ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, December 4, 2010

"ಡಾಕ್ಟರೇ, ಕೇಸರೀಬಾತು ತಿನ್ನಬೇಕು " !


"ಡಾಕ್ಟರೇ, ಕೇಸರೀಬಾತು ತಿನ್ನಬೇಕು " !

ಹಳ್ಳಿಗಳಲ್ಲಿ ವೈದ್ಯಕೀಯ ವ್ಯವಹಾರವಾಗಿಲ್ಲ. ಅಲ್ಲಿ ಗ್ರಾಮೀಣ ಭಾಗದ ಜನರಿಗೆ ಕೆಲವು ವೈದ್ಯರುಗಳು ಸ್ನೇಹಿತರಂತೇ ಇರುತ್ತಾರೆ. ನನಗೆ ತಿಳಿದ ಒಂದೆರಡು ವೈದ್ಯರುಗಳ ಬಗ್ಗೆ ಹೇಳುತ್ತೇನೆ. ಒಮ್ಮೊಮ್ಮೆ ಅನಿಸುವುದು ಅವರನ್ನು ಸ್ಮರಿಸದೇ ಇದ್ದರೆ ಅವರಿಗೆ ಕೃತಘ್ನನಾದಂತೇ ಎಂದು. ಯಾಕೇ ಎಂತು ಎಂಬುದನ್ನು ಓದುತ್ತಾ ತಿಳಿಯುತ್ತೀರಿ.

ಸುಮಾರು ೨೫-೩೦ ವರ್ಷಗಳ ಹಿಂದೆ ನಮ್ಮ ಹಳಿಗಳಲ್ಲಿ ಇಂಗ್ಲೀಷ್ ಮೆಡಿಸಿನ್ ಓದಿದ ಅಷ್ಟೊಂದು ವೈದ್ಯರು ಇರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಆರ್.ಎಂ.ಪಿ. [ರಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಶನರ್] ಎಂಬ ಚಿಕ್ಕ ತರಬೇತಿಯನ್ನು ಮುಗಿಸಿಕೊಂಡ ವೈದ್ಯರೇ ನಮಗೆ ದೊಡ್ಡ ಡಾಕ್ಟರು. ಆಗತಾನೇ ಆಂಗ್ಲ ಔಷಧ ಪದ್ದತಿ ಜಾರಿಗೆ ಬರುತ್ತಿತ್ತು. ಅದು ಬಿಟ್ಟರೆ ನಮ್ಮ ಆಯುರ್ವೇದದ ತಜ್ಞರೇ ಜಾಸ್ತಿ. ಆಯುರ್ವೇದ ಪದ್ದತಿ ಜಗತ್ತಿನಲ್ಲಿಯೇ ಅತಿ ಶ್ರೇಷ್ಠ ಪದ್ದತಿ. ಅದರಲ್ಲಿ ಔಷಧ ಸೇವನೆಯಿಂದ ಅಡ್ಡ ಪರಿಣಾಮಗಳು ಇರುವುದಿಲ್ಲ. ಆದರೆ ಅದೊಂದು ವ್ಯವಸ್ಥಿತವಾದ ಪದವಿ ಇಲ್ಲದ ಪದ್ದತಿಯಾಗಿತ್ತಾಗಿ ಅಲ್ಲಲ್ಲಿ ಔಷಧ ಮೂಲಿಕೆಗಳ ಬಗ್ಗೆ ತಿಳಿದಿರದ ಅಳಲೇಕಾಯಿ ಪಂಡಿತರೂ ಬಹಳ ಇದ್ದರು! ಅವರ ದೆಸೆಯಿಂದ ಆಯುರ್ವೇದಕ್ಕೇ ಪರಿಣಾಮಕಾರಿಯಲ್ಲ ಎಂಬ ಕೆಟ್ಟ ಹೆಸರು ಬಂತು. ನಿಜವಾಗಿ ಇವತ್ತಿಗೂ ಗುಣಪಡಿಸಲಾಗದ ನರರೋಗಗಳನ್ನು ಹಾಗೂ ಚರ್ಮವ್ಯಾಧಿಗಳನ್ನು ಆಯುರ್ವೇದವೇ ಪರಿಹರಿಸಬಲ್ಲದು. ಇದೂ ಅಲ್ಲದೇ ಆಯುರ್ವೇದದ ತಜ್ಞರಾಗಿದ್ದ ಚರಕ ಹಾಗೂ ಸುಶ್ರುತರು ಆ ಕಾಲದಲ್ಲೇ ಶಸ್ತ್ರಚಿಕಿತ್ಸೆಮಾಡಿ ಯಶಸ್ಸುಪಡೆದ ದಾಖಲೆಗಳು ಸಿಗುತ್ತವೆ! ಇರಲಿ ನಾವೀಗ ಇಬ್ಬರು ವೈದ್ಯರನ್ನು ತಿಳಿಯೋಣ.

ಡಾ| ಭಟ್ಟರು

ವಂಶದ ಹೆಸರು [ಸರ್ ನೇಮ್] ನನ್ನಂತೇ ಭಟ್ಟ ಎಂದಾದ್ದರಿಂದ ಎಲ್ಲರೂ ಅವರನ್ನು ಡಾ|ಭಟ್ಟರು ಎಂದೇ ಕರೆಯುತ್ತಿದ್ದರು. ದೂರ್ವಾಸರ ಅಪರಾವತಾರದಂತಿದ್ದರು. ಹೊಟ್ಟೆಯಲ್ಲಿ ಹುಳುಕಿರಲಿಲ್ಲ. ಎದುರಿಗೆ ಬಂದ ರೋಗಿಗೆ ಚೆನ್ನಾಗಿ ಬೈದರೆ ರೋಗ ಗುಣವಾ[ವಾಸಿಯಾ]ದ ಹಾಗೇ ! ಇದೇ ಅವರ ಮಹಿಮೆ. ಯಾವೊಬ್ಬ ರೋಗಿಯನ್ನೂ ಬೈಯ್ಯದೇ ಮನೆಗೆ ಕಳಿಸಿದ್ದಿಲ್ಲ. ಓದಿದ್ದು ಆರ್.ಎಂ.ಪಿ. ಆದರೆ ದಿನವೂ ಹತ್ತಾರು ರೋಗಿಗಳನ್ನು ನೋಡೀ ನೋಡೀ ಹಲವು ಪ್ರಾಥಮಿಕ ಚಿಕಿತ್ಸೆಗಳನ್ನು ಮಾಡುತ್ತಿದ್ದರು. ಕೆಲವೊಮ್ಮೆ ರೋಗಿಗೆ ಒಂದು ಬಾರಿಸುವುದೂ ಇತ್ತು. ಆದರೂ ಜನ ಅವರನ್ನೇ ಬಯಸುತ್ತಿದ್ದರು. ಅವರ ಶಖೆ ಹೇಗಿತ್ತಪ್ಪಾ ಅಂದರೆ ಒಂದೊಮ್ಮೆ ಡಾ| ಭಟ್ಟರು ಬೈಯ್ಯಲಿಲ್ಲಾ ಎಂದರೆ ರೋಗಿಗೆ ಕಡಿಮೆಯಾಗುವುದೋ ಇಲ್ಲವೋ ಎಂಬಷ್ಟು ಅಧೈರ್ಯ!

" ಇವತ್ಯಾಕೋ ಡಾಕ್ಟರು ಸರಿಯಾಗಿ ಮಾತಾಡ್ಲೇ ಇಲ್ಲ " ಎಂದುಕೊಳ್ಳುತ್ತಿದ್ದರು. ಡಾ| ಬೈದರೆ ಅವರು ಪ್ರೀತಿತೋರಿಸಿದಹಾಗೇ. ಯಾರದರೂ ಹೊತ್ತು ಮೀರಿ ಬಂದರೆ

" ಏನೋ ಈಗ್ ಬಂದೆ ? ರಾತ್ರಿ ಹನ್ನೆರ್ಡಕ್ಕೆ ಬರ್ಬೇಕಾಗಿತಲ್ಲ ನೀನು ? ಡಾಕ್ಟರಿಗೂ ಮನೆ-ಮಠ ಅದೆ ಅಂತ ಗೊತ್ತಿಲ್ವಾ ? ಬಂದ್ಬುಟ ನೆಟ್ಗೆ "

ಇಷ್ಟು ಹೇಳುತ್ತಲೇ ಚಿಕಿತ್ಸೆ ಆರಂಭಿಸುತ್ತಿದ್ದ
ರೇ ಹೊರತು ರೋಗಿಯನ್ನು ವಾಪಸ್ ಕಳಿಸುತ್ತಿರಲಿಲ್ಲ. ಪ್ರತಿಯೊಬ್ಬ ರೋಗಿಗೂ ಎಷ್ಟೇ ಹೊತ್ತಾದರೂ ಔಷಧ ಕೊಟ್ಟೇ ಕಳಿಸುತ್ತಿದ್ದರು. ಕೆಲವೊಂದು ರೋಗಿಗಳಿಗೆ ಡಾಕ್ಟರನ್ನು ನೋಡಿದ ಕೂಡಲೇ ಅರ್ಧವಾಸಿಯಾಗಿಬಿಡುತ್ತಿತ್ತು. ಡಾಕ್ಟರು ಚೆನ್ನಾಗಿ ಬೈದರೆ ಕೆಲವೊಮ್ಮೆ ಮುಕ್ಕಾಲು ರೋಗವೇ ವಾಸಿ! ನಿಮಗೊಂದು ಗುಟ್ಟು ಹೇಳುತ್ತೇನೆ ಕೇಳಿ ---ರೋಗದ ಮೂಲವೇ ಮನಸ್ಸು. ಈ ವಿಷಯ ಸಾಕಷ್ಟು ಸಲ ನಿಷ್ಕರ್ಷೆ ಮಾಡಿದ್ದೇನೆ. ರೋಗಗ್ರಸ್ತ ಮನಸ್ಸೇ ಶರೀರಕ್ಕೂ ರೋಗವನ್ನು ಬರಿಸುತ್ತದೆ; ಆದರೆ ನಮಗದರ ಅರಿವಿರುವುದಿಲ್ಲ. ಬಹುತೇಕ ಕಾಯಿಲೆಗಳು ವಾಸಿಯಾಗದಿರುವುದಕ್ಕೆ ಮನಸ್ಸಿನೊಳಗಿರುವ ಕಲ್ಮಶವೇ ಕಾರಣವಾಗಿರುತ್ತದೆ. ಮನಸ್ಸು ತಿಳಿಯಿದ್ದಷ್ಟೂ, ಶುಚಿಯಾಗಿದ್ದಷ್ಟೂ ರೋಗ ಕಮ್ಮಿ ಇರುತ್ತದೆ. ಯೋಗಮಾಡುವವರಿಗೆ ರೋಗ ಕಮ್ಮಿ ಯಾಕೆಂದರೆ ಅವರ ಮನಸ್ಸು ಯೋಗದಿಂದ ಸ್ವಲ್ಪ ಮಟ್ಟಿಗೆ ಅವರ ಹಿಡಿತಕ್ಕೆ ಬಂದಿರುತ್ತದೆ. ಅದೇ ಯೋಗಮಾಡದ ನಾವು ಮನಸ್ಸಿನ ಕೈಯ್ಯಲ್ಲಿ ಸಿಕ್ಕಿಹಾಕಿಕೊಂಡಿರುತ್ತೇವೆ. ಮನಸ್ಸಿನ ಕೈಯ್ಯಲ್ಲಿ ನಮ್ಮನ್ನು ನಾವು ಕೊಡುವುದೆಂದರೆ ಮಂಗನ ಕೈಲಿ ಮಾಣಿಕ್ಯ ಕೊಟ್ಟಂತೇ !

ನಿಮಗೆ ಆರೋಗ್ಯ ಬೇಕೋ ಆದಷ್ಟು ಯೋಗ ಕಲಿತು ಅನುಸರಿಸಿ, ದಿನವೂ ಕನಿಷ್ಠ ಅರ್ಧಗಂಟೆ ಕಾಲ ನಿಮ್ಮ ನಿಮ್ಮ ಇಷ್ಟದ ದೇವರನ್ನು [ ಕೃಷ್ಣನೋ ಕ್ರಿಸ್ತನೋ ಅಲ್ಲಾಹುವೋ ಮಹಾವೀರನೋ ಬುದ್ಧನೋ ಯಾರೇ ಇರಲಿ ] ಕುರಿತು ಧ್ಯಾನಮಾಡಿ. ಪ್ರಾರಂಭದಲ್ಲಿ ದೇವರೆಂಬ ಆ ಅದ್ಬುತ ಶಕ್ತಿ ಕೇವಲ ನಮ್ಮ ನಮ್ಮ ಧರ್ಮದ ಚೌಕಟ್ಟಿನಲ್ಲಿ ಕಾಣುತ್ತಾನೆ. ದೃಷ್ಟಿಕೋನ ವಿಶಾಲವಾದಾಗ ದೇವರೆಂಬ ಶಕ್ತಿಗೆ ಧರ್ಮದ ಹಂಗಿರುವುದಿಲ್ಲ. ಆಗ ಎಲ್ಲಾ ದೇವರುಗಳೂ ಒಂದೊಂದು ಮುಖ ಎಂಬುದು ಗೊತ್ತಾಗತೊಡಗುತ್ತದೆ. ಮೇಲೇರುತ್ತಾ ದೇವರು ನಿರಾಕಾರ ಎಂಬ ಅಂಶ ನಿಮ್ಮನುಭವಕ್ಕೆ ನಿಲುಕಲು ಸಾಧ್ಯವಾಗುತ್ತದೆ. ಇದೆಲ್ಲಾ ದುಡ್ಡುಕೊಟ್ಟು ಖರೀದಿ ಮಾಡಲು ಬರುವುದಿಲ್ಲ ಸ್ವಾಮೀ ...ಬದಲಾಗಿ ಸ್ವಪ್ರಯತ್ನ ಬೇಕು. ನಂಬಿಕೆಬೇಕು. ಛಲಬೇಕು. ತಾದಾತ್ಮ್ಯತೆ ಬೇಕು. ಹೀಗೊಮ್ಮೆ ನೀವು ಮನಸ್ಸನ್ನು ತಕ್ಕಮಟ್ಟಿಗೆ ತಹಬಂದಿಗೆ ತಂದಿರೋ ಆಗ ಅರ್ಧರಾಜ್ಯವನ್ನು ಗೆದ್ದಂತೇ ! ಅರ್ಥಾತ್ ಕಾಯಿಲೆಗಳು ನಿಮ್ಮ ಶರೀರಕ್ಕೆ ಅತಿಥಿಗಳಾಗಿ ಬರುವುದು ಕಮ್ಮಿಯಾಗುತ್ತದೆ ಅಥವಾ ಬರುವುದೇ ಇಲ್ಲ ! ಇದನ್ನು ಕರಾರುವಾಕ್ಕಾಗಿ ಹೇಳುತ್ತಿದ್ದೇನೆ.

ನಾವೀಗ ಡಾಕ್ಟರ್ ಕಥೆಗೆ ವಾಪಸ್ ಬರೋಣ. ಅಂದಹಾಗೇ ಡಾ| ಭಟ್ಟರಿಗೆ ಅಸಾಧ್ಯ ಗುಣಸ್ವಭಾವಗಳ ರೋಗಿಗಳು ಬರುತ್ತಿದ್ದರು. ಅವರ ದವಾಖಾನೆಯಲ್ಲಿ ಒಂದು ಗಂಟೆ ಕೂತರೆ ಸಿನಿಮಾ ನೋಡಿದ್ದಕ್ಕಿಂತ ಮಜಾ ಸಿಗುತ್ತಿತ್ತು! ಒಮ್ಮೆ ಒಬ್ಬಾತ ಬಂದ

" ಡಾಕ್ಟ್ರೇ ನಂಗೆ ಹೊಟ್ಟೆನೋವು ಆದ್ರೆ ಇವತ್ತು ಅಗ್ದಿ ಬೇಕಾದವ್ರ ಮನೇಲಿ ಕಾರ್ಯಕ್ರಮ ಇದೆ....ಮಧ್ಯಾಹ್ನ ಕೇಸರೀಬಾತ್ ತಿನ್ಲೇಬೇಕು...ಏನಾದ್ರೂ ಮಾಡಿ....ಇಂದಿಕ್ಸನ್ ಹಾಕ್ದ್ರೂ ಅಡ್ಡಿಲ್ಲ "

ಮಾತಿಲ್ಲ ಮೌನ, ದೂರ್ವಾಸರು ಗಾಡಿ ಗೇರ್ ಬದಲಾಯಿಸುತ್ತಿದ್ದರು! ಒಂದು ಕೊಟ್ಟರು ನೋಡಿ ! ರೋಗಿ ತಬ್ಬಿಬ್ಬು.

" ಹೊಟ್ಟೆ ನೋವಿಗೆ ಚಿಕಿತ್ಸೆ ಮಾಡು ಅಂತೇಳಿ ಬಂದವಂಗೆ ಕೇಸರೀಬಾತ್ ತಿನ್ನು ಚಟವಾ ಯಾವ ಮನೆಹಾಳ ಡಾಕ್ಟ್ರು ನಿಮ್ಗೆಲ್ಲಾ ಔಷಧೀ ಕೊಡುದು...ಅದೇನ್ನಿಂದು ಹೊಟ್ಟೆಯೋ ಅಲ್ಲಾ ಕೊಟ್ಟೆಯೋ ? "

ರೋಗಿಗೆ ಕೇಸರೀಬಾತ್ ಜನ್ಮದಲ್ಲೂ ಬೇಡ! ಪಾಪ ಬೆವರು ನೀರು ಇಳಿಸಿಬಿಟ್ರು. ಇದೇ ಡಾಕ್ಟ್ರು ಧೈರ್ಯಮಾಡಿ ಕೆಲವೊಮ್ಮೆ ಹೊಸಾ ಇಂಗ್ಲೀಷ್ ಮೆಡಿಸಿನ್ ’ಟೆಟ್ರಾಸೈಕ್ಲಿನ್’ ಈ ಥರದ್ದನ್ನೆಲ್ಲಾ ಬಳಸುತ್ತಿದ್ದರು. ಬಹಳಸರ್ತಿ ಅದರ ಹೆಸರು ಹೇಳುತ್ತಲೇ ಇರುತ್ತಿದ್ದರು ಹೀಗಾಗಿ ನಮಗೆಲ್ಲಾ ಅದರ ಪರಿಣಾಮದ ಅರಿವಿರದಿದ್ದರೂ ಹೆಸರುಮಾತ್ರ ಅಚ್ಚಳಿಯದೇ ಉಳಿದಿದೆ. ನಮ್ಮೂರಲ್ಲಿ ನಾವು ಅತೀ ಚಿಕ್ಕವರಿದ್ದಾಗ ಟೈಫಾಯ್ಡ್ ಜ್ವರದ ಬಾಧೆ ಕಾಣಿಸಿತು. ಹಲವರು ಅನುಭವಿಸದೇ ಇದ್ದರೂ ಕೆಲವರಿಗೆ ತಾಗೇಬಿಟ್ಟಿತ್ತು. ಇಬ್ಬರಿಗಂತೂ ಜೀವ ಉಳಿಯುವುದೇ ಕಷ್ಟವಾಗಿತ್ತು. ಆಗ ಧೈರ್ಯಮಾಡಿ ಚಿಕಿತ್ಸೆ ನೀಡಿದವರು ಇದೇ ವೈದ್ಯರು. ಇವರು ಏನೇನೋ ಮಾಡಿ ಅಂತೂ ರೋಗಿಗಳನ್ನು ಬದುಕಿಸಿಟ್ಟರು. ಜ್ವರದಲ್ಲಿ ಬಳಲಿದ ಇಬ್ಬರಲ್ಲಿ ಒಬ್ಬರ ಎರಡೂ ಕಣ್ಣುಗಳು ಹೋದರೆ ಮತ್ತೊಬ್ಬರ ಬುದ್ಧಿಶಕ್ತಿಯಮೇಲೆ ಔಷಧಿಯ ಅಡ್ಡಪರಿಣಾಮ ಅಡರಿ ಅದು ಕ್ಷೀಣವಾಗಿಹೋಯಿತು. ಇಬ್ಬರೂ ಇಂದಿಗೂ ಬದುಕಿದ್ದಾರೆ, ಆದರೆ ಆ ವೈದ್ಯರು ಈಗ ದಿವಂಗತರು.

ಹೈಗುಂದ ಡಾಕ್ಟರು !

ಆಯುರ್ವೇದದಲ್ಲಿ ಅತ್ಯಂತ ಒಳ್ಳೆಯ ಅನುಭವವನ್ನು ಪಡೆದ ವೈದ್ಯರಾಗಿದ್ದರು. ಮಾತು ಕಡಿಮೆ. ಎಲ್ಲಾ ಥರದ ಕಾಯಿಲೆಗಳಿಗೂ ಔಷಧಿಗಳನ್ನು ಪುಡಿಗಳ ರೂಪದಲ್ಲಿ ಕಟ್ಟಿಕೊಡುತ್ತಿದ್ದರು. ನಿಗರ್ವಿ, ಸಾತ್ವಿಕ. ಇವರು ಮೂಲತಃ ದಕ್ಷಿಣ ಕನ್ನಡದಿಂದ ನಮ್ಮ ಉತ್ತರಕನ್ನಡಕ್ಕೆ ವಲಸೆ ಬಂದವರಾಗಿದ್ದರು. ಹೆಸರು ಪದ್ಮನಾಭಯ್ಯ ಎಂದಾದರೂ ಅವರು ವೃತ್ತಿ ಆರಂಭಿಸಿದ್ದು ಹೈಗುಂದದಲ್ಲಾದ್ದರಿಂದ ಹೈಗುಂದ ಡಾಕ್ಟರು ಎಂದೇ ಪ್ರಸಿದ್ಧರಾಗಿದ್ದರು. ಅತಿ ಕಡಿಮೆ ಹಣಕ್ಕೆ ಔಷಧ ಸಿಗುತ್ತಿತ್ತಲ್ಲದೇ ಅಡ್ಡ ಪರಿಣಾಮಗಳೂ ಇರುತ್ತಿರಲಿಲ್ಲ. ಹೀಗಾಗಿ ಜನ ಅವರಲ್ಲಿಗೆ ಮುಗಿಬೀಳುತ್ತಿದ್ದರು.

ಇವರ ಮಹತ್ವವೆಂದರೆ ಡಾಕ್ಟರು ಕೆಲವೊಮ್ಮೆ ಸಿಗುವುದೇ ಕಷ್ಟ! ಯಾಕೆಂದರೆ ಇವರಿಗೆ ಯಕ್ಷಗಾನ ತಾಳಮದ್ದಲೆ ಎಂದರೆ ಎಲ್ಲಿಲ್ಲದ ಪ್ರೀತಿ. ಸ್ವತಃ ಅರ್ಥದಾರಿಯಾದ ಇವರು ರೋಗಿಗಳ ಕೂಡ ಜಾಸ್ತಿ ಮಾತನಾಡದಿದ್ದರೂ ತಾಳಮದ್ದಲೆಯಲ್ಲಿ ಅವರನ್ನು ಮೀರಿಸುವ ಖುಳ ಇರಲಿಲ್ಲ! ಯಾವುದೇ ಪಾತ್ರವನ್ನು ಕೊಡಿ ಹೈಗುಂದ್ ಡಾಕ್ಟರು ಮಾಡಿದ ಪಾತ್ರ ಅಷ್ಟು ಕಳೆಕಟ್ಟುತ್ತಿತ್ತು. ತುಂಬಾ ಹಾಸ್ಯಪ್ರವೃತ್ತಿಯವರಾದ ಇವರ ಮಾತುಗಳನ್ನು ಕೇಳಲು ಸುತ್ತ ಹತ್ತಾರು ಹಳ್ಳಿಗಳ ಜನ ಜಮಾಯಿಸುತ್ತಿದ್ದರು. ಒಮ್ಮೊಮ್ಮೆ ರಾತ್ರಿಯಿಂದ ಬೆಳತನಕ ಪ್ರಸಂಗ ನಡೆದು ಮಾರನೇ ದಿನ ಸ್ವಲ್ಪ ವಿಶ್ರಾಂತಿ ಬೇಕಲ್ಲ--ಹೀಗಾಗಿ ಆದಿನ ರೋಗಿಗಳಿಗೆ ವೈದ್ಯರು ಸ್ವಲ್ಪಕಾಲ ಅಲಭ್ಯರಾಗುತ್ತಿದ್ದರು. ರೋಗಿಗಳನ್ನು ಬಹಳ ಅಕ್ಕರೆಯಿಂದ ನೋಡಿಕೊಳ್ಳುವ ಸ್ವಭಾವದವರಾದ ಇವರು ಬಡ ರೋಗಿಗಳಿಗೆ ಹಣವಿರದಿದ್ದರೂ ಚಿಕಿತ್ಸೆನೀಡಿದ ದಾಖಲೆಗಳಿವೆ. ಕೆಲವೊಮ್ಮೆ ಡಾ| ಭಟ್ಟರ ಇಂಗ್ಲೀಷ್ ಮೆಡಿಸಿನ್ ಕೆಲಸಮಾಡದಿದ್ದಾಗ ಅಲ್ಲಿಂದಲೂ ರೋಗಿಗಳು ಹೈಗುಂದ ಡಾಕ್ಟರನ್ನು ಹುಡುಕಿಕೊಂಡು ಹೋಗುತ್ತಿದ್ದರು! ಅನೇಕ ಜನರಿಗೆ ಉಪಕಾರ ನೀಡಿದ ಈ ವೈದ್ಯ ಈಗ ಕೀರ್ತಿಶೇಷರು...ಆದರೆ ಇಂದಿಗೂ ಅವರ ಮಗ ಔಷಧ ನೀಡುತ್ತಾರೆ. ತಂದೆಯ ಸ್ಥಾನ ಮಗನಿಗೆ ಬಂದಿದೆ. ಆದರೆ ಮಗನಿಗೆ ತಾಳಮದ್ದಲೆಯಲ್ಲಿ ಆಸಕ್ತಿಯಿಲ್ಲ.

ಈಗ ನಿಮ್ಮಲ್ಲಿ ಒಂದು ಪ್ರಶ್ನೆ ಉಳಿದಿರುತ್ತದೆ! ಅದೇನೆಂದರೆ ಯೋಗದಿಂದ ಪಕ್ವವಾದ ಮನಸ್ಸಿನವರಿಗೆ ರೋಗವೇ ಇಲ್ಲವಾಗುವುದೆಂದಮೇಲೆ ಆಯುರ್ವೇದ ಯಾಕೆ ಹುಟ್ಟಿಕೊಂಡಿತು ಎಂಬುದು, ಅಲ್ಲವೇ ? ಕೆಲವು ಘಟನೆಗಳ ಅವಲೋಕನದಿಂದ ಹೇಳುವುದಾದರೆ ಅಲ್ಲಲ್ಲಿ ಕೆಲವು ಕಾಯಿಲೆಗಳು ನಮ್ಮ ಜನ್ಮಾಂತರ ಕರ್ಮಫಲದಿಂದಲೂ ಬರುತ್ತವೆ. ಕುಂಟನೋ, ಕುರುಡನೋ, ಕಿವುಡನೋ, ಮೂಗನೋ ಅಥವಾ ಪೋಲಿಯೋ ಪೀಡಿತನೋ ಆತ ಹಾಗಾಗುವುದಕ್ಕೆ ಆತನ ಪೂರ್ವಜನ್ಮದ ಪಾಪ ಕೃತ್ಯವೇ ಕಾರಣವಾಗುತ್ತದೆ. ಇದನ್ನು ಬಗೆಹರಿಸಲು ವೈದ್ಯಮಾತ್ರರಿಂದ ಸಾಧ್ಯವಿಲ್ಲ. ಜಗನ್ನಿಯಾಮಕ, ಸೃಷ್ಟಿಯಲ್ಲಿ ಹಲವು ವೈಚಿತ್ರ್ಯಗಳನ್ನು ತೋರಿಸಿ ಗುಟ್ಟನ್ನು ತನ್ನಲ್ಲೇ ಇಟ್ಟುಕೊಂಡಿದ್ದಾನೆ. ಅದನ್ನಾತ ಯಾರಿಗೂ ಹೇಳುವುದಿಲ್ಲ. ನಾವು ಬಾಯಿಮಾತಿನಲ್ಲಿ ಹಣೆಬರಹವೆನ್ನುತ್ತೇವೆ ನಮ್ಮಲ್ಲಿ ಎಷ್ಟುಮಂದಿಗೆ ಹಣೆಬರಹವಿರುವುದು ತಿಳಿದಿದೆ ? ಸತ್ತವ್ಯಕ್ತಿಯ ತಲೆಯಭಾಗದ ಮೂಳೆಗಳು ಹೂತ/ಸುಟ್ಟ ನಂತರ ಹಾನಿಯಾಗಿರದೇ ಹಾಗೇ ಸಿಕ್ಕರೆ ಆಗ ಹಣೆಯಭಾಗದಲ್ಲಿ ಅದನ್ನು ಸರಿಯಾಗಿ ವೀಕ್ಷಿಸಿದರೆ ಓದಲು ಬರದ ಯಾವುದೋ ಲಿಪಿ ನೋಡಸಿಗುತ್ತದೆ! ಇದೇ ಬ್ರಹ್ಮ ಲಿಪಿ. ಇದು ಆತನ ಇಡೀ ಜನ್ಮವನ್ನು ಹೇಳುತ್ತದೆ! ಆದರೆ ಇಲ್ಲೀವರೆಗೆ ಅದನ್ನು ಓದಿದವರಾಗಲೀ, ಸಂಶೋಧಿಸಿದವರಾಗಲೀ ಇಲ್ಲ. ಹೀಗಾಗಿ ಪ್ರಾರಬ್ಧಕರ್ಮದಿಂದ ಪಡೆದುಬಂದ ದೌರ್ಭಾಗ್ಯದಿಂದ ಅನುಭವಿಸಬೇಕಾಗಿ ಬಂದ ಕಾಯಿಲೆಗಳಿಗೆ ದಯಾಮಯಿಯಾದ ದೇವರು ಧನ್ವಂತರಿಯಾಗಿ ತಾನೇ ಬಂದು ಆಯುರ್ವೇದವನ್ನೂ ತಂದ. ಪ್ರತೀವರ್ಷ ಸರಿಸುಮಾರು ಈ ವೇಳೆಯಲ್ಲಿ ಧನ್ವಂತರೀ ಜಯಂತಿ ಬರುತ್ತದೆ. ಮೊನ್ನೆ ಮೊನ್ನೆ ಅದು ನಡೆದುಹೋಯಿತು. ಧನ್ವಂತರಿಯನ್ನು ನೆನೆದಾಗ ಊರಲ್ಲಿ ಉಪಕರಿಸಿದ ಹಳೆಯತಲೆಮಾರಿನ ಎರಡು ಜೀವಗಳ ನೆನಪಾಗಿ ಈ ಲೇಖನ ಬರೆದೆ.

ಕ್ಷೀರೋದಮಥನೋದ್ಭೂತಂ ದಿವ್ಯಗಂಧಾನುಲೇಪಿತಂ |
ಸುಧಾಕಲಶ ಹಸ್ತಂ ತಂ ವಂದೇ ಧನ್ವಂತರಿಂ ಹರಿಂ ||

ಕ್ಷೀರಸಾಗರ ಮಥನವಾದಾಗ ಲಕ್ಷ್ಮಿಯ ಉದ್ಭವವಾದ ಹಾಗೇ ಶ್ರೀಹರಿಯೂ ಧನ್ವಂತರಿಯಾಗಿ ಭೂಮಿಗೆ ಬಂದ. ಬರುವಾಗ ಜಗದಲ್ಲಿ ತನ್ನ ಲೀಲಾನಾಟಕದಲ್ಲಿ ನೋವನುಭವಿಸುವ ನತದೃಷ್ಟರ ಪಾಲಿಗೆ ಹಲವು ಗಿಡಮೂಲಿಕೆಗಳಿಂದ ಪರಿಹಾರ ಹೇಳುವ ಆಯುರ್ವೇದ ಶಾಸ್ತ್ರವನ್ನೂ ತಂದ. ಸ್ನೇಹಿತರೇ, ಭಾರತೀಯರದಾದ ಈ ಆಯುರ್ವೇದ ವಿದೇಶೀಯರ ಕೈವಶವಾಗಿ ಅಮೇರಿಕನ್ನರು ಹಲವಕ್ಕೆ ಪೇಟೆಂಟ್ ಪಡೆಯುತ್ತಿದ್ದರು. ಅಷ್ಟರಲ್ಲಿ ಸುದೈವವಶಾತ್ ಬಾಬಾ ರಾಮ್‍ದೇವ್ ಥರದ ಕೆಲವು ಜನರ ಪ್ರಯತ್ನದಿಂದ ಅದು ಸ್ವಲ್ಪ ನಿಂತಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳೋಣ. ಭಾರತದಲ್ಲಿ ಹುಟ್ಟಿದ ಯಾವುದೇ ಶಾಸ್ತ್ರವಾಗಲಿ ಅದಕ್ಕೊಂದು ಭದ್ರ ಬುನಾದಿ ಇರುತ್ತದೆ. ಅದನ್ನರಿತ ಬೇರೇ ದೇಶದ ಜನತೆ ನಮ್ಮ ಹಕ್ಕುಗಳನ್ನೂ ಮೀರಿ ಶಾಸ್ತ್ರಗಳೇ ತಮ್ಮದು ಎಂದರೆ ಕಷ್ಟವಾಗುತ್ತದೆ. ಶಾಸ್ತ್ರಗಳಿಂದ ಸಿಗುವ ಲಾಭವನ್ನು ಅವರೂ ಪಡೆಯಲಿ ಅದಕ್ಕೆ ತೊಂದರೆಯಿಲ್ಲ, ಬಾಡಿಗೆಯವರೇ ಮಾಲೀಕರೆಂಬ ಸುಳ್ಳನ್ನು ಸತ್ಯಮಾಡುವ ಕೆಲಸಕ್ಕೆ ಅವಕಾಶ ಬೇಡ. ಮೇಲಿನ ಶ್ಲೋಕವನ್ನು ಒಮ್ಮೆ ಹೇಳಿ ಧನ್ವಂತರಿಗೆ ಒಮ್ಮೆ ನಮಿಸಿ, ನಮ್ಮ-ನಿಮ್ಮಲ್ಲಿರಬಹುದಾದ ಎಲ್ಲಾ ಕಾಯಿಲೆಗಳನ್ನೂ ಆತ ದೂರಮಾಡಲಿ.

