ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, November 30, 2010

ರಂಗೀ ನಿನ್ ಕಂಡಮ್ಯಾಗ

ಚಿತ್ರಋಣ : ಅಂತರ್ಜಾಲ
ರಂಗೀ ನಿನ್ ಕಂಡಮ್ಯಾಗ

[ಇದೊಂದು ಹೊಸತನದ ಗೀತೆ, ಹರೆಯದ ಹುಡುಗ ಚಳಿಯಲ್ಲಿ ಸುಂದರವಾದ ಹುಡುಗಿಯನ್ನು ಕಂಡು ತನ್ನೊಳಗೇ ತಾನು ಗುನುಗುನಿಸಿ ರಾಗವಾಗಿ ಹಾಡಿಕೊಳ್ಳುವ ಸನ್ನಿವೇಶ. ಗುರು ಬೇಂದ್ರೆಯವರ ಒಂದು ಪಿಂಚ್ ಕೊಟ್ಟು ಜನಪದ ಶೈಲಿಯಲ್ಲಿ ಹೊಸೆದ ಹಾಡು[ಫ್ಯುಶನ್]. ಹರೆಯದ ಮಿತ್ರರೆಲ್ಲಾ ಒಮ್ಮೆ ಕುಣಿಯಲಿ ಎಂಬ ಭಾವನೆಯಿಂದ ಪ್ರಕಟಿಸುತ್ತಿದ್ದೇನೆ. ]


ರಂಗೀ ನಿನ್ ಕಂಡಮ್ಯಾಗ
ಮಂಗನಂತಾಗಿ ಹೋದೆ
ಅಂಗಳದ ತುಂಬಾ ನವಿಲ್ ಕುಣಿದು
ಬಂಗಾರದಂಥಾ ನಿನ್ನ
ಚಂಗನೇ ಹಿಡಿದೆತ್ಕೊಂಡು
ರಂಗಿನಾ ಕೆಂಪು ತುಟಿಗೆ ತುಟಿಯ ಹಿಡಿದು

ಮಂಗಳದಾ ಮೂಗುತಿಯಲ್ಲಿ
ಸಿಂಗಾರಕೆ ಚಂದದ ಹರಳು
ಸಂಗಾತಿಯಾಗಿ ಜತೆಗೆ ಬರುತೀಯಾ ?
ತಿಂಗಳು ಹರಡಿದ ರಾತ್ರಿ
ತೆಂಗಿನ ತೋಟದ ನಡುವೆ
ಕಂಗು ವೀಳೆಯದೆಲೆ ತರುತೀಯಾ?

ರಿಂಗಣಿಸುವ ಕಾಲಿನಗೆಜ್ಜೆ
ಮುಂಗುರುಳಿನ ತೂಗುಯ್ಯಾಲೆ
ಮುಂಗಾರು ಮಳೆಯ ಸುರಿಸಿ ಎದೆಯೊಳಗೆ
ನಿಂಗೇನ್ ಗೊತ್ ನನ್ ಪರಿಪಾಟ ?
ಅಂಗಾಂಗದಾ ಹೊಯ್ದಾಟ
ಭಂಗವದು ಹೇಳತೀರ ಮನದೊಳಗೆ !

ರಂಗೇರಿಸೊ ಈ ಚಳಿಯಲ್ಲಿ
ಕಂಗೊಳಿಸುವ ರೂಪ ನೆನೆದು
ತುಂಗಾನದಿಗೆ ನೆಗಸು ಬಂದಂತೇ !
ರಂಗೀ ಎನ್ನುತ್ತಾ ಕರೆದು
ಪುಂಗಿ ಊದುತ್ತ ದಣಿದು
ನಿಂಗಾಗಿ ಬಾಳಾ ದಿನ ಕಾದುಕುಂತೇ !

ಹಂಗ್ಯಾಕ ಮಾಡ್ಲಾಕ ಹತ್ತಿ ?
ಹೀಂಗ ನೀ ಬಾರಾ ಇಲ್ಲಿ
ಹೆಂಗಾದ್ರೂ ನಾವು ಮುಂದೆ ಒಂದೇನ
ನಂಗಂತೂ ನೀನ ಬೇಕು
ನಿಂಗೂ ನನ್ ಸಂಗಾ ಬೇಕು
ಮಂಗಳವಾದ್ಯ ಬೇಗ ತರಸ್ತೇನ !



Monday, November 29, 2010

ಟಾಟಾರನ್ನು ನೋಡಿ ಕಲಿಯೋಣ




ಟಾಟಾರನ್ನು ನೋಡಿ ಕಲಿಯೋಣ

ನಮ್ಮ ಭಾರತದಲ್ಲಿ ನೈತಿಕತೆಗೆ ಅತಿಯಾದ ಪ್ರಾಮುಖ್ಯತೆ ಕೊಡುವ ಏಕೈಕ ಸಂಸ್ಥೆ ಎಂದರೆ ಅದು ಟಾಟಾ ಗ್ರೂಪ್ ! ಭಾರತದ ಸರಕಾರಕ್ಕೇ ಇರದ ಜವಾಬ್ದಾರಿಯುತ ಕೆಲಸಗಳನ್ನು ಟಾಟಾ ಸಂಸ್ಥೆಗಳು ಮಾಡಿವೆ. ಟಾಟಾ ಅಂದರೇ ಭಾರತ ಎನ್ನುವಷ್ಟು ಅನ್ಯೋನ್ಯ ಸಂಬಂಧ ಪ್ರಜೆಗಳಿಗಿದೆ, ಆದರೆ ನಮ್ಮನ್ನು ಆಳುವ ಪ್ರಭುಗಳಿಗಳಿಗಿಲ್ಲ ! ಮೊನ್ನೆ ಮೊನ್ನೆ ಶ್ರೀ ರತನ್ ಟಾಟಾ ಹೇಳಿದ್ದಾರೆ : " ೧೫ ವರ್ಷಗಳ ಹಿಂದೆ ನಮಗೆ ವಿಮಾನೋದ್ಯಮಕ್ಕೆ ಪರವಾನಿಗೆ ಕೊಡಲು ಕೇಳಿದಾಗ ೨೦ ಕೋಟಿ ಲಂಚ ಕೇಳಿದರು " ಎಂದು. ಟಾಟಾ ಜನರಿಗೆ ಲಂಚ ಕೊಟ್ಟಾಗಲೀ ಪಡೆದಾಗಾಲೀ ಗೊತ್ತಿಲ್ಲ ! ಅವರು ಅತ್ಯಂತ ಪ್ರಾಮಾಣಿಕರು.

ಬ್ರಿಟಿಷರು ಭಾರತವನ್ನು ದೋಚಿದರು ಎಂದು ಬೊಬ್ಬಿರಿಯುವ ನಾವೆಲ್ಲಾ ನಮ್ಮ ಕಳ್ಳ ರಾಜಕಾರಣಿಗಳು ಕೊಳ್ಳೆಹೊಡೆದು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದನ್ನು ಮರೆತುಬಿಟ್ಟಿದ್ದೇವೆ ! ಇದನ್ನೆಲ್ಲಾ ಹೇಳಲು ಕೇಳಲು ಜನವೇ ಇಲ್ಲ. ರಾಜಕಾರಣಿಗಳೆಲ್ಲರೂ ಒಂದೇ ದೋಣಿಯ ಕಳ್ಳರಾಗಿರುವುದರಿಂದ ಹೊರಜಗತ್ತಿಗೆ ಕಾಣುವ ಅವರ ಮುಖಗಳೇನೇ ಇದ್ದರೂ ಒಳಗಡೆಯ ರಾಜಕೀಯದ ಜಗತ್ತೇ ಬೇರೆ! ಅಲ್ಲಿ ಅವರವರಲ್ಲೇ ಪಕ್ಷಭೇದ ಮರೆತ ಗೆಳೆತನವಿರುತ್ತದೆ ! ಕೊಂದ ಪ್ರಾಣಿಯನ್ನು ಹರಿದು ತಿನ್ನುವ ಹೈನಾ ಅಥವಾ ಕತ್ತೆಕಿರುಬನ ಜಾತಿಗೆ ಅವರನ್ನು ಹೋಲಿಸಬಹುದು. ಹೊಟ್ಟೆಗಾಗಿ ಏನನ್ನೂ ಮಾಡಲು ಹೇಸದ ಪ್ರಾಣಿ ಕತ್ತೆಕಿರುಬ, ಇಲ್ಲಿ ಹಣಕ್ಕಾಗಿ ಏನೂ ಮಾಡಲು ಹೇಸದವರು ರಾಜಕಾರಣಿಗಳು--ಇದೊಂದೇ ವ್ಯತ್ಯಾಸ! ಮೊದಲಾಗಿ ಚುನಾವಣೆಗೆ ನಿಂತು ಹೆಂಡತಿಯ ಸೆರಗನ್ನು ಹಿಡಿದು ಮತದಾನಮಾಡಿ ಎಂದು ಬಡ ಭಿಕ್ಷುಕನ ಥರ ಬಂದ ಯಾವನೇ ಒಬ್ಬ ವ್ಯಕ್ತಿ ಶಾಸಕನಾದ ಐದುವರ್ಷಗಳಲ್ಲಿ ಅತಿ ಶ್ರೀಮಂತನಾಗಿ ಬದಲಾಗುವುದು ನಮ್ಮಂತಹ ಬಡಪಾಯಿಗಳ ಕಣ್ಣಿಗೆ ಕಾಣದ ಹಗಲುದರೋಡೆಯಿಂದ !

ತಮ್ಮ ಗುರುವಾದ ಜರಾತುಷ್ಟ್ರರನ್ನು ಜತೆಯಾಗಿ ಭಾರತಕ್ಕೆ ಆಶ್ರಯಬೇಡಿ ಬಂದವರು ಪಾರ್ಸಿಗಳು. ಅವರು ಮೊದಲು ಬಂದಿಳಿದದ್ದು ಗುಜರಾತ್ ರಾಜ್ಯಕ್ಕೆ. ಹಾಗೆ ಅಲ್ಲಿಗೆ ಬಂದಾಗ ಗುಜರಾತ್ ಪ್ರಾಂತವನ್ನಾಳುತ್ತಿದ್ದ ಭಾರತದ ದೊರೆ ಅವರಿಗೆ ದೂತನ ಮೂಲಕ ಕಳುಹಿಸಿದ್ದು ತುಂಬಿದ ಹಾಲಿನ ಟಾಕಿ ಅಥವಾ ಕರಂಡಕ[ಮಿಲ್ಕ್ ಟ್ಯಾಂಕ್]. ಅದು ಸಾಂಕೇತಿಕವಾಗಿ ನಮ್ಮ ರಾಜ್ಯ ಜನರಿಂದ ತುಂಬಿದೆ, ಇಲ್ಲಿ ಹೊರದೇಶದ ಪ್ರಜೆಗಳಿಗೆ ಜಾಗವಿಲ್ಲಾ ಎಂಬುದು ಹೇಳಿಕೆ. ಆಗ ಗುರು ಜರಾತುಷ್ಟ್ರರು ಅಲೋಚಿಸಿ ಒಂದಷ್ಟು ಸಕ್ಕರೆಯನ್ನು ಆ ಹಾಲುತುಂಬಿದ ಕರಂಡಕಕ್ಕೆ ಸುರುವಿ ಅದೇ ದೂತನ ಮೂಲಕ ಮರಳಿ ಆ ರಾಜನಿಗೆ ಕಳುಹಿಸುತ್ತಾರೆ; ಅದರೊಡನೆ ಒಂದು ವಿನಂತಿ ಪತ್ರ ಏನೆಂದರೆ ತಮ್ಮನ್ನು ನಿಮ್ಮ ರಾಜ್ಯಕ್ಕೆ ಸೇರಿಸಿಕೊಂಡರೆ ತಮ್ಮ ಜನ ನಿಮ್ಮಲ್ಲೇ ಒಂದಾಗಿ ನಿಮ್ಮೆಲ್ಲರಿಗಾಗಿ, ನಿಮ್ಮ ರಾಜ್ಯಕ್ಕಾಗಿ[ದೇಶಕ್ಕಾಗಿ] ಆದಷ್ಟೂ ಒಳಿತನ್ನು ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತೇವೆ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಆದಷ್ಟೂ ಪ್ರಾಮಾಣಿಕ ಪ್ರಯತ್ನಮಾಡುತ್ತೇವೆ. ರಾಜ ಆ ವಿನಂತಿಯಿಂದ ಸಂತುಷ್ಟನಾದ. ಪಾರ್ಸಿಗಳನ್ನು ರಾಜ್ಯಕ್ಕೆ ಸೇರಿಸಿಕೊಂಡ !

ತಮ್ಮ ಗುರು ಆ ಕಾಲಕ್ಕೆ ಕೊಟ್ಟ ವಚನವನ್ನು ಪಾರ್ಸಿಗಳು ಪಾಲಿಸುತ್ತಲೇ ಬಂದರು. ಧರ್ಮಭೀರುಗಳಾದ ಅವರು ಯಾವುದೇ ಅನೈತಿಕ ಹಾಗೂ ಧರ್ಮಬಾಹಿರ ಕೆಲಸಗಳಲ್ಲಿ ತೊಡಗುವವರಲ್ಲ. ಇಂತಹ ಜನಾಂಗದಲ್ಲಿ ಭಾರತದ ಭಾಗವೇ ಆಗಿ ಜನಿಸಿದವರು ದಿ| ಶ್ರೀ ಜೆ.ಎನ್.ಟಾಟಾ. ಅವರು ಆರಂಭಿಸುವುದಕ್ಕೂ ಮುನ್ನ ಭಾರತದಲ್ಲಿ ಸರಿಯಾದ ಕೈಗಾರಿಕಾ ವಸಾಹತುಗಳೇ ಇರಲಿಲ್ಲ, ಜಲವಿದ್ಯುತ್ ಸ್ಥಾವರಗಳಿರಲಿಲ್ಲ, ಕಬ್ಬಿಣ-ಉಕ್ಕು ಕಾರ್ಖಾನೆಗಳಿರಲಿಲ್ಲ, ದೊಡ್ಡ ಬಟ್ಟೆ ಗಿರಣಿಗಳಿರಲಿಲ್ಲ ಹೀಗೇ ಒಂದಲ್ಲ ಎರಡಲ್ಲ..ಹತ್ತು ಹಲವು ಪ್ರಥಮಗಳಿಗೆ ಕಾರಣರಾದವರು ಜೆ.ಎನ್.ಟಾಟಾ. ಭಾರತದ ಉನ್ನತಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಮಹಾವಿದ್ಯಾಲಯವೊಂದು ಬೇಕು ಎಂದು ಕನಸುಕಂಡು, ಬ್ರಿಟಿಷ್ ರಾಯಭಾರಿಗಳೊಂದಿಗೆ ನೈತಿಕವಾಗಿ ಹೋರಾಡಿ ಅದನ್ನು ಸಮರ್ಥಿಸಿ ಅನುಮತಿ ಪಡೆದು ಅಂತೂ ತಮ್ಮ ಮರಣಾನಂತರವೂ ಅದು ಸಾಧ್ಯವಾಗಿ ಬೆಂಗಳೂರಿನಲ್ಲಿ ಟಾಟಾ ಇನ್ಸ್‍ಟಿಟ್ಯೂಟ್ ಅಥವಾ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಗೆ ಕಾರಣರಾದವರೂ ಅವರೇ.

ಇಂತಹ ಜನಾಂಗದ ಇನ್ನೊಂದು ಕುಡಿ ಮತ್ತು ಜೆ.ಎನ್.ಟಾಟಾರವರ ಸಹೋದರ ಸಂಬಂಧಿ ದಿ| ಶ್ರೀ ಜೆ.ಆರ್.ಡಿ ಟಾಟಾ. ಬ್ರಿಟಿಷರು ಆಳುತ್ತಿದ್ದ ಕಾಲಕ್ಕೇ ಭಾರತಕ್ಕೆ ವಿಮಾನಯಾನವನ್ನು ಮೊದಲಾಗಿ ಪರಿಚಯಿಸಿ, ಅದಕ್ಕೊಂದು ಸ್ಥಾಯೀ ಗೌರವ ಸಿಗುವಂತೇ ಮೌಲ್ಯವರ್ಧಿತ ಸೇವೆ, ನೀತಿ-ನಿಯಮಗಳನ್ನು ರಚಿಸಿ, ಪ್ರಚುರಪಡಿಸಿ ಇಡೀ ಜಗತ್ತಿನಲ್ಲಿ ೧೯೧೪ ರಲ್ಲಿ ಮೊದಲಾಗಿ ಕಾರ್ಯಾರಂಭಮಾಡಿದ ವ್ಯವಸ್ಥಿತ ಅಂತರ್ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ನಮ್ಮ ಭಾರತದ ನೆಲದಲ್ಲಿ ರೂಪಿಸಿದ ಹೆಗ್ಗಳಿಕೆ ಶ್ರೀ ಜೆ.ಆರ್.ಡಿಯವರದು. ಕಾಲಕಾಲಕ್ಕೆ ಸರಕಾರಕ್ಕೆ ಹಲವು ಸಲಹೆಗಳನ್ನು ನೀಡುತ್ತಾ, ಸ್ವತಂತ್ರ ಭಾರತದ ಸರಕಾರದ ಜನ ತಮ್ಮ ವಿಮಾನಯಾನ ಸಂಸ್ಥೆಯನ್ನೂ ಸೇರಿದಂತೇ ಹಲವು ಖಾಸಗಿ ವಿಮಾನಯಾನ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸುವಾಗ ಕೊಟ್ಟ ಕೆಲಸಕ್ಕೆ ಬಾರದ ಪರಿಹಾರ ಧನವನ್ನು ಪರಿಷ್ಕರಿಸಿ ಜಾಸ್ತಿ ಕೊಡುವಂತೇ ವಿನಂತಿಸಿ ಸೋತವರು ಜೆ.ಆರ್.ಡಿ. ಅದೇ ಜನ ಇವರನ್ನು ಏರ್ ಇಂಡಿಯಾ ಇಂಟರ್ನ್ಯಾಶನಲ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ದುಂಬಾಲುಬಿದ್ದಾಗ ಒಲ್ಲದ ಮನಸ್ಸಿನಲ್ಲೇ ಒಪ್ಪಿದವರು ಜೆ.ಆರ್.ಡಿ. ೪೫ ವರ್ಷಗಳ ಸಾರ್ಥಕ, ಸಮರ್ಪಕ ಹಾಗೂ ದಕ್ಷ ಸೇವೆಯನ್ನು ಸಲ್ಲಿಸುತ್ತಿರುವಾಗಲೇ ರಾಜಕೀಯ ನಾಯಕರ ವಿಕೃತ ಮನಸ್ಥಿತಿಗೆ ಸ್ಥಾನ ಕಳೆದುಕೊಂಡವರೂ ಇವರೇ. ೧೯೭೭ ರಲ್ಲಿ ಚುನಾವಣಾ ಪೂರ್ವ ಪಕ್ಷದ ಖರ್ಚಿಗೆ ವಂತಿಗೆ ಎತ್ತಲು ಬಂದ ಮೊರಾರ್ಜಿ ದೇಸಾಯಿಗೆ ಏನನ್ನೂ ಕೊಡದಿದ್ದುದೇ ಕಾರಣವಾಗಿ ಚುನಾವಣೆಯಲ್ಲಿ ಗೆದ್ದುಬಂದು ಪ್ರಧಾನಿಯಾದ ಮೊರಾರ್ಜಿ ತನ್ನ ಈರ್ಷ್ಯೆಯನ್ನು ತೀರಿಸಿಕೊಂಡಿದ್ದು : ಏರ್ ಇಂಡಿಯಾ ಅಧ್ಯಕ್ಷಸ್ಥಾನದಲ್ಲಿದ್ದ ಟಾಟಾರನ್ನು ಏಕಾಏಕಿ ವಜಾಗೊಳಿಸಿರುವುದು ! ೩೦ ಕ್ಕೂ ಹೆಚ್ಚು ವರ್ಷಗಳಲ್ಲಿ ಯಾವುದೇ ಪ್ರತಿಫಲ ತೆಗೆದುಕೊಳ್ಳದೇ ಪ್ರಾಮಾಣಿಕವಾಗಿ ಕೆಲಸಮಾಡಿದ ವ್ಯಕ್ತಿಗೆ ಭಾರತದ ರಾಜಕಾರಣಿಗಳು ಕೊಟ್ಟ ಗೌರವ ಇದು.

ಅವರೇ ಹೇಳುವಂತೇ ತನಗಾಗಿ ಎಂದೂ ಅವರು ಮರುಗಲಿಲ್ಲ. ತಾನೇ ಕಟ್ಟಿಬೆಳೆಸಿದ ಏರ್ ಇಂಡಿಯಾ ಸಂಸ್ಥೆಗೆ ಮಾತೃ ಸದೃಶ ಸಂಬಂಧ ತಮ್ಮದಾದ್ದರಿಂದ ಅಲ್ಲಿರುವ ಎಲ್ಲಾ ಕೆಲಸಗಾರರ ಹಿತಾರ್ಥ, ಅವರೆಲ್ಲರ ನಾಡಿಮಿಡಿತವನ್ನು ಬಲ್ಲ ತನ್ನನ್ನು ಹೊರದಬ್ಬಿದ್ದು ತಾಯ ತೋಳ್ತೆಕ್ಕೆಯಲ್ಲಿರುವ ಮಗುವೊಂದನ್ನು ಎಳೆದುಕೊಂಡು ತಾಯನ್ನು ಹೊರದೂಡಿದ ರೀತಿಯಲ್ಲಿ ಭಾಸವಾಯಿತು. ಇಂತಹ ಒಳ್ಳೆಯ ಟಾಟಾ ಗುಂಪಿನ ಇವತ್ತಿನ ಯಜಮಾನ ಶ್ರೀ ರತನ್ ಟಾಟಾ ಕಳೆದ ೧೫ ವರ್ಷಗಳ ಹಿಂದೆ ತಮ್ಮ ದೂರದರ್ಶಿತ್ವದಿಂದ ತಮ್ಮ ಖಾಸಗೀ ವಿಮಾನಯಾನ ಸಂಸ್ಥೆಯೊಂದನ್ನು ನಡೆಸಲು ಪರವಾನಿಗೆ ಬಯಸಿದ್ದರು. ಆಗ ಪ್ರಸ್ತಾಪವಾಗಿದ್ದೇ ’ಲಂಚ.’ ಇವತ್ತು ಕರ್ನಾಟಕದಲ್ಲಿ ಕೂತು ಕೂಗುತ್ತಿರುವ ಸಿ.ಎಮ್ ಇಬ್ರಾಹಿಂ ಆಗಲೀ ಅಥವಾ ಮತ್ಯಾರೇ ಆಗಲಿ ನಮಗೆ ಅವರ ಪ್ರಾಮಾಣಿಕತೆಯ ಬಗ್ಗೆ ಹೊಸದಾಗಿ ತಿಳಿಸಿಹೇಳಬೇಕಿಲ್ಲ! ಭಾರತದ ಕೆಲವಾದರೂ ಪ್ರಜೆಗಳಿಗೆ ಟಾಟಾ ಯಾರೆಂಬುದು ಗೊತ್ತು.

ಟಾಟಾ ಸಂಸ್ಥೆಯಲ್ಲಿ ಕೆಲಸಮಾಡಿದ ಯಾವುದೇ ಸಿಬ್ಬಂದಿಯನ್ನು ನೀವು ಕೇಳಿ--ಯಾರೊಬ್ಬರೂ ತಮಗೆ ಅನ್ಯಾಯವಾಗಿದೆ ಎನ್ನುವುದಿಲ್ಲ. ಟಾಟಾ ಸಂಸ್ಥೆಗಳ ಮೂಲ ಸಂಸ್ಕಾರವೇ ಅಂಥದ್ದು. ಅಲ್ಲಿ ಯಾವುದೇ ರುಷುವತ್ತುಗಳಿಗೆ ಅವಕಾಶವಿಲ್ಲ, ಪ್ರಲೋಭನೆಯ ಛಾಯೆಯೂ ಇಲ್ಲ. ನಮ್ಮಲ್ಲಿ ಕಾರ್ಯದಕ್ಷತೆಯಿದ್ದರೆ ಅವರಲ್ಲಿ ತಕ್ಕ ಜಾಗವಿದ್ದರೆ ಕರೆದುಕೊಡುವ ಔದಾರ್ಯವುಳ್ಳವರು ಟಾಟಾ ಮಾಲೀಕರು. ಮಾಲೀಕರಿದ್ದರೆ ಎಂಥಾಮಾಲೀಕರಿರಬೇಕು ಎಂಬುದಕ್ಕೆ ಇವತ್ತು ಬೆರಳಿಟ್ಟು ತೋರಿಸಬಹುದಾದರೆ ಅದು ಟಾಟಾ ಒಬ್ಬರೇ ಎಂದರೂ ತಪ್ಪಾಗಲಾರದೇನೋ. ಹಾಗಂತ ನಾನು ಟಾಟಾ ಉದ್ಯೋಗಿಯಲ್ಲ. ಆದರೆ ಟೈಟನ್ ಸಂಸ್ಥೆಗೆ ಮೊದಲಾಗಿ ನಾವು ಒಂದಷ್ಟು ಗಣಕಯಂತ್ರಗಳನ್ನು ಮಾರಿದಾಗ ಅವರು ಕಳುಹಿಸಿಕೊಟ್ಟ ಮಾಹಿತಿಯೇ - ’ ಲರ್ನ್ ಟಾಟಾ ಕಲ್ಚರ್ ’ ಎಂಬ ಪತ್ರ. ಅದರಲ್ಲಿ ಅವರ ಕಂಪನಿ ಹೇಗೆ ವ್ಯವಹರಿಸುತ್ತದೆ, ಸಾಮಾನು ಒದಗಿಸುವ ಬೇರೇ ಕಂಪೆನಿಗಳಿಗೆ ಯಾವಾಗ ಹಣವನ್ನು ಪಾವತಿಸುತ್ತದೆ ಎಂಬ ಎಲ್ಲಾ ಮಾಹಿತಿಗಳೂ ಇದ್ದವು. ೧೫ ದಿನವೆಂದರೆ ಒದಗಿಸಿಕೊಟ್ಟಾನಂತರ ಸರಿಯಾಗಿ ೧೫ ದಿನಕ್ಕೆ ನಮಗೆ ಚೆಕ್ ಕಳುಹಿಸುತ್ತಿದ್ದರು! ತಡವೂ ಇಲ್ಲ ಮೊದಲೂ ಇಲ್ಲ. ಹೀಗೇ ಟಾಟಾ ವ್ಯವಹಾರದ ವೈಖರಿಯೇ ಚಂದ.

ಎಲ್ಲೋ ಹುಟ್ಟಿ, ಬೆಳೆದು, ನಿರ್ವಾಹವಿಲ್ಲದೇ ವಲಸಿಗರಾಗಿ ಭಾರತಕ್ಕೆ ಬಂದು, ಗುರುವು ಕೊಟ್ಟ ಮಾತಿಗೆ ತಕ್ಕುದಾಗಿ ಭಾರತದ ಸರ್ವತೋಮುಖ ಏಳ್ಗೆಗೆ ಕಾರಣರಾದ ಪಾರ್ಸಿಗಳು ಅದರಲ್ಲೂ ಟಾಟಾಗಳು ನಿಜಕ್ಕೂ ಸ್ತುತ್ಯಾರ್ಹರು. ಭಾರತ ತಮ್ಮದೇ ರಾಷ್ಟ್ರ, ತಮ್ಮದೇ ತಾಯ್ನೆಲ ಎಂಬಂತೇ ನಮ್ಮೆಲ್ಲರಲ್ಲಿ ಒಂದಾದ ಪಾರ್ಸಿಗಳು ಹಾಲಲ್ಲಿ ಹಾಕಿದ ಸಕ್ಕರೇಯೇ ಸರಿ ಎನ್ನೋಣವೇ ?

ಪ್ರಾಮಾಣಿಕತೆಗೆ ಬಹಳ ಬೆಲೆಯಿದೆ. ಒಮ್ಮೆ ವಿಶ್ವಾಸವನ್ನು ಕಳೆದುಕೊಂಡರೆ ಮತ್ತೆಂದೂ ಅದನ್ನು ಮರಳಿಪಡೆಯಲಾಗುವುದಿಲ್ಲ. ನಮ್ಮ ಹಿರಿಯರು ಹೇಳುತ್ತಿದ್ದುದೂ ಇದನ್ನೇ. ಹರಕು ಬಟ್ಟೆ ತೊಟ್ಟರೂ ಚಿಂತೆಯಿಲ್ಲ, ಹೊಟ್ಟೆಗೆ ಒಂದೇ ಹೊತ್ತು ಉಂಡರೂ ಚಿಂತೆಯಿಲ್ಲ ಆದರೆ ಯಾವುದೇ ಕಾಲಕ್ಕೂ ವ್ಯಾವಹಾರಿಕ ಯಾ ಲೌಕಿಕ ಆಚಾರ-ಆಚರಣೆಗಳಲ್ಲಿ ವಿಶ್ವಾಸ ಅತೀ ಮುಖ್ಯ. ನಾಲಿಗೆಗೆ ಮಹತ್ವ ಅರ್ಥಾತ್ ನಾವು ಕೊಡುವ ವಚನಕ್ಕೆ ಮಹತ್ವ. ಚಕ್ರವರ್ತಿ ಬಲಿ ತನ್ನನ್ನು ’ವಚನಬ್ರಷ್ಟ’ ಎಂದು ವಾಮನರೂಪೀ ಮಹಾವಿಷ್ಣು ಛೇಡಿಸತೊಡಗಿದಾಗ ಕುಗ್ಗಿಹೋಗಿ ಬೇಡಿಕೊಂಡ ಒಂದೇ ಒಂದು ಅಂಶ " ಮಹಾನುಭಾವನೇ ನನ್ನಿಂದ ಏನೇ ಹೋದರೂ ಚಿಂತೆಯಿಲ್ಲ...ಆದರೆ ವಚನಬ್ರಷ್ಟ ಎಂದು ಮಾತ್ರ ಹೇಳಬೇಡ." ಹೀಗೆನ್ನುತ್ತಾ ಕೊಡಲಾಗದ ಮೂರನೇ ಹೆಜ್ಜೆಯ ಜಾಗಕ್ಕೆ ತನ್ನ ಶಿರವನ್ನೇ ಪ್ರತಿಯಾಗಿ ಕೊಟ್ಟು ತನ್ಮೂಲಕ ಆಡಿದ ಮಾತಿನಂತೇ ನಡೆದ ಶ್ರೇಷ್ಠ ವ್ಯಕ್ತಿ. ಪರಿಣಾಮ ಸಾಕ್ಷಾತ್ ದೇವರೇ ಆತನ ಬಾಗಿಲನ್ನು ಕಾಯುವ ಭಟನಾಗಿ ವರ್ಷದಲ್ಲಿ ಮೂರುದಿನ ನಿಲ್ಲುವುದು ಆತನಿಗೆ ಸಿಕ್ಕ ಗೌರವ !

ಬದುಕಿದರೆ ಬದುಕೋಣ ಪ್ರಾಮಾಣಿಕರಾಗಿ, ವಿಶ್ವಾಸಕ್ಕೆ ಒಡಂಬಡಿಸುವ ಭಾರತ ಕಟ್ಟುವವರಾಗಿ, ಕಲಿಯೋಣ ಈ ತತ್ವವನ್ನು ಟಾಟಾರವರನ್ನು ತಿಳಿದವರಾಗಿ, ಆಗ ಮಾತ್ರ ನಾವು ಬೆಳೆಯಲು ಸಾಧ್ಯ, ಬ್ರಷ್ಟಾಚಾರ ನಿರ್ಮೂಲನೆಯಾಗಲು ಸಾಧ್ಯ.

Saturday, November 27, 2010

'ನಿಮ್ಮೊಡನೆ ವಿ.ಆರ್. ಭಟ್ ' ಗೆ ವರ್ಷದ ಸಂಭ್ರಮ

'ನಿಮ್ಮೊಡನೆ ವಿ.ಆರ್. ಭಟ್ ' ಗೆ ವರ್ಷದ ಸಂಭ್ರಮ

ಸಹೃದಯೀ ಮಿತ್ರರೇ, ಹೃತ್ಪೂರ್ವಕ ನಮಸ್ಕಾರಗಳು.


ತಾವು ಈ ಮಿಂಚಂಚೆಯನ್ನು ತಮ್ಮ ಕ್ಷೇಮದಲ್ಲಿ ಓದುತ್ತೀರೆಂದು ಭಾವಿಸುತ್ತೇನೆ, ಮತ್ತು ಸತತವಾಗಿ ತಮ್ಮೆಲ್ಲರ ಹಿತವನ್ನು ಬಯಸುವವನಾಗಿದ್ದೇನೆ.

ದಿನಗಳು ಉರುಳುವುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಎಷ್ಟುದಿನಗಳು ಉರುಳಿದವು ಎನ್ನುವುದು ನೆನೆಪಿನಲ್ಲಿ ಉಳಿಯುವುದು ಕಮ್ಮಿ. ಹೀಗೇ ಕುಳಿತು ಉರುಳುವ ದಿನಗಳ ಲೆಕ್ಕಾಚಾರ ಹಾಕುತ್ತಾ ಇದ್ದಾಗ ಗೋಚರವಾಗಿದ್ದು ನನ್ನ ಬ್ಲಾಗ್ ನ ವಿಷಯ. ’ನಿಮ್ಮೊಡನೆ ವಿ.ಆರ್.ಭಟ್’ ಎಂಬ ನನ್ನ ಬ್ಲಾಗ್ ಅನಿರೀಕ್ಷಿತವಾಗಿ ಆರಂಭಿಸಿದೆ. ಅಂದಿನಿಂದಾರಭ್ಯ ಇಲ್ಲೀವರೆಗೆ ೨೪ ವಿಭಿನ್ನ ಮಾಲಿಕೆಗಳ ದ್ವಾರಾ ೨೫೬ ಕೃತಿಗಳನ್ನು ತಮಗೆಲ್ಲಾ ಓದಬಡಿಸಿದ್ದೇನೆ. ಇದೇ ಡಿಸೆಂಬರ್ ೩ನೇ ದಿನಾಂಕಕ್ಕೆ ಒಂದು ವರ್ಷವನ್ನು ಪೂರೈಸುತ್ತದೆ. ಈ ಎಲ್ಲಾ ದಿನಗಳಲ್ಲಿ ನಿಮಗೆ ಓದಿಸಿರುವ ಕೃತಿಗಳಲ್ಲಿ, ಬರೆದಿರುವ ಪತ್ರಗಳಲ್ಲಿ ಕಾರಣಾಂತರಗಳಿಂದ ಬೇಸರವನ್ನೋ, ವಿಷಾದವನ್ನೋ, ನೋವನ್ನೋ ಗೊತ್ತಿದ್ದೋ ಗೊತ್ತಿಲ್ಲದೆಯೋ ಉಂಟುಮಾಡಿದ್ದರೆ ಮನೆಯ ಸದಸ್ಯನೋಪಾದಿಯಲ್ಲಿ ಇದನ್ನೆಲ್ಲಾ ನೀವು ಕ್ಷಮಿಸಿದ್ದೀರಿ,ನನ್ನ ಜೊತೆ ಬೆನ್ನು ತಟ್ಟುತ್ತಾ ಹಾಗೇ ನಡೆದುಬಂದಿದ್ದೀರಿ.

ಸಂಗೀತ, ಸಾಹಿತ್ಯ, ಕಲೆ - ಈ ಮೂರು ಮನುಷ್ಯ ಜೀವನಕ್ಕೆ ದೈವನೀಡಿದ ಉದ್ದಾತ್ತ ದೇಣಿಗೆಗಳು. ಪಶುವಿಗೂ ಮನುಜನಿಗೂ ಇರುವ ಹಲವು ಭೇದಗಳಲ್ಲಿ ಇವೂ ಒಂದೊಂದು. ಅದರಲ್ಲಂತೂ ಸಾಹಿತ್ಯ ಮತ್ತು ಸಂಗೀತಕ್ಕೆ ಇರುವ ಸಂಬಂಧ ದೇಹ ಮತ್ತು ಆತ್ಮಕ್ಕಿರುವ ಸಂಬಂಧವೇ ಸರಿ! ಆತ್ಮವಿರದಿದ್ದರೆ ದೇಹಕ್ಕೆ ಹೇಳುವ ಹೆಸರೇ ಬೇರೆ ಇದೆಯಲ್ಲವೇ ? ಅದೇರೀತಿ ಸಾಹಿತ್ಯವಿರದಿದ್ದರೆ ಸಂಗೀತಕ್ಕೆ ಅಷ್ಟೊಂದು ಮಹತ್ವ ಬರುತ್ತಲೇ ಇರಲಿಲ್ಲ. ಸಂಗೀತ ಸೊನ್ನೆಯಿದ್ದಂತೇ ಅದಕ್ಕೆ ಸಾಹಿತ್ಯ ಸೇರಿದಾಗ ಅದರ ನಿಜವಾದ ಬೆಲೆ ಗೊತ್ತಾಗುತ್ತದೆ! ಸ್ವರಗಳೇ ಸಂಗೀತಕ್ಕೆ ಮುಖ್ಯವಾದರೂ ಬರೇ ಸ್ವರಗಳ ಆಲಾಪನೆಯನ್ನು ಕೇಳುತ್ತಾ ಯಾರೂ ಕುಳಿತುಕೊಳ್ಳುವುದಿಲ್ಲ; ಅದಕ್ಕೆಂತಲೇ ಈ ನಡುವೆ ಸುಗಮ ಸಂಗೀತದ ಕ್ರಾಂತಿಯೇ ಆಯಿತು ಅಲ್ಲವೇ ?

