ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, January 30, 2011

’ವೇದಸುಧೆ’ ಅಂಬೆಗಾಲಿಕ್ಕಿದ ಚಂದ


’ವೇದಸುಧೆ’ ಅಂಬೆಗಾಲಿಕ್ಕಿದ ಚಂದ

ನಿನ್ನೆ ೩೦.೦೧.೨೦೧೧ ರಂದು ಹಾಸನದ ಶ್ರೀ ಶಂಕರಮಠದ ಶ್ರೀಭಾರತೀತೀರ್ಥ ಸಂಭಾಂಗಣದಲ್ಲಿ ಸುಮಾರು ೭೦೦ ಜನರಷ್ಟು ಸೇರಿದ್ದರು. ಬಂದವರಲ್ಲಿ ಅನೇಕರು ಬ್ಲಾಗಿಗರೂ ಇದ್ದರೆಂಬುದು ಸಂತಸದ ವಿಷಯ. ತಮಗೆಲ್ಲಾ ಮೊದಲೇ ಹೇಳಿದ ಹಾಗೇ ’ವೇದಸುಧೆ’ಯ ವಾರ್ಷಿಕೋತ್ಸವದ ಸಂಭ್ರಮ. ವೇದಸುಧೆ ಬಳಗ ಅದರಲ್ಲೂ ಪ್ರಮುಖವಾಗಿ ಮಿತ್ರರಾದ ಶ್ರೀ ಹರಿಹರಪುರ ಶ್ರೀಧರ್, ಕವಿ ಸುರೇಶ್, ಕವಿ ನಾಗರಾಜ್, ರಾಮಸ್ವಾಮಿ ಮೊದಲಾದವರು ತಮ್ಮ ಅನೇಕ ದಿನಗಳ ಶ್ರಮಕ್ಕೆ ಫಲವನ್ನು ಕಾಣುತ್ತಿದ್ದರು. ಬೆಳಿಗ್ಗೆ ಬಿಸಿಬಿಸಿ ಶ್ಯಾವಿಗೆ ಬಾತು, ಕಾಫಿ/ಟೀ ೯ ಗಂಟೆಗೆ ಎಲ್ಲರಿಗೂ ನೀಡಲ್ಪಟ್ಟು ಉಪಾಹಾರ ಅಚ್ಚುಕಟ್ಟಾಗಿ ಮುಗಿದರೆ ಸಭಾಕಾರ್ಯಕ್ರಮ ಸರಿಯಾಗಿ ಹತ್ತು ಗಂಟೆಗೆ ಆರಂಭವಾಯಿತು. ಕವಿ ಸುರೇಶ್ ಅವರು ತಮ್ಮ ಸರಳ ನಿರೂಪಣಾ ಶೈಲಿಯಲ್ಲಿ ಅತಿಥಿಗಳೆಲ್ಲರನ್ನೂ ವೇದಿಕೆಗೆ ಆಹ್ವಾನಿಸಿದರೆ, ಪ್ರಾಸ್ತವಿಕ ಮಾತುಗಳನ್ನಾಡುತ್ತಾ ಶ್ರೀಧರ್ ಅವರು ’ವೇದಸುಧೆ’ ರೂಪುತಳೆದ ಬಗೆಯನ್ನು ವಿವರಿಸಿದರು. ಶಂಕರಮಠದ ಧರ್ಮಾಧಿಕಾರಿಗಳಾದ ಶ್ರೀ ಎಮ್.ಎಸ್, ಶ್ರೀಕಂಠಯ್ಯ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕುಮಾರಿ ಸಹನಾಳಿಂದ ಮನಮೋಹಕ ದೀಪನೃತ್ಯ ನಡೆಯಿತು. ಶರ್ಮರಿಂದ ಪ್ರವಚಿಸಲ್ಪಟ್ಟ ’ವೇದೋಕ್ತ ಜೀವನಪಥ’ ಎಂಬ ಶ್ರಾವ್ಯಮಾಧ್ಯಮ ತಟ್ಟೆಯ ಬಗ್ಗೆ ವೇದಸುಧೆಯ ಶ್ರೀ ವಿಶಾಲ್ ಅವರು ಮಾತನಾಡಿದರು. ನಂತರ ಆ ಶ್ರಾಯ್ವ ಮಾಧ್ಯಮ ತಟ್ಟೆ[ಆಡಿಯೋ ಸೀಡಿ] ಬಿಡುಗಡೆಗೊಂಡಿತು. ಶಿವಮೊಗ್ಗೆಯ ಕುಮಾರಿ ಅಂಬಿಕಾ ಸುಶ್ರಾವ್ಯವಾಗಿ ವಯೋಲಿನ್ ನುಡಿಸಿದರು. ನಂತರ ಆರಂಭವಾದ ’ಆರೋಗ್ಯಕರ ಬದುಕು ಮತ್ತು ವೇದ’ ವಿಚಾರಸಂಕಿರಣದಲ್ಲಿ ಡಾ|ಶ್ರೀವತ್ಸ ಎಸ್.ವಟಿ, ಡಾ| ವಿವೇಕ್, ಕುಮಾರಿ ಶೃತಿ, ಶ್ರೀ ದಕ್ಷಿಣಾಮೂರ್ತಿ, ಶ್ರೀ ನಾಗರಾಜ್ ದೀಕ್ಷಿತ್ ಮತ್ತು ನಾನು ಭಾಗವಹಿಸಿದ್ದೆವು. ವಿವಿಧ ದೃಷ್ಟಿಕೋನಗಳ ವಿಚಾರಧಾರೆಗಳು ಹರಿದವು. ಮಧ್ಯೆ ಮಧ್ಯೆ ಶ್ರೀಮತೀ ಲಲಿತಾ ರಮೇಶ್ ಮತ್ತು ಕುಮಾರಿ ಸ್ವಾತಿ ಮತ್ತು ಕುಮಾರಿ ಸಹನಾ ಈ ಮೂವರಿಂದ ಸುಮಧುರ ಗೀತ ಗಾಯನಗಳು ನಡೆದವು. ಶ್ರೀ ಸುಧಾಕರ ಶರ್ಮರು ತಮ್ಮ ಆಳವಾದ ವಿಶ್ಲೇಷಣೆಯೊಂದಿಗೆ ವಿಚಾರ ಸಮನ್ವಯಗೊಳಿಸಿದರು. ವೇದಸುಧೆಯ ಎಲ್ಲಾ ಕಾರ್ಯಗಳಿಗೆ ಆಧಾರವಾಗಿ ನಿಂತಿರುವ ಹಾಗೂ ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಶ್ರೀ ಸಿ.ಎಚ್.ಕೃಷ್ಣಸ್ವಾಮಿಯವರು [ಹಲವು ವೇದಿಕೆಗಳಲ್ಲಿ ನಡೆಯುವಂತೇ:ಯಾವ ಸಬೂಬನ್ನೂ ಹೇಳಿ ತೆರಳದೇ]ಕಾರ್ಯಕ್ರಮದ ಅಂತ್ಯದವರೆಗೂ ವೇದಿಕೆಯಲ್ಲೇ ಹಾಜರಿದ್ದು ಸಮಯಾಭಾವದಿಂದ ಕೇವಲ ಎರಡೇ ಹಿತನುಡಿಗಳಲ್ಲಿ ತಮ್ಮ ಮಾತು ಮುಗಿಸಿದರು. ವೇದಸುಧೆಯ ವತಿಯಿಂದ ವೇದಿಕೆಯಲ್ಲಿರುವ ಎಲ್ಲರಿಗೂ ಹಾರಾರ್ಪಣೆಯ ಗೌರವದೊಂದಿಗೆ ವೇದಸುಧೆ ಹೊರತಂದ ’ವೇದೋಕ್ತ ಜೀವನ ಪಥ’ ಸೀಡಿ ನೀಡಿ ಸನ್ಮಾನಿಸಲಾಯಿತು. ವೇದಸುಧೆ ಬಳಗದ ನೇತೃತ್ವ ವಹಿಸಿ ಕಾರ್ಯಕ್ರಮದ ರೂವಾರಿಯಾದ ಶ್ರೀ ಹರಿಹರಪುರ ಶ್ರೀಧರ್ ಅವರಿಗೆ ವೇದಸುಧೆ ಬಳಗದ ಮಿಕ್ಕೆಲ್ಲರೂ ಸೇರಿ ಹಾರಾರ್ಪಣೆ ಮಾಡಿ ಗೌರವಿಸಿದರು.

ಇಷ್ಟೆಲ್ಲಾ ಮುಗಿಯುವ ಹೊತ್ತಿಗೆ ಮಧ್ಯಾಹ್ನ ೩ ಗಂಟೆ ಯಾಗಿತ್ತಾದರೂ ಜ್ಞಾನದಾಹಿಗಳಾದ ಸಭಿಕರು ದೈಹಿಕ ಹಸಿವನ್ನು ತಡೆಯುತ್ತ ತಮ್ಮ ಜ್ಞಾನದ ಹಸಿವಿಗೆ ಪುಷ್ಟಿನೀಡಿದ್ದರು. ವೇದಸುಧೆಯ ಬಳಗದಲ್ಲಿ ಪ್ರೇರಕರಾದ ಶ್ರೀ ಶರ್ಮರು ಸ್ವಾಮಿ ದಯಾನಂದ ಸರಸ್ವತಿಯವರು ಬರೆದ ಕೆಲವು ಪುಸ್ತಕಗಳನ್ನು ಮುದ್ರಣ ವೆಚ್ಚಪಡೆದು ವಿತರಿಸುವ ಏರ್ಪಾಟುಮಾಡಿದ್ದರು. ಪುಷ್ಕಳ ಭೋಜನ ವ್ಯವಸ್ಥೆಯಾಗಿತ್ತು. ಎಲ್ಲರೂ ಊಟ ಮಾಡಿಬಂದ ಮೇಲೆ ಅದಾಗಲೇ ತಡವಾಗಿತ್ತಾದ್ದರಿಂದ ೪ ಗಂಟೆಯಿಂದ ಹಾಸನದ ಮನೆಮನೆ ಕವಿಗೋಷ್ಠಿ ಆರಂಭಗೊಂಡಿತು. ಬೋರೇಗೌಡರಾದಿಯಾಗಿ ಹಲವು ನಿವೃತ್ತ ಅಧಿಕಾರಿಗಳು ಜನಪದ ಗೀತೆಗಳನ್ನು ಲಯಬದ್ಧವಾಗಿ ಹಾಡಿ ರಂಜಿಸಿದರು. ಅತಿಥಿಗಳನ್ನು ಸ್ವಾಗತಿಸಿ ಗುಲಾಬಿ ಹೂ ಗಳನ್ನು ನೀಡಿ ಗೌರವಿಸಲಾಯಿತು. ಸಂಘಟನೆಯಲ್ಲದ ಸಂಘಟನೆಯೆನಿಸಿದ ’ಮನೆ ಮನೆ ಕವಿಗೋಷ್ಠಿ’ಯ ಹದಿನಾಲ್ಕು ವರ್ಷಗಳ ನಡಿಗೆಯನ್ನು ಕಾರ್ಯದರ್ಶಿ ಶ್ರೀ ಎಸ್. ಸತ್ಯನಾರಾಯಣ ಅವರು ವಿವರಿಸಿದರು. ವೇದಿಕೆಯಲ್ಲಿ ಶ್ರೀ ಸುಧಾಕರ ಶರ್ಮ ಉದ್ಘಾಟಕರಾಗಿ ಭಾಗವಹಿಸಿ ಗಿಡವೊಂದಕ್ಕೆ ನೀರೆರೆಯುವುದರ ಮೂಲಕ ಉದ್ಘಾಟನೆ ನಡೆಯಿತು. ಪುಸ್ತಕಗಳ ಬಿಡುಗಡೆಗಾಗಿ ಆಗಮಿಸಿದ್ದ ಅತಿಥಿಗಳಾದ ಹಾಸನದ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿ ಶ್ರೀಮತಿ ಆಶಾಲತಾ ಮತ್ತು ಕಾರವಾರದ ಆಕಾಶವಣಿಯ ಮುಖ್ಯಸ್ಥರಾದ ಶ್ರೀ ವಸಂತ ಕುಮಾರ್ ಪೆರ್ಲ ಅವರುಗಳು ಕ್ರಮವಾಗಿ ಕವಿ ನಾಗರಾಜ್ ಕೃತ ’ಮೂಢ ಉವಾಚ’ ಮತ್ತು ಕೊಟ್ರೇಶ್ ಉಪ್ಪಾರ ಕೃತ ’ಮೃತ್ಯುವಿನಾಚೆಯ ಬದುಕು’ ಕವನ ಸಂಕಲನಗಳನ್ನು ಬಿಡುಗಡೆಮಾಡಿದರು. ಕೃತಿಗಳ ಕುರಿತು ಅತಿಥಿಗಳು ವಿಚಾರ ಮಂಡಿಸಿದರೆ, ಲೇಖಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

’ವೇದಸುಧೆ; ಮತ್ತು ’ಮನೆಮನೆಕವಿಗೋಷ್ಠಿ’ ಜಂಟಿಯಾಗಿ ಏರ್ಪಡಿಸಿದ್ದ ಇಡೀ ದಿನದ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಸಂಪನ್ನಗೊಂಡವು ಎಂಬಲ್ಲಿಗೆ ’ವೇದಸುಧೆ’ ಚಂದವಾಗಿ ಅಂಬೆಗಾಲಿಕ್ಕುತ್ತಿದೆ ಎನ್ನುವುದು ಸಾಬೀತಾಯಿತು. ವೇದಕ್ಕೆ ಜಾತಿ ಮತ, ಧರ್ಮಗಳ ಗಡಿಯಿಲ್ಲ! ವೇದವೆಂದರೆ ಅತ್ಯಪೂರ್ವ ಮಾನವೀಯ ಸುಖ ಜೀವನವನ್ನು ಸಾಧಿಸುವ ಕಲೆ. ವೇದ ಎಲ್ಲರದಾಗಲಿ, ವೇದ ಎಲ್ಲರಿಗಾಗಿರಲಿ. ಮುಂಬರುವ ವರ್ಷಗಳಲ್ಲಿ ಇಂತಹ ಕಾರ್ಯಕ್ರಮಗಳು ಜಿಲ್ಲಾವಾರು ನಡೆಯುವಂತೇ ’ವೇದಸುಧೆ’ ಬೆಳೆಯಲಿ ಮತ್ತು ಎಲ್ಲರೂ ವೇದಾಮೃತಪಾನ ಮಾಡುವಂತಾಗಲಿ ಎಂಬುದು ’ವೇದಸುಧೆ’ ಯ ಸದಾಶಯ. ಈ ಸಂದರ್ಭದಲ್ಲಿ ವೇದಸುಧೆ ತಮ್ಮೆಲ್ಲರಿಗೆ ಶುಭಹಾರೈಸುತ್ತಿದೆ . ಚಿತ್ರಗಳು ಮತ್ತು ಇನ್ನಷ್ಟು ವಿವರಗಳನ್ನು ’ವೇದಸುಧೆ’ ಬ್ಲಾಗಿನಲ್ಲಿ ನಿರೀಕ್ಷಿಸಿ:
http://vedasudhe.blogspot.com

Saturday, January 29, 2011

ಕುಮಾರಾಮಾಯಣ ಮತ್ತು ಸುಮಾಭಾರತ !



ಕುಮಾರಾಮಾಯಣ ಮತ್ತು ಸುಮಾಭಾರತ !

ಕುಮಾರಾಮಾಯಣ

ಪೂರ್ವಂ ಕುಮಾರ ಬೆಂಗಳೂರಾದಿ ಗಮನಂ
ಥರಥರದ ಸರ್ಕಸ್ಗಳುಂ |
ರಾಧಿಕಾ ಪಾಣಿಗ್ರಹಣಂ ಶಮಿಕಾ ಜನನಂ
ಕಸ್ತೂರಿಪರಿಶಿಂಚನಂ |
ಖುರ್ಚಿ ವೇದನ ಶಾಸಕಾನರ್ಹ ಯುದ್ಧಂ
ಮೀಡಿಯಾ ಸಂಭಾಷಣಂ |
ಪಶ್ಚಾದರ್ಥಮನರ್ಥಂ ನವಿಜಯಂ
ಏತಧ್ಯ ಕುಮಾರಾಮಾಯಣಂ ||


ಸುಮಾಭಾರತ

ಆದೌ ಶಿವಮೊಗ್ಗ ಜಿಲ್ಲೆಯಲ್ಲಿ ಜನನಂ
ರಾಸ್ವಂಸ ಸೇವಾರ್ಪಣಂ |
ಮಾಯಾಜಾಲವನೇಕಮಂ ಜಯಿಸುತಂ
ತಾ ಗೆದ್ದು ಖುರ್ಚಿಂಗಳಂ |
ನ್ಯಾಯಚ್ಛೇದನ ಭೂಮಿಖಾತೆ ಹರಣಂ
ತಾ ನುಂಗುತಂ ಗುಳುಗುಳುಂ |
ಶೋಭಾಯಾತ್ರೆಯೇ ಪ್ರಖರಮುಂ
ಮಿಕ್ಕೆಲ್ಲ ಹಿರಿಯರ್ಗೆ ಧಿಕ್ಕಾರವುಂ |
ಫೆವಿಕಾಲ್ ಆನೋಬಾಂಡಾದಿ ರಹಿತಂ
ಖುರ್ಚಿಮಾತ್ರಂ ಅಚಲವುಂ|
ಊರ್ಮೇಲ್ ಊರ್ಬಿದ್ರೆ ಯಾರಪ್ನ ಗಂಟ್ಹೋಯ್ತುಂ ?
ಕೇಳಿ ಸುಮಹಾಭಾರತಂ ||

Friday, January 28, 2011

ಉ. ಮ. ಹೇ.!

ಕಾಲ್ಪನಿಕ ಚಿತ್ರ ಕೃಪೆ :ಅಂತರ್ಜಾಲ

ಉ. ಮ. ಹೇ.!


ಹೇಳಲೇ ಬೇಕೆಂಬ ಗಟ್ಟಿ ಮನಸ್ಸಿನಿಂದ ಹಾಗೂ ಹೇಳದೇ ಹೋದರೆ ನಿಮ್ಮ ಒಂದು ನಗೆಯನ್ನು ಕಸಿದುಕೊಂಡ ಹಾಗಾಗಬಹುದೆಂಬ ಅಪರಾಧೀ ಪ್ರಜ್ಞೆಯಿಂದ ಸತ್ಯವನ್ನೇ ಹೇಳಬೇಕಾಗಿದೆ. ಇದು ಸತ್ಯವೆಂಬ ಮಾತಿಗೆ ಸಾಕ್ಷಿಯಾಗಿ ಗೀತೆಯೋ ಖುರಾನೋ ಬೈಬಲ್ಲೋ ಬೇಕಾಗಿಲ್ಲ; ಓದಿದ ನೀವು ಯಾವುದೇ ಚೌಕಾಸಿಯೂ ಇಲ್ಲದೇ ನಕ್ಕರೆ ಅದು ಸಾಕ್ಷಿಗಳ ಸಂಖ್ಯೆ ಜಾಸ್ತಿಯಾಗಲು ಸಾಧ್ಯವಾಗುತ್ತದೆ. ಗಕ್ಕನೆ ನಗುವ ಸಾಕ್ಷಿಗಳನ್ನು ನಾಶಪಡಿಸುವ ಜಾಯಮಾನವಾಗಲೀ ಇರಾದೆಯಾಗಲೀ ನನ್ನದಲ್ಲ; ಯಾಕೆಂದರೆ ನಾನೊಬ್ಬ ರಾಜಕಾರಣಿಯಲ್ಲ! ಇರದೇ ಇರುವುದನ್ನು ಇದ್ದಹಾಗೇ ಸೃಜಿಸುವ ಮನೋಭಾವವೂ ನನ್ನಲ್ಲಿಲ್ಲ--ಹೋಗಲಿ ಬಿಡಿ ವಿಷಯಕ್ಕೆ ತಡವಾಗುತ್ತದೆ: ಮುಂದೆ ಸಾಗೋಣ.

ಹಕೀಕತ್ತು ಜಾಸ್ತಿಯೇನಿಲ್ಲ. ನಾನೊಬ್ಬ ಚಿಕ್ಕ ಹುಡುಗನಾಗಿದ್ದೆ. ನನಗೇನೂ ಗೊತ್ತಿರದ ಮುಗ್ಧನಾಗಿದ್ದೆ. ಆ ಕಾಲಕ್ಕೆ ಶ್ರೀಮಾನ್ ಒಬ್ಬರು ಪರಿಚಿತರಾದರು. ನಾನು ಅವರಮನೆಗೆ ಕಾರ್ಯನಿಮಿತ್ತ ನಮ್ಮ ಹಿರಿಯರ ಜೊತೆಗೂಡಿ ಹೋಗಿದ್ದರಿಂದ ಅವರ ಪರಿಚಯವಾಯಿತು. ನೀಳದೇಹದ ದೊಡ್ಡ ಹೊಟ್ಟೆಯ ಶ್ರೀಯುತರ ಧ್ವನಿಮಾತ್ರ ನಾನು ಬೇರೆಲ್ಲಿಯೂ ಕೇಳದ ವಿಶಿಷ್ಟಥರದ್ದಾಗಿತ್ತು. ಗೊಗ್ಗರು ಧ್ವನಿಯಲ್ಲಿ ಮಾತನಾಡಿದರೂ ಯಾರನ್ನೂ ಕೂರಗೊಡದ ಅವರು ಬಾಲಕನಾದ ನನ್ನನ್ನೂ ಮಾತನಾಡಿಸಿದ್ದು ಅದೇ ಸಹಜ ಸ್ವಭಾವದಿಂದ. ನನಗೆ ಅವರು ಮೆಚ್ಚುಗೆಯಾಗದಿದ್ದರೂ ಅವರ ಮನೆಗೇ ಹೋಗಿ ಅವರನ್ನೇ ತಿರಸ್ಕರಿಸುವ ಧೈರ್ಯವಾಗಲೀ ಸಾಹಸೀ ಮನೋಧರ್ಮವಾಗಲೀ ಇಲ್ಲದ ಪುಕ್ಕಲು ಹುಡುಗ ನಾನಾಗಿದ್ದುದ್ದರಿಂದ ಅವರು ಹೇಳಿದ್ದನ್ನು ಪಾಲಿಸುವುದೇ ಪಾಲಿಗೆಬಂದ ಪಂಚಾಮೃತವಾಗಿತ್ತು.

ಮಕ್ಕಳನ್ನು ಗೋಳು ಹುಯ್ದುಕೊಳ್ಳುವುದರಲ್ಲಿ ಅವರು ನಿಸ್ಸೀಮರೆಂಬುದನ್ನು ನಿಮಗೆ ಹೇಳಿಬಿಡಲೇ ಅಥವಾ ಆಮೇಲೆ ನೀವೇ ತಿಳಿದುಕೊಳ್ಳಬಹುದೇ ? ಮಕ್ಕಳ ತೊಡೆ ಚಿವುಟುವುದು, ಕಿವಿತಿರುಚುವುದು, ಕಣ್ಣು ದೊಡ್ಡದುಮಾಡುವುದು, ಅಕರಾಳ ವಿಕರಾಳ ಬಾಯಿತೆರೆದು ನಾಲಿಗೆ ಹೊರಹಾಕಿ ಏನೇನೋಮಾಡಿ ಅಂತೂ ಮಕ್ಕಳು ಹೆದರಿದರೆ ಆಗ ಅವರಿಗೆ ಹಿಟ್ಲರ್ ಜಗತ್ತನ್ನೇ ಗೆದ್ದ ಖುಷಿ ಸಿಗುತ್ತಿತ್ತು! ಹಾಗಂತ ತೀರಾ ಕಠೋರ ಮನೋಸ್ಥಿತಿಯವರೂ ಅಲ್ಲ, ಯಾವುದೇ ಮನೋವ್ಯಾಧಿಗೆ ತುತ್ತಾದವರೂ ಅಲ್ಲ. ಆದರೆ ಅವರ ಕೈಗೆ ಸಿಕ್ಕ ಮಕ್ಕಳಿಗೆ ಮಾತ್ರ ಅವರ ಬಾಲಿಷ ನಡವಳಿಕೆಗಳ ಅನನ್ಯ ಅನುಭವವಾಗುತ್ತಿತ್ತು.

ಎರಡು ಮದುವೆಯಾಗಿದ್ದ ಅವರಿಗೆ ಒಟ್ಟೂ ಒಂದೂವರೆ ಡಜನ್ ಮಕ್ಕಳು! ಮನೆಯೇ ಅಂಗನವಾಡಿ ಥರ ಆದಕಾರಣವೋ ಏನೋ ಮಕ್ಕಳು ಎಂದರೇ ಹೀಗಾಗಿದ್ದರು. ನಾವೆಲ್ಲಾ ಅವರಮನೆಗೆ ಹೋಗುವಾಗ ಅವರ ಮಕ್ಕಳೆಲ್ಲಾ ದೊಡ್ಡವರಾಗಿದ್ದರೂ ಒಂದಿಬ್ಬರು ನಮ್ಮ ಓರಗೆಯವರೂ ಇದ್ದರು. ಇಂತಹ ಮನೆಗೆ ಒಂದಾನೊಂದು ದಿನ ಭೇಟಿ ಇತ್ತಾಗ ಅವರು ಹೇಳಿದ್ದು

" ತಮ್ಮಾ ನೀ ಏನು ಮಾಡ್ತಾ ಇದೀಯೋ ನೀನು ಬಿಡು ಬರೀ ಉ.ಮ.ಹೇ " ಎನ್ನುತ್ತಾ ೧೦ ನಿಮಿಷ ನಕ್ಕರು.

ನೆನೆಪು ಮಾಡಿಕೊಳ್ಳುತ್ತಾ ನಕ್ಕರು. ನನಗೆ ಅರ್ಥವಾಗಲಿಲ್ಲ. ಏನಿದು ’ಉ.ಮ.ಹೇ’ ? ನಿಮಗೇನಾದರೂ ಗೊತ್ತೇ ? ಇರಲಿ ಇದರ ಅರ್ಥವನ್ನು ಆಮೇಲೆ ನೋಡೋಣ. ಅದೇದಿನ ಸ್ವಲ್ಪ ಹೊತ್ತಿನಮೇಲೆ ಒಂದು ಕಾಗದ ಮತ್ತು ಪೆನ್ನು ಸಹಿತ ನನ್ನಹತ್ತಿರ ಬಂದ ಅವರು

" ಏನೋ ಹೇಳುತ್ತೇನೆ ಬರೆದು ತೋರಿಸುತ್ತೀಯಾ? " ಎಂದರು.

" ಆಯ್ತು ಬರೆಯುತ್ತೇನೆ "

" ಬರಿ ಬರಿ ಒಂದೇ ಸಮಕ್ಕೆ ಬರೆಯುತ್ತಾ ಹೋಗು ಆಮೇಲೆ ಏನುಮಾಡಬೇಕೆಂದು ಹೇಳುತ್ತೇನೆ " ಎಂದವರೇ ಮುಂದುವರಿದು

"ದಂತಿತದಾರೆಬಲುಹೇನತದಾಸಿರೆಬ" --ಎಂದರು

ರಾಮನ ಮುಂದೆ ಕೈಜೋಡಿಸಿ ಕುಳಿತ ಹನುಮನ ರೀತಿಯಲ್ಲಿ ತಲೆತಗ್ಗಿಸಿ ಬರೆಯುತ್ತಿದ್ದೆ.

" ಮುಗೀತಲ್ಲ ? " --ಕೇಳಿದರು

" ಹಾಂ ಮುಗೀತು ಏನಿದು ? "

" ಅದನ್ನೇ ಈಗ ತಿರುವು ಮುರುವಾಗಿ ಓದು "

ಸ್ವಾಮೀ ಅದನ್ನು ತಿರುವುಮುರುವು ಮಾಡಿದಾಗಿನಿಂದ ನನಗೆ ವಾಕರಿಕೆ ಆರಂಭವಾಯಿತು. ಕಣ್ಣುಕತ್ತಲೆ ಬಂದಹಾಗಾಯಿತು. ಇನ್ನೂ ಏನೇನೋ ಆಗತೊಡಗಿತು. ಅದನ್ನು ಹರಿದು ಬಿಸಾಡಿಬಿಟ್ಟೆ. ಅದು ಯಾಕೆ ಅಂತ ನಿಮಗೆ ಈಗ ತಿಳಿಯಿತಲ್ಲವೇ ?

ಈಗ ಉ.ಮ.ಹೇ ಎನ್ನುವುದರ ಬಗ್ಗೆ ನನಗೆ ಮತ್ತೆ ಸಂಶಯ ಕಾಡತೊಡಗಿತು. ಅದರ ಕುರಿತು ನಮ್ಮ ಹಿರಿಯರಲ್ಲಿ ನಿಧಾನವಾಗಿ ಪ್ರಸ್ತಾವಿಸಿದಾಗ ಗೊತ್ತಾಗಿದ್ದು ಉ=ಉಣ್ಣು, ಮ=ಮಲಗು, ಹೇ=ಹೇಲು. ಮತ್ತದೇ ವಾಕರಿಕೆ. ಕೆಲಸವಿಲ್ಲದೇ ಉಂಡಾಡಿಗಳಾಗಿ ತಿರುಗುವವರಿಗೆ ಆ ಶಬ್ದವನ್ನು ಪ್ರಯೋಗಿಸುತ್ತಾರೆ ಎಂಬುದು ನನ್ನ ಅರಿವಿಗೆ ಬಂತು. ಅಂದಿನಿಂದ ನಾನು ಮತ್ತೆಲ್ಲೂ ಮತ್ತೆಂದೂ ’ಉ.ಮ.ಹೇ.’ ಎಂದು ಕರೆಯಿಸಿಕೊಳ್ಳಲಿಲ್ಲ.

ಆಗೊಮ್ಮೆ ಈಗೊಮ್ಮೆ ಕೆಲವು ಜನರನ್ನು ನೋಡಿದಾಗ ನೆನಪಾಗುವುದು ’ಉ.ಮ.ಹೇ.’, ಅವರೇ ಜಾಸ್ತಿಯಾದಾಗ ಕುಟುಂಬಕ್ಕೂ ಸಮಾಜಕ್ಕೂ ಅವರು ಭಾರವಾಗಿ ತೋರುವುದರಿಂದ ಅವರಿಗೆ ಈ ಕಥೆಯನ್ನು ಓದಿ ಹೇಳುವುದು ಒಳಿತು. ಹಾಗೆ ಮಾಡಿ ಪುಣ್ಯ ಕಟ್ಟಿಕೊಳ್ಳಿ, ಧನ್ಯೋಸ್ಮಿ !

Thursday, January 27, 2011

ಶುಭ ಸುಪ್ರಭಾತ


ಶುಭ ಸುಪ್ರಭಾತ

ತಿರೆಯ ತಿರುಗಿ ನೋಡಲಲ್ಲಿ
ಹರೆಯ ಬಂದ ಹುಡುಗಿಯಂತೇ
ಮೆರೆಯುತಿರುವ ಕಾಲ ಕಂಡೆ ಮುಂಜಾವಿನಲಿ

ಬರಿಯ ಮಾತು ಕೇಳಬೇಡಿ
ಅರಿಯಲೊಮ್ಮೆ ಬಂದು ನೋಡಿ
ಕರೆಯುತಿಹಳು ನಮ್ಮನೆಲ್ಲ ಸುಪ್ರಭಾತದಿ

ಕರಿಯು ಮದಿಸಿ ಓಡಿದಂತೆ
ಹಿರಿಯ ತನವ ಮರೆವಳಲ್ಲಿ
ಗುರಿಯು ಸಿಂಗಾರಗೊಂಡು ಅಂದವಪ್ಪುದು !

ತೆರೆಯ ಸರಿಸಿ ಮುಖವ ತೋರ್ವ
ನೆರೆಯ ಊರ ವಧುವಿನಂತೆ
ತೊರೆಯಂಚಿನ ಪುಷ್ಪದಂತೇ ಅರಳುತಿಪ್ಪುದು

ಹೊರೆಯ ಹೊತ್ತ ಕೃಷಿಕರೆಲ್ಲ
ಗಿರಿಯಬುಡದಿ ಅದನು ಇಳಿಸಿ
ಮರೆಯಲೊಮ್ಮೆ ಆಯಾಸವ ಕುಳಿತುನೋಡ್ವರು

ಉರಿಯುವಂಥ ಸೂರ್ಯನಿರದ
ಕೊರೆಯುವಂಥ ಚಳಿಯ ಕಾಲ
ಗರಿಯನೊಲೆದು ಹೊಯ್ದಾಡುವ ತೆಂಗುಕಂಗಳು

ಮರಿಯ ಮುದ್ದುಮಾಡುತಿರುವ
ಕರಿಯ ಬಿಳಿಯ ಹಕ್ಕಿಗಳವು
ಸರಿಯೆನ್ನುವ ಹಾಡ ಹಾಡಿ ಸಂಭ್ರಮಿಸಿಹವು

ಸಿರಿಯು ಧರೆಗೆ ಇಳಿವ ಸಮಯ
ಬೆರೆಯಬೇಕು ಪ್ರಕೃತಿಯೊಡನೆ
ಮರೆಯಬೇಡಿ ಮೈಮನಕಿದು ಶಾಂತಿತರುವುದು

Wednesday, January 26, 2011

ಮರೆಯಲಾಗದ ಎರಡು ವಿಷಯಗಳು



ಮರೆಯಲಾಗದ ಎರಡು ವಿಷಯಗಳು

ನಾವು ಮರೆತರೂ ಮರೆಯಲಾಗದ ಕೆಲವು ವಿಷಯಗಳು ಮಾನವ ಲೋಕದ ಭಾವನಗಳಿಂದ ಪೂರಿತವಾಗಿರುತ್ತವೆ. ಕೆಲವನ್ನು ನಾವು ಬೇಡವೆಂದರೂ ಅವು ನಮ್ಮಲ್ಲೇ ಸದಾ ಐಕ್ಯವಾಗಿದ್ದು ಆಗಾಗ ಆಗಾಗ ಜಾಗೃತವಾಗುತ್ತವೆ. ಹೀಗೆ ಬರೆದಾಗ ನೀವೆಲ್ಲ ಕೇಳಬಹುದು : ಮೊನ್ನೆ ಅಸ್ತಂಗತರಾದ ಶ್ರೀ ಭೀಮಸೇನ್ ಜೋಶಿಯವರ ಬಗ್ಗೆ ನಾನು ಏನೂ ಬರೆಯಲಿಲ್ಲವೆಂದು. ಆದರೆ ವಸ್ತುಸ್ಥಿತಿ ಅದಲ್ಲ. ಬರೆದ ಅತ್ಯಂತ ಹೃದಯಂಗಮ ಕವನವೊಂದು ತಂತ್ರಾಂಶದ ಇನ್ನೊಂದು ರೂಪವಾದ ವೈರಾಣುವಿನ ಪಾಲಾದಾಗ ಮತ್ತೆ ಬರೆಯಲು ಮನಸ್ಸೂ ಬರಲಿಲ್ಲ, ಅಂತಹ ಭಾವಪೂರಿತ ಕಾವ್ಯ ಮತ್ತೆ ಹುಟ್ಟಿಬರುತ್ತೋ ಇಲ್ಲವೋ ತಿಳಿಯದಾಯ್ತು. ಬರೆಯಬೇಕು ಎಂಬುದೇನೋ ನಿಜವೇ ಆದರೂ ಬರೆಯುವಾಗ ಮನೋವೇದಿಕೆ ಅದಕ್ಕೆ ಸಿದ್ಧವಗಬೇಕಲ್ಲ? ಮನಸ್ಸು ದೇಹಕ್ಕೆ ವಿರುದ್ಧದಿಸೆಯಲ್ಲಿ ಹೆಜ್ಜೆಹಾಕಿದಾಗ ಬರಹಗಳ ಸೃಷ್ಟಿಯಾದರೆ ಆ ಬರಹಗಳನ್ನು ಒಂದೋ ಯಾರೂ ಓದಲಾಗುವುದಿಲ್ಲ, ಅಥವಾ ಅಂತಹ ಬರಹಗಳು ತೀರಾ ಕಮರ್ಷಿಯಲ್ ಸಿನಿಮಾಗಳ ಥರ ಕೇವಲ ಕೆಲವು ಜನರಿಗೆ ಸೀಮಿತವಾಗುತ್ತವೆ.

