ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, April 3, 2010

ಬ್ರೆಕಿಂಗ್ ನ್ಯೂಸ್ !!



ಬ್ರೆಕಿಂಗ್ ನ್ಯೂಸ್

" ಎಲ್ಲಾ ವೀಕ್ಷಕರಿಗೂ ಕಳಪೆ ಟಿವಿ 24 X 7 ಗೆ ಸ್ವಾಗತ, ನಾನು ಸಂಜನಾ,

" ಇವತ್ತಿನ ವಿಶೇಷ ಎಂದರೆ ಇಂದು ಕಳಪೆ ಟಿವಿ ಗೆ ಹತ್ತನೇ ವರ್ಷದ ಹುಟ್ಟಿದ ಹಬ್ಬ, ದೇಶಾದ್ಯಂತ ತನ್ನ ಬ್ರೆಕಿಂಗ್ ನ್ಯೂಸ್ ಮೂಲಕ ಮನೆಮಾತಾಗಿರುವ ಕಳಪೆ ಟಿವಿ ಜನಸಾಮಾನ್ಯರ ನಾಡಿಮಿಡಿತವನ್ನು ಬೆಂಬಲಿಸುತ್ತಾ ಟಿ.ಆರ್.ಪಿ ರೇಟಿನಲ್ಲಿ ಪ್ರಥಮಸ್ಥಾನ ಗಳಿಸಿ ಹಲವು ಕಂಪನಿಗಳ ಜಾಹೀರಾತುಗಳನ್ನು ದಿನವಿಡೀ ಪ್ರಸಾರಿಸುತ್ತಾ ಸಮಾಜದಲ್ಲಿ ಬಹಳ ಸ್ತುತ್ಯಾರ್ಹ ಕಾರ್ಯಕ್ರಮಗಳನ್ನು ಕೊಡುತ್ತಿದೆ, ಇದಕ್ಕಾಗಿ ಈ ಸಲದ ಪದ್ಮ ಪ್ರಶಸ್ತಿಯನ್ನು ಪಡೆಯುವಲ್ಲಿ ಕೂಡ ನಮ್ಮ ಕಳಪೆ ಟಿವಿ ಸಂಸ್ಥೆ ಮುಂಚೂಣಿಯಲ್ಲಿದೆ ಎಂದು ಹೇಳಲು ಬಹಳ ಸಂತಸವೆನಿಸುತ್ತಿದೆ "

" ಇಂದು ಬೆಳಗಿನ ಜಾವ ಹಾಸಿಗೆಪಾಳ್ಯದಲ್ಲಿ ನಡೆದ ಮನಕಲಕುವ ಘಟನೆಯನ್ನು ತಮಗೆ ತೋರಿಸುತ್ತಿದ್ದೇವೆ ಈ ನೇರಪ್ರಸಾರದಲ್ಲಿ , ಬನ್ನಿ ಹಾಗಾದ್ರೆ ನಮ್ಮ ವರದಿಗಾರ ಪ್ರಾಣೇಶ್ ಈಗ ನಮ್ಮ ಸಂಪರ್ಕದಲ್ಲಿದ್ದಾರೆ ಅವರಜೊತೆ ಅದರ ಬಗ್ಗೆ ತಿಳಿದುಕೊಳ್ಳೋಣ "

" ಪ್ರಾಣೇಶ್ ಹೇಳಿ, ಕೇಳಿಸ್ತಾ ಇದ್ಯಾ ? "

" ಕೇಳಿಸ್ತಾ ಇದೇ ಸಂಜನಾ, ಇಲ್ಲಿ ಮಂಜುನಾಥ್ ಅವರ ಮನೆಯಲ್ಲಿ ಬೆಳಗಿನ ಜಾವ ಹಾಸಿಗೆಯಲ್ಲಿ ಏನೋ ಕಚ್ಚುತ್ತಿದೆ ಎನಿಸಿ ತುರಿಕೆಯಾಗಿ ಎದ್ದು ಲೈಟ್ ಹಾಕಿ ನೋಡಿದ್ದಾರೆ, ನೋಡಿದರೆ ಅತಿದೊಡ್ಡ ತಿಗಣೆ ಹಾಸಿಗೆಯನ್ನು ಬಿಟ್ಟು ಓಡುತ್ತಿತ್ತು , ಅಂತೂ ಹಲವುನಿಮಿಷಗಳ ಕಾಲ ಪ್ರಯತ್ನಿಸಿ ಆ ತಿಗಣೆಯನ್ನು ಹಿಡಿಯುವಲ್ಲಿ ಮಂಜುನಾಥ್ ಯಶಸ್ವಿಯಾಗಿದ್ದಾರೆ ಸಂಜನಾ "

" ನಂತರ ಏನ್ಮಾಡದ್ರು ಪ್ರಾಣೇಶ್ ? ಪ್ರಾಣಿದಯಾಸಂಘದವರಾಗಲೀ ಸರಕಾರದ ಅರಣ್ಯ ಇಲಾಖೆಯ ಅಧಿಕಾರಿಗಳಾಗಲೀ ಭೇಟಿ ನೀಡಿದ್ದಾರಾ ಅಲ್ಲಿಗೆ ? "

" ಇಲ್ಲ ಸಂಜನಾ, ಬಹಳ ಕೋಪದಲ್ಲಿದ್ದ ಮಂಜುನಾಥ್ ಅವರು ತಿಗಣೆಯನ್ನು ಮನೆಯ ಹೊರಗೆ ತಂದು, ವರಾಂಡಾದಲ್ಲಿರುವ ನೆಲದಮೇಲಿಟ್ಟು ಕಲ್ಲಿನಿಂದ ಜಜ್ಜಿ ಸಾಯಿಸಿಬಿಟ್ಟಿದ್ದಾರೆ, ಇನ್ನು ಅದರ ಬಗ್ಗೆ ತನಿಕೆಯಾಗಬೇಕಷ್ಟೇ "

