ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, August 14, 2010

ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ !


ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ !

ನಮ್ಮಲ್ಲಿ ಇವತ್ತಿನ ಮಕ್ಕಳಿಗೆ ಇಂಡಿಯಾ ಅಂದರೆ ಗೊತ್ತಾಗಬಹುದೇ ವಿನಃ ಭಾರತ ಎಂದರೆ ತಿಳಿಯುವುದು ಕಷ್ಟ. ಯಾಕೆ ಭಾರತ ಎನ್ನುವ ಹೆಸರು ಬಂತು ಎಂದು ನಾವು ಚಿಂತಿಸುವುದೇ ಇಲ್ಲ. ನಮ ಪೂರ್ವಜರಲ್ಲಿ ದುಷ್ಯಂತ-ಶಕುಂತಲೆ ಕೂಡ ಇದ್ದರಲ್ಲ ? ಆ ದುಷ್ಯಂತ-ಶಕುಂತಲೆಗೆ ಭರತನೆಂಬೊಬ್ಬ ಮಗನಿದ್ದ ಎಂದು ಕೆಲವು ನನ್ನ ಓರಗೆಯ ಜನ ಅಥವಾ ಇದಕ್ಕೂ ದೊಡ್ಡ ವಯಸ್ಸಿಗರು ತಿಳಿದಿರುತ್ತಾರೆ. ಆದರೆ ಆ ಭರತನಿಗೂ ಈ ಭಾರತಕ್ಕೂ ಏನು ಸಂಬಂಧ ? ಇಮಮ್ ಸಾಬಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧವೇ ? ಖಂಡಿತ ಅಲ್ಲ! ಹಾಗಾದರೆ ಅದೇ ಭರತ ಜಡಭರತನಾಗದೇ ಬಹಳ ಕರ್ತೃತ್ವ ಶಕ್ತಿಯನ್ನು ಹೊಂದಿದ್ದ. ವಿಕ್ರಮಿಯೂ ಅತಿ ಪರಾಕ್ರಮಿಯೂ ಆಗಿದ್ದ. ಸಣ್ಣವನಿರುವಾಗಲೇ ಸಿಂಹಗಳ ಬಾಯಿಗೆ ಕೈಹಾಕುತ್ತಾ ಅವುಗಳ ಜೊತೆಗೆ ಆಟವಾಡಿದ್ದನೆಂದು ನಾವು ಕೇಳಿದ್ದೇವೆ ಅಲ್ಲವೇ ? ಆ ಭರತ ಬೆಳೆದು ಚಕ್ರವರ್ತಿಯಾದ. ಭರತೇಶನಾದ. ಅಂತಹ ಭರತ ತಮ್ಮ ಮೇಲೆ ಒಂದುಕಾಲಕ್ಕೆ ಇನ್ನೊಬ್ಬ ಚಕ್ರವರ್ತಿಯಾದ ರುಕ್ಮಾಂಗದನ ಮಗ ದಾಳಿಗೆ ಬಂದಾಗ ಆತನ ಚಹರೆಗಳನ್ನು ನೋಡಿ ಅವನಿಗೆ ಮನಸೋತ; ಇದ್ದರೆ ಇರಬೇಕು ಇಂತಹ ಪರಾಕ್ರಮಶಾಲಿ ಅಳಿಯ ಎಂದು ನಿರ್ಧರಿಸಿ ನೇರವಾಗಿ ಯುದ್ಧಕ್ಕೆ ಬಂದಿದ್ದ ಧರ್ಮಾಂಗದನಲ್ಲಿ ಪ್ರಸ್ತಾವಿಸಿದ. ಮಹಾವಿಷ್ಣುವಿನ ಪರಮ ಭಕ್ತನಾದ ಧರ್ಮಾಂಗದ ತನ್ನ ಒಪ್ಪಿಗೆಯಿತ್ತ ಪರಿಣಾಮ ಭರತ ಚಕ್ರವರ್ತಿ ರುಕ್ಮಾಂಗದ ಚಕ್ರವರ್ತಿಯ ಮಗನಿಗೆ ತನ್ನ ಹೆಣ್ಣು ಮಕ್ಕಳನ್ನು ಧಾರೆ ಎರೆದ. ಇದರಿಂದ ಅಖಂಡ ಹಿಂದೂಸ್ಥಾನದ ಬಹುಭಾಗ ಭರತ ಹಾಗೂ ಮತ್ತವನ ಅಳಿಯನ ಸಾಮ್ರಾಜ್ಯಕ್ಕೆ ಒಳಪಟ್ಟಿತು. ಆ ಕಾಲದಲ್ಲಿ ಪ್ರಜೆಗಳನ್ನು ಅತ್ಯಂತ ಗೌರವಯುತವಾಗಿ ಅತ್ಯಂತ ಕಾಳಜಿಯಿಂದ ನೋಡಿಕೊಂಡ ಭರತನ ನೆನಪಿಗಾಗಿ ಪ್ರಜೆಗಳೇ ಇಟ್ಟು ಪ್ರೀತಿಯಿಂದ ಕರೆದ ಹೆಸರು ಈ ’ ಭರತಖಂಡ’ ! ಒಂದುಕಾಲಕ್ಕೆ ಭರತನಾಳಿದ್ದ ಈ ಭೂ ಖಂಡ ಭೌಗೋಳಿಕವಾಗಿ ದೊಡ್ಡ ಖಂಡವಲ್ಲದೇ ಇದ್ದರೂ ಒಮ್ಮೆ ಅದನ್ನು ಜನ ಖಂಡವೆಂದೇ ಕರೆದರು. ಈ ಭರತಖಂಡವೆನ್ನುವ ಹೆಸರು ಕಾಲಕ್ರಮದಲ್ಲಿ ’ಭಾರತ’ ವಾಯಿತು. ಇವತ್ತಿಗೂ ಅಖಂಡ ಭಾರತವನ್ನು ಹಿಂದೂಗಳು ಪೂಜೆಯಲ್ಲಿ ಕೈಗೊಳ್ಳುವ ಸಂಕಲ್ಪದಲ್ಲಿ " ಭರತ ಖಂಡೇ ಭಾರತ ದೇಶೇ " ಅಂತ ಸಂಬೋಧಿಸುತ್ತಾರೆ. ಒಟ್ಟಾರೆ ಇದು ಜನಪ್ರಿಯ ಚಕ್ರವರ್ತಿಯ ನೆನಪಿಗೆ ಜನರೇ ಇಟ್ಟು ಕರೆದ ಹೆಸರು.