ಓದುಗ ಪ್ರಭುಗಳಾದ ನಿಮ್ಮಿಂದ ಬಂದಿರುವ ಹಲವಾರು ಪ್ರತಿಕ್ರಿಯೆಗಳಿಗೆ ನಾನು ಋಣಿಯಾಗಿದ್ದೇನೆ. ಕೃತಿಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ನಿಮ್ಮಲ್ಲಿ ಎಷ್ಟೋ ಜನ ನನ್ನನ್ನು ಖುದ್ದಾಗಿ ನೋಡಿಲ್ಲ, ಆದರೂ ನೋಡಿದಂತಹ ಅನುಭವವನ್ನು ಹೊಂದಿದ್ದೀರಿ ಎಂದು ನನಗನ್ನಿಸಿದೆ. ನನ್ನ ಬದುಕನ್ನು ಬರವಣಿಗೆಗೆ ಸಾಕಷ್ಟು ಮೀಸಲಿರಿಸಿದ್ದೇನೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃತಿಗಳನ್ನು ವಿವಿಧ ಮಾಧ್ಯಮಗಳಲ್ಲಿ ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ನಿಮಗೆ ಕೊಡಲು ಉದ್ಯುಕ್ತನಾಗಿದ್ದೇನೆ.

ನಿಮ್ಮ ಸಹಕಾರಕ್ಕೆ, ಸಲಹೆಗಳಿಗೆ, ಪ್ರೀತಿಗೆ, ವಿಶ್ವಾಸಕ್ಕೆ ಹೃದಯಾಂತರಾಳದ ಪ್ರೀತಿ-ಭಕ್ತಿ ತುಂಬಿದ ವಂದನೆಗಳನ್ನು ಅರ್ಪಿಸುತ್ತಿದ್ದೇನೆ. ಕಳೆದ ದಿನಗಳಲ್ಲಿ ನೀಡಿದ ನಿಮ್ಮ ಸಹಕಾರವನ್ನು ಸದಾ ಮುಂದುವರಿಸುವಂತೇ ತಮ್ಮಲ್ಲಿ ಭಿನ್ನವಿಸಿಕೊಳ್ಳುತ್ತಿದ್ದೇನೆ. ಅನೇಕ ಜನರು ನನ್ನಲ್ಲಿ ಕೇಳುತ್ತಿದ್ದ ಒಂದೇ ಪ್ರಮುಖ ಪ್ರಶ್ನೆ " ಸರ್ ನೀವು ಯಾಕೆ ಪುಸ್ತಕ ಹೊರತರಬಾರದು ? " ಎಂದು. ಪುಸ್ತಕಗಳನ್ನು ಆಯಾಕಾಲಕ್ಕೆ ಹೊರತರುತ್ತೇನೆ ಎಂಬುದು ನನ್ನ ಉತ್ತರವಾಗಿದೆ. ವಿದ್ಯುನ್ಮಾನ ಪ್ರಸರಣ ಮಾಧ್ಯಮ ಜಾಗತಿಕ ಮಟ್ಟದ್ದು. ಎಲ್ಲೇ ಕುಳಿತವರೂ ನನ್ನ ಕೃತಿಗಳನ್ನು ತಕ್ಷಣಕ್ಕೆ ತೆಗೆದುನೋಡುವ, ಓದುವ ಅವಕಾಶವಿರುವುದು ಈ ಮಾಧ್ಯಮಕ್ಕೆ ಮಾತ್ರ ! ಅದಕ್ಕಾಗಿ ಬ್ಲಾಗೆಂಬುದು ಒಂದರ್ಥದಲ್ಲಿ ಸರ್ವವ್ಯಾಪಿ ಎಂಬುದನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಎಲ್ಲೆಲ್ಲೂ ಇರುವ ಕನ್ನಡ ಸಾಹಿತ್ಯ ಪ್ರೇಮಿಗಳು ಎಲ್ಲೇ ಇದ್ದಾದರೂ ಈ ಸವಲತ್ತನ್ನು ಅನುಭವಿಸಲು ಅನುವು ಮಾಡಿಕೊಟ್ಟ ಗೂಗಲ್ ಸಂಸ್ಥೆಯವರಿಗೆ [ಹಾಗೂ ವರ್ಡ್ ಪ್ರೆಸ್ ಸಂಸ್ಥೆಯವರಿಗೆ] ನಾನು ಕೃತಜ್ಞ.

೩೬೫ ಕೃತಿಗಳನ್ನು ಒದಗಿಸಲಾಗದ್ದಕ್ಕೆ ಕಾರಣಗಳು ಹೀಗಿವೆ:

೧. ಮನೆಯಲ್ಲಿ ಅಂತರ್ಜಾಲಕ್ಕೆ ಇಲ್ಲದ ಕಾಯಿಲೆ ಅಡರಿಕೊಂಡಿದ್ದು.

೨. ದೇಹಾಲಸ್ಯದಿಂದ ನಾನು ಕಳ್ ಬಿದ್ದಿದ್ದು

೩. ಮನೆಯಲ್ಲಿ ನೆಂಟರ ಜಾತ್ರೆ ಜಾಸ್ತಿ ಇದ್ದಿದ್ದು.

೪. ಬೆಂಗಳೂರಿಂದ ಬೇರೆಡೆಗೆ ಹೋಗಿದ್ದು

೫. ಅನಾರೋಗ್ಯ ಪೀಡಿತನಾಗಿ ನಿತ್ರಾಣನಾಗಿ ಬರೆಯದೇ ಇದ್ದಿದ್ದು.

೬. ಕಚೇರಿಯ ಕೆಲಸದ ಅನಿವಾರ್ಯ ಒತ್ತಡ ಬರೆಯಲು ಅಡ್ಡಿಪಡಿಸಿದ್ದು ಮತ್ತು ಇನ್ನೂ ಒಂದೆರಡು ಚಿಲ್ಲರೆ ಕಾರಣಗಳಿವೆ.

ಇವೆಲ್ಲಾ ಕಾರಣವಾಗಿ ೧೦೯ [೩೬೫-೨೫೬=೧೦೯] ಕೃತಿಗಳನ್ನು ನಿಮಗೆ ಕೊಡಲಾಗಲಿಲ್ಲ. ಇದಕ್ಕಾಗಿ ವಿಷಾದಿಸುತ್ತೇನೆ. ಬ್ಯಾಲೆನ್ಸ್ ಶೀಟ್ [ಅಢಾವೆ ಪತ್ರಿಕೆ] ಒಪ್ಪಿಸಿ ಆಯಿತಲ್ಲ ! ಆಯ್ತು ಇವಿಷ್ಟನ್ನು ತಮ್ಮಲ್ಲಿ ಹೇಳಿಕೊಳ್ಳುವುದಿತ್ತು, ಇನ್ನು ನನಗೆ ಮುಂದಿನ ನನ್ನ ಆಖ್ಯಾಯಿಕೆಗಳನ್ನು ಆಡಿತೋರಿಸಲು ನಿಮ್ಮೆಲ್ಲರ ಅನುಮತಿಯನ್ನು ಕೋರಿ ಮುನ್ನಡೆಯುತ್ತಿದ್ದೇನೆ.

ಅನುಕೂಲವಾದಾಗ ಭೇಟಿ ಕೊಡಿ:


ಮತ್ತೊಮ್ಮೆ ಸಿಗೋಣ

ಅನಂತಾನಂತ ಧನ್ಯವಾದಗಳೊಂದಿಗೆ,

ವಿ.ಆರ್.ಭಟ್

------------------------------------------------------


ಹಂದಿಗೆ ಅದೇ ಸುಖ ಇಂದಿಗೆ ಇದೇ ಸುಖ

ಏನಪ್ಪಾ ಚಿತ್ರವಿಚಿತ್ರ ಶಬ್ದಗಳನ್ನು ಕೇಳುತ್ತಿದ್ದೇವಲ್ಲಾ ಎಂಬ ಪ್ರಶ್ನೆ ಉದ್ಭವವಾಯಿತೇ ? ಸಹಜ. ಗೊತ್ತಿರದ ಕೆಲವು ಜಾಣ್ನುಡಿಗಳು ನಮಗೆ ಗೊತ್ತಾದಾಗ ಅವುಗಳ ಅರ್ಥವಾಗಲೀ ವ್ಯಾಪ್ತಿಯಾಗಲೀ ತಿಳಿಯುವವರೆಗೆ ಗೊಂದಲವಾಗುತ್ತದೆ. ಅವುಗಳ ವಿಸ್ತಾರ ತಿಳಿದಾಗ ಹಲವು ಸರ್ತಿ ನಾವೇ ದಂಗಾಗಬೇಕಾಗಿ ಬರುತ್ತದೆ !

ಹಳ್ಳಿಯೊಂದರಲ್ಲಿ ಗಂಡ-ಹೆಂಡತಿ-ಮಕ್ಕಳು ವಾಸವಾಗಿದ್ದರಂತೆ. ಗಂಡ-ಹೆಂಡತಿಯಲ್ಲಿ ಅಗಲಿರಲಾರದ ಅನ್ಯೋನ್ಯತೆಯಿತ್ತು. ಜತೆಗೆ ಮಕ್ಕಳೂ ಕೂಡ ಇದ್ದರಲ್ಲ, ಒಟ್ಟಿನಲ್ಲಿ ಸುಖದಲ್ಲಿ ಸಂಸಾರ ನಡೆದಿತ್ತು. ಹೀಗೇ ದಿನಗಳೆಯುತ್ತಿರಲು ಹೆಂಡತಿ ಯಾವುದೇ ಕುರುಹೂ ಇಲ್ಲದೇ ಹೃದಯಸ್ತಂಭನವಾಗಿ ಕಾಲವಾದಳು. ಕಾಲವಾದ ಹೆಂಡತಿಯನ್ನು ನೆನೆನೆನೆದು ಗಂಡ ಹಾಗೂ ಅವಳ ಮಕ್ಕಳು ಪರಿತಪಿಸುತ್ತಿದ್ದರು.

ಕಾಲಾನಂತರದಲ್ಲಿ ಕೆಲವು ವರ್ಷಗಳಲ್ಲೇ ಮನುಷ್ಯ ತನ್ನ ತೋಟಗದ್ದೆಗಳಲ್ಲಿ ಓಡಾಡುವಾಗ ಹಂದಿಯೊಂದು ಕಣ್ಣಿಗೆ ಬಿತ್ತು. ಅದುತನ್ನ ಮರಿಗಳ ಬಳಗವನ್ನೆಲ್ಲಾ ಕಟ್ಟಿಕೊಂಡು ಅಲ್ಲಿಗೆ ಬಂದಿತ್ತು. ಆತನನ್ನು ಕಂಡ ಹಂದಿಗೆ ಪೂರ್ವಜನ್ಮದ ಸ್ಮರಣೆಯಾಯಿತು. ಹಂದಿನಿಂತಲ್ಲೇ ಕೆಲಸಮಯ ಕಣ್ಣೀರು ಸುರಿಸುತ್ತಾ ನಿಂತುಕೊಂಡಿತ್ತು ! ಇದನ್ನು ನೋಡುತ್ತಿದ್ದ ಆತ ಹಂದಿಗೆ ಏನೋ ಸಂಕಟವಾಗಿರಬೇಕೆಂದುಕೊಂಡ. ಹಂದಿಯ ಮರಿಗಳು ಅದೂ ಇದೂ ತಿನ್ನುತ್ತಿರುವಾಗ ಆತ ಅವುಗಳನ್ನು ಹೊಡೆಯಲೆತ್ನಿಸಿದ. ಆದರೆ ಹಂದಿ ಆತನ ಮುಂದೆ ದೈನ್ಯವಾಗಿ ನಿಂತು ಬೇಡುವಂತಿತ್ತು. ಅದು ಏನನ್ನೋ ಹೇಳಬಯಸುತ್ತಿತ್ತು. ಇದನ್ನೆಲ್ಲಾ ನೋಡಿದಆತ ಮರಿಗಳಿಗೂ ಹೊಡೆಯಲಿಲ್ಲ. ಕೆಲವೇ ಕ್ಷಣಗಳಲ್ಲಿ ಹಂದಿ ಮಾತನಾಡಿತು. ಪೂರ್ವದಲ್ಲಿ ತಾನು ಆತನ ಹೆಂಡತಿಯಾಗಿದ್ದು ಈಗ ಹಂದಿಯಾಗಿದ್ದೇನೆಂದೂ ಆತನ ನೆನಪಿನಲ್ಲಿ ಹುಡುಕುತ್ತಾ ಆತನ ತೋಟಕ್ಕೆ ಆತನನ್ನೂ ಮಕ್ಕಳನ್ನೂ ನೋಡುವ ಇಚ್ಛೆಯಾಗಿ ಬಂದೆನೆಂದೂ ಹೇಳಿಕೊಂಡಿತು !

ಕಥೆಯನ್ನೆಲ್ಲಾ ಕೇಳಿದ ಆತ ಹಂದಿಯಾದ ನಿನ್ನನ್ನು ಮತ್ತೆ ಕೊಂದು ತಾನೇ ಮರಳಿ ಪಡೆಯುತ್ತೇನೆಂದ ! ಪಡೆಯಲು ಸಾಧ್ಯವೋ ಇಲ್ಲವೋ ಅಂತೂ ಘಳಿಗೆಯಲ್ಲಿ ಅವನಿಗೆ ಹಾಗನ್ನಿಸಿತ್ತು. ಆಗ ಹಂದಿ ತನ್ನನ್ನು ಕೊಲ್ಲುವುದು ಬೇಡವೆಂದೂ ತನಗೆ ಜನ್ಮದಲ್ಲಿಇರುವ ಸಣ್ಣ ಸಣ್ಣ ಮರಿಗಳನ್ನು ಬೆಳೆಸಬೇಕೆಂದೂ, ಏನೂ ಅರಿಯದ ಅವುಗಳನ್ನು ತಾನು ಬಿಟ್ಟುಬರಲಾರೆನೆಂದೂ ಪ್ರಾರ್ಥಿಸಿತು. ಅಂದಿಗೆ ನನಗೆ ಅದೇ ಸುಖವಾಗಿತ್ತು ಆದರೆ ಇಂದಿಗೆ ಹಂದಿಯಾಗಿ ನನಗೆ ಇದೇ ಸುಖವೆಂದೂ ಸಾರಿತು. ಆತ ಬಹಳ ನೊಂದ. ತನ್ನಮಕ್ಕಳನ್ನೆಲ್ಲಾ ಕರೆದು ತೋರಿಸಿದ. ಮಕ್ಕಳನ್ನು ಕಂಡ ಹಂದಿ ಹತ್ತಿರ ಬಂದು ಲಲ್ಲೆಗರೆಯಿತು. ಕಾಡು ಹಂದಿಗೂ ಜನರಿಗೂ ಅದೇನು ಸಂಬಂಧ ಎಂದು ನೋಡಲು ಊರ ಜನ ಸುತ್ತರಿದರು. ತುಂಬಾ ಹೊತ್ತು ಅಲ್ಲಿಯೇ ಇದ್ದ ಹಂದಿ ಆತ ಕೊಟ್ಟಹಣ್ಣು-ಹಂಪಲು ತಿಂದು ಸಂಜೆ ದುಃಖದಲ್ಲಿ ತನ್ನ ಮರಿಗಳನ್ನು ಕರೆದುಕೊಂಡು ಮರಳಿ ಕಾಡಿಗೆ ಹೋಯಿತು.

ಜನ್ಮಕ್ಕಂಟಿದ ಬಾಂಧವ್ಯ, ನಂಟು ತೊರೆದುಹೋಗುವುದಿಲ್ಲ. ಮಾನವ ಜನ್ಮವನ್ನು ಭಗವಂತ ಕಟ್ಟಿಹಾಕಿರುವುದೇ ಭಾವನೆಗಳಿಂದ ಅಲ್ಲವೇ ? ನಾವೇನೇ ಅಂದರೂ ಇಹದ ನಮ್ಮ ಬದುಕು ಲೌಕಿಕ ಸಂಬಂಧಗಳ, ಭಾವನೆಗಳ, ರೀತಿ-ನೀತಿಗಳ, ಪ್ರೀತಿ-ಪ್ರೇಮಗಳ ಸರಪಳಿಗಳಿಂದ ಬಂಧಿಸಲ್ಪಟ್ಟಿರುತ್ತದೆ. ಇದಕ್ಕೆ ಜನಸಾಮಾನ್ಯರು ಯಾರೂ ಹೊರತಲ್ಲ! ಒಳಗಿರುವ ಆತ್ಮಕ್ಕೆ ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ ಯಾರೂ ಇರುವುದಿಲ್ಲ. ಅದಕ್ಕೆ ಯಾವ ಸಂಬಂಧವಾಗಲೀ ಹುಟ್ಟು-ಸಾವಾಗಲೀ ಇರುವುದಿಲ್ಲ. ಆದರೆ ದೇಹವನ್ನು ಧರಿಸಿ ಇಲ್ಲಿರುವವರೆಗೆ ನಮಗೆ ಎಲ್ಲವೂ ಬಾಧ್ಯಸ್ಥವೇ ! ಯಾವುದನ್ನೂ ಅಲ್ಲಗಳೆಯುವಂತಿಲ್ಲ, ಏನನ್ನೂ ಇಲ್ಲಾ ಎನ್ನುವಂತಿಲ್ಲ. ಆದರೆ ಇರುವವರೆಗೆ ನಾವು ನಾವೇ ಅಲ್ಲ, ನಾವು ಬರಿದೇ ಇಲ್ಲಿದ್ದೇವೆ ಎಂದು ತಿಳಿದು ಮನೆಯನ್ನು ಬಾಡಿಗೆಗೆ ಪಡೆದು ಇರುವಂತೇ ಜನ್ಮವನ್ನು ಬಾಡಿಗೆಗೆ ಪಡೆದು ಬದುಕಿದ್ದೇವೆ ಎಂದು ತಿಳಿದರೆ ಆಗ ನಾವು ಯಾವ ಕೆಲಸ ಮಾಡಬೇಕು, ಏನನ್ನುಮಾಡಬಾರದು ಎಂಬುದು ತಿಳಿಯುತ್ತದೆ.

ಇಲ್ಲಿರುವಷ್ಟು ದಿನ ನಾವು ಆದಷ್ಟೂ ಪರೋಪಕಾರಾರ್ಥವಾಗಿ ಬದುಕನ್ನು ವ್ಯಯಿಸೋಣ.

Friday, November 26, 2010

ಎಮ್ಮೆ ಕಳೆದಿದೆ !

ಎಮ್ಮೆ ಕಳೆದಿದೆ !

ಇದು ಹಳ್ಳಿಗಳ ರಿಯಾಲಿಟಿ ಶೋ ! ನೀವೂ ನೋಡಿರಬಹುದು. ಕೆಲವೊಂದು ಘಟನೆಗಳನ್ನು ನೆನಪಿಸಿಕೊಂಡರೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಆದರೆ ಒಮ್ಮೆ ನಕ್ಕು ಹಗುರಾಗುವುದರಲ್ಲಿ ತೊಂದರೆಯೇನಿಲ್ಲ. ಹೀಗಾಗಿ ಕಳೆದ ಎಮ್ಮೆಯನ್ನು ಹುಡುಕುವ ನೆಪದಲ್ಲಿ ಹಳ್ಳಿಯನ್ನೊಮ್ಮೆ ಸುತ್ತೋಣ ಬನ್ನಿ, ಸಿಗುವಷ್ಟು ಸಿಗಲಿ !

ಜಂಬೂಸವಾರಿ ಭಾಗ-೧


ಬೆಳ್ಳಂಬೆಳಿಗ್ಗೆಯೇ ಆಗಲಿ, ಮಟಮಟ ಮಧ್ಯಾಹ್ನವೇ ಆಗಲಿ, ಚುಮುಚುಮು ಚಳಿಯ ಸಾಯಂಕಾಲವೇ ಆಗಲಿ ಮಂಜು ಏರುವುದು ಅದೇ ಹಳೇ ಲೂನಾ. ಆತ ಹೇಳಿಕೇಳಿ ಊರ್ಕಡೆಯವ್ನಪ್ಪ ಅದಕ್ಕೇ ಆಗಾಗ ಅವನ ದರ್ಶನ ನಮಗೆಲ್ಲಾ ಕಾಯಂ ಇರ್ತಿತ್ತು. ಆತನ ವೈಶಿಷ್ಟ್ಯ ಎಂದರೆ ಎಂದೂ ಕಿಕ್ ಹಾಕಿದರೆ ಚಾಲು ಆಗದ ಆತನ ವಾಹನವನ್ನು ಒಂದಷ್ಟು ದೂರ ಆತನೇ ತಳ್ಳಿ ಓಡಿಸಿಕೊಂಡು ಹೋಗಿ ಪುರರ್ ಎಂದು ಚಾಲು ಆದ ತಕ್ಷಣ ಹಾರಿ ಕೂತು ಮುಂದೆ ಓಡುವುದು! ಹಳ್ಳಿಯಲ್ಲವೇ ಗಾಡಿಗಳೇ ಅಪರೂಪವಾದ ಕಾಲವೊಂದಿತ್ತು. ಆಗಾಗ ಅಕ್ಕ-ಪಕ್ಕದ ಮನೆಗಳವರು " ಮಂಜಣ್ಣ ಗಾಡಿ ಕೊಡ್ತೀಯಾ ಸ್ವಲ್ಪ ಪೇಟೆಗೆ ಹೋಗಿ ಬರ್ಬೇಕಿತ್ತು " ಅಂತ ಬೆನ್ನು ಹತ್ತುತ್ತಿದ್ದರು.

" ಗಾಡಿ ಕೊಡಲೇನೋ ಅಡ್ಡಿಲ್ಲ ಆದರೆ ಅದನ್ನು ಚಾಲು ನೀವೇ ಮಾಡ್ಕಂಬೆಕು " ಎಂದುಬಿಡುತ್ತಿದ್ದ. ಪ್ರಯತ್ನಿಸಿದ ಒಬ್ಬರ ಕೈಲೂ ಅದು ಸಾಧ್ಯವಾಗದೇ ಆಮೇಲಾಮೇಲೆ ’ಮಂಜಣ್ಣನ ರಥ’ ಅಂತ ಜನ ಅದನ್ನ ಕರೀತಾ ಇದ್ರು.


ಇಂತಹ ಗಾಡಿಯನ್ನು ದಸರಾ ಆಯುಧಪೂಜೆಗೊಮ್ಮೆ ಪೂಜೆ ಮಾಡ್ಸೋದು ವಾಡಿಕೆ. ಅದಕೂ ಮುಂಚೆ ಎರಡೂ ಚಕ್ರನೆಲ್ಲಾ ಚೆನ್ನಾಗಿ ತಿಕ್ಕಿ ತೊಳೆದು, ವರ್ಷಗಳಿಂದ ನೀರು ಕಂಡಿರದ ಬಾಡೀನೆಲ್ಲಾ ತೊಳ್ದು, ಹರದ್ಹೋಗಿರೋ ಸೀಟ್ ಕವರ್ ಗೆ ಹೊಲಿಗೆ ಹಾಕಿ, ಬ್ರೇಕ್ ಹಿಡಿಕೆಗೆಲ್ಲಾ ಸ್ವಲ್ಪ ಅದೇಂಥದೋ ಎಣ್ಣೆ ಹಾಕಿ.....ಹೇಳ್ತೀರೋ ಕೇಳ್ತೀರೋ ಗಾಡಿ ಮದುವಣಗಿತ್ತಿಯಂತೇ ತಯಾರಾಗುತ್ತಿತ್ತು. ಆಮೇಲೆ ಅಲಂಕಾರ ಬೇರೆ. ಒಮ್ಮೆ ಅವರಮನೆಗೆ ಯಾರೋ ಪುರೋಹಿತರೂ ಬಂದವರಿದ್ರು. ಅವರ ಹತ್ತಿರಾನೇ ಪೂಜೆ ಮಾಡ್ಸಿದ್ರೆ ಒಳ್ಳೇದು ಅಂತ ಅಂದ್ಕೊಂಡು ಪೂಜೆ ಶುರುವೂ ಆಗ್ಹೋಯ್ತು. ಪೂಜೆಗೆ ಸಂಕಲ್ಪಮಾಡುತ್ತ ’........’ ಇಂಥಾ ದೇವರ ಪ್ರೀತ್ಯರ್ಥ ಎಂದು ಹೇಳಬೇಕಲ್ಲ ...ಪುರೋಹಿತರು ಕೇಳದ್ರು...

" ತಮಾ ಈ ಗಾಡಿ ಹೆಸರೆಂಥದ ? "

" ......ಅದರ ಹೆಸ್ರು ಲೂನಾ " .

ಪುರೋಹಿತರು ಹೇಳಿದರು " ಶ್ರೀಮಹಾಕಾಳೀ ಮಹಾಸರಸ್ವತೀ ಮಹಾಲಕ್ಷ್ಮೀ ಸಹಿತ ಲೂನಾದೇವತಾಭ್ಯೋ ನಮಃ ಅತ್ರಾಗಚ್ಛಾ ಆವಾಹಯಿಷ್ಯೇ "




ಜಂಬೂಸವಾರಿ ಭಾಗ-೨

ಆ ಕಾಲದಲ್ಲಿ ಊರಲ್ಲೆಲ್ಲಾ ಕಾರು ಅಂದರೆ ಅಂಬಾಸೆಡರ್ ಮಾತ್ರ. ನಮಗೆಲ್ಲಾ ಅದನ್ನೆಲ್ಲಾ ಹೇಳುವಷ್ಟು ಪರಿಜ್ಞಾನ ಎಲ್ಲಿತ್ತು ? ಹೋಗಲಿ ಊರಿನ ಬಹಳಷ್ಟು ಜನ ಹೇಳುತ್ತಿದ್ದುದೂ ಹಾಗೇ : ’ ಅಂಬಾರಶೆಟ್ರ ಕಾರು ’ ! ಎಳವೆಯಲ್ಲೇ ನಾನೊಬ್ಬ ಕಡ್ಡಿಹಾಕಿ ಕಾರಣ ಹುಡುಕುವ ಸ್ವಭಾವದವನಿದ್ದೆನಲ್ಲ ನಾನು ತಿಳಿದುಕೊಂಡದ್ದು ಯಾರೋ ಅಂಬಾರಶೆಟ್ರು ಅಂತ ಕುಚ್ಚೀ[ಖುರ್ಚಿ]ಸಾಹುಕಾರನ ಫ್ಯಾಕ್ಟರಿಯಲ್ಲಿ ತಯಾರಾಗುವ ಈ ಕಾರಿಗೆ ಎಲ್ಲರೂ ’ಅಂಬಾರಶೆಟ್ರ ಕಾರು’ ಎನ್ನುತ್ತಾರೆ ಎಂದು. ಕೊನೆಕೊನೆಗೆ ಪಟ್ಟಣಗಳಿಗೆ ಹೋದಾಗ ಆ ಶಬ್ದದಲ್ಲಿ ಏನೋ ವ್ಯತ್ಯಾಸವನ್ನು ಜನ ಉಚ್ಚರಿಸುತ್ತಿದ್ದುದು ಗಮನಕ್ಕೆ ಬಂತು. ಅವರು ಹೇಳಿದ್ದನ್ನು ಸರಿಯಾಗಿ ತಿಳಿದು ಗಟ್ಟಿಮಾಡಿಕೊಳ್ಳುವವರೆಗೆ ಹೆಸರಿನ ಬದಲಿಗೆ ಬಳಸಬೇಕಾದಲ್ಲೆಲ್ಲಾ ’ಕಾರು’ ಎಂದು ಬಳಸುತ್ತಿದ್ದೆ. ಮರ್ಯಾದೆ ಪ್ರಶ್ನೆ ನೋಡಿ ! ಎಲ್ಲಾದ್ರೂ ಅಪ್ಪಿ ತಪ್ಪಿ ತಪ್ಪೇನಾದ್ರೂ ಹೇಳದ್ರೆ ಎಲ್ಲರೂ ನಗ್ಯಾಡು ಪ್ರಸಂಗ.


ಈ ಅಂಬಾರಶೆಟ್ರ ಕಾರಲ್ಲಿ ನಾವು ಮಕ್ಕಳು ಲೆಕ್ಕಕ್ಕೇ ಇಲ್ಲ ಬಿಡಿ, ದೊಡ್ಡವರು ೧೩ ಜನ ಮತ್ತು ಡ್ರೈವರ್--ಇದು ನಮ್ಮ ಪ್ರಯಾಣವಾಗಿತ್ತು. ಅದು ಹೇಗೆ ಕೂರುತ್ತಿದ್ದರು ಎಲ್ಲಿ ಕಾಲಿಡುತ್ತಿದ್ದರು ಇದೆಲ್ಲಾ ಕೇಳಬೇಡಿ. ಕಾರಲ್ಲಿ ಹೋಗ್ಬೇಕೋ ಹೋಗ್ಬೇಕು ಅಷ್ಟೇ ! ಕೆಲವೊಮ್ಮೆ ಇಂತಹ ಕಾರನ್ನೂ ಒತ್ತಿ ತಳ್ಳುತ್ತಾ ಚರರ್ ಚರರ್ ಚರರ್ ಚರರ್ ಚರರ್ ಎನ್ನುವ ಕಾರನ್ನು ಸುಮಾರು ಸಲ ಪ್ರಯತ್ನಿಸಿ ಚಾಲೂಮಾಡುವುದು ಅನಿವಾರ್ಯವಾಗುತ್ತಿತ್ತು. ಒಂದ್ಸಲಾ ಹೊರ್ಟ್ತು ಅಂದ್ರೆ ನಮಗೆ ಭೂಮಿಯಿಂದ ರಾಕೆಟ್ ಉಡ್ಡಯನ ಮಾಡಿದಷ್ಟು ಖುಷಿ. ಆಗಾಗ ಹಳ್ಳಿಯ ಬಸ್ಸುಗಳು ಹಾಳಾಗಿ ಬರದೇ ಇದ್ದಾಗ ಕಾರಿನ ಅನಿವಾರ್ಯತೆ ಬರುತ್ತಿತ್ತು. ಅಷ್ಟೊಂದು ಭಾರವನ್ನು ಸಹಿಸಿಯೂ ಹಳ್ಳಿಯ ಕಚಡಾ ರಸ್ತೆಗಳಲ್ಲಿ ತರಾವರಿ ಓಡಾಡುತ್ತ, ಕೆಸರುಮೆತ್ತಿದ ಟೈರುಗಳು ಹಾಳಾಗಿದ್ದು ಕಮ್ಮಿ. ಕಾರು ಕೈಕೊಟ್ಟಿದ್ದೂ ಕಮ್ಮಿ. ಅಂಬಾರಶೆಟ್ರ ಕಾರಿನ ಮುಂದೆ ಇವತ್ತಿನ ಕಾರುಗಳೆಲ್ಲಾ ಜರ್ಸಿ ದನಗಳಂತೇ ಕಾಣುತ್ತವೆ ನನಗೆ. ರಿಪೇರ್ಯೋ ರಿಪೇರಿ. ಹೊಸಕಾಲಮಾನದ ಕಾರುಗಳ ನಡುವೆ ಅಂಬಾರಶೆಟ್ರು ಅಂಬಾರ ಬಿಟ್ಟು ಭೂಮಿಗೆ ಬಿದ್ದುಬುಟ್ರು ಪಾಪ !


ಹಾಲು ತುಂಬಾ ಇದೇರಿ !

ಹಳ್ಳಿಗಳಲ್ಲಿ ಎಮ್ಮೆ ವ್ಯಾಪಾರ ನಡೆಯುತ್ತಲೇ ಇರುತ್ತದೆ. ಅವರ ಎಮ್ಮೆ ಇವರಿಗೆ ಇವರ ಎಮ್ಮೆ ಅವರಿಗೆ ಎಂದು ಮಾರಾಟಮಾಡಿಸಿಕೊಡುವ ಮಧ್ಯವರ್ತಿಗಳು ಅಲ್ಲಲ್ಲಿ ಇರುತ್ತಾರೆ. ಅವರು ಒಂದು ಸಣ್ಣ ಕೊಟ್ಟಿಗೆಯನ್ನು [ದೊಡ್ಡಿ] ವ್ಯಾಪಾರದ ಎಮ್ಮೆಗಳಿಗೇ ಅಂತಲೇ ಕಟ್ಟಿಸಿಕೊಳ್ಳುತ್ತಾರೆ. ಗಿರಾಕಿ ಸಿಕ್ಕಾಗ ಅವರನ್ನು ಹೊರಗೆ ನಿಲ್ಲಿಸಿ ಕೊಟ್ಟಿಗೆಯೊಳಕ್ಕೆ ಬರುವ ಮಧ್ಯವರ್ತಿ ತನ್ನ ಸುಪರ್ದಿಯಲ್ಲಿರುವ ಹಾಗೂ ಗಿರಾಕಿಯ ಬಜೆಟ್ ಗೆ ದೊರೆಯಬಹುದಾದ ಎಮ್ಮೆಯ ಕೆಚ್ಚಲಿಗೆ ಚೆನ್ನಾಗಿ ಒದ್ದು ಹೊರಬರುತ್ತಿದ್ದ. ಆಮೇಲೆ ಗಿರಾಕಿಯನ್ನು ಒಳಗೆ ಕರೆದು ಹಾಲುಹಿಂಡುತ್ತಾ ಜೋರಾಗಿ ಒಮ್ಮೆ ಕೂಗಿದರೆ ಎಮ್ಮೆ ಹೆದರಿ ಇಲ್ಲದ ಹಾಲನ್ನೂ ಅದೆಲ್ಲಿಂದ ಕೊಡುತ್ತಿತ್ತೋ ಗೊತ್ತಿಲ್ಲ. ಗಿರಾಕಿಗೆ ಒಪ್ಪಿಗೆಯಾಗಿ ತೆಗೆದುಕೊಂಡು ಹೋದ ಮಾರನೇ ದಿನವೇ ಮತ್ತೆ ಗಿರಾಕಿ ವ್ಯಾಪಾರಿಯನ್ನು ಹುಡುಕಿಕೊಂಡು ಮರಳಿ ಬರುತ್ತಿದ್ದ. " ನೀವು ಕೊಟ್ಟ ಎಮ್ಮೇಲಿ ಹಾಲೇ ಇಲ್ಲ ಮಾರಾರ್ಯೆ ನನಗೆ ಬದ್ಲಮಾಡ್ಕೊಡಿ " " ಓಹೋ ಅದೆಂಥದ್ರೀ ಅದು....ನಿಮ್ಗೆ ಸಾರಾವಳಿ ಇಲ್ಲ ಇಲ್ಲಾಂದ್ರೆ ಒಳ್ಳೇ ಹಾಲ್ಕೊಡ್ತಿತು " ನಂತರ ಅಂತೂ ಮಾತು ನಡೆದು ಗಿರಾಕಿಗೆ ಒಂದು ತಿಂಗಳಲ್ಲೇ ಬೇರೆ ಎಮ್ಮೆಯನ್ನು ಕೊಡುವ ಭರವಸೆಯಮೇಲೆ ಗಿರಾಕಿ ವಾಪಸ್ಸಾಗುತ್ತಿದ್ದ. ಇವತ್ತಿನ ಸುರುಟಿ ಎಮ್ಮೆಗಳಿಗೆ ಆ ರೀತಿಯ ಒಂದು ಒದೆತ ಬಿದ್ದರೆ ಎಮ್ಮೆ ನಿತ್ತಲ್ಲೇ ಚೊಂಯಪ್ಪಟ್ನ !


ಮದುವೆ ಮುಂದೆ ಹೋಗಿದೆ !

