ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, April 1, 2010

ನಶ್ವರದಲ್ಲಿರುವ ಶಾಶ್ವತ ನಾದ

ಶ್ರೀ ಆದಿ ಶಂಕರರು ' ಅಯಿಗಿರಿ ನಂದಿನಿ ' ಅಂತ ಅಮ್ಮನವರನ್ನು ಕಂಡು ಹಾಡಿ ನುತಿಸಿದರು. ಅದೇ ದಾಟಿಯಲ್ಲಿ ಬೇರೆ ಅರ್ಥದಲ್ಲಿ ಒಂದು ಹಾಡು ಬರೆಯುವ ಹೀಗೊಂದು ಪ್ರಯತ್ನ ನಡೆಯಿತು. ಪ್ರಕೃತಿಯಲ್ಲಿ ಒಂದು ಅಘೋಷಿತ ನಡೆಯಿದೆ, ಅಲ್ಲಿ ದೈವ ನಿರ್ಮಿತ ಪಂಚಭೂತಗಳ ವಿಲಂಬಿತ ಮತ್ತು ಶಾಶ್ವತ ಒಂದು ನಾದವಿದೆ. ಅದನ್ನು ಆಸ್ವಾದಿಸಲೇ ನಮಗೆ ಬಿಡುವೆಲ್ಲಿದೆ ? big bang ಅಂದರೆ ಕಿವಿ ನಿಮಿರುತ್ತದೆ ನಮಗೆ, ಆದರೆ ನಮ್ಮ ವೇದ-ಶಾಸ್ತ್ರಗಳು ತಮ್ಮ ಬೆಳಕಿಂಡಿಯಿಂದ ನಮಗೆ ಎತ್ತಿ ಕೊಡುತ್ತಿದ್ದರೆ ನಾವು ಬಾಲಿಶರಾಗುತ್ತೇವೆ; ಪೂರ್ವಾಗ್ರಹ ಪೀಡಿತರಾಗುತ್ತೇವೆ; ಹಿತ್ತಾಳೆಕಿವಿಯವರಾಗುತ್ತೇವೆ ! ನಮಗೆ ಅಮೇರಿಕ ಹೇಳಿದ್ದೇ ವೇದ. ಎಲ್ಟನ್ ಜಾನ್ ಬಾರಿಸಿದ್ದೇ ಗಿಟಾರು ! ನಮ್ಮ ಮೂಲ ಸಂಸ್ಕೃತಿಯ ಅಂದ-ಚಂದ ಯಾರಿಗೆ ಬೇಕು ಸ್ವಾಮಿ ? ಅದೆಲ್ಲಾ ಪುಸ್ತಕದ ಬದನೇಕಾಯಿ, ಕಾಲಹರಣ ಮಾಡುವ ಕಾಡುಹರಟೆ ಅಂದುಕೊಳ್ಳುತ್ತೇವೆ, ಅಲ್ಲವೇ ? ಶಾಲೆಯಲ್ಲಿ ನಮಗೆ ಇಂಗ್ಲೀಷ್ ಮಾಧ್ಯಮವೇ ಬೇಕು. ಮಕ್ಕಳು ಶಾಲೆಗೆ ಹೋದ ಮರುದಿನವೇ ಹರುಕು ಮುರುಕು ಆಂಗ್ಲಭಾಷೆಯಲ್ಲಿ 'ನೋ ಯಾ ಗೋ ಯಾ ' ಅಂದರೆ ನಮ್ಮೊಳಗೊಳಗೇ ಒಂಥರಾ ಅದಮ್ಯ ಆನಂದ, ಮೈಮನ ವೆಲ್ಲ ಗಾಳಿಯಿಂದ ಬಲೂನು ಬೀಗಿದಂತೆ ಬೀಗಿ ಖುಷಿಯೋ ಖುಷಿ ! ಎಲ್ಲರಲ್ಲೂ ಹೇಳಿಕೊಳ್ಳುವ ತವಕ! ಇನ್ನು ಸಿಕ್ಕಾಪಟ್ಟೆ ಬೇಕಾದ್ದನ್ನ ಬೇಡದ್ದನ್ನ ಎಲ್ಲವನ್ನೂ ತಿಂದು ತಿಂದು ಹೊಟ್ಟೆ ಬರಿಸಿಕೊಂಡು ಬೆಳಿಗ್ಗೆ ಉದ್ಯಾನದಲ್ಲಿ ವ್ಯಾಯಾಮ ಮಾಡಲು ಜಾಗಿಂಗ್ ಹೋಗುವಾಗ ದಾರಿಯಲ್ಲಿ ಅರ್ಧ ಕಾಪಿ ಕುಡಿದು ಪಾರ್ಕಿನಿಂದ ಮರಳಿ ಬರುವಾಗ ಪೂರಿಸಾಗು, ಕೇಸರಿಬಾತು ಕಂಪೆನಿಗೆ ಇಡ್ಲಿವಡೆ ಎಲ್ಲಾ ಮುಕ್ಕಿ ನೆಮ್ಮದಿಯಿಂದ ಜಾಗಿಂಗ್ ಪೂರೈಸಿ ಮರಳುತ್ತೇವೆ ! ಎಲ್ಲೋ ಯಾಕೋ ಸುಮ್ಮನೇ ಹುಡುಗರು ಹೊಡೆದಾಡಿದರೆ ರಾಜಕೀಯದ ಬಣ್ಣ ಹಚ್ಚಿ 'ಕೋಮು ಗಲಭೆ' ಎನ್ನುತ್ತೇವೆ ! ಪ್ರಕೃತಿ ಇವೆಲ್ಲವನ್ನೂ ನೋಡುತ್ತಾ ಸುಮ್ಮನೇ ನಮ್ಮೊಟ್ಟಿಗೆ ಹಾಗೆ ಸಾಗಿದೆ. ಅದು ನಮಗೆ ಮಿಥ್ಯಾಲೋಕದ ಹಲವು ಅನುಕೂಲಗಳನ್ನೂ ನೀಡದಂತೆ ಮಾಡಿ ನಾವು ಬಹಳ ಸುಖವೆಂದು ತಿಳಿದಾಗ ಸಮಸ್ಯೆಗಳನ್ನೂ ತಂದೊಡ್ಡುತ್ತದೆ ! ಹೀಗಾಗಿ ಪ್ರಕೃತಿಯಲ್ಲಿ ಅನನ್ಯವಾಗಿ ಅನುರಳಿಸುವ ಆ ನಾದವನ್ನು ಆಲಿಸಲು ಪ್ರಯತ್ನಿಸಿದರೆ ಪ್ರಕೃತಿಗೆ ಅನುಗುಣವಾಗಿ ನಡೆದರೆ ನಮಗೆ ಸಮಸ್ಯೆಗಳು ಕಡಿಮೆ ಬರಬಹುದು. ಇಲ್ಲಿ ನಭೋಮಂಡಲದ ಅವಕಾಶಗಳ ನಡುವೆ ಬ್ರಹ್ಮಾಂಡದ ಒಂದೇ ರಾಗದ ಕೂಗು ಸದಾ ಹೊಮ್ಮುತ್ತಿದೆ, ಅದನ್ನು ಹಲವರು ' ಓಂ' ಕಾರವೆಂದರೆ ಕೆಲವರು ಏನೋ ಶಬ್ಧಎಂದಿದ್ದಾರೆ, ವಿಜ್ಞಾನಿಗಳು ಇನ್ನೂ big bang ತಲೆಯಲ್ಲೇ ಇದ್ದಾರೆ ! ಆ ಸ್ವರವನ್ನು ಅಲೈಸುತ್ತ, ಚೋದ್ಯವಾಗಿ ಬರೆದ ಒಂದು ಹಾಡು ನಿಮಗಾಗಿ---