ಇವತ್ತು ನಮ್ಮ ರಾಜಕೀಯ ನಾಯಕರುಗಳಿದ್ದಾರಲ್ಲ, ಅವರು ಪ್ರಜೆಗಳ ಬಗ್ಗೆ ಮಾಡಿದ ಕೆಲಸ ಹಾಗಿರಲಿ, ಒಮ್ಮೆ ಗೆದ್ದು ಖುರ್ಚಿ ಸಿಕ್ಕಿಬಿಟ್ಟರೆ ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಶುರುಮಾಡುತ್ತಾರೆ. ನ್ಯಾಯವೋ ಅನ್ಯಾಯವೋ ಅವರಿಗೆ ದುಡ್ಡುಬೇಕು. ಈ ಸ್ಥಾನ ಭದ್ರತೆಗಾಗಿ ಇವರು ಮಾಡುವ ಹಲವು ಕೆಲಸಗಳಲ್ಲಿ ಒಂದು ತಮ್ಮ ಹೆಸರನ್ನು ಕಂಡ ಕಂಡಲ್ಲಿ ಅದಕ್ಕೆ ಇದಕ್ಕೆ ಅಂತ ಇಡುತ್ತ ಹೋಗುವುದು. ಉದಾಹರಣೆಗೆ : ದೇಶಪಾಂಡೆ ನಗರ. ನಮಗೆ ಈ ದೇಶಪಾಂಡೆ ಮಾಡಿದ ಘನಂದಾರಿ ಸಹಾಯವೇನು? ದೇಶಪಾಂಡೆ ಇದುವರೆಗಿನ ಸಕ್ರಿಯ ರಾಜಕೀಯದಲ್ಲಿ ಬೆಳೆದು ಬಂದ ಮಾರ್ಗ ಹೇಗೆ ? ಹಾಗೂ ಅವರ ನಡೆ-ನುಡಿ ಸ್ವಭಾವಗಳು ಹೇಗೆ? ಅವರು ಚುನಾವಣೆಯಲ್ಲಿ ಗೆಲ್ಲಲು ಬಳಸುವ ಸೀರೆ-ಪಂಚೆ-ಬಂಗಾರದ ನತ್ತು ಇವುಗಳ ಹಿಂದಿರುವ ಅವರ ತಾಕತ್ತು ಎಂಥದು?---ಎಲ್ಲವನ್ನೂ ಅವಲೋಕಿಸಿದರೆ ಪೆದ್ದನೂ ಅಳೆಯಬಲ್ಲ ರಾಜಕೀಯ ಆದಾಯದ ಒಳಹರಿವು ಹೊರಹರಿಯುತ್ತದೆ! ಹರುಕು ಪೈಜಾಮಿನಲ್ಲಿ ಬರುವ ರಾಜಕಾರಣಿಗಳು ವರ್ಷದಲ್ಲೇ ಬದಲಾವಣೆ ಕಂಡು ಕಾರು ಬಂಗಲೆ ಖರೀದಿಸುವುದು, ಎಸ್ಟೇಟ್ ಮತ್ತು ಫಾರ್ಮ ಲ್ಯಾಂಡ್ ಎಂದು ಸಾವಿರಗಟ್ಟಲೆ ಎಕರೆ ಜಮೀನು ಮಾಡುವುದು ಇದೆಲ್ಲಾ ಹೇಗೆ ಸಾಧ್ಯ ? ಬಿಕನಾಸಿಗಳಾಗಿದ್ದ ಅವರುಗಳನ್ನೆಲ್ಲ ಸುಕನಾಸಿಯ ಮೇಲೆ ಹತ್ತಿಸಿ ಥೈ ಥೈ ಎಂದು ಕುಣಿಯುವಂತೆ ನೋಡಿಕೊಂಡಿದ್ದರಿಂದಲೇ ಅವರು ಇದನ್ನೆಲ್ಲಾ ಮಾಡಲು ದಾರಿಸಿಕ್ಕಿತು ಎನ್ನೋಣವೇ ? ಲೋಕಾಯುಕ್ತರು ಸರಕಾರೀ ಅಧಿಕಾರಿಗಳನ್ನು ಪರಿಶೀಲಿಸಿದಂತೆ ರಾಜಕಾರಣಿಗಳ ಆಸ್ತಿಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಿ. ಮುಂದೆ ನುಸಿ ಹಾರಿದರೆ ಹಿಡಿಯಿರಿ ಎನ್ನುವ ಸರಕಾರ ಹಿಂದೆ ಆನೆ ಓಡುತ್ತಿರುವುದನ್ನು ಹಿಡಿಯಲು ಯಾಕೆ ಅನುಮತಿಸುವುದಿಲ್ಲ? ಇದು ಜಾಣ ಜಾರಿಕೆಯೇ ? ಲೋಕಾಯುಕ್ತರು ಮೊದಲು ಹಿಡಿಯಬೇಕಾದದ್ದು ರಾಜಕೀಯ ಹಲವು ಮುಖಂಡರನ್ನು. ಈ ಕುತ್ಸಿತ ರಾಜಕೀಯದವರ ಮನೆಗಳಲ್ಲಿ ಧಕ್ಕಿರುವ ಆಸ್ತಿಯ ಹಿಂದೆ ಹಲವು ರೋಚಕ ಮತ್ತು ರೋದಕ ಕಥೆಗಳಿವೆ. ಅವರ ಒಂದೊಂದು ಆಸ್ತಿಯ ಗಳಿಕೆಯೂ ಒಂದೊಂದು ಅಕ್ರಮ ವ್ಯವಹಾರವನ್ನು ಬಯಲಿಗೆಳೆಯುತ್ತದೆ, ಅದಕ್ಕೆಂದೇ ನಮ್ಮ 'ರಾಜಕಾರಣಿಗಳ ಮಹಾಒಕ್ಕೂಟ' ಲೋಕಾಯುಕ್ತರಿಗೆ ಯಾವುದೇ ಕಾರಣಕ್ಕೂ ಪೂರ್ಣಪ್ರಮಾಣದ ಅಧಿಕಾರ ಕೊಡುವುದಿಲ್ಲ! ಹೀಗಾಗಿ ಯಾವುದೇ ರಾಜಕೀಯ ಧುರೀಣನನ್ನು ಲೋಕಾಯುಕ್ತರು ಪ್ರಶ್ನಿಸುವಂತಿಲ್ಲ! ಇಲ್ಲಿ ಒಂದು ಮಜಾ ನೋಡಿ- ಶಹರ, ಪಟ್ಟಣಗಳ ಬಹುತೇಕ ಹೆಸರುಗಳೆಲ್ಲ ರಾಜಕೀಯ ಪ್ರೇರಿತವೇ ಹೊರತು ಅವು ಜನಪ್ರಿಯವಲ್ಲ! ಜನ ಪ್ರೀತಿಯಿಂದ ಆ ಹೆಸರನ್ನು ಇಟ್ಟಿದ್ದಲ್ಲ, ಬದಲಾಗಿ ಕಳ್ಳ ರಾಜಕಾರಣಿಗಳು ತಾವು ಸತ್ತರೂ ತಮ್ಮ ನೆನಪಿಗೆ ಇರಲಿ ಎಂದು ಅಂತಹ ಬೋರ್ಡು ಬರೆಸುತ್ತಾರೆ. ಪ್ರಜೆಗಳು ಇಷ್ಟವೋ ಕಷ್ಟವೋ ಅಂತೂ ಗುರುತಿಸಲಾಗಿ ಬೇಕಲ್ಲ ಎಂದು ಆ ಹೆಸರುಗಳನ್ನು ಅನಿವಾರ್ಯವಾಗಿ ಬಳಸುತ್ತಾರೆ.

