ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, July 1, 2011

ಅಣ್ಣಾ ಕೃಷ್ಣ ಏನು ಕೊಡಲಿ?


ಅಣ್ಣಾ ಕೃಷ್ಣ ಏನು ಕೊಡಲಿ?

ಎಲ್ಲರೂ ಉಂಡು ದ್ರೌಪದಿ ಪಾತ್ರೆ ತೊಳೆದು ಮಲಗಿದ ಮೇಲೆ ಆ ಅಪರಾಹ್ನ ಕೃಷ್ಣ ಬಂದ. ತಂಗೀ ಹಸಿವು ತಂಗೀ ಹಸಿವು ಎಂದ. ಮಾಡಿದ ಅಡುಗೆ ಮುಗಿದಿದ್ದ ಆ ವೇಳೆ ಅಷ್ಟು ಬೇಗ ಏನನ್ನು ಕೊಡಲಾದೀತು? ಅದೂ ಆ ಕಾಲಘಟ್ಟದಲ್ಲಿ ಮಾಡಿದ್ದನ್ನು ಹಾಗೇ ಇಡುವ ಪರಿಪಾಟವಿರಲಿಲ್ಲ. ಗೊಲ್ಲ ಸುಮ್ಮನೇ ಇರಲಿಲ್ಲ. ನೋಡು ಅಲ್ಲೆಲ್ಲೋ ಏನೋ ಇರಲೇ ಬೇಕು. ಏನೂ ಇರದೇ ಹೋಗದು ಎಂದ! ದ್ರೌಪದಿ ಹುಡುಕೇ ಹುಡುಕಿದಳು. ಏನೂ ಇರಲಿಲ್ಲ.

ಸ್ವತಃ ಕೃಷ್ಣ ತಂಗಿಗೆ ಹೇಳಿದ ಮಾತು ನಡೆಸಬೇಕಲ್ಲಾ ಆ ಕಾರಣದಿಂದ ಪ್ರತಿಯೊಂದೂ ಪಾತ್ರೆಯನ್ನು ತೆಗೆದು ನೋಡಿದ. ಅನ್ನದ ಪಾತ್ರೆಗೆ ಒಂದೇ ಅಗುಳು ಅಂಟಿಕೊಂಡಿತ್ತು. ಹಾಗಂತ ದ್ರೌಪದಿ ಗಲೀಜೇ ಎಂಬುದು ಪ್ರಶ್ನಾರ್ಹವಲ್ಲ! ಅದು ಕಪಟನಾಟಕ ಸೂತ್ರಧಾರಿ ಎಂದು ಖ್ಯಾತಿಗೊಳಗಾದ ಘನಶ್ಯಾಮನ ಒಂದು ಸೂತ್ರ. ಆತ ಅದನ್ನೇ ಎತ್ತಿ ತೋರುತ್ತಾ ತಿಂದು ’ಡರ್’ ಎಂದು ದೊಡ್ಡದಾಗಿ ತೇಗಿದ. ತೇಗಿದ ಸದ್ದಿಗೆ ಇಡೀ ಆ ಪ್ರದೇಶವೇ ಎಚ್ಚರಗೊಂಡಿತು! ಅದು ಸಂತೃಪ್ತ ಸ್ಥಿತಿ! ಭಕ್ತಿಯಿಂದ ತನ್ನನ್ನು ಕ್ಷಮಿಸು ಕೊಡಲು ತತ್ಕಾಲದಲ್ಲಿ ಅಡುಗೆ ಸಿದ್ಧವಿಲ್ಲಾ ಎಂಬ ಪಾಂಚಾಲಿಯ ಪ್ರಾರ್ಥನೆಗೆ ಪಾಂಚಜನ್ಯಧಾರಿ ತಲೆದೂಗಿದ. ಆ ಪ್ರಾರ್ಥನೆಯಲ್ಲಿನ ಅಳುಕು, ಭಕ್ತಿ, ಶ್ರದ್ಧೆ, ನೋವು, ತುಡಿತ, ಅಸಹಾಯಕತೆ ಎಲ್ಲವೂ ಆತನ ಗಮನಕ್ಕೆ ಬಂದಿದ್ದವು. ಯಾವುದನ್ನು ಆ ಹೊತ್ತಿಗೆ ಬಯಸಿ ಬಂದಿದ್ದನೋ ಅದು ಸಿಕ್ಕಿತ್ತು! ಅದೇ ಆತನ ಅಷ್ಟು ದೊಡ್ಡ ತೇಗಿಗೆ ಕಾರಣವಾಗಿತ್ತು.

