ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, November 11, 2010

ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಉತ್ತರ ಕನ್ನಡದ ಮಿಸಳ್ ಬಾಜಿಯಂ!!


ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಉತ್ತರ ಕನ್ನಡದ ಮಿಸಳ್ ಬಾಜಿಯಂ!!

ಕನ್ನಡ ಕರಾವಳಿಯ ಬಹುತೇಕ ಜನ ಬಾಯಿ ಚಪ್ಪರಿಸಿ ತಿನ್ನುವ ಅತೀ ಇಷ್ಟದ ಹೋಟೆಲ್ ತಿಂಡಿಗಳಲ್ಲಿ ಮಿಸ್ಸಳ್ ಬಾಜಿ ಮತ್ತು ಬನ್ಸ್ ಬಾಜಿ ಬಹಳ ಪ್ರಮುಖ ಸ್ಥಾನ ಪಡೆದಿವೆ. ಈ ಹೆಸರುಗಳು ಎಷ್ಟು ಪ್ರಚಲಿತವೆಂದರೆ ಇದಕ್ಕೆಂದೇ ಹೆಗ್ಗುರುತಾದ ಹೋಟೆಲ್ಗಳೂ ಅಲ್ಲಿ ಇವೆ. ಮಿಸ್ಸಳು ಇಲ್ಲದ ದಿನವನ್ನು ಅಲ್ಲಿನ ಜನ ನೆನೆಸಿಕೊಳ್ಳಲೂ ಸಾಧ್ಯವಿಲ್ಲ. ಹಾಗಂತ ಅಂಥಾದ್ದೇನಪ್ಪಾ ಅದರಲ್ಲಿ ಅಂತ ನೀವೆಲ್ಲ ಕೇಳಹೊರಟರೆ ಅದನ್ನು ತಿಂದೇ ನೋಡಿ ಸ್ವಾಮೀ ಎನ್ನಬೇಕಾಗುತ್ತದೆ.

ಮಸಾಲ್ ಪೂರಿಯ ಮಸಾಲೆಯನ್ನು ಹೋಲುವ ಸಾಂಬಾರಿನಿಂದ [ಬಾಜಿಯಿಂದ] ತುಂಬುವ ಪ್ಲೇಟಿನಲ್ಲಿ ಗುಡ್ಡದ ಮಿನಿಯೇಚರ್ ನ ರೀತಿ ಮಧ್ಯಕ್ಕೆ ಗೋಪುರಾಕಾರವಾಗಿ ನಿಲ್ಲುವ ಈ ತಿಂಡಿ ಯಾವ ಕಾಲದ ಯಾರ ಆವಿಷ್ಕಾರವೋ ತಿಳಿದುಬಂದಿಲ್ಲ. ಅಂತೂ ಕಡಲ ಕಿನಾರೆಯ ಜನ ನೆನಪಿಟ್ಟು ಕೇಳಿ ತಿನ್ನುವ ತಿಂಡಿ ಈ ಮಿಸ್ಸಳ್ ಬಾಜಿ. ಶುದ್ಧ ತೆಳು ಅವಲಕ್ಕಿ ಪ್ಲೇಟಿನಲ್ಲಿ ಹಾಕಿ, ಜೊತೆಗೆ ಅಷ್ಟೇ ಅಳತೆಯಲ್ಲಿ ಖಾರ ಮಿಕ್ಸ್ಚರ್ ಹಾಕಬೇಕು, ಅದಕ್ಕೆ ಜೊತೆಗೆ ಶೇವ್ ಚೂಡ ಮತ್ತು ಕಡ್ಲೆ ಹಿಟ್ಟಿನಲ್ಲಿ ಕರಿದ ಶೇಂಗಾ ಬೀಜಗಳನ್ನು ಸೇರಿಸುತ್ತಾರೆ. ಮೇಲಿಂದ ಈರುಳ್ಳಿಸೇರಿಸಿ ಮಾಡಿದ ಘಮಘಮಿಸುವ ಸಾಂಬಾರನ್ನು ಹಾಕಿ ತಿನ್ನಲು ಕೊಟ್ಟರೆ ಅದರಲ್ಲಿ ನಮ್ಮನ್ನೇ ನಾವು ಕಳೆದುಹೋಗುವ ಅದ್ಬುತ ರುಚಿ, ಸ್ವಲ್ಪ ಸಿಹಿ,ಖಾರ,ಹದವಾಗಿ ಉಪ್ಪು, ಮಸಾಲೆ ಪದಾರ್ಥಗಳ ಪರಿಮಳ ಎವೆಲ್ಲವುಗಳ ಮಿಶ್ರಣವಿರುವ ಈ ತಿಂಡಿಯನ್ನು ಮಳೆಗಾಲದಲ್ಲಂತೂ ಜನ ತುದಿಗಾಲಲ್ಲಿ ನಿಂತು ತಿನ್ನುತ್ತಾರೆ. ಬೇಗ ಜೀರ್ಣವಾಗುವ ಈ ತಿಂಡಿ ಹೆಚ್ಚಾಗಿ ಯಾವ ವೇಳೆಗಾದರೂ ತಿನ್ನಬಹುದಾದ ಹಿತವಾದ ಭಕ್ಷ್ಯ. " ಅರೆ ಹೋಯ್ ಪೈಮಾಮ್,ಕೈಂಯ್ ಗೆಲ್ರೆ ಮಾರಾಯ, ಮಿಸ್ಸಳ್ ಅಸ? " ಅಂತ ಕೇಳುತ್ತ ಪೈಗಳ ಹೋಟೆಲ್ ಅಥವಾ ಇನ್ನ್ಯಾವುದೋ ಲೋಕಲ್ ಹೋಟೆಲ್ ಗೆ ಹೋಗಿ ವಿಚಾರಿಸಿದರೆ ಮಿಸ್ಸಳ್ ಬಾಜಿ ಸಿಕ್ಕೇ ಸಿಗುತ್ತದೆ, ಇನ್ನೇನಾದ್ರೂ ಜನ ಜಾಸ್ತಿ ಬಂದು ತಿಂದು ಖಾಲಿ ಆಗಿದ್ದ್ರೆ ಮಾತ್ರ ಬೇರೆ ಹೋಟೆಲ್ ಹುಡುಕೋದು ಅನಿವಾರ್ಯ.

ಕರಾವಳಿಯಲ್ಲಿ ಮಳೆಯ ಆರ್ಭಟ ಬಹಳವಾಗಿರುತ್ತದೆ. ದಪ್ಪದಪ್ಪಹನಿಗಳು ಗಾತ್ರದ ಮುಸಲಧಾರೆಗಳಾಗಿ ಸುರಿಯುತ್ತಲೇ ಇರುತ್ತವೆ. ಬೆಳಗು ಬೈಗಿನ ಅಂತರವಿಲ್ಲದೇ ಬೆಳಗೇ ಬೈಗೇನೋ ಎಂಬಂತೇ ಕತ್ತಲಾವರಿಸಿ ಧೋ ಎಂದು ಸುರಿಯಲಾರಂಭಿಸಿದರೆ ಮಳೆಗೆ ಪುರುಸೊತ್ತೇ ಇಲ್ಲ. ಇಂತಹ ಮಳೆಗಾಲದಲ್ಲಿ ಅದೂ ನಾಲ್ಕು ತಿಂಗಳು ಸುರಿವ ದಿನಗಳಲ್ಲಿ ದಿನವೂ ಅದೂ ಇದೂ ಕೆಲಸ ಅಂತ ಮನೆಯ ಹೊರಗೆ ಬಂದ ಜನರ ಮೈ ಸ್ವಲ್ಪವಾದರೂ ನೆನೆಯುವುದು ಅನಿವಾರ್ಯ. ಚಳಿಹಿಡಿದ ಶರೀರಕ್ಕೆ ಒಂದಷ್ಟು ಬಿಸಿ ಪಡೆದುಕೊಳ್ಳುವ ಮತ್ತು ಹಸಿದ ಹೊಟ್ಟೆಗೆ ತುಸು ಏನಾದರೂ ತಿಂದುಕೊಳ್ಳುವ ಮನಸ್ಸಾಗುವ ಜನಕ್ಕೆ ಮೂಗರಳಿಸಿ ಕಣ್ಣು ಹಿರಿದಾಗಿಸಿ ನೋಡುವಂತೆ ಮಾಡುವ ತಿಂಡಿ ಮಿಸ್ಸಳ್. ಮಿಸ್ಸಳ್ ಬಾಜಿ ಎನ್ನಬೇಕಿಲ್ಲ ಬರೇ ಮಿಸ್ಸಳು ಎಂದರೆ ಸಾಕು! ಹೊಸದಾಗಿ ಹೋಟೆಲ್ ಹಾಕಿದ ಮಾಲೀಕನಿಗೆ ಗಲ್ಲಾಪೆಟ್ಟಿಗೆಗೆ ಗಸಗಸಿ ರೊಕ್ಕ ತುಂಬಿಸುವುದು ಮಿಸ್ಸಳು ಮತ್ತು ಬನ್ಸ್ ಬಿಟ್ಟರೆ ಈರುಳ್ಳಿ ಬಜೆ [ಈರುಳ್ಳಿ ಬಜ್ಜಿ].

ಸ್ಕೂಲು-ಕಾಲೇಜು ಹುಡುಗರು ತಮ್ಮ ತರಗತಿಯ ಅವಧಿಗಳ ಮಧ್ಯೆ ಎದ್ದುಬಂದು ತಿಂದು ಹೋಗುವುದು ಮಿಸ್ಸಳು. ಸೀತಾರಮ್ ಹೇಗ್ಡೆರು ಪೇಟೆಗೆ ಬಟ್ಟೆತರಲು ಬಂದವರು ಸುತರಾಂ ಮರೆಯದೇ ಕೇಳಿ ತಿನ್ನುವ ತಿನಿಸು ಮಿಸ್ಸಳು. ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಜಾನಕಕ್ಕ ಜ್ಞಾಪಿಸಿಪಡೆದು ತಿನ್ನುವುದು ಈ ಮಿಸ್ಸಳು. ರಾಮದಾಸ್ ಕಾಮತ್ ರು "ಮಕ್ ಕಬರ್ನಾ ಅಶಿಲೆ ಮರಾಯಾ" ಅಂತ ಸುದ್ದಿ ಹೇಳುತ್ತ ತಿನ್ನುವುದು ಮಿಸ್ಸಳು. ಗೋವಿಂದ ಶೆಟ್ರು ವ್ಯಾಪಾರದ ಮಧ್ಯದಲ್ಲಿ ಗೋವಿಂದನಾಮಸ್ಮರಣೆಯೊಂದಿಗೆ ಮಗನನ್ನು ಅಂಗಡಿಯಲ್ಲಿ ಬಿಟ್ಟು ಬಂದು ತಿಂದುಹೋಗುವುದು ಮಿಸ್ಸಳು. ಗೇಬ್ರಿಯಲ್ ಗೊನ್ಸಾಲ್ವಿಸ್ ಮತ್ತು ಮ್ಯಾಥ್ಯು ಫರ್ನಾಂಡಿಸ್ ಇಗರ್ಜಿಗೆ ಹೋಗಿಬರುವಾಗ ತಿಂದುಹೋಗುವುದು ಮಿಸ್ಸಳು. ಗೇರುಸೊಪ್ಪೆಯ ಬಾಪು ಸಾಹೇಬರು " ಮಾಶಾ ಅಲ್ಲಾ " ಎನ್ನುತ ಮೆಟ್ಟಿಲು ಹತ್ತಿ ಬಂದು ತಿಂದು ತೆರಳುವುದು ಮಿಸ್ಸಳು. ಬಾಡಿಗೆ ಕಾರುಗಳು ಕ್ಯಾಬ್ ಗಳನ್ನು ಓಡಿಸುವ ಚಾಲಕ-ಮಾಲಕರು ಗುಂಪಾಗಿ ಹರಟೆ ಹೊಡೆಯುತ್ತ ಸವಿಯುವುದು ಮಿಸ್ಸಳು. ಗಡಿಬಿಡಿಯಲ್ಲಿ ಕೋರ್ಟಿಗೆ ಹೋಗುವ ವಕೀಲರುಗಳು ಕೆಲವೇ ನಿಮಿಷ ಸುಖಾಸೀನರಾಗಿ ಕೇಳುವುದು ಇದೇ- ಮಿಸ್ಸಳು! ಹೋಟೆಲ್ ನಲ್ಲಿ ಪಾರ್ಟಿ ಕೊಡುವ ಅಲ್ಲಿನ ಜನ ಮೊದಲಾಗಿ ಆದೇಶಿಸುವ ತಿಂಡಿ ಮಿಸ್ಸಳು; ಪಾರ್ಟಿ-ಪಂಗಡ ಮರೆತು ಎಲ್ಲರೂ ಒಂದೆಡೆ ಕಲೆತ ಸಂಭ್ರಮಗಳ ಸರಹದ್ದಿನಲ್ಲಿ ಸರಸರನೆ ತಿಂದುಣ್ಣುವ ತಿಂಡಿ ಇದೇ ಮಿಸ್ಸಳು. ಅಪ್ಪನ ಜೊತೆಗೆ ಪೇಟೆಗೆ ಬಂದ ಮಗ/ಮಗಳು ಅಪೇಕ್ಷಿಸಿ ತಿನ್ನುವುದು ಮಿಸ್ಸಳು, ಅಪರೂಪಕ್ಕೆ ಪೇಟೆಗೆ ಬಂದ ಸುಕ್ರು ಹಳ್ಳೇರ್ ಬಯಸುವುದೂ ಮಿಸ್ಸಳು. ಇಡೀದಿನ ರೋಗಿಗಳನ್ನು ಶುಶ್ರೂಷೆಮಾಡಿ ದಣಿದ ವೈದ್ಯ ಭಾಸ್ಕರ್ ತಮ್ಮ ಕೋಣೆಗೆ ಪಾರ್ಸೆಲ್ ತರಿಸಿಕೊಳ್ಳುವುದು ಮಿಸ್ಸಳು! ಹೀಗೇ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎನ್ನುವ ಹಾಗೇ ಎಲ್ಲುಂಟು ಎಲ್ಲಿಲ್ಲ ಎಂದೇ ಲೆಕ್ಕಕ್ಕೆ ಸಿಕ್ಕದ ಸಿಕ್ಕಾಪಟ್ಟೆ ಖರ್ಚಾಗುವ[ಬೇಗ ಖಾಲಿಯಾಗುವ]ಅಗ್ಗದ ಖರ್ಚಿನ ತಿಂಡಿ ಈ ಮಿಸ್ಸಳು. ಶಾಸ್ತ್ರ ಶಾಸ್ತ್ರವೆನ್ನುತ್ತಿರುವ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಭಟ್ಟರು ದಾಯಾದರಲ್ಲಿ ಹಡೆದ ಸೂತಕ ಬಂದಾಗ ಇದೇ ಸಮಯವೆಂದು ಹೋಟೆಲಿಗೆ ನುಗ್ಗಿ ತಿಂದು ಜನಿವಾರ ಬದಲಿಸಿಕೊಳ್ಳುವುದು ಇದೇ ಮಿಸ್ಸಳು!

ಕಡಲತೀರದಲ್ಲಿ ಯಕ್ಷಗಾನ,ನಾಟಕ, ಸಂಗೀತ ರಸಸಂಜೆಗಳಿಗಂತೂ ಕಮ್ಮಿ ಇಲ್ಲವೆಂದು ತಮಗೆಲ್ಲ ತಿಳಿದಿದೆಯಷ್ಟೇ? ಪ್ರತೀಕಾರ್ಯಕ್ರಮದಲ್ಲೂ ಹೊರಾಂಗಣದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಚಹಾ ಅಂಗಡಿ ಇರುವುದಂತೂ ಕಾಯಂ. ಯಾಕೇಂದ್ರೆ ಅಲ್ಲಿನ ಜನ ಅದರಲ್ಲಂತೂ ಸಣ್ಣ ಚಟಗಳಾದ ಚಹಾ-ಬೀಡಿ-ಸಿಗರೇಟು ಇವುಗಳನ್ನು ಅಂಟಿಸಿಕೊಂಡ ಜನ, ಅವುಗಳನ್ನೆಲ್ಲ ಬಿಟ್ಟು ಬಹಳ ಹೊತ್ತು ಇರುವುದೇ ಇಲ್ಲ. ಹೀಗಾಗಿ ಚಹಾ ಅಂಗಡಿ ಇದ್ದಮೇಲೆ ಗಣಪತಿಯ ಜೊತೆಗೆ ಮೂಷಿಕವಿದ್ದಹಾಗೇ ಅಲ್ಲಿ ಮಿಸ್ಸಳಿನ ಹಾಜರಾತಿ ಇದ್ದೇ ಇರುತ್ತದೆ. ಪೂರ್ಣರಾತ್ರಿಯ ಕಾರ್ಯಕ್ರಮವಾದರೆ ಅದಕ್ಕೆ ಮಧ್ಯೆ ಮಧ್ಯೆ ಮೂತ್ರ ವಿಸರ್ಜನೆಗೆ ಎದ್ದು ಹೋದವರು, ನಿದ್ದೆ ಬರದಿರಲೆಂದು ದಂ ಎಳೆಯಲು ಹೋದವರು ಎಲ್ಲರೂ ಖುದ್ದಾಗಿ ಹೋಗಿ ಕುಕ್ಕರಿಸಿ ಕುಳಿತು ಮಟ್ಟಸವಾಗಿ ತಿಂದು ಮುಗಿಸುವ ಮನನೀಯ ತಿಂಡಿ ಈ ಮಿಸ್ಸಳು.

ಜಾಗತೀಕಅಣ ಎಲ್ಲೇ ಅಡಿಯಿಟ್ಟರೂ, ಏನೇ ಪರಿಣಾಮ ಬೀರಿದರೂ ಜಗದುದ್ದಗಲ ಬೇರೆಲ್ಲೂ ಕಾಣಲಾರದ ಅಪ್ಪಟ ದೇಶೀಯ ತಿನಿಸು ನಮ್ಮದೇ ಆದ ಉತ್ತರಕನ್ನಡದ ಮಿಸ್ಸಳು.ಪಟ್ಟಾಗಿ ಕೂತು ಪಟ್ಟಂಗ ಹೊಡೆಯುವಾಗೆಲ್ಲ ನೆನೆಪಾಗಿ ಪ್ಲೇಟಿನ ಮೇಲೆ ಪ್ಲೇಟು ಪಡೆಪಡೆದು ಗಡದ್ದಾಗಿ ತಿಂದು ತೇಗಿಮುಗಿಸುವ ಆಸೆ ಹುಟ್ಟಿಸುವ ತಿನಿಸು ನಮ್ಮದೀ ಮಿಸ್ಸಳು ! ನಮ್ಮದೀ ಮಿಸ್ಸಳು! ವಿದೇಶೀಯರೂ ಸೇರಿದಂತೆ ಹಲವು ಪ್ರವಾಸಿಗರ ಮನಸೂರೆಗೊಂಡ ಮರೆತರೆ ಮರುಗಬೇಕಾದ ಜನಪ್ರಿಯ ನೈವೇದ್ಯ ಉತ್ತರ ಕನ್ನಡದ ಮಿಸ್ಸಳು. ಸ್ವಲ್ಪ ಇರಿ ವಿದೇಶೀಯರು ನುಗ್ಗಿ ಪೇಟೆಂಟ್ ಪಡೆಯುವ ಮೊದಲು ಒಂದು ಹಾಡಿನ ತುಣಿಕು ಹಾಡಿಬಿಡುತ್ತೇನೆ ---

ಉಪ್ಪರಿಗೆಯ ಜನ ಚಪ್ಪರಿಸಿ ತಿಂದರು
ಮುಪ್ಪಡರಿದ ಜನ ನೆಪ್ಪಿನಿಂದ ನೆನೆದರು
ಸಪ್ಪೆಯಾದ ಜೀವನದಲ್ಲಿ ಕುಪ್ಪಳಿಸಲು ಕುಮ್ಮಕ್ಕು ನೀಡುವ
ಉಪ್ಪು ಖಾರ ಸಹಿತದ ಮಿಸ್ಸಳೇ ನಿನಗೆ
ಬಪ್ಪರೇ ಭಳಿರೇ ಬಹುಪರಾಕ್ ಬಹುಪರಾಕ್ !

" ಹಾಂ ಏನ್ ಕೊಡ್ಲಿ ನಿಮ್ಗೆ ? ಖಾಲಿ ದೋಸೆ,ಮಸಾಲೆ ದೋಸೆ, ಇಡ್ಲಿ, ಉಪ್ಪಿಟ್ಟು, ಶಿರ, ಪೂರಿ ಬಾಜಿ,ಬನ್ಸ್ ಬಾಜಿ, ಮಿಸ್ಸಳು " ಅಂತ ಸಪ್ಲೈಯರ್ ಲಿಸ್ಟ್ ಹೇಳುತ್ತ ಕೊನೇಗೊಮ್ಮೆ ಹೇಳುವ ಐಟೆಮ್ ಮಿಸ್ಸಳು. ಯಾಕೇಂದ್ರೆ ಅದು ಹೇಗೂ ಹೇಳದಿದ್ದ್ರೂ ಕೇಳುವಂತ ಐನಾತಿ ಐಟಮ್ ಅನ್ನೋದು ಅವರಿಗೆಲ್ಲ ಗೊತ್ತೇ ಇದೆ.

ಮಿಸ್ಸಳು ಒಂದೊಂದು ಹೋಟೆಲ್ ನಲ್ಲಿ ಅವರವರ ತಯಾರಿಕೆಗೆ ತಕ್ಕಂತೆ ಸ್ವಲ್ಸ್ವಲ್ಪ ಭಿನ್ನ ರುಚಿಯಿಂದ ಸಿಗುತ್ತದೆ. ಕೆಲವರು ತುಂಬಾ ಚೆನ್ನಾಗಿ ಮಸಾಲೆ ಹಾಕಿದರೆ ಇನ್ನು ಕೆಲವರು ಸ್ವಲ್ಪ ಕಮ್ಮಿ ಮಸಾಲೆ ಸಾಮಗ್ರಿಗಳನ್ನು ಉಪಯೋಗಿಸುತ್ತಾರೆ. ಆದರೂ ಮಿಸ್ಸಳು ರುಚಿಯೇ ಆಗಿರುತ್ತದೆ. ಹೊಸದಾಗಿ ತಿನ್ನುವವರಿಗೆ ಇದು ಅನುಭವಕ್ಕೆ ಬರುವುದಿಲ್ಲ. ತಿನ್ನುತ್ತ ಸ್ವಲ್ಪ ರೀಸರ್ಚ್ ಮಾಡಿದರೆ ಕೆಲವು ಹೋಟೆಲ್ ಗಳು ಇದಕ್ಕಾಗೇ ಹುಟ್ಟಿದವೇನೋ ಎನ್ನುವಷ್ಟು ಖುಷಿಕೊಡುವ ರುಚಿಯ ಮಾಯಾಜಗತ್ತು ಈ ಮಿಸ್ಸಳಿನದು. ಯಾವುದೇ ಕೆಲಸದ ಗಡಿಬಿಡಿಯಲ್ಲೂ ಕೆಲವೇ ನಿಮಿಷಗಳಲ್ಲಿ ತಿಂದುಮುಗಿಸಿಬಿಡಬಹುದಾದ ಈ ತಿಂಡಿ, ತಿಂದ ಕೆಲವೇ ನಿಮಿಷಗಳಲ್ಲಿ ಒಂಥರಾ ಆತ್ಮತೃಪ್ತಿಯಾಗುವಷ್ಟು ದೇಹದುದ್ದಗಲ ನರನಾಡಿಗಳಲ್ಲೂ ತನ್ನ ಘಮಘಮದಿಂದ ಮಘಮಘಿಸಿ ಜೀವಕ್ಕೆ ಹೊಸ ಚೈತನ್ಯ ತುಂಬುವ ಅತಿ ವಿಷಿಷ್ಟ ಮತ್ತು ಕಾಲಭೇದರಹಿತ ತಿಂಡಿ! ಹೋಟೆಲ್ ಮಾಲೀಕರು ಹಸಿವಾದಾಗ ತಾವೇ ಖುದ್ದಾಗಿ ಎದ್ದುಬಂದು ಒಂದಷ್ಟು ಸುರುವಿಕೊಂಡು ಚಪ್ಪರಿಸಿ ತಿನ್ನುವುದು ಕಾಣಸಿಗುವ ದೃಶ್ಯವಾದರೆ, ಸಪ್ಲೈಯರ್ ಹುಡುಗರು, ಟೇಬಲ್ ಒರೆಸುವ ಮಾಣಿಗಳು ಸದಾ ಓಎಗಣ್ಣಿನಿಂದ ಆಗಾಗ ಗಮನಿಸುವುದು ಈ ಮಿಸ್ಸಳು. ಯಜಮಾನರು ಅನುಮತಿ ಮತ್ತು ಅವಕಾಶ ಕೊಟ್ಟಾಗ ಗಬಗಬನೆ ಹಸಿದ ಹೆಬ್ಬುಲಿಯಂತೆ ಅತೀವ ಬಯಕೆಯಿಂದ ತಿನ್ನುವ ಖಾದ್ಯ ಇದೇ ಈ ಮಿಸ್ಸಳು. ಇದಕ್ಕೆ ಸಾಥ್ ನೀಡಲು ಈರುಳ್ಳಿ ಬಜೆ. ಬಜೆಯೆಂದು ಕರೆಸಿಕೊಳ್ಳುವ ಈರುಳ್ಳಿ ಬಜ್ಜಿ. ಕನ್ನಡ ಕರಾವಳಿಯ ಈರುಳ್ಳಿ ಬಜೆಯ ಶೈಲಿ ತುಸು ವಿಭಿನ್ನ. ಅಲ್ಲಿ ಸಿಗುವ ಈರುಳ್ಳಿಯ ಗುಣಮಟ್ಟ ಕೂಡ ಹಾಗೇ. ಸಿಹಿಸಿಹಿಯಾಗಿರುವ ಈರುಳ್ಳಿಯನ್ನು ಖಾರಮಿಶ್ರಿತ ಶುದ್ಧ ಕಡ್ಲೆಹಿಟ್ಟಿಗೆ ಮೈದಾ ಬೆರೆಸಿ, ಉಪ್ಪು ಇತ್ಯಾದಿ ಹಾಕಿ ಕರಿದ ಬಿಸಿ ಬಿಸಿ ಈರುಳ್ಳಿ ಬಜೆ ಸುತ್ತಲ ಕಿಲೋಮೀಟರ್ ಜಾಗಕ್ಕೆ ಪರಿಮಳ ಬೀರುತ್ತ ಗಿರಾಕಿಯನ್ನು ಹೋಟೆಲ್ಲಿಗೆ ಕರೆತರುವಲ್ಲಿ ರಾಕೆಟ್ ಉಡ್ಡಯನಮಾಡಿದಂತೇ ಯಶಸ್ವೀ ಕೆಲಸ ಮಾಡುತ್ತದೆ. ಮಿಸ್ಸಳಿನ ಜೊತೆಗೆ ಈರುಳ್ಳಿ ಬಜೆ ಸೇರಿದರೆ ಅದರ ಲೋಕವೇ ಬೇರೆ! ತಿಂದು ಕೈತೊಳೆದುಕೊಂಡವರೂ ಕೈಮೂಸಿ ನೋಡುತ್ತಿರುವಂತ ಪರಿಮಳ ಬೀರುವ ಈರುಳ್ಳಿ ಬಜೆಯದ್ದು. ಎನನ್ನೂ ತಿನ್ನಲಾರದಷ್ಟು ಹೊಟ್ಟೆಬಿರಿ ತಿಂದು ಬರೇ ಟೀ ಕುಡಿಯಲು ಬಂದ ಜನ ಸುಮ್ನೇ ಬಾಯಿಗೆ ಬಿಟ್ಟುಕೊಳ್ಳುವ ಮೆತ್ತನೆಯ ತಿಂಡಿ ಈರುಳ್ಳಿ ಬಜೆ.

ಬೆಳಿಗ್ಗೆ ಹೊಟ್ಟೆತುಂಬಾ [ಕಮ್ಮಿ ಖರ್ಚಿನಲ್ಲಿ] ತಿನ್ನಬಹುದಾದ ತಿಂಡಿ ಬನ್ಸ್ ಬಾಜಿ. ರೂಪದಿಂದ ಪೂರಿಯ ಸಹೋದರತ್ವ ಹೊಂದಿರುವ ಈ ತಿಂಡಿ ಅಕ್ಕಿಹಿಟ್ಟು, ಮೈದಾಹಿಟ್ಟು, ಬಾಳೆಹಣ್ಣು ಮತ್ತು ಉಪ್ಪು-ಅಡಿಗೆ ಸೋಡಾ ಇವುಗಳ ಮಿಶ್ರಣ. ಹಿಟ್ಟುಗಳನ್ನು ಹದಪ್ರಮಾಣದಲ್ಲಿ ಸೇರಿಸಿ, ನೀರು ಹಾಕಿ, ಬಾಳೇ ಹಣ್ಣು[ ಯಾಲಕ್ಕಿ,ಪುಟಬಾಳೆ ಅಥವಾ ಮೆಟ್ಗ ಎಂದು ಕರೆಸಿಕೊಳ್ಳುವ ಬಾಳೇ ಹಣ್ಣು] ಕಿವುಚಿ ಸೇರಿಸಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆ ಸೋಡಾ ಬೆರೆಸಿ ನಾದಿದರೆ ತಯಾರಾಗುವ ಮೆತ್ತನೆಯ ಹಿಟ್ಟಿನ ಮುದ್ದೆಯನ್ನು ಪೂರಿಯನ್ನು ಒರೆದ ಹಾಗೇ ಸ್ವಲ್ಪ ಸ್ವಲ್ಪವೇ ಉಂಡೆಮಾಡಿ ಕೈಯ್ಯಿಂದಲೇ ತಟ್ಟಿ, ಕುದಿಯುತ್ತಿರುವ ಖಾದ್ಯತೈಲದಲ್ಲಿ ಕಂದು ಬಣ್ಣ ಬರುವವರೆಗೆ ಕರಿದರೆ ಸಿದ್ಧವಾಯಿತು ನೋಡಿ ನಮ್ಮ ಬನ್ಸ್. ಬನ್ನಿನ್ನ ಹಾಗೇ ಮೆತ್ತಗಿದ್ದರೂ ಬನ್ನಿಗೂ ಪೂರಿಗೂ ವಿಭಿನ್ನವಾಗಿರುವ ಬನ್ಸ್ ನ ಒಳಮೈ ತೆರೆದು ನೋಡಿದರೆ ಬೆಳ್ಳನೆಯ ಪೆಟಿಕೋಟ್ ಥರದ ಒಳಮೈ ನೋಡಬಹುದು. ಸಿಹಿಯಾಗಿರುವ ಈ ತಿಂಡಿಗೆ ಜೊತೆಗೆ ನೆಂಜಿಕೊಳ್ಳಲು ಮಿಸ್ಸಳಿಗೆ ಮಾಡಿದ ರೀತಿಯಲ್ಲೇ ಸಾಂಬಾರು. ಎರಡು ತಿಂಡಿ ತಟ್ಟೆಗಳಲ್ಲಿ ಒಂದರಲ್ಲಿ ಮೂರು ಬನ್ಸ್ ಮತ್ತು ಇನ್ನೊಂದರಲ್ಲಿ ಬಾಜಿ [ಸಾಂಬಾರು] ಇಟ್ಟುಕೊಂಡು ಕುಳಿತುಬಿಟ್ಟರೆ ಈ ಜಗ ಸೋಜಿಗ!

ಒಂದು ಪ್ಲೇಟ್ ಬನ್ಸ್ ಬಾಜಿ ತಿಂದು ನಿಮ್ಮ ಕೆಲಸಕ್ಕೆ ಹೋಗಿ, ಹಸಿವೆ ಮಧ್ಯಾಹ್ನ ೧ರ ತನಕ ನಿಮ್ಮನ್ನು ಬಾಧಿಸದು, ಇದು ಗ್ಯಾರಂಟಿ, ಇಲ್ಲದಿದ್ದರೆ ನಿಮಗೆ ನಿಮ್ಮಹಣ ವಾಪಸ್! ಕರಾವಳಿಯಲ್ಲಿ ಬಿಸಿಲ ಧಗೆ ಹೆಚ್ಚು. ಮಳೆಗಾಲದ ಮಧ್ಯೆ ಬಿಸಿಲು ಬಂದರೂ ಅಷ್ಟರಲ್ಲೇ ಸೆಕೆ ಆರಂಭ. ಹೀಗಾಗಿ ಅಲ್ಲಿ ಬೆವರುವುದೂ ಹೆಚ್ಚು. ತಿಂದ ಆಹಾರ ಜೀರ್ಣವಾಗುವುದೂ ಬಹುಬೇಗ. ಇಂತಹ ಸನ್ನಿವೇಶದಲ್ಲಿ ಅಲ್ಲಿನ ಹೋಟೆಲಿಗರು ಕಂಡುಕೊಂಡ ರುಚಿಯಾದ ತಿಂಡಿ ಬನ್ಸ್ ಬಾಜಿ.

ಮಳೆಗಾಲ ಇನ್ನೇನು ಬಂತು ಎನ್ನುವಾಗ ಪೇಟೆಗೆ ಕೆಲಸಕ್ಕೆ ಹೋದರೆ ಕುಳಿತು ತಿನ್ನಲು ಸರಿಯಾಗಿ ಜಾಗವಿರುವ, ಶುಚಿ ರುಚಿಯಿಂದ ಕೂಡಿದ ಹೋಟೆಲನ್ನು ಮನಸ್ಸು ಎಣಿಸುತ್ತಾ ಇರುತ್ತದೆ. ಹೋಟೆಲ್ ನೋಡಲು ಬಹಳ ಕ್ಲಾಸಿಕ್ ಆಗಿರದಿದ್ದರೂ ನೀಡುವ ಈ ತಿಂಡಿಗಳನ್ನು ಮರೆಯಲಾಗದು. ತಿನ್ನುವ ಮನಸ್ಸುಳ್ಳವರು ಈ ತಿಂಡಿಗಳ ಹೆಸರನ್ನು ಬರೆದಿಟ್ಟುಕೊಂಡು ಕರಾವಳಿಯ ಪ್ರೇಕ್ಷಣೀಯ ಸ್ಥಳಗಳಾದ ಮುರುಡೇಶ್ವರ, ಗೋಕರ್ಣ, ಯಾಣ, ಧರ್ಮಸ್ಠಳ, ಉಡುಪಿ ಹೀಗೇ ಎಲ್ಲಿಗಾದರೂ ಹೋದರೆ ಅಥವಾ ಹೊನ್ನಾವರ, ಕುಮಟಾ ಕಡೆ ಒಮ್ಮೆ ರುಚಿನೋಡಬಹುದು.

Wednesday, November 10, 2010

ಜ್ಞಾತನಾಗು

ಚಿತ್ರ ಋಣ: ಅಂತರ್ಜಾಲ

ಜ್ಞಾತನಾಗು

ಬದುಕು ಕಲಿಸುವ ಪಾಠ ಬಹಳ ಮೌಲ್ಯದ್ದಹುದು
ಕೆದಕಿ ಬರೆದರು ಹೊತ್ತಗೆಗಳ ಪೂರ್ವಜರು
ಪದಕ ಪದವಿಯ ವಿಶ್ವವಿದ್ಯಾಲಯಕಂ ಮಿಗಿಲು
ಅದಕುಂಟೆ ಸರಿಸಾಟಿ | ಜಗದಮಿತ್ರ

ಓದುತ್ತ ಅರಿ ಮೊದಲು ಮಾಡುತ್ತ ತಿಳಿ ಹಲವು
ಬಾಧಕವೇ ಬೇಡವೆನ್ನುತ ಕೂರಬೇಡ
ಹಾದಿಬೀದಿಯಲೊಮ್ಮೆ ನೋಡುತ್ತ ಕಲಿ ಕೆಲವು
ಆದರಿಸು ಆದರ್ಶ | ಜಗದಮಿತ್ರ

ದೇಹಕ್ಕೆ ಸ್ನಾನವನು ಮಾಳ್ಪ ರೀತಿಯಲೊಮ್ಮೆ
ಸಾಹಸದಿ ಮನಸನ್ನು ಸ್ನಪನಗೊಳಿಸುವೊಲು
ಆಹಾರ-ನಿದ್ದೆ-ಮೈಥುನಗಳಲಿ ಹದವಿರಿಸಿ
ವಿಹರಿಸು ಧ್ಯಾನದಲಿ | ಜಗದಮಿತ್ರ

ಮನವು ಎಲ್ಲಕು ಮೂಲ ಕಾರಣವು ಕಾರ್ಯಕ್ಕೆ
ಅನುಗೊಳಿಸು ಅಭ್ಯಸಿಸಿ ಪ್ರಾಜ್ಞ ಜೀವಿತವ
ಮನುಕುಲದಿ ಸಮಯ ಸದ್ವಿನಿಯೋಗಿಸುತ ನಡೆಸು
ನೆನೆವಂತ ಕೆಲಸಗಳ | ಜಗದಮಿತ್ರ

ಉತ್ತಮದ ಪುಸ್ತಕಗಳೇ ನಮ್ಮ ಆಸ್ತಿಗಳು
ಪತ್ತಿನಲಿ ಮನವನ್ನು ಮುದಗೊಳಿಸುವುದಕೆ
ಹೊತ್ತುಹೊತ್ತಿಗೆ ಅವುಗಳಂ ತೆರೆದು ತುಂಬುತ್ತ
ಎತ್ತು ನಿನ್ನಯ ಮಟ್ಟ | ಜಗದಮಿತ್ರ

ಸುಜ್ಞಾನಿಗಳ ಬದುಕು ಪರರಜ್ಞಾನ ನೀಗಿಸಲು
ವಿಜ್ಞಾನಿಗಳು ಶ್ರಮಿಸಿ ಸಂಶೋಧಿಸುವರು
ಅಜ್ಞಾನಕಿಂತ ಬೇರೊಂದು ದೋಷವದಿಲ್ಲ
ಪ್ರಜ್ಞಾನ ನೀ ಗಳಿಸು | ಜಗದಮಿತ್ರ

Tuesday, November 9, 2010

ಢಂ ಪುಸ್ ಡಬೋಲ್ !!


ಢಂ ಪುಸ್ ಡಬೋಲ್ !!

ದೀಪಾವಳಿಗೆ ಮೂರುದಿವಸ ದಿನಕ್ಕೊಂದರಂತೇ ಪಟಾಕಿ ಸಿಡಿಸಿದರೆ ಎಂಬ ಆಸೆ ಇತ್ತು. ಆದರೆ ಮಳೆಯಲ್ಲಿ ದೀಪಾವಳಿ ಪಟಾಕಿಯೆಲ್ಲಾ ಟುಸ್ ಆದಾಗ ಮರೆವಿನ ಹಿತ್ತಲಲ್ಲಿ ಆಪದ್ರಕ್ಷಕವಾಗಿ ಹೂತಿಟ್ಟ ಔಷಧೀಯ ಮೂಲಿಕೆಗಳನ್ನು ಹೊರತೆಗೆದು ಬಳಸಿದರೆ ಹೇಗೆ ಎಂಬ ಭಾವನೆ ಬಂತು. ಹೀಗಾಗಿ ಇವತ್ತು ಸ್ವಲ್ಪ ಮಳೆಯೂ 'ನಿಂತಿದ್ದೇನೆ ' ಅಂತ ಕೆಲವುಕಡೆ ಬೋರ್ಡು ಹಾಕಿರುವುದರಿಂದ ನಿನ್ನೆಯ ಮಳೆಯಿಂದಾದ ಶೀತ ನೆಗಡಿಗೆ ನನ್ನ ಮೂಲಿಕೆಗಳೇ ಸಾಕಾಗಬಹುದು ಎಂಬ ಭಂಡ ಧೈರ್ಯದಿಂದ ನೆಲ ಅಗೆದು ಹೊರಗೆಳೆದೆ ನೋಡಿ ....... ಆಗ ಸಿಕ್ಕಿದ್ದೇ ಢಂ ಪುಸ್ ಡಬೋಲ್ !

ಢಂ !

