ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, January 24, 2012

’ಪದ್ಯಪಾನ’ಮತ್ತನಾಗುತ್ತ ಸಾಗಿದ ನಿನ್ನೆಯ ದಿನ !


’ಪದ್ಯಪಾನ’ಮತ್ತನಾಗುತ್ತ ಸಾಗಿದ ನಿನ್ನೆಯ ದಿನ !

ಭಾವುಕ ಮನಕ್ಕೆ ಧನ-ಕನಕದಿಂದ ಸುಖದ ಸೊಬಗಿಲ್ಲ. ಅದು ಚಿಂತಿಸುವ ವೈಖರಿಯೇ ಬೇರೆ! ಅಲ್ಲಿ ಭಾವನೆಗಳಿಗೆ ಬೆಲೆಯೇ ವಿನಃ ಮಿಕ್ಕುಳಿದವು ಗೌಣ. ಕವಿಜನಗಳು ಬಯಸುವುದು ಭಾವದೌತಣವನ್ನು.ಅವರ ಜೀವನ ಅತ್ಯಂತ ಆಡಂಬರದ್ದಲ್ಲ, ಬದಲಿಗೆ ಸಾದಾ ಸೀದಾ. ನಳನಳಿಸುವ ಬಣ್ಣದ ಬೆಡಗಿನ ಥಳುಕು ತುಂಬಿದ ಈ ಜಗದಲ್ಲಿ ಕಾವಿ ತೊಟ್ಟ ಸನ್ಯಾಸಿ ಒಂದು ಕಡೆಗಾದರೆ ಭಾವ ತೊಟ್ಟ ’ಭಾವ್ಯಾಸಿ’ ಇನ್ನೊಂದೆಡೆ. ಭಾವ ಲೋಕದ ಹಕ್ಕಿಗಳು ನರ್ತಿಸುವ ತಾಳಗತಿಗಳೇ ಬೇರೆ. ಅಲ್ಲಿ ಮಾಮೂಲೀ ಲೋಕದ ಖರ್ಚು-ವೆಚ್ಚ ಬೇಡುವ ಅಟಾಟೋಪಗಳಿರುವುದಿಲ್ಲ. ನೋಡಿದರೆ ದೂರದಿಂದ ಎಂತೆಂಥವರೋ ಎಂಬ ಧೋರಣೆಯನ್ನು ಹೊಂದಿರುವ ಇನ್ನೂ ಮೊಕ್ತಾ ನೋಡದ ಜನರಿಗೆ ನೇರವಾಗಿ ಅಂಥವರು ಮುಖಾಮುಖಿಯಾದಾಗ " ಓ ಇವ್ರೇನಾ ? " ಎಂಬ ಸಂದೇಹದ ಭಾವನೆ. "ಹೌದು ಅವರೇ" ಎಂದು ಇನ್ಯಾರೋ ಪರಿಚಿತರು ಹೇಳಿದಮೇಲೆ ಅವರೇ ಎಂಬುದನ್ನು ತಡವಾಗಿ ಒಪ್ಪಿಕೊಳ್ಳುವುದು.

ಅನೇಕ ಕಡೆ ಬಸ್ಸಿನಲ್ಲೋ ಗಾಡಿಯಲ್ಲೋ ಬುರ್ರನೆ ಬೆಂಗಳೂರಿಗರು ನಾವು ಸಾಗುತ್ತಿರುವಾಗ ಆಗಾಗ ಎದುರಾಗುವ ಗುಂಗುರು ಗೂದಲಿನ ಚಸ್ಮಾ ಧರಿಸಿದ ಉದ್ದನೆಯ ವ್ಯಕ್ತಿ ಶತಾವಧಾನಿ ಆರ್.ಗಣೇಶ್. ಹಾಗೇ ಗಣೇಶ್ ಎಂದರೆ ಎಷ್ಟೋ ಜನರಿದ್ದಾರೆ ಯಾರಿಗೂ ಗುರ್ತು ಸಿಗುವುಇದಿಲ್ಲ; ಅದೇ ’ಶತಾವಧಾನಿ’ ಎನ್ನುವ ಪದ ಹೆಸರಿನ ಹಿಂದೆ ಸೇರ್ಪಡೆಯಾಗಿಬಿಟ್ಟರೆ ಗೊತ್ತು ನಮ್ಮ ಮಂದಿಗೆ- ಇಡೀ ಕರ್ನಾಟಕಕ್ಕೇ ಆ ಹೆಸರಿನ ವ್ಯಕ್ತಿ ಒಬ್ಬರೇ, ಒಬ್ಬರೇ ಮತ್ತು ಒಬ್ಬರೇ! ಮಹಾಭಾರತದಲ್ಲಿ ಸವ್ಯಸಾಚಿ ಎಂಬ ಪದಪ್ರಯೋಗವಿದೆ. ಅದು ಅರ್ಜುನನಿಗೆ ಮಾತ್ರ ಲಾಗು. ಅದು ಏಕಲವ್ಯನಿಗೂ ದಕ್ಕಬಾರದೆಂಬ ಉದ್ದೇಶದಿಂದ ದ್ರೋಣರು ಅವನ ಹೆಬ್ಬೆರಳನ್ನೇ ಗುರುದಕ್ಷಿಣೆಯನ್ನಾಗಿ ಕೇಳಿ ಪಡೆದುಬಿಟ್ಟರು ಪಾಪ. ಸವ್ಯಸಾಚಿ ಏಕಮೇವಾದ್ವಿತೀಯ. ಎರಡನೇ ವ್ಯಕ್ತಿ ಎಂಬಮಾತು ಅಲ್ಲಿರುವುದೇ ಇಲ್ಲ. ಅದೇ ರೀತಿ ನಮ್ಮ ಈ ಕನ್ನಡನಾಡಿನಲ್ಲಿ ಶತಾವಧಾನ ನಡೆಸುವ ಪುಣ್ಯವಂತ ಒಬ್ಬರಿದ್ದರೆ ಅವರೊಬ್ಬರೇ ಶತಾವಧಾನಿ ಆರ್. ಗಣೇಶ್.

