ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, January 15, 2011

ಅಪಾನ ವಾಯು ಪುರಾಣವು !


ಅಪಾನ ವಾಯು ಪುರಾಣವು !

ಅಷ್ಟಾದಶ ಪುರಾಣಗಳನ್ನೂ ಮೀರಿ ವಿಶ್ವವ್ಯಾಪಕತ್ವವನ್ನೂ ಅತೀ ಮಹತ್ವವನ್ನೂ ಪಡೆದ ಅಪಾನವಾಯು ಪುರಾಣವನ್ನು ಕೇಳುವುದಕ್ಕೆ ಯೋಗಬೇಕು! ಅದರಲ್ಲೂ ಹಬ್ಬಹರಿದಿನಗಳ ಮಾರನೇದಿನ ಇಂತಹ ಪುಣ್ಯ ಕಥಾನಕಗಳನ್ನು ಕೇಳುವುದು ಜಗತ್ತಿಗೇ ಆನಂದದಾಯಕ! ಹತ್ತಾರುಜನ ಸೇರಿದ ಸಭೆಯಲ್ಲಿ ಮಂಡಿಸಿದ್ದ ತಿಪ್ಪಾ ಭಟ್ಟರು ಸ್ವಲ್ಪ ವಾಲುತ್ತ " ಈಗ ಹೊಟ್ಟೆ ಸ್ವಲ್ಪ ಸಡಿಲಾಯ್ತು" ಎನ್ನುತ್ತಾ ಪುರಾಣವನ್ನಾರಂಭಿಸಿದಾಗ ಮಗ್ಗುಲಲ್ಲಿ ಕಾಡುತ್ತಿರುವ ಕೆಟ್ಟ ಕುತೂಹಲದಿಂದ ಆಲಿಸಲು ಕೂತ ನನಗೆ ಕಿವಿನೆಟ್ಟಗಾಯಿತು. ಸಭಾಲಕ್ಷಣವೆಂಬಂತೇ ಅದೂ ಇದೂ ಶ್ಲೋಕಗಳನ್ನು ಹೇಳುತ್ತಾ ಪುರಾಣಿಕರಾದ ಭಟ್ಟರು ತಮ್ಮ ಪುಸ್ತಕರಹಿತ ವ್ಯಾಖ್ಯಾನಕ್ಕೆ ಅನುವುಗೊಂಡು ಶಾಲನ್ನು ಎಳೆದೆಳೆದು ಹೆಗಲಿನ ಎರಡೂ ಪಕ್ಕಕ್ಕೆ ಬರುವಂತೇ ಸರಿಪಡಿಸಿಕೊಂಡರು.

" ವಾಯುಗಳಲ್ಲಿ ಹಲವಾರು ಥರದ ವಾಯುಗಳಿವೆ" --ಅದು ಸಹಜಬಿಡಿ ನಮಗೆ ವಿಜ್ಞಾನಿಗಳೂ ಹೇಳಿದ್ದಾರೆ.

ಭಟ್ಟರು ಮುಂದುವರಿಸುತ್ತಿದ್ದರು--
" ಅವುಗಳಲ್ಲಿ ಪ್ರಾಣವಾಯು, ಆಪಾನವಾಯು, ಯಾನವಾಯು, ಉದಾನವಾಯು,ಸಮಾನವಾಯು ಇತ್ಯೇತ್ಯಾದಿ ವಾಯುಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ. ಇವುಗಳಲ್ಲಿ ಯಾವೊಂದು ವಾಯುವಿರದಿದ್ದರೂ ನಡೆಯುವುದಿಲ್ಲ. ಇವತ್ತು ನಾವು ಅಪಾನವಾಯುವಿನ ಮಹತ್ವವನ್ನು ತಿಳಿದುಕೊಳ್ಳೋಣ.

