ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, June 15, 2010

ಜಗವೆಂಬ ಮನೆಯ ನೆನೆದು

ಸುಮ್ಮನೆ ಕುಳಿತೊಮ್ಮೆ ವಿಚಾರಿಸುತ್ತಿದ್ದರೆ ಮನಸ್ಸಿಗೆ ಹಲವು ಬಾರಿ ಅನ್ನಿಸುವುದು ಯಾಕಪ್ಪಾ ದಿನಬೆಳಗಾದರೆ ಜಗಳ,ದೊಂಬಿ,ಲೂಟಿ,ಬಾಂಬು....ಇವುಗಳಿಗೆಲ್ಲ ಇತಿಶ್ರೀ ಹಾಡಿ ಇಡೀ ಜಗತ್ತೇ ಒಂದು ಮನೆಯ ಥರ ಅಂತ ಭಾವಿಸಿ ಎಲ್ಲರೂ ಭ್ರಾತೃತ್ವ ಭಾವದಿಂದ ಸುಖವಾಗಿರಬಹುದಲ್ಲ ಅಂತ.

ಒಂದು ಕಡೆ ಮತಾಂಧರು ಇನ್ನೊಂದು ಕಡೆ ರಾಜಕೀಯ ಪಕ್ಷಪಾತಿಗಳು, ಮಗುದೊಂದೆಡೆ ಸಾಮಾಜಿಕ ಹಿತಾಸಕ್ತಿ-ಸೌಲಭ್ಯ ತಮಗೆ ಸಿಕಿಲ್ಲವೆಂಬವರು. ಹೀಗಾಗಿ ಅಂತೂ ಸೃಷ್ಟಿಸಿದ ಭಗವಂತ ಜಗದಲ್ಲಿ ಸುಂದೋಪಸುಂದರು ಸುಂದರಿಗಾಗಿ ಹೊಡೆದಾಡಿ ಸತ್ತಂತೆ ನಮ್ಮ ಅಳಿವು-ಉಳಿವನ್ನು ನಮ್ಮವರ ಕೈಯ್ಯಲ್ಲೇ ಕೊಟ್ಟು ಬಹಳ ಚಾಲಾಕಿತನ ಮೆರೆದನಲ್ಲ ಅಲ್ಲವೇ ? ಇದರ ಅರ್ಥವೇ ತಿಳಿಯದೇ ಬಿನ್-ಲಾಡೆನ್ ಅಂತೆ ಡೇವಿಡ್ ಹೆಡ್ಲಿಯಂತೆ ಎಂತೆಂತಹ ರಾಕ್ಷಸರು ಹುಟ್ಟಿದರು ನೋಡಿ! ಒಂದು ಕಡೆ ದಾವೂದ್ ಇಬ್ರಾಹಿಂ ಇನ್ನೊಂದುಕಡೆ ರವಿಪೂಜಾರಿ ಇವರೆಲ್ಲರ ಅಂತಿಮ ಗುರಿ ಏನು? ಇವರಿಗಾಗಿ ಪ್ರತ್ಯೇಕ ಆಯುಷ್ಯ ಕೊಟ್ಟು ಹೆಚ್ಚಿಸಲಾಗಿದೆಯೇ ? ಎಲ್ಲರೂ ಬಂದ ಹಾಗೇ ವಾಪಸ್ ಹೋಗಲೇಬೇಕೆಂಬ ಅರಿವು ಬಾಂಬಣ್ಣಗಳಿಗಿಲ್ಲವೇಕೆ?

ಪೂಜನೀಯ ಶ್ರೀ ಶ್ರೀ ರವಿಶಂಕರರು ಜಗತ್ ಹಿತಾರ್ಥ ಎಂತಹ ಅದ್ಬುತ ಕೆಲಸವನ್ನು ಮಾಡುತ್ತಿದ್ದಾರೆ ನೋಡಿ.ಅದರಲ್ಲಿ ಅವರ ಸ್ವಾರ್ಥ ಅಡಗಿದೆಯೇ ? ಇಲ್ಲವಲ್ಲ? ಅವರು ಸನ್ಯಾಸಿಯಲ್ಲ,ಪರಮಹಂಸ ಅಲ್ಲ, ಮತ ಪ್ರಚಾರಕ ಅಲ್ಲ, ಸಾದಾ ಮನುಷ್ಯ ಕೂಡ ಅಲ್ಲ. ಹಾಗಾದರೆ ಅವರು ಯಾರು ? ಅವರೊಬ್ಬ ತತ್ವಜ್ಞಾನಿ ಎಂದರೆ ತಪ್ಪೇ? ಜಗತ್ತೇ ತನ್ನ ಮನೆ, ತನಗೆ ಯಾರೂ ವೈರಿಗಳಿಲ್ಲ, ಎಲ್ಲರೂ ನಮ್ಮೊಳಗಿನ ಸಾಮರ್ಥ್ಯವನ್ನು ವರ್ಧಿಸಿಕೊಂಡು, ರೋಗ ರುಜಿನಗಳನ್ನು ದೂರವಿಟ್ಟು ಇರುವಷ್ಟು ಕಾಲ ಸುಖವಾಗಿ,ಸಹಜವಾಗಿ ಬದುಕೋಣ ಎಂಬ ಅವರ ಮಹತ್ತರ ಸಂದೇಶ ನಮಗರ್ಥವಾಗಲು ಇನ್ನೆಷ್ಟು ಕಾಲ ಬೇಕಾಗಬಹುದು?

