ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, May 9, 2010

ಅಮ್ಮಾ..ಎಂದರೇ ತೃಪ್ತಿಯು


ಕೇವಲ ಮದರ್‍ಸ ಡೇ ಆಚರಣೆಯಿಂದ ಯಾವ ಪ್ರಯೋಜನವೂ ಈ ಜಗತ್ತಿನಲ್ಲಿಲ್ಲ, ಬದಲಾಗಿ ಆ ತಾಯಂದಿರನ್ನು ಪ್ರತಿ ದಿನ ಪ್ರತಿ ಕ್ಷಣ ನೆನಪಿಸಿಕೊಂಡು ಅವರಿಗೆ ಅವರ ಮುಪ್ಪಿನ ಕಾಲದಲ್ಲಿ ಅವರನ್ನು ಎಲ್ಲಿಗೂ ಸಾಗಹಾಕದೆ, ವೃದ್ಧಾಶ್ರಮಕ್ಕೆ ಸೇರಿಸದೆ, ಅವರ ಅವಶ್ಯಕತೆಗಳನ್ನು-ಬೇಡಿಕೆಗಳನ್ನು ಪೂರೈಸಿದರೆ ಅದೇ ನಿಜವಾದ ಮದರ್‍ಸ್ ಡೇ ! ನಾವು ಪ್ರತಿನಿತ್ಯ ಟಿ.ವಿ ಚಾನೆಲ್ ಗಳಲ್ಲಿ, ಪೇಪರ್ ಗಳಲ್ಲಿ ನೋಡುತ್ತ/ಓದುತ್ತ ಇರುತ್ತೇವೆ--ಮಕ್ಕಳಿದ್ದೂ ಬೀದಿಪಾಲಾದ ಅಮ್ಮಂದಿರ ಬಗ್ಗೆ. ಯಾವ ತಾಯಿ ಕೂಡ ತನ್ನ ಮಗುವನ್ನು ಹಡೆದಾಗ ಮುಂದೆ ಅದರಿಂದ ತನ್ನ ಸ್ವಾರ್ಥಕ್ಕಾಗಿ ಏನನ್ನೋ ಬಯಸಿ ಹಡೆಯುವುದಿಲ್ಲ. ಅದು ನಿಸರ್ಗ ಸಹಜ ಕ್ರಿಯೆ. ಹಡೆದ ಮಗುವನ್ನು ಅತಿ ಪ್ರೀತಿಯಿಂದ ಲಾಲನೆ-ಪಾಲನೆ-ಪೋಷಣೆಮಾಡಿ ಬೆಳೆಸಿ, ಪ್ರಾಥಮಿಕ ವಿದ್ಯೆಯನ್ನು ತಾನೇ ಪ್ರಾರಂಭಿಸಿ ಮುನ್ನಡೆಸುವ ಅಮ್ಮನ ಪಾತ್ರ ಪ್ರತೀ ವ್ಯಕ್ತಿಯ ಬದುಕಿನಲ್ಲೂ ಬಹಳ ಅರ್ಥಗರ್ಭಿತ;ಸತ್ವಪೂರ್ಣ. ಅಮ್ಮನ ಆ ಜಾಗವನ್ನು ಯಾರೂ ತುಂಬಲು ಸಾಧ್ಯವೇ ಇಲ್ಲ.