[ಚಿತ್ರ ಋಣ : ಅಂತರ್ಜಾಲ]

ನಶ್ವರದಲ್ಲಿರುವ ಶಾಶ್ವತ ನಾದ

ಚಕಚಕ ಚಂಚಲ ಮಿಂಚಿನ ಗೊಂಚಲ
ಕಂಚಿನ ಶಬ್ಧದ ಮಾರ್ದನಿಯು
ಪಂಚಭೂತಗಳ ಇಂಚಿಂಚಲು ಅದು
ಸಂಚರಿಸುವ ಪರಿ ಅದ್ಬುತವು

ವತ್ಸರ ವತ್ಸರ ಕಳೆದು ವಿಲಂಬಿತ

ತಾತ್ಸಾರವು ಇರದಿಹ ನಡೆಯು
ಕುತ್ಸಿತ ಬುದ್ಧಿಯ ಹುಲುಮಾನವಗಿದು
ತತ್ಸಮ ಪ್ರತಿರೋಧದ ಗಣಿಯು

ನಶ್ವರದೀಜಗ ಬಲು ಬಲು ಸೋಜಿಗ

ಶಾಶ್ವತ ಮಡಿಲೊಳು ಅವಿತಿಡುತ
ಅಶ್ವಗಂಧ ಗೋಮೇದಿಕ ಕೇಸರಿ
ಈಶ್ವರನಾಟದ ದಾಳಗಳು

ಕಾಮ ಕ್ರೋಧ ಲೋಭ ಮೋಹ ಮದ
ಆಮಶಂಕೆ ಥರ ಮತ್ಸರವು
ರಾಮ-ಹನುಮ ದೈವಾದಿಗಳನು ನಾವ್
ಕೋಮಿಗೀಡುಮಾಡುವ ವಿಧಿಯು

ತಜ್ಜನಿತ ಜನಿತ ನವತಾಪದ

ಮಜ್ಜನದೋಳ್ ಮನ ಕಲುಷಿತವು
ಅಜ್ಜ-ಅಜ್ಜಿಯರ ಬಿಡದೀ ಮಾಯೆಯು
ನುಜ್ಜಾದರು ಗುಜ್ಜಾಡುತಲಿ

ಘಾತುಕ ಪಾತಕ ಬುದ್ಧಿಯು ನಮ್ಮದು

ಜಾತಕದಲಿ ಅದು ಬರೆದಿಹುದು
ನೀತಿಶತಕ ನೂರೆಂಟು ಓದಿದರು
ಭೀತಿಯೇ ಇಲ್ಲದ ಭಂಡತನ

ಮಜಮಜ ಬಲುಮಜ ಬಲು ಮೋಜಿನ ಮಜ

ನಿಜದರಿವದು ಯಾತಕೆ ಬೇಕು ?
ಅಜಗಜಾಂತರವು ಇರೆ ತೊಂದರೆಯೇನ್ ?
ರಜೋಗುಣದಿ ಮುನ್ನಡೆಯುವೆವು

ಬೀಗುತ ತೇಗುತ ಗಾತ್ರದ ಉದರವ

ಹಾಗೆ ಒಮ್ಮೆ ನೇವರಿಸುತಲಿ
ನೀಗುತಪಾನವಾಯು ಮಂದಸ್ಮಿತ
ರೋಗದ ಕಣಜವ ಬಚ್ಚಿಡುತ

9 comments:

  1. ಅದ್ಭುತ ಪರಿಕಲ್ಪನೆ !ಬಹಳ ಇಷ್ಟವಾಯ್ತು .ನಿಮ್ಮೊಳಗೆ ಕುಳಿತು ಬರೆಸುತ್ತಿರುವ ಆ ಮಹಾನ್ ಶಕ್ತಿಗೆ ನಮೋನ್ನಮಃ .

