ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, June 16, 2010

ರಾಕ್ಷಸರು!


ರಾಕ್ಷಸರು ಎಲ್ಲಿದ್ದಾರೆ ಈ ಜಗದಲ್ಲಿ? ಜಗತ್ತಿನಲ್ಲಿ ಹಲವು ರೀತಿಯಲ್ಲಿ ನಮಗೆ ರಾಕ್ಕಸರು ಸಿಗುತ್ತಾರೆ. ರಾಕ್ಷಸರು ಎಂದ ಮಾತ್ರಕ್ಕೆ ವಿರೂಪಿಗಳು, ಕೋರೆ ಹಲ್ಲುಳ್ಳವರು ಎಂಬ ಚಿತ್ರ ನಮ್ಮ ಮನಃಪಟಲದ ಮೇಲೆ ಬಂದು ನಿಲ್ಲುತ್ತದೆ. ಆದರೆ ರಾಕ್ಷಸರೂ ಮನುಷ್ಯರೇ, ಅವರಲ್ಲಿನ ರಕ್ಕಸಗುಣದಿಂದ ಅವರು ರಾಕ್ಷಸರಾಗುತ್ತಾರೆ. ಜನಸಾಮಾನ್ಯರಿಗೆ ನಾನಾ ರೀತಿಯಲ್ಲಿ ಉಪಟಳ ಕೊಡುವ ಎಲ್ಲರೂ ರಾಕ್ಷಸರೇ ಆಗಿರುತ್ತಾರೆ. ನಮ್ಮ ಮಧ್ಯೆಯೇ ನೋಡಿ ಪಂಚಾಗ್ನಿಯ ಪರಮಹಂಸ ಎಂದುಕೊಂಡು ನಂಬಿಸಿ ನಾಮವೆಳೆವವ ಒಬ್ಬನಾದರೆ ಉದ್ಯೋಗವರಸಿ ಬಂದ ವ್ಯಕ್ತಿಯ ಕಿಡ್ನಿ ಮುಂತಾದ ಅಂಗಾಂಗಗಳನು ಕದ್ದು ಮಾರುವವರು ಇನ್ನೊಂದೆಡೆ, ಸಾರಾಯಿ ತಯಾರುಮಾಡಿ ಸಾವಿರ್ ಸಾವಿರ ಸಂಸಾರಗಳನ್ನು ಬೀದಿಪಾಲುಮಾಡಿ ರಾಜಕೀಯದಲ್ಲಿ ತಾವು ಮುನ್ನಡೆದು ಮೆರೆಯುವರು ಕೆಲವರಾದರೆ, ರೈತರ ಭೂಮಿಯನ್ನು ವಿನಾಕಾರಣ ಕಸಿದು ಅವರನ್ನೆಲ್ಲ ಅನಾಥರನ್ನಾಗಿ ಮಾಡುವವರು ಕೆಲವರು, ನೆರೆ ಸಂತ್ರಸ್ತರಿಗೆ ಕೊಡಲೆಂದು ಸಂಗ್ರಹಿಸಿ ತಾವೇ ತಿಂದು ತೇಗುವವರು ಇನ್ನೂ ಕೆಲವರು, ದುಪ್ಪಟ್ಟು ಹಣ ಶೀಘ್ರಕೊಡುತ್ತೇವೆ ಎಂದು ಠೇವಣಿ ಪಡೆದು ನಾಮವೆಳೆವವರು ಮತ್ತೂ ಕೆಲವರು,ಅನಾಥ-ವೃದ್ಧರಿಗೆ ಆಶ್ರಯ ಕೊಡುವ ನೆಪದಲ್ಲಿ ಅವರನ್ನು ನೋಡಲಾರದ ಸ್ಥಿತಿಯಲ್ಲಿಟ್ಟು ಹಣಬಾಚುವವರು, ವಿದೇಶದಲ್ಲಿ ಕುಳಿತು ಗ್ಯಾಂಗು,ಮಾಫಿಯಾ ವ್ಯವಹಾರ ನಡೆಸುವವರು ಕೆಲವರು, ಶಿಕ್ಷಣ-ವೈದ್ಯಕೀಯ ಸೇವೆ ಈ ಎಲ್ಲಾ ರೀತಿಯಲ್ಲಿಯೂ ಮುಖವಾಡ ಧರಿಸಿ ಚೆನ್ನಾಗಿ ಮೇಯುವವರು ಹಲವರು ಅಲ್ಲವೇ? ಇಂಥವರನ್ನೆಲ್ಲಾ ರಾಕ್ಷಸರು ಎಂದು ಸಂಬೋಧಿಸಿದ್ದಾನೆ ಜಗದಮಿತ್ರ. ಜನಸಂತತಿ ಹಲ್ಲಿನ ಮಧ್ಯೆ ಇರುವ ನಾಲಿಗೆಯಂತೆ ಬದುಕಲು ಪ್ರಯತ್ನಿಸುವಾಗ ಇಂತಹ ಕುತ್ಸಿತ,ಕುಟಿಲ, ಕಪಟ,ಖೂಳ ರಕ್ಕಸತನವನ್ನು ನೆನೆಪಿಸಿಕೊಂಡು, ಪರಾಮರ್ಶಿಸಿಕೊಂಡು ಬದುಕಬೇಕು ಎಂದಿದ್ದಾನೆ ಜಗದಮಿತ್ರ. ಬೇಸರಗೊಡ ತನ್ನ ಮನದಿಂದ ಜನತೆಗಾಗಿ ಮೀಟಿ ತೆಗೆದ ರಾಗಗಳನ್ನು ಶಬ್ಧಗಳಲ್ಲಿ ಈ ರೀತಿ ಪೋಣಿಸಿಕೊಟ್ಟಿದ್ದಾನೆ ಜಗದಮಿತ್ರ--

