ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, December 3, 2011

ಡರ್ಟಿ ಎನಿಸದ ಡರ್ಟಿ ಪಿಕ್ಚರ್ !


ಡರ್ಟಿ ಎನಿಸದ ಡರ್ಟಿ ಪಿಕ್ಚರ್ !

ನಿಮ್ಮಂತೇ ಅಥವಾ ನಿಮ್ಮಲ್ಲಿ ಕೆಲವರಂತೇ ಕುತೂಹಲಿಯಾಗಿ ’ದಿ ಡರ್ಟಿ ಪಿಕ್ಚರ್’ ನೋಡಿದೆ! ನೋಡುವ ಮೊದಲು ಉತ್ಸುಕನಾಗಿದ್ದೆ, ಕಾಮದ ಬಗ್ಗೆ [ಕಾಮವನ್ನು ನೋಡುವ ಉದ್ದೇಶವಲ್ಲ] ಒಂದಷ್ಟು ಏನೇನೋ ಜೋಡಿಸಿರುತ್ತಾರೆ ಎಂದುಕೊಂಡಿದ್ದೆ, ಖಂಡಿತಾ ಹಾಗಿಲ್ಲ. ನೋಡುತ್ತಾ ನೋಡುತ್ತಾ ಕೊನೇಗೆ ನನಗೇ ಅರಿವಿಲ್ಲದೇ ಕಣ್ಣಲ್ಲಿ ಎರಡು ಹನಿಗಳು ಹುಟ್ಟಿ ಕೆನ್ನೆಯ ಪಕ್ಕೆಗಳತ್ತ ಜಾರಿದವು. ನಾವು ನೀವು ಸಾಮಾನ್ಯವಾಗಿ ತಿಳಿದುಕೊಳ್ಳುವಂತಹ ಸನ್ನಿವೇಶ ಯಾವುದೂ ಕಾಣಿಸಲಿಲ್ಲ. ಕುಟುಂಬ ಸಮೇತ ಕುಳಿತು ಯಾವುದೇ ಮುಜುಗರವಿಲ್ಲದೇ ನೋಡಬಹುದಾದ ಚಿತ್ರ; ಯಾಕೆಂದರೆ ಅದರಲ್ಲಿರುವ ಚಿಕ್ಕ ಪುಟ್ಟ ಬಿಚ್ಚುಡುಗೆಯ ಚಿತ್ರಗಳಿಗಿಂತಾ ಕೆಳಮಟ್ಟದ ಅಥವಾ ಬಟ್ಟೆಯೇ ಇಲ್ಲದ ಚಿತ್ರಗಳನ್ನು ನಿತ್ಯವೂ ನಾವು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ನೋಡುತ್ತೇವೆ. [ ಇನ್ನು ೮-೧೪ ವಯಸ್ಸಿನ ಚಿಕ್ಕಮಕ್ಕಳು ತೋರಿಸಬಾರದು ಎಂಬ ಮನೋಭಾವ ಇದ್ದರೆ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗಬಹುದು. ೬ ಕ್ಕೂ ಕೆಳಗಿನವರಿಗೆ ಅರ್ಥವಾಗುವುದಿಲ್ಲ, ೧೫ ಕ್ಕೂ ಮೇಲಿನವರು ಅವರೇ ಕದ್ದಾದರೂ ನೋಡುತ್ತಾರೆ! ]