ನಾವು ಚಿಕ್ಕವರಿರುವಾಗ ಅಂದರೆ ಕನ್ನಡಶಾಲೆಯಲ್ಲಿ ಓದುತ್ತಿರುವಾಗ ನಮಗೆ ಓದು, ಬರಹ ಬರುತ್ತಿತ್ತೇ ವಿನಃ ಹೊರಜಗತ್ತಿನ ಯಾವುದೋ ರಾಜಕೀಯಕ್ಕೋ ವ್ಯವಹಾರಗಳಿಗೋ ತಲೆ ಹಾಕಿದ ಜನವಲ್ಲ ನಾವು. ನಾವಾಯಿತು ನಮ್ಮ ಪಾಡಾಯಿತು ದೊಗಳೆ ಚಡ್ಡಿಯನ್ನು ಜಗ್ಗುತ್ತಾ ಹರಿದ ಚಪ್ಪಲಿಯನ್ನು ಸೂಜಿ ದಾರದಿಂದ ಹೊಲಿದು ಕಿತ್ತುಹೋದ ಸಂಸಾರದ ಗಂಡ-ಹೆಂಡಿರ ವೈಮನಸ್ಯ ಬಗೆಹರಿಸಿ ವಿಚ್ಛೇದನವನ್ನು ರದ್ದುಗೊಳಿಸುವಂತೇ ಎಲ್ಲಕ್ಕೂ ಪರಿಹಾರ ಕಂಡುಕೊಳ್ಳುತ್ತಾ ಬದುಕಿದ ಬಡಪಾಯಿ ಹುಡುಗರು ನಾವು. ಯಾರಾದರೂ ದಾರಿಹೋಕರು ಕಣ್ಣುಹಿಗ್ಗಿಸಿದರೆ ಚಡ್ಡಿಯಲ್ಲೇ ಉಚ್ಚೆ ಹೊಯ್ದುಕೊಳ್ಳುವಷ್ಟು ಅಸಾಧಾರಣ ಧೈರ್ಯವಂತರು ನಾವು. ಇರಲಿ ಬಿಡಿ ಸಾಕು ಹೇಳ ಹೊರಟಿದ್ದು ನಮ್ಮಕಥೆಯನ್ನಲ್ಲ....ಸುಬ್ಬಕ್ಕನದು.

ಸುಬ್ಬಕ್ಕ ನಮ್ಮ ಪಕ್ಕದ ಮನೆಯ ಸಂಬಂಧಿ. ಆಗಾಗ ನಮ್ಮನೆಗೆ ಬರುತ್ತಿದ್ದಳು. ಸುಮಾರು ೬೦ ವಯಸ್ಸಿನ ಹೆಂಗಸು. ನೋಡುವುದಕ್ಕೆ ಸಹ್ಯಾದ್ರಿ ಸಮೂಹದ ಯಾವುದೋ ಬೆಟ್ಟ! ಬಂದಾಗ ನಮ್ಮಲ್ಲಿ ಊಟ-ತಿಂಡಿಗೆ ನಿಲ್ಲುವುದಿತ್ತು. ಅನಿರೀಕ್ಷಿತವಾಗಿ ಬರುವ ಆಕೆ ಕೆಲವೊಮ್ಮೆ ಬೇರೆ ಅಭ್ಯಾಗತರಿರುವಾಗ ಬಂದು ಕಿರಿಕಿರಿಯುಂಟುಮಾಡುವುದೂ ಇತ್ತು. ಹಾಗಂತ ನಾವೆಂದೂ ಅವಳನ್ನು ಅವಳ ಮುಂದೆ ಬೈಯ್ಯಲಿಲ್ಲ ! ಯಾಕೆಂದರೆ ಅವಳು ಮದುವೆಯಾಗಿ, ಸಂಸಾರ ಹೂಡಿ, ಕೆಲವು ಪೆದ್ದ ಮಕ್ಕಳನ್ನು ಹೆತ್ತು ಆಮೇಲಾಮೇಲೆ ಗಂಡನಕೂಡ ಜಗಳವಾಡಿ ಕೊನೆಗೊಂದು ದಿನ ಬಡ್ಡಾಕುಳಿ ತಲೆಯ ಯಜಮಾನ ರಾಮ ತನಗೆ ಬಂದ ಕೋಪವನ್ನು ಹೆಂಡತಿಯ ಮೇಲೆ ಹಾಯಿಸುವ ರಭಸದಲ್ಲಿ ತನ್ನ ಸಂಪೂರ್ಣ ಸ್ಥಿರಾಸ್ಥಿಯನ್ನು ಅದೇ ಊರಿನ ಅಣ್ಣೇ ಮನೆಗೆ ಬರೆದುಬಿಟ್ಟ ! ಢಂ ! ಶಬ್ದ ಕೇಳಲಿಲ್ಲವೇ ? ಇದೇ ಆಗಿದ್ದು ಪಾಪ, ಜೀವಮಾನದಲ್ಲಿ ಆಕೆಗೂ ಆಕೆಯ ಮಕ್ಕಳಿಗೂ ಪರರ ಮನೆಯ ಕೂಲಿ ಕೆಲಸಮಾಡುತ್ತಾ ಹೇಗೇಗೋ ಹೊಟ್ಟೆಹೊರೆದುಕೊಳ್ಳಬೇಕಾಗಿ ಬಂತು. ಇದನ್ನೇ ವಿಧಿಯಾಟವೆನ್ನೋಣವೇ ? ಹೀಗಾದ್ದರಿಂದ ಅಲ್ಲಿಂದಲಾಗಾಯ್ತು ಸುಬಕ್ಕನದು ಎಲ್ಲಿಗೆ ಹೋದರೂ ಅದೇ ಹಾಡು: ತನ್ನ ಗಂಡನ ಬೋಳಿಗೆ ಎಣ್ಣೆ ಸವರಿ ನಮ್ಗೆಲ್ಲಾ ನಾಮಹಾಕಿದ ಅಣ್ಣೇ ಮನೆಯವರು ಹಾಳುಬಿದ್ದೋಗಲಿ --ಎಂಬುದು.

ಇಲ್ಕೇಳಿ ಹೋಯ್ ಮೊದಮೊದ್ಲು ನಮಗೂ ಆಕೆ ಯಾಕೆ ಹಾಗೆ ಹೇಳುತ್ತಾಳೆ ಎಂದು ತಿಳಿದಿರಲಿಲ್ಲ. ಅಂತೂ ನಿಧಾನವಾಗಿ ವಿಷಯಗಳನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸಿದ್ದೆವು. ಒಮ್ಮೆ ನಮ್ಮನೆಗೆ ಬಂದ ಸುಬ್ಬಕ್ಕ

" ತಮಾ ಒಂದ್ ಕಾಗ್ದ ತಗ್ಯ ನಾ ಹೇಳ್ದಾಂಗ್ ಬರಿ ಆಯ್ತಾ " ಎಂದಳು.

ನಾನು " ಹೂಂ ಆಯ್ತು" ಅಂದೆ

ಬರ್ಯೋ " ಸುಬ್ಬಕ್ಕ ಅನಾಥರಕ್ಷಳಿರುತ್ತಾಳೆ "

ನನ್ನ ತಲೆಗೆ ಏನೂ ಹೊಳೆಯಲಿಲ್ಲ, ಎಷ್ಟೇ ಚಿಂತಿಸಿದರೂ ನನಗೆ ಆ ಶಬ್ದದ ಅರ್ಥವೇ ಆಗಲಿಲ್ಲ. ಬಹಳ ಹೊತ್ತು ಕಾಲಹರಣ ಮಾಡಲು ಸುಬ್ಬಕ್ಕನನ್ನು ಕಳಿಸಬೇಕಾಗಿತ್ತಲ್ಲ ಅದಕ್ಕೇ ಅವಳು ಹೇಳಿದಹಾಗೆಲ್ಲಾ ಬರೆದುಕೊಟ್ಟೆ.

ನಾವು ಬುದ್ಧಿ ತಿಳಿದು ದೊಡ್ಡವರಾಗುವ ಹೊತ್ತಿಗೆ ನನಗೆ ತಿಳಿದದ್ದು, ಅವಳು ಬರೆಯಿಸಿದ್ದು ಅರ್ಜಿ ಎಂಬುದು. ಅರ್ಜಿಯ ಹಲವು ಕಡೆ ಸುಬ್ಬಕ್ಕ ಅನಾಥರಕ್ಷಳು ಎಂದು ಬರೆದಿದ್ದೆನಲ್ಲ ಅದರ ಅರ್ಥ ಸುಬ್ಬಕ್ಕ ಅನಕ್ಷರಸ್ಥಳು ! ತಾನು ಅನಕ್ಷರಸ್ಥಳಾಗಿರುವುದರಿಂದ ತನಗೆ ಓದಲು/ಬರೆಯಲು ಬಾರದೇ ಇರುವುದರಿಂದ ಸ್ವಲ್ಪ ಮಾನಸಿಕ ತೊಂದರೆಯಿಂದ ಬಳಲುತ್ತಿರುವ ಯಜಮಾನರು ತಮ್ಮ ಆಸ್ತಿಯನ್ನೆಲ್ಲಾ ತನಗೆ ತಿಳಿಯದೇ ಯಾರಿಗೋ ಬಿಡಿಗಾಸನ್ನೂ ತೆಗೆದುಕೊಳ್ಳದೇ ಬರೆದುಕೊಟ್ಟಿದಾರಾಗಿಯೂ ಮತ್ತು ಹಾಗೆ ಮಾಡುವಂತೇ ಅಣ್ಣೇಮನೆಯವರು ಸತತವಾಗಿ ಪ್ರೇರೇಪಿಸಿದ್ದರಿಂದ ತನ್ನ ಗಂಡನಿಗೆ ಬುದ್ಧಿಯಿಲ್ಲದ್ದನ್ನು ತಿಳಿದು ದುರುಪಯೋಗಮಾಡಿಕೊಂಡರು ಎಂದು ಕೆಲವು ಅಧಿಕಾರಿಗಳಿಗೆ ಕಳಿಸಲು ಆಕೆ ನನ್ನ ಕೈಲಿ ಅರ್ಜಿ ಬರೆಯಿಸಿದ್ದಳು !

ಪುಸ್ !

ಕೆಲವರಿಗೆ ಮಾತಿನ ಮಧ್ಯೆ ಆಗಾಗ ಏನಾದರೂ ಒಂದೆರಡು ಶಬ್ದಗಳನ್ನು ಉಪಯೋಗಿಸುವ ಹವ್ಯಾಸ. ಇಂತಹ ಒಬ್ಬರು ನಮ್ಮ ಬಳಗದಲ್ಲಿದ್ದರು. " ನಾ ಹೇಳದ್ ತಿಳೀಲಿಲ್ಲಾ ? " ಎಂಬ ಒಕ್ಕಣಿಕೆಯನ್ನು ಅವರು ಸದಾ ಉಪಯೋಗಿಸುತ್ತಿದ್ದರು. ತೀರಾ ಪುಕ್ಕಲುತನದ ಈ ಮನುಷ್ಯನಿಗೆ ಬೆಕ್ಕುಗಳೆಂದರೆ ಭಾರೀ ಹೆದರಿಕೆ. ದೂರದಲ್ಲಿ ಬೆಕ್ಕುಗಳನ್ನು ಕಂಡರೂ ದಾರಿಬದಲಾಯಿಸಿ ಹೋಗಿಬಿಡುವ ವ್ಯಕ್ತಿ ಈತ. ನಮ್ಮನೆಗೆ ಬಂದಾಗ ನಮಗೆಲ್ಲಾ ಬೆಕ್ಕುಗಳ ವರ್ಣನೆ ಮಾಡಿ ಬೆಕ್ಕುಗಳು ಹುಲಿ-ಸಿಂಹಗಳಿಗಿಂತಾ ಕ್ರೂರ ಎಂಬಂತೇ ಬಣ್ಣಿಸಿ ನಮ್ಮಲ್ಲೂ ಕೆಲವು ಕಾಲ ಹೆದರಿಕೆ ಉಂಟಾಗುವಂತೇ ಮಾಡಿಬಿಟ್ಟಿದ್ದ ಆಸಾಮಿ !

ಹಾಗಂತ ಈತ ಚಿಕ್ಕವನೇನೂ ಅಲ್ಲ. ಆಗಲೇ ಮದುವೆ ವಯಸ್ಸಿಗೆ ಬಂದ ಮಗನೂ ಇದ್ದ. ಮಗನ ಮದುವೆ ಮಾಡುತ್ತೇನೆ ಎಂದು ಊರತುಂಬಾ ಡಂಗುರ ಸಾರಿದ್ದರಿಂದ ಅನೇಕಜನ ಹೆಣ್ಣು ಹೆತ್ತವರು ಈತನ ಮಗನಿಗೆ ಹೆಣ್ಣುಕೊಡುವ ಸಲುವಾಗಿ ವಧುಪರೀಕ್ಷೆಯ ಕಾರ್ಯವನ್ನು ಇಟ್ಟುಕೊಳ್ಳುತ್ತಿದ್ದರು. ಅಲ್ಲಿ ಇಲ್ಲಿ ಕರೆದಾಗ ಈತ ಹೆಂಡತಿ ಮಗನೊಟ್ಟಿಗೆ ಹೋಗಿ ನೋಡಿಬರುತಿದ್ದ. ಒಮ್ಮೆ ಹೀಗೇ ಹೊರಟಿತ್ತು ಮೇಳ. ದಾರಿಯಲ್ಲಿ ಒಂದು ಬೆಕ್ಕು ದೂರದಲ್ಲಿ ಓಡಿಬರುತ್ತಿತ್ತು.

" ನಾ ಬರುದಿಲ್ಲ ನೀವೇ ಹೋಗ್ಬನ್ನಿ " ಕಾಲೆಳೆಯುತ್ತಾ ಅಡ್ಡರಸ್ತೆಯಲ್ಲಿ ತಿರುಗಿದ ಈತ.

" ಬನ್ನಿ ನೀವು ಬರ್ದೇ ಇದ್ರೆ ಅವ್ರು ಏನ್ ತಿಳ್ಕೋತಾರೋ ಗೊತ್ತಿಲ್ಲಾ, ಯಾಕ್ ಹೀಗೆ ಬನ್ನಿ " ಎಂದು ಹೆಂಡತಿ ಕೇಳುತ್ತಿದ್ದರೂ ಆತನಿಂದ ಉತ್ತರಬಂದಿದ್ದು ಇಷ್ಟೇ

" ನಾ ಬರುದಿಲ್ಲ ನಾ ಹೇಳದ್ ತಿಳೀಲಿಲ್ಲಾ ? "

ಹೇಗೋ ಏನೋ ಊರ ಹಲವರಿಗೆ ಈತ ಬೆಕ್ಕಿಗೆ ಹೆದರುವ ವಿಷಯ ಗೊತ್ತಿತ್ತು. ಆದರೆ ಅದನ್ನೇ ನೇರವಾಗಿ ’ಬೆಕ್ಕಿಗೆ ಹೆದರಾಂವ ’ ಎನ್ನುವ ಬದಲು ’ನಾ ಹೇಳದ್ ತಿಳೀಲಿಲ್ಲಾ’ ಎಂದು ಜನ ಈತನಿಗೆ ಅಡ್ಡಹೆಸರು ಇಟ್ಟಿದ್ದರು. ಯಾರಾದರೂ ಈತನ ಮನೆಯ ಹಾದಿಯಲ್ಲಿ ಹೋಗುವಾಗ ಬರುವಾಗ ಇನ್ನೊಬ್ಬರಿಗೆ ಅವರು ಗುರುತು ಹೇಳುತ್ತಿದ್ದುದು " ನೋಡೋ ಇದು ’ನಾ ಹೇಳದ್ ತಿಳೀಲಿಲ್ಲಾ ’ ಮನೆ." ಬೆಕ್ಕಿಗಿಂತಾ ಅಪಸಂಶಯದ ಪ್ರಾಣಿಯಾದ ಈತನ ಮಗನಿಗೆ ಯಾವ ಸಂಬಂಧಗಳೂ ಕೂಡಿಬರಲಿಲ್ಲ. ಬಹುತೇಕ ಮನೆಗಳಲ್ಲಿ ಬೆಕ್ಕುಗಳಿದ್ದವು--ಅದು ಕಾರಣ. ಇನ್ನು ಕೆಲವು ಮನೆಗಳಿಗೆ ಹೋಗುವಾಗ ಬರುವಾಗ ಬೆಕ್ಕುಗಳು ಕಣ್ಣಿಗೆ ಬಿದ್ದುದು ಕಾರಣ. ಅಪ್ಪನ ಈ ಮಹಾನಡಾವಳಿಯನ್ನು ನೋಡಿ ಜಿಗುಪ್ಸೆಗೊಂಡ ಮಗ ಒಂದಿನ ರಾತ್ರಿ ಮನೆಬಿಟ್ಟು ಓಡಿಹೋದ. ನಂತರದ ದಿನಗಳಲ್ಲಿ ಮಾನಸಿಕವಾಗಿ ಖಿನ್ನನಾದ ಈತ ತಾನೂ ಬೆಕ್ಕಿನ ರೀತಿಯಲ್ಲೇ ವರ್ತಿಸುತ್ತಿದ್ದ!

ಹಾಗಂತ ಬಹಳ ಜನ ಸೇರಿದ ಜಾಗದಲ್ಲಿ ದೂರದಲ್ಲಿ ಬೆಕ್ಕುಗಳಿದ್ದರೂ ಈತ ಆಕಡೆಗೇ ನೋಡುತ್ತಿರಲಿಲ್ಲ ಬಿಟ್ಟರೆ ಆಗೆಲ್ಲಾ ಒಳ್ಳೆ ಧೈರ್ಯ! ಇಂತಹ ಮನುಷ್ಯನಿಗೆ ಒಮ್ಮೆ ಛಾಯಚಿತ್ರದ ಗೀಳು ಹಿಡೀತು. ಮದುವೆಯೊಂದರಲ್ಲಿ ಫೋಟೋ ತೆಗೆಯುವಂತೇ ದುಂಬಾಲುಬಿದ್ದ. ಆಗೆಲ್ಲಾ ಸ್ಟಿಲ್ ಕ್ಯಾಮರಾಗಳ ಕಾಲ. ರೀಲನ್ನು ಹಾಕಿ ಫೋಟೋ ತೆಗೆದು ಅದನ್ನು ಸಂಸ್ಕರಿಸಬೇಕಾಗುತ್ತಿತ್ತು. ಇವನ ಹಠ ನೋಡಿ ಅಲ್ಲಿ ಸೇರಿದ್ದ ಕೆಲಜನ

" ನಿನ್ನ ಮುಂದಿನ ಎರಡು ಹಲ್ಲು ಕ್ಯಾಮರಾ ರೀಲಿಗೆ ಸಿಕ್ಕಾಕೊಂಡು ಫೋಟೋ ತೊಳೆಯಲು ಬರುದಿಲ್ಲ ಮಾರಾಯ "

ಅಂದಿದ್ದೇ ತಡ ಊರಲ್ಲಿ ಮತ್ತೊಂದೆಡೆಗೆ ಮದುವೆ ನಡೆಯುವುದನ್ನೇ ಎದುರುನೋಡುತ್ತಿದ್ದ. ಒಂದು ಮದುವೆ ಇದ್ದುದು ತಿಳಿದಿತ್ತು. ಮದುವೆಗೆ ವಾರ ಮುಂಚಿತವಾಗಿ ತಯಾರಾಗಿಬಿಟ್ಟ! ಮದುವೆಯ ದಿನ ಬಂದೇ ಬಂತು. ಮದುವೆಮನೆಗೆ ಬಂದವನೇ ಅಲ್ಲಿಗೆ ಬಂದ ಅದೇ ಹಳೆಯ ಫೋಟೋಗ್ರಾಫರ್ ಕೈಲಿ ಫೋಟೋ ತೆಗೆಯುವಂತೇ ಹೇಳಿದ.

" ನೋಡಯ್ಯಾ ನೀ ಹೇಳಿದ್ಯಲ್ಲ ಹಲ್ಲು ಕ್ಯಾಮರಾ ರೀಲಿಗೆ ಸಿಕ್ಕಾಕೊಂಡ್ಬುಡುತ್ತೆ ಅಂತ ಅದ್ಕೇ ಹೋಗಿ ಮುಂದಿನ ಹಲ್ಲು ಕಿತ್ತಾಕ್ಸೊಂಡು ಬಂದಿದೀನಿ, ತೆಗೀ ಈಗ ಫೋಟೋ, ನಾ ಹೇಳದ್ ತಿಳೀಲಿಲ್ಲಾ " ಎಂದ

ಸುತ್ತ ಇದ್ದವರಿಗೆಲ್ಲಾ ನಗಬೇಕೋ ಅಳಬೇಕೋ ತಿಳಿಯಲಿಲ್ಲ.

ಡಬೋಲ್

ಕಡಕಾಲ್ ರಾಮಣ್ಣ ಎಂದ್ರೆ ವರ್ಲ್ಡ್ ಫೇಮಸ್ಸು ! ಆತನ ವಿಷಯ ನೀವು ನಮ್ಮೂರಿಗೆ ಹೋಗಿ ಕೇಳದ್ರೆ ಈಗ್ಲೂ ಹೇಳ್ತಾರೆ ಜನ. ಜಕಣಾಚಾರಿಯನ್ನಾದ್ರೂ ಜನ ಮರೀಬಹುದು ಆದರೆ ರಾಮಣ್ಣನನ್ನು ಮರೆಯಲು ಸಾಧ್ಯವೇ ? ಹಳೆಯ ಕಾಲಮಾನ. ಆಗ ಗದ್ದೆಗಳಲ್ಲಿ ಮಾಳಗಳನ್ನು ಹಾಕಿ ರಾತ್ರಿ ಕಾವಲು ಕಾಯುತ್ತಿದ್ದರು. ಕಾಡು ಊರಿಗೆ ಹತ್ತಿರವಿರುತ್ತಿದ್ದುದರಿಂದ ನರಿ, ತೋಳ, ಹಂದಿ ಇತ್ಯಾದಿ ಹಲವು ಕಾಡುಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಲು ಹಾಗೆ ಕಾಯುವುದು ಬೇಕಾಗುತ್ತಿತ್ತು. ರಾತ್ರಿ ಆಗಾಗ ಗದ್ದೆಯ ಬದುವಿನ ಮೇಲೆ ಓಡಾಡಿಬರುವುದು, ಒಮ್ಮೊಮ್ಮೆ ಕಾಲಿಯಾದ ತಗಡಿನ ಎಣ್ಣೆ ಡಬ್ಬವನ್ನು ಬೋರಲುಹಾಕಿ ಜೋರಾಗಿ ಕೋಲಿನಿಂದ ಬಡಿದು " ತಾವಿದ್ದೇವೆ " ಎಂದು ಕಾಡುಪ್ರಾಣಿಗಳಿಗೆ ಸೂಚಿಸುವುದು ರೂಢಿ. ನಾಲ್ಕು ಸೆಲ್ಲಿನ ಅಗಲ ಗಾಜಿನ ಬ್ಯಾಟರಿ [ಟಾರ್ಚ್] ಹಿಡಿದು ಗದ್ದೆಯಲ್ಲಿ ಓಡಡುವುದೆಂದರೆ ಕೆಲವರಿಗೆ ಬಹಳ ಆಸಕ್ತಿ.

ಅದರಲ್ಲಂತೂ ರಾಮಣ್ಣ ನಡುವಯಸ್ಕ. ಆತನಿಗೆ ಬೀಡೀ ಸೇದುವ ಚಟ. ಮೂವತ್ತು ಮಾರ್ಕಿನ ಬೀಡಿಗಳನ್ನು ಅಂಗಿಯ ಜೇಬಿನಲ್ಲಿ ಇಟ್ಟುಕೊಂಡು ಮಲಗಿಬಿಟ್ಟರೆ ರಾತ್ರಿ ನೆನಪಾದಾಗ ಒಂದೊಂದು ಅಂಟಿಸಿಕೊಂಡು ಸೇದುತ್ತಿದ್ದ. ಹಂದಿಗಳ ಉಪಟಳ ಜಾಸ್ತಿಯಾಗಿದ್ದರಿಂದ ನಿಗ್ರಹಿಸಲು ಸಾಧ್ಯವಾಗದೇ ಹೊಸದಾಗಿ ಕಂಡುಕೊಂಡ ದಾರಿ ಆಗಾಗ ಪಟಾಕಿ ಹೊಡೆಯುವುದು. ಆಗ ಸಿಗುತ್ತಿದ್ದ ಬಿಡಿಬಿಡಿಯಾದ ಲಕ್ಷ್ಮೀ ಪಟಾಕಿಯನ್ನು ಜೇಬಲ್ಲೇ ಬೀಡಿಯೊಟ್ಟಿಗೆ ಇಟ್ಟುಕೊಂಡುಬಿಟ್ಟ. ಮಲಗಿದವನಿಗೆ ನಿದ್ದೆಯ ಮಂಪರು ಹತ್ತಿತ್ತು. ಸ್ವಲ್ಪ ಎಚ್ಚರವಾದಂತಾದಾಗ ಅಲ್ಲೆಲ್ಲೋ ಗದ್ದೆಯ ಒಂದು ಮೂಲೆಯಲ್ಲಿ ಯಾವುದೋ ಪ್ರಾಣಿಯ ಸದ್ದು ಕೇಳಿಬರುತ್ತಿತ್ತು. ಅಪರಾತ್ರಿಬೇರೆ. ಹಂದಿಗಳು ಬಹಳ ಅಪಾಯಕಾರಿಯಾದ್ದರಿಂದ ಮಾಳ ಇಳಿದು ಹೋಗಲೂ ಹೆದರಿಕೆ.

ರಾಮಣ್ಣ ತಡಮಾಡಲೇ ಇಲ್ಲ. ಜೇಬಿನಿಂದ ಬೀಡಿಯೊಂದನ್ನು ತೆಗೆದು ಸೇದುತ್ತಾ ನೋಡೋಣ ಎಂದುಕೊಂಡ. ಹಚ್ಚಿದ ಬೀಡಿ ಸುರ್ ಸುರ್ ಎಂದು ಅರ್ಧ ನಿಮಿಷದಲ್ಲಿ " ಡಬೋಲ್ " ಎಂಬ ಸದ್ದಿನೊಡನೆ ಸ್ಪೋಟಗೊಂಡಾಗಲೇ ರಾಮಣ್ಣನಿಗೆ ಜೇಬಿನಲ್ಲಿ ಇಟ್ಟುಕೊಂಡಿದ್ದ ಪಟಾಕಿಯ ನೆನಪಾಗಿದ್ದು. ಪರಿಣಾಮ ಕಣ್ಣೊಂದು ಬರ್ಬಾದಾಗಿ ಹೋಯಿತು. ಮಾರನೇದಿನ ದೂರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಕಣ್ಣು ಮರಳಿ ಬರಲೆ ಇಲ್ಲ. ದೀಪಾವಳಿಯಲ್ಲಿ ಮಿಕ್ಕುಳಿದ ಪಟಾಕಿಯನ್ನು ಹಂದಿ ಓಡಿಸಲು ರಾಮಣ್ಣ ಮಾಡಿದ ಪ್ಲಾನೇನೋ ಸರಿ. ಆದರೆ ಆತ ವಿಷಕಾರಿಯಾದ ಆ ಸ್ಪೋಟಕವನ್ನು ಬೀಡಿಯೊಂದಿಗೆ ಜೇಬಿನಲ್ಲಿಟ್ಟುಕೊಂಡು ಸೇದಿ ಬೆಳಗಾಗುವುದರೊಳಗೆ ಸುತ್ತ ಹತ್ತಾರು ಹಳ್ಳಿಗಳಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದ!

Monday, November 8, 2010

ಶಾಲಿನಿ


ಶಾಲಿನಿ

[ಸಹೃದಯೀ ಓದುಗ ಮಿತ್ರರೇ, ಇಲ್ಲೊಂದು ಹೊಸಬಗೆಯ ಕಥೆಯನ್ನು ಬರೆಯಲು ಪ್ರಯತ್ನಿಸಿದ್ದೇನೆ. ಕಥೆಯುದ್ದಕ್ಕೂ ಕವನವೊಂದು ಹಾದುಹೋಗುತ್ತಾ ತಮಗೆ ಕಥೆಯನ್ನೂ ಕವನವನ್ನೂ ಒಟ್ಟಾಗಿ ಕೊಡುವ ಒಂದು ವಿಭಿನ್ನ ಹೆಜ್ಜೆ ಇದು. ಪೂರಕ ಪ್ರಯತ್ನಗಳಿಲ್ಲದೇ ಕುಳಿತಾಗೊಮ್ಮೆ ಸಹಜವಾಗಿ ಮನಸ್ಸನ್ನಾವರಿಸಿದ ಭಾವಗಳಿಗೆ ಭಾಷ್ಯಬರೆಯಲು ಹೊರಟಾಗ ಕಥೆಯೂ ಕವನವೂ ಒಟ್ಟೊಟ್ಟಿಗೇ ಬಂದವು. ಸಮ್ಮಿಶ್ರ ಸರಕಾರವನ್ನು ನೋಡಿದ ನಿಮಗೆ ಅಂತಹ ಅಸಹ್ಯಕರ ಸನ್ನಿವೇಶವಂತೂ ಇದಾಗಲಾರದು ಎಂಬ ಅನಿಸಿಕೆಯಿಂದ ಬಿಸಿಬಿಸಿಯಿರುವಾಗಲೇ ಬಾಳೆಲೆಗೆ ಬಡಿಸಿದ್ದೇನೆ. ಮನೆಮಂದಿಯಾದ ನಿಮ್ಮಲ್ಲಿ ಹೇಳದ್ದೇನಿದೆ? ಹೀಗಾಗಿ ಇದನ್ನೂ ಹೇಳಿಕೊಂಡಿದ್ದೇನೆ. ಶುಭವಾದರೆ ಶುಭವೆನ್ನಿ, ಹಿತವಾದರೆ ಹಿತವೆನ್ನಿ, ಉಪ್ಪು-ಖಾರ ಜಾಸ್ತಿಯಾಗಿದ್ದರೆ ಅದನ್ನೂ ಹೇಳಿ ಆಗದೇ? ಮತ್ತೆ ಸಿಗೋಣ, ನಮಸ್ಕಾರ.]


ಕಾವೂರ ಶಾಲೆಯ ಸುತ್ತಾ ಮುತ್ತಾ ಬಹಳ ಮಂದಿ ಊರವರು ಸೇರಿದ್ದರು. ಅವರೆಲ್ಲರ ಮುಖದಲ್ಲಿ ಅವ್ಯಕ್ತವಾದ ನೋವೊಂದು ಕಾಣುತ್ತಿತ್ತು. ಕೆಲವರ ಕಣ್ಣಂಚಿನಿಂದ ಜಾರುತ್ತಿವೆ ಹನಿಗಳು. ನೀರವ ಮೌನದ ನಡುವೆ ಶಾಲೆಯ ಒಳಗೆ ನಡೆಯುತ್ತಿದ್ದ ಸಮಾರಂಭದಲ್ಲಿ ಯಾರೋ ಹುಡುಗಿ ಹಾಡಿದ ಹಾಡು ಕೇಳಿಬರುತ್ತಿತ್ತು.


ಋಣಿಯಾಗಿಹೆವು ನಿಮಗೆ
ಗಣಿತ ಇತಿಹಾಸ ಪುರಾಣದಾ ಜ್ಞಾನಗಳ
ಹಣತೆ ಬೆಳಗಿದ ಗುರುವೇ ನಿಮಗಿದೋ ವಂದನೆ ......
ಪಾದಾಭಿವಂದನೆ

ವೀರವನಿತೆಯಾಗಬೇಕೆಂಬ ಕನಸು ನನಸಾಗದಿದ್ದರೂ ಬೇಸರವಿಲ್ಲ, ಶಿಕ್ಷಕಿಯಾಗಿ ನಾಲ್ಕುಮಕ್ಕಳಿಗೆ ವೀರರ ಕಥೆಯನ್ನು ಬೋಧಿಸಿ ಅವರನ್ನು ನಾಳಿನ ಜಗತ್ತಿಗೆ ಅಣಿಗೊಳಿಸುವ ಕೆಲಸ ದೊರೆತದ್ದು ಪುಣ್ಯ ಎಂದುಕೊಂಡ ಶಾಲಿನಿಗೆ ಜೀವನವೇ ಒಂದು ನೋವಿನ ಯಾತ್ರೆಯಾಗುತ್ತದೆಂದು ಅನಿಸಿರಲೇ ಇಲ್ಲ. ಮೂರು ನಾಲ್ಕನೇ ತರಗತಿಗಳಲ್ಲಿ ಓದುವ ಚಿಕ್ಕ ಮಕ್ಕಳಿಗೆ ಇತಿಹಾಸ ಮತ್ತು ಪುರಾಣಗಳ ಕಥೆಯನ್ನು ಹೇಳುತ್ತಾ ತನ್ನನ್ನೇ ಮೈಮರೆತು ಆ ಕಥೆಗಳ ಭಾಗವೇ ಆಗಿಹೋಗುವ ಶಾಲಿನಿ ನಡೆದು ಬಂದ ದಾರಿ ಬಲುದೂರ!

ಪುಸ್ತಕವೊಂದನ್ನು ಹುಡುಕುವಾಗ ಆಕೆಗೆ ಸಿಕ್ಕಿದ್ದು ಒಂದು ಶುಭಾಶಯ ಪತ್ರ. ಆ ಪತ್ರದಲ್ಲಿ ಅಡಗಿದ ಭಾವಕ್ಕೆ ಮಾರುಹೋಗಿದ್ದಳು ಶಾಲಿನಿ. ಬೇರೇ ಬರಹಗಳು ತಿಳಿಸದ, ಮಾತುಗಳು ಧ್ವನಿಸದ, ಸಂಜ್ಞೆಗಳು ಸೂಚಿಸದ ಹಲವು ಭಾವನೆಗಳನ್ನು ಹೊತ್ತು ಬಂದ ಪತ್ರ ಅದಾಗಿತ್ತು. ಅಂದು ಅದೊಂದೇ ಪತ್ರ ತನ್ನ ಹೊಸಬಾಳಿಗೆ ಬುನಾದಿಯನ್ನು ಹಾಕಿತ್ತು! ದೂರದ ಸಂಬಂಧಿಕರ ಮಗ ರಮೇಶ್ ತನಗೆ ಯಾಕೋ ಒಳಗೊಳಗೇ ಹತ್ತಿರವಾಗತೊಡಗಿದ್ದ. ಹೇಳಬೇಕಿದ್ದ ಅನಿಸಿಕೆಗಳು ಹಲವು, ಆದರೆ ಅನಿಸಿದ್ದನ್ನೆಲ್ಲಾ ಹೇಳುವ ಸ್ವಾತಂತ್ರ್ಯವಾಗಲೀ ಧೈರ್ಯವಾಗಲೀ ಇಲ್ಲದ್ದು ಆ ಕಾಲ. ಕೈಲಿ ಮೊಬೈಲಿಲ್ಲ ಇನ್ನಾವುದೇ ಸಂಪರ್ಕ ಸಾಧನವಿರಲಿಲ್ಲ. ಹೀಗಾಗಿ ಕೇವಲ ಪತ್ರಮಾಧ್ಯಮವೊಂದೇ ಪ್ರೇಮನಿವೇದನೆಗೆ ದಾರಿಯಾಗಿತ್ತು.

ಬೈಲಾರದಲ್ಲಿ ಮದುವೆಯೊಂದಕ್ಕೆ ಹೋದಾಗ ಛಂಗನೆ ಚಿಗರೆಯಂತೇ ಜಿಗಿಯುತ್ತಿದ್ದ ಶಾಲಿನಿಗೆ ದೂರದಲ್ಲಿ ಗಂಡಿನ ದಿಬ್ಬಣದ ಕಡೆಗಿನ ಜನರ ನಡುವೆ ಕಾಣಿಸಿದ್ದ ರಮೇಶ. ಅತ್ಯಂತ ಸ್ಪುರದ್ರೂಪಿ ಹುಡುಗ, ಬಹಳ ಚಾಲಾಕಿ, ಯಾರಜೊತೆಗೋ ಹರಟುತ್ತಾ ನಗುತ್ತಾ ಇದ್ದ. ಹದಿವಯದ ಆ ಕಾಲ ಹೊಸಜಗವನ್ನು ಅನಾವರಣಗೊಳಿಸುತ್ತಿತ್ತು. ಪ್ರಕೃತಿಮಾತೆಯ ಚಪ್ಪರದಲ್ಲಿ ಭೂಮಿಗೆ ಬಾನಿನೊಡನೆ ಸಂಪರ್ಕಿಸುವ ಆಸೆ! ಬಾನಿಗೆ ಭೂಮಿಯನ್ನು ಸೇರುವ ಬಯಕೆ. ಈ ಬಯಕೆಗಳ ತಾಕಲಾಟದಲ್ಲೇ ತೇಲಾಡುತ್ತಾ ಒಳಗೊಳಗೇ ಆಗಾಗ ಆಗಾಗ ಸಿಗಬಹುದಾದ ಚಿಕ್ಕ ಪುಟ್ಟ ದರ್ಶನ ಸ್ಪರ್ಶನಗಳಿಗೆ ಪುಳಕಗೊಳ್ಳುವ ಮೈಮನ ಹದಿಹರೆಯದ ಹೆಣ್ಣು-ಗಂಡುಗಳದು. ಅವನಿಗೆ ಅವಳೆಂದರೆ ಆಯಿತು.....ಏಷ್ಟೇ ಹೊತ್ತಾದರೂ ಪರವಾಗಿಲ್ಲ ಕಾಯುವ ತವಕ...ಒಟ್ಟಾರೆ ಅವಳೊಟ್ಟಿಗೆ ಮಾತನಾಡಬೇಕು, ಹರಟಬೇಕು......ಅವಳ ಕಿವಿಯಲ್ಲಿ ಏನನ್ನಾದರೂ ಪಿಸುಗುಡುತ್ತಾ ನಗಬೇಕು....ನಕ್ಕಿ ಕಚಗುಳಿಯಿಡಬೇಕು.....ಸೋತ ಆಕೆ ಕೊನೆಗೊಮ್ಮೆ ತನ್ನ ತೋಳಿನಲ್ಲಿ ಬಂಧಿಯಾಗಿ ಬಹಳಹೊತ್ತು ತನ್ನನ್ನೇ ಮರೆಯಬೇಕು. ಅವಳಿಗೆ ಅವನೆಂದರೆ ಎಲ್ಲಿಲ್ಲದ ಆಸೆ...ಆತ ಬೇರೆಯವರ ಜೊತೆ ಹರಟುವುದನ್ನು ನೋಡುವಾಗ ತಾನೂ ಏನಾದರೂ ಮಾತನಾಡಬೇಕೆಂಬ ಚಪಲ.....ಹತ್ತಿರ ಕುಳಿತುಕೊಳ್ಳುವ ಬಯಕೆ......ಒರಗಿ ಕುಳಿತು ಛೇಡಿಸುವ ಇಚ್ಛೆ......ಜಗದ ಎಲ್ಲಾ ಸ್ಪರ್ಧೆಗಳಲ್ಲಿ ಆತನೇ ಗೆದ್ದುಬರಲೆಂಬ ಬೆಟ್ಟದೆತ್ತರದ ಆಕಾಂಕ್ಷೆ....ಆತ ತನ್ನನ್ನೇ ಪ್ರೀತಿಸಲಿ ಎಂಬ ಅಪೇಕ್ಷೆ. ಆ ದಿನಗಳೇ ಹಾಗಲ್ಲವೇ ? ಅವುಗಳನ್ನು ಪ್ರತ್ಯೇಕವಾಗಿ ಬಣ್ಣಿಸಲೇ ಬೇಕಿಲ್ಲವಷ್ಟೇ ?

ಹೀಗೇ ಮದುವೆಯ ಸಂಭ್ರಮದಲ್ಲಿ ದಕ್ಕಿದ ಮೊದಲನೋಟದಲ್ಲಿ ರಾಜಾ ವಿಷ್ಣುವರ್ಧನ ಶಾಂತಲೆಯನ್ನು ಬಂಧಿಸಿದಂತೇ, ದುಷ್ಯಂತ ಶಕುಂತಲೆಯ ಮನಕದ್ದಂತೇ ಶಾಲಿನಿಯ ಹೃದಯಚೋರನಾಗಿದ್ದ ರಮೇಶ. ಅಲ್ಲಿಂದ ಮುಂದೆ ಅನೇಕ ತಿಂಗಳುಗಳು ಪರಸ್ಪರರ ಕಾಣಬೇಕೆಂಬ ತಹತಹದಲ್ಲೇ ಕಳೆದುಹೋದವು. ಇಬ್ಬರಿಗೂ ಏನೋ ದೂರದ ನೆಂಟರು ಎಂಬುದಷ್ಟೇ ಗೊತ್ತು ವಿನಃ ಆ ಮನೆಗಳಲ್ಲಿ ಅತೀ ಹತ್ತಿರದ ಬಾಂಧವ್ಯವಿರಲಿಲ್ಲ. ಏನಾದರಾಗಲಿ ಇನ್ನು ತಾಳಲಾರೆ ಎಂದುಕೊಂಡ ರಮೇಶ ಒಂದು ಶುಭಾಶಯ ಪತ್ರವನ್ನು ಬರೆದ. ಹೇಗೋ ಏನೋ ಅವಳ ವಿಳಾಸವನ್ನು ಪತ್ತೆಹಚ್ಚಿ ಕಳಿಸೇಬಿಟ್ಟ!