ರಾಕ್ಷಸರು!

ಪಂಚಾಗ್ನಿ ಪರಮಹಂಸಾದಿ ಶಬ್ಧಗಳ
ಮಿಂಚಿನಾವೇಗದಲಿ ಬಳಸುತ್ತ ಜನಕೆ
ಸಂಚುಮಾಡುತ ಹಲವು ಮಿಥ್ಯ ಸತ್ಯವದೆಂದು
ವಂಚಿಸುವರೈ ನೋಡ | ಜಗದಮಿತ್ರ

ಉದ್ಯೋಗವೀವೆನುತ ಕರೆದು ಯುವಪೀಳಿಗೆಯ
ಸಾಧ್ಯವಿರುವೆಲ್ಲರೀತಿಯಲಿ ಹಣಪಡೆದು
ವೇದ್ಯವಾಗದರೀತಿ ಅಂಗಾಂಗ ಕಡಿದಿರಿಸಿ
ಮೇಧ್ಯ ಭಕ್ಷಿಸುತಿಹರು | ಜಗದಮಿತ್ರ

ಸಾರಾಯಿ ಮಾರುತ್ತ ಸಾರಾಸಗಾಟಾಗಿ
ಪಾರಾಯಣ ಭಜನೆ ಹೊರಗೆ ತೋರಿಕೆಗೆ
ಯಾರು ಏನಾದರೇನ್ ರಾಜಕೀಯದಿ ತಾವು
ಜೋರಾಗಿ ಬದುಕುವರು | ಜಗದಮಿತ್ರ

ಇದ್ದುದನು ಹೇಳಿದರೆ ಎದ್ದು ತಾವೆದೆಗೊದೆದು
ಗೆದ್ದು ತಾವಾಳಿಹರು ರಾಜ್ಯ-ದೇಶವನು
ಸದ್ದಿರದೆ ಮಾರುತ್ತ ಮಣ್ಣಮಕ್ಕಳ ಭೂಮಿ
ಮೆದ್ದು ಮೆರೆವರು ಜಗದಿ| ಜಗದಮಿತ್ರ

ಹುಂಡಿಯನು ಹಿಡಿದಿಡಿದು ಕಂಡಕಂಡಲ್ಲೆಲ್ಲ
ದಂಡೆದ್ದುಹೋಗಿ ಧನಕನಕ ಸಂಗ್ರಹಿಸಿ
ಉಂಡಿರದ ಆ ಜನಕೆ ಪರಿಹಾರವೀವೆನುತ
ಉಂಡು ಕೈ ತಿರುವಿದರು | ಜಗದಮಿತ್ರ

ದುಪ್ಪಟ್ಟು ಹಣವೆನುತ ಆಸೆ-ಆಮಿಷ ತೋರಿ
ಉಪ್ಪಿಟ್ಟು-ಕೇಸರೀಬಾತು ನೀಡುತಲಿ
ತಪ್ಪೇನು ಗೊತ್ತಿರದ ಜನಗಳಿಗೆ ನೀಡಿಹರು
ಕಪ್ಪೆ-ಕಲ್ಲಿನ ಚೀಲ | ಜಗದಮಿತ್ರ

