ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, April 2, 2010

ದೀಪಂ ದೇವ ದಯಾನಿಧೇ-೨ದೀಪಂ ದೇವ ದಯಾನಿಧೇ-
[ ಜಗದ್ಗುರು ಶ್ರೀ ಶ್ರೀ ಆದಿಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ ಭಾಗ-೨ ]


ಚೈತನ್ಯಃ ಶಾಶ್ವತಃ ಶಾಂತೋ ವ್ಯೋಮಾತೀತೋ ನಿರಂಜನಃ |
ಬಿಂದುನಾದಕಲಾತೀತಃ ತಸ್ಮೈ ಶ್ರೀಗುರವೇ ನಮಃ ||


ಶ್ರೀ ಆದಿಶಂಕರರು ಚಿಕ್ಕ ಬಾಲಕನಾಗಿದ್ದಾಗ ಅವರ ತಂದೆ ದಿನಾಲೂ ಹತ್ತಿರವಿರುವ ಒಂದು ಅಮ್ಮನವರ ದೇವಸ್ಥಾನಕ್ಕೆ ಪೂಜೆಗೆ ಹೋಗುತ್ತಿದ್ದರು. ದಿನವೂ ಒಂದಷ್ಟು ಹಾಲನ್ನು ತೆಗೆದುಕೊಂಡು ಹೋಗಿ ಅದರಿಂದ ಅಭಿಷೇಕ ಮಾಡಿ, ಸ್ವಲ್ಪ ಉಳಿಸಿಕೊಂಡು ಮರಳಿ ಮನೆಗೆ ಬಂದಾಗ ದೇವಿಯ ಪ್ರಸಾದವೆಂದು ಅದನ್ನು ಶಂಕರರಿಗೆ ಕುಡಿಯಲು ಕೊಡುತ್ತಿದ್ದರು. ಶಂಕರರು ಯಾಕೆ ಇದನ್ನು ತರುತ್ತೀರಿ ವಿಚಾರಿಸಿದಾಗ ದೇವಿ ಹಾಲನ್ನು ತಾನು ಕುಡಿದು ಸ್ವಲ್ಪವನ್ನು ಪ್ರಸಾದವಾಗಿ ಕೊಂಡೊಯ್ಯಲು ಹೇಳುತ್ತಾಳೆ ಎಂದು ಶಂಕರನಿಗೆ ಹೇಳಿದರು. ಕೆಲವು ಸಮಯದ ನಂತರ ಕಾರ್ಯನಿಮಿತ್ತ ಕೆಲದಿನಗಳಕಾಲ ದೂರದ ಊರಿಗೆ ಪ್ರಯಾಣ ಮಾಡಬೇಕಾಗಿ ಬಂತು. ಆಗ ಅವರು ದೇವೀಪೂಜೆಯನ್ನು ಹೆಂಡತಿಗೆ ವಹಿಸಿ ಹೋದರು. ಶಂಕರರ ಅಮ್ಮ ದಿನವೂ ಗುಡಿಗೆ ಹೋಗಿ ಎಂದಿನಂತೆ ಪೂಜೆಯನ್ನು ನಡೆಸಿಕೊಂಡಿದ್ದರು ಮತ್ತು ಹಾಲನ್ನು ತಂದು ಮಗನಿಗೆ ಕೊಡುತ್ತಿದ್ದರು, ಇದರಲ್ಲಿ ಏನೂ ಬದಲಾವಣೆ ಇರಲಿಲ್ಲ. ಒಂದುದಿನ ಶಂಕರರ ತಾಯಿ ಋತುಮತಿಯಾಗಿರುತ್ತ ಪೂಜೆಯನ್ನು ಮಾಡಲಾರದಾದರು. ಬಾಲಕ ಶಂಕರನಿಗೆ ಪೂಜೆ ಮಾಡಿಕೊಂಡು ಬರುವಂತೆ ಹೇಳಿದರು. ಎಷ್ಟಿದ್ದರೂ ಚಿಕ್ಕ ಮುಗ್ಧ ಮುದ್ದು ಬಾಲಕ ಶಂಕರ ತಾಯಿಯ ಆಜ್ಞೆಯೂ ಮತ್ತು ತನ್ನ ಇಷ್ಟವೂ ಎರಡೂ ಪೂರೈಸಿತೆಂದು ಹಾಲು ತೆಗೆದುಕೊಂಡು ಪೂಜೆಗೆ ಹೋದರು. ಪೂಜೆ ಮುಗಿಯಿತು.
ಎದುರಿನ ಪಾತ್ರೆಯಲ್ಲಿ ಹಾಲುಮಾತ್ರ ಹಾಗೇ ಉಳಿದಿತ್ತು ! ಶಂಕರರು ಪ್ರಾರ್ಥಿಸಿದರೂ ಪ್ರಯೋಜನವಾಗಲಿಲ್ಲ. ತನ್ನ ಪೂಜೆಯಲ್ಲಿ ಏನೋ ದೋಷವಿರಬೇಕೆಂದು ಶಂಕರರು ಜೋರಾಗಿ ಅಳಲು ಪ್ರಾರಂಭಿಸಿದರು.