ದೇಹದ ಒಳಗೆ ಆಹಾರ ಸೇರಿ ವೈಶ್ವಾನರರೂಪೀ ಅಗ್ನಿ ಅದನ್ನು ಪಚನಗೊಳಿಸಿದ ಮೇಲೆ ಅಲ್ಲಿ ಉದ್ಭವವಾಗುವುದು ಅಪಾನವಾಯು. ಸೇವಿಸಿದ ಆಹಾರವನ್ನು ಅವಲಂಬಿಸಿ ಈ ವಾಯುವಿನ ಉತ್ಫತ್ತಿಯ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. ಆದರೆ ಮಗುವಿನಿಂದ ಹಿಡಿದ ಮುದುಕರವರೆಗೂ ಇದೂ ಅಲ್ಲದೇ ಪ್ರತೀ ಸಸ್ತನಿಯ ದೇಹದಲ್ಲೂ ಈ ಅಪಾನವಾಯುವಿನ ಸನ್ನಿಧಾನವಿದೆ. ಕೆಲವರಲ್ಲಿ ಅದರ ನಿತ್ಯಾನುಸಂಧಾನವಿದ್ದರೆ ಇನ್ನೂ ಕೆಲವರಲ್ಲಿ ಅದರ ಅನುಷ್ಠಾನ ಸ್ವಲ್ಪ ಕಡಿಮೆಮಟ್ಟದಲ್ಲಿರುತ್ತದೆ. ಈ ಅಪಾನವಾಯು ಟಾಟಾ ಬಿರ್ಲಾಗಳನ್ನಾಗಲೀ ’ಅನಿಲ’ ಅಂಬಾನಿ ’ಅನಿಲ’ ಕುಂಬ್ಳೆ ಗಳನ್ನಾಗಲೀ ಬೇರೇ ಬೇರೇ ಎಂದು ತಿಳಿಯುವುದಿಲ್ಲ. ಇದಕ್ಕೆ ಎಲ್ಲರೂ ಒಂದೇ! ಸಾಫ್ಟ್ ವೇರ್ ಅಭಿಯಂತರನೂ ಒಂದೇ ರಸ್ತೆಬದಿಯ ಮೆಕಾನಿಕ್ಕೂ ಒಂದೇ. ಜೀವನದಲ್ಲಿ ಬಡವ ಶ್ರೀಮಂತರೆಂಬ ಬೇಧವೆಣಿಸದ ಯಾವುದಾದರೂ ಇದ್ದರೆ ಅದು ಅಪಾನವಾಯು ಮಾತ್ರ! ಹೀಗಾಗಿ ಅಪಾನವಾಯುವಿಗೆ ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ಬಿರುದನ್ನೂ ಕೊಡಬಹುದು.

ಅಪಾನವಾಯುವಿನ ಉಪಸ್ಥಿತಿ ಎಲ್ಲಾಕಡೆಗಿದ್ದರೂ ಯಾರೂ ಅದನ್ನು ಹೇಳಲು ಹೆದರುತ್ತಾರೆ. ಯಾಕೋ ಬಹಳ ಸಂಕೋಚಪಡುತ್ತಾರೆ. ನಮ್ಮ ಜನಕ್ಕೆ ಈ ವಿಷಯದ ಬಗ್ಗೆ ಮಾತನಾಡಲು ಎಲ್ಲಿಲ್ಲದ ಮರ್ಯಾದೆ ಅಡ್ಡಬರುತ್ತದೆ! ತಮ್ಮ ಸ್ಥಾನಮಾನ ಏನಾಗಬಹುದೆಂಬ ಅನಿಸಿಕೆಯಿಂದ ಇದರ ಬಗ್ಗೆ ಮಾತನಾಡುವುದೇ ಇಲ್ಲ! ಕೊಳೆತ ಕುಂಬಳಕಾಯಿಯನ್ನು ಎಷ್ಟುದಿನ ಬಚ್ಚಿಡಲು ಸಾಧ್ಯವಾಗುತ್ತದೆ ? ಅದರ ವಾಸನೆ ಸುತ್ತಲ ಪ್ರದೇಶಕ್ಕೆಲ್ಲಾ ಹಬ್ಬಲೇಬೇಕಾಗುತ್ತದೆ ಅಲ್ಲವೇ ? ಹೇಳಿದರೂ ಹೇಳದಿದ್ದರೂ ಕುಂಬಳಕಾಯಿ ಕೊಳೆತಿರುವುದು ಹೇಗೋ ಎಲ್ಲರಿಗೂ ತಿಳಿದುಹೋಗುತ್ತದೆ! ಅದೇ ರೀತಿ ಈ ಅಪಾನವಾಯುವಿನ ಮಹಿಮೆ ಅಪಾರ. ಇದರ ಮಹಿಮೆಯನ್ನು ನೀವೆಲ್ಲಾ ಅನುಭವಿಸಿದವರೇ! ಆದರೂ ಇನ್ನೊಮ್ಮೆ ಪುರಾಣಿಕರ ಬಾಯಿಂದ ಕೇಳುವ ಆಸೆಯಾಗಿ ಹೀಗೆ ಕುಳಿತಿದ್ದೀರಿ. ಹೇಳುತ್ತೇನೆ ಕೇಳಿ:

