ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, February 7, 2011

ಅತ್ಯಭೂತಪೂರ್ವ ಮಂಗಳ ಸನ್ನಿವೇಶ



ಅತ್ಯಭೂತಪೂರ್ವ ಮಂಗಳ ಸನ್ನಿವೇಶ

ಕನ್ನಡದ ಮನೆಯಂಗಳದಲ್ಲಿ ನಿಜವಾಗಲೂ ಎಂದೋ ಆಗಬೇಕಿದ್ದ ಉಚ್ಛಕಾರ್ಯವೊಂದು ಸುಸೂತ್ರವಾಗಿ ಮತ್ತು ಸಮರ್ಪಕವಗಿ ನಡೆಯಿತು: ಅದೇ ೭೭ನೇ ಕನ್ನಡ ನುಡಿ ತೇರು. ಕನ್ನಡ ತನ್ನತನವನ್ನು ಕಳೆದುಕೊಂಡು ಸಮ್ಮಿಶ್ರ ಸರಕಾರದಂತೇ ಸಮ್ಮಿಶ್ರ ಭಾಷೆಯಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ, ಯಾವುದೋ ದೇಶದ, ರಾಜ್ಯಗಳ ಜನರು ಬಂದು-ಇಲ್ಲಿ ನೆಲೆನಿಂತು ತಮಗೆ ಬೇಕಾದ ಬೇಳೆಬೇಯಿಸಿಕೊಂಡು ಒತ್ತಾಯದಿಂದ ತಮ್ಮೆಲ್ಲರ ಭಾಷೆಯನ್ನು ಕನ್ನಡಿಗರಿಗೆ ಹೇರುತ್ತಿರುವ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿರುವ ಉತ್ತಮ ಕೆಲಸವೊಂದನ್ನು ಮಾಡಿದೆ ಎಂಬುದು ಸ್ತುತ್ಯಾರ್ಹ.ರಾಜ್ಯಗಳ ವಿಂಗಡಣೆಯಾಗಿ ಎಲ್ಲರೂ ಭಾಷಾವಾರು ತಂತಮ್ಮ ಜಾಗವನ್ನು ಭದ್ರಪಡಿಸಿಕೊಂಡರೂ ಬೇರೇ ಭಾಷೆಗಳವರ ಬಗ್ಗೆ ಮಲತಾಯ ಧೋರಣೆ ತಳೆಯದ ಸಹಿಷ್ಣುತೆಯನ್ನು ಒಗ್ಗಿಸಿಕೊಂಡು ಸಂಯಮದಿಂದಲೂ ಸೌಜನ್ಯದಿಂದಲೂ ನಡೆದ ಏಕೈಕ ರಾಜ್ಯವೆಂದರೆ ಅದು ಕನ್ನಡನೆಲ-ಕರ್ನಾಟಕ.

ಯಾವುದೇ ಕಾರ್ಯ ಯಶಸ್ವಿಯಾದಗಲೂ ಅದರ ಬಗ್ಗೆ ಹೇಳುವವರು ಕಮ್ಮಿ ಇರುತ್ತಾರೆ. ಅದೇ ಬೃಹತ್ ಕಾರ್ಯವೊಂದರಲ್ಲಿ ಕಿಂಚಿತ್ತು ಕೊರತೆ ಕಂಡರೂ ಎಲ್ಲರೂ ಆಡುವವರೇ. ಹಿಂದಿನ ನನ್ನ ಲೇಖನದಲ್ಲಿ ನಾನು ಕೆಲವು ನ್ಯೂನತೆಗಳನ್ನು ನೆನಪಿಸಿದ್ದೇನೆಯೇ ಹೊರತು ಅದರ ಬಗ್ಗೆ ವಿವಾದವನ್ನು ಹುಟ್ಟಿಸುವ ಮನಸ್ಸಿನಿಂದ ಎಂದೂ ಬರೆಯಲಿಲ್ಲ. ಪರಿಷತ್ತಿನ ಸಾಮನ್ಯ ಸದಸ್ಯರು ಬಯಸುವುದು ಕೊನೇಪಕ್ಷ ತಮಗೊಂದು ಮಾಹಿತಿ ಪತ್ರ ತಲ್ಪಲಿ ಎಂಬುದು. ಅದರ ಕುರಿತು ಸದಸ್ಯರೊಬ್ಬರು ದೂರವಾಣಿಯಲ್ಲಿ ಮಾತನಾಡಿ ತಮ್ಮ ಅನಿಸಿಕೆ ಹೇಳಿಕೊಂಡಿದ್ದರಿಂದ ಅದನ್ನೇ ಬರೆದಿದ್ದೇನೆ. ಆದರೆ ನನಗೆ ಸಭೆಯಲ್ಲಿ ಗೊತ್ತಾಗಿದ್ದು ನಿಜಕ್ಕೂ ಆಶ್ಚರ್ಯಕರ ವಿಷಯ. "೪೦ ವರ್ಷಗಳ ಹಿಂದಿನ ಪರಿಷತ್ತಿನ ಸದಸ್ಯರ ಸಂಖ್ಯೆ ಕೇವಲ ೫-೬೦೦೦ -ಈಗ ಅದು ಒಂದು ಲಕ್ಷದ ಹದಿನೇಳುಸಾವಿರ. ಆಗಿನ ಪರಿಷತ್ತಿನಲ್ಲಿ ಕೆಲಸಗಾರರ ಸಂಖ್ಯೆ ಇದ್ದದ್ದು ನೂರಾರು ಆದರೆ ಇಂದು ಬರೇ ಹದಿನೇಳು. ಇಂದಿನ ಇರುವ ಹದಿನೇಳು ಜನರಲ್ಲಿ ಯಾರು ವ್ಯವಸ್ಥಾಪಕರು ಯಾರು ಕಸಗುಡಿಸುವವರು ಯಾರು ಗುಮಾಸ್ತೆ ಇದ್ಯಾವುದೂ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಬದಲಿಗೆ ಎಲ್ಲರೂ ಎಲ್ಲಾ ಕೆಲಸವನ್ನೂ ಹಂಚಿಕೊಂಡು ಮಾಡುತ್ತಿರುವುದರಿಂದ ಯಾವ ಕೆಲಸವೂ ಸಮರ್ಪಕವಾಗಿ ನಡೆಯುತ್ತಿಲ್ಲ." --ಇದೆಲ್ಲಾ ಅಧ್ಯಕ್ಷ ಶ್ರೀ ನಲ್ಲೂರು ಪ್ರಸಾದ್ ಅವರೇ ಹೇಳಿದ್ದು. ಕೇವಲ ಹದಿನೇಳು ಜನರ ಕೇಂದ್ರ ಪರಿಷತ್ತು ೬ ಕೋಟಿ ಜನರ ಪ್ರತಿನಿಧಿಗಳಾಗಿ ಈ ಸಮಾರಂಭಕ್ಕೆ ತಯಾರಿ ನಡೆಸುವಾಗ ಸಹಜವಾಗಿ ಒತ್ತಡಗಳಲ್ಲಿ ಕೆಲವು ಚಿಕ್ಕಪುಟ್ಟ ನ್ಯೂನತೆಗಳು ಕಂಡರೂ ಇದು ನಿಜಕ್ಕೂ ಒಂದು ಸಾಧನೆಯೇ ಸರಿ.

ಯಾವುದೇ ಕಾರ್ಯವನ್ನು ಹೊರಗೆ ನಿಂತು ನೋಡುವುದು, ದೂಷಿಸುವುದು ತುಂಬಾ ಸುಲಭದ ಕೆಲಸ. ಅದೇ ಕಾರ್ಯಕರ್ತರ ಸ್ಥಾನದಲ್ಲಿ ನಿಂತು ನಿರ್ವಹಿಸಿದಾಗ ಮಾತ್ರ ಅದರ ಕಷ್ಟಕೋಟಲೆಗಳು ಅನುಭವ ವೇದ್ಯ. ಇಂತಹ ಅಕ್ಷರ ಸಮ್ಮೇಳನಕ್ಕೆ ಹೋಗುವಾಗ ಜ್ಞಾನದಾಹಿಗಳಾಗಿ ಹೋಗಬೇಕೇ ವಿನಃ ಹೊಟ್ಟೆತುಂಬಿಸಿಕೊಂಡು ಬರಲು ಬರಿದೇ ಏನಿದೆಯೆಂದು ವಿಹರಿಸಿ ಬರಲು ಇದು ಸಾದಾ ಸೀದಾ ಜಾತ್ರೆಯಲ್ಲ. ಕೆಲವರಂತೂ ಕೂಗಾಡಿದ್ದನ್ನು ಮಾಧ್ಯಮವಾಹಿನಿಗಳಲ್ಲಿ ಗಮನಿಸಿದಾಗ ಅನಿಸಿದ್ದು ಅಂಥವರು ಬರೇ ಊಟಕ್ಕಾಗೇ ಅಲ್ಲಿಗೆ ಬಂದಿದ್ದರೇ ಎಂಬುದು! ಕಂತ್ರಾಟುದಾರ ಯಾರೇ ಇರಲಿ ವ್ಯವಸ್ಥೆ ಯಾವುದೇ ಇರಲಿ ಲಕ್ಷ ಅಥವಾ ಅಧಿಕ ಜನರಿಗೆ ಏಕಕಾಲಕ್ಕೆ ಭೋಜನವ್ಯವಸ್ಥೆ ಏರ್ಪಾಟುಮಾಡುವುದು ಹುಡುಗಾಟಿಕೆಯ ಮಾತೇ ? ಹಣವನ್ನು ಕೋಟಿಯಲ್ಲಿ ಎಣಿಸುವುದಾದರೂ ಸುಲಭವಾಗಬಹುದು ಆದರೆ ಈ ಕೆಲಸ ಅಷ್ಟೇನೂ ಸುಲಭಸಾಧ್ಯವಲ್ಲ ಅನಿಸುತ್ತಿದೆ; ಆದರೂ ತಕ್ಕಮಟ್ಟಿಗೆ ಮಾಡಿದ್ದಾರೆ.

ಪ್ರತಿನಿಧಿಗಳಾಗಿ ಹಲವು ಪ್ರದೇಶಗಳಿಂದ ಬರುವ ಜನರೂ ಸಮ್ಮೇಳನದ ಗಾತ್ರ ಮತ್ತು ಗುರುತರ ಜವಬ್ದಾರಿಗಳನ್ನರಿತು ಅವರದೇ ಆದ ಪರ್ಯಾಯ ವ್ಯವಸ್ಥೆಯೊಂದನ್ನು ಇಟ್ಟುಕೊಂಡಿದ್ದರೇ ಉತ್ತಮ. ಕನ್ನಡ ನುಡಿತೇರಿನಲ್ಲಿ ಭಾಗವಹಿಸಿದ ’ಪ್ರತಿನಿಧಿಗಳಿಗಷ್ಟೇ ಭೋಜನ ವ್ಯವಸ್ಥೆ ಮಿಕ್ಕಿದವರಿಗೆ ಇಲ್ಲಾ’ ಎನ್ನುವ ಮನೋಭಾವ ಕನ್ನಡಿಗರದಲ್ಲ. ಕನ್ನಡಿಗರು ಎಷ್ಟೆಂದರೂ ಅತಿಥಿಸತ್ಕಾರಕ್ಕೆ ಆದ್ಯತೆ ಕೊಡುವವರು. ಹೀಗಿರುವಾಗ ಲಕ್ಷಾಂತರ ಜನರು ಊಟಮಾಡುವಾಗ ಕೆಲವು ಪ್ರತಿನಿಧಿಗಳಿಗೇ ಮಧ್ಯೆ ಆಹಾರ ಪೂರೈಕೆಯಾಗಲಿಲ್ಲ ಎಂಬುದನ್ನು ಅವರು ತೋಡಿಕೊಂಡಿರುವುದು ನಿಜಕ್ಕೂ ವಿಷಾದನೀಯ, ಮತ್ತು ನಗಣ್ಯ.

ಯಾವ ಮಹಾನಗರ ಕೇವಲ ಕನ್ನಡೆತರರ ಔದ್ಯೋಗಿಕ ಕೇಂದ್ರವಾಗಿ ಬೆಳೆದು ಜಾಗತಿಕ ಮಟ್ಟದಲ್ಲಿ ತಂತ್ರಾಂಶ ಮತ್ತು ಜೈವಿಕ ತಂತ್ರಜ್ಞಾನಕ್ಕಾಗಿ ಹೆಸರುಮಾಡಿದೆಯೋ, ಯಾವ ಇನ್ಫೋಸಿಸ್ ಎಂಬ ಕಂಪೆನಿ ತಾನು ಹುಟ್ಟಿದ ನೆಲದ ಮಹತ್ವಸಾರುವ ರಾಷ್ಟ್ರಗೀತೆಯನ್ನು ತನ್ನ ಕಟ್ಟಡದಲ್ಲಿ ತನ್ನ ಉದ್ಯೋಗಿಗಳು ಬೇಕಾಬಿಟ್ಟಿ ಹೀಯಾಳಿಸಿ ಅಣಕವಾಡಿದ್ದನ್ನು ಕ್ಷಮಿಸಿತೋ ಅದೇ ಮಹಾನಗರಿಯ ನೆಲದಲ್ಲಿ ಅತ್ಯಭೂತಪೂರ್ವವಾಗಿ ಈ ಸಮ್ಮೇಳನ ನಡೆಯಿತು ಎಂಬುದು ಅತ್ಯಂತ ಖುಷಿತಂದಿರುವ ಸಮಾಧಾನತಂದಿರುವ ವಿಷಯ. ಇದೇ ನೆಲದಲ್ಲಿ ಹುಟ್ಟಿಬೆಳೆದು ಜಗದ್ವ್ಯಾಪಿಯಾಗಿ ವಿಸ್ತರಿಸಿಕೊಂಡ ಅನೇಕ ಖಾಸಗೀ ಸಂಸ್ಥೆಗಳು ನಮ್ಮ ಕನ್ನಡಕ್ಕೆ ಕೊಟ್ಟಿರುವ ಕಾಣಿಕೆ ಮಾತ್ರ ಶೂನ್ಯ. ಈ ವಿಷಯದಲ್ಲಿ ತಂತ್ರಾಂಶದ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಕೂಡ ಅಕ್ಷಮ್ಯ ಅಪರಧವನ್ನೇ ಮಾಡಿದೆ ಎಂದರೆ ತಪ್ಪಲ್ಲ. ಕನ್ನಡ ಜನತೆ ಕೇವಲ ಇಂದಿನ ಇನ್ಫೋಸಿಸ್ ಮತ್ತಿತರ ಐಟಿ ಬಿಟಿ ಕಂಪನಿಗಳ ಭಿಕ್ಷೆಯಿಂದ ಬದುಕಿಲ್ಲ. ಕನ್ನಡ ಜನತೆ ಮೊದಲೂ ಬದುಕಿದ್ದರು ಈಗಲೂ ಬದುಕಿದ್ದಾರೆ. ಕನ್ನಡ ಜನತೆಯ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಬೆಳೆದ ಅಂತಹ ಸಂಸ್ಥೆಗಳು ಕನ್ನಡ ನೆಲಕ್ಕಾಗಿಯೇ ಮೀಸಲಾದ ಯವುದದರೂ ಘನಕಾರ್ಯ ಮಾಡಿದ್ದರೆ ಹೇಳಿ.

ತಮಗೆ ಅನುಕೂಲವಾಗುವ ಕಡೆ ಕ್ಯಾಂಪಸ್ ತೆರೆಯುವುದು. ಪರಿಣತರಲ್ಲಿ ಹೆಚ್ಚಿನ ಸಂಬಳಪಡೆಯುವವರನ್ನು ನಿಧಾನವಾಗಿ ಮನೆಗೆ ಕಳಿಸಿ ಹೊಸಬರನ್ನು ಆರಿಸಿಕೊಳ್ಳುವುದು ಅವುಗಳ ಆದ್ಯತೆ-ಅದು ಅವರವರ ಅನುಕೂಲ ಮಾಡಿಕೊಳ್ಳಲಿ ಬಿಡಿ. ಆದರೆ ನಾವು ತೆರಿಗೆ ಕಟ್ಟಿದ್ದೇವೆ ಎನ್ನುವ ಜನ ಯಾವಗಿನಿಂದ ಎಷ್ಟೆಷ್ಟು ಲಾಭ ಗಳಿಸಿದರು ಎಷ್ಟೆಷ್ಟು ತೆರಿಗೆ ಕೊಟ್ಟರು ಎಂಬುದು ಮುಖ್ಯ. ಅಷ್ಟಕ್ಕೂ ಮೂರ್ನಾಲ್ಕು ವರ್ಷಗಳ ಹಿಂದಿನವರೆಗೂ ತಂತ್ರಾಂಶ ತಯಾರಕರಿಗೆ ತೆರಿಗೆ ವಿನಾಯತಿ ಇತ್ತು. ಕರ್ನಾಟಕದ ಬಡ ಮೆಕಾನಿಕಲ್ ಅಥವಾ ಇನ್ನಿತರ ರಂಗಗಳ ಕಂಪನಿಗಳು ದೊಡ್ಡ ಲಾಭದ ಹಾದಿ ಬಹುದೂರವೇ ಇದ್ದರೂ ತೆರಿಗೆ ಪಾವತಿಸಿದವು. ಆದರೆ ಬಹುದೊಡ್ಡ ಲಾಭವನ್ನು ಹೇರಳವಾಗಿ ಎಣಿಸಿಕೊಂಡ ತಂತ್ರಾಂಶ ಕಂಪನಿಗಳು ತೆರಿಗೆಯಿಂದ ಮುಕ್ತಗೊಂಡವು! ಎಂತಹ ವಿಪರ್ಯಾಸ ಎನಿಸಿವುದಿಲ್ಲವೇ? ಈಗ ತರಾವರಿ ರಸ್ತೆಕೊಡಿ, ಮತ್ತೊಂದು ಕೊಡಿ ಇಲ್ಲದಿದ್ದರೆ ನಾವು ಪುಣೆಗೋ ಮತ್ತೆಲ್ಲಿಗೋ ಹೋಗಿಬಿಡುತ್ತೇವೆ ಎಂದು ಗಂಡ ವರದಕ್ಷಿಣೆಗಾಗಿ ಹೆಂಡತಿಯನ್ನು ಪೀಡಿಸುವಂತೇ ಪೀಡಿಸುವ ಇಂಥವರು ಇಲ್ಲಿದ್ದರೆಷ್ಟು ಅಲ್ಲಿಗೆ ಹೋದರೆಷ್ಟು. ಕನ್ನಡ ಜನತೆ ಇನ್ನಾದರೂ ಇಂತಹ ’ಬುದ್ಧಿಜೀವಿಗಳನ್ನು’ ಚಂದ್ರಲೋಕದಿಂದ ಕರೆತಂದು ಭೂಮಿಗೆ ಕರೆತಂದು ಸೂರ್ಯನ ಬಿಸಿಲು ತಾಗಿಸಬೇಕು. ಅಂದರೇನೇ ಅವರಿಗೆ ಕನ್ನಡದ ಅಭಿಮಾನ ಅನಿವಾರ್ಯವಾಗಿ ಬರುತ್ತದೆ. ಕನ್ನಡ ಜನತೆಯಲ್ಲಿ ಅರ್ಹತೆಯುಳ್ಳ ವ್ಯಕ್ತಿಗಳಿಲ್ಲವೇ? ಇಲ್ಲಿನವರಿಗೇ ಉದ್ಯೋಗದಲ್ಲಿ ಆದ್ಯತೆ ಸಿಗಲಿ, ಅದಿಲ್ಲಾ ಕಂಪನಿಗಳು ಜಾಗ ಖಾಲಿಮಾಡಲಿ.

ನಮ್ಮನ್ನಾಳುವ ದೊರೆಗಳಲ್ಲೂ ಒಂದು ನ್ಯೂನತೆಯಿದೆ. ಉಂಡು ಬೋರಲು ಬಿದ್ದು ನಿದ್ದೆಮಾಡುವಂತೇ ನಮ್ಮ ದೊರೆಗಳು ಒಂದಷ್ಟು ತಮ್ಮ ’ಹೊಟ್ಟೆ’ ತುಂಬಿದಮೇಲೆ ನಿದ್ದೆ ಮಾಡಿಬಿಡುತ್ತಾರೆ. ಎಲ್ಲಾದರೂ ಚುನಾವಣೆ ಅದೂ ಇದೂ ಸಮ್ಮೇಳನ ಬಂದರೆ ಅಲ್ಲಿಗೆ ಹೋಗಿ ವೇದಿಕೆಗೆ ತಕ್ಕ ಹಾಗೇ ಒಂದಷ್ಟು ವದರಿವಿಟ್ಟರೆ ಮುಗಿಯಿತು. ಇನ್ನೂ ಕೆಲವರು ಕುಡಿದ ಮತ್ತಿನಲ್ಲಿ ಕುಡುಕ ಹಳವಳಿಸಿದಂತೇ "ಕನ್ನಡ ನಮ್ ಭಾಷೆಯಾಬೇಕು ಕನ್ನಡ ನಮ್ ತಾಯಿ " ಎಂದೆಲ್ಲಾ ಹೇಳುತ್ತಿರುತ್ತಾರೆಯೇ ಶಿವಾಯಿ ಕನ್ನಡವನ್ನು ಅಧಿಕಾರಯುತವಾಗಿ ಅಳವಡಿಸಲು ಯಾವಯಾವ ಕೆಲಸಗಳು ಬೇಕೋ ಅದನ್ನು ಮಾಡಲು ಹೋಗುವುದಿಲ್ಲ. ಇದಕ್ಕೆ ಕಾರಣವೊಂದಿದೆ. ದೊರೆಗಳ ಜೊತೆಗಿರುವ ಅಧಿಕಾರಿಗಳಲ್ಲಿ ಅನೇಕರು ವಿವಿಧ ರಾಜ್ಯಗಳಿಂದ ಬಂದಿರುತ್ತಾರೆ. ಅವರುಗಳಿಗೆ ಕನ್ನಡ ಬರುವುದಿಲ್ಲ. ಇವರ ಹರುಮುರುಕು ಇಂಗ್ಲೀಷನ್ನು ಅವರುಗಳು ಡಾಕ್ಟರುಗಳ ಕೈಬರಹವನ್ನು ಔಷಧ ಅಂಗಡಿಯವರು ಅರ್ಥವಿಸುವಂತೇ ಅರ್ಥವಿಸುತ್ತಾರೆ. ಒಂದೊಮ್ಮೆ ಕನ್ನಡದಲ್ಲೇ ಎಲ್ಲವನ್ನೂ ಜಾರಿಗೊಳಿಸಿಬಿಟ್ಟರೆ ನಮ್ಮ ದೊರೆಗಳಿಗಳಲ್ಲಿ ಹಲವರಿಗೆ ಕನ್ನಡದ ಬಹುತೇಕ ಉಚ್ಛಶಬ್ದಗಾಳು ತಿಳಿದಿಲ್ಲ! ಅಧಿಕಾರಿಗಳಿಗೆಲ್ಲಾ ಕನ್ನಡ ಕಲಿಸುತ್ತಾ ಇವರೂ ಹೊಸದಾಗಿ ಕನ್ನಡ ಕಲಿಯಬೇಕಾದ ಪ್ರಮೇಯ ಬರುತ್ತದೆ. ಹೀಗಾಗಿ ’ಏನಾದರೂ ಮಾಡಿಕೊಂಡು ಹೋಗಲಿ’ ಎಂದು ಸುಮ್ಮನಾಗಿಬಿಡುತ್ತಾರೆ. ಇಲ್ಲೇ ಎಡವಟ್ಟಾಗುತ್ತಿದೆ.

ಆಳುವ ದೊರೆಗಳಿಗೆ ಹಿಂದೆಲ್ಲಾ ಅದಕ್ಕೆಂದೇ ವಿದ್ಯಾಭ್ಯಾಸವನ್ನು ಅವರ ಪೂರ್ವಜರು ಅತೀ ಕಾಳಜಿಯಿಂದ ಗುರುಕುಲದಲ್ಲಿ ನಡೆಸುತ್ತಿದ್ದರು. ಇಂದು ಗುರುಕುಲವೂ ಇಲ್ಲ; ಇದ್ದರೆ ಹೋಗುವವರೂ ಇಲ್ಲ. ಇಂದಿನ ನಮ್ಮ ದೊರೆಗಳಲ್ಲಿ ಬಹುತೇಕರು ಕ್ರಿಮಿನಲ್ ಮೊಕದ್ದಮೆಗಳ ಸರದಾರರಾಗಿರುತ್ತಾರೆ. ಯಾವ ಸ್ಥಾನದಲ್ಲಿ ಜಗಳ-ದೊಂಬಿ,ಕೈಕೈ ಮಿಲಾಯಿಸುವಿಕೆ ನಡೆಯಬಾರದೋ ಅಂತಹ ಜಾಗದಲ್ಲಿ ಪ್ರಜಾಪ್ರಭುತ್ವದ ’ಕುರುಡುಕಾಂಚಾಣದ ತಾಕತ್ತು’ ಎದ್ದು ಕುಣಿಯುತ್ತದೆ. ಇದನ್ನಿಲ್ಲಿ ಪ್ರಸ್ತಾಪಿಸಿದ್ದು ಏಕೆಂದರೆ ಅಕ್ಷರಕ್ಕೂ ಆಳುವಿಕೆಗೂ ಅನ್ಯೋನ್ಯ ಸಂಬಂಧವಿದೆ. ನಿಜವಾದ ’ಅಕ್ಷರಿಗಳು’ ಆಳುವ ದೊರೆಗಳಾದರೆ ಅಲ್ಲಿ ಈ ತೆರನಾದ ಹೊಡೆದಾಟ ಗುದ್ದಾಟ ಇರುತ್ತಿರಲಿಲ್ಲ. ಇವತ್ತಿನ ಈ ಎಲ್ಲಾ ಹೊಡೆದಾಟಗಳಿಗೂ ಜ್ಞಾನಿಗಳ ಮರ್ಗದರ್ಶನ ಪಡೆಯದಿರುವುದೇ ಕಾರಣವಾಗಿದೆ.ಜ್ಞಾನಿಗಳು ಬಂದರೆ ಅಲ್ಲಿ ಅವರು ಎಲ್ಲರಿಗೂ ನಿಜವಾಗಿ ಸಮಪಾಲು-ಸಹಬಾಳ್ವೆ ಬೋಧಿಸುತ್ತಾರೆ. ಆಗ ಕುದುರೆ ವ್ಯಾಪಾರಕ್ಕೋ ಸ್ವಿಸ್ ಬ್ಯಾಂಕಿನ ವ್ಯವಹರಕ್ಕೋ ಅವಕಾಶವಾಗುವುದಿಲ್ಲ. ಹೀಗಾಗಿ ಜ್ಞಾನಿಗಳನ್ನು ಕಡೆಗಣಿಸಿಬಿಟ್ಟರೆ ತಮ್ಮ ಬೇಳೆ ಬೇಯುತ್ತದಲ್ಲ ಎಂಬುದು ರಾಜಕಾರಣಿಗಳ ಹಂಬಲ! ಎಲ್ಲೋ ಕೆಲವರು ಉತ್ತಮ ರಾಜಕಾರಣಿಗಳೂ ಇರಬಹುದು. ಆದರೆ ಬಹುತೇಕರು ಹಣದ ಥೈಲಿಯನ್ನು ಹಿಡಿದೇ ಅದನ್ನು ವೃದ್ಧಿಮಾಡಲು ಬಯಸುವವರು. ಅವರಿಗೆ ಕನ್ನಡವೋ ಮರಾಠಿಯೋ ಥೈಲಿ ತುಂಬಿದ್ದೇ ಗೊತ್ತು!

ಇರಲಿ ಅಕ್ಷರ ಜಾತ್ರೆ ಸಮರ್ಪಕವಾಗಿ ಸಂಪನ್ನವಾಯಿತು. ೮ ಕೋಟಿ ಮೌಲ್ಯದ ಕನ್ನಡ ಪುಸ್ತಕಗಳು ಮಾರಲ್ಪಟ್ಟವು. ಬಂದ ಮೂರು ಲಕ್ಷಕ್ಕೂ ಅಧಿಕ ಮಂದಿ ಒಳ್ಳೆಯ ನೆನಪನ್ನು ಹೊತ್ತು ಮರಳಿದರು. ಕೋಟಿ ಕೋಟಿ ಕನ್ನಡಿಗರು ಮಾಧ್ಯಮಗಳಲ್ಲಿ ವೀಕ್ಷಿಸಿದರು. ಇಂತಹ ಹಬ್ಬ ಹಲವು ಹತ್ತು ನಡೆಯಲಿ. ಮುಂಬರುವ ವಿಶ್ವಕನ್ನಡ ಸಮ್ಮೇಳನಕ್ಕೂ ಶುಭವನ್ನು ಕೋರಿ ನಿಮ್ಮಿಂದ ಈಗೊಮ್ಮೆ ಬೀಳ್ಕೊಳ್ಳುತ್ತೇನೆ, ಹಾರ್ದಿಕ ಶುಭಕಾಮನೆಗಳು,

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗಲ್ಲಿಗಲ್ಲಿಗೆ.

Friday, February 4, 2011

ಸಾರ್ಥಕ ’ಜೀವಿ’ಯ ಬಗ್ಗೆರಡು ಮಾತು


ಸಾರ್ಥಕ ’ಜೀವಿ’ಯ ಬಗ್ಗೆರಡು ಮಾತು

ಕನ್ನಡ ನುಡಿತೇರನ್ನು ಈ ಸರ್ತಿ ಬೆಂಗಳೂರಿನಲ್ಲಿ ಎಳೆಯುತ್ತಿರುವುದು ತಮಗೆಲ್ಲಾ ಗೊತ್ತಿರುವ ವಿಷಯ. ಕನ್ನಡ ಸಾಹಿತ್ಯ ಪರಿಷತ್ತು ಮಾಡಿದ ಒಂದು ಉತ್ತಮ ಕೆಲಸವೆಂದರೆ ಸಮ್ಮೇಳನದ ಅಧ್ಯಕ್ಷತೆಗೆ ಪ್ರೊ.ಗಂಜಾಂ ವೆಂಕಟಸುಬ್ಬಯ್ಯನವರನ್ನು ಆಯ್ಕೆಮಾಡಿರುವುದು. ಅದು ಪರಿಷತ್ತಿಗೇ ಸಂದ ಗೌರವ. ವಯಸ್ಸಿನಲ್ಲಿ ಅತ್ಯಂತ ಹಿರಿಯರಾಗಿ, ಹಿಂದಿನ ಹಾಗೂ ಇಂದಿನ ಶತಮಾನಗಳ ಕೊಂಡಿಯಾಗಿ, ಕನ್ನಡಕ್ಕಾಗಿ ಹಲವು ಒಳ್ಳೆಯ ಪುಸ್ತಕಗಳನ್ನು ಬರೆದು ಇತ್ತೀಚೆಗೆ ಕನ್ನಡಕ್ಕೆ ನಿಘಂಟನ್ನೂ ಅರ್ಪಿಸಿದ ಮುತ್ಸದ್ಧಿಗೆ ಈ ಸ್ಥಾನ ಯಥಾಯೋಗ್ಯವೇ ಸರಿ.

ಉಳಿದರಂಗಗಳಂತೇ ಸಾಹಿತ್ಯರಂಗ ಕೂಡ ಇಂದು ರಾಜಕೀಯದಿಂದ ತುಂಬಿದೆ. ಪ್ರಶಸ್ತಿ ಪುರಸ್ಕಾರಗಳಿಗೂ ಮಸಲತ್ತುಗಳು ನಡೆಯುತ್ತವೆ ಎಂಬುದು ಪರದೆಯ ಹಿಂದೆ ನಡೆಯುತ್ತಿರುವ ಆದರೆ ಎಲ್ಲರಿಗೂ ತಿಳಿದೇ ಇರುವ ವಿಷಯ. ಸಮ್ಮೇಳನದ ಅಧ್ಯಕ್ಷಸ್ಥಾನಕ್ಕೂ ’ತನಗೆ ಕೊಡಲಿಲ್ಲ ತನಗೆ ಕೊಡಲಿಲ್ಲ’ ಎಂಬ ಹತಾಶ ಮನೋವೃತ್ತಿ ಕೆಲವರಲ್ಲಿ ಕಂಡುಬರುತ್ತಿದೆ. ಇದೇ ಕಾರಣವಾಗಿ ಕೆಲವರು ಸಮ್ಮೇಳನದ ಸಭೆಯಲ್ಲಿ ಭಾಗವಹಿಸಲೂ ಇಲ್ಲ ಎಂಬುದು ಗಮನಿಸಬೇಕಾದ ಅಂಶ. ಅಷ್ಟಾಗಿ ’ಕನ್ನಡ ಕನ್ನಡ’ ಎಂದು ಕುಣಿಯುವವರು ಕೇವಲ ತಮಗೆ ಸಿಗಬಹುದಾದ ಆದ್ಯತೆಯನ್ನು ಗಮನಿಸಿಕೊಂಡೇ ಆ ಕೆಲಸವನ್ನು ಮಾಡುವರೇ ಎಂಬುದು ನಮಗೆ ಗುಮಾನಿ! ಆದರೂ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆಮಾಡುವಾಗ ಕೊಡುಗೆ, ವಯಸ್ಸು ಈ ಎರಡೂ ಅಂಶಗಳನ್ನು ಆಧರಿಸಿ ಆಯ್ಕೆಮಾಡುವುದು ಸರ್ವೋತ್ತಮ. ಈ ಸಲವಂತೂ ಅದು ಸಮರ್ಪಕವಾಗಿ ನಡೆದಿದೆ ಎಂಬುದು ಯಾವುದೇ ಕನ್ನಡಿಗನಿಗೂ ಅನಿಸದೇ ಇರದು.

ವ್ಯಕ್ತಿಗಳನ್ನು ನೋಡುವಾಗ ನಮಗೆ ಸಹಜವಾಗಿ ಏನೆನ್ನಿಸುತ್ತದೆ ಎಂಬುದು ಮುಖ್ಯ. ಸರಳ ಜೀವನದ ವ್ಯಕ್ತಿಗಳು ನಿಗರ್ವಿಗಳಾಗಿ ಹಿರಿ-ಕಿರಿಯ ಭೇದಭಾವವಿಲ್ಲದೇ ಎಲ್ಲರೊಡನೆಯೂ ಒಡನಾಡುತ್ತಾ ತಾವು ಮಾಡಬೇಕಾದ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಯಾವುದೇ ಪ್ರಶಸ್ತಿಗಳಿಗಾಗಲೀ ರಾಜಕೀಯಕ್ಕಾಗಲೀ ಅವರು ತಲೆಹಾಕುವುದಿಲ್ಲ. ನಿಜವಾದ ಕವಿ-ಸಾಹಿತಿಗಳು ಮತ್ತು ಭಾಷಾ ಕೋವಿದರು ಪ್ರಶಸ್ತಿಗಳು ಬರಲಿ ಎಂದು ಬರೆಯುವುದಿಲ್ಲ. ಬರವಣಿಗೆ ಅವರ ಸಹಜ ಪ್ರವೃತ್ತಿ. ತಮ್ಮ ವೃತ್ತಿ ಜೀವನದ ಜೊತೆಜೊತೆಗೇ ಬರವಣಿಗೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು ಅದರಲ್ಲೇ ಸಂತಸವನ್ನು ಪಡೆಯುವ ಇಂತಹ ಸಾರಸ್ವತರು ದೃಷ್ಟಿಸಿ ನೋಡಿದರೆ ಋಷಿಸದೃಶರೇ ಆಗಿರುತ್ತಾರೆ. ದೈನಂದಿನ ತಮ್ಮ ಬದುಕಿನಲ್ಲಿ ಅಚ್ಚುಕಟ್ಟಾಗಿ ವೇಳೆಯನ್ನು ಸದುಪಯೋಗಪಡಿಸಿಕೊಳ್ಳುತ್ತಾ ಮುಂದಿನ ಜನಾಂಗಕ್ಕೆ ತಮ್ಮಿಂದ ನೀಡಬಹುದಾದ ನೀಡಲು ಸಾಧ್ಯವಾದ ಅನೇಕ ಕೃತಿಗಳನ್ನು ಹೊರತರುತ್ತಾರೆ.