ಪತ್ರ ಬಂದಿರುವ ವೇಳೆಯಲ್ಲಿ ಶಾಲಿನಿಯ ತಂದೆ ಪೇಟೆಗೆ ಹೋಗಿದ್ದರು. ತಾಯಿ ದೇವಸ್ಥಾನಕ್ಕೆ " ಏನೋ ಪೂಜೆಯಂತೆ ಕಮಲಮ್ಮ ಕರ್ದಿದಾರೆ ಹೋಗ್ಬರ್ತೀನಿ " ಎನ್ನುತ್ತಾ ಹೋಗಿದ್ದರು. ಶಾಲಿನಿಗೆ ಕಾಲೇಜಿನ ಪರೀಕ್ಷೆ ಹತ್ತಿರ ಬಂದಿದ್ದರಿಂದ ಮನೆಯಲ್ಲೇ ಕುಳಿತು ಓದುತ್ತಿದ್ದಳು. ಅನಿರೀಕ್ಷಿತವಾಗಿ ಹಳ್ಳಿಯ ಅಂಚೆಯಣ್ಣ ಕೂಗಿ ಕರೆದ. ಹೊರಗೆ ಬಂದಾಗ ಕೈಗೆ ಪತ್ರಕೊಟ್ಟು ಇದು ನಿಮ್ಮದೇ ಹೌದೋ ಎಂದ. ಗೋಣುಹಾಕಿತ್ತಾ ಅವಸರದಲ್ಲಿ ಅದನ್ನು ಹಿಡಿದವಳೇ ಅಂಚೆಯಣ್ಣನಿಗೆ ಬಾಯಾರಿಕೆಗೆ ಕೊಡಲೋ ಎಂದು ಕೇಳುವುದನ್ನೂ ಮರೆತು ಒಳಸೇರಿದ್ದಳು ಶಾಲಿನಿ. ಪತ್ರವನ್ನು ಓದಿದಳು. ಇದ್ದುದು ಮೂರ್ನಾಲ್ಕು ಸಾಲು :

ಪ್ರೀತಿಯ ಶಾಲಿನಿ,

ಬಹಳದಿನಗಳ ಹಿಂದೆ ನಾವು ಮದುವೆಯಲ್ಲಿ ಭೇಟಿಯಾಗಿದ್ದೆವು ನೆನಪಿದೆಯಲ್ಲವೇ ? ನಾನು ರಮೇಶ್, ಒಮ್ಮೆ ನಿಮ್ಮನ್ನು ಕಾಣುವ ತವಕದಿಂದ ನನ್ನ ವಿಳಾಸವನ್ನು ತಿಳಿಸುವ ಸಲುವಾಗಿ ಬರೆದೆ, ಬರೆಯಲು ಆಗದಷ್ಟು ಮಾತಾಡುವುದಿದೆ, ನಾನು ಬರೆದಿದ್ದು ಇಷ್ಟವಾದರೆ ನನಗೊಮ್ಮೆ ಉತ್ತರಿಸಿ, ಹೃದಯಾಂತರಾಳದಿಂದ ಶುಭಾಶಯಗಳು.

ಇತಿ ನಿಮ್ಮವ,
ರಮೇಶ್


ಪತ್ರ ಓದಿದ ಶಾಲಿನಿಗೆ ಬಾನು ಬಾಗಿ ಭೂಮಿಗೆ ತಲ್ಪಿದ ಅನುಭವ. ಪತ್ರವನ್ನು ಯಾರಿಗೂ ಸಿಗದಂತೇ ಅಟ್ಟದಲ್ಲಿರುವ ಹಳೆಯ ಯಾವಾಗಲೂ ತೆರೆಯದ ಪೆಟ್ಟಿಗೆಯೊಂದರಲ್ಲಿ ಬಚ್ಚಿಟ್ಟು ಜೋಪಾನಮಾಡಿದಳು. ಅಪ್ಪ-ಅಮ್ಮ ಹೊರಗೆ ಹೋದವರು ಬಂದರೂ ಅವಳಿಗೆ ತಲೆಯಲ್ಲಿ ರಮೇಶನದ್ದೇ ಗುಂಗು, ಆತನದೇ ಧ್ಯಾನ. ಪತ್ರವನ್ನು ಸದಾ ಕೈಲಿ ಹಿಡಿದೇ ಇರುವ ಆಸೆ. ಆ ಪತ್ರವನ್ನೊಮ್ಮೆ ಮೂಸಿ ಅದಕ್ಕಿರುವ ಲಘು ಆಹ್ಲಾದಕರ ಪರಿಮಳವನ್ನು ಆಘ್ರಾಣಿಸಿದ್ದಳು. ಈಗ ಎಲ್ಲರ ಎದುರಿನಲ್ಲಿ ಮತ್ತೆ ಹೊರತೆಗೆಯಲು ಸಾಧ್ಯವೇ ? ಪತ್ರವನ್ನು ಮುಟ್ಟಿದ್ದ ತನ್ನ ಕೈಯ್ಯನ್ನೇ ಮತ್ತೊಮ್ಮೆ ಆಘ್ರಾಣಿಸಿದಳು. ಮೂಡಿದ ದೇವರು ಮುಳುಗುವ ಹೊತ್ತಿಗೆ ಮನದ ತುಂಬಾ ರಮೇಶನೇ ತುಂಬಿ ಉಸಿರುಸಿರಿನಲ್ಲೂ ಅವನೇ ಉಸಿರಾಡುತ್ತಿದ್ದ. ರಾತ್ರಿಯಾವಾಗ ಬಂತೋ ತಿಳಿಯಲೇ ಇಲ್ಲ ಆಕೆಗೆ. ಮೈಯ್ಯೆಲ್ಲಾ ಬಿಸಿಬಿಸಿ ಬಿಸಿಬಿಸಿ. ರಮೇಶನನ್ನು ಹೇಗಾದರೂ ಮಾಡಿ ಕಾಣಬೇಕೆನ್ನುವ ತವಕ, ಆತನಿಗೆ ಈ ಕೂಡಲೇ ಪತ್ರವನ್ನು ಬರೆಯಬೇಕೆಂಬ ಅದಮ್ಯ ಬಯಕೆ.

ಮಾರ್ದನಿಸಿ ಎಲ್ಲೆಲ್ಲೂ ನಿಮ್ಮ ದನಿ ಮನದೊಳಗೆ
ಆರ್ದ್ರತೆಯ ಅನುಕಂಪ ಪೂಸುತಿರೆ ಮೈಗೆ
ನಿರ್ದೇಶಿಸುತ ನಿತ್ಯ ಸನ್ಮಾರ್ಗ ಕಾರ್ಯಗಳ
ಗರ್ದಭಗಳನೆಲ್ಲ ಹಯವಮಾಡಿದಿರಿ

..............ಹುಡುಗಿಯ ಇಂಪಾದ ಅಮೋಘ ಕಂಠಸಿರಿಯಲ್ಲಿ ಹಾಡು ಹೊರಳುತ್ತಿದ್ದಂತೇ ಶಾಲಿನಿಯ ಮನಸ್ಸಿನ ಬಂಡಿ ಮುಂದೆ ಚಲಿಸುತ್ತಲೇ ಇತ್ತು.

ಕೆಲವೇ ದಿನಗಳಲ್ಲಿ ಕದ್ದೂ ಮುಚ್ಚಿ ಅಂತೂ ಉದ್ದನೆಯ ಪತ್ರ ಬರೆದು ರಮೇಶ್ ತಿಳಿಸಿದ್ದ ಆ ವಿಳಾಸಕ್ಕೆ ಕಳಿಸಿದ್ದಳು ಶಾಲಿನಿ.

ಉತ್ತರಕ್ಕಾಗಿ ಕಾದ ರಮೇಶ ತಡವಾದುದರಿಂದ ನಿರಾಸೆಗೊಂಡಿದ್ದ. ಆದರೂ ಉಮ್ಮಳಿಸಿ ಬರುವ ಮನೋಗತವನ್ನು ಯಾರಲ್ಲೂ ಬಹಿರಂಗಗೊಳಿಸಲಾರ. ಕೊನೆಗೂ ಪತ್ರ ಬಂದೇ ಬಿಟ್ಟಿತ್ತು ! ಪರಮ ಸಂತೋಷದಿಂದ ಕುಣಿದಾಡಿದ ರಮೇಶನಿಗೆ ಅಂದು ಆಕಾಶ ಕೈಗೆಟುಕುವ ಹತ್ತಿರಕ್ಕೆ ಕಂಡಿತು. ಹಾಗೂ ಹೀಗೂ ಈರ್ವರ ನಡುವೆ ತರಾವರಿ ಪತ್ರಗಳ ವಿಲೇವಾರಿ ನಡೆದು ಪರಸ್ಪರ ಬಿಟ್ಟಿರಲಾರದ ಪ್ರೇಮಪಾಶದಲ್ಲಿ ಬಂಧಿಯಾಗಿದ್ದರು. ಆಗಾಗ ಕಾಲೇಜಿನ ಹೊರಾವರಣದಲ್ಲಿ ಸಿಗುತ್ತಿದ್ದರು. ಆತನ ಪಟ್ಟಣವೇ ಬೇರೆಯಾದುದರಿಂದ ಆತ ಆಕೆಯನ್ನು ನೋಡಲೆಂದೇ ದೂರದ ಅವಳ ಕಾಲೇಜಿನ ಹತ್ತಿರಕ್ಕೆ ಬಂದು ನಿಲ್ಲುತ್ತಿದ್ದ. ಎಲ್ಲವೂ ಪತ್ರಗಳ ಮೂಲಕ ಮೊದಲೇ ಹೇಳಲ್ಪಡುವ ಕಾರ್ಯಕ್ರಮಗಳಾಗುತ್ತಿದ್ದವು.

ಡಿಗ್ರೀ ಮುಗಿಸಿ ನೌಕರಿ ಹಿಡಿದ ರಮೇಶ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಿದ. ನಂತರ ಶೀಘ್ರದಲ್ಲಿ ಆತನಿಗೆ ಶಾಲಿನಿಯನ್ನು ಮದುವೆಯಾಗಿಬಿಡುವ ಬಯಕೆ ಜಾಸ್ತಿಯಾಗಿ ತಿಳಿಸಿದ್ದ. ಹೇಗೂ ಇಬ್ಬರ ಇಚ್ಛೆಯೂ ಒಂದೇ ಆಗಿದ್ದರಿಂದ ರೋಗಿ ಬಯಸಿದ್ದೂ ವೈದ್ಯರು ಹೇಳಿದ್ದೂ ಒಂದೇ ಎಂಬಂತೇ ಆಗಿತ್ತು. ಶಾಲಿನಿಯ ಪಾಲಕರಿಗೆ ಪತ್ರದ ಮೂಲಕ ವಿನಂತಿಸಿದ್ದ ರಮೇಶ. ಮೊದ ಮೊದಲು ವಿವಾದಗಳು ವಾಗ್ವಾದಗಳು ನಡೆದವು. ಅಪ್ಪನ ಕೋಪ ಅಮ್ಮನ ಅಸಡ್ಡೆ ಎಲ್ಲವನ್ನೂ ರಮೇಶನಿಗಾಗಿ ಅನುಭವಿಸಿದ್ದಳು ಶಾಲಿನಿ. ಆದರೂ ರಮೇಶನ್ನು ಮಾತ್ರ ತೊರೆಯಲು ಸಿದ್ಧಳಿರಲಿಲ್ಲ. ಹಿತೈಷಿಗಳನೇಕರು ತಿಳಿಹೇಳಿ ಎರಡೂ ಕಡೆಯ ಬೀಗರನ್ನು ಒಪ್ಪಿಸಿದರು. ಮದುವೆ ಬಹಳ ವಿಜೃಂಭಣೆಯಿಂದ ಶಿವಮೊಗ್ಗೆಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ನೆಂಟರಿಷ್ಟರು, ಸ್ನೇಹಿತರು, ಬಂಧುಬಳಗ ಅಂತೇಳಿ ಸುಮಾರು ೧೫೦೦ ಜನ ಸೇರಿದ್ದರು. ಊಟೋಪಚಾರ ವಗೈರೆಯೆಲ್ಲಾ ಪೊಗದಸ್ತಾಗಿತ್ತು ಎಂದು ಬಂದವರೆಲ್ಲಾ ಖುಷಿಯಾಗಿ ಎಲೆಯಡಿಕೆ ಮೆದ್ದು ಬಾಯಾಡಿಸುತ್ತಾ ಹರಸಿ ಹೋಗಿದ್ದರು.

ಗಂಡನಮನೆ ಸೇರಿದ ಶಾಲಿನಿಗೆ ಅತೀವ ಸಂತೋಷವಾಗಿತ್ತು. ಅಕ್ಕರೆಯ ಕಕ್ಕುಲಾತಿಯಲ್ಲಿ ರಮಿಸುವ ಪ್ರೀತಿಯ ಗಂಡ, ದೇವರಂಥಾ ಅತ್ತೆ-ಮಾವ, ಒಡಹುಟ್ಟಿದವರ ಪ್ರೀತಿ ತೋರುವ ನಾದಿನಿಯರು, ಉಂಡುಟ್ಟು ಸುಖವಾಗಿದ್ದ ಸಂಸಾರ......ಇನ್ನೇನು ಬೇಕು ಬದುಕಲು?

ಸೋಲುಗಳ ಬದಿಗಿರಿಸಿ ಗೆಲುವುಗಳನರಸುತ್ತ
ಆಲದಾ ಮರದಂತೆ ನಿಂತು ಶೋಭಿಸುತಾ
ಗಾಲಿಗಳ ಸಮಗೊಳಿಸಿ ನಡೆಸಿ ಜೀವನರಥವ
ಗೇಲಿಮಾಡುವ ಜಗಕೆ ಪಥವ ತೋರಿದಿರಿ

............ಮತ್ತದೇ ಇಂಪಾದ ಕಂಠ ಮುಂದುವರಿಸಿತ್ತು ಆ ಹಾಡನ್ನು....ಎಂತಹ ಆಪ್ತತೆ ತುಂಬಿದ ಹಾಡದು, ಅಬ್ಬಾ!

ಮದುವೆಯಾಗುವ ಮುನ್ನ ನೂರಾರು ಕನಸುಗಳ ಒಡತಿಯಾಗಿದ್ದಳು ಶಾಲಿನಿ. ಭರತನಾಟ್ಯವನ್ನು ಬಹುವಾಗಿ ಪ್ರೀತಿಸುತ್ತಿದ್ದ ಆಕೆ ಬಹಳ ಸುಂದರವಾಗಿ ನರ್ತಿಸುತ್ತಿದ್ದಳು. ತಾನೊಬ್ಬ ನರ್ತಕಿಯಾಗಿಯೂ ಜನಮನ ಗೆಲ್ಲುವ ಇರಾದೆ ಅವಳಿಗಿತ್ತು. ಕಿತ್ತೂರು ಚೆನ್ನಮ್ಮನೆಂದರೆ ಆಕೆಗೆ ಎಲ್ಲಿಲ್ಲದ ಪ್ರೀತಿ. ಅವಳನ್ನು ನೆನೆದಾಗಲೆಲ್ಲಾ ಆಕೆಗೆ ದೇಶಭಕ್ತಿ ಉಕ್ಕಿ ಹರಿಯುತ್ತಿತ್ತು. ಅನೇಕದಿನ ತನ್ನೊಳಗೇ ರಾಣಿ ಚೆನ್ನಮ್ಮಾಜಿಯನ್ನು ಆಹ್ವಾನಿಸಿಕೊಂಡು ಆವೇಶಭರಿತಳಾಗಿ ಬ್ರಿಟಿಷರನ್ನು ಕಂಡು ಬುಸುಗುಟ್ಟುವ ಸನ್ನಿವೇಶಕ್ಕೆ ಇಳಿದುಬಿಡುತ್ತಿದ್ದಳು. ಒಂದಲ್ಲಾ ಒಂದು ದಿನ ತಾನು ವೀರವನಿತೆಯಾಗಿ ದೇಶಪ್ರೇಮವನ್ನು ಮೆರೆಯಬೇಕೆಂಬ ಹಂಬಲ ಅವಳದಾಗಿತ್ತು. ಆದರೆ ಹರೆಯದ ಕರೆಯ ಹೊರಗಿನ ಎಲ್ಲಾ ಕರೆಯನ್ನೂ ಮೀರಿಸಿ ಪ್ರೇಮದ ಸೆಳೆತದಲ್ಲಿ ಬಿದ್ದಿದ್ದಳು, ಬಿದ್ದು ಮದುವೆಯಾಗಿ ಬಂದಿದ್ದಳು ಶಾಲಿನಿ.

ಮದುವೆಯಾಗಿ ೫-೬ ವರ್ಷಗಳು ಬಹಳ ಸುಖವಾಗಿ ನಡೆಯಿತು ಸಂಸಾರ. ಆಗಲೇ ಇಬ್ಬರು ಮಕ್ಕಳು ! ಮಕ್ಕಳ ಜತೆಯಲ್ಲಿ ಆಟವಾಡುತ್ತಾ ಸಮಯ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ ಶಾಲಿನಿಗೆ. ಒಂದಿನ ಇದ್ದಕ್ಕಿದ್ದಂತೇ ಆಫೀಸಿನಿಂದ ಬರುವಾಗ ರಮೇಶ ನಡೆಯಲು ಕಾಲಲ್ಲಿ ಸತುವೇ ಇಲ್ಲ ಎನ್ನುತ್ತಾ ಮನೆಗೆ ಬಂದ. ಬಂದ ಮಾರನೇ ದಿನದಿಂದ ಆತ ಮೇಲೇಳುವುದೇ ಕಷ್ಟವಾಯಿತು. ಗರಬಡಿದವಳಂತೇ ಆದ ಶಾಲಿನಿ ಕಂಡ ಕಂಡ ವೈದ್ಯರನ್ನೂ ದವಾಖಾನೆಯನ್ನೂ ಸಂಪರ್ಕಿಸಿ ಕಾರಣವೇನೆಂದು ತಿಳಿಯ ಬಯಸಿದಳು. ಹಲವು ಸಾವಿರ ಹಣ ಖರ್ಚಾದ ಮೇಲೆ ಒಬ್ಬರೇ ಒಬ್ಬ ವೈದ್ಯರು " ಅಮ್ಮಾ, ನೀವು ಭಯಪಡುವ ಅಗತ್ಯವಿಲ್ಲ, ನೀವು ಧೈರ್ಯ ತೆಗೆದುಕೊಳ್ಳಬೇಕು, ಮನುಷ್ಯನಿಗೆ ಬರದೇ ಮಂಗನಿಗೆ ಬರುತ್ಯೇ, ಇದು ಸಾವಿರದಲ್ಲೊಬ್ಬರಿಗೆ ಬರಬಹುದಾದ ಪಾರ್ಕಿನ್ಸನ್ ಕಾಯಿಲೆ ಅಂದರೆ ಒಂದು ರೀತಿಯ ನರದೌರ್ಬಲ್ಯ. ಇದಕ್ಕೆ ಇನ್ನೂ ಸಮರ್ಪಕವಾದ ಔಷಧಗಳು ಇಲ್ಲವಾದರೂ ಜೀವಕ್ಕೆ ಏನೂ ಅಪಾಯವಿಲ್ಲ. ನೀವೇ ಆದಷ್ಟೂ ತಾಳ್ಮೆಯಿಂದ ಅವರನ್ನು ನೋಡಿಕೊಳ್ಳಬೇಕು"

ಬಿಳಿಯಬಣ್ಣವೊಂದರ ಮಧ್ಯೆ ಕಪ್ಪು ಬಳಿದಂತೇ, ಹಾಲಿನ ಪಾತ್ರೆಯಲ್ಲಿ ಹಾಲಾಹಲದ ಹನಿ ಬಿದ್ದಂತೇ ಆಗಿಬಿಟ್ಟಿತ್ತು ಆ ಸಂಸಾರದಲ್ಲಿ. ಹತ್ತಾರು ಬರಸಿಡಿಲು ಒಮ್ಮೆಲೇ ಅಪ್ಪಳಿಸಿದಂತೇ ಆಗಿ ಶಾಲಿನಿಗೆ ದಿಕ್ಕೇ ತೋಚದಂತಾಗಿತ್ತು. ಮಕ್ಕಳು ಬೇರೇ ಚಿಕ್ಕವರು. ಅವರನ್ನು ಸಂಭಾಳಿಸಿ ಓದಿಸಬೇಕು, ಮನೆವಾರ್ತೆ ಕೆಲಸವಾಗಬೇಕು, ಏಳಲಾರದ ಗಂಡನಿಗೆ ಉಪಚರಿಸಬೇಕು ....ಇದೆಲ್ಲಕ್ಕಿಂತ ಮಿಗಿಲಾಗಿ ದುಡಿಮೆಗೆ ಒಂದು ದಾರಿ ಬೇಕು. ಅವಡುಗಚ್ಚಿ ಬಂದ ಪರಿಸ್ಥಿತಿಯನ್ನು ತನ್ನ ಹಸ್ತದಲ್ಲೇ ಬಂಧಿಸಿ ಓದನ್ನು ಭಾಗಶಃ ಅಂಚೆತೆರಪಿನ ವಿಶ್ವವಿದ್ಯಾಲಯದ ಮೂಲಕ ಮುಗಿಸಿದಳು. ಹಾಗೆ ಮುಗಿಸುವ ಸಮಯ ತನ್ನಲ್ಲಿ ಇದ್ದ ಬಂಗಾರದ ವಡವೆಗಳನ್ನೂ ಮಾರಬೇಕಾಗಿ ಬಂತು. ಅವರಿವರ ಕಚೇರಿಯಲ್ಲಿ ಪಾರ್ಟ್ ಟೈಮ್ ನೌಕರಿ ನಿಭಾಯಿಸಿ ದುಡಿಯುತ್ತಿದ್ದಳು. ಅದೂ ಸಾಲದಾಗ ಸಿರಿವಂತರ ಮನೆಗಳಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸಮಾಡಿ ಅಂತೂ ತನ್ನ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದಾಗ ದಿನಪತ್ರಿಕೆಯ ಜಾಹೀರಾತು ನೋಡಿ, ಅರ್ಜಿಹಾಕಿಕೊಂಡು ಶಾಲೆಯ ಅಧ್ಯಾಪಕಿಯಾಗಿ ಸೇರಿಕೊಂಡಳು. ಅಲ್ಲಿಂದಾಚೆಗೆ ಅವಳ ದಿನಚರಿಯೇ ಬದಲಾಯಿತು.

ಸರಕಾರೀ ನೌಕರಿಯೊಂದು ಸಿಕ್ಕಿತ್ತು. ಊಟಕ್ಕೆ ತೊಂದರೆಯಿರಲಿಲ್ಲ. ಆದರೆ ಹರೆಯದ ಕೂಗು ಆ ಬಯಕೆಗಳು, ಆ ಹಲವು ಕನಸುಗಳು ಅವೆಲ್ಲಾ ಹಾಗೇ ಮುರುಟಿಹೋದವು. ಆಗಾಗ ಆಗಾಗ ಸಹೋದ್ಯೋಗೀ ಗಂಡಸರ ಕಿರುಕುಳ ತಪ್ಪಲಿಲ್ಲ. ಸಮಾಜದ ಅವಹೇಳನಕಾರೀ ಮಾತುಗಳನ್ನೂ ಸಹಿಸಿದಳು ಶಾಲಿನಿ. ಮಕ್ಕಳನ್ನೂ ಓದಿಸುತ್ತಾ, ಗಂಡನನ್ನೂ ಪ್ರೀತಿಯಿಂದ ಸೇವೆಗೈಯ್ಯುತ್ತಾ ಊರಿಂದೂರಿಗೆ ಆಗಾಗ ವರ್ಗವಾಗಿ ಹೋಗುತ್ತಾ ಕಾವೂರಿಗೆ ಬಂದು ಹತ್ತು ವರುಷಗಳೇ ಕಳೆದಿದ್ದವು. ಅಲ್ಲಿಗೆ ಅವಳ ಕೆಲಸದ ವರ್ಷಗಳ ಮುಕ್ತಾಯ ಇನ್ನೇನು ಹತ್ತೇ ವರ್ಷವಿದ್ದುದರಿಂದ ಊರ ಸಹೃದಯರು ಅವಳನ್ನು ಅಲ್ಲೇ ಇರಿಸಿಕೊಳ್ಳುವ ಪ್ರಯತ್ನಮಾಡಿದ್ದರು. ಕಾವೂರ ಜನರಿಗೆ ದೈವಾಂಶ ಸಂಭೂತಳಂತೇ ಕಾಣಿಸಿದ ಉಚ್ಚಕುಲಪ್ರಸೂತ ಶಾಲಿನಿ ಮಕ್ಕಳಿಗೆಲ್ಲಾ ಅಮ್ಮ, ಅಕ್ಕ, ಚಿಕ್ಕಮ್ಮ ಹೀಗೆಲ್ಲಾ ಇದ್ದಂತೇ ಭಾಸವಾಗುತ್ತಿತ್ತು. ತನ್ನ ಜೀವನದಲ್ಲಿ ತಾನೇನೂ ಸಾಧಿಸಲಾಗದಿದ್ದರೂ ತನ್ನಿಂದ ಅಕ್ಷರ ಕಲಿತ ಮಕ್ಕಳಾದರೂ ಉನ್ನತ ಮಟ್ಟದಲ್ಲಿ ಬೆಳಗಲಿ ಎಂಬ ಇಚ್ಛೆ ಶಾಲಿನಿಯದ್ದಾಗಿತ್ತು.

ಬಂಧಿಯಾದರೂ ಜಗದಿ ಬಂಧನವ ಕಿತ್ತೆಸೆದು
ನಿಂದನೆಗಳನೇಕವನು ಹಿಂದೆ ದೂಡುತಲೀ
ನಂದಿಹೋಗದ ನಂದಾದೀಪವನು ತಾ ಬೆಳಗಿ
ಇಂದು ಹೊರಟಿರಿ ನಿಮಗೆ ಶುಭದಾ ವಿದಾಯ

----ಹುಡುಗಿ ಹಾಡುತ್ತಾ ಹಾಡಿನ ಕೊನೆಯ ಚರಣಕ್ಕೆ ಬರುವ ವೇಳೆಗೆ ಶಾಲಿನಿಗೆ ತನ್ನ ಇಲ್ಲಿಯವರೆಗಿನ ಬದುಕಿನ ಸಿಂಹಾವಲೋಕನವಾಗಿತ್ತು. ಸರಕಾರೀ ನಿರ್ದೇಶನದಂತೇ ವಯಸ್ಸಿನ ಮಿತಿ ದಾಟಿದ್ದರಿಂದ ಮುಪ್ಪಿನಾವಸ್ಥೆಗೆ ಕಾಲಿಡುವ ಶಾಲಿನಿಗೆ ನಿವೃತ್ತಿ ಅನಿವಾರ್ಯವಾಗಿತ್ತು. ಮಕ್ಕಳ ಪ್ರೀತಿಯನ್ನು ಮರೆತು ತಾನೆಂದೂ ದೂರಹೋಗಲಾಅದ ಸ್ಥಿತಿ ಅವಳದಾದರೂ, ಗ್ರಾಮಸ್ಥರಿಗೆ ಅವಳು ಇನ್ನೂ ತಮ್ಮ ಮಕ್ಕಳಿಗೆ ಬೋಧಿಸಲಿ ಎಂಬ ಹತ್ತಿಕ್ಕಲಾರದ ಅನನ್ಯ ಅನಿಸಿಕೆ ಇದ್ದರೂ ನಿರ್ವಾಹವಿಲ್ಲದ ದಿನ ಬಂದೇಬಿಟ್ಟಿತ್ತು. ಊರ ಜನರೆಲ್ಲಾ ಸುಮಾರು ಸಾವಿರಾರು ಮಂದಿ ಸೇರಿದ್ದರು. ಎಲ್ಲರ ಸಮ್ಮುಖದಲ್ಲಿ ಅಂದು ಶಾಲಿನಿಗೆ ಸನ್ಮಾನ ನಡೆಸಲ್ಪಟ್ಟಿತು. ಊರ ಜನ ಮೈಯ್ಯೆಲ್ಲಾ ಕಿವಿಯಾಗಿ ಶಾಲಿನಿಯ ಜೀವನಗಾಥೆಯನ್ನು ಅವಳ ಬಾಯಿಂದಲೇ ಕೇಳಿ ಣ್ಣೀರ್ಗರೆದರು. ಸರಕಾರ ಸೇವೆ ನಿಲ್ಲಿಸುವಂತೇ ತಿಳಿಸಿದರೂ ಸಾರ್ವಜನಿಕರು ಅವಳ ಸೇವೆಯನ್ನು ಇನ್ನೂ ಹಲವು ವರ್ಷ ನಡೆಸಿಕೊಡುವಂತೆಯೂ ಅದಕ್ಕೆ ಪ್ರತಿಫಲವಾಗಿ ಊರವರೇ ಅವಳ ಸಂಬಳವನ್ನು ಭರಿಸುತ್ತೇವೆಂದೂ ವಿನಂತಿಸಿದರು. ಜನರ ಪ್ರೀತಿವಿಶ್ವಾಸಗಳಿಗೆ ಮರುಗಿದ ಶಾಲಿನಿ ತನ್ನಿಂದಾಗುವಷ್ಟು ಕಾಲ ಊರವರಿಂದ ಚಿಕ್ಕಾಸನ್ನೂ ಪಡೆಯದೇ ಪ್ರೀತಿಯಿಂದ ಇನ್ನೂ ಹಲವು ಕಿತ್ತೂರು ರಾಣಿಯರನ್ನು ಸೃಜಿಸಿದಳು.

Sunday, November 7, 2010

ಕಾವ್ಯ ಕಾರಣ

ಚಿತ್ರಋಣ : ಅಂತರ್ಜಾಲ
ಕಾವ್ಯ ಕಾರಣ

[ ಚಿತ್ರವನ್ನು ಬಹಳ ಜನ ನೋಡಿರುತ್ತೀರಿ, ಸ್ವಲ್ಪ ಹೊತ್ತು ದಿಟ್ಟಿಸಿ ನೋಡುತ್ತಿದ್ದರೆ ಅದರ ವಿಶೇಷ ತಿಳಿಯುತ್ತದೆ ! ಮನದ ಕಲ್ಪನೆಗೆ ಅದನ್ನು ಸಾಂಕೇತಿಕವಾಗಿ ಬಳಸಿದ್ದೇನೆ. ದೀಪಾವಳಿಯನ್ನು ಮಳೆಯಿದ್ದರೂ ಹರುಷದಿಂದಲೇ ಆಚರಿಸಿ ಬೀಳ್ಕೊಟ್ಟೆವು, ಮತ್ತೆ ಬರಲಿ ; ಶುಭವ ತರಲಿ ದೀಪಾವಳಿ ಎಂದು ಜಗನ್ನಿಯಾಮಕನಲ್ಲಿ ಪ್ರಾರ್ಥಿಸಿ ಇಂದು ಕವನವನ್ನು ನಿಮ್ಮ ಮುಂದಿಡುವ ಮನಸ್ಸು, ಓದುವಿರಲ್ಲವೇ ? ]

ಮಥಿಸಿ ಮನದ ಶರಧಿಯನ್ನು
ಚಿಂತನೆಯ ಕಡೆಗೋಲಲಿ
ಚಕಿತನಾಗಿ ಕಾದು ಕುಳಿತೆ ಬರುವ ವಿಧದ ಬರಹಕೇ
ಮುಕುತಿಯಿಲ್ಲ ಚಿಂತೆಗಳಿಗೆ
ಅಂತ್ಯವಿಲ್ಲ ನೋವುಗಳಿಗೆ
ಶಕುತನಾಗಿ ಮೀರಿ ಬೆಳೆವ ಪರಿಯ ತಿಳಿಯುವುದಕೇ

ಒಂದು ಕವನ ಬರೆಯುವಾಗ
ನೊಂದು ಬರೆವ ರೀತಿ ತರವೇ ?
ಇಂದು ನನ್ನ ಮಿತ್ರರೆಲ್ಲ ಕರೆದು ಬೈವರಲ್ಲವೇ ?
ಮಿಂದು ಸ್ವಚ್ಛವಾದ ದೇಹ
ಚಂದದಿಂದ ಹೊಳೆಯುವಂತೆ
ಬಂಧಿಸೊಮ್ಮೆ ಈ ಮನವನು ಚೊಕ್ಕಗೊಳಿಸಬೇಡವೇ ?

ಅಡಿಗೆಮಾಡುವಾಗ ಉಪ್ಪು
ಸಿಹಿಯು ಹುಳಿಯು ಖಾರವನ್ನು
ಹದವನರಿತು ಹಾಕಿದಾಗ ರುಚಿಯು ಸಹಜವಪ್ಪುದು
ಗಡಿಬಿಡಿಯಲಿ ಬರೆದು ಮೂರು
ಪದದ ಜೊತೆಗೆ ಇನ್ನೊಂದಾರು
ಸೇರಿಸಲ್ಕೆ ಬರೆದ ಪದ್ಯ ನೆಲವ ಕಚ್ಚುತಿರ್ಪುದು !

ಬರೆದುದೆಲ್ಲಾ ಓದಬೇಕೆ ?
ಓದುವುದಕೆ ಸಾಧ್ಯವುಂಟೇ ?
ನನ್ನ ಪಾತ್ರೆಯಲ್ಲಿ ಒಳಗೆ ಹಣಕಿ ಇಣುಕಿ ನೋಡುತಾ
ಚಿನ್ನದಂಥ ಶಬ್ದಗಳನು
ಕನ್ನಡಿಯೊಳು ತೆರೆದುತೋರಿ
ಬನ್ನಿರಯ್ಯ ಓದಲೆಂದು ಕರೆದು ನಿಂತು ಕಾಯುತಾ

ಜೀವದಲ್ಲಿ ಭಾವತುಂಬಿ
ಭಾವದಲ್ಲಿ ಜೀವತುಂಬಿ
ಜೀವ-ಭಾವ ಸಮ್ಮಿಳಿತದ ಸಂವಿಧಾನ ಬರೆಹವು
ಆವ ಘಳಿಗೆ ಬರೆಯಬೇಕು
ಎಲ್ಲಿ ಕುಳಿತು ಹೊಸೆಯಬೇಕು
ಯಾವೊಂದನು ತಿಳಿಯದಂಥ ಸಂಯಮದಾ ಶಿಖರವು

ಒಳಗೆ ಇರುವ ಕಾಣದಾತ
ಇಳೆಗೆ ಹಾರಿ ಹತ್ತಿ ಕುಣಿದು
ಬಳಸಿ ಬಂದು ಹರಿವ ರೂಪ ಕಾವ್ಯ-ಕಾದಂಬರಿ
ಅಳುಕು ಮನದ ಅಡುಗೆಗಳನು
ಬಳುಕುತಲೇ ಹೊರಗೆ ಇಡುವ
ಬಡಿವಾರದ ಮನದ ಕನ್ಯೆ ಆಗೆ ನಿರಾಡಂಬರಿ

Thursday, November 4, 2010

ವಿಜ್ಞಾನ ದೀಪಾವಳಿ



ವಿಜ್ಞಾನ ದೀಪಾವಳಿ

ಈ ಹೆಸರು ಬಹುಶಃ ನಿಮಗೆ ವಿಚಿತ್ರವೆನಿಸುತ್ತದೆ. ದೀಪಾವಳಿಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅವಲೋಕಿಸಿ ಜತೆಗೆ ಕೆಲವು ಪೌರಾಣಿಕ ಮಹತ್ವಗಳನ್ನೂ ಆಚರಣೆಯನ್ನೂ ಸ್ವಲ್ಪ ಅರಿಯೋಣವೆಂದು ಅತ್ತಕಡೆ ಹೊರಳಿದೆ. ಅದರ ಪರಿಣಾಮವಾಗಿ ಸಿಕ್ಕ ಕೆಲವು ಮಾಹಿತಿಗಳನ್ನು ಹಲವು ಶುಭಾಶಯಗಳೊಂದಿಗೆ ನಿಮಗೆ ವರ್ಗಾಯಿಸಿಬಿಟ್ಟರೆ ದೀಪಾವಳಿ ಕೆಲಮಟ್ಟಿಗೆ ಅರ್ಥಪೂರ್ಣವಾಗಬಹುದೆಂಬ ಧೋರಣೆಯಿಂದ ಈ ಲೇಖನ.

ತ್ರಯೋದಶಿ: ಆಚರಣೆ ಪ್ರಾರಂಭ
ಇವತ್ತು ಹಳ್ಳಿಗಳಲ್ಲಿ ಹಂಡೆಯನ್ನು ತೊಳೆದು, ಅದರ ಹೊರಮೈಗೆ ಕೆಮ್ಮಣ್ಣು ಬರೆದು, ನೀರನ್ನು ತುಂಬಿ, ಹಂಡೆಯ ಕಂಠಭಾಗಕ್ಕೆ ಶಿಂಡ್ಲೆ ಅಥವಾ ಹಿಂಡ್ಲೆ[ಕಹಿ ಹಿಂಡ್ಲೆ] ಬಳ್ಳಿಯನ್ನು ಸಾಂಕೇತಿಕ ರಕ್ಷಾಸೂತ್ರವಾಗಿ ಹಾಕುತ್ತಾರೆ. ಮಾರನೇ ದಿನದ ಅಭ್ಯಂಜನಕ್ಕೆ ಇಂದೇ ತಯಾರಿ. ಇಲ್ಲಿ ವಿಶೇಷವಾದ ವೈಜ್ಞಾನಿಕತೆಯಿರದಿದ್ದರೂ ತಾಮ್ರದ ಹಂಡೆಯಲ್ಲಿ ರಾತ್ರಿಯೆಲ್ಲಾ ಉಳಿಯುವ ನೀರು ಅದರ ಕಿಲುಬನ್ನು ಭಾಗಶಃ ಹೀರಿಕೊಂಡು ನಮ್ಮ ಮೈಗೆ ಬೇಕಾದ ಪೂರಕ ತಾಮ್ರದ ಅಂಶವನ್ನು ಒದಗಿಸುತ್ತದೆ. ತಾಮ್ರದ ಪಾತ್ರೆಯಲ್ಲಿಟ್ಟ ನೀರು ಕುಡಿದರೂ ಬಹಳ ಒಳ್ಳೆಯದೆಂಬುದು ನಮಗೆ ತಿಳಿದೇ ಇದೆ. ಲೋಹಗಳಲ್ಲಿ ಉತ್ಕೃಷ್ಟ ಲೋಹವೆಂದರೆ ಬಂಗಾರ. ನಾವು ಈಗ ಪ್ಲಾಟೀನಮ್ ಎಂದೆಲ್ಲಾ ಏನೇ ಕೊಚ್ಚಿದರೂ ಬಂಗಾರದ ಮೆರುಗು ಅದಕ್ಕಿಲ್ಲ. ನಂತರ ಬರುವುದು ಬೆಳ್ಳಿ, ಆ ನಂತರ ತಾಮ್ರ, ನಂತರ ಹಿತ್ತಾಳೆ, ನಂತರ ಕಂಚು, ನಂತರ ಕಬ್ಬಿಣ ಹೀಗೇ.... ಹಾಗಂತ ಹಂಡೆಯನ್ನು ಬಂಗಾರದಲ್ಲಿ ಹಿಂದಿನ ಕಾಲದ ಅರಸರೂ ಮಾಡಿಸಿದ್ದು ಸುಳ್ಳು. ಅದರ ಬದಲಿಗೆ ತಾಮ್ರವನ್ನೇ ಬಹುತೇಕ ಎಲ್ಲೆಡೆಗೂ ಬಳಸಲಾಗುತ್ತದೆ.

ಏನೂ ಇಲ್ಲದ ಬಡವರಿಗೆ ಮಣ್ಣಲ್ಲಿ ತಯಾರಾದ ಹಂಡೆ ಕೂಡ ಸಿಗುತ್ತದೆ. ನಮ್ಮಲ್ಲಿ ಆಚರಣೆ ನಡೆಸುವಾಗ ಎಲ್ಲರಿಗೂ ಅದು ಸಮನ್ವಯವಾಗಲಿ ಎನ್ನುವ ದೃಷ್ಟಿಯಿಂದ ಮಣ್ಣ ಹಂಡೆಗೂ ಕೂಡ ಮಹತ್ವವಿದೆ. ಮಣ್ಣ ಬೋಗುಣಿಗಳಲ್ಲಿ ಮಡಿಕೆಕುಡಿಕೆಗಳಲ್ಲಿ ಮಾಡುವ ಅಡಿಗೆಯ ರುಚಿ ಇವತ್ತಿನ ಯಾವ ಪಾತ್ರೆಯಲ್ಲೂ ನಮಗೆ ಸಿಗುವುದಿಲ್ಲ. ನಾವು ಹುಟ್ಟಿಬಂದ ಈ ಭೂಮಿಯ ಧಾತುವನ್ನೇ ಬಳಸಿ ಮಾಡುವ ಪಾತ್ರೆಗಳು ಶ್ರೇಷ್ಠವೇ ಸರಿ.