ಕಾರಣಾಂತರಗಳಿಂದ ನಮ್ಮ ಮನೆಯಲ್ಲಿ ನಡೆಯಬೇಕಾಗಿದ್ದ ಮದುವೆಯನ್ನು ಮುಂದಿನ ತಿಂಗಳು ೧೬ನೇ ತಾರೀಖಿಗೆ ಮುಂದೂಡಲಾಗಿದೆ. ಆಮಂತ್ರಣ ಸಿಗದವರು ದಯವಿಟ್ಟು ಇದನ್ನೇ ಆಮಂತ್ರಣವೆಂದು ತಿಳಿದುಕೊಳ್ಳಬೇಕಾಗಿ ವಿನಂತಿ.

ಇಂತೀ ಶ್ರೀ ರಾಮಪ್ಪನವರು ಮತ್ತು ಕುಟುಂಬ, ಬಿಟ್ಟುಬಂದಹಳ್ಳಿ

ಈ ರೀತಿಯ ಪ್ರಕಟಣೆಗಳು ದಿನಪತ್ರಿಕೆಗಳಲ್ಲಿ ನೂರಾರು ಇರುತ್ತಿದ್ದವು. ಇದು ಸಾರ್ವಜನಿಕರಿಗೆ ಸಂಬಂಧಿಸಿದ್ದೋ ಅಥವಾ ವೈಯ್ಯಕ್ತಿಕವಾಗಿ ಕೆಲವರಿಗೆ ಸಂಬಂಧಿಸಿದ್ದೋ ತಿಳಿಯುತ್ತಿರಲಿಲ್ಲ! ಈಗಲೂ ಇಂತಹ ಅನೇಕ ಜಾಹೀರಾತುಗಳು ಬರುತ್ತವೆ : ಅವು ಮುಖ್ಯ ಪತ್ರಿಕೆಯ ಭಾಗವೇ ಆಗಿ ’ಶೋಭಿಸುತ್ತವೆ’ ! ಜನ ಒಪ್ಪಲಿ ಬಿಡಲಿ ಜಾಹೀರಾತು ಕೊಡುವ ಕಂಪನಿಯವರು ದಿನಪತ್ರಿಕೆ ನಡೆಸುವ ಸಂಸ್ಥೆಗೆ ಹಣವನ್ನು ಕೇಳಿದಷ್ಟು ಕೊಡುತ್ತಾರಲ್ಲ ಅದಕ್ಕೇ. ನೀವೇ ನೋಡಿರಬಹುದಲ್ಲ ಆ ಬಜಾರು ಈ ಬಜಾರು ಅರ್ಧ ಪತ್ರಿಕೆಯ ತುಂಬಾ ಬಜಾರಿನದ್ದೇ ಕಾರುಬಾರು!


" ಅವರಮನೆ ಹುಡುಗಿಯಾ ? ಅವಳು ಕಾಗೆ " !

ಒಂದೇ ಊರಿನ ಎರಡು ತುದಿಗಳಲ್ಲಿ ಎರಡು ಮನೆಗಳವರಿದ್ದರು. ಒಬ್ಬಾತನಿಗೆ ಮದುವೆಗೆ ಬಂದ ಮಗಳು ಇನ್ನೊಬ್ಬನಿಗೆ ವಯಸ್ಸಿಗೆ ಬಂದ ಮಗ. ಆಗೆಲ್ಲಾ ಜಾತಕವನ್ನೂ ನೋಡಬೇಕಾಗಿತ್ತಲ್ಲ. ತನ್ನ ಯೋಗ್ಯತೆಗೇನೂ ಕಮ್ಮಿ ಇಲ್ಲಾ ಎಂಬುದು ಈ ಗಂಡಿನ ಅಪ್ಪನ ಅಂಬೋಣವಾದರೆ ತಮಗೆ ತಕ್ಕವರಲ್ಲಾ ಎಂಬುದು ಹೆಣ್ಣಿನ ಅಪ್ಪನ ಅನಿಸಿಕೆ. ಹೀಗಾಗಿ ಇವರಾಗಿ ಕೇಳಲಿಲ್ಲ ಅವರಾಗಿ ಕೊಡಲಿಲ್ಲ. ಯಾರೂ ಕಮ್ಮಿಯಿರಲಿಲ್ಲ ಬಿಡಿ : ಏನಿಲ್ಲದಿದ್ದರೂ ಅಹಂಭಾವಕ್ಕೇನೂ ಕೊರತೆಯಿರಲಿಲ್ಲವಲ್ಲ ! ಹುಡುಗನ ಅಪ್ಪ ಆ ಹುಡುಗಿಯ ಜಾತಕವನ್ನು ಇನ್ಯಾರದೋ ಮುಖಾಂತರ ಹೇಗೋ ತರಿಸಿ ಮೇಳಾಮೇಳೀ ನೋಡಿಟ್ಟಿದ್ದ. ಯಾವಗಲೋ ದೇವಸ್ಥಾನಕ್ಕೆ ಬಂದ ಹುಡುಗಿಯನ್ನೂ ನಖಶಿಖಾಂತ ನೋಡಿ ’ ನಮ್ಮನೆ ತಮ್ಮಂಗೆ ಇದು ಒಳ್ಳೇ ಜೋಡಿ ’ ಎಂತಲೂ ಮನಸ್ಸಲ್ಲೇ ಶರಾ ಬರೆದುಕೊಂಡಿದ್ದ ! ಹೆಣ್ಣಿನ ಮನೆಯ ಕಡೆಗೆ ಸಾಗಿ ಹೋಗುವ ಜನ ಈ ಗಂಡಿನ ಮನೆಯ ದಿಕ್ಕಿನಿಂದಲೇ ಹೋಗಬೇಕಾದುದು ಮಾರ್ಗದ ಅನಿವಾರ್ಯತೆ. ದಿನಬೆಳಗಾದ್ರೆ ಯಾರೇ ಹೊಸಬರು ಬರಲಿ " ಹೋಯ್ ನೀವು ಓ ಅವರ ಮನೆಗೆ ಹೋಗಲಿಕ್ಕೆ ಬಂದವ್ರಾ ? ಅವರ ಮನೆ ಹುಡುಗಿಯಲ್ವಾ ಅವಳು ಕಾಗೆ ....ತೊಳೆದಿಟ್ಟ ಮಸಿಕೆಂಡ " ಎನ್ನುವುದನ್ನು ಬೇಕೆಂತಲೇ ಅಭ್ಯಾಸಮಾಡಿಕೊಂಡ. ಹೇಗಾದ್ರೂ ಆ ಹೆಣ್ಣಿನ ಅಪ್ಪನನ್ನು ಬಗ್ಗಿಸಿ ತನ್ನ ಕಾಲಿಗೆ ಬೀಳಿಸಿಕೊಳ್ಳಬೇಕೆಂಬುದು ಇವನ ಬಯಕೆ. ಬಂದ ಹಲವು ಪರವೂರ ಸಂಬಂಧಗಳು ನಡುದಾರಿಯಿಂದಲೇ ವಾಪಸ್ಸಾಗುವಂತೇ ನೋಡಿಕೊಂಡ ಹೆಗ್ಗಳಿಗೆ ಶ್ರೀಮಾನ್ ಇವರದು ! ಕೊನೆಗೂ ಅದೆಲ್ಲಿಂದಲೋ ಬಂದ ಜೀಪು ತುಂಬಾ ಇದ್ದ ಜನ ಈತ ಕೈಅಡ್ಡಹಾಕಿದರೂ ನಿಲ್ಲಿಸದೇ ಮುಂದಕ್ಕೆ ಹೋಗೇ ಬಿಟ್ಟರು. ಕಪ್ಪಿನ ಕಾಗೆ ಬೆಳ್ಳನ ಗುಬ್ಬಚ್ಚಿಯಾಗಿ ಬುರ್ರನೆ ಹಾರೇ ಹೋಯಿತು !


ಎಮ್ಮೆಕಳೆದಿದೆ !

ನಮ್ಮ ಹತ್ತಿರದ ಸಂಬಂಧಿಕರೊಬ್ಬರಿಗೆ ದಿನಪತ್ರಿಕೆಯಲ್ಲಿ ಒಳಪುಟಗಳನ್ನು ಚಾಚೂ ತಪ್ಪದೇ ಓದುವ ಚಟ ! ಪತ್ರಿಕೆಗೆ ಕೊಡುತ್ತಿದ್ದ ಕಾಸಿಗೆ ಬಡ್ಡೀ ಸಮೇತ ಹಿಂಪಡೆದ ರೀತಿ ಒಂದೇ ಒಂದೂ ಇಂಚನ್ನೂ ಬಿಡದೇ ಮಗುಚಿ ತಿರುವಿ ಓದೇ ಓದುತ್ತಿದ್ದರು. ಪತ್ರಿಕೆಯನ್ನು ಕೆಲವು ಶಾಲಾಮಕ್ಕಳು ಪುಸ್ತಕ ಓದಿದಂತೇ ದೊಡ್ಡದಾಗಿ ಓದುವುದು ಬೇರೆ ಅವರ ಕೆಟ್ಟಚಾಳಿ. ಆಗೆಲ್ಲಾ ನಮ್ಮಲ್ಲಿಗೆ ಹುಬ್ಬಳ್ಳಿಯಿಂದ ’ಸಂಯುಕ್ತ ಕರ್ನಾಟಕ’ ಬರುತ್ತಿತ್ತು. ಒಳಪುಟಗಳ ತುಂಬಾ ವೈಕುಂಠಸಮಾರಾಧನೆ, ಶಿವಗಣಾರಾಧನೆ, ವಿವಾಹ ಮುಂದೂಡಿಕೆ ಇಂಥದ್ದೇ ಬರಹಗಳು. ಮಧ್ಯೆ ಮಧ್ಯೆ ಅವರೂ ಇವರೂ ಕಳೆದುಹೋದವರ ಸುದ್ದಿ ಇರುತ್ತಿತ್ತು. ಒಮ್ಮೆ ನಮ್ಮನೆಗೆ ಬಂದವರು ಲೋಕಾಭಿರಾಮವಾಗಿ ಬೆಳಗಿನ ಚಾ ಕುಡಿದಮೇಲೆ ಪತ್ರಿಕೆ ಓದಲು ಪ್ರಾರಂಭಿಸಿದರು. ’ ಹುಬ್ಬಳ್ಳಿಯಲ್ಲಿ ಹಳೇಹುಬ್ಬಳ್ಳಿಯ ಇಂಥಾ ಕಡೆಯಲ್ಲಿ ಇಂಥವರಿಗೆ ಸಂಬಂಧಿಸಿದ ಎರಡು ಎಮ್ಮೆಗಳು ಮೇಯಲಿಕ್ಕೆ ಬಿಟ್ಟಿದ್ದು ಮರಳಲಿಲ್ಲ, ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಕೊಡಲಾಗುವುದು. ಯಾರಾದರೂ ನೋಡಿದಲ್ಲಿ ವೀರನಗೌಡ್ರ ಸಂಗನಗೌಡ್ರ ಕೇರಾಫ ಇಂಥಾ ವಿಳಾಸಕ್ಕೆ ತಿಳಿಸುವುದು. ಬಾಕಿ ಸಂಗ್ತಿ ಮೊಖ್ತಾ ’ ! ಪುಣ್ಯಾತ್ಮ ಪಠಿಸುತ್ತಿದ್ದುದನ್ನು ಕೇಳುವುದೇ ಮಜವಾಗಿರುತ್ತಿತ್ತು. ನಿಮಗೂ ಇಂಥವರು ಸಿಗುತ್ತಾರೆ : ಬಸ್ಸಿನಲ್ಲಿ ದಿನಪತ್ರಿಕೆ ಕೈಯ್ಯಲ್ಲಿ ಹಿಡಿದುಕೊಳ್ಳಿ ಸ್ವಲ್ಪ ಹೊತ್ತಿನಲ್ಲೇ ಬುಲಾವ್ ಬರುತ್ತದೆ-ಪತ್ರಿಕೆಗೆ! " ಸ್ವಲ್ಪ ಪೇಪರ್ ಕೊಡ್ತೀರಾ ? " ಕೊಟ್ಟರೆ ನೀವೇ ಮರಳಿ ಕೇಳಿ ಪಡೆಯಬೇಕು. ಇಲ್ಲದಿದ್ದರೆ ಅವರು ನಾವು ಕೊಟ್ಟ ದುಡ್ಡಿಗೆ ತಾವು ಬಡ್ಡೀ ಪಡೆಯಲಿಲ್ಲವೆಂಬ ರೀತಿಯಲ್ಲಿ ಕಳೆದುಹೋದ ಎಮ್ಮೆಯನ್ನೋ ಹೋರಿಯನ್ನೋ ಹುಡುಕುತ್ತಿರುತ್ತಾರೆ! ಬಿಟ್ಟಿಯಲ್ಲಿ ತಿನ್ನುವ ಹಣ್ಣೇ ಅಷ್ಟೊಂದು ರುಚಿಯೇ ? ಇಷ್ಟೇ ಅಲ್ಲ, ವ್ಯಾವಹಾರಿಕ ದಿನಗಳಂದು ಬೇರೆಬೇರೇ ಕಚೇರಿ, ಬ್ಯಾಂಕು ಇಂಥಲ್ಲೆಲ್ಲಾ ಪೆನ್ನು ಕೇಳುವ ಜನ ಸಿಗುತ್ತಾರೆ. ಪೆನ್ನು ಬಳಸಿಕೊಂಡಮೇಲೆ ಮರಳಿಕೊಡುವವರೇ ಕಮ್ಮಿ, ಕೊಟ್ಟರೂ " ತಗೋಳಿ " ಅಂತ ನಮ್ಮೆಡೆಗೆ ಬಿಸಾಕಿ ಹೋಗುತ್ತಾರೆ! ಇಂಥವರಿಗೆಲ್ಲಾ ಸಾಮಾನ್ಯ ಜ್ಞಾನ ಇರುವುದೇ ಇಲ್ಲವೇ ? ಎಲ್ಲೆಲ್ಲಿಗೆ ಹೋದಾಗ ಏನೇನು ಬೇಕಾಗುತ್ತದೆ ಎಂಬ ಒಂಚೂರೂ ಪರಿಜ್ಞಾನ ಇರುವುದಿಲ್ಲವೇ ?

ಮತ್ತೆ ಸಿಗೋಣ, ನಿಮ್ಮಲ್ಲಿ ಎಲ್ಲಾದ್ರೂ ಎಮ್ಮೆ ಕಳೆದಿದ್ರೆ ದಿನಪತ್ರಿಕೆಯಲ್ಲಿ ಪ್ರಕಟಿಸುವುದನ್ನು ಮರೆಯಬೇಡಿ!

Wednesday, November 24, 2010

ದಿ| ಶ್ರೀ ಕೆರೆಮನೆ ಶಂಭು ಹೆಗಡೆಯವರ ಮರೆಯಲಾಗದ ಪಾತ್ರಗಳು


ದಿ| ಶ್ರೀ ಕೆರೆಮನೆ ಶಂಭು ಹೆಗಡೆಯವರ ಮರೆಯಲಾಗದ ಪಾತ್ರಗಳು

ಯಕ್ಷರಂಗದ ಕೆಲವು ಪಾತ್ರಗಳನ್ನು ಕೆಲವರು ಮಾತ್ರ ಸಮರ್ಥವಾಗಿ ನಿಭಾಯಿಸಬಲ್ಲರು. ಹೇಗೆಂದರೆ ಅವರು ಅಭಿನಯಿಸುವ ಪಾತ್ರ ನಿಜವಾಗಿಯೂ ಅದು ಪಾತ್ರವಲ್ಲ ಬದಲಾಗಿ ಅದೇ ವ್ಯಕ್ತಿ ನಮ್ಮ ಕಣ್ಣಮುಂದಿರುವಂತೆ ಅನಿಸುತ್ತದೆ. ಆ ಯಾ ವ್ಯಕ್ತಿಗಳು ಆ ಯಾ ಪಾತ್ರಗಳಿಗಾಗೇ ಹುಟ್ಟಿಬಂದಿದ್ದರೋ ಎಂಬ ಸಂದೇಹ ಕೂಡ ಬಾರದೇ ಇರುವುದಿಲ್ಲ. ಕನ್ನಡ ನೆಲದ ಅಷ್ಟೇ ಏಕೆ ಭಾರತದ ಸರ್ವ ಶ್ರೇಷ್ಠ ಕಲಾ ಪ್ರಾಕಾರಗಳಲ್ಲಿ ಯಕ್ಷಗಾನ ತನ್ನ ವಿಶಿಷ್ಟವಾದ ಛಾಪು ಒತ್ತಿದ್ದರೆ ಅದಕ್ಕೆಲ್ಲ ಈ ಮಹನೀಯರು ನಿರ್ವಹಿಸಿದ ಪಾತ್ರಗಳೂ ಕಾರಣ ಎಂದರೆ ತಪ್ಪಾಗಲಾರದೇನೋ. ಇವತ್ತು ಅಂತಹ ಒಂದೆರಡು ಸನ್ನಿವೇಶಗಳನ್ನು ನಿಮ್ಮೆಲ್ಲರಲ್ಲಿ ಹಂಚಿಕೊಳ್ಳಲು ಅಪೇಕ್ಷಿಸಿ ಹೀಗೆ ಬಂದಿದ್ದೇನೆ.

ಕಣ್ಣೀರಿಳಿಸುವ ದೃಶ್ಯಗಳಿಗಿಂತಲೂ ಮೊದಲು ಶಶಾಂಕ್ ಎಂಬ ಈ ಬಾಲ ಪ್ರತಿಭೆಯನ್ನು ನೋಡಿ, ಇಷ್ಟು ಎಳವೆಯಲ್ಲೇ ಆ ಕುಣಿತ, ಹಾವ ಭಾವ:



ಪುಟಾಣಿಗೊಂದು ಚಪ್ಪಾಳೆ ತಟ್ಟಿ ಭಳಿರೇ ಬಾಲಕ || ದೀರ್ಘಾಯುಷ್ಮಾನ್ ಭವ || ಎಂದು ಹರಸಿ ಮುನ್ನಡೆಯುತ್ತಿದ್ದೇನೆ.

ಪೌರಾಣಿಕ ಕಥಾಭಾಗಗಳಲ್ಲಿ ಸತ್ಯವೇ ಮೂರ್ತಿವೆತ್ತ ರಾಜಾ ಸತ್ಯಹರಿಶ್ಚಂದ್ರ, ತನ್ನ ದೌರ್ಭಾಗ್ಯದಿಂದ ದೇಶಬ್ರಷ್ಟನಾದ ನಳ-ಬಾಹುಕ, ಮಹಾಭಾರತದ ದಾನಶೂರ ಕರ್ಣ, ರಾಮ ನಿರ್ಯಾಣದ ಶ್ರೀರಾಮ, ಪಾದುಕಾ ಪಟ್ಟಾಭಿಷೇಕದ ದಶರಥ.....ಹೀಗೇ ಈ ಕೆಲವು ಪಾತ್ರಗಳನ್ನು ದಿ| ಶ್ರೀ ಕೆರೆಮನೆ ಶಂಭುಹೆಗಡೆಯವರು ನಿರ್ವಹಿಸುತ್ತಿದ್ದ, ಪೋಷಿಸುತ್ತಿದ್ದ ರೀತಿಯೇ ಬೇರೆ. ಅಲ್ಲಿ ಅಭಿನಯಕ್ಕಿಂತ ಭಾವನೆಗೆ ಬಹು ಪ್ರಾಧಾನ್ಯತೆ. ಅಂತಹ ಭಾವನಾಪ್ರಧಾನ ಸಂಗತಿಗಳನ್ನು ಪ್ರೇಕ್ಷಕರೆಲ್ಲ ಕಣ್ಣೆವೆಯಿಕ್ಕದೇ ಮೈಯ್ಯೆಲ್ಲಾ ಕಿವಿಯಾಗಿ ಕಾದು ಕುಳಿತು ನೋಡುವಂತೇ ನಡೆಸಿಕೊಡುತ್ತಿದ್ದ ಮಹಾನುಭಾವ ಶಂಭಣ್ಣನ ನೆನಪು ಮರುಕಳಿಸಿ, ಮನದ ಭಾವ ನೀರಾಗಿ ಕಣ್ಣಾಲಿಗಳಲ್ಲಿ ಹರಿದಾಗ ಅವರಿಗೊಮ್ಮೆ ವಂದಿಸಲೋಸುಗ ಬರೆಯುತ್ತಿದ್ದೇನೆ. ಈ ಮೇಲೆ ಹೇಳಿದ ಎಲ್ಲಾ ಪಾತ್ರಗಳಲ್ಲಿ ಅವರ ಭಾವತಲ್ಲೀನತೆ, ಭಾವತನ್ಮಯತೆ, ಆ ಅಸ್ಖಲಿತ ಮಾತುಗಳು, ನಿರರ್ಗಳವಾಗಿ ಹರಿಯುವ ಕಥೆಗೆ ಪೂರಕವಾದ ಜ್ಞಾನಧಾರೆ ಕುಳಿತ ಎಲ್ಲಾ ಪ್ರೇಕ್ಷಕರ ಕಣ್ಣಲ್ಲೂ ನೀರು ತರಿಸುತ್ತಿದ್ದವು. ಕಣ್ಣೀರು ತರಿಸುವ ಪಾತ್ರಗಳೇ ಅವುಗಳಾದರೂ ಜನ ಮತ್ತೆಮತ್ತೆ ಅದನ್ನೇ ನೋಡಲು ಬಯಸುತ್ತಿದ್ದರು, ಮೇಲಾಗಿ ತಮ್ಮ ಜೀವನದ ಘಟನೆಗಳಿಗೂ ಆ ಪಾತ್ರಗಳಿಗೂ ತಾದಾತ್ಮ್ಯತೆ ಕಂಡು ತಮ್ಮ ನೋವನ್ನು ಅಂದು ಅಲ್ಲಿ ಕಣ್ಣೀರು ಹರಿಸುವುದರ ಮೂಲಕ ನೊಂದ ಮನವನ್ನು ಹಗುರಗೊಳಿಸಿಕೊಳ್ಳುತ್ತಿದ್ದರು.

ನಾವೆಲ್ಲಾ ಅಂದು ಚಿಕ್ಕವರೇ ಆಗಿದ್ದರೂ ಆ ಪಾತ್ರಗಳು ಸೃಜಿಸಿದ ಚಿತ್ರಣ, ಕೆರಳಿಸಿ ಮನದೊಳಕ್ಕಿಳಿದ ಭಾವನೆಗಳು ಇಂದಿಗೂ ಜೀವಂತ, ನಾವಿರುವವರೆಗೂ ಅವು ಜೀವಂತ. ಬಹುಶಃ ಎಲ್ಲಾ ಮಕ್ಕಳಿಗೂ ಎಳವೆಯಲ್ಲಿ ಇಂತಹ ಪುಣ್ಯಕಥಾಭಾಗಗಳ ಅಭಿನಯವನ್ನು ಯಕ್ಷಗಾನದಲ್ಲಿ ನೋಡಲು ಅದೂ ಇಂತಹ ಕಲಾವಿದರು ನಿರ್ವಹಿಸಿದ್ದನ್ನು ಕಾಣಲು ಸಾಧ್ಯವಿಲ್ಲ. ಆ ದಿಸೆಯಲ್ಲಿ ನಾವು ಪಡೆದುಬಂದ ಪುಣ್ಯ ನಮಗೆ ಆ ಕಾಲಕ್ಕೆ ಇಂತಹ ದೃಶ್ಯಗಳನ್ನು ಕಣ್ಣಾರೆ ನೋಡುವ ಅವಕಾಶ, ಅನುಕೂಲ ನಮಗೆ ದೊರೆಯಿತು. ಮಹಾನುಭಾವರಾದ ನಮ್ಮ ಹಿರಿಯರು ಅದಕ್ಕೆ ಅನುಮತಿಯಿತ್ತು, ಅಗತ್ಯ ಸಹಕಾರವನ್ನೂ ಇತ್ತು, ನಾವು ಪೂರ್ಣರಾತ್ರಿ ಅದನ್ನು ನೋಡಲಾಗದೇ ಮಧ್ಯೆ ಮಧ್ಯೆ ನಿದ್ದೆಮಾಡಿದರೂ ನಮ್ಮನ್ನು ಪಕ್ಕದಲ್ಲೇ ಕೂರಿಸಿಕೊಂಡು ತೋರಿಸುವ ಸಾಹಸಮಾಡಿದರು, ಈ ವಿಷಯದಲ್ಲಿ ನಾವು ಅವರಿಗೆ ಮೊದಲಾಗಿ ಋಣಭಾರಿಗಳು.

ಈಗ ಶ್ರೀಯುತ ಶಂಭುಹೆಗಡೆಯವರ ಹರಿಶ್ಚಂದ್ರನ ಪಾತ್ರದ ಕೆಲವು ತುಣುಕುಗಳನ್ನು ಆಸ್ವಾದಿಸೋಣ ಬನ್ನಿ :






ಶ್ರೀಯುತರು ಈ ಎಲ್ಲಾ ಪಾತ್ರಗಳಿಗೆ ಜೀವರಸ ತುಂಬುತ್ತಿದ್ದುದು ಅವರ ಸಾಹಿತ್ಯಕ ಮಾತುಗಾರಿಕೆಯಿಂದ. ಆಹಾ ....ಎಂತಹ ಸುಂದರ, ಸ್ಪಷ್ಟ ಮಾತುಗಳವು! ಮಾತು ಆಡಿದರೆ ಮುತ್ತು ಉದುರಿದಂತೇ. ಎದುರಿನ ಪಾತ್ರಧಾರಿಗೇ ಕಣ್ಣಲ್ಲಿ ನೀರುಹರಿಸುವ ತಾಕತ್ತು ಅವರಿಗಿತ್ತು. ಯಕ್ಷಗಾನದ ವಿಶೇಷವೆಂದರೆ ಇಲ್ಲಿ ಮಾತುಗಳನ್ನು ಬಾಯಿಪಾಠ ಮಾಡಿ ಉಚ್ಚರಿಸುವುದಿಲ್ಲ, ಬದಲಾಗಿ ಸನ್ನಿವೇಶಕ್ಕೆ ತಕ್ಕಂತೇ ಪಾತ್ರಧಾರಿಯೇ ಅದನ್ನು ಭರಿಸಬೇಕು. ಇಲ್ಲಿ ಪಾತ್ರಧಾರಿಯ ಓದಿನ ಆಳ-ಅಗಲ-ವಿಸ್ತಾರದ ವಿಸ್ತರವನ್ನು ನಾವು ಅವಲೋಕಿಸಿಬಹುದಾಗಿದೆ. ಹೆಗಡೆಯವರು ದಿನಂಪ್ರತಿ ಓದುತ್ತಿದ್ದರು. ಸಮಕಾಲೀನ ಮತ್ತು ಪೂರ್ವದ ಹಲವು ಪುಸ್ತಕಗಳನ್ನು ಬಿಡುವಿದ್ದಾಗ ಓದುವುದು ಅವರ ಅಭ್ಯಾಸವಾಗಿತ್ತು. ಪಾತ್ರವನ್ನು ಆಳಕ್ಕೆ ಇಳಿದು ಆ ದಿನಗಳಲ್ಲಿ ಆ ವ್ಯಕ್ತಿ ಹೇಗಿದ್ದಿರಬಹುದು ಎಂಬುದನ್ನು ಮೊದಲೇ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಿದ್ದರು. ಉದಾಹರಣೆಗೆ ಹರಿಶ್ಚಂದ್ರ ತನ್ನ ಹೆಂಡತಿ ಸತ್ತ ಮಗನನ್ನು ಹೊತ್ತುಕೊಂಡು ಸ್ಮಶಾನಕ್ಕೆ ಬಂದಾಗಿನ ದೃಶ್ಯವನ್ನು ಅವರು ಮನಸಾ ಅನುಭವಿಸಿ ಆ ಮೂಲಕ ಅವರೂ ಅಳುತ್ತ ಪ್ರೇಕ್ಷಕರಿಗೆ ಉಣಬಡಿಸುತ್ತಿದ್ದರು. ಮಗನನ್ನು ಕಾಡಿಗೆ ಕಳುಹಿಸಿದ ಅನಿವಾರ್ಯತೆಯನ್ನು ಆ ಸಂದಿಗ್ಧವನ್ನು ಅನುಭವಿಸುವ ದಶರಥ ನಮ್ಮೆದುರಿಗೇ ಸಾಯುತ್ತಿದ್ದಾನೇನೋ ಎಂದೆನಿಸುತ್ತಿತ್ತು. ತಾಯ ಪ್ರೀತಿಯನ್ನೂ ಕಳೆದುಕೊಂಡು, ಹೆತ್ತ ಮಗ ವೃಷಸೇನನನ್ನೂ ಕಳೆದುಕೊಂಡು ರಣರಂಗದಲ್ಲಿ ದುಃಖಿಸುವ ಕರ್ಣನನ್ನು ನೋಡಿದಾಗ ಆತ ತನ್ನೆದೆಯಲ್ಲಿರುವ ಅಮೃತಕಲಶವನ್ನು ಹೊರತೆಗೆದು ಕೊಡುವಾಗಿನ ದೃಶ್ಯ ಕರ್ಣ ನಮ್ಮೆದುರಲ್ಲೇ ಇದ್ದಾನೇನೋ ಎಂಬಂತಿರುತ್ತಿತ್ತು. ಅಂತಹ ಕರ್ಣನ ಪಾತ್ರದ ಎರಡು ತುಣುಕಗಳನ್ನು ನೋಡಿ :






ಕಾರ್ಕೋಟಕ ಸರ್ಪ ಕಚ್ಚಿದ ನೆಪದಿಂದ ನಳಮಹಾರಾಜ ಬಾಹುಕನಾಗಿ, ದೇಶಬ್ರಷ್ಟನಾಗಿ ಅಲೆಯುತ್ತಾ ಅಲೆಯುತ್ತಾ ತನ್ನ ಆಪ್ತ ಸ್ನೇಹಿತನಾದ ಋತುಪರ್ಣ ಮಹಾರಾಜನ ಆಸ್ಥಾನಕ್ಕೆ ಬಂದು ಆತನಿಗೆ ಪರಿಚಯಿಸಿಕೊಳ್ಳುವಾಗ ನಿಜ ಹೇಳಿದರೆ ಎಲ್ಲಿ ಆತ ನೊಂದುಕೊಳ್ಳುತ್ತಾನೋ ಎಂಬ ಪರಿವೆಯಿಂದ ತಾನು ನಳನಲ್ಲವೆಂದು ಬರಿದೇ ಹೇಳುವ ದೃಶ್ಯ, ಹೆಂಡತಿ ದಮಯಂತಿಯ ಪುನಃ ಸ್ವಯಂವರ ನಡೆಯುತ್ತದೆ ಎಂಬ ಸುದ್ದಿಯನ್ನು ಋತುಪರ್ಣ ತನಗೆ ತಿಳಿಸಿದಾಗ ಒಳಗೊಳಗೇ ವಿಲವಿಲನೆ ಒದ್ದಾಡುವ ಬಾಹುಕನ ಮಾತುಗಳು ಹೃದಯಕಲಕುತ್ತಿದ್ದವು. ಕೊನೆಗೊಮ್ಮೆ ಬಾಹುಕ ನಳನೇ ಎಂದು ತಿಳಿದಾಗ ಋತುಪರ್ಣನನ್ನು ನಡೆಸಿಕೊಳ್ಳುವ ಆ ಆಪ್ತತೆಯ ಅಭಿನಯ ಮತ್ಯಾರಲ್ಲಿ ಕಂಡೀತು ? ಬದುಕಿನ ಕೊನೆಯ ಕ್ಷಣದವರೆಗೂ ಪೌರಾಣಿಕ ಪಾತ್ರಗಳನ್ನು ಬಿಟ್ಟು ಬೇರೇ ಪಾತ್ರಗಳನ್ನು ಅವರು ನಿರ್ವಹಿಸಲಿಲ್ಲ. ಅವರು ಯಾರೊಂದಿಗೋ ಹೋಲಿಸಿಕೊಂಡು ಆ ನಟನನ್ನು ಮೀರಿಸುತ್ತೇನೆಂಬ ಗೋಜಿಗೆ ಹೋದವರಲ್ಲ. ಅವರದ್ದೇ ಆದ ಒಂದು ತಿಟ್ಟನ್ನು, ಒಂದು ಸಂಪ್ರದಾಯಬದ್ಧ ಚೌಕಟ್ಟನ್ನು ಅವರು ಇಟ್ಟುಕೊಂಡಿದ್ದರು. ಹೊಸರೂಪದ ಭಾಗವತಿಕೆ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಹಿತಮಿತವಾದ ಆಂಗಿಕ ಅಭಿನಯ, ನೃತ್ಯ ಮತ್ತು ಅರ್ಥ ಇವು ಅವರ ರಂಗಮಾಧ್ಯಮದ ಆಯಾಮಗಳಲ್ಲಿ ಸದಾ ಸಮನ್ವಯಗೊಂಡ ಅಂಶಗಳಾಗಿರುತ್ತಿದ್ದವು. ಖ್ಯಾತ ನೃತ ವಿದುಷಿ ಶ್ರೀಮತಿ ಮಾಯಾರಾವ್ ಅವರಲ್ಲಿ ಕೋರಿಯೋಗ್ರಾಫಿ ಬಗ್ಗೆ ತರಬೇತಿ ಪಡೆದಿದ್ದ ಅವರ ಜೀವನವನ್ನು ಸಾಗರದ ಎಲ್.ಬಿ ಕಾಲೇಜಿನ ಅಧ್ಯಾಪಕರಾಗಿದ್ದ ಡಾ| ಜಿ.ಎಸ್. ಭಟ್ಟರು ಸಂಶೋಧನೆಗೇ ವಿಷಯವಸ್ತುವಾಗಿ ಬಳಸಿಕೊಂಡರು.

ಸೀತಾವಿಯೋಗದ ಶ್ರೀರಾಮನ ಒಂದು ದೃಶ್ಯವನ್ನು ನೋಡಿ :


ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ, ಉತ್ತರಕನ್ನಡ ಮತ್ತು ಮಲೆನಾಡು ಪ್ರಾಂತಗಳಲ್ಲಿ ಶಂಭು ಹೆಗಡೆಯವರ ಪರಿಚಯ ಹೊಸದಾಗಿ ಮಾಡಿಕೊಡಬೇಕಾಗಿಲ್ಲ. ಅಲ್ಲಿನ ಬಹುತೇಕ ಜನರ ಜೀವನದ ಮೇಲೆ ಹೆಗಡೆಯವರ ಪಾತ್ರ ಪೋಷಣೆ ಪರಿಣಾಮ ಬೀರಿದೆ. ಚಿಕ್ಕ ಚಡ್ಡಿ ಹುಡುಗನಾಗಿದ್ದ ನನ್ನಂಥವನೊಬ್ಬ ಆ ಕಾಲಕ್ಕೆ ಅನುಭವಿಸಿದ್ದನ್ನು ನೆನಪಿಸಿಕೊಂಡು ಇಷ್ಟು ಬರೆಯುವೆನಾದರೆ ಬರೆಯುವ/ಮಾತನಾಡುವ ಕಲೆ ಗೊತ್ತಿರದ ಜನ ಅದೆಷ್ಟು ನೆನಪಿನ ಮೂಟೆಗಳನ್ನು ತಮ್ಮಲ್ಲೇ ಹುದುಗಿಸಿಕೊಂಡಿರಬಹುದು ನೀವೇ ಲೆಕ್ಕಹಾಕಿ !

ರಾಮಾಯಣ ಮಹಾಭಾರತದ ಕಥೆಗಳನ್ನು ಮತ್ತೆ ಮತ್ತೆ ಹೇಳಲು, ತಿಳಿಸಿಕೊಡಲು ಇಂತಹ ಪಾತ್ರಪೋಷಕರ ಅವಶ್ಯಕತೆ ಈಗಲೂ ಯಕ್ಷರಂಗದಲ್ಲಿದೆ. ಆದರೆ ನನಗನಿಸಿದ ರೀತಿಯಲ್ಲಿ ಇದುವರೆಗೆ ಭಾವಪೂರಿತ ಮಾತಿನಲ್ಲಿ ಶಂಭುಹೆಗಡೆಯವರ ಸರಿಸಾಟಿಯಾಗುವ ವ್ಯಕ್ತಿ ಹುಟ್ಟಿಬಂದಿಲ್ಲ. ಅವರ ಜಾಗವನ್ನು ತುಂಬಲು ಇದುವರೆಗೂ ಯಾರಿಂದಲೂ ಆಗಲಿಲ್ಲ. ಸ್ನೇಹಿತರೇ, ನೋಡಿದಿರಲ್ಲ ಈ ಮೇಲಿನ ತುಣುಕಗಳಲ್ಲಿ ಭಾಗವಹಿಸಿದ ಶ್ರೇಷ್ಠ ಭಾಗವತ ನೆಬ್ಬೂರು ನಾರಾಯಣ ಹೆಗಡೆಯವರಿಗೂ ಹಾಗೂ ಮಿಕ್ಕುಳಿದ ಹಿಮ್ಮೇಳ-ಮುಮ್ಮೇಳದವರಿಗೂ ನಮ್ಮ ನಮನ ಸಲ್ಲಿಸೋಣ. ದಿ| ಶಂಭುಹೆಗಡೆಯವರು ಮತ್ತೆ ಯಕ್ಷಗಾನಕ್ಕಾಗಿ ಮರಳಿ ಜನಿಸಿ ಬರಲಿ, ಕರ್ನಾಟಕದ ಜನತೆಗೆ ತನ್ನ ಭಾಷೆಯ ಸೊಬಗನ್ನು ಉಣಬಡಿಸಲಿ ಎಂದು ಹಾರೈಸುತ್ತೇನೆ, ನಮಸ್ಕಾರ.