ನಾನು ಸಿನಿಮಾ ನೋಡದೇ ವರ್ಷಗಳೇ ಕಳೆದಿವೆ. ಮಡಿವಂತಿಕೆಯಲ್ಲ, ಹಣಖರ್ಚಾಗುವ ಪ್ರಮೇಯಕ್ಕಲ್ಲ, ನಮ್ಮಂತಹ ಬರಹಗಾರರು / ತರಬೇತುದಾರರು/ ತಂತ್ರಜ್ಞರು ಎಲ್ಲರ ಜೊತೆ ಕೂತು ಸಿನಿಮಾ ನೋಡಬಾರದೆಂಬ ಮನೋಭಾವದವನೂ ಅಲ್ಲ. ಸರದಿಯಲ್ಲಿ ನಿಂತು ಟಿಕೇಟು ಕೊಳ್ಳುವುದು, ನುಗ್ಗಾಟದಲ್ಲಿ ನುಸುಳಿ ಪ್ರಯಾಸದಲ್ಲೇ ನೋಡುವುದು ನನಗೆ ಒಗ್ಗುವುದಿಲ್ಲ. ನಾವು ನೋಡಬೇಕೆನ್ನಿಸುವಷ್ಟು ದಿವಸಗಳಿಗೆ ಸಿನಿಮಾ ಹತ್ತಿರದ ಥಿಯೇಟರ್ ಗಳಿಂದ ಎದ್ದುಹೋಗಿರುತ್ತದೆ. ಅವರಿವರ ಬಾಯಿಂದ ಕಥೆ ಗೊತ್ತಾದಮೇಲೆ ನೋಡುವ ಆಸಕ್ತಿ ತೀರಾ ಉಳಿಯುವುದಿಲ್ಲ. ಅದರಲ್ಲಂತೂ ಇತ್ತೀಚೆಗೆ ಕನ್ನಡದಲ್ಲಂತೂ ಒಂದೋ ಮಚ್ಚು-ಲಾಂಗು ವ್ಯವಹಾರದ್ದು ಇಲ್ಲಾ ಯೋಗರಾಜ ಭಟ್ಟರ ಒಂದೇ ರುಚಿಯ ಚಿತ್ರಾನ್ನ ಅದೂ ಇಲ್ಲಾ ಅಂದ್ರೆ ಅಲ್ಲೊಂದಷ್ಟು ಇಲ್ಲೊಂದಷ್ಟು ಸಿನಿಮಾಗಳ ತುಣುಕು ಕಥೆ ಕದ್ದು ಸೇರಿಸಿದ ಕೊಲಾಜ್ ಇವುಗಳೇ ಆಗಿರುತ್ತವೆ. ಪುಟ್ಟಣ್ಣ ಕಣಗಾಲ್‍ರಂಥವರು ಗತಿಸಿದ ಮೇಲೆ ಎಲ್ಲೋ ಆಗೊಮ್ಮೆ ಈಗೊಮ್ಮೆ ’ಅಮೃತವರ್ಷಿಣಿ’ , ’ಯಜಮಾನ’, ’ಆಪ್ತಮಿತ್ರ’ ಹೀಗೇ ಒಂದೊಂದು ಕನ್ನಡ ಸಿನಿಮಾಗಳು ಬರುತ್ತಿವೆ. ಅಂತಹ ನಿರ್ದೇಶಕರು ಕನ್ನಡದಲ್ಲಿ ಮತ್ತೆ ಬರುತ್ತಾರಾ ಎಂದು ಈಗಲೂ ನನ್ನಂಥವರು ಹುಡುಕುತ್ತಿದ್ದಾರೆ; ಹೊಸದೊಂದು ಸಿನಿಮಾ ಸೆಟ್ಟೇರಿದಾಗ ಅದರ ನಿರ್ದೇಶಕರಲ್ಲಿ ಕಣಗಾಲ್ ರನ್ನು ಕಾಣ ಹೊರಡುತ್ತೇವೆ. ಬಹುತೇಕ ಭ್ರಮನಿರಸನಗೊಳ್ಳುತ್ತೇವೆ. ಮತ್ತೆ ಹುಡುಕುವುದು ಮತ್ತೆ ಸುಮ್ಮನೇ ಕೂರುವುದು- ಇದನ್ನು ನೆನೆದಾಗ " ಬಂದೇ ಬರುತಾನೆ ರಾಮ ಬಂದೇ ಬರುತಾನೆ....." ಹಾಡಿನ ನೆನಪಾಗುತ್ತದೆ. ಪುಟ್ಟಣ್ಣ ಮರಳುವುದೂ ಇಲ್ಲ, ಯಾರಲ್ಲೂ ಪರಕಾಯ ಪ್ರವೇಶ ಮಾಡುವುದೂ ಇಲ್ಲ ಎಂಬ ಭಾವತರಂಗಗಳು ನಮ್ಮಲ್ಲಿ ಹರಿಯುವುದೇ ಇಲ್ಲ !

ಹಿಂದೂ ಕೆಲವೊಮ್ಮೆ ಇಂತಹದ್ದೇ ಹಿಂದೀ ಸಿನಿಮಾಗಳನ್ನು ನಾನು ನೋಡಿದ್ದಿದೆ. ತಬು ನಟಿಸಿದ ಚಾಂದನಿ ಬಾರ್, ಕರೀನಾ ಕಪೂರ್ ನಟಿಸಿದ ಚಮೇಲಿ ಇಂತಹ ಚಿತ್ರಗಳನ್ನು ನೋಡಿದ್ದೇನೆ; ಖುಷಿಪಟ್ಟಿದ್ದೇನೆ. ಇವುಗಳನ್ನು ನೋಡುವುದು ನಾಯಕಿಯರು ಬಿಚ್ಚುಡುಗೆಯಲ್ಲಿ ಚೆನ್ನಾಗಿ ಕಾಣುತ್ತಾರೆ ಎಂದು ಜೊಲ್ಲು ಸುರಿಸುವುದಕ್ಕಲ್ಲ ಬದಲಾಗಿ ಇಂತಹ ಚಿತ್ರಗಳಲ್ಲಿ ನಾಯಕ, ನಾಯಕಿ ತಮ್ಮ ಅದ್ಭುತ ನಟನಾ ಕೌಶಲವನ್ನು ಹೊರಹೊಮ್ಮಿಸಲು ಸಾಕಷ್ಟು ಅವಕಾಶಗಳಿರುತ್ತವೆ. ನಟಿಯರು ಹೇಗೂ ತಮ್ಮ ದೇಹಸಿರಿಯನ್ನು ಸಾರ್ವಜನಿಕರ ಕಣ್ಣಿಗೆ ಉಣಬಡಿಸುವುದು ಸಹಜವೇ. ಅಂಥದ್ದಕ್ಕೆ ತಯಾರಿದ್ದವರು ಮಾತ್ರ ಹಾಗೆ ನಟಿಯರಾಗುತ್ತಾರೆ. ಆದರೆ ನಟಿಯರು ಎಂದಾಕ್ಷಣ ಅವರೆಡೆ ಮೂಗು ಮುರಿಯುವುದು ಅಸಡ್ಡೆಮಾಡುವುದು ಸರಿಯಲ್ಲ. ಅವರಲ್ಲೂ ಕಲೆಗಾರಿಕೆ ಇರುತ್ತದೆ. ಒಳಗೆ ಕುಳಿತ ಕಲಾವಿದನಿಗೆ ಲಿಂಗಭೇದವಿಲ್ಲ. ವೈಯ್ಯಕ್ತಿಕ ಜೀವನದಲ್ಲಿ ನಟೀಮಣಿಗಳು ಏನಾದರೂ ಮಾಡಿಕೊಳ್ಳಲಿ ಆದರೆ ಕಥೆಯಲ್ಲಿ ಬರುವ ಆ ಯಾ ಪಾತ್ರಗಳಿಗೆ ಜೀವತುಂಬಿದ್ದಾರೋ ಎಂಬುದು ನಾವು ನೋಡಬೇಕಾದ ಪ್ರಮುಖ ಅಂಶ.