" ತುಂಬಾ ಜನ ಸೇರಿದ್ದಾರಾ ಅಲ್ಲಿ ? "

"ಹೌದು, ಮೊದಲು ಮಂಜುನಾಥ್ ಅವರ ಕೋಪದ ಕೂಗನ್ನು ಕೇಳಿ ಅಕ್ಕ-ಪಕ್ಕದವರೆಲ್ಲ ಬಂದರು, ಆಮೇಲೆ ಏನೋ ಗಲಾಟೆ ಅಂತ ರಸ್ತೆಯಲ್ಲಿ ಹೋಗುತ್ತಿರುವವರೆಲ್ಲಾ ನೋಡಲು ಬರುತ್ತಿದ್ದಾರೆ, ಒಟ್ನಲ್ಲಿ ಈಗಾಗಲೇ ಸಾವಿರಾರು ಜನ ಬಂದು ಹೋಗಿದ್ದಾರೆ, ಮಂಜುನಾಥ್ ಅವರ ಕೋಪ ಇನ್ನೂ ಇಳಿದಿಲ್ಲ"

" ಮಂಜುನಾಥ್ ಅವರಿಗೆ ಮೈಕ್ ಕೊಟ್ಟು ಮಾತನಾಡಿಸಲು ಸಾಧ್ಯವಾಗಬಹುದಾ ಪ್ರಾಣೇಶ್ ? "

" ಇಲ್ಲ ಸಂಜನಾ, ಬಹಳ ಕೋಪದಲ್ಲಿರುವ ಅವರು ಏನನ್ನಾದರೂ ಕೇಳಿದರೆ ಹೊಡೆಯೋದಕ್ಕೆ ಬರುತ್ತಾರೆ, ಹೀಗಾಗಿ ತಕ್ಷಣಕ್ಕೆ ಅದು ಸಾಧ್ಯವಾಗುತ್ತಿಲ್ಲ, ಆಮೇಲೆ ಸ್ವಲ್ಪ ಪರಿಸ್ಥಿತಿ ತಣ್ಣಗಾದಮೇಲೆ ಪ್ರಯತ್ನಿಸಬಹುದು ಅಷ್ಟೇ "

" ವೀಕ್ಷಕರೇ ನೀವೀಗ ಟಿ.ವಿ ಪರದೆಯ ಮೇಲೆ ನೋಡುತ್ತಿರುವ ಕೆಂಪು ಬಣ್ಣದ ಜಾಗವೇ ತಿಗಣೆಯನ್ನು ಹೊಸಕಿಹಾಕಿರುವ ಜಾಗ, ಕೋಪದಲ್ಲಿದ್ದ ಮಂಜುನಾಥ್ ಅವರು ಹೇಳದೆ ಕೇಳದೆ ತಿಗಣೆಯನ್ನು ಜಜ್ಜಿ ಸಾಯಿಸಿಬಿಟ್ಟಿದ್ದಾರೆ, ಜಾಗೃತ ದಳಗಳು, ಪೊಲೀಸರು, ಸಂಬಂಧಪಟ್ಟ ಇಲಾಖೆಗಳವರು ಇನ್ನೂ ಬರುವುದರಲ್ಲಿದ್ದಾರೆ, ಬಹುಶಃ ಇಂದು ಸಾಯಂಕಾಲದ ಹೊತ್ತಿಗೆ ಪರಿಸ್ಥಿತಿ ಏನು ಎಂದು ಅರ್ಥವಾಗಬಹುದು "

" ಬನ್ನಿ ವೀಕ್ಷಕರೆ ಈ ವಿಷಯದ ಬಗ್ಗೆ ಮಾತನಾಡಲು ನಮ್ಮ ಸ್ಟುಡಿಯೋಗೆ ಇಂದು ಖ್ಯಾತ ಪರಿಸರವಾದಿ ಗುಣಪ್ಪರವರು ಮತ್ತು ತಿಗಣೆ ವಂಶಾಭಿವೃದ್ಧಿಯ ಹರಿಕಾರ ಎಂದೇ ಪ್ರಸಿದ್ಧರಾದ ಮಾನ್ಯ ತೊನ್ನುಪರಮೇಶಪ್ಪರವರು ಬಂದಿದ್ದಾರೆ ಅವರ ಜೊತೆ ಚರ್ಚೆಮಾಡೋಣ, ಮಾನ್ಯ ಗುಣಪ್ಪರವರೇ ತಮಗೆ ಕಳಪೆ ಟಿವಿ ಗೆ ಸ್ವಾಗತ "

" ನಮಸ್ಕಾರ"


" ಮಾನ್ಯ ತೊನ್ನು ಪರಮೇಶಪ್ಪರವರೇ ತಮಗೂ ಕೂಡ ಕಳಪೆ ಟಿವಿಗೆ ಆತ್ಮೀಯ ಸ್ವಾಗತ "

" ನಮಸ್ಕಾರ "

" ಗುಣಪ್ಪರವರೇ ಈಗ ತಮಗೊಂದು ಪ್ರಶ್ನೆ --ಇತ್ತೀಚಿನ ವರದಿಗಳ ಪ್ರಕಾರ ತಿಗಣೆಯ ಸಂತತಿ ನಶಿಸಿ ಹೋಗುತ್ತಿದೆ ಎನ್ನಲಾಗುತ್ತಿದೆ, ಇದು ನಿಜವೇ ? "