Monday, November 22, 2010

ಸಾರಥಿಯೆ ನಿಲ್ಲೊಮ್ಮೆ .....


ಸಾರಥಿಯೆ ನಿಲ್ಲೊಮ್ಮೆ .....

ದೇಹದೀ ಕೊಳಲಿನಲಿ ನವರಂಧ್ರಗಳ ಕೊರೆದು
ಜೀವ ನುಡಿಸಿದ ತನ್ನ ಭಾವಗಳು ಹರಿದೂ
ಸಂಸಾರ ಸಾಗರದಿ ನೌಕೆನಡೆಸುತಲರಿದು
ಸುಖ ದುಃಖಗಳೀಯುತ್ತ ತನ್ನೆಡೆಗೆ ಕರೆದೂ


ರಾಜ್ಯಭಾರವ ನಡೆಸಿ ತಾ ಕುಳಿತು ಕಾಣದಲಿ
ಒಂದರೊಳಗೊಂದಾಗಿ ಮೆರೆವುದನು ಕಂಡೆ
ಮಂದಬುದ್ಧಿಗೆ ಕವಿದಿರುವಹಂಕಾರದಲಿ
ಕಂಡರೂ ಕಾಣದಂತಾಗಿಹುದನುಂಡೆ

ಆರೂ ವೈರಿಗಳಿರದ ಬದುಕಿನೀ ದಾರಿಯಲಿ
ಆರು ಅಶ್ವಗಳಿರಿಸಿ ಚಾವಟಿಯ ಬೀಸಿ
ಸಾರಥಿಯೆ ಎಲ್ಲಿಗದು ಪಯಣವೀ ವೇಗದಲಿ ?
ಮಾರುತಿಯ ಮೀರಿಸುವ ರೀತಿಯಲಿ ನಡೆಸಿ

ರಾಗ ಹಲವನು ನುಡಿಸಿ ಕೊಳಲ ಮಾಯೆಯಲಿರಿಸಿ
ಭೋಗದಾ ವೈಭೋಗ ತೆರೆತೆರೆದು ತೋರಿ
ತ್ಯಾಗಮಾಡುತ ಮುರಳಿ ತೊರೆವೆ ಮತ್ತೊಂದರಸಿ
ಯೋಗ ಬಯಸುವೆ ನಿನ್ನ ದರುಶನವ ಕೋರಿ

Sunday, November 21, 2010

ಬದುಕು ಜಟಕಾ ಬಂಡಿ ..........

ಚಿತ್ರ ಕೃಪೆ : ಅಂತರ್ಜಾಲ [ಕೇವಲ ಕಾಲ್ಪನಿಕ ]

ಬದುಕು ಜಟಕಾ ಬಂಡಿ ..........

ಮಾನವ ಸಂಪನ್ಮೂಲದ ವ್ಯವಸ್ಥಾಪಕ ಹುದ್ದೆಯಲ್ಲಿ ಕೆಲಸಮಾಡುತ್ತಿರುವ ಗಿರೀಶ್ ಗೆ ನಿತ್ಯವೂ ಬಿಡುವಿಲ್ಲದ ಕೆಲಸ. ಕಂಪನಿಯನ್ನು ಉತ್ತಮ ದರ್ಜೆಗೆ ಏರಿಸಲು ಒಳ್ಳೆಯ ಕೆಲಸಗಾರರೂ ಕೂಡ ಒಂದು ಕಾರಣ ಎಂಬುದನ್ನು ಆತ ನಂಬಿದ ವ್ಯಕ್ತಿ. ಮೇಲಧಿಕಾರಿಗಳ ಜೊತೆ ಮಾತನಾಡುವಾಗ ಇನ್ನು ಮುಂದೆ ಮತ್ತಷ್ಟು ಪರಿಶ್ರಮದಿಂದ ಇನ್ನೂ ಉತ್ತಮ ಅರ್ಹತೆಯುಳ್ಳ ಕೆಲಸಗಾರರನ್ನು ಆಯ್ಕೆಮಾಡುವುದಾಗಿ ಆತ ಭರವಸೆ ಕೊಟ್ಟಿದ್ದ. ತಾನು ಅಲಂಕರಿಸಿದ ಹುದ್ದೆಗೆ ನ್ಯಾಯ ಒದಗಿಸುವ ಉದ್ದೇಶ ಆತನಿಗಿತ್ತು. ಸೇರಿದ ಒಳ್ಳೆಯ ನೌಕರರನ್ನು ಕಂಪನಿಬಿಟ್ಟು ಬೇರೇ ಕಂಪೆನಿಗೆ ಹಾರದಂತೆ ನಿಲ್ಲಿಸಿಕೊಳ್ಳುವುದೂ ಅಷ್ಟೇ ಕೌಶಲದ ಕೆಲಸವಾಗಿತ್ತು. ಆಗೀಗ ಬಿಟ್ಟು ಹೋಗುವ ಕೆಲವು ಕೆಲಸದವರ ಬದಲಾಗಿ ಆಗಾಗ ಹೊಸ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುವುದು ಮತ್ತು ಅವರಲ್ಲಿ ಉತ್ತಮವಾಗಿರುವವರನ್ನು ಆಯ್ಕೆಮಾಡಿಕೊಳ್ಳುವುದು ಸದಾ ಜಾರಿಯಲ್ಲಿದ್ದ ಪ್ರಕ್ರಿಯೆಯಾಗಿಬಿಟ್ಟಿತ್ತು. ಹೀಗೇ ಅಂದೂ ಕೂಡ ಒಂದು ತಾಂತ್ರಿಕ ಸೇವಾ ಹುದ್ದೆಗೆ ಸಂದರ್ಶನಕ್ಕೆ ಕರೆದಿದ್ದ. ಸುಮಾರು ೨೮-೩೦ ಅಭ್ಯರ್ಥಿಗಳು ಬಂದಿದ್ದರು. ಬಂದವರಲ್ಲಿ ಹುಡುಗರೂ ಇದ್ದರು ಹುಡುಗಿಯರೂ ಇದ್ದರು.

ಒಂದುಕಾಲದಲ್ಲಿ ಕೇವಲ ಹುಡುಗರೇ ನಿಭಾಯಿಸಬಹುದಾದ ಹುದ್ದೆಯನ್ನು ಇಂದು ಮಡಿವಂತಿಕೆ ತೊರೆದು ಧೈರ್ಯದಿಂದ ಹುಡುಗಿಯರೂ ನಿಭಾಯಿಸುತ್ತಿದ್ದರು. ಹುಡುಗಿಯರು ಕೊಟ್ಟ ನೌಕರಿಯಲ್ಲಿ ಆದಷ್ಟೂ ಹೆಚ್ಚಿನ ಕಾಲ ನಿಲ್ಲುವ ಒಂದು ಲಕ್ಷಣ ಆತನಿಗೆ ಬಹಳ ಹಿಡಿಸುತ್ತಿತ್ತು. ಅವರು ಕೆಲಸವನ್ನೂ ಆದಷ್ಟು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಆದರೆ ಬರುಬರುತ್ತಾ ರಾಯರ ಕುದುರೆ ಕತ್ತೆಯಾಗತೊಡಗಿತು ! ಈಗೀಗ ನೌಕರಿಯಲ್ಲಿ ಕಂಪನಿಯಿಂದ ಕಂಪನಿಗೆ ಜಿಗಿಯುವ ಕೆಲಸದಲ್ಲಿ ಹುಡುಗಿಯರೇ ಮುಂಚೂಣಿಯಲ್ಲಿದ್ದಾರೆ ಎಂಬುದು ಮನವರಿಕೆಯಾಗಿ ಈ ಸರ್ತಿ ಹುಡುಗರಿಗೇ ಆದ್ಯತೆ ಕೊಡಬೇಕೇನೋ ಎಂದುಕೊಂಡಿದ್ದ.

" ನೆಕ್ಸ್ಟ್ "

ಆತ ಕರೆದಾಗ ಒಳಗೆ ಬಂದಿದ್ದು ಶೀತಲ್. ಶೀತಲ್ ಬಹಳ ಸುಂದರ ಹುಡುಗಿ. ಸುಮಾರು ೨೬ ವರ್ಷ ವಯಸ್ಸು. ಮೆಕಾನಿಕಲ್ ತಂತ್ರಜ್ಞಾನ ಓದಿಕೊಂಡವಳು. ೩-೪ ವರ್ಷಗಳ ಒಳ್ಳೆಯ ಅನುಭವ ಕೂಡ ಹೊಂದಿದ್ದಳು. ತನ್ನ ವಿವರಣೆಗಳುಳ್ಳ ಬಯೋಡಾಟಾವನ್ನು ಗಿರೀಶ್ ಕೈಯ್ಯಲ್ಲಿ ಕೊಟ್ಟಳು. ಆತ ಕೂರ್ಲೌ ಹೇಳಿದನಂತರ ಎದುರುಗಡೆಗಿರುವ ಆಸನದಲ್ಲಿ ಕುಳಿತಳು. ಕೆಲವೊಂದು ತಾಂತ್ರಿಕ ವಿಷಯಗಳನ್ನು ಆಕೆಯಲ್ಲಿ ಕೇಳಿ ಉತ್ತರಪಡೆದ ನಂತರ ಆಕೆಯನ್ನು ಸೇರಿಸಿಕೊಳ್ಳುವುದೇ ಬಿಡುವುದೇ ಎಂಬುದು ಮನಸ್ಸಿನ ಹೊಯ್ದಾಟವಾಗಿತ್ತು ಗಿರೀಶ್ ನಿಗೆ. ಆಕೆಯ ಸ್ನಿಗ್ಧ ಸೌಂದರ್ಯ ಇಂದೇಕೋ ಆತನನ್ನು ಸೆಳೆಯುತ್ತಿತ್ತು. ಆಕೆಗೆ ನೌಕರಿ ಕೊಡದಿದ್ದರೂ ಆಕೆಯನ್ನು ಕಳೆದುಕೊಳ್ಳಲು ಆತ ಸಿದ್ಧನಿರಲಿಲ್ಲ. ಆಕೆಯ ಭಾವುಕ ಬೊಗಸೆ ಕಂಗಳು ತನ್ನೆದುರು ಬಿತ್ತರಿಸಿದ ಹಲವು ಭಾವನೆಗಳಿಗೆ ಆತನ ಮನಸ್ಸು ಕವನ ಹೊಸೆಯತೊಡಗಿತ್ತು. ಆದರೂ ತನ್ನ ವೈಯ್ಯಕ್ತಿಕ ಹಿತಾಸಕ್ತಿಯನ್ನು ಆತ ಹೇಳಿಕೊಳ್ಳಲಾಗುವುದೇ ? ಅದಕ್ಕೇ ಆತ ಆಕೆಯನ್ನು ಸ್ವಲ್ಪ ಹೊತ್ತು ಹೊರಗೆ ಕುಳಿತಿರಲು ಹೇಳಿದ. ಮುಂದೆ ಇನ್ನೆರಡು ಅಭ್ಯರ್ಥಿಗಳಿದ್ದರು. ಅವರ ಸಂದರ್ಶನ ಮುಗಿಸಿದಮೇಲೆ ಇನ್ನೊಮ್ಮೆ ಆಕೆಯನ್ನು ಮಾತನಾಡಿಸುವ ಇರಾದೆ ಆತನದಾಗಿತ್ತು. ಆಕೆ ಅಭ್ಯರ್ಥಿಯೇ ಆದರೂ ತನ್ನೆದುರು ಆಕೆ ಕುಳಿತಾಗ ಹೃದಯ ಹಾಡುವ ಹಲವು ರಾಗಗಳು ಮನದಲ್ಲಿ ಉದ್ಭವಿಸಿ ಕಣ್ಣುತುಂಬುವ ಹಲವು ಬಣ್ಣದ ಚಿತ್ತಾರಗಳು ಆತನಿಗೆ ಮುಂದೇನುಮಾಡಬೇಕೆಂಬುದನ್ನೇ ಮರೆಸುತ್ತಿದ್ದವು.

" ನೆಕ್ಸ್ಟ್ "

ಆಗ ಒಳಬಂದಿದ್ದು ರಾಜೀವ. ಬಹಳ ಒಳ್ಳೆಯ ಹುಡುಗ. ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಕಷ್ಟಾರ್ಜಿತದಲ್ಲಿ ಮಾಧ್ಯಮಿಕ ಹಂತದವರೆಗೆ ವಿದ್ಯಾಭ್ಯಾಸ ಪೂರೈಸಿ ನಂತರ ಭಾಗಶಃ ಅಲ್ಲಿಲ್ಲಿ ಕೆಲಸಮಾಡಿಕೊಂಡು ತಾಂತ್ರಿಕ ಪದವಿ ಗಳಿಸಿದ್ದ. ತೆಳ್ಳಗಿನ ವ್ಯಕ್ತಿಯ ಕಣ್ಣ ತುಂಬಾ ಸಾಧಿಸಬೇಕೆಂಬ ಹಂಬಲ ಎದ್ದು ಕಾಣುತ್ತಿತ್ತು. ಅನುಭವವೂ ಸಾಕಷ್ಟು ಇದ್ದುದರಿಂದ ಈತ ಹುದ್ದೆಗೆ ಒಂದರ್ಥದಲ್ಲಿ ತಕ್ಕುದಾದ ವ್ಯಕ್ತಿಯಾಗಬಹುದಿತ್ತು. ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ಕೊಟ್ಟಿದ್ದ ರಾಜೀವ. ವೈಯ್ಯಕ್ತಿಕ ವಿಚಾರಗಳನ್ನು ಕೇಳುತ್ತಾ ತಂದೆಯ ಬಗೆಗೆ ಕೇಳಿದ್ದ. ತನ್ನೆರಡು ಕಣ್ಣಲ್ಲಿ ಹನಿಗಳನ್ನು ತುಂಬಿಕೊಂಡು ಮುಗ್ಧ ಮಗುವಿನ ರೀತಿ ಕಣ್ಣೊರೆಸಿಕೊಳ್ಳುತ್ತ ಉತ್ತರಿಸಿದ ರಾಜೀವ ತಾನು ಅತೀ ಅವನಿರುವಾಗಲೇ ಯಾವುದೋ ಹಾವು ಕಡಿದು ತಂದೆ ತೀರಿಹೋದನೆಂದೂ, ತಂದೆಯ ಪ್ರೀತಿಯನ್ನು ಕಳೆದುಕೊಂಡ ಹತಭಾಗ್ಯನೆಂದೂ ಹೇಳಿದ.

ಅಪ್ಪನೆಂದರೆ ಈ ರೀತಿಯ ಅನನ್ಯತೆ ಇರುತ್ತದೆಂಬುದನ್ನು ಇದೇ ಮೊದಲಾಗಿ ಅನುಭವಿಸುತ್ತಿದ್ದ ಗಿರೀಶ್. ತಾನು ಚಿಕ್ಕವನಿದ್ದಾಗ ಅಪ್ಪ-ಅಮ್ಮ ಇಬ್ಬರೂ ಪ್ರೀತಿಯಿಂದಿದ್ದರು. ತಾನು ೪-೫ ವಯಸ್ಸಿನವನಾಗುವ ಹೊತ್ತಿಗೆ ಅಪ್ಪ-ಅಮ್ಮ ದಿನಾಲೂ ಜಗಳವಾಡುತ್ತಿದ್ದರು. ಮೊದಲೆಲ್ಲಾ ತನ್ನೊಟ್ಟಿಗೇ ತನ್ನನ್ನು ಮಧ್ಯೆ ಮಲಗಿಸಿಕೊಂಡು ಆಚೆ ಈಚೆ ಮಲಗುತ್ತಿದ್ದ ಅಪ್ಪ-ಅಮ್ಮ ಕ್ರಮೇಣ ಬೇರೆ ಬೇರೆ ಕೋಣೆಗಳಲ್ಲಿ ಮಲಗುತ್ತಿದ್ದರು. ಈ ವಿಷಯದಲ್ಲಿ ಅಪ್ಪನನ್ನು ಕೇಳಲಿ ಅಮ್ಮನನ್ನು ಕೇಳಲಿ ತನ್ನನ್ನು ಗದರಿಸುತ್ತಿದ್ದರು. ಕೊನೆಗೊಂದು ದಿನ ಅಪ್ಪ-ಅಮ್ಮ ಒಬ್ಬರನ್ನೊಬ್ಬರು ಥಳಿಸುತ್ತಿದ್ದರು. ಆ ರಾತ್ರಿ ಅಪ್ಪ ಅಮ್ಮನನ್ನೂ ತನ್ನನ್ನೂ ಮನೆಯಿಂದ ಹೊರಗೆ ನೂಕಿಬಿಟ್ಟರು. ಅಳುತ್ತಿದ್ದ ಅಮ್ಮನನ್ನು ನಾನು ತಾನು ಓಡೋಡಿ ಅಪ್ಪಿಕೊಂಡೆ. ಆಮೇಲೆ ಅಮ್ಮ ಏನುಹೇಳಿದರೂ ಕೇಳಿಸಿಕೊಳ್ಳದ ಅಪ್ಪ ಬಾಗಿಲು ತೆರೆಯಲೇ ಇಲ್ಲ. ತನ್ನನ್ನು ನೋಡಲೂ ಬರಲಿಲ್ಲ. ಅರೆಗತ್ತಲೆಯಲ್ಲಿ ಅಮ್ಮ ತನ್ನ ಕೈಹಿಡಿದುಕೊಂಡು ದೂರ ನಡೆದಳು. ತನಗೆ ಕಾಲು ನೋವುಬಂದು ನಡೆಯಲಾಗುತ್ತಿರಲಿಲ್ಲ. ತಾನು ಅಮ್ಮನ ಮುಖವನ್ನೇ ಆಗಾಗ ನೋಡುತ್ತಿದ್ದೆ. ಅಮ್ಮನಿಗೆ ಬೇಸರವಾಗಿದೆಯೆಂಬುದು ಸ್ಪಷ್ಟವಾಗಿತ್ತು. ಅವಳಿಗೆ ಮತ್ತೂ ಬೇಸರಮಾಡುವುದು ಬೇಡವೆಂದು ತಾನು ನೋವಾದರೂ ನಡೆಯುತ್ತಿದ್ದೆ. ನಡೆದೂ ನಡೆದೂ ನಡೆದೂ ಸುಮಾರು ತಾನು ಎಂದಿಗೂ ನಡೆದಿರದ ದೂರವನ್ನು ಕ್ರಮಿಸಿದ್ದೆವು. ಅಲ್ಲಿ ಅಮ್ಮನ ಗೆಳತಿಯ ಮನೆಯೊಂದಿತ್ತು ಎಂಬುದು ಆಮೇಲೆ ತನಗೆ ಗೊತ್ತಾಗಿದ್ದು. ಅಮ್ಮ ಬಾಗಿಲು ತಟ್ಟಿ ಎಬ್ಬಿಸಿದಾಗ ಕತ್ತಲು ತುಂಬಿದ ನೀರವ ರಾತ್ರಿಯಲ್ಲಿ, ನಾಯಿಗಳ ಬೊಗಳುವಿಕೆಗಳ ಮಧ್ಯೆ ಯಾರು ಬಂದಿದ್ದಾರೆಂದು ಅಮ್ಮನ ಗೆಳತಿ ಬಾಗಿಲ ಪಕ್ಕದ ಕಿಟಕಿಯಿಂದ ನೋಡಿದಳು. ತಿಳಿದ ನಂತರ ಬಾಗಿಲು ತೆರೆದು ಬರಮಾಡಿಕೊಂಡಳು.

ಅಮ್ಮ ತುಂಬಾ ದಣಿದಿದ್ದಳು. ಆಕೆಗೆ ದಣಿದದ್ದಕಿಂತ ಹೆಚ್ಚು ಅಪ್ಪಬೈದಿದ್ದು ಬೇಸರವಾಯಿತಿರಬೇಕು. ಗೆಳತಿ ಶರ್ಮಿಳಾ ಆಶ್ಚರ್ಯದಿಂದ ಕೇಳಿದಾಗ ಆಮ್ಮ ಆಕೆಯ ಹೆಗಲಮೇಲೆ ತಲೆಯಾನಿಸಿ ಗಳಗಳನೇ ಅತ್ತಳು. ಶರ್ಮಿಳಾ ಆಂಟಿ ಅಮ್ಮನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಕುಡಿಯಲು ನೀರು ಕೊಟ್ಟು, ಊಟಕ್ಕೆ ಸಜ್ಜುಗೊಳಿಸಲು ಅಡಿಗೆಮನೆಗೆ ಹೋದರು. ಶರ್ಮಿಳಾ ಆಂಟಿಯ ಯಜಮಾನರು ಅಂದು ಊರಲ್ಲಿರಲಿಲ್ಲ. ಆಗ ತಾನು ಮತ್ತು ಅಮ್ಮ ಇಬ್ಬರೇ ಜಗುಲಿಯಲ್ಲಿ ಕುಳಿತಿದ್ದೆವು. ಅಮ್ಮನನ್ನು ಕೇಳಿದರೆ ಮತ್ತೆ ಅಳಲೂಬಹುದು ಎಂಬ ಸಂದೇಹ ತನಗಿತ್ತು. ಆದರೂ ಅಪ್ಪ ಯಾಕೆ ಅಷ್ಟು ಕಟುಕ ಮನಸ್ಸಿನವರಾದರು ಎಂಬುದು ಮಾತ್ರ ತನಗೆ ತಿಳಿಯಲಿಲ್ಲ. ಅದನ್ನು ತಿಳಿಯುವ ಕುತೂಹಲವಿದ್ದರೂ ಅಮ್ಮನಿಗಲ್ಲದೇ ಮತ್ತಿನ್ಯಾರಿಗೆ ಅದು ಗೊತ್ತಿರಲು ಸಾಧ್ಯ ? ತನ್ನ ಪ್ರಶ್ನೆಗಳನ್ನು ಹಾಗೇ ತನ್ನ ಪುಟ್ಟ ಮೆದುಳಿನಲ್ಲಿ ಬಂಧಿಸಬೇಕಾಯಿತು. ಅಪ್ಪನ ಮೇಲೆ ತನಗೂ ಕೋಪ ಬಂದಿತ್ತು. ಆದರೆ ಒಳಗೊಳಗೇ ಪ್ರೀತಿಯೂ ಇತ್ತು. ಆತ ಅಮ್ಮನನ್ನು ಮಾತ್ರ ಹೀಗೆ ಬೈದ ಹೊಡೆದ ಎಂಬ ಕಾರಣಕ್ಕೆ ಅವನನ್ನು ಏಕಾಏಕೀ ಎದುರಿಸುವ ಧೈರ್ಯ ತನಗಿರಲಿಲ್ಲ. ಅಕಸ್ಮಾತ್ ತನಗೂ ಆತ ಎರಡಿಟ್ಟರೆ ಎಂಬ ಭಯ ತನ್ನಲ್ಲಿತ್ತು. ಆದರೂ ಒಂದೆರಡು ಬಾರಿ ಜೋರಾಗಿ " ಅಪ್ಪಾ ಏನ್ಮಾಡ್ತಾ ಇದ್ದೀರ ...ಅಮ್ಮನ್ನ ಹೊಡೀತೀರ ಯಾಕೆ ? " ಎಂದು ಜೋರಾಗಿ ಕೂಗಿದ್ದಿದೆ. ಆದರೆ ಅಪ್ಪ ಅದಕ್ಕೆಲ್ಲಾ ಉತ್ತರಿಸುವ ಗೋಜಿಗೆ ಹೋಗದೇ ಅಮ್ಮನನ್ನು ಬೈಯ್ಯುವ ದೂಡುವ ಕಾರ್ಯದಲ್ಲಿ ನಿರತರಾಗೇ ಇದ್ದರು.

ಊಟಕ್ಕೆ ಅಣಿಗೊಳಿಸಿದ ಶರ್ಮಿಳಾ ಆಂಟಿ ತಮ್ಮನ್ನು ಕರೆದರು. ತಾವು ಹೋಗಿ ಕುಳಿತಾಗ ಅಮ್ಮ ಅದೇನೇನೋ ಇಂಗ್ಲೀಷಿನಲ್ಲಿ ತಮ್ಮ ಗೆಳತಿಯೊಂದಿಗೆ ಸಂಭಾಷಿಸಿದರು. ತನಗದು ಸದ್ಯ ಅರ್ಥವಾಗದ್ದು. ಊಟದ ಶಾಸ್ತ್ರ ಮುಗಿಸಿದರು ಅಮ್ಮ. ಆಗಲೇ ರಾತ್ರಿ ೧೨:೩೦ ರ ಮೇಲೆ ಆಗಿಹೋಗಿತ್ತು. ಕೋಣೆಯೊಂದರಲ್ಲಿ ಹಾಸಿಗೆಹಾಸಿ ತಮಗೆ ನಿದ್ರಿಸಲು ಅನುವುಮಾಡಿಕೊಟ್ಟಿದ್ದಳು ಶರ್ಮಿಳಾ ಆಂಟಿ. ಆ ಇಡೀ ರಾತ್ರಿ ಅಮ್ಮ ಏನೇನೋ ಸಣ್ಣಗೆ ಗುನುಗುತ್ತಾ ಅಳುತ್ತಿದ್ದರು. ಅಮ್ಮ ನಿದ್ರಿಸುವುದಿಲ್ಲವೇಮ್ದು ತಿಳಿದು ತನಗೂ ನಿದ್ರೆ ಬೇಡವಾಗಿತ್ತು. ಅದೇ ಕೊನೆಯಿರಬೇಕು. ಅಲ್ಲಿಂದಾಚೆ ಅಮ್ಮ ಮತ್ತೆ ಅಪ್ಪನಿದ್ದೆಡೆ ಹೋಗಲಿಲ್ಲ. ತಾನು ಹುಟ್ಟಿ ಇಷ್ಟುದಿನ ಬೆಳೆದು ಆಡಿದ ಆ ಮನೆ, ಅಲ್ಲಿನ ಸುತ್ತಲ ಪರಿಸರದಲ್ಲಿ ವಾಸವಿದ್ದ ಪೂಜಾ ಆಂಟಿ, ಪವಿತ್ರಾ ಆಂಟಿ, [ಮಂಚ್ ಕೊಡುತ್ತಿದ್ದ ಪಕ್ಕದ ಮನೆ] ತಾತ, ಸೀಬೆಕಾಯಿ ಆಂಟಿ, ಆಡಲು ಬರುತ್ತಿದ್ದ ಸ್ಕೂಲ್ ಸ್ನೇಹಿತರಾದ ರವಿ, ಸುಧೀಶ್, ಚಿರಂತ್, ಸ್ನೇಹಾ, ಇಂಚರ ಇವರೆಲ್ಲರನ್ನೂ ತಾನು ಕಳೆದುಕೊಂಡೆ. ಮತ್ತೆಂದೂ ಅಪ್ಪ ತನಗಾಗಿ ಹುಡುಕಿ ಬರಲೇ ಇಲ್ಲ. ಆಸೆ ಕಂಗಳಿಂದ ನೋಡುತ್ತಿದ್ದ ತನಗೆ ದಿನವೂ ನಿರಾಸೆಯೇ ಕಾದಿತ್ತು. ಈಗ ತನ್ನಜೊತೆ ಚೌಕಾಬಾರ್ , ಕಣ್ಣಾಮುಚ್ಚೆ, ಕೇರಮ್ಮು ಎಲ್ಲಾ ಆಡಲಿಕ್ಕೆ ಯಾರೂ ಇರಲಿಲ್ಲ. ಆಡುವ ವಸ್ತುಗಳೂ ಇರಲಿಲ್ಲ. ಮನೆಯಿಂದ ತಂದಿದ್ದು ಏನೂ ಇರಲಿಲ್ಲ. ಹಾಕಿಕೊಂಡು ಬಂದ ಚಡ್ಡಿ-ಪ್ಯಾಂಟು ಬಿಟ್ಟರೆ ತನ್ನೆಲ್ಲಾ ವಸ್ತುಗಳು ಆ ಮನೆಯಲ್ಲೇ ಇದ್ದವು. ತನಗಿಷ್ಟವಾದ ಜೀನ್ಸ್, ಬಣ್ಣದ ದಿರಿಸುಗಳು, ಕ್ರೆಯಾನ್ಸ್, ರಬ್ಬರು, ಪೆನ್ಸಿಲ್ ಪುಸ್ತಕಗಳು ಎಲ್ಲವೂ ಅದೇ ಮನೆಯಲ್ಲಿದ್ದವು. ಹೋಗಿ ತರೋಣವೆಂದರೆ ಅಮ್ಮ ನೊಂದುಕೊಂಡಾರೆಂಬ ಅನಿಸಿಕೆ.

ಅಪ್ಪ ಯಾಕೆ ಹಾಗಾದನೆಂಬ ಕಾರಣ ಮಾತ್ರ ಗೊತ್ತಗಲೇ ಇಲ್ಲ. ಮೊದಲೆಲ್ಲಾ ಚೆನ್ನಾಗೇ ಇದ್ದರು. ತನ್ನನ್ನು ಬಹಳ ಪ್ರೀತಿಮಾಡುತ್ತಿದ್ದರು, ಮುದ್ದುಮಾಡುತ್ತಿದ್ದರು, ಚಾಕೊಲೇಟ್-ಹೊಸ ಹೊಸ ಬಟ್ಟೆ ಎಲ್ಲಾ ತಂದು ಕೊಡೋರು. ತಾನೇನಾದರೂ ಕೇಳಿದರೆ ಆದಷ್ಟೂ ಬೇಗನೇ ತಂದುಕೊಟ್ಟು " ಈಗ ಖುಷಿ ಆಯ್ತಾ ನಿಂಗೆ ಮರೀ ? " ಎನ್ನುತ್ತಾ ಲಲ್ಲೆಗರೆಯುತ್ತಿದ್ದರು. ಅಮ್ಮನೇ ಆಗಾಗ ಗದರಿಕೊಳ್ಳುವುದು ಬಿಟ್ಟರೆ ಅಪ್ಪ ತನ್ನನ್ನೆಂದೂ ಹೊಡೆದಿರಲಿಲ್ಲ. ಅಮ್ಮನೊಂದಿಗೂ ತುಂಬಾ ಪ್ರೀತಿಯಿಂದ ನಗುತ್ತಾ ಮಾತನಾಡುತ್ತಿದ್ದರು. ಚಳಿಗಾಲದಲ್ಲಿ ಅವರಿಬ್ಬರ ಮಧ್ಯೆ ಹಾಸಿಗೆಯಲ್ಲಿ ಬೆಚ್ಚಗೆ " ಅಮ್ಮ ಹೊದಿಕೆ-ಅಪ್ಪ ಹೊದಿಕೆ " ಎಂದುಕೊಂಡು ಅವರೀರ್ವರು ಹೊದ್ದ ಹೊದಿಕೆಗಳಲ್ಲೂ ಪಾಲು ಪಡೆದು ಒಂದರಮೇಲೊಂದು ಹೊದೆದುಕೊಂಡು ಮಲಗುತ್ತಿದ್ದೆ ತಾನು. ಸ್ಕೂಲಿಗೆ ಹೊತ್ತಾಗುತ್ತೆ ಏಳೋ ಎಂದು ಅಮ್ಮ ಕೂಗಿದರೂ ಅವರೀರ್ವರೂ ಎದ್ದುಹೋಗಿ ಬಹಳ ಸಮಯವಾದರೂ ಏಳುತ್ತಲೇ ಇರಲಿಲ್ಲ ತಾನು. ರಾತ್ರಿ ಊಟವಾದಮೇಲೆ ’ಪೋಗೋ’ ನೋಡುತ್ತ ತಡವಾಗಿ ನಿದ್ರಿಸುವ ತನನ್ನು ಅದೆಷ್ಟೋ ಹೊತ್ತಿಗೆ ಅಪ್ಪ ಮೆಲ್ಲನೆ ಎತ್ತುತಂದು ಹಾಸಿಗೆಯ ಮಧ್ಯಭಾಗದಲ್ಲಿ ಮಲಗಿಸಿಕೊಳ್ಳುತ್ತಿದ್ದರು. ಅವರಿಗೆ ಬೇರಾವ ಚಾನೆಲ್ ನೋಡಲೂ ತಾನು ಬಿಡದಾಗ " ಮರೀ ಸ್ವಲ್ಪ ಹೊತ್ತು ಕಣೋ ನ್ಯೂಸ್ ನೋಡಬೇಕು " ಎಂದೆಲ್ಲಾ ತನ್ನಲ್ಲಿ ಕೇಳುತ್ತಿದ್ದರು. ಸ್ಕೂಲ್ ಹೋಮ್ ವರ್ಕ್ ಮುಗಿಸಲು ಅಪ್ಪನಾಗಲೀ ಅಮ್ಮನಾಗಲೀ ಸಹಾಯಮಾಡುತ್ತಿದ್ದರು. ಯಾವುದೋ ವಸ್ತು ಸರಿಯಿಲ್ಲವೆಂದು ಅತ್ತರೆ ಮಾರನೇದಿನವೇ ಹೊಸದನ್ನು ತಂದುಕೊಡುವ ಜಾಯಮಾನ ಅಪ್ಪನದಾಗಿತ್ತು. ಮೈಕೈ ತುರಿಕೆ ಇದ್ದರೆ ಇಡೀ ಮೈಗೆ ಕೊಬ್ಬರಿ ಎಣ್ಣೆ ಸವರುತ್ತಿದ್ದುದೂ ಅಪ್ಪನೇ ! ಹೊತ್ತಲ್ಲೇ ಎದ್ದು ತನ್ನ ಸ್ಕೂಲ್ ಬ್ಯಾಗ್ ತಯಾರಿಮಾಡಿ, ತನ್ನ ಸಮವಸ್ತ್ರಕ್ಕೆ ಇಸ್ತ್ರಿ ಹಾಕಿ, ಅದನ್ನು ತನಗೆ ತೊಡಿಸಿ, ಕಾಲುಚೀಲ, ಬೂಟು ಇವನ್ನೆಲ್ಲಾ ಹಾಕಿ ಅಣಿಗೊಳಿಸುವುದು ಅಪ್ಪನಾದರೆ, ಸ್ನಾನಮಾಡಿಸಿ, ದೇವರ ಸ್ತೋತ್ರ ಹೇಳಿಸಿ, ತಿಂಡಿಬ್ಯಾಗ್ ತಯಾರಿಮಾಡಿ, ತಿಂಡಿ ತಿನ್ನಿಸಿ-ಹಾಲುಕೊಟ್ಟು ಮುಂತಾದ ಕೆಲಸವನ್ನು ಅಮ್ಮ ಮಾಡುತ್ತಿದ್ದಳು. ಅಪ್ಪ ಗಾಡಿಯಲ್ಲಿ ಕರೆದೊಯ್ಯುವಾಗ ಅಮ್ಮ ಬಾಗಿಲ ಹೊರಗಿನ ಗೇಟಿನವರೆಗೂ ಬಂದು ಬೀಳ್ಕೊಟ್ಟು ಹೋಗುತ್ತಿದ್ದರು.

