ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, December 23, 2014

ಯೋಗಿಯೋ ಭೋಗಿಯೋ ಹೇಳುವೆಡೆ ಆತ್ಮವಂಚನೆ ಬೇಡ!




ಯೋಗಿಯೋ ಭೋಗಿಯೋ ಹೇಳುವೆಡೆ ಆತ್ಮವಂಚನೆ ಬೇಡ!


ಬಹಳ ವರ್ಷಗಳ ಹಿಂದೆಯೇ ಹಿಮಾಲಯದ ಸಂತ ಸ್ವಾಮಿ ರಾಮ ಬರೆದ ‘ಲಿವಿಂಗ್ ವಿತ್ ದಿ ಹಿಮಾಲಯನ್ ಮಾಸ್ಟರ್ಸ್’ ಎಂಬ ಅವರ ಆತ್ಮಕಥೆಯನ್ನು ಓದಿದ್ದೆ. ತೀರಾ ಇತ್ತೀಚೆಗೆ ಯುವ ಲೇಖಕ ಚೇತನ್ ಭಗತ್ ಬರೆದ ‘ಹಾಫ್ ಗರ್ಲ್ಫ್ರೆಂಡ್’ ಎಂಬ ಕಾದಂಬರಿಯನ್ನೂ ಓದಿದ್ದೇನೆ. ಮೊದಲನೆಯದು ಆಧ್ಯಾತ್ಮಿಕ ಶಿಖರಗಾಮಿಗಳ ರೋಚಕ-ತ್ಯಾಗಮಯ ಬದುಕನ್ನು ಸಾಲಾಗಿ ತೆರೆದಿಡುತ್ತ, ಮನುಷ್ಯ ಜೀವಿತದ ಘನ ಉದ್ದೇಶಗಳ ಬಗೆಗೆ ಸಾರಿದರೆ, ಎರಡನೆಯದು ಲೌಕಿಕ ಬದುಕಿನ ಭಾವಶೃಂಖಲೆಗಳನ್ನು ಬಣ್ಣಿಸುತ್ತ ಐಹಿಕ ಬದುಕಿನ ಕ್ಷಣಿಕ ಆನಂದವನ್ನು ನೀಡುತ್ತದೆ. ಇವೆರಡೂ ಪರಸ್ಪರ ವಿರುದ್ಧ ದಿಸೆಯಲ್ಲಿ ಸಾಗುವ ವಿಷಯವಸ್ತುಗಳ ಕಥಾ ಹಂದರಗಳನ್ನು ಒಳಗೊಂಡಿದ್ದು, ಎರಡೂ ಆಪ್ತವಾಗುತ್ತವೆ.

ನಿಜವಾದ ತ್ಯಾಗಿಯಾರು? ಯೋಗಿ ಯಾರು? ಆತನ ಜೀವನ ವೈಖರಿಯ ದಿನಚರಿಯೆಂಥದ್ದು? ಆತ ಎದುರಿಸುವ ಸವಾಲುಗಳೆಂಥವು? ಲೌಕಿಕವಾದ ಭಾವನಾತ್ಮಕ ಸಂಬಂಧಗಳನ್ನು ಆತ ಹೇಗೆ ಕಳೆದುಕೊಳ್ಳುತ್ತಾನೆ ಎಂಬುದರ ಬಗೆಗೆ ಸ್ವಾಮಿ ರಾಮ ಚೆನ್ನಾಗಿ ಹೇಳಿದ್ದಾರೆ. ಯೋಗಿಯಾಗುವ ಮೊದಲಿನ ಹಂತದಲ್ಲಿ ಉಡಾಫೆಮಾಡುವ ಹುಡುಗನಾಗಿ ತನ್ನ ಗುರುವಿಗೆ ವಿರುದ್ಧವಾಗಿ ಹೇಗೆಲ್ಲಾ ನಡೆದುಕೊಂಡೆ ಮತ್ತು ಅದರ ಪರಿಣಾಮವೇನಾಯ್ತೆಂಬುದರ ಬಗೆಗೂ ವಿಶದವಾಗಿ ವಿವರಿಸಿದ್ದಾರೆ. ಅರಿಷಡ್ವರ್ಗಮುಕ್ತ ಯೋಗಿಗಳನ್ನು ಕಾಣಲು ಆಯ್ಕೆಯೇ ಅನಿವಾರ್ಯ ಎಂಬುದೂ ಸಹ ಗೊತ್ತಾಗುತ್ತದೆ. ಯೋಗಿಯ ಮೊದಲ ಹಂತವೇ ಅಹಂಕಾರದ ದಮನ[‘ನಾನು’ ಎಂಬುದರ ನಾಶ] ನಾನು ಎಂಬುದನ್ನು ಅನಂತದಲ್ಲಿ ಅಡಕವಾಗಿಸುವುದೇ ಯೋಗಿಯ ಗುರಿ-ಅದೇ ಮೋಹ ಕ್ಷಯ ಅಥವಾ ಮೋಕ್ಷ. ಸಾಧನಾ ಪಥದಲ್ಲಿ ಒಂದೊಂದು ಸಾಧುವಿಗೂ, ಒಬ್ಬೊಬ್ಬ ಸಂತನಿಗೂ ಸಹಜವಾಗಿ ಅಂಟಿರುವ ವೈಶಿಷ್ಟ್ಯವನ್ನು ಮತ್ತು ಅದರ ಮಹತ್ವಗಳನ್ನೂ ಸ್ವಾಮಿ ರಾಮ ಉದಾಹರಿಸಿದ್ದಾರೆ. ತನ್ನ ಗುರುವಿನ ಔದಾರ್ಯದಿಂದ ತಾನು ನೇರವಾಗಿ ಸಂದರ್ಶಿಸಿದ ಅನೇಕ ಸಂತರನ್ನು ಆ ಹೊತ್ತಗೆಯುದ್ದಕ್ಕೂ ಓದುಗರಿಗೆ ಪರಿಚಯಿಸುತ್ತಲೇ ನಡೆಯುತ್ತಾರೆ. ಸಂತ ಊರೊಳಗಿದ್ದರೆ ಹೇಗೆ? ಮತ್ತು ಊರಾಚೆಯ ಬೆಟ್ಟ-ಗುಡ್ಡ-ಪರ್ವತ-ಗುಹೆ-ಗಹ್ವರಗಳಲ್ಲಿ ಇದ್ದರೆ ಹೇಗೆ? ಎಂಬುದನ್ನೂ ತೋರಿಸುತ್ತಾರೆ. ನಿವೃತ್ತಿ ಪಥ-ಪಥಿಕರಾದ ಸಂತರಲ್ಲಿ ಕುಂಡಲಿನಿ ಶಕ್ತಿಯ ಸಕಾರಾತ್ಮಕ ಬಳಕೆ ಹೇಗಾಗುತ್ತದೆ ಎಂಬುದನ್ನೂ ಅಲ್ಲಿ ಕಾಣಬಹುದಾಗಿದೆ.   

ಮುದ್ದಿಗೆ-ಪ್ರೀತಿಗೆ ಅಂಟಿಕೊಂಡ ಹಿಮಕರಡಿಯೊಂದು ಹಿಮಾಲಯದ ಗುಹೆಯ ಹೊರಗೆ ಸದಾ ಇರತೊಡಗಿದಾಗ, “ಸಾಧಕನಿಗೆ ಯಾವುದೇ ನಂಟು-ಮೋಹ ಇರಕೂಡದು” ಎಂದು  ಸ್ವಾಮಿರಾಮರಿಗೆ ಅವರ ಗುರು ಆದೇಶಿಸಿದ್ದು ನೆನಪಿಗೆ ಬರುತ್ತದೆ. ಭಾರತದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳಪ್ರದೇಶಗಳಲ್ಲಿ ಅಥರ್ವಣ ವೇದದ ಭಾಗಗಳನ್ನು ‘ಬ್ಲ್ಯಾಕ್ ಮ್ಯಾಜಿಕ್’ ಮಾಡಲು ದುರುಪಯೋಗ ಮಾಡುವುದನ್ನು ಲೇಖಕರು ಸಾಕ್ಷಾತ್ಕರಿಸಿ ತೋರಿಸುತ್ತಾರೆ. ಕರವೀರಮಠದ ಶಂಕರಾಚಾರ್ಯ ಪೀಠ ತನಗೊಲಿದು ಬಂದರೂ, ತನ್ನಾತ್ಮ ಸಾಧನೆಗೆ ಸಮಯವೇ ಸಿಗುವುದಿಲ್ಲವೆಂಬ ಕಾರಣಕ್ಕೆ, ಹೇಳದೇ ಕೇಳದೇ ಪೀಠತ್ಯಾಗ ಮಾಡಿದ್ದನ್ನೂ ಅವರು ದಾಖಲಿಸಿದ್ದಾರೆ. ಮನುಷ್ಯ ಸಹಜ ಭಾವನೆಗಳು, ತುಮುಲ-ಗೊಂದಲಗಳು, ದ್ವಂದ್ವ-ಇಬ್ಬಂದಿತನಗಳು, ದ್ವೇಷಾಸೂಯೆಗಳು, ಕೋಪ-ವಿಕೋಪಗಳು, ಇಷ್ಟಾನಿಷ್ಟಗಳು, ಹಲವಿಧ ಸೆಂಟಿಮೆಂಟ್ಸ್ ಎಲ್ಲ ಮಜಲುಗಳೂ ಅತ್ಯಂತ ಸಹಜಗತಿಯಲ್ಲಿ ಆಯಾಯ ಕಾಲದಲ್ಲಿ ತನ್ನಲ್ಲಿ ಹೇಗೆ ಸ್ಫುರಿಸಿದವು ಎಂಬುದರ ಆತ್ಮಾವಲೋಕನ ಮಾಡಿಕೊಂಡಿದ್ದಾರೆ. 

ಹರೆಯದ ಹುಡುಗರಿಗೆ ಹಸಿವಿನ ಬಾಧೆ ಬಹಳ; ಅದು ದೇಹದ ಬೆಳವಣಿಗೆಯ ಕಾಲ. ದಿವಸಕ್ಕೊಮ್ಮೆ ಮಾತ್ರ ಒಂದೋ ಎರಡೋ ಚಪಾತಿ-ಪಲ್ಯ ತಿಂದು ಬದುಕುತ್ತಿದ್ದ ಸಂತರ ಗುಹೆಯಲ್ಲಿ ವಾಸಿಸುತ್ತಿದ್ದ ಸ್ವಾಮಿ ರಾಮರಿಗೆ ಒಮ್ಮೆ, “ನಾಲ್ಕಾರು ದಿನಗಳಿಂದ ಏನನ್ನೂ ತಿಂದಿರದ ಸಂತರೊಬ್ಬರು ಗುಹೆಗೆ ಬರುತ್ತಿದ್ದಾರೆ, ಇಂದಿನ ನಿನ್ನ ಆಹಾರವನ್ನು ಅವರಿಗೆ ಕೊಟ್ಟುಬಿಡು” ಎಂದು ಹೊರಗಿನಿಂದ ಬಂದ ತನ್ನ ಗುರು ಹೇಳಿದಾಗ, ಹಸಿವನ್ನು ತಡೆದುಕೊಳ್ಳಲಾರದೇ, ತನ್ನ ಆಹಾರ ಯಾರಿಗೂ ಕೊಡೆನೆಂದು ಗುರುವಿನೊಡನೆ ಜಗಳವಾಡಿ, ನಂತರ ನಿಧಾನವಾಗಿ ನಡುಗುತ್ತ ಬಂದು ಕುಳಿತ ವಯೋವೃದ್ಧ ಸಂತನ ಪಾದ ತೊಳೆದು, ತನ್ನ ಪಾಲಿನ ಭೋಜನವನ್ನು ಅವರಿಗೆ ನೀಡುವ ಸ್ವಾಮಿ ರಾಮರಿಗೆ, “ಮಗೂ, ಮುಂದೆಂದೂ ನೀನೇ ಇಚ್ಛಿಸಿ ಆಹಾರ ಸ್ವೀಕರಿಸುವವರೆಗೆ ನಿನಗೆ ಹಸಿವು ಬಾಧಿಸದು” ಎಂದು ಆಶೀರ್ವದಿಸಿದ ಘಟನೆ ನೆನೆದು ನನ್ನ ಕಣ್ಣಾಲಿಗಳು ಆನಂದಬಾಷ್ಪ ಹರಿಸಿದವು; ಆ ಸಂತನ ಆಶೀರ್ವಾದ ನಿಜವಾಗಿದ್ದನ್ನು ಸ್ವಾಮಿ ರಾಮ ನೆನೆದಿದ್ದಾರೆ.    

 ಇತ್ತೀಚೆಗೆ “ಸಶಕ್ತ ಯೋಗ ಮುದ್ರೆಗಳು” ಮತ್ತು “ಚೈತನ್ಯ ಚಕ್ರಗಳು” ಎಂಬೆರಡು ಯೋಗಾಧಾರಿತ ಹೊತ್ತಗೆಗಳನ್ನು ಬರೆದು ಮುದ್ರಣಕ್ಕೆ ಕಳುಹಿಸಿದ್ದೇನೆ. ಯೋಗದ ಬಗೆಗೆ ಅಧ್ಯಯನಕ್ಕೆ ತೊಡಗಿದಾಗ ಮಹರ್ಷಿ ಪತಂಜಲಿಯ ಅಷ್ಟಾಂಗಯೋಗ ಮತ್ತು ಪಾತಂಜಲ ಯೋಗಸೂತ್ರಗಳಂತಹ ಹಲವು ಆಕರಗಳನ್ನು ಓದಿಕೊಳ್ಳುವ ಅನಿವಾರ್ಯತೆಯಿತ್ತು ಮತ್ತು ಆ ಓದು ಇಷ್ಟವೂ ಆಗಿತ್ತು. “ಯೋಗಃ ಚಿತ್ತವೃತ್ತಿ ನಿರೋಧ” ಎಂದು ಪತಂಜಲಿ ತಮ್ಮ ಗ್ರಂಥದಲ್ಲಿ ಹೇಳಿದ್ದಾರೆ. ಮನುಷ್ಯನಿಗೆ ಚಿತ್ತವೃತ್ತಿಯನ್ನು ಹದ್ದುಬಸ್ತಿನಲ್ಲಿಡುವುದು ಸುಲಭ ಸಾಧ್ಯವಲ್ಲ; ಚಿತ್ತವೃತ್ತಿ ನಿರೋಧಿಸುವುದಕ್ಕೆ ಪೂರಕ ಆಹಾರ ಮತ್ತು ಯೋಗದ ಸಮನ್ವಯ ಆಗಬೇಕಾಗುತ್ತದೆ. ಯೋಗವೆಂದರೆ ಕೇವಲ ಯೋಗಾಸನಗಳಲ್ಲ; ಯಮ, ನಿಯಮ, ಅಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ  ಧ್ಯಾನ, ಸಮಾಧಿಗಳೆಂಬ ಎಂಟು ಅಂಗಗಳನ್ನೊಳಗೊಂಡ ಆಚರಣೆಯೇ ಯೋಗ ಮತ್ತು ಅದನ್ನು ತನ್ನದಾಗಿಸಿಕೊಳ್ಳುವುದೇ ಸಾಧಕನ ಯೋಗಾಯೋಗ! ಎಲ್ಲವನ್ನೂ ನೋಡಿಯೂ ಯಾವ ಭಾವನೆಗಳಿಗೂ ಕಟ್ಟುಬೀಳದೇ, ತನ್ನನ್ನೇ ತಾನು ನಿಗ್ರಹಿಸಿಕೊಳ್ಳುವ ಕಲೆ ಯೋಗದಿಂದ ಕರಗತವಾಗುತ್ತದೆ. ಅಷ್ಟಾಂಗ ಯೋಗದ ಮೊದಲ ನಾಲ್ಕು ಅಂಗಗಳು ಮುಗಿದ ಮೇಲೆ ಸಾಧಕನಿಗೆ ಎರಡು ಮಾರ್ಗಗಳು ಕಾಣ ಸಿಗುತ್ತವೆ: ಒಂದು ಮುಮುಕ್ಷುತ್ವವನ್ನು ಹೊಂದುವುದು-ಯೋಗಿಯಾಗುವುದು, ಇನ್ನೊಂದು ಮಂತ್ರಗಳನ್ನು ಯಂತ್ರರಚನೆಗಳಲ್ಲಿ ಬಂದಿಸುವ ತಾಂತ್ರಿಕ-ಮಾಂತ್ರಿಕನಾಗುವುದು. ತಾಂತ್ರಿಕ-ಮಾಂತ್ರಿಕನಿಗೆ ಕೆಲವು ಸಿದ್ಧಿಗಳು ಪ್ರಾಪ್ತವಾಗಿದ್ದರೂ ಸಿದ್ಧಿಗಳ ದುರುಪಯೋಗದಿಂದ ಆತ ತನ್ನ ಜೀವನವನ್ನು ತಾನೇ ಹಾಳುಮಾಡಿಕೊಳ್ಳುತ್ತ ಕ್ಷಣಿಕ ಧನ-ಕನಕ-ವಶೀಕರಣ-ವ್ಯಾಮೋಹದಿಂದ ಐಹಿಕ ಸುಖಲೋಲುಪನಾಗುತ್ತಾನೆ. ಸಾಧನಾಪಥದ ಆರಂಭಿಕ ಹಂತಗಳಲ್ಲಿ ಸಿದ್ಧಿಸುವ ಇಂತಹ ಶಕ್ತಿಗಳನ್ನು ಉಪಯೋಗಿಸದೇ ಮುನ್ನಡೆದರೆ ಯೋಗಿ ಮೋಕ್ಷವನ್ನು ಪಡೆಯುತ್ತಾನೆ.  

ಭವ್ಯ ಭಾರತದಲ್ಲಿ, ಅದರಲ್ಲೂ ಸನಾತನ ಧರ್ಮದ ಪುನರುತ್ಥಾನ ಮಾಡಿದ ಅದಿಶಂಕರ ಪರಂಪರೆಯಲ್ಲಿ ಸಂನ್ಯಾಸಿಗಳಾಗುವ ವ್ಯಕ್ತಿಗೆ, ಸಂಸ್ಕೃತ ಭಾಷಾ ವಿದ್ವತ್ತಿನ ಜೊತೆಗೆ,   ಚತುರ್ವೇದಗಳು, ಅಷ್ಟಾದಶ ಪುರಾಣಗಳು, ಷಟ್ ಶಾಸ್ತ್ರಗಳು, ಭಗವದ್ಗೀತೆ, ಬ್ರಹ್ಮಸೂತ್ರ ಮೊದಲಾದ ಹಲವು ಪಾರಮಾರ್ಥಿಕ ಜ್ಞಾನದಾಯಿಗಳು ಕಂಠಸ್ಥವಾಗಿ-ಹೃದ್ಗತವಾಗಿರಬೇಕು. ಆ ವ್ಯಕ್ತಿಯ ಜನ್ಮಜಾತ ಸ್ವಭಾವ ಸದಾ ನಿವೃತ್ತಿ ಮಾರ್ಗಕ್ಕಾಗಿ ಹಾತೊರೆಯುವಂಥದ್ದಾಗಿರಬೇಕು. ರಾಗ-ದ್ವೇಷಗಳು ಯಾರಲ್ಲಿ ಲುಪ್ತವಾಗಿವೆಯೋ ಆತನೇ ವೈರಾಗಿ, ಅಥವಾ ಬೈರಾಗಿ. ಅಂತಹ ಬೈರಾಗಿಗೆ ಈ ಲೋಕದ ಯಾವುದೇ ಚರಾಚರ ವಸ್ತು-ವಿಷಯಗಳಲ್ಲಿ ಖಾಸಗಿಯಾದ ಯಾವುದೇ ಹಿತಾಸಕ್ತಿಗಳೂ ಇರಕೂಡದು. ಧರ್ಮಮಾರ್ಗವನ್ನು ಶಿಷ್ಯರಿಗೆ ಪ್ರಬೋಧ ಮಾಡುವುದು ಮಾತ್ರ ಆತನ ಕರ್ತವ್ಯ.

ಆದಿಶಂಕರ ಪರಂಪರಯನ್ನೇ ಅನುಮೋದಿಸಿದ್ದು ಸಮರ್ಥ ಪರಂಪರೆ. ಅಂತಹ ಪರಂಪರೆಯಲ್ಲಿ ಕಳೆದ ಶತಮಾನದಲ್ಲಿ ನಾವು ಭಾಗವಾನ್ ಶ್ರೀಧರ ಸ್ವಾಮಿಗಳನ್ನು ಕಂಡಿದ್ದೇವೆ. ಶ್ರೀಧರ ಸ್ವಾಮಿಗಳ ಭಕ್ತರೊಬ್ಬರ ಮನೆಯಲ್ಲಿ ಪಾದಪೂಜೆ ನಡೆದಿದೆ. ತೀರ್ಥವನ್ನು ತೆಗೆದುಕೊಳ್ಳಲು ಹೊರಟ ಮನೆಯೊಡತಿಯ ಕಣ್ಣಲ್ಲಿ ಕಣ್ಣೀರು ಕಂಡ ಸ್ವಾಮಿಗಳು "ಯಾಕಮ್ಮಾ ಕಣ್ಣೀರು?" ಎಂದು ಕೇಳುತ್ತಾರೆ. ಅದಕ್ಕೆ ಆ ಮನೆಯೊಡತಿ, “ಗುರುಗಳೇ, ತಾವು ನಮ್ಮ ಮನೆಗೆ ಪಾದಾರ್ಪಣೆ ಮಾಡಿರುವ ಈ ಸಂದರ್ಭದಲ್ಲಿ, ನನ್ನ ಮಗ ತಮ್ಮ ಕೈಯ್ಯಿಂದ ತೀರ್ಥ ತೆಗೆದುಕೊಳ್ಳುವ ಅವಕಾಶದಿಂದ ವಂಚಿತನಾದನಲ್ಲಾ ಎಂದು ದುಃಖವಾಗುತ್ತಿದೆ” ಎನ್ನುತ್ತಾ ಕಣ್ಣೀರಿಡುತ್ತಾಳೆ. ಆಗ ಶ್ರೀಧರ ಸ್ವಾಮಿಗಳು ಹೇಳುತ್ತಾರೆ, “ಅಷ್ಟಕ್ಕೆ ಕಣ್ಣೀರೇಕೆ? ಇಗೋ ನೋಡು ನಿನ್ನ ಮಗನಿಗೆ ತೀರ್ಥಕೊಟ್ಟಿದ್ದಾಯ್ತು” ಎಂದು ಹೇಳಿ, ಒಂದು ಉದ್ಧರಣೆ ತೀರ್ಥವನ್ನು ಅರ್ಘ್ಯಪಾತ್ರೆಗೆ ಬಿಡುತ್ತಾರೆ. “ಈಗ ನೀನು ತೀರ್ಥ ತೆಗೆದುಕೊ” ಎಂದು ಆ ತಾಯಿಗೆ ತೀರ್ಥಕೊಡುತ್ತಾರೆ. ಕೆಲವೇ ದಿನಗಳಲ್ಲಿ ಕಾಶಿಯಲ್ಲಿ ಓದುತ್ತಿದ್ದ ಮಗನಿಂದ ಪತ್ರವೊಂದು ಬರುತ್ತದೆ; ಅದರಲ್ಲಿ ಅವನು ಈ ರೀತಿ ಬರೆದಿರುತ್ತಾನೆ: “ಕಾಶಿಯ ವಿಶ್ವನಾಥನ ದೇವಾಲಯಕ್ಕೆ ಹೋಗಿದ್ದೆ. ಅಲ್ಲಿ ಎಲ್ಲರಿಗೂ ಗಂಗೆಯ ತೀರ್ಥವನ್ನು ಕೊಡುತ್ತಿದ್ದರು. ನಾನೂ ಕೈ ಒಡ್ಡಿದೆ, ಆಶ್ಚರ್ಯವಾಯ್ತು, ನನ್ನ ಕೈಗೆ ಬಂದದ್ದು ಪಂಚಾಮೃತ." ಘಟನೆಯನ್ನು ಕೇಳುವಾಗ ಭಕ್ತರಿಗೆ ರೋಮಾಂಚನವಾಗುತ್ತದೆ. ಅಂದು ಭಗವಾನ್ ಶ್ರೀಧರಸ್ವಾಮಿಗಳು ಅರ್ಘ್ಯಪಾತ್ರೆಗೆ ಹಾಕಿದ ಪಂಚಾಮೃತತೀರ್ಥವು ಕಾಶಿಯಲ್ಲಿದ್ದ ಆ ತಾಯಿಯ ಮಗನಕೈಗೆ ಬಿದ್ದಿತ್ತು!

ಇಂದು ನಮ್ಮಲ್ಲಿನ ಅಧುನಿಕ ‘ಸಂನ್ಯಾಸಿ’ಗಳಲ್ಲಿ ಕೆಲವರು ಐಪ್ಯಾಡ್-ಐಫೋನ್ ಮೂಲಕ ವಾಟ್ಸಾಪ್ ಬಳಸಿ ತೀರ್ಥಕೊಡುವ ಚಿತ್ರವನ್ನು ಕಳುಹಿಸುತ್ತಾರೆಯೇ ಶಿವಾಯಿ ಇವರಲ್ಲಿ ಅಂತಹ ಯಾವ ಯೋಗ್ಯತೆಯೂ ಎಳ್ಳಿನಷ್ಟೂ ಇರುವುದಿಲ್ಲ; ಇದಕ್ಕೆ ಕಾರಣಗಳನ್ನು ಹುಡುಕಿದಾಗ ಯಾವ ಘನ ಆರ್ಹತೆಯಾಗಲೀ, ಸಾಧನೆಯಾಗಲೀ, ಜನ್ಮಜಾತ ವೈರಾಗ್ಯವಾಗಲೀ ಅವರಲ್ಲಿ ಇರುವುದಿಲ್ಲ ಎಂಬುದು ಸ್ಪಷ್ಟವಾಗುವುದರ ಜೊತೆಗೆ, ಕಳ್ಳಬೆಕ್ಕು ಕಣ್ಮುಚ್ಚಿ ಹಾಲುಕುಡಿದಂತೆ  ಈ ಲೋಕದ ಸಕಲ ಸುಖೋಪಭೋಗಗಳನ್ನು ಸಂಸಾರಿಗಿಂತಲೂ ಅಧಿಕವಾಗಿ ಅನುಭವಿಸುವವರಾಗಿರುವುದು ಕಂಡುಬರುತ್ತದೆ. ಮೇಲಾಗಿ ಸಮಾಜದಲ್ಲಿ ಅಲ್ಲಲ್ಲಿರುವ ಸಾಂಸಾರಿಕ ದುರುಳರು ತಮ್ಮ ವೈರಿನಿಗ್ರಹಕ್ಕಾಗಿ ಪ್ರಯೋಗಿಸುವ ವಾಮಾಚಾರಗಳಂಥದ್ದನ್ನು ಇವರೂ ಬಳಸಿಕೊಂಡು “ಶಾಪ” ಎಂದು ಭೋಂಗು ಬಿಡುವುದೂ ನಡೆಯುತ್ತಿದೆ.

ಇಂಥವರನ್ನು ಕಂಡಾಗ ಚೇತನ್ ಭಗತ್ ಅವರ ‘ಹಾಫ್ ಗರ್ಲ್ಫ್ರೆಂಡ್’ ಕಾದಂಬರಿಯ ಹಲವು ಅಂಶಗಳು ನನಗೆ ನೆನಪಿಗೆ ಬರುತ್ತವೆ. ರಿಯಾ ಸೋಮನಿ ಮತ್ತು ಮಾಧವ್ ಝಾ ಎಂಬಿಬ್ಬರ ನಡುವಿನ ಪ್ರೇಮ್ ಕಹಾನಿ ಹೇಗೆ ಆರಂಭ ಗೊಂಡಿತು, ಹೇಗೆಲ್ಲ ತಿರುವು ಪಡೆದುಕೊಂಡಿತು, ಹೇಗೆ ಸುಖಾಂತ್ಯ ಕಂಡಿತು ಎಂಬುದು ಮನದಟ್ಟಾಗುತ್ತದೆ. ಸಹಜಗತಿಯಲ್ಲಿ ಸಾಗುವ ಅಧುನಿಕ ನಗರ ಜನಜೀವನ ವಿಧಾನದಲ್ಲಿ ಘಟಿಸಿಹೋಗಬಹುದಾದ ಕಥೆಯೊಂದರಲ್ಲಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ವ್ಯಾವಸಾಯಿಕ, ಆಹಾರ್ಯಕ, ದಾನ-ದತ್ತಿ, ಪ್ರೇಮ-ಭಗ್ನಪ್ರೇಮ-ಕಾಮ, ಅಸಹಾಯಕತೆ, ಭಾಷಾಬಳಕೆಯ ವೈಕಲ್ಯ ಸ್ಥಿತಿ ಎಲ್ಲಾ ವಿಷಯಗಳನ್ನೂ ಹಿತಮಿತವಾಗಿ ಬೆರೆಸಿ ಹದಪಾಕ ಇಳಿಸಿದ ಕಾದಂಬರಿಯಲ್ಲಿ, ಭಾವನೆಗಳ ಎಳೆಎಳೆಗಳನ್ನು ಅನುಭವಿಸುವುದೇ ಒಂದು ಕ್ಷಣಿಕಾನಂದ. “ಏ ಲೋ ಕ್ಲಾಸ್ ಕ್ಯಾನ್ ಸ್ಮೆಲ್ ಲೋ ಕ್ಲಾಸ್ ”, “ಗವರ್ನಮೆಂಟ್ ಎಂಪ್ಲಾಯೀಸ್ ಆರ್ ದಿ ಲೋವೆಸ್ಟ್ ರಿಸ್ಕ್ ಟೇಕರ್ಸ್ ಆನ್ ದಿ ಅರ್ಥ್” ಎಂಬ ಕೆಲವು ಹೇಳಿಕೆಗಳು ಹಾದುಹೋಗುವಾಗ ನಮಗರಿವಿರದಂತೆಯೇ ನಗು ಉಮ್ಮಳಿಸುತ್ತದೆ. ಕಾದಂಬರಿಯಲ್ಲಿ ಲೇಟೆಸ್ಟ್ ತಂತ್ರಜ್ಞಾನದ ಹಲವು ಸಾಧನ-ಸಲಕರಣೆಗಳನ್ನೂ ಅಂತರ್ಜಾಲ ಮತ್ತು ಯೂಟ್ಯೂಬ್ ಮೊದಲಾದ ವಿಷಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ದತ್ತಿ ಪ್ರತಿಷ್ಠಾನವನ್ನು ಹೆಸರಿಸಿದ್ದು ಬಿಲ್ ಗೇಟ್ಸ್ ಬಂದುಹೋಗುವ ಸನ್ನಿವೇಶ ಮತ್ತು ಅದಕ್ಕಾಗಿ ಮಾಧವ್ ಝಾನ ಇಂಗ್ಲೀಷ್ ಕಲಿಕೆ ಇವೆಲ್ಲವೂ ಓದುಗನನ್ನು ರಂಜಿಸುತ್ತವೆ. ನಡುಗಾಲದ ಕೃತಿಗಳಲ್ಲಿರುವಷ್ಟು  ಸೆಂಟಿಮೆಂಟ್ಸ್ ಇಟ್ಟುಕೊಳ್ಳದ, ನವಕಾಲದ ತರುಣ-ತರುಣಿಯರ ಹಾವ-ಭಾವ-ಬಾಂಧವ್ಯಗಳ ಸಮ್ಮೇಲನಗಳು ಕಮರ್ಷಿಯಲ್ ಸಿನಿಮಾ ಒಂದಕ್ಕೆ ಸರಿಯೆನಿಸುತ್ತವೆ. ಮುದ್ದಣ-ಮನೋರಮೆಯರ ಸರಸ-ಸಲ್ಲಾಪದ ನಡುವೆ ಚೇಟ-ಚೇಟಿಯರು ಬಂದು ಹೋಗುವಂತೆ, ಕಾದಂಬರಿಯ ನಡುನಡುವೆ ಕೃತಿಕಾರ ಚೆತನ್ ಭಗತ್ ಸ್ವತಃ ಪಾತ್ರವಾಗಿಬಿಡುತ್ತಾರೆ. ಇದನ್ನೆಲ್ಲ ಓದುವಾಗ, ಓದುವಷ್ಟು ಹೊತ್ತು ನಗರ ನಾಗರಿಕರಿಗೆ ಒಂಥರಾ ಖುಷಿ ಕೊಡುವುದು ಸುಳ್ಳಲ್ಲ.  ಆದರೆ ಇದೊಂದು ಸಂಪೂರ್ಣ ಅಪರ ಅಥವಾ ಲೌಕಿಕ-ಪ್ರಾಪಂಚಿಕ ಜೀವನ ವ್ಯಾಪಾರದ ಕಥೆಯೇ ಹೊರತು ಆತ್ಮೋದ್ಧಾರದ ಮಾತು ಇಲ್ಲಿ ಎಲ್ಲಿಯೂ ಬರುವುದಿಲ್ಲ.

ಓದುವ ಸಾಹಿತ್ಯಗಳಲ್ಲಿ ಪ್ರಬೋಧ ಸಾಹಿತ್ಯ,  ಪ್ರಮೋದ ಸಾಹಿತ್ಯ ಮತ್ತು ಪ್ರಮಾದ ಸಾಹಿತ್ಯ ಎಂಬ ಮೂರು ಪ್ರಕಾರಗಳಿರುತ್ತವೆಂದು ನಾನು ಹಲವೆಡೆ ವದರಿದ್ದಿದೆ. ರಾಜಾಜ್ಞೆಯಂತೆ ಹೀಗೇ ನಡೆದುಕೊಳ್ಳತಕ್ಕದ್ದು ಎಂದು ಬೋಧಿಸುವುದು ಪ್ರಬೋಧ ಸಾಹಿತ್ಯ[ಉದಾಹರಣೆಗ: ವೇದಗಳು, ದರ್ಶನಗಳು], ಜನಜೀವನದಲ್ಲಿ ಹೀಗೆ ಬದುಕಬೇಕೆಂಬ ಲೌಕಿಕ ಜ್ಞಾನ-ಅಮೋದಗಳನ್ನು ನೀಡುವುದು ಪ್ರಮೋದ ಸಾಹಿತ್ಯ[ಉತ್ತಮ ಕಥೆ, ಕವನ, ಕಾದಂಬರಿ ಮೊದಲಾದವು], ಪ್ರಾಚೀನ ಸತ್ಪರಂಪರೆಗೆ ವಿರೋಧಾಭಾಸ ಹುಟ್ಟಿಸಿ ಮಾನಸಿಕ ಕ್ಲೇಶ, ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುವುದು ಪ್ರಮಾದ ಸಾಹಿತ್ಯ[ಪೀತ ಪತ್ರಿಕೆಗಳು, ‘ಬುದ್ಧಿಜೀವಿಗಳ’ ಬರಹಗಳು ಮೊದಲಾದವು ಇದಕ್ಕೆ ಉದಾಹರಣೆಗಳು] ಮುದುಡಿ ಚಾದರ ಎಳೆದುಕೊಂಡು ಮಲಗಿದ ಮನಸ್ಸಿಗೆ ಮುದನೀಡುವ ಸ್ನೇಹಿತನ ಚೇತರಿಕೆಯ ಮಾತಿನ ಸರಣಿಯಂತಿರುವ ‘ಹಾಫ್ ಗರ್ಲ್ ಫ್ರೆಂಡ್ ’ ಒಂದು ಪ್ರಮೋದ ಸಾಹಿತ್ಯ ಎನ್ನಬಹುದಾಗಿದೆ.      