ಪುಸ್ತಕ ವ್ಯಾಪಾರವೇ ಕವಿ-ಸಾಹಿತಿಗಳ ಉದ್ದೇಶವಲ್ಲ. ತಾವು ಬರೆದಿದ್ದು ನಾಲ್ಕು ಜನರಿಗೆ ಓದಲು ಸಿಕ್ಕು ಅದರಿಂದ ಓದುಗರ ಜ್ಞಾನವೃದ್ಧಿಯಾದರೆ ಆಗ ಓದುಗರಲ್ಲಿ ಉಂಟಾಗಬಹುದಾದ ಮನಸ್ಸಿನ ಪ್ರಪುಲ್ಲತೆಯೇ ಕೃತಿಕಾರರಿಗೆ ಸಿಗಬಹುದಾದ ನಿಜವಾದ ಪುರಸ್ಕಾರ. ಗಾದೆಯೊಂದು ಹೀಗಿದೆ--ಉಂಡವರು ಹರಸುವುದು ಬೇಡ ನೊಂದವರು ಬೈಯ್ಯುವುದು ಬೇಡ-- ಇದರ ಅರ್ಥ ತಿಳಿಯಿತಲ್ಲ? ಒಬ್ಬಾತನಿಗೆ ಹಸಿವಾಗಿದ್ದರೆ ಆತನ ಹೊಟ್ಟೆಯ ಹಸಿವಿಗೆ ಒಂದಷ್ಟು ಸುಕೃತ ಭೋಜನವನ್ನು ಉಣಬಡಿಸಿದಾಗ ಆತ ಉಂಡು ಹಸಿವು ನೀಗಿಸಿಕೊಂಡು ತೇಗುತ್ತಾನಲ್ಲಾ ಆಗಲೇ ಆತನಲ್ಲಿರುವ ಪರಮಾತ್ಮ ಅನ್ನಹಾಕಿದಾತನನ್ನು ತಂತಾನೇ ಉಂಡವನ ಮೂಲಕ ಹರಸಿಬಿಡುತ್ತಾನೆ. ಅದರಂತೆಯೇ ಯಾವನ ಮನಸ್ಸಿಗಾದರೂ ನಾವು ನೋವುಂಟುಮಾಡಿದಾಗ ಆತ ಹೊಸದಾಗಿ ಬೈಯ್ಯುವ ಅಗತ್ಯ ಬೀಳುವುದಿಲ್ಲ. ಅಲ್ಲಿ ಆತನ ಮನಸ್ಸು ನೋವುಂಟುಮಾಡಿದ ವ್ಯಕ್ತಿಗೆ ಹಿಡಿಶಾಪಹಾಕುತ್ತದೆ. ಹೀಗೇ ಮಾನಸಿಕ ಹಸಿವಿಗೆ ಉಣಬಡಿಸುವ ಕಾಯಕವನ್ನು ತನ್ನಿಂದಾಗಬಹುದಾದ ಎಲ್ಲರೀತಿಯ ಸಾಹಿತ್ಯಕ ಅಡುಗೆಗಳಿಂದ ಕೃತಿಗಳೆಂಬ ಎಡೆಸಿಂಗರಿಸಿ ಉಣಬಡಿಸುವಾತನೇ ಕವಿ-ಸಾಹಿತಿ-ಭಾಷಾ ಕೋವಿದ.

ಅಡುಗೆಯ ರುಚಿಯಲ್ಲಿ ವ್ಯತ್ಯಾಸವಿರುವಂತೇ, ಅಡುಗೆಯ ಉತ್ಫನ್ನಗಳಲ್ಲಿ ವೈವಿಧ್ಯವಿರುವಂತೇ ಬರಹಗಾರನ ಭಾಷಾಶೈಲಿಯಲ್ಲಿಯೂ ಭಿನ್ನತೆ ಇರುತ್ತದೆ. ಅದು ಕೆಲವೊಮ್ಮೆ ಯಾರದೋ ಬರಹವನ್ನು ಹೋಲಬಹುದೇ ವಿನಃ ಪ್ರತೀ ಬರಹಗಾರನ ಬರಹಗಳಲ್ಲೂ ಅವನದೇ/ಅವಳದೇ ಆದ ಸ್ಪಷ್ಟ ಛಾಯೆಯೊಂದು ಅಚ್ಚೊತ್ತಿರುತ್ತದೆ. ಕೆಲವರು ಕೆಟ್ಟರುಚಿಯ ಅಡುಗೆ ಮಾಡುವಂತೇ ಇಲ್ಲೂ ಕೆಲವರು ಕೆಟ್ಟ ಸಾಹಿತ್ಯವನ್ನು ಸೃಜಿಸಬಹುದು. ಆದರೆ ಉತ್ತಮ ಕವಿ-ಸಾಹಿತಿಯಿಂದ ಉತ್ತಮ ಕೃತಿಗಳೇ ಜನಿಸುತ್ತವೆ. ಇನ್ನೊಂದು ಗಾದೆ ತಮಗೆ ನೆನಪಾಗಬಹುದಲ್ಲ ’ ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಜನಿಸುತ್ತದೆ’ ಎಂಬುದು ಅಲ್ಲವೇ ? ಅದೇ ರೀತಿ ಸಿಂಹವೊಂದೇ ಪ್ರಾಣಿಯಲ್ಲ ನರಿ,ಕರಡಿ,ಹಂದಿಗಳೂ ಜೀವಿಸುವುದು ಸಹಜವಷ್ಟೇ ? ಇದೇ ತೆರನಾಗಿ ಸಾಹಿತ್ಯಕ ರಂಗದಲ್ಲೂ ಎಲ್ಲರೂ ಸಾರ್ಥಕ ಜೀವಿಯಾಗಲು ಸಾಧ್ಯವಾಗುವುದಿಲ್ಲ. ಬರೆದಿದ್ದೆಲ್ಲಾ ಸಾಹಿತ್ಯ ಎನಿಸಿಕೊಳ್ಳುವುದೂ ಇಲ್ಲ.

ಕೃತಿಗಳನ್ನು ರಚಿಸುವಾಗ ಕೃತಿಕಾರರಿಗೆ ಅದರ ಓದಿನ ಪರಿಣಾಮದ ಚಿಂತೆ ಇರಬೇಕು. ಉತ್ತಮ ಕವಿತ್ವವಿರುವ ವ್ಯಕ್ತಿ ಸಮಾಜದ ಉನ್ನತಿಯನ್ನು ಬಯಸಿ ಹಲವರು ಓದಿದಾಗ ಅವರ ಮನಸ್ಸಿನಮೇಲೆ ಉತ್ತಮ ಪರಿಣಾಮ ಬೀರುವ ಕೃತಿಗಳನ್ನೇ ರಚಿಸುತ್ತಾನೆ.[ ಇಲ್ಲಿ ಗದ್ಯ-ಪದ್ಯ ಯಾವುದನ್ನೇ ತೆಗೆದುಕೊಂಡರೂ ಗದ್ಯವೂ ಒಂದರ್ಥದಲ್ಲಿ ಪದ್ಯವೇ ಆಗುತ್ತದೆ.]ಕೇವಲ ತಾನು ಬರೆದಿದ್ದೇ ವೇದ, ಅದನ್ನು ಓದಿದದವರೇ ಪುಣ್ಯವಂತರು ಎಂಬ ಅನಿಸಿಕೆ ಅ ವ್ಯಕ್ತಿಯಲ್ಲಿರುವುದಿಲ್ಲ. ಬದಲಾಗಿ ತನ್ನ ಹುಟ್ಟು, ಶೈಶವ, ಯೌವ್ವನ, ವಾರ್ಧಕ್ಯ, ಮುಪ್ಪು ಗಳನ್ನು ಸಮಾಜದ ಎಲ್ಲಾ ವರ್ಗಗಳ ಜನರ ಬದುಕಿನೊಂದಿಗೆ ಅಳೆದುನೋಡಿ ಸಮಷ್ಟಿಯಿಂದ ಕೃತಿಗಳನ್ನು ರಚಿಸುತ್ತಾನೆ/ಳೆ. ಬರೆದ ಕೃತಿಗಳು ಬಡವರಿಗೂ ಬಲ್ಲಿದರಿಗೂ ಎಲ್ಲರಿಗೂ ಏಕಕಾಲಕ್ಕೆ ಸಮನ್ವಯವಾಗುತ್ತವೆ ಮತ್ತು ಓದುಗರು ಅವುಗಳಲ್ಲಿ ತಮ್ಮನ್ನೇ ಕಾಣತೊಡಗುತ್ತಾರೆ. ಹೇಗೆ ಒಂದು ಚಲಚಿತ್ರವನ್ನು ನೋಡುವಾಗ ಆ ಯಾ ಪಾತ್ರಗಳಲ್ಲಿ ನಾವು ತೊಡಗಿಕೊಳ್ಳುತ್ತೇವೋ ಹಾಗೆಯೇ ಕೃತಿಗಳ ಓದಿನಲ್ಲೂ ಅದೇ ರೀತಿಯ ತಾದಾತ್ಮ್ಯತೆ ಉಂಟಾಗುತ್ತದೆ.

ಸಮಾಜಕ್ಕೆ ಉತ್ತಮ ಕೃತಿಗಳನ್ನು ನೀಡಿದ ಕೃತಿಕಾರ ಮನಸಾ ಉತ್ತಮ ಮಟ್ಟವನ್ನು ಹೊಂದಿರುತ್ತಾನೆ. ಕರ್ತವ್ಯ ಪರಾಯಣನಾಗಿರುತ್ತಾನೆ. ತಾನು ತನದೆಂಬ ಚಿತ್ತ ವೃತ್ತಿಗಳನ್ನು ತೊರೆದು ಸಾಹಿತ್ಯದಲ್ಲೇ ಭಗವಂತನನ್ನು ಕಾಣುವ ಉಚ್ಚ ಮನೋಗತವನ್ನು ಹೊಂದಿರುತ್ತಾನೆ. ಕೃತಿಗಳಿಂದಲೇ ಸಮಾಜದ ದೂಷಿತ ಮುಖಗಳನ್ನು ತಿದ್ದುವ ಕೆಲಸವನ್ನಾತ ಮಾಡುತ್ತಾನೆ. ತನ್ನ ಆದರ್ಶ ಬದುಕಿನಿಂದ ಪರರಿಗೆ ಮಾರ್ಗದರ್ಶನ ಮಾಡುತ್ತಾನೆ. ಅಂತಹ ಕೃತಿಕಾರರನ್ನು ನಾವು ದೂರದಲ್ಲೋ ಹತ್ತಿರದಲ್ಲೋ ನೋಡಿದಾಗ ಅವರನ್ನು ಸಂಪರ್ಕಿಸುವ ತಹತಹ ಓದುಗರಲ್ಲಿ ಬೆಳೆಯುತ್ತದೆ. ಹಾಗಂತ ಕೃತಿಕಾರ ಸಂಪರ್ಕಿಸಿದರೆ ಏನನ್ನೋ ಕೊಡುತ್ತಾನೆ ಎಂಬ ಅನಿಸಿಕೆಯಲ್ಲ. ಉತ್ತಮ ಸಂಗೀತವನ್ನು ಕೇಳಿದಾಗ ನೃತ್ಯವನ್ನು ನೋಡಿದಾಗ ಚಿತ್ರರಚನೆಯನ್ನು ಕಂಡಾಗ ಕರತಾಡನದಿಂದ ಕಲಾವಿದರನ್ನು ಗೌರವಿಸುವಂತೇ ಉತ್ತಮ ಕೃತಿಗಳನ್ನು ಕೊಟ್ಟ ಸಾರ್ಥಕ ಜೀವಿಯನ್ನು ಒಮ್ಮೆ ಕಂಡು ಕೈಮುಗಿದು ನಿಮ್ಮ ಕೃತಿಗಳನ್ನು ಓದಿ ಆನಂದತುಂದಿಲನಾದೆ ಎಂದು ಹೇಳಬೇಕೆನಿಸುತ್ತದೆ. ಅಂತಹ ರಸಋಷಿಗಳಲ್ಲಿ ಇವತ್ತಿನ ನಮ್ಮ ’ಜೀವಿ’ ಕೂಡ ಒಬ್ಬರು.

ನಿನ್ನೆಯ ಅಧ್ಯಕ್ಷೀಯ ಭಾಷಣದಲ್ಲೇ ತಾವು ವೆಂಕಟಸುಬ್ಬಯ್ಯನವರ ಇಡೀ ಜೀವಿತದ ಬಗ್ಗೆ ತಿಳಿಯಬಹುದು. ಅವರ ಅನುಭವ ಅಗಾಧ. ಬೆಳಿಗ್ಗೆಯ ತಿಂಡಿಯ ನಂತರ ನಿನ್ನೆ ನಿರಂತರ ಸಾಯಂಕಾಲ ೪ ಗಂಟೆಯವರೆವಿಗೂ ಅವರಿಗೆ ಊಟಕ್ಕೆ ಸಹ ಬಿಡುವಾಗಲಿಲ್ಲ. ದಣಿವರಿಯದ ಕುದುರೆಯಂತೇ ಈ ವಯಸ್ಸಿನಲ್ಲೂ ನಿಂತು ಭಾಷಣ ಮಂಡಿಸಿರುವುದು ಮತ್ತು ಕನ್ನಡಕವನ್ನೂ ಉಪಯೋಗಿಸದೇ ಮರೆಯಬಾರದೆಂದು ಬರೆದುಕೊಂಡಿದ್ದನ್ನು ಓದಿದ್ದು, ಕನ್ನಡ ಭಾಷೆಯ ಇತಿಹಾಸ, ಇಂದಿನ ಸಾಮಾಜಿಕ, ರಾಜಕೀಯ ಪ್ರಕ್ಷುಬ್ಧ ಸನ್ನಿವೇಶಗಳು ಹೀಗೇ ಎಲ್ಲಾ ದೃಷ್ಟಿಕೋನಗಳಿಂದಲೂ ತಮ್ಮ ವಿದ್ವತ್ಪೂರ್ಣ ವಿಷಯವನ್ನು ಜನರ ಮುಂದಿಟ್ಟರು. ೯೮ ವರ್ಷಗಳಲ್ಲಿ ಪ್ರಾಯಶಃ ಒಂದೇ ಒಂದು ವರ್ಷವನ್ನೂ ನಿರರ್ಥಕವಾಗಿ ಕಳೆಯದ ಸಾಧಕರಾದ ಅವರಲ್ಲಿ ಇನ್ನೂ ಏನನ್ನೋ ಕೊಡಮಾಡುವ ತರುಣ ಮನೋಸ್ಥಿತಿಯಿದೆ. ಸಮಾಜಕ್ಕೆ ಇನ್ನೂ ಒಂದೆರಡು ಕೃತಿಗಳನ್ನು ಕೊಡಬೇಕೆಂಬ ಉತ್ಕಟೇಚ್ಛೆಯಿದೆ. ಈ ವಯಸ್ಸಿನ ಹಲವು ಮಹನೀಯರು ಕಾಲಗರ್ಭದಲ್ಲಿ ಲೀನವಾಗಿ ಅದೆಷ್ಟೋ ಕಾಲವಾಗಿರಬಹುದು, ಇವರಿಗಿಂತಾ ಎಳಬರು ವೃತ್ತಿಯಿಂದ ನಿವೃತ್ತರಾಗಿ ಟಿವಿ ಮುಂದೆ ಪ್ರತಿಷ್ಠಾಪಿತರಾಗಿರಬಹುದು, ಇನ್ನೂ ಕೆಲವರು ಕಾಯಿಲೆ-ಕಸಾಲೆಗಳಿಂದ ಬಳಲುತ್ತಾ ಇಂದೋ ನಾಳೆಯೋ ಎಣಿಸುತ್ತಾ ಅಂತೂ ಜೀವನ ಸಾಗಿಸುತ್ತಿರಬಹುದು. ಈ ಎಲ್ಲಾ ರೀತಿಯ ಜನಗಳ ನಡುವೆ ಕೇವಲ ಶರೀರಕ್ಕೆ ಮುಪ್ಪು ಎನ್ನುವ ಅನಿಸಿಕೆಯಿಂದ ಮನದಲ್ಲಿ ತಾರುಣ್ಯದ ಪ್ರಬುದ್ಧ ಸ್ಥಿತಿಯನ್ನು ಇಟ್ಟುಕೊಂಡು ಹಲವರಿಗೆ ಆದರ್ಶಪ್ರಾಯರಾಗಿ ಬದುಕುತ್ತಿರುವ ’ಜೀವಿ’ಯದು ಸಾರ್ಥಕ ತುಂಬು ಜೀವನ. ಅಜಾತಶತ್ರುವಾದ ಅವರ ಸಾಧನೆಗಳಿಗೆ ನಾವೆಲ್ಲಾ ಶರಣೆನ್ನೋಣ.

ಕೊನೆಯ ಒಂದು ಮಾತು : ಅಂದಹಾಗೇ ಕಳೆದವರ್ಷ ತೊಳೆದ ಹಳೆಯ ಜೀಪಿನಲ್ಲಿ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ನಡೆದಿತ್ತು. ಆ ವಿಷಯವಾಗಿ ವಿಡಂಬನಾ ಕಾವ್ಯವನ್ನೂ ಬರೆದಿದ್ದೆ. ಸುದೈವ ವಶಾತ್ ಇಂದು ಪರಿಷತ್ತು ಆ ರೀತಿ ಮಾಡಿಲ್ಲ. ಮೆರವಣಿಗೆಯೂ ಬಹು ಅಂದವಾಗಿ ನಡೆಯಿತು. ಅದು ಕನ್ನಡತಾಯಿಗೆ ಸಂದ ಗೌರವ. ದಕ್ಷ ಅಧ್ಯಕ್ಷರನ್ನು ಆಯ್ದಿದ್ದಕ್ಕಾಗಿ ಮತ್ತು ತಕ್ಕ ಮೆರವಣಿಗೆ, ವ್ಯವಸ್ಥೆ ಮಾಡಿದ್ದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದರ ಇಂದಿನ ಸೂತ್ರಧಾರ ಡಾನಲ್ಲೂರು ಪ್ರಸಾದ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ. ಮುಂಬರುವ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಮಟ್ಟದ ಸಾಹಿತ್ಯ ಪರಿಷತ್ತುಗಳಿಗೆ, ಸದಸ್ಯರಿಗೆ ಇಂತಹ ಸಮ್ಮೇಳನಗಳ ಆಮಂತ್ರಣಗಳನ್ನು ಮುಂಚಿತವಾಗಿ ತಲ್ಪಿಸುವ ಕೆಲಸದ ಜೊತೆಗೆ ಬಂದ ಸದಸ್ಯರಿಗೆ ಸರಿಯಾದ ವ್ಯವಸ್ಥೆಯಾಗುವಂತೇ ನೋಡಿಕೊಂಡರೆ ಉತ್ತಮ ಎನಿಸುತ್ತದೆ. ಏನಿದ್ದರೂ ಲಕ್ಷಾಂತರ ಜನ ಸೇರುವುದರಿಂದ ಸಾಹಿತ್ಯಾಸಕ್ತರಿಗಿಂತ ಹೆಚ್ಚಾಗಿ ತಿಂಡಿಪೋತಗಳೂ ಬಂದಿರಬಹುದು-- ಈ ಕಾರಣದಿಂದ ಒಂದು ನಿಗದಿತ ವ್ಯವಸ್ಥೆ ಎಲ್ಲದಕ್ಕೂ ಅನುಕೂಲ. ಸಮಾರಂಭಕ್ಕೆ ಸಣ್ಣ ವೆಚ್ಚದ ಟಿಕೆಟ್ ಇಟ್ಟರೂ ಪರವಾಗಿಲ್ಲ, ಆಗ ಬೇಡದ ಜನಗಳು ಬರುವ ಬೇಕಾದವರಿಗೆ ಜಾಗ ಸಿಗದೇ ಇರುವ ಸಮಸ್ಯೆಯ ನಿವಾರಣೆಯಾಗುತ್ತದೆ ಎಂಬುದು ನನ್ನ ಅನಿಸಿಕೆ.

ನುಡಿಹಬ್ಬದ ಈ ಶುಭ ಸಂದರ್ಭದಲ್ಲಿ ಕನ್ನಡತಾಯಿ ಭುವನೇಶ್ವರಿಯ ಕೃಪೆ ಎಲ್ಲರಿಗಿರಲಿ, ಎಲ್ಲರ ಬದುಕೂ ಜ್ಞಾನ-ಸಂಪತ್ತಿನಿಂದ ತುಂಬಲಿ ಎಂದು ಹಾರೈಸುತ್ತಿದ್ದೇನೆ, ನಮಸ್ಕಾರ.

Thursday, February 3, 2011

ಕನ್ನಡಾಂಬೆಯಲ್ಲಿ ಅಹವಾಲು


ಕನ್ನಡಾಂಬೆಯಲ್ಲಿ ಅಹವಾಲು

[ಆತ್ಮೀಯ ಕನ್ನಡಾಭಿಮಾನಿಗಳೇ, ಕನ್ನಡದ ಸಹೋದರ ಸಹೋದರಿಯರೇ ನಾಳೆಯಿಂದ ಮೂರುದಿನ ಬೆಂಗಳೂರಿನಲ್ಲಿ ನಡೆಯುವ ಕನ್ನಡ ನುಡಿಹಬ್ಬಕ್ಕೆ ತಮಗೆಲ್ಲರಿಗೂ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ. ]

ತೊದಲುಮಾತುಗಳಿಂದ ಪೂಜಿಸುವೆವು ನಿನ್ನ
ಕನ್ನಡ ಭುವನೇಶ್ವರಿಯೆ ಪ್ರೀತಿಯಿಂದ
ಹೃದಯ ದೇಗುಲದಲ್ಲಿ ಸಿಂಹಾಸನವನಿರಿಸಿ
ಅರ್ಚಿಸುವೆವೂ ದಿನವೂ ಅಭಿಮಾನದಿಂದ

ಮುಕ್ಕೋಟಿ ಆರಾಗಿ ಮಿಕ್ಕಿ ಬೆಳೆಯುತ್ತಿಹೆವು
ಅಕ್ಕರೆಯ ನುಡಿಗಳನು ಮರೆಯುವವರಲ್ಲ
ಸಿಕ್ಕಲ್ಲಿ ಅಲ್ಲಿಲ್ಲಿ ಕೆಲತಪ್ಪು ಕಾಣುತಿರೆ
ನಕ್ಕು ಕ್ಷಮಿಸಿಬಿಡಮ್ಮ ನೋವು ತರವಲ್ಲ

ಗಡಿಜಗಳ ಮತಜಗಳ ನದಿಯ ನೀರಿಗೆ ಜಗಳ
ಅಡಿಗಡಿಗೂ ನೂರೆಂಟು ತೀರದಾ ದಾಹ
ಉಡಿಯ ತುಂಬುವೆವಮ್ಮ ಅದನೇ ಪೇರಿಸುತಿಲ್ಲಿ
ಬಿಡಿಸಲಾರದ ಕೆಲವು ಕಗ್ಗಂಟ ಮೋಹ !

ಬರೆಯುವೆವು ಮೆರೆಯುವೆವು ಮರೆಯುವೆವು ನಮ್ಮತನ
ತೊರೆಯುವೆವು ಕನ್ನಡದ ಸೊಗಡ ಮಧ್ಯದಲಿ
ಬಿರಿಯುವವು ರಾತ್ರಿಯಲಿ ತರಹಾವರಿಯ ಕೂಟ
ಹರಿಯುವವು ಪಾನ ಬಹುವಿಧದ ಮದ್ಯದಲಿ !

ಕೆಲವು ಹೊಸ ಜಿಲ್ಲೆಗಳ ತಾಲೂಕುಗಳ ಸೃಜಿಸಿ
ಹಲವು ಜಾಗಗಳನ್ನು ರಸ್ತೆಗಳ ಮಾಡಿ
ನಲಿಯುತಿದ್ದಾ ಕಾಡು-ಪ್ರಾಣಿಗಳ ಲಕ್ಷಿಸದೆ
ಕಲಿವುದೊಂದೇ ಮಂತ್ರ ’ಗಳಿಸು ಗಣಿಮಾಡಿ’ !

ಇಂದು ನಿನ್ನೆಯದಲ್ಲ ಸಂಪತ್ತುಗಳ ಲೂಟಿ
ತಿಂದುಹಾಕಿದೆವೆಲ್ಲ ನಾಳೆಗಳ ಮರೆತು
ನಂದು ಹೋಗದಹಾಗೆ ಜೀವಸಂಕುಲ ಕೋಟಿ
ಬಂದು ವರುಷದಲೊಮ್ಮೆ ಹರಸಮ್ಮ ನಿಂತು

Tuesday, February 1, 2011

ತಲ್ಲಣ

[ಚಿತ್ರ ಕೇವಲ ಕಾಲ್ಪನಿಕ, ರೂಪದರ್ಶಿ: ಸೊನಾಲಿ ಬೇಂದ್ರೆ ]

ತಲ್ಲಣ

ಜಾಲಹಳ್ಳಿಯ ಅಯ್ಯಪ್ಪ ಬ್ಲಾಕಿನ ನಾಲ್ಕನೇ ಮುಖ್ಯರಸ್ತೆಯಲ್ಲಿರುವ ೨೮/೬೭ ನಂಬರಿನ ಮನೆಯ ಮುಂದೆ ಪೋಲೀಸ್ ಜೀಪು ಬಂದು ನಿಂತಿತ್ತು. ಗೌತಮ್‍ಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ಆತ ಅಲ್ಲಿರುವ ವಿಷಯವನ್ನು ಪೋಲೀಸರು ಪತ್ತೆ ಹಚ್ಚಿರುವುದು ಅವನಿಗೆ ಆಶ್ಚರ್ಯವಾಗಿತ್ತು. ಅದು ಆತನ ದೂರದ ಸಂಬಂಧಿಕರ ಮನೆ. ಅಲ್ಲಿರುವ ನೆಂಟ ಹಾಗೂ ಮಿತ್ರ ನವೀನ್‍ನಿಗೆ ಪತ್ರ ಬರೆದು "ವಾರದ ಮಟ್ಟಿಗೆ ಬೆಂಗಳೂರಿಗೆ ಬರಬೇಕೆಂದಿದ್ದೇನೆ ಅಲ್ಲೇ ಎಲ್ಲಾದರೂ ನೌಕರಿ ಹುಡುಕಿ ಆಮೇಲೆ ಬಾಡಿಗೆ ಮನೆ ಪಡೆದು ಇದ್ದು ಬಿಡುವ ತೀರ್ಮಾನಕ್ಕೆ ಬಂದಿದ್ದೇನೆ, ಎಲ್ಲಾದರೂ ಉಳಿಯಲು ತುರ್ತಾಗಿ ವ್ಯವಸ್ಥೆ ಮಡುತ್ತೀಯಾ " ಎಂದು ಕೇಳಿದ್ದ ಮಿಂಚಂಚೆಗೆ ನವೀನ್ ತಮ್ಮನೆಯಲ್ಲೇ ಇರಲು ಆಹ್ವಾನಿಸಿದ್ದ. ಹೇಗೂ ಗೊತ್ತಿರುವ ಹಳೆಯ ಸಂಬಂಧ. ಒಳ್ಳೆಯ ಹುಡುಗ ಗೌತಮ್. ಹೀಗಾಗಿ ಆತನಿಗೆ ಸಣ್ಣ ಸಹಾಯವಾದರೆ ಆಗಲಿ ಎಂಬ ಅನಿಸಿಕೆಯಿಂದ ನವೀನ್ ತಂದೆ-ತಾಯಿಗಳೂ ಒಪ್ಪಿ ಆಹ್ವಾನಿಸಿದ್ದರು.

ಯಾರದೇ ಜೊತೆಗೂ ಜಗಳವಾಡದ, ಎಲ್ಲರಿಗೂ ಬೇಕಾದ ಸ್ಥಳೀಯ ಜನಪ್ರಿಯ ಜನರಾಗಿದ್ದ ಅವರ ಮನೆಯ ಮುಂದೆ ಪೋಲೀಸ್ ಜೀಪು ಬಂದಿದ್ದು ನೋಡಿ ಆ ರಸ್ತೆಯಲ್ಲಿರುವ ಎಲ್ಲಾ ಮನೆಗಳ ಅನೇಕರು ಒಬ್ಬೊಬ್ಬರಾಗಿ ಬಂದು ಜಮಾಯಿಸತೊಡಗಿದರು. ಎಸ್.ಐ. ಕೂಗುತ್ತಿದ್ದ " ಏನ್ರೀ ಗೌತಮ್ ಎನ್ನುವ ವ್ಯಕ್ತಿಗೆ ನೀವು ಆಶ್ರಯ ಕೊಟ್ಟಿದ್ದೀರಾ ? "

ಮನೆಯ ಯಜಮಾನಿ ಮೆಲುದನಿಯಲ್ಲಿ ಹೇಳಿದರು " ಹೌದು ಸರ್, ಆತ ತುಂಬಾ ಒಳ್ಳೇ ಹುಡುಗ, ಏನಾಗ್ಬೇಕಾಗಿತ್ತು ಸರ್ ? "

" ಮೊದಲು ಆತನನ್ನು ಹೊರಗೆ ಕಳಿಸಿ ಆಮೇಲೆ ಮಾತಾಡೋಣ "

ಗೌತಮ್ ದಿಂಬಿನಲ್ಲಿ ಮುಖ ಹುದುಗಿಸಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಆತನನ್ನು ಕರೆಯಲು ಬಂದ ಆ ಮನೆಯ ಯಜಮಾನಿಗೆ ಆತ ಮುಖತೋರಿಸಲಾರ. " ಯಾಕಪ್ಪಾ ಗೌತಮ್ ಏನು ಮಾಡಿದ್ದೀಯಾಂತ ? ಪೋಲೀಸರು ನಿನ್ನನ್ನು ಕರೀತಾ ಇದ್ದಾರಲ್ಲ ಯಾಕೆ ? ಬಾ ಬಾ ಮಾತಾಡು....ತಪ್ಪಿಲ್ಲದಿದ್ದರೆ ನೀನ್ಯಾಕೆ ಹೆದರಬೇಕು ? "

ಗೌತಮ್ ಅಳುವುದನ್ನು ಇನ್ನೂ ಜಾಸ್ತಿಯಾಗಿಸಿದನೇ ಹೊರತು ಮುಖವನ್ನು ಎತ್ತಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅಷ್ಟೊತ್ತಿಗಾಗಲೇ ಪೇದೆಯೊಬ್ಬ ಬಂದು ಆತನನ್ನು ದರದರನೇ ಎಳೆಯತೊಡಗಿದ. ಬರುವುದಿಲ್ಲಾ ಎನ್ನಲಾಗಲೀ ಏನು ನಡೆಯಿತು ಎನ್ನುವುದನ್ನು ಆ ಮನೆಯ ಯಜಮಾನಿಗೆ ಹೇಳಲಾಗಲೀ ಸಮಯವನ್ನೇ ಕೊಡದೇ ಆತನನ್ನು ಜೀಪಿನಲ್ಲಿ ಒಳಗೆ ದಬ್ಬಿ ಕೂರಿಸಿ ಕೊಂಡು ಹೊರಟೇ ಹೋದರು.

******
ಜೈಲಿನ ಕೋಣೆಯಲ್ಲಿ ಕೂತಿದ್ದ ಗೌತಮ್‍ಗೆ ತಾನು ಮಾಡಿದ ಅಪರಾಧದ ಬಗ್ಗೆ ಬಹಳ ಬೇಸರವಾಗಿತ್ತು. ಅದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಹೌದು. ಹಾಗೊಮ್ಮೆ ತಾನು ವರ್ತಿಸದಿದ್ದಲ್ಲಿ ಎಲ್ಲರಂತೇ ಹೊರಗೆ ಆರಾಮಾಗಿ ತಿರುಗಿಕೊಂಡು ಬೇಕಾದ ಕೆಲಸ ಮಾಡಿಕೊಂಡು ಬದುಕಬಹುದಿತ್ತು. ಉದ್ಯೋಗವೇ ಇಲ್ಲದ ತಾನು ಒಳ್ಳೆಯ ಉದ್ಯೋಗಿಯಾದರೆ ಸಿನಿಮಾ ..ಸಿನಿಮಾ ತಾರೆಯಂತಹ ಹುಡುಗಿಯನ್ನು ವರಿಸಬಹುದಿತ್ತು. ಆದರೆ ಹಾಳಾದ ಪ್ರೀತಿ ಎಲ್ಲವನ್ನೂ ಅರೆಕ್ಷಣ ಮರೆಸಿಬಿಟ್ಟಿತ್ತು! ನಡೆಯಬಾರದ್ದು ನಡೆದೇ ಹೋಗಿತ್ತು.

ಉಪೇಂದ್ರನ ಕೆಲವು ಸಿನಿಮಾಗಳನ್ನು ಬಹಳವಾಗಿ ನೋಡಿದ್ದ ಗೌತಮ್‍ಗೆ ಫೇಸ್‍ಬುಕ್‍ನಲ್ಲಿ ಪರಿಚಯವಾದವಳೇ ಶಿಲ್ಪಾ. ಆಕೆ ಸತತವಾಗಿ ಫೇಸ್‍ಬುಕ್‍ನಲ್ಲೇ ಈಜಾಡುವವಳು. ಕಾಲೇಜು ಓದುತ್ತಿದ್ದರೂ ಸಮಯದ ಬಹುಪಾಲು ಸ್ನೇಹಿತರ ಬಳಗದಲ್ಲಿ ಮತ್ತು ಅಂತರ್ಜಾಲದಲ್ಲಿ ಕಳೆಯುತ್ತಿದ್ದಳು. ಸ್ಫುರದ್ರೂಪಿಯಾಗಿದ್ದ ಅವಳಿಗೆ ತನ್ನ ರೂಪದ ಬಗ್ಗೆ ಅಪಾರವಾದ ಹೆಮ್ಮೆಯಿತ್ತು. ಮಾಡ್ ಆಗಿರುವ ೨೦೦-೩೦೦ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಾಕಿದ್ದಳು. ಅವಳ ವಿವಿಧ ಭಂಗಿಗಳ ಫೋಟೊಗಳನ್ನು ನೋಡಿಯೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಗೌತಮ್. ಆಕೆ ಅನುಮತಿಸಿದಾಗ ದಿನವೂ ಅವನಿಗೆ ಆಕೆಯ ಫೋಟೊಗಳು ಕಾಮೆಂಟುಗಳು ಇವುಗಳನ್ನೆಲ್ಲಾ ನೋಡುವ ಹವ್ಯಾಸ ಬೆಳೆಯಿತು. ಒಂದೇ ಒಂದು ದಿನವೂ ಆತ ಫೇಸ್‍ಬುಕ್ ಬಿಟ್ಟಿರಲಾರ! ದಿನಗಳೆದಂತೇ ಆತ ನಿಜವಾಗಿಯೂ ಆಕೆಯನ್ನು ಅಪಾರವಾಗಿ ಹಚ್ಚಿಕೊಂಡಿದ್ದ. ಹೇಗೋ ಧೈರ್ಯಮಾಡಿ " ಐ ಲವ್ ಯೂ " ಎನ್ನುವ ಮನಸ್ಸು. ಆದರೆ ಆಗಬೇಕಲ್ಲ? ಆಕೆಯೂ ಅನೇಕರ ಕಾಮೆಂಟುಗಳಿಗೆ ಉತ್ತರಿಸಿದಂತೇ ಈತನ ಕಾಮೆಂಟಿಗೂ ಉತ್ತರಿಸುತ್ತಿದ್ದಳು. " ಯೂ ಆರ್ ಲುಕಿಂಗ್ ವೆರಿ ವೆರಿ ಸ್ವೀಟ್ " ಎಂಬ ಈತನ ಕಾಮೆಂಟಿಗೆ " ಸೋ ನೈಸ್ ಆಫ್ ಯೂ " ಅಂದಿದ್ದಳು. ಹುಡುಗಿಯರಿಗೆ ’ತುಂಬಾ ಚೆನ್ನಾಗಿದ್ದೀಯಾ’ ಎಂದುಬಿಟ್ಟರೆ ಮುಖ ಕತ್ತೆಯ ಥರವಿದ್ದರೂ ಮೂರಡಿ ಏರಿಬಿಡುತ್ತಾರಲ್ಲವೇ. ಇಲ್ಲಂತೂ ಆಕೆ ಸಹಜವಾಗಿಯೇ ಸುಂದರಿ; ಕೇಳಬೇಕೆ! ಚಾಟ್ ಆರಂಭವಾಯಿತು.

ಚಾಟ್ ಮಾಡುತ್ತಾ ಮಾಡುತ್ತಾ ಆಕೆ ಇರುವ ಏರಿಯಾ,ಮನೆ, ಕಾಲೇಜು ಆದಿಯಾಗಿ ಎಲ್ಲವನ್ನೂ ತಿಳಿದುಕೊಂಡ ಗೌತಮ್ ಆಕೆಗೆ ಪರ್ಸನಲ್ ಮಿಂಚಂಚೆ ಕಳಿಸತೊಡಗಿದ. ಆಕೆಯ ಮೊಬೈಲಿಗೆ ಎಸ್.ಎಮ್.ಎಸ್ ಕಳಿಸತೊಡಗಿದ. ಹೇಗಾದರೂ ಆಕೆ ತನ್ನವಳಾಗಿಬಿಟ್ಟರೆ ತನ್ನಂಥಾ ಅದೃಷ್ಟವಂತ ಯಾರು ಈ ಜಗತ್ತಿನಲ್ಲಿ ! ಆದರೂ "ಐ ಲವ್ ಯೂ " ಎಂದಿರಲಿಲ್ಲ, ಯಾಕೋ ಮನಸ್ಸು ಹೆದರುತ್ತಿತ್ತು. ಗೌತಮ್ ಕೂಡ ಸ್ಫುರದ್ರೂಪಿಯೇ. ಜೀನ್ಸ್ ಮತ್ತು ಟೀ ತೊಟ್ಟು ಅಪ್ಪ ಕೊಡಿಸಿದ್ದ ಬೈಕಿನಲ್ಲಿ ಕೂತುಬಿಟ್ಟರೆ ಎಲ್ಲಿಗೇ ಹೋದರೂ ಅಪ್ಪ ಅಷ್ಟಾಗಿ ಕೇಳುತ್ತಿರಲಿಲ್ಲ. ಕೊಡಗಿನಲ್ಲಿಯೇ ಶ್ರೀಮಂತರೆನಿಸಿದ್ದ ಕುಟುಂಬ ಅವರದ್ದು. ಬೈಕ್ ಬದಲಿಗೆ ಕಾರೂ ಕೊಡಿಸಬಹುದಿತ್ತು. ಆದರೂ ಅದ್ಯಾಕೋ ಅಪ್ಪ ಆತನಿಗೆ ಉದ್ಯೋಗ ಸಿಕ್ಕಮೇಲೆ ಆತನೇ ಖರೀದಿಸಲಿ ಎಂಬ ಅನಿಸಿಕೆಯಿಂದ ಬಿಟ್ಟಿರಬೇಕು. ಹಾಗಂತ ನೌಕರಿ ಮಾಡಬೇಕಾದ ಪರಿಸ್ಥಿತಿಯೇನೂ ಇರಲಿಲ್ಲ. ಆದರೂ ಕಾಫೀ ಪ್ಲಾಂಟೇಶನ್‍ನಲ್ಲಿ ಇತ್ತೀಚೆಗೆ ತೀರಾ ಲಾಭಬರುತ್ತಿಲ್ಲ ಮತ್ತು ಕಾರ್ಮಿಕರ ಅಭಾವ ಜಾಸ್ತಿಯೆಂಬ ಕಾರಣಕ್ಕೆ ಮಗ ಬರೇ ಕಾಫೀತೋಟವನ್ನೇ ನೆಚ್ಚಿಕೊಂಡು ಬದುಕುವುದು ಬೇಡವೆಂಬುದು ಅಪ್ಪ ಬೋಪಣ್ಣನವರ ಇರಾದೆ.