ಪ್ರಕೃತಿಯಲ್ಲಿ ಮನುಷ್ಯ ಹುಟ್ಟಾ ಮಾಂಸಾಹಾರಿಯಲ್ಲ, ಅವನಿಗೆ ಮಾಂಸಾಹರಕ್ಕೆ ಬೇಕಾಗುವ ಹಲ್ಲುಗಳೂ ಇಲ್ಲ-ಜೀರ್ಣಾಂಗವೂ ಆ ರೀತಿ ಇಲ್ಲ. ಆದರೆ ಇಂದು ನಮ ಮೋಜು-ಮಜಕ್ಕಾಗಿ ಹಲವು ಹತ್ತು ರೀತಿಯ ಪ್ರಾಣಿ-ಪಕ್ಷಿಗಳನ್ನು ಬಲಿಗೊಟ್ಟು ಭುಂಜಿಸುವುದು ಯಾವ ನ್ಯಾಯ? ಅವುಗಳಿಗೂ ಅವುಗಳದೇ ಆದ ಕುಟುಂಬ-ಸಂಸಾರ-ಮಕ್ಕಳು-ಮರಿ ಇರುವುದಿಲ್ಲವೇ? ಅವುಗಳನ್ನು ಅಗಲಿಸಿದ ಪಾಪ ನಮಗಲ್ಲವೇ? ಅಲ್ಲದೇ ಮಾಂಸಾಹಾರಕ್ಕೆ ಹಾಕುವ ಕಡು ಮಸಾಲೆಯಲ್ಲಿ ಕಚಡಾ ಕಲ್ಲು ಹುರಿದು ತಿಂದರೂ ರುಚಿಯೆಂಬ ಮಿತ್ರರೊಬ್ಬರ ಹೇಳಿಕೆಯನ್ನು ಹಿಡಿದು ವಿವೇಚಿಸಿದರೆ ಅಲ್ಲಿ ನಾವು ಕಾಣುವುದು ಸತ್ಯವಷ್ಟೇ? ಕಡು ಮಸಾಲೆ ಹಾಕಿದ ಯಾವ ಪದಾರ್ಥವೇ ಆಗಲಿ ಅದು ಮಸಾಲೆಯ ರುಚಿಯಿಂದ ರುಚಿಕಟ್ಟಾಗಿರುವುದೇ ಹೊರತು ಅಲ್ಲಿ ಮಾಂಸದಿಂದ ಮಾತ್ರ ರುಚಿ ಬರುತ್ತದೆ ಎಂದರೆ ಅದು ಸುಳ್ಳೆಂದು ನನ್ನ ಅನಿಸಿಕೆ. ಇನ್ನು ಮದ್ಯವನ್ನು ದೂರ ದಬ್ಬಿದರೆ ಜಗತ್ತು ಬಹಳಪಾಲು ಸುಧಾರಿಸಿದ ಹಾಗೇ. ಇದಕ್ಕಾಗಿ ಒಂದು ಸಣ್ಣ ಉದಾಹರಣೆ ನೋಡಿ-- ತಂದೆಯೊಬ್ಬ ಮದ್ಯ ಸೇವಿಸಿದ್ದ. ತನ್ನ ಹೊಸ ಕಾರನ್ನು ತಾನೇ ತೊಳೆಯುತ್ತಿದ್ದ. ಆಡುತ್ತಿರುವ ಆತನ ನಾಲ್ಕು ವಯಸ್ಸಿನ ಪುಟ್ಟ ಮಗ ಸಣ್ಣ ಕಲ್ಲೊಂದನ್ನು ಹಿಡಿದು ಕಾರಿನ ಮೇಲೆ ಗೀಚಿ ಬಿಟ್ಟ. ಸಹಿಸಲಸಾಧ್ಯ ಕೋಪವುಕ್ಕಿದ ತಂದೆ ತನ್ನೆದುರಿಗಿರುವ ಮಗನ ಕೈಮೇಲೆ ಸುತ್ತಿಗೆಯಿಂದ ಜಜ್ಜಿ ಬಜ್ಜಿಯಾಗುವಷ್ಟು ಮಾಡಿಬಿಟ್ಟ. ತಂದೆ ಏನುಮಾಡಿದನೆಂಬ ಅರಿವಿಲ್ಲದ ಕಂದ ನೋವಿನಲ್ಲೇ ತನ್ನ ಕೈಯ್ಯನ್ನು ನೋಡುತ್ತ " ಅಪ್ಪಾ, ನನ್ನ ಬೆರಳುಗಳು ಯಾವಾಗ ಮತ್ತೆ ಬೆಳೆಯುತ್ತವೆ ? " ಎಂಬ ಪ್ರಶ್ನೆ ಕೇಳಿದ. ಈ ಮಾತನ್ನು ಕೇಳಿದ ತಂದೆಗೆ ಮದ್ಯದ ಅಮಲು ಒಮ್ಮೆಗೇ ಇಳಿದು ಹೋಯಿತು! ಹುಚ್ಚನಂತಾದ ಆತ ಕಾರನ್ನು ಒದೆಯಲು ಹೋದಾಗ ಅಲ್ಲಿ ನಾಲ್ಕು ಶಬ್ಧಗಳು ಕಂಡವು. " ಐ ಲವ್ ಯು ಡ್ಯಾಡ್ " ! ಆ ಮನುಷ್ಯನಿಗೆ ತಪ್ಪಿನ ಅರಿವಾಗುವ ಹೊತ್ತಿಗೆ ಬಹಳ ತಡವಾಗಿತ್ತು. ಮಗು ರಕ್ತಸ್ರಾವದಿಂದ ತೀರಿಹೋಗಿತ್ತು. ಬೇಸತ್ತ ಆ ಮನುಷ್ಯ ಆತ್ಮಹತ್ಯೆ ಮಾಡಿಕೊಂಡ. --ಇದು ಒಂದು ಸಣ್ಣ ಘಟನೆ ಅಷ್ಟೇ. ಪ್ರಪಂಚದಾದ್ಯಂತ ಮದ್ಯದ ಅಮಲಿನಲ್ಲಿ ನಡೆಯುವ ಅವಘಡಗಳಿಗೇನು ಲೆಕ್ಕವಿದೇಯೇ. ಸುಂದರ ತರುಣಿಯರನ್ನು ಬಯಸುವ ತರುಣರು ಬೀದಿ ನಾಯಿಗಳ ಥರ ಬಡಿದಾಡುವುದನ್ನು ಅನೇಕ ಕಡೆ ಕಾಣಬಹುದಾಗಿದೆ. ಸಿನಿಮಗಳಲ್ಲೂ ತ್ರಿಕೋನ ಮತ್ತು ಬಹುಕೋನ ಪ್ರೇಮ ಕಥೆ ಎಂದು ಬಣ್ಣಿಸಲ್ಪಡುವ ಈ ಘಟನೆಗಳು ನಿಜವಾಗಿ ಪ್ರೇಮವಿಲ್ಲದ ಕಾಮಕ್ರೀಡೆಗಳು. ನಿಜವಾದ ಪ್ರೇಮ ತ್ಯಾಗದಿಂದ ಕೂಡಿರುತ್ತದೆ. ಅಲ್ಲಿ ತನಗೇ ಎಲ್ಲವೂ, ತನದೇ ಎಲ್ಲವೂ ಎಂಬ ಇನ್ನಿಲ್ಲದ ಸ್ವಾರ್ಥ ಇರುವುದಿಲ್ಲ. ಇದನ್ನು ತಿಳಿದೇ ಆಂಗ್ಲರು ಹೇಳಿದರು- ಬ್ಯೂಟಿ ಈಸ್ ಬಟ್ ಸ್ಕಿನ್ ಡೀಪ್ - ಎಂದು, ಅದರರ್ಥ ಕೇವಲ ಹರೆಯದ ಹುಮ್ಮಸ್ಸಿನಲ್ಲಿ, ದಷ್ಟಪುಷ್ಟವಾದ ಅಂಗಾಂಗಗಳನ್ನು ಹೋಂದಿದ ಸೌಂದರ್ಯವತಿ ಸಿಕ್ಕರೆ ನೆನಪಿರಲಿ ಸೌಂದರ್ಯ ಶಾಶ್ವತವಲ್ಲ ಎಂದು! ಆದರೆ ಆಗುತ್ತಿರುವುದೇ ಬೇರೆ. ನಾವು ಮೊದಲಾಗಿ ನೋಡುವುದೇ ಸೌಂದರ್ಯವನ್ನು. ಅದೂ ನಮ್ಮ ಕುದುರೆ ಒಂದನ್ನರಸಿ ಮುಗಿಸಿದರೆ ತೃಪ್ತವಾಗುವುದಿಲ್ಲ-ಬದಲಾಗಿ ಹಲವನ್ನು ಬಯಸುತ್ತದೆ. ಅಲ್ಲಿ ನಾವು ರಾಜಸರಾಗುತ್ತೇವೆ; ಕಾಮುಕರಾಗುತ್ತೇವೆ; ವಿಷಯಲಂಪಟರಾಗುತ್ತೇವೆ. ಇದನ್ನು ತಮ್ಮ ದೂರ ದೃಷ್ಟಿಯಿಂದಲೇ ಅರಿತ ಬಹುಸೂಕ್ಷ್ಮಗ್ರಾಹಿ ಆದಿ ಶಂಕರರು ಹೇಳಿದರು--

