ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 15, 2010

ಅರ್ಥವಾಗದ ಆಗಸ !


ಅರ್ಥವಾಗದ ಆಗಸ !

ನೀಲಾಗಸದ ಆಚೆ ಯಾವೂರು ಯಾರಿಹರು ?
ಕಾಲದಲಿ ಕಂಡಿಹರು ಬದುಕಿಹರೆ ಕೇಳೆ ?
ಏನಿದಾನಂತದಲಿ ಅಂತ್ಯವೇ ಇಲ್ಲದಿರೆ ?
ನಾನದನ ನೆನೆಯುತಿರೆ ನೂರು ಕನಸಿಹುದು

ನಕ್ಷತ್ರಗಳ ರಾಶಿ ನಡುವೆ ಚಂದ್ರನ ಕಾಶಿ
ಅಕ್ಷತೆಯ ಕಾಳ ಚೆಲ್ಲಿರುವ ನೋಟ
ವಕ್ಷಸ್ಥಳವೆಲ್ಲಿ ಆಧಾರವದಕೆಲ್ಲಿ
ಭಕ್ಷೀಸು ನೀಡಿದಗೆ ನೂರೆಂಟು ನಮನ

ಕಂಬಗಳ ನೋಡಿಲ್ಲ ಬಿಂಬಗಳು ಕಾಣುತಿವೆ
ಅಂಬರದಿ ಗುರುತ್ವ ಪೊಳ್ಳುಗಳೆಂಬ ಸೆಳವು
ನಂಬಿ ಹೋದವ ಬಾರ ಏನಲ್ಲಿ ದರಬಾರ ?
ತುಂಬುಗಣ್ಣಲಿ ಹುಡುಕು ಸಾವಿರದ ಸರಕು !

ಬಾಗಿಲುಗಳೇ ಇಲ್ಲ ಕಿಟಕಿಗಳು ಮೊದಲಿಲ್ಲ
ತೂಗಿ ಬಿಟ್ಟಿಹರೆನ್ನೆ ಸರಪಳಿಯು ಇಲ್ಲ
ಭಾಗವತ ಜನರಿಲ್ಲ ಸಾಗಿ ಹಾಡುವುದಕ್ಕೆ
ಆಗಾಗ ತೋರುವುದು ಬಣ್ಣದೋಕುಳಿಯು !

ಒಮ್ಮೆ ಯೋಚಿಸೆ ಸೋತೆ ಆಯಗಲ ವಿಸ್ತೀರ್ಣ
ಸುಮ್ಮನಾಗುತ್ತೇನೆ ಫಲಸಿಗದ ಅಳತೆ !
ದಮ್ಮು ಇದ್ದರೆ ಬನ್ನಿ ಅಳೆದುಕೊಡಿ ಅದರಳತೆ
ಹಮ್ಮು ಮುರಿವುದು ಕ್ಷಣದಿ ಆಗಸದ ಗಾಥೆ !

Saturday, August 14, 2010

ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ !


ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ !

ನಮ್ಮಲ್ಲಿ ಇವತ್ತಿನ ಮಕ್ಕಳಿಗೆ ಇಂಡಿಯಾ ಅಂದರೆ ಗೊತ್ತಾಗಬಹುದೇ ವಿನಃ ಭಾರತ ಎಂದರೆ ತಿಳಿಯುವುದು ಕಷ್ಟ. ಯಾಕೆ ಭಾರತ ಎನ್ನುವ ಹೆಸರು ಬಂತು ಎಂದು ನಾವು ಚಿಂತಿಸುವುದೇ ಇಲ್ಲ. ನಮ ಪೂರ್ವಜರಲ್ಲಿ ದುಷ್ಯಂತ-ಶಕುಂತಲೆ ಕೂಡ ಇದ್ದರಲ್ಲ ? ಆ ದುಷ್ಯಂತ-ಶಕುಂತಲೆಗೆ ಭರತನೆಂಬೊಬ್ಬ ಮಗನಿದ್ದ ಎಂದು ಕೆಲವು ನನ್ನ ಓರಗೆಯ ಜನ ಅಥವಾ ಇದಕ್ಕೂ ದೊಡ್ಡ ವಯಸ್ಸಿಗರು ತಿಳಿದಿರುತ್ತಾರೆ. ಆದರೆ ಆ ಭರತನಿಗೂ ಈ ಭಾರತಕ್ಕೂ ಏನು ಸಂಬಂಧ ? ಇಮಮ್ ಸಾಬಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧವೇ ? ಖಂಡಿತ ಅಲ್ಲ! ಹಾಗಾದರೆ ಅದೇ ಭರತ ಜಡಭರತನಾಗದೇ ಬಹಳ ಕರ್ತೃತ್ವ ಶಕ್ತಿಯನ್ನು ಹೊಂದಿದ್ದ. ವಿಕ್ರಮಿಯೂ ಅತಿ ಪರಾಕ್ರಮಿಯೂ ಆಗಿದ್ದ. ಸಣ್ಣವನಿರುವಾಗಲೇ ಸಿಂಹಗಳ ಬಾಯಿಗೆ ಕೈಹಾಕುತ್ತಾ ಅವುಗಳ ಜೊತೆಗೆ ಆಟವಾಡಿದ್ದನೆಂದು ನಾವು ಕೇಳಿದ್ದೇವೆ ಅಲ್ಲವೇ ? ಆ ಭರತ ಬೆಳೆದು ಚಕ್ರವರ್ತಿಯಾದ. ಭರತೇಶನಾದ. ಅಂತಹ ಭರತ ತಮ್ಮ ಮೇಲೆ ಒಂದುಕಾಲಕ್ಕೆ ಇನ್ನೊಬ್ಬ ಚಕ್ರವರ್ತಿಯಾದ ರುಕ್ಮಾಂಗದನ ಮಗ ದಾಳಿಗೆ ಬಂದಾಗ ಆತನ ಚಹರೆಗಳನ್ನು ನೋಡಿ ಅವನಿಗೆ ಮನಸೋತ; ಇದ್ದರೆ ಇರಬೇಕು ಇಂತಹ ಪರಾಕ್ರಮಶಾಲಿ ಅಳಿಯ ಎಂದು ನಿರ್ಧರಿಸಿ ನೇರವಾಗಿ ಯುದ್ಧಕ್ಕೆ ಬಂದಿದ್ದ ಧರ್ಮಾಂಗದನಲ್ಲಿ ಪ್ರಸ್ತಾವಿಸಿದ. ಮಹಾವಿಷ್ಣುವಿನ ಪರಮ ಭಕ್ತನಾದ ಧರ್ಮಾಂಗದ ತನ್ನ ಒಪ್ಪಿಗೆಯಿತ್ತ ಪರಿಣಾಮ ಭರತ ಚಕ್ರವರ್ತಿ ರುಕ್ಮಾಂಗದ ಚಕ್ರವರ್ತಿಯ ಮಗನಿಗೆ ತನ್ನ ಹೆಣ್ಣು ಮಕ್ಕಳನ್ನು ಧಾರೆ ಎರೆದ. ಇದರಿಂದ ಅಖಂಡ ಹಿಂದೂಸ್ಥಾನದ ಬಹುಭಾಗ ಭರತ ಹಾಗೂ ಮತ್ತವನ ಅಳಿಯನ ಸಾಮ್ರಾಜ್ಯಕ್ಕೆ ಒಳಪಟ್ಟಿತು. ಆ ಕಾಲದಲ್ಲಿ ಪ್ರಜೆಗಳನ್ನು ಅತ್ಯಂತ ಗೌರವಯುತವಾಗಿ ಅತ್ಯಂತ ಕಾಳಜಿಯಿಂದ ನೋಡಿಕೊಂಡ ಭರತನ ನೆನಪಿಗಾಗಿ ಪ್ರಜೆಗಳೇ ಇಟ್ಟು ಪ್ರೀತಿಯಿಂದ ಕರೆದ ಹೆಸರು ಈ ’ ಭರತಖಂಡ’ ! ಒಂದುಕಾಲಕ್ಕೆ ಭರತನಾಳಿದ್ದ ಈ ಭೂ ಖಂಡ ಭೌಗೋಳಿಕವಾಗಿ ದೊಡ್ಡ ಖಂಡವಲ್ಲದೇ ಇದ್ದರೂ ಒಮ್ಮೆ ಅದನ್ನು ಜನ ಖಂಡವೆಂದೇ ಕರೆದರು. ಈ ಭರತಖಂಡವೆನ್ನುವ ಹೆಸರು ಕಾಲಕ್ರಮದಲ್ಲಿ ’ಭಾರತ’ ವಾಯಿತು. ಇವತ್ತಿಗೂ ಅಖಂಡ ಭಾರತವನ್ನು ಹಿಂದೂಗಳು ಪೂಜೆಯಲ್ಲಿ ಕೈಗೊಳ್ಳುವ ಸಂಕಲ್ಪದಲ್ಲಿ " ಭರತ ಖಂಡೇ ಭಾರತ ದೇಶೇ " ಅಂತ ಸಂಬೋಧಿಸುತ್ತಾರೆ. ಒಟ್ಟಾರೆ ಇದು ಜನಪ್ರಿಯ ಚಕ್ರವರ್ತಿಯ ನೆನಪಿಗೆ ಜನರೇ ಇಟ್ಟು ಕರೆದ ಹೆಸರು.


ಇವತ್ತು ನಮ್ಮ ರಾಜಕೀಯ ನಾಯಕರುಗಳಿದ್ದಾರಲ್ಲ, ಅವರು ಪ್ರಜೆಗಳ ಬಗ್ಗೆ ಮಾಡಿದ ಕೆಲಸ ಹಾಗಿರಲಿ, ಒಮ್ಮೆ ಗೆದ್ದು ಖುರ್ಚಿ ಸಿಕ್ಕಿಬಿಟ್ಟರೆ ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಶುರುಮಾಡುತ್ತಾರೆ. ನ್ಯಾಯವೋ ಅನ್ಯಾಯವೋ ಅವರಿಗೆ ದುಡ್ಡುಬೇಕು. ಈ ಸ್ಥಾನ ಭದ್ರತೆಗಾಗಿ ಇವರು ಮಾಡುವ ಹಲವು ಕೆಲಸಗಳಲ್ಲಿ ಒಂದು ತಮ್ಮ ಹೆಸರನ್ನು ಕಂಡ ಕಂಡಲ್ಲಿ ಅದಕ್ಕೆ ಇದಕ್ಕೆ ಅಂತ ಇಡುತ್ತ ಹೋಗುವುದು. ಉದಾಹರಣೆಗೆ : ದೇಶಪಾಂಡೆ ನಗರ. ನಮಗೆ ಈ ದೇಶಪಾಂಡೆ ಮಾಡಿದ ಘನಂದಾರಿ ಸಹಾಯವೇನು? ದೇಶಪಾಂಡೆ ಇದುವರೆಗಿನ ಸಕ್ರಿಯ ರಾಜಕೀಯದಲ್ಲಿ ಬೆಳೆದು ಬಂದ ಮಾರ್ಗ ಹೇಗೆ ? ಹಾಗೂ ಅವರ ನಡೆ-ನುಡಿ ಸ್ವಭಾವಗಳು ಹೇಗೆ? ಅವರು ಚುನಾವಣೆಯಲ್ಲಿ ಗೆಲ್ಲಲು ಬಳಸುವ ಸೀರೆ-ಪಂಚೆ-ಬಂಗಾರದ ನತ್ತು ಇವುಗಳ ಹಿಂದಿರುವ ಅವರ ತಾಕತ್ತು ಎಂಥದು?---ಎಲ್ಲವನ್ನೂ ಅವಲೋಕಿಸಿದರೆ ಪೆದ್ದನೂ ಅಳೆಯಬಲ್ಲ ರಾಜಕೀಯ ಆದಾಯದ ಒಳಹರಿವು ಹೊರಹರಿಯುತ್ತದೆ! ಹರುಕು ಪೈಜಾಮಿನಲ್ಲಿ ಬರುವ ರಾಜಕಾರಣಿಗಳು ವರ್ಷದಲ್ಲೇ ಬದಲಾವಣೆ ಕಂಡು ಕಾರು ಬಂಗಲೆ ಖರೀದಿಸುವುದು, ಎಸ್ಟೇಟ್ ಮತ್ತು ಫಾರ್ಮ ಲ್ಯಾಂಡ್ ಎಂದು ಸಾವಿರಗಟ್ಟಲೆ ಎಕರೆ ಜಮೀನು ಮಾಡುವುದು ಇದೆಲ್ಲಾ ಹೇಗೆ ಸಾಧ್ಯ ? ಬಿಕನಾಸಿಗಳಾಗಿದ್ದ ಅವರುಗಳನ್ನೆಲ್ಲ ಸುಕನಾಸಿಯ ಮೇಲೆ ಹತ್ತಿಸಿ ಥೈ ಥೈ ಎಂದು ಕುಣಿಯುವಂತೆ ನೋಡಿಕೊಂಡಿದ್ದರಿಂದಲೇ ಅವರು ಇದನ್ನೆಲ್ಲಾ ಮಾಡಲು ದಾರಿಸಿಕ್ಕಿತು ಎನ್ನೋಣವೇ ? ಲೋಕಾಯುಕ್ತರು ಸರಕಾರೀ ಅಧಿಕಾರಿಗಳನ್ನು ಪರಿಶೀಲಿಸಿದಂತೆ ರಾಜಕಾರಣಿಗಳ ಆಸ್ತಿಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಿ. ಮುಂದೆ ನುಸಿ ಹಾರಿದರೆ ಹಿಡಿಯಿರಿ ಎನ್ನುವ ಸರಕಾರ ಹಿಂದೆ ಆನೆ ಓಡುತ್ತಿರುವುದನ್ನು ಹಿಡಿಯಲು ಯಾಕೆ ಅನುಮತಿಸುವುದಿಲ್ಲ? ಇದು ಜಾಣ ಜಾರಿಕೆಯೇ ? ಲೋಕಾಯುಕ್ತರು ಮೊದಲು ಹಿಡಿಯಬೇಕಾದದ್ದು ರಾಜಕೀಯ ಹಲವು ಮುಖಂಡರನ್ನು. ಈ ಕುತ್ಸಿತ ರಾಜಕೀಯದವರ ಮನೆಗಳಲ್ಲಿ ಧಕ್ಕಿರುವ ಆಸ್ತಿಯ ಹಿಂದೆ ಹಲವು ರೋಚಕ ಮತ್ತು ರೋದಕ ಕಥೆಗಳಿವೆ. ಅವರ ಒಂದೊಂದು ಆಸ್ತಿಯ ಗಳಿಕೆಯೂ ಒಂದೊಂದು ಅಕ್ರಮ ವ್ಯವಹಾರವನ್ನು ಬಯಲಿಗೆಳೆಯುತ್ತದೆ, ಅದಕ್ಕೆಂದೇ ನಮ್ಮ 'ರಾಜಕಾರಣಿಗಳ ಮಹಾಒಕ್ಕೂಟ' ಲೋಕಾಯುಕ್ತರಿಗೆ ಯಾವುದೇ ಕಾರಣಕ್ಕೂ ಪೂರ್ಣಪ್ರಮಾಣದ ಅಧಿಕಾರ ಕೊಡುವುದಿಲ್ಲ! ಹೀಗಾಗಿ ಯಾವುದೇ ರಾಜಕೀಯ ಧುರೀಣನನ್ನು ಲೋಕಾಯುಕ್ತರು ಪ್ರಶ್ನಿಸುವಂತಿಲ್ಲ! ಇಲ್ಲಿ ಒಂದು ಮಜಾ ನೋಡಿ- ಶಹರ, ಪಟ್ಟಣಗಳ ಬಹುತೇಕ ಹೆಸರುಗಳೆಲ್ಲ ರಾಜಕೀಯ ಪ್ರೇರಿತವೇ ಹೊರತು ಅವು ಜನಪ್ರಿಯವಲ್ಲ! ಜನ ಪ್ರೀತಿಯಿಂದ ಆ ಹೆಸರನ್ನು ಇಟ್ಟಿದ್ದಲ್ಲ, ಬದಲಾಗಿ ಕಳ್ಳ ರಾಜಕಾರಣಿಗಳು ತಾವು ಸತ್ತರೂ ತಮ್ಮ ನೆನಪಿಗೆ ಇರಲಿ ಎಂದು ಅಂತಹ ಬೋರ್ಡು ಬರೆಸುತ್ತಾರೆ. ಪ್ರಜೆಗಳು ಇಷ್ಟವೋ ಕಷ್ಟವೋ ಅಂತೂ ಗುರುತಿಸಲಾಗಿ ಬೇಕಲ್ಲ ಎಂದು ಆ ಹೆಸರುಗಳನ್ನು ಅನಿವಾರ್ಯವಾಗಿ ಬಳಸುತ್ತಾರೆ.

ಇಷ್ಟೆಲ್ಲಾ ಬರೆಯುವ ಕಾರಣವೆಂದರೆ ಇಂದಿಗೂ ಹಿಂದಿನ ರಾಜರ ಆಳ್ವಿಕೆಗೂ ಬಹಳ ವ್ಯತ್ಯಾಸವಿದೆ! ಅಂದಿನ ರಾಜರ ಆಳ್ವಿಕೆಯೇ ಬಹುಪಾಲು ಮೇಲಾಗಿತ್ತು. || ರಾಜಾ ಪ್ರತ್ಯಕ್ಷ ದೇವತಾ || ಎಂದು ಪ್ರಜೆಗಳು ನಂಬಿದ್ದರೆ || ಯಥಾರಾಜಾ ತಥಾ ಪ್ರಜಾ || ಎಂಬುದನ್ನು ಮನಗಂಡಿದ್ದ ರಾಜರುಗಳು ಪ್ರಜೆಗಳ ಪರಿಪಾಲನೆಯಲ್ಲಿ ಮಾನವಧರ್ಮ ಮಾರ್ಗವನ್ನು ಅನುಸರಿಸುತ್ತಿದ್ದರು. ಇವತ್ತು ಆಳುವ ಪಕ್ಷಗಳಲ್ಲೇ ಹಲವು ಅಪಸ್ವರಗಳು ಹೊರಡುತ್ತಿರುತ್ತವೆ. ಉದಾಹರಣೆಗೆ ನಿನ್ನೆಯ ಪತ್ರಿಕೆಯೊಂದರಲ್ಲಿ ಉತ್ತರಕರ್ನಾಟಕದ ಶಾಸಕರೊಬ್ಬರು ವೈದ್ಯಕೀಯ ಸೌಲಭ್ಯ ವಂಚಿತ ಬಡವನೊಬ್ಬನ ಬಗ್ಗೆ ಹೇಳುತ್ತ ತನ್ನದೇ ಪಕ್ಷದ ಸರಕಾರದಲ್ಲಿ ವೈದ್ಯಕೀಯ ಶಿಕ್ಷಣ ಮಂತ್ರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕಾಗಿ ಬಂದ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಆಳುವವರಿಗೆ ಏನಾಗಿದೆ ? ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಇದು ನಾವು ಮಾಡಿಕೊಂಡ ವ್ಯವಸ್ಥೆಯೋ ಅಥವಾ ದೇಶದ/ರಾಜ್ಯದ ಬೊಕ್ಕಸವನ್ನು ಬರಗಿ ತುಂಬಿಕೊಳ್ಳಲು ಜನರನ್ನು ನೇಮಕಮಾಡಿಕೊಳ್ಳುವ ವ್ಯವಸ್ಥೆಯೋ ಅರ್ಥವಾಗಿಲ್ಲ;ಅರ್ಥವಾಗೊಲ್ಲ ಎಲ್ಲೀವರೆಗೆ ಎಂದರೆ ನಮ್ಮ ಕಟ್ಟಕಡೆಯ ಅಂದಿನದಿನದ ಪುಡಿ ದುಡ್ಡಿಗಾಗಿ ಹಲ್ಲು ಗಿಂಜುತ್ತ ಕಂಡಲ್ಲಿ ಮತವೊತ್ತುವ ಹಲಕಟ್ಟು ಮತದಾರ ಇರುವವೆರೆಗೂ! ರಾಜಕಾರಣಿಗಳಿಗೂ ಇದೇ ಆಸ್ತಿ! ಎಲ್ಲಿ ಅನಕ್ಷರತೆ ಮತ್ತು ಬಡತನವಿದೆಯೋ ಅಲ್ಲಿ ಅವರ ಬೇಳೆ ಬೇಯುತ್ತದೆ!

ನೋಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಮ್ಮ ಹಳ್ಳಿಗಳಿಗೆ ರಸ್ತೆಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಓದಲು ಶಾಲೆಗಳಿಲ್ಲ, ಸರಿಯಾಗೆ ಕೆಲಸ ಮಾಡುವ ಆರೋಗ್ಯಕೇಂದ್ರಗಳಿಲ್ಲ, ತೀವ್ರ ಸ್ಥಿತಿಗೆ ಸಾಗಿಸಲು ವಾಹಕಗಳಿಲ್ಲ[ಆಂಬುಲೆನ್ಸ್]. ಆದರೆ ನಮ್ಮಲ್ಲಿ ಮತವೈಷಮ್ಯಗಳಿವೆ, ಮೀಸಲಾತಿಗಳಿವೆ, ಮೈನಾರಿಟಿ-ಮೆಜಾರಿಟಿ ಎಂಬ ಪ್ರಬೇಧ-ಕುಲಬೇಧಗಳಿವೆ--ಈ ವಿಷಯಗಳಲ್ಲಿ ನಾವು ಶ್ರೀಮಂತರು! ಜನಸಂಖ್ಯೆ ಈ ಗಾತ್ರಕ್ಕೆ ಬೆಳೆದು ಊಟಕ್ಕೆ ಪರದಾಡುವ ಸ್ಥಿತಿ ಬಂದರೂ ಇನ್ನೂ ಮೈನಾರಿಟಿಯೆಂಬ ವಿಷಬೀಜ ಬಿತ್ತಿ ಬೆಳೆಯುತ್ತಿರುವವರು ರಾಜಕಾರಣಿಗಳೇ ! ಓಬೀರಾಯನ ಕಾಲದ ಸಂವಿಧಾನದ ಕರಡು ಹಾಗೇ ಇದೆ. ಅಂದಿನ ಕಾಲಕ್ಕೆ ಅರ್ಜೆಂಟಿಗೆ ಮಾಡಿಕೊಂಡಿದ್ದನ್ನು ಮತ್ತೆ ಇವರು ತಿದ್ದಲು ಬಿಡುವುದಿಲ್ಲ ಯಾಕೆಂದರೆ ತಿದ್ದಿಬಿಟ್ಟರೆ ಹಲವು ರಾಜಕಾರಣಿಗಳು ಮೂಲೆಗುಂಪಾಗುತ್ತಾರೆ, ಮತ್ತೆ ಕೆಲವರು ಕಂಬಿಯ ಹಿಂದೆ ನಿಲ್ಲುತ್ತಾರೆ, ಇನ್ನೂ ಕೆಲವರು ದೇಶ ಬಹಿಷ್ಕಾರಕ್ಕೆ ಒಳಗಾಗುತ್ತಾರೆ! ಅದಕ್ಕೇ " ಅದೆಲ್ಲಾ ಈಗ ಬೇಕಾಗಿಲ್ಲ, ನಮಗೆ ಹೇಗೆ ಬೇಕೋ ಹಾಗೆ ಅಂಬೇಡ್ಕರ್ ಮಾಡಿಟ್ಟಿದ್ದಾರೆ " ಎಂದು ಅದನ್ನೇ ಆತುಕೊಂಡಿದ್ದಾರೆ. ಒಂದು ಉದಾಹರಣೆ ನೋಡಿ- ಬೆಂಗಳೂರಿಗೆ ಮೊದಲಾಗಿ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ದಿ| ಸರ್ ವಿಶ್ವೇಶ್ವರಯ್ಯ ಮಾಡಿದರು. ಇವತ್ತು ಜನಸಂಖ್ಯೆ ಬೆಳೆದಂತೆ ಹಲವು ನಗರಗಳು ಸಮರದೋಪಾದಿಯಲ್ಲಿ ಒಮ್ಮೆಲೇ ತಲೆ ಎತ್ತಿ ನಿಂತವು-- ಇವುಗಳಿಗೆಲ್ಲಾ ವಿಶ್ವೇಶ್ವರಯ್ಯನವರು ಮಾಡಿದ ಪ್ಲಾನು ಸಾಕಾಯಿತೇ ? ಇಲ್ಲವಲ್ಲ, ಅವರ ಪ್ಲಾನು ಬುನಾದಿ-ಈಗ ಮಾಡುವ ಪ್ಲಾನು ಅದರ ಮುಂದುವರಿದ ಭಾಗ ಅಲ್ಲವೇ? ಅಂತೆಯೇ ಸಂವಿಧಾನಕ್ಕೆ ಅಂದಿಗೆ ಅಂದಿನ ಜನಮಾನಸ ಬದಲಿದ್ದ ಕಾರಣ ಅದನ್ನು ಕೆಲವು ನ್ಯೂನತೆಗಳಿಂದಲೇ ನಾವು ಒಪ್ಪ್ಕೊಂಡಿದ್ದೇವೆ - ಈಗ ಅದರಲ್ಲಿ ಬದಲಾವಣೆ ಬೇಕಿದೆ. ಅದಿಲ್ಲದಿದ್ದರೆ ಅದೇ ಅಸ್ತ್ರ ಬಳಸಿ ಕೆಟ್ಟ ರಾಜಕಾರಣಿಗಳು ಯುದ್ಧ ಗೆಲ್ಲುತ್ತಲೇ ಇರುತ್ತಾರೆ.

