ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, May 18, 2010

ಶ್ರೀ ಶಂಕರ ಸ್ಮೃತಿ



ಶ್ರೀ ಶಂಕರ ಸ್ಮೃತಿ

ಕೇರಳದ ಕಾಲಟಿಯಲ್ಲಿ ಕ್ರಿ..೬೩೦ ರಲ್ಲಿ ಜನಿಸಿ ೬೬೨ರವರೆಗೆ ಬದುಕಿದ್ದ ಶ್ರೀ ಆದಿಶಂಕರರು ವೈಶಾಖ ಶುದ್ಧ ಪಂಚಮಿಯಂದುಅವತರಿಸಿದ ಪರಮೇಶ್ವರನ ರೂಪ ಎಂಬ ಪ್ರತಿಪಾದನೆಯಿದೆ. ಮನುಷ್ಯಮಾತ್ರರಿಂದಲೂ ಇವೆಲ್ಲಾ ಸಾಧ್ಯ ಎಂಬ ಅನೇಕಕೆಲಸಗಳನ್ನು ಮಾಡಿತೋರಿಸಿದ ಮಹಾಮೇಧಾವಿ, ಮುನಿ ಶಂಕರರ ಬಗ್ಗೆ ಬರೆಯಲು ಹೊರಟರ್ ಶಬ್ಢಗಳೇ ಸೋಲುತ್ತವೆ!

ಆದಿ ಶಂಕರರನ್ನು ನೆನೆಸಿಕೊಳ್ಳಲು ಹಲವು ಕಾರಣಗಳು ಸಿಗುತ್ತವೆ.

. ಅವರು ಬಾಲ ಪ್ರತಿಭೆ-ಇಲ್ಲಿಯ ತನಕ ಜಗತ್ತು ಕಂಡು ಕೇಳರಿಯದ ಅಪ್ರತಿಮ ಮತ್ತು ಅನ್ಯಾದೃಶ ಬಾಲಪ್ರತಿಭೆ ಶ್ರೀ ಶಂಕರರು.

. ಸಂಸ್ಕೃತದ ಮೇರು ಕವಿ-ಮಹಾಕವಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಕಾವ್ಯ ಪ್ರಭೆಯನ್ನು ಹೊಮ್ಮಿಸಿ, ಸಂಸ್ಕೃತಭಾಷೆಗೆ ಮತ್ತಷ್ಟು ಉತ್ಕೃಷ್ಟ ಸ್ಥಾನ ಒದಗಿಸಿದ, ಭಾಷಾ ಸಾಹಿತ್ಯವನ್ನು ಸುಲಲಿತ ಶಬ್ಧಗಳಿಂದ ಅಲಂಕರಿಸಿದ ಪ್ರಜ್ಞಾನ ಬ್ರಹ್ಮ ಶ್ರೀಶಂಕರರು.

. ದಾರ್ಶನಿಕತೆಗೆ ದಾರ್ಶನಿಕರು-ಜಗತ್ತು ಅನೇಕ ದಾರ್ಶನಿಕರನ್ನು ಕಂಡಿದೆ, ಆದರೆ ಶಂಕರರಂತಹ ಆದರ್ಶ ದಾರ್ಶನಿಕರುಸಿಗುವುದು ವಿರಳ. ಜಗತ್ತಿನ ಎಲ್ಲೇ ಯಾರೇ ಯಾವಾಗಲೇ ಬಯಸಿದರೂ ಅವರವರ ಧರ್ಮದಲ್ಲೇ ಇದ್ದುಕೊಂಡು ಕೇವಲತತ್ವಾನುಭೂತಿಯಿಂದ ಜಗತ್ತನ್ನು ನೋಡುವ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶಂಕರರು ಯಾವ ದೀಕ್ಷೆಯನ್ನೂ ಹೇಳದೇತಮ್ಮ ತತ್ವವನ್ನು ಅನುಸರಿಸಲು ರಾಜಮಾರ್ಗವನ್ನು ತೋರಿದರು!