ಇದನ್ನು ಕಂಡ ದೇವಿ ಹಾಲನ್ನು ಪೂರ್ತಿಯಾಗಿ ಕುಡಿದುಬಿಟ್ಟಳು ! ಬಾಲಕ ಅಳು ನಿಲ್ಲಿಸಿ ಪಾತ್ರೆ ನೋಡಿದಾಗ ತೊಟ್ಟು ಹಾಲು ಕೂಡ ಇರಲಿಲ್ಲ. ಅಯ್ಯೋ ಇದೇನು ಬಂತು ನನಗೆ ದೇವಿ ಪ್ರಸಾದದ ಹಾಲು ಕೊಡುತ್ತಿಲ್ಲವಲ್ಲ ಎಂದುಕೊಳ್ಳುತ್ತಾ ಮತ್ತೆ ಅಳುವುದಕ್ಕೆ ಪ್ರಾರಂಭಿಸಿದರು ಶಂಕರರು. ಆಗ ಒಂದು ಘಟನೆ ಸಂಭವಿಸಿತು. ಶಂಕರರ ಮುಗ್ದ ಪ್ರೀತಿಗೆ,ಭಕ್ತಿಗೆ,ಪೂಜೆಗೆ ಮನಸೋತ ದೇವಿ ಪ್ರತ್ಯಕ್ಷಳಾಗಿ, ಶಂಕರರನ್ನು ಹಸುಳೆಯಂತಾಗಿ ಮಾಡಿ ಎತ್ತಿಕೊಂಡು ಸ್ತನ್ಯಪಾನ ಮಾಡಿಸಿದಳು. ಸ್ವಲ್ಪ ಹೊತ್ತಿನ ಬಳಿಕ ಶಂಕರನ್ನು ಮುದ್ದಾಡಿ ಪುನಃ ಮೊದಲಿನ ಬಾಲಕ ರೂಪಕ್ಕೆ ತಂದಿತ್ತಳು. ಬಾಲಕ ಶಂಕರ ದೇವಿಯ ಈ ದಿವ್ಯ ಪ್ರಸಾದದಿಂದ ಅತಿವಿಶಿಷ್ಟ ಜ್ಞಾನವನ್ನು ಪಡೆದರು. ಅವರ ಬಾಯಿಂದ ಆಗ ಹುಟ್ಟಿದ ಸ್ತೋತ್ರವೇ ' ಸೌಂದರ್ಯ ಲಹರೀ ' .