    ReplyDelete
  2. ಸ್ವಾಮೀ ಕೃಷ್ಣಮೂರ್ತಿಗಳೇ, ನಾನೆಂಬುದು ಬರೇ ನಿಮಿತ್ತ, ಇದು ನಂಬಿದ ಆರಾಧ್ಯ ದೈವದ ಸ್ವಾಯತ್ತ ಕೃಪೆ, ಧನ್ಯವಾದಗಳು

    ReplyDelete
  3. ವಾಹ್ !. ಸತ್ಯವಾದ ವಿಚಾರಗಳು ಕವನವಾಗಿ ಬಂದಿದೆ. ನಿಮ್ಮ ರಚನಾಕೌಶಲ್ಯಕ್ಕೆ ಶರಣು. ನೀವೆಂದಂತೆ, ನಾವು ನಮ್ಮ ವೇದದ ಆಧಾರಗಳನ್ನು ಎಷ್ಟೇ ಹೇಳಿದರೂ ,
    ವಿದೇಶಿಗಳ ಮಾತನ್ನೇ ಜನ ಹೆಚ್ಚು ನಂಬುವುದು. ಅರಿವೆಂದು ಮೂಡುವುದೋ ??

    ReplyDelete
  4. ವೇದಗಳು ಹೇಳಿದ್ದನ್ನು ವಿರೋದಿಸುವುದೇ ಹೆಚ್ಚುಗಾರಿಕೆ,ಪರಕೀಯರು ಹೇಳಿದ್ದೇ ಪ್ರಮಾಣ ಎ೦ದು ನ೦ಬುವವರಿಗೆ ಅರಿವು ಮೂಡಲಿ.Nice article

    ReplyDelete
  5. ಹೀಗೂ ಚಿಂತನೆ ಮಾಡುವ ಜನರಿದ್ದಾರಲ್ಲಾ! ಅದೇ ಸಂತೋಷ. ಇಂತಹ ಜನರ ಗುಂಪು ಬೆಳೆಯುತ್ತಿದೆ. ಹಳೆಯದ ಬಿಟ್ಟು ಹೊಸದಾರಿ ಕಾಣದೆ ಜನರು ಕಂಗಾಲಾಗಿದ್ದಾರೆ. ಅವರಿಗೆ ಮಾರ್ಗದರ್ಶನ ಬೇಕು. ನಿಮ್ಮ ಬ್ಲಾಗ್ ಕೂಡ ಅಂತ ಒಂದು ಪುಟ್ಟ ಪ್ರಯತ್ನ.ಜನರು ತಾತ್ಕಾಲಿಕವಾದ ಸಂತೋಷದ ಹೆಸರಲ್ಲಿ ಶಾಶ್ವತವಾಗಿ ದು:ಖ ಅನುಭವಿಸಲು ಹೊರಟಿದ್ದಾರಲ್ಲಾ! ಯಾಕೆ ಹೀಗೆ? ಎಂಬುದು ತಿಳಿಯದಾಗಿದೆ. ಇಂತಹಾ ಒಂದು ಸತ್ಕಾರ್ಯದಲ್ಲಿ ಜೊತೆಜೊತೆಗೆ ಸಾಗೋಣ.
    ನಮಸ್ತೆ
    ಶ್ರೀಧರ್