. ಕಣ್ಣಿಗೆ ಕಟ್ಟುವ ಅದ್ವೈತ- ನಾವು ಯಾವ ಜೀವಿಯನ್ನೇ ತೆಗೆದುಕೊಂಡರೂ ಅದರಲ್ಲಿ ನಮ್ಮೊಳಗಿರುವ ಪರಮಾತ್ಮನೇ ಇದ್ದಾನೆಎಂಬ ಸತ್ಯ ತಿಳಿದಾಗ ವಿಶ್ವ ಬ್ರಾತ್ವತ್ವ ಬರುತ್ತದಲ್ಲವೇ ? ಇದರಿಂದ ಪ್ರಾಣಿಹಿಂಸೆ, ಮಾಂಸಾಹಾರ, ವೈರತ್ವ,ಜಗಳ,ದೊಂಬಿ,ಕಚ್ಚಾಟ ಸಾಕಷ್ಟು ದೂರವಾಗಿ ಮಾನವ ಸಂಸ್ಕೃತಿಯನ್ನು ಅನುಸರಿಸಲು ಅನುಕೂಲವಾಗುತ್ತದೆಯಲ್ಲವೇ?

. ಪ್ರಾಂತ ಭೇದ ನಿವಾರಕ-ಇಡೀ ಭರತಖಂಡವನ್ನು ಬದುಕಿದ್ದ ೩೨ ವರ್ಷಗಳಲ್ಲೇ ಮೂರಾವರ್ತಿ ಸುತ್ತಿದ ಮಹಾನುಭಾವಶಂಕರರು ಮಾನವ ಕುಲಕ್ಕೆ ಮಾರ್ಗದರ್ಶಿಸಲು ಆಮ್ನಾಯ ಮಠಗಳೆಂಬ ನಾಲ್ಕು ಪ್ರಮುಖ ಪೀಠಗಳನು ಸ್ಥಾಪಿಸಿದರು. ಶೃಂಗೆರಿ, ಪುರಿ,ದ್ವಾರಕೆ ಹಾಗೂ ಜ್ಯೊತಿರ್ಮಠಗಳೆಂಬ ಪೀಠಗಳಲ್ಲಿ ಮೊದಲಾಗಿ ಸ್ಥಳೀಯರಲ್ಲದವರನ್ನು ಕುಳ್ಳಿರಿಸಿ ಪೀಠಾಧಿಪತಿಗಳೆಂದುಜನತೆಗೆ ಬೋಧಿಸಿದರು. ಶೃಂಗೇರಿಗೆ ಉತ್ತರದ ಸುರೇಶ್ವರಾಚಾರ್ಯರನ್ನು ಕೂರಿಸಿದರೆ ದಕ್ಷಿಣದ ಹಸ್ತಾಮಲಕರನ್ನು ಉತ್ತರದಪೀಠದಲ್ಲಿ ನೆಲೆಸುವಂತೆ ಮಾಡಿದರು.

. ವಿಶ್ವವ್ಯಾಪಕ ತತ್ವ-ಯಾವ ಧರ್ಮದವರನ್ನೂ ಹೀಗಳೆಯದ ಶಂಕರರು ಬೇರೆ ಧರ್ಮದ ಪ್ರಮುಖರಿಂದ ಗೌರವವನ್ನು ಪಡೆದವರು. ಮಾತಾಂತರವೆಂಬ ಗೋಜಲಿಗೆ ಕಾರಣವಾಗಬಹುದಾದ ದೀಕ್ಷೆಯನ್ನೇ ಪ್ರತಿಪಾದಿಸದೇ ಸರ್ವಧರ್ಮೀಯರೂ ಅನುಸರಿಸಬಹುದಾದ ಆದರ್ಶ ಜೀವನ ಪಥವನ್ನು ತೋರಿಸಿಮನುಕುಲಕ್ಕೆ ಇದು ಹಿತಎಂಬುದನ್ನು ಪ್ರಾತ್ಯಕ್ಷಿಕೆಗಳೊಂದಿಗೆ ತೋರಿಸಿದರು.

