ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, October 11, 2010

ಅಯೋಮಯ!


ಅಯೋಮಯ!

ಉಂಡಮನೆಗೆ ಎರಡು ಬಗೆವ
ಭಂಡ ರಾಜಕೀಯದವರ
ಕಂಡುಸೋತು ಮನವು ದಿನವು ಬರೆಯದಾಯಿತು !
ಕಂಡಕಂಡಲೆಲ್ಲ ಅಲೆದು
ಮೊಂಡು ಬುದ್ಧಿಬಹಳ ಮೆರೆದು
ಕೊಂಡು-ಕೊಡುವ ಕುದುರೆ ವ್ಯಾಪಾರನೋಡಿತು !

ಮಂಡೆಬಿಸಿ ಮಾಡಲೊಮ್ಮೆ
ಅಂಡಿಗೆ ಬಿಸಿಮುಟ್ಟಿಸುತ್ತ
ಚಂಡು ತೂರಿ ಮಜವಪಡೆವ ಶಾಸಕರನೋಡಿತು!
ಭಂಡಧೈರ್ಯದಿಂದ ಕೋಟಿ
’ಬಂಡವಾಳ’ದಂತೆ ಸುರಿವ
ಪುಂಡು ಹುಡುಗುರಾಜಕೀಯವನ್ನು ಕಂಡಿತು !

ಹೆಂಡ-ಹೆಣ್ಣು-ಹಣವ ಪಡೆದು
ಮಂಡಿಯೂರಿ ನಮಿಸುವಂತ
ಉಂಡೆನಾಮವಿಟ್ಟ ಶಾಸಕರ ಹುಡುಕಿತು !
ಹಿಂಡುಕಟ್ಟಿಕೊಂಡು ತಾವು
ಗೂಂಡಾಗಳು ಎಂದು ತೋರಿ
ಥಂಡುಹೊಡೆದು ದಾಸರಾದುದನ್ನು ಅರಿಯಿತು!

ಸಂಡಿಗೆ ಕಜ್ಜಾಯ ಮೆದ್ದು
ಗುಂಡಿಗೆಯಲಿ ತಂತ್ರಹೂಡಿ
ಮುಂಡೆಮದುವೆಯಲುಂಬ ಕೆಲವು ’ಕೈ’ಯನಂಬಿತು!
ಅಂಡುಸುಟ್ಟ ಬೆಕ್ಕಿನಂತೆ
ಅಂಡೆಚೆಡ್ಡಿ ಚಿವುಟಿಗೊಳುತ
ಕೊಂಡು-ಕಳೆದು ಹಪಹಪಿಸಿದ ’ದಳ’ವ ಕಂಡಿತು!

ಬೆಂಡೆಕಾಯಿ ಹುರಿದರೀತಿ
ಗುಂಡಿಯದುಮಿ ಬರೆದುಹರಿದು
ಬಂಡಿತುಂಬ ಮತವೆಣಿಸಿದ ರೀತಿ ನೆನೆಸಿತು!
ಕಂಡೂ ಕಂಡೂ ಕೊಡುವೆವಲ್ಲ
ಕುಂಡೆ-ಹೊಟ್ಟೆ ಬೆಳೆದ ಜನಕೆ
ಮಂಡೆಸರಿಯಿಲ್ಲ ನಮಗೆ ಎಂದು ಮರುಗಿತು !

9 comments:

  1. ಈವೊತ್ತಿನ ನೀಚ ರಾಜಕಾರಣಿಗಳ ವರ್ಣನೆಯನ್ನು ಸಮರ್ಥವಾಗಿ ಮಾಡಿದ್ದೀರಿ. ಆದರೆ ಇವರು ಸುಧಾರಿಸಿಯಾರೆ?

    ReplyDelete
  2. ಭಟ್ಟರೇ,
    ಇಂದು ವಿಧಾನಸಭೆಯ ರಣರಂಗವನ್ನು ನೋಡಿದಾಗ ದು:ಖವಾಯ್ತು.ಏನು ಸ್ವಾಮಿ ಇವರನ್ನೇನಾ ನಾವು ಆರಿಸಿ ಕಳಿಸಿದ್ದು?
    ಎಂತಹಾ ಪುಂಡರ ಕೈಯ್ಯಿಗೆ ನಮ್ಮ ಜುಟ್ಟು ಕೊಟ್ಟಿದ್ದೇವೆ, ಸ್ವಾಮಿ !ಛೆ! ಛೆ!