    ReplyDelete
  6. ಇಂದಿನ ಮಾಧ್ಯಮಗಳ ಕಾಲದಲ್ಲಿ ಸವಿತೃವೋ ಗಾಯತ್ರಿಯೋ ಮಾಧ್ಯಮಗಳಲ್ಲೇ ಪ್ರಸಾರಿಸಲ್ಪಡುತ್ತದೆ. ಎಲ್ಲಿಯವರೆಗೆ ಕೂಪಗಳಿರುವವೋ ಅಲ್ಲಿಯವರೆಗೆ ಮಂಡೂಕಗಳೂ ಇರುತ್ತವೆ. ಇದು ಯಾವುದೇ ಪಂಗಡಕ್ಕೆ ಸಂಬಂಧಿಸಿಲ್ಲ. ನೀವೇ ಹೇಳಿದಂತೆ ತೀರ ತಿಳಿಯದ ನಮ್ಮಂಥವರು ಏನೋ ಸ್ವಲ್ಪ ಓದಿ ಓದಿ ಅಂತ ಎಲ್ಲರಲ್ಲಿ ಪ್ರಾರ್ಥಿಸುತ್ತೇವೆ, ಸಗಣಿಯನ್ನೇ ಉಪ್ಪಿಟ್ಟು ಎಂದು ತಿನ್ನುವ ನಮ್ಮ ಮಂಕುಬಡಿದ ಜನರಿಗೆ ಅದರ ಅರಿವು ಬರುವುದು ಕಷ್ಟ! ಶಿವರಾತ್ರಿಯ ದಿನ ದೈವಧ್ಯಾನಕ್ಕೆ ಜಾಗರಣೆ ಹೇಳಿದರೆ, ಕೇ.ಜಿ.ಫಲಾಹಾರ ಅಂತ ತಿಂದು ಸಿನಿಮಾ ಹಾಕಿ ಜಾಗರಣೆ ಮಾಡುವ ಬೂಟಾಟಿಕೆಯಿರುವಲ್ಲಿ, ವೇದದ ಗಮ್ಯಕ್ಕೆ ಬೇಕಾದ ಗೋವನ್ನು ಎಡಗೈಯಲ್ಲಿ ಕಡಿದು ತಿನ್ನುತ್ತ ಬಲಗೈಯ್ಯಲ್ಲಿ ವೇದ ವೇದ ಎಂದರೆ ಅದು ಒಂದು ಹುಡುಗಿಯ ಹೆಸರಾದರೆ ಪರವಾಗಿಲ್ಲ, ಎರಡನೆಯದು ಗ್ರಾಮಗಳಲ್ಲಿ ಅಂತರ್ಜಾಲ ಇರದಿದ್ದರೂ ಸುಮಾರಾಗಿ ಲಭ್ಯವಿರುವ ಮಾಧ್ಯಮಗಳಿಂದ ಓದುವ ಹವ್ಯಾಸ ಬೆಳೆಸಿಕೊಂಡವರಿಗೆ, ಓದು ಒಂದು ಉಪಾಸನೆ ಎಂದುಕೊಂಡವರಿಗೆ ಆ ಮಡಿವಂತರ ಮೌಡ್ಯ ತೊಡೆದುಹಾಕಿ ಹೊರಬರಲು ಬೇಕಷ್ಟು-ಸಾಕಷ್ಟು ಮಾರ್ಗಗಳಿವೆ. ಮಾಂಸಾಹಾರ ಭುಂಜಿಸುವ ನಮ್ಮ ಮನಸ್ಸು ತಾಮಸಿಕವಾಗಿ, ಐಹಿಕ ತಾಪತ್ರಯಗಳಲ್ಲಿ ಬಿದ್ದಿರುತ್ತ, ಏಕಾಗ್ರತೆಯೇ ಸಿಗದಾಗ ವೇದದ ಓದು ಬಹು ದೂರದ ಮಾತು! ಇಲ್ಲಿ ಪಂಗಡ ಭೇದವಿಲ್ಲ. ನನಗೆ ಗೊತ್ತಿರುವಂತೆ ಮಾಂಸಾಹಾರ ತ್ಯಜಿಸಿ,ಶುದ್ಧಾಚಾರದಿಂದ ಪರಿವರ್ತಿತಗೊಂಡ ಅನೇಕರು ಯಾವ ಬ್ರಾಹ್ಮಣ್ಯದಲ್ಲೂ ಕಮ್ಮಿ ಇಲ್ಲ ! ನಮ್ಮ ಸುತ್ತಮುತ್ತ ಇಂದಿಗೂ ಸ್ವಚ್ಛತೆ ಕಾಪಾಡಿಕೊಳ್ಳದ, ಸ್ನಾನಮಾಡದ,ಹಲ್ಲುಜ್ಜದ ಜನರೇ ಇರುವಾಗ ಗ್ರಾಮಗಳಲ್ಲಿ ನೈರ್ಮಲ್ಯವನ್ನು ಮೊದಲು