. ಕುಪುತ್ರೋ ಜಾಯೇತ ಕ್ವಚಿತಪಿ ಕುಮಾತಾ ಭವತಿ-ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂಬುದನ್ನು ಸನ್ಯಾಸಿಯಾಗಿಯೂ ತೋರಿಸಿದ ಮಾನವೀಯ ಕರುಣಾಮೂರ್ತಿ ಶ್ರೀ ಶಂಕರರು. " ಅಮ್ಮಾ ನಿನ್ನ ಅಂತ್ಯಕಾಲದಲ್ಲಿ ಎಲ್ಲಿದ್ದರೂ ನಿನ್ನಲ್ಲಿಗೆ ಬಂದು ತಲ್ಪುತ್ತೇನೆ" ಎಂಬ ಮಾತನ್ನು ಹೇಳಿದಂತೆ ನಡೆಸಿಕೊಟ್ಟ ಮಾತೃಪ್ರೇಮಿ ಶ್ರೀ ಶಂಕರರು ಎಲ್ಲರಿಂದಲೂ ವಂದಿಸಲ್ಪಡುವ ಯತಿಗಳೂ ಕೂಡ ಹಡೆದ ಅಮ್ಮನಿಗೆ ಹೇಗೆ ತಲೆಬಾಗಬೇಕೆಂದು ತೋರಿಸಿದರು. ಲೋಕದಲ್ಲಿ ಕೆಟ್ಟ ಮಗ ಜನಿಸಬಹುದೇ ಹೊರತು ಕೆಟ್ಟತಾಯಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು.

. ಸಂಶಯ ನಿವಾರಕ-ಯಾವುದೇ ಸಿದ್ಧಾಂತವನ್ನು ನಿಷ್ಕರ್ಷೆಗೆ ಒಳಪಡಿಸಿದರೆ ಸಹಜವಾಗಿ ಅದರ ಮೂಲವಸ್ತು ಅದ್ವೈತದೆಡೆಗೆವಾಲುತ್ತದೆ. ಆಲದ ಮರದ ಪಕ್ಕದಲ್ಲಿ ಹೇಗೆ ಬೇರೆ ಗಿಡಗಳು ವಿಜೃಂಭಿಸಲು ಅಸಾಧ್ಯವೋ ಹಾಗೇ ಅದ್ವೈತವೆಂಬುದು ಎಲ್ಲಗಿಡಮರಗಳನ್ನೂ ಮೀರಿದ ಅಗಲ ಎತ್ತರ ಉಳ್ಳ ಆಲದಮರ ಎಂಬುದು ನಮಗೆ ಗೋಚರವಾಗುತ್ತದೆ! ಸಂಶಯಗಳಿಗೆ ಸಂಪೂರ್ಣನಿವಾರಣೆ ಹಾಗೂ ನಿರ್ಣಯಾತ್ಮಕ ಸಂದೇಶ ಸಿಗುವುದು ಅದ್ವೈತತೆಯಲ್ಲಿ ಮಾತ್ರ ಎಂಬುದನ್ನು ಇಂದಿಗೂ ಯಾರೇ ಆದರೂ ಮನಗಾಣಬಹುದು.

. ಅದ್ವಿತೀಯ ಸಾಧಕರು-ಬದುಕಿನಲ್ಲಿ ಇವತ್ತಿಗೆ ನಮ್ಮ ವಿದ್ಯಾಭ್ಯಾಸವೇ ಸರಿಯಾಗಿ ಮುಗಿಯದ ೩೨ ವಯಸ್ಸಿಗೆ ಇಡೀಬ್ರಹ್ಮಾಂಡವನ್ನೇ ಅರಿತು, ಅರೆದು ಕುಡಿದು ಅರ್ಥೈಸಿ ಬ್ರಹ್ಮಸೂತ್ರಗಳಿಗೆಲ್ಲ ಭಾಷ್ಯಬರೆದರು! ಯಾವ ಭಾಷೆ ಕ್ಲಿಷ್ಟವಾಗಿ ಸಂಕೀರ್ಣಶಬ್ಢಗಳಿಂದ ಕೂಡಿದೆಯೋ ಅದನ್ನೇ ಬಳಸಿ ಅದಕ್ಕೇ ತನ್ನ ಅನೇಕ ಕೊಡುಗೆ ಕೊಡುವಷ್ಟು ಸಾಧನೆ ಮಾಡಿದರು. ವಿಮಾನ,ರೈಲುಅಥವಾ ಯಾವುದೇ ಯಂತ್ರಚಾಲಿತ ವಾಹನಗಳ ಅವಲಂಬನೆ ಇಲ್ಲದೇ ಇಡೀ ದೇಶವನ್ನು ಅಂದಿನ ಕಾಡುಗಳ ಹಾದಿ ತುಳಿದುಸುತ್ತಿದ, ’ಇದಮಿತ್ಥಮ್ಎಂದು ತೋರಿಸಿದ ಪ್ರಾಕ್ಟಿಕಲ್ ಎಂಜಿನೀಯರ್ ನಮ್ಮ ಶಂಕರರು! ಜೀವಿತದ ಒಂದರೆಘಳಿಗೆಯನ್ನೂಸುಮ್ಮನೇ ವ್ಯಯಿಸದೆ ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದೆಂಬುದಕ್ಕೆ, ಹೇಗೆ ಪ್ರಾಡಕ್ಟಿವ್ ಆಗಿರಬಹುದು ಎಂಬುದಕ್ಕೆ ಉತ್ತಮಉದಾಹರಣೆಯಾಗಿ ಬದುಕಿದ ಮಾಷ್ಟರ್ ಆಫ್ [ಆಲ್] ಬ್ಯುಸಿನೆಸ್ ಎಡ್ಮಿನಿಷ್ಟ್ರೇಶನ್ ಡಿಗ್ರಿಯನ್ನು ತಾನಾಗೇ ಸ್ಥಾನ ಅಲಂಕರಿಸಿ ಸ್ಥಾನಕ್ಕೇ ಕೀರ್ತಿಕಳಶವಿಟ್ಟ ಮಾನವ ಸಂಪನ್ಮೂಲದ ಮಹಾಮೇರು ನಮ್ಮ ಶಂಕರರು!

