ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, July 7, 2010

ಜಗವಾಗಲಿ ಮನೆ

ಜಗವಾಗಲಿ ಮನೆ

ಜಗವದೊಂದು ಮದುವೆಮನೆ
ನಗುವಿನಲೆಯ ನವಿಲಮನೆ
ಮಗುವಿನಂತ ಮುಗ್ಧರಿರುವ
ಬಗೆಬಗೆ ಜೀವಿಗಳಮನೆ

ಸಡಗರದಲಿ ಹಲವರೆದ್ದು
ಗಡಬಡಿಸುತ ಓಡಿ ಹೋಗಿ
ಹಡಗು ರೈಲು ವಿಮಾನವೇರಿ
ಒಡನಾಡುವ ನಡುಮನೆ

ಗುಡುಗು ಮಿಂಚು ಮಳೆಯು ಬಿಸಿಲು
ಗುಡಿ ಮಸೀದಿ ಇಗರ್ಜಿಗಳು
ಮಡಿಮನಸಲಿ ಮಂಡಿಯೂರಿ
ಗಡಿಮೀರಿ ಪ್ರಾರ್ಥಿಪಮನೆ

ಮೃಷ್ಟಾನ್ನದ ಸುಗ್ರಾಸವು
ಅಷ್ಟಾಂಗಕು ಯೋಗ-ಧ್ಯಾನ
ಕಷ್ಟಗಳನು ತಿಳಿದು ಕಳೆದು
ಇಷ್ಟಾರ್ಥವ ಪಡೆವಮನೆ

ಧರ್ಮಕರ್ಮ ಅರ್ಥಗ್ರಹಿಸಿ
ಮರ್ಮವರಿತು ಮನುಜರಾಗಿ
ವರ್ಮ ಅಬ್ದುಲ್ ಆಂಟನಿ ಜತೆ
ಶರ್ಮ ಸೇರಿ ಬಾಳ್ವಮನೆ

11 comments:

  1. 'ವಸುದೈವ ಕುಟುಂಬಕಂ'ಎನ್ನುವ ಮನೆ ನಿಜಕ್ಕೂ ಸುಂದರ ಅರಮನೆ!

    ReplyDelete
  2. ಡಾ| ಕೃಷ್ಣಮೂರ್ತಿಗಳೇ ತಮ್ಮ ಮನಸ್ಸೂ ಅದನ್ನೇ ಅನುಮೊದಿಸುತ್ತಿದೆಯಲ್ಲವೇ? ತಮಗೂ ಧನ್ಯವಾದಗಳು

    ReplyDelete
  3. ವೇದಗಳ ಕರೆಯೇ ಇದಲ್ಲವೇ,
    ಉದಾರಚರಿತರು ನಾವು
    ವಿಶ್ವದೆಲ್ಲರ ಪ್ರೀತಿಸುವವರು
    ಜದದ ಜನರೆಲ್ಲ ಒಂದೇ ಕುಟುಂಬದವರೆಂದು ತಿಳಿದವರು
    -ನಿಮ್ಮ ಆಶಯವೇ ಎಲ್ಲರ ಆಶಯವಾಗಲಿ, ಶುಭಮ್.

    ReplyDelete
  4. sakkattagide sir kavana.... :-)

    ಯಾಕೋ "ಮಂಕು ತಿಮ್ಮನ" ಕಗ್ಗ ನೆನಪಾಯಿತು..:-)

    ReplyDelete
  5. ಚೆಂದದ ಕವನ . ಪ್ರಾಸ ತುಂಬಾ ಸೊಗಸಾಗಿ ಮೂಡಿ ಬ೦ದಿದೆ.

    ReplyDelete
  6. ನಿಮ್ಮ ಕವನವೆ ಮೃಷ್ಟಾನ್ನ. ಸದಭಿರುಚಿಯ ಕವನಗಳು ಬರುತ್ತಲೇ ಇರಲಿ.

    ReplyDelete
  7. "ಜಗವೇ ಒಂದು ಮನೆ"
    ಭಟ್ಟರೇ,
    ಇಂತಹ ಪರಿಕಲ್ಪನೆ ಎಷ್ಟು ಸುಂದರ ಆಲ್ವಾ? ಆದರೆ ಜಗವೆ ಒಂದು ಮನೆಯಾಗಳು ಸಾಧ್ಯವೇ?

    ReplyDelete
  8. ವರ್ಮ ಅಬ್ದುಲ್ ಆಂಟನಿ ಜತೆ
    ಶರ್ಮ ಸೇರಿ ಬಾಳ್ವಮನೆ
    ಸಾಲು ತುಂಬಾ ಚೆನ್ನಾಗಿದೆ...

    "ಆ ಧರ್ಮ ಈ ಧರ್ಮ, ಎನಿತೆನಿತೋ ಧರ್ಮ....
    ಒಗ್ಗೂಡಿ ಬಾಳುವುದೇ ಎಲ್ಲದರ ಮರ್ಮ"...