ಶರೀರದಲ್ಲಿ ಅಪಾನವಾಯುವಿನಾ ಜನನವಾದಮೇಲೆ ಅದು ಹೊರಬರಲೇ ಬೇಕು. ಶರೀರದ ಒಳಗೇ ಅದು ಸುತ್ತುತ್ತಿರುವಾಗ ಆಗುವ ಅನಾಹುತ ಅಷ್ಟಿಷ್ಟಲ್ಲ. ಇದನ್ನೇ ನಮ್ಮ ವೈದ್ಯಶಾಸ್ತ್ರಿಗಳು ಆಂಗ್ಲ ಭಾಷೆಯಲ್ಲಿ ’ಗ್ಯಾಸ್ ಟ್ರಬಲ್’ ಅಂತಾರೆ. ಕೆಲವರಲ್ಲಿ ಈ ಅಪಾನಯವು ರಕ್ತನಾಳಗಳಲ್ಲಿ ಸೇರಿಕೊಂಡು ಆಗಾಗ ಅಡಚಣೆಯುಂಟುಮಾಡುವುದಲ್ಲದೇ ಶರೀರದ ಒಳಾಂಗಗಳಲ್ಲಿ ಅದರ ಅಟಾಟೋಪ ಬಹಳ. ಜಠರದಲ್ಲಿ ಹುಟ್ಟಿ ಕರುಳಿನಲ್ಲಿ ಹರಿದು ಹಾಗೇಯೇ ಕೆಲವೊಮ್ಮೆ ಮೇಲೂ ಕೆಳಗೂ ಶರೀರದ ಉದ್ದಗಲಕ್ಕೂ ಓಡಾಡುವ ಅಪಾನಯಾವು ಕೆಲವರಲ್ಲಿ ವಿನಾಕಾರಣ ತೇಗುವುದರಮೂಲಕ ಹೊರಹೋದರೆ ಹಲವರಲ್ಲಿ ಇದು ವಾಮಮಾರ್ಗದಿಂದ ಹೊರಟುಹೋಗುತ್ತದೆ-ಇಲ್ಲೇ ನೋಡಿ ಸ್ವಲ್ಪ ಅವಾಂತರ. ಈ ವಾಮಮಾರ್ಗದಿಂದ ಹೊರಹೋಗುವ ಅಪಾನವಾಯು ತನ್ನಪಾಡಿಗೆ ತಾನು ಹೋಗದೇ ಅನೇಕಾವರ್ತಿ ತಾನು ಹೋದರೂ ತನ್ನ ಮೆರವಣಿಗೆಯ ಘಾಟನ್ನು ಪರಿಸರದಲ್ಲಿ ಸ್ವಲ್ಪಕಾಲ ಗಾಢವಾಗಿ ಉಳಿಸಿಹೋಗಿಬಿಡುತ್ತದೆ!

ವಾಕರಿಕೆ, ತಲೆನೋವು, ಹೊಟ್ಟೆಯಲ್ಲಿ ಉರಿ, ಸುಸ್ತು, ಹೊಟ್ಟೆಯಲ್ಲಿ ಕಲ್ಲುಹಾಕಿದಹಾಗೇ ಆಗುವುದು, ಆಹಾರವೇ ಬೇಡವೆನ್ನಿಸುವುದು, ತಲೆತಿರುಗುವ ಅನುಭವವಾಗುವುದು ಇವೆಲ್ಲಾ ಅಪಾನವಾಯುವಿನ ಪ್ರಭಾವೀ ಲಕ್ಷಣಗಳು. ಜಾತಿ,ಮತ,ಲಿಂಗ, ವಯಸ್ಸು ಯಾವುದರ ಬೇಧವೂ ಇಲ್ಲದೇ ನಿತ್ಯವೂ ಎಲ್ಲರಲ್ಲೂ ಆಗಾಗ ತನ್ನ ಅಸ್ಥಿತ್ವವನ್ನು ತೋರಿಸುವ ಅಪಾನವಾಯು ಹಲವರ ಕೆಂಗಣ್ಣಿಗೆ ಬಲಿಯಾಗುವುದೂ ಇದು. ಆಕಾರದಲ್ಲಿ, ಬಣ್ಣದಲ್ಲಿ ಕೈಗೆ ಸಿಕ್ಕದ -ಕಣ್ಣಿಗೆ ಧಕ್ಕದ ಇದು ತಪ್ಪಿಸಿಕೊಳ್ಳುವುದು ಇದೇ ಕಾರಣದಿಂದ. ಇಲ್ಲಾಂದರೆ ಅನೇಕಜನ ಇದನ್ನು ಬಿಡುತ್ತಿದ್ದರೇ ? ಹಿಡಿದು ಬಡಿಯುತ್ತಿದ್ದರು ! ಸ್ನೇಹಿತರನೇಕರು ಸೇರಿ ಇಂತಹ ಅಪ್ರತಿಮ ಅಪಾನವಾಯುವನ್ನು ಶ್ಲೋಕದ ಮೂಲಕ ಹೊಗಳಿದ್ದಾರೆ -