ನಾರೀಸ್ತನಭರನಾಭೀದೇಶಂ
ದೃಷ್ಟ್ವಾ ಮಾಗಾ ಮೋಹಾವೇಶಂ |
ಏತನ್ಮಾಂಸವಸಾದಿ ವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||

ಎಂತಹ ಪ್ರಭುದ್ಧ ಹೇಳಿಕೆ ನೋಡಿ! ಅದಕ್ಕೇ ಅಲ್ಲವೇ ಮಹಾತ್ಮರು ಯಾವಾಗಲೂ ಸಾಮಾನ್ಯರಿಗಿಂತ ಭಿನ್ನವಾಗಿರುತ್ತಾರೆ ಎನ್ನುವುದು?

ಹೀಗಾಗಿ ಮದ್ಯ,ಮಾಂಸ,ಮಾನಿನಿ ಈ ಮೂರು ಮನುಷ್ಯನ ಸ್ವಭಾವವನ್ನು ಬದಲಿಸುತ್ತವೆ ಎಂಬುದು ಮಥಿತ ಅಂಶವಷ್ಟೇ? ಇದನ್ನರಿತು ನಮ್ಮ ಮಹಾತ್ಮಾ ಗಾಂಧೀಜಿ ಈ ಮೂರನ್ನೂ ಬಹಳ ದೂರವಿಟ್ಟಿದ್ದರು ಅಲ್ಲವೇ ? ಇದರ ಒಳಹೊರಗಿನ ಇನ್ನೊಂದು ಗಾದೆ ಹೆಣ್ಣು-ಹೊನ್ನು-ಮಣ್ಣು ಈ ಮೂರನ್ನು ಬೆನ್ನತ್ತಿ ಹೋದರೆ ಸುಖವಿಲ್ಲ ಎಂಬುದಲ್ಲವೇ?

ಜಗದ ಯಾವ ಮೂಲೆಯಿಂದಲೂ ಒಳ್ಳೆಯದು ಹರಿದು ಬರಲಿ, ಅದನ್ನು ನಾವೆಲ್ಲ ಸ್ವೀಕರಿಸಲು ನಮಗೇನೂ ತೊಂದರೆಯಿಲ್ಲವಲ್ಲ. ಆದರೆ ಜಗತ್ತಿಗೆ ಬಹಳಷ್ಟು ಒಳ್ಳೆಯ ಕೊಡುಗೆಗಳನ್ನು ನಮ್ಮ ಭಾರತ ಕೊಟ್ಟಿದೆ-ಕೊಡುತ್ತಿದೆ ಎಂಬುದು ನಮಗೆ ಹೆಮ್ಮೆ ಅಷ್ಟೇ! ಧರ್ಮ ಯಾವುದೇ ಆದರೂ ದೇವರು ಒಬ್ಬನೇ! ಹೇಗೆ ಕೆಲವೊಂದು ಪ್ರದೇಶಗಳಿಗೆ ಹೋಗಲು ಹಲವು ಮಾರ್ಗಗಳಿರುತ್ತವೆಯೋ ಹಾಗೇ ದೇವರು ಎಂಬ ಆ ಶಕ್ತಿಸ್ವರೂಪವನ್ನು ತಲ್ಪಲು ಬಹಳ ರೂಪಗಳಲ್ಲಿ ನಾವು ಪೂಜಿಸುತ್ತೇವೆ, ಪ್ರಾರ್ಥಿಸುತ್ತೇವೆ, ಭಜಿಸುತ್ತೇವೆ, ಆರಾಧಿಸುತ್ತೇವೆ, ಸೇವಿಸುತ್ತೇವೆ, ಆಸ್ವಾದಿಸುತ್ತೇವೆ. ಆತ ಅಲ್ಲಾಹುವೋ ಕ್ರಿಸ್ತನೋ ಬುದ್ಧನೋ ಮಹಾವೀರನೋ ಗಣೇಶನೋ ಯಾರೇ ಆಗಿದ್ದರೂ ಅವೆಲ್ಲ ಆ ಮೂಲ ರೂಪದ ಹೊರಮುಖಗಳು ಎಂದು ನಾವೇಕೆ ಇನ್ನೂ ತಿಳಿದಿಲ್ಲ? ಈ ನಿಜದ ತತ್ವವನ್ನು ಅವಲೋಕಿಸಿದರೆ, ಆಹ್ವಾನಿಸಿದರೆ, ಅಭಿವಂದಿಸಿದರೆ,ಅನುಸರಿಸಿದರೆ ನಮ್ಮಲ್ಲಿ ಬಹಳಮಟ್ಟಿಗಿನ ಭಿನ್ನಾಭಿಪ್ರಾಯಗಳು ತಗ್ಗಬಹುದಲ್ಲ ಅಲ್ಲವೇ? ಹೀಗೇ ಇದೇ ವಿಚಾರವನು ಮಥಿಸುತ್ತ ಮಥಿಸುತ್ತ ತೆಗೆದ ಅಲ್ಪ ಪ್ರಮಾಣದ ನವನೀತ ನಿಮ್ಮ ಮುಂದೆ- ತಿಂದು ರುಚಿ ನೋಡಿ ಹೇಳಿ ಆಗದೇ ?


