ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, July 29, 2010

ಶ್ರೀ ಭೈರವೆಶ್ವರ ಯುವಕರ ಸಂಘ(ರಿ)


ಶ್ರೀ ಭೈರವೆಶ್ವರ ಯುವಕರ ಸಂಘ(ರಿ)
ಹೆಸರೇಳು ತಾಲ್ಲೋಕು,ಸಕಲಾಪುರ ಹೋಬಳಿ, ಹುಡುಕಾಡು ಜಿಲ್ಲೆ, ಕರ್ನಾಟಕ ರಾಜ್ಯ
ಪಿನ್ನ್ :- ೫೬_ _ ೧೦ ಫೋನ್ : ೧೨೩೪೫
ಅಧ್ಯಕ್ಷರು : ಚೆಲುವಯ್ಯ ಕಾರ್ಯದರ್ಶಿಗಳು: ಪರಮೇಶಿ


ಸರ್ವರಿಗೂ ಹಾದರದ ಸ್ವಾಗತ

-- ಸೊಂಟದ ಕೀಲುಗಳಲ್ಲಿ, ಪಕ್ಕೆಗಳಲ್ಲಿ, ಬೆನ್ನುಹುರಿಯಲ್ಲಿ ಚಳಿಯಾದ ಅನುಭವ !

ಮೇಲಿನ ಸಂಘದವರು ವಾರ್ಷಿಕೋತ್ಸವ ಇಟ್ಟುಕೊಂಡು ಭಾಷಣ ಮಾಡಲು ಕರೆದರು. ಆಮಂತ್ರಣದಲ್ಲಿ ಹೆಸರು ಹಾಕಿಸಿಕೊಂಡೂ ಬಂದಿದ್ದರು. ಆಮಂತ್ರಣ ಓದಿ ತಬ್ಬಿಬ್ಬಾಗಿಬಿಟ್ಟೆ ! ಯಾಕ್ರೀ ಅನ್ನೋದೇ ಸಸ್ಪೆನ್ಸು !

ಆ ಊರಿನ ಒಂಡೆರಡು ಮಂದಿಗೆ ನಾನು ಚೆನ್ನಾಗಿ ಗೊತ್ತಂತೆ, ಹಾಗಾಗಿ " ನೀವೇ ಬರಬೇಕು" ಎಂಬ ಹಠ.

ಆಮಂತ್ರಣ ಮುಂದೆ ಓದಿ --

ಮರೆಯದಿರಿ ಮರೆತು ನಿರಾಶರಾಗದಿರಿ

ದ್ರೌಪತೀ ವಸ್ತ್ರಾಪಹರಣ ಎಂಬ ಪೌರಾಣಿಕ ನಾಟಕವನ್ನು ಹಾಡಿತೋರಿಸಲಿದ್ದಾರೆ.

ವಿಸೇಷ ಆಕರ್ಶಣೆ:- ಚಲುವೇ ಗೌಡರ ಹೊಸ ಸೀನರಿ, ಹೊಸ ಡ್ರಸ್ಸು ,ಏಕಕಾಲಕ್ಕೆ ಅನೇಕ ವಾಧ್ಯಗಳನ್ನು ನೋಡಿ ಆನಂದಿಸಿ

ಪಾತ್ರದಾರಿಗಳು

ಶ್ರೀ ದಫೇದಾರ ತಿಮ್ಮೇಗೌಡರು-ದುಶ್ಯಾಶನ
ಶ್ರೀ ಪೋಲೀಸ್ ಅನುಮೇಗೌಡರು-ಶಕುನಿ
ಶ್ರೀ ಕೇಬಲ್ ಭೈರಪ್ಪ--ಭೀಮ
ಶ್ರೀ ಸಾಹುಕಾರ್ ಚಿನ್ನಪ್ಪ--ಕೌರವ
ಶ್ರೀ ನಂದಿನಿ ಮಾದೇಶ--ಅರ್ಜುನ
ಶ್ರೀ ಜಮೀನ್ದಾರ್ ಜವರಯ್ಯ-ನಕುಲ
ಶ್ರೀ ಮೀಸೆ ಹೊನ್ನಪ್ಪ-ಸಹದೇವ
ಶ್ರೀ ಕಲಾಕಾರ್ ಮಂಜು-ಧರ್ಮರಾಯ
ಶ್ರೀ ಗಂಗಹನುಮಯ್ಯ [ನಿವ್ರೂತ್ತ ಬಿಎಸೆನೆಲ್ ವ್ಯವಸ್ಥಾಪಕರು]-- ಕ್ರಿ ಷ್ಣ
ಶ್ರೀ ಚಿಕ್ಕಹನುಮಂತರಾಯಪ್ಪ-ದ್ರೌಪತಿ
ಸೀನ, ಪುಟ್ಟಣ್ಣ, ರೇವಣ್ಣ, ಕರಿಬಸವ, ಬಸ್ಯ, ವೆಂಕಿ, ಯಲಹಂಕ ಸೋಮು, ಮೈಕೊ ಕ್ರಿಷ್ಣಪ್ಪ,
ದೊಡ್ಡಹನುಮ, ದೊಡ್ಡಗಣೇಷ, ವೆಂಕಟೇಶು, ರಾಜು, ಬಾಬು, ಕಡ್ಡೀಪುಡಿ ಆನಂದ, ತರ್ಲೆರಾಮ, ಗೋವಿಂದು
ಇನ್ನೂ ಅನೇಕರು ವಿವಿಧ ಪಾತ್ರಗಳಲ್ಲಿ ತಮ್ಮನ್ನು ರಂಜಿಸಲಿದ್ದಾರೆ.