ಇಷ್ಟೆಲ್ಲಾ ಬರೆಯುವ ಕಾರಣವೆಂದರೆ ಇಂದಿಗೂ ಹಿಂದಿನ ರಾಜರ ಆಳ್ವಿಕೆಗೂ ಬಹಳ ವ್ಯತ್ಯಾಸವಿದೆ! ಅಂದಿನ ರಾಜರ ಆಳ್ವಿಕೆಯೇ ಬಹುಪಾಲು ಮೇಲಾಗಿತ್ತು. || ರಾಜಾ ಪ್ರತ್ಯಕ್ಷ ದೇವತಾ || ಎಂದು ಪ್ರಜೆಗಳು ನಂಬಿದ್ದರೆ || ಯಥಾರಾಜಾ ತಥಾ ಪ್ರಜಾ || ಎಂಬುದನ್ನು ಮನಗಂಡಿದ್ದ ರಾಜರುಗಳು ಪ್ರಜೆಗಳ ಪರಿಪಾಲನೆಯಲ್ಲಿ ಮಾನವಧರ್ಮ ಮಾರ್ಗವನ್ನು ಅನುಸರಿಸುತ್ತಿದ್ದರು. ಇವತ್ತು ಆಳುವ ಪಕ್ಷಗಳಲ್ಲೇ ಹಲವು ಅಪಸ್ವರಗಳು ಹೊರಡುತ್ತಿರುತ್ತವೆ. ಉದಾಹರಣೆಗೆ ನಿನ್ನೆಯ ಪತ್ರಿಕೆಯೊಂದರಲ್ಲಿ ಉತ್ತರಕರ್ನಾಟಕದ ಶಾಸಕರೊಬ್ಬರು ವೈದ್ಯಕೀಯ ಸೌಲಭ್ಯ ವಂಚಿತ ಬಡವನೊಬ್ಬನ ಬಗ್ಗೆ ಹೇಳುತ್ತ ತನ್ನದೇ ಪಕ್ಷದ ಸರಕಾರದಲ್ಲಿ ವೈದ್ಯಕೀಯ ಶಿಕ್ಷಣ ಮಂತ್ರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕಾಗಿ ಬಂದ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಆಳುವವರಿಗೆ ಏನಾಗಿದೆ ? ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಇದು ನಾವು ಮಾಡಿಕೊಂಡ ವ್ಯವಸ್ಥೆಯೋ ಅಥವಾ ದೇಶದ/ರಾಜ್ಯದ ಬೊಕ್ಕಸವನ್ನು ಬರಗಿ ತುಂಬಿಕೊಳ್ಳಲು ಜನರನ್ನು ನೇಮಕಮಾಡಿಕೊಳ್ಳುವ ವ್ಯವಸ್ಥೆಯೋ ಅರ್ಥವಾಗಿಲ್ಲ;ಅರ್ಥವಾಗೊಲ್ಲ ಎಲ್ಲೀವರೆಗೆ ಎಂದರೆ ನಮ್ಮ ಕಟ್ಟಕಡೆಯ ಅಂದಿನದಿನದ ಪುಡಿ ದುಡ್ಡಿಗಾಗಿ ಹಲ್ಲು ಗಿಂಜುತ್ತ ಕಂಡಲ್ಲಿ ಮತವೊತ್ತುವ ಹಲಕಟ್ಟು ಮತದಾರ ಇರುವವೆರೆಗೂ! ರಾಜಕಾರಣಿಗಳಿಗೂ ಇದೇ ಆಸ್ತಿ! ಎಲ್ಲಿ ಅನಕ್ಷರತೆ ಮತ್ತು ಬಡತನವಿದೆಯೋ ಅಲ್ಲಿ ಅವರ ಬೇಳೆ ಬೇಯುತ್ತದೆ!

ನೋಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಮ್ಮ ಹಳ್ಳಿಗಳಿಗೆ ರಸ್ತೆಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಓದಲು ಶಾಲೆಗಳಿಲ್ಲ, ಸರಿಯಾಗೆ ಕೆಲಸ ಮಾಡುವ ಆರೋಗ್ಯಕೇಂದ್ರಗಳಿಲ್ಲ, ತೀವ್ರ ಸ್ಥಿತಿಗೆ ಸಾಗಿಸಲು ವಾಹಕಗಳಿಲ್ಲ[ಆಂಬುಲೆನ್ಸ್]. ಆದರೆ ನಮ್ಮಲ್ಲಿ ಮತವೈಷಮ್ಯಗಳಿವೆ, ಮೀಸಲಾತಿಗಳಿವೆ, ಮೈನಾರಿಟಿ-ಮೆಜಾರಿಟಿ ಎಂಬ ಪ್ರಬೇಧ-ಕುಲಬೇಧಗಳಿವೆ--ಈ ವಿಷಯಗಳಲ್ಲಿ ನಾವು ಶ್ರೀಮಂತರು! ಜನಸಂಖ್ಯೆ ಈ ಗಾತ್ರಕ್ಕೆ ಬೆಳೆದು ಊಟಕ್ಕೆ ಪರದಾಡುವ ಸ್ಥಿತಿ ಬಂದರೂ ಇನ್ನೂ ಮೈನಾರಿಟಿಯೆಂಬ ವಿಷಬೀಜ ಬಿತ್ತಿ ಬೆಳೆಯುತ್ತಿರುವವರು ರಾಜಕಾರಣಿಗಳೇ ! ಓಬೀರಾಯನ ಕಾಲದ ಸಂವಿಧಾನದ ಕರಡು ಹಾಗೇ ಇದೆ. ಅಂದಿನ ಕಾಲಕ್ಕೆ ಅರ್ಜೆಂಟಿಗೆ ಮಾಡಿಕೊಂಡಿದ್ದನ್ನು ಮತ್ತೆ ಇವರು ತಿದ್ದಲು ಬಿಡುವುದಿಲ್ಲ ಯಾಕೆಂದರೆ ತಿದ್ದಿಬಿಟ್ಟರೆ ಹಲವು ರಾಜಕಾರಣಿಗಳು ಮೂಲೆಗುಂಪಾಗುತ್ತಾರೆ, ಮತ್ತೆ ಕೆಲವರು ಕಂಬಿಯ ಹಿಂದೆ ನಿಲ್ಲುತ್ತಾರೆ, ಇನ್ನೂ ಕೆಲವರು ದೇಶ ಬಹಿಷ್ಕಾರಕ್ಕೆ ಒಳಗಾಗುತ್ತಾರೆ! ಅದಕ್ಕೇ " ಅದೆಲ್ಲಾ ಈಗ ಬೇಕಾಗಿಲ್ಲ, ನಮಗೆ ಹೇಗೆ ಬೇಕೋ ಹಾಗೆ ಅಂಬೇಡ್ಕರ್ ಮಾಡಿಟ್ಟಿದ್ದಾರೆ " ಎಂದು ಅದನ್ನೇ ಆತುಕೊಂಡಿದ್ದಾರೆ. ಒಂದು ಉದಾಹರಣೆ ನೋಡಿ- ಬೆಂಗಳೂರಿಗೆ ಮೊದಲಾಗಿ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ದಿ| ಸರ್ ವಿಶ್ವೇಶ್ವರಯ್ಯ ಮಾಡಿದರು. ಇವತ್ತು ಜನಸಂಖ್ಯೆ ಬೆಳೆದಂತೆ ಹಲವು ನಗರಗಳು ಸಮರದೋಪಾದಿಯಲ್ಲಿ ಒಮ್ಮೆಲೇ ತಲೆ ಎತ್ತಿ ನಿಂತವು-- ಇವುಗಳಿಗೆಲ್ಲಾ ವಿಶ್ವೇಶ್ವರಯ್ಯನವರು ಮಾಡಿದ ಪ್ಲಾನು ಸಾಕಾಯಿತೇ ? ಇಲ್ಲವಲ್ಲ, ಅವರ ಪ್ಲಾನು ಬುನಾದಿ-ಈಗ ಮಾಡುವ ಪ್ಲಾನು ಅದರ ಮುಂದುವರಿದ ಭಾಗ ಅಲ್ಲವೇ? ಅಂತೆಯೇ ಸಂವಿಧಾನಕ್ಕೆ ಅಂದಿಗೆ ಅಂದಿನ ಜನಮಾನಸ ಬದಲಿದ್ದ ಕಾರಣ ಅದನ್ನು ಕೆಲವು ನ್ಯೂನತೆಗಳಿಂದಲೇ ನಾವು ಒಪ್ಪ್ಕೊಂಡಿದ್ದೇವೆ - ಈಗ ಅದರಲ್ಲಿ ಬದಲಾವಣೆ ಬೇಕಿದೆ. ಅದಿಲ್ಲದಿದ್ದರೆ ಅದೇ ಅಸ್ತ್ರ ಬಳಸಿ ಕೆಟ್ಟ ರಾಜಕಾರಣಿಗಳು ಯುದ್ಧ ಗೆಲ್ಲುತ್ತಲೇ ಇರುತ್ತಾರೆ.