ಜಗವೆಂಬ ಮನೆಯ ನೆನೆದು

ಹೀಗೊಮ್ಮೆ ನನ್ನ ಕನಸು
ಜಗವೊಂದು ಮನೆಯಾಗಿ
ಹಾಯಾಗಿ ಬದುಕಬಹುದೇ ?

ಮುರಿದ ಹಕ್ಕಿಯ ರೆಕ್ಕೆಗಳ
ತಿರುವಿ ಹೊಲಿಯುತ್ತ
ಮರಳಿ ಹಕ್ಕಿಯ ಮುದದಿ ಹಾರಗೊಡಬಹುದೇ ?

ಕಿರಿದಾಯ್ತು ಜಗವು
ಗಣಕ ಯಂತ್ರದ ಜಾಲ
ಬೋಗಿಗಳ ಕೊಂಡಿ ಬೆಸೆದಿರಲು ಅಹುದಲ್ಲ ?

ಜಗದಿ ಮಾನವ ಧರ್ಮ
ಸ್ತ್ರೀ-ಪುರುಷ ಜಾತಿಗಳು
ವಯದ ಮಿತಿಯರಿತು ನಡೆವೊಲು ನಲಿವದಹುದೇ ?

ನಮಗೆ ಪಕ್ಷವು ಬೇಡ
ಗುಂಪುಗಾರಿಕೆ ಬೇಡ
ಮುಗುದರಾಗಲು ಮಾರ್ಗತೆರೆಯಬಹುದೇ ?

ಬಡತನವ ಓಡಿಸಲು
ಸಿರಿತನಕೆ ಮಿತಿಯಿಡಲು
ಹಂಚಿ ತಿನ್ನುವ ತತ್ವ ಅಳವಡಿಸಬಹುದೇ?

ಕಾಯಿಲೆಗೆ ಪಾಷಾಣ
ಕಂಡು ಎಲ್ಲರು ಸೇರಿ
ನೋವಿರದ ಜಗವನ್ನು ಕಟ್ಟಬಹುದೇ ?

ವಾಯಿದೆಯ ಭಯವಿರದ
ಜಾಯಮಾನಕೆ ಒಗ್ಗಿ
ಕಾಯವಿಳಿಯುವವರೆಗೂ ಸುಖಿಸಬಹುದೇ?

ಹಮ್ಮಿರದ-ಭಿಮ್ಮಿರದ
ಸಾಮಾನ್ಯರಂತಿದ್ದು
ಒಂದೇ ವಿನಿಮಯವನ್ನು ಪಡೆಯಬಹುದೇ?

ಕಾಡು ಕಡಿಯದೆ ನಾಡು
ಜಗವೆಂಬ ಹಂಬಲದಿ
ಕೂಡಿದ್ದು ನಾಳೆಗಳ ಸ್ವಾಗತಿಸಬಹುದೇ ?

8 comments:

 1. ನಿಮ್ಮ ಆಶಯ ನಿಜವಾಗಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.

  ReplyDelete
 2. ವಿ ಆರ್ ಭಟ್ ಸರ್,
  ಜಗವು ಒಂದೇ ಮನೆ, ನಾವೆಲ್ಲಾ ಸೋದರರು........
  ಎಷ್ಟೊಂದು ಸುಂದರ ಪರಿಕಲ್ಪನೆ! ಅದಕ್ಕೆ ಅಲ್ಲವೇ ನಮ್ಮೆಲ್ಲರ ಮೆಚ್ಚಿನ ಕುವೆಂಪಜ್ಜನವರು 'ವಿಶ್ವ ಮಾನವ' ಎಂಬ ಶಬ್ದ ಹುಟ್ಟುಹಾಕಿದ್ದು....., ಶ್ರೀ ಶ್ರೀ ಶ್ರೀ ರವಿಶಂಕರರು ಜೀವನದ ಕಲೆಯನ್ನು ಜಗಕೆ ಬೋಧಿಸುತಿರುವುದು, ಸ್ವಾಮಿ ವಿವೇಕಾನಂದರು ಅಮೆರಿಕಾದಲ್ಲಿ ಪ್ರೀತಿಯ ಸೋದರ ಸೋದರಿಯರೆ ಎಂದು ಮಾತು ಪ್ರಾರಂಬಿಸಿದ್ದು...........?
  ಇದೆಲ್ಲದರ ಮರ್ಮವನ್ನು ನಾವು ಅರಿತರೆ ಖಂಡಿತಾ ಜಗವೊಂದೆ ಮನೆಯಾಗುವುದರಲ್ಲಿ ಸಂಶಯವಿಲ್ಲ........!