ನಾಟಕ ನಿರ್ದೇಶಕರು :- ಹಾಮಾ ಬಾಲಯ್ಯ ಬಣ್ಣ :- ಮೇಕಪ್ ರಾಜು ಕ್ಯಾಸಿಯೋ :- ಪ್ರಕಾಶ್


ಕುಮಾರಿ ಮೆಗಾಶ್ರೀ ಮತ್ತು ಕುಮಾರಿ ಹೇಮಾಶ್ರೀ ಇವರುಗಳಿಂದ ಭರತನಾಟ್ಯ

ಸಭಾ ಕಾರ್ಯಕ್ರಮ :- ರಾತ್ರಿ ೭:೩೦ ರಿಂದ

ಸ್ವಾಗತಗೀತೆ
ಸ್ವಾಗತಭಾಶಣ
ಮಾಲಾರ್ಪಣೆ
ಮುಖ್ಯ ಅತಿಥಿಗಳ ಭಾಶಣ
ಸಂಘದ ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ
ಅಧ್ಯಕ್ಷರ ಭಾಶಣ
ವಂದನಾರ್ಪಣೆ

ರಾತ್ರಿ ೯:೩೦ ರಿಂದ ವಿವಿಧ ಮನೋರಂಜನಾಕಾರ್ಯಕ್ರಮಗಳು ಹಾಗೂ ದ್ರೌಪತೀ ವಸ್ತ್ರಾಪಹರಣ ನಾಟಕ

ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬನ್ನಿ, ನಿಮ್ಮವರನ್ನೂ ಕರೆತನ್ನಿ
-------------------

--ಇಲ್ಲಿಗೆ ಆಮಂತ್ರಣ ಪತ್ರಿಕೆ ಮುಗಿಯಿತು

ಈಗ ಅಲ್ಲಿ ನಡೆದ ಅನುಭವದ ಬಗ್ಗೆ ಕೇಳಿ

ಅವತ್ತು ಈ ಸಂಘದ ವತಿಯಿಂದ ಬಾಡಿನ ಊಟ ಎರ್ಪಾಟಾಗಿತ್ತಂತೆ ! ಮಧ್ಯಾಹ್ನದಿಂದ ಸಾಯಂಕಾಲದವರೆಗೆ ಗ್ರಾಮಸ್ಥರು, ಪರಊರವರು, ಅವರವರ ನೆಂಟರಿಷ್ಟರು ಎಲ್ಲಾ ಸೇರಿ ಸರಿಸುಮಾರು ೩ಸಾವಿರ ಜನರಿದ್ದರು.ಸಭೆಗೆ ಬರುವಾಗಲೇ ಅಲ್ಲಿ ಕುಳಿತ ಕೆಲವರ ಹತ್ತಿರದಿಂದ ಪಾಸಾಗಿ ಬರುವಾಗ ಹುಳಿ ಹುಳಿ ವಾಸನೆ ಬರುತ್ತಿತ್ತು.
ಸಂಜೆ ಸಭೆ ಶುರುವಾಯ್ತು.

" ಈಗ ಸ್ವಾಗತ ಗೀತೆ-ಕುಮಾರಿ ರಶ್ಶಿತಾರವರಿಂದ "

ಸ್ವಾಗತವೂ ನಿಮಗೆ ಸುಸ್ವಾಗತವೂ ನಿಮಗೆ --ಸ್ವರ ಹೊರಟಾಗ ಡಬ್ಬುಹಾಕಿಕೊಂಡ ಕಿವಿ ಮತ್ತೆತೆರೆಯುವುದೇ ಇಲ್ಲವೇನೋ ಅಂದುಕೊಂಡಿದ್ದೆ. ಅಂತೂ ಮುಗಿಯಿತು, ಉಸ್ಸಪ್ಪಾ! ಶ್ಶು...

" ಈಗ ಸ್ವಾಗತ ಭಾಷಣ- ನಮ್ಮ ಸಂಘದ ಸದಸ್ಯರಾದ ಗೋವಿಂದುರವರಿಂದ"

" ಮಾಹನೀಯರೇ ಮಹಳಿಯರೇ ಮತ್ತು ನಮ್ಮ ಸಂಘದ ಪದಾಧಿಕಾರಿಗಳೇ, ಈಗ ಸ್ವಾಗತ ಭಾಷಣವನ್ನುಮಾಡುವಂತೆ ನಮ್ಮ ಹಿರಿಯ ಸದಸ್ಯರಾದಂತ ವೆಂಕಿರವರು ಹೇಳಿದರು. ಅವರ ಮಾತನ್ನು ಮನ್ನಿಸಿ ಈಗ ಸುರುಮಾಡುತ್ತೇನೆ.
ಮೊದಲ್ನೇದಾಗಿ ಗಣ್ಯರಾದಂತಹ ಶ್ರೀ ವಿ.ಆರ್.ಭಟ್ಟರು ಬೆಂಗಳೂರಿಂದ ನಮ್ಮ ಕರೆಗೆ ಹೋ ಗೊಟ್ಟು ಹಿಲ್ಲೀತಂಕ ಬಂದಿದಾರೆ ಹವರಿಗೆ ಹಾದರದ ಸ್ವಾಗತ.

ಎರಡ್ನೇದಾಗಿ ನಮ್ಮ ಸನ್ಮಾನ್ಯ ಅಧ್ಯಕ್ಸರಾದಂತ ಶ್ರೀ ಚೆಲುವಯ್ಯನೋರು ಬಹಳ ಮುಂಚಿತವಾಗಿ ಬಂದು ಹೀ ಸ್ಥಾನವನ್ನು ಹಲಂಕರಿಸಿದ್ದಾರೆ ಹವರಿಗೂ ಸ್ವಾಗತ.

ಮೂರನೇದಾಗಿ ಅನೇಕ ಅಳ್ಳಿಗಳಿಂದ ತಾವೆಲ್ಲಾ ಬಂದು ಸೇರಿದ್ದೀರಿ ತಮಗೆಲ್ಲಾ ಸುಸುಸ್ವಾಗತ.

