ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, November 11, 2010

ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಉತ್ತರ ಕನ್ನಡದ ಮಿಸಳ್ ಬಾಜಿಯಂ!!


ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಉತ್ತರ ಕನ್ನಡದ ಮಿಸಳ್ ಬಾಜಿಯಂ!!

ಕನ್ನಡ ಕರಾವಳಿಯ ಬಹುತೇಕ ಜನ ಬಾಯಿ ಚಪ್ಪರಿಸಿ ತಿನ್ನುವ ಅತೀ ಇಷ್ಟದ ಹೋಟೆಲ್ ತಿಂಡಿಗಳಲ್ಲಿ ಮಿಸ್ಸಳ್ ಬಾಜಿ ಮತ್ತು ಬನ್ಸ್ ಬಾಜಿ ಬಹಳ ಪ್ರಮುಖ ಸ್ಥಾನ ಪಡೆದಿವೆ. ಈ ಹೆಸರುಗಳು ಎಷ್ಟು ಪ್ರಚಲಿತವೆಂದರೆ ಇದಕ್ಕೆಂದೇ ಹೆಗ್ಗುರುತಾದ ಹೋಟೆಲ್ಗಳೂ ಅಲ್ಲಿ ಇವೆ. ಮಿಸ್ಸಳು ಇಲ್ಲದ ದಿನವನ್ನು ಅಲ್ಲಿನ ಜನ ನೆನೆಸಿಕೊಳ್ಳಲೂ ಸಾಧ್ಯವಿಲ್ಲ. ಹಾಗಂತ ಅಂಥಾದ್ದೇನಪ್ಪಾ ಅದರಲ್ಲಿ ಅಂತ ನೀವೆಲ್ಲ ಕೇಳಹೊರಟರೆ ಅದನ್ನು ತಿಂದೇ ನೋಡಿ ಸ್ವಾಮೀ ಎನ್ನಬೇಕಾಗುತ್ತದೆ.

ಮಸಾಲ್ ಪೂರಿಯ ಮಸಾಲೆಯನ್ನು ಹೋಲುವ ಸಾಂಬಾರಿನಿಂದ [ಬಾಜಿಯಿಂದ] ತುಂಬುವ ಪ್ಲೇಟಿನಲ್ಲಿ ಗುಡ್ಡದ ಮಿನಿಯೇಚರ್ ನ ರೀತಿ ಮಧ್ಯಕ್ಕೆ ಗೋಪುರಾಕಾರವಾಗಿ ನಿಲ್ಲುವ ಈ ತಿಂಡಿ ಯಾವ ಕಾಲದ ಯಾರ ಆವಿಷ್ಕಾರವೋ ತಿಳಿದುಬಂದಿಲ್ಲ. ಅಂತೂ ಕಡಲ ಕಿನಾರೆಯ ಜನ ನೆನಪಿಟ್ಟು ಕೇಳಿ ತಿನ್ನುವ ತಿಂಡಿ ಈ ಮಿಸ್ಸಳ್ ಬಾಜಿ. ಶುದ್ಧ ತೆಳು ಅವಲಕ್ಕಿ ಪ್ಲೇಟಿನಲ್ಲಿ ಹಾಕಿ, ಜೊತೆಗೆ ಅಷ್ಟೇ ಅಳತೆಯಲ್ಲಿ ಖಾರ ಮಿಕ್ಸ್ಚರ್ ಹಾಕಬೇಕು, ಅದಕ್ಕೆ ಜೊತೆಗೆ ಶೇವ್ ಚೂಡ ಮತ್ತು ಕಡ್ಲೆ ಹಿಟ್ಟಿನಲ್ಲಿ ಕರಿದ ಶೇಂಗಾ ಬೀಜಗಳನ್ನು ಸೇರಿಸುತ್ತಾರೆ. ಮೇಲಿಂದ ಈರುಳ್ಳಿಸೇರಿಸಿ ಮಾಡಿದ ಘಮಘಮಿಸುವ ಸಾಂಬಾರನ್ನು ಹಾಕಿ ತಿನ್ನಲು ಕೊಟ್ಟರೆ ಅದರಲ್ಲಿ ನಮ್ಮನ್ನೇ ನಾವು ಕಳೆದುಹೋಗುವ ಅದ್ಬುತ ರುಚಿ, ಸ್ವಲ್ಪ ಸಿಹಿ,ಖಾರ,ಹದವಾಗಿ ಉಪ್ಪು, ಮಸಾಲೆ ಪದಾರ್ಥಗಳ ಪರಿಮಳ ಎವೆಲ್ಲವುಗಳ ಮಿಶ್ರಣವಿರುವ ಈ ತಿಂಡಿಯನ್ನು ಮಳೆಗಾಲದಲ್ಲಂತೂ ಜನ ತುದಿಗಾಲಲ್ಲಿ ನಿಂತು ತಿನ್ನುತ್ತಾರೆ. ಬೇಗ ಜೀರ್ಣವಾಗುವ ಈ ತಿಂಡಿ ಹೆಚ್ಚಾಗಿ ಯಾವ ವೇಳೆಗಾದರೂ ತಿನ್ನಬಹುದಾದ ಹಿತವಾದ ಭಕ್ಷ್ಯ. " ಅರೆ ಹೋಯ್ ಪೈಮಾಮ್,ಕೈಂಯ್ ಗೆಲ್ರೆ ಮಾರಾಯ, ಮಿಸ್ಸಳ್ ಅಸ? " ಅಂತ ಕೇಳುತ್ತ ಪೈಗಳ ಹೋಟೆಲ್ ಅಥವಾ ಇನ್ನ್ಯಾವುದೋ ಲೋಕಲ್ ಹೋಟೆಲ್ ಗೆ ಹೋಗಿ ವಿಚಾರಿಸಿದರೆ ಮಿಸ್ಸಳ್ ಬಾಜಿ ಸಿಕ್ಕೇ ಸಿಗುತ್ತದೆ, ಇನ್ನೇನಾದ್ರೂ ಜನ ಜಾಸ್ತಿ ಬಂದು ತಿಂದು ಖಾಲಿ ಆಗಿದ್ದ್ರೆ ಮಾತ್ರ ಬೇರೆ ಹೋಟೆಲ್ ಹುಡುಕೋದು ಅನಿವಾರ್ಯ.