ಇನ್ನು ಹಂಡೆಯ ಸುತ್ತ ಬರೆಯುವ ಕೆಮ್ಮಣ್ಣು ಮತ್ತು ಹಾಕುವ ಶಿಂಡ್ಲೆ ಬಳ್ಳಿ ಕೇವಲ ನಮ್ಮ ಸಂಭ್ರಮಕ್ಕೆ. ಅಂದು ನರಕ ಚತುರ್ದಶಿಯಂದು ಶ್ರೀಕೃಷ್ಣ ನರಕಾರಸುರನನ್ನು ವಧಿಸಿದಾಗ ಆದ ಮೈಕೈ ನೋವನ್ನು ಅಭ್ಯಂಜನಮಾಡಿ ಕಳೆದುಕೊಂಡನಂತೆ. ಆ ನೆನಪಿಗೆ ಅಂದಿನಿಂದ ಜನ ಉತ್ಸವಕ್ಕೆ, ಉತ್ಸುಕತೆಗೆ ಬೇಕಾಗಿ ಅಲಂಕಾರಕ್ಕಾಗಿ ಅದನ್ನು ಬಳಸಿರಬೇಕು.

ಬೂದುಗಳು ಅಥವಾ ಬೂರೆ ಕಳು [ಬೂರೆ ಹಾಯುವುದು ]

ಕೆಲವುಕಡೆ ಈ ರಾತ್ರಿ ತಮಾಷೆಗೆ ಕಳ್ಳತನಮಾಡುವುದಿದೆ. ಈ ರಾತ್ರಿ ಕದ್ದವರು ಸಿಕ್ಕಿಬಿದ್ದರೂ ಯಾರೂ ಶಿಕ್ಷಿಸುವುದಿಲ್ಲ. ಆದರೆ ತಮಾಷೆ ಅತಿಯಾದರೆ ಮಾತ್ರ ಅದು ಅಪಾಯಕಾರಿಯಾಗುತ್ತದೆ! ಒಂದು ತಮಾಷೆಯ ಮತ್ತೊಂದು ಅಪಾಯದ ಎರಡು ನೈಜ ಘಟನೆಗಳನ್ನು ಹೇಳುತ್ತೇನೆ ಕೇಳುವಂತವರಾಗಿ:

ನಾವು ಚಿಕ್ಕವರಿದ್ದಾಗ ಬೂರೆಹಬ್ಬ ಅಥವಾ ಬೂದೆ ಹಬ್ಬ ಎಂದರೆ ಒಂಥರಾ ಒಳಗೊಳಗೇ ನಮಗೆಲ್ಲಾ ಹೆದರಿಕೆ ಮಿಶ್ರಿತ ಸಂತೋಷ. ಬೂದೆ ಹಬ್ಬದ ರಾತ್ರಿ ಕಳ್ಳತನ ಸರ್ವೇ ಸಾಮಾನ್ಯವಾಗಿದ್ದ ಕಾಲ. ಆ ಕಾಲದಲ್ಲಿ ನಮ್ಮ ಹಳ್ಳಿಯ ತೋಟಗಳಲ್ಲಿ ಅಡಿಕೆ-ತೆಂಗಿನ ಮರಗಳನ್ನು ಹತ್ತಿ ಗೊನೆಗಳನ್ನೂ, ಸೀಯಾಳಗಳನ್ನೂ[ಎಳೆನೀರುಗೊನೆಗಳನ್ನೂ] ಕಡಿದು ಇಳಿಸಿ ಅವುಗಳಲ್ಲಿ ಕೆಲವನ್ನು ಉಪಯೋಗಿಸಿ ಮತ್ತೆ ಕೆಲವನ್ನು ಎಲ್ಲಿಗೋ ಕೊಂಡುಹೋಗಿ ಬಿಟ್ಟುಹೋಗುತ್ತಿದ್ದರು. ಕೆಲವೊಮ್ಮೆ ಪಕ್ಕದ ಮನೇದು ನಮ್ಮನೆಗೆ ನಮ್ಮನೇದು ಮತ್ಯಾರದೋ ಮನೆಗೆ ಅದ್ಯಾವುದೂ ಇಲ್ಲದಿದ್ದರೆ ಎಲ್ಲವನ್ನೂ ಹೊತ್ತು ಹತ್ತಿರದ ದೇವಸ್ಥಾನದ ಅಂಗಳಕ್ಕೆ ಹೀಗೆಲ್ಲಾ. ಒಂದು ವರ್ಷ ರಾತ್ರಿ ಕೊಟ್ಟಿಗೆಗೆ ಹೋಗಿ, ಅಟ್ಟದಲ್ಲಿರುವ ಒಣಹುಲ್ಲು ತೆಗೆದು ದನಗಳಿಗೆ ತಿನ್ನಲು ಕೊಟ್ಟು, ಅವುಗಳನ್ನು ಹೆದರಿಸಿ ಕೂಗಿಸಿ, ಹುಲ್ಲಿನಿಂದ ಬೆಚ್ಚುಮಾಡಿ ಕೊಟ್ಟಿಗೆಯ ಬಾಗಿಲಲ್ಲಿ ನಿಲ್ಲಿಸಿ, ಅದರ ಕೈಲಿ ದೊಣ್ಣೆಯೊಂದನ್ನು ಕೊಟ್ಟು, ಆ ಬೆಚ್ಚಿನ ಕಾಲ ಪಕ್ಕದಲ್ಲಿ ಎರಡು ತಿನ್ನಲುಬಾರದಷ್ಟು ಎಳೆಯ ಬಾಳೆಗೊನೆ[ಬಾಳೆ ಜಿಕ್ಕು] ತಂದಿಟ್ಟು ಹೋಗಿದ್ದರು. ಯಾರು ಎಂದು ಯಾರೂ ಕೇಳುವುದಿಲ್ಲ, ಯಾರೂ ಆಬಗ್ಗೆ ಬೇಸರಗೊಳ್ಳುವುದೂ ಇಲ್ಲ. ಇದು ಹಬ್ಬದ ಒಂದು ಅಂಗ.

ಇನ್ನು ಅಪಾಯದ ಒಂದು ಘಟನೆ: ನಮ್ಮೂರ ಮುಖ್ಯರಸ್ತೆಯಲ್ಲಿ ನಮ್ಮೂರಿಂದ ಸುಮಾರು ೩ ಕೀ.ಮೀ ದೂರದಲ್ಲಿ, ದೊಡ್ಡ ದೊಡ್ಡ ಸೈಜುಗಲ್ಲುಗಳನ್ನು ತಂದು ಹಾಕಿ ಅದನ್ನು ತೆಂಗಿನ ಮಡಲಿನಿಂದ[ತೆಂಗಿನ ಗರಿಯಿಂದ] ಮುಚ್ಚಿಬಿಟ್ಟಿದ್ದರಂತೆ. ನಮ್ಮ ತಾಲೂಕಿನ ವೈದ್ಯರೊಬ್ಬರು ಯಾರದೋ ಅನಿವಾರ್ಯತೆಯಲ್ಲಿ ರೋಗಿಯೊಬ್ಬನಿಗೆ ಚಿಕಿತ್ಸೆ ಕೊಡಲು ಹೋಗಿದ್ದವರು ಇದೇ ರಸ್ತೆಯಲ್ಲಿ ಮರಳುತ್ತಿದ್ದರು. ಹೇಳಿಕೇಳಿ ಶೀಕು ಯಾರನ್ನೂ ಕೇಳಿಯೋ ಹಬ್ಬದ ಸಮಯ ಆಮೇಲೆ ಬರೋಣ ಅಂತೆಲ್ಲಾ ನೋಡಿಯೋ ಬರುವುದಿಲ್ಲವಲ್ಲ! ರಾತ್ರಿ ಸುಮಾರು ೧೧ ಘಂಟೆಯ ವೇಳೆ ಅಂತ ಲೆಕ್ಕ ಆಮೇಲೆ ತೆಗೆದಿದ್ದು. ಡಾಕ್ಟರು ಪರತ್ ಹೊರಟವರು ಮಬ್ಬಿನ ಬೆಳಕಿನಲ್ಲಿ, ಮುಚ್ಚಿಟ್ಟ ಕಲ್ಲುಗಳಮೇಲೆ ಬೈಕು ಓಡಿಸಿ ಬಿದ್ದು ತಲೆಯೊಡೆದು ಹೋಯಿತು. ಆ ನಂತರ ಅದು ಹಳ್ಳಿಯ ರಸ್ತೆ, ಯಾರೂ ಆ ಕಡೆಯಿಂದ ಪಾಸಾಗಿರಲಿಲ್ಲ. ಯಾರೋ ಪುಣ್ಯಾತ್ಮರು ಅನಿರೀಕ್ಷಿತವಾಗಿ ಅಲ್ಲಿಗೆ ತಮ್ಮ ಬೈಕಿನಲ್ಲಿ ಬಂದವರು ಕಂಡು ಹತ್ತಿರದ ಹಳ್ಳಿಯ ಮನೆಗಳಿಗೆ ಓಡಿ ಜನರನ್ನು ಕರೆತರುವಾಗ ವೈದ್ಯರು ಸಣ್ಣ ಜೀವದಿಂದಿದ್ದರು. ಎಲ್ಲರೂ ಸೇರಿ ಅವರಿಗೆ ನೀರು ಹಾಕಿ ಹೊತ್ತುಕೊಂಡು ಬೇರೆ ಯಾವುದೋ ಸಿಕ್ಕವಾಹನದಲ್ಲಿ ದೂರದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದರಾದರೂ ವೈದ್ಯರು ಬದುಕುಳಿಯಲಿಲ್ಲ. ಅನ್ಯಾಯವಾಗಿ ಸಾವು ಉತ್ತಮ ಹಾಗೂ ಒಳ್ಳೆಯ ವೈದ್ಯರೊಬ್ಬರನ್ನು ಸೆಳೆದುಕೊಂಡಿತು.[ ಆ ವೈದ್ಯರ ಹೆಸರು ಡಾ| ಅವಧಾನಿ.] ರಸ್ತೆಯಲ್ಲಿ ಕಲ್ಲುಹಾಕಿ ಮಜಾನೋಡಿದ ಆ ಅವಿವೇಕಿಗಳು ಯಾರು ಎಂಬುದು ಇಂದಿಗೂ ನಿಗೂಢ. ಆದರೆ ಅಂತಹ ಘಟನೆ ಮತ್ತೆ ಮರುಕಳಿಸಲಿಲ್ಲ ಎಂಬುದು ಸಂತಸದ ವಿಷಯ.

ಮೊದಲನೆಯ ದಿನದ ಆಚರಣೆ

ನಸುಕಿನಲ್ಲೇ ಎದ್ದು ಮುಖಮಾರ್ಜನೆ-ಶೌಚವನ್ನು ಪೂರೈಸಿ ಒಳಬಂದಮೇಲೆ ದೇವರಕೋಣೆಯಲ್ಲಿ ಹಾಕಿರುವ ಮಣೆಯಮೇಲೆ ಮಕ್ಕಳನ್ನೂ ಸೇರಿಸಿದಂತೇ ದೊಡ್ಡವರಿಗೆಲ್ಲಾ ಹೆಂಗಳೆಯರು ಎಣ್ಣೆಹನಿಸಿ[ ನೆತ್ತಿಗೆ, ಭುಜಗಳಿಗೆ ಎಣ್ಣೆ ಯನ್ನು ಚಮಚದಿಂದ ಬಸಿಯುವುದು] ಆರತಿ ಬೆಳಗುವುದು, ಮಂಗಲಾಕ್ಷತೆ ಎರಚುವುದು ಸಂಪ್ರದಾಯ. ಅಂದಿನ ದಿನ ಶ್ರೀಕೃಷ್ಣನಿಗೆ ಮೈಗೆಲ್ಲಾ ಎಣ್ಣೆ ಹಚ್ಚಿ ಮಾಲಿಶ್ ಮಾಡಿದ್ದರಂತೆ. ಅದೇ ನೆನಪಿನಲ್ಲಿ ಈ ಪ್ರಕ್ರಿಯೆ. ವೈಜ್ಞಾನಿಕವಾಗಿ ನೋಡಿದರೆ ಈಗ ಚಳಿಗಾಲ ಪ್ರಾರಂಭವಾಗುತ್ತದೆ. ಚಳಿಗಾಲದಲ್ಲಿ ಚರ್ಮ ಒಡೆಯುತ್ತದೆ. ಅದರ ರಕ್ಷಣೆಗೆ ಎಣ್ಣೆಮಜ್ಜನ ಒಳ್ಳೆಯ ಮಾರ್ಗ. ಹೀಗಾಗಿ ಚರ್ಮ ರಕ್ಷಣೆಯೇ ಮುಖ್ಯಕಾರಣವಾಗಿ ವರುಷದಲ್ಲಿ ಒಮ್ಮೆಯಾದರೂ ಈ ರೀತಿ ಸ್ನಾನ ಮಾಡಲಿ ಎಂದು ಅದನ್ನೇ ಶಾಸ್ತ್ರವನ್ನಾಗಿಸಿದರು. ನಾವು ಚಿಕ್ಕವರಿದ್ದಾಗ ಎಲ್ಲಾದರೂ ತಪ್ಪಿಸಿಕೊಂಡು ಓಡುವುದಿತ್ತು. ಅದಕ್ಕೇ "ಎಣ್ಣೆ ಹಚ್ಚಿ ಸ್ನಾನಮಾಡದವರ ಮೈ ಬೂದಿ ಬೂದಿಯಾಗುತ್ತದಂತೆ " ಎಂದು ಹೆದರಿಸುತ್ತಿದ್ದರು. ಪ್ರಾಯಶಃ ಈ ದೃಷ್ಟಿಯಲ್ಲಿ ಇದು ಬೂದೆ ಹಬ್ಬ.

ಬೂದೆ ಹಬ್ಬದ ದಿನ ಕೊಟ್ಟಿಗೆಯಲ್ಲಿರುವ ದನಗಳಿಗೂ ನಮಗೆ ಸಿಕ್ಕ ಮನ್ನಣೆಯೇ ಸಿಗುತ್ತದೆ. ನಸುಬೆಳಕಿನಲ್ಲಿ ದೀಪವೊಂದನ್ನು ಉರಿಸಿ ಎಲ್ಲಾ ದನಗಳಿಗೂ ಮಂಗಲಾಕ್ಷತೆ ಎರಚಿ, ಎಣ್ಣೆಹನಿಸುವುದು ಪದ್ಧತಿ. ಬೇಗ ಎಬ್ಬಿಸಿದ್ದು ಯಾಕೋ ಎಂದು ದನಗಳು ಕಂಗಾಲಾಗಿ ನೋಡುತ್ತಿರುವಾಗ ಹಿರಿಯದನಗಳು ಚಿಕ್ಕವುಗಳಿಗೆ ತಮ್ಮ ಹಿಂದಿನ ಅನುಭವ ಹೇಳುತ್ತಿದ್ದವೋ ಏನೋ! ಆನಂತರ ಅವುಗಳಿಗೆ ಹುಲ್ಲು ಹಾಕಿ ನಮಸ್ಕರಿಸಿದ ನಂತರವೇ ನಮಗೆಲ್ಲಾ ಎಣ್ಣೆಹನಿಸುವುದು.

ಮೂರು ದಿನದ ಭಾಗ್ಯ --ಬಲೀಂದ್ರ ರಾಜ್ಯಭಾರ

ಪ್ರಹ್ಲಾದನ ಮೊಮ್ಮಗ ಬಲಿ. ತನ್ನ ಧಾರಾಳತನದಿಂದ ಬಲಿಚಕ್ರವರ್ತಿಯಾದ. ಸಂಪತ್ತು ಹೇರಳ ಸಂಗ್ರಹಣೆಯಾದ ಮೇಲೆ ರಾಜ್ಯವನ್ನು ಬೇಕಷ್ಟು ವಿಸ್ತರಿಸಿದ. ಒಮ್ಮೆ ಆತನಿಗೊಂದು ಆಸೆ ಬಂತು. ತಾನು ಯಾಕೆ ದೇವಲೋಕವನ್ನೂ ಆಳಬಾರದು ಎಂದು. ಅದಕ್ಕೆ ಬೇಕಾಗಿ ಆತ ೧೦೦ ಯಾಗಗಳನ್ನುಮಾಡಿದ. ಯಾಗದ ಫಲವಾಗಿ ಅಜೇಯ ರಕ್ಷಾಕವಚವನ್ನೂ ಪಡೆದ. ದೇವಲೋಕಕ್ಕೆ ದಾಳಿಯಿಟ್ಟು ದೇವತೆಗಳನ್ನೆಲ್ಲಾ ನಡುಗಿಸಬೇಕು, ಅದಕ್ಕೂ ಮುನ್ನ ಪುಣ್ಯಸಂಚಯ ಸ್ವಲ್ಪ ಜಾಸ್ತಿ ಬೇಕಾಗಿ ಆಚಾರ್ಯರೆಲ್ಲಾ ಹೇಳಿದ್ದರಿಂದ ದಾನವನ್ನು ಕೈಗೊಂಡ. ಬೇಕಾದವರು ಬೇಕಾದದ್ದನ್ನೆಲ್ಲಾ ದಾನವಾಗಿ ಪಡೆದರು. ಆ ಘಳಿಗೆಯಲ್ಲಿ ದೇವತೆಗಳ ಇಚ್ಛೆಯಂತೇ ಅವರ ರಕ್ಷಣೆಮಾಡಲಾಗಿ ಮಹಾವಿಷ್ಣು ವಾಮನನಾಗಿ ಬಂದ! ವಾಮನ ಅಂದರೆ ಕುಬ್ಜ, ಕುಳ್ಳ. ಕುಬ್ಜ ಬ್ರಾಹ್ಮಣ ವಟುವೊಬ್ಬ ಬಂದು ದಾನಸ್ವೀಕರಿಸಲು ಕುಳಿತಾಗ ಬಲಿ ಆತ್ಮೀಯವಾಗಿ ಸ್ವಾಗತಿಸಿದ. ವಾಮನ ಬೇಡಿದ ಮೂರು ಹೆಜ್ಜೆ ನೆಲವನ್ನು ನೆನೆದು " ಅಷ್ಟು ಸಣ್ಣ ದಾನವನ್ನು ಯಾಕೆ ಕೇಳುತ್ತೀರಿ ಬೇರೇ ಏನನ್ನಾದರೂ ಕೇಳಬಾರದೇ ? " ಎಂದ ಬಲಿ. ವಾಮನ ತನಗಷ್ಟೇ ಸಾಕು ಎಂದ. ಬಲಿಗೆ ಬಂದವ ಮಹಾವಿಷ್ಣುವೆಂಬ ಅರಿವಿರಲಿಲ್ಲ. ಆದರೆ ಆತನ ಗುರು ಶುಕ್ರಾಚಾರ್ಯರಿಗೆ ಇದು ತಿಳಿದುಹೋಯಿತು. ಅವರು ಬಲಿಗೆ ತಿಳಿಸಿ ಹೇಳಿ ಈ ದಾನವನ್ನು ಕೊಡುವುದರ ಬದಲು ಬೇರೇನಾದರೂ ಧನಕನಕವನ್ನು ಕೊಡು ಎಂದು ಸೂಚಿಸಿದರೂ " ಕೊಟ್ಟೆ " ಎಂದು ಆಡಿದ ಮಾತಿಗೆ ತಪ್ಪಲಾರೆ ಎಂದುತ್ತರಿಸಿದ ಬಲಿ. ದಾನಕ್ಕೆ ತುಳಸೀ ನೀರು ಬಿಡುವಾಗ ಕೊಂಬಿನ ಗಿಂಡಿಯಲ್ಲಿ ಸೂಕ್ಷರೂಪದಲ್ಲಿ ಕುಳಿತು ನೀರು ಬರದ ಹಾಗೇ ತಡೆದ ಶುಕ್ರಾಚಾರ್ಯ! ಇದನ್ನರಿತ ವಾಮನ ತನ್ನಲ್ಲಿರುವ ದರ್ಬೆಯಿಂದ ಆ ತೂತಿನೊಳಗೆ ಇರಿದಾಗ ಶುಕ್ರಾಚಾರ್ಯರ ಒಂದು ಕಣ್ಣು ಹೋಯಿತಂತೆ! ಅದಕ್ಕೆ ಕೆಲವೊಮ್ಮೆ ವಾಡಿಕೆಯಲ್ಲಿ ಒಂದೇ ಕಣ್ಣಿರುವವರಿಗೆ ಒಕ್ಕಣ್ಣ ಶುಕ್ರಾಚಾರ್ಯ ಎನ್ನುವುದಿದೆ ! ಅಂತೂ ದಾನ ನಡೆದು ಹೊಯಿತು. ದಾನ ಪಡೆದ ಮರುಕ್ಷಣ ವಾಮನ ಆಕಾಶದೆತ್ತರಕ್ಕೆ ಬೆಳೆದ, ಬೆಳೆದೂ ಬೆಳೆದೂ ಆತನಿಗೆ ಜಾಗವೇ ಸಾಲದಾಯಿತು. ಮೊದಲನೇ ಹೆಜ್ಜೆಯಿಂದ ಇಡೀ ಭೂಮಂಡಲವನ್ನೂ ಎರಡನೇ ಹೆಜ್ಜೆಯಿಂದ ಇಡೀ ಸ್ವರ್ಗಲೋಕವನ್ನೂ ಆಕ್ರಮಿಸಿದ ವಾಮನ ಬಲಿಗೆ " ನೀನು ವಚನಬ್ರಷ್ಟ " ಎಂದು ಬೈದ. ದಾರಿಕಾಣದ ಬಲಿ ಎರಡೂ ಕೈಜೋಡಿಸಿ " ನಿನ್ನ ಮೂರನೇ ಹೆಜ್ಜೆಯನ್ನು ನನ್ನ ಶಿರದಮೇಲಿಡು" ಎಂಬುದಾಗಿ ವಿನಂತಿಸಿದ. ಆ ಮಾತಿನಂತೇ ಮೂರನೇ ಹೆಜ್ಜೆಯನ್ನು ಬಲಿಯ ತಲೆಯಮೇಲಿಟ್ಟ ವಾಮನ ತನ್ನ ಬಲವಾಗಿ ಬಲಿಯನ್ನು ಪಾತಾಳಕ್ಕೆ ನೂಕಿದ.

ಬಂದಾತ ಮಹಾವಿಷ್ಣುವೆಂದು ಶುಕ್ರಾಚಾರ್ಯರು ಅಂತರಂಗದಲ್ಲಿ ಕಿವಿಯಲ್ಲಿ ಉಸುರಿದ್ದು ಅರ್ಥವಾಗಿಹೋಗಿತ್ತು ಬಲಿಗೆ. ಆದರೆ ಆಡಿದ ಮಾತಿಗೆ ತಪ್ಪದ ಅಪ್ಪಟ ರಾಜರ್ಷಿ ಈ ಮಹಾಬಲಿ! ತನ್ನನ್ನು ಪಾತಾಳಕ್ಕೆ ಕಳುಹಿದ್ದು ನ್ಯಾಯವೇ ಎಂಬುದಾಗಿ ಮಹಾವಿಷ್ಣುವಿನಲ್ಲಿ ಕೇಳಲಾಗಿ, ಭಕ್ತ ಬಲಿಗೆ ಒಲಿದ ಮಹಾವಿಷ್ಣು ತನ್ನ ನಿಜರೂಪದಲ್ಲಿ ದರ್ಶನವಿತ್ತು, ಕಾರಣಗಳನ್ನೆಲ್ಲಾ ತಿಳಿಸಿ, ವರ್ಷದಲ್ಲಿ ಮೂರು ದಿನ ದೀಪಾವಳಿಯ ವೇಳೆ ಭೂಮಿ ನಿನ್ನದೇ ರಾಜ್ಯಭಾರದಲ್ಲಿರುತ್ತದೆಂದೂ ಆಗ ಸ್ವತಃ ತಾನು ಬಲಿಯ ಬಾಗಿಲ ಕಾಯುವ ಭಟನಾಗಿ ನಿಂತು ಸೇವೆಮಾಡುವೆನೆಂದೂ ವರವಿತ್ತ. ಇದು ಬಲಿಯ ದಾನಕ್ಕೆ, ಆತನ ನಿಸ್ಪೃಹ ಪ್ರವೃತ್ತಿಗೆ ಸಂದ ಗೌರವ. ಹೀಗಾಗಿ ಪ್ರತೀವರ್ಷ ಬಹುತೇಕ ಫಸಲುಗಳು ಕೈಗೆ ಬರುವ ಹೊತ್ತಿನ ಈ ದೀಪಾವಳಿಯಲ್ಲಿ ಮೂರುದಿನ ಭುವಿಯ ರಾಜ್ಯಭಾರವನ್ನು ಬಲಿ ನೆರವೇರಿಸಿ, ತನ್ನ ಸತ್ಪ್ರಜೆಗಳಿಗೆ ಹಿಂದೆ ತನ್ನ ರಾಜ್ಯದಲ್ಲಿ ಹೇಗೆ ರಾಮರಾಜ್ಯದಂತೇ ಯಾವ ಕೊರತೆಯೂ ಇರಲಿಲ್ಲವೋ ಅದೇ ರೀತಿ ಯಾವ ಕುಂದುಕೊರತೆಗಳೂ ಬಾಧಿಸದಿರಲಿ ಎಂದು ಹರಸುತ್ತಾನೆ ಎಂಬುದು ಪ್ರತೀತಿ; ಪ್ರತೀತಿ ಹೇಗಿದ್ದರೂ, ಆತ ರಕ್ಕಸಕುಲದಲ್ಲೇ ಹುಟ್ಟಿದ ರಾಜನಾದರೂ ಈ ಭೂಮಿಯ ಎಲ್ಲರಿಗೂ[ಕಥೆ ಗೊತ್ತಿರುವವರಿಗೆ] ಬಲಿಯೆಂದರೆ ಪ್ರೀತಿ. ಇಂದ್ರನಾಗಬೇಕೆಂದು ಬಯಸಿದ್ದ ಬಲಿಗೆ ಇಂದ್ರನ ಹೆಸರಲ್ಲೇ ಪೂಜೆ: ಹೀಗಾಗಿ ಆತ ಬಲೀಂದ್ರ.

ಬಲೀಂದ್ರನನ್ನು ಕರೆತರುವುದಕ್ಕೆ ತ್ರಯೋದಶಿಯ ಸಾಯಂಕಾಲವೇ ಸಾಕಷ್ಟು ಸಿದ್ಧತೆಗಳು ನಡೆದಿರುತ್ತವೆ. ನವಧಾನ್ಯಗಳನ್ನು ಲೋಟ,ಚೊಂಬು ಮುಂತಾದ ಪಾತ್ರೆಗಳಲ್ಲಿಟ್ಟು, ಕೆಮ್ಮಣ್ಣು ತೀಡಿ ಶೇಡಿ[ರಂಗೋಲಿ ಪುಡಿ]ಯಿಂದ ಹಸೆಬರೆದ ಮಣೆಯಮೇಲೆ ಅವುಗಳನ್ನು ಪೇರಿಸಿ ಇಟ್ಟು, ಬೆಳ್ಳಿ-ಬಂಗಾರದ ನಾಣ್ಯಾದಿಗಳನ್ನೆಲ್ಲಾ ಇಟ್ಟು, ತೆಂಗಿನ ಕಾಯಿ, ಮೊಗೇಕಾಯಿ[ಮಂಗಳೂರು ಸೌತೇಕಾಯಿ] ಇವುಗಳನ್ನೆಲ್ಲಾ ಇಟ್ಟಿರುತ್ತಾರೆ. ಸಾಂಕೇತಿಕವಾಗಿ ಚಕ್ರವರ್ತಿ ಬಲಿಯನ್ನು ಹೊರಾಂಗಣದಲ್ಲಿರುವ ತುಳಸಿಯ ಮುಂಭಾಗದಲ್ಲಿ ಅಡಿಕೆಗೊನೆಯ[ಕೆಲವುಕಡೆ ವೀಳ್ಯದೆಲೆಯಡಿಕೆ] ಮೇಲೆ ಆಹ್ವಾನಿಸಿ, ಅಲ್ಲಿಯೇ ಮೊದಲಾಗಿ ಒಂದು ಪೂಜೆ ನೆರವೇರಿಸಿ ಆಮೇಲೆ ದೇವರಕೋಣೆಗೆ ಬಿಜಯಂಗೈಯ್ಯುವುದು. ಬಂದ ಬಲೀಂದ್ರನಿಗೆ ಆ ದಿನವೆಲ್ಲಾ ವಿಶೇಷ ತಿನಿಸುಗಳು ಭಕ್ಷ-ಭೋಜ್ಯ ನಿವೇದಿಸಿ ಮಹಾಮಂಗಲಾರತಿ ನೆರವೇರಿಸುವುದು ನಮ್ಮಲ್ಲಿಯ ರೂಢಿ. ಈ ಎಲ್ಲಾ ಕಾರ್ಯಕ್ರಮಗಳಿಗೆ ಪ್ರತೀ ಹೆಜ್ಜೆಯಲ್ಲೂ ಹೆಂಗಳೆಯರು ಹಾಡುವ ಅಜ್ಞಾತ ಕವಿಗಳ ಭಾವತುಂಬಿದ ಭಕ್ತಿಗೀತೆಗಳು ಹೃದಯಂಗಮ, ಆದರೆ ಇಂದು ಅವುಗಳು ಸಿಕ್ಕುವುದೇ ದುರ್ಲಭ.

ಮನೋವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ನಮ್ಮ ಜನ ರಾಜನೊಬ್ಬನ ಆದರ್ಶಗಳನ್ನು ಬಹುವಾಗಿ ಮೆಚ್ಚುತ್ತಿದ್ದರು. ಆದರ್ಶರಾಜ ಪ್ರಜೆಗಳಿಗೆ ದೇವರಾಗಿಬಿಡುತ್ತಿದ್ದ. ರಾಜಾ ಪ್ರತ್ಯಕ್ಷ ದೇವತಾ ಎಂಬಂತೇ ತಮ್ಮ ಕಷ್ಟ-ಸುಖಗಳಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದ ರಾಜನನ್ನು ಪ್ರಜೆಗಳು ಆದರಿಸುತ್ತಿದ್ದರು, ಆರಾಧಿಸುತ್ತಿದ್ದರು. ಬಲಿ ಅಂತಹ ಚಕ್ರವರ್ತಿಗಳ ಸಾಲಿನಲ್ಲಿ ಮಹಾಮೇರು. ಅಂತಹ ಬಲಿಯನ್ನು ನಮ್ಮ ಜನ ಮರೆಯಲೊಲ್ಲರು. ಮೇಲಾಗಿ ಭಗವಂತನ ಮಾತನ್ನು ಶಿರಸಾವಹಿಸುವ ಕಳಕಳಿ ಕೂಡ ಇದರಲ್ಲಿ ಅಡಗಿದೆ. ಬಲೀಂದ ರಾಜ್ಯದಲ್ಲಿ ಇರದ್ದೇ ಇಲ್ಲವಂತೆ ! ಅಷ್ಟೊಂದು ಪ್ರಜಾರಂಜಕನಾಗಿ, ರಕ್ಷಕನಾಗಿ ಎಲ್ಲರ ಹೃದಯಸಿಂಹಾಸನದಲ್ಲಿ ಶಾಶ್ವತವಾಗಿ ಕುಳಿತುಬಿಟ್ಟಿದ್ದಾನೆ ಬಲಿ. ಬಲಿಯ ಕಥೆಯನ್ನು ಕೇಳಿದರೇ ಆತನ ನಡವಳಿಕೆಯ ಮನವರಿಕೆಯಾಗುತ್ತದೆ. ಆತನ ಸ್ಮರಣ, ಪೂಜನ, ಪ್ರಾರ್ಥನೆಗಳಿಂದ ತಮ್ಮೆಲ್ಲರ ಮನೆಗಳಲ್ಲೂ ಸಮೃದ್ಧಿ ನೆಲೆಸಲಿ ಎಂಬುದು ಮನದಿಂಗಿತ.

ಎರಡನೇ ದಿನ ಅಮಾವಾಸ್ಯೆ

ಬಲೀಂದ್ರ ಸನ್ನಿಧಿಯಲ್ಲಿ ಯಾವುದಕ್ಕೂ ಕಮ್ಮಿಯೇ ಇರಲಿಲ್ಲವಂತೆ. ಅವನ ರಾಜ್ಯದಲ್ಲಿ ಲಕ್ಷ್ಮಿ ಸ್ಥಿರವಾಗಿ ನೆಲೆಸಿದ್ದಳು. ಈ ಹಿನ್ನೆಯಲ್ಲಿ ಬೆಳೆದುಬಂದ ಧಾನ್ಯಲಕ್ಷ್ಮಿಯೊಂದಿಗೆ ಧನಲಕ್ಷ್ಮಿಯನ್ನೂ ಆಹ್ವಾನಿಸಿ ಬಲೀಂದ್ರ ಸಮ್ಮುಖದಲ್ಲಿ, ಸನ್ನಿಧಿಯಲ್ಲಿ ಪೂಜೆ ನಡೆಸುತ್ತಾರೆ. ಕೆಲವರ ಮನೆಗಳಲ್ಲಿ ಇದು ವಿಶೇಷವಿರದಿದ್ದರೂ ಅನೇಕರು ಇದನ್ನು ನಡೆಸುವುದು ಕಂಡುಬರುತ್ತದೆ. ಇದೇ ವೇಳೆ ಅಂಗಡಿಕಾಕರು, ವ್ಯಾಪಾರಿಗಳು ತಮ್ಮ ವ್ಯವಹಾರದ ಜಾಗದಲ್ಲಿ ಲಕ್ಷ್ಮೀ ಪೂಜೆಯನ್ನು ನೆರವೇರಿಸುತ್ತಾರೆ.

ಎಲ್ಲರೀತಿಯ ಸುಗ್ಗಿಯ ಕಾಲ. ಫಸಲು ಬೆಳೆದು ರೈತನ ಕಸೇರಿರುವ ಕಾಲ. ಬೆಳೆದು ಮನೆಸೇರಲಿರುವ ಫಸಲಿಗೊಮ್ಮೆ ಲಕ್ಷ್ಮೀ ಎಂಬ ಭಾವದಿಂದ ಸಾಂಕೇತಿಕ ಪೂಜೆ. ಹೀಗೆ ಪೂಜೆ ನಡೆಸುವುದರಿಂದ ಲಕ್ಷ್ಮಿಯ ಸ್ಥಿರತೆ ಜಾಸ್ತಿಯಾಗಿ ಸಮೃದ್ಧಿ ನೆಲೆಸುತ್ತದೆ ಎಂಬುದು ಕಲ್ಪನೆ, ಭಾವನೆ.

ಈ ರಾತ್ರಿ ನಮ್ಮಲ್ಲಿ ಕಡುಬುಗಳನ್ನು ಮಾಡಿ ಬಲೀಂದ್ರನಿಗೆ ನಿವೇದಿಸಿ ನಂತರ ಕೊಟ್ಟಿಗೆಗೆ ಹೋಗಿ, ದನಕರುಗಳ ಕಾಲು-ಬಾಯಿ ತೊಳೆದು[ಸಾಂಕೇತಿಕವಾಗಿ ಉದ್ಧರಣೆಯಿಂದ ನೀರು ಹಾಕುತ್ತ] ಆಮೇಲೆ ಕಡುಬುಗಳನ್ನು ಅವುಗಳಿಗೆ ತಿನ್ನಿಸುವುದು. ತಿಂದು ಪ್ರೀತಿಯಿಂದ ನಾಲಿಗೆ ಆಡಿಸುತ್ತಿರುವಾಗ ಮತ್ತೆ ಕಾಲು-ಬಾಯಿ ತೊಳೆದು, ಹುಲ್ಲು ಹಾಕಿ ನಮಸ್ಕರಿಸಿ ಮನೆಗೆ ಮರಳುವುದರೊಂದಿಗೆ ಎರಡನೇ ದಿನದ ಮುಕ್ತಾಯ.

ಮೂರನೇ ದಿನ - ಬಲಿ ಪಾಡ್ಯ[ಮಿ]

ಬಲೀಂದ್ರ ಇವತ್ತು ತನ್ನ ರಾಜ್ಯಭಾರವನ್ನು ಪೂರೈಸಿ ಸ್ವಸ್ಥಾನಕ್ಕೆ ಹಿಂದಿರುಗುತ್ತಾನೆಂಬ ನಂಬಿಕೆ. ಗೋಪೂಜೆ ಇಂದಿನ ಮಹತ್ವದ ಕಾರ್ಯ. ಜಾವದಲ್ಲೇ ಎದ್ದು ದನಕರುಗಳಿಗೆ ಸ್ನಾನಮಾಡಿಸಿ, ಕೊಟ್ಟಿಗೆ ಶುದ್ಧೀಕರಿಸಿ, ಅವುಗಳ ಮೈಗೆ ಕೆಮ್ಮಣ್ಣು ಮತ್ತು ಶೇಡಿಗಳಿಂದ ದೊಡ್ಡ ಸೊನ್ನೆಯಾಕಾರಕ್ಕೆ ಲೋಟವೇ ಮೊದಲಾದವುಗಳನ್ನು ಬಳಸಿ ಅಚ್ಚು ಹಾಕುವುದು [ಹುಬ್ಬು ಹಾಕುವುದು]. ನಂತರ ಅವುಗಳ ಕೋಡಿಗೆ ಬಣ್ಣಗಳನ್ನು ಬಳಿಯುವುದು, ಝರಿಯ ಗೊಂಡೆಗಳನ್ನು ಕಟ್ಟುವುದು, ಕೊರಳಿಗೆ ಹೊಸ ಹಗ್ಗ ಮತ್ತು ಗಂಟೆ ಕಟ್ಟುವುದು ಇವೆಲ್ಲಾ ನಡೆಯುತ್ತವೆ. ನಂತರ ಚಂಡು ಹೂವು, ದನಮಾಲೆ [ಕಾಡಿನಲ್ಲಿ ಸಿಗುವ ಸುವಾಸ್ನೆ ಭರಿತ ಹೂಗೊಂಚಲು]ಹೂವು ಇವುಗಳನ್ನೆಲ್ಲ ಕಟ್ಟುವುದು. ಮನೆಯಲ್ಲಿ ಬಲೀಂದ್ರ ಪೂಜೆ ನೆರವೇರಿಸಿ, ಗ್ರಾಮದ ದೇವಸ್ಥಾನಗಳಿಗೆ ಹಣ್ಣು-ಕಾಯಿ ಅರ್ಪಿಸಿ ಪ್ರಸಾದ ತಂದು ಕೊಟ್ಟಿಗೆಯ ಪೂಜೆಗೆ ಮುಂದಾಗುವುದು ಕ್ರಮ.

ಮನೆಯ ಯಜಮಾನ ಕೊಟ್ಟಿಗೆಗೆ ಬಂದು, ಮಣೆಯಮೇಲೆ ಗಣಪತಿಯ ಮಂಡಲ ಬರೆದು ಮೊದಲಾಗಿ ಆತನನ್ನು ಪೂಜಿಸಿ, ನಂತರ ದನಕರುಗಳ ಮೈ,ಕಾಲು-ಬಾಯಿ ಇವುಗಳನ್ನೆಲ್ಲಾ ಸಾಂಕೇತಿಕವಾಗಿ ತೊಳೆದಮೇಲೆ ಅವುಗಳಿಗೆ ಗಂಧ, ಅರಿಶಿನ, ಕುಂಕುಮ, ಅಕ್ಷತೆ ಹಚ್ಚುತ್ತಾನೆ. ನಂತರ ಅಡಿಕೆಯ ಸರ ಹಾಗೂ ಚಾಟಿ[ ಅಡಿಕೆ, ವೀಳ್ಯದೆಲೆ, ಶಿಂಗಾರ, ತೆಳ್ಳವು ಎಂಬ ದೋಸೆ [ಇದು ಕೆಲವು ಕಡೆ ಇಲ್ಲ] ಇವುಗಳನ್ನೆಲ್ಲಾ ಸೇರಿಸಿ ಮಾಡಿದ ಮಾಲೆಯ ಥರದ್ದು] ಕಟ್ಟುವುದು. ನಂತರ ಧೂಪಾರತಿ. ಹಣ್ಣು-ಕಾಯಿ ಮತ್ತು ಗೋಗ್ರಾಸ[ಅನ್ನಕ್ಕೆ ತುಪ್ಪ, ಬೆಲ್ಲ, ಬಾಳೆಹಣ್ಣು, ಕಾಯಿತುರಿ ಸೇರಿಸಿ ಪಾಕ ಬರಿಸಿದ್ದು] ನಿವೇದಿಸಿ, ಗೋಗ್ರಾಸವನ್ನು ದನಕರುಗಳಿಗೆ ತಿನ್ನಲು ಕೊಡುತ್ತೇವೆ. ನಂತರ ಮತ್ತೆ ಅವುಗಳ ಬಾಯಿ ತೊಳೆದು ಮಂಗಳಾರತಿ. ಇದಾದಮೇಲೆ ಮಾತುಬಾರದಿದ್ದರೂ ಜೀವನದಲ್ಲಿ ಎರಡನೆಯ ಅಮ್ಮನಾಗಿ ಜೀವಿತದುದ್ದಕ್ಕೂ ಹಾಲುಣಿಸುವ ಗೋವಮ್ಮನಲ್ಲಿ ಪ್ರಾರ್ಥನೆ. ವರ್ಷವಿಡೀ ಹುಲ್ಲಿಗಾಗಲೀ ನೀರಿಗಾಗಲೀ ಚಿಂತಿಸದಿರು ಎಂಬ ಮನೋನಿವೇದನೆ. ಪ್ರಸಾದ ಸ್ವೀಕರಣೆಯಾದ ಮೇಲೆ ಜೋರಾಗಿ ಜಾಗಟೆಬಡಿಯುತ್ತಾ ದನಕರುಗಳನ್ನು ಹಗ್ಗದಿಂದ ಬಿಡಿಸಿ ಗೋಮಾಳಕ್ಕೆ ಕಳುಹಿಸುವುದು. ನಂತರ ಪ್ರಾದೇಶಿಕವಾಗಿ ಅಲ್ಲಲ್ಲಿಯ ಚೌಡಿ, ನಾಗ, ಹುಲಿಯಪ್ಪ ಹೀಗೇ ಎಲ್ಲಾ ದೇವರಿಗೂ ದನಕರುಗಳ ಸಂಖ್ಯೆಯಷ್ಟೇ ಕಾಯಿ ಒಡೆದು ಅವುಗಳ ಉಳಿವನ್ನು ಬಯಸಿ ಪ್ರಾರ್ಥಿಸುವಷ್ಟರಲ್ಲಿ ಮಧ್ಯಾಹ್ನದ ಭೋಜನದ ಸಮಯವಾಗಿರುತ್ತದೆ.