    ಕವನ ತುಂಬಾ ಚೆನ್ನಾಗಿದೆ..

    ReplyDelete
  9. ಸನ್ಮಿತ್ರರೇ, ಆರ್ಷೆಯ ವೇದ ಸಂಸ್ಕೃತಿಯ ಮೂಲ ಆದರ್ಶವೇ ಇದು, ಇದನ್ನರಿತ ಕವಿಗಳು ಸಾಹಿತಿಗಳು ಇದಕ್ಕಾಗಿ ದುಡಿದರು. ವರಕವಿ ಬೇಂದ್ರೆ " ಇದು ಬರಿ ಬೆಳಗಲ್ಲೋ ಅಣ್ಣಾ ಇದು ಬರಿ ಬೆಳಗಲ್ಲೋ" ಅಂದರು-ಅಂದರೆ ಬೆಳಗು ಬರೀ ಬೆಳಗಲ್ಲ ಬೆಳಗಿನ ಅರ್ಥ ಬಹಳ ಗೂಢ! ಈ ಬೆಳಗು ಅರಿತರೆ ಜಗದಲ್ಲಿ ಹಲವರ ಬಾಳಿಗೆ ಬೆಳಕಾದೀತು. ಅರಿಯದೆ ನಾವು ನಮ್ಮ ನಮ್ಮಲ್ಲೇ ಕಚ್ಚಾಡಿಕೊಂಡರೆ ಇದು ಅರ್ಥಹೀನ ಪ್ರಾಣಿಸದೃಶ ಬದುಕಾದೀತು. ಪ್ರತೀ ಪ್ರಾಣಿ-ಪಕ್ಷಿಗಾದರೂ ಒಂದು ನಿಯಮ-ಕಟ್ಟುಕಟ್ಟಳೆ ಇದೆ, ಅದನ್ನವು ಚಾಚೂ ತಪ್ಪದೇ ಪರಿಪಾಲಿಸುತ್ತವೆ, ಆದರೆ ಬೆಳೆದು ಅನಿಯಂತ್ರಿತನಾದ ಮನುಜ ಜಗತ್ತಿಗೇ ಮಾರಕವಾದ ಕೆಲಸಗಳನ್ನು ನಿಸರ್ಗವನ್ನೇ ಹಾಳುಗೆಡಹುವ ಕಾರ್ಯವನ್ನು ಮಾಡುತ್ತಿರುವಾಗ, ಕಾರ್ಖಾನೆಗಳಿಂದ ದೂಷಿತ ಹೊಗೆಯನ್ನು ಕಲುಷಿತ ನೀರನ್ನು ಪರಿಸರಕ್ಕೆ ಬಿಡುವುದು, ತನ್ನ ತ್ವರಿತಗತಿಯ ಓಡಾಡುವಿಕೆಗೆ ಬೇಕಾಗಿ ಮಿಕ್ಕುಳಿದ ಮರಗಿಡಗಳು-ಜೀವಸಂಕುಲಗಳನ್ನು ನಾಶಪಡಿಸುತ್ತಾನೆ. ಕೇವಲ ದುಡ್ಡಿಗಾಗಿ ಏನನ್ನೂ ಮಾಡಲ ಹೇಸದ ಮನುಷ್ಯ ಅರಿತು ಮನುಜನಾದರೆ ಎಂದು ಕವನ ಸಾರಿದೆ. ಇಲ್ಲಿ ಧರ್ಮ-ಕೋಮು-ಜಾತಿ ಇವೆಲ್ಲ ಬೇಡ, ಯಾವುದೂ ಅಡ್ಡ ಬಾರದಿರಲಿ, ಬದುಕು ಹರುಷದಾಯಕವಾಗಲಿ ಎಂಬುದು ಆಶಯ, ಪ್ರತಿಕ್ರಿಯಿಸಿದ ಮಿತ್ರಓದುಗರಾದ ಹರಿಹರಪುರ ಶ್ರೀಧರ್, ದಿವ್ಯಾ, ಸೀತಾರಾಮ್, ಸುಬ್ರಹ್ಮಣ್ಯ, ಪ್ರವೀಣ್ , ಪ್ರಗತಿ ತಮಗೆಲ್ಲರಿಗೂ ಕವನ ಸಂತಸ ತಂದಿರುವುದು ಪರ್ಯಾಯ ನನಗೆ ಆನಂದ ತಂದಿದೆ, ತಮಗೆಲ್ಲರಿಗೂ ಹಾಗೂ ಇನ್ನಿತರ ಎಲ್ಲಾ ಓದುಗರಿಗೂ ಹೃತ್ಪೂರ್ವಕವಾಗಿ ಆಭಾರಿಯಾಗಿದ್ದೇನೆ, ನಿಮ್ಮ ಬದುಕು ಸತತವೂ ಆನಂದಮಯವಾಗಿರಲಿ, ಇತಿ ಶಮ್.

    ReplyDelete