ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, January 27, 2011

ಶುಭ ಸುಪ್ರಭಾತ


ಶುಭ ಸುಪ್ರಭಾತ

ತಿರೆಯ ತಿರುಗಿ ನೋಡಲಲ್ಲಿ
ಹರೆಯ ಬಂದ ಹುಡುಗಿಯಂತೇ
ಮೆರೆಯುತಿರುವ ಕಾಲ ಕಂಡೆ ಮುಂಜಾವಿನಲಿ

ಬರಿಯ ಮಾತು ಕೇಳಬೇಡಿ
ಅರಿಯಲೊಮ್ಮೆ ಬಂದು ನೋಡಿ
ಕರೆಯುತಿಹಳು ನಮ್ಮನೆಲ್ಲ ಸುಪ್ರಭಾತದಿ

ಕರಿಯು ಮದಿಸಿ ಓಡಿದಂತೆ
ಹಿರಿಯ ತನವ ಮರೆವಳಲ್ಲಿ
ಗುರಿಯು ಸಿಂಗಾರಗೊಂಡು ಅಂದವಪ್ಪುದು !

ತೆರೆಯ ಸರಿಸಿ ಮುಖವ ತೋರ್ವ
ನೆರೆಯ ಊರ ವಧುವಿನಂತೆ
ತೊರೆಯಂಚಿನ ಪುಷ್ಪದಂತೇ ಅರಳುತಿಪ್ಪುದು

ಹೊರೆಯ ಹೊತ್ತ ಕೃಷಿಕರೆಲ್ಲ
ಗಿರಿಯಬುಡದಿ ಅದನು ಇಳಿಸಿ
ಮರೆಯಲೊಮ್ಮೆ ಆಯಾಸವ ಕುಳಿತುನೋಡ್ವರು

ಉರಿಯುವಂಥ ಸೂರ್ಯನಿರದ
ಕೊರೆಯುವಂಥ ಚಳಿಯ ಕಾಲ
ಗರಿಯನೊಲೆದು ಹೊಯ್ದಾಡುವ ತೆಂಗುಕಂಗಳು

ಮರಿಯ ಮುದ್ದುಮಾಡುತಿರುವ
ಕರಿಯ ಬಿಳಿಯ ಹಕ್ಕಿಗಳವು
ಸರಿಯೆನ್ನುವ ಹಾಡ ಹಾಡಿ ಸಂಭ್ರಮಿಸಿಹವು

ಸಿರಿಯು ಧರೆಗೆ ಇಳಿವ ಸಮಯ
ಬೆರೆಯಬೇಕು ಪ್ರಕೃತಿಯೊಡನೆ
ಮರೆಯಬೇಡಿ ಮೈಮನಕಿದು ಶಾಂತಿತರುವುದು

4 comments:

 1. ahhahah
  entha sogasaada kavana
  munjaavina suprabhaata
  Jai Ho

  ReplyDelete
 2. ನಿಸರ್ಗದಲ್ಲಿ ಪ್ರಭಾತವು ಅರಳಿದ ಬಗೆಯನ್ನು ಸುಲಲಿತವಾಗಿ ಹೇಳಿದ್ದೀರಿ. ಅಭಿನಂದನೆಗಳು.

  ReplyDelete
 3. ಸುಂದರ ಚಿತ್ರಕ್ಕೆ ತಕ್ಕ ಕವನ.ಅಭಿನಂದನೆಗಳು ಸರ್.

  ReplyDelete
 4. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನೇಕಾವರ್ತಿ ನಮನಗಳು.

  ReplyDelete