ಇವತ್ತಿನ ಎರಡು ವಿಷಯಗಳು ಇಂತಿವೆ: ಮೊದಲನೆಯದು ಭೀಮಸೇನರಿಗೆ ಶ್ರದ್ಧಾಂಜಲಿ ಎಂಬುದು ನಿರ್ವಿವಾದ. ಎರಡನೆಯದು ತಾಯಿ ಭಾರತಿಯ ಅಗಾಧತೆಯ ನೆನಪು. ಬನ್ನಿ ಒಂದೊಂದಾಗಿ ಕೂತು ಮಾತಾಡೋಣ-

ಕರ್ನಾಟಕವೆಂಬ ಮಗಳು ಭಾರತವೆಂಬ ಮಾತೆಗೆ ಹೆತ್ತುಕೊಟ್ಟ ಸುಪುತ್ರರಲ್ಲಿ ಅನೇಕ ರತ್ನಗಳು ಅಡಕವಾಗಿವೆ. ಅಂತಹ ರತ್ನಗಳಲ್ಲಿ ಒಂದು ಮೊನ್ನೆ ಕಾಣದಾಯಿತು ಎಂದರೆ ಇದು ಬರೇ ಬಣ್ಣನೆಗೆ ಬಳಸಿದ ಪದವೆಂದು ಯಾರೂ ಹೇಳಲಾರಿರಿ. ಭೀಮಸೇನ್ ಜೋಶಿಯ ವ್ಯಕ್ತಿತ್ವ ಹಾಗಿತ್ತು! ದೇವರು ಎಂಬ ನಮಗೆ ಗೋಚರವಲ್ಲದ ಮಹಾನ್ ಶಕ್ತಿ ಈ ವಿಶ್ವಕ್ಕೆ ಆಗಾಗ ಆಗಾಗ ಏನಾದರೂ ಅಪರೂಪದ ಕೊಡುಗೆಗಳನ್ನು ಕೊಡುತ್ತಲೇ ಹೋಗುತ್ತದೆ. ಅಂತಹ ಕೊಡುಗೆಗಳು ಮಾನವ ಕೊಡುಗೆಗಳಲ್ಲವಾದ್ದರಿಂದ ಅವುಗಳ ಬೆಳಕು,ಪ್ರಕಾಶ ಹಲವೆಡೆ ಪಸರಿಸುತ್ತದೆ. ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ’ಸಂಭವಾಮಿ ಯುಗೇ ಯುಗೇ’ ಎನ್ನುವ ಮಾತು ಸದಾ ಮನದಲ್ಲಿ ಹಸಿರಾಗಿರುವಂಥದ್ದು. ಯುಗಯುಗಗಳಲ್ಲೂ ಕಾಲಕಾಲಗಳಲ್ಲೂ ಹಲವು ರೂಪಗಳಲ್ಲಿ ಭಗವಂತ ಅಂಶ, ಅಂಶಾಂಶ ಅವತಾರಿಯಾಗಿ ಭೂಮಿಗೆ ಬರುತ್ತಾನೆ. ಕೆಲವೊಮ್ಮೆ ಆತನನ್ನು ಆತನೇ ಮನುಷ್ಯ ರೂಪದಲ್ಲಿ ಹುಟ್ಟಿ ಸೇವೆ ಮಾಡುವುದೂ ಕಾಣುತ್ತದೆ. ಇಂತಹ ಹಲವು ಜನ್ಮಗಳು ದಾಸಪರಂಪರೆಯವರದ್ದು. ಹರಿದಾಸರೆಲ್ಲ ಹರದಾಸರೂ ಹೌದು, ಅವರು ಭಗವಂತನ ನಿರ್ವ್ಯಾಜ ಪ್ರೀತಿಯನ್ನು ಮೊಗೆದು ತಾವೂ ಉಂಡು ನಮಗೂ ಉಣಬಡಿಸಿದವರು. ಅಂತಹ ದಾಸರುಗಳು ಬರೆದ ಹಾಡುಗಳನ್ನು ಹಾಡುವದಕ್ಕಾಗಿ ಕೆಲವು ವಿಷಿಷ್ಟ ವ್ಯಕ್ತಿಗಳನ್ನೂ ಅದೇ ಆ ದೇವರು ಹುಟ್ಟಿಸುತ್ತಾನೆ. ಹೀಗೆ ಆ ದಿಸೆಯಲ್ಲಿ ಧಾರವಾಡದ ಹಳ್ಳಿಯಲ್ಲಿ ಜನ್ಮವೆತ್ತಿದವರು ಶ್ರೀ ಭೀಮಸೇನರು. ಮತ್ತದೇ ಹಳೆಯ ಸಂಪ್ರದಾಯಗಳನ್ನು ನೆಚ್ಚಿನಿಂತ ಬಡ ಶಿಕ್ಷಕರ ಮಗನಾಗಿ ಜನಿಸಿದ ಶ್ರೀಯುತರಿಗೆ ಶಾಲೆಯಲ್ಲಿ ಕಲಿಸುವ ವಿದ್ಯೆಗಿಂತ ಇಂಪಾಗಿ ಹಾಡುವ ಹಾಡುಗಳು ಇಷ್ಟವಾದವು. ಸಂಗೀತಕ್ಕಾಗಿ ಮನೆಜನರ ಕಣ್ತಪ್ಪಿಸಿ ಕಂಡಲ್ಲೆಲ್ಲಾ ಅಲೆಯುವುದು ಆರಂಭವಾದ ದಿನಗಳಲ್ಲಿ ಮನೆಯ ಹಿರಿಯರು ನಿರ್ಧರಿಸಿದ್ದು ಈತನನ್ನು ಹೇಗೆ ಸರಿದಾರಿಗೆ ತರುವುದಪ್ಪಾ ಎಂದು. ಆದರೆ ಅದು ತಪ್ಪುದಾರಿಯೇನೂ ಆಗಿರಲಿಲ್ಲ, ಬದಲಾಗಿ ಅದೊಂದು ವಿಶಿಷ್ಟ ಮಹತ್ವವುಳ್ಳ ಹಾದಿಯಾಗಿತ್ತು. ಆ ಹಾದಿ ಎಲ್ಲರಿಗೂ ರುಚಿಸುವುದಾಗಿರಲಿಲ್ಲ. ಕೆಲವರಿಗೆ ಸಂಗೀತವನ್ನು ಕೇಳುವುದಷ್ಟೇ ಇಷ್ಟವಾಗುತ್ತಿತ್ತು ಹೊರತು ಅಭ್ಯಸಿಸುವುದಲ್ಲ.

ತನ್ನ ಸುತ್ತಲ ಜಗತ್ತು ತನಗೆ ಪೂರಕವಾಗಿರದ ವಿಷಮಸ್ಥಿತಿಯಲ್ಲೇ ಗುರುವನ್ನು ಹುಡುಕುತ್ತಾ ನಡೆದು ಕಾಣದ ಊರು ಜಾಗಗಳಲ್ಲೆಲ್ಲಾ ಸುತ್ತುತ್ತಾ ಕೊನೆಗೊಮ್ಮೆ ತನ್ನಿಚ್ಛೆಯನ್ನು ನೆರವೇರಿಸುವ ಮುಸ್ಲಿಂ ಗಾಯಕರೊಬ್ಬರನ್ನು ಪ್ರಥಮ ಗುರುವಾಗಿಸಿಕೊಂಡು ಹಿಂದೂಸ್ಥಾನೀ ಸಂಗೀತವನ್ನು ಗುರುಕುಲ ಮಾದರಿಯಲ್ಲಿ ಕಲಿಯಲು ಆರಂಭಿಸಿದ ಭೀಮಸೇನರು ನಂತರ ಸವಾಯಿ ಗಂಧರ್ವರನ್ನು ಗುರುವನ್ನಾಗಿ ಸ್ವೀಕರಿಸಿ ಮುನ್ನಡೆದರು. ಕಲಿಕೆ ಕೇವಲ ನೆಪಮಾತ್ರ. ಹುಟ್ಟುಪ್ರತಿಭೆಗೆ ಕಲಿಕೆ ಬೇಕೆ? ಆದರೂ ಜನ್ಮಾಂತರದಲ್ಲಿ ಮರೆತುಹೋದ ಸಂಗೀತದ ಮಜಲುಗಳನ್ನು ಮತ್ತೊಮ್ಮೆ ಎತ್ತಿ ನೆನಪಿಸುವ ಕಾರಣಕ್ಕಾಗಿ ಗುರುವಿನ ಅವಶ್ಯಕತೆಯಿತ್ತು;ಕಲಿತರು. ಹಾಡುವ ಪ್ರತೀ ಹಾಡು ಜನರನ್ನು ಮೋಡಿಮಾಡಲು ತೊಡಗಿದ್ದು ಅವರ ಸುಶ್ರಾವ್ಯ ಕಂಠಮಾಧುರ್ಯದಿಂದ. ಆ ಕಂಠಶಾರೀರದಲ್ಲಿ ಅದೆಂತಹ ಅದ್ಭುತ ಚೈತನ್ಯದ ಚಿಲುಮೆಯಿದೆಯೆಂದರೆ ಕೇಳುತ್ತಾ ಕೇಳುತ್ತಾ ಅದಕ್ಕೆ ಮಾರುಹೋಗದವರು ವಿರಳ.

ಆನೆ ನಡೆದದ್ದೇ ದಾರಿ ಅಂತಾರಲ್ಲ ಅದೇ ರೀತಿ ಭೀಮಸೇನರು ಇಟ್ಟಿದ್ದೇ ಭೀಮಗಾತ್ರದ ಹೆಜ್ಜೆಗಳನ್ನು. ಅವರು ಹೇಗೇ ಆಲಾಪಿಸಿದರೂ ಅದೊಂದು ರಾಗವೇ ಆಯಿತು. ಹೊಸ ರಾಗಗಳು ಅವರಿಂದ ಸೃಜಿಸಲ್ಪಟ್ಟವು. ಪಕ್ಕ ವದ್ಯಗಳಿರಲಿ ಬಿಡಲಿ ಆ ಧ್ವನಿಗೆ ಅವುಗಳ ಅನಿವಾರ್ಯತೆ ತೀರಾ ಕಮ್ಮಿ. ವಾದ್ಯಗಳೇ ಹಾಡುಗಾರರನ್ನು ಮರೆಮಾಚುವ ಇವತ್ತಿನ ದಿನಗಳಲ್ಲಿ ಕೇವಲ ಹಾರ್ಮೋನಿಯಂ ಮತ್ತು ತಾಳ, ತಬಲಾಗಳೊಂದಿಗೆ ಅವರು ಭಜನೆಗಳನ್ನು ಹಾಡಿದರು. ದೇವರ ನಾಮಗಳನ್ನು ಹೇಳಿದರು. ಅಭಂಗಗಳನ್ನು ಭಂಗವಿಲ್ಲದೇ ಸತತ ಹಾಡಿದರು. ಕರ್ನಾಟಕದಲ್ಲಿ ಅವರ ವಿದ್ಯೆಗೆ ತಕ್ಕುದಾದ ವ್ಯವಸ್ಥೆ ಸಿಗದೇ ಇದ್ದಾಗ ಮಹಾರಾಷ್ಟ್ರದ ಪುಣೆಗೆ ಅವರು ವಲಸೆಹೋದರು. ಅಲ್ಲೇ ನೆಲೆನಿಂತರೂ ಅವರು ಕನ್ನಡ ತಾಯಿಯನ್ನು ಮರೆಯಲಿಲ್ಲ! ಕನ್ನಡದಲ್ಲಿ ಅನೇಕ ಹಾಡುಗಳನ್ನು ಹಾಡಿದರು. ಮಹಾರಾಷ್ಟ್ರಕ್ಕೆ ಅವರು ತೆರಳಿದ ಮೇಲೆ ಅಲ್ಲಿಂದ ಅವರು ದೇಶವ್ಯಾಪೀ ಗುರುತಿಸಿಕೊಂಡರು. ದೇಶದಲ್ಲೇ ಸಂಗೀತದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ದೇಶದ ಆಸ್ತಿಯಾಗಿ ಬೆಳೆದರು.

ಪಂಚಮವೇದವೆನಿಸಿದ ಸಂಗೀತ ಮೂಲ ಮಹಾಭಾರತದ ಕಾವ್ಯವನ್ನು ಓದುವಾಗ ಜಾಸ್ತಿ ಪ್ರಚುರಗೊಂಡಿತು ಎಂಬ ಐತಿಹ್ಯವೊಂದಿದೆ. ಅದು ಹೌದೋ ಅಲ್ಲವೋ ಅಂತೂ ಸಂಗೀತವೊಂದು ಚಿಕಿತ್ಸೆ ಎಂಬುದಂತೂ ನಿಜವೇ. ಅರೆಕ್ಷಣದ ಇಂಪಾದ ಸಂಗೀತದಿಂದ ತೇಲಿಬರುವ ಆಹ್ಲಾದ ಎಂತೆಂತಹ ಕುಪಿತವ್ಯಕ್ತಿಗಳ ಮನೋಸ್ಥಿತಿಯನ್ನು ತಕ್ಷಣಕ್ಕೆ ತಣಿಸುತ್ತದೆ. ನರಗಳ ಸಂವೇದನೆಯ ಮೂಲಕ ಸಾಗುವ ಸಂದೇಶಗಳು ಆಯಾ ಭಾಗಗಳಿಗೆ ಸಮರ್ಪಕವಾಗಿ ತಲುಪದಾದಾಗ ಕಾಯಿಲೆಗಳ ಜನನವಾಗುತ್ತದೆ. ಸೂಕ್ತ ಸಂದೇಶಗಳ ಬದಲಾಗಿ ವ್ಯತ್ಯಸ್ತ ಸಂದೇಶಗಳು ಪ್ರವಹಿಸಿದರೂ ಕಾರ್ಯವ್ಯತ್ಯಾಸವಾಗುತ್ತದೆ. ಯಥೋಚಿತ ಸಂದೇಶಗಳು ಸಕಾಲಕ್ಕೆ ಸರಿಯಾಗಿ ಪ್ರವಹಿಸಲು ಸಂಗೀತದ ಹಲವು ರಾಗಗಳು ಕಾರಣವಾಗುತ್ತವೆ ಎಂಬುದು ಈಗ ವೈಜ್ಞಾನಿಕವಾಗಿ ನಿರೂಪಿಸಲ್ಪಟ್ಟ ಸಂಗತಿ. ಉತ್ತಮ ಸಂದೇಶಗಳು ನಮ್ಮ ನರನಾಡಿಗಳಲ್ಲಿ ಹರಿಯುತ್ತ ವೈರುಧ್ಯಭಾವಗಳು ದೂರವಾಗಲು ಸಂಗೀತ ಕಾರಣವಾದರೆ ಅದನ್ನು ನಮಗೆ ತಲುಪಿಸುವ ಕೆಲಸವನ್ನು ತಮ್ಮ ಶಾರೀರದಿಂದ ನಡೆಸಿಕೊಡುವವರು ಗಾಯಕರಾಗಿರುತ್ತಾರೆ.

ದೇಶವೊಂದು ತನ್ನ ಖಾಸಾ ಪ್ರತಿಭೆಗೆ ಮನ್ನಣೆಯನ್ನು ನೀಡಬೇಕಾದ್ದು ಸಹಜವೇ. ಆದರೂ ಸಂಗೀತದಲ್ಲಿ ಅಸಾಮಾನ್ಯತೆಯನ್ನು ಮೆರೆದ ಅಪ್ಪಟ ಪ್ರತಿಭೆಗೆ ೨೦೦೮ ರ ವರೆಗೂ ಭಾರತರತ್ನ ಪುರಸ್ಕಾರ ದೊರೆತಿರಲಿಲ್ಲ. ಅಂತೂ ಅದು ಭೀಮಸೇನರನ್ನು ತಾನಾಗೇ ಅರಸಿಬಂದಿದ್ದು ೨೦೦೮ರಲ್ಲಿ. ಇದರ ಹೊರತು ಮಿಕ್ಕುಳಿದ ಮಾನ-ಸನ್ಮಾನಗಳ ಮತ್ತು ಬಿರುದುಬಾವಲಿಗಳ ಪಟ್ಟಿ ನಿಮಗೇ ಚೆನ್ನಾಗಿ ತಿಳಿದಿರುತ್ತದೆ. ಯಾವುದನ್ನೇ ಕೊಟ್ಟರೂ ಅದು ಕಮ್ಮಿ ಎನಿಸುವ ಸಂಗೀತ ಸಾಮ್ರಾಟನ ಸೇವೆ ಅಮೋಘ ಮತ್ತು ಅನನ್ಯ ಕೂಡ. ಅನೇಕರು ಅನೇಕ ಮಾರ್ಗಗಳಿಂದ ಅಮರರಾದರೆ ಭೀಮಸೇನರು ಸಂಗೀತಕ್ಷೇತ್ರದ ಮರೆಯಲಾಗದ ಧ್ರುವತಾರೆಯಾಗಿದ್ದಾರೆ. ಅವರಿಗೆ ನಮ್ಮೆಲ್ಲರ ನುಡಿನಮನಗಳನ್ನು ಹೇಳುವ ಸಮಯ ಇದಾಗಿದೆ, ಹಾಗೆ ಸ್ಮರಿಸೋಣ: ದಿವಂಗತ ಮಹಾನುಭಾವ ಶ್ರೀ ಭೀಮಸೇನ ಜೋಶಿಯವರೇ ತಮ್ಮ ಆತ್ಮ ಚಿರಶಾಂತಿಯನ್ನು ಪಡೆಯಲಿ. ಮತ್ತೆ ಬರುವುದಾದರೆ ಇದೇ ಈ ನಮ್ಮ ಕನ್ನಡನೆಲಕ್ಕೆ ಮರಳಲಿ ಎಂದು ತಮಗೆ ಹೃತ್ಪೂರ್ವಕವಾಗಿ ತಮಗೆ ಭಾಷ್ಪಾಂಜಲಿಗಳನ್ನು ಅರ್ಪಿಸುತ್ತಿದ್ದೇವೆ.

ಇನ್ನು ಎರಡನೇ ವಿಚಾರ ಅಮ್ಮ ಭಾರತಿಯದ್ದು. ನಾವು ಏನೇ ಕೊಡಲಿ ಬಿಡಲಿ ಅವಳುಮಾತ್ರ ಸತತವಾಗಿ ನಮ್ಮನ್ನು ಅತ್ಯಂತ ಕಾಳಜಿಯಿಂದ ನಡೆಸುತ್ತಾಳೆ. ನಮ್ಮಿಂದ ಯಾವುದನ್ನೂ ಅಪೇಕ್ಷಿಸುವುದಿಲ್ಲ. ಗಲಭೆ, ದೊಂಬಿ ರಾದ್ಧಾಂತಗಳೇನೆ ಇದ್ದರೂ "ಛೆ ಮಕ್ಕಳು, ಇಂದು ಜಗಳವಾಡುತ್ತಾರೆ ನಾಳೆ ಮತ್ತೆ ಒಂದಾಗುತ್ತಾರೆ" ಎಂಬ ಭಾವದಿಂದ ಸುಮ್ಮನಾಗುತ್ತಾಳೆ. ನಾವು ಮಾತ್ರ ಅಮ್ಮನ ಮನಸ್ಸಿಗೆ ತಿಳಿಯದ ರೀತಿಯಲ್ಲಿ ಮತ್ತೆ ಮತ್ತೆ ಇಲ್ಲಸಲ್ಲದ್ದನ್ನು ನಡೆಸುತ್ತಲೇ ಇರುತ್ತೇವೆ.

ನೀವೇ ವಿಚಾರಿಸಿ ನೋಡಿ--ಅಲ್ಲೆಲ್ಲೋ ಸಿಂಗಾಪುರವೋ ಅಮೇರಿಕಾವೋ ಇನ್ನೂ ಯಾವುದೋ ರಾಷ್ಟ್ರದ ಪ್ರಜೆಯೂ ನೀವಾಗಬಹುದು. ಆದರೆ ಭಾರತದ ಅನನ್ಯ ಸಂಸ್ಕೃತಿ ನಿಮಗಲ್ಲಿ ದೊರಯುವುದಿಲ್ಲ. ಹಾಗಾದರೆ ನಮ್ಮಲ್ಲಿನ ಹೆಚ್ಚುಗಾರಿಕೆಯೇನೆಂದರೆ ನಮ್ಮಲ್ಲಿಯ ವಿಭಿನ್ನ ಸಂಸ್ಕೃತಿ ಆಚಾರವಿಚಾರಗಳ ಜನರನ್ನೂ ಅಲ್ಲದೇ ಭಾರತ ಹಲವು ದೇಶಗಳ ಜನರನ್ನೂ ಮತ್ತವರ ಸಂಸ್ಕೃತಿಯನ್ನೂ ಆದರಿಸಿದೆ. ಯಾವುದೇ ಸಂಸ್ಕೃತಿ ಬಂದರೂ ತನ್ನ ಮೂಲ ಸಂಸ್ಕೃತಿಯನ್ನು ಕಳೆಯಗೊಡದೇ ಹೊಸ ಹೊಸ ಜಾಯಮಾನಗಳ ಜನರನ್ನು ಏಕೋ ಭಾವದಿಂದ ನೋಡುತ್ತಿದೆ. ’ವಸುಧೈವ ಕುಟುಂಬಕಮ್’ ಎಂಬ ಆರ್ಷೇಯ ವಾದದಿಂದ ಜಗತ್ತಿನ ಸಕಲಜನೋಪಕಾರಿಯಾಗಿ ಎಲ್ಲರಿಗೂ ಹಿತವಾಗುವ ಮಾನವ ಸಹಜ ಧರ್ಮವನ್ನು, ಬದುಕುವ ಕಲೆಯನ್ನು ತೋರಿಸುತ್ತಿದೆ.

ಹೆಚ್ಚಿನ ಆದ್ಯತೆಗಾಗಿ, ಹಣಕ್ಕಾಗಿ ನಮ್ಮಲ್ಲಿ ಎಷ್ಟೋ ಜನ ದೇಶಬಿಟ್ಟು ವಿದೇಶಗಳಲ್ಲಿ ನೆಲೆಸುತ್ತಾರೆ. ಅಲ್ಲಿ ಹಾಗಿದೆ ಇಲ್ಲಿ ಹೀಗಿದೆ ಎಂದೆಲ್ಲಾ ಇಲ್ಲಿಗೆ ಬಂದಾಗ ಹೇಳುವುದನ್ನು ಕೇಳುತ್ತೇವೆ. ಎಲ್ಲಿ ಹೇಗೇ ಇದ್ದರೂ ನಮಗೆ ನಮ್ಮ ಭಾರತ ಸಾಕು. ಅಮ್ಮ ಹಳೆಯ ಮಾಸಲು ಸೀರೆಯನ್ನುಟ್ಟ ಮಾತ್ರಕ್ಕೆ ಅವಳನ್ನು ಅಮ್ಮ ಎನ್ನಲು ಅಸಹ್ಯ ಪಡುವ ಮನೋಧರ್ಮ ನಮ್ಮದಾಗಬಾರದು. ಅಮ್ಮ ನಮಗೆ ಜನ್ಮವಿತ್ತವಳಲ್ಲವೇ? ನಮಗಿಂತ ಎಷ್ಟೋ ಹಿರಿಯಳಲ್ಲವೇ ? ಅವಳಲ್ಲಿ ಅವಳ ಸೀರೆಯನ್ನೋ ಬಟ್ಟೆಯನ್ನೋ ಒಗೆದುಕೊಳ್ಳುವ ಯಾ ಹೊಸದನ್ನು ಕೊಂಡುಕೊಳ್ಳುವ ತಾಕತ್ತು ಇರದೇ ಇರಬಹುದು. ಅದನ್ನು ಮನದಂದು ಅವಳಿಗೆ ಕಾಲಕಾಲಕ್ಕೆ ಬೇಕಾದ ಅನುಕೂಲಗಳನ್ನು ಕಲ್ಪಿಸಬೇಕಾದ್ದು ಮಕ್ಕಳಾದ ನಮ್ಮ ಕರ್ತವ್ಯ. ಈ ಕರ್ತವ್ಯವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ನಡೆಸಬೇಕು.

ಇನ್ನು ಹಣವನ್ನೇ ನಂಬಿ ಅದರ ಹಿಂದೆ ಬಿದ್ದು, ಕೇವಲ ತಮ್ಮ ಸ್ವಾರ್ಥದ ಬದುಕಿಗಾಗಿ, ಸ್ವೇಚ್ಛಾಚಾರಕ್ಕಾಗಿ ದೇಶದ್ರೋಹದ ಹಲವಾರು ಕೆಲಸಗಳನ್ನು ಮಾಡುವವರನ್ನು ಕಾಣುತ್ತಿದ್ದೇವೆ. ಆ ಗುಂಪಿನಲ್ಲಿ ಕೆಲವು ಭಾರತೀಯ ರಾಯಭಾರೀ ಕಚೇರಿಗಳಲ್ಲಿನ ಅಧಿಕಾರಿಗಳೂ ತೊಡಗುತ್ತಾರೆ ಎಂಬುದು ಖಂಡನೀಯ ಮತ್ತು ವಿಷಾದನೀಯ. ಇಲ್ಲೇ ಹುಟ್ಟಿ ಇಲ್ಲಿನ ಉಪ್ಪನ್ನವನ್ನೇ ಉಂಡು ಇಂದು ಪಾಕಿಗಳ ಜೊತೆ ಕೈಜೋಡಿಸಿರುವ ದಾವೂದ್, ಚೋಟಾ ರಾಜನ್, ರವಿ ಪೂಜಾರಿ ಇಂತಹವರನ್ನೆಲ್ಲಾ ರಕ್ಕಸರಸಾಲಿಗೆ ಸೇರಿಸಲು ಯಾವುದೇ ಹಿಂಜರಿಕೆ ಬೇಡ. ಇದೂ ಅಲ್ಲದೇ ದೇಶದ ಆರ್ಥಿಕ ವ್ಯವಸ್ಥೆಯನ್ನು ತಲ್ಲಣಗೊಳಿಸುವ ಹರ್ಷದ್ ಮೆಹ್ತಾ ಅಥವಾ ಸತ್ಯಂ ಸಂಸ್ಥೆಯ ಮಾಜಿ ಅಧ್ಯಕ್ಷ ರಾಮಲಿಂಗ ರಾಜು ಥರದ ವ್ಯಕ್ತಿಗಳೂ ಕೂಡ ಇಲ್ಲಿದ್ದೇ ದೇಶದ್ರೋಹವನ್ನೆಸಗಿದವರು ಎಂದರೆ ತಪ್ಪಲ್ಲ. ಇಂತಹ ಕುಖ್ಯಾತರ ಸಂತತಿ ನಶಿಸ.

ದೇಶದಲ್ಲಿ ಮದ್ಯ ಮಾನಿನಿ ಮತ್ತು ಮಾಂಸದ ಮಾರಾಟ ಸರಾಗ ನಡೆದೇ ಇದೆ. ಮಾಂಸಾಹಾರಿಗಳಿಗೆ ಮಾಂಸ ಅನಿವಾರ್ಯವಾದರೂ ಹಾಲು ಕೊಡುವ ಹಸುವನ್ನು ಮಾಂಸಕ್ಕೆ ಬಳಸುವ ಕ್ರಮ ಅತ್ಯಂತ ಖೇದಕರ. ಯಾವ ರಾಷ್ಟ್ರದಲ್ಲಿ ಮಾನಿನಿಯರಿಗೆ ಸರಿಯಾದ ರಕ್ಷಣೆ ಇರುವುದಿಲ್ಲವೋ ಅಥವಾ ಅವರನ್ನೇ ಪರೋಕ್ಷವಾಗಿ ಬಳಸಿ ಹಣದ ವ್ಯವಹಾರ ನಡೆಸುತ್ತಾರೋ ಆ ದೇಶ ಉದ್ಧಾರವಾಗಲು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆ. ಮೊನ್ನೆ ಯಷ್ಟೇ ದಕ್ಷಿಣ ಭಾರತದ ಸ್ಫುರದ್ರೂಪೀ ತಾರೆಯೊಬ್ಬಳ ಲೈಂಗಿಕ ಹಗರಣವನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಸಿನಿಮಾ ಹಾಗೂ ರಂಗಭೂಮಿ ಕಲಾವಿದರ ಬಳಗದಲ್ಲಿ ಎಲ್ಲೋ ಮಧ್ಯ್ ಮಧ್ಯೆ ಕೆಲವರು ’ಕಾಸ್ಟಿಂಗ್ ಕೌಚ್’ ಎಂಬ ಕಾಮದಾಟವನ್ನು ನಡೆಸುತ್ತಾರೆಂಬುದು ಎಲ್ಲರಿಗೂ ತಿಳಿದಿರುವ ಅಂತರಂಗ! ಈ ವ್ಯವಸ್ಥೆಯಲ್ಲಿ ತನ್ನ ಶೀಲ ಕಳೆದುಕೊಳ್ಳುವ ಹೆಣ್ಣು ಆಮೇಲೆ ಯಾರು ಎಲ್ಲೇ ಏನೇ ಮಾಡಿದರೂ ಸಹಿಸಿಕೊಳ್ಳುವ ಮನೋಭಾವಕ್ಕೆ ಒಗ್ಗಿಕೊಳ್ಳುತ್ತಾಳೆ ಎನಿಸುತ್ತದೆ. ಕಾಲಸಂದುತ್ತಾ ಅವಕಾಶಗಳು ಕಡಿಮೆಯಾದಾಗ ಹೈಟೆಕ್ ವೇಶ್ಯಾವಾಟಿಕೆಯನ್ನು ಆರಂಭಿಸುತ್ತಾಳೆ ಎಂಬುದು ಇತ್ತೀಚೆಗೆ ಎರಡು ಮೂರು ಪ್ರಕರಣಗಳಿಂದ ಕಂಡುಬಂದ ಅಭಿಪ್ರಾಯ. ಭಾರತೀಯ ಶಾಸ್ತ್ರದಲ್ಲಿ ರಂಗನಟಿ/ನಟಿಗೆ ಪರ್ಯಾಯವಾಗಿ ಸೂಳೆ ಎಂದೇ ಕರೆದಿದ್ದಾರೆ. ಹಲವಾರು ಗಂಡುಗಳ ಸಂಪರ್ಕಕ್ಕೆ ಬರುವ ಹೆಣ್ಣು ಹಲವಾರು ಸಂದರ್ಭಗಳಲ್ಲಿ ತನ್ನತನವನ್ನು ಕಳೆದುಕೊಳ್ಳಬೇಕಾಗಿ ಬರುವುದರಿಂದ ಈ ಹೆಸರು. ಇಂದು ನಟಿಸುವುದಕ್ಕೂ ಪ್ರಾಧಾನ್ಯತೆಯಿರುವುದರಿಂದಲೂ ದೃಶ್ಯಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಹೆಣ್ಣು ಹಲವರ ಕಣ್ಮನ ತಣಿಸುವುದರಿಂದಲೂ ಆ ಹೆಣ್ಣುಗಳಿಗೆ ಎಲ್ಲಿಲ್ಲದ ಪ್ರಚಾರ ದೊರೆಯುತ್ತದೆ. ತುಂಡುಡುಗೆ ಉಟ್ಟ ನಟೀಮಣಿ ಪ್ರಾಯ ಸಲ್ಲುವವರೆಗೆ ಅದರಿಂದಲೇ ಹಲವರ ಎದೆಗೆ ಬಾಣ ಎಸೆಯುತ್ತಾಳೆ ಮತ್ತು ಅವರನ್ನು ಗೆಲ್ಲುವುದರಲ್ಲೂ ಯಶಸ್ವಿಯಾಗುತ್ತಾಳೆ!

ಒಂದು ಅಂಬೋಣದ ಪ್ರಕಾರ ಯುವ ಜನಾಂಗದಲ್ಲಿ ಈಗೀಗ ಯಾವುದೇ ಸಂಕೃತಿಯಾಧಾರಿತ ಜೀವನ ಕಂಡುಬರುತ್ತಿಲ್ಲ. ಹುಡುಗ/ಹುಡುಗಿ ಹಲವು ಸಂಪರ್ಕಗಳನ್ನು ಸಂಬಂಧಗಳನ್ನು ಇಟ್ಟುಕೊಳ್ಳುವುದು ಹಿಂದಿಯ ’ಬಿಗ್ ಬಾಸ್’ ಥರದ ರಿಯಾಲಿಟಿ ಶೋ ಗಳಲ್ಲಿ ಜಗಜ್ಜಾಹೀರುಗೊಂಡಿದೆ. ಒಂದೊಮ್ಮೆ ಅಮೇರಿಕಾದ ರೀತಿಯ ಜೀವನವೇ ನಮ್ಮದಾದರೆ ನಮ್ಮ ನಾಳೆಗಳಲ್ಲಿ ಭಾರತೀಯ ಭಾವನೆಗಳು ಇರಲು ಸಾಧ್ಯವೇ? ಇಲ್ಲಿನ ದಾಂಪತ್ಯದ ಆ ಆನ್ಯೋನ್ಯ ಭಾವ ಬರಲು ಸಾಧ್ಯವೇ? ಹುಟ್ಟುವ ಮಕ್ಕಳಿಗೆ ಅಪ್ಪಯಾರೋ ಅಮ್ಮ ಯಾರೋ ಆದರೆ ಅವರುಗಳ ಗತಿಯೇನು? ಇದೇ ಕಾರಣವಾಗಿ ನಗರದ ಬೀದಿಗಳಲ್ಲಿ ಅಲ್ಲಲ್ಲಿ ಶಿಶುಗಳನ್ನು ಎಸೆದು ಹೋಗುವುದು ಕಾಣಸಿಗುತ್ತಿದೆ. ಇಂತಹ ಕೃತ್ಯಗಳನ್ನು ನಡೆಸುವಾಗ ಅವರ ಹೃದಯ ಕೆಲಸಮಾಡುವುದಿಲ್ಲವೇ ? ಅಥವಾ ಯಾವ ಮಾನಸಿಕ ಧೈರ್ಯದಿಂದ ಅಂತಹ ಘೋರಕೃತ್ಯವೆಸಗುತ್ತಾರೆ ಎಂಬುದು ತಿಳಿಯದಾಗಿದೆ. ಅಂತೂ ಇವಕ್ಕೆಲ್ಲಾ ಬಹುಮುಖ್ಯವಾಗಿ ಮದುವೆಗೂ ಮೊದಲಿನ ಸಂಬಂಧವೇ ಕಾರಣ ಎಂಬುದು ಸ್ಪಷ್ಟವಾಗುತ್ತಿದೆ.

ಹೀಗೇ ಹಲವಾರು ಸಾಮಾಜಿಕ ಜ್ವಲಂತ ಸಮಸ್ಯೆಗಳಿದ್ದರೂ ತನ್ನ ಮಕ್ಕಳ ತಪ್ಪುಗಳನ್ನೆಲ್ಲಾ ಕ್ಷಮಿಸಿ ತಾಯಿ ಭಾರತಿ ಮುನ್ನಡೆದಿದ್ದಾಳೆ;ಮುನ್ನಡೆಸಿದ್ದಾಳೆ. ಇಂದೊಮ್ಮೆ ಅವಳನ್ನು ಸ್ಮರಿಸುವುದು ಯೋಗ್ಯವೆಂಬುದು ನನ್ನ ಭಾವನೆ. ಎರಡನ್ನೂ ನಿಮ್ಮಲ್ಲಿ ನಿವೇದಿಸಿ ಕೊಂಡಿದ್ದೇನೆ. ಮತ್ತೊಮ್ಮೆ ಸಿಗುತ್ತೇನೆ, ಹಾರ್ದಿಕ ಶುಭಾಶಯಗಳು.

Saturday, January 22, 2011

ಪ್ರಜಾಪ್ರಭುತ್ವವೆಂಬ ಭೂತ


ಪ್ರಜಾಪ್ರಭುತ್ವವೆಂಬ ಭೂತ !


ಭೂತದ ಕಥೆಯನ್ನು ಕಳೆದವಾರ ಓದಿದ್ದೀರಿ. ಆದರೆ ’ಪ್ರಜಾಪ್ರಭುತ್ವ’ ಎಂಬ ವ್ಯವಸ್ಥೆಯೇ ಅರ್ಥಕಳೆದುಕೊಂಡು ಭೂತವಾದಾಗ ರಾಜ್ಯವೋ ದೇಶವೋ ಭೂತಾವಾಸದ ಜಾಗವಾಗುತ್ತದೆ! ಬಹಳಸರ್ತಿ ಪೌರಾಣಿಕ ಕಥಾಭಾಗಗಳನ್ನು ಹೇಳುವಾಗ ಇದನ್ನೇ ಹೇಳಿದ್ದೇನೆ. ಹಿಂದಕ್ಕೆ ಆಳುವ ದೊರೆಯನ್ನು ಜನರು ಅರ್ಥಾತ್ ಪ್ರಜೆಗಳು ಪ್ರತ್ಯಕ್ಷ ದೈವವೆಂಬಂತೇ ಕಾಣುತ್ತಿದ್ದರು. ರಾಜನೂ ತನ್ನ ಪ್ರಜೆಗಳ ಯೋಗಕ್ಷೇಮವನ್ನು ಕಾಲಕಾಲಕ್ಕೆ ವಿಚಾರಿಸುತ್ತ ಪ್ರಜಾರಂಜಕನಾಗಿ ರಾಜ್ಯಭಾರನಡೆಸುತ್ತಿದ್ದ.