’ಅವಧಾನ ಕಲೆ’ ಎಂಬ ಅವರ ಥೀಸಿಸ್ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅರ್ಪಿತವಾದಾಗ ಅಲ್ಲಿ ಅದನ್ನು ಪರಿಶೀಲಿಸುವ ಮಹಾನುಭಾವರಾಗಲೀ ಪರಿಣತರಾಗಲೀ ಯಾರೂ ಇರಲಿಲ್ಲ! ಆಮೇಲೆ ವಿದ್ವಾನ್ ರಂಗನಾಥ ಶರ್ಮರು ಮತ್ತು ವಿದ್ವಾನ್ ಟಿ.ವಿ.ವೇಂಕಟಾಚಲಶಾಸ್ತ್ರಿಗಳು[ಈ ಇಬ್ಬರಲ್ಲಿ ರಂಗನಾಥ ಶರ್ಮರು ಸಂಸ್ಕೃತ ಮತ್ತು ಕನ್ನಡದ ಘನ ವಿದ್ವಾಂಸರೂ ಹೊಸ ಮತ್ತು ಹಳಗನ್ನಡ ಕಾವ್ಯವನ್ನು ವ್ಯಾಖ್ಯಾನಿಸ ಬಲ್ಲ ತಾಕತ್ತಿನವರೂ ಹಲವು ಕೃತಿಗಳ ಲೇಖಕರೂ ಆಗಿದ್ದರೆ, ಶಾಸ್ತ್ರಿಗಳು ಮೈಸೂರುವಿ.ವಿ.ಯಲ್ಲಿದ್ದ ಮಹಾವಿದ್ವಾಂಸರು, ಹಳಗನ್ನಡಭಾಷೆ-ಛಂದಸ್ಸು-ವ್ಯಾಕರಣ- ಶಾಸನ - ನಿಘಂಟು - ಚಿತ್ರಕವಿತೆ ಮುಂತಾದ ವಿಷಯಗಳಲ್ಲಿ ಕನ್ನಡಕ್ಕಿಂದು ಕಟ್ಟಕಡೆಯ ನಿರ್ಣಯವಾಗಿ ಹೇಳಬಲ್ಲವರೆಂದರೆ ಅವರೊಬ್ಬರೇ! ಶತಾಧಿಕಗ್ರಂಥಕರ್ತರು ಕೂಡ. ] ಸೇರಿ ಅದನ್ನು ಓದಿ, ಅರ್ಥೈಸಿಕೊಂಡು ಅದನ್ನು ಒಪ್ಪಿ ವಿಶ್ವವಿದ್ಯಾಲಯಕ್ಕೆ ಡಿ.ಲಿಟ್ ಕೊಡುವಂತೇ ಸಲಹೆ ನೀಡಿದರು! ಒಂದುಕಾಲಕ್ಕೆ ಕರ್ನಾಟಕದ ಬಹಳ ಕಡೆ ಇದ್ದ ಕುಟುಂಬಗಳು ಅವಧಾನಿ ಎಂಬ ಅಡ್ಡ ಹೆಸರನ್ನು ಹೊಂದಿದ್ದು ಅವರು ಅವಧಾನ ಕಲೆಯನ್ನು ನಡೆಸಿದ್ದರು ಎಂಬುದು ತಿಳಿಯುತ್ತದೆ. ಬರುಬರುತ್ತಾ ಅವಧಾನ ಕಲೆ ಸಮಾಜದಲ್ಲಿ ಕಾಣದಾಗಿತ್ತು, ಮರೆಯಾಗಿ ಹೋಗಿತ್ತು. ನಮ್ಮ ಚಿಕ್ಕಂದಿನಲ್ಲಿ ನಾವು ಅಲ್ಲಲ್ಲಿ ಅವಧಾನಿ ಎಂಬ ಹೆಸರನ್ನು ಕೇಳಿದ್ದೆವಾದರೂ "ಪಾಪ ದಾನ ಜಾಸ್ತಿ ಕೊಟ್ಟಿರಬೇಕು ಅದಕ್ಕೇ ಅವಧಾನಿ ಎನ್ನುತ್ತಾರೋ ಏನೋ" ಎಂತಲೋ "ಅವರು ಅವಧೂತರ ಸಂಗಡ ಸಹಾಯಕರಾಗಿ ಅವರ ಕೈಕೆಲಸಕ್ಕೆ ಇರುವವರಿರಬೇಕು" ಎಂತಲೋ ಪರಸ್ಪರ ಹೇಳಿಕೊಳ್ಳುವುದಿತ್ತು! ಪ್ರಾಯಶಃ ನಮ್ಮ ಹಿರಿಯರಿಗೂ ’ಅವಧಾನಿ’ ಹೆಸರಿನ ಮಹಿಮೆ ಗೊತ್ತಿತ್ತೋ ಇಲ್ಲವೋ ಕೇಳಿದವರ್ಯಾರು! ಏಕವ್ಯಕ್ತಿ ಏಕಕಾಲಕ್ಕೆ ಅನೇಕ ವ್ಯಕ್ತಿಗಳ ಸಂಖ್ಯಾಬಂಧ-ಚಕ್ರಬಂಧ-ಪದಬಂಧಗಳನ್ನು ಕರಾರುಗಳ ಸಹಿತ ಛಲವಾಗಿ ಸ್ವೀಕರಿಸಿ ಅದನ್ನು ನಿರ್ವಹಿಸುವ ಕ್ರಮ ಅವಧಾನ. ಅದರಲ್ಲಿ ಸಾಹಿತ್ಯ, ಕಾವ್ಯ, ಮೀಮಾಂಸೆ, ತರ್ಕ, ವ್ಯಾಕರಣ, ದತ್ತಪದ, ಸಂಖ್ಯಾಬಂಧ, ಛಂದಸ್ಸು, ಅಲಂಕಾರ, ಉಪಮೆ, ಶಾಸ್ತ್ರ, ರಾಜಕೀಯ, ಪ್ರಸಕ್ತ ಸಮಾಜದ ವಿದ್ಯಮಾನ ಒಂದೇ ಎರಡೇ ಎಲ್ಲವನ್ನೂ ನಿಭಾಯಿಸುವ ವ್ಯವಧಾನವಿದ್ದರೆ ಅದು ಅವಧಾನಿಗೆ ಮಾತ್ರವೇ ಹೊರತು ಇನ್ಯಾರಾದರೂ ಆದರೆ ಎಲ್ಲವನ್ನೂ ಕಿತ್ತು ಬಿಸಾಕಿ ತಲೆನೋವೇ ಬೇಡಾ ಎಂದು ಎದ್ದೋಡಿ ಹೋಗುವಂತಹ ಜಟಿಲ ಸಮಸ್ಯೆಗಳ ಸುಕ್ಕುಬಿಡಿಸುವ ಕುಸುರಿಕೆಲಸ! ಭಾಗ್ಯಶಾಲಿಗಳಾದ ನಾವು ಇಂದಿಗೆ ನಮ್ಮ ಸಮಕಾಲೀನರಾಗಿ ಗಣೇಶರನ್ನು ಪಡೆದಿದ್ದೇವೆ ಎನ್ನುತ್ತಾ ಬೀಗಲು, ಹೆಮ್ಮೆ ಪಡಲು ಹಿಂಜರಿಯಬೇಕಿಲ್ಲ.