Friday, December 3, 2010

ಅನ್ಯೋನ್ಯ

ಚಿತ್ರ ಋಣ : ಅಂತರ್ಜಾಲ

ದಾಂಪತ್ಯದಲ್ಲಿ ಗಂಡ-ಹೆಂಡತಿಯರ ಜಗವೇ ಮಧುರವಾಗಿರುತ್ತದೆ, ಅನ್ಯೋನ್ಯವಾಗಿರುತ್ತದೆ. ಅಲ್ಲಿ ಪ್ರತಿಯೊಂದು ಅತಿ ಚಿಕ್ಕ ಭಾವಕ್ಕೂ ಬೆಲೆಯಿದೆ, ಭಾವ ಜೀವದಲ್ಲಿ ಕರಗಿ ಕಣ್ಣಲ್ಲೇ ಅಭಿವ್ಯಕ್ತವಾಗುತ್ತದೆ. ಮಾತು ಕಡಿಮೆಯಾಗಿ ಮೌನದಲ್ಲೇ ಹಲವೊಮ್ಮೆ ಆಡಬೇಕಾಗಿದ್ದ ಎಷ್ಟೋ ಮಾತುಗಳು ಕೇವಲ ಮುಖದಚರ್ಯೆಯಲ್ಲೇ ವ್ಯಕ್ತವಾಗಿ ಹೆಂಡತಿ ಗಂಡನನ್ನೂ ಗಂಡ ಹೆಂಡತಿಯನ್ನೂ ಪರಸ್ಪರ ಅರಿತುಕೊಳ್ಳುವಂತಾಗುತ್ತದೆ. ಏನಿರಲಿ ಇಲ್ಲದಿರಲಿ ಎಲ್ಲವನ್ನೂ ಸಹಿಸಿಬಾಳುವ, ಪರಸ್ಪರರ ಅನಿವಾರ್ಯತೆಯನ್ನು ಅರ್ಥೈಸಿಕೊಂಡು ಸಹಿಸಿ ಬದುಕುವ ಪ್ರತೀ ನಿಮಿಷವೂ ನಿಜವಾದ ಪ್ರೀತಿಯ ಅನುಬಂಧವಾಗಿರುತ್ತದೆ. ತಾಪತ್ರಯಗಳೆಷ್ಟೇ ಇದ್ದರೂ ಎಲ್ಲವನ್ನೂ ಸಹಿಸಿಕೊಂಡು ಜತೆಯಾಗಿ ಹೆಜ್ಜೆಯಿಡುವುದು ಋಣಾನುಬಂಧವಾಗಿರುತ್ತದೆ. ಹೆಚ್ಚಿನ ಸಿರಿವಂತಿಕೆಯ ಸುಖವನ್ನು ಕೊಡಲಾಗದ ಗಂಡನಿಗೆ ಹೆಂಡತಿಗೆ ತಾನೇನೂ ಕೊಡಲಿಲ್ಲವಲ್ಲವೆಂಬ ಕೊರಗೊಂದು ಸದಾಕಾಡಿದರೆ ಪಡೆಯಲಾಗದ ಶ್ರೀಮಂತಿಕೆಗೆ ಮರುಗುವುದಕ್ಕಿಂತ ಗಂಡನೇ ತನಗೆ ಶ್ರೀಮಂತಿಕೆಯ ವೈಭೋಗಕ್ಕಿಂತ ಹೆಚ್ಚು ಎಂದುಕೊಳ್ಳುವುದು ಹೆಂಡತಿಯ ಅನಿಸಿಕೆಯಾಗುತ್ತದೆ. ಅಂತಹ ಸನ್ನಿವೇಶ ಸೃಷ್ಟಿಸಿದ ಕಾವ್ಯಕನ್ನಿಕೆ ಈ ಕೆಳಗೆ ನಿಂತಿದ್ದಾಳೆ :

ಅನ್ಯೋನ್ಯ

ನಾನೇನೂ ಕೊಡದಾದೆ ನನ್ನವಳಿಗೆ
ಆನೋವು ಕಾಡುತಿದೆ ಘಳಿಗೆಘಳಿಗೆ |
ಬಾನೆತ್ತರಕೆ ಬೆಳೆವ ಕನಸುಗಳ ಕಟ್ಟಿಹಗೆ
ಕಾನನದ ಮೌನ ಧರಿಸಿರುವವಳಿಗೆ ||

ಮಾನಾಪಮಾನ ಎಲ್ಲವ ಸಹಿಸಿ ಮುನ್ನಡೆದು
ಯಾನದಲಿ ಜತೆಯಾಗಿ ಬಂದವಳಿಗೆ |
ಏನಾದರೂ ಕೊಡುವ ಬಯಕೆಯದು ಮನದೊಳಗೆ
ತಾನಾಗಿ ಆವರಿಸಿ ನಿಂತಘಳಿಗೆ !

ತಾನಾಯ್ತು ತನ್ನ ಕೆಲಸವದಾಯ್ತು ಎಂಬಂತೆ
ಗಾನದಲಿ ತನ್ನನ್ನೇ ಮರೆವವಳಿಗೆ |
ಮಾನಿನಿಯ ಮನೆವಾರ್ತೆ ನಿತ್ಯ ಪೂರೈಸುತ್ತ
ಧ್ಯಾನದಲಿ ಸಿರಿವಂತೆಯಾದವಳಿಗೆ ||

ಆನೆಗಾತ್ರದ ಚಿಂತೆ ಮನದಿ ಘೀಳಿಡುವಾಗ
ಹಾನಿಯಾಗದ ರೀತಿ ತಡೆದವಳಿಗೆ |
ನಾನೂರು ವಚನಗಳ ನಾಕೊಟ್ಟು ಹುಸಿಯಾಗೆ
ದೀನ ಮುಗುಳ್ನಗೆ ಬೀರಿ ಅರಿತವಳಿಗೆ ||

ಈ ಹಾಡನ್ನು ನಾನು ನನ್ನದೇ ರಾಗದಲ್ಲಿ ಹಾಡಿದ್ದೇನೆ ಕೇಳಿ -- [ಸಹಿಸುವುದು ಕಷ್ಟವಾದರೆ ನಿಲ್ಲಿಸಿಬಿಡಿ!]

Thursday, December 2, 2010

ಮನವ ಶೋಧಿಸಬೇಕು ನಿತ್ಯ !


ಮನವ ಶೋಧಿಸಬೇಕು ನಿತ್ಯ !

ಮನಸ್ಸಿನ ಕುರಿತು ಬಹಳ ಬರೆದಿದ್ದೇನೆ. ಆಗಾಗ ಬರೆಯುತ್ತಲೇ ಇದ್ದೇನೆ. ಗಣಕಯಂತ್ರದ ಕೇಂದ್ರಬಿಂದುವಾದ ಮೈಕ್ರೋ ಪ್ರಾಸೆಸ್ಸರ್ ಥರಾನೇ ಮನಸ್ಸು ನಮ್ಮ ಶರೀರದ ಪ್ರಮುಖಕೇಂದ್ರ. ಮನಸ್ಸಿಗೂ ಆತ್ಮಕ್ಕೂ ವೈಜ್ಞಾನಿಕ ಭಿನ್ನತೆ ತೋರಿಸುವುದು ಕಷ್ಟವಾದರೂ ಮನಸ್ಸು ಬೇರೆ, ಆತ್ಮಬೇರೆ--ಇದೇ ನಮ್ಮೊಳಗಿನ ವಿಚಿತ್ರ. ಮನಸ್ಸಿನಲ್ಲೂ ಚಿತ್ತ, ಬುದ್ಧಿ, ಅಹಂಕಾರ ಇತ್ಯಾದಿ ಹಲವು ಸ್ತರಗಳಿವೆ! ಮನಸ್ಸಿನ ಅವಲೋಕನವನ್ನೇ ಮಾಡಿದರೆ ಮಾತ್ರ ಈರುಳ್ಳಿಯ ಎರಡನೇ ಹಂತದ ಪಾರದರ್ಶಕ ಸಿಪ್ಪೆಯ ರೀತಿಯಲ್ಲಿ ಇವುಗಳ ಇರವು ನಮಗೆ ಗೊತ್ತಾಗುತ್ತದೆ. ಇಂತಹ ಮನಸ್ಸನ್ನು ನಿಗ್ರಹಿಸುವ ಸಾಮರ್ಥ್ಯದ ಕೀಲಿಕೈ ಮನಸ್ಸಿನದೇ ಒಂದು ಭಾಗವಾದ ಬುದ್ಧಿಯಲ್ಲಿದೆ! ಆ ಬುದ್ಧಿಗೆ ಒಳ್ಳೆಯ ಪ್ರಚೋದನೆಯನ್ನು ಕೊಡು ಎಂಬ ಮಂತ್ರವೇ ಶ್ರೀ ಗಾಯತ್ರಿ ಮಂತ್ರ. ಅದರ ತಾತ್ಪರ್ಯವನ್ನಷ್ಟೇ ಹೇಳಿದ್ದೇನೆ ಯಾಕೆಂದರೆ ಗಾಯತ್ರಿಯ ಕುರಿತು ಇಲ್ಲಿ ಪ್ರಸ್ತಾಪಿಸಿದ್ದಲ್ಲ.

ಮನುಷ್ಯನಾಗಿ ಹುಟ್ಟಿದಮೇಲೆ, ಉಪ್ಪು-ಖಾರ ತಿಂದ ಮೇಲೆ ಇವೆಲ್ಲಾ ಇರೋದೇ ಬಿಡಿ ಎನ್ನುವ ಅನಿಸಿಕೆ ಬಹುತೇಕರದೇ ಆದರೂ ಮನಸ್ಸಿನ ವಿಕೃತಿಗಳನ್ನು ಹದ್ದುಬಸ್ತಿನಲ್ಲಿಡುವುದು ನಮ್ಮ ಆದ್ಯ ಕರ್ತವ್ಯ. ಇದರಲ್ಲಿ ಪ್ರಮುಖವಾಗಿ ಕಾಮ-ಅಂದರೆ ಭೋಗ, ಗಂಡು-ಹೆಣ್ಣುಗಳ ಮಿಲನಕ್ರಿಯೆ. ಪ್ರಾಣಿಗಳಿಗೆ ಈ ವಿಷಯದಲ್ಲಿ ಯಾವುದೇ ಹಿಡಿತಗಳಿಲ್ಲವಾದರೂ ಅವುಗಳಲ್ಲಿ ವರ್ಷವಿಡೀ ಮಿಲನೋತ್ಸವವಿರುವುದಿಲ್ಲ. ಬೇರೇ ಬೇರೇ ಪ್ರಾಣಿ ಪಕ್ಷಿಗಳಿಗೆ ಬೇರೇ ಬೇರೇ ಕಾಲಗಳು ಋತುಗಳು ಮಿಲನೋತ್ಸವದ ಸಮಯವಾಗಿರುತ್ತವೆ. ಆದರೆ ಮನುಷ್ಯನಲ್ಲಿ ಮಾತ್ರ ಇದಕ್ಕೆ ಕಾಲವೂ ಇಲ್ಲ ಋತುವೂ ಇಲ್ಲ. ಬಯಸಿದಾಗಲೆಲ್ಲಾ ಕಾಮದ ತೆವಲನ್ನು ತೀರಿಸಿಕೊಳ್ಳುವ ಸ್ವಭಾವ ಮನುಷ್ಯನದು. ಹೊಟ್ಟೆಗೆ ಬಟ್ಟೆಗೆ ಸ್ವಲ್ಪ ಕಮ್ಮಿ ಇದ್ದರೂ ಇದಕ್ಕೆ ಮಾತ್ರ ಕಮ್ಮಿ ಇರುವುದಿಲ್ಲ. ಸಂತಾನೋತ್ಪತ್ತಿ ಸಹಜ ಪ್ರಕ್ರಿಯೆಯಾದರೂ ಮನುಷ್ಯನಿಗೆ ಇದರಲ್ಲಿಯೇ ಅತಿಯಾದ ಆಸಕ್ತಿ, ಮಿತಿಮೀರಿದ ಆಸಕ್ತಿ. ಹರೆಯದ ಸುಂದರ ಹೆಣ್ಣನ್ನು ಕಂಡಾಗ ನೀರಿಳಿಯುವ ನಾಲಿಗೆ ತಿರುವುತ್ತ ನೋಡುವ ಪ್ರಾಯದ ಗಂಡುಗಳೇ ಬಹುತೇಕ. ಗಂಡಸರಲ್ಲಿ ಕಾಮೋದ್ರೇಕವಾಗುವುದೂ ಶೀಘ್ರ ಮತ್ತು ಕಾಮಪಿಪಾಸೆಯ ಹರವು ಸುಮಾರು ೧೩-೧೪ ವಯಸ್ಸಿನಿಂದಲೇ ಹಿಡಿದು ಸಾಯುವವರೆಗೂ ಹಬ್ಬಿರುತ್ತದೆ ಎಂದರೆ ಆಶ್ಚರ್ಯವಾಗಬಹುದಲ್ಲವೇ ? ಆದರೂ ಸತ್ಯ.

ಮಗ ಹರೆಯಕ್ಕೆ ಕಾಲಿಡುವಾಗ ಇಂತಹ ವಿಷಯವನ್ನು ಹೇಳಿಕೊಳ್ಳಲಾಗದೇ ಅಪ್ಪ ಮಾನಸಿಕವಾಗಿ ನೋಯುತ್ತಿದ್ದರೆ ಮಗನಿಗೆ ಯಾವುದೋ ಹುಡುಗಿಯ ಚಿಂತೆ ಕಾಡುತ್ತಿರುತ್ತದೆ. ಇದೇ ಕಾರಣವಾಗಿ ಮನೆಯಲ್ಲಿ ಪರಸ್ಪರ ಜಗಳವಾಗುತ್ತದೆ, ವೈಮನಸ್ಸು ಬೆಳೆಯುತ್ತದೆ. ಇದನ್ನು ಅರಿತೇ ಪ್ರಾಜ್ಞರು ಮಗನಿಗೆ ೧೬ ವರ್ಷ ವಯಸ್ಸು ಮೆಟ್ಟಿದಾಗ ಆತನನ್ನು ಸ್ನೇಹಿತನಂತೇ ಕಾಣು ಎಂದಿದ್ದಾರೆ.

|| ಪ್ರಾಪ್ತೇಷು ಷೋಡಶೇ ವರ್ಷೇ ಪುತ್ರಂ ಮಿತ್ರ ವದಾಚರೇ || -

ಎಂಬ ಉಲ್ಲೇಖ ನಮಗೆ ಸಂಸ್ಕೃತದಲ್ಲಿ ದೊರೆಯುತ್ತದೆ. ವಿಷಯಾಸಕ್ತಿಗೆ ಕಡಿವಾಣಹಾಕುವ ಸಲುವಾಗಿ ತಿಳುವಳಿಕೆ ನೀಡಲು ಒಬ್ಬ ಸ್ನೇಹಿತನಂತೇ ನಡೆಸಿಕೋ ಎಂಬುದು ಇದರ ಅರ್ಥವಲ್ಲವೇ ? ಆದರೂ ಈ ವಿಷಯ ಬರೇ ಪಠ್ಯವಾಗೇ ಇದೆ ಬಿಟ್ಟರೆ ಕೃತಿಯಲ್ಲಿ ಎಷ್ಟುಮನೆಯಲ್ಲಿ ಅಪ್ಪ-ಮಗ ಮಿತ್ರರಾಗಿರುತ್ತಾರೆ ? ಹಲವೊಂದು ಕಡೆ ಅಪ್ಪನ ಬುದ್ಧಿಯೇ ಈ ವಿಷಯದಲ್ಲಿ ಸ್ಥಿಮಿತವನ್ನು ಹೊಂದಿರುವುದಿಲ್ಲ ಅಂದಮೇಲೆ ಆತ ಮಗನನ್ನು ತಿದ್ದುವುದು ಸಾಧ್ಯವೇ ? ಹೀಗಾಗಿ ಬೇಕೋ ಬೇಡವೋ ನಮ್ಮೆಲ್ಲರ ಜೀವನದಲ್ಲಿ ಒಂದಿಲ್ಲೊಂದು ಸಮಯದಲ್ಲಿ ನಾವು ಮನಸ್ಸಿನ ತಾಳ ತಪ್ಪುವಂತೇ ನಡೆದುಕೊಳ್ಳುತ್ತೇವೆ.
ಆಳಕ್ಕೆ ಬೀಳುವ ಮುನ್ನ ಎಚ್ಚೆತ್ತುಕೊಳ್ಳುವವರು ಕೆಲವರಾದರೆ, ಆಳದಲ್ಲಿ ಬಿದ್ದು ಒದ್ದಾಡುವವರು ಹಲವರು. ಇದು ರಾತ್ರಿ ಬೆಳದಿಂಗಳಲ್ಲಿ ಕಂಡ ಬಾವಿಗೆ ಹಗಲಿನಲ್ಲಿ ಬೀಳುವ ಸ್ಥಿತಿ!

ಈ ತಾಳತಪ್ಪುವಿಕೆಯೇ ಸಮಾಜದಲ್ಲಿ ಹಲವು ನಿಜಜೀವನದ ಕಥೆಗಳಿಗೆ ಕಾರಣವಾಗುತ್ತದೆ. ಅಕ್ರಮ ಸಂಬಂಧಗಳು, ಅನೈತಿಕ ಸಂಪರ್ಕಗಳು ಬೆಳೆಯುತ್ತವೆ. ಅವೇ ಮುಂದೆ ಹಲವು ಕಡೆಗಳಲ್ಲಿ ದ್ವೇಷ, ವೈಷಮ್ಯ, ಕೊಲೆಗಳ ಹಂತವನ್ನು ತಲುಪುತ್ತವೆ ! ಇಂತಹ ವಿಷಯಾಸಕ್ತಿಯನ್ನೇ ವಿಷಯವಸ್ತುವಾಗಿಟ್ಟುಕೊಂಡು ಅನೇಕ ಸಾಮಾಜಿಕ ಕಥೆಗಳನ್ನೋ ನಾಟಕಗಳನ್ನೋ ಬರಹಗಾರರು ರಚಿಸುತ್ತಾರೆ. ಅದು ’ನಡೆಯುವುದು ಹೌದು ಹೌದು’ ಎಂಬ ಭಾವನೆ ನಮ್ಮಲ್ಲೂ ಅದಕ್ಕೆ ತಾಳಹಾಕುವುದರಿಂದ ನಮಗೆ ಕಥೆ ನೈಜತೆಗೆ ಹತ್ತಿರವಾಗಿ ಕಾಣುತ್ತದೆ. ಬೆಂಕಿಯನ್ನೇ ಕಾಣದ ವ್ಯಕ್ತಿಗೆ ಬೆಂಕಿಯಕಥೆ ಕೇಳಿ ಭಾವನೆ ಕೆರಳುವುದಿಲ್ಲವಲ್ಲವೇ ? ಅದೇ ರೀತಿ ಸಾಮಾಜಿಕ ಜೀವನದಲ್ಲಿ ತೊಡಗಿಕೊಂಡಿರದ ಮನಸ್ಸಿಗೆ ಇಂತಹ ಕಥೆಗಳಿಂದ/ನಾಟಕಗಳಿಂದ ಯಾವುದೇ ಪ್ರಭಾವವಾಗುವುದಿಲ್ಲ. ಚಿಕ್ಕ ಮಗುವಿನೆದುರು ದೊಡ್ಡವರು ಸರಸವನ್ನು ನಡೆಸಿದರೆ ಆ ಮಗುವಿಗೆ ಅದರ ಗಂಧ ತಲುಪುವುದಿಲ್ಲ. ಅದೇ ಮಗು ಬೆಳೆಯುತ್ತಾ ಬೆಳೆಯುತ್ತಾ ರೂಪ,ರಸ. ಗಂಧ, ಸ್ಪರ್ಶ, ಶ್ರವಣ ಎಲ್ಲಾ ಇಂದ್ರಿಯಗಳೂ ತಮ್ಮ ಕೆಲಸದಲ್ಲಿ ಚುರುಕುಗೊಳ್ಳುತ್ತವೆ. ಹೀಗೆ ಚುರುಕುಗೊಳ್ಳಲು ನಮ್ಮ ಮನಸ್ಸೇ ಕಾರಣ. ಆ ಮನಸ್ಸಿಗೆ ಬುದ್ಧಿಯ ಆಜ್ಞೆ ಕಾರಣ. ಆ ಬುದ್ಧಿಗೆ ಆತ್ಮನ ಪ್ರಚೋದನೆ ಕಾರಣ.

ದೇವರನ್ನು ಎಷ್ಟೆಲ್ಲಾ ನಾವು ಪ್ರಾರ್ಥಿಸಿದಾಗ ಆತ ನೇರವಾಗಿ ಬಂದು " ಓಹೋ ಭಟ್ಟರಿಗೆ ಬಹಳ ತೊಂದರೆಯಿದೆ ಒಂದು ಮಾರುತಿ ಡಿಸೈರ್ ಕಾರು ಕೊಡಿಸುತ್ತೇನೆ " ಅಂತಲೋ " ಮಗನೇ ಇಗೋ ಹತ್ತುಕೋಟಿ ಹಣ" ಎಂತಲೋ ಸಹಾಯಮಾಡಲು ಬರುವುದಿಲ್ಲ. ಬದಲಾಗಿ ನಮ್ಮಾತ್ಮದ ಮೂಲರೂಪವಾದ ಪರಮಾತ್ಮ ನಮ್ಮಾತ್ಮದ ಮೂಲಕ ನಮ್ಮ ಅಂತರಂಗದ ಮೂಲಕ ನಮ್ಮ ಮನಸ್ಸಿಗೆ, ಬುದ್ಧಿಗೆ ಒಳ್ಳೆಯ ಪ್ರಚೋದನೆ ಕೊಡುತ್ತಾನೆ. ಈ ಪ್ರಚೋದನೆ ಕೊಡುವ ಪ್ರಕ್ರಿಯೆ ಮತ್ತದೇ ಜನ್ಮಾಂತರದ ಕರ್ಮಬಂಧನದ ಜಾಲರಿಯಲ್ಲಿ ಸಿಲುಕಿರುತ್ತದೆ. ಎಲ್ಲರ ಮನಸ್ಸಿಗೂ ಒಳ್ಳೆಯ ಪ್ರಚೋದನೆಯನ್ನೇ ಕೊಡಬೇಕೆಂದೇನಿಲ್ಲ, ಕೆಲವರಿಗೆ ಕೆಟ್ಟ ಪ್ರಚೋದನೆಯನ್ನೂ ಕೊಡಬಹುದು. ಒಂದೊಮ್ಮೆ ಹಾಗೆ ಕೆಟ್ಟ ಪ್ರಚೋದನೆಯನ್ನು ಕೊಟ್ಟರೆ ಆ ವ್ಯಕ್ತಿ ಇಲ್ಲಸಲ್ಲದ ವಿಕೃತಿಗಳನ್ನು ನಡೆಸಿ, ಸಮಾಜಬಾಹಿರ ಕೃತ್ಯಗಳನ್ನು ನಡೆಸಿ ನಿಂದನೆಗೊಳಗಾಗುತ್ತಾನೆ!

ನಾವು ಎಷ್ಟೇ ಬುದ್ಧಿ ಸ್ಥಿಮಿತದಲ್ಲಿದ್ದರೂ ವಿರುದ್ಧಲಿಂಗಿಗಳು ಪರಸ್ಪರ ಏಕಾಂತದಲ್ಲಿ ಸಿಕ್ಕಾಗ ಎಲ್ಲೋ ಮನದ ಮೂಲೆಯಲ್ಲಿ ಕಾಮತೃಷೆಯ ಹಾವು ಹೆಡೆಯಾಡುತ್ತದೆ. ಹಾಗೊಮ್ಮೆ ಕೃತಿಯಿಂದ ನಾವು ಯಾವುದೇ ನೀತಿ ಬಾಹಿರ ಕೆಲಸವನ್ನು ಮಾಡದೇ ಮಾನಸಿಕವಾಗಿ ಅದನ್ನು ಕಲ್ಪಿಸಿಕೊಂಡರೂ ಸಹ ಅದು ಮಾನಸಿಕ ವ್ಯಭಿಚಾರ ಎನಿಸಿಕೊಳ್ಳುತ್ತದೆ. ಒಂದು ಹುಡುಗಿಯನ್ನು ಮನದಲ್ಲೇ ಸಂಭೋಗಿಸಿದಂತೇ ಕಲ್ಪಿಸಿಕೊಂಡರೆ ಅದಕ್ಕೆ ನಿಜವಾಗಿಯೂ ಹುಡುಗಿಯನ್ನು ಸಂಭೋಗಿಸಿದಾಗ ಸಿಗಬಹುದಾದ ಪಾಪದ ಫಲವನ್ನೇ ಶಾಸ್ತ್ರಕಾರರು ಹೇಳುತ್ತಾರೆ. ಜೀವನದಲ್ಲಿ ಗಂಡು-ಹೆಣ್ಣಿಗೆ ಒಂದೇ ಮದುವೆ, ಆ ಮದುವೆಯಲ್ಲಿ ಅಗ್ನಿಸಾಕ್ಷಿಯಾಗಿ ಕೈಹಿಡಿದ ಜೀವನದ ಪಾಲುದಾರ ವ್ಯಕ್ತಿಯನ್ನು

|| ಧರ್ಮೇಚ ಅರ್ಥೇಚ ಕಾಮೇಚ ನಾತೀ ಚರಾಮಿ || -

ಧರ್ಮದಲ್ಲಿ, ಅರ್ಥದಲ್ಲಿ, ಕಾಮದಲ್ಲಿ ಅಂದರೆ ಧರ್ಮಾಚರಣೆಯಲ್ಲೂ ದುಡಿಮೆಯಲ್ಲೂ ಕಾಮದಲ್ಲೂ ಕೇಳಿಯೇ ಮುನ್ನಡೆಯುತ್ತೇನೆಯೇ ಹೊರತು ಆ ವ್ಯಕ್ತಿಯನ್ನು ಬಿಟ್ಟು ಈ ವಿಷಯಗಳಲ್ಲಿ ಏಕಾಏಕಿ ತೊಡಗಿಕೊಳ್ಳಲಾರೆ ಎಂಬುದಾಗಿ ವಾಗ್ದಾನ ಮಾಡುತ್ತಾರೆ. ಈ ವಾಗ್ದಾನದಂತೇ ಗಂಡು ಹೆಣ್ಣಿನ ಹೆಣ್ಣು ಗಂಡಿನ ಒಪ್ಪಿಗೆಯಿಲ್ಲದೇ ಈ ವಿಷಯಗಳಲ್ಲಿ ಮುಂದುವರಿಯಕೂಡದು. ಆದರೆ ಮಂತ್ರಗಳ ಅರ್ಥವನ್ನೇ ತಿಳಿಯದ ನಮಗೆ ಗಲಾಟೆಯ ಮಧ್ಯೆ ಮದುವೆಯ ಮಂಟಪದಲ್ಲಿ ಏನು ಹೇಳಿದರು ಎಂದು ತಿಳಿಯುವ ವ್ಯವಧಾನವಾದರೂ ಎಲ್ಲಿರುತ್ತದೆ?

ಎಂತಹ ಒಳ್ಳೆಯ ವ್ಯಕ್ತಿಯೂ ಕೂಡ ಮನುಷ್ಯ ಸಹಜವಾಗಿ ಮಾನಸಿಕವಾಗಿ ಕೆಲವೊಮ್ಮೆ ವ್ಯಭಿಚಾರಿಯಾಗಿಬಿಡುತ್ತಾನೆ. ಇದಕ್ಕೆ ಉದಾಹರಣೆಯನ್ನು ನೋಡಿ. ಒಬ್ಬಾತ ಬಹಳ ಒಳ್ಳೇ ಮನುಷ್ಯನಿದ್ದನಂತೆ. ಆತನ ಮನೆಯ ಎದುರು ಮನೆಯಲ್ಲಿ ಸುಂದರವಾದ ವ್ಯಭಿಚಾರೀ ಹೆಂಗಸೊಬ್ಬಳು ಇದ್ದಳಂತೆ. ಆಕೆಗೆ ನೂರೆಂಟು ಗಿರಾಕಿಗಳು. ಈತನಿಗೆ ದಿನವೂ ಎದುರಿಗೆ ಯಾರು ಬರುತ್ತಾರೆ ಹೋಗುತ್ತಾರೆ ಎಂದು ಕಣ್ಣುಹಾಯಿಸುವ ಮತ್ತು ಅದನ್ನೇ ತನ್ನಮನೆಗೆ ಬಂದವರ ಕೂಡ ಹೇಳಿಕೊಳ್ಳುವ ಚಪಲ. ಶಾರೀರಿಕವಾಗಿ ಆತ ಏನೂ ತಪ್ಪುಮಾಡಿಲ್ಲವಾದರೂ ಅವನ ಮನಸ್ಸು ಮಾತ್ರ ಅವಳೊಡನೆ ದಿನವೂ ಹತ್ತಾರುಬಾರಿ ಸಂಭೋಗಿಸಿಬಿಟ್ಟಿದೆ ! ಇಬ್ಬರೂ ಸತ್ತು ಯಮನಲ್ಲಿಗೆ ಬಂದಾಗ ಚಿತ್ರಗುಪ್ತ ಪಾಪ-ಪುಣ್ಯಗಳ ಹೊತ್ತಗೆಯನ್ನು ತೆರೆದು ಓದಿದನಂತೆ. ಅದರ ಪ್ರಕಾರ ವ್ಯಭಿಚಾರೀ ಹೆಂಗಸು ಕಡಿಮೆ ಪಾಪಗಳಿಸಿದವಳೂ ಹಾಗೂ ಈ ಒಳ್ಳೆಯ ವ್ಯಕ್ತಿ ಜಾಸ್ತಿ ಪಾಪವನ್ನು ಗಳಿಸಿದವನೂ ಆಗಿರುತ್ತಾರೆ. ಆಗಈ ವ್ಯಕ್ತಿ ಅಲ್ಲಿ ತಕರಾರು ಮಾಡುತ್ತಾನಂತೆ. ನಾನು ಏನೂ ಪಾಪಮಾಡಿಲ್ಲ. ಅವಳಾದರೆ ದಿನವೂ ನೂರಾರು ಜನರಿಗೆ ಸೆರಗು ಹಾಸುತ್ತಿದ್ದಳು ತನಗೆ ಅದು ಹೇಗೆ ಜಾಸ್ತಿ ಪಾಪ ? ಆಗ ಚಿತ್ರಗುಪ್ತ ಹೇಳಿದನಂತೆ " ಅಯ್ಯಾ ಅವಳು ತನ್ನ ಉದರಂಭರಣೆಗಾಗಿ ಅದನ್ನು ವೃತ್ತಿಯನ್ನಾಗಿ ನಡೆಸಿದಳು. ಆಕೆ ತನ್ನ ಶರೀರವನ್ನು ಬೇರೆಯವರಿಗೆ ಕೊಟ್ಟಾಗಲೆಲ್ಲಾ ಭಗವಂತನನ್ನೇ ನೆನೆಯುತ್ತಿದ್ದಳು. ನೀನಾದರೋ ಪ್ರತೀಸರ್ತಿ ಆಕೆಯ ಮನಗೆ ಗಿರಾಕಿ ಬಂದಗಲೆಲ್ಲಾ ನಿನ್ನ ಮನಸ್ಸಿನಲ್ಲಿ ಅವಳೊಟ್ಟಿಗೆ ಕ್ರಿಯೆಯಲ್ಲಿ ತೊಡಗುತ್ತಿದ್ದೆ. ಆಕೆ ಗಿರಾಕಿಯನ್ನು ಕಳುಹಿಸಿ ದಿನವಾದರೂ ನಿನ್ನ ಮನಸ್ಸು ಅದನ್ನೇ ಧ್ಯಾನಿಸುತ್ತಿತ್ತು. ಹೀಗಾಗಿ ಕೊಳಕು ತುಂಬಿದ ನಿನ್ನ ಮನಸ್ಸು ಪಾಪದ ಕೂಪವಾಗಿದೆ."

ಶಾರೀರಿಕ ವ್ಯಭಿಚಾರ ವ್ಯಕ್ತಿಗಳನೇಕರನ್ನು ಹಾಳುಗೆಡವಿದರೆ ಮಾನಸಿಕ ವ್ಯಭಿಚಾರ ಆ ವ್ಯಕ್ತಿಯೊಬ್ಬನನ್ನೇ ಹಾಳುಗೆಡವುತ್ತದೆ. ಇಂತಹ ಅಗೋಚರವಾದ ಮಾನಸಿಕ ಪಾಪವನ್ನು ಜಪ-ತಪದ ಪ್ರಭಾವಳಿಯುಳ್ಳ ಬ್ರಾಹ್ಮಣರಿಗೆ ಧನವನ್ನು ದಾನವಾಗಿ ಕೊಡುವ ಮೂಲಕ ಅಲ್ಪಮಟ್ಟಿಗೆ ಪರಿಹರಿಸಿಕೊಳ್ಳಬಹುದು ಎಂಬುದಾಗಿ ಶಾಸ್ತ್ರ ಸಾರುತ್ತದೆ. ಅದಕ್ಕೆಂತಲೇ ಯಜ್ಞಯಾಗಾದಿ ಒಳ್ಳೆಯ ಕಾರ್ಯಗಳನ್ನು ಮಾಡುವ ಪೂರ್ವಭಾವಿಯಾಗಿ ಕಂಕಣಗ್ರಹಣಮಾಡುವ ಕಾಲದಲ್ಲಿ ’ ಕೃಛ್ರಾಚರಣೆ ’ ಎಂಬ ಪ್ರಾಯಶ್ಚಿತ್ತ ವಿಧಿಯೊಂದಿದೆ. ಅದನ್ನು ಬಹುತೇಕ ವೈದಿಕರು ಮಾಡಿಸುತ್ತಾರೆ. ಇಲ್ಲಿ ಪಾಪದ ವರ್ಗಾವಣೆಯಾಗುವುದರಿಂದ ದಾನರೂಪದ ಧನ ಪಾಪವನ್ನು ಹೊತ್ತು ತರುವುದರಿಂದ ದಾನವನ್ನು ಸ್ವೀಕರಿಸಿದ ಜನ ತನ್ನ ವೈಯ್ಯಕ್ತಿಕ ಜಪ-ತಪದಿಂದ ಅದನ್ನು ನಿವಾರಿಸಿಕೊಳ್ಳಬೇಕಾಗುತ್ತದೆ.

|| ಮನ ಏವ ಮನುಷ್ಯಾಣಾಂ || ಮನಸ್ಸೇ ಎಲ್ಲದಕ್ಕೂ ಕಾರಣವಾಗಿರುವುದರಿಂದ ಮಾನಸಿಕವಾಗಿ ನಾವು ಮಾಡುವ ವ್ಯಭಿಚಾರವೂ ಶಾರೀರಿಕವಾಗಿ ಮಾಡಿದಷ್ಟೇ ಪರಿಣಾಮಕಾರಿ ಎಂಬ ದೃಷ್ಟಿಯಲ್ಲಿ ಮನಸ್ಸಿಗೆ ಯಾವಾಗಲೂ ಅಂತಹ ಆಲೋಚನೆಗಳು ಬಾರದಿರಲಿ ಒಳ್ಳೆಯ ಪ್ರೇರೇಪಣೆಯೇ ಆಗಲಿ ಎಂಬುದೇ ನಿತ್ಯದ ಪ್ರಾರ್ಥನೆಯಾಗಿದೆ. ಈ ಪ್ರಾರ್ಥನೆಯನ್ನೇ ಮೌನವಾಗಿ ಮನದಲ್ಲಿ ಧರಿಸುವುದೇ ಧ್ಯಾನವೆನಿಸಿಕೊಳ್ಳುತ್ತದೆ. ಶರೀರಕ್ಕೆ ಸ್ನಾನವಿದ್ದಹಾಗೇ ಮನಸ್ಸಿಗೆ ಧ್ಯಾನವೇ ಸ್ನಾನವಾಗುತ್ತದೆ! ಧ್ಯಾನದಲ್ಲಿ ನಮ್ಮಂತರಂಗವನ್ನು ಶೋಧಿಸಿಕೊಳ್ಳಬೇಕೆಂದು ದಾಸರು ಹೇಳಿದರು

ಮನವ ಶೋಧಿಸಬೇಕು ನಿತ್ಯ
ನಾವು ಅನುದಿನ ಮಾಡಿದ ಪಾಪ ಪುಣ್ಯದ ವೆಚ್ಚ .....

