ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, July 31, 2010

ಭಕ್ತಿ-ಶ್ರದ್ಧೆ-ಸೇವೆ


ಭಕ್ತಿ-ಶ್ರದ್ಧೆ-ಸೇವೆ

ಯಾತ್ರೆ ಹೋಗಲುಬೇಕು ತೀರ್ಥಕ್ಷೇತ್ರಂಗಳಿಗೆ
ಜಾತ್ರೆ ನೋಡಲು ಜನರ ಬಹುರೂಪಗಳನು
ಮಾತ್ರೆ ನುಂಗುವ ಬದಲು ರಕ್ತದೊತ್ತಡವದಕೆ
ಸೂತ್ರ-ಮನಮುದಗೊಳಿಸು | ಜಗದಮಿತ್ರ

ಪ್ರೀತಿಸುತ ದೈವಗಳ ಪಲ್ಲಕಿಯ ಹೊರು ನೀನು
ರೀತಿಯಲಿ ಬಹುವಿಧದಿ ಪೂಜಿಸುತಲವನ
ಭೀತಿಯಿಂ ಮುಗ್ಗರಿಸಿ ಹೊರನೋಟದಲಿ ಭಜಿಸೆ
ನೀತಿಯದು ಸರಿಯಿರದು | ಜಗದಮಿತ್ರ

ಕಾವ ದೇವನ ಕಂಡು ಜಾವದಲಿ ಸರದಿಯಲಿ
ಭಾವಭಕ್ತಿಯ ಹೃದಯ ತೆರೆದಿಡುತಲವಗೆ
ಮಾವು ತೆಂಗಿನಕಾಯಿ ಜಾಜಿ-ಮಲ್ಲಿಗೆಯಿಟ್ಟು
ಜೀವಕಳೆ ನೀ ಕಾಣು | ಜಗದಮಿತ್ರ

ಪತ್ರೆಯಾದರು ಇರಲಿ ಪುಷ್ಪವಾದರು ಬರಲಿ
ಗಾತ್ರದಲಿ ಮನ ಮಾತ್ರ ಬಹುದೊಡ್ಡದಿರಲಿ
ಹತ್ರದಲಿ ಸಿಗುವಂತ ಫಲ ನೀರು ಪನ್ನೀರು
ಪಾತ್ರೆಯೊಳಗಿಟ್ಟು ಮುಗಿ | ಜಗದಮಿತ್ರ

ಹೃದಯಕಮಲದ ಮಧ್ಯೆ ಸಿಂಹಾಸನದಿ ಕುಳಿತ
ಉದಯ ನಾರಾಯಣನ ಮುದದಿಂದ ನೆನೆದು
ಬದುಕಿನಲಿ ಜೊತೆಗಾರ ಅನನ್ಯ ಸಹಕಾರ
ವಿಧಿಯವನೆ ಹಿಡಿಯವನ | ಜಗದಮಿತ್ರ

ಛತ್ರ ಚಾಮರನೀಡು ಶಯನದುತ್ಸವ ಮಾಡು
ಉತ್ತರೋತ್ತರ ನಾಮ ಸ್ಮರಣೆಯದ ಪಾಡು
ಕ್ಷಾತ್ರನಾ ಚಂಡಕೌಶಿಕ ಜಪಿಸಿ ಮುನಿಯಾದ
ಖಾತ್ರಿಯದು ನೀ ಪಡೆವೆ | ಜಗದಮಿತ್ರ

ನರ್ತಿಸುತ ಕೈಕಾಲು ದಂಡಿಸುತ ಶಿರ ಬಾಗಿ
ವರ್ತನೆಯೊಳಾದೈವ ಸಂಪ್ರೀತಗೊಳಿಸು
ವ್ಯರ್ಥಮಾಡದೆ ಸಮಯ ಅಷ್ಟಾಂಗ ಸೇವಿಸಲು
ಪಾರ್ಥಸಾರಥಿಯೊಲಿವ | ಜಗದಮಿತ್ರ


16 comments:

 1. [ಪತ್ರೆಯಾದರು ಇರಲಿ ಪುಷ್ಪವಾದರು ಬರಲಿ
  ಗಾತ್ರದಲಿ ಮನ ಮಾತ್ರ ಬಹುದೊಡ್ಡದಿರಲಿ]

  ಆ ಭಗವಂತನಿಗೇನು ಬೇಕು?
  ಶುದ್ಧ ಮನವೊಂದು ಸಾಕು||

  ReplyDelete
 2. ಗೀತೆಯ ನುಡಿ-ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ, ಇದನ್ನಾಧರಿಸಿ ಜಗದ ಮಿತ್ರ ಈ ರೀತಿ ಸಾರಿದ್ದಾನೆ, ಶ್ರೀಯುತ ಶ್ರೀಧರ್ ತಮಗೆ ಧನ್ಯವಾದಗಳು

  ReplyDelete
 3. ಚೆನ್ನಾಗಿದೆ ಭಟ್ಟರೆ. ಜಗದಮಿತ್ರ ಚೆನ್ನಾಗಿ ಹೇಳಿದ್ದಾನೆ.ಭಕ್ತಿ ಶ್ರದ್ಧೆ ಇದ್ದರೆ ಸಾಕು ಅದೇ ದೇವರ ಪೂಜೆ ಅಲ್ವೇ!!

  ReplyDelete
 4. ಅರೆ ನೀವೂ ಬಂದ್ರ್ಯಾ ? ಎಷ್ಟ್ ದಿನ ಆಗಿತ್ತ್ ಮಾರ್ರೆ,ಧನ್ಯವಾದಗಳು

  ReplyDelete
 5. ಜಗದ ಮಿತ್ರನ ಹಿತನುಡಿಗಳಿಗೆ ಸಾಟಿ ಇಲ್ಲ.

  ReplyDelete
 6. ನಿಷ್ಕಲ್ಮಶ ಮನಸ್ಸಿನಿಂದ ಮಾಡಿದ ಪೂಜೆ ಬಗವನ್ತನಿಗೆ ಇಷ್ಟವಂತೆ..........!
  ನಿಮ್ಮ ಜಗದ ಮಿತ್ರ ಭಕ್ತಿಯ ಗುಟ್ಟನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  ReplyDelete
 7. ಜಗದ ಮಿತ್ರನ ಹಿತನುಡಿಗಳು ನಮಗೆ ಸದಾ ಮಾರ್ಗದರ್ಶಿ ಯಾಗಿರಲಿ.