ಸರ್ವಭಾಷಾಮಯೀ ಭಾಷಾ ಎಂದೆನಿಸಿಕೊಂಡ ’ಸಿರಿಭೂವಲಯ’ ಗ್ರಂಥದಂತೇ ಬಹುಭಾಷಾ ಕೋವಿದರಾದ ಗಣೇಶರು ಮಾತೃಭಾಷೆ ಕನ್ನಡಕ್ಕಾಗಿ ತಮ್ಮ ಸಕಲವನ್ನೂ ತೊಡಗಿಸಿ ಅಖಂಡವಾಗಿ ಕನ್ನಡ ಸೇವೆ ಮಾಡುತ್ತಿರುವ ಶಕ್ತಿ. ಶಕ್ತಿ ಏಕೆಂದರೆ ಇವತ್ತಿನ ಯಾವ ಕವಿ-ಸಾಹಿತಿಗೂ ಇರದ ಅಪ್ರತಿಮ ಮೇಧಾ ಶಕ್ತಿಯನ್ನು ಪಡೆದು ನಡೆದಾಡುವ ಗಣಕಯಂತ್ರವೆನಿಸಿದ ಗಣೇಶರು ಕೃತಿ ರಚನೆಯಲ್ಲಿ ತೊಡಗಿದ್ದರೆ ಇಷ್ಟೊತ್ತಿಗೆ ಅದು ಎಷ್ಟು ಸಾವಿರವಾಗುತ್ತಿತ್ತೋ ಗೊತ್ತಾಗದಲ್ಲಾ! ಎಂತಹ ಕ್ಲಿಷ್ಟ, ಸಂದಿಗ್ಧ ಸಮಸ್ಯೆಗಳನ್ನೂ ಒಳಸುಳಿಗಳನ್ನರಿತು ಬಾಳೆಹಣ್ಣು ಸುಲಿದಷ್ಟೇ ಸುಲಭವಾಗಿ ತಿಳಿಸಿಕೊಡುವ, ಬಿಡಿಸಿಕೊಡುವ ಅರ್ಹತೆ ಇರುವುದು, ಆ ಯೋಗ್ಯತೆ ಇರುವುದು ಗಣೇಶರಿಗೆ ಮಾತ್ರ ಎಂದರೆ ತಪ್ಪಾಗಲಾರದು ಎನಿಸುತ್ತದೆ. ಒಬ್ಬ ತಂತ್ರಜ್ಞನಾಗಿ ನಂತರ ಐಚ್ಛಿಕ ವಿಸ್ತರವಾದ ಸಾರಸ್ವತ ಲೋಕಕ್ಕೆ ಹೊಕ್ಕ ಈ ಗಣೇಶರಿಗೂ ಮೇಲೆ ಕೂತಿರುವ ಆ ಗಣೇಶನಿಗೂ ಅನೇಕ ಸಾಮ್ಯತೆ ಕಾಣುತ್ತದೆ-ಬುದ್ಧಿಯಲ್ಲಿ! ದೈಹಿಕವಾಗಿ ಅದು ಅಜ-ಗಜಾಂತರ ಬಿಡಿ ಮಾತಾಡುವ ಪ್ರಶ್ನೆಯೇ ಇಲ್ಲ, ಇವರು ಕೃಶ ಶರೀರಿ ಆತ ಡೊಳ್ಳಿನ ಮುದ್ದು ಗಣಪ. ಅನೇಕರು ನನ್ನಲ್ಲಿ ಕೇಳುತ್ತಿದ್ದುದು ಒಂದೇ ಪ್ರಶ್ನೆ ತಂತ್ರಜ್ಞನೊಬ್ಬ ಈ ರಂಗದಲ್ಲಿ ಸಾಧಿಸುವುದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧದಂತೇ ಅಲ್ಲವೇ ಎಂದು ? ಆದರೆ ಕನ್ನಡ ಸಾಹಿತ್ಯಲೋಕವನ್ನು ತಿಳಿಯ ಹೊರಟರೆ ಇಂದು ಮುಂಚೂಣಿಯಲ್ಲಿ ಕಾರ್ಯನಿರತರಾಗಿರುವ ಕವಿ-ಸಾಹಿತಿಗಳಲ್ಲಿ ತಂತ್ರಜ್ಞರೇ ಹೆಚ್ಚಿಗೆ ಇದ್ದಾರೆ ಎಂಬುದು ಮನಗಾಣಬೇಕಾದ ವಿಷಯ.