ಉದಾಹರಣೆಗೆ ತೆಗೆದುಕೊಂಡರೆ ನಮ್ಮ ರಾಜ್ಯದ ಕೆಲವು ಅಣೆಕಟ್ಟುಗಳು ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಿದವು. ಅವು ಸ್ವಾತಂತ್ರ್ಯ ಪೂರ್ವದವು. ಅಂದರೆ ಅವರಲ್ಲೂ ಅಭಿವೃದ್ಧಿಯತ್ತ ಸಾಕಷ್ಟು ಗಮನವಿತ್ತು.ಯಾವುದೇ ದೇಶದಲ್ಲಿ ಹೊಸದೇನನ್ನಾದರೂ ಕಂಡರೆ ಅದನು ತಮ್ಮ ದೇಶಕ್ಕೆ[ರಾಜ್ಯಕ್ಕೆ] ಕೊಂಡುಕೊಳ್ಳುವುದು ಯಾ ನಿರ್ಮಿಸುವುದು ಇತ್ಯಾದಿ ಕೆಲಸಗಳನ್ನು ಮಾಡುವುದರ ಜೊತೆಗೆ ಕಲೆ,ಸಂಗೀತ, ಸಾಹಿತ್ಯ, ವಿಜ್ಞಾನ, ಕೃಷಿ ಹೀಗೇ ಎಲ್ಲಾರಂಗಗಳಿಗೂ ಸಮಾನ ಮಹತ್ವನೀಡಲಾಗುತ್ತಿತ್ತು.

ಇಂದು ಯಾರೂ ರಾಜರಿಲ್ಲ, ಆದರೆ ಆಳುವ ಪ್ರತೀ ಶಾಸಕ ಯಾವ ರಾಜನಿಗೂ ಕಮ್ಮಿಯಿಲ್ಲದ ಆಸ್ತಿ ಸಂಪಾದಿಸಲು ಮುಂದಾಗುತ್ತಾನೆ. ಪ್ರತೀ ಶಾಸಕನೂ ಮೊದಲನೇ ಸಲಕ್ಕೇ ತಾನು ಮಂತ್ರಿ, ಮುಖ್ಯಮಂತ್ರಿಯಾಗಬೇಕೆಂಬ ಕನಸುಕಾಣುತ್ತಾನೆ. ಯಾರಿಗೂ ಪರಸ್ಪರರಲ್ಲಿ ಗೌರವವಿಲ್ಲ. ಎಲ್ಲಾ ದುಡ್ಡಿಗಾಗಿ ಮಾಡಿಕೊಂಡ ರಾಜಕೀಯ ದುಷ್ಟಕೂಟಗಳಾಗಿವೆ. ೨೦-೨೫ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವವರು ಚುನಾವಣೆಗೆ ನಿಲ್ಲಲು ಅರ್ಹರಾಗುತ್ತಾರೆ. ಅಪ್ಪ ರಾಷ್ಟ್ರಾಧ್ಯಕ್ಷನಾದರೆ ಮಗ ರಾಜ್ಯಾಧ್ಯಕ್ಷನಾಗುತ್ತಾನೆ! ಪಕ್ಷ ಸಂವರ್ಧನೆಯಲ್ಲಿ ಮೊದಲು ಕೊಟ್ಟು ಕರೆತಂದು ಆಮೇಲೆ ಮರಳಿ ಮೂರುಪಟ್ಟು ದೋಚುವ ಹುನ್ನಾರ-ದುರಾಲೋಚನೆ ಕೆಲವು ಪಕ್ಷಗಳದ್ದು. ಕುದುರೆ ವ್ಯಾಪಾರ, ಕುಸ್ತಿ-ಅಖಾಡ ಎಲ್ಲವೂ ಆಳುವ ಗೌರವಯುತ ಸ್ಥಾನವಾದ ವಿಧಾನಸೌಧದಲ್ಲೇ ನಡೆಯುತ್ತವೆ. ಒಬ್ಬಾತ ಅಂಗಿ ಹರಿದುಕೊಂಡು ಮೇಜು ಹತ್ತಿನಿಂತು ಬಾಯಿ ಬಾಯಿ ಬಡಿದುಕೊಂಡು ತನ್ನ ಪ್ರದರ್ಶನ ಮಾಧ್ಯಮಗಳಲ್ಲಿ ಕಾಣುವಂತೇ ಮಾಡಿದರೆ ಇನ್ನೊಬ್ಬಾತ ಹೊಡೆಯಲೇ ಹೋಗಿ ಸುದ್ದಿ ಮಾಡುತ್ತಾನೆ.

ಮಾಟ-ಮಂತ್ರಗಳು ಈ ಸ್ಥಾನದಿಂದ ಹಳ್ಳಿಯ ಮೂಲೆಯವರೆಗೂ ಮತ್ತೆ ತಲೆಯೆತ್ತುವಂತೇ ಮಾಡಿರುವ ರಾಜಕಾರಣಿಗಳು ಪರಸ್ಪರರ ಮೇಲೆ ಗೂಬೆ ಕೂರಿಸುತ್ತಾರೆ. ಆಳುವ ಪಕ್ಷದ ದೊರೆಗಳು ನುಂಗಣ್ಣಗಳಾಗುತ್ತಿರುವುದನ್ನು ಎದುರಿಗೆ ಕೂತು ಅನುಭವಿಸುವ ಹತಾಶಸ್ಥಿತಿಯಲ್ಲಿರುವ ವಿರೋಧಪಕ್ಷಗಳು ತಮ್ಮ ಘನತೆಗಳನ್ನೆಲ್ಲಾ ಗಾಳಿಗೆ ತೂರಿ ಕಾಲುಕೆರೆದು ಕೋಳಿ ಅಂಕಕ್ಕೆ ನಾಂದಿ ಹಾಡುತ್ತಾರೆ. "ಏನೋ ತಪ್ಪಾಯ್ತಪ್ಪಾ ಸರಿಮಾಡಿಕೊಂಡು ಹೋಗುತ್ತೇನೆ" ಎಂಬ ಮುಖ್ಯಮಂತ್ರಿಗೆ ಕೇವಲ ಒಂದೇ ಒಂದು ದಿನ ಸುರಳೀತ ವ್ಯವಹಾರ ಮಾಡಲು ಬಿಡುವುದಿಲ್ಲ. ಹಗಲೂ ರಾತ್ರಿ ಅಪ್ಪ-ಮಕ್ಕಳು ಸಿದ್ರಾಮಣ್ಣನೇ ಮುಂತಾದ ಕೆವರನ್ನು ಕರೆದುಕೊಂಡು ತಲೆಯಿಲ್ಲದ ಗೊಂಬೆಯಂತಿರುವ ದಿವಾನಖಾನೆಗೆ ತೆರಳುತ್ತಾರೆ. ಒತ್ತಡದಲ್ಲಿ ಗಾಳಿಬಂದ ಕಡೆ ವಾಲುವ ಗೂಟದ ಗೊಂಬೆ ಪೂರ್ವಕ್ಕೆ ನಿಂತರೆ ಒಂದು ರೂಪದಲ್ಲೂ ಪಶ್ಚಿಮಕ್ಕೆ ನಿಂತಾಗ ಇನ್ನೊಂದು ರೂಪದಲ್ಲೂ ಹಾಗೂ ಇನ್ನೆಷ್ಟು ದಿಕ್ಕುಗಳಿವೆಯೋ ಅಷ್ಟೂ ದಿಕ್ಕುಗಳಲ್ಲೂ ನಿಂತು ನೋಡಿದಾಗ ವಿಭಿನ್ನವಾಗಿ ಕಾಣುತ್ತದೆ!

ಯಾರದು ತಪ್ಪು ಯಾರದು ಸರಿ? ತಪ್ಪು ನಮ್ಮೆಲ್ಲರದು! ನೆನಪಿಡಿ ಇನ್ನೊಮ್ಮೆ ಒತ್ತಿ ಹೇಳುತ್ತೇನೆ-ತಪ್ಪು ನಮ್ಮೆಲ್ಲರದು. ನಮ್ಮ ರಾಜ್ಯಕ್ಕೆ ಯಾವುದೇ ಆಸ್ತಿಮಾಡದ ಕಡಿದಾಳ್ ಮಂಜಪ್ಪ ಅಥವಾ ಕೆಂಗಲ್ ಹನುಮಂತೈಯ್ಯನವರಂಥವರು, ನಿಜಲಿಂಗಪ್ಪನಂಥವರು ಬೇಕಾಗಿತ್ತು. ಆದರೆ ಅದೆಲ್ಲಾ ಈಗ ಇತಿಹಾಸ! ಮುಂಡಾಸು ಸುತ್ತಿದರೆ ಒಬ್ಬೊಬ್ಬರಿಗೂ ಜಾಸ್ತಿ ಬಟ್ಟೆ ಬೇಕಾಗುತ್ತದಲ್ಲಾ ಎಂಬ ಅನಿಸಿಕೆಯಿಂದ ಮಹಾತ್ಮಾಗಾಂಧಿ ಖಾದಿ ಟೋಪಿ ಧರಿಸುವಂತೇ ಎಲ್ಲರಲ್ಲೂ ಕೇಳಿಕೊಂಡರು. ಆದರೆ ಈಗ ಟೋಪಿ ಧರಿಸುತ್ತಿರುವ ರಾಜ್ಕಾರಣಿಗಳೆಲ್ಲಾ ನಾಟಕದ ಪಾತ್ರಗಳಂತೇ ಕಾಣುತ್ತಿರುವುದು ಮಾತ್ರ ವಿಪರೀತ ವಿಪರ್ಯಾಸ ಮತ್ತು ಹಾಸ್ಯಾಸ್ಪದ. ಬಡತನ ನಿರ್ಮೂಲನೆಗೆ ವಾರದಲ್ಲಿ ಒಂದುದಿನ ಉಪವಾಸವನ್ನು ಬೋಧಿಸಿದರು ಗಾಂಧಿಯವರು....ಇಂದು ನಮ್ಮಲ್ಲಿ ಉಪವಾಸ ಶಬ್ದವೇ ಊರ್ಜಿತವಿಲ್ಲ! ಅಹೋರಾತ್ರಿ ಹಣದ ಝಣತ್ಕಾರವನ್ನೇ ಕಿವಿಗೊಟ್ಟು ಆಲೈಸುವ ಮತ್ತು ಓಲೈಸುವ ಕುಟಿಲ ರಾಜಕಾರಣಿಗಳು ಪಬ್ಬು ಬಾರು ಲೈವ್ ಬ್ಯಾಂಡ್ ಗಳನ್ನೆಲ್ಲಾ ಅತೀ ಖಾಸಗಿಯಾಗಿ ಅನುಭವಿಸುತ್ತಾ ಪರರಿಗೆ ಅದನ್ನೆಲ್ಲಾ ಬಿಡಲು ಬೋಧಿಸುವವರಾಗುತ್ತಾರೆ. ತಮ್ಮ ಅಥವಾ ತಮ್ಮ ಸಹಚರರ ಅರ್ಥಾತ್ ಬಲಬಡುಕರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗದಂತೇ ನೋಡಿಕೊಳ್ಳುತ್ತಾರೆ. ಹಾಗೊಮ್ಮೆ ದಾಖಲಾದರೂ ಸಾಕ್ಷಿಗಳೇ ಸಿಗದಂತೇ ನೋಡಿಕೊಳ್ಳುತ್ತಾರೆ.

ಕುತ್ಸಿತ ರಾಜಕೀಯ ತಂತ್ರ-ಪ್ರತಿತಂತ್ರ ಮತ್ತು ಕುತಂತ್ರಗಳನ್ನು ಉಪಯೋಗಿಸುತ್ತಾ ಆಳುವ ಮತ್ತು ವಿರೋಧಿ ಪಕ್ಷಗಳು ಪರಸ್ಪರ ಕಾಲೆಳೆಯಲು ಪ್ರಯತ್ನಿಸುವುದರಲ್ಲಿ ಪ್ರಜೆಯಾದವನ ಬದುಕು ಮೂರಾಬಟ್ಟೆಯಾಗುತ್ತದೆ. ಯಾವುದೇ ಪ್ರಯೋಜನಕ್ಕೆ ಬಾರದ ಆಯೋಜನೆಗಳನ್ನು ಹುಟ್ಟುಹಾಕಿ ಹಣವಿನಿಯೋಗಿಸುತ್ತಾ ಅಲ್ಲಿಷ್ಟು ಇಲ್ಲಿಷ್ಟು ಮೇಯುವುದನ್ನು ಕಂಡರೆ ಹಿಂದಿನ ರಾಜರ ಕಾಲದಲ್ಲಿ ಈ ಗತಿಯಿರದಿದ್ದುದು ತಿಳಿಯುತ್ತದೆ. ಆಗ ಒಬ್ಬನೇ ರಾಜ ತನ್ನ ಬೊಕ್ಕಸವನ್ನು ತುಂಬಿಸಿಕೊಂಡು ಉಸ್ತುವಾರಿ ನೋಡಿಕೊಂಡಿದ್ದರೆ ಈಗ ಎಲ್ಲರೂ ತಾವು ರಾಜರೆಂದೇ ಅಂದುಕೊಳ್ಳುತ್ತಾ ಕುಳಿತಲ್ಲೇ ಕೊಪ್ಪರಿಗೆ ಹೊನ್ನನ್ನು ಬಯಸುತ್ತಾ ಲಂಚಕೋರರಾಗಿ ಬ್ರಷ್ಟಾಚಾರಿಗಳಾಗಿ ಸಿಕ್ಕಸಿಕ್ಕ ಮೂಲಗಳಿಂದ ಮೇಯಲು ತೊಡಗುತ್ತಾರೆ.

ಈ ಅಡ್ಡ ಮೇವಿನ ಹಲ್ಲಿಗೆ ಸಿಕ್ಕ ಅಧಿಕಾರಿಗಳು ತಮ್ಮ ಉಳಿವಿಗಾಗಿ ತಾವೂ ಅಡ್ಡಡ್ಡ ಮೇಯಲು ತೊಡಗುತ್ತಾರೆ. ಬ್ರಷ್ಟಾಚಾರ ನಿರ್ಮೂಲನೆ ಎಂಬ ವಿಷಯದ ಕುರಿತು ಬೆಳಿಗ್ಗೆ ವೇದಿಕೆಯಲ್ಲಿ ವ್ಯಾಖ್ಯಾನಿಸುವ ಮಂತ್ರಿಗಳು ಅದೇ ದಿನ ಸಾಯಂಕಾಲ ಸೇತುವೆ ದುರಸ್ತಿಯ ಕಾರ್ಯದಲ್ಲಿ ತನಗೆ ಬರಬೇಕಾದ ’ಪ್ರಸಾದ’ವನ್ನು ಪಡೆಯಲು ಗುಟ್ಟಾಗಿ ತೆರಳುತ್ತಾರೆ! ಮಾನಭಂಗ ಮಾಡುವವರನ್ನು ಗಲ್ಲಿಗೇರಿಸಬೇಕು ಎನ್ನುವ ರಾಜಕಾರಣಿಯ ಮೇಲೆ ದಾಖಲಾದ ಮಾನಭಂಗ ಕುರಿತ ಹಲವಾರು ಮೊಕದ್ದಮೆಗಳು ಇದ್ದಕ್ಕಿದ್ದ ಹಾಗೇ ಅನೂರ್ಜಿತಗೊಳ್ಳುತ್ತವೆ! ಚೆನ್ನಾಗಿ ಕೆಲಸಮಾಡುವ ದಕ್ಷ ಅಧಿಕಾರಿಗಳಿಗೆ ಸಿಗಬೇಕಾದ ಪುರಸ್ಕಾರಗಳು ಮತ್ತದೇ ’ಪ್ರಸಾದ’ ವಿಲೇವಾರಿ ಪ್ರಕ್ರಿಯೆಯಿಂದ ಯಾವುದೋ ದುಷ್ಟ ಅಧಿಕಾರಿಗಳಿಗೆ ಸಲ್ಲುತ್ತವೆ. ಸಾರಸ್ವತಲೋಕದಲ್ಲೂ ಇದು ಹೊರತಾಗಿರದೇ ಇತ್ತೀಚೆಗೆ ನಡೆದ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಹನುಮಂತನ ಬಾಲದಂತೇ ಬೆಳೆಯುತ್ತಿದ್ದುದ್ದನ್ನು ನೀವೆಲ್ಲಾ ನೋಡಿಯೇ ಇದ್ದೀರಿ. ಆ ಪಟ್ಟಿಯಲ್ಲಿ ಪುರಸ್ಕೃತರಾದವರಲ್ಲಿ ಯಾರು ನಿಜವಾಗಿ ಅರ್ಹರು ಎಂಬುದನ್ನು ಹಂಸಕ್ಷೀರನ್ಯಾಯದಿಂದ ತೆಗೆದು ನೋಡಬೇಕಾಗಿದೆ. ಯಾವುದೋ ಗೊತ್ತಿರದ ದೇಶದ ವಿಶ್ವವಿದ್ಯಾನಿಲಯ ದೂರದ-ಕಾಣದ-ಕಂಡರಿಯದ ರಾಜಕಾರಣಿಗೆ ಗೌರವ ಡಾಕ್ಟರೇಟ್ ಬಿಕರಿ ಮಾಡಿದ್ದು ಈಗ ಇತಿಹಾಸದಲ್ಲಿ ಸಿಗುತ್ತದೆ! ಇಂಥದ್ದೇ ಹಲವಾರು ವಿಶ್ವವಿದ್ಯಾನಿಲಯಗಳು ನಮ್ಮ ದೃಷ್ಟಿಕೋನದಲ್ಲಿ ಸಿಗುತ್ತವೆ!

ಯಾವುದಕ್ಕೂ ನೆಲೆಯಾಗಲೀ ಬೆಲೆಯಾಗಲೀ ಇಲ್ಲದ ಈ ಕಾಲ ನಿಜವಾಗಿಯೂ ಪ್ರಜೆಗಳು ಕಂಡ ಪ್ರಜಾಪ್ರಭುತ್ವವೆಂಬ ಭೂತ ಕುಣಿಯುತ್ತಿರುವ ಕಾಲವಲ್ಲವೇ ? ಬಡತನ ನಿರ್ಮೂಲನೆ, ಸಾಕ್ಷರತಾ ಯೋಜನೆ, ಬೆಳೆಯುತ್ತಿರುವ ಒಂದುಕಾಲದ ಅಲ್ಪಸಂಖ್ಯಾತರಿಗೂ ಇಂದು ಕಡ್ಡಾಯವಾಗಿ ಆಗಬೇಕಾದ ಕುಟುಂಬಯೋಜನೆ, ಭಿಕ್ಷುಕರ ಪುನರ್ವಸತಿ ಯೋಜನೆ, ಕುಗ್ರಾಮಗಳಿಗೆ ಮೂಲಭೂತ ಸೌಲಭ್ಯಯೋಜನೆ ---ಹೀಗೇ ಆಗಬೇಕಾದ ಎಲ್ಲಾ ಕಾರ್ಯಗಳನ್ನು ಬಿಟ್ಟು ಕಂಡಲ್ಲೆಲ್ಲಾ ಮಹಮಹಾ ರಸ್ತೆಗಳನ್ನು ನಿರ್ಮಿಸುತ್ತಾ ಚತುಷ್ಪಥ,ಪಂಚಪಥ ಮಾಡುವುದೊಂದೇ ಮಾಡಿದರೆ ಅದು ಅಭಿವೃದ್ಧಿಯ ಹಂತವೇ? ರಸ್ತೆಯನ್ನೇ ಉಣ್ಣಲೋ ತಿನ್ನಲೋ ಆಗುವುದಿಲ್ಲವಲ್ಲ, ರಸ್ತೆಯಲ್ಲೇ ಮಲಗಬೇಕಾದ ಕಾಲವನ್ನು ರಾಜಕಾರಣಿಗಳು ತಂದಿಟ್ಟರೆ ಅದು ಅನಿರೀಕ್ಷಿತವೇನಲ್ಲ! "ಭಾರತ ಬಡರಾಷ್ಟ್ರ ಭಾರತ ಬಡರಾಷ್ಟ್ರ" ಹುಟ್ಟಿದಾಗಿಂದ ಇದನ್ನ ಕೇಳುತ್ತಲೇ ಬಂದಿದ್ದೇವೆ. ನಮ್ಮೊಡನೆಯೇ ಜನಿಸಿ ನಮ್ಮ ನಡುವೆಯೇ ಇರುವ ಗುಳ್ಳೆನರಿಗಳು ಈ ಮಂತ್ರದ ಅರ್ಥವನ್ನು ಗ್ರಹಿಸಿಕೊಂಡು ಕೋಟಿಗಟ್ಟಲೇ ಕಪ್ಪುಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದಾರೆ. ಅದರ ವಿವರಣೆ ಬೇಕು ಎಂದರೂ ಖುದ್ದಾಗಿ ಪ್ರಧಾನಿಯೇ "ಇಲ್ಲಾ ಅದು ಅಂತರ್ರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳ ಕಾಯ್ದೆಗೆ ಮಾಡುವ ಅಪಚಾರ, ಅದರಿಂದ ದೇಶ ದೇಶಗಳ ಸಂಪರ್ಕ ಕಡಿದುಹೋಗುತ್ತದೆ" ಎನ್ನುತ್ತಾರೆ! ಹೋಗಲಿ ಬಿಡಿ. ನಮ್ಮದಾದ ಹಣವನ್ನು ತನ್ನಲ್ಲಿರಿಸಿಕೊಂಡು ಕದ್ದೂ ಮುಚ್ಚಿ ಮಾತನಾಡುವ ಆ ದೇಶದ ಹಂಗಾದರೂ ನಮಗೇಕೆ ಬೇಕು. ಒಮ್ಮೆ ಅಲ್ಲಿರುವ ಎಲ್ಲಾ ಹಣ ಮರಳಿ ಭಾರತಕ್ಕೆ ಬಂದು ಮುಟ್ಟುಗೋಲಾಗಿ ಸರಕಾರೀ ಖಜಾನೆಯನ್ನು ಸೇರಲಿ ಎಂದರೆ ಬೆಕ್ಕಿಗೆ ಗಂಟೆ ಕಟ್ಟುವ ಪ್ರಮೇಯ ಹಲವು ರಾಜಕಾರಣಿಗಳನ್ನು ಕಾಡುತ್ತದೆ! ಎಲ್ಲರೂ ಖೂಳರೇ ಎಲ್ಲರೂ ಕಳ್ಳರೇ! ಯಾರೂ ಸಂಭಾವಿತರಲ್ಲ. ಎಲ್ಲೋ ಒಂದೆರಡು ಸುಸಂಕೃತ ವ್ಯಕ್ತಿಗಳು ಸೇವಾರ್ಥವಾಗಿ ರಾಜಕೀಯ ಸೇರಿ ಮಂತ್ರಿಗಳಾಗಿದ್ದರೆ ಅವರಿಗೆ ಮಿಕ್ಕವರು ಕೊಡುವ ಬಿರುದು" ಕೆಲಸಕ್ಕೆ ಬಾರದವರು" ಎಂಬುದು. ಅಂತಹ ಒಳ್ಳೆಯ ಮಂತ್ರಿಗಳು ಕೊಡು-ಕೊಳ್ಳುವ ವ್ಯವಹಾರ ಇಟ್ಟುಕೊಳ್ಳದೇ ಇರುವುದರಿಂದ ಬೇರೇ ಸಮಾನದರ್ಜೆಯ ಮಂತ್ರಿಗಳಿಗೆ ಯಾವುದೋ ಕೆಲಸಮಾಡಿಕೊಡಿರೆಂದು ಕೇಳುವಾಗ ’ಮಾಮೂಲಿ’ ಕೊಡುವುದು ಸಾಧ್ಯವಾಗದೇ ಕೇವಲ ನ್ಯಾಯಯುತವಾಗಿ ಕೇಳುತ್ತಾರೆ. ಹೀಗೆ ಬದುಕುವವರನ್ನು ಬೇರಾವ ಮಂತ್ರಿಗಳೂ ಮೂಸಿಯೂ ನೋಡುವುದಿಲ್ಲ;ಬದಲಾಗಿ ಮೂಲೆಗುಂಪುಮಾಡಿ ಬೇಡದ ಖಾತೆಯನ್ನು ಜಡಿದು ಕೂರಿಸುತ್ತಾರೆ!

ಅಮೇರಿಕಾದಂಥ ರಾಷ್ಟ್ರ ಬಲಿಷ್ಠವಾಗಿರುವುದು ಅಲ್ಲಿನ ರಾಜಕೀಯ ನೀತಿಯಿಂದ. ಮಿಕ್ಕೆಲ್ಲಾ ಜೀವನಶೈಲಿಗೆ ಅವರನ್ನು ನೋಡಿ ಕಲಿಯುವ ನಮ್ಮ ಜನ ರಾಜಕೀಯವನ್ನೂ ಅವರನ್ನೇ ನೋಡಿ ಕಲಿಯಬಹುದಿತ್ತು. ದಿವಾಳಿಯೆದ್ದಾಗಲೂ ಜಗತ್ತನ್ನು ನಿಯಂತ್ರಿಸುವ ತಾಕತ್ತಿದ್ದರೆ ಅದು ಅಮೇರಿಕಾಕ್ಕೆ ಮಾತ್ರ ಎಂಬುದನ್ನು ರಾಜಾರೋಷವಾಗಿ ಹೇಳಬೇಕಾಗಿದೆ. ದಿವಾಳಿಯೇಳುವುದಕ್ಕೆ ಅಲ್ಲಿನ ರಾಜಕೀಯ ವಿದ್ಯಮಾನ ಕಾರಣವಲ್ಲ, ಬದಲಾಗಿ ಅವರ ಅಸಮರ್ಪಕ ಆರ್ಥಿಕ ಠೇವಣಿಯೋಜನೆಗಳು ಕಾರಣ ಅಲ್ಲವೇ? ಇಡೀ ದೇಶದಲ್ಲಿ ಆಳುವ ಒಂದು ಪಕ್ಷ ಮತ್ತು ವಿರೋಧಿ ಸ್ಥಾನದಲ್ಲಿ ಇನ್ನೊಂದು ಪಕ್ಷ ಇದ್ದರೆ ಈ ರೀತಿ ದಿನವೂ ಗಬ್ಬುನಾರುವ ಪರಿಸ್ಥಿತಿಯ ನಿರ್ಮಾಣವಾಗುತ್ತಿರಲಿಲ್ಲ. ಇಲ್ಲಿ ಇಂದಿ ಸ್ವಾತಂತ್ರ್ಯ ಹೆಚ್ಚಾಗಿ ಮನೆಗೊಂದು ಪಕ್ಷ, ಕೇರಿಗೊಂದು, ಊರಿಗೊಂದು, ತಾಲೂಕಿಗೊಂದು ಹೀಗೇ ಸಾವಿರಾರು ಪಕ್ಷಗಳು ಅಣಬೆಕೊಡೆಗಳಂತೇ ರಾತ್ರೋರಾತ್ರಿ ಹುಟ್ಟಿ ತಂಬುಕಟ್ಟಿ ನಿಲ್ಲುತ್ತವೆ. ಅವರವರಲ್ಲೇ ಯಾವಾರ್ಗಲೋ ಹೊಂದಾಣಿಕೆ ಯಾವಾಗಲೋ ವಿಭಜನೆ ಅಂತೂ ’ಕಾರ್ಯಾವಾಸಿ ಕತ್ತೇಕಾಲು’ ಎನ್ನುವ ಗಾದೆಯ ನೆನಪಾಗುತ್ತದೆ. ಹಲವಾರು ತೇಪೆಗಳಿಂದ ಯಾವುದೇ ಮೌಲ್ಯಗಳಿಲ್ಲದೇ ಹೊಂದಾಣಿಕೆಮಾಡಿಕೊಂಡ ’ದುಪ್ಟಿ’ ಥರದ ಸಮ್ಮಿಶ್ರ ಪಕ್ಷಗಳು ಅಧಿಕಾರ ಲಾಲಸೆಯಿಂದ ಕಾಲನ್ನೆಳೆಯುವುದು ಕಾಣುತ್ತಿದ್ದರೂ ಪ್ರಜೆಗಳು ಮತ್ತದೇ ನೂರಾರು ಪಕ್ಷಗಳನ್ನು ಅನುಮೋದಿಸುತ್ತಿರುವುದು ಖೇದದ ವಿಷಾದದ ಸಂಗತಿಯಾಗಿದೆ. ಈಗ ಯಾವುದೇ ಪಕ್ಷವೆಂಬುದು ಇದ್ದರೆ ಅದು ಬರೇ ಬೋರ್ಡಿನಲ್ಲಿಮಾತ್ರ! ಇವತ್ತು ಅಲ್ಲಿರುವವರು ನಾಳೆ ಇನ್ನೆಲ್ಲೋ ಇರುತ್ತಾರೆ. ದೇಶೋದ್ಧಾರಕ್ಕಾಗಿ ಬಡವರಿಗೆ ಸೈಕಲ್ ತೋರಿಸಿದವರು ಅದೇ ಸೈಕಲ್ ಪಂಕ್ಚರ್ ಆದಾಗ ’ಕೈಬಿಟ್ಟು’ ಫಸಲಿನಾಶೆಗೆ ಹುಲ್ಲುಹೊತ್ತ ಮಹಿಳೆಯ ಪಾದಹಿಡಿಯುತ್ತಾರೆ...ಮತ್ತೆ ನಾಳೆ ಅದನೂ ಕೈಬಿಟ್ಟು "ತವರಿಗೆ ಮರಳಿದ ಸಂತೋಷ" ಎನ್ನುತ್ತಾ ಓರೆಬಾಯಲ್ಲೇ ನಗುತ್ತಾರೆ! ಇಷ್ಟೆಲ್ಲಾ ನೋಡುವಾಗ ನನಗನಿಸಿದ್ದು ಟಿವಿ ನೈನ್ ನವರ ಡೈಲಾಗು "ಹೀಗೂ ಉಂಠೇ ! "

ದಿನಕಳೆದ ಹಾಗೇ ದಿನಕಳೆಯಲೇ ಆಗದ ಪರಿಸ್ಥಿತಿ ನಿರ್ಮಾಣಮಾಡಿಕೊಳ್ಳುತ್ತಿರುವ ನಮ್ಮ ಪ್ರಜೆಗಳು ಬೆಳೆದು ನಿಂತ ಬಲಾಢ್ಯ ಭೂತವಾದ ಭಾರತೀಯ ’ಪ್ರಜಾಪ್ರಭುತ್ವ’ ಕ್ಕೆ ಬುದ್ಧಿಕಲಿಸುವರೇ ತಿಳಿಯದಾಗಿದೆ. ಕಾಲನಗರ್ಭದಲ್ಲಿ ಕಳೆದ ಮಣ್ಣಾದ ಉತ್ತಮ ರಾಜಮಹಾರಾಜರೇ ಮರಳಿಬಂದು ರಾಜಕೀಯವನ್ನು ನಡೆಸಿದರೇ ಚೆನ್ನ ಎನಿಸುತ್ತಿದೆ.

Friday, January 21, 2011

ನಾಟ್ಯಮಯೂರಿಯ ಬಯಸಿ

ರಾಜಾರಾವಿವರ್ಮ ಕೃತ ಚಿತ್ರ ಋಣ : ಅಂತರ್ಜಾಲ

ನಾಟ್ಯಮಯೂರಿಯ ಬಯಸಿ


ಇದೊಂದು ಹೊಸಪ್ರಯೋಗ, ಮೂಲ ಭಾವನೆಗಳಿಗೆ ಧಕ್ಕೆಬಾರದ ರೀತಿಯಲ್ಲಿ ಒಂದೇ ಕವನದ ಆದಿ-ಅಂತ್ಯ ಪ್ರಾಸಗಳ ಜುಗಲ್ ಬಂದಿ, ತಮ್ಮೆಲ್ಲರ ಓದಿಗೆ ಅರ್ಪಿಸುತ್ತಿದ್ದೇನೆ:


-೧-

ರಂಗದೆದುರಿದ್ದೆನ್ನ ನೋಡಿ ನಕ್ಕಾ ಗಿಣಿಯೇ
ರಂಗು ಹಚ್ಚಿದೆಯಲ್ಲ ನನ್ನ ಎದೆಗೆ !
ಮಂಗಳದ ನರ್ತನದಿ ಹಲವು ಮನಗಳ ಕದ್ದು
ಭಂಗತಂದಿಡುತ ಓಡಿದೆಯಲ್ಲ ಒಳಗೆ !

/

ನೀ ನಕ್ಕು ನಲಿನಲಿದು ಕುಣಿದಾಗ ಆ ರಂಗ
ಹಚ್ಚಿಬಿಟ್ಟಿತು ಎದೆಗೆ ಹೊಸದೊಂದು ರಂಗ
ಹಲವು ಮನಗಳ ಕದ್ದೆ ನರ್ತಿಸುತ ಬಹಿರಂಗ
ಓಡಿ ಪರದೆಯ ಹಿಂದೆ ತಂದಿಟ್ಟೆ ಭಂಗ

-೨-

ಚಂಗನೇ ಜಿಗಿಯುತ್ತ ಜಿಂಕೆ ಸಾರಂಗಗಳ
ಅಂಗಾಂಗ ಹಾವಭಾವದಲಿ ತೋರಿಸುತಾ
ಮಂಗನಂತಾಗಿರುವ ನನ್ನಂಥ ಕೆಲವರೆಡೆ
ಭಂಗಿಯಲಿ ನಕ್ಕಪರಿ ಎಲ್ಲೋ ಸೆಳೆಯುತಾ

/

ಚಂಗನೇ ಜಿಗಿಯುತ್ತ ಜಿಂಕೆಗಳು ಸಾರಂಗ
ತೋರುತ್ತ ಹಾವಭಾವದಲವುಗಳಂಗ
ನನಂಥ ಕೆಲವರು ಮೈಮರೆತು ಬರಿ ಮಂಗ
ಸೆಳೆಯಿತೆಲ್ಲೋ ನಿನ್ನ ನಗೆ ಭಂಗಿ ಸಂಗ

-೩-

ಮುಂಗಾಲ ನೀವುವಾ ಮುದುಕರನು ಹರೆಯದೆಡೆ
ಬೆಂಗಾವಲಲಿ ತಂತು ತುಂಟ ನರ್ತನವು
ಸಂಗಾತಿಯಾದರೆ ಸಾವಿರದ ಹೊನ್ಕೊಡುವೆ
ಮುಂಗಡವೇ ಇಸಿದುಕೋ ಇಗೋ ಹೃದಯದೊಡವೆ !

/

ಮುಂಗಾಲ ನೀವುವಾ ಮುದುಕರಾದರು ರಂಗ
ನಿನ್ನ ಮೋಡಿಯು ನರ್ತಿಸುತಲಂತರಂಗ !
ಸಾವಿರದ ಹೊನ್ಕೊಡುವೆ ಸೇರು ನನ್ನಯ ಸಂಗ
ಹೃದಯದೊಡವೆಯು ಮುನ್ನ ಪ್ರೀತಿಯತರಂಗ

-೪-
ಕಂಗು ಮಾವಿನ ತಳಿರು ಚಪ್ಪರವ ಹಾಕಿಸುವೆ
ಬಂಗಾರ ಬಣ್ಣದಾ ಕಾಗದವ ಹಚ್ಚಿ
ತಿಂಗಳೊಪ್ಪತ್ತಿನಲಿ ನಾನೂ ನೀನೊಂದಾಗೆ
ಬಂಗಾಳಕೊಲ್ಲಿಯಲಿ ಸಂಗಮಿಸಿದಂತೆ

/

ಚಪ್ಪರವ ಹಾಕಿಸುವೆ ತಳಿರು ಮಾವು-ಕಂಗ
ಹಚ್ಚಿ ಬಂಗಾರದಾ ಚಿತ್ರ ಚದುರಂಗ
ತಿಂಗಳೊಪ್ಪತ್ತಿನಲಿ ನಾವಾಗೆ ಅರ್ಧಾಂಗ
ಬಂಗಾಳಕೊಲ್ಲಿಯಲಿ ನದಿ-ಶರಧಿ ಸಂಗ !