  ReplyDelete
 8. ನಾನು ಅನೇಕಬಾರಿ ತಿರುಪತಿಗೆ ಹೋಗಿದ್ದೇನೆ, ಮೊಟ್ಟ ಮೊದಲ ಬಾರಿಗೆ ಹೋದಾಗ ಆದ ಆ ಅನ್ಯನ್ಯ ಅನುಭವವನ್ನು ಇವತ್ತಿಗೂ ನೆನೆಸುತ್ತೇನೆ, ನಾವು ನಾಲ್ಕು ಮಂದಿ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿಹೋದೆವು. ನಾವು ತಿರುಪತಿಗೆ ತಲ್ಪಿದಗಾಲೇ ರಾತ್ರಿ ಒಂದು ಗಂಟೆಯಾಗಿತ್ತು, ಕೈಗೆ ದರ್ಶನದ ಬ್ಯಾಡ್ಜ್ ಹಾಕಿಸಿಕೊಂಡು ಸ್ವಲ್ಪಕಾಲ ಇಸ್ಕಾನ್ ವಸತಿಯಲ್ಲಿ ಇದ್ದೆವು, ಶೌಚ-ಸ್ನಾನ ತೀರಿಸಿ ಬೆಳಗಿನ ಜಾವ ೪:೩೦ಕ್ಕೆ ನಡೆಯಲು ಪ್ರಾರಂಭಿಸಿದೆವು, ಬೆಟ್ಟ ಹತ್ತಿ ನಾವು ನಡೆದಾಗ ಆದಿನ ನಮ್ಮ ಸೌಭಾಗ್ಯಕ್ಕೆ ಸರಿಸುಮಾರು 12 ಘಂಟೆಗೆ ಸರದಿಯಲ್ಲಿ ಜನರು ತುಂಬಾ ಬೆರಳೆಣಿಕೆಯಲ್ಲಿದ್ದರು-ಇದು ಬ್ರಹ್ಮೋತ್ಸವ ಜರುಗಿದ ಎರಡು ದಿನಗಳ ನಂತರ ಆಗಿರುವುದರಿಂದಲೂ ಇರಬಹುದು. ಸರಿ ನಿಂತುಕೊಂಡೆವು, ಗೋವಿಂದ ಭಜನೆ ಮನಸ್ಸಲ್ಲಿ ಸದಾ ನಡೆದಿತ್ತು. ೧೨:೩೦ರ ಹೊತ್ತಿಗೆ ದೇವರ ಮುಂದೆ ನಿಂತಾಗ ನನಗೆ ಸ್ವರ್ಗವನ್ನೋ ವೈಕುಂಠವನ್ನೋ ಕಂಡಷ್ಟು ಸಂತಸವಾಯಿತು! ಒಂದಿನಿತೂ ತೊಂದರೆಯಿರದೇ ನಿಧಾನವಾಗಿ ದರ್ಶನ ಮುಗಿಸಿ ಬಂದೆವು, ಮತ್ತೆ ಊಟಮಾಡಿ ಎರಡನೇ ಬಾರಿ ಕಾರಿನಲ್ಲಿ ಬೆಟ್ಟ ಹತ್ತಿದಾಗಲೂ ಜನಸಂಖ್ಯೆ ಕಮ್ಮಿ ಇತ್ತು, ಆಗ ಹೀಗೇ ಹೋಗಿ ನಿಂತೆವು, ಎರಡನೇ ಬಾರಿ ದೇವರು ನಮಗೆ ದರ್ಶನದ ಸೌಭಾಗ್ಯ ಕರುಣಿಸಿದ! ಏನೂ ಇರಲಿ ಇದೆಲ್ಲ ನಮ್ನಮ್ಮ ಮನೋಭಾವನೆಯೇ ಆದರೂ ಮೊದಲಾಗಿ ಹೋದ ನಮಗೆ ಅಷ್ಟು ಶೀಘ್ರದಲ್ಲಿ ಸರಿಯಾಗಿ ದರ್ಶನ ಮಾಡಲು ಅವಕಾಶ ಒದಗಿಸಿದ ಒಡೆಯ ತಿಮ್ಮಪ್ಪನ ನೆನೆಪು ಸದಾ ಹಸಿರಾಗಿರುತ್ತದೆ.

  ಮಹಾಭಾರತದಲ್ಲಿ ಭೀಮ ಈಶ್ವರ ಭಕ್ತ. ಭೀಮ ಪೂಜೆ ಎಂತಲೇ ಪ್ರಸಿದ್ಧಿಗೊಂಡ ಆತನ ಪೂಜೆಯ ಅವತರಣಿಕೆಯೇ ಹಾಗಿದೆ. ಒಮ್ಮೆ ಭೀಮ ತನ್ನ ಹೃದಯದಲ್ಲಿ ಶಂಕರನನ್ನು ಕೂರಿಸಿ ಅಷ್ಟಾಂಗ ಸೇವೆಯನ್ನು ಮಾನಸ ಪೂಜೆಯಾಗಿ ಸಮರ್ಪಿಸಿ, ಸಾಷ್ಟಾಂಗವೆರಗಿದ್ದಾನೆ, ಅವನಿಗೆ ಶಂಕರನನ್ನು ಕಾಣುವ ಉತ್ಕಟ ಬಯಕೆ ಆದಿನ.ಈಶ್ವರ ಬರಲಿಲ್ಲ. ತನ್ನ ಪೂಜೆ ನಿನನಗೆ ಸರಿಯಾಗದಿದ್ದಲ್ಲಿ ನಾನೇಕೆ ಬದುಕಿರಲಿ ಎಂದು ತನ್ನ ಮಹತ್ತರವಾದ ಗದೆಯನ್ನು ಬೀಸಿ ಮೇಲಕ್ಕೆಸೆದು ಅದು ತನಗೆ ಮೇಲಿಂದ ಬಂದು ಅಪ್ಪಳಿಸುವಂತೆ ಮಾಡಿಕೊಳ್ಳುತ್ತಾನೆ. ಏನಾಶ್ಚರ್ಯ ಮೇಲೆ ಹೋದ ಗದೆ ಕೆಳಗೆ ಬರಲಿಲ್ಲ, ಅದನ್ನು ಶಂಕರ ಹಿಡಿದುಕೊಂಡ, ಪ್ರತ್ಯಕ್ಷನಾದ ಈಶ್ವರನನ್ನು ಭೀಮ ಕಂಡು ಅನುಭವಿಸಿದ ಸಂತೋಷ ಅಷ್ಟಿಷ್ಟಲ್ಲ.