೧೦. ನಿಸ್ವಾರ್ಥರು-ಬದುಕು ಪೂರ್ತಿ ಲೋಕದ ಜನರ ಕಲ್ಯಾಣಕ್ಕಾಗಿ ವ್ಯಯಿಸಿದ, ಪಾರಮಾರ್ಥ ಚಿಂತನೆಯಿಂದ ಲೋಕವನ್ನು ಬೆಳಗಲು ಅನೇಕ ಸಾವಿರ ಸಾವಿರ ಕೃತಿಗಳನ್ನು ಬರೆದು, ತೋರಿಸಿ, ತಿಳಿಹೇಳಿ, ಮಾರ್ಗದರ್ಶಿಸಿ ತನ್ನ ಜೀವಿತಾವಧಿಯನ್ನು ಪರಸೇವೆಗೆ ಮೀಸಲಿಟ್ಟ ಪರಮಹಂಸ ಪರಿವ್ರಾಜಕಾಚಾರ್ಯರು ಶ್ರೀ ಶಂಕರರು.

ಸನ್ಯಾಸಿಗೆ-ಗುರುವಿಗೆ ಅವರ ನೆರವಿಗೆ, ಅವರ ಇಹದ ಬದುಕಿನ ಭೌತಿಕ ದೇಹಕ್ಕೆ ಅನಾರೋಗ್ಯವಾದಾಗ ಅವರನ್ನು ನೋದಿಕೊಳ್ಳಲು ಅವರಿಗೆ ಮನೆಮಂದಿ ಎಂಬ ಜನರಿಲ್ಲ! ಅಣ್ಣ-ತಮ್ಮ,ಅಕ್ಕ-ತಂಗಿಯರಿಲ್ಲ! ಬದಲಾಗಿ ನಾವೆಲ್ಲಾ ಅಂಥವರ ಶುಶ್ರೂಷೆಮಾಡಬೇಕು, ಅದು ನಮ್ಮ ಅದ್ಯ ಕರ್ತವ್ಯ.

ಯಾರೋ ಕೇಳಿದರು " ಅಂತಹ ಮಹಾತ್ಮರಿಗೆ ರೋಗ ಬರುವುದೇಕೆ? ಒಂದೊಮ್ಮೆ ಬಂದರೆ ತಾವೇ ತಪಸ್ಸಿದ್ಧಿಯಿಂದ ಅದನ್ನು ಬರದಂತೆ ನಿವಾರಿಸಿಕೊಳ್ಳಬಹುದಲ್ಲವೇ? "

