ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, October 9, 2010

ಜಗವೆಂಬ ಹಕ್ಕಿ ಗೂಡು


ಜಗವೆಂಬ ಹಕ್ಕಿ ಗೂಡು

ಜಗವದೊಂದು ಹಕ್ಕಿ ಗೂಡು
ಅದಕೆ ತಾಯ ರೆಕ್ಕೆ ಮಾಡು
ಮರಿಗಳಿಹವು ಚಿಲಿಪಿಲಿಪಿಲಿ
ಗುಟುಕಿಗಾಗಿ ಗಲಿಬಿಲಿ !

ನಗುವು ನಲಿವು ಏಳುಬೀಳು
ಅಗಲಿಬಾಳದಂತ ಬಯಕೆ !
ತಾಯಿ ಮುನಿಸಿಕೊಂಡರಾಗ
ಸಹಿಸಿ ಬಾಳಲಾರೆವು

ಅಮ್ಮ ಪ್ರೀತಿ ತೋರ್ವಳೊಮ್ಮೆ
ಸುಮ್ಮನೇ ಕುಕ್ಕುವಳಿನ್ನೊಮ್ಮೆ
ನಮ್ಮ ಹುಟ್ಟು ಏತಕೆಂಬ
ಆಳ ಅರಿಯದಾದೆವು

ಹುಟ್ಟನಿರೀಕ್ಷಿತವು ಎಮಗೆ
ಸಾವು ಅನಿವಾರ್ಯದಾ ಘಳಿಗೆ
ಹುಟ್ಟು ಮತ್ತು ಸಾವ ನಡುವೆ
ಗೂಡಲೊಮ್ಮೆ ಚಿಗಿತೆವು !

ಜನುಮಜಾತ ಕರ್ಮದಲ್ಲಿ
ಭವದ ಬಂಧ ತೊರೆವುದೆಲ್ಲಿ ?
ನಗದು ಪುಣ್ಯಗಳಿಸಿ ಇಹದ
ಸಾಲ ತೀರಿಸುವೆವು !

ಗೆಲುವ ಸೂರ್ಯ ಕಿರಣ ಹೊಳೆದು
ಬಳಿಕ ರೆಕ್ಕೆ-ಪುಕ್ಕ ಬಲಿದು
ಅಮ್ಮ ಹಾರಕಲಿಸೆ ಒಮ್ಮೆ
ದೂರಹೊರಗೆ ಹೊರಟೆವು !

7 comments:

 1. ಭಟ್ಟರೆ,
  ಮಾನವ ಜನ್ಮ ಹಾಗು ಪಕ್ಷಿಜನ್ಮ ಮೂಲತಃ ಬೇರೆ ಅಲ್ಲ. ಆ ಜಗಜ್ಜನನಿ ನಮ್ಮನ್ನು ಯಾವ ಗೂಡಿನಲ್ಲಿ ಇರಿಸುತ್ತಾಳೊ, ಯಾವ ಗುಟುಕು ನೀಡುತ್ತಾಳೊ ಅದರಿಂದ ನಾವು ಸಮಾಧಾನ ಪಡೆಯಬೇಕು. ಸರಳ ಪದಗಳಲ್ಲಿ ನಮ್ಮ ಭಾರತೀಯ ತತ್ವವನ್ನು ಸೊಗಸಾಗಿ ತಿಳಿಸುತ್ತಿದ್ದೀರಿ. ಅಭಿನಂದನೆಗಳು.

  ReplyDelete
 2. ಹಕ್ಕಿಮರಿಗಳ ಅಳಲಿನ ಮೂಲಕ ನಮ್ಮ ಜೀವನ ತತ್ವವನ್ನೇ ತೆರೆದಿಟ್ಟಿದ್ದೀರಿ. ಉತ್ತಮ ಕವನಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೊಮ್ಮೆ ಬನ್ನಿ.

  ReplyDelete
 3. ಹಕ್ಕಿಗಳ ಜೀವನಕ್ಕೂ ನಮ್ಮ ಜೀವನಕ್ಕೂ ಎಷ್ಟೊಂದು ಸಾಮ್ಯತೆ ಇದೆಯಲ್ಲಾ ಗುರುಗಳೇ!ನೀವು ಹೇಳುವವರೆಗೆ ಇದು ಹೊಳೆದಿರಲಿಲ್ಲ.ಧನ್ಯವಾದಗಳು.

  ReplyDelete
 4. Bhatre,

  Once again, Superbbb...Tumbaa chennagide...

  ReplyDelete
 5. ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ನಮನಗಳು ಮತ್ತು ಮತ್ತೊಮ್ಮೆ ಮಗುದೊಮ್ಮೆ ನಿಮಗೂ, ನಿಮ್ಮ ಕುಟುಂಬದವರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು .

  ಹೊಸದಾಗಿ ಲಿಂಕಿಸಿಕೊಂಡ ಜಗನ್ನಾಥ್ ಮಸ್ಕಿ ಮತ್ತು ಸತೀಶ್ ಗೌಡ ಈರ್ವರಿಗೂ ಸ್ವಾಗತ ಮತ್ತು ನಮನ

  ReplyDelete