Saturday, January 15, 2011

ಅಪಾನ ವಾಯು ಪುರಾಣವು !


ಅಪಾನ ವಾಯು ಪುರಾಣವು !

ಅಷ್ಟಾದಶ ಪುರಾಣಗಳನ್ನೂ ಮೀರಿ ವಿಶ್ವವ್ಯಾಪಕತ್ವವನ್ನೂ ಅತೀ ಮಹತ್ವವನ್ನೂ ಪಡೆದ ಅಪಾನವಾಯು ಪುರಾಣವನ್ನು ಕೇಳುವುದಕ್ಕೆ ಯೋಗಬೇಕು! ಅದರಲ್ಲೂ ಹಬ್ಬಹರಿದಿನಗಳ ಮಾರನೇದಿನ ಇಂತಹ ಪುಣ್ಯ ಕಥಾನಕಗಳನ್ನು ಕೇಳುವುದು ಜಗತ್ತಿಗೇ ಆನಂದದಾಯಕ! ಹತ್ತಾರುಜನ ಸೇರಿದ ಸಭೆಯಲ್ಲಿ ಮಂಡಿಸಿದ್ದ ತಿಪ್ಪಾ ಭಟ್ಟರು ಸ್ವಲ್ಪ ವಾಲುತ್ತ " ಈಗ ಹೊಟ್ಟೆ ಸ್ವಲ್ಪ ಸಡಿಲಾಯ್ತು" ಎನ್ನುತ್ತಾ ಪುರಾಣವನ್ನಾರಂಭಿಸಿದಾಗ ಮಗ್ಗುಲಲ್ಲಿ ಕಾಡುತ್ತಿರುವ ಕೆಟ್ಟ ಕುತೂಹಲದಿಂದ ಆಲಿಸಲು ಕೂತ ನನಗೆ ಕಿವಿನೆಟ್ಟಗಾಯಿತು. ಸಭಾಲಕ್ಷಣವೆಂಬಂತೇ ಅದೂ ಇದೂ ಶ್ಲೋಕಗಳನ್ನು ಹೇಳುತ್ತಾ ಪುರಾಣಿಕರಾದ ಭಟ್ಟರು ತಮ್ಮ ಪುಸ್ತಕರಹಿತ ವ್ಯಾಖ್ಯಾನಕ್ಕೆ ಅನುವುಗೊಂಡು ಶಾಲನ್ನು ಎಳೆದೆಳೆದು ಹೆಗಲಿನ ಎರಡೂ ಪಕ್ಕಕ್ಕೆ ಬರುವಂತೇ ಸರಿಪಡಿಸಿಕೊಂಡರು.

" ವಾಯುಗಳಲ್ಲಿ ಹಲವಾರು ಥರದ ವಾಯುಗಳಿವೆ" --ಅದು ಸಹಜಬಿಡಿ ನಮಗೆ ವಿಜ್ಞಾನಿಗಳೂ ಹೇಳಿದ್ದಾರೆ.

ಭಟ್ಟರು ಮುಂದುವರಿಸುತ್ತಿದ್ದರು--
" ಅವುಗಳಲ್ಲಿ ಪ್ರಾಣವಾಯು, ಆಪಾನವಾಯು, ಯಾನವಾಯು, ಉದಾನವಾಯು,ಸಮಾನವಾಯು ಇತ್ಯೇತ್ಯಾದಿ ವಾಯುಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ. ಇವುಗಳಲ್ಲಿ ಯಾವೊಂದು ವಾಯುವಿರದಿದ್ದರೂ ನಡೆಯುವುದಿಲ್ಲ. ಇವತ್ತು ನಾವು ಅಪಾನವಾಯುವಿನ ಮಹತ್ವವನ್ನು ತಿಳಿದುಕೊಳ್ಳೋಣ.

ದೇಹದ ಒಳಗೆ ಆಹಾರ ಸೇರಿ ವೈಶ್ವಾನರರೂಪೀ ಅಗ್ನಿ ಅದನ್ನು ಪಚನಗೊಳಿಸಿದ ಮೇಲೆ ಅಲ್ಲಿ ಉದ್ಭವವಾಗುವುದು ಅಪಾನವಾಯು. ಸೇವಿಸಿದ ಆಹಾರವನ್ನು ಅವಲಂಬಿಸಿ ಈ ವಾಯುವಿನ ಉತ್ಫತ್ತಿಯ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. ಆದರೆ ಮಗುವಿನಿಂದ ಹಿಡಿದ ಮುದುಕರವರೆಗೂ ಇದೂ ಅಲ್ಲದೇ ಪ್ರತೀ ಸಸ್ತನಿಯ ದೇಹದಲ್ಲೂ ಈ ಅಪಾನವಾಯುವಿನ ಸನ್ನಿಧಾನವಿದೆ. ಕೆಲವರಲ್ಲಿ ಅದರ ನಿತ್ಯಾನುಸಂಧಾನವಿದ್ದರೆ ಇನ್ನೂ ಕೆಲವರಲ್ಲಿ ಅದರ ಅನುಷ್ಠಾನ ಸ್ವಲ್ಪ ಕಡಿಮೆಮಟ್ಟದಲ್ಲಿರುತ್ತದೆ. ಈ ಅಪಾನವಾಯು ಟಾಟಾ ಬಿರ್ಲಾಗಳನ್ನಾಗಲೀ ’ಅನಿಲ’ ಅಂಬಾನಿ ’ಅನಿಲ’ ಕುಂಬ್ಳೆ ಗಳನ್ನಾಗಲೀ ಬೇರೇ ಬೇರೇ ಎಂದು ತಿಳಿಯುವುದಿಲ್ಲ. ಇದಕ್ಕೆ ಎಲ್ಲರೂ ಒಂದೇ! ಸಾಫ್ಟ್ ವೇರ್ ಅಭಿಯಂತರನೂ ಒಂದೇ ರಸ್ತೆಬದಿಯ ಮೆಕಾನಿಕ್ಕೂ ಒಂದೇ. ಜೀವನದಲ್ಲಿ ಬಡವ ಶ್ರೀಮಂತರೆಂಬ ಬೇಧವೆಣಿಸದ ಯಾವುದಾದರೂ ಇದ್ದರೆ ಅದು ಅಪಾನವಾಯು ಮಾತ್ರ! ಹೀಗಾಗಿ ಅಪಾನವಾಯುವಿಗೆ ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ಬಿರುದನ್ನೂ ಕೊಡಬಹುದು.

ಅಪಾನವಾಯುವಿನ ಉಪಸ್ಥಿತಿ ಎಲ್ಲಾಕಡೆಗಿದ್ದರೂ ಯಾರೂ ಅದನ್ನು ಹೇಳಲು ಹೆದರುತ್ತಾರೆ. ಯಾಕೋ ಬಹಳ ಸಂಕೋಚಪಡುತ್ತಾರೆ. ನಮ್ಮ ಜನಕ್ಕೆ ಈ ವಿಷಯದ ಬಗ್ಗೆ ಮಾತನಾಡಲು ಎಲ್ಲಿಲ್ಲದ ಮರ್ಯಾದೆ ಅಡ್ಡಬರುತ್ತದೆ! ತಮ್ಮ ಸ್ಥಾನಮಾನ ಏನಾಗಬಹುದೆಂಬ ಅನಿಸಿಕೆಯಿಂದ ಇದರ ಬಗ್ಗೆ ಮಾತನಾಡುವುದೇ ಇಲ್ಲ! ಕೊಳೆತ ಕುಂಬಳಕಾಯಿಯನ್ನು ಎಷ್ಟುದಿನ ಬಚ್ಚಿಡಲು ಸಾಧ್ಯವಾಗುತ್ತದೆ ? ಅದರ ವಾಸನೆ ಸುತ್ತಲ ಪ್ರದೇಶಕ್ಕೆಲ್ಲಾ ಹಬ್ಬಲೇಬೇಕಾಗುತ್ತದೆ ಅಲ್ಲವೇ ? ಹೇಳಿದರೂ ಹೇಳದಿದ್ದರೂ ಕುಂಬಳಕಾಯಿ ಕೊಳೆತಿರುವುದು ಹೇಗೋ ಎಲ್ಲರಿಗೂ ತಿಳಿದುಹೋಗುತ್ತದೆ! ಅದೇ ರೀತಿ ಈ ಅಪಾನವಾಯುವಿನ ಮಹಿಮೆ ಅಪಾರ. ಇದರ ಮಹಿಮೆಯನ್ನು ನೀವೆಲ್ಲಾ ಅನುಭವಿಸಿದವರೇ! ಆದರೂ ಇನ್ನೊಮ್ಮೆ ಪುರಾಣಿಕರ ಬಾಯಿಂದ ಕೇಳುವ ಆಸೆಯಾಗಿ ಹೀಗೆ ಕುಳಿತಿದ್ದೀರಿ. ಹೇಳುತ್ತೇನೆ ಕೇಳಿ:

ಶರೀರದಲ್ಲಿ ಅಪಾನವಾಯುವಿನಾ ಜನನವಾದಮೇಲೆ ಅದು ಹೊರಬರಲೇ ಬೇಕು. ಶರೀರದ ಒಳಗೇ ಅದು ಸುತ್ತುತ್ತಿರುವಾಗ ಆಗುವ ಅನಾಹುತ ಅಷ್ಟಿಷ್ಟಲ್ಲ. ಇದನ್ನೇ ನಮ್ಮ ವೈದ್ಯಶಾಸ್ತ್ರಿಗಳು ಆಂಗ್ಲ ಭಾಷೆಯಲ್ಲಿ ’ಗ್ಯಾಸ್ ಟ್ರಬಲ್’ ಅಂತಾರೆ. ಕೆಲವರಲ್ಲಿ ಈ ಅಪಾನಯವು ರಕ್ತನಾಳಗಳಲ್ಲಿ ಸೇರಿಕೊಂಡು ಆಗಾಗ ಅಡಚಣೆಯುಂಟುಮಾಡುವುದಲ್ಲದೇ ಶರೀರದ ಒಳಾಂಗಗಳಲ್ಲಿ ಅದರ ಅಟಾಟೋಪ ಬಹಳ. ಜಠರದಲ್ಲಿ ಹುಟ್ಟಿ ಕರುಳಿನಲ್ಲಿ ಹರಿದು ಹಾಗೇಯೇ ಕೆಲವೊಮ್ಮೆ ಮೇಲೂ ಕೆಳಗೂ ಶರೀರದ ಉದ್ದಗಲಕ್ಕೂ ಓಡಾಡುವ ಅಪಾನಯಾವು ಕೆಲವರಲ್ಲಿ ವಿನಾಕಾರಣ ತೇಗುವುದರಮೂಲಕ ಹೊರಹೋದರೆ ಹಲವರಲ್ಲಿ ಇದು ವಾಮಮಾರ್ಗದಿಂದ ಹೊರಟುಹೋಗುತ್ತದೆ-ಇಲ್ಲೇ ನೋಡಿ ಸ್ವಲ್ಪ ಅವಾಂತರ. ಈ ವಾಮಮಾರ್ಗದಿಂದ ಹೊರಹೋಗುವ ಅಪಾನವಾಯು ತನ್ನಪಾಡಿಗೆ ತಾನು ಹೋಗದೇ ಅನೇಕಾವರ್ತಿ ತಾನು ಹೋದರೂ ತನ್ನ ಮೆರವಣಿಗೆಯ ಘಾಟನ್ನು ಪರಿಸರದಲ್ಲಿ ಸ್ವಲ್ಪಕಾಲ ಗಾಢವಾಗಿ ಉಳಿಸಿಹೋಗಿಬಿಡುತ್ತದೆ!

ವಾಕರಿಕೆ, ತಲೆನೋವು, ಹೊಟ್ಟೆಯಲ್ಲಿ ಉರಿ, ಸುಸ್ತು, ಹೊಟ್ಟೆಯಲ್ಲಿ ಕಲ್ಲುಹಾಕಿದಹಾಗೇ ಆಗುವುದು, ಆಹಾರವೇ ಬೇಡವೆನ್ನಿಸುವುದು, ತಲೆತಿರುಗುವ ಅನುಭವವಾಗುವುದು ಇವೆಲ್ಲಾ ಅಪಾನವಾಯುವಿನ ಪ್ರಭಾವೀ ಲಕ್ಷಣಗಳು. ಜಾತಿ,ಮತ,ಲಿಂಗ, ವಯಸ್ಸು ಯಾವುದರ ಬೇಧವೂ ಇಲ್ಲದೇ ನಿತ್ಯವೂ ಎಲ್ಲರಲ್ಲೂ ಆಗಾಗ ತನ್ನ ಅಸ್ಥಿತ್ವವನ್ನು ತೋರಿಸುವ ಅಪಾನವಾಯು ಹಲವರ ಕೆಂಗಣ್ಣಿಗೆ ಬಲಿಯಾಗುವುದೂ ಇದು. ಆಕಾರದಲ್ಲಿ, ಬಣ್ಣದಲ್ಲಿ ಕೈಗೆ ಸಿಕ್ಕದ -ಕಣ್ಣಿಗೆ ಧಕ್ಕದ ಇದು ತಪ್ಪಿಸಿಕೊಳ್ಳುವುದು ಇದೇ ಕಾರಣದಿಂದ. ಇಲ್ಲಾಂದರೆ ಅನೇಕಜನ ಇದನ್ನು ಬಿಡುತ್ತಿದ್ದರೇ ? ಹಿಡಿದು ಬಡಿಯುತ್ತಿದ್ದರು ! ಸ್ನೇಹಿತರನೇಕರು ಸೇರಿ ಇಂತಹ ಅಪ್ರತಿಮ ಅಪಾನವಾಯುವನ್ನು ಶ್ಲೋಕದ ಮೂಲಕ ಹೊಗಳಿದ್ದಾರೆ -

ಉತ್ತಮೋ ಡುರುಕೋ ರಾಜೋ
ಮಧ್ಯಮೋ ಟರಟರಾಟುರಿ |
ಅಧಮೋ ಪೀಂ ಪೀಂ ಪೂಂ ಪೂಂ
ಪುಸ್ ಪುಸ್ ಪ್ರಾಣಘಾತಕಃ ||

ವಾಮಮಾರ್ಗದಲ್ಲಿ ಓಡಿಹೋಗುವ ಅಪಾನವಾಯುವನ್ನು ಅದರ [ಕುವಾಸನೆಯ]ಪ್ರತಿಶತ ಪರಿಣಾಮವನ್ನು ಅವಲೋಕಿಸಿ ಭಾಗಿಸಿದ್ದಾರೆ. ಡುರುಕ್ ಡುರುಕ್ ಎನ್ನುವುದು ಉತ್ತಮವೆಂತಲೂ ಟರಾಟುರಿ ಎನ್ನುವುದು ಮಧ್ಯಮವೆಂತಲೂ ಪೀಂ ಪೀಂ ಪೂಂ ಪೂಂ ಎನ್ನುವುದು ಅಧಮವೆಂತಲೂ ಮತ್ತು ಪುಸ್ಸೆನ್ನುತ್ತಾ ಹೊರಡುವುದು ಪ್ರಾಣಘಾತಕ ಅಂದರೆ ಪ್ರಾಣವನ್ನೇ ಹಿಂಡುವಷ್ಟು ಘನಘೋರವೆಂತಲೂ ಅಪಾನವಾಯುವಿಹಾರಿಗಳು ವರ್ಣಿಸಿದ್ದಾರೆ. ಶ್ಲೋಕವನ್ನು ನೆನಪಿಟ್ಟುಕೊಳ್ಳಿ: ಅಪಾನವಾಯುವಿನ ಧ್ಯಾನಕ್ಕೆ ಅನುಕೂಲವಾಗುತ್ತದೆ!

ಕರ್ಮಠ ಬ್ರಾಹ್ಮಣರಿಗೆ ಒಂದು ಕಠಿಣ ಪರೀಕ್ಷೆಯೇನು ಗೊತ್ತೇ ? ಅವರು ವ್ರತನಿಷ್ಠರಾಗಿರುವಾಗ ಮತ್ತು ಪೂಜೆ, ಹೋಮ, ಶ್ರಾದ್ಧ ಇವುಗಳಲ್ಲೆಲ್ಲಾ ನಿರತರಾಗಿರುವಾಗ ಶರೀರ ಸಹಜವಾಗಿ ಉದ್ಭವವಾಗುವ ಈ ಅಪಾನವಾಯುವನ್ನು ವಾಮಮಾರ್ಗದಿಂದ ಹೊರಬಿಡುವಂತೇ ಇಲ್ಲ. ಇದು ಕಟ್ಟಪ್ಪಣೆ. ಅಕಸ್ಮಾತ್ ಅವರು ಹೊರಬಿಟ್ಟರೆ ಅವರು ಅದರ ಪಾಪದ ಫಲವನ್ನು ಅನುಭವಿಸಬೇಕಾಗುತ್ತದೆ. ಅದಕ್ಕೇ ಹಲವಾರು ಪೂಜೆ-ಪುನಸ್ಕಾರಗಳ ಮುನ್ನಾದಿನದಿಂದಲೇ ಉಪವಾಸಾದಿ ವ್ರತಗಳಲ್ಲಿ ಅವರು ತಮ್ಮನ್ನು ನಿಯಮಿಸಿಕೊಂಡು ದೇಹವನ್ನೇ ದಂಡಿಸುತ್ತಾರೆ.

ಹೆಂಗಸರಲ್ಲಿ ಅಪಾನವಾಯು ಕಮ್ಮಿಯೇನಿಲ್ಲ. ಹೆಂಗಸರು ಎಲ್ಲಾರಂಗದಲ್ಲೂ ಇದ್ದಾರಲ್ಲವೇ? ಇಲ್ಲೂ ಅವರಿಗೆ ನ್ಯಾಯ ಸಲ್ಲಬೇಕು. ಹಳೆಯ ಮನೆಗಳಲ್ಲಿ ಕೀಂ ಕೂಂ ಎಂದು ಕಿರುಚುವ ಬಾಗಿಲುಗಳನ್ನು ಅವರು ನೋಡಿಕೊಂಡಿರುತ್ತಾರೆ. ಅತಿಥಿಗಳೆದುರು ಅನಿವಾರ್ಯವಾಗಿ ವಾಮಮಾರ್ಗದಲ್ಲಿ ಬಾಂಬು ಹೊರಬಿದ್ದರೆ ಅಂತಹ ಬಾಗಿಲುಗಳನ್ನು ತಳ್ಳಿಬಿಡುತ್ತಾರೆ. ಏಕಕಾಲಕ್ಕೆ ಎರಡೂ ಘಟಿಸುವುದರಿಂದ ಅತಿಥಿಗೆ ಅದರ ಪರಿಣಾಮ ನಂತರ ಮೂಗಿನ ಮಟ್ಟಕ್ಕೆ ’ಬೆಳೆದುನಿಂತಾಗ’ ಮಾತ್ರ ಗೊತ್ತಾಗುತ್ತದೆ. ಆದರೂ ಅತಿಥಿ " ನೀವು ವಾಸನೆ ಬಿಟ್ಟಿರೇ ? " ಎಂದು ಕೇಳಲು ಬರುತ್ತದೆಯೇ ? ಹೀಗಾಗಿ ಹೆಂಗಳೆಯರು ಈ ವಿಷಯದಲ್ಲಿ ಸೇಫು.

ಕೆಲವು ಸಭೆಗಳಲ್ಲಿ ದೊಡ್ಡವರು ಮಾಡಿದ ಅಪರಾಧಕ್ಕೆ ಮಕ್ಕಳು ಅಪವಾದ ಹೊರುವುದಿದೆ. ಹಾಗೊಂದು ಸಭೆಯಲ್ಲಿ ನಿಂತು ಇನ್ನೇನು ಮಾತನಾಡಬೇಕೆಂದಿದ್ದ ಮಹನೀಯರಿಗೆ ಮೀಟರುಗಟ್ಟಲೇ ’ಟರಾಟುರಿ’ ಬಂದುಬಿಟ್ಟಿತು! ಎದುರಿಗೆ ಅಕಸ್ಮಾತ್ ಅನಿರೀಕ್ಷಿತವಾಗಿ ಬಾಲಕನೊಬ್ಬ ಬಂದುಹೋದ. ಆಗ ಅವರು ಆತನನ್ನೇ ಅದಕ್ಕೆ ಗುರಿಮಾಡಿ " ಹೋಗೊ ಹೊಲ್ಸ್ ಹುಡುಗ " ಎಂದು ಬಿಟ್ಟರು. ಪಾಪದ ಕೂಸಿಗೆ ಅರ್ಥವಾಗದೇ ಮಿಕಿಮಿಕಿ ನೋಡುತ್ತಾ ಸಭೆಯ ಹಿಂಭಾಗಕ್ಕೆ ಸರಿದುಹೋಯಿತು ಆ ಬಡಪಾಯಿ! ಇಂತಹದು ದೊಡ್ಡವರು ಮಾಡುವ ಅಕ್ಷಮ್ಯ ಅಪರಾಧವಾಗಿದೆ.

ಇನ್ನು ಪ್ರಯಾಣ ಹೊರಟಾಗ ಸಾರ್ವಜನಿಕ ಬಸ್ಸುಗಳಲ್ಲಿ, ಪಡಿತರಕ್ಕೋ ದೇವರದರ್ಶನಕ್ಕೋ ಸಿನಿಮಾಟಿಕೆಟ್ಟಿಗೋ ಅಥವಾ ಸಿನಿಮಾ ಮಂದಿರಗಳ ಒಳಗೋ ಅಪಾನವಾಯುವಿನ ಮತ್ತೇರಿದ ಕುಣಿತ ನಡೆದೇ ಇರುತ್ತದೆ. ಯಾರೂ ಹೇಳಲೂ ಕೇಳಲೂ ಸಾಧ್ಯವಾಗದ ಸನ್ನಿವೇಶ! ’ಧೂಮಪಾನ ನಿಷೇಧಿಸಿದೆ’ ಎಂದು ಬೋರ್ಡು ಹಾಕಿದಹಾಗೇ ’ಹೂಸು ಬಿಡುವುದು ದಂಡನಾರ್ಹ ಅಪರಾಧ’ ಎಂಬ ಕಟ್ಟಳೆಯನ್ನು ತರಲಾಗುವುದಿಲ್ಲ. ಇದು ಮನುಷ್ಯ ಸಹಜ ಮತ್ತು ಅದುಮಿಟ್ಟುಕೊಳ್ಳಲಾರದ ’ಅದಮ್ಯ ಆಂದೋಲನ’ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಆಂದೋಲನಕ್ಕೆ ಸಮಿತಿಯೂ ಇಲ್ಲ, ಅಧ್ಯಕ್ಷರಾಗಲೀ ಕಾರ್ಯದರ್ಶಿಗಳಾಗಲೀ ಇಲ್ಲವೇ ಇಲ್ಲ. ಕರಾರುಪತ್ರಗಳಾಗಲೀ ನಿಬಂಧನೆಗಳಾಗಲೀ ಇರುವುದಿಲ್ಲ. ನಿರ್ಭಿಡೆಯವಾಗಿ ನಡೆಯುತ್ತಿರುವ ಈ ಆಂದೋಲನಕ್ಕೆ ಎಲ್ಲರೂ ಸದಸ್ಯರೇ. ಸದಸ್ಯತ್ವಕ್ಕೂ ಪದ್ಧತಿಯೂ ಇಲ್ಲ ರದ್ಧತಿಯೂ ಇಲ್ಲ! ಎಂತಹ ಅಪರಿಮಿತ ಪ್ರೇಮದ ಸಂಘ ನೋಡಿ!ಫಲಾನುಭವಿಗಳ ಅವಸ್ಥೆ ಮಾತ್ರ ಹೇಳತೀರ! ಅಪಾನವಾಯುವನ್ನು ತಹಬಂಧಿಯಲ್ಲಿಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಅದನ್ನು ವಿಸರ್ಜಿಸದೇ ಇರುವ ಅನೇಕ ಸುಸಂಕೃತರಿದ್ದಾರೆ. ಅಂಥವರಿಗಂತೂ ಅವರಿರುವ ಜಾಗಗಳಲ್ಲಿ ಅಪಾನವಾಯು ಪ್ರಯೋಗವಾಗಿಬಿಟ್ಟರೆ ಅಶ್ರುವಾಯು ಪ್ರಯೋಗವಾದಂತೇ ಅವರು ಚಡಪಡಿಸುತ್ತಾರೆ!

ಕೊನೆಯದಾಗಿ ಮಠಮಾನ್ಯಗಳಲ್ಲಿ ಅನೇಕ ಜನ ಅದೂ ಇದೂ ಕಡಲೇಕಾಳಿನದೋ ಹಿಟ್ಟಿನದೋ ಪ್ರಸಾದ ತಿಂದು, ತೊಗರಿ ಬೇಳೆಯ ಹುಳಿಯನ್ನೋ ಹೆಸರುಬೇಳೆಯ ತೊವ್ವೆಯನ್ನೋ ಉಂಡು ಅಡ್ಡಾದಾಗ ಅಲ್ಲಿ ನೋಡಬೇಕು -- ಯುನಿಟಿ ಇನ್ ಡೈವರ್ಸಿಟಿ! ಯಾವ ಕಳ್ಳನೇ ಬಂದರೂ ಆ ಬಾಂಬು ಗರ್ನಾಲುಗಳ ಸದ್ದಿಗೆ ಮಾರುದೂರದಿಂದಲೇ ಓಡಿಹೋಗಿಬಿಡುತ್ತಾನೆ. ಇಲ್ಲಿ ಪರಸ್ಪರ ಪ್ರಶ್ನೋತ್ತರಗಳು ನಡೆಯುತ್ತಿರುವ ಹಾಗೇ ಒಬ್ಬರಾದಮೇಲೆ ಒಬ್ಬರು ’ಉಪಾಸನೆ’ ನಡೆಸುತ್ತಲೇ ಇರುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಕೆಲವು ಭಾರತೀಯರಲ್ಲಿ ಈ ’ಹೊಗೆಯಾಡುವ ಫಿರಂಗಿ’ಗಳಿದ್ದರೂ ’ಬ್ರಿಟಿಷ್ ಫಿರಂಗಿ’ಗಳ ಮುಂದೆ ನಮ್ಮ ಫಿರಂಗಿಗಳು ಏನೂ ಅಲ್ಲ ಎನ್ನುವುದು ತಮಾಷೆಯೆನಿಸುತ್ತದೆ.


ಫಲಶೃತಿ

ಸಮಾಜದಲ್ಲಿ ಸದಾ ಹೊಗೆಯಾಡುವ ಫಿರಂಗಿಗಳಿದ್ದಹಾಗೇ ಇರುವ ವಾಮದ್ವಾರಗಳನ್ನು ಇಟ್ಟುಕೊಂಡವರಲ್ಲಿ ಒಂದು ವಿನಂತಿ: ಅಪಾನವಾಯು ಸಹಜವೇ ಆಗಿದ್ದರೂ ಬದುಕೇ ಅಸಹ್ಯವೆನಿಸುವಷ್ಟು ಅವುಗಳ ಅನುಸಂಧಾನ ಬೇಡ. ಆಯುರ್ವೇದದಲ್ಲಿ ಊಟ-ತಿಂಡಿಗಳನ್ನು ಮಾಡುವವರಿಗೂ ತಯಾರಿಮಾಡುವವರಿಗೂ ಒಂದು ಕ್ರಮವನ್ನು ಹೇಳಿದ್ದಾರೆ. ಯಾವುದು ಅಪಾನವಾಯು ಜನಕವೋ ಅದರ ದಮನಕ್ಕೋಸ್ಕರ ಇನ್ನೊಂದು ವಿರುದ್ಧಗುಣ ತತ್ವದ ಆಹಾರವನ್ನು ಜೊತೆಯಲ್ಲಿ ಉಪಯೋಗಿಸಲು ಹೇಳುತ್ತಾರೆ. ಉದಾಹರಣೆಗೆ ಹೋಳಿಗೆ ತಿಂದಾಗ ಅಪಾನವಾಯು ಜಾಸ್ತಿ ಉದ್ಭವಾವಾಗದಂತೇ ಅದಕ್ಕೆ ತುಪ್ಪಸವರಿ ತಿನ್ನಲು ಹೇಳಿದರೆ, ಪುದಿನಾ ಮತ್ತು ಶುಂಠಿ ಇವೆಲ್ಲಾ ಅಪಾನವಾಯು ಮರ್ದಕಗಳಾಗಿವೆ-ಇವುಗಳ ಚಟ್ನಿಯನ್ನು ಸೇವಿಸಬಹುದಾಗಿದೆ. ಹೀಗಾಗಿ ಈ ಅಸಂಘಟಿತ ಸಂಘಟನೆಯ ಆಂದೋಲನಕ್ಕೆ ಕಡಿವಾಣ ಹಾಕಲು ಆಯುರ್ವೇದ ಪದ್ಧತಿಯನ್ನು ಅನುಸರಿಸಿ. ಆಗ ’ಗ್ಯಾಸ್ ಟ್ರಬಲ್’ ಕೂಡ ಕಮ್ಮಿಯಾಗುತ್ತದೆ, ಸಮಾಜದಲ್ಲೂ ’ಗ್ಯಾಸ್ ನಿಂದಾಗುವ ಟ್ರಬಲ್’ ಕಡಿತಗೊಳ್ಳುತ್ತದೆ!

ಮಂಗಲವು ಅಪಾನವಾಯುಗೆ ಲಿಂಗಬೇಧ ರಹಿತಗೆ |
ಅಂಗಳದಿ ನಿತ್ಯವೂ ನಲಿವಗೆ ಭಂಗವಿಲ್ಲದೆ ಬೆಳದಗೇ ||

Friday, January 14, 2011

ಹರಿವ ತೊರೆಗಳು ಬರಿದಾದ ಕಥೆಯು !


ಹರಿವ ತೊರೆಗಳು ಬರಿದಾದ ಕಥೆಯು !


ಮಿತ್ರಾ ರವಿ, ನಮಸ್ಕಾರಗಳು.

ಉಭಯಕುಶಲೋಪರಿ ನಿತ್ಯವೂ ಸಾಂಪ್ರತ! ವ್ಯತ್ಯಾಸವಿಷ್ಟೇ ನೀನು ದಿನವೂ ಉದಿಸಿ ದಿನವೂ ಮುಳುಗಿ ಮತ್ತದೇ ಕ್ರಿಯೆಯಲ್ಲಿರುತ್ತಾ ಜಗತ್ತಿನ ಪ್ರತಿ ಜೀವಸಂಕುಲಕ್ಕೇ ಮಿತ್ರನಾಗಿದ್ದೀಯ, ನಾವೋ ಹುಟ್ಟಿದಾಘಳಿಗೆಯಿಂದ ದಿನವೂ ಮುದುಕಾಗುತ್ತಾ ನಡೆದಿದ್ದೇವೆ ಬಿಟ್ಟರೆ ಜಗತ್ತಿನ ಬಗ್ಗೆ ನಿನ್ನಷ್ಟು ಕಾಳಜಿ ಇಟ್ಟುಕೊಂಡವರಲ್ಲ.

ವಿಜ್ಞಾನಿಗಳು ಹೇಳಿದರು ನೀನು ಕರಗುತ್ತಿದ್ದೀಯ ಒಂದುದಿನ ಪೂರ್ತಿ ಕರಗೇ ಹೋಗುತ್ತೀಯ ಅಂತ! ನನಗೆ ಆ ಮಾತಿನಲ್ಲಿ ಸ್ವಾರಸ್ಯಕಾಣಿಸಲಿಲ್ಲ. ನೀನು ಇನ್ನೂ ಪ್ರಖರವಾಗುತ್ತಲೇ ನಡೆಯುತ್ತೀಯ ಬಿಡು. ನಿನ್ನ ಹತ್ತಿರ ಬರಲು ಮನುಜರಾದ ನಮಗೆ ಅವಕಾಶ ಸಿಕ್ಕಿದ್ದರೆ ನಿನ್ನನ್ನು ನಾವೇ ಕೊಯ್ದು ಒಯ್ದು ಮನೆಯಲ್ಲಿ ದೀಪಕ್ಕಾಗಿ ಬಳಸುತ್ತಾ ಕರಗಿಸಿಬಿಡುತ್ತಿದ್ದೆವು! ಆದರೆ ನಿನ್ನ ಅಗಾಧ ಪರ್ಸನಾಲಿಟಿ ಇದೆಯಲ್ಲಾ ಅದು ಹತ್ತಿರ ಬರುವುದಿರಲಿ ಸರಿಯಾಗಿ ನೋಡಲೂ ಬಿಡುವುದಿಲ್ಲ. ಹೀಗಾಗಿ ನಿರುಪಾಯರಾಗಿ ಕುಳಿತಿದ್ದೇವೆ. ನಮ್ಮಲ್ಲೇ ವಿಜ್ಞಾನಿಗಳೆನಿಸಿಕೊಂಡವರಿಗೆ ತಿನ್ನಲಾರದ ದ್ರಾಕ್ಷಿ ಹುಳಿಯಾಗಿದೆ!

ಹೌದೂ ಕೇಳುವುದಕ್ಕೇ ಮರೆತೆ ನಿನ್ನೊಳಗೇನಿದೆ ಮಹನೀಯ ? ನಾವೆಲ್ಲಾ ಹಲವು ಬ್ಯಾಟರಿಗಳನ್ನೋ ಜನರೇಟರ್ ಗಳನ್ನೋ ಬಳಸಿದರೂ ಬೆಳಕನ್ನು ಪಡೆಯುವುದು ಕೇವಲ ಎಣಿಕೆಯಮೇಲೆ. ಆದರೆ ದಿನವೂ ಅದೇ ಬೆಳಕು ಹರಿಸುವ, ಅದರೊಂದಿಗೆ ಶಾಖನೀಡುವ ಅಲ್ಲದೇ ನಿನ್ನ ಕಿರಣಗಳ ರೂಪದಿಂದ ಕಿಣ್ವಗಳನ್ನು ಆಯಾ ಜೀವಿಗಳಲ್ಲಿ ಸೃಷ್ಟಿಸುವ ನಿನಗೆ ಅಷ್ಟೆಲ್ಲಾ ಶಕ್ತಿ ಎಲ್ಲಿಂದ ಬಂತು ? ಹೇಳಲಾರೆಯಾ ? ಹಾಗಂತ ನಸುಕಿನಲ್ಲಿ ನೀನು ಉದಿಸುವಾಗ ಮತ್ತು ಸಾಯಂಕಾಲ ನೀನು ಸಮುದ್ರದಲ್ಲಿ ಮುಳುಗಿಹೋಗುವಾಗ[!]ನಾವು ನಿನ್ನನ್ನು ಕೆಂಪಗೆ ಕಾಣುತ್ತೇವೆ. ಆಗಮಾತ್ರ ನಿನ್ನನ್ನು ನೋಡುತ್ತೇವೆ, ಆದರೂ ನಮಗೆ ನಿನ್ನ ಗಾತ್ರದ ಲೆಕ್ಕ ಹಾಕುವುದು ಸಾಧ್ಯವೇ ಇಲ್ಲ. ಕಣ್ಣು ಮೂಗು ಕೈಕಾಲು ಏನೂ ಇಲ್ಲದ ನಿನಗೆ ಪೂರ್ವದ ದಿಕ್ಕು ಇಲ್ಲೇ ಇದೆ ಮತ್ತು ಪಶ್ಚಿಮ ಆಕಡೆಗೇ ಇದೆ ಎಂದು ಯಾರು ಹೇಳಿಕೊಡುತ್ತಾರೆ ಮಾರಾಯ? ಒಂದೇಒಂದು ದಿನ ಉತ್ತರಕ್ಕಾಗಲೀ ದಕ್ಷಿಣಕ್ಕಾಗಲೀ ಉದಯಿಸಲಿಲ್ಲವಪ್ಪಾ, ಹಾಗಂತ ಪಶ್ಚಿಮದಿಂದಲೂ ಉದಯಿಸಲಿಲ್ಲ. ಸದಾ ಒಂದೇ ದಿಕ್ಕು-ಪೂರ್ವ! ನಿನ್ನ ಈ ಕರ್ತವ್ಯಶೀಲ ಜೀವನ ಅಪೂರ್ವ!