ಇಂದಿಗೆ ಒಂದು ಮಾತು ನೆನಪಿಡಿ- ಸಮಾಜವನ್ನು ಉದ್ಧಾರಮಾಡುವ ರಾಜಕಾರಣಿ ಇಂದಿಗೆ ಯಾರೂ ಬದುಕಿಲ್ಲ! ಅಂಥವರು ಇದ್ದರೆ ಎದೆತಟ್ಟಿ ಮುಂದೆ ಬರಲಿ ನಾವವರಿಗೆ ಸನ್ಮಾನ ಮಾಡೋಣ-ನಿರ್ಭಿಡೆಯವಾಗಿ. ಇಂದಿರುವ ರಾಜಕಾರಣಿಗಳು ಬರೇ ಬಕಗಳು. ಅವರಲ್ಲಿ ಪರ್ಸಂಟೇಜು ವ್ಯತ್ಯಾಸ ಅಷ್ಟೇ! ಜೇನು ತೆಗೆದವರು ಕೈ ನೆಕ್ಕುತ್ತಾರಂತೆ ಅಂಬೋದೊಂದು ಗಾದೆ, ಇರಲಿ ಇಲ್ಲಿ ಜೇನು ಹುಟ್ಟನ್ನೇ ಗುಳುಂ ಸ್ವಾಹಾ ಮಾಡಿ ಬರೇ ಕೈಗೆ ತಾಗಿರುವುದನ್ನು ಸಮಾಜದ ಮೂತಿಗೆ ಒರೆಸಿಬಿಡುತ್ತಿದ್ದಾರಲ್ಲ ಯಾಕೆ ನಮಗೆ ಅರ್ಥವಾಗುತ್ತಿಲ್ಲ? ಇದರ ಬದಲಾವಣೆ ಸಾಧ್ಯವಿಲ್ಲವೇ ? ಅಮೇರಿಕಾದ ಥರ ಕೇವಲ ಎರಡೇ ರಾಷ್ಟ್ರೀಯ ಪಕ್ಷಗಳು ನಮ್ಮಲ್ಲಿ ಇದ್ದಿದ್ದರೆ ಪಕ್ಷಾಂತರ ಮತ್ತು ಕುದುರೆವ್ಯಾಪಾರ ಇಲ್ಲವಾಗುತ್ತಿತ್ತು. ಅಪವಿತ್ರ ಮೈತ್ರಿ ಎಂಬುದು ಅಧಿಕಾರಕ್ಕಾಗಿ ಹುಟ್ಟಿಕೊಳ್ಳುತ್ತಿರಲಿಲ್ಲ. ಹರಿದ ಲಡ್ಡಾದ ಬಟ್ಟೆಗೆ ಹಳೆಯ ದಾರದಿಂದ ತೇಪೆ ಹಾಕಿದಂತೆ ಸಮ್ಮಿಶ್ರ ಸರಕಾರಗಳ ಉಗಮವಾಗುತ್ತಿರಲಿಲ್ಲ. ಉಪಚುನಾವಣೆಗಳು, ಮರುಚುನಾವಣೆಗಳು, ಮತ್ತೆ ಚುನಾವಣೆಗಳು, ಮತ್ತಷ್ಟು ಚುನಾವಣೆಗಳು ಇವೆಲ್ಲದರ ಹೊರೆ ಮತದಾರನ ತಲೆಗೆ ಬರುತ್ತಿರಲಿಲ್ಲ, ಅತಂತ್ರ ರಾಜಕೀಯ ಹುಟ್ಟಿಕೊಳ್ಳುತ್ತಿರಲಿಲ್ಲ.