ಈಗಲೋ ಅಮ್ಮ ಇಲ್ಲಿ, ಅಪ್ಪ ಅಲ್ಲಿ. ಅಪ್ಪನ ಮನೆಗೆ ಮತ್ತೆ ಹೋಗೋಣವೇ ಎಂದು ಕೇಳುವ ಮನಸ್ಸಾಗುತ್ತಿತ್ತಾದರೂ ಅಮ್ಮ ನೊಂದುಕೊಳ್ಳಬಾರದಲ್ಲ. ಅದಕ್ಕೇ ತಾನು ಸುಮ್ಮನಿದ್ದೆ. ನೋಡುತ್ತಾ ನೋಡುತ್ತಾ ಬೆಳಗಾಗಿಹೋಯಿತು. ಅಮ್ಮನಿಗೆ ಶರ್ಮಿಳಾ ಆಂಟಿ ಸ್ವಲ್ಪ ಹಣ ಕೊಟ್ಟಳು. ಅಮ್ಮ-ತಾನು ತಿಂಡಿತಿಂದು ಶರ್ಮಿಳಾ ಆಂಟಿಗೆ ಕೃತಜ್ಞತೆ ಸಲ್ಲಿಸಿ ಅಜ್ಜನಮನೆ ಊರಿಗೆ ಪ್ರಯಾಣಬೆಳೆಸಿದೆವು. ಕೆಲಸದ ದಿನವಾದ್ದರಿಂದ ಅನಿರೀಕ್ಷಿತವಾಗಿ ಮಧ್ಯಾಹ್ನ ೩ ಗಂಟೆಗೆಲ್ಲಾ ಬಂದಿಳಿದ ತಮ್ಮನ್ನು ನೋಡಿ ಅಜ್ಜ-ಅಜ್ಜಿಗೆ ಆಶ್ಚರ್ಯವಾಯಿತು. ಏನೋ ಕಾರಣವಿರಬೇಕೆಂಬ ಗುಮಾನಿ ಅಜ್ಜನಿಗೆ ಬಂದಿರಬೇಕು. ಒಳಮನೆಗೆ ಕರೆದು ಊಟ-ಉಪಚಾರ ವಗೈರೆ ನಡೆಸಿದರು. ಎಷ್ಟೇ ಕೇಳಿದರೂ ಅಮ್ಮ ಆಕ್ಷಣಕ್ಕೆ ಏನನ್ನೂ ಹೇಳಲಿಲ್ಲ. ಸರಿ ಮಗಳು-ಮೊಮ್ಮಗ ಬಂದಿದ್ದಾರೆ ಅಂತ ಅಜ್ಜ-ಅಜ್ಜಿ ಸುಮ್ಮನಾಗಿಬಿಟ್ಟರು.

ದಿನಗಳು ಕಳೆಯುತ್ತಲೇ ಇದ್ದವು. ತನಗೆ ಸ್ಕೂಲೂ ಇರಲಿಲ್ಲ, ಸ್ನೇಹಿತರೂ ಇರಲಿಲ್ಲ. ಅಜ್ಜನ ಮನೆಯ ಸುತ್ತಲ ಮನೆಯ ಕೆಲವು ಹುಡುಗರು " ನೀನು ಸ್ಕೂಲಿಗೆ ಹೋಗುವುದಿಲ್ವೇನೋ ? " ಎಂದು ಗೋಳುಹುಯ್ದುಕೊಳ್ಳುತ್ತಿದ್ದರು. ಅವರೆಲ್ಲರ ಮನೆಯಲ್ಲಿ ಅಪ್ಪ್-ಅಮ್ಮ ಹಾಯಾಗಿದ್ದರು. ಅವರೆಲ್ಲಾ ಅ ಹಳ್ಳಿಯ ಶಾಲೆಗೆ ಹೋಗುತ್ತಿದ್ದರು. ಅವರನ್ನೆಲ್ಲಾ ನೋಡಿದಾಗ ತನಗೂ ಅಪ್ಪನ ನೆನಪು ಸದಾ ಕಾಡುತ್ತಿತ್ತು. ಅಪ್ಪನ ಮನೆಗೆ ಅಮ್ಮ ಹೋಗುವುದು ಯಾವಾಗ, ಮೊದಲು ನಾವು ಊರಿಗೆ ಬಂದಾಗ ದಿನವೂ ದೂರವಾಣಿ ಕರೆ ಮಾಡಿದ ಹಾಗೇ ಈಗಲೂ ಕೊನೆಗೊಮ್ಮೆ ಮಾಡಬಹುದೇ? ಅಮ್ಮ ಯಾಕೆ ಹೀಗೆ ಮಾಡಿದಳು. ತಿರುಗಿ ಒಮ್ಮೆ ಅಪ್ಪನನ್ನು ಓಲೈಸಿ ಮನೆಗೆ ಹೋಗಬಾರದಿತ್ತೇ ? ಉತ್ತರವಿಲ್ಲದ ಪ್ರಶ್ನೆಗಳು ಕಾಡುತ್ತಲೇ ಇದ್ದವು. ಹೀಗೇ ತಿಂಗಳುಗಳ ಮೇಲೆ ತಿಂಗಳುಗಳೇ ಕಳೆದುಹೋದವು. ಅಪ್ಪ ತಮ್ಮನ್ನೆಲ್ಲಾ ಮರೆತಿರಬಹುದೇ? ಈಗ ಹೇಗಿರಬಹುದು? ಆತನ ಕೋಪ ತಣ್ಣಗಾಗಿರಬಹುದೇ ? ಎಂದು ಯೋಚಿಸುತ್ತಿದ್ದೆ. ಅನಿರೀಕ್ಷಿತವಾಗಿ ಬಂದ ಅಂಚೆಮಾಮ " ಮರಿ ಶಾಲ್ಮಲಿ ಅಂದ್ರೆ ಯಾರು ಕೂಗು " ಅಂದರು. ಅಮ್ಮನನ್ನು ಕೊಗಿದೆ. ರಜಿಸ್ಟರ್ ಮಾಡಿದ ಪತ್ರವೊಂದು ಬಂದಿದೆಯೆಂದು ಆತ ತಿಳಿಯಿತು. ಹಾಗಂತ ಅಮ್ಮನೇ ಹೇಳಿದ್ದು. ಪತ್ರ ಬಂತಲ್ಲ, ಬಹುಶಃ ಅಪ್ಪನದ್ದೇ ಇರಬೇಕು, ಇನ್ನೇನು ತಮ್ಮನ್ನು ಕರೆದುಬಿಡುತ್ತಾನೆ ಎಂದುಕೊಂಡೆ.

ಅಮ್ಮ ಗಳಗಳನೇ ಅಳಲು ಶುರುಮಾಡಿದ್ದರು. ಬಂದ ಪತ್ರದಲ್ಲಿ ಏನಿತ್ತು ಎಂಬುದು ತನಗೆ ಅರ್ಥವಾಗದ್ದು. ಮತ್ತದೇ ಅರ್ಥವಾಗದ ನೋವುಗಳು. ಕಾಡುವ ಪ್ರಶ್ನೆಗಳು, ಮರೆಯಲಾಗದ ನೆನಪುಗಳು. ಅಂದು ಮಾತ್ರ ಅಮ್ಮ ಎಲ್ಲರೆದುರೂ ತನ್ನ ಮನಸ್ಸನ್ನು ಬಿಚ್ಚಿ ಹೇಳಲೇಬೇಕಾಯಿತು. ಅಮ್ಮನಿಗೆ ಅಪ್ಪ ನ್ಯಾಯಾಲಯದ ಮೂಲಕ ಸೋಡಚೀಟಿ ಕೊಡುತ್ತಿರುವ ಸಂದೇಶ ಕಳಿಸಿದ್ದ. ಹಾಗಂದರೇನು ಮುಂದೇನಾಗುತ್ತದೆ ಎಂಬುದು ತನ್ನರಿವಿಗೆ ನಿಲುಕದ ವಿಷಯ. ಅಮ್ಮನೊಂದಿಗೆ ಅಜ್ಜ-ಅಜ್ಜಿಯೂ ಅತ್ತಾಗ ತನಗೂ ಅಳುತಡೆಯಲಾಗಲಿಲ್ಲ. ಗಂಟೆಗಟ್ಟಲೆ ಇಡೀ ಕುಟುಂಬ ಅತ್ತಿದ್ದೆವು. ಆಮೇಲೆ " ಎದೆಗಟ್ಟಿ ಮಾಡಿಕೋ ಮಗಾ ದೇವರಿದ್ದಾನೆ .......ನಿನಗೆ ಹೇಗೂ ಮಗನೊಬ್ಬನಿದ್ದಾನಲ್ಲ .......ಅವನ ಮುಖನೋಡಿ ನಿನ್ನ ನೋವನು ಮರೆ" ಎಂದು ಅಜ್ಜ ಹೇಳುತ್ತಿದ್ದರು. ಅಪ್ಪ ಏನು ಕಳಿಸಿದ್ದಾನೆ ಎಂಬುದು ನನಗೆ ಕೊನೆಗೂ ತಿಳಿಯದ ವಿಷ್ಯವೇ ಆಗಿತ್ತು. ಹಠಮಾಡಿದ್ದಕ್ಕೆ ಅಜ್ಜ ಹೇಳಿದ್ದು " ನಿಮ್ಮಪ್ಪನಿಗೆ ನೀವು ಬೇಡವಂತೆ ಕಣೋ ....ಅದಕ್ಕೇ ಆತ ಬೇರೆ ಮದುವೆಯಾಗುತ್ತಾನಂತೆ.....ಇನ್ನು ನಿನ್ನ ಪಾಲಿಗೆ ಅಮ್ಮನೇ ಅಪ್ಪ ಮಗೂ ...ಜಾಸ್ತಿ ಏನೂ ಕೇಳಬೇಡ...ನಿನಗೀಗ ಅರ್ಥವಾಗೊಲ್ಲ...ಮುಂದೊಂದು ದಿನ ನೀನು ದೊಡ್ಡವನಾಗಿ ಚೆನ್ನಾಗಿ ಓದಿ ಒಳ್ಳೆಯ ಹುದ್ದೆಯಲ್ಲಿದ್ದು ಅಮ್ಮನ್ನ ಚೆನ್ನಾಗಿ ನೋಡಿಕೋ ....ದೇವರು ನಿಮಗೆ ಒಳ್ಳೇದು ಮಾಡುತ್ತಾನೆ " ಅಜ್ಜ ಮತ್ತೆ ಪಂಚೆಯ ತುದಿಯಿಂದ ಕಣ್ಣೊರೆಸಿಕೊಳ್ಳ ಹತ್ತಿದ್ದರು.

ಕಳೆದೆರಡು ವರ್ಷಗಳಲ್ಲಿ ಅಷ್ಟೊಂದು ಪ್ರೀತಿಸಿದ್ದ ಅಪ್ಪ ಇಂದೇಕೆ ತಮ್ಮನ್ನು ಬೇಡವೆಂದು ಹೇಳುತ್ತಿದ್ದಾನೆ ಎಂಬುದು ಕಗ್ಗಂಟಾದ ಸಂಗತಿಯಾಗಿತ್ತು. ಅಪ್ಪನ ಹರವಾದ ಎದೆಯಮೇಲೆ ಮಲಗಿಕೊಂಡು ಆಟವಾಡುತ್ತಾ ಆತನ ಎದೆಗೂದಲನ್ನು ಎಳೆದು ನೋವುಂಟುಮಾಡಿ ಆತ ಕಿರುಚಿದಾಗ ಸಂತಸಗೊಳ್ಳುತ್ತಿದ್ದ ಆ ರಜಾದಿನಗಳು ಮತ್ತೆ ಸಿಗುವುದೇ ? ಅಪ್ಪನ ಬೆನ್ನಮೇಲೆ ಹತ್ತಿ ಆನೆಯಾಟವಾಡುವ, ಆತನನ್ನು ಕೂರಿಸಿ ಆತನ ಮೈಮೇಲೆ ಟವೆಲ್ ಹೊದಿಸಿ, ತಲೆಗೆ ನೀರು ಸಿಂಪಡಿಸಿ, ಹಣಿಗೆ ತೆಗೆದುಕೊಂಡು ಕ್ಷೌರಿಕನ ಆಟವಾಡುವ ದಿನಗಳು ಮತ್ತೆ ಲಭ್ಯವೇ ? ಅಪ್ಪನೇ ಖುದ್ದಾಗಿ " ಇನ್ನು ನೀವು ಬರುವುದೇ ಬೇಡ..." ಎಂದು ಸಂದೇಶ ಕಳಿಸಿದ ಮೇಲೆ ಇನ್ನೆಲ್ಲಿ ಮತ್ತೆ ಅಪ್ಪ ಕರೆಯುವುದು ಸಾಧ್ಯವೇ ? ಮತ್ತದೇ ಮೂಕ ಭಾವಗಳು, ನಾಕಾರು ಪ್ರಶ್ನೆಗಳು .....ಯಾವುದೂ ಮನಸ್ಸಿಗೆ ಸುಸೂತ್ರವಿಲ್ಲ. ಅಳುವ ಅಮ್ಮನ-ಅಜ್ಜ-ಅಜ್ಜಿಯ ಮುಖಗಳನ್ನೇ ನೋಡುತ್ತಾ ಆ ಎಲ್ಲವನ್ನೂ ಮರೆತು ಆಡಲು ಪ್ರಯತ್ನಿಸಿದವ ತಾನು. ವಾಸ್ತವದಲ್ಲಿ ತನಗೆ ಆಟವೂ ಬೇಡ...ಊಟವೂ ಬೇಡ.....ಅಪ್ಪ ಸಿಕ್ಕರೆ ಸಾಕಾಗಿತ್ತು.

ಅಂತೂ ಅಪ್ಪ ಬಾರದಾದ. ತಾವಿಲ್ಲಿದ್ದಾಗ ಉಲಿಯುತ್ತಿದ್ದ ದೂರವಾಣಿ ಯಂತ್ರ ಈಗ ಸುಮ್ಮನೇ ಹಂಗಿಸುತ್ತಿತ್ತು. ಬೇಡದ ಪತ್ರಗಳೇ ಬರುತ್ತಿದ್ದವು. ತಮ್ಮ ಜೀವನ ಸದ್ಯ ಇಲ್ಲಿಯೇ ಎಂಬುದು ತನಗರಿವಾದದ್ದು ಆ ದಿನಗಳಲ್ಲಿ. ಅಜ್ಜ ಅವರಿವರನ್ನು ಕಂಡು ತನ್ನನ್ನು ಹಳ್ಳಿಯ ಶಾಲೆಗೆ ಸೇರಿಸಿದ. ತನಗೆ ಕನ್ನಡ ಬರುತ್ತಿರಲಿಲ್ಲ. ಹೊಸದಾಗಿ ಅಭ್ಯಸಿಸಬೇಕಾಗಿತ್ತು. ಆದರೂ ಹೊಸ ಗೆಳೆಯರೊಂದಿಗೆ ಹೊಂದಿಕೊಂಡು, ಅಜ್ಜ-ಅಜ್ಜಿಯರೊಡನೆಯೂ ಆಟವಾಡುತ್ತಾ ಅಮ್ಮ-ಅಜ್ಜ-ಅಜ್ಜಿ ಹೇಳುವ ಹಲವು ಕಥೆಗಳನ್ನೂ, ವೀರಪುರುಷರ ಜೀವನಗಾಥೆಗಳನ್ನೂ ಕೇಳುತ್ತಾ ಅಪ್ಪನಿಲ್ಲದ ನೋವನ್ನು ಮರೆತೆ. ಮುಂದೊಂದು ದಿನ ಬೆಳೆದು ದೊಡ್ಡವನಾಗಿ ಅಜ್ಜನಿಗೂ-ಅಜ್ಜಿಗೂ-ಅಮ್ಮನಿಗೂ ಖುಷಿತರುವ ಇಚ್ಛೆ ತನಗೆ ಬಂದಿತ್ತು. ಸಾಧ್ಯವಾದರೆ ಮತ್ತೆ ಅಪ್ಪ ತಮ್ಮನ್ನು ಕರೆದೊಯ್ಯಬಹುದೆಂಬ ಆಸೆಯೂ ಇತ್ತು; ಬತ್ತಿಹೋಗಿರಲಿಲ್ಲ.

ತಾನು ಹೈಸ್ಕೊಲ್ ಗೆ ೧೦ನೇ ಈಯತ್ತೆಗೆ ಹೋಗುವಾಗಲೇ ತಿಳಿದದ್ದು ’ಅಮ್ಮನನ್ನು ಅಪ್ಪ ಬಿಟ್ಟುಬಿಟ್ಟಿದ್ದಾನೆ’ ಅಂತ. ಅದಕ್ಕೆ ಕಾರಣವಿಷ್ಟೆ ಅಪ್ಪ ಇನ್ಯಾವುದೋ ಹುಡುಗಿಯ ಪ್ರೇಮಪಾಶದಲ್ಲಿ ಬಿದ್ದಿದ್ದ. ಆಕೆ ಅಮ್ಮನಿಗಿಂತಾ ಸುಂದರಿಯಂತೆ. ಒಳ್ಳೆಯ ನೌಕರಿಯಲ್ಲಿದ್ದಾಳಂತೆ. ಅದುಹೇಗೋ ಅಪ್ಪನಿಗೆ ಅಂತರ್ಜಾಲದ ಮೂಲಕ ಸಂಪರ್ಕ ಬೆಳೆದು ಇಬ್ಬರೂ ಮಾತನಾಡತೊಡಗಿದರಂತೆ. ಆಮೇಲೆ ಅವಳು ಅಪ್ಪನ ಜಂಗಮವಾಣಿಗೆ ಆಗಾಗ ಕರೆಮಾಡುತ್ತಿದ್ದಳಂತೆ. ಈ ವಿಷಯ ಅದು ಹೇಗೋ ಅಮ್ಮನಿಗೆ ತಿಳಿದುಬಿಟ್ಟಿದೆ. ಅಮ್ಮ ಅಂದೇ ಬಹಳ ಅತ್ತಳಂತೆ. ಆಮೇಲೆ ಆಗಾಗ ಪರಿಪರಿಯಾಗಿ ಅಪ್ಪನಲ್ಲಿ ಆ ಸಂಬಂಧ ಬಿಡುವಂತೇ ಗೋಗರೆದಳಂತೆ. ಆದರೆ ಅಪ್ಪನ ಹುಚ್ಚುಪ್ರೀತಿ ಕುರುಡಾಗಿ ಅಮ್ಮನ ಇರವನ್ನು ಮರೆತಿತ್ತು. " ಬೇಕಾದ್ರೆ ನೀನೂ ಇರು ಇಲ್ಲಾಂದ್ರೆ ಅವಳೊಬ್ಬಳೇ ಸಾಕು ....." ಎಂದು ಅಪ್ಪ ಒತ್ತಾಯಿಸಿದಾಗ ಅಮ್ಮನಿಗೆ ಮನಸ್ಸು ತಾಳದೇ ಜಗಳ ಆರಂಭಿಸಿದ್ದಾಳೆ. ಈ ವಿಷಯ ತನ್ನಲ್ಲೇ ಇರಲಿ ಎಂದು ಕೊನೆಯ ದಿನದವರೆಗೂ ಯಾರಿಗೂ ಹೇಳಿರಲಿಲ್ಲ. ಯಾವಾಗ ಅಪ್ಪ ತಾನು ಪ್ರೀತಿಸಿದ ಇನ್ನೊಬ್ಬ ಹುಡುಗಿಯನ್ನು ಶೀಘ್ರವೇ ಮದುವೆಯಾಗುತ್ತೇನೆ ಎಂದನೋ ಆಗ ಮಾತ್ರ ಜಗಳ ತಾರಕ್ಕಕೇರಿತು. ಅದೇ ಕೊನೆ. ಅಮ್ಮನೂ ಮನಸ್ಸು ಗಟ್ಟಿ ಮಾಡಿಕೊಂಡು ಏನಾದರಾಗಲಿ ಎಂದು ಜಗಳವಾಡಿದ್ದು. ಯಾವ ಹೆಣ್ಣೆ ಆಗಲಿ ಇನ್ನೊಂದು ಹೆಣ್ಣಿಗೆ ತನ್ನ ಗಂಡನನ್ನು ಕೊಡಲು ಒಪ್ಪುವಳೇ ? ಖಾರವಾದ ಮಾತುಗಳು ಕೈಕೈಮಿಲಾಯಿಸುವವರೆಗೆ ಬೆಳೆದು ಅಮ್ಮ-ಅಪ್ಪ ನಿಜಕ್ಕೂ ಬಡಿದಾಡಿದರು. ಅಂದೇ ರಾತ್ರಿ ಅಪ್ಪ ದಯೆ, ಕರುಣೆ, ವಾತ್ಸಲ್ಯ, ನೀತಿ, ಪ್ರೀತಿ ಎಲ್ಲವನ್ನೂ ಗಾಳಿಗೆ ತೂರಿ ಹದಿಹರೆಯದ ಹುಡುಗನಂತೇ ಆ ಹುಡುಗಿಗಾಗಿ ಹಂಬಲಿಸುತ್ತಾ ತಮ್ಮನ್ನು ಮನೆಯಿಂದ ಹೊರದಬ್ಬಿದ್ದರು !

ಮುಪ್ಪಿನ ವಯಸ್ಸಿನ ಅಜ್ಜ-ಅಜ್ಜಿ ತಮ್ಮ ಕೃಷೀಜೀವನದ ಕಷ್ಟಾರ್ಜಿತದಲ್ಲಿ ತಮ್ಮನ್ನು ಅದುಹೇಗೋ ಸಾಕಿ-ಸಲಹಿದರು. ಗಂಡುಮಕ್ಕಳಿಲ್ಲದ ಅವರಿಗೆ ತಾನೇ ಗಂಡುಮಗುವಂತಾಗಿ ಬೆಳೆದೆ. ಪದವಿ ಮುಗಿಸಿ ನಂತರ ’ಮಾನವ ಸಂಪನ್ಮೂಲ ಮತ್ತು ಅದರ ಅಭಿವೃದ್ಧಿ, ತರಬೇತಿ ’ ಈ ವಿಷಯದಲ್ಲಿ ಹೆಚ್ಚಿನ ಶಿಕ್ಷಣ ಪಡೆದು ಇಂದು ಒಂದು ಹಂತಕ್ಕೆ ಬಂದಿದ್ದೇನೆ.

" ಸರ್ ....ಅಪ್ಪ ನಾನು ಚಿಕ್ಕವನಿರುವಾಗಲೇ " ಎಂಬ ರಾಜೀವನ ಪುನರುಕ್ತಿಗೆ ಮರಳಿ ಲೋಕಕ್ಕೆ ಬಂದ ಗಿರೀಶ್ ಆತನನ್ನು ಆಯ್ಕೆಮಾಡಿದ. ಅಪ್ಪನಿಲ್ಲದ ಬದುಕು ಯಾವ ಮಗುವಿಗೂ ನೋವಿನ ಬದುಕೇ ಸರಿ ಎಂಬುದು ಅವನ ಮನದಿಂಗಿತವಾಗಿತ್ತು. ತಾನೆಂದೂ ಹೆಣ್ಣಿನ ಸೌಂದರ್ಯಕ್ಕಾಗಿ ಸೋತು ಬಾಳುಕೊಟ್ಟ, ಕೈಹಿಡಿದ ಹೆಣ್ಣಿಗೆ ವಂಚಿಸಬಾರದು ಎಂದುಕೊಂಡ ಗಿರೀಶ್ ಕಛೇರಿಯ ಸಹಾಯಕನನ್ನು ಕರೆದು ಹೊರಗೆ ಕೂತಿರುವ ಶೀತಲ್ ಳನ್ನು ಒಳಗೆ ಕಳಿಸಲು ಹೇಳಿದ. ನೌಕರಿ ಗಿಟ್ಟಿಸಿದ ರಾಜೀವನ ಕೈಕುಲಿಕಿದ, ರಾಜೀವ ನಮಸ್ಕರಿಸಿ ಹೊರಟುಹೋದ. ಆ ನಂತರ ಒಳಗೆಬಂದ ಶೀತಲ್ ಗೆ " ಇವತ್ತಿನ ಸಂದರ್ಶನದಲ್ಲಿ ನಿಮಗೆ ಇನ್ನೂ ಹಲವು ಪ್ರಶ್ನೆಗಳನ್ನು ಕೇಳುವುದಿತ್ತು... ಆದರೆ ಇವತ್ತು ಸಮಯ ಸಾಲುತ್ತಿಲ್ಲ...ಕಾಯಿಸಿದ್ದಕ್ಕಾಗಿ ಕ್ಷಮಿಸಿ....ಇನ್ನೊಮ್ಮೆ ನಿಮಗೆ ಸಂದೇಶ ಕಳಿಸಿ ಹೊಸದಾಗಿ ಸಂದರ್ಶಿಸುತ್ತೇನೆ " ಎಂದು ಕಳುಹಿಸಿಕೊಟ್ಟ. ತಾನಿನ್ನೂ ಮದುವೆಯಾಗಿರದ ವ್ಯಕ್ತಿಯೇ ಆಗಿದ್ದರೂ ತನ್ನ ಬಾಲ್ಯದಲ್ಲಿ ಅಪ್ಪ ನಡೆಸಿದ ಕಥೆ ಗಿರೀಶ್ ನ ಮನದ ತುಂಬಾ ತುಂಬಿಕೊಂಡಿತ್ತು.

Friday, November 19, 2010

ರಾಧಿಕೆ ನಿನ್ನ ಸರಸವಿದೇನೆ ..........?


ರಾಧಿಕೆ ನಿನ್ನ ಸರಸವಿದೇನೆ ..........?

" ಏನ್ಲಾ ಸಿವಾ ಆರಾಮಿದೀಯೇನ್ಲಾ ? "

" ಹೌದಣೋ ಸಂದಾಕಿವ್ನಿ, ಮತ್ತೇನಿಸ್ಯ ? "

" ಏನಿಲ್ಕಣೊ ಮಗಾ ಯಡ್ಯೂರಣ್ಣನ್ ತಾವ ಬಾಳಾ ಜಮೀನದಾವಂತೆ ಒಸಿ ಕೊಡುಸ್ಕ್ಯಬೇಕಾಗಿತು "

" ಅವ್ರಲ್ಲ ಸೋಬಕ್ಕ ಅವ್ರುನ್ನೆ ಹಿಡ್ದ್ಬುಡಿ ಕೆಲ್ಸ್ ಸಲೀಸಾಗೋತದೆ "

" ಒಹೊಹೊಹೊ ಸೋಬಕ್ಕ ಅಂಗೇ ಎಲ್ಲಾ ಮಾತಾಡ್ಸಕಿಲ್ಲ ಸಿವಾ ಅವರೀಗ ೧೬೬ ಎಕ್ರೆ ಕಾಪೀ ಎಸ್ಟೇಟ್ ಮಡಗವ್ರೆ "

" ಹೌದೇನಣಾ ? ನಂಗೊತ್ತೇ ಇರ್ಲಿಲ್ಲಾ "

" ಸುಮ್ಕೇನಾ ರಾಜ್ಕೀಯಕ್ಕೆ ಬಂದಿರಾದು, ಅವ್ರುಗೆ ರಾತ್ರೋರಾತ್ರಿ ಅದ್ಯಾವ್ದೋ ಕಂಪ್ನಿ ಮೂರುವರೆ ಕೋಟಿ ಸಾಲ ಕೊಟ್ಟದೆ, ಜಾಮೀನಿಲ್ಲ-ಗೀಮೀನಿಲ್ಲ.....ಆ ದುಡ್ನೇ ನಾ ಕಾಪೀ ತೋಟ ತಗಳಕೆ ಬಳ್ಸಿರಾದು ಅಂತ ಹೇಳ್ಯವ್ರೆ ಎಲ್ಲೀ.....ಲೋಕಾಯ್ತರಲ್ಲಿ.....ಅವ್ರುಗೆ ಸಾನೆ ಡೌಟ್ ಬಂದದೆ....ಅದೆಂಗೆ ನಿಂಗೆ ಅಷ್ಟೆಲ್ಲಾ ಸಾಲ ಕೊಟ್ಬುಟ್ರು ಅಂತ ರಾಗತೆಗ್ದವ್ರೆ....ಅಷ್ಟೊತ್ಗೆ ನಮ್ಮ ಯಡ್ಯೂರಣ್ಣ ಫೋನಾಕವ್ರೆ ಅನ್ಸುತ್ತೆ.....ಬಿಟ್ಟಾಕವ್ರೆ "

" ಹೌದೇನಣಾ ? ಇಷ್ಟೆಲ್ಲಾ ಆಗೈತಾ ? ಅಂಗಾರೆ ಕಷ್ಟಕಣಣ್ಣೋ ಸದ್ಯ ನೀ ಸೋಬಕ್ಕನ್ ತಾವ ಹೋಗ್ಬ್ಯಾಡ "

" ಸುಮ್ಮುನ್ಕುತ್ಗೊಳೋ ತರ್ಲೆ ನನ್ಮಗನೆ ನಂಗೊತ್ತಿಲ್ವಾ ಈ ಕೆಲಸಕ್ಕೆ ಯಾರ್ನ ಹಿಡೀಬೇಕು ಯಾರ್ನ ಮಡೀಕಬೇಕು ಅಂತಾವ "

-----------------------

" ಅಣಾ ಭೂಕಬಳಿಕೆ ಅಂತಾವ ವಾತ್ರೆಲಿ ಹೇಳವ್ರಲ್ಲ ಹದೇನಣಾ ಅಂಗಂದ್ರೆ ಕಬಳ್ಸೋದೂ ಅಂದ್ರೆ ನುಂಗೋದಲ್ವಾ.... ? "

" ಹೌದ್ಕಣಪ್ಪಾ ಖುರ್ಚೀಲಿದ್ದಾಗ ಮಾಡ್ಮಡೀಕಬುಟ್ರೆ ಮೊಮ್ಮಕ್ಳ ಕಾಲಕ್ಕೂ ಬತ್ತದೆ ಅಂತ ಎಲ್ಲಾ ಸುರುಹಚ್ಕಂಡವ್ರೆ "

" ಕಟ್ಟಾ ಮೀಟಾ ಅಂತೆಲ್ಲ ಬರುದ್ರಲ್ಲ ಪೇಪರ್ರಗೆ ಈಗ ಎಲ್ಲಾವ್ರೂ ಕಟ್ಟಾನೇ ಹಂತೀಯಾ ? "

" ಹಿನ್ನೆಲ್ಲಾ ಅಂಗೇಯ ಕಣ್ಲಾ .....ಒಂದಷ್ಟ್ ಕಾಸ್ಮಾಡ್ಕೆಂಬುಟ್ಟು ಅಲ್ಲಿ ಹಿಲ್ಲಿ ನಿತ್ಗಂಬೋದು...ಗೆದ್ ಬರೂತ್ಲೂವೆ ಎಲ್ಲಾ ಸ್ಕೆಚ್ ಹಾಕ್ಕಂಬೋದು.....ಯಾರಾದ್ರೂ ಅಡ್ಡ ಬಂದ್ರೆ ಸರ್ಕಾರ ಉರುಳುಸ್ತೀವಿ ಅಂತಾ ಕಾಗೆ ಹಾರ್ಸೋದು ....ತಾವೇನೇ ಮಾಡುದ್ರೂ ಎಲ್ಲಾರೂ ಸುಮ್ಕಿರ್ಬೇಕು .....ಆಮೇಲಾಮೇಲೆ ಎಲ್ಲರೂ ತಮ್ಮಂಗೇ ಆಗೋಯ್ತರೆ .....ಆಗಿರೋದು ಒಂದೇ ಪಾಲ್ಟಿ .....ಇರೋಧಾನೇ ಇರಾಕಿಲ್ಲ "

" ಎಂತಾ ಕಾಲ ಬಂದೋಯ್ತಣಾ.....ನಮ್ ಕುಮಾರಣ್ಣ ಅಂಗೆಲ್ಲಾ ಮಾಡಾಕಿಲ್ಲ ಹಲ್ವಾ "

" ಕುಮಾರಣ್ಣ್ನೇ ಸುರುಹಚ್ಕಂಡಿದ್ ಕಣ್ಲಾ ಮೂದೇವಿ .........ಆವಯ್ಯಾ ಸುರುಮಾಡಿದ್ನೇ ಈವಯ್ಯಂದ್ರು ಮುಂದರ್ಸ್ಕೋತ ಬಂದವ್ರೆ "

" ನಮ್ಮ ಕಿಷ್ಣಪ್ಪೋರ್ ಕಾಲಕ್ಕೆಲ್ಲಾ ಒಳ್ಳೇದಿತ್ತಲ್ಲಾ ? "

" ಕತ್ತೇನ್ ತಂದು...ಕಿಷ್ಣಪ್ಪೋರು ದಿಲ್ಲಿ ದರ್ಬಾರಿಂದ್ಲೇ ಮೊನ್ನೆ ಅಳೀಮಯ್ಯ ಮುಕಾಂತ್ರ ರಿಸಾಟ್ರ ಬಿಲ್ನೆಲ್ಲಾ ಶೆಟ್ಲಮಾಡ್ಸಿಲ್ವೇಲ್ನಾ ? ನಿಂಗೆ ರಾಜ್ಕೀಯ ಗೊತ್ತಾಯಾಕಿಲ್ಲ ನೀ ಬಿಡಾಕಿಲ್ಲ .... ಜೀವಾ ತಿಂತೀಯ"

------------------

" ದೀಪಾವಳಿ ಗಿಫ್ಟು ಕೊಡ್ಲೇ ಇಲ್ಲಾ ಕಣಣ್ಣಾ ನೀನು .....ದೀಪಾವಳೀನೂ ಆಗೋಯ್ತು...ತುಳ್ಸಿ ಪೂಜೆನೂ ಆಗೋಯ್ತು"

" ಗೋವಾದಿಂದ ತರಕ್ ಯೋಳಿದ್ದೆ ಕಣ್ಲಾ ನಮ್ ಬಾಮೈದ ಹಲ್ಲೇ ಕೆಲ್ಸ ಮಾಡದು....ಬರೋವಾಗ ಒಂದಷ್ಟ ಹಿಡ್ಕಂಬಾ ಅಂತಂದೆ .....ಆವಯ್ಯ ರಜಾ ಸಿಗ್ನಿಲ್ಲಾ ಅಂತಾವ ಬರೋದೇ ಬಂದಮಾಡ್ದ್ನ ...ನಂಗೊಂತರಾ ಕೈಮುರ್ದಾಂಗಾಗೋಗದೆ "

" ಹೋಗ್ಲಿ ರವಿಬೆಳಗೆರೆ ಅದೇನೋ ’ಕಾಮರಾಜ ಮಾರ್ಗ’ ಅಂತ ಬರ್ದವನಂತಲ್ಲಾ ಓದುದ್ರಾ ? "

" ನಮ್ಮಂತೋರ್ಗೆ ಗೀತೆ ಗೀತೆ ಕಣ್ಲಾದೂ....ವೈನಾಗಿ ಎರಡು ತುಂಡ್ ತಿಂದ್ಕಬುಟ್ಟು ಒಸಿ ಏರ್ಸ್ಕಬುಟ್ಟಿದ್ದೇ ಓದೋಕ್ಕೂತ್ರೆ ಸ್ವರ್ಗ... ಸ್ವರ್ಗನೇ ಇಳ್ದ್ ಬತ್ತದೆ....ಅದ್ಕೇ ಕಣ್ಲಾ ...ಪ್ರಿಂಟಾದಂಗೂ ಖರ್ಚಾಗೋತದೆ ನೋಡ್ತಾಯಿರು ! "

" ಹಂತಾದೇನಣಾ ಅದ್ರಲ್ಲಿ ? "

" ನೇರೂ ಕಾಲ್ದಿಂದ ಹಿಡ್ದು ಇಲ್ಲೀಗಂಟ ಸುಮಾರೆಲ್ಲಾ ದೊಡ್ ಮನ್ಸೂರ ಬಗ್ಗೆ ಬರದವ್ನೆ.... ಅವರೋ ಅವರಾಟಾನೋ ನಾ ಯೋಳ್ತಾಯಿದ್ರೇ ಇಂಗ್ ಬಾಯ್ಬಾಯ್ ಬಿಟ್ಕಂಡು ನೋಡ್ತಾಯ್ಕಂತೀಯ ....ಇನ್ನು ನಿಂಗೇನಾರ ಪುಸ್ತ್ಕಾ ಸಿಕ್ಕುದ್ರೆ ದಿನಾ ಓದಕಾಯ್ತದೆ ಅಂತಾವ ದೇವರ್ಕೋಣೇಲಿ ಪೂಜೆಗಿಟ್ಕಂಬುಡ್ತೀಯ ಬುಡು "

" ಅಣಾ ಬೆಂಗ್ಳೂರ್ಗೋದ್ರೆ ನಂಗೊಂದ್ ಕಾಪಿ ತಗಂಬಾರಣ...ಅದೆಷ್ಟಾತದೆ ಅಂತಾ ಕೊಟ್ಬುಡ್ತೀನಿ "

" ಅದ್ಕಿರೋದು ಹಿನ್ನೂರೈವತ್ತು ರೂ. ಬ್ಲಾಕಲ್ಲಿ ಡಬಲ್ ರೇಟ್ ಮಡ್ಗ್ಯವ್ರೆ ಅಂದವ್ನೆ ನಮ್ ಬಸ್ಯ "

" ಏನಾರಾ ಆಕ್ಕೊಂಡೋಗ್ಲಿ ಕಣಣ್ಣೋ ನಂಗೊಂದ್ ಕಾಪಿ ಬೇಕೇ ಬೇಕು "

-------------------

" ಅಣಾ ಕನಡಾ ಸಾಯ್ತ್ಯ ಸಮ್ಮೇಳ್ನ ಮಾಡ್ತವ್ರಂತಲ್ಲ "

" ಹೌದ ಕಣೋ ಈ ಸರ್ತಿ ಬೇಂಗ್ಳೂರಾಗೇ ಮಾಡಾದು "

" ಹದ್ಯಾರೋ ಜೀವಿ ನ ಕರೀತಾರಂತೆ ....ಹದ್ಯಾರ್ಲ ಅಂಗಂದ್ರೆ ? "

" ಓ ಅದೇ ಕಣ್ಲಾ ಮೊದ್ಲೆಲ್ಲಾ ಹವ್ರೂ ಇವ್ರೂ ಅಂತ ಮಾ ಮಾ ದೊಡ್ ಹೆಸರುಇದ್ದೋರ್ನ ಕರೀತಿದ್ರು....ಅವರಿಗೆಲ್ಲ ಮಾತಾಡಕ್ಕೇ ಕೊಡ್ದೇ ಜೀವಿಲ್ದಿದ್ದಂಗೇ ಕೂತಿರ್ಬೇಕಾಯ್ತಿತ್ತು....ಈವಯ್ಯ ೯೮ ವರ್ಸಾದ್ರೂ ಭಲೇ ಘಾಟಿ .....ಚೆನ್ನಾಗಿ ಮುಕಕ್ಕೇ ಉಗ್ದಂಗೆ ಯೋಳಬುಡ್ತರೆ ಅದಕ್ಕೇ ಜೀವಿ ಜೀವಿ ಹನ್ನದು "

" ಹೌದು ಹದ್ಯಾವನೋ ಮುದ್ಕಪ್ಪನ ಕರ್ದು ಅಲ್ಲಿ ಹೇನೆಲ್ಲಾ ಮಾಡ್ತರೆ ? "

" ಮೂರು ದಿವ್ಸ ಹಬ್ಬ ಹಬ್ಬದ್ ತರ ಇರ್ತದೆ ಕಣ್ಲಾ....ಊಟ...ತಿಂಡಿ ಅಂತ ಎಲ್ಲಾ ಇರ್ತದೆ.....ಕನಡಾ ಬಾವುಟ ಹಾರುಸ್ತರೆ.....ಸುರುವಾಗೋವಾಗ ಸಲ್ಪ ಮೆರವಣ್ಗೆ ಹದೂ ಇದೂ ಇರ್ತದೆ ....ಸುರುಮಾಡಕೂ ಮುಗಿಸಕೂ ರಾಜ್ಕೀಯ ನಾಯ್ಕರು ಬತ್ತರೆ.....ಬಾಳ ಜನ ಸೇರ್ತರೆ...ಹುಡ್ಗೀರು ಅವ್ರು ಇವ್ರು ಅಂತಾವ ಸಾನೆ ಜನ ಓಡಾಡ್ತರೆ "

" ಹುಡ್ಗೀರ್ ಬತ್ತರೆ ಅಂತಾಯ್ತು...ನಾನು ಹೋಬೇಕಣಾ .......ಬೆಂಗಳೂರ್ ಬೊಂಬೆಗೋಳ್ನ ನೋಡ್ದೆ ಸಾನೆ ಬೇಜಾರಾಗೋಗದೆ....ಒಂದ್ ಕಿತಾ ರೌಂಡ್ ಹೊಡ್ದ್ಬುಟ್ಟ್ರೆ ಹೆಲ್ಲಾ ಸರಿಹೋತದೆ "

" ಹೋಗವ ಬಿಡು....ನಾನೂ ನಿನ್ನಂಗೇ ಹೋಬೇಕು ಅಂದ್ಕಂಡಿವ್ನಿ.....ಯಾರಾರಾ ಏನಾರಾ ಮಾಡ್ಕಳ್ಳಿ....ಸರ್ಕಾರ ಒಂದಷ್ಟ್ ಕರ್ಚ್ ಮಾಡ್ತದೆ....ನಾವೂ ಹೋಗಿ ಮಜಾ ಉಡಾಯ್ಸ್ಕಂಬರೋದು "

-------------------


" ಅಣಾ ರಾಧಿಕಾ ಅವ್ಳಲ್ಲಾ ........"