ಹುಡುಗು ಬುದ್ಧಿ ತುಡುಗು ಬುದ್ಧಿ ಅಂತಾರಲ್ಲ. ಬೇಲಿಹಾರುವ ವಯಸ್ಸಿನಲ್ಲಿ ಮನಸ್ಸು ನಿಗ್ರಹಕ್ಕೆ ಬರುವುದು ಕಷ್ಟವಾಗಿತ್ತು. ಅಲ್ಲಿಲ್ಲಿ ಒಂದಷ್ಟು ಗೆಳೆಯರೂ ಜೊತೆಯಾಗುತ್ತಿದ್ದರು. ಓದಿನಲ್ಲಿ ಅಷ್ಟಾಗಿ ಆಸಕ್ತಿಯೇ ಬರಲಿಲ್ಲ. ಪಾಸಾದರೂ ಆಯ್ತೂ ಬಿಟ್ಟರೊ ಆಯ್ತು. ಆದರೂ ಬೋಪಣ್ಣ ಮಗನನ್ನು ಕಾಲೇಜಿನಿಂದ ಬಿಡಿಸಿರಲಿಲ್ಲ. ಓದುವಷ್ಟು ಓದಲಿ ಆಮೇಲೆ ಜೀವನ ಅವರವರ ಹಣೆಬರಹ ಎಂಬ ತಿಳುವಳಿಕೆಯುಳ್ಳ ಜನ ಅವರು. ಆದರೂ ಪ್ರಾಯದ ಮಗನನ್ನು ನಿಗಾವಹಿಸಿ ನೋಡಿದ್ದರೆ ಸ್ವಲ್ಪವಾದರೂ ದಿಕ್ಕುತಪ್ಪದಂತೇ ಮಾಡಬಹುದಿತ್ತೇನೋ.

ಗೆಳೆಯರ ಸಂಗದಲ್ಲಿ ಅಲ್ಲಲ್ಲಿ ಇಸ್ಪೀಟು, ಕಂಪ್ಯೂಟರ್ ಗೇಮ್ಸ್ ಆಡುತ್ತಿದ್ದ ಗೌತಮ್‍ಗೆ ಬೇರೇನೂ ಚಟಗಳು ಅಂಟಿರಲಿಲ್ಲ. ಎಲ್ಲೋ ಒಂಚೂರು ಮದ್ಯ ತೆಗೆದುಕೊಳ್ಳುವುದು ಕೊಡವರಿಗೆ ಮಾಮೂಲು ಬಿಡಿ. ಆದರೆ ಅದನ್ನೇ ಬೆನ್ನುಹತ್ತಿದವನಲ್ಲ. ಎಲ್ಲರನ್ನೂ ಮೆಚ್ಚಿಸುವ ಗುಣ. ಯಾರು ಏನೇ ಕೇಳಿದರೂ ’ಇಲ್ಲಾ’ ಎನ್ನದ ಸ್ವಭಾವ. ಹೀಗಾಗಿ ಸ್ನೇಹಿತರೆಲ್ಲರಿಗೂ ಗೌತಮ್ ಎಂದರೆ ಅಚ್ಚುಮೆಚ್ಚು. ಅಂತರ್ಜಾಲ ವೀಕ್ಷಣೆಯನ್ನು ಅಭ್ಯಾಸಮಾಡಿಕೊಂಡ ಗೌತಮ್ ಅದಾಗಲೇ ಫೇಸ್‍ಬುಕ್‍ನಲ್ಲಿ ಖಾತೆ ತೆರೆದಿದ್ದ. ನೋಡುತ್ತಾ ನೋಡುತ್ತಾ ಆತನಿಗೆ ಹುಡುಗಿಯರ ಫೋಟೋಗಳು ಹಿಡಿಸತೊಡಗಿದವು. ಆಗ ಕಂಡವಳೇ ಚೆಲ್ಲು ಚೆಲ್ಲು ಶಿಲ್ಪಾ.

ಕಡೆದಿಟ್ಟ ಶಿಲ್ಪದಂತೇ ಮೈಮಾಟಹೊಂದಿರುವ ಶಿಲ್ಪಾಳ ವಿವಿಧ ಭಂಗಿಗಳ ಚಿತ್ರಗಳನ್ನು ನೋಡತೊಡಗಿದ ಗೌತಮ್‍ಗೆ ನಿತ್ಯವೂ ಗಣಕಯಂತ್ರದಿಂದ ಆಚೆಬಂದಮೇಲೆ ಏನನ್ನೋ ಕಳೆದುಕೊಂಡ ಅನುಭವ. ಆಕೆಯೊಂದಿಗೆ ಇಡೀದಿನ ಚಾಟ್ ಮಾಡುವಾ ಎಂಬ ಆಸೆ. ಆಕೆಯೂ ಮಡೀಕೇರಿಯವಳೇ ಎಂಬುದು ತಿಳಿದಾಗಲಂತೂ ಕುಣಿದಾಡಿಬಿಟ್ಟಿದ್ದ ಆತ. ತನ್ನ ಮನೆಗೂ ಅವಳ ಮನೆಗೂ ಕೇವಲ ಹನ್ನೆರಡು ಕಿಲೋಮೀಟರ್ ಅಂತರ, ಆದರೂ ಓ ದೇವರೇ ನಾವೆಷ್ಟು ದೂರ ದೂರ ಎಂದುಕೊಳ್ಳುತ್ತಿದ್ದ. ಆದಷ್ಟೂ ಶೀಘ್ರ ಆಕೆಯನ್ನು ಭೇಟಿಮಾಡಲೂ ಹಾತೊರೆಯುತ್ತಿದ್ದ. ಆಕೆಯೂ ಈತನ ಎಲ್ಲಾ ಲೀಲೆಗಳಿಗೂ ಸ್ಫಂದಿಸಿದರೂ ಇಬ್ಬರೂ " ಐ ಲವ್ ಯೂ " ಅನ್ನಲಿಲ್ಲ. ಆದರೂ ಇಬ್ಬರೂ ಸಾಕಷ್ಟು ಅನ್ಯೋನ್ಯ ಎಂಬಷ್ಟು ಹತ್ತಿರವಾಗಿದ್ದರು.

******
ಅವಳ ಕಾಲೇಜಿನ ಹೊರಗೆ ತಂದೆಯ ಕಾರಿನಲ್ಲಿ ಕುಳಿತಿದ್ದ ಗೌತಮ್ ಆಕೆ ಬರುವುದನ್ನೇ ಕಾಯುತ್ತಿದ್ದ. ಆತನೇ ಸ್ವತಃ ಡ್ರೈವ್ ಮಾಡಿಬಂದಿದ್ದ. ಜೊತೆಗೆ ಇನ್ಯಾರೂ ಇರಲಿಲ್ಲ. ಅದು ಉದ್ದೇಶಪೂರ್ವಕವೂ ಹೌದು. ತಾನು ಶಿಲ್ಪಾಳನ್ನು ಪ್ರೀತಿಸುತ್ತಿರುವುದು ಯಾರಿಗೂ ತಿಳಿಯದಿರಲಿ ಎಂಬುದೇ ಆತನಲ್ಲಿರುವ ಗುಟ್ಟು. ಹಾಗಂತ ಆತ ಯಾವುದೇ ಕ್ಷಣದಲ್ಲೂ ಆಕೆಯನ್ನು ಮದುವೆಯಾಗಲು ರೆಡಿ. ಆದರೆ ಮನೆಯಲ್ಲಾಗಲೀ ಗೆಳೆಯರಲ್ಲಾಗಲೀ ಈ ವಿಷಯದ ಬಗ್ಗೆ ಹೇಳಿದ್ದಿಲ್ಲ. ಯಾಕೋ ಹಿಂಜರಿಯುತ್ತಿದ್ದ. ಕಡಿ ನೀಲಿ ಬಣ್ಣದ ಮಾರುತಿ ಡಿಸೈರ್ ಕಾರಿನಲ್ಲಿ ಚಲನಚಿತ್ರದ ಹೀರೋ ಕುಳಿತಂತೇ ಪೋಸುಕೊಡುತ್ತಾ ಕುಳಿತಿದ್ದ ಆತನನ್ನು ಹಲವಾರು ಹುಡುಗಿಯರು ನೋಡಿಕೊಂಡು ಮುನ್ನಡೆದರು. ಶಿಲ್ಪಾ ತಡವಾಗಿ ಬಂದವಳು ಮೊದಲ ಭೇಟಿಯಲ್ಲೇ "ಹಾಯ್, ಯಾವುದೋ ಅರ್ಜೆಂಟ್ ಕೆಲಸವಿದೆ ನಾಳೆ ಸಿಗುತ್ತೇನೆ " ಎಂದವಳೇ ಮರುಮಾತಿಗೂ ಕಾಯದೇ ಹೊರಟೇ ಹೋದಳು. ಆಕೆಗೆ ಈ ಥರದ ಹಲವು ಹುಡುಗರು ಫೇಸ್‍ಬುಕ್ ಮೂಲಕ ಸ್ನೇಹಿತರಾಗಿದ್ದರು. ಕಾಲೇಜಿನಲ್ಲಿಯೂ ಬಹಳ ಹುಡುಗರು ಆಕೆಯ ಹಿಂದೆಯೇ ಸುತ್ತುತ್ತಿದ್ದರು. ಒಂದಿಬ್ಬರು ಹರೆಯದ ಗಂಡು ಉಪನ್ಯಾಸಕರೂ ಆಕೆಯನ್ನು ಯಾಕೋ ಏಕೋಭಾವದಿಂದ ದೃಷ್ಟಿಸುತ್ತಿದ್ದರು ! ಇದೆಲ್ಲಾ ಮಾಮೂಲಿಯಾಗಿಬಿಟ್ಟಿದ್ದರಿಂದ ಆಕೆ ಯಾವುದಕ್ಕೂ ಅಷ್ಟಾಗಿ ತಲೆಕೆಡಿಸಿಕೊಂಡವಳಲ್ಲ. ಆದರೂ ಅವಳು ನಗುನಗುತ್ತಾ ಸ್ವಲ್ಪ ಅತಿಯಾಗಿ ಸಂಭಾಷಿಸುವ ಪರಿಯನ್ನು ಆಕೆಯ ಅಭಿಮಾನೀ ಹುಡುಗರೆಲ್ಲಾ ಅಪಾರ್ಥಮಾಡಿಕೊಂಡಿದ್ದರು. ಗೌತಮ್ ಕೂಡ ಅವರಲ್ಲೊಬ್ಬ.

ವಿಧಿಯಿಲ್ಲದೇ ಮರಳಿದ ಗೌತಮ್‍ಗೆ ನಾಳೆ ಯಾವಾಗ ಬರುತ್ತದೆ ಎಂಬ ಕಾತರ. ಆಕೆಯೊಡನೆ ಗಂಟೆಗಟ್ಟಲೇ ಮಾತನಾಡುವ ಆತುರ. ಇಡೀ ದಿನವನ್ನು ಹೇಗುಹೇಗೋ ಕಳೆದ ಆತನಿಗೆ ತಂದೆ ವಹಿಸಿದ ಕೆಲವು ಕೆಲಸಗಳನ್ನೂ ಮನಸ್ಸಿಲ್ಲದ ಮನಸ್ಸಿನಿಂದ ಮಾಡಿಮುಗಿಸುವ ಪ್ರಮೇಯ ಬಂದಿತ್ತು. ಕ್ಷಣವೂ ದಿನಾವಾದಂತೇ ಯಾಕೋ ಬೇಸರ. ಮೈಮುರಿಯುತ್ತಾ ಆಕಳಿಸಿದ ಆತನಿಗೆ ಆ ರಾತ್ರಿ ನಿದ್ದೆಯೇ ಹತ್ತಲಿಲ್ಲ. ದಿಂಬು ಹಾಸಿಗೆ ಎಲ್ಲವನ್ನೂ ಶಿಲ್ಪಾ ಆವರಿಸಿಬಿಟ್ಟಿದ್ದಳು! ಎಲ್ಲಿ ನೋಡಿದರೂ ಅವಳೇ ಕಾಣಿಸುತ್ತಿದ್ದಳು. ಯಾವ ದಿಕ್ಕಿಗೇ ತಿರುಗಿಕೊಂಡರೂ ಅಲ್ಲಿ ಅವಳ ಚಿತ್ರ ಕಾಣುತ್ತಿತ್ತು. ಅಂತೂ ರಾತ್ರಿ ಕಳೆದು ಹಗಲಾಯಿತು. ಭಾರವಾದ ಕ್ಷಣಗಳು ಮತ್ತೆ ಬರಬರನೇ ಓಡತೊಡಗಿದವು. ಸ್ನಾನಮಾಡಿ ಅತಿ ವಿಶೇಷವಾದ ದಿರಿಸನ್ನು ಧರಿಸಿ, ಶಾಸ್ತ್ರಕ್ಕೆ ತಿಂಡಿ ತಿಂದು ಅಪ್ಪ-ಅಮ್ಮರಿಗೆ ಯಾವುದೋ ನೆಪಹೇಳಿ ಅಪ್ಪನ ಕಾರನ್ನು ಮತ್ತೆ ಕೇಳಿ ಪಡೆದು ಹೊರಟು ಶಿಲ್ಪಾಳ ಕಾಲೇಜಿಗೆ ಬಂದಿದ್ದ ಗೌತಮ್.

ಈ ದಿನ ಮಾತ್ರ ಆಕೆ ಗೌತಮ್‍ನನ್ನು ಬಹಳ ಆಪ್ತವಾಗಿ ಮಾತನಾಡಿಸುತ್ತಾ ಆತನೊಡನೆ ಆತ ಕರೆದಲ್ಲಿಗೆ ಹೊರಡಲು ಸಿದ್ಧವಾದಳು. ಈರ್ವರೂ ಮಡಿಕೇರಿಯ ಕಾವೇರಿ ಕಾಂಟಿನೆಂಟಲ್ ಹೋಟೆಲ್ ನಲ್ಲಿ ಕುಳಿತು ಗಂಟೆಗಟ್ಟಲೇ ಮಾತನಾಡುತ್ತಾ ತಿಂಡಿ, ಐಸಕ್ರೀಮ್ ಹೀಗೇ ಸಮಯಕಳೆದಿದ್ದೇ ಗೊತ್ತಾಗಲಿಲ್ಲ. ನಿಸರ್ಗನಿರ್ಮಿತ ಉದ್ಯಾನದಲ್ಲಿ ತುಸುಹೊತ್ತು ಕುಳಿತುಬರೋಣ ಎಂದ ಗೌತಮ್‍ನ ಮಾತಿಗೂ ಅಸ್ತು ಎಂದು ಆತನ ಜೊತೆ ಹೆಜ್ಜೆಹಾಕಿದ್ದಳು ಶಿಲ್ಪಾ. ಸ್ವರ್ಗವೇ ಧರೆಗಿಳಿದ ಖುಷಿಯಲ್ಲಿದ್ದರೂ ಗೌತಮ್‍ಗೆ ಆಕೆಯನ್ನು ಇನ್ನೂ ಹತ್ತಿರ ಹತ್ತಿರ ಸೆಳೆಯುವ ಆಸೆಯಾಗುತ್ತಿತ್ತು. ಹಾಗೂ ಹೀಗೂ ಕಷ್ಟಪತ್ತು " ಐ ಲವ್ ಯೂ " ಎನ್ನಬಯಸಿದ್ದ ಪ್ರಯತ್ನಗಳು ನಾಲಿಗೆಯ ತುದಿಯಲ್ಲೆಲ್ಲೋ ಅಂಟಿಕೊಂಡು ಹೊರಬರದಾಗುತ್ತಿದ್ದವು. ಆಕೆ ಮಾತ್ರ " ಐ ಲವ್ ಯೂ " ಅನ್ನುವ ಮನೋಭಾವದವಳಾಗಿರಲಿಲ್ಲ. ಯಾಕೆಂದರೆ ಆಕೆಗೆ ಅದೊಂದು ಸ್ನೇಹವಷ್ಟೇ! ಅಲ್ಲಿ ಸಿಗುವ ಖುಷಿಯನ್ನು ಪಡೆಯಲಷ್ಟೇ ಆಕೆ ಬಯಸುತ್ತಿದ್ದಳು.

ಅಗಾಗ ಭೇಟಿಯಾಗುತ್ತಿದ್ದ ಈರ್ವರೂ ವಾರಕ್ಕೊಮ್ಮೆ ಭೇಟಿಯಾಗಬಯಸಿದರು. ಕಾಲ ಸರ್ರೆಂದು ಕಳೆಯುತ್ತಿತ್ತು. ಒಂದಾನೊಂದು ದಿನ ಮಿಂಚಂಚೆಯಲ್ಲಿ ತನ್ನ ಇಂಗಿತವನ್ನು ಹೇಗೋ ಅಂತೂ ಪ್ರಯಾಸಪೂರ್ವಕ ನಿವೇದಿಸಿದ್ದ ಗೌತಮ್. ಅದಕ್ಕೆ ಆಕೆ ಉತ್ತರಿಸುವ ಬದಲು ಮೊಬೈಲ್ ನಲ್ಲಿ ನಕ್ಕಳು. ಆಕೆ ಒಪ್ಪಿದಾಳೆಂಬ ಸಂತೋಷದಲ್ಲಿ ಆಕಾಶ ಭೂಮಿಗೇ ಬಾಗಿನಿಂತಿತ್ತು. ಇನ್ನೇನು ಅದಕ್ಕೆ ಮೂರೇಗೇಣು! ಸಂತಸದ ಅಸದೃಶ ಚಳುಕೊಂದು ಬೆನ್ನ ಹುರಿಯಲ್ಲಿ ಹಾದುಹೋದ ಅನುಭವವಾಗಿತ್ತು ಗೌತಮ್‍ಗೆ.

******
ಮಡೀಕೇರಿಯ ಚಳಿಗಾಲ. ಕೇಳಬೇಕೇ ? ಸುತ್ತಲ ಪರಿಸರವೆಲ್ಲಾ ಹಸಿರು, ಮಂಜುಮುಸುಕಿದ ಮತ್ತು ಮೋಡಗಳ ವಾತಾವರಣ. ಚುಮುಚುಮು ಚಳಿಯಲ್ಲೇ ಆ ದಿನ ಶಿಲ್ಪಾಳನ್ನು ಮತ್ತೆ ಕಾಣುವ ಹಸಿದ ಕಣ್ಣುಗಳನ್ನು ಹೊತ್ತು ಬಹಳ ಬೇಗನೇ ಕಾಲೇಜಿನ ಹೊರಗೆ ಕಾಯುತ್ತಿದ್ದ ಗೌತಮ್. ಆಕೆ ಬರುತ್ತೇನೆ ಎಂದಿದ್ದ ಸಮಯ ಅದಾಗಲೇ ಕಳೆದು ಬಹಳ ಸಮಯವಾಗಿತ್ತು. ಮೊಬೈಲಿಗೆ ಕಾಲ್ ಮಾಡಿದ್ದರೆ ’ಯಾವುದೇ ಕರೆಯನ್ನು ಸ್ವೀಕರಿಸುತ್ತಿಲ್ಲ ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ’ ಎಂಬ ಉಲಿಕೆ. ಕಾದೂ ಕಾದೂ ಬಳಲಿದ ಆತ ಹೊರಟು ಹಿಂದೆ ತಾವಿಬ್ಬರೂ ಅನೇಕ ಸರ್ತಿ ಕುಳಿತು ತಿಂಡಿತಿಂದಿದ್ದ ಕಾವೇರಿ ಕಾಂಟಿನೆಂಟಲ್ ಹೋಟೆಲ್‍ಗೆ ಬಂದಿದ್ದ. ಹಸಿವೆಯ ಅರಿವು ಕಾಡುತ್ತಿತ್ತು. ಮನಸ್ಸು ಬೇಡವೆಂದರೂ ಹೊಟ್ಟೆ ಬಯಸುತ್ತಿತ್ತು. ತಿಂಡಿಗೆ ಆರ್ಡರ್ ಮಾಡಿದ. ಇನ್ನೇನು ತಿಂದು ಮುಗಿಸಿ ಹೊರಡುವಾಗ ಮಹಡಿಯ ’ಸ್ಪೆಶಲ್ ಸರ್ವಿಸ್ ಹಾಲ್’ ನಿಂದ ಶಿಲ್ಪಾ ಯಾವುದೋ ಯುವಕನೊಡನೆ ಕೆಳಗಿಳಿದು ಬರುತ್ತಿರುವುದು ಕಾಣಿಸಿತು !

ತನ್ನವಳೇ ಎನಿಸಿದ್ದ ಆ ಹುಡುಗಿ ಇನ್ನೊಬ್ಬನೊಟ್ಟಿಗೆ ಚೆಲ್ಲುಚೆಲ್ಲಾಗಿ ವರ್ತಿಸುತ್ತಿರುವುದನ್ನು ಕಂಡ ಗೌತಮ್‍ಗೆ ಭೂಮಿಯಲ್ಲಿಲ್ಲದಂಥಾ ಅಸಾಧ್ಯ ಕೋಪವುಕ್ಕಿಬಂತು. ಕೈ ಕೈ ಹಿಸುಕಿಕೊಂಡನಾದರೂ ಅದನ್ನು ವ್ಯಕ್ತ ಪಡಿಸಲು ಆಗುವುದೇ? ಬೆಳಗಿನಿಂದ ಅಷ್ಟುಹೊತ್ತು ತಾನು ಕಾದಿದ್ದೇ ಬಂತು. ಈ ಹುಡುಗಿ ಇಲ್ಲಿ ನೋಡಿದರೆ ಹಾಯಾಗಿ ಬೇರೊಬ್ಬನೊಡನೆ ಸುತ್ತುತ್ತಾ ಎಂಜಾಯ್ ಮಾಡುತ್ತಿರುವುದನ್ನು ಆತ ಸಹಿಸದಾದ. ವೇಟರ್ ಕರೆದು ಬಿಲ್ಲು ತೆತ್ತು ಹೊರಟುನಿಂತ ಆತ ಶಿಲ್ಪಾ ಇನ್ನೊಬ್ಬನೊಡನೆ ಹತ್ತಿರಬಂದು ನಕ್ಕಾಗ ನಗಲಾರದೇ ನಕ್ಕ. " ಯೂ ನೋ ಹೀ ಈಸ್ ತರುಣ್. ಮೈ ಬೆಸ್ಟ್ ಫ್ರೆಂಡ್ " ಎಂದಾಗ ಯಾಂತ್ರಿಕವಾಗಿ ಆ ಹುಡುಗನ ಕೈಕುಲುಕಿದ. ಆಕೆ ಆತನಿಗೂ ಗೌತಮ್‍ನ ಪರಿಚಯ ಹೇಳಿ " ಮೈ ಫೇಸ್‍ಬುಕ್ ಫ್ರೆಂಡ್" ಎಂದಳು. ಭೂಮಿಗೆ ಬಾಗಿದ್ದ ಆಗಸ ಬರ್ರನೆ ನಿಲುಕದ ಎತ್ತರಕ್ಕೆ ಏರಿಹೋಗಿತ್ತು. ಯಾಕೋ ತನ್ನ ಮನಸ್ಸು ಶಿಲ್ಪಾಳನ್ನು ದ್ವೇಷಿಸುವ ಹಾಗಾಗಿತ್ತು. ಆ ದಿನ ನೋವಿನಲ್ಲೇ ಆ ಜಗದಿಂದ ’ಬೈ ಬೈ’ ಹೇಳಿದ ಗೌತಮ್.

ಮನೆಗೆ ಬಂದವನಿಗೆ ಊಟ ತಿಂಡಿ ಎಲ್ಲಕ್ಕಿಂತಾ ಹೆಚ್ಚಾಗಿ ವಿಶ್ರಾಂತಿಯ ಅವಶ್ಯಕತೆಯಿತ್ತು. ಮಲಗಿದರೂ ನಿದ್ದೆಯೇನೂ ಬರದು...ಆದರೂ ಮಲಗಬೇಕು ಎನಿಸುತ್ತಿತ್ತು. ಶಿಲ್ಪಾ ಯಾಕೋ ದೂರವಾಗುತ್ತಿದ್ದಾಳೆನೋ ಅನಿಸುತ್ತಿತ್ತು. ಅಂತರ್ಜಾಲ ತೆರೆದು ಗುಪ್ತವಾಗಿ ಮೆಸ್ಸೇಜ್ ಕಳಿಸಿದ್ದೂ ಆಯಿತು. ಸಾಕಷ್ಟು ಎಸ್.ಎಮ್.ಎಸ್ ಗಳೂ ಸಂದವು. ಆದರೆ ಅದಕ್ಕೆಲ್ಲಾ ಅವಳ ಉತ್ತರ " ಹಾಗೇನೂ ಇಲ್ಲ " ಎಂಬುದಾಗಿತ್ತು. ಆಕೆಯನ್ನು ಹೇಗೆ ಅರ್ಥಮಾಡಿಕೊಳ್ಳಲಿ ಎಂಬುದೇ ತೋಚದ ಮನ ಹುಚ್ಚುಹುಚ್ಚಾಗಿ ವಿಚಿತ್ರಗಳನ್ನು ಚಿಂತಿಸುತ್ತಿತ್ತು. ಮನದಲ್ಲಿ ನಡೆದ ಈ ಹೊಯ್ದಾಟಗಳನ್ನು ಹೇಳಿಕೊಳ್ಳಲು ಮನೆಯಲ್ಲಿ ಸಾಧ್ಯವಿರಲಿಲ್ಲ, ಗೆಳೆಯರು ನಕ್ಕಾರು ಎಂದೆನಿಸುತ್ತಿತ್ತು. ತಾನೇ ತಾನಾಗಿ ತುಮುಲಗಳು ಬಗೆಹರಿಯಲು ಸಮಯ ಜಾಸ್ತಿ ಬೇಕಲ್ಲವೇ? ಅದಕ್ಕಾಗಿ ಆತ ಮಲಗಿ ಮಲಗಿ ಸೋತ. ಅಪ್ಪ-ಅಮ್ಮ "ಯಾಕೇ ಒಂಥರಾ ಇದೀಯಾ ? " ಎಂದರೆ " ಯಾಕೂ ಇಲ್ಲ ಯಾವುದೋ ಆಟದಲ್ಲಿ ಸೋತುಬಿಟ್ಟೆ ಅದಕೇ ಬೇಜಾರಾಗಿದೆ " ಎಂದಿದ್ದ.

******
ದಿನಗಳು ಕಳೆದರೂ ಆ ಕಹಿ ನೆನಪು ಮಾತ್ರ ಮನದ ಮೂಲೆಯಲ್ಲಿ ಶಾಶ್ವತವಾಗಿ ಬೇರುಬಿಟ್ಟಿತ್ತು. ಶಿಲ್ಪಾ ತನ್ನವಳೇ ಆಗಬಲ್ಲಳೇ ಎಂಬ ಅಳಿದುಳಿದ ಆಸೆ ಇನ್ನೂ ಬತ್ತಿರಲಿಲ್ಲ. ಶಿಲ್ಪಾಗೆ ಸಾಕಷ್ಟು ತಿಳಿಹೇಳಿದರೂ ಅವಳ ಜಾಯಮಾನದಲ್ಲಿ ಬದಲಾವಣೆಯಿರಲೇ ಇಲ್ಲ. "ನಾವಿಬ್ಬರೂ ಮದುವೆಯಾಗೋಣವೇ ? " ಎಂಬ ಪ್ರಶ್ನೆಗೆ "ನನಗೆ ಮದುವೆ ಈಗಲೇ ಇಷ್ಟವಿಲ್ಲ " ಎನ್ನುತ್ತಿದ್ದಳು. ಕೇಳಿ ಕೇಳಿ ಸೋತ ಗೌತಮ್‍ಗೆ ಆಕೆಯನ್ನು ತಾನು ಪಡೆಯಲೇ ಬೇಕೆಂಬ ಬಯಕೆ ತೀರಾ ಅತಿಯಾಗತೊಡಗಿತು. ಒಂದಿನ ಊರ ಹೊರಗಲ್ಲೆಲ್ಲೋ ಹೋಗಿಬರೋಣವೆಂದಿದ್ದಕ್ಕೆ ಶಿಲ್ಪಾ ಸಮ್ಮತಿಸಿದಳು. ಹಾಗೆ ಇಬ್ಬರೂ ಹೋದಾಗ ಸ್ವಲ್ಪ ಸಮಯದ ನಂತರ ತಾನು ಬಲವಂತವಾಗಿ ಆಕೆಯನ್ನು ಮದುವೆಗೆ ಒಪ್ಪಿಸುವ ಪ್ರಯತ್ನ ಮಾಡಿದ್ದ. ಏನೇ ಮಾಡಿದರೂ ಆಕೆ ಒಪ್ಪಲಿಲ್ಲ ಮಾತ್ರವಲ್ಲ " ನಾವಿಬ್ಬರೂ ಸ್ನೇಹಿತರಾಗೇ ಇರೋಣ, ನಮ್ಮ ನಡುವೆ ಮದುವೆಯ ಬಂಧನ ಬೇಡ" ಎಂದುಬಿಟ್ಟಳು.

ಅಕೆಗಾಗಿ ಹಲವಾರು ದಿನಗಳಿಂದ ಆಸೆಹೊತ್ತ ಚಿಗುರು ಮೀಸೆಯ ಪೋರ ಕುಸಿದು ಕುಳಿತಿದ್ದ. ಇನ್ನು ಉಳಿದಿದ್ದು ಆತನಿಗೆ ಉಪೇಂದ್ರ ಹೇಳಿದ್ದ ಕೊನೇ ಅಸ್ತ್ರ. ತನಗೆ ಧಕ್ಕದ ಆಗದ ಇನ್ಯಾರಿಗೂ ಧಕ್ಕದೇ ಹೋಗಲಿ ಎಂಬ ನಿರ್ಧಾರ! ಹಾಗೆ ನಿರ್ಧರಿಸಿದವನೇ ಆಕೆಯನ್ನು ಮತ್ತೊಂದು ದಿನ ಊರ ಹೊರಗಿನ ನಿಸರ್ಗೋದ್ಯಾನಕ್ಕೆ ಕರೆದ. ಆಕೆ ಒಮ್ಮೆ ಹೀಗೆ ಯೋಚಿಸಿದರೂ ಸ್ನೇಹಿತನೆಂಬ ಭಾವನೆಯಿಂದ ಬಂದುಬಿಟ್ಟಳು. ನಿಸರ್ಗೋದ್ಯಾನದಲ್ಲಿ ನಡೆಯುತ್ತಾ ಇರುವಾಗ ಆತ ತನ್ನ ಜೇಬಿನಿಂದ ಯಾವುದೋ ದ್ರವವೊಂದನ್ನು ಆಕೆಯ ಮುಖಕ್ಕೆ ಎರಚಿಬಿಟ್ಟ. ಆಕೆ ಉರಿಯಿಂದ ಚೀರುತ್ತಿರುವಾಗಲೇ ತನ್ನ ಕಾರನ್ನು ಹತ್ತಿ ಪಾರಾರಿಯಾಗಿ ಹೋದ.

******
ಸಾವು ಬದುಕಿನ ತೂಗುಯ್ಯಾಲೆಯಲ್ಲಿ ಹಲವು ದಿನ ಕಳೆದ ಶಿಲ್ಪಾ ಅಂತೂ ಬದುಕಿ ಬಂದಿದ್ದಳು. ಘಟನೆ ನಡೆದಿದ್ದ ದಿನ ಆಸ್ಪತ್ರೆಯಲ್ಲಿ ಆಕೆ ಕೊಟ್ಟಿದ್ದ ಮಾಹಿತಿಯ ಪ್ರಕಾರ ಆಕೆಯ ಪಾಲಕರು ಆರಕ್ಷಕರಲ್ಲಿ ಅರ್ಜಿ ನೀಡಿದ್ದರು. ಅರ್ಜಿಯನ್ನು ಪಡೆದ ಆರಕ್ಷಕರು ಗೌತಮ್‍ನ ಹುಡುಕಾಟಕ್ಕೆ ತೊಡಗಿದ್ದರು. ಆತನ ಮನೆಗೆ ಬಂದಿಳಿದ ಪೋಲೀಸರನ್ನು ಕಂಡು ಆತನ ತಂದೆ ತಾಯಿಗಳು ಹೌಹಾರಿ ನಿಂತರು. ಅವರಿಗೆ ಯಾವೊಂದೂ ವಿಷಯಗಳು ತಿಳಿದಿರಲಿಲ್ಲ. ಪೋಲೀಸರು ಮಾತ್ರ ಅವರನ್ನು ಠಾಣೆಗೆ ಎಳೆದೊಯ್ದು ವಿಚಾರಿಸಿದ್ದರು. ಬೆಳಿಗ್ಗೆಯೇ ಹೊರಟು ಹೋದ ಆತ ಕಾರನ್ನು ಮಾತ್ರ ಮನೆಯಂಗಳದಲ್ಲಿ ತಂದು ನಿಲ್ಲಿಸಿದ್ದು ಕಾಣಿಸಿತ್ತು. ಆದರೆ ಮನೆಯೊಳಗೆ ಆತ ಬಂದಿರಲಿಲ್ಲ. ಇನ್ನೇನು ಸಂಜೆಯೊಳಗೆ ಎಲ್ಲಿದ್ದರೂ ಬರುತ್ತಾನೆ ಎಂದೇ ತಂದೆ-ತಾಯಿ ತಿಳಿದಿದ್ದರೂ ಆತ ಬರದಿದ್ದಾಗ ಆತನ ಹುಡುಕುವಿಕೆಗೇ ಪೋಲೀಸರಲ್ಲಿ ವಿನಂತಿಸುವ ವಿಚಾರ ಅವರದಾಗಿತ್ತು. ಅವರ ವಿಚಾರಣೆ ಮುಗಿಸಿದ ಪೋಲೀಸರು ಘಟನೆಯ ಬಗ್ಗೆ ತಿಳಿಸಿ ಅವರ ಮಗನ ಎಲ್ಲಾ ಸಂಪರ್ಕಗಳ ಜಾಡನ್ನು ತಿಳಿಸುವಂತೇ ತಾಕೀತು ಮಾಡಿದರು. ತಂದೆ-ತಾಯಿಗಳು ವಿಧಿಯಿಲ್ಲದೇ ತಿಳಿದಷ್ಟನ್ನೂ ಹೇಳಿದರು. ಆದರೆ ಅವರು ಹೇಳಿದ ಪಟ್ಟಿಯಲ್ಲಿ ಬೆಂಗಳೂರಿನ ಜಾಲಹಳ್ಳಿಯ ದೂರದ ಸಂಬಂಧಿಕರ ಹೆಸರು ಇರಲಿಲ್ಲ!

ಘಟನೆಯ ಪೂರ್ವಭಾವಿಯಾಗಿ ಬೆಂಗಳೂರಿಗೆ ಹೊರಡುವ ತಯಾರಿನಡೆಸಿದ್ದ ಗೌತಮ್ ಬಂಧು-ಸ್ನೇಹಿತ ನವೀನ್ ಸಂಪರ್ಕ ಸಾಧಿಸಿದ್ದ. ಮತ್ತು ಸೀದಾ ಹೊರಟು ಅವರ ಮನೆಗೆ ಬಂದಿಳಿದಿದ್ದ. ಸುಮಾರಿಗೆ ಪೋಲೀಸರು ತನ್ನನ್ನು ಹುಡುಕಲು ಸಾಧ್ಯವಿಲ್ಲ, ಆದಷ್ಟು ದಿನ ಹೀಗೇ ತಳ್ಳಿ ಬೇರೆಲ್ಲಿಗಾದರೂ ಹೋಗಿಬಿಡೋಣವೆಂಬ ಮನಸ್ಸು ಆತನದ್ದಿತ್ತು.

ಮಡಿಕೇರಿಯ ಪೋಲೀಸರು ಸಾಕಷ್ಟು ಪರಿಶ್ರಮ ವಹಿಸಿದರು. ಗೌತಮ್‍ನ ಮೊಬೈಲ್ ಕರೆಗಳ ವಿವರಗಳನು ಪಡೆದು ಆತನ ಅಡಗುದಾಣವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದರು. ಅದರಲ್ಲಿ ಅವರು ಇಂದು ಯಶಸ್ಸು ಕಂಡಿದ್ದರು. ಪ್ರೀತಿಯೇ ದ್ವೇಷವಾಗಿ ಹೊಮ್ಮಿ ಪ್ರೇಯಸಿಯ ಜೀವಕ್ಕೇ ಅಪಾಯವೊಡ್ಡಿದ್ದ ಗೌತಮ್ ತನ್ನ ಒಳ್ಳೆಯತನವನ್ನು ಕಳೆದುಕೊಂಡುಬಿಟ್ಟಿದ್ದ. ಕಂಡವರೆಲ್ಲಾ ಛೀಮಾರಿ ಹಾಕುವಾಗ ಸಹಿಸಲಾಗದಷ್ಟು ನೋವಾಗುತ್ತಿತ್ತು. ಯಾಕಾದರೂ ಹೀಗೆ ಮಾಡಿದೆ ಎಂದು ಆತ ಜೈಲಿನ ಕೋಣೆಯಲ್ಲಿ ಕಣ್ಣೀರ್ಗರೆಯುತ್ತಾ ಕುಳಿತಿದ್ದ. ತನಗೆ ಮರಳಿ ಜೀವನವೇ ಬೇಡ ತಾನು ಸಾಯಬೇಕೆಂದು ಬಯಸುತ್ತಿದ್ದ.