ಸಮಾಜದ ನೆಮ್ಮದಿಗೆ ಪರೋಕ್ಷವಾಗಿ ಮಾರಕರಾದ ಹೆಂಡದ ದೊರೆಗಳಿಗೆ ನಾವು ಗೌರವ ಡಾಕ್ಟರೇಟ್ ಕೊಡುತ್ತೇವೆ ಎನ್ನುವುದು ನಮ್ಮ ಸಂಸ್ಕೃತಿಯ ಅಧಃಪತನಕ್ಕೆ ಹಿಡಿದ ಬಹುದೊಡ್ಡ ಕನ್ನಡಿ! ನಮ್ಮ ಬಿಳಿಯ ಬಟ್ಟೆಯ ರಾಜಕಾರಣಿಗಳು ಜೀವಿತದಲ್ಲೇ ಕೇಳರಿಯದ ವಿದೇಶೀ ಡಾಕ್ಟರೇಟ್ ಖರೀದಿಸಿ ಕಪ್ಪು ಗೌನು ಹಾಕಿ ಚಿತ್ರ ತೆಗೆಸಿಕೊಳ್ಳುವುದು ನಮ್ಮ ಹಣೆಗೆ ಹಚ್ಚಿದ ಮಸಿಯ ನಾಮ! ವಿಶ್ವವಿದ್ಯಾಲಯಗಳ ಪದವಿಗಳು, ಹಲವು ಪ್ರಶಸ್ತಿಗಳು ಬೀದಿಯಲ್ಲಿ ಬೇಕಾಬಿಟ್ಟಿ ಬಿಕರಿಯಾಗುತ್ತಿರುವುದು ನಮ್ಮ ಚಿಂತಾಜನಕ ಸ್ಥಿತಿ, ತೆಲ್ಗಿ-ಹರ್ಷದ್ ರಂತಹ ಪ್ರಕರಣಗಳಲ್ಲಿ ಅವರನ್ನು ಶಿಕ್ಷಿಸಲಾಗದಿರುವುದು ಆ ಮೇಳಗಳಲ್ಲಿ ತಾವೂ ಶಾಮೀಲಾಗಿರುವ ನಮ್ಮ ರಾಜಕಾರಣಿಗಳು ನಮಗೆ ನಮ್ಮ ಆರ್ಥಿಕತೆಗೆ ಅಂಟಿಸಿದ ಏಡ್ಸ್ ರೋಗ ! ರಾಮನು ಹುಟ್ಟಿದ ದೇಶದಲ್ಲಿ ಅವನನ್ನೇ ರಾಜಕೀಯಕ್ಕೆ ಬಳಸಿಕೊಂಡಿದ್ದು ನಮ್ಮ ದುರ್ದೈವ! ನಾವಿನ್ನೂ ಇಂತಹ ಜೀವಿತವನ್ನೇ ಜೀವಿಸಬೇಕಾಗಿ ಬಂದಿರುವುದು ನಮ್ಮ ಹಣೆಬರಹ!

ಪ್ರತೀ ಸರ್ತಿ ನೋಡಿ ವೇದಿಕೆಯ ತುಂಬಾ ಅದೇ ಘರ್ಜನೆ: " ಮಹಾತ್ಮಾ ಗಾಂಧಿ ಏನಂದ್ರು, ಸರ್ದಾರ್ ಪಟೇಲ್ ಏನ್ಮಾಡದ್ರು, ಲೋಕಮಾನ್ಯ ತಿಲಕರು ಯಾವ ರೀತಿ ತಿದ್ದಿದರು " ಇಷ್ಟಿಷ್ಟೇ, ಇದಕ್ಕೂ ಜಾಸ್ತಿ ಆಳಕ್ಕೆ ಇಳಿದರೆ ಅವರೆಲ್ಲರ ಬಗ್ಗೆ ನಮ್ಮ ರಾಜಕೀಯಣ್ಣಗಳಿಗೆ ಏನುಗೊತ್ತು ? ಹಾಡಿದ್ದೇ ಹಾಡೋ ಕಿಸ್ಬಾಯಿದಾಸರಾಗುವ ಬದಲು ಸಮಾಜಕ್ಕೆ ನಾವಿದನ್ನು ಮಾಡಿದ್ದೇವೆ ಎಂದು ಬರಿದೇ ಕಾಲ್ನಡಿಗೆ,ಕೈನಡಿಗೆ, ಸರ್ಕಸ್ಸು, ಸಮಾವೇಶ ಇದನ್ನೆಲ್ಲಾ ಮಾಡದೇ ಕೃತಿಯಲ್ಲಿ ಜನಮೆಚ್ಚುವ ಕೆಲಸ ಮಾಡಿದ್ದರೆ ಇಂದಿಗೆ ನಮ್ಮ ಭಾರತ ಖಂಡಿತ ಉದ್ಧಾರವಾಗುತ್ತಿತ್ತು. ಎಂದಿಗೆ ನಮ್ಮ ಭಾರತ ಉದ್ಧಾರವಾಗುತ್ತಿತ್ತೋ ಅಂದಿಗೆ ಪಾಕಿಸ್ತಾನಿಗಳಾಗಲೀ ಬಾಂಗ್ಲಾದೇಶಿಗಳಾಗಲೀ ಅಥವಾ ಚೀನೀಯರೇ ಆಗಲಿ ನಮ್ಮ ಒಗ್ಗಟ್ಟನ್ನು ನಮ್ಮ ತಾಳ್ಮೆಯನ್ನು, ನಮ್ಮ ಸಾಧನೆಯನ್ನು ನೋಡಿ ತಂತಾನೇ ಹಿಮ್ಮೆಟ್ಟುತ್ತಿದ್ದರು. ಇವತ್ತಿಗೆ ಅವರೆಲ್ಲಾ ಮೂತಿ ತೂರಿಸುತ್ತಿದ್ದರೆ ಅದಕ್ಕೆ ಅವಕಾಶ ನಮ್ಮಲ್ಲಿರುವ ನಮ್ಮ ದೌರ್ಬಲ್ಯ. ಯಾರೇ ಬಾಂಬುಹಾಕುವವರು ಬಂದು ವರ್ಷಾನುಗಟ್ಟಲೆ ನಮ್ಮ ಪಕ್ಕದಲ್ಲೇ ಇದ್ದು, ಚೆನ್ನಾಗಿ ಬೇಕಾದ್ದನೆಲ್ಲ ಮೆದ್ದು, ಮೈಕೊಡವಿ ಎದ್ದು ಓಡಿಹೋಗಿ ಸರಿಯಾಗಿ ಮತ್ತೆ ಹಾಕುವಾಗ ಗುದ್ದು -ನಾವೆಲ್ಲಾ ಬುದ್ದು ನಾವೆಲ್ಲಾ ಬುದ್ದು! ನಾವಿನ್ನೂ ಮಲಗೇ ಇದ್ದೇವೆ-ದೇಶಕ್ಕೆ ಸ್ವಾತಂತ್ರ್ಯ ಬಂದು ೬೪ ವರ್ಷಗಳಾದವು ಎನ್ನುತ್ತಾ ಅಲ್ಲೇ ಹರಿದ ಕಂಬಳಿ ಹಾಸಿ ಕುಕ್ಕರುಬಡಿದಿದ್ದೇವೆ!