ಕರಾವಳಿಯಲ್ಲಿ ಮಳೆಯ ಆರ್ಭಟ ಬಹಳವಾಗಿರುತ್ತದೆ. ದಪ್ಪದಪ್ಪಹನಿಗಳು ಗಾತ್ರದ ಮುಸಲಧಾರೆಗಳಾಗಿ ಸುರಿಯುತ್ತಲೇ ಇರುತ್ತವೆ. ಬೆಳಗು ಬೈಗಿನ ಅಂತರವಿಲ್ಲದೇ ಬೆಳಗೇ ಬೈಗೇನೋ ಎಂಬಂತೇ ಕತ್ತಲಾವರಿಸಿ ಧೋ ಎಂದು ಸುರಿಯಲಾರಂಭಿಸಿದರೆ ಮಳೆಗೆ ಪುರುಸೊತ್ತೇ ಇಲ್ಲ. ಇಂತಹ ಮಳೆಗಾಲದಲ್ಲಿ ಅದೂ ನಾಲ್ಕು ತಿಂಗಳು ಸುರಿವ ದಿನಗಳಲ್ಲಿ ದಿನವೂ ಅದೂ ಇದೂ ಕೆಲಸ ಅಂತ ಮನೆಯ ಹೊರಗೆ ಬಂದ ಜನರ ಮೈ ಸ್ವಲ್ಪವಾದರೂ ನೆನೆಯುವುದು ಅನಿವಾರ್ಯ. ಚಳಿಹಿಡಿದ ಶರೀರಕ್ಕೆ ಒಂದಷ್ಟು ಬಿಸಿ ಪಡೆದುಕೊಳ್ಳುವ ಮತ್ತು ಹಸಿದ ಹೊಟ್ಟೆಗೆ ತುಸು ಏನಾದರೂ ತಿಂದುಕೊಳ್ಳುವ ಮನಸ್ಸಾಗುವ ಜನಕ್ಕೆ ಮೂಗರಳಿಸಿ ಕಣ್ಣು ಹಿರಿದಾಗಿಸಿ ನೋಡುವಂತೆ ಮಾಡುವ ತಿಂಡಿ ಮಿಸ್ಸಳ್. ಮಿಸ್ಸಳ್ ಬಾಜಿ ಎನ್ನಬೇಕಿಲ್ಲ ಬರೇ ಮಿಸ್ಸಳು ಎಂದರೆ ಸಾಕು! ಹೊಸದಾಗಿ ಹೋಟೆಲ್ ಹಾಕಿದ ಮಾಲೀಕನಿಗೆ ಗಲ್ಲಾಪೆಟ್ಟಿಗೆಗೆ ಗಸಗಸಿ ರೊಕ್ಕ ತುಂಬಿಸುವುದು ಮಿಸ್ಸಳು ಮತ್ತು ಬನ್ಸ್ ಬಿಟ್ಟರೆ ಈರುಳ್ಳಿ ಬಜೆ [ಈರುಳ್ಳಿ ಬಜ್ಜಿ].

ಸ್ಕೂಲು-ಕಾಲೇಜು ಹುಡುಗರು ತಮ್ಮ ತರಗತಿಯ ಅವಧಿಗಳ ಮಧ್ಯೆ ಎದ್ದುಬಂದು ತಿಂದು ಹೋಗುವುದು ಮಿಸ್ಸಳು. ಸೀತಾರಮ್ ಹೇಗ್ಡೆರು ಪೇಟೆಗೆ ಬಟ್ಟೆತರಲು ಬಂದವರು ಸುತರಾಂ ಮರೆಯದೇ ಕೇಳಿ ತಿನ್ನುವ ತಿನಿಸು ಮಿಸ್ಸಳು. ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಜಾನಕಕ್ಕ ಜ್ಞಾಪಿಸಿಪಡೆದು ತಿನ್ನುವುದು ಈ ಮಿಸ್ಸಳು. ರಾಮದಾಸ್ ಕಾಮತ್ ರು "ಮಕ್ ಕಬರ್ನಾ ಅಶಿಲೆ ಮರಾಯಾ" ಅಂತ ಸುದ್ದಿ ಹೇಳುತ್ತ ತಿನ್ನುವುದು ಮಿಸ್ಸಳು. ಗೋವಿಂದ ಶೆಟ್ರು ವ್ಯಾಪಾರದ ಮಧ್ಯದಲ್ಲಿ ಗೋವಿಂದನಾಮಸ್ಮರಣೆಯೊಂದಿಗೆ ಮಗನನ್ನು ಅಂಗಡಿಯಲ್ಲಿ ಬಿಟ್ಟು ಬಂದು ತಿಂದುಹೋಗುವುದು ಮಿಸ್ಸಳು. ಗೇಬ್ರಿಯಲ್ ಗೊನ್ಸಾಲ್ವಿಸ್ ಮತ್ತು ಮ್ಯಾಥ್ಯು ಫರ್ನಾಂಡಿಸ್ ಇಗರ್ಜಿಗೆ ಹೋಗಿಬರುವಾಗ ತಿಂದುಹೋಗುವುದು ಮಿಸ್ಸಳು. ಗೇರುಸೊಪ್ಪೆಯ ಬಾಪು ಸಾಹೇಬರು " ಮಾಶಾ ಅಲ್ಲಾ " ಎನ್ನುತ ಮೆಟ್ಟಿಲು ಹತ್ತಿ ಬಂದು ತಿಂದು ತೆರಳುವುದು ಮಿಸ್ಸಳು. ಬಾಡಿಗೆ ಕಾರುಗಳು ಕ್ಯಾಬ್ ಗಳನ್ನು ಓಡಿಸುವ ಚಾಲಕ-ಮಾಲಕರು ಗುಂಪಾಗಿ ಹರಟೆ ಹೊಡೆಯುತ್ತ ಸವಿಯುವುದು ಮಿಸ್ಸಳು. ಗಡಿಬಿಡಿಯಲ್ಲಿ ಕೋರ್ಟಿಗೆ ಹೋಗುವ ವಕೀಲರುಗಳು ಕೆಲವೇ ನಿಮಿಷ ಸುಖಾಸೀನರಾಗಿ ಕೇಳುವುದು ಇದೇ- ಮಿಸ್ಸಳು! ಹೋಟೆಲ್ ನಲ್ಲಿ ಪಾರ್ಟಿ ಕೊಡುವ ಅಲ್ಲಿನ ಜನ ಮೊದಲಾಗಿ ಆದೇಶಿಸುವ ತಿಂಡಿ ಮಿಸ್ಸಳು; ಪಾರ್ಟಿ-ಪಂಗಡ ಮರೆತು ಎಲ್ಲರೂ ಒಂದೆಡೆ ಕಲೆತ ಸಂಭ್ರಮಗಳ ಸರಹದ್ದಿನಲ್ಲಿ ಸರಸರನೆ ತಿಂದುಣ್ಣುವ ತಿಂಡಿ ಇದೇ ಮಿಸ್ಸಳು. ಅಪ್ಪನ ಜೊತೆಗೆ ಪೇಟೆಗೆ ಬಂದ ಮಗ/ಮಗಳು ಅಪೇಕ್ಷಿಸಿ ತಿನ್ನುವುದು ಮಿಸ್ಸಳು, ಅಪರೂಪಕ್ಕೆ ಪೇಟೆಗೆ ಬಂದ ಸುಕ್ರು ಹಳ್ಳೇರ್ ಬಯಸುವುದೂ ಮಿಸ್ಸಳು. ಇಡೀದಿನ ರೋಗಿಗಳನ್ನು ಶುಶ್ರೂಷೆಮಾಡಿ ದಣಿದ ವೈದ್ಯ ಭಾಸ್ಕರ್ ತಮ್ಮ ಕೋಣೆಗೆ ಪಾರ್ಸೆಲ್ ತರಿಸಿಕೊಳ್ಳುವುದು ಮಿಸ್ಸಳು! ಹೀಗೇ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎನ್ನುವ ಹಾಗೇ ಎಲ್ಲುಂಟು ಎಲ್ಲಿಲ್ಲ ಎಂದೇ ಲೆಕ್ಕಕ್ಕೆ ಸಿಕ್ಕದ ಸಿಕ್ಕಾಪಟ್ಟೆ ಖರ್ಚಾಗುವ[ಬೇಗ ಖಾಲಿಯಾಗುವ]ಅಗ್ಗದ ಖರ್ಚಿನ ತಿಂಡಿ ಈ ಮಿಸ್ಸಳು. ಶಾಸ್ತ್ರ ಶಾಸ್ತ್ರವೆನ್ನುತ್ತಿರುವ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಭಟ್ಟರು ದಾಯಾದರಲ್ಲಿ ಹಡೆದ ಸೂತಕ ಬಂದಾಗ ಇದೇ ಸಮಯವೆಂದು ಹೋಟೆಲಿಗೆ ನುಗ್ಗಿ ತಿಂದು ಜನಿವಾರ ಬದಲಿಸಿಕೊಳ್ಳುವುದು ಇದೇ ಮಿಸ್ಸಳು!