ಅಳುಕು ಮನೋಸ್ಥಿತಿಯಲ್ಲಿ ದ್ರೌಪದಿ ಹೇಗೆ ನಡೆದಿರಬಹುದು ಎಂಬುದೇ ಈ ಹಾಡಿನ ಚಿತ್ರಣ:

ಅಣ್ಣಾ ಕೃಷ್ಣ ಏನು ಕೊಡಲಿ?
ಅಡುಗೆ ತೀರಿತಲ್ಲ
ನಿನ್ನಾಣೆಗೂ ನಿನ್ನ ಬರವು ನಿರೀಕ್ಷಿತವಲ್ಲ

ಎಲ್ಲಿ ಎಲ್ಲಿ ಸುತ್ತುತಾ ಬಂದೆ
ಯಾಕೆ ಇಷ್ಟು ತಡವಾಯ್ತು ?
ಗೊಲ್ಲ ಕೃಷ್ಣಗೇನು ಕೊಡಲಿ ತಗೋ ನೀರು ಬೆಲ್ಲ !

ಎಲ್ಲ ಉಂಡು ತೇಗಿ ತೂಗಿ
ಮಲಗಿ ನಿದ್ದೆ ಜಾರಿದರು
ಅಲ್ಲಿ ನೋಡು ಪಾತ್ರೆಪಗಡೆ ಡಬ್ಬ್ಹಾಕಿಹೆನಲ್ಲ

ಅನ್ನ ಬೇಳೆ ಸಾರು ಪಲ್ಯ
ಇನ್ನೂ ಇದೇ ಅನ್ನೋವಾಗ
ಅಣ್ಣ ಮುದ್ದು ಕೃಷ್ಣ ಇಲ್ಲಿಗೆ ನಿನ್ಯಾಕ್ ಬರಲಿಲ್ಲ?

ಹಸಿದ ಹೊಟ್ಟೆ ಹೊತ್ತುದ ನೋಡಿ
ಕುಸಿದು ಬೀಳುವಂತಾಗುತಿದೆ
ಒಸಗೆ ನಿನ್ನಲಣ್ಣ ನನ್ನ ಕ್ಷಮಿಸ ಬೇಕಲ್ಲಾ ?

5 comments:

 1. ಚೆಂದ ಇದೆ ಕವಿತೆ.
  ಇಷ್ಟವಾಯಿತು ನಿಮ್ಮ ಒಳದನಿ.

  ReplyDelete
 2. ಭಟ್ಟರೆ,
  ದ್ರೌಪದಿಯ ಅಂತರಂಗವನ್ನು ಹೊಕ್ಕವರಂತೆ ಕವನ ಬರೆದಿದ್ದೀರಿ.

  ReplyDelete
 3. ಓದಿದ,ಪ್ರತಿಕ್ರಿಯಿಸಿದ ಎಲ್ಲರಿಗೂ ನಮಸ್ಕಾರಗಳು.

  ReplyDelete
 4. "ಗೊಲ್ಲ ಕೃಷ್ಣಗೇನು ಕೊಡಲಿ ತಗೋ ನೀರು ಬೆಲ್ಲ" - ಚೆಂದದ ಸಾಲು. ಕವನ ಚೆನ್ನಾಗಿದೆ

  ReplyDelete