ಇತ್ತ ಊರಿಗೆ ತೆರಳಿದ್ದ ಶಿವಗುರು [ಶಂಕರರ ತಂದೆ] ಮರಳಿ ಬಂದರು. ಶಂಕರರ ವಿಷಯವಾಗಿ ಮಾತನಾಡುತ್ತ ತಿಳಿದಾಗ ಅವರಿಗೆ ಅದ್ಭುತವೂ,ಆಶ್ಚರ್ಯವೂ ಆಯಿತು. ಸೌಂದರ್ಯ ಲಹರಿಯ ಒಂದೊಂದೂ ಶ್ಲೋಕಗಳು ದೇವಿಯ ವಿವಿಧ ರೂಪ ವಿಶೇಷಗಳನ್ನು ಬಣ್ಣಿಸುತ್ತವೆ. ಮತ್ತು ಒಂದೊಂದೂ ಶ್ಲೋಕದ ಅನುಷ್ಠಾನದಿಂದ ಇಂತಿಂತದೇ ಫಲವನ್ನು ಪಡೆಯಬಹುದೆಂದು ವ್ಯಾಖ್ಯಾನಿಸಿ ತಿಳಿಸಿದರು. 100 ಶ್ಲೋಕಗಳುಳ್ಳ ಸೌಂದರ್ಯಲಹರೀ ಒಂದು ವಿಶಿಷ್ಟ ಸಾತ್ವಿಕ ಉಪಾಸನಾ ವಿಧಾನ. ಪ್ರಸಕ್ತ ಎಲ್ಲರ ಒಳಿತನ್ನು ಬಯಸಿ ದೇವಿಯ ವಿದ್ಯಾಲಕ್ಷ್ಮೀ ಸರಸ್ವತೀ ರೂಪವನ್ನು ಧ್ಯಾನಿಸುವ ಮೂರನೇ ಶ್ಲೋಕವನ್ನು ಇಲ್ಲಿ ಕೊಡುತ್ತಿದ್ದೇನೆ--

ಅವಿದ್ಯಾನಾಮಂತಸ್ತಿಮಿರ ಮಿಹಿರದ್ವೀಪನಗರೀ
ಜಡಾನಾಂ ಚೈತನ್ಯಸ್ತಬಕಮಕರಂದಸ್ರುತಿಝರೀ |
ದರಿದ್ರಾಣಾಂ ಚಿಂತಾಮಣಿಗುಣನಿಕಾ ಜನ್ಮ ಜಲಧೌ
ನಿಮಗ್ನಾನಾಂ ದಂಷ್ಟ್ರಾ ಮುರರಿಪುವರಾಹಸ್ಯ ಭವತಿ ||

ಮಥಿತಾರ್ಥ-
ಅಜ್ಞಾನಿಗಳ ಅಂತಃಕರಣದಲ್ಲಿರುವ ಅವಿದ್ಯೆಯೆಂಬ ಕತ್ತಲೆಗೆ ಸೂರ್ಯೋದಯದಂತೆ, ಸಮುದ್ರ ಮಧ್ಯದಲ್ಲಿದ್ದ ಶುಭ್ರನಗರದಂತೆ, ಮಂದಬುದ್ಧಿಗಳಿಗೆ ಜ್ಞಾನವೆಂಬ ಹೂಗೊಂಚಲ ಮಧುರಸದಂತೆ, ದರಿದ್ರರಿಗೆ ಬೇಡಿದ್ದನ್ನು ಕೊಡುವಂತಹ ಚಿಂತಾಮಣಿಯಂತೆ ಇರುವ ಈ ಪಾದರೇಣುವು ಸಂಸಾರದಲ್ಲಿ ಮುಳುಗಿದವರಿಗೆ ಮುರಾರಿಯಾದ ಮಹಾವಿಷ್ಣುವಿನ ವರಾಹರೂಪದ ಕೋರೆದಾಡೆಗಳಂತೆ ಉದ್ಧಾರಕವಾಗಿದೆ.

ಶ್ಲೋಕವನ್ನು ನಿತ್ಯವೂ ಸ್ನಾನಾದಿ ಶುದ್ಧೀಕರಣ ಮಾಡಿಕೊಂಡು, ಸಾಧ್ಯವಾದರೆ ಏನನ್ನಾದರೂ [ವಿಶೇಷವಾಗಿ ಉದ್ದಿನವಡೆಯನ್ನು] ನೈವೇದ್ಯವಾಗಿಟ್ಟು, ಅನೇಕಸಾರಿ ಶ್ರದ್ಧಾಭಕ್ತಿಯಿಂದ ಪಠಿಸಿದರೆ, ವಿದ್ಯೆಯೂ, ಐಶ್ವರ್ಯವೂ ಲಭಿಸುತ್ತದೆಂದು ಶಂಕರರು ಹೇಳಿದ್ದಾರೆ.