  ಹೀಗೇ ಹೃದಯದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿ ಪುರಸ್ಸರವಾಗಿ ಹರಿಹರ ಭೇದವೆಣಿಸದೆ ಭಗವಂತನನ್ನು ಪ್ರಾರ್ಥಿಸುತ್ತ ಅನುಕೂಲವಿರುವಾಗ ಆತ ವಿವಿಧ ರೂಪಗಳಲ್ಲಿ ಪೂಜೆಗೊಳ್ಳುವ ಕ್ಷೇತ್ರಗಳಿಗೆ ಭೇಟಿನೀಡುವುದು, ಆತನನ್ನು ಪಲ್ಲಕ್ಕಿಯಲ್ಲಿ ಹೊರುವುದು, ನೃತ್ಯ-ಛತ್ರ-ಚಾಮರ-ದರ್ಪಣ-ಮಂಚ-ವ್ಯಜನ ಮೊದಲಾದ ಸೇವೆಗಳನ್ನು ನೇರವಾಗಿ ರಾಜನೋಬ್ಬನಿಗೆ ಸೇವಕರು ಮಾಡುವಂತೆ ಮಾಡುವುದು ಪರಮಾತ್ಮನನ್ನು ನಮ್ಮ ಹೃದಯಕ್ಕೆ ಹತ್ತಿರವಾಗಿಸುತ್ತದೆ, ನಮ್ಮೊಳಗೇ ಆತ ಇದ್ದರೂ ಅವನನ್ನು ನಾವು ಕಾಣಲಾಗುತ್ತಿಲ್ಲವಲ್ಲ, ನಾವು ಸೇವೆ ಮಾಡುವುದರಿಂದ ಆತ ಸಂಪ್ರೀತನಾಗುತ್ತಾನೆ. ಆತನ ಇದಿರು ಯಾವುದೇ ಬೂಟಾಟಿಕೆ ತೋರದೇ ನೇರವಾಗಿ ಹೃದಯ ತೆರೆದಿಟ್ಟಾಗ ಆತನ ಪ್ರೀತಿ ದ್ವಿಗುಣ, ತ್ರಿಗುಣ, ಚತುರ್ಗುಣ ಹೀಗೇ ಬೆಳೆಯುತ್ತಲೇ ಹೋಗುತ್ತದೆ ಎಂಬುದು ತಾತ್ಪರ್ಯ.

  ಪ್ರತಿಕ್ರಿಯಿಸಿದ ಸರ್ವಶ್ರೀ ಶ್ರೀಕಾಂತ್, ಸುಧೀಂಧ್ರ ದೇಶಪಾಂಡೆ, ಶ್ರೀಧರ್, ಪ್ರವೀಣ್, ಡಾ|ಕೃಷ್ಣಮೂರ್ತಿ ತಮಗೆಲ್ಲರಿಗೂ ವಂದನೆಗಳು, ತಿಮ್ಮಪ್ಪನಿಗೂ ಸಾಷ್ಟಾಂಗ ವಂದನೆಗಳು.