ಇದಕ್ಕೆ ಉತ್ತರ--
ಸನ್ಯಾಸಿಗಳೂ ಜನ್ಮಾಂತರದ ಕರ್ಮವನ್ನು ಅನುಭವಿಸಲೇ ಬೇಕು. ಅವರ ಭೌತಿಕ ಕಾಯಕ್ಕೆ ಹಿಂದಿನ ಜನ್ಮಗಳ ಲವಲೇಶವಿದ್ದರೆ ಅದರಿಂದ ಅವರು ಮುಕ್ತರಾಗುವುದಿಲ್ಲ. ಅದನ್ನು ಪರಿಹರಿಸಿಕೊಳ್ಳಲು ಅವರು ಶಾರ್ಟ್ ಕಟ್ ಉಪಯೋಗಿಸುವುದಿಲ್ಲ,ಬದಲಿಗೆ ಅನುಭವಿಸಿಯೇ ಮುಂದಿನ ಕಾರ್ಯಕ್ಕೆ ಅಣಿಗೊಳ್ಳುತ್ತಾರೆ! ಹೀಗಾಗಿ ಅವರು ತಮ್ಮ ಮೇಲೆಯೇ ಮಂತ್ರಸಿದ್ಧಿ ಪ್ರಯೋಗಿಸಿಕೊಂಡು ಪಡೆದು ಬಂದ ಕರ್ಮಫಲವನ್ನು ತೊಡೆದುಹಾಕಲು ಇಷ್ಟಪಡುವುದಿಲ್ಲ-ಇದು ಗುರುತತ್ವದ ಒಂದು ಅಂಶಕೂಡ.

ಇಂತಹ ಸದ್ಗುರು ಸಂಕುಲಕ್ಕೆ ಕಳಶಃಪ್ರಾಯರಾಗಿ ನಿಂತ ನಮ್ಮ ಜಗದ್ಗುರು ಶಂಕರರನ್ನು ಒಮ್ಮೆ ಸ್ಮರಿಸೋಣ ಬನ್ನಿ-


ಸ್ಮರಿಸುವೆವಯ್ಯಾ ಶಂಕರ ಗುರುವರ
ನುತಿಸುವೆವಯ್ಯಾ ಭವಹರ

ಕಾಷಾಯಾಂಬರ ಕರದಿ ಕಮಂಡಲ
ಪದ್ಮಕರದಿ ಶಂಖ ಚಕ್ರವ ಪಿಡಿದು
ಶ್ರೀಪಾದನು ತಾನೆನ್ನುವ ರೂಪವ
ಲೋಕದಿ ತೋರಿದೆ ಬದುಕಿ ಮುನಿವರ

ವ್ಯಾಪಾರವು ಈ ಜೀವನ ನಾಟಕ
ಆಪ್ಯಾಯತೆಯಲಿ ಮೋಹದ ಮುಸುಕು
ಕೋಪ ಲೋಭ ಮದ ಮಾತ್ಸರ್ಯಗಳಲಿ
ಕಾಮನೆಗಳ ಅಲೆ ಬಲೆಯ ತೋರಿದನೇ

ಭರತ ಖಂಡದೀ ಭುವಿಯಲಿ ಜನಿಸುತ
ಅವಿರತ ಶ್ರಮಿಸುತ ಜನರನುದ್ಧರಿಸಿ
ಕವಿಕುಲಗುರು ನೀನಾಗುತ ವಿಶ್ವಕೆ
ಸವಿಯೂಟವ ನೀಡಿದೆಯೋ ಶಾಶ್ವತ

10 comments:

  1. ಶ್ರೀ ಶಂಕರಾಚಾರ್ಯರ ಕುರಿತು ಮುತ್ತಿನಂಥ ಹತ್ತಂಶಗಳನ್ನು ತಿಳಿಹೇಳಿದ ನಿಮಗೆ + ಅದನ್ನೋದಿದ ನಮಗೆಲ್ಲ ಶಂಕರಭಗವತ್ಪಾದರ ಆಶೀರ್ವಾದಾನುಗ್ರಹಗಳು ಸದಾಕಾಲ ಇರಲಿ. ಶಂಕರಸ್ಮರಣೆಯ ಕವನವೂ ಚೆನ್ನಾಗಿದೆ,ಆರ್ಥಪೂರ್ಣವಾಗಿದೆ!

