ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, July 30, 2010

ಗಾಡಿಕಾರನ ರೂಢಿ



ಗಾಡಿಕಾರನ ರೂಢಿ



ಗೂಡಲಿರುವೀ ಕಣ್ಣ
ದೂರದೆಡೆ ಹರಿಬಿಟ್ಟು
ಆಡಿ ತುಂಬಿದೆ ಮನದಿ ರೂಪಗಳನ




ಬೇಡವೆಂದರು ಬಿಡದೆ
ಕಿವಿಗಳನು ತೆರೆದಿಟ್ಟು
ಜಾಡಿಸುತ ತುಂಬಿರುವೆ ಶಬ್ಧಗಳನ


ನಾಡನೆಲ್ಲವ ತಿರುಗಿ
ನಾಸಿಕದಿ ಆಘ್ರಾಣಿಸಿ
ಕಾಡಿ ತುರುಕಿದೆ ಒಳಗೆ ಕಂಪುಗಳನ


ಬೀಡಾಡಿ ತಿನ್ನುತ್ತ
ಮತ್ತಷ್ಟು ಒದರೆಂದು
ಜೋಡಿಸಿದೆ ಜಿಹ್ವೆಯೊಳು ರುಚಿಗ್ರಂಥಿಗಳನ


ಬೀಡುಬಿಡುತಲಿ ಸ್ಪರ್ಶ
ಸುಖ ನೀಡಿ ಪಡೆಯೆಂದು
ಮಾಡುಮಾಡಿದೆ ಚರ್ಮ ಪದರಗಳನ


ಗಾಡಿಯನು ನಮಗಿತ್ತು
ಸವಲತ್ತು ಕೊಟ್ಟುಣಿಸಿ
ಗಾಢಾಂಧಕಾರದಲಿ ಕೂಡಿ ನಮ್ಮನ್ನ

ಗಾಡಿಕಾರನೆ ನಿನ್ನ
ಅಡಿಯೆಲ್ಲಿ ಮುಡಿಯೆಲ್ಲಿ ?
ವಾಡಿಕೆಯು ಪೂಜಿಪುದು ಹಲರೂಪಗಳನ

11 comments:

  1. ಸರ್ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ಕೊಡ್ಬೇಕು ಅಂತ ಒಂದೆರಡು ನಿಮಿಷ ಸುಮ್ಮನೆ ಕೂತುಬಿಟ್ಟೆ.....ವರ್ಣನೆ ಚನ್ನಾಗಿದೆ ಜೊತೆಗೆ ಹೊಸತನ ...
    ಗಾಡಿಕಾರನೆ ನಿನ್ನ
    ಅಡಿಯೆಲ್ಲಿ ಮುಡಿಯೆಲ್ಲಿ ?
    ವಾಡಿಕೆಯು ಪೂಜಿಪುದು ಹಲರೂಪಗಳನ
    ಈ ಪ್ರಶ್ನೆ ನನ್ನ ಕೂಡ ಕಾಡುತಿದೆ ...ತುಂಬಾ ಇಷ್ಟವಾಯ್ತು

    ReplyDelete
  2. ಈ ಚಿಂತನಶೀಲ ಕವನಗಳಲ್ಲಿ ಸೃಷ್ಟಿಯ ವಿವಿಧ ಮಜಲುಗಳನ್ನು ಮತ್ತು ಅದರ ನಿರ್ಮಾತೃವನ್ನು ನೆನೆಸಿಕೊಳ್ಳುವ ಪ್ರಕ್ರಿಯೆ ಸದಾ ಜಾರಿಯಲ್ಲಿರುತ್ತದೆ. ನಮ್ಮೊಳಗೂ ಹೊರಗೂ ಇರುವ ಆದರೆ ಅರಿವಿಗೆ ನಿಲುಕದ ಒಂದು ಶಕ್ತಿಯನ್ನು, ಕೆಮೆರಾ ಕಣ್ಣಲ್ಲಿ ಛಾಯಾಗ್ರಾಹಕ ಬೇರೆ ಬೇರೆ ಕೋನಗಳಲ್ಲಿ ಚಿತ್ರಗಳನ್ನು ಸೆರೆಹಿಡಿದಂತೆ ಕವನಿಸುವುದೇ ಈ ಪ್ರಯತ್ನ. ಇಲ್ಲಿ ಆಧ್ಯಾತ್ಮದ ಭಾಗವೂ ಸೇರಿದೆ ಎಂದರೆ ತಪ್ಪಲ್ಲ, ನಿಮ್ಮ ಪ್ರತಿಕ್ರಿಯೆ ಚೆನ್ನಾಗಿದೆ ಶ್ರೀ ಶ್ರೀಕಾಂತ್, ನಿಮಗೆ ಧನ್ಯವಾದಗಳು

    ReplyDelete
  3. ಕಾಣುವ ಇಂದ್ರಿಯಗಳ ಹಿಂದೆ ಅವುಗಳನ್ನು ಚಾಲನೆಯಲ್ಲಿಡುವ, ಅವುಗಳಿಂದ ಬಂದ ಮಾಹಿತಿಗಳನ್ನು ಗ್ರಹಿಸುವ ಕಾಣದ ಶಕ್ತಿಯೊಂದು ಅಡಗಿ ಕುಳಿತಿದೆ.ಕವಿತೆ ಮತ್ತು ಚಿತ್ರಗಳು ಚೆನ್ನಾಗಿವೆ ಸ್ವಾಮಿ.ನಮಸ್ಕಾರ.