ಬೋಧಿಸುವ ಸಲುವಾಗಿ ಮಡಿಯೆಂಬ ಕಟ್ಟುಪಾಡು ಬಂತು ಎಂಬುದು ನನ್ನನಿಸಿಕೆ. ಹೀಗಾಗಿ ಸಾಗರ ಬಹಳ ವಿಸ್ತಾರ, ಅದರ ಆಳದ ಅರಿವು ಇಳಿದವರಿಗೆ ಗೊತ್ತು, ತಮ್ಮ ಶಕ್ತ್ಯಾನುಸಾರ ಬಿಂದಿಗೆಯಲ್ಲೋ, ಚೊಂಬಿನಲ್ಲೋ ಮೊಗೆದುಕೊಳ್ಳಲಿ, ಆದರೆ ಯಾರೋ ನಾಲ್ಕು ಜನ ಮಂಡೂಕ ಪಂಡಿತರು ವಾದಿಸಿದ್ದಾರೆ ಎಂದ ಮಾತ್ರಕ್ಕೆ ಇಂದು ಹೆಂಗಳೆಯರಿಗೆ ಮಂತ್ರ ಗೊತ್ತಿಲ್ಲವೆಂದಲ್ಲ, ಉದಾಹರಣೆಗೆ ನನ್ನಜ್ಜಿ [ಈಗ ಇಲ್ಲ,೯೪ರಲ್ಲಿ ತೀರಿಕೊಂಡಾಗ ೭೦ ವರ್ಷ] ಇಡೀ ಕಾಲೋಚಿತ ಮಂತ್ರಭಾಗಗಳನ್ನು ಸಲೀಸಾಗಿ ಹೇಳುತ್ತಿದ್ದರು, ಇದು ಅವರು ಬಾಲ್ಯದಲ್ಲಿ ಅವರ ಅಣ್ಣ ಪಾಠಹೇಳಿಸಿಕೊಳ್ಳುವಾಗ ಪಕ್ಕದಲ್ಲೇ ಕುಳಿತು ಕಲಿತಿದ್ದಾಗಿತ್ತಂತೆ ! ಅಂದರೆ ಅಲ್ಲಿ ಕಲಿಸುತ್ತಿದ್ದ ಯಾರೋ ಅಜ್ಞಾತ ಗುರು ಕೂಪಮಂಡೂಕನಾಗಿರಲಿಲ್ಲ! ಮೈಸೂರು ಮೂಲದ ಮಹಿಳೆಯೊಬ್ಬರು ಇತ್ತೀಚಿನ ದಿನಗಳಲ್ಲಿ ಹೋಮ-ಹವನಗಳನ್ನು ಮಾಡುವುದನ್ನು ತಾವೂ ಕೇಳಿರುತ್ತೀರಿ, ಅಂದರೆ ಇದು ಪಡೆಯುವವರಿಗೆ ಬೇಕಾದ ಶ್ರದ್ಧೆಯಲ್ಲಿ ಅಡಗಿದೆ ವಿನಃ ಕೊಡುವ ಮಂಡೂಕಗಳಲ್ಲಲ್ಲ ! ಗ್ರಾಮಗಳಲ್ಲಿ ಓದಿದ ಗಂಡಸರಿಗೇ ವೇದ ಓದಲು ವೇಳೆ ಇಲ್ಲ;ಹಾಗಂತ ಧಾರಾವಾಹಿಗಳನ್ನು ಮಾತ್ರೆ ಸೇವಿಸಿದ ಹಾಗೇ ಚಾಚೂತಪ್ಪದೇ ನೋಡುತ್ತಾರೆ ! ಹೆಂಗಸರಿಗೆ ಅವರ ಕಾರ್ಯಗಳು ಕಾರ್ಯ-ಭಾರಗಳಾಗಿರುವುದರಿಂದ ಅಲ್ಲಿ ಪಟ್ಟಣಗಳಂತೆ ಗಂಡಸರು ಅವರಿಗೆ ಕೆಲಸಗಳಲ್ಲಿ ನೆರವಾಗುವ ಪರಿಪಾಟ ಇಲ್ಲವಾದ್ದರಿಂದ ಸಹಜವಾಗಿ ಸಮಯದ ಅಭಾವ, ಅನಾರೋಗ್ಯ, ಮಕ್ಕಳ ಲಾಲನೆ-ಪಾಲನೆ ಇದೇ ಹೆಚ್ಚಾಗಿ ಅವರು ಅದರಿಂದ ಆಚೆ ಇಣುಕಿನೋಡಲೂ ಸಾಧ್ಯವಾಗುತ್ತಿಲ್ಲ ! ಅದನ್ನೂ ಮೀರಿ ಬೆಳೆದ ಅನೇಕ ಹೆಂಗಸರು ವೇದಮಂತ್ರ ಮತ್ತು ಅರ್ಥಗಳನ್ನು ತಿಳಿಯುವಲ್ಲಿ ಸ್ವಲ್ಪವಾದರೂ ಯಶಸ್ವಿಯಾಗಿದ್ದಾರೆ.