ಒಬ್ಬ ಚಂದ್ರಾಸ್ವಾಮಿ, ಒಬ್ಬ ನಿತ್ಯಾನಂದ, ಒಬ್ಬ ಎಮ್.ಎಫ್.ಹುಸೇನ್ ಹುಟ್ಟಿ ಮೆರೆಯುವುದು ನಮ್ಮ ಭಾರತದ ಇಂದಿನ ಹೆಮ್ಮೆ!!! ನಮ್ಮ ನಡುವೆ ಸ್ವಾರ್ಥಿಗಳೂ ವಿಷಯಲಂಪಟರೂ, ಮತಾಂಧರೂ ಆಗಿರುವ ಇಂಥವರನ್ನೆಲ್ಲ ನಾವು ಮೆಹರ್ಬಾನ್ ಮಾಡಿ ಸಾಕುತ್ತಿರುವುದು ನಮಗಿರುವ ನರದೌರ್ಬಲ್ಯ! ಆಗಾಗ ನಿಷ್ಕಾಳಜಿಯ ಅತಿ ಸಣ್ಣ ಕಾರಣಗಳೇ ದೊಡ್ಡದಾಗಿ ರೈಲು,ಬಸ್ಸು ಮುಂತಾದ ಅಪಘಾತಗಳಾಗುವುದು ನಮಗೆ ಬರುತ್ತಿರುವ ಫಿಟ್ಸ್ [ ಮಲರೋಗ] ! ಕಾಡು-ಗಣಿ-ಭೂಸಂಪತ್ತು ನಾಶಮಾಡುವ ಹೊಸ ರಕ್ಕಸರ ಮುಂದೆ ತಲೆಬಾಗಿ ಕೈಕಟ್ಟಿ ನಿಲ್ಲುವುದು ನಮ್ಮ ದೈನ್ಯ ಸ್ಥಿತಿ! ಸಾಮಾಜಿಕ ಕಾರ್ಯಗಳನ್ನು ಒಂಚೂರೂ ಸರಿಯಾಗಿ ಮಾಡದ ರಾಜಕೀಯದವರನ್ನು ಪರೋಕ್ಷವಾಗಿ ಸಾಕಬೇಕಾಗಿ ಬಂದಿರುವುದು ಸಾಕುತ್ತಿರುವುದು ನಮಗೆ ಬಂದ ಸ್ವಯಾರ್ಜಿತ ಆಸ್ತಿ! ಇವುಗಳನ್ನೆಲ್ಲಾ ಮೆಟ್ಟಿನಿಲ್ಲುವ ಎಲ್ಲಾ ಸಾಧ್ಯತೆಗಳ ಕುರಿತು ಚರ್ಚಿಸಲು, ಕ್ರಮಕೈಗೊಳ್ಳಲು ಯಾರಿಗೂ ಸಮಯವೂ ಇಲ್ಲ, ಬೇಕಾಗಿಯೂ ಇಲ್ಲ. ಏನಾದರೂ ನಡೆದರೆ ಅದಕ್ಕೊಂದು ಸಮಿತಿ ರಚಿಸಿ ಪರಿಶೀಲನೆ ಮಾಡಿ ಅಂತ ಕಳಿಸಿ ಹತ್ತಾರು ವರ್ಷಗಳ ನಂತರ ಸಮಾಜ ಅದನ್ನು ಮರೆತಮೇಲೆ ತಾವೂ ಮರೆತುಬಿಡುವುದು ನಮ್ಮ ರಾಜಕೀಯ ಮುತ್ಸದ್ಧಿತನ! ಪರಸ್ಪರರ ಮೇಲೆ ಗೂಬೆ ಕೂರಿಸುತ್ತಾ ಹಾಗೆ ಹೀಗೆ ಎನ್ನುತ್ತಾ ಬೇಳೆಬೇಯಿಸಿಕೊಳ್ಳುವ ರಾಜಕಾರಣಿಗಳ ದಾಳಕ್ಕೆ ಸಿಕ್ಕ ಮೀನುಗಳು ನಾವು ! ಅತಂತ್ರ ಪ್ರಜಾತಂತ್ರವೆಂಬ ನಾವೇ ಬೆಳೆಸಿದ ಹುಲಿಯಬಾಯಿಗೆ ಸಿಕ್ಕ ಹಸುಗಳು ನಾವು! ಬದುಕಿದ್ದೇವೆ, ಬದುಕುತ್ತಿದ್ದೇವೆ ಕ್ಯಾನ್ಸರ್ ಹಿಡಿದ ರೋಗಿಗಳಂತೆ, ಕುಷ್ಠ ಹಿಡಿದ ಪಾಪಣ್ಣನಂತೆ, ಕದಿರು ಬಂದು ಎಣ್ಣೆಯಾರುತ್ತಿರುವ ದೀಪದಂತೆ!

ಇನ್ನಾದರೂ ನಾವು ಅರಿತರೆ, ಬದಲಾದರೆ, ಓದಿಕೊಂಡರೆ, ರಾಜಕಾರಣಿಗಳ ರಟ್ಟೆಹಿಡಿದು ವಿಮಾನದಿಂದ/ ಕಾರಿಂದ ಕೆಳಗಿಳಿಸಿ ಮುಖಕ್ಕೆ ’ಮಂಗಲಾರತಿ’ ಮಾಡುವ ಮಟ್ಟಕ್ಕೆ ಬೆಳೆದರೆ ಆಗ ಬರುವುದು ನಿಜವಾದ ಸ್ವಾತಂತ್ರ್ಯ, ಕಾಡನ್ನು-ಭೂಗರ್ಭದ ಸಂಪತ್ತನ್ನು ಶಾಶ್ವತವಾಗಿ ಉಳಿಸಿಕೊಂಡರೆ ಆಗ ದೊರೆವುದು ನಿಜವಾದ ಸ್ವಾತಂತ್ರ್ಯ. ನಮಗೆಲ್ಲಾ ಬೇಕಾಗುವ ಮೂಲ ಸೌಲಭ್ಯಗಳು ಎಂದು ಸಿಗುತ್ತವೋ ಅಂದು ನಮಗೆ ಸಿಗುವುದು ಪರಿಪೂರ್ಣ ಸ್ವಾತಂತ್ರ್ಯ. ರಾಜಕೀಯದಲ್ಲಿರುವ ಪ್ರತೀ ವ್ಯಕ್ತಿ ತಾನೊಬ್ಬ ಸಮಾಜದ ಆಳು ಎಂಬ ತಿಳುವಳಿಕೆ ಹೊತ್ತು ನಡೆಯುವ ಕಾಲವನ್ನು ತರಿಸಿದರೆ ಅಂದು ನಮಗೆ ನಿಲುಕುವುದು ಪರಿಪಕ್ವ ಸ್ವಾತಂತ್ರ್ಯ. ಬಡವರು, ದೀನರು, ದಲಿತರು, ನಿರಕ್ಷರಕುಕ್ಷಿಗಳು, ಭಿಕ್ಷುಕರು ಎಂದಿಗೆ ನಮ್ಮಲ್ಲಿ ಸಹಜವಾಗಿ ಇರುವುದಿಲ್ಲವೋ ಅಂದೇ ನಮಗೆ ಉಂಟಾಗುವುದು ಸಬಲ, ಸಮರ್ಥ ಸ್ವಾತಂತ್ರ್ಯ.