ನಾವೆಲ್ಲ ಕೇವಲ ಶ್ರೀಸಾಮಾನ್ಯರು, ಇನ್ನು ಮಹಾತ್ಮರೆನಿಸಿದ ಶ್ರೀ ಆದಿಶಂಕರರು ತಾಯಿಗೆ ಒಬ್ಬನೇ ಮಗನಾಗಿದ್ದರು. ದೈವೇಚ್ಛೆಯಂತೆ ಸನ್ಯಾಸ ಸ್ವೀಕರಿಸಿದ ಅವರು ತಾಯಿಗೊಮ್ಮೆ ವಚನವಿತ್ತರು " ಅಮ್ಮಾ ನಿನ್ನ ಅಂತ್ಯಕಾಲಕ್ಕೆ ಎಲ್ಲಿದ್ದರೂ ಬಂದು ಸೇರುತ್ತೇನಮ್ಮ " ಎಂದು. ಹಾಗೇ ಅನೇಕ ವರ್ಷಗಳ ನಂತರ ಶಂಕರರು ಲೋಕಕಲ್ಯಾಣಾರ್ಥ ಬಹುದೂರದಲ್ಲಿರುವಾಗ ಅವರಿಗೆ ಧ್ಯಾನಾಸಕ್ತರಾಗಿ ಕುಳಿತೊಂದು ದಿನ ಅಮ್ಮನ ಅಂತ್ಯಕಾಲ ಸಮೀಪಿಸಿದ್ದು ತಿಳಿದುಬಂತು, ಕೂಡಲೇ ಕೇರಳದ ಕಾಲಟಿಗೆ ಧಾವಿಸಿದ ಶಂಕರರು ಅಮ್ಮನ ಸನಿಹಕ್ಕೆ ಬಂದರು, ಅದಾಗಲೇ ಅಮ್ಮ ಇಹದ ಬಂಧನ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದರು, ಅಮ್ಮನ ಆತ್ಮಕ್ಕೆ ಚಿರಶಾಂತಿಯನ್ನು ತನ್ನ ತಪೋಬಲದಿಂದ ಅನುಗ್ರಹಿಸಿದ ಶಂಕರರು ಕೇವಲ ಒಬ್ಬನೇ ಮಗನಾದ ಕಾರಣ ಅಮ್ಮನ ಅಂತ್ಯಕ್ರಿಯೆಗೆ ಸ್ವತಃ ಮುಂದಾದರು. ನೆರೆಹೊರೆಯ ಯಾರೂ ಅವರ ಸಹಾಯಕ್ಕೆ ಬರಲಿಲ್ಲ. ಯಾಕೆಂದರೆ ಸನ್ಯಾಸಿಗೆ ಕಾರ್ಮಾಧಿಕಾರವಿಲ್ಲ-ಅವ್ರು ಅದನ್ನೆಲ್ಲ ಮಾಡುವ ಹಾಗಿಲ್ಲ ಎಂಬುದು. ಯಾರ ಸಹಾಯಕ್ಕಾಗಿ ಕಾಯದೇ ಶಂಕರರು ತಮ್ಮ ಪೂರ್ವಾಶ್ರಮದ ಮನೆಯ ಪಕ್ಕದಲ್ಲೇ ಅಮ್ಮನ ಅಂತ್ಯಕ್ರಿಯೆ ನಡೆಸಿದರು. ಇಹದ ಕರ್ತವ್ಯವಾದ ಅಂತ್ಯೇಷ್ಟಿಯ ವಿಧಿವಿಧಾನಗಳನ್ನು ತಮ್ಮ ದಿವ್ಯ ತಪಸ್ಸಿದ್ಧಿಯ ಫಲದಿಂದ ಅರಿತು ಪೂರೈಸಿ ಅಮ್ಮನ ಇಹದ ಋಣವನ್ನು ನೆನೆದರು. ಅಂದಿನಿಂದ ಸನ್ಯಾಸ ಧರ್ಮದಲ್ಲಿ ಹೇಗಿರಬೇಕು ಎಂಬ ಅಧ್ಯಾಯಗಳನ್ನು ಬರೆದರು. ಹೀಗಿರುವಾಗ ಅಮ್ಮನಿಗೆ ಯಾವ ರೀತಿಯಲ್ಲೂ ಉಪಕರಿಸದೇ ನಮ್ಮ ಸ್ವಾರ್ಥದಲ್ಲೇ ಮುಳುಗಿರುವ ನಾವು ಕೇವಲ ಹೀಗೊಂದು ಪಾಶ್ಚಾತ್ಯರ ಗೌಣ ಪದ್ಧತಿಯನ್ನು ಅನುಕರಿಸಿ ಅನುಸರಿಸುವುದರಿಂದ ಮದರ್‍ಸ ಡೇ ಅರ್ಥಪೂರ್ಣವೇ ? ಅನೇಕ ಗಂಡಸರು ಮದುವೆಯಾದಮೇಲೆ ಹೆಂಡತಿಯ ಮಾತನ್ನು ಕೇಳಿ ಅಮ್ಮನನ್ನು ದೂರಮಾಡುತ್ತಾರೆಂಬುದು ಸರ್ವ ವೇದ್ಯ ಸಂಗತಿ. ಇಂದಿನ ಅಮ್ಮಂದಿರಂತೂ ಹಿಂದಿನವರ ಥರ ಇಲ್ಲ, ಅವರು ಹೊಂದಿಕೊಳ್ಳುವ ಸ್ವಭಾವದವರಗಿರುತ್ತಾರೆ, ಎಲ್ಲೋ ಏನೋ ಅಭಿಪ್ರಾಯ ಭೇದ ಬಂದುದಕ್ಕೆ ಅದನ್ನು ತಿದ್ದಬೇಕೇ ಹೊರತು ಅಮ್ಮನನ್ನು ದೂರಮಾಡುವುದು,ಯಾರದೋ ಸುಪರ್ದಿಗೆ ನೋಡಿಕೊಳ್ಳಲು ಬಿಡುವುದು ತರವಲ್ಲ. ಹೀಗೇ ಆಲೋಚಿಸುತ್ತಿರುವಾಗ ಇಳಿದ ಕಣ್ಣಿನ ಧಾರೆಗೆ ಅಕ್ಷರ ರೂಪ ಕೊಡಲು ಪ್ರಯತ್ನಿಸಿ ನಿಮ್ಮ ಮುಂದಿಡುತ್ತಿದ್ದೇನೆ.......