    ವೇದವನ್ನು ತಮ್ಮದೇ ಆಸ್ತಿ ಅಂತ ಯಾರೂ ಹೇಳಿಲ್ಲ;ಹೇಳಲಾರರು,ಹೇಳಿದರೆ ಸಿಂಧುವೂ ಅಲ್ಲ, ಆದರೆ ವಿನಾಕಾರಣ ಸಮಾಜದಲ್ಲಿ ಓದಿದವರೆನ್ನುವ ಅನೇಕರು ಕೇವಲ ಒಂದು ಪಂಗಡವನ್ನು ಬೆರಳಿಟ್ಟು ತೋರಿಸುವುದು ಯಾವ ನ್ಯಾಯ, ಅಲ್ಲವೇ ? ವೇದ ಸರ್ವತ್ರವಾಗಲಿ, ಅದಕ್ಕೆ ಬೇಕಾದ ಸಮಾಜ-ಪರಿಸರ,ಸಂಸ್ಕೃತಿ ಮೊದಲು ಪ್ರಾರಂಭವಾಗಲಿ,ವಿದೇಶೀ ವ್ಯಾಮೋಹ ದೂರವಾಗಲಿ ಎಂಬ ಸದಾಶಯದೊಂದಿಗೆ ನಿಮ್ಮೆಲ್ಲರಿಗೆ ಕೃತಜ್ಞತೆಗಳು, || ಸರ್ವೇ ಜನಾಃ ಸುಖಿನೋ ಭವಂತು ||