ಮೆಕಾನಿಕಲ್ ಎಂಜಿನೀಯರಿಂಗ್ ಮುಗಿಸಿದ ಮೇಲೆ ಉನ್ನತ ಹುದ್ದೆಗಳು ಕೈ ಬೀಸಿ ಕರೆದರೂ ಅವುಗಳಿಗೆ ಟಾ ಟಾ ಹೇಳಿದ ಗಣೇಶರು ಓದಿನ ಅರಮನೆಯಲ್ಲಿ ಸ್ವತಃ ತಮ್ಮನ್ನು ತಾವೇ ರಂಜಿಸಿಕೊಳ್ಳುತ್ತಾ ಸಮಾಜದ ಸಾಹಿತ್ಯ ಪ್ರೇಮಿಗಳ ಸೇವೆಗೆ ತೊಡಗಿದ್ದು ನಮ್ಮ ಸೌಭಾಗ್ಯ ಎನ್ನದೇ ಇನ್ನೇನು ಹೇಳಲಿ ? ಇಷ್ಟೆಲ್ಲಾ ಇದ್ದೂ ಅವರು ಏನೂ ಇಲ್ಲವೇನೋ ಎಂಬ ರೀತಿಯಲ್ಲಿ ಇರುವ ಸರಳತೆ ಇದೆಯಲ್ಲಾ ಅದನ್ನು ನೆನೆದಾಗ ಯಾರೋ ನಮ್ಮಣ್ಣ ಮಾತಾಡಿದ ಅನುಭವ ಆಗುತ್ತದೆ. ಅವರ ಒಡನಾಟಕ್ಕಾಗಿ ಹಗಲೂ ರಾತ್ರಿ ಅವರಲ್ಲಿಗೆ ತೆರಳಿ ತೊಂದರೆ ಕೊಟ್ಟಿದ್ದುಂಟು. ಆದರೂ ಕೊಂಚವೂ ಬೇಸರಿಸದೇ ಪ್ರೀತಿಯಿಂದ ಕಂಡ ಅವರ ಸೌಜನ್ಯಕ್ಕೆ, ಆ ಸಜ್ಜನಿಕೆಗೆ ಆಜನ್ಮ ಪರ್ಯಂತ ಶರಣು. ಮುಪ್ಪಿನಲ್ಲಿ ಎಲ್ಲವನ್ನೂ ಮರೆತು ಮಗುವಿನಂತಾದ ಅಮ್ಮನನ್ನು ಮನೆಯಲ್ಲಿ ಸಂಭಾಳಿಸಿಕೊಳ್ಳುತ್ತಾ ಈ ಬ್ರಹ್ಮಚಾರಿ ಉದರಂಭರಣೆಗೆ ಆಹಾರ ತಾವೇ ಸಿದ್ಧಪಡಿಸಿಕೊಂಡು ಅಮ್ಮನಿಗೆ ತುತ್ತು ನೀಡಿ ಆಮೇಲೆ ತಾವು ಸ್ವೀಕರಿಸುತ್ತಾರೆ. ಮೊದಲೇ ಸಾಕಷ್ಟು ನನ್ನ ಲೇಖನಗಳಲ್ಲಿ ಹೇಳಿದಂತೇ ಕವಿ-ಸಾಹಿತಿಗಳಿಗೆ ತನ್ನ ನೋವು ನೋವಲ್ಲ, ಅದನ್ನೇ ನಲಿವೆಂದು ಸ್ವೀಕರಿಸಿ ಅದರಲ್ಲೇ ಇದ್ದು ಹಲವು ಕೃತಿಗಳಿಂದ ಸಮಾಜವನ್ನು ರಂಜಿಸುತ್ತಾರೆ ಎಂದು...ಅದು ಇಲ್ಲೂ ಸತ್ಯ ಎಂಬುದು ಮತ್ತೊಮ್ಮೆ ಕಾಣುವ ವಿಷಯ. ತಾನು ಕವಿಯೋ ಸಾಹಿತಿಯೋ ವಿಮರ್ಶಕನೋ ಎಂದು ಗಣೇಶರು ಹೇಳಿಕೊಳ್ಳುವುದಿಲ್ಲ. ಅವರನ್ನು ಜನ ಗುರುತಿಸಿದ್ದು ಶತಾವಧಾನಿ ಎಂದೇ! ಅದೇ ಹೆಸರು ಕಾಯಂ ಆಗಿಹೋಯ್ತು.

ಕನ್ನಡ ಸಾಹಿತ್ಯದಲ್ಲಿ ಛಂದೋಬದ್ಧ ಮತ್ತು ವ್ಯಾಕರಣ ಶುದ್ಧ ಕಾವ್ಯ ಬರೆಯುವವರ ಸಂಖ್ಯೆ ನಶಿಸುತ್ತಿದೆ, ಅದನ್ನು ಬೆಳೆಸಬೇಕೆಂಬ ಹಂಬಲದಿಂದ ’ಪದ್ಯಪಾನ’ ಎಂಬ ಜಾಲತಾಣವೊಂದನ್ನು ನಿರ್ಮಿಸಿ ಅನೇಕರಿಗೆ ಅವುಗಳನ್ನು ಕಲಿಸುತ್ತಿದ್ದಾರೆ, ಮಾರ್ಗದರ್ಶಕರಾಗಿದ್ದಾರೆ. ಆಸಕ್ತ ಹತ್ತಾರು ಕವಿ ಮನೋಭಾವದವರು ಅಲ್ಲಿ ತೊಡಗಿಕೊಂಡು ತಮ್ಮನ್ನು ರೀಫೈನ್ ಮೆಂಟ್ ಮಾಡಿಕೊಳ್ಳುತ್ತಿದ್ದಾರೆ. ಏಕಕಾಲದಲ್ಲಿ ಕವನ ಕೇಳಲೂ ಓದಲೂ ಸೊಗಸಾಗಿದ್ದು ಸ್ವಲ್ಪ ಹ್ಯೂಮರಸ್ ಅಗಿದ್ದರೆ, ಅದು ಛಂದೋಬದ್ಧ ಮತ್ತು ವ್ಯಾಕರಣ ಶುದ್ಧವಾಗಿದ್ದರೆ ಸಹಜವಾಗಿ ಅದು ಗೇಯವಾಗುತ್ತದೆ. ಕವನ ಗೇಯವಾದಾಗ ಬಾಯಿಂದ ಬಾಯಿಗೆ ಅದು ಹಬ್ಬುತ್ತದೆ. ಅನೇಕ ವೇದಿಕೆಗಳಲ್ಲಿ ಅದರ ಪ್ರಸ್ತುತಿ ಆಗಲೂ ಬಹುದು. ಜನಸಂದೋಹವನ್ನು ಸಮರ್ಪಕವಾಗಿ ತಲ್ಪಿ ಕವನದಲ್ಲಿನ ವಿಷಯ ಮನದಟ್ಟಾದಾಗ ರಚಿಸಿದ ವ್ಯಕ್ತಿಗೆ ಅದೊಂದು ಖುಷಿಯ ಸಂಗತಿಯಾಗುತ್ತದೆ. ಗದ್ಯದಲ್ಲಿ ಸಾವಿರ ಶಬ್ದಗಳಲ್ಲಿ ಹೇಳಲಾಗದ ಗಹನವಾದ ವಿಷಯವನ್ನು ಪದ್ಯದಲ್ಲಿ ಮೂರ್ನಾಲ್ಕು ಪದಗಳಿಂದ ಬಂಧಿಸುವ ಕಲೆ ಎಲ್ಲರಿಗೂ ಕರಗತವಲ್ಲ. ಅದೊಂದು ಎಣ್ಣೆಗಂಬ. ಹತ್ತಿದಷ್ಟೂ ಜಾರಿ ಜಾರಿ ಜಾರಿ ಬೀಳುವ ಪರಿಸ್ಥಿತಿಯಲ್ಲಿ ಹತ್ತು ಪುಟ ಬರೆದು-ಹರಿದು ದೂರ್ವಾಸಾವತಾರ ತಾಳಿ ಬಿಟ್ಟೆದ್ದು ಹೋಗುವ ಪೈಕಿಯ ಜನವೇ ಹೆಚ್ಚು! ಅಂತಹ ಮಲ್ಲಗಂಬವನ್ನು ಏರಿ ಅದರಲ್ಲೇ ಗಂಟೆಗಟ್ಟಲೆ ಕೂತು ಯೋಗಾಸನದ ಭಂಗಿಗಳನ್ನು ತೋರುವ ಪಟುವಿನಂತೇ ನವರಸಗಳನ್ನು ಸ್ಫುರಿಸುವ ಪದಪುಂಜಗಳಿಂದ ಕವನ ಕಟ್ಟುವುದು ಜಾಣ್ಮೆಯ ವಿಷಯ. ಇಲ್ಲಿ ಬರೆಯುವಾತ ಶಬ್ದ ಭಂಡಾರಿಯಾಗಿರಬೇಕು, ಭಾವುಕನಾಗಿರಬೇಕು, ಪ್ರಸಕ್ತ ವಿದ್ಯಮಾನಗಳನ್ನೂ ಪೂರ್ವದ ಘಟನೆಗಳನ್ನೂ ಅರಿತಿರುವವನಾಗಿರಬೇಕು, ಬರೆದ ಪದಗಳಿಂದ ಯಾರಿಗೂ ನೋವಾಗದ ರೀತಿ ಇರಬೇಕು ಮತ್ತು ಸಮಾಜಕ್ಕೆ ಯಾವುದಾದರೂ ಪ್ರಯೋಜನವಾಗುವ ವಸ್ತುವಿಷಯವನ್ನು ಕಾವ್ಯ ಒಳಗೊಂಡಿರಬೇಕು.