" ಮೊದಲನೆಯದಾಗಿ ತಿಗಣೆ ಎಂದರೆ ಅದು ಗೋಮಾತೆಗೆ ಸಮ, ಯಾಕೆಂದರೆ ನಿದ್ದೆ ಅತಿರೇಕವಾಗಿ ನಾವು ತುಂಬಾ ಆಲಸಿಯಾಗಿ ಹೊದ್ದು ಮಲಗೇ ಇದ್ದಾಗ ಅದು ಬಂದು ಎಚ್ಚರಿಸದಿದ್ದರೆ ಹೊರಗೆ ಲೋಕದಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದರೂ ನಮ್ಮ ಗಮನಕ್ಕೆ ಬರುವುದಿಲ್ಲ, ಹೀಗಾಗಿ ಅಂತಹ ಆಪತ್ಕಾಲದಲ್ಲೂ ಎಬ್ಬಿಸಿ ಸಹಾಯಮಾಡುವ ತಿಗಣೆಯನ್ನು ' ಜಾಗೃತಜನ ಮಿತ್ರ ' ಎಂದು ಗೌರವಿಸಬೇಕಾದ್ದು ನಮ್ಮ ಕರ್ತವ್ಯ "


" ನೀವೇನಂತೀರಿ ಪರಮೇಶಪ್ಪ ? "


" ಈಗ ಗುಣಪ್ಪನವರು ಹೇಳಿದ್ದು ಸರಿಯೇ ಇದೆ, ತಿಗಣೆಯಲ್ಲಿ ಎಷ್ಟು ವಿಧ ಮತ್ತು ಅವುಗಳ ರಕ್ಷಣೆ ಮುಂದೆ ಹೇಗೆ ಎಂಬ ಬಗ್ಗೆ ತಮಗೆ ಗೊತ್ತಿರಬಹುದು ನಾನೀಗಾಗ್ಲೇ ಸಂಶೋಧನೆ ನಡೆಸಿದ್ದೇನೆ, ಇದು ನನಗೆ ಹೊಳೆದಿದ್ದು ಹಳೆಯ ನಮ್ಮ ಮನೆಯಲ್ಲಿ, ತಾತನ ಕಾಲದ ಹತ್ತಿ ದಿಂಬು ಉಪಯೋಗಿಸುತ್ತಿದ್ದಾಗ ! ಅಲ್ಲಿ ಅನೇಕಥರದ ಉದ್ದನೆಯ ,ಅಗಲದ, ಸಣ್ಣ, ದೊಡ್ಡ ಹೀಗೆ ಹಲವಾರು ಸೈಜಿನ ತಿಗಣೆಗಳು ಲಭ್ಯವಿವೆ, ಇನ್ನೂ ಹುಡುಕುತ್ತಲೇ ಇದ್ದೇನೆ. ತಾತ ಈಗ ಇರದ ಕಾರಣ ತಿಗಣೆಗಳ ಮೂಲ ಸಿಗುತ್ತಿಲ್ಲ, ಅವರಿದ್ದರೆ ಬಹಳಷ್ಟು ಮಾಹಿತಿ ಪಡೆಯಬಹುದಿತ್ತು "

" ವೀಕ್ಷಕರೇ, ಈಗ ನಮ್ಮೊಂದಿಗೆ ಚರ್ಚೆಗೆ ಇನ್ನೊಬ್ಬ ಧೀಮಂತ ವ್ಯಕ್ತಿ ಸೇರಿಕೊಳ್ಳಲಿದ್ದಾರೆ, ಮೈಪರಚಿಕೋನಹಳ್ಳಿಯಲ್ಲಿ ಹುಟ್ಟಿ ಬೆಳೆದು ಅಮೇರಿಕಾದ ವಾಶಿಂಗ್ ಟನ್ ಡಿ.ಸಿ ಯಲ್ಲಿ ಉನ್ನತ ವ್ಯಾಸಂಗ ಪೂರೈಸಿ ಮರಳಿ ಭಾರತಕ್ಕೆ ಬಂದು ದೇಶಾದ್ಯಂತ 'ಜನಸೇವೆಗೆಂದು' ಬ್ರಾಂಚ್ ಹೊಂದಿರುವ ಟಿವಿ ಇಂಟರ್ನ್ಯಾಷನಲ್ ಹೆಲ್ತ್ ಕೇರ್ ಲಿಮಿಟೆಡ್ ಸ್ಥಾಪಿಸಿ ಅದರ ವ್ಯವಸ್ಥಾಪಕ ನಿರ್ದೇಶಕರಾದ ಡಾ| ಟಿವಿ ಗಂಗಣ್ಣ [ತಿಗಣೆ ವಿರೋಧಕ ಗಂಗಣ್ಣ ಇರಬಹುದೇ ? ] ಬಂದಿದ್ದಾರೆ, ಅವರಿಂದ ತಿಗಣೆ ಕಚ್ಚಿದ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ, ಮಾನ್ಯ ಡಾ|ಟಿವಿ ಗಂಗಣ್ಣರವರಿಗೆ ಸ್ವಾಗತ "


"ನಮಸ್ಕಾರ "


"ಡಾಕ್ಟರೇ, ಹೇಳಿ ತಿಗಣೆ ಕಚ್ಚಿದರೆ ಒಳ್ಳೆಯದೋ ಕೆಟ್ಟದ್ದೋ, ಅದರ ಪರಿಣಾಮಗಳೇನು ? "