ಉತ್ತಮೋ ಡುರುಕೋ ರಾಜೋ
ಮಧ್ಯಮೋ ಟರಟರಾಟುರಿ |
ಅಧಮೋ ಪೀಂ ಪೀಂ ಪೂಂ ಪೂಂ
ಪುಸ್ ಪುಸ್ ಪ್ರಾಣಘಾತಕಃ ||

ವಾಮಮಾರ್ಗದಲ್ಲಿ ಓಡಿಹೋಗುವ ಅಪಾನವಾಯುವನ್ನು ಅದರ [ಕುವಾಸನೆಯ]ಪ್ರತಿಶತ ಪರಿಣಾಮವನ್ನು ಅವಲೋಕಿಸಿ ಭಾಗಿಸಿದ್ದಾರೆ. ಡುರುಕ್ ಡುರುಕ್ ಎನ್ನುವುದು ಉತ್ತಮವೆಂತಲೂ ಟರಾಟುರಿ ಎನ್ನುವುದು ಮಧ್ಯಮವೆಂತಲೂ ಪೀಂ ಪೀಂ ಪೂಂ ಪೂಂ ಎನ್ನುವುದು ಅಧಮವೆಂತಲೂ ಮತ್ತು ಪುಸ್ಸೆನ್ನುತ್ತಾ ಹೊರಡುವುದು ಪ್ರಾಣಘಾತಕ ಅಂದರೆ ಪ್ರಾಣವನ್ನೇ ಹಿಂಡುವಷ್ಟು ಘನಘೋರವೆಂತಲೂ ಅಪಾನವಾಯುವಿಹಾರಿಗಳು ವರ್ಣಿಸಿದ್ದಾರೆ. ಶ್ಲೋಕವನ್ನು ನೆನಪಿಟ್ಟುಕೊಳ್ಳಿ: ಅಪಾನವಾಯುವಿನ ಧ್ಯಾನಕ್ಕೆ ಅನುಕೂಲವಾಗುತ್ತದೆ!

ಕರ್ಮಠ ಬ್ರಾಹ್ಮಣರಿಗೆ ಒಂದು ಕಠಿಣ ಪರೀಕ್ಷೆಯೇನು ಗೊತ್ತೇ ? ಅವರು ವ್ರತನಿಷ್ಠರಾಗಿರುವಾಗ ಮತ್ತು ಪೂಜೆ, ಹೋಮ, ಶ್ರಾದ್ಧ ಇವುಗಳಲ್ಲೆಲ್ಲಾ ನಿರತರಾಗಿರುವಾಗ ಶರೀರ ಸಹಜವಾಗಿ ಉದ್ಭವವಾಗುವ ಈ ಅಪಾನವಾಯುವನ್ನು ವಾಮಮಾರ್ಗದಿಂದ ಹೊರಬಿಡುವಂತೇ ಇಲ್ಲ. ಇದು ಕಟ್ಟಪ್ಪಣೆ. ಅಕಸ್ಮಾತ್ ಅವರು ಹೊರಬಿಟ್ಟರೆ ಅವರು ಅದರ ಪಾಪದ ಫಲವನ್ನು ಅನುಭವಿಸಬೇಕಾಗುತ್ತದೆ. ಅದಕ್ಕೇ ಹಲವಾರು ಪೂಜೆ-ಪುನಸ್ಕಾರಗಳ ಮುನ್ನಾದಿನದಿಂದಲೇ ಉಪವಾಸಾದಿ ವ್ರತಗಳಲ್ಲಿ ಅವರು ತಮ್ಮನ್ನು ನಿಯಮಿಸಿಕೊಂಡು ದೇಹವನ್ನೇ ದಂಡಿಸುತ್ತಾರೆ.