ವಾಗರ್ಥಾವಿವ ಸಂಪ್ರಕ್ತೌ ವಾಗರ್ಥಪ್ರತಿಪತ್ತಯೇ|
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ||

-೨೪ಕ್ಕೂ ಅಧಿಕ ಛಂದಸ್ಸುಗಳನ್ನು ಬಳಸಿ ಬರೆದ ತನ್ನ ರಘುವಂಶ ಮಹಾಕಾವ್ಯದ ಆರಂಭದಲ್ಲಿ ಈ ಮಹಾಕವಿ ಕಾಳಿದಾಸ ಹೀಗೆ ಜಗನ್ನಿಯಾಮಕ ಶಕ್ತಿಯನ್ನು ವಂದಿಸಿದ್ದಾನೆ. ಮಾತು ಮತ್ತು ಅರ್ಥ ಇವೆರಡರ ಸಂಬಂಧ ಪಾರ್ವತಿ-ಪರಮೇಶ್ವರಂತೆ ಬೇರ್ಪಡಿಸಲು ಸಾಧ್ಯವಾಗದ್ದು ಎಂಬುದನ್ನು ಇದೇ ಹೇಳಿಕೆಯಲ್ಲಿ ಸಂಧಿ, ಸಮಾಸ, ವಿಭಕ್ತಿ ಪ್ರತ್ಯಯಗಳ ಜೋಡಣೆಯಲ್ಲಿಯೂ ವೈಶಿಷ್ಟ್ಯ ಮೆರೆದು, ಪದವಿನ್ಯಾಸಗಳ ಮೂಲಕ ವಾಕ್ ಮತ್ತು ಅರ್ಥಗಳ ಅನ್ಯೋನ್ಯತೆಯನ್ನು ವಿವರಿಸಿದ್ದಾನೆ. ಪದಪ್ರಯೋಗಗಳಲ್ಲಿ ಕವಿಯು ತನ್ನ ಜಾಣ್ಮೆ, ಸಮಯೋಚಿತತೆಗಳನ್ನು ತೋರಿಸಬೇಕು ಎಂಬುದು ಇಲ್ಲಿ ಗೊತ್ತಾಗುತ್ತದೆ. ‘ಹಾಡಿ ಹಾಡಿ ರಾಗ ಉಗುಳಿ ಉಗುಳಿ ರೋಗ’ ಎಂಬುದು ವಾಡಿಕೆಯ ಮಾತು; ಅದೇ ವಿಧವಾಗಿ ಅಧ್ಯಯನಶೀಲತೆಯಲ್ಲಿ ಆಳವಾಗಿ ತೊಡಗಿಕೊಂಡು ತನ್ನ ನಿರಂತರ ಪ್ರಯತ್ನದಿಂದ ಪ್ರಾಪ್ತವಾಗುವ ಶೈಲಿಯಿಂದ ಓದುಗನಿಗೆ ಕಾವ್ಯ ರುಚಿಸುವಂತೆ ಮಾಡುವುದರ ಜೊತೆಗೆ ಕವಿಯ ಮನದಾಶಯ, ಅನುಭವಿಸಿದ ಆನಂದವನ್ನು ಓದುಗ-ಸಹೃದಯನಿಗೂ ವೇದ್ಯವಾಗುವಂತೆ ಕಾವ್ಯರಚನೆ ಸಾಧ್ಯವಾಗಬೇಕು. ಶೈಲಿ, ಛಂದಸ್ಸು, ವಸ್ತುವಿನ ಆಯ್ಕೆ, ಕವಿಸಮಯದ ಔಚಿತ್ಯ, ಸಮಯೋಚಿತ ಪದಪುಂಜಗಳ ಜೋಡಣೆ ಇವೆಲ್ಲವೂ ಕಾವ್ಯ ಪ್ರಯತ್ನದಿಂದ ಮಾತ್ರ ಕವಿಗೆ ಲಭಿಸುವಂಥವು.

ಸಂಸ್ಕೃತ ಕವಿಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಸಂಸ್ಕೃತಿ-ಪರಂಪರೆಗಳ ಅರಿವಿನ ಬಗ್ಗೆ ಅವರ ಕೃತಿಗಳು ನೀಡುವ ಜ್ಞಾನ ಅಪಾರ; ಹೀಗಾಗಿಯೇ, ವೈದಿಕ ವಾಙ್ಮಯದಲ್ಲಿ ಇಲ್ಲಿನ ಸಾಹಿತ್ಯಗಳ ಬಳಕೆಯಾಗುತ್ತ ಬಂದಿರುವುದು ಕಾಣುತ್ತದೆ. ಆದಿಕವಿ ವಾಲ್ಮೀಕಿ, ರಾಮಾಯಣ ಮಹಾ-ಕಾವ್ಯವನ್ನು ಬರೆದಿದ್ದರೂ, ದಶರಥನನ್ನುಳಿದು ರಾಮನ ಪೂರ್ವಜರ ಬಗೆಗೆ ನಮಗೆ ಮಾಹಿತಿ ಸಿಗುವುದಿಲ್ಲ; ಅದರಂತೆಯೇ ರಾಮನ ಮಕ್ಕಳು ಲವ-ಕುಶರು ಆಳ್ವಿಕೆಗೆ ಬರುವ ಹೊತ್ತಿಗೆ ರಾಮಾಯಣ ಕಥಾನಕ ಮುಗಿದುಬಿಡುತ್ತದೆ. ಆದರೆ ರಘುವಂಶದಲ್ಲಿ ಸ್ವಯಂಭೂ ಮನುವಿನಿಂದ ಆರಂಭಗೊಂಡು ಅಗ್ನಿವರ್ಣನ ವರೆಗಿನ ತಲೆಗಳಿಗಳನ್ನು ನಾವು ಕಾಣಬಹುದಾಗಿದೆ. ಶ್ರೀರಾಮನ ವಂಶಸ್ಥರೆಲ್ಲರೂ ಪುಣ್ಯಪುರುಷರೇ ಆಗಿದ್ದರು. ಆದರೆ, ಶ್ರೀರಾಮನ ನಂತರದಲ್ಲಿ ಆ ವಂಶದಲ್ಲಿ ಜನಿಸಿದ ‘ಅಗ್ನಿವರ್ಣ’ನೆಂಬೊಬ್ಬಾತ ಮಾತ್ರ ಇದಕ್ಕೆ ವಿರುದ್ಧವಾದ ಅವಗುಣಗಳನ್ನು ಹೊಂದಿದ್ದು ಐಹಿಕ ಸುಖಲೋಲುಪನೂ, ಲಂಪಟನೂ ಆಗಿದ್ದನೆಂದು ತಿಳಿದುಬರುತ್ತದೆ. ತಾನೇ ದೇವರೆಂಬಂತೆ ಬಿಂಬಿಸುತ್ತ ತನ್ನ ಪಾದಪೂಜೆಯನ್ನೇ ಮಾಡಿ ಎಂದು ಹೇಳುತ್ತಿದ್ದ ಎನ್ನಲಾಗಿದೆ. ಹೀಗಿದ್ದ ಅಗ್ನಿವರ್ಣನ ಪಾಪಕೃತ್ಯಗಳಿಂದ ರಘುವಂಶ ಅಂತ್ಯಗೊಂಡಿತು ಎಂಬುದು ವಿಷಾದ.  

ಪ್ರತೀ ವ್ಯಕ್ತಿಯೊಳಗೂ ಆತ್ಮನಲ್ಲಿ ಪರಮಾತ್ಮ ಅಂಶಾಂಶ ರೂಪದಿಂದ ನೆಲೆಸಿದ್ದಾನೆಂದು ಗೀತೆಯಲ್ಲಿ ಹೇಳಿದ್ದಾನೆ. ನಮ್ಮ ಶರೀರದಲ್ಲಿರುವ ಕಾವು, ಬಿಸಿ, ಆಹಾರ ಜೀರ್ಣವಾಗುವಿಕೆ, ತ್ಯಾಜ್ಯ ವಿಲೇವಾರಿ ಇವುಗಳನ್ನೆಲ್ಲ ಗಮನಿಸಿದಾಗ ವ್ಯಕ್ತಿ ಕೇವಲ ಶರೀರವಲ್ಲ, ಶರೀರದೊಳಗಿನ ಅವ್ಯಕ್ತ ಶಕ್ತಿಯೂ ಸೇರಿದ ಸ್ಥಿತಿ ಎಂಬುದು ಅರಿವಿಗೆ ಬರುತ್ತದೆ. ಕಳ್ಳನ ಮನದೊಳಗಿನ ಅತ್ಮ ಕಳ್ಳನನ್ನು “ನೀನೊಬ್ಬ ಕಳ್ಳ” ಎಂದು ಸದಾ ಹಂಗಿಸುತ್ತದೆ, ಸುಳ್ಳನ / ದ್ರೋಹಿಯ ಮನದೊಳಗಿನ ಆತ್ಮ “ನೀನೊಬ್ಬ ಸುಳ್ಳ, ನೀನೊಬ್ಬ ದ್ರೋಹಿ” ಎಂದು ಜರೆಯುತ್ತದೆ, ಕೊಲೆಗಡುಕನೊಳಗೆ ಸ್ಥಿತವಾದ ಆತ್ಮ “ನೀನೊಬ್ಬ ಪಾತಕಿ” ಎಂದು ಆಗಾಗ ಆತನ ಪಾತಕ ಕೃತ್ಯಗಳನ್ನು ಕನಸಿನ ರೂಪದಲ್ಲಿ ತೋರಿಸಿ ಭಯ ಹುಟ್ಟಿಸುತ್ತಲೇ ಇರುತ್ತದೆ, ಕಾಮುಕನ ಶರೀರಾಂತರ್ಗತ ಆತ್ಮ “ನೀನೊಬ್ಬ ಲಂಪಟ” ಎಂದು ಬಡಬಡಿಸುತ್ತಲೇ ಇರುತ್ತದೆ. ನಾವು ನಡೆಸಿದ ಕುಕೃತ್ಯಗಳನ್ನು ಆತ್ಮ ಸಮ್ಮತಿಸುವುದಿಲ್ಲ. ಆತ್ಮ ಸಮ್ಮತಿಸದ ಕೃತ್ಯಗಳನ್ನು ನಡೆಸಿದಾಗ ನಾವೇ ನಮ್ಮಾತ್ಮ ಘಾತುಕರಾಗಿ ಬೆಳೆಯುತ್ತೇವೆ. ಆತ್ಮವಂಚನೆ ಮಾಡಿಕೊಳ್ಳುತ್ತ ಹತ್ತುಹರದಾರಿ ಹೇಗೋ ಸಾಗಬಹುದು; ಆದರೆ ಅಲ್ಲಿಂದ ಮುಂದಕ್ಕೆ ಆತ್ಮವಂಚನೆಗೆ ತಕ್ಕ ಶಾಸ್ತಿ ಶತಸ್ಸಿದ್ಧ ಎಂಬುದು ಹಲವು ಪ್ರಬೋಧ ಸಾಹಿತ್ಯಗಳ ಅನುಭವ ಸಿದ್ಧಾಂತ.  ಜಗತ್ತನೇ ಗೆದ್ದ ಅಲೆಕ್ಸಾಂಡರ್, ಸರ್ವಾಧಿಕಾರ ಧೋರಣೆಯ ಹಿಟ್ಲರ್, ನೆಪೋಲಿಯನ್ ಮತ್ತು ಇತ್ತೀಚಿನ ಸದ್ದಾಂ ಹುಸೇನ್ ಮೊದಲಾದವರ ಕಥೆಗಳನ್ನು ನೋಡಿದಾಗ ಇದು ಸತ್ಯವೆಂಬ ಅರಿವುದೊರೆಯುತ್ತದೆ. ಯಾವ ಸ್ಥಾನಕ್ಕೆ ನಾವು ಅರ್ಹರೋ ಅಂತಹ ಸ್ಥಾನವನ್ನು ಮಾತ್ರ ನಾವು ಅಲಂಕರಿಸಬಹುದು, ಅನುಭವಿಸಬಹುದು, ಅದರ ಹೊರತಾಗಿ ಅರ್ಹತೆಗೂ ಮೀರಿದ ಸ್ಥಾನವನ್ನು ಅಧಿಕಾರಬಲದಿಂದ ಅತಿಕ್ರಮಿಸಿ, ಸ್ಥಾನದ ಮೌಲ್ಯಗಳನ್ನು ಕಳೆಯತೊಡಗಿದರೆ ಆಪತ್ತು ಸಂಭವಿಸುತ್ತದೆ. ಗಿಂಡಿಮಾಣಿಯಿಲ್ಲದೇ 'ಕಮಂಡಲಿಗೆ' ಹೋಗಲೂ, ಹಸ್ತೋದಕ ಸಿಗದೇ ಊಟ ಮಾಡಲೂ ಕರ್ಮಾಧಿಕಾರ ಇಲ್ಲದ ಸಂನ್ಯಾಸಿ ಎನಿಸಿಕೊಂಡವ, ಯೂಟ್ಯೂಬ್ ವೀಡಿಯೋ ನೋಡಬಹುದೇ? ಫೇಸ್ಬುಕ್, ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ವಿಹರಿಸಬಹುದೇ? ಐಫೋನ್, ಐಪ್ಯಾಡ್, ವಾಟ್ಸ್ಯಾಪ್ಗಳ ಮೂಲಕ ಗುಪ್ತವಾಗಿ ಸಂವಹಿಸಬಹುದೇ?-ಎಂಬುದನ್ನು ಇಂದಿನ ಕೆಲವು ‘ಸಂನ್ಯಾಸಿ’ಗಳು ಅರಿತುಕೊಳ್ಳಬೇಕು.  

ಸಾನಂದಂ ಸದನಂ ಸುತಾಶ್ಚ ಸುಧಿಯಃ ಕಾಂತಾ ನ ದುರ್ಭಾಷಿಣೀ
ಸನ್ಮಿತ್ರಂ ಸುಧನಂ ಸ್ವಯೋಪಿತಿ ರತಿಃ ಆಜ್ಞಾಪರಾಃ ಸೇವಕಾಃ |
ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮಿಷ್ಟಾನ್ನಪಾನಂ ಗೃಹೇ
ಸಾಧೋಃ ಸಂಗಮುಪಾಸನೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮಃ ||

[ಅರ್ಥ: ಆನಂದ ತುಂಬಿದ ಮನೆ, ಬುದ್ಧಿವಂತ ಮಕ್ಕಳು, ಎದುರು ವಾದಿಸದ ಪತ್ನಿ, ಹಿತೈಷಿಗಳಾದ ಸ್ನೇಹಿತರು, ಧರ್ಮಮಾರ್ಗದಲ್ಲಿ  ಆರ್ಜಿಸಿದ ಧನ, ಸ್ವಪತ್ನಿಯಲ್ಲಿ ನಲಿಯುವಿಕೆ, ಆಜ್ಞೆಯನ್ನು ಮೀರದ ಸೇವಕರು, ಅತಿಥಿ ಸತ್ಕಾರ, ಅನುದಿನ ಭಗವದಾರಾಧನೆ, ಇಷ್ಟವಾದ ಅನ್ನ ಪಾನಾದಿಗಳು, ಸಾಧ್ಯವಾದಷ್ಟು ಸದಾ ಸಾಧು-ಸಂತರ ಸತ್ಸಂಗ, ಸೇವೆ- ಇವಿಷ್ಟು ಇದ್ದರೆ ಗೃಹಸ್ಥಾಶ್ರಮವು ಧನ್ಯವಾಗುತ್ತದೆ].

ಅಧುನಿಕ ದಿನಮಾನದಲ್ಲಿಯೂ ಸಂತರಂತೆ ಬದುಕಿದ ಸಂಸಾರಿಗಳಿದ್ದಾರೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಎಂವ ಚತುರಾಶ್ರಮಗಳಲ್ಲಿ ಗೃಹಸ್ಥಾಶ್ರಮ ಮಾತ್ರ ಉಳಿದ ಮೂರೂ ಆಶ್ರಮಗಳಿಗೆ ಆಧಾರವಾಗಿದೆ. ಗೃಹಸ್ಥ ಭಕ್ತರ-ಶಿಷ್ಯರ ಅನ್ನ-ಅನುಪಾನದಿಂದ ಮಿಕ್ಕವರಿಗೆ ಅನುಕೂಲವಾಗುತ್ತದೆ; ಆದರಿಲ್ಲೊಂದು ಧರ್ಮಸೂಕ್ಷ್ಮವಿದೆ- ವ್ರತನಿಷ್ಠ ಬ್ರಹ್ಮಚಾರಿಯೂ, ವಾನಪ್ರಸ್ಥನೂ, ಸಂನ್ಯಾಸಿಯೂ ಗೃಹಸ್ಥರನ್ನು ಮನದುಂಬಿ ಆಶೀರ್ವದಿಸುತ್ತಾರೆ-ಅವರ ಆಶೀರ್ವಾದದ ಬಲದಿಂದಲೇ ಗೃಹಸ್ಥ ಅವರಿಗೆ ಪುನರಪಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಆಶ್ರಮ ಧರ್ಮಕ್ಕೆ ಯಾವಾಗ ಕುತ್ತುಂಟಾಗುತ್ತದೋ ಆಗ ಅಲ್ಲಿ ಅಧರ್ಮ ಕಾಲಿಡುತ್ತದೆ. ಅದು ಧರ್ಮದ ನ್ಯೂನತೆಯಲ್ಲ; ಆಚರಿಸುವ ವ್ಯಕ್ತಿಗಳಲ್ಲಿರುವ ಐಬು!

ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕು; ಅದರಲ್ಲೂ ಸಂನ್ಯಾಸಿಯಾದವನು ತಾನು ಯೋಗಿಯೋ ಅಥವಾ ಭೋಗಿಯೋ ಎಂಬುದನ್ನು ಮೊದಲು ಅರಿತುಕೊಳ್ಳಬೇಕು.  

ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿ-ಪಿಪೀಲಿಕಾಂತ-ತನುಷು ಪ್ರೋತಾ ಜಗತ್ಸಾಕ್ಷಿಣೇ |
ಸೈವಾಹಂ ನ ಚ ದೃಶ್ಯ ವಸ್ತ್ವಿತಿ ದೃಢಾಪ್ರಜ್ಞಾಪಿ ಯಸ್ಯಾಸ್ತಿಚೇತ್
ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ ||

ಕಾಶಿಯಲ್ಲಿ ಭಗವತ್ಪಾದ ಶ್ರೀಶಂಕರರು ಚಾಂಡಾಲನಲ್ಲೂ ದೈವದರ್ಶನ ಮಾಡಿದೆ ಎಂದು ತಮ್ಮ ಮನೀಷಾ ಪಂಚಕದಲ್ಲಿ ಹೇಳಿದ್ದಾರೆ. ಯಾವುದೋ ಐಹಿಕ ಲಾಭದ ದುರುದ್ದೇಶದಿಂದ ಹೊರಗೆ ಯೋಗಿಯಂತೆ ದಿರಿಸು ಧರಿಸಿ ಒಳಗೆ ಭೋಗಿಯಾದರೆ ಅದು ಆತ್ಮವಂಚನೆಯ ಪರಮಾವಧಿಯಾಗುತ್ತದೆ. ಕಾವಿ ಬಟ್ಟೆಯನ್ನು ಧರಿಸಿದ ಕೆಲವರು ಸಿನಿಮಾದಲ್ಲಿ ಸಿಕ್ಸ್ ಪ್ಯಾಕ್ ಹೀರೋ ಆಗಿ ನಟಿಸಿದ್ದಾರಂತೆ, ಮಾಂಸಾಹಾರವನ್ನು ಭುಂಜಿಸಿದ್ದಾರಂತೆ, ನಟೀಮಣಿಯರೊಂದಿಗೆ ಡ್ಯಾನ್ಸ್ ಆಡಿದ್ದಾರಂತೆ; ಅವರ ಪಂಥ ಬೇರೆ ಇರಬಹುದು, ಆದರೆ ಇದು ಕಾವಿ ಬಟ್ಟೆಗೂ ಮತ್ತು ಹಿಂದೂ ಧರ್ಮಕ್ಕೂ ಮಾಡಿದ ಅಪಚಾರವೆಂಬುದು ಖಚಿತ. ಗೀತೆಯಲ್ಲಿ ಹೇಳಿದ ಚಾತುರ್ವರ್ಣಗಳಿಗೆ ಅತೀತವಾದ ಹಂತ ಯೋಗಿ/ಸಂನ್ಯಾಸಿಯದ್ದು. ‘ಯೋಗಿ’ಯೆನಿಸಿ ಗೊತ್ತಿದ್ದೂ ತಪ್ಪು ಮಾಡಿದರೆ ಅದಕ್ಕೆ ಪ್ರಾಯಶ್ಚಿತ್ತವೂ ಅದೇ ಪ್ರಮಾಣದಲ್ಲಿ ವಿಪರೀತ ಹೆಚ್ಚಿಗೆ ಇರುತ್ತದೆ ಎಂದು ಶಾಸ್ತ್ರ ಸಾರುತ್ತದೆ; ಕಾಲಘಟ್ಟದಲ್ಲಿ ‘ಮಾಡಿದ್ದುಣ್ಣೋ ಮಹರಾಯ’ ಎಂಬಂತೆ, ಅವರವರು ಮಾಡಿದ್ದನ್ನು ಅವರವರೇ ಉಣ್ಣಬೇಕಾಗುತ್ತದೆ.  

Tuesday, May 13, 2014

ದೀಪಕ ರಾಗದ ಬೆನ್ನತ್ತಿ ಭಾಗ-೨

ದೀಪಕ ರಾಗದ ಬೆನ್ನತ್ತಿ ಭಾಗ-೨

ದೀಪಕರಾಗದ ಮೂಲವನ್ನು ಆಳವಾಗಿ ಹುಡುಕುತ್ತಾ ಹೊರಟ ನನಗೆ ಮಧ್ಯೆ ಕೆಲವು ಕಾಲ ಆ ಕೆಲಸ ವಿಳಂಬ ಗತಿಯಲ್ಲಿ ಸಾಗಿದ್ದಕ್ಕೆ ನನ್ನಮೇಲೇ ನನಗೆ ಬೇಸರ ಬಂದಿತ್ತು. ಅನಿವಾರ್ಯವಾಗಿ ಹಾಗೆ ಸಹಿಸಿಕೊಂಡಿದ್ದೆ. ಸಮಸ್ಯೆಯ ಮೂಲದಲ್ಲಿ ಎದ್ದ ಪ್ರಶ್ನೆಗಳು ಇಂತಿದ್ದವು:

೧. ದೀಪಕ ರಾಗ ಎಂದು ಹುಟ್ಟಿತು?

೨. ಚಕ್ರವರ್ತಿ ವಿಕ್ರಮಾದಿತ್ಯ ಯಾವ ಶತಮಾನದಲ್ಲಿ ಜೀವಿಸಿದ್ದ?

೩. ವಿಕ್ರಮಾದಿತ್ಯನ ಕಾಲದಲ್ಲಿ ಆತನ ಆಸ್ಥಾನ ವಿದ್ವಾನ್ ಆಗಿ ಕಾಳಿದಾಸ ಸಹ ಇದ್ದನೇ?

೪. ವಿಕ್ರಮಾರ್ಕ ಶಕೆಯ ಆರಂಭಕ್ಕೂ ವಿಕ್ರಮಾದಿತ್ಯನಿಗೂ ಸಂಬಂಧವಿದೆಯೇ?

೫. ಭಾರತದಲ್ಲಿ ಹಲವು ವಿಕ್ರಮಾದಿತ್ಯರು ಆಗಿ ಹೋಗಿದ್ದಾರೆ, ಆದರೆ ನಮಗೆ ಬೇಕಾದ ಅಥವಾ ನಾವು ಹುಡುಕುತ್ತಿರುವ ವಿಕ್ರಮಾದಿತ್ಯ ಅವರಲ್ಲಿ ಯಾರು?

೬. ಯಾವ ವಿಕ್ರಮಾದಿತ್ಯನಿಂದ ದೀಪಕ ರಾಗ ಪ್ರಚುರಗೊಂಡಿತು ?

೭. ಹಿಂದೂಸ್ಥಾನೀ ಸಂಗೀತಕ್ಕೆ ಮುಸಲ್ಮಾನರ ಕೊಡುಗೆಗಳು ಕಾರಣವೇ?

೮.  ಬೇತಾಳ-ವಿಕ್ರಮಾದಿತ್ಯರ ಕಥೆಗಳಲ್ಲಿ ಬರುವ ವಿಕ್ರಮಾದಿತ್ಯ ಯಾರು ? ಅವನಿಗೂ  ನಾವು ಹುಡುಕುತ್ತಿರುವ ವಿಕ್ರಮಾದಿತ್ಯನಿಗೂ ಸಾಮ್ಯವಿದೆಯೇ?

೯. ವಿಕ್ರಮಾದಿತ್ಯ ಶನಿಪೀಡಿತನಾಗಿದ್ದನೆಂಬುದಕ್ಕೆ ಶಾಸನಗಳ ಆಧಾರವೇನಾದರೂ ಸಿಗುತ್ತದೆಯೇ?

೧೦. ವಿಕ್ರಮನ ಐತಿಹಾಸಿಕ ನ್ಯಾಯ-ನಿರ್ಣಯ ಸಿಂಹಾಸನಕ್ಕೂ ನಾವು ಹುಡುಕುತ್ತಿರುವ ವಿಕ್ರಮಾದಿತ್ಯನಿಗೂ ಸಂಬಂಧವಿದೆಯೇ?

ಈ ಸಮಸ್ಯೆಗೆ ಉತ್ತರ ಅಷ್ಟು ಸುಲಭದಲ್ಲಿ ದೊರೆಯುವುದಿಲ್ಲ. ಇದಕ್ಕೆ ಕಾರಣಗಳು ಹಲವಾರು, ಆದರೆ ಬ್ರಿಟಿಷರು ಮತ್ತು ಮೊಘಲರು ಭಾರತದಲ್ಲಿದ್ದಾಗ, ತಮಗೆ ಬೇಕಾದ ಅನುಕೂಲತೆಗಳನ್ನು ಕಲ್ಪಿಸಿಕೊಳ್ಳುವ ದುರುದ್ದೇಶದಿಂದ, ಭಾರತೀಯರು ನಿಜವಾದ ಇತಿಹಾಸ ಅರಿಯಲಾರದಂತೆ ಇಲ್ಲಿನ ಐತಿಹಾಸಿಕ ಉದ್ಗ್ರಂಥಗಳನ್ನು ಸುಟ್ಟುಹಾಕಿದರು! ಹೀಗಾಗಿ ಅನೇಕ ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ಕೊಂಡಿಗಳು ನಮಗೆ ದಕ್ಕುವುದಿಲ್ಲ. ಅಳಿದುಳಿದ ಐತಿಹಾಸಿಕ ಗ್ರಂಥಗಳಲ್ಲಿ ನಮಗೆ ಬೇಕಾದ  ವಿಕ್ರಮಾದಿತ್ಯ ಮತ್ತು ಆತನ ಆಸ್ಥಾನದ ’ನವರತ್ನ’ಗಳ ಬಗ್ಗೆ ಮಾಹಿತಿ ದೊರೆಯುವುದಿಲ್ಲ. 

ಪ್ರಶ್ನೆಗಳನ್ನು ಮ್ಮನದಲ್ಲಿ ಧರಿಸಿದ ಮೇಲೆ ಅವಿರತವಾಗಿ ಶ್ರಮಿಸಿದ್ದಾಯ್ತು. ಮಿತ್ರರಾದ ಶತಾವಧಾನಿಗಳನ್ನು ಕೇಳಿದ್ದಾಯ್ತು. ಅವರ ಪ್ರಕಾರ ಆಗಿಹೋದ ವಿಕ್ರಮಾದಿತ್ಯರಲ್ಲಿ ಚಂದ್ರಗುಪ್ತ-ವಿಕ್ರಮಾದಿತ್ಯನೇ ಅತ್ಯಂತ ಪ್ರಭಾವೀ ವ್ಯಕ್ತಿಯಾಗಿದ್ದಾನೆ. ವಿಕ್ರಮಶಕೆ ಎಂಬುದು ಮಾಲವ ವಂಶಜರು ಹೂಣರನ್ನು ಸೋಲಿಸಿ ಮೆರೆದ ವಿಕ್ರಮವನ್ನು ಸೂಚಿಸುವ ಕಾಲಮಾನ ಎಂಬುದು ಅವಧಾನಿ ಗಣೇಶರ ಅಂಬೋಣ; ಅದಕ್ಕೂ ವಿಕ್ರಮಾದಿತ್ಯ ಎಂಬ ವ್ಯಕ್ತಿಗೂ ಸಂಬಂಧವನ್ನವರು ನಿರಾಕರಿಸುತ್ತಾರೆ. ಇನ್ನು ಅತ್ಯಂತ ಅಗಾಧ ಓದಿನ ಆಗರವಾದ ಅವರೇ ಹೇಳುವಂತೆ ವಿಕ್ರಮನ ಆಸ್ಥಾನದ ನವರತ್ನಗಳಲ್ಲಿ ಹಲವರ ಪರಿಚಯ ಯಾರಿಗೂ ಮತ್ತು ಎಲ್ಲೂ ಸಿಗುವುದಿಲ್ಲ!! 

    ಧನ್ವಂತರಿ ಕ್ಷಪಣಕೋಮರಸಿಂಹಶಂಕು
    ವೇತಾಲಭಟ್ಟ ಘಟಕರ್ಪರ ಕಾಳಿದಾಸಃ |
    ಖ್ಯಾತೋ ವರಾಹಮಿಹಿರೋ ನೃಪತೇ ಸಭಾಯಾಂ
    ರತ್ನಾನಿ ವೈ ವರರುಚಿರ್ನವ ವಿಕ್ರಮಸ್ಯ ||

೧. ಧನ್ವಂತರಿ
೨. ಕ್ಷಪಣಕ
೩. ಅಮರ ಸಿಂಹ
೪. ಶಂಕು
೫. ವೇತಾಲ ಭಟ್ಟ
೬. ಘಟ ಕರ್ಪರ
೭. ಕಾಳಿದಾಸ
೮. ವರಾಹ ಮಿಹಿರ
೯. ವರರುಚಿ

ಈ ಅಸ್ಥಾನ ವಿದ್ವಾನ್ ನವರತ್ನಗಳಲ್ಲಿ ಧನ್ವಂತರಿ ಯಾರು?  ಕ್ಷಪಣಕ ಯಾರು? ಶಂಕು ಯಾರು ? ವೇತಾಲ ಭಟ್ಟ ಯಾರು?  ಈ ಎಲ್ಲಾ ಹೆಸರುಗಳು ಅವರ ಅಂಕಿತನಾಮಗಳೇ?  ಅಥವಾ ಕಾವ್ಯನಾಮಗಳೇ?  ಗೊತ್ತಿಲ್ಲ, ಎಲ್ಲೂ-ಸಮರ್ಪಕವಾದ ಯಾವ ದಾಖಲೆಗಳೂ ಸಿಗುವುದಿಲ್ಲ. 

ಕಾಳಿದಾಸನ ಕಾಲಮಾನದ ಬಗೆಗೆ  ವಿದ್ವಾನ್ ರಾಮಚಂದ್ರ ತಿವಾರಿಯಂತಹ ಅನೇಕರು ಸಂಶೋಧನೆ ನಡೆಸಿದರು. ’ಕಾಳಿದಾಸ ತಿಥಿ ಸಮೃದ್ಧಿ’ ಮೊದಲಾದ ಹೊತ್ತಗೆಗಳೇ ರೂಪುಗೊಂಡವು. ಕೆಲವರಂತೂ ಕಾಳಿದಾಸ ಇಂಥಾದ್ದೇ ಶತಮಾನದಲ್ಲಿದ್ದ-ಅದು ಸುಳ್ಳೆಂದು ಯಾರಾದರೂ ಸಾಬೀತು ಪಡಿಸಿದರೆ ತಮಗೆ ನೀಡಲ್ಪಟ್ಟ ಡಿ.ಲಿಟ್ ಮೊದಲಾದ ಪದವಿಗಳನ್ನೇ ಹಿಂದಿರುಗಿಸುವ ಸವಾಲು ಒಡ್ಡಿದರು. ಆದರೂ ಕಾಳಿದಾಸನ ಕಾಲ ನಿರ್ಣಯ ಯಾಕೋ ಕಗ್ಗಂಟಾಗಿ ಕಾಡುತ್ತದೆ! ಎಂಟನೇ ಶತಮಾನದಲ್ಲಿದ್ದರೆಂದು ಹೇಳಲ್ಪಟ್ಟ ಆದಿಶಂಕರರ ಜೀವಿತಾವಧಿಯ ಇಸವಿಗಳ ಬಗೆಗೇ ನಿರ್ಣಯ ಕಷ್ಟವೆನಿಸಿರುವಾಗ ಅದಕ್ಕೂ ಹಿಂದಿನದೆನಿಸುವ ಕಾಳಿದಾಸನ ಜೀವಿತಾವಧಿಯನ್ನು ನಿರ್ಣಯಿಸುವುದು ಅಷ್ಟು ಸುಲಭವೇ?  ಕೆಲವೊಂದು ಆಧಾರಗಳ ಪ್ರಕಾರ ಕಾಳಿದಾಸ ಗುಪ್ತರಕಾಲದವನೇ ಅಂದರೆ ೩ನೇ ಶತಮಾನದಿಂದ ೬ನೇ ಶತಮಾನದ ಅವಧಿಯಲ್ಲಿ ಆಳಿದ ಗುಪ್ತ ಸಾಮ್ರಾಜ್ಯದಲ್ಲೇ ಇದ್ದ ಮಹಾಕವಿ ಎಂಬುದು ತಿಳಿದುಬರುತ್ತದೆ. ಕಾಳಿದಾಸನನ್ನು ಆಸ್ಥಾನ ವಿದ್ವಾನ್ ಆಗಿ ಹೊಂದಿದ್ದ ವಿಕ್ರಮಾದಿತ್ಯ ಎಂದಾದರೆ ಆ ವಿಕ್ರಮಾದಿತ್ಯ ಬೇರಾರೂ ಅಲ್ಲ; ಚಂದ್ರಗುಪ್ತ-ವಿಕ್ರಮಾದಿತ್ಯನೇ ಆಗಿದ್ದಾನೆ!  ಹಾಗಾದರೆ ಭವಿಷ್ಯ ಪುರಾಣದಲ್ಲಿ ಹೇಳಲ್ಪಟ್ಟ ವಿಕ್ರಮಾದಿತ್ಯನ ಕಾಲಮಾನ ಕ್ರಿಸ್ತಪೂರ್ವಕ್ಕೆ ಹೋಗುತ್ತದೆ!  ಆ ವಿಕ್ರಮಾದಿತ್ಯನಿಗೆ ಶನಿಪೀಡೆ ತಗುಲಿತ್ತೆಂದೂ, ಶನಿಯಿಂದ ಪೀಡಿತನಾದ ಆತ ಕೈಕಾಲುಗಳನ್ನು ಕಳೆದುಕೊಂಡು, ನಂದಿ ಶೆಟ್ಟಿಯ ಎಣ್ಣೆಯ ಗಾಣದ ನೊಗದಮೇಲೆ ಕುಳಿತು, ನಿಶ್ಚೇಷ್ಟಿತನಾಗಿ-ನೊಂದವನಾಗಿ, ದೀಪಕರಾಗವನ್ನು ಹಾಡಿದನೆಂದು ಹೇಳಲಾಗಿದೆ. ಹಾಗಾದರೆ ಚಂದ್ರಗುಪ್ತ-ವಿಕ್ರಮಾದಿತ್ಯ ಮತ್ತು ದೀಪಕರಾಗದ ವಿಕ್ರಮಾದಿತ್ಯ ಬೇರೆ ಬೇರೇಯೇ? -ಎಂಬ ಸಂದೇಹ ಉಳಿದುಹೋಗುತ್ತದೆ!