ಅಮ್ಮಾ..ಎಂದರೇ ತೃಪ್ತಿಯು

ಅವ್ವಾ ಎನ್ನಲೇ ?
ಅಬ್ಬೇ ನಿನ್ನನೂ
ಅಮ್ಮಾ..ಎಂದರೇ ತೃಪ್ತಿಯು
ಚೆನ್ನಾದ ಬಾಳು ನೀಡಿ
ನಮ್ಮನ್ನು ಹರಸಿದೆ
ಹಣ್ಣಾದ ನಿನ್ನ ಜೀವ
ನಮಗಾಗೀ ತುಡಿದಿದೇ
ಇನ್ನೆಲ್ಲಿ ತೀರಿಸಲಮ್ಮ
ನಿನ್ನೊಡಲಿನ ಆ ಋಣ.......ಅವ್ವಾ ಎನ್ನಲೇ ?||ಪ||


ಒಂಬತ್ತು ತಿಂಗಳಷ್ಟು
ನಮ್ಮನ್ನು ಬಸಿರೊಳೂ
ಮುಂದಷ್ಟು ವರುಷ ದಿನವೂ
ಸೊಂಟ ತೋಳಿನಲೀ ಹೊತ್ತೂ
ಈ ಲೋಕದ ಬದುಕಿನ ಹೆಜ್ಜೆ
ಕಲಿಸಿದೆ ನೀ ಪ್ರತಿ ಕ್ಷಣ......ಅವ್ವಾ ಎನ್ನಲೇ ? ||೧||


ಅಂಬೆಗಾಲನಿಕ್ಕಿ ಬೆಳೆದೂ
ಅಡುತ್ತಾ ಮಡಿಲೊಳೂ
ತುಂಬ ತಪ್ಪು ಹೆಜ್ಜೆ ಇಡುತಾ
ನಡೆದಂತಾ ದಿನಗಳೂ
ಹಂಬಲಿಸಿ ಬದುಕಿನ ತೊಡಕು
ಬೆಂಬಿಡದೇ ಅರೆಕ್ಷಣ.......ಅವ್ವಾ ಎನ್ನಲೇ ? ||೨||