ವೇದಾಂತಿಗಳು ನಿನ್ನನ್ನು ಸೂರ್ಯನಾರಾಯಣನೆಂದರು, ಭಾಸ್ಕರನೆಂದರು, ದಿವಾಕರ, ಪ್ರಭಾಕರ ಹೀಗೆಲ್ಲಾ ಹೇಳಿಕೊಳ್ಳುತ್ತಾ ನಮಿಸಿದರು, ಸೂರ್ಯನಮಸ್ಕಾರವೆಂಬ ವ್ಯಾಯಾಮವನ್ನೇ ಹುಟ್ಟುಹಾಕಿ ಹೊಸ ಆಯಾಮ ಕಂಡುಕೊಂಡರು. ಆದರೂ ’ಮಿತ್ರಾ’ ಎಂದರಲ್ಲ ಅದೇ ನನಗೆ ಬಹಳ ಹಿಡಿಸಿತು. ಯಾಕೆ ಗೊತ್ತೋ ಒಂದು ದಿನ ನೀ ಬರದಿದ್ದರೆ, ನೀನಿರದಿದ್ದರೆ ನಮಗೆ ಬದುಕಲೇ ಸಾಧ್ಯವಿಲ್ಲ ಇಲ್ಲಿ. ನಾವು ಬದುಕಬೇಕೆಂದಿದ್ದರೆ ನೀನು ಬರಲೇಬೇಕು. ಹೀಗಾಗಿ ನಾವೆಲ್ಲಾ ಜೀವಸಂಕುಲಗಳ ಸಂಘ ನಿನ್ನನ್ನು ಸನ್ಮಾನಿಸಿದರೂ ಅದು ನಿನ್ನ ಘನತೆಗೆ ತೀರಾ ಕಮ್ಮಿಯೇ ಬಿಡು. ಆದರೂ ಸನ್ಮಾನಿಸಲು ನೀನು ಬಿಡುವುದಿಲ್ಲವಲ್ಲ.

ಹುಟ್ಟಿದಾಗಿನಿಂದ ಹಲವು ಬದಲಾವಣೆಗಳನ್ನು ಸುತ್ತಲ ಪರಿಸರಗಳಲ್ಲಿ ಕಂಡಿದ್ದೇವೆ. ಹಿರಿಯರು ಕಾಲನ ಕರೆಯಲ್ಲಿ ಕಾಲವಾದರು. ಕಿರಿಯರು ಬೆಳೆಯುತ್ತಾ ಹಿರಿಯರಾದರು. ಬೀಜ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಮರವಾಗಿ,ಅದರಲ್ಲಿ ಮೊಗ್ಗರಳಿಸಿ ಹೂವಾಗಿ, ಕಾಯಾಗಿ, ಹಣ್ಣಾಗಿ ಆ ಹಣ್ಣಿನಲ್ಲಿ ಮತ್ತೆ ಬೀಜರೂಪ ಕಂಡೆವು! ಕಾಂಡವ ವನವನ್ನು ಅಗ್ನಿ ತನ್ನ ಕೆನ್ನಾಲಿಗೆಯಿಂದ ಆಹಾರವಾಗಿ ಸ್ವೀಕರಿಸಲು ಸಾಕಷ್ಟು ಸಮಯ ಹಿಡಿಯಿತಂತೆ. ಆದರೆ ಇಂದಿನ ನಮ್ಮ ರಾಜಕಾರಣಿಗಳು, ಕಾಡುಗಳ್ಳರು ಇಡೀ ವಿಶ್ವದ ಕಾಡನ್ನೆಲ್ಲಾ ನೈವೇದ್ಯವಾಗಿ ಸ್ವೀಕಾರಮಾಡುವ ವೇಗವನ್ನು ನೋಡಿದರೆ ಕೆಲವೇ ವರ್ಷಗಳಲ್ಲಿ ಕಾಡು ಎಂಬುದು ಕಥೆಯಾಗುತ್ತದೆ!

೩೦ ವರ್ಷಗಳಲ್ಲಿ ಆದ ಪರಿಸರದ ಬದಲಾವಣೆಯೇ ನಮ್ಮನ್ನೆಲ್ಲಾ ತಲ್ಲಣಗೊಳಿಸಿದೆ ಮಿತ್ರಾ. ನಾವೆಲ್ಲಾ ಚಿಕ್ಕವರಿದ್ದಾಗ ಬೇಸಿಗೆಯೇ ಇದ್ದರೂ ಹರಿವತೊರೆಗಳಿದ್ದವು. ಅಲ್ಲಿಂದ ಹರಿವ ನೀರನ್ನು ಹಲವು ಮೃಗ,ಪಕ್ಷಿ,ಪಶುಗಳು ಕುಡಿಯುವುದರ ಜೊತೆಗೆ ಕೃಷಿಕರೂ ಅಲ್ಲಲ್ಲಿ ಬಳಸುತ್ತಿದ್ದರು. ನೂರಾರು ಜಾತಿಯ, ಬಣ್ಣದ, ಗಾತ್ರದ, ರೂಪದ ಹಕ್ಕಿಗಳು ಆ ತೊರೆಗಳ ಬದುವಿನಲ್ಲಿ ಇರುವ ಮರಗಳಲ್ಲಿ ಗೂಡುಕಟ್ಟಿಕೊಂಡು ಸ್ವಚ್ಛಂದವಾಗಿ ವಿಹರಿಸುತ್ತಾ ಆರಾಮಾಗಿದ್ದವು. ಬರುಬರುತ್ತಾ ಆ ಎಲ್ಲಾ ಹರಿವ ತೊರೆಗಳು ಬರಿದಾದವು, ಅವೂ ಕಾಲಗರ್ಭದಲ್ಲಿ ಕಥೆಯಾದವು. ಗಿಡಮರಗಳು ಕಡಿಯಲ್ಪಟ್ಟವು, ಅವುಗಳನ್ನಾಶ್ರಯಿಸಿದ ಜೀವಸಂಕುಲಗಳು ಅಲ್ಲಿಂದ ಎಲ್ಲಿಗೋ ಹೋದವೋ ನಾಶವಾದವೋ ತಿಳಿಯದಾದೆವು-ಅಂತೂ ಕಾಣದಾದವು.

ಓಡಾಟಕ್ಕೆ ರಸ್ತೆಬೇಕು ನಿಜ. ನಮ್ಮ ಸಂಖ್ಯೆಯ ಅತೀವ ಹೆಚ್ಚಳದಿಂದ ಮತ್ತು ನಮ್ಮ ಓಡಾಟದ ಹುಚ್ಚಿನಿಂದ ತಿರುಗಾಟ ಜಾಸ್ತಿಯಾಯಿತು. ತಿರುಗಲು ವಾಹನಗಳು ಬಂದವು, ಎಲ್ಲಾ ಕೆಲಸಗಳಿಗೂ ಯಂತ್ರಗಳು ಬಂದವು. ನಮ್ಮ ಅವಸರಗಳಿಗೆ ತಕ್ಕಂತೇ ವಾಹನಗಳ ಭರಾಟೆ ಅತಿಯಾಗಿದ್ದರಿಂದ ಈಗ ಇದ್ದ ರಸ್ತೆಗಳೆಲ್ಲಾ ಆಗಲಗಲ ಅಗಲಗಲವಾಗುತ್ತಾ ಚತುಷ್ಪಥ, ಪಂಚಪಥ, ಷಷ್ಟಪಥ, ಅಷ್ಟಪಥಗಳಾಗುತ್ತಾ ಮುಂದೊಮ್ಮೆ ಜಾಗವೆಲ್ಲಾ ರಸ್ತೆಗಳಿಗೇ ಮೀಸಲಾಗುವ ಕಾಲವನ್ನು ನಾವೇ ಕೈಯಾರೆ ತಂದುಕೊಳ್ಳುವೆವು. ಕೇವಲ ೩೦ ವರ್ಷಗಳ ಹಿಂದೆ ಜೀವನಕ್ರಮದಲ್ಲಿ ಇಷ್ಟೆಲ್ಲಾ ತ್ವರಿತಗತಿಯಿರಲಿಲ್ಲ. ಜನರಲ್ಲಿ ಪರಸ್ಪರ ಅನ್ಯೋನ್ಯತೆಯಿತ್ತು. ಯಂತ್ರಗಳ ಬಳಕೆ ತೀರಾ ಕಮ್ಮಿಯಿತ್ತು. ಜನರು ಉಪಜೀವನಕ್ಕೆ ಬೇಕಾಗಬಹುದಾದ ಆಹಾರ-ವ್ಯವಹಾರಗಳಲ್ಲಷ್ಟೇ ತೊಡಗಿದ್ದರು.

ಏನಾಯಿತು ಎಂದು ಚಕಿತರಾಗಿ ನೋಡುತ್ತಿರುವಂತೇ ಜೀವನದ ಮೌಲ್ಯಗಳೇ ಬುಡಮೇಲಾದವು. ಝಣ ಝಣ ಕಾಂಚಾಣಕ್ಕೆ ತೀರಾ ಪ್ರಾಮುಖ್ಯತೆ ಕೊಡಲಾಯಿತು. ಮಾನವನ ಗುಣ-ಸ್ವಭಾವಗಳಿಗೆ ಯಾವ ಮಹತ್ವವೂ ಕಾಣಲಿಲ್ಲ. ಎಲ್ಲರಿಗೂ ತಾನು ಬೇಗ ಬೇಗ ಹಣವನ್ನು ಬಾಚಿ ಸಿರಿವಂತನಾಗಬೇಕು ಎಂಬ ಹಪಹಪಿಕೆ ಬಂತು. ನಮ್ಮಲ್ಲೇ ಹಲವರು ಅಡ್ಡದಾರಿಯಲ್ಲಿ ದುಡ್ಡುಮಾಡಲು ತೊಡಗಿದೆವು, ಗಣಿಗಳನ್ನು ಮಾಡಿದೆವು, ಕಾಡುಕಡಿದೆವು, ತೊರೆನೆರೆಗಳನ್ನೆಲ್ಲಾ ಮುಚ್ಚಿಹಾಕಿ ಕಟ್ಟಡಗಳನ್ನೋ ಕೈಗಾರಿಕಾ ವಸಾಹತುಗಳನ್ನೋ ಕೃಷಿಭೂಮಿಯನ್ನೋ ಆಗಿ ಪರಿವರ್ತಿಸಿದೆವು. ಪರಿಸರದಮೇಲೆ ಈ ನಮ್ಮ ದಾಳಿ ನಿತ್ಯವೂ ನೀನು ಉದಯಿಸಿದಷ್ಟೇ ಸತ್ಯವಾಯಿತು. ಅಳಿದುಳಿದ ಜೀವಸಂಕುಲಗಳು ತಮ್ಮ ಉಳಿವಿಗಾಗಿ ಇರುವ ಚೂರುಪಾರು ಕಾಡುಗಳಲ್ಲಿ ಸೇರಿಕೊಂಡವು. ಆದರೆ ಅಲ್ಲಿ ಅವುಗಳಿಗೆ ಆಹಾರವೇ ಸಾಲದಾಯಿತು!

ದಿನವೂ ಉದಯಿಸುವ ಮತ್ತು ಎಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುವ ನೀನು ಇದನ್ನೆಲ್ಲಾ ಗಣಿಸದಾದೆಯೋ ಅಥವಾ ಗಣಿಸಿಯೂ ಸುಮ್ಮನಾದೆಯೋ ತಿಳಿಯದಾಯಿತು. ವರ್ಷಕ್ಕೆ ಎರಡಾವರ್ತಿ ಪಥಬದಲಿಸುವ ನಿನ್ನ ಪರಿಕ್ರಮವೇನೋ ಸರಿಯೇ ಆದರೆ ಇನ್ನೆಷ್ಟು ದಿನ ಈ ಭೂಮಿಯಲ್ಲಿ ಮಿಕ್ಕುಳಿದ ಜೀವಸಂಕುಲಗಳಿಗೆ ಅವಕಾಶ ಎಂಬುದು ತಿಳಿಯದಾಯಿತಾಲ್ಲ ಮಿತ್ರಾ. ಈಗಿನ ತೀವ್ರತರ ಬದಲಾವಣೆಗಳನ್ನು ಕಂಡರೆ ಭೂಮಿ ಗುಂಡಗಿದೆ ಎಂದು ಬೋಳುಭೂಮಿಯನ್ನು ಕಾಣುವ ದಿನ ಹತ್ತಿರವೇ ಬರುತ್ತಿದೆಯೇನೋ ಅನಿಸುತ್ತಿದೆ. ಅದೇನೋ ಓಝೋನ್ ಪದರ ಅಂತ ನಮ್ಮಲ್ಲೇ ಕೆಲವರು ಒಂದಷ್ಟು ದಿನ ಕುಣಿದಾಡಿದರು. ಯಾವುದು ಓಝೋನ್ ಪದರವೋ ಯಾವುದು ಅತ್ಯಾವಶ್ಯಕವೋ ಅದರ ಅರಿವನ್ನು ನಾವು ಪಡೆಯುವ ಮೊದಲೇ ಝಣ ಝಣದ ಝಣತ್ಕಾರಕ್ಕೆ ನಮ್ಮನ್ನೇ ನಾವು ಮಾರಿಕೊಳ್ಳಹತ್ತಿದೆವು!

ನಿನ್ನ ಕಿರಣಗಳು ಸುಂದರ ಹಸಿರು ಗಿಡಮರಗಳಮೇಲೆ, ಹುಲ್ಲುಗಾವಲಿನಮೇಲೆ ಬೀಳುವುದನ್ನು ನೋಡಬೇಕು, ಅಲ್ಲಿ ಬಣ್ಣಬಣ್ಣದ ಜೀವಸಂಕುಲಗಳು ಆಡುವುದನ್ನು, ಬದುಕುವುದನ್ನು ಕಾಣಬೇಕೆಂಬ ನಮ್ಮ ಕೆಲವರ ಅಪೇಕ್ಷೆ ಕೇವಲ ಮನಸ್ಸಿನಲ್ಲಿಯೇ ಉಳಿಯಿತು. ದೂರದಿಂದಲೇ ತನ್ನ ಪಥವನ್ನು ಬದಲಿಸುವೆನೆಂದು ಟಾಟಾ ಮಾಡಿ ಹೋಗುವ ನಿನ್ನಲ್ಲಿ ಒಂದೇ ಪ್ರಶ್ನೆ ಮಿತ್ರಾ .......ಬರಿದಾಗಬಹುದಾದ ಈ ಭೂಮಿಯಲ್ಲಿ ಅಳಿದುಹೋದ ಗಿಡಮರಗಳ, ಜೀವಸಂಕುಲಗಳ ಮರುಹುಟ್ಟು ಸಾಧ್ಯವೇ? ಯುಗದ ಪಾದದಲ್ಲೇ ಇರುವಾಗ ಇಷ್ಟಾದರೆ ಯುಗಾಂತ್ಯವಾಗುವ ಹೊತ್ತಿಗೆ ಇನ್ನೇನು ಉಳಿಯಲು ಸಾಧ್ಯ? ತುಂಬೇ ಗಿಡಕ್ಕೆ ಏಣಿಹಾಕುವ ಆಕಾರಕ್ಕೆ ಮಾನವ ರೂಪತಳೆಯುತ್ತಾನೆ-ಆಗ ಈ ಯುಗಾಂತ್ಯವಾಗುತ್ತದೆ ಎನ್ನುತ್ತವೆ ವೇದಾಂತಗಳು! ಆದರೂ ಗೆಳೆಯಾ ನಿನ್ನಲ್ಲಿ ಒಂದು ಅರಿಕೆ.... ನಮ್ಮ ಜೀವನದಲ್ಲಿ ಒಂದಷ್ಟು ಗಿಡಮರಗಳೂ ಉಳಿದ ಜೀವಸಂಕುಲಗಳೂ ಅಳಿಯದಂತೇ ಏನಾದರೂ ನಿನ್ನದಾದ ಬೇಲಿವ್ಯವಸ್ಥೆ ಮಾಡುತ್ತೀಯಾ ? ಋಣವಿದ್ದರೆ ಮತ್ತೆ ನಿನ್ನನ್ನೂ ನಿನ್ನ ಹೊಳೆಯುವ ಎಳೆಯ ಕಿರಣಗಳನ್ನೂ ಸದಾ ಆ ಹಸಿರುದ್ಯಾನಗಳ ಮೇಲೆ ಕಾಣಬಯಸುತ್ತೇವೆ, ಕೇಳಿಸಿಕೊಂಡೆಯಲ್ಲ? ನಮಸ್ಕಾರ.

Thursday, January 13, 2011

ನೀನಿಲ್ಲದೇ ನನಗೇನಿದೇ ?


ನೀನಿಲ್ಲದೇ ನನಗೇನಿದೇ ?

ಸೂರ್ಯನ ಮೇಲೊಂದು ಕವನ ಬರೆಯಲು ಹೊರಟೆ
ಆ ಯಾರಲ್ಲಿ ? ಪೆನ್ನು ಕಾಗದ ಕೊಂಡು ಬನ್ನಿ
ಯಾರೂ ಬರಲಿಲ್ಲ! ಅರ್ಥವಾಯಿತು ನಾನು ರಾಜನಲ್ಲವಲ್ಲ
ರಾತ್ರಿಯೂ ಸುಮಾರೇ ಆಗಿಹೋಗಿತ್ತು ಹೇಗೂ ಇದೆ
ನಾಳೆ ಬೆಳಿಗ್ಗೆ ಬರೆದರಾಯಿತೆಂದು
ಮುಸುಕೆಳೆದು ಮಲಗಿದರೆ ಬೆಳಿಗ್ಗೆ ಕೆಟ್ಟ ಚಳಿ
ಕಟಕಟ ಕಟಕಟ ಎನ್ನುವ ಹಲ್ಲುಗಳನ್ನು
ಹೊತ್ತು ಅದು ಹೇಗೆ ಬರೆಯಲಿ ?

ಬಂದೇ ಬಿಡುತ್ತಾನಪ್ಪ ಅಷ್ಟು ಬೇಗ
ಆತನಿಗೆ ಚಳಿಯೇ ಇಲ್ಲವೇ ?
ಚಾದರ ಕಂಬಳಿ ಯಾವುದೂ ಇಲ್ಲ
ಲುಂಗಿ ಉಟ್ಟಿದ್ದೂಕಾಣೆ ಅಂಗಿ ಹಾಕಿದ್ದೂ ಕಾಣೆ
ದುಂಡಗೇ ಇರುತ್ತಾನೆ
ಬೆಳಿಗ್ಗೆನೇ ಹೀಗೆ ಹೇಳಿದ್ದು ಕೇಳಿ
ಕೆಂಪಗೆ ಮುಖ ಊದಿಸಿಕೊಂಡ ಹಾಗಿದ್ದನಪ್ಪ !

ಹೊತ್ತಾಯಿತು ಇನ್ನಾದರೂ ಬರೆಯೋಣ
ಹತ್ತು ಹೋಗಿ ಹನ್ನೆರಡು ಹೊಡೆದರೂ
ಮತ್ತದೇ ಕೊಸರುವಿಕೆ: ಸ್ವಲ್ಪ ತಡೆದು ಬರೆಯುವ !
ತಲೆಬಾಗಿಲಲ್ಲಿ ನಿಂತು ನೋಡುತ್ತೇನೆ
ಆತ ನನ್ನನ್ನೇ ದಿಟ್ಟಿಸಿ ನೋಡುತ್ತಾ
ಮೇಲೆ ಮೇಲೆ ಬಂದು ಕೋಪದಿಂದ
ಬುಸುಗುಟ್ಟುವ ಹಾಗಿದ್ದ: ಬಾಯಿಕಾಣಲಿಲ್ಲ
ಹಲ್ಲೂ ತೋರಲಿಲ್ಲ ಕಣ್ಣು ದೊಡ್ಡದುಮಾಡಿದನೋ
ಚಿಕ್ಕದು ಮಾಡಿದನೋ ಕಣ್ಣಿದೆಯೋ ಇಲ್ಲವೋ
ಯಾವುದೂ ತಿಳಿಯದಾಯಿತಲ್ಲ !
ನನ್ನ ಕಣ್ಣುಮಾತ್ರ ಆತನನ್ನು ನೋಡದಾಯ್ತು!
ಹೋಗಲಿ ಬಿಡಿ ಇನ್ನೂ ಸಮಯವಿದೆ
ನಮಗೇನು ೩ ಘಂಟೆಯ ಪರೀಕ್ಷೆಯೇ ?



ಮೂಡು ಬರಲೇ ಇಲ್ಲ!
ಏನಂತ ಬರೆಯುವುದು ? ’ರೊಟ್ಟಿಯ ಹಾಗೇ
ಗುಂಡಗೆ ಇರುವ ಹಳದಿ ಬಣ್ಣದ’ ಎಂದಷ್ಟೇ
ಬರೆದಿದ್ದೆ ಮತ್ತೆ ಕಂಡೆ ಆತನ ಬಣ್ಣ ಕೆಂಪು!
ಈಗ ಆತ ನನಗೆ ಕಣ್ಣು ಬಿಟ್ಟು
ತನ್ನ ಕಣ್ಣೇ ನೋಯ್ದಾಗ ಸಣ್ಣಗಾಗಿ ಹೋಗಿದ್ದ
ಸಾಕು ಎಂದುಕೊಂಡು ದೂರ ಸಾಗುತ್ತಿದ್ದ
ಸೀತಾರಾಮ ಭಟ್ಟರ ತೋಟದ ಆಚೆ
ಶಂಕರ ಶೆಟ್ರ ಶೇಂಗಾ ಬೇಣದ ಇಳಿಜಾರ
ಸಂದಿಯಲ್ಲಿ ಮತ್ತೆ ಸಾಗುವಾನಿ ಮರಗಳ
ಗುಂಪಿನ ಹಿಂದೆ ಇಳಿದಿಳಿದು ಅಡಗುತ್ತಿದ್ದ!
ಅವಿತೂ ಕಂಡೂ ಕೂಕಿಯಾಡುತ್ತಿದ್ದ!
ಕವನ ಬರೆಯಬೇಕೆನ್ನುವಷ್ಟರಲ್ಲಿ
ಕೈಬೀಸಿದರೂ ನಿಲ್ಲದೇ ಓಡಿಹೋದ!
ಮತ್ತೆ ಆತನಿಲ್ಲದ ರಾತ್ರಿ ಅದುಹೇಗೆ ಬರೆಯಲಿ ?

Wednesday, January 12, 2011

ಕಥೆಯಾದರಿವರು ನಮ್ಮ-ನಿಮ್ಮ ನಡುವೆ


ಕಥೆಯಾದರಿವರು ನಮ್ಮ-ನಿಮ್ಮ ನಡುವೆ

ಬಾಲ್ಯದ ಹಲವು ದಿನಗಳನ್ನೂ ಜನರನ್ನೂ ನೆನೆದಾಗ ಕೆಲವು ವ್ಯಕ್ತಿಗಳನ್ನು ಮರೆಯಲು ಸಾಧ್ಯವಾಗುವುದಿಲ್ಲ. ಹಾಗಂತ ಅವರು ನನಗೇನೋ ಸಹಾಯ ಮಾಡಿದವರಲ್ಲ. ಬದಲಾಗಿ ಅವರ ವಿಧಿಲಿಖಿತವೇ ವಿಚಿತ್ರವಾಗಿದ್ದು ಅವರ ಬದುಕಿನ ದಿಕ್ಕೇ ಬದಲಾಗಿ ಅವರೇ ಬದಲಾಗಿ ಹೋದ ವ್ಯಕ್ತಿಗಳು. ಇಂತಹ ಜನರಲ್ಲಿ ಕೆಲವರನ್ನು ನಿಮ್ಮ ಮುಂದೆ ನೆನಪಿಸಿಕೊಳ್ಳುವ ಪ್ರಯತ್ನ ಹೀಗಿದೆ--


ಮಳ್ಳ ಗಣಪ

ಗಣಪ ಎಂಬಾತ ಒಳ್ಳೆಯ ವ್ಯಕ್ತಿ, ಜಾತಿಯಿಂದ ಒಕ್ಕಲಿಗ. ಸಪೂರ ಶರೀರದ ಮೃದು ಮನಸ್ಸಿನ ಸಜ್ಜನ. ಅವನಾಯಿತು, ಅವನ ಕೆಲಸವಾಯಿತು. ಹೆಂಡತಿ-ಮಕ್ಕಳು ಎಲ್ಲರೊಟ್ಟಿಗೆ ಸರಳ ಜೀವನವನ್ನು ನಡೆಸುತ್ತಿದ್ದ ಆತನಿಗೆ ಅದೇಕೋ ಏನೋ ಮನೆಯೇ ಬೇಡವಾಯಿತು. ನಿಂತಲ್ಲಿ ನಿಲ್ಲಾಲಾರ, ಒಂದೆಡೆಗೇ ಬಹಳ ಹೊತ್ತು ಕೂರಲಾರ. ಕೆಲವೊಮ್ಮೆ ಮಾತ್ರ ಒಂಡೆಡೆಗೇ ಬಹಳ ಹೊತ್ತು ಕೂತುಬಿಡುತ್ತಿದ್ದ. ಊಟ ಸಿಕ್ಕಿದರೆ ಮೂರುದಿನಕ್ಕಾಗುವಷ್ಟನ್ನು ಒಮ್ಮೆಲೇ ತಿನ್ನುವ ಪರಿಪಾಠ! ಆಮೇಲೆ ಕೆಲವೊಮ್ಮೆ ದಿನಗಟ್ಟಲೇ ಉಪವಾಸ! ಆಗಾಗ ನಮ್ಮನೆಯ ಅಂಗಳದಲ್ಲಿ ಕಟ್ಟೆಯಮೇಲೆ ಠಿಕಾಣಿ. " ಗಣಪಾ, ಸ್ವಲ್ಪ ಆ ಕೆಲಸ ಇತ್ತಲ " ಎಂದು ಹಿರಿಯರು ಹೇಳಿದರೆ ಸಾಕು-ಆಸಾಮಿ ನಾಪತ್ತೆ! ಬಹಳ ಮಾರ್ಯಾದೆಯ ಮನುಷ್ಯ ಬೇರೆ. ಸಂಕೋಚವೂ ಕೂಡ ಇತ್ತು. ಆದರೂ ತಾಳಲಾರದ ಹಸಿವೆ ಮಾತ್ರ ಆತನನ್ನು ಹಲವರ ಮನೆಗಳಿಗೆ ಆಗಾಗ ಭೇಟಿಕೊಡುವ ಹಾಗೇ ಮಾಡುತ್ತಿತ್ತು. ಪಂಚೆ ಉಟ್ಟು ಅಂಗಿ ಧರಿಸಿ ಹೊರಟ ಗಣಪನಿಗೆ ಎಲ್ಲಿ ಸ್ನಾನವೋ, ಎಲ್ಲಿ ನಿದ್ದೆಯೋ ಒಂದೂ ಗೊತ್ತಿಲ್ಲ. ಮನೆಯಲ್ಲಿ ಹೆಂಡತಿ-ಮಕ್ಕಳು ನೋಡುವಷ್ಟು ನೋಡಿ ಹೇಳಿ-ಕೇಳಿ ಮಾಡಿ ಸಾಕಾಗಿ ಕೈತೊಳೆದುಕೊಂಡಿದ್ದರು.


ಚೀನ್ಕೋಡ ಆಚಾರಿ

ಅಡಿಕೆ ಹಾಳೆ ಮತ್ತು ಕತ್ತಿಯೊಂದಿಗೆ ಬರುತ್ತಿದ್ದ ಈ ಆಸಾಮಿ ಒಂದುಕಾಲದಲ್ಲಿ ಒಳ್ಳೆಯ ಬಡಿಗ-ಆಚಾರಿ[ಮರಗೆಲಸದವ] ಯಾವ ಘಳಿಗೆಯ ತಪ್ಪೋ ಇದ್ದಕ್ಕಿದ್ದಲ್ಲೇ ಚೀನ್ಕೋಡ್ ಆಚಾರಿ ನಗಲು ಆರಂಭಿಸಿದ. ಆತ ಯಾರನ್ನು ಕಂಡರೂ ಏನನ್ನು ಕಂಡರೂ ನಗುತ್ತಲೇ ಉಳಿದ. ಒಂದು ಕೈಲಿ ಅಡಿಕೆ ಹಾಳೆ ಇನ್ನೊಂದರಲ್ಲಿ ಕತ್ತಿ ! ಆಗಾಗ ಬರುತ್ತಿದ್ದ ಈತನನ್ನು ಕಂಡು ನಾವೆಲ್ಲಾ ಮಕ್ಕಳು ಹೆದರಿಕೊಳ್ಳುತ್ತಿದ್ದೆವು. ಆದರೆ ಆತ ನಿರುಪದ್ರವಿಯಾಗಿದ್ದ.


ಮಕ್ ಶೀತಸ ?

ಈತನ ಹೆಸರು ಗೊತ್ತೇಇಲ್ಲ. ಆದರೆ ಕೊಂಕಣಿ ಭಾಷೆಯಲ್ಲಿ ಮಾತನಾಡುತ್ತಿದ್ದ ಈತನಿಗೆ ಆತ ಪದೇ ಪದೇ ಬಳಸುತ್ತಿದ್ದ " ಮಕ್ ಶೀತಸ " ಎಂತಲೇ ಕರೆಯುತ್ತಿದ್ದರು. ಮಕ್ ಶೀತಸ " ನಂಗೆ ಅನ್ನ ಉಂಟಾ ? " ಎಂದರ್ಥವಂತೆ. ನಾವೆಲ್ಲಾ ತೀರಾ ಚಿಕ್ಕವರಾಗಿದ್ದು ಏನಾದರೂ ತರಲೆಮಾಡಿದರೆ ಅಮ್ಮ " ನಿನ್ನ ಮಕ್ ಶೀತಸಂಗೆ ಕೊಟ್ಟು ಬಿಡ್ತೇನೆ ನೋಡು " ಎನ್ನುತ್ತಿದ್ದರು. ಚಡ್ಡಿ-ಅಂಗಿ ಹಾಕಿಕೊಂಡು ಓಡಾಡುತ್ತಿದ್ದ ಆತ ಸತ್ಯನಾರಾಯಣ ಪೂಜೆ ಹಾಡು ಹೇಳು ಎಂದರೆ " ಸತ್ಯನಾರಾಯಣ ಕಾಜಾಯತಮ್ " ಎನ್ನುತ್ತಾ ಒಂದು ವಿಧದ ನರ್ತನ ಮಾಡುತ್ತಿದ್ದ. " ಅಣ್ಣಪ್ಪ ಗಾಡಸ ? " ಎನ್ನುವುದು ಆತನಾಡುತ್ತಿದ್ದ ಇನ್ನೊಂದು ಮಾತು. ಆತ ಎತ್ತಿನಗಾಡಿಯೊಂದನ್ನು ನಡೆಸುತ್ತಿದ್ದು ಅದನ್ನು ಯಾರೋ ಅಣ್ಣಪ್ಪ ತೆಗೆದುಕೊಂಡು ಹೋದನೆಂತಲೂ ಅದನ್ನು ಈತ ಸತತ ಹಾಗೆ ಹೇಳುತ್ತಿದ್ದನೆಂತಲೂ ಜನ ಅಂದುಕೊಳ್ಳುತ್ತಿದ್ದರು.


ಪೈ ಮಾಮ್

ವಿದ್ಯಾವಂತ ಮತ್ತು ಬುದ್ಧಿವಂತನಾದ ಪೈ ಎನ್ನುವ ವ್ಯಕ್ತಿ ಹರುಕು ಪ್ಯಾಂಟ್ ಮತ್ತು ಶರ್ಟ್ ಧರಿಸಿ ಬರುತ್ತಿದ್ದ. ಆತನಿಗೆ ಗೊತ್ತಿಲ್ಲದ ಕೃಷಿಕೆಲಸಗಳಿರಲಿಲ್ಲ. ಮನೆಯಲ್ಲಿ ಅಣ್ಣ-ತಮ್ಮಂದಿರ ನಡುವೆ ಯಾವುದೋ ಜಗಳವಾಗಿತ್ತೋ ಏನೋ! ಪಾಪ ಒಳ್ಳೆಯ ಮನುಷ್ಯನಾಗಿದ್ದ. ಬಂದರೆ ತುಸುಹೊತ್ತು ನಿಲ್ಲುವುದು ಏನಾದ್ರೂ ಕೊಟ್ಟರೆ ತಿನ್ನುವುದು ಮಾಡುತ್ತಿದ್ದ. ಆತನ ಎದುರು ಯಾರಾದರೂ ಕೆಲಸಮಾಡುತ್ತಿದ್ದರೆ ಆ ಕೆಲಸವನ್ನು ಹೇಗೆ ಚೆನ್ನಾಗಿ ಮಾಡಬಹುದು, ಹೇಗೆ ಬೇಗಮಾಡಬಹುದು ಎಂಬುದೆಲ್ಲವನ್ನೂ ಹೇಳಬಲ್ಲ ಬುದ್ಧಿವಂತ. ಆದರೆ ಮನಸ್ಸು ಯಾಕೋ ಮನೆಯ ವಾತಾವರಣದಿಂದ ವಿರಕ್ತವಾಗಿ ಈ ಸ್ಥಿತಿಯಾಗಿತ್ತು.


ಕುಲ್ಲೇಗದ್ದೆ ಮೊನ್ನ

ಕುಲ್ಲೇಗದ್ದೆ ಎಂಬುದೊಂದು ಚಿಕ್ಕ ಮಜರೆ. ಅಲ್ಲಿನ ಹವ್ಯಕ ಬ್ರಾಹ್ಮಣ ಆ ಮೊನ್ನ[ಮೂಕ]. ಆತನಿಗೆ ಮಾತು ಬರುತ್ತಿತ್ತು, ಆದರೂ ಮಾತನಾಡದ ಸ್ಥಿತಿ ತಲುಪಿದ್ದ! ಹತ್ತಾರು ಎಕರೆ ತೋಟವಿದ್ದ ಆತ ತೆಂಗಿನಕಾಯಿ ಕೀಳುವಾಗ ತೋಟದ ಬದುವಿನಲ್ಲಿ ಮೇಯುತ್ತಿದ್ದ ಆಕಳ ತಲೆಯಮೇಲೆ ಕಾಯಿ ಉದುರಿಬಿದ್ದ ಏಟಿನಿಂದ ಆಕಳು ಸ್ಥಳದಲ್ಲೇ ಸತ್ತುಹೋಯಿತಂತೆ. ಅಂದಿನಿಂದ ಆತ ಮನೆಯನ್ನು ಬಿಟ್ಟ. ಊರಿಂದೂರಿಗೆ ಪಯಣ. ದಾರಿಯಲ್ಲಿ ಯಾರಾದರೂ ತಿಂಡಿ ಏನಾದರೂ ಕೊಟ್ಟರೆ ಅವುಗಳನ್ನೆಲ್ಲಾ ಪಂಚೆಯಲ್ಲಿ ಕಟ್ಟುತ್ತಾ ಸಾಯಂಕಾಲವಾಗುವ ಹೊತ್ತಿಗೆ ಎಲ್ಲಾದರೂ ಸಿಗುವ ಒಂದು ಆಕಳಿಗೆ ಆ ಗಂಟನ್ನು ಬಿಚ್ಚಿ ತಿನ್ನಲು ಕೊಟ್ಟು ಕೈಮುಗಿಯುವುದು ಅಭ್ಯಾಸವಾಯಿತಂತೆ. ಚಿಕ್ಕ ಪಂಚೆ ಉಟ್ಟು ಬರುತ್ತಿದ್ದ. ಮೈಗೊಂದು ಕಸೆ ಅಂಗಿ ಕೆಲವೊಮ್ಮೆ ಇದ್ದರೂ ಹಲವೊಮ್ಮೆ ಇರುತ್ತಿರಲಿಲ್ಲ. ದನವನ್ನು ತನ್ನ ಕೈಯ್ಯಾರೆ ಸಾಯಿಸಿಬಿಟ್ಟೆನಲ್ಲಾ ಎಂಬ ಪಶ್ಚಾತಾಪದಿಂದ ನಂತರದ ಇಡೀ ಜೀವನವನ್ನು ಹೀಗೆಯೇ ಕಳೆದ. ನಮಗೆಲ್ಲಾ ನೋಡಿ ಪರಿಚಯವಾಗಿದ್ದರಿಂದ ಸಣ್ಣಗೆ ನಗುತ್ತಿದ್ದ. ನಮಗೆ ಅರ್ಥವಾಗದಿದ್ದರೆ ಸನ್ನೆ ಮಾಡುತ್ತಾ ಚಿಕ್ಕದಾಗಿ "ಆಕಳಿಗೆ ಏನಾದರೂ ಕೊಡು" ಎನ್ನುತ್ತಿದ್ದ. ಹಾಗಂತ ಯಾರಲ್ಲಿಯೂ ತಿಂಡಿ-ಊಟಕ್ಕೆ ನಿಲ್ಲುತ್ತಿರಲಿಲ್ಲ.