ಅವಧಾನಿ ಗಣೇಶರಲ್ಲಿ ಎರಡು ಗಂಟೆಗಳ ಕಾಲ ನಿಷ್ಕರ್ಶಿಸಿದಾಗ ಕೆಲವೊಂದು ಮಾಹಿತಿಗಳು ದೊರೆತವು, ಆಧಾರ ರಹಿತವಾಗಿ, ಜನಪದ ಕಥೆಯಂತಿರುವ, ಪುರಾಣೋಕ್ತ ಕಥೆಯ ವಿಕ್ರಮಾದಿತ್ಯನ ಕಾಲಮಾನವನ್ನು ನಿರ್ಧರಿಸುವ ಯಾವುದೇ ಮಾಪನಗಳು ಸಿಗದ ಕಾರಣ,  ಚಂದ್ರಗುಪ್ತ-ವಿಕ್ರಮಾದಿತ್ಯನ ಆಸ್ಥಾನ ವಿದ್ವಾಂಸರು ಮತ್ತು ಕವಿಗಳು ಆತನಮೇಲಿನ ಅತಿಶಯ ಪ್ರೇಮ ಮತ್ತು ಅಭಿಮಾನದಿಂದ ಅನೇಕ ಹೊತ್ತಗೆಗಳನ್ನೂ ಕಥಾನಕಗಳನ್ನೂ ರಚಿಸಿದರು ಎಂಬುದನ್ನು ನಿರ್ಧರಿಸಿದೆವು. ವರರುಚಿಯ ಬಗ್ಗೆ ಸ್ಥೂಲವಾಗಿ ವ್ಯಾಖ್ಯಾನಿಸಿದ ಅವಧಾನಿಗಳು, ವರರುಚಿಯನ್ನು ಕಾತ್ಯಾಯನ ಎಂದೂ ಕರೆಯಲಾಗಿದ್ದನ್ನು ಹೇಳಿ, ಪಾಂಡಿತ್ಯದಿಂದ ವಿದ್ವತ್ ಸಾಮ್ರಾಜ್ಯದಲ್ಲಿ ’ರಾಕ್ಷಸ’ನೆಂದು ಗುರುತಿಸಲ್ಪಟ್ಟ ವ್ಯಕ್ತಿಯೇ ವರರುಚಿ ಎಂಬುದನ್ನು ಬಣ್ಣಿಸಿದರು. ’ಘಟಕರ್ಪರ ಸಂದೇಶಕಾವ್ಯ’ವನ್ನು ಕಾಳಿದಾಸನೇ ಬರೆದಿದ್ದು,  ಪ್ರೇಮಿಗಳಿಬ್ಬರ ನಡುವಿನ ಸಂವಹನವನ್ನು ಬಣ್ಣಿಸುವ ಆತನ ಕೃತಿ ಮೇಘಸಂದೇಶ ಅಥವಾ ಮೇಘದೂತ ಎಂದು ಹೆಸರಾಗಿದೆ. ಒಡೆದು ಹೋದ ಹೂಜೆಯೊಂದರ ಬಗೆಗೆ ಅತೀವ ಕಳವಳ ವ್ಯಕ್ತಪಡಿಸುವ ಹೆಂಡತಿಯೊಬ್ಬಳು, ದೂರದಲ್ಲಿರುವ ತನ್ನ ಗಂಡನಿಗೆ ಸಂದೇಶ ತಲ್ಪಿಸುವಂತೆ ಮೇಘಗಳನ್ನೂ, ಮರಗಳನ್ನೂ ಕೇಳಿಕೊಳ್ಳುವ ಅತ್ಯದ್ಭುತ ರಮಣೀಯ ಕಥಾನಕ ’ಘಟಕರ್ಪರ’  ಹಾಗಾದರೆ ಘಟಕರ್ಪರನೆಂಬ ಬೇರೊಬ್ಬ ಕವಿಯಿದ್ದನೇ?ಹೌದು, ಆತನ ಬಗೆಗೂ ಚರ್ಚೆಗಳು ನಡೆದವು. ಮಂದಾಕ್ರಾಂತ ಛಂದಸ್ಸಿನಲ್ಲಿರುವ ಆತನ ಬರಹಗಳ ಸುದ್ದಿಯೊಂದಿಗೆ ’ಮಂದ್ರ’ ಕಾದಂಬರಿಯನ್ನು ಬರೆಯುವ ಮುನ್ನ ಸಂಗೀತ-ರಾಗಗಳ ಬಗೆಗೆ ಆಳವಾಗಿ ಸಂಶೋಧಿಸಿದ ಎಸ್.ಎಲ್.ಭೈರಪ್ಪನವರ ಅಭಿಪ್ರಾಯಗಳನ್ನೂ ಗಣನೆಗೆ ತೆಗೆದುಕೊಳ್ಳಲಾಯ್ತು. 

ಸಂಗೀತ ಸಾಮ್ರಾಜ್ಯವನ್ನು ಬೆರಗುಗಣ್ಣುಗಳಿಂದ ನೋಡಿ, ಆ ಕುರಿತು ಆಳವಾಗಿ ಅಧ್ಯಯನ ನಡೆಸಿದ ಮೈಸೂರಿನ ವಿದ್ವಾನ್ ರಾ.ಸತ್ಯನಾರಾಯಣ ಅವರ ಪ್ರಸ್ತಾಪವೂ ಬಂತು. ಮೊದಲಾಗಿ ಭಾರತೀಯ ಸಂಗೀತದಲ್ಲಿ ಹಿಂದೂಸ್ಥಾನಿ-ಉತ್ತರಾದಿಯೆಂದೋ  ಅಥವಾ ಕರ್ನಾಟಕ-ದಕ್ಷಿಣಾದಿಯೆಂದೋ ಭಿನ್ನತೆಗಳಿರಲಿಲ್ಲವೆಂಬುದು ಸಂಶೋಧಕರ ಅಭಿಪ್ರಾಯ. ಆದರೆ ಸಂಗೀತವೆಂಬುದು ಮೌಖಿಕ ಮಾಧ್ಯಮವಾದುದರಿಂದ ಸುಮಾರು ೬೦-೭೦ ಕಿ.ಮೀ ಅಂತರದಲ್ಲಿ  ಸಂಗೀತದ ರಾಗಗಳಲ್ಲಿ, ಅವುಗಳಲ್ಲಿ ಆಲಾಪನೆಗಳಲ್ಲಿ ಭಿನ್ನತೆಗಳು ಇದ್ದವು ಎಂಬುದು ತಿಳಿದುಬರುತ್ತದೆ. ಹೀಗಾಗಿ ವಿಭಿನ್ನ ಘರಾಣಾಗಳು ಬಳಕೆಯಲ್ಲಿದ್ದವು. ೧೪ನೇ ಶತಮಾನದಿಂದೀಚೆಗೆ ಸಂಗೀತದಲ್ಲಿ ಎರಡು ಪ್ರಕಾರಗಳು ಒಡಮೂಡಿದವಾದರೂ ಹಿಂದೂಸ್ಥಾನಿಯಲ್ಲಿ "ದ್ರುಪದ್" [ಹಿಂದೂಸ್ಥಾನೀ ಸಂಗೀತ ಪರಿಕರವಾದ ಸಾರಂಗಿಯನ್ನೂ ದ್ರುಪದ್ ಎಂದು ಕರೆಯುವುದಿದೆ]ಎನಿಸುವುದನೇ ಕರ್ನಾಟಕಿಯಲ್ಲಿ "ಪಲ್ಲವಿ" ಎನ್ನುವುದನ್ನು ಕಾಣಬಹುದು. ಅಂತೆಯೇ ಬಹುತೇಕ ರಾಗಗಳ ಹೆಸರುಗಳಲ್ಲಿ-ಆಲಾಪನಾ ವಿಧಾನಗಳಲ್ಲಿ ವ್ಯತ್ಯಾಸವಿರಬಹುದೇ ಹೊರತು ಎರದೂ ಪ್ರಕಾರಗಳಲ್ಲಿರುವ ರಾಗಗಳಲ್ಲಿ ಸಾಮ್ಯತೆಯುಂಟು. 

ಹಿಂದೂಸ್ಥಾನೀ ಸಂಗೀತಕ್ಕೆ ಅಪ್ರತಿಮ ಕೊಡುಗೆಗಳನ್ನು ಕೊಟ್ಟ ತಾನ್ ಸೇನ್ ಮೂಲತಃ ಅಪ್ಪಟ ಭಾರತೀಯ ಹಿಂದೂ ಬ್ರಾಹ್ಮಣನಾಗಿದ್ದಾತ! ಇಸ್ಲಾಂ ಪ್ರಭಾವದಿಂದ ಮತ್ತು ಮೊಘಲರ ಆಳ್ವಿಕೆಯಲ್ಲಿನ ಬಲವಂತಿಕೆಯಿಂದ ಆತ ಮುಸ್ಲಿಂ ಆಗಿ ಮತಾಂತರಗೊಂಡಿದ್ದು ತಿಳಿದುಬರುತ್ತದೆ. ದೀಪಕರಾಗವನ್ನು ಇನ್ನಷ್ಟು ಪ್ರಚುರಪಡಿಸಿದ ಖ್ಯಾತಿ ಇದೇ ತಾನ್ ಸೇನನದು.  ಮಧ್ಯಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಿಂದ ಭಾರತಕ್ಕೆ ವಲಸೆಬಂದ ಮುಸಲ್ಮಾನರಲ್ಲಿ ಹಿಂದೆ ಭಾರತದಲ್ಲಿದ್ದಂತಹ ಸುಂದರ ಸಂಗೀತ ಸ್ವರಮೇಳಗಳ ಬಳಕೆ ಊರ್ಜಿತದಲ್ಲಿರಲಿಲ್ಲ. ಭಾರತೀಯ ಸಂಗೀತಕ್ಕೆ ಮನಸೋತ ಅವರು ಇಲ್ಲಿಗೆ ಬಂದನಂತರ ತಮ್ಮಲ್ಲಿನ ಕೆಲವು ರಾಗಗಳನ್ನು ಬದಲಿಸಿ ಭಾರತೀಯ ಪದ್ಧತಿಯಲ್ಲೇ ಅದನ್ನು ಹಾಡಲು ಆರಂಭಿಸಿದರು ಎಂಬುದು ಇತಿಹಾಸ. ಅಂತಹ ಒಂದು ರಾಗ: ಯಮನ್ ಅಥವಾ ಯಮನ್ ಕಲ್ಯಾಣ್. "ಅದು ಯಮನ್ ಅಲ್ಲ ಯವನ ಕಲ್ಯಾಣ್ ಎಂದು, ಅದನ್ನೇ ಮ್ಲೇಚ್ಛ ಕಲ್ಯಾಣ್ ಎಂದೂ ಹೇಳುತ್ತಾರೆ" ಎಂಬುದು ಶತಾವಧಾನಿ ಗಣೇಶರ ಹೇಳಿಕೆ. ಅಮೀರ ಖುಸ್ರು ಎಂಬ ಹೆಸರನ್ನು ಹಲವರು ವಿಚಿತ್ರವಾಗಿ ಬಳಸಿಕೊಂಡಿದ್ದಾರೆಯೇ ಹೊರತು ಆತ ಹಿಂದೆ ಇಂದಿನ ಕಾಬೂಲ್ ಕಡೆಗೆ ಬದುಕಿದ್ದವ ಎನ್ನುತ್ತಾರೆ ಗಣೇಶರು. ಅಮೀರ್ ಖುಸ್ರು ಭಾರತೀಯ ಸಂಗೀತಕ್ಕೆ ಒದೆರಡು ವಾದ್ಯ ಪರಿಕರಗಳನ್ನು ಕೊಟ್ಟಿದ್ದನ್ನು ಬಿಟ್ಟರೆ,  ಮುಸಲ್ಮಾನ ಜನಾಂಗದಿಂದ  ಹಿಂದೂಸ್ಥಾನೀ ಸಂಗೀತಕ್ಕೆ ಕೊಡುಗೆಗಳು ನೀಡಲ್ಪಟ್ಟಿವೆ ಎಂಬುದು ಸುಳ್ಳು ಎಂಬುದನ್ನು ಸಾಧಾರವಾಗಿ ವಿವರಿಸಿದರು.

ಬೇತಾಳ-ತ್ರಿವಿಕ್ರಮರ ಕಥೆಯನ್ನು ಪ್ರಾಯಶಃ ವೇತಾಲ ಭಟ್ಟನೇ ರಚಿಸಿರಬೇಕೆಂಬುದು ಸಂಶೋಧಕರ ಅನಿಸಿಕೆ; ಅದು ಇನ್ನೂ ನಿರ್ಧರಿತವಲ್ಲ. ಅದಕ್ಕೂ ಮುನ್ನ ಅಂತಹ ಯಾವುದೇ ಕೃತಿ ನಮಗೆ ಕಂಡು ಬರುವುದಿಲ್ಲ.  ಮಹಾಪಂಡಿತನಾಗಿದ್ದ ವೇತಾಲ ಭಟ್ಟ, ಆಶ್ರಯದಾತನಾದ ರಾಜಾ ವಿಕ್ರಮಾದಿತ್ಯನನ್ನು ಪ್ರಶಂಸಿಸುವ ಸಲುವಾಗಿ, ಇಪ್ಪತ್ತೈದು ಅದ್ಭುತ ಕಥೆಗಳನ್ನು ಹೊಂದಿರುವ ’ವೇತಾಲ ಪಂಚವಿಂಶತಿ’ಯನ್ನು ರಚಿಸಿರಬೇಕು.  ಕವಿ-ಪಂಡಿತ-ಕಲಾವಿದ-ಸಂಗೀತಜ್ಞ-ನ್ಯಾಯತತ್ಪರ-ಪ್ರಜಾರಂಜಕ-ಆಡಳಿತ ಸಮರ್ಥ-ಶೂರ-ಧೀರ-ಮಹಾಪರಾಕ್ರಮಿಯಾಗಿದ್ದ ಚಕ್ರವರ್ತಿ ಚಂದ್ರಗುಪ್ತ-ವಿಕ್ರಮಾದಿತ್ಯನ ಬಗೆಗೆ ಆ ಕಾಲಘಟ್ಟದಲ್ಲಿ ಅನೇಕ ದಂತಕಥೆಗಳು ಹುಟ್ಟಿದವಂತೆ! ವಿಶಾಖದತ್ತನೆಂಬ ಪಂಡಿತ ’ದೇವಿಚಂದ್ರಗುಪ್ತ’ಸಂಸ್ಕೃತ ನಾಟಕವನ್ನೂ ಬರೆದಿದ್ದು ಗೋಚರವಾಗುತ್ತದೆ. ರಾಜಾ ವಿಕ್ರಮನ ನ್ಯಾಯ ಸಿಂಹಾಸನವೆಂಬುದು ಈ ದೇಶ ಕಂಡ ಇನ್ನೊಂದು ಬೆರಗು!   ವಿಕ್ರಮಾದಿತ್ಯನ ನ್ಯಾಯದಾನದ ಹಲವು ಕಥೆಗಳು ಇಂದಿಗೂ ನಮಗೆ ಲಭ್ಯವಿದ್ದು, ಆತ ಕೈಗೊಂಡ ನಿರ್ಣಯಗಳು ಚಕಿತರನ್ನಾಗಿ ಮಾಡುತ್ತವೆ.

ದೀಪಕ ರಾಗ ಎಂದು ಹುಟ್ಟಿತು ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ! ಭಾರತೀಯ ಸಂಗೀತದಲ್ಲಿ ಸಂಧ್ಯಾ ಅಥವಾ ಸಂಜೆಯ ವೇಳೆಗೆ ದೀಪ ಮುಡಿಸುವ ಹೊತ್ತಿನಲ್ಲಿ ಹಾಡುವ ಅನೇಕ ರಾಗಗಳಿವೆ. ಅವುಗಳಲ್ಲಿ ಪೂರ್ವಿ ಥಾಟ್ ನಿಂದ ಆರಂಭಗೊಳ್ಳುವ ರಾಗಗಳೂ ಸೇರಿವೆ. ಸಂಜೆಯ  ಅಥವ ಸಂಧ್ಯಾ ರಾಗಗಳನ್ನೇ ದೀಪ ಹೊತ್ತಿಸುವ ವೇಳೆಯ ರಾಗಗಳಾದುದರಿಂದ "ದೀಪಕ ರಾಗ" ಎಂದು ಹೇಳಿದ್ದಿರಬೇಕೆ ಎಂಬುದು ಅವಧಾನಿಗಳ ಅನಿಸಿಕೆ. ತಾನ್ ಸೇನ್ನ ನಂತರದ ತಲೆಮಾರುಗಳಲ್ಲಿ ದೀಪಕ ರಾಗವೆಂದು ಪ್ರತ್ಯೇಕವಾಗಿ ಗುರುತಿಸಲ್ಪಟ್ಟ ರಾಗದ ಪ್ರಸ್ತಾವನೆಯಾಗಲೀ, ಹಾಡುವಿಕೆಯಾಗಲೀ ಅಷ್ಟಾಗಿ ನಡೆಯಲಿಲ್ಲ. ೬ನೇ ಶತಮಾನದಿಂದ ಸಿಗುವ ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಗಳಲ್ಲಿ ದೀಪಕ ರಾಗದ ಪ್ರಸ್ತುತಿ ಅಲ್ಲಲ್ಲಿ ಕಾಣುತ್ತದೆಯೇ ವಿನಃ, "ಅದು ಇದೇ ರಾಗ" ಎಂಬುದನ್ನು  ನಿರ್ದಿಷ್ಟವಾಗಿ ಹೇಳಲು ಯಾವ ಆಧಾರಗಳೂ ಸಿಗುವುದಿಲ್ಲ!!  ಆಳವನ್ನು  ಅಗೆಯುತ್ತ ಹೋದರೆ ಭಾರತೀಯ ಸಂಗೀತವೆಂಬುದು ಕ್ರಿಸ್ತಪೂರ್ವ ೨೫೦೦ರಲ್ಲೂ ಬಳಕೆಯಲ್ಲಿದ್ದುದು ತಿಳಿದುಬರುತ್ತದೆ! ೧೯೬೩ರಲ್ಲಿ, ರಾಮಕೃಷ್ಣ ಮಠದ ಪ್ರಜ್ಞಾನಾನಂದ ಸ್ವಾಮಿಗಳು 'A History of Indian Music: Ancient period'  ಎಂಬ ಗ್ರಂಥವನ್ನು ಬರೆದಿದ್ದಾರೆ.  The Classical Music of North India  ಎಂಬ ಪುಸ್ತಕವನ್ನು ೭೫ ತಂತಿಗಳ ಸರೋದ್ ವಾದಕನೆಂದೇ ಖ್ಯಾತನಾದ ಅಲಿ ಅಕ್ಬರ್ ಖಾನ್ ಬರೆದಿದ್ದಾರೆ.


ಅಜಂತಾ ಗುಹೆ ೯ ರಲ್ಲಿನ ಗೋಡೆಯಲ್ಲಿರುವ ಚಿತ್ರ

ಸಂಗೀತವೆಂಬುದು ಭಾರತೀಯ ಮೂಲದಲ್ಲಿ ಯಾವಾಗ ಮತ್ತು ಎಲ್ಲಿ ಆರಂಭವಾಯ್ತೆಂಬುದು ಯಾರಿಗೂ ಸ್ಪಷ್ಟವಿಲ್ಲ! ಆದರೆ, ಕ್ರಿಸ್ತ ಪೂರ್ವ ೨೫೦೦ ವರ್ಷಗಳ ಹಿಂದೆಯೇ ಸಂಗೀತ ಬಳಕೆಯಲ್ಲಿತ್ತು ಎಂಬುದಕ್ಕೆ ಕಲವು ಆಧಾರಗಳು ದೊರೆಯುತ್ತವೆ. ಸಾಮವೇದದ ಸಾಮಗಾಯನವೇ ಸಂಗೀತಕ್ಕೆ ಮೂಲಾಧಾರ ಎನ್ನಲಾಗುತ್ತದೆ. ಸಾಮವೇದದ ಪದೋಚ್ಚರಣೆಗಳಲ್ಲಿ ಅನುದತ್ತ[ದೀರ್ಘ], ಉದತ್ತ[ಶೀಘ್ರ] ಮತ್ತು ಸ್ವರಿತ [ಮಧ್ಯಮ] ಪ್ರಕಾರದ ಉಚ್ಚರಣೆಗಳಿವೆ ಎಂಬುದನ್ನು ಕಾಣಬಹುದು. ಈ ವ್ಯವಸ್ಥೆಗೆ ಮುಂದೆ ಸ ರಿ ಗ ಮ ಪ ದ ನಿ ಎಂಬ ಸ್ವರಗಳ ಸಮ್ಮಿಲನ ಮಾತ್ರ ಯಾವಾಗ ಅಳವಡಿಸಲ್ಪಟ್ಟಿತು ಎಂಬುದು ತಿಳಿದುಬರುವುದಿಲ್ಲ! ಮಹಾರಾಷ್ಟ್ರದ ಅಜಂತಾ ಗುಹೆಗಳ ಪೈಕಿ ೯ನೇ ಗುಹೆಯೈ ಗೋಡೆಯಲ್ಲಿ, ಅಜಮಾಸು  ಕ್ರಿಸ್ತಪೂರ್ವ ೫೦೦ ರಲ್ಲಿ ಚಿತ್ರಿತವಾದ  ಚಿತ್ರವೊಂದರಲ್ಲಿ ಸಂಗೀತದ ಪರಿಕರಗಳೊಟ್ಟಿಗೆ ಹಾಡುತ್ತಿರುವ ಮಹಿಳೆಯರ ಗಾಯವ್ನವನ್ನು ಆಲಿಸುತ್ತಿರುವ ರಾಜನೊಬ್ಬನ ಚಿತ್ರವೊಂದಿದೆ!  ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಭಾರತೀಯ ಸಂಗೀತದ ಬಗೆಗೆ ಹೇಳಿಕೆಯಿರುವುದು ಇನ್ನೊಂದು ದಾಖಲೆ. ಋಷಿ ವಾತ್ಸಾಯನನ ಹೇಳಿಕೆಯ ಪ್ರಕಾರ ಸಂಗೀತವೆಂಬುದು ಗೀತಂ, ವಾದ್ಯಂ, ನೃತ್ಯಂ ಎಂಬ ಮೂರು ಅಂಗಗಳಿಂದ ಕೂಡಿದೆ. ಸಾರಂಗದೇವನ ’ಸಂಗೀತ ರತ್ನಾಕರ’ ಎಂಬ ಹೊತ್ತಗೆಯನ್ನು ಬಿಟ್ಟರೆ ಅದಕ್ಕೂ ಆದಿಯಲ್ಲಿ ಯಾವ ಗ್ರಂಥಗಳೂ ಕಾಣಿಸುವುದಿಲ್ಲ. ೬ನೇ ಶತಮಾನದ ನಂತರ ಒಂದು ಲಿಖಿತ ರೂಪವಿರುವುದಕ್ಕೆ ಮತ್ತು ೭ನೇ ಶತಮಾನದಿಂದ ಆಳಿದ ರಾಜರುಗಳ ಆಸ್ಥಾನದಲ್ಲಿ ಸಂಗೀತಗಾರರು ಹಾಡುತ್ತಿದ್ದುದಕ್ಕೆ ಆಧಾರಗಳು ಸಿಗುತ್ತವೆ. ಸಿಂಧೂ ನಾಗರಿಕತೆ ಎಂದು ಇತಿಹಾಸ ತಜ್ಞರು ಹೇಳುವ ಕಾಲಘಟ್ಟದ ಸಾಮಗ್ರಿಗಳೆಂದು ಪರಿಗಣಿತವಾದವುಗಳಲ್ಲಿ, ಲಂಕೆಯಲ್ಲಿ ಸಂಗೀತ ವಿದ್ವಾಂಸ ರಾವಣನಿಂದ ರೂಪಿತವಾಯ್ತೆಂಬ ’ರಾವಣಾಹತ’ವೆಂಬ ವಾದ್ಯವೂ ಸೇರಿದೆ! ಇಷ್ಟೆಲ್ಲಾ ಇದ್ದರೂ ಭಾರತೀಯ ಸಂಗೀತವೆಂಬುದು, ಬಹುಶತಮಾನಗಳ ಕಾಲ ಗುರುವಿನಿಂದ ಶಿಷ್ಯನಿಗೆ [ಗುರು-ಶಿಷ್ಯ ಪರಂಪರೆ]ಬಾಯಿಂದ ಬಾಯಿಗೆ ಹೇಳಿಕೊಡಲ್ಪಟ್ಟು ಬಳಕೆಯಲ್ಲಿತ್ತಷ್ಟೆ. ಈ ಪರಂಪರೆ ಸುಮಾರು ೧೮ನೇ ಶತಮಾನದ ವರೆಗೂ ಮುಂದುವರಿಯಿತು ಎಂಬುದು ಕಾಣುತ್ತದೆ.


ಭಾರತೀಯ ಬಹುಪ್ರಾಚೀನ ಸಂಗೀತ ವಾದ್ಯ:  ರಾವಣಾಹತ

೧೮ನೇ ಶತಮಾನದಲ್ಲಿ ಭಾರತಕ್ಕೆ ಬ್ರಿಟಿಷರ ಆಗಮನವಾದಮೇಲೆ, ಬ್ರಿಟಿಷರು ಭಾರತದ ಈ ಪರಂಪರೆಯನ್ನು ವಿರೋಧಿಸಿ ಅಪರಾಧವೆಂಬಂತೆ ಕಂಡಿದ್ದರಿಂದ,  ಸಂಗೀತ ವಿದ್ವತ್ತುಳ್ಳವರು ತಮ್ಮ ಮನೆಯ ಮುಂದಿನ ಪೀಳಿಗೆಗಳಲ್ಲಿನ ಸಂಗೀತಾಸಕ್ತರಿಗೆ ಮಾತ್ರ ಸಂಗೀತವನ್ನು ಕಲಿಸಿಕೊಡುವುದು ಸಾಧ್ಯವಾಯ್ತು! ಸಂಗೀತವೆಂಬುದು ಕೇವಲ ಮನೋರಂಜನೆಯ ಮಾಧ್ಯಮವೆಂದು ಬ್ರಿಟಿಷ್ ಪ್ರೇರಿತ ಅನ್ಯ ರಾಜ್ಯಗಳವರು ಹೇಳುತ್ತಿದ್ದಾಗ, ಗ್ವಾಲಿಯರ್, ಬರೋಡಾ ಮತ್ತು ಅಯೋಧ್ಯಾ ರಾಜ್ಯಗಳು ಮಾತ್ರ ಸಂಗೀತವನ್ನು ಪುರಸ್ಕರಿಸುತ್ತಲೇ ಬಂದವು. ೧೯ನೇ ಶತಮಾನದಲ್ಲಿ ಬದುಕಿದ್ದ ಪಂಡಿತ್ ವಿಷ್ಣು ನಾರಾಯಣ ಭಾತ್‍ಖಂಡೆ [ಆಗಸ್ಟ್ ೧೦, ೧೮೬೦-ಸೆಪ್ಟೆಂಬರ್ ೧೯, ೧೯೩೬]  ಎಂಬವರು ಆಧುನಿಕ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಗ್ಗೆ ನಿಖರವಾಗಿ ಪುಸ್ತಕವೊಂದನ್ನು ಬರೆಯುವವ ವರೆಗೂ ಸಂಗೀತ ಬಳಲುತ್ತಲೇ-ತೆವಳುತ್ತಲೇ ಬಂತು. ಮುಂಬೈಯ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಭಾತ್‍ಖಂಡೆ, ಆದಿಯಲ್ಲಿ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಓದಿದವರು. ಆಗಲೇ ಸಂಗೀತದಲ್ಲಿ ಆಸಕ್ತಿ ತಳೆದು ಸಿತಾರ್ ನುಡಿಸತೊಡಗಿದ್ದರು. ಮುಂದೆ, ಅನಿರೀಕ್ಷಿತವಾಗಿ ತನ್ನ ಹೆಂಡತಿ ಮತ್ತು ಮಗಳ ಸಾವನ್ನು ಕಂಡ ಅವರು, ಹಿಂದೂಸ್ಥಾನಿ ಸಂಗೀತಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟರು. ಬ್ರಿಟಿಷರ ಸೊಕ್ಕಿನಿಂದ ಸೊರಗಿದ್ದ ಭಾರತೀಯ ಹಿಂದೂಸ್ಥಾನೀ ಪ್ರಕಾರದ ಸಂಗೀತದ ಅಳಿದುಳಿದ  ಭಾಗಗಳನ್ನು ಕಲೆಹಾಕಿ ಅದಕ್ಕೊಂದು ನಿರ್ದಿಷ್ಟ ಸ್ವರೂಪ ಪರಿಕಲ್ಪಿಸುವಲ್ಲಿ ಮುಂದಾದ ಅವರು ವಕೀಲಿ ವೃತ್ತಿಯನ್ನೂ ತೊರೆದುಬಿಟ್ಟರು.  ಹಲವು ಸಂಶೋಧನೆಗಳನ್ನು ಕೈಗೊಂಡ ಅವರ ಪ್ರಬಂಧ ’ಸ್ವರ ಮಾಲಿಕಾ’ ಮೊದಲು ಪ್ರಕಟವಾಯ್ತು. ನಂತರ ೧೯೦೯ ರಲ್ಲಿ, ’ಶ್ರೀ ಮಲ್ಲಕ್ಷಯ ಸಂಗೀತಂ’ ಎಂಬ ಸಂಸ್ಕೃತ ಭಾಷೆಯ ಗ್ರಂಥವನ್ನು ಹೊರತಂದರು; ನಂತರ ಜನಸಾಮಾನ್ಯರಿಗೆ ಅದು ಅರ್ಥವಾಗುವಂತೆ ಅವರ ಈ ಕೃತಿಗೆ ಅವರೇ ಭಾಷ್ಯ[ಅರ್ಥ ವಿವರಣೆ]ಗಳನ್ನು ಬರೆದರು. 


ಭಾತ್‍ಖಂಡೆಯವರ ಗ್ರಂಥದಲ್ಲಿ ದೀಪಕ ರಾಗದ ಬಗೆಗೆ ಶ್ಲೋಕ ವೊಂದು ಈ ರೀತಿ ಇದೆ:

ಪೂರ್ವೀ ಮೇಲ ಸಮುತ್ಪನ್ನೋ ದೀಪಕೋ ಗುನಿ ಸಮ್ಮತಃ
ಆರೋಹಣೇ ರಿ-ವರ್ಜ್ಯಂಸ್ಯಾದ್ ಅವರೋಹೇ ನಿ-ವರ್ಜಿತಂ |
ಷಡ್ಜ ಸ್ವರೋ ಭವೇದ್ವಾದಿ ಕೈಶ್ಚಿತ್ ಪಂಚಮರ್ಹರಿತಃ
ಗಾನಂ ಸುಸಮ್ಮತಂ ಚಾಸ್ಯ ದಿನೇ ಯಾಮೇ ತುರೀಯಕೇ ||

ಆರೋಹಣದಲ್ಲಿ ’ರಿ’ ಸ್ವರವನ್ನೂ ಮತ್ತು ಮತ್ತು ಅವರೋಹಣದಲ್ಲಿ ’ನಿ’ಸ್ವರವನ್ನೂ  ಬಳಸಬಾರದು. ಷಡ್ಜವನ್ನು ವಾದಿಯನ್ನಾಗಿಯೂ ಪಂಚಮವನ್ನು ಸಂವಾದಿಯನ್ನಾಗಿಯೂ ಬಳಸಬೇಕು [ಇದಕ್ಕೆ ವ್ಯತ್ಯಯದ ಹೇಳಿಕೆಗಳೂ ಕೆಲವರಲ್ಲಿವೆ!] ಎಂಬುದು ಶ್ಲೋಕದ ತಾತ್ಪರ್ಯ.

ದೀಪಕರಾಗದ ಜಾಡನ್ನು ಹಿಡಿಯಲು ಹೊರಟಾಗ ಕೆಲವು ಸಂಗೀತ ವಿದ್ವಾಂಸರನ್ನು ನಾನು ಕೇಳಿಕೊಂಡೆ. ಆ ಪೈಕಿ ಕೆರೆಮನೆ ರಾಮ ಹೆಗಡೆಯವರು ಮಾತ್ರ ಸ್ಪಂದಿಸಿ ಕೆಲವು ಮಾಹಿತಿ ನೀಡಿದರು; ಉಳಿದವರಿಗೆ ಈ ರಾಗದ ಬಗ್ಗೆ ಯಾವ ಆಸಕ್ತಿಯೂ ಇರದಿರಬಹುದು ಅಥವಾ ನನ್ನ ಕೋರಿಕೆ ಅವರ ಗಮನಕ್ಕೆ ಬಾರದೇ ಇದ್ದಿರಬಹುದು. ರಾಮ ಹೆಗಡೆಯವರಿಂದಲೂ ಕೆಲವು ಪ್ರಶ್ನಾವಳಿಗಳು ಹೊರಟಾಗ  ಅವಧಾನಿಗಳೆಡೆಗೆ ಮುಖಮಾಡಿದೆ, ಅಲ್ಲೊಂದಷ್ಟು ಮಾಹಿತಿ ದೊರೆಯಿತು. ಹಲವು ಹೊತ್ತಗೆಗಳನ್ನು ತಡಕಾಡಿದ ನಂತರವೂ ಬೇತಾಳ-ತ್ರಿವಿಕ್ರಮನೆನಿಸಿದ ವಿಕ್ರಮಾದಿತ್ಯ, "ನನ್ನ ಪರಾಕ್ರಮದ ಮುಂದೆ ನೀನೇನು? ಯತ್ನಿಸುತ್ತಲೇ ಇರು" ಎಂಬಂತೆ ಚಂದ್ರಗುಪ್ತ-ವಿಕ್ರಮಾದಿತ್ಯ  ಮತ್ತು ಭವಿಷ್ಯ ಪುರಾಣದಲ್ಲಿ ಕಂಡ ವಿಕ್ರಮಾದಿತ್ಯರಲ್ಲಿ ಇಬ್ಬರೂ ಅವರೇ ಆಗಿರಬಹುದೋ ಅಥವಾ ಇಬ್ಬರೂ ಬೇರೆ ಬೇರೆಯೋ ಎಂಬುದು ಖಂಡಿತ ಅರ್ಥವಾಗಲಿಲ್ಲ!

ಹೀಗೇ, ದೀಪಕ ರಾಗದ ಬೆನ್ನತ್ತಿ ಹೊರಟಾಗ, ಅಖಂಡ ಭಾರತೀಯ ಸಂಗೀತದ ಆಮೂಲಾಗ್ರ ದರ್ಶನವನ್ನು ಪಡೆಯುವಂತಾಯ್ತು. ಇಂದು ನಮ್ಮಲ್ಲಿನ ಉತ್ತರಾದಿ-ದಕ್ಷಿಣಾದಿ ಎಂಬೆರಡೂ ಸಂಗೀತ ಪ್ರಕಾರಗಳ ಕುರಿತಾಗಿ ಹಲವು ವಿದ್ವಾಂಸರು ಬರೆದ ಪುಸ್ತಕಗಳಿವೆ. ಸಾವಿರಾರು ವರ್ಷಗಳ ಇತಿಹಾಸದಲ್ಲೆಲ್ಲೋ ದೀಪಕರಾಗ ಅಡಗಿಹೋಗಿದೆ! "ಅದು ಇದೇ" ಎಂದು ನಿಖರವಾಗಿ, ನಿಚ್ಚಳವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲದಂತಾಗಿದೆ. ಅನ್ಯ ದೇಶಗಳವರು ತಮ್ಮ ತಮ್ಮ ಸಂಸ್ಕೃತಿ-ಪರಂಪರೆಗೆ ಆದ್ಯತೆಗಳನ್ನು ಕೊಟ್ಟು, ರಕ್ಷಿಸಿಕೊಂಡರೆ,  ಪರಕೀಯರ ದಾಳಿ-ಆಳ್ವಿಕೆಗಳಿಂದ ಪ್ರಕ್ಷುಬ್ಧಗೊಂಡ, ಮಲಿನಗೊಂಡ ಭಾರತೀಯರ ಮನಸ್ಸುಗಳಲ್ಲಿ ನಿಜದ ಅರಿವಿರದೇ ಇರುವುದನ್ನು ಕಂಡಾಗ ಖೇದವಾಗುತ್ತದೆ.  ಅನ್ಯರ ಒಡೆದಾಳುವ ನೀತಿಗೆ ಬಲಿಯಾದ ನಾವು ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ಅಮೂಲ್ಯ ಸಂಸ್ಕೃತಿಯನ್ನು ಕಾಪಿಟ್ಟುಕೊಳ್ಳಬೇಕಾಗಿದೆ, ನಮಸ್ಕಾರ.   