ಆಗ ನಾವು ನಿಜವಾದ ಅರ್ಥದಲ್ಲಿ ಹಾಡಬೇಕಾದ ಹಾಡು ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ ! ನಮಸ್ಕಾರ

ಜೈ ಹಿಂದ್ ಜೈ ಹಿಂದ್ ಜೈ ಹಿಂದ್

12 comments:

 1. sir..
  idannu odi, khushi padalo niraashe paDalo artha aagtilla...

  svaatantya dinada nimma bhaashaNa kelida haagittu.....

  bhaaratada indina paristitige naave kaaraNaru....

  tumbaa chennaagi barediddeeri sir... dhanyavaada....

  ReplyDelete
 2. ಭಟ್ಟರೆ,
  ಭಾರತವರ್ಷದ ಸ್ಥಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ. ನನಗೊಂದು ಪುಟ್ಟ ಸಂದೇಹವಿದೆ. ಭಾಗವತದಲ್ಲಿ, ಋಷಭರಾಜನ ಮಗನಾದ ಭರತನಿಂದ ಈ ದೇಶಕ್ಕೆ ಭಾರತವೆಂದು ಹೆಸರು ಬಂದಿತು ಎಂದು ವರ್ಣಿಸಲಾಗಿದೆ. ಈ ಭರತನೇ ಮುಂದೆ ಜಡಭರತನೆಂದು ಕರೆಯಲ್ಪಟ್ಟವನು ಎಂದೂ ಹೇಳಲಾಗಿದೆ. ಆದುದರಿಂದ, ಭಾರತವು ಶಕುಂತಲೆಯ ಮಗ ಭರತನಿಂದ ಬಂದಿತೊ ಅಥವಾ ಜಡಭರತನಿಂದ ಬಂದಿತೊ ಎಂದು ತಿಳಿಯದಾಗಿದೆ.

  ReplyDelete
 3. ವಿ. ಆರ್. ಭಟ್ಟರೇ,
  ಈ ವರ್ಷ ಯಾರ ಬಾಯಲ್ಲೂ ಸ್ವತಂತ್ರ ಭಾರತದ ಬಗ್ಗೆ ಒಳ್ಳೇ ಮಾತುಗಳೇ ಕೇಳಿಬರುತ್ತಿಲ್ಲ.. ಭಾರತದ ದುಃಸ್ಥಿತಿಗೆ ಇದಕ್ಕಿಂತ ಪುರಾವೆ ಬೇಕೆ?

  ReplyDelete
 4. ಇವತ್ತು ನಮ್ಮ ಚೀಫ್ ಇಂಜಿನಿಯರ್ ಆಫೀಸಲ್ಲಿ ಧ್ವಜಾರೋಹಣವಾದಾಗ ಗಟ್ಟಿ ಸ್ವರದಲ್ಲಿ ರಾಷ್ಟ್ರಗೀತೆ ಹಾಡಿದವರಲ್ಲಿ ನನ್ನೊಡನೆ ಇನ್ನು ನಾಲ್ಕೈದು ಜನರಿದ್ದರು.ಉಳಿದವರೆಲ್ಲಾ ಸ್ವೀಟ್ ತಿನ್ನೋದಕ್ಕೇ ಬಂದಿದ್ದರೆಂದು ಹೇಳಲು ಬೇಸರವಾಗುತ್ತೆ.ಯಾವುದೇ ಕಾರ್ಯಕ್ರಮಗಳಲ್ಲಿ ಮಾತನಾಡಿದರೆ ನಾನು ಮಾತನಾಡಬೇಕು,ಹಿರಿಯ ಅಧಿಕಾರಿಗಳಲ್ಲಿ ದೇಶಭಕ್ತಿಯ ಬಗ್ಗೆ ಮಾತನಾಡಬೇಕೆಂಬ ಆಸಕ್ತಿಯೇಇಲ್ಲ.ಬಲು ಬೇಸರವಾಗುತ್ತೆ. ನಮ್ಮ ಯುವಕರೋ ಬೆಳಗಿನಿಂದ ಟಿ.ವಿ ಮುಂದೆ ಕೂತ್ಕೊಂಡು ಮೋಜು ಮಾಡ್ತಾ ಇದ್ದಾರೆ. ಛೇ! ರಾಷ್ಟ್ರೀಯ ಹಬ್ಬಗಳ ದಿನಗಳಾದರೂ ದೇಶಭಕ್ತಿಯನ್ನು ಜಾಗೃತಗೊಳಿಸುವ ದಿನಗಳಾಗಬಾರದೇ?

  ReplyDelete
 5. ಸಾರ್ ನಿಮ್ಮ ಅಭಿಪ್ರಾಯ ಸರಿ... ಆದರೆ ಎಲ್ಲರೂ ಅದೇ ರೀತಿ ಅಭಿಪ್ರಾಯ ಪಟ್ಟರೆ ಮಾತ್ರವೇ ಸುಧಾರಣೆ ಸಾಧ್ಯವಾಗುವುದಲ್ಲವೇ...? ನಮ್ಮ ಕಟ್ಟಡದಲ್ಲೂ ಈ ದಿನ ಧ್ವಜಾರೋಹಣ ಮಾಡಿದರು. ಪ್ರತೀ ಸಾರಿಯೂ ನಾವು ೧೫-೨೦ ಜನರು ಬಿಟ್ಟರೆ ಬೇರೆಯವರು ಬರುವುದೇ ಇಲ್ಲ.... ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿ, ಸಿಹಿ ಹಂಚುತ್ತಾರೆ, ಅಷ್ಟಕ್ಕೆ ೧೫ ನಿವಿಷಗಳಷ್ಟು ತಮ್ಮ ಅಮೂಲ್ಯ ಸಮಯವನ್ನು ಜನರು ದೇಶಕ್ಕಾಗಿ ಕೊಡಲಾರರೇನೋ ಅನ್ನಿಸುತ್ತೆ. ಬೆಳಿಗ್ಗೆ ನಿಜಕ್ಕೂ ನನಗೆ ಬೇಸರವಾಗಿತ್ತು.....