ಹೆಂಗಸರಲ್ಲಿ ಅಪಾನವಾಯು ಕಮ್ಮಿಯೇನಿಲ್ಲ. ಹೆಂಗಸರು ಎಲ್ಲಾರಂಗದಲ್ಲೂ ಇದ್ದಾರಲ್ಲವೇ? ಇಲ್ಲೂ ಅವರಿಗೆ ನ್ಯಾಯ ಸಲ್ಲಬೇಕು. ಹಳೆಯ ಮನೆಗಳಲ್ಲಿ ಕೀಂ ಕೂಂ ಎಂದು ಕಿರುಚುವ ಬಾಗಿಲುಗಳನ್ನು ಅವರು ನೋಡಿಕೊಂಡಿರುತ್ತಾರೆ. ಅತಿಥಿಗಳೆದುರು ಅನಿವಾರ್ಯವಾಗಿ ವಾಮಮಾರ್ಗದಲ್ಲಿ ಬಾಂಬು ಹೊರಬಿದ್ದರೆ ಅಂತಹ ಬಾಗಿಲುಗಳನ್ನು ತಳ್ಳಿಬಿಡುತ್ತಾರೆ. ಏಕಕಾಲಕ್ಕೆ ಎರಡೂ ಘಟಿಸುವುದರಿಂದ ಅತಿಥಿಗೆ ಅದರ ಪರಿಣಾಮ ನಂತರ ಮೂಗಿನ ಮಟ್ಟಕ್ಕೆ ’ಬೆಳೆದುನಿಂತಾಗ’ ಮಾತ್ರ ಗೊತ್ತಾಗುತ್ತದೆ. ಆದರೂ ಅತಿಥಿ " ನೀವು ವಾಸನೆ ಬಿಟ್ಟಿರೇ ? " ಎಂದು ಕೇಳಲು ಬರುತ್ತದೆಯೇ ? ಹೀಗಾಗಿ ಹೆಂಗಳೆಯರು ಈ ವಿಷಯದಲ್ಲಿ ಸೇಫು.

ಕೆಲವು ಸಭೆಗಳಲ್ಲಿ ದೊಡ್ಡವರು ಮಾಡಿದ ಅಪರಾಧಕ್ಕೆ ಮಕ್ಕಳು ಅಪವಾದ ಹೊರುವುದಿದೆ. ಹಾಗೊಂದು ಸಭೆಯಲ್ಲಿ ನಿಂತು ಇನ್ನೇನು ಮಾತನಾಡಬೇಕೆಂದಿದ್ದ ಮಹನೀಯರಿಗೆ ಮೀಟರುಗಟ್ಟಲೇ ’ಟರಾಟುರಿ’ ಬಂದುಬಿಟ್ಟಿತು! ಎದುರಿಗೆ ಅಕಸ್ಮಾತ್ ಅನಿರೀಕ್ಷಿತವಾಗಿ ಬಾಲಕನೊಬ್ಬ ಬಂದುಹೋದ. ಆಗ ಅವರು ಆತನನ್ನೇ ಅದಕ್ಕೆ ಗುರಿಮಾಡಿ " ಹೋಗೊ ಹೊಲ್ಸ್ ಹುಡುಗ " ಎಂದು ಬಿಟ್ಟರು. ಪಾಪದ ಕೂಸಿಗೆ ಅರ್ಥವಾಗದೇ ಮಿಕಿಮಿಕಿ ನೋಡುತ್ತಾ ಸಭೆಯ ಹಿಂಭಾಗಕ್ಕೆ ಸರಿದುಹೋಯಿತು ಆ ಬಡಪಾಯಿ! ಇಂತಹದು ದೊಡ್ಡವರು ಮಾಡುವ ಅಕ್ಷಮ್ಯ ಅಪರಾಧವಾಗಿದೆ.