" ತಿಗಣೆ ಕಚ್ಚಿದ್ದು ತುಂಬಾನೇ ಹಾಳು, ತಿಗಣೆಗಳನ್ನು ಹಲವು ಕಾಲದಿಂದ ಕಚ್ಚಿಸಿಕೊಳ್ಳುತ್ತಿರುವವರು ಸರಿಯಾದ ವ್ಯವಸ್ಥೆ ಇರುವ ಆಸ್ಪತ್ರೆಯಲ್ಲಿ ತಪಾಸಣೆಮಾಡಿಸಿಕೊಳ್ಳಬೇಕು. ತಿಗಣೆಗಳು ಅನೇಕ ರೋಗಗಳನ್ನೂ ಹರಡುವ ಸಾಧ್ಯತೆಯನ್ನು ಅಮೇರಿಕಾದ ವಿಜ್ಞಾನಿಗಳು ಅಲ್ಲಗಳೆಯುತ್ತಿಲ್ಲ. ನಾನು ತಿಳಿದಮಟ್ಟಿಗೆ ತಿಗಣೆ ಕಚ್ಚಿದವರಿಗೆ ನಮ್ಮ ಹೆಲ್ತ್ ಕೇರ್ ಥರದ ಆಸ್ಪತ್ರೆಗಳಲ್ಲಿ ಸಂಪೂರ್ಣ ಸಿ.ಟಿ.ಸ್ಕ್ಯಾನಿಂಗ್ ಮಾಡಿ, ಬ್ಲಡ್ ಮತ್ತು ಯುರಿನ್ ಟೆಸ್ಟ್ ಮಾಡಿಸಿ, ಎಲ್ಲಕ್ಕೂ ಮಿಗಿಲಾಗಿ ಎಂ ಆರ್ ಆಯ್ ಸ್ಕ್ಯಾನಿಂಗ್ ಮಾಡಿಸಿಕೊಂಡ ಬಳಿಕವಷ್ಟೇ ಅವರ ದೇಹಸ್ಥಿತಿ ಯಾವ ಹಂತದಲ್ಲಿದೆ ಎಂದು ತೀರ್ಮಾನಕ್ಕೆ ಬರಲು ಸಾಧ್ಯ "

" ಅಲ್ಲ ಡಾಕ್ಟರೇ, ಆಸ್ಪತ್ರೆಗಳಲ್ಲಿ ಇದಕ್ಕೆಲ್ಲ ತುಂಬಾ ಖರ್ಚಾಗುತ್ತದಲ್ಲವೇ ? ಜನಸಾಮಾನ್ಯರಿಗೆ ಇದು ಹೊರೆಯಾಗುವುದಿಲ್ಲವೇ ಅಂತ ? "


" ಇಲ್ಲ, ಉನ್ನತ ವ್ಯಾಸಂಗವನ್ನು ಅಮೆರಿಕಾದಂತಹ ದೇಶಗಳಲ್ಲಿ ಪೂರೈಸಿ ಇಲ್ಲಿ ಇಷ್ಟು ಕಡಿಮೆ ಖರ್ಚಿನಲ್ಲಿ
ಶುಶ್ರೂಷೆಯನ್ನು ಒದಗಿಸಿಕೊಡುತ್ತಿರುವುದೇ ಒಂದು ದೊಡ್ಡ ಕೆಲಸ ! ಹೀಗಾಗಿ ಕಡಿಮೆ ವೆಚ್ಚದಲ್ಲಿ ಆಗಬೇಕೆನ್ನುವವರು ಇಂಡಿಯನ್ ಆಯುರ್ವೇದ ಕ್ಕೆ ಮೊರೆಹೋಗಲಿ ಏನೂ ಕೆಲಸಕ್ಕೆ ಬಾರದ ಆ ಪದ್ಧತಿ ಇತ್ತೀಚೆಗೆ ಬರೇ ಹೆಸರು ಮಾಡಿದೆ, ಹೀಗಾಗಿ ಜನರ ಮನಸ್ಸಿಗಾದರೂ ನೆಮ್ಮದಿ ಸಿಗಬಹುದು, ಒಳ್ಳೆಯ ಟ್ರೀಟ್ ಮೆಂಟ್ ಸಿಗಬೇಕೆಂದು ಬಯಸುವವರು ನಮ್ಮಂಥ ಆಯ್ ಎಸ್ ಓ ಸರ್ಟಿಫೈಡ್ ಆಸ್ಪತ್ರೆಗಳಿಗೆ ಬರುತ್ತಾರೆ, ಸ್ವಲ್ಪ ಹೆಚ್ಚೋ-ಕಮ್ಮಿಯೋ ಎಲ್ಲ ಸೌಲಭ್ಯ ಒಂದೇ ಕಡೆ ಪಡೆದು ಸಂಪೂರ್ಣ ಗುಣಮುಖರಾಗುತ್ತಾರೆ "

" ಆಯುರ್ವೇದ ಬಹಳ ಉನ್ನತವಾಗಿದೆ, ದೇಹದಲ್ಲಿ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ ಎಂದು ಹೇಳುತ್ತಾರೆ , ತಾವೇನೆನ್ನುತ್ತೀರಿ ಇದಕ್ಕೆ ? "


" ಆಯುರ್ವೇದ ಅನ್ನುವುದು ಅಳಲೇಕಾಯಿ ಪಂಡಿತರ ಪದ್ಧತಿ, ನಮ್ಮ ಅಲೋಪಥಿಯ ಹಾಗೆ ಅದಕ್ಕೆ ಬಹಳ ರೀತಿಯ ಪುಸ್ತಕಗಳಾಗಲೀ ಪರಿಕರಗಳಾಗಲೀ ಇಲ್ಲ, ಹೀಗಾಗಿ ಅದರ ಬಗ್ಗೆ ನಾನು ಹೇಳಲು ಇಷ್ಟಪಡುವುದಿಲ್ಲ "

" ಅಂತೂ ಭಾರತೀಯ ಆಯುರ್ವೇದ ಏನೂ ಪ್ರಯೋಜನವಿಲ್ಲ ಎಂಬ ಅಭಿಪ್ರಾಯ ತಮ್ಮದು, ಇರಲಿ, ವೀಕ್ಷಕರೆ ನಾವೀಗ ಒಂದು ಚಿಕ್ಕ ವಿರಾಮ ತೆಗೆದುಕೊಳ್ಳೋಣ, ಮತ್ತೆ ನಮ್ಮ ಚರ್ಚೆಯನ್ನು ಮುಂದುವರಿಸೋಣ ವಿರಾಮದ ನಂತರ, ಸೋ ಲೆಟ್ಸ್ ಟೇಕ್ ಅ ಸ್ಮಾಲ್ ಬ್ರೇಕ್ "