    ಅಂತೂ ಇದಕ್ಕೂ ಅಕ್ಷರಕೊಟ್ಟು ಕವನರೂಪಕ್ಕೆ ತಂದು ಬಿಟ್ಟಿರಿ. ನಿಮ್ಮ ಸಾಹಸಕ್ಕೆ ಏನೆಂದು ಹೇಳಲಿ!
    ರಾತ್ರಿ ಹನ್ನೆರಡು ದಾಟಿ ಬಿಟ್ಟಿದೆ, ಮಲಗುವೆ. ನಾವಂತೂ ಹಾಸನದಲ್ಲಿ ಕಳೆದ ಐದು ದಿನಗಳಿಂದ ಒಂದಿಷ್ಟು ಸದ್ವಿಚಾರವನ್ನು ಆಲಿಸುತ್ತಾ ನವರಾತ್ರಿಯನ್ನು ಆಚರಿಸುತ್ತಿದ್ದೇವೆ.
    ಶುಭವಾಗಲಿ.

    ReplyDelete
  3. Bhatre,

    Samayochita Kavana..ivattina raajakeeya paristhiti nodi nijakku besaravaguttide,yaarannu aayke maadabeku embude uttara sigada prashne aagibittide..

    ReplyDelete
  4. ವಿ.ಆರ್.ಬಿ ಸರ್...ಹಹಹ ಬಹಳ ಒಪ್ಪುವ ಮತ್ತು ಜಾಣನಿಗೆ ಮಾತಿನ ಪೆಟ್ಟು ಎನ್ನುವಂತೆ..ಇವೆ ಸಾಲುಗಳು,,,ಆದರೆ ನಮ್ಮ ದುರಾದೃಷ್ಟ ವಿ.ಸೌ.ದಲ್ಲಿ ಜಾಣತನ ದೂರದೂರಕ್ಕೂ ಅಗೋಚರ,,,ಪುಂಡತನದ ಪರಮಾವಧಿ ಎಲ್ಲರಿಂದಲೂ ಅದರಲ್ಲೂ ಹಿರಿಯರಿಂದ...ಛೇ...

    ReplyDelete
  5. ನಿನ್ನೆಯ ರಾಜಕೀಯ ಮೇಲಾಟಕ್ಕೆ ಮೊಟಕುವ೦ತೆ ಸಮಯೋಚಿತವಾಗಿದೆ ನಿಮ್ಮ ಭೋಗ ಷಟ್ಪದಿ. ಚೆನ್ನಾಗಿದೆ. ಬೇಸರದ ವಿಷಯವೆ೦ದರೆ ಆ ಲಜ್ಜೆಗೆಟ್ಟ ರಾಜಕಾರಣಿಗಳಿಗೆ ಜನರ ಭಾವನೆಗಳು ಅರ್ಥವಾಗುವುದಿಲ್ಲವಲ್ಲ.

    ReplyDelete
  6. ಹೊಲಸು ರಾಜಕೀಯ ನೋಡಿ ಜಿಗುಪ್ಸೆಯಾಗುತ್ತಿದೆ. ಇದರಿಂದ ಬಿಡುಗಡೆಯೇ ಇಲ್ಲವೆ ಎಂದು ಹತಾಶೆ.

    ReplyDelete
  7. ಎಲ್ಲರಿಗೂ ಅನಂತ ಧನ್ಯವಾದಗಳು

    ReplyDelete
  8. ಹೊಲಸಾಗಿದ್ದ ರಾಜಕೀಯ ಇನ್ನೂ ಅಧೋಗತಿಗೆ ಇಳಿಯುತ್ತಾ ಏನು ಹೇಳಬೇಕೆಂದೇ ತೋಚದಂತೆ ಮಾಡಿದೆ. ಮಾಧ್ಯಮದವರ ಕ್ಯಾಮೆರಾ ಎಲ್ಲವನ್ನೂ ಸೆರೆಹಿಡಿಯುತ್ತಿದೆ ಎಂದು ತಿಳಿದೂ ಹೀಗೆ ಅತ್ಯಂತ ಕೀಳುತನದಿಂದ ನಡೆದುಕೊಳ್ಳುತ್ತಿರುವ ರಾಜಕಾರಣಿಗಳನ್ನು ನೋಡಿ, ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ... ಧನ್ಯವಾದಗಳು ಭಟ್ ಸಾರ್...

    ಶ್ಯಾಮಲ

    ReplyDelete
  9. ಹೊಲಸು ಎ೦ದರೆ ಹೊಲಸಿಗೆ ಅವಮಾನ ನಮ್ಮ ರಾಜಕಾರಣಿಯರನ್ನು ಅದಕ್ಕಿ೦ತಾ ಕಡೆಯಾಗಿ ಹೇಳೊಕ್ಕೆ ಸಾಹಿತಿಗಳು ಹೊಸಶಬ್ದ ಹುತ್ತು ಹಾಕಬೇಕಿದೆ.
    ಚೆ೦ದದ ಕವನ.

    ReplyDelete