ಇನ್ನು ನಾಲ್ಕನೇದಾಗಿ ನಮ್ ಗ್ರಾಮಸ್ಥರು ಹಿರೀಕ್ರು ಎಲ್ಲಾ ಬಂದವ್ರೆ, ಮಕ್ಳು-ಮರಿಗೊಳ್ನ ಎತ್ಕಂಡು ತಮ್ಮ ಅಲವಾರು ಕಷ್ಟಗೋಳ ಮಧ್ಯೆನೂವೆ ನಮ್ಮ ಎಂಗುಸ್ರೆಲ್ಲಾ ಬಂದವ್ರೆ ಅವರೆಲ್ಲರಿಗೂ ಸ್ವಾಗತ ಸುಸ್ವಾಗತ.

ಇನ್ನು ಕೊನೇಕಿತ ನಮ್ ಸಂಘದ ಕಾರ್ಯದರ್ಸಿಗೋಳಾದಂತ ಶ್ರೀಮಾನ್ ಪರಮೇಶಿ ಇದ್ದಾರೆ ಹಾಗೂ ಅನೇಕ ಸದಸ್ಯರುಗೋಳು ಬಂದವ್ರೆ, ತಮ್ಮ ಇರೋಬರೋ ಕೆಲ್ಸಾನೆಲ್ಲ ಪಕ್ಕಕ್ ಮಡೀಕಂಡು ಬಂದವ್ರೆ ಇದೆಲ್ಲಾ ಯಾಕೇಳಿ ನಮ್ಮೂರ್ ಜನ್ಕೆ ಒಸಿ ಸಂತೋಸಾಗ್ಲಿ, ವರ್ಸದಾಗ ಒಂದ್ಕಿತಾ ಈ ತರ ಕಾರ್ಯಕ್ರಮ್ಗೋಳ್ನ ಮಡೀಕಂಡ್ರೆ ಎಲ್ಲಾ ಚೆನ್ನಾಗಿರ್ತೈತೆ ಹಂತ ಅಮ್ಮಕೊಂಡೀವಿ, ತಮ್ಮೆಲ್ಲರ್ಗೂನೂವೆ ಹಾದರದ ಸ್ವಾಗತ.

ಇಷ್ಟು ಏಳಿ ನನ್ನ ಚಿಕ್ಕ ಭಾಶಣ ಮುಗಸ್ತಾ ಇದೀನಿ ನಮುಸ್ಕಾರ, ಜೈಹಿಂದ್, ಜೈ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ "

ನನಗೆ ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ.

" ಈಗ ಮಾಲಾರ್ಪಣೆ ನಮ್ಮ ಸಂಘದ ಕಾರ್ಯದರ್ಸಿಗಳಾದಂತ ಸ್ರೀಮಾನ್ ಪರಮೇಶಿ ಎಲ್ಲಿದ್ರೂ ಅರ್ಜೆಂಟಾಗಿ ಸ್ಟೇಜಿನ್ ಮ್ಯಾಕೆ ಬರ್ಬೇಕು "

ಆಕಡೆ ಈಕಡೆ ಆಕಡೆ ಈಕಡೆ ಕತ್ತಾಡಿಸಿ ಹುಡುಕಾಡಬೇಕಾಯ್ತು ಹಾರಹಾಕುವವರಿಗಾಗಿ! ಅಂತೂ ಪರಮೇಶಿ ಬಂದ್ರು.

"ಮೊದಲನೇ ದಾಗಿ ನಮ್ಮ ಮುಖ್ಯ ಹತಿಥಿ ಸ್ರೀ ವಿ.ಆರ್.ಭಟ್ ರವರಿಗೆ ಮಾಲಾರ್ಪಣೆ "

" ಏ ಬಸ್ಯಾ ಹೊಡೀರ್ಲಾ ಚಪ್ಪಾಳೆನಾ ಏನ್ ಹಾಂಗ್ ಮಕಮಕ ನೋಡ್ತಾಯ್ಕಂಡ್ರಿ ? " --ಇದೂ ಅನೌನ್ಸರ್ ಹೆಳಿದ್ದೇ ಆಗಿದೆ!

" ಎರುಡ್ನೇ ದಾಗಿ ನಮ್ ಅಧ್ಯಕ್ಸರೂಗೆ ಮಾಲಾರ್ಪಣೆ "

ಸಭೆ ನಡೆಯುತ್ತಿರುವಾಗ ಅನಿರೀಕ್ಷಿತವಾಗಿ ಅಲ್ಲಿನ ಎಮ್.ಎಲ್.ಏ ಬಂದ್ರು. ಅವರನ್ನು ಕಂಡವ್ರೇ ಸಂಘದ ಅಧ್ಯಕ್ಷರು ಪರಮೇಶಿಯವರನ್ನು ಪಕ್ಕಕ್ಕೆ ಕರೆದು ಕೇಳಿದರು " ಪರಮೇಶಿ ಎಸ್ಟ್ರಾ ಆರ ತಂದಿದ್ದು ಐತೇನ್ಲಾ ಒಳೀಕ್ಕೆ ?"
ಪರಮೇಶಿ ಎದ್ನೋ ಬಿದ್ನೋ ಅಂತ ಗ್ರೀನ್ ರೂಮ್ ಕಡೆ ಚೆಕ್ ಮಾಡೋಕೆ ಹೋದ್ರು.

ಅನೌನ್ಸರ್ ಘೋಷಿಸಿದ " ಇದೀಗ ತಾನೇ ಸನ್ಮಾನ್ಯ ಎಮ್ಮೆಲ್ಲೆ ಸಾಹೇಬ್ರು ಸೋಮಣ್ಣ ಬಂದವ್ರೆ, ತಮ್ಮ ಬಿಡುವಿಲ್ದ ಕಾರ್ಯಗೋಳ ನಡುವೆ ಬರಕಾಯಾಕಿಲ್ಲ ಅಂದಿದ್ದ್ರೂನೂವೆ ಹಿಂದು ಬಂದವ್ರೆ ಹವರಿಗೆ ಹಾದರದ ಸ್ವಾಗತವನು ಕೋರುತ್ತೇವೆ "

" ಈಗ ಸನ್ಮಾನ್ಯ ಎಮ್ಮೆಲ್ಲೆ ಸೋಮಣ್ಣೋರ್ಗೆ ನಮ್ಮ ಅಧ್ಯಕ್ಸರಿಂದ ಆರಾರ್ಪಣೆ"

--ಇದೆಲ್ಲಾ ಮುಗೀತು. ನನಗೆ ಬಳಸುವ ಅಪ್ಪಟ ಕನ್ನಡ ನೋಡಿ ಬಹಳ ನಗುಬರುತ್ತಿತ್ತು, ಒಮ್ಮೊಮ್ಮೆ ವಿಷಾದವೂ ಆಗುತ್ತಿತ್ತು!