9 comments:

  1. ಮಾದ್ಯಮಗಳ ಅತಿರ೦ಜಕಕತೆ,ಹಾಗೂ ನೈಜತೆ ಮತ್ತು ವಸ್ತುನಿಷ್ಟತೆಯಿ೦ದ ಹೇಗೆ ದೂರ ಸರಿಯುತ್ತಿದೆ ಎ೦ಬುದಕ್ಕೆ ನಿಮ್ಮ ವಿಡ೦ಬನೆ ಸೋಗಸಾಗಿ ಮೂಡಿ ಬ೦ದಿದೆ.ಟಿ.ಅರ್.ಪಿ ಯೇ ಮುಖ್ಯವಾದಾಗ ಹೇಗೆ ಎಲ್ಲವೂ ಕುಲಗೆಟ್ಟು ಹೋಗುತ್ತದೆ ಎ೦ಬುದನ್ನು ಗಮನಿಸಬೇಕು.
    ಅಭಿನ೦ದನೆಗಳು.

    ReplyDelete
  2. ದೃಶ್ಯ ಮಾಧ್ಯಮದ ಬಗ್ಗೆ ನಿಮ್ಮ ವಿಡಂಬನೆ ಸಮಂಜಸವಾದುದು. ಕೇವಲ ಜಾಹಿರಾತಿಗಾಗಿ ಇಂದಿನ ವಾರ್ತಾ ಚಾನಲ್ಲುಗಳು ಕೆಲಸ ಮಾಡ್ತಿವೆ.ಇಲ್ಲಿ ಸುದ್ದಿ ಮುಖ್ಯ ಅಲ್ಲ. ಹಣ ಮುಖ್ಯ. ಮಾಧ್ಯಮದ ಮೂಲ ಉದ್ದೇಶ ಇಲ್ಲವೇ ಇಲ್ಲ! ಜಾಹಿರಾತಿನ ಮಧ್ಯೆ 5 ನಿಮಿಷ ಬ್ರೇಕ್ ಸಮಯದಲ್ಲಿ ಮಾತ್ರ news! ಇದು ಇಂದಿನ ಮಾಧ್ಯಮ!

    ReplyDelete
  3. ಬಹಳ ಚೆನ್ನಾಗಿದೆ. ಇಲ್ಲಿ (ದುಬೈ) ಯಲ್ಲೂ ಸಹಾ ಕಿಂಗ್ ಸೈಜ್ ತಿಗಣೆ ಸರಿಸುಮಾರು ಪ್ರತಿ ಮನೆಯಲ್ಲಿಯೂ ಇರುತ್ತದೆ. ಇಲ್ಲಿ ತಿಗಣೆಗಳ ಸಂಹಾರಕ್ಕಾಗಿಯೇ ಹತ್ತು ಹಲವು ಸಂಸ್ಥೆಗಳು ಟೊಂಕಕಟ್ಟಿ ನಿಂತಿವೆ. ವಾರಕ್ಕೆ ಕನಿಷ್ಟ ನಾಲ್ಕಾದರೂ ಕೀಟ ನಿಯಂತ್ರಣಾ (ಪೆಸ್ಟ್ ಕಂಟ್ರೋಲ್) ಸಂಸ್ಥೆಯ ವಿಸಿಟಿಂಗ್ ಕಾರ್ಡುಗಳು ಮುಂಬಾಗಿಲಿನಿಂದ ಒಳದೂಡಲ್ಪಟ್ಟಿರುತ್ತವೆ. ಹಲವು ಸಂಸ್ಥೆಗಳು ಫ್ರೀ ಆಫರುಗಳನ್ನೂ ನೀಡುತ್ತವೆ. ಉದಾಹರಣೆಗೆ ತಿಗಣೆ ಸಂಹಾರದೊಂದಿಗೆ ಜಿರಳೆ ಸಂಹಾರ ಫ್ರೀ. ಆರು ತಿಂಗಳು ಗ್ಯಾರಂಟಿ, ಮನೆ ಖಾಲಿ ಮಾಡುವ ಅಗತ್ಯವಿಲ್ಲ, ಅತ್ಯಾಧುನಿಕ ಅಮೇರಿಕನ್ ಮಷಿನರಿ ಇತ್ಯಾದಿ ಇತ್ಯಾದಿ. ಒಂದು ವೇಳೆ ಖ್ಯಾತ ಪರಿಸರವಾದಿ ಗುಣಪ್ಪರವರು ಮತ್ತು ತಿಗಣೆ ವಂಶಾಭಿವೃದ್ಧಿಯ ಹರಿಕಾರ ಎಂದೇ ಪ್ರಸಿದ್ಧರಾದ ಮಾನ್ಯ ತೊನ್ನುಪರಮೇಶಪ್ಪರವರು ದುಬೈಗೇನಾದರೂ ಬಂದರೆ ಈ ಸಂಸ್ಥೆಗಳ ಅಷ್ಟೂ ಕಾರ್ಮಿಕರು ಸೇರಿ ನಗರಗೊಳಕ್ಕೆ ಕಾಲಿಡದಂತೆ ಧರಣಿ ನಡೆಸುವುದು ಮಾತ್ರ ಗ್ಯಾರಂಟಿ. - ಅರ್ಶದ್ ಹುಸೇನ್, ಬಹಳ ಚೆನ್ನಾಗಿದೆ. ಇಲ್ಲಿ (ದುಬೈ) ಯಲ್ಲೂ ಸಹಾ ಕಿಂಗ್ ಸೈಜ್ ತಿಗಣೆ ಸರಿಸುಮಾರು ಪ್ರತಿ ಮನೆಯಲ್ಲಿಯೂ ಇರುತ್ತದೆ. ಇಲ್ಲಿ ತಿಗಣೆಗಳ ಸಂಹಾರಕ್ಕಾಗಿಯೇ ಹತ್ತು ಹಲವು ಸಂಸ್ಥೆಗಳು ಟೊಂಕಕಟ್ಟಿ ನಿಂತಿವೆ. ವಾರಕ್ಕೆ ಕನಿಷ್ಟ ನಾಲ್ಕಾದರೂ ಕೀಟ ನಿಯಂತ್ರಣಾ (ಪೆಸ್ಟ್ ಕಂಟ್ರೋಲ್) ಸಂಸ್ಥೆಯ ವಿಸಿಟಿಂಗ್ ಕಾರ್ಡುಗಳು ಮುಂಬಾಗಿಲಿನಿಂದ ಒಳದೂಡಲ್ಪಟ್ಟಿರುತ್ತವೆ. ಹಲವು ಸಂಸ್ಥೆಗಳು ಫ್ರೀ ಆಫರುಗಳನ್ನೂ ನೀಡುತ್ತವೆ. ಉದಾಹರಣೆಗೆ ತಿಗಣೆ ಸಂಹಾರದೊಂದಿಗೆ ಜಿರಳೆ ಸಂಹಾರ ಫ್ರೀ. ಆರು ತಿಂಗಳು ಗ್ಯಾರಂಟಿ, ಮನೆ ಖಾಲಿ ಮಾಡುವ ಅಗತ್ಯವಿಲ್ಲ, ಅತ್ಯಾಧುನಿಕ ಅಮೇರಿಕನ್ ಮಷಿನರಿ ಇತ್ಯಾದಿ ಇತ್ಯಾದಿ. ಒಂದು ವೇಳೆ ಖ್ಯಾತ ಪರಿಸರವಾದಿ ಗುಣಪ್ಪರವರು ಮತ್ತು ತಿಗಣೆ ವಂಶಾಭಿವೃದ್ಧಿಯ ಹರಿಕಾರ ಎಂದೇ ಪ್ರಸಿದ್ಧರಾದ ಮಾನ್ಯ ತೊನ್ನುಪರಮೇಶಪ್ಪರವರು ದುಬೈಗೇನಾದರೂ ಬಂದರೆ ಈ ಸಂಸ್ಥೆಗಳ ಅಷ್ಟೂ ಕಾರ್ಮಿಕರು ಸೇರಿ ನಗರಗೊಳಕ್ಕೆ ಕಾಲಿಡದಂತೆ ಧರಣಿ ನಡೆಸುವುದು ಮಾತ್ರ ಗ್ಯಾರಂಟಿ. - ಅರ್ಶದ್ ಹುಸೇನ್, ದುಬೈ