ಇಂದಿಗೆ ಒಂದು ಮಾತು ನೆನಪಿಡಿ- ಸಮಾಜವನ್ನು ಉದ್ಧಾರಮಾಡುವ ರಾಜಕಾರಣಿ ಇಂದಿಗೆ ಯಾರೂ ಬದುಕಿಲ್ಲ! ಅಂಥವರು ಇದ್ದರೆ ಎದೆತಟ್ಟಿ ಮುಂದೆ ಬರಲಿ ನಾವವರಿಗೆ ಸನ್ಮಾನ ಮಾಡೋಣ-ನಿರ್ಭಿಡೆಯವಾಗಿ. ಇಂದಿರುವ ರಾಜಕಾರಣಿಗಳು ಬರೇ ಬಕಗಳು. ಅವರಲ್ಲಿ ಪರ್ಸಂಟೇಜು ವ್ಯತ್ಯಾಸ ಅಷ್ಟೇ! ಜೇನು ತೆಗೆದವರು ಕೈ ನೆಕ್ಕುತ್ತಾರಂತೆ ಅಂಬೋದೊಂದು ಗಾದೆ, ಇರಲಿ ಇಲ್ಲಿ ಜೇನು ಹುಟ್ಟನ್ನೇ ಗುಳುಂ ಸ್ವಾಹಾ ಮಾಡಿ ಬರೇ ಕೈಗೆ ತಾಗಿರುವುದನ್ನು ಸಮಾಜದ ಮೂತಿಗೆ ಒರೆಸಿಬಿಡುತ್ತಿದ್ದಾರಲ್ಲ ಯಾಕೆ ನಮಗೆ ಅರ್ಥವಾಗುತ್ತಿಲ್ಲ? ಇದರ ಬದಲಾವಣೆ ಸಾಧ್ಯವಿಲ್ಲವೇ ? ಅಮೇರಿಕಾದ ಥರ ಕೇವಲ ಎರಡೇ ರಾಷ್ಟ್ರೀಯ ಪಕ್ಷಗಳು ನಮ್ಮಲ್ಲಿ ಇದ್ದಿದ್ದರೆ ಪಕ್ಷಾಂತರ ಮತ್ತು ಕುದುರೆವ್ಯಾಪಾರ ಇಲ್ಲವಾಗುತ್ತಿತ್ತು. ಅಪವಿತ್ರ ಮೈತ್ರಿ ಎಂಬುದು ಅಧಿಕಾರಕ್ಕಾಗಿ ಹುಟ್ಟಿಕೊಳ್ಳುತ್ತಿರಲಿಲ್ಲ. ಹರಿದ ಲಡ್ಡಾದ ಬಟ್ಟೆಗೆ ಹಳೆಯ ದಾರದಿಂದ ತೇಪೆ ಹಾಕಿದಂತೆ ಸಮ್ಮಿಶ್ರ ಸರಕಾರಗಳ ಉಗಮವಾಗುತ್ತಿರಲಿಲ್ಲ. ಉಪಚುನಾವಣೆಗಳು, ಮರುಚುನಾವಣೆಗಳು, ಮತ್ತೆ ಚುನಾವಣೆಗಳು, ಮತ್ತಷ್ಟು ಚುನಾವಣೆಗಳು ಇವೆಲ್ಲದರ ಹೊರೆ ಮತದಾರನ ತಲೆಗೆ ಬರುತ್ತಿರಲಿಲ್ಲ, ಅತಂತ್ರ ರಾಜಕೀಯ ಹುಟ್ಟಿಕೊಳ್ಳುತ್ತಿರಲಿಲ್ಲ.

ಸಮಾಜದ ನೆಮ್ಮದಿಗೆ ಪರೋಕ್ಷವಾಗಿ ಮಾರಕರಾದ ಹೆಂಡದ ದೊರೆಗಳಿಗೆ ನಾವು ಗೌರವ ಡಾಕ್ಟರೇಟ್ ಕೊಡುತ್ತೇವೆ ಎನ್ನುವುದು ನಮ್ಮ ಸಂಸ್ಕೃತಿಯ ಅಧಃಪತನಕ್ಕೆ ಹಿಡಿದ ಬಹುದೊಡ್ಡ ಕನ್ನಡಿ! ನಮ್ಮ ಬಿಳಿಯ ಬಟ್ಟೆಯ ರಾಜಕಾರಣಿಗಳು ಜೀವಿತದಲ್ಲೇ ಕೇಳರಿಯದ ವಿದೇಶೀ ಡಾಕ್ಟರೇಟ್ ಖರೀದಿಸಿ ಕಪ್ಪು ಗೌನು ಹಾಕಿ ಚಿತ್ರ ತೆಗೆಸಿಕೊಳ್ಳುವುದು ನಮ್ಮ ಹಣೆಗೆ ಹಚ್ಚಿದ ಮಸಿಯ ನಾಮ! ವಿಶ್ವವಿದ್ಯಾಲಯಗಳ ಪದವಿಗಳು, ಹಲವು ಪ್ರಶಸ್ತಿಗಳು ಬೀದಿಯಲ್ಲಿ ಬೇಕಾಬಿಟ್ಟಿ ಬಿಕರಿಯಾಗುತ್ತಿರುವುದು ನಮ್ಮ ಚಿಂತಾಜನಕ ಸ್ಥಿತಿ, ತೆಲ್ಗಿ-ಹರ್ಷದ್ ರಂತಹ ಪ್ರಕರಣಗಳಲ್ಲಿ ಅವರನ್ನು ಶಿಕ್ಷಿಸಲಾಗದಿರುವುದು ಆ ಮೇಳಗಳಲ್ಲಿ ತಾವೂ ಶಾಮೀಲಾಗಿರುವ ನಮ್ಮ ರಾಜಕಾರಣಿಗಳು ನಮಗೆ ನಮ್ಮ ಆರ್ಥಿಕತೆಗೆ ಅಂಟಿಸಿದ ಏಡ್ಸ್ ರೋಗ ! ರಾಮನು ಹುಟ್ಟಿದ ದೇಶದಲ್ಲಿ ಅವನನ್ನೇ ರಾಜಕೀಯಕ್ಕೆ ಬಳಸಿಕೊಂಡಿದ್ದು ನಮ್ಮ ದುರ್ದೈವ! ನಾವಿನ್ನೂ ಇಂತಹ ಜೀವಿತವನ್ನೇ ಜೀವಿಸಬೇಕಾಗಿ ಬಂದಿರುವುದು ನಮ್ಮ ಹಣೆಬರಹ!

ಪ್ರತೀ ಸರ್ತಿ ನೋಡಿ ವೇದಿಕೆಯ ತುಂಬಾ ಅದೇ ಘರ್ಜನೆ: " ಮಹಾತ್ಮಾ ಗಾಂಧಿ ಏನಂದ್ರು, ಸರ್ದಾರ್ ಪಟೇಲ್ ಏನ್ಮಾಡದ್ರು, ಲೋಕಮಾನ್ಯ ತಿಲಕರು ಯಾವ ರೀತಿ ತಿದ್ದಿದರು " ಇಷ್ಟಿಷ್ಟೇ, ಇದಕ್ಕೂ ಜಾಸ್ತಿ ಆಳಕ್ಕೆ ಇಳಿದರೆ ಅವರೆಲ್ಲರ ಬಗ್ಗೆ ನಮ್ಮ ರಾಜಕೀಯಣ್ಣಗಳಿಗೆ ಏನುಗೊತ್ತು ? ಹಾಡಿದ್ದೇ ಹಾಡೋ ಕಿಸ್ಬಾಯಿದಾಸರಾಗುವ ಬದಲು ಸಮಾಜಕ್ಕೆ ನಾವಿದನ್ನು ಮಾಡಿದ್ದೇವೆ ಎಂದು ಬರಿದೇ ಕಾಲ್ನಡಿಗೆ,ಕೈನಡಿಗೆ, ಸರ್ಕಸ್ಸು, ಸಮಾವೇಶ ಇದನ್ನೆಲ್ಲಾ ಮಾಡದೇ ಕೃತಿಯಲ್ಲಿ ಜನಮೆಚ್ಚುವ ಕೆಲಸ ಮಾಡಿದ್ದರೆ ಇಂದಿಗೆ ನಮ್ಮ ಭಾರತ ಖಂಡಿತ ಉದ್ಧಾರವಾಗುತ್ತಿತ್ತು. ಎಂದಿಗೆ ನಮ್ಮ ಭಾರತ ಉದ್ಧಾರವಾಗುತ್ತಿತ್ತೋ ಅಂದಿಗೆ ಪಾಕಿಸ್ತಾನಿಗಳಾಗಲೀ ಬಾಂಗ್ಲಾದೇಶಿಗಳಾಗಲೀ ಅಥವಾ ಚೀನೀಯರೇ ಆಗಲಿ ನಮ್ಮ ಒಗ್ಗಟ್ಟನ್ನು ನಮ್ಮ ತಾಳ್ಮೆಯನ್ನು, ನಮ್ಮ ಸಾಧನೆಯನ್ನು ನೋಡಿ ತಂತಾನೇ ಹಿಮ್ಮೆಟ್ಟುತ್ತಿದ್ದರು. ಇವತ್ತಿಗೆ ಅವರೆಲ್ಲಾ ಮೂತಿ ತೂರಿಸುತ್ತಿದ್ದರೆ ಅದಕ್ಕೆ ಅವಕಾಶ ನಮ್ಮಲ್ಲಿರುವ ನಮ್ಮ ದೌರ್ಬಲ್ಯ. ಯಾರೇ ಬಾಂಬುಹಾಕುವವರು ಬಂದು ವರ್ಷಾನುಗಟ್ಟಲೆ ನಮ್ಮ ಪಕ್ಕದಲ್ಲೇ ಇದ್ದು, ಚೆನ್ನಾಗಿ ಬೇಕಾದ್ದನೆಲ್ಲ ಮೆದ್ದು, ಮೈಕೊಡವಿ ಎದ್ದು ಓಡಿಹೋಗಿ ಸರಿಯಾಗಿ ಮತ್ತೆ ಹಾಕುವಾಗ ಗುದ್ದು -ನಾವೆಲ್ಲಾ ಬುದ್ದು ನಾವೆಲ್ಲಾ ಬುದ್ದು! ನಾವಿನ್ನೂ ಮಲಗೇ ಇದ್ದೇವೆ-ದೇಶಕ್ಕೆ ಸ್ವಾತಂತ್ರ್ಯ ಬಂದು ೬೪ ವರ್ಷಗಳಾದವು ಎನ್ನುತ್ತಾ ಅಲ್ಲೇ ಹರಿದ ಕಂಬಳಿ ಹಾಸಿ ಕುಕ್ಕರುಬಡಿದಿದ್ದೇವೆ!

ಒಬ್ಬ ಚಂದ್ರಾಸ್ವಾಮಿ, ಒಬ್ಬ ನಿತ್ಯಾನಂದ, ಒಬ್ಬ ಎಮ್.ಎಫ್.ಹುಸೇನ್ ಹುಟ್ಟಿ ಮೆರೆಯುವುದು ನಮ್ಮ ಭಾರತದ ಇಂದಿನ ಹೆಮ್ಮೆ!!! ನಮ್ಮ ನಡುವೆ ಸ್ವಾರ್ಥಿಗಳೂ ವಿಷಯಲಂಪಟರೂ, ಮತಾಂಧರೂ ಆಗಿರುವ ಇಂಥವರನ್ನೆಲ್ಲ ನಾವು ಮೆಹರ್ಬಾನ್ ಮಾಡಿ ಸಾಕುತ್ತಿರುವುದು ನಮಗಿರುವ ನರದೌರ್ಬಲ್ಯ! ಆಗಾಗ ನಿಷ್ಕಾಳಜಿಯ ಅತಿ ಸಣ್ಣ ಕಾರಣಗಳೇ ದೊಡ್ಡದಾಗಿ ರೈಲು,ಬಸ್ಸು ಮುಂತಾದ ಅಪಘಾತಗಳಾಗುವುದು ನಮಗೆ ಬರುತ್ತಿರುವ ಫಿಟ್ಸ್ [ ಮಲರೋಗ] ! ಕಾಡು-ಗಣಿ-ಭೂಸಂಪತ್ತು ನಾಶಮಾಡುವ ಹೊಸ ರಕ್ಕಸರ ಮುಂದೆ ತಲೆಬಾಗಿ ಕೈಕಟ್ಟಿ ನಿಲ್ಲುವುದು ನಮ್ಮ ದೈನ್ಯ ಸ್ಥಿತಿ! ಸಾಮಾಜಿಕ ಕಾರ್ಯಗಳನ್ನು ಒಂಚೂರೂ ಸರಿಯಾಗಿ ಮಾಡದ ರಾಜಕೀಯದವರನ್ನು ಪರೋಕ್ಷವಾಗಿ ಸಾಕಬೇಕಾಗಿ ಬಂದಿರುವುದು ಸಾಕುತ್ತಿರುವುದು ನಮಗೆ ಬಂದ ಸ್ವಯಾರ್ಜಿತ ಆಸ್ತಿ! ಇವುಗಳನ್ನೆಲ್ಲಾ ಮೆಟ್ಟಿನಿಲ್ಲುವ ಎಲ್ಲಾ ಸಾಧ್ಯತೆಗಳ ಕುರಿತು ಚರ್ಚಿಸಲು, ಕ್ರಮಕೈಗೊಳ್ಳಲು ಯಾರಿಗೂ ಸಮಯವೂ ಇಲ್ಲ, ಬೇಕಾಗಿಯೂ ಇಲ್ಲ. ಏನಾದರೂ ನಡೆದರೆ ಅದಕ್ಕೊಂದು ಸಮಿತಿ ರಚಿಸಿ ಪರಿಶೀಲನೆ ಮಾಡಿ ಅಂತ ಕಳಿಸಿ ಹತ್ತಾರು ವರ್ಷಗಳ ನಂತರ ಸಮಾಜ ಅದನ್ನು ಮರೆತಮೇಲೆ ತಾವೂ ಮರೆತುಬಿಡುವುದು ನಮ್ಮ ರಾಜಕೀಯ ಮುತ್ಸದ್ಧಿತನ! ಪರಸ್ಪರರ ಮೇಲೆ ಗೂಬೆ ಕೂರಿಸುತ್ತಾ ಹಾಗೆ ಹೀಗೆ ಎನ್ನುತ್ತಾ ಬೇಳೆಬೇಯಿಸಿಕೊಳ್ಳುವ ರಾಜಕಾರಣಿಗಳ ದಾಳಕ್ಕೆ ಸಿಕ್ಕ ಮೀನುಗಳು ನಾವು ! ಅತಂತ್ರ ಪ್ರಜಾತಂತ್ರವೆಂಬ ನಾವೇ ಬೆಳೆಸಿದ ಹುಲಿಯಬಾಯಿಗೆ ಸಿಕ್ಕ ಹಸುಗಳು ನಾವು! ಬದುಕಿದ್ದೇವೆ, ಬದುಕುತ್ತಿದ್ದೇವೆ ಕ್ಯಾನ್ಸರ್ ಹಿಡಿದ ರೋಗಿಗಳಂತೆ, ಕುಷ್ಠ ಹಿಡಿದ ಪಾಪಣ್ಣನಂತೆ, ಕದಿರು ಬಂದು ಎಣ್ಣೆಯಾರುತ್ತಿರುವ ದೀಪದಂತೆ!

ಇನ್ನಾದರೂ ನಾವು ಅರಿತರೆ, ಬದಲಾದರೆ, ಓದಿಕೊಂಡರೆ, ರಾಜಕಾರಣಿಗಳ ರಟ್ಟೆಹಿಡಿದು ವಿಮಾನದಿಂದ/ ಕಾರಿಂದ ಕೆಳಗಿಳಿಸಿ ಮುಖಕ್ಕೆ ’ಮಂಗಲಾರತಿ’ ಮಾಡುವ ಮಟ್ಟಕ್ಕೆ ಬೆಳೆದರೆ ಆಗ ಬರುವುದು ನಿಜವಾದ ಸ್ವಾತಂತ್ರ್ಯ, ಕಾಡನ್ನು-ಭೂಗರ್ಭದ ಸಂಪತ್ತನ್ನು ಶಾಶ್ವತವಾಗಿ ಉಳಿಸಿಕೊಂಡರೆ ಆಗ ದೊರೆವುದು ನಿಜವಾದ ಸ್ವಾತಂತ್ರ್ಯ. ನಮಗೆಲ್ಲಾ ಬೇಕಾಗುವ ಮೂಲ ಸೌಲಭ್ಯಗಳು ಎಂದು ಸಿಗುತ್ತವೋ ಅಂದು ನಮಗೆ ಸಿಗುವುದು ಪರಿಪೂರ್ಣ ಸ್ವಾತಂತ್ರ್ಯ. ರಾಜಕೀಯದಲ್ಲಿರುವ ಪ್ರತೀ ವ್ಯಕ್ತಿ ತಾನೊಬ್ಬ ಸಮಾಜದ ಆಳು ಎಂಬ ತಿಳುವಳಿಕೆ ಹೊತ್ತು ನಡೆಯುವ ಕಾಲವನ್ನು ತರಿಸಿದರೆ ಅಂದು ನಮಗೆ ನಿಲುಕುವುದು ಪರಿಪಕ್ವ ಸ್ವಾತಂತ್ರ್ಯ. ಬಡವರು, ದೀನರು, ದಲಿತರು, ನಿರಕ್ಷರಕುಕ್ಷಿಗಳು, ಭಿಕ್ಷುಕರು ಎಂದಿಗೆ ನಮ್ಮಲ್ಲಿ ಸಹಜವಾಗಿ ಇರುವುದಿಲ್ಲವೋ ಅಂದೇ ನಮಗೆ ಉಂಟಾಗುವುದು ಸಬಲ, ಸಮರ್ಥ ಸ್ವಾತಂತ್ರ್ಯ.

ಆಗ ನಾವು ನಿಜವಾದ ಅರ್ಥದಲ್ಲಿ ಹಾಡಬೇಕಾದ ಹಾಡು ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ ! ನಮಸ್ಕಾರ

ಜೈ ಹಿಂದ್ ಜೈ ಹಿಂದ್ ಜೈ ಹಿಂದ್

ಬೀಡಾಡಿಗಳ ಸ್ವಾತಂತ್ರ್ಯೋತ್ಸವ !!

[ಗಮನಿಸಿ : ನಾಳೆಯ ಸ್ವಾತಂತ್ರ್ಯೋತ್ಸವಕ್ಕೆ ಬೇರೆ ಕೃತಿ ಪ್ರಕಟವಾಗುತ್ತದೆ-ಇದು ಸದ್ಯಕ್ಕೆ ಟೈಂ ಪಾಸ್ ಕಡ್ಲೇಕಾಯಿ ]

ಬೀಡಾಡಿಗಳ ಸ್ವಾತಂತ್ರ್ಯೋತ್ಸವ !!

" ತಲೆಗೆ ರುಮಾಲು ಸುತ್ತದ್ರೆ ಜಾಸ್ತಿ ಬಟ್ಟೆ ಬೇಕಾತದೆ ಅಂತ ಮಾತ್ಮಾ ಗಾಂಧಿ ಟೋಪಿ ಹಾಕ್ಕೊಂಡ್ರು ಹಂಗೇಯ ನೀವೆಲ್ಲಾ ಅದ್ನೇ ಬಳಸಿ ಅಂತದ್ರು "

" ಅದ್ಕೇ ಕಣಪ್ಪಾ ದೇಸದ ಜನವೆಲ್ಲಾ ಸರ್ಯಾಗಿ ಬಟ್ಟೆ ಇಲ್ದೇ ಇರ್ವಾಗ ತಂಗ್ ಮಾತ್ರ ಯಾಕೆ ಎಂದು ಮಲ್ಲಿಕಾ ಸೇರಾವತ್ ಬಟ್ಟೇನೆ ಕಮ್ಮಿ ಮಾಡ್ಬುಟ್ಳು "

---------------

" ಅಲ್ಲಾಲೇ ಆಗಸ್ಟ್ ಹದ್ನೈದು ಯಾವ ಹಬ್ಬ ? "

" ಓ ಅದಾ ಅದೂ ಅದೂ ನಮ್ಮೂರ್ ಮೇಷ್ಟ್ರುಗೋಳೆಲ್ಲ ಬಾವುಟ ಹಾರ್ಸೋ ಹಬ್ಬ, ಯಾವಗ್ಲೂ ಹಾರ್ಸಾಕಿಲ್ಲ ನೋಡು ಅದ್ಕೇಯ ಇಂತಾ ದಿವ್ಸ ಅಂತ ಒಂದಷ್ಟ್ ದಿನ ಮಡೀಕಬುಟ್ಟವ್ರೆ "

---------------

" ರಾಜ್ಯದ ಖಜಾನ್ಯಾಗೆ ದುಡ್ಡೇ ಇಲ್ವಂತೆ ? "

" ಯಾರ್ಲಾ ಹೇಳಿದ್ದು ಹಾಂಗೆಲ್ಲಾ ಮಾಡಕಾಯ್ತದೇನಲೇ ಅದಕ್ಕೇ ಅಲ್ವಾ ಸಮಾವೇಸ ಮಾಡ್ಬುಟ್ಟು ದ್ರುಷ್ಟಿ ಬಳ್ದು ಮತ್ತೊಂದಿಷ್ಟು ಸದ್ಯಕ್ಕಿರ್ಲಿ ಅಂತ ಅಲ್ಲಿಂದಾ ಇಲ್ಲಿಂದಾ ಎಲ್ಲೆಲ್ಲಾತದೋ ಕಿತ್ತಾಂಕಬರ್ರಲೇ ಅಂತ ಓಯಾಸೀಸು ನ ಕಳ್ಸ್ಕತಾರೆ "

" ಅದ್ಯೇನಯ್ಯಾ ಹಂಗಂತೀಯಾ ಓಯಾಸಿಸು ಇರೋದು ಮರ್ಭೂಮಿಲಿ ಅಂತಾ ರಂಗಣ ಮೇಷ್ಟ್ರು ಹೇಳಿದ್ ಮರ್ತ್ಬುಟ್ಟಾ ? "

" ಅದಲ್ಲ ಕಣಲೇ ಗುಗ್ಗು ಓಯಾಸೀಸು ಅಂದ್ರೆ ಇಲ್ಲಿ ಇಂಥಿಂಥಾ ಮಂಕ್ರೀಗೆ ಇಂಥಿಂಥಾ ಸಕ್ಕರೆಟ್ರಿ ಅಂತ ಮಡೀಕತಾರಲ್ಲ ಅವ್ರು ಅವ್ರು "

" ಓ ಆಯ್ ಏ ಎಸ್ ಅನ್ನಪ್ಪಾ ಓಯಾಸೀಸಲ್ಲ ಕಣ್ಲಾ ಅದು "

" ಎರ್ಡೂ ಒಂದೇಯ ನಂಗ್ಯಾಕ್ ಹೇಳ್ತ್ಯಾ ಸುಮ್ಕೆ...ಅಲ್ಲಿ ನೀರಿರ್ದಿದ್ರೆ ಅದು ನೀರ್ ಕೊಡ್ತೈತೆ ಇಲ್ಲಿ ಕಾಸಿರ್ದಿದ್ರೆ ಅವರು ಕಾಸ್ ಮಾಡೋ ಪ್ಲಾನ್ ಕೊಡ್ತಾರಪ್ಪಾ ಅವರ್ನ ಕರ್ದು ’ ಕಾಸೆಲ್ಲಾ ಖಾಲಿ ಆಗೈತೆ ಇಸ್ಯ ನಿಮ್ತಾವನೇ ಇರ್ಲಿ ಬೇಗ ಹುಡಕ್ಕಂಬನ್ನಿ ’ ಅಂದ್ಬುಟ್ರೆ ಮುಗ್ದೇ ಹೋಯ್ತು ತಕ ಎಲ್ಲೆಲ್ಲಿ ಹೆಂಗೆಂಗೆ ಫಿಟಿಂಗ್ ಇಡ್ಬೈದು ಅನ್ನೋ ಐಡಿಯಾನ ತಕಂಬತ್ತವೆ ಕಾಸ್ ಮಾಡಕ್ಕೆ ಮತ್ತೆ ಸುಮ್ನೇನಾ ಅವರ್ನ ಮಡೀಕಳದು ? ನಂಗೇನ್ ಅಷ್ಟೂ ತಲೇ ಇಲ್ಲಾಂತ್ ತಿಳ್ದಾ ಮೂದೇವಿ ? "

--------------

" ಅಣೆಕಟ್ಟೆಲ್ಲಾ ಸೋರ್ತಾ ಅವೆ ಅಂತಾರಲ್ಲಯ್ಯ ? ಅದೇನ್ ಒಸಿ ರಿಪೇರಿ ಮಾಡಾಕಿಲ್ವ ? "

"ನೀ ಕೇಳ್ತಾಲೇ ಇರು ನಾಯೇಳ್ತಾಲೇ ಇರ್ತೀನಿ ರಿಪೇರಿಗೆಲ್ಲಾ ಬಗ್ಗೋ ಸ್ಟೇಜ್ ಪಾಸಾಗ್ಬುಟ್ಟೈತೆ ಮಗಾ ಒಂದೊಂದಕ್ಕೂ ಸ್ವಾತಂತ್ರ ಬಂದಷ್ಟ್ ವೈಸಾಗೈತೆ ಇನ್ನೇನಲ್ಲಿ ಹಣೇಬರ ಹೋದಮ್ಯಾಲೆ ಒಟ್ಗೇ ಹೊಸದಾಗೇ ಮಾಡ್ಬುಟ್ರೆ ಇಂತಿಷ್ಟ್ ಸಾವ್ರ ಕೋಟಿ ಅಂತ ಕೆಡೀಕೋಬೈದು ಎಲ್ಲಿಟ್ಟೆ ತಲೇನಾ ? "

----------------

" ಜನ ಗಣ ಮನ ....ಅನ್ನೋ ಹಾಡೈತಲ್ಲಪ್ಪಾ ಅದೇ ನಾವು ಸ್ಕೂಲಾಗೆ ಹಾಡ್ಲೇ ಬೇಕು ಅಂತ ಬೆಂಚ್ ಮೇಲೆ ನಿಲ್ಸಿ ಮೇಷ್ಟ್ರು ಬಾಯ್ಪಾಠ ಮಾಡ್ಸಿದ್ದು "

" ಏನಾಯ್ತು ಹೇಳು "

" ಏನಿಲ್ಲಾ ನಮ್ ರಾಜ್ಕೀಯದ್ ಜನಕ್ಕೆ ಅದನ್ನ್ ಕೇಳ್ದ್ರೆ ಸಾಕು ಒಳ್ಳೇ ನಿದ್ದೆ ಬತ್ತದಂತೆ ಏನಾದ್ರೂ ತಲೆಬಿಸಿ ಆದ್ರೆ ಆ ಹಾಡ್ನ ಸೀಡಿ ಹಾಕ್ಕಂಡು ಮಲ್ಕಬುಟ್ರೆ ಆಗೋಯ್ತಂತೆ "

" ಅದ್ಕೇನಪ್ಪಾ ಈ ದೇಸ ಹೀಗಿರೋದು ಅವ್ರೂ ಅದ್ನ ಹಾಡಿದ್ದ್ರೆ ಅಮೇರಿಕಾದವ್ರು ತಮ್ಮನ್ನೆಲ್ಲ ಬಿಟ್ಟೋಯ್ತರೆ ಅಂತ ಅದೆಲ್ಲಾ ಏನಿದ್ದ್ರೂ ನೀವ್ಗೋಳು ಹಾಡಿ ನಾವು ಮೊಳಕೈಗೆ ಏನಾರೂ ಕೋಲು ಕೊಟ್ಗಂಡು ನಿಂತ್ಗೋಬುಡ್ತೀವಿ ಅಂತಾರೆ "

" ಅಲ್ಲಾ ನೀ ಹೇಳಿದ್ದು ಸರೀ ಅನ್ನು ಯಾವುದ್ರಾಗ್ ಒಕ್ಕಟ್ಟಿಲ್ದಿದ್ರು ಈ ಹಾಡು ಬರೋದಿಲ್ಲಾ ಅಂತ ಮೊದ್ಲೇ ಗೊತ್ತಿರೋದ್ರಿಂದ ಹಂಗೇ ಪಾಲ್ಟಿ-ಪಕ್ಸನೆಲ್ಲಾ ಮರ್ತು ಹಾಡ್ ಹಾಡುವತ್ಗೆ ಸುಮ್ನಾಯ್ಕಂತವೆ ನೋಡು "