ನಮ್ಮ ಹತ್ತಿರ ಬಂದ ಅನೌನ್ಸರ್ ಯಾರು ಮೊದಲು ಭಾಷಣಮಾಡುತ್ತಾರೆ ಅಂತ ಕೂಗಲಿ ಎಂದು ಕಿವಿಗಳಲ್ಲಿ ಕೇಳಿದರು. ಅಂತೂ ನಮ್ಮೊಳಗೆ ತೀರ್ಮಾನವಾಗಿ ಮೊದಲು ನಾನೇ ಮಾತನಾಡಬೇಕೆಂದುತಿಳಿದುಬಂತು. ನಾನು ಮಾತನಾದಲು ನಿಂತೆ. ನನ್ನ ಬಾಯಿಂದ ಮಾತು ಹೊರಬರುವ ಪ್ರತೀ ಹಂತದಲ್ಲಿ ನನಗೆ ನಗು ಉಕ್ಕರಿಸಿ ಬರುತ್ತಿತ್ತು. ನನ್ನ ಭಾಷಣವನ್ನು ಕೇಳುವ ರುಚಿ-ಅಭಿರುಚಿ ಇದ್ದವರು ಅಲ್ಲಿ ಯಾರೂ ಇದ್ದಹಾಗಿಲ್ಲ ಎಂಬ ನನ್ನ ಅನಿಸಿಕೆ ನಿಜವಾಗಿತ್ತು. ನನ್ನ ಭಾಷಣದ ಅರ್ಥವನ್ನು ಕೇಳಿದರೆ ಬಹುಶಃ ರಾಮನಿಗೆ ಸೀತೆ ಏನಾಗಬೇಕು ಎಂದು ರಾಮಾಯಣ ಕೇಳಿದವರಲ್ಲಿ ಪ್ರಶ್ನಿಸಿದರೆ ಸೀತೆ ರಾಮನಿಗೆ ತಂಗಿ ಅಂದಹಾಗಾಯ್ತು ಅಂದ್ರಂತೆ-- ಈ ಥರ ಆಗಿತ್ತು. ಕೆಲವೊಮ್ಮೆ ಹೀಗೇ ಆಗಿಬಿಡುತ್ತದೆ. ನಾವು ಬರಲಾಗುವುದಿಲ್ಲ ಎನ್ನಲಾಗುವುದಿಲ್ಲ, ಹೋಗದಿದ್ದರೆ ನಮಗೆ ಸೊಕ್ಕು ಅಂತಾರೆ ಹೋದರೆ ಈ ರೀತಿ ’ ಆರಾರ್ಪಣೆ’ !

" ಸಂಘದವರ ಚಟುವಟಿಕೆಗಳ ಬಗ್ಗೆ ಹಾಗೂ ಜನೋಪಕಾರೀ ಕೆಲಸಗಳ ಬಗ್ಗೆ ಕೇಳಿದ್ದೇನೆ, ಪ್ರೀತಿಯಿಂದ ಸಂಘದ ಸದಸ್ಯರ ಆಹ್ವಾನಕ್ಕೆ ಬೆಲೆಕೊಟ್ಟು ತಾವೆಲ್ಲಾ ಇಲ್ಲಿ ಬಂದು ಸೇರಿದ್ದೀರಿ, ಇದು ನನಗೆ ಬಹಳ ಸಂತೋಷ "

ಹೇಳುತ್ತಿರುವಾಗಲೇ ಮುಂದಿರುವ ಕೆಲವು ಗಂಡಸರು ಗೊರೆಯುವುದು ಕೇಳಿಸಿತು. ಹಿಂದೆ ಕತ್ತಲಲ್ಲಿ ಯಾರ್ಯಾರೋ ಏನೇನೋ ಬಡಬಡಾಯಿಸುತ್ತಿದ್ದರು. ನನ್ನ ಮಾತು ಅತ್ಯಂತ ಬೇಗ ಮುಗೀತು-ಇದರರ್ಥ ಜಾಸ್ತಿ ನನ್ನ ಮಾತಿನ ಅವಶ್ಯಕತೆ ಅಲ್ಲಿ ಕಂಡುಬರಲಿಲ್ಲ. ಸಂಘದವರು ಪಾಪ ಭಕ್ತಿಯಿಂದ ಕರೆದಿದ್ದಾರೆ-ಹೋಗಿದ್ದೇನೆ. ಅದಕ್ಕೇ ಸ್ವೀಟ್ ಆಂಡ್ ಶಾರ್ಟ್ ಆಗಿ ಮುಗಿಸಿಬಿಟ್ಟೆ.