    ReplyDelete
  4. ನಿಮ್ಮ ಕಳಪೆ ಟೀವಿಯವರ ‘ಒಡೆಯುವ ಸುದ್ದಿ’ ಓದಿ ರೋಮಾಂಚಿತನಾದೆ. ತಿಗಣೆಗಳ ಬಗೆಗೆ ಹೆಚ್ಚಿನ ಸಂಶೋಧನೆ ಮಾಡಬಯಸುವವರು ಕೆಲವೊಂದು ಲಕ್ಝರಿ ಬಸ್ಸುಗಳಿಗೆ ಹೋಗಿ ನೋಡುವದು ಒಳ್ಳೆಯದು ಎನ್ನುವ ಪುಕ್ಕಟೆ ಸಲಹೆಯನ್ನು ನಿಮ್ಮ ಮೂಲಕ ನೀಡಬಯಸುತ್ತೇನೆ. ಇಂತಹ ಒದೆಯುವ ಸುದ್ದಿಗಳು ಇನ್ನಷ್ಟು ಬರಲಿ ಎನ್ನುವ ಬೇಡಿಕೆಯನ್ನು ನಿಮ್ಮೆದುರಿಗೆ ಇಡುತ್ತೇನೆ.

    ReplyDelete
  5. ಮಾಧ್ಯಮಗಳು ಸಮರ್ಪಕವಾಗಿ ಕೆಲಸಮಾಡಿದರೆ ಅದು ದೇಶ ಕಟ್ಟುವ ಕೆಲಸವಾಗುತ್ತದೆ, ಅದೇ ಈ ರೀತಿಯ ಕೆಲಸಕ್ಕೆ ಬಾರದ ಚಿಕ್ಕ-ಪುಟ್ಟ ಹೊಲಸು ಘಟನೆಗಳನ್ನು ಬ್ರೆಕಿಂಗ್ ನ್ಯೂಸ್ ಅಂತ ಬಿಂಬಿಸಿ ಜನರ ಮನಸ್ಸನ್ನು-ಲಕ್ಷ್ಯವನ್ನು ತಮ್ಮತ್ತ ಸೆಳೆದರೆ ಅದು ಮುಂದೊಮ್ಮೆ ಮಾಧ್ಯಮದವರ ' ತೋಳಬಂತಲೇ ತೋಳ ' ಕಥೆಯಾಗುತ್ತದೆ. ಬ್ರೆಕಿಂಗ್ ನ್ಯೂಸ್ ನಲ್ಲಿ ಯಾವುದನ್ನು ಕೊಡಬೇಕೋ ಅದನ್ನು ಕೊಡಿ, ಆದರೆ ಕಂಡ ಕಂಡ ವಿಷಯವನ್ನೆಲ್ಲ ಬೇಕೋ ಬೇಡವೋ ತಿಪ್ಪೆಗೆ ಎಸೆದಂತೆ ಪುಸಕ್ಕನೆ ಬ್ರೆಕಿಂಗ್ ನ್ಯೂಸ್ ಅಂತ ತೂರಿಸಿ, ತನ್ಮೂಲಕ ಜಾಹೀರಾತು ಪ್ರದರ್ಶನಕ್ಕೆ ದಾರಿಮಾಡಿಕೊಳ್ಳಲು ಹೋಗಬೇಡಿ ಎಂಬುದು ದೃಶ್ಯಮಾಧ್ಯಮದವರಿಗೆ ನನ್ನ ಸಲಹೆ.