ಎಂದು. ಎಂತಹ ಅದ್ಬುತ ಜ್ಞಾನಲಹರಿ ! ಅಂತಹ ಹಿರಿಯರಿಗೆ ನಮಿಸುತ್ತಾ ನಮ್ಮ ಅಂತರಂಗವನ್ನು ಶುದ್ಧೀಕರಿಸುವ ಪ್ರಕಿಯೆಯಲ್ಲಿ ತೊಡಗೋಣ ಅಲ್ಲವೇ ?

Wednesday, December 1, 2010

ಮರೆಯಲಾಗದ ಹಾಡುಗಳು


ಮರೆಯಲಾಗದ ಹಾಡುಗಳು

ಹಾಡುಗಳು ಎಲ್ಲರಿಗೂ ಇಷ್ಟವೇ ! ಲಘು ಸಂಗೀತ ಅಥವಾ ಸುಗಮ ಸಂಗೀತವನ್ನು ಬಯಸದ ವ್ಯಕ್ತಿ ಯಾರು ? ನಮ್ಮೆಲ್ಲರ ಜೀವನದಲ್ಲಿ ನಮ್ಮ ನೋವನ್ನೇ ಆಗಲಿ ನಲಿವನ್ನೇ ಆಗಲಿ ಹಾಡುಕೇಳಿಯೋ ಹಾಡಿಯೋ ಅನುಭವಿಸುವುದರಲ್ಲಿ ಇರುವ ಸುಖವೇ ಬೇರೆ. ಹಾಡು ನೋವಿನದ್ದೇ ಆದರೂ ನಮ್ಮ ಮನಸ್ಸು ಆ ಹಾಡನ್ನು ಕೇಳುತ್ತಾ ಎಲ್ಲವನ್ನೂ ಮರೆಯುತ್ತದೆ. ಸಂತೋಷ ಹೆಚ್ಚಲು ಹಾಡುಗಳೇ ಹಲವೊಮ್ಮೆ ಕಾರಣವಾಗುತ್ತವೆ. ಅಲ್ಲಿ ಕೆಲವೊಮ್ಮೆ ಭಾಷೆಯ ಬಂಧನ ಕೂಡ ಮೀರಿಹೋಗುತ್ತದೆ ! ಬೆಳಗಾಗೆದ್ದಾಗ ಮರಾಠಿ ಅಭಂಗಗಳು, ಭಜನೆಗಳು ಕೇಳಲು ಬಹಳ ಹಿತವಾದರೆ ಮಿಕ್ಕುಳಿದ ಸಮಯದಲ್ಲಿ ನಮ್ಮದೇ ಆದ ಕನ್ನಡ ಅಥವಾ ಹಿಂದಿ ಹಾಡುಗಳು ಇಷ್ಟವಾಗುತ್ತವೆ ಅಲ್ಲವೇ ? ಸಂಗೀತವೇ ಇಲ್ಲದ ಪ್ರಪಂಚವನ್ನು ಊಹಿಸುವುದೂ ಕಷ್ಟ!

ರಾಗವಾಗಿ ಹಾಡುವವರನ್ನು ಕಂಡಾಗ ನನಗೆ ನಾನೂ ಹಾಡುವ ಆಸೆ ಹುಟ್ಟುತ್ತದೆ. ಚಿಕ್ಕಂದಿನಲ್ಲಿ ಹಾಡಿ ಶಾಲೆಗಳಲ್ಲಿ ಮೊದಲ ಸ್ಥಾನವನ್ನು ಪಡೆದದ್ದೂ ಇದೆ ಎನ್ನಿ. ಆದರೆ ಬರುತ್ತಾ ಬರುತ್ತಾ ರಾಯರ ಕುದುರೆ ಆ ವಿಷಯದಲ್ಲಿ ಸ್ವಲ್ಪ ಕತ್ತೆಯಾಯಿತು. ಈಗಲೂ ನಾನೊಬ್ಬ ’ಬಾತರೂಮ್ ಸಿಂಗರ್’ ಗಿಂತ ಸ್ವಲ್ಪ ಮೇಲೇ ಅನ್ನಿ! ಆದರೂ ಹಾಡಲಿಕ್ಕೆ ನಿಂತರೆ ಮಾತ್ರ ಸುತ್ತಲಿನ ನೆಲವೆಲ್ಲಾ ಕಂಪಿಸಲಿಕ್ಕೆ ಆರಂಭವಾಗಿಬಿಡುತ್ತದೆ. ನಾನು ಇದ್ದಲ್ಲೇ ಇರುತ್ತೇನೆ. ಅದಕ್ಕೇ ಹಲವಾರು ಬಾರಿ ನಾನು ಕನ್ನಡಿಯ ಮುಂದೆ ನಿಂತು ಹಾಡಲು ಪ್ರಯತ್ನಿಸುವುದಿದೆ, ಆಗಾಗ ದೂರದರ್ಶನದ ಮಹೇಶ್ ಜೋಶಿಯವರಂತೇ ಇರುವ ಕಂಠದಲ್ಲೇ ಮೈಕು ಹಿಡಿದಿದ್ದಿದೆ ! ಆದರೆ ಅದ್ಯಾಕೋ ನಾನು ಅನಂತಸ್ವಾಮಿಯವರ ಅಥವಾ ಅಶ್ವತ್ಥ್‍ರ ಶಿಷ್ಯನಾಗಲೇ ಇಲ್ಲ.

’ಹಾಡು ಹಳೆಯದಾದರೇನು ಭಾವ ನವನವೀನ’ ಎನ್ನುವ ಹಾಡಾದರೇನು ’ಎದೆತುಂಬಿಹಾಡಿದೆನು ಅಂದು ನಾನು’ ಎನ್ನುವ ಗೀತೆಯಾದರೇನು ಅಂತೂ ಹಾಡು ನಮಗೆ ಬೇಕೇಬೇಕು. ಹಾಡಿನ ಪ್ರಭಾವ ಜಾಸ್ತಿಯಾದ ಕಾರಣವೇ ಈಗ ಹಲವುಕಡೆ ಸಂಗೀತ ಕಲಿಯುವ ಆಸಕ್ತಿ ಚಿಕ್ಕ ಹುಡುಗರಲ್ಲೂ ಮೂಡುತ್ತಿದೆ; ಪಾಲಕವೃಂದ ಅದನ್ನು ಮೂಡಿಸುತ್ತಿದೆ. ಆದರೆ ಯುವಕರು ವಯಸ್ಕರು ಹಾಡುವ ಹಾಡುಗಳನ್ನೆಲ್ಲಾ ಅವರಿಗಿಂತಾ ಭಾವಪೂರ್ಣವಾಗಿ ಎಳೆಯ ಮಕ್ಕಳು ಹಾಡುವುದನ್ನು ನೋಡಿದಾಗ ಮಕ್ಕಳು ಬಹಳ ಬೇಗನೇ ವಯಸ್ಕರ ಅನುಭವಗಳನ್ನು ಪಡೆಯುತ್ತಿದ್ದಾರೆಯೇ ಎಂಬ ಆತಂಕ ಕೂಡ ಉಂಟಾಗುತ್ತದೆ. ಮಕ್ಕಳಿಗೆ ಸಂಗೀತ ಕಲಿಸುವಾಗ ಪಾಲಕರು ಅವರ ವಯಸ್ಸಿಗೆ ಅನುಗುಣವಾದ ಹಾಡುಗಳನ್ನು ಆಯ್ಕೆಮಾಡಿಕೊಳ್ಳುವುದು ಸೂಕ್ತವೆನಿಸುತ್ತದೆ.

ಜೀವಕ್ಕೂ ಭಾವಕ್ಕೂ ಸೇತುವೆ ನಿರ್ಮಿಸಿ ಅದರಮೇಲೆ ಹದವಾದ ವೇಗದಲ್ಲಿ ನವರಸಗಳ ಲಹರಿಯೆಂಬ ವಾಹನವನ್ನು ಓಡಿಸುವುದೇ ಸಂಗೀತ. ಸಂಗೀತವನ್ನಾತು ಅದರ ಸಪ್ತಸ್ವರಲಾಲಿತ್ಯದಲ್ಲಿ ಓಲಾಡುವ ಶಬ್ದಗಳ ಸರಮಾಲೆಯೇ ಇಂಪಾದ ಹಾಡೆನಿಸುತ್ತದೆ. ಸ್ವರಲಾಲಿತ್ಯದ ಪರಿಜ್ಞಾನವಿಲ್ಲದಿದ್ದರೆ ಹಾಡನ್ನು ಹಾಡುವುದು ಸುಲಭವಾಗುವುದಿಲ್ಲ. ಅಥವಾ ಅಂತಹ ಹಾಡುಗಳನ್ನು ಜನ ಕೇಳಬೇಕಾಗಿ ಬಂದಾಗ ತಪ್ಪಿಸಿಕೊಂಡು ಓಡುತ್ತಾರೆ! ಹಾಡಿಗೆ ಸಾಹಿತ್ಯ ಒಳ್ಳೆಯದಾಗಿರಬೇಕು, ಸ್ವರಸಂಯೋಜನೆ ಸರಿಯಾಗಿ ಆಗಬೇಕು, ರಾಗರಂಜಿತವಾಗುವಂತಿರಬೇಕು, ಹಾಡುವವರ ಕಂಠ ಶಾರೀರ ಉತ್ಕೃಷ್ಟವಾಗಿರಬೇಕು, ವಾದ್ಯಪರಿಕರಗಳ ಬಳಕೆ ಹಿತಮಿತವಾಗಿರಬೇಕು ಇಷ್ಟೆಲ್ಲಾ ಇದ್ದಾಗ ಮಾತ್ರ ಹಾಡಿಗೊಂದು ಸಂಪೂರ್ಣ ಕಳೆ ಬರುತ್ತದೆ! ಹಾಳೆಯಮೇಲೆ ಕವಿಯೊಬ್ಬ ಕವನ ಬರೆದುಕೊಟ್ಟರೆ ಅದಕ್ಕೆ ಸ್ವರಪ್ರಸ್ತಾರ ಹಚ್ಚುವ ಮೊದಲು ಓದುಗ ಇಷ್ಟಪಡುವದು ಅಷ್ಟಕ್ಕಷ್ಟೇ ! ಇದಕ್ಕೆ ಉದಾಹರಣೆ ನಮ್ಮ ಕೆ.ಎಸ್.ನ ಅವರ ’ಮೈಸೂರು ಮಲ್ಲಿಗೆ.’ ಒಂದೊಮ್ಮೆ ಸಂಗೀತಕ್ಕೆ ಅದು ಅಳವಡಿಸಲ್ಪಡದಿದ್ದರೆ ಅದು ಇಷ್ಟೊಂದು ಜನಪ್ರಿಯತೆ ಗಳಿಸುತ್ತಿತ್ತೋ ಇಲ್ಲವೋ!

ಸಂಗೀತಗಾರನೊಬ್ಬ ಹಾಡಿಗೆ ಸಂಗೀತ ಸಂಯೋಜಿಸುವಾಗ ಮೂಲ ಕವಿಯ ಆಶಯಗಳನ್ನೂ, ಕಲ್ಪನೆಗಳನ್ನೂ, ಸನ್ನಿವೇಶಗಳನ್ನೂ ತಿಳಿದು ಆ ಕೆಲಸ ಕೈಗೊಂಡರೆ ಆಗ ಹಾಡು ಅದ್ಬುತವಾಗಿ ಹೊರಹೊಮ್ಮುತ್ತದೆ. ಕವಿಯ ಉಪಸ್ಥಿತಿಯಿಲ್ಲದೇ ತನ್ನದೇ ಕಲ್ಪನೆಯಲ್ಲಿ ಸಂಗೀತ ಕೊಟ್ಟರೆ ಆಗ ಅದರ ಗತ್ ಸ್ವಲ್ಪ ಬದಲಾಗುತ್ತದೆ. ಇನ್ನು ಹೇಗಾದರಾಗಲಿ ಎಂದು ಇದ್ದಬದ್ದ ವಾದ್ಯಗಳನ್ನೆಲ್ಲಾ ಬಾರಿಸಿದರೆ ಆಗ ಹಾಡಿನ ಗತಿ ಅಧೋಗತಿ! ಕವಿಯೊಬ್ಬನ ನವಿರಾದ ಭಾವನೆಯನ್ನು ಅರ್ಥಮಾಡಿಕೊಳ್ಳುವ ತಾಳ್ಮೆ ಸಂಗೀತಗಾರನಿಗೆ ಬರಲೇಬೇಕು. ಉಷಾ ಉತ್ತುಪ್ಪರ ಹಾಡುಗಳನ್ನು ಬಯಸುವ ಜನರು ಸ್ವಲ್ಪ ಕಮ್ಮಿಯೇ ಇರುತ್ತಾರೆ ಸಮಾಜದಲ್ಲಿ. ಪಾಪ್ ಸಂಗೀತವನ್ನು ನಾನೆನ್ನುವುದು ಪಾಪಮಾಡಿದವರ ಸಂಗೀತ ಅಂತ ! ಸಂಗೀತದಲ್ಲೇ ವೇದ ಕೂಡ ಅಡಗಿದೆ. ಆದಿಭಾರತ [ಮಹಾಭಾರತ]ಕ್ಕೆ ಅದನ್ನು ವ್ಯಾಸರು ಕಾವ್ಯರೂಪವಾಗಿ ಗಣಪನಿಗೆ ಹೇಳಿದಾಗ, ಅದನ್ನು ಅರ್ಥೈಸಿಕೊಂಡು ಆನಂದತುಂದಿಲನಾಗಿ ಬರೆಯುತ್ತಾ ಹೋದ ಗಣಪ ಕೊನೇಗೊಮ್ಮೆ ಈ ಕಾವ್ಯ ಪಂಚಮವೇದವಾಗಲಿ ಎನ್ನುತ್ತಾನೆ! ಪ್ರಾಯಶಃ ಅದಕ್ಕೂ ಮೊದಲು ಸಂಗೀತಕ್ಕೆ ಅಷ್ಟೊಂದು ಪ್ರಾಶಸ್ತ್ಯ ದೊರೆತಿತ್ತೋ ಇಲ್ಲವೋ ಸಂದೇಹ. ಭಾರತೀಯ ಸಂಗೀತದ ಉಚ್ಚ ಸ್ಥಾಯಿ [ಹೈ ನೋಟ್]ಯಲ್ಲಿ ತಲ್ಲೀನನಾದ ಹಾಡುಗಾರನಿಗೆ ಪರಮಾನಂದದ ಅನುಭವವಾಗುತ್ತದೆ ಎಂಬುದು ವಿಜ್ಞಾನಿ ಡಾ| ರಾಜಾರಾಮಣ್ಣನವರ ಇಂಗಿತವಾಗಿತ್ತು. ಪಿಯಾನೋ ನುಡಿಸುತ್ತಿದ್ದುದು ಪಾಶ್ಚಾತ್ಯ ವೈಖರಿಯಲ್ಲಾದರೂ ಅವರಿಗೆ ನಮ್ಮಲ್ಲಿನ ಸಂಗೀತವೇ ಇಷ್ಟವಾಗಿತ್ತು.

ಕೆಲವು ಹಾಡುಗಳನ್ನು ನಾವು ಮರೆಯಲು ಆಗದಂತೇ ಕೆಲವು ಸಂಗೀತಜ್ಞರು ಅದನ್ನು ದೃಶ್ಯ ಹಾಗೂ ಶ್ರಾವ್ಯ ಮಾಧ್ಯಮಕ್ಕೆ ಅಳವಡಿಸಿದ್ದಾರೆ. ಅಂತಹ ಹಾಡುಗಳು ಎಷ್ಟೇ ಸಲ ಕೇಳಿದರೂ ಇನ್ನೂ ಮತ್ತೂ ಕೇಳಲು ಬೇಸರವಾಗದ ಹಾಡುಗಳು. ಅದರಲ್ಲಂತೂ ಭಾವನಗಳಿಗೆ ಭರಪೂರ ಮಹತ್ವವೀಯುವ ಹಾಡುಗಳಾದರೆ ಅವು ನಮ್ಮಮೇಲೆ ಉಂಟುಮಾಡುವ ಪ್ರಭಾವವೇ ಬೇರೆ. ಅಂತಹ ಕೆಲವು ಹಾಡುಗಳನ್ನು ಆಗಾಗ ಆಗಾಗ ಗುನುಗುನಿಸುತ್ತಲೇ ಇರಬೇಕೆನಿಸುತ್ತದೆ. ಅಂತಹ ಹಾಡುಗಳು ತರುವ ನೆಮ್ಮದಿಯನ್ನು ಶಬ್ದಗಳಲ್ಲಿ ಸೆರೆಹಿಡಿಯಲು ಸಾಧ್ಯವಿಲ್ಲ. ಕವಿ ದಿ| ಶ್ರೀ ಗೋಪಾಲಕೃಷ್ಣ ಅಡಿಗರು ರಚಿಸಿ ನಿರ್ದೇಶಕ ಶ್ರೀನಾಗಾಭರಣ ದೃಶ್ಯಮಾಧ್ಯಮಕ್ಕೆ ಅಳವಡಿಸಿ ಗಾಯಕಿ ಶ್ರೀಮತಿ ಮಂಜುಳಾ ಗುರುರಾಜ್ ಹಾಡಿರುವ ಅಂಥ ಒಂದು ಹಾಡನ್ನು ತಮಗೆ ಕೇಳಿಸುತ್ತಾ ಇವತ್ತಿಗೆ ನಿಮ್ಮಿಂದ ಬೀಳ್ಕೊಳ್ಳುತ್ತಿದ್ದೇನೆ ಕೇಳಿ ಆನಂದಿಸಿ :



Tuesday, November 30, 2010

ರಂಗೀ ನಿನ್ ಕಂಡಮ್ಯಾಗ

ಚಿತ್ರಋಣ : ಅಂತರ್ಜಾಲ
ರಂಗೀ ನಿನ್ ಕಂಡಮ್ಯಾಗ

[ಇದೊಂದು ಹೊಸತನದ ಗೀತೆ, ಹರೆಯದ ಹುಡುಗ ಚಳಿಯಲ್ಲಿ ಸುಂದರವಾದ ಹುಡುಗಿಯನ್ನು ಕಂಡು ತನ್ನೊಳಗೇ ತಾನು ಗುನುಗುನಿಸಿ ರಾಗವಾಗಿ ಹಾಡಿಕೊಳ್ಳುವ ಸನ್ನಿವೇಶ. ಗುರು ಬೇಂದ್ರೆಯವರ ಒಂದು ಪಿಂಚ್ ಕೊಟ್ಟು ಜನಪದ ಶೈಲಿಯಲ್ಲಿ ಹೊಸೆದ ಹಾಡು[ಫ್ಯುಶನ್]. ಹರೆಯದ ಮಿತ್ರರೆಲ್ಲಾ ಒಮ್ಮೆ ಕುಣಿಯಲಿ ಎಂಬ ಭಾವನೆಯಿಂದ ಪ್ರಕಟಿಸುತ್ತಿದ್ದೇನೆ. ]


ರಂಗೀ ನಿನ್ ಕಂಡಮ್ಯಾಗ
ಮಂಗನಂತಾಗಿ ಹೋದೆ
ಅಂಗಳದ ತುಂಬಾ ನವಿಲ್ ಕುಣಿದು
ಬಂಗಾರದಂಥಾ ನಿನ್ನ
ಚಂಗನೇ ಹಿಡಿದೆತ್ಕೊಂಡು
ರಂಗಿನಾ ಕೆಂಪು ತುಟಿಗೆ ತುಟಿಯ ಹಿಡಿದು

ಮಂಗಳದಾ ಮೂಗುತಿಯಲ್ಲಿ
ಸಿಂಗಾರಕೆ ಚಂದದ ಹರಳು
ಸಂಗಾತಿಯಾಗಿ ಜತೆಗೆ ಬರುತೀಯಾ ?
ತಿಂಗಳು ಹರಡಿದ ರಾತ್ರಿ
ತೆಂಗಿನ ತೋಟದ ನಡುವೆ
ಕಂಗು ವೀಳೆಯದೆಲೆ ತರುತೀಯಾ?

ರಿಂಗಣಿಸುವ ಕಾಲಿನಗೆಜ್ಜೆ
ಮುಂಗುರುಳಿನ ತೂಗುಯ್ಯಾಲೆ
ಮುಂಗಾರು ಮಳೆಯ ಸುರಿಸಿ ಎದೆಯೊಳಗೆ
ನಿಂಗೇನ್ ಗೊತ್ ನನ್ ಪರಿಪಾಟ ?
ಅಂಗಾಂಗದಾ ಹೊಯ್ದಾಟ
ಭಂಗವದು ಹೇಳತೀರ ಮನದೊಳಗೆ !

ರಂಗೇರಿಸೊ ಈ ಚಳಿಯಲ್ಲಿ
ಕಂಗೊಳಿಸುವ ರೂಪ ನೆನೆದು
ತುಂಗಾನದಿಗೆ ನೆಗಸು ಬಂದಂತೇ !
ರಂಗೀ ಎನ್ನುತ್ತಾ ಕರೆದು
ಪುಂಗಿ ಊದುತ್ತ ದಣಿದು
ನಿಂಗಾಗಿ ಬಾಳಾ ದಿನ ಕಾದುಕುಂತೇ !

ಹಂಗ್ಯಾಕ ಮಾಡ್ಲಾಕ ಹತ್ತಿ ?
ಹೀಂಗ ನೀ ಬಾರಾ ಇಲ್ಲಿ
ಹೆಂಗಾದ್ರೂ ನಾವು ಮುಂದೆ ಒಂದೇನ
ನಂಗಂತೂ ನೀನ ಬೇಕು
ನಿಂಗೂ ನನ್ ಸಂಗಾ ಬೇಕು
ಮಂಗಳವಾದ್ಯ ಬೇಗ ತರಸ್ತೇನ !



Monday, November 29, 2010

ಟಾಟಾರನ್ನು ನೋಡಿ ಕಲಿಯೋಣ




ಟಾಟಾರನ್ನು ನೋಡಿ ಕಲಿಯೋಣ

ನಮ್ಮ ಭಾರತದಲ್ಲಿ ನೈತಿಕತೆಗೆ ಅತಿಯಾದ ಪ್ರಾಮುಖ್ಯತೆ ಕೊಡುವ ಏಕೈಕ ಸಂಸ್ಥೆ ಎಂದರೆ ಅದು ಟಾಟಾ ಗ್ರೂಪ್ ! ಭಾರತದ ಸರಕಾರಕ್ಕೇ ಇರದ ಜವಾಬ್ದಾರಿಯುತ ಕೆಲಸಗಳನ್ನು ಟಾಟಾ ಸಂಸ್ಥೆಗಳು ಮಾಡಿವೆ. ಟಾಟಾ ಅಂದರೇ ಭಾರತ ಎನ್ನುವಷ್ಟು ಅನ್ಯೋನ್ಯ ಸಂಬಂಧ ಪ್ರಜೆಗಳಿಗಿದೆ, ಆದರೆ ನಮ್ಮನ್ನು ಆಳುವ ಪ್ರಭುಗಳಿಗಳಿಗಿಲ್ಲ ! ಮೊನ್ನೆ ಮೊನ್ನೆ ಶ್ರೀ ರತನ್ ಟಾಟಾ ಹೇಳಿದ್ದಾರೆ : " ೧೫ ವರ್ಷಗಳ ಹಿಂದೆ ನಮಗೆ ವಿಮಾನೋದ್ಯಮಕ್ಕೆ ಪರವಾನಿಗೆ ಕೊಡಲು ಕೇಳಿದಾಗ ೨೦ ಕೋಟಿ ಲಂಚ ಕೇಳಿದರು " ಎಂದು. ಟಾಟಾ ಜನರಿಗೆ ಲಂಚ ಕೊಟ್ಟಾಗಲೀ ಪಡೆದಾಗಾಲೀ ಗೊತ್ತಿಲ್ಲ ! ಅವರು ಅತ್ಯಂತ ಪ್ರಾಮಾಣಿಕರು.

ಬ್ರಿಟಿಷರು ಭಾರತವನ್ನು ದೋಚಿದರು ಎಂದು ಬೊಬ್ಬಿರಿಯುವ ನಾವೆಲ್ಲಾ ನಮ್ಮ ಕಳ್ಳ ರಾಜಕಾರಣಿಗಳು ಕೊಳ್ಳೆಹೊಡೆದು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದನ್ನು ಮರೆತುಬಿಟ್ಟಿದ್ದೇವೆ ! ಇದನ್ನೆಲ್ಲಾ ಹೇಳಲು ಕೇಳಲು ಜನವೇ ಇಲ್ಲ. ರಾಜಕಾರಣಿಗಳೆಲ್ಲರೂ ಒಂದೇ ದೋಣಿಯ ಕಳ್ಳರಾಗಿರುವುದರಿಂದ ಹೊರಜಗತ್ತಿಗೆ ಕಾಣುವ ಅವರ ಮುಖಗಳೇನೇ ಇದ್ದರೂ ಒಳಗಡೆಯ ರಾಜಕೀಯದ ಜಗತ್ತೇ ಬೇರೆ! ಅಲ್ಲಿ ಅವರವರಲ್ಲೇ ಪಕ್ಷಭೇದ ಮರೆತ ಗೆಳೆತನವಿರುತ್ತದೆ ! ಕೊಂದ ಪ್ರಾಣಿಯನ್ನು ಹರಿದು ತಿನ್ನುವ ಹೈನಾ ಅಥವಾ ಕತ್ತೆಕಿರುಬನ ಜಾತಿಗೆ ಅವರನ್ನು ಹೋಲಿಸಬಹುದು. ಹೊಟ್ಟೆಗಾಗಿ ಏನನ್ನೂ ಮಾಡಲು ಹೇಸದ ಪ್ರಾಣಿ ಕತ್ತೆಕಿರುಬ, ಇಲ್ಲಿ ಹಣಕ್ಕಾಗಿ ಏನೂ ಮಾಡಲು ಹೇಸದವರು ರಾಜಕಾರಣಿಗಳು--ಇದೊಂದೇ ವ್ಯತ್ಯಾಸ! ಮೊದಲಾಗಿ ಚುನಾವಣೆಗೆ ನಿಂತು ಹೆಂಡತಿಯ ಸೆರಗನ್ನು ಹಿಡಿದು ಮತದಾನಮಾಡಿ ಎಂದು ಬಡ ಭಿಕ್ಷುಕನ ಥರ ಬಂದ ಯಾವನೇ ಒಬ್ಬ ವ್ಯಕ್ತಿ ಶಾಸಕನಾದ ಐದುವರ್ಷಗಳಲ್ಲಿ ಅತಿ ಶ್ರೀಮಂತನಾಗಿ ಬದಲಾಗುವುದು ನಮ್ಮಂತಹ ಬಡಪಾಯಿಗಳ ಕಣ್ಣಿಗೆ ಕಾಣದ ಹಗಲುದರೋಡೆಯಿಂದ !

ತಮ್ಮ ಗುರುವಾದ ಜರಾತುಷ್ಟ್ರರನ್ನು ಜತೆಯಾಗಿ ಭಾರತಕ್ಕೆ ಆಶ್ರಯಬೇಡಿ ಬಂದವರು ಪಾರ್ಸಿಗಳು. ಅವರು ಮೊದಲು ಬಂದಿಳಿದದ್ದು ಗುಜರಾತ್ ರಾಜ್ಯಕ್ಕೆ. ಹಾಗೆ ಅಲ್ಲಿಗೆ ಬಂದಾಗ ಗುಜರಾತ್ ಪ್ರಾಂತವನ್ನಾಳುತ್ತಿದ್ದ ಭಾರತದ ದೊರೆ ಅವರಿಗೆ ದೂತನ ಮೂಲಕ ಕಳುಹಿಸಿದ್ದು ತುಂಬಿದ ಹಾಲಿನ ಟಾಕಿ ಅಥವಾ ಕರಂಡಕ[ಮಿಲ್ಕ್ ಟ್ಯಾಂಕ್]. ಅದು ಸಾಂಕೇತಿಕವಾಗಿ ನಮ್ಮ ರಾಜ್ಯ ಜನರಿಂದ ತುಂಬಿದೆ, ಇಲ್ಲಿ ಹೊರದೇಶದ ಪ್ರಜೆಗಳಿಗೆ ಜಾಗವಿಲ್ಲಾ ಎಂಬುದು ಹೇಳಿಕೆ. ಆಗ ಗುರು ಜರಾತುಷ್ಟ್ರರು ಅಲೋಚಿಸಿ ಒಂದಷ್ಟು ಸಕ್ಕರೆಯನ್ನು ಆ ಹಾಲುತುಂಬಿದ ಕರಂಡಕಕ್ಕೆ ಸುರುವಿ ಅದೇ ದೂತನ ಮೂಲಕ ಮರಳಿ ಆ ರಾಜನಿಗೆ ಕಳುಹಿಸುತ್ತಾರೆ; ಅದರೊಡನೆ ಒಂದು ವಿನಂತಿ ಪತ್ರ ಏನೆಂದರೆ ತಮ್ಮನ್ನು ನಿಮ್ಮ ರಾಜ್ಯಕ್ಕೆ ಸೇರಿಸಿಕೊಂಡರೆ ತಮ್ಮ ಜನ ನಿಮ್ಮಲ್ಲೇ ಒಂದಾಗಿ ನಿಮ್ಮೆಲ್ಲರಿಗಾಗಿ, ನಿಮ್ಮ ರಾಜ್ಯಕ್ಕಾಗಿ[ದೇಶಕ್ಕಾಗಿ] ಆದಷ್ಟೂ ಒಳಿತನ್ನು ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತೇವೆ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಆದಷ್ಟೂ ಪ್ರಾಮಾಣಿಕ ಪ್ರಯತ್ನಮಾಡುತ್ತೇವೆ. ರಾಜ ಆ ವಿನಂತಿಯಿಂದ ಸಂತುಷ್ಟನಾದ. ಪಾರ್ಸಿಗಳನ್ನು ರಾಜ್ಯಕ್ಕೆ ಸೇರಿಸಿಕೊಂಡ !

ತಮ್ಮ ಗುರು ಆ ಕಾಲಕ್ಕೆ ಕೊಟ್ಟ ವಚನವನ್ನು ಪಾರ್ಸಿಗಳು ಪಾಲಿಸುತ್ತಲೇ ಬಂದರು. ಧರ್ಮಭೀರುಗಳಾದ ಅವರು ಯಾವುದೇ ಅನೈತಿಕ ಹಾಗೂ ಧರ್ಮಬಾಹಿರ ಕೆಲಸಗಳಲ್ಲಿ ತೊಡಗುವವರಲ್ಲ. ಇಂತಹ ಜನಾಂಗದಲ್ಲಿ ಭಾರತದ ಭಾಗವೇ ಆಗಿ ಜನಿಸಿದವರು ದಿ| ಶ್ರೀ ಜೆ.ಎನ್.ಟಾಟಾ. ಅವರು ಆರಂಭಿಸುವುದಕ್ಕೂ ಮುನ್ನ ಭಾರತದಲ್ಲಿ ಸರಿಯಾದ ಕೈಗಾರಿಕಾ ವಸಾಹತುಗಳೇ ಇರಲಿಲ್ಲ, ಜಲವಿದ್ಯುತ್ ಸ್ಥಾವರಗಳಿರಲಿಲ್ಲ, ಕಬ್ಬಿಣ-ಉಕ್ಕು ಕಾರ್ಖಾನೆಗಳಿರಲಿಲ್ಲ, ದೊಡ್ಡ ಬಟ್ಟೆ ಗಿರಣಿಗಳಿರಲಿಲ್ಲ ಹೀಗೇ ಒಂದಲ್ಲ ಎರಡಲ್ಲ..ಹತ್ತು ಹಲವು ಪ್ರಥಮಗಳಿಗೆ ಕಾರಣರಾದವರು ಜೆ.ಎನ್.ಟಾಟಾ. ಭಾರತದ ಉನ್ನತಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಮಹಾವಿದ್ಯಾಲಯವೊಂದು ಬೇಕು ಎಂದು ಕನಸುಕಂಡು, ಬ್ರಿಟಿಷ್ ರಾಯಭಾರಿಗಳೊಂದಿಗೆ ನೈತಿಕವಾಗಿ ಹೋರಾಡಿ ಅದನ್ನು ಸಮರ್ಥಿಸಿ ಅನುಮತಿ ಪಡೆದು ಅಂತೂ ತಮ್ಮ ಮರಣಾನಂತರವೂ ಅದು ಸಾಧ್ಯವಾಗಿ ಬೆಂಗಳೂರಿನಲ್ಲಿ ಟಾಟಾ ಇನ್ಸ್‍ಟಿಟ್ಯೂಟ್ ಅಥವಾ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಗೆ ಕಾರಣರಾದವರೂ ಅವರೇ.