" ಹೇಳ್ಲಾ ಮುಂದೆ ......"

" ಅವ್ಳೀಗೆ ವರ್ಸದ ಹಿಂದೆ ಮಗೂ ಆಯ್ತಲಣಾ ಹದೂ ನಮ್ ಕುಮಾರಣ್ಣಂದಂತೆ ? "

" ಇನ್ನೇನಾತದೆ ಮತ್ತೆ......ತುರ್ಕೆ ಜಾಸ್ತಿ ಆಯ್ತು...ಹೆಂಗೂ ಒಂದ್ ಮಡೀಕಬೇಕು ಚೆನ್ನಾಗಿರೋದಕ್ಕೆ ಕೈ ಹಾಕವ ಅಂತ ಸುರು ಹಚ್ಕಂಡಿದ್ದ "

" ಹವ್ಳೇನೋ ಹದಯಾವ್ದೋ ಉದಯವಾಣಿ ಪೇಪರ್ನಾಗೆ ಹೇಳವ್ಳಂತೆ.....’ನಾನು ಮಾಜಿ ಮಂತ್ರಿಯೊಬ್ಬುರ್ನ ಮದ್ವೆ ಆಗಿದ್ದೌದು....ಮಗೂನೂ ಆಗದೆ..ಆದ್ರೆ... ಎರ್ಡೆರ್ಡಲ್ಲಾ....ಒಂದೇಯ.....ನಾನು ಮಗೂನ ವಿದೇಶಕ್ಕೆಲ್ಲಾ ಕಳುಸ್ಲಿಲ್ಲಾ....ಹಿಲ್ಲೇ ಇದೀವಿ ...ನಾ ಇನ್ನೂ ಸಿನ್ಮಾದಾಗೆ ಮತ್ತೆ ಹಿರೋಯಿಣಿ ಮಾಡ್ತೀನಿ ಆದ್ರೆ ಜಾಸ್ತಿ ಬಿಚ್ಚಾಕಿಲ್ಲಾ...’ ಅಂದವ್ಳಂತೆ "

" ಹೋಕ್ಕಳಿ ಬುಡು ಗೌಡ್ರೂ ಮಾತಾಡಂಗಿಲ್ಲ....ಸೊಸೆದೀರೂ ಮಾತಾಡಾಂಗಿಲ್ಲ...ಮಂತ್ರಿಗಿರಿ ಇಲ್ಡಿರ್ವಾಗ ಸುಮ್ನೇ ಹೋಗಿ ಆಟ ಆಡಕೊಂದ್ಕಿತಾ ಜಾಗ ಬೇಕಲ್ವಾ ? "

" ಜನತಾ ದರ್ಸನ ಮಾಡೀ ಮಾಡೀ ಸುಸ್ತಾಗ್ಬುಟ್ಟಿತ್ತು ಪಾಪ ಹದ್ಕೇ ’ ಜಾನಕಿ ತರ ಒಬ್ಳೇ ಇರ್ಬ್ಯಾಡ....ನಾನಿದೀನಲ್ಲ....ನಿಂಗೆಲ್ಲಾ ಕೊಡ್ತೀನಿ.....ನೀ ನಂಗಬೆಕಾದ್ನೆಲ್ಲಾ ಕೊಟ್ಬುಡು ’ ಅಂದವ್ನೆ....ಭದ್ರಾವತಿ ಬಂಗಾರ್ದ ಬಣ್ಣ ಕಂಡ್ಬುಟ್ಟು ಒಸಿ ಬೇಜಾರಾದ್ರೂ ಇನ್ನೇನ್ ಹಬ್ಬಬ್ಬಾ ಹಂದ್ರೆ ಒಂದ್ ಹತ್ತನ್ನೆರ್ಡ್ ವರ್ಸ .... ಆಮೇಲೆಲ್ಲಾ ಬಣ್ಣ ತಗಂಡೇನೂ ಆಯಾಕಿಲ್ಲ...ಒಳ್ಳೇ ಆಸ್ತಿ ಮನೆ ಇದ್ರೆ ಸಾಕು ಅಂತಾವ ಮನ್ಸಮಾಡ್ಯವಳೆ....ಮಾಡಿದ್ದೇ ಮಾಡಿದ್ದು ಕುಮಾರಣ್ಣ ಮತ್ಯಾರೂ ಕಣ್ಣಾಕ್ ದಂಗೆ ಕೈಲೊಂದ್ ಕೊಟ್ಬುಟ್ಟ "

" ಓಗ್ಲಿ ಬಿಡೋ.....ನಿಂದೇನೋಯ್ತು ಗಂಟು .....ನಾ ಹೋಬೇಕು ಅರ್ಜೆಂಟದೆ "

" ಯಾಕಣಾ ಹಶ್ಟು ಅರ್ಜೆಂಟು ? "

" ಮಾದೇಗೌಡ್ರ ಸೊಸೆ ಹತ್ರ ಏನಾರ ಎಲ್ಪು ಬೇಕಾರೆ ಯೋಳು ಬತ್ತೀನಿ ಅಂದಿದ್ದೆ....ಬೆಳಗ್ಗೆನೇ ಪೋನಾಕವ್ಳೆ ಇನ್ನೂ ಹೋಯಕಾಯ್ತಾ ಇಲ್ಲ .....ಬರ್ಲಾ "

" ಅಣೋ ........................."


" ಬತ್ತೀನಿ ಬತ್ತೀನಿ......... ;) "

Thursday, November 18, 2010

ಸೂರ್ಯ ನಿಷ್ಠೆ


ಸೂರ್ಯ ನಿಷ್ಠೆ

ಸಪ್ತಾಶ್ವದ ರಥವನೇರಿ
ಸೂರ್ಯನುದಿಸಿ ಬರುವ ವೇಳೆ
ಹಾಡೊಂದಕೆ ದೇಹರಚಿಸಿ
ಭಾವತುಂಬಿ ಜೀವಬಂತು
ನವನವೀನ ಕಲ್ಪನೆ ನೂರು ವಿಧದ ಯೋಚನೆ

ಸಕಲ ಜೀವರಾಶಿಗಳಿಗೆ
ಬದುಕನೀವ ಬೆಳಕನಿತ್ತು
ವ್ಯಥಿತ ಮನದ ವ್ಯಾಕುಲಗಳ
ಕಳೆವನಾತ ಮೌನದಲ್ಲಿ
ಚಕಿತರಾಗಿ ನೋಡಿರಿ ನಿಷ್ಠೆ ನೆನೆದು ನಲಿಯಿರಿ

ಕಾಯಿಸಲೋ ಬೇಯಿಸಲೋ
ಕೆಲಸ ಕಾರ್ಯ ನಡೆಯಿಸಲೋ
ಆತ ಬಾರದಿದ್ದರೊಮ್ಮೆ
ಬೆಳೆಯುತಿತ್ತೇ ಬದುಕುಬಳ್ಳಿ ?
ರವಿಯು ಇರದ ಜಾಗವು ರೋಗಗಳಿಗೆ ಹಾರವು

ರಜೆಯ ಹಾಕಲಿಲ್ಲ ಗೆಳೆಯ
ವಿಜಯನಗೆಯ ಬೀರಲಿಲ್ಲ !
ಸುಜನ ಕುಜನ ಭೇದ ಭಾವ
ಅಳವಡಿಸುತ ನಡೆಯಲಿಲ್ಲ
ಸರ್ವರಿಗೂ ಸರಿಸಮಾನ ತತ್ವದಲ್ಲಿ ಇರಿಸಿ ಗಮನ

ಬಾಡಿಗೆಯ ಕೊಡುವೆವೇನು ?
ಬಾಳತುಂಬ ಬೆಳಗುವುದಕೆ
ಹಾಳುಮನದ ನಮಗೆ ಒಮ್ಮೆ
ಸ್ಮರಿಸದಂಥ ನಂಜುನಮದು
ನಾಳೆಗಳನು ನಡೆಸಲು ನೆನೆಯಿರಿಂದು ಮನದೊಳು

Wednesday, November 17, 2010

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೇ........


ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೇ........

ಅನುರೂಪ ದಾಂಪತ್ಯಕ್ಕೆ ಹಾಡಿಕೊಳ್ಳಲು ಬೇಕಾದ ಹಾಡುಗಳನ್ನೆಲ್ಲಾ ಗುತ್ತಿಗೆ ಹಿಡಿದವರಂತೇ ಬರೆಯುತ್ತಾ ಹೋದವರು ನಮ್ಮ ’ಮೈಸೂರು ಮಲ್ಲಿಗೆ’ಯ ಕವಿ ದಿ| ಶ್ರೀ ಕೆ.ಎಸ್. ನರಸಿಂಹಸ್ವಾಮಿಗಳು. ಕವಿಮನವನ್ನು ಮತ್ತು ಮನೆಯನ್ನು ಕಾಣುವ ಬಯಕೆ ಹೊತ್ತು ೧೯೯೮ ರಲ್ಲಿ ಒಮ್ಮೆ ಕತ್ರಿಗುಪ್ಪೆಯಲ್ಲಿರುವ ಅವರ ಮನೆಗೆ ಹೋಗಿದ್ದೆ. ಆಗಲೇ ಮುಪ್ಪಡರಿದ್ದ ಕವಿವರ್ಯರು ಮನೆಯ ಮುಂಭಾಗದಲ್ಲಿರುವ ಚಿಕ್ಕ ಜಾಗದಲ್ಲಿ ಬೆತ್ತದ ಖುರ್ಚಿ ಹಾಕಿಕೊಂಡು ಕುಳಿತಿದ್ದರು. ಕಣ್ಣಿಗೆ ದಪ್ಪ ಗಾಜಿನ ಸೊಲೋಚನ[ಕನ್ನಡಕ]. ಇಳಿಸಂಜೆಯಲ್ಲಿ ನಾನು ಹೋದಾಗ ಅವರ ’ಶಾರದೆ’ [ಪತ್ನಿ ದಿ| ಶ್ರೀಮತಿ ವೆಂಕಮ್ಮನವರು] ಆದರದಿಂದ ಬರಮಾಡಿಕೊಂಡರು. ಹೇಳಿಕೇಳಿ ನಾನೊಬ್ಬ ಕಾಲೇಜು ವಯಸ್ಸಿನ ಹುಡುಗ; ಗುರುತು ಪರಿಚಯ ಇಲ್ಲದವ. ಆದರೂ ಎಷ್ಟೋ ವರ್ಷಗಳ ಒಡನಾಟವಿದೆಯೇನೋ ಎಂಬಷ್ಟು ಆತ್ಮೀಯತೆಯಿಂದ ಅವರು ನಡೆಸಿಕೊಂಡ ರೀತಿ ನನಗೆ ಬಹಳ ಹಿಡಿಸಿತ್ತು. ಕವಿಗಳಿಗೆ ಕಿವಿ ಬೇರೇ ಸ್ವಲ್ಪ ಮಂದವಾಗಿತ್ತು. ಈ ಕುರಿತು ಹೇಳಿದ ವೆಂಕಮ್ಮನವರು ಸೀದಾ ಅಡುಗೆ ಕೋಣೆಗೆ ಹೋಗಿ [ಆಗ ಬೇಸಿಗೆಯ ದಿನಗಳು] ಯಾಲಕ್ಕಿಯನ್ನು ಹಾಕಿದ ಲಿಂಬೂ ಪಾನಕವನ್ನು ಮಾಡಿತಂದರು. ಆಗ ನರಸಿಂಹಸ್ವಾಮಿಗಳು ಪತ್ರಿಕೆಯೊಂದಕ್ಕೆ ವಾರದಲ್ಲಿ ಒಂದಾವರ್ತಿ ಹಾಡುಗಳನ್ನು ಬರೆದು ಕೊಡುತ್ತಿದ್ದರು; ಬರವಣಿಗೆಗೆ ಆಗುತ್ತಿರಲಿಲ್ಲವಾಗಿ ವ್ಯಕ್ತಿಯೊಬ್ಬನ ಸಹಾಯದಿಂದ ತಮ್ಮ ಕೃತಿಗಳನ್ನು ಬರಹರೂಪಕ್ಕೆ ಇಳಿಸುತ್ತಿದ್ದರು.

ಮೊದಲಿನಿಂದಲೂ ನನಗೆ ಕವಿ-ಸಾಹಿತಿಗಳೆಂದರೆ ಎಲ್ಲಿಲ್ಲದ ಆಸೆ. ಒಳ್ಳೆಯ ಕವಿ-ಸಾಹಿತಿಗಳು ಕಂಡರೆ ಅವರ ಹಿಂದೇ ಹೋಗುವುದು, ಅವರ ದೈನಂದಿನ ಬದುಕು, ಅವರ ಬಗ್ಗೆ ಒಂದಷ್ಟು ಅರಿತುಕೊಳ್ಳುವುದು ನನ್ನ ಅಭ್ಯಾಸ. ಹಾಗೆ ನೋಡಿದರೆ ನನ್ನೆಲ್ಲಾ ಸ್ನೇಹಿತರು ಸಿನಿಮಾ ತಾರೆಯರನ್ನು ನೋಡಲು ಆಸೆಪಟ್ಟದ್ದಕ್ಕಿಂತ ತುಸು ಹೆಚ್ಚಾಗಿ ನಾನು ಕವಿ-ಸಾಹಿತಿಗಳ ಸಾಂಗತ್ಯವನ್ನು ಬಯಸುತ್ತಿದ್ದೆ. ಅವರುಗಳ ಸನ್ನಿಧಾನದಲ್ಲಿ ನನಗೆ ನಿಧಿಸಿಕ್ಕದ್ದಕಿಂತ ದಿಪ್ಪಟ್ಟು ದುಪ್ಪಟ್ಟು ಖುಷಿಯಾಗುತ್ತಿತ್ತು! ನನಗೆ ಅವರ ಮನೆಯಲ್ಲಿ ಭೋಜನ, ತಿಂಡಿ ಇಂತದ್ದರ ಬಗ್ಗೇನೂ ಆಸೆಯಿರಲಿಲ್ಲ. ಅವರೊಂದಿಗೆ ಮಾತಾಡಬೇಕು, ಒಂದಷ್ಟು ಅವರ ಮನೋಗತವನ್ನು ಕೆದಕಿ ಸಿಗಬಹುದಾದ ಮುತ್ತುಗಳನ್ನು ಎತ್ತಿ ಪೋಣಿಸಿ, ನನ್ನ ಮೊಲೆಯಲ್ಲಿ ಆಪದ್ಧನವಾಗಿ ಕಾಪಿಟ್ಟುಕೊಳ್ಳುವ ಅದಮ್ಯ ಚಡಪಡಿಕೆ ನನ್ನದು. ಮುತ್ತು ಪೋಣಿಸಿಕೊಳ್ಳುವಾಗ ಹೊತ್ತುಗೊತ್ತಿನ ಪರಿವೆಯೇ ಇರುತ್ತಿರಲಿಲ್ಲ! ಹಲವು ದಿನ ಹಿರಿಯ ಮಿತ್ರ ಶತಾವಧಾನಿ ಶ್ರೀ ಆರ್.ಗಣೇಶ್ ಅವರ ಮನೆಯಲ್ಲೂ ಕೂರುತ್ತಿದ್ದೆ. ನನ್ನ ವೃತ್ತಿನಿರತ ಜಂಜಾಟಗಳ ನಡುವೆಯೂ ಸಿಗರೇಟು, ಬೀಡಿ ಚಟದವರಿಗೆ ಆಗಾಗ ಅವು ಹೇಗೆ ಬೇಕಾಗುತ್ತಾವೋ ಹಾಗೇ ಕಾವ್ಯ-ಸಾಹಿತ್ಯ-ಕುಶಲೋಪರಿ ನನ್ನಿಷ್ಟದ ವಿಷಯಗಳು. ಮದಿಸಿದ ಮದ್ದಾನೆಯೊಂದು ಕದಳೀವನಕ್ಕೆ ನುಗ್ಗಿದಂತೇ ನುಗ್ಗಲಾಗದಿದ್ದರೂ ಆಗಾಗ ಕವಿ-ಸಾಹಿತಿಗಳ ಮನೆ ಸುತ್ತಾ ಆಮೆ ನಡೆದಂತೇ ನಿಧಾನವಾಗಿ ಸುಳಿದು ಹಣಿಕಿ-ಇಣುಕಿ ’ಅವರಿದ್ದಾರೋ’ ಎಂದು ಖಾತ್ರಿಮಾಡಿಕೊಂಡು, ಅವರಿಗೆ ಸಮಯವಿದೆ ಎಂಬುದು ಗಟ್ಟಿಯಾದಮೇಲೆ ಹೋಗಿ ಕುಳಿತುಕೊಳ್ಳುವುದಾಗಿತ್ತು. ಇಂತಹುದೇ ಒಂದು ಪ್ರಯತ್ನದಲ್ಲಿ ಕೆ.ಎಸ್.ನ ಅವರ ಮನೆಗೂ ಒಮ್ಮೆ ಎಡತಾಕಿದ್ದೆ. ಸುಮಾರು ಎರಡು ಗಂಟೆಗಳಕಾಲ ಹರಟಿದ ಸೌಭಾಗ್ಯ ನನ್ನದು! ನನ್ನ ಜೀವನದ ಅವಿಸ್ಮರಣೀಯ ತುಣುಕುಗಳಲ್ಲಿ ಈ ಘಟನೆ ಕೂಡ ಒಂದು.

ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ನರಸಿಂಹಸ್ವಾಮಿಗಳು ಜನವರಿ ೧೫, ೧೯೧೫ನೇ ಇಸ್ವಿಯಲ್ಲಿ ಜನಿಸಿದರು. ಹುಟ್ಟಾ ಹೊಯ್ಸಳ ಕರ್ನಾಟಕ ಬ್ರಾಹ್ಮಣರು. ಮೈಸೂರಿನಲ್ಲಿ ಆರಂಭಿಕ ಹಂತದ ವಿದ್ಯಾಭ್ಯಾಸಗಳನ್ನು ಪೂರೈಸಿದರು. ೧೯೩೪ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿ ಅಲ್ಲಿ ಓದಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದರು. ೧೯೩೬ ರಲ್ಲಿ ತಿಪಟೂರಿನಲ್ಲಿ ವೆಂಕಮ್ಮ ಎಂಬ ಹುಡುಗಿಯನ್ನು ಮದುವೆಯಾಗಿ, ಮನೆಯನ್ನೂ-ಮನವನ್ನೂ ತುಂಬಿಸಿಕೊಂಡರು. ಮೈಸೂರಿನ ನಗರಪಾಲಿಕೆಯಲ್ಲಿ ಗುಮಾಸ್ತನಾಗಿ ಸೇವೆಸಲ್ಲಿಸುತ್ತ ವೃತ್ತಿ ಆರಂಭಿಸಿದ ನರಸಿಂಹಸ್ವಾಮಿಗಳು ನಡೆದ ದಾರಿಬಹುದೂರ.

ಕನ್ನಡ ಕಾವ್ಯಲೋಕಕ್ಕೆ ನವ್ಯ ಮತ್ತು ನವ್ಯೋತ್ತರ ಕಾವ್ಯಗಳು ಪಾದಾರ್ಪಣೆ ಮಾಡಿದ ಕಾಲವದು. ತಮಗನಿಸಿದ್ದನ್ನು ಸರಳ ಶಬ್ದಗಳಲ್ಲಿ ಯಾವುದೇ ಪ್ರಾಸ, ಛಂದಸ್ಸು ವಗೈರೆಗಳ ಮಾರ್ಗಬಂಧಿಗಳಿಲ್ಲದೇ ಬರೆಯುವವರ ಅವಶ್ಯಕತೆಯಿತ್ತು. ಅಡಿಗರು ಅದರ ಹರಿಕಾರರಾಗಿದ್ದರು. ಅಂತಹ ಸಾಲಿಗೆ ಕೆ.ಎಸ್.ನ. ಸೇರಿದರೂ ಕಾವ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಕೆ.ಎಸ್.ನ. ರಾಬರ್ಟ್ ಬರ್ನ್ಸ್ ಇವರ ಕಾವ್ಯಗಳಿಗೆ ಮೂಲಕಾರಣ. ಮೊದಲಾಗಿ ಅವನ ಕವನಗಳನ್ನೇ ಆಂಗ್ಲ ಭಾಷೆಯಿಂದ ಕನ್ನಡೀಕರಿಸಿದವರು ಕೆ.ಎಸ್.ನ. ಮುಂದೆ ಅದರಿಂದ ಪ್ರೇರಿತರಾಗಿ ತಮ್ಮ ಹೆಂಡತಿಯನ್ನೇ ಸ್ಫೂರ್ತಿಯ ಸೆಲೆಯಾಗಿ ಬಳಸಿಕೊಂಡು ಅವರು ಬರೆದ ಕವನಗಳು ಒಂದಕ್ಕಿಂತಾ ಒಂದು ಅಪ್ರತಿಮ, ಓಘ, ಅಮೋಘ.

ಒಂದುಕಾಲಕ್ಕೆ ಅವರ ಕೃತಿಗಳನ್ನು ಕೇಳುವವರೇ ಇರಲಿಲ್ಲ! ಮೂಲೆಗೆ ಬಿದ್ದು ಹಳೇ ಪೇಪರ್ ಮಾರುವವರ ಕೈಗೆ ಹೋಗಿದ್ದ ಪ್ರತಿಗಳೇ ಎಷ್ಟೋ ! ಆದರೆ ಯಾವುದೋ ಒಬ್ಬ ಸಾಹಿತ್ಯ ಪ್ರೇಮೀ ಪುಣ್ಯಾತ್ಮ ಅದನ್ನು ಎತ್ತಿಕೊಂಡು ಓದಿ, ಅದನ್ನೊಂದು ಪ್ರಕಾಶನಕ್ಕೆ ಕೊಂಡೊಯ್ದು ಕೊಟ್ಟಾಗ ಅವರು ಅದನ್ನು ಪ್ರಕಾಶಿಸಲು ಮುಂದೆ ಬಂದರು. ಪ್ರಕಾಶಕರಿಗೇ ವ್ಯವಹಾರದ ಹಕ್ಕನ್ನು ಬಿಟ್ಟುಕೊಟ್ಟ ಕೆ.ಎಸ್.ನ. ೧೯೪೨ರಲ್ಲಿ ತನ್ನ ಮೊದಲ ಕೃತಿಗೊಂದು ಪ್ರಕಟಣೆ ಕಾಣಿಸುವಲ್ಲಿ ಯಶಸ್ವಿಯಾದರು. ’ಮೈಸೂರು ಮಲ್ಲಿಗೆ’ ಯ ಕಂಪು ನಂತರ ಎಲ್ಲೆಡೆಗೂ ಪಸರಿಸಲು ಶುರುವಾಯಿತು. ಇದರಲ್ಲಿರುವ ೪೯ ಕವನಗಳು ದಾಖಲೆಯ ಪ್ರಸಾರವನ್ನು ಕಂಡವು. ಮುದ್ರಣದ ಮೇಲೆ ಮುದ್ರಣ ಕಂಡ ರೋಮಾಂಚನ ಕವನ ಸಂಕಲನ ಪ್ರಾಯಶಃ ಕನ್ನಡದಲ್ಲಿ ಮತ್ತೊಂದಿಲ್ಲ! ಕವನಗಳಲ್ಲಿ ಅದೆಷ್ಟು ಆಪ್ತತೆ ತುಂಬಿದೆಯೆಂಬುದನ್ನು ’ಅಕ್ಕಿ ಆರಿಸುವಾಗ’ ಎಂಬ ಕವನ ಓದಿ ನೋಡಿ [ಇದನ್ನೆಲ್ಲಾ ನೀವು ಈಗಾಗಲೇ ನೂರಾರು ಬಾರಿ ಕೇಳಿಯೇ ಇರುತ್ತೀರಿ. ಆದರೂ ಕೇಳಿದಷ್ಟೂ ಕೇಳಬೇಕೆನಿಸುವ ಓದಿದಷ್ಟೂ ಓದಬೇಕೆನಿಸುವ ಅತ್ಯಂತ ಆಪ್ತವಾದ ಶಬ್ದಮಾಲೆಗಳು. ಪ್ರಾಯಶಃ ಪ್ರಿಯತಮ ತನ್ನ ಪ್ರಿಯತಮೆಯ ಕಿವಿಯಲ್ಲಿ ಪಿಸುಗುಟ್ಟುವ ಹಲವು ಸಿಂಪ್ಲಿ ನಥಿಂಗ್ ಗಳು, ಆದರೂ ಬಿಡಲಾರದಂತೇ ಕಿವಿಯಲ್ಲಿ ಗುನುಗುನಿಸುತ್ತಲೇ ಗುಂಗಿನಲ್ಲಿ ತಡೆಹಿಡಿಯುವ ಹಸಿಹಸಿ ಕವಿತೆಗಳು !]



[ಗಾತ್ರ ಹಿಗ್ಗಿಸಲು ಅಕ್ಷರದ ಮೇಲೆ ಕ್ಲಿಕ್ಕಿಸಿ ]

ದುಡ್ಡು ಕೊಟ್ಟರೆ ಹಸನುಮಾಡಿದ ಆಹಾರ ಧಾನ್ಯಗಳು, ಪದಾರ್ಥಗಳು ಸಿಗುವ ಕಾಲ ಅದಾಗಿರಲಿಲ್ಲ, ಬದಲಿಗೆ ಅಕ್ಕಿ, ಬೇಳೆ-ಕಾಳುಗಳನ್ನು ಕೊಂಡು ಆಮೇಲೆ ಸ್ವಚ್ಛಗೊಳಿಸಿಕೊಳ್ಳಬೇಕಾದ ದಿನಗಳವು. ಹೆಂಡತಿಯ ಉಂಗುರವಿರದ ಬೆರಳು ಹಾಗೂ ಬಂಗಾರದ ಸರವಿಲ್ಲದ ಕತ್ತನ್ನು ಕವಿ ಗಮನಿಸುತ್ತಾರೆ.

ಕವಿ ಹೃದಯ ಎಂದರೆ ಇದೇ ತಾನೇ ? ತನ್ನ ಹೆಂಡತಿಗೆ ಬೇಕಷ್ಟು ಬಂಗಾರ ಧರಿಸುವ, ಅಲಂಕರಿಸಿಕೊಳ್ಳುವ ಆಸೆಯಾಗಲೀ, ಆಸ್ಪದವಾಗಲೀ ಇರಲಿಲ್ಲ, ಆದರೆ ಇದ್ದುದರಲ್ಲೇ ತನ್ನ ಜತೆ ಅವಳು ಹಾಯಾಗಿದ್ದಳು ಎಂಬುದನ್ನು ನೋವಿನಲ್ಲಿಯೇ ನಯವಾಗಿಯೇ ಹೇಳಿದ್ದಾರೆ ಕವಿ ಅಲ್ಲವೇ ? ಮಡದಿ ವೆಂಕಮ್ಮನವರಿಗೆ ಕವಿ ಬರೆದ ಕಾವ್ಯಗಳೇಆಭರಣಗಳಾಗಿದ್ದವು ಎಂದರೆ ತಪ್ಪಲ್ಲ. ಅಂತಹ ಬಡತನವನ್ನೂ ಅವರು ಅನುಭವಿಸಿ ಬಂದರೂ ಅವರ ಕಾವ್ಯ ಶ್ರೀಮಂತಿಕೆಯಲ್ಲಿ ಅದು ಮರೆಯಾಗಿ ಹೋಗಿತ್ತು !

ಚಲನಚಿತ್ರ ದಿಗ್ದರ್ಶಕರಾದ ಶ್ರೀಯುತ ಟಿ.ಎಸ್.ನಾಗಾಭರಣರವರು ಇವರ ಹಲವು ಗೀತೆಗಳನ್ನು ದೃಶ್ಯ/ಶ್ರಾವ್ಯ ಮಾಧ್ಯಮಕ್ಕೆ ಅಳವಡಿಸಿದರು. 'ಮೈಸೂರು ಮಲ್ಲಿಗೆ' ಯನ್ನು ಸಂಪೂರ್ಣ ಕಥಾಹಂದರ ಹೊಂದಿಸಿ ಚಲನ ಚಿತ್ರವನ್ನಾಗಿಸಿದರು. ಒಂದೊಂದು ಹಾಡೂ ಅದೆಷ್ಟು ಇಂಪು ಅದೆಷ್ಟು ತಂಪು ಅದೆಷ್ಟು ಕಂಪುಬೀರುತ್ತದೆ ಎಂಬುದನ್ನು ಸದ್ಯಕ್ಕೀಗ 'ಕನ್ನಡವೇ ಸತ್ಯ' ಕಾರ್ಯಕ್ರಮದಲ್ಲಿ ಹಾಡಿದ್ದ ಎರಡು ಹಾಡುಗಳ ಮೂಲಕ ನೋಡೋಣ:



ಗಾಯಕ ಸಿ.ಅಶ್ವಥ್ , ಗಾಯಕಿ ಎಂ.ಡಿ.ಪಲ್ಲವಿ ಹಾಗೂ ತಂಡದವರಿಗೆ ನಮ್ಮ ಧನ್ಯವಾದಗಳು.



ಬೆಂಬಿಡದ ಭಾವನೆಗಳು ನಮ್ಮನ್ನು ಗಂಧರ್ವಲೋಕಕ್ಕೇ ಕರೆದೊಯ್ಯುವಂತೇ ಅನಿಸುತ್ತದೆ. ಯವೊಂದೂ ಹಾಡನ್ನು ಕೇಳಿ ಮುಗಿಯಿತೆಂಬುದೇ ಇಲ್ಲ. ಆ ಹಾಡುಗಳು ಹಿಂದಿಗೂ, ಇಂದಿಗೂ, ಮುಂದಿನ ಜನಾಂಗಕ್ಕೂ ಇಂಪಾಗಿ ಕೇಳುತ್ತಿದ್ದರೆ ಅದಕ್ಕೆ ಅವುಗಳಲ್ಲಿನ ಒಲವಿನ ದಾಂಪತ್ಯದಿಂದ ಎರಕಹೊಯ್ದ ಸಾಹಿತ್ಯಕ ಹೂರಣವೇ ಕಾರಣ.

ನರಸಿಂಹ ಕೆಲವೊಮ್ಮೆ ನರಸಿಂಹಾವತಾರಿಯೂ ಆಗುತ್ತಿದ್ದರಂತೆ, ಅದು ಹೆಂಡತಿಯೊಂದಿಗಲ್ಲ, ಮಿಕ್ಕುಳಿದ ಜನರೊಡನೆ ಮಾತ್ರ. ಆಗ ಅಲ್ಲಿ ಮನದನ್ನೆಯ ಪ್ರವೇಶವಾಗಿಬಿಟ್ಟರೆ ಬಂದ ನಾರಸಿಂಹ ಹೊರಟುಹೋಗಿ ಕಿಕ್ಕೇರಿ ನರಸಿಂಹ ಮಾತ್ರ ಉಳಿಯುತ್ತಿದ್ದನಂತೆ! ಅವರಿಗೆ ಸ್ವರಲಾಲಿತ್ಯ, ಶಬ್ದಲಾಲಿತ್ಯ ಮತ್ತು ಶಾರೀರ ಇವಿಷ್ಟು ಇರದಿದ್ದರೆ ಕವನಗಳು ಸುತರಾಂ ಹಿಡಿಸುತ್ತಿರಲಿಲ್ಲ. ನನ್ನೇದುರೇ ಯಾರಿಗೋ ನೇರವಾಗಿ ಖಾರವಾಗಿ " ಶಾರೀರ್ವೇ ಇಲ್ಲ " ಎಂದಿದ್ದನ್ನು ಕೇಳಿದ್ದೆ. ಹಾಗಂತ ಹೃದಯ ತುಂಬಾ ಮೆದು....ನಿಮಗೆ ಗೊತ್ತಾಗೋದಿಲ್ವೇ ? ಕಲ್ಲು ಹೃದಯದಿಂದ ಕವನಗಳು ಹೊರಹರಿಯಲು ಸಾಧ್ಯವೇ ? ಒಮ್ಮೆ ಹುಟ್ಟಿದರೂ ಮರಗಳೇ ಇಲ್ಲದ ಬೋಳು ಗುಡ್ಡದಂತೇ ಅವುಗಳಿಗೆ ಭಾವನೇಯೇ ಇರುತ್ತಿರಲಿಲ್ಲ ಅಲ್ಲವೇ ?