----------------

" ಸೆಂಟ್ರಲ್ ನೋರು ಅದೇನೋ ಆಹಾರ ಹಾಳಮಾಡವ್ರಂತೆ "

" ಸೆಂಟ್ರಲ್ಲು ಅಂದ್ರೆ ಬಟ್ಟೆ ಬರೆ ಸಿಗೋ ದೊಡ್ಡ ಸಾವ್ಕಾರ್ರ ಜಾಗ ಕಣಪ್ಪಾ ಅಲ್ಲೇಲ್ಲಾ ಅವ್ರು ಯಾಪಾರ ಮಾಡಕೇ ಅಂತ್ಲೇ ಕೂತಿರಾದು ಅದೇನ್ ಹಾಳ್ಮಾಡ್ಕಂಡು ಲಾಸ್ ಮಾಡ್ಕಳಕಲ್ಲ ಅಷ್ಟೂ ಗೊತ್ತಾಯಾಕಿಲ್ವೆ ಗೂಬೆನ್ ತಂದು "

" ಅದಲ್ಲಲೇ ನಾ ಹೇಳಿದ್ದು ಕೇಂದ್ರ ಸರ್ಕಾರ ಆಹಾರ ಹಾಳಮಾಡದೆ ಅಂತಾವ "

" ಅದೆಲ್ಲಾ ಎಷ್ಟೋ ಆತದೆ ಬಿಡಪ್ಪಾ ಯಾಕ್ ಸುಮ್ನೇ ಉಚ್ಚೇಲ್ ಗಾಳ ಹಾಕ್ತೀಯ ದೊಡ್ ಮನ್ಸ ಆಗ್ಬೇಕು ಅಂದ್ರೆ ಇಂತಾ ಚಿಕ್ಪುಟ್ ಇಸ್ಯಾನೆಲ್ಲಾ ನಂತಾವ ಕೊರೀತಾ ಇರ್ಬಾರ್ದು ನಾ ನೋಡು ಹೇಂಗಿದ್ದೆ ಈಗೊಂದಾರ್ತಿಂಗ್ಳು ಅಲ್ಲೀ ಇಲ್ಲೀ ಒಸಿ ಅವ್ರಿವ್ರ ಜೊತೆ ಸಲ್ಪ ಓಡಾಡ್ದೆ ನೋಡು ಹೆಂಗಿವ್ನಿ ಈಗ....ನೀನು ಕಲ್ತ್ಕೊಳಲೇ ಇಲ್ಲಾಂದ್ರೆ ಇಲ್ಲೇ ಕುಂತಿರು ಅವ್ರಿವ್ರ ತಾವ ಅರ್ಧ ಬೀಡಿ ಕೇಳ್ಕೋತ "

-------------------

" ಬೆಂಗ್ಳೂರ್ ತುಂಬಾ ಒಂಟೆಗ್ಳು ಬಂದ್ಬುಟ್ಟವಂತೆ "

" ಹಾಂ ಇನ್ನೊಂದ್ ೨೫ ದಿನ ಇರ್ತವೆ ಅಷ್ಟೇಯ ಬ್ರಮ್ಮ ಬರ್ದ್ಬುಟವ್ನೆ ಅವುಗ್ಳ ಹಣೇಬರ ತೀರೋಗದೆ ಗೊತ್ತಿಲ್ದೇ ಬಬಲ್ ಗಮ್ ತಿನ್ನೋ ಹಂಗೆ ಮೂತಿ ತಿರ್ಗಿಸ್ಕೋತ ಅಡ್ಡಾಡ್ತವೆ ಪಾಪ ..... ಹೊಟ್ಟೆಗೂ ಸರಿ ಐತೋ ಇಲ್ವೋ "

-------------------

" ಅದೇನೋ ೬೪ನೇ ಸ್ವಾತಂತ್ರ ಅಂದ್ರು ಟೀವಿನಾಗೆ ? "

" ಅಷ್ಟೂ ಗೊತ್ತಾಯಕಿಲ್ವೇನೋ ನಿಂಗೇ ಚಮ್ಚಾ ತಗಂಡು ತಿನ್ನಸ್ಬೇಕು ಆದ್ರೆ ಚಮಚಾಗಿರಿ ಮಾತ್ರ ಮಾಡಕ್ ಬಲ್ನನ್ಮಗ ನೀನು ...ಅದೂ ನಮ್ ಗಾಂಧೀಜಿ ಇದ್ರಲ್ಲಾ ಆವಯ್ಯಾ ಹೋಗಿ ಅಷ್ಟ್ ವರ್ಸ ಆಯ್ತೂ ಅಂತ ಇನ್ನಾರು ತಿಳ್ಕೋ ಬರೇ ಬಿಟ್ಟಿಲ್ ತಿಂದಾಗಲ್ಲ... ನಾನೂ ಒಂದ್ಕಿತಾ ಅದೇನ್ ಮಾಡಾರು ಅಂತ ನೋಡಾಕೋಗಿದ್ನ ಒಂದ್ಕಿತಾ ಹೊರ್ಗಡೀಕೆ ಬಾವುಟ ಹಾರ್ಸ್ಬುಟ್ಟಿದ್ದೆ ಆಮೇಲೆ ಸುರು ಹಚ್ಕಬುಟ್ರು ಕಣ್ಲಾ..ಆವಯ್ಯನ್ ಬಗ್ಗೆ ಮಾತಾಡಿದ್ದೇ ಮಾತಾಡಿದ್ದು .. ಹಂಗಂತೆ ಹಿಂಗಂತೆ...ಆದ್ರೆ ಆವಯ್ಯನ್ ಥರ ಒಬ್ಬ್ರಾದ್ರೂ ಉಪ್ಪಿನ್ ಸತ್ಯಾಗ್ರಹ ಮಾಡದ್ರ ? "

" ಮಾಡ್ದ್ರಲ್ಲಪ್ಪಾ ನೀ ಎಲ್ಲಿದ್ದೆ ’ ಟಾಟಾ ಉಪ್ಪು ದೇಸದ ಉಪ್ಪು ’ ಅಂತ ಟೀವಿನಾಗೆ ಆ ಪಾಟಿ ಒದರ್ತಾಇದ್ರು ಅದೂ ಬಿಟ್ಟು ಮೊನ್ನೆ ನಮ್ ಕೈಯ್ಯೋರು ಕಾಲೆಳ್ಕೋತ ಬಳ್ಳಾರಿ ತಂಕ ಕ್ವಿಂಟಾಲ್ಗಟ್ಲೆ ಡ್ರೈಫ್ರೂಟ್ಸ್ ತಿಂದಿಲ್ವೆ...ನಂಗೇನು ತಿಳ್ಯಾಕಿಲ್ಲ ಅನ್ಬೇಡ ನೀನು ನಾನು ಒಸಿ ತಿಳ್ಕಂಡಿದೀನಿ ನೆಪ್ಪಿರ್ಲಿ "

------------

" ವರಮಾಲಕ್ಸ್ಮಿ ಹಬ್ಬ ಬಂತಲ್ವಾ ? "

" ಹೌದು ಯಾಕಪ್ಪಾ ಹೆಂಗುಸ್ರ ಹಬ್ಬ ನಿಂಗೆ ಯಾದಾರೂ ಮಾಲಕ್ಸ್ಮೀನ ಕಂಡ್ಕೊಂಡಿದೀಯೋ ಏನ್ಕತೆ ? "

" ಅಯ್ಯೋ ನಿನ್ ಮನೆಕಾಯೋಗ ನಾ ಹೇಳಿದ್ದು ಸುಸ್ಮಮ್ಮ ಬರ್ತಾರಲ್ಲ ಬಳ್ಳಾರಿಗೆ ಅಂತಾವ "

" ಬತ್ತಾರೆ ಬತ್ತಾರೆ ಮಕ್ಳವ್ರೆ ನೋಡು ಒಸಿ ನೋಡ್ಕಂಡು ತಲೆಮೇಲೆ ಕೈಯ್ಯಿಟ್ಟು ಆಮೇಲೆ ಮಾಲಕ್ಸ್ಮೀನ ಬಳ್ಳಾರೀಲೇ ಕೂರ್ಸಿ ಹೊಂಟೋಗ್ಬುಡ್ತರೆ ಆಕಡೀಕೆ ನಮ್ ರಾಮ್ಲು ಹೋದ್ರೆ ಅಮ್ಮಂಗೆ ಮನೆ ಖರ್ಚಿಗಿರ್ಲಿ ಅಂತ ಸಲ್ಪ ನಿಪ್ಪಟ್ಟು ಕೋಡ್ಬಳೆ ಜೊತೆ ಮಾಲಕ್ಸ್ಮೀ ಬಾಗಿನನೂ ಕೊಟ್ಬುಟ್ ಬತ್ತಾನೆ "

------------------

" ಇದ್ಯಾಕಣ್ಣಾ ನಿಮ್ಮನೇಲಿ ಬಣ್ ಬಣ್ದ ಬ್ರಸ್ಸು ಹಲ್ಲುಜ್ಜಾಕೆ ಬೋ ಸುಧಾರ್ಸ್ದೋರು ಬೆಳಿಗ್ಗೆಲೇ ಒಂದ್ ಬಣ್ಣದ್ದು ಇನ್ನು ಮದ್ಯಾನ್ಕೆ ಇನ್ನೊಂದ್ ಬಣ್ಣದ್ದು ಸೈಂಕಾಲ ಮತ್ತೊಂದು ಬಣ್ಣದ್ದು "

" ಇದಾ ಇಸ್ಯಾ ನೀ ಬಂದಾವಾಗ್ಲೇ ಅಂದ್ಕೊಂಡೆ ಏನಾರೂ ಮಾಡ್ತೀಯಾ ಅಂತ ಗಬ್ ನನ್ಮಗ್ನೆ ಅದ್ಕೇ ಎಲ್ಲಾ ಬ್ರಸ್ಸು ಬೀಡಿ ವಾಸ್ನೆ ಅಂತವೆ ಹೆಂಗುಸ್ರು "

----------------------

" ಏನ್ಲಾ ಹಿಂಗ್ಯಾಕ್ ನಿನ್ ಮುಖ ನಾಟ್ಕಕ್ಕೆ ಬಣ್ಣ ಹಚ್ದಂಗೈತೆ ? "

" ಅಷ್ಟೂ ಗೊತ್ತಾಯಾಕಿಲ್ವ ನೀವೆಲ್ಲಾ ಹಚ್ಕತೀರಲ್ಲ ಕಿರೀಮು ಅಂಥದ್ದೇ ಒಂದ್ನ ಕಂಡ್ಬುಟ್ನಾ ಬಿಡ್ದೇ ಸಲ್ಪ ಹಚ್ಚ್ಕೊಂಡಿವ್ನಿ ನೋಡು ಸಖತ್ತಾಗೈತಲ್ವಾ ? "

" ಯಾವ ಕಿರೀಮು ತೋರ್ಸು ನೋಡವಾ "

" ಅದು ಕಾಲ್ಗೇಟಲೇ ಅದು ಹಲ್ಲುಜ್ಜೋದು ಕಣ್ಲಾ ಮಕಕ್ಕಲ್ಲಾ ಅದು "


---------------------

" ಬಿಹಾರ್ದಗೆ ರಾಬರಿ ದೇವಿ ......"

" ರಾಬರಿ ಅಲ್ಲಪ್ಪಾ ರಾಬ್ಡಿ ದೇವಿ ಹನ್ನೋ "

" ಹಾಂ ರಾಬ್ಡಿ ದೆವೀನೂ ಆವಯ್ಯ ಮೇವುತಿಂದು ಕಿವೀಲಿ ಹುಲ್ ಬೆಳ್ಸವ್ನಲ್ಲಾ ಲಾಲೂ ಅವ್ನೂನೂ ಎಲ್ದೂ ಜನ ರಾಸ್ಥ್ರು ಗೀತೆ ಹಾಡುವಾಗ ಕುಂತೇ ಇದ್ರಂತೆ ? "

" ಗಣಿಯಂತೂ ಇಲ್ಲಾ ಅಲ್ಲಿ ಅದಕ್ಕೇ ಧಣಿಗಾರ್ಕೆ ತೋರ್ಸುವಾ ಅಂತ ಕುಂತಿದ್ರಂತೆ ಏನಾಯ್ತಪ್ಪ ಕುಂತ್ಕಂಡ್ರೇನು ಮಲೀಕಂಡ್ರೇನು ನಿಂಗೇನ್ ತೊಂದ್ರೆ ಬಿಡು "

----------------------

" ಇನ್ನೇನ್ಲಾ ಇಸ್ಯಾ ? "

" ಏನಿಲ್ಲಾ ಕಣಪ್ಪಾ ಎಲ್ಡೆಲ್ಡ್ ದಿನಕ್ಕೂ ನೀನು ಹಿಂಗೇ ಅಲೀತಾ ಬಾ ನಾನೂ ಬತ್ತೀನಿ ಅದೂ ಇದೂ ಅಂತ ಮಾತಾಡ್ಬುಟ್ಟು ಹಂಗೇ ಸಲ್ಪ ಸಂಕ್ರಣ್ಣನ್ ತಾವ ಸಲ್ಪ ಇಸ್ಗಂಡು ಒಳೀಕ್ಬಿಟ್ಟು ಹೊಂಟೋಗ್ವ "

" ಅಂದಂಗೆ ಮರ್ತೇ ಬಿಟ್ಟೆ ಕಣಪ್ಪಾ ನಮ್ ಹೆಮ್ಮೆಲ್ಲೇ ಬರಹೇಳವ್ರೆ ಬಾವುಟಹಾರ್ಸಕೆ, ಬಾವುಟ ಹಾರ್ಸೂತ್ಲೂವೆ ನಾವೆಲ್ಲಾ ಅಲ್ಲೇ ಪಕ್ಕಕ್ಕೆ ನಾವು ಕೂತ್ಗಂಬುದು ಕೊರೀವರ್ ಕೊರ್ಕತರೆ ಅದ್ಯೇನೇನೋ ಒದರ್ಕತರೆ ನಮ್ಗದೆಲ್ಲಾ ಯಾಕ್ಬೇಕಪ್ಪಾ ಹೋದವ್ರ್ ಹೋದ್ರು ಇದ್ದವ್ರು ಸುಮ್ಕಿರೋದು ಬಿಟ್ಟು ಅವ್ರಹಂಗೆ ಇವ್ರ ಹಿಂಗೆ ಅಂತಾನೇ ಇರಾದು ಪ್ರತೀ ಸಲಿ ಅದೇ ಪ್ಲೇಟು ಬದ್ಲಾಯಕೇ ಇಲ್ಲ ಹೋಗ್ಲಿ ಬಿಡು ಆದಾದ್ ಮ್ಯಾಲೆ ಪಾಲ್ಟಿ ಅದೆ ಅಂತ ನಮ್ ಹೆಮ್ಮೆಲ್ಲೆ ಕಣ್ಮಡದವ್ರೆ ....ಹೋಗ್ ಕೂತಿರೋತು ಕೈಗೊಂದ್ ನೂರ್ರುಪಾಯ್ ಮಡೀಕಾ ಅಂತ ಕೊಟ್ಟಾಗ ಇಸ್ಕಳದು ಸಲ್ಪ ತುಂಡ್ ತಿಂದು ಒಂದು ಕ್ವಾರ್ಟ್ರು ಏರಿಸ್ಗೊಂಬುಟ್ರೆ ಎಲ್ಲಾ ಫ್ರೀಡಮ್ಮು "

Friday, August 13, 2010

ನಾಗಣ್ಣಗೆ ನಮನ



ಧ್ಯಾಯೇತ್ ಷಣ್ಮುಖಮಿಂದು ಕೋಟಿ ಸದೃಶಂ ರತ್ನಪ್ರಭಾ ಶೋಭಿತಂ
ಬಾಲಾರ್ಕದ್ಯುತಿ ಷಟ್ಕಿರೀಟ ವಿಲಸತ್ಕೇಯೂರ ಹಾರಾನ್ವಿತಂ |
ಕರ್ಣಾಲಂಬಿತ ಕುಂಡಲ ಪ್ರವಿಲಸದ್ಗಂಡಸ್ಥಲಾ ಶೋಭಿತಂ
ಕಿಂಚಿತ್ಕಂಕಣ ಕಿಂಕಿಣೀರವಯುತಂ ಶೃಂಗಾರ ಸಾರೋದಯಂ ||






ನಾಗಣ್ಣಗೆ ನಮನ

ನಾಗರ ಪಂಚಮಿ ಬಂದೇ ಬಿಟ್ಟಿತು! ಬೆಳಿಗ್ಗೆ ಎದ್ದಾಗಲೇ ಬಹಳ ಊರುಗಳಲ್ಲಿ ಸಡಗರ. ಕೇವಲ ಹೆದರಿಕೆಯಿಂದ ಪೂಜಿಸುವ ಕಾರ್ಯ ಇದಲ್ಲ. ಇದಕ್ಕೊಂದು ನೆಲೆಗಟ್ಟಿದೆ-ಹಿನ್ನೆಲೆಯಿದೆ. ಪೂರ್ವದಲ್ಲಿ ಪ್ರಹ್ಲಾದನ ಮೊಮ್ಮಗನಾದ ರಾಜಾ ಪರೀಕ್ಷಿತನಿಗೆ ಒಂದು ಶಾಪವಿತ್ತು. ಆತ ಕಾಡಿನಲ್ಲಿ ತಪಸ್ಸನ್ನಾಚರಿಸುತ್ತಿದ್ದ ಮುನಿಯೋರ್ವರ ಕೊರಳಿಗೆ ಸತ್ತ ಸರ್ಪವೊಂದನ್ನು ತಂದು ತೊಡಿಸಿ ತನ್ನ ಕೋಪತೀರಿಸಿಕೊಂಡಿದ್ದ, ಸಮಾಧಿ ಸ್ಥಿತಿಯಿಂದ ಎಚ್ಚೆತ್ತ ಮುನಿಗೆ ತನ್ನ ದೇಹದ ಕುತ್ತಿಗೆಗೆ ಸತ್ತ ಸರ್ಪವಿರುವುದು ಕಾಣಿಸಿತು. ದಿವ್ಯದೃಷ್ಟಿಯಿಂದ ನೋಡಲಾಗಿ ಅದು ಪರೀಕ್ಷಿತನ ಕೃತ್ಯವೆಂದು ತಿಳಿದುಬಂತು. ಅದರಿಂದ ಕುಪಿತನಾದ ಮುನಿ ಪರೀಕ್ಷಿತನಿಗೆ ಹಾವಿನಿಂದಲೇ ಸಾವು ಎಂಬುದಾಗಿ ಶಾಪವಿತ್ತಿದ್ದ. ಅವನ ಶಾಪ ಕಾರ್ಯಗತಗೊಳ್ಳುವ ದಿನ ಹತ್ತಿರ ಬಂತು. ಇದನ್ನು ತಿಳಿದ ಪರೀಕ್ಷಿತ ಸಮುದ್ರದ ಮಧ್ಯೆ ದೊಡ್ಡ ಕಂಬವನ್ನೆಬ್ಬಿಸಿ, ಆ ಕಂಬದಮೇಲೆ ಅರಮನೆಯನ್ನು ನಿರ್ಮಿಸಿಕೊಂಡು ಜೀವಿಸಲು ಪ್ರಾರಂಭಿಸುತ್ತಾನೆ. ಆಗ ದೈವೀ ಶಾಪವನ್ನು ನಿಗ್ರಹಿಸಲು, ನಿವಾಳಿಸಿ ಎಸೆಯಲು ಅವನಿಂದ ಸಾಧ್ಯವೇ ? ಸರ್ಪರಾಜ ತಕ್ಷಕನಿಗೆ ಆಜ್ಞೆ ಬಂತು. ತಕ್ಷಕ ಮಂತ್ರಾಲೋಚಿಸಿ ನೋಡಿದ. ಪರೀಕ್ಷಿತನಿರುವಲ್ಲಿ ಹೋಗುವುದಾದರೂ ಹೇಗೆ. ಅಲ್ಲೆಲ್ಲಾ ಹಾವಿನ ರೂಪದಲ್ಲಿ ಹೋದರೆ ಪ್ರವೇಶ ಸಾಧ್ಯವೇ ? ಅದಿರಲಿ ಮನುಷ್ಯರೂಪದಲ್ಲಿಯೇ ಹೋಗೋಣವೆಂದರೂ ಪರಿಚಿತರಿಗಲ್ಲದೇ ಬೇರೆ ಯಾರಿಗೂ ಪ್ರವೇಶವಿರಲಿಲ್ಲ. ಅದಕ್ಕೇ ಚಿಂತಿಸಿ ಹೋಗುವ ದಾರಿ ಹುಡುಕಿದ ತಕ್ಷಕ ಹಣ್ಣೊಂದರೊಳಗೆ ಹುಳವಾಗಿ ಸೇರಿ ಹಣ್ಣಿನ ಬುಟ್ಟಿಯಲ್ಲಿ ತೂರಲ್ಪಟ್ಟು ರಾಜನ ಅರಮನೆಯನ್ನು ಪ್ರವೇಶಿಸುತ್ತಾನೆ. ಪ್ರವೇಶಿಸಿದ ಆತ, ಅದೇ ಹಣ್ಣನ್ನು ಅನಿರೀಕ್ಷಿತವಾಗಿ ಪರೀಕ್ಷಿತ ಕೈಗೆತ್ತಿಕೊಂಡಾಗ ದೊಡ್ಡ ಹಾವಿನ ರೂಪದಲ್ಲಿ ಹೊರಬಂದು ಪರೀಕ್ಷಿತನನ್ನು ಕಚ್ಚಿ ಕೊಂದು ಹೊರಟುಹೋಗುತ್ತಾನೆ.


ತನ್ನ ತಂದೆಗೆ ಸಾವು ಬಂದ ಕಾರಣವನ್ನು ಅರಿತ ಪರೀಕ್ಷಿತನ ಮಗ ಜನಮೇಜಯ ಪ್ರತೀಕಾರಕ್ಕಾಗಿ ಸರ್ಪಯಾಗವನ್ನೇ ಮಾಡಿದ! ಬ್ರಹ್ಮಾಂಡದಲ್ಲಿರುವ ಎಲ್ಲಾ ಹಾವುಗಳನ್ನೂ ಅಗ್ನಿಗೆ ಆಹುತಿ ಕೊಡಹತ್ತಿದ. ಆಗ ಇನ್ನೇನು ಸರ್ಪಕುಲಗಳೆಲ್ಲ ಬಹುತೇಕ ನಾಶವಾಗುತ್ತಿರಲು ಆಸ್ತಿಕನೆಂಬ ಸರ್ಪ ಬ್ರಾಹ್ಮಣ ವೇಷದಲ್ಲಿ ಬಂದು ಕೇವಲ ೭ ಮಹಾ ಸರ್ಪ ಕುಲಗಳನ್ನು ಉಳಿಸಲು ಮಂತ್ರಪ್ರಯೋಗಮಾಡಿದ. ಇದು ಭಗವದಿಚ್ಛೆಯೂ ಆಗಿತ್ತಾದ್ದರಿಂದ ಯಜ್ಞಕ್ಕೆ ಬರುತ್ತಿದ್ದ ಉಳಿದ ಸರ್ಪ ಕುಲಗಳ ಹಾವುಗಳು ತಡೆಯನ್ನು ಪಡೆದು ಮರಳಿ ಜೀವದಾನವನ್ನು ಪಡೆದವು. ಹೀಗಾಗಿ ಅಂದು ಆತ ಮಾಡಿದ ಆ ಯಾಗ ಪರೋಕ್ಷವಾಗಿ ಜನಮೇಜಯನ ವಂಶದ ನಾಶಕ್ಕೆ, ಸಂತತಿ ನಾಶಕ್ಕೆ ಕಾರಣವಾಯಿತು.

ಇವತ್ತಿಗೂ ಗೊತ್ತಿದ್ದೋ ಗೊತ್ತಿಲ್ಲದೇಯೋ, ಹಾವನ್ನು ನೇರವಾಗಿಯೋ ಪರೋಕ್ಷವಾಗಿಯೋ ಸಾಯಿಸಿದ್ದರೆ, ಹುತ್ತ ಅಗೆದಿದ್ದರೆ, ಹಾವುಗಳನ್ನು ಅವುಗಳ ಮೂಲವಾಸಸ್ಥಾನದಿಂದ ಬೇರೆಡೆಗೆ ತಳ್ಳಿದ್ದರೆ ಅದಕ್ಕೆಲ್ಲ ನಾವು ಜನ್ಮಾಂತರಗಳಲ್ಲೂ ಶಿಕ್ಷೆಯನ್ನು ಅನುಭವಿಸಲೇ ಬೇಕು. ಈ ಶಿಕ್ಷೆ ಹೇಗೆ ಎಂದರೆ ಇದು ವಂಶಪರಂಪರೆಗೂ ತಗುಲುವಂತಹುದ್ದಾಗಿರುತ್ತದೆ. ವಂಶ ನಾಶವಾಗಬಹುದು, ಸಂತಾನ ಇಲ್ಲದೇ ಹೋಗಬಹುದು, ಹಲವು ವಿಧದ ಚರ್ಮವ್ಯಾಧಿ ತಗಲಬಹುದು, ಮಾಡುವ ವ್ಯವಹಾರಗಳಲ್ಲಿ ನಷ್ಟ ಸಂಭವಿಸಬಹುದು ಹೀಗೇ ಒಟ್ಟಾರೆಯಾಗಿ ಇದನ್ನು ಅನುಭವಿಸಲೇ ಬೇಕು. ಕೆಲವೊಮ್ಮೆ ನಾವು ಈ ಜನ್ಮದಲ್ಲಿ ಹಾವನ್ನೇ ಸರಿಯಾಗಿ ನೋಡಿರದಿದ್ದರೂ ಇಂತಹ ಶಾಪ ಹಿಂದಿನ ನಮ್ಮ ಪೂರ್ವಜರಿಂದ ಅಥವಾ ನಮ್ಮ ಜನ್ಮಾಂತರದ ಸಂಚಿತ ಕರ್ಮಗಳಿಂದ ಬರಬಹುದು. ಇವುಗಳ ನಿವಾರಣೆಗಾಗಿ ನಾಗಪ್ರತಿಷ್ಠೆ, ನಾಗಪೂಜೆ, ನಾಗಮಂಡಲ ಪೂಜೆ, ಆಶ್ಲೇಷಾ ಬಲಿಯೇ ಮೊದಲಾದ ಆರಾಧನಾ ಕ್ರಮಗಳನ್ನು ಪ್ರಾಜ್ಞರು ತಿಳಿಸಿಕೊಟ್ಟಿದ್ದಾರೆ.