*******

" ಗೌತಮ್.... ಹೇ....ಗೌತಮ್ ಬೆಳಗಾಯ್ತು ಕಣೋ....ಯಾಕೋ ಇನ್ನೂ ಎದ್ದಿಲ್ಲಾ ? " ಅಮ್ಮ ಕೂಗಿ ಕರೆದಾಗ ದುಃ ಸ್ವಪ್ನದಿಂದ ಎಚ್ಚೆತ್ತ ಗೌತಮ್ ನಡೆದದ್ದನ್ನು ನೆನೆಸಿ ಬೆವತು ಹೋದ. ತಲೆಯ ಕೆಳಗಿನ ದಿಂಬು ಒದ್ದೆಯಾಗಿತ್ತು.

Sunday, January 30, 2011

’ವೇದಸುಧೆ’ ಅಂಬೆಗಾಲಿಕ್ಕಿದ ಚಂದ


’ವೇದಸುಧೆ’ ಅಂಬೆಗಾಲಿಕ್ಕಿದ ಚಂದ

ನಿನ್ನೆ ೩೦.೦೧.೨೦೧೧ ರಂದು ಹಾಸನದ ಶ್ರೀ ಶಂಕರಮಠದ ಶ್ರೀಭಾರತೀತೀರ್ಥ ಸಂಭಾಂಗಣದಲ್ಲಿ ಸುಮಾರು ೭೦೦ ಜನರಷ್ಟು ಸೇರಿದ್ದರು. ಬಂದವರಲ್ಲಿ ಅನೇಕರು ಬ್ಲಾಗಿಗರೂ ಇದ್ದರೆಂಬುದು ಸಂತಸದ ವಿಷಯ. ತಮಗೆಲ್ಲಾ ಮೊದಲೇ ಹೇಳಿದ ಹಾಗೇ ’ವೇದಸುಧೆ’ಯ ವಾರ್ಷಿಕೋತ್ಸವದ ಸಂಭ್ರಮ. ವೇದಸುಧೆ ಬಳಗ ಅದರಲ್ಲೂ ಪ್ರಮುಖವಾಗಿ ಮಿತ್ರರಾದ ಶ್ರೀ ಹರಿಹರಪುರ ಶ್ರೀಧರ್, ಕವಿ ಸುರೇಶ್, ಕವಿ ನಾಗರಾಜ್, ರಾಮಸ್ವಾಮಿ ಮೊದಲಾದವರು ತಮ್ಮ ಅನೇಕ ದಿನಗಳ ಶ್ರಮಕ್ಕೆ ಫಲವನ್ನು ಕಾಣುತ್ತಿದ್ದರು. ಬೆಳಿಗ್ಗೆ ಬಿಸಿಬಿಸಿ ಶ್ಯಾವಿಗೆ ಬಾತು, ಕಾಫಿ/ಟೀ ೯ ಗಂಟೆಗೆ ಎಲ್ಲರಿಗೂ ನೀಡಲ್ಪಟ್ಟು ಉಪಾಹಾರ ಅಚ್ಚುಕಟ್ಟಾಗಿ ಮುಗಿದರೆ ಸಭಾಕಾರ್ಯಕ್ರಮ ಸರಿಯಾಗಿ ಹತ್ತು ಗಂಟೆಗೆ ಆರಂಭವಾಯಿತು. ಕವಿ ಸುರೇಶ್ ಅವರು ತಮ್ಮ ಸರಳ ನಿರೂಪಣಾ ಶೈಲಿಯಲ್ಲಿ ಅತಿಥಿಗಳೆಲ್ಲರನ್ನೂ ವೇದಿಕೆಗೆ ಆಹ್ವಾನಿಸಿದರೆ, ಪ್ರಾಸ್ತವಿಕ ಮಾತುಗಳನ್ನಾಡುತ್ತಾ ಶ್ರೀಧರ್ ಅವರು ’ವೇದಸುಧೆ’ ರೂಪುತಳೆದ ಬಗೆಯನ್ನು ವಿವರಿಸಿದರು. ಶಂಕರಮಠದ ಧರ್ಮಾಧಿಕಾರಿಗಳಾದ ಶ್ರೀ ಎಮ್.ಎಸ್, ಶ್ರೀಕಂಠಯ್ಯ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕುಮಾರಿ ಸಹನಾಳಿಂದ ಮನಮೋಹಕ ದೀಪನೃತ್ಯ ನಡೆಯಿತು. ಶರ್ಮರಿಂದ ಪ್ರವಚಿಸಲ್ಪಟ್ಟ ’ವೇದೋಕ್ತ ಜೀವನಪಥ’ ಎಂಬ ಶ್ರಾವ್ಯಮಾಧ್ಯಮ ತಟ್ಟೆಯ ಬಗ್ಗೆ ವೇದಸುಧೆಯ ಶ್ರೀ ವಿಶಾಲ್ ಅವರು ಮಾತನಾಡಿದರು. ನಂತರ ಆ ಶ್ರಾಯ್ವ ಮಾಧ್ಯಮ ತಟ್ಟೆ[ಆಡಿಯೋ ಸೀಡಿ] ಬಿಡುಗಡೆಗೊಂಡಿತು. ಶಿವಮೊಗ್ಗೆಯ ಕುಮಾರಿ ಅಂಬಿಕಾ ಸುಶ್ರಾವ್ಯವಾಗಿ ವಯೋಲಿನ್ ನುಡಿಸಿದರು. ನಂತರ ಆರಂಭವಾದ ’ಆರೋಗ್ಯಕರ ಬದುಕು ಮತ್ತು ವೇದ’ ವಿಚಾರಸಂಕಿರಣದಲ್ಲಿ ಡಾ|ಶ್ರೀವತ್ಸ ಎಸ್.ವಟಿ, ಡಾ| ವಿವೇಕ್, ಕುಮಾರಿ ಶೃತಿ, ಶ್ರೀ ದಕ್ಷಿಣಾಮೂರ್ತಿ, ಶ್ರೀ ನಾಗರಾಜ್ ದೀಕ್ಷಿತ್ ಮತ್ತು ನಾನು ಭಾಗವಹಿಸಿದ್ದೆವು. ವಿವಿಧ ದೃಷ್ಟಿಕೋನಗಳ ವಿಚಾರಧಾರೆಗಳು ಹರಿದವು. ಮಧ್ಯೆ ಮಧ್ಯೆ ಶ್ರೀಮತೀ ಲಲಿತಾ ರಮೇಶ್ ಮತ್ತು ಕುಮಾರಿ ಸ್ವಾತಿ ಮತ್ತು ಕುಮಾರಿ ಸಹನಾ ಈ ಮೂವರಿಂದ ಸುಮಧುರ ಗೀತ ಗಾಯನಗಳು ನಡೆದವು. ಶ್ರೀ ಸುಧಾಕರ ಶರ್ಮರು ತಮ್ಮ ಆಳವಾದ ವಿಶ್ಲೇಷಣೆಯೊಂದಿಗೆ ವಿಚಾರ ಸಮನ್ವಯಗೊಳಿಸಿದರು. ವೇದಸುಧೆಯ ಎಲ್ಲಾ ಕಾರ್ಯಗಳಿಗೆ ಆಧಾರವಾಗಿ ನಿಂತಿರುವ ಹಾಗೂ ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಶ್ರೀ ಸಿ.ಎಚ್.ಕೃಷ್ಣಸ್ವಾಮಿಯವರು [ಹಲವು ವೇದಿಕೆಗಳಲ್ಲಿ ನಡೆಯುವಂತೇ:ಯಾವ ಸಬೂಬನ್ನೂ ಹೇಳಿ ತೆರಳದೇ]ಕಾರ್ಯಕ್ರಮದ ಅಂತ್ಯದವರೆಗೂ ವೇದಿಕೆಯಲ್ಲೇ ಹಾಜರಿದ್ದು ಸಮಯಾಭಾವದಿಂದ ಕೇವಲ ಎರಡೇ ಹಿತನುಡಿಗಳಲ್ಲಿ ತಮ್ಮ ಮಾತು ಮುಗಿಸಿದರು. ವೇದಸುಧೆಯ ವತಿಯಿಂದ ವೇದಿಕೆಯಲ್ಲಿರುವ ಎಲ್ಲರಿಗೂ ಹಾರಾರ್ಪಣೆಯ ಗೌರವದೊಂದಿಗೆ ವೇದಸುಧೆ ಹೊರತಂದ ’ವೇದೋಕ್ತ ಜೀವನ ಪಥ’ ಸೀಡಿ ನೀಡಿ ಸನ್ಮಾನಿಸಲಾಯಿತು. ವೇದಸುಧೆ ಬಳಗದ ನೇತೃತ್ವ ವಹಿಸಿ ಕಾರ್ಯಕ್ರಮದ ರೂವಾರಿಯಾದ ಶ್ರೀ ಹರಿಹರಪುರ ಶ್ರೀಧರ್ ಅವರಿಗೆ ವೇದಸುಧೆ ಬಳಗದ ಮಿಕ್ಕೆಲ್ಲರೂ ಸೇರಿ ಹಾರಾರ್ಪಣೆ ಮಾಡಿ ಗೌರವಿಸಿದರು.

ಇಷ್ಟೆಲ್ಲಾ ಮುಗಿಯುವ ಹೊತ್ತಿಗೆ ಮಧ್ಯಾಹ್ನ ೩ ಗಂಟೆ ಯಾಗಿತ್ತಾದರೂ ಜ್ಞಾನದಾಹಿಗಳಾದ ಸಭಿಕರು ದೈಹಿಕ ಹಸಿವನ್ನು ತಡೆಯುತ್ತ ತಮ್ಮ ಜ್ಞಾನದ ಹಸಿವಿಗೆ ಪುಷ್ಟಿನೀಡಿದ್ದರು. ವೇದಸುಧೆಯ ಬಳಗದಲ್ಲಿ ಪ್ರೇರಕರಾದ ಶ್ರೀ ಶರ್ಮರು ಸ್ವಾಮಿ ದಯಾನಂದ ಸರಸ್ವತಿಯವರು ಬರೆದ ಕೆಲವು ಪುಸ್ತಕಗಳನ್ನು ಮುದ್ರಣ ವೆಚ್ಚಪಡೆದು ವಿತರಿಸುವ ಏರ್ಪಾಟುಮಾಡಿದ್ದರು. ಪುಷ್ಕಳ ಭೋಜನ ವ್ಯವಸ್ಥೆಯಾಗಿತ್ತು. ಎಲ್ಲರೂ ಊಟ ಮಾಡಿಬಂದ ಮೇಲೆ ಅದಾಗಲೇ ತಡವಾಗಿತ್ತಾದ್ದರಿಂದ ೪ ಗಂಟೆಯಿಂದ ಹಾಸನದ ಮನೆಮನೆ ಕವಿಗೋಷ್ಠಿ ಆರಂಭಗೊಂಡಿತು. ಬೋರೇಗೌಡರಾದಿಯಾಗಿ ಹಲವು ನಿವೃತ್ತ ಅಧಿಕಾರಿಗಳು ಜನಪದ ಗೀತೆಗಳನ್ನು ಲಯಬದ್ಧವಾಗಿ ಹಾಡಿ ರಂಜಿಸಿದರು. ಅತಿಥಿಗಳನ್ನು ಸ್ವಾಗತಿಸಿ ಗುಲಾಬಿ ಹೂ ಗಳನ್ನು ನೀಡಿ ಗೌರವಿಸಲಾಯಿತು. ಸಂಘಟನೆಯಲ್ಲದ ಸಂಘಟನೆಯೆನಿಸಿದ ’ಮನೆ ಮನೆ ಕವಿಗೋಷ್ಠಿ’ಯ ಹದಿನಾಲ್ಕು ವರ್ಷಗಳ ನಡಿಗೆಯನ್ನು ಕಾರ್ಯದರ್ಶಿ ಶ್ರೀ ಎಸ್. ಸತ್ಯನಾರಾಯಣ ಅವರು ವಿವರಿಸಿದರು. ವೇದಿಕೆಯಲ್ಲಿ ಶ್ರೀ ಸುಧಾಕರ ಶರ್ಮ ಉದ್ಘಾಟಕರಾಗಿ ಭಾಗವಹಿಸಿ ಗಿಡವೊಂದಕ್ಕೆ ನೀರೆರೆಯುವುದರ ಮೂಲಕ ಉದ್ಘಾಟನೆ ನಡೆಯಿತು. ಪುಸ್ತಕಗಳ ಬಿಡುಗಡೆಗಾಗಿ ಆಗಮಿಸಿದ್ದ ಅತಿಥಿಗಳಾದ ಹಾಸನದ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿ ಶ್ರೀಮತಿ ಆಶಾಲತಾ ಮತ್ತು ಕಾರವಾರದ ಆಕಾಶವಣಿಯ ಮುಖ್ಯಸ್ಥರಾದ ಶ್ರೀ ವಸಂತ ಕುಮಾರ್ ಪೆರ್ಲ ಅವರುಗಳು ಕ್ರಮವಾಗಿ ಕವಿ ನಾಗರಾಜ್ ಕೃತ ’ಮೂಢ ಉವಾಚ’ ಮತ್ತು ಕೊಟ್ರೇಶ್ ಉಪ್ಪಾರ ಕೃತ ’ಮೃತ್ಯುವಿನಾಚೆಯ ಬದುಕು’ ಕವನ ಸಂಕಲನಗಳನ್ನು ಬಿಡುಗಡೆಮಾಡಿದರು. ಕೃತಿಗಳ ಕುರಿತು ಅತಿಥಿಗಳು ವಿಚಾರ ಮಂಡಿಸಿದರೆ, ಲೇಖಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

’ವೇದಸುಧೆ; ಮತ್ತು ’ಮನೆಮನೆಕವಿಗೋಷ್ಠಿ’ ಜಂಟಿಯಾಗಿ ಏರ್ಪಡಿಸಿದ್ದ ಇಡೀ ದಿನದ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಸಂಪನ್ನಗೊಂಡವು ಎಂಬಲ್ಲಿಗೆ ’ವೇದಸುಧೆ’ ಚಂದವಾಗಿ ಅಂಬೆಗಾಲಿಕ್ಕುತ್ತಿದೆ ಎನ್ನುವುದು ಸಾಬೀತಾಯಿತು. ವೇದಕ್ಕೆ ಜಾತಿ ಮತ, ಧರ್ಮಗಳ ಗಡಿಯಿಲ್ಲ! ವೇದವೆಂದರೆ ಅತ್ಯಪೂರ್ವ ಮಾನವೀಯ ಸುಖ ಜೀವನವನ್ನು ಸಾಧಿಸುವ ಕಲೆ. ವೇದ ಎಲ್ಲರದಾಗಲಿ, ವೇದ ಎಲ್ಲರಿಗಾಗಿರಲಿ. ಮುಂಬರುವ ವರ್ಷಗಳಲ್ಲಿ ಇಂತಹ ಕಾರ್ಯಕ್ರಮಗಳು ಜಿಲ್ಲಾವಾರು ನಡೆಯುವಂತೇ ’ವೇದಸುಧೆ’ ಬೆಳೆಯಲಿ ಮತ್ತು ಎಲ್ಲರೂ ವೇದಾಮೃತಪಾನ ಮಾಡುವಂತಾಗಲಿ ಎಂಬುದು ’ವೇದಸುಧೆ’ ಯ ಸದಾಶಯ. ಈ ಸಂದರ್ಭದಲ್ಲಿ ವೇದಸುಧೆ ತಮ್ಮೆಲ್ಲರಿಗೆ ಶುಭಹಾರೈಸುತ್ತಿದೆ . ಚಿತ್ರಗಳು ಮತ್ತು ಇನ್ನಷ್ಟು ವಿವರಗಳನ್ನು ’ವೇದಸುಧೆ’ ಬ್ಲಾಗಿನಲ್ಲಿ ನಿರೀಕ್ಷಿಸಿ:
http://vedasudhe.blogspot.com

Saturday, January 29, 2011

ಕುಮಾರಾಮಾಯಣ ಮತ್ತು ಸುಮಾಭಾರತ !



ಕುಮಾರಾಮಾಯಣ ಮತ್ತು ಸುಮಾಭಾರತ !

ಕುಮಾರಾಮಾಯಣ

ಪೂರ್ವಂ ಕುಮಾರ ಬೆಂಗಳೂರಾದಿ ಗಮನಂ
ಥರಥರದ ಸರ್ಕಸ್ಗಳುಂ |
ರಾಧಿಕಾ ಪಾಣಿಗ್ರಹಣಂ ಶಮಿಕಾ ಜನನಂ
ಕಸ್ತೂರಿಪರಿಶಿಂಚನಂ |
ಖುರ್ಚಿ ವೇದನ ಶಾಸಕಾನರ್ಹ ಯುದ್ಧಂ
ಮೀಡಿಯಾ ಸಂಭಾಷಣಂ |
ಪಶ್ಚಾದರ್ಥಮನರ್ಥಂ ನವಿಜಯಂ
ಏತಧ್ಯ ಕುಮಾರಾಮಾಯಣಂ ||


ಸುಮಾಭಾರತ

ಆದೌ ಶಿವಮೊಗ್ಗ ಜಿಲ್ಲೆಯಲ್ಲಿ ಜನನಂ
ರಾಸ್ವಂಸ ಸೇವಾರ್ಪಣಂ |
ಮಾಯಾಜಾಲವನೇಕಮಂ ಜಯಿಸುತಂ
ತಾ ಗೆದ್ದು ಖುರ್ಚಿಂಗಳಂ |
ನ್ಯಾಯಚ್ಛೇದನ ಭೂಮಿಖಾತೆ ಹರಣಂ
ತಾ ನುಂಗುತಂ ಗುಳುಗುಳುಂ |
ಶೋಭಾಯಾತ್ರೆಯೇ ಪ್ರಖರಮುಂ
ಮಿಕ್ಕೆಲ್ಲ ಹಿರಿಯರ್ಗೆ ಧಿಕ್ಕಾರವುಂ |
ಫೆವಿಕಾಲ್ ಆನೋಬಾಂಡಾದಿ ರಹಿತಂ
ಖುರ್ಚಿಮಾತ್ರಂ ಅಚಲವುಂ|
ಊರ್ಮೇಲ್ ಊರ್ಬಿದ್ರೆ ಯಾರಪ್ನ ಗಂಟ್ಹೋಯ್ತುಂ ?
ಕೇಳಿ ಸುಮಹಾಭಾರತಂ ||

Friday, January 28, 2011

ಉ. ಮ. ಹೇ.!

ಕಾಲ್ಪನಿಕ ಚಿತ್ರ ಕೃಪೆ :ಅಂತರ್ಜಾಲ

ಉ. ಮ. ಹೇ.!


ಹೇಳಲೇ ಬೇಕೆಂಬ ಗಟ್ಟಿ ಮನಸ್ಸಿನಿಂದ ಹಾಗೂ ಹೇಳದೇ ಹೋದರೆ ನಿಮ್ಮ ಒಂದು ನಗೆಯನ್ನು ಕಸಿದುಕೊಂಡ ಹಾಗಾಗಬಹುದೆಂಬ ಅಪರಾಧೀ ಪ್ರಜ್ಞೆಯಿಂದ ಸತ್ಯವನ್ನೇ ಹೇಳಬೇಕಾಗಿದೆ. ಇದು ಸತ್ಯವೆಂಬ ಮಾತಿಗೆ ಸಾಕ್ಷಿಯಾಗಿ ಗೀತೆಯೋ ಖುರಾನೋ ಬೈಬಲ್ಲೋ ಬೇಕಾಗಿಲ್ಲ; ಓದಿದ ನೀವು ಯಾವುದೇ ಚೌಕಾಸಿಯೂ ಇಲ್ಲದೇ ನಕ್ಕರೆ ಅದು ಸಾಕ್ಷಿಗಳ ಸಂಖ್ಯೆ ಜಾಸ್ತಿಯಾಗಲು ಸಾಧ್ಯವಾಗುತ್ತದೆ. ಗಕ್ಕನೆ ನಗುವ ಸಾಕ್ಷಿಗಳನ್ನು ನಾಶಪಡಿಸುವ ಜಾಯಮಾನವಾಗಲೀ ಇರಾದೆಯಾಗಲೀ ನನ್ನದಲ್ಲ; ಯಾಕೆಂದರೆ ನಾನೊಬ್ಬ ರಾಜಕಾರಣಿಯಲ್ಲ! ಇರದೇ ಇರುವುದನ್ನು ಇದ್ದಹಾಗೇ ಸೃಜಿಸುವ ಮನೋಭಾವವೂ ನನ್ನಲ್ಲಿಲ್ಲ--ಹೋಗಲಿ ಬಿಡಿ ವಿಷಯಕ್ಕೆ ತಡವಾಗುತ್ತದೆ: ಮುಂದೆ ಸಾಗೋಣ.

ಹಕೀಕತ್ತು ಜಾಸ್ತಿಯೇನಿಲ್ಲ. ನಾನೊಬ್ಬ ಚಿಕ್ಕ ಹುಡುಗನಾಗಿದ್ದೆ. ನನಗೇನೂ ಗೊತ್ತಿರದ ಮುಗ್ಧನಾಗಿದ್ದೆ. ಆ ಕಾಲಕ್ಕೆ ಶ್ರೀಮಾನ್ ಒಬ್ಬರು ಪರಿಚಿತರಾದರು. ನಾನು ಅವರಮನೆಗೆ ಕಾರ್ಯನಿಮಿತ್ತ ನಮ್ಮ ಹಿರಿಯರ ಜೊತೆಗೂಡಿ ಹೋಗಿದ್ದರಿಂದ ಅವರ ಪರಿಚಯವಾಯಿತು. ನೀಳದೇಹದ ದೊಡ್ಡ ಹೊಟ್ಟೆಯ ಶ್ರೀಯುತರ ಧ್ವನಿಮಾತ್ರ ನಾನು ಬೇರೆಲ್ಲಿಯೂ ಕೇಳದ ವಿಶಿಷ್ಟಥರದ್ದಾಗಿತ್ತು. ಗೊಗ್ಗರು ಧ್ವನಿಯಲ್ಲಿ ಮಾತನಾಡಿದರೂ ಯಾರನ್ನೂ ಕೂರಗೊಡದ ಅವರು ಬಾಲಕನಾದ ನನ್ನನ್ನೂ ಮಾತನಾಡಿಸಿದ್ದು ಅದೇ ಸಹಜ ಸ್ವಭಾವದಿಂದ. ನನಗೆ ಅವರು ಮೆಚ್ಚುಗೆಯಾಗದಿದ್ದರೂ ಅವರ ಮನೆಗೇ ಹೋಗಿ ಅವರನ್ನೇ ತಿರಸ್ಕರಿಸುವ ಧೈರ್ಯವಾಗಲೀ ಸಾಹಸೀ ಮನೋಧರ್ಮವಾಗಲೀ ಇಲ್ಲದ ಪುಕ್ಕಲು ಹುಡುಗ ನಾನಾಗಿದ್ದುದ್ದರಿಂದ ಅವರು ಹೇಳಿದ್ದನ್ನು ಪಾಲಿಸುವುದೇ ಪಾಲಿಗೆಬಂದ ಪಂಚಾಮೃತವಾಗಿತ್ತು.

ಮಕ್ಕಳನ್ನು ಗೋಳು ಹುಯ್ದುಕೊಳ್ಳುವುದರಲ್ಲಿ ಅವರು ನಿಸ್ಸೀಮರೆಂಬುದನ್ನು ನಿಮಗೆ ಹೇಳಿಬಿಡಲೇ ಅಥವಾ ಆಮೇಲೆ ನೀವೇ ತಿಳಿದುಕೊಳ್ಳಬಹುದೇ ? ಮಕ್ಕಳ ತೊಡೆ ಚಿವುಟುವುದು, ಕಿವಿತಿರುಚುವುದು, ಕಣ್ಣು ದೊಡ್ಡದುಮಾಡುವುದು, ಅಕರಾಳ ವಿಕರಾಳ ಬಾಯಿತೆರೆದು ನಾಲಿಗೆ ಹೊರಹಾಕಿ ಏನೇನೋಮಾಡಿ ಅಂತೂ ಮಕ್ಕಳು ಹೆದರಿದರೆ ಆಗ ಅವರಿಗೆ ಹಿಟ್ಲರ್ ಜಗತ್ತನ್ನೇ ಗೆದ್ದ ಖುಷಿ ಸಿಗುತ್ತಿತ್ತು! ಹಾಗಂತ ತೀರಾ ಕಠೋರ ಮನೋಸ್ಥಿತಿಯವರೂ ಅಲ್ಲ, ಯಾವುದೇ ಮನೋವ್ಯಾಧಿಗೆ ತುತ್ತಾದವರೂ ಅಲ್ಲ. ಆದರೆ ಅವರ ಕೈಗೆ ಸಿಕ್ಕ ಮಕ್ಕಳಿಗೆ ಮಾತ್ರ ಅವರ ಬಾಲಿಷ ನಡವಳಿಕೆಗಳ ಅನನ್ಯ ಅನುಭವವಾಗುತ್ತಿತ್ತು.

ಎರಡು ಮದುವೆಯಾಗಿದ್ದ ಅವರಿಗೆ ಒಟ್ಟೂ ಒಂದೂವರೆ ಡಜನ್ ಮಕ್ಕಳು! ಮನೆಯೇ ಅಂಗನವಾಡಿ ಥರ ಆದಕಾರಣವೋ ಏನೋ ಮಕ್ಕಳು ಎಂದರೇ ಹೀಗಾಗಿದ್ದರು. ನಾವೆಲ್ಲಾ ಅವರಮನೆಗೆ ಹೋಗುವಾಗ ಅವರ ಮಕ್ಕಳೆಲ್ಲಾ ದೊಡ್ಡವರಾಗಿದ್ದರೂ ಒಂದಿಬ್ಬರು ನಮ್ಮ ಓರಗೆಯವರೂ ಇದ್ದರು. ಇಂತಹ ಮನೆಗೆ ಒಂದಾನೊಂದು ದಿನ ಭೇಟಿ ಇತ್ತಾಗ ಅವರು ಹೇಳಿದ್ದು

" ತಮ್ಮಾ ನೀ ಏನು ಮಾಡ್ತಾ ಇದೀಯೋ ನೀನು ಬಿಡು ಬರೀ ಉ.ಮ.ಹೇ " ಎನ್ನುತ್ತಾ ೧೦ ನಿಮಿಷ ನಕ್ಕರು.

ನೆನೆಪು ಮಾಡಿಕೊಳ್ಳುತ್ತಾ ನಕ್ಕರು. ನನಗೆ ಅರ್ಥವಾಗಲಿಲ್ಲ. ಏನಿದು ’ಉ.ಮ.ಹೇ’ ? ನಿಮಗೇನಾದರೂ ಗೊತ್ತೇ ? ಇರಲಿ ಇದರ ಅರ್ಥವನ್ನು ಆಮೇಲೆ ನೋಡೋಣ. ಅದೇದಿನ ಸ್ವಲ್ಪ ಹೊತ್ತಿನಮೇಲೆ ಒಂದು ಕಾಗದ ಮತ್ತು ಪೆನ್ನು ಸಹಿತ ನನ್ನಹತ್ತಿರ ಬಂದ ಅವರು

" ಏನೋ ಹೇಳುತ್ತೇನೆ ಬರೆದು ತೋರಿಸುತ್ತೀಯಾ? " ಎಂದರು.

" ಆಯ್ತು ಬರೆಯುತ್ತೇನೆ "

" ಬರಿ ಬರಿ ಒಂದೇ ಸಮಕ್ಕೆ ಬರೆಯುತ್ತಾ ಹೋಗು ಆಮೇಲೆ ಏನುಮಾಡಬೇಕೆಂದು ಹೇಳುತ್ತೇನೆ " ಎಂದವರೇ ಮುಂದುವರಿದು

"ದಂತಿತದಾರೆಬಲುಹೇನತದಾಸಿರೆಬ" --ಎಂದರು

ರಾಮನ ಮುಂದೆ ಕೈಜೋಡಿಸಿ ಕುಳಿತ ಹನುಮನ ರೀತಿಯಲ್ಲಿ ತಲೆತಗ್ಗಿಸಿ ಬರೆಯುತ್ತಿದ್ದೆ.

" ಮುಗೀತಲ್ಲ ? " --ಕೇಳಿದರು

" ಹಾಂ ಮುಗೀತು ಏನಿದು ? "

" ಅದನ್ನೇ ಈಗ ತಿರುವು ಮುರುವಾಗಿ ಓದು "

ಸ್ವಾಮೀ ಅದನ್ನು ತಿರುವುಮುರುವು ಮಾಡಿದಾಗಿನಿಂದ ನನಗೆ ವಾಕರಿಕೆ ಆರಂಭವಾಯಿತು. ಕಣ್ಣುಕತ್ತಲೆ ಬಂದಹಾಗಾಯಿತು. ಇನ್ನೂ ಏನೇನೋ ಆಗತೊಡಗಿತು. ಅದನ್ನು ಹರಿದು ಬಿಸಾಡಿಬಿಟ್ಟೆ. ಅದು ಯಾಕೆ ಅಂತ ನಿಮಗೆ ಈಗ ತಿಳಿಯಿತಲ್ಲವೇ ?

ಈಗ ಉ.ಮ.ಹೇ ಎನ್ನುವುದರ ಬಗ್ಗೆ ನನಗೆ ಮತ್ತೆ ಸಂಶಯ ಕಾಡತೊಡಗಿತು. ಅದರ ಕುರಿತು ನಮ್ಮ ಹಿರಿಯರಲ್ಲಿ ನಿಧಾನವಾಗಿ ಪ್ರಸ್ತಾವಿಸಿದಾಗ ಗೊತ್ತಾಗಿದ್ದು ಉ=ಉಣ್ಣು, ಮ=ಮಲಗು, ಹೇ=ಹೇಲು. ಮತ್ತದೇ ವಾಕರಿಕೆ. ಕೆಲಸವಿಲ್ಲದೇ ಉಂಡಾಡಿಗಳಾಗಿ ತಿರುಗುವವರಿಗೆ ಆ ಶಬ್ದವನ್ನು ಪ್ರಯೋಗಿಸುತ್ತಾರೆ ಎಂಬುದು ನನ್ನ ಅರಿವಿಗೆ ಬಂತು. ಅಂದಿನಿಂದ ನಾನು ಮತ್ತೆಲ್ಲೂ ಮತ್ತೆಂದೂ ’ಉ.ಮ.ಹೇ.’ ಎಂದು ಕರೆಯಿಸಿಕೊಳ್ಳಲಿಲ್ಲ.

ಆಗೊಮ್ಮೆ ಈಗೊಮ್ಮೆ ಕೆಲವು ಜನರನ್ನು ನೋಡಿದಾಗ ನೆನಪಾಗುವುದು ’ಉ.ಮ.ಹೇ.’, ಅವರೇ ಜಾಸ್ತಿಯಾದಾಗ ಕುಟುಂಬಕ್ಕೂ ಸಮಾಜಕ್ಕೂ ಅವರು ಭಾರವಾಗಿ ತೋರುವುದರಿಂದ ಅವರಿಗೆ ಈ ಕಥೆಯನ್ನು ಓದಿ ಹೇಳುವುದು ಒಳಿತು. ಹಾಗೆ ಮಾಡಿ ಪುಣ್ಯ ಕಟ್ಟಿಕೊಳ್ಳಿ, ಧನ್ಯೋಸ್ಮಿ !

Thursday, January 27, 2011

ಶುಭ ಸುಪ್ರಭಾತ


ಶುಭ ಸುಪ್ರಭಾತ

ತಿರೆಯ ತಿರುಗಿ ನೋಡಲಲ್ಲಿ
ಹರೆಯ ಬಂದ ಹುಡುಗಿಯಂತೇ
ಮೆರೆಯುತಿರುವ ಕಾಲ ಕಂಡೆ ಮುಂಜಾವಿನಲಿ

ಬರಿಯ ಮಾತು ಕೇಳಬೇಡಿ
ಅರಿಯಲೊಮ್ಮೆ ಬಂದು ನೋಡಿ
ಕರೆಯುತಿಹಳು ನಮ್ಮನೆಲ್ಲ ಸುಪ್ರಭಾತದಿ

ಕರಿಯು ಮದಿಸಿ ಓಡಿದಂತೆ
ಹಿರಿಯ ತನವ ಮರೆವಳಲ್ಲಿ
ಗುರಿಯು ಸಿಂಗಾರಗೊಂಡು ಅಂದವಪ್ಪುದು !

ತೆರೆಯ ಸರಿಸಿ ಮುಖವ ತೋರ್ವ
ನೆರೆಯ ಊರ ವಧುವಿನಂತೆ
ತೊರೆಯಂಚಿನ ಪುಷ್ಪದಂತೇ ಅರಳುತಿಪ್ಪುದು

ಹೊರೆಯ ಹೊತ್ತ ಕೃಷಿಕರೆಲ್ಲ
ಗಿರಿಯಬುಡದಿ ಅದನು ಇಳಿಸಿ
ಮರೆಯಲೊಮ್ಮೆ ಆಯಾಸವ ಕುಳಿತುನೋಡ್ವರು

ಉರಿಯುವಂಥ ಸೂರ್ಯನಿರದ
ಕೊರೆಯುವಂಥ ಚಳಿಯ ಕಾಲ
ಗರಿಯನೊಲೆದು ಹೊಯ್ದಾಡುವ ತೆಂಗುಕಂಗಳು

ಮರಿಯ ಮುದ್ದುಮಾಡುತಿರುವ
ಕರಿಯ ಬಿಳಿಯ ಹಕ್ಕಿಗಳವು
ಸರಿಯೆನ್ನುವ ಹಾಡ ಹಾಡಿ ಸಂಭ್ರಮಿಸಿಹವು

ಸಿರಿಯು ಧರೆಗೆ ಇಳಿವ ಸಮಯ
ಬೆರೆಯಬೇಕು ಪ್ರಕೃತಿಯೊಡನೆ
ಮರೆಯಬೇಡಿ ಮೈಮನಕಿದು ಶಾಂತಿತರುವುದು

Wednesday, January 26, 2011

ಮರೆಯಲಾಗದ ಎರಡು ವಿಷಯಗಳು



ಮರೆಯಲಾಗದ ಎರಡು ವಿಷಯಗಳು

ನಾವು ಮರೆತರೂ ಮರೆಯಲಾಗದ ಕೆಲವು ವಿಷಯಗಳು ಮಾನವ ಲೋಕದ ಭಾವನಗಳಿಂದ ಪೂರಿತವಾಗಿರುತ್ತವೆ. ಕೆಲವನ್ನು ನಾವು ಬೇಡವೆಂದರೂ ಅವು ನಮ್ಮಲ್ಲೇ ಸದಾ ಐಕ್ಯವಾಗಿದ್ದು ಆಗಾಗ ಆಗಾಗ ಜಾಗೃತವಾಗುತ್ತವೆ. ಹೀಗೆ ಬರೆದಾಗ ನೀವೆಲ್ಲ ಕೇಳಬಹುದು : ಮೊನ್ನೆ ಅಸ್ತಂಗತರಾದ ಶ್ರೀ ಭೀಮಸೇನ್ ಜೋಶಿಯವರ ಬಗ್ಗೆ ನಾನು ಏನೂ ಬರೆಯಲಿಲ್ಲವೆಂದು. ಆದರೆ ವಸ್ತುಸ್ಥಿತಿ ಅದಲ್ಲ. ಬರೆದ ಅತ್ಯಂತ ಹೃದಯಂಗಮ ಕವನವೊಂದು ತಂತ್ರಾಂಶದ ಇನ್ನೊಂದು ರೂಪವಾದ ವೈರಾಣುವಿನ ಪಾಲಾದಾಗ ಮತ್ತೆ ಬರೆಯಲು ಮನಸ್ಸೂ ಬರಲಿಲ್ಲ, ಅಂತಹ ಭಾವಪೂರಿತ ಕಾವ್ಯ ಮತ್ತೆ ಹುಟ್ಟಿಬರುತ್ತೋ ಇಲ್ಲವೋ ತಿಳಿಯದಾಯ್ತು. ಬರೆಯಬೇಕು ಎಂಬುದೇನೋ ನಿಜವೇ ಆದರೂ ಬರೆಯುವಾಗ ಮನೋವೇದಿಕೆ ಅದಕ್ಕೆ ಸಿದ್ಧವಗಬೇಕಲ್ಲ? ಮನಸ್ಸು ದೇಹಕ್ಕೆ ವಿರುದ್ಧದಿಸೆಯಲ್ಲಿ ಹೆಜ್ಜೆಹಾಕಿದಾಗ ಬರಹಗಳ ಸೃಷ್ಟಿಯಾದರೆ ಆ ಬರಹಗಳನ್ನು ಒಂದೋ ಯಾರೂ ಓದಲಾಗುವುದಿಲ್ಲ, ಅಥವಾ ಅಂತಹ ಬರಹಗಳು ತೀರಾ ಕಮರ್ಷಿಯಲ್ ಸಿನಿಮಾಗಳ ಥರ ಕೇವಲ ಕೆಲವು ಜನರಿಗೆ ಸೀಮಿತವಾಗುತ್ತವೆ.