ನಮ್ಮ ಭಾವನೆಗಳಿಗೆ ಬೆಲೆಯೇ ಇಲ್ಲವೇ ಎಂಬ ನವ್ಯೋತ್ತರ ಕವಿಗಳಿಗೆ ನಾನು ಹೇಳುವುದಿಷ್ಟೇ : ಈಗೀಗ ಬರೆಯುತ್ತಿರುವ ಕೆಲವರ ಕವನಗಳನ್ನು ಗದ್ಯ ಎನ್ನಬೇಕೋ ಅಥವಾ ಪದ್ಯ ಎನ್ನಬೇಕೋ ತಿಳಿಯದಲ್ಲಾ ? ಎರಡರಲ್ಲಿ ಯಾವ ಲಿಂಗಕ್ಕೂ ಸೇರದ ವ್ಯಕ್ತಿಗಳ ಗುಂಪಿನ ಜನರ ರೀತಿ ಕಾವ್ಯ ಅಲ್ಲಿಗೇ ಸಲ್ಲುತ್ತದೆ ವಿನಃ ಅದು ಸರಿಯಾದ ಮಾರ್ಗ ಎಂದು ನನಗೆಂದೂ ಅನಿಸಲೇ ಇಲ್ಲ. ಯಾರೋ ಸ್ನೇಹಿತರು ಹೇಳಿದ್ದ ಹಾಗೇ ಪುಟಪೂರ್ತಿ ಬರೆದು ಎಡ ಬಲಗಳಲ್ಲಿ ಆ ಕಡೆ ಒಂದಿಂಚು ಈ ಕಡೆ ಒಂದಿಂಚು ಕತ್ತರಿಸಿದರೆ ಇಂದಿನ ಹಾಡು ಸಿದ್ಧ! ಅನೇಕ ಜನ ಅದನ್ನೇ ಮೆಚ್ಚಿ " ಬಹಳ ಭಾವವಿದೆ ಆಹಹಾ ಎಂಥಾ ಅರ್ಥಗರ್ಭಿತ" ಎನ್ನುವುದನ್ನು ಕಾಣುತ್ತಿದ್ದೇನೆ. ಕನ್ನಡದ ತರುಣ ಪೀಳಿಗೆಯಲ್ಲಿ ವಿದ್ವತ್ಪೂರ್ಣ ಕಾವ್ಯ-ಸಾಹಿತ್ಯವನ್ನು ಓದುವ ಅಭಿರುಚಿ ಕಮ್ಮಿಯಾಗಿದೆ; ಕಮ್ಮಿಯಾಗುತ್ತಿದೆ. ಸೆಲ್ಫ್ ಸರ್ವಿಸ್ ನಲ್ಲಿ ಇಡ್ಲಿವಡೆ ತಿಂದು ಅರ್ಧಕಾಫಿ ಕುಡಿದು ಕೈತೊಳೆದು ಬಸ್ ಏರುವ ಗಡಿಬಿಡಿಯಲ್ಲಿ, ಆ ಧಾವಂತದಲ್ಲಿ ಅವರಿಗೆ ಅರ್ಥವಾಗುವುದು ಕೇವಲ ನವ್ಯೋತ್ತರದ ಕವನಗಳು ಮಾತ್ರ!