ಕೆಲವು ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಇವುಗಳನ್ನು ನಡೆಸಿದರೆ ಶೀಘ್ರ ಫಲಪ್ರಾಪ್ತಿ ಎಂಬುದು ಹಲವು ಜನರ ಅನುಭವದ ಮಾತು. ಕರ್ನಾಟಕದಲ್ಲಿ ಕುಕ್ಕೇ ಸುಬ್ರಹ್ಮಣ್ಯ[ದಕ್ಷಿಣ ಕನ್ನಡ], ಘಾಟೀ ಸುಬ್ರಹ್ಮಣ್ಯ[ಕೋಲಾರ], ಮುಗ್ವಾ ಸುಬ್ರಹ್ಮಣ್ಯ[ಉತ್ತರ ಕನ್ನಡ] ಹೀಗೆ ಈ ಮೂರು ಕ್ಷೇತ್ರಗಳು ನಾಗಾರಾಧನೆಗೆ ಹೆಸರುವಾಸಿ. ನಾಗ ಅಂದರೆ ಒಂದರ್ಥದಲ್ಲಿ ಸುಬ್ರಹ್ಮಣ್ಯನೇ ಆಗಿರುವುದರಿಂದ ನಾಗಾರಾಧನೆ ಸುಬ್ರಹ್ಮಣ್ಯನ ಆರಾಧನೆಯೇ ಸರಿ. ಇಂತಹ ಕಾರ್ತಿಕೇಯನನ್ನು ನಾಗನ ರೂಪದಲ್ಲಿ ಶ್ರಾವಣ ಶುದ್ಧ ಪಂಚಮಿಯಂದು ಪೂಜಿಸುವುದು, ಫಲಪುಷ್ಪ-ನೈವೇದ್ಯ-ಧೂಪ-ದೀಪಗಳನ್ನು ಅರ್ಪಿಸುವುದು ನಡೆದು ಬಂದ ಸಂಪ್ರದಾಯ. ಯಾವ ವಿಜ್ಞಾನದಲ್ಲಿ ಸಂತಾನ ಹೀನತೆಗೆ ವೈದ್ಯಕೀಯ ಪರೀಕ್ಷೆಗಳಲ್ಲಿ ಯಾವುದೇ ಸಮಸ್ಯೆ ಕಾಣದೇ ಇದ್ದೂ ಮಕ್ಕಳಾಗದೇ ಇರುವ ಸ್ಥಿತಿ ಕಾಣುತ್ತದೋ ಅಂಥವರು ಶ್ರದ್ಧಾ-ಭಕ್ತಿ ಪುರಸ್ಸರವಾಗಿ ಹೆಚ್ಚಿನ ರೀತಿಯಲ್ಲಿ ನಾಗಾರಾಧನೆ ಮಾಡಿದರೆ ಅವರಿಗೆ ಸಂತಾನಪ್ರಾಪ್ತಿ ಶತಸ್ಸಿದ್ಧ. ಹೀಗೇ ಮನುಜ ಕುಲದ ಹಲವು ದುಃಖ ದುಮ್ಮಾನಗಳಿಗೆ ಪರೋಕ್ಷವಾಗಿ ನಮ್ಮ ನಡವಳಿಕೆ ಕಾರಣವೂ ಆಗಿರಬಹುದು! ಪ್ರಕೃತಿದತ್ತ ಬದುಕಿನಲ್ಲಿ ಹಾವುಗಳಿಗೂ ಒಂದು ಸ್ಥಾನವಿರಲಿ ಎಂಬ ಕಾರಣದಿಂದ ಇದು ದೈವಸಂಕಲ್ಪದಿಂದಲೇ ಆದದ್ದಿರಬಹುದು. ಏನೇ ಇದ್ದರೂ ಹಾವುಗಳು ಸಹಜವಾಗಿ ಮನುಷ್ಯರ ತಂಟೆಗೆ ಬರುವುದಿಲ್ಲ, ಹಿಂದಿನ ಕರ್ಮದ ಫಲವನ್ನು ಅನುಭವಿಸಬೇಕೆಂದಿದ್ದರೆ ಕಚ್ಚದೆಯೂ ಬಿಡುವುದಿಲ್ಲ, ಕಚ್ಚಿದರೂ ಬದುಕುಳಿಯಲೆಂದು ವ್ಯಕ್ತಿಯ ಹಣೆಯಲ್ಲಿ ಬರೆದಿದ್ದರೆ ತಕ್ಷಣಕ್ಕೆ ಆ ವ್ಯಕ್ತಿಗೆ ತಕ್ಕ ಚಿಕಿತ್ಸೆ ಸಿಗುತ್ತದೆ, ಅದಿಲ್ಲಾ ವ್ಯಕ್ತಿ ಕೋಟಿತೆತ್ತರೂ ಆಯುಷ್ಯ ಮುಗಿದ ಹಾಗೇ.



[ಕುಕ್ಕೆಯಲ್ಲಿ ಕಾಣಿಸಿತ್ತೆನ್ನಲಾದ, ಇತ್ತೀಚೆಗೆ ಮೇಲ್ ಮೂಲಕ ದೊರೆತ ಐದು ತಲೆ ನಾಗರಹಾವಿನ ಚಿತ್ರಗಳು ]

ನಮ್ಮ ಕೆಲವು ಹಳ್ಳಿಗಳಲ್ಲಿ ನಾಗರಹಾವು ಕಚ್ಚಿದ್ದನ್ನು ಔಷಧವಿಲ್ಲದೇ ಬರೇ ಮಂತ್ರದಿಂದ ಗುಣಪಡಿಸುವ ವ್ಯಕ್ತಿಗಳು ಇಂದಿಗೂ ಇದ್ದಾರೆ! ಕಚ್ಚಿದ ತಕ್ಷಣಕ್ಕೆ ಅವರಿಗೆ ಸುದ್ದಿ ತಲ್ಪಿಸಿ ಬಿಟ್ಟರೆ ಅವರು ಒಂದು ಸಣ್ಣ ಬಟ್ಟೆಯನ್ನು ಸುರುಳಿ ಸುತ್ತಿ ಗಂಟು ಹಾಕಿಡುತ್ತಾರಂತೆ. ಆಮೇಲೆ ಕಚ್ಚಿದ ವ್ಯಕ್ತಿಯನ್ನು ಅವರ ಹತ್ತಿರ ಕರೆತರುವವರೆಗೂ ಆ ವ್ಯಕ್ತಿಗೆ ತೀರಾ ಸ್ಮೃತಿಯೇ ಇರದಿದ್ದರೂ ಅವರಲ್ಲಿಗೆ ಬಂದು ಅವರು ಮಂತ್ರಪಠಿಸುತ್ತ ಕಚ್ಚಿದ ವ್ಯಕ್ತಿಗಳನ್ನು ಮುಟ್ಟಿದರೆ ಅವರು ನಿಧಾನವಾಗಿ ಏನೂ ಅರಿಯದವರಂತೆ ಕಣ್ಣು ತೆರೆಯುತ್ತ ಮೇಲೇಳುತ್ತಾರೆ! ಇದು ಹಲವು ಮಾಧ್ಯಮ ವಾಹಿನಿಗಳಲ್ಲಿ ಕೂಡ ತೋರಿಸಲ್ಪಟ್ಟಿದೆ--ಅಂದಮೇಲೆ ಹಾವು ಎಂದರೆ ಕೇವಲ ಪ್ರಾಣಿಯಲ್ಲ, ಅದರಲ್ಲೂ ನಾಗರಹಾವಿಗೆ ವಿಶೇಷ ಸ್ಥಾನಮಾನವಿದೆ. ನಾಗರಹಾವು ಕಣ್ಣಿಗೆ ನಮಗೆ ಕೇವಲ ಹಾವಾಗಿಕಂಡರೂ ಅದು ನಾಗಲೋಕದ ತಕ್ಷಕನಿಗೆ ನಾವು ಸಲ್ಲಿಸತಕ್ಕ ಗೌರವವನ್ನು ಪಡೆಯಲು ಅರ್ಹವಾಗಿದೆ. ಅದಕ್ಕೆಂದೇ ಹಳ್ಳಿಗಳಲ್ಲಿ ಇತ್ತೀಚಿನ ದಿನಗಳವರೆಗೂ ಅನೇಕ ಹೃದಯವಂತ ಬ್ರಾಹ್ಮಣ ಕುಟುಂಬಗಳು ಅಲ್ಲದೇ ಹಲವು ವರ್ಗದವರು ಸತ್ತ ನಾಗರಹಾವನ್ನು ಕಂಡರೆ, ಒಬ್ಬ ಮನುಷ್ಯನ ಅಂತ್ಯೇಷ್ಟಿಗಳನ್ನು ಹೇಗೆ ಶಾಸ್ತ್ರೋಕ್ತವಾಗಿ ನಡೆಸುತ್ತಾರೋ ಅದೇ ರೀತಿಯಲ್ಲಿ ನಡೆಸುತ್ತಾರೆ, ಸಾವಿರಾರು/ನೂರಾರು ಜನರಿಗೆ ಅನ್ನಸಂತರ್ಪಣೆ ಮಾಡುತ್ತಾರೆ-ಇದು ’ಸರ್ಪಸಂಸ್ಕಾರ’ ಎಂದು ಕರೆಯಲ್ಪಟ್ಟಿದೆ. ನಮ್ಮ ದಕ್ಷಿಣೋತ್ತರ ಕನ್ನಡ,ಮಲೆನಾಡು, ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಎಲ್ಲಾ ವರ್ಗದವರೂ ಈ ಸರ್ಪಸಂಸ್ಕಾರ ನಡೆಸುವುದನ್ನು ಕಾಣಬಹುದಾಗಿದೆ.

ಇರಲಿ ದೇವತ್ವವನ್ನು ತಮಾಷೆಯಾಗಿಯಾದರೂ ಸ್ಮರಿಸಿದರೆ ಸಾಕಂತೆ, ಹಾಗಾಗಿ ನಾವು ನಮ್ಮ ನಾಗಣ್ಣನನ್ನು ಒಂದು ಸಣ್ಣ ಹಾಡಿನೊಂದಿಗೆ ನೆನೆಯೋಣ ಬನ್ನಿ-


ಬುಸ್ಸು ಬುಸ್ಸೆಂದು ಬಂದೆಯಲ್ಲ ಸುಬ್ಬರಾಯ
ತುಸು ತಡ್ಕೊಳೋ ನೀನು ಮಹರಾಯ || ಪ ||

ಊರಕೇರಿಯ ಜನರು ನಿನ್ನ ಈಗ ಕಂಡರೆ
ಭಾರೀ ಜೋರಾಗಿ ಗದ್ದಲ ನಿನಗೆ ತೊಂದರೆ !
ಹಾರಹಾಕುತ್ತ ನಿನ್ನ ಆ ಶಿಲೆಯ ಮೂರ್ತಿಗೆ
ನಾರೀಮಣಿಗಳು ಎರೆವರು ತನಿಯ ಹೊತ್ತಿಗೆ || ೧ ||

ಹುತ್ತ ಬಗೆವರು ನಿನ್ನನ್ನು ದೂರ ಓಡಿಸಿ
ಬೆತ್ತ ಕಡಿವರು ನಿನ್ನ ಮನೆಯ ಜಾಗ ಕದಲಿಸಿ
ಎತ್ತ ಕಂಡರು ಮಕ್ಕಳೆಲ್ಲ ಹೆದರಿಕೊಂಬರು
ಮತ್ತೆ ಹಾವಾಡಿಗರು ನಿನ್ನ ಹಿಡಿದುಕೊಂಬರು || ೨ ||

ನಾಗದೋಷವೆಂದು ಜ್ಯೋತಿಷರು ಎಣಿಸಿಕೊಂಡರು
ಬಾಗಿಲಾಚೆ ಸತ್ತ ಸರ್ಪ ಕೊಟ್ಟ ಶಾಪವೆಂದರು !
ರಾಗವೆಳೆಯುತ್ತ ಆಶ್ಲೇಷಾ ಬಲಿಯ ಬರೆದರು
ಬೇಗ ಪೂರೈಸಿ ನಿಮಗೆ ಒಳ್ಳೆಯದು ಎಂದರು || ೩ ||

ಹರಿಯು ಮಲಗಿಬಿಟ್ಟ ನಿನ್ನನ್ನೇ ಹಾಸಿಗೆಮಾಡಿ
ಹರನು ಕೊರಳಲ್ಲಿ ಧರಿಸಿದನು ಹಾರವಮಾಡಿ
ಹರನ ಸುತ ನಮ್ಮ ಗಣಪಣ್ಣ ಹೊಟ್ಟೆಗೆ ಹೂಡಿ
ಅರೆರೆ ಸುಬ್ರಹ್ಮಣ್ಯ ಮಾಡಿದೆ ಎಂಥಾ ಮೋಡಿ ! || ೪ ||

Thursday, August 12, 2010

ಹೀಗೂ ಉಂಟೇ ?? !!!

ಚಿತ್ರ ಋಣ : ಅಂತರ್ಜಾಲ
ಹೀಗೂ ಉಂಟೇ ?? !!!

ಬಿಸಿಬಿಸಿ ಹೋಳಿಗೆ, ಬೂಂದಿ ಲಾಡು, ಕೇಸರೀಬಾತು ಯಾವ ಸಿಹಿತಿನಿಸು ಬೇಕು ಹೇಳಿ ಅದನ್ನು ಪುಕ್ಕಟೆಯಾಗಿ ಒದಗಿಸುವ ವ್ಯವಸ್ಥೆ ಅವರದಾಗಿತ್ತು. ಕಾಸು ಎರವಲು ಬೇಕಾದರೆ ಸಿಗುತ್ತಿತ್ತು, ಮರಳಿ ಸರಿಯಾದ ದಿನಕ್ಕೆ ತಲ್ಪಿಸಿದ ಕಾಸನ್ನು ಅವರು ಹೋಮಕ್ಕೆ ಹಾಕಿಬಿಟ್ಟರೆ ಅದು ಮಾಯ !

ನಾವೆಲ್ಲಾ ಚಿಕ್ಕವರಿದ್ದಾಗ ನಮಗಿನ್ನೇನು ಕೆಲಸ ಹೇಳಿ! ಯಾವಾಗಲೂ ಕಥೆ ಕೇಳುವುದೆಂದರೆ ಬಹಳ ಇಷ್ಟವಾಗಿರೋದ್ರಿಂದ ಅದಕ್ಕಾಗಿ ಎಲ್ಲಿ ಅನುಕೂಲವಾಗುತ್ತದೆ ಎಂದು ಕಾಯುವುದು. ಕಥೆ ಹೇಳುವಂತ ಯಾರಾದರೂ ಕಣ್ಣಿಗೆ ಬಿದ್ದರೆ ಅವರ ಮನವೋಲೈಸುವುದು. ಆಗ ತಂತಾನೆ ಅವರಿಂದ ನಮ್ಮ ಮುಗ್ಧ ಮುಖ ನೋಡಿ ಕಥೆಗಳು ಹೊರಬರುತ್ತಿದ್ದವು. ರಾಕ್ಷಸರ ಕಥೆ ಹೊರಬರುತ್ತಿದ್ದರೆ ನಮಗೆ ಒಳಗೋಳಗೇ ಪುಕುಪುಕು ! ಗಾಳಿ ಕಮ್ಮಿಯಾದ ಸೀಮೆ ಎಣ್ಣೆ ಗ್ಯಾಸ್ ಲೈಟ್ ಥರ ನಮ್ಮ ಹೃದಯಬಡಿತ ಮೇಲಕ್ಕೂ ಕೆಳಕ್ಕೂ ಆಗುತ್ತಿತ್ತು. ಕಥೆ ಕೇಳುತ್ತ ಆ ಕಥೆಗಳಲ್ಲೇ ತಲ್ಲೀನರಾಗಿಬಿಡುತ್ತಿದ್ದುದರಿಂದ ದೊಡ್ಡವರು ಪಕ್ಕದಲ್ಲೇ ಕಥೆ ಹೇಳುತ್ತಿದ್ದರೂ ನಮಗೆ ಚಡ್ಡಿಯಲ್ಲಿ ಉಚ್ಚೆಬರುವಷ್ಟೂ ಹೆದರಿಕೆ. ಆ ದಿನಗಳಲ್ಲಿ ರಾತ್ರಿ ಕತ್ತಲು ಇರುವಲ್ಲಿ ನಾವು ಹೋಗುತ್ತಲೇ ಇರಲಿಲ್ಲ. ಕತ್ತಲು ಎಂದರೆ ನಮಗೆ ಆಗಿನಿಂದಲೂ ವೈರ, ಆಗ ಸ್ವಲ್ಪ ಬೇರೆ ಅರ್ಥದಲ್ಲಿತ್ತು. ಹೀಗಾಗಿ ನಾವು ಯಾವಾಗಲೂ ಸೂರ್ಯನ ಪರಮ ಭಕ್ತರು! ಎಲ್ಲೆಡೆ ಬೆಳಕು ಚೆಲ್ಲುವ ಪರಮಾತ್ಮ ನಮ್ಮಂತ ಸಾವಿರ ಸಾವಿರ ಮಕ್ಕಳ ಹೆದರಿಕೆಯನ್ನು ಹಗಲಿನಲ್ಲಿ ಹೊಡೆದೋಡಿಸುತ್ತಿದ್ದ!

ಕಥೆಗಳನ್ನು ಪಟ್ಟಾಗಿ ಹೇಳುವುದರಲ್ಲಿ ನಮ್ಮಜ್ಜ ಮಾತ್ರ ನಿಸ್ಸೀಮರು, [ಈಗ ನೀವೇ ಹೇಳಿಬಿಡಬಹುದು-ನಿನ್ನನ್ನು ನೋಡಿದ್ರೇ ಗೊತ್ತಾಗುವುದಿಲ್ವೇ ಅಂತ, ಸ್ವಲ್ಪ ರಕ್ತಗತ ಹೌದೆನ್ನಿ!] ಆ ಕಾಲಕ್ಕೆ ಬಹಳ ಜ್ಞಾನದ ಆಗರವಾಗಿದ್ದ ಅವರಲ್ಲಿ ಇಲ್ಲದ ಮಾಹಿತಿಗಳೇ ಇರಲಿಲ್ಲ. ಮನಸ್ಸಿದ್ದರೆ ಆಗಾಗ ವಿಶ್ರಮಿಸಿಕೊಂಡಾಗ ಅವರು ಅದನ್ನೆಲ್ಲಾ ಹೇಳುತ್ತಿದ್ದರು. ಅನೇಕ ನೈಜ ಕಥೆಗಳೂ ಅವುಗಳಲ್ಲಿ ಇದ್ದವೆಂದರೆ ನೀವು ನಂಬಲಾರಿರೇನೋ ! ಅವರ ಸ್ವಾನುಭವ ಬಹಳ ಅದ್ಬುತ. ಅವರಿಗೆ ಲೋಕದ ಪರಿಜ್ಞಾನದ ಜೊತೆಗೆ ಸಾಮಾಜಿಕ ಕಳಕಳಿಯೂ ಇತ್ತು, ಬಡವರಬಗ್ಗೆ, ದೀನರಬಗ್ಗೆ, ಅಂಗವಿಕಲರಬಗ್ಗೆ ಅವರಿಗೆ ರಾಜಕೀಯ ರಹಿತ ಶುದ್ಧ ಅನುಕಂಪವಿತ್ತು. ಸುತ್ತ ಹತ್ತಾರು ಹಳ್ಳಿಗಳಿಗೆ ಗೊತ್ತಿರುವ ದೊಡ್ಡ ವ್ಯಕ್ತಿ ಅವರಾಗಿದ್ದರು ಎನ್ನಲು ನನಗೆ ಹೆಮ್ಮೆ. ಇಂತಹ ಪುಣ್ಯಾತ್ಮ ಮನೆಯಲ್ಲಿ ನಮ್ಮೊಟ್ಟಿಗೆ ಮಗುವಿನ ಹೃದಯ ಹೊಂದಿದವರು. ಯಾರೂ ಆಡಲು ಸಿಗದಿದ್ದರೆ, ಅಜ್ಜನವರಿಗೆ ಬಿಡುವು ಇದ್ದರೆ ಆ ದಿನ ಕಥೆ ಗ್ಯಾರಂಟಿ. ಪುರೋಹಿತರು ಸುಟ್ಟೇವು ತಿಂದ ಕಥೆ, ಬೀರ್ಬಲ್ ಅಕ್ಬರನ ಗಡ್ಡಹಿಡಿದ ಕಥೆ, ತೆನ್ನಾಲಿಯ " ಸರ್ ಡಬ್ ವಾಂಯ್ "--ತಿಲಕಾಷ್ಟ ಮಹಿಷಬಂಧನ ಕಥೆ ಹೀಗೇ ಹಲವು ಕಥೆಗಳ ಮೂಲಕ ನಮ್ಮನ್ನು ಅವರು ರಂಜಿಸುವುದರೊಟ್ಟಿಗೆ ನಮಗೆ ಅವರ ಜ್ಞಾನವನ್ನು ಧಾರೆ ಎರೆದರು, ಹೀಗಾಗಿ ಈ ಕಥೆಯ ಮಧ್ಯದಲ್ಲೇ ಕಥೆಯ ಕಥೆ ಹೇಳಿದ ಅವರಿಗೊಮ್ಮೆ ನಮನ.

ಆ ಕಾಲದಲ್ಲಿ ಅಷ್ಟಾಗಿ ಸಮಾಜದಲ್ಲಿ ಹಳ್ಳಿಗಳಲ್ಲಿ ಸಿರಿತನವೇನೂ ಇರಲಿಲ್ಲ. ಎಲ್ಲೋ ಅಪರೂಪಕ್ಕೆ ಒಂದೊಂದು ಮನೆ ಶ್ರೀಮಂತರದ್ದಾಗಿರುತ್ತಿತ್ತು. ಬಹುತೇಕರು ಜೀವನದಲ್ಲಿ ಬಹಳ ಏರಿಳಿತವಿಲ್ಲದೇ ಉಂಡುಟ್ಟು ಸುಖವಾಗಿದ್ದರು. ನಾನು ಹೇಳುತ್ತಲೇ ಬಂದಹಾಗೇ ಸಿಹಿತಿನಿಸುಗಳು ಮತ್ತು ಕರಿದ ಪದಾರ್ಥಗಳೆಲ್ಲ ವಿಶೇಷ ದಿನಗಳಲ್ಲಿ ಮಾತ್ರ. ಹಾಗೂ ಆ ದಿನಗಳಲ್ಲಿ ಏನಾದರೂ ತೊಂದರೆಯಾಗಿಬಿಟ್ಟರೆ ಅವುಗಳಿಗೆ ಮತ್ತೆ ಡಿಸ್ಕೌಂಟು. ನಾವೆಲ್ಲ ಇಂದಿನ ಮಕ್ಕಳ ಹಾಗೆ ಬೇಕರಿ ಎಂಬುದನ್ನೇ ಕಂಡಿರಲಿಲ್ಲ, ಇನ್ನು ಚಿಪ್ಸು, ಕುರ್ಕುರೆ ಇದೆಲ್ಲಾ ಇರಲಿಲ್ಲ-ಕೊಡಿಸಿ ಎಂದು ಕರ್ಕರೆ ಮಾಡಿದ ಮಕ್ಕಳೂ ನಾವಲ್ಲ. ಎಲ್ಲಾದರೂ ಹೊಸ ಬಟ್ಟೆ ಅಥವಾ ಚಪ್ಪಲಿಗಾಗಿ ಪೀಡಿಸಿದರೆ ಆಗ ಅವರಿಗೇನಾದರೂ ತೊಂದರೆ ಇದ್ದರೆ " ಸುಮ್ನೇ ಇರ್ರೋ, ಪೆಟ್ಟು ಕೊಡ್ತೆ ನೋಡು... ಮಕ್ಳು ಅಂದ್ರೆ ದೇವರ ಮರಿ ಇದ್ದಾಂಗಿರಬೇಕು " ಅನ್ನೋರು. ’ದೇವರ ಮರಿ’ ಅಂದ್ರೆ ಏನು ಎಂಬುದು ನಮಗೆ ಇನ್ನೂ ತಿಳಿದಿಲ್ಲ, ಆದರೆ ನಾವಂತೂ ತಕ್ಷಣ ೫:೩೦ ಕ್ಕೆ ಬ್ಯಾಂಕ್ ಬಾಗಿಲು ಹಾಕಿದ ಹಾಗೇ ಬಾಯಿಗೆ ಬೀಗಜಡಿದುಕೊಂಡು ಕೂರುತ್ತಿದ್ದೆವು. ಆದಾದ ಮೇಲೆ ಒಂದೆರಡು ದಿನ ಕಥೆಯೂ ಇಲ್ಲ ಕಾದಂಬರಿಯೂ ಇಲ್ಲ! ದೊಡ್ಡವರ ಎದುರುಗಡೆ ನಿಲ್ಲಲೇ ಒಂಥರಾ ಹೆದರಿಕೆ, ಕೈಕಾಲೆಲ್ಲ ಗಡಗಡಗಡ !

ಹಿಂದಿನ ಕಾಲಕ್ಕೆ ಅಜ್ಜನ ಎಳವೆಯಲ್ಲಿ ನಮ್ಮಲ್ಲಿ ಬಹಳ ಬಡತನ. ಊಟಕ್ಕೆ ತೊಂದರೆಯಿಲ್ಲ ಆದರೆ ಆಟಕ್ಕೆ ಅನುಕೂಲವಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ಅಜ್ಜ-ದೊಡ್ಡಜ್ಜ ಅವಿಭಕ್ತ ಕುಟುಂಬದಿಂದ ವಿಭಜಿತಗೊಂಡು ಬೇರೆ ಬೇರೆ ಮನೆಮಾಡಿದರು. ಮನೆಕಟ್ಟಲೂ ಕೈಲಿ ಹಣವಿಲ್ಲದೇ ಹಾಗೂ ಹೀಗೂ ಪರದಾಡಿ ಮಾಡಿದ ಕೆಲಸವದು. ಆದರೂ ಅಂದಿನ ಕಾಲಕ್ಕೆ ಅವರು ಮಾಡಿದ ಆ ಸಾಹಸ ಇಂದಿಗೂ ಹಳ್ಳಿಯಲ್ಲಿ ನಮ್ಮಿಂದ ಸಾಧ್ಯವಿಲ್ಲ. ಬೇರೇ ಮನೆಗಳ ತೋಟಗಳಲ್ಲಿ ದಿನಗೂಲಿ ಕೆಲಸ ಮಾಡಿ ಸಂಸಾರವನ್ನು ನಿಭಾಯಿಸಿದವರಂತೆ ನಮ್ಮಜ್ಜ. ಆಮೇಲೆ ಇಚ್ಛೆಯನಿರಿವ ಅನುರೂಪಮಡದಿಯಾದ್ದರಿಂದ ಬೇರೆ ವ್ಯಾಪಾರಗಳಲ್ಲಿ ತೊಡಗಿಸಿಕೊಂಡು ಗುರು ಸಮರ್ಥ ಶ್ರೀಧರರ ಕೃಪೆಯಿಂದ ಬಹಳ ಮೇಲೆ ಬಂದರು, ಅನುಕೂಲ ಪಡೆದರು, ಶ್ರೀಮಂತರಾದರು ಮತ್ತು ಅಂದಿನ ಕಾಲಕ್ಕೆ ’ಕೊಪ್ಪರಿಗೆಯಲ್ಲಿ ದುಡ್ಡು ಹೂತಿಟ್ಟರಂತೆ’ ಎಂಬ ದಂತಕಥೆಗೆ ವಿಷಯವಸ್ತುವಾದರು! ಕಷ್ಟ-ಸುಖಗಳ ಪರಿವೆಯಿದ್ದ ಅವರು ನಮಗೆಲ್ಲ ’ಸಂಸಾರ’ದಲ್ಲಿ ಸೊನ್ನೆ ಮಧ್ಯೆ ಸೇರಿಕೊಂಡಿದ್ದರಿಂದ ಅದು ’ಸಸಾರ’ವಲ್ಲ ಎಂದು ತಿಳುವಳಿಕೆ ಹೇಳುತ್ತಿದ್ದರು.