ಇಂತಹ ಜನಾಂಗದ ಇನ್ನೊಂದು ಕುಡಿ ಮತ್ತು ಜೆ.ಎನ್.ಟಾಟಾರವರ ಸಹೋದರ ಸಂಬಂಧಿ ದಿ| ಶ್ರೀ ಜೆ.ಆರ್.ಡಿ ಟಾಟಾ. ಬ್ರಿಟಿಷರು ಆಳುತ್ತಿದ್ದ ಕಾಲಕ್ಕೇ ಭಾರತಕ್ಕೆ ವಿಮಾನಯಾನವನ್ನು ಮೊದಲಾಗಿ ಪರಿಚಯಿಸಿ, ಅದಕ್ಕೊಂದು ಸ್ಥಾಯೀ ಗೌರವ ಸಿಗುವಂತೇ ಮೌಲ್ಯವರ್ಧಿತ ಸೇವೆ, ನೀತಿ-ನಿಯಮಗಳನ್ನು ರಚಿಸಿ, ಪ್ರಚುರಪಡಿಸಿ ಇಡೀ ಜಗತ್ತಿನಲ್ಲಿ ೧೯೧೪ ರಲ್ಲಿ ಮೊದಲಾಗಿ ಕಾರ್ಯಾರಂಭಮಾಡಿದ ವ್ಯವಸ್ಥಿತ ಅಂತರ್ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ನಮ್ಮ ಭಾರತದ ನೆಲದಲ್ಲಿ ರೂಪಿಸಿದ ಹೆಗ್ಗಳಿಕೆ ಶ್ರೀ ಜೆ.ಆರ್.ಡಿಯವರದು. ಕಾಲಕಾಲಕ್ಕೆ ಸರಕಾರಕ್ಕೆ ಹಲವು ಸಲಹೆಗಳನ್ನು ನೀಡುತ್ತಾ, ಸ್ವತಂತ್ರ ಭಾರತದ ಸರಕಾರದ ಜನ ತಮ್ಮ ವಿಮಾನಯಾನ ಸಂಸ್ಥೆಯನ್ನೂ ಸೇರಿದಂತೇ ಹಲವು ಖಾಸಗಿ ವಿಮಾನಯಾನ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸುವಾಗ ಕೊಟ್ಟ ಕೆಲಸಕ್ಕೆ ಬಾರದ ಪರಿಹಾರ ಧನವನ್ನು ಪರಿಷ್ಕರಿಸಿ ಜಾಸ್ತಿ ಕೊಡುವಂತೇ ವಿನಂತಿಸಿ ಸೋತವರು ಜೆ.ಆರ್.ಡಿ. ಅದೇ ಜನ ಇವರನ್ನು ಏರ್ ಇಂಡಿಯಾ ಇಂಟರ್ನ್ಯಾಶನಲ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ದುಂಬಾಲುಬಿದ್ದಾಗ ಒಲ್ಲದ ಮನಸ್ಸಿನಲ್ಲೇ ಒಪ್ಪಿದವರು ಜೆ.ಆರ್.ಡಿ. ೪೫ ವರ್ಷಗಳ ಸಾರ್ಥಕ, ಸಮರ್ಪಕ ಹಾಗೂ ದಕ್ಷ ಸೇವೆಯನ್ನು ಸಲ್ಲಿಸುತ್ತಿರುವಾಗಲೇ ರಾಜಕೀಯ ನಾಯಕರ ವಿಕೃತ ಮನಸ್ಥಿತಿಗೆ ಸ್ಥಾನ ಕಳೆದುಕೊಂಡವರೂ ಇವರೇ. ೧೯೭೭ ರಲ್ಲಿ ಚುನಾವಣಾ ಪೂರ್ವ ಪಕ್ಷದ ಖರ್ಚಿಗೆ ವಂತಿಗೆ ಎತ್ತಲು ಬಂದ ಮೊರಾರ್ಜಿ ದೇಸಾಯಿಗೆ ಏನನ್ನೂ ಕೊಡದಿದ್ದುದೇ ಕಾರಣವಾಗಿ ಚುನಾವಣೆಯಲ್ಲಿ ಗೆದ್ದುಬಂದು ಪ್ರಧಾನಿಯಾದ ಮೊರಾರ್ಜಿ ತನ್ನ ಈರ್ಷ್ಯೆಯನ್ನು ತೀರಿಸಿಕೊಂಡಿದ್ದು : ಏರ್ ಇಂಡಿಯಾ ಅಧ್ಯಕ್ಷಸ್ಥಾನದಲ್ಲಿದ್ದ ಟಾಟಾರನ್ನು ಏಕಾಏಕಿ ವಜಾಗೊಳಿಸಿರುವುದು ! ೩೦ ಕ್ಕೂ ಹೆಚ್ಚು ವರ್ಷಗಳಲ್ಲಿ ಯಾವುದೇ ಪ್ರತಿಫಲ ತೆಗೆದುಕೊಳ್ಳದೇ ಪ್ರಾಮಾಣಿಕವಾಗಿ ಕೆಲಸಮಾಡಿದ ವ್ಯಕ್ತಿಗೆ ಭಾರತದ ರಾಜಕಾರಣಿಗಳು ಕೊಟ್ಟ ಗೌರವ ಇದು.

ಅವರೇ ಹೇಳುವಂತೇ ತನಗಾಗಿ ಎಂದೂ ಅವರು ಮರುಗಲಿಲ್ಲ. ತಾನೇ ಕಟ್ಟಿಬೆಳೆಸಿದ ಏರ್ ಇಂಡಿಯಾ ಸಂಸ್ಥೆಗೆ ಮಾತೃ ಸದೃಶ ಸಂಬಂಧ ತಮ್ಮದಾದ್ದರಿಂದ ಅಲ್ಲಿರುವ ಎಲ್ಲಾ ಕೆಲಸಗಾರರ ಹಿತಾರ್ಥ, ಅವರೆಲ್ಲರ ನಾಡಿಮಿಡಿತವನ್ನು ಬಲ್ಲ ತನ್ನನ್ನು ಹೊರದಬ್ಬಿದ್ದು ತಾಯ ತೋಳ್ತೆಕ್ಕೆಯಲ್ಲಿರುವ ಮಗುವೊಂದನ್ನು ಎಳೆದುಕೊಂಡು ತಾಯನ್ನು ಹೊರದೂಡಿದ ರೀತಿಯಲ್ಲಿ ಭಾಸವಾಯಿತು. ಇಂತಹ ಒಳ್ಳೆಯ ಟಾಟಾ ಗುಂಪಿನ ಇವತ್ತಿನ ಯಜಮಾನ ಶ್ರೀ ರತನ್ ಟಾಟಾ ಕಳೆದ ೧೫ ವರ್ಷಗಳ ಹಿಂದೆ ತಮ್ಮ ದೂರದರ್ಶಿತ್ವದಿಂದ ತಮ್ಮ ಖಾಸಗೀ ವಿಮಾನಯಾನ ಸಂಸ್ಥೆಯೊಂದನ್ನು ನಡೆಸಲು ಪರವಾನಿಗೆ ಬಯಸಿದ್ದರು. ಆಗ ಪ್ರಸ್ತಾಪವಾಗಿದ್ದೇ ’ಲಂಚ.’ ಇವತ್ತು ಕರ್ನಾಟಕದಲ್ಲಿ ಕೂತು ಕೂಗುತ್ತಿರುವ ಸಿ.ಎಮ್ ಇಬ್ರಾಹಿಂ ಆಗಲೀ ಅಥವಾ ಮತ್ಯಾರೇ ಆಗಲಿ ನಮಗೆ ಅವರ ಪ್ರಾಮಾಣಿಕತೆಯ ಬಗ್ಗೆ ಹೊಸದಾಗಿ ತಿಳಿಸಿಹೇಳಬೇಕಿಲ್ಲ! ಭಾರತದ ಕೆಲವಾದರೂ ಪ್ರಜೆಗಳಿಗೆ ಟಾಟಾ ಯಾರೆಂಬುದು ಗೊತ್ತು.

ಟಾಟಾ ಸಂಸ್ಥೆಯಲ್ಲಿ ಕೆಲಸಮಾಡಿದ ಯಾವುದೇ ಸಿಬ್ಬಂದಿಯನ್ನು ನೀವು ಕೇಳಿ--ಯಾರೊಬ್ಬರೂ ತಮಗೆ ಅನ್ಯಾಯವಾಗಿದೆ ಎನ್ನುವುದಿಲ್ಲ. ಟಾಟಾ ಸಂಸ್ಥೆಗಳ ಮೂಲ ಸಂಸ್ಕಾರವೇ ಅಂಥದ್ದು. ಅಲ್ಲಿ ಯಾವುದೇ ರುಷುವತ್ತುಗಳಿಗೆ ಅವಕಾಶವಿಲ್ಲ, ಪ್ರಲೋಭನೆಯ ಛಾಯೆಯೂ ಇಲ್ಲ. ನಮ್ಮಲ್ಲಿ ಕಾರ್ಯದಕ್ಷತೆಯಿದ್ದರೆ ಅವರಲ್ಲಿ ತಕ್ಕ ಜಾಗವಿದ್ದರೆ ಕರೆದುಕೊಡುವ ಔದಾರ್ಯವುಳ್ಳವರು ಟಾಟಾ ಮಾಲೀಕರು. ಮಾಲೀಕರಿದ್ದರೆ ಎಂಥಾಮಾಲೀಕರಿರಬೇಕು ಎಂಬುದಕ್ಕೆ ಇವತ್ತು ಬೆರಳಿಟ್ಟು ತೋರಿಸಬಹುದಾದರೆ ಅದು ಟಾಟಾ ಒಬ್ಬರೇ ಎಂದರೂ ತಪ್ಪಾಗಲಾರದೇನೋ. ಹಾಗಂತ ನಾನು ಟಾಟಾ ಉದ್ಯೋಗಿಯಲ್ಲ. ಆದರೆ ಟೈಟನ್ ಸಂಸ್ಥೆಗೆ ಮೊದಲಾಗಿ ನಾವು ಒಂದಷ್ಟು ಗಣಕಯಂತ್ರಗಳನ್ನು ಮಾರಿದಾಗ ಅವರು ಕಳುಹಿಸಿಕೊಟ್ಟ ಮಾಹಿತಿಯೇ - ’ ಲರ್ನ್ ಟಾಟಾ ಕಲ್ಚರ್ ’ ಎಂಬ ಪತ್ರ. ಅದರಲ್ಲಿ ಅವರ ಕಂಪನಿ ಹೇಗೆ ವ್ಯವಹರಿಸುತ್ತದೆ, ಸಾಮಾನು ಒದಗಿಸುವ ಬೇರೇ ಕಂಪೆನಿಗಳಿಗೆ ಯಾವಾಗ ಹಣವನ್ನು ಪಾವತಿಸುತ್ತದೆ ಎಂಬ ಎಲ್ಲಾ ಮಾಹಿತಿಗಳೂ ಇದ್ದವು. ೧೫ ದಿನವೆಂದರೆ ಒದಗಿಸಿಕೊಟ್ಟಾನಂತರ ಸರಿಯಾಗಿ ೧೫ ದಿನಕ್ಕೆ ನಮಗೆ ಚೆಕ್ ಕಳುಹಿಸುತ್ತಿದ್ದರು! ತಡವೂ ಇಲ್ಲ ಮೊದಲೂ ಇಲ್ಲ. ಹೀಗೇ ಟಾಟಾ ವ್ಯವಹಾರದ ವೈಖರಿಯೇ ಚಂದ.

ಎಲ್ಲೋ ಹುಟ್ಟಿ, ಬೆಳೆದು, ನಿರ್ವಾಹವಿಲ್ಲದೇ ವಲಸಿಗರಾಗಿ ಭಾರತಕ್ಕೆ ಬಂದು, ಗುರುವು ಕೊಟ್ಟ ಮಾತಿಗೆ ತಕ್ಕುದಾಗಿ ಭಾರತದ ಸರ್ವತೋಮುಖ ಏಳ್ಗೆಗೆ ಕಾರಣರಾದ ಪಾರ್ಸಿಗಳು ಅದರಲ್ಲೂ ಟಾಟಾಗಳು ನಿಜಕ್ಕೂ ಸ್ತುತ್ಯಾರ್ಹರು. ಭಾರತ ತಮ್ಮದೇ ರಾಷ್ಟ್ರ, ತಮ್ಮದೇ ತಾಯ್ನೆಲ ಎಂಬಂತೇ ನಮ್ಮೆಲ್ಲರಲ್ಲಿ ಒಂದಾದ ಪಾರ್ಸಿಗಳು ಹಾಲಲ್ಲಿ ಹಾಕಿದ ಸಕ್ಕರೇಯೇ ಸರಿ ಎನ್ನೋಣವೇ ?

ಪ್ರಾಮಾಣಿಕತೆಗೆ ಬಹಳ ಬೆಲೆಯಿದೆ. ಒಮ್ಮೆ ವಿಶ್ವಾಸವನ್ನು ಕಳೆದುಕೊಂಡರೆ ಮತ್ತೆಂದೂ ಅದನ್ನು ಮರಳಿಪಡೆಯಲಾಗುವುದಿಲ್ಲ. ನಮ್ಮ ಹಿರಿಯರು ಹೇಳುತ್ತಿದ್ದುದೂ ಇದನ್ನೇ. ಹರಕು ಬಟ್ಟೆ ತೊಟ್ಟರೂ ಚಿಂತೆಯಿಲ್ಲ, ಹೊಟ್ಟೆಗೆ ಒಂದೇ ಹೊತ್ತು ಉಂಡರೂ ಚಿಂತೆಯಿಲ್ಲ ಆದರೆ ಯಾವುದೇ ಕಾಲಕ್ಕೂ ವ್ಯಾವಹಾರಿಕ ಯಾ ಲೌಕಿಕ ಆಚಾರ-ಆಚರಣೆಗಳಲ್ಲಿ ವಿಶ್ವಾಸ ಅತೀ ಮುಖ್ಯ. ನಾಲಿಗೆಗೆ ಮಹತ್ವ ಅರ್ಥಾತ್ ನಾವು ಕೊಡುವ ವಚನಕ್ಕೆ ಮಹತ್ವ. ಚಕ್ರವರ್ತಿ ಬಲಿ ತನ್ನನ್ನು ’ವಚನಬ್ರಷ್ಟ’ ಎಂದು ವಾಮನರೂಪೀ ಮಹಾವಿಷ್ಣು ಛೇಡಿಸತೊಡಗಿದಾಗ ಕುಗ್ಗಿಹೋಗಿ ಬೇಡಿಕೊಂಡ ಒಂದೇ ಒಂದು ಅಂಶ " ಮಹಾನುಭಾವನೇ ನನ್ನಿಂದ ಏನೇ ಹೋದರೂ ಚಿಂತೆಯಿಲ್ಲ...ಆದರೆ ವಚನಬ್ರಷ್ಟ ಎಂದು ಮಾತ್ರ ಹೇಳಬೇಡ." ಹೀಗೆನ್ನುತ್ತಾ ಕೊಡಲಾಗದ ಮೂರನೇ ಹೆಜ್ಜೆಯ ಜಾಗಕ್ಕೆ ತನ್ನ ಶಿರವನ್ನೇ ಪ್ರತಿಯಾಗಿ ಕೊಟ್ಟು ತನ್ಮೂಲಕ ಆಡಿದ ಮಾತಿನಂತೇ ನಡೆದ ಶ್ರೇಷ್ಠ ವ್ಯಕ್ತಿ. ಪರಿಣಾಮ ಸಾಕ್ಷಾತ್ ದೇವರೇ ಆತನ ಬಾಗಿಲನ್ನು ಕಾಯುವ ಭಟನಾಗಿ ವರ್ಷದಲ್ಲಿ ಮೂರುದಿನ ನಿಲ್ಲುವುದು ಆತನಿಗೆ ಸಿಕ್ಕ ಗೌರವ !

ಬದುಕಿದರೆ ಬದುಕೋಣ ಪ್ರಾಮಾಣಿಕರಾಗಿ, ವಿಶ್ವಾಸಕ್ಕೆ ಒಡಂಬಡಿಸುವ ಭಾರತ ಕಟ್ಟುವವರಾಗಿ, ಕಲಿಯೋಣ ಈ ತತ್ವವನ್ನು ಟಾಟಾರವರನ್ನು ತಿಳಿದವರಾಗಿ, ಆಗ ಮಾತ್ರ ನಾವು ಬೆಳೆಯಲು ಸಾಧ್ಯ, ಬ್ರಷ್ಟಾಚಾರ ನಿರ್ಮೂಲನೆಯಾಗಲು ಸಾಧ್ಯ.

Saturday, November 27, 2010

'ನಿಮ್ಮೊಡನೆ ವಿ.ಆರ್. ಭಟ್ ' ಗೆ ವರ್ಷದ ಸಂಭ್ರಮ

'ನಿಮ್ಮೊಡನೆ ವಿ.ಆರ್. ಭಟ್ ' ಗೆ ವರ್ಷದ ಸಂಭ್ರಮ

ಸಹೃದಯೀ ಮಿತ್ರರೇ, ಹೃತ್ಪೂರ್ವಕ ನಮಸ್ಕಾರಗಳು.


ತಾವು ಈ ಮಿಂಚಂಚೆಯನ್ನು ತಮ್ಮ ಕ್ಷೇಮದಲ್ಲಿ ಓದುತ್ತೀರೆಂದು ಭಾವಿಸುತ್ತೇನೆ, ಮತ್ತು ಸತತವಾಗಿ ತಮ್ಮೆಲ್ಲರ ಹಿತವನ್ನು ಬಯಸುವವನಾಗಿದ್ದೇನೆ.

ದಿನಗಳು ಉರುಳುವುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಎಷ್ಟುದಿನಗಳು ಉರುಳಿದವು ಎನ್ನುವುದು ನೆನೆಪಿನಲ್ಲಿ ಉಳಿಯುವುದು ಕಮ್ಮಿ. ಹೀಗೇ ಕುಳಿತು ಉರುಳುವ ದಿನಗಳ ಲೆಕ್ಕಾಚಾರ ಹಾಕುತ್ತಾ ಇದ್ದಾಗ ಗೋಚರವಾಗಿದ್ದು ನನ್ನ ಬ್ಲಾಗ್ ನ ವಿಷಯ. ’ನಿಮ್ಮೊಡನೆ ವಿ.ಆರ್.ಭಟ್’ ಎಂಬ ನನ್ನ ಬ್ಲಾಗ್ ಅನಿರೀಕ್ಷಿತವಾಗಿ ಆರಂಭಿಸಿದೆ. ಅಂದಿನಿಂದಾರಭ್ಯ ಇಲ್ಲೀವರೆಗೆ ೨೪ ವಿಭಿನ್ನ ಮಾಲಿಕೆಗಳ ದ್ವಾರಾ ೨೫೬ ಕೃತಿಗಳನ್ನು ತಮಗೆಲ್ಲಾ ಓದಬಡಿಸಿದ್ದೇನೆ. ಇದೇ ಡಿಸೆಂಬರ್ ೩ನೇ ದಿನಾಂಕಕ್ಕೆ ಒಂದು ವರ್ಷವನ್ನು ಪೂರೈಸುತ್ತದೆ. ಈ ಎಲ್ಲಾ ದಿನಗಳಲ್ಲಿ ನಿಮಗೆ ಓದಿಸಿರುವ ಕೃತಿಗಳಲ್ಲಿ, ಬರೆದಿರುವ ಪತ್ರಗಳಲ್ಲಿ ಕಾರಣಾಂತರಗಳಿಂದ ಬೇಸರವನ್ನೋ, ವಿಷಾದವನ್ನೋ, ನೋವನ್ನೋ ಗೊತ್ತಿದ್ದೋ ಗೊತ್ತಿಲ್ಲದೆಯೋ ಉಂಟುಮಾಡಿದ್ದರೆ ಮನೆಯ ಸದಸ್ಯನೋಪಾದಿಯಲ್ಲಿ ಇದನ್ನೆಲ್ಲಾ ನೀವು ಕ್ಷಮಿಸಿದ್ದೀರಿ,ನನ್ನ ಜೊತೆ ಬೆನ್ನು ತಟ್ಟುತ್ತಾ ಹಾಗೇ ನಡೆದುಬಂದಿದ್ದೀರಿ.

ಸಂಗೀತ, ಸಾಹಿತ್ಯ, ಕಲೆ - ಈ ಮೂರು ಮನುಷ್ಯ ಜೀವನಕ್ಕೆ ದೈವನೀಡಿದ ಉದ್ದಾತ್ತ ದೇಣಿಗೆಗಳು. ಪಶುವಿಗೂ ಮನುಜನಿಗೂ ಇರುವ ಹಲವು ಭೇದಗಳಲ್ಲಿ ಇವೂ ಒಂದೊಂದು. ಅದರಲ್ಲಂತೂ ಸಾಹಿತ್ಯ ಮತ್ತು ಸಂಗೀತಕ್ಕೆ ಇರುವ ಸಂಬಂಧ ದೇಹ ಮತ್ತು ಆತ್ಮಕ್ಕಿರುವ ಸಂಬಂಧವೇ ಸರಿ! ಆತ್ಮವಿರದಿದ್ದರೆ ದೇಹಕ್ಕೆ ಹೇಳುವ ಹೆಸರೇ ಬೇರೆ ಇದೆಯಲ್ಲವೇ ? ಅದೇರೀತಿ ಸಾಹಿತ್ಯವಿರದಿದ್ದರೆ ಸಂಗೀತಕ್ಕೆ ಅಷ್ಟೊಂದು ಮಹತ್ವ ಬರುತ್ತಲೇ ಇರಲಿಲ್ಲ. ಸಂಗೀತ ಸೊನ್ನೆಯಿದ್ದಂತೇ ಅದಕ್ಕೆ ಸಾಹಿತ್ಯ ಸೇರಿದಾಗ ಅದರ ನಿಜವಾದ ಬೆಲೆ ಗೊತ್ತಾಗುತ್ತದೆ! ಸ್ವರಗಳೇ ಸಂಗೀತಕ್ಕೆ ಮುಖ್ಯವಾದರೂ ಬರೇ ಸ್ವರಗಳ ಆಲಾಪನೆಯನ್ನು ಕೇಳುತ್ತಾ ಯಾರೂ ಕುಳಿತುಕೊಳ್ಳುವುದಿಲ್ಲ; ಅದಕ್ಕೆಂತಲೇ ಈ ನಡುವೆ ಸುಗಮ ಸಂಗೀತದ ಕ್ರಾಂತಿಯೇ ಆಯಿತು ಅಲ್ಲವೇ ?

ಓದುಗ ಪ್ರಭುಗಳಾದ ನಿಮ್ಮಿಂದ ಬಂದಿರುವ ಹಲವಾರು ಪ್ರತಿಕ್ರಿಯೆಗಳಿಗೆ ನಾನು ಋಣಿಯಾಗಿದ್ದೇನೆ. ಕೃತಿಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ನಿಮ್ಮಲ್ಲಿ ಎಷ್ಟೋ ಜನ ನನ್ನನ್ನು ಖುದ್ದಾಗಿ ನೋಡಿಲ್ಲ, ಆದರೂ ನೋಡಿದಂತಹ ಅನುಭವವನ್ನು ಹೊಂದಿದ್ದೀರಿ ಎಂದು ನನಗನ್ನಿಸಿದೆ. ನನ್ನ ಬದುಕನ್ನು ಬರವಣಿಗೆಗೆ ಸಾಕಷ್ಟು ಮೀಸಲಿರಿಸಿದ್ದೇನೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃತಿಗಳನ್ನು ವಿವಿಧ ಮಾಧ್ಯಮಗಳಲ್ಲಿ ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ನಿಮಗೆ ಕೊಡಲು ಉದ್ಯುಕ್ತನಾಗಿದ್ದೇನೆ.

ನಿಮ್ಮ ಸಹಕಾರಕ್ಕೆ, ಸಲಹೆಗಳಿಗೆ, ಪ್ರೀತಿಗೆ, ವಿಶ್ವಾಸಕ್ಕೆ ಹೃದಯಾಂತರಾಳದ ಪ್ರೀತಿ-ಭಕ್ತಿ ತುಂಬಿದ ವಂದನೆಗಳನ್ನು ಅರ್ಪಿಸುತ್ತಿದ್ದೇನೆ. ಕಳೆದ ದಿನಗಳಲ್ಲಿ ನೀಡಿದ ನಿಮ್ಮ ಸಹಕಾರವನ್ನು ಸದಾ ಮುಂದುವರಿಸುವಂತೇ ತಮ್ಮಲ್ಲಿ ಭಿನ್ನವಿಸಿಕೊಳ್ಳುತ್ತಿದ್ದೇನೆ. ಅನೇಕ ಜನರು ನನ್ನಲ್ಲಿ ಕೇಳುತ್ತಿದ್ದ ಒಂದೇ ಪ್ರಮುಖ ಪ್ರಶ್ನೆ " ಸರ್ ನೀವು ಯಾಕೆ ಪುಸ್ತಕ ಹೊರತರಬಾರದು ? " ಎಂದು. ಪುಸ್ತಕಗಳನ್ನು ಆಯಾಕಾಲಕ್ಕೆ ಹೊರತರುತ್ತೇನೆ ಎಂಬುದು ನನ್ನ ಉತ್ತರವಾಗಿದೆ. ವಿದ್ಯುನ್ಮಾನ ಪ್ರಸರಣ ಮಾಧ್ಯಮ ಜಾಗತಿಕ ಮಟ್ಟದ್ದು. ಎಲ್ಲೇ ಕುಳಿತವರೂ ನನ್ನ ಕೃತಿಗಳನ್ನು ತಕ್ಷಣಕ್ಕೆ ತೆಗೆದುನೋಡುವ, ಓದುವ ಅವಕಾಶವಿರುವುದು ಈ ಮಾಧ್ಯಮಕ್ಕೆ ಮಾತ್ರ ! ಅದಕ್ಕಾಗಿ ಬ್ಲಾಗೆಂಬುದು ಒಂದರ್ಥದಲ್ಲಿ ಸರ್ವವ್ಯಾಪಿ ಎಂಬುದನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಎಲ್ಲೆಲ್ಲೂ ಇರುವ ಕನ್ನಡ ಸಾಹಿತ್ಯ ಪ್ರೇಮಿಗಳು ಎಲ್ಲೇ ಇದ್ದಾದರೂ ಈ ಸವಲತ್ತನ್ನು ಅನುಭವಿಸಲು ಅನುವು ಮಾಡಿಕೊಟ್ಟ ಗೂಗಲ್ ಸಂಸ್ಥೆಯವರಿಗೆ [ಹಾಗೂ ವರ್ಡ್ ಪ್ರೆಸ್ ಸಂಸ್ಥೆಯವರಿಗೆ] ನಾನು ಕೃತಜ್ಞ.

೩೬೫ ಕೃತಿಗಳನ್ನು ಒದಗಿಸಲಾಗದ್ದಕ್ಕೆ ಕಾರಣಗಳು ಹೀಗಿವೆ:

೧. ಮನೆಯಲ್ಲಿ ಅಂತರ್ಜಾಲಕ್ಕೆ ಇಲ್ಲದ ಕಾಯಿಲೆ ಅಡರಿಕೊಂಡಿದ್ದು.

೨. ದೇಹಾಲಸ್ಯದಿಂದ ನಾನು ಕಳ್ ಬಿದ್ದಿದ್ದು

೩. ಮನೆಯಲ್ಲಿ ನೆಂಟರ ಜಾತ್ರೆ ಜಾಸ್ತಿ ಇದ್ದಿದ್ದು.

೪. ಬೆಂಗಳೂರಿಂದ ಬೇರೆಡೆಗೆ ಹೋಗಿದ್ದು

೫. ಅನಾರೋಗ್ಯ ಪೀಡಿತನಾಗಿ ನಿತ್ರಾಣನಾಗಿ ಬರೆಯದೇ ಇದ್ದಿದ್ದು.

೬. ಕಚೇರಿಯ ಕೆಲಸದ ಅನಿವಾರ್ಯ ಒತ್ತಡ ಬರೆಯಲು ಅಡ್ಡಿಪಡಿಸಿದ್ದು ಮತ್ತು ಇನ್ನೂ ಒಂದೆರಡು ಚಿಲ್ಲರೆ ಕಾರಣಗಳಿವೆ.

ಇವೆಲ್ಲಾ ಕಾರಣವಾಗಿ ೧೦೯ [೩೬೫-೨೫೬=೧೦೯] ಕೃತಿಗಳನ್ನು ನಿಮಗೆ ಕೊಡಲಾಗಲಿಲ್ಲ. ಇದಕ್ಕಾಗಿ ವಿಷಾದಿಸುತ್ತೇನೆ. ಬ್ಯಾಲೆನ್ಸ್ ಶೀಟ್ [ಅಢಾವೆ ಪತ್ರಿಕೆ] ಒಪ್ಪಿಸಿ ಆಯಿತಲ್ಲ ! ಆಯ್ತು ಇವಿಷ್ಟನ್ನು ತಮ್ಮಲ್ಲಿ ಹೇಳಿಕೊಳ್ಳುವುದಿತ್ತು, ಇನ್ನು ನನಗೆ ಮುಂದಿನ ನನ್ನ ಆಖ್ಯಾಯಿಕೆಗಳನ್ನು ಆಡಿತೋರಿಸಲು ನಿಮ್ಮೆಲ್ಲರ ಅನುಮತಿಯನ್ನು ಕೋರಿ ಮುನ್ನಡೆಯುತ್ತಿದ್ದೇನೆ.

ಅನುಕೂಲವಾದಾಗ ಭೇಟಿ ಕೊಡಿ:


ಮತ್ತೊಮ್ಮೆ ಸಿಗೋಣ

ಅನಂತಾನಂತ ಧನ್ಯವಾದಗಳೊಂದಿಗೆ,

ವಿ.ಆರ್.ಭಟ್

------------------------------------------------------


ಹಂದಿಗೆ ಅದೇ ಸುಖ ಇಂದಿಗೆ ಇದೇ ಸುಖ

ಏನಪ್ಪಾ ಚಿತ್ರವಿಚಿತ್ರ ಶಬ್ದಗಳನ್ನು ಕೇಳುತ್ತಿದ್ದೇವಲ್ಲಾ ಎಂಬ ಪ್ರಶ್ನೆ ಉದ್ಭವವಾಯಿತೇ ? ಸಹಜ. ಗೊತ್ತಿರದ ಕೆಲವು ಜಾಣ್ನುಡಿಗಳು ನಮಗೆ ಗೊತ್ತಾದಾಗ ಅವುಗಳ ಅರ್ಥವಾಗಲೀ ವ್ಯಾಪ್ತಿಯಾಗಲೀ ತಿಳಿಯುವವರೆಗೆ ಗೊಂದಲವಾಗುತ್ತದೆ. ಅವುಗಳ ವಿಸ್ತಾರ ತಿಳಿದಾಗ ಹಲವು ಸರ್ತಿ ನಾವೇ ದಂಗಾಗಬೇಕಾಗಿ ಬರುತ್ತದೆ !

ಹಳ್ಳಿಯೊಂದರಲ್ಲಿ ಗಂಡ-ಹೆಂಡತಿ-ಮಕ್ಕಳು ವಾಸವಾಗಿದ್ದರಂತೆ. ಗಂಡ-ಹೆಂಡತಿಯಲ್ಲಿ ಅಗಲಿರಲಾರದ ಅನ್ಯೋನ್ಯತೆಯಿತ್ತು. ಜತೆಗೆ ಮಕ್ಕಳೂ ಕೂಡ ಇದ್ದರಲ್ಲ, ಒಟ್ಟಿನಲ್ಲಿ ಸುಖದಲ್ಲಿ ಸಂಸಾರ ನಡೆದಿತ್ತು. ಹೀಗೇ ದಿನಗಳೆಯುತ್ತಿರಲು ಹೆಂಡತಿ ಯಾವುದೇ ಕುರುಹೂ ಇಲ್ಲದೇ ಹೃದಯಸ್ತಂಭನವಾಗಿ ಕಾಲವಾದಳು. ಕಾಲವಾದ ಹೆಂಡತಿಯನ್ನು ನೆನೆನೆನೆದು ಗಂಡ ಹಾಗೂ ಅವಳ ಮಕ್ಕಳು ಪರಿತಪಿಸುತ್ತಿದ್ದರು.

ಕಾಲಾನಂತರದಲ್ಲಿ ಕೆಲವು ವರ್ಷಗಳಲ್ಲೇ ಮನುಷ್ಯ ತನ್ನ ತೋಟಗದ್ದೆಗಳಲ್ಲಿ ಓಡಾಡುವಾಗ ಹಂದಿಯೊಂದು ಕಣ್ಣಿಗೆ ಬಿತ್ತು. ಅದುತನ್ನ ಮರಿಗಳ ಬಳಗವನ್ನೆಲ್ಲಾ ಕಟ್ಟಿಕೊಂಡು ಅಲ್ಲಿಗೆ ಬಂದಿತ್ತು. ಆತನನ್ನು ಕಂಡ ಹಂದಿಗೆ ಪೂರ್ವಜನ್ಮದ ಸ್ಮರಣೆಯಾಯಿತು. ಹಂದಿನಿಂತಲ್ಲೇ ಕೆಲಸಮಯ ಕಣ್ಣೀರು ಸುರಿಸುತ್ತಾ ನಿಂತುಕೊಂಡಿತ್ತು ! ಇದನ್ನು ನೋಡುತ್ತಿದ್ದ ಆತ ಹಂದಿಗೆ ಏನೋ ಸಂಕಟವಾಗಿರಬೇಕೆಂದುಕೊಂಡ. ಹಂದಿಯ ಮರಿಗಳು ಅದೂ ಇದೂ ತಿನ್ನುತ್ತಿರುವಾಗ ಆತ ಅವುಗಳನ್ನು ಹೊಡೆಯಲೆತ್ನಿಸಿದ. ಆದರೆ ಹಂದಿ ಆತನ ಮುಂದೆ ದೈನ್ಯವಾಗಿ ನಿಂತು ಬೇಡುವಂತಿತ್ತು. ಅದು ಏನನ್ನೋ ಹೇಳಬಯಸುತ್ತಿತ್ತು. ಇದನ್ನೆಲ್ಲಾ ನೋಡಿದಆತ ಮರಿಗಳಿಗೂ ಹೊಡೆಯಲಿಲ್ಲ. ಕೆಲವೇ ಕ್ಷಣಗಳಲ್ಲಿ ಹಂದಿ ಮಾತನಾಡಿತು. ಪೂರ್ವದಲ್ಲಿ ತಾನು ಆತನ ಹೆಂಡತಿಯಾಗಿದ್ದು ಈಗ ಹಂದಿಯಾಗಿದ್ದೇನೆಂದೂ ಆತನ ನೆನಪಿನಲ್ಲಿ ಹುಡುಕುತ್ತಾ ಆತನ ತೋಟಕ್ಕೆ ಆತನನ್ನೂ ಮಕ್ಕಳನ್ನೂ ನೋಡುವ ಇಚ್ಛೆಯಾಗಿ ಬಂದೆನೆಂದೂ ಹೇಳಿಕೊಂಡಿತು !

ಕಥೆಯನ್ನೆಲ್ಲಾ ಕೇಳಿದ ಆತ ಹಂದಿಯಾದ ನಿನ್ನನ್ನು ಮತ್ತೆ ಕೊಂದು ತಾನೇ ಮರಳಿ ಪಡೆಯುತ್ತೇನೆಂದ ! ಪಡೆಯಲು ಸಾಧ್ಯವೋ ಇಲ್ಲವೋ ಅಂತೂ ಘಳಿಗೆಯಲ್ಲಿ ಅವನಿಗೆ ಹಾಗನ್ನಿಸಿತ್ತು. ಆಗ ಹಂದಿ ತನ್ನನ್ನು ಕೊಲ್ಲುವುದು ಬೇಡವೆಂದೂ ತನಗೆ ಜನ್ಮದಲ್ಲಿಇರುವ ಸಣ್ಣ ಸಣ್ಣ ಮರಿಗಳನ್ನು ಬೆಳೆಸಬೇಕೆಂದೂ, ಏನೂ ಅರಿಯದ ಅವುಗಳನ್ನು ತಾನು ಬಿಟ್ಟುಬರಲಾರೆನೆಂದೂ ಪ್ರಾರ್ಥಿಸಿತು. ಅಂದಿಗೆ ನನಗೆ ಅದೇ ಸುಖವಾಗಿತ್ತು ಆದರೆ ಇಂದಿಗೆ ಹಂದಿಯಾಗಿ ನನಗೆ ಇದೇ ಸುಖವೆಂದೂ ಸಾರಿತು. ಆತ ಬಹಳ ನೊಂದ. ತನ್ನಮಕ್ಕಳನ್ನೆಲ್ಲಾ ಕರೆದು ತೋರಿಸಿದ. ಮಕ್ಕಳನ್ನು ಕಂಡ ಹಂದಿ ಹತ್ತಿರ ಬಂದು ಲಲ್ಲೆಗರೆಯಿತು. ಕಾಡು ಹಂದಿಗೂ ಜನರಿಗೂ ಅದೇನು ಸಂಬಂಧ ಎಂದು ನೋಡಲು ಊರ ಜನ ಸುತ್ತರಿದರು. ತುಂಬಾ ಹೊತ್ತು ಅಲ್ಲಿಯೇ ಇದ್ದ ಹಂದಿ ಆತ ಕೊಟ್ಟಹಣ್ಣು-ಹಂಪಲು ತಿಂದು ಸಂಜೆ ದುಃಖದಲ್ಲಿ ತನ್ನ ಮರಿಗಳನ್ನು ಕರೆದುಕೊಂಡು ಮರಳಿ ಕಾಡಿಗೆ ಹೋಯಿತು.