" ಈಗ ನಮ್ಮ ಎಮ್ಮೆಲ್ಲೆ ಸ್ರೀ ಸೋಮಣ್ಣೋರು ಸಭಿಕರನ್ನುದ್ದೇಸಿಸಿ ಹೆರಡು ಮಾತನ್ನಾಡಲಿದ್ದಾರೆ "

ಶ್ರುವಾಯ್ತು ನೋಡಿ, ಹನ್ನೆರಡು ಇಂಚಿನ ಡ್ರಿಲ್ ಬಿಟ್ಟಿನ ಕೊರೆತ ಹಾಗೂ ಮೊರೆತ, ಇಡೀ ಸಭೆ ನಿದ್ದೆಮಾಡುತ್ತಿತ್ತು ಎನ್ನಬೇಕು, ಎಮ್ಮೆಲ್ಲೆ ಬಾಲಬಡುಕರು ನೂರಾರು ಜನರನ್ನ " ಏ ಬನ್ರೋ " ಅಂತ ಅವ್ರೇ ಎಬ್ಬಿಸ್ಕೊಂಡು ಬಂದಿದ್ರು. ಅವರೆಲ್ಲ ಅಲ್ಲಲ್ಲಿ ಕೂತವರು ವಿಧಿಯಿಲ್ಲದೇ ಚಪ್ಪಾಳೆ ತಟ್ಟುತ್ತಿದ್ದರು! ಅಂತೂ ೩೦ ನಿಮಿಷಗಳ ಡ್ರಿಲ್ ಈಗ ನಿಂತಿತು.

" ಈಗ ನಮ್ಮ ಸಂಘದ ಅಧ್ಯಕ್ಸರಾದಂತ ಸ್ರೀಮಾನ್ ಸ್ರೀ ಚಲುವಯ್ಯರವರು ತಮ್ಮ ಹಭಿಪ್ರಾಯವನ್ನು ತಮ್ಮೊಡನೆ ಅಂಚಿಕೊಳ್ಳಲಿದ್ದಾರೆ"

ಚಲುವಯ್ಯನವರು ಶುದ್ಧ ಗ್ರಾಮ್ಯ ಭಾಷೆಯಲ್ಲಿ ಕೊರೆದಿದ್ದೇ ಕೊರೆದಿದ್ದು! ಇಡೀಸಭೆಯಲ್ಲಿ ಪಿನ್ ಡ್ರಾಪ್ ಸೈಲನ್ಸ್ ! ಕಾರಣ ಗೊತ್ತೇ- ಎಲ್ಲರೂ ನಿದ್ದೆಮಾಡುತ್ತಿದ್ದರು. ಸಂಘಕ್ಕೆ ಹೊಸದಾಗಿ ಸೇರಿದ ಪಡ್ಡೆಗಳಷ್ಟು ಜನ ಮಧ್ಯೆ ಮಧ್ಯೆ ಕೂತವರು ಟಪ ಟಪ ಟಪ ಟಪ ಅಂತ ನಿಲ್ಲಿಸಿ ಎನ್ನುವವರೆಗೂ ಚಪ್ಪಾಳೆ ತಟ್ಟುತ್ತಿದ್ದರು, ಅದು ಅವರ ಅಧ್ಯಕ್ಷರಮೇಲಿನ ಅಭಿಮಾನದಿಂದ. ವೇದಿಕೆಯ ಪರದೆಯ ಹಿಂದೆ ಯಾವುದೋ ಪಡ್ಡೆ ಹೇಳುತ್ತಿತ್ತು " ನಮ್ ಚಲವಯ್ಯೋರು ಯಾರ್ಗೂ ಬಿಟ್ಕೊಡಾಕಿಲ್ಲ, ಭಾಳ ಚನ್ನಾಗ್ ಮಾತಾಡ್ತರೆ, ಯಾರೂ ಎಲ್ಲಿದ್ರೂನೂವೆ ಚಪ್ಪಾಳೆ ತಟ್ಟಬೇಕು ಕಣಪ್ಪೋ"
ಮುಗೀತು!

"ಈಗ ಹೊಂದನಾರ್ಪಣೆ ನಮ್ಮ ಸಂಘದ ಹಿರಿಯ ಸದಸ್ಯರಾಗಿರತಕ್ಕಂತಹ ಶಾಂಭಪ್ಪನವರಿಂದ "

" ಮಾನ್ಯ ಅಧ್ಯಕ್ಸರೇ, ಪೂಜ್ಯ ಗುರುಗಳೇ ಹಾಗೂ ನನ್ನ ಸಹಪಾಠಿಗಳೇ " -ಏನಪ್ಪಾ ಇದು ಎಂದು ಆಶ್ಚರ್ಯವಾಯಿತು.
"ಶಾಂಭಪ್ಪಾ ಅದು ಸ್ಕೂಲ್ದು ಕಣ್ಲಾ, ಸಂಘದ್ದೇಳ್ಲಾ " ಅಂತ ಅನೌನ್ಸರ್ ಹೇಳಿದ್ದು ಮೈಕ್ ನಲ್ಲಿ ಎಲ್ಲರಿಗೂ ಕೇಳಿಸಿತು, ಆದರೆ ಯಾರೂ ನಗಲಿಲ್ಲ : ಕಾರಣ ನೀವೇ ಊಹಿಸಿಕೊಳ್ಳಿ. ಮತ್ತೆ ಮುಂದುವರೀತು.