ಹಾಗೆ ಅವರ ಎಳವೆಯ ಕಾಲದಲ್ಲಿ ನಮ್ಮೂರಲ್ಲಿ ಕಣ್ಣೀಮನೆ ಶಾಸ್ತ್ರಿಗಳು ಬಹಳ ಜನಜನಿತ ವ್ಯಕ್ತಿತ್ವವಾಗಿತ್ತಂತೆ. ನೋಡಲು ಶುದ್ಧ ಚಾಣಕ್ಯನಂತೇ ಕಾಣುತ್ತಿದ್ದ ಅವರು ಬಿಳಿಯ ಪಂಚೆ ಉಟ್ಟು, ವಿಭೂತಿ ಧರಿಸಿ ಹೊರಟುಬಿಟ್ಟರೆ ಎಲ್ಲಿಗೆ ಎಂದು ಯಾರೂ ಕೇಳುವ ಹಾಗಿಲ್ಲ-ಅವರು ಹೇಳುವುದೇ ಇದ್ದಿಲ್ಲ. ಅಂತೂ ಸವಾರಿ ಹೊರಟುಬಿಡುತ್ತಿತ್ತಂತೆ. ಅವರಿಗೆ ಕಾಲಲ್ಲಿ ಚಕ್ರ ಇದೆ-ಅವರು ನಿಂತಲ್ಲಿ ನಿಲ್ಲುವುದೇ ಇಲ್ಲ ಎಂದೆಲ್ಲಾ ಜನ ಅಂದುಕೊಳ್ಳುತ್ತಿದ್ದರಂತೆ. ಸ್ವಾನುಷ್ಠಾನ ಬಲದಿಂದ ಅವರು ಕೆಲವು ಶಕ್ತಿಗಳನ್ನು ಪಡೆದಿದ್ದರಂತೆ. ಮಾಹಾಕೋಪಾವಿಷ್ಟರಾಗಿದ್ದರೂ ಬಹಳ ನಿಗರ್ವಿಯೂ ಅನೇಕಕಾಲ ಮುಗ್ಧರೂ ಆಗಿರುತ್ತಿದ್ದರಂತೆ. ಅವರ ಬರುವಿಕೆಗೆ ಹಲವು ಜನ ಕಾಯುತ್ತಿದ್ದರಂತೆ. ಅವರು ಅನೇಕರ ಕಷ್ಟಗಳಲ್ಲಿ ಸಹಕರಿಸಿದ ಆಧ್ಯಾತ್ಮ ಮನೋಭಾವದವರಂತೆ. ಅಂತಹ ಪುಣ್ಯಾತ್ಮನೊಬ್ಬನನ್ನು ಕಥೆಯ ಮೂಲಕ ನಮಗೆ ಸಮಗ್ರವಾಗಿ ದರ್ಶಿಸಿದವರು ನಮ್ಮಜ್ಜ ದಿ|ಶ್ರೀ ವಿಷ್ಣುಭಟ್ಟರು. ನಮ್ಮಲ್ಲಿನ ಸಾಂಪ್ರದಾಯಿಕ ಪದ್ಧತಿಯಂತೇ ಅವರ ಹೆಸರನ್ನೇ ನನಗೆ ಇಟ್ಟು ಕರೆದರು.

ಶ್ರೀ ಕಣ್ಣೀಮನೆ ಶಾಸ್ತ್ರಿಗಳು ಒಮ್ಮೊಮ್ಮೆ ಕುಳಿತಲ್ಲಿಂದ ಧುತ್ತನೇ ಎದ್ದುಹೋಗಿಬಿಡುತ್ತಿದ್ದರಂತೆ, ಅವರ ಎದುರುಗಡೆ ಹತ್ತಲಾರದ ಎತ್ತರದ ಭೂ ಪ್ರದೇಶ[ನಮ್ಮಲ್ಲಿ ವಾಡಿಕೆಯಲ್ಲಿ ಇದಕ್ಕೆ ಧರೆ ಎನ್ನುತ್ತೇವೆ] ಇದ್ದರೂ ಅದನ್ನೇ ಹಾಗೇ ಹತ್ತಿಹೋಗುವ ಅಭೂತಪೂರ್ವ ಸಾಧಕರು ಅವರಾಗಿದ್ದರಂತೆ. ಊರಿಗೆ ಬಂದಾಗ ಮನೆಗಳಿಗೆ ಭೇಟಿ ನೀಡುವ ಅವರು ಏನಾದರೂ ಅಪರೂಪದ ಸಿಹಿತಿನಿಸು ಬೇಕು ಎನಿಸಿದರೆ ಒಂದು ಖಾಲಿ ಹರಿವಾಣವನ್ನೂ ಒಂದು ಶುಭ್ರ ಪಂಚೆಯನ್ನೂ ತರಲು ಹೇಳಿ, ತರಿಸಿಕೊಂಡ ಮೇಲೆ ಅದನ್ನು ಏನೋ ಮಂತ್ರಿಸಿ ಹರಿವಾಣವನ್ನು ನೆಲದ ಮೇಲಿಟ್ಟು ಅದಕ್ಕೆ ಆ ಪಂಚೆಯನ್ನು ಮುಸುಕುಹಾಕುತ್ತಿದ್ದರಂತೆ. ಕ್ಷಣಾರ್ಧದ ಬಳಿಕ ತೆಗೆಯಲು ಹೇಳುತ್ತಿದ್ದರಂತೆ " ಏಯ್ ಬಾರೋ ಇಲ್ಲಿ, ಹೋಳಿಗೆ ಬೇಕು ಅಂದ್ಯಲಾ ...ತಗೋ ಬಿಸಿಬಿಸಿ ಹೋಳಿಗೆ " ಎಂದು ಗಡಸು ದನಿಯಲ್ಲಿ ಆಜ್ಞೆಮಾಡಿ ತಿನ್ನಿಸುತ್ತಿದ್ದರಂತೆ. ಅಂತೆಯೇ ಯಾರಿಗಾದರೂ ಕಾಸಿನ ತೊಂದರೆ ಇದ್ದರೆ ಅದೇ ರೀತಿಯಲ್ಲಿ ಮುಸುಕು ಹಾಕಿಟ್ಟು ಮಂತ್ರಿಸಿದಾಗ ಹರಿವಾಣದಲ್ಲಿ ದುಡ್ಡಿನ ರಾಶಿ. ಆ ದುಡ್ಡನ್ನು ಬೇಕಾದವರಿಗೆ ನಿಬಡ್ಡಿಯ ಸಾಲವಾಗಿ ನೀಡಿ " ಯಾವಾಗ ನೀನು ಕೊಡೋದು ಅಂತ ಹೇಳ್ಬಿಡು " ಎನ್ನುತ್ತಿದ್ದರಂತೆ. ಆ ದಿನಕ್ಕೆ ಮರಳಿಸದಿದ್ದರೆ ಪರಿಣಾಮ ಏನಾಗುತ್ತಿತ್ತೋ ತಿಳಿಯದು-ಅದನ್ನು ಯಾರೂ ಪ್ರಯತ್ನಿಸಿ ನೋಡಿಲ್ಲವಂತೆ. ಹಾಗೆ ಆಮೇಲೆ ಮರಳಿ ಬರುವ ಹಣವನ್ನು ಹೋಮಮಾಡಿ ಹೋಮಕ್ಕೆ ಹಾಕಿಬಿಡುತ್ತಿದ್ದರಂತೆ. ಹಾಕಿದ ಕ್ಷಣದಲ್ಲಿ ಆ ದುಡ್ಡು ಅಲ್ಲಿಂದ ಮಾಯ! ಚೌಡಿಯ ಉಪಾಸಕರಾಗಿದ್ದ ಅವರು ಅದರ ಸಹಾಯದಿಂದ ಯಾರದೋ ಮನೆಯಲ್ಲಿ ಬಳಸದೇ ಹಾಗೇ ಇಟ್ಟ ಹಣವನ್ನು ತರಿಸಿ ಮತ್ತೆ ಮರಳಿ ಅದು ಸ್ವಸ್ಥಾನ ಸೇರುವವರೆಗೆ ದುಡ್ಡಿನ ಸಾಹುಕಾರರಿಗೆ ಅದು ಬಳಕೆಗೆ ಬೇಕಾಗದಂತೆಯೂ ನೋಡಿಕೊಳ್ಳುವ ಪರಿಕಲ್ಪನೆಯೊಂದಿಗೆ ಇದನ್ನು ನಡೆಸುತ್ತಿದ್ದರು ಎನ್ನುತ್ತಾರೆ.

ಎಲ್ಲೋ ಮದುವೆ-ಮುಂಜಿ ಇಂತಹ ಕಾರ್ಯದ ಮನೆಗಳಲ್ಲಿ ಅನಿರೀಕ್ಷಿತ ಸಂಖ್ಯೆಯ ಜನರು ಬರುವಲ್ಲಿ ಮಾಡಿದ ಸಿಹಿತಿನಿಸುಗಳನ್ನು ಅಲ್ಲಿಗೆ ಬರುವ ಜನರ ಸಂಖ್ಯೆಯನ್ನೂ ನೋಡಿಕೊಂಡು ಹೆಚ್ಚಾಗಿ ಉಳಿಯುವುದನ್ನು ತರಿಸುವುದೋ ಅಥವಾ ಬರುವ ಜನರ ಸಂಖ್ಯೆಯನ್ನೇ ಕಮ್ಮಿ ಮಾಡಿ, ಪದಾರ್ಥ ಹೆಚ್ಚುಳಿಸಿ ಅದನ್ನು ಹೀಗೆ ಬೇಕಾದವರಿಗೆ ತಿನಿಸುತ್ತಿದ್ದರಂತೆ!

ಇಂದು ನಂಬಲಾಗದ ಇಂತಹ ಘಟನೆ ಅಂದಿಗೆ ನಡೆದಿದ್ದನ್ನು ಸಾಕ್ಷೀಕರಿಸದವರು ನನ್ನಜ್ಜ. ಆಗ ಅವರಿನ್ನೂ ಸಣ್ಣ ವಯೋಮಾನದವರಾದ್ದರಿಂದ ಆ ಶಾಸ್ತ್ರಿಗಳ ಆರ್ಥಿಕ ಸಹಾಯ ಅಜ್ಜನವರಿಗೆ ಸಿಗಲಿಲ್ಲ[ಅಜ್ಜ ಸಂಸಾರವಂದಿಗನಾಗುವ ಹೊತ್ತಿಗೆ ಶಾಸ್ತ್ರಿಗಳು ದೈವಾಧೀನರಾಗಿದ್ದರಂತೆ] ಏನೂ ಇರಲಿ ನಮ್ಮ ನಡುವೆ ಇಲ್ಲದ ರಾಜಕೀಯ ಮಾಡಿಕೊಂಡು ಬದುಕುವ ಅನೇಕ ಶ್ರೀಮಂತರಿದ್ದಾರೆ-ಯಾರಿಗೂ ಸಹಾಯ ಮಾಡುವ ಮನೋಧರ್ಮದವರಲ್ಲ, ಪೈಸೆ ಪೈಸೆಗೆ ಹಲ್ಲು ಗಿಂಜುವ, ಅಲ್ಲೇ ಲೆಕ್ಕಹಾಕಿ ಗಂಟುಕಟ್ಟುವ ಕಡುಲೋಭಿಗಳಾಗಿರುತ್ತಾರೆ. ಅಂಥವರ ಮಧ್ಯೆ ದಿ| ಶ್ರೀ ಕಣ್ಣೀಮನೆ ಶಾಸ್ತ್ರಿಗಳು ನಡೆಸಿದ ’ಹೀಗೂ ಉಂಟೇ ’ ಕಾರ್ಯ ಶ್ಲಾಘನೀಯ. ಅಂತಹ ಸಾಮಾಜಿಕ ಕಳಕಳಿಯುಳ್ಳ ಆತ್ಮಗಳು ಮತ್ತೆ ಅಂಥದ್ದೇ ರೂಪದಲ್ಲಿ ಜನಿಸಿ ಬರಲಿ-ದೊಡ್ಡಮಟ್ಟದಲ್ಲಿ ಜನಸಮುದಾಯಕ್ಕೆ ಸಹಕರಿಸಲಿ ಎಂದು ಹಾರೈಸುತ್ತೇನೆ.

Wednesday, August 11, 2010

ಆಸೆ

ಚಿತ್ರ ಋಣ : ಅಂತರ್ಜಾಲ

ಆಸೆ

ಬಡತನಕೆ ಹಸಿವು ಸಿರಿತನಕೂ ಹಸಿವು
ಬಿಡಿಸಿನೋಡಲು ವಿಷಯವಸ್ತುವದು ಬದಲು
ಎಡಬಿಡದೆ ಅದುಬೇಕು ಇದುಬೇಕು ತನಗೆಂದು
ಬಡಬಡಿಸಿ ನೋಯದಿರು | ಜಗದಮಿತ್ರ

ಅಂಗಡಿಗಳಿಹವಿಲ್ಲಿ ಸ್ವರ್ಗಸೀಮೆಯ ಥರದಿ
ಅಂಗಳಕೆ ಕರೆಯುವರು ಅದೂ ಇದೂ ಎನುತ
ಬಂಗಾರ ಮುತ್ತು ರತ್ನಗಳಷ್ಟೇ ಬದುಕಲ್ಲ
ಸಿಂಗಾರ ಸದ್ಗುಣವು | ಜಗದಮಿತ್ರ

ವೇಗದಲಿ ಗಳಿಸುತ್ತ ಜಾಗ ಪಡೆಯುವ ಆಸೆ
ಬೇಗ ಸ್ವಂತದ್ದೆಂಬ ಮನೆ ಕಟ್ಟುವಾಸೆ
ಭೋಗಿಸಲು ಅದು ಸಾಲ ಮತ್ತೆ ವಾಹನ ಬೇಕು
ತ್ಯಾಗಿಗಳು ಬೆರಳೆಣಿಕೆ | ಜಗದಮಿತ್ರ

ಗುಣಕೆ ಗೌರವವಿಲ್ಲ ಮನಕೆ ಮನ್ನಣೆಯಿಲ್ಲ
ಒಣಜಂಬ ಬಲುಜೋರು ಬಲು ಕಾರುಬಾರು
ಕುಣಿಯುವರು ಕುಡಿಯುತ್ತ ಹುಡುಗ-ಹುಡುಗಿಯರ್ ರಾತ್ರಿ
ಕಣಕಣದಿ ಕಾಮಿಸುತ | ಜಗದಮಿತ್ರ

ಇರಗೊಡದು ಈ ಕಾಲ ಮಳೆಯಿಲ್ಲ ಬೆಳೆಯಿಲ್ಲ
ಬರೇ ಪಂಚೆ ಪಟ್ಟೆ ಸೀರೆಯನುಟ್ಟು ತಿರುಗೆ
ಅರಿದಿನಿತು ಹೊಲದಲ್ಲಿ ಕೃಷಿಕಾರ್ಯವಂ ಮಾಡು
ತಿರೆಯ ಮರೆಯದೆ ನಿತ್ಯ | ಜಗದಮಿತ್ರ

ದಿನಕೊಂದು ಹೊಸ ಯಾತ್ರೆ ಜನಕೊಂದು ಹೊಸ ಮಾತ್ರೆ
ಕನವರಿಸಿದಾಗೆಲ್ಲ ಕೈಗೆ ಕಮಲ ದಳ
ಮನೆಯೇನು ಮಠವೇನು ಬಿಡದ ಜಾಗವದುಂಟೆ
ನೆನೆದು ನುಂಗುವರೆಲ್ಲ | ಜಗದಮಿತ್ರ

ಬಣ್ಣಹಚ್ಚಿದ ಬೆಡಗು ಈ ಜೀವ ಈ ಭಾವ
ಕಣ್ಣು ಮೂಗು ಬಾಯಿ ಕಿವಿಯು ಚರ್ಮವದು
ಅಣ್ಣ ಕೇಳೈ ನಿನ್ನ ಕೈಯ್ಯೊಳಿರೆ ವಾಂಛಿತವು
ಮಣ್ಣಾದರೂ ಕೀರ್ತಿ | ಜಗದಮಿತ್ರ

Tuesday, August 10, 2010

ಪುಸ್ಕಿ ಶೇಂಗಾ -ಬೂಂಚಾಣಿ


ಪುಸ್ಕಿ ಶೇಂಗಾ -ಬೂಂಚಾಣಿ
[ಇವತ್ತಿನ ಜನಾಂಗದ ಜವಾಬ್ದಾರಿಗಳು ಎಷ್ಟೆಷ್ಟು , ಯಾವ್ಯಾವರೀತಿ ಎಂಬುದನ್ನು ನೆನೆದು ಈ ಶೇಂಗಾ ತಿನ್ನಿ ]


" ಸಿಗರೇಟು ಸೇದಿ ತುಂಡನ್ನು ಅಲ್ಲೇ ಯಾಕೋ ಬಿಸಾಕ್ದೆ ? "

"ದಾಸರು ಹೇಳಿಲ್ಲವೇ - ಕೆರೆಯ ನೀರನು ಕೆರೆಗೆ ಚೆಲ್ಲಿ "

----------

" ಹುಡುಗಿಯನ್ನು ಲವ್ ಮಾಡಿಬಿಟ್ಟೆಯಲ್ಲ ನೀನು ಖದೀಮ "

" ವೃದ್ಧರಾದ ಅವಳ ತಂದೆಗೆ ಗಂಡು ಹುಡುಕುವ ಭಾರ ಕಮ್ಮಿ ಮಾಡುವ ಸಲುವಾಗಿ ಮಾಡಿದೆ"

" ಬಹ್ಳ ಒಳ್ಳೇ ಕೆಲಸವಪ್ಪಾ ಆದ್ರೆ ಮೊನ್ನೆ ಇನ್ನೊಬ್ಬಳ ಜೊತೆ ಪೇಟೆಯಲ್ಲಿ ಸುತ್ತುತ್ತಾ ಇರುವುದನ್ನು ನೋಡಿದೆ ? "

" ಅವಳಾ ಅವಳು ಸಿಂಪ್ಲಿ ನನ್ನ ಗರ್ಲ್ ಫ್ರೆಂಡು, ಮದುವೆ ಆಗೋದು ಇವಳನ್ನ "

-----------

" ಇಡಿ ಮಾವಿನ್ ಮಿಡಿ ಮಠಕ್ಕೆ ಹೋಗಿದ್ಯಾ ? "

" ಇಲ್ಲ, ಅಲ್ಲಕಣೋ ಅದು ಇಡಿ ಮಾವಿನ್ ಮಿಡಿ ಮಠ ಅಲ್ಲ ನಿಡುಮಾಮಿಡಿ, ಯಾಕಪ್ಪಾ ಅದ್ರ ಬಗ್ಗೆ ಈಗ? "

" ಏನಿಲ್ಲ ಸನ್ಯಾಸಿಗಳು ಯಾರೂ ಬ್ರಹ್ಮಚಾರಿಗಳಲ್ವಂತೆ ಅದ್ಕೇ ಸ್ವಾಮಗೋಳು ಏನಾದ್ರೂ ಮದ್ವೆ ಆಯ್ತಾರ ಇಲ್ಲಾ ಮಡೀಕತಾರ ಕೇಳವಾ ಅಂತ "

-----------

" ದೀಪಿಕಾ ಪಡುಕೋಣೆ ಸಿದ್ಧಾರ್ಥ ಮಲ್ಯನ ಹಿಂದೆ ಬಿದ್ದವ್ಳಂತೆ ? "

" ನೀನೂ ಲಿಕ್ಕರ್ ಬ್ಯಾರನ್ ಆಗಿ ನೂರ್ಜನ್ಮಕ್ಕಾಗುವಷ್ಟು ಕಾಸು ಮಡೀಕಂಡು ಹಾರನ್ ಮಾಡು ಬತ್ತಾಳೆ ನೋಡು! "

----------

" ಬಳ್ಳಾರೀಲಿ ಮುಂದಿನಸರ್ತಿ ಕಾಂಗ್ರೆಸ್ಸೇ ಬರೋದಂತೆ ಸಿದ್ರಾಮಣ್ಣೋರು ಹೇಳ್ಬುಟ್ಟವ್ರೆ ? "

" ಸದ್ಯಕ್ಕಂತೂ ಹಾಗೇ ಇಟ್ಕಾ ಏನಂತೆ ಅದ್ಕೀಗ, ಆಮೇಲೆ ಚುನಾವಣೆ ಬರೂತ್ಲೂವೆ ಎಲ್ಲಾ ಮರ್ತೋತದೆ, ಹೆಂಡ-ದುಡ್ಡು ಒಸಿ ಸಿಕ್ಬುಟ್ರೆ ಯಾವ ಸಿದ್ರಾಮಣ್ಣನೂ ಮತ್ತೆ ಪಾದ ಮಡ್ಗಾಕಿಲ್ಲ ಆ ಕಡೀಕ್ಕೆ "

--------------

" ಜಲಾಸಯ ಎಲ್ಲಾ ಬರ್ತಿ ಆಗ್ಬುಟ್ಟದೆ ಅಂತ ಬಾಗಿನ ರೆಡಿ ಮಾಡ್ಕ ಕುಂತವ್ರೆ ಆದ್ರೂ ಕರೆಂಟ್ ಮಾತ್ರ ಕೊಡಾಕಿಲ್ಲ ನೋಡು ? "

" ರಾಜ್ಕೀಯ್ದೋರು ಜೋರಾಗಿ ಉಚ್ಚೆ ಹೊಯ್ದಿರಾದ್ ಕಂಡ್ರೂ ಬಾಗಿನ ಎತ್ಕಂಡು ಹೊರಟ್ಬುಡ್ತರೆ, ಜಲಾಸಯದಗೆ ನೀರಿಲ್ಲ, ಕಣ್ಣೀರು....ಅಷ್ಟೇಯ ತಿಳ್ಕಾ "

----------

" ನಾನ್ ಯಾರಿಗೂ ಹೆದ್ರೋ ಮರೀನೇ ಅಲ್ಲಾ ಅಂತ ರೇಣುಕಾಚಾರ್ಯ ಹೇಳ್ತವನಂತೆ "

" ನೋಡಿದ್ದೇ ಯಾಕೋ ಮತ್ತೆ ಕೇಳ್ತೀಯಾ ನಿಂಗೇನು ಬೇರೆ ಕೆಲ್ಸಾ ಇಲ್ವಾ, ಇಲ್ಲಾಂದ್ರೆ ಹೇಳು ಜೈಲಕ್ಷ್ಮಮ್ಮನ್ ತಾವ ಕೇಳು ಎಲ್ಲಾ ಸರೀ ಗೊತ್ತಾತದೆ "


------------------

" ಏನ್ಲಾ ಅದು ಮೊಬೈಲ್ನಾಗೆ ಯಾರೋ ಹುಡ್ಗಾ ಹುಡ್ಗಿ ಅದೇನೇನೋ ಮಾಡ್ದಾಂಗಿತ್ತು ? "

" ಅದೆಲ್ಲಾ ನಮ್ಮ ಪ್ರಾಜೆಕ್ಟ್ ಮೀಟಿಂಗು, ನಮ್ಮಪ್ಪ ಬೋ ಒಳ್ಳೇಮನ್ಸ, ಮಗಾ ಲೇಟೆಸ್ಟ್ ಮೊಬೈಲ್ ಕೊಡುಸ್ತೀನಿ ಮುಂದಿನ್ಸಲಾ ಜಾಸ್ತಿ ಮಾರ್ಕ್ ತೆಗಿ ಅಂತೇಳಿ ಕೊಡ್ಸ್ಯವ್ರೆ "

---------------

" ಯಾಕಮ್ಮಾ ದಿನಾ ಇಷ್ಟು ಲೇಟಾಗಿ ಮನೆಗೆ ಬತ್ತೀಯಲ್ಲ, ನೀನೇನು ಹೆಣ್ಣೋ ಗಂಡೋ,ಹೆಣ್ಣೈಕ್ಳು ಬೇಗ ಮನೇ ಸೇರ್ಕೋಬೇಕು ಅಷ್ಟೂ ಗೊತ್ತಾಯಕಿಲ್ವ ನಿಂಗೆ ? "

" ಸಾರಿ ಅಪ್ಪ, ಇವತ್ತೊಂದಿನ ನಂಗೆ ಕಾಲೇಜ್ನಾಗೆ ಎಕ್ಟ್ರಾ ಕ್ಲಾಸ್ ಇತ್ತು ಅದ್ಕೇ ಲೇಟು "

" ಪದ್ಮಮ್ಮನ ಮನೆ ಸೀನು ಹೇಳ್ದ ನೀನು ಅದ್ಯಾರೋ ಲೋಕಿ ಅನ್ನೋವ್ನಜೊತೆ ಎಲ್ಗೋ ಹೋಗಿದ್ಯಂತೆ "

" ಇಲ್ಲಪ್ಪಾ ಆವಯ್ಯಂಗೆ ತನ್ಜೊತೆ ಬಂದಿಲ್ಲಾ ಅಂತ ಹೊಟ್ಟೆಕಿಚ್ಚು ಅದಕ್ಕೇ ಹಾಂಗಾಡ್ತಾನೆ "

Monday, August 9, 2010

ಎಲ್ಲಿಯ ಸಂಬಂಧ ?


ಚಿತ್ರ ಋಣ : ಅಂತರ್ಜಾಲ

ಎಲ್ಲಿಯ ಸಂಬಂಧ ?

ಮಾನವ ಜೀವನ ಭಾವನೆಗಳ ಸರ
ಕೊಂಡಿ ಬೆಸೆದಿಹ ಸಂಕೋಲೆ
ನಾವಿದನರಿತರು ಹೊರಬರಲಾರೆವು
ಕಂಡೂ ತೂಗುವ ಉಯ್ಯಾಲೆ

ಹುಟ್ಟುವುದೆಲ್ಲೋ ಸಾವು ಅದೆಲ್ಲೋ
ಗೊತ್ತಿರದಾ ಹಲಪುಟಗಳಿವು
ಒಟ್ಟಿಗೆ ಇರಲೂ ಒಮ್ಮನಸಿಲ್ಲದ
ಉತ್ತರ ರಹಿತ ಪ್ರಶ್ನೆಗಳು

ಬಂದಿಹೆವಿಲ್ಲಿ ಬರಿಗೈಯ್ಯಲ್ಲಿ
ಬಂಧನ ಮರೆತು ಮೆರೆಯುವೆವು
ಸಂದುವೆವಲ್ಲಿ ಬರಿಮೈಯ್ಯಲ್ಲಿ
ಅಂದಿಗೆ ಬಿಡುಗಡೆ ಕಾಣುವೆವು !