ಹೀಗೇ ಜೀವನವೇ ಒಂದು ವಿಚಿತ್ರ. ಇಲ್ಲಿ ಒಬ್ಬೊಬ್ಬರದೂ ಒಂದೊಂದು ಕಥೆ! ಬದುಕಿನ ಯಾವುದೋ ಘಟನೆ, ಯಾವುದೋ ಘಳಿಗೆ ಜೀವನವನ್ನೇ ಬದಲಾಯಿಸಿಬಿಡಬಹುದು. ಹೇಗೋ ಇದ್ದವರು ಇನ್ನ್ಹೇಗೋ ಆಗಿಬಿಡುವುದು ಇಲ್ಲಿನ ವಿಲಕ್ಷಣ ಸಂಗತಿ. ಇಂತಹ ಕೆಲವು ವ್ಯಕ್ತಿಗಳನ್ನು ಅವರ ಮನೆಯ ಜನರೆಲ್ಲಾ ಸೇರಿ ಸರಿಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಅವರು ಮಾತ್ರ ಬದಲಾಗುವುದೇ ಇಲ್ಲ. ಯಾವುದೋ ಶಕ್ತಿ ಅವರನ್ನು ಅವಿರತವಾಗಿ ತನ್ನ ಐಹಿಕಮೂಲವನ್ನೇ ಮರೆತು ಅಲೆದಾಡುವ, ಕೇಳಿಪಡೆಯುವ, ಯಾರೋ ಕೊಟ್ಟರೆ ತಿನ್ನುವ ಅಥವಾ ಉಪವಾಸವಿರುವ ಇಂತಹ ಮಾರ್ಗಕ್ಕೆ ಹಚ್ಚುವುದನ್ನು ಕಂಡಾಗ ಅಂತಹ ಜನರು ಪಡೆದುಬಂದ ಭ್ಯಾಗಯ ಅದೇಯೇನೋ ಎಂಬ ಅನಿಸಿಕೆ ಬರುತ್ತದೆ. ಇದನ್ನೆಲ್ಲಾ ಕಾಣುವಾಗ ಅತಿ ಸಹಜವಾಗಿ ನಮಗೂ ಮೀರಿದ ಶಕ್ತಿಯೊಂದು ಇದೆ ಅನಿಸುವುದಿಲ್ಲವೇ?

ಸಮಾಜದಲ್ಲಿ ಸಿರಿವಂತರೆಂದು ಹಮ್ಮುಬಿಮ್ಮಿನಿಂದ ಮೆರೆಯುವ ಅನೇಕರ ಮನೆಗಳಲ್ಲಿ ಬುದ್ಧಿಮಾಂದ್ಯ ಮಕ್ಕಳು, ಮೂರ್ಛಾರೋಗ ಪೀಡಿತಮಕ್ಕಳು ಹುಟ್ಟುತ್ತಾರೆ ಅಥವಾ ಅನೇಕಕಡೆ ಹುಟ್ಟಿದಾಗ ಸರಿಯಿದ್ದು ಆಮೇಲೆ ಕಾರಣಾಂತರಗಳಿಂದ ಮೂಕರಾಗುವುದು, ಕಿವುಡರಾಗುವುದು, ಕುರುಡರಾಗುವುದು, ಪಾರ್ಕಿನ್ಸನ್ ನಿಂದ ಬಳಲುವುದು ಮುಂತಾದ ಹಲವು ಸಂಗತಿಗಳನ್ನು ಕಾಣಬಹುದಲ್ಲ ಇವೆಲ್ಲಾ ಕೇವಲ ಮನುಷ್ಯನ ಕೈಮೀರಿ ನಡೆಯುವಂತಹ ಕ್ರಿಯೆಗಳಲ್ಲವೇ ? ಆಗಾಗ ಬರಿದೇ ಚಿಂತಿಸಿದಾಗ ಮತ್ತೆ ಮತ್ತೆ ಅನಿಸುವುದು ಇದಕ್ಕೆಲ್ಲಾ ಕಾರಣಗಳೇ ಬೇಕಿಲ್ಲ. ನಿಸರ್ಗವೇ ಎಲ್ಲವನ್ನೂ ನಿಯಂತ್ರಿಸುವುದಾದರೆ ನಮ್ಮ ಕಾಡುಗಳ್ಳರನ್ನೂ ಗಣಿಧಣಿಗಳ ಅಟಾಟೋಪವನ್ನೂ ತಹಬಂದಿಗೆ ತರಲು ಇನ್ನೆಷ್ಟು ಸಮಯ ಕಾಯಬೇಕೋ ಗೊತ್ತಿಲ್ಲ. ಪ್ರಾಯಶಃ ಅವರ ಹಿಂದಿನ ಜನ್ಮದ ’ಬ್ಯಾಂಕ್ ಬ್ಯಾಲೆನ್ಸ್’ ನಲ್ಲಿ ಪುಣ್ಯದ ಅವಶೇಷ ಜಾಸ್ತಿ ಇದ್ದಿರಬೇಕು-ಅದು ಖಾಲಿಯಾಗುವವರೆಗೂ ಅವರು ಮೆರೆಯುತ್ತಲೇ ಇರುತ್ತಾರೆ.

Monday, January 10, 2011

ಅಸಮತೋಲನ


ಅಸಮತೋಲನ

ಹೃದಯ ದೀವಿಗೆಯುರಿದು ಭಾವಗಳು ಸಂಗಮಿಸಿ
ಉದಯವಾಗಲಿ ಜಗದ ಗುಡಿಯು ನೂತನದಿ
ಅದಕಾಗಿ ಜನರೆಲ್ಲ ವಿಶ್ವ ಬಾಂಧವ್ಯದೊಳು
ಹದಮಾಡಿ ಮನಗಳನು ಮುದಗೊಳಿಸುತಿರಲಿ

ವಿಸ್ತರದ ಈ ಜಗಕೆ ಬಾಗಿಲುಗಳೆಲ್ಲಿಹವು ?
ಹೊಸ್ತಿಲದು ಕಾಣಿಸದು ತಿರುಗೆತ್ತ ನೋಡೆ
ವಾಸ್ತವವ ಅರಿತಾಗ ನಾವೆಷ್ಟು ಚಿಕ್ಕವರು !
ಶಿಸ್ತಾಗಿ ಸಹಜೀವನವ ಬಾಳಬೇಕು

ಆರ್ಯಾವರ್ತದ ನಡುವೆ ಹಾರುವಾ ಪಕ್ಷಿಗಳು
ಸೂರ್ಯನುದಿಸುವ ವೇಳೆ ವಲಸೆ ತೆರಳುವವು
ಕಾರ್ಯಮುಗಿದಾವೇಳೆ ಮರಳಿ ತವರಿಗೆ ಬಂದು
ಪರ್ಯಾಯ ಸಂದೇಶ ನಮಗೆ ನೀಡುವವು !

ಗಡಿಗಳಾ ಮಿತಿಯಿರದೇ ಕಾಡೊಳಗೆ ಸಂಚರಿಸಿ
ಸಡಗರದಿ ಆಹಾರ ಭುಂಜಿಪ ಮೃಗಗಳು
ಉಡುಗೊರೆಯ ನೀಡುವವು ಸುಂದರ ದೃಶ್ಯಗಳ
ಗಿಡಮರಗಳಂಚಿನಲಿ ನಿಂತು ನಲಿಯುತಲಿ

ಯಾವುದೇ ಪಶುಪಕ್ಷಿ ಈ ನಿಸರ್ಗದ ನಡುವೆ
ತಾವಾಯ್ತು ತಮ್ಮ ಕೆಲಸಗಳಾಯ್ತೆಂದು ತಿಳಿದು
ಆವ ಸಂಪತ್ತನೂ ಲೂಟಿಮಾಡದೇ ಉಳಿದು
ನಾವು ಮಾಡುವ ಹಾನಿ ನೋಡಿ ಮಿಡಿಯುವವು

ಹಸಿರು ಕಾನನ ಬೇಕು ಶುದ್ಧ ಜಲವದುಬೇಕು
ಉಸಿರಾಡುವೊಲು ನಮಗೆ ನಿರ್ಮಲದ ಗಾಳಿ
ಬಸಿದುಕೊಳ್ಳುವ ಬದಲು ದೋಚಿಬದುಕುವ ನಾವು
ಹೆಸರಿಗೂ ಇರದಂತೆ ಮಾಡುವೆವು ದಾಳಿ !

Sunday, January 9, 2011

ವೇದ ದೀವಿಗೆ


ವೇದ ದೀವಿಗೆ

ಸೇರು ಸಜ್ಜನರನ್ನು ದೂರಗಳ ಮಿತಿಯಿರದೇ
ಸಾರು ಅವರಿರುವೆಡೆಗೆ ದಾರಿ ಹುಡುಕುತಲಿ
ನಾರು ಹೂವಿನ ಜೊತೆಗೆ ದೇವಮುಡಿಗೈದಂತೆ
ಏರು ಆ ಎತ್ತರಕೆ | ಜಗದಮಿತ್ರ

ಯಾರಿಗೂ ಕಮ್ಮಿಯೇಂ ಎಂಬ ಭಾವವು ಬೇಡ
ದಾರಿಹೋಕರು ನಾವು ತಿಳಿಮೊದಲು ಅದನು
ಹೀರುತ್ತ ಈ ಜಗದ ಅಪವಿತ್ರ ಬಳುವಳಿಯ
ಜಾರುವುದು ತರವಲ್ಲ | ಜಗದಮಿತ್ರ

ಹೇರಿ ನಡೆವುದು ಕತ್ತೆ ಭಾರವನು ದೂರದೆಡೆ
ಯಾರದೋ ವಸ್ತುಗಳು ಅದಕೆ ಅರಿವಿರದೇ
ಊರೂರು ಸುತ್ತುವುದು ಭಾರೀ ಪೆಟ್ಟಿಗೆ ಹೆದರಿ
ಕೇರಿ ಬೇಕಾದ್ದು ಪಡೆ | ಜಗದಮಿತ್ರ

ಸೂರು ಸಂತತಿ ಸಂಪದಭಿವೃದ್ಧಿಯಲಿ ತೊಡಗಿ
ತೇರೆತ್ತರದ ಬಯಕೆ ರಾಶಿಗಳ ನಡುವೆ
ಮೀರುತ್ತ ಕರ್ತವ್ಯ ಮಿತಿಯ ಸ್ವಾರ್ಥಕ್ಕಾಗಿ
ತೂರಿ ಪುನರಪಿ ಬರುವೆ | ಜಗದಮಿತ್ರ

ಯಾರೂ ಹೇಳುವುದಿಲ್ಲ ಬೇರೇ ಮಾರ್ಗವದಿಲ್ಲ
ಪಾರಾಗಲದುವೊಂದೇ ಜ್ಞಾನದ್ಹಾಯ್ದೋಣಿ
ಬೇರು ಎಲ್ಲಿಹುದೆಂದು ಹುಡುಕುತ್ತ ಮುನ್ನಡೆದು
ಭೂರಿ ಆನಂದ ಪಡೆ | ಜಗದಮಿತ್ರ

ಹಾರಿಹೋಗುವ ಮೊದಲು ಅರಿಯುತ್ತ ವೇದಗಳ
ದಾರಿದೀವಿಗೆಯಾಗಿ ಬಳಸು ತತ್ವಗಳ
ಖಾರ-ಉಪ್ಪುಗಳತಿಯ ಹಿಂಸೆಯಿರುವಶನಗಳ
ದೂರವಿಡು ತಿನ್ನದಲೇ | ಜಗದಮಿತ್ರ

ವಾರವಾರಕು ನವ್ಯ ವರುಷವರುಷಕು ದಿವ್ಯ
ಯಾರೋ ಕವಿ-ಸಾಹಿತಿಯ ಸೃಷ್ಟಿಯಂತಲ್ಲ
ನೂರಾರು ಯುಗಗಳನು ದಾಟುತ್ತ ನಡೆತಂದು
ಸೋರಿಕರಗದು ವೇದ | ಜಗದಮಿತ್ರ

Saturday, January 8, 2011

”ವೇದಸುಧೆ’ಯ ವಾರ್ಷಿಕೋತ್ಸವ

’ವೇದಸುಧೆ’ಯ ವಾರ್ಷಿಕೋತ್ಸವ

ಸಹೃದಯರೇ,

ನಮ್ಮ ನಿಮ್ಮೆಲ್ಲರ ಪ್ರೀತಿಯ ವೇದಿಕೆ ’ವೇದಸುಧೆ’ ---ಜಾತಿ,ಮತ,ಪಂಥ,ಜನಾಂಗವನ್ನೆಲ್ಲಾ ಮೀರಿನಿಂತ ಜ್ಞಾನದಾಹೀ ಬಳಗ. ವೇದಸುಧೆ ಎಂದರೆ ಕೇವಲ ಮಡಿಯುಟ್ಟವರ ತಾಣ ಎಂಬ ಪರಿಕಲ್ಪನೆ ಹೊರಗೋಡಿಸಿ ತಮ್ಮೆಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಬಯಸುತ್ತೇವೆ. ವೇದ ಎಂದರೆ ಜ್ಞಾನವೇ ಹೊರತು ಮತ್ತೇನೋ ಅರಗಿಸಲಾರದ ಕಬ್ಬಿಣದ ಕಡಲೇಕಾಳಲ್ಲ. ಹಿರಿಯರಾದ ಶತಾಯುಷಿ ಪಂಡಿತ್ ಸುಧಾಕರ ಚತುರ್ವೇದಿಯವರು ಬಯಸಿ, ವೇದಮೂರ್ತಿ ಸುಧಾಕರ ಶರ್ಮಾರವರು ಅನುಮೋದಿಸಿ, ಅಭಿಯಂತರರೂ ಮಿತ್ರರೂ ಆದ ಹರಿಹರಪುರ ಶ್ರೀಧರ್ ರವರು ತಮ್ಮ ನಿತ್ಯಬೆಳಕುನೀಡುವ ವೃತ್ತಿಯೊಂದಿಗೆ ಸೇವೆಗಾಗಿ ಈ ಒಂದು ಬಳಗವನ್ನು ರೂಪಿಸಿದರು. ದೈವೀಪ್ರೇರಣೆಯೋ ನಿಸರ್ಗದ ಇಚ್ಛೆಯೋ ಎಲ್ಲೆಲ್ಲೋ ಇದ್ದ ನಾವುಗಳನೇಕರು ’ವೇದಸುಧೆ ಬಳಗ’ವಾಗಿ ಬೆಳೆಯುತ್ತಿದ್ದೇವೆ. ಯಾವುದೇ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೇ ಕೇವಲ ಎಲ್ಲರ ಒಳಿತಿಗಾಗಿ ಒಂದಷ್ಟು ಜ್ಞಾನವನ್ನು ಹಂಚುವ ಸಲುವಾಗಿ ’ವೇದಸುಧೆ’ ಒಂದುವರ್ಷದಿಂದ ಶ್ರಮಿಸುತ್ತಿದೆ.

ಹಿಂದೂ ತಮ್ಮನ್ನೆಲ್ಲಾ ಆಗಾಗ "ವೇದಸುಧೆಗೆ ಬನ್ನಿ" ಎಂದು ಕರೆದಿದ್ದೇನೆ. ಈಗ ವೇದಸುಧೆ ವರ್ಷದ ಕೂಸು. ನಿಧಾನಕ್ಕೆ ಅಂಬೆಗಾಲಿಕ್ಕುತ್ತಿದೆ. ಈ ಕೂಸಿನ ಬೆಳವಣಿಗೆಯ ಜೊತೆಜೊತೆಗೆ ನಮ್ಮೆಲ್ಲರ ಮಾನಸಿಕ ವಿಕಸನ ಸಾಧ್ಯ ಎಂಬುದು ಹಲವು ಓದುಗರ ಅಭಿಪ್ರಾಯ. ಇಲ್ಲಿ ವೇದ ಮಂತ್ರಗಳನ್ನಷ್ಟೇ ಅಲ್ಲದೇ ಹಲವು ಜ್ಞಾನಪೂರಿತ ಕವನಗಳು, ಮುಕ್ತಕಗಳು, ಸ್ವಾರಸ್ಯಕರ ಘಟನೆಗಳು, ಧ್ವನಿಮುದ್ರಿತ ಹಾಡುಗಳು, ಪ್ರವಚನಗಳು ಇತ್ಯಾದಿ ಹಲವು ಹತ್ತು ಕೃತಿಗಳನ್ನು ತಾವು ಕಾಣಬಹುದಾಗಿದೆ. ನಮ್ಮ ನಿಮ್ಮೆಲ್ಲರ ವೇದಸುಧೆಗೆ ವರ್ಷ ತುಂಬಿದ ಹರ್ಷವನ್ನು ಹಂಚಿಕೊಳ್ಳಲು 'ವೇದಸುಧೆ ಬಳಗ' ಹಾಗೂ ಹಾಸನದ 'ಮನೆಮನೆ ಕವಿಗೋಷ್ಠಿ'ಯ ಸದಸ್ಯರಿಂದ ಇದೇ ಜನವರಿ ೩೦ ರಂದು ಭಾನುವಾರ ಹಾಸನದ ಶ್ರೀಶಂಕರಮಠದ ಸಭಾಭವನದಲ್ಲಿ ದಿನಪೂರ್ತಿಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜ್ಞಾನದಾಯೀ ಕಾರ್ಯಕ್ರಮಗಳ ಜೊತೆಗೆ ಮನೋರಂಜಕ ಗೀತಗಾಯನಗಳು, ಗೋಷ್ಠಿಗಳು ನಡೆಯುತ್ತವೆ. ವೇದಸುಧೆ ಬಳಗದ ಸದಸ್ಯಮಿತ್ರರಾದ ಕವಿನಾಗರಾಜರ ಪುಸ್ತಕ ಹಾಗೂ ಇನ್ನಿತರ ಒಂದೆರಡು ಪುಸ್ತಕಗಳ ಬಿಡುಗಡೆಯೂ ಇದೆ.

ಹಾಸನದ ಜನರ ಉತ್ತಮ ಮನೋಭೂಮಿಕೆ ಹೇಗಿದೆಯೆಂಬುದು ಅಲ್ಲಿಗೆ ನೇರವಾಗಿ ಹೋಗಿ ನೋಡಿವದರಿಗೆ ಮಾತ್ರ ಗೊತ್ತಾಗುವ ವಿಷಯ. ಸಜ್ಜನರನೇಕರು ಸೇರಿರುವ ಹಾಸನದ ಕೇಂದ್ರ ಭೂಮಿಕೆಗೆ ಬೆಂಗಳೂರೂ ಸೇರಿದಂತೇ ರಾಜ್ಯದ/ದೇಶದ/ವಿಶ್ವದ ಎಲ್ಲಾ ಕಡೆಯ ಜನರನ್ನು ಆಹ್ವಾನಿಸುತ್ತಿದ್ದೇವೆ. ವಿವರಗಳನ್ನು ಈ ಕೆಳಗೆ ಲಗತ್ತಿಸಿದ ಆಹ್ವಾನ ಪತ್ರಿಕೆಯಲ್ಲಿ ನೋಡಿ.




http://vedasudhe.blogspot.com/

ಮತ್ತಷ್ಟು ವಿವರಗಳಿಗೆ ಭೇಟಿಕೊಡಿ :
http://vedasudhe.blogspot.com/2011/01/normal-0-false-false-false-en-us-x-none.html
ಬರಲಿಚ್ಛಿಸುವವರು ತಮ್ಮ ವಿವರಗಳನ್ನು ವೇದಸುಧೆಗೆ [ ಮಿಂಚಂಚೆಯ] vedasudhe@gmail.com ಮೂಲಕ ಕಳುಹಿಸಿದರೆ ವ್ಯವಸ್ಥೆಗೆ ಅನುಕೂಲವಾಗುತ್ತದೆ.

ತಮಗೆಲ್ಲಾ
ಆದರದ ಸ್ವಾಗತ. ಬನ್ನಿ ವೇದಸುಧೆಗೆ ಕೈಜೋಡಿಸೋಣ, ಇದು ವೇದದ ಪ್ರಚಾರಕ್ಕಾಗಿಯಲ್ಲ-ಬದಲಾಗಿ ನಮ್ಮ ಒಳಿತಿಗಾಗಿ ವೇದವನ್ನು ತಿಳಿಯುವ ಸಲುವಾಗಿ. ತಮ್ಮೆಲ್ಲರ ಉಪಸ್ಥಿತಿಯನ್ನು ಅಪೇಕ್ಷಿಸಿ ಈ ಆಮಂತ್ರಣ, ನಮಸ್ಕಾರ.


Thursday, January 6, 2011

"ಒಂಬಲತಿ ಬರುತ್ತಾಳೆ ಕವಳಾ ಕೊಡು ಎನ್ನುತ್ತಾಳೆ !"

ಚಿತ್ರಗಳ ಕೃಪೆ : ಅಂತರ್ಜಾಲ

"ಒಂಬಲತಿ ಬರುತ್ತಾಳೆ ಕವಳಾ ಕೊಡು ಎನ್ನುತ್ತಾಳೆ !"

[ಪ್ರೇತಾತ್ಮಗಳ ಇರುವಿಕೆಯನ್ನು ವಿಜ್ಞಾನ ಒಪ್ಪುತ್ತದೆ ಆದರೆ ಅವುಗಳ ರೂಪವನ್ನಾಗಲೀ ಆಕೃತಿಯನ್ನಾಗಲೀ ಹೀಗೇ ಅಂತ ಯಾರೂ ಬಣ್ಣಿಸಲಾರರು, ಇದೊಂದು ಮೂರನೆಯ ಆಯಾಮವನ್ನು ಮಕ್ಕಳು ಅನುಭವಿಸುವ ಲೇಖನ]

ಓದುಗಾಯಾಂ ಪ್ರತಿಬೋಧಿತಾಂ ಲೇಖಕಾಂ ವಿ.ಆರ್.ಭಟ್ಟೇನ ಸ್ವಯಂ
ಸ್ವಾನಂದಂ ಮಿಶ್ರಿತಾಂ ಹಲವೆಡೆ ಲಘುಹಾಸ್ಯದಿಂ ಪೂರಿತಾಂ |
ಭಯಕೃದ್ಭಯನಾಶಿನೀಂ ಲೇಖನಂ ಏಕಾಧ್ಯಾಯದಿ ವಿರಚಿತಾಂ
ಅನುಕಂಪ
ಜನಕಂ ಇಹದೊಳು ನಿಶಾಸಮಯ ದ್ವೇಷಿಣಂ||
[ತಮಾಷೆಗೆ ಬರೆದ ಮೇಲಿನ ಶ್ಲೋಕಕ್ಕೆ ವ್ಯಾಕರಣ-ಛಂದಸ್ಸು,ಭಾಷಾಲಂಕಾರಗಳನ್ನು ಪರಿಗಣಿಸಬೇಡಿ]

ಮಕ್ಕಳ ಜಗತ್ತೇ ಬೇರೆ. ಆವರ ಆಟ-ಪಾಟಗಳ ವೈಖರಿ ಎಂಥವರಿಗೂ ಮುದನೀಡುವಂಥದ್ದು. ಯಾರಮೇಲೇ ಕೋಪವೋ ತಾಪವೋ ಪರಿತಾಪವೋ ಇದ್ದರೂ ಮಕ್ಕಳನ್ನು ನೋಡಿದಾಗ ಅದೆಲ್ಲಾ ಮರೆತುಹೋಗುತ್ತದೆ! ಅದಕ್ಕೇ ಇರಬೇಕು ಮಕ್ಕಳ ಆ ಜೀವನದ ಮಜಲುಗಳನ್ನು, ಬಾಲ್ಯವನ್ನು ಜೀವಮಾನಪೂರ್ತಿ ಇರಗೊಡುವುದಿಲ್ಲ ಸೃಷ್ಟಿ. ಒಂದೊಮ್ಮೆ ಎಲ್ಲರೂ ಮಕ್ಕಳ ಥರಾ ಇದ್ದಿದ್ದರೆ ಕಡಿದುಹೋದ ಸಂಬಂಧಗಳು ಮತ್ತೆ ಬೆಸೆಯುತ್ತಿದ್ದವೇನೋ. ಮಣ್ಣು ಮರಳು ನೀರು ಬಣ್ಣ ಪೆನ್ಸಿಲ್ ಕಾಗದ ಕಡ್ಡಿ ಏನೇ ಸಿಕ್ಕರೂ ಸಿಕ್ಕಿದವಸ್ತುವಿಗೆ ತಕ್ಕಹಾಗೇ ಆಟ ಆರಂಭವಾಗುತ್ತದೆ. ಮಕ್ಕಳು ಇಲ್ಲದಿದ್ದರೆ ಗಿಜಿಗುಡುವ ಈ ಜಗವೆಲ್ಲಾ ಹಕ್ಕಿಗಳಿಲ್ಲದ ಜಾಗದಂತೇ ಆಗುತ್ತಿತ್ತೇನೋ.

ನಾವೆಲ್ಲಾ ಚಿಕ್ಕವರಿರುವಾಗ ಸಾಯಂಕಾಲವಾದರೆ ಸಾಕು ನಮಗೆ ಕತ್ತಲೆ ಇರುವೆಡೆ ಹೋಗಲು ಹೆದರಿಕೆ, ಒಂಥರಾ ಪುಕು ಪುಕು ನಡುಕ, ಬರೀ ಪುಕ್ಕಲುತನ. ಕೆಲವೊಮ್ಮೆ ಒಬ್ಬರೇ ಇರಬೇಕಾದ ಜಾಗದಲ್ಲಿ ಕುಂತಲ್ಲೇ ಚಳಿಮಳೆಗಾಲವನ್ನೂ ಲೆಕ್ಕಿಸದೇ ಇಳಿಯುವ ಬೆವರು! ಮಕ್ಕಳಿಗೆ ದೊಡ್ಡವರಿಗಿಂತಾ ಹೆದರಿಕೆ ತುಂಬಾ ಜಾಸ್ತಿ ಇರುತ್ತದೆ ಎಂಬುದನ್ನು ವಿಜ್ಞಾನವೂ ಒಪ್ಪಿಕೊಂಡಿದೆ. ನಮ್ಮಲ್ಲಿ ನಾವೆಲ್ಲಾ ಚಿಕ್ಕವರಿರುವಾಗ ಶಾಲೆಗೆ ಹೋಗಿ ಬರುವಾಗೆಲ್ಲಾ ಯಾವುದಾದರೊಂದು ಕಥೆಗಳು ಸುದ್ದಿಗಳು ನಮ್ಮೊಳಗೆ ಹರಿದಾಡುತ್ತಲೇ ಇರುತ್ತಿದ್ದವು. ಕಾಗೆ ಎಂಜಲು ಮಾಡಿದ ಹುಳಿಸೇಬೀಜ, ಮಾವಿನಮಿಡಿ, ಇತ್ಯೇತ್ಯಾದಿಗಳಿಂದ ಹಿಡಿದು ಹಬ್ಬದ ಸಾಲಿನ ತಿಂಡಿಗಳಾದ ಚಕ್ಕುಲಿ, ಉಂಡೆ ಮುಂತಾದುವುಗಳನ್ನು ಹಂಚಿಕೊಂಡು ಅದೂ ಇದೂ ಮಾತನಾಡುತ್ತಾ ಹಳ್ಳಿಯ ಕಾಲು ಹಾದಿಗಳಲ್ಲಿ ಅಡ್ಡಾ ದಿಡ್ಡೀ ಓಲಾಡುತ್ತಾ ಸಾಗುವ ನಮ್ಮ ವೈಖರಿಯೇ ಬಹಳ ಆಮೋದಕರವಾಗಿರುತ್ತಿತ್ತು. ಅಲ್ಲಿ ಒಬ್ಬೊಬ್ಬರು ಒಂದೊಂಥರಾ ಕಥೆಗಳನ್ನು ಹೊತ್ತುಬರುತ್ತಿದ್ದರು! ಕಥೆಗಳಲ್ಲಿನ ಪಾತ್ರಗಳು ಕೆಲವೊಮ್ಮೆ ಕಣ್ಣೆದುರೇ ಬರುತ್ತಿವೆಯೇನೋ ಎಂಬಂತೇ ಬಣ್ಣಿಸುವ ಕಲಾವಿದರು ನಮ್ಮಲ್ಲಿದ್ದರು.

ಇಂತಹ ಕಥೆಗಳಲ್ಲಿ ದೆವ್ವ-ಭೂತ-ಪಿಶಾಚಿಗಳ ಕಥೆಯೇನೂ ಕಮ್ಮಿ ಇರುತ್ತಿರಲಿಲ್ಲ. ಊರಲ್ಲಿ ಮುದುಕರು ಯಾರಾದ್ರೂ ತೀರಿಕೊಂಡರೆ ವಾರಗಟ್ಟಲೆ ಅಂಥದ್ದೇ ಸುದ್ದಿ. ಸತ್ತವರು ಏನಾಗುತ್ತಾರೆ. ಭೂತ-ಪ್ರೇತವಾದವರು ಏನುಮಾಡುತ್ತಾರೆ-ಇವೆಲ್ಲಾ ಹಾದಿಯುದ್ದಕ್ಕೂ ಹಲವು ದಿನ ಗ್ರಾಸವಾದ ವಿಷಯಗಳು. ಅದರಲ್ಲಂತೂ ನಾವು ಚಿಕ್ಕವರಿರುವಾಗ ಬಂದ " ನಾ ನಿನ್ನ ಬಿಡಲಾರೆ’ ಸಿನಿಮಾವನ್ನು ನಮ್ಮ ಸದಾಶಿವ ನೋಡಿಬಿಟ್ಟಿದ್ದ! ಆತ ಹೇಳಿದ ಕಥೆ ಕೇಳಿ ತಿಂಗಳುಗಟ್ಟಲೇ ನಮಗೆ ಹೇಳಿಕೊಳ್ಳಲಾಗದ "ಧೈರ್ಯ ಭಯಂಕರ ಧೈರ್ಯ" ! ಧೈರ್ಯ ಎನ್ನುವಾಗ ನಡುಗುತ್ತಿದ್ದೆವು ಎನ್ನಲು ಅಧೈರ್ಯ ! ನಮ್ಮಲ್ಲಿಯೇ ಕೆಲವರನ್ನು ಆಯ್ಕೆಮಾಡಿ ’ಎದಗ’ರೆಂದು ಹೆಸರಿಸಿದ್ದೆವು. ಎದಗ ಎಂದರೆ ಎದೆ ಗಟ್ಟಿ ಇರುವವನು-ಯಾವುದಕ್ಕೂ ಹೆದರುವ ಆಸಾಮಿಯಲ್ಲ ಅಂತ. ಈಗ ಹೇಳುತ್ತೇನೆ ಕೇಳಿ ಅವರೆಲ್ಲಾ ಹೆಸರಿಗೆ ಮಾತ್ರ ಎದಗರಾಗಿದ್ದರು. ಇಂತಹ ಎದಗರ ಜೊತೆಗೆ ನಾವು ಸಾದಾ ಸೀದಾ ಹುಡುಗರು ಹೋಗುವಾಗ ನಮಗೆ ಭಯವಿರಬೇಕೇಕೆ? ಹಾಗಂತ ಕೊಚ್ಚಿಕೊಳ್ಳುವುದು ನಮ್ಮ ಎದಗರು ಎನಿಸಿಕೊಂಡವರದಾಗಿತ್ತು.


ನಮಗೆ ಆಗ ಬೆಳಿಗ್ಗೆ ಮತ್ತು ಸಾಯಂಕಾಲ ಶಾಲೆ ಇರುತ್ತಿದ್ದು ಮಧ್ಯೆ ಊಟಕ್ಕೆ ೧೧ ರಿಂದ ೨ ಗಂಟೆ ಬಿಡುವಿರುತ್ತಿತ್ತು. ಸಾಯಂಕಾಲ ೫:೩೦ಕ್ಕೆ ಶಾಲೆಬಿಟ್ಟಾಗ ಊರದಾರಿಯಲ್ಲಿ ಅವರವರ ಮನೆಗಳು ಬಂದಾಗ ಅವರವರು ಗುಂಪಿಗೆ ವಿದಾಯ ಹೇಳಿ ಗುಂಪು ನಿಧಾನವಾಗಿ ಕರಗುತ್ತಾ ಹೋಗುತ್ತಿತ್ತು. ದೂರ ದೂರ ಒಂಟಿ ಮನೆಯಿರುವವರು ಪಾಪ ಅವರ ಫಜೀತಿ ಹೇಳತೀರ! ಮನೆಯಲ್ಲಿ ಇಂದಿನಂತೇ ಮಕ್ಕಳನ್ನು ಕರೆದೊಯ್ಯಲು ಯಾರೂ ಬರುತ್ತಿರಲಿಲ್ಲ. ನಮಷ್ಟಕ್ಕೆ ನಾವೇ ಸ್ವತಂತ್ರರು. ಯಾವ ಬೀದಿನಾಯಿಗೂ ಕಲ್ಲೆಸೆಯ ಬಹುದಿತ್ತು;ಅಟ್ಟಿಸಿಕೊಂಡು ಬಂದರೆ ಮರವೇರಿ ತಪ್ಪಿಸಿಕೊಳ್ಳಬಹುದಿತ್ತು, ಅದಿಲ್ಲಾ ಎಲ್ಲೋ ಅಪ್ಪೀತಪ್ಪೀ ಕಚ್ಚಿದರೆ ಏನೂಮಾಡಲಾಗದ ಸ್ಥಿತಿ ಇರುತ್ತಿತ್ತು. ಆದರೂ ಅಲ್ಲಲ್ಲಿ ಯಾರ್ದೋ ಮಾವಿನ ಮರಗಳಿಗೆ ಕಾಯಿಬಿಟ್ಟಾಗ ಕಲ್ಲೆಸೆಯುವುದು,ಜಂಬೇ ಹಣ್ಣು [ಗುಲಾಬಿ ಬಣ್ಣದ ಜಂಬುನೇರಳೆ ಹಣ್ಣು] ಕೊಯ್ಯುವುದು ಇದೆಲ್ಲಾ ಸರ್ವೇಸಾಮಾನ್ಯ ಕಿತಾಪತಿ. ನಮ್ಮ ಮಧ್ಯೆಯೂ ಕೆಲವೊಮ್ಮೆ ಪಕ್ಷಪಂಗಡಗಳು ಹುಟ್ಟಿಕೊಳ್ಳುತ್ತಿದ್ದವು. ಆಗಾಗ ವಿಭಜನೆ, ಮತ್ತೆ ವಿಲೀನ, ಮತ್ತೆ ವಿಭಜನೆ ಮತ್ತೆ ವಿಲೀನ--ಇದೂ ಕೂಡ ಸತತ ಅನುಷ್ಠಾನದಲ್ಲಿರುವ ಕಾರ್ಯವಾಗಿತ್ತು.


ದೆವ್ವಕ್ಕೆ ಕಾಲು ತಿರುವುಮುರುವಾಗಿರುತ್ತದಂತೆ, ದೆವ್ವ ಬಿಳಿಯ ಬಣ್ಣದಲ್ಲಿ ಇರುವುದಂತೆ, ರಾತ್ರಿ ಹೊತ್ತಲ್ಲಿ ಗುಡ್ಡಗಳಲ್ಲಿ ಕೊಳ್ಳಿ ದೀಪಗಳನ್ನು ಹಿಡಿದು ಓಡಾಡುತ್ತವಂತೆ. ಅಕಸ್ಮಾತ್ ಯಾರಾದರೂ ಸಿಕ್ಕಿದರೆ ಅವರಿಗೆ ಗ್ರಹಚಾರ ಕಟ್ಟಿಟ್ಟದ್ದಂತೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗಳ ರಾತ್ರಿಗಳಲ್ಲಿ ಒಡ್ಡೋಲಗವೆತ್ತಿಕೊಂಡು ನಾನಾ ವಾದ್ಯಗಳನ್ನು ಬಾರಿಸಿಕೊಳ್ಳುತ್ತಾ ಅವು ಸಾಗುತ್ತವಂತೆ. ಶಿವನ ದೇವಸ್ಥಾನವಿರುವಲ್ಲಿಯವರೆಗೂ ಅವು ಹಾಗೇ ನಡೆದು ಹೋಗಿಬಂದು ಮಾಡುತ್ತಲೇ ಇರುತ್ತವಂತೆ. ಕಣ್ಣು ಅತ್ಯಂತ ಕೆಂಪಗಿರುತ್ತದಂತೆ. ಕೈಬೆರಳುಗಳು ಚೂಪಾಗಿದ್ದು ಹೊಟ್ಟೆ ಬಗೆದು ರಕ್ತಹೀರಲು ಅದು ಅವುಗಳಿಗೆ ಸಹಕಾರಿಯಂತೆ. ಅವುಗಳಲ್ಲಿ ಕೆಲವು ದೆವ್ವಗಳು ಮನುಷ್ಯರಿಗೆ ಉಪಕಾರಿಗಳಾದರೆ ಇನ್ನೂ ಕೆಲವು ದೆವ್ವಗಳು ಅಪಕಾರಿಗಳಾಗಿದ್ದು ಅತ್ಯಂತ ಕ್ರೂರ ಸ್ವಭಾವದವಂತೆ.---ಹೀಗೇ ಇಲ್ಲಸಲ್ಲದ ವರ್ಣನೆಗಳುಳ್ಳ ಕಥೆಗಳನ್ನು ಹೇಳಿದರೆ ಅದೇ ಒಂದು ಕಾದಂಬರಿಯಾದೀತು! ಮಾಧ್ಯಮವಾಹಿನಿಗಳೂ ಯಾವುದೇ ಭಯಾನಕ ಧಾರಾವಾಹಿಗಳೂ ಇಲ್ಲದ ಆ ಕಾಲದಲ್ಲಿಯೇ ಆ ರೀತಿಯ ನಡುಕ ಹುಟ್ಟಿಸುತ್ತಿದ್ದ ವಿಷಯಗಳು ಇವತ್ತಿನ ಪುಟಾಣಿಗಳಿಗೆ ಹೇಗನಿಸಬಹುದು ಎಂಬುದು ತರ್ಕಿಸಬೇಕಾದ ವಿಷಯ.