    ReplyDelete
  4. ಭಟ್ಟರೇ,
    ಅದ್ಭುತ!

    ReplyDelete
  5. ನಿಜವಾಗಿಯೂ ನೋಡಿ ಪಂಚೆಂದ್ರಿಯಗಳನ್ನು ಕರುಣಿಸಿದ ಭಗವಂತ ಅವುಗಳನ್ನು ನಡೆಸಲು ಗಾಡಿಗೆ ಬ್ರೇಕು ಇದ್ದಹಾಗೇ ಮನಸ್ಸನ್ನೂ ಕೊಟ್ಟ, ಆದರೆ ಅ ಮನಸ್ಸನ್ನು ಚಂಚಲ ಮಾಡಿ ಅದು ನಮ್ಮ ನಿಯಂತ್ರಣದಲ್ಲೇ ಇರದ ಹಾಗೇ ಮಾಡಿದ, ಈ ಸೃಷ್ಟಿಯ ನಿಯಾಮಕ ಮಾತ್ರ ಹಲವು ರೂಪಗಳಲ್ಲಿ ಪೂಜಿಸಲ್ಪಟ್ಟ, ಆದರೆ ಆಕಾಶ, ಭೂಮಿ, ವಾಯು, ಅಗ್ನಿ, ನೀರು ಕಣ್ಣಿಗೆ ಕಾಣುವ ಈ ಪಂಚ ಮಹಾಭೂತಗಳಲ್ಲಿ ಯಾರ ಹಿಡಿತವೂ ಇಲ್ಲ, ಏನಾಗಬೇಕೋ ಅದಾಗಲೇ ಬೇಕು ಅಲ್ಲವೇ ? ಈ ಗಾರುಡಿಗನ ಅಡಿಯಾಗಲೀ ಮುಡಿಯಾಗಲೀ ನಮಗೆ ಕಾಣಿಸುತ್ತಿಲ್ಲವಲ್ಲ ಎಂಬುದು ಆತಂಕ! ಕೊನೇಪಕ್ಷ ಅದನ್ನಾದರೂ ತೋರಿಸಿದ್ದರೆ ಮತ್ತಿನ್ನೇನೂ ಬೇಕಿರಲಿಲ್ಲ ಅಲ್ಲವೇ ? ಪ್ರತಿಕ್ರಿಯಿಸಿದ ಶ್ರೀಯುತ ಕೃಷ್ಣಮೂರ್ತಿ ಮತ್ತು ಶ್ರೀಯುತ ಹರಿಹರಪುರ ಶ್ರೀಧರ್ ತಮ್ಮೀರ್ವರಿಗೂ ನಮನಗಳು.

    ReplyDelete
  6. ತತ್ವಶಾಸ್ತ್ರವನ್ನು ಒಂದು nutsheellನಲ್ಲಿ ಹೇಳಿದ್ದೀರಿ. ಅಭಿನಂದನೆಗಳು.

    ReplyDelete
  7. ಪಂಚೇಂದ್ರಿಯಗಳ ವಿವರಣೆ ಚೆನ್ನಾಗಿದೆ ಸರ್..

    ReplyDelete
  8. ತಮ್ಮೆಲ್ಲರ ಪ್ರತಿಕ್ರಿಯೆಗಳೂ ಉತ್ತಮ, ಯಾಕೆಂದರೆ ವಸ್ತು ವಿಷಯವೇ ಹಾಗಿದೆಯಲ್ಲವೇ? ಇಲ್ಲಿ ಬರೇ ಇಂದ್ರಿಯಗಳನ್ನು ಹತೋಟಿಯಲ್ಲಿ ಹಿಡಿಯುವಾತ ನಮ್ಮೆದುರಿಗೆ ಕಾಣುವುದಿಲ್ಲವಲ್ಲ,

    * ಸುಗುಣ ಮೇಡಂ ತಮಗೆ ಆಭಾರಿ

    * ಸುಧೀಂಧ್ರರೆ ನಟ್ ಶೆಲ್ ಎನ್ನುವಷ್ಟು ಮಾಡಲಾಗಲಿಲ್ಲ, ಸನ್ಮಾನ್ಯ ದಿ| ಬೇಂದ್ರೆ ಬರೆದಂತೆ ಮೂರೇ ಸಾಲಿನಲ್ಲಿ ಗಹನವಾದ ಅರ್ಥವನ್ನು ಹಿಡಿದುಕೊಡಲು ನಮಗೆಲ್ಲಾ ಸಾಧ್ಯವೇ ಎಂಬುದು ಪ್ರಶ್ನೆ, ತಮ್ಮ ಅಭಿನಂದನೆಗಳು ಅಡಿಯನ್ನೂ ಮುಡಿಯನ್ನೂ ತೋರಿಸದ ಆ ಶಕ್ತಿಗೆ ಟ್ರಾನ್ಸ್ಫರ್ ಮಾಡಿದ್ದೇನೆ, ತಮಗೆ ನಮನಗಳು

    * ಪ್ರಗತಿ ಮೇಡಂ ತಮಗೂ ವಂದನೆಗಳು

    ReplyDelete
  9. panchedriyagala parichayadondige adhyatmada tirulannu neediddiraa....
    adbhutavada prayatna!!

    ReplyDelete
  10. ಧನ್ಯವಾದಗಳು ಸರ್

    ReplyDelete