" ನನ್ನ ಹೊಂದನಾರ್ಪಣೆ ಮಾಡಕಾಕವ್ರೆ, ಗೊತ್ತಿದ್ದಷ್ಟ್ ಏಳ್ಬುಡು ಅಂದ್ರು. ನಮ್ಗೆಲ್ಲಾ ತೀರಾ ಭಾಶಣ ಮಾಡಕಾಯಾಕಿಲ್ಲ. ಅದ್ಕೇ ಒಸಿ ಅಡ್ಜಸ್ಟ್ ಮಾಡ್ಕೋಬುಡಿ. ತಪ್ಪ್ನೆಲ್ಲಾ ನಿಮ್ಮ್ ಹೊಟ್ಟೆವಳೀಕಾಕೊಂಬುಡಿ. ಮೊದಲ್ನೇ ದಾಗಿ ಇಲ್ಲಿಗೆ ಭಾಶಣ ಮಾಡಲು ಬಂದಿರತಕ್ಕಂತಹ ಸ್ರೀ ವಿ.ಆರ್.ಭಟ್ಗೆ ಹೊಂದನೆಗಳು. ಎರಡ್ನೇದಾಗಿ ಸನ್ಮಾನ್ಯ ಹೆಮ್ಮೆಲ್ಲೆ ಸಾಏಬ್ರು ಕುಂತವ್ರೆ ಹವರ್ಗೂ ಹೊಂದನೆಗಳು. ಮೂರ್ನೇದಾಗಿ ನಮ್ಮ್ ಪಕ್ಕದಳ್ಳಿ ಕಡೆಗಿಂದೇಲ್ಲಾ ಕಿತ್ತೆದ್ ಬಂದಾರಲ್ಲ ಅಂತವ್ರಗೆಲ್ಲ ಹೊಂದನೆಗಳು. ಈ ಕಿತಾ ನಮ್ಮೂರ್ ಜನಗೋಳ್ಗೆ ಎಲ್ರೂಗೂನು ಹೊಂದನೆಗಳು. ನಾಟಕದಾಗೆ ನನ್ನ ಪಾರ್ಟ್ ನೋಡೋಕೋಸ್ಕರ ನಮ್ಮ ಅತ್ತೆ-ಮಾವ,ಬಾಮೈದ ಎಲ್ಲಾದಿರು ಬಂದವ್ರೆ ಅವ್ರಗೆಲ್ಲಾನುನೂವೆ ಹೊಂದನೆಗಳು. ನಮ್ ಸಂಘ ಭಾಳ ಚೆನ್ನಾಗಿ ಕೆಲ್ಸ ಮಾಡ್ತೈತೆ, ಗಣೇಶಬ್ಬ, ಊರಬ್ಬ ಇದೆಲ್ಲಾ ಮಾಡೋದು, ಅಂದಾನ, ರಸ್ತೆರಿಪೇರಿ,ರಕ್ತದಾನ ಇದೆಲ್ಲಾ ಮಾಡ್ತವ್ರೆ ನಮ್ ಹೈಕ್ಳು ಅವ್ರೀಗೆಲ್ಲಾನುನೂವೆ ಹೊಂದನೆಗಳು,ಇಲ್ಲಿಗೆ ನನ್ನ ಭಾಷಣ ಮುಗುಸ್ತೀನಿ, ನಂಗೆ ಭಾಶಣಮಾಡೋದು ಕಲ್ಸಬುಟ್ಟು ಹೀಂಗ್ ನಿಂತ್ಕಾ, ಚೀಟಿ ಹೀಂಗ ಮಡೀಕಾ ಅಂತೆಲ್ಲಾ ಹೇಳ್ಕೊಟ್ಟು ನಮ್ಮನ್ನು ಬೆಳ್ಸಸದ ನಮ್ ಅಧ್ಯಕ್ಸರುಗೆ ನನ್ನ ನಮಸ್ಕಾರ"

" ಇಲ್ಲಿಗೆ ಸಭಾ ಕಾರ್ಯಕ್ರಮ ಮುಗೀತು, ಈಗ ಭರತನಾಟ್ಯ ಸುರುವಾಗ್ತೈತೆ, ಎಲ್ಲಾ ಅಲ್ಲಲ್ಲೇ ಕೂತಿದ್ದು ಸಾಂತರೀತಿಯಿಂದ ನೊಡ್ಬೇಕು ಹಂತೇಳಿ ಪ್ರಾರ್ಥನೆ "

ಅಯ್ಯಯ್ಯೋ ರಾಮ ! ಅಂತೂ ಸಭೆ ಮುಗೀತು. ನಂತ್ರ ಮುಂದೆ ಕೂತು ಮಜಾ ತಗೋಬೇಕಲ್ಲ! ದೂರದ ಹಳ್ಳಿಗಾಡು ಬೇರೆ. ರಾತ್ರಿ ವಾಹನ ಸೌಲಭ್ಯ ಇರೋದಿಲ್ಲ. ಅದಕ್ಕಿಂತ ಬಂದದ್ದಕ್ಕೆ ಅಲ್ಲೇ ಮುಂದೆ ಕೂತು ಬೆಳಗುಮಾಡುವ ಪರಿಸ್ಥಿತಿ ನನ್ನದಾಗಿತ್ತು!

[ಮುಂದಿನ ಭಾಗದಲ್ಲಿ ನಾಟಕದ ಬಗ್ಗೆ ಓದಿ- ಒಂದೆರಡು ದಿನಗಳಲ್ಲಿ!]

15 comments:

  1. ಹಹ್ಹಹ್ಹಾ... ಪಾಪ ನಿಮ್ ಇಸ್ತಿತಿ ಇಂಗ್ ಹಾಗ್ಬಾರ್ದಿತ್ತು... ನಾಟಕದಾಗೆ ಇನ್ನೇನ್ ಕಾದೈತೋ ಸಿವನೇ... ವಸಿ ಬೇಗ ಎಳ್ಬುಡಿ ಸ್ವಾಮಿ... ಬಲೇ ಚೆಂದಾಗೈತೆ ...

    ReplyDelete
  2. ಹಯ್ಯೋ, ನಿಮ್ಮ ಪರಿಸ್ತಿತಿ ನೋಡಿದ್ರೆ ಪಾಪ ಅನಿಸ್ತಿತು.... ಎಲ್ರಿಗೂ ಅರ್ತ ಆಗೂ ಅಂಗೆ ಮಾತಾಡಬೇಕಿತ್ತು ಸರ್.... ಇದೆ ಇಂಗಿದ್ರೆ ನಾಟ್ಕ ಎಂಗೈತೋ.... ಬೇಗ ಎಲ್ಬಿಡಿ ಸಾರ್.....

    ReplyDelete
  3. ವಿ.ಆರ್ ಭಟ್ಟ ಸರ್,
    ಹಾಸ್ಯಮಯವಾಗಿದೆ ... ನಾನು ಇಂತಹದೆ ಒಂದು ಪ್ರಸಂಗ ಬರೆಯುತ್ತಿದ್ದೆ .,. ನೀವು ಬೇಗ ಬರೆದು ಬಿಟ್ಟಿರಿ ..