ಹಿಂದೆ ಸಿನಿಮಾಗಳು ಚೆನ್ನಾಗೇ ಇರುತ್ತಿದ್ದವು ಯಾಕೆಂದರೆ ಅವುಗಳ ಕಥೆಗಳು ಹೆಚ್ಚಾಗಿ ಉತ್ತಮ ಕಾದಂಬರಿಗಳನ್ನು ಆಧರಿಸುತ್ತಿದ್ದವು. ಇಂದು ಕಾಸು ಉಳ್ಳ ನಿರ್ಮಾಪಕ ಯಾವುದೋ ನಿರ್ದೇಶಕರನ್ನೂ ಇನ್ಯಾರ್ಯಾರೋ ಕಲಾವಿದರನ್ನೂ ಕಲೆಹಾಕಿ ಒಟ್ಟಾರೆ ಮತ್ತೊಂದಷ್ಟು ಹಣಗಳಿಸಬೇಕೆಂಬ ಒಂದೇ ಉದ್ದೇಶದಿಂದ ಸಿನಿಮಾ ಮಾಡಲು ಹೊರಟು ಊಟಕ್ಕೊಂದು ಉಪ್ಪಿನಕಾಯಿ, ಹಪ್ಪಳ-ಸಂಡಿಗೆ, ಪಲ್ಯ, ಚಿತ್ರಾನ್ನ ಇವೆಲ್ಲಾ ಇರುವ ಹಾಗೇ ಅವರದ್ದೇ ಭಾಷೆಯಲ್ಲಿ ಹೇಳುವುದಾದರೆ ಒಂದು ಲವ್ ಸೀನು, ಒಂದು ಫೈಟಿಂಗು, ಒಂದು ಕ್ಲೈಮ್ಯಾಕ್ಸು, ಒಂದ್ಸ್ವಲ್ಪ ಸೆಂಟಿಮೆಂಟು, ಒಂದಷ್ಟು ಹಾಡುಗಳ ಮಧ್ಯೆ ಒಂದು ಬಿಕನಿಹಾಕಿ ಕುಣಿವ ಐಟೆಮ್ ಸಾಂಗು --ಇದಲ್ಲ ಸಿನಿಮಾ. ಎಲ್ಲೂ ಪುನರಾವರ್ತಿತವಾಗದ ಕಾಲಕ್ಕೆ ತಕ್ಕ ಸ್ವಸಾಮರ್ಥ್ಯವುಳ್ಳ ಕಥೆಯನ್ನು ಆಯ್ದುಕೊಂಡು, ಉತ್ತಮ ಭೂಮಿಕೆ, ಉತ್ತಮ ನಿರ್ದೇಶಕರು-ತಂತ್ರಜ್ಞರನ್ನು ಹಾಕಿಕೊಂಡು ಮಾಡುವ ಸಿನಿಮಾ ಎಲ್ಲೂ ನೆಲಕಚ್ಚುವುದಿಲ್ಲ!! ಅಲ್ಲಿ ಕಲವಿದರೂ ಗೆಲ್ಲುತ್ತಾರೆ, ನಿರ್ಮಾಪಕ, ನಿರ್ದೇಶಕ, ತಂತ್ರಜ್ಞ ಎಲ್ಲರೂ ಉತ್ತೀರ್ಣರಾಗುತ್ತಾರೆ. ಅದು ಬಿಟ್ಟು ಹಾಡಿದ್ದನ್ನೇ ಹಾಡೋ ಕಿಸಬಾಯ್ ದಾಸರ ರೀತಿ ಮಾಡಿದ್ದನ್ನೇ ಮತ್ತೆ ಮಾಡುತ್ತಾ ಮಾಧ್ಯಮಗಳಲ್ಲಿ " ಇದೊಂಥರಾ ಡಿಫರೆಂಟ್ ಆಗಿದೆ " ಎಂದರೆ ಸಾಕಾಗೋದಿಲ್ಲ, ಪ್ರೇಕ್ಷಕ ಹುಷಾರಿದ್ದಾನೆ, ಚೆನ್ನಾಗಿಲ್ಲದಿದ್ದರೆ ತೋಪೆದ್ದುಹೋಗುತ್ತದೆ! ಆಮೇಲೆ ನಿದ್ರೆಮಾತ್ರೆ ಸುಸೈಡ್ ಅಟೆಂಪ್ಟು ಇದೆಲ್ಲಾ ನಾಟಕಮಾಡಿದರೂ ಮತ್ತೆ ಆ ಯಾ ಗೌರವ ಸ್ಥಾನಗಳನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಹೋಗಲಿ ಬಿಡಿ "ಇದೆಲ್ಲಾ ನಮಗೂ ಗೊತ್ತಿರುವ ಕಥೇನೆ ಅದ್ಯಾಕ್ ಕೊರೀತಾನೋ" ಅಂದ್ಕೊಂಡ್ರೆ ಕಷ್ಟ, ನೇರವಾಗಿ ಡರ್ಟಿಯತ್ತ ಸಾಗಿಬಿಡೋಣ.