ಓದು ಬರಹ ಕಲಿಸುತ ದಿನವೂ
ಕಥೆ ನೀತಿ ನಿಯಮಂಗಳಾ
ಸಾಧು ಗೋಧು ಪಿರಂಗಿ ಚಾರೀ
ಕಣ್ಣಾ ಮುಚ್ಚಾಲೆ ಆಟಂಗಳಾ
ವೇದ ಸಾರವೇ ತುಂಬಿದ ಶ್ಲೋಕ
ಆದೆ ಜ್ಞಾನದ ಹರಿವಾಣ.....ಅವ್ವಾ ಎನ್ನಲೇ ? ||೩||


ಹೊತ್ತಾರೆ ಅನ್ನವನಿಕ್ಕಿ
ಸಂತಸದೀ ನೋಡುತಾ
ಒಟ್ಟಾರೆ ಕಷ್ಟಗಳನೂ
ನಮ್ಮ ನಗುವಲಿ ಕಳೆಯುತಾ
ಹೆತ್ತ ಕರುಳಿನ ಕುಡಿಯೊಳು ನಿತ್ಯ
ತುಂಬಿ ಭವಿತವ್ಯದ ಹೂರಣ.....ಅವ್ವಾ ಎನ್ನಲೇ ? ||೪||


ಬೆಳೆಬೆಳೆಯುತ ದೊಡ್ಡವರಾಗಿ
ಸೇರಿದೆವೂ ಪಟ್ಟಣ
ಕಳೆಗುಂದಿದ ನಿನ್ನಯ ಮುಖವಾ
ಮರೆಯುತ್ತಾ ಜೀವನ
ಮುಪ್ಪಡರಿದ ನಿನ್ನಯ ಬದುಕಲಿ
ಬಂದೇವೇ ಅರೆಕ್ಷಣ?......ಅವ್ವಾ ಎನ್ನಲೇ ? ||೫||


8 comments:

 1. ನಿಮ್ಮ ಹೃದಯ ಸ್ಪರ್ಶಿ ಲೇಖನ ಮತ್ತು ಕವನ ನಮ್ಮೆಲ್ಲರ ಕಣ್ಣು ತೆರೆಸಲಿ.ಅಭಿನಂದನೆಗಳು,ನಮಸ್ಕಾರ.

  ReplyDelete
 2. ವಿ.ಆರ್. ಅಮ್ಮನ ದಿನ ನಮ್ಮ ಸಮಾಜಕ್ಕೆ ಈಗೀಗ ಬಹಳ ಸಮಂಜಸ ಎನಿಸುತ್ತಿದೆ..ತಾಯ ಮೇಲಿನ ಮಮತೆ ಪ್ರೀತಿ ಎಲ್ಲಾ ಬರೀ ತೋರಿಕೆ ಆಗುವುದು ..ನಮ್ಮ ಬದಲಾದ ವ್ಯಾವಹಾರಿಕ ರೀತಿಯಿಂದ..
  ನಮ್ಮ ಪಾರಂಪರಿಕ ರೀತಿ ರಿವಾಜಿಗೆ ಇದು ಸ್ವಾಭಾವಿಕ ..ಅದಕ್ಕೆ ಮದರ್ಸ್ ಡೇ ಬೇಕಿಲ್ಲ ..ನಿಮ್ಮ ಕವನ ಬಹಳ ಸಮಯೋಚಿತ ಮತ್ತು ಈ ಸಾಲುಗಳು
  ಹಣ್ಣಾದ ನಿನ್ನ ಜೀವ
  ನಮಗಾಗೀ ತುಡಿದಿದೇ
  ಇನ್ನೆಲ್ಲಿ ತೀರಿಸಲಮ್ಮ
  ನಿನ್ನೊಡಲಿನ ಆ ಋಣ.