ಇದು ನಮಗೆ ಆ ಮೂಕ ಪ್ರಾಣಿಯ ಜೊತೆಗಿರುವ ಅವಿನಾಭಾವ ಸಂಬಂಧಕ್ಕೆ ಕೃತಜ್ಞತೆ ಸಲ್ಲಿಸುವ ಕ್ರಮವಾಗಿದೆ. ದಿನಂಪ್ರತಿ ಇಷ್ಟೆಲ್ಲಾ ಮಾಡಲು ಸಾಧ್ಯವೇ ? ಹಾಗಂತ ಅವುಗಳಿಗೂ ಮನ್ನಣೆ, ರಕ್ಷಣೆ ಎಲ್ಲವನ್ನೂ ತೋರಬೇಕಲ್ಲವೇ ? ತನ್ನ ಎಳೆಗರುವನ್ನು ತನ್ನ ಮುಂದೇ ದರದರನೆ ಎಳೆದು ಪಕ್ಕಕ್ಕೆ ಕಟ್ಟಿ ತನ್ನ ಹಾಲು ಹಿಂಡಿಕೊಳ್ಳುವಾಗ ಬೇಡವೆನ್ನುವುದಿಲ್ಲ ಆ ತಾಯಿ. ಹೋರಿಗರುವನ್ನು ನೀಡಿ ಅವುಗಳ ಭುಜಬಲದಿಂದ ಗದ್ದೆಯನ್ನು ಹಸನುಮಾಡಲು ಅನುಕೂಲ ಕಲ್ಪಿಸುವುದೂ ಅವಳ ಸಹಾಯ. ಬೇಕಾದ ಹೈನಕ್ಕೆ, ಗೊಬ್ಬರಕ್ಕೆ ಎಲ್ಲಕ್ಕೂ ಗೋವೇ ಮೂಲವಾಗಿ ಗೋವಾಧಾರಿತ ಜೀವನ ಕೃಷಿಕನದಾಗಿದೆ. ಅವಳ ಉಪಕಾರ ಸ್ಮರಣೆಗಾಗಿ ಈ ಕಾರ್ಯ.

ಬಲೀಂದ್ರ ವಿಸರ್ಜನೆ

ಮೂರನೇ ದಿನದ ಸಾಯಂಕಾಲ ಬಲೀಂದ್ರನಿಗೆ ಮತ್ತೆ ಪೂಜೆ. ಕೆಲಸಗಾರರು ಹಿಂದೆಲ್ಲಾ ಪ್ರೀತಿಯಿಂದ ಹಬ್ಬಗಾಣಿಕೆ ನೀಡುತ್ತಿದ್ದರು. ಹಾಗೆ ಬಂದ ಹಬ್ಬಗಾಣಿಕೆ ಹಣ್ಣು-ಕಾಯಿ-ಮರದ ಸಾಮಾನುಗಳನ್ನು ಬಲೀಂದ್ರನಿಗೆ ಅರ್ಪಿಸುವುದು ನಡೆದು ಬಂದಿತ್ತು. ಒಟ್ಟಾರೆ ಬಂದು, ಮೂರುದಿನ ನಮ್ಮ ಮನೆಗಳಲ್ಲಿದ್ದು, ನಮ್ಮ ಹಬ್ಬವನ್ನು ಚೆನ್ನಾಗಿ ನಡೆಸಿಕೊಟ್ಟು, ಅದನ್ನು ಸಾಕ್ಷೀಕರಿಸಿ ಮರಳುವ ದೊರೆರಾಯನಿಗೆ ಹಾರ್ದಿಕ ಬೀಳ್ಕೊಡುಗೆಯ ತಯಾರಿ. ಹಣ್ಣು-ಕಾಯಿ-ಹಾಲು ನೈವೇದ್ಯ. ನಾಲ್ಕಾರು ವಿಧದ ಮಂಗಳಾರತಿ. ಪ್ರಾರ್ಥನೆ. ನಂತರ ಪ್ರಸಾದ ಸ್ವೀಕರಿಸಿ, ಸಾಂಕೇತಿಕವಾಗಿ ಕುಳಿತ ಸ್ಥಾನದಿಂದ ವಿಸರ್ಜನೆ. ಆಮೇಲೆ ದೊಂದಿಗಳು, ಕರ್ಪೂರ ಜ್ಯೋತಿಗಳು, ತಾಳ, ಜಾಗಟೆ, ಶಂಖ ಮೊದಲಾದ ಹಲವು ಮನೆವಾದ್ಯಗಳೊಂದಿಗೆ ಅಡಿಕೆಗೊನೆಯನ್ನು ಎಬ್ಬಿಸಿ ನಿಧಾನಕ್ಕೆ ಕೊಂಡೊಯ್ದು ತುಳಸಿಯ ಮುಂದೆ ಕೂರಿಸುವುದರೊಂದಿಗೆ ಬಲಿಚಕ್ರವರ್ತಿ ಪಾತಾಳಕ್ಕೆ ಮರಳುತ್ತಾನೆಂಬ ಐತಿಹ್ಯ. ಆತನ ಮೈಮೇಲಿನ ಪ್ರಸಾದವನ್ನು " ಕಟ್ಟಿದ್ದೇ ಕರೆಯಲಿ, ಬಿತ್ತಿದ್ದೇ ಬೆಳೆಯಲಿ ಬಲೀಂದ್ರನ ರಾಜ್ಯವೇ ಆಗಲಿ " ಎನ್ನುತ್ತಾ ಮನೆಯ ಛಾವಣಿಯ ಮೇಲೆ ಎಸೆದು ಪ್ರಾರ್ಥಿಸುವುದು ನಮ್ಮ ಅನ್ಯೋನ್ಯತೆ! ಹೀಗೇ ಮೂರುದಿನಗಳ ರಾಜ್ಯಭಾರದ ಭಾಗ್ಯವನ್ನು ಪಡೆದ ಬಲೀಂದ್ರ ಇವತ್ತಿಗೂ ಭಾರತದಾದ್ಯಂತ ಜನಮಾನಸದಲ್ಲಿ ಸಲ್ಲುವ ಚಕ್ರವರ್ತಿ.

ಇಂದಿನಿಂದ ಆರಭ್ಯ ಕಾರ್ತೀಕ ಮಾಸ ಪೂರ್ತಿ ಪಿತೃಗಳ ನೆನಪಿಗಾಗಿ, ಸ್ವರ್ಗದಲ್ಲಿರುವ ಪೂರ್ವಜರಿಗಾಗಿ ಮುಡಿಪಾಗಿಡುವ ಆಕಾಶಬುಟ್ಟಿಗಳನ್ನು ಎತ್ತರದಲ್ಲಿ ಕಟ್ಟಿ ಅದರಲ್ಲಿ ವಿದ್ಯುದ್ದೀಪ ಉರಿಸಲಾಗುತ್ತದೆ [ಹಿಂದಕ್ಕೆ ಅವುಗಳಲ್ಲೂ ಎಣ್ಣೆಯ ದೀಪಗಳನ್ನೇ ಉರಿಸುತ್ತಿದ್ದರಂತೆ!]

ಈ ನಡುವೆ ಕೆಲವುಕಡೆ ಮೂರನೇ ದಿನ ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿದ ನೆನಪಿಗೆ ಗೋವರ್ಧನ ಪೂಜೆಯನ್ನೂ ಸಾಂಕೇತಿಕವಾಗಿ ನಡೆಸುತ್ತಾರೆ. ಮೂರನೇ ದಿನದ ಮಾರನೇ ದಿನ ನಮ್ಮೂರ ಕಡೆಯಲ್ಲಿ ದೇವರ ಹಬ್ಬ! ಅಂದರೆ ಇಲ್ಲೀತನಕ ಮಾಡಿದ್ದು ದೇವರ ಹಬ್ಬವಲ್ಲವೇ ? ಹಾಗಲ್ಲ ಸ್ವಾಮೀ, ಇದು ದೇವಸ್ಥಾನಗಳಲ್ಲಿ ನಡೆಯುವಂಥದ್ದು. ಗ್ರಾಮದಲ್ಲಿ ಸಾಧ್ಯವಾದ ಎಲ್ಲರೂ, ನವದಂಪತಿಗಳೊಂದಿಗೆ ದೇವಸ್ಥಾನಗಳಿಗೆ ತೆರಳುತ್ತಾರೆ. ಅಲ್ಲಿ ಸರ್ವಾಭರಣ ಭೂಷಿತವಾದ ದೇವರ ದರ್ಶನ ಪಡೆದೆಯುತ್ತಾರೆ. ಸಾರ್ವತ್ರಿಕ ಪೂಜೆಯೊಂದು ನಡೆದು ಮಂಗಳಾರತಿಯಾಗಿ ಪ್ರಸಾದ ವಿತರಣೆಯಾಗುತ್ತದೆ. ಇಲ್ಲಿಗೆ ದೀಪಾವಳಿ ಇನ್ನು ಮುಂದಿನ ವರ್ಷ!


ಮೂರೂ ದಿವಸ ಜಾನಪದ ಆಟಗಳದ್ದೇ ಕಾರುಬಾರು. ಕಂಬಳಿಯಲ್ಲಿ ಅವಿತುಕೊಂಡವನಿಗೆ ಪಪ್ಪಾಯಿಯನ್ನು ಹೊಡೆಯುವ ಹೊಂಡೆ, ಈಡುಗಾಯಿ, ಕಬಡ್ಡಿ, ಓಟ, ಜಿಗಿತ, ಅದೂ-ಇದೂ ಎತ್ತುವುದು, ಎಣ್ಣೆಗಂಬ ಹತ್ತುವುದು....ಇವೇ ಮೊದಲಾದ ಆಟಗಳು. ಅನೇಕ ಕಡೆ ತಾಳಮದ್ದಲೆ, ಯಕ್ಷಗಾನಗಳು. ಹಲವು ವಿಧದ ಸ್ಪರ್ಧೆಗಳು. ಒಟ್ಟರ್ಥದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಪ್ರತೀದಿನ ಮನೋರಂಜನೆ. ಮೂರೂ ದಿನಗಳಂದು ಸಾಯಂಕಾಲ ದೀಪಗಳನ್ನು ಬೆಳಗುತ್ತಾರೆ. ಕಾರ್ತೀಕ ಮಾಸದ ಆರಂಭವಾಗುವುದರಿಂದ ಕೆಲವರು ದೇವಸ್ಥಾನಗಳಲ್ಲಿ ದೀಪೋತ್ಸವವನ್ನು [ಬಿದಿಗೆಯಿಂದ] ಆರಂಭಿಸುತ್ತಾರೆ. ಹಗಲು ಕಡಿಮೆಯಾಗಿ ಇರುಳ ಕತ್ತಲೆಯಲ್ಲಿ ಅನುಕೂಲಕ್ಕೂ ಅಲಂಕಾರಕ್ಕೂ ಆಗಲೆಂದು ಹಚ್ಚುವುದೇ ದೀಪ. ಈ ದೀಪ ಕೊಡುವ ಆನಂದವನ್ನು ವಿದ್ಯುದ್ದೀಪ ಕೊಡುವುದಿಲ್ಲ ಎಂದರೆ ತಪ್ಪಾಗಲಾರದೇನೋ. ಇಷ್ಟೆಲ್ಲಾ ಪುರಾಣ ಕೇಳಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು, ಅಭಿವಂದನೆಗಳು ಮತ್ತು ಹಾರ್ದಿಕ ಶುಭಾಶಯಗಳು.

Wednesday, November 3, 2010

ಬೆಳಗಲಿ ದೀವಿಗೆ ಹೃದಯದಲಿ


ಬೆಳಗಲಿ ದೀವಿಗೆ ಹೃದಯದಲಿ

ಅದೇ ರಾಗ ಅದೇ ತಾಳದಲ್ಲಿ ಹಾಡದೇ
ಬೇರೆ ಹಿಂದೋಳ ರಾಗದಲ್ಲಿ ಹಾಡುವುದಕೆ ಬರೆದೆ
ಆದರೆ ಹಿಂದೂ ಗೊತ್ತಿಲ್ಲ ಮುಂದೂ ಗೊತ್ತಿಲ್ಲ : ರಾಗವೇ ಗೊತ್ತಿಲ್ಲ
ನೂರಾವೊಂದು ಬಾರಿ ಬರೆದರೂ ಅದೇ ರಾಗ
ಬಂದರೂ ಬಂದೀತೆಂದು ಅನಿಸುತ್ತಿದೆ
ಅದಕ್ಕೇ ಖರಹರಪ್ರಿಯವನ್ನು ಸ್ವಲ್ಪ ಬದಲಾಯಿಸಿ
ಕಲಹಪ್ರಿಯ ರಾಗವೆಂದು ಬರೆದುಬಿಟ್ಟರೆ ಹೇಗೆ ?
ಪ್ಲಾನಿನಲ್ಲೇ ರಾತ್ರಿಯೆಲ್ಲಾ ತಲೆಯಲ್ಲಿ
ಯಾರೋ ಹುಳಬಿಟ್ಟ ಅನುಭವ !

ಹೋಗಲಿ ರಾಗಯಾವುದಾದರೇನು ಭಾವ ನವನವೀನ
ಎಂದುಕೊಂಡು ಬರೆಯಹೊರಟರೆ ತಂಗಿ-ಬಾವ
ಬರುತ್ತಾರೋ ಕೇಳೋ ಎಂಬ ಫೋನಿಗೆ ಕಿವಿಯಾನಿಸಿ
ಭಾವನೆಗಳ ಕಂತೆಯನ್ನು ಮೂಟೆಕಟ್ಟಿ
ಏಕ್ ದಂ ಹೊರಗೆಬಂದು ಕಾಲುಮಾಡಿದೆ
ಹೋಯ್ ತಂಗಿ-ಬಾವ ಹಬ್ಬಕ್ಕೆ ಬನ್ನಿ
ಅಸಲಿಗೆ ಹಬ್ಬ ಯಾವದಿನ ಶುರು ಮತ್ತು
ಯಾವದಿನ ಮುಕ್ತಾಯ ಏನೇನು ಕಾರ್ಯಕ್ರಮ
ಯಾವ ಕಜ್ಜಾಯ-ಸಿಹಿತಿನಿಸು ಇದೆಲ್ಲಾ ಗೊತ್ತಿರದ
ಕುಂಭಕರ್ಣ ಸಹೋದರ ನಾನು
ಹಾಗಂತ ರಾವಣನಲ್ಲ ವಿಭೀಷಣನೂ ಅಲ್ಲ
ಸ್ವಲ್ಪ ನಿದ್ದೆ ಜಾಸ್ತಿ ಅಷ್ಟೇ

ಏನೂ ಅಂದುಕೊಳ್ಳಬೇಡಿ ಪಟಾಕಿ ಅಂದರೆ
ನನಗೆ ಬೋ ಅಲರ್ಜಿ ಪಟಾಕಿಯಂತೇ
ಮೈಯ್ಯೆಲ್ಲಾ ಉರಿಯುತ್ತದೆ
ನಿದ್ದೆಮಾಡುವಾಗೆಲ್ಲಾ ಹಚ್ಚುತ್ತಾರೆ
ತಲೆಹಿಡುಕರು ಅವರಿಗೇನು ತಲೆಸರಿಯಿಲ್ಲವೇ ?
ಎಂದುಕೊಂಡು ಬೇಗ ಘಂಟೆಗೇ ಎದ್ದು
ಕಣ್ಣುಜ್ಜಿ ನೋಡುತ್ತೇನೆ
ಅಂಗಳತುಂಬಾ ರಂಗೋಲಿ
ಬಣ್ಣಬಣ್ಣದ ನಕ್ಷೆಗಳು
ಬದುಕು ರಂಜಿಪ ಚಿತ್ತಾರಗಳು
ಒಬ್ಬರಿಗಿಂತಾ ಒಬ್ಬರು ಮೇಲು ಭಲೇ ಇವರ
ಒಬ್ಬಟ್ಟು ತಿಂದು ಹೊಸಬಟ್ಟೆ ಉಟ್ಟು ಆಗಲೇ
ಸುರು ಹಚ್ಚಿಬಿಟ್ಟಿದ್ದಾರೆ ಹಬ್ಬದಾಚರಣೆಗೆ

ಸಿಗುವ ಮೂರೇ ದಿನ ಹಾಯಾಗಿ ಮಜವಾಗಿ
ಸುಬ್ರಾಯ ಮಾದೇವ ಸದಾಶಿವ
ಇವರೆಲ್ಲರ ಹಿಮ್ಮೇಳದಲ್ಲಿ ಕಳೆಯುತ್ತಿರುವಾಗ
ಎಣ್ಣೆಹನಿಸುವುದು ಅಭ್ಯಂಜನ ನಮ್ಮಲ್ಲಿಯ ಪತ್ರೊಡೆ
ಚೀನೀಕಾಯಿಯ ಸಿಹಿಗಡುಬು
ಕಣ್ ಕಣ್ ಬಿಡುತ್ತಾ ಕುಳಿತ ಬಾಜೀಬಲೀಂದ್ರ
ಹಣ್ಣಡಿಕೆ ಸಿಂಗಾರ ದನಮಾಲೆ ಹೂವು
ಭೂರಿಭೋಜನದ ಮೇಲೆ ಹುತುತು-ಕಬಡ್ಡಿ ಹೊಂಡೆಯಾಟ
ತಮಾಷೆಗೆ ಕುಸ್ತಿ ಬೈಠಕ್ಕಿನಲ್ಲಿ ತಾಳಮದ್ದಲೆ
ಯಕ್ಷಗಾನ ಕೆಲವರ ಲೋಕವನ್ನೇ ಮರೆವ ಇಸ್ಪೀಟಾಟ


ಸ್ನಾನಮಾಡಿಸಿ ಹುಬ್ಬು ಹಾಕಿ ಕೋಡಿಗೆ ಬಣ್ಣಬಳಿದು
ಚಂಡು ಹೂವಿನ ಮಾಲೆ ಚಾಟಿ ಅಡಿಕೆಸರ ಕಟ್ಟಿದಮೇಲಿನ ಗೋಪೂಜೆ
ಜಾಗಟೆ ಬಡಿದು ಓಡಿಸಿ ಗೋಮಾಳ
ಬೆದರಿದ ಹುಲ್ಲೆಗಳಂತಾದ ದನಗಳಿಗೆ
ಸಾಯಂಕಾಲ ಕೆಂಪು ಹಾನ ತೋರಿ ಕರೆತಂದು ಮತ್ತೆ
ಹಸನುಗೊಳಿಸಿದ ಕೊಟ್ಟಿಗೆಯಲ್ಲಿ ಕಟ್ಟಿ ಉಪಚಾರ
ಎಲ್ಲೆಲ್ಲೂ ಬೆಳಗುವ ದೀವಿಗೆಗಳು ಆಕಾಶಬುಟ್ಟಿ
ಒಂದೇ ಎರಡೇ ಹಲವು ಭಾವಗಳ ಭಾವಸಂಗಮ
ನಮ್ಮ ದೀಪಾವಳಿ ಅಡ್ವಾನ್ಸ್ ಆಗಿ ಹೇಳುತ್ತೇನೆ
ಎಲ್ಲರಿಗೂ ಶುಭತರಲಿ ಶುಭಾಶಯ

Tuesday, November 2, 2010

ವಾರಾನ್ನದ ಹುಡುಗರೂ ಮತ್ತು ಪ್ರಶಸ್ತಿಯ ಸರದಾರರೂ !



ವಾರಾನ್ನದ ಹುಡುಗರೂ ಮತ್ತು ಪ್ರಶಸ್ತಿಯ ಸರದಾರರೂ !

ಅನಿವಾರ್ಯವಾಗಿ ನಿಮ್ಮೊಡನೆ ಹಂಚಿಕೊಳ್ಳಬೇಕಾದ ಮನದ ಇಂಗಿತಗಳು ಕೆಲವು. ಸಮಾಜದ ಹತ್ತಾರು ಮುಖ-ಮಜಲುಗಳನ್ನು ಅವಲೋಕಿಸಿದಾಗ ಸಿಗುವ ಅನನ್ಯ ಅನುಭವ ಬರೇ ’ ಕುಳಿತೋದದೆಯುಂ ಕಾವ್ಯಪರಿಣತಮತಿಗಳ್’ ಎಂಬ ಮಾತಿಗೆ ಅಡ್ಡ ಬರುತ್ತವೇನೋ. ಕೆಲವನ್ನು ನಾವು ಅಗೆದು ತೆಗೆದು ಜಾಳಿಗೆಯಲ್ಲಿ ಜಾಲಾಡಿಸಿದಾಗ ಮಾತ್ರ ನಮಗೆ ಅವರ ಪರಿಣತಿಯಾಗಲೀ ಅಥವಾ ಇತಿಹಾಸದ ಕತ್ತಲೆಯ ಗರ್ಭದಲ್ಲಿ ನಡೆದುಹೋದ ನೈಜ ಕಥೆಗಳ ಹಂದರವಾಗಲೀ ನೋಡಸಿಗುತ್ತದೆ! ಅಂತಹ ಕೆಲವು ಘಟನೆಗಳನ್ನು ಅನಾವರಣ ಗೊಳಿಸುವ ಅನಿಸಿಕೆ ಅದಮ್ಯವಾಗಿ ಮನವನ್ನೆಲ್ಲಾ ಅಮರಿಕೊಂಡಾಗ ಹೀಗೆ ಬರೆಯುತ್ತಿದ್ದೇನೆ.

೩೦-೪೦ ವರ್ಷಗಳ ಹಿಂದಿನ ಕರ್ನಾಟಕ ಇಷ್ಟು ಸಿರಿವಂತರನ್ನು ಹೊಂದಿರಲಿಲ್ಲ, ಆ ವಿಷಯದಲ್ಲಿ ಈಗಲೇ ವಾಸಿ ಎನ್ನಬಹುದು. ಇವತ್ತು ಧನದ ಶ್ರೀಮಂತಿಕೆಯಿದೆ ಆದರೆ ಹೃದಯ ಸಿರಿವಂತಿಕೆಯ ಕೊರತೆ ಹಲವೆಡೆ ಕಾಣುತ್ತದೆ. ಅಂದು ಕರ್ನಾಟಕದ ಹಳ್ಳಿ ಹಳ್ಳಿಗಳು ರಸ್ತೆಗಳಿರದೇ, ಪ್ರಾಥಮಿಕ ಆರೋಗ್ಯ ಸೌಲಭ್ಯಗಳಿರದೇ ಇದ್ದವು. ಹಾಗಂತ ಹಳ್ಳಿಯ ಜನ ಭಾರತೀಯ ಆಯುರ್ವೇದವನ್ನು ಪಾರಂಪರ್ಯವಾಗಿ ನಡೆಸಿಬಂದ ಕೆಲವು ವೈದ್ಯರನ್ನು ಹೊಂದಿದ್ದರಿಂದ ಕಷ್ಟವೋ ಸುಖವೋ ಜೀವನ ನಡೆದುಹೋಯಿತು. ಯಾವುದೇ ಜಾತಿ ಮತಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ. ಸಹಜವಾಗಿ ಮನುಷ್ಯರು ಎಂದಿಟ್ಟುಕೊಳ್ಳೋಣ. ಆ ಮನುಷ್ಯರಲ್ಲಿ ಬಡತನ ಸದಾ ಕಾಡುವ ಸಮಸ್ಯೆಯಾಗಿತ್ತು. ಉಟ್ಟರೆ ಉಣಲಿಲ್ಲ, ಉಂಡರೆ ಉಡಲಿಲ್ಲ-ಹೀಗೇ ಬಹುತೇಕ ಹಳ್ಳಿಗಳು ಬಡವರನ್ನು ಹೊಂದೇ ಇದ್ದವು. ಆದರೂ ಇದ್ದುದರಲ್ಲೇ ತೃಪ್ತಿಪಡುವ, ಮನುಷ್ಯರ ಗುಣ-ನಡತೆ ಹಾಗೂ ಮಾನವೀಯ ಮೌಲ್ಯಗಳಿಗೆ ಬೆಲೆಕೊಡುವ ಸಮಾಜ ಅಂದಿಗಿತ್ತು. ದುಡ್ಡಿಲ್ಲದೇ ಇದ್ದರೂ ಕೆಲಸ ಪೂರೈಸಿಕೊಳ್ಳಬಹುದಾದ ಪರಸ್ಪರರ ಬಳಗವಿತ್ತು. ಅವರಿಗೆ ಇವರು ಇವರಿಗೆ ಅವರು ಎಂದು ಕೆಲಸಗಳಲ್ಲೂ ತಮ್ಮಿಂದ ತಾವೇ ತಮಗಾಗಿ ನಡೆಸಿಬಂದ, ಅಘೋಷಿತ ಕಾರ್ಯಕಾರೀ ಸಮಿತಿಯೊಂದು ಪ್ರತೀ ಹಳ್ಳಿಯಲ್ಲಿ ಕೆಲಸಮಾಡುತ್ತಿತ್ತು. ವಕೀಲರು-ನ್ಯಾಯಾಲಯ-ಆರಕ್ಷಕ ಠಾಣೆಗಳ ಅವಶ್ಯಕತೆಯಿಲ್ಲದೇ ಗ್ರಾಮದ ಕೆಲವು ಜನ ಹಿರಿಯರು ಸೇರಿ ಗೋತ್ತಾದ ಒಂದು ಕಟ್ಟೆಯೋ ಜಾಗವೋ ಅಲ್ಲಿ ಸೇರಿ ತಮ್ಮ ತೊಡಕುಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ದೇವರು-ದಿಂಡರು ಎಂಬ ಭಕ್ತಿ ಭಾವವೂ ಮತ್ತು ಹಾದಿ ತಪ್ಪಿದರೆ ಯಾರೂ ಕ್ಷಮಿಸಲಾರರು ಎಂಬ ಭಯವೂ ಇದ್ದುದರಿಂದ ಯಾರೇ ಆಗಲಿ ಯಾವುದೇ ಅಪಚಾರದ ಕೆಲಸಕ್ಕೆ ಕೈಹಾಕಲು ಹೆದರುತ್ತಿದ್ದರು.

ರಾಜಕೀಯದ ಕಲಿ ಕಾಲಿಟ್ಟಮೇಲೆ ಹಳ್ಳಿಗಳ ಸ್ಥಿತಿ ಬದಲಾಗಿಹೋಯಿತು. ಎಷ್ಟಪ್ಪಾ ಅಂದರೆ ಅಕ್ಕ ಪಕ್ಕದ ದಾಯಾದರು ಮುಖ ಮುಖ ನೋಡದಷ್ಟು ಬದ್ಧವೈರಿಗಳಾಗಿ ಮಾರ್ಪಟ್ಟರು. ಯಾರಿಗೂ ಕಷ್ಟದ ಕೆಲಸವಾಗಲೀ ಶ್ರಮಜೀವನವಾಗಲೀ ಬೇಕಾಗಿಲ್ಲ. ಕೃಷಿ ಪದಾರ್ಥಗಳಷ್ಟೇ ಬೇಕೇ ವಿನಃ ಅವುಗಳನ್ನು ಬೆಳೆಯುವ ಗೋಜಿಗೆ ಹೋಗದವರೇ ಜಾಸ್ತಿ. ಎಲ್ಲರೂ ಅಂಡೆಚಡ್ಡಿ[ಪ್ಯಾಂಟು] ಹಾಕಲು ತೊಡಗಿದರು. ಪ್ರತಿಯೊಬ್ಬರ ಕೈಗೂ ಗಡಿಯಾರ ಬಂತು. ಕೆಲಸವಿಲ್ಲದೆಯೂ ಪೇಟೆ ಸುತ್ತುವ ಬೂಟಾಟಿಕೆಯ ವ್ಯವಹಾರಸ್ಥರು ತಯಾರಾದರು. ಹಾಸಿಗೆಗೂ ಮೀರಿ ಕಾಲು ಚಾಚುವ, ಸಾಲಮಾಡಿಯೂ ಗಡಿಗೆ ತುಪ್ಪ ಸೇವಿಸುವ ಜನರ ಸಂಖ್ಯೆ ಬೆಳೆಯತೊಡಗಿತು. ಪ್ರತೀ ಸಣ್ಣ ತೊಡಕಿಗೂ ನ್ಯಾಯಾಲಯಗಳ ಮೊರೆಹೋಗುವ ಕಾಲ ಆರಂಭವಾಯಿತು. ಪರಸ್ಪರರಲ್ಲಿ ವಿಶ್ವಾಸ ಕಮ್ಮಿಯಾಯಿತು. ಬ್ರಿಟಿಷರ ಒಡೆದು ಆಳುವ ನೀತಿಯನ್ನು ನಮ್ಮ ದೃತಿಗೆಟ್ಟ ರಾಜಕಾರಣಿಗಳು ಮನೆಮನೆಗಳಲ್ಲೂ ಉಪಯೋಗಿಸಿ ಮನೆಗಳನ್ನೇ ಒಡೆದರು. ಗ್ರಾಮ್ಯ ಬದುಕಿನ ಸಹಜ ಸ್ಥಿತಿ ತನ್ನತನವನ್ನು ಕಳೆದುಕೊಂಡು ಪಟ್ಟಣದ ಕಡತಂದ ಅತಿನಾಗರಿಕ ಹುಚ್ಚು ಸಂಪ್ರದಾಯ, ಸಂವೇದನೆಗಳು ಅನುಕರಿಸಲ್ಪಟ್ಟವು. ಕಂಡಿದ್ದನ್ನೆಲ್ಲಾ ಕೊಳ್ಳುವ ಮತ್ತು ಪಕ್ಕದವರ ’ತೂಕ’ಕ್ಕಿಂತ ತಮ್ಮ ’ತೂಕ’ವನ್ನು ಹೆಚ್ಚಿಸಿ ಕೊಳ್ಳುವ ಪಟ್ಟಿಯಲ್ಲಿ ಹೇರಳವಾಗಿ ಬೆಳವಣಿಗೆ ಕಂಡುಬಂತು. ಸಮಾಜದಲ್ಲಿ ಯಾರೂ ಯಾರನ್ನೂ ಯಾವಕೆಲಸಕ್ಕೂ ನಂಬಿನಿಲ್ಲುವ ವಾತಾವರಣವೇ ಕಳೆದುಹೋಯಿತು. ಅದರ ಪರಿಣಾಮ ಕುರುಡು ಕಾಂಚಾಣ ಬೃಹದಾಕಾರ ತಳೆದು ಕುಣಿಯಹತ್ತಿತ್ತು. ಎಲ್ಲೆಲ್ಲೂ ದುಡ್ಡು ದುಡ್ಡು ದುಡ್ಡು. ಹಣವಿದ್ದರೆ ಮಾತ್ರ ಬೆಲೆ, ಇಲ್ಲದಿದ್ದರೆ ಆ ವ್ಯಕ್ತಿಗಿಲ್ಲ ಭುವಿಯಲ್ಲಿ ನೆಲೆ ಎಂಬಂತಹ ದಿನಗಳು ಬಂದವು. ಇದನ್ನೆಲ್ಲಾ ಪ್ರಸಕ್ತ ನಮ್ಮನ್ನಾಳುವ ರಾಜಕೀಯದವರಲ್ಲೂ, ನಮ್ಮಲ್ಲೂ ನಾವೇ ಕಾಣುತ್ತಿದ್ದೇವೆ. ಪರೋಕ್ಷ ನಾವೆಲ್ಲಾ ಕೆಲಸಕ್ಕೆ ಬಾರದ ಕತ್ತೆಗಳಾಗಿ ನಮ್ಮಿಂದಾರಿಸಲ್ಪಟ್ಟ ಕೆಲವರು ಹಲವಷ್ಟು ಹಡೆಯುವ ಕುದುರೆಗಳಾಗಿ ಪರಿಸ್ಥಿತಿ ಹಿಗ್ಗಾಮುಗ್ಗಾ ತೂಗುವುದನ್ನು ಕಂಡೂ ಅಯ್ಯೋ ಅನ್ನಿಸಿ ಸುಮ್ಮನಿರಬೇಕಾಗಿದೆ ಅಲ್ಲವೇ ?

ಈ ಎರಡು ಕಾಲಘಟ್ಟಗಳ ಜತೆಜತೆಗೆ ಅಂದಿನ ಹಾಗೂ ಇಂದಿನ ಕೆಲವು ಮಾನವೀಯ ಮೌಲ್ಯಾಧಾರಿತ ಘಟನೆಗಳನ್ನು ಈಗ ನೋಡೋಣ. ಮೊದಲನೆಯದು ವಾರಾನ್ನ. ಬಡ ವಿದ್ಯಾರ್ಥಿಗಳು ತಮ್ಮ ಮುಂದಿನ ಕಲಿಕೆಗಾಗಿ ತಮ್ಮ ತಂದೆ-ತಾಯಿಗಳಿಂದ ಬೀಳ್ಕೊಂಡು, ಪಟ್ಟಣಗಳಿಗೆ ಬಂದು ಅಲ್ಲಿ ಕಠಿಣ ಪರಿಶ್ರಮದಿಂದ ಓದನ್ನು ಮುಂದುವರಿಸಲು ನಿರ್ಧರಿಸಿ, ಸ್ಥಿತಿವಂತರ ಅಥವಾ ಸ್ವಲ್ಪ ಸ್ಥಿತಿವಂತರ ಮನೆಗಳಿಗೆ ಭೇಟಿ ನೀಡಿ ಅನ್ನ-ವಸತಿಗೆ ಕೋರಿಕೊಂಡು ವಾರದ ಏಳುದಿನಗಳಲ್ಲಿ ಒಂದೊಂದು ಮನೆಯನ್ನು ಗೊತ್ತುಪಡಿಸಿಕೊಂಡು ಮುನ್ನಡೆಯುವುದು ವಾರಾನ್ನದ ವ್ಯವಸ್ಥೆ. ಅವತ್ತಿನ ಕಾಲಕ್ಕೆ ಕೆಲವು ಮನೆತನಗಳಲ್ಲಿ ದಾನ-ಧರ್ಮ ಮತ್ತು ಅತಿಥಿ ಸತ್ಕಾರಕ್ಕೆ ಆದ್ಯತೆಗಳಿದ್ದವು. ಕೆಲವು ಮಧ್ಯಮವರ್ಗದ ಕುಟುಂಬಗಳೂ ದೊಡ್ಡಮನಸ್ಸಿನಿಂದ ಕುಗ್ರಾಮ-ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗಾಗಿ ವಾರಕ್ಕೊಂದು ದಿನ ಆಶ್ರಯನೀಡುತ್ತಿದ್ದರು. ಇನ್ನೂ ಕೆಲವರು ತಮ್ಮ ಮನೆಗಳಲ್ಲಿ ಅದೂ ಇದೂ ಕೆಲಸಮಾಡಿಸಿಕೊಂಡು ಒಂದುದಿನ ಅನ್ನ ಹಾಕುತ್ತಿದ್ದರು.

ಈ ವಾರಾನ್ನಕ್ಕೆ ಹೋಗುವ ಹುಡುಗರಿಗೆ ಬಹಳ ಇರುಸುಮುರುಸು. ಅನ್ನಹಾಕುವವರ ಋಣವನ್ನು ಭರಿಸುವುದು ಹೇಗೆ ಎಂಬ ಯೋಚನೆ ಕೆಲವರಲ್ಲಿರುತ್ತಿತ್ತು. ಕೆಲವು ಮನೆಗಳಲ್ಲಿ ಬಂದ ವಾರದ ಹುಡುಗರನ್ನು ಚೆನ್ನಾಗಿ ಕಂಡರೆ ಇನ್ನು ಕೆಲವು ಮನೆಗಳಲ್ಲಿ ಒಟ್ಟಾರೆ ಹಾಕಬೇಕಲ್ಲಪ್ಪಾ ಎಂಬ ಭಾವವಿರುತ್ತಿತ್ತು. ಕೆಲವೊಮ್ಮೆ ಸರದಿಯ ವಾರದ ಮನೆಯವರು ಅನಾರೋಗ್ಯದಿಂದಲೋ ಅಥವಾ ಬೇರೇ ಕಾರ್ಯಗಳಿಂದಲೋ " ನಾಳೆ ಬರಬೇಡ, ಮುಂದಿನವಾರ ಬಾ " ಎಂದುಬಿಟ್ಟರೆ ಆಗ ಆ ವಿದ್ಯಾರ್ಥಿಗೆ ಉಪವಾಸವೇ ಗತಿಯಾಗಿಬಿಡುತ್ತಿತ್ತು. ಅಪರೂಪಕ್ಕೊಮ್ಮೆ ತಮ್ಮ ಸಹಪಾಠಿಗಳ ತಂದೆ-ತಾಯಿಗಳು ಎಲ್ಲಾದರೂ ಒಪ್ಪಿ ಅನ್ನಹಾಕುವುದಾದರೆ ಹಾಗೆ ಉಪವಾಸವುಳಿಯಬೇಕಾಗಿ ಬರುವ ದಿನ ಅಂತಹ ಮನೆಗಳಿಗೆ ಹೋಗುತ್ತಿದ್ದರು. ತಾವೇ ಹೋಗಿ " ಊಟಕ್ಕೆ ಬರಲೇ " ಎಂದು ಕೇಳುವಾಗ ಅವರ ಮನೋಭಾವ-ನಿರ್ವಾಹವಿಲ್ಲದೇ ಕೇಳಿಕೊಳ್ಳುವ ಪರಿ ನೀವೇ ಊಹಿಸಿ. ಕೆಲವು ಮನೆಗಳಲ್ಲಿ ನಡುವಯಸ್ಸಿನ ಹುಡುಗರು ವಾರದ ಹುಡುಗರನ್ನು ಗೋಳುಹುಯ್ದುಕೊಳ್ಳುತ್ತಿದ್ದರು. ಇನ್ನು ಕೆಲವು ಮನೆಗಳಲ್ಲಿ ಮನೆಯೊಡೆಯ ಒಪ್ಪಿಕೊಂಡಿದ್ದರೂ ಹೆಂಗಸರು ಕರುಬುತ್ತಲೇ ಅನ್ನಹಾಕುತಿದ್ದರು. ಹಲವು ಮನೆಗಳಲ್ಲಿ ವಾರದ ವಿದ್ಯಾರ್ಥಿಗಳು ಹೂವಿನ ಗಿಡಗಳಿಗೆ ನೀರುಹಾಕುವುದು, ಬಾವಿಯಿಂದ ನೀರು ಸೇದಿ ಸಂಗ್ರಹಿಸುವುದು, ಬಟ್ಟೆ ಒಗೆಯುವುದು, ಸಾಮಾನು ತಂದುಕೊಡುವುದೇ ಮುಂತಾದ ಹಲವು ಕೆಲಸಗಳನ್ನು ಮಾಡಬೇಕಾದ ಪ್ರಮೇಯವಿತ್ತು. ಕೆಲವರು ಮಾತ್ರ ಇಂತಹ ವಿದ್ಯಾರ್ಥಿಗಳನ್ನು ದೇವರಂತೇ ಕಾಣುವ ಮನೋಧರ್ಮದವರಾಗಿದ್ದರು. ಅಂತೂ ಅಂದಿಗೆ ಕೊನೇಪಕ್ಷ ಅನ್ನಹಾಕುವ ಧಾರಾಳತನವಿತ್ತಲ್ಲ ಎಂಬುದೇ ಸಮಾಧಾನ.