  ReplyDelete
 3. ಅರವಿಂದ ಮಾತು ನಿಜವಾಗುತ್ತಿದೆ ಭಟ್ಟರೇ....

  ReplyDelete
 4. ಸಸ್ಯಾಹಾರಿಯಾಗಿ ಮಾ೦ಸಾಹಾರವನ್ನು ತ್ಯಜಿಸುವದನ್ನು ನಾನು ಅನುಮೋದಿಸುತ್ತೆನೆ. ಎಲ್ಲ ಜೀವಿಗಳನ್ನು ಬದುಕಲು ಬಿಟ್ಟು ಸಸ್ಯಾಹಾರದಿ೦ದ ಮಾನವ ಸದೃಡ ಜೇವನ ನಡೆಸಬಹುದಾಗಿದೆ ಜೊತೆಗೆ ಸಸ್ಯಗಳನ್ನು ಬೆಳೆವ ಕಲೆ ಅವನಿಗೆ ಸಿದ್ಧಿಸಿದೆ. ಆದರೆ ಇದನ್ನು ಹೇಳುವಲ್ಲಿ ನಾವೂ ವೈಜ್ಞಾನಿಕ ತಪ್ಪುಗಳನ್ನು ಮಾಡುವದು ಬೇಡ ಅ೦ದರೆ ಮಾನವ ಜೇವಿಯ ಪಚನಾ೦ಗಗಳು ಮತ್ತು ಹಲ್ಲುಗಳು ಮಾ೦ಸಾಹಾರಕ್ಕೆ ತಕ್ಕದಲ್ಲವೆ೦ಬ ಒಪ್ಪಲಾರದ ತರ್ಕ ನೀಡುವದು ಬೇಡ. ಮಾನವನ ಮೂಲ ನೋಡಿದಾಗ ಅವನು ಮೂಲತ: ಮಾ೦ಸಾಹಾರಿ. ಸಸ್ಯಾಹಾರ ಅಮೇಲೆ ಬೆಳೆದುದು. ಅದನ೦ತರ ಮಾನವ ಬೇಯಿಸಿದ್ದನ್ನು ತಿನ್ನುವ ನಮಗೆ ತಿಳಿದ ಏಕೈಕ ಪ್ರಾಣಿ. ಈ ಸತ್ಯ ಗಳು ವೈಜ್ಞಾನಿಕವಾಗಿ ಶೋಧಿಸಿದ೦ತವು. ಆಧುನಿಕ ಮಾನವನಿಗೆ ಮಾ೦ಸಾಹಾರ ಅವಶ್ಯವಿಲ್ಲ ಆದ್ದರಿ೦ದ ಅದನ್ನು ಬಿಟ್ಟು ಸಸ್ಯಾಹಾರ ಅಳವಡಿಸಿ ಬೇರೆ ಪ್ರಾಣಿಹತ್ಯ ಅಹಾರಕ್ಕಾಗಿ ನಿಲ್ಲಿಸಿ ಎ೦ದು ಹೇಳೋಣ ಅದಕ್ಕಾಗಿ ತಪ್ಪು ಮಾಹಿತಿ ನೀಡುವದು ಅವಶ್ಯವಿಲ್ಲ ಇಲ್ಲವಾದಲ್ಲಿ ಅದು ಅನಾವಶ್ಯಕ ಚರ್ಚೆ ವಿಷಯವಾಗಿ ಉದ್ಧೇಶ ವಿಷಯಾ೦ತರವಾಗುವದು ಎ೦ದು ನನ್ನ ಪ್ರಾಮಾಣಿಕ ಅನಿಸಿಕೆ.

  ReplyDelete
 5. ತಮ್ಮ ಜಗದ ಅನಿಕೇತನ ಪರಿಕಲ್ಪನೆಯಲ್ಲಿನ ಕವನ ಎ೦ದಿನ೦ತೆ ಚೆ೦ದವಾಗಿದೆ ಸು೦ದರ ಪ್ರಾಸಭದ್ಧ ಶೈಲಿಯಲ್ಲಿ.