  ReplyDelete
 3. very touching article.thanx.

  ReplyDelete
 4. ಅಮ್ಮನ ಸೇವೆ ಮಾಡುವ ಪುಣ್ಯ ಸಿಕ್ಕವರೇ ಅದೃಷ್ಟವಂತರು. ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ. ಹೆತ್ತ ತಾಯಿ ತಂದೆಯರನ್ನು ಕೊನೆಗಳಿಗೆಯಲ್ಲಿ ಬೀದಿ ಪಾಲು ಮಾಡುವ ಮಕ್ಕಳು ಜೀವಿಸಲು ಯೋಗ್ಯರಲ್ಲ ಎಂಬುದು ನನ್ನ ಅನಿಸಿಕೆ.
  mothers day ಸಂದರ್ಭದಲ್ಲಿ ನಿಮ್ಮ ಲೇಖನ, ಕವನ ನಮ್ಮೆಲ್ಲರ ಕಣ್ಣು ತೆರೆಸಲಿ.

  ReplyDelete
 5. ಅಮ್ಮಂದಿರ ದಿನಕ್ಕೆ ನೀವು ನೀಡಿದ ಕಾಣಿಕೆ ಚೆನ್ನಾಗಿದೆ ಸಾರ್. ನಮ್ಮ ಪೀಳಿಗೆಯ ಅಮ್ಮಂದಿರು ಹೊಂದಿಕೊಳ್ಳಲು ಖಂಡಿತಾ ತಯಾರಿದ್ದಾರೆ, ಏಕೆಂದರೆ ಈಗ ಎಲ್ಲರ ಮನೆಯಲ್ಲೂ ಒಂದೋ / ಎರಡೋ ಮಕ್ಕಳು ಅಷ್ಟೆ... ಒಬ್ಬ ಮಗ ಇರುವಾಗ ಬರುವ ಸೊಸೆ ಮಗಳಾಗುತ್ತಾಳೆಯೇ ಹೊರತು ಸೊಸೆಯಲ್ಲ... ಅದನ್ನು ಈಗಿನ ಪೀಳಿಗೆಯ ಯುವತಿಯರು ಸ್ವಲ್ಪ ಅರಿತರೇ ಹೊಂದಾಣಿಕೆ ಸುಲಭವಾಗುತ್ತದೆ. ಒಳ್ಳೆಯ ಬರಹ ನೀಡಿದ್ದಕ್ಕೆ ಧನ್ಯವಾದಗಳು..........

  ReplyDelete
 6. ಕೊನೆಯ ಪ್ಯಾರದಲ್ಲಿದ್ದ೦ತೆ ಅನುಕರಿಸಿದರೆ ಸಾಕು ತಾಯಿದಿನ ಅರ್ಥ ಪಡೆದುಕೊ೦ಡ೦ತೆ. ಚೆ೦ದದ ಲೇಖನ.

  ReplyDelete
 7. ಅಮ್ಮನ ಬಗ್ಗೆ ಹೇಗೆ ಬರೆದರೂ ಅದು ಕಮ್ಮಿಯೇ ಅಲ್ಲವೇ,ನಿಮ್ಮೆಲ್ಲರ ಪ್ರತಿಕ್ರಿಯೆ ನೋಡಿ ನನಗೆ ಇನ್ನೊಮ್ಮೆ ಕಣ್ಣೀರು ಬಂತು,ಅಮ್ಮನ ಸ್ಥಾನವೇ ಹಾಗೆ. ಓದಿ,ಅನುಭವಿಸಿ ನನ್ನ ಭಾವನಾಲಹರಿಯಲ್ಲಿ ಪಾಲ್ಗೊಂಡ ಓದುಗಮಿತ್ರರಾದ ಡಾ.ಕೃಷ್ಣಮೂರ್ತಿ, ಡಾ.ಆಜಾದ್, ಅಪರ್ಣಾ,ಪ್ರವೀಣ್,'ಅಂತರಂಗದ ಮಾತುಗಳು',ಸೀತಾರಾಮ್ ನಿಮಗೆಲ್ಲ ಹೃತ್ಪೂರ್ವಕ ವಂದನೆಗಳು. ಮತ್ತೆ ಸಮಯ ಸಿಕ್ಕಾಗ ನಿಮ್ಮೊಂದಿಗೆ ಸಂವಹಿಸುತ್ತೇನೆ.