Thursday, March 13, 2014

ಗಮಯನ ಕಥೆಯುಣಿಸಿದ ಡಾ. ಎಲ್. ಆರ್. ಹೆಗಡೆ


ಚಿತ್ರಋಣ: ಅಂತರ್ಜಾಲ

ಗಮಯನ ಕಥೆಯುಣಿಸಿದ ಡಾ. ಎಲ್. ಆರ್. ಹೆಗಡೆ

ತೊಟ್ಟಿಲ ಹೊತ್ಕೊಂಡು ತೌರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು  | ತೌರೂರ
ತಿಟ್ಟತ್ತಿ ತಿರುಗಿ ನೋಡ್ಯಾಳ

ಗರತಿಯೋರ್ವಳು ತೌರುಮನೆಯಿಂದ ಗಂಡನ ಮನೆಗೆ ತೊಟ್ಟಿಲಕಂದನನ್ನು ಕರೆದೊಯ್ಯುವ ಭಾವನಾತ್ಮಕ ಸನ್ನಿವೇಶ ಮೇಲಿನ ಜನಪದ ಪದ್ಯದಲ್ಲಿದೆ. ತವರು ಮನೆಯಲ್ಲಿ ಕೊಟ್ಟ ಸೀರೆಯನ್ನು ಉಟ್ಟುಕೊಂಡ ಗರತಿ, ಅಪ್ಪ ತನ್ನ ಕಂದಮ್ಮನಿಗೆ ಉಣಿಸಲು ಕರಾವಿವಾಗಿ ನೀಡಿದ ಎಮ್ಮೆಯನ್ನು ಜೊತೆಮಾಡಿಕೊಂಡು, ಸಂಗಡಿಗರೊಂದಿಗೆ ತೊಟ್ಟಿಲನ್ನು ಹೊರಿಸಿಕೊಂಡು, ಮೆಟ್ಟಿಲುಗಳನ್ನು ಹತ್ತಿ ಮರಳಿ ಮರಳಿ ತವರನ್ನು ನೆನಯುತ್ತಲೇ ತೆರಳುವ ಪರಿ ಭಾವ ಸಂಕೋಲೆಗಳಿಂದ ನಮ್ಮನ್ನು ಬಂಧಿಸುತ್ತದೆ. ಇಂತಹ ಹಾಡುಗಳನ್ನು ಡಾ|ಎಲ್.ಆರ್.ಹೆಗಡೆಯವರು ಬೋಧಿಸುವ ರೀತಿ ಎಲ್ಲರಿಗಿಂತ ವಿಭಿನ್ನವಾಗಿತ್ತು. ಸನ್ನಿವೇಶಗಳನ್ನು ಅನುಭವಿಸಿ ವಿವರಿಸುತ್ತಿದ್ದ ಶೈಲಿ ಅನನ್ಯ ಮತ್ತು unparalleled.

ನಾವೆಲ್ಲಾ  ಓದುತ್ತಿದ್ದಾಗ ಜನಪದ ಕಥೆಗಳೂ ಅಲ್ಲಲ್ಲಿ ಪಠ್ಯದಲ್ಲಿ ಇರುತ್ತಿದ್ದವು. ಡಾ| ಎಲ್.ಆರ್. ಹೆಗಡೆಯವರ ’ಗಮಯನ ಕಥೆ’  ಅಂಥದ್ದರಲ್ಲಿ ಒಂದು.  2005ರಲ್ಲಿ ಉತ್ತರಕನ್ನಡದ ಕುಮಟಾಕ್ಕೆ ನಾನು ಹೋಗಿ, ಹೊರಟು ನಿಂತಿದ್ದೆ, ಆಗ ಕೇಳಿಬಂದಿದ್ದ ಸುದ್ದಿ ಜನಪದ ಸಾಹಿತಿ ಎಲ್.ಆರ್.ಹೆಗಡೆಯವರ ನಿಧನದ್ದು. ಅವರ ಸಂಗ್ರಹದ  ’ಗಮಯನ ಕಥೆ’ ಎಷ್ಟು  ಹೃದಯಂಗಮವಾಗಿತ್ತೆಂದರೆ, ಅದು ಮಕ್ಕಳ ಕಥೆಯೆನಿಸಿದರೂ, ಅದರಲ್ಲಿರುವ ಭಾವ-ಬಂಧಗಳು ಮಾತ್ರ ಎಳೆಯ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನು ಬೀರುತ್ತಿದ್ದವು. ಗಮಯನ ಕಥೆಯಲ್ಲಿ ಕಾಡುಪಾಲಾಗುವ ಹುಡುಗನೊಬ್ಬ ಬೃಹತ್ ಮರವೊಂದರ ಕೆಳಗೆ ಕಾಡು ಗಮಯಗಳ ಹಿಂಡನ್ನು ಕಾಣುವುದು, ಅವುಗಳ ಜೊತೆ ಆನ ಸಖ್ಯ ಬೆಳೆಯುವುದು, ನಿತ್ಯವೂ ಅವು ಹಗಲುಹೊತ್ತಿನಲ್ಲಿ ಮೇಯಲು ಹೋದಾಗ, ಅವುಗಳ ಸೆಗಣಿಗುಡ್ಡೆಗಳನ್ನೆಲ್ಲ ಎತ್ತಿ ಜಾಗವನ್ನು ಸ್ವಚ್ಛಗೊಳಿಸಿಡುವುದು, ಗಮಯಗಳು ಅವನಿಗೆ ಉಪಕರಿಸುವುದು, ಚಿನ್ನ-ಬೆಳ್ಳಿ-ಕಬ್ಬಿಣದ ಕೊಳಲುಗಳು...ಇತ್ಯಾದಿ ಇತ್ಯಾದಿ ಇನ್ನೇನೇನೋ ಮಸುಕು ಮಸುಕಾಗಿ ನೆನಪಿದೆಯಷ್ಟೆ. ಎಲ್.ಆರ್. ಹೆಗಡೆಯವರ ಸಮಗ್ರ ಸಂಕಲನಗಳು ಸಂಗ್ರಾಹ್ಯವಾಗಿವೆ; ವಿಶಾಲ ಓದಿನ ಅಭಿರುಚಿಯುಳ್ಳವರಿಗೆ ಲೋಕಜ್ಞಾನದ ಜೊತೆಗೆ ಮುದನೀಡುವ, ರೋಮಾಂಚನಗೊಳಿಸುವ ಕಥೆಗಳೂ ಅವುಗಳಲ್ಲಿವೆ.  ಜನಪದ  ಸಾಹಿತಿ ದಿ| ಎಚ್.ಎಲ್.ನಾಗೇಗೌಡರಿಗಿಂತ ಮೊದಲೇ ಜನಪದ ಕಹಳಯೆನ್ನೂದಿದ್ದವರು ಹೆಗಡೆಯವರು. ಆದರೆ ಆ ಕಾಲಘಟ್ಟದಲ್ಲಿ ಅವರ ಕೆಲಸಗಳಿಗೆ ಅಷ್ಟೊಂದು ಆದ್ಯತೆ ದೊರಕಲಿಲ್ಲ! ಸರಕಾರ ಅವರಿಗಾಗಿ ಯಾವ ಜಾಗವನ್ನೂ ಕೊಡಲಿಲ್ಲ-ಅವರು ಕೇಳಲೂ ಇಲ್ಲವೆಂದಿಟ್ಟುಕೊಳ್ಳೋಣ.   

ನಾಡವರು, ಸಿದ್ಧಿಗಳು, ಹಸಲರು, ಹಾಲಕ್ಕಿ ಒಕ್ಕಲಿಗರು, ಹರಿಜನರೇ ಮೊದಲಾದ ಜನಾಂಗಗಳಲ್ಲಿನ ಜನಪದ ಕಥೆ, ಗಾದೆ, ಜಾಣ್ನುಡಿ, ಗಿಡಮೂಲಿಕೆ-ಮಾಹಿತಿ ಇಂಥವುಗಳನ್ನೆಲ್ಲ ನಲವತ್ತು ದಶಕಗಳ ಹಿಂದೆಯೇ ಸಂಗ್ರಹಿಸಿ,   ಹೊಸ ಪ್ರಪಂಚಕ್ಕೆ ತೆರೆದಿಟ್ಟವರಲ್ಲಿ ಪ್ರಮುಖರಾದವರೆಂದರೆ ಡಾ| ಲಕ್ಷ್ಮೀನಾರಾಯಣ ಹೆಗಡೆ (ಡಾ. ಎಲ್. ಆರ್. ಹೆಗಡೆ, 1923-2005).  ಉತ್ತರ ಕನ್ನಡ ಜಿಲ್ಲೆಯು ಜಾನಪದ ಹಾಗೂ ಯಕ್ಷಗಾನ ಪ್ರಕಾರಗಳಿಗೆ ತೌರುಮನೆಯಿದ್ದಂತೆ. ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆ ಎಂಬಲ್ಲಿ. ತಂದೆ ರಾಮಕೃಷ್ಣ ಹೆಗಡೆಯವರು. ಕುಮಟಾದ ಗಿಬ್ಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ತಾಯಿ ಮಹಾಲಕ್ಷ್ಮಿ.

ಇಲ್ಲೊಂದು ಆ ತರಗತಿಯ ಜನಪದ ಕಥೆಯಿದೆ:

ಒಂದಲ್ಲಾ ಒಂದೂರಿತ್ತು. ಅಲ್ಲಿ ಗುಣಶೇಖರನೆಂಬ ಯುವಕನಿದ್ದ. ಅವನು ತಂದೆಯ ಬಳಿ ನೂರು ಬೆಳ್ಳಿಯ ನಾಣ್ಯ ತೆಗೆದುಕೊಂಡು ಪ್ರಪಂಚ ಸುತ್ತಲು ಹೊರಟ. ದಾರಿಯಲ್ಲಿ  ನಾಲ್ಕು ಜನ  ಒಂದು ಬೆಕ್ಕನ್ನು ಹಿಡಿದು ಕೊಂಡು ಕುಳಿತಿದ್ದರು. ಅದು ಅವರ ಕೋಳಿಯನ್ನು ತಿಂದಿತ್ತಂತೆ, ಅದಕ್ಕೇ ಬೆಕ್ಕಿಗೆ ಶಿಕ್ಷೆ ವಿಧಿಸಲು ಅವರು ಯೋಚಿಸುತ್ತಿದ್ದರು. ಗುಣಶೇಖರನಿಗೆ ಬೆಕ್ಕನ್ನು ಕಂಡು ಬಹಳ ಕನಿಕರವೆನಿಸಿತು.

"ಅಯ್ಯೋ ಪಾಪ ಅದನ್ನು ಬಿಟ್ಟು ಬಿಡಿ. ನಿಮಗೆ ಐವತ್ತು ಬೆಳ್ಳಿಯ ನಾಣ್ಯ ಕೊಡುತ್ತೇನೆ" ಎಂದ. ಆ ನಾಲ್ವರು ಸಂತೋಷದಿಂದ ಹಣ ತೆಗೆದುಕೊಂಡು ಬೆಕ್ಕನ್ನು ಬಿಟ್ಟು ಹೋದರು. ಗುಣಶೇಖರ ಬೆಕ್ಕನ್ನೆತ್ತಿಕೊಂಡು ಮುನ್ನಡೆದ.

ಇನ್ನೂ ಕೆಲವು ಮೈಲು ನಡೆದ ಬಳಿಕ ಒಂದು ಹಳ್ಳಿಯವರು ಹಾವೊಂದನ್ನು ಕೊಲ್ಲಲು ಯತ್ನಿಸುತ್ತಿರುವುದನ್ನು ಕಂಡ. "ಆ ಬಡ ಪ್ರಾಣಿಗೆ ಯಾಕೆ ಕಷ್ಟ ಕೊಡ್ತೀರಿ?" ಈ ಐವತ್ತು ಬೆಳ್ಳಿ ನಾಣ್ಯ ತೆಗೆದುಕೊಂಡು ಅದನ್ನು ಬಿಟ್ಟಿಡಿ" ಎಂದ.  ಹೀಗೆ ಅವನಿಗೆ ಎರಡು ಪ್ರಾಣಿಗಳು ಗಂಟುಬಿದ್ದವು. ಕೈಯಲ್ಲಿದ್ದ ದುಡ್ಡೆಲ್ಲ ಖರ್ಚಾಗಿಹೋಯ್ತು. ಮುಂದುವರಿಯುವುದು ಹೇಗೆ? ಎಂದುಕೊಳ್ಳುತ್ತಾ ಮರಳಿ ತಂದೆಯ ಮನೆಗೆ ಬಂದ.  ಆದರೆ ತಂದೆ ಅವನನ್ನು ಸಿಟ್ಟಿನಿಂದ ಹೊರದೂಡಿದ. ಆಗ ರಾತ್ರಿಯ ಸಮಯವಾಗಿತ್ತು. ಹೆದರುತ್ತಲೇ ಗುಣಶೇಖರ ಕಾಡಿನ ಮರದ ಕೆಳಗೆ ಮಲಗಿದ. ಹಾವು ಅವನ ತಲೆಯಮೇಲೆ ಹೆಡೆ ಬಿಚ್ಚಿ ನಿಂತಿತು. ಬೆಕ್ಕು ಅವನನ್ನು ಕಚ್ಚಲು ಬಂದ ಇಲಿಗಳನ್ನು ಓಡಿಸಿತು. ಅಂತೂ ಬೆಳಗಾಯಿತು. ಆಗ ಹಾವು ಹೇಳಿತು: "ಒಡೆಯಾ, ಇಲ್ಲೇ ನದಿ ಕೆಳಗಿನ ಗುಹೆಯಲ್ಲಿ ನಮ್ಮ ತಂದೆ ಇದ್ದಾನೆ. ನೀನು ನನ್ನ ಜೀವ ಉಳಿಸಿರುವುದರಿಂದ  ಏನು ಕೇಳಿದ್ರೂ ತಂದೆ ಕೊಡ್ತಾನೆ. ಮಾಯದ ಉಂಗುರ ಬೇಕು ಅಂತ ಅವನಲ್ಲು ಕೇಳು."

ಗುಣಶೇಖರ ಹಾವಿನ ಜೊತೆ ನದಿಯಲ್ಲಿ ಮುಳುಗಿ ಅದರ ತಂದೆಯಿಂದ ಮಾಯದ ಉಂಗುರವನ್ನು ಪಡೆದುಕೊಂಡ. ನದಿಯಿಂದ ಹೊರಬಂದು ಉಂಗುರವನ್ನು ಸೂರ್ಯನ ಕಿರಣಗಳಿಗೆ ಒಡ್ಡಿದ. ಅರೆಕ್ಷಣದಲ್ಲಿ ಅಲ್ಲೊಂದು ಚಂದದ ಅರಮನೆ ಪ್ರತ್ಯಕ್ಷವಾಯ್ತು. ಅದರೊಳಗೆ ಬೇಕುಬೇಕಾದ ಸಾಮಾನುಗಳು, ಸೇವಕರು, ಬಂಗಾರದ ಕೂದಲಿನ ರಾಜಕುಮಾರಿಯೊಬ್ಬಳು ಅವನನ್ನು ಇದಿರುಗೊಂಡು ಹಾರ ಹಾಕಿದಳು! ಗುಣಶೇಖರನೂ ರಾಜಕುಮಾರಿಯೂ ಆ ಅರಮನೆಯಲ್ಲಿ ಸುಖವಾಗಿದ್ದರು.

ಕಥೆ ಇಷ್ಟಕ್ಕೇ ಮುಗಿಯಲಿಲ್ಲ!!

ಒಂದಾನೊಂದು ದಿನ ನದೀತೀರದಲ್ಲಿ ಕುಳಿತು ರಾಜಕುಮಾರಿ ತನ್ನ ಕೂದಲನ್ನು ಬಾಚಿಕೊಳ್ಳುತ್ತಿದ್ದಳು. ಆಗ ಅವಳ ಒಂದು ಬಂಗಾರದ ಕೂದಲೆಳೆ ನೀರಿನಲ್ಲಿ ಬಿದ್ದು ತೇಲುತ್ತಾ ಹೋಯಿತು. ಕೆಳಗೆ ನದಿಯಲ್ಲಿ ಈಜುತ್ತಿದ್ದ ನೆರೆದೇಶದ ರಾಜಕುಮಾರನ ಕೈಗೆ ಆ ಕೂದಲೆಳೆ ಸಿಕ್ಕಿಬಿಟ್ಟಿತು! " ಮದುವೆಯಾದ್ರೆ ಈ ಬಂಗಾರದ ಕೂದಲಿನ ಸುಂದರಿಯನ್ನು ಮಾತ್ರ" ಎಂದು ಅವನು ಶಪಥ ಮಾಡಿದ. ಬಂಗಾರದ ಕೂದಲಿನ ಹುಡುಗಿಗಾಗಿ ಬಹಳಷ್ಟು ಹುಡುಕಿಸಿದ; ಆದರೆ, ಎಷ್ಟು ಹುಡುಕಿಸಿದರೂ ಆ ಸುಂದರಿ ಸಿಗದೆ, ಚಿಂತೆಯಲ್ಲಿ ಊಟ-ತಿಂಡಿ ರುಚಿಸದೆ, ರಾಜಕುಮಾರ ವ್ಯಥೆಯಿಂದ ಬಡಕಲು ಶರೀರದವನಾಗತೊಡಗಿದ. ಕಡೆಗೆ ಮಾಟಗಾತಿಯಾದ ಅವನ ಮುದಿ ಚಿಕ್ಕಮ್ಮ ಹತ್ತಿರ ಬಂದು, "ಮಗು, ಈ ಸುಂದರಿಯನ್ನು ನಾನು ಹುಡುಕಿಕೊಂಡು ಬರ್ತೇನೆ" ಎಂದು ಒಂದು ಹದ್ದಿನ ರೂಪ ಧರಿಸಿ ಆಕಾಶದಲ್ಲಿ ಹಾರಿಹೋದಳು.

ಹಾರುತ್ತಿರುವ ಹದ್ದಿನ ಕಣ್ಣಿಗೆ ಬಂಗಾರಕೂದಲಿನ ಸುಂದರಿ ಕಣ್ಣಿಗೆ ಬಿದ್ದೊಡನೆ, ಹದ್ದಿನ ರೂಪದ ಮಾಟಗಾತಿ ಕೆಳಗಿಳಿದು, ಮುದುಕಿಯ ರೂಪ ಧರಿಸಿ ಅವಳ ಬಳಿಗೆ ಹೋದಳು.‘ ಮಗಳೇ ಹೇಗಿದ್ದೀಯಾ? ನನ್ನ ಗುರುತು ಸಿಗಲಿಲ್ಲವೇನೆ? ನಾನು ನಿನ್ನ ದೊಡ್ಡಮ್ಮನಲ್ಲವೇನೆ?" ಎಂದು ಕೇಳಿ ಆತ್ಮೀಯವಾಗಿ ಮಾತನಾಡುತ್ತಾ ಅಲ್ಲಿಯೇ ಉಳಿದುಬಿಟ್ಟಳು! ಒಂದೆರಡು ದಿನಗಳ ಬಳಿಕ ಉಂಗುರವನ್ನೆತ್ತಿಕೊಂಡು ಓಡಿಹೋದಳು!!

ಮರಳಿದ ಹದ್ದು ಮತ್ತೆ ಮಾಟಗಾತಿಯ ರೂಪ ಧರಿಸಿ-ಅರಮನೆಗೆ ಬಂದು, ಉಂಗುರವನ್ನು ರಾಜಕುಮಾರನ ಕೈಗೆ ಕೊಟ್ಟು, ಆತ ಅದನ್ನು ಬಿಸಿಲಿಗೆ ಹಿಡಿದಾಗ, ಅರಮನೆಯೂ ರಾಜಕುಮಾರಿಯೂ ಅವನ ರಾಜ್ಯಕ್ಕೆ ಬಂದರು! "ನಿನಗಾಗಿ ಅದೆಷ್ಟು ದಿನ ಕಾದಿದ್ದೆ ಗೊತ್ತೇ? ನನ್ನನ್ನು ಮದುವೆಯಾಗು" ಎಂದು ಅವನು ರಾಜಕುಮಾರಿಯನ್ನು ಒತ್ತಾಯಪಡಿಸಿದ. ರಾಜಕುಮಾರಿಗೆ ಗಾಬರಿಯಾಯಿತು. ಅವಳು ಹೊರಗೆ ಏನನ್ನೂ  ತೋರಿಸಿಕೊಳ್ಳದೆ, "ಆಗ್ಲಿ, ನಂಗೆ ಒಂದು ತಿಂಗಳು ಸಮಯ ಕೊಡು" ಎಂದುಬಿಟ್ಟಳು.

ಇತ್ತ ಬೇಟೆಗೆ ಹೋಗಿದ್ದ ಗುಣಶೇಖರ ವಾಪಸು ಬರುವ ಹೊತ್ತಿಗೆ ಅರಮನೆ ಮತ್ತು ರಾಜಕುಮಾರಿ ಇಬ್ಬರೂ ಮಾಯವಾಗಿದ್ದರು! ಏನೂಮಾಡಲು ದಾರಿ ಕಾಣದೇ ಅವನು ದುಃಖದಿಂದ ಆಳುತ್ತಾ ಕುಳಿತುಬಿಟ್ಟ. ಆಗ ಬೆಕ್ಕು ಅವನ ಹತ್ತಿರ ಬಂದು "ಅಳಬೇಡ ಒಡೆಯನೇ, ಹೇಗಾದ್ರೂ ಮಾಡಿ ಆ ಉಂಗುರ ತರ್ತೇನೆ" ಎಂದು ಹೇಳಿ ಹೊರಟೇಬಿಟ್ಟಿತು!

ನೆರೆರಾಜ್ಯಕ್ಕೆ ಅದು ತಲುಪಿದಾಗ ರಾತ್ರಿಯಾಗಿದ್ದರಿಂದ, ರಾಜಕುಮಾರ  ಹಂಸತೂಲಿಕಾತಲ್ಪದಮೇಲೆ ಮಲಗಿದ್ದ. ಇಲಿಯೊಂದರ ಸಹಾಯದಿಂದ ಬೆಕ್ಕು ಉಂಗುರವನ್ನು ಲಪಟಾಯಿಸಿ ವಾಯುವೇಗದಲ್ಲಿ ಹಿಂತಿರುಗಿ ಬಂತು. ಮರುದಿನ ಬೆಳ್ಳ್ಂಬೆಳಿಗ್ಗೆ ಗುಣಶೇಖರ ಉಂಗುರವನ್ನು ಸೂರ್ಯನ ಬಿಸಿಲಿಗೆ ಹಿಡಿದಾಗ ಅರಮನೆ ಮತ್ತು ರಾಜಕುಮಾರಿ ಅಲ್ಲಿ ಪ್ರತ್ಯಕ್ಷವಾದರು! ಅಂದಿನಿಂದ ಗುಣಶೇಖರ ಉಂಗುರವನ್ನು ಬಹು ಜೋಪಾನವಾಗಿರಿಸಿಕೊಂಡ.

ಇಂತಹ ಕಥೆಗಳಲ್ಲಿ ಬರುವ ಕುತೂಹಲಕಾರಿ ತಿರುವುಗಳು, ಕಲ್ಪನಾ ಜಗತ್ತು ಮಕ್ಕಳ ಮನಸ್ಸಿಗೊಂದೇ ಅಲ್ಲದೇ ಎಲ್ಲಾ ವಯಸ್ಸಿನವರಿಗೂ ಮುದನೀಡುವುದರಲ್ಲಿ ಸಂಶಯವಿಲ್ಲ.

ಜನಪದ ತಜ್ಞ ಎಲ್.ಆರ್. ಹೆಗಡೆಯವರ ಪ್ರಾರಂಭಿಕ ಶಿಕ್ಷಣ ಹೊಲನಗದ್ದೆ ಹಾಗೂ ಗುಡೆ ಅಂಗಡಿಗಳಲ್ಲಿ. ಪ್ರೌಢಶಾಲೆಗೆ ಸೇರಿದ್ದು-ಅವರ ತಂದೆಯೇ ಅಧ್ಯಾಪಕರಾಗಿದ್ದ ಕುಮಟಾದ ಗಿಬ್ಸ್ ಹೈಸ್ಕೂಲಿಗೆ. ಬಿ.ಎ. ಪದವಿ ಪಡೆದದ್ದು ಬೆಳಗಾವಿಯ ಲಿಂಗರಾಜು ಕಾಲೇಜು ಹಾಗೂ ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಿಂದ ಬಿ.ಟಿ. ಪದವಿ. ಪೂನಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪ್ರಥಮ ವರ್ಗದಲ್ಲಿ ತೇರ್ಗಡೆಯಾಗಿ ಪಡೆದರು. ‘ಕುಮಾರವ್ಯಾಸನ ಪಾತ್ರ ಸೃಷ್ಟಿ’ ಎಂಬ ಪ್ರೌಢ ಪ್ರಬಂಧವನ್ನು ಡಾ.ಆರ್.ಸಿ. ಹಿರೇಮಠರವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವದ್ಯಾಲಯಕ್ಕೆ ಸಲ್ಲಿಸಿ ಪಡೆದ ಡಾಕ್ಟರೇಟ್ ಪದವಿ.

ಬೋಧಕರಾಗಿ ಕಾರವಾರದ ಸರಕಾರಿ ಹೈಸ್ಕೂಲಿನಲ್ಲಿ ಉದ್ಯೋಗ ಪ್ರಾರಂಭಿಸಿ ಹೊನ್ನಾವರದ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿಯೂ ಕೆಲಕಾಲ ಸೇವೆ ಸಲ್ಲಿಸಿದ ನಂತರ ಕುಮಟಾದ ಕೆನರಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ೧೯೭೮ರಲ್ಲಿ ನಿವೃತ್ತಿ ಹೊಂದಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃಷಿ ಬಲುಸೊಗಸು ಮತ್ತು ಬಹಳ ವೈವಿಧ್ಯಮಯ. ವಿಶೇಷತಃ ಉತ್ತರಕನ್ನಡದ ಮಣ್ಣಿನವಾಸನೆ, ಆ ನೆಲದ ಗಂಧಗಾಳಿ ಸರಳ ಶೈಲಿಯ ಅವರ ಬರಹಗಳಲ್ಲಿ ಢಾಳಾಗಿ ಛಾಪೊತ್ತಿ ನಿಂತಿದೆ. ಅಲ್ಲಿನ  ವಿವಿಧ ಜನಾಂಗಗಳ ಉಪಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ಪ್ರಕಟಿಸಿರುವ ಪ್ರಮುಖ ಕೃತಿಗಳೆಂದರೆ ’ಮುಕ್ರಿ ಹೊಲೆಯರ ಪದಗಳು’, ’ಕುವರಿ ಮರಾಠಿ ಕಥೆಗಳು’, ’ಗುಮಟೆಯ ಪದಗಳು’, ’ಕರಾವಳಿಯ ಜನಪದ ಕಥೆಗಳು’ ಮೊದಲಾದವು. ಇದಲ್ಲದೆ, ಇವರ ಜಾನಪದ ಕೃತಿಗಳೆಂದರೆ: ’ತಿಮ್ಮಕ್ಕನ ಪದಗಳು’, ’ಪರಮೇಶ್ವರಿಯ ಪದಗಳು’, ’ಉತ್ತರ ಕನ್ನಡ ಜಿಲ್ಲೆಯ ಜಾನಪದ ಕಥೆಗಳು’, ’ಮೂಢನಂಬಿಕೆಗಳು’, ’ಹಾಲಿನ ತೆನೆ’, ’ಹಾಡಲುಂಟೇ ನಿನ್ನ ಮಡಿಲಲ್ಲಿ’, ’ಜನಪದ ಸಾಹಿತ್ಯದಲ್ಲಿ ಮದುವೆ’ ಮುಂತಾದವುಗಳು.

ಹೆಗಡೆಯವರು ಜನಪದ ಗೀತೆಗಳು, ಹಾಡುಗಳು, ಸ್ಥಳೀಯ ಸುಗ್ಗಿಕುಣಿತ ಮೊದಲಾದ ನರ್ತನಗಳು, ಕಥನ ಗೀತೆಗಳು ಮತ್ತು ವಿಮರ್ಶೆಯ ಕ್ಷೇತ್ರಗಳಲ್ಲಿಯೂ ಅಪಾರ ಸಾಧನೆ ಗೈದಿದ್ದಾರೆ. ಸೃಜನಶೀಲ ಸಾಹಿತ್ಯಕ್ಕೂ ಇವರು ನೀಡಿರುವ ಕೊಡುಗೆಯು ಬಹಳ ದೊಡ್ಡದೇ ಎನ್ನಬಹುದು. ಕಥೆ, ಕಾವ್ಯ, ನಾಟಕ, ಲಘು-ಬರಹ, ವ್ಯಕ್ತಿ ಚಿತ್ರ, ಹೀಗೆ ನಾನಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದು, ಒಟ್ಟು  ಕೃತಿಗಳ ಸಂಖ್ಯೆಯು ಮೂವತ್ತಕ್ಕೂ ಹೆಚ್ಚು. ಇವರ ಮತ್ತೊಂದು ಆಸಕ್ತಿ ಕ್ಷೇತ್ರವೆಂದರೆ ಆಯುರ್ವೇದ, ಹೋಮಿಯೋಪತಿ ಹಾಗೂ ಜಾನಪದ ವೈದ್ಯ ಕ್ಷೇತ್ರ. ’ಅನುಭವ ಚಿಕಿತ್ಸೆ’, ’ಆರೋಗ್ಯವೇ ಭಾಗ್ಯ’, ’ಗಾಂವಟಿ ಚಿಕೆತ್ಸೆ’, ’ಜನಪದ ವೈದ್ಯ’, ’ನಾಡಮದ್ದು’, ’ಹೋಮಿಯೋಪತಿ ಚಿಕಿತ್ಸೆ’ ಮುಂತಾದ ಹಲವಾರು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕರ್ನಾಟಕದ ವಿವಿಧ ಪತ್ರಿಕೆಗಳಿಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರು ಬರೆದ ಲೇಖನಗಳೇ ನೂರಾರು.

ಜನಪದ ಕ್ಷೇತ್ರಕ್ಕಾಗಿ ಇವರು ನೀಡಿದ ಕೊಡುಗೆಗಾಗಿ ಸಂದ ಪ್ರಶಸ್ತಿ ಗೌರವಗಳು ಹಲವಾರು. ೧೯೮೧ರಲ್ಲಿ ಕರ್ನಾಟಕದ ವಿಶ್ವವಿದ್ಯಾಲಯದ ವತಿಯಿಂದ ಅಂಕೋಲದಲ್ಲಿ ಜರುಗಿದ ಎಂಟನೆಯ ಜನಪದ ಸಾಹಿತ್ಯ ಸಮ್ಮೇಳನ ಮತ್ತು ರಾಯಚೂರಿನಲ್ಲಿ ನಡೆದ ಕರ್ನಾಟಕ ಜನಪದ ವಿದ್ವಾಂಸರ ಮಹಾಧಿವೇಶನದಲ್ಲಿ ಗೋಷ್ಠಿಯೊಂದರ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಸದಸ್ಯರಾಗಿ ಸೇವೆ ಸಲ್ಲಸಿದ್ದಲ್ಲದೆ ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ನಡೆಸಿದ ಜಾನಪದ ಗೋಷ್ಠಿ, ಚರ್ಮವಾದ್ಯ ಗೋಷ್ಠಿ, ಜಾನಪದ ಮೌಲ್ಯ ಮಾಪನ ಗೋಷ್ಠಿ ಮತ್ತು ಮಲೆನಾಡು ಜಾನಪದ ಗೋಷ್ಠಿ ಮುಂತಾದವುಗಳ ಅಧ್ಯಕ್ಷತೆಯ ಗೌರವವನ್ನು ಪಡೆದಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯು 1986ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.

ಹೀಗೆ, ಜನಪದ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ ಎಲ್.ಆರ್. ಹೆಗಡೆಯವರು, ಜನಪದ ಲೋಕದಿಂದ ನಿರ್ಗಮಿಸಿದ್ದು, ಕಾಣದಲೋಕದಲ್ಲಿ ವಿರಮಿಸಿದ್ದು 2005ರಲ್ಲಿ. ಅವರು ಆಡೆದ್ದು ಹೋದ ಜನಪದ ಸಾಹಿತ್ಯರಂಗವನ್ನು ಅವಲೋಕಿಸುವಾಗ ಸರ್ವಜ್ಞ ವಚನವೊಂದು ನೆನಪಿಗೆ ಬಂತು:

ಸಿರಿಯು ಸಂಪದವು ಸ್ಥಿರವೆಂದು ನಂಬದಿರು
ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ
ಹರಿದು ಹೋದಂತೆ -ಸರ್ವಜ್ಞ

ಕನ್ನಡಕ್ಕಾಗಿ ಶ್ರಮಿಸಿದ ಕೈಗಳದೆಷ್ಟೋ. ಅವುಗಳಲ್ಲಿ ಹೆಗಡೆಯವರ ಕೈ ಕೂಡ ಒಂದು. ಇಂಥವರೆಲ್ಲ ವಿದೇಶೀ ತತ್ವಜ್ಞಾನಿಗಳಂತೆ ಸಿರಿ-ಸಂಪತ್ತನ್ನು ಅನುಭವಿಸಿದವರಲ್ಲ. ಊರೂರು ಸುತ್ತಿ, ಹಲವರಲ್ಲಿ ಕಾಡಿ-ಬೇಡಿ ಮಾಹಿತಿಗಳನ್ನು ಸಂಗ್ರಹಿಸಿದರು. ಕಳೆದುಹೋಗಬಹುದಾದ ಬಹುಮೂಲ್ಯ ಮಾಹಿತಿಗಳನ್ನು ಪುಸ್ತಕಗಳ ರೂಪದಲ್ಲಿ ತಯಾರಿಸಿದರು. ಎಲ್ಲವನ್ನೂ ನಮ್ಮೆಲ್ಲರಿಗಾಗಿ ತಯಾರಿಸಿಕೊಟ್ಟ ಜನ, ಬಹುದೊಡ್ಡ ಸಂತೆ ನಡೆದ ಸಂತೇಮಾಳದಿಂದ ತಮ್ಮ ಸ್ವಸ್ಥಾನಗಳಿಗೆ ಮರಳುವಂತೆ ತೆರಳಿಬಿಟ್ಟರು! ಸಂತೆನೆರೆದ ಜಾಗದಲ್ಲಿ ಸಂತೆ ಸೇರಿದ್ದ ಬಗ್ಗೆ ಕುರುಹುಗಳು ಮಾತ್ರ ಉಳಿದುಕೊಂಡವು; ಜನಮಾನಸದ ಜ್ಞಾನದ ಹರವಿಗೆ ತಮ್ಮನ್ನು ತೆರೆದುಕೊಂಡವು, ನಮಸ್ಕಾರ.

Saturday, March 1, 2014

ಕವಿ ಲಕ್ಷ್ಮೀಶನ ’ಜೈಮಿನಿ ಭಾರತ’ದ ಸುತ್ತ.