ಕೆ.ಎಸ್.ನ ಅವರಿಗೆ ಗಾಯಕ ಸಿ. ಅಶ್ವಥ್ ಸ್ನೇಹಿತರಾಗಿದ್ದರು. ಸರಕಾರದಿಂದ ಏನಾದರೂ ಕೆಲಸವಾಗಬೇಕಾದರೆ ತಾನು ಮಾಡಿಕೊಡುತ್ತೇನೆಂದು ಹೇಳುತ್ತಿದ್ದರಂತೆ. ಒಮ್ಮೆ ಮಾತ್ರ ಯಾವುದೋ ಕೆಲವು ಹಾಡುಗಳಿಗೆ ಗೌರವಧನ ಬಂದಿದ್ದನ್ನು ಅಶ್ವಥ್ ಬಳಗ ತಮಗೆ ಕೊಡಲೇ ಇಲ್ಲ ಎಂಬುದನ್ನು ಸ್ವತಃ ಕವಿಗಳೇ ನನ್ನೊಂದಿಗೆ ನೋವಿನಲ್ಲಿ ಹೇಳಿದರು.[ದೊಡ್ಡವರ ಸಣ್ಣತನಗಳು ಕೆಲವೊಮ್ಮೆ ಕೆಲವು ಯಾರಿಗೂ ಕಾಣದ ಸಂಗತಿಗಳಾಗಿ ಉಳಿದುಹೋಗುತ್ತವೆ] ಆಗಲೇ ಬಹಳ ಮುಪ್ಪಡರಿ ಏನೂ ಕೆಲಸಮಾಡಲಾಗದೇ ಇರುತ್ತಿದ್ದ ಅವರಿಗೆ ಅಷ್ಟಿಷ್ಟು ಹಣದ ಅವಶ್ಯಕತೆಯಿತ್ತೇನೋ ಅನ್ನಿಸಿತು.

ಕೆ.ಎಸ್.ನ ಅವರ ಕೃತಿಗಳ ಬಗ್ಗೆ ತಿಳಿದುಕೊಳ್ಳೋಣವೇ ?

ಕವನ ಸಂಕಲನಗಳು

  • ಮೈಸೂರು ಮಲ್ಲಿಗೆ (೧೯೪೨)
  • ಉಂಗುರ (೧೯೪೨)
  • ಐರಾವತ (೧೯೪೫)
  • ದೀಪದ ಮಲ್ಲಿ (೧೯೪೭)
  • ಇರುವಂತಿಗೆ (೧೯೫೨)
  • ಶಿಲಾಲತೆ (೧೯೫೮)
  • ಮನೆಯಿಂದ ಮನೆಗೆ (೧೯೬೦)
  • ತೆರೆದ ಬಾಗಿಲು (೧೯೭೬)
  • ನವಪಲ್ಲವ (೧೯೮೩)
  • ಮಲ್ಲಿಗೆಯ ಮಾಲೆ (೧೯೮೬,೨೦೦೪)
  • ದುನ್ಡು ಮಲ್ಲಿಗೆ (೧೯೯೩)
  • ನವಿಲ ದನಿ (೧೯೯೯)
  • ಸನ್ಜೆ ಹಾಡು (೨೦೦೦)
  • ಕೈಮರದ ನೆಳಲಲ್ಲಿ (೨೦೦೧)
  • ಎದೆ ತುಂಬ ನಕ್ಷತ್ರ (೨೦೦೨)
  • ಮೌನದಲಿ ಮಾಥ ಹುಡುಕುತ್ತ (೨೦೦೩)
  • ದೀಪ ಸಾಲಿನ ನಡುವೆ (೨೦೦೩)
  • ಹಾಡು-ಹಸೆ (೨೦೦೩)

ಭಾಷಾಂತರಿಸಿದ ಕೃತಿಗಳು

  • ಮೀಡಿಯಾ (೧೯೬೬)
  • ರಾಬರ್ಟ್ ಬರ್ನ್ಸ್ ಕವಿಯ ಕೆಲವು ಪ್ರೇಮಗೀತೆಗಳು (೧೯೯೭)
  • ಕೆಲವು ಚೈನೀ ಕವನಗಳು (೧೯೯೭)

ಗದ್ಯ

  • ಮಾರಿಯ ಕಲ್ಲು (೧೯೪೨)
  • ಉಪವನ (೧೯೫೮)
  • ದಮಾಯಂತಿ (೧೯೬೦)
  • ಸಿರಿಮಲ್ಲಿಗೆ (೧೯೯೦)

ಪ್ರಶಸ್ತಿಗಳು

  • ೧೯೭೮ ರಲ್ಲಿ ಶ್ರೀಯುತರ ’ತೆರೆದ ಬಾಗಿಲು’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
  • ನರಸಿಂಹಸ್ವಾಮಿಯವರ ಕನ್ನಡ ಸೇವೆ ಮತ್ತು ಅದರ ವೈಶಿಷ್ಟ್ಯವನ್ನು ಗಮನಿಸಿದ ಬೆಂಗಳೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.
  • ೧೯೯೧ ರಲ್ಲಿ ಮೈಸೂರಿನಲ್ಲಿ ನಡೆದ ೬೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು.
  • ೧೯೯೭ ರಲ್ಲಿ ಶ್ರೀಯುತರ ದುಂಡುಮಲ್ಲಿಗೆ ಕವನ ಸಂಕಲನಕ್ಕೆ ಪಂಪ ಸಾಹಿತ್ಯ ಪ್ರಶಸ್ತಿ ಲಭ್ಯವಾಗಿದೆ.
  • ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತುಗಳು ಇವರನ್ನು ಫೆಲೋಶಿಪ್ [ಆಸ್ಥಾನ ವಿದ್ವಾನ್] ಅಥವಾ ಸಭಾಸದಸ್ಯತ್ವ ಕೊಟ್ಟು ಗೌರವಿಸಿವೆ.

೨೭ ಡಿಸೆಂಬರ್ ೨೦೦೩ ರಂದು ಕೆ.ಎಸ್.ನ ರವರು ತಮ್ಮ ಬಾಳಯಾತ್ರೆಯನ್ನು ಮುಗಿಸಿದರು ಎನ್ನುವಾಗ ಅವರೊಂದಿಗೂ ಅವರ ಕವನಗಳೊಂದಿಗೂ ಇರುವ ಭಾವನಾತ್ಮಕ ಸಂಬಂಧ ಬಿಚ್ಚಿಕೊಂಡು ಕಣ್ಣುಗಳು ತೇವವಾಗುತ್ತವೆ. ಮನದಲ್ಲೆಲ್ಲೋ ಅವರ ಇಂಪಾದ ಹಾಡೊಂದರ ಪಲ್ಲವಿ ಸುಳಿದುಹೋಗುತ್ತದೆ

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೇ..........

Tuesday, November 16, 2010

ಮಾನಸ ಪೂಜೆ


ಮಾನಸ ಪೂಜೆ

ಭಗವತ್ಪಾದ ಶ್ರೀ ಆದಿಶಂಕರರು ಪ್ರಕಾಂಡ ಪಂಡಿತರೂ ಉತ್ತಮ ಕವಿಗಳೂ ಆಗಿದ್ದರು. ಆ ದಾರ್ಶನಿಕರ ಬಗ್ಗೆ ಬರೆಯತೊಡಗಿ ಮಧ್ಯದಲ್ಲಿ ಅನಿವಾರ್ಯತೆಯಲ್ಲಿ ನಿಲ್ಲಿಸಿದ್ದೆ. ಮತ್ತೆ ಕೆಲದಿನಗಳಲ್ಲಿ ಅದನ್ನು ಆರಂಭಿಸುತ್ತಿದ್ದೇನೆ. ಮನುಷ್ಯ ಏನೂ ಇರಲಿ ಇಲ್ಲದಿರಲಿ ತನ್ನ ದೈನಂದಿನ ವ್ಯವಹಾರಗಳ ಮಧ್ಯೆ ಇದ್ದಲ್ಲೇ ಹೇಗೆ ದೈವಧ್ಯಾನ ಮಾಡಬಹುದು ಎಂಬುದನ್ನು ಅಂದೇ ಅವರು ಸೂಚಿಸಿದ್ದರು. ಪಾಂಡವರಲ್ಲಿ ಭೀಮ ಇಂತಹುದೇ ಉಪಾಸನೆಯನ್ನು ಮಾಡುತ್ತಿದ್ದ ಎಂಬುದೊಂದು ಐತಿಹ್ಯ. ಮನುಷ್ಯನ ಮನಸ್ಸೇ ಎಲ್ಲಕ್ಕೂ ಮೂಲ ಕೇಂದ್ರವಾಗಿರುವುದರಿಂದ ಅಲ್ಲೇ ಹೊರಜಗತ್ತಿನ ವೈಭವ-ವೈಭೋಗಗಳನ್ನು ಕಲ್ಪನೆಮಾಡಿಕೊಳ್ಳುತ್ತಾ ದೈವಕ್ಕೆ ಅವುಗಳಿಂದ ಮನಸಾ ಪೂಜಿಸುವುದು ಮಾನಸ ಪೂಜೆ ಎನಿಸಿದೆ. ಶುದ್ಧ ಮನಸ್ಸಿನಲ್ಲಿ ದೇವರನ್ನು ಆಹ್ವಾನಿಸಿ ನಡೆಸಬಹುದಾದ ಈ ಪೂಜೆಗೆ ಬೇಕಾಗುವ ಒಂದೇ ಪ್ರಮುಖ ವಸ್ತು--ಮನಸ್ಸು. ಶಂಕರರ ಅಡಿಗಳಿಗೆರಗುತ್ತ ಅವರು ರಚಿಸಿದ ಶಿವಮಾನಸ ಸ್ತೋತ್ರವನ್ನು ಕನ್ನಡೀಕರಿಸಲು ನನ್ನ ಶಬ್ದಗಳನ್ನೂ ಸೇರಿಸಿ ಹೀಗೆ ಪ್ರಯತ್ನಿಸಿದ್ದೇನೆ : ]

ಆಂತರ್ಯದಲಿ ಕುಳಿತು
ನನ್ನಾಳ್ವ ಓ ದೊರೆಯೇ
ಅರ್ಪಿಸುವೆ ನಿನಗಿದುವೇ
ನನ್ನ ಹಾಡು
ನಿತ್ಯವೂ ಬೆಳಗಿನಲಿ
ಮತ್ತದೇ ಬೈಗಿನಲಿ
ಸ್ವಸ್ತ ಚಿತ್ತವ ಕೊಡುವ
ಕೃಪೆಯ ಮಾಡು

ರತ್ನ ಸಿಂಹಾಸನವ
ಕಲ್ಪಿಸುವೆ ಮನಸಿನಲಿ
ಪಟ್ಟೆ ಪೀತಾಂಬರವ
ಅಣಿಗೊಳಿಸುತಲ್ಲಿ
ಜಾತೀಯ ಪುಷ್ಪಗಳ
ಧೂಪದೀಪಗಳಿಟ್ಟು
ಪ್ರೀತಿಯಲಿ ಸ್ವಾಗತಿಸಿ
ಕುಳ್ಳಿರಿಸುತಲೀ

ಅರ್ಘ್ಯ ಪಾದ್ಯಾದಿಗಳು
ಸ್ನಾನ ಪಾನೀಯಗಳು
ಭೂಷಣಕೆ ಗಂಧ
ಮಾಲೆಗಳನ್ನು ಇಡುತ
ಭೇಷಾಯ್ತು ನಿನ್ನಿರವು
ನಾ ಸೋಲದಂತಿರಲು
ಕೇಶವನೇ ಶಿವನೇ ನೀ
ಪ್ರೀತಿಸೈ ಸತತ

ನವರತ್ನ ಖಚಿತ
ಬಂಗಾರದಾ ಪಾತ್ರೆಯಲಿ
ತುಪ್ಪ ಹಾಲ್ಮೊಸರು ಪಂಚ
ಭಕ್ಷ್ಯಾದಿಗಳನು
ಬಾಳೆ ಮಾವಿತ್ಯಾದಿ
ವಿಧದ ಹಣ್ಣಿನ ಜತೆಗೆ
ಪಾನಕ ತಾಂಬೂಲವಂ
ಕೊಡುತಲಿಹೆನು

ಅವಸರದ ಜೀವನದಿ
ಮರೆತಿರುವೆ ನಿನ್ನನ್ನೇ
ಭವಸಾಗರವು ಬಹಳ
ವಿಸ್ತಾರವಹುದು
ಕ್ಷಮಿಸೆನ್ನ ಮಂದಮತಿ
ಕರುಣಿಸುತ ಚಂದಗತಿ
ಮರುಳು ಮಾನವ ಜನ್ಮ
ಮುಸುಕು ಕವಿದಿಹುದು

ಕರಚರಣ ಕೃತಪಾಪ
ಕಾಯದಲಿ ಕರ್ಮದಲಿ
ಶ್ರವಣ ನಯನಗಳಲ್ಲಿ
ಜನಿಸಿದಪರಾಧ
ವಿಹಿತವೋ ಅವಿಹಿತವೋ
ಸರ್ವವನು ಕಡೆಗಣಿಸು
ಜಯಜಯವು ಜಯವೆನುತ
ದರ್ಶಿಸುವೆ ಪಾದ

Monday, November 15, 2010

ಬಾಲ್ಯಸಖಿ

ಚಿತ್ರ ಋಣ : ಅಂತರ್ಜಾಲ

ಬಾಲ್ಯಸಖಿ

ತಣ್ಣೆಳಲು ಬಯಸುತ್ತ ತೆರಳಿ ಆಲದ ಅಡಿಗೆ
ಕಣ್ಣೆವೆಯ ಮುಚ್ಚಿ ಮಲಗಿರಲು ಸಿಹಿಗನಸು
ಬಣ್ಣಿಸಲು ಶಬ್ದ ಸೋಲುವ ಮುನ್ನ ನಾ ಬರೆದೆ
ನುಣ್ಣನೆಯ ಈ ಹಾಡು ಗುನಿಗುನಿಸುವುದಕೆ

ಹುಣ್ಣಿಮೆಯ ರಾತ್ರಿಯಲಿ ಬಂದು ಕುಳಿತಿರೆ ಇಲ್ಲಿ
ಹೆಣ್ಣು ಹರಿಣದ ಮುಖವ ಹೊತ್ತ ಆ ಮುಗುದೆ
ಬಣ್ಣ ಹಾಲಿನ ಬಿಳುಪು ಸುರಲೋಕ ಸುಂದರಿಯು
ಗಿಣ್ಣದಂತಹ ಕೆನ್ನೆ ಮೃದುಮನಸಿನವಳು

ಅಣ್ಣಕೇಳ್ ನಾ ಬಂದೆ ಸರಿರಾತ್ರಿಯಲಿ ಭರದಿ
ಸಣ್ಣ ನಡುವನು ಬಳಸಿ ಮುದ್ದಾಡಲಾಗ
ಹಣ್ಣು-ಹಂಪಲು ಹಿಡಿದು ತೋರಿದೆನು ಪ್ರೀತಿಯನು
ಬೆಣ್ಣೆ ಮುದ್ದೆಯ ಮೈಯ ಸೋಕಿಸಿದಳವಳು

ಚಿಣ್ಣರಂತಾಗಿದ್ದ ನಮ್ಮ ಮನಗಳು ಸೇರಿ
ಮಣ್ಣಾಟವಾಡಿದ ದಿನಗಳನು ನೆನೆದೂ
ತಣ್ಣನೆಯ ಸುಳಿಗಾಳಿ ಸುಂಯ್ಯೆಂದು ಬೀಸಿಬರೆ
ಸುಣ್ಣಹಚ್ಚಿದ ತಾಂಬೂಲವನು ಮೆದ್ದೂ

ಬಣ್ಣಬಣ್ಣದ ಕಾಗದಗಳನು ಅಂಟಿಸುತ
ಕಣ್ಣಳತೆ ಮೀರಿ ಹೋಗುವ ದೂರದೆಡೆಗೆ
ಮಣ್ಣಾದ ಕೈಗಳಲಿ ಹಾರಿಸುತ ಗಾಳಿಪಟ
ಹುಣ್ಣಾಗುವಷ್ಟು ನಕ್ಕುದ ನೆನೆದು ಕಡೆಗೆ

ಹೆಣ್ಣವಳು ಬಾಲ್ಯಸಖಿ ಬಾಳಬೆಳಗಿದ ಗೆಳತಿ
ಗೆಣ್ಣು ಮುರಿದಿಹ ಕಾಯಿ ನೆಲವಪ್ಪಿದಂತೇ
ಹಣ್ಣೆಲೆಯು ಕೋಲೊಂದು ಉದುರಿ ಚೀಲದಮೇಲೆ
ಟಣ್ಣೆಂದು ಬಿದ್ದ ಸದ್ದಿಗೆ ಎದ್ದು ಕುಳಿತೆ !

Sunday, November 14, 2010

ದಯವೇ ಧರ್ಮದ ಮೂಲವಯ್ಯಾ ೪೦ ಮಾರ್ಕ್ಸು ಹಾಕಿ ಪಾಸುಮಾಡಿರಯ್ಯಾ!!


ದಯವೇ ಧರ್ಮದ ಮೂಲವಯ್ಯಾ ೪೦ ಮಾರ್ಕ್ಸು ಹಾಕಿ ಪಾಸುಮಾಡಿರಯ್ಯಾ!!

ಎಷ್ಟೋ ಸಮಯ ಮಕ್ಕಳನ್ನು ನಾವು ಮರೆತೇಹೋಗುತ್ತೇವೆ. ದೈನಂದಿನ ನಮ್ಮ ವ್ಯಾವಹಾರಿಕ ಜಂಜಡಗಳಲ್ಲಿ ಮಕ್ಕಳನ್ನು ಬೈದೋ ಬಡಿದೋ ದೂರ ಅಟ್ಟುವುದೇ ನಮ್ಮ ಕ್ರಿಯೆಯಾಗಿ ಎಷ್ಟೋ ಮನೆಗಳಲ್ಲಿ ಇಂದಿಗೂ ಅಪ್ಪನೆಂದರೆ ಹೆದರಿ ಮುದುರಿಕೊಳ್ಳುವ ಮಕ್ಕಳೂ ಇದ್ದಾರೆ! ಅಪ್ಪ ಯಾಕೆ ಒಮ್ಮೊಮ್ಮೆ ಹೀಗಾಗಿ ಬಿಡುತ್ತಾನೆ ಎಂದು ಆ ಮುಗ್ಧ ಮನಸ್ಸು ಅರ್ಥೈಸಲಾಗದೇ ಸೋಲುತ್ತದೆ. ಮನೆಯಲ್ಲಿ ಅಪ್ಪ-ಅಮ್ಮ ಕೊಡುವ ಪರಿಸರ, ಸಂಸ್ಕಾರದಲ್ಲಿ ಮಕ್ಕಳು ಬೆಳೆಯುತ್ತಾರೆ. ಈ ಕುರಿತು ಗಿಳಿಮರಿಗಳೆರಡರ ಕಥೆ ನಿಮಗೆಲ್ಲಾ ಗೊತ್ತೇ ಇದೆ. ಒಂದು ನೈಜ ಘಟನೆಯನ್ನು ತಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.

ಒಂದು ಪ್ಲಾಸ್ಟಿಕ್ ಪೀಠೋಪಕರಣಗಳನ್ನು ಮಾರುವ ಅಂಗಡಿಯ ಪಕ್ಕ ನನ್ನ ವಾಹನವನ್ನು ನಿಲ್ಲಿಸುತ್ತಿದ್ದೆ. ಅಲ್ಲಿ ಪಾರ್ಕಿಂಗ್ ಜಾಗದ ಹಿಂದೆ ಸಂದಿಯಲ್ಲಿ ಚಿಕ್ಕ ಹುಡುಗರಿಬ್ಬರು ನಿಂತಿದ್ದರು. ಸುಮಾರು ೬-೭ ವಯಸ್ಸಿನವರು. ಒಬ್ಬನ ತುಟಿಯೊಡೆದು ರಕ್ತ ಹೊರಚಿಮ್ಮುತ್ತಿತ್ತು. ತುಸು ಹೊತ್ತು ನೋಡಿ ಹತ್ತಿರ ಕರೆದೆ. " ಯಾಕಪ್ಪಾ ಏನಾಯಿತು ? " ಎಂದೆ. ಆತ ಅಳುವುದನ್ನು ಇನ್ನೂ ಜೋರಾಗಿಸಿದ. ಬಹುಶಃ ಒಡೆದ ದವಡೆಯ ಅಥವಾ ತುಟಿಯ ನೋವಿನಿಂದ ಆತ ಚೀರುತ್ತಿದ್ದನಿರಬೇಕು. ಗಮನಿಸಿ ನೋಡಿದಾಗ ತಿಳಿದದ್ದು : ಆತ ಯಾವುದೋ ಸ್ಲಮ್ ಹುಡುಗ, ಜೊತೆಗಾರನೂ ಸ್ಲಮ್ ಹುಡುಗನೇ. ಆಗ ಅಪರಾಹ್ನ ೪ ಗಂಟೆಯ ಸಮಯ. ಊಟಮಾಡಿದ್ದರೋ ಹಸಿದಿದ್ದರೋ ಆ ಹುಡುಗರು ತಿಳಿಯದು. ಅವರನ್ನು ಕೇಳುವವರಾರು? ದುಡಿಯುವ ಜನಸಾಮಾನ್ಯನೇ ತೊಂದರೆಯಿಂದ ಹೆಳವನಾದರೆ ಯಾರೂ ಕೇಳದ ಕಾಲವಿದು ಅಂದಮೇಲೆ ಅಂತಹ ಹುಡುಗರನ್ನೆಲ್ಲಾ ಯಾರು ಕೇಳುತ್ತಾರೆ ಅಲ್ಲವೇ ? ನಾನು ತಡೆಯದಾದೆ. ಮನಸ್ಸಿಗೆ ಬಹಳ ಬೇಸರವಾಯಿತು. ಆತ ಅಂತೂ ಉತ್ತರಿಸಿದ " ಆ ಅಂಗಡಿಯಪ್ಪ ಹೊಡೆದನಣ್ಣಾ. " ಎನ್ನುತ್ತಾ ಕೆನ್ನೆ ಮುಟ್ಟಿಕೊಂಡ. ಕೆನ್ನೆ ಊದತೊಡಗಿತ್ತು. ನಾನು ಮತ್ತೆ ಕೇಳಿದೆ " ನೀನೇನು ಮಾಡಿದೆ ಅಂತ ಹೊಡೆದರು ? " ಆತ ನಿರುತ್ತರನಾಗಿದ್ದ. ನಾನು ಅಂಗಡಿಯಾತನಲ್ಲಿ ಕೇಳಿದೆ " ಸ್ವಾಮೀ ಅಷ್ಟು ಜೋರಾಗಿ ಹೊಡೆದಿರಲ್ಲ ಯಾಕೆ ಅಂತ ಕೇಳಬಹುದೇ ? " ಅಂಗಡಿಯಾತ ಹೇಳಿದ " ಕಳನನ್ಮಕ್ಳು ಚೇರ್ ಕದೀತಾ ಇದ್ರು ಅದಕ್ಕೇ ಕೊಟ್ಟೆ ಎರಡು. " ಉತ್ತರಬಂತು. ಅರ್ಥವೂ ಆಯಿತು.

ಸ್ಲಮ್ ಹುಡುಗರಿಗೆ ಅವರ ಮಾತಾ-ಪಿತೃಗಳು ಇನ್ನೇನು ಹೇಳಿಕೊಡಲು ಸಾಧ್ಯ! ಊಟಕ್ಕೇ ಗತಿಯಿರದಿರುವಾಗ ವಿದ್ಯೆಗೆ ದಾರಿ ಇದೆಯೇ ? ಅನ್ನ-ವಸತಿಗೆ ಅನುಕೂಲವಿಲ್ಲದಾಗ ಮಿಕ್ಕಿದ ಸಂಸ್ಕಾರಗಳಿಗೆ ಪುರಸ್ಕಾರವಿರುತ್ತದೆಯೇ ? ಬಡತನದ ಬವಣೆಯ ಸಂಸಾರದಲ್ಲಿ ಹುಟ್ಟಿಬೆಳೆಯುವ ಇಂಥಾ ಮಕ್ಕಳ ಗೋಳು ಹೇಳತೀರದು. ಅಪ್ಪ-ಅಮ್ಮ ಹೇಳಿದ್ದನ್ನು ಅವರು ಪಾಲಿಸಬೇಕು. ಇಲ್ಲದಿದ್ದರೆ ಹೊಟ್ಟೆಗೆ ಸಿಗುವ ಚಿಲ್ಲರೆ ಹಿಟ್ಟೂ ಇಲ್ಲ! ಪಾಲಕರು ಹೇಳಿದ್ದನ್ನು ಆದಷ್ಟೂ ಪಾಲಿಸುವ ಅಂತಹ ಹುಡುಗರು ಹಲವೊಮ್ಮೆ ಬೆಳೆಯುತ್ತಾ ಸಹಜವಾಗಿ ಇಲ್ಲದ ಚಟಗಳಿಗೆ ಬಲಿಯಾಗುತ್ತಾರೆ. ಕೆಲಸದಲ್ಲಿ ಆಸಕ್ತಿಯಿಲ್ಲದೇ ಮಾದಕ ವ್ಯಸನಿಗಳಾಗಿ ಎಲ್ಲೋ ಬಿದ್ದಿರುವುದೂ ಇರಬಹುದು. " ಹೇಯ್ ಏಳ್ರೋ ಮೇಲೆ ಹೋಗ್ರೋ ಏನಾದ್ರೂ ಒಂದಷ್ಟ್ ಪಟಾಯ್ಸ್ಕೊಂಡ್ ಬನ್ನಿ, ಇಲ್ಲಾಂದ್ರೆ ಒದ್ದೋಡ್ಸ್ಬುಡ್ತೀನಿ " ಇಂತಹ ಬೆದರಿಕೆಯ ದನಿಗೆ ಒಂದುಕಡೆ ಬೆದರಿ ಇನ್ನೊಂದು ಕಡೆ ತಿನ್ನುವ ತುತ್ತಿಗೆ ಅನಿವಾರ್ಯವಾಗಿ ಸ್ಲಮ್ ಮಕ್ಕಳು ದಾರಿ ತಪ್ಪುತ್ತಾರೆ. ನೇರಮಾರ್ಗದ ದುಡಿಮೆಯ ಬದಲು ಅಡ್ಡಡ್ಡ ಮಾರ್ಗವನ್ನು ಹಿಡಿಯುತ್ತಾರೆ. ಅವರಲ್ಲೇ ಬಹಳ ಮಂದಿ ಅವರಿವರ ಬಂಟರಾಗಿ ರೌಡೀ ಗ್ಯಾಂಗ್ ಗಳಲ್ಲಿ ಸೇರಿಕೊಂಡರೆ ಕೆಲವರು ಮಾತ್ರ ಚಿಲ್ಲರೆ ವ್ಯಪಾರವೋ ಸಾಪಾರವೋ ಮಾಡಿ ಜೀವಿಸುತ್ತಾರೆ. ಎಲ್ಲೋ ಬೆರಳೆಣಿಕೆಯಷ್ಟು ಜನ ಕೂಲಿ, ಚಿಕ್ಕಪುಟ್ಟ ನೌಕರಿ ಇತ್ಯಾದಿ ಕೆಲಸಗಳನ್ನು ಮಾಡುತ್ತಾರೆ.

ಹೀಗಿರುವ ಸ್ಲಮ್ ಒಂದರಿಂದ ಬಂದಿದ್ದ ಅವರಿಬ್ಬರು ಹಸಿದ ಹೊಟ್ಟೆಯಲ್ಲೇ ಇದ್ದರೇನೋ. ಅಲ್ಲಿರುವ ಪ್ಲಾಸ್ಟಿಕ್ ಅಂಗಡಿಯಾತ ಕೂಡ ತೀರಾ ಅನುಕೂಲದವರೇನಲ್ಲ. ತಮ್ಮ ಬದುಕಿಗಾಗಿ ಇರುವುದರಲ್ಲೇ ಅಷ್ಟೋ ಇಷ್ಟೋ ಹಣಕೂಡಿಸಿಕೊಂಡು ಅಂಗಡಿ ತೆರೆದಿದ್ದವರು. ಮೇಲಾಗಿ ವ್ಯಾಪಾರದಲ್ಲಿ ವಿಪರೀತ ಪೈಪೋಟಿ ಬೇರೆ. ತನ್ನ ಅನ್ನಕ್ಕೇ ಕೈಹಾಕಿದವರು ಹುಡುಗರೇ ಆಗಿದ್ದರೂ ತಾಳಲಾರದೇ ಹುಡುಗನಿಗೆ ಎರಡು ಬಾರಿಸಿದ್ದಾರೆ. ಹೊಡೆದ ತೀವ್ರತೆಗೆ ದವಡೆಯೇ ಒಡೆದು ತುಟಿಯತನಕವೂ ಗಾಯವಾಗಿ ರಕ್ತಬಂದಿದೆ. ಇಲ್ಲಿ ಹುಡುಗರ ತಪ್ಪೋ ಅಥವಾ ಅಂಗಡಿಯವರ ತಪ್ಪೋ ನೀವೇ ಹೇಳಿ. ಒಬ್ಬ ಏನೂ ಇಲ್ಲದವ, ಇನ್ನೊಬ್ಬ ತನ್ನ ಹೊಟ್ಟೆಗೆ ವ್ಯಾಪಾರೀ ವೃತ್ತಿಯಲ್ಲಿ ತೊಡಗಿಕೊಂಡವ. ನಾನು ಅಂಗಡಿಯವರ ಕೂಡ ಮಾತನಾಡಿದೆ. " ಸ್ವಾಮೀ ಏನೋ ಹುಡುಗರು ಸ್ವಲ್ಪ ಗದರಿಸಿ ಬಿಡಬಹುದಿತ್ತು, ಇನ್ನು ಮಾಡಿದರೆ .....ಅಂತ ಹೇಳಬಹುದಿತ್ತಲ್ಲ " ಎಂದೆ. " ನಿಮಗೇನ್ ಗೊತ್ರೀ ನಮ್ ಕಷ್ಟಸುಖ ದಿನಾ ಬರ್ತಾರೆ...ನಿಂತಿರ್ತಾರೆ.....ಸ್ವಲ್ಪ ನೋಡ್ಲಿಲ್ಲಾ ಅಂದ್ರೆ ಹೊಡ್ಕೊಂಡೋಗ್ಬುಡ್ತಾರೆ...ಪಾಪಿ ನನ್ಮಕ್ಳು. "

ನಾನು ಹೆಚ್ಚಿಗೆ ಹೇಳುವ ಸ್ಥಿತಿಯಲ್ಲಿರಲಿಲ್ಲ. ಆ ಹುಡುಗ ಅಲ್ಲೇ ಅಳುತ್ತಿದ್ದ. ಆತನನ್ನು ಕರೆದು ಕೈಗೊಂದು ಹತ್ತು ರೂಪಾಯಿ ಕೊಟ್ಟು [ಇದು ಕೊಟ್ಟೆ ಎಂದು ತೋರಿಸಲು ಬರೆದದ್ದಲ್ಲ, ನಡೆದದ್ದನ್ನ ಇದ್ದಹಾಗೇ ಹೇಳುತ್ತಿದ್ದೇನೆ] " ಅಲ್ಲಯ್ಯಾ ನೀನ್ಯಾಕೋ ಕದಿಯಕ್ಕೆ ಹೋಗಿದ್ದೆ? ಕಳ್ತನ ಮಾಡೋದು ತಪ್ಪು ಅಂತ ಗೊತ್ತಿಲ್ವಾ ? " ಅಂದೆ. ಆತ ನನ್ನ ಕಣ್ಣುಗಳನ್ನು ನೋಡಿ ತನ್ನ ಅಸಹಾಯಕತೆಯನ್ನು ಕಣ್ಣುಗಳಿಂದಲೇ ತಿಳಿಸುತ್ತಿದ್ದ. ಮಕ್ಕಳ ಇಂತಹ ಗೋಳಿಗೆ ಕಾರಣ ನಮ್ಮಲ್ಲಿನ ಬಡತನವಲ್ಲವೇ ? ಹುಟ್ಟಾ ಯಾವ ಮಗುವೂ ಕಳ್ಳ ಸುಳ್ಳ ಆಗಿರುವುದಿಲ್ಲ. ಮಗುವಿಗೆ ತಾನ್ಯಾರು, ಎಲ್ಲಿದ್ದೇನೆ, ಏನುತಿನ್ನುತ್ತೇನೆ ಇವೆಲ್ಲಾ ಪರಿವೆಯೇ ಇರುವುದಿಲ್ಲ. ಅಲ್ಪಸ್ವಲ್ಪ ತಿಳುವಳಿಕೆ ಬರುವುದು ೩ ವರ್ಷಗಳ ನಂತರವಷ್ಟೇ. ಹೀಗಾಗಿ ೩ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದೇವರೆಂದೇ ತಿಳಿದರೆ ತಪ್ಪಿಲ್ಲ. ಅಂತಹ ಮುಗ್ಧ ಮನಸ್ಸು ಅವರದಾಗಿರುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ಅವ್ರು ಹುಟ್ಟಿದ ಸುತ್ತಲ ಪರಿಸರಕ್ಕೆ ಒಗ್ಗಿಕೊಳ್ಳತೊಡಗುತ್ತಾರೆ. ಅಲ್ಲಿನ ಭಾಷೆ, ಸಂಸ್ಕಾರ-ಸಂಸ್ಕೃತಿ, ಆಹಾರ-ವಿಹಾರ, ಆಚಾರ-ನಡವಳಿಕೆ ಎಲ್ಲವನ್ನೂ ಮಗು ಸೂಕ್ಷ್ಮವಾಗಿ ಅರಿಯತೊಡಗುತ್ತದೆ, ಅನುಕರಿಸತೊಡಗುತ್ತದೆ. ಯಾವುದು ತಪ್ಪು ಯಾವುದು ಒಪ್ಪು ಎನ್ನುವುದನ್ನು ಮರೆತು ತಪ್ಪನ್ನೇ ಸರಿಯೆಂಬ ಭಾವನೆಯಿಂದ ತನ್ನ ಹಿರಿಯರು ಹೇಳಿದ್ದನ್ನು ಮಾಡತೊಡಗುತ್ತದೆ.

ಎಳವೆಯಲ್ಲೇ ಇಂತಹ ಮಕ್ಕಳು ಬೀದಿಗೆ ಬಂದು ಬೇಡುವುದು-ಕಾಡುವುದು ಮುಂತಾದ ಹಲವು ಮಾರ್ಗಗಳನ್ನು ಹಿಡಿಯುತ್ತಾರೆ. ಒಮ್ಮೊಮ್ಮೆ ಯಾವುದೂ ಸಾಲದಾಗ ಪಾಲಕರು ಹೇಳಿಕೊಡುವ ಕಳ್ಳತನವೇ ಮೊದಲಾದ ಬೇಡದ ಕೆಲಸಕ್ಕೆ ಕೈಹಾಕುತ್ತಾರೆ. ಸಮಾಜ ತಮ್ಮನ್ನು ವಿರೋಧಿಸುತ್ತದೆ ಎಂದು ಅನಿಸಿದಾಗ ಸಮಾಜದ ಜನರನ್ನು ನಿಗ್ರಹಿಸಲು ಮಚ್ಚು-ಲಾಂಗುಗಳನ್ನು ಕೈಗೆತ್ತಿಕೊಂಡು ಹೆದರಿಸುವ ಕಾಯಕ ಆರಂಭವಾಗುತ್ತದೆ. ಎಳೆಯ ಮಗುವೊಂದು ಪರಿಸ್ಥಿತಿಯಿಂದ ಬೆಳೆದ ರೌಡಿಯಾಗುತ್ತದೆ! ಇದರ ಮೂಲ ಬಡತನ ಮತ್ತು ಪರಿಸರ. ಇಂತಹ ಮಕ್ಕಳಿಗೆ ಆರಂಭದಲ್ಲೇ ಒಳ್ಳೆಯ ವಿದ್ಯೆ-ಸಂಸ್ಕಾರ ಸಿಕ್ಕಿದ್ದರೆ ಅವರು ಹೀಗಾಗುತ್ತಿರಲಿಲ್ಲ. ಆದರೆ ಹುಟ್ಟಿಸಿದಾತನಿಗೆ ಅವರ ಉದರಂಭರಣೆಯೇ ಕಷ್ಟವಾಗಿರುವಾಗ ಇನ್ನು ವಿದ್ಯೆಯೆಲ್ಲಿಂದ ಬಂತು ? ಪಾಪದ ಕೂಸುಗಳು ಪಾಪಕೂಪದ ಕೃತ್ಯಕ್ಕೆ ಇಳಿದುಬಿಡುತ್ತವೆ. ವಂಚನೆ, ಮೋಸ, ದಗಾಕೋರರಾಗಿಯೂ, ಕಳ್ಳರು-ದರೋಡೆಕೋರರಾಗಿಯೂ ಕೆಲದಿನ ಸಂಪಾದಿಸಿದ ಹಣದಿಂದ ಆಮೇಲೆ ರೋಲ್ ಕಾಲ ಮಾಡಲು ಶುರುಮಾಡಿ ರೌಡಿಗಳಾಗುತ್ತಾರೆ.