ನಾನೊಬ್ಬಣ್ಣ ನೀನೋ ತಮ್ಮ
ಅಪ್ಪಾ ಅಮ್ಮಾ ಕಣ್ಣೊಡೆಯೆ
ಈ ದಿಬ್ಬಣವು ಇಲ್ಲಿಗೆ ಮಾತ್ರ
ಯಾರಿಹರು ನೀ ಹೊರನಡೆಯೆ ?

ಯಾರ ಮಗನು ನೀ ಯಾರ ಮಗಳು ನೀ ?
ಯಾರಿಗೆ ನೀನು ಯಜಮಾನ ?
ಬಾರಿ ಬಾರಿ ನೀ ಕೇಳಿಕೊ ಇದನೇ
ಸಾರುವೆ ನಿನಗೆ ಬಹುಮಾನ !

Sunday, August 8, 2010

|| ಅಥ ಶ್ರೀ ಹುಳಿ ಮಜ್ಜಿಗೆ ಪುರಾಣಂ ||




|| ಅಥ ಶ್ರೀ ಹುಳಿ ಮಜ್ಜಿಗೆ ಪುರಾಣಂ ||

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ|
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ ||

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಂ ||

ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋ ನಿಧಿಮ್ ||

ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ |
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ||


ಚಾತುರ್ಮಾಸ್ಯ ಕಾಲದಲ್ಲಿ ವ್ಯಾಸಾದಿ ಮಹಾಮುನಿಗಳನ್ನು ಮನಸಾ ವಂದಿಸಿ ಗೌರೀತನಯ ಗಣೇಶನಿಗೆ ಅಡ್ಡಬಿದ್ದು ಸೂತಮಹಾಮುನಿಗಳು ಶೌನಕಾದಿ ಮುನಿಗಳಿಗೆ ಹೇಳಿರದ, ಅಷ್ಟಾದಶ ಪುರಾಣಗಳ ಪೈಕಿ ೨೦ ನೇ ಪುರಾಣವಾದ ’ಹುಳಿಮಜ್ಜಿಗೆ ಪುರಾಣ’ವನ್ನು ತಿಪ್ಪಾ ಭಟ್ಟರು ಸುಬ್ಬಮ್ಮನೇ ಮೊದಲಾದ ಸೇರಿದ ಹೆಂಗಸರು-ಮಕ್ಕಳಿಗೆಲ್ಲ ಹೇಳಿದ್ದನ್ನು ಅಲ್ಲೇ ಪಕ್ಕದಲ್ಲಿ ಗಡದ್ದಾಗಿ ಊಟಹೊಡೆದು ಮಲಗಲು ಜಾಗಸಿಗದೇ ಕುಳಿತೇ ತೂಕಡಿಸುತ್ತಿದ್ದ ನಾನು ಕೇಳಿದ ರೀತ್ಯಾ ಶ್ರುತಪಡಿಸುವಂತವನಾಗುತ್ತೇನೆ!

ಬೇಸಿಗೆ ಕಾಲದಲ್ಲಿ ಮಜ್ಜಿಗೆಯೊಂದು ಸಿಕ್ಕಿದರೆ ಅದು ಮಹಾಪುಣ್ಯವೆಂಬಂತೇ ಅನುಭವಿಸುವವರು ಬಹುತೇಕರಿದ್ದಾರೆ. ಸ್ವಾಭಾವಿಕವಾಗಿ ಸ್ವಲ್ಪ ಸಿಹಿಯುಳ್ಳ ಮಜ್ಜಿಗೆ ಕುಡಿದವರ ದಾಹವನ್ನು ತಣಿಸುತ್ತದೆ ಮಾತ್ರವಲ್ಲ ತುಸು ಒಣಗಿದ ಹೂ ಕುಂಡದ ಗಿಡಕ್ಕೆ ನೀರೆರೆದ ಅರ್ಧಘಂಟೆಯಲ್ಲಿ ಹೇಗೆ ನಳನಳಿಸುತ್ತದೋ ಹಾಗೇ ಜನರ ಸರ್ವನರಗಳೂ ನವಚೈತನ್ಯ ಪಡೆದು ಮನುಷ್ಯ ಕೆಲಸ ಮಾಡಲು ಹೊಸ ಉತ್ಸಾಹ ಪಡೆಯುತ್ತಾನೆ ಎಂಬುದು ನಿಸರ್ಗ ನಿಯಮ. ಆದರೆ ಇದೇ ಮಜ್ಜಿಗೆ ಆಯುರ್ವೇದದಲ್ಲಿ ಹಲವು ಔಷಧಗಳ ಸಂಗಾತಿಯಾಗಿ ಸೇವಿಸಲ್ಪಡುವುದೂ ಉಂಟು. ಮಜ್ಜಿಗೆ ತಕ್ಕಮಟ್ಟಿಗೆ ಹುಳಿ ಇದ್ದರೆ ಅದನ್ನು ಲಿಂಬೂ ಪಾನಕದ ಪರ್ಯಾಯವಾಗಿ ಉಪಯೋಗಿಸುವರು ಸಂಖ್ಯೆಯಲ್ಲಿ ಬಹಳ ಸಿಗುತ್ತಾರೆ. ಆದರೆ ಈಗ ನಾವು ಕೇಳುತ್ತಿರುವ ಹುಳಿ ಮಜ್ಜಿಗೆ ಕಥೆಯೇ ಬೇರೆ!

ಮಹಾಭಾರತ ಯುದ್ಧ ಮುಗಿಯುತ್ತಿರುವ ದಿನಗಳು. ಇನ್ನೇನು ಮುಗಿದೇಹೋಯಿತು ಎನ್ನುವಾಗ ಭೀಷ್ಮಾಚಾರ್ಯರು ಮರಣಿಸಿದ ಮೇಲೆ ಅವರು ದಾಹ ತೀರಿಸಿಕೊಳ್ಳಲು ಅರ್ಜುನ ಬಾಣಹೊಡೆದು ಗಂಗೆಯನ್ನು ಬರಿಸಿ ಆ ಚಿಲುಮೆ ನೇರವಾಗಿ ಅವರ ಬಾಯಿಗೆ ಬೀಳುವಂತೇ ಮಾಡಿದ್ದನಲ್ಲ. ನಾವಾದರೆ ನಮಗೆ ಬಾಟ್ಲಲ್ಲಿ ತುಂಬಿದ ಮಿನರಲ್ ವಾಟರ್ ಕೊಡು-ಈ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಹಲವರು ತುಳಿದ ಜಾಗದಲ್ಲಿ ಹುಟ್ಟಿದ ಗಲೀಜು ನೀರನ್ನು ನಾವು ಕುಡೆಯೆವು ಅಂದುಬಿಡೆತ್ತಿದ್ದೆವೇನೋ, ಆದರೆ ಅದು ಮಹಾಭಾರತ ಕಾಲವಾದ್ದರಿಂದ ಅಲ್ಲಿ ಹಾಗೆ ಹುಟ್ಟಿದ ನೀರು ಮಿನರಲ್ ಯುಕ್ತ ವಾಟರೇ ಆಗಿತ್ತು! ಇರಲಿ, ನಮ್ಮ ಭೀಷ್ಮಾಚಾರ್ಯರು ಮರಣಿಸಿದ ಬಳಿಕ ಗಂಗೆಗೆ ಇಲ್ಲಿ ತಾನಿದ್ದು ಪ್ರಯೋಜನವಿಲ್ಲ ಎಂದೆನಿಸಿತು. ಅದಕ್ಕಾಗಿ ಯುದ್ಧದಲ್ಲಿ ತನ್ನಿಚ್ಛೆಯಂತೇ ಮೆರೆದ ಶ್ರೀಕೃಷ್ಣ ಪ್ರಸನ್ನವದನನಾಗಿ ಕುಳಿತಿದ್ದ ಹೊತ್ತು ನೋಡಿ ಮನುಷ್ಯರೂಪದಲ್ಲಿ ಆತನನ್ನು ಕಂಡು ತನ್ನಳಲನ್ನು ತೋಡಿಕೊಂಡಳು. ಶಾಪಾನುಗ್ರಹ ಸಮರ್ಥನಾದ ಶ್ರೀಕೃಷ್ಣ ಆ ಗಂಗೆಗೆ ನೀನು ಅಂಶಾಂಶ ರೂಪದಲ್ಲಿ ಭಾರತೀಯ ತಳಿಯ ಹಸುವಿನ ಹಾಲಿನಲ್ಲಿ ಅಡಗಿದ್ದು ಲೋಕದ ಜನರನ್ನೆಲ್ಲಾ ಪೊರೆ, ಆ ಹಾಲು ಪ್ರೆಶ್ ಮಜ್ಜಿಗೆಯಾದಾಗ ಅದು ಕುಡಿಯಲು ಅಮೃತತುಲ್ಯವಾಗಿರಲಿ ತದನಂತರ ಯಾವಾಗ ಆ ಮಜ್ಜಿಗೆ ಅತೀ ಹುಳಿಬರುತ್ತದೋ ಆಗ ನೀನು ಅದರಲ್ಲಿಂದ ಮಾಯವಾಗಿ ಅದು ಕುಡಿಯಲು ಅನುಪಯುಕ್ತವಾಗಿ ಪರಿಣಮಿಸಲಿ ಎಂದು ಹರಸಿದ. ಇನ್ನೇನೂ ದಾರಿಕಾಣದೇ ಗಂಗೆ ತಥಾಸ್ತು ಎಂದುಕೊಂಡು ಹೊರಟುಹೋದಳು.

ಅಲ್ಲಿಂದಾಚೆಗೆ ಹಾಲು ಮಜ್ಜಿಗೆಯ ರುಚಿಯಲ್ಲಿ ಜನ ಬಹಳೇ ಬದಲಾವಣೆ ಕಂಡರು. ಈ ಪದಾರ್ಥಗಳ ಅದ್ಬುತ ರುಚಿಯನ್ನು ಜನ ಹೊಗಳೇ ಹೊಗಳಿದರು. ಅಂದಿನ ಕಾಲಕ್ಕೆ ಲಸ್ಸಿ ಪಸ್ಸಿ ಇವೆಲ್ಲಾ ಗೊತ್ತಿರದಿದ್ದರಿಂದಲೂ ತಂಗಳ ಪೆಟ್ಟಿಗೆ, ಮಿಕ್ಸಿ ಗ್ರೈಂಡರುಗಳನ್ನು ಆ ಅವತಾರ ಕಾಲದಲ್ಲಿ ಶ್ರೀಕೃಷ್ಣ ಹೊರತರದಿದ್ದರಿಂದಲೂ ಮೊಸರನ್ನು ಸುತರಾಂ ಕಡೆಗೋಲಲ್ಲೇ ಕಡೆಯುತ್ತಿದ್ದರು. ಇದಕ್ಕೆ ಇಂದಿಗೂ ಸಾಕ್ಷಿ ಉಡುಪಿಯಲ್ಲಿ ಕಡೆಗೋಲು ಹಿಡಿದು ಕೃಷ್ಣ ನಿಂತಿರುವುದು. ಆಗೆಲ್ಲಾ ಮೊಸರನ್ನು ಬಹಳ ವ್ಯವಸ್ಥಿತವಾಗಿ ’ಸಿಕ್ಕ’ ಎಂಬ ಬಳ್ಳಿಯಿಂದ ಮಾಡಿದ ನೇಯ್ಗೆಯ ತೂಗುದಾರದಲ್ಲಿ ಮಣ್ಣಿನ ಮಡಕೆಗಳಲ್ಲಿ ಮುಚ್ಚಿಡುತ್ತಿದ್ದರು. ಕರೆದ ನೊರೆಹಾಲನ್ನು ಕೆಲಹೊತ್ತು ಹಾಗೇ ಬಿಟ್ಟು, ಸೋಸಿ ನಂತರ ಕಾಯಿಸಿ, ಉಗುರು ಬೆಚ್ಚಗಿನವರೆಗೆ ಅದು ತಣಿದಮೇಲೆ ಅದಕ್ಕೆ ’ನೆರವು’[ಹೆಪ್ಪು]ಹಾಕುತ್ತಿದ್ದರು. ಹಾಗೆ ರಾತ್ರಿ ಹೊತ್ತಲ್ಲಿ ಹೆಪ್ಪಿಗಿಟ್ಟ ಹಾಲು ಮೊಸರಾಗಿ ಬೆಳಗಿನ ಜಾವ ೫ ಗಂಟೆಗೆ ಶೌಚ ಸ್ನಾನಾದಿಗಳನ್ನು ತೀರಿಸಿದ ಹೆಂಗಸರು ಮಡಿಯಲ್ಲಿ ಮೊಸರ ಮಡಿಕೆಗಳನ್ನು[ಗಡಿಗೆಗಳನ್ನು] ಸಿಕ್ಕದಿಂದ ಇಳಿಸಿ, ಅದನ್ನು ಈರಿಕೆಯೆಂಬ ಹುಲ್ಲಿನಿಂದ ಮಾಡಿದ ದೊಡ್ಡ ಉದ್ದಿನವಡೆಯಾಕಾರದ ಆಕೃತಿಯ ಮೇಲೆ ಕೂರಿಸಿ, ಅದಕ್ಕೆ ಸ್ವಲ್ಪ ಶುದ್ಧ ನೀರು [ಗಂಗಾಜಲ!] ಹಾಕಿ ಆಮೇಲೆ ನಿಧಾನಕ್ಕೆ ಕಡೆಗೋಲು ಇಳಿಸಿ, ಕಡೆಗೋಲ ಕಂಬದ ಸಹಾಯದಿಂದ ಮೊಸರನ್ನು ಕಡೆಯುತ್ತಿದ್ದರು. ೧೫-೨೦ ನಿಮಿಷ ಕಡೆದಾಗ ಶುದ್ಧ ಮಜ್ಜಿಗೆಯ ಮೇಲ್ಭಾಗದಲ್ಲಿ ಶುದ್ಧ ಬೆಣ್ಣೆ ತೇಲುತ್ತಿತ್ತು. ಆ ತೇಲುವ ಬೆಣ್ಣೆಯ ತುಂಡುಗಳನ್ನೆಲ್ಲ ಎತ್ತಿ ತೆಗೆದು ಬೇರೆ ಪಾತ್ರೆಗೆ ಹಾಕಿ ಮಜ್ಜಿಗೆಯನ್ನು ಬೇರೆ ಪಾತ್ರೆ ಒಂದಷ್ಟು ಬಗ್ಗಿಸುತ್ತಿದ್ದರು. ಹಾಗೆ ಬಗ್ಗಿಸಿದ ಮಜ್ಜಿಗೆ ಬಹಳಕೆಲಸಗಳಿಗೆ ಉಪಯೋಗಿಸಲ್ಪಡುತ್ತಿತ್ತು.ಹೀಗೆ ತಗೆದ ಮಜ್ಜಿಗೆ ಬೇಸಿಗೆಯಲ್ಲಿ ಮನೆಗೆ ಬಂದ ಬಹಳ ಅತಿಥಿಗಳಿಗೆ,ಅಭ್ಯಾಗತರಿಗೆ ಬಾಯಾರಿಕೆಗೆ ಕೊಡಲ್ಪಡುತ್ತಿತ್ತು. ಯಾವುದೇ ಅಡ್ಡ,ಕೆಟ್ಟ ವಾಸನೆಯಿರದ ಮಜ್ಜಿಗೆ ಕುಡಿಯಲು ಉತ್ಕೃಷ್ಟ ಪಾನೀಯವೆಂಬುದು ಈಗಲೂ ಎಲ್ಲರಿಗೂ ಗೊತ್ತು.

ಮಜ್ಜಿಗೆ ಬಗ್ಗೆ ಹೇಳುವಾಗ ಬೆಣ್ಣೆ-ತುಪ್ಪದ ಬಗ್ಗೆ ಹೇಳದಿದ್ದರೆ ಅದು ಅಪೂರ್ಣ ಪುರಾಣ! ಪುರಾಣಾಂತರ್ಗತ ಶ್ರೀ ಬೆಣ್ಣೆ-ತುಪ್ಪ ದೇವತಾಭ್ಯೋ ನಮಃ || ಆವಾಹಯಿಷ್ಯೇ ! ಬೆಣ್ಣೆ-ತುಪ್ಪಗಳು ಮಜ್ಜಿಗೆಯ ಮರಿಗಳು. ಒಮ್ಮೆ ಹೀಗಾಯಿತು ಒಂದು ಮದುವೆಯ ಆಮಂತ್ರಣ ಕೊಡಲು ಪಕ್ಕದ ಹಳ್ಳಿಗೆ ನಾನು ಹೋಗಿದ್ದೆ. ನಮ್ಮಲ್ಲಿ ಮದುವೆ-ಮುಂಜಿಗಳಿಗೆ ಕರೆಯಲು ಬಂದವರಿಗೆ ಕೊನೇಪಕ್ಷ ಸಕ್ಕರೆ-ತುಪ್ಪ ಕೊಡುವುದು ವಾಡಿಕೆ. ಅಂದು ನನಗೂ ಬಿಡದೇ ಹಠಮಾಡಿ ಆ ಮನೆಯ ಯಜಮಾನ ಸಕ್ಕರೆ-ತುಪ್ಪ ಮನೆಯೊಡತಿಗೆ ಹೇಳಿ ತರಿಸಿ ಕೊಟ್ಟ. ಬಾಯಲ್ಲಿ ಹಾಕುತ್ತಿರುವಂತೇ ನನಗೆ ಉಸಿರು ತೆಗೆದು ಕೊಳ್ಳುವುದಿರಲಿ, ಉಮ್ಮಳಿಸಿ ವಾಂತಿ ಬರುವಂತಾಯಿತು, ನುಂಗಿದರೆ ವಾಂತಿ ಗ್ಯಾರಂಟಿ-ಉಗುಳಿದರೆ ಯಜಮಾನರಿಗೆ ಬೇಜಾರು, ಅಪ್ಪಾ ನನ್ನ ಅವಸ್ಥೆ ದೇವರಿಗಷ್ಟೇ ಗೊತ್ತು. ಗಾದೆಗೆ ’ಬಿಸಿ ತುಪ್ಪ’ ಅಂತಾರೆ, ಆದರೆ ವಾಸ್ತವದಲ್ಲಿ ವಾಸನೆಯ ತುಪ್ಪವೂ ಹಾಗೇನೆ. ಕೆಲವರಿಗೆ ಬೆಣ್ಣೆ-ತುಪ್ಪವನ್ನು ಹೇಗಿಡಬೇಕು, ಯಾವಾಗ ಬಳಸಬೇಕು ಎಂಬುದು ತಿಳಿದಿರುವುದಿಲ್ಲ. ಬೆಣ್ಣೆಯನ್ನು ದಿನದಿನವೂ ಕರಗಿಸಿ ತುಪ್ಪಮಾಡುವ ವಹಿವಾಟು ತುಂಬಾ ಕಮ್ಮಿ. ಎತ್ತಿಟ್ಟ ಬೆಣ್ಣೆಯನ್ನು ನೀರಿನಲ್ಲಿಟ್ಟುಕೊಳ್ಳುವುದು ಅಭ್ಯಾಸ. ಆ ನೀರನ್ನು ದಿನವೂ ಬದಲಾಯಿಸುತ್ತ ೪-೫ ದಿನಗಳಿಗೊಮ್ಮೆ ಬೆಣ್ಣೆ ಶೇಖರಣೆ ಜಾಸ್ತಿಯಾದಾಗ ತುಪ್ಪ ಮಾಡುವುದು ಆಚರಣೆ. ತುಪ್ಪ ಕಾಯಿಸುವದಕ್ಕೂ ಒಂದು ಹದವಿದೆ. ಬೆಣ್ಣೆ ಕರಗಿ ಕಾದು ಒಂದು ಹಂತಕ್ಕೆ ಬರುವವರೆಗೆ ಕಾಯಿಸುತ್ತಲೇ ಇರಬೇಕು, ಕಾಯಿಸಿದ್ದು ಜಾಸ್ತಿ-ಕಮ್ಮಿ ಹೇಗೇ ಆದರೂ ತುಪ್ಪ ಕೆಡುವುದು ಶತಸ್ಸಿದ್ಧ! ಕೆಲವೊಮ್ಮೆ ಚೆನ್ನಾಗಿರುವ ತುಪ್ಪವನ್ನೂ ಚಮಚ ಹಾಕಿ ಬಳಸುತ್ತ ಬಹಳದಿನವಿಟ್ಟರೆ ಅಥವಾ ಬಳಸದೇ ತಿಂಗಳುಗಳ ಕಾಲವಿಟ್ಟರೆ ತುಪ್ಪ ’ಜಡ್ಡು’ ಹಿಡಿದ ತುಪ್ಪ ಅಥವಾ ಜಡ್ಡು ಎನ್ದಿಕೊಳ್ಳುತ್ತದೆ. [ಜಿಡ್ಡು ಬೇರೆ ಜಡ್ಡುಬೇರೆ, ಜಿಡ್ಡು ಎಂದರೆ ನಯದ ಪಸೆ, ಜಡ್ಡು ಎಂದರೆ ವಾಸನೆ ಎಂದರ್ಥ] ಹೀಗೇ ಕೆಲವು ಮನೆಗಳಲ್ಲಿ ಅವರ ಮೂಗುಗಳು ನಮ್ಮ ಮೂಗುಗಳ ಥರ ತೆರೆದುಕೊಳ್ಳುವುದೇ ಇಲ್ಲ. ಅವುಗಳಿಗೆ ಜಡ್ಡು ಹಾಗೂ ಹೊಸದು ಎಲ್ಲಾ ಒಂದೇ! ಅಂತಹ ಮನೆಗಳಲ್ಲಿ ಸತ್ಯನಾರಾಯಣ ಪೂಜೆ ಮಾಡಿದಾಗ ದೇವರಿಗೆ ಸಪಾದಭಕ್ಷ್ಯ ಮಾಡುವಾಗ ಜಡ್ಡುತುಪ್ಪವನ್ನೇ ಬಳಸುವುದರಿಂದ ಬಂದವರು ಪ್ರಸಾದವಾಗಿ ಪಡೆಯುವ ಸಪಾದವನ್ನು ತಿನ್ನಲು ಹೇಸಿಕೊಳ್ಳುತ್ತಾರೆ. ತಿನ್ನುವ ಹಾಗಿಲ್ಲ-ತಿನ್ನದೇ ಇರುವ ಹಾಗೂ ಇಲ್ಲ[ದೇವರು ಕೋಪಿಸಿಕೊಂಡರೆ!]

ಕೆಲವು ಮನೆಯಲ್ಲಿ ಬೆಣ್ಣೆ ದೋಸೆ ಕೊಡುತ್ತೇವೆಂದು ಹೇಳಿ ತಂದುಬಿಡುತ್ತಾರೆ. ಅಲ್ಲೂ ಅದೇ ಗತಿ. ದಿನವೂ ಅದೇ ಹಳೇ ನೀರಿನಲ್ಲಿ ಕುಳಿತಿರುವ ಬೆಣ್ಣೆ ವಾಸನೆಗಟ್ಟಿರುತ್ತದೆ. ಅಂತಹ ಬೆಣ್ಣೆ ತಟ್ಟೆಗೆ ಬಂದಾಗ ಭುಗ್ಗನೆ ಪೆಟ್ರೋಲ್ಗೆ ಬೆಂಕಿ ತಗುಲಿದ ಹಾಗೇ ನಮ್ಮ ಮೂಗಿಗೆ ವಾಸನೆ ಹತ್ತಿಕೊಂಡುಬಿಡುತ್ತದೆ! ಗಂಟೆಗಟ್ಟಲೆ ಈ ವಾಸನೆ ಯಾವ ವಾಸು ಬತ್ತಿ ಹಚ್ಚಿದರೂ ಓಡಿಹೋಗುವಂತಹುದಲ್ಲ. ಎದುರಿಗೇ ಕುಳಿತುಕೊಳ್ಳುವ ಯಜಮಾನರು

" ಸಂಕೋಚ ಮಾಡ್ಕೋಬಾರ್ದು, ಇನ್ನೊಂದು ಹಾಕ್ಸೊಳ್ಳಿ " ಅಂದುಬಿಟ್ಟರೆ ನಾವು ಸತ್ತಂತೆ ! ನಮ್ಮ ಫಜೀತಿ ಹೇಗಿರಬಹುದು!

ಕೆಲವು ಮನೆಗಳಲ್ಲಿ ಈ ನಾಥವೇ ಜಾಸ್ತಿ ಇರುವುದರಿಂದ ಮನೆಕಾಯುವುದಕ್ಕೆ ನಾಯಿಯ ಅವಶ್ಯಕತೆಯೇ ಇರುವುದಿಲ್ಲ. ವೆರಿ ಸಿಂಪಲ್ ಸಾಲ್ಯುಶನ್- ಬೆಣ್ಣೆ ಅಥವಾ ತುಪ್ಪದ ಪಾತ್ರೆ ತಂದು ಮುಚ್ಚಳ ತೆಗೆದಿಟ್ಟುಬಿಟ್ಟರೆ ಅವರ ಮನೆಕಡೆ ದರೋಡೆಕೋರರೂ ಬರುವುದೇ ಇಲ್ಲ!

’ಮಳ್ಳಾದರೂ ತಾಯಿ ನೀರಾದರೂ ಮಜ್ಜಿಗೆ’ ಎಂಬುದು ನಮ್ಮಲ್ಲಿನ ಗಾದೆ. ಈ ಗಾದೆ ಯಾವಾತ ಮಾಡಿದ್ದೋ ಗೊತ್ತಿಲ್ಲ! ತಾಯಿ ಮಳ್ಳಾದರೂ ಕೆಲವರು ಸಹಿಸಿಯಾರು, ಮಜ್ಜಿಗೆ ನೀರಾದರೂ ಪರವಾಗಿಲ್ಲ ಆದರೆ ಮಜ್ಜಿಗೆ ಹೆಂಡದ ವಾಸನೆಗೆ ತಿರುಗಿದರೆ ಅದು ಮದಿರಾರಸ ಪ್ರಿಯರಿಗೆ ಮಾತ್ರ ಇಷ್ಟವಾಗುತ್ತದೆಯೇ ಹೊರತು ಎಲ್ಲರೂ ಅದನ್ನು ಕುಡಿಯಲಾರರು.