ಜನ್ಮಕ್ಕಂಟಿದ ಬಾಂಧವ್ಯ, ನಂಟು ತೊರೆದುಹೋಗುವುದಿಲ್ಲ. ಮಾನವ ಜನ್ಮವನ್ನು ಭಗವಂತ ಕಟ್ಟಿಹಾಕಿರುವುದೇ ಭಾವನೆಗಳಿಂದ ಅಲ್ಲವೇ ? ನಾವೇನೇ ಅಂದರೂ ಇಹದ ನಮ್ಮ ಬದುಕು ಲೌಕಿಕ ಸಂಬಂಧಗಳ, ಭಾವನೆಗಳ, ರೀತಿ-ನೀತಿಗಳ, ಪ್ರೀತಿ-ಪ್ರೇಮಗಳ ಸರಪಳಿಗಳಿಂದ ಬಂಧಿಸಲ್ಪಟ್ಟಿರುತ್ತದೆ. ಇದಕ್ಕೆ ಜನಸಾಮಾನ್ಯರು ಯಾರೂ ಹೊರತಲ್ಲ! ಒಳಗಿರುವ ಆತ್ಮಕ್ಕೆ ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ ಯಾರೂ ಇರುವುದಿಲ್ಲ. ಅದಕ್ಕೆ ಯಾವ ಸಂಬಂಧವಾಗಲೀ ಹುಟ್ಟು-ಸಾವಾಗಲೀ ಇರುವುದಿಲ್ಲ. ಆದರೆ ದೇಹವನ್ನು ಧರಿಸಿ ಇಲ್ಲಿರುವವರೆಗೆ ನಮಗೆ ಎಲ್ಲವೂ ಬಾಧ್ಯಸ್ಥವೇ ! ಯಾವುದನ್ನೂ ಅಲ್ಲಗಳೆಯುವಂತಿಲ್ಲ, ಏನನ್ನೂ ಇಲ್ಲಾ ಎನ್ನುವಂತಿಲ್ಲ. ಆದರೆ ಇರುವವರೆಗೆ ನಾವು ನಾವೇ ಅಲ್ಲ, ನಾವು ಬರಿದೇ ಇಲ್ಲಿದ್ದೇವೆ ಎಂದು ತಿಳಿದು ಮನೆಯನ್ನು ಬಾಡಿಗೆಗೆ ಪಡೆದು ಇರುವಂತೇ ಜನ್ಮವನ್ನು ಬಾಡಿಗೆಗೆ ಪಡೆದು ಬದುಕಿದ್ದೇವೆ ಎಂದು ತಿಳಿದರೆ ಆಗ ನಾವು ಯಾವ ಕೆಲಸ ಮಾಡಬೇಕು, ಏನನ್ನುಮಾಡಬಾರದು ಎಂಬುದು ತಿಳಿಯುತ್ತದೆ.

ಇಲ್ಲಿರುವಷ್ಟು ದಿನ ನಾವು ಆದಷ್ಟೂ ಪರೋಪಕಾರಾರ್ಥವಾಗಿ ಬದುಕನ್ನು ವ್ಯಯಿಸೋಣ.

Friday, November 26, 2010

ಎಮ್ಮೆ ಕಳೆದಿದೆ !

ಎಮ್ಮೆ ಕಳೆದಿದೆ !

ಇದು ಹಳ್ಳಿಗಳ ರಿಯಾಲಿಟಿ ಶೋ ! ನೀವೂ ನೋಡಿರಬಹುದು. ಕೆಲವೊಂದು ಘಟನೆಗಳನ್ನು ನೆನಪಿಸಿಕೊಂಡರೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಆದರೆ ಒಮ್ಮೆ ನಕ್ಕು ಹಗುರಾಗುವುದರಲ್ಲಿ ತೊಂದರೆಯೇನಿಲ್ಲ. ಹೀಗಾಗಿ ಕಳೆದ ಎಮ್ಮೆಯನ್ನು ಹುಡುಕುವ ನೆಪದಲ್ಲಿ ಹಳ್ಳಿಯನ್ನೊಮ್ಮೆ ಸುತ್ತೋಣ ಬನ್ನಿ, ಸಿಗುವಷ್ಟು ಸಿಗಲಿ !

ಜಂಬೂಸವಾರಿ ಭಾಗ-೧


ಬೆಳ್ಳಂಬೆಳಿಗ್ಗೆಯೇ ಆಗಲಿ, ಮಟಮಟ ಮಧ್ಯಾಹ್ನವೇ ಆಗಲಿ, ಚುಮುಚುಮು ಚಳಿಯ ಸಾಯಂಕಾಲವೇ ಆಗಲಿ ಮಂಜು ಏರುವುದು ಅದೇ ಹಳೇ ಲೂನಾ. ಆತ ಹೇಳಿಕೇಳಿ ಊರ್ಕಡೆಯವ್ನಪ್ಪ ಅದಕ್ಕೇ ಆಗಾಗ ಅವನ ದರ್ಶನ ನಮಗೆಲ್ಲಾ ಕಾಯಂ ಇರ್ತಿತ್ತು. ಆತನ ವೈಶಿಷ್ಟ್ಯ ಎಂದರೆ ಎಂದೂ ಕಿಕ್ ಹಾಕಿದರೆ ಚಾಲು ಆಗದ ಆತನ ವಾಹನವನ್ನು ಒಂದಷ್ಟು ದೂರ ಆತನೇ ತಳ್ಳಿ ಓಡಿಸಿಕೊಂಡು ಹೋಗಿ ಪುರರ್ ಎಂದು ಚಾಲು ಆದ ತಕ್ಷಣ ಹಾರಿ ಕೂತು ಮುಂದೆ ಓಡುವುದು! ಹಳ್ಳಿಯಲ್ಲವೇ ಗಾಡಿಗಳೇ ಅಪರೂಪವಾದ ಕಾಲವೊಂದಿತ್ತು. ಆಗಾಗ ಅಕ್ಕ-ಪಕ್ಕದ ಮನೆಗಳವರು " ಮಂಜಣ್ಣ ಗಾಡಿ ಕೊಡ್ತೀಯಾ ಸ್ವಲ್ಪ ಪೇಟೆಗೆ ಹೋಗಿ ಬರ್ಬೇಕಿತ್ತು " ಅಂತ ಬೆನ್ನು ಹತ್ತುತ್ತಿದ್ದರು.

" ಗಾಡಿ ಕೊಡಲೇನೋ ಅಡ್ಡಿಲ್ಲ ಆದರೆ ಅದನ್ನು ಚಾಲು ನೀವೇ ಮಾಡ್ಕಂಬೆಕು " ಎಂದುಬಿಡುತ್ತಿದ್ದ. ಪ್ರಯತ್ನಿಸಿದ ಒಬ್ಬರ ಕೈಲೂ ಅದು ಸಾಧ್ಯವಾಗದೇ ಆಮೇಲಾಮೇಲೆ ’ಮಂಜಣ್ಣನ ರಥ’ ಅಂತ ಜನ ಅದನ್ನ ಕರೀತಾ ಇದ್ರು.


ಇಂತಹ ಗಾಡಿಯನ್ನು ದಸರಾ ಆಯುಧಪೂಜೆಗೊಮ್ಮೆ ಪೂಜೆ ಮಾಡ್ಸೋದು ವಾಡಿಕೆ. ಅದಕೂ ಮುಂಚೆ ಎರಡೂ ಚಕ್ರನೆಲ್ಲಾ ಚೆನ್ನಾಗಿ ತಿಕ್ಕಿ ತೊಳೆದು, ವರ್ಷಗಳಿಂದ ನೀರು ಕಂಡಿರದ ಬಾಡೀನೆಲ್ಲಾ ತೊಳ್ದು, ಹರದ್ಹೋಗಿರೋ ಸೀಟ್ ಕವರ್ ಗೆ ಹೊಲಿಗೆ ಹಾಕಿ, ಬ್ರೇಕ್ ಹಿಡಿಕೆಗೆಲ್ಲಾ ಸ್ವಲ್ಪ ಅದೇಂಥದೋ ಎಣ್ಣೆ ಹಾಕಿ.....ಹೇಳ್ತೀರೋ ಕೇಳ್ತೀರೋ ಗಾಡಿ ಮದುವಣಗಿತ್ತಿಯಂತೇ ತಯಾರಾಗುತ್ತಿತ್ತು. ಆಮೇಲೆ ಅಲಂಕಾರ ಬೇರೆ. ಒಮ್ಮೆ ಅವರಮನೆಗೆ ಯಾರೋ ಪುರೋಹಿತರೂ ಬಂದವರಿದ್ರು. ಅವರ ಹತ್ತಿರಾನೇ ಪೂಜೆ ಮಾಡ್ಸಿದ್ರೆ ಒಳ್ಳೇದು ಅಂತ ಅಂದ್ಕೊಂಡು ಪೂಜೆ ಶುರುವೂ ಆಗ್ಹೋಯ್ತು. ಪೂಜೆಗೆ ಸಂಕಲ್ಪಮಾಡುತ್ತ ’........’ ಇಂಥಾ ದೇವರ ಪ್ರೀತ್ಯರ್ಥ ಎಂದು ಹೇಳಬೇಕಲ್ಲ ...ಪುರೋಹಿತರು ಕೇಳದ್ರು...

" ತಮಾ ಈ ಗಾಡಿ ಹೆಸರೆಂಥದ ? "

" ......ಅದರ ಹೆಸ್ರು ಲೂನಾ " .

ಪುರೋಹಿತರು ಹೇಳಿದರು " ಶ್ರೀಮಹಾಕಾಳೀ ಮಹಾಸರಸ್ವತೀ ಮಹಾಲಕ್ಷ್ಮೀ ಸಹಿತ ಲೂನಾದೇವತಾಭ್ಯೋ ನಮಃ ಅತ್ರಾಗಚ್ಛಾ ಆವಾಹಯಿಷ್ಯೇ "




ಜಂಬೂಸವಾರಿ ಭಾಗ-೨

ಆ ಕಾಲದಲ್ಲಿ ಊರಲ್ಲೆಲ್ಲಾ ಕಾರು ಅಂದರೆ ಅಂಬಾಸೆಡರ್ ಮಾತ್ರ. ನಮಗೆಲ್ಲಾ ಅದನ್ನೆಲ್ಲಾ ಹೇಳುವಷ್ಟು ಪರಿಜ್ಞಾನ ಎಲ್ಲಿತ್ತು ? ಹೋಗಲಿ ಊರಿನ ಬಹಳಷ್ಟು ಜನ ಹೇಳುತ್ತಿದ್ದುದೂ ಹಾಗೇ : ’ ಅಂಬಾರಶೆಟ್ರ ಕಾರು ’ ! ಎಳವೆಯಲ್ಲೇ ನಾನೊಬ್ಬ ಕಡ್ಡಿಹಾಕಿ ಕಾರಣ ಹುಡುಕುವ ಸ್ವಭಾವದವನಿದ್ದೆನಲ್ಲ ನಾನು ತಿಳಿದುಕೊಂಡದ್ದು ಯಾರೋ ಅಂಬಾರಶೆಟ್ರು ಅಂತ ಕುಚ್ಚೀ[ಖುರ್ಚಿ]ಸಾಹುಕಾರನ ಫ್ಯಾಕ್ಟರಿಯಲ್ಲಿ ತಯಾರಾಗುವ ಈ ಕಾರಿಗೆ ಎಲ್ಲರೂ ’ಅಂಬಾರಶೆಟ್ರ ಕಾರು’ ಎನ್ನುತ್ತಾರೆ ಎಂದು. ಕೊನೆಕೊನೆಗೆ ಪಟ್ಟಣಗಳಿಗೆ ಹೋದಾಗ ಆ ಶಬ್ದದಲ್ಲಿ ಏನೋ ವ್ಯತ್ಯಾಸವನ್ನು ಜನ ಉಚ್ಚರಿಸುತ್ತಿದ್ದುದು ಗಮನಕ್ಕೆ ಬಂತು. ಅವರು ಹೇಳಿದ್ದನ್ನು ಸರಿಯಾಗಿ ತಿಳಿದು ಗಟ್ಟಿಮಾಡಿಕೊಳ್ಳುವವರೆಗೆ ಹೆಸರಿನ ಬದಲಿಗೆ ಬಳಸಬೇಕಾದಲ್ಲೆಲ್ಲಾ ’ಕಾರು’ ಎಂದು ಬಳಸುತ್ತಿದ್ದೆ. ಮರ್ಯಾದೆ ಪ್ರಶ್ನೆ ನೋಡಿ ! ಎಲ್ಲಾದ್ರೂ ಅಪ್ಪಿ ತಪ್ಪಿ ತಪ್ಪೇನಾದ್ರೂ ಹೇಳದ್ರೆ ಎಲ್ಲರೂ ನಗ್ಯಾಡು ಪ್ರಸಂಗ.


ಈ ಅಂಬಾರಶೆಟ್ರ ಕಾರಲ್ಲಿ ನಾವು ಮಕ್ಕಳು ಲೆಕ್ಕಕ್ಕೇ ಇಲ್ಲ ಬಿಡಿ, ದೊಡ್ಡವರು ೧೩ ಜನ ಮತ್ತು ಡ್ರೈವರ್--ಇದು ನಮ್ಮ ಪ್ರಯಾಣವಾಗಿತ್ತು. ಅದು ಹೇಗೆ ಕೂರುತ್ತಿದ್ದರು ಎಲ್ಲಿ ಕಾಲಿಡುತ್ತಿದ್ದರು ಇದೆಲ್ಲಾ ಕೇಳಬೇಡಿ. ಕಾರಲ್ಲಿ ಹೋಗ್ಬೇಕೋ ಹೋಗ್ಬೇಕು ಅಷ್ಟೇ ! ಕೆಲವೊಮ್ಮೆ ಇಂತಹ ಕಾರನ್ನೂ ಒತ್ತಿ ತಳ್ಳುತ್ತಾ ಚರರ್ ಚರರ್ ಚರರ್ ಚರರ್ ಚರರ್ ಎನ್ನುವ ಕಾರನ್ನು ಸುಮಾರು ಸಲ ಪ್ರಯತ್ನಿಸಿ ಚಾಲೂಮಾಡುವುದು ಅನಿವಾರ್ಯವಾಗುತ್ತಿತ್ತು. ಒಂದ್ಸಲಾ ಹೊರ್ಟ್ತು ಅಂದ್ರೆ ನಮಗೆ ಭೂಮಿಯಿಂದ ರಾಕೆಟ್ ಉಡ್ಡಯನ ಮಾಡಿದಷ್ಟು ಖುಷಿ. ಆಗಾಗ ಹಳ್ಳಿಯ ಬಸ್ಸುಗಳು ಹಾಳಾಗಿ ಬರದೇ ಇದ್ದಾಗ ಕಾರಿನ ಅನಿವಾರ್ಯತೆ ಬರುತ್ತಿತ್ತು. ಅಷ್ಟೊಂದು ಭಾರವನ್ನು ಸಹಿಸಿಯೂ ಹಳ್ಳಿಯ ಕಚಡಾ ರಸ್ತೆಗಳಲ್ಲಿ ತರಾವರಿ ಓಡಾಡುತ್ತ, ಕೆಸರುಮೆತ್ತಿದ ಟೈರುಗಳು ಹಾಳಾಗಿದ್ದು ಕಮ್ಮಿ. ಕಾರು ಕೈಕೊಟ್ಟಿದ್ದೂ ಕಮ್ಮಿ. ಅಂಬಾರಶೆಟ್ರ ಕಾರಿನ ಮುಂದೆ ಇವತ್ತಿನ ಕಾರುಗಳೆಲ್ಲಾ ಜರ್ಸಿ ದನಗಳಂತೇ ಕಾಣುತ್ತವೆ ನನಗೆ. ರಿಪೇರ್ಯೋ ರಿಪೇರಿ. ಹೊಸಕಾಲಮಾನದ ಕಾರುಗಳ ನಡುವೆ ಅಂಬಾರಶೆಟ್ರು ಅಂಬಾರ ಬಿಟ್ಟು ಭೂಮಿಗೆ ಬಿದ್ದುಬುಟ್ರು ಪಾಪ !


ಹಾಲು ತುಂಬಾ ಇದೇರಿ !

ಹಳ್ಳಿಗಳಲ್ಲಿ ಎಮ್ಮೆ ವ್ಯಾಪಾರ ನಡೆಯುತ್ತಲೇ ಇರುತ್ತದೆ. ಅವರ ಎಮ್ಮೆ ಇವರಿಗೆ ಇವರ ಎಮ್ಮೆ ಅವರಿಗೆ ಎಂದು ಮಾರಾಟಮಾಡಿಸಿಕೊಡುವ ಮಧ್ಯವರ್ತಿಗಳು ಅಲ್ಲಲ್ಲಿ ಇರುತ್ತಾರೆ. ಅವರು ಒಂದು ಸಣ್ಣ ಕೊಟ್ಟಿಗೆಯನ್ನು [ದೊಡ್ಡಿ] ವ್ಯಾಪಾರದ ಎಮ್ಮೆಗಳಿಗೇ ಅಂತಲೇ ಕಟ್ಟಿಸಿಕೊಳ್ಳುತ್ತಾರೆ. ಗಿರಾಕಿ ಸಿಕ್ಕಾಗ ಅವರನ್ನು ಹೊರಗೆ ನಿಲ್ಲಿಸಿ ಕೊಟ್ಟಿಗೆಯೊಳಕ್ಕೆ ಬರುವ ಮಧ್ಯವರ್ತಿ ತನ್ನ ಸುಪರ್ದಿಯಲ್ಲಿರುವ ಹಾಗೂ ಗಿರಾಕಿಯ ಬಜೆಟ್ ಗೆ ದೊರೆಯಬಹುದಾದ ಎಮ್ಮೆಯ ಕೆಚ್ಚಲಿಗೆ ಚೆನ್ನಾಗಿ ಒದ್ದು ಹೊರಬರುತ್ತಿದ್ದ. ಆಮೇಲೆ ಗಿರಾಕಿಯನ್ನು ಒಳಗೆ ಕರೆದು ಹಾಲುಹಿಂಡುತ್ತಾ ಜೋರಾಗಿ ಒಮ್ಮೆ ಕೂಗಿದರೆ ಎಮ್ಮೆ ಹೆದರಿ ಇಲ್ಲದ ಹಾಲನ್ನೂ ಅದೆಲ್ಲಿಂದ ಕೊಡುತ್ತಿತ್ತೋ ಗೊತ್ತಿಲ್ಲ. ಗಿರಾಕಿಗೆ ಒಪ್ಪಿಗೆಯಾಗಿ ತೆಗೆದುಕೊಂಡು ಹೋದ ಮಾರನೇ ದಿನವೇ ಮತ್ತೆ ಗಿರಾಕಿ ವ್ಯಾಪಾರಿಯನ್ನು ಹುಡುಕಿಕೊಂಡು ಮರಳಿ ಬರುತ್ತಿದ್ದ. " ನೀವು ಕೊಟ್ಟ ಎಮ್ಮೇಲಿ ಹಾಲೇ ಇಲ್ಲ ಮಾರಾರ್ಯೆ ನನಗೆ ಬದ್ಲಮಾಡ್ಕೊಡಿ " " ಓಹೋ ಅದೆಂಥದ್ರೀ ಅದು....ನಿಮ್ಗೆ ಸಾರಾವಳಿ ಇಲ್ಲ ಇಲ್ಲಾಂದ್ರೆ ಒಳ್ಳೇ ಹಾಲ್ಕೊಡ್ತಿತು " ನಂತರ ಅಂತೂ ಮಾತು ನಡೆದು ಗಿರಾಕಿಗೆ ಒಂದು ತಿಂಗಳಲ್ಲೇ ಬೇರೆ ಎಮ್ಮೆಯನ್ನು ಕೊಡುವ ಭರವಸೆಯಮೇಲೆ ಗಿರಾಕಿ ವಾಪಸ್ಸಾಗುತ್ತಿದ್ದ. ಇವತ್ತಿನ ಸುರುಟಿ ಎಮ್ಮೆಗಳಿಗೆ ಆ ರೀತಿಯ ಒಂದು ಒದೆತ ಬಿದ್ದರೆ ಎಮ್ಮೆ ನಿತ್ತಲ್ಲೇ ಚೊಂಯಪ್ಪಟ್ನ !


ಮದುವೆ ಮುಂದೆ ಹೋಗಿದೆ !

ಕಾರಣಾಂತರಗಳಿಂದ ನಮ್ಮ ಮನೆಯಲ್ಲಿ ನಡೆಯಬೇಕಾಗಿದ್ದ ಮದುವೆಯನ್ನು ಮುಂದಿನ ತಿಂಗಳು ೧೬ನೇ ತಾರೀಖಿಗೆ ಮುಂದೂಡಲಾಗಿದೆ. ಆಮಂತ್ರಣ ಸಿಗದವರು ದಯವಿಟ್ಟು ಇದನ್ನೇ ಆಮಂತ್ರಣವೆಂದು ತಿಳಿದುಕೊಳ್ಳಬೇಕಾಗಿ ವಿನಂತಿ.

ಇಂತೀ ಶ್ರೀ ರಾಮಪ್ಪನವರು ಮತ್ತು ಕುಟುಂಬ, ಬಿಟ್ಟುಬಂದಹಳ್ಳಿ

ಈ ರೀತಿಯ ಪ್ರಕಟಣೆಗಳು ದಿನಪತ್ರಿಕೆಗಳಲ್ಲಿ ನೂರಾರು ಇರುತ್ತಿದ್ದವು. ಇದು ಸಾರ್ವಜನಿಕರಿಗೆ ಸಂಬಂಧಿಸಿದ್ದೋ ಅಥವಾ ವೈಯ್ಯಕ್ತಿಕವಾಗಿ ಕೆಲವರಿಗೆ ಸಂಬಂಧಿಸಿದ್ದೋ ತಿಳಿಯುತ್ತಿರಲಿಲ್ಲ! ಈಗಲೂ ಇಂತಹ ಅನೇಕ ಜಾಹೀರಾತುಗಳು ಬರುತ್ತವೆ : ಅವು ಮುಖ್ಯ ಪತ್ರಿಕೆಯ ಭಾಗವೇ ಆಗಿ ’ಶೋಭಿಸುತ್ತವೆ’ ! ಜನ ಒಪ್ಪಲಿ ಬಿಡಲಿ ಜಾಹೀರಾತು ಕೊಡುವ ಕಂಪನಿಯವರು ದಿನಪತ್ರಿಕೆ ನಡೆಸುವ ಸಂಸ್ಥೆಗೆ ಹಣವನ್ನು ಕೇಳಿದಷ್ಟು ಕೊಡುತ್ತಾರಲ್ಲ ಅದಕ್ಕೇ. ನೀವೇ ನೋಡಿರಬಹುದಲ್ಲ ಆ ಬಜಾರು ಈ ಬಜಾರು ಅರ್ಧ ಪತ್ರಿಕೆಯ ತುಂಬಾ ಬಜಾರಿನದ್ದೇ ಕಾರುಬಾರು!


" ಅವರಮನೆ ಹುಡುಗಿಯಾ ? ಅವಳು ಕಾಗೆ " !

ಒಂದೇ ಊರಿನ ಎರಡು ತುದಿಗಳಲ್ಲಿ ಎರಡು ಮನೆಗಳವರಿದ್ದರು. ಒಬ್ಬಾತನಿಗೆ ಮದುವೆಗೆ ಬಂದ ಮಗಳು ಇನ್ನೊಬ್ಬನಿಗೆ ವಯಸ್ಸಿಗೆ ಬಂದ ಮಗ. ಆಗೆಲ್ಲಾ ಜಾತಕವನ್ನೂ ನೋಡಬೇಕಾಗಿತ್ತಲ್ಲ. ತನ್ನ ಯೋಗ್ಯತೆಗೇನೂ ಕಮ್ಮಿ ಇಲ್ಲಾ ಎಂಬುದು ಈ ಗಂಡಿನ ಅಪ್ಪನ ಅಂಬೋಣವಾದರೆ ತಮಗೆ ತಕ್ಕವರಲ್ಲಾ ಎಂಬುದು ಹೆಣ್ಣಿನ ಅಪ್ಪನ ಅನಿಸಿಕೆ. ಹೀಗಾಗಿ ಇವರಾಗಿ ಕೇಳಲಿಲ್ಲ ಅವರಾಗಿ ಕೊಡಲಿಲ್ಲ. ಯಾರೂ ಕಮ್ಮಿಯಿರಲಿಲ್ಲ ಬಿಡಿ : ಏನಿಲ್ಲದಿದ್ದರೂ ಅಹಂಭಾವಕ್ಕೇನೂ ಕೊರತೆಯಿರಲಿಲ್ಲವಲ್ಲ ! ಹುಡುಗನ ಅಪ್ಪ ಆ ಹುಡುಗಿಯ ಜಾತಕವನ್ನು ಇನ್ಯಾರದೋ ಮುಖಾಂತರ ಹೇಗೋ ತರಿಸಿ ಮೇಳಾಮೇಳೀ ನೋಡಿಟ್ಟಿದ್ದ. ಯಾವಗಲೋ ದೇವಸ್ಥಾನಕ್ಕೆ ಬಂದ ಹುಡುಗಿಯನ್ನೂ ನಖಶಿಖಾಂತ ನೋಡಿ ’ ನಮ್ಮನೆ ತಮ್ಮಂಗೆ ಇದು ಒಳ್ಳೇ ಜೋಡಿ ’ ಎಂತಲೂ ಮನಸ್ಸಲ್ಲೇ ಶರಾ ಬರೆದುಕೊಂಡಿದ್ದ ! ಹೆಣ್ಣಿನ ಮನೆಯ ಕಡೆಗೆ ಸಾಗಿ ಹೋಗುವ ಜನ ಈ ಗಂಡಿನ ಮನೆಯ ದಿಕ್ಕಿನಿಂದಲೇ ಹೋಗಬೇಕಾದುದು ಮಾರ್ಗದ ಅನಿವಾರ್ಯತೆ. ದಿನಬೆಳಗಾದ್ರೆ ಯಾರೇ ಹೊಸಬರು ಬರಲಿ " ಹೋಯ್ ನೀವು ಓ ಅವರ ಮನೆಗೆ ಹೋಗಲಿಕ್ಕೆ ಬಂದವ್ರಾ ? ಅವರ ಮನೆ ಹುಡುಗಿಯಲ್ವಾ ಅವಳು ಕಾಗೆ ....ತೊಳೆದಿಟ್ಟ ಮಸಿಕೆಂಡ " ಎನ್ನುವುದನ್ನು ಬೇಕೆಂತಲೇ ಅಭ್ಯಾಸಮಾಡಿಕೊಂಡ. ಹೇಗಾದ್ರೂ ಆ ಹೆಣ್ಣಿನ ಅಪ್ಪನನ್ನು ಬಗ್ಗಿಸಿ ತನ್ನ ಕಾಲಿಗೆ ಬೀಳಿಸಿಕೊಳ್ಳಬೇಕೆಂಬುದು ಇವನ ಬಯಕೆ. ಬಂದ ಹಲವು ಪರವೂರ ಸಂಬಂಧಗಳು ನಡುದಾರಿಯಿಂದಲೇ ವಾಪಸ್ಸಾಗುವಂತೇ ನೋಡಿಕೊಂಡ ಹೆಗ್ಗಳಿಗೆ ಶ್ರೀಮಾನ್ ಇವರದು ! ಕೊನೆಗೂ ಅದೆಲ್ಲಿಂದಲೋ ಬಂದ ಜೀಪು ತುಂಬಾ ಇದ್ದ ಜನ ಈತ ಕೈಅಡ್ಡಹಾಕಿದರೂ ನಿಲ್ಲಿಸದೇ ಮುಂದಕ್ಕೆ ಹೋಗೇ ಬಿಟ್ಟರು. ಕಪ್ಪಿನ ಕಾಗೆ ಬೆಳ್ಳನ ಗುಬ್ಬಚ್ಚಿಯಾಗಿ ಬುರ್ರನೆ ಹಾರೇ ಹೋಯಿತು !


ಎಮ್ಮೆಕಳೆದಿದೆ !

ನಮ್ಮ ಹತ್ತಿರದ ಸಂಬಂಧಿಕರೊಬ್ಬರಿಗೆ ದಿನಪತ್ರಿಕೆಯಲ್ಲಿ ಒಳಪುಟಗಳನ್ನು ಚಾಚೂ ತಪ್ಪದೇ ಓದುವ ಚಟ ! ಪತ್ರಿಕೆಗೆ ಕೊಡುತ್ತಿದ್ದ ಕಾಸಿಗೆ ಬಡ್ಡೀ ಸಮೇತ ಹಿಂಪಡೆದ ರೀತಿ ಒಂದೇ ಒಂದೂ ಇಂಚನ್ನೂ ಬಿಡದೇ ಮಗುಚಿ ತಿರುವಿ ಓದೇ ಓದುತ್ತಿದ್ದರು. ಪತ್ರಿಕೆಯನ್ನು ಕೆಲವು ಶಾಲಾಮಕ್ಕಳು ಪುಸ್ತಕ ಓದಿದಂತೇ ದೊಡ್ಡದಾಗಿ ಓದುವುದು ಬೇರೆ ಅವರ ಕೆಟ್ಟಚಾಳಿ. ಆಗೆಲ್ಲಾ ನಮ್ಮಲ್ಲಿಗೆ ಹುಬ್ಬಳ್ಳಿಯಿಂದ ’ಸಂಯುಕ್ತ ಕರ್ನಾಟಕ’ ಬರುತ್ತಿತ್ತು. ಒಳಪುಟಗಳ ತುಂಬಾ ವೈಕುಂಠಸಮಾರಾಧನೆ, ಶಿವಗಣಾರಾಧನೆ, ವಿವಾಹ ಮುಂದೂಡಿಕೆ ಇಂಥದ್ದೇ ಬರಹಗಳು. ಮಧ್ಯೆ ಮಧ್ಯೆ ಅವರೂ ಇವರೂ ಕಳೆದುಹೋದವರ ಸುದ್ದಿ ಇರುತ್ತಿತ್ತು. ಒಮ್ಮೆ ನಮ್ಮನೆಗೆ ಬಂದವರು ಲೋಕಾಭಿರಾಮವಾಗಿ ಬೆಳಗಿನ ಚಾ ಕುಡಿದಮೇಲೆ ಪತ್ರಿಕೆ ಓದಲು ಪ್ರಾರಂಭಿಸಿದರು. ’ ಹುಬ್ಬಳ್ಳಿಯಲ್ಲಿ ಹಳೇಹುಬ್ಬಳ್ಳಿಯ ಇಂಥಾ ಕಡೆಯಲ್ಲಿ ಇಂಥವರಿಗೆ ಸಂಬಂಧಿಸಿದ ಎರಡು ಎಮ್ಮೆಗಳು ಮೇಯಲಿಕ್ಕೆ ಬಿಟ್ಟಿದ್ದು ಮರಳಲಿಲ್ಲ, ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಕೊಡಲಾಗುವುದು. ಯಾರಾದರೂ ನೋಡಿದಲ್ಲಿ ವೀರನಗೌಡ್ರ ಸಂಗನಗೌಡ್ರ ಕೇರಾಫ ಇಂಥಾ ವಿಳಾಸಕ್ಕೆ ತಿಳಿಸುವುದು. ಬಾಕಿ ಸಂಗ್ತಿ ಮೊಖ್ತಾ ’ ! ಪುಣ್ಯಾತ್ಮ ಪಠಿಸುತ್ತಿದ್ದುದನ್ನು ಕೇಳುವುದೇ ಮಜವಾಗಿರುತ್ತಿತ್ತು. ನಿಮಗೂ ಇಂಥವರು ಸಿಗುತ್ತಾರೆ : ಬಸ್ಸಿನಲ್ಲಿ ದಿನಪತ್ರಿಕೆ ಕೈಯ್ಯಲ್ಲಿ ಹಿಡಿದುಕೊಳ್ಳಿ ಸ್ವಲ್ಪ ಹೊತ್ತಿನಲ್ಲೇ ಬುಲಾವ್ ಬರುತ್ತದೆ-ಪತ್ರಿಕೆಗೆ! " ಸ್ವಲ್ಪ ಪೇಪರ್ ಕೊಡ್ತೀರಾ ? " ಕೊಟ್ಟರೆ ನೀವೇ ಮರಳಿ ಕೇಳಿ ಪಡೆಯಬೇಕು. ಇಲ್ಲದಿದ್ದರೆ ಅವರು ನಾವು ಕೊಟ್ಟ ದುಡ್ಡಿಗೆ ತಾವು ಬಡ್ಡೀ ಪಡೆಯಲಿಲ್ಲವೆಂಬ ರೀತಿಯಲ್ಲಿ ಕಳೆದುಹೋದ ಎಮ್ಮೆಯನ್ನೋ ಹೋರಿಯನ್ನೋ ಹುಡುಕುತ್ತಿರುತ್ತಾರೆ! ಬಿಟ್ಟಿಯಲ್ಲಿ ತಿನ್ನುವ ಹಣ್ಣೇ ಅಷ್ಟೊಂದು ರುಚಿಯೇ ? ಇಷ್ಟೇ ಅಲ್ಲ, ವ್ಯಾವಹಾರಿಕ ದಿನಗಳಂದು ಬೇರೆಬೇರೇ ಕಚೇರಿ, ಬ್ಯಾಂಕು ಇಂಥಲ್ಲೆಲ್ಲಾ ಪೆನ್ನು ಕೇಳುವ ಜನ ಸಿಗುತ್ತಾರೆ. ಪೆನ್ನು ಬಳಸಿಕೊಂಡಮೇಲೆ ಮರಳಿಕೊಡುವವರೇ ಕಮ್ಮಿ, ಕೊಟ್ಟರೂ " ತಗೋಳಿ " ಅಂತ ನಮ್ಮೆಡೆಗೆ ಬಿಸಾಕಿ ಹೋಗುತ್ತಾರೆ! ಇಂಥವರಿಗೆಲ್ಲಾ ಸಾಮಾನ್ಯ ಜ್ಞಾನ ಇರುವುದೇ ಇಲ್ಲವೇ ? ಎಲ್ಲೆಲ್ಲಿಗೆ ಹೋದಾಗ ಏನೇನು ಬೇಕಾಗುತ್ತದೆ ಎಂಬ ಒಂಚೂರೂ ಪರಿಜ್ಞಾನ ಇರುವುದಿಲ್ಲವೇ ?