    ಪ್ರತಿಕ್ರಿಯಿಸಿದ ಸರ್ವಶ್ರೀ ಸುಬ್ರಹ್ಮಣ್ಯ , ಸೀತಾರಾಮ್, ಕು.ಸು.ಮುಳಿಲಾಯ ಮತ್ತು ಹರಿಹರಪುರ ಶ್ರೀಧರ್ -ತಮಗೆಲ್ಲರಿಗೂ, ಓದಿದ-ಓದುವ-ಓದದ ಎಲ್ಲರಿಗೂ ವಂದನೆಗಳು

    ReplyDelete
  7. ನಿಜ ಭಟ್ರೇ, ಅದೇನೋ ಗಾದೆ ಇದೆಯಲ್ಲ ದೀಪದ ಬುಡದಲ್ಲಿ ಯಾವಾಗಲು ಕತ್ತಲೆ ಅಂತ! ಹಾಗೆ. ನಮಗೆ ನಮ್ಮ ವೇಧ ಪುರಾಣಗಳ ಬಗ್ಗೆ ಗೊತ್ತೇ ಇರುವುದಿಲ್ಲ. ಅದೇ ವಿದೇಶಿಯರ ಮಾತು ಅಂದ್ರೆ ವೇದವಾಕ್ಯ!
    ಇನ್ನು ನಿಮ್ಮ ಕವನದ ಬಗ್ಗೆ ಹೇಳುವ ಶಕ್ತಿ ನನಗಿಲ್ಲ!

    ReplyDelete
  8. ಧನ್ಯವಾದಗಳು ಪ್ರವೀಣ್, ಕೊನೇಪಕ್ಷ ನಾವಾದರೂ ಸ್ವಲ್ಪ ಅರಿತು ನಡೆಯೋಣ ಅಲ್ಲವೇ ?

    ReplyDelete