    ಅದರಂತೆ ವೈದ್ಯಕೀಯ, ಶಿಕ್ಷಣ ಈ ಎರಡೂ ಕ್ಷೇತ್ರಗಳು ಬಹಳ ಕಚಡಾ ಆಗಿ ಸಂಪೂರ್ಣ ವ್ಯಾಪಾರೀಕರಣಗೊಂಡಿವೆ, ಅದರಲ್ಲಂತೂ ಅಲೋಪಥಿಯ ಅನೇಕ ಹೈಟೆಕ್ ಆಸ್ಪತ್ರೆಗಳು ಹಣಮಾಡುವ ಯಂತ್ರಗಳಾಗಿವೆ, ಬಡವರ ಸೇವೆಗೆ ಶುಶ್ರೂಷೆಗೆ, ಅವರ ಮುಖದಲ್ಲಿ ನಗುವನ್ನು ಅರಳಿಸಬೇಕಾದ ಆಧುನಿಕ ವೈದ್ಯಕೀಯ ರಂಗದ ಇಂತಹ ಆಸ್ಪತ್ರೆಗಳು ಮುಂದಾದರೂ ತಮ್ಮ ಧೋರಣೆ ಬದಲಾಯಿಸಿಕೊಳ್ಳಲಿ ಎಂಬುದು ಜನಸಾಮಾನ್ಯನಾಗಿ ನನ್ನ ಪ್ರಾರ್ಥನೆ, ಶಿಕ್ಷಣ ರಂಗದ ಖಾಸಗಿ ಸಂಸ್ಥೆಗಳ ಸುಲಿಗೆ ಎಲ್ಲಾ ಪಾಲಕರಿಗೆ ಗೊತ್ತಿರುವ ವಿಷಯ, ಇಂತಹದಕ್ಕೆ ಮಣೆ ಹಾಕುವುದೂ ಕೂಡ ಪಾಲಕರಲ್ಲೇ ಒಂದಷ್ಟು ಜನ, ನಮ್ಮಲ್ಲೇ ಒಗ್ಗಟ್ಟಿರದಿರುವಾಗ ಯಾರುತಾನೇ ಅವರ ಬೇಳೆ ಬೇಯಿಸ್ಕೊಳ್ಳಲು ಸಾಧ್ಯ? ನಾವು ಕೊಡುವುದಿಲ್ಲ ಅಂತ ಹಠಹಿಡಿದರೆ ಡೊನೇಶನ್ ಹಾವಳಿ ತಪ್ಪಿಸಬಹುದಿತ್ತು, ಆದರೆ ಪರಿಸ್ಥಿತಿ ಹಾಗಿಲ್ಲ, ಇದು ಕೂಡ ಮುಂದುವರಿದರೆ ಸಮಾಜ ಕಂಟಕ ಪಿಡುಗು ಇದಾಗುವುದರಲ್ಲಿ ಲವಲೇಶವೂ ಸಂದೇಹವಿಲ್ಲ ! ಹೀಗಾಗಿ ನಮ್ಮೆಲ್ಲ ಮಿತ್ರ-ಬಂಧುಗಳಲ್ಲಿ ವಿನಮ್ರ ವಿನಂತಿ ಏನೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಶನ್ ಕ್ರಮಕ್ಕೆ ಕಡಿವಾಣ ಹಾಕಲು ಯಾವ ಕ್ರಮಬೇಕೋ ಅದಕ್ಕೆ ಸಂಘಟನಾ ಶಕ್ತಿ ಹುಟ್ಟುಹಾಕಿ.

    ಭಾರತದ ಮೂಲ ಬೇರಾದ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಅನೇಕ ಹೊಸ ರೆಡಿ ಟು ಈಟ್ ಔಷಧಗಳು ಬಂದಿವೆ, ವಿದೇಶೀಯರು ಅನೇಕ ಆಯುರ್ವೇದ ಔಷಧಗಳಿಗೆ ಪೇಟೆಂಟ್ ಪಡೆಯಲು ಹುನ್ನಾರ ನಡೆಸಿದ್ದಾರೆ. ಇದಲ್ಲದೇ ಯೋಗ ಥೆರಪಿ ಕೂಡ ಹಾಗೇ, ಇವೆಲ್ಲವೂ ನಮ್ಮದಲ್ಲ ಎನಿಸಿಕೊಳ್ಳುವ ಕಾಲ ಬರಬಹುದು! ಅತ್ಯಂತ ಶ್ರೇಷ್ಠ ಹಾಗೂ ಆರೋಗ್ಯಕರವಾದ ಆಯುರ್ವೇದವನ್ನು ಹಾಗೂ ಯೋಗವನ್ನು ಮರೆಯದೇ ಬೆಂಬಲಿಸಿ.

    ಪ್ರಸಕ್ತ ಪ್ರತಿಕ್ರಿಯಿಸಿದ ಸರ್ವಶ್ರೀ ಕು.ಸು.ಮುಳಿಲಾಯ, ಪ್ರವೀಣ್, ಹುಸೇನ್ ಮತ್ತು ಸುಧೀಂದ್ರ ದೇಶಪಾಂಡೆ ಈ ಎಲ್ಲ ಮಹನೀಯರಿಗೂ, ಓದಿದ, ಓದದ,ಓದುವ ಎಲ್ಲಾ ಮಿತ್ರರಿಗೂ ಧನ್ಯವಾದಗಳು.