  ReplyDelete
 6. ತುಂಬಾ ಒಳ್ಳೆಯ ಆಶಯ
  ಒಳ್ಳೆಯ ಕವನ
  ಸುಂದರ ವಿವರಣೆ

  ReplyDelete
 7. ಸೀತಾರಾಮ್ ಸರ್ ತಮ್ಮ ಅಭಿಪ್ರಾಯಕ್ಕೆ ಸವಾಲು ಒಡ್ದಲಲ್ಲ ಆದರೆ ಸಹಜವಾಗಿ ನನ್ನ ಅನಿಸಿಕೆ, ವೇದಗಳು ನಮ್ಮ ವಿಜ್ಞಾನಕ್ಕೂ ಮುನ್ನ ಇದ್ದವು ಎಂಬುದು ಸತ್ಯವೇ ಸರಿ.ಯಾಕೆಂದರೆ ವೇದಗಳಲ್ಲಿರುವ ಜ್ಞಾನ ಇವತ್ತಿನ ವಿಜ್ಞಾನಕ್ಕೂ ಹಲವು ಸವಾಲು ಒಡ್ಡಿದ್ದು! ರಾಮಾಯಣ ಕಾಲದಲ್ಲೇ ವಿಮಾನವನ್ನು ನಾವು ಕೇಳಿದೆವು! ಅದರಂತೆ ಮಾನವ ಗುಹಾವಾಸಿಯಾಗಿ,ಕಾಡು ಮೃಗಗಳನ್ನು ಸಾಯಿಸಿ ತಿಂದು ಬದುಕಿದ್ದ ಎಂಬುದು ಮಾನವ ಕುಲ ಕಂಡ ವಿಜ್ಞಾನ! ಥಟ್ ಈಸ್ ರೀಸರ್ಚ್ [ಒಮ್ಮೆ ಸರ್ಚ್ ಮಾಡಿದ್ದನ್ನ ಮತ್ತೊಮ್ಮೆ ಹುಡುಕುವುದು! ಇತ್ತೀಚೆಗೆ ವಿಜ್ಞಾನಿಗಳು ನಮ್ಮ ಚರ್ಮದಲ್ಲಿ ೭ [ಏಳು] ಪದರಗಳಿವೆ ಎಂಬುದನ್ನುಒಪ್ಪಿಕೊಂಡರು, ಆದರೆ ನಮ್ಮ ವೇದ ಅದನ್ನು ಮೊದಲೇ ಹೇಳಿದೆ. ವಿಜ್ಞಾನಿಗಳು ಕಂಡ ನೆಪ್ಚೂನ್ ಮತ್ತು ಪ್ಲುಟೊ ಗ್ರಹಗಳು ರಾಹು -ಕೇತುಗಳೆಂದು ನಮಗೆ ಮೊದಲೇ ತಿಳಿದಿತ್ತು. ಅಂದಮೇಲೆ ಭಾರತೀಯಯತೆಯಲ್ಲಿ ಮಾನವ್ ಕೇವಲ ಕಾಡುವಾಸಿ-ಮಾಂಸಾಹಾರಿ ಎಂದರೆ ಅದು ತರ್ಕಕ್ಕಷ್ಟೇ ಎಂಬುದು ನನ್ನ ವೈಯಕ್ತಿಕ ಅಭಿಮತ. ಒಂದೊಮ್ಮೆ ಇದ್ದರೂ, ಹಿಂದೊಮ್ಮೆ ಮಂಗನಿಂದ ಮಾನವ ಆಗಿದ್ದರೂ ಮಂಗ ಮಾಂಸಾಹಾರಿಯಲ್ಲ ಅಲ್ಲವೇ ? ಎಲ್ಲೋ ಗೊರಿಲ್ಲದಂತ ಕೆಲವು ಮಂಗಗಳೂ ಮಾನಸ ಭಕ್ಷಿಸಿದರೆ ಅವುಗಳ ಹಲ್ಲಿನ ರಚನೆ ನೋಡಿ! ಹೀಗಾಗಿ ಮಾನವ ಮಾಂಸಾಹಾರಿಯೇ ಆಗಿದ್ದ ಎನ್ನಲು ಸಾಕಷ್ಟು ಪುರಾವೆಗಳು ಸಿಗುವುದಿಲ್ಲ, ಅದು ಏನಿದ್ದರೂ ತಾವು ಹೇಳಿದಂತೆ ತರ್ಕದ ವಿಷಯ! ಆದರೂ ಅದು ಹೇಗೇ ಇದ್ದರೂ ನಾವೀಗ ಶಾಖಾಹಾರಿಗಳಾಗಬಹುದಲ್ಲ ಎಂಬುದು ನನ್ನ ಅನಿಸಿಕೆ. ದಯವಿಟ್ಟು ಕ್ಷಮಿಸಿ, ಇದು ತಮ್ಮಜೊತೆ ಯುದ್ಧವಲ್ಲ, ಜಿಜ್ಞಾಸೆ ಅಷ್ಟೇ!