ಸಿನಿಮಾ ಇರುವುದು ಒಬ್ಬ ನಟಿಯ ಜೀವನದ ಸುತ್ತ. ಅದು ಸಿಲ್ಕ್ ಸ್ಮಿತಾಳ ಜೀವನವನ್ನು ಹೋಲುವಂಥದ್ದೂ ಹೌದು ಮತ್ತು ಚಿತ್ರದಲ್ಲಿ ಸಿಲ್ಕ್ ಎನ್ನುವ ಹೆಸರನ್ನೇ ಬಳಸಲಾಗಿದೆ. ವಿದ್ಯಾಬಾಲನ್ ತನ್ನ ಪಾತ್ರವನ್ನು ಎಕ್ಸಲೆಂಟ್ ಆಗಿ ಮಾಡಿದ್ದಾಳೆ. ಉಳಿದ ಪಾತ್ರಗಳೂ ಸಾಕಷ್ಟು ಚೆನ್ನಾಗೇ ಮೂಡಿಬಂದಿವೆ. ಚಿತ್ರದ ಟೈಟಲ್ ಸಾಂಗ್ ಕೊನೇವರೆಗೂ ಮನೆಗೆ ಹೋದಮೇಲೂ ಮರೆತುಹೋಗುವುದಿಲ್ಲ. ನೀವೀಗಾಗಲೇ ಮಾಧ್ಯಮಗಳಲ್ಲಿ ಎಫ್ ಎಂ ರೇಡಿಯೋಗಳಲ್ಲಿ ಕೇಳಿಯೇ ಇರುತ್ತೀರಿ " ಊಲಾಲಾ ಊಲಾಲಾ ಊಲಾಲಾ ಊಲಾಲಾ ತೂ ಹೈ ಮೆರಿ ಫ್ಯಾಂಟಸಿ " ಎಂಬ ಹಾಡು. ನಟಿಯಾಗ ಹೊರಟ ಹೆಣ್ಣೊಬ್ಬಳಿಗೆ ಯಾವೆಲ್ಲಾ ರೀತಿಯ ಕಷ್ಟಕೋಟಲೆಗಳು ಬರಬಹುದು, ಜೀವನದ ಯಾವ ನೋವಿನ ಘಟ್ಟದಲ್ಲಿ ಎಂದಿನ ಅನಿವಾರ್ಯತೆಯಲ್ಲಿ ಅವಳು ಚಟಗಳಿಗೆ ಬಲಿಯಾಗುತ್ತಾಳೆ, ಗಂಡಸರು ಹೇಗೆ ಅವಳನ್ನು ದುರುಪಯೋಗಪಡಿಸಿ ಶೋಷಿಸುತ್ತಾರೆ ಎಂಬೆಲ್ಲಾ ಅಂಶಗಳ ಬಗ್ಗೆ ಕಥೆ ಹರವಿಕೊಂಡು ಸಾಗುತ್ತದೆ.