ಕಡಲತೀರದಲ್ಲಿ ಯಕ್ಷಗಾನ,ನಾಟಕ, ಸಂಗೀತ ರಸಸಂಜೆಗಳಿಗಂತೂ ಕಮ್ಮಿ ಇಲ್ಲವೆಂದು ತಮಗೆಲ್ಲ ತಿಳಿದಿದೆಯಷ್ಟೇ? ಪ್ರತೀಕಾರ್ಯಕ್ರಮದಲ್ಲೂ ಹೊರಾಂಗಣದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಚಹಾ ಅಂಗಡಿ ಇರುವುದಂತೂ ಕಾಯಂ. ಯಾಕೇಂದ್ರೆ ಅಲ್ಲಿನ ಜನ ಅದರಲ್ಲಂತೂ ಸಣ್ಣ ಚಟಗಳಾದ ಚಹಾ-ಬೀಡಿ-ಸಿಗರೇಟು ಇವುಗಳನ್ನು ಅಂಟಿಸಿಕೊಂಡ ಜನ, ಅವುಗಳನ್ನೆಲ್ಲ ಬಿಟ್ಟು ಬಹಳ ಹೊತ್ತು ಇರುವುದೇ ಇಲ್ಲ. ಹೀಗಾಗಿ ಚಹಾ ಅಂಗಡಿ ಇದ್ದಮೇಲೆ ಗಣಪತಿಯ ಜೊತೆಗೆ ಮೂಷಿಕವಿದ್ದಹಾಗೇ ಅಲ್ಲಿ ಮಿಸ್ಸಳಿನ ಹಾಜರಾತಿ ಇದ್ದೇ ಇರುತ್ತದೆ. ಪೂರ್ಣರಾತ್ರಿಯ ಕಾರ್ಯಕ್ರಮವಾದರೆ ಅದಕ್ಕೆ ಮಧ್ಯೆ ಮಧ್ಯೆ ಮೂತ್ರ ವಿಸರ್ಜನೆಗೆ ಎದ್ದು ಹೋದವರು, ನಿದ್ದೆ ಬರದಿರಲೆಂದು ದಂ ಎಳೆಯಲು ಹೋದವರು ಎಲ್ಲರೂ ಖುದ್ದಾಗಿ ಹೋಗಿ ಕುಕ್ಕರಿಸಿ ಕುಳಿತು ಮಟ್ಟಸವಾಗಿ ತಿಂದು ಮುಗಿಸುವ ಮನನೀಯ ತಿಂಡಿ ಈ ಮಿಸ್ಸಳು.

ಜಾಗತೀಕಅಣ ಎಲ್ಲೇ ಅಡಿಯಿಟ್ಟರೂ, ಏನೇ ಪರಿಣಾಮ ಬೀರಿದರೂ ಜಗದುದ್ದಗಲ ಬೇರೆಲ್ಲೂ ಕಾಣಲಾರದ ಅಪ್ಪಟ ದೇಶೀಯ ತಿನಿಸು ನಮ್ಮದೇ ಆದ ಉತ್ತರಕನ್ನಡದ ಮಿಸ್ಸಳು.ಪಟ್ಟಾಗಿ ಕೂತು ಪಟ್ಟಂಗ ಹೊಡೆಯುವಾಗೆಲ್ಲ ನೆನೆಪಾಗಿ ಪ್ಲೇಟಿನ ಮೇಲೆ ಪ್ಲೇಟು ಪಡೆಪಡೆದು ಗಡದ್ದಾಗಿ ತಿಂದು ತೇಗಿಮುಗಿಸುವ ಆಸೆ ಹುಟ್ಟಿಸುವ ತಿನಿಸು ನಮ್ಮದೀ ಮಿಸ್ಸಳು ! ನಮ್ಮದೀ ಮಿಸ್ಸಳು! ವಿದೇಶೀಯರೂ ಸೇರಿದಂತೆ ಹಲವು ಪ್ರವಾಸಿಗರ ಮನಸೂರೆಗೊಂಡ ಮರೆತರೆ ಮರುಗಬೇಕಾದ ಜನಪ್ರಿಯ ನೈವೇದ್ಯ ಉತ್ತರ ಕನ್ನಡದ ಮಿಸ್ಸಳು. ಸ್ವಲ್ಪ ಇರಿ ವಿದೇಶೀಯರು ನುಗ್ಗಿ ಪೇಟೆಂಟ್ ಪಡೆಯುವ ಮೊದಲು ಒಂದು ಹಾಡಿನ ತುಣಿಕು ಹಾಡಿಬಿಡುತ್ತೇನೆ ---