ಮತ್ತೆ ಸಿಗೋಣ, ನಿಮ್ಮಲ್ಲಿ ಎಲ್ಲಾದ್ರೂ ಎಮ್ಮೆ ಕಳೆದಿದ್ರೆ ದಿನಪತ್ರಿಕೆಯಲ್ಲಿ ಪ್ರಕಟಿಸುವುದನ್ನು ಮರೆಯಬೇಡಿ!

Wednesday, November 24, 2010

ದಿ| ಶ್ರೀ ಕೆರೆಮನೆ ಶಂಭು ಹೆಗಡೆಯವರ ಮರೆಯಲಾಗದ ಪಾತ್ರಗಳು


ದಿ| ಶ್ರೀ ಕೆರೆಮನೆ ಶಂಭು ಹೆಗಡೆಯವರ ಮರೆಯಲಾಗದ ಪಾತ್ರಗಳು

ಯಕ್ಷರಂಗದ ಕೆಲವು ಪಾತ್ರಗಳನ್ನು ಕೆಲವರು ಮಾತ್ರ ಸಮರ್ಥವಾಗಿ ನಿಭಾಯಿಸಬಲ್ಲರು. ಹೇಗೆಂದರೆ ಅವರು ಅಭಿನಯಿಸುವ ಪಾತ್ರ ನಿಜವಾಗಿಯೂ ಅದು ಪಾತ್ರವಲ್ಲ ಬದಲಾಗಿ ಅದೇ ವ್ಯಕ್ತಿ ನಮ್ಮ ಕಣ್ಣಮುಂದಿರುವಂತೆ ಅನಿಸುತ್ತದೆ. ಆ ಯಾ ವ್ಯಕ್ತಿಗಳು ಆ ಯಾ ಪಾತ್ರಗಳಿಗಾಗೇ ಹುಟ್ಟಿಬಂದಿದ್ದರೋ ಎಂಬ ಸಂದೇಹ ಕೂಡ ಬಾರದೇ ಇರುವುದಿಲ್ಲ. ಕನ್ನಡ ನೆಲದ ಅಷ್ಟೇ ಏಕೆ ಭಾರತದ ಸರ್ವ ಶ್ರೇಷ್ಠ ಕಲಾ ಪ್ರಾಕಾರಗಳಲ್ಲಿ ಯಕ್ಷಗಾನ ತನ್ನ ವಿಶಿಷ್ಟವಾದ ಛಾಪು ಒತ್ತಿದ್ದರೆ ಅದಕ್ಕೆಲ್ಲ ಈ ಮಹನೀಯರು ನಿರ್ವಹಿಸಿದ ಪಾತ್ರಗಳೂ ಕಾರಣ ಎಂದರೆ ತಪ್ಪಾಗಲಾರದೇನೋ. ಇವತ್ತು ಅಂತಹ ಒಂದೆರಡು ಸನ್ನಿವೇಶಗಳನ್ನು ನಿಮ್ಮೆಲ್ಲರಲ್ಲಿ ಹಂಚಿಕೊಳ್ಳಲು ಅಪೇಕ್ಷಿಸಿ ಹೀಗೆ ಬಂದಿದ್ದೇನೆ.

ಕಣ್ಣೀರಿಳಿಸುವ ದೃಶ್ಯಗಳಿಗಿಂತಲೂ ಮೊದಲು ಶಶಾಂಕ್ ಎಂಬ ಈ ಬಾಲ ಪ್ರತಿಭೆಯನ್ನು ನೋಡಿ, ಇಷ್ಟು ಎಳವೆಯಲ್ಲೇ ಆ ಕುಣಿತ, ಹಾವ ಭಾವ:



ಪುಟಾಣಿಗೊಂದು ಚಪ್ಪಾಳೆ ತಟ್ಟಿ ಭಳಿರೇ ಬಾಲಕ || ದೀರ್ಘಾಯುಷ್ಮಾನ್ ಭವ || ಎಂದು ಹರಸಿ ಮುನ್ನಡೆಯುತ್ತಿದ್ದೇನೆ.

ಪೌರಾಣಿಕ ಕಥಾಭಾಗಗಳಲ್ಲಿ ಸತ್ಯವೇ ಮೂರ್ತಿವೆತ್ತ ರಾಜಾ ಸತ್ಯಹರಿಶ್ಚಂದ್ರ, ತನ್ನ ದೌರ್ಭಾಗ್ಯದಿಂದ ದೇಶಬ್ರಷ್ಟನಾದ ನಳ-ಬಾಹುಕ, ಮಹಾಭಾರತದ ದಾನಶೂರ ಕರ್ಣ, ರಾಮ ನಿರ್ಯಾಣದ ಶ್ರೀರಾಮ, ಪಾದುಕಾ ಪಟ್ಟಾಭಿಷೇಕದ ದಶರಥ.....ಹೀಗೇ ಈ ಕೆಲವು ಪಾತ್ರಗಳನ್ನು ದಿ| ಶ್ರೀ ಕೆರೆಮನೆ ಶಂಭುಹೆಗಡೆಯವರು ನಿರ್ವಹಿಸುತ್ತಿದ್ದ, ಪೋಷಿಸುತ್ತಿದ್ದ ರೀತಿಯೇ ಬೇರೆ. ಅಲ್ಲಿ ಅಭಿನಯಕ್ಕಿಂತ ಭಾವನೆಗೆ ಬಹು ಪ್ರಾಧಾನ್ಯತೆ. ಅಂತಹ ಭಾವನಾಪ್ರಧಾನ ಸಂಗತಿಗಳನ್ನು ಪ್ರೇಕ್ಷಕರೆಲ್ಲ ಕಣ್ಣೆವೆಯಿಕ್ಕದೇ ಮೈಯ್ಯೆಲ್ಲಾ ಕಿವಿಯಾಗಿ ಕಾದು ಕುಳಿತು ನೋಡುವಂತೇ ನಡೆಸಿಕೊಡುತ್ತಿದ್ದ ಮಹಾನುಭಾವ ಶಂಭಣ್ಣನ ನೆನಪು ಮರುಕಳಿಸಿ, ಮನದ ಭಾವ ನೀರಾಗಿ ಕಣ್ಣಾಲಿಗಳಲ್ಲಿ ಹರಿದಾಗ ಅವರಿಗೊಮ್ಮೆ ವಂದಿಸಲೋಸುಗ ಬರೆಯುತ್ತಿದ್ದೇನೆ. ಈ ಮೇಲೆ ಹೇಳಿದ ಎಲ್ಲಾ ಪಾತ್ರಗಳಲ್ಲಿ ಅವರ ಭಾವತಲ್ಲೀನತೆ, ಭಾವತನ್ಮಯತೆ, ಆ ಅಸ್ಖಲಿತ ಮಾತುಗಳು, ನಿರರ್ಗಳವಾಗಿ ಹರಿಯುವ ಕಥೆಗೆ ಪೂರಕವಾದ ಜ್ಞಾನಧಾರೆ ಕುಳಿತ ಎಲ್ಲಾ ಪ್ರೇಕ್ಷಕರ ಕಣ್ಣಲ್ಲೂ ನೀರು ತರಿಸುತ್ತಿದ್ದವು. ಕಣ್ಣೀರು ತರಿಸುವ ಪಾತ್ರಗಳೇ ಅವುಗಳಾದರೂ ಜನ ಮತ್ತೆಮತ್ತೆ ಅದನ್ನೇ ನೋಡಲು ಬಯಸುತ್ತಿದ್ದರು, ಮೇಲಾಗಿ ತಮ್ಮ ಜೀವನದ ಘಟನೆಗಳಿಗೂ ಆ ಪಾತ್ರಗಳಿಗೂ ತಾದಾತ್ಮ್ಯತೆ ಕಂಡು ತಮ್ಮ ನೋವನ್ನು ಅಂದು ಅಲ್ಲಿ ಕಣ್ಣೀರು ಹರಿಸುವುದರ ಮೂಲಕ ನೊಂದ ಮನವನ್ನು ಹಗುರಗೊಳಿಸಿಕೊಳ್ಳುತ್ತಿದ್ದರು.

ನಾವೆಲ್ಲಾ ಅಂದು ಚಿಕ್ಕವರೇ ಆಗಿದ್ದರೂ ಆ ಪಾತ್ರಗಳು ಸೃಜಿಸಿದ ಚಿತ್ರಣ, ಕೆರಳಿಸಿ ಮನದೊಳಕ್ಕಿಳಿದ ಭಾವನೆಗಳು ಇಂದಿಗೂ ಜೀವಂತ, ನಾವಿರುವವರೆಗೂ ಅವು ಜೀವಂತ. ಬಹುಶಃ ಎಲ್ಲಾ ಮಕ್ಕಳಿಗೂ ಎಳವೆಯಲ್ಲಿ ಇಂತಹ ಪುಣ್ಯಕಥಾಭಾಗಗಳ ಅಭಿನಯವನ್ನು ಯಕ್ಷಗಾನದಲ್ಲಿ ನೋಡಲು ಅದೂ ಇಂತಹ ಕಲಾವಿದರು ನಿರ್ವಹಿಸಿದ್ದನ್ನು ಕಾಣಲು ಸಾಧ್ಯವಿಲ್ಲ. ಆ ದಿಸೆಯಲ್ಲಿ ನಾವು ಪಡೆದುಬಂದ ಪುಣ್ಯ ನಮಗೆ ಆ ಕಾಲಕ್ಕೆ ಇಂತಹ ದೃಶ್ಯಗಳನ್ನು ಕಣ್ಣಾರೆ ನೋಡುವ ಅವಕಾಶ, ಅನುಕೂಲ ನಮಗೆ ದೊರೆಯಿತು. ಮಹಾನುಭಾವರಾದ ನಮ್ಮ ಹಿರಿಯರು ಅದಕ್ಕೆ ಅನುಮತಿಯಿತ್ತು, ಅಗತ್ಯ ಸಹಕಾರವನ್ನೂ ಇತ್ತು, ನಾವು ಪೂರ್ಣರಾತ್ರಿ ಅದನ್ನು ನೋಡಲಾಗದೇ ಮಧ್ಯೆ ಮಧ್ಯೆ ನಿದ್ದೆಮಾಡಿದರೂ ನಮ್ಮನ್ನು ಪಕ್ಕದಲ್ಲೇ ಕೂರಿಸಿಕೊಂಡು ತೋರಿಸುವ ಸಾಹಸಮಾಡಿದರು, ಈ ವಿಷಯದಲ್ಲಿ ನಾವು ಅವರಿಗೆ ಮೊದಲಾಗಿ ಋಣಭಾರಿಗಳು.

ಈಗ ಶ್ರೀಯುತ ಶಂಭುಹೆಗಡೆಯವರ ಹರಿಶ್ಚಂದ್ರನ ಪಾತ್ರದ ಕೆಲವು ತುಣುಕುಗಳನ್ನು ಆಸ್ವಾದಿಸೋಣ ಬನ್ನಿ :






ಶ್ರೀಯುತರು ಈ ಎಲ್ಲಾ ಪಾತ್ರಗಳಿಗೆ ಜೀವರಸ ತುಂಬುತ್ತಿದ್ದುದು ಅವರ ಸಾಹಿತ್ಯಕ ಮಾತುಗಾರಿಕೆಯಿಂದ. ಆಹಾ ....ಎಂತಹ ಸುಂದರ, ಸ್ಪಷ್ಟ ಮಾತುಗಳವು! ಮಾತು ಆಡಿದರೆ ಮುತ್ತು ಉದುರಿದಂತೇ. ಎದುರಿನ ಪಾತ್ರಧಾರಿಗೇ ಕಣ್ಣಲ್ಲಿ ನೀರುಹರಿಸುವ ತಾಕತ್ತು ಅವರಿಗಿತ್ತು. ಯಕ್ಷಗಾನದ ವಿಶೇಷವೆಂದರೆ ಇಲ್ಲಿ ಮಾತುಗಳನ್ನು ಬಾಯಿಪಾಠ ಮಾಡಿ ಉಚ್ಚರಿಸುವುದಿಲ್ಲ, ಬದಲಾಗಿ ಸನ್ನಿವೇಶಕ್ಕೆ ತಕ್ಕಂತೇ ಪಾತ್ರಧಾರಿಯೇ ಅದನ್ನು ಭರಿಸಬೇಕು. ಇಲ್ಲಿ ಪಾತ್ರಧಾರಿಯ ಓದಿನ ಆಳ-ಅಗಲ-ವಿಸ್ತಾರದ ವಿಸ್ತರವನ್ನು ನಾವು ಅವಲೋಕಿಸಿಬಹುದಾಗಿದೆ. ಹೆಗಡೆಯವರು ದಿನಂಪ್ರತಿ ಓದುತ್ತಿದ್ದರು. ಸಮಕಾಲೀನ ಮತ್ತು ಪೂರ್ವದ ಹಲವು ಪುಸ್ತಕಗಳನ್ನು ಬಿಡುವಿದ್ದಾಗ ಓದುವುದು ಅವರ ಅಭ್ಯಾಸವಾಗಿತ್ತು. ಪಾತ್ರವನ್ನು ಆಳಕ್ಕೆ ಇಳಿದು ಆ ದಿನಗಳಲ್ಲಿ ಆ ವ್ಯಕ್ತಿ ಹೇಗಿದ್ದಿರಬಹುದು ಎಂಬುದನ್ನು ಮೊದಲೇ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಿದ್ದರು. ಉದಾಹರಣೆಗೆ ಹರಿಶ್ಚಂದ್ರ ತನ್ನ ಹೆಂಡತಿ ಸತ್ತ ಮಗನನ್ನು ಹೊತ್ತುಕೊಂಡು ಸ್ಮಶಾನಕ್ಕೆ ಬಂದಾಗಿನ ದೃಶ್ಯವನ್ನು ಅವರು ಮನಸಾ ಅನುಭವಿಸಿ ಆ ಮೂಲಕ ಅವರೂ ಅಳುತ್ತ ಪ್ರೇಕ್ಷಕರಿಗೆ ಉಣಬಡಿಸುತ್ತಿದ್ದರು. ಮಗನನ್ನು ಕಾಡಿಗೆ ಕಳುಹಿಸಿದ ಅನಿವಾರ್ಯತೆಯನ್ನು ಆ ಸಂದಿಗ್ಧವನ್ನು ಅನುಭವಿಸುವ ದಶರಥ ನಮ್ಮೆದುರಿಗೇ ಸಾಯುತ್ತಿದ್ದಾನೇನೋ ಎಂದೆನಿಸುತ್ತಿತ್ತು. ತಾಯ ಪ್ರೀತಿಯನ್ನೂ ಕಳೆದುಕೊಂಡು, ಹೆತ್ತ ಮಗ ವೃಷಸೇನನನ್ನೂ ಕಳೆದುಕೊಂಡು ರಣರಂಗದಲ್ಲಿ ದುಃಖಿಸುವ ಕರ್ಣನನ್ನು ನೋಡಿದಾಗ ಆತ ತನ್ನೆದೆಯಲ್ಲಿರುವ ಅಮೃತಕಲಶವನ್ನು ಹೊರತೆಗೆದು ಕೊಡುವಾಗಿನ ದೃಶ್ಯ ಕರ್ಣ ನಮ್ಮೆದುರಲ್ಲೇ ಇದ್ದಾನೇನೋ ಎಂಬಂತಿರುತ್ತಿತ್ತು. ಅಂತಹ ಕರ್ಣನ ಪಾತ್ರದ ಎರಡು ತುಣುಕಗಳನ್ನು ನೋಡಿ :






ಕಾರ್ಕೋಟಕ ಸರ್ಪ ಕಚ್ಚಿದ ನೆಪದಿಂದ ನಳಮಹಾರಾಜ ಬಾಹುಕನಾಗಿ, ದೇಶಬ್ರಷ್ಟನಾಗಿ ಅಲೆಯುತ್ತಾ ಅಲೆಯುತ್ತಾ ತನ್ನ ಆಪ್ತ ಸ್ನೇಹಿತನಾದ ಋತುಪರ್ಣ ಮಹಾರಾಜನ ಆಸ್ಥಾನಕ್ಕೆ ಬಂದು ಆತನಿಗೆ ಪರಿಚಯಿಸಿಕೊಳ್ಳುವಾಗ ನಿಜ ಹೇಳಿದರೆ ಎಲ್ಲಿ ಆತ ನೊಂದುಕೊಳ್ಳುತ್ತಾನೋ ಎಂಬ ಪರಿವೆಯಿಂದ ತಾನು ನಳನಲ್ಲವೆಂದು ಬರಿದೇ ಹೇಳುವ ದೃಶ್ಯ, ಹೆಂಡತಿ ದಮಯಂತಿಯ ಪುನಃ ಸ್ವಯಂವರ ನಡೆಯುತ್ತದೆ ಎಂಬ ಸುದ್ದಿಯನ್ನು ಋತುಪರ್ಣ ತನಗೆ ತಿಳಿಸಿದಾಗ ಒಳಗೊಳಗೇ ವಿಲವಿಲನೆ ಒದ್ದಾಡುವ ಬಾಹುಕನ ಮಾತುಗಳು ಹೃದಯಕಲಕುತ್ತಿದ್ದವು. ಕೊನೆಗೊಮ್ಮೆ ಬಾಹುಕ ನಳನೇ ಎಂದು ತಿಳಿದಾಗ ಋತುಪರ್ಣನನ್ನು ನಡೆಸಿಕೊಳ್ಳುವ ಆ ಆಪ್ತತೆಯ ಅಭಿನಯ ಮತ್ಯಾರಲ್ಲಿ ಕಂಡೀತು ? ಬದುಕಿನ ಕೊನೆಯ ಕ್ಷಣದವರೆಗೂ ಪೌರಾಣಿಕ ಪಾತ್ರಗಳನ್ನು ಬಿಟ್ಟು ಬೇರೇ ಪಾತ್ರಗಳನ್ನು ಅವರು ನಿರ್ವಹಿಸಲಿಲ್ಲ. ಅವರು ಯಾರೊಂದಿಗೋ ಹೋಲಿಸಿಕೊಂಡು ಆ ನಟನನ್ನು ಮೀರಿಸುತ್ತೇನೆಂಬ ಗೋಜಿಗೆ ಹೋದವರಲ್ಲ. ಅವರದ್ದೇ ಆದ ಒಂದು ತಿಟ್ಟನ್ನು, ಒಂದು ಸಂಪ್ರದಾಯಬದ್ಧ ಚೌಕಟ್ಟನ್ನು ಅವರು ಇಟ್ಟುಕೊಂಡಿದ್ದರು. ಹೊಸರೂಪದ ಭಾಗವತಿಕೆ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಹಿತಮಿತವಾದ ಆಂಗಿಕ ಅಭಿನಯ, ನೃತ್ಯ ಮತ್ತು ಅರ್ಥ ಇವು ಅವರ ರಂಗಮಾಧ್ಯಮದ ಆಯಾಮಗಳಲ್ಲಿ ಸದಾ ಸಮನ್ವಯಗೊಂಡ ಅಂಶಗಳಾಗಿರುತ್ತಿದ್ದವು. ಖ್ಯಾತ ನೃತ ವಿದುಷಿ ಶ್ರೀಮತಿ ಮಾಯಾರಾವ್ ಅವರಲ್ಲಿ ಕೋರಿಯೋಗ್ರಾಫಿ ಬಗ್ಗೆ ತರಬೇತಿ ಪಡೆದಿದ್ದ ಅವರ ಜೀವನವನ್ನು ಸಾಗರದ ಎಲ್.ಬಿ ಕಾಲೇಜಿನ ಅಧ್ಯಾಪಕರಾಗಿದ್ದ ಡಾ| ಜಿ.ಎಸ್. ಭಟ್ಟರು ಸಂಶೋಧನೆಗೇ ವಿಷಯವಸ್ತುವಾಗಿ ಬಳಸಿಕೊಂಡರು.

ಸೀತಾವಿಯೋಗದ ಶ್ರೀರಾಮನ ಒಂದು ದೃಶ್ಯವನ್ನು ನೋಡಿ :


ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ, ಉತ್ತರಕನ್ನಡ ಮತ್ತು ಮಲೆನಾಡು ಪ್ರಾಂತಗಳಲ್ಲಿ ಶಂಭು ಹೆಗಡೆಯವರ ಪರಿಚಯ ಹೊಸದಾಗಿ ಮಾಡಿಕೊಡಬೇಕಾಗಿಲ್ಲ. ಅಲ್ಲಿನ ಬಹುತೇಕ ಜನರ ಜೀವನದ ಮೇಲೆ ಹೆಗಡೆಯವರ ಪಾತ್ರ ಪೋಷಣೆ ಪರಿಣಾಮ ಬೀರಿದೆ. ಚಿಕ್ಕ ಚಡ್ಡಿ ಹುಡುಗನಾಗಿದ್ದ ನನ್ನಂಥವನೊಬ್ಬ ಆ ಕಾಲಕ್ಕೆ ಅನುಭವಿಸಿದ್ದನ್ನು ನೆನಪಿಸಿಕೊಂಡು ಇಷ್ಟು ಬರೆಯುವೆನಾದರೆ ಬರೆಯುವ/ಮಾತನಾಡುವ ಕಲೆ ಗೊತ್ತಿರದ ಜನ ಅದೆಷ್ಟು ನೆನಪಿನ ಮೂಟೆಗಳನ್ನು ತಮ್ಮಲ್ಲೇ ಹುದುಗಿಸಿಕೊಂಡಿರಬಹುದು ನೀವೇ ಲೆಕ್ಕಹಾಕಿ !

ರಾಮಾಯಣ ಮಹಾಭಾರತದ ಕಥೆಗಳನ್ನು ಮತ್ತೆ ಮತ್ತೆ ಹೇಳಲು, ತಿಳಿಸಿಕೊಡಲು ಇಂತಹ ಪಾತ್ರಪೋಷಕರ ಅವಶ್ಯಕತೆ ಈಗಲೂ ಯಕ್ಷರಂಗದಲ್ಲಿದೆ. ಆದರೆ ನನಗನಿಸಿದ ರೀತಿಯಲ್ಲಿ ಇದುವರೆಗೆ ಭಾವಪೂರಿತ ಮಾತಿನಲ್ಲಿ ಶಂಭುಹೆಗಡೆಯವರ ಸರಿಸಾಟಿಯಾಗುವ ವ್ಯಕ್ತಿ ಹುಟ್ಟಿಬಂದಿಲ್ಲ. ಅವರ ಜಾಗವನ್ನು ತುಂಬಲು ಇದುವರೆಗೂ ಯಾರಿಂದಲೂ ಆಗಲಿಲ್ಲ. ಸ್ನೇಹಿತರೇ, ನೋಡಿದಿರಲ್ಲ ಈ ಮೇಲಿನ ತುಣುಕಗಳಲ್ಲಿ ಭಾಗವಹಿಸಿದ ಶ್ರೇಷ್ಠ ಭಾಗವತ ನೆಬ್ಬೂರು ನಾರಾಯಣ ಹೆಗಡೆಯವರಿಗೂ ಹಾಗೂ ಮಿಕ್ಕುಳಿದ ಹಿಮ್ಮೇಳ-ಮುಮ್ಮೇಳದವರಿಗೂ ನಮ್ಮ ನಮನ ಸಲ್ಲಿಸೋಣ. ದಿ| ಶಂಭುಹೆಗಡೆಯವರು ಮತ್ತೆ ಯಕ್ಷಗಾನಕ್ಕಾಗಿ ಮರಳಿ ಜನಿಸಿ ಬರಲಿ, ಕರ್ನಾಟಕದ ಜನತೆಗೆ ತನ್ನ ಭಾಷೆಯ ಸೊಬಗನ್ನು ಉಣಬಡಿಸಲಿ ಎಂದು ಹಾರೈಸುತ್ತೇನೆ, ನಮಸ್ಕಾರ.

Monday, November 22, 2010

ಸಾರಥಿಯೆ ನಿಲ್ಲೊಮ್ಮೆ .....


ಸಾರಥಿಯೆ ನಿಲ್ಲೊಮ್ಮೆ .....

ದೇಹದೀ ಕೊಳಲಿನಲಿ ನವರಂಧ್ರಗಳ ಕೊರೆದು
ಜೀವ ನುಡಿಸಿದ ತನ್ನ ಭಾವಗಳು ಹರಿದೂ
ಸಂಸಾರ ಸಾಗರದಿ ನೌಕೆನಡೆಸುತಲರಿದು
ಸುಖ ದುಃಖಗಳೀಯುತ್ತ ತನ್ನೆಡೆಗೆ ಕರೆದೂ


ರಾಜ್ಯಭಾರವ ನಡೆಸಿ ತಾ ಕುಳಿತು ಕಾಣದಲಿ
ಒಂದರೊಳಗೊಂದಾಗಿ ಮೆರೆವುದನು ಕಂಡೆ
ಮಂದಬುದ್ಧಿಗೆ ಕವಿದಿರುವಹಂಕಾರದಲಿ
ಕಂಡರೂ ಕಾಣದಂತಾಗಿಹುದನುಂಡೆ

ಆರೂ ವೈರಿಗಳಿರದ ಬದುಕಿನೀ ದಾರಿಯಲಿ
ಆರು ಅಶ್ವಗಳಿರಿಸಿ ಚಾವಟಿಯ ಬೀಸಿ
ಸಾರಥಿಯೆ ಎಲ್ಲಿಗದು ಪಯಣವೀ ವೇಗದಲಿ ?
ಮಾರುತಿಯ ಮೀರಿಸುವ ರೀತಿಯಲಿ ನಡೆಸಿ

ರಾಗ ಹಲವನು ನುಡಿಸಿ ಕೊಳಲ ಮಾಯೆಯಲಿರಿಸಿ
ಭೋಗದಾ ವೈಭೋಗ ತೆರೆತೆರೆದು ತೋರಿ
ತ್ಯಾಗಮಾಡುತ ಮುರಳಿ ತೊರೆವೆ ಮತ್ತೊಂದರಸಿ
ಯೋಗ ಬಯಸುವೆ ನಿನ್ನ ದರುಶನವ ಕೋರಿ

Sunday, November 21, 2010

ಬದುಕು ಜಟಕಾ ಬಂಡಿ ..........

ಚಿತ್ರ ಕೃಪೆ : ಅಂತರ್ಜಾಲ [ಕೇವಲ ಕಾಲ್ಪನಿಕ ]

ಬದುಕು ಜಟಕಾ ಬಂಡಿ ..........

ಮಾನವ ಸಂಪನ್ಮೂಲದ ವ್ಯವಸ್ಥಾಪಕ ಹುದ್ದೆಯಲ್ಲಿ ಕೆಲಸಮಾಡುತ್ತಿರುವ ಗಿರೀಶ್ ಗೆ ನಿತ್ಯವೂ ಬಿಡುವಿಲ್ಲದ ಕೆಲಸ. ಕಂಪನಿಯನ್ನು ಉತ್ತಮ ದರ್ಜೆಗೆ ಏರಿಸಲು ಒಳ್ಳೆಯ ಕೆಲಸಗಾರರೂ ಕೂಡ ಒಂದು ಕಾರಣ ಎಂಬುದನ್ನು ಆತ ನಂಬಿದ ವ್ಯಕ್ತಿ. ಮೇಲಧಿಕಾರಿಗಳ ಜೊತೆ ಮಾತನಾಡುವಾಗ ಇನ್ನು ಮುಂದೆ ಮತ್ತಷ್ಟು ಪರಿಶ್ರಮದಿಂದ ಇನ್ನೂ ಉತ್ತಮ ಅರ್ಹತೆಯುಳ್ಳ ಕೆಲಸಗಾರರನ್ನು ಆಯ್ಕೆಮಾಡುವುದಾಗಿ ಆತ ಭರವಸೆ ಕೊಟ್ಟಿದ್ದ. ತಾನು ಅಲಂಕರಿಸಿದ ಹುದ್ದೆಗೆ ನ್ಯಾಯ ಒದಗಿಸುವ ಉದ್ದೇಶ ಆತನಿಗಿತ್ತು. ಸೇರಿದ ಒಳ್ಳೆಯ ನೌಕರರನ್ನು ಕಂಪನಿಬಿಟ್ಟು ಬೇರೇ ಕಂಪೆನಿಗೆ ಹಾರದಂತೆ ನಿಲ್ಲಿಸಿಕೊಳ್ಳುವುದೂ ಅಷ್ಟೇ ಕೌಶಲದ ಕೆಲಸವಾಗಿತ್ತು. ಆಗೀಗ ಬಿಟ್ಟು ಹೋಗುವ ಕೆಲವು ಕೆಲಸದವರ ಬದಲಾಗಿ ಆಗಾಗ ಹೊಸ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುವುದು ಮತ್ತು ಅವರಲ್ಲಿ ಉತ್ತಮವಾಗಿರುವವರನ್ನು ಆಯ್ಕೆಮಾಡಿಕೊಳ್ಳುವುದು ಸದಾ ಜಾರಿಯಲ್ಲಿದ್ದ ಪ್ರಕ್ರಿಯೆಯಾಗಿಬಿಟ್ಟಿತ್ತು. ಹೀಗೇ ಅಂದೂ ಕೂಡ ಒಂದು ತಾಂತ್ರಿಕ ಸೇವಾ ಹುದ್ದೆಗೆ ಸಂದರ್ಶನಕ್ಕೆ ಕರೆದಿದ್ದ. ಸುಮಾರು ೨೮-೩೦ ಅಭ್ಯರ್ಥಿಗಳು ಬಂದಿದ್ದರು. ಬಂದವರಲ್ಲಿ ಹುಡುಗರೂ ಇದ್ದರು ಹುಡುಗಿಯರೂ ಇದ್ದರು.

ಒಂದುಕಾಲದಲ್ಲಿ ಕೇವಲ ಹುಡುಗರೇ ನಿಭಾಯಿಸಬಹುದಾದ ಹುದ್ದೆಯನ್ನು ಇಂದು ಮಡಿವಂತಿಕೆ ತೊರೆದು ಧೈರ್ಯದಿಂದ ಹುಡುಗಿಯರೂ ನಿಭಾಯಿಸುತ್ತಿದ್ದರು. ಹುಡುಗಿಯರು ಕೊಟ್ಟ ನೌಕರಿಯಲ್ಲಿ ಆದಷ್ಟೂ ಹೆಚ್ಚಿನ ಕಾಲ ನಿಲ್ಲುವ ಒಂದು ಲಕ್ಷಣ ಆತನಿಗೆ ಬಹಳ ಹಿಡಿಸುತ್ತಿತ್ತು. ಅವರು ಕೆಲಸವನ್ನೂ ಆದಷ್ಟು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಆದರೆ ಬರುಬರುತ್ತಾ ರಾಯರ ಕುದುರೆ ಕತ್ತೆಯಾಗತೊಡಗಿತು ! ಈಗೀಗ ನೌಕರಿಯಲ್ಲಿ ಕಂಪನಿಯಿಂದ ಕಂಪನಿಗೆ ಜಿಗಿಯುವ ಕೆಲಸದಲ್ಲಿ ಹುಡುಗಿಯರೇ ಮುಂಚೂಣಿಯಲ್ಲಿದ್ದಾರೆ ಎಂಬುದು ಮನವರಿಕೆಯಾಗಿ ಈ ಸರ್ತಿ ಹುಡುಗರಿಗೇ ಆದ್ಯತೆ ಕೊಡಬೇಕೇನೋ ಎಂದುಕೊಂಡಿದ್ದ.

" ನೆಕ್ಸ್ಟ್ "

ಆತ ಕರೆದಾಗ ಒಳಗೆ ಬಂದಿದ್ದು ಶೀತಲ್. ಶೀತಲ್ ಬಹಳ ಸುಂದರ ಹುಡುಗಿ. ಸುಮಾರು ೨೬ ವರ್ಷ ವಯಸ್ಸು. ಮೆಕಾನಿಕಲ್ ತಂತ್ರಜ್ಞಾನ ಓದಿಕೊಂಡವಳು. ೩-೪ ವರ್ಷಗಳ ಒಳ್ಳೆಯ ಅನುಭವ ಕೂಡ ಹೊಂದಿದ್ದಳು. ತನ್ನ ವಿವರಣೆಗಳುಳ್ಳ ಬಯೋಡಾಟಾವನ್ನು ಗಿರೀಶ್ ಕೈಯ್ಯಲ್ಲಿ ಕೊಟ್ಟಳು. ಆತ ಕೂರ್ಲೌ ಹೇಳಿದನಂತರ ಎದುರುಗಡೆಗಿರುವ ಆಸನದಲ್ಲಿ ಕುಳಿತಳು. ಕೆಲವೊಂದು ತಾಂತ್ರಿಕ ವಿಷಯಗಳನ್ನು ಆಕೆಯಲ್ಲಿ ಕೇಳಿ ಉತ್ತರಪಡೆದ ನಂತರ ಆಕೆಯನ್ನು ಸೇರಿಸಿಕೊಳ್ಳುವುದೇ ಬಿಡುವುದೇ ಎಂಬುದು ಮನಸ್ಸಿನ ಹೊಯ್ದಾಟವಾಗಿತ್ತು ಗಿರೀಶ್ ನಿಗೆ. ಆಕೆಯ ಸ್ನಿಗ್ಧ ಸೌಂದರ್ಯ ಇಂದೇಕೋ ಆತನನ್ನು ಸೆಳೆಯುತ್ತಿತ್ತು. ಆಕೆಗೆ ನೌಕರಿ ಕೊಡದಿದ್ದರೂ ಆಕೆಯನ್ನು ಕಳೆದುಕೊಳ್ಳಲು ಆತ ಸಿದ್ಧನಿರಲಿಲ್ಲ. ಆಕೆಯ ಭಾವುಕ ಬೊಗಸೆ ಕಂಗಳು ತನ್ನೆದುರು ಬಿತ್ತರಿಸಿದ ಹಲವು ಭಾವನೆಗಳಿಗೆ ಆತನ ಮನಸ್ಸು ಕವನ ಹೊಸೆಯತೊಡಗಿತ್ತು. ಆದರೂ ತನ್ನ ವೈಯ್ಯಕ್ತಿಕ ಹಿತಾಸಕ್ತಿಯನ್ನು ಆತ ಹೇಳಿಕೊಳ್ಳಲಾಗುವುದೇ ? ಅದಕ್ಕೇ ಆತ ಆಕೆಯನ್ನು ಸ್ವಲ್ಪ ಹೊತ್ತು ಹೊರಗೆ ಕುಳಿತಿರಲು ಹೇಳಿದ. ಮುಂದೆ ಇನ್ನೆರಡು ಅಭ್ಯರ್ಥಿಗಳಿದ್ದರು. ಅವರ ಸಂದರ್ಶನ ಮುಗಿಸಿದಮೇಲೆ ಇನ್ನೊಮ್ಮೆ ಆಕೆಯನ್ನು ಮಾತನಾಡಿಸುವ ಇರಾದೆ ಆತನದಾಗಿತ್ತು. ಆಕೆ ಅಭ್ಯರ್ಥಿಯೇ ಆದರೂ ತನ್ನೆದುರು ಆಕೆ ಕುಳಿತಾಗ ಹೃದಯ ಹಾಡುವ ಹಲವು ರಾಗಗಳು ಮನದಲ್ಲಿ ಉದ್ಭವಿಸಿ ಕಣ್ಣುತುಂಬುವ ಹಲವು ಬಣ್ಣದ ಚಿತ್ತಾರಗಳು ಆತನಿಗೆ ಮುಂದೇನುಮಾಡಬೇಕೆಂಬುದನ್ನೇ ಮರೆಸುತ್ತಿದ್ದವು.