ಒಮ್ಮೆ ಹೀಗೇ ಅದೂ ಇದೂ ಕೆಲಸಮಾಡುತ್ತಿದ್ದ ಮಂಜುವಿಗೆ ಸೀತಾರಾಮ್ ಹೆಗ್ಡೇರು
" ಏ ಮಂಜು ಉರಿ ಬಿಸ್ಲಲಾ , ಸ್ವಲ್ಪ ಮಜ್ಜಿಗೆ ಕುಡ್ಯನ ಬಾರಾ " ಅಂದರಂತೆ. ಮಂಜು ಬಂದಿದ್ದಾನೆ. ಮಜ್ಜಿಗೆಯೂ ಬಂದಿದೆ. ಮಜ್ಜಿಗೆಯ ಲೋಟವನ್ನು ಬಾಯಿಗಿಟ್ಟನೋ ಇಲ್ಲವೋ " ಊವೇ ......ಊವೇ" ಎಂತ ವಾಂತಿ ಮಾಡಿ ಎಚ್ಚರತಪ್ಪಿಬಿದ್ದಿದ್ದಾನೆ. ಆತನನ್ನು ಹೆಗ್ಡೇರು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಎಚ್ಚರವಾದಾತನಿಗೆ ಹೆಗ್ಡೇರ ಮುಖನೋಡಿದ ತಕ್ಷಣ ವಾಂತಿ! ನೀರೂ ಬೇಡ ಏನೂ ಬೇಡ ಬದುಕಿ ಉಳಿದರೆ ಸಾಕು ಎನ್ನುವ ಸ್ಥಿತಿ.

ಆತ ಹುಷಾರಾಗಿ ಮನೆಗೆ ಬಂದ ವಾರದಮೇಲೆ ಬೇಟಿಯಾದಾಗ ಏನಾಯಿತು ಎಂದು ಕೇಳಿದರೆ " ಹೆಗ್ಡೇರ್ ಮನೆಲಿ ಮಜ್ಜಿಗೆ ಕೊಟ್ಟೀರು ಮಾರಾರ್ಯೆ, ಅದ್ಯೆಂತಾ ವಾಸನೆ ಅದು, ಹುಟ್ದಾಗಿಂದ ಇನ್ನೂವರೆಗೆ ಎಲ್ಲೆಲ್ಲೂ ನೋಡ್ಲಿಲ್ಲಾಗಿತ್ತು ನಾನು, ಬ್ಯಾಡ್ರೋ ಬ್ಯಾಡ, ಇನ್ನು ಮಜ್ಜಿಗೆ ಸಹವಾಸವೇ ಬ್ಯಾಡ " --ಮಂಜು ಉವಾಚ !

ತೀರಾ ಹುಳಿಬಂದ ಮಜ್ಜಿಗೆಯ ಪರಿಯೇ ಇದು. ಹಳ್ಳಿಯಲ್ಲೇ ಹಾಗೆ ಇನ್ನು ಶಹರ-ಪಟ್ಟಣಗಳಲ್ಲಿ ಪ್ಯಾಕೆಟ್ ಹಾಲಿನಿಂದ ಮಾಡಿದ ಮೊಸರು, ಮಜ್ಜಿಗೆ ಎಲ್ಲ ೨ ದಿನಗಳ ನಂತರ ಉಪಯೋಗಕ್ಕೆ ಯೋಗ್ಯವಲ್ಲ. ಒಂದೊಮ್ಮೆ ಉಪಯೋಗಿಸಿದರೆ ಮತ್ತೆ ನಿಮ್ಮ ಮೊಸರು-ಮಜ್ಜಿಗೆಯನ್ನು ಬಳಸುವ ಅಭಿರುಚಿಯೇ ಬದಲಾಗಿ ತೆನ್ನಾಲಿ ರಾಮಕೃಷ್ಣನ ಬೆಕ್ಕಿನ ಕಥೆಯಂತಾಗುತ್ತದೆ ಹುಷಾರು!

ಇತ್ತೀಚೆಗೆ ಈ ಮೇಲಿನ ಎಲ್ಲಾ ನಂಬಲರ್ಹ ಮೂಲಗಳಿಂದ ಬಂದ ವರದಿಯನ್ನು ಆಧರಿಸಿ ನಾನು ಎಲ್ಲೇ ಹೋದರೂ ಈಗ ಬೆಣ್ಣೆ-ತುಪ್ಪ ಬಡಿಸುತ್ತೇವೆ ಎಂದರೆ ನನಗೆ ವೈದ್ಯರು ಬಳಸಬೇಡ-ಅಲರ್ಜಿ ಇದೆ ಎಂದಿದ್ದಾರೆ ಎನ್ನುತ್ತೇನೆ ಮತ್ತು ಮಜ್ಜಿಗೆ ತಂದರೆ ಮಜ್ಜಿಗೆ ಅಂದರೆ ನನಗೆ ಅಷ್ಟಕ್ಕಷ್ಟೇ ಎಂದು ತಪ್ಪಿಸಿಕೊಳ್ಳುತ್ತೇನೆ. ನಿಮಗೂ ಈ ಅನುಭವಗಳು ಬಂದಿರಬಹುದು, ಬರಲೂಬಹುದು ಎಂಬ ಕಾರಣದಿಂದ ಸೂತರು ಶೌನಕಾದಿ ಮುನಿಗಳಿಗೆ ಹೇಳಿರದಿದ್ದ ವಿಷಯವನ್ನು ತಿಪ್ಪಾಭಟ್ಟರು ಸುಬ್ಬಮ್ಮ ಮತ್ತನೇಕ ಹೆಂಗಸರು-ಮಕ್ಕಳಿಗೆಲ್ಲ ಹೇಳಿರುವುದನ್ನ ನಿಮಗೆ ಇಂದಿಲ್ಲಿ ತಿಳಿಸಿಕೊಟ್ಟಿದ್ದೇನೆ.

|| ಇತಿ ಶ್ರೀ ಹುಳಿಮಜ್ಜಿಗೆ ಪುರಾಣಂ ಸಂಪೂರ್ಣಂ ||


ಫಲಶ್ರುತಿ

ಭಕ್ತಿಯಿಂದ ಈ ಪುರಾಣವನ್ನು ಓದುವವರಿಗೆ, ಪುಟಗಟ್ಟಿದ ರೂಪದಲ್ಲಿ ಪ್ರಿಂಟು ತೆಗೆದು-ಮನೆಯ ಕಪಾಟಿನಲ್ಲಿ ಎತ್ತಿಟ್ಟು ಆಗಾಗ ಪೂಜಿಸುವವರಿಗೆ, ಫ್ರೆಂಡ್ಸುಗಳಿಗೆ ತೋರಿಸಿ ನಕ್ಕು ನಕ್ಕು ಸುಸ್ತಾದವರಿಗೆ, ಗೂಗಲ್ ಬಜ್ಜಿನಲ್ಲಿ ಕೂತು ಬಿಸಿಬಿಸಿ ಬಜ್ಜಿ ಕಾಯಿಸಿಕೊಳ್ಳುವವರಿಗೆ, ಕಾಯಾ-ವಾಚಾ-ಮನಸಾ ಅನುಭವಿಸಿ ಇದನ್ನ ಈ ಮೆಲ್ ಮಾಡುವವರಿಗೆ, ಶಹರದಲ್ಲಿದ್ದು ಮಜ್ಜಿಗೆ-ಬೆಣ್ಣೆ-ತುಪ್ಪ ಮಾಡಿ ಗೊತ್ತಿಲ್ಲದ ಇತ್ತೀಚಿನ ಹುಡುಗಿಯರಿಗೆ ಈ ಎಲ್ಲರಿಗೂ ದೇವರು ಒಳ್ಳೆಯ, ದುರ್ವಾಸನಾರಹಿತ ಬೆಣ್ಣೆ-ತುಪ್ಪ-ಮಜ್ಜಿಗೆ ಇತ್ತು ಸಲಹುತ್ತಾನೆ.

ಸತ್ಯಾಸ್ಸಂತು ಭಕ್ತಸ್ಯ ಕಾಮಾಃ ||

Saturday, August 7, 2010

ಒಲವಿನ ಸೆಳೆತ

ರಾಜಾರವಿವರ್ಮ ರಚಿತ ಚಿತ್ರ ಕೃಪೆ : ಅಂತರ್ಜಾಲ

ಒಲವಿನ ಸೆಳೆತ


ಗೆಳೆಯ ಕರೆದಿಹನೆಂದು ನಾ ಹೋದೆ ಜೊತೆಯಾಗಿ
ಗಿಳಿಯ ಮರಿ ಕೂತಿರುವ ಆ ಮನೆಯ ಕಡೆಗೆ
ಅಳಿವಿನಂಚಲಿ ಇರುವ ಹಲವು ಜೀವಿಗಳನ್ನು
ಬಳಗ ಸಹಿತದಿ ನೋಡಲೊಮ್ಮೆ ಆ ಬದಿಗೆ

ಲಿಂಬೂ ಪಾನಕದೊಡನೆ ಬಂದವಳ ನೋಡಿದೆನು
ಬೆಂಬಿಡದೆ ಅಚ್ಚಿಸಿತು ಮನವು ಚಿತ್ತಾರ
ತುಂಬಿ ಚೆಲ್ಲಿತು ಲೋಟದಲ್ಲಿ ಆ ಪಾನೀಯ
ಹಂಬಲಿಸಿ ಅವಳಿರವ ಅಲ್ಲಿ ಮನಸಾರ

ಕರೆಬಂದು ನಾ ತೆರಳಿ ಜಿಂಕೆ-ಕಡವೆಗಳನ್ನು
ಹೆರೆ ಬಿಟ್ಟ ಹಾವು ಮತ್ತೊಂದಷ್ಟು ಮೃಗವ
ಅರಿವಿರದೇ ಮನಸೆಲ್ಲ ಆಕೆಯೊಡನಾಡಿತ್ತು !
ಬರುವಿಕೆಯ ಬಯಸುತ್ತ ನಮ್ಮೂರ ಕಡೆಗೆ

ಹೆಸರು ಕೇಳಲು ಭಯವು ಉಸಿರುಗಟ್ಟಿದ ರೀತಿ
ಹಸುಳೆಗೆನ್ನೆಯ ಮೇಲೆ ಗುಳಿ ನಗಲು ತುಸುವೇ
ಹೆಸರುಕಾಳಿನ ಉಸ್ಲಿ ಮಜ್ಜಿಗೆಯ ನೀಡಿದಳು
ಕೆಸರಲರಳಿದ ಕಮಲ ಮುಗುದೆಯವಳು !

ಹೊಸಬನಾನೆಂಬಂತೆ ಒಂದಿನಿತು ತೋರ್ಗೊಡದೆ
ಗಸಗಸೆಯ ಪಾಯಸವ ಧಾರಾಳ ಬಡಿಸಿ
ಎಸಳಯಾಲಕ್ಕಿ ಪೂರಿತ ವಿವಿಧ ತಿನಿಸುಗಳ
ನಸುನಕ್ಕು ನೀಡಿದಳು ಕುಶಲದಲಿ ಬಹಳ

ಹೊರಟು ನಿಂತೆವು ನಾವು ಮನವು ಹೊರಟಿರಲಿಲ್ಲ!
ಕರಟ ತಟ್ಟಿದ ಸದ್ದು ತಿರುಗಿ ನಾ ನೋಡೆ
ಹರಟುವುದು ಹಲವಿತ್ತು ಇನ್ನೆಲ್ಲಿ ತರವಲ್ಲ
ಮುರುಟಿ ನಿಂತಲ್ಲೇ ಕಣ್ಮಿಂಚಿನಲಿ ಕರೆದೂ !


Friday, August 6, 2010

ರಿಕವರಿ ರೌಡಿಸಂ !

ಕಲ್ಪನೆಗಾಗಿ ಬಳಸಿದ ಚಿತ್ರ ಋಣ : ಅಂತರ್ಜಾಲ

ರಿಕವರಿ ರೌಡಿಸಂ !

[ಈ ಹಾಡಿನಲ್ಲಿ ಛಂದಸ್ಸು ಮತ್ತು ವ್ಯಾಕರಣ ಗಣನೆಗೆ ತರವಲ್ಲ, ಇದು ಕೇವಲ ತಮಾಷೆಗಾಗಿ !]

ಮಲ್ಟಿನ್ಯಾಷನಲ್ ಬ್ಯಾಂಕಿನವರು
ಪಲ್ಟಿಹೊಡೆದು ಗಿರಾಕಿ ಕರೆದು
ಉಲ್ಟಾ ಸೀದಾ ಮಾತನಾಡಿ ಹೆದರಿಸಿದ್ದರು
ಗಿಲ್ಟಿಮನದ ಬಡವನವಗೆ
ಸಿಲ್ಟು ಇರದ ಮನಸಿನವಗೆ
ಅಲ್ಟಿಮೇಟು ಡೇಟುಕೊಟ್ಟು ಕಳಿಸಿಬಿಟ್ಟರು

ಡೇಟು ಮುಗಿದು ಹೋದರವಗೆ
ದಾಟಿಬರಲು ಆಗಲಿಲ್ಲ
ಊಟಕುಂಟು ಆಟಕಿಲ್ಲ ಅವನ ಜನರಿಗೆ
ಪಾಠಮಾಡುತಿದ್ದ ಮೇಷ್ಟ್ರು
ಪಾಟಿಯಲ್ಲಿ ಬರೆಸುತಿದ್ರು
’ಕಾಟಖಚಿತ ಸಾಲವೆಂಬ ಶೂಲ ಪಡೆದಗೆ’ !

ಮ್ಯಾನೇಜರು ಪ್ಲಾನು ಮಾಡಿ
ಟೀನೇಜಿನ ಟೀಮು ಕರೆದು
ನೀವೇ ವಸೂಲಿಮಾಡಿ ತನ್ನಿರೆಂದರು
ನಾವೇ ಜನ ಹೊರಟೆವೀಗ
ಕಾವೇರಿದೆ ಬಿಡುವುದಿಲ್ಲ
ಸಾವಾದರು ಸರಿಯೆ ಬಡಿದು ತರುವೆವೆಂದರು

ಗುಂಡು ತುಂಡು ಸೇರಿಕೊಂಡು
ಚೆಂಡು ಬುಗುರಿಯಾಡುವಾಗ
ಚಂಡ ಭೈರನೆದ್ದು ಒಮ್ಮೆ ಗುಟುರುಹಾಕಿದ
ಮಂಡೆಬಿಸಿ ಮಾಡಿಕೊಂಡ
ಪಾಂಡುರಂಗ ಪರಮ ತಾನು
ಉಂಡು ಉಡದೆ ಉಟ್ಟು ಉಣದೆ ಹಣವ ಕಟ್ಟಿದ !

Thursday, August 5, 2010

ರಾತ್ರಿ ಚಾ ಪಾರ್ಟಿ ಇರುತ್ತದಂತೆ !


ರಾತ್ರಿ ಚಾ ಪಾರ್ಟಿ ಇರುತ್ತದಂತೆ !

ಇದನ್ನು ಕೇಳಿಯೇ ಮಕ್ಕಳಾದ ನಮಗೆಲ್ಲ ಒಂಥರಾ ಥ್ರಿಲ್ಲಿಂಗ್ ! ರಾತ್ರಿ ಹೊತ್ತಿನಲ್ಲೆಲ್ಲ ಚಾ ಕುಡುಯುವುದು ಸಾಮಾನ್ಯವಾಗಿ ನಾವು ನೋಡಿದ್ದಲ್ಲ. ಅದಕ್ಕೇ ಅದು ಹೇಗಿರಬಹುದು ಮತ್ತು ಏನೆಲ್ಲಾ ತಿಂಡಿ ಇರಬಹುದು ಎಂಬುದು ನಮ್ಮ ಕುತೂಹಲ. ಮಕ್ಕಳಿಗೆ ಸಹಜವಾಗಿ ತಿಂಡಿಗಳೆಲ್ಲಾ ಇಷ್ಟ್ ತಾನೇ ? ಅದೂ ಬೇರೆಯವರ ಮನೆಗಳಲ್ಲಿ ಮಾಡಿದ್ದು ಹೇಗಿರುತ್ತದೆ ತಿಳಿಯಬೇಕು ಎಂಬುದೊಂದು ಸ್ವಲ್ಪ ಕೆಟ್ಟ ಬಯಕೆ. ಆಗಾಗ ನಮ್ಮ ಅಕ್ಕ-ಪಕ್ಕದ ಮನೆಗಳಲ್ಲಿ ಸಿಹಿ ತಿಂಡಿಗಳನ್ನು ಮಾಡಿದರೆ ಕಾಯಿಸುವಾಗ-ಬೇಯಿಸುವಾಗ್ಲೇ ಅದರ ಪರಿಮಳ ನಮ್ಮಅಸಾಧಾರಣಮೂಗಿಗೆ ಹೊಡೆಯುತ್ತಿತ್ತು. ಆಗ ಪಕ್ಕದ ಮನೆಯ ಮಕ್ಕಳನ್ನು ಆಟಕ್ಕೆ ಕರೆದು

"ಏಯ್ ನಿಮ್ಮನೇಲಿ ಇವತ್ತೇನ್ ಮಾಡಿದಾರೋ "

" ಕೈಮುಗಿಯುವ ಮೊಮ್ಮಿ "

ಕೈಮುಗಿಯುವ ಮೊಮ್ಮಿ ಎಂದರೆ ಅದು ನಮ್ಮ ಮುಗಿದ ಕೈ ಆಕಾರದ ಸಿಹಿತಿನಿಸು! ಅಕ್ಕಿಹಿಟ್ಟಿನ ಕಡುಬು ನೋಡಿದ್ದೀರಲ್ಲಾ ಆಥರದ್ದೇ ಒಂದು. ಅಂಥದ್ದೆಲ್ಲಾ ದಿನವೂ ಮಾಡುವುದಲ್ಲ. ಅಪರೂಪಕ್ಕೆ ನೂಲು ಹುಣ್ಣಿಮೆ, ನಾಗರ ಪಂಚಮಿ ಇಂತಹ ದಿನಗಳಲ್ಲೇ ಮಾತ್ರ ಸಿಗುವಂತದು. ನಮ್ಮನೆಗಳಲ್ಲಿ ಅಮ್ಮ ತಿಂಗಳ ರಜಾಕ್ಕೆ ಕೂತರೆ ಆಗ ಅದು ಸಿದ್ಧವಾಗುತ್ತಿರಲಿಲ್ಲ, ಇನ್ಯಾವುದೋ ಹಬ್ಬಕ್ಕೆ ಪೋಸ್ಟ್ ಪೋನ್ ಆಗಿಬಿಡುತ್ತಿತ್ತು. ಒಮ್ಮೊಮ್ಮೆ ಅವರ ಮನೆಗಳಲ್ಲೂ ಅದೇ ಕಥೆ. ಹೀಗಾಗಿ ಕೆಲವೊಮ್ಮೆ ತಿನ್ನಬೇಕೆನಿಸುವ ನಮ್ಮ ಜಿಹ್ವಾಚಾಪಲ್ಯಕ್ಕೆ ಅದೇ ಕಾಲಕ್ಕೆ ತುರಿಕೆ ಜಾಸ್ತಿಯಾಗಿಬಿಡೋದು. ಏನಾದರೂ ಉಪಾಯ ಮಾಡಿ ನಾವು ಅವುಗಳನ್ನು ಹೊರಗಡೆ ತಂದು ಎಲ್ಲಾ ಸೇರಿ ಆಟವಾಡುತ್ತಾ ತಿನ್ನುವುದಿತ್ತು.

ನಾಗರ ಪಂಚಮಿಗೆಸುಳಿರೊಟ್ಟಿಮಾಡುತ್ತಿದ್ದರು. ಬೇಕಾದರೆನೀವೂ ಮಾಡಿನೋಡಿ--

ನೆನೆಹಾಕಿ ರುಬ್ಬಿದ ಅಕ್ಕಿಯ ಹಿಟ್ಟನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ಚಪಾತಿ ಹಿಟ್ಟಿನ ಹದಕ್ಕೆ ಇಟ್ಟುಕೊಂಡು ಅದನ್ನು ತುಂಡು ಬಾಳೆಲೆಯಮೇಲೆ ನಮ್ಮ ಅಂಗೈ ಆಕಾರಕ್ಕೆ ತೆಳ್ಳಗಿನ ಪದರದ ಥರ ಆಗುವವರೆಗೆ ತಟ್ಟಿ[ಕೈಗೆ ಎಣ್ಣೆ ತಗುಲಿಸಿಕೊಂಡು ಮಾಡಬೇಕಾದ ಕೆಲಸ], ನಂತರ ಅದರಮೇಲೆ ಸಿದ್ಧಪಡಿಸಿರುವ ಕಾಯಿಸಿ ಇಳಿಸಿರುವ ಕಾಯಿತುರಿ-ಬೆಲ್ಲದ ಮಿಶ್ರಣವನ್ನು ಒಂದು ಪದರ ಹರಡಿ. ನಿಧಾನಕ್ಕೆ ಅಂಗೈ ಮಡಿಸಿದಂತೇ ಮಡಿಸಿಕೊಳ್ಳಿ, ದೋಸೆ ಕಾವಲಿಯ ಮೇಲೆ ತುಂಡು ಬಾಳೆಲೆ ಸಮೇತ ಇಡಿ, ಒಂದೈದು ನಿಮಿಷ ಆಕಡೆ ಈಕಡೆ ಮಗುಚುತ್ತ ಬೇಯಿಸಿ! ಬಾಳೆಲೆ ಬಣ್ಣ ಬದಲಾಗುತ್ತ ಬಂದಾಗ ಇಳಿಸಿ ತಣಿಯಲು ಬಿಡಿ. ತಿಂದುನೋಡಿ--ಇದು ಸುಳಿರೊಟ್ಟಿ! ಸುಳಿರೊಟ್ಟಿಯನ್ನು ನಿಜವಾಗಿ ಮಾಡುವುದು ಅರಿಶಿನ ಗಿಡದ ಎಲೆ[ಅರಿಶಿನ ಕೀಳೆ]ಯಲ್ಲಿ! ಅದು ಅರಿಶಿನದ ಎಲೆಯ ಪರಿಮಳವನ್ನು ಹೀರಿಕೊಂಡು ಬೇಯುತ್ತದೆ. ಆಗ ತಿಂದರೆ ಅದರ ಪರಿಮಳವೇ ಬೇರೆ. ಆದರೆ ಶಹರ-ಪಟ್ಟಣಗಳಲ್ಲಿ ಅರಿಶಿನದ ಎಲೆ ಎಲ್ಲಿ ಸಿಗುತ್ತದೆ ? ಹೀಗಾಗಿ ಅದಕ್ಕೆ ಪರ್ಯಾಯ ಬಾಳೆಲೆ ಹೇಳಿದ್ದೇನೆ.

ಇರಲಿ ನಾವು ಮರಳಿ ಮಕ್ಕಳಾಗೋಣ! ನಮ್ಮೂರ ದೇವಸ್ಥಾನಗಳಲ್ಲಿ ಕಾರ್ತೀಕಮಾಸ ಮುಗಿಯುವ ಹೊತ್ತಿಗೆ ತಿಂಗಳದಿನ ದಿನವೂ ಸಾಯಂಕಾಲ ನಡೆಸಿಬಂದ ಭಜನಾ ಸೇವೆಗೆ ಮಂಗಳ ಹಾಡುವ ಭಜನೆಸಪ್ತಾಹ ನಡೆಯುತ್ತದೆ. ಸಪ್ತಾಹದಲ್ಲಿ ಹಲವು ವಿಧ. ಇದರಲ್ಲೇ ಯಾಮಾಷ್ಟಕ ಎಂದರೆ ಒಂದೊಂದು ಯಾಮಕ್ಕೆ ಒಂದೊಂದು ಗುಂಪು ಕುಳಿತು ಅಖಂಡ ಭಜನಾ ಸೇವೆ ನಡೆಯುತ್ತದೆ. ಇದು ಏಳುದಿನಗಳ ಪರ್ಯಂತ ನಡೆಯುವುದರಿಂದ ಸಪ್ತಾಹವೆಂದು ಹೆಸರು. ಆದರೆ ಈಗ ಕಾಲ ಬದಲಾಗಿದೆ. ಕೇವಲ ೨೪ ಘಂಟೆಗೆ ಅಖಂಡ ಭಜನೆ ಮುಗಿದುಹೋಗುತ್ತದೆ! ನಮ್ಮದು ಹಳ್ಳಿಯಾಗಿರುವುದರಿಂದ ಅಲ್ಲಿ ಆಗಿನಕಾಲದಲ್ಲಿ ದ್ವನಿವರ್ಧಕದ ವ್ಯವಸ್ಥೆ ಇರಲಿಲ್ಲ. ಇಂತಹ ವಿಶೇಷ ಕಾರ್ಯಕ್ರಮಗಳಿರುವಾಗ ಮಾತ್ರ ದೂರದ ಪಟ್ಟಣದಿಂದ ಬಾಡಿಗೆಗೆ ಮೈಕು ತರಿಸುತ್ತಿದ್ದರು. ಮೈಕಿನವ ಬಂದು ಶ್ರೀಮತಿ ಎಸ್. ಜಾನಕಿಯವರು ಹಾಡಿರುವಶುಕ್ಲಾಂಬರಧರಂ ವಿಷ್ಣುಂ ....’ ಎನ್ನುವ ದೋಸೆಥರದ ತಿರುಗುವ ಅದೇನೋ ಹಾಕುತ್ತಿದ್ದ! ತಿರುಗುತ್ತಿರುವ ಅದರ ಮೇಲೆ ಒಂದು ದಪ್ಪ ಕಡ್ಡಿಯ ಥರದ್ದನ್ನು ಎಳೆದು ಬಿಟ್ಟರೆ ಅಲ್ಲಿ ತರತರದ ಹಾಡುಗಳು ಬರುತ್ತಿದ್ದವು ! ಕೆಲವೊಮ್ಮೆ ಹಾಡು ಮುಂದೆಹಾಡಲು ಮರೆತುಹೋದ ಹಾಗೇ ೧೦-೧೨ ಬಾರಿ ಹಾಡಿದ್ದನ್ನೇ ಹಾಡುತ್ತಿತ್ತು. ಆಗ ಮೈಕಣ್ಣ ಅದೇನೋ ಬೆಕ್ಕಿನಮರಿ ಎತ್ತಿ ಬಿಟ್ಟಹಾಗೇ ದಪ್ಪದ ಕೋಲನ್ನು ಸ್ವಲ್ಪ ಎತ್ತಿ ಪಕ್ಕಕ್ಕೆ ಬಿಡುತ್ತಿದ್ದ. ಅಲ್ಲಿಂದ ಮತ್ತೆ ಮುಂದೆ ಹಾಡುತ್ತಿತ್ತು. ನಮಗೆಲ್ಲಾ ಮೈಕಣ್ಣನನ್ನೂ ಅವನ ಪೆಟ್ಟಿಗೆಯನ್ನೂ ಹೊರಗೆ ಮರಕ್ಕೋ ಎತ್ತರದ ಕಂಬಕ್ಕೋ ಕಟ್ಟುವ ಕಹಳೆಯಾಕಾರದ್ದನ್ನೂ ನೋಡುವುದೇ ಒಂದು ಹಬ್ಬ! ಅದು ಗ್ರಾಮೊಫೋನ್ ಎನ್ನುವುದು ನಮಗಂದಿಗೆ ತಿಳಿದಿರಲಿಲ್ಲ. ಆತನ ಹತ್ತಿರ ಹಲವಾರುದೋಸೆಗಳಿರುತ್ತಿದ್ದವು. ದೇವಸ್ಥಾನಗಳಿಗೆ ಬಂದರೆ ಭಕ್ತಿ ಗೀತೆ ಹಾಡುವ ದೋಸೆಮಾತ್ರ ಹಾಕುತ್ತಿದ್ದ. ಊರಲ್ಲಿ ನಾಟಕಕ್ಕೆ ಬಂದರೆ ಅದಕ್ಕೇ ಬೇರೆ ಸಿನಿಮಾ ಹಾಡುಗಳು. ’ನಾ ಬಿಡಲಾರೆ ಎಂದೂ ನಿನ್ನಾ...ನೀನಾದೆ ನನ್ನಾ ಪ್ರಾಣಾ.....’ ತರದ್ದು. ’ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರನಾರಿಯಾ.....’ ಹಾಡು ಎಲ್ಲರ ಅಚ್ಚುಮೆಚ್ಚಿನದು. ಅದರ ಅರ್ಥ ಅಷ್ಟೆಲ್ಲಾ ತಿಳಿದಿರಲಿಲ್ಲ, ಆದರೆ ದೊಡ್ಡವರೆಲ್ಲಾ ಇಷ್ಟಪಡುತ್ತಾರಲ್ಲ ಅಂತ ನಾವೂ ಇಷ್ಟಪಡುತ್ತಿದ್ದೆವು!