ಸದೃಢವಾದ ಕಾವ್ಯ ಗೇಯತೆಯನ್ನು ಪಡೆದುಕೊಂಡು ಸಂಗೀತಗಾರನ ಕೈಗೆ ಸಿಕ್ಕಾಗ ಅದು ಹಾಡಲ್ಪಡುತ್ತದೆ. ಹಾಡಿದ ಹಾಡು ಸಪ್ತಸ್ವರಗಳನ್ನು ಮೇಳೈಸಿಕೊಂಡು ಕರ್ಣಾನಂದಕರ ವಾದ್ಯ ಸಂಗೀತಗಳನ್ನು ಜೊತೆಗೆ ಪೇರಿಸಿಕೊಂಡು ಕೇಳಲು ಹಿತಕರವಾಗಿರುತ್ತದೆ. ಕವನದ ಸಾಹಿತ್ಯ ಅರ್ಥವಾಗುತ್ತಿರುವಂತೆಯೇ ರಾಗ, ತಾಳ, ಲಯ ಸ್ವರಮೇಳಗಳು ಆ ಸಾಹಿತ್ಯಕ್ಕೆ ನೆಕ್ಲೇಸ್, ಹಾರ, ಉಂಗುರ, ವಡ್ಯಾಣಗಳಂತೇ ಆಭರಣಗಳ ರೀತಿ ಶೋಭಿಸುತ್ತವೆ. ಆನೆಗೆ ಅಲಂಕಾರವೇ ಎಂಬುದೊಂದು ಗಾದೆ ಇದೆಯಲ್ಲ! ಕವನವೇ ಅದ್ಭುತವಾಗಿದ್ದರೆ ಆಗ ಅದನ್ನು ಸಂಗೀತಕ್ಕೆ ಅಳವಡಿಸಿದಾಗ ಜಂಬೂಸವಾರಿಯ ಪ್ರಧಾನ ಆನೆಯಂತೇ ಅದು ಕಂಗೊಳಿಸುತ್ತದೆ; ಬಹುಸಂಖ್ಯಾಕರನ್ನು ಅದು ತಲ್ಪಲು ಸಾಧ್ಯವಾಗುತ್ತದೆ. ರುದ್ರ ನಮಕ-ಚಮಕ ಮಂತ್ರಗಳಂತೇ ಸ್ವರಬದ್ಧವಾದ ಸಂಗೀತ ಮನುಷ್ಯನಿಗೆ ಉತ್ತಮ ಆರೋಗ್ಯವನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ. ಇದನ್ನೆಲ್ಲಾ ಅರಿತಿದ್ದ ಹಿಂದಿನ ನಮ್ಮ ಕವಿಗಳು ಅದನ್ನು ಪಾಲಿಸುತ್ತಾ ಬಂದಿದ್ದರು. ಸಂಸ್ಕೃತದ ಎಲ್ಲಾ ಕವಿಗಳೂ ಅದನ್ನು ಪಾಲಿಸಿದ್ದಾರೆ. ಸಂಸ್ಕೃತ ಕನ್ನಡದ ಹಾಗಲ್ಲ, ಅದು ಹೇಗೆಲ್ಲಾ ಬರೆದರೂ ಸ್ವೀಕರಿಸುವುದಿಲ್ಲ- ಎಂಬುದು ಮಿತ್ರ ಕೊಳ್ಳೇಗಾಲದ ಮಂಜುನಾಥರ ಅಭಿಪ್ರಾಯ. ಅದನ್ನೇ ನಾನೂ ಹೇಳುತ್ತಿದ್ದೇನೆ. ಅದೇ ಜಾಡಿನಲ್ಲಿ ನಮ್ಮ ಕನ್ನಡ ಕಾವ್ಯ-ಸಾಹಿತ್ಯವೂ ಬಲಾಢ್ಯವಾದರೆ ಆಗ ನೋಡಲು ತುಂಬಾ ಖುಷಿಯಾಗುತ್ತದೆ. ಇಲ್ಲದಿದ್ದರೆ ಕನ್ನಡಮ್ಮ ಯಾವುದೋ ಕಾರಣಗಳಿಂದ ಬಳಲಿದಂತೇ ತೋರುತ್ತದೆ. ಹಾಗಾಗದಂತೇ ಎಚ್ಚರವಹಿಸಬೇಕಾದ್ದು ನಮ್ಮ ಕರ್ತವ್ಯ ಎಂಬುದು ಸದಭಿರುಚಿಯ ಸಾರಸ್ವತರ ಅನಿಸಿಕೆ.

ಹೊಸಪೀಳಿಗೆಯನ್ನು ತಯಾರಿ ಮಾಡುವಲ್ಲಿ ಗಣೇಶರ ಈ ಪ್ರಯತ್ನ ಅತ್ಯಂತ ಶ್ಲಾಘನೀಯ. ಅವರಿಗಿರುವ ಕೆಲಸದೊತ್ತಡಗಳ ಮಧ್ಯೆ ನಾನಾಗಿದ್ದರೆ ಇದನ್ನೆಲ್ಲಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾನೇಕೆ ನೀವೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದು ಕಡೆ ಯಾವುದೋ ವೇದಿಕೆಯಲ್ಲಿ ವ್ಯಾಖ್ಯಾನ, ಇನ್ನೊಂದು ಕಡೆ ಅಷ್ಟಾವಧಾನ, ಮನೆಯಲ್ಲಿ ಅಡಿಗೆ- ಬೇಕಾದ ಪರಿಕರಗಳ/ದಿನಸಿಗಳ ಪೂರೈಕೆ, ಅಮ್ಮನ ಆರೈಕೆ, ಆಗಾಗ ಮೊಳಗುವ ದೂರವಾಣಿಗೆ ಉತ್ತರ, ಕಲಾವಿದರಾದರನೇಕರಿಗೆ ಥೀಮ್ ಬೇಸ್ಡ್ ನೃತ್ಯಕ್ಕೆ ಹಿನ್ನೆಲೆ ಸಾಹಿತ್ಯ-ಪರಿಕಲ್ಪನೆ, ಏಕವ್ಯಕ್ತೀ ಯಕ್ಷಗಾನ ಪರಿಕಲ್ಪನೆ-ಪ್ರಸಂಗ ರಚನೆ, ಕನ್ನಡ-ಸಂಸ್ಕೃತಗಳಲ್ಲಿ ಕೃತಿಗಳ ರಚನೆ, ಯಾರಿಗೋ ಮುನ್ನುಡಿ-ಬೆನ್ನುಡಿ, ಮತ್ತೆಲ್ಲೋ ಶಾಲೆಯಲ್ಲಿ ಮಕ್ಕಳಿಗೆ ಪಾಠ, ಕಾಲೇಜುಗಳಲ್ಲಿ ಅಧ್ಯಾಪನ ---ಹೀಗೇ ಅವರ ನಿತ್ಯಜೀವನವೇ ಒಂದು ಅಷ್ಟಾವಧಾನ. ಅಷ್ಟರ ಮಧ್ಯೆಯೂ ಹಲವರ ರಚನೆಗಳನ್ನು ಪರಿಶೀಲಿಸಿ ಉತ್ತರಿಸುವುದು, ತಿದ್ದುವುದು ಸಾಮಾನ್ಯದ ತಾಳ್ಮೆಯೇ ಸ್ವಾಮೀ ? ಅಂತಹ ಘನಪಾಠಿ, ಅಂತಹ ಚತುರ್ವೇದಿ, ಅಂತಹ ನಡೆದಾಡುವ ಅದ್ಭುತ ಮಾನವ ಯಂತ್ರ ನಮ್ಮ ಮಧ್ಯೆ ಇದೆ! ಯಾವ ವಿಷಯವನ್ನೇ ಎಲ್ಲೇ ಎಷ್ಟೇ ಹೊತ್ತಿಗೆ ಪ್ರಸ್ತಾಪಿಸಿದರೂ ಅದಕ್ಕೆ ಸಮರ್ಪಕ ಉತ್ತರ ದೊರೆಯುವುದು ಗಣಕಯಂತ್ರದಲ್ಲೂ ಸಾಧ್ಯವಿಲ್ಲ, ಅದು ಇಲ್ಲಿ ಮಾತ್ರ ಸಾಧ್ಯ; ಗಣೇಶರಿಂದ ಮಾತ್ರ ಸಾಧ್ಯ! ಅಂತಹ ಹಿರಿಯ ವ್ಯಕ್ತಿಯೊಬ್ಬರ ಸಂಗ ನನಗೆ ದೊರಕಿದ್ದು ಯೋಗಾಯೋಗವೇ ಇರಬಹುದು.