ಉಪ್ಪರಿಗೆಯ ಜನ ಚಪ್ಪರಿಸಿ ತಿಂದರು
ಮುಪ್ಪಡರಿದ ಜನ ನೆಪ್ಪಿನಿಂದ ನೆನೆದರು
ಸಪ್ಪೆಯಾದ ಜೀವನದಲ್ಲಿ ಕುಪ್ಪಳಿಸಲು ಕುಮ್ಮಕ್ಕು ನೀಡುವ
ಉಪ್ಪು ಖಾರ ಸಹಿತದ ಮಿಸ್ಸಳೇ ನಿನಗೆ
ಬಪ್ಪರೇ ಭಳಿರೇ ಬಹುಪರಾಕ್ ಬಹುಪರಾಕ್ !

" ಹಾಂ ಏನ್ ಕೊಡ್ಲಿ ನಿಮ್ಗೆ ? ಖಾಲಿ ದೋಸೆ,ಮಸಾಲೆ ದೋಸೆ, ಇಡ್ಲಿ, ಉಪ್ಪಿಟ್ಟು, ಶಿರ, ಪೂರಿ ಬಾಜಿ,ಬನ್ಸ್ ಬಾಜಿ, ಮಿಸ್ಸಳು " ಅಂತ ಸಪ್ಲೈಯರ್ ಲಿಸ್ಟ್ ಹೇಳುತ್ತ ಕೊನೇಗೊಮ್ಮೆ ಹೇಳುವ ಐಟೆಮ್ ಮಿಸ್ಸಳು. ಯಾಕೇಂದ್ರೆ ಅದು ಹೇಗೂ ಹೇಳದಿದ್ದ್ರೂ ಕೇಳುವಂತ ಐನಾತಿ ಐಟಮ್ ಅನ್ನೋದು ಅವರಿಗೆಲ್ಲ ಗೊತ್ತೇ ಇದೆ.

ಮಿಸ್ಸಳು ಒಂದೊಂದು ಹೋಟೆಲ್ ನಲ್ಲಿ ಅವರವರ ತಯಾರಿಕೆಗೆ ತಕ್ಕಂತೆ ಸ್ವಲ್ಸ್ವಲ್ಪ ಭಿನ್ನ ರುಚಿಯಿಂದ ಸಿಗುತ್ತದೆ. ಕೆಲವರು ತುಂಬಾ ಚೆನ್ನಾಗಿ ಮಸಾಲೆ ಹಾಕಿದರೆ ಇನ್ನು ಕೆಲವರು ಸ್ವಲ್ಪ ಕಮ್ಮಿ ಮಸಾಲೆ ಸಾಮಗ್ರಿಗಳನ್ನು ಉಪಯೋಗಿಸುತ್ತಾರೆ. ಆದರೂ ಮಿಸ್ಸಳು ರುಚಿಯೇ ಆಗಿರುತ್ತದೆ. ಹೊಸದಾಗಿ ತಿನ್ನುವವರಿಗೆ ಇದು ಅನುಭವಕ್ಕೆ ಬರುವುದಿಲ್ಲ. ತಿನ್ನುತ್ತ ಸ್ವಲ್ಪ ರೀಸರ್ಚ್ ಮಾಡಿದರೆ ಕೆಲವು ಹೋಟೆಲ್ ಗಳು ಇದಕ್ಕಾಗೇ ಹುಟ್ಟಿದವೇನೋ ಎನ್ನುವಷ್ಟು ಖುಷಿಕೊಡುವ ರುಚಿಯ ಮಾಯಾಜಗತ್ತು ಈ ಮಿಸ್ಸಳಿನದು. ಯಾವುದೇ ಕೆಲಸದ ಗಡಿಬಿಡಿಯಲ್ಲೂ ಕೆಲವೇ ನಿಮಿಷಗಳಲ್ಲಿ ತಿಂದುಮುಗಿಸಿಬಿಡಬಹುದಾದ ಈ ತಿಂಡಿ, ತಿಂದ ಕೆಲವೇ ನಿಮಿಷಗಳಲ್ಲಿ ಒಂಥರಾ ಆತ್ಮತೃಪ್ತಿಯಾಗುವಷ್ಟು ದೇಹದುದ್ದಗಲ ನರನಾಡಿಗಳಲ್ಲೂ ತನ್ನ ಘಮಘಮದಿಂದ ಮಘಮಘಿಸಿ ಜೀವಕ್ಕೆ ಹೊಸ ಚೈತನ್ಯ ತುಂಬುವ ಅತಿ ವಿಷಿಷ್ಟ ಮತ್ತು ಕಾಲಭೇದರಹಿತ ತಿಂಡಿ! ಹೋಟೆಲ್ ಮಾಲೀಕರು ಹಸಿವಾದಾಗ ತಾವೇ ಖುದ್ದಾಗಿ ಎದ್ದುಬಂದು ಒಂದಷ್ಟು ಸುರುವಿಕೊಂಡು ಚಪ್ಪರಿಸಿ ತಿನ್ನುವುದು ಕಾಣಸಿಗುವ ದೃಶ್ಯವಾದರೆ, ಸಪ್ಲೈಯರ್ ಹುಡುಗರು, ಟೇಬಲ್ ಒರೆಸುವ ಮಾಣಿಗಳು ಸದಾ ಓಎಗಣ್ಣಿನಿಂದ ಆಗಾಗ ಗಮನಿಸುವುದು ಈ ಮಿಸ್ಸಳು. ಯಜಮಾನರು ಅನುಮತಿ ಮತ್ತು ಅವಕಾಶ ಕೊಟ್ಟಾಗ ಗಬಗಬನೆ ಹಸಿದ ಹೆಬ್ಬುಲಿಯಂತೆ ಅತೀವ ಬಯಕೆಯಿಂದ ತಿನ್ನುವ ಖಾದ್ಯ ಇದೇ ಈ ಮಿಸ್ಸಳು. ಇದಕ್ಕೆ ಸಾಥ್ ನೀಡಲು ಈರುಳ್ಳಿ ಬಜೆ. ಬಜೆಯೆಂದು ಕರೆಸಿಕೊಳ್ಳುವ ಈರುಳ್ಳಿ ಬಜ್ಜಿ. ಕನ್ನಡ ಕರಾವಳಿಯ ಈರುಳ್ಳಿ ಬಜೆಯ ಶೈಲಿ ತುಸು ವಿಭಿನ್ನ. ಅಲ್ಲಿ ಸಿಗುವ ಈರುಳ್ಳಿಯ ಗುಣಮಟ್ಟ ಕೂಡ ಹಾಗೇ. ಸಿಹಿಸಿಹಿಯಾಗಿರುವ ಈರುಳ್ಳಿಯನ್ನು ಖಾರಮಿಶ್ರಿತ ಶುದ್ಧ ಕಡ್ಲೆಹಿಟ್ಟಿಗೆ ಮೈದಾ ಬೆರೆಸಿ, ಉಪ್ಪು ಇತ್ಯಾದಿ ಹಾಕಿ ಕರಿದ ಬಿಸಿ ಬಿಸಿ ಈರುಳ್ಳಿ ಬಜೆ ಸುತ್ತಲ ಕಿಲೋಮೀಟರ್ ಜಾಗಕ್ಕೆ ಪರಿಮಳ ಬೀರುತ್ತ ಗಿರಾಕಿಯನ್ನು ಹೋಟೆಲ್ಲಿಗೆ ಕರೆತರುವಲ್ಲಿ ರಾಕೆಟ್ ಉಡ್ಡಯನಮಾಡಿದಂತೇ ಯಶಸ್ವೀ ಕೆಲಸ ಮಾಡುತ್ತದೆ. ಮಿಸ್ಸಳಿನ ಜೊತೆಗೆ ಈರುಳ್ಳಿ ಬಜೆ ಸೇರಿದರೆ ಅದರ ಲೋಕವೇ ಬೇರೆ! ತಿಂದು ಕೈತೊಳೆದುಕೊಂಡವರೂ ಕೈಮೂಸಿ ನೋಡುತ್ತಿರುವಂತ ಪರಿಮಳ ಬೀರುವ ಈರುಳ್ಳಿ ಬಜೆಯದ್ದು. ಎನನ್ನೂ ತಿನ್ನಲಾರದಷ್ಟು ಹೊಟ್ಟೆಬಿರಿ ತಿಂದು ಬರೇ ಟೀ ಕುಡಿಯಲು ಬಂದ ಜನ ಸುಮ್ನೇ ಬಾಯಿಗೆ ಬಿಟ್ಟುಕೊಳ್ಳುವ ಮೆತ್ತನೆಯ ತಿಂಡಿ ಈರುಳ್ಳಿ ಬಜೆ.