ಚಿತ್ರಗಳ ಋಣ: ಅಂತರ್ಜಾಲ
ಕವಿ ಲಕ್ಷ್ಮೀಶನ ’ಜೈಮಿನಿ ಭಾರತ’ದ ಸುತ್ತ.

ಅಡುಗೆಯನ್ನೂ,  ಉಪ್ಪಿನಕಾಯಿಯನ್ನೂ ಅದದೇ ತೆರನಾದ ಮೂಲವಸ್ತು-ಪರಿಕರಗಳನ್ನು ಬಳಸಿ, ಹಲವು ಜನ ತಯಾರಿಸುತ್ತಾರೆ; ಅವುಗಳಲ್ಲಿ ಒಂದರಂತೆ ಇನ್ನೊಂದು ಡಿಟ್ಟೋ ಇರುವುದಿಲ್ಲ. ಶಿಲೆಗಳಲ್ಲಿ ಕಲೆಗಳರಳುವುದು, ರಂಗಗಳಲ್ಲಿ ಪಾತ್ರಗಳು ಜೀವಂತಿಕೆ ಪಡೆದುಕೊಳ್ಳುವುದು,  ಜೀವರಹಿತ ವಾದ್ಯಪರಿಕರಗಳಲ್ಲಿ ಜೀವವಿದೆಯೆಂಬಷ್ಟು ಚೈತನ್ಯ ಉಕ್ಕಿ ಹರಿಯುವುದು, ಇಲ್ಲೆಲ್ಲವೂ ಹಾಗೆಯೇ. ಒಬ್ಬೊಬ್ಬರದೂ ವಿಭಿನ್ನ ಮತ್ತು ವಿಶಿಷ್ಟ. ಹಿಂದಿನ ಕವಿಗಳು ವಿಕೃತಮನಸ್ಸನ್ನು ಮಾತ್ರ ಹೊಂದಿರಲಿಲ್ಲ ಎಂಬುದು ಬಹಳ ಸಮಾಧಾನ ಯಾಕೆಂದರೆ ಅಂದು ರಾಜರ ಕಾಲವಾಗಿತ್ತು. ಕೃತಿಗಳಲ್ಲಿ ತಪ್ಪಿದ್ದರೆ ಕವಿಗಳಿಗೂ ಶಿಕ್ಷೆಯಾಗುತ್ತಿತ್ತು, ಕೃತಿಗಳು ಸಂಪದ್ಭರಿತವಾಗಿದ್ದರೆ ಯಥಾಯೋಗ್ಯ ಸನ್ಮಾನ-ಪುರಸ್ಕಾರಗಳು ನಡೆಯುತ್ತಿದ್ದವು. ಅಂತಹ ಸವಾಲುಗಳನ್ನು ಎದುರಿಸಲು ಸಿದ್ಧನಾಗುವ ವಿಶಾಲ ಅಧ್ಯಯನದ ಹಿನ್ನೆಲೆಯುಳ್ಳ ವ್ಯಕ್ತಿ  ಮಾತ್ರ ಕವಿಯಾಗುತ್ತಿದ್ದ. ಮಂಡಿಸುವ ವಿಷಯಗಳ ಮೇಲೆ ಆತನಿಗೆ ಅಪಾರವಾದ ಪ್ರೌಢಿಮೆ ಇರುತ್ತಿತ್ತು.  ಎದುರುವಾದಿಗಳಾಗಿ ಬರಬಹುದಾದ ಅನ್ಯ ಪಂಡಿತರಿಗೆ ಆತ ಉತ್ತರಹೇಳಬೇಕಾಗಿತ್ತು.

ದೇವಪುರದ ಲಕ್ಷ್ಮೀಶ ಮಹಾಕವಿಯ ಕಾಲಮಾನ 16-17 ಶತಮಾನವೆಂದು ಹೇಳಲಾಗುತ್ತದೆ. ಕುಮಾರವ್ಯಾಸ ಭಾರತದ ನಂತರ ಲಕ್ಷ್ಮೀಶ ’ಜೈಮಿನಿ ಭಾರತ’ವನ್ನು ಬರೆದ.  ಹಿಂದಿನ ಕವಿಗಳ ಇನ್ನೊಂದು  ವಿಶಾಲ ಬುದ್ಧಿಯೆಂದರೆ ಪೂರ್ವಸೂರಿಗಳನ್ನು ಚೆನ್ನಾಗಿ ಓದಿಕೊಳ್ಳುವುದು. ಕಾಲಘಟ್ಟಗಳಲ್ಲಿ ತಾಲಪತ್ರಗಳಲ್ಲೇ ಬರೆಯಲ್ಪಡುತ್ತಿದ್ದ ಕೃತಿಗಳನ್ನು ಇಂದಿನಂತೆ ಪುಸಕ್ಕನೆ ಕಾಪಿ, ಪೇಸ್ಟ್ ಮಾಡಲು ಸಾಧ್ಯವಿರಲಿಲ್ಲ, ಬರೆಯಲು ಅತ್ಯುತ್ತಮವೆಂಬ ಉಪಕರಣಗಳಾಗಲೀ, ವಿದ್ಯುತ್ತಾಗಲೀ ಇರಲಿಲ್ಲ. ಹಗಲಿನ ಬೆಳಕಿನಲ್ಲೇ, ಸಾಮಾನ್ಯವಾಗಿ ದೇವಾಲಯಗಳ ಪೌಳಿಯಲ್ಲಿ, ಸ್ನಾನ ಮಾಡಿಕೊಂಡು ಕುಳಿತು ಬರೆಯುತ್ತಿದ್ದರು. ಅಂತಹ ಸನ್ನಿವೇಶಗಳಲ್ಲೂ ಕವಿತ್ವವನ್ನು ಉದ್ದೀಪಿಸಿಕೊಂಡು ಬರೆಯುವುದು ಶ್ರಮದಾಯೀ ಕೆಲಸವಾಗಿತ್ತು.

ಕವಿ ಲಕ್ಷ್ಮೀಶ ಬರೆದ ’ಜೈಮಿನಿ ಭಾರತ’ದ ಪ್ರಥಮ ಮುದ್ರಣ 1932ರಲ್ಲಿ ಬೆಂಗಳೂರಿನ ಒಕ್ಕಲಿಗರ ಸಂಘದ ಪ್ರೆಸ್ಸಿನಲ್ಲಿ ನಡೆಯಿತೆಂದು ತಿಳಿದುಬರುತ್ತದೆ. ಅಂದಿಗೆ  ಈ ಹೊತ್ತಗೆಗೆ ಮಾರುಕಟ್ಟೆಯಲ್ಲಿಟ್ಟ  ಗೌರವಮೌಲ್ಯ 5 ರೂಪಾಯಿಗಳು. ಪ್ರಥಮ ಮುದ್ರಣದಲ್ಲಿ 2500 ಪ್ರತಿಗಳನ್ನು ಅಚ್ಚು ಮಾಡಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಶೀರ್ಷಿಕಾ ಪುಟದಲ್ಲಿ `ದೇವಪುರದ ಲಕ್ಷ್ಮೀಶ ಮಹಾಕವಿ ವಿರಚಿತ ಕರ್ಣಾಟಕ ಜೈಮಿನಿ ಭಾರತವು,  ವೇದಮೂರ್ತಿ ಪಂಡಿತ ಕೆ. ನಂಜುಂಡ ಶಾಸ್ತ್ರಿಗಳಿಂದಲೂ, ಬ್ರಹ್ಮಶ್ರೀ  ಹೆಡ್ಮಾಸ್ಟರ್ ಹೆಚ್ ನಾಗಪ್ಪನವರಿಂದಲೂ,  ಪ್ರತಿಪದಾರ್ಥ, ತಾರ್ತ್ಪಯ, ವ್ಯಾಕರಣ ವಿಶೇಷಗಳು, ವಿಶೇಷಾರ್ಥಗಳು ಇವುಗಳೊಡನೆ ಬರೆಯಲ್ಪಟ್ಟು, ಇದರ ಸರ್ವಾಧಿಕಾರವನ್ನು ಬೆಂಗಳೂರು ಸಿಟಿಯ ಚಿಕ್ಕಪೇಟೆ ಶ್ರೀ ಸರಸ್ವತಿ ರತ್ನಾಕರ ಬುಕ್ಕು ಡಿಪೋ ಸರ್ವಾಧಿಕಾರಿ ಟಿ.ಎನ್. ಶ್ರೀನಿವಾಸ ಶೆಟ್ಟರಿಗೆ ಕೊಡಲಾಗಿದೆ’ ಎನ್ನುವ ಒಕ್ಕಣೆ ಇದೆ.



ಇದರ ಆಹಾರ್ಯ ಹೀಗಿದೆ: ಚತುಷ್ಕ ಡೆಮಿ ಆಕಾರದ ಈ ಕೃತಿಯಲ್ಲಿ 12+940 ಪುಟಗಳಿವೆ. ಇದರ ಸಂಪಾದಕರಲ್ಲೊಬ್ಬರಾದ ಹೆಚ್. ನಾಗಪ್ಪನವರು,  ಬೆಂಗಳೂರು ಮಹಾನಗರದ, ವಿಶ್ವೇಶ್ವರಪುರದಲ್ಲಿರುವ  ಪ್ರೈಮರಿ ಬಾಯ್ಸ ಸ್ಕೂಲ್ನಲ್ಲಿ  ಹೆಡ್ಮಾಸ್ಟರ್ ವೃತ್ತಿ ನಿರ್ವಹಿಸಿದ್ದು, ಇವರ 8 ಪುಟಗಳ ಉಪಯುಕ್ತ ಉಪೋದ್ಘಾತ ಹಾಗೂ ಸೂಚನೆ ಈ ಪುಸ್ತಕದಲ್ಲಿ ಅಡಕವಾಗಿದೆ.  ರಕ್ಷಾಪುಟಗಳ ಒಳಮೈಯ್ಯಲ್ಲಿ, ಆ ಕಾಲಕ್ಕೆ ಶ್ರೀ ಸರಸ್ವತೀ ರತ್ನಾಕರ ಬುಕ್ ಡಿಪೋ ಪ್ರಕಟಿಸಿದ್ದ, ಭಾರತಿ ಸಂಪಂಗಿರಾಮ ವಿರಚಿತ ’ಶ್ರೀಮದ್ವಾಲ್ಮೀಕಿ ರಾಮಾಯಣ ಕಥಾಸಂಗ್ರಹಂ’, ’ಸಚಿತ್ರ ಶುಕಸಪ್ತತಿ 70 ಕಥೆಗಳು’, ’ಭಟ್ಟಿ ವಿಕ್ರಮಾದಿತ್ಯರಾಯನ ಕಥೆಗಳು’, ’ಶ್ರೀಮದ್ಭಗವದ್ಗೀತಾ’ ಹಾಗೂ ’ಸಚಿತ್ರ ಮಹಾಭಕ್ತಿ ವಿಜಯವು’- ಎಂಬ ಐದು ಪುಸ್ತಕಗಳ ಜಾಹೀರಾತುಗಳಿವೆ.

ಕನ್ನಡದಲ್ಲಿ ಕುಮಾರವ್ಯಾಸ ಭಾರತದ ನಂತರ, ಮಹಾಕವಿ ಲಕ್ಷ್ಮೀಶನ ’ಜೈಮಿನಿ ಭಾರತ’ವು ಅತ್ಯಂತ ಜನಪ್ರಿಯ ಕಾವ್ಯ ಎನಿಸಿತ್ತು. ಇದೇ ರೀತಿಯ ಮತ್ತೊಂದು ಕಾವ್ಯವೆಂದರೆ ರಾಘವಾಂಕ ಕವಿಯ ’ಹರಿಶ್ಚಂದ್ರ ಕಾವ್ಯ’. ಅತ್ಯಾಶ್ಚರ್ಯಕರ ಸಂಗತಿ ನೋಡಿ: ಟೀಕೆ ತಾರ್ತ್ಪಯಗಳೊಂದಿಗಿನ ಜೈಮಿನಿ ಭಾರತದ ಪ್ರಕಟಣೆಗೆ ಕನ್ನಡದಲ್ಲಿ ಅಂದು ನಾಂದಿ ಹಾಡಿದವನು ಜರ್ಮನಿಯ ಹರ್ಮನ್ ಮೋಗ್ಲಿಂಗ್! ಈತ 1848ರಲ್ಲಿ ಮೊದಲಬಾರಿಗೆ ಮಂಗಳೂರಿನಲ್ಲಿ, ವ್ಯಾಖ್ಯಾನದೊಂದಿಗೆ ಮೋಗ್ಲಿಂಗ್ `ಜೈಮಿನಿ ಭಾರತ’ದ ಕೆಲವು ಸಂಧಿಗಳನ್ನು ಕಲ್ಲಚ್ಚು ಮುದ್ರಣದಲ್ಲಿ ಪ್ರಕಟಿಸಿದನು!! ಇದಕ್ಕೆ ನಿಮ್ಮಿಂದೊಂದು ಚಪ್ಪಾಳೆಯಿರಲಿ. ನಂತರ 1852ರಲ್ಲಿ ಡೇನಿಯಲ್ ಸ್ಯಾಂಡರ್ಸನ್, 1873ರಲ್ಲಿ ಸಿದ್ಧಾಂತಿ ಸುಬ್ರಹ್ಮಣ್ಯ ಶಾಸ್ತ್ರಿಗಳು, 1875ರಲ್ಲಿ ಹೊಳಕಲ್ಲು ಶ್ರೀನಿವಾಸ ಪಂಡಿತರು, 1875ರಲ್ಲಿ ವೆಂಕಟ ರಂಗೋ ಕಟ್ಟಿ, 1887ರಲ್ಲಿ ಮಿಸರ ಗೌರೀಶಂಕರ ರಾಮಪ್ರಸಾದ, 1888ರಲ್ಲಿ ಮೂರು ಭಾಗಗಳಲ್ಲಿ ದಕ್ಷಿಣಾಮೂರ್ತಿ ಶಾಸ್ತ್ರಿಗಳು, 1889ರಲ್ಲಿ ಎಂ.ಆರ್. ಅಣ್ಣಾಜಿ ರಾವ್,  1893ರಲ್ಲಿ ಕೃಷ್ಣರಾವ್ ಬಾಳಾಜಿ ರಾವ ಬೆಂಡಗೇರಿ, 1897ರಲ್ಲಿ ಬಿ.ಎಂ. ಸಿದ್ಧಲಿಂಗಶಾಸ್ತ್ರಿ- ಈ ಮುಂತಾದವರು ಜೈಮಿನಿ ಭಾರತವನ್ನು ಬಿಡಿಯಾಗಿ, ಇಡಿಯಾಗಿ ಟೀಕೆ, ಅರ್ಥಗಳೊಂದಿಗೆ ಕಲ್ಲಚ್ಚಿನಲ್ಲಿಯೇ  ಪ್ರಕಟಿಸಿದ್ದಾರೆ. [ಕಲ್ಲಚ್ಚು ಎಂದರೇನೆಂದು ಹುಡುಕುತ್ತಿದ್ದೇನೆ,  ವಿವರ ಗೊತ್ತಿದ್ದರೆ ಕೃಪಯಾ ಯಾರಾದರೂ ತಿಳಿಸುವುದು]

ತೀರಾ ಇತ್ತೀಚೆಗೆ 2010ರಲ್ಲಿ,  ಸದರೀ ’ಜೈಮಿನಿ ಭಾರತ’ದ  ಮೂಲ-ತಾತ್ಪರ್ಯಗಳನ್ನು ಗಂಜೀಫಾ ಕಲೆಯೊಂದಿಗೆ, ಸಚಿತ್ರವಾಗಿ ಪ್ರಸ್ತುತ ಪಡಿಸಿದವರು ಅ.ರಾ.ಸೇತೂರಾಮ ರಾವ್;  ಅವರ ಈ ಬೃಹತ್ ಕೃತಿಯನ್ನು ಬೆಂಗಳೂರಿನ `ಕಾಮಧೇನು ಪುಸ್ತಕ ಭವನ’ ಪ್ರಕಟಿಸಿತು. ಇವೆಲ್ಲದರ ಜೊತೆಜೊತೆಗೆ,  ಲಕ್ಷ್ಮೀಶನ ವಾರ್ಧಕ ಷಟ್ಪದಿ ಪದ್ಯರೂಪದ ’ಜೈಮಿನಿ ಭಾರತವನ್ನು’ ಟೀಕೆ ತಾರ್ತ್ಪಯಗಳಿಲ್ಲದ ಮೂಲರೂಪದಲ್ಲಿ,  ಸಾಕಷ್ಟು ಜನ ವಿದ್ವಾಂಸರು ಸಂಪಾದಿಸಿದ್ದಾರೆ. ಇವೆಲ್ಲವೂ  ಲಕ್ಷ್ಮೀಶನ ಪ್ರಸ್ತುತತೆಗೂ ಕಾವ್ಯದ ಸುದೀರ್ಘ ಜೀವಂತಿಕೆಗೂ, ಜನಪ್ರಿಯತೆಗೂ ಮತ್ತು  ಆಯಾ ವಿದ್ವಾಂಸರ ವಿದ್ವತ್ತಿಗೂ ಸಿಗಬಹುದಾದ ನಿದರ್ಶನಗಳಾಗಿವೆ.

1932 ರಲ್ಲಿ ಮುದ್ರಣವಾಗಿದ್ದ ಕೃತಿಯಲ್ಲಿ, 34 ಸಂಧಿಗಳಲ್ಲಿ 1906 ವಾರ್ಧಕ ಷಟ್ಪದಿಗಳಿಗೆ ಪ್ರತಿಯೊಂದು ಪದ್ಯಕ್ಕೂ ಪ್ರತಿಪದಾರ್ಥ, ತಾರ್ತ್ಪಯ, ವ್ಯಾಕರಣ, ಅಲಂಕಾರಾದಿ ಆಭೂಷಣಗಳನ್ನೂ ಪದಗಳ ವಿಶಿಷ್ಟ ಧ್ವನ್ಯಾರ್ಥಸಹಿತ ನೀಡಲಾಗಿದೆ. ಕೃತಿಯ ಕೊನೆಯೊಳಗೆ ಒಂದು ಕಂದಪದ್ಯವಿದೆ:

ಕನ್ನಡಜೈಮಿನಿಭಾರತ                                                                        
ಕುನ್ನತತಾರ್ತ್ಪಯಟೀಕೆಸಕಲಾರ್ಥಗಳಿಂ                          
ಚೆನ್ನೆನೆಮೆರೆದುದುಗುಣಸಂ                                        
ಪನ್ನತೆಯಿಂದಾಂಗೀರಸದಶುಭವತ್ಸರದೊಳ್        

ಕೃತಿಯ ಮೊದಲ 18 ಸಂಧಿಗಳಿಗೆ ವೇದಮೂರ್ತಿ ಕಡಬದ ನಂಜುಂಡ ಶಾಸ್ತ್ರಿಗಳೂ ನಂತರದ 16 ಸಂಧಿಗಳಿಗೆ ಹೆಡ್ಮಾಸ್ಟರ್ ಹೆಚ್.ನಾಗಪ್ಪ ಅವರೂ ಟೀಕಾತಾರ್ತ್ಪಯ ಬರೆದಿರುವುದು ಕಾಣುತ್ತದೆ. ಹೆಚ್.ನಾಗಪ್ಪನವರ ಉಪೋದ್ಘಾತದಲ್ಲಿ: `"ಮರಾಶ್ರೀ ಟಿ. ಯನ್. ಶ್ರೀನಿವಾಸಶೆಟ್ಟರವರು, ಕಡಬದ ನಂಜಂಡಶಾಸ್ತ್ರಿಗಳಿಂದಲೆ ಟೀಕಾ ತಾರ್ತ್ಪಯ ವಿಶೇಷ ವಿಷಯಗಳೊಡನೆ ಅಲಂಕಾರ ವಿವರಣೆ ಸಹಿತವಾಗಿ ಟೀಕೆಯನ್ನು ಬರೆಸಿ ಮುದ್ರಿಸುತ್ತಾ ಬಂದರು. ಈ ಕಾರ್ಯವು ಅರ್ಧ ಭಾಗ ಕೈಗೂಡಿ ಹದಿನೆಂಟನೆಯ ಸಂಧಿಗೆ ಟೀಕೆ ಬರೆಯುತ್ತಿದ್ದಾಗ, ದುರ್ದೈವಹತರಾಗಿ ನಂಜುಂಡಶಾಸ್ತ್ರಿಗಳು ಅಕಾಲ ಮರಣಕ್ಕೆ ಗುರಿಯಾಗಿ, ಇದ್ದಕ್ಕಿದ್ದ ಹಾಗೆ ಸತ್ತು ಹೋದರು. ಹೀಗಾದ ಮೇಲೆ, ಕಾಕತಾಳನ್ಯಾಯದಂತೆ ಕನ್ನಡಿಗರ ಸೇವೆ ಸತ್ಕಾರಗಳನ್ನು ಪರೋಕ್ಷದಲ್ಲಿ ಮಾಡುತ್ತಿದ್ದ ನನ್ನನ್ನು ಹುರಿದುಂಬಿಸಿ, ಮುಂದಿನ ಟೀಕೆಯನ್ನು ಬರೆಯುವ ಭಾರವನ್ನು ನನ್ನ ಮೇಲೆ ಹೊರಿಸಿ, ಭಗವದಾಜ್ಞೆಯಂತೆ ಅಪ್ರಾರ್ಥಿತವಾಗಿ ಬಂದ ಈ ಸುಸಂಧಿಯನ್ನು ಬಿಡಬಾರದೆಂದು ನಾನು ಕಾರ್ಯವನ್ನು ಪ್ರಾರಂಭಿಸಿದೆನು" ಎಂಬ ಹೇಳಿಕೆ ನಾಗಪ್ಪನವರ ವಿನಮ್ರ-ವಿಧೇಯ ಸ್ವಭಾವ ಮತ್ತು ಸಮಾಜಹಿತ-ಕಾಳಜಿಯನ್ನು ತೋರುತ್ತದೆ.

ನಂಜುಂಡಶಾಸ್ತ್ರಿಗಳು ಮತ್ತು ತಾವು[ನಾಗಪ್ಪನವರು] ಇಬ್ಬರೂ ಸೇರಿ ಇದಕ್ಕೆ ಟೀಕೆ ತಾರ್ತ್ಪಯಗಳನ್ನು ಏಕೆ ಬರೆಯಬೇಕಾಯ್ತೆಂಬ ಸಂದರ್ಭವನ್ನು ಸಹ ತಿಳಿಸಿದ್ದಾರೆ.  1931ಕ್ಕೂ  ಮುಂಚೆ, ಬೆಳ್ಳಾವೆ ವೆಂಕಟನಾರಾಯಣಪ್ಪನವರಿಗೆ ’ಪಂಪ ಭಾರತ’ವನ್ನು ಶಾಸ್ತ್ರೀಯವಾಗಿ ಗ್ರಂಥಸಂಪಾದನೆ ಮಾಡಲು ಪ್ರಸ್ತುತ ಕೃತಿಯ ವ್ಯಾಖ್ಯಾನಕಾರರಾದ ಕಡಬದ ನಂಜುಂಡಶಾಸ್ತ್ರಿಗಳು ನೆರವು ನೀಡಿದ್ದರು ಎಂಬುದನ್ನು ಅವರು ಉಲ್ಲೇಖಿಸಿ, ಈರ್ವರ ವಿಭಿನ್ನ ದೃಷ್ಟಿಕೋನಗಳಿಂದ ಬರೆಯಲ್ಪಡುವ ಟೀಕಾತಾತ್ಪರ್ಯ ಹಲವರಿಗೆ ರಂಜನೀಯವಗಬಹುದೆಂಬ ಅನಿಸಿಕೆಯಿಂದ ಹಾಗೆ ಮಾಡಿದ ಕುರುಹನ್ನು ನೀಡಿದ್ದಾರೆ.

ಅನುಕ್ರಮವಾಗಿ ಪದ್ಯ,  ಪ್ರತಿಪದಾರ್ಥ,  ಭಾವಾರ್ಥ,  ವಿಶೇಷಾಂಶ-ಈ ಕ್ರಮದಲ್ಲಿ ಪ್ರತಿಯೊಂದು ಪದ್ಯಕ್ಕೂ ಟೀಕಾತಾತ್ಪರ್ಯಗಳಿವೆ. ಸದರೀ ಮಹಾಕಾವ್ಯದ  ಸಹಜಾರ್ಥ ಮತ್ತು ಪದಗಳ ಗೂಡಾರ್ಥಗಳನ್ನು ಸವಿಯಲು ಇದು ಸಹಾಯಕವಾಗುತ್ತದೆ. ಪ್ರತಿಪದಾರ್ಥ ನೀಡುವಾಗ, ಮೂಲ ಪದ್ಯದಲ್ಲಿರುವ ಒಟ್ಟು ಅರ್ಥಘಟಕಗಳನ್ನು ಸಂಖ್ಯೆಯನ್ನು ಸೂಚಿಸುವ ಮೂಲಕ ನಿರ್ದೇಶಿಸಿರುತ್ತಾ ಹೋಗುತ್ತಾರೆ. ಉದಾಹರಣೆಗೆ:

ಶ್ರೀವಧುವಿನಂಬಕ ಚಕೋರಕಂ ಪೊರೆಯೆ ಭ 
ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ 
ತೀ ವಲಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೇ |
ಆವಗಂ ಸರಸ ಕರುಣಾಮೃತದ ಕಲೆಗಳಿಂ 
ತೀವಿದೆಳೆನಗೆಯ ಬೆಳ್ದಿಂಗಳಂ ಪಸರಿಸುವ 
ದೇವಪುರನಿಲಯ ಲಕ್ಷ್ಮೀರಮಣನಾಸ್ಯಚಂದ್ರಾನಂದವೆಮಗೀಯಲೀ ||

ಪ್ರತಿಪದಾರ್ಥ:1.ಶ್ರೀವಧುವಿನ-ಲಕ್ಷ್ಮೀದೇವಿಯ, ಅಂಬಕ-ಕಣ್ಣೆಂಬ, ಚಕೋರಕಂ-ಚಕೋರ ಪಕ್ಷಿಯು, ಪೊರೆಯೆ-ಆನಂದವನ್ನು ಪಡೆಯಲು, ಭಕ್ತಾವಳಿಯ-ಭಕ್ತ ಸಮೂಹದ, ಹೃತ್-ಮನಸ್ಸೆಂಬ, ಕುಮುದ-ಬಿಳಿಯ ನೆಯ್ದಿಲೆಯ, ಕೋರಕಂ-ಮೊಗ್ಗು, ಬಿರಿಯೆ-ಅರಳಲು (ವಿಕಾಸಗೊಳ್ಳಲು), 2. ಜಗತೀ ವಲಯದ-ಭೂಮಂಡಲದ, ಅಮಲ-ನಿರ್ಮಲವಾದ, 3. ಸೌಭಾಗ್ಯ-ಐಶ್ವರ್ಯವೆಂಬ, 4. ರತ್ನಾಕರಂ-ಸಮುದ್ರವು, ಪೆರ್ಚಿನಿಂ-ವೃದ್ಧಿಯಿಂದ, 5 ಮೇರೆವರಿಯೆ-ದಡವನ್ನು ಮೀರಿ ಉಕ್ಕಲು, ಆವಗಂ-ಯಾವಾಗಲೂ, ಸರಸ-ರಸವತ್ತಾದ, ಕರುಣಾ-ದಯೆಯೆಂಬ, 6.ಅಮೃತದ, 7. ಕಲೆಗಳಿಂ-(ಅಂಶ) ಕಳೆಗಳಿಂದ, ತೀವಿದ-ತುಂಬಿದ, ಎಳನಗೆಯ-ಕಿರುನಗೆಯೆಂಬ, ಬೆಳ್ದಿಂಗಳಂ, ಪಸರಿಸುವ-ಹರಡುವ, ದೇವಪುರ-ದೇವನೂರಿನಲ್ಲಿ, ನಿಲಯ-ನೆಲೆಗೊಂಡಿರುವ, ಲಕ್ಷ್ಮೀರಮಣನ-ಲಕ್ಷ್ಮೀಕಾಂತಸ್ವಾಮಿಯ, 8. ಆಸ್ಯಚಂದ್ರ-ಮುಖವೆಂಬ ಚಂದ್ರನು, ಎಮಗೆ-ನಮಗೆ, ಆನಂದವ-ಹರ್ಷವನ್ನು, ಈಯಲಿ-ಕೊಟ್ಟು (ರಕ್ಷಿಸಲಿ).

ಪದ್ಯದ ಭಾವಾರ್ಥ: ಲಕ್ಷ್ಮೀದೇವಿಯ ನೇತ್ರಗಳೆಂಬ ಚಕೋರ ಪಕ್ಷಿಗಳಿಗೆ ಹರ್ಷವನ್ನುಂಟುಮಾಡುತ್ತಲೂ, ಭಗವದ್ಭಕ್ತರ ಮನಸ್ಸೆಂಬ ನೈದಿಲೆಗಳನ್ನು ಅರಳಿಸಿ ವಿಸ್ತಾರಪಡಿಸುತ್ತಲೂ, ವಿಸ್ತಾರವಾದ ಈ ಭೂಮಂಡಲದ ಐಶ್ವರ್ಯವೆಂಬ ಸಮುದ್ರವು ಉಬ್ಬಿ ಮೇರೆದಪ್ಪಿ ಉಕ್ಕುವಂತೆ ಮಾಡುತ್ತಲೂ, ಸರ್ವದಾ ರಸಯುಕ್ತವಾದ ಕರುಣೆಯೆಂಬ ಅಮೃತ ಕಳೆಗಳಿಂದ ತುಂಬಿಮುಗುಳ್ನಗೆಯೆಂಬ ಬೆಳ್ದಿಂಗಳನ್ನು ಎಲ್ಲೆಡೆಗಳಲ್ಲಿಯೂ ಹರಡಿ ಬೆಳಗುತ್ತಲೂ ಇರುವ, ದೇವನೂರಿನಲ್ಲಿ ನೆಲೆಸಿರುವ ಲಕ್ಷ್ಮೀರಮಣಸ್ವಾಮಿಯ ಮುಖವೆಂಬ ಚಂದ್ರನು ನಮಗೆ ಸಂತೋಷವನ್ನುಂಟು ಮಾಡಲಿ.

ಚಂದ್ರನು ಹೇಗೆ ಅಮೃತಮಯವಾದ ತನ್ನ ಹದಿನಾರು ಕಳೆಗಳನ್ನೂ ಬೆಳ್ದಿಂಗಳ ರೂಪದಲ್ಲಿ ಲೋಕದಲ್ಲೆಲ್ಲಾ ಹರಡಿ ಚಕೋರ ಪಕ್ಷಿಗೆ ನೇತ್ರಾನಂದವನ್ನುಂಟು ಮಾಡುತ್ತಲೂ, ಬಿಳಿಯ ನೆಯ್ದಿಲೆಗಳನ್ನು ಅರಳುವಂತೆ ಮಾಡುತ್ತಲೂ, ಸಮುದ್ರವು ಸಂತೋಷದಿಂದ ಮೇರೆದಪ್ಪಿ ಉಕ್ಕುವಂತೆ ಮಾಡುತ್ತಲೂ ಇರುವನೋ ಹಾಗೆ, ಲಕ್ಷ್ಮೀದೇವಿಯ ಕಣ್ಣುಗಳಿಗೆ ಹರ್ಷವನ್ನುಂಟು ಮಾಡುತ್ತಲೂ, ಭಕ್ತರ ಮನಸ್ಸು ಆನಂದದಿಂದ ವಿಸ್ತಾರಗೊಳ್ಳುವಂತೆ ಮಾಡುತ್ತಲೂ, ಪ್ರಪಂಚದ ಐಶ್ವರ್ಯವು ಅಭಿವೃದ್ಧಿ ಹೊಂದುವಂತೆ ಮಾಡುತ್ತಲೂ, ಮುಗುಳ್ನಗೆಯಿಂದ ಶೋಭಿಸುತ್ತಿರುವ ತನ್ನ ಕೃಪಾಕಟಾಕ್ಷವನ್ನು ಯಾವಾಗಲೂ ಪ್ರಸರಿಸುತ್ತಿರುವ ಶ್ರೀ ಲಕ್ಷ್ಮೀರಮಣಸ್ವಾಮಿಯ ದಿವ್ಯಮುಖವು, ನಮ್ಮೆಲ್ಲರಿಗೂ ಹರ್ಷವನ್ನುಂಟುಮಾಡಲಿ.

-ಇಂತೀಪರಿಯಲ್ಲಿ, ಪ್ರತಿಯೊಂದೂ ಪದದ, ಪದ್ಯದ ಅರ್ಥವನ್ನು, ಸುಲಭವಾಗಿ ಗ್ರಹಿಸುವುದಕ್ಕೆ ಅನುಕೂಲವಾಗುವಂತಹ ವ್ಯತ್ಪತ್ತಿಗಳನ್ನು ಸದರೀ ವ್ಯಾಖ್ಯಾನಕಾರರು ಸಮಗ್ರವಾಗಿ ನೀಡಿರುವುದರಿಂದ, ಕಾವ್ಯಾನುಭವದ ಸ್ವೋಪಜ್ಞತೆಯ ’ಸೌಂದರ್ಯ ಲಹರಿ’ಯ ದರ್ಶನವನ್ನು ಪಡೆದುಕೊಳ್ಳಲು ಈ ಕ್ರಮವು ಸ್ವಾಧ್ಯಾಯಿಗಳಿಗೆ ಬಹಳ ಅನುಕೂಲಕರವಾಗಿದೆ.ಇತ್ತೀಚೆಗೆ ವಿಧಿವಶರಾದ ಮಹಾಮಹೋಪಾಧ್ಯಾಯ ವಿದ್ವಾನ್ ಎನ್.ರಂಗನಾಥ ಶರ್ಮರು  ಕವಿ ಲಕ್ಷ್ಮೀಶನ ’ಜೈಮಿನಿ ಭಾರತ’ ಕೃತಿಗೆ ತನ್ನ ಯೋಗದಾನವನ್ನು ಮಾಡಿದ್ದಾರೆ ಎಂಬುದನ್ನೂ ಮರೆಯುವಂತಿಲ್ಲ.    ಇಂದು ಸಂಶೋಧನಾ ಗ್ರಂಥಗಳನ್ನು ಬರೆಯುವ ಹಲವರು ಇಂತಹ ಅದ್ಭುತ ಕಾವ್ಯವಸ್ತುಗಳನ್ನು ಕೈಗೆತ್ತಿಕೊಂಡರೆ ಅವರಿಗೆ ಸರ್ಟಿಫಿಕೇಟ್ ಜ್ಞಾನದ ಹೊರತಾದ ನಿಜವಾದ ದಿವ ರಸಾನುಭೂತಿಯೂ ಪ್ರಾಪ್ತವಾಗುತ್ತಿತ್ತು ಎನ್ನಬಹುದು.

Sunday, February 9, 2014

ವನಸುಮದೊಳೆನ್ನ ಜೀವನವು ವಿಕಸಿಸುವಂತೆ...

 ವನಸುಮದೊಳೆನ್ನ ಜೀವನವು ವಿಕಸಿಸುವಂತೆ...