ವೃತ್ತಿ ಜೀವನದ ಆರಂಭದಲ್ಲಿ ಕೇವಲ ೫ ರೂಪಾಯಿಗಾಗಿ ಹಂಬಲಿಸುವ ನಟಿ ವೃತ್ತಿಯ ಶಿಖರವನ್ನೇರಿದಾಗ ಹಲವು ಡಿಮಾಂಡ್ ಮಾಡುತ್ತಾಳಾದರೂ ರಸಿಕ ಕಾಮುಕ ಚಿತ್ರ ನಿರ್ಮಾಪಕ, ನಿರ್ದೇಶಕ, ನಟರೊಂದಿಗೆ ಅವಳ ಸಂಬಂಧ ಹೇಗೆ ಬೆಸೆದುಕೊಂಡು ತನ್ನ್ ಸರ್ವಸ್ವವನ್ನೂ ಕಳೆದುಕೊಳ್ಳುತ್ತಾ ಹೋಗುತ್ತಾಳೆ ಎಂಬುದನ್ನು ವಿಶದವಾಗಿ ಚಿತ್ರಿಸಲಾಗಿದೆ. ವಯಸ್ಸು ಇನ್ನೂ ಇದ್ದರೂ ಉದ್ಯಮಕ್ಕೆ ದುಡಿದುಕೊಡುವ ಕುದುರೆಯಾಗಿ ಕಾಣದಾಗ ಕಾಲ ಕಸದಂತೇ ವರ್ತಿಸುವ ಆ ಮಂದಿಯ ನಿರಾಕರಣೆಗಳಿಗೆ ಬೇಸತ್ತು ಕಾಲಹಾಕುವುದು, ಮತ್ತೆ ಒಮ್ಮೆ ಐದೇ ರೂಪಾಯಿಗಳಿಗಾಗಿ ಬೇಡುವುದು ಇವೆಲ್ಲಾ ಮನಸ್ಸಿಗೆ ನಾಟುತ್ತವೆ. ದಿವಾಳಿಯಾಗಿ ಸಾಲಮಾಡಿಕೊಂಡ ನಟಿಗೆ [ಅಮ್ಮನ ಮನೆಬಾಗಿಲೂ ಮೊದಲೇ ಮುಚ್ಚಿಹೋಗಿರುತ್ತದೆ] ಯಾರೂ ಇಲ್ಲದಾದಾಗ ತನ್ನ ನೋವನ್ನು ಕೇಳುವವರೇ ಇಲ್ಲದ ದುರ್ಭರ ಸ್ಥಿತಿಯಲ್ಲಿ ಮಾನಸಿಕ ಖಿನ್ನತೆಯಲ್ಲಿ ಆಕೆ ಈ ಲೋಕಕ್ಕೆ ವಿದಾಯಹೇಳುವ ಸನ್ನಿವೇಶ ಕಣ್ಣಾಲಿಗಳನ್ನು ತುಂಬಿಸುತ್ತದೆ. ಈ ಸಂದರ್ಭ ನನಗೆ ಎರಡು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ತೀರಿಕೊಂಡ ಪರ್ವೀನ್ ಬಾಬಿಯ ನೆನಪಾಯ್ತು; ತುಂಬು ಹರೆಯದ ಸುಂದರ ತರುಣಿ ಒಂದುಕಾಲದಲ್ಲಿ ಅಮಿತಾಭ್ ರಂತಹ ನಾಯಕರ ಮನವನ್ನೇ ಗೆದ್ದಿದ್ದಳು! ಆದರೆ ಸಾಯುವಾಗ ಎಂತಹ ವ್ಯಥೆಯಿಂದ ಸತ್ತಳು ಎಂಬುದು ಅನೇಕರಿಗೆ ತಿಳಿದಿರುವ ಸಂಗತಿ.

ಇತ್ತೀಚೆಗೆ ಸೆಲೆಬ್ರಿಟಿಗಳು ಸಾರ್ವಜನಿಕ ಜೀವನದಲ್ಲಿರುವವರು ಹಲವು ಅನೈತಿಕ ಸಂಬಂಧಗಳಲ್ಲಿ ತೊಡಗಿಕೊಂಡು ಹೆಂಡತಿ-ಮಕ್ಕಳನ್ನು ಕೈಬಿಡುತ್ತಾರೆ. ಈ ಕಥೆಯನ್ನು ಬರೆಯುತ್ತಿರುವ ಹೊತ್ತಿಗೇ ’ಜಸ್ಟ್ ಬೆಂಗಳೂರು’ ನಲ್ಲಿ ಅಂತಹ ಒಂದು ಸುದ್ದಿ ಬಿತ್ತರವಾಯ್ತು. ನಮ್ಮ ಏಳ್ಗೆಗಾಗಿ, ನಮ್ಮ ಅನುಕೂಲಕ್ಕಾಗಿ ನಮ್ಮ ಜೊತೆಯಾದ ಹೆಣ್ಣನ್ನು ನಡುನೀರಿನಲ್ಲಿ ಕೈಬಿಡುತ್ತಿರುವುದು ಖಂಡನೀಯ. ಸಿನಿಮಾಮಂದಿಯ ಈ ವರ್ತನೆ ಈಗೀಗ ಇದು ತೀರಾ ದಿನಕ್ಕೊಂದೆರಡು ವರದಿಯಾಗುತ್ತಿದೆ. ಇಂಥದ್ದನ್ನು ಹಾಗೆ ಮಾಡಿದ ನಟ/ನಿರ್ದೇಶಕರಿಗೆ ಪ್ರೇಕ್ಷಕರು ಒಟ್ಟಾಗಿ ಕಲ್ಲೆಸೆದು ನಿಯಂತ್ರಿಸಬೇಕಾಗಿದೆ.

ಒಟ್ಟಾರೆ ಹೇಳುವುದಾದರೆ ಡರ್ಟಿ ಪಿಕ್ಚರ್ ನಲ್ಲಿ ಅಂಥಾ ಡರ್ಟಿ ಸನ್ನಿವೇಶಗಳ್ಯಾವವೂ ಇಲ್ಲ. ಇಂದಿನ ಮಕ್ಕಳು ನಮಗಿಂತಾ ತಿಳುವಳಿಕೆ ಉಳ್ಳವರಾಗಿರುವುದರಿಂದ ಕುಟುಂಬ ಸಮೇತ [ಅಥವಾ ಮಕ್ಕಳನ್ನು ಬೇಕಾದರೆ ಮನೆಯಲ್ಲೇ ಬಿಟ್ಟು] ಹಾಯಾಗಿ ಕುಳಿತು ನೋಡಬಹುದು. ಹೋಗಿಬನ್ನಿ, ನೋಡಿಬನ್ನಿ , ಕಲಾವಿದರಿಗೆ / ನಟಿಯರಿಗೆ ಅಂತಹ ಸ್ಥಿತಿ ಬಾರದಿರಲಿ ಎಂದು ಹಾರೈಸಿಬನ್ನಿ. ಮುಗಿಸುವ ಮುನ್ನ: ವಿದ್ಯಾಬಾಲನ್ ಅವರಿಗೆ ಬೇಕಷ್ಟು ಅವಾರ್ಡ್‍ಗಳು ಸಿಗಬಹುದಾಗಿದೆ; ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು, ಮಿಕ್ಕವರಿಗೂ ಕೂಡ ಅಭಿನಂದನೆಗಳು.