ಬೆಳಿಗ್ಗೆ ಹೊಟ್ಟೆತುಂಬಾ [ಕಮ್ಮಿ ಖರ್ಚಿನಲ್ಲಿ] ತಿನ್ನಬಹುದಾದ ತಿಂಡಿ ಬನ್ಸ್ ಬಾಜಿ. ರೂಪದಿಂದ ಪೂರಿಯ ಸಹೋದರತ್ವ ಹೊಂದಿರುವ ಈ ತಿಂಡಿ ಅಕ್ಕಿಹಿಟ್ಟು, ಮೈದಾಹಿಟ್ಟು, ಬಾಳೆಹಣ್ಣು ಮತ್ತು ಉಪ್ಪು-ಅಡಿಗೆ ಸೋಡಾ ಇವುಗಳ ಮಿಶ್ರಣ. ಹಿಟ್ಟುಗಳನ್ನು ಹದಪ್ರಮಾಣದಲ್ಲಿ ಸೇರಿಸಿ, ನೀರು ಹಾಕಿ, ಬಾಳೇ ಹಣ್ಣು[ ಯಾಲಕ್ಕಿ,ಪುಟಬಾಳೆ ಅಥವಾ ಮೆಟ್ಗ ಎಂದು ಕರೆಸಿಕೊಳ್ಳುವ ಬಾಳೇ ಹಣ್ಣು] ಕಿವುಚಿ ಸೇರಿಸಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆ ಸೋಡಾ ಬೆರೆಸಿ ನಾದಿದರೆ ತಯಾರಾಗುವ ಮೆತ್ತನೆಯ ಹಿಟ್ಟಿನ ಮುದ್ದೆಯನ್ನು ಪೂರಿಯನ್ನು ಒರೆದ ಹಾಗೇ ಸ್ವಲ್ಪ ಸ್ವಲ್ಪವೇ ಉಂಡೆಮಾಡಿ ಕೈಯ್ಯಿಂದಲೇ ತಟ್ಟಿ, ಕುದಿಯುತ್ತಿರುವ ಖಾದ್ಯತೈಲದಲ್ಲಿ ಕಂದು ಬಣ್ಣ ಬರುವವರೆಗೆ ಕರಿದರೆ ಸಿದ್ಧವಾಯಿತು ನೋಡಿ ನಮ್ಮ ಬನ್ಸ್. ಬನ್ನಿನ್ನ ಹಾಗೇ ಮೆತ್ತಗಿದ್ದರೂ ಬನ್ನಿಗೂ ಪೂರಿಗೂ ವಿಭಿನ್ನವಾಗಿರುವ ಬನ್ಸ್ ನ ಒಳಮೈ ತೆರೆದು ನೋಡಿದರೆ ಬೆಳ್ಳನೆಯ ಪೆಟಿಕೋಟ್ ಥರದ ಒಳಮೈ ನೋಡಬಹುದು. ಸಿಹಿಯಾಗಿರುವ ಈ ತಿಂಡಿಗೆ ಜೊತೆಗೆ ನೆಂಜಿಕೊಳ್ಳಲು ಮಿಸ್ಸಳಿಗೆ ಮಾಡಿದ ರೀತಿಯಲ್ಲೇ ಸಾಂಬಾರು. ಎರಡು ತಿಂಡಿ ತಟ್ಟೆಗಳಲ್ಲಿ ಒಂದರಲ್ಲಿ ಮೂರು ಬನ್ಸ್ ಮತ್ತು ಇನ್ನೊಂದರಲ್ಲಿ ಬಾಜಿ [ಸಾಂಬಾರು] ಇಟ್ಟುಕೊಂಡು ಕುಳಿತುಬಿಟ್ಟರೆ ಈ ಜಗ ಸೋಜಿಗ!