    ReplyDelete
  2. ಶ್ರೀ ಶಂಕರಾಚಾರ್ಯರ ಜೀವನ, ಸಾಧನೆಗಳ ಕುರಿತು ಬರೆದ ನಿಮ್ಮ ಹತ್ತಂಶಗಳು ತುಂಬಾ ಚೆನ್ನಾಗಿದೆ. ಕವನವೂ ಕೂಡ ಚೆನ್ನಾಗಿದೆ ಸಾರ್. ಶಂಕರ ಜಯಂತಿಯ ದಿನ ಅವರ ಕುರಿತು ವಿವರಗಳು ಓದಲು ನಮಗೆ ಅನುವು ಮಾಡಿಕೊಟ್ಟ ನಿಮಗೆ ಧನ್ಯವಾದಗಳು........

    ReplyDelete
  3. ವಿ ಆರ್ ಬಿ ಸರ್,
    ಶ್ರೀ ಶಂಕರಾಚಾರ್ಯರ ಬಗ್ಗೆ ದಶಾಂಶಗಳನ್ನು ನಮಗೆಲ್ಲ ತಿಳಿಸುವುದರ ಮೂಲಕ ಪುಣ್ಯದ ಕೆಲಸ ಮಾಡಿದ್ದೀರಾ! ಶಂಕರಾಚಾರ್ಯರ ಜೀವನ ಶೈಲಿ ನಮಗೆಲ್ಲ ಮಾದರಿಯಾಗಲಿ. ಗುರುವರ್ಯರ ಕೃಪಾಕಟಾಕ್ಷ, ಆಶೀರ್ವಾದ ನಮ್ಮೆಲ್ಲರ ಮೇಲಿರಲಿ.

    ReplyDelete
  4. ಶಂಕರರ ಅದ್ವೈತ ಸಿದ್ಧಾಂತದಲ್ಲಿ ನನಗೆ ಎಳ್ಳಷ್ಟೂ ಸಂಶಯವಿಲ್ಲ.ಆದರೆ ಯಾವುದೋ ಒಂದು ಶಕ್ತಿ (ಅದನ್ನು ನೀವು ಮಾಯೆಎನ್ನಬಹುದು)ಅದ್ವೈತವನ್ನು ಅನುಷ್ಠಾನದಲ್ಲಿ ತರಲು ಬಿಡುವುದಿಲ್ಲ.ಜನಸಾಮಾನ್ಯರಲ್ಲೂ ದ್ವೈತವೆ ಪ್ರಭಲವಾಗಿ ಬೇರೂರಿದೆ.ಅದಕ್ಕೂ ಯಾವುದೋ ನಿಘೂಢ ವಾದ,ನಿರ್ಧಿಷ್ಟ ವಾದ ಕಾರಣವಿರಲೇ ಬೇಕು!ಅದು ನಮಗೆ ಅರ್ಥವಾಗುವುದಿಲ್ಲ ಅಷ್ಟೇ.ನಮನಗಳು.

    ReplyDelete
  5. ಆತ್ಮೀಯರೇ,
    ಶಂಕರರ ಸ್ಮರಣೆಯನ್ನು ಎಲ್ಲರಿಗೂ ಮಾಡಿಸಿದ ನಿಮಗೆ ಕೃತಜ್ಞತೆಗಳು. ಕೆಳಗಿನಕೊಂಡಿಯನ್ನು ಹಿಡಿದು ಅನುಸರಿಸಿದರೆ ಪೂಜ್ಯ ಜಗದ್ಗುರು ಭಾರತೀತೀರ್ಥಸ್ವಾಮೀಜಿಯವರ ಸ್ವತ:ನುಡಿಗಳನ್ನು ಆಲಿಸಲು ಅವಕಾಶವಿದೆ. ಪ್ರಯತ್ನಿಸಿ

    http://vedasudhe.blogspot.com/2010/05/blog-post_19.html

    ReplyDelete
  6. ಶಂಕರಜಯಂತಿಯಂದು ಅವರ ತತ್ವದ ತಿರುಳನ್ನು ನೀಡಿದ ನಿಮಗೆ ಧನ್ಯವಾದಗಳು.