ವಿದ್ವಜ್ಜನರು ಕಥೆ ಹೇಳುವ-ಕಥೆ ಕೇಳುವ ಕಾಲ ಸಂದುಹೋಯ್ತು! ಮಕ್ಕಳಿಗೂ ಟಿವಿ-ಮುದುಕರಿಗೂ ಟಿವಿ ಬಂದಾಯ್ತು! ಈಗ ಕಥೆಗೆಲ್ಲ ಹೂಂ..ಗುಟ್ಟುವವರಿಲ್ಲ, ಕಥೆ ಹೇಳುವವರು ಮೊದಲೇ ಇಲ್ಲ. ಇಂತಹ ಕಥೆಹೇಳುವ ಕಾಲ-ನಿಡುಗಾಲ-ಹೊಸಕಾಲಗಳ ಕೊಂಡಿಯಾಗಿ ಅನರ್ಘ್ಯರತ್ನಗಳಂತಹ ವ್ಯಕ್ತಿಗಳು ಕೆಲವರಿದ್ದರು; ಅವರಲ್ಲಿ ದಿ.ಎನ್.ರಂಗನಾಥ ಶರ್ಮರೂ ಒಬ್ಬರು. ಅವರ ವಿದ್ವತ್ತನ್ನು ಸ್ವತಃ ಡಿವಿಜಿಯವರೇ ಕೊಂಡಾಡಿದ್ದರು! ವಾಲ್ಮೀಕಿ-ರಾಮಾಯಣವನ್ನು ಕನ್ನಡೀಕರಿಸಿದ ಖ್ಯಾತಿ ಸದರಿಯವರದ್ದು. ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ಎಂಬ ಹಾಗೆ ಡಿವಿಜಿಯವರ ಮುನ್ನುಡಿ ಆವರ ಅನುವಾದಿತ ಕೃತಿಗೆ ಕಿರೀಟಪ್ರಾಯವಾಗಿತ್ತು. ಅಂತಹ ಮಹನೀಯ ರಂಗನಾಥ ಶರ್ಮರು ಬರೆದ ’ಋಷಿಗಳ ರಾಷ್ಟ್ರಾಭಿಮಾನ’ ಎಂಬ ಲೇಖನದಲ್ಲಿ ಅದೆಷ್ಟು ಉದಾತ್ತ ಭಾವಗಳು; ಎಷ್ಟೊಂದು ಉನ್ನತ ಧ್ಯೇಯಗಳು. ನಮ್ಮಲ್ಲಿನ ಅರೆಪಂಡಿತರು ಇವುಗಳನ್ನೆಲ್ಲ ಅರಿಯಬೇಕು.

ಚಪ್ಪಲಿಯೂ ಇರಲಿಲ್ಲ ರೊಕ್ಕ ಮೊದಲೇ ಇಲ್ಲ
ಇಪ್ಪತ್ತುಮನೆಗಳಲಿ ಭಿಕ್ಷೆಯನುಬೇಡಿ
ಸೊಪ್ಪು ಸಿಪ್ಪೆಗಳನು ಚಪ್ಪರಿಸಿ ತಿಂದೆಯಲೊ 
ಮುಪ್ಪಿನಲಿ ತೆಪ್ಪಗಿರು ಬೊಪ್ಪ ಮೇಲಿಹನು 

ರಂಗನಾಥ ಶರ್ಮರು ತಮ್ಮ ಕಲಿಕೆಯ ದಿನಗಳ ಬಡತನವನ್ನು ತಮ್ಮಾಪ್ತರಲ್ಲಿ ಆಶು ಕವಿತೆಯ ಮೂಲಕ ಹಾಸ್ಯಮಯವಾಗಿ ಹೇಳಿಕೊಳುತ್ತಿದ್ದ ರೀತಿಯಿದು!   

ಶಿವಮೊಗ್ಗಾ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಡಹಳ್ಳಿ ಒಂದು ಕುಗ್ರಾಮ; ಪ್ರಾಯಶಃ ೧೯೧೬ರ ವೇಳೆಗೆ ಅಲ್ಲೆಲ್ಲ ವಾಹನ ಸಂಚಾರವೇ ಇರಲಿಲ್ಲವೇನೋ. ಅಂತಹ ಹಳ್ಳಿಯಲ್ಲಿ ತಿಮ್ಮಪ್ಪ-ಜಾನಕಿಯರ ಮಗನಾಗಿ ೧೯೧೬ರಲ್ಲಿ ಈ ನೆಲಕ್ಕೆ ಬಂದಿಳಿದ ಶರ್ಮಾ,  ಅತಿ ಬಡತನದಲ್ಲೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಡಹಳ್ಳಿಯಲ್ಲಿ ಪೂರೈಸಿಕೊಂಡು, ತನ್ನ ಜ್ಞಾನ ತೃಷೆಯನ್ನು ತೀರಿಸಿಕೊಳ್ಳುವ ಸಲುವಾಗಿ ಕೆಳದಿಯಲ್ಲಿ ಅಂದು ನಡೆಸಲ್ಪಡುತ್ತಿದ್ದ ಸಂಸ್ಕೃತ ಪಾಠಶಾಲೆಗೆ ಸೇರಿಕೊಂಡು, ಮೂರು ವರ್ಷಗಳಕಾಲ ಆಧ್ಯಯನಮಾಡಿ, ಪ್ರಥಮ ಹಾಗೂ ಕಾವ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾದರು. ನಂತರ ಒಬ್ಬರೇ ಬೆಂಗಳೂರಿಗೆ ಬಂದು,  ವಾರಾನ್ನ ಮಾಡಿಕೊಂಡಿದ್ದು, ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಮಹಾ ಪಾಠ ಶಾಲೆಯಲ್ಲಿ ಸಾಹಿತ್ಯ ಪರೀಕ್ಷೆ ಯನ್ನು ತೆಗೆದುಕೊಂಡು ಯಶಸ್ವಿಯಾದರು. ಮುಂದೆ ಶಾಸ್ತ್ರಾಭ್ಯಾಸ ಮಾಡಿ ವ್ಯಾಕರಣ, ಅಲಂಕಾರ, ವೇದಾಂತ ಶಾಸ್ತ್ರಗಳಲ್ಲಿ ವಿದ್ವತ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅಲ್ಲಿಯೇ ಅವರಿಗೆ ಅವಕಾಶ ದೊರೆಯಿತು. ಸ್ವಪ್ರಯತ್ನದಿಂದ ಕನ್ನಡ ವಿದ್ವಾನ್ ಪರೀಕ್ಷೆಯನ್ನು ತೆಗೆದುಕೊಂಡು ಉತ್ತೀರ್ಣರಾದರು.

ಪ್ರೌಢಶಾಲಾ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರೂ, ಕೇವಲ ಹಣಕ್ಕಾಗಿಯೇ ಪಾಠಮಾಡುವ ಮೇಷ್ಟ್ರು ಅವರಾಗಿರಲಿಲ್ಲ. ಉದರಂಭರಣೆಗೆ ತನಗಿರುವ ಅರ್ಹತೆಯಲ್ಲಿ ಅವಕಾಶ ಸಿಕ್ಕ ಕಡೆ ಕೆಲಸಮಾಡುತ್ತ ನಡೆದರು.೧೯೪೧ರಲ್ಲಿ ಸಾಗರ ತಾಲೂಕಿನ ಮಂಚಾಲೆಯ ಕಮಲಾಕ್ಷಮ್ಮನವರ ಕೈಹಿಡಿದ ಶರ್ಮರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ. ೧೯೪೩ರಲ್ಲಿ ಹಾಸನದ ಮಾಧ್ಯಮಿಕ ಹಾಗೂ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿದರು. ಬೇಲೂರಿನ ಸಂಸ್ಕೃತ ಪಾಠಶಾಲೆಯಲ್ಲಿಯೂ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ತಾವು ಕಲಿತ ಚಾಮರಾಜೇಂದ್ರ ಸಂಸ್ಕೃತ ಮಹಾಪಾಠಶಾಲೆಯಲ್ಲೇ ೧೯೪೮ರಲ್ಲಿ ವ್ಯಾಕರಣದ ಅಧ್ಯಾಪಕರಾಗಿ ನೇಮಕಗೊಂಡರು. ಪ್ರಾಧ್ಯಾಪಕರಾಗಿ ೧೯೭೬ರಲ್ಲಿ ವೃತ್ತಿಯೆಂಬುದರಿಂದ  ನಿವೃತ್ತರಾದರೂ ಸಹ, ಸಾಹಿತ್ಯಕ ಸೇವೆ ಕೊನೆಯುಸಿರಿನವರೆಗೂ ಅನೂಚಾನಾಗಿ ನಡೆಯುತ್ತಲೇ ಇತ್ತು. ೧೯೭೩ರಲ್ಲಿ ತೀವ್ರ ಅನಾರೋಗ್ಯದಿಂದ ಅವರ ಪತ್ನಿ ನಿಧನರಾದರು. ನಂತರ ಡಿವಿಜಿಯವರಂತೆಯೇ ಪತ್ನಿವಿಯೋಗವನ್ನು ಸಹಿಸಿಕೊಂಡೇ ಜೀವನ ನಡೆಸಿಬಂದರು.

ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಶ್ರೀಯುತರು ರಚಿಸಿದ ಕೃತಿಗಳು ಸುಮಾರು ಐವತ್ತಕ್ಕೂ ಹೆಚ್ಚು. ’ಗುರು ಪರಂಪರಾಚರಿತಮ್’, ’ಸಂಸ್ಕೃತ ಪ್ರಥಮ ಪ್ರವೇಶ’, ’ಶ್ರೀಬಾಹುಬಲಿ ವಿಜಯಮ್’[ನಾಟಕ], ’ಏಕಚಕ್ರಂ’[ನಾಟಕ],ಸಂಸ್ಸೃತ ನಾಮ ದೈವೀವಾಕ್-ಇತ್ಯಾದಿ ಸಂಸ್ಕೃತ ಕೃತಿಗಳನ್ನು ಬರೆದಿದ್ದಾರೆ.  ಆವರ ಕನ್ನಡ ಸಾಹಿತ್ಯಕ ಸೇವೆ ಇಂತಿದೆ: ‘ಲೌಕಿಕ ನ್ಯಾಯಗಳು’, ‘ಹೊಸಗನ್ನಡ ವ್ಯಾಕರಣ’, ‘ವಾಲ್ಮೀಕಿ ಮುನಿಗಳ ಹಾಸ್ಯ ಪ್ರವೃತಿ’, ‘ವರದಹಳ್ಳಿ ಶ್ರೀಧರ ಸ್ವಾಮಿಗಳು’, ‘ಶ್ರೀರಾಮಚಂz’, ‘ಸೂಕ್ತಿ-ವ್ಯಾಪಿ’, ‘ಸಂದರ್ಭಸೂಕಿ’, ‘ವ್ಯಾಸ ತಾತ್ಪರ್ಯ ನಿರ್ಣಯ’. ಅನುವಾದಿಸಿದ ಕೃತಿಗಳು: ಭಗವದ್ಗೀತೆ, ಮಾಧವೀಯ ಶಂಕರ ದಿಗ್ವಿಜಯ, ಶ್ರೀಮದ್ವಾಲ್ಮೀಕಿ ರಾಮಾಯಣ [ಏಳು ಕಾಂಡಗಳು], ಅಮರ ಕೋಶ, ವಿದುರ ನೀತಿ, ಶ್ರೀಮದ್ ಭಾಗವತ [ದಶಮಸ್ಕಂದ], ಪ್ರಾರ್ಥನಾ ಶ್ಲೋಕಗಳು, ವಿಷ್ಣು ಪುರಾಣ, ಶ್ರುತಿ ಸಾರ ಸಮುದ್ಧರಣ, ವಾಕ್ಯ ಪದೀಯ ಮೊದಲಾದವು. ಇದಲ್ಲದೇ ಹಲವಾರು ಗ್ರಂಥಗಳನ್ನು ಅವರು ಸಂಪಾದಿಸಿದ್ದಾರೆ. ಹಳಗನ್ನಡದ ಕಾವ್ಯಗಳಲ್ಲಿ ಕೆಲವನ್ನು ಹೊಸಗನ್ನಡಕ್ಕೆ ರೂಪಾಂತರಿಸಿದ್ದಾರೆ. ಮೂಲ ’ಮಾಧವೀಯ ಶಂಕರ ದಿಗ್ವಿಜಯ’ವನ್ನು ಸಂಗ್ರಹಿಸಿ,  ’ಶ್ರೀ ಶಂಕರಚರಿತಾಮೃತಮ್’ ಎಂಬ ಶಂಕರರ ಜೀವನಚರಿತ್ರೆಯನ್ನು ಚಿಕ್ಕ ಹೊತ್ತಗೆಯಾಗಿ ಸಂಸ್ಕೃತದಲ್ಲಿ ಅನುಷ್ಟುಪ್ ಛಂದಸ್ಸಿನಲ್ಲಿ ಬರೆದು ಕನ್ನಡಕ್ಕೂ  ಅದರ ಅನುವಾದವನ್ನೂ ಒದಗಿಸಿದ್ದಾರೆ.

ಶಾಸ್ತ್ರಗಳನ್ನು ಕ್ರಮಾಗತ ಕಲಿಕೆಗಳಿಂದ ಅಧ್ಯಯನ ನಡೆಸಿ, ಘನಪಂಡಿತರೆನಿಸಿದ ಹಲವರು ಅದನ್ನಷ್ಟೇ ಗಾಢವಾಗಿ ಆಲಂಗಿಸಿಕೊಂಡುಬಿಡುತ್ತಾರೆ; ವಿದ್ವತ್ತಿನ ಜೊತೆಗೆ ಲೋಕಜ್ಞಾನವೂ, ಏಕಾಂತದ ಜೊತೆಗೆ ಲೋಕಾಂತವೂ ಇದ್ದರೆ ಜೀವನ ಸುಲಲಿತ ಎಂದು ಬಲ್ಲ ಕೆಲವೇ ವಿದ್ವಾಂಸರಲ್ಲಿ ಶರ್ಮರೂ ಒಬ್ಬರು! ಪ್ರತಿದಿನದ ರಾಜಕೀಯ-ಸಾಮಾಜಿಕ-ಆರ್ಥಿಕ-ವ್ಯಾವಹಾರಿಕ-ವೈಜ್ಞಾನಿಕ-ಸಾಹಿತ್ಯಕ ಎಲ್ಲಾ ರಂಗಗಳಿಗೆ ಸಂಬಂಧಪಟ್ಟ ಸುದ್ದಿಗಳನ್ನೂ ತಿಳಿದುಕೊಳ್ಳುವ ಹವ್ಯಾಸವಿತ್ತು. ಕೊನೆಗಾಲದಲ್ಲಿ ಕಣ್ಣು ಕಾಣಿಸದಿದ್ದಾಗ ಸಹಾಯಕರಿಂದ ಓದಿಸಿ ಕೇಳುತ್ತಿದ್ದರು. ಅವರ ಲೋಕಮುಖಕ್ಕೊಂದು ಚಿಕ್ಕ ಉದಾಹರಣೆ ಇಲ್ಲಿದೆ: ಗುಲ್ವಾಡಿಯವರು ಇನ್ನೂ ಬದುಕಿದ್ದ ದಿನದಲ್ಲಿ ಒಮ್ಮೆ, ಶತಾವಧಾನಿ ಡಾ|ರಾ.ಗಣೇಶ್, ಪತ್ರಕರ್ತ ಸಂತೋಷಕುಮಾರ ಗುಲ್ವಾಡಿ ಹಾಗೂ ಸೂರ್ಯಪ್ರಕಾಶ್ ಪಂಡಿತರು ಶರ್ಮರ ಮನೆಗೆ ಹೋಗಿದ್ದರು. ಕೊಡಲ್ಪಟ್ಟ ನೈವೇದ್ಯಗಳನ್ನೆಲ್ಲ ಭುಂಜಿಸಿ, ಗಂಟೆಗಟ್ಟಲೆ ಮಾತನಾಡಿ ಹೊರಟಾಗ, ಶರ್ಮರು ತನ್ನ ಸಹಜ ರಿವಾಜಿನಂತೆ, ಅತಿಥಿಗಳನ್ನು ಬೀಳ್ಕೊಡಲು ಗೇಟಿನವರೆಗೂ ಬಂದರು. ಅಲ್ಲಿ ನಿಂತಿದ್ದ ಅವರ ವಾಹನವನ್ನು ಗಮನಿಸಿ, ಗುಲ್ವಾಡಿಯವರಲ್ಲಿ "ನೀವೇ ಡ್ರೈವ್ ಮಾಡಿಕೊಂಡು ಬಂದಿದ್ದೀರಾ?" ಎಂದು ಪ್ರಶ್ನಿಸಿದರು. "ಇಲ್ಲ ಡ್ರೈವರ್ ಇದ್ದಾನೆ" ಎಂದು ಗುಲ್ವಾಡಿಯವರು ಉತ್ತರಿಸಿದರೆ, "ಛೇ! ಎಂಥಾ ಕೆಲಸವಾಗಿ ಹೋಯ್ತು. ಇಷ್ಟು ಹೊತ್ತು ಹೊರಗೇ ಕಾದಿದ್ದ ಚಾಲಕನಿಗೆ ಏನೂ ಕೊಡಲಿಲ್ಲವಲ್ಲ" ಎಂದು ಪರಿತಪಿಸುತ್ತ, ಯಾರ ಸಮಜಾಯಿಷಿಯನ್ನೂ ಕೇಳದೆ, ಚಾಲಕನನ್ನು ಕರೆದು ಹಣ್ಣು ಹಂಪಲು ಕೊಟ್ಟು ಉಪಚರಿಸಿದರು. ಶರ್ಮರ ಅನನ್ಯ ಸೌಜನ್ಯವನ್ನು ಇಂಥದ್ದರಲ್ಲಿ ಢಾಳಾಗಿ ಕಾಣಬಹುದು.

ಅಕ್ಕ-ಪಕ್ಕದ ಮನೆಗಳಲ್ಲೇ ಎರಡು ಸಲಗಗಳಂತಿದ್ದ ಡಿ.ವಿ.ಜಿ ಮತ್ತು ರಂಗನಾಥ ಶರ್ಮರದ್ದು ಅನ್ಯೋನ್ಯ ಸ್ನೇಹ ಸಂಬಂಧ; ಡಿ.ವಿ.ಜಿಯವರು ತಮ್ಮ ಕೃತಿಗೆ ಶರ್ಮರ ಸಲಹೆಯನ್ನು ಪಡೆಯುತ್ತಿದ್ದರೆ, ಡಿವಿಜಿಯವರ ಮರಣಾನಂತರ ಪ್ರಕಟಗೊಂಡ ’ಮರುಳ ಮುನಿಯನ ಕಗ್ಗ’ವನ್ನು ಸಂಸ್ಕರಿಸಿ ಮುನ್ನುಡಿ ಬರೆದವರು ಇದೇ ಶರ್ಮರು. ಡಿವಿಜಿಯವರ ಸರಿಸಮಾನ ವ್ಯಕ್ತಿ ಇಲ್ಲವೇ ಇಲ್ಲ ಎಂಬುದು ಶರ್ಮರ ಅನುಭವದ ಮಾತು. ಒಳ್ಳೆಯ ಕನ್ನಡ ಯಾವುದೆಂಬುದನ್ನು ಶರ್ಮರ ಬರಹಗಳಿಂದ  ತಿಳಿಯಬಹುದು ಎಂದು ಡಿ.ವಿ.ಜಿ. ಮತ್ತು ಇನ್ನಿತರ ವಿದ್ವಾಂಸರ ಅಭಿಪ್ರಾಯವಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಹಳಗನ್ನಡ ಗ್ರಂಥ ಸಂಪಾದನಾ ಸಮಿತಿಗೆ ಅಧ್ಯಕ್ಷರಾಗಿ ಅನೇಕ ಗ್ರಂಥಗಳ ಪ್ರಕಟಣೆಗೆ ಕಾರಣಕರ್ತರಾದರು. ಡಾ|ರಾ.ಗಣೇಶರು ಶರ್ಮರ ಕುರಿತೇ ಬರೆದ ’ವಾಣೀವಾಹನ’ ಎಂಬ ಹೊತ್ತಗೆಯಲ್ಲಿ ವಿಸ್ತಾರವಾಗಿ ಶರ್ಮರ ವ್ಯಕ್ತಿತ್ವವನ್ನು ಚಿತ್ರಿಸಿದ್ದಾರೆ.

ಸಾಹಿತ್ಯ ಸಲಗಗಳ ವಿನೋದಾವಳಿಗಳ ಸ್ಯಾಂಪಲ್ಗಳನ್ನು ನೋಡಿ: ಒಮ್ಮೆ ಶರ್ಮರು ತಮ್ಮ ಹಲ್ಲು ನೋವಿನ ಚಿಕಿತ್ಸೆಗಾಗಿ ಹೊರಟು ದಾರಿಯಲ್ಲಿ ಡಿವಿಜಿಯವರನ್ನು ಕಂಡಾಗ, ವಿನೋದಕ್ಕಾಗಿ ಡಿವಿಜಿ, "ಏಕದಂತಸ್ಸ ವೈ ಕುರ್ಯಾದದ್ಯವೋ ದಂತ ಮಂಗಲಂ"[ಏಕದಂತ ಗಣಪತಿಯು ಇಂದು ನಿಮ್ಮ ಹಲ್ಲನ್ನು ಕಾಪಾಡಲಿ] ಎಂದು ಹೇಳಿದ್ದರಂತೆ; ಚಿಕಿತ್ಸೆ ಪಡೆದು ಮರಳಿದ ಶರ್ಮರಿಗೆ ಡಿವಿಜಿಯವರು ಸಿಕ್ಕಾಗ, "ಅಸೂಯಯೈವ ಭಗವಾನ್ ದಂತದ್ವಯಮಪಾಹರತ್" [ತಾನು ಏಕದಂತನೆಂಬ ಅಸೂಯೆಯಿಂದ ಆ ದೇವನು ನನ್ನ ಎರಡು ಹಲ್ಲುಗಳನ್ನು ಕೀಳಿಸಿಬಿಟ್ಟನು!] ಎಂದು ಶ್ಲೋಕಮಯವಾಗಿಯೇ ಉತ್ತರಿಸಿದ್ದರಂತೆ! ಡಿವಿಜಿಯವರಿಗೆ ಕರಿದ ತಿಂಡಿಗಳೆಂದರೆ ಪರಮಪ್ರೀತಿ! ಶರ್ಮರದ್ದೋ ಮಿತಾಹಾರ. ಡಿವಿಜಿಯವರ ಮನೆಗೆ ಹೋದಾಗಲೆಲ್ಲಾ ಶರ್ಮರಿಗೆ ಬೋಂಡಾ ಸೇವೆ ನಡೆಯುತ್ತಿತ್ತು. ಇಬ್ಬರ ಮುಂದೆ ಬೋಂಡಾದ ಬಟ್ಟಲು ಬಂದು ಕುಳಿತಾಗೊಮ್ಮೆ ಎಷ್ಟು ಒತ್ತಾಯಿಸಿದರೂ, ಶರ್ಮರು ಒಂದಕ್ಕಿಂತ ಹೆಚ್ಚು ಬೋಂಡ ತಿನ್ನಲೇ ಇಲ್ಲವಂತೆ; ಆಗ ಡಿವಿಜಿ: "ಪಂಡಿತರೇ ನಿಮ್ಮ ಹೊಟ್ಟೆ ಲೇಡೀಸ್ ರಿಸ್ಟ್ವಾಚ್. ನನ್ನದಾದರೋ ವಾಲ್ಕ್ಲಾಕ್"ಎಂದು ನಕ್ಕರಂತೆ!

ಶರ್ಮರು ಆದಿಚುಂಚನಗಿರಿಯಲ್ಲಿ ನಡೆದ ೫ನೇ-ಅಖಿಲ ಕರ್ನಾಟಕ ಸಂಸ್ಕೃತ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ಅನೇಕ ಸಂನ್ಯಾಸಿಗಳಿಗೆ ಗುರುವಾಗಿ ವೇದ-ಶಾಸ್ತ್ರಾದಿಗಳನ್ನು ಬೋಧಿಸಿದ್ದಾರೆ. ಅನೇಕ ಮಠ-ಮಂದಿರ-ಸಂಘ-ಸಂಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ತಿರುಪತಿಯ ಸಂಸ್ಕೃತ ವಿಶ್ವವಿದ್ಯಾಲಯ, ಗೌರವ ಪೂರ್ವಕವಾಗಿ, ‘ಮಹಾಮಹೋಪಾಧ್ಯಾಯ’ ಮತ್ತು  ಗೌರವ ಡಾಕ್ಟರೇಟ್ ಪದವಿಗಳನ್ನು ಪ್ರದಾನಮಾಡಿತ್ತು. ’ವಿದ್ಯಾವಾರಿಧಿ’ ಎಂಬ ಬಿರುದನ್ನು ಪಡೆದಿದ್ದರು. ೧೯೭೪ರಲ್ಲಿ ರಾಜ್ಯ ಸರಕಾರ ’ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ನೀಡಿದ್ದರೆ, ಅದೇ ವರ್ಷ "ಅತ್ಯುತ್ತಮ ಶಿಕ್ಷಕ" ನೆಂಬ ರಾಷ್ಟ್ರಪ್ರಶಸ್ತಿಯೂ ಪ್ರಾಪ್ತವಾಗಿತ್ತು. ‘ರಂಗಾಭಿನಂದನ’[ಕನ್ನಡ]-‘ರಂಗಾಭಿನಂದನಮ್’[ಸಂಸ್ಕೃತ]-ಶ್ರೀಯುತರಿಗೆ ಅರ್ಪಿಸಲ್ಪಟ್ಟ ಅಭಿನಂದನ ಗ್ರಂಥಗಳು. ರಂಗನಾಧ ಶರ್ಮರೆಂಬ ಸಂಸ್ಕೃತಿ ಶಿಖರವೊಂದು ಇತ್ತೀಚೆಗೆ ಸಾರಸ್ವತ ಲೋಕದಲ್ಲೆಲ್ಲೋ ಮರೆಯಾಗಿ, ಅಮರವಾಯಿತು.

Tuesday, February 4, 2014

ಸೌಂದರ್ಯಾಲಾಪ

 
ಸೌಂದರ್ಯಾಲಾಪ

ನಿನ್ನ ಮೂಕ ಮನದೊಳಗಿಗೆ ಜೀವವಾಗಿ ಭಾವವಾಗಿ 
ನನ್ನೆ ನಾನು ಕಳೆದುಕೊಂಡೆ ಭಾರವಾಗಿ ರಾಗವಾಗಿ

ಅಂದು ಬಂದು ಎದಿರೊಳೊಮ್ಮೆ ನಿಂದು ಮುಗುಳ ನಗುವ ಬೀರಿ
ಸಂಧಿಸೆನ್ನ ಕಂಗಳಲ್ಲೆ ಮಾತನಾಡಿಸೊಮ್ಮೆಲೆ
ಸುಂದರಾಂಗಿ ಸರಿದು ಹೋದ ಚಂದವನ್ನು ಮರೆಯಲಾರೆ
ಮುಂದೆ ಭೇಟಿ ಎಂದೊ ಎಂತೊ ಅರಿಯದಾದೆನೀಗಲೆ

ನೂರು ನೋಡಲಿಲ್ಲ ನಾನು ಒಬ್ಬಳನ್ನೆ ನೋಳ್ಪೆನೆಂದು
ತೇರನೇರಿ ಮೆರೆಯ ಹೊರಟ ದೇವದೇವನಂದದಿ
ದೂರ ಸಾಗಿಬಂದಮೇಲೆ ಜಾರಿಹೋಯಿತಲ್ಲೆ ಮನಸು
ಮಾರ ಶರವು ಮೀಟಿ ಹೃದಯವೀಣೆ ತಂತಿ ಬಂಧದಿ

ಅಡವಿಯೊಳಗೆ ತುಡುಗು ಹರಿಣ ಬೆಡಗಿನಿಂದ ಚಂಗನೆದ್ದು
ಅಡಿಗಡಿಗೂ ಜಿಗಿದು ಕುಣಿದು ಹಾರುವಂಥ ಬಯಕೆಗಳ್
ಹುಡುಗಿಯೆನ್ನ ಸ್ವಂತವೆಂದು ಗುಡುಗಿ ಹೇಳುವಾಸೆ ಗೆದ್ದು
ತಡವಮಾಡದಲ್ಕೆ ಹಿಡಿದು ಬಿಡದೆ ತೋಳತೆಕ್ಕೆಯೊಳ್  

Saturday, January 18, 2014

ಹಣತೆಯೆನ್ನದಲ್ಲ ದೇವ



ಹಣತೆಯೆನ್ನದಲ್ಲ ದೇವ

ಹಣತೆಯೆನ್ನದಲ್ಲ ದೇವ ಬತ್ತಿಯಲ್ಲ ಎಣ್ಣೆಯಿಲ್ಲ
ಫಣತವೆಂದು ಕರೆದರೆನ್ನ ಕುಣಿತ ಕಂಡ ಹಲವರು
ಎಣಿಕೆಯಿಲ್ಲ ಬರೆದದೆಷ್ಟೊ ಕನಸು ಹರಿದ ನಿಜವದೆಷ್ಟೊ
ಕುಣಿಕೆಗಳನು ಸೇರಿಸೆಳೆವ ಸೂತ್ರಧಾರ ಓ ಪ್ರಭು

ತಿಣುಕಲಿಲ್ಲ ನಿನ್ನ ಕೃಪೆಯಿಂ ಮನಕೆ ಬಂದುದಾಯ್ತು ಬರಹ
ವಣಿಕನಾನು ಹೊತ್ತಗೆಗಳ ಹೊತ್ತು, ಹೊತ್ತು-ಹೊತ್ತಿಗೆ
ಸಣಕಲಾದ ಮನದ ಮನೆಯೊಳಿಣುಕಿ ತೆಗೆದ ಭಾವಗಳನು
ಗಣಿಕೆಯೊರೆದು ತೆರೆದು ಇಟ್ಟೆ ಲೋಕಮುಖಕೆ ಅರ್ಪಿಸಿ 

ಪಣಕೆ ಒಡ್ಡಲಾರೆ ಭಾಷ್ಯ ಸೂತ್ರಕಾರನೆನ್ನಲಾರೆ
ಚುಣುಕು ರಾಗ-ತಾಳದಲ್ಲಿ ನುಡಿವೆ ತನನ ತೋಂ ತನ
ಸೊಣಕು ಸೊಗಡು ನೆಲ-ಜಲಗಳ ದೇಶ-ಕೋಶ ಪರಿವೆಯಿರದ
ಮಿಣುಕು ಹುಳದ ತೆರದಿ ಹಾರಿ-ಹರೆವೆನಷ್ಟು ಭರದಲಿ!

ಕಣಕ-ಹೂರಣಗಳನರಿಯೆ ಕಣಿಕೆಯೆತ್ತಿ ಕೊಣಕುತಿರುವೆ
ಕುಣುಕು ಬಹಳವಿದೆಯದೆಂದು ಹೇಳಲಾರೆ ನಿನ್ನೊಳು
ಗಣಕ-ಗುಣಕವೆಲ್ಲ ನಿನದು ಅಣಕವಾಡ ಬೇಡ ದೊರೆಯೆ
ಇನಕುಲೇಂದ್ರ ಮಣಿದು ಮುಗಿವೆ ಚಣಚಣದಲು ಚರಣಕೆ

Saturday, January 11, 2014

.....ಕಂಬ್ಳಿ ಹೊದ್ಕೊಂಡ್ ಕುಂತ್ಕಂಡಿದ್ರೆ ಯಾರು ನಿನ್ನ ಕೇಳ್ತಾರೆ ನಿಂಗವ್ವ? ನೀನು ಬೆಂಗಳೂರಿಗೆ ಬಂದು ನೋಡವ್ವ!

 
 ಚಿತ್ರಋಣ:ಅಂತರ್ಜಾಲ 

.....ಕಂಬ್ಳಿ ಹೊದ್ಕೊಂಡ್ ಕುಂತ್ಕಂಡಿದ್ರೆ ಯಾರು ನಿನ್ನ ಕೇಳ್ತಾರೆ ನಿಂಗವ್ವ? ನೀನು ಬೆಂಗಳೂರಿಗೆ ಬಂದು ನೋಡವ್ವ!

ಪದ್ಯ ಸಾಹಿತ್ಯದಲ್ಲಿ ಜನಪದವೂ ಒಂದು. ಜಾನಪದ ಎಂಬುದು ಸರಿಯಾದ ಪದ ಪ್ರಯೋಗವಲ್ಲ. ಜನರೊಳಗಿನ ಅಜ್ಞಾತ ಕವಿ ಮನಗಳು ಜನರಿಗಾಗಿ ಹೊರಹೊಮ್ಮಿಸಿದ ಸಾಹಿತ್ಯ ಪ್ರಾಕಾರ ಜನಪದ. ಪ್ರಾಯಶಃ ’ಜಾಣಪದ’ ಎಂಬ ಪದ ಪ್ರಯೋಗ ಹೇಳುವಾಗ ಸ್ವಲ್ಪ ತಿರುಚಲ್ಪಟ್ಟು ’ಜಾನಪದ’ ಎಂದಾಗಿರಲು ಸಾಕು. ಇಲ್ಲಿ ನನ್ನ ಉದ್ದೇಶ ಇರುವುದು ಆ ಪದದ ಬಗ್ಗೆ ಹೇಳುವುದಲ್ಲ; ಪದವನ್ನು ಶಿರೋನಾಮೆಯಾಗಿ ಹೊತ್ತ ಪದ್ಯಗಳ ಕಂತೆಯ ಸಂತೆಯ ಬಗ್ಗೆ ಮೂರು ಮತ್ತೊಂದು ಮಾತನಾಡುವುದು.  

ಹುಕ್ಕೇರಿ ಬಾಳಪ್ಪ, ಏಣಗಿ ಬಾಳಪ್ಪ ಇವರೆಲ್ಲ ಅನೇಕ ಹಾಡುಗಳನ್ನು ಹಾಡಿದಂತೆ ಕೆಲವು ರಂಗ ಕಲಾವಿದರೂ ಜನಪದ ಪದ್ಯಗಳನ್ನು ಹಾಡಿದ್ದಾರೆ. ಆ ಪೈಕಿ ಗುರುರಾಜ್ ಹೊಸಕೋಟಿ ಎಂಬವರೂ ಒಬ್ಬರು. ಹೆಸರನ್ನು ಹೇಳುತ್ತಿದ್ದಂತೆಯೇ ನಿಮಗೆಲ್ಲ ತುಸುಮಟ್ಟಿಗೆ ಅವರ ಪದ್ಯದ ಸದ್ದಿನ ಥಾಟು ಕಿವಿಯಲ್ಲಿ ಮಾರ್ದನಿಸತೊಡಗಿರಬಹುದು. ಅವರ ಹಾಡುಗಳ ಧ್ವನಿಸಾಂದ್ರಿಕೆಗಳು ಮಾರುಕಟ್ಟೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಿಕರಿಗೊಂಡಿವೆ! ಉತ್ತರ ಕರ್ನಾಟಕದ ಮಂದಿಗೆ ಇಂತಹ ಸಾಹಿತ್ಯ ಪ್ರಾಕಾರವೂ ಮತ್ತು ಹಾಡುಗಳೂ ಸಹ ಅಚ್ಚುಮೆಚ್ಚು; ಅದರರ್ಥ ಉಳಿದವರಿಗೆ ಹಿಡಿಸುವುದಿಲ್ಲವೆಂದಲ್ಲ, ಉಳಿದೆಡೆ ಜನಪದ ಸಂಗೀತ ಕಲವಿದರು ಕಮ್ಮಿ ಇದ್ದರು, ಇದ್ದಾರೆ ಮತ್ತು ಜನಪದಕ್ಕೆ ಅಷ್ಟೊಂದು ಮಹತ್ವ ಕೊಡುವುದಕ್ಕಿಂತ ಉಳಿದ ಪ್ರಾಕಾರಗಳಿಗೆ ಮಹತ್ವಕೊಟ್ಟರು ಎಂದರ್ಥ. ಗುರುರಾಜ್ ಹೊಸಕೋಟಿಯವರ ಹಾಡುಗಳನ್ನು ಕೇಳಿದ ಗಂಗರಾಜು ಅವರು ತಮ್ಮ ಸಿನಿಮಾವೊಂದರಲ್ಲಿ ಅವರಿಂದ ಜನಪದ ಶೈಲಿಯ ಹಾಡೊಂದನು ಹಾಡಿಸಿದರು:

ನಿಂಗಿ ...ನಿಂಗಿ ... ನಿಂಗಿ..ನಿಂಗಿ
ನಿದ್ದಿ ಕದ್ದಿಯಲ್ಲೆ ನಿಂಗಿ
ಚಂದಾನ ಚಂದ್ರ.....
ಭೂಮಿಗೆ ಲಾಂದ್ರ...ಆಗ್ಯಾನ ನೋಡಲ್ಲಿ

ಗಂಗರಾಜು ಎಂಬವರು ಬರೆಯತೊಡಗಿದಾಗ ತನ್ನ ಹೆಸರು ಸ್ವಲ್ಪ ವಿಭಿನ್ನವಾಗಿರಲಿ ಎಂದು ’ಹಂಸಲೇಖ’ ಎಂದು ತಮ್ಮನ್ನು ಕರೆದುಕೊಂಡರು, ಹಂಸದ ಆಕಾರದಲ್ಲಿ ರುಜುಮಾಡಲು ಆರಂಭಿಸಿದರು. 