  ReplyDelete
 8. ನಿತ್ಯ ಅಮ್ಮನ ಮಡಿಲಲ್ಲಿರುವ ನಮಗೆ ಯಾವತ್ತೋ ಒಮ್ಮೆ ಅಮ್ಮನ ದಿನ ಅಪ್ಪನ ದಿನ ಆಚರಿಸುವ ಅಗತ್ಯವೆಲ್ಲಿಂದ ಬಂತು? ಬಾಲ್ಯದಲ್ಲಿ ನಿತ್ಯವೂ ಅಮ್ಮ-ಅಪ್ಪನ ಆಸರೆಯಲ್ಲಿ ಬೆಳೆದು ದೊಡ್ದವರಾದಮೇಲೆ ಅವರಿಗೆ ನಾವೇ ಆಸರೆಯಾಗಿನಿಂತು, ನಿತ್ಯವೂ ಅವರ ಜೊತೆಯಲ್ಲೇ ಇರುವುದು-ಇರಬೇಕಾದ್ದು ನಮ್ಮ ಭಾರತೀಯ ಪರಂಪರೆ.ಕೇವಲ ಅವರ ಅಂತಿಮದ ನಂತರವಷ್ಟೇ ವರ್ಷಕ್ಕೊಮ್ಮೆ ಅವರಿಗಾಗಿ ಶ್ರಾದ್ಧದ ಆಚರಣೆ. ಅಪ್ಪ-ಅಮ್ಮ ಬದುಕಿರುವಾಗ ವರ್ಷಕ್ಕೊಮ್ಮೆ ನೆನಪುಮಾಡಿಕೊಳ್ಳುವುದು ತೀರಾ ಹಾಸ್ಯಾಸ್ಪದ.ಯಾರೋ ಏನೋ ಮಾಡಿದರೆಂದು ಅಂಧಾನುಕರಣೆ ಮಾಡುವ ಹೀನ ಪ್ರವೃತ್ತಿಯಿಂದ ಬಿಡುಗಡೆಯಾಗುವುದಾದರೂ ಎಂದೋ? ಇಡೀ ವಿಶ್ವವು ಭಾರತದ ಕಡೆ ಮುಖಮಾಡಿ ನಮ್ಮ ಜೀವನ ಮೌಲ್ಯಗಳನ್ನು ಅನುಸರಿಸಲು ಹಾತೊರೆಯುತ್ತಿರುವಾಗ ಇಂತಾ ಹಾಸ್ಯಾಸ್ಪದವಾದ ಅಪ್ಪ-ಅಮ್ಮನ ದಿನಗಳನ್ನು ಆಚರಣೆಯನ್ನು ಖಂಡಿಸಬೇಕು, ಅಷ್ಟೇ ಅಲ್ಲ,ವೃದ್ಧ ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ತಳ್ಳುವ ಮಕ್ಕಳಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು.

  [ಶ್ರೀ ವಿಷ್ಣುಭಟ್ಟರು ನಾಲ್ಕು ದಿನಗಳಿಂದ ಏನೂ ಬರೆಯಲೇ ಇಲ್ಲವಲ್ಲಾ! ಅವರ ಯೋಗಕ್ಷೇಮದಬಗ್ಗೆ ವಿಚಾರಿಸಲು