ಇನ್ನು ಪ್ರಯಾಣ ಹೊರಟಾಗ ಸಾರ್ವಜನಿಕ ಬಸ್ಸುಗಳಲ್ಲಿ, ಪಡಿತರಕ್ಕೋ ದೇವರದರ್ಶನಕ್ಕೋ ಸಿನಿಮಾಟಿಕೆಟ್ಟಿಗೋ ಅಥವಾ ಸಿನಿಮಾ ಮಂದಿರಗಳ ಒಳಗೋ ಅಪಾನವಾಯುವಿನ ಮತ್ತೇರಿದ ಕುಣಿತ ನಡೆದೇ ಇರುತ್ತದೆ. ಯಾರೂ ಹೇಳಲೂ ಕೇಳಲೂ ಸಾಧ್ಯವಾಗದ ಸನ್ನಿವೇಶ! ’ಧೂಮಪಾನ ನಿಷೇಧಿಸಿದೆ’ ಎಂದು ಬೋರ್ಡು ಹಾಕಿದಹಾಗೇ ’ಹೂಸು ಬಿಡುವುದು ದಂಡನಾರ್ಹ ಅಪರಾಧ’ ಎಂಬ ಕಟ್ಟಳೆಯನ್ನು ತರಲಾಗುವುದಿಲ್ಲ. ಇದು ಮನುಷ್ಯ ಸಹಜ ಮತ್ತು ಅದುಮಿಟ್ಟುಕೊಳ್ಳಲಾರದ ’ಅದಮ್ಯ ಆಂದೋಲನ’ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಆಂದೋಲನಕ್ಕೆ ಸಮಿತಿಯೂ ಇಲ್ಲ, ಅಧ್ಯಕ್ಷರಾಗಲೀ ಕಾರ್ಯದರ್ಶಿಗಳಾಗಲೀ ಇಲ್ಲವೇ ಇಲ್ಲ. ಕರಾರುಪತ್ರಗಳಾಗಲೀ ನಿಬಂಧನೆಗಳಾಗಲೀ ಇರುವುದಿಲ್ಲ. ನಿರ್ಭಿಡೆಯವಾಗಿ ನಡೆಯುತ್ತಿರುವ ಈ ಆಂದೋಲನಕ್ಕೆ ಎಲ್ಲರೂ ಸದಸ್ಯರೇ. ಸದಸ್ಯತ್ವಕ್ಕೂ ಪದ್ಧತಿಯೂ ಇಲ್ಲ ರದ್ಧತಿಯೂ ಇಲ್ಲ! ಎಂತಹ ಅಪರಿಮಿತ ಪ್ರೇಮದ ಸಂಘ ನೋಡಿ!ಫಲಾನುಭವಿಗಳ ಅವಸ್ಥೆ ಮಾತ್ರ ಹೇಳತೀರ! ಅಪಾನವಾಯುವನ್ನು ತಹಬಂಧಿಯಲ್ಲಿಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಅದನ್ನು ವಿಸರ್ಜಿಸದೇ ಇರುವ ಅನೇಕ ಸುಸಂಕೃತರಿದ್ದಾರೆ. ಅಂಥವರಿಗಂತೂ ಅವರಿರುವ ಜಾಗಗಳಲ್ಲಿ ಅಪಾನವಾಯು ಪ್ರಯೋಗವಾಗಿಬಿಟ್ಟರೆ ಅಶ್ರುವಾಯು ಪ್ರಯೋಗವಾದಂತೇ ಅವರು ಚಡಪಡಿಸುತ್ತಾರೆ!

ಕೊನೆಯದಾಗಿ ಮಠಮಾನ್ಯಗಳಲ್ಲಿ ಅನೇಕ ಜನ ಅದೂ ಇದೂ ಕಡಲೇಕಾಳಿನದೋ ಹಿಟ್ಟಿನದೋ ಪ್ರಸಾದ ತಿಂದು, ತೊಗರಿ ಬೇಳೆಯ ಹುಳಿಯನ್ನೋ ಹೆಸರುಬೇಳೆಯ ತೊವ್ವೆಯನ್ನೋ ಉಂಡು ಅಡ್ಡಾದಾಗ ಅಲ್ಲಿ ನೋಡಬೇಕು -- ಯುನಿಟಿ ಇನ್ ಡೈವರ್ಸಿಟಿ! ಯಾವ ಕಳ್ಳನೇ ಬಂದರೂ ಆ ಬಾಂಬು ಗರ್ನಾಲುಗಳ ಸದ್ದಿಗೆ ಮಾರುದೂರದಿಂದಲೇ ಓಡಿಹೋಗಿಬಿಡುತ್ತಾನೆ. ಇಲ್ಲಿ ಪರಸ್ಪರ ಪ್ರಶ್ನೋತ್ತರಗಳು ನಡೆಯುತ್ತಿರುವ ಹಾಗೇ ಒಬ್ಬರಾದಮೇಲೆ ಒಬ್ಬರು ’ಉಪಾಸನೆ’ ನಡೆಸುತ್ತಲೇ ಇರುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಕೆಲವು ಭಾರತೀಯರಲ್ಲಿ ಈ ’ಹೊಗೆಯಾಡುವ ಫಿರಂಗಿ’ಗಳಿದ್ದರೂ ’ಬ್ರಿಟಿಷ್ ಫಿರಂಗಿ’ಗಳ ಮುಂದೆ ನಮ್ಮ ಫಿರಂಗಿಗಳು ಏನೂ ಅಲ್ಲ ಎನ್ನುವುದು ತಮಾಷೆಯೆನಿಸುತ್ತದೆ.