ಒಂದು ಪ್ಲೇಟ್ ಬನ್ಸ್ ಬಾಜಿ ತಿಂದು ನಿಮ್ಮ ಕೆಲಸಕ್ಕೆ ಹೋಗಿ, ಹಸಿವೆ ಮಧ್ಯಾಹ್ನ ೧ರ ತನಕ ನಿಮ್ಮನ್ನು ಬಾಧಿಸದು, ಇದು ಗ್ಯಾರಂಟಿ, ಇಲ್ಲದಿದ್ದರೆ ನಿಮಗೆ ನಿಮ್ಮಹಣ ವಾಪಸ್! ಕರಾವಳಿಯಲ್ಲಿ ಬಿಸಿಲ ಧಗೆ ಹೆಚ್ಚು. ಮಳೆಗಾಲದ ಮಧ್ಯೆ ಬಿಸಿಲು ಬಂದರೂ ಅಷ್ಟರಲ್ಲೇ ಸೆಕೆ ಆರಂಭ. ಹೀಗಾಗಿ ಅಲ್ಲಿ ಬೆವರುವುದೂ ಹೆಚ್ಚು. ತಿಂದ ಆಹಾರ ಜೀರ್ಣವಾಗುವುದೂ ಬಹುಬೇಗ. ಇಂತಹ ಸನ್ನಿವೇಶದಲ್ಲಿ ಅಲ್ಲಿನ ಹೋಟೆಲಿಗರು ಕಂಡುಕೊಂಡ ರುಚಿಯಾದ ತಿಂಡಿ ಬನ್ಸ್ ಬಾಜಿ.

ಮಳೆಗಾಲ ಇನ್ನೇನು ಬಂತು ಎನ್ನುವಾಗ ಪೇಟೆಗೆ ಕೆಲಸಕ್ಕೆ ಹೋದರೆ ಕುಳಿತು ತಿನ್ನಲು ಸರಿಯಾಗಿ ಜಾಗವಿರುವ, ಶುಚಿ ರುಚಿಯಿಂದ ಕೂಡಿದ ಹೋಟೆಲನ್ನು ಮನಸ್ಸು ಎಣಿಸುತ್ತಾ ಇರುತ್ತದೆ. ಹೋಟೆಲ್ ನೋಡಲು ಬಹಳ ಕ್ಲಾಸಿಕ್ ಆಗಿರದಿದ್ದರೂ ನೀಡುವ ಈ ತಿಂಡಿಗಳನ್ನು ಮರೆಯಲಾಗದು. ತಿನ್ನುವ ಮನಸ್ಸುಳ್ಳವರು ಈ ತಿಂಡಿಗಳ ಹೆಸರನ್ನು ಬರೆದಿಟ್ಟುಕೊಂಡು ಕರಾವಳಿಯ ಪ್ರೇಕ್ಷಣೀಯ ಸ್ಥಳಗಳಾದ ಮುರುಡೇಶ್ವರ, ಗೋಕರ್ಣ, ಯಾಣ, ಧರ್ಮಸ್ಠಳ, ಉಡುಪಿ ಹೀಗೇ ಎಲ್ಲಿಗಾದರೂ ಹೋದರೆ ಅಥವಾ ಹೊನ್ನಾವರ, ಕುಮಟಾ ಕಡೆ ಒಮ್ಮೆ ರುಚಿನೋಡಬಹುದು.

18 comments:

  1. ಸರ್
    ನಂಗೂ ಭಾರತದಲ್ಲಿ ಇದ್ದಾಗ ಅದರಲ್ಲೂ ಉಡುಪಿಯಲ್ಲಿ ಇದ್ದಾಗ
    ಮಿಸಲ್ ಮತ್ತೆ ಬನ್ಸ್ ಬಾಜಿ ಇಲ್ಲದ ದಿನ ಇರಲಿಲ್ಲ
    ಎಂಥ ರುಚಿ ಅದು

    ReplyDelete
  2. ನಿಮ್ಮ ವರ್ಣನೆ ಬಾಯಲ್ಲಿ ನೀರೂರಿಸುತ್ತಿದೆ. ಎಷ್ಟೇ ದೊಡ್ಡ ಹೊಟೆಲ್ ಗಳು ಬಂದರೂ ಇವುಗಳಿಗಿರುವ ಬೇಡಿಕೆ ಇಂದಿಗೂ ಕಡಿಮೆಯಾಗಿಲ್ಲ

    ReplyDelete
  3. ಭಟ್ ಸರ್;ನಾವೂ ಇಲ್ಲಿಗೆ ಬಂದ ಮೇಲೆ ಬನ್ಸ್ ರುಚಿ ಹತ್ತಿಸಿಕೊಂಡಿದ್ದೇವೆ.ಇನ್ನೂ ಮಿಸ್ಸಳ ಬಾಜಿಯ ರುಚಿ ನೋಡುವ ಅವಕಾಶ ಸಿಕ್ಕಿಲ್ಲ.ಮಾಹಿತಿಗೆ ಧನ್ಯವಾದಗಳು.ನಮಸ್ತೆ.

    ReplyDelete
  4. This comment has been removed by the author.

    ReplyDelete
  5. Missal Bhaaji is regular in Belgaum zone (and its most demanded thing in Maharashtra). Its taste is really wow. . . Thanks for Missal

    ReplyDelete
  6. ಭಟ್ರೆ...

    ನಿನ್ನೇನೇ ಇದನ್ನು ಓದಿದ್ದೆ...

    ಇದರ ರುಚಿ ಮತ್ತೆ ನೆನಪಾಗಿ ಮತ್ತೆ ಓದಿದೆ...

    ನನ್ನ ಮಗ ಪಾನಿಪುರಿ, ಮಸಾಲೆ ಪುರಿ ಭಕ್ತ...

    ಒಮ್ಮೆ ಊರಿಗೆ ಹೋದಾಗ "ಮಿಸಳ್ ಭಾಜಿ" ರುಚಿ ತೋರಿಸಿದೆ..
    ನನ್ನ ಸಂಗಡ ಅವನೂ ಈಗ ಮಿಸಳ್ ಭಾಜಿ ಅಭಿಮಾನಿಯಾಗಿದ್ದಾನೆ..