    ReplyDelete
  6. ಚೆ೦ದದ ವಿಡ೦ಬನೆ.
    ಇದರಲ್ಲಿ,
    - ಮಾಧ್ಯಮದವರ ಅತೀರ೦ಜನೆ
    - ಬುದ್ಧಿಜೀವಿಗಳ ಚಿ೦ತನಾಶೈಲಿ
    - ಒ೦ದು ಸಿಧ್ಧಾ೦ತಕ್ಕ೦ಟಿದವರ ಸೋಗಳಾಡಿತನ
    - ನಮ್ಮ ನೂತನ ಭಾರೀ ಕಲಿಕೆಯ ಇ೦ಗ್ಲೀಷವೈಧ್ಯಕೀಯ ಪದ್ದತೀಯ ವೈದ್ಯರುಗಳ
    - ಹಿತ್ತಲಗಿಡ ಮದ್ದಲ್ಲ ಅನ್ನುವ ಜನರ
    ವಿಡ೦ಬನೆ ಚೆನ್ನಾಗಿ ಮೂಡಿದೆ.
    ಯೋಗ ಪದ್ದತಿಗಳ ಎಲ್ಲಾ ಆಸನಗಳನ್ನು, ಪ್ರಣಾಯಾಮಗಳನ್ನು ಮತ್ತು ಆಯುರ್ವೇದಿಕ ಚಿಕಿತ್ಸಾಪಧ್ಧತಿಯನ್ನು ಸ್ವಾಮಿ ರಾಮದೇವ ಬಾಬಾರು ಭಾರತೀಯ ಪುರಾತನ ಮೂಲದ ಹೆಸರಲ್ಲಿ ಪೆಟೆ೦ಟ್ ಮಾಡಿಸುತ್ತಿದ್ದಾರೆ. ಹಲವು ಆಗಿವೆ ಸಹಾ. ಅದಕ್ಕಾಗಿ ಅವರ ಒ೦ದು ತ೦ಡವೇ ನಿರ೦ತರ ಕಾರ್ಯವ್ಯಾಪ್ತಿಯಲ್ಲಿದೆ.

    ReplyDelete
  7. ಸೀತಾರಾಮ್ ರಾಯರೇ, ರಾಮದೇವ್ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಜನ ಅವರಲ್ಲೂ ದೋಷ ಹುಡುಕಿ ಅಪಚಾರವೆಸಗಲು ಅವರ ಆಯುರ್ವೇದ ಔಷಧಗಳಲ್ಲಿ ಏನೇನೋ ಹಾಕುತ್ತಾರೆ ಅಂತೆಲ್ಲ ಬೊಗಳೆ ಬಿಟ್ಟು ಮಾಧ್ಯಮದವರು ಪ್ರಚಾರ ಮಾಡಿದರು, ಏನೇ ಇದ್ದರೂ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಸಥಪಥದಲ್ಲಿ ರಾಮ್ ದೇವ್ ಇದ್ದಾರೆ, ನೆನಪಿಸಿದ್ದಕ್ಕೆ,ಪ್ರತಿಕ್ರಿಯಿಸಿದ್ದಕ್ಕೆ ತಮಗೆ ಶರಣು ಮತ್ತು ರಾಮ್ ದೇವ್ ಅವರಿಗೂ ನನ್ನ ಅನಂತ ವಂದನೆಗಳು

    ReplyDelete
  8. ಮಾಧ್ಯಮದ ವರದಿಗಾರರ ಭಾಶೆಯ ಬಗೆಗೆ ನನಗೆ ತೀವ್ರ ಅಸಮಧಾನ ಇದೆ. ನಿಮ್ಮ ವಿಡಂಬನೆ ಆಬಗೆಗೂ ಸಾಗಬೆಕಿತ್ತು. ನಿಮ್ಮ ವರದಿಗರನೇನೋ ಎಲ್ಲ ವಾಕ್ಯಗಳನ್ನೂ ಸರಿಯಗಿ ಪೊಣಿಸಿ ನಿರೂಪಣೆಯನ್ನು ಮಾಡಿದ್ದಾನೆ. ಆತೀ ಕಡಿಮೆ ವರದಿಗಾರರು ವಾಕ್ಯ ರಚನೆ ಹಾಗೂ ವಾಕ್ಯ ಗಳ ಹೊಂದಣಿಕೆಯ ಶಿಸ್ತನ್ನು ಅರಿತಿದ್ದಾರೆ.

    ReplyDelete
  9. ವಿಷಯವನ್ನು ಎಷ್ಟೇ ಮನದುಂಬಿಕೊಂಡರೂ ಬರೆಯುವಾಗ ಎಲ್ಲವನ್ನೂ ಬರೆಯಲು ಕೆಲವು ಅಡೆತಡೆಗಳು ಕಾಣಿಸುತ್ತವೆ, ತಾವು ಹೇಳಿದ್ದು ಮನಸ್ಸಲ್ಲಿದ್ದರೂ ಅದು ಬೇಡವೆಂತಲೇ ಬಿಟ್ಟಿದ್ದೇನೆ, ಇಲ್ಲಿ ಅವರ ವಾಕ್ಯ, ಶಬ್ಧಗಳ ಉಚ್ಚಾರಣೆ ಇವುಗಳಿಗಿಂತ ಬೇಡದ ವಿಷಯವನ್ನು ಹೇಗೆ ಪುನರಪಿ ತುರುಕುತ್ತಾರೆ ಮತ್ತು ವೈಭವೀಕರಿಸುತ್ತಾರೆ ಎಂಬುದೇ ಮುಖ್ಯವಾಗಿ ಹಾಗೆ ಬರೆದಿದ್ದೇನೆ, ಮತ್ತೆ ಬರೆಯುವಾಗ ಭಾಷೆಯ ಅಪಬ್ರಂಶಡ ಕುರಿತೇ ಇನ್ನೊಮ್ಮೆ ಬರೆಯುತ್ತೇನೆ ಬಿಡಿ, ಧನ್ಯವಾದಗಳು ತಮಗೆ ngh.

    ReplyDelete