ಫಲಶೃತಿ

ಸಮಾಜದಲ್ಲಿ ಸದಾ ಹೊಗೆಯಾಡುವ ಫಿರಂಗಿಗಳಿದ್ದಹಾಗೇ ಇರುವ ವಾಮದ್ವಾರಗಳನ್ನು ಇಟ್ಟುಕೊಂಡವರಲ್ಲಿ ಒಂದು ವಿನಂತಿ: ಅಪಾನವಾಯು ಸಹಜವೇ ಆಗಿದ್ದರೂ ಬದುಕೇ ಅಸಹ್ಯವೆನಿಸುವಷ್ಟು ಅವುಗಳ ಅನುಸಂಧಾನ ಬೇಡ. ಆಯುರ್ವೇದದಲ್ಲಿ ಊಟ-ತಿಂಡಿಗಳನ್ನು ಮಾಡುವವರಿಗೂ ತಯಾರಿಮಾಡುವವರಿಗೂ ಒಂದು ಕ್ರಮವನ್ನು ಹೇಳಿದ್ದಾರೆ. ಯಾವುದು ಅಪಾನವಾಯು ಜನಕವೋ ಅದರ ದಮನಕ್ಕೋಸ್ಕರ ಇನ್ನೊಂದು ವಿರುದ್ಧಗುಣ ತತ್ವದ ಆಹಾರವನ್ನು ಜೊತೆಯಲ್ಲಿ ಉಪಯೋಗಿಸಲು ಹೇಳುತ್ತಾರೆ. ಉದಾಹರಣೆಗೆ ಹೋಳಿಗೆ ತಿಂದಾಗ ಅಪಾನವಾಯು ಜಾಸ್ತಿ ಉದ್ಭವಾವಾಗದಂತೇ ಅದಕ್ಕೆ ತುಪ್ಪಸವರಿ ತಿನ್ನಲು ಹೇಳಿದರೆ, ಪುದಿನಾ ಮತ್ತು ಶುಂಠಿ ಇವೆಲ್ಲಾ ಅಪಾನವಾಯು ಮರ್ದಕಗಳಾಗಿವೆ-ಇವುಗಳ ಚಟ್ನಿಯನ್ನು ಸೇವಿಸಬಹುದಾಗಿದೆ. ಹೀಗಾಗಿ ಈ ಅಸಂಘಟಿತ ಸಂಘಟನೆಯ ಆಂದೋಲನಕ್ಕೆ ಕಡಿವಾಣ ಹಾಕಲು ಆಯುರ್ವೇದ ಪದ್ಧತಿಯನ್ನು ಅನುಸರಿಸಿ. ಆಗ ’ಗ್ಯಾಸ್ ಟ್ರಬಲ್’ ಕೂಡ ಕಮ್ಮಿಯಾಗುತ್ತದೆ, ಸಮಾಜದಲ್ಲೂ ’ಗ್ಯಾಸ್ ನಿಂದಾಗುವ ಟ್ರಬಲ್’ ಕಡಿತಗೊಳ್ಳುತ್ತದೆ!

ಮಂಗಲವು ಅಪಾನವಾಯುಗೆ ಲಿಂಗಬೇಧ ರಹಿತಗೆ |
ಅಂಗಳದಿ ನಿತ್ಯವೂ ನಲಿವಗೆ ಭಂಗವಿಲ್ಲದೆ ಬೆಳದಗೇ ||

13 comments:

 1. ಅಪಾನ ವಾಯುವಿನ ಅಪಾಯ
  ಫಲಶೃತಿ ............ ಚನ್ನಾಗಿದೆ


  ಅಷ್ಟಾದಶ ಪುರಾಣಗಳನ್ನೂ ಮೀರಿ ವಿಶ್ವವ್ಯಾಪಕತ್ವವನ್ನೂ ಅತೀ ಮಹತ್ವವನ್ನೂ ಪಡೆದ ಅಪಾನವಾಯು ಪುರಾಣವನ್ನು ಕೇಳುವುದಕ್ಕೆ ಯೋಗಬೇಕು!
  .....**......
  ತಮಗೆ ಮತ್ತು ತಮ್ಮ ಕುಟುಂಬದವರಿಗೆ ಸಂಕ್ರಾತಿಯ ಶುಭಾಶಯಗಳು.