’ಪದ್ಯಪಾನ’ದಲ್ಲಿ [http://padyapaana.com] ನಿನ್ನೆ ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೆ. ಮೇಲಿನ ಈ ಚಾಪ ಹಸ್ತದ ಬೇಡತಿಯ ಚಿತ್ರಕ್ಕೆ ಇಷ್ಟವಾದ ರೀತಿಯಲ್ಲಿ ಕವನ ಬರೆಯಬೇಕು ಎಂದು ತಿಳಿಸಿದ್ದರು . ಅದರ ಸ್ಯಾಂಪಲ್ಲುಗಳು ಈ ರೀತಿ ಇವೆ:

ನಾಡ ಹರೆಯದ ಹೈಕಳೆದೆಯಲಿ
ಮಾಡಿ ಮೋಡಿಯ ಜಾಗಪಡೆಯುತ
ಕಾಡು ಹೊಕ್ಕರೆ ಮರಳಿ ಸೆಳೆವರು ಬಿಡುವಜನವಲ್ಲ !
ಬೇಡಿ ಬರುವರು ಪ್ರೇಮಭಿಕ್ಷೆಯ
ಕಾಡಿ ಹುಡುಕುತ ನಿನ್ನ ಮೂಲದ
ಜಾಡ ಹಿಡಿವರು ಕೂಡುವಾಸೆಗೆ ಗೊಡವೆ ತರವಲ್ಲ !

ಬೆಡಗಿ ನಿನ್ನಯ ನಡು ನಿತಂಬವ
ಅಡಗುಗಣ್ಣಲೆ ಕಂಡು ಸೋತೆನು
ತುಡುಗು ಬುದ್ಧಿಯು ದೇಹಸಖ್ಯವ ಬಯಸುತಿಹುದಲ್ಲ |
ಒಡೆಯನಾಗುವ ಹುಚ್ಚು ಹಂಬಲ
ಬಿಡದೆ ನೆನೆವೆನು ರಾಮಚಂದ್ರನ
ಕೊಡಲಿ ನಿನ್ನನು ಶಾಶ್ವತಕೆ ನಾ ಬಿಡುವುದೇ ಇಲ್ಲ ||

ನೆಚ್ಚಿಕೊಳ್ಳುವೆ ನಿನ್ನನೋರ್ವಳ
ಅಚ್ಚಕನ್ನಡ ’ಕಾವ್ಯ’ ಜನಿಸಲಿ
ತುಚ್ಛನಾನೆಂದೆಣಿಸಿ ದೂರುತ ದೂರಹೋಗದಿರು |
ಅಚ್ಯುತನ ಪದದಾಣೆಯಲಿಪದ-
ಹಚ್ಚಿ ಪೊಗಳುವೆ ನಿನ್ನನೀ ಪರಿ
ಮೆಚ್ಚಿನೆನೆವೆನು ಭುವನದೊಳು ನೀ ಬಿಟ್ಟರೆನಗಿಲ್ಲ ! ||

ವಿಸ್ತರದಿ ಸಿರಿವತ್ಸಗಾದರ
ಮಸ್ತಕಕೆ ಕಸ್ತೂರಿ ಪೂಸುತ
ವಸ್ತುವಿಷಯವು ಗಹನವಿದ್ದರು ಗೆಲುವು ನಿಚ್ಚಳವು |
ಬೆಸ್ತ ಹುಡುಗಿಯ ಸುತನ ದಯೆಯಿರೆ
ಸುಸ್ತು ಎನಿಸದು ಬದುಕು ಸುಂದರ
ಅಸ್ತು ಎನ್ನುವ ಶತವಧಾನಿಗೆ ಜಯಜಯತು ಜಯವು ||

ಈ ಕವನದ ಭಾಗಗಳಲ್ಲಿ ಕೆಲವರ ಹೆಸರುಗಳೂ ಮತ್ತು ಅವರಿಗೆ ಸ್ವಾಗತಕೋರಿದ್ದು, ವಂದಿಸಿದ್ದೂ ಸೇರಿದೆ! ಮೂಲ ವಸ್ತುವಿಷಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅದನ್ನು ಭಾಮಿನಿ ಷಟ್ಪದಿಯಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ. ಪಾಠ ಬಹಳ ದೀರ್ಘವಾಯ್ತು, ಇವತ್ತಿಗೆ ಇಷ್ಟು ಸಾಕು, ಇಷ್ಟದ ಅಷ್ಟಾವಧಾನಿಗೆ ಸಾಷ್ಟಾಂಗ ನಮಸ್ಕಾರಗಳು. ಜೊತೆಗೆ ಪಾಠ ಕೇಳಿದ ನಿಮಗೆಲ್ಲರಿಗೂ ’ಪದ್ಯಪಾನ’ಕ್ಕೆ ಸ್ವಾಗತ ಮತ್ತು ನಮನಗಳು.

13 comments:

  1. ಗಣೇಶ್ ಸರ್ ನಮ್ಮೆಲ್ಲರ ಆಸ್ತಿ. ಕನ್ನಡದ ಅದ್ಭುತವೆನಿಸುವ ಒಬ್ಬರೇ ಒಬ್ಬರು. ಚಿಂತಕರು ಕೂಡ. ನಿಮ್ಮ ಲೇಖನ ತುಂಬಾ ಸಕಾಲಿಕವಾದದ್ದು. ಇನ್ನೂ ನಮಗೆ ಜಾಸ್ತಿ ಕಲಿಸಲಿ.

    ಧನ್ಯವಾದ.

    ReplyDelete
  2. R. Ganesh avaru eShtu janarannu thalupiddaare annuvudannu nimma lekhana sogasaagi heLide. excellent writeup sir.

    ReplyDelete
  3. ಧನ್ಯವಾದವು ನಿಮ್ಮ ಬರಹಕೆ
    ಮಾನ್ಯರವಧಾನಿಗಳ ಪರಿಚಯ -
    ಕನ್ಯವಾದಗಳಿಲ್ಲ ನಿಮ್ಮಯ ಸಾಜ ವಿವರಣೆಗೆ |
    ಜನ್ಯವಾಗಲಿ ಗೀಳು ಪದ್ಯದ -
    ನನ್ಯ ಛಂದೋವ್ಯಾಕರಣಗಳು
    ಧನ್ಯರಾದಿರಿ ತಾಯ್ನುಡಿಗೆ ರಸವೆರೆದು ಭಾವದಲಿ ||

    ReplyDelete
  4. ನಿಮ್ಮ ಕವನ ಮತ್ತು ಶತಾವಧಾನಿಗಳ ಪರಿಚಯ ಚೆನ್ನಾಗಿದೆ ಸರ್.
    ಸ್ವರ್ಣಾ

    ReplyDelete
  5. उत्तमम् । भट्भाग !