    ReplyDelete
  7. ಅನೇಕ ಮಿತ್ರರು ಬಹಳ ದಿನ ಹುಡುಕಿದಿರಿ, ಕಾಲಾಯ ತಸ್ಮೈ ನಮಃ ಎಂಬಂತೆ ಕಾಲ ಕೂಡಿ ಬಂದಮೇಲೆಯೇ ಬರೆಯಲು ಸಾಧ್ಯವಾಯಿತು. ಶಂಕರರ ಜೀವನ ಚರಿತೆಯನ್ನು ಸಂಕ್ಷಿಪ್ತವಾಗಿ ಬರೆಯುತ್ತಿದ್ದರೂ ಮಧ್ಯೆ ಬಿಡುವಾಗಿರಲಿಲ್ಲ, ದಯಾಮಯ ದೇವರು ಅಂತೂ ಸಮಯ ಕರುಣಿಸಿದ, ಶಂಕರರ ಬಗ್ಗೆ ಅತ್ಯಲ್ಪ ಬರೆದೆ.ಅಲ್ಪನಾದ ನನ್ನಿಂದ ಅಗಣಿತ ಮಹಿಮರಾದ ಶಂಕರರ ಬಗ್ಗೆ ಎಷ್ಟು ಬರೆಯಲು ಸಾಧ್ಯ ಹೇಳಿ? ಆದರೂ ತಾವೆಲ್ಲ ಬಂದು ಓದಿದಿರಿ, ನನ್ನ ಭಕ್ತಿಗೆ-ತಮ್ಮೆಲ್ಲರ ಹೃದಯಗಳನ್ನೂ ಜೋಡಿಸಿ ಒಟ್ಟಾಗಿ ಶಂಕರರಿಗೆ ನಮಿಸಿದ್ದಾಗಿದೆ,ಶಂಕರರು ಎಲ್ಲರ ಅಭೀಷ್ಟ ಪೂರೈಸಿ ನಡೆಸಲಿ, ತನ್ನ ಪರಗಸ್ಪರ್ಶದಿಂದ ಬೇರೆ ಲೋಹವನ್ನೂ ಚಿನ್ನವನ್ನಾಗಿ ಮಾರ್ಪಡಿಸುವ ಅಘಟಿತ ಘಟನಾ ಶಕ್ತಿಯ ಆಗರವಾಗಿದ್ದ ಶಂಕರರು ಮಿತ್ರ ಶ್ರೀವತ್ಸರನ್ನೂ ಕರೆದುತಂದರು, 'ಅಂತರಂಗದ ಮಾತುಗಳು' 'ಮನದಾಳದಿಂದ' 'ಕೊಳಲಿ'ನ ಕೃಷ್ಣಮೂರ್ತಿಗಳಿಂದಲೂ ಹೊರಬಿದ್ದವು,ಸಹನಾಮಯಿಯಾಗಿ ವಿವೇಚಿಸಿ ತಿಳಿದರೆ ಜಗದ್ಗುರು ಶ್ರೀ ಭಾರತೀ ತೀರ್ಥರು ಹೇಳಿದ್ದರಿಂದ ಅದ್ವೈತದ ಅವಲೋಕನ ಸುಲಭ ಸಾಧ್ಯ ಎಂದು ತಿಳಿದುಬಂದು 'ಸಾವಿರ ಸುತ್ತು ಹಾಕಿದರೂ ಗಂಟು ಒಂದೇ' ಎಂಬ ಗಾದೆಯಂತೆ ತಿರುಳನ್ನೇ ಎತ್ತಿಕೊಟ್ಟಿರಿ ಎನ್ನುವ ಸುನಾಥರೊಂದಿಗೆ ಇದು ತಿರುಳಲ್ಲ, ಕೇವಲ ಶಂಕರಾವಲೋಕನ ಎಂದು ಭಿನ್ನವಿಸುತ್ತ ನಿಮ್ಮೆಲ್ಲರಿಗೆ ನನ್ನ ಗದ್ಯದಲ್ಲೇ ನಮಿಸುತ್ತಿದ್ದೇನೆ,ನಮಸ್ಕಾರಗಳು

    ReplyDelete
  8. shankarara babbe baredu e mediadalli anyatra alabhyavoo - duralbavoo aada vishaya visheshavannu sakalikavagi thilisiddeeri.

    ReplyDelete
  9. ಶ೦ಕರಾಚಾರ್ಯರ ಪರಿಚಯ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  10. Thanks to Shri Begar Ramesh & also to Shri Sitaram.

    ReplyDelete