    ನಮ್ಮ ಕಾನಸೂರಿನಲ್ಲಿ "ರಾಯರ ಹೊಟ್ಲು" ಅಂತ ಇದೆ...

    ಅಲ್ಲಿ ಹೋಗಿ ಕುಳಿತರೆ "ಏನ್ ಹೇಳ್ಳಿ ...ಹೆಗಡೇರೆ..? "
    ಅಂತ ಕರ್ಕಶ ಧ್ವನಿಯಲ್ಲಿ ಸ್ವತಹ ರಾಯರೇ ಆರ್ಡರ್ ತೆಗೆದುಕೊಳ್ಳುತ್ತಾರೆ...

    "ಮಿಸಳ್ ಭಾಜಿ ಕೊಡಿ ರಾಯ್ರೆ.."

    "ಒಂದು ಮಿಸಳ್ ಭಾಜೀ...!! ..."
    ಅಂತ
    ರಾಯರೇ ಜೋರಾಗಿ ಕೂಗಿ...
    ಅವರೇ ಒಳಗೆ ಹೋಗಿ ಸಪ್ಲೈ ಮಾಡುತ್ತಾರೆ..!.

    ನಮಗೆ ತಿಂದಾದ ಮೇಲೆ...

    "ಹೆಗಡೆಯವರ ಬಿಲ್ಲ್ ಬರ್ಲೀ..."
    ಅಂತ ಕರ್ಕಶ ಧ್ವನಿ ಮತ್ತೆ ಕೇಳಿಸುತ್ತದೆ...

    ರಾಯರೇ ಬಿಲ್ ತಂದುಕೊಡುತ್ತಾರೆ....
    ಗಲ್ಲಾ ಪೆಟ್ಟಿಗೆಗೆ ಹೋಗಿ ಚೇಂಜ್ ಕೂಡ ಅವರೇ ತಂದುಕೊಡುತ್ತಾರೆ...

    ಮತ್ತೆ ಕರ್ಕಶ ಧ್ವನಿ....!!

    "ಟೇಬಲ್ ಕ್ಲೀನ್.. "
    ಅಂತ ಜೋರಾಗಿ ಕೂಗಿ...
    ಅವರೆ ಟವೆಲ್ ತಂದು ಟೇಬಲ್ ಕ್ಲೀನ್ ಮಾಡುತ್ತಾರೆ.. !!

    ಅವರದು ಒನ್ ಮ್ಯಾನ್ ಷೋ" ಹೊಟೆಲ್..!!!.

    ಆದರೆ ರಾಯರ ಹೊಟೆಲ್ಲಿನ ಮಿಸಳ್ ಭಾಜಿ ಮಾತ್ರ ಸೂಪರ್.. !!!

    ಭಟ್ರೆ... ಬಾಯಲ್ಲಿ ನೀರು ತರಿಸಿದ್ದಕ್ಕೆ ಧನ್ಯವಾದಗಳು...

    ReplyDelete
  7. ಬಾಯಲ್ಲಿ ನೀರೂರಿಸುವ ವರ್ಣನೆ sir.. :) ಉತ್ತರಕನ್ನಡದ ಹಲವು ವೈವಿಧ್ಯಗಳಲ್ಲಿ ಮಿಸಳ್ ಭಾಜಿಯೂ ಒಂದು .... :)

    ReplyDelete
  8. ಭಟ್ರೇ, ಮಿಸಳ್ ಭಾಜಿ ಮತ್ತು ಬನ್ಸ್ ನೆನಪಿಸಿ ಬಾಯಲ್ಲಿ ನೀರೂರುವ೦ತೆ ಬರೆದಿದ್ದೀರಿ. ನಿಮ್ಮ ವರ್ಣನೆ ಓದಿ ಈಗಲೇ ತಿನ್ನಬೇಕೆ೦ಬ ಆಸೆಯಾಗುತ್ತಿದೆ. ಮು೦ದಿನ ಸಲ ಊರಿಗೆ ಹೋದಾಗ ತಿನ್ನಬೇಕಷ್ಟೇ. ತು೦ಬಾ ಚೆನ್ನಾಗಿದೆ.

    ReplyDelete
  9. ತುಂಬಾ ಸೂಪರಾಗಿದೆ ಆರ್ಟಿಕಲ್..

    "ಶಾಸ್ತ್ರ ಶಾಸ್ತ್ರವೆನ್ನುತ್ತಿರುವ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಭಟ್ಟರು ದಾಯಾದರಲ್ಲಿ ಹಡೆದ ಸೂತಕ ಬಂದಾಗ ಇದೇ ಸಮಯವೆಂದು ಹೋಟೆಲಿಗೆ ನುಗ್ಗಿ ತಿಂದು ಜನಿವಾರ ಬದಲಿಸಿಕೊಳ್ಳುವುದು ಇದೇ ಮಿಸ್ಸಳು! "

    ಇಂಥಾ ಡೈಲಾಗ್ ನಿಮ್ಮ ಬರಹದ ಮಿಸಳ್ ಭಾಜಿಯ ಮಸಾಲೆ ಇದ್ದಂಗಿದೆ.

    ೨೮ ವರ್ಷ ಆದ್ರೂ ಅದೇ ಕರಾಳಿಕಡೆಯವನಾದ್ರೂ ಇನ್ನೂ ಮಿಸಳ್ ಬಾಜಿಯ ರುಚಿ ನೋಡಿಲ್ಲ ಅಷ್ಟೇ ಏಕೆ ಇದರ ಹೆಸರೂ ಕೇಳಿಲ್ಲ ಎಂದು ಹೇಳಲು ಖೇದವೆನಿಸುತ್ತೆ :(

    ReplyDelete
  10. ಸುಪರ್ ವಿ ಆರ್ ಭಟ್ರೇ , ಕಾಲೇಜ್ ದಿನಗಳು ಮತ್ತೊಮ್ಮೆ ನೆನಪಾದವು . ಹೌದಲ್ವ ಮಿಸಳ್ ಬಾಜಿ ತಿನ್ನದೇ ಸುಮಾರು 5-6 ವರ್ಷಗಳಾದವು , ಈ ಸಲ ಹೋದಾಗ ಖಂಡಿತ ತಿನ್ನುತ್ತೇನೆ . ಹಾಗೆ ನಾವು ಸ್ನೇಹಿತರೆಲ್ಲ ಮಿಸಳ್ , ಸೇವ್ , ಪೂರಿ, ಬನ್ಸ್ , ಬಾಜಿಗಳನ್ನೆಲ್ಲ ತಿಂದು ಹೋಟೆಲ್ ಕ್ಯಾಂಟೀನ್ ನವನಿಗೆ ಲೆಕ್ಕ ತಪ್ಪಿಸುವುದು ಮಿಸಳ್ ಭಾಜಿಯೇ ಆಗಿತ್ತು .