ಮೈಕಣ್ಣನ ಮೈಕಿನಲ್ಲಿ ಕುಳಿತು ಹಾಡಿದರೆ ಊರಿಗೆಲ್ಲಾ ಕೇಳುತ್ತದೆ ಎಂಬುದು ನಮಗೆ ತಿಳಿದುಬಿಟ್ಟಿತ್ತು. ಹಾಗಾಗಿ ಒಂದು ಅವಕಾಶ ಎಲ್ಲಾದರೂ ಸಿಗುವುದೆಂದರೆ ನಮಗೆ ನಿಧಿಸಿಕ್ಕಿದಷ್ಟು ಖುಷಿ! ಭಜನಾಮಂಡಳಿಯಲ್ಲಿ ಉಸ್ತುವಾರಿ ನೊಡುಕೊಳ್ಳುತ್ತಿದ್ದ ಬಾಳಣ್ಣ ಎಲ್ಲಾದರೂ ಮನಸ್ಸಿದ್ದರೆ ಅವಕಾಶ ಮಾಡಿಕೊಡುತ್ತಿದ್ದ. ಅವಕಾಶಕ್ಕಾಗಿ ಆತನ ಪಕ್ಕದಲ್ಲೇ ಕೂತು ಮರ್ಜಿಗಾಗಿ ಆಗಾಗ ಆತನ ಮುಖ ನೋಡುತ್ತಾ ಎಲ್ಲರ ಜೊತೆ ಭಜನೆ ಹೇಳುವುದು ನಮ್ಮ ಕೆಲಸ. ಅಲ್ಲಿಕೆಲವರು ದೇವರ ಮೇಲಿನ ಭಕ್ತಿಗಿಂತ ಮೈಕಣ್ಣನ ಮೈಕಿನಲ್ಲಿ ಹಾಡಲಾಗುತ್ತದೆಂದೇ ಬರುತ್ತಿದ್ದರು. ಎಂದೂ ಬಾರದ ಅವರ ಸವಾರಿ ಅಂದು ಮಾತ್ರ ತಪ್ಪದೇ ಹಾಜರಾಗುತ್ತಿತ್ತು. ಬಾಳಣ್ಣನಿಗೆ ಮನಸ್ಸಿಲ್ಲದಿದ್ದರೆ ಆತ ಹಾಲು ಹಿಂಡಲು ಹೋದಾಗ ಒದೆಯುವ ಆಕಳಿನಂತೇ ತನ್ನ ಕಣ್ಣುಬೇಳೆ ತಿರುಗಿಸಿಒದ್ದ ಹಾಗೇಮಾಡಿಬಿಟ್ಟರೆ ಮತ್ತೆ ಗಂಟೆಗಟ್ಟಲೆ ಆತನ ಮುಖ ನೋಡಲೇ ಹೆದರಿಕೆಯಾಗುತ್ತಿತ್ತು. ಹೆದರಿಕೆಯಲ್ಲೂ ಇನ್ನೇನೂ ಆಗದಲ್ಲ ಎಂಬ ಸಮಾಧಾನದ ನಡುವೆ ಎಲ್ಲಾದರೂ ಅವಕಾಶ ಕೊಟ್ಟಾನು ಎಂಬ ಸಣ್ಣ ಆಸೆಯೊಂದು ಅಲ್ಲೇ ತಡೆದು ಕೂರುವಂತೇ ಮಾಡುತ್ತಿತ್ತು. ದೊಡ್ಡವರು ಹಾಡಿ ದಣಿದ ಮೇಲೆ ಜನರ ಕೊರತೆ ಬಿದ್ದರೆ ಆಗಮಾತ್ರ ಮಕ್ಕಳ ಸರದಿ ಬರುತ್ತಿತ್ತು! ಅದು ತುಂಬಾ ಅಪರೂಪ ಅನ್ನಿ. ಮೈಕಿನಲ್ಲಿ ದನಿ ತೂರಿಸಲಷ್ಟೇ ಬಂದ ಅಪರೂಪದ ಜನರಿಗೆ ಭಜನೆಗಳು ಮರೆತುಹೋಗಿರುತ್ತಿದ್ದವು. ಅವರು ಹಾಡಿ ತಾನೂ ಹಾಡಿದ್ದೇನೆ ಎಂದು ಊರಿಗೆಲ್ಲ ಕೇಳಿಸುವ ಚಟದ ನಡುವೆ ಹಾಡುತ್ತಿರುವ ಭಜನೆ ತಾಳತಪ್ಪಿದ್ದಾಗ ಹೂತ ರಥವನು ಕರ್ಣ ಎತ್ತುತ್ತಿರುವಂತೇ ಅವರಿವರು ನೆನಪಿಸಿಕೊಟ್ಟಾರೂ ಎಂದು ಕಾಯುತ್ತ ಹಾಡಿದ್ದನ್ನೇ ಹಾಡುತ್ತ ಆತಂಕದಲ್ಲಿದ್ದರೆ ಉಳಿದಕೆಲವರು ಅವರನ್ನು ನೋಡಿ ಮುಸಿಮುಸಿ ನಗುತ್ತಿದ್ದರು.

ಭಜನೆ ಕಾರ್ಯಕ್ರಮಗಳಿರುವಾಗ ಗಂಟೆಗೊಂದಾವರ್ತಿ ದೇವರಿಗೆ ಆರತಿ ನಡೆಯುತ್ತಿತ್ತು. ಊರವರು ಅವರಿವರು ಅಂತಹೇಳಿ ಹಣ್ಣು-ಕಾಯಿ, ನೈವೇದ್ಯಕ್ಕೆ ಪಂಚಕಜ್ಜಾಯ, ಎಳ್ಳುಂಡೆ, ಹುಳಿಅವಲಕ್ಕಿ, ಕೋಸಂಬರಿ, ಕಡ್ಲೆ ಉಸುಳಿ ಮುಂತಾದ ಹತ್ತಾರು ಬಗೆಯ ಪನವಾರಗಳನ್ನು ತರುತ್ತಿದ್ದರು. ಊರಿಗೆ ಬಂದ ನಾರಿ ನೀರಿಗೆ ಬರದೇ ಹೋಗುತ್ತಾಳೆಯೇ ಎಂಬ ಹಳೆಯ ಗಾದೆಯಂತೇ ದೇವರಿಗೆ ಬಂದ ಪನವಾರ ಭಜನೆಗೆ ಕೂತಭಕ್ತಾದಿಗಳಿಗೂ ಪ್ರಸಾದ ರೂಪವಾಗಿ ಸ್ವಲ್ಪ ಸ್ವಲ್ಪ ಸಿಗುತ್ತಿತ್ತು! ರಾತ್ರಿ ಘಂಟೆಗೆ ದೀಪೋತ್ಸವವಿರುತ್ತಿತ್ತು.ಆಗೊಮ್ಮೆ ಮಹಾಮಂಗಲಾರತಿಗೆ ಊರಬಹುತೇಕರು ಕೊನೇಪಕ್ಷ ಮನೆಗೊಬ್ಬರಂತೇ ಬರುತ್ತಿದ್ದರು. ಅದಾದ ಮೇಲೆ ಮತ್ತೆ ರಾತ್ರಿ ಹನ್ನೆರಡು ಗಂಟೆಗೆ ಮಂಗಲಾರತಿ ಮಾಡುತ್ತಿದ್ದರು. ಮನೆಯವರು ದೀಪೋತ್ಸವ ಮುಗಿದ ಮೇಲೆ ನಮ್ಮನ್ನೆಲ್ಲಾ ಮನೆಗೆ ಹೊರಡುವಂತೇ ಒತ್ತಾಯಿಸಿ ಕರೆದುಕೊಂಡು ಹೋಗುತ್ತಿದ್ದರು. ನಾವೆಲ್ಲಾ ಸಣ್ಣವರಲ್ಲವೇ-ನಿದ್ದೆ ಇಲ್ಲದೇ ಇರಲಾಗುತ್ತಿರಲಿಲ್ಲ. ಆಮೇಲೆ ಬೆಳಗಿನವರೆಗೆ ಏನೇನು ವಿಶೇಷವಿರುತ್ತದೆ ಎಂದು ನಾವು ಯಾರನ್ನಾದರೂ ಕೇಳುತ್ತಿದ್ದೆವು. ರಾತ್ರಿ ಹನ್ನೆರಡು ಗಂಟೆಯ ಆರತಿ ಮುಗಿದ ಸ್ವಲ್ಪ ಹೊತ್ತಿನ ಮೇಲೆ ಭಜನೆಯವರಿಗೆಚಾ ಪಾರ್ಟಿಇರುತ್ತದೆ ಮತ್ತೆ ಇನ್ನೊಮ್ಮೆ ಬೆಳಗಿನ ಜಾವ -೫ಗಂಟೆಗೆ ಇರುತ್ತದೆ ಎಂದು ಯಾರೋ ಹೇಳಿದ್ದರು.

ಮಕ್ಕಳಿಗೆ ಕುತೂಹಲ ಶುರುವಾದರೆ ಅದು ತಣಿಯುವವರೆಗೂ ಅವಿರತವಾಗಿ ಅವರು ಅದನ್ನು ತಿಳಿಯಲು ಪ್ರಯತ್ನಿಸುತ್ತಾರಲ್ಲವೇ ಹಾಗೇ ಒಮ್ಮೆ ನಾನೂ ಮತ್ತು ಇನ್ನೊಬ್ಬ ಪಕ್ಕದ ಮನೆಯ ಹುಡುಗನೂ ರಾತ್ರಿಯೆಲ್ಲಾ ಭಜನೆ ಮಾಡುವುದಾಗಿ ಕುಳಿತುಕೊಂಡೆವು. ದೀಪೋತ್ಸವ ಆದ ಮೇಲೆ ಮನೆಗೆ ತೆರಳಿ ಊಟಮುಗಿಸಿ ಮರಳಿಬಂದೆವು. ತಲೆಗೆ ಸುತ್ತಿಕೊಳ್ಳಲು ಕೇವಲ ಒಂದು ಉಣ್ಣೆಯಮಫ್ಲರ್ಎನ್ನುವ ಸಣ್ಣ ಬಟ್ಟೆಯನ್ನು ಬಿಟ್ಟರೆ ಬೇರೆ ಶಾಲು ಅಥವಾ ಬೇಡ್ ಶೀಟ್ ಎಲ್ಲಾ ತಂದಿರಲಿಲ್ಲ. ರಾತ್ರಿ ಹನ್ನೊಂದು ಆಗಿರಬಹುದು. ಆಗ್ಲೇ ಚಳಿಯಾಗಲಿಕ್ಕೆ ಶುರುವಾಯಿತು. ಕುಳಿತಲ್ಲೇ ಭಜನೆ ಹೇಳುತ್ತ ಕಣ್ಣಿಗೆ ಆಗಾಗ ಜೋಂಪು ಹತ್ತಿ ತೂಗುತ್ತಿದ್ದೆವು, ಪಕ್ಕದಲ್ಲಿ ಕುಳಿತವರಿಗೆ ತಾಗಿದ ತಕ್ಷಣ ಎಲ್ಲೂ ಏನೂ ತೊಂದರೆಯಾಗಿಲ್ಲಾ ಎಂಬುದನ್ನು ಗಟ್ಟಿಮಾಡಿಕೊಂಡವರೇ ಭಜನೆಯ ಒಂದೆರಡು ಸೊಲ್ಲುಗಳನ್ನು ಜೋರಾಗಿ ಹಾಡಿ ಮತ್ತೆ ಮತ್ತದೇ ಸ್ಥಿತಿ! ಅಂತೂ ರಾತ್ರಿ ೧೨ ಮಂಗಲಾರತಿಯಾಯ್ತು. ನಮ್ಮ ಕಣ್ಣೆಲ್ಲಾ ಚಾ ಪಾರ್ಟಿಗಾಗಿ ಕಾದಿತ್ತು. ಮನೆಗಳಲ್ಲಾದರೆ ಅದು ಬೇರೆ ವಿಷಯ. ಹಳ್ಳಿಯ ದೇವಸ್ಥಾನಗಳಲ್ಲಿ ಯಾವುದೇ ಅಡಿಗೆಯ ವ್ಯವಸ್ಥೆ ಇರದ ಕಾಲದಲ್ಲಿ ಅದು ಹೇಗೆ ಇದನ್ನೆಲ್ಲ ನಿಭಾಯಿಸುತ್ತಾರೆ ಎಂಬುದರ ಜೊತೆಗೆ ಅದನ್ನು ಅನುಭವಿಸುವುದೇ ರುಚಿಯಾಗಿ ಪರಿಣಮಿಸಿತ್ತು. ಊರವರು ಭಜನೆಮಂಗಲದ ದಿನವೆರಡಕ್ಕೆ ಎಲ್ಲರೂ ತನು-ಮನ-ಧನಗಳ ಜೊತೆಗೆ ದಿನಸಿ, ಹಾಲು,ಬಾಳೆಹಣ್ಣು,ಬಾಳೆಲೆ ಹಲವಾರು ಸಾಮಗ್ರಿಗಳನ್ನು ಕೊಡುತ್ತಿದ್ದರು. ದೇವಸ್ಥಾನದ ಸ್ಥಾಯೀ ಸಮಿತಿ[ವಿಶ್ವಸ್ಥ ಸಮಿತಿ] ಇದರ ಲೆಕ್ಕಾಚಾರಗಳು ಹಾಗೂ ವ್ಯವಸ್ಥೆಗೆ ಬೇಕಾಗುವ ಪಾತ್ರೆ-ಪಗಡೆ ಎಲ್ಲವನ್ನೂ ಒಟ್ಟುಗೂಡಿಸುತ್ತಿತ್ತು.

ಅಂತೂ ಬಹು ನಿರೀಕ್ಷಿತ ಚಾ ಪಾರ್ಟಿ ಬಂದೇ ಬಿಟ್ಟಿತು. ದೇವಸ್ಥಾನದ ಚಂದ್ರಶಾಲೆಯಲ್ಲಿ [ಪಕ್ಕದ ಹೊರಾವರಣದಲ್ಲಿರುವ ಚಂದ್ರಾಕಾರದ ಕಟ್ಟಡ.] ಕಟ್ಟಿಗೆಯ ಒಲೆ ಉರಿಯತೊಡಗಿತ್ತು. ನಾಣಣ್ಣ[ನಾರಯಣ] ಮತ್ತು ಸೀತಣ್ಣ[ಸೀತಾರಾಮ]ಇಬ್ಬರು ಚಾ ಮಾಡುತ್ತಿದ್ದರು. " ಚಾ ರೆಡಿ"ಅಂತ ಕರೆಬಂದ ತಕ್ಷಣ ಭಜನೆ ಮಾಡುವವರಲ್ಲಿ ಕೆಲವರು ಚಾ ಪಾರ್ಟಿಗೆ ಕುಳಿತುಕೊಳ್ಳಲು ತಯಾರಾದರು. ಭಜನೆ ಮಾಡುವುದಕ್ಕೆ ಪರವೂರಕಲಾವಿದರೂಬರುತ್ತಿದ್ದರು. ಅವರಿಗೆ ತಮ್ಮ ಕಂಠಸಿರಿಯನ್ನು ನಮ್ಮೂರ ಜನರಿಗೆ ತೋರಿಸಿಕೊಳ್ಳುವ ಹೆಚ್ಚುಗಾರಿಕೆಯಿರುತ್ತಿತ್ತು. ಅದರಲ್ಲೂ ಮದುವೆಗೆ ಬೆಳೆದ ವಯಸ್ಸಿನ ಹುಡುಗರ ಸಂಖ್ಯೆ ಜಾಸ್ತಿ. ತಾನು ಚೆನ್ನಾಗಿ ಹಾಡುವುದನ್ನು ನೋಡಿ ಯಾರಾದರೂ ಹುಡುಗಿಯರೋ ಅವರ ಅಪ್ಪಂದಿರೋ ತಮ್ಮನ್ನು ಮಾತನಾಡಿಸಿ ಸಂಬಂಧ ಕುದುರಬಹುದೇನೋ ಎಂಬ ಅನಿಸಿಕೆ ಅವರದಾಗಿತ್ತು! ಅಪರೂಪಕ್ಕೊಮ್ಮೆ ಹಾಗೇ ನೋಡಿ ಕಣ್ಣಿಟ್ಟು ಹುಡುಗರಿಗೆ ತಮ್ಮ ಮಕ್ಕಳ ಜಾತಕಗಳನ್ನು ತಲ್ಪಿಸುವ ಕನ್ಯಾಪಿತೃಗಳೂ ಇದ್ದರು ಎಂಬುದು ನಮಗೆ ಆವಾಗ ತಿಳಿಯುತ್ತಿರಲಿಲ್ಲ. ಅಂತಹ ಕಲಾವಿದರಿಗೆ ಚಾ ಪಾರ್ಟಿಯಲ್ಲಿ ಮೊದಲ ಆದ್ಯತೆ. ನಮ್ಮ ಸರದಿ ಬಂದಾಗಲೇ ತಿಳಿದಿದ್ದು ಹಾಲು ಕಮ್ಮಿಹಾಕಿರುವ ಕೆಂಪನೆಯ ಖಡಕ್ ಚಾ ಜೊತೆಗೆ ಒಂದೊಂದು ಕೊಬ್ಬರಿ ಮಿಠಾಯಿ, ಕಲಸಿದ ತೆಳುಅವಲಕ್ಕಿ[ ಕೆಂಪಕ್ಕಿಯ ರುಚಿಯಾದ ಊರ ಮಿಲ್ಲಿನಲ್ಲೇ ಮಾಡಿಸಿದ ಪೇಪರ್ ಅವಲಕ್ಕಿಗೆ ಕಾಯಿತುರಿ,ಬೆಲ್ಲ, ಮೆಣಸು, ಸಾಂಬಾರ್ ಪುಡಿ ಹಾಕಿ ಕಲಸುತ್ತಿದ್ದರು]. ರಾತ್ರಿ ಅದೂ ದೇವಸ್ಥಾನಗಳಲ್ಲಿ ಇನ್ನೇನು ಮಾಡಲು ಸಾಧ್ಯ ಬಿಡಿ. ಇಲ್ಲಿ ಚಾ ಪಾರ್ಟಿಯಲ್ಲಿ ಸಿಗುವ ಪದಾರ್ಥಗಳಿಗಿಂತ ಚಾ ಪಾರ್ಟಿಯಲ್ಲಿ ಕುಳಿತು ದೇವಸ್ಥಾನದಲ್ಲಿ ಪಡೆದ ಆತಿಥ್ಯವೇ ಒಂಥರಾ ಥ್ರಿಲ್ಲಿಂಗ್ ಆಗಿರುತ್ತಿತ್ತು. ನಮ್ಮೂರಿಗೆ ಕಲಾವಿದರು ಬಂದಂತೇ ನಮ್ಮೂರ ಹುಡುಗಕಲಾವಿದರುಪಕ್ಕದ ಊರುಗಳಿಗೆ ಅಲ್ಲಿನ ಭಜನೆ ಮಂಗಲ ಕಾರ್ಯಕ್ಕೆ ಹೋಗುವುದಿತ್ತು. ಇದು ಒಂದು ರೀತಿ ಸೌಹಾರ್ದಕ್ಕೆ, ಸಂಬಂಧಕ್ಕೆ ಅನುಕೂಲವೂ ಆಗಿತ್ತು. ’ಭಾವೀ ಮಾವಂದಿರಮುಂದೆ ಹಾಡುವ ಕಲೆಗಾರಿಕೆ ಹುಡುಗರನ್ನು ಅಲ್ಲಲ್ಲೇ ಪುಳಕಗೊಳಿಸುತ್ತಿತ್ತು. ಇನ್ನು ಅಪ್ಪಿ ತಪ್ಪಿ ಮದುವೆಗೆ ಬೆಳೆದು ನಿಂತ ಹುಡುಗಿಯರೂ ಆಗಾಗ ಕಂಡರೆ[ಯಾಕೆಂದರೆ ಕಲಾವಿದರು ಹಗಲು ಹೊತ್ತಿನಲ್ಲೂ ಇರುತ್ತಿದ್ದರು] ಭಜನೆಯ ಗತಿಯೇ ಬದಲಾಗುತ್ತಿತ್ತೇನೋ ನಮಗದು ಅರಿವಿಲ್ಲ!

ಬರುಬರುತ್ತ ಮೈಕಾಸುರನ ಬಾಡಿಗೆ ಕಮ್ಮಿಯಾಯ್ತು. ಬಾಡಿಗೆ ಮೈಕಣ್ಣಗಳ ಸಂಖ್ಯೆ ಜಾಸ್ತಿಯಾಯ್ತು. ಹೀಗಾಗಿ ಊರಲ್ಲಿ ಮದುವೆ-ಮುಂಜಿ ಥರದ ಏನೇ ಕಾರ್ಯಕ್ರಮಗಳಿದ್ದರೂ ಮೊದಲಾಗಿ ಹಾಕುವುದು ಮೈಕು. ಮೈಕಿನ ಅವಾಂತರ ತಾಳಲಾರದೇಮೈಕಾಸುರನೆಂಬ ಬಿರುದನ್ನು ಮೈಕಿಗೆ ನೀಡಲಾಗಿತ್ತು. ಅಲ್ಲೂ ಅಷ್ಟೇ ಹೆಂಗಸರು-ಮಕ್ಕಳು ನಾ ಮುಂದು ತಾಮುಂದು ಎಂದು ಹಾಡಲು ತರಾತುರಿಯಲ್ಲಿ ನಿಂತಿರುತ್ತಿದ್ದರು. ನಮ್ಮಂತಹ ಗಂಡುಮಕ್ಕಳೂ ಹಿಂದೇನೂ ಇರಲಿಲ್ಲ. ಆದರೆ ಮೈಕ್ ಹಿಡಿದ ಹೆಂಗಸರ ದಂಡಿನ ನಡುವೆ ನಮಗೆ ಬಹಳ ಮುಜುಗರವಾಗುತ್ತಿತ್ತು-ಹೀಗಾಗಿ ಒತ್ತರಿಸಿ ಬರುವ ಒತ್ತಾಸೆಯನ್ನು ಅಲ್ಲೇ ಒತ್ತಿಟ್ಟು ತಾನಾಗೇ ಸಿಕ್ಕರೆ ಮಾತ್ರ ಹಾಡುತ್ತಿದ್ದೆವು. ಯಾರಾದರೂ ಊರವರು " ನಿನ್ನ ಹಾಡು ಕೇಳಿದೆ ಮಾರಾಯ, ಚಲೋ ಇತ್ತು " ಎಂದುಬಿಟ್ಟರೆ ಪಿ.ಬಿ.ಶ್ರೀನಿವಾಸರಿಗೆ ಪ್ರಶಸ್ತಿ ಕೊಟ್ಟರೂ ಸಿಗದಂತಹ ಗೌರವ ನಮ್ಮೊಳಗೇ ನಮಗೆ ದಕ್ಕುತ್ತಿತ್ತು. ಅದರಲ್ಲಂತೂ ಆಚೀಚೆಯ ಮನೆಯವರು ನಮ್ಮನೆಗೆ ಬಂದು " ಇಂವ ಚಲೋ ಹಾಡ್ತ ಮಾರಾಯ " ಅಂತ ಹೇಳಿ ಒಂದು ಚಾ ಕುಡಿದು ಹೋಗಿಬಿಟ್ಟರೆ ಇನ್ನೆಲ್ಲಾದರೂ ಅವರನ್ನು ಮತ್ತೆ ನೋಡಿದಾಗ ನಾಚಿಕೆಯೋ ಅವರಮೇಲೆ ಗೌರವವೋ ಏನೋ ಸಾಧಿಸಿದೆನೆಂಬ ಹೆಗ್ಗಳಿಕೆಯ ಭಾವವೋ ಅಂತೂ ಮನಸ್ಸಿನ ಮೂಲೆಯಲ್ಲಿ ಹೇಳಲಾಗದ ವಿಶೇಷ ಭವನಾಲಹರಿಯೇ ಚಿಮ್ಮಿ ಹರಿಯುತ್ತಿತ್ತು!

ಮದುವೆಗಳಲ್ಲೂ ನಮ್ಮಲ್ಲಿ ಚಾ ಪಾರ್ಟಿಗಳಿರುತ್ತಿದ್ದವು. ಬೆಳಗಿನ ೧೧ ಗಂಟೆಯ ಒಳಗೆ ಬಂದವರಿಗೆ ತಿಂಡಿ-ಚಾ ಕೊಡುವ ಪದ್ಧತಿ ಇತ್ತು. ಅದರದ್ದೇ ಒಂದು ವಿಶೇಷ ಕಥೆಯನ್ನು ಮತ್ತೊಮ್ಮೆ ನೋಡೋಣ, ಸುಮ್ಮನೇ ಓದಿದ ಹಾಗಲ್ಲ, ಮನದಲ್ಲೇ ನಕ್ಕಿ ಮಜಾತೆಗೆದುಕೊಳ್ಳುವುದಲ್ಲ, ಎಲ್ಲಾದರೂ ಚಾ ಪಾರ್ಟಿ ಇದ್ದರೆ ಹೇಳಿ, ಒಮ್ಮೆ ಸೇರಿಕುಳಿತು ಹರಟುತ್ತ ಚಾ ಕುಡಿಯೋಣ ಆಗದೇ ?