ಇವತ್ತಿನ ಎರಡು ವಿಷಯಗಳು ಇಂತಿವೆ: ಮೊದಲನೆಯದು ಭೀಮಸೇನರಿಗೆ ಶ್ರದ್ಧಾಂಜಲಿ ಎಂಬುದು ನಿರ್ವಿವಾದ. ಎರಡನೆಯದು ತಾಯಿ ಭಾರತಿಯ ಅಗಾಧತೆಯ ನೆನಪು. ಬನ್ನಿ ಒಂದೊಂದಾಗಿ ಕೂತು ಮಾತಾಡೋಣ-

ಕರ್ನಾಟಕವೆಂಬ ಮಗಳು ಭಾರತವೆಂಬ ಮಾತೆಗೆ ಹೆತ್ತುಕೊಟ್ಟ ಸುಪುತ್ರರಲ್ಲಿ ಅನೇಕ ರತ್ನಗಳು ಅಡಕವಾಗಿವೆ. ಅಂತಹ ರತ್ನಗಳಲ್ಲಿ ಒಂದು ಮೊನ್ನೆ ಕಾಣದಾಯಿತು ಎಂದರೆ ಇದು ಬರೇ ಬಣ್ಣನೆಗೆ ಬಳಸಿದ ಪದವೆಂದು ಯಾರೂ ಹೇಳಲಾರಿರಿ. ಭೀಮಸೇನ್ ಜೋಶಿಯ ವ್ಯಕ್ತಿತ್ವ ಹಾಗಿತ್ತು! ದೇವರು ಎಂಬ ನಮಗೆ ಗೋಚರವಲ್ಲದ ಮಹಾನ್ ಶಕ್ತಿ ಈ ವಿಶ್ವಕ್ಕೆ ಆಗಾಗ ಆಗಾಗ ಏನಾದರೂ ಅಪರೂಪದ ಕೊಡುಗೆಗಳನ್ನು ಕೊಡುತ್ತಲೇ ಹೋಗುತ್ತದೆ. ಅಂತಹ ಕೊಡುಗೆಗಳು ಮಾನವ ಕೊಡುಗೆಗಳಲ್ಲವಾದ್ದರಿಂದ ಅವುಗಳ ಬೆಳಕು,ಪ್ರಕಾಶ ಹಲವೆಡೆ ಪಸರಿಸುತ್ತದೆ. ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ’ಸಂಭವಾಮಿ ಯುಗೇ ಯುಗೇ’ ಎನ್ನುವ ಮಾತು ಸದಾ ಮನದಲ್ಲಿ ಹಸಿರಾಗಿರುವಂಥದ್ದು. ಯುಗಯುಗಗಳಲ್ಲೂ ಕಾಲಕಾಲಗಳಲ್ಲೂ ಹಲವು ರೂಪಗಳಲ್ಲಿ ಭಗವಂತ ಅಂಶ, ಅಂಶಾಂಶ ಅವತಾರಿಯಾಗಿ ಭೂಮಿಗೆ ಬರುತ್ತಾನೆ. ಕೆಲವೊಮ್ಮೆ ಆತನನ್ನು ಆತನೇ ಮನುಷ್ಯ ರೂಪದಲ್ಲಿ ಹುಟ್ಟಿ ಸೇವೆ ಮಾಡುವುದೂ ಕಾಣುತ್ತದೆ. ಇಂತಹ ಹಲವು ಜನ್ಮಗಳು ದಾಸಪರಂಪರೆಯವರದ್ದು. ಹರಿದಾಸರೆಲ್ಲ ಹರದಾಸರೂ ಹೌದು, ಅವರು ಭಗವಂತನ ನಿರ್ವ್ಯಾಜ ಪ್ರೀತಿಯನ್ನು ಮೊಗೆದು ತಾವೂ ಉಂಡು ನಮಗೂ ಉಣಬಡಿಸಿದವರು. ಅಂತಹ ದಾಸರುಗಳು ಬರೆದ ಹಾಡುಗಳನ್ನು ಹಾಡುವದಕ್ಕಾಗಿ ಕೆಲವು ವಿಷಿಷ್ಟ ವ್ಯಕ್ತಿಗಳನ್ನೂ ಅದೇ ಆ ದೇವರು ಹುಟ್ಟಿಸುತ್ತಾನೆ. ಹೀಗೆ ಆ ದಿಸೆಯಲ್ಲಿ ಧಾರವಾಡದ ಹಳ್ಳಿಯಲ್ಲಿ ಜನ್ಮವೆತ್ತಿದವರು ಶ್ರೀ ಭೀಮಸೇನರು. ಮತ್ತದೇ ಹಳೆಯ ಸಂಪ್ರದಾಯಗಳನ್ನು ನೆಚ್ಚಿನಿಂತ ಬಡ ಶಿಕ್ಷಕರ ಮಗನಾಗಿ ಜನಿಸಿದ ಶ್ರೀಯುತರಿಗೆ ಶಾಲೆಯಲ್ಲಿ ಕಲಿಸುವ ವಿದ್ಯೆಗಿಂತ ಇಂಪಾಗಿ ಹಾಡುವ ಹಾಡುಗಳು ಇಷ್ಟವಾದವು. ಸಂಗೀತಕ್ಕಾಗಿ ಮನೆಜನರ ಕಣ್ತಪ್ಪಿಸಿ ಕಂಡಲ್ಲೆಲ್ಲಾ ಅಲೆಯುವುದು ಆರಂಭವಾದ ದಿನಗಳಲ್ಲಿ ಮನೆಯ ಹಿರಿಯರು ನಿರ್ಧರಿಸಿದ್ದು ಈತನನ್ನು ಹೇಗೆ ಸರಿದಾರಿಗೆ ತರುವುದಪ್ಪಾ ಎಂದು. ಆದರೆ ಅದು ತಪ್ಪುದಾರಿಯೇನೂ ಆಗಿರಲಿಲ್ಲ, ಬದಲಾಗಿ ಅದೊಂದು ವಿಶಿಷ್ಟ ಮಹತ್ವವುಳ್ಳ ಹಾದಿಯಾಗಿತ್ತು. ಆ ಹಾದಿ ಎಲ್ಲರಿಗೂ ರುಚಿಸುವುದಾಗಿರಲಿಲ್ಲ. ಕೆಲವರಿಗೆ ಸಂಗೀತವನ್ನು ಕೇಳುವುದಷ್ಟೇ ಇಷ್ಟವಾಗುತ್ತಿತ್ತು ಹೊರತು ಅಭ್ಯಸಿಸುವುದಲ್ಲ.

ತನ್ನ ಸುತ್ತಲ ಜಗತ್ತು ತನಗೆ ಪೂರಕವಾಗಿರದ ವಿಷಮಸ್ಥಿತಿಯಲ್ಲೇ ಗುರುವನ್ನು ಹುಡುಕುತ್ತಾ ನಡೆದು ಕಾಣದ ಊರು ಜಾಗಗಳಲ್ಲೆಲ್ಲಾ ಸುತ್ತುತ್ತಾ ಕೊನೆಗೊಮ್ಮೆ ತನ್ನಿಚ್ಛೆಯನ್ನು ನೆರವೇರಿಸುವ ಮುಸ್ಲಿಂ ಗಾಯಕರೊಬ್ಬರನ್ನು ಪ್ರಥಮ ಗುರುವಾಗಿಸಿಕೊಂಡು ಹಿಂದೂಸ್ಥಾನೀ ಸಂಗೀತವನ್ನು ಗುರುಕುಲ ಮಾದರಿಯಲ್ಲಿ ಕಲಿಯಲು ಆರಂಭಿಸಿದ ಭೀಮಸೇನರು ನಂತರ ಸವಾಯಿ ಗಂಧರ್ವರನ್ನು ಗುರುವನ್ನಾಗಿ ಸ್ವೀಕರಿಸಿ ಮುನ್ನಡೆದರು. ಕಲಿಕೆ ಕೇವಲ ನೆಪಮಾತ್ರ. ಹುಟ್ಟುಪ್ರತಿಭೆಗೆ ಕಲಿಕೆ ಬೇಕೆ? ಆದರೂ ಜನ್ಮಾಂತರದಲ್ಲಿ ಮರೆತುಹೋದ ಸಂಗೀತದ ಮಜಲುಗಳನ್ನು ಮತ್ತೊಮ್ಮೆ ಎತ್ತಿ ನೆನಪಿಸುವ ಕಾರಣಕ್ಕಾಗಿ ಗುರುವಿನ ಅವಶ್ಯಕತೆಯಿತ್ತು;ಕಲಿತರು. ಹಾಡುವ ಪ್ರತೀ ಹಾಡು ಜನರನ್ನು ಮೋಡಿಮಾಡಲು ತೊಡಗಿದ್ದು ಅವರ ಸುಶ್ರಾವ್ಯ ಕಂಠಮಾಧುರ್ಯದಿಂದ. ಆ ಕಂಠಶಾರೀರದಲ್ಲಿ ಅದೆಂತಹ ಅದ್ಭುತ ಚೈತನ್ಯದ ಚಿಲುಮೆಯಿದೆಯೆಂದರೆ ಕೇಳುತ್ತಾ ಕೇಳುತ್ತಾ ಅದಕ್ಕೆ ಮಾರುಹೋಗದವರು ವಿರಳ.

ಆನೆ ನಡೆದದ್ದೇ ದಾರಿ ಅಂತಾರಲ್ಲ ಅದೇ ರೀತಿ ಭೀಮಸೇನರು ಇಟ್ಟಿದ್ದೇ ಭೀಮಗಾತ್ರದ ಹೆಜ್ಜೆಗಳನ್ನು. ಅವರು ಹೇಗೇ ಆಲಾಪಿಸಿದರೂ ಅದೊಂದು ರಾಗವೇ ಆಯಿತು. ಹೊಸ ರಾಗಗಳು ಅವರಿಂದ ಸೃಜಿಸಲ್ಪಟ್ಟವು. ಪಕ್ಕ ವದ್ಯಗಳಿರಲಿ ಬಿಡಲಿ ಆ ಧ್ವನಿಗೆ ಅವುಗಳ ಅನಿವಾರ್ಯತೆ ತೀರಾ ಕಮ್ಮಿ. ವಾದ್ಯಗಳೇ ಹಾಡುಗಾರರನ್ನು ಮರೆಮಾಚುವ ಇವತ್ತಿನ ದಿನಗಳಲ್ಲಿ ಕೇವಲ ಹಾರ್ಮೋನಿಯಂ ಮತ್ತು ತಾಳ, ತಬಲಾಗಳೊಂದಿಗೆ ಅವರು ಭಜನೆಗಳನ್ನು ಹಾಡಿದರು. ದೇವರ ನಾಮಗಳನ್ನು ಹೇಳಿದರು. ಅಭಂಗಗಳನ್ನು ಭಂಗವಿಲ್ಲದೇ ಸತತ ಹಾಡಿದರು. ಕರ್ನಾಟಕದಲ್ಲಿ ಅವರ ವಿದ್ಯೆಗೆ ತಕ್ಕುದಾದ ವ್ಯವಸ್ಥೆ ಸಿಗದೇ ಇದ್ದಾಗ ಮಹಾರಾಷ್ಟ್ರದ ಪುಣೆಗೆ ಅವರು ವಲಸೆಹೋದರು. ಅಲ್ಲೇ ನೆಲೆನಿಂತರೂ ಅವರು ಕನ್ನಡ ತಾಯಿಯನ್ನು ಮರೆಯಲಿಲ್ಲ! ಕನ್ನಡದಲ್ಲಿ ಅನೇಕ ಹಾಡುಗಳನ್ನು ಹಾಡಿದರು. ಮಹಾರಾಷ್ಟ್ರಕ್ಕೆ ಅವರು ತೆರಳಿದ ಮೇಲೆ ಅಲ್ಲಿಂದ ಅವರು ದೇಶವ್ಯಾಪೀ ಗುರುತಿಸಿಕೊಂಡರು. ದೇಶದಲ್ಲೇ ಸಂಗೀತದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ದೇಶದ ಆಸ್ತಿಯಾಗಿ ಬೆಳೆದರು.

ಪಂಚಮವೇದವೆನಿಸಿದ ಸಂಗೀತ ಮೂಲ ಮಹಾಭಾರತದ ಕಾವ್ಯವನ್ನು ಓದುವಾಗ ಜಾಸ್ತಿ ಪ್ರಚುರಗೊಂಡಿತು ಎಂಬ ಐತಿಹ್ಯವೊಂದಿದೆ. ಅದು ಹೌದೋ ಅಲ್ಲವೋ ಅಂತೂ ಸಂಗೀತವೊಂದು ಚಿಕಿತ್ಸೆ ಎಂಬುದಂತೂ ನಿಜವೇ. ಅರೆಕ್ಷಣದ ಇಂಪಾದ ಸಂಗೀತದಿಂದ ತೇಲಿಬರುವ ಆಹ್ಲಾದ ಎಂತೆಂತಹ ಕುಪಿತವ್ಯಕ್ತಿಗಳ ಮನೋಸ್ಥಿತಿಯನ್ನು ತಕ್ಷಣಕ್ಕೆ ತಣಿಸುತ್ತದೆ. ನರಗಳ ಸಂವೇದನೆಯ ಮೂಲಕ ಸಾಗುವ ಸಂದೇಶಗಳು ಆಯಾ ಭಾಗಗಳಿಗೆ ಸಮರ್ಪಕವಾಗಿ ತಲುಪದಾದಾಗ ಕಾಯಿಲೆಗಳ ಜನನವಾಗುತ್ತದೆ. ಸೂಕ್ತ ಸಂದೇಶಗಳ ಬದಲಾಗಿ ವ್ಯತ್ಯಸ್ತ ಸಂದೇಶಗಳು ಪ್ರವಹಿಸಿದರೂ ಕಾರ್ಯವ್ಯತ್ಯಾಸವಾಗುತ್ತದೆ. ಯಥೋಚಿತ ಸಂದೇಶಗಳು ಸಕಾಲಕ್ಕೆ ಸರಿಯಾಗಿ ಪ್ರವಹಿಸಲು ಸಂಗೀತದ ಹಲವು ರಾಗಗಳು ಕಾರಣವಾಗುತ್ತವೆ ಎಂಬುದು ಈಗ ವೈಜ್ಞಾನಿಕವಾಗಿ ನಿರೂಪಿಸಲ್ಪಟ್ಟ ಸಂಗತಿ. ಉತ್ತಮ ಸಂದೇಶಗಳು ನಮ್ಮ ನರನಾಡಿಗಳಲ್ಲಿ ಹರಿಯುತ್ತ ವೈರುಧ್ಯಭಾವಗಳು ದೂರವಾಗಲು ಸಂಗೀತ ಕಾರಣವಾದರೆ ಅದನ್ನು ನಮಗೆ ತಲುಪಿಸುವ ಕೆಲಸವನ್ನು ತಮ್ಮ ಶಾರೀರದಿಂದ ನಡೆಸಿಕೊಡುವವರು ಗಾಯಕರಾಗಿರುತ್ತಾರೆ.

ದೇಶವೊಂದು ತನ್ನ ಖಾಸಾ ಪ್ರತಿಭೆಗೆ ಮನ್ನಣೆಯನ್ನು ನೀಡಬೇಕಾದ್ದು ಸಹಜವೇ. ಆದರೂ ಸಂಗೀತದಲ್ಲಿ ಅಸಾಮಾನ್ಯತೆಯನ್ನು ಮೆರೆದ ಅಪ್ಪಟ ಪ್ರತಿಭೆಗೆ ೨೦೦೮ ರ ವರೆಗೂ ಭಾರತರತ್ನ ಪುರಸ್ಕಾರ ದೊರೆತಿರಲಿಲ್ಲ. ಅಂತೂ ಅದು ಭೀಮಸೇನರನ್ನು ತಾನಾಗೇ ಅರಸಿಬಂದಿದ್ದು ೨೦೦೮ರಲ್ಲಿ. ಇದರ ಹೊರತು ಮಿಕ್ಕುಳಿದ ಮಾನ-ಸನ್ಮಾನಗಳ ಮತ್ತು ಬಿರುದುಬಾವಲಿಗಳ ಪಟ್ಟಿ ನಿಮಗೇ ಚೆನ್ನಾಗಿ ತಿಳಿದಿರುತ್ತದೆ. ಯಾವುದನ್ನೇ ಕೊಟ್ಟರೂ ಅದು ಕಮ್ಮಿ ಎನಿಸುವ ಸಂಗೀತ ಸಾಮ್ರಾಟನ ಸೇವೆ ಅಮೋಘ ಮತ್ತು ಅನನ್ಯ ಕೂಡ. ಅನೇಕರು ಅನೇಕ ಮಾರ್ಗಗಳಿಂದ ಅಮರರಾದರೆ ಭೀಮಸೇನರು ಸಂಗೀತಕ್ಷೇತ್ರದ ಮರೆಯಲಾಗದ ಧ್ರುವತಾರೆಯಾಗಿದ್ದಾರೆ. ಅವರಿಗೆ ನಮ್ಮೆಲ್ಲರ ನುಡಿನಮನಗಳನ್ನು ಹೇಳುವ ಸಮಯ ಇದಾಗಿದೆ, ಹಾಗೆ ಸ್ಮರಿಸೋಣ: ದಿವಂಗತ ಮಹಾನುಭಾವ ಶ್ರೀ ಭೀಮಸೇನ ಜೋಶಿಯವರೇ ತಮ್ಮ ಆತ್ಮ ಚಿರಶಾಂತಿಯನ್ನು ಪಡೆಯಲಿ. ಮತ್ತೆ ಬರುವುದಾದರೆ ಇದೇ ಈ ನಮ್ಮ ಕನ್ನಡನೆಲಕ್ಕೆ ಮರಳಲಿ ಎಂದು ತಮಗೆ ಹೃತ್ಪೂರ್ವಕವಾಗಿ ತಮಗೆ ಭಾಷ್ಪಾಂಜಲಿಗಳನ್ನು ಅರ್ಪಿಸುತ್ತಿದ್ದೇವೆ.

ಇನ್ನು ಎರಡನೇ ವಿಚಾರ ಅಮ್ಮ ಭಾರತಿಯದ್ದು. ನಾವು ಏನೇ ಕೊಡಲಿ ಬಿಡಲಿ ಅವಳುಮಾತ್ರ ಸತತವಾಗಿ ನಮ್ಮನ್ನು ಅತ್ಯಂತ ಕಾಳಜಿಯಿಂದ ನಡೆಸುತ್ತಾಳೆ. ನಮ್ಮಿಂದ ಯಾವುದನ್ನೂ ಅಪೇಕ್ಷಿಸುವುದಿಲ್ಲ. ಗಲಭೆ, ದೊಂಬಿ ರಾದ್ಧಾಂತಗಳೇನೆ ಇದ್ದರೂ "ಛೆ ಮಕ್ಕಳು, ಇಂದು ಜಗಳವಾಡುತ್ತಾರೆ ನಾಳೆ ಮತ್ತೆ ಒಂದಾಗುತ್ತಾರೆ" ಎಂಬ ಭಾವದಿಂದ ಸುಮ್ಮನಾಗುತ್ತಾಳೆ. ನಾವು ಮಾತ್ರ ಅಮ್ಮನ ಮನಸ್ಸಿಗೆ ತಿಳಿಯದ ರೀತಿಯಲ್ಲಿ ಮತ್ತೆ ಮತ್ತೆ ಇಲ್ಲಸಲ್ಲದ್ದನ್ನು ನಡೆಸುತ್ತಲೇ ಇರುತ್ತೇವೆ.

ನೀವೇ ವಿಚಾರಿಸಿ ನೋಡಿ--ಅಲ್ಲೆಲ್ಲೋ ಸಿಂಗಾಪುರವೋ ಅಮೇರಿಕಾವೋ ಇನ್ನೂ ಯಾವುದೋ ರಾಷ್ಟ್ರದ ಪ್ರಜೆಯೂ ನೀವಾಗಬಹುದು. ಆದರೆ ಭಾರತದ ಅನನ್ಯ ಸಂಸ್ಕೃತಿ ನಿಮಗಲ್ಲಿ ದೊರಯುವುದಿಲ್ಲ. ಹಾಗಾದರೆ ನಮ್ಮಲ್ಲಿನ ಹೆಚ್ಚುಗಾರಿಕೆಯೇನೆಂದರೆ ನಮ್ಮಲ್ಲಿಯ ವಿಭಿನ್ನ ಸಂಸ್ಕೃತಿ ಆಚಾರವಿಚಾರಗಳ ಜನರನ್ನೂ ಅಲ್ಲದೇ ಭಾರತ ಹಲವು ದೇಶಗಳ ಜನರನ್ನೂ ಮತ್ತವರ ಸಂಸ್ಕೃತಿಯನ್ನೂ ಆದರಿಸಿದೆ. ಯಾವುದೇ ಸಂಸ್ಕೃತಿ ಬಂದರೂ ತನ್ನ ಮೂಲ ಸಂಸ್ಕೃತಿಯನ್ನು ಕಳೆಯಗೊಡದೇ ಹೊಸ ಹೊಸ ಜಾಯಮಾನಗಳ ಜನರನ್ನು ಏಕೋ ಭಾವದಿಂದ ನೋಡುತ್ತಿದೆ. ’ವಸುಧೈವ ಕುಟುಂಬಕಮ್’ ಎಂಬ ಆರ್ಷೇಯ ವಾದದಿಂದ ಜಗತ್ತಿನ ಸಕಲಜನೋಪಕಾರಿಯಾಗಿ ಎಲ್ಲರಿಗೂ ಹಿತವಾಗುವ ಮಾನವ ಸಹಜ ಧರ್ಮವನ್ನು, ಬದುಕುವ ಕಲೆಯನ್ನು ತೋರಿಸುತ್ತಿದೆ.

ಹೆಚ್ಚಿನ ಆದ್ಯತೆಗಾಗಿ, ಹಣಕ್ಕಾಗಿ ನಮ್ಮಲ್ಲಿ ಎಷ್ಟೋ ಜನ ದೇಶಬಿಟ್ಟು ವಿದೇಶಗಳಲ್ಲಿ ನೆಲೆಸುತ್ತಾರೆ. ಅಲ್ಲಿ ಹಾಗಿದೆ ಇಲ್ಲಿ ಹೀಗಿದೆ ಎಂದೆಲ್ಲಾ ಇಲ್ಲಿಗೆ ಬಂದಾಗ ಹೇಳುವುದನ್ನು ಕೇಳುತ್ತೇವೆ. ಎಲ್ಲಿ ಹೇಗೇ ಇದ್ದರೂ ನಮಗೆ ನಮ್ಮ ಭಾರತ ಸಾಕು. ಅಮ್ಮ ಹಳೆಯ ಮಾಸಲು ಸೀರೆಯನ್ನುಟ್ಟ ಮಾತ್ರಕ್ಕೆ ಅವಳನ್ನು ಅಮ್ಮ ಎನ್ನಲು ಅಸಹ್ಯ ಪಡುವ ಮನೋಧರ್ಮ ನಮ್ಮದಾಗಬಾರದು. ಅಮ್ಮ ನಮಗೆ ಜನ್ಮವಿತ್ತವಳಲ್ಲವೇ? ನಮಗಿಂತ ಎಷ್ಟೋ ಹಿರಿಯಳಲ್ಲವೇ ? ಅವಳಲ್ಲಿ ಅವಳ ಸೀರೆಯನ್ನೋ ಬಟ್ಟೆಯನ್ನೋ ಒಗೆದುಕೊಳ್ಳುವ ಯಾ ಹೊಸದನ್ನು ಕೊಂಡುಕೊಳ್ಳುವ ತಾಕತ್ತು ಇರದೇ ಇರಬಹುದು. ಅದನ್ನು ಮನದಂದು ಅವಳಿಗೆ ಕಾಲಕಾಲಕ್ಕೆ ಬೇಕಾದ ಅನುಕೂಲಗಳನ್ನು ಕಲ್ಪಿಸಬೇಕಾದ್ದು ಮಕ್ಕಳಾದ ನಮ್ಮ ಕರ್ತವ್ಯ. ಈ ಕರ್ತವ್ಯವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ನಡೆಸಬೇಕು.

ಇನ್ನು ಹಣವನ್ನೇ ನಂಬಿ ಅದರ ಹಿಂದೆ ಬಿದ್ದು, ಕೇವಲ ತಮ್ಮ ಸ್ವಾರ್ಥದ ಬದುಕಿಗಾಗಿ, ಸ್ವೇಚ್ಛಾಚಾರಕ್ಕಾಗಿ ದೇಶದ್ರೋಹದ ಹಲವಾರು ಕೆಲಸಗಳನ್ನು ಮಾಡುವವರನ್ನು ಕಾಣುತ್ತಿದ್ದೇವೆ. ಆ ಗುಂಪಿನಲ್ಲಿ ಕೆಲವು ಭಾರತೀಯ ರಾಯಭಾರೀ ಕಚೇರಿಗಳಲ್ಲಿನ ಅಧಿಕಾರಿಗಳೂ ತೊಡಗುತ್ತಾರೆ ಎಂಬುದು ಖಂಡನೀಯ ಮತ್ತು ವಿಷಾದನೀಯ. ಇಲ್ಲೇ ಹುಟ್ಟಿ ಇಲ್ಲಿನ ಉಪ್ಪನ್ನವನ್ನೇ ಉಂಡು ಇಂದು ಪಾಕಿಗಳ ಜೊತೆ ಕೈಜೋಡಿಸಿರುವ ದಾವೂದ್, ಚೋಟಾ ರಾಜನ್, ರವಿ ಪೂಜಾರಿ ಇಂತಹವರನ್ನೆಲ್ಲಾ ರಕ್ಕಸರಸಾಲಿಗೆ ಸೇರಿಸಲು ಯಾವುದೇ ಹಿಂಜರಿಕೆ ಬೇಡ. ಇದೂ ಅಲ್ಲದೇ ದೇಶದ ಆರ್ಥಿಕ ವ್ಯವಸ್ಥೆಯನ್ನು ತಲ್ಲಣಗೊಳಿಸುವ ಹರ್ಷದ್ ಮೆಹ್ತಾ ಅಥವಾ ಸತ್ಯಂ ಸಂಸ್ಥೆಯ ಮಾಜಿ ಅಧ್ಯಕ್ಷ ರಾಮಲಿಂಗ ರಾಜು ಥರದ ವ್ಯಕ್ತಿಗಳೂ ಕೂಡ ಇಲ್ಲಿದ್ದೇ ದೇಶದ್ರೋಹವನ್ನೆಸಗಿದವರು ಎಂದರೆ ತಪ್ಪಲ್ಲ. ಇಂತಹ ಕುಖ್ಯಾತರ ಸಂತತಿ ನಶಿಸ.

ದೇಶದಲ್ಲಿ ಮದ್ಯ ಮಾನಿನಿ ಮತ್ತು ಮಾಂಸದ ಮಾರಾಟ ಸರಾಗ ನಡೆದೇ ಇದೆ. ಮಾಂಸಾಹಾರಿಗಳಿಗೆ ಮಾಂಸ ಅನಿವಾರ್ಯವಾದರೂ ಹಾಲು ಕೊಡುವ ಹಸುವನ್ನು ಮಾಂಸಕ್ಕೆ ಬಳಸುವ ಕ್ರಮ ಅತ್ಯಂತ ಖೇದಕರ. ಯಾವ ರಾಷ್ಟ್ರದಲ್ಲಿ ಮಾನಿನಿಯರಿಗೆ ಸರಿಯಾದ ರಕ್ಷಣೆ ಇರುವುದಿಲ್ಲವೋ ಅಥವಾ ಅವರನ್ನೇ ಪರೋಕ್ಷವಾಗಿ ಬಳಸಿ ಹಣದ ವ್ಯವಹಾರ ನಡೆಸುತ್ತಾರೋ ಆ ದೇಶ ಉದ್ಧಾರವಾಗಲು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆ. ಮೊನ್ನೆ ಯಷ್ಟೇ ದಕ್ಷಿಣ ಭಾರತದ ಸ್ಫುರದ್ರೂಪೀ ತಾರೆಯೊಬ್ಬಳ ಲೈಂಗಿಕ ಹಗರಣವನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಸಿನಿಮಾ ಹಾಗೂ ರಂಗಭೂಮಿ ಕಲಾವಿದರ ಬಳಗದಲ್ಲಿ ಎಲ್ಲೋ ಮಧ್ಯ್ ಮಧ್ಯೆ ಕೆಲವರು ’ಕಾಸ್ಟಿಂಗ್ ಕೌಚ್’ ಎಂಬ ಕಾಮದಾಟವನ್ನು ನಡೆಸುತ್ತಾರೆಂಬುದು ಎಲ್ಲರಿಗೂ ತಿಳಿದಿರುವ ಅಂತರಂಗ! ಈ ವ್ಯವಸ್ಥೆಯಲ್ಲಿ ತನ್ನ ಶೀಲ ಕಳೆದುಕೊಳ್ಳುವ ಹೆಣ್ಣು ಆಮೇಲೆ ಯಾರು ಎಲ್ಲೇ ಏನೇ ಮಾಡಿದರೂ ಸಹಿಸಿಕೊಳ್ಳುವ ಮನೋಭಾವಕ್ಕೆ ಒಗ್ಗಿಕೊಳ್ಳುತ್ತಾಳೆ ಎನಿಸುತ್ತದೆ. ಕಾಲಸಂದುತ್ತಾ ಅವಕಾಶಗಳು ಕಡಿಮೆಯಾದಾಗ ಹೈಟೆಕ್ ವೇಶ್ಯಾವಾಟಿಕೆಯನ್ನು ಆರಂಭಿಸುತ್ತಾಳೆ ಎಂಬುದು ಇತ್ತೀಚೆಗೆ ಎರಡು ಮೂರು ಪ್ರಕರಣಗಳಿಂದ ಕಂಡುಬಂದ ಅಭಿಪ್ರಾಯ. ಭಾರತೀಯ ಶಾಸ್ತ್ರದಲ್ಲಿ ರಂಗನಟಿ/ನಟಿಗೆ ಪರ್ಯಾಯವಾಗಿ ಸೂಳೆ ಎಂದೇ ಕರೆದಿದ್ದಾರೆ. ಹಲವಾರು ಗಂಡುಗಳ ಸಂಪರ್ಕಕ್ಕೆ ಬರುವ ಹೆಣ್ಣು ಹಲವಾರು ಸಂದರ್ಭಗಳಲ್ಲಿ ತನ್ನತನವನ್ನು ಕಳೆದುಕೊಳ್ಳಬೇಕಾಗಿ ಬರುವುದರಿಂದ ಈ ಹೆಸರು. ಇಂದು ನಟಿಸುವುದಕ್ಕೂ ಪ್ರಾಧಾನ್ಯತೆಯಿರುವುದರಿಂದಲೂ ದೃಶ್ಯಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಹೆಣ್ಣು ಹಲವರ ಕಣ್ಮನ ತಣಿಸುವುದರಿಂದಲೂ ಆ ಹೆಣ್ಣುಗಳಿಗೆ ಎಲ್ಲಿಲ್ಲದ ಪ್ರಚಾರ ದೊರೆಯುತ್ತದೆ. ತುಂಡುಡುಗೆ ಉಟ್ಟ ನಟೀಮಣಿ ಪ್ರಾಯ ಸಲ್ಲುವವರೆಗೆ ಅದರಿಂದಲೇ ಹಲವರ ಎದೆಗೆ ಬಾಣ ಎಸೆಯುತ್ತಾಳೆ ಮತ್ತು ಅವರನ್ನು ಗೆಲ್ಲುವುದರಲ್ಲೂ ಯಶಸ್ವಿಯಾಗುತ್ತಾಳೆ!

ಒಂದು ಅಂಬೋಣದ ಪ್ರಕಾರ ಯುವ ಜನಾಂಗದಲ್ಲಿ ಈಗೀಗ ಯಾವುದೇ ಸಂಕೃತಿಯಾಧಾರಿತ ಜೀವನ ಕಂಡುಬರುತ್ತಿಲ್ಲ. ಹುಡುಗ/ಹುಡುಗಿ ಹಲವು ಸಂಪರ್ಕಗಳನ್ನು ಸಂಬಂಧಗಳನ್ನು ಇಟ್ಟುಕೊಳ್ಳುವುದು ಹಿಂದಿಯ ’ಬಿಗ್ ಬಾಸ್’ ಥರದ ರಿಯಾಲಿಟಿ ಶೋ ಗಳಲ್ಲಿ ಜಗಜ್ಜಾಹೀರುಗೊಂಡಿದೆ. ಒಂದೊಮ್ಮೆ ಅಮೇರಿಕಾದ ರೀತಿಯ ಜೀವನವೇ ನಮ್ಮದಾದರೆ ನಮ್ಮ ನಾಳೆಗಳಲ್ಲಿ ಭಾರತೀಯ ಭಾವನೆಗಳು ಇರಲು ಸಾಧ್ಯವೇ? ಇಲ್ಲಿನ ದಾಂಪತ್ಯದ ಆ ಆನ್ಯೋನ್ಯ ಭಾವ ಬರಲು ಸಾಧ್ಯವೇ? ಹುಟ್ಟುವ ಮಕ್ಕಳಿಗೆ ಅಪ್ಪಯಾರೋ ಅಮ್ಮ ಯಾರೋ ಆದರೆ ಅವರುಗಳ ಗತಿಯೇನು? ಇದೇ ಕಾರಣವಾಗಿ ನಗರದ ಬೀದಿಗಳಲ್ಲಿ ಅಲ್ಲಲ್ಲಿ ಶಿಶುಗಳನ್ನು ಎಸೆದು ಹೋಗುವುದು ಕಾಣಸಿಗುತ್ತಿದೆ. ಇಂತಹ ಕೃತ್ಯಗಳನ್ನು ನಡೆಸುವಾಗ ಅವರ ಹೃದಯ ಕೆಲಸಮಾಡುವುದಿಲ್ಲವೇ ? ಅಥವಾ ಯಾವ ಮಾನಸಿಕ ಧೈರ್ಯದಿಂದ ಅಂತಹ ಘೋರಕೃತ್ಯವೆಸಗುತ್ತಾರೆ ಎಂಬುದು ತಿಳಿಯದಾಗಿದೆ. ಅಂತೂ ಇವಕ್ಕೆಲ್ಲಾ ಬಹುಮುಖ್ಯವಾಗಿ ಮದುವೆಗೂ ಮೊದಲಿನ ಸಂಬಂಧವೇ ಕಾರಣ ಎಂಬುದು ಸ್ಪಷ್ಟವಾಗುತ್ತಿದೆ.

ಹೀಗೇ ಹಲವಾರು ಸಾಮಾಜಿಕ ಜ್ವಲಂತ ಸಮಸ್ಯೆಗಳಿದ್ದರೂ ತನ್ನ ಮಕ್ಕಳ ತಪ್ಪುಗಳನ್ನೆಲ್ಲಾ ಕ್ಷಮಿಸಿ ತಾಯಿ ಭಾರತಿ ಮುನ್ನಡೆದಿದ್ದಾಳೆ;ಮುನ್ನಡೆಸಿದ್ದಾಳೆ. ಇಂದೊಮ್ಮೆ ಅವಳನ್ನು ಸ್ಮರಿಸುವುದು ಯೋಗ್ಯವೆಂಬುದು ನನ್ನ ಭಾವನೆ. ಎರಡನ್ನೂ ನಿಮ್ಮಲ್ಲಿ ನಿವೇದಿಸಿ ಕೊಂಡಿದ್ದೇನೆ. ಮತ್ತೊಮ್ಮೆ ಸಿಗುತ್ತೇನೆ, ಹಾರ್ದಿಕ ಶುಭಾಶಯಗಳು.

Saturday, January 22, 2011

ಪ್ರಜಾಪ್ರಭುತ್ವವೆಂಬ ಭೂತ


ಪ್ರಜಾಪ್ರಭುತ್ವವೆಂಬ ಭೂತ !


ಭೂತದ ಕಥೆಯನ್ನು ಕಳೆದವಾರ ಓದಿದ್ದೀರಿ. ಆದರೆ ’ಪ್ರಜಾಪ್ರಭುತ್ವ’ ಎಂಬ ವ್ಯವಸ್ಥೆಯೇ ಅರ್ಥಕಳೆದುಕೊಂಡು ಭೂತವಾದಾಗ ರಾಜ್ಯವೋ ದೇಶವೋ ಭೂತಾವಾಸದ ಜಾಗವಾಗುತ್ತದೆ! ಬಹಳಸರ್ತಿ ಪೌರಾಣಿಕ ಕಥಾಭಾಗಗಳನ್ನು ಹೇಳುವಾಗ ಇದನ್ನೇ ಹೇಳಿದ್ದೇನೆ. ಹಿಂದಕ್ಕೆ ಆಳುವ ದೊರೆಯನ್ನು ಜನರು ಅರ್ಥಾತ್ ಪ್ರಜೆಗಳು ಪ್ರತ್ಯಕ್ಷ ದೈವವೆಂಬಂತೇ ಕಾಣುತ್ತಿದ್ದರು. ರಾಜನೂ ತನ್ನ ಪ್ರಜೆಗಳ ಯೋಗಕ್ಷೇಮವನ್ನು ಕಾಲಕಾಲಕ್ಕೆ ವಿಚಾರಿಸುತ್ತ ಪ್ರಜಾರಂಜಕನಾಗಿ ರಾಜ್ಯಭಾರನಡೆಸುತ್ತಿದ್ದ.

ಉದಾಹರಣೆಗೆ ತೆಗೆದುಕೊಂಡರೆ ನಮ್ಮ ರಾಜ್ಯದ ಕೆಲವು ಅಣೆಕಟ್ಟುಗಳು ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಿದವು. ಅವು ಸ್ವಾತಂತ್ರ್ಯ ಪೂರ್ವದವು. ಅಂದರೆ ಅವರಲ್ಲೂ ಅಭಿವೃದ್ಧಿಯತ್ತ ಸಾಕಷ್ಟು ಗಮನವಿತ್ತು.ಯಾವುದೇ ದೇಶದಲ್ಲಿ ಹೊಸದೇನನ್ನಾದರೂ ಕಂಡರೆ ಅದನು ತಮ್ಮ ದೇಶಕ್ಕೆ[ರಾಜ್ಯಕ್ಕೆ] ಕೊಂಡುಕೊಳ್ಳುವುದು ಯಾ ನಿರ್ಮಿಸುವುದು ಇತ್ಯಾದಿ ಕೆಲಸಗಳನ್ನು ಮಾಡುವುದರ ಜೊತೆಗೆ ಕಲೆ,ಸಂಗೀತ, ಸಾಹಿತ್ಯ, ವಿಜ್ಞಾನ, ಕೃಷಿ ಹೀಗೇ ಎಲ್ಲಾರಂಗಗಳಿಗೂ ಸಮಾನ ಮಹತ್ವನೀಡಲಾಗುತ್ತಿತ್ತು.