    ReplyDelete
  11. ಭಟ್ಟರೆ,
    ನಿಮ್ಮ ವರ್ಣನೆ ಕೇಳಿ ಬಾಯಲ್ಲಿ ನೀರು ಬಂತು. ಬೆಳಗಾವಿ ವಿಭಾಗದಲ್ಲೂ ಸಹ ಮಿಸ್ಸಳ ಭಾಜಿಗೆ ಸಕತ್ ಡಿಮಾಂಡ ಇದೆ.

    ReplyDelete
  12. Namma Honnavarada asupasinalli ee bhakshya bahala famous. Nanu oorige hodaga tappade thindu baruva item idu.

    Thumba dhanyavada. Meesal hagu Buns thindaste khushi aaythu nimma lekhana odidaga.

    Thumbu manassina dhanyavadagalu!!!

    ReplyDelete
  13. ಬಾಯಲ್ಲಿ ನಿರು ಜನುಗುತ್ತಿದೆ ... ನಿಮ್ಮ ಬರಹದ ರೀತಿಯ ರುಚಿ ಕಂಡು

    ReplyDelete
  14. ಮಿಸಳ್ ಭಾಜಿ ತಿಂದಷ್ಟು ರುಚಿ ರುಚಿ !! ಬರಹ ರುಚಿ ಸವಿದ ನೆನಪು ಮೂಡಿಸಿ ಬಾಯಲ್ಲಿ ನೀರೂರಿಸಿದೆ .ಭಟ್ರೇ ಭಾರಿ ಚಲೋ ಆಯ್ತು ಬಿಡ್ರೀ

    --
    ಪ್ರೀತಿಯಿಂದ ನಿಮ್ಮವ ಬಾಲು.

    ReplyDelete
  15. ಬರಹ ತುಂಬಾ ಚನ್ನಾಗಿತ್ತು. ಮನವು ಮಿಸಳ್ ಬಾಜಿಯನ್ನು ನೆನೆಯುತಿದೆ.

    ReplyDelete
  16. ಮನುಷ್ಯನ ಸಹಜ ವಾಂಛೆ ಒಳ್ಳೆಯ,ಉತ್ತಮ, ರುಚಿಕಟ್ಟಾದ ಆಹಾರ ಅಲ್ಲವೇ ? ಅದರಲ್ಲೂ ಒಂದೊಂದು ಕಡೆಯ ಭಿನ್ನತೆಯನ್ನು ನೆನೆಸಿಕೊಂಡರೆ ಆಯಾಯ ರುಚಿಯನ್ನು ಮಾಡಿಬಡಿಸಲೆಂದೇ ಅವರೆಲ್ಲಾ ಹುಟ್ಟಿದರೇ ಎನಿಸುತ್ತದೆ. ಓದಿದ, ಓದುವ ಹಾಗೂ ಮೆಚ್ಚಿಕೊಂಡ ಎಲ್ಲರಿಗೂ ಅನಂತ ವಂದನೆಗಳು

    ReplyDelete
  17. ಸಿರ್ಸಿ ರೂಮಿನಲ್ಲಿ ಎರಡು ವರ್ಷ,
    ಸಂಜೆ ಹೊಟ್ಟೆ ತುಂಬಿಸಿದ ನಳಪಾಕ ಅದು,
    ಮತ್ಯಾರೋ ಬರುತ್ತಾರೆಂದು ,ಮಾಣಿಗಳ ಜೊತೆ ಕೂತಾಗ ,
    ಬಾಯಿ ಬಿಸಿ ಮಾಡಿದ ತಿಂಡಿ ಅದು

    ಮನೆಯಿಂದ ರಜೆ ಮುಗಿಸಿ ಬಂದಾಗ,
    ರಾತ್ರಿ ಊಟವಾಗಿದ್ದು ಅದು
    ಮೊನ್ನೆ ಹಬ್ಬಕ್ಕೆ ಮನೆಗೆ ಹೊದಾಗ
    ರೂಮಿನ ನಮ್ಮ ಹುಡುಗರಿಗೆ ಕೊಡಿಸಿದ್ದು ಅದು .

    ಅಪ್ಪನ ಹತ್ತಿರ ದೋಸೆ,ಇಡ್ಲಿ ಲೆಕ್ಕ ಹೇಳಿ
    ಬೆರಳೆಣಿಸಿ ತಿಂದಿದ್ದು ಅದು ..
    ಟ್ವೆಂಟಿ ಮ್ಯಾಚು ನೊಡಲು ಹೊದಾಗ
    ಕಳ್ಳ ಹಸಿವಿಗೆ ತಿಂದಿದ್ದು ಅದು

    ಅಷ್ತೇ ಎಕೆ ? ನನ್ನ ಮೊದಲ
    ಬರ್ತ್ ಡೇ ಪಾರ್ಟಿಯ ದುಬಾರಿ ತಿಂಡಿ ಅದು
    ಎನೂ ಕೆಲಸವಿಲ್ಲವೆಂದು ,ಸುಮ್ಮನೆ ಒಡಾಡುತ್ತಿದ್ದಾಗ
    ಸಾಥ್ ಕೊಟ್ಟ ಗೆಳೆಯ ಅದು!!!!!!


    ಬೆಳಗಿಂದ ಕ್ರಿಕೆಟ್ ಆಡಿ,ಸುಸ್ತಾದಾಗ
    ಲೋಕಲ್ ಮ್ಯಾಂಗೋದ ಜೊತೆಗಾಗಿದ್ದು ಅದು
    ಇಂದು ,ಸಂಜೆ ಹೊತ್ತಿಗೆ ಚಾಟ್ಸ್ ಅಂದ ಕೂಡಲೆ
    ನೆನಪಾಗುವುದೇ ಅದು!!!!!!



    ಥಾಂಕ್ಸು...... ಸುರಭಿ ಹೊಟೆಲ್ ಮಂಜಣ್ಣಂಗೆ!!!!!

    ReplyDelete