  ಎಲ್ಲರೂ ಬಹಳ ಮಾರ್ಮಿಕವಾಗಿ ಪ್ರತಿಕ್ರಿಯಿಸಿದಿರಿ, ಪ್ರವೀಣ್ ಕವಿ ಕುವೆಂಪುವನ್ನು ನೆನೆದರೆ, ಕೃಷ್ಣಮೂರ್ತಿಗಳು ನನ್ನ ಪರಿಕಲ್ಪನೆಗೆ ಅನುಮೋದಿಸಿದರು, ಶ್ರೀಧರ್ ಅರವಿಂದರನ್ನು ನೆನಪಿಸ್ಕೊಂಡರು, ಸೀತಾರಾಮ ರಾಯರು ತಮ್ಮ ತರ್ಕವನ್ನು ಮಂಡಿಸುತ್ತ ಅನುಮೋದಿಸಿದರು,ಗುರುಮೂರ್ತಿಗಳು ಆಶಯವನ್ನು ಮೆಚ್ಚಿಕೊಂಡರು.....ತಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಓದಿದ ಎಲ್ಲಾ ಮಿತ್ರರಿಗೂನಮನಗಳು

  ReplyDelete
 8. ಜೀವ ಪ್ರಕ್ರಿಯೆಯನ್ನು ನೋಡುವ ದೃಷ್ಟಿಗಳು ಮುಲತ: ಎರದು ಬಗೆಯವು. ಒ೦ದು ನಾವು ನ೦ಬಿದ ಧರ್ಮ-ಪರ೦ಪರೆ-ನ೦ಬಿಕೆ ಗಳ ಮೂಲದಿ೦ದ ಮತ್ತು ಇನ್ನೊ೦ದು ನಮ್ಮ ಗ್ರಹಿಕೆಗೆ ಅಧಾರದಿ೦ದ ಅರಿವಾದದ್ದು( ಇದು ವೈಜ್ಞಾನಿಕ ತಿಳುವಳಿಕೆ). ವೇದಗಳ ಹರವು ನಮ್ಮ೦ಥಾ ಭಾರತೀಯ ಪರ೦ಪರೆಯಲ್ಲಿ ನ೦ಬಿಗೆ ಇರುವವರಿಗೆ ಅಪಾರ ಮತ್ತು ಅನೂಹ್ಯ! ನ೦ಬದವರಿಗೆ ಗೊಡ್ಡು ಕಥೆ. ವೇದ ಪುರಾಣದಲ್ಲಿನ ಪುಷ್ಪಕ ವಿಮಾನ, ಅಗ್ನೇಯಾಸ್ತ್ರ, ವಾಯುವ್ಯಾಸ್ತ್ರ, ವರುಣಾಸ್ತ್ರ, ಇಗ ಎಲ್ಲವೂ ಸಾಧವಾಗಿದೆ. ಐನ್-ಸ್ಟೀನ್ ನ ಸೂತ್ರದ೦ತೆ ವಸ್ತು ಶಕ್ತಿಗೆ ರೂಪಾ೦ತರ ಹೊ೦ದಿ ಮತ್ತೆ ವಸ್ತುವಾಗುವದಾದರೆ ನಮ್ಮ ಪೂರ್ವಜರೂ ಅ೦ತರ್ಧಾನರಾಗಿ ಇನ್ನೊ೦ದು ಕಡೆ ಪಯಣಿಸಿ ಪುನರ್-ಪ್ರತ್ಯಕ್ಷರಾಗುತ್ತಿದ್ದದ್ದು ನ೦ಬಲೇಬೇಕು!ಆದರೆ ವಿಜ್ಞಾನ ಇದನ್ನು ಸಾಧಿಸಲಾಗಿಲ್ಲ ಹೀಗಾಗಿ ಒ೦ದು ವರ್ಗ ಇದನ್ನು ನ೦ಬುವದಿಲ್ಲ. ಇನ್ನು ಧರ್ಮ -ಪರ೦ಪರಾನುಗತವಾಗಿ ನ೦ಬುವರಲ್ಲಿ ವಿವಿಧ ನ೦ಬಿಕೆಗಳಿವೆ -ಕ್ರಿಸ್ತೀಯನರು ಈವಾ-ಅಡಮ್ ಎ೦ದರೆ , ಹಿ೦ದುಗಳದು ಇನ್ನೊ೦ದು ಮತ್ತೆ ಮುಸ್ಲಿಮರದು ಮಗದೊ೦ದು. ಇವೆಲ್ಲದರ ನಡೆವ ತರ್ಕಾತರ್ಕಗಳು ಎ೦ದಿಗೂ ಒಮ್ಮತದಿ೦ದ ಮುಕ್ತಾಯವಾಗಲಾರದುದು. ಹಾಗಾಗಿ ನಾನು ಹೇಳಿದುದು ಸಸ್ಯಾಹಾರದ೦ತ ಉತ್ತಮ ವಿಚಾರವನ್ನು ಹೇಳುವಾಗ ತರ್ಕಕ್ಕೆ ಬರುವ ವಿಷಯ ಬಿಡೋಣ ಎ೦ದು!

  ReplyDelete