ಇಂದು ಯಾರೂ ರಾಜರಿಲ್ಲ, ಆದರೆ ಆಳುವ ಪ್ರತೀ ಶಾಸಕ ಯಾವ ರಾಜನಿಗೂ ಕಮ್ಮಿಯಿಲ್ಲದ ಆಸ್ತಿ ಸಂಪಾದಿಸಲು ಮುಂದಾಗುತ್ತಾನೆ. ಪ್ರತೀ ಶಾಸಕನೂ ಮೊದಲನೇ ಸಲಕ್ಕೇ ತಾನು ಮಂತ್ರಿ, ಮುಖ್ಯಮಂತ್ರಿಯಾಗಬೇಕೆಂಬ ಕನಸುಕಾಣುತ್ತಾನೆ. ಯಾರಿಗೂ ಪರಸ್ಪರರಲ್ಲಿ ಗೌರವವಿಲ್ಲ. ಎಲ್ಲಾ ದುಡ್ಡಿಗಾಗಿ ಮಾಡಿಕೊಂಡ ರಾಜಕೀಯ ದುಷ್ಟಕೂಟಗಳಾಗಿವೆ. ೨೦-೨೫ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವವರು ಚುನಾವಣೆಗೆ ನಿಲ್ಲಲು ಅರ್ಹರಾಗುತ್ತಾರೆ. ಅಪ್ಪ ರಾಷ್ಟ್ರಾಧ್ಯಕ್ಷನಾದರೆ ಮಗ ರಾಜ್ಯಾಧ್ಯಕ್ಷನಾಗುತ್ತಾನೆ! ಪಕ್ಷ ಸಂವರ್ಧನೆಯಲ್ಲಿ ಮೊದಲು ಕೊಟ್ಟು ಕರೆತಂದು ಆಮೇಲೆ ಮರಳಿ ಮೂರುಪಟ್ಟು ದೋಚುವ ಹುನ್ನಾರ-ದುರಾಲೋಚನೆ ಕೆಲವು ಪಕ್ಷಗಳದ್ದು. ಕುದುರೆ ವ್ಯಾಪಾರ, ಕುಸ್ತಿ-ಅಖಾಡ ಎಲ್ಲವೂ ಆಳುವ ಗೌರವಯುತ ಸ್ಥಾನವಾದ ವಿಧಾನಸೌಧದಲ್ಲೇ ನಡೆಯುತ್ತವೆ. ಒಬ್ಬಾತ ಅಂಗಿ ಹರಿದುಕೊಂಡು ಮೇಜು ಹತ್ತಿನಿಂತು ಬಾಯಿ ಬಾಯಿ ಬಡಿದುಕೊಂಡು ತನ್ನ ಪ್ರದರ್ಶನ ಮಾಧ್ಯಮಗಳಲ್ಲಿ ಕಾಣುವಂತೇ ಮಾಡಿದರೆ ಇನ್ನೊಬ್ಬಾತ ಹೊಡೆಯಲೇ ಹೋಗಿ ಸುದ್ದಿ ಮಾಡುತ್ತಾನೆ.

ಮಾಟ-ಮಂತ್ರಗಳು ಈ ಸ್ಥಾನದಿಂದ ಹಳ್ಳಿಯ ಮೂಲೆಯವರೆಗೂ ಮತ್ತೆ ತಲೆಯೆತ್ತುವಂತೇ ಮಾಡಿರುವ ರಾಜಕಾರಣಿಗಳು ಪರಸ್ಪರರ ಮೇಲೆ ಗೂಬೆ ಕೂರಿಸುತ್ತಾರೆ. ಆಳುವ ಪಕ್ಷದ ದೊರೆಗಳು ನುಂಗಣ್ಣಗಳಾಗುತ್ತಿರುವುದನ್ನು ಎದುರಿಗೆ ಕೂತು ಅನುಭವಿಸುವ ಹತಾಶಸ್ಥಿತಿಯಲ್ಲಿರುವ ವಿರೋಧಪಕ್ಷಗಳು ತಮ್ಮ ಘನತೆಗಳನ್ನೆಲ್ಲಾ ಗಾಳಿಗೆ ತೂರಿ ಕಾಲುಕೆರೆದು ಕೋಳಿ ಅಂಕಕ್ಕೆ ನಾಂದಿ ಹಾಡುತ್ತಾರೆ. "ಏನೋ ತಪ್ಪಾಯ್ತಪ್ಪಾ ಸರಿಮಾಡಿಕೊಂಡು ಹೋಗುತ್ತೇನೆ" ಎಂಬ ಮುಖ್ಯಮಂತ್ರಿಗೆ ಕೇವಲ ಒಂದೇ ಒಂದು ದಿನ ಸುರಳೀತ ವ್ಯವಹಾರ ಮಾಡಲು ಬಿಡುವುದಿಲ್ಲ. ಹಗಲೂ ರಾತ್ರಿ ಅಪ್ಪ-ಮಕ್ಕಳು ಸಿದ್ರಾಮಣ್ಣನೇ ಮುಂತಾದ ಕೆವರನ್ನು ಕರೆದುಕೊಂಡು ತಲೆಯಿಲ್ಲದ ಗೊಂಬೆಯಂತಿರುವ ದಿವಾನಖಾನೆಗೆ ತೆರಳುತ್ತಾರೆ. ಒತ್ತಡದಲ್ಲಿ ಗಾಳಿಬಂದ ಕಡೆ ವಾಲುವ ಗೂಟದ ಗೊಂಬೆ ಪೂರ್ವಕ್ಕೆ ನಿಂತರೆ ಒಂದು ರೂಪದಲ್ಲೂ ಪಶ್ಚಿಮಕ್ಕೆ ನಿಂತಾಗ ಇನ್ನೊಂದು ರೂಪದಲ್ಲೂ ಹಾಗೂ ಇನ್ನೆಷ್ಟು ದಿಕ್ಕುಗಳಿವೆಯೋ ಅಷ್ಟೂ ದಿಕ್ಕುಗಳಲ್ಲೂ ನಿಂತು ನೋಡಿದಾಗ ವಿಭಿನ್ನವಾಗಿ ಕಾಣುತ್ತದೆ!

ಯಾರದು ತಪ್ಪು ಯಾರದು ಸರಿ? ತಪ್ಪು ನಮ್ಮೆಲ್ಲರದು! ನೆನಪಿಡಿ ಇನ್ನೊಮ್ಮೆ ಒತ್ತಿ ಹೇಳುತ್ತೇನೆ-ತಪ್ಪು ನಮ್ಮೆಲ್ಲರದು. ನಮ್ಮ ರಾಜ್ಯಕ್ಕೆ ಯಾವುದೇ ಆಸ್ತಿಮಾಡದ ಕಡಿದಾಳ್ ಮಂಜಪ್ಪ ಅಥವಾ ಕೆಂಗಲ್ ಹನುಮಂತೈಯ್ಯನವರಂಥವರು, ನಿಜಲಿಂಗಪ್ಪನಂಥವರು ಬೇಕಾಗಿತ್ತು. ಆದರೆ ಅದೆಲ್ಲಾ ಈಗ ಇತಿಹಾಸ! ಮುಂಡಾಸು ಸುತ್ತಿದರೆ ಒಬ್ಬೊಬ್ಬರಿಗೂ ಜಾಸ್ತಿ ಬಟ್ಟೆ ಬೇಕಾಗುತ್ತದಲ್ಲಾ ಎಂಬ ಅನಿಸಿಕೆಯಿಂದ ಮಹಾತ್ಮಾಗಾಂಧಿ ಖಾದಿ ಟೋಪಿ ಧರಿಸುವಂತೇ ಎಲ್ಲರಲ್ಲೂ ಕೇಳಿಕೊಂಡರು. ಆದರೆ ಈಗ ಟೋಪಿ ಧರಿಸುತ್ತಿರುವ ರಾಜ್ಕಾರಣಿಗಳೆಲ್ಲಾ ನಾಟಕದ ಪಾತ್ರಗಳಂತೇ ಕಾಣುತ್ತಿರುವುದು ಮಾತ್ರ ವಿಪರೀತ ವಿಪರ್ಯಾಸ ಮತ್ತು ಹಾಸ್ಯಾಸ್ಪದ. ಬಡತನ ನಿರ್ಮೂಲನೆಗೆ ವಾರದಲ್ಲಿ ಒಂದುದಿನ ಉಪವಾಸವನ್ನು ಬೋಧಿಸಿದರು ಗಾಂಧಿಯವರು....ಇಂದು ನಮ್ಮಲ್ಲಿ ಉಪವಾಸ ಶಬ್ದವೇ ಊರ್ಜಿತವಿಲ್ಲ! ಅಹೋರಾತ್ರಿ ಹಣದ ಝಣತ್ಕಾರವನ್ನೇ ಕಿವಿಗೊಟ್ಟು ಆಲೈಸುವ ಮತ್ತು ಓಲೈಸುವ ಕುಟಿಲ ರಾಜಕಾರಣಿಗಳು ಪಬ್ಬು ಬಾರು ಲೈವ್ ಬ್ಯಾಂಡ್ ಗಳನ್ನೆಲ್ಲಾ ಅತೀ ಖಾಸಗಿಯಾಗಿ ಅನುಭವಿಸುತ್ತಾ ಪರರಿಗೆ ಅದನ್ನೆಲ್ಲಾ ಬಿಡಲು ಬೋಧಿಸುವವರಾಗುತ್ತಾರೆ. ತಮ್ಮ ಅಥವಾ ತಮ್ಮ ಸಹಚರರ ಅರ್ಥಾತ್ ಬಲಬಡುಕರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗದಂತೇ ನೋಡಿಕೊಳ್ಳುತ್ತಾರೆ. ಹಾಗೊಮ್ಮೆ ದಾಖಲಾದರೂ ಸಾಕ್ಷಿಗಳೇ ಸಿಗದಂತೇ ನೋಡಿಕೊಳ್ಳುತ್ತಾರೆ.

ಕುತ್ಸಿತ ರಾಜಕೀಯ ತಂತ್ರ-ಪ್ರತಿತಂತ್ರ ಮತ್ತು ಕುತಂತ್ರಗಳನ್ನು ಉಪಯೋಗಿಸುತ್ತಾ ಆಳುವ ಮತ್ತು ವಿರೋಧಿ ಪಕ್ಷಗಳು ಪರಸ್ಪರ ಕಾಲೆಳೆಯಲು ಪ್ರಯತ್ನಿಸುವುದರಲ್ಲಿ ಪ್ರಜೆಯಾದವನ ಬದುಕು ಮೂರಾಬಟ್ಟೆಯಾಗುತ್ತದೆ. ಯಾವುದೇ ಪ್ರಯೋಜನಕ್ಕೆ ಬಾರದ ಆಯೋಜನೆಗಳನ್ನು ಹುಟ್ಟುಹಾಕಿ ಹಣವಿನಿಯೋಗಿಸುತ್ತಾ ಅಲ್ಲಿಷ್ಟು ಇಲ್ಲಿಷ್ಟು ಮೇಯುವುದನ್ನು ಕಂಡರೆ ಹಿಂದಿನ ರಾಜರ ಕಾಲದಲ್ಲಿ ಈ ಗತಿಯಿರದಿದ್ದುದು ತಿಳಿಯುತ್ತದೆ. ಆಗ ಒಬ್ಬನೇ ರಾಜ ತನ್ನ ಬೊಕ್ಕಸವನ್ನು ತುಂಬಿಸಿಕೊಂಡು ಉಸ್ತುವಾರಿ ನೋಡಿಕೊಂಡಿದ್ದರೆ ಈಗ ಎಲ್ಲರೂ ತಾವು ರಾಜರೆಂದೇ ಅಂದುಕೊಳ್ಳುತ್ತಾ ಕುಳಿತಲ್ಲೇ ಕೊಪ್ಪರಿಗೆ ಹೊನ್ನನ್ನು ಬಯಸುತ್ತಾ ಲಂಚಕೋರರಾಗಿ ಬ್ರಷ್ಟಾಚಾರಿಗಳಾಗಿ ಸಿಕ್ಕಸಿಕ್ಕ ಮೂಲಗಳಿಂದ ಮೇಯಲು ತೊಡಗುತ್ತಾರೆ.

ಈ ಅಡ್ಡ ಮೇವಿನ ಹಲ್ಲಿಗೆ ಸಿಕ್ಕ ಅಧಿಕಾರಿಗಳು ತಮ್ಮ ಉಳಿವಿಗಾಗಿ ತಾವೂ ಅಡ್ಡಡ್ಡ ಮೇಯಲು ತೊಡಗುತ್ತಾರೆ. ಬ್ರಷ್ಟಾಚಾರ ನಿರ್ಮೂಲನೆ ಎಂಬ ವಿಷಯದ ಕುರಿತು ಬೆಳಿಗ್ಗೆ ವೇದಿಕೆಯಲ್ಲಿ ವ್ಯಾಖ್ಯಾನಿಸುವ ಮಂತ್ರಿಗಳು ಅದೇ ದಿನ ಸಾಯಂಕಾಲ ಸೇತುವೆ ದುರಸ್ತಿಯ ಕಾರ್ಯದಲ್ಲಿ ತನಗೆ ಬರಬೇಕಾದ ’ಪ್ರಸಾದ’ವನ್ನು ಪಡೆಯಲು ಗುಟ್ಟಾಗಿ ತೆರಳುತ್ತಾರೆ! ಮಾನಭಂಗ ಮಾಡುವವರನ್ನು ಗಲ್ಲಿಗೇರಿಸಬೇಕು ಎನ್ನುವ ರಾಜಕಾರಣಿಯ ಮೇಲೆ ದಾಖಲಾದ ಮಾನಭಂಗ ಕುರಿತ ಹಲವಾರು ಮೊಕದ್ದಮೆಗಳು ಇದ್ದಕ್ಕಿದ್ದ ಹಾಗೇ ಅನೂರ್ಜಿತಗೊಳ್ಳುತ್ತವೆ! ಚೆನ್ನಾಗಿ ಕೆಲಸಮಾಡುವ ದಕ್ಷ ಅಧಿಕಾರಿಗಳಿಗೆ ಸಿಗಬೇಕಾದ ಪುರಸ್ಕಾರಗಳು ಮತ್ತದೇ ’ಪ್ರಸಾದ’ ವಿಲೇವಾರಿ ಪ್ರಕ್ರಿಯೆಯಿಂದ ಯಾವುದೋ ದುಷ್ಟ ಅಧಿಕಾರಿಗಳಿಗೆ ಸಲ್ಲುತ್ತವೆ. ಸಾರಸ್ವತಲೋಕದಲ್ಲೂ ಇದು ಹೊರತಾಗಿರದೇ ಇತ್ತೀಚೆಗೆ ನಡೆದ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಹನುಮಂತನ ಬಾಲದಂತೇ ಬೆಳೆಯುತ್ತಿದ್ದುದ್ದನ್ನು ನೀವೆಲ್ಲಾ ನೋಡಿಯೇ ಇದ್ದೀರಿ. ಆ ಪಟ್ಟಿಯಲ್ಲಿ ಪುರಸ್ಕೃತರಾದವರಲ್ಲಿ ಯಾರು ನಿಜವಾಗಿ ಅರ್ಹರು ಎಂಬುದನ್ನು ಹಂಸಕ್ಷೀರನ್ಯಾಯದಿಂದ ತೆಗೆದು ನೋಡಬೇಕಾಗಿದೆ. ಯಾವುದೋ ಗೊತ್ತಿರದ ದೇಶದ ವಿಶ್ವವಿದ್ಯಾನಿಲಯ ದೂರದ-ಕಾಣದ-ಕಂಡರಿಯದ ರಾಜಕಾರಣಿಗೆ ಗೌರವ ಡಾಕ್ಟರೇಟ್ ಬಿಕರಿ ಮಾಡಿದ್ದು ಈಗ ಇತಿಹಾಸದಲ್ಲಿ ಸಿಗುತ್ತದೆ! ಇಂಥದ್ದೇ ಹಲವಾರು ವಿಶ್ವವಿದ್ಯಾನಿಲಯಗಳು ನಮ್ಮ ದೃಷ್ಟಿಕೋನದಲ್ಲಿ ಸಿಗುತ್ತವೆ!

ಯಾವುದಕ್ಕೂ ನೆಲೆಯಾಗಲೀ ಬೆಲೆಯಾಗಲೀ ಇಲ್ಲದ ಈ ಕಾಲ ನಿಜವಾಗಿಯೂ ಪ್ರಜೆಗಳು ಕಂಡ ಪ್ರಜಾಪ್ರಭುತ್ವವೆಂಬ ಭೂತ ಕುಣಿಯುತ್ತಿರುವ ಕಾಲವಲ್ಲವೇ ? ಬಡತನ ನಿರ್ಮೂಲನೆ, ಸಾಕ್ಷರತಾ ಯೋಜನೆ, ಬೆಳೆಯುತ್ತಿರುವ ಒಂದುಕಾಲದ ಅಲ್ಪಸಂಖ್ಯಾತರಿಗೂ ಇಂದು ಕಡ್ಡಾಯವಾಗಿ ಆಗಬೇಕಾದ ಕುಟುಂಬಯೋಜನೆ, ಭಿಕ್ಷುಕರ ಪುನರ್ವಸತಿ ಯೋಜನೆ, ಕುಗ್ರಾಮಗಳಿಗೆ ಮೂಲಭೂತ ಸೌಲಭ್ಯಯೋಜನೆ ---ಹೀಗೇ ಆಗಬೇಕಾದ ಎಲ್ಲಾ ಕಾರ್ಯಗಳನ್ನು ಬಿಟ್ಟು ಕಂಡಲ್ಲೆಲ್ಲಾ ಮಹಮಹಾ ರಸ್ತೆಗಳನ್ನು ನಿರ್ಮಿಸುತ್ತಾ ಚತುಷ್ಪಥ,ಪಂಚಪಥ ಮಾಡುವುದೊಂದೇ ಮಾಡಿದರೆ ಅದು ಅಭಿವೃದ್ಧಿಯ ಹಂತವೇ? ರಸ್ತೆಯನ್ನೇ ಉಣ್ಣಲೋ ತಿನ್ನಲೋ ಆಗುವುದಿಲ್ಲವಲ್ಲ, ರಸ್ತೆಯಲ್ಲೇ ಮಲಗಬೇಕಾದ ಕಾಲವನ್ನು ರಾಜಕಾರಣಿಗಳು ತಂದಿಟ್ಟರೆ ಅದು ಅನಿರೀಕ್ಷಿತವೇನಲ್ಲ! "ಭಾರತ ಬಡರಾಷ್ಟ್ರ ಭಾರತ ಬಡರಾಷ್ಟ್ರ" ಹುಟ್ಟಿದಾಗಿಂದ ಇದನ್ನ ಕೇಳುತ್ತಲೇ ಬಂದಿದ್ದೇವೆ. ನಮ್ಮೊಡನೆಯೇ ಜನಿಸಿ ನಮ್ಮ ನಡುವೆಯೇ ಇರುವ ಗುಳ್ಳೆನರಿಗಳು ಈ ಮಂತ್ರದ ಅರ್ಥವನ್ನು ಗ್ರಹಿಸಿಕೊಂಡು ಕೋಟಿಗಟ್ಟಲೇ ಕಪ್ಪುಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದಾರೆ. ಅದರ ವಿವರಣೆ ಬೇಕು ಎಂದರೂ ಖುದ್ದಾಗಿ ಪ್ರಧಾನಿಯೇ "ಇಲ್ಲಾ ಅದು ಅಂತರ್ರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳ ಕಾಯ್ದೆಗೆ ಮಾಡುವ ಅಪಚಾರ, ಅದರಿಂದ ದೇಶ ದೇಶಗಳ ಸಂಪರ್ಕ ಕಡಿದುಹೋಗುತ್ತದೆ" ಎನ್ನುತ್ತಾರೆ! ಹೋಗಲಿ ಬಿಡಿ. ನಮ್ಮದಾದ ಹಣವನ್ನು ತನ್ನಲ್ಲಿರಿಸಿಕೊಂಡು ಕದ್ದೂ ಮುಚ್ಚಿ ಮಾತನಾಡುವ ಆ ದೇಶದ ಹಂಗಾದರೂ ನಮಗೇಕೆ ಬೇಕು. ಒಮ್ಮೆ ಅಲ್ಲಿರುವ ಎಲ್ಲಾ ಹಣ ಮರಳಿ ಭಾರತಕ್ಕೆ ಬಂದು ಮುಟ್ಟುಗೋಲಾಗಿ ಸರಕಾರೀ ಖಜಾನೆಯನ್ನು ಸೇರಲಿ ಎಂದರೆ ಬೆಕ್ಕಿಗೆ ಗಂಟೆ ಕಟ್ಟುವ ಪ್ರಮೇಯ ಹಲವು ರಾಜಕಾರಣಿಗಳನ್ನು ಕಾಡುತ್ತದೆ! ಎಲ್ಲರೂ ಖೂಳರೇ ಎಲ್ಲರೂ ಕಳ್ಳರೇ! ಯಾರೂ ಸಂಭಾವಿತರಲ್ಲ. ಎಲ್ಲೋ ಒಂದೆರಡು ಸುಸಂಕೃತ ವ್ಯಕ್ತಿಗಳು ಸೇವಾರ್ಥವಾಗಿ ರಾಜಕೀಯ ಸೇರಿ ಮಂತ್ರಿಗಳಾಗಿದ್ದರೆ ಅವರಿಗೆ ಮಿಕ್ಕವರು ಕೊಡುವ ಬಿರುದು" ಕೆಲಸಕ್ಕೆ ಬಾರದವರು" ಎಂಬುದು. ಅಂತಹ ಒಳ್ಳೆಯ ಮಂತ್ರಿಗಳು ಕೊಡು-ಕೊಳ್ಳುವ ವ್ಯವಹಾರ ಇಟ್ಟುಕೊಳ್ಳದೇ ಇರುವುದರಿಂದ ಬೇರೇ ಸಮಾನದರ್ಜೆಯ ಮಂತ್ರಿಗಳಿಗೆ ಯಾವುದೋ ಕೆಲಸಮಾಡಿಕೊಡಿರೆಂದು ಕೇಳುವಾಗ ’ಮಾಮೂಲಿ’ ಕೊಡುವುದು ಸಾಧ್ಯವಾಗದೇ ಕೇವಲ ನ್ಯಾಯಯುತವಾಗಿ ಕೇಳುತ್ತಾರೆ. ಹೀಗೆ ಬದುಕುವವರನ್ನು ಬೇರಾವ ಮಂತ್ರಿಗಳೂ ಮೂಸಿಯೂ ನೋಡುವುದಿಲ್ಲ;ಬದಲಾಗಿ ಮೂಲೆಗುಂಪುಮಾಡಿ ಬೇಡದ ಖಾತೆಯನ್ನು ಜಡಿದು ಕೂರಿಸುತ್ತಾರೆ!

ಅಮೇರಿಕಾದಂಥ ರಾಷ್ಟ್ರ ಬಲಿಷ್ಠವಾಗಿರುವುದು ಅಲ್ಲಿನ ರಾಜಕೀಯ ನೀತಿಯಿಂದ. ಮಿಕ್ಕೆಲ್ಲಾ ಜೀವನಶೈಲಿಗೆ ಅವರನ್ನು ನೋಡಿ ಕಲಿಯುವ ನಮ್ಮ ಜನ ರಾಜಕೀಯವನ್ನೂ ಅವರನ್ನೇ ನೋಡಿ ಕಲಿಯಬಹುದಿತ್ತು. ದಿವಾಳಿಯೆದ್ದಾಗಲೂ ಜಗತ್ತನ್ನು ನಿಯಂತ್ರಿಸುವ ತಾಕತ್ತಿದ್ದರೆ ಅದು ಅಮೇರಿಕಾಕ್ಕೆ ಮಾತ್ರ ಎಂಬುದನ್ನು ರಾಜಾರೋಷವಾಗಿ ಹೇಳಬೇಕಾಗಿದೆ. ದಿವಾಳಿಯೇಳುವುದಕ್ಕೆ ಅಲ್ಲಿನ ರಾಜಕೀಯ ವಿದ್ಯಮಾನ ಕಾರಣವಲ್ಲ, ಬದಲಾಗಿ ಅವರ ಅಸಮರ್ಪಕ ಆರ್ಥಿಕ ಠೇವಣಿಯೋಜನೆಗಳು ಕಾರಣ ಅಲ್ಲವೇ? ಇಡೀ ದೇಶದಲ್ಲಿ ಆಳುವ ಒಂದು ಪಕ್ಷ ಮತ್ತು ವಿರೋಧಿ ಸ್ಥಾನದಲ್ಲಿ ಇನ್ನೊಂದು ಪಕ್ಷ ಇದ್ದರೆ ಈ ರೀತಿ ದಿನವೂ ಗಬ್ಬುನಾರುವ ಪರಿಸ್ಥಿತಿಯ ನಿರ್ಮಾಣವಾಗುತ್ತಿರಲಿಲ್ಲ. ಇಲ್ಲಿ ಇಂದಿ ಸ್ವಾತಂತ್ರ್ಯ ಹೆಚ್ಚಾಗಿ ಮನೆಗೊಂದು ಪಕ್ಷ, ಕೇರಿಗೊಂದು, ಊರಿಗೊಂದು, ತಾಲೂಕಿಗೊಂದು ಹೀಗೇ ಸಾವಿರಾರು ಪಕ್ಷಗಳು ಅಣಬೆಕೊಡೆಗಳಂತೇ ರಾತ್ರೋರಾತ್ರಿ ಹುಟ್ಟಿ ತಂಬುಕಟ್ಟಿ ನಿಲ್ಲುತ್ತವೆ. ಅವರವರಲ್ಲೇ ಯಾವಾರ್ಗಲೋ ಹೊಂದಾಣಿಕೆ ಯಾವಾಗಲೋ ವಿಭಜನೆ ಅಂತೂ ’ಕಾರ್ಯಾವಾಸಿ ಕತ್ತೇಕಾಲು’ ಎನ್ನುವ ಗಾದೆಯ ನೆನಪಾಗುತ್ತದೆ. ಹಲವಾರು ತೇಪೆಗಳಿಂದ ಯಾವುದೇ ಮೌಲ್ಯಗಳಿಲ್ಲದೇ ಹೊಂದಾಣಿಕೆಮಾಡಿಕೊಂಡ ’ದುಪ್ಟಿ’ ಥರದ ಸಮ್ಮಿಶ್ರ ಪಕ್ಷಗಳು ಅಧಿಕಾರ ಲಾಲಸೆಯಿಂದ ಕಾಲನ್ನೆಳೆಯುವುದು ಕಾಣುತ್ತಿದ್ದರೂ ಪ್ರಜೆಗಳು ಮತ್ತದೇ ನೂರಾರು ಪಕ್ಷಗಳನ್ನು ಅನುಮೋದಿಸುತ್ತಿರುವುದು ಖೇದದ ವಿಷಾದದ ಸಂಗತಿಯಾಗಿದೆ. ಈಗ ಯಾವುದೇ ಪಕ್ಷವೆಂಬುದು ಇದ್ದರೆ ಅದು ಬರೇ ಬೋರ್ಡಿನಲ್ಲಿಮಾತ್ರ! ಇವತ್ತು ಅಲ್ಲಿರುವವರು ನಾಳೆ ಇನ್ನೆಲ್ಲೋ ಇರುತ್ತಾರೆ. ದೇಶೋದ್ಧಾರಕ್ಕಾಗಿ ಬಡವರಿಗೆ ಸೈಕಲ್ ತೋರಿಸಿದವರು ಅದೇ ಸೈಕಲ್ ಪಂಕ್ಚರ್ ಆದಾಗ ’ಕೈಬಿಟ್ಟು’ ಫಸಲಿನಾಶೆಗೆ ಹುಲ್ಲುಹೊತ್ತ ಮಹಿಳೆಯ ಪಾದಹಿಡಿಯುತ್ತಾರೆ...ಮತ್ತೆ ನಾಳೆ ಅದನೂ ಕೈಬಿಟ್ಟು "ತವರಿಗೆ ಮರಳಿದ ಸಂತೋಷ" ಎನ್ನುತ್ತಾ ಓರೆಬಾಯಲ್ಲೇ ನಗುತ್ತಾರೆ! ಇಷ್ಟೆಲ್ಲಾ ನೋಡುವಾಗ ನನಗನಿಸಿದ್ದು ಟಿವಿ ನೈನ್ ನವರ ಡೈಲಾಗು "ಹೀಗೂ ಉಂಠೇ ! "

ದಿನಕಳೆದ ಹಾಗೇ ದಿನಕಳೆಯಲೇ ಆಗದ ಪರಿಸ್ಥಿತಿ ನಿರ್ಮಾಣಮಾಡಿಕೊಳ್ಳುತ್ತಿರುವ ನಮ್ಮ ಪ್ರಜೆಗಳು ಬೆಳೆದು ನಿಂತ ಬಲಾಢ್ಯ ಭೂತವಾದ ಭಾರತೀಯ ’ಪ್ರಜಾಪ್ರಭುತ್ವ’ ಕ್ಕೆ ಬುದ್ಧಿಕಲಿಸುವರೇ ತಿಳಿಯದಾಗಿದೆ. ಕಾಲನಗರ್ಭದಲ್ಲಿ ಕಳೆದ ಮಣ್ಣಾದ ಉತ್ತಮ ರಾಜಮಹಾರಾಜರೇ ಮರಳಿಬಂದು ರಾಜಕೀಯವನ್ನು ನಡೆಸಿದರೇ ಚೆನ್ನ ಎನಿಸುತ್ತಿದೆ.

Friday, January 21, 2011

ನಾಟ್ಯಮಯೂರಿಯ ಬಯಸಿ

ರಾಜಾರಾವಿವರ್ಮ ಕೃತ ಚಿತ್ರ ಋಣ : ಅಂತರ್ಜಾಲ

ನಾಟ್ಯಮಯೂರಿಯ ಬಯಸಿ


ಇದೊಂದು ಹೊಸಪ್ರಯೋಗ, ಮೂಲ ಭಾವನೆಗಳಿಗೆ ಧಕ್ಕೆಬಾರದ ರೀತಿಯಲ್ಲಿ ಒಂದೇ ಕವನದ ಆದಿ-ಅಂತ್ಯ ಪ್ರಾಸಗಳ ಜುಗಲ್ ಬಂದಿ, ತಮ್ಮೆಲ್ಲರ ಓದಿಗೆ ಅರ್ಪಿಸುತ್ತಿದ್ದೇನೆ:


-೧-

ರಂಗದೆದುರಿದ್ದೆನ್ನ ನೋಡಿ ನಕ್ಕಾ ಗಿಣಿಯೇ
ರಂಗು ಹಚ್ಚಿದೆಯಲ್ಲ ನನ್ನ ಎದೆಗೆ !
ಮಂಗಳದ ನರ್ತನದಿ ಹಲವು ಮನಗಳ ಕದ್ದು
ಭಂಗತಂದಿಡುತ ಓಡಿದೆಯಲ್ಲ ಒಳಗೆ !

/

ನೀ ನಕ್ಕು ನಲಿನಲಿದು ಕುಣಿದಾಗ ಆ ರಂಗ
ಹಚ್ಚಿಬಿಟ್ಟಿತು ಎದೆಗೆ ಹೊಸದೊಂದು ರಂಗ
ಹಲವು ಮನಗಳ ಕದ್ದೆ ನರ್ತಿಸುತ ಬಹಿರಂಗ
ಓಡಿ ಪರದೆಯ ಹಿಂದೆ ತಂದಿಟ್ಟೆ ಭಂಗ

-೨-

ಚಂಗನೇ ಜಿಗಿಯುತ್ತ ಜಿಂಕೆ ಸಾರಂಗಗಳ
ಅಂಗಾಂಗ ಹಾವಭಾವದಲಿ ತೋರಿಸುತಾ
ಮಂಗನಂತಾಗಿರುವ ನನ್ನಂಥ ಕೆಲವರೆಡೆ
ಭಂಗಿಯಲಿ ನಕ್ಕಪರಿ ಎಲ್ಲೋ ಸೆಳೆಯುತಾ

/

ಚಂಗನೇ ಜಿಗಿಯುತ್ತ ಜಿಂಕೆಗಳು ಸಾರಂಗ
ತೋರುತ್ತ ಹಾವಭಾವದಲವುಗಳಂಗ
ನನಂಥ ಕೆಲವರು ಮೈಮರೆತು ಬರಿ ಮಂಗ
ಸೆಳೆಯಿತೆಲ್ಲೋ ನಿನ್ನ ನಗೆ ಭಂಗಿ ಸಂಗ

-೩-

ಮುಂಗಾಲ ನೀವುವಾ ಮುದುಕರನು ಹರೆಯದೆಡೆ
ಬೆಂಗಾವಲಲಿ ತಂತು ತುಂಟ ನರ್ತನವು
ಸಂಗಾತಿಯಾದರೆ ಸಾವಿರದ ಹೊನ್ಕೊಡುವೆ
ಮುಂಗಡವೇ ಇಸಿದುಕೋ ಇಗೋ ಹೃದಯದೊಡವೆ !

/

ಮುಂಗಾಲ ನೀವುವಾ ಮುದುಕರಾದರು ರಂಗ
ನಿನ್ನ ಮೋಡಿಯು ನರ್ತಿಸುತಲಂತರಂಗ !
ಸಾವಿರದ ಹೊನ್ಕೊಡುವೆ ಸೇರು ನನ್ನಯ ಸಂಗ
ಹೃದಯದೊಡವೆಯು ಮುನ್ನ ಪ್ರೀತಿಯತರಂಗ

-೪-
ಕಂಗು ಮಾವಿನ ತಳಿರು ಚಪ್ಪರವ ಹಾಕಿಸುವೆ
ಬಂಗಾರ ಬಣ್ಣದಾ ಕಾಗದವ ಹಚ್ಚಿ
ತಿಂಗಳೊಪ್ಪತ್ತಿನಲಿ ನಾನೂ ನೀನೊಂದಾಗೆ
ಬಂಗಾಳಕೊಲ್ಲಿಯಲಿ ಸಂಗಮಿಸಿದಂತೆ

/

ಚಪ್ಪರವ ಹಾಕಿಸುವೆ ತಳಿರು ಮಾವು-ಕಂಗ
ಹಚ್ಚಿ ಬಂಗಾರದಾ ಚಿತ್ರ ಚದುರಂಗ
ತಿಂಗಳೊಪ್ಪತ್ತಿನಲಿ ನಾವಾಗೆ ಅರ್ಧಾಂಗ
ಬಂಗಾಳಕೊಲ್ಲಿಯಲಿ ನದಿ-ಶರಧಿ ಸಂಗ !


Saturday, January 15, 2011

ಅಪಾನ ವಾಯು ಪುರಾಣವು !


ಅಪಾನ ವಾಯು ಪುರಾಣವು !

ಅಷ್ಟಾದಶ ಪುರಾಣಗಳನ್ನೂ ಮೀರಿ ವಿಶ್ವವ್ಯಾಪಕತ್ವವನ್ನೂ ಅತೀ ಮಹತ್ವವನ್ನೂ ಪಡೆದ ಅಪಾನವಾಯು ಪುರಾಣವನ್ನು ಕೇಳುವುದಕ್ಕೆ ಯೋಗಬೇಕು! ಅದರಲ್ಲೂ ಹಬ್ಬಹರಿದಿನಗಳ ಮಾರನೇದಿನ ಇಂತಹ ಪುಣ್ಯ ಕಥಾನಕಗಳನ್ನು ಕೇಳುವುದು ಜಗತ್ತಿಗೇ ಆನಂದದಾಯಕ! ಹತ್ತಾರುಜನ ಸೇರಿದ ಸಭೆಯಲ್ಲಿ ಮಂಡಿಸಿದ್ದ ತಿಪ್ಪಾ ಭಟ್ಟರು ಸ್ವಲ್ಪ ವಾಲುತ್ತ " ಈಗ ಹೊಟ್ಟೆ ಸ್ವಲ್ಪ ಸಡಿಲಾಯ್ತು" ಎನ್ನುತ್ತಾ ಪುರಾಣವನ್ನಾರಂಭಿಸಿದಾಗ ಮಗ್ಗುಲಲ್ಲಿ ಕಾಡುತ್ತಿರುವ ಕೆಟ್ಟ ಕುತೂಹಲದಿಂದ ಆಲಿಸಲು ಕೂತ ನನಗೆ ಕಿವಿನೆಟ್ಟಗಾಯಿತು. ಸಭಾಲಕ್ಷಣವೆಂಬಂತೇ ಅದೂ ಇದೂ ಶ್ಲೋಕಗಳನ್ನು ಹೇಳುತ್ತಾ ಪುರಾಣಿಕರಾದ ಭಟ್ಟರು ತಮ್ಮ ಪುಸ್ತಕರಹಿತ ವ್ಯಾಖ್ಯಾನಕ್ಕೆ ಅನುವುಗೊಂಡು ಶಾಲನ್ನು ಎಳೆದೆಳೆದು ಹೆಗಲಿನ ಎರಡೂ ಪಕ್ಕಕ್ಕೆ ಬರುವಂತೇ ಸರಿಪಡಿಸಿಕೊಂಡರು.