ಬ್ರಹ್ಮಾನಂದಂ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿ ಲಕ್ಷ್ಯಮ್ |
ಏಕಂ
ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ
ಭಾವಾತೀತಂ
ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||

10 comments:

 1. ನಿಮ್ಮ ಬ್ಲಾಗಿನಲ್ಲಿ ಸಾಕಷ್ಟು ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ .ಇದು ಹೀಗೆ ಮುಂದು ವರೆದು ,ನಮಗೆಲ್ಲಾ ಬೆಳಕನ್ನೀಯಲಿ ಎನ್ನುವುದು ನನ್ನ
  ಹಾರೈಕೆ .

  ReplyDelete
 2. ಶಂಕರರ ಸ್ಮರಣೆ ಮಾಡಿಸಿದ ನಿಮಗೆ ಶರಣು.ಇದು ಕಥೆಯೇ ಆಗಿರಲಿ, ಅಥವಾ ನಡೆದದ್ದೇ ಆಗಿರಲಿ ಜೀವನದಲ್ಲಿ ನೆಮ್ಮದಿಗಾಗಿ ಹಾದಿಯಂತೂ ಹೌದು.

  ReplyDelete
 3. Tumba chennagi tilisiruviri...Nimma Blognalli dinvu ondu hosa vishayada bagge tiliyalu avakashavide. Addarinda neevu ondu dina bareyadiddaroo yeno kaledukonda anubhava aaguvudu...

  ReplyDelete
 4. ನನಗ೦ತೂ ಶ೦ಕರರ ಬಗ್ಗೆ ಕೇಳಿದಷ್ಟೂ ಓದಿದಷ್ಟೂ ಸ೦ತೋಷವೇ...
  ಅವಕಾಶ ಕಲ್ಪಿಸಿದ ನಿಮಗೆ ಕೃತಜ್ನತೆಗಳು.

  ReplyDelete
 5. ಶ್ರೀ ಶಂಕರಾಚಾರ್ಯರ ಚರಿತ್ರೆ ಮತ್ತು ಸೌಂದರ್ಯಲಹರಿಯ ಶ್ಲೋಕ ಪರಿಚಯ ಮಾಡಿ ಕೊಡುತ್ತಿರುವ ನಿಮಗೆ ಧನ್ಯವಾದಗಳು.

  ReplyDelete
 6. सदाशिवसमारम्भां शङ्कराचार्यमध्यमाम्।
  अस्मादाचार्यपर्यन्तां वन्दे गुरुपरम्पराम् ॥
  शङ्कराचार्यविषये लिखित्वा भवान् पूतात्मा अभवत् ।धन्यवादाः । एवमेव महापुरुषाणां विषाये लिखतु ।