ಈಗ ಸಮಾಜದ ಇನ್ನೋಂದು ಮುಖವನ್ನು ನೋಡೋಣ. ಉಳ್ಳವರ ಮಕ್ಕಳಿಗೆ ಹೊಟ್ಟೆ-ಬಟ್ಟೆಗೆ ಹೇರಳವಾಗಿ, ಹೆಚ್ಚಾಗಿ, ತಿಂದಿದ್ದು ಕರಗದೇ ಹಲವು ಹವ್ಯಾಸ ಬೆಳೆಯುತ್ತದೆ. ಇಲ್ಲಿಯ ಸಂಸ್ಕಾರ ವಿಭಿನ್ನವಾಗಿದ್ದು ಇಲ್ಲಿ ಅಪ್ಪ-ಅಮ್ಮ ಯಾಂತ್ರಿಕವಾಗಿ ಮಕ್ಕಳನ್ನು ಬೆಳೆಸುತ್ತಾರೆ. ಆತ್ಮೀಯತೆ ತೀರಾ ಕಮ್ಮಿ ಇರುವ ವಾತಾವರಣದಲ್ಲಿ ಮಕ್ಕಳು ಅಪ್ಪ-ಅಮ್ಮನ ನಿಜವಾದ ಪ್ರೀತಿ ಸಿಗದೇ ಉಂಡಾಡಿಗಳಾಗಿ ಖರ್ಚಿಗೊಂದಷ್ಟು ಪಾಕೆಟ್ ಮನಿ ಪಡೆದು ವಿದ್ಯಾರ್ಥಿದೆಸೆಯಲ್ಲಿಯೇ ಬೇಡದ ಚಟಗಳನ್ನು ಅಂಟಿಸಿಕೊಳ್ಳಲು ತೊಡಗುತ್ತಾರೆ. ಅಪ್ಪ-ಅಮ್ಮನ ಮಧ್ಯೆ ಇರುವ ’ಅಹಂ’ ಎಂಬ ಕಂದಕದಿಂದ ಮಕ್ಕಳು ಎಲ್ಲಿದ್ದಾರೆ, ಏನುಮಾಡುತ್ತಿದ್ದಾರೆ ಎಂಬುದನ್ನು ಲಕ್ಷ್ಯಿಸುವ ದೇಖರೇಖಿಯ ಕೆಲಸ ಅಪ್ಪ-ಅಮ್ಮಂದಿರಿಗೆ ಸಾಧ್ಯವಾಗುವುದಿಲ್ಲ.

ಇದಕ್ಕೆ ಉದಾಹರಣೆ: ಕಳೆದ ಕೆಲವು ತಿಂಗಳ ಹಿಂದೆ ಅತಿ ಚಿಕ್ಕ ಹುಡುಗರಿಬ್ಬರು ಮನೆಯಿಂದ ತಪ್ಪಿಸಿಕೊಂಡಿದ್ದರು. ಆಮೇಲೆ ನೋಡಿದರೆ ಮಧ್ಯಮವರ್ಗದವರಿಗೆ ಜನ್ಮದಲ್ಲೇ ಸಾಧ್ಯವಾಗದ ರೆಸಾರ್ಟ್ ಖರ್ಚಿನ ವಾಸದಲ್ಲಿ ಅವರು ಇದ್ದರು. ಅಲ್ಲಿಗೆ ಹೋಗಿ ಏನೇನನ್ನೋ ಬಯಸಿ ಕೇಳಿಪಡೆದು ಮಜಾಮಾಡತೊಡಗಿದ್ದರು. ಇಷ್ಟು ಸಣ್ಣಮಕ್ಕಳು ಮಾಡಿದ ಕೆಲಸದ ಇತಿಹಾಸ ಕೇಳಿ ನಾವೆಲ್ಲಾ ನಿಜಕ್ಕೂ ದಂಗಾಗಿ ಹೋಗಿದ್ದೆವು. ಇವತ್ತಿನ ದಿನ ವಾರ್ತಾವಾಹಿನಿಗಳು ನಿರಂತರ ಕಾರ್ಯನಿರತವಾಗಿರುವುದರಿಂದ ಅವರ ಪತ್ತೆ ಸುಲಭಸಾಧ್ಯವಾಯಿತು. ಇಲ್ಲಾಂದರೆ ಮಕ್ಕಳನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದೇ ಭಾವಿಸಬೇಕಾಗುತ್ತಿತ್ತು. ಇದು ಇಂದು ನಿನ್ನೆಯದಲ್ಲ,ಹಿಂದಿನಿಂದಲೂ ನಡೆದು ಬಂದಿದ್ದು. ಉಳ್ಳವರಿಗೆ ಮಕ್ಕಳೂ ಒಂದು ಉಪಕರಣವಿದ್ದ ಹಾಗೇ! ಹೆಂಡತಿ-ಮಕ್ಕಳು ಇರಬೇಕೋ ಇರಬೇಕು ಅಷ್ಟೇ. ಬಾಕಿ ಚಟಗಳನ್ನೆಲ್ಲಾ ಅವರು ದುಡ್ಡಿಕೊಟ್ಟು ತೆವಲು ತೀರಿಸಿಕೊಳ್ಳುತ್ತಾರೆ. ಐಷಾರಾಮೀ ಬಂಗಲೆಯಲ್ಲಿ ಹಾಯಾಗಿ ಹತ್ತಾರು ಕೋಣೆಗಳು, ದೊಡ್ಡ ದೊಡ ಹಜಾರಗಳು, ಕೈಗೆ ಕಾಲಿಗೆ ಆಳುಗಳು, ಅಡಿಗೆಯವರು.....ಹೀಗೇ ಎಲ್ಲದಕ್ಕೂ ಪ್ರತ್ಯೇಕ ವ್ಯವಸ್ಥೆ...ಎಲ್ಲವೂ ದುಡ್ಡಿನಲ್ಲೇ. ಕೋಣೆ ಕೋಣೆಗೆ ಫೋನು, ಟಿವಿ. ಅಪ್ಪನಿಗೊಂದು ಕೋಣೆ, ಅಮ್ಮನಿಗೆ ಇನ್ನೊಂದು ಕೋಣೆ. ಮಕ್ಕಳಿಗೆ ಒಬ್ಬೊಬರಿಗೆ ಒಂದೊಂದು ಕೋಣೆ. ಮಕ್ಕಳಿಗೆ ಹೋಮ್ ವರ್ಕ್ ಮಾಡಿಸಲು ಟ್ಯೂಶನ್ ಟೀಚರ್, ಅವರನ್ನು ಮಲಗಿಸಲು ಆಯಾಗಳು. ಇನ್ನೇನು ಬೇಕು. ಅಲ್ಲಿ ಕೊರತೆಯಿರುವುದು ಅಪ್ಪ-ಅಮ್ಮನ ಪ್ರೀತಿ ಮಾತ್ರ. ಎಲ್ಲವೂ ಯಾಂತ್ರಿಕ!

ಇಂತಹ ಸ್ಥಿತಿಯಲ್ಲಿ ಬೆಳೆದ ಹುಡುಗರು ಹಿಂದೊಮ್ಮೆ ಪರೀಕ್ಷೆಗೆ ಕುಳಿತಾಗ ತಾವು ಹೇಗೂ ಉತ್ತೀರ್ಣರಾಗುವುದಿಲ್ಲವೆಂದು ತಿಳಿದಾಗ ನೂರು ನೂರು ರೂಪಾಯಿಗಳ ನೋಟುಗಳನ್ನು ಉತ್ತರಪತ್ರಿಕೆಗೆ ಗುಂಡುಪಿನ್ನು ಚುಚ್ಚಿ ಸಿಕ್ಕಿಸಿ ಅದರ ಕೆಳಗೆ ಬರೆದ ವಚನ

’ದಯವೇ ಧರ್ಮದ ಮೂಲವಯ್ಯಾ ೪೦ ಮಾರ್ಕ್ಸು ಹಾಕಿ ಪಾಸುಮಾಡಿರಯ್ಯಾ’ !

ಇಂತಹ ಮಹಾಮೇಧಾವಿಗಳೇ ಮುಂದೆ ಬೆಳೆದು ರಾಜಕಾರಣಿಗಳಾಗುತ್ತಾರೆ! ನಮ್ಮನ್ನೆಲ್ಲಾ ಆಳುತ್ತಾರೆ. ಅವರಿಗೆ ಗೊತ್ತು ದುಡ್ಡು ಕೊಟ್ಟರೆ ಎಲ್ಲವೂ ಸಾಧ್ಯ. ದುಡ್ಡಿದ್ದರೆ ಏನನ್ನೂ ಖರೀದಿಸಬಹುದು ಎಂಬುದು ಅವರ ಅನುಭವ ಜನ್ಯ ಅನಿಸಿಕೆಯಾಗಿರುತ್ತದೆ. ಶಾಸಕ ಸ್ಥಾನಕ್ಕೆ ಟಿಕೀಟು ಖರೀದಿಯಾಗುತ್ತದೆ. ಆಮೇಲೆ ಚುನಾವಣೆಗೆ ಒಂದಷ್ಟು ಕೋಟಿ ಇನ್ವೆಷ್ಟಮೆಂಟ್ ಆಗುತ್ತದೆ! ಆಮೇಲೆ ಗೆದ್ದಮೇಲೆ ಮಂತ್ರಿಗಿರಿಗೆ ಮತ್ತಷ್ಟು ಕೋಟಿ ಖರ್ಚಾಗುತ್ತದೆ! ತದನಂತರ ಅವುಗಳನ್ನೆಲ್ಲಾ ಸರಿದೂಗಿಸಿ ಮುಂದಿನ ಚುನಾವಣೆಗೆ ಮತ್ತು ಐಷಾರಾಮೀ ಜೀವನಕ್ಕೆ ಬೇಕಾಗಿ ಮಿಗಿಸಲು ಲಾಬಿ ಶುರು ಹಚ್ಚಿಕೊಳ್ಳುತ್ತಾರೆ!

ಯಾವ ಮಗು ಎಳವೆಯಲ್ಲಿ ಏನನ್ನು ಬಯಸಬಾರದಿತ್ತೋ , ಯಾವ ಕಾಮಚೇಷ್ಟೆಗಳನ್ನು ಅನುಭವಿಸಬಾರದಿತ್ತೋ, ಏನನ್ನು ಕುಡಿಯಬಾರದಿತ್ತೋ ಅಷ್ಟನ್ನೂ ಮಾಡಿಮುಗಿಸಿರುತ್ತದೆ. ಮೂಲದಲ್ಲೇ ಮಹತ್ವಾಕಾಂಕ್ಷೆಯ ಆಸೆಗಳನ್ನು ಖರೀದಿಸುವ ಸಂಸ್ಕೃತಿಗೆ ಒಗ್ಗಿದ ಮಗುವಿಗೆ ಯಾವುದು ಬೇಕು ಯಾವುದು ಬೇಡ ಎಂಬುದರ ಪರಿವೆ ಹೇಗೆ ತಾನೇ ಬಂದೀತು? ಅಪ್ಪ - ಅಮ್ಮ ಪಾರ್ಟಿಗಳಲ್ಲಿ ಪೆಗ್ಗು ಹಾಕುವುದು ಕಂಡಾಗ ತಾನೇಕೆ ಮಾಡಬಾರದು ಎಂದು ಮಗುವಿನ ಮನಸ್ಸು ಅತ್ತಕಡೆ ಎಳೆಯುತ್ತದೆ. ಮಾಜಿ ಮುಖ್ಯಮಂತ್ರಿಯೊಬ್ಬರ ಮಗ ಕಾಲೇಜಿಗಿನ್ನೂ ಕಾಲಿಡದವ ಎಮ್.ಜಿ. ರಸ್ತೆಯ ರೆಸ್ಟಾರೆಂಟ್ ಒಂದರಲ್ಲಿ ಕಂಠಪೂರ್ತಿ ಕುಡಿದು ದಾಂಧಲೆ ಮಾಡಿದ್ದು ನಮಗೆ ಗೊತ್ತಿರುವ ಹಳೇ ಕಥೆ. ಕಾಲಗರ್ಭದಲ್ಲಿ ಇಂತಹ ಅದೆಷ್ಟು ಕಥೆಗಳಿವೆಯೋ !

ಮಹಾತ್ಮಾ ಗಾಂಧೀಜಿ ಚಿಕ್ಕವರಿರುವಾಗ ಬೀಡಿಯೊಂದನ್ನು ಸೇದಿದ್ದರಂತೆ. ಅದು ಸರಿಯಲ್ಲವೆಂದು ಯಾವಾಗ ತಿಳಿಯಿತೋ ಮರುಕ್ಷಣದಿಂದ ತನ್ನಲ್ಲೇ ಕೊರಗಿ ಮತ್ತೆ ತಾನು ಬೀಡಿಸೇದದಂತೇ ಮನಸ್ಸನ್ನು ಹಿಡಿತದಲ್ಲಿಟ್ಟರಂತೆ. ಮನೆಯಲ್ಲಿ ನಾವೇನು ಮಾಡುತ್ತೇವೆ, ಶಾಲೆಯಲ್ಲಿ ಶಿಕ್ಷಕರು ಏನುಮಾಡುತ್ತಾರೆ ಇವೆಲ್ಲಾ ಚಿಕ್ಕಮಕ್ಕಳ ಎಳೆಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತವೆ. ಈ ಎರಡು ಪ್ರದೇಶಗಳಲ್ಲಿ ಸಿಗುವ ವ್ಯಕ್ತಿಗಳೇ ಅಂದಿಗೆ ಮಕ್ಕಳ ರೋಲ್ ಮಾಡೆಲ್ ಆಗಿರುತ್ತಾರೆ! ನಮ್ಮಲ್ಲಿ ಯಾರೇ ಆಗಲಿ ಶ್ರೀಮಂತರಿದ್ದರೆ ಅವರಲ್ಲಿ ಒಂದು ಸವಿನಯ ವಿಜ್ಞಾಪನೆ ನನ್ನದು. ನಿಮ್ಮ ಮಕ್ಕಳನ್ನು ಯಾರದೋ ಉಸ್ತುವಾರಿಯಲ್ಲಿ ಬೆಳೆಸುವ ಬದಲು ನೀವೇ ಬೆಳೆಸಿ. ನಿಮ್ಮ ಅಂಹಕಾರ, ಶ್ರೀಮಂತಿಕೆಯನ್ನೆಲ್ಲಾ ಪಕ್ಕದಲ್ಲಿರಿಸಿ ವ್ಯವಹರಿಸಿ. ಮಹಾಲಕ್ಷ್ಮಿ ಚಂಚಲೆಯಂತೆ! ಅವಳು ನಿಂತಲ್ಲಿ ನಿಲ್ಲುವುದಿಲ್ಲವಂತೆ. ಒಂದೊಮ್ಮೆ ಯಾವುದೋ ತೊಂದರೆಯಿಂದ ಅವಾಂತರವಾಗಿ ಗಳಿಸಿದ ಶ್ರೀಮಂತಿಕೆ ನಶಿಸಿಹೋಗಿ ಬಡತನ ಬಂದುಬಿಟ್ಟರೆ ಆಗ ಹೇಗೆ ಬದುಕಬೇಕು ?

ನಾವೆಲ್ಲಾ ಎಳೆಯವರಿರುವಾಗ ನಮ್ಮ ತಾಯಿ, ತಂದೆ, ಅಜ್ಜ, ಅಜ್ಜಿ, ಚಿಕ್ಕಪ್ಪಂದಿರು ಎಲ್ಲರೂ ಇರುವ ಕೂಡು ಕುಟುಂಬ ನಮ್ಮದಾಗಿತ್ತು. ೨ ವರ್ಷದವರಿದ್ದಾಗಲೇ ದಿನಾಲೂ ಬಾಯಿಪಾಠ ಹೇಳಿಸುತ್ತಿದ್ದರಂತೆ ನಮ್ಮ ಅಜ್ಜಿ. ೬ ವರ್ಷವಾದಾಗ ನಮ್ಮ ನಮ್ಮ ಬಟ್ಟೆಯನ್ನು ನಾವ್ನಾವೇ ತೊಳೆದುಕೊಳ್ಳಬೇಕು, ಶುಭ್ರ ಬಟ್ಟೆಗಳನ್ನು ಧರಿಸಬೇಕು, ಹಲ್ಲುಗಳನ್ನು ಬೆಳಿಗ್ಗೆ ಎದ್ದಾಗ ಮತ್ತು ರಾತ್ರಿ ಮಲಗುವ ಮುನ್ನ ಹೀಗೇ ಎರೆಡಾವರ್ತಿ ಉಜ್ಜಿ ಸ್ವಚ್ಛಗೊಳಿಸಬೇಕು ಎಂದು ಹೇಳಿಕೊಟ್ಟವರು ತಾಯಿ, ಸಾಹಸದ ಗಾಥೆಗಳನ್ನು ಮನದಟ್ಟಾಗಿಸಿ ವ್ಯಕ್ತಿ ಯಾವಾಗಲೂ ಕಾರ್ಯತತ್ಪರನಾಗಿರಬೇಕೆಂದೂ ಸಾಮಾನ್ಯವಾಗಿ ಬೇಕಾಗುವ ಎಲ್ಲಾ ಕೆಲಸಗಳನ್ನೂ ಅರಿತಿರಬೇಕೆಂದೂ ಹೇಳಿ-ತಿಳಿಸಿ-ಕಲಿಸಿದವರು ಅಜ್ಜ, ಮಕ್ಕಳಿಗೆ ಬೇಕಾಗುವ ಪುಸ್ತಕ, ಪಟ್ಟಿ, ಪೆನ್ಸಿಲ್, ಬಿಸ್ಕಿಟ್ ಇವನ್ನೆಲ್ಲಾ ತಂದವರು ಚಿಕ್ಕಪ್ಪಂದಿರು, ಬದುಕಿಗೆ ಬೇಕಾಗುವ ಹಲವು ಕೆಲಸಗಳನ್ನು ಪ್ರಯೋಗಿಕವಾಗಿ ಪ್ರಾತ್ಯಕ್ಷಿಕೆ ಮಾಡಿತೋರಿಸಿದವರು, ಕಿವಿ ಹಿಡಿದು ಬುದ್ಧಿಹೇಳಿದವರು ತಂದೆ. ನಮ್ಮಂತಹ ಶುಂಠರನ್ನು, ಮೂಢರನ್ನು ತಿದ್ದಲು ಅವರು ರಾಮಾಯಣ ಮಹಾಭಾರತಗಳ ಕಥೆಗಳನ್ನು ಬಳಸಿದರು.

ಪ್ರತೀನಿತ್ಯ ದೈವಧ್ಯಾನ, ಪೂಜೆ-ಪುನಸ್ಕಾರ, ಅತಿಥಿಸತ್ಕಾರ, ಶಾಲೆ, ಪಾಠ-ಪ್ರವಚನ, ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳು, ಕೊಟ್ಟಿಗೆಯ ಕೆಲಸಗಳು-ಸಗಣಿ ಎತ್ತುವುದು, ಎಮ್ಮೆ-ದನಗಳನ್ನು ಮೀಯಿಸುವುದು, ಕೊಟ್ಟಿಗೆ ತೊಳೆಯುವುದು, ಗೊಬ್ಬರ ಬರಗುವುದು, ಹಾಲು ಹಿಂಡುವುದು, ಜಾನುವಾರುಗಳಿಗೆ ಮೇವು-ಅಕ್ಕಚ್ಚು [ಕಲಗಚ್ಚು]ಕೊಡುವುದು, ತೋಟದಲ್ಲಿ ಗಿಡ-ಮರಗಳಿಗೆ ನೀರು-ಗೊಬ್ಬರ ಪೂರೈಕೆ ಇವೇ ಮೊದಲಾದ ಹತ್ತಾರು ಕಾರ್ಯಗಳಲ್ಲಿ ನಾವು ತೊಡಕಿಕೊಳ್ಳುತ್ತ ಓದುವಂತೇ ಪ್ರೇರೇಪಿಸಿದ್ದರಿಂದ ಇಂದು ಮಾನವರಾಗಿದ್ದೇವೆ ಅಂದುಕೊಂಡಿದ್ದೇನೆ! ನಮ್ಮ ಹಿರಿಯರು ಪ್ರತಿನಿತ್ಯ ಹೇಳುತ್ತಿದ್ದುದು :

|| ಅನಾಯಾಸೇನ ಮರಣಂ ವಿನಾದೈನ್ಯೇನ ಜೀವನಂ ||

ಅಂದಿಗೆ ನಮಗೆ ವೇದಮಂತ್ರಗಳ, ಶ್ಲೋಕಗಳ, ಸ್ತುತಿ-ಕವಚಗಳ ಅರ್ಥವಾಗುತ್ತಿರಲಿಲ್ಲ. ಇಂದು ನಮಗೆ ಇದನ್ನೆಲ್ಲಾ ಹೇಳಿಕೊಟ್ಟರಲ್ಲಾ ಪುಣ್ಯಾತ್ಮರು ಎಂದು ಮನಸ್ಸು ಕೃತಜ್ಞವಾಗುತ್ತದೆ. ಜೀವನದಲ್ಲಿ ಯಾರಲ್ಲಿಯೂ ಬೇಡಬಾರದಂತಹ ಸ್ಥಿತಿಯಲ್ಲಿ ನಾವು ಜೀವಿಸಿ ನಂತರ ನಿರಾಯಾಸವಾಗಿ ಮರಣವಾದರೆ ಅದೇ ಸುಖವೆಂದು ಈ ಮೇಲಿನ ಶ್ಲೋಕ ಹೇಳುತ್ತದೆಯಷ್ಟೇ ? " ಮಕ್ಕಳೇ ಯಾರನ್ನೂ ದ್ವೇಷಿಸಬೇಡಿ. ಎಲ್ಲರಲ್ಲಿಯೂ ಪ್ರೀತಿಯಿರಲಿ. ಜಗತ್ತಿನ ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮನಿದ್ದಾನೆ. ಆದಷ್ಟೂ ಬಡವರಿಗೆ, ಆರ್ತರಿಗೆ, ಮುಪ್ಪಿನ ವಯಸ್ಸಿನವರಿಗೆ, ಅಂಗವಿಕಲರಿಗೆ ಸಹಾಯಮಾಡಿ. ಯಾರಿಗೂ ನಮ್ಮಿಂದ ಅನ್ಯಾಯ-ಅಪಚಾರವಾಗದಂತೇ ನೋಡಿಕೊಳ್ಳಿ. ಒಂದೊಮ್ಮೆ ಯಾರಾದರೂ ನಮ್ಮಿಂದ ನೊಂದುಕೊಂಡರೆ ಅಂಥವರಲ್ಲಿ ಕ್ಷಮೆಯಾಚಿಸಿ. ಸಾಧು-ಸಂತರ ಸೇವೆಮಾಡಿ. ಗೋವುಗಳನ್ನು ಚೆನ್ನಾಗಿ ಆರೈಕೆಮಾಡಿ, ನಮ್ಮ ಸುತ್ತಲಿರುವ ಪ್ರತಿಯೊಂದೂ ವಸ್ತುವಿನಲ್ಲೂ ಪರಮಾತ್ಮ ಸಾನ್ನಿಧ್ಯ ಇದೆಯೆಂದು ಭಾವಿಸಿ ನಡೆದುಕೊಳ್ಳಿ." --ಹೀಗೇ ಹಲವು ಅಂಶಗಳನ್ನು ಆಗಾಗ ಹೇಳುತ್ತಿದ್ದರಲ್ಲದೇ ಅದರಂತೇ ನಡೆದುಕೊಂಡರು; ನಮಗದು ಆದರ್ಶ.

" ದರಿದ್ರ ಏಳಗೊಡ ಭಾಗ್ಯ ಕೂರಗೊಡ. ಜಾಸ್ತಿ ಮಲಗಿದರೆ ದರಿದ್ರರಾಗ್ತೇವೆ ಕೆಲಸಮಾಡಿ ಭಾಗ್ಯ ಹುಡುಕಿಕೊಂಡು ಬರುತ್ತದೆ " ಎನ್ನುತ್ತಿದ್ದ ಅಜ್ಜಿ ನಮ್ಮೆಲ್ಲರನ್ನೂ ಹೊತ್ತಾರೆ ಎಬ್ಬಿಸಿ ದೇವರಿಗೆ ಹೂ ಕೊಯ್ಯಲು ಕಳುಹಿಸುತ್ತಿದ್ದುದು ನೆನಪಿಗೆ ಬರುತ್ತಿದೆ. ಕೆಲವೊಮ್ಮೆ ಚಳಿಗಾಲದಲ್ಲಿ ಇಂಪಾಗಿ ಹಾಡುವ ಹಕ್ಕಿಗಳ ಕಲರವದ ನಡುವೆ ಅಜ್ಜಿ ಹಾಡುತ್ತಿದ್ದ ಹಾಡು :

ಏಳು ಮುದ್ದಿನ ಗಿಣಿಯೆ ಏಳು ಸದ್ಗುಣಮಣಿಯೆ
ಏಳಯ್ಯ ಕಂದಯ್ಯ ಬೆಳಗಾಯಿತು

ಕ್ರೂರಮೃಗಗಳು ತಾವು ಗವಿಯ ಸೇರುತಲಿಹವು
ಪಾರಿಜಾತದ ಪುಷ್ಪ ಅರಳುತಿಹುದು .....

ಹಾಡು ಸುಮಾರು ಉದ್ದವಿದೆ, ಒಳ್ಳೆಯ ಸಾಹಿತ್ಯವಿದೆ. ಬರೆದ ಅಜ್ಞಾತ ಕವಿಯ ಬಗ್ಗೆ ಗೊತ್ತಿಲ್ಲ. ಈ ಹಾಡಿನ ಅರ್ಥವನ್ನು ಅಜ್ಜಿಯೇ ವಿವರಿಸುತ್ತಿದ್ದರು. ಇಂದಿಗೆ ಅಜ್ಜಿ ಕೇವಲ ನೆನಪುಮಾತ್ರ. ಅವರು ನಮ್ಮೆಲ್ಲಾ ಮಕ್ಕಳ ಹೃದಯದಲ್ಲಿ ನೆಲೆನಿಂತರು! ಇವತ್ತಿನ ದಿನದಲ್ಲಿ ಅವಿಭಕ್ತ ಕುಟುಂಬಗಳು ಎಲ್ಲೋ ಸಾವಿರಕ್ಕೆ ಒಂದು ಕಾಣಸಿಕ್ಕರೆ ನಮ್ಮ ಪುಣ್ಯ. ಇದ್ದರೂ ಮೊದಲಿನ ನಿಸ್ಪೃಹ ಜೀವನದ ವೈಖರಿ ಇವತ್ತಿನ ಜನರಲ್ಲಿಲ್ಲ. ಅಂದು ಹಿರಿಯರಿದ್ದರು ಸನ್ಮಾರ್ಗ ಬೋಧಿಸುತ್ತಿದ್ದರು; ಇಂದು ಹಿರಿಯರು ಜೊತೆಗಿರುವುದಿಲ್ಲ ಸನ್ಮಾರ್ಗ ಯಾವುದು ದುರ್ಮಾರ್ಗ ಯಾವುದು ತಿಳಿಯುವುದೇ ಇಲ್ಲ. ವಿದ್ಯೆ ಕಲಿಸುವ ಶಿಕ್ಷಣ ಕೇಂದ್ರಗಳು ಬದುಕುವ ನಿಜವಾದ ಕಲೆಯನ್ನು ಕಲಿಸುವ ಬದಲು ಬೇರೇನನ್ನೋ ಹೇಳುತ್ತವೆ. ಇಲೆಕ್ಟ್ರಿಕಲ್ ಎಂಜಿನೀಯರಿಂಗ್ ಓದಿಕೊಂಡಾತ ಕೆಟ್ಟುನಿಂತ ತನ್ನ ಮೋಟಾರ್ ರಿಪೇರಿಗೆ ಯಾವುದೋ ಇನ್ನೊಬ್ಬ ವ್ಯಕ್ತಿಯನ್ನು ಅವಲಂಬಿಸುತ್ತಾನೆ, ಸಿವಿಲ್ ಓದಿದವನಿಗೆ ಮನೆ ಕಟ್ಟಿಸಲು ಮತ್ತೊಬ್ಬ ಕಂತ್ರಾಟುದಾರ ಹೇಳಿಕೊಡಬೇಕಾಗುತ್ತದೆ, ಪ್ರಶಿಕ್ಷಣ ಓದಿದ ಪಂಡಿತನಿಗೆ ಪಾಠಮಾಡುವ ಪ್ರಾತ್ಯಕ್ಷಿಕೆಗೆ ಮತ್ತೆ ತರಬೇತಿ ಬೇಕು! --ಇವೆಲ್ಲಾ ಪಠ್ಯಕ್ರಮದ ನ್ಯೂನತೆಗಳು.

ಹೃದಯ ತಜ್ಞ ಡಾ| ಬಿ.ಎಮ್. ಹೆಗ್ಡೆಯವರು ಹೇಳುತ್ತಾರೆ-- ಅಲೋಪಥಿಯಲ್ಲಿ ಕೆಲವು ಮಾಪನಗಳನ್ನು ವಿದೇಶೀ ಹವಾಮಾನಕ್ಕನುಗುಣವಾಗಿ ಹೇಳುತ್ತಿದ್ದರಂತೆ. ಭಾರತದ ಹವಾಮಾನಕ್ಕೂ ಅಲ್ಲಿಗೂ ವ್ಯತ್ಯಾಸವಿರುವುದಿಲ್ಲವೇ ? ಇಲ್ಲಿ ಹೊಸದಾಗಿ ಕಲಿಯುವ ವೈದ್ಯರು ಆ ಪಠ್ಯಗಳನ್ನು ಅಭ್ಯಸಿಸಿ ಮಾಪನ ಉಪಯೋಗಿಸುವಾಗ ರೋಗಿಯ ತಪಾಸಣೆಯಾಧಾರಿತ ಅಂಕಿ ಅಂಶಗಳನ್ನು ಸರಿಯಾಗಿ ನಮೂದಿಸದೇ ಅಲ್ಲಿನ ಅಳತೆಗಳನ್ನೇ ಅವಲಂಬಿಸಿ ಬರೆಯುತ್ತಿದ್ದರಂತೆ. ಇದು ಅಷ್ಟಾಗಿ ಯಾವ ವೈದ್ಯರ ಲಕ್ಷ್ಯಕ್ಕೂ ಬರುತ್ತಿರಲಿಲ್ಲವಂತೆ. ಹೆಗ್ಡೆಯವರು ಅದನ್ನು ಪರಿಶೀಲಿಸಿ ಆ ನ್ಯೂನತೆಯನ್ನು ಹೊರಹಾಕಿದ್ದಾರೆ. --ಇದು ನಮ್ಮ ಪಠ್ಯಕ್ರಮಕ್ಕೂ ಮತ್ತು ಪ್ರಾಕ್ಟಿಕಲ್ ಗೂ ಇರುವ ವ್ಯತ್ಯಾಸ.

ಬಡತನ ನಮ್ಮಲ್ಲಿ ಇದ್ದೇ ಇದೆ. ಗದ್ದೆಯಲ್ಲಿ ಕೆಸರಿರುವಂತೇ, ಹುದ್ದೆಗೊಂದು ಜವಾಬ್ದಾರಿಯಿರುವಂತೇ ಇದು ಸದ್ಯಕ್ಕಂತೂ ಅನಿವಾರ್ಯ ಸಹಜ. ಇದನ್ನು ಒಪ್ಪಿಕೊಳ್ಳೋಣ. ಆದರೆ ಕೆಸರಿನಲ್ಲಿಯೇ ಕಮಲವೂ ಅರಳುವಂತೆ, ಆ ಅರಳಿದ ಕಮಲ ಕೆಸರನಲ್ಲಿಯೇ ಇದ್ದರೂ ಅದನ್ನು ಅಂಟಿಸಿಕೊಳ್ಳದಂತೇ ಇರುವಂತೇ ಬಡತನವಿದೆಯೆಂಬ ಭಾವವನ್ನು ತೊರೆದು ನಾವೆಲ್ಲಾ ಶ್ರೀಮಂತರೇ ಎಂಬ ಭಾವದಿಂದ ಬದುಕಬಲ್ಲೆವಷ್ಟೇ ? ನಮಗೆ ಢಾಂಬಿಕತೆ ಬೇಡ, ಇದ್ದುದನ್ನೇ ನಮ್ಮ ಶ್ರೀಮಂತಿಕೆಯೆಂದು ತಿಳಿಯಲು ಅಡ್ಡಿಯಿಲ್ಲವಲ್ಲ? ನಿಜವಾಗಿಯೂ ಹೇಳಲೇ ನಾವ್ಯಾರೂ ಬಡವರಲ್ಲ. ನಮ್ಮನ್ನು ಬಡವರನ್ನಾಗಿಸಿದವರು ಖರೀದಿಸುವ ಮನೋಭಾವದ ರಾಜಕಾರಣಿಗಳು. ಅವರು ಖೊಳ್ಳೆ ಹೊಡೆದು ಸ್ವಿಸ್ ಬ್ಯಾಂಕಿನಲ್ಲಿಟ್ಟ ಹಣ ದೇಶಕ್ಕೆ ಮರಳಿ ಬಂದಿದ್ದರೆ-ಅದನ್ನು ಬಡವರು ಪಡೆದಿದ್ದರೆ ದೇಶದಲ್ಲಿ ಬಡತನವೆಂಬುದು ಇರುತ್ತಿರಲಿಲ್ಲ. ಆಗಲಿ, ಆಗುವುದೆಲ್ಲಾ ಒಳ್ಳೆಯದಕ್ಕೇ! ಕಾಲ ಮತ್ತೆ ಬದಲಾಗುತ್ತಿರುತ್ತದೆ. ಆದರೊಂದು ಮಾತು ಮಕ್ಕಳಿಗೆ ಒಳ್ಳೆಯತನ ಮೈಗೂಡಿಸಿಕೊಳ್ಳಲು ಅನುವುಮಾಡಿಕೊಡಿ. ಸನ್ಮಾರ್ಗವನ್ನು ಕಥೆಯಲ್ಲಲ್ಲ ಕೃತಿಯಿಂದ ಬೋಧಿಸಿ ! ಮಕ್ಕಳು ಬಸವಣ್ಣನವರ ಆ ವಚನವನ್ನು ಬದಲಿಸದೇ ಮೂಲ ವಚನವನ್ನು ಹಾಗೇ ಬಳಸುವಂತೇ ಆಗಲಿ. ಮಕ್ಕಳು ಎಲ್ಲೇ ಇರಲಿ, ಅವರು ಮುಗ್ಧರೇ, ಅವರನ್ನು ತಿದ್ದುವುದು-ತೀಡುವುದು ನಮ್ಮ ಕರ್ತವ್ಯ. ಈ ದಿಸೆಯಲ್ಲಿ ತಿದ್ದುವ ನೆಪದಲ್ಲಿ ಮಕ್ಕಳನ್ನು ಗೋಳುಹುಯ್ದುಕೊಳ್ಳುವ ಕೆಲಸ ಮಾಡಬೇಡಿ. ತಿದ್ದುವ ಕ್ರಮ ನಮ್ಮ ಕಾರ್ಯರೂಪದಿಂದ ತೋರ್ಪಡುವ ಸಂಸ್ಕಾರದಿಂದ ಅವರಿಗೆ ತಂತಾನೇ ಬರಲಿ. ಮಕ್ಕಳಲ್ಲಿ ದಯೆಯಿರಲಿ, ಅನುಕಂಪವಿರಲಿ, ಪ್ರೀತಿಯಿರಲಿ, ಸಹಾನುಭೂತಿಯಿರಲಿ. ಮಂಗಳವನ್ನೂ ಶುಭವನ್ನೂ ಕೋರುವ ಹಾಡಿನ ಪಲ್ಲವಿಯೊಂದಿಗೆ ಈ ಲೇಖನಕ್ಕೆ ಮಂಗಳ ಕೋರೋಣ:

ಮಂಗಳದಾ ಈ ಸುದಿನ ಮಧುರವಾಗಲೀ ....
ನಿಮ್ಮೊಲವೇ ಈ ಮನೆಯ ನಂದಾದೀಪವಾಗಲಿ ......