14 comments:

 1. Well said sir, A good Comment.........

  ReplyDelete
 2. posytiv aproch is maen....alvaa ? very nise & true words.....

  ReplyDelete
 3. bhat sir, after reading this i too wish to see it.

  ReplyDelete
 4. ಭಟ್ಟರೆ,
  ಉತ್ತಮ ವಿಶ್ಲೇಷಣೆಗಾಗಿ ಧನ್ಯವಾದಗಳು. ಇಂತಹ ಒಳ್ಳೆಯ ಸಿನೆಮಾಗಳಲ್ಲಿ Bandit Queen:Phoolan Deviಯನ್ನು ಸಹ ಸೇರಿಸಬಹುದು.

  ReplyDelete
 5. ಭಟ್ಟರೆ,
  ಉತ್ತಮ ವಿಶ್ಲೇಷಣೆಗಾಗಿ ಧನ್ಯವಾದಗಳು.

  ReplyDelete
 6. ವಿ ಆರ್ ಬಿ ಸರ್ ನಿಮ್ಮ ವಿಶ್ಲೇಷಣೆ ನೋಡಿದ ಮೇಲೆ ಚಿತ್ರ ನೋಡಬೇಕು ಅನ್ನಿಸ್ತಿದೆ. ಕೆಲವೊಮ್ಮೆ ಹೆಸರನ್ನು ನೋಡಿ ಮೋಸ ಹೋದ ಪಡ್ಡೆ ದಿನಗಳು ನೆನಪಾಗ್ತವೆ...ಹಹಹಹ. ಈಗ ಇನ್ನೊಂದು ಥರ ಮೋಸ ಹೋಗ್ಬಾರ್ದು ಅಲ್ವಾ?

  ReplyDelete
 7. ಸಿನೆಮಾ ಮಾಧ್ಯಮ ಬಂದಾಗ ಜಗತ್ತು ನಮ್ಮ ಮನೆಯಲ್ಲಿ, ನಮ್ಮ ಕೈಯಲ್ಲಿ ನಲಿದಾಡುತ್ತಿದೆ ಅಂತ ಅನ್ನಿಸಿದ್ದು ಸಹಜ.ಅದೇ ರೀತಿ ಮಾಡಬಾರದ ಕೆಲಸಗಳು ಮಾಡದಂತೆ ಮತ್ತು ಮಾಡುವಂತೆಯೂ ಅದರಲ್ಲಿ ಸಂದೇಶಗಳು ನೇರವಾಗಿ ಸಮಾಜಕ್ಕೆ ರವಾನೆಯಾಗುತ್ತದೆ. ಈಗ ಮಾತು ನಿಮ್ಮ "ದಿ ದರ್ಟಿ ಪಿಕ್ಚರ್"ಬಗ್ಗೆ.ನಿಮ್ಮ ಬರವಣಿಗೆ ಶೈಲಿ ಮತ್ತು ವಿಶ್ಲೇಷಣೆ ಕೆಟ್ಟದ್ದನ್ನು ಒಳ್ಳೆಯದು ಮಾಡುವ ಗುಣವುಳ್ಳದ್ದು ಅಂತ ಸಾಭೀತಾಯಿತು.ಪಕ್ಕಾ ವಿಚಾರದಿಂದ, ವಿಶಾಲವಾಗಿ ನೇರ ಮಾತಿನಿಂದ ಎದೆಗೆ ನುಗ್ಗಿಸಿದ್ದೀರಿ. ತುಂಬಾ ಚೆನ್ನಾಗಿದೆ ಬರಹ.