ಮನುಷ್ಯನ ವಯಸ್ಸು ಕೂರುವುದಿಲ್ಲ; ಕಿಲೋಗಟ್ಟಲೆ ಸುಣ್ಣ-ಬಣ್ಣ ಮೆತ್ತಿಕೊಂಡರೂ ಯಾವ ಸುಂದರಿಯೂ ಒಂದಷ್ಟು ವಯಸ್ಸಿನ ನಂತರ ಷೋಡಶಿಯಾಗಿ ಕಾಣುವುದಿಲ್ಲ. ಇನ್ಫ್ಯಾಕ್ಟ್, ಬಣ್ಣ ಮೆತ್ತಿಕೊಂಡು ವಯಸ್ಸು ಮರೆಮಾಚಿ ಸುಂದರ ಎನಿಸಿಕೊಳ್ಳುವುದರಲ್ಲಿ ಕೆಲವು ಗಂಡಸರೂ ಕಮ್ಮಿ ಇರುವುದಿಲ್ಲವೆಂದು ಬಸಂತ್ ಕುಮಾರ್ ಪಾಟೀಲ್ ಹೇಳಿದ್ದಾರೆ ಬಿಡಿ! ವಯಸ್ಸು ಯಾವುದೇ ಇದ್ದರೂ ಮನುಷ್ಯರಲ್ಲಿ ಲವಲವಿಕೆ ಎಂಬುದು ಮರೆಯಾಗಬಾರದು; ಅದೇ ಜೀವನಕ್ಕೆ ಬೇಕಾದ ಪ್ರಮುಖ ಇಂಧನ. ಜೀವನೋತ್ಸಾಹ ಸದಾ ಇದ್ದರೆ ಯಾವುದೋ ಒಂದು ರೀತಿಯಲ್ಲಿ ಏನನ್ನೋ ಸಾಧಿಸಲು ಸಾಧ್ಯವಾಗುತ್ತದೆ. ಉತ್ಸಾಹವೇ ಉಡುಗಿಹೋದರೆ ಸತ್ತಿದ್ದೂ ಬದುಕಿರುವ ಹಾಗೆ ಜೀವನ ಸಪ್ಪೆಯಾಗಿರುತ್ತದೆ; ನೀರಸವಾಗಿ ಬೇಸರದಲ್ಲೇ ಮುಗಿದು ಹೋಗುತ್ತದೆ. ಬೇಸರ-ಬೇಗುದಿಗಳನ್ನು ಝಾಡಿಸಿ ಒಂದೆಡೆ ದೂಡಿಟ್ಟು ಬಾಗಿಲು ಹಾಕಿ ಬೋಲ್ಟ್ ಮಾಡಿ, ಇದು ನನ್ನ ಸಂತಸದ ಸಮಯ ಎಂದು ಒಂದಷ್ಟು ಸಮಯವನ್ನು ನಮಗಾಗಿ ಇಟ್ಟುಕೊಂಡು, ಒಂದಷ್ಟು ಸಂಗೀತ-ಸಾಹಿತ್ಯ-ಕಲೆಗಳ ಗಂಧವನ್ನು ನಮ್ಮೊಳಗೆ ಬಿಟ್ಟುಕೊಳ್ಳಬೇಕು. ಅದೊಂದು ಕಲ್ಪನಾ ವಿಲಾಸ, ಅದೊಂದು ಭ್ರಮಾಲೋಕ, ಅಲ್ಲೆಲ್ಲಾ ಒಂದಷ್ಟು ಹೊತ್ತು ಹಂಪಿಯಲ್ಲಿ ಹ್ಯಾಲಿಕಾಪ್ಟರ್ ರೈಡ್ ಹೋಗಿಬಂದ ಹಾಗೇ ವಿಹರಿಸಿ ಹೊರಬರಬೇಕು. ಆಗ ಲವಲವಿಕೆ ಹೆಚ್ಚಿ ಶರೀರಿದ ಪ್ರತಿಯೊಂದೂ ಜೀವಕೋಶಕ್ಕೂ ಹೊಸಜೀವ ಬರುತ್ತದೆ; ಹಣವನ್ನು ಕಂಡರೆ ಹೆಣವೂ ಎದ್ದುಬರುತ್ತದೆ ಅಂತಾರಲ್ಲಾ ಹಾಗೆ!  

ನನ್ನ ಮಿತ್ರ ಗುರುರಾಜ್ ಜೊತೆಗೆ ನಾನು ಹರಟೆಗೆ ಕೂತಿದ್ದಾಗ ಅವರು ಸಿಗರೇಟ್ ಸೇದುತ್ತಿದ್ದರು. ನಾನಾದರೂ ’ಅಗ್ನಿಹೋತ್ರಿ’ಯಲ್ಲ. ತಮಾಷೆಯ ಮಾತಿಗೆ ಗುರುರಾಜ್ ಹೆಸರಾದವರು. "ಸಿಗರೇಟೆಲ್ಲ ಸೇದ ಬಾರದ್ರೀ....ಕ್ಯಾನ್ಸರ್ ಬರತ್ತೆ" ಎಂದರೆ ಸಾಕು ಉತ್ತರಿಸುತ್ತಿದ್ದುದು ಹೀಗೆ: "ಭಟ್ರೆ ನಿಮಗ್ಗೊತ್ತಿಲ್ಲ, ಸಿಗರೇಟ್ ಸೇದಿದಾಗ ಶ್ವಾಸಕೋಶದೊಳಗೆ ಹೊಗೆ ಹೋಗುವುದರಿಂದ ಅಲ್ಲಿರುವ ಕ್ರಿಮಿಕೀಟಗಳೆಲ್ಲ ಸತ್ತುಹೋಗುತ್ತವೆ. ವಿಜ್ಞಾನಿಗಳಿಗೆ ತಲೆಯಿಲ್ಲ, ಅವರು ಹೇಳಿದ್ದನ್ನೆಲ್ಲಾ ಮಾಡುತ್ತ ಕೂರಲು ನಮಗೆ ಪುರ್ಸೊತ್ತಿಲ್ಲ." ನಿಯಮಗಳನ್ನು ಹೇಳುವ ವೈದ್ಯರೂ, ವಿಜ್ಞಾನಿಗಳೂ ಅಲ್ಲಲ್ಲಿ ಸಿಗರೇಟ್ ಸೇದುವುದನ್ನು ಕಂಡಿದ್ದ ನನಗೆ ಏನು ಹೇಳಬೇಕೋ ತಿಳಿಯುತ್ತಿರಲಿಲ್ಲ. ಪ್ರತೀ ವ್ಯಕ್ತಿಗೂ ತನ್ನ ವೈಯ್ಯಕ್ತಿಕದಲ್ಲಿ ಕೆಲವು ಬೇಕು-ಬೇಡಗಳಿರುತ್ತವೆ; ಅವುಗಳನ್ನು ತೀರಾ ನಿರ್ಬಂಧಕ್ಕೆ ತರಲು ಯಾರಿಂದಲೂ ಆಗುವುದಿಲ್ಲ. ಅದರಿಂದಲೇ ಅವರಿಗೆ ತೃಪ್ತಿ ಎಂಬುದಾದರೆ ಆಗ್ಲಪ್ಪಾ ಹಾಗಾದರೂ ನೆಮ್ಮದಿಯಿಂದಿರುತ್ತಾರಲ್ಲಾ ಎಂದುಕೊಂಡು ಸಂಬಂಧಿಕರು ಸುಮ್ಮನಾಗುತ್ತಾರೆ. ವೈಯ್ಯಕ್ತಿಕ ಬೇಡಿಕೆಗೂ ಮಾಡುವ ವೃತ್ತಿಗೂ, ಕಲಿತಿರುವ ವಿದ್ಯೆಗೂ ಯಾವುದೇ ಸಂಬಂಧವೂ ಇರುವುದಿಲ್ಲ. ಆದರೂ ಒಂದು ಕಿವಿಮಾತು: ಲವಲವಿಕೆ ಪಡೆಯುವ ಭರದಲ್ಲಿ ದುಶ್ಚಟಗಳಿಗೆ ದಾಸರಾಗುವುದು ಒಳಿತಲ್ಲ.       

ಸಾಹಿತ್ಯದಲ್ಲಿ ಸದಾ ಯೌವ್ವನವಿರಬೇಕು, ಸಾಹಿತ್ಯವೆಂಬುದು ಶಾರೀರಿಕವಾಗಿ ಮುದುಕಾಗಬಾರದು. ಸಾಹಿತ್ಯ ಸಣಕಲಾಗಿ, ಗೂರಲುಬ್ಬಸ ಅದಕ್ಕೆ ಶುರುವಾಗಿ, ಮುಪ್ಪಿನ ಮುಖ-ಮೈ ಸಿಕ್ಕುಗಳು-ಸುಕ್ಕುಗಳು ಕಾಣಿಸಿಕೊಂಡರೆ, ಸಂಬಂಧಮಾಡಿಕೊಳ್ಳಲು ಬರುವ ಓದುಗರೆಂಬ ಯೌವ್ವನಿಗರು ಬಂದ ದಾರಿಗೆ ಸುಂಕವಿಲ್ಲವೆಂದು ಬೈದುಕೊಂಡು ಓಡಿಹೋದಾರು! ನೀವೇ ನೋಡಿ: "ಮೈ ಅಮಿತಾಭ್ ಬಚ್ಚನ್ ಬೋಲ್ ರಹಾಂ ಹೂಂ ...." ಎಂಬ ದನಿ ನಮ್ಮಲ್ಲಿನ ಮುದುಕಿಯರಿಗೆ ಕೇಳಿದರೆ, ಇಂದಿನ ಹುಡುಗಿಯರಿಗೆ ರಣಬೀರ್ ಕಪೂರ್ ಕೈಹಿಡಿದುಕೊಂಡು ನಿಂತಷ್ಟೇ ಖುಷಿಯಾಗಿಬಿಡುತ್ತದಲ್ಲಾ, ಸಿಕ್ಸ್ಟೀ ಪ್ಲಸ್  ಹೇಮಾ ಮಾಲಿನಿ, ರೇಖಾ, ಶ್ರೀದೇವಿ ಥರದ ನಟಿಯರು ಹತ್ತಿರದ ನಗರಗಳಿಗೆ ಬಂದರೆ, ಕೈಲಾಗದ ಮುದುಕರೂ ಕೋಲೂರಿಕೊಂಡು ನಿಧಾನಕ್ಕೆ ನೋಡಿಬರಲು ಹೊರಟುಬಿಡುತ್ತಾರಲ್ಲಾ, ಅಂಥಾ ಯೌವ್ವನದ ಕಸುವನ್ನು ಸಾಹಿತ್ಯ ಸದಾ ಉಳಿಸಿಕೊಳ್ಳಬೇಕು. ಹೆಂಡ ಮತ್ತು ಆಯುರ್ವೇದೀಯ ಔಷಧಿಗಳು ಹಳೆಯದಾದಷ್ಟೂ ಪರಿಣಾಮ ಅಧಿಕವಂತೆ! ಅದೇರೀತಿಯಲ್ಲಿ, ಬರೆದ ಸಾಹಿತ್ಯ ಕಾಲಾನಂತರದಲ್ಲೂ, ಹುದುಗಿದ್ದಲ್ಲಿಂದಲೇ ದೂರಕ್ಕೆ ಬಾಣಪ್ರಯೋಗಿಸಿ ಬೇಟೆಯಾಡುವ ಶಬ್ದವೇದಿ ಬಲ್ಲ ಚಾಣಾಕ್ಷನಂತೆ, ತಾನೆಲ್ಲೇ ಹುದುಗಿದ್ದರೂ, ಹುಡುಕುತ್ತಿರುವ ಆಸಕ್ತರನ್ನು ಬರಸೆಳೆಯುವಲ್ಲಿ ಯಶಸ್ವಿಯಾಗಬೇಕು.

ಜನಪದ ಪದ್ಯಸಾಹಿತ್ಯಗಳು ಯಾಕೆ ಇಷ್ಟವಾಗುತ್ತವೆಂದರೆ, ಅವುಗಳಲ್ಲಿನ ಪಾತ್ರಗಳಲ್ಲಿ ಜೀವಂತಿಕೆಯಿರುತ್ತದೆ. ಅದು ನೇರವಾಗಿ ಯಾರನ್ನೋ ಕುರಿತು ಹೇಳಿದ್ದಲ್ಲ, ಬದಲಾಗಿ ಜನಜೀವನದಲ್ಲಿ ಕಂಡುಬರುವ ಒಂದು ಮಜಲು.

ಕಲಿತ ಹುಡುಗಿ
ಕುದುರೆ ನಡಿಗಿ ನಡೀತ ಬರ್ತಿತ್ತ
ಉಟ್ಟ ಸೀರೆಯ
ಕೆಳಗಿನ ದಡಿಯು ಕಸಾ ಹೊಡೆಯುತಿತ್ತ...

ಸೊನಗಾರ ಮಗನು ಬೆಂಕಿಯಲ್ಲಿ
ಚಿನ್ನ ಕಾಯ್ಸುತಿದ್ದ
ಆ ಸಮಯದಲಿ ಕಲಿತ ಹುಡುಗಿ
ಅಲ್ಲಿಗೆ ಬಂದ್ಬಿಡ್ತ
ಹುಡುಗಿ ನೋಡುತ ಇರುವಾಗಲೇ
ಚಿನ್ನ ಕರಗಿ ಹೋತ
ಆ ಸಮಯದಲಿ ಗುಂಜಿ ಚಿನ್ನ
ತೆಗೆವುದೆ ಮರೆತೋತ ...  

ಎಂಬ ಹಾಡಿನಲ್ಲಿ ಕಾಲೇಜು ಓದಿದ ಅಧುನಿಕ ಕನ್ಯಾಮಣಿ ಸರ್ವಾಲಂಕಾರ ಭೂಷಿತೆಯಾಗಿ ನಡೆದು ಬರುವುದನ್ನು ವರ್ಣಿಸಲಾಗಿದೆ. ಅಲ್ಲಿ ಯಾವ ಯಾವ ವೃತ್ತಿಯ ಜನ ಆಕೆಯ ನಡಿಗೆಯನ್ನು ಕಂಡು ಮೋಹಗೊಂಡು ಏನೇನು ಮಾಡಿದರು/ಮಾಡಿಕೊಂಡರು ಎಂಬುದನ್ನು ಅಜ್ಞಾತ ಕವಿ ಹಿತಮಿತವಾಗಿ ತನ್ನ ರಸಿಕ ಪದಗಳಲ್ಲಿ ಬಣ್ಣಿಸಿದ್ದಾನೆ. ಹುಡುಗಿ ಸುಂದರಿ ಎಂಬುದರ ಜೊತೆಗೆ ಆಕೆಯ ಸೌಂದರ್ಯ ಘಮಲಿಗೆ ಮಾರುಹೋಗುವವರ ದೃಶ್ಯಾವಳಿಗಳನ್ನು ಮನದಲ್ಲಿ ಚಿತ್ರಿಸಿಕೊಂಡರೆ ಅದೊಂಥರಾ ಮಜಾ ಕೊಡುತ್ತದೆ!  ಕಲಿತು ಬದಲಾಗಿ, ನಗರ ’ನಾಗರಿಕತೆ’ಗೆ ಹೊಂದಿಸಿಕೊಂಡ ಹುಡುಗಿಯ ನಡತೆಯನ್ನು ನೇರವಾಗಿ ಅವಳಲ್ಲಿ ಹೇಳಲಾಗದ ಕವಿ ಹುಡುಗಿಯ ಬಗ್ಗೆ ಪದ್ಯದ ಮುಖಾಂತರ ಹೇಳಿದ್ದಾನೆ;  ಯಾವುದೇ ವ್ಯಕ್ತಿಯ ಬಗ್ಗೆ ಹೇಳುವುದು ಅದರ ಗುರಿಯಲ್ಲ; ವ್ಯಕ್ತಿತ್ವವೊಂದರ ಬಗ್ಗೆ ಹೇಳುತ್ತಾ ತಮಾಷೆ ತೆಗೆದುಕೊಳ್ಳುವುದು ಉದ್ದೇಶ. ಇದೇ ವಿಧದಲ್ಲಿ " ನೀ ಮಳ್ಳಿಹಂಗೆ ...."ಎಂದು ಹಾಡೊಂದು ಆರಂಭವಾಗುತ್ತದೆ. ಹಳ್ಳಿಮೂಲೆಯಲ್ಲಿ ಕಂಬಳಿ ಹೊದ್ದುಕೊಂಡು ಕುಳಿತುಕೊಂಡಿದ್ದರೆ ಯಾರೂ ನೋಡುವುದಿಲ್ಲ, ನೀನು ಬೆಂಗಳೂರಿಗೆ ಬಂದದ್ದೇ ಆದರೆ, ಸ್ವಲ್ಪ ಸುಣ್ಣ-ಬಣ್ಣ ಹೊಡೆದುಕೊಂಡು ಅಲ್ಲಲ್ಲಿ ನಿಂತು ನೋಡು.. ನಿನ್ನ ಖದರ್ರೇ ಬೇರೆ ಆಗಿಬಿಡುತ್ತದೆ! ಜನ ಬೇಡ ಬೇಡವೆಂದರೂ ನಿನ್ನ ಮುಂದೆ-ಹಿಂದೆ-ಅಕ್ಕ-ಪಕ್ಕ ಇರುವ ಎಲ್ಲಾ ಜಾಗಗಳಿಂದಲೂ, ಎಲ್ಲಾ ಕೋನಗಳಿಂದಲೂ ನಿನ್ನನ್ನು ನೋಡ್ತಾರೆ ನಿಂಗವ್ವ, ಸುಮ್ನೇ ಹಳ್ಳೀಲಿ ಯಾಕಿರ್ತೀಯ? ಬೆಂಗಳೂರಿಗೆ ಬಾ ಎಂದು ಹೇಳುತ್ತಾ ಬೆಂಗಳೂರಿನಲ್ಲಿ ಸುಂದರ ಹೆಣ್ಣಿಗೆ ಇರುವ ಕೀಟಲೆಗಳನ್ನು ಹೇಳುವುದರ ಜೊತೆಗೇ, ಬೆಂಗಳೂರಿನ ಆಯಕಟ್ಟಿನ ಕೆಲವು ಸ್ಥಳಗಳಲ್ಲಿ ಕೆಲವು ಹೆಂಗಸರು ನಿಂತು ತೋರಿಸಿಕೊಳ್ಳುತ್ತ ಮಾರ್ಕೆಟ್ ಗಿಟ್ಟಿಸಿಕೊಳುವ ಬಗ್ಗೆ ವ್ಯಂಗ್ಯವಾಗಿಯೂ ಹಾಡಿನಲ್ಲಿ ಹೇಳಲಾಗಿದೆ.       

ತೀರಾ ಮಡಿವಂತಿಕೆಯುಳ್ಳ ಮಹನೀಯರಿಗೆ ಇವು ಅಶ್ಲೀಲ ಸಾಹಿತ್ಯವೆನಿಸಬಹುದು. ಆದರೆ ಹೆಚ್ಚಿನ ಹಾಡುಗಳಲ್ಲಿ ಜನಜೀವನದ ಆಡುಂಬೊಲದ ಹಲವು ಮುಖಗಳೇ ಅಡಗಿರುತ್ತವೆ! ಲವಲವಿಕೆ ತುಂಬಿದ ಸಾಹಿತ್ಯಕ್ಕೊಂದು ಶಕ್ತಿಯಿರುತ್ತದೆ. ಅದು ಮುದುಕರನ್ನೂ ಎತ್ತಿ ಕುಣಿಸುತ್ತದೆ; ಮನದಲ್ಲೇ ಹಳೆಯದನ್ನೆಲ್ಲ ನೆನಪಿಸಿಕೊಳ್ಳುವ ಮುದುಕು ಗಂಡಸರು ತಮ್ಮ ಯೌವ್ವನದಲ್ಲಿ ’ಆಕೆ’ ಪ್ರಥಮವಾಗಿ ನೋಡಿ ನಕ್ಕಿದ್ದನ್ನು ನೆನೆದು ಪುಳಕಗೊಳ್ಳುತ್ತಾರೆ! ಧೈರ್ಯದಿಂದ ’ಆಕೆ’ ಓಣಿಕೇರಿಯ ಹಿತ್ತಲಲ್ಲಿ ಸಿಕ್ಕು ಮಾತನಾಡಿದ ಸಂದರ್ಭವನ್ನು ನೆನೆದು ನಾಚಿ ನೀರಾಗುತ್ತಾರೆ! "ಮದುವೆಯಾಗೋಣವೇ" ಎಂದು ಪ್ರಸ್ತಾಪ ಸಲ್ಲಿಸುವುದರೊಳಗೆ, ಕಾವೇರಿ ದಡದಲ್ಲಿ’ಆಕೆ’ ತನ್ನ ಮದುವೆಯ ಆಮಂತ್ರಣ ಪತ್ರಿಕೆ ಕೊಟ್ಟುಹೋದದ್ದನ್ನು ನೆನೆದು ಕಣ್ಣ ಹನಿ ಉದುರಿಸುತ್ತಾರೆ! ಎಲ್ಲಾ ಗಂಡಸರಿಗೂ ಅಲ್ಲಿ ’ಆಕೆ’ ಸಿಗುತ್ತಾಳೆ; ಅಂಡ್ ಆಫ್ಕೊರ್ಸ್, ವೈಸೆ ವರ್ಸಾ !!  ಅದು ಮಾನವ ಸಹಜ ಭಾವನೆಗಳ ಮಿಡಿತ-ತುಡಿತ. ಜನಪದ ಪದ್ಯಗಳನ್ನು ಎಲ್ಲರೆದುರೂ ಕೇಳದ ’ಮಡಿವಂತ’ ಜನ, ಅಲ್ಲಲ್ಲಿ ಕದ್ದು ಕೇಳಿದವರಿದ್ದಾರೆ!

ಸಿನಿಮಾ, ನಾಟಕ, ಕಥೆ-ಕವನ-ಕಾದಂಬರಿಗಳ ಪಾತ್ರಗಳಲ್ಲಿ ಜನ ತಮ್ಮನ್ನು ಕಲ್ಪಿಸಿಕೊಂಡು ಆನಂದವನ್ನು ಅನುಭವಿಸುತ್ತಾರೆ. ನಿಜ ಜೀವನದಲ್ಲಿ ಸಿಗದ ಯಾವುದೋ ಆನಂದ ಅಂತಹ ರಂಜನೀಯ ದೃಶ್ಯಾವಳಿಗಳ ಮೂಲಕ ಅವರಿಗೆ ದೊರೆಯುತ್ತದೆ; ಅವರನ್ನು ರಂಜಿಸುತ್ತದೆ. ಅದೇ ಕೆಲಸವನ್ನು ಒಂದಷ್ಟು ಜನರಿಗೆ ಜನಪದ ಸಾಹಿತ್ಯದ ಕೆಲವು ಪದ್ಯಗಳೂ ಒದಗಿಸಿಕೊಟ್ಟರೆ ತಪ್ಪಿಲ್ಲ.

ದೇವರು ನಿಮ್ಮೆಲ್ಲರನ್ನೂ ಚೆನ್ನಾಗಿಟ್ಟಿರಲಿ, ಇಷ್ಟು ಹೇಳಿ ನನ್ನ ಇಂದಿನ ಭಾಷಣವನ್ನು ಮುಗಿಸುತ್ತಿದ್ದೇನೆ, ಜೈಹಿಂದ್, ಜೈ ಕರ್ನಾಟಕ


Tuesday, December 10, 2013

ಅಲಮೇಲಮ್ಮನ ಶಾಪವೇ ಅಷ್ಟೊಂದು ಪರಿಣಾಮಕಾರಿಯಾದರೆ ಬ್ರಹ್ಮಶಾಪದ ಪರಿಣಾಮ ಹೇಗಿರಬೇಡ!


ಅಲಮೇಲಮ್ಮನ ಶಾಪವೇ ಅಷ್ಟೊಂದು ಪರಿಣಾಮಕಾರಿಯಾದರೆ ಬ್ರಹ್ಮಶಾಪದ ಪರಿಣಾಮ ಹೇಗಿರಬೇಡ!

ಅದೊಂದು ಸುದೀರ್ಘ ಐತಿಹಾಸಿಕ ಕಥೆ! ವಿಜಯನಗರ ಸಾಮ್ರಾಜ್ಯ ಪತನಗೊಳ್ಳುವ ಕಾಲದಲ್ಲಿ, ಅವರ ಪಾಳೇಗಾರರು, ಸಾಮಂತರು ಎಲ್ಲರೂ ಬೆಳೆಯುತ್ತ ಸಬಲರಾಗತೊಡಗಿದ್ದರು. ವಿಜಯನಗರ ವಂಶಸ್ಥನಾಗಿದ್ದ ಶ್ರೀರಂಗರಾಯ ವಿರೋಧಿಗಳಿಂದ ತಪ್ಪಿಸಿಕೊಳ್ಳಲು ಶ್ರೀರಂಗಪಟ್ಟಣಕ್ಕೆ ಬಂದು ನೆಲೆಸಿದ್ದ. ಬರುವಾಗ ಆತನ ರಾಣಿ ಅಲಮೇಲಮ್ಮ ಪಾರಂಪರಿಕವಾಗಿ ಪ್ರಾಪ್ತವಾದ ಬಂಗಾರ, ಮುತ್ತು-ರತ್ನ-ಒಡವೆ ವಸ್ತುಗಳನ್ನೆಲ್ಲ ಕಟ್ಟಿಕೊಂಡು ಬಂದಿದ್ದಳು. ಮೈಸೂರು ಪ್ರಾಂತದಲ್ಲಿ ಪ್ರಬಲಗೊಳ್ಳುತ್ತಿದ್ದ ಯದುವಂಶದ ಅರಸ ಶ್ರೀರಂಗ ಪಟ್ಟಣದಮೇಲೆ ದಂಡೆತ್ತಿಹೋದ. ನಡೆದ ಯುದ್ಧದಲ್ಲಿ ಶ್ರೀರಂಗರಾಯ ಮಡಿದ. ಗತಿಸಿದ ಶ್ರೀರಂಗರಾಯನ ಪತ್ನಿ ಅಲಮೇಲಮ್ಮನಲ್ಲಿ ಇರುವ ಅನರ್ಘ್ಯ ರತ್ನಗಳನ್ನು ಬಯಸಿದವರು ಮೈಸೂರು ಅರಸರು. ತನ್ನ ಮುಂದಿನ ಉಪಜೀವಿತಕ್ಕೆ ಆಪದ್ಧನವಾದ ಅದನ್ನು ಕೊಡೆನೆಂದ ಆಕೆಯನ್ನು ಅರಸನ ಸೈನಿಕರು ಅಟ್ಟಿಸಿಕೊಂಡು ಹೋದರು. ಓಡುತ್ತಾ ಓಡುತ್ತಾ ಆಕೆ ಕಾವೇರಿ ನದಿಯ ಮಾಲಂಗಿ ಎಂಬ ಪ್ರದೇಶಕ್ಕೆ ಬಂದಳು. ಅಲ್ಲಿಗೆ ಬಂದಾಗ ಅಟ್ಟಿಸಿ ಬಂದ ಸೈನಿಕರು ಆಕೆಯ ತಲೆಗೂದಲನ್ನು ಹಿಡಿದೆಳೆದರೂ ಸಹ, ಅವರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರಾಣಿಯ ಕೂದಲುಗಳ ಒಂದಷ್ಟು ಭಾಗ ತುಂಡಾಗಿ, ಸೈನಿಕನೊಬ್ಬನ ಕೈಯ್ಯಲ್ಲಿ ಹಾಗೇ ಉಳಿಯಿತು. ಕೋಪೋದ್ರಿಕ್ತಳಾದ ಆ ತಾಯಿ, ತನ್ನ ಅಶಾಯಕತೆಯಲ್ಲಿ ಮೈಸೂರು ಅರಸರು ಕೊಟ್ಟ ಹಿಂಸೆಯನ್ನು ನೆನೆದು,  "ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ಅರಸರಿಗೆ ಸಂತಾನ ಆಗದೇ ಹೋಗಲಿ" ಎಂದು ಶಪಿಸಿ ಕಾವೇರಿ ನದಿಯಾಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಳು.  

ಆ ಕ್ಷಣದಲ್ಲಿ ಮೈಸೂರು ರಾಜರಿಗೆ ಏನೂ ಅನ್ನಿಸಲಿಲ್ಲ; ಶಾಪವೆಲ್ಲ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಕೂಡ ಅವರಲ್ಲಿರಲಿಲ್ಲ. ಆದರೆ ನಂತರ ನಡೆದುಬಂದ ಮೈಸೂರು ಯದುವಂಶದ ಇತಿಹಾಸವನ್ನು ಗಮನಿಸುವಾಗ, [ಪಾಂಡವರ ಯುಧಿಷ್ಠಿರ ಬಳಸಿದ್ದ ಸಿಂಹಾಸನವೆಂಬ ಪ್ರತೀತಿ ಇದೆ]ವಿಜಯನಗರದಿಂದಲೇ ಬಂದಿತೆನ್ನಲಾದ  ಬಂಗಾರದ ಸಿಂಹಾಸನದಲ್ಲಿ ಪಟ್ಟಾಭಿಷಿಕ್ತನಾಗಿ ಅರಸನೆನಿಸಿಕೊಳ್ಳುವ ವ್ಯಕ್ತಿಗೆ ಮಕ್ಕಳು ಆಗಲೇ ಇಲ್ಲ! ದತ್ತು ತೆಗೆದುಕೊಂಡು ಪಟ್ಟಾಧಿಕಾರಕ್ಕೆ ಬರುವ ಅರಸರಿಗೆ ಒಂದು ಪೀಳಿಗೆಗೆ ಮಕ್ಕಳು ಇನೊಂದು ಪೀಳಿಗೆ ಬರುವಷ್ಟರಲ್ಲಿ ಮತ್ತೆ ಮಕ್ಕಳಿಲ್ಲ!  

ಮೈಸೂರು ಅರಸರ ಮಹಾ ಸಂಸ್ಥಾನ ಕಳೆಗುಂದುವುದಕ್ಕೆ ಅಲಮೇಲಮ್ಮನ ಶಾಪ ಕೂಡ ಕಾರಣವಾಗಿದೆ ಎಂಬುದು ನಂಬಬಹುದಾದ ವಿಷಯ; ಅದನ್ನು ಸ್ವತಃ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರೇ ಒಪ್ಪಿಕೊಂಡಿದ್ದರು-ಅದು ಅವರ ತಪ್ಪಲ್ಲ, ಅವರ ವಂಶದ ಪೂರ್ವಜರ ತಪ್ಪು.

ನಿಕಟಪೂರ್ವ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರಿಗೆ ಮದುವೆಯಾಗಿ ಕೆಲವುಕಾಲ ಪುತ್ರಸಂತಾನವಾಗಲೇ ಇಲ್ಲ. ಜಯಚಾಮರಾಜೇಂದ್ರ ಒಡೆಯರ್ ಅವರು ಅವರ ದೊಡ್ಡಪ್ಪನಿಂದ ದತ್ತು ತೆಗೆದುಕೊಳ್ಳಲ್ಪಟ್ಟು ಸಿಂಹಾಸನವನ್ನೇರಿದ್ದರು. ಕಾಲಾನಂತರದಲ್ಲಿ ಮೈಸೂರಿಗೆ ಭಗವಾನ್ ಶ್ರೀಧರ ಸ್ವಾಮಿಗಳು ಬಂದಿದ್ದರು. ಮೈಸೂರಿನಲ್ಲಿ ಶಿಷ್ಯರಿಂದ ತನ್ನರಿವಿಗಿಲ್ಲದೇ ಗೊತ್ತುಪಡಿಸಲಾಗಿದ್ದ-[ಎರಡು ಕಡೆಗೂ] ಒಂದೇ ಸಮಯದಲ್ಲಿ ಜರುಗುತ್ತದೆಂದು ಘೋಷಿತವಾಗಿದ್ದ ಪ್ರವಚನ ವೇದಿಕೆಗಳಲ್ಲಿ ಏಕಕಾಲಕ್ಕೆ ಎರಡು ಶ್ರೀಧರರಾಗಿ ಪ್ರವಚನ ನಡೆಸಿದ ಸಂನ್ಯಾಸ ಶಿಖರ ಶ್ರೀಧರ ಸ್ವಾಮಿಗಳು! ಅಂತಹ ಮಹಾತ್ಮರು ಮೈಸೂರಿಗೆ ಬಂದಿದ್ದನ್ನು ತಿಳಿದು, ಜಯಚಾಮರಾಜೇಂದ್ರ ಒಡೆಯರ್ ಅವರ ಭಾವ ಸ್ವಾಮಿಗಳಿದ್ದೆಡೆ ಬಂದು, ನಮಸ್ಕರಿಸಿ ತನ್ನ ಸಹೋದರಿಗೆ ಪುತ್ರಸಂತಾನವಾಗಬೇಕೆಂದು ಪ್ರಾರ್ಥಿಸಿದ. ಎರಡು ನಿಮಿಷ ಮೇಲ್ಮುಖವಾಗಿ ಏನನ್ನೋ ಯೋಚಿಸಿದ ಶ್ರೀಧರರು ಸ್ವಲ್ಪ ನೀರನ್ನು ನೆಲಕ್ಕೆ ಬಿಟ್ಟರು. ಆಮೇಲೆ ತೆಂಗಿನಕಾಯೊಂದನ್ನು ಅಭಿಮಂತ್ರಿಸಿ ಅವರಿಗೆ ಕೊಟ್ಟು, ರಾಜ-ರಾಣಿಗೆ ಅದನ್ನು ಬಳಸಲು ಹೇಳುವಂತೆ ತಿಳಿಸಿದರು. ಇದರ ಪರಿಣಾಮವಾಗಿ ಹುಟ್ಟಿದ ಮಗುವಿನ ಹೆಸರಿನ ಮಧ್ಯೆ ’ದತ್ತ’ ಎಂಬ ಪದವನ್ನು ಕಾಣಬಹುದು. ಶ್ರೀಧರರು ಸಾಕ್ಷಾತ್ ದತ್ತಾವತಾರಿಯಾದುದರಿಂದ ಆ ಹೆಸರು ಬಳಸಲ್ಪಟ್ಟಿತು. ಶ್ರೀಧರಸ್ವಾಮಿಗಳ ಚರಿತ್ರೆಯಿಂದ ಈ ಮಾಹಿತಿಯನ್ನು ಸಂಗ್ರಹಿಸಿ ತಮಗೆ ಹೇಳಿದ್ದೇನೆ.