    ReplyDelete
  4. hahaha super chennagi barediddeeri haLLiya kateyannu........paapa neevu sumne raatri ella kaLeyohaagaytu hahaha mundina bhaaga odalikke kaayta iddeevi

    ReplyDelete
  5. ಎನ್ಸಾಮೀ ಈ ಪಾಟಿ ನಮ್ ಅಕ್ಕ್ತಂಗೀದೀರು, ಅಣ್ಣ--ತಮ್ದೀರು ಎಲ್ಲ ಬಂದ್ಬುಟ್ಟು ನಗೆಯಾಡ್ತಾಯ್ಕೊಂಡ್ರಿ ? ನನ್ ಪರಿಸ್ಥಿತಿ ಒಸಿ ಅರ್ಥಮಾಡ್ಕೊಳಿ ನೋಡನ, ನಾಟಕಾ ನೋಡ್ತೀನಿ ಅನ್ತೀರಲ್ಲಪ್ಪೋ ನಂಗೆ ಶಾನೆ ಸಂಕಟಾಗ್ತೈತೆ, ಬತ್ತೀನಿ ಇರಿ ಸಲ್ಪ, ಮಳ್ಗಾಲ ಅಲ್ಲವ್ರಾ ಒಳ್ಗಡೀಕೆ ಬೆಚ್ಚಗೆ ಮಲ್ಕಂಡೀನಿ, ಕಾಪಿ ಕುಡೀತಲೆಯ ಬಂದ್ಬುಡ್ತೀನಿ,

    ತಮ್ಮೆಲ್ಲರ ಪ್ರತಿಕ್ರಿಯೆ ನೋಡುತ್ತಿದ್ದರೆ ನಾಟಕ ಬೇಗ ಪ್ರಸ್ತುತ ಪಡಿಸುವ ಇಷ್ಟವಾಗುತ್ತಿದೆ, ಆದರೆ ಸಮಯದ ಅಭಾವದಿಂದ ಎರಡು ದಿನಗಳ ವಿಳಂಬ ಅನಿವಾರ್ಯ!
    ಸದ್ಯ ಪ್ರತಿಕ್ರಿಯಿಸದ ಪ್ರಗತಿ ಮೇಡಂ ,ಶ್ರೀ ದಿನಕರ್, ಶ್ರೀ ಶ್ರೀಧರ್, ಶ್ರೀ ಶ್ರೀಕಾಂತ್ ಮತ್ತು ಸುಗುಣ ಮೇಡಂ ತಮೆಗೆಲ್ಲಾರಿಗೂ ಧನ್ಯವಾದಗಳು.

    ReplyDelete
  6. ಗ೦ಭೀರ ವಿಷಯಗಳ ವಿಶ್ಲೇಷಣೆ ಮಾಡ್ತಿದ್ದ ನೀವು ತಮಾಷೆ ಬರಹದಲ್ಲೂ ಎತ್ತಿದ ಕೈ ಅಂತ ಗೊತ್ತಾಯ್ತು. ನನ್ನ ಬ್ಲಾಗಿಗೆ ನಿಮಗೆ ಹಾದರದ ಸ್ವಾಗತ

    ReplyDelete
  7. ಸಾರ್....
    ಆಮಂತ್ರಣ ಪತ್ರಿಕೆ ಓದೇ ಸುಸ್ತಾಗೋಯ್ತು... ಮುಂದೆ ಕಾರ್ಯಕ್ರಮ ವಿವರಣೆ...ಅಯ್ಯಬ್ಬಾ.... ಅಂತೂ... "ಆರಾರ್ಪಣೆ" ಯಿಂದ ಸುರು ಮಾಡ್ಕೊಂಡು "ಸಾಂತರೀತೀಲಿ........" ಸಭೆ ಮುಗ್ಸಿದ್ವಿ... :-) ನಾಟ್ಕಕ್ಕೆ ಕಾಯ್ತಿದೀವಿ ಸಾರ್......... :-) :-)

    ಶ್ಯಾಮಲ

    ReplyDelete
  8. hhohoho :-). ಅಡ್ಬುದ್ದೆ ಬುದ್ದಿ !.

    ReplyDelete
  9. ಇದೇನು ಸಾರ್,
    ಕನ್ನಡಕ್ಕೆ ಈ ಪಾಟಿ ಹಾದರದ ಮರ್ವಾದೆ ಸಿಗ್ತಾ ಅದೆ? ಹಾದ್ರೂ ಸಭೆ ಸಂತ ರೀತಿಯಲ್ಲಿ ಮುಂದುವರ್ದುದಕ್ಕೆ ಹೆಲ್ಲರಿಗೂ ಹೊಂದನೆ ಏಳಬೇಕು!
    ಸಭೆಯ ಸುರುವಾತಿನಲ್ಲೇ ಹಿಷ್ಟೊಂದು ಮರ್ವಾದೆ ಸಿಕ್ಕದೆ ಕನ್ನಡಕ್ಕೆ, ಹಿನ್ನು ನಾಟ್ಕ ಸುರು ಆದ್ಮೇಲೆ ಎಂಗೈತೋ?
    ಬೇಗ ಏಳಿ!

    ReplyDelete
  10. ಏಕದರಲ್ಲಿ ಅನೇಕವನ್ನು ಹೊಂದಿರುವ ರಾಷ್ಟ್ರ ನಮ್ಮದು ! ಹಾಗೇ ಈಲರಿಗೂ ಒಂದೇ ಉತ್ತರದಲ್ಲಿ ಹೇಳಿಬಿಟ್ಟರೆ ಹೇಗೆ?