  ReplyDelete
 8. ಬಹಳಾ ವಿಶೇಷವಾಗಿ ಚಿತ್ರದ ವರ್ಣನೆ ಮಾಡಿದ್ದಿರಾ ಸರ್.. ಆದರೆ ನಮ್ಮೂರಲ್ಲಿ ಚಿತ್ರ ನೋಡಿ ಬಂದ ಎಲ್ಲರೂ ಈ ಚಿತ್ರ ಸರಿ ಇಲ್ಲ..
  ಎಂಬ ಮಾತುಗಳನ್ನು ಹೇಳುತ್ತಾರೆ.. ನಾವಿನ್ನು ಚಿತ್ರ ನೋಡಿಲ್ಲ... ನಮ್ಮ ಕೆಲಸಗಳ ಬಿಡುವಿನ ಮಧ್ಯೆ ಚಿತ್ರಗಳನ್ನು ನೋಡುವುದು
  ಅಪರೂಪ ಮತ್ತು ಬೇಡವೆಂದರು ಸಹ ಚಿತ್ರ ನೋಡಿಬಂದವರು ಕಥೆಯನ್ನು ಬಲವಂತವಾಗಿ ನಮ್ಮಲ್ಲಿ ಹೇಳಿಯೇ ಬಿಡುತ್ತಾರೆ..
  ಅದರಿಂದ ಅವರಿಗೆ ಹೆಚ್ಚಿನ ಆನಂದ ಸಿಗುತ್ತದೆ ಚಿತ್ರದ ಬಗ್ಗೆ... ಇಂತಹಾ ಸಮಯದಲ್ಲಿ ಆ ಕಥೆಯನ್ನು ಕೇಳಿದ ಚಿತ್ರ ನೋಡುವ
  ಆಸಕ್ತಿ ಕಡಿಮಿಯಾಗಿ ಮತ್ತೊಂದು ಹೊಸ ಚಿತ್ರದ ಕಡೆ ಮನಸ್ಸು ಹರಿಯುತ್ತದೆ..
  ನಾವು ಕೂಡ ಏನಾದರೂ ಒಂದು ವಿಷಯ ಸಿಗಬಹುದು ಎಂಬ ಚಿಂತನೆಯಲ್ಲಿ ಚಲನಚಿತ್ರ ನೋಡುತ್ತೇವೆ.. ನಿಮ್ಮ ಈ ವಿವರಣೆ
  ಚಿತ್ರದ ಬಗೆಗಿನ ವಿಚಾರವನ್ನು ಮತ್ತಷ್ಟು ಹೆಚ್ಚಿಸಿದೆ.. ಇಂತಹಾ ಮಾಹಿತಿಯ ಚಿತ್ರ ವಿಶ್ಲೇಷಣೆ ಬಹಳಾ ಸೊಗಸಾಗಿದೆ.. ನಿಮ್ಮ
  ಜೊತೆಯಲ್ಲೇ ನಮ್ಮ ಕಡೆಯಿಂದಲೂ ಚಿತ್ರ ತಂಡಕ್ಕೆ ಶುಭಾಶಯಗಳು... :)

  ReplyDelete
 9. ಭಟ್ಟರೇ, ನಿಮ್ಮ ವಿಮರ್ಶೆ ಚನ್ನಾಗಿ ಬಂದಿದೆ. ಬಾಲನ್ ರವರಿಗೆ ಅವಾರ್ಡ್ ವಿಷಯದ ಬಗ್ಗೆ ಈಗಾಗಲೇ ಬರೆದಿದ್ದಿರಿ!.ಒಂದು ವಿಷಯ ನೆನಪಾಗುತ್ತಿದೆ. ಕನ್ನಡತಿ ಅರುಂಧತಿ ನಾಗ್ ರವರು ನಟಿಸಿದ ಪಾ ಚಿತ್ರದಲ್ಲಿ ಅವರದು ಉತ್ತಮ ಅಭಿನಯ. ಈ ಬಗ್ಗೆ ಕನ್ನಡದ ಪತ್ರಿಕೆಗಳು ಒಂದೂ ಹೊಗಳಿಕೆ ಎತ್ತದಿರುವದು ವಿಪರ್ಯಾಸ.ಇಲ್ಲೂ ಲಾಬಿ ನೆಡೆಯಬಹುದು. ಇತ್ತೀಚಿಗಿನ ಚಲನಚಿತ್ರ ಪ್ರಶಸ್ತಿಯ ಆಯ್ಕೆ ಕೂಡ ಕೆಲವರಿಗೆ ಬೇಸರ ತಂದಿದೆ.

  ReplyDelete
 10. ಮಿತ್ರರೇ, ಅನೇಕರು ತಂತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಬರೆದು ಹಂಚಿಕೊಂಡಿದ್ದೀರಿ. ಕಲಾತ್ಮಕ ಚಿತ್ರಗಳನ್ನು ನೋಡುವಾಗ ವಿಭಿನ್ನ ದೃಷ್ಟಿಕೋನವನ್ನು ಇಟ್ಟುಕೊಂಡರೆ ಮಾತ್ರ ಸಾಧ್ಯವಾಗುತ್ತದೆ. ನನಗೆ ರುಚಿಸಿದ್ದು ಇನ್ನೂಬ್ಬರಿಗೂ ಹಿಡಿಸಲೇಬೇಕೆಂದಿಲ್ಲ; ಅಲ್ಲಿ ಅಭಿಪ್ರಾಯ ಭೇದಗಳಿರಬಹುದು. ನಟಿಯರ ಜೀವನದ ಒಂದು ಮುಖವನ್ನು ಈ ಚಿತ್ರ ಬಿಂಬಿಸುತ್ತಿದೆ. ಹಾಗಂತ ಎಲ್ಲಾ ನಟಿಯರೂ ಹೀಗೇ ಎಂಬುದೂ ಕೂಡ ಅಲ್ಲ. ಹರೆಯದಲ್ಲಿ ಸೌಂದರ್ಯವನ್ನೋ ರೂಪರಾಶಿಯನ್ನೋ ತೆರೆದುತೋರಿ ಎದೆಗಾರಿಕೆ ಮೆರೆವ ನಟಿಯರು ೪೦ರ ನಂತರ ಕಳಾಹೀನರಾಗುತ್ತಾರೆ. Beauty is but skin deep ಅಂತಾರಲ್ಲ ಹಾಗೇ. ಮಡಿಯನ್ನು ಹೊದ್ದು ಅಡಗಿ ಒಳಗಿಂದಲೇ ನೋಡಿ ಆಸ್ವಾದಿಸುವ ಬದಲು ನೇರವಾಗಿ ನೋಡಿ ಅನುಭವಿಸುವ ಔದಾರ್ಯ ಇರಬೇಕು ಎಂಬುದು ನನ್ನ ಅನಿಸಿಕೆ. ಬಹಳ ಚೆನ್ನಾಗಿ ನೀವೆಲ್ಲಾ ಬರೆದಿದ್ದೀರಿ. ಸರ್ವಶ್ರೀ Sathish MR, nagendra bhat, umesh desai, sunaath, ANANTHAGEETHA, ಜಲನಯನ, ರವಿಮುರ್ನಾಡು, Nanda kiran, ಪ್ರಶಾಂತ್ ಖಟಾವ್ ಕರ್,Jagadeesh Balehadda ಎಲ್ಲರಿಗೂ ನನ್ನ ಅನಂತ ಕೃತಜ್ಞತೆಗಳು.