" ನೆಕ್ಸ್ಟ್ "

ಆಗ ಒಳಬಂದಿದ್ದು ರಾಜೀವ. ಬಹಳ ಒಳ್ಳೆಯ ಹುಡುಗ. ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಕಷ್ಟಾರ್ಜಿತದಲ್ಲಿ ಮಾಧ್ಯಮಿಕ ಹಂತದವರೆಗೆ ವಿದ್ಯಾಭ್ಯಾಸ ಪೂರೈಸಿ ನಂತರ ಭಾಗಶಃ ಅಲ್ಲಿಲ್ಲಿ ಕೆಲಸಮಾಡಿಕೊಂಡು ತಾಂತ್ರಿಕ ಪದವಿ ಗಳಿಸಿದ್ದ. ತೆಳ್ಳಗಿನ ವ್ಯಕ್ತಿಯ ಕಣ್ಣ ತುಂಬಾ ಸಾಧಿಸಬೇಕೆಂಬ ಹಂಬಲ ಎದ್ದು ಕಾಣುತ್ತಿತ್ತು. ಅನುಭವವೂ ಸಾಕಷ್ಟು ಇದ್ದುದರಿಂದ ಈತ ಹುದ್ದೆಗೆ ಒಂದರ್ಥದಲ್ಲಿ ತಕ್ಕುದಾದ ವ್ಯಕ್ತಿಯಾಗಬಹುದಿತ್ತು. ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ಕೊಟ್ಟಿದ್ದ ರಾಜೀವ. ವೈಯ್ಯಕ್ತಿಕ ವಿಚಾರಗಳನ್ನು ಕೇಳುತ್ತಾ ತಂದೆಯ ಬಗೆಗೆ ಕೇಳಿದ್ದ. ತನ್ನೆರಡು ಕಣ್ಣಲ್ಲಿ ಹನಿಗಳನ್ನು ತುಂಬಿಕೊಂಡು ಮುಗ್ಧ ಮಗುವಿನ ರೀತಿ ಕಣ್ಣೊರೆಸಿಕೊಳ್ಳುತ್ತ ಉತ್ತರಿಸಿದ ರಾಜೀವ ತಾನು ಅತೀ ಅವನಿರುವಾಗಲೇ ಯಾವುದೋ ಹಾವು ಕಡಿದು ತಂದೆ ತೀರಿಹೋದನೆಂದೂ, ತಂದೆಯ ಪ್ರೀತಿಯನ್ನು ಕಳೆದುಕೊಂಡ ಹತಭಾಗ್ಯನೆಂದೂ ಹೇಳಿದ.

ಅಪ್ಪನೆಂದರೆ ಈ ರೀತಿಯ ಅನನ್ಯತೆ ಇರುತ್ತದೆಂಬುದನ್ನು ಇದೇ ಮೊದಲಾಗಿ ಅನುಭವಿಸುತ್ತಿದ್ದ ಗಿರೀಶ್. ತಾನು ಚಿಕ್ಕವನಿದ್ದಾಗ ಅಪ್ಪ-ಅಮ್ಮ ಇಬ್ಬರೂ ಪ್ರೀತಿಯಿಂದಿದ್ದರು. ತಾನು ೪-೫ ವಯಸ್ಸಿನವನಾಗುವ ಹೊತ್ತಿಗೆ ಅಪ್ಪ-ಅಮ್ಮ ದಿನಾಲೂ ಜಗಳವಾಡುತ್ತಿದ್ದರು. ಮೊದಲೆಲ್ಲಾ ತನ್ನೊಟ್ಟಿಗೇ ತನ್ನನ್ನು ಮಧ್ಯೆ ಮಲಗಿಸಿಕೊಂಡು ಆಚೆ ಈಚೆ ಮಲಗುತ್ತಿದ್ದ ಅಪ್ಪ-ಅಮ್ಮ ಕ್ರಮೇಣ ಬೇರೆ ಬೇರೆ ಕೋಣೆಗಳಲ್ಲಿ ಮಲಗುತ್ತಿದ್ದರು. ಈ ವಿಷಯದಲ್ಲಿ ಅಪ್ಪನನ್ನು ಕೇಳಲಿ ಅಮ್ಮನನ್ನು ಕೇಳಲಿ ತನ್ನನ್ನು ಗದರಿಸುತ್ತಿದ್ದರು. ಕೊನೆಗೊಂದು ದಿನ ಅಪ್ಪ-ಅಮ್ಮ ಒಬ್ಬರನ್ನೊಬ್ಬರು ಥಳಿಸುತ್ತಿದ್ದರು. ಆ ರಾತ್ರಿ ಅಪ್ಪ ಅಮ್ಮನನ್ನೂ ತನ್ನನ್ನೂ ಮನೆಯಿಂದ ಹೊರಗೆ ನೂಕಿಬಿಟ್ಟರು. ಅಳುತ್ತಿದ್ದ ಅಮ್ಮನನ್ನು ನಾನು ತಾನು ಓಡೋಡಿ ಅಪ್ಪಿಕೊಂಡೆ. ಆಮೇಲೆ ಅಮ್ಮ ಏನುಹೇಳಿದರೂ ಕೇಳಿಸಿಕೊಳ್ಳದ ಅಪ್ಪ ಬಾಗಿಲು ತೆರೆಯಲೇ ಇಲ್ಲ. ತನ್ನನ್ನು ನೋಡಲೂ ಬರಲಿಲ್ಲ. ಅರೆಗತ್ತಲೆಯಲ್ಲಿ ಅಮ್ಮ ತನ್ನ ಕೈಹಿಡಿದುಕೊಂಡು ದೂರ ನಡೆದಳು. ತನಗೆ ಕಾಲು ನೋವುಬಂದು ನಡೆಯಲಾಗುತ್ತಿರಲಿಲ್ಲ. ತಾನು ಅಮ್ಮನ ಮುಖವನ್ನೇ ಆಗಾಗ ನೋಡುತ್ತಿದ್ದೆ. ಅಮ್ಮನಿಗೆ ಬೇಸರವಾಗಿದೆಯೆಂಬುದು ಸ್ಪಷ್ಟವಾಗಿತ್ತು. ಅವಳಿಗೆ ಮತ್ತೂ ಬೇಸರಮಾಡುವುದು ಬೇಡವೆಂದು ತಾನು ನೋವಾದರೂ ನಡೆಯುತ್ತಿದ್ದೆ. ನಡೆದೂ ನಡೆದೂ ನಡೆದೂ ಸುಮಾರು ತಾನು ಎಂದಿಗೂ ನಡೆದಿರದ ದೂರವನ್ನು ಕ್ರಮಿಸಿದ್ದೆವು. ಅಲ್ಲಿ ಅಮ್ಮನ ಗೆಳತಿಯ ಮನೆಯೊಂದಿತ್ತು ಎಂಬುದು ಆಮೇಲೆ ತನಗೆ ಗೊತ್ತಾಗಿದ್ದು. ಅಮ್ಮ ಬಾಗಿಲು ತಟ್ಟಿ ಎಬ್ಬಿಸಿದಾಗ ಕತ್ತಲು ತುಂಬಿದ ನೀರವ ರಾತ್ರಿಯಲ್ಲಿ, ನಾಯಿಗಳ ಬೊಗಳುವಿಕೆಗಳ ಮಧ್ಯೆ ಯಾರು ಬಂದಿದ್ದಾರೆಂದು ಅಮ್ಮನ ಗೆಳತಿ ಬಾಗಿಲ ಪಕ್ಕದ ಕಿಟಕಿಯಿಂದ ನೋಡಿದಳು. ತಿಳಿದ ನಂತರ ಬಾಗಿಲು ತೆರೆದು ಬರಮಾಡಿಕೊಂಡಳು.

ಅಮ್ಮ ತುಂಬಾ ದಣಿದಿದ್ದಳು. ಆಕೆಗೆ ದಣಿದದ್ದಕಿಂತ ಹೆಚ್ಚು ಅಪ್ಪಬೈದಿದ್ದು ಬೇಸರವಾಯಿತಿರಬೇಕು. ಗೆಳತಿ ಶರ್ಮಿಳಾ ಆಶ್ಚರ್ಯದಿಂದ ಕೇಳಿದಾಗ ಆಮ್ಮ ಆಕೆಯ ಹೆಗಲಮೇಲೆ ತಲೆಯಾನಿಸಿ ಗಳಗಳನೇ ಅತ್ತಳು. ಶರ್ಮಿಳಾ ಆಂಟಿ ಅಮ್ಮನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಕುಡಿಯಲು ನೀರು ಕೊಟ್ಟು, ಊಟಕ್ಕೆ ಸಜ್ಜುಗೊಳಿಸಲು ಅಡಿಗೆಮನೆಗೆ ಹೋದರು. ಶರ್ಮಿಳಾ ಆಂಟಿಯ ಯಜಮಾನರು ಅಂದು ಊರಲ್ಲಿರಲಿಲ್ಲ. ಆಗ ತಾನು ಮತ್ತು ಅಮ್ಮ ಇಬ್ಬರೇ ಜಗುಲಿಯಲ್ಲಿ ಕುಳಿತಿದ್ದೆವು. ಅಮ್ಮನನ್ನು ಕೇಳಿದರೆ ಮತ್ತೆ ಅಳಲೂಬಹುದು ಎಂಬ ಸಂದೇಹ ತನಗಿತ್ತು. ಆದರೂ ಅಪ್ಪ ಯಾಕೆ ಅಷ್ಟು ಕಟುಕ ಮನಸ್ಸಿನವರಾದರು ಎಂಬುದು ಮಾತ್ರ ತನಗೆ ತಿಳಿಯಲಿಲ್ಲ. ಅದನ್ನು ತಿಳಿಯುವ ಕುತೂಹಲವಿದ್ದರೂ ಅಮ್ಮನಿಗಲ್ಲದೇ ಮತ್ತಿನ್ಯಾರಿಗೆ ಅದು ಗೊತ್ತಿರಲು ಸಾಧ್ಯ ? ತನ್ನ ಪ್ರಶ್ನೆಗಳನ್ನು ಹಾಗೇ ತನ್ನ ಪುಟ್ಟ ಮೆದುಳಿನಲ್ಲಿ ಬಂಧಿಸಬೇಕಾಯಿತು. ಅಪ್ಪನ ಮೇಲೆ ತನಗೂ ಕೋಪ ಬಂದಿತ್ತು. ಆದರೆ ಒಳಗೊಳಗೇ ಪ್ರೀತಿಯೂ ಇತ್ತು. ಆತ ಅಮ್ಮನನ್ನು ಮಾತ್ರ ಹೀಗೆ ಬೈದ ಹೊಡೆದ ಎಂಬ ಕಾರಣಕ್ಕೆ ಅವನನ್ನು ಏಕಾಏಕೀ ಎದುರಿಸುವ ಧೈರ್ಯ ತನಗಿರಲಿಲ್ಲ. ಅಕಸ್ಮಾತ್ ತನಗೂ ಆತ ಎರಡಿಟ್ಟರೆ ಎಂಬ ಭಯ ತನ್ನಲ್ಲಿತ್ತು. ಆದರೂ ಒಂದೆರಡು ಬಾರಿ ಜೋರಾಗಿ " ಅಪ್ಪಾ ಏನ್ಮಾಡ್ತಾ ಇದ್ದೀರ ...ಅಮ್ಮನ್ನ ಹೊಡೀತೀರ ಯಾಕೆ ? " ಎಂದು ಜೋರಾಗಿ ಕೂಗಿದ್ದಿದೆ. ಆದರೆ ಅಪ್ಪ ಅದಕ್ಕೆಲ್ಲಾ ಉತ್ತರಿಸುವ ಗೋಜಿಗೆ ಹೋಗದೇ ಅಮ್ಮನನ್ನು ಬೈಯ್ಯುವ ದೂಡುವ ಕಾರ್ಯದಲ್ಲಿ ನಿರತರಾಗೇ ಇದ್ದರು.

ಊಟಕ್ಕೆ ಅಣಿಗೊಳಿಸಿದ ಶರ್ಮಿಳಾ ಆಂಟಿ ತಮ್ಮನ್ನು ಕರೆದರು. ತಾವು ಹೋಗಿ ಕುಳಿತಾಗ ಅಮ್ಮ ಅದೇನೇನೋ ಇಂಗ್ಲೀಷಿನಲ್ಲಿ ತಮ್ಮ ಗೆಳತಿಯೊಂದಿಗೆ ಸಂಭಾಷಿಸಿದರು. ತನಗದು ಸದ್ಯ ಅರ್ಥವಾಗದ್ದು. ಊಟದ ಶಾಸ್ತ್ರ ಮುಗಿಸಿದರು ಅಮ್ಮ. ಆಗಲೇ ರಾತ್ರಿ ೧೨:೩೦ ರ ಮೇಲೆ ಆಗಿಹೋಗಿತ್ತು. ಕೋಣೆಯೊಂದರಲ್ಲಿ ಹಾಸಿಗೆಹಾಸಿ ತಮಗೆ ನಿದ್ರಿಸಲು ಅನುವುಮಾಡಿಕೊಟ್ಟಿದ್ದಳು ಶರ್ಮಿಳಾ ಆಂಟಿ. ಆ ಇಡೀ ರಾತ್ರಿ ಅಮ್ಮ ಏನೇನೋ ಸಣ್ಣಗೆ ಗುನುಗುತ್ತಾ ಅಳುತ್ತಿದ್ದರು. ಅಮ್ಮ ನಿದ್ರಿಸುವುದಿಲ್ಲವೇಮ್ದು ತಿಳಿದು ತನಗೂ ನಿದ್ರೆ ಬೇಡವಾಗಿತ್ತು. ಅದೇ ಕೊನೆಯಿರಬೇಕು. ಅಲ್ಲಿಂದಾಚೆ ಅಮ್ಮ ಮತ್ತೆ ಅಪ್ಪನಿದ್ದೆಡೆ ಹೋಗಲಿಲ್ಲ. ತಾನು ಹುಟ್ಟಿ ಇಷ್ಟುದಿನ ಬೆಳೆದು ಆಡಿದ ಆ ಮನೆ, ಅಲ್ಲಿನ ಸುತ್ತಲ ಪರಿಸರದಲ್ಲಿ ವಾಸವಿದ್ದ ಪೂಜಾ ಆಂಟಿ, ಪವಿತ್ರಾ ಆಂಟಿ, [ಮಂಚ್ ಕೊಡುತ್ತಿದ್ದ ಪಕ್ಕದ ಮನೆ] ತಾತ, ಸೀಬೆಕಾಯಿ ಆಂಟಿ, ಆಡಲು ಬರುತ್ತಿದ್ದ ಸ್ಕೂಲ್ ಸ್ನೇಹಿತರಾದ ರವಿ, ಸುಧೀಶ್, ಚಿರಂತ್, ಸ್ನೇಹಾ, ಇಂಚರ ಇವರೆಲ್ಲರನ್ನೂ ತಾನು ಕಳೆದುಕೊಂಡೆ. ಮತ್ತೆಂದೂ ಅಪ್ಪ ತನಗಾಗಿ ಹುಡುಕಿ ಬರಲೇ ಇಲ್ಲ. ಆಸೆ ಕಂಗಳಿಂದ ನೋಡುತ್ತಿದ್ದ ತನಗೆ ದಿನವೂ ನಿರಾಸೆಯೇ ಕಾದಿತ್ತು. ಈಗ ತನ್ನಜೊತೆ ಚೌಕಾಬಾರ್ , ಕಣ್ಣಾಮುಚ್ಚೆ, ಕೇರಮ್ಮು ಎಲ್ಲಾ ಆಡಲಿಕ್ಕೆ ಯಾರೂ ಇರಲಿಲ್ಲ. ಆಡುವ ವಸ್ತುಗಳೂ ಇರಲಿಲ್ಲ. ಮನೆಯಿಂದ ತಂದಿದ್ದು ಏನೂ ಇರಲಿಲ್ಲ. ಹಾಕಿಕೊಂಡು ಬಂದ ಚಡ್ಡಿ-ಪ್ಯಾಂಟು ಬಿಟ್ಟರೆ ತನ್ನೆಲ್ಲಾ ವಸ್ತುಗಳು ಆ ಮನೆಯಲ್ಲೇ ಇದ್ದವು. ತನಗಿಷ್ಟವಾದ ಜೀನ್ಸ್, ಬಣ್ಣದ ದಿರಿಸುಗಳು, ಕ್ರೆಯಾನ್ಸ್, ರಬ್ಬರು, ಪೆನ್ಸಿಲ್ ಪುಸ್ತಕಗಳು ಎಲ್ಲವೂ ಅದೇ ಮನೆಯಲ್ಲಿದ್ದವು. ಹೋಗಿ ತರೋಣವೆಂದರೆ ಅಮ್ಮ ನೊಂದುಕೊಂಡಾರೆಂಬ ಅನಿಸಿಕೆ.

ಅಪ್ಪ ಯಾಕೆ ಹಾಗಾದನೆಂಬ ಕಾರಣ ಮಾತ್ರ ಗೊತ್ತಗಲೇ ಇಲ್ಲ. ಮೊದಲೆಲ್ಲಾ ಚೆನ್ನಾಗೇ ಇದ್ದರು. ತನ್ನನ್ನು ಬಹಳ ಪ್ರೀತಿಮಾಡುತ್ತಿದ್ದರು, ಮುದ್ದುಮಾಡುತ್ತಿದ್ದರು, ಚಾಕೊಲೇಟ್-ಹೊಸ ಹೊಸ ಬಟ್ಟೆ ಎಲ್ಲಾ ತಂದು ಕೊಡೋರು. ತಾನೇನಾದರೂ ಕೇಳಿದರೆ ಆದಷ್ಟೂ ಬೇಗನೇ ತಂದುಕೊಟ್ಟು " ಈಗ ಖುಷಿ ಆಯ್ತಾ ನಿಂಗೆ ಮರೀ ? " ಎನ್ನುತ್ತಾ ಲಲ್ಲೆಗರೆಯುತ್ತಿದ್ದರು. ಅಮ್ಮನೇ ಆಗಾಗ ಗದರಿಕೊಳ್ಳುವುದು ಬಿಟ್ಟರೆ ಅಪ್ಪ ತನ್ನನ್ನೆಂದೂ ಹೊಡೆದಿರಲಿಲ್ಲ. ಅಮ್ಮನೊಂದಿಗೂ ತುಂಬಾ ಪ್ರೀತಿಯಿಂದ ನಗುತ್ತಾ ಮಾತನಾಡುತ್ತಿದ್ದರು. ಚಳಿಗಾಲದಲ್ಲಿ ಅವರಿಬ್ಬರ ಮಧ್ಯೆ ಹಾಸಿಗೆಯಲ್ಲಿ ಬೆಚ್ಚಗೆ " ಅಮ್ಮ ಹೊದಿಕೆ-ಅಪ್ಪ ಹೊದಿಕೆ " ಎಂದುಕೊಂಡು ಅವರೀರ್ವರು ಹೊದ್ದ ಹೊದಿಕೆಗಳಲ್ಲೂ ಪಾಲು ಪಡೆದು ಒಂದರಮೇಲೊಂದು ಹೊದೆದುಕೊಂಡು ಮಲಗುತ್ತಿದ್ದೆ ತಾನು. ಸ್ಕೂಲಿಗೆ ಹೊತ್ತಾಗುತ್ತೆ ಏಳೋ ಎಂದು ಅಮ್ಮ ಕೂಗಿದರೂ ಅವರೀರ್ವರೂ ಎದ್ದುಹೋಗಿ ಬಹಳ ಸಮಯವಾದರೂ ಏಳುತ್ತಲೇ ಇರಲಿಲ್ಲ ತಾನು. ರಾತ್ರಿ ಊಟವಾದಮೇಲೆ ’ಪೋಗೋ’ ನೋಡುತ್ತ ತಡವಾಗಿ ನಿದ್ರಿಸುವ ತನನ್ನು ಅದೆಷ್ಟೋ ಹೊತ್ತಿಗೆ ಅಪ್ಪ ಮೆಲ್ಲನೆ ಎತ್ತುತಂದು ಹಾಸಿಗೆಯ ಮಧ್ಯಭಾಗದಲ್ಲಿ ಮಲಗಿಸಿಕೊಳ್ಳುತ್ತಿದ್ದರು. ಅವರಿಗೆ ಬೇರಾವ ಚಾನೆಲ್ ನೋಡಲೂ ತಾನು ಬಿಡದಾಗ " ಮರೀ ಸ್ವಲ್ಪ ಹೊತ್ತು ಕಣೋ ನ್ಯೂಸ್ ನೋಡಬೇಕು " ಎಂದೆಲ್ಲಾ ತನ್ನಲ್ಲಿ ಕೇಳುತ್ತಿದ್ದರು. ಸ್ಕೂಲ್ ಹೋಮ್ ವರ್ಕ್ ಮುಗಿಸಲು ಅಪ್ಪನಾಗಲೀ ಅಮ್ಮನಾಗಲೀ ಸಹಾಯಮಾಡುತ್ತಿದ್ದರು. ಯಾವುದೋ ವಸ್ತು ಸರಿಯಿಲ್ಲವೆಂದು ಅತ್ತರೆ ಮಾರನೇದಿನವೇ ಹೊಸದನ್ನು ತಂದುಕೊಡುವ ಜಾಯಮಾನ ಅಪ್ಪನದಾಗಿತ್ತು. ಮೈಕೈ ತುರಿಕೆ ಇದ್ದರೆ ಇಡೀ ಮೈಗೆ ಕೊಬ್ಬರಿ ಎಣ್ಣೆ ಸವರುತ್ತಿದ್ದುದೂ ಅಪ್ಪನೇ ! ಹೊತ್ತಲ್ಲೇ ಎದ್ದು ತನ್ನ ಸ್ಕೂಲ್ ಬ್ಯಾಗ್ ತಯಾರಿಮಾಡಿ, ತನ್ನ ಸಮವಸ್ತ್ರಕ್ಕೆ ಇಸ್ತ್ರಿ ಹಾಕಿ, ಅದನ್ನು ತನಗೆ ತೊಡಿಸಿ, ಕಾಲುಚೀಲ, ಬೂಟು ಇವನ್ನೆಲ್ಲಾ ಹಾಕಿ ಅಣಿಗೊಳಿಸುವುದು ಅಪ್ಪನಾದರೆ, ಸ್ನಾನಮಾಡಿಸಿ, ದೇವರ ಸ್ತೋತ್ರ ಹೇಳಿಸಿ, ತಿಂಡಿಬ್ಯಾಗ್ ತಯಾರಿಮಾಡಿ, ತಿಂಡಿ ತಿನ್ನಿಸಿ-ಹಾಲುಕೊಟ್ಟು ಮುಂತಾದ ಕೆಲಸವನ್ನು ಅಮ್ಮ ಮಾಡುತ್ತಿದ್ದಳು. ಅಪ್ಪ ಗಾಡಿಯಲ್ಲಿ ಕರೆದೊಯ್ಯುವಾಗ ಅಮ್ಮ ಬಾಗಿಲ ಹೊರಗಿನ ಗೇಟಿನವರೆಗೂ ಬಂದು ಬೀಳ್ಕೊಟ್ಟು ಹೋಗುತ್ತಿದ್ದರು.

ಈಗಲೋ ಅಮ್ಮ ಇಲ್ಲಿ, ಅಪ್ಪ ಅಲ್ಲಿ. ಅಪ್ಪನ ಮನೆಗೆ ಮತ್ತೆ ಹೋಗೋಣವೇ ಎಂದು ಕೇಳುವ ಮನಸ್ಸಾಗುತ್ತಿತ್ತಾದರೂ ಅಮ್ಮ ನೊಂದುಕೊಳ್ಳಬಾರದಲ್ಲ. ಅದಕ್ಕೇ ತಾನು ಸುಮ್ಮನಿದ್ದೆ. ನೋಡುತ್ತಾ ನೋಡುತ್ತಾ ಬೆಳಗಾಗಿಹೋಯಿತು. ಅಮ್ಮನಿಗೆ ಶರ್ಮಿಳಾ ಆಂಟಿ ಸ್ವಲ್ಪ ಹಣ ಕೊಟ್ಟಳು. ಅಮ್ಮ-ತಾನು ತಿಂಡಿತಿಂದು ಶರ್ಮಿಳಾ ಆಂಟಿಗೆ ಕೃತಜ್ಞತೆ ಸಲ್ಲಿಸಿ ಅಜ್ಜನಮನೆ ಊರಿಗೆ ಪ್ರಯಾಣಬೆಳೆಸಿದೆವು. ಕೆಲಸದ ದಿನವಾದ್ದರಿಂದ ಅನಿರೀಕ್ಷಿತವಾಗಿ ಮಧ್ಯಾಹ್ನ ೩ ಗಂಟೆಗೆಲ್ಲಾ ಬಂದಿಳಿದ ತಮ್ಮನ್ನು ನೋಡಿ ಅಜ್ಜ-ಅಜ್ಜಿಗೆ ಆಶ್ಚರ್ಯವಾಯಿತು. ಏನೋ ಕಾರಣವಿರಬೇಕೆಂಬ ಗುಮಾನಿ ಅಜ್ಜನಿಗೆ ಬಂದಿರಬೇಕು. ಒಳಮನೆಗೆ ಕರೆದು ಊಟ-ಉಪಚಾರ ವಗೈರೆ ನಡೆಸಿದರು. ಎಷ್ಟೇ ಕೇಳಿದರೂ ಅಮ್ಮ ಆಕ್ಷಣಕ್ಕೆ ಏನನ್ನೂ ಹೇಳಲಿಲ್ಲ. ಸರಿ ಮಗಳು-ಮೊಮ್ಮಗ ಬಂದಿದ್ದಾರೆ ಅಂತ ಅಜ್ಜ-ಅಜ್ಜಿ ಸುಮ್ಮನಾಗಿಬಿಟ್ಟರು.

ದಿನಗಳು ಕಳೆಯುತ್ತಲೇ ಇದ್ದವು. ತನಗೆ ಸ್ಕೂಲೂ ಇರಲಿಲ್ಲ, ಸ್ನೇಹಿತರೂ ಇರಲಿಲ್ಲ. ಅಜ್ಜನ ಮನೆಯ ಸುತ್ತಲ ಮನೆಯ ಕೆಲವು ಹುಡುಗರು " ನೀನು ಸ್ಕೂಲಿಗೆ ಹೋಗುವುದಿಲ್ವೇನೋ ? " ಎಂದು ಗೋಳುಹುಯ್ದುಕೊಳ್ಳುತ್ತಿದ್ದರು. ಅವರೆಲ್ಲರ ಮನೆಯಲ್ಲಿ ಅಪ್ಪ್-ಅಮ್ಮ ಹಾಯಾಗಿದ್ದರು. ಅವರೆಲ್ಲಾ ಅ ಹಳ್ಳಿಯ ಶಾಲೆಗೆ ಹೋಗುತ್ತಿದ್ದರು. ಅವರನ್ನೆಲ್ಲಾ ನೋಡಿದಾಗ ತನಗೂ ಅಪ್ಪನ ನೆನಪು ಸದಾ ಕಾಡುತ್ತಿತ್ತು. ಅಪ್ಪನ ಮನೆಗೆ ಅಮ್ಮ ಹೋಗುವುದು ಯಾವಾಗ, ಮೊದಲು ನಾವು ಊರಿಗೆ ಬಂದಾಗ ದಿನವೂ ದೂರವಾಣಿ ಕರೆ ಮಾಡಿದ ಹಾಗೇ ಈಗಲೂ ಕೊನೆಗೊಮ್ಮೆ ಮಾಡಬಹುದೇ? ಅಮ್ಮ ಯಾಕೆ ಹೀಗೆ ಮಾಡಿದಳು. ತಿರುಗಿ ಒಮ್ಮೆ ಅಪ್ಪನನ್ನು ಓಲೈಸಿ ಮನೆಗೆ ಹೋಗಬಾರದಿತ್ತೇ ? ಉತ್ತರವಿಲ್ಲದ ಪ್ರಶ್ನೆಗಳು ಕಾಡುತ್ತಲೇ ಇದ್ದವು. ಹೀಗೇ ತಿಂಗಳುಗಳ ಮೇಲೆ ತಿಂಗಳುಗಳೇ ಕಳೆದುಹೋದವು. ಅಪ್ಪ ತಮ್ಮನ್ನೆಲ್ಲಾ ಮರೆತಿರಬಹುದೇ? ಈಗ ಹೇಗಿರಬಹುದು? ಆತನ ಕೋಪ ತಣ್ಣಗಾಗಿರಬಹುದೇ ? ಎಂದು ಯೋಚಿಸುತ್ತಿದ್ದೆ. ಅನಿರೀಕ್ಷಿತವಾಗಿ ಬಂದ ಅಂಚೆಮಾಮ " ಮರಿ ಶಾಲ್ಮಲಿ ಅಂದ್ರೆ ಯಾರು ಕೂಗು " ಅಂದರು. ಅಮ್ಮನನ್ನು ಕೊಗಿದೆ. ರಜಿಸ್ಟರ್ ಮಾಡಿದ ಪತ್ರವೊಂದು ಬಂದಿದೆಯೆಂದು ಆತ ತಿಳಿಯಿತು. ಹಾಗಂತ ಅಮ್ಮನೇ ಹೇಳಿದ್ದು. ಪತ್ರ ಬಂತಲ್ಲ, ಬಹುಶಃ ಅಪ್ಪನದ್ದೇ ಇರಬೇಕು, ಇನ್ನೇನು ತಮ್ಮನ್ನು ಕರೆದುಬಿಡುತ್ತಾನೆ ಎಂದುಕೊಂಡೆ.

ಅಮ್ಮ ಗಳಗಳನೇ ಅಳಲು ಶುರುಮಾಡಿದ್ದರು. ಬಂದ ಪತ್ರದಲ್ಲಿ ಏನಿತ್ತು ಎಂಬುದು ತನಗೆ ಅರ್ಥವಾಗದ್ದು. ಮತ್ತದೇ ಅರ್ಥವಾಗದ ನೋವುಗಳು. ಕಾಡುವ ಪ್ರಶ್ನೆಗಳು, ಮರೆಯಲಾಗದ ನೆನಪುಗಳು. ಅಂದು ಮಾತ್ರ ಅಮ್ಮ ಎಲ್ಲರೆದುರೂ ತನ್ನ ಮನಸ್ಸನ್ನು ಬಿಚ್ಚಿ ಹೇಳಲೇಬೇಕಾಯಿತು. ಅಮ್ಮನಿಗೆ ಅಪ್ಪ ನ್ಯಾಯಾಲಯದ ಮೂಲಕ ಸೋಡಚೀಟಿ ಕೊಡುತ್ತಿರುವ ಸಂದೇಶ ಕಳಿಸಿದ್ದ. ಹಾಗಂದರೇನು ಮುಂದೇನಾಗುತ್ತದೆ ಎಂಬುದು ತನ್ನರಿವಿಗೆ ನಿಲುಕದ ವಿಷಯ. ಅಮ್ಮನೊಂದಿಗೆ ಅಜ್ಜ-ಅಜ್ಜಿಯೂ ಅತ್ತಾಗ ತನಗೂ ಅಳುತಡೆಯಲಾಗಲಿಲ್ಲ. ಗಂಟೆಗಟ್ಟಲೆ ಇಡೀ ಕುಟುಂಬ ಅತ್ತಿದ್ದೆವು. ಆಮೇಲೆ " ಎದೆಗಟ್ಟಿ ಮಾಡಿಕೋ ಮಗಾ ದೇವರಿದ್ದಾನೆ .......ನಿನಗೆ ಹೇಗೂ ಮಗನೊಬ್ಬನಿದ್ದಾನಲ್ಲ .......ಅವನ ಮುಖನೋಡಿ ನಿನ್ನ ನೋವನು ಮರೆ" ಎಂದು ಅಜ್ಜ ಹೇಳುತ್ತಿದ್ದರು. ಅಪ್ಪ ಏನು ಕಳಿಸಿದ್ದಾನೆ ಎಂಬುದು ನನಗೆ ಕೊನೆಗೂ ತಿಳಿಯದ ವಿಷ್ಯವೇ ಆಗಿತ್ತು. ಹಠಮಾಡಿದ್ದಕ್ಕೆ ಅಜ್ಜ ಹೇಳಿದ್ದು " ನಿಮ್ಮಪ್ಪನಿಗೆ ನೀವು ಬೇಡವಂತೆ ಕಣೋ ....ಅದಕ್ಕೇ ಆತ ಬೇರೆ ಮದುವೆಯಾಗುತ್ತಾನಂತೆ.....ಇನ್ನು ನಿನ್ನ ಪಾಲಿಗೆ ಅಮ್ಮನೇ ಅಪ್ಪ ಮಗೂ ...ಜಾಸ್ತಿ ಏನೂ ಕೇಳಬೇಡ...ನಿನಗೀಗ ಅರ್ಥವಾಗೊಲ್ಲ...ಮುಂದೊಂದು ದಿನ ನೀನು ದೊಡ್ಡವನಾಗಿ ಚೆನ್ನಾಗಿ ಓದಿ ಒಳ್ಳೆಯ ಹುದ್ದೆಯಲ್ಲಿದ್ದು ಅಮ್ಮನ್ನ ಚೆನ್ನಾಗಿ ನೋಡಿಕೋ ....ದೇವರು ನಿಮಗೆ ಒಳ್ಳೇದು ಮಾಡುತ್ತಾನೆ " ಅಜ್ಜ ಮತ್ತೆ ಪಂಚೆಯ ತುದಿಯಿಂದ ಕಣ್ಣೊರೆಸಿಕೊಳ್ಳ ಹತ್ತಿದ್ದರು.