    ಶ್ರೀಯುತ ಪರಾಂಜಪೆ, ನನ್ನ ಬ್ಲಾಗಿನಲ್ಲಿ ಹಣ್ಣು ತರಕಾರಿ ಎಲ್ಲವೂ ಇವೆ, ಹೀಗಾಗಿ ಆಗಾಗ ಊಟಕ್ಕೆ ಉಪ್ಪಿನಕಾಯಿ ಇದ್ದಂತೆ ಹಾಸ್ಯ-ರಸಾಯನ ಅನಿವಾರ್ಯ, ಬರೇ ಒಂಥರಾ ಅದು ಬೋರು ! ಆಮೇಲೆ ನೀವೂ ಕೂಡ ಅದು ಸೀರಿಯಸ್ ಬ್ಲಾಗು ಅಂತೀರಾ, ಅದಕ್ಕೇ ಎಲ್ಲವನ್ನೂ ಮೊದಲೇ ಇಟ್ಟುಬಿಟ್ಟಿದ್ದೇನೆ, ಆದರೆ ಯಾರಿಗೂ ಇದುವರೆಗೆ ಕೈ ಎತ್ತಿಲ್ಲ [ತಮಾಷೆಗಾಗಿ ಹೇಳಿದೆ!] ತಮ್ಮ ಬ್ಲಾಗಿಗೆ ಬರುತ್ತಲೇ ಇದ್ದೇನೆ, ತಮಗೆ ಧನ್ಯವಾದಗಳು

    ಶ್ರೀಯುತ ಸೀತಾರಾಮ್,
    ((((((((((((-: ((((((((((((((((((((((((((--: [ನಿಮ್ಮಕದೆ ಮುಖಮಾಡಿ ನಕ್ಕಿದ್ದೇನೆ !]ಧನ್ಯವಾದಗಳು


    ಶ್ಯಾಮಲ ಮೇಡಂಮ್ನೋರೆ ಇನ್ನೂ ನಾಟ್ಕ ಬರೋಕ್ಮುಂಚೆನೇ ನಗಾಡ್ಬುಟ್ರಿ ಇನ್ನು ನಾಟ್ಕ ನೋಡೆನಂತೀರೋ ತಿಳೀವಲ್ದು, ಸಾಂತರೀತೀಲಿ ನೀವ್ ಕಾಯ್ರಿ ನಾ ಬುರ್ರ್ನೆ ಬತ್ತೀನಿ, ಧನ್ಯವಾದಗಳು.

    ಶ್ರೀಯುತ ಸುಬ್ರಹ್ಮಣ್ಯ , ಹಂಗ್ಯಾಕೆ ಅಡ್ಬುದ್ರಿ, ಇನ್ನೊಂದ ಕಿತಾ ಬಂದು ನಾಟ್ಕ ನೋಡದ್ರೆನೇಯ ನಂಗೆ ಸಮಾದಾನ ಆಗದು ಇಲ್ಲಾಂದ್ರೆ ನಮ್ ಸಂಘದ ಅದ್ಯುಕ್ಸರ ತಾವ ಹೇಳ್ಕೊಟ್ ಬುಡ್ತೀನ್ ಕಣಪ್ಪೋ ! ಧನ್ಯವಾದಗಳು

    ಶ್ರೀಯುತ ಪ್ರವೀಣ್, ನೀವು ಈಂಗ್ ಕನ್ನಡ ಮಾತಾಡಬಾರದಿತ್ತು ಅನ್ಸಾಕತ್ತೈತೆ , ನಾಟ್ಕ ತಂಕ ನಿಮ್ಮ ಹೇನಂತೀರೋ ಹದನ್ನ ಮಡೀಕೊಳಕಾಯಕಿಲ್ವ ? ಭೋ ಚಂದಾ ಹೇಳ್ದ್ರಿ ಬುಡಿ, ಧನ್ಯವಾದಗಳು.

    ಇನ್ನೂ ಓದಲಿರುವ, ಈಗಾಗಲೇ ಓದಿರುವ ಎಲ್ಲರಿಗೂ ನಮನಗಳು

    ReplyDelete
  11. ಶ್ರೀ ವಸಂತ್, ಇದರ ಎರಡನೇ ಭಾಗವನ್ನೂ ಓದಿ ಆನಂದಪಡಿ-ಶೀಘ್ರದಲ್ಲಿ, ಧನ್ಯವಾದಗಳು

    ReplyDelete
  12. ಆರ್. ವಿ ಭಟ್ಟರೇ ತುಂಬಾ ಚೆನ್ನಾಗಿದೆ , ಸಾಮಾನ್ಯವಾಗಿ ಹಳ್ಳಿಯ ಮುಗ್ಧ ಜನರು ಈ ತರಾ ಮಾತಾಡೋದು ಕಾಮನ್ . ನನಗೂ ಒಮ್ಮೆ ನಮ್ಮ ಸಂಭಂದಿಕರ ಮನೆಗೆ ಹಬ್ಬಕ್ಕೆ ಹೋದಾಗ ಈ ತರಾ ಅನುಭವ ಆಗಿತ್ತು . ಅಲ್ಲಿಯವರು ದ್ರೌಪತಿ ವಸ್ತ್ರಾಪಹರಣ ನಾಟಕ ಆಡಿದ್ದರು , ವಸ್ತ್ರಾಪಹರಣದ ಸಂದರ್ಬದಲ್ಲಿ ಕೃಷ್ಣ ನ ಪಾತ್ರ ಮಾಡುವವನು ಹೊರಗಡೆ ಹೋಗಿ ಬೀಡಿ ಸೇದುತ್ತ ನಿಂತಿದ್ದ . ಇಲ್ಲಿ ದ್ರೌಪತಿ ಪಾತ್ರ ಮಾಡಿದವನು ಬೋಳಿಮಗ ಕೃಷ್ಣ ಎಲ್ಲಿ ಹೋದನಲೆ ಅಂತ ಸ್ಟೇಜ್ ಮೇಲೆ ಕೂಗಿದ್ದ .

    ReplyDelete
  13. ಥ್ಯಾಂಕ್ಸ್ ಶ್ರೀ ವೆಂಕಟೇಶ್, ತಮಗೂ ಅಂಥಾ ಅನುಭವ ಇದೆಯಲ್ಲ, ಖುಷಿಯಾಗುತ್ತಿದೆ

    ReplyDelete