ದೆವ್ವಗಳು ಕಾಣಿಸಿಕೊಳ್ಳುವ ಜಾಗಗಳೂ ಕೆಲವು ಗುರುತಿಸಲ್ಪಟ್ಟಿದ್ದವು. ಜನನಿಬಿಡ ಸ್ಥಳಗಳಲ್ಲಿ, ಊರುಕೇರಿಗಳ ಮನೆಗಳ ಮಧ್ಯದಲ್ಲಿ ದೆವ್ವಗಳು ಕಾಣಿಸುತ್ತಿರಲಿಲ್ಲ. ಯಾರೂ ಜಾಸ್ತಿ ತಿರುಗಾಡದ ಜಾಗಗಳಲ್ಲೇ ಅವುಗಳ ಅಬರ್ತಳ ಜೋರು! ಒಬ್ಬರೇ ಯಾರಾದರೂ ಅಂತಹ ಜಾಗಗಳ ಮುಖಾಂತರ ಹಾದುಹೋಗುವಾಗ ಅವರಿಗೆ ಕೆನ್ನೆಗೆ ಬಾರಿಸುವುದು, ಕಲ್ಲೆಸೆಯುವುದು, ವಿಕೃತಸ್ವರದಲ್ಲಿ ಕೂಗುವುದು, ಅಕರಾಳವಿಕರಾಳ ರೂಪದಲ್ಲಿ ಕಂಡು ಪ್ರಜ್ಞೆತಪ್ಪಿಸುವುದು, ದೆವ್ವಕಂಡು ಹೆದರಿದ ಕೆಲವರು ಜ್ವರದಿಂದ ವಾರಗಟ್ಟಲೇ ಮೇಲೇಳದಿದ್ದುದು-ಕೆಲವರು ಹೆದರಿ ಅಸುನೀಗಿದ್ದು ಇಂಥದ್ದಕ್ಕೆಲ್ಲಾ ದೆವ್ವಗಳು ಕಾರಣ ಅಂತ ನಾವು ಕೇಳಿದ್ದಷ್ಟೇ, ಆದರೆ ದೆವ್ವಗಳನ್ನು ನೋಡಿರಲಿಲ್ಲ. ನಮ್ಮೂರಲ್ಲಿ ’ಗೋಳ್‍ಮಕ್ಕಳ ಹೊಂಡ’ , ಬೆಳ್ಳರೆ, ಶಿಂಗಾರಬೇಣ, ಬೋಳಗುಡ್ಡೆ ಹೀಗೇ ಇವೆಲ್ಲಾ ದೆವ್ವಗಳ ರಂಗಸ್ಥಳಗಳು ಈ ಜಾಗಗಳಾಗಿದ್ದವು. ಆ ಜಾಗಗಳ ಮನೆ ಹಾಳುಬೀಳಲಿ ಬೇರೇ ಖಾಲೀ ಜಾಗಗಳಲ್ಲಿ ಒಂದರ್ಧ ಕಿಲೋಮೀಟರು ಒಬ್ಬರೇ ನಡೆಯಬೇಕೆಂದರೆ ಅಲ್ಲೂ ದೆವ್ವಗಳು ಕಾಣಿಸುತ್ತವೇನೋ ಎಂಬ ಭಯವಿತ್ತಲ್ಲ ಅದನ್ನೀಗ ನೆನೆದರೆ ನಗು ಬರುತ್ತದೆ. ’ಗೋಳ್‍ಮಕ್ಕಳ ಹೊಂಡ’ ಎಂಬ ಹೆಸರು ಕೇಳಿದರೇ ಒಂಥರಾ ನಮ್ಮ ನರನಾಡಿಗಳನ್ನೆಲ್ಲಾ ದೆವ್ವಗಳು ಹಿಡಿದು ಎಳೆದಹಾಗೇ ಆಗುತ್ತಿತ್ತು !


ರಾತ್ರಿಹೊತ್ತಿನಲ್ಲಿ ವಿದ್ಯುದ್ದೀಪಗಳು ಹಠಾತ್ತನೇ ಹೋಗಿಬಿಟ್ಟರೆ ನಮ್ಮ ಕಥೆ ಅದೊಂದು ಹೇಳಲಾಗದ ವ್ಯಥೆ! ಯಾರೇ ದೊಡ್ಡವರು ಹತ್ತಿರವಿದ್ದರೂ ಅವರನ್ನು ಕಂಡರೇ ದೆವ್ವ ಆ ರೂಪದಲ್ಲಿ ಬಂದುಬಿಟ್ಟಿತೇನೋ ಎಂಬ ಭಯದಲ್ಲಿ ನಮ್ಮ ಪ್ರಸಾದವೆಲ್ಲಾ ಒಣಗಿಹೋಗುತ್ತಿತ್ತು. ಕತ್ತಲೆಯಲ್ಲಿ ಬೆಕ್ಕು ಕೂಗಿದರೆ, ಪಕ್ಕದ ಗುಡ್ಡದಲ್ಲಿ ನರಿ ಕೂಗಿದರೆ ನಮಗೆಕೋ ಅನುಮಾನ ! ವಿದ್ಯುತ್ತು ಮರಳಿಬಂದಮೇಲೇ, ಸೌದೆಯ ಒಲೆಯಲ್ಲಿ ಆರುತ್ತಿರುವ ಕಿಡಿಯೊಂದು ಮತ್ತೆ ಹೊಗೆಯಾಡಿ ಹೊತ್ತಿಕೊಂಡಂತೇ ಕುಟುಕುಜೀವ ನಮ್ಮ ಶರೀರದಲ್ಲಿ ಮತ್ತೆ ಉಸಿರಾಡಿ ನಮ್ಮ ದೇಹದಲ್ಲಿ ಚೈತನ್ಯ ಮರಳಿಬರುತ್ತಿತ್ತು. ಯಾರೋ ಪುಣ್ಯಾತ್ಮ ವಿಶ್ವೇಶ್ವರಯ್ಯನಂತೆ ಆ ದೀಪವನ್ನು ತಯಾರಿಸಲು ಆರಂಭಿಸಿದ್ದು, ಅವನಿಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು. ಬಡಪಾಯಿ ಮಕ್ಕಳನ್ನು ಕಂಡು ಆ ವ್ಯಕ್ತಿಗೆ ವಿದ್ಯುತ್ ತಯಾರಿಸುವ ಬುದ್ಧಿಯನ್ನು ದೇವರೇ ನೀಡಿರಬೇಕು ! ಅಂತಹ ದೀಪವೊಂದು ಇರದಿರುತ್ತಿದ್ದರೆ ದೆವ್ವಗಳು ಖಂಡಿತಾ ನಮ್ಮನ್ನು ಬದುಕಬಿಡುತ್ತಿರಲಿಲ್ಲ ! ಆದರೂ ನಮಗೆ ರಾತ್ರಿ ಹೊತ್ತಿನಲ್ಲಿ ಉಚ್ಚೆಗೆ ಅವಸರವಾದರೆ ಸ್ವಲ್ಪ ಕಷ್ಟವಾಗುತ್ತಿತ್ತು. ಯಾಕೆಂದರೆ ಅಪ್ಪಟ ಸಂಪ್ರದಾಯವಾದಿಗಳಾದ ನಮ್ಮಲ್ಲೆಲ್ಲಾ ಆ ಕಾಲಕ್ಕೆ ಕಕ್ಕಸು-ಬಚ್ಚಲುಮನೆ ಮನೆಯೊಳಗೇ ಇರುತ್ತಿರಲಿಲ್ಲ. ಹೊರಗೆ ಅನತಿ ದೂರದಲ್ಲಿ ಇರುವ ಅವುಗಳಿಗೆ ವಿದ್ಯುದ್ದೀಪದ ವ್ಯವಸ್ಥೆ ಇರುತ್ತಿರಲಿಲ್ಲ.ದೊಡ್ಡವರನ್ನು ಎಬ್ಬಿಸಿ ವಿನಂತಿಸಿ ಕರೆದೊಯ್ದರೂ ಮೂತ್ರಬಿಡುವಾಗ ನಮ್ಮ ಕೈಕಾಲು ಥರಥರಥರ ನಡುಗುತ್ತಿತ್ತು. ಅಸಲಿಗೆ ನಾವೆಲ್ಲಾ ಚಿಕ್ಕವರಿರುವಾಗ ಕಕ್ಕಸು ಮನೆಯೇ ಇರಲಿಲ್ಲ. ಎಲ್ಲರೂ ಸುತ್ತಲ ಗುಡ್ಡಗಳಿಗೆ ಚೊಂಬಿನಲ್ಲಿ ನೀರು ತೆಗೆದುಕೊಂಡು ಹೋಗಿ ಮಲವಿಸರ್ಜನೆ ಮಾಡಿಬರಬೇಕಾಗಿತ್ತು. ಅಲ್ಲೆಲ್ಲೋ ಕುರುಚಲು ಪೊದೆಗಳ ನಡುವೆ ಹಾವಿಗೆ,ಚೇಳಿಗೆ ಹೆದರುತ್ತಾ ಅಂತೂ ಹೊರಹಾಕಲೇ ಬೇಕಾಗಿದ್ದನ್ನು ಹೊರಹಾಕಿ ವಾಪಸ್ಸಾಗುತ್ತಿದ್ದೆವು. ಮಳೆಗಾಲದಲ್ಲಿ ಸೋನೆಮಳೆ ಸುರಿಯುವಾಗ ಕಕ್ಕಸಿಗೆ ಅವಸರವಾದರೆ ಕೊಡೆಯನ್ನು ಹಿಡಿದೇ ಕುಕ್ಕರುಗಾಲಿನಲ್ಲಿ ಕುಳಿತು ವಿಸರ್ಜನಾ ಕ್ರಿಯೆ ನಡೆಯುತ್ತಿತ್ತು. ಅಲ್ಲೂ ದೆವ್ವಗಳು ಬಂದರೆ ಎಂಬಾಭಯ ನಮ್ಮನ್ನು ಬಿಟ್ಟಿರುತ್ತಿರಲಿಲ್ಲ!


ಒಂಬಲತಿ ಎಂಬುದು ಹೆಣ್ಣು ದೆವ್ವ. ಸಾಮಾನ್ಯ ಹೆಂಗಸಿನ ರೂಪವೇ ಇರುತ್ತದಂತೆ. ಆದರೆ ಆಕೆಯ ಅಂಗೈ ತೂತಂತೆ. ಅವಳು ಬಂದರೆ ತನ್ನ ಕೈಮುಂದೆ ಮಾಡಿ ಕವಳ [ಎಲೆಯಡಿಕೆ] ಕೊಡು ಎನ್ನುತ್ತಾಳಂತೆ. ಕವಳ ಕೊಟ್ಟಾಗ ಕೈಯ್ಯ ತೂತಿನ ಮೂಲಕ ಅದು ಕೆಳಗೆ ಬೀಳುತ್ತದಲ್ಲಾ ಆಗ ಅದನ್ನು ಎತ್ತಿಕೊಡು ಎನ್ನುತ್ತಾಳಂತೆ. ಅದನ್ನು ಎತ್ತಲು ನಾವು ಬಗ್ಗಿದಾಗ ಕುತ್ತಿಗೆಮುರಿಯುತ್ತಾಳಂತೆ. ಆದರೆ ಚರ್ಮದ ಚಪ್ಪಲಿಗೂ ಅವಳಿಗೂ ಬದ್ಧ ದ್ವೇಷವಂತೆ. ಚರ್ಮದ ಚಪ್ಪಲಿ ಕಂಡರೆ ಸಾಕು ಬೆಂಕಿಯನ್ನು ಕಂಡ ಕಾಡುಪ್ರಾಣಿಯಂತೇ ದೂರ ಓಡುತ್ತಾಳಂತೆ. ಆಕೆ ಕೂಡಾ ಬರುವುದು ಒಬ್ಬರೇ ಓಡಾಡುವಾಗ! ಹಾಗೆಲ್ಲಾ ಜನಸಂದಣಿಯ ನಡುವೆ ಆಕೆ ಕಾಣಿಸಿಕೊಳ್ಳುವುದಿಲ್ಲ. ಇಂತಹ ಜನಜನಿತ ಊಹಾಪೋಹಗಳೂ ಕಲ್ಪನೆಗಳೂ ಸೇರಿ ಇದ್ದಬದ್ದ ನಮ್ಮ ಶಕ್ತಿಯನ್ನೆಲ್ಲಾ ಉಡುಗಿಹಾಕಿಬಿಡುತ್ತಿದ್ದವು. ನಾವೆಲ್ಲಾ ಹವಾಯಿ ಚಪ್ಪಲಿ ಹಾಕುತ್ತಿದ್ದುದರಿಂದ ಚರ್ಮದ ಚಪ್ಪಲಿ ಯಾವುದೆಂಬುದು ಅಷ್ಟಾಗಿ ತಿಳಿಯದು. ಆದರೂ ಸಾಲ್ಕೋಡ್ ಹೆಗಡೇರು ಹಾಕುತ್ತಾರಲ್ಲಾ ನಡೆಯುವಾಗ ನರ್ ಚರ್ ನರ್ ಚರ್ ನರ್ ಚರ್ ಎನ್ನುವ ಚಪ್ಪಲಿ ಆ ಚಪ್ಪಲಿಯೇ ಚರ್ಮದ ಚಪ್ಪಲಿ ಎಂದು ಯಾರೋ ಹೇಳಿದ್ದರು. ಹೀಗಾಗಿ ಆಪತ್ಕಾಲಕ್ಕಾಗಿ ದರೋಡೆಕೋರರನ್ನು ನಿಭಾಯಿಸಲು ಏ.ಕೆ.೪೭ ಇಟ್ಟುಕೊಂಡಂತೇ ನನಗೂ ಅಂತಹ ನರ್ ಚರ್ ಎನ್ನುವ ಚರ್ಮದ ಚಪ್ಪಲಿಯೊಂದನ್ನು ಇಟ್ಟುಕೊಳ್ಳುವ ಆಸೆಯಾಗಿತ್ತು ! ಅದನ್ನು ಧರಿಸಿ ನಡೆಯುವಾಗ ಹೇಗೂ ಒಂಬಲತಿ ಬರುವುದಿಲ್ಲ;ಒಂಬಲತಿ ಹಾಗಿರಲಿ ದೆವ್ವಗಳೇ ಬರುವುದಿಲ್ಲ ಎಂದಮೇಲೆ ಅದು ಬ್ರಿಟಿಷರು ಭಾರತಕ್ಕೆ ಕೊಟ್ಟ ಸ್ವಾತಂತ್ರ್ಯಕ್ಕಿಂತಾ ದೊಡ್ಡ ಸ್ವಾತಂತ್ರ್ಯದ ಥರಾ ನನಗೆ ಭಾಸವಾಗುತ್ತಿತ್ತು! ಒಪಕ್ಷ ಒಂಬಲತಿ ಬಂದುಬಿಟ್ಟರೆ ಮೆಟ್ಟಿರುವ ಚರ್ಮದ ಚಪ್ಪಲಿಯನ್ನು ಅವಳೆಡೆಗೆ ಬೀಸಿ ಎಸೆದುಬಿಟ್ಟರೆ ಪಾಕಿಗಳು ಭಾರತಕ್ಕೆ ಬಾಂಬು ಎಸೆದಂತೇ ಆಗಿಬಿಡುವುದಲ್ಲವೇ? ಓಹೊಹೊ ನಗೆಯಾಡಬೇಡಿ ಸ್ವಾಮೀ ನಮ್ಮ ಪಾಡು ಯಾರಿಗೆಬೇಕು ಹೇಳಿ ! ದೊಡ್ಡವರನ್ನು ಕೇಳಿದರೆ ಬೈತಾರೆ, ಚಿಕ್ಕವರಲ್ಲಿ ಯಾರೂ ದೆವ್ವಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ನುರಿತವರಲ್ಲ. ಒಂದು ಗುಟ್ಟು ಹೇಳಲೋ ? ನಮ್ಮಲ್ಲಿ ಅನೇಕ ದೊಡ್ಡವರಿಗೂ ದೆವ್ವದ ಭಯ ಇತ್ತು. ಅವರಲ್ಲೂ ಕೆಲವರು ರಾತ್ರಿ ಮೂತ್ರವಿಸರ್ಜನೆಗೆ ಅವಸರವಾದರೂ ನೋವನುಭವಿಸುತ್ತಾ ತಡೆದುಕೊಂಡು ಬೆಳಿಗ್ಗೇನೇ ಹೋಗುವುದು ನಮಗೆ ಗೊತ್ತಿರದ ವಿಷಯವೇನಲ್ಲ ಬಿಡಿ !

ಇನ್ನು ನೆಂಟರಮನೆಗಳಿಗೆ ಹೋದರೆ ಅಲ್ಲಿಯ ದೆವ್ವ-ಭೂತ-ಪಿಶಾಚಿಗಳ ನೆಟ್‍ವರ್ಕೇ ಬೇರೆ ! ಇದೆಲ್ಲಾ ಒಂಥರಾ ಮೊಬೈಲ್ ನೆಟ್‍ವರ್ಕ್ ಇದ್ದಹಾಗೇ. ಕೆಲವು ರೋಮಿಂಗ್ ನಲ್ಲಿರುತ್ತವೆ. ಕೆಲವು ರೋಮಿಂಗ್ ಸೌಲಭ್ಯ ಇಲ್ಲದವು. ರೋಮಿಂಗ್ ಸೌಲಭ್ಯ ಇದ್ದವು ಅಲ್ಲೂ ಬರುತ್ತಿದ್ದವು! ಅಮ್ಮನ ಜೊತೆಗೆ ಅಮ್ಮನ ತವರುಮನೆಗೆ ಹೋದಾಗ ಅಥವಾ ಇನ್ನೆಲ್ಲಿಗೋ ಹೋದಾಗ ನಮಗೆ ಈ ವಿಷಯದಲ್ಲಿ ಯಮಯಾತನೆ! ಅಲ್ಲಿ ಇನ್ನೂ ಕಷ್ಟ. ರಾತ್ರಿ ಎಲ್ಲಾಕಡೆಯೂ ನಮ್ಮನೆಯ ರೀತಿಯಲ್ಲೇ ದೀಪ ಇರಲು ಸಾಧ್ಯವೇ ? ಅಲ್ಲಿರುವ ದೀಪವನ್ನೇ ಅವಲಂಬಿಸಿ ನಾವು ನಮ್ಮ ವಿಸರ್ಜನಾ ವ್ಯವಹಾರವನ್ನು ತಹಬಂದಿಗೆ ತಂದುಕೊಳ್ಳುವುದು ಬಾರೀ ಸಾಹಸದ ಕೆಲಸವೇ ಆಗುತ್ತಿತ್ತು. ಹಗಲು ಹೊತ್ತಿನಲ್ಲಿ ಅಲ್ಲಿನ ಹುಡುಗರ ಜೊತೆ ಆಡಿ ಹೊತ್ತುಕಳೆಯುವ ನಮಗೆ ಹಾಗೂ ಹೀಗೂಮಾಡಿ ರಾತ್ರಿಯನ್ನು ಕಳೆಯಬೇಕಾಗಿ ಬರುತ್ತಿತ್ತು. ಕನಸಿನಲ್ಲಿ ದೆವ್ವಗಳನ್ನು ಕಂಡರಂತೂ ಹಾಸಿಗೆಯೆಲ್ಲಾ ಒದ್ದೆಯಾಗುವ ಪ್ರಸಂಗ! ಯಾರಲ್ಲಿ ಹೇಳುವುದು ? ಹೇಳಲಾರೆವು ಹೇಳದೇ ಇರಲಾರೆವು.

ದೆವ್ವಗಳ ಕಾಟ ಕೆಲವು ಊರುಗಳಲ್ಲಿ ತುಂಬಾ ಜಾಸ್ತಿ ಇತ್ತೆಂದು ಕೇಳುತ್ತಿದ್ದೆವು. ಊರಿನಲ್ಲಿ ವರ್ಷಕ್ಕೊಮ್ಮೆ ಹಸಿರುಪೂಜೆ/ ಗಡಿ ಪೂಜೆ/ ಊರಹಬ್ಬ / ಆರಿದ್ರಾಮಳೆ ಹಬ್ಬ ಎಂಬೆಲ್ಲಾ ಹೆಸರಲ್ಲಿ ಕರೆಸಿಕೊಳ್ಳುವ ಬೇಸಿಗೆ-ಮಳೆ ಗಡಿಕಾಲದ ಪೂಜೆಯೊಂದು ನಡೆಯುತ್ತಿತ್ತು. ಆಗ ಅಲ್ಲಿ ಸಾವಿರಾರು ಬಾಳೆಹಣ್ಣುಗಳನ್ನೂ, ಹತ್ತಾರು ಎಳೆನೀರುಗಳನ್ನೂ, ನೂರಾರು ತೆಂಗಿನಕಾಯಿಗಳನ್ನೂ, ಅನ್ನ, ಹಲಸಿನ ಹಣ್ಣಿನ ಕಡುಬು ಮೊದಲಾದವನ್ನೂ ಊರ ಜಟಗ, ಮಾಸ್ತಿ[ಮಹಾಸತಿ], ಚೌಡಿ, ನಾಗರು, ಕೀಳು ಇವುಗಳಿಗೆಲ್ಲಾ ನಿವೇದಿಸುತ್ತಿದ್ದರು. ಕೀಳಿಗೆ ಹಾಕುವ ಅನ್ನದ ಬಲಿಯನ್ನು ನೋಡಿದಾಗ ಅವುಗಳಿಗೆ ಕುಡಿಯಲು ಎಳೆನೀರು ಕಡಿದು ಅಲ್ಲಲ್ಲಿ ಇಡುವಾಗ 'ಕೀಳು' ಎಂದರೇನೆಂದು ಯಾರನ್ನಾದರೂ ಕೇಳಿದರೆ ಅವರು ಸರಿಯಾಗಿ ಉತ್ತರಿಸುತ್ತಲೇ ಇರುತ್ತಿರಲಿಲ್ಲ. ಕೀಳು ಎಂದರೆ ದೆವ್ವ-ಭೂತಗಳಿಗೆ ಇರುವ ಪರ್ಯಾಯ ಪದ ಎನ್ನುವುದು ನಮಗೆ ತಿಳಿದಿರಲಿಲ್ಲ. ಊರು ಬೆಳೆಯುತ್ತಾ ಬಂದಹಾಗೇ ದೆವ್ವಗಳ ಸಂಖ್ಯಾಬಲ ಕಮ್ಮಿಯಾಯಿತೋ ಅಥವಾ ಜನರಿಗೆ ಆ ಭಾವನೆ ಕಮ್ಮಿಯಾಯಿತೋ ಸೃಷ್ಟಿಕರ್ತನೇ ಬಲ್ಲ. ಈಗೀಗ ದೆವ್ವಗಳ ಸುದ್ದಿ ಅಷ್ಟಾಗಿ ಕೇಳುವುದಿಲ್ಲವಪ್ಪ ! ಹಳ್ಳಿಗಳಲ್ಲಿ ಪ್ರತೀ ಮನೆಯ ತೋಟದಲ್ಲೋ ಗದ್ದೆಯಲ್ಲೋ ಮನೆಯ ಹಿತ್ತಿಲಲ್ಲೋ ಬೀಡುಬಿಟ್ಟು ಸ್ಥಾನ ಪಡೆಯುವ ನಾಗ ಚೌಡಿಗಳಿಗೆ ಪಟ್ಟಣ ಮತು ಶಹರಗಳಲ್ಲಿ ಅಷ್ಟೆಲ್ಲಾ ಆಸಕ್ತಿ ಇರುವುದಿಲ್ಲವೇ ? ಇಂಚಿಂಚು ಜಾಗಕ್ಕೂ ಕೊರತೆಯಿರುವ ಈ ಕಾಂಕ್ರೀಟ್‍ಕಾಡು ಅವಕ್ಕೆ ಬೇಸರವೇನೋ ಅನಿಸುತ್ತದೆ. ನೀವೇ ನೋಡಿ ನಗರಗಳಲ್ಲಿ ಎಲ್ಲೋ ಅಲ್ಲಲ್ಲಿ ದೇವಸ್ಥಾನಗಳ ಸಮೀಪ ಬಿಟ್ಟರೆ ಇನ್ನೆಲ್ಲಾದರೂ ನಾಗ ಚೌಡಿ ಮುಂತಾದ ದೇವತೆಗಳ ಜಾಗವನ್ನು ಕಾಣುವಿರೇ?

ದೆವ್ವ ಕಲ್ಲೆಸೆಯುವುದು ಒಂದು ಚಮತ್ಕಾರ! ಒಮ್ಮೆ ನಮ್ಮಲ್ಲಿನ ಗಾಜಣ್ಣನ ಕಣ್ಣಿಗೆ ದೆವ್ವ ಕಲ್ಲೆಸೆದಿತ್ತು. ಆತನಿಗೆ ಕಣ್ಣೊಳಗೆ ಸಣ್ಣ ಕಲ್ಲು ತುಣುಕು ಓಡಾಡಿದಂತೇ ಭಾಸವಾಗಿ ನೋವಾಗುತ್ತಿತ್ತಂತೆ. ಕಣ್ಣು ಕೆಂಪಾಗಿ ಊದಿಕೊಂಡಿದ್ದುದ್ದನ್ನು ನೋಡಿದ್ದಕ್ಕೆ ನಾನೇ ಸಾಕ್ಷಿ! ಆದರೆ ಅದು ದೆವ್ವದ ಕಲ್ಲೆಸೆತವೇ ಅಥವಾ ಗಾಳಿಯಲ್ಲಿನ ಧೂಳು ಗಾಳಿಬೀಸುವ ರಭಸಕ್ಕೆ ಕಣ್ಣಿಗೆ ಹಾರಿರುವುದೇ ಎಂಬುದು ಅರ್ಥವಾಗದೇ ಉಳಿದ ವೈಜ್ಞಾನಿಕ ವಿಚಾರ. ದೆವ್ವಗಳನ್ನು ’ಗಾಳಿ’ ಎಂದೂ ಕರೆಯಲಾಗುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗಳಂದು ಚಿಕ್ಕಮಕ್ಕಳನ್ನು ಕೆಟ್ಟಜಾಗಗಳೆಂದು ಗುರುತಿಸಲ್ಪಟ್ಟ ’ಗೋಳ್‍ಮಕ್ಕಳ ಹೊಂಡ’ ದಂತಹ ಜಾಗಗಳ ಹತ್ತಿರವೂ ಕರೆದೊಯ್ಯಬಾರದಂತೆ! ಅಕಸ್ಮಾತ್ ಕರೆದೊಯ್ದರೆ ಅವರಿಗೆ ಮರಳಿ ಬಂದಮೇಲೆ ಕೆಂಪು ಹಾನ ಎತ್ತುವುದು [ಓಕುಳಿನೀರು], ಕಲ್ಲುಪ್ಪು ಮಂತ್ರಿಸಿ ಬೆಂಕಿಗೆ ಎಸೆಯುವುದು ಇದೆಲ್ಲಾ ನಡೆಯುತ್ತಿತ್ತು. ಹಾಗೂ ಮಕ್ಕಳು ರಾತ್ರಿ ಚೀರುತ್ತಲೇ ಇದ್ದರೆ ಮಾರನೇ ದಿನ ಸತ್ಯಹೆಗಡೇರು, ಕೊಡ್ಲಮನೆ ಭಟ್ರು ಇವರಲ್ಲಿ ಯಾರಾದ್ರೂ ವಿಭೂತಿ ಮಂತ್ರಿಸಿಕೊಡುತ್ತಿದ್ದರು. ಅದನ್ನು ತಂದು ಹಾಕಿದಾಗ ಮಗುವಿನ ಕೂಗು ಮಾಯ ! ಇದು ಕಾಕತಾಳೀಯವೋ ಅಥವಾ ನಮಗರಿವಿರದ ಇನ್ಯಾವುದೋ ಕ್ರಿಯೆಯೋ ಅರ್ಥವಾಗದಲ್ಲ.


ಕೆಲವು ಜನಾಂಗಗಳಲ್ಲಿ ದೆವ್ವ ಕಡಿಯುವ ಪರಿಪಾಠವಿತ್ತು. ಯಾರಿಗಾದರೂ ದೆವ್ವದ ಕಾಟ ಶುರುವಾಗಿದೆಯೆಂದು ತಿಳಿದರೆ ’ನೋಟ ನೋಡುವವ’ರನ್ನು ಕರೆಯುತ್ತಿದ್ದರು. ನೋಟನೋಡುವುದು ಎಂದರೆ ಅದೊಂದು ಚಿಕಿತ್ಸೆ. ಅದರ ಕ್ರಮ ಹೇಗೆಂದರೆ ಮನೆಯ ಜಗುಲಿಯ ಮೂಲೆಯೊಂದರಲ್ಲಿ ಮಣೆಯಮೇಲೆ ಹಂದಿದಾಡೆಯಲ್ಲಿ ನೋಟನೋಡುವ ಅನಕ್ಷರಸ್ಥ ವ್ಯಕ್ತಿ ಅದೇನನ್ನೋ ಗೀಚುತ್ತಾ ಕಂಡ ಕಂಡ ಹಾಗೇ ಏನನ್ನೋ ಬಡಬಡಾಯಿಸುತ್ತಾ ಮಧ್ಯೆಮಧ್ಯೆ ಸುತ್ತಿದ ಬಾಳೆ ಎಲೆಯನ್ನು ಕತ್ತರಿಸುತ್ತಾ ಕೂರುತ್ತಿದ್ದ. ತಲೆಯನ್ನು ಜೋರಾಗಿ ಅಲ್ಲಾಡಿಸುವ ಆತ ಸ್ವಲ್ಪಮಟ್ಟಿಗೆ ಕೂದಲನ್ನೂ ಅಲ್ಲಾಡಿಸುತ್ತಾ ಬಾಯಲ್ಲಿ

"ಓಹೋಹೋಸ್ಸುಹಾ.....ಉಸುವಸುವಾ......ಉಸುವಸುವಾ.....ಊಂ.ಹೂಂ....ಸ್ಸುವಾ....ಮಾರಮ್ಮ ನಿನುಗೇ ಮೂರ್ಕೋಳಿ ನಿನುಗೇ ಆರ್ಕೋಳಿ ನಿನುಗೇ ಅಹ ಅಹ ಹಾಂ ಹಾಂ ಹಾಂ ಷಟ್ "

ಎಂದೆಲ್ಲಾ ಹಲುಬುತ್ತ ವಿಶಿಷ್ಟವಾದ ಧ್ವನಿಯನ್ನು ಹೊರಡಿಸುತ್ತಿದ್ದ. ಗಂಟೆಗಟ್ಟಲೇ ಒದರಾಡುವ ಆತ ಕೊನೆಯ ಘಟ್ಟದಲ್ಲಿ ಮುಂದೆ ಇಟ್ಟ ತೆಂಗಿನಕಾಯಿಯನ್ನು ಎತ್ತಿ ಒಂದೇ ಏಟಿಗೆ ಅದನ್ನು ನೆಲಕ್ಕಪ್ಪಳಿಸಿ ಒಡೆದಾಗ ದೆವ್ವ ಕಡಿದು ಮುಗಿಯಿತೂ ಅಂತರ್ಥ! ನೋಟನೋಡಿಸುತ್ತಾರೆಂಬ ಗಾಳಿಸುದ್ದಿ ನಮಗೆ ಮೊದಲೇ ಬೇರೆ ಮಕ್ಕಳ ಮುಖಾಂತರ ಸಿಕ್ಕಿರುತ್ತಿದ್ದು, ದೂರದವರೆಗೆ ಕೇಳಿಸುವ ಆತನ ಅಬರಾಟದ ಸದ್ದಿಗೆ ಆತ ಕುಳಿತ ಅಂತಹ ಮನೆಗೆ ನಾವು ನೋಡಲು ಹೋಗುತ್ತಿದ್ದೆವಾದರೂ ಕೊನೇಕ್ಷಣದಲ್ಲಿ ಕಣ್ಣೆಲ್ಲಾ ಕೆಂಪಗೆಮಾಡಿಕೊಂಡು ಆತ ತೆಂಗಿನಕಾಯಿ ಬಡಿದು ಒಡೆಯುವ ಸಮಯದಲ್ಲಿ ದೂರದಲ್ಲಿ ಅಡಗಿ ನೋಡುತ್ತಿದ್ದೆವು! ಸೊಸೆ ಇರುವ ಮನೆಯಲ್ಲಿ ಕೆಲವೊಮ್ಮೆ ಅತ್ತೆಗೂ ಸೊಸೆಗೂ ಆಗಿಬರದಾಗ ಸೊಸೆಯ ಮೈಮೇಲೆ ’ದೆವ್ವ’ ಬರುತ್ತಿತ್ತು ! ನೋಟನೋಡಿದಾಗ ಬಿಟ್ಟುಹೋಗುವ ಆ ದೆವ್ವ ಕೆಲವು ತಿಂಗಳುಗಳ ನಂತರ ಮತ್ತೆ ಒಕ್ಕರಿಸುತ್ತಿತ್ತು. ಕೆಲವು ಗೂರಲು ಉಬ್ಬಸದ ರೋಗಿಗಳಿಗೆ ರೋಗ ಉಲ್ಬಣಿಸಿ ಶ್ವಾಸೋಚ್ವಾಸವೇ ಕಷ್ಟವಾದಾಗ ಅದು ’ಗಾಳಿ ಮೆಟ್ಟಿದ್ದು’ ಎನ್ನುವ ಜನರಿದ್ದು ನೋಟನೋಡಿದರೆ ಕಮ್ಮಿಯಾಗುತ್ತಿತ್ತಂತೆ. ಅದಕ್ಕೆ ಯಾವ ವೈಜ್ಞಾನಿಕ ಕಾರಣವಿತ್ತು ಅದೂ ಅರ್ಥವಾಗಲಿಲ್ಲ. ಕೊಳ್ಳಿದೆವ್ವ ಎಂಬುದನ್ನು ನೀವೆಲ್ಲಾ ಕೇಳಿಯೇ ಇರುತ್ತೀರಿ ಬಿಡಿ. ಯಾಕೆಂದರೆ ನಿಮ್ಮೆಲ್ಲರ ಜೀವನದಲ್ಲೂ ಅಲ್ಲಿಲ್ಲಿ ಆ ಸುದ್ದಿ ಬಂದಿರುತ್ತದೆ. ಕೊನೇಪಕ್ಷ ಮಾಧ್ಯಮದಲ್ಲಾದರೂ ನೋಡಿರುತ್ತೀರಿ. ಕೊಳ್ಳಿದೆವ್ವಗಳು ಕಗ್ಗತ್ತಲ ರಾತ್ರಿಯಲ್ಲಿ ತಮ್ಮ ಕೈಬೆರಳುಗಳನ್ನೇ ಬೆಂಕಿಯಕೊಳ್ಳಿಯಂತೇ ಉರಿಸಿಕೊಂಡು ಓಡಾಡುವ ಇನ್ನಿಲ್ಲದ ವೈಷಿಷ್ಟ್ಯದವು.