    ReplyDelete
  6. ಶ್ರೀ ಗಣೇಶ್ ಅವರು ನಮ್ಮೆಲ್ಲರ ಆಸ್ತಿ. ನಾನು ಒಮ್ಮೆ ಅವರ ಅಷ್ಟವದಾನ ಕಾರ್ಯಕ್ರಮ ನೋಡಿದ್ದೆ. ಅದೊಂದು ಅದ್ಭುತ!
    ಹಾಗೆಯೇ ನಿಮ್ಮ ಲೇಖನ ಕೂಡ ಸುಂದರ, ಗಣೇಶ ಅವರ ಬಗ್ಗೆ ತಿಳಿದಿರದ ಹತ್ತು ಹಲವು ವಿಚಾರಗಳನ್ನು ಬರೆದಿರುವಿರಿ.
    ಕವನ ಕೂಡ ಚೆನ್ನಾಗಿದೆ. :)

    ReplyDelete
  7. ಬಾಣವಿಲ್ಲದೆ ಬೇಡಹುಡುಗಿಯ
    ಜಾಣತನದಿಂ ಸೋಲಿಸಿಹರಿ
    ಕಾಣೆ ನಿಮ್ಮಯ ಎದೆಗಾರಿಕೆಗೆ ಸರಿದೊರೆಯ

    ReplyDelete
  8. ಅವಧಾನ ಕಲೆ ಯ ಬಗ್ಗೆ ತಿಳಿಯಿತು. ಮೆಕ್ಯಾನಿಕಲ್ ಇಂಜಿನಿಯರ್ ಗಣೇಶರು ಶತಾವಧಾನಿಯಾದ್ದು ಸಂತೋಷವಾಯಿತು. ಅಭಿನಂದನೆಗಳು.

    ReplyDelete
  9. Excellent write up sir..Very great and heartful thoughts expressed about Poojaneeya Shatavadhaniji... :-)

    ReplyDelete
  10. ಅನೇಕ ಗಣ್ಯ ಮಹನೀಯರು ಈ ಲೇಖನವನ್ನು ಓದಿ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಸ್ವತಃ ಶ್ರೀಯುತ ಆರ್. ಗಣೇಶರೂ ಕೂಡ ಸೇರಿದ್ದಾರೆ. " ನೀವು ನನ್ನನ್ನು ಆರಾಧಿಸಿ ಬರೆದಿದ್ದು ತೀರಾ ಮುಜುಗರ ತಂದ ವಿಷಯ " ಎಂದಿದ್ದಾರೆ. ಆದರೆ ನನಗದು ಹಾಗನ್ನಿಸಿಲ್ಲ. ಹೊಸದಾಗಿ ಬ್ಲಾಗಿಗೆ ಇತ್ತೀಚೆಗೆ ಹಲವಾರು ಮಾನ್ಯರು ಭೇಟಿನೀಡಿದ್ದಾರೆ. ಅವರಲ್ಲಿ ಶ್ರೀಯುತ ಕೆ.ಬಿ.ಎಸ್ ರಾಮಂಚಂದ್ರರೂ ಕಾಣುತ್ತಾರೆ. ನಿಮಿತ್ತಮಾತ್ರನಾದ ನನ್ನಿಂದ ಬರೆಸುವ ಶಕ್ತಿ ನಿಮ್ಮೆಲ್ಲರದಾಗಿದೆ. ನಿಮ್ಮೆಲ್ಲರ ಓದಿಗೆ ಮತ್ತು ಅಭಿಪ್ರಾಯಗಳಿಗೆ ಋಣಿಯಾಗಿದ್ದೇನೆ, ಆಭಾರಿಯಾಗಿದ್ದೇನೆ. ಭಾಮಿನಿಯ ಕುರಿತಾಗಿ ಆರಂಭಿಸಿದ ಈ ಲೇಖನದ ಪ್ರತಿಕ್ರಿಯೆಗಳಿಗೆ ಭಾಮಿನಿಯಲ್ಲೇ ಕೃತಜ್ಞತೆ ಸಲ್ಲಿಸುವ ಪ್ರಯತ್ನ ಹೀಗಿದೆ:


    ನೆನೆವೆನೆಲ್ಲರನಿದರ ಓದಿಗೆ
    ಘನಥರದ ಪಾಂಡಿತ್ಯವವರದು
    ಮನದಣಿಯೆ ಕರಮುಗಿದು ಶಿರಬಾಗಿ ವಂದಿಪೆನು |
    ದಿನಮಣಿಯ ಕಿರಣಗಳ ತೆರದಲಿ
    ಜನಮನವ ಬೆಳಗುತಿಹ ಸೇವೆಗೆ
    ಅನವರತ ನಾವೇನು ಕೊಟ್ಟರು ಕಮ್ಮಿಯೆನ್ನುವೆನು ||

    ReplyDelete
    Replies
    1. ಮೂರನೇ ಬಾರಿ ಈ ಲೇಖನವನ್ನ ಓದಿದ್ದಾಯಿತು ಭಟ್ಟರೇ. ಓದುತ್ತಲೇ ಇರಬೇಕು ಅನ್ನಿಸತ್ತೆ . "ಭಾವಸ್ವಿ" ಗಣೇಶರ ಪರಿಚಯ ಇನ್ನೊಬ್ಬ ಭಾವಸ್ವಿ ಇಂದ ಅಧ್ಭುತವಾಗಿದೆ.
      ಬರಹ ಪಂಚಾಮೃತದಷ್ಟು ಸವಿಯಾಗಿರುತ್ತೆ ಅನ್ನೋದಕ್ಕೆ ಇಂದೊಂದು ಉದಾಹರಣೆ.

      ಬರಿತಾಯಿರಿ
      ಶ್ರೀನಿವಾಸ

      Delete
  11. ಭಟ್ರೇ,

    ಗಣೇಶ್ ಅವರ ಬಗ್ಗೆ ಕೆಲವು ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಂಡೆ..ಉತ್ತಮ ಬರಹ....ಧನ್ಯವಾದಗಳು...

    ReplyDelete
  12. guruvu iddare heege irabeku. kasta pattu enadaru tharabahudu , aadare aparoopda gurugalu sigalu nijavada punyave beku.

    ReplyDelete