  ನೇಪಥ್ಯದಲ್ಲಿ ಹಲವಾರು ಮಂದಿ ಓದಿರುವುದು ಗ್ರಾಫ್ ಮೂಲಕ ಕಾಣಸಿಕ್ಕಿದೆ,ಓದಿದ ಎಲ್ಲರಿಗೂ ಧನ್ಯವಾದಗಳು.

  ReplyDelete
 11. ಸಿನೆಮಾ ನೋಡಿದ್ದಂತೂ ಆಯ್ತು. ಆದ್ರೆ, ಏಕ್ತಾ ಕಪೂರ್ ಹೇಳುತ್ತಿದ್ದಂತೆ ವಿದ್ಯಾ ಬಾಲನ್ ಗೆ ಪ್ರಶಸ್ತಿ ಬರಲೇಬೇಕಾದಂತಹ ಚಿತ್ರ ಅಂತ ನನಗನ್ನಿಸಲಿಲ್ಲ. ನಟಿಯೊಬ್ಬಳ ಜೀವನವನ್ನ ಇನ್ನೂ ಚೆನ್ನಾಗಿ ಚಿತ್ರಿಸಿದ್ದ ರಂಗನಾಯಕಿಯೇ ಆಗಲಿ, ಅಥವಾ ಕೆಲವು ಕಾದಂಬರಿಗಳ ಮುಂದೆ ಈ ಚಿತ್ರಣ ಸ್ವಲ್ಪ ತೆಳುವಾಯಿತು ಎನ್ನಿಸಿತು.

  ಇರಲಿ, ನೀವು ಹೇಳಿದಂತೆ ಲೋಕೋ ಭಿನ್ನ ರುಚಿಃ ಅನ್ನೋದನ್ನ ನಾನೊಪ್ಪುವೆ.

  ReplyDelete
 12. ಹಂಸಾನಂದಿಯವರೇ, ನೋಡಿದ್ದನ್ನೇ ಅಥವಾ ಅಂಥದ್ದನ್ನೇ ನೋಡಿದರೆ ವಿಶೇಷ ಎನಿಸುವುದಿಲ್ಲ ಎಂಬುದು ನನ್ನನಿಸಿಕೆ. ವಿದ್ಯಾಬಾಲನ್ ತೀರಾ ಬಟ್ಟೆ ಬಿಚ್ಚದೇ ನಟಿಸಿದ್ದಾಳೆ, ನೀವು ಹೇಳಿದ್ದು ನಿಜ, ಆರತಿ ರಂಗನಾಯಕಿಯಲ್ಲೂ ಸುಹಾಸಿನಿ ಬೆಂಕಿಯಲ್ಲಿ ಅರಳಿದಹೂವುವಿನಲ್ಲೂ ನಟಿಸಿ ತೋರಿಸಿದ ನಟನಾ ಕೌಶಲ್ಯವೇನಿಲ್ಲ, ಆದರೆ ಇಂದಿನ ನಾಯಕಿಯರಿಗೆ ಅಷ್ಟೂ ಇರುವುದಿಲ್ಲ ! ಬರೇ ರೂಪವೇ ಬಂಡವಾಳ, ಇದನ್ನೆಲ್ಲಾ ನೋಡುವಾಗ ವಿದ್ಯಾ ನಟನೆಗೆ ಮೆಚ್ಚುಗೆ, ಮೇಲಾಗಿ ಗಂಡಸರ ಜೊತೆ ಹಾಗೆ ತೆರೆದ ಮನದಿಂದ ನಟಿಸುವ [ಒಳಗುಟ್ಟು ಏನೇ ಇರಲಿ] ನಟಿಯರು ಕಮ್ಮಿ. ಬೇರೇ ಕ್ಲಾಸಿನ ನಟಿಯರಿದ್ದಾರೆ, ಆದರೆ ಅವರನ್ನು ವಿದ್ಯಾಳಿಗೆ ಹೋಲಿಸಲಾಗುತ್ಯೇ ? ನಿಮ್ಮ ಅಭಿಪ್ರಾಯಕ್ಕೆ ಶರಣು.

  ReplyDelete
 13. tamma ee lekhana odi cinema nodide. iga pratikriyisuttiddene- tavu heliddu sari.

  ReplyDelete