  ReplyDelete
 7. ಶಂಕರರ ಬಗೆಗೆ ಹೇಳಹೊರಟರೆ ಸಾಗರವನ್ನು ಅದು ಚೊಂಬಿನಲ್ಲಿ ಮೊಗೆದಂತೆ, ಆದರೂ ಏನೋ ಸ್ವಲ್ಪ ಹೇಳಬೇಕು ಅಂತ ಮನಸ್ಸು ತುಡಿಯುವಾಗ ಬರೆಯದೆ ಇದ್ದರೆ ಮನಸ್ಸಿಗೆ ಬೇಸರ, ಹೀಗಾಗಿ ಅದು ಸೇವೆ ಎಂದುಕೊಂಡು ಬರೆಯುತ್ತಿದ್ದೇನೆ. ಆಚಾರ್ಯತ್ರಯರಲ್ಲಿ ಮೊದಲಿಗರಾಗಿ ಅವರು ಪ್ರತಿಪಾದಿಸಿದ ದಿವ್ಯ ರಸಗಂಧಾನುಭೂತಿ ಇಂದಿಗೂ ನಮಗೆ ಅನುಭವಕ್ಕೆ ಬರುತ್ತದೆ. ಎಲ್ಲ ಆಚಾರ್ಯರನ್ನೂ ಗೌರವಿಸೋಣ,ಎಲ್ಲರೂ ಪೂಜ್ಯರೇ, ಮಾನ್ಯರೇ. ಆದರೆ ಪ್ರಕೃತಿಯಲ್ಲಿ ಅದ್ವೈತ ಕಣ್ಣಿಗೆ ಕಂಡಷ್ಟು ಬೇರೆ ಅಭಿಪ್ರಾಯ ಕಾಣುತ್ತಿಲ್ಲ. ಭಗವಂತ ಬೇರೆ ಬೇರೆ ರೂಪಗಳಲ್ಲಿ ತನ್ನನ್ನು ಸೃಜಿಸಿಕೊಳ್ಳುತ್ತೇನೆ ಎಂದಿದ್ದಾನೆ-'ಸಂಭವಾಮಿ ಯುಗೇ ಯುಗೇ --ಎಂದು. ಮತ್ಸ್ಯ,ಕೂರ್ಮ,ವರಾಹ,ನಾರಸಿಂಹ ಇದೆಲ್ಲ ಮುಗಿದ ತರುವಾಯ ಹೊಸ ಧರ್ಮವನ್ನೆ ಹುಟ್ಟುಹಾಕಿದ ಬುದ್ಧ ಕೂಡ ಭಗವಂತನೇ ಅಲ್ಲವೇ ? ಹೀಗಾಗಿ ಎಲ್ಲಾ ಆಚಾರ್ಯರೂ ಭಗವಂತನ ವಿವಿಧ ಅಂಶಗಳ ಅವತಾರಿಗಳೆಂದರೆ ತಪ್ಪಲ್ಲ. ಅವರೆಲ್ಲರ ಪ್ರತಿಪಾದನೆಯಲ್ಲಿ ಸಮಷ್ಟಿಯಾಗಿ ಒಂದಷ್ಟು ಬಳಸಿಕೊಂಡು ಜೀವನ ಸುಧಾರಿಸಿಕೊಳ್ಳೋಣ.

  ಪ್ರತಿಕ್ರಿಯಿಸಿದ ಡಾ| ಕೃಷ್ಣಮೂರ್ತಿ, ಹರಿಹರಪುರ ಶ್ರೀಧರ್, ಸೀತಾರಾಮ್, ಕಲಾ ನಾಯ್ಕ್, ಕು.ಸು.ಮುಳಿಲಾಯ, ಸುಧೀಂದ್ರ ದೇಶಪಾಂಡೆ, ಸೂರ್ಯನಾರಾಯಣ ಜೋಯಿಸ್ ಈ ಎಲ್ಲ ಸ್ನೇಹಿತರಿಗೂ,ನೇಪಥ್ಯದಲ್ಲಿ ಓದಿದ, ಓದದ ಹಾಗೂ ಓದುವ ಎಲ್ಲ ಓದುಗ ಮಿತ್ರರಿಗೂ ಧನ್ಯವಾದಗಳು.

  ReplyDelete
 8. ಸಾರ್....
  ತುಂಬಾ ಚೆನ್ನಾಗಿದೆ.... ಕಥೆ ಓದಿ ಗೊತ್ತಿದ್ದರೂ, ಅದನ್ನು ಇಲ್ಲಿ ಮತ್ತೆ ಓದಿದಾಗ ಹೊಸದೇನೋ ಎನ್ನುವಷ್ಟು ಆನಂದವಾಯಿತು.... ಸೌಂದರ್ಯ ಲಹರಿಯ ಶ್ಲೋಕದ ಅರ್ಥ ವಿವರಣೆ ಕೂಡ ಸರಳವಾಗಿ ಚೆನ್ನಾಗಿದೆ. ನಿಮ್ಮ ಬ್ಲಾಗ್ ಗೆ ಬರುವುದೆಂದರೇ ಅತ್ಯಂತ ಉತ್ತಮ ವಿಚಾರಗಳ ರಸದೌತಣಕ್ಕೆ ಬಂದಂತೆ.... ಹೃತ್ಪೂರ್ವಕ ಧನ್ಯವಾದಗಳು ಸಾರ್...

  ReplyDelete
 9. ಶ್ಯಾಮಲಾರವರೇ, ತಮಗೆ ಧನ್ಯವಾದಗಳು

  ReplyDelete