  ReplyDelete
 9. tumba chennagide kavana devarige aadambarada abhisheka, pooje, nevedya bekilla bhakti ondiddare ade saaku......

  saalugaLu bhaLa chennagide sir...dhanyavadagaLu

  ReplyDelete
 10. ಸುಗುಣ ಮೇಡಂ, ಭಾವನೆ ಮತ್ತು ಶ್ರದ್ಧೆ ಬಹಳ ಮುಖ್ಯ-ಅದರೊಂದಿಗೆ ಕೊಡುವ ಪ್ರೀತಿಯೇ ಭಕ್ತಿ ಅಲ್ಲಿ, ತಮಗೆ ಧನ್ಯವಾದಗಳು

  ReplyDelete
 11. ವಿ.ಆರ್.ಬಿ ಸರ್,
  ಭಕ್ತಿ ತುಂಬಿದರೆ ಮನದಲಿ ಕುಯುಕ್ತಿ ಬರದು
  ಶಕ್ತಿ ಅದೆ ತನು-ಮನಕೆ ತೋರಿಕೆ ಸಲ್ಲ ಬರಿದು
  ನಿಜ ಕಾಳಜಿ ಮನುಪ್ರೇಮ ಬೇಕು- ಬೇಡ ದೈವ ಪಟ್ಟ
  ಬದುಕಿದರೂ ಬರಿ ವ್ಯರ್ಥ ನೀ, ನಿಜಮನವ ತೊರೆದು.

  ಬಹಳ ಅರ್ಥಭರಿತ ಹಿಡಿತೊಳಗಿನ ಮಿಡಿತ ಹೊದಿಸಿ ಜಗದ ಮಿತ್ರ ಹೇಗಾಗುವುದು ಎನ್ನುವುದನ್ನು ಬಹಳ ಸುಲಲಿತವಾಗಿ ಹಾಡಿಕೊಳ್ಳಲೂ ಆಗುವಂತೆ ಪ್ರಸ್ತುತ ಪಡಿಸಿದ್ದೀರಿ..ಇಷ್ಟವಾಯ್ತು..ಮನಕೆ, ಜಗದ ಮಿತ್ರ.

  ReplyDelete
 12. ಧನ್ಯವಾದಗಳು ಮಿತ್ರ ಶ್ರೀ ಆಜಾದ್ ರವರೇ, ನಿಮ್ಮ ಪ್ರತಿಕ್ರಿಯೆಯೇ ಕವನವಾಗಿದೆ, ನಿಜ ನೀವು ಹೇಳಿದ್ದು, ಇಲ್ಲಿ ಜಗದ ಮಿತ್ರ ಸಾರಿದ್ದೂ ನೀವು ಹೇಳಿದ್ದನ್ನೇ ಅಲ್ಲವೇ ? ಚರ್ಚ್, ಮಂದಿರ, ಮಸೀದಿಯಲ್ಲಿರುವ ದೇವರು ಎನ್ನುವ ಈ ಶಕ್ತಿ ನಮ್ಮ ಹೃದಯದಲ್ಲೇ ಇದೆ. ಆದರೆ ನಾವು ಡಾಂಭಿಕರಾಗಿ ಹೊರಗಿನಿಂದಷ್ಟೇ ಭಕ್ತರಾಗಿದ್ದೇವೆ ಎನ್ನುವುದು, ಹಾಗಾಗಬಾರದು ಎನ್ನುವುದು ಜಗದಮಿತ್ರನ ಆಶಯ, ತಮ್ಮ ಅನಿಸಿಕೆಗೆ ಹಲವು ಅಭಿವಂದನೆಗಳು

  ReplyDelete
 13. manadvanne devarigarpisi kayakadalli todagisikollo janakke devaru sadaa vedhya. chendada jagadamitrana kavana.

  ReplyDelete
 14. ಧನ್ಯವಾದಗಳು ಸೀತಾರಾಮ್ ಸರ್

  ReplyDelete