" ವಾಯುಗಳಲ್ಲಿ ಹಲವಾರು ಥರದ ವಾಯುಗಳಿವೆ" --ಅದು ಸಹಜಬಿಡಿ ನಮಗೆ ವಿಜ್ಞಾನಿಗಳೂ ಹೇಳಿದ್ದಾರೆ.

ಭಟ್ಟರು ಮುಂದುವರಿಸುತ್ತಿದ್ದರು--
" ಅವುಗಳಲ್ಲಿ ಪ್ರಾಣವಾಯು, ಆಪಾನವಾಯು, ಯಾನವಾಯು, ಉದಾನವಾಯು,ಸಮಾನವಾಯು ಇತ್ಯೇತ್ಯಾದಿ ವಾಯುಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ. ಇವುಗಳಲ್ಲಿ ಯಾವೊಂದು ವಾಯುವಿರದಿದ್ದರೂ ನಡೆಯುವುದಿಲ್ಲ. ಇವತ್ತು ನಾವು ಅಪಾನವಾಯುವಿನ ಮಹತ್ವವನ್ನು ತಿಳಿದುಕೊಳ್ಳೋಣ.

ದೇಹದ ಒಳಗೆ ಆಹಾರ ಸೇರಿ ವೈಶ್ವಾನರರೂಪೀ ಅಗ್ನಿ ಅದನ್ನು ಪಚನಗೊಳಿಸಿದ ಮೇಲೆ ಅಲ್ಲಿ ಉದ್ಭವವಾಗುವುದು ಅಪಾನವಾಯು. ಸೇವಿಸಿದ ಆಹಾರವನ್ನು ಅವಲಂಬಿಸಿ ಈ ವಾಯುವಿನ ಉತ್ಫತ್ತಿಯ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. ಆದರೆ ಮಗುವಿನಿಂದ ಹಿಡಿದ ಮುದುಕರವರೆಗೂ ಇದೂ ಅಲ್ಲದೇ ಪ್ರತೀ ಸಸ್ತನಿಯ ದೇಹದಲ್ಲೂ ಈ ಅಪಾನವಾಯುವಿನ ಸನ್ನಿಧಾನವಿದೆ. ಕೆಲವರಲ್ಲಿ ಅದರ ನಿತ್ಯಾನುಸಂಧಾನವಿದ್ದರೆ ಇನ್ನೂ ಕೆಲವರಲ್ಲಿ ಅದರ ಅನುಷ್ಠಾನ ಸ್ವಲ್ಪ ಕಡಿಮೆಮಟ್ಟದಲ್ಲಿರುತ್ತದೆ. ಈ ಅಪಾನವಾಯು ಟಾಟಾ ಬಿರ್ಲಾಗಳನ್ನಾಗಲೀ ’ಅನಿಲ’ ಅಂಬಾನಿ ’ಅನಿಲ’ ಕುಂಬ್ಳೆ ಗಳನ್ನಾಗಲೀ ಬೇರೇ ಬೇರೇ ಎಂದು ತಿಳಿಯುವುದಿಲ್ಲ. ಇದಕ್ಕೆ ಎಲ್ಲರೂ ಒಂದೇ! ಸಾಫ್ಟ್ ವೇರ್ ಅಭಿಯಂತರನೂ ಒಂದೇ ರಸ್ತೆಬದಿಯ ಮೆಕಾನಿಕ್ಕೂ ಒಂದೇ. ಜೀವನದಲ್ಲಿ ಬಡವ ಶ್ರೀಮಂತರೆಂಬ ಬೇಧವೆಣಿಸದ ಯಾವುದಾದರೂ ಇದ್ದರೆ ಅದು ಅಪಾನವಾಯು ಮಾತ್ರ! ಹೀಗಾಗಿ ಅಪಾನವಾಯುವಿಗೆ ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ಬಿರುದನ್ನೂ ಕೊಡಬಹುದು.

ಅಪಾನವಾಯುವಿನ ಉಪಸ್ಥಿತಿ ಎಲ್ಲಾಕಡೆಗಿದ್ದರೂ ಯಾರೂ ಅದನ್ನು ಹೇಳಲು ಹೆದರುತ್ತಾರೆ. ಯಾಕೋ ಬಹಳ ಸಂಕೋಚಪಡುತ್ತಾರೆ. ನಮ್ಮ ಜನಕ್ಕೆ ಈ ವಿಷಯದ ಬಗ್ಗೆ ಮಾತನಾಡಲು ಎಲ್ಲಿಲ್ಲದ ಮರ್ಯಾದೆ ಅಡ್ಡಬರುತ್ತದೆ! ತಮ್ಮ ಸ್ಥಾನಮಾನ ಏನಾಗಬಹುದೆಂಬ ಅನಿಸಿಕೆಯಿಂದ ಇದರ ಬಗ್ಗೆ ಮಾತನಾಡುವುದೇ ಇಲ್ಲ! ಕೊಳೆತ ಕುಂಬಳಕಾಯಿಯನ್ನು ಎಷ್ಟುದಿನ ಬಚ್ಚಿಡಲು ಸಾಧ್ಯವಾಗುತ್ತದೆ ? ಅದರ ವಾಸನೆ ಸುತ್ತಲ ಪ್ರದೇಶಕ್ಕೆಲ್ಲಾ ಹಬ್ಬಲೇಬೇಕಾಗುತ್ತದೆ ಅಲ್ಲವೇ ? ಹೇಳಿದರೂ ಹೇಳದಿದ್ದರೂ ಕುಂಬಳಕಾಯಿ ಕೊಳೆತಿರುವುದು ಹೇಗೋ ಎಲ್ಲರಿಗೂ ತಿಳಿದುಹೋಗುತ್ತದೆ! ಅದೇ ರೀತಿ ಈ ಅಪಾನವಾಯುವಿನ ಮಹಿಮೆ ಅಪಾರ. ಇದರ ಮಹಿಮೆಯನ್ನು ನೀವೆಲ್ಲಾ ಅನುಭವಿಸಿದವರೇ! ಆದರೂ ಇನ್ನೊಮ್ಮೆ ಪುರಾಣಿಕರ ಬಾಯಿಂದ ಕೇಳುವ ಆಸೆಯಾಗಿ ಹೀಗೆ ಕುಳಿತಿದ್ದೀರಿ. ಹೇಳುತ್ತೇನೆ ಕೇಳಿ:

ಶರೀರದಲ್ಲಿ ಅಪಾನವಾಯುವಿನಾ ಜನನವಾದಮೇಲೆ ಅದು ಹೊರಬರಲೇ ಬೇಕು. ಶರೀರದ ಒಳಗೇ ಅದು ಸುತ್ತುತ್ತಿರುವಾಗ ಆಗುವ ಅನಾಹುತ ಅಷ್ಟಿಷ್ಟಲ್ಲ. ಇದನ್ನೇ ನಮ್ಮ ವೈದ್ಯಶಾಸ್ತ್ರಿಗಳು ಆಂಗ್ಲ ಭಾಷೆಯಲ್ಲಿ ’ಗ್ಯಾಸ್ ಟ್ರಬಲ್’ ಅಂತಾರೆ. ಕೆಲವರಲ್ಲಿ ಈ ಅಪಾನಯವು ರಕ್ತನಾಳಗಳಲ್ಲಿ ಸೇರಿಕೊಂಡು ಆಗಾಗ ಅಡಚಣೆಯುಂಟುಮಾಡುವುದಲ್ಲದೇ ಶರೀರದ ಒಳಾಂಗಗಳಲ್ಲಿ ಅದರ ಅಟಾಟೋಪ ಬಹಳ. ಜಠರದಲ್ಲಿ ಹುಟ್ಟಿ ಕರುಳಿನಲ್ಲಿ ಹರಿದು ಹಾಗೇಯೇ ಕೆಲವೊಮ್ಮೆ ಮೇಲೂ ಕೆಳಗೂ ಶರೀರದ ಉದ್ದಗಲಕ್ಕೂ ಓಡಾಡುವ ಅಪಾನಯಾವು ಕೆಲವರಲ್ಲಿ ವಿನಾಕಾರಣ ತೇಗುವುದರಮೂಲಕ ಹೊರಹೋದರೆ ಹಲವರಲ್ಲಿ ಇದು ವಾಮಮಾರ್ಗದಿಂದ ಹೊರಟುಹೋಗುತ್ತದೆ-ಇಲ್ಲೇ ನೋಡಿ ಸ್ವಲ್ಪ ಅವಾಂತರ. ಈ ವಾಮಮಾರ್ಗದಿಂದ ಹೊರಹೋಗುವ ಅಪಾನವಾಯು ತನ್ನಪಾಡಿಗೆ ತಾನು ಹೋಗದೇ ಅನೇಕಾವರ್ತಿ ತಾನು ಹೋದರೂ ತನ್ನ ಮೆರವಣಿಗೆಯ ಘಾಟನ್ನು ಪರಿಸರದಲ್ಲಿ ಸ್ವಲ್ಪಕಾಲ ಗಾಢವಾಗಿ ಉಳಿಸಿಹೋಗಿಬಿಡುತ್ತದೆ!

ವಾಕರಿಕೆ, ತಲೆನೋವು, ಹೊಟ್ಟೆಯಲ್ಲಿ ಉರಿ, ಸುಸ್ತು, ಹೊಟ್ಟೆಯಲ್ಲಿ ಕಲ್ಲುಹಾಕಿದಹಾಗೇ ಆಗುವುದು, ಆಹಾರವೇ ಬೇಡವೆನ್ನಿಸುವುದು, ತಲೆತಿರುಗುವ ಅನುಭವವಾಗುವುದು ಇವೆಲ್ಲಾ ಅಪಾನವಾಯುವಿನ ಪ್ರಭಾವೀ ಲಕ್ಷಣಗಳು. ಜಾತಿ,ಮತ,ಲಿಂಗ, ವಯಸ್ಸು ಯಾವುದರ ಬೇಧವೂ ಇಲ್ಲದೇ ನಿತ್ಯವೂ ಎಲ್ಲರಲ್ಲೂ ಆಗಾಗ ತನ್ನ ಅಸ್ಥಿತ್ವವನ್ನು ತೋರಿಸುವ ಅಪಾನವಾಯು ಹಲವರ ಕೆಂಗಣ್ಣಿಗೆ ಬಲಿಯಾಗುವುದೂ ಇದು. ಆಕಾರದಲ್ಲಿ, ಬಣ್ಣದಲ್ಲಿ ಕೈಗೆ ಸಿಕ್ಕದ -ಕಣ್ಣಿಗೆ ಧಕ್ಕದ ಇದು ತಪ್ಪಿಸಿಕೊಳ್ಳುವುದು ಇದೇ ಕಾರಣದಿಂದ. ಇಲ್ಲಾಂದರೆ ಅನೇಕಜನ ಇದನ್ನು ಬಿಡುತ್ತಿದ್ದರೇ ? ಹಿಡಿದು ಬಡಿಯುತ್ತಿದ್ದರು ! ಸ್ನೇಹಿತರನೇಕರು ಸೇರಿ ಇಂತಹ ಅಪ್ರತಿಮ ಅಪಾನವಾಯುವನ್ನು ಶ್ಲೋಕದ ಮೂಲಕ ಹೊಗಳಿದ್ದಾರೆ -

ಉತ್ತಮೋ ಡುರುಕೋ ರಾಜೋ
ಮಧ್ಯಮೋ ಟರಟರಾಟುರಿ |
ಅಧಮೋ ಪೀಂ ಪೀಂ ಪೂಂ ಪೂಂ
ಪುಸ್ ಪುಸ್ ಪ್ರಾಣಘಾತಕಃ ||

ವಾಮಮಾರ್ಗದಲ್ಲಿ ಓಡಿಹೋಗುವ ಅಪಾನವಾಯುವನ್ನು ಅದರ [ಕುವಾಸನೆಯ]ಪ್ರತಿಶತ ಪರಿಣಾಮವನ್ನು ಅವಲೋಕಿಸಿ ಭಾಗಿಸಿದ್ದಾರೆ. ಡುರುಕ್ ಡುರುಕ್ ಎನ್ನುವುದು ಉತ್ತಮವೆಂತಲೂ ಟರಾಟುರಿ ಎನ್ನುವುದು ಮಧ್ಯಮವೆಂತಲೂ ಪೀಂ ಪೀಂ ಪೂಂ ಪೂಂ ಎನ್ನುವುದು ಅಧಮವೆಂತಲೂ ಮತ್ತು ಪುಸ್ಸೆನ್ನುತ್ತಾ ಹೊರಡುವುದು ಪ್ರಾಣಘಾತಕ ಅಂದರೆ ಪ್ರಾಣವನ್ನೇ ಹಿಂಡುವಷ್ಟು ಘನಘೋರವೆಂತಲೂ ಅಪಾನವಾಯುವಿಹಾರಿಗಳು ವರ್ಣಿಸಿದ್ದಾರೆ. ಶ್ಲೋಕವನ್ನು ನೆನಪಿಟ್ಟುಕೊಳ್ಳಿ: ಅಪಾನವಾಯುವಿನ ಧ್ಯಾನಕ್ಕೆ ಅನುಕೂಲವಾಗುತ್ತದೆ!

ಕರ್ಮಠ ಬ್ರಾಹ್ಮಣರಿಗೆ ಒಂದು ಕಠಿಣ ಪರೀಕ್ಷೆಯೇನು ಗೊತ್ತೇ ? ಅವರು ವ್ರತನಿಷ್ಠರಾಗಿರುವಾಗ ಮತ್ತು ಪೂಜೆ, ಹೋಮ, ಶ್ರಾದ್ಧ ಇವುಗಳಲ್ಲೆಲ್ಲಾ ನಿರತರಾಗಿರುವಾಗ ಶರೀರ ಸಹಜವಾಗಿ ಉದ್ಭವವಾಗುವ ಈ ಅಪಾನವಾಯುವನ್ನು ವಾಮಮಾರ್ಗದಿಂದ ಹೊರಬಿಡುವಂತೇ ಇಲ್ಲ. ಇದು ಕಟ್ಟಪ್ಪಣೆ. ಅಕಸ್ಮಾತ್ ಅವರು ಹೊರಬಿಟ್ಟರೆ ಅವರು ಅದರ ಪಾಪದ ಫಲವನ್ನು ಅನುಭವಿಸಬೇಕಾಗುತ್ತದೆ. ಅದಕ್ಕೇ ಹಲವಾರು ಪೂಜೆ-ಪುನಸ್ಕಾರಗಳ ಮುನ್ನಾದಿನದಿಂದಲೇ ಉಪವಾಸಾದಿ ವ್ರತಗಳಲ್ಲಿ ಅವರು ತಮ್ಮನ್ನು ನಿಯಮಿಸಿಕೊಂಡು ದೇಹವನ್ನೇ ದಂಡಿಸುತ್ತಾರೆ.

ಹೆಂಗಸರಲ್ಲಿ ಅಪಾನವಾಯು ಕಮ್ಮಿಯೇನಿಲ್ಲ. ಹೆಂಗಸರು ಎಲ್ಲಾರಂಗದಲ್ಲೂ ಇದ್ದಾರಲ್ಲವೇ? ಇಲ್ಲೂ ಅವರಿಗೆ ನ್ಯಾಯ ಸಲ್ಲಬೇಕು. ಹಳೆಯ ಮನೆಗಳಲ್ಲಿ ಕೀಂ ಕೂಂ ಎಂದು ಕಿರುಚುವ ಬಾಗಿಲುಗಳನ್ನು ಅವರು ನೋಡಿಕೊಂಡಿರುತ್ತಾರೆ. ಅತಿಥಿಗಳೆದುರು ಅನಿವಾರ್ಯವಾಗಿ ವಾಮಮಾರ್ಗದಲ್ಲಿ ಬಾಂಬು ಹೊರಬಿದ್ದರೆ ಅಂತಹ ಬಾಗಿಲುಗಳನ್ನು ತಳ್ಳಿಬಿಡುತ್ತಾರೆ. ಏಕಕಾಲಕ್ಕೆ ಎರಡೂ ಘಟಿಸುವುದರಿಂದ ಅತಿಥಿಗೆ ಅದರ ಪರಿಣಾಮ ನಂತರ ಮೂಗಿನ ಮಟ್ಟಕ್ಕೆ ’ಬೆಳೆದುನಿಂತಾಗ’ ಮಾತ್ರ ಗೊತ್ತಾಗುತ್ತದೆ. ಆದರೂ ಅತಿಥಿ " ನೀವು ವಾಸನೆ ಬಿಟ್ಟಿರೇ ? " ಎಂದು ಕೇಳಲು ಬರುತ್ತದೆಯೇ ? ಹೀಗಾಗಿ ಹೆಂಗಳೆಯರು ಈ ವಿಷಯದಲ್ಲಿ ಸೇಫು.

ಕೆಲವು ಸಭೆಗಳಲ್ಲಿ ದೊಡ್ಡವರು ಮಾಡಿದ ಅಪರಾಧಕ್ಕೆ ಮಕ್ಕಳು ಅಪವಾದ ಹೊರುವುದಿದೆ. ಹಾಗೊಂದು ಸಭೆಯಲ್ಲಿ ನಿಂತು ಇನ್ನೇನು ಮಾತನಾಡಬೇಕೆಂದಿದ್ದ ಮಹನೀಯರಿಗೆ ಮೀಟರುಗಟ್ಟಲೇ ’ಟರಾಟುರಿ’ ಬಂದುಬಿಟ್ಟಿತು! ಎದುರಿಗೆ ಅಕಸ್ಮಾತ್ ಅನಿರೀಕ್ಷಿತವಾಗಿ ಬಾಲಕನೊಬ್ಬ ಬಂದುಹೋದ. ಆಗ ಅವರು ಆತನನ್ನೇ ಅದಕ್ಕೆ ಗುರಿಮಾಡಿ " ಹೋಗೊ ಹೊಲ್ಸ್ ಹುಡುಗ " ಎಂದು ಬಿಟ್ಟರು. ಪಾಪದ ಕೂಸಿಗೆ ಅರ್ಥವಾಗದೇ ಮಿಕಿಮಿಕಿ ನೋಡುತ್ತಾ ಸಭೆಯ ಹಿಂಭಾಗಕ್ಕೆ ಸರಿದುಹೋಯಿತು ಆ ಬಡಪಾಯಿ! ಇಂತಹದು ದೊಡ್ಡವರು ಮಾಡುವ ಅಕ್ಷಮ್ಯ ಅಪರಾಧವಾಗಿದೆ.

ಇನ್ನು ಪ್ರಯಾಣ ಹೊರಟಾಗ ಸಾರ್ವಜನಿಕ ಬಸ್ಸುಗಳಲ್ಲಿ, ಪಡಿತರಕ್ಕೋ ದೇವರದರ್ಶನಕ್ಕೋ ಸಿನಿಮಾಟಿಕೆಟ್ಟಿಗೋ ಅಥವಾ ಸಿನಿಮಾ ಮಂದಿರಗಳ ಒಳಗೋ ಅಪಾನವಾಯುವಿನ ಮತ್ತೇರಿದ ಕುಣಿತ ನಡೆದೇ ಇರುತ್ತದೆ. ಯಾರೂ ಹೇಳಲೂ ಕೇಳಲೂ ಸಾಧ್ಯವಾಗದ ಸನ್ನಿವೇಶ! ’ಧೂಮಪಾನ ನಿಷೇಧಿಸಿದೆ’ ಎಂದು ಬೋರ್ಡು ಹಾಕಿದಹಾಗೇ ’ಹೂಸು ಬಿಡುವುದು ದಂಡನಾರ್ಹ ಅಪರಾಧ’ ಎಂಬ ಕಟ್ಟಳೆಯನ್ನು ತರಲಾಗುವುದಿಲ್ಲ. ಇದು ಮನುಷ್ಯ ಸಹಜ ಮತ್ತು ಅದುಮಿಟ್ಟುಕೊಳ್ಳಲಾರದ ’ಅದಮ್ಯ ಆಂದೋಲನ’ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಆಂದೋಲನಕ್ಕೆ ಸಮಿತಿಯೂ ಇಲ್ಲ, ಅಧ್ಯಕ್ಷರಾಗಲೀ ಕಾರ್ಯದರ್ಶಿಗಳಾಗಲೀ ಇಲ್ಲವೇ ಇಲ್ಲ. ಕರಾರುಪತ್ರಗಳಾಗಲೀ ನಿಬಂಧನೆಗಳಾಗಲೀ ಇರುವುದಿಲ್ಲ. ನಿರ್ಭಿಡೆಯವಾಗಿ ನಡೆಯುತ್ತಿರುವ ಈ ಆಂದೋಲನಕ್ಕೆ ಎಲ್ಲರೂ ಸದಸ್ಯರೇ. ಸದಸ್ಯತ್ವಕ್ಕೂ ಪದ್ಧತಿಯೂ ಇಲ್ಲ ರದ್ಧತಿಯೂ ಇಲ್ಲ! ಎಂತಹ ಅಪರಿಮಿತ ಪ್ರೇಮದ ಸಂಘ ನೋಡಿ!ಫಲಾನುಭವಿಗಳ ಅವಸ್ಥೆ ಮಾತ್ರ ಹೇಳತೀರ! ಅಪಾನವಾಯುವನ್ನು ತಹಬಂಧಿಯಲ್ಲಿಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಅದನ್ನು ವಿಸರ್ಜಿಸದೇ ಇರುವ ಅನೇಕ ಸುಸಂಕೃತರಿದ್ದಾರೆ. ಅಂಥವರಿಗಂತೂ ಅವರಿರುವ ಜಾಗಗಳಲ್ಲಿ ಅಪಾನವಾಯು ಪ್ರಯೋಗವಾಗಿಬಿಟ್ಟರೆ ಅಶ್ರುವಾಯು ಪ್ರಯೋಗವಾದಂತೇ ಅವರು ಚಡಪಡಿಸುತ್ತಾರೆ!

ಕೊನೆಯದಾಗಿ ಮಠಮಾನ್ಯಗಳಲ್ಲಿ ಅನೇಕ ಜನ ಅದೂ ಇದೂ ಕಡಲೇಕಾಳಿನದೋ ಹಿಟ್ಟಿನದೋ ಪ್ರಸಾದ ತಿಂದು, ತೊಗರಿ ಬೇಳೆಯ ಹುಳಿಯನ್ನೋ ಹೆಸರುಬೇಳೆಯ ತೊವ್ವೆಯನ್ನೋ ಉಂಡು ಅಡ್ಡಾದಾಗ ಅಲ್ಲಿ ನೋಡಬೇಕು -- ಯುನಿಟಿ ಇನ್ ಡೈವರ್ಸಿಟಿ! ಯಾವ ಕಳ್ಳನೇ ಬಂದರೂ ಆ ಬಾಂಬು ಗರ್ನಾಲುಗಳ ಸದ್ದಿಗೆ ಮಾರುದೂರದಿಂದಲೇ ಓಡಿಹೋಗಿಬಿಡುತ್ತಾನೆ. ಇಲ್ಲಿ ಪರಸ್ಪರ ಪ್ರಶ್ನೋತ್ತರಗಳು ನಡೆಯುತ್ತಿರುವ ಹಾಗೇ ಒಬ್ಬರಾದಮೇಲೆ ಒಬ್ಬರು ’ಉಪಾಸನೆ’ ನಡೆಸುತ್ತಲೇ ಇರುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಕೆಲವು ಭಾರತೀಯರಲ್ಲಿ ಈ ’ಹೊಗೆಯಾಡುವ ಫಿರಂಗಿ’ಗಳಿದ್ದರೂ ’ಬ್ರಿಟಿಷ್ ಫಿರಂಗಿ’ಗಳ ಮುಂದೆ ನಮ್ಮ ಫಿರಂಗಿಗಳು ಏನೂ ಅಲ್ಲ ಎನ್ನುವುದು ತಮಾಷೆಯೆನಿಸುತ್ತದೆ.


ಫಲಶೃತಿ

ಸಮಾಜದಲ್ಲಿ ಸದಾ ಹೊಗೆಯಾಡುವ ಫಿರಂಗಿಗಳಿದ್ದಹಾಗೇ ಇರುವ ವಾಮದ್ವಾರಗಳನ್ನು ಇಟ್ಟುಕೊಂಡವರಲ್ಲಿ ಒಂದು ವಿನಂತಿ: ಅಪಾನವಾಯು ಸಹಜವೇ ಆಗಿದ್ದರೂ ಬದುಕೇ ಅಸಹ್ಯವೆನಿಸುವಷ್ಟು ಅವುಗಳ ಅನುಸಂಧಾನ ಬೇಡ. ಆಯುರ್ವೇದದಲ್ಲಿ ಊಟ-ತಿಂಡಿಗಳನ್ನು ಮಾಡುವವರಿಗೂ ತಯಾರಿಮಾಡುವವರಿಗೂ ಒಂದು ಕ್ರಮವನ್ನು ಹೇಳಿದ್ದಾರೆ. ಯಾವುದು ಅಪಾನವಾಯು ಜನಕವೋ ಅದರ ದಮನಕ್ಕೋಸ್ಕರ ಇನ್ನೊಂದು ವಿರುದ್ಧಗುಣ ತತ್ವದ ಆಹಾರವನ್ನು ಜೊತೆಯಲ್ಲಿ ಉಪಯೋಗಿಸಲು ಹೇಳುತ್ತಾರೆ. ಉದಾಹರಣೆಗೆ ಹೋಳಿಗೆ ತಿಂದಾಗ ಅಪಾನವಾಯು ಜಾಸ್ತಿ ಉದ್ಭವಾವಾಗದಂತೇ ಅದಕ್ಕೆ ತುಪ್ಪಸವರಿ ತಿನ್ನಲು ಹೇಳಿದರೆ, ಪುದಿನಾ ಮತ್ತು ಶುಂಠಿ ಇವೆಲ್ಲಾ ಅಪಾನವಾಯು ಮರ್ದಕಗಳಾಗಿವೆ-ಇವುಗಳ ಚಟ್ನಿಯನ್ನು ಸೇವಿಸಬಹುದಾಗಿದೆ. ಹೀಗಾಗಿ ಈ ಅಸಂಘಟಿತ ಸಂಘಟನೆಯ ಆಂದೋಲನಕ್ಕೆ ಕಡಿವಾಣ ಹಾಕಲು ಆಯುರ್ವೇದ ಪದ್ಧತಿಯನ್ನು ಅನುಸರಿಸಿ. ಆಗ ’ಗ್ಯಾಸ್ ಟ್ರಬಲ್’ ಕೂಡ ಕಮ್ಮಿಯಾಗುತ್ತದೆ, ಸಮಾಜದಲ್ಲೂ ’ಗ್ಯಾಸ್ ನಿಂದಾಗುವ ಟ್ರಬಲ್’ ಕಡಿತಗೊಳ್ಳುತ್ತದೆ!

ಮಂಗಲವು ಅಪಾನವಾಯುಗೆ ಲಿಂಗಬೇಧ ರಹಿತಗೆ |
ಅಂಗಳದಿ ನಿತ್ಯವೂ ನಲಿವಗೆ ಭಂಗವಿಲ್ಲದೆ ಬೆಳದಗೇ ||

Friday, January 14, 2011

ಹರಿವ ತೊರೆಗಳು ಬರಿದಾದ ಕಥೆಯು !


ಹರಿವ ತೊರೆಗಳು ಬರಿದಾದ ಕಥೆಯು !


ಮಿತ್ರಾ ರವಿ, ನಮಸ್ಕಾರಗಳು.

ಉಭಯಕುಶಲೋಪರಿ ನಿತ್ಯವೂ ಸಾಂಪ್ರತ! ವ್ಯತ್ಯಾಸವಿಷ್ಟೇ ನೀನು ದಿನವೂ ಉದಿಸಿ ದಿನವೂ ಮುಳುಗಿ ಮತ್ತದೇ ಕ್ರಿಯೆಯಲ್ಲಿರುತ್ತಾ ಜಗತ್ತಿನ ಪ್ರತಿ ಜೀವಸಂಕುಲಕ್ಕೇ ಮಿತ್ರನಾಗಿದ್ದೀಯ, ನಾವೋ ಹುಟ್ಟಿದಾಘಳಿಗೆಯಿಂದ ದಿನವೂ ಮುದುಕಾಗುತ್ತಾ ನಡೆದಿದ್ದೇವೆ ಬಿಟ್ಟರೆ ಜಗತ್ತಿನ ಬಗ್ಗೆ ನಿನ್ನಷ್ಟು ಕಾಳಜಿ ಇಟ್ಟುಕೊಂಡವರಲ್ಲ.

ವಿಜ್ಞಾನಿಗಳು ಹೇಳಿದರು ನೀನು ಕರಗುತ್ತಿದ್ದೀಯ ಒಂದುದಿನ ಪೂರ್ತಿ ಕರಗೇ ಹೋಗುತ್ತೀಯ ಅಂತ! ನನಗೆ ಆ ಮಾತಿನಲ್ಲಿ ಸ್ವಾರಸ್ಯಕಾಣಿಸಲಿಲ್ಲ. ನೀನು ಇನ್ನೂ ಪ್ರಖರವಾಗುತ್ತಲೇ ನಡೆಯುತ್ತೀಯ ಬಿಡು. ನಿನ್ನ ಹತ್ತಿರ ಬರಲು ಮನುಜರಾದ ನಮಗೆ ಅವಕಾಶ ಸಿಕ್ಕಿದ್ದರೆ ನಿನ್ನನ್ನು ನಾವೇ ಕೊಯ್ದು ಒಯ್ದು ಮನೆಯಲ್ಲಿ ದೀಪಕ್ಕಾಗಿ ಬಳಸುತ್ತಾ ಕರಗಿಸಿಬಿಡುತ್ತಿದ್ದೆವು! ಆದರೆ ನಿನ್ನ ಅಗಾಧ ಪರ್ಸನಾಲಿಟಿ ಇದೆಯಲ್ಲಾ ಅದು ಹತ್ತಿರ ಬರುವುದಿರಲಿ ಸರಿಯಾಗಿ ನೋಡಲೂ ಬಿಡುವುದಿಲ್ಲ. ಹೀಗಾಗಿ ನಿರುಪಾಯರಾಗಿ ಕುಳಿತಿದ್ದೇವೆ. ನಮ್ಮಲ್ಲೇ ವಿಜ್ಞಾನಿಗಳೆನಿಸಿಕೊಂಡವರಿಗೆ ತಿನ್ನಲಾರದ ದ್ರಾಕ್ಷಿ ಹುಳಿಯಾಗಿದೆ!

ಹೌದೂ ಕೇಳುವುದಕ್ಕೇ ಮರೆತೆ ನಿನ್ನೊಳಗೇನಿದೆ ಮಹನೀಯ ? ನಾವೆಲ್ಲಾ ಹಲವು ಬ್ಯಾಟರಿಗಳನ್ನೋ ಜನರೇಟರ್ ಗಳನ್ನೋ ಬಳಸಿದರೂ ಬೆಳಕನ್ನು ಪಡೆಯುವುದು ಕೇವಲ ಎಣಿಕೆಯಮೇಲೆ. ಆದರೆ ದಿನವೂ ಅದೇ ಬೆಳಕು ಹರಿಸುವ, ಅದರೊಂದಿಗೆ ಶಾಖನೀಡುವ ಅಲ್ಲದೇ ನಿನ್ನ ಕಿರಣಗಳ ರೂಪದಿಂದ ಕಿಣ್ವಗಳನ್ನು ಆಯಾ ಜೀವಿಗಳಲ್ಲಿ ಸೃಷ್ಟಿಸುವ ನಿನಗೆ ಅಷ್ಟೆಲ್ಲಾ ಶಕ್ತಿ ಎಲ್ಲಿಂದ ಬಂತು ? ಹೇಳಲಾರೆಯಾ ? ಹಾಗಂತ ನಸುಕಿನಲ್ಲಿ ನೀನು ಉದಿಸುವಾಗ ಮತ್ತು ಸಾಯಂಕಾಲ ನೀನು ಸಮುದ್ರದಲ್ಲಿ ಮುಳುಗಿಹೋಗುವಾಗ[!]ನಾವು ನಿನ್ನನ್ನು ಕೆಂಪಗೆ ಕಾಣುತ್ತೇವೆ. ಆಗಮಾತ್ರ ನಿನ್ನನ್ನು ನೋಡುತ್ತೇವೆ, ಆದರೂ ನಮಗೆ ನಿನ್ನ ಗಾತ್ರದ ಲೆಕ್ಕ ಹಾಕುವುದು ಸಾಧ್ಯವೇ ಇಲ್ಲ. ಕಣ್ಣು ಮೂಗು ಕೈಕಾಲು ಏನೂ ಇಲ್ಲದ ನಿನಗೆ ಪೂರ್ವದ ದಿಕ್ಕು ಇಲ್ಲೇ ಇದೆ ಮತ್ತು ಪಶ್ಚಿಮ ಆಕಡೆಗೇ ಇದೆ ಎಂದು ಯಾರು ಹೇಳಿಕೊಡುತ್ತಾರೆ ಮಾರಾಯ? ಒಂದೇಒಂದು ದಿನ ಉತ್ತರಕ್ಕಾಗಲೀ ದಕ್ಷಿಣಕ್ಕಾಗಲೀ ಉದಯಿಸಲಿಲ್ಲವಪ್ಪಾ, ಹಾಗಂತ ಪಶ್ಚಿಮದಿಂದಲೂ ಉದಯಿಸಲಿಲ್ಲ. ಸದಾ ಒಂದೇ ದಿಕ್ಕು-ಪೂರ್ವ! ನಿನ್ನ ಈ ಕರ್ತವ್ಯಶೀಲ ಜೀವನ ಅಪೂರ್ವ!

ವೇದಾಂತಿಗಳು ನಿನ್ನನ್ನು ಸೂರ್ಯನಾರಾಯಣನೆಂದರು, ಭಾಸ್ಕರನೆಂದರು, ದಿವಾಕರ, ಪ್ರಭಾಕರ ಹೀಗೆಲ್ಲಾ ಹೇಳಿಕೊಳ್ಳುತ್ತಾ ನಮಿಸಿದರು, ಸೂರ್ಯನಮಸ್ಕಾರವೆಂಬ ವ್ಯಾಯಾಮವನ್ನೇ ಹುಟ್ಟುಹಾಕಿ ಹೊಸ ಆಯಾಮ ಕಂಡುಕೊಂಡರು. ಆದರೂ ’ಮಿತ್ರಾ’ ಎಂದರಲ್ಲ ಅದೇ ನನಗೆ ಬಹಳ ಹಿಡಿಸಿತು. ಯಾಕೆ ಗೊತ್ತೋ ಒಂದು ದಿನ ನೀ ಬರದಿದ್ದರೆ, ನೀನಿರದಿದ್ದರೆ ನಮಗೆ ಬದುಕಲೇ ಸಾಧ್ಯವಿಲ್ಲ ಇಲ್ಲಿ. ನಾವು ಬದುಕಬೇಕೆಂದಿದ್ದರೆ ನೀನು ಬರಲೇಬೇಕು. ಹೀಗಾಗಿ ನಾವೆಲ್ಲಾ ಜೀವಸಂಕುಲಗಳ ಸಂಘ ನಿನ್ನನ್ನು ಸನ್ಮಾನಿಸಿದರೂ ಅದು ನಿನ್ನ ಘನತೆಗೆ ತೀರಾ ಕಮ್ಮಿಯೇ ಬಿಡು. ಆದರೂ ಸನ್ಮಾನಿಸಲು ನೀನು ಬಿಡುವುದಿಲ್ಲವಲ್ಲ.

ಹುಟ್ಟಿದಾಗಿನಿಂದ ಹಲವು ಬದಲಾವಣೆಗಳನ್ನು ಸುತ್ತಲ ಪರಿಸರಗಳಲ್ಲಿ ಕಂಡಿದ್ದೇವೆ. ಹಿರಿಯರು ಕಾಲನ ಕರೆಯಲ್ಲಿ ಕಾಲವಾದರು. ಕಿರಿಯರು ಬೆಳೆಯುತ್ತಾ ಹಿರಿಯರಾದರು. ಬೀಜ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಮರವಾಗಿ,ಅದರಲ್ಲಿ ಮೊಗ್ಗರಳಿಸಿ ಹೂವಾಗಿ, ಕಾಯಾಗಿ, ಹಣ್ಣಾಗಿ ಆ ಹಣ್ಣಿನಲ್ಲಿ ಮತ್ತೆ ಬೀಜರೂಪ ಕಂಡೆವು! ಕಾಂಡವ ವನವನ್ನು ಅಗ್ನಿ ತನ್ನ ಕೆನ್ನಾಲಿಗೆಯಿಂದ ಆಹಾರವಾಗಿ ಸ್ವೀಕರಿಸಲು ಸಾಕಷ್ಟು ಸಮಯ ಹಿಡಿಯಿತಂತೆ. ಆದರೆ ಇಂದಿನ ನಮ್ಮ ರಾಜಕಾರಣಿಗಳು, ಕಾಡುಗಳ್ಳರು ಇಡೀ ವಿಶ್ವದ ಕಾಡನ್ನೆಲ್ಲಾ ನೈವೇದ್ಯವಾಗಿ ಸ್ವೀಕಾರಮಾಡುವ ವೇಗವನ್ನು ನೋಡಿದರೆ ಕೆಲವೇ ವರ್ಷಗಳಲ್ಲಿ ಕಾಡು ಎಂಬುದು ಕಥೆಯಾಗುತ್ತದೆ!