ಅನಾಥ-ವೃದ್ಧರಿಗೆ ಆಶ್ರಯವ ಈವೆಂದು
ಕನಾತು ಕಟ್ಟಿ ಕೋಣೆಯ ಮೂರು ತೋರಿ
ದುರ್ನಾತ ಹೊಡೆವಂತ ಹಂದಿಗೂಡಲಿ ಕೂಡಿ
ನಾನಾಥರದಿ ಮೆಲ್ವರ್ | ಜಗದಮಿತ್ರ

ತಂತ್ರಗಾರಿಕೆಯಿಂದ ಯಂತ್ರೋಪಕರಣವನು
ಮಂತ್ರಿಮಾಗಧರಿಂದ ಮರೆಯಲ್ಲಿ ಪಡೆದು
ಕಂತ್ರಿಬುದ್ಧಿಯ ಬಳಸಿ ದೇಶದ್ರೋಹಿಗಳಾಗಿ
ಸಂತ್ರಸ್ತರನು ಮಾಳ್ಪರ್ | ಜಗದಮಿತ್ರ

8 comments:

  1. ಆಧುನಿಕ ರಾಕ್ಷಸರ ಕುರಿತು ನೀವು ರಚಿಸಿದ ಕಾವ್ಯ ತುಂಬಾ ಚೆನ್ನಾಗಿದೆ....ಸತ್ಯವೂ ಆಗಿದೆ.

    ReplyDelete
  2. ನಮಸ್ಕಾರ ವಿ.ಆರ್. ಭಟ್ ರವರೇ.ನೀವು ಹೇಳಿದ್ದು ಸರಿ.
    ಸಜ್ಜನನು ಬೇರಿಲ್ಲ ದುರ್ಜನನು ಬೇರಲ್ಲ|
    ಬುದ್ಧನೂ ಬೇರಿಲ್ಲ ಹಿಟ್ಲರನೂ ಬೇರಲ್ಲ||
    ಕೆಡುಕದು ಬೇರಿಲ್ಲ ಒಳ್ಳಿತದು ಬೇರಲ್ಲ |
    ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ||

    ReplyDelete
  3. Bhattare,
    janaru nidreyiMda echchettukolluvavaregoo Rakkasaru idde iruttaare.
    jana jaagrutiyonde parihaara. nimma prayatnavoo jaagrutiya omdu bhaaga.

    ReplyDelete
  4. ನಮ್ಮ ಸುತ್ತ ಮುತ್ತ ಸೇರಿ ತರತರದ ವೇಷದೀ ಲೂಟಿಮಾಡುವ ಗೋಮುಖರಕ್ಕಸರ ಪರಿಯನ್ನು ತು೦ಬಾ ಸರಳವಾಗಿ ಸುಲಲಿತ ಶಬ್ದಜಾಲದಲ್ಲಿ, ವಿಷದವಾಗಿ ಬಿಚ್ಚಿಟ್ಟಿದ್ದಾನೆ ಜಗದಮಿತ್ರ. ತು೦ಬಾ ಸು೦ದರ ಪ್ರಾಸಭದ್ದ ಕವನ. ಶಬ್ದಗಳ ಬಳಕೆ ಸೊಗಸಾಗಿ ಮನ ತಟ್ಟಿದೆ.
    ಈ ರಕ್ಕಸರ ಮಟ್ಟ ಹಾಕುವ ಆ ಶ್ರೀಹರಿಯು ಎಷ್ಟೆಷ್ಟು ಅವತಾರ ಎತ್ತಬೇಕೋ?

    ReplyDelete
  5. ಭಟ್ಟರೇ,
    ಗೊಮುಖವ್ಯಾಘ್ರರ ಬಗ್ಗೆ ನಿಮ್ಮ ಕವನ ಚೆನ್ನಾಗಿ ಮೂಡಿ ಬಂದಿದೆ. ಹೌದು, ಇ೦ದು ನಮ್ಮ ಸುತ್ತ ರಾಕ್ಷಸರು ತು೦ಬಿದ್ದಾರೆ.

    ReplyDelete
  6. ಆಧುನಿಕ ರಾಕ್ಷಸರ ಬಗ್ಗೆ ನಿಮ್ಮ ಕವನ ಚೆನ್ನಾಗಿ ಮೂಡಿ ಬಂದಿದೆ.