ದೆವ್ವಗಳ ಬಗ್ಗೆ ಸ್ವಾರಸ್ಯಕರ ಘಟನೆಗಳೂ ಇವೆ. ಒಂದಿನ ನಮ್ಮ ಗುರುಮಾಸ್ತರು ದೆವ್ವದಕಥೆಯೊಂದನ್ನು ತರಗತಿಯಲ್ಲಿ ಬಿತ್ತರಿಸಿದ್ದರು. ಅದೇನೆಂದು ಕೇಳಿ-- ಬಡ ಬ್ರಾಹ್ಮಣನೊಬ್ಬನಿಗೆ ದೆವ್ವಾ ಎಂದರೆ ಭಯಂಕರ ಹೆದರಿಕೆಯಿತ್ತಂತೆ. ಆತ ಕಾಡದಾರಿಯಲ್ಲಿ ಒಮ್ಮೆ ನಡೆದುಹೋಗುವಾಗ ಹೆಗಲಮೇಲಿದ್ದ ಅಂಗವಸ್ತ್ರ [ಟವೆಲ್ ಥರದ ಶಾಲು] ಹಾದಿಯ ಪಕ್ಕದ ಮುಳ್ಳಿನ ಗಿಡದ ಕೊಂಬೆಗೆ ಸಿಕ್ಕಾಕಿಕೊಂಡು, ಆತ ಮುಂದೆ ಹೋಗಲು ಪ್ರತ್ನಿಸಿದಾಗಲೆಲ್ಲಾ ಹಿಂದೆ ಯಾರೋ ಎಳೆದ ಅನುಭವ! ತಿರುಗಿ ನೋಡಿಬಿಟ್ಟರೆ ದೆವ್ವ ಏಕ್ ದಂ ಝಾಡಿಸಿ ಮುಖಕ್ಕೇ ಹೊಡೆದರೆ ಎಂಬ ಅತೀವ ಆತಂಕ. ಹೃದಯಬಡಿತ ೭೨ ಹೋಗಿ ೧೨೨ ! ವೇದ ಓದುವಾಗ ಗುರುಗಳು ಹೇಳಿದ್ದರಂತೆ " ನೋಡಪ್ಪಾ ವೃಕ್ಷಗಳಲ್ಲಿ ಅದರಲ್ಲೂ ಅಶ್ವತ್ಥವೃಕ್ಷದಲ್ಲಿ ಭಗವಂತನ ಸಾನ್ನಿಧ್ಯವಿರುತ್ತದೆ. ಬುಡದಲ್ಲಿ ಬ್ರಹ್ಮನೂ ಮಧ್ಯದಲ್ಲಿ ವಿಷ್ಣುವೂ ತುದಿಯಲ್ಲಿ ಶಿವನೂ ಇರುತ್ತಾರೆ. ಅದಕ್ಕೇ ಅಶ್ವತ್ಥವೃಕ್ಷವನ್ನು ವೃಕ್ಷರಾಜ ಎನ್ನುತ್ತಾರೆ. ಅಕಸ್ಮಾತ್ ಕಾಡುಮೇಡುಗಳಲ್ಲಿ ಅಲೆಯುವಾಗ ನಮಗೆ ಹೆದರಿಕೆಯಾದರೆ

ಮೂಲತೋ ಬ್ರಹ್ಮರೂಪಾಯಾ ಮಧ್ಯತೋ ವಿಷ್ಣುರೂಪಿಣೇ |
ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ ||

ಎಂದು ಪ್ರಾರ್ಥಿಸಿದರೆ ದೇವರು ನಮ್ಮನ್ನು ರಕ್ಷಿಸುತ್ತಾನೆ. " ಎಂಬುದಾಗಿ. ಗಡಿಬಿಡಿಯಲ್ಲಿ ಆತ ಆ ಶ್ಲೋಕವನ್ನು ನೆನಪಿಸಿಕಳ್ಳುತ್ತಿದ್ದರೂ ದೇಹಪೂರ್ತಿ ಬೆವತುಹೋಗಿ ಕಂಪಿಸುತ್ತಾ

ಮೂಲತೋ ಮಧ್ಯರೂಪಾಯ ಮಧ್ಯತೋ ಮೂಲರೂಪಿಣೇ |
ಅಗ್ರತೋ ...........ಎಂದೆಲ್ಲಾ ತೊದಲುತ್ತಾ ಹೇಗೂ ಸಾಯುವುದೇ ಗ್ಯಾರಂಟಿ ಎಂದುಕೊಂಡು ಮನೆಯವರನ್ನೆಲ್ಲಾ ನೆನಪಿಸಿಕೊಂಡು ದುಃಖಿಸುತ್ತ ಒಮ್ಮೆ ಮನಸ್ಸು ಗಟ್ಟಿಮಾಡಿ ಓರೆಗಣ್ಣಿನಲ್ಲಿ ನಿಧಾನಕ್ಕೆ ಕತ್ತು ತಿರುವಿ ನೋಡಿದನಂತೆ.....ನೋಡುತ್ತಾನೆ ಪಂಚೆ ಮುಳ್ಳಿನ ಪೊದೆಗೆ ಸಿಕ್ಕಿಕೊಂಡಿತ್ತು! ’ಬದುಕಿದೆಯಾ ಬಡಜೀವವೇ?’ ಎಂದುಕೊಳ್ಳುತ್ತಾ ಮನಗೆ ಬಂದು ಗಂಟೆಗಟ್ಟಲೇ ವಿಶ್ರಮಿಸಿದನಂತೆ!

ದೆವ್ವಗಳಲ್ಲಿ ಮರಾಠಿ ದೆವ್ವ, ಕನ್ನಡ-ತಮಿಳು-ತೆಲುಗು ಈ ರೀತಿ ಭಾಷಾವಾರು ದೆವ್ವಗಳಿದ್ದವೋ ಇಲ್ಲವೋ ಗೊತ್ತಿಲ್ಲ. ಆದರೂ ದೇಶಾದ್ಯಂತ ದೆವ್ವಗಳು ಇದ್ದವು ಎಂಬುದು ಮಾತ್ರ ಖಾತ್ರಿ. ದೆವ್ವಗಳು ಈಗ ಅಲ್ಪಸಂಖ್ಯಾತರ ಸಾಲಿಗೆ ಸೇರಿವೆಯೇನೋ ಅನಿಸುತ್ತಿದೆ! ಅಲ್ಪಸಂಖ್ಯಾತರಿಗೆ ಕೊಡಬೇಕಾದ ಆದ್ಯತೆಗಳನ್ನು ತಮಗೂ ಕೊಡಿ ಎಂದು ಹೇಳಲು ಅವು ಮುಂದೆಬಂದರೆ ನೋಡಲಾದರೂ ಸಿಗುತ್ತಿದ್ದವೇನೋ! ಸಾಕು ಆಯ್ತಾ ? ಹುಷಾರು ನೀವಿದನ್ನು ಓದಿ ಮುಗಿಸಿದ ದಿನ ಎಲ್ಲಾದರೂ ಕೊಳ್ಳಿದೆವ್ವ ಸಿಕ್ಕಿದರೆ ಹೇಳಲು ಮರೀಬೇಡಿ. ದೆವ್ವಗಳ ಭಯದಲ್ಲಿ ಅನುಕೂಲವಾಗಲಿ ಎಂದು ಕವಿ ದಿ| ಬಿ.ಎಂ.ಶ್ರೀಕಂಠೈಯ್ಯನವರು ನಮಗೆ ಕರುಣಿಸಿದ ಹಾಡಿನೊಂದಿಗೆ[ಹಾಡನ್ನು ಕತ್ತಲೆಯಲ್ಲಿ ಬೆಳಕೇ ಕೈ ಹಿಡಿದು ಮಕ್ಕಳನ್ನು ಕಾಪಾಡು ಎಂಬ ಈ ಅರ್ಥದಲ್ಲಿ ಬಳಸಿಕೊಂಡು] ದೆವ್ವಗಳ ಪುರಾಣವನ್ನು ಸದ್ಯಕ್ಕೆ ಮಡಚಿಟ್ಟು ಅದಕ್ಕೆ ಮಂಗಲಾರತಿ ಮಾಡೋಣ:


ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆಮ್ಮನು .......

Monday, January 3, 2011

ಸೂತ್ರಧಾರಗೊಂದನೆ


ಸೂತ್ರಧಾರಗೊಂದನೆ

ಇಗೋ ನಿನಗೆ ವಂದನೇ
ತಗೋ ಸದಾಭಿನಂದನೇ

ಮುನ್ನ ನೋವನೆಲ್ಲ ಮರೆತು
ನನ್ನ ಮನದಿ ಭಾವತಳೆದು
ಚೆನ್ನಾಗಿಹ ಶಬ್ದಗಳನು
ತಿನ್ನಬಡಿಸುವಾತನೇ

ರನ್ನ ಪಂಪ ಹರಿಹರಾದಿ
ಚಿನ್ನದಂಥ ಕವಿಗಳಿಂದ
ಕನ್ನವಿಟ್ಟು ಜನರಹೃದಯ
ಜೊನ್ನ ಸಮಯದೊಯ್ದನೇ !

ಅನ್ನನೀರು ಬಿಟ್ಟು ಅಳುವ
ಸೊನ್ನೆಯಾದ ಹಲವು ಮನಕೆ
ಕೆನ್ನೆ ಚಿವುಟಿ ಮುದವನೀಡಿ
ಪನ್ನದಲ್ಲಿ ಅಳೆದನೇ

ಹೊನ್ನು ಹೆಣ್ಣು ಮಣ್ಣಿಗೆಲ್ಲಾ
ಮನ್ನಣೆಯನು ನೀಡದಂತೇ
ಬೆನ್ನು ತಟ್ಟಿ ಬುದ್ಧಿಹೇಳಿ
ಚೆನ್ನುಡಿಯಲಿ ನಗುವನೇ

ಹುನ್ನಾರದ ಹುಳುಕು ಮನಕೆ
ನಿನ್ನೆ ಮೊನ್ನೆ ಗಳನು ತಿಳಿಸಿ
ಸನ್ನೆಯಲೇ ತಿದ್ದಿ ತೀಡ್ವ
ನನ್ನೊಡೆಯನೇ ವಂದನೇ

Sunday, January 2, 2011

ಸೊಗದೇಬೇರಿನ ಶರಬತ್ತು !


ಸೊಗದೇಬೇರಿನ ಶರಬತ್ತು !

ಹದಿನಾರಾಣೆ ಸತ್ಯ ಅಂದರೆ ನಮಗ್ಯಾರಿಗೂ ಗೊತ್ತಿರದ ನಾರು ಬೇರುಗಳ ಕಷಾಯಗಳನ್ನು ಯಾವುದೋ ಒಂದು ಹದದಲ್ಲಿ ಬೆರೆಸಿ ಅಂತೂ ರೋಗಗಳನ್ನು ವಾಸಿಮಾಡುವ ನಮ್ಮ ತಿಪ್ಪಾ ಭಟ್ಟರಿಗೆ ಸೊಗದೇಬೇರಿನ ಶರಬತ್ತು ಎಂದರೆ ಎಲ್ಲಿಲ್ಲದ ಪ್ರೀತಿ ! ಅವರಾಯಿತು ಅವರ ಕೆಲಸವಾಯಿತು ಪಾಪ ಯಾರ ಗೋಜಿಗೂ ಹೋಗದ ಮುಗ್ಧ ಜೀವ ಅದು! ಭಟ್ಟರು ಕಾಯಂ ಬಳಸುವ ದ್ರಾವಣಗಳಲ್ಲಿ ಸೊಗದೇಬೇರಿನ ಶರಬತ್ತೂ ಒಂದು. ಯಾರಿಗೇ ಏನೇ ಆದರೂ ಪ್ರಥಮವಾಗಿ ಅವರು ಕುಡಿಯಲು ಕೊಡುವುದು ಸೊಗದೇಬೇರಿನ ಶರಬತ್ತು. ಅಂದಹಾಗೆ ಈ ಶರಬತ್ತಿನ ಪರಿಚಯ ನಿಮಗಿರಬೇಕಲ್ಲ? ಇಲ್ಲವೇ ? ಹಾಗಾದರೆ ಒಂದೋ ನಾಗಸಂದ್ರದ ಮೂರನೇ ಅಡ್ಡರಸ್ತೆ ಹಾಗೂ ನಾಲ್ಕನೇ ಮುಖ್ಯರಸ್ತೆ ಸೇರುವ ಜಾಗದಲ್ಲಿರುವ ’ತಿರುಮಲೇಶ’ ನಾಮಧೇಯದ ಮನೆಗೆ ಭೇಟಿಕೊಡಿ ಅಥವಾ ಇದು ಸಾಧ್ಯವಾಗದಿದ್ದ ಪಕ್ಷದಲ್ಲಿ ಯಾವುದೇ ಆಯುರ್ವೇದದ ಅಂಗಡಿಗೆ ತೆರಳಿ ಅಲ್ಲಿ ಕೇಳಿ ಸಿಗುತ್ತದೆ! ಅದರ ರುಚಿಯನ್ನು ಬಲ್ಲವರೇ ಬಲ್ಲರು-ಇದು ಭಟ್ಟರಿಂದ ಕಡಾ ಪಡೆದು ಹೇಳಿದ ಮಾತು !

ಎಡವಟ್ಟಾಗಿದ್ದು ಎಲ್ಲಿ ಗೊತ್ತೇ? ಕೆಲವು ವರ್ಷಗಳ ಹಿಂದೆ ನಾನೂ ಅವರೂ ಯಾರದೋ ಮನೆಯಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ ರೇಡಿಯೋ ಕೂಗುತ್ತಿತ್ತು. ಬೆಳ್ಳಂಬೆಳಿಗ್ಗೆ " ಮಗೂಗೆ ಏನಾಯ್ತು .......ವುಡ್ವರ್ತ್ ಗ್ರೈಪ್ ವಾಟರ್ ಕೋಡೀಯಾ ಮಗುವಾಗಿದ್ದಾಗ ನಿಮ್ಮಮ್ಮಂಗೂ ನಾನು ಅದನ್ನೇ ಕೊಡ್ತಿದ್ದೆ " ಎಂದು ಅಜ್ಜಿ ಜಾಹೀರಾತಿನಲ್ಲಿ ಕೂಗುತ್ತಿರುವುದು ಭಟ್ಟರನ್ನು ಕೆರಳಿಸಿಬಿಟ್ಟಿತ್ತು !

" ಇವ್ಕೆಲ್ಲಾ ತಲೆಯಿಲ್ಲ ಜನಮಳ್ಳೊ ಜಾತ್ರೆಮಳ್ಳೋ ನಾವೆಲ್ಲಾ ಬದುಕಿ ಬೆಳೀಲಿಲ್ವಾ ಹೇಳ್ತಾರಪ್ಪ ಗ್ರೈಪ್ ವಾಟರಂತೆ ಗ್ರೈಪ್ ವಾಟರು ನಾವು ಕುಡಿಯೋ ಕಷಾಯಾನೋ ಸೊಗದೇಶರಬತ್ತನ್ನೋ ಕುಡಿಸಿದರೆ ಆಯ್ತಪ್ಪ....ಮಕ್ಳಿಗೆಲ್ಲಾ ಏಕ್ ದಂ ಕಮ್ಮಿ ಆಗ್ತದೆ ಮಾಡೂಕೆ ಬೇರೇ ಕೆಲ್ಸಿಲ್ಲಾ ಅದಕೇ ಇಂಥಾದ್ನೆಲ್ಲಾ ಹಾಕ್ತರೆ ರೇಡಿಯೋದಲ್ಲಿ "

ಭಟ್ಟರು ಏಕಾಏಕಿ ಕೋಪಾವಿಷ್ಟರಾಗಿದ್ದರು. ಅಷ್ಟು ಸಣ್ಣ ವಿಷಯಕ್ಕೆ ಭಟ್ಟರು ನಾರಸಿಂಹಾವತಾರ ತಾಳಿಬಿಟ್ಟಿದ್ದರು. ನಿಮಗೆ ಹೇಳಲು ಮರೆತಿದ್ದೆ-- ಅಲ್ಲಿಗೆ ನಾವು ಹೋಗಿದ್ದು ಯಾರಿಗೋ ಚ್ಯವನಪ್ರಾಶ ಮಾಡಿಕೊಡಲಾಗಿ. ಚ್ಯವನಪ್ರಾಶವನ್ನು ನೀವು ಮನದಣಿಯೇ ತಿಂದಿರಬಹುದು ಅಥವಾ ಕಾಸು ಜಾಸ್ತಿ ಅಂತ ಬಿಟ್ಟಿರಲೂ ಬಹುದು. ಕ್ಯಾಡ್ ಬರೀಸ್ ಚಾಕೋಲೇಟ್ ಗಿಂತ ರುಚಿಯಲ್ಲಿ ಹೆಜ್ಜೆ ಮುಂದಿರುವ ಚ್ಯವನಪ್ರಾಶದಲ್ಲಿ ಇರುವ ಸಾಮಾನುಗಳೇ ಅಂಥದ್ದು. ಉತ್ತುತ್ತೆ,ಒಣ ದ್ರಾಕ್ಷಿ, ಬಾದಾಮಿ, ಯಾಲಕ್ಕಿ, ಲವಂಗ, ಗಸಗಸೆ, ತುಪ್ಪ ಇತ್ಯೇತ್ಯಾದಿ ಘಟಾನುಘಟಿ ಪದಾರ್ಥಗಳನ್ನೆಲ್ಲಾ ಗೊತ್ತಾದ ಹದಕ್ಕೆ ಮಿಶ್ರಣಮಾಡಿ ಜಜ್ಜಿ-ಅರೆದು ಯಾವುದೋ ಹಂತದಲ್ಲಿ ಅಂತೂ ಕಾಯಿಸಿಯೋ ಬೇಯಿಸಿಯೋ ಎಲ್ಲಾ ಮುಗಿದಮೇಲೆ ತಣ್ಣಗಾದ ಅದುವೆ 'ಚ್ಯವನಪ್ರಾಶ'.

ಚ್ಯವನಪ್ರಾಶ ಎಂಬ ಹೆಸರು ಅದಕ್ಕೆ ಬರಲು ಕಾರಣವಿದೆ. ಚ್ಯವನನೆಂಬ ಋಷಿಕುಮಾರನಿಗೆ ಎಳವೆಯಲ್ಲೇ ಇರಬೇಕೆಂದೂ ಮುಪ್ಪು ಆವರಿಸಬಾರದೆಂದೂ ಆಸೆ ಹುಟ್ಟಿತು. ಆಗ ಆತ ಹಲವು ಮಾರ್ಗಗಳಲ್ಲಿ ಅದಕ್ಕೆ ಚಿಕಿತ್ಸೆಗಳನ್ನು ಮಾಡಿಕೊಳ್ಳತೊಡಗಿದ. ಆಗ ಹುಟ್ಟಿದ್ದೇ ಈ ಚ್ಯವನಪ್ರಾಶ. ’ಪ್ರಾಶ’ ಎನ್ನುವುದು ಸಂಸ್ಕೃತದ ಮರಿ! ಪ್ರಾಶನ ಎಂದರೆ ತಿನ್ನಿಸುವುದು, ಅದರ ಬಾಲ ಕತ್ತರಿಸಿದಾಗ ಸಿಗುವುದೇ ಪ್ರಾಶ. ಆ ಪ್ರಾಶವನ್ನು ಅಂದರೆ ತಿನ್ನಬಹುದಾದದ್ದನ್ನು ಚ್ಯವನನ ನೆನಪಿನಲ್ಲಿ ಅದೇ ಹೆಸರಿಗೆ ಜೋಡಿಸಿ ಚ್ಯವನಪ್ರಾಶವಾಯಿತು. ಚ್ಯವನಪ್ರಾಶ ತಿಂದವರೆಲ್ಲಾ ಎಳಬರಾಗೇ ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಒಂದಷ್ಟು ಶಕ್ತಿಯಂತೂ ಬರುವುದು ಖಚಿತ--ಈ ಸಲಹೆ ನಿಮಗೆ ಉಚಿತ ! ಸುಕನ್ಯೆ ಚ್ಯವನನ ರೂಪರಾಣಿ. ಅವಳಿಗಾಗಿ ತನ್ನ ಪ್ರಾಯ ಕಾಪಿಡಲು ಚ್ಯವನ ಪ್ರಯತ್ನಿಸಿದ ಎಂದಮೇಲೆ ನಮ್ಮ ಯುವಜನಾಂಗ ಈ ಕುರಿತು ಸ್ವಲ್ಪ ಯೋಚಿಸಬೇಕಾದ್ದು ನ್ಯಾಯ!

ಭಟ್ಟರಿಗೂ ಚ್ಯವನಪ್ರಾಶಕ್ಕೂ ತೀರಾ ಅನ್ಯೋನ್ಯತೆ ಥಳುಕುಹಾಕಿದ್ದೇನಿಲ್ಲ. ಆದರೆ ಹಲವಾರು ಔಷಧಗಳನ್ನು ಮನೆಯಲ್ಲೇ ತಯಾರಿಸಿಕೊಡುವ ಭಟ್ಟರು ಪುರೋಹಿತರಂತೇ ಅಲ್ಲಲ್ಲಿ ಅಲ್ಲಲ್ಲಿ ತನ್ನ ಅಭಿಮಾನೀ ಶಿಷ್ಯಬಳಗವನ್ನೇ ಹೊಂದಿದ್ದು ಆಗಾಗ ಅವರಿಗೆಲ್ಲಾ ಬೇಕಾದ ಔಷಧವನ್ನೋ ಕಷಾಯವನ್ನೋ ಅವರವರ ಮನೆಗೇ ತೆರಳಿ ಮಾಡಿಕೊಡುವುದು ಭಟ್ಟರ ವಾಡಿಕೆ. ಹಾಗಂತ ಭಟ್ಟರು ಯಾರಲ್ಲೂ ಇದನ್ನು ಬಡಾಯಿ ಕೊಚ್ಚಿಲ್ಲ. ಅವರನ್ನೇ ಕೇಳಿ ಯಾವುದೇ ಕೆಲಸವನ್ನೇ ಆಗಲಿ

" ಆಡದೇ ಮಾಡುವವ ರೂಢಿಯೊಳಗುತ್ತಮನು.
ಆಡಿಮಾಡುವವ ಮಧ್ಯಮನು
ಅಡಿಯೂ ಮಾಡದವ ಅಧಮನೆಂದಾ | ಸರ್ವಜ್ಞ "

ಹೀಗಾಗೀ ನಮ್ಮ ಭಟ್ಟರು ಹಾಗೆಲ್ಲಾ ಮಾತಾಡಿ ಕೆಡಿಸುವುದಿಲ್ಲ. ಒಂದು ಲೋಟ ಸೊಗದೇಶರಬತ್ತನ್ನು ಏರಿಸಿಕೊಂಡು ಚ್ಯವನಪ್ರಾಶ ಮಾಡಲು ಕುಳಿತುಬಿಟ್ಟರೆ ಆರು ಮೂರಾಗಲಿ ಮೂರು ಆರಾಗಲಿ ಅದು ಮುಗಿದಮೇಲೆಯೇ ಏಳುವುದು. ಮಧ್ಯೆ ವಿರಾಮವವೇ ಇರುವುದಿಲ್ಲ. ಚ್ಯವನಪ್ರಾಶ ಮಾಡುವುದು ತಿಂದಷ್ಟು ಸುಲಭವಲ್ಲ, ಕಮ್ಮೀ ಕಮ್ಮೀ ಅಂದ್ರೂ ೩-೪ ಗಂಟೆಕಾಲ ಬೇಕೇ ಬೇಕು, ಮಧ್ಯೆ ನಿಲ್ಲಿಸುವ ಹಾಗಿಲ್ಲ. ಹೆಚ್ಚೇಕೆ ಉಚ್ಚೆಗೆ ಎದ್ದುಹೋಗಲೂ ಆಗುವುದಿಲ್ಲ. ಅದನ್ನು ಮಾಡುವುದು ವೃತಮಾಡಿದಷ್ಟೇ ಪ್ರಯಾಸಕರ! ಆದರೂ ಯಾವುದೇ ಬೇಸರವಿಲ್ಲದೇ ಈ ಕಾಯಕದಲ್ಲಿ ತಲ್ಲೀನರಾಗುತ್ತಾರೆ. ಅರ್ಥಾತ್ ಬಸವಣ್ಣ ಹೇಳಿದ ಕಾಯಕಯೋಗಿ ಅವರು, ಶ್ರೀಕೃಷ್ಣ ಹೇಳಿದ ಹಾಗೇ ಕರ್ಮಯೋಗಿ ಅವರು.

ಚ್ಯವನಪ್ರಾಶ ಮಾಡುವುದರಲ್ಲೂ ಅದ್ಭುತ ಯಶಸ್ಸನ್ನು ಗಳಿಸಿರುವ ಶ್ರೀಯುತರು ಮಾಡಿದ ಚ್ಯವನಪ್ರಾಶ ತಿಂದವರು ಹೇಳುವಂತೇ " ಒಮ್ಮೆ ತಿಂದರೆ ಬೇರೇ ಬ್ರಾಂಡೆಡ್ ಚ್ಯವನಪ್ರಾಶಗಳನ್ನೆಲ್ಲಾ ನೀವು ಮೂಸಿ ಕೂಡ ನೋಡುವುದಿಲ್ಲ " ಸಾಕಾ ಸರ್ಟಿಫಿಕೇಟು ? ಹಾಗಂತ ಅವರು ಬಳಸುವ ಫಾರ್ಮ್ಯುಲಾಕ್ಕೊಂದು ಪೇಟೆಂಟ್ ಪಡೆಯಬೇಕೆಂಬುದು ಭಟ್ಟರ ಇರಾದೆ. ಆದರೂ ಕೆಲವೊಮ್ಮೆ ಅದರಲ್ಲಿ ವಿರಕ್ತಿ-" ಹೋಗ್ಲಿ ಬಿಡು ಒಬ್ಬನ ಜೀವಮಾನ ಎಷ್ಟ್ ದಿನಾ ಅಂತೀಯ ? ನಾ ಸತ್ತಮೇಲಾದ್ರೂ ಇದೇ ಥರ ಮಾಡೋದ್ನ ನಾಲ್ಕ್ ಜನ ಕಲ್ತಿದ್ರೆ ಮಾಡ್ಬೋದಲ್ವ? ಒಂದೊಮ್ಮೆ ಯಾರಿಗೂ ಬರ್ದೇ ಇದ್ರೆ ನಾ ಕಲಿತ ಈ ವಿದ್ಯೆ ಹಾಗೇ ಮರೆಯಾಗ್ತದಲ್ಲ ? ಬೇಕಾದವ್ರು ಬೇಕಾದ್ದು ಮಾಡ್ಕಳ್ಳಿ ಬಿಡು " ಅಂತಿದ್ರು. ಚ್ಯವನಪ್ರಾಶ ಮುಗಿದಮೇಲೆ ಮತ್ತೊಮ್ಮೆ ಸೊಗದೇಶರಬತ್ತನ್ನು ಸ್ವಲ್ಪ ಕುಡಿದರೆ ಅದರಿಂದ ಸಿಗುವ ಪರಮಾನಂದವೇ ಬಣ್ಣಿಸಲಸದಳ ಅಂತಾರೆ ಭಟ್ರು.

ಯಂಕೋಜಿ ಕೆಲವೊಮ್ಮೆ ಮಂಕಾಗಿ ಕೂತಾಗೆಲ್ಲಾ ಅವನ ತಾತ ಹೇಳೋದುಂಟು" ಹೋಗೋ ಮಂಕೆ ಭಟ್ರ ಮನೆಗೆ ಹೋಗಿ ಒಂದು ಗ್ಲಾಸು ಸೊಗದೇ ಶರಬತ್ತು ತೆಗೆದುಕೊಂಡು ಬಾ ಅದನ್ನು ಕುಡಿ ನಿಂಗಿರೋ ಆಲಸ್ಯ ಎಲ್ಲಾ ಬಿಟ್‍ಹೋಗುತ್ತೆ ನೋಡು. " ! ಕೆಲಸದಲ್ಲಿ ನಿರುತ್ಸಾಹ, ನಿದ್ರಾಹೀನತೆ, ನಿರಾಸಕ್ತಿ, ಹೊಟ್ಟೆಯ ತಳಮಳ, ಸುಸ್ತು ಇಂಥದ್ದಕ್ಕೆಲ್ಲಾ ಸೊಗದೇಬೇರಿನ ಶರಬತ್ತು ದಿವ್ಯೌಷಧ ಅಂತಾರೆ ನಮ್ ತಿಪ್ಪಾಭಟ್ರು.

ಸರಳಜೀವನ ನಡೆಸಿಬಂದ ಭಟ್ಟರನ್ನು ಎದುರಿಗೇ ಸಿಕ್ಕಿದರೂ ನೀವು ಗುರುತಿಸಲು ಸಾಧ್ಯವಿಲ್ಲ. ಆದರೆ ಗೊತ್ತಿದ್ದವರು ಅರ್ಧಾ ಕಿಲೋಮೀಟರ್ ದೂರದಿಂದಲೇ ಅವರ ಬಿಳಿಚಾಟಿ [ಕಪ್ಪು ಕೊಡೆ ಬಿಸಿಲಿನಲ್ಲಿ ತಿರುಗೀ ತಿರುಗೀ ಬೆಳ್ಳಗಾಗಿದ್ದು]ಕೊಡೆಯನ್ನು ಕಂಡೇ ಗುರುತು ಹಿಡಿಯುತ್ತಾರೆ. ಅಲ್ಲಲ್ಲಿ ತೂತುಗಳೂ ಇರುವ ಕೊಡೆಯನ್ನು ಸದಾ ಸಂಗತಿಯನ್ನಾಗಿ ಇರಿಸಿಕೊಂಡ ಭಟ್ಟರಿಗೆ ಕೊಡೆಯೆಂದ್ರೆ ಬಹಳ ಇಷ್ಟ. ಅದೊಂಥರಾ ಋಣಾನುಬಂಧ ಇದ್ದಹಾಗೇ ಅಂತಾರೆ! ಹತ್ತಾರುಸಲ ದುರಸ್ತಿ ನಡೆದಿದ್ರೂ, ಕಡ್ಡಿಗಳೆಲ್ಲಾ ತುಕ್ಕು ಹಿಡಿದು ವೇಗದ ಗಾಳಿಗೆ ಮುರಿದುಬೀಳುವಷ್ಟು ಮುದುಕಾಗಿದ್ರೂ ಭಟ್ಟರಿಗೆ ಅದೇ ಕೊಡೆಯ ಸೇವೆ ಪ್ರೀತಿ. ಅದನ್ನು ಮಾತ್ರ ಬಿಟ್ಟವರಲ್ಲ. ಅವರ ಈ ರೀತಿಯನ್ನು ನೋಡೇ ನಮ್ಮ ಕವಿಯೊಬ್ಬರು -

ತಿಪ್ಪಾ ಭಟ್ಟರ ಚೆಂದ ಕೊಡೆ
ಸಾವಿರ ತೂತುಗಳಿಂದ ಕೊಡೆ
ಮಳೆನೀರೆಲ್ಲಾ ಒಳಗಡೆಗೆ
ಭಟ್ಟರು ಮಿಂದರು ಕೊಡೆಯೊಳಗೆ

--ಎನ್ನುವ ಹಾಡನ್ನು ಬರೆದಿರಬೇಕು ಎನಿಸುತ್ತದೆ.

ಒಮ್ಮೆ ಭಟ್ಟರ ಮಗಳನ್ನು ಪರವೂರ ಗಂಡಿನಕಡೆಯವರು ನೋಡಲು ಬಂದಿದ್ದರು. ಅವರಿಗೆಲ್ಲಾ ಸ್ವಾಗತಕೋರಿದ ಭಟ್ಟರ ಮೊದಲ ಶೈತ್ಯೋಪಚಾರ ಎಂದರೆ ಸೊಗದೇಬೇರಿನ ಶರಬತ್ತು! ಸರಿಸುಮಾರು ಮುಕ್ಕಾಲುಗಂಟೆ ಶರಬತ್ತಿನ ಬಗ್ಗೆ ಭಾಷಣಮಾಡಿದ ಭಟ್ಟರ ವಾಗ್ಝರಿಯಲ್ಲಿ ಗಂಡಿನಕಡೆಯವರು ಬಂದ ಕೆಲಸವನ್ನೇ ಮರೆತಿದ್ದರು! ಅಮೇಲೆ ಭಟ್ಟರ ಮುಗ್ದ ಸ್ವಭಾವ, ಹುಡುಗಿಯ ಸೌಂದರ್ಯ-ಅರ್ಹತೆ ಎಲ್ಲಾ ಹಿಡಿಸಿದ್ದರಿಂದ ಮದುವೆಯೂ ನಡೆದುಹೋಯಿತು. ಮದುವೆಯಲ್ಲಿ ಬಳುವಳಿ ಸಾಮಾನುಗಳ ಜೊತೆಗೆ ತಾವೇ ತಯಾರಿಸಿದ ಸೊಗದೇಬೇರಿನ ಶರಬತ್ತಿನ ಬಾಟಲನ್ನು ಕೊಡಲು ಭಟ್ಟರು ಮರೆಯಲಿಲ್ಲ !

ಮೊನ್ನೆ ’ಆಯುರ್ವೇದ ಕಾಂಗ್ರೆಸ್’ ಎನ್ನುವ ಆಯುರ್ವೇದದ ಬಗೆಗಿನ ಮಾಹಿತಿ ಹಾಗೂ ಪ್ರಚಾರವನ್ನು ಸರಕಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿತ್ತಲ್ಲ ? ಆಗ ಅಲ್ಲಿಗೆ ಬರುವ ಆಸೆ ಇತ್ತಂತೆ ಭಟ್ಟರಿಗೆ. ಆದರೆ 'ಕಾಂಗ್ರೆಸ್' ಅಂತಿದೆಯಲ್ಲ ಒಂದೊಮ್ಮೆ ಅದು ಕಾಂಗ್ರೆಸ್ ಪಾರ್ಟಿ ವತಿಯಿಂದ ನಡೆಸುವಂತಹದ್ದಿರಬಹುದು ತನಗೆ ಯಾವ ಪಕ್ಷವೂ ಬೇಡ ಎನ್ನುವ ಅಂಬೋಣದಿಂದ ಅವರು ತಪ್ಪಿಸಿಕೊಂಡರಂತೆ. ಆಮೇಲೇ ತಿಳಿದದ್ದು ಕಾಂಗ್ರೆಸ್ ಅಂದರೆ ಅದೊಂದು ಸಮಾವೇಶವೇ ಹೊರತು ಕಾಂಗ್ರೆಸ್ ಪಕ್ಷಕ್ಕಷ್ಟೇ ಸೀಮಿತವಲ್ಲ ಎಂಬುದು. ಇಲ್ಲದಿದ್ದರೆ ಭಟ್ಟರ ಸೊಗದೇಬೇರಿನ ಶರಬತ್ತು ತುಂಬಿದ ಕೆಲವು ಬಾಟಲಿಗಳಾದರೂ ಅಲ್ಲಿ ಕಾಣಸಿಗುತ್ತಿದ್ದವು! ಶರಬತ್ತಿಗೆ ’ತಿಪ್ಪಾ ಭಟ್ಟರು ತಯಾರಿಸಿದ ’ ಎಂದಿರುತ್ತದೆ ಬಿಟ್ಟರೆ ಬೇರೇ ಯಾವುದೇ ಬ್ರ್ಯಾಂಡ್ ಹಾಕುವುದಿಲ್ಲ. ಭಟ್ಟರೇನಾದರೂ ಕಂಪನಿ ತೆರೆದು ಬ್ರ್ಯಾಂಡ್ ಹಾಕಿದ್ದರೆ ಇಷ್ಟೊತ್ತಿಗೆಲ್ಲಾ ನಟನಟಿಯರನ್ನಿಟ್ಟು ಜಾಹೀರಾತು ಕೊಟ್ಟು ಮಾರುಕಟ್ಟೆ ಗಳಿಸುವ ಅನೇಕ ಕಂಪನಿಗಳನ್ನು ಹಿಂದೆಹಾಕುತ್ತಿದ್ದರು.


ಪುರಾಣ
ಕೇಳಿದಿರಲ್ಲ ನಿಮಗೇನಾದರೂ ಭಟ್ಟರ ತಯಾರಿಕೆಯ ಸೊಗದೇ ಶರಬತ್ತು ಬೇಕೆ ? ಬೇಕೆಂದಿದ್ದಲ್ಲಿ ಮತ್ತೊಮ್ಮೆ ಅವರು ಎಲ್ಲಿ ಸಿಗುತ್ತಾರೆಂದು ವಿಚಾರಿಸಿ ಹೇಳುತ್ತೇನೆ ಆಗದೇ? ಮರೆಯದಿರಿ ಮರೆತು ನಿರಾಶರಾಗದಿರಿ ’ತಿಪ್ಪಾಭಟ್ಟರು ತಯಾರಿಸಿದ ಸೊಗದೇಬೇರಿನ ಶರಬತ್ತು’ !