೩೦ ವರ್ಷಗಳಲ್ಲಿ ಆದ ಪರಿಸರದ ಬದಲಾವಣೆಯೇ ನಮ್ಮನ್ನೆಲ್ಲಾ ತಲ್ಲಣಗೊಳಿಸಿದೆ ಮಿತ್ರಾ. ನಾವೆಲ್ಲಾ ಚಿಕ್ಕವರಿದ್ದಾಗ ಬೇಸಿಗೆಯೇ ಇದ್ದರೂ ಹರಿವತೊರೆಗಳಿದ್ದವು. ಅಲ್ಲಿಂದ ಹರಿವ ನೀರನ್ನು ಹಲವು ಮೃಗ,ಪಕ್ಷಿ,ಪಶುಗಳು ಕುಡಿಯುವುದರ ಜೊತೆಗೆ ಕೃಷಿಕರೂ ಅಲ್ಲಲ್ಲಿ ಬಳಸುತ್ತಿದ್ದರು. ನೂರಾರು ಜಾತಿಯ, ಬಣ್ಣದ, ಗಾತ್ರದ, ರೂಪದ ಹಕ್ಕಿಗಳು ಆ ತೊರೆಗಳ ಬದುವಿನಲ್ಲಿ ಇರುವ ಮರಗಳಲ್ಲಿ ಗೂಡುಕಟ್ಟಿಕೊಂಡು ಸ್ವಚ್ಛಂದವಾಗಿ ವಿಹರಿಸುತ್ತಾ ಆರಾಮಾಗಿದ್ದವು. ಬರುಬರುತ್ತಾ ಆ ಎಲ್ಲಾ ಹರಿವ ತೊರೆಗಳು ಬರಿದಾದವು, ಅವೂ ಕಾಲಗರ್ಭದಲ್ಲಿ ಕಥೆಯಾದವು. ಗಿಡಮರಗಳು ಕಡಿಯಲ್ಪಟ್ಟವು, ಅವುಗಳನ್ನಾಶ್ರಯಿಸಿದ ಜೀವಸಂಕುಲಗಳು ಅಲ್ಲಿಂದ ಎಲ್ಲಿಗೋ ಹೋದವೋ ನಾಶವಾದವೋ ತಿಳಿಯದಾದೆವು-ಅಂತೂ ಕಾಣದಾದವು.

ಓಡಾಟಕ್ಕೆ ರಸ್ತೆಬೇಕು ನಿಜ. ನಮ್ಮ ಸಂಖ್ಯೆಯ ಅತೀವ ಹೆಚ್ಚಳದಿಂದ ಮತ್ತು ನಮ್ಮ ಓಡಾಟದ ಹುಚ್ಚಿನಿಂದ ತಿರುಗಾಟ ಜಾಸ್ತಿಯಾಯಿತು. ತಿರುಗಲು ವಾಹನಗಳು ಬಂದವು, ಎಲ್ಲಾ ಕೆಲಸಗಳಿಗೂ ಯಂತ್ರಗಳು ಬಂದವು. ನಮ್ಮ ಅವಸರಗಳಿಗೆ ತಕ್ಕಂತೇ ವಾಹನಗಳ ಭರಾಟೆ ಅತಿಯಾಗಿದ್ದರಿಂದ ಈಗ ಇದ್ದ ರಸ್ತೆಗಳೆಲ್ಲಾ ಆಗಲಗಲ ಅಗಲಗಲವಾಗುತ್ತಾ ಚತುಷ್ಪಥ, ಪಂಚಪಥ, ಷಷ್ಟಪಥ, ಅಷ್ಟಪಥಗಳಾಗುತ್ತಾ ಮುಂದೊಮ್ಮೆ ಜಾಗವೆಲ್ಲಾ ರಸ್ತೆಗಳಿಗೇ ಮೀಸಲಾಗುವ ಕಾಲವನ್ನು ನಾವೇ ಕೈಯಾರೆ ತಂದುಕೊಳ್ಳುವೆವು. ಕೇವಲ ೩೦ ವರ್ಷಗಳ ಹಿಂದೆ ಜೀವನಕ್ರಮದಲ್ಲಿ ಇಷ್ಟೆಲ್ಲಾ ತ್ವರಿತಗತಿಯಿರಲಿಲ್ಲ. ಜನರಲ್ಲಿ ಪರಸ್ಪರ ಅನ್ಯೋನ್ಯತೆಯಿತ್ತು. ಯಂತ್ರಗಳ ಬಳಕೆ ತೀರಾ ಕಮ್ಮಿಯಿತ್ತು. ಜನರು ಉಪಜೀವನಕ್ಕೆ ಬೇಕಾಗಬಹುದಾದ ಆಹಾರ-ವ್ಯವಹಾರಗಳಲ್ಲಷ್ಟೇ ತೊಡಗಿದ್ದರು.

ಏನಾಯಿತು ಎಂದು ಚಕಿತರಾಗಿ ನೋಡುತ್ತಿರುವಂತೇ ಜೀವನದ ಮೌಲ್ಯಗಳೇ ಬುಡಮೇಲಾದವು. ಝಣ ಝಣ ಕಾಂಚಾಣಕ್ಕೆ ತೀರಾ ಪ್ರಾಮುಖ್ಯತೆ ಕೊಡಲಾಯಿತು. ಮಾನವನ ಗುಣ-ಸ್ವಭಾವಗಳಿಗೆ ಯಾವ ಮಹತ್ವವೂ ಕಾಣಲಿಲ್ಲ. ಎಲ್ಲರಿಗೂ ತಾನು ಬೇಗ ಬೇಗ ಹಣವನ್ನು ಬಾಚಿ ಸಿರಿವಂತನಾಗಬೇಕು ಎಂಬ ಹಪಹಪಿಕೆ ಬಂತು. ನಮ್ಮಲ್ಲೇ ಹಲವರು ಅಡ್ಡದಾರಿಯಲ್ಲಿ ದುಡ್ಡುಮಾಡಲು ತೊಡಗಿದೆವು, ಗಣಿಗಳನ್ನು ಮಾಡಿದೆವು, ಕಾಡುಕಡಿದೆವು, ತೊರೆನೆರೆಗಳನ್ನೆಲ್ಲಾ ಮುಚ್ಚಿಹಾಕಿ ಕಟ್ಟಡಗಳನ್ನೋ ಕೈಗಾರಿಕಾ ವಸಾಹತುಗಳನ್ನೋ ಕೃಷಿಭೂಮಿಯನ್ನೋ ಆಗಿ ಪರಿವರ್ತಿಸಿದೆವು. ಪರಿಸರದಮೇಲೆ ಈ ನಮ್ಮ ದಾಳಿ ನಿತ್ಯವೂ ನೀನು ಉದಯಿಸಿದಷ್ಟೇ ಸತ್ಯವಾಯಿತು. ಅಳಿದುಳಿದ ಜೀವಸಂಕುಲಗಳು ತಮ್ಮ ಉಳಿವಿಗಾಗಿ ಇರುವ ಚೂರುಪಾರು ಕಾಡುಗಳಲ್ಲಿ ಸೇರಿಕೊಂಡವು. ಆದರೆ ಅಲ್ಲಿ ಅವುಗಳಿಗೆ ಆಹಾರವೇ ಸಾಲದಾಯಿತು!

ದಿನವೂ ಉದಯಿಸುವ ಮತ್ತು ಎಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುವ ನೀನು ಇದನ್ನೆಲ್ಲಾ ಗಣಿಸದಾದೆಯೋ ಅಥವಾ ಗಣಿಸಿಯೂ ಸುಮ್ಮನಾದೆಯೋ ತಿಳಿಯದಾಯಿತು. ವರ್ಷಕ್ಕೆ ಎರಡಾವರ್ತಿ ಪಥಬದಲಿಸುವ ನಿನ್ನ ಪರಿಕ್ರಮವೇನೋ ಸರಿಯೇ ಆದರೆ ಇನ್ನೆಷ್ಟು ದಿನ ಈ ಭೂಮಿಯಲ್ಲಿ ಮಿಕ್ಕುಳಿದ ಜೀವಸಂಕುಲಗಳಿಗೆ ಅವಕಾಶ ಎಂಬುದು ತಿಳಿಯದಾಯಿತಾಲ್ಲ ಮಿತ್ರಾ. ಈಗಿನ ತೀವ್ರತರ ಬದಲಾವಣೆಗಳನ್ನು ಕಂಡರೆ ಭೂಮಿ ಗುಂಡಗಿದೆ ಎಂದು ಬೋಳುಭೂಮಿಯನ್ನು ಕಾಣುವ ದಿನ ಹತ್ತಿರವೇ ಬರುತ್ತಿದೆಯೇನೋ ಅನಿಸುತ್ತಿದೆ. ಅದೇನೋ ಓಝೋನ್ ಪದರ ಅಂತ ನಮ್ಮಲ್ಲೇ ಕೆಲವರು ಒಂದಷ್ಟು ದಿನ ಕುಣಿದಾಡಿದರು. ಯಾವುದು ಓಝೋನ್ ಪದರವೋ ಯಾವುದು ಅತ್ಯಾವಶ್ಯಕವೋ ಅದರ ಅರಿವನ್ನು ನಾವು ಪಡೆಯುವ ಮೊದಲೇ ಝಣ ಝಣದ ಝಣತ್ಕಾರಕ್ಕೆ ನಮ್ಮನ್ನೇ ನಾವು ಮಾರಿಕೊಳ್ಳಹತ್ತಿದೆವು!

ನಿನ್ನ ಕಿರಣಗಳು ಸುಂದರ ಹಸಿರು ಗಿಡಮರಗಳಮೇಲೆ, ಹುಲ್ಲುಗಾವಲಿನಮೇಲೆ ಬೀಳುವುದನ್ನು ನೋಡಬೇಕು, ಅಲ್ಲಿ ಬಣ್ಣಬಣ್ಣದ ಜೀವಸಂಕುಲಗಳು ಆಡುವುದನ್ನು, ಬದುಕುವುದನ್ನು ಕಾಣಬೇಕೆಂಬ ನಮ್ಮ ಕೆಲವರ ಅಪೇಕ್ಷೆ ಕೇವಲ ಮನಸ್ಸಿನಲ್ಲಿಯೇ ಉಳಿಯಿತು. ದೂರದಿಂದಲೇ ತನ್ನ ಪಥವನ್ನು ಬದಲಿಸುವೆನೆಂದು ಟಾಟಾ ಮಾಡಿ ಹೋಗುವ ನಿನ್ನಲ್ಲಿ ಒಂದೇ ಪ್ರಶ್ನೆ ಮಿತ್ರಾ .......ಬರಿದಾಗಬಹುದಾದ ಈ ಭೂಮಿಯಲ್ಲಿ ಅಳಿದುಹೋದ ಗಿಡಮರಗಳ, ಜೀವಸಂಕುಲಗಳ ಮರುಹುಟ್ಟು ಸಾಧ್ಯವೇ? ಯುಗದ ಪಾದದಲ್ಲೇ ಇರುವಾಗ ಇಷ್ಟಾದರೆ ಯುಗಾಂತ್ಯವಾಗುವ ಹೊತ್ತಿಗೆ ಇನ್ನೇನು ಉಳಿಯಲು ಸಾಧ್ಯ? ತುಂಬೇ ಗಿಡಕ್ಕೆ ಏಣಿಹಾಕುವ ಆಕಾರಕ್ಕೆ ಮಾನವ ರೂಪತಳೆಯುತ್ತಾನೆ-ಆಗ ಈ ಯುಗಾಂತ್ಯವಾಗುತ್ತದೆ ಎನ್ನುತ್ತವೆ ವೇದಾಂತಗಳು! ಆದರೂ ಗೆಳೆಯಾ ನಿನ್ನಲ್ಲಿ ಒಂದು ಅರಿಕೆ.... ನಮ್ಮ ಜೀವನದಲ್ಲಿ ಒಂದಷ್ಟು ಗಿಡಮರಗಳೂ ಉಳಿದ ಜೀವಸಂಕುಲಗಳೂ ಅಳಿಯದಂತೇ ಏನಾದರೂ ನಿನ್ನದಾದ ಬೇಲಿವ್ಯವಸ್ಥೆ ಮಾಡುತ್ತೀಯಾ ? ಋಣವಿದ್ದರೆ ಮತ್ತೆ ನಿನ್ನನ್ನೂ ನಿನ್ನ ಹೊಳೆಯುವ ಎಳೆಯ ಕಿರಣಗಳನ್ನೂ ಸದಾ ಆ ಹಸಿರುದ್ಯಾನಗಳ ಮೇಲೆ ಕಾಣಬಯಸುತ್ತೇವೆ, ಕೇಳಿಸಿಕೊಂಡೆಯಲ್ಲ? ನಮಸ್ಕಾರ.

Thursday, January 13, 2011

ನೀನಿಲ್ಲದೇ ನನಗೇನಿದೇ ?


ನೀನಿಲ್ಲದೇ ನನಗೇನಿದೇ ?

ಸೂರ್ಯನ ಮೇಲೊಂದು ಕವನ ಬರೆಯಲು ಹೊರಟೆ
ಆ ಯಾರಲ್ಲಿ ? ಪೆನ್ನು ಕಾಗದ ಕೊಂಡು ಬನ್ನಿ
ಯಾರೂ ಬರಲಿಲ್ಲ! ಅರ್ಥವಾಯಿತು ನಾನು ರಾಜನಲ್ಲವಲ್ಲ
ರಾತ್ರಿಯೂ ಸುಮಾರೇ ಆಗಿಹೋಗಿತ್ತು ಹೇಗೂ ಇದೆ
ನಾಳೆ ಬೆಳಿಗ್ಗೆ ಬರೆದರಾಯಿತೆಂದು
ಮುಸುಕೆಳೆದು ಮಲಗಿದರೆ ಬೆಳಿಗ್ಗೆ ಕೆಟ್ಟ ಚಳಿ
ಕಟಕಟ ಕಟಕಟ ಎನ್ನುವ ಹಲ್ಲುಗಳನ್ನು
ಹೊತ್ತು ಅದು ಹೇಗೆ ಬರೆಯಲಿ ?

ಬಂದೇ ಬಿಡುತ್ತಾನಪ್ಪ ಅಷ್ಟು ಬೇಗ
ಆತನಿಗೆ ಚಳಿಯೇ ಇಲ್ಲವೇ ?
ಚಾದರ ಕಂಬಳಿ ಯಾವುದೂ ಇಲ್ಲ
ಲುಂಗಿ ಉಟ್ಟಿದ್ದೂಕಾಣೆ ಅಂಗಿ ಹಾಕಿದ್ದೂ ಕಾಣೆ
ದುಂಡಗೇ ಇರುತ್ತಾನೆ
ಬೆಳಿಗ್ಗೆನೇ ಹೀಗೆ ಹೇಳಿದ್ದು ಕೇಳಿ
ಕೆಂಪಗೆ ಮುಖ ಊದಿಸಿಕೊಂಡ ಹಾಗಿದ್ದನಪ್ಪ !

ಹೊತ್ತಾಯಿತು ಇನ್ನಾದರೂ ಬರೆಯೋಣ
ಹತ್ತು ಹೋಗಿ ಹನ್ನೆರಡು ಹೊಡೆದರೂ
ಮತ್ತದೇ ಕೊಸರುವಿಕೆ: ಸ್ವಲ್ಪ ತಡೆದು ಬರೆಯುವ !
ತಲೆಬಾಗಿಲಲ್ಲಿ ನಿಂತು ನೋಡುತ್ತೇನೆ
ಆತ ನನ್ನನ್ನೇ ದಿಟ್ಟಿಸಿ ನೋಡುತ್ತಾ
ಮೇಲೆ ಮೇಲೆ ಬಂದು ಕೋಪದಿಂದ
ಬುಸುಗುಟ್ಟುವ ಹಾಗಿದ್ದ: ಬಾಯಿಕಾಣಲಿಲ್ಲ
ಹಲ್ಲೂ ತೋರಲಿಲ್ಲ ಕಣ್ಣು ದೊಡ್ಡದುಮಾಡಿದನೋ
ಚಿಕ್ಕದು ಮಾಡಿದನೋ ಕಣ್ಣಿದೆಯೋ ಇಲ್ಲವೋ
ಯಾವುದೂ ತಿಳಿಯದಾಯಿತಲ್ಲ !
ನನ್ನ ಕಣ್ಣುಮಾತ್ರ ಆತನನ್ನು ನೋಡದಾಯ್ತು!
ಹೋಗಲಿ ಬಿಡಿ ಇನ್ನೂ ಸಮಯವಿದೆ
ನಮಗೇನು ೩ ಘಂಟೆಯ ಪರೀಕ್ಷೆಯೇ ?



ಮೂಡು ಬರಲೇ ಇಲ್ಲ!
ಏನಂತ ಬರೆಯುವುದು ? ’ರೊಟ್ಟಿಯ ಹಾಗೇ
ಗುಂಡಗೆ ಇರುವ ಹಳದಿ ಬಣ್ಣದ’ ಎಂದಷ್ಟೇ
ಬರೆದಿದ್ದೆ ಮತ್ತೆ ಕಂಡೆ ಆತನ ಬಣ್ಣ ಕೆಂಪು!
ಈಗ ಆತ ನನಗೆ ಕಣ್ಣು ಬಿಟ್ಟು
ತನ್ನ ಕಣ್ಣೇ ನೋಯ್ದಾಗ ಸಣ್ಣಗಾಗಿ ಹೋಗಿದ್ದ
ಸಾಕು ಎಂದುಕೊಂಡು ದೂರ ಸಾಗುತ್ತಿದ್ದ
ಸೀತಾರಾಮ ಭಟ್ಟರ ತೋಟದ ಆಚೆ
ಶಂಕರ ಶೆಟ್ರ ಶೇಂಗಾ ಬೇಣದ ಇಳಿಜಾರ
ಸಂದಿಯಲ್ಲಿ ಮತ್ತೆ ಸಾಗುವಾನಿ ಮರಗಳ
ಗುಂಪಿನ ಹಿಂದೆ ಇಳಿದಿಳಿದು ಅಡಗುತ್ತಿದ್ದ!
ಅವಿತೂ ಕಂಡೂ ಕೂಕಿಯಾಡುತ್ತಿದ್ದ!
ಕವನ ಬರೆಯಬೇಕೆನ್ನುವಷ್ಟರಲ್ಲಿ
ಕೈಬೀಸಿದರೂ ನಿಲ್ಲದೇ ಓಡಿಹೋದ!
ಮತ್ತೆ ಆತನಿಲ್ಲದ ರಾತ್ರಿ ಅದುಹೇಗೆ ಬರೆಯಲಿ ?

Wednesday, January 12, 2011

ಕಥೆಯಾದರಿವರು ನಮ್ಮ-ನಿಮ್ಮ ನಡುವೆ


ಕಥೆಯಾದರಿವರು ನಮ್ಮ-ನಿಮ್ಮ ನಡುವೆ

ಬಾಲ್ಯದ ಹಲವು ದಿನಗಳನ್ನೂ ಜನರನ್ನೂ ನೆನೆದಾಗ ಕೆಲವು ವ್ಯಕ್ತಿಗಳನ್ನು ಮರೆಯಲು ಸಾಧ್ಯವಾಗುವುದಿಲ್ಲ. ಹಾಗಂತ ಅವರು ನನಗೇನೋ ಸಹಾಯ ಮಾಡಿದವರಲ್ಲ. ಬದಲಾಗಿ ಅವರ ವಿಧಿಲಿಖಿತವೇ ವಿಚಿತ್ರವಾಗಿದ್ದು ಅವರ ಬದುಕಿನ ದಿಕ್ಕೇ ಬದಲಾಗಿ ಅವರೇ ಬದಲಾಗಿ ಹೋದ ವ್ಯಕ್ತಿಗಳು. ಇಂತಹ ಜನರಲ್ಲಿ ಕೆಲವರನ್ನು ನಿಮ್ಮ ಮುಂದೆ ನೆನಪಿಸಿಕೊಳ್ಳುವ ಪ್ರಯತ್ನ ಹೀಗಿದೆ--


ಮಳ್ಳ ಗಣಪ

ಗಣಪ ಎಂಬಾತ ಒಳ್ಳೆಯ ವ್ಯಕ್ತಿ, ಜಾತಿಯಿಂದ ಒಕ್ಕಲಿಗ. ಸಪೂರ ಶರೀರದ ಮೃದು ಮನಸ್ಸಿನ ಸಜ್ಜನ. ಅವನಾಯಿತು, ಅವನ ಕೆಲಸವಾಯಿತು. ಹೆಂಡತಿ-ಮಕ್ಕಳು ಎಲ್ಲರೊಟ್ಟಿಗೆ ಸರಳ ಜೀವನವನ್ನು ನಡೆಸುತ್ತಿದ್ದ ಆತನಿಗೆ ಅದೇಕೋ ಏನೋ ಮನೆಯೇ ಬೇಡವಾಯಿತು. ನಿಂತಲ್ಲಿ ನಿಲ್ಲಾಲಾರ, ಒಂದೆಡೆಗೇ ಬಹಳ ಹೊತ್ತು ಕೂರಲಾರ. ಕೆಲವೊಮ್ಮೆ ಮಾತ್ರ ಒಂಡೆಡೆಗೇ ಬಹಳ ಹೊತ್ತು ಕೂತುಬಿಡುತ್ತಿದ್ದ. ಊಟ ಸಿಕ್ಕಿದರೆ ಮೂರುದಿನಕ್ಕಾಗುವಷ್ಟನ್ನು ಒಮ್ಮೆಲೇ ತಿನ್ನುವ ಪರಿಪಾಠ! ಆಮೇಲೆ ಕೆಲವೊಮ್ಮೆ ದಿನಗಟ್ಟಲೇ ಉಪವಾಸ! ಆಗಾಗ ನಮ್ಮನೆಯ ಅಂಗಳದಲ್ಲಿ ಕಟ್ಟೆಯಮೇಲೆ ಠಿಕಾಣಿ. " ಗಣಪಾ, ಸ್ವಲ್ಪ ಆ ಕೆಲಸ ಇತ್ತಲ " ಎಂದು ಹಿರಿಯರು ಹೇಳಿದರೆ ಸಾಕು-ಆಸಾಮಿ ನಾಪತ್ತೆ! ಬಹಳ ಮಾರ್ಯಾದೆಯ ಮನುಷ್ಯ ಬೇರೆ. ಸಂಕೋಚವೂ ಕೂಡ ಇತ್ತು. ಆದರೂ ತಾಳಲಾರದ ಹಸಿವೆ ಮಾತ್ರ ಆತನನ್ನು ಹಲವರ ಮನೆಗಳಿಗೆ ಆಗಾಗ ಭೇಟಿಕೊಡುವ ಹಾಗೇ ಮಾಡುತ್ತಿತ್ತು. ಪಂಚೆ ಉಟ್ಟು ಅಂಗಿ ಧರಿಸಿ ಹೊರಟ ಗಣಪನಿಗೆ ಎಲ್ಲಿ ಸ್ನಾನವೋ, ಎಲ್ಲಿ ನಿದ್ದೆಯೋ ಒಂದೂ ಗೊತ್ತಿಲ್ಲ. ಮನೆಯಲ್ಲಿ ಹೆಂಡತಿ-ಮಕ್ಕಳು ನೋಡುವಷ್ಟು ನೋಡಿ ಹೇಳಿ-ಕೇಳಿ ಮಾಡಿ ಸಾಕಾಗಿ ಕೈತೊಳೆದುಕೊಂಡಿದ್ದರು.


ಚೀನ್ಕೋಡ ಆಚಾರಿ

ಅಡಿಕೆ ಹಾಳೆ ಮತ್ತು ಕತ್ತಿಯೊಂದಿಗೆ ಬರುತ್ತಿದ್ದ ಈ ಆಸಾಮಿ ಒಂದುಕಾಲದಲ್ಲಿ ಒಳ್ಳೆಯ ಬಡಿಗ-ಆಚಾರಿ[ಮರಗೆಲಸದವ] ಯಾವ ಘಳಿಗೆಯ ತಪ್ಪೋ ಇದ್ದಕ್ಕಿದ್ದಲ್ಲೇ ಚೀನ್ಕೋಡ್ ಆಚಾರಿ ನಗಲು ಆರಂಭಿಸಿದ. ಆತ ಯಾರನ್ನು ಕಂಡರೂ ಏನನ್ನು ಕಂಡರೂ ನಗುತ್ತಲೇ ಉಳಿದ. ಒಂದು ಕೈಲಿ ಅಡಿಕೆ ಹಾಳೆ ಇನ್ನೊಂದರಲ್ಲಿ ಕತ್ತಿ ! ಆಗಾಗ ಬರುತ್ತಿದ್ದ ಈತನನ್ನು ಕಂಡು ನಾವೆಲ್ಲಾ ಮಕ್ಕಳು ಹೆದರಿಕೊಳ್ಳುತ್ತಿದ್ದೆವು. ಆದರೆ ಆತ ನಿರುಪದ್ರವಿಯಾಗಿದ್ದ.


ಮಕ್ ಶೀತಸ ?

ಈತನ ಹೆಸರು ಗೊತ್ತೇಇಲ್ಲ. ಆದರೆ ಕೊಂಕಣಿ ಭಾಷೆಯಲ್ಲಿ ಮಾತನಾಡುತ್ತಿದ್ದ ಈತನಿಗೆ ಆತ ಪದೇ ಪದೇ ಬಳಸುತ್ತಿದ್ದ " ಮಕ್ ಶೀತಸ " ಎಂತಲೇ ಕರೆಯುತ್ತಿದ್ದರು. ಮಕ್ ಶೀತಸ " ನಂಗೆ ಅನ್ನ ಉಂಟಾ ? " ಎಂದರ್ಥವಂತೆ. ನಾವೆಲ್ಲಾ ತೀರಾ ಚಿಕ್ಕವರಾಗಿದ್ದು ಏನಾದರೂ ತರಲೆಮಾಡಿದರೆ ಅಮ್ಮ " ನಿನ್ನ ಮಕ್ ಶೀತಸಂಗೆ ಕೊಟ್ಟು ಬಿಡ್ತೇನೆ ನೋಡು " ಎನ್ನುತ್ತಿದ್ದರು. ಚಡ್ಡಿ-ಅಂಗಿ ಹಾಕಿಕೊಂಡು ಓಡಾಡುತ್ತಿದ್ದ ಆತ ಸತ್ಯನಾರಾಯಣ ಪೂಜೆ ಹಾಡು ಹೇಳು ಎಂದರೆ " ಸತ್ಯನಾರಾಯಣ ಕಾಜಾಯತಮ್ " ಎನ್ನುತ್ತಾ ಒಂದು ವಿಧದ ನರ್ತನ ಮಾಡುತ್ತಿದ್ದ. " ಅಣ್ಣಪ್ಪ ಗಾಡಸ ? " ಎನ್ನುವುದು ಆತನಾಡುತ್ತಿದ್ದ ಇನ್ನೊಂದು ಮಾತು. ಆತ ಎತ್ತಿನಗಾಡಿಯೊಂದನ್ನು ನಡೆಸುತ್ತಿದ್ದು ಅದನ್ನು ಯಾರೋ ಅಣ್ಣಪ್ಪ ತೆಗೆದುಕೊಂಡು ಹೋದನೆಂತಲೂ ಅದನ್ನು ಈತ ಸತತ ಹಾಗೆ ಹೇಳುತ್ತಿದ್ದನೆಂತಲೂ ಜನ ಅಂದುಕೊಳ್ಳುತ್ತಿದ್ದರು.


ಪೈ ಮಾಮ್

ವಿದ್ಯಾವಂತ ಮತ್ತು ಬುದ್ಧಿವಂತನಾದ ಪೈ ಎನ್ನುವ ವ್ಯಕ್ತಿ ಹರುಕು ಪ್ಯಾಂಟ್ ಮತ್ತು ಶರ್ಟ್ ಧರಿಸಿ ಬರುತ್ತಿದ್ದ. ಆತನಿಗೆ ಗೊತ್ತಿಲ್ಲದ ಕೃಷಿಕೆಲಸಗಳಿರಲಿಲ್ಲ. ಮನೆಯಲ್ಲಿ ಅಣ್ಣ-ತಮ್ಮಂದಿರ ನಡುವೆ ಯಾವುದೋ ಜಗಳವಾಗಿತ್ತೋ ಏನೋ! ಪಾಪ ಒಳ್ಳೆಯ ಮನುಷ್ಯನಾಗಿದ್ದ. ಬಂದರೆ ತುಸುಹೊತ್ತು ನಿಲ್ಲುವುದು ಏನಾದ್ರೂ ಕೊಟ್ಟರೆ ತಿನ್ನುವುದು ಮಾಡುತ್ತಿದ್ದ. ಆತನ ಎದುರು ಯಾರಾದರೂ ಕೆಲಸಮಾಡುತ್ತಿದ್ದರೆ ಆ ಕೆಲಸವನ್ನು ಹೇಗೆ ಚೆನ್ನಾಗಿ ಮಾಡಬಹುದು, ಹೇಗೆ ಬೇಗಮಾಡಬಹುದು ಎಂಬುದೆಲ್ಲವನ್ನೂ ಹೇಳಬಲ್ಲ ಬುದ್ಧಿವಂತ. ಆದರೆ ಮನಸ್ಸು ಯಾಕೋ ಮನೆಯ ವಾತಾವರಣದಿಂದ ವಿರಕ್ತವಾಗಿ ಈ ಸ್ಥಿತಿಯಾಗಿತ್ತು.


ಕುಲ್ಲೇಗದ್ದೆ ಮೊನ್ನ

ಕುಲ್ಲೇಗದ್ದೆ ಎಂಬುದೊಂದು ಚಿಕ್ಕ ಮಜರೆ. ಅಲ್ಲಿನ ಹವ್ಯಕ ಬ್ರಾಹ್ಮಣ ಆ ಮೊನ್ನ[ಮೂಕ]. ಆತನಿಗೆ ಮಾತು ಬರುತ್ತಿತ್ತು, ಆದರೂ ಮಾತನಾಡದ ಸ್ಥಿತಿ ತಲುಪಿದ್ದ! ಹತ್ತಾರು ಎಕರೆ ತೋಟವಿದ್ದ ಆತ ತೆಂಗಿನಕಾಯಿ ಕೀಳುವಾಗ ತೋಟದ ಬದುವಿನಲ್ಲಿ ಮೇಯುತ್ತಿದ್ದ ಆಕಳ ತಲೆಯಮೇಲೆ ಕಾಯಿ ಉದುರಿಬಿದ್ದ ಏಟಿನಿಂದ ಆಕಳು ಸ್ಥಳದಲ್ಲೇ ಸತ್ತುಹೋಯಿತಂತೆ. ಅಂದಿನಿಂದ ಆತ ಮನೆಯನ್ನು ಬಿಟ್ಟ. ಊರಿಂದೂರಿಗೆ ಪಯಣ. ದಾರಿಯಲ್ಲಿ ಯಾರಾದರೂ ತಿಂಡಿ ಏನಾದರೂ ಕೊಟ್ಟರೆ ಅವುಗಳನ್ನೆಲ್ಲಾ ಪಂಚೆಯಲ್ಲಿ ಕಟ್ಟುತ್ತಾ ಸಾಯಂಕಾಲವಾಗುವ ಹೊತ್ತಿಗೆ ಎಲ್ಲಾದರೂ ಸಿಗುವ ಒಂದು ಆಕಳಿಗೆ ಆ ಗಂಟನ್ನು ಬಿಚ್ಚಿ ತಿನ್ನಲು ಕೊಟ್ಟು ಕೈಮುಗಿಯುವುದು ಅಭ್ಯಾಸವಾಯಿತಂತೆ. ಚಿಕ್ಕ ಪಂಚೆ ಉಟ್ಟು ಬರುತ್ತಿದ್ದ. ಮೈಗೊಂದು ಕಸೆ ಅಂಗಿ ಕೆಲವೊಮ್ಮೆ ಇದ್ದರೂ ಹಲವೊಮ್ಮೆ ಇರುತ್ತಿರಲಿಲ್ಲ. ದನವನ್ನು ತನ್ನ ಕೈಯ್ಯಾರೆ ಸಾಯಿಸಿಬಿಟ್ಟೆನಲ್ಲಾ ಎಂಬ ಪಶ್ಚಾತಾಪದಿಂದ ನಂತರದ ಇಡೀ ಜೀವನವನ್ನು ಹೀಗೆಯೇ ಕಳೆದ. ನಮಗೆಲ್ಲಾ ನೋಡಿ ಪರಿಚಯವಾಗಿದ್ದರಿಂದ ಸಣ್ಣಗೆ ನಗುತ್ತಿದ್ದ. ನಮಗೆ ಅರ್ಥವಾಗದಿದ್ದರೆ ಸನ್ನೆ ಮಾಡುತ್ತಾ ಚಿಕ್ಕದಾಗಿ "ಆಕಳಿಗೆ ಏನಾದರೂ ಕೊಡು" ಎನ್ನುತ್ತಿದ್ದ. ಹಾಗಂತ ಯಾರಲ್ಲಿಯೂ ತಿಂಡಿ-ಊಟಕ್ಕೆ ನಿಲ್ಲುತ್ತಿರಲಿಲ್ಲ.

ಹೀಗೇ ಜೀವನವೇ ಒಂದು ವಿಚಿತ್ರ. ಇಲ್ಲಿ ಒಬ್ಬೊಬ್ಬರದೂ ಒಂದೊಂದು ಕಥೆ! ಬದುಕಿನ ಯಾವುದೋ ಘಟನೆ, ಯಾವುದೋ ಘಳಿಗೆ ಜೀವನವನ್ನೇ ಬದಲಾಯಿಸಿಬಿಡಬಹುದು. ಹೇಗೋ ಇದ್ದವರು ಇನ್ನ್ಹೇಗೋ ಆಗಿಬಿಡುವುದು ಇಲ್ಲಿನ ವಿಲಕ್ಷಣ ಸಂಗತಿ. ಇಂತಹ ಕೆಲವು ವ್ಯಕ್ತಿಗಳನ್ನು ಅವರ ಮನೆಯ ಜನರೆಲ್ಲಾ ಸೇರಿ ಸರಿಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಅವರು ಮಾತ್ರ ಬದಲಾಗುವುದೇ ಇಲ್ಲ. ಯಾವುದೋ ಶಕ್ತಿ ಅವರನ್ನು ಅವಿರತವಾಗಿ ತನ್ನ ಐಹಿಕಮೂಲವನ್ನೇ ಮರೆತು ಅಲೆದಾಡುವ, ಕೇಳಿಪಡೆಯುವ, ಯಾರೋ ಕೊಟ್ಟರೆ ತಿನ್ನುವ ಅಥವಾ ಉಪವಾಸವಿರುವ ಇಂತಹ ಮಾರ್ಗಕ್ಕೆ ಹಚ್ಚುವುದನ್ನು ಕಂಡಾಗ ಅಂತಹ ಜನರು ಪಡೆದುಬಂದ ಭ್ಯಾಗಯ ಅದೇಯೇನೋ ಎಂಬ ಅನಿಸಿಕೆ ಬರುತ್ತದೆ. ಇದನ್ನೆಲ್ಲಾ ಕಾಣುವಾಗ ಅತಿ ಸಹಜವಾಗಿ ನಮಗೂ ಮೀರಿದ ಶಕ್ತಿಯೊಂದು ಇದೆ ಅನಿಸುವುದಿಲ್ಲವೇ?

ಸಮಾಜದಲ್ಲಿ ಸಿರಿವಂತರೆಂದು ಹಮ್ಮುಬಿಮ್ಮಿನಿಂದ ಮೆರೆಯುವ ಅನೇಕರ ಮನೆಗಳಲ್ಲಿ ಬುದ್ಧಿಮಾಂದ್ಯ ಮಕ್ಕಳು, ಮೂರ್ಛಾರೋಗ ಪೀಡಿತಮಕ್ಕಳು ಹುಟ್ಟುತ್ತಾರೆ ಅಥವಾ ಅನೇಕಕಡೆ ಹುಟ್ಟಿದಾಗ ಸರಿಯಿದ್ದು ಆಮೇಲೆ ಕಾರಣಾಂತರಗಳಿಂದ ಮೂಕರಾಗುವುದು, ಕಿವುಡರಾಗುವುದು, ಕುರುಡರಾಗುವುದು, ಪಾರ್ಕಿನ್ಸನ್ ನಿಂದ ಬಳಲುವುದು ಮುಂತಾದ ಹಲವು ಸಂಗತಿಗಳನ್ನು ಕಾಣಬಹುದಲ್ಲ ಇವೆಲ್ಲಾ ಕೇವಲ ಮನುಷ್ಯನ ಕೈಮೀರಿ ನಡೆಯುವಂತಹ ಕ್ರಿಯೆಗಳಲ್ಲವೇ ? ಆಗಾಗ ಬರಿದೇ ಚಿಂತಿಸಿದಾಗ ಮತ್ತೆ ಮತ್ತೆ ಅನಿಸುವುದು ಇದಕ್ಕೆಲ್ಲಾ ಕಾರಣಗಳೇ ಬೇಕಿಲ್ಲ. ನಿಸರ್ಗವೇ ಎಲ್ಲವನ್ನೂ ನಿಯಂತ್ರಿಸುವುದಾದರೆ ನಮ್ಮ ಕಾಡುಗಳ್ಳರನ್ನೂ ಗಣಿಧಣಿಗಳ ಅಟಾಟೋಪವನ್ನೂ ತಹಬಂದಿಗೆ ತರಲು ಇನ್ನೆಷ್ಟು ಸಮಯ ಕಾಯಬೇಕೋ ಗೊತ್ತಿಲ್ಲ. ಪ್ರಾಯಶಃ ಅವರ ಹಿಂದಿನ ಜನ್ಮದ ’ಬ್ಯಾಂಕ್ ಬ್ಯಾಲೆನ್ಸ್’ ನಲ್ಲಿ ಪುಣ್ಯದ ಅವಶೇಷ ಜಾಸ್ತಿ ಇದ್ದಿರಬೇಕು-ಅದು ಖಾಲಿಯಾಗುವವರೆಗೂ ಅವರು ಮೆರೆಯುತ್ತಲೇ ಇರುತ್ತಾರೆ.