    ReplyDelete
  7. ರಕ್ಕಸರಿಹರು ನಮ್ಮ ಮನದ
    ಅಕ್ಕ ಪಕ್ಕದಲಿ ಕುಳಿತು
    ಚೊಕ್ಕವಾಗಿ ಸುಲಿದು ಜೇಬನು
    ಹಕ್ಕೆಂಬ ರೀತಿಯಲಿ ಕನ್ನ ಕೊರೆವರು
    ಇಕ್ಕಿದರೂ ಉಮ್ಬರು ಕಳ್ಳತನದಿ
    ಬಿಕ್ಕುವರು ಖದೀಮರು ಮೊಸಳೆಯ ತರದಿ........

    ಇಂತ ರಾಕ್ಷಸರೇ ಈ ಜಗತ್ತಿನ ತುಂಬಾ ತುಂಬಿದ್ದಾರೆ. ಖದೀಮರ ಬಗೆಗೆ ನಿಮ್ಮ ಕವನ ಮೆಚ್ಚುವಂತಿದೆ..

    ReplyDelete
  8. ಮನಸ್ಸಿಗೆ ಹಲವನ್ನು ಹೇಳುವ ಹಂಬಲವಿರುತ್ತದೆ, ಆದರೆ ಅದಕ್ಕೆ ತಕ್ಕುದಾದ ವೇದಿಕೆ ಇರುವುದಿಲ್ಲ ! ಅಥವಾ ಮನಸ್ಸು ಹೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಮನಸ್ಸಿಗೆ ಅನ್ನಿಸಿದ್ದನ್ನು ಮುಲಾಜಿಲ್ಲದೆ ಬರೆಯುವುದು ನನ್ನ ಅಭ್ಯಾಸ, ಇಲ್ಲಿ ಮಿತ್ರನೂ ಶತ್ರುವೂ ಎಲ್ಲರೂ ಒಂದೇ. ಅಸಲಿಗೆ ನನಗೆ ಶತ್ರುವಿಲ್ಲ ಎಂಬುದನ್ನು ತಮ್ಮೆಲ್ಲರಿಗೆ ಹೇಳಲು ಸಂತಸವಾಗುತ್ತದೆ.

    ತೇಜಸ್ವಿನಿ ಹೆಗಡೆಯವರು ಆನಂದಿಸಿದ್ದಾರೆ , ಕವಿ ನಾಗರಾಜ್ ರವರು ಕವನಿಸಿದ್ದಾರೆ[ಅವರ ಹೆಸರಲ್ಲೇ ಕವಿಯಿದ್ದಾನೆ ನೋಡಿ !], ಶ್ರೀಧರರು ನನ್ನ ಪ್ರಯತ್ನದ ಬಗ್ಗೆ ಹೇಳಿದ್ದಾರೆ, ಸೀತಾರಾಮ್ ರಾಯರು ನಿನ್ನೆಯದಕ್ಕೂ ತಕ್ಕುದಾಗಿ ಮಾರ್ದನಿಸಿ ಇಂದು ಇದಕ್ಕೆ ಸಹಮತವನ್ನು ಹೇಳಿದ್ದಾರೆ, ಪರಾಂಜಪೆಯವರು ಗೋಮುಖ ವ್ಯಾಘ್ರಡ ಬಗ್ಗೆ ಹೇಳಿದ್ದಾರೆ, ಕುಸು ಮುಳಿಲಾಯರು ರಕ್ಕಸರನ್ನು ಸರಿಯಾಗಿ ಕಂಡಿರಿ ಎಂದಿದ್ದಾರೆ, ಪ್ರವೀಣ್ ರವರು ಸಿಕ್ಕ ರಕ್ಕಸರನ್ನು ತಮ್ಮ ಕಾವ್ಯದಲ್ಲಿ ಬಂಧಿಸಿದ್ದಾರೆ--ತಮಗೆಲ್ಲ ಹೃತ್ಪೂರ್ವಕ ಧನ್ಯವಾದಗಳು.

    ಓದಿದ, ಓದುವ, ಓದಿ ಮೇಲ್ ಮೂಲಕ ಉತ್ತರಿಸಿದ , ಬಜ್ ನಲ್ಲಿ ಲೈಕ್ ಮಾಡಿದ ಎಲ್ಲಾ ಮಿತ್ರರಿಗೂ ಋಣಿ

    ReplyDelete