ಕಳೆದೆರಡು ವರ್ಷಗಳಲ್ಲಿ ಅಷ್ಟೊಂದು ಪ್ರೀತಿಸಿದ್ದ ಅಪ್ಪ ಇಂದೇಕೆ ತಮ್ಮನ್ನು ಬೇಡವೆಂದು ಹೇಳುತ್ತಿದ್ದಾನೆ ಎಂಬುದು ಕಗ್ಗಂಟಾದ ಸಂಗತಿಯಾಗಿತ್ತು. ಅಪ್ಪನ ಹರವಾದ ಎದೆಯಮೇಲೆ ಮಲಗಿಕೊಂಡು ಆಟವಾಡುತ್ತಾ ಆತನ ಎದೆಗೂದಲನ್ನು ಎಳೆದು ನೋವುಂಟುಮಾಡಿ ಆತ ಕಿರುಚಿದಾಗ ಸಂತಸಗೊಳ್ಳುತ್ತಿದ್ದ ಆ ರಜಾದಿನಗಳು ಮತ್ತೆ ಸಿಗುವುದೇ ? ಅಪ್ಪನ ಬೆನ್ನಮೇಲೆ ಹತ್ತಿ ಆನೆಯಾಟವಾಡುವ, ಆತನನ್ನು ಕೂರಿಸಿ ಆತನ ಮೈಮೇಲೆ ಟವೆಲ್ ಹೊದಿಸಿ, ತಲೆಗೆ ನೀರು ಸಿಂಪಡಿಸಿ, ಹಣಿಗೆ ತೆಗೆದುಕೊಂಡು ಕ್ಷೌರಿಕನ ಆಟವಾಡುವ ದಿನಗಳು ಮತ್ತೆ ಲಭ್ಯವೇ ? ಅಪ್ಪನೇ ಖುದ್ದಾಗಿ " ಇನ್ನು ನೀವು ಬರುವುದೇ ಬೇಡ..." ಎಂದು ಸಂದೇಶ ಕಳಿಸಿದ ಮೇಲೆ ಇನ್ನೆಲ್ಲಿ ಮತ್ತೆ ಅಪ್ಪ ಕರೆಯುವುದು ಸಾಧ್ಯವೇ ? ಮತ್ತದೇ ಮೂಕ ಭಾವಗಳು, ನಾಕಾರು ಪ್ರಶ್ನೆಗಳು .....ಯಾವುದೂ ಮನಸ್ಸಿಗೆ ಸುಸೂತ್ರವಿಲ್ಲ. ಅಳುವ ಅಮ್ಮನ-ಅಜ್ಜ-ಅಜ್ಜಿಯ ಮುಖಗಳನ್ನೇ ನೋಡುತ್ತಾ ಆ ಎಲ್ಲವನ್ನೂ ಮರೆತು ಆಡಲು ಪ್ರಯತ್ನಿಸಿದವ ತಾನು. ವಾಸ್ತವದಲ್ಲಿ ತನಗೆ ಆಟವೂ ಬೇಡ...ಊಟವೂ ಬೇಡ.....ಅಪ್ಪ ಸಿಕ್ಕರೆ ಸಾಕಾಗಿತ್ತು.

ಅಂತೂ ಅಪ್ಪ ಬಾರದಾದ. ತಾವಿಲ್ಲಿದ್ದಾಗ ಉಲಿಯುತ್ತಿದ್ದ ದೂರವಾಣಿ ಯಂತ್ರ ಈಗ ಸುಮ್ಮನೇ ಹಂಗಿಸುತ್ತಿತ್ತು. ಬೇಡದ ಪತ್ರಗಳೇ ಬರುತ್ತಿದ್ದವು. ತಮ್ಮ ಜೀವನ ಸದ್ಯ ಇಲ್ಲಿಯೇ ಎಂಬುದು ತನಗರಿವಾದದ್ದು ಆ ದಿನಗಳಲ್ಲಿ. ಅಜ್ಜ ಅವರಿವರನ್ನು ಕಂಡು ತನ್ನನ್ನು ಹಳ್ಳಿಯ ಶಾಲೆಗೆ ಸೇರಿಸಿದ. ತನಗೆ ಕನ್ನಡ ಬರುತ್ತಿರಲಿಲ್ಲ. ಹೊಸದಾಗಿ ಅಭ್ಯಸಿಸಬೇಕಾಗಿತ್ತು. ಆದರೂ ಹೊಸ ಗೆಳೆಯರೊಂದಿಗೆ ಹೊಂದಿಕೊಂಡು, ಅಜ್ಜ-ಅಜ್ಜಿಯರೊಡನೆಯೂ ಆಟವಾಡುತ್ತಾ ಅಮ್ಮ-ಅಜ್ಜ-ಅಜ್ಜಿ ಹೇಳುವ ಹಲವು ಕಥೆಗಳನ್ನೂ, ವೀರಪುರುಷರ ಜೀವನಗಾಥೆಗಳನ್ನೂ ಕೇಳುತ್ತಾ ಅಪ್ಪನಿಲ್ಲದ ನೋವನ್ನು ಮರೆತೆ. ಮುಂದೊಂದು ದಿನ ಬೆಳೆದು ದೊಡ್ಡವನಾಗಿ ಅಜ್ಜನಿಗೂ-ಅಜ್ಜಿಗೂ-ಅಮ್ಮನಿಗೂ ಖುಷಿತರುವ ಇಚ್ಛೆ ತನಗೆ ಬಂದಿತ್ತು. ಸಾಧ್ಯವಾದರೆ ಮತ್ತೆ ಅಪ್ಪ ತಮ್ಮನ್ನು ಕರೆದೊಯ್ಯಬಹುದೆಂಬ ಆಸೆಯೂ ಇತ್ತು; ಬತ್ತಿಹೋಗಿರಲಿಲ್ಲ.

ತಾನು ಹೈಸ್ಕೊಲ್ ಗೆ ೧೦ನೇ ಈಯತ್ತೆಗೆ ಹೋಗುವಾಗಲೇ ತಿಳಿದದ್ದು ’ಅಮ್ಮನನ್ನು ಅಪ್ಪ ಬಿಟ್ಟುಬಿಟ್ಟಿದ್ದಾನೆ’ ಅಂತ. ಅದಕ್ಕೆ ಕಾರಣವಿಷ್ಟೆ ಅಪ್ಪ ಇನ್ಯಾವುದೋ ಹುಡುಗಿಯ ಪ್ರೇಮಪಾಶದಲ್ಲಿ ಬಿದ್ದಿದ್ದ. ಆಕೆ ಅಮ್ಮನಿಗಿಂತಾ ಸುಂದರಿಯಂತೆ. ಒಳ್ಳೆಯ ನೌಕರಿಯಲ್ಲಿದ್ದಾಳಂತೆ. ಅದುಹೇಗೋ ಅಪ್ಪನಿಗೆ ಅಂತರ್ಜಾಲದ ಮೂಲಕ ಸಂಪರ್ಕ ಬೆಳೆದು ಇಬ್ಬರೂ ಮಾತನಾಡತೊಡಗಿದರಂತೆ. ಆಮೇಲೆ ಅವಳು ಅಪ್ಪನ ಜಂಗಮವಾಣಿಗೆ ಆಗಾಗ ಕರೆಮಾಡುತ್ತಿದ್ದಳಂತೆ. ಈ ವಿಷಯ ಅದು ಹೇಗೋ ಅಮ್ಮನಿಗೆ ತಿಳಿದುಬಿಟ್ಟಿದೆ. ಅಮ್ಮ ಅಂದೇ ಬಹಳ ಅತ್ತಳಂತೆ. ಆಮೇಲೆ ಆಗಾಗ ಪರಿಪರಿಯಾಗಿ ಅಪ್ಪನಲ್ಲಿ ಆ ಸಂಬಂಧ ಬಿಡುವಂತೇ ಗೋಗರೆದಳಂತೆ. ಆದರೆ ಅಪ್ಪನ ಹುಚ್ಚುಪ್ರೀತಿ ಕುರುಡಾಗಿ ಅಮ್ಮನ ಇರವನ್ನು ಮರೆತಿತ್ತು. " ಬೇಕಾದ್ರೆ ನೀನೂ ಇರು ಇಲ್ಲಾಂದ್ರೆ ಅವಳೊಬ್ಬಳೇ ಸಾಕು ....." ಎಂದು ಅಪ್ಪ ಒತ್ತಾಯಿಸಿದಾಗ ಅಮ್ಮನಿಗೆ ಮನಸ್ಸು ತಾಳದೇ ಜಗಳ ಆರಂಭಿಸಿದ್ದಾಳೆ. ಈ ವಿಷಯ ತನ್ನಲ್ಲೇ ಇರಲಿ ಎಂದು ಕೊನೆಯ ದಿನದವರೆಗೂ ಯಾರಿಗೂ ಹೇಳಿರಲಿಲ್ಲ. ಯಾವಾಗ ಅಪ್ಪ ತಾನು ಪ್ರೀತಿಸಿದ ಇನ್ನೊಬ್ಬ ಹುಡುಗಿಯನ್ನು ಶೀಘ್ರವೇ ಮದುವೆಯಾಗುತ್ತೇನೆ ಎಂದನೋ ಆಗ ಮಾತ್ರ ಜಗಳ ತಾರಕ್ಕಕೇರಿತು. ಅದೇ ಕೊನೆ. ಅಮ್ಮನೂ ಮನಸ್ಸು ಗಟ್ಟಿ ಮಾಡಿಕೊಂಡು ಏನಾದರಾಗಲಿ ಎಂದು ಜಗಳವಾಡಿದ್ದು. ಯಾವ ಹೆಣ್ಣೆ ಆಗಲಿ ಇನ್ನೊಂದು ಹೆಣ್ಣಿಗೆ ತನ್ನ ಗಂಡನನ್ನು ಕೊಡಲು ಒಪ್ಪುವಳೇ ? ಖಾರವಾದ ಮಾತುಗಳು ಕೈಕೈಮಿಲಾಯಿಸುವವರೆಗೆ ಬೆಳೆದು ಅಮ್ಮ-ಅಪ್ಪ ನಿಜಕ್ಕೂ ಬಡಿದಾಡಿದರು. ಅಂದೇ ರಾತ್ರಿ ಅಪ್ಪ ದಯೆ, ಕರುಣೆ, ವಾತ್ಸಲ್ಯ, ನೀತಿ, ಪ್ರೀತಿ ಎಲ್ಲವನ್ನೂ ಗಾಳಿಗೆ ತೂರಿ ಹದಿಹರೆಯದ ಹುಡುಗನಂತೇ ಆ ಹುಡುಗಿಗಾಗಿ ಹಂಬಲಿಸುತ್ತಾ ತಮ್ಮನ್ನು ಮನೆಯಿಂದ ಹೊರದಬ್ಬಿದ್ದರು !

ಮುಪ್ಪಿನ ವಯಸ್ಸಿನ ಅಜ್ಜ-ಅಜ್ಜಿ ತಮ್ಮ ಕೃಷೀಜೀವನದ ಕಷ್ಟಾರ್ಜಿತದಲ್ಲಿ ತಮ್ಮನ್ನು ಅದುಹೇಗೋ ಸಾಕಿ-ಸಲಹಿದರು. ಗಂಡುಮಕ್ಕಳಿಲ್ಲದ ಅವರಿಗೆ ತಾನೇ ಗಂಡುಮಗುವಂತಾಗಿ ಬೆಳೆದೆ. ಪದವಿ ಮುಗಿಸಿ ನಂತರ ’ಮಾನವ ಸಂಪನ್ಮೂಲ ಮತ್ತು ಅದರ ಅಭಿವೃದ್ಧಿ, ತರಬೇತಿ ’ ಈ ವಿಷಯದಲ್ಲಿ ಹೆಚ್ಚಿನ ಶಿಕ್ಷಣ ಪಡೆದು ಇಂದು ಒಂದು ಹಂತಕ್ಕೆ ಬಂದಿದ್ದೇನೆ.

" ಸರ್ ....ಅಪ್ಪ ನಾನು ಚಿಕ್ಕವನಿರುವಾಗಲೇ " ಎಂಬ ರಾಜೀವನ ಪುನರುಕ್ತಿಗೆ ಮರಳಿ ಲೋಕಕ್ಕೆ ಬಂದ ಗಿರೀಶ್ ಆತನನ್ನು ಆಯ್ಕೆಮಾಡಿದ. ಅಪ್ಪನಿಲ್ಲದ ಬದುಕು ಯಾವ ಮಗುವಿಗೂ ನೋವಿನ ಬದುಕೇ ಸರಿ ಎಂಬುದು ಅವನ ಮನದಿಂಗಿತವಾಗಿತ್ತು. ತಾನೆಂದೂ ಹೆಣ್ಣಿನ ಸೌಂದರ್ಯಕ್ಕಾಗಿ ಸೋತು ಬಾಳುಕೊಟ್ಟ, ಕೈಹಿಡಿದ ಹೆಣ್ಣಿಗೆ ವಂಚಿಸಬಾರದು ಎಂದುಕೊಂಡ ಗಿರೀಶ್ ಕಛೇರಿಯ ಸಹಾಯಕನನ್ನು ಕರೆದು ಹೊರಗೆ ಕೂತಿರುವ ಶೀತಲ್ ಳನ್ನು ಒಳಗೆ ಕಳಿಸಲು ಹೇಳಿದ. ನೌಕರಿ ಗಿಟ್ಟಿಸಿದ ರಾಜೀವನ ಕೈಕುಲಿಕಿದ, ರಾಜೀವ ನಮಸ್ಕರಿಸಿ ಹೊರಟುಹೋದ. ಆ ನಂತರ ಒಳಗೆಬಂದ ಶೀತಲ್ ಗೆ " ಇವತ್ತಿನ ಸಂದರ್ಶನದಲ್ಲಿ ನಿಮಗೆ ಇನ್ನೂ ಹಲವು ಪ್ರಶ್ನೆಗಳನ್ನು ಕೇಳುವುದಿತ್ತು... ಆದರೆ ಇವತ್ತು ಸಮಯ ಸಾಲುತ್ತಿಲ್ಲ...ಕಾಯಿಸಿದ್ದಕ್ಕಾಗಿ ಕ್ಷಮಿಸಿ....ಇನ್ನೊಮ್ಮೆ ನಿಮಗೆ ಸಂದೇಶ ಕಳಿಸಿ ಹೊಸದಾಗಿ ಸಂದರ್ಶಿಸುತ್ತೇನೆ " ಎಂದು ಕಳುಹಿಸಿಕೊಟ್ಟ. ತಾನಿನ್ನೂ ಮದುವೆಯಾಗಿರದ ವ್ಯಕ್ತಿಯೇ ಆಗಿದ್ದರೂ ತನ್ನ ಬಾಲ್ಯದಲ್ಲಿ ಅಪ್ಪ ನಡೆಸಿದ ಕಥೆ ಗಿರೀಶ್ ನ ಮನದ ತುಂಬಾ ತುಂಬಿಕೊಂಡಿತ್ತು.

Friday, November 19, 2010

ರಾಧಿಕೆ ನಿನ್ನ ಸರಸವಿದೇನೆ ..........?


ರಾಧಿಕೆ ನಿನ್ನ ಸರಸವಿದೇನೆ ..........?

" ಏನ್ಲಾ ಸಿವಾ ಆರಾಮಿದೀಯೇನ್ಲಾ ? "

" ಹೌದಣೋ ಸಂದಾಕಿವ್ನಿ, ಮತ್ತೇನಿಸ್ಯ ? "

" ಏನಿಲ್ಕಣೊ ಮಗಾ ಯಡ್ಯೂರಣ್ಣನ್ ತಾವ ಬಾಳಾ ಜಮೀನದಾವಂತೆ ಒಸಿ ಕೊಡುಸ್ಕ್ಯಬೇಕಾಗಿತು "

" ಅವ್ರಲ್ಲ ಸೋಬಕ್ಕ ಅವ್ರುನ್ನೆ ಹಿಡ್ದ್ಬುಡಿ ಕೆಲ್ಸ್ ಸಲೀಸಾಗೋತದೆ "

" ಒಹೊಹೊಹೊ ಸೋಬಕ್ಕ ಅಂಗೇ ಎಲ್ಲಾ ಮಾತಾಡ್ಸಕಿಲ್ಲ ಸಿವಾ ಅವರೀಗ ೧೬೬ ಎಕ್ರೆ ಕಾಪೀ ಎಸ್ಟೇಟ್ ಮಡಗವ್ರೆ "

" ಹೌದೇನಣಾ ? ನಂಗೊತ್ತೇ ಇರ್ಲಿಲ್ಲಾ "

" ಸುಮ್ಕೇನಾ ರಾಜ್ಕೀಯಕ್ಕೆ ಬಂದಿರಾದು, ಅವ್ರುಗೆ ರಾತ್ರೋರಾತ್ರಿ ಅದ್ಯಾವ್ದೋ ಕಂಪ್ನಿ ಮೂರುವರೆ ಕೋಟಿ ಸಾಲ ಕೊಟ್ಟದೆ, ಜಾಮೀನಿಲ್ಲ-ಗೀಮೀನಿಲ್ಲ.....ಆ ದುಡ್ನೇ ನಾ ಕಾಪೀ ತೋಟ ತಗಳಕೆ ಬಳ್ಸಿರಾದು ಅಂತ ಹೇಳ್ಯವ್ರೆ ಎಲ್ಲೀ.....ಲೋಕಾಯ್ತರಲ್ಲಿ.....ಅವ್ರುಗೆ ಸಾನೆ ಡೌಟ್ ಬಂದದೆ....ಅದೆಂಗೆ ನಿಂಗೆ ಅಷ್ಟೆಲ್ಲಾ ಸಾಲ ಕೊಟ್ಬುಟ್ರು ಅಂತ ರಾಗತೆಗ್ದವ್ರೆ....ಅಷ್ಟೊತ್ಗೆ ನಮ್ಮ ಯಡ್ಯೂರಣ್ಣ ಫೋನಾಕವ್ರೆ ಅನ್ಸುತ್ತೆ.....ಬಿಟ್ಟಾಕವ್ರೆ "

" ಹೌದೇನಣಾ ? ಇಷ್ಟೆಲ್ಲಾ ಆಗೈತಾ ? ಅಂಗಾರೆ ಕಷ್ಟಕಣಣ್ಣೋ ಸದ್ಯ ನೀ ಸೋಬಕ್ಕನ್ ತಾವ ಹೋಗ್ಬ್ಯಾಡ "

" ಸುಮ್ಮುನ್ಕುತ್ಗೊಳೋ ತರ್ಲೆ ನನ್ಮಗನೆ ನಂಗೊತ್ತಿಲ್ವಾ ಈ ಕೆಲಸಕ್ಕೆ ಯಾರ್ನ ಹಿಡೀಬೇಕು ಯಾರ್ನ ಮಡೀಕಬೇಕು ಅಂತಾವ "

-----------------------

" ಅಣಾ ಭೂಕಬಳಿಕೆ ಅಂತಾವ ವಾತ್ರೆಲಿ ಹೇಳವ್ರಲ್ಲ ಹದೇನಣಾ ಅಂಗಂದ್ರೆ ಕಬಳ್ಸೋದೂ ಅಂದ್ರೆ ನುಂಗೋದಲ್ವಾ.... ? "

" ಹೌದ್ಕಣಪ್ಪಾ ಖುರ್ಚೀಲಿದ್ದಾಗ ಮಾಡ್ಮಡೀಕಬುಟ್ರೆ ಮೊಮ್ಮಕ್ಳ ಕಾಲಕ್ಕೂ ಬತ್ತದೆ ಅಂತ ಎಲ್ಲಾ ಸುರುಹಚ್ಕಂಡವ್ರೆ "

" ಕಟ್ಟಾ ಮೀಟಾ ಅಂತೆಲ್ಲ ಬರುದ್ರಲ್ಲ ಪೇಪರ್ರಗೆ ಈಗ ಎಲ್ಲಾವ್ರೂ ಕಟ್ಟಾನೇ ಹಂತೀಯಾ ? "

" ಹಿನ್ನೆಲ್ಲಾ ಅಂಗೇಯ ಕಣ್ಲಾ .....ಒಂದಷ್ಟ್ ಕಾಸ್ಮಾಡ್ಕೆಂಬುಟ್ಟು ಅಲ್ಲಿ ಹಿಲ್ಲಿ ನಿತ್ಗಂಬೋದು...ಗೆದ್ ಬರೂತ್ಲೂವೆ ಎಲ್ಲಾ ಸ್ಕೆಚ್ ಹಾಕ್ಕಂಬೋದು.....ಯಾರಾದ್ರೂ ಅಡ್ಡ ಬಂದ್ರೆ ಸರ್ಕಾರ ಉರುಳುಸ್ತೀವಿ ಅಂತಾ ಕಾಗೆ ಹಾರ್ಸೋದು ....ತಾವೇನೇ ಮಾಡುದ್ರೂ ಎಲ್ಲಾರೂ ಸುಮ್ಕಿರ್ಬೇಕು .....ಆಮೇಲಾಮೇಲೆ ಎಲ್ಲರೂ ತಮ್ಮಂಗೇ ಆಗೋಯ್ತರೆ .....ಆಗಿರೋದು ಒಂದೇ ಪಾಲ್ಟಿ .....ಇರೋಧಾನೇ ಇರಾಕಿಲ್ಲ "

" ಎಂತಾ ಕಾಲ ಬಂದೋಯ್ತಣಾ.....ನಮ್ ಕುಮಾರಣ್ಣ ಅಂಗೆಲ್ಲಾ ಮಾಡಾಕಿಲ್ಲ ಹಲ್ವಾ "

" ಕುಮಾರಣ್ಣ್ನೇ ಸುರುಹಚ್ಕಂಡಿದ್ ಕಣ್ಲಾ ಮೂದೇವಿ .........ಆವಯ್ಯಾ ಸುರುಮಾಡಿದ್ನೇ ಈವಯ್ಯಂದ್ರು ಮುಂದರ್ಸ್ಕೋತ ಬಂದವ್ರೆ "

" ನಮ್ಮ ಕಿಷ್ಣಪ್ಪೋರ್ ಕಾಲಕ್ಕೆಲ್ಲಾ ಒಳ್ಳೇದಿತ್ತಲ್ಲಾ ? "

" ಕತ್ತೇನ್ ತಂದು...ಕಿಷ್ಣಪ್ಪೋರು ದಿಲ್ಲಿ ದರ್ಬಾರಿಂದ್ಲೇ ಮೊನ್ನೆ ಅಳೀಮಯ್ಯ ಮುಕಾಂತ್ರ ರಿಸಾಟ್ರ ಬಿಲ್ನೆಲ್ಲಾ ಶೆಟ್ಲಮಾಡ್ಸಿಲ್ವೇಲ್ನಾ ? ನಿಂಗೆ ರಾಜ್ಕೀಯ ಗೊತ್ತಾಯಾಕಿಲ್ಲ ನೀ ಬಿಡಾಕಿಲ್ಲ .... ಜೀವಾ ತಿಂತೀಯ"

------------------

" ದೀಪಾವಳಿ ಗಿಫ್ಟು ಕೊಡ್ಲೇ ಇಲ್ಲಾ ಕಣಣ್ಣಾ ನೀನು .....ದೀಪಾವಳೀನೂ ಆಗೋಯ್ತು...ತುಳ್ಸಿ ಪೂಜೆನೂ ಆಗೋಯ್ತು"

" ಗೋವಾದಿಂದ ತರಕ್ ಯೋಳಿದ್ದೆ ಕಣ್ಲಾ ನಮ್ ಬಾಮೈದ ಹಲ್ಲೇ ಕೆಲ್ಸ ಮಾಡದು....ಬರೋವಾಗ ಒಂದಷ್ಟ ಹಿಡ್ಕಂಬಾ ಅಂತಂದೆ .....ಆವಯ್ಯ ರಜಾ ಸಿಗ್ನಿಲ್ಲಾ ಅಂತಾವ ಬರೋದೇ ಬಂದಮಾಡ್ದ್ನ ...ನಂಗೊಂತರಾ ಕೈಮುರ್ದಾಂಗಾಗೋಗದೆ "

" ಹೋಗ್ಲಿ ರವಿಬೆಳಗೆರೆ ಅದೇನೋ ’ಕಾಮರಾಜ ಮಾರ್ಗ’ ಅಂತ ಬರ್ದವನಂತಲ್ಲಾ ಓದುದ್ರಾ ? "

" ನಮ್ಮಂತೋರ್ಗೆ ಗೀತೆ ಗೀತೆ ಕಣ್ಲಾದೂ....ವೈನಾಗಿ ಎರಡು ತುಂಡ್ ತಿಂದ್ಕಬುಟ್ಟು ಒಸಿ ಏರ್ಸ್ಕಬುಟ್ಟಿದ್ದೇ ಓದೋಕ್ಕೂತ್ರೆ ಸ್ವರ್ಗ... ಸ್ವರ್ಗನೇ ಇಳ್ದ್ ಬತ್ತದೆ....ಅದ್ಕೇ ಕಣ್ಲಾ ...ಪ್ರಿಂಟಾದಂಗೂ ಖರ್ಚಾಗೋತದೆ ನೋಡ್ತಾಯಿರು ! "

" ಹಂತಾದೇನಣಾ ಅದ್ರಲ್ಲಿ ? "

" ನೇರೂ ಕಾಲ್ದಿಂದ ಹಿಡ್ದು ಇಲ್ಲೀಗಂಟ ಸುಮಾರೆಲ್ಲಾ ದೊಡ್ ಮನ್ಸೂರ ಬಗ್ಗೆ ಬರದವ್ನೆ.... ಅವರೋ ಅವರಾಟಾನೋ ನಾ ಯೋಳ್ತಾಯಿದ್ರೇ ಇಂಗ್ ಬಾಯ್ಬಾಯ್ ಬಿಟ್ಕಂಡು ನೋಡ್ತಾಯ್ಕಂತೀಯ ....ಇನ್ನು ನಿಂಗೇನಾರ ಪುಸ್ತ್ಕಾ ಸಿಕ್ಕುದ್ರೆ ದಿನಾ ಓದಕಾಯ್ತದೆ ಅಂತಾವ ದೇವರ್ಕೋಣೇಲಿ ಪೂಜೆಗಿಟ್ಕಂಬುಡ್ತೀಯ ಬುಡು "

" ಅಣಾ ಬೆಂಗ್ಳೂರ್ಗೋದ್ರೆ ನಂಗೊಂದ್ ಕಾಪಿ ತಗಂಬಾರಣ...ಅದೆಷ್ಟಾತದೆ ಅಂತಾ ಕೊಟ್ಬುಡ್ತೀನಿ "

" ಅದ್ಕಿರೋದು ಹಿನ್ನೂರೈವತ್ತು ರೂ. ಬ್ಲಾಕಲ್ಲಿ ಡಬಲ್ ರೇಟ್ ಮಡ್ಗ್ಯವ್ರೆ ಅಂದವ್ನೆ ನಮ್ ಬಸ್ಯ "

" ಏನಾರಾ ಆಕ್ಕೊಂಡೋಗ್ಲಿ ಕಣಣ್ಣೋ ನಂಗೊಂದ್ ಕಾಪಿ ಬೇಕೇ ಬೇಕು "

-------------------

" ಅಣಾ ಕನಡಾ ಸಾಯ್ತ್ಯ ಸಮ್ಮೇಳ್ನ ಮಾಡ್ತವ್ರಂತಲ್ಲ "

" ಹೌದ ಕಣೋ ಈ ಸರ್ತಿ ಬೇಂಗ್ಳೂರಾಗೇ ಮಾಡಾದು "

" ಹದ್ಯಾರೋ ಜೀವಿ ನ ಕರೀತಾರಂತೆ ....ಹದ್ಯಾರ್ಲ ಅಂಗಂದ್ರೆ ? "

" ಓ ಅದೇ ಕಣ್ಲಾ ಮೊದ್ಲೆಲ್ಲಾ ಹವ್ರೂ ಇವ್ರೂ ಅಂತ ಮಾ ಮಾ ದೊಡ್ ಹೆಸರುಇದ್ದೋರ್ನ ಕರೀತಿದ್ರು....ಅವರಿಗೆಲ್ಲ ಮಾತಾಡಕ್ಕೇ ಕೊಡ್ದೇ ಜೀವಿಲ್ದಿದ್ದಂಗೇ ಕೂತಿರ್ಬೇಕಾಯ್ತಿತ್ತು....ಈವಯ್ಯ ೯೮ ವರ್ಸಾದ್ರೂ ಭಲೇ ಘಾಟಿ .....ಚೆನ್ನಾಗಿ ಮುಕಕ್ಕೇ ಉಗ್ದಂಗೆ ಯೋಳಬುಡ್ತರೆ ಅದಕ್ಕೇ ಜೀವಿ ಜೀವಿ ಹನ್ನದು "

" ಹೌದು ಹದ್ಯಾವನೋ ಮುದ್ಕಪ್ಪನ ಕರ್ದು ಅಲ್ಲಿ ಹೇನೆಲ್ಲಾ ಮಾಡ್ತರೆ ? "

" ಮೂರು ದಿವ್ಸ ಹಬ್ಬ ಹಬ್ಬದ್ ತರ ಇರ್ತದೆ ಕಣ್ಲಾ....ಊಟ...ತಿಂಡಿ ಅಂತ ಎಲ್ಲಾ ಇರ್ತದೆ.....ಕನಡಾ ಬಾವುಟ ಹಾರುಸ್ತರೆ.....ಸುರುವಾಗೋವಾಗ ಸಲ್ಪ ಮೆರವಣ್ಗೆ ಹದೂ ಇದೂ ಇರ್ತದೆ ....ಸುರುಮಾಡಕೂ ಮುಗಿಸಕೂ ರಾಜ್ಕೀಯ ನಾಯ್ಕರು ಬತ್ತರೆ.....ಬಾಳ ಜನ ಸೇರ್ತರೆ...ಹುಡ್ಗೀರು ಅವ್ರು ಇವ್ರು ಅಂತಾವ ಸಾನೆ ಜನ ಓಡಾಡ್ತರೆ "

" ಹುಡ್ಗೀರ್ ಬತ್ತರೆ ಅಂತಾಯ್ತು...ನಾನು ಹೋಬೇಕಣಾ .......ಬೆಂಗಳೂರ್ ಬೊಂಬೆಗೋಳ್ನ ನೋಡ್ದೆ ಸಾನೆ ಬೇಜಾರಾಗೋಗದೆ....ಒಂದ್ ಕಿತಾ ರೌಂಡ್ ಹೊಡ್ದ್ಬುಟ್ಟ್ರೆ ಹೆಲ್ಲಾ ಸರಿಹೋತದೆ "

" ಹೋಗವ ಬಿಡು....ನಾನೂ ನಿನ್ನಂಗೇ ಹೋಬೇಕು ಅಂದ್ಕಂಡಿವ್ನಿ.....ಯಾರಾರಾ ಏನಾರಾ ಮಾಡ್ಕಳ್ಳಿ....ಸರ್ಕಾರ ಒಂದಷ್ಟ್ ಕರ್ಚ್ ಮಾಡ್ತದೆ....ನಾವೂ ಹೋಗಿ ಮಜಾ ಉಡಾಯ್ಸ್ಕಂಬರೋದು "

-------------------


" ಅಣಾ ರಾಧಿಕಾ ಅವ್ಳಲ್ಲಾ ........"

" ಹೇಳ್ಲಾ ಮುಂದೆ ......"

" ಅವ್ಳೀಗೆ ವರ್ಸದ ಹಿಂದೆ ಮಗೂ ಆಯ್ತಲಣಾ ಹದೂ ನಮ್ ಕುಮಾರಣ್ಣಂದಂತೆ ? "

" ಇನ್ನೇನಾತದೆ ಮತ್ತೆ......ತುರ್ಕೆ ಜಾಸ್ತಿ ಆಯ್ತು...ಹೆಂಗೂ ಒಂದ್ ಮಡೀಕಬೇಕು ಚೆನ್ನಾಗಿರೋದಕ್ಕೆ ಕೈ ಹಾಕವ ಅಂತ ಸುರು ಹಚ್ಕಂಡಿದ್ದ "

" ಹವ್ಳೇನೋ ಹದಯಾವ್ದೋ ಉದಯವಾಣಿ ಪೇಪರ್ನಾಗೆ ಹೇಳವ್ಳಂತೆ.....’ನಾನು ಮಾಜಿ ಮಂತ್ರಿಯೊಬ್ಬುರ್ನ ಮದ್ವೆ ಆಗಿದ್ದೌದು....ಮಗೂನೂ ಆಗದೆ..ಆದ್ರೆ... ಎರ್ಡೆರ್ಡಲ್ಲಾ....ಒಂದೇಯ.....ನಾನು ಮಗೂನ ವಿದೇಶಕ್ಕೆಲ್ಲಾ ಕಳುಸ್ಲಿಲ್ಲಾ....ಹಿಲ್ಲೇ ಇದೀವಿ ...ನಾ ಇನ್ನೂ ಸಿನ್ಮಾದಾಗೆ ಮತ್ತೆ ಹಿರೋಯಿಣಿ ಮಾಡ್ತೀನಿ ಆದ್ರೆ ಜಾಸ್ತಿ ಬಿಚ್ಚಾಕಿಲ್ಲಾ...’ ಅಂದವ್ಳಂತೆ "

" ಹೋಕ್ಕಳಿ ಬುಡು ಗೌಡ್ರೂ ಮಾತಾಡಂಗಿಲ್ಲ....ಸೊಸೆದೀರೂ ಮಾತಾಡಾಂಗಿಲ್ಲ...ಮಂತ್ರಿಗಿರಿ ಇಲ್ಡಿರ್ವಾಗ ಸುಮ್ನೇ ಹೋಗಿ ಆಟ ಆಡಕೊಂದ್ಕಿತಾ ಜಾಗ ಬೇಕಲ್ವಾ ? "

" ಜನತಾ ದರ್ಸನ ಮಾಡೀ ಮಾಡೀ ಸುಸ್ತಾಗ್ಬುಟ್ಟಿತ್ತು ಪಾಪ ಹದ್ಕೇ ’ ಜಾನಕಿ ತರ ಒಬ್ಳೇ ಇರ್ಬ್ಯಾಡ....ನಾನಿದೀನಲ್ಲ....ನಿಂಗೆಲ್ಲಾ ಕೊಡ್ತೀನಿ.....ನೀ ನಂಗಬೆಕಾದ್ನೆಲ್ಲಾ ಕೊಟ್ಬುಡು ’ ಅಂದವ್ನೆ....ಭದ್ರಾವತಿ ಬಂಗಾರ್ದ ಬಣ್ಣ ಕಂಡ್ಬುಟ್ಟು ಒಸಿ ಬೇಜಾರಾದ್ರೂ ಇನ್ನೇನ್ ಹಬ್ಬಬ್ಬಾ ಹಂದ್ರೆ ಒಂದ್ ಹತ್ತನ್ನೆರ್ಡ್ ವರ್ಸ .... ಆಮೇಲೆಲ್ಲಾ ಬಣ್ಣ ತಗಂಡೇನೂ ಆಯಾಕಿಲ್ಲ...ಒಳ್ಳೇ ಆಸ್ತಿ ಮನೆ ಇದ್ರೆ ಸಾಕು ಅಂತಾವ ಮನ್ಸಮಾಡ್ಯವಳೆ....ಮಾಡಿದ್ದೇ ಮಾಡಿದ್ದು ಕುಮಾರಣ್ಣ ಮತ್ಯಾರೂ ಕಣ್ಣಾಕ್ ದಂಗೆ ಕೈಲೊಂದ್ ಕೊಟ್ಬುಟ್ಟ "

" ಓಗ್ಲಿ ಬಿಡೋ.....ನಿಂದೇನೋಯ್ತು ಗಂಟು .....ನಾ ಹೋಬೇಕು ಅರ್ಜೆಂಟದೆ "

" ಯಾಕಣಾ ಹಶ್ಟು ಅರ್ಜೆಂಟು ? "

" ಮಾದೇಗೌಡ್ರ ಸೊಸೆ ಹತ್ರ ಏನಾರ ಎಲ್ಪು ಬೇಕಾರೆ ಯೋಳು ಬತ್ತೀನಿ ಅಂದಿದ್ದೆ....ಬೆಳಗ್ಗೆನೇ ಪೋನಾಕವ್ಳೆ ಇನ್ನೂ ಹೋಯಕಾಯ್ತಾ ಇಲ್ಲ .....ಬರ್ಲಾ "

" ಅಣೋ ........................."


" ಬತ್ತೀನಿ ಬತ್ತೀನಿ......... ;) "