  ReplyDelete
 2. hha hha.. apaana vaayuvina avaantara....

  nimagu habbada shubhaashaya sir...

  ReplyDelete
 3. ವಾಯು ಪುರಾಣದ ವಿಡಂಬನೆಯ ಜೊತೆಗೆ ಸಲಹೆಗಳೂ ಅಮೂಲ್ಯವಾಗಿವೆ.

  ReplyDelete
 4. yene sikkaru eledu heluva tamma pari adbhuta. bahala dinagalinda tamma blog-ge barade indu bandu idannu odi nagu banditu.

  ReplyDelete
 5. bhat sir, wonderful article. and it is knowledgeable also.

  ReplyDelete
 6. ಹಹಹಹ್ಹಾ.........
  ಅಪಾನಾಯ ಸ್ವಾಹ...........
  ಓಂ ಶಾಂತಿ ಶಾಂತಿ ಶಾಂತಿಃ.

  ReplyDelete
 7. maaraayre!! kaayi hoLige tintaa idannu Odi..kaNNalli neeru bantu. not only by laughing but i got such severe cramps i thought i was having a heart attack...now i am fine enough to comment, but for a moment there i was half -dead.
  u should add* READ AT YOUR OWN RISK* i suppose
  hahaha
  malathi S

  ReplyDelete
 8. ವಿ.ಆರ್.ಭಟ್..,
  ಹಾಸ್ಯದ ಧಾಟಿಯಲ್ಲಿ ವಿಚಾರವಂತ ಲೇಖನ..

  ReplyDelete
 9. ಹ್ಹಾ ಹ್ಹಾ ಹ್ಹ ಭಟ್ಟರೇ ವಾಯು ಪುರಾಣ ಸೊಗಸಾಗಿತ್ತು ಹೆಂಗಸರ ಮೇಲೆ ಕೂಡ ಹೇಳಿದ್ರಾ ಹ್ಹಾ ಹ್ಹಾ..ಇರಲಿ

  ReplyDelete
 10. ಹ್ಹೊ,ಭಲೇ. ಧನ್ಯೋಸ್ಮಿ..ಈ ಪುರಾಣವನ್ನು ಕೇಳಿದವರಿಗೆ ಯಾವತರಹದ ಪುಣ್ಯಪ್ರಾಪ್ತಿ ಲಭಿಸುವುದು? ಕಾತರಿಸಿದ್ದೇನೆ.

  ಮಂಗಲವು ಅಪಾನವಾಯುಗೆ ಲಿಂಗಬೇಧ ರಹಿತಗೆ |
  ಅಂಗಳದಿ ನಿತ್ಯವೂ ನಲಿವಗೆ ಭಂಗವಿಲ್ಲದೆ ಬೆಳದಗೇ ||

  ReplyDelete
 11. ಸಹೃದಯೀ ಹಾಸ್ಯಪ್ರೇಮೀ ಮಿತ್ರರೇ, ಹಾಸ್ಯದೊಂದಿಗೆ ನಡೆಯುವ ಶಾಂತ ಕೋಲಾಹಲವನ್ನೂ ವಿವರಿಸುವ ಘನ ಉದ್ದೇಶದಿಂದ ಪ್ರಯತ್ನಿಸಿದ್ದೇನೆ, ತಮ್ಮೆಲ್ಲರ ಓದಿಗೆ,ಪ್ರತಿಕ್ರಿಯೆಗೆ ಶರಣು.

  ಹೊಸದಾಗಿ ಬ್ಲಾಗಿಗೆ ಲಿಂಕಿಸಿಕೊಂಡ ಸುಬ್ರಹ್ಮಣ್ಯ ಮಾಚಿಕೊಪ್ಪ ಮತ್ತು ವೆಂಕಟರಮಣ ಭಟ್ ಈರ್ವರಿಗೂ ಸ್ವಾಗತ ಮತ್ತು ನಮನ.

  ReplyDelete
 12. ha ha ha..ಅಬ್ಬಾ ನಕ್ಕು ನಕ್ಕು ಕಣ್ನಲ್ಲಿ ನೀರು ಬಂತು. ಬಹಳ ದಿನಗಳ ನಂತರ ಹೀಗೆ ನಕ್ಕಿದ್ದೇನೆ ಅನ್ನಿಸಿತು.
  ಧನ್ಯವಾದಗಳು. ತುಂಬಾ ಸೊಗಸಾಗಿ ಬರೆದಿದ್ದಿರಿ.
  ರೇಣುಕಾ ನಿಡಗುಂದಿ

  ReplyDelete