ವರ್ಣಭೇದ ಎಂಬುದನ್ನು ಗೀತೆಯಲ್ಲಿ ಕೃಷ್ಣ ಹೇಗೆಂದು ಹೇಳಿದ್ದಾನೆ:

ಚಾತುರ್ವಣ್ಯಂ ಮಾಯಸೃಷ್ಟಂ ಗುಣಕರ್ಮ ವಿಭಾಗಶಃ |
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ||

ಜಾತಿ ಪದ್ಧತಿ, ವರ್ಣ ಪದ್ಧತಿ ಇವೆರಡೂ ಒಂದೇ ಅಲ್ಲ! ಜಾತಿ ಹುಟ್ಟಿನಿಂದ ಬಂದದ್ದು; ವರ್ಣ ಮನುಷ್ಯನ ಸ್ವಭಾವಕ್ಕೆ ಸಂಬಂಧಪಟ್ಟದ್ದು. ಗೀತೆಯಲ್ಲಿ ಕೃಷ್ಣ ಹೇಳುವ "ಚಾತುರ್ವಣ್ಯಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ"[ಗೀತಾ 4.13] ಎಂಬುದು ಮನುಷ್ಯನ ಸ್ವಭಾವದ ವರ್ಗೀಕರಣವಷ್ಟೆ. ಮನುಷ್ಯನ ಮನಸ್ಸಿನ ಜಾಯಮಾನಗಳು ಜಾತಿಗೆ ಸಂಬಂಧ ಪಟ್ಟಿದ್ದಲ್ಲ. "ನ ವರ್ಣಾನಾಂ ಭೇದಃ ನಾಸ್ತಿ | ಸರ್ವಂ ಬ್ರಾಹ್ಮಂ ಇದಂ ಜಗತ್" [ಎಲ್ಲರನ್ನೂ ಒಂದೇ ಸಮನಾಗಿ ಕಾಣು ಏಕೆಂದರೆ ಎಲ್ಲವನ್ನೂ ಮತ್ತು ಎಲ್ಲ ವರ್ಣದವರನ್ನು ಸೃಷ್ಟಿಸಿದ್ದು ಭಗವಂತನೇ ಆಗಿದ್ದಾನೆ.]ಎನ್ನುವ ಮಹಾಭಾರತದ ಮಾತು ಭೀಷ್ಮ ಧರ್ಮರಾಯನಿಗೆ ತಿಳಿಸುವ ಬುದ್ಧಿ ಮಾತು. ’ವರ್ಣ’ಎಂಬ ಪದಕ್ಕೆ ದೇಹದ ಬಣ್ಣ ಎಂಬ ಅರ್ಥವನ್ನಂತೂ ಇಲ್ಲಿ ಹೇಳಿಲ್ಲ. "ಅವರ ಬಣ್ಣ ಬಯಲಾಯ್ತು" ಎಂದರೆ, ಅದು ನಾಮ ನಮೂದಿತರ ದೇಹದ ಬಣ್ಣದ ಬಗ್ಗೆ ಹೇಳುತ್ತಿರುವುದಲ್ಲ ಎಂಬುದು ಯಾರಿಗಾದರೂ ಗೊತ್ತಾಗುತ್ತದೆ. ಮನುಷ್ಯ ವಸಾಹತುಳ್ಳ ಪ್ರಪಂಚದ ಎಲ್ಲ ಭಾಗಗಳಲ್ಲೂ ವರ್ಣ ಪದ್ಧತಿ ಇದ್ದೇ ಇದೆ. ಆದರೆ ಅದಕ್ಕೆ ಒಂದು ರೂಪಕೊಟ್ಟು ಮನುಷ್ಯರನ್ನು ಅವರವರ ಸ್ವಭಾವಕ್ಕೆ ಅನುಗುಣವಾಗಿ ವರ್ಗೀಕರಿಸಿ ಹೆಸರು ಕೊಟ್ಟವರು ಪ್ರಾಚೀನ ಭಾರತದ ಬುದ್ಧಿ ಜೀವಿಗಳು. ಬುದ್ಧಿಯ ಬಲದಿಂದ ಬಾಳುವವರ ಗುಂಪು, ತೋಳ್ಬಲದಿಂದ ಆಳುವವರ ಗುಂಪು, ವ್ಯಾಪಾರ- ವ್ಯವಸಾಯದಲ್ಲಿ ನುರಿತು ನಾಡನ್ನು ಶ್ರೀಮಂತಗೊಳಿಸುವವರ ಗುಂಪು, ಮತ್ತು ಒಂದಲ್ಲ ಒಂದು ಕಸುಬಿನಲ್ಲಿ ಪರಿಣತಿ ಹೊಂದಿದ ಶ್ರಮಜೀವಿಗಳ ಗುಂಪು-ಈ ರೀತಿಯ ನಾಲ್ಕು ವರ್ಗವಿಲ್ಲದ ಸಮಾಜ ಎಲ್ಲಿದೆ? ದುರ್ದೈವದಿಂದ ಜಾತಿ ಮತ್ತು ವರ್ಣ ಎರಡೂ ಒಂದೇ ಎಂಬ ನಂಬಿಕೆ ಬಂದುಬಿಟ್ಟಿದೆ. ವಿಭಿನ್ನ ಆಚಾರ-ವಿಚಾರ-ವ್ಯವಹಾರಗಳನ್ನು  ಹೊಂದಿದ ಒಟ್ಟಾರೆ ಸಮಾಜದಲ್ಲಿ, ಒಂದೇತೆರನಾದ ಆಚಾರ ವಿಚಾರಗಳನ್ನು ಹುಡುಕುತ್ತಾ ತಮ್ಮ ತಮ್ಮ ಗುಂಪುಗಳಲ್ಲೇ ಮದುವೆಯಾಗುವ ರೂಢಿ ಬಂದು ಸಮಾಜದಲ್ಲಿ ಜಾತಿಯ ಬಿಗಿತ ಬಂದು ಬಿಟ್ಟಿತು. ಇದರ ಪರಿಹಾರ ಕ್ರಮೇಣ ಸಮಾಜ ತನ್ನನು ತಾನೇ ತಿದ್ದಿಕೊಳ್ಳುವ ಮೂಲಕ ಆಗಬೇಕು. ಇನ್ನು ಹಿಂದೂ ಎನ್ನುವ ಶಬ್ದ ‘ಸಿಂಧೂ’[ನದಿಯ ಹೆಸರು] ಎಂಬ ಶಬ್ದದಿಂದ ಬಂದದ್ದು. ಈ ಶಬ್ದ ಧರ್ಮದ ಹೆಸರಿಗಿಂತ ಹೆಚ್ಚಾಗಿ ಒಂದು ಪ್ರದೇಶದ ಹೆಸರನ್ನು ಸೂಚಿಸುತ್ತದೆ. ಆ ದೃಷ್ಟಿಯಿಂದ ನೋಡಿದರೆ ಭಾರತವಾಸಿಗಳೆಲ್ಲ- ಅವರು ಯಾವ ಧರ್ಮಕ್ಕೆ ಸೇರಿದವರಾದರೂ- ಹಿಂದುಗಳೇ ಆಗಿದ್ದಾರೆ.

ಪ್ರಕೃತಿಯಲ್ಲಿ ಎಲ್ಲವುದರಲ್ಲೂ ವೈವಿಧ್ಯಗಳಿವೆ. ಮಾನವ ಜನಾಂಗದಲ್ಲಿ 5,000 ವಿಭಿನ್ನ ವಂಶಾವಳಿಗಳಿವೆ ಎಂದು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ. ಸಮಸ್ಯೆಯೊಂದರ ಕುರಿತ ಪರಿಹಾರಕ್ಕಾಗಿ ದೇಶದಾದ್ಯಂತ ತಿರುಗಿ ಈಗಾಗಲೇ 8,000 ವಿಭಿನ್ನ ಜನಾಂಗದ ಜನರ ಡಿ.ಎನ್.ಎ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ! ಭತ್ತದಿಂದ ಭತ್ತ, ತೆಂಗಿನಿಂದ ತೆಂಗು, ಮಾವಿನಿಂದ ಮಾವು, ಬೇವಿನಿಂದ ಬೇವು ಹೀಗೇ ಫಲಗಳಲ್ಲಿ ವೈವಿಧ್ಯತೆಯಿದೆ. ಜಾಜಿ, ಜೂಜಿ, ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಕರವೀರ, ದಾಸವಾಳ, ನಾಗಲಿಂಗ, ಕದಳಿ ....ಹೀಗೇ ನೂರಾರು ವೈವಿಧ್ಯದ ಹೂವುಗಳನ್ನು ಕಾಣಬಹುದಾಗಿದೆ. ಸಸ್ಯಗಳಲ್ಲಿ ಪ್ರಭೇದ, ಜೀವಿಗಳಲ್ಲಿ ಪ್ರಭೇದ, ಕೀಟಗಳಲ್ಲಿ ಪ್ರಭೇದ, ಅದೆಲ್ಲಾ ಹಾಗಿರಲಿ ಪ್ರಾದೇಶಿಕವಾಗಿ ಒಂದೇ ಭೂಮಿಯ ಮಣ್ಣಿನಲ್ಲೇ ಪ್ರಭೇದಗಳಿವೆ! ಎಂದಾಗ, ಮನುಷ್ಯರ ನಡೆ-ನುಡಿ ವಂಶಾವಳಿಗಳಲ್ಲಿ ಪ್ರಭೇದಗಳು ಇರುವುದು ಸಹಜ ಮತ್ತು ಪ್ರಕೃತಿ ನಿರ್ಮಿತ! "ಮಾನವಕುಲ ತಾನೊಂದೆವಲಮ್" ಎಂಬ ಮಾತು ಸಾಮಾಜಿಕವಾಗಿ ಒಟ್ಟಾಗಿ ಬಾಳುವುದಕ್ಕಷ್ಟೇ ಬಿಟ್ಟರೆ ನಮ್ಮ ದಿನನಿತ್ಯದ ನಡತೆಯಲ್ಲಿ ಭಿನ್ನತೆಗಳು ಇದ್ದೇ ಇರುತ್ತವೆ. ಸಂಸ್ಕೃತಿ ಮತ್ತು ನಾಗರಿಕತೆಗಳ ಕುರಿತು ನಾನು ಈ ಹಿಂದೆ ಬರಿದಿದ್ದೆ. ನಾಗರಿಕತೆ ಮನುಷ್ಯರೆಲ್ಲಾ ಒಂದೇ ಎನ್ನುತ್ತದೆ-ಅದು ಸರಿ; ಒಂದೇ ಎಂಬ ಮನುಷ್ಯರು ಹೇಗಿರಬೇಕು ಎಂಬುದನ್ನು ಸಂಸ್ಕೃತಿ ಬೋಧಿಸುತ್ತದೆ-ಅದನ್ನು ಒಪ್ಪಿಕೊಳ್ಳಲು ’ಅಧುನಿಕ ಬುದ್ಧಿಜೀವಿಗಳು’ ಸಿದ್ಧರಿಲ್ಲ! ಮಾಂಸಾಹಾರ ತ್ಯಜಿಸಿ ಎಂದು ಬಿಟ್ಟರೆ ಮೈಮೇಲೆ ಬೀಳುವ ಮಂದಿ ಅದೆಷ್ಟಿಲ್ಲ? ಮಾಂಸಾಹಾರದಲ್ಲೂ ಹಿಂದೂಗಳಿಗೆ ಪೂಜ್ಯವಾದ ದನದಮಾಂಸವನ್ನು ತಿನ್ನುವ ಜನಾಂಗವನ್ನೂ ನೋಡುತ್ತೇವೆ. ಹೀಗೆಲ್ಲಾ ಇರುವಾಗ ’ಮಾನವಕುಲ ತಾನೊಂದೇವಲಮ್’ ಎಂಬುದು ಅಪ್ರಾಕೃತಿಕವಾಗುತ್ತದೆ-ಇದು ನನ್ನ ನೇರ, ಸ್ಪಷ್ಟ ದೃಷ್ಟಿಯ ನುಡಿ. ಯಾವಾಗ ಮನುಷ್ಯರೆಲ್ಲರ ಆಹಾರ-ವ್ಯವಹಾರ-ಆಚಾರ-ವಿಚಾರಗಳಲ್ಲಿ ಇಂಚಿಂಚೂ ಹೋಲಿಕೆಯಿರುತ್ತದೋ ಆಗ ಮಾತ್ರ ಮನುಷ್ಯರೆಲ್ಲರೂ ಒಂದೇ ಆಗಲು ಸಾಧ್ಯವಿದೆ-ಅಲ್ಲೀವರೆಗೂ ಗುಂಪುಗಳು ಹಾಗೇ ಇರುತ್ತವೆ, ಜಾತಿಗಳು ಹೋಗುವುದಿಲ್ಲ. ಈಗಿನ ಕಾಲದಲ್ಲಿ ಎಲ್ಲವೂ ಜಾತ್ಯಾತೀತ ಎಂದು ಚೀರಾಡಿಬಿಟ್ಟರೆ ಅದು ತಿಪ್ಪೆಸಾರಿಸಿದ ಕೆಲಸವಾಗಿ, ಒಳಗೆ ಹಾಗೇ ಕುಳಿತಿರುವ ತಿಪ್ಪೆಯ ಗಬ್ಬು ನಾತ ಹೊರಗಿರುವವರ ಮೂಗಿಗೆ ಹೊಡೆಯುತ್ತಲೇ ಇರುತ್ತದೆ! ಎಲ್ಲಿಯವರೆಗೆ ನಾನು ಹೇಳಿದ ಅಂಶಗಳಲ್ಲಿ ಸಾಮ್ಯತೆಯಿಲ್ಲವೋ ಅಲ್ಲೀವರೆಗೂ ಜಾತೀಯತೆ ಬದುಕುತ್ತದೆ ಮತ್ತು ಬಲಿಯುತ್ತದೆ. ಇದನ್ನು ಮನುಷ್ಯರಾಗಿ ನಾವು ಮೊದಲು ಮನಗಾಣಬೇಕು.

ವರ್ಣವ್ಯವಸ್ಥೆಯನ್ನು ಭಗವಂತ ಸ್ವತಃ ತಾನೇ ನಿರ್ಮಿಸಿದೆ ಎಂದಿದ್ದಾನೆ. ಒಂದೊಮ್ಮೆ ಗೀತಾಚಾರ್ಯ ಶ್ರೀಕೃಷ್ಣ ಗೀತೆ ಮಹಾಭಾರತದ ನಡುವೆ ಬಂದಿರುವುದೆಂಬ ಕಾರಣಕ್ಕೆ ಅದು ’ಬ್ರಾಹ್ಮಣ’ನೇ ಬರೆದಿದ್ದು ಎಂಬುದಾದರೆ ವ್ಯಾಸರು ಜಾತಿಯಿಂದ ಶೂದ್ರ ತಾಯಿಯಲ್ಲಿ ಜನಿಸಿದವರು. ಹಾಗಾದರೆ ಅವರು ಹಡೆದ ಮಾತೆಗೆ ದ್ರೋಹ ಬಗೆದರೇ? ಖಂಡಿತಕ್ಕೂ ಇಲ್ಲ. ಜಾತಿ ಪದ್ಧತಿಗೆ ಬ್ರಾಹ್ಮಣರೇ ಕಾರಣ ಎಂಬ ಅಪನಂಬಿಕೆ ಹುಟ್ಟಲಿಕ್ಕೆ ಇನ್ನೊಂದು ಕಾರಣ: ರಾಜರು ಬ್ರಾಹ್ಮಣರಿಗೆ ಕೊಡುತ್ತಿದ್ದ ರಾಜಾಶ್ರಯ ಮತ್ತು ಮರ್ಯಾದೆ. ರಾಜರುಗಳಿಗೆ ಬ್ರಾಹ್ಮಣ್ಯವೆಂಬುದರ ಮಹತ್ವ ಗೊತ್ತಿತ್ತು-ಹಾಗಾಗಿ ಅವರು ಅದಕ್ಕೆ ಮಹತ್ವ ಕೊಡುತ್ತಿದ್ದರು! ಇಂದು ಪ್ರಜೆಗಳೇ ತಲೆಯಿಲ್ಲದ ಪ್ರಭುಗಳು, ರಾಜಕೀಯ ಅತಂತ್ರ ಸ್ಥಿತಿಗಳು, ಮಿತಿಮೀರಿದ ಭ್ರಷ್ಟಾಚಾರ, ದೇಶವನ್ನೇ ಅಡವಿಡುವ ಪರಿಸ್ಥಿತಿ ಬಂದಿರುವುದಕ್ಕೆ ಕಾರಣ ರಾಜರಲ್ಲಿದ್ದ ಆಡಳಿತ ವೈಖರಿ ಪ್ರಜಾರಾಜರಲ್ಲಿಲ್ಲ! ಗೂಂಡಾಗಳೇ ಹಣಬಲ, ಜನಬಲ, ತೋಳ್ಬಲಗಳಿಂದ ಗೆದ್ದು ರಾಜಕೀಯ ಮಾಡುವಾಗ ಆಡಳಿತದ ಅನುಭವ ಅವರಿಗೆ ಹೇಗೆ ಬರಲು ಸಾಧ್ಯ? ಅಥವಾ ಪ್ರಜೆಗಳ ಸಂಕಷ್ಟವನ್ನು ಅರಿಯುವ ಮನಸ್ಸು ಅವರಿಗಾದರೂ ಹೇಗೆ ಬಂದೀತು? ಪ್ರಜಾತಂತ್ರದ ಸಮಸ್ಯೆಗಳನ್ನು ಇಂದು ನಾವು ಕಾಣತೊಡಗಿದ್ದೇವೆ; ಇದು ಮುಂದುವರಿಯುತ್ತದೆ-ಮುಂದೊಂದು ದಿನ ಘನಘೋರ ಯುದ್ಧ ಸಂಭವಿಸುತ್ತದೆ-ಅದರಲ್ಲಿ ಸಂಶಯವೇ ಇಲ್ಲ!

ಉತ್ತರಭಾರತದಲ್ಲಿ ಬ್ರಾಹ್ಮಣರಿಗೆ, ರಾಜರಿಗೆ ಇನ್ನೂ ಮಾನ್ಯತೆಯಿದೆ. ವಿನಾಕಾರಣ ಯಾರೂ ಅವರನ್ನು ದೂಷಿಸುವುದಿಲ್ಲ. ನಮ್ಮ ಕರ್ನಾಟಕದ ತುಂಬೆಲ್ಲ ರಾಜದ್ವೇಷಿಗಳು, ಬ್ರಾಹ್ಮಣ ದ್ವೇಷಿಗಳು  ಹುಟ್ಟಿಕೊಂಡಿದ್ದಾರೆ. ಬ್ರಾಹ್ಮಣರು ತಮ್ಮನ್ನು ತುಳಿದರು ಎಂಬ ತಪ್ಪು ಕಲ್ಪನೆಯಿಂದ ಪರಬ್ರಹ್ಮೋಪಾಸನೆಯನ್ನು ನಡೆಸುವ ಬ್ರಾಹ್ಮಣರನ್ನು ಬೈದು-ಜರಿದು-ಹೀಗಳೆದು ಪರೋಕ್ಷ ಬ್ರಹ್ಮನನ್ನೇ ದೂಷಿಸುತ್ತಿದ್ದಾರೆ. ಸಾಮಾನ್ಯ ರಾಜಸ್ತ್ರೀಯಾದ ಅಲಮೇಲಮ್ಮನ ಶಾಪವೇ ಇಷ್ಟೆಲ್ಲಾ ಕೆಲಸಮಾಡುತ್ತದೆ ಎಂದಾದಮೇಲೆ, ಆಚಾರವಂತ ಬ್ರಾಹ್ಮಣರ ಶಾಪ [ಬ್ರಾಹ್ಮಣರು ಶಾಪ ಹಾಕುತ್ತಿಲ್ಲ ಅದು ಬೇರೆ ಪ್ರಶ್ನೆ]ತಟ್ಟಿದರೆ ಏನಾಗಬಹುದೆಂದು ನೀವೇ ಊಹಿಸಿ!

ಒಂದೊಮ್ಮೆ ಬ್ರಾಹ್ಮಣರು ಎಂದುಕೊಂಡವರು ಏನನ್ನೂ ಹೇಳದೇ ಹೋಗಿದ್ದರೆ, ಕಲಿಸದೇ ಹೋಗಿದ್ದರೆ ಇಂದು ಮಾತನಾಡಲು ಬರುವ ಅದೆಷ್ಟೋ ಜನರಿಗೆ ಈ ಅರ್ಹತೆ ಕೂಡ ಇರುತ್ತಿರಲಿಲ್ಲ! ಇದು ಕೆಲವು ಓದುಗರ ಸ್ವಾಭಿಮಾನಕ್ಕೆ ವಿರೋಧವೆನಿಸಬಹುದು; ಆದರೆ ಸತ್ಯ ಎಂದೂ ಸುಳ್ಳಾಗಲು ಸಾಧ್ಯವಿಲ್ಲ. ಪಂಕ್ತಿ ಭೇದವನ್ನು ಮಾಡುವ ಬ್ರಾಹ್ಮಣರು ಯಾಕೆ ಹಾಗೆ ಮಾಡಿದರು ಎನ್ನುವ ಚಿಂತನೆ ಯಾರಿಗೂ ಇಲ್ಲ, ಬೇಕಾಗಿಯೂ ಇಲ್ಲ. ’ಬ್ರಾಹ್ಮಣ್ಯ’ ಎಂಬುದೊಂದು ಹುಟ್ಟಿದಾರಭ್ಯ-ಅಜೀವ ಪರ್ಯಂತ ನಡೆಯುವ ವ್ರತ ಎಂಬುದನ್ನು ಬಹಳ ಜನ ಅರಿತಿಲ್ಲ. ರಾಜಾಶ್ರಯ ಕಳೆದುಕೊಂಡ ಬ್ರಾಹ್ಮಣರು, ಪ್ರಜಾಪ್ರಭುತ್ವದಲ್ಲಿ, ಉದರನಿಮಿತ್ತವಾಗಿ ಅನ್ಯವೃತ್ತಿಗಳತ್ತ ಮುಖಮಾಡಬೇಕಾಗಿ ಬಂತು. ಇದರಿಂದ ಎಲ್ಲರ ಸಂಪರ್ಕ-ಸಂಸರ್ಗ ಆರಂಭವಾಯ್ತು. ಇದರ ಪರಿಣಾಮವಾಗಿ ಬ್ರಾಹ್ಮಣ ಜಾತಿಯಲ್ಲಿ ಜನಿಸಿದ ಕೆಲವರನ್ನು ಬಾರ್ ಅಂಡ್ ರೆಸ್ಟಾರೆಂಟುಗಳಲ್ಲೂ ನೋಡುತ್ತಿದ್ದೀರಿ! ಇದೆಲ್ಲಾ ಆಗಬಾರದು, ಬ್ರಾಹ್ಮಣರ ಪೂಜೆ, ಪೂಜೆಗೆ ಬಳಸುವ ಪರಿಕರಗಳು, ದೇವಸ್ಥಾನ/ಪೂಜಾ ಕೇಂದ್ರಗಳು ಇವೆಲ್ಲಾ ಪರಿಶುದ್ಧವಾಗಿರಬೇಕೆಂಬ ಸದುದ್ದೇಶದಿಂದ ಅವರು ಪ್ರತ್ಯೇಕತೆಯಲ್ಲಿರುತ್ತಿದ್ದರು. ಅವರ ಸಂಖ್ಯೆಯೂ ಕೂಡ ತೀರಾ ಕಡಿಮೆ.

ಇಂದು ಸಂಸರ್ಗ, ಮೊಬೈಲ್ ಫೋನು, ಗಾಡಿ, ವ್ಯವಹಾರ ಇದೆಲ್ಲಾ ಹೆಚ್ಚಿದ್ದರಿಂದ ನಿಜವಾದ ಬ್ರಾಹ್ಮಣರಿಗಿಂತ ಜೋರಾಗಿ ಮೆರೆಯುವ ಅರ್ಚಕ-ವ್ಯಭಿಚಾರಿಗಳು ಅಲ್ಲಲ್ಲಿ ಕಾಣುತ್ತಾರೆ-ಇದು ಕಾಲದ ಮಹಿಮೆ. ಊಟಕ್ಕೆ-ಕೂಟಕ್ಕೆ-ಚಟಕ್ಕೆ ಇಂಥಾದ್ದಕ್ಕೆಲ್ಲಾ ಸಾವಿರದೋಪಾದಿಯಲ್ಲಿ ಹಣ ಸುರಿಯುವ ಮಂದಿ ಆರತಿ ತಟ್ಟೆಗೆ ಕಾಸು ಹಾಕುವ ಸುದ್ದಿ ಬಂದಾಗ ಮಾತ್ರ ಕಣ್ಣು ಕೆಂಪಗೆ ಮಾಡಿಕೊಳ್ಳುವುದು ಆಶ್ಚರ್ಯವಾಗುತ್ತದೆ. ಅದು ವೃತ್ತಿಗೊಂದು ಗೌರವ, ಪುಣ್ಯಕ್ಕೆ ಸಾಧನವೆಂದು ತಿಳಿದೂ, ದಾನವೆಂಬುದನ್ನು ಅರಿತೂ ಹಿಂದಿಗಡೆಯಿಂದ ಈ ರೀತಿ ಆಡಿಕೊಳ್ಳುತ್ತ ದೇವಸ್ಥಾನಗಳಿಗೆ ಹೋದಾಗ ಹತ್ತೋ ಇಪ್ಪತ್ತೋ ರೂಪಾಯಿ ಹಾಕಿದರೆ ಅದರ ಫಲ ಹಾಕಿದವರಿಗೆ ಲಭಿಸುವುದಿಲ್ಲ. ಹಾಕುವ ಮನಸ್ಸುಳ್ಳವರು ಹಾಕಬಹುದು-ಅದರಿಂದ ಪಡೆದವ ಹೇಗೇ ಇದ್ದರೂ ಕೊಟ್ಟವನಿಗೆ ಫಲ ಲಭ್ಯ. ಚಂದದ ಹುಡುಗಿಯನ್ನು ನೋಡುತ್ತ ಮನಸ್ಸು ಕೆಡಿಸಿಕೊಂಡರೆ ಅಂತಹ ಅರ್ಚಕನ ಕರ್ಮಕ್ಕೆ ತಕ್ಕ ಫಲವನ್ನು ಆತ ಅನುಭವಿಸುತ್ತಾನೆ. ನೀವು ಹೇಳಿದ್ದಷ್ಟೇ ಸತ್ಯವೆಂದು ವಾದಿಸುವ ಮೊದಲು ನಾನು ಹೇಳುವ ಮುಖವನ್ನೂ ತಿಳಿದುಕೊಂಡರೆ ನಾನು ಏನು ಹೇಳುತ್ತಿದ್ದೇನೆ ಎಂಬ ಅರಿವುಂಟಾಗುತ್ತದೆ.

ಇವತ್ತು ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲ ಇವೆಲ್ಲಾ ಗೌರವದ ಹುದ್ದೆಗಳು. ಮಾನವರೆಲ್ಲರೂ ಒಂದೇ ಆದ್ದರಿಂದ ಅವರೂ ಎಲ್ಲರೊಂದಿಗೆ ಬೆರೆತುಬಿಡಲಿ ನೋಡೋಣ. ಅದು ಹಾಗಿರಲಿ, ಒಂದು ಸಣ್ಣ ತಾಲೂಕು ಮಟ್ಟದ ನ್ಯಾಯಾಧೀಶರು ಸಮಾಜದಲ್ಲಿ ಎಲ್ಲರೊಡನೆ ಬೆರೆಯುವುದಿಲ್ಲ; ಹಾಗೆ ಬೆರೆತರೆ ನ್ಯಾಯದಾನ ಸಾಧ್ಯವಿಲ್ಲ. ಇಂತಹ ಪ್ರತ್ಯೇಕತೆಗಳು ಯಾಕೆಂದರೆ ಉನ್ನತ ಮೌಲ್ಯಗಳನ್ನು ಆದರ್ಶಮಯವಾಗಿ ಎತ್ತಿ ಹಿಡಿಯುವುದಕ್ಕೆ. ವೇದ-ಶಾಸ್ತ್ರ-ಪುರಾಣ-ಮಹಾಕಾವ್ಯಗಳು ಅಷ್ಟು ಸುಲಭಕ್ಕೆ ಲಭ್ಯವಾಗುವ ಬದನೆಕಾಯಿಗಳಲ್ಲ! ಅವುಗಳನ್ನು ಅಭ್ಯಸಿಸಲು ಪೂರಕ ವಾತಾವರಣ ಬೇಕು, ಪೂರಕ ತಯಾರಿ ಬೇಕು, ಮನಸ್ಸು ನಿರುಮ್ಮಳವಾಗಿರಬೇಕು, ತ್ಯಾಗಜೀವನ ಬೇಕು, ಇದನ್ನೆಲ್ಲಾ ಹಿಂದಿನಿಂದ ನಡೆಸಿ ಬಂದವರು ಬ್ರಾಹ್ಮಣರು. ಬ್ರಹ್ಮಜ್ಞಾನವೇ ಅವರ ಪರಮೋಚ್ಚ ಆಸ್ತಿ. ಅವರ ಪ್ರವಚನ ಧಾರೆಗಳೇ ಉಳಿದ ಹಿಂದೂ ಜನರ ಕಲಿಕೆಗೆ ಆಧಾರವಾಗಿದ್ದು. ಇದನ್ನೆಲ್ಲಾ ಅರ್ಥಮಾಡಿಕೊಳ್ಳದೇ ಕೇವಲ ಒಂದೇ ನೇರಕ್ಕೆ ’ಮಾನವಕುಲ ತಾನೊಂದೆವಲಮ್’ ಎಂದುದನ್ನು ಅನುಮೋದಿಸಲು ಬ್ರಾಹ್ಮಣರು ಬ್ರಾಹ್ಮಣ್ಯವನ್ನು ಬಿಡಲು ಸಿದ್ಧರಿಲ್ಲ, ನಿಜ, ಅದೊಂದು ಪಾರಂಪರಿಕ ವ್ರತ, ಅದನ್ನು ಪರಿಪೂರ್ಣವಾಗಿ ಬಿಟ್ಟರೆ, ಬಿಡುವವರ ಕುಲ ನಶಿಸಿ ಹೋದೀತು!
’ಬ್ರಾಹ್ಮಣ್ಯ’ ಎಂದರೇನು ಎಂದು ತಿಳಿಯಲಿ ಇಲ್ಲಿ ಓದಿ :   ಆ ಮುಖ

ಹಾಗಂತ ಎಲ್ಲರನ್ನೂ ನಾನು ದೂಷಿಸುವುದಿಲ್ಲ, ಹಳೇ ಮೈಸೂರು ಪ್ರಾಂತದ ಒಕ್ಕಲಿಗರ ಮನೆಗಳಲ್ಲಿ ಮಹಾರಾಜರ ಭಾವಚಿತ್ರಗಳು ಪೂಜೆಗೊಳುತ್ತವೆ. ಅವರಿಗೆ ರಾಜರು ಮತ್ತು ವಿಶ್ವೇಶ್ವರಯ್ಯನವರ ಭಾವಚಿತ್ರಗಳು ಮನೆಯಲ್ಲಿ ಇರಲೇಬೇಕು ಯಾಕೆಂದರೆ ಅವರು ಸಲ್ಲಿಸಿದ ಸಮಾಜ ಸೇವೆ ಬೆಲೆಕಟ್ಟಲಾಗದ್ದು. ಆದರೂ ರಾಜಕೀಯವಾಗಿ ರಾಜರನ್ನು ಸೋಲಿಸಲು ಮುಂದಾಗುವುದಕ್ಕೆ ಕಾರಣ ಅಲಮೇಲಮ್ಮನ ಶಾಪವೇ,  ಆ ಶಾಪದ ಪರಿಹಾರಕ್ಕಾಗಿ ಶ್ರೀಕಂಠದತ್ತರು ಬಹಳ ಪ್ರಯತ್ನ ಮಾಡಿದರು,  ಆದರೆ ಸಾಧ್ಯವಾಗಲಿಲ್ಲ! ವ್ಯಾವಹಾರಿಕ ಜಗತ್ತಿನಲ್ಲಿ ಏರಲೈನ್ಸ್, ರೇಷ್ಮೆ ಸೀರೆ ವ್ಯಾಪಾರ, ಪಂಚತಾರ ಹೋಟೆಲ್ ಮೊದಲಾದ ಉದ್ದಿಮೆಗಳನ್ನು ನಡೆಸಿದರು. ಎಲ್ಲಿಗೇ ಹೋದರು ವಿಧಿ ತನ್ನ ವಿರುದ್ಧ ನಡೆಯುವುದು ಅವರಿಗೆ ಅನುಭವಕ್ಕೆ ಬರುತ್ತಿತ್ತು! ಆದರೂ ಅವರ ಪ್ರಯತ್ನಕ್ಕೆ ಜಗನ್ನಿಯಾಮಕ ಶಕ್ತಿ ಅವರ ವೈಯ್ಯಕ್ತಿಕದಲ್ಲಿ ಅವರಿಗೊಂದು ದೊಡ್ಡ ಗೌರವ ಕಲ್ಪಿಸಿಕೊಟ್ಟಿದೆ; ಜನ್ಮಾಂತರಗಳಲ್ಲಿ ಮಹಾರಾಜರು ಬಹುದೊಡ್ಡ ಆಧ್ಯಾತ್ಮಿಕ ಎತ್ತರವನ್ನು ಏರಲಿದ್ದಾರೆ-ಅವರೊಬ್ಬ ಸಂನ್ಯಾಸಿಯಾಗಿ ಮರುಜನ್ಮ ತಾಳುವ ಲಕ್ಷಣಗಳು ನನಗೆ ಭಾಸವಾಗುತ್ತಿದೆ. ಯಾಕೆಂದರೆ ೮೦ನೇ ಇಸವಿಯಿಂದ ಆಧ್ಯಾತ್ಮಿಕವಾಗಿ ಅವರು ಬಹಳ ಮುನ್ನಡೆದಿದ್ದರು.

ಸಂವತ್ಸರವೊಂದರಲ್ಲಿ ಒಟ್ಟೂ ಐದು ನವರಾತ್ರಿಗಳು ಬರುತ್ತವೆ: ವಸಂತ ನವರಾತ್ರಿ, ಗುಪ್ತನವರಾತ್ರಿ,  ಶರನ್ನವರಾತ್ರಿ, ಪೌಷ ನವರಾತ್ರಿ ಮತ್ತು ಮಾಘ ನವರಾತ್ರಿ. ಅವರು ವೈಭವೋಪೇತವಾಗಿ ಶಾಸ್ತ್ರೀಯವಾಗಿ ಆಚರಿಸುತ್ತಿದ್ದ ಶರನ್ನವರಾತ್ರಿಯನ್ನು ಮಾತ್ರ ನಾವೆಲ್ಲ ಮಾಧ್ಯಮಗಳ ಮೂಲಕ ಅಷ್ಟಿಷ್ಟು ಕಂಡಿದ್ದೇವೆ, ಆದರೆ ಅವರು ಆಚರಿಸುತ್ತಿದ್ದ ಇನ್ನುಳಿದ ಎರಡು ನವರಾತ್ರಿಗಳ ದೃಶ್ಯಗಳು ನಮಗೆ ಲಭ್ಯವಿಲ್ಲ. ದೇವರ ಪೂಜೆ ಅರಸರಲ್ಲಿ ಬಹಳ ರಕ್ತಗತವಾಗಿತ್ತು. ಇಷ್ಟೆಲ್ಲ ಇದ್ದೂ ಸಹ, ಅವರು ಮಾಡುವ ಕೆಲಸಗಳಲ್ಲಿ ಅವರಿಗೆ ಆಗಾಗ ಅಡ್ಡಿಯಾಗುತ್ತಿದ್ದುದು ಅಲಮೇಲಮ್ಮನ ಶಾಪ! ಇದು ವಿಷಾದದ ಸಂಗತಿ.