  ಶ್ಯಾಮಲ

  ReplyDelete
 6. ಸನ್ಮಾನ್ಯ ಶ್ರೀ ಸುಧೀಂಧ್ರ ದೇಶಪಾಂಡೆ, ತಮ್ಮ ಪ್ರತಿಕ್ರಿಯೆಗೆ ಮೊದಲಾಗಿ ಉತ್ತರಿಸುವ ಅನಿವಾರ್ಯವಿದೆ, ಹಾಗಾಗಿ ಉಪಕ್ರಮಿಸುತ್ತಿದ್ದೇನೆ- ಉತ್ತರ ಭಾರತದಲ್ಲಿ ಪ್ರತಿಷ್ಥಾ ನಗರವನ್ನು ಕೇಂದ್ರವನ್ನಾಗಿ [ರಾಜಧಾನಿ] ಇಟ್ಟುಕೊಂಡು ರಾಜಾ ಭರತ ಆಳಿದ. ಈತ ದುಷ್ಯಂತ -ಶಕುಂತಲೆಯರ ಪುತ್ರನೇ ಸರಿ, ಈ ಕಥೆಯನ್ನು ಹಿಂದಕ್ಕೆ ನನ್ನ ಓದಿನ ವೇಳೆಯಲ್ಲಿ ಎಲ್ಲೋ ಓದಿದ್ದೆ, ಇದನ್ನು ಸಾಕ್ಷೀಕರಿಸಲು ತಾವು ರುಕ್ಮಾಂಗದ ಅಥವಾ ಧರ್ಮಾಂಗದರೆಂಬ ಅಪ್ಪ-ಮಕ್ಕಳ ಇತಿಹಾಸ ತೆಗೆದರೆ ಸಂಪೂರ್ಣ ಪುರಾವೆ ಲಭ್ಯವಾಗುತ್ತದೆ. ಜಡಭಾರತನೂ ಆಮೇಲೆ ಆಳಿರಬಹುದು ಆದ್ರೆ ಭಾರತಕ್ಕೆ 'ಭಾರತ' ಎಂಬ ಹೆಸರು ಬಂದಿರುವುದು ಈ ದುಷ್ಯಂತ-ಶಕುಂತಲೆಯ ಮಗ ಭರತ ಚಕ್ರವರ್ತಿಯಿಂದಲೇ ಎಂಬುದು ನಿಸ್ಸಂದೇಹ, ಇನ್ನೂ ತಮಗೆ ಸಂದೇಹವಿದ್ದರೆ ತಮ್ಮ ವಿಳಾಸಕ್ಕೆ ನನ್ನಲ್ಲಿರುವ ಮಾಹಿತಿ ಪೂರ್ಣ ಹೊತ್ತಗೆಗಳ ನಕಲು ಪ್ರತಿಗಳನ್ನೂ ಕಳುಹಿಸಿಕೊಡಲು ತೊಂದರೆಯಿಲ್ಲ. ದಯವಿಟ್ಟು ಇದನ್ನು ಇನ್ನೊಮ್ಮೆ ವಿಶ್ಲೇಷಿಸಿ ಎಂದು ತಮ್ಮಲ್ಲಿ ಪ್ರಾರ್ಥನೆ. ಹಾಗೂ ತಮಗೆ ವಂದನೆಗಳು

  * ಶ್ರೀ ದಿನಕರ್ ತಮ್ಮ ಪ್ರತಿಕ್ರಿಯೆಯೂ ಕೂಡ ಚೆನ್ನಾಗಿದೆ, ತಮಗೆ ಕೃತಜ್ಞನಾಗಿದ್ದೇನೆ.

  * ಶ್ರೀ ಹರೀಶ್, ಈಗೀಗ ನಮಗೆ ಸ್ವಾತಂತ್ರ್ಯ ಎನ್ನುವುದು ಸುಮ್ಮನೇ ಒಂದು ಆಚರಣೆಯಾಗಿದೆ, ತಮ್ಮ ಅನಿಸಿಕೆಗೆ ನಮನಗಳು

  * ಶ್ರೀ ಶ್ರೀಧರ್, ತಮ್ಮ ಇಚ್ಛೆಯಂತೇ ಈ ಲೇಖನ ಪ್ರಕಟಿಸಿದ್ದೇನೆ, ಇದರಲ್ಲಿ ಹೊಸತು ತಮಗೆ ಸಿಕ್ಕಿದೆ ಅಂದುಕೊಳ್ಳುತ್ತೇನೆ, ನಿಮ್ಮ ಕಚೇರಿಯ ಅನಿಸಿಕೆಗೆ ' ಬೀಡಾಡಿಗಳ ಸ್ವಾತಂತ್ರ್ಯೋತ್ಸವ ' ಎಂಬ ಹಿಂದಿನ ಕೃತಿಯಲ್ಲಿ ಉತ್ತರವಿದೆ, ನಿಮ್ಮ ಅನಿಸಿಕೆ ನನ್ನ ಅನಿಸಿಕೆಯೂ ಆಗಿರುವುದರಿಂದ ಅದನ್ನು ವ್ಯಂಗ್ಯವಾಗಿ ಬರೆದಿದ್ದೇನೆ, ಸರಿಯಾಗಿ ಓದಿದರೆ ಅರ್ಥವಾಗುತ್ತದೆ, ತಮಗೆ ತುಂಬಾ ಆಭಾರಿ.

  ReplyDelete
 7. ಶ್ಯಾಮಲ ಮೇಡಂ, ತಾವು ಹೇಳುವುದು ನಿಜ, ನಾವೆಲ್ಲಾ ಹೊಣೆಗಾರಿಕೆ ಹೊತ್ತರೆ ಜನಮಾನಸದಲ್ಲಿ ಆ ಅಲೆಯೇಳಲು ಕಾರಣೀಭೂತರಾದರೆ ಅದು ಸಾಧ್ಯವಗಬಹುದಲ್ಲ, ಆಡಿಸೆಯಲ್ಲಿ ನಮ್ಮ ಪ್ರಯತ್ನ ನಡೆಯಲಿ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

  ReplyDelete
 8. ತುಂಬಾ ಚೆನ್ನಾಗಿ ಮಾರ್ಮಿಕವಾಗಿ ಬರೆದ ಲೇಖನ ಇತಿಹಾಸದಿಂದ ಇಂದಿನವರೆಗಿನ ನಮ್ಮ ಸ್ವಾತಂತ್ರದ ಲೆಕ್ಕಾಚಾರ ಸರಿಯಾಗಿ ಕೊಟ್ಟಿದ್ದಿರಾ...
  ಇನ್ನು ಎಳೆದು ಹೊಡೆದು ಉಳಿದಿರುವ ತೊಲ್ಲನ್ನು ಖಾಲಿ ಮಾಡಬೇಕಾದ ಜವಾಬ್ದಾರಿ ನಮ್ಮದು. ಅದನ್ನೇ ಇಂದು ಸಂಕಲ್ಪಿಸುವಾ..

  ReplyDelete
 9. ಆದರೆ ಒಂದ್ಮಾತು,
  ಯಾರೊಬ್ಬರು ಒಳ್ಳೆಯ ರಾಜಕಾರಣಿ ಇಲ್ಲ ಅಂದ್ಕೋಬೇಡಿ..
  ಇದ್ದಾರೆ ಬೆರಳೆಣಿಕೆಯಷ್ಟು ಜನ..
  ಒಮ್ಮೆ ಕೂಲಂಕುಶವಾಗಿ ನೋಡಿ ಗೊತ್ತಾಗುತ್ತೆ..
  --ಬೇಸರ ಬೇಡ .."

  ReplyDelete
 10. ನಿಮ್ಮ ಅಭಿಪ್ರಾಯ ಮನ್ನಿಸುತ್ತೇನೆ, ಆದರೆ ಮೆಜಾರಿಟಿ ಇರುವ ಕೆಡೆಗೆ ರಾಜಕೀಯ ನಿರ್ಧಾರಗಳು ವಾಲುತ್ತವೆ, ಗುಂಪಿನಲ್ಲಿ ಅವರು ಗೋವಿಂದನಾಗುತ್ತಾರೆ, ಥ್ಯಾಂಕ್ಸ್

  ReplyDelete