ಹಾಗೆ ನೋಡಿದರೆ ಅಂದಿಗೆ ಅಡಿಗೆ ಪರಿಕರಗಳು, ಅನುಕೂಲತೆಗಳು ಕಮ್ಮಿ ಇದ್ದವು. ಇದ್ದಲು ಒಲೆ ಅಥವಾ ಸೀಮೆ ಎಣ್ಣೆ ಅಗ್ಗಿಷ್ಟಿಕೆಯನ್ನು ಬಳಸಿ ಆಹಾರ ಬೇಯಿಸಬೇಕಾಗಿತ್ತು. ಕೆಲವು ಕಡೆ ಕಟ್ಟಿಗೆಯ ಒಲೆಯೂ ಇದ್ದ ಕಾಲವದು. ಅಂದಿನ ಗೃಹಿಣಿಯರಿಗೆ ಶಾರೀರಿಕ ಅನಾನುಕೂಲವಿದ್ದರೆ ಇವತ್ತಿನ ರೀತಿ ಹಲವು ವೈದ್ಯಕೀಯ ಸವಲತ್ತುಗಳು ಇರಲಿಲ್ಲ. ಹಾಗಂತ ಅತಿರೇಕದ ಧಾವಂತವೂ ಇರದ ಜೀವನ ಅವರದಾಗಿತ್ತು. ತಮ್ಮ ಮಕ್ಕಳ ಜತೆಗೆ ಬಂದ ವಾರದ ವಿದ್ಯಾರ್ಥಿಯನ್ನೂ ಆತ್ಮೀಯವಾಗಿ ಕಂಡು ಉಣಬಡಿಸುವ ಕೆಲವರಿದ್ದರು.

ಒಮ್ಮೆ ಒಬ್ಬರು ಹೇಳಿದ್ದು-- ತಾವು ವಾರಾನ್ನ ಮಾಡುತ್ತಿರುವಾಗ ಒಂದು ದಿನ ಉಪವಾಸವಿರಬೇಕಾದ ಪ್ರಮೇಯ ಬಂದಿತ್ತು. ಯಾವ ಮನೆಯೂ ಗೊತ್ತಾಗಿರಲಿಲ್ಲ. ಸಹಪಾಠಿಯೊಬ್ಬನ ಸ್ನೇಹದಲ್ಲಿ ಆತನಲ್ಲಿ ನಿವೇದಿಸಿ " ಏ ನಿಮ್ಮಮ್ಮಂಗೆ ಹೇಳಿ ಊಟ ಹಾಕಲು ಕೇಳಿನೋಡುತ್ತೀಯೇನೋ " ಎಂದಿದ್ದಕ್ಕೆ ಆ ಹುಡುಗ ಒಪ್ಪಿ ತನ್ನ ಮನೆಯಲ್ಲಿ ಹೇಳಿಬಿಟ್ಟಿದ್ದಾನೆ. ಅವರು " ಆಗಲಿ ಆತ ಬರಲಿ " ಎಂದು ಹೇಳಿಕಳಿಸಿದ್ದಾರೆ. ಈತ ಹೋಗಿದ್ದಾಯ್ತು, ಹೋದಾಗ ಕಂಡಿದ್ದು ಅದು ಸಣ್ಣದೊಂದು ಮನೆ. ಅತಿ ದೊಡ್ಡ ಸಂಸಾರ. ಏಳೆಂಟು ಮಕ್ಕಳು-ಗಂಡ-ಹೆಂಡತಿ. ಅವರಿಗೇ ಬಡತನ. ಅಂಥದ್ದರಲ್ಲೂ ಆ ಮಹಾತಾಯಿ ತನ್ನಮಕ್ಕಳ ರೀತಿಯಲ್ಲೇ ಒಬ್ಬ ಉಂಡರೆ ದೇವರು ಉಂಡಂತೇ ಎಂಬ ಭಾವದಿಂದ ಬರಹೇಳಿದ್ದಳು! ಆಮೇಲೆ ಪ್ರತೀವಾರದ ಒಂದು ದಿನ ಅವರ ಮನೆಗೆ ಊಟಕ್ಕೆ ಹೋದಾಗ ಈತನಿಗೆ ಬಿಸಿಬಿಸಿ ಅನ್ನ ಬಡಿಸುತ್ತಿದ್ದರು. ಅಕ್ಕ ಪಕ್ಕದಲ್ಲಿ ಕುಳಿತುಕೊಳ್ಳುವ ತನ್ನ ಮಕ್ಕಳಿಗೆ ತಂಗಳನ್ನು ಬಡಿಸುತ್ತಿದ್ದಳು ಆ ಮಹಾತಾಯಿ. ಇದನು ಗ್ರಹಿಸಿದ ಈತ " ಯಾಕಮ್ಮಾ ನನಗೆ ಮಾತ್ರ ಬಿಸಿಬಿಸಿ ಅನ್ನ, ನಿಮ್ಮ ಮಕ್ಕಳಿಗೆಲ್ಲಾ ತಂಗಳನ್ನ ಹಾಕುತ್ತೀರಿ ? " ಎಂದಾಗ ಅವರೆಂದರು " ಅಯ್ಯಾ, ಅವರಿಗೆ ಅನಾರೋಗ್ಯವಾದರೆ ನೋಡಿಕೊಳ್ಳಲು ತಂದೆ-ತಾಯಿ ನಾವಿಲ್ಲೇ ಇದ್ದೇವೆ, ನಿನಗೆ ಅಪ್ಪಿ-ತಪ್ಪಿ ಅನಾರೋಗ್ಯವಾದರೆ ಯಾರುನೋಡಿಕೊಳ್ಳುವವರಿದ್ದಾರಪ್ಪ ? ಅದಕ್ಕೇ ಹಾಗೆ ಮಾಡುತ್ತಿದ್ದೇನಪ್ಪಾ, ಏನೂ ತೊಂದರೆಯಿಲ್ಲ ಬಿಡು. " ಆ ಮಾತನ್ನು ಕೇಳಿ ಈತನಿಗೆ ಅವರೂ ತನ್ನ ತಾಯಿಯಸಮಾನ ಎಂದೆನಿಸಿತು. ಸಹಜತಾನೇ ?

ಇನ್ನೊಂದು ದಿನ ಇದೇ ವಿದ್ಯಾರ್ಥಿಗೆ ಊಟವಿರಲಿಲ್ಲ. ಅನಿರೀಕ್ಷಿತವಾಗಿ ವಾರದಲ್ಲೊಂದು ದಿನ ಅನ್ನಹಾಕುವವರು ಎಲ್ಲಿಗೋ ಪ್ರಯಾಣ ಹೋಗಿದ್ದರಿಂದ ಅಂದಿಗೆ ಉಪವಾಸವೇ ಗತಿಯಾಗಿತ್ತು. ತಾಳದ ಹೊಟ್ಟೆಯ ತಾಳಕ್ಕೆ ತಕ್ಕಂತೇ ಒಂದಷ್ಟು ನೀರುಕುಡಿದು ಅನ್ನದ ಜಾಡನ್ನು ಹಿಡಿದು ಹೊರಟಿದ್ದನೀತ. ದಕ್ಷಿಣ ಕನ್ನಡದ ಪುಣ್ಯಾತ್ಮರೊಬ್ಬರ ಹೋಟೆಲ್ ಒಂದು ಕಾಣಿಸಿತು. ಹೇಳಿ-ಕೇಳಿ ದಕ್ಷಿಣ ಕನ್ನಡವೆಂದರೆ ಉತ್ಕೃಷ್ಟ ಆಹಾರ ತಯಾರಿಕೆಗೆ ಹೊಸ ವ್ಯಾಖ್ಯಾನ ಬರೆದ ಜಾಗತಾನೇ? ಅಲ್ಲಿನವರ ಹೋಟೆಲ್ ಕೂಡಾ ಹಾಗೇ ಇರುತ್ತವೆ. ಈ ಹುಡುಗ ಆ ಹೋಟೆಲ್ ಮುಂಭಾಗ ಒಂಡೆರಡು ಸಲ ಆಚೆ ಈಚೆ ಓಡಾಡಿದ. ಗಲ್ಲಾದಲ್ಲಿ ಕುಳಿತು ಹಣಸ್ವೀಕರಿಸುತ್ತಿದ್ದ ಮಹಾಬಲೇಶ್ವರ ಭಟ್ಟರಿಗೆ ಈತ ಕಂಡ. ಅವರಿಗೆ ಈತನ ಪರಿಚಯವಿತ್ತು. ಈತ ವಾರಾನ್ನಮಾಡಿ ವಿದ್ಯಾರ್ಜನೆ ಮಾಡುವ ಹುಡುಗ ಎಂದು ಹಿಂದೆ ಯಾರೋ ಹೇಳಿದ್ದರು. ಹಾಗೆ ಕಂಡ ಅವನನ್ನು ಅವರು ಒಳಗೆ ಕರೆದರು. " ಏನಪ್ಪಾ ಊಟವಾಯ್ತಾ ? " ಈತ ನಿರುತ್ತರನಾಗಿದ್ದ. ಅನ್ನ-ತಿಂಡಿ ತಯಾರಿರುವ ಹಾಗೂ ಅದನ್ನೇ ಉದ್ಯಮವಾಗಿಸಿಕೊಂಡಿರುವ ಜಾಗಕ್ಕೇ ಬಂದು ಬಿಟ್ಟಿಯಲ್ಲಿ ಅನ್ನಹಾಕಿ ಎಂದಹಾಗೆ ಆಗುತ್ತದೇನೋ ಎಂಬ ಭಾವನೆ ಈತನಿಗೆ. ಮಾತನಾಡದ್ದಕ್ಕೆ ಸಲುಗೆಯಿಂದ ಭಟ್ಟರು ಒಂದು ಬಿಟ್ಟರು ! ಹಸಿದ ಹೊಟ್ಟೆಯಲ್ಲೂ ಏನೋ ಚಳುಕು, ನೋವು. ಆಗ ಬಾಯಿಂದ ಬಂದಿದ್ದು " ಇಲ್ಲಾ ಸ್ವಾಮೀ, ಇವತ್ತು ವಾರದ ಸರದಿ ಮನೆಯವರು ಎಲ್ಲಿಗೋ ಹೋಗಿದ್ದಾರೆ. ಹೀಗಾಗಿ ಊಟವಿಲ್ಲ. " ಭಟ್ಟರು ಕುಳಿತಲ್ಲಿಂದಲೇ ಕೂಗಿ ಹುಡುಗನೊಬ್ಬನನ್ನು ಕರೆದರು. " ಹೇಯ್ ಬರ್ರೋ ಇಲ್ಲಿ, ಇವನನ್ನು ಕರೆದುಕೊಂಡು ಹೋಗಿ ಊಟಹಾಕಿ. "

ಊಟಮುಗಿಸಿದ ಸಂತೃಪ್ತ ಹೊಟ್ಟೆಯಲ್ಲಿ ಭಟ್ಟರನ್ನು ಮನದಲ್ಲೇ ಅಭಿನಂದಿಸುತ್ತಾ ಗಲ್ಲಾದ ಹತ್ತಿರ ಬಂದ ಈತನನ್ನು ಮತ್ತೆ ಹಿಡಿದುಕೊಂಡರು ಭಟ್ಟರು. " ಹೇಯ್ ನಿಲ್ಲಯ್ಯಾ, ಆಣೆ ಎಂದರೇನು ಗೊತ್ತೇನಯ್ಯಾ ನಿಂಗೆ? ನಿನ್ನ ಬಲಗೈಕೊಡು, ನನ್ನ ತಲೆಯಮೇಲೆ ಇಡು ಹೇಳು ಇವತ್ತಿನಿಂದ ಊಟವಿರದ ದಿನ ನಮ್ಮಲ್ಲಿಗೆ ಬಂದು ಊಟಮಾಡದೇ ಹೋದರೆ ಮಹಾಬಲೇಶ್ವರ ಭಟ್ಟರಮೇಲಾಣೆ. " ಒಂಥರಾ ಹೆದರಿಕೆಯಿಂದ ಹುಡುಗ ಹೇಳಿಕೊಟ್ಟಂತೇ ಮಾಡಿದ. ಆಮೇಲೆ ಹೇಳಿದರು " ನೋಡಯ್ಯಾ ಅಕಸ್ಮಾತ್ ನೀನು ಉಪವಾಸವಿದ್ದು ಆಣೆಮಾಡಿದ್ದನ್ನು ಮರೆತರೆ ಮಹಾಬಲೇಶ್ವರ ಭಟ್ಟರು ಸತ್ತುಹೋಗುತ್ತಾರೆ ತಿಳಿಯಿತೇ ? " ಹುಡುಗ ದಂಗಾಗಿ ಹೋಗಿದ್ದ. ಈ ಹುಡುಗ ಇನ್ನೂ ಜೀವಂತವಿದ್ದು ಹೆಸರ್ವಾಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ನೆಲೆನಿಂತ ಈತನೇ ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿರುವ ಶೀ ಮತ್ತೂರು ಕೃಷ್ಣಮೂರ್ತಿ. ಇಂತಹ ಸಾಮಾಜಿಕ ಕಳಕಳಿಯುಳ್ಳ, ಒಳ್ಳೆಯತನವನ್ನು ಪ್ರೋತ್ಸಾಹಿಸುವ ಹಲವು ಧಾರ್ಮಿಕ ಮನೋಭಾವದ ಜನ ಅಂದಿದ್ದರು. ಇದು ಒಂದು ಉದಾಹರಣೆಯಾದರೆ ಇಂತಹುದೇ ಅಸಂಖ್ಯ ಸಂಗತಿಗಳು ನೋಡಸಿಗುತ್ತವೆ. ವಾರಾನ್ನ ಕಲಿಸಿದ ವಿನಯ ವಿಧೇಯತೆ ಬಹಳ ಎಂದು ಪ್ರತೀ ವ್ಯಕ್ತಿಯ ಜೀವನವನ್ನು ತಿಳಿದಾಗಲೂ ನಮ್ಮರಿವಿಗೆ ಬರುತ್ತದೆ. ಜೀವನದಲ್ಲಿ ವಾರಾನ್ನದ ಹುಡುಗರು ಸಾಧಿಸಿದಷ್ಟು ಬೇರೆ ಹುಡುಗರು ಸಾಧಿಸಲಿಲ್ಲ ಎನ್ನುವದು ಕಂಡುಬರುತ್ತದೆ. ಕಲಿತು, ಬೆಳೆದು, ತಮ್ಮಕಾಲಮೇಲೆ ತಾವು ನಿಂತು, ದೇಶದ ಅತ್ಯುತ್ತಮ ಹುದ್ದೆಗಳನ್ನು ಅಲಂಕರಿಸಿದ ಅನೇಕ ಹುಡುಗರು ವಾರಾನ್ನದವರೆಂದರೆ ಆಶ್ಚರ್ಯವಾಗುತ್ತದಲ್ಲವೇ ?

ಇನ್ನೊಂದು ವಿಧದ ಬಗ್ಗೆ ಮಾತಾಡೋಣ. ಅದು ರಾಜಕೀಯದ ರುಶುವತ್ತು. ಇಂದು ಎಲ್ಲವೂ ಲಂಚಪ್ರಪಂಚ ! ಲಂಚಾವತಾರ ! ಲಂಚವಿಲ್ಲದೇ ಯಾವುದೂ ನಡೆಯುವುದಿಲ್ಲ ಎಂಬಷ್ಟು ಹಾಸುಹೊಕ್ಕಾಗಿದೆ ಲಂಚದ ಇರವು. ಬ್ರಷ್ಟಾಚಾರ ನಿರ್ಮೂಲನೆಯ ಕಾರ್ಯಕ್ರಮ ಉದ್ಘಾಟನೆಗೆ ಬಂದ ರಾಜಕಾರಣಿಗೆ ಮರಳುವಾಗ ಅಲ್ಲೇ ಸಿಕ್ಕು ಯಾವುದೋ ಕೆಲಸಮಾಡಿಸಿಕೊಳ್ಳಲು ಲಂಚ. ನೌಕರಿ ಗಿಟ್ಟಿಸಲು, ಸಿಕ್ಕಿದ ನೌಕರಿಯಲ್ಲಿ ಮುಂಬಡ್ತಿಪಡೆಯಲು, ಬೇಕಾದ ಜಾಗಕ್ಕೆ ವರ್ಗಾಯಿಸಿಕೊಳ್ಳಲು, ಡೊನೇಶನ್ ಹಣಗಳಿಸಲು ಕಳಪೆ ವಿದ್ಯಾಸಂಸ್ಥೆಗಳನ್ನು ಆರಂಭಿಸಿದ್ದಕೆ ಪರವಾನಿಗೆ ಪಡೆಯಲು ಈಗ ಇದೆಲ್ಲವೂ ಮುಗಿದು ಪ್ರಶಸ್ತಿ-ಪುರಸ್ಕಾರಗಳಿಗೆ ಲಾಬಿ ನಡೆಯುತ್ತಿದೆ! ಅದಕ್ಕೂ ಲಂಚ. ಅರ್ಹತೆಗೆ ಮೀರಿದ ಗೌರವವನ್ನು ಕೊಂಡುಕೊಳ್ಳುವ ಪರಿಪಾಠ! ಎಂಥಾ ವಿಪರ್ಯಾಸ ನೋಡಿ.

ನಮ್ಮ ಊರಲ್ಲೆಲ್ಲಾ ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಊಟಮಾಡುವಾಗ ಮದುವೆಮನೆಯವರು ಬಂದು ಊಟದ ಜಾಗಕ್ಕೆ ಕರೆಯಬೇಕಿತ್ತು. ಬದಲಾದ ರೀತಿಯಲ್ಲಿ ಇಂದು ನಾವು ತಟ್ಟೆಹಿಡಿದು ಬೇಡಿ ತಿನ್ನುವ ’ಬಫೆ’ ಯನ್ನು ಸ್ವೀಕರಿಸಿದ್ದೇವೆ. ಜಾಗ ಜಾಸ್ತಿ ಇಲ್ಲದ ಜಾಗದಲ್ಲಿ ಅದು ಅನುಕೂಲವೇ ಆದರೂ ನಮ್ಮ ಆಯುರ್ವೇದ ಸಾರುವುದು ನಿಂತು ಏನನ್ನೂ ತಿಂದು-ಕುಡಿದು ಮಾಡಬೇಡಿ ಎಂಬುದಾಗಿ. ಆದರೆ ಅದನ್ನೆಲ್ಲಾ ಕೇಳುವವರಾರು? ನಿನ್ನೆ ನನಗೆ ಒಬ್ಬರು ಸಿಕ್ಕರು ಮತ್ತು ಹೇಳಿದರು " ಏನಿಲ್ಲಾ ಸರ್ ಎಲ್ಲರಿಗೂ ಹೇಳ್ಬುಟ್ಟಿದ್ದೀನಿ, ಆಫೀಸಲ್ಲಿ ಎಲ್ಲರೂ ಅವರವರ ಸಂಬಳದಲ್ಲಿ ೫೦೦ ರೂಪಾಯಿ ಕೊಡಿ ಅಂತ. ಕನ್ನಡದ ಯಾವುದಾದರೂ ಚಿತ್ರವನ್ನು ಇಟ್ಟು ಒಂದು ಮಾಲೆ ಹಾಕಿ, ಒಂದೊಂದು ಸ್ವೀಟ್ ಕೊಟ್ಟು, ಒಂದುದ್ದ ಸರ ಪಟಾಕಿ ಹಚ್ಬುಡ್ತೀವಿ, ಅಲ್ಲಿಗೆ ಯಾರೂ ಮಾತಾಡೋ ಹಾಗೇ ಇಲ್ಲ ಏನಂತೀರಾ ? " . ನಾನು ಹೌದು ಅನ್ನಲೋ ಅಲ್ಲ ಅನ್ನಲೋ ತಿಳಿಯದಾದೆ. ಯಾಕೆಂದರೆ ಆಚರಣೆಗಳೆಲ್ಲಾ ಡಾಂಭಿಕವಾದಾಗ ಅದರಲ್ಲಿ ಮಹತ್ತರ ಸಾಧನೆಯೇನಿದೆ? ಈಗ ಎಲ್ಲವೂ ಅಷ್ಟೆ ಒಂದು ಸಿನಿಮಾ ಅಂದರೆ : ಕೆಲವು ಮರಸುತ್ತುವ ಹಾಡುಗಳು, ಒಂದೆರಡು ಫೈಟು, ಒಂದು ಕ್ಲೈಮ್ಯಾಕ್ಸು -ಎಂದು ಯಾರೋ ಹೇಳಿದ್ದು ನೆನಪಿಗೆ ಬಂತು. ಎಲ್ಲವೂ ಹೀಗೇ ಆಗಿಬಿಟ್ಟಿವೆ. ಅದರಂತೇ ನಮ್ಮ ಪ್ರಶಸ್ತಿ, ದಾಖಲೆಗಳು, ಡಾಕ್ಟರೇಟ್ ಮುಂತಾದವುಗಳೆಲ್ಲಾ ಸೇರಿಕೊಂಡು ಅಣಕಿಸಿದಂತೇ ಆಗುತ್ತದೆ.

ಬದುಕಿನಲ್ಲಿ ಏನಾದರೂ ಅನುಸರಿಸುವುದಿದ್ದರೆ ಅದನ್ನು ಕಾರಂತ, ಬೇಂದ್ರೆ ಮತ್ತು ಡೀವಿಜಿಯವರಿಂದ ಕಲಿಯಬೇಕಾಗಿತ್ತು. ಇಂದಿಗೆ ಅವರು ಅಮರರು ಹೀಗಾಗಿ ಅವರ ಕೃತಿಗಳಲ್ಲಿ ಅವರ ಜೀವನಚರಿತ್ರೆಗಳಲ್ಲಿ ಆದಷ್ಟೂ ನೋಡಿ ತಿಳಿದುಕೊಳ್ಳುವುದು ಬಹಳ ಇದೆಯೆನಿಸುತ್ತದೆ. ಮೀಸಾ ಕಾಯಿದೆಯನ್ನು ಜಾರಿಗೆತಂದ ಸಮಯದಲ್ಲಿ ಕೇಂದ್ರ ಸರಕಾರ ಕೊಟ್ಟ ಪುರಸ್ಕಾರವನ್ನು ನೇರವಾಗಿ ಶ್ರೀಮತಿ ಇಂದಿರಾಗಂಧಿಯವರಿಗೆ ಬಿಸಾಕಿದ ಹೆಗ್ಗಳಿಕೆ ಕಾರಂತರದು! ಬ್ರಿಟಿಷರು ತಪ್ಪಾಗಿ ತಿಳಿದು ಶಿಕ್ಷಿಸಿದಾಗಲೂ ಸಹಿಸಿ ಸಾಹಿತ್ಯ ಮುಂದುವರಿಸಿದ ಮತ್ತು ಯಾವುದೇ ಪ್ರಶಸ್ತಿಗಾಗಿ ಹಲ್ಲುಗಿಂಜುವ ಕೆಲಸಮಾಡದವರು ಬೇಂದ್ರೆ. ಅಭಿಮಾನಿಗಳು ಸನ್ಮಾನಿಸಿ ಕೊಟ್ಟ ಒಂದುಲಕ್ಷರೂಪಾಯಿಯ [೩೫ ವರ್ಷಗಳ ಹಿಂದೆ] ಹಣವನ್ನು ಸಾರ್ವಜನಿಕ ಸೇವೆಗೆ ಮುಡಿಪಾಗಿಸಿದವರು ಡೀವೀಜಿ. ಮಾಸಾಶನ ಕೊಡುವುದಕ್ಕೆ ಆಸ್ತಿವಿವರದ ಅರ್ಜಿ ಕೇಳಿ ಡಾ| ಕೆರೆಮನೆ ಮಹಾಬಲ ಹೆಗಡೆಯವರಿಗೆ ಸರಕಾರದ ಪತ್ರಬಂದಾಗ ಅವರು ಹೇಳಿದ್ದಿಷ್ಟು: " ಕಲಾವಿದನೊಬ್ಬನಿಗೆ ಮಾಸಾಶನವನ್ನು ಆತನ ಕಲಾಸೇವೆ ನೋಡಿ ಕೊಡುವುದಾದರೆ ಅದು ಸರಿ, ಆಸ್ತಿಯವಿವರ ಕೇಳಿ ಅರ್ಜಿ ಪಡೆದು ಕೊಡುವುದಾದರೆ ಅದಕ್ಕೆ ನನ್ನ ಧಿಕ್ಕಾರವಿದೆ". ಹುಟ್ಟಾ ಕಡುಬಡತನದಿಂದ ಬಂದ ಹೆಗಡೆ ರಂಜಿಸಿದ ಜನರ ಸಂಖ್ಯೆ ಅಪಾರ. ಅವರ ಕಲಾಸೇವೆ ಅಮೋಘ. ಆದರೆ ಕುರುಡು ಸರಕಾರಕ್ಕೆ ಅಂದು ಕಣ್ಣಿರಲಿಲ್ಲವಲ್ಲ! ಇಂತಹ ಘನತೆವೆತ್ತ ಜನರನ್ನು ನಾನು ಬೇರೆಲ್ಲೂ ಕಾಣಲಿಲ್ಲ. ಇವರನ್ನೆಲ್ಲಾ ಪಡೆದುದು ನಮ್ಮ ಭಾಗ್ಯ.

ಆದರೆ ಈಗ ಎಲ್ಲವೂ ತಂತ್ರ-ಪ್ರತಿತಂತ್ರ-ಕುತಂತ್ರ ರಾಜಕಾರಣಿಗಳ ತಹಬಂದಿಯಲ್ಲಿ ಲಂಚದ ಮೂಲಕವೇ ನಡೆಯುವ ಕೆಲಸಗಳು ಹಲವು. ಪ್ರಶಸ್ತಿಗಾಗಿ ಅರ್ಜಿ ಸ್ವೀಕರಿಸುವುದು ಎಂಥಾ ನಾಚಿಕೆಗೇಡು! ಹಾಗೆ ಅರ್ಜಿ ಕೊಡುವ ಜನರಿಗಾದರೂ ಮಾನ ಮರ್ಯಾದೆ ಬೇಡವೇ ? ತನಗೆ ರಾಜ್ಯೋತ್ಸವ ಪ್ರಶಸ್ತಿಕೊಡಿ ತನಗೂ ಕೊಡಿ ಎಂದು ೩೫೦೦ ಜನ ಅರ್ಜಿಹಾಕಿದ್ದರಂತೆ. ಅದರಲ್ಲಿ ಕೆಲವನ್ನು ಆರಿಸಲಾಯಿತಂತೆ. ಸರಕಾರ ಆಯ್ಕೆಗಾಗಿ ಲಾಬಿಮಾಡದ, ಲಂಚಹೊಡೆಯದ, ಯಾರದೇ ಸಂಪರ್ಕಕ್ಕೆ ಸಿಗದ ಒಂದು ಸಮಿತಿಯನ್ನು ನೇಮಕಮಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲವೇ ? ಆ ಸಮಿತಿ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಮಾಹಿತಿಯನ್ನು ಗೌಪ್ಯವಾಗಿ ಕಲೆಹಾಕಿ ಆಮೇಲೆ ಕ್ರೋಢೀಕರಿಸಿದ ದಾಖಲೆಗಳನ್ನೆಲ್ಲಾ ತೆಗೆದು ಪರಿಶೀಲಿಸಿ ಪರಿಷ್ಕರಿಸಿ ಪ್ರಶಸ್ತಿಗೆ ಅರ್ಹರಾದವರ ಯಾದಿಯನ್ನು ನಂತರ ಬಿಡುಗಡೆಗೊಳಿಸಿದ್ದರೆ ಬಹುಶಃ ಇಂತಹ ಹಾಸ್ಯಾಸ್ಪದ ಸನ್ನಿವೇಶದ ಸೃಷ್ಟಿಯ ಪುನರಾವರ್ತನೆಯಾಗುತ್ತಿರಲಿಲ್ಲ. ಸರಕಾರ ಹಾಗೆ ಮಾಡುವುದಿಲ್ಲ. ಯಾಕೆ ಗೊತ್ತೇ ? ಇಲ್ಲೂ ಲಂಚಾವತಾರ!

ಇನ್ನು ಕಾಣದ ಲೋಕದಿಂದ ರಂಭೆ, ಮೇನಕೆ, ಊರ್ವಶಿ, ತಿಲೋತ್ತಮೆ ಇವರೆಲ್ಲಾ ಧರೆಗೆ ಬಂದಂತೇ ಯಾವುದೋ ಕಣ್ಣಿಗೇ ಕಾಣದ ದೂರದೇಶದಲ್ಲಿರುವ ವಿಶ್ವವಿದ್ಯಾಲಯವೊಂದೆರಡು ನಮ್ಮ ರಜಕಾರಣಿಗಳಿಗೆ ನಮ್ಮ ಸಿನಿಮಾತಾರೆಯರಿಗೆ ರಾತ್ರೋರಾತ್ರಿ ಗೌರವ ಡಾಕ್ಟರೇಟ್ ಕೊಟ್ಟುಬಿಡುತ್ತಾರೆ! ಅವರ ದೇಶದಲ್ಲಿ ಅಲ್ಲಿನ ಪ್ರಜೆಗಳು ಪ್ರಾಯಶಃ ಈ ವ್ಯಕ್ತಿಗಳ ಹೇಸರನ್ನೇ ಕೇಳಿರುವುದಿಲ್ಲ! ಇನ್ನು ಜಾಗತಿಕ ಮಟ್ಟದಲ್ಲಿ ಇವರು ಮಾಡಿರುವ ಘನಂದಾರಿ ಕೆಲಸಗಳು ಯಾವುದೂ ಕಾಣಿಸುವುದಿಲ್ಲ. ಒಟ್ಟಾರೆ ಈ ಡಾಕ್ಟರೇಟ್ ಕೊಡಿಸುವಿಕೆಯಲ್ಲಿ ಯಾವುದೋ ಮಧ್ಯವರ್ತಿಗಳು ವೈಯಕ್ತಿಕ ಹೊರಗುತ್ತಿಗೆ ಪಡೆಯುತ್ತಾರೆ ಎಂಬುದರಲ್ಲಿ ಎರಡುಮಾತಿಲ್ಲ ! ಹೀಗೆ ಕೊಡಲ್ಪಡುವ ಡಾಕ್ಟರೇಟ್ ಸದ್ಯ ಯಾರ್ಯಾರಿಗೆ ಬಂತೆಂದು ತಮಗೆಲ್ಲಾ ಹೊಸದಾಗಿ ಹೇಳಬೇಕೆ ? ಇವರಿಗಿಂತ ರಸ್ತೆಬದಿಯಲ್ಲಿ ಅಂಗಡಿ ತೆರೆದು ವೈದ್ಯಕೀಯ ಶಿಕ್ಷಣ ಪಡೆಯದಿದ್ದರೂ ತಾನು 'ಡಾಕ್ಟರ್' ಎಂದು ನಾಮಫಲಕ ಹಾಕಿಕೊಳ್ಳುವ ಡಾಕ್ಟರ್ ಗಳೇ ವಾಸಿ. ಯಾಕೆಗೊತ್ತೇ ? ಅವರು ಕೆಲವೇ ಜನರನ್ನು ಹಾಳುಮಾಡುತ್ತಾರೆ, ಆದರೆ ಈ ಗೌರವ ಡಾಕ್ಟರ್ ಗಳು ಸಮಾಜದ ಸಂಸ್ಕೃತಿಯನ್ನೇ ಬದಲುಮಾಡುತ್ತಾರೆ. ’ನಂದೋರಾಯನ ದರ್ಬಾರ ನಾಯಿ-ನರಿ ಪಾಲು’ ಎಂಬೊಂದು ಗಾದೆ ನೆನಪಿಗೆ ಬರುತ್ತಿದೆ. ಪ್ರಶಸ್ತಿಗೆ-ಫಲಕಕ್ಕೆ ಮುಗಿಬೀಳುತ್ತಿರುವ ಅನರ್ಹರು ಅದನ್ನು ಕೊಂಡುಕೊಳ್ಳಲು ಮುಂದಾಗುತ್ತಿರುವುದು ನವಸಮಾಜದ ಕೆಟ್ಟ ಸಂಸ್ಕೃತಿಯ ದ್ಯೋತಕವಾಗಿದೆ. ಮಾನ ಸನ್ಮಾನಗಳು, ಬಿರುದು-ಬಾವಲಿಗಳು ಸಹಜವಾಗಿ ಗೌರವಯುತವಾಗಿ ಸಮಾಜಗುರುತಿಸಲ್ಪಟ್ಟು ಹರಿದುಬರಬೇಕೇ ವಿನಃ ’ ಇವರು ಇಂಥಾ ಪ್ರಶಸ್ತಿ ವಿಜೇತರು, ಇವರು ಅಂಥಾ ಪ್ರಶಸ್ತಿ ವಿಜೇತರು ಎಂದು ಘೋಷಿಸಿಕೊಳ್ಳುವುದರ ಮೂಲಕ ಪ್ರಚಾರ ಗಿಟ್ಟಿಸುವ, ಮುಂದೆ ಹಣಗಳಿಸಲು ಇದು ಸಹಕಾರಿಯಾಗಲೆಂದು ಉದ್ದೇಶಿಸುವ ಹಲವು ಅನರ್ಹ ಜನರಿಗೆ ಏನನ್ನಬೇಕೋ ತಿಳಿಯದಾಗಿದೆ. ಇದರಿಂದ ನಿಜವಾಗಿ ಅರ್ಹತೆಯುಳ್ಳ ಎಷ್ಟೋ ಜನ ಮೂಲೆಗುಂಪಾಗುತ್ತಾರೆ. ಎಲೆಮರೆಯ ಕಾಯಿಯಂತೇ ಬದುಕಿ ತಮ್ಮ ಜೀವನ ಕಳೆಯುತ್ತಾರೆ. ರಾಜ್ಯೋತ್ಸವ ಪ್ರಶಸ್ತಿ ೧೬೫ ಜನರಿಗೆ ಕೊಟ್ಟರಲ್ಲ, ಅದರಲ್ಲಿ ಬರೇ ೬೫-೭೦ ಜನರಿಗೆ ಕೊಟ್ಟರೂ ಅದೂ ಕೂಡ ಹೆಚ್ಚೇ ಆಗುತ್ತಿತ್ತು. ಮಿಕ್ಕುಳಿದ ಯಾರೂ ಅದಕ್ಕೆ ಅರ್ಹರಲ್ಲದಿರುವುದು ನಮಗೆ ತಿಳಿದುಬರುವ ಅಪ್ಪಟ ಸತ್ಯ! ಇಲ್ಲೂ ಕುದುರೆ ಲದ್ದಿ ಖರೀದಿ ನಡೆದಿದೆ ಎಂಬ ಸುದ್ದಿ ?

ಒಂದುಕಡೆ ಬಡತನದಿಂದ ಕಷ್ಟಪಟ್ಟು ಮೇಲೆಬಂದ ಅರ್ಹತೆಯುಳ್ಳ ಜನ, ಇನ್ನೊಂದು ಕಡೆ ಹಣದಿಂದ ಅರ್ಹತೆಯಿಲ್ಲದ್ದನ್ನೂ ಖರೀದಿಮಾಡುವ ಜನ-ಈ ಎರಡು ಸಮುದಾಯಗಳ ನಡುವೆ ಯಾರು ಹಿತವರು ನಿಮಗೆ -ನಮಗೆ? ನಾಳಿನ ನಮ್ಮ ರಾಜ್ಯ-ದೇಶದಲ್ಲಿ ನಾಡು-ನುಡಿ-ಸಂಸ್ಕೃತಿ ಉಳಿಯಬೇಕೆಂದರೆ ನಿಜವಾಗಿ ಅರ್ಹತೆಯುಳ್ಳವರಿಗೆ ಮಾನ-ಸನ್ಮಾನ ನಡೆಯಲಿ, ಅದು ಬಿಟ್ಟು ಯಾರು ಎಷ್ಟನ್ನು ಕೊಡುತ್ತಾರೆ, ಯಾರಮೂಲಕ ಲಾಬಿ ಮಾಡಿದ್ದಾರೆ ಎಂಬುದನ್ನು ಅವಲಂಬಿಸಿ ಅಂತಹ ಪ್ರಶಸ್ತಿಗಳು ಅಪಾತ್ರರ ಪಾಲಾಗಿ ಮುಂದೆ ನಮ್ಮ ಸಮಾಜಕ್ಕೆ ಭ್ರಮನಿರಸನವಾಗುವ ಸ್ಥಿತಿ ಬಾರದಿರಲಿ ಎಂದು ಹಾರೈಸುತ್ತ ಮತ್ತೊಮ್ಮೆ ನಿಮಗೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತಿದ್ದೇನೆ, ನಮಸ್ಕಾರ.

Sunday, October 31, 2010

ನಗೆಯಲೂ ಬಯಸುವ ಕನ್ನಡವ !

ಮೊದಲ ಚಿತ್ರ ಋಣ : ಶ್ರೀ ಬಿ.ಕೆ.ಎಸ್ ವರ್ಮಾ

ನಗೆಯಲೂ ಬಯಸುವ ಕನ್ನಡವ !

ಜೀವನ ಕಡಲಿನ ಸ್ನೇಹದ ನೌಕೆಯ
ಪಾವನ ಓ ಸಹಯಾತ್ರಿಗಳೇ
ನಾವಿರುವರೆಗೂ ಒಳಿತನು ಬಯಸುವ
ಭಾವದಿ ನಮಿಸುತ ಕನ್ನಡಕೆ

ಎಂದಿಗೂ ದೂರದ ಕಂದನ ಮರೆಯದ
ಬಂಧು ನಮ್ಮ ಕನ್ನಡಮಾತೆ
ಚಂದದ ಛಂದಸ್ಸುಗಳಿಹ ಭಾಷೆಯು
ಸುಂದರ ಲಕ್ಷಣಗಳ ವನಿತೆ

ಸಿರಿವಂತೆಯು ನಮ್ಮಮ್ಮನು ಶಬ್ದದಿ
ವರಕವಿ ನಟರನು ಹಡೆದಿಹಳು
ಬರವಿರದಾ ನೀರಿನ ಸೆಲೆ ಹರಿದಿದೆ
ನೆರವೀಯುತ ನೀಡುತ ನೆರಳು

ನೂರು ವಿಧಂಗಳು ಮುನ್ನೂರು ತರಂಗಳು
ನೀರೆಯವಳು ಬಹು ಮೋದದಲಿ
ಆರುಕೋಟಿ ಮಕ್ಕಳ ಬೆಳೆಸುವ ಪರಿ
ಯಾರಿಗೂ ಮತ್ಸರ ತರದಿರಲಿ !

ಜಯಸಿರಿಯು ನಮ್ಮಮ್ಮನ ಸೋದರಿ
ಭಯವಿಲ್ಲಾ ಅವಳಿರುವಿಕೆಗೆ
ವಯವನು ವ್ಯಯಿಸುವ ಕೆಲಮಟ್ಟಿಗೆ ನಾವ್
ನಯನಮನೋಹರ ಮಾಳ್ಪುದಕೆ

ಹೆಗಲಲಿ ಕನ್ನಡ ಬಗಲಲಿ ಕನ್ನಡ
ಮುಗಿಲಲೂ ಕಾಣುವ ಕನ್ನಡವ
ಹಗಲಲಿ ಕನ್ನಡ ತೊಗಲಲಿ ಕನ್ನಡ
ನಗೆಯಲೂ ಬಯಸುವ ಕನ್ನಡವ !

Friday, October 29, 2010

ಭೀಷ್ಮ


ರಾಜಾರವಿವರ್ಮ ಕೃತ ಚಿತ್ರಗಳ ಕೃಪೆ : ಅಂತರ್ಜಾಲ

ಭೀಷ್ಮ


[ಮಹಾಭಾರತದಲ್ಲಿ ಅನೇಕ ಪಾತ್ರಗಳು ನಮ್ಮ ಮನವನ್ನು ಕಲಕುತ್ತವೆ. ಅಂತಹ ಒಂದು ಪಾತ್ರದ ಅಭಿವ್ಯಕ್ತಿ ನನ್ನ ಲೇಖನಿಯಲ್ಲಿ ನಿಮಗಾಗಿ ]



ಶಂತನು ಮಕ್ಕಳನ್ನು ಏಕೆ ನದಿಗೆ ಎಸೆದು ಸಾಯಿಸುತ್ತೀಯ ಎಂದು ಕೇಳಿದ್ದೇ ತಪ್ಪಾಗಿ ಗಂಗೆ ಮೂಲರೂಪಕ್ಕೆ ನಡೆದುಬಿಟ್ಟಳು. ದೇವವೃತ ಬೆಳೆದು ಆಗತಾನೇ ಹದಿಹರೆಯಕ್ಕೆ ಕಾಲಿಡುತ್ತಿದ್ದ. ಅಪ್ಪನ ನೋವಲ್ಲಿ ಆತನೇ ಅಪ್ಪನ ಆಪ್ತ ಬಂಧು. ಅಪ್ಪನನ್ನು ಬಿಟ್ಟು ಬೇರೆಯ ಜಗತ್ತೇ ಇಲ್ಲದ ಹುಡುಗನಾತ. ತಾಯಿ ಗಂಗೆ ಕೆಲವರುಷ ತನ್ನ ಜತೆಗಿದ್ದರೂ ಇರುವಷ್ಟು ದಿನ ಮಾತಾಪಿತೃಗಳಿಬ್ಬರಿಗೂ ಬಹಳ ಸಂತಸವನ್ನುಂಟುಮಾಡಿದ ಮಗುವಾತ. ತನ್ನ ತಂದೆ ಪರಾಶರ ಮಹರ್ಷಿಯ ಮಗನೆಂದೂ, ಯಮುನೆಯ ನಡುಗಡ್ಡೆಯಲ್ಲಿ ಹುಟ್ಟಿದವನೆಂದೂ ಆತ ಕೇಳಿತಿಳಿದಿದ್ದ. ತಂದೆಯ ರಾಜಸ ಲಕ್ಷಣಗಳು ಅವನನ್ನು ಬಹುವಾಗಿ ಆಕರ್ಷಿಸಿದ್ದವು. [ ಪಚ್ಮಣಿ ಎಂಬ ಈ ನಡುಗಡ್ಡೆ ಇಂದಿಗೂ ಯಮುನೆಯ ಪಶ್ಚಿಮ ಭಾಗದಲ್ಲಿ ನೋಡಸಿಗುತ್ತದೆ]ಇದೊಂದು ಕಥೆಯಾದರೆ ಕಾಲಾನಂತರದಲ್ಲಿ ಪರಾಶರ ಸುತ ಶಂತನು ಹಸ್ತಿನಾಪುರಕ್ಕೆ ಬಂದು ಗಂಗೆಯನ್ನು ವರಿಸಿದ್ದು ಇನ್ನೊಂದು ಕಥೆ.

ಗಂಗೆಯ ಮೋಹಪಾಶದಿಂದ ಹೊರಬರುತ್ತಿದ್ದ ವೇಳೆ ಶಂತನುವಿನ ಮನವ ಕದ್ದವಳು ಸತ್ಯವತಿ. ಬೆಸ್ತರ ಹುಡುಗಿ. ಆಕೆಯೆ ಹದವಾದ ಮೈಕಟ್ಟು ರೂಪಲಾವಣ್ಯಕ್ಕೆ ಮನಸೋತ ಶಂತನು ಹಲವಾರು ದಿನ ಹಾಗೇ ಕಳೆದ. ಆತನದು ಆಡಲಾರದ ಅನುಭವಿಸಲಾರದ ಸ್ಥಿತಿ! ಎಡೆಯಲ್ಲಿ ಬೆಳೆಯುತ್ತಿರುವ ತನ್ನ ಮತ್ತು ಗಂಗೆಯ ಪ್ರೀತಿಯ ಕುಡಿಯಿದೆ, ಆ ಕುಡಿ ಇನ್ನೂ ಹದಿಹರೆಯಕ್ಕೆ ಕಾಲಿಡುತ್ತಿದೆ. ಹೇಳಬೇಕೆಂದರೆ ಆ ಗಾಂಗೇಯನಿಗೆ ಈಗ ಹರೆಯದ ಹುಡುಗಿಯರ ಪ್ರೇಮಪಾಶದಲ್ಲಿ ಸಿಲುಕುವ ವಯಸ್ಸು. ಆದರೆ ತನಗೆ ಯಾಕೆ ಈ ರೀತಿ ಭಾವನೆ ಎಂಬುದನ್ನು ಆತ ಯೋಚಿಸಿಯೂ ತನ್ನ ಮನದ ಬಯಕೆಯನ್ನು ಹತ್ತಿಕ್ಕಲಾರದಾದ. ಶಂತನುವಿನ ಪ್ರೇಮಜ್ವರ ಉಲ್ಬಣಿಸುತ್ತಿರುವಾಗ ತಾಯಿಯಿಲ್ಲದ ತಬ್ಬಲಿ ಗಾಂಗೇಯ ನಡೆದುಬಂದ ಅಪ್ಪನಿದ್ದೆಡೆಗೆ, ಕೇಳಿದ ತಂದೆಯಲ್ಲಿ " ಅಪ್ಪಾ ನಿಮ್ಮ ಚಿಂತೆಗೆ ಕಾರಣವೇನು. ನಾನಿದ್ದೂ ನೀವು ಇಷ್ಟೆಲ್ಲಾ ಯಾರೂ ದಿಕ್ಕಿಲ್ಲದಂತೇ ಪರಿತಪಿಸುತ್ತಿರುವುದೇಕೆ? ನನ್ನಲ್ಲಿಯೂ ಹೇಳಬಾರದೇ ? " . ಮಗನ ಮಾತಿಗೆ ಮನಸೋತ ಶಂತನು ತನ್ನ ಮನದ ಬಯಕೆಯನ್ನು ತೋಡಿಕೊಂಡ. ಅರ್ಥೈಸಿಕೊಂಡ ಯುವಮುತ್ಸದ್ಧಿ ಗಾಂಗೇಯ ಬೆಸ್ತರ ಮುಖಂಡನ ಮನೆಯ ದಾರಿ ಹಿಡಿದು ನಡೆದ. ಅಲ್ಲಿ ಬೆಸ್ತರ ಮುಖಂಡ ದಾಶರಾಜನನ್ನು ಕಂಡು ತನ್ನ ತಂದೆಯ ಬಯಕೆಯನ್ನು ನಿವೇದಿಸಿದ. ಅಪ್ಪನಿಗಾಗಿ ಅಪ್ಪನ ಉಳಿವಿಗಾಗಿ ಮಗಳನ್ನು ಧಾರೆಯೆರೆದು ಕೊಡುವಂತೆ ಗಾಂಗೇಯ ಅಕ್ಷರಶಃ ಅಂಗಲಾಚಿದ! ಆದರೂ ಬೆಸ್ತನ ಮನಸ್ಸು ಏನನ್ನೋ ಎಣಿಸುತ್ತಿತ್ತು. ಕೊನೆಗೂ ಗಂಗೇಯ ಪಟ್ಟುಬಿಡದೇ ಕೇಳಿದ " ಏನಾಗಬೇಕೆಂಬುದನ್ನು ಹೇಳಿದರೆ ಅದನ್ನು ಪೂರೈಸಲೂ ನಾನು ಸಿದ್ಧನಾಗಬಹುದೋ ನೋಡುತ್ತೇನೆ ಹಾಗಾಗಿ ಏನಾಗಬೇಕೆಂದು ತಿಳಿಸಿ" ಎಂದಾಗ, ಬೆಸ್ತ ಕೇಳಿದ "ಶಂತನುವಿಗೆ ಸತ್ಯವತಿಯಲ್ಲಿ ಹುಟ್ಟಿದ ಮಕ್ಕಳಷ್ಟೇ ಮುಂದೆ ಆ ರಾಜ್ಯವನ್ನು ಆಳಲು ಅರ್ಹರಾಗಬೇಕು , ಮಿಕ್ಕುಳಿದ ಯಾರಿಗೂ ಆಡಳಿತದಲ್ಲಿ ಹಕ್ಕಿರಬಾರದು " --ಇಂತಹ ಸಂದಿಗ್ಧದಲ್ಲೂ ತನ್ನೋ ಮನೋಸ್ಥೈರ್ಯವನ್ನು ಕಳೆದುಕೊಳ್ಳದ ಗಾಂಗೇಯ ತಾನು ಆಜನ್ಮ ಬ್ರಹ್ಮಚಾರಿಯಾಗಿರುತ್ತೇನೆಂದೂ, ತನಗೆ ಸಿಂಹಾಸನದ ಉತ್ತಾರಾಧಿಕಾರತ್ವ ಬೇಡವೆಂದೂ ಪ್ರತಿಜ್ಞೆಮಾಡಿದ! ತಂದೆಯ ಪ್ರೇಮಕನ್ನಿಕೆಯನ್ನು ತಂದೆಗೆ ಮಗ ಮುಂದಾಗಿ ನಿಂತು ಸಂಬಂಧ ಕುದುರಿಸಲು, ತನ್ನ ಸ್ವಾರ್ಥ ತ್ಯಜಿಸಿ ಗೈದ ಪ್ರತಿಜ್ಞೆ ದೇವತೆಗಳಿಗೂ ಕೇಳಿಸಿತಂತೇ, " ಭಲೇ ಗಾಂಗೇಯ ಇದು ಭೀಷ್ಮ ಪ್ರತಿಜ್ಞೆಯೇ ಸರಿ ....ನೀನೀಗ ಭೀಷ್ಮ .......ನೀನೀಗ ಭೀಷ್ಮ " ಎಂದು ಅಶರೀರವಾಣಿ ಮೊಳಗಿ ಪುಷ್ಪವೃಷ್ಟಿಯಾಯಿತಂತೆ. ಅಂದಿನಿಂದ ದೇವವೃತ ಭೀಷ್ಮನಾದ.

ಅಂತೂ ತನ್ನ ಜೀವನವನ್ನೇ ಕಡೆಗಣಿಸಿ ತಂದೆಗೆ ಬೆಸ್ತರ ಕನ್ಯೆಯನ್ನು ವಿವಾಹಮಾಡಿಸಿದ ಅಪ್ರತಿಮ ಬಾಲ್ಯಸಾಹಸಿ ಭೀಷ್ಮ! ಮುಂದೆ ಕಾಲಾನಂತರದಲ್ಲಿ ತನ್ನ ಜೀವಿತವನ್ನು ಕೊಟ್ಟ ಮಾತಿಗೆ ತಪ್ಪದಂತೇ ನಡೆದ ಆಜನ್ಮ ಬ್ರಹ್ಮಚಾರಿ ಭೀಷ್ಮ. ತಂದೆಯ ಮರಣಾನಂತರ ತನ್ನ ತಂದೆಗೆ ಸತ್ಯವತಿಯಲ್ಲಿ ಜನಿಸಿದ ಚಿತ್ರವೀರ್ಯ ಮತ್ತು ವಿಚಿತ್ರವೀರ್ಯ ಎಂಬ ಮಕ್ಕಳನ್ನು ಸಿಂಹಾಸನದಲ್ಲಿ ಕೂರಿಸಿಕೊಂಡು ಅವರು ಬೆಳೆದು ದೊಡ್ಡವರಾಗುವವರೆಗೆ ರಾಜ್ಯಭಾರ ನಡೆಸಿಡೆಸಲು ಸತ್ಯವತಿಗೆ ಸಹಕರಿಸಿದ. ಮುಂದುವರಿದ ಭಾಗವೇ ಮಹಾಭಾರತಕ್ಕೆ ನಾಂದಿ ಎಂಬುದನ್ನು ಬೇರೆ ಹೇಳಬೇಕೆ ?

ಕಾಶೀರಾಜನ ಮಕ್ಕಳಾದ ಅಂಬೆ, ಅಂಬಿಕೆ ಮತ್ತು ಅಂಬಾಲಿಕೆಯರನ್ನು ತನ್ನ ಮಲತಮ್ಮ ವಿಚಿತ್ರವೀರ್ಯನಿಗೆ ಮದುವೆಮಾಡಲಾಗಿ ಅವರ ಸ್ವಯಂವರ ನಡೆಯುವ ಜಾಗದಿಂದ ಅಪಹರಿಸಿ ಕರೆತಂದ ಭೀಷ್ಮನಿಗೆ, ಅವರಲ್ಲಿ ಹಿರಿಯಳಾದ ಅಂಬೆ ತಾನು ಸುಬಲದೇಶದ ಸಾಲ್ವ ಮಹಾರಾಜನನ್ನು ಬಹಳ ಇಷ್ಟಪಟ್ಟುದಾಗಿಯೂ ತನ್ನನ್ನು ಕಳುಹಿಸಿಕೊಡಬೇಕೆಂದೂ ಕೇಳಿಕೊಳ್ಳುತ್ತಾಳೆ. ಆಗ ಭೀಷ್ಮ ಮರಳಿ ಆಕೆಯನ್ನು ಸಾಲ್ವನಲ್ಲಿಗೆ ಕಳುಹಿಸಿಕೊಟ್ಟರೂ ಬಹಳಕಾಲ ಇನ್ನೊಬ್ಬ ಗಂಡಸಿನ ಜತೆಗೆ ಉಳಿದ ಹೆಣ್ಣನ್ನು ಮದುಯಾಗುವುದು ತನಗಿಷ್ಟವಿಲ್ಲವೆಂದು ಆತ ತಿರಸ್ಕರಿಸುತ್ತಾನೆ. ಪುನಃ ಆಕೆ ದಾರಿಕಾಣದೇ ಭೀಷ್ಮನಲ್ಲಿಗೆ ಬಂದು ಮಾಡಿದ ತಪ್ಪಿಗೆ ತನ್ನನ್ನು ಮದುವೆಯಾಗ್ಲೇ ಬೇಕೆಂದು ಹಠಹಿಡಿಯುತ್ತಾಳೆ. ಮಾಡಿದ ಪ್ರತಿಜ್ಞೆಯನ್ನು ಭಂಗಗೊಳಿಸಲು ಒಪ್ಪದ ಭೀಷ್ಮನಿಗೆ ತಾನು ಸತ್ತು ಇನ್ನೊಂದು ಜನ್ಮವೆತ್ತಿ ಶಿಖಂಡಿಯಾಗಿ ನಿನ್ನನ್ನು ಸಾಯಿಸುತ್ತೇನೆಂದು ಶಪಿಸುತ್ತಾಳೆ ಮತ್ತು ಆ ಕ್ಷಣವೇ ತುಸುದೂರ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ಸಾಯುವುದಕ್ಕೂ ಮುನ್ನ ಅಂಬೆ ಗುರು ಪರಶುರಾಮರಲ್ಲಿ ಪ್ರಾರ್ಥಿಸಿ ಭೀಷ್ಮನನ್ನು ಈ ಕುರಿತು ಒಲಿಸುವಂತೇ ಕೇಳಲು ಹೇಳುತ್ತಾಳೆ. ಪರಶುರಾಮರು ಭೀಷ್ಮನನ್ನು ಕೇಳಲಾಗಿ ಆತ ಮತ್ತೆ ನಾಜೂಕು ಮಾತಿನಿಂದ ತಿಳಿಸಿ ನಿರಾಕರಿಸುತ್ತಾನೆ. ಕುಪಿತರಾದ ಪರಶುರಾಮರು ಭೀಷ್ಮನನ್ನು ಯುದ್ಧಕ್ಕೆ ಕರೆಯುತ್ತಾರೆ. ರಥಾರೂಢನಾಗಿ ಕುರುಕ್ಷೇತ್ರಕ್ಕೆ ಬಂದ ಭೀಷ್ಮ ತನ್ನೆದುರು ಪರಶುರಾಮರು ಬರಿಗಾಲಲ್ಲಿ ನಿರಾಯುಧರಾಗಿ ನಿಂತಿರುವುದನ್ನು ನೋಡಿ ರಥಾರೂಢರಾಗಿ, ಶಸ್ತ್ರಧಾರಿಯಾಗಿ ಬರಲು ವಿನಂತಿಸಿದಾಗ ಭೀಷ್ಮನಿಗೆ ತಿಳಿಸಿ ಇನ್ನೊಮ್ಮೆ ಸರಿಯಾಗಿ ನೋಡಲು ಹೇಳುತ್ತಾರೆ. ಆಗ ಎದುರಿಗೆ ರಥದಲ್ಲಿ ಪರಶುರಾಮರಿದ್ದರೆ, ನಾಲ್ಕುವೇದಗಳು ಕುದುರೆಗಳಾಗಿ, ವಾಯು ಸಾರಥಿಯಾಗಿ ಅವರು ಗಾಯತ್ರಿ, ಸಾವಿತ್ರಿ, ಸರಸ್ವತಿ ಮೂರು ದೇವಿಯರನ್ನು ಎದೆಗವಚವಾಗಿ ಧರಿಸಿಬಂದಿದ್ದು ಕಾಣುತ್ತಾನೆ. ಯುದ್ಧ ಘಟಿಸುತ್ತದೆ, ಯಾರೂ ಇನ್ನೂ ಸೋತಿರುವುದಿಲ್ಲ. ಭೀಷ್ಮನಿಗೆ ಹಿರಿಯರು ಕೊಟ್ಟ ವಿಶೇಷವಾದೊಂದು ಅಸ್ತ್ರವಿರುತ್ತದೆ-ಅದು ಪರಶುರಾಮರಿಗೆ ಗೊತ್ತಿರುವುದಿಲ್ಲ. ಅದನ್ನು ಉಪಯೋಗಿಸಿದರೆ ಪರಶುರಾಮರು ರಣರಂಗದಲ್ಲಿ ಮಲಗಬೇಕಾಗುತ್ತದೆ. ರಣರಂಗದಲ್ಲಿ ಮಲಗಿದವನನ್ನು ಸತ್ತವನೇ ಎಂದು ವೇದಹೇಳುತ್ತದೆಂದೂ ಅದನ್ನು ಉಪಯೋಗಿಸೆಂದೂ ಕೆಲವರು ಹೇಳಿದರೂ ಭೀಷ್ಮ ಅದನ್ನು ಉಪಯೋಗಿಸುವುದಿಲ್ಲ. ಅಷ್ಟರಲ್ಲಿ ಪರಶುರಾಮರು ಮನಸ್ಸು ಬದಲಿಸಿ ಯುದ್ಧ ಬಿಟ್ಟು ತೆರಳುತ್ತಾರೆ.

ಆ ವೇಳೆಗೆ ಕುರುಕ್ಷೇತ್ರದಲ್ಲಿ ಮಹಾಯುದ್ಧವೇ ಆರಂಭವಾಗುವುದರಿಂದ ಸಂಪೂರ್ಣ ಕುರುಕ್ಷೇತ್ರಕ್ಕೆ ಸಾಕ್ಷಿಯಾಗಿ ಭೀಷ್ಮ ರಣರಂಗದಲ್ಲಿ ಕುರುವಂಶದ ನಾಯಕನಾಗಿ ಮುನ್ನಡೆದು ಬರುತ್ತಾನೆ.
ಇದಕ್ಕೆ ಕಾರಣವೂ ಇಲ್ಲದಿಲ್ಲ.

ಹಿನ್ನೆಲೆ

ಸ್ನಾನಕ್ಕೆಂದು ಕೊಳವೊಂದಕ್ಕೆ ಇಳಿದ ದುರ್ಯೋಧನನಿಗೆ ಗಂಧರ್ವರು ಅಲ್ಲಿಗೆ ಬಂದಿರುವುದು ಕಾಣಿಸುತ್ತದೆ. ಅದನ್ನು ಸಹಿಸದ ಆತ ಅವರ ಕೂಡ ಯುದ್ಧನಡೆಸಿ ಸೋತು ಸಿಕ್ಕಿಹಾಕಿಕೊಂಡಾಗ ಯುಧಿಷ್ಠಿರ, ಅರ್ಜುನ ಮುಂತಾದ ಪಾಂಡವರ ವಿನಂತಿಯ ಮೇರೆಗೆ ಅವರು ಆತನನ್ನು ಬಿಡುಗಡೆಗೊಳಿಸುತ್ತಾರೆ. ಅವಮಾನಿತನಾದ ದುರ್ಯೋಧನ ತಾನು ಕ್ಷತ್ರಿಯನಾಗಿಯೂ ಹೀಗಾಯ್ತಲ್ಲಾ ಎಂಬ ಕೊರಗಿನಿಂದಿದ್ದರೂ ಋಣ ಕಳೆವ ನೆಪದಲ್ಲಿ ಅರ್ಜುನನಿಗೆ ತನ್ನಿಂದ ಏನಾದರೂ ತೆಗೆದುಕೋ ಎಂದು ವಿನಂತಿಸುತ್ತಾನೆ. ಅದಕ್ಕೆ ಅರ್ಜುನ ಕಾಲಬಂದಾಗ ಕೇಳುತ್ತೇನೆಂದು ಹೇಳಿರುತ್ತಾನೆ. ಕುರುಕ್ಷೇತ್ರ ಯುದ್ಧ ಇನ್ನೇನು ಸನ್ನದ್ಧವಾದಾಗ ಅರ್ಜುನ ದುರ್ಯೋಧನನಲ್ಲಿಗೆ ಹೋಗಿ ಆತನಲ್ಲಿರುವ ಬಂಗಾರದ, ಶಕ್ತಿ ತುಂಬಿದ ೫ ವಿಶೇಷವಾದ ಬಾಣಗಳನ್ನು ಕೊಡುವಂತೆ ಕೇಳುತ್ತಾನೆ. ದುರ್ಯೋಧನ ಆಶ್ಚರ್ಯಚಕಿತನಾಗಿ ತನ್ನಲ್ಲಿ ಆ ಐದು ಬಾಣಗಳಿವೆಯೆಂದು ಯಾರು ಹೇಳಿದರೆನ್ನಲು ಅರ್ಜುನ ಶ್ರೀಕೃಷ್ಣ ಹೇಳಿದನೆನ್ನುತ್ತಾನೆ. ನಿರ್ವಾಹವಿಲ್ಲದೇ ದುರ್ಯೋಧನ ಆ ೫ ಅಸಾಧಾರಣ ಶಕ್ತಿ ಹೊಂದಿದ ಬಾಣಗಳನ್ನು ಅರ್ಜುನನಿಗೆ ಕೊಡುತ್ತಾನೆ. ಆ ಒಂದೊಂದೂ ಬಾಣಗಳು ಭೀಷ್ಮನ ಆಜನ್ಮ ತಪಶ್ಚರ್ಯದ ಶಕ್ತಿಯಿಂದ ಪ್ರೇರಿತವಾಗಿದ್ದು ಒಬ್ಬೊಬ್ಬ ಪಾಂಡವನನ್ನು ಮುಗಿಸಲು ಸಾಕಾಗಿದ್ದವು.

ತಪ್ಪಿಹೋದ ಅವಕಾಶವನ್ನು ನೆನೆಯುತ್ತ ದುರ್ಯೋಧನ ಭೀಷ್ಮರಲ್ಲಿಗೆ ರಾತ್ರಿ ಬಂದಾಗ, ಮತ್ತೆ ತನ್ನಲ್ಲಿ ಅಂತಹ ಬಾಣಗಳನ್ನು ಸೃಜಿಸುವ ಶಕ್ತಿ ಇಲ್ಲವೆಂದೂ, ಪರಮಾತ್ಮನೇ ಬಯಸಿ ಮರಳಿ ಪಡೆದದ್ದರಿಂದ ಅದನ್ನು ಮೀರುವ ಸಾಮರ್ಥ್ಯ ತನ್ನಲ್ಲಿಲ್ಲವೆಂದೂ, ಆದರೆ ನಾಳೆಯ ಯುದ್ಧದಲ್ಲಿ ತಾನು ಸಿಂಹದಂತೆ ಹೋರಾಡುವೆನೆಂದೂ ತಿಳಿಸುತ್ತಾನೆ. ಅದರಂತೇ ಮಾರನೇ ದಿನ ಯುದ್ಧಾರಂಭಗೊಂಡಾಗ ಗರ್ಜಿಸುವ ಹಸಿದ ಸಿಂಹದೋಪಾದಿಯಲ್ಲಿ ಭೀಷ್ಮ ಅರ್ಜುನನೆಡೆಗೆ ಸಾಗಿಬರುತ್ತಾನೆ. ತಾತಯ್ಯನ ಕೋಪದ ಪರಾಕ್ರಮದ ಮುಂದೆ ಅರ್ಜುನನ ಆಟ ನಡೆಯುವುದಿಲ್ಲ. ಭೀಷ್ಮ ಬಿಟ್ಟ ಒಂದು ಬಾಣ ಅರ್ಜುನನ ಎದೆಗವಚವನ್ನು ಸೀಳಿಹಾಕುತ್ತದೆ. ಅಲ್ಲದೇ ರಥದ ಚಕ್ರ ಸ್ವಲ್ಪ ಹೂತು ತೊಂದರೆಯಾಗುತ್ತದೆ. ಕೋಪಗೊಂಡ ಕೃಷ್ಣ ಲಗಾಮು ಚಾವಟಿಗಳನ್ನು ಅಲ್ಲೇ ಬಿಟ್ಟು ರಥವಿಳಿದು ಕೆಳಗೆ ಬಂದು ಚಕ್ರವನ್ನು ಸರಿಪಡಿಸುತ್ತಾನಲ್ಲದೇ ಭಕ್ತನಾದ ಅರ್ಜುನನ ರಕ್ಷಣೆಗಾಗಿ ಕುರುಕ್ಷೇತ್ರ ಯುದ್ಧದಲ್ಲಿ ತಾನು ಶಸ್ತ್ರವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಭೀಷ್ಮನಿಗೆ ಕೊಟ್ಟಿದ್ದ ವಚನವನ್ನು ಮುರಿಯಲು ಮನಮಾಡುತ್ತಾನೆ. ಅರ್ಜುನನ ವಿನಂತಿಯ ಮೇರೆಗೆ ಹಾಗೆ ಮಾಡದೇ ಮತ್ತೆ ರಥವೇರಿ ಸಾರಥಿಯಾಗಿ ಮುನ್ನಡೆಸುವಾಗ ಅರ್ಜುನನಿಗೆ ಹೇಳಿ ಶಿಖಂಡಿಯನ್ನು ಕರೆದು ಆತನನ್ನು ಕವಚದ ಬದಲಾಗಿ ಮುಂದೆ ನಿಲ್ಲಿಸಿಕೊಂಡು ಭೀಷ್ಮನೊಟ್ಟಿಗೆ ಸೆಣಸಾಡಲು ಹೇಳುತ್ತಾನೆ.

ಘನಘೋರ ಯುದ್ಧದಲ್ಲಿ ಅರ್ಜುನನ ಅಸಂಖ್ಯಾತ ಬಾಣಗಳು ಭೀಷ್ಮನ ಮೈಸೇರಿ ಮೈಯ್ಯೆಲ್ಲಾ ರಕ್ತಸಿಕ್ತವಾಗುತ್ತದೆ, ಹಲವು ಗಾಯಗಳು ತಂದ ನೋವಿಗೆ ಹತಾಶೆಗೊಂಡು ಭೀಷ್ಮ ನೆಲವನ್ನು ಹಿಡಿಯಬೇಕಾಗಿ ಬರುತ್ತದೆ. ಅರ್ಜುನ ಶರಗಳನ್ನೆಸೆದು ಶಯ್ಯೆಯೊಂದನ್ನು ರಚಿಸಿದಾಗ ಅದರಮೇಲೆ ಭೀಷ್ಮ ಪಿತಾಮಹ ಮಲಗುತ್ತಾನೆ. ಇಚ್ಛಾಮರಣಿಯಾಗಲು ತಂದೆಯಿಂದ ಅನುಗ್ರಹ ಪಡೆದಿದ್ದ ಭೀಷ್ಮ ನೋವನ್ನು ಸಹಿಸಿಕೊಂಡು, ಮಹಾಭಾರತ ಯುದ್ಧವನ್ನು ನೋಡುತ್ತಾ, ದೇಹವನ್ನು ತೊರೆಯಲು ಒಳ್ಳೆಯ ಮುಹೂರ್ತಕ್ಕಾಗಿ ಕಾದು ಮಲಗಿರುತ್ತಾನೆ.

ತನ್ನದಲ್ಲದ ತಪ್ಪಿಗೆ ಭೀಷ್ಮ ಹಲವು ಬಾರಿ ಅಪರಾಧಿ ಎನಿಸಿಕೊಳ್ಳುತ್ತಾನೆ. ಜನ್ಮಪೂರ್ತಿ ತಂದೆ, ಕುಟುಂಬ, ವಂಶ ಇವರೆಲ್ಲರಿಗಾಗಿ ಬದುಕಿದ ಭೀಷ್ಮ ಒಂದರ್ಥದಲ್ಲಿ ಕೊನೆಯವರೆಗೂ ಏಕಾಂಗಿಯೇ. ಅವನ ಆಸೆ-ಆಕಾಂಕ್ಷೆಗಳಿಗೆ ಮನ್ನಣೆಯೇ ಇರಲಿಲ್ಲ. ಯಾರೂ ಆತನನ್ನು ’ನಿನಗೇನು ಬೇಕು ಅಜ್ಜಯ್ಯಾ’ ಎಂದು ಒಂದು ದಿನವೂ ಕೇಳಿದ್ದಿಲ್ಲ. ಬದಲಾಗಿ ಅಜ್ಜಯ್ಯನಿಂದ ಸಿಗಬಹುದಾದ ಪ್ರಯೋಜನವನ್ನು ಎಲ್ಲರೂ ಪಡೆದರು. ಹಾಗೆ ನೋಡಿದರೆ ಭೀಷ್ಮ ಎಲ್ಲರಿಗೂ ಅಜ್ಜನೇ. ಸಂಧಾನಕ್ಕಾಗಿ ಪ್ರಯತ್ನಿಸಿದವರಲ್ಲಿ ಭೀಷ್ಮಕೂಡ ಒಬ್ಬ. ಆದರೆ ಸಂಧಾನವೇ ಬೇಡವೆಂಬ ಕೌರವನ ನಿರ್ಧಾರಕ್ಕೆ ಆತ ಮನದಲ್ಲೇ ಕುಸಿದುಹೋದ. ಮುಖದಲ್ಲಿನ ಎರಡು ಕಣ್ಣುಗಳಂತಿರುವ ಆ ಎರಡು ಕುಟುಂಬಗಳಲ್ಲಿ ಆತನಿಗೆ ಯಾರು ಹೆಚ್ಚು ಅಥವಾ ಯಾರು ಕಮ್ಮಿ ಎಂಬುದಿರಲಿಲ್ಲ. ಕೃಷ್ಣನ ನಿರ್ಧಾರದಂತೇ ಆತ ಕೌರವರನ್ನು ಸೇರಬೇಕಾಯಿತು. ಇನ್ನೇನು ಹರೆಯ ಉಕ್ಕಿ ಹರಿವಾಗ ತನ್ನ ದೈಹಿಕ ಬಯಕೆಗಳನ್ನೆಲ್ಲಾ ಒತ್ತಟ್ಟಿಗೆ ಕಟ್ಟಿ ಸುಟ್ಟುಹಾಕಿದ ಭೀಷ್ಮ ತಾನು ಸುಖಪಡಲೇ ಇಲ್ಲ. ಈ ಕಡೆ ರಾಜನೂ ಆಗದಾಯ್ತು, ಆಕಡೆ ಮದುವೆಯಾಗುವುದನ್ನೂ ತಪ್ಪಿಸಿಕೊಂಡಾಯ್ತು, ತಂದೆಯ ಮರಣಾನಂತರ ಆತ ಬದುಕಿದ್ದದ್ದು ಕೇವಲ ತನ್ನ ಮಾತಿನಂತೇ ತನ್ನ ಮಲತಮ್ಮಂದಿರ ಯೋಗಕ್ಷೇಮ ನೋಡುವುದು ಮತ್ತು ಅವರಿಗೆ ರಾಜ್ಯಾಧಿಕಾರ ಪ್ರಾಪ್ತವಾಗಿ, ಅವರ ಮಂಗಳಕಾರ್ಯಗಳಾಗಿ ವಂಶ ಮುಂದುವರಿಯುವುದು, ಇದು ಬಿಟ್ಟು ಇನ್ನೇನೂ ಬೇಕಿರಲಿಲ್ಲ ಆತನಿಗೆ. ತನ್ನ ಕಣ್ಮುಂದೆ ಹುಟ್ಟಿ ಬೆಳೆದು, ಚಿನ್ನಿದಾಂಡು ಆಟವಾಡಿದ ಹುಡುಗರು ನೆಲಕ್ಕಾಗಿ ಬಡಿದಾಡಿ ಜನಸ್ತೋಮ ಮರೆಯಲಾಗದ ಭಾರತವನ್ನೇ ಸೃಜಿಸುತ್ತಾರೆಂಬುದನ್ನು ಕನಸಲ್ಲೂ ಎಣಿಸಿರಲಿಲ್ಲವಾತ.

ಕಣ್ಣೆದುರೇ ಕೃಷ್ಣನಿದ್ದರೂ ಕೃಷ್ಣ ಮಾತನಾಡಲಾರ, ಸಂತೈಸಲಾರ, ಅಳಲು ಕೇಳಲಾರ, ಬದಲಾಗಿ ತನ್ನಲ್ಲಿರುವ ಅಸಾಧಾರಣ ಶಕ್ತಿ ಉಡುಗಿಹೋಗಲೆಂದು ಶಿಖಂಡಿಯನ್ನು ಎದುರು ನಿಲ್ಲಿಸಿಕೊಂಡ! ಭೀಷ್ಮನಿಗೆ ಅರ್ಥವಾಗಿ ಹೋಗಿತ್ತು--ಕೃಷ್ಣನೊಬ್ಬ ಅತಿಮಾನುಷ ಶಕ್ತಿ, ಆತನ ಸಂಕಲ್ಪದಂತೇ ಆತ ಎಲ್ಲವನ್ನೂ ನಡೆಸುತ್ತಾನೆ ಎಂಬುದು. ಹಾಗಂತ ಕೃಷ್ಣನಲ್ಲಿ ಆತ ಪ್ರಾಣಭಿಕ್ಷೆ ಬೇಡಲಿಲ್ಲ. ಭೀಷ್ಮನಿಗೀಗ ಆತ್ಮಜ್ಞಾನವಾಗಿತ್ತು. ಆತ ತಂದೆಗೆ ಸಲ್ಲಿಸಿದ ಸೇವೆಯಿಂದ " ಮಗನೇ ಇಚ್ಛಾಮರಣಿಯಾಗು " ಎಂದು ತಂದೆಯಿಂದ ವರವನ್ನು ಪಡೆದಿದ್ದ. ತಾನೊಬ್ಬ ಒಳ್ಳೆಯ ವ್ಯಕ್ತಿ ಎಂದೂ, ಅಪ್ರತಿಮ ಸಾಹಸಿಯೆಂದೂ, ಅಸಾಧಾರಣ ಹೋರಾಟಗಾರನೆಂದೂ ಎಂದೂ ಕೊಚ್ಚಿಕೊಂಡವನಲ್ಲ; ಅವನ ಮನದಲ್ಲಿ ಅಹಂಕಾರ ತುಂಬಿರಲೇ ಇಲ್ಲ. ಕೇವಲ ಕೊಟ್ಟಮಾತಿಗಾಗಿ ಬದುಕಿದ್ದು, ತನ್ನ ಮಾತುನಡೆಯುವಂತೇ ನೋಡಿಕೊಂಡ ಸಜ್ಜನ ಭೀಷ್ಮ. ಆತನೊಬ್ಬ ಕರ್ಮಯೋಗಿ. ಕ್ಷತ್ರಿಯನಾಗಿ ತನ್ನ ಧರ್ಮವನ್ನು ಮೆರೆಯುತ್ತಾ ಆ ಧರ್ಮಾಚರಣೆಯಲ್ಲೇ ದೇವರನ್ನು ಕಂಡ ಕ್ಷಾತ್ರತೇಜಸ್ವಿ ಆತ. ತಾನು ಕೈಗೊಂಡ ನಿರ್ಧಾರಗಳು ತಪ್ಪು ಎಂದು ಯಾವಗಲೂ ಅನಿಸಲಿಲ್ಲ ಆತನಿಗೆ.

ಇಂದು ಮಗು ದುರ್ಯೋಧನನಿಗಾಗಿ ಮತ್ತೊಬ್ಬ ಮಗು ಅರ್ಜುನನ ಕೂಡ ಯುದ್ಧ ! ಬಹಳ ಯೋಚಿಸಿದ್ದಾನೆ ಭೀಷ್ಮ. ತನ್ನೊಳಗಿನ ತಳಮಳವನ್ನು ಯಾರಲ್ಲಿಯೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಒದ್ದಡಿದ್ದಾನೆ ಭೀಷ್ಮ. ಕೊನೆಗೂ ಕಾಲಸನ್ನಿಹಿತವಾದಾಗ ಅನಿವಾರ್ಯವಾಗಿ ಕೃಷ್ಣ ಸಾರಥ್ಯದ ರಥದಲ್ಲಿರುವ ಅರ್ಜುನನ ಎದುರು ವೀರಾವೇಶದಿಂದ ಮುನ್ನುಗ್ಗಿದ್ದಾನೆ ಭೀಷ್ಮ. ರಥದಲ್ಲಿ ಕುಳಿತ ದೇವರು ತನ್ನನ್ನು ಬೇಗ ಕರ್ತವ್ಯದೀಮ್ದ ಬಿಡುಗಡೆಗೊಳಿಸಲಿ ಎಂಬುದೇ ಆತನ ಆಶಯವಾಗಿತ್ತು. ಜೀವನದುದ್ದಕ್ಕೂ ನಡೆದ ಹಲವಾರು ಘಟನೆಗಳು ಆತನಿಗೆ ಬೇಸರತರಿಸಿದ್ದವು, ನೋವುಂಟುಮಾಡಿದ್ದವು. ಆದರೂ ಒಪ್ಪಿಕೊಂಡ ಪಾತ್ರಪೋಷಣೆಯನ್ನು ಮಾಡಿಯೇ ಇಹವನ್ನು ತ್ಯಜಿಸುವ ಇಚ್ಛೆಯನ್ನು ಆತ ಹೊಂದಿದ್ದ. ಇದನ್ನರಿತ ಪರಶುರಾಮರು ತಾವೇ ಸ್ವತಃ ಹಿಂದೆ ಭೀಷ್ಮನಲ್ಲಿ ನಡೆಸಿದ ಯುದ್ಧವನ್ನು ನಿಲ್ಲಿಸಿ ಹೊರಟುಹೋದರು. ಅಂತೂ ಯುದ್ಧ ಘಟಿಸಿ ತನಗೆ ಬಾಣಗಳು ನಾಟಿ ಶರಶಯ್ಯೆಯಲ್ಲಿ ಮಲಗಿದ್ದಾಗಿದೆ ಈಗ. ಬಾಯಾರಿಕೆಗೆ ಪರಮಾತ್ಮನ ಅಣತಿಯಂತೇ ಅರ್ಜುನ ಬಾಣ ನೆಟ್ಟು ಗಂಗೆಯನ್ನೇ ಬಾಯಿಗೆ ತಲ್ಪಿಸಿದ್ದಾನೆ. ಎದುರಾಳಿ ಅರ್ಜುನನಲ್ಲ, ಅರ್ಜುನನ ಎದುರು ಲಗಾಮು ಹಿಡಿದು ಕುಳಿತ ಶ್ರೀಕೃಷ್ಣ ಎಂಬುದನ್ನು ನಿರ್ಧರಿಸಿದ್ದ ಭೀಷ್ಮ ಆತನ ಸಮ್ಮುಖದಲ್ಲೇ ಬಾಣಗಳ ಮಂಚದಮೇಲೆ ಮಲಗಿದ್ದಾನೆ. ಬದುಕಿನಲ್ಲಿ ಯಾರ್ಯಾರಿಗೆ ಏನೇನು ಸಿಗಬೇಕೋ ಅದು ಸಿಗಬೇಕು, ಏನೇನು ನಡೆಯಬೇಕೋ ಅದು ನಡೆದೇ ತೀರಬೇಕು. ಸಂಚಿತಕರ್ಮಫಲವನ್ನು ಅನುಭವಿಸಿಯೇ ಕಳೆಯಬೇಕೇ ವಿನಃ ಅದು ಹಾಗೇ ಮಾಯವಾಗಿಹೋಗುವುದಲ್ಲ.

ಹೆತ್ತಾತನರ್ಜುನನು ಮುತ್ತಯ್ಯ ದೇವೇಂದ್ರ
ಮತ್ತೆ ಮಾತುಲನು ಶ್ರೀಹರಿಯಿರಲು ಅಭಿಮನ್ಯು
ಸತ್ತನೇಕಯ್ಯ ? ಸರ್ವಜ್ಞ

ಎಂಬ ಸರ್ವಜ್ಞಕವಿಯ ಉದ್ಘೋಷದಂತೇ ಯಾರೇ ಇದ್ದರೂ ವಿಧಿಯ ಮುಂದೆ ಅವರು ಏನೂ ಮಾಡಲಾರರು. ಜನಬಲ, ಧನಬಲ, ದೇಹಬಲ ಇವೆಲ್ಲಾ ಆಗ ಕೆಲಸಮಾಡಲಾರವು. ಕ್ಷತ್ರಿಯಬಲವನ್ನು ಅಪಾರವಾಗಿ ವಶಿಷ್ಠರ ಮೇಲೆ ಪ್ರಯೋಗಿಸಿದ ಚಂಡ ಕೌಶಿಕ ಪ್ರತೀ ಘಳಿಗೆ ಸೋತು ಹೋದ! ಆಮೇಲೆ ಅವನಿಗೆ ಅರ್ಥವಾಗಿದ್ದು ಅದನ್ನೇ ಅನುಸರಿಸಿ "ಬ್ರಹ್ಮರ್ಷಿ" ಎಂದು ವಶಿಷ್ಠರಿಂದಲೇ ಗೌರವಿಸಲ್ಪಟ್ಟ ! ಅಂದರೆ ತಪಃಶಕ್ತಿಗೆ ಸರಿಸಮವಾದ ಶಕ್ತಿ ಬೇರಾವುದೂ ಅಲ್ಲ.

ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮತೇಜಂ ಬಲಂ ಬಲಂ ---ಎಂಬ ಉಕ್ತಿಯಂತೇ ಕೇವಲ ಬ್ರಹ್ಮತೇಜಸ್ಸು ಮಾತ್ರ ಅಸಾಧ್ಯವಾದುದನ್ನೂ ಸಾಧ್ಯವಾಗಿಸುವಂಥದು. ಅಂತಹ ಬ್ರಹ್ಮಚರ್ಯ ವೃತನಿಷ್ಠನಾದ ಭೀಷ್ಮ ಪಿತಾಮಹ ತನ್ನ ಜೀವಿತದಲ್ಲಿ ಗಳಿಸಿದ ಪುಣ್ಯದ ಬಹುಭಾಗವನ್ನು ಆ ಐದು ಬಾಣಗಳಿಗೆ ಧಾರೆಯೆರೆದಿದ್ದ. ನಿರರ್ಥಕವಾದ ಆ ಕೆಲಸದ ಬದಲು ಅದನ್ನು ಹಾಗೇ ಇಟ್ಟುಕೊಳ್ಳಬಹುದಿತ್ತು, ಆದರೆ ಕ್ಷಾತ್ರಧರ್ಮವನ್ನು ಕಾಪಾಡಲು, ತಾನು ಪ್ರತಿನಿಧಿಸುವ ವಂಶದ ಭಾಗವನ್ನು ಕಾಪಾಡಲು ಹಾಗೆ ಮಾಡಿದ್ದ. ಅಂಬೆಯನ್ನು ಕರೆತರದೇ ಹೋದರೆ ತನ್ನ ಮಲತಮ್ಮನಿಗೆ ಮದುವೆಗೆ ಸರಿಯಾದ ಅಷ್ಟು ಚಂದದ ಹೆಣ್ಣು ಸಿಗುವಳೇ ಎಂಬ ಕಾರಣದಿಂದ ಹಾಗೆ ರಥದಲ್ಲಿ ಬಲವಂತವಾಗಿ ಕರೆತಂದಿದ್ದ. ಮೋದಲೇ ಆಕೆಯ ಬಗೆಗೆ ತಿಳಿದಿದ್ದರೆ ಆ ಕೆಲಸಕ್ಕೆ ಕೈಹಾಕುತ್ತಲೇ ಇರಲಿಲ್ಲ ಭೀಷ್ಮ. " ಮಕ್ಕಳೇ ಬೇಡಾ " ಎಂದರೂ ತಾನೇ ಅವರ ನಡುವೆ ನಿಂತು ಹೋರಾಡುವಂತ ಪರಿಸ್ಥಿತಿ ಬರುತ್ತದೆಂಬ ನಿರೀಕ್ಷೆಯಿಟ್ಟುಕೊಂಡವನಲ್ಲ ಭೀಷ್ಮ. ಎಂದು ಮೊಮ್ಮಗು ಅರ್ಜುನನನಿಂದ ಸೋತನೋ ಅಂದೇ ಭೀಷ್ಮ ಸತ್ತುಹೋದ, ಆದರೆ ಕೇವಲ ಶುಭಗಳಿಗೆಗಾಗಿ, ಪರಮಾತ್ಮನ ಅಂತಿಮ ದರ್ಶನಕ್ಕಾಗಿ ಹಾತೊರೆದು ಜೀವವನ್ನು ಕೈಯ್ಯಲ್ಲಿ ಬಿಗಿಹಿಡಿದು ಜೀವಚ್ಛವವಾಗಿ ಶರಶಯ್ಯೆಯಲ್ಲಿ ಮಲಗಿದ್ದಾನೆ ಭೀಷ್ಮ. ಸುತ್ತ ರಣರಂಗದಲ್ಲಿ ಸತ್ತ, ಅರೆಸತ್ತ ಸೈನಿಕರು. ನೋವಿನ ಚೀರಾಟ. ಹಗಲೂ-ರಾತ್ರಿ ನೋವು, ನೋವು ನೋವಿನದೇ ಗೋಳು. ಕೇಳುತ್ತಿರುವ ಆರ್ತನಾದಗಳು. ಹಗಲು ಹಾರಾಡುವ ರಣಹದ್ದುಗಳು, ಕಾಗೆಗಳು. ರಾತ್ರಿಯಲ್ಲಿ ನಿಶಾಚರಿ ಪಶುಪಕ್ಷಿಗಳು. ಎಲ್ಲೆಲ್ಲೂ ರಕ್ತದ ಅಸಹ್ಯ ಹುಟ್ಟಿಸುವ ವಾಸನೆ. ರಾತ್ರಿಗಾಗಿ ಯುದ್ಧವಿರಾಮವಿದ್ದರೂ ಎದ್ದುಹೋಗಲಾರದ ಸ್ಥಿತಿ. ನೆಂಟರಿಷ್ಟರು ಬಂಧು-ಬಳಗ ಯಾರೂ ಸನಿಹದಲ್ಲಿ ಇರಲಾರದ ಗತಿ. ದಾರುಣವಾದ ಈ ವಿಷಮ ಪರಿಸರದಲ್ಲಿ ಜನ್ಮಾವಶೇಷದ ಋಣತೀರಿಕೆಗಾಗಿ ಕುಟುಕು ಜೀವವನ್ನು ಹಿಡಿದು ಕಳೆದಹೋದ ಜೀವಮಾನವನ್ನು ಅವಲೋಕಿಸುತ್ತಿದ್ದ ಭೀಷ್ಮ. ವಶಿಷ್ಠರ ಶಾಪವೇ ಕಾರಣವಾಗಿ ಮನುಷ್ಯನಾಗಿ ಪಡಬಾರದ ಪಾಡುಪಟ್ಟ ಭೀಷ್ಮ ಸಾಯುವ ನೋವಿನ ಘಳಿಗೆಯಲ್ಲೂ ತನ್ನ ಪ್ರೀತಿಪಾತ್ರ ಜನರನ್ನು ಮರೆಯಲಿಲ್ಲ. ಬಹುದೀನನಾದ ಭೀಷ್ಮ ತನ್ನಿಂದ ಇತರರಿಗಾದ ಉಪಕಾರಕ್ಕೆ ಪ್ರತ್ಯುಪಕಾರ ಬಯಸಲಿಲ್ಲ. ಆತನಿಗೆ ಬೇಕಾದುದೊಂದೇ ಶ್ರೀಕೃಷ್ಣನ ಕೊನೆಯ ಒಂದು ನೋಟ. ಆ ನೋಟವನ್ನೊಮ್ಮೆ ಹೃದಯಕವಾಟ ತೆರೆದು ಅದರಲ್ಲಿ ಹುದುಗಿಸಿಕೊಂಡು ಆತನೇ ಕರುಣಿಸುವ ಶುಭಸಮಯದಲ್ಲಿ ಕಣ್ಮುಚ್ಚುವವನಿದ್ದ ಭೀಷ್ಮ. ಆ ಸಮಯ ಸನ್ನಿಹಿತವಾದಗ ಮತ್ತೊಮ್ಮೆ ತನ್ನ ತಂದೆ ಶಂತನುವನ್ನೂ ತಾಯಿ ಗಂಗೆಯನ್ನೂ ಮನದಲ್ಲೇ ವಂದಿಸಿ, ನಿಮಗೆ ತಕ್ಕಮಗನಾಗಲು ಸಾಧ್ಯವಾಗದಿದ್ದರೂ ಕೈಲಾದಮಟ್ಟಿಗೆ ನಾನು ನಾನಾಗಿರಲು ಪ್ರಯತ್ನಿಸಿದ್ದೇನೆ ಎಂದು ಮನದಲ್ಲೇ ವಂದಿಸಿದ. ಆತನ ಮನದಲ್ಲಿ ಯಾವುದೇ ಅಶಾಂತಿಯಾಗಲೀ ಅತೃಪ್ತಿಯಾಗಲೀ ಇರಲಿಲ್ಲ.


ಶಂತನು ಗಂಗೆಯ ವರಿಸಿದ ಕಾರಣ
ನಿಂತೆನು ಈ ದಿನ ಭುವಿಯೊಳಗೆ
ಸಂತತಿ ನಡೆಸುತ ವಂಶವ ಮುಂದಕೆ
ಸಂತಸ ತರಲೀ ಹಿರಿಯರಿಗೆ

ಕ್ಷಾತ್ರದಿ ಕಾದುತ ಬೇಡದ ಭಾಗ್ಯವ
ಪಾತ್ರೆಯೊಳಿರಿಸಲು ಬಯಸಿಲ್ಲ
ಗೋತ್ರವು-ಕುಲವು ಒಂದೇ ಆದರೂ
ಖಾತ್ರಿಯು ಯುದ್ಧವು ಬಿಡದಲ್ಲ

ನಲುನಲುಗುವ ನನ್ನೊಳಮನಸಿನ ಪರಿ
ಅಲುಗಾಡಿಸುತಲಿದೆ ದೇಹವನು
ಬಲುಮಾನವರಿವರೆಲ್ಲರು ಕಮ್ಮಿಯೇ ?
ಹುಲುಮಾನವ ನಾನಾಗಿಹೆನು

ಚೆಂಡು ಬುಗುರಿಯಾಡಿದ ಮರಿಮಕ್ಕಳು
ರುಂಡ ಮುಂಡ ಕತ್ತರಿಸುತಲಿ
ಅಂಡಪಿಂಡ ಬ್ರಹ್ಮಾಂಡವು ಮರೆಯದ
ಚಂಡ ಯುದ್ಧವನು ನಡೆಸುತಲಿ

ಬುದ್ಧಿ ಹೀನ ಜನರೊಂದಿಗೆ ಕಳೆದೆನು
ಇದ್ದೂ ಏನೂ ಸಾಧಿಸದೇ
ಗದ್ದಲದೊಳ ಜೀವನವದು ಅದುರಿತು
ಬಿದ್ದುದಕೇನೂ ವಾದಿಸದೇ

ಪರಮಾತ್ಮನ ಪರಿಶೋಭಿತ ಚರಣದಿ
ಶಿರವಿಡುತಲಿ ನಾ ಬೇಡುವೆನು
ಹರಿನೀನೆಂಬುದು ಅರಿವಾದೊಡೆನೆಯೇ
ಬರೆದೆನು ನಿನಗೀ ಜೀವವನು

ಸಲ್ಲದ ಪಾಪವ ಮಾಡದ ಜನ್ಮದಿ
ಇಲ್ಲದ ನೋವನು ಅನುಭವಿಸಿ
ಎಲ್ಲರೊಡನೆ ಸಹಕರಿಸುತ ಪಾತ್ರವ
ಬಲ್ಲರೀತಿಯಲಿ ನಿರ್ವಹಿಸಿ

ಮುರಳೀಗಾನದಿ ಸುಖಿಸುವ ಕೃಷ್ಣನೆ
ಧರೆಗುರುಳಿಸಿ ನೋಡುವುದೇನು ?
ಭರದಲಿ ಸಮಯವ ಕರುಣಿಸು ಬೇಗದಿ
ಸರಸರ ನಿನ್ನೊಳು ಸೇರುವೆನು !

Tuesday, October 26, 2010

ಇಮಾಮ್ ಸಾಬಿಯೂ ಗೋಕುಲಾಷ್ಟಮಿಯೂ


ಇಮಾಮ್ ಸಾಬಿಯೂ ಗೋಕುಲಾಷ್ಟಮಿಯೂ


ಬದುಕಿನ ಪುಟಗಳಲ್ಲಿ ಹೃದಯ ವೈಶಾಲ್ಯತೆ ಇದ್ದರೆ ಜಗತ್ತು ಸುಂದರವಾಗುವುದಕ್ಕೆ ಬೇರಾವುದೇ ಪರಿಕರ ಬೇಕಾಗುವುದಿಲ್ಲ. ನಮ್ಮ ವ್ಯಕ್ತಿತ್ವ ಸಂಪೂರ್ಣ ವಿಕಸಿತವಾಗಬೇಕಾದರೆ ಅದರ ದರ್ದು ಇದ್ದೇ ಇದೆ. ವಿಶಾಲ ಮನೋಭಾವ ಇಲ್ಲದವರು ಬಾಲಿಶ ವ್ತಕ್ತಿಯಂತೆಯೋ, ಕುಬ್ಜರಂತೆಯೋ, ಲೋಭಿಗಳಂತೆಯೋ ಆಗಿರುವುದು ನಮಗೆ ಕಂಡುಬರುತ್ತದೆ. ಮುಳುಗುವವನಿಗೆ ಹುಲ್ಲುಕಡ್ಡಿ ಭಾರ ಎಂಬೊಂದು ಗಾದೆ ಹೇಗೆ ಹುಟ್ಟಿತೋ ಗೊತ್ತಿಲ್ಲ, ಆದರೆ ಮುಳುಗಿರುವ ವಸ್ತುವನ್ನು ಹುಲ್ಲುಕಡ್ಡಿಯಾದ ದರ್ಬೆಯನ್ನೇ ಇಳಿಬಿಟ್ಟು ಅವು ಒಂದಕ್ಕೊಂದು ಅಂಟಿಕೊಂಡು ದಾರವಾಗಿ, ಆ ದಾರದಿಂದಲೇ ಮೇಲೆತ್ತಿದ ಘಟನೆ ಮಹಾಭಾರತದಲ್ಲಿ ನಮಗೆ ವೇದ್ಯವಾಗುತ್ತದೆ. ನಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬಹುದಾದ ನಯ ವಿನಯಗಳು ಯಾರಿಂದಲೋ ಕಡ ತಂದು ಬಳಸಬೇಕಾದ ಗುಣನಡತೆಗಳಲ್ಲ. ಮೇಲಾಗಿ ಅವಕ್ಕೆ ಯಾವುದೇ ಖರ್ಚಿನ ಬಾಬತ್ತು ಕೂಡ ಇಲ್ಲ. ನಯ-ವಿನಯ-ವೈಶಾಲ್ಯ-ಕ್ಷಮೆ-ದಾನ-ಧರ್ಮ ಹೀಗೇ ಇವೆಲ್ಲಾ ಒಂದೇ ಸಾಲಿನಲ್ಲಿ ಒಂದಕ್ಕೊಂದು ಅಂಟಿನಿಂತಿರುವ ನಡತೆಯ ಮುಖ್ಯ ಸಲ್ಲಕ್ಷಣಗಳು. ನಾವೇ ಸ್ವತಃ ಎಲ್ಲವನ್ನೂ ಜನ್ಮಜಾತವಾಗಿ ಪಡೆದುಬಂದಿರುವುದಿಲ್ಲವಾದ್ದರಿಂದ ಹಿರಿಯರನ್ನು ಮತ್ತು ಸದ್ಗುಣಿಗಳನ್ನು ನೋಡಿ ನಾವದನ್ನು ಅಳವಡಿಸಿಕೊಳ್ಳುವುದು ಬಹಳ ಒಳ್ಳೆಯದು.

ಇದರ ಕುರಿತು ಹೇಳುವಾಗ ಕೆಲವು ಉದಾಹರಣೆಗಳ ಸಮೇತ ಹೇಳಿದರೆ ಸಮಂಜಸವೆನಿಸಿ ಹಾಗೇ ಸಾಗುತ್ತೇನೆ. ಕೆಲವು ವರ್ಷಗಳ ಹಿಂದೆ ನನ್ನ ಅತ್ಮೀಯ ಗೆಳೆಯರೊಬ್ಬರು ಹೋಟೆಲ್ ಒಂದಕ್ಕೆ ತಿಂಡಿಗೆ ಹೋದರು. ಅವರು ಕುಳಿತ ಹೋಟೆಲ್ ಸಾಮಾನ್ಯ ತರಗತಿಯದ್ದಾಗಿತ್ತು. ಆದ್ರೆ ಸೆಲ್ಫ್ ಸರ್ವಿಸ್ ಥರದ್ದಲ್ಲ. ಅಲ್ಲಿ ಕೂತರು ಕೂತರು ಕೂತರು, ಯಾರೂ ಮಾತಾನಾಡಿಸಲು ಬರಲೇ ಇಲ್ಲ. ಇನ್ನೇನು ಎದ್ದು ಹೋಗಿಬಿಡಬೇಕೆನ್ನುವಷ್ಟು ಅಸಹನೆ ಕೋಪದರೂಪವನ್ನು ಪಡೆಯಬೇಕೆನ್ನುವಷ್ಟರಲ್ಲಿ ಒಬ್ಬ ತಾತ ಬಂದು ಮಾತನಾಡಿಸಿದ

" ಏನ್ ಕೊಡ್ಲಿ ಸರ್ ? "

ಇವರು ಉತ್ತರಿಸುವ ಬದಲು ಆತನನ್ನು ಸುಮ್ಮನೇ ಕೇಳಿದರು

" ಯಜಮಾನ್ರೆ ನೀವು ಇಲ್ಯಾವಾಗ್ ಬಂದ್ರಿ ? "

" ಒಂದ್ತಿಂಗ್ಳಾಯ್ತು ಸಾರ್, ಅಲ್ಲೀ ಯಶವಂತಪುರದಲ್ಲಿದ್ದಾಗ ಸಂಬ್ಳ ತುಂಬಾನೇ ಕಮ್ಮಿ ಕೊಡ್ತಿದ್ರು, ಮೇಲಾಗಿ ಯಜಮಾನ್ರು ತುಂಬಾನೇ ಸಿಡುಕು....ನಂಗೂ ವಯಸ್ಸಾಯ್ತು.....ಮಕ್ಳು-ಮರಿ ಸಂಸಾರ ಎಲ್ಲಾ ನಡೀಬೇಕಲ್ಲಾ ಸ್ವಾಮಿ....ಅದಕ್ಕೇ ಇಲ್ಲೊಂದ್ ಕೆಲ್ಸ ಇದೆ ಅಂತ ನಂ ಸ್ನೇಹಿತರೊಬ್ರು ಹೇಳ್ದ್ರು...ಬಂದೆ ಇಷ್ಟ ಆಯ್ತು. ಯಜಮನ್ರು ತುಂಬಾ ಒಳ್ಳೇಜನ...ಇರುವಷ್ಟು ದಿನ ಇದ್ಬುಡೋಣ ಅನ್ನಿಸ್ತಾ ಇದೆ "

ನನ್ನ ಸ್ನೇಹಿತರಿಗೆ ಆ ಒಂದು ಮಾತಿನಿಂದ ಆರಂಭವಾದ ಉಪಚಾರ ಮನೆಯಲ್ಲೂ ಸಿಗದಷ್ಟು ವ್ಯವಸ್ಥೆಯೊಂದಿಗೆ, ಪುನಃ ಬರುತ್ತಿರಬೇಕೆಂಬ ಆತ್ಮೀಯ ಆಹ್ವಾನದೊಡನೆ ಗೌರವಪೂರ್ವಕ ನಮಸ್ಕಾರ ಸಹಿತದ ಬೀಳ್ಕೊಡುಗೆಯೊಂದಿಗೆ ಅಂದಿಗೆ ಮುಗಿಯಿತು. ಅದೇ ಅಂದು ಅವರು ರೇಗಾಡಿದ್ದರೆ ಆ ಮನುಷ್ಯನೂ ಕೂಡ ಕುಪಿತನಾಗಿ ಕ್ಷಣಾರ್ಧದಲ್ಲಿ ಎಲ್ಲವೂ ಬೇರೆಯದೇ ರೀತಿ ಆಗುತ್ತಿತ್ತು.

ಉದಾ ೨ :

ಎಚ್.ಎಸ್.ವಿ ಬರೆದ ಅನಾತ್ಮಕಥನದಲ್ಲಿ ರಾಜಕುಮಾರ್ ಬಗ್ಗೆ ಬರೆದಾಗ ಅವರು ಹೇಳುತ್ತಾರೆ -- ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಕಾರ್ಯಕ್ರಮ, ಹಿರಿಯಕವಿ ಕೆ.ಎಸ್.ನ. ಅಲ್ಲಿಗೆ ಬಂದಿದ್ದರು. ಡಾ| ರಾಜಕುಮಾರ್ ಕೂಡ ಪಾಲ್ಗೊಳ್ಳಬೇಕಾದ ಸಭೆ. ಬಂದಿಳಿದ ರಾಜಕುಮಾರ್ ನೇರವಾಗಿ ವೇದಿಕೆಯಲ್ಲಿ ಕುಳಿತಿದ್ದ ಕೆ.ಎಸ್.ನ ಗೆ ದೀರ್ಘದಂಡ ನಮಸ್ಕಾರ ಮಾಡಿದರಂತೆ. ಸಭೆಯಲ್ಲಿ ರಾಜಕುಮಾರ್ ಅಭಿಮಾನಿಗಳೆ ಹೆಚ್ಚಿದ್ದು ಕೆ.ಎಸ್.ನ ಅಭಿಮಾನಿಗಳ ಸಂಖ್ಯೆ ಕಮ್ಮಿ ಇತ್ತು ಹೀಗಾಗಿ ಅವರ ವ್ಯಕ್ತಿತ್ವವನ್ನು ಎಲ್ಲರಿಗೂ ಉನ್ನತಮಟ್ಟದಲ್ಲಿ ಪರಿಚಯಿಸುವುದಕ್ಕಾಗಿ ಮೆರುಕಲಾವಿದನೊಬ್ಬ ಇನ್ನೊಂದು ರಂಗದ ಮೇರುಕಲಾವಿದನೊಬ್ಬನಿಗೆ ನಮಸ್ಕರಿಸಿದ್ದು ಎನ್ನುತ್ತಾರೆ ಎಚ್.ಎಸ್.ವಿ. ಇದರಿಂದ ರಾಜಕುಮಾರ್ ಚಿಕ್ಕವರಾಗಲಿಲ್ಲ ಬದಲಿಗೆ ರಾಜಕುಮಾರ್ ಅವರ ಆದರ್ಶವನ್ನು ಎಲ್ಲರೂ ಕಂಡರು.

ಜಗತ್ತಿನ ಪ್ರತೀ ಅಣು ಅಣುವೂ ಗೌರವಯುತವಾದದ್ದೇ. ಸಮಯಬಂದಾಗ ಹುಲ್ಲುಕಡ್ಡಿಯೂ ಕೆಲಸಮಾಡಬಲ್ಲುದು. ಇದನ್ನು ಅರಿಯದೇ ಜನರನ್ನು ನಿಭಾಯಿಸುವುದು ಕಷ್ಟವಾದಾಗ ಕರ್ನಾಟಕ ಈಗ ಕಾಣುತ್ತಿರುವ ಅರಾಜಕತೆ ಕಾಣಬಹುದು. ಅದು ನಮ್ಮ ನಮ್ಮ ಮಟ್ಟದಲ್ಲಿನ ವ್ಯವಹಾರದಲ್ಲಿ ಅರಾಜಕತೆಯೇ ಆಗಿರುತ್ತದೆ. ಹಾಗಂತ ಕೇವಲ ಹೊರತೋರಿಕೆಗಾಗಿ ಆ ವೇಷ ಹಾಕುವುದು ಬೇಡ. ವ್ಯಕ್ತಿಗೆ ಗೌರವ ಕೊಟ್ಟು ಪಡೆಯುವ ಸಂಸ್ಕಾರ ಸಿದ್ಧಿಸಿರಬೇಕು. ಯಾವ ವ್ಯಕ್ತಿಯಲ್ಲಿ ಸದ್ಗುಣಗಳು ಮನೆಮಾಡಿರುತ್ತವೆಯೋ ಆ ವ್ಯಕ್ತಿ ಸ್ವಯಂ ಮೇಲ್ಮಟ್ಟಕ್ಕೆ ಏರುತ್ತಾನೆ.

ಎಚ್.ಎಸ್.ವಿ ಒಂದುಕಡೆ ಬರೆಯುತ್ತಾರೆ-- ಬೆಂಗಳೂರಿಗೆ ಬಂದ ಹೊಸದು, ಸಂಸಾರ ಅವಿಭಕ್ತ ಹಾಗೂ ದೊಡ್ಡದು. ಅವರ ಮನೆಯಲ್ಲಿ ಅಡಿಗೆಗೆ ಗ್ಯಾಸ್ ಇರಲಿಲ್ಲ. ಆ ಕಾಲದಲ್ಲಿ ವರ್ಷಗಟ್ಟಲೆ ಗ್ಯಾಸ್ ಗಾಗಿ ಬುಕ್ ಮಾಡಿ ಕಾಯಬೇಕಾದ ಪ್ರಸಂಗವಿತ್ತು. ಅನಿರೀಕ್ಷಿತವಾಗಿ ಸಿಕ್ಕ ಮುದುಕನೊಬ್ಬ ರಾಮಾ ಶಿವಾ ಅನ್ನುತ್ತಾ, ಕಾಲುಗಂಟು ನೀವಿಕೊಳ್ಳುತ್ತಾ ಅವರನ್ನು ಸಂಧಿಸಿ ಗ್ಯಾಸ್ ಕೊಡಿಸುತ್ತೇನೆಂದು ಹೇಳುತ್ತಾ ಅಂದಿನ ಅವರ ಸಂಬಳದ ಅರ್ಧಹಣ ಅಂದರೆ ಮುನ್ನೂರು ರೂಪಾಯಿ ಪಡೆದು ಮೋಸಮಾಡುತ್ತಾನೆ. ಆ ಮುದುಕನ ತೋರಿಕೆಯ ಲಕ್ಷಣಗಳು ಒಳ್ಳೆಯವನಂತೇ ಕಂಡುಬಂದುದರಿಂದ ಎಚ್.ಎಸ್.ವಿ ಮೋಸಹೋಗುತ್ತಾರೆ. ಇದೇ ರೀತಿ ಇನ್ನೊಮ್ಮೆ ಸಿನಿಮಾ ಥೇಟರ್ ನಲ್ಲಿ ಅಸಹಾಯ ಸ್ಥಿತಿಯಲ್ಲಿ ಹುಡುಗನೊಬ್ಬ ಸಹಕರಿಸಿ ಅವರ ಮನೆಮಂದಿಯೆಲ್ಲರ ಮನಗೆದ್ದು ಅವರ ಮನೆಗೆ ಆತ್ಮೀಯನಾಗಿ ಆಮೇಲೊಂದು ದಿನ ತನಗೆ ತೀವ್ರ ಅನಾರೋಗ್ಯವೆಂದೂ ಆಪರೇಶನ್ ಗೆ ಖರ್ಚಿಗೇ ಇಲ್ಲವೆಂದು ಹೇಳುತ್ತಾ, ಎಚ್.ಎಸ್.ವಿ ತಾವೇ ಸ್ವಲ್ಪ ಕೊಡುತ್ತೇವೆಂದು ಹತ್ತುಸಾವಿರ ಕೊಟ್ಟಾಗ, ಹಣಪಡೆದು ದೂರವಾಗುತ್ತಾನೆ. ಮತ್ತೆ ಮೂವತ್ತು ವರ್ಷಗಳನಂತರ ಅನಿರೀಕ್ಷಿತವಾಗಿ ರವೀಂದ್ರ ಕಲಾಕ್ಷೇತ್ರದ ಹೊರಗೆ ಭೇಟಿಯಾಗಿ ಆತನೇ ಬಂದು ಮಾತನಾಡಿಸಿ ಸಾರಿ ಎಂದು ಚೆಕ್ ಕೊಟ್ಟು ಹೋಗುತ್ತಾನೆ. ಕೆಲಸಕ್ಕೆ ಬಾರದ ಚೆಕ್ ತಗಂಡು ಎಚ್. ಎಸ್.ವಿ ಸುಮ್ಮನೇ ಇರುತ್ತಾರೆ. ಆ ಚೆಕ್ ಎನ್ ಕ್ಯಾಷ್ ಆಯಿತೋ ಇಲ್ಲವೋ ನೀವೇ ಊಹಿಸಿ ಎಂದು ನಮಗೇ ಹೇಳುತ್ತಾರೆ. ಈ ಎರಡೂ ಸಂದರ್ಭಗಳಲ್ಲಿ ಎಚ್.ಎಸ್.ವಿ ಕೋಪಗೊಳ್ಳುವ ಬದಲು, ಯಾವುದೇ ಈರ್ಷ್ಯೆ ತೀರಿಸುವ ಬದಲು ಅಂಥವರ ಬಗ್ಗೆ ಮರುಕಪಡುತ್ತಾರೆ.

ಎಚ್.ಎಸ್.ವಿ ಯವರು ಬರೆದ ಲೋಕದ ಕಣ್ಣಿಗೆ ರಾಧೆಯು ಕೂಡ, ಅಮ್ಮಾ ನಾನು ದೇವರಾಣೆ , ನೀರು ತಿಳಿಯಿದ್ದರೂ ಕೊಳವಿರಲಿ ಆಳ ಎಂಬೆಲ್ಲಾ ಹತ್ತುಹಾಡುಗಳನ್ನು ಸೇರಿಸಿ ಖ್ಯಾತ ಸಂಗೀತ ಸ್ವರಸಂಯೋಜಕರಾದ ಸಿ.ಅಶ್ವತ್ಥ್ ಅವರಿಗೆ ನೀಡಿದಾಗ ಕೆಲವುದಿನಗಳ ನಂತರ ಆ ಹಾಡುಗಳ ಲಿಖಿತ ಪ್ರತಿಗಳ ಫೈಲನ್ನು ಮರಳಿ ಕೊಟ್ಟು " ಮೂರ್ತಿ , ಇವು ನನಗ್ಯಾಕೋ ಅಷ್ಟಾಗಿ ಹಿಡಿಸಲಿಲ್ಲ " ಎಂದರಂತೆ. ಎಚ್.ಎಸ್.ವಿ ಮರುಮಾತಾಡದೇ ಸುಮ್ಮನೇ ಪಡೆದರು. ಅದಾದ ಮಾರನೇ ದಿನ ಮೈಸೂರು ಅನಂತಸ್ವಾಮಿ ಎಚ್.ಎಸ್.ವಿ ಯವರ ಮನೆಗೆ ಬಂದವರು ಎಚ್.ಎಸ್.ವಿ ಬರೆದದ್ದರಲ್ಲಿ ಒಂದಷ್ಟು ಭಾವಗೀತೆಗಳನ್ನು ಆಯ್ದುಕೊಡಲು ಹೇಳಿದರಂತೆ. ಅಶ್ವತ್ಥ್ ಮರಳಿಸಿದ ಫೈಲು ಅನಂತಸ್ವಾಮಿಯವರ ಕೈ ಸೇರಿತು. ಅನಂತಸ್ವಾಮಿ ಅದಕ್ಕೆ ರಾಗಸಂಯೋಜಿಸಿ ಹಾಡಿ ಆಮೇಲೆ ಅವು ಅನೇಕ ಹಾಡುಗಾರರಿಂದ ಅನೇಕ ವೇದಿಕೆಗಳಲ್ಲಿ ಹಾಡಲ್ಪಟ್ಟು ಜಗದ್ವಿಖ್ಯಾತವಾದವು ! [ವಿಶ್ವಕನ್ನಡಿಗರೆಲ್ಲರೂ ಇಷ್ಟಪಟ್ಟು ಕೇಳಿರುವ ಹಾಡುಗಳವು]. ಅದಾದಮೇಲೆ ಎಚ್.ಎಸ್.ವಿ ಯವರ ಹಾಗೂ ಅಶ್ವತ್ಥ್ ರ ಸ್ನೇಹಕ್ಕೆ ಯಾವ ಅಡ್ಡಿಯೂ ಇರಲಿಲ್ಲ. ನಂತರದ ದಿನಗಳಲ್ಲಿ ಎಚ್.ಎಸ್.ವಿ ಯವರ ಅನೇಕ ಗೀತೆಗಳನ್ನು ಅಶ್ವತ್ಥ್ ಬಳಸಿಕೊಂಡರು, ಹಾಡಿದರು. ವ್ಯಕ್ತಿಗೆ ತನ್ನ ತಪ್ಪಿನ ಅರಿವಾದಾಗ ಆತನೇ ಕುಗ್ಗಿಹೋಗುತ್ತಾನೆ; ಪಶ್ಚಾತ್ತಾಪ ಪಡುತ್ತಾನೆ. ಆ ಪಶ್ಚಾತ್ತಾಪದ ಬೇಗುದಿಯೇ ಆತನನ್ನು ಮನವನ್ನು ದಹಿಸಿ ಶುಚಿಗೊಳಿಸುತ್ತದೆ.

ಇದನ್ನು ಇಲ್ಲಿ ಯಾಕೆ ಪ್ರಸ್ತಾಪಿಸಿದೆನೆಂದರೆ ಎಲ್ಲರಿಗೂ ಒಂದಿಲ್ಲೊಂದು ಅವಕಾಶ ಸಿಕ್ಕೇ ಸಿಗುತ್ತದೆ. ಯಾರೋ ತಿರಸ್ಕರಿಸಿದರು ಎಂದು ಅವರಮೇಲೆ ಹರಿಹಾಯುವುದಾಗಲೀ ಅಥವಾ ನಮ್ಮೊಳಗೇ ನಾವು ಕುಗ್ಗಿಕೊರಗುವುದಾಗಲೀ ಸರಿಯಲ್ಲ.

ಇವತ್ತು ಅವಿಭಕ್ತ ಭಾರತ ವಿಭಕ್ತವಾಗಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಭಾರತಗಳೆಂಬ ಮೂರು ರಾಷ್ಟ್ರಗಳಾಗಿವೆ. ಅಕ್ಕಪಕ್ಕದ ರಾಷ್ಟ್ರಗಳವರು ತಿಳುವಳಿಕೆಯಿಲ್ಲದೇ ತಮ್ಮ ಮೌಢ್ಯವನ್ನು ಮೆರೆಯುತ್ತಲೇ ಇದ್ದಾರೆ. ಹಾಗೆ ಅವರು ಹಾರಾಡಿದಾಗಲೆಲ್ಲಾ ನಮ್ಮಲ್ಲಿಯೂ ಕೆಲವರು ಅವರನ್ನು ವಿರೋಧಿಸಿ ಹಾರಾಡುತ್ತಾರೆ. ಅವರಿಗೆ ಬುದ್ಧಿಯಿಲ್ಲವೆಂದು ನಮಗೂ ಬುದ್ಧಿಯಿಲ್ಲವಾಯಿತೇ ? ಉತ್ತರಕರ್ನಾಟಕದ ಅನೇಕ ದೇವಸ್ಥಾನಗಳು ಮತ್ತು ಮಸೀದಿಗಳು ಒಂದೇ ವಿಶ್ವಸ್ಥ ಸಮಿತಿಯ ಅಡಿಯಲ್ಲಿ ನಡೆಯುತ್ತಿವೆ. ಹಿಂದೂ-ಮುಸಲ್ಮಾನ್ ಹಬ್ಬಗಳೆಲ್ಲಾ ಸಮರ್ಪಕವಾಗಿ ಎರಡೂ ಕೋಮುಗಳಿಂದ ಆಚರಿಸಲ್ಪಡುತ್ತವೆ. ಹುಸೇನಾಬಿಯೂ ಸುಶೀಲಕ್ಕನೂ ಒಟ್ಟಿಗೇ ಹಲವು ಕೆಲಸಗಳನ್ನು ಮಾಡುತ್ತಾರೆ. ಪರಸ್ಪರರ ಕಷ್ಟ-ಸುಖಗಳಲ್ಲಿ ನೆರವಾಗುತ್ತಾರೆ. ಎಲ್ಲೂ ವಗ್ವಾದಗಳಿಲ್ಲ. ಚಿಕ್ಕಪುಟ್ಟ ವಾಗ್ವಾದಗಳಿದ್ದರೂ ಅದೆಲ್ಲಾ ಒಂದೇ ಮನೆಯ ಸದಸ್ಯರೊಳಗೆ ನಡೆದಂತೇ ನಡೆದು ಆಮೇಲೆ ಮತ್ತೆ ಬಗೆಹರಿದುಹೋಗುತ್ತವೆ. ಇಮಾಮ್ ಸಾಬಿ ಗೋಕುಲಾಷ್ಟಮಿಯನ್ನೂ ಚೆನ್ನಬಸಣ್ಣ ರಾಮ್ ದಾನ್ ಹಬ್ಬವನ್ನೂ ಆಚರಿಸುತ್ತಾರೆ. ಇಮಾಮ್ ತನ್ನ ಮಿತ್ರರನ್ನು-ಬಂಧುಗಳನ್ನೂ ಕರೆದುಕೊಂಡು ಗೋಕುಲಾಷ್ಟಮಿಯ ಪೂಜೆಯಲ್ಲಿ ಪಾಲ್ಗೊಂಡು ತಿಂಡಿ ತಿಂದರೆ ಚೆನ್ನಬಸಣ್ಣ ರಾಮ್ ದಾನ್ ನ ಆಚರಣೆ-ಪ್ರಾರ್ಥನೆಗಳಲ್ಲಿ ಭಾಗವಹಿಸಿ ಇಫ್ತಾರ್ ಕೂಟಗಳಲ್ಲಿ ಭುಂಜಿಸುತ್ತಾನೆ. ಹಾಡೊಂದರಲ್ಲಿ ಕವಿ ಹೇಳುವಂತೇ

ಓದಿ ಬ್ರಾಹ್ಮಣನಾಗು
ಕಾದು ಕ್ಷತ್ರಿಯನಾಗು
ಏನಾದರೂ ಆಗು ಮೊದಲು ಮಾನವನಾಗು

ಹುಟ್ಟಾ ಯಾರೂ ಯಾವುದೇ ಜಾತಿಮತಗಳಲ್ಲಿ ಜನಿಸಿದರೂ ಬೆಳೆಯುತ್ತಾ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ನವಯುಗದಲ್ಲಿ, ನವ ಕಾಲಧರ್ಮದಲ್ಲಿ ಮಾನವಧರ್ಮವಷ್ಟೇ ಶ್ರೇಷ್ಠ. ಮೊದಲು ಮನುಷ್ಯನಾಗಬೇಕಾಗುತ್ತದೆ;ಮನುಷ್ಯನಾಗಲು ಕಲಿಯಬೇಕಾಗುತ್ತದೆ.

ದಕ್ಷಿಣ ಕನ್ನಡದ ದೇವಸ್ಥಾನವೊಂದರ ಅರ್ಚಕರೊಬ್ಬರ ಕುಟುಂಬ ವಾಹನವೊಂದರಲ್ಲಿ ತೆರಳುತ್ತಿದ್ದಾಗ ಮಾರ್ಗಮಧ್ಯೆ ಅಪಘಾತ ಸಂಭವಿಸಿ ಕುಟುಂಬದ ಎಲ್ಲಾ ಸದಸ್ಯರೂ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿರುವಾಗ ಕೆಲವು ಮುಸ್ಲಿಮ್ ಬಾಂಧವರಿಗೆ ಅವರ್ಯಾರೋ ಪುರೋಹಿತರು ಎಂಬುದು ಹೊರನೋಟದಿಂದ ತಿಳಿಯುತ್ತದೆ. ಆಮೇಲೆ ನೋಡಿದರೆ ಅವರು ಸುಮಾರಾಗಿ ಪರಿಚಯವಿರುವವರಂತೇ ಎಲ್ಲೋ ನೋಡಿರುವಂತೇ ಭಾಸವಾಗುತ್ತದೆ. ಆ ಕ್ಷಣ ಅವರು ಪರಿಚಯಕ್ಕಾಗಿ ನಿಲ್ಲುವುದಿಲ್ಲ, ಹತ್ತಿರದ ಆಸ್ಪತ್ರೆಯೊಂದಕ್ಕೆ ಎಲ್ಲರನ್ನೂ ಬೇರೆ ವಾಹನವೊಂದರಲ್ಲಿ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಾರೆ--ಇದಲ್ಲವೇ ಇಮಾಮ್ ಸಾಬಿಯ ಗೋಕುಲಾಷ್ಟಮಿಯ ಪೂಜೆ ? ಶಾಸಕರೂ ಮಂತ್ರಿಯೂ ಆಗಿದ್ದ ಭಟ್ಕಳದ ಯಾಹ್ಯಾ ಸಾಹೇಬರಿಗೆ ತುರ್ತಾಗಿ ಚಿಕಿತ್ಸೆಬೇಕಾಗಿ ಬಂದಾಗ, ಹಳ್ಳಿಗಾಡಿನ ಮೂಲೆಯೊಂದರ ಬ್ರಾಹ್ಮಣರೊಬ್ಬರು ದಿನಗಳ ಕಾಲ ಅವರ ಚಿಕಿತ್ಸೆಗೆ ನಿಲ್ಲುತ್ತಾರೆ. ಇದಲ್ಲವೇ
ರಾಮ್ ದಾನ್ ಪ್ರಾರ್ಥನೆ ?

ಹೀಗೇ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳೋಣ, ಸಂಕುಚಿತ ಮನೋವೃತ್ತಿ ಅಳಿಸಿಹಾಕೋಣ, ಆ ಮೂಲಕ ನಮ್ಮ ವ್ಯಕ್ತಿತ್ವ ಎಲ್ಲರಿಗೂ ಹತ್ತಿರವಾಗಿ ಎಲ್ಲರಲ್ಲೂ ಪ್ರೀತಿಯನ್ನು-ಸ್ನೇಹವನ್ನು ಗಳಿಸೋಣ. ಪ್ರತೀ ದೋಡ್ಡ ವ್ಯಕ್ತಿಯಲ್ಲಿ ದೊಡ್ಡ ಹೃದಯವೂ ಇರುತ್ತದೆ [ಕ್ಷಮಿಸಿ ಈ ಮಾತು ಇಂದಿನ ಹಲವು ರಾಜಕಾರಣಿಗಳಿಗೆ ಅನ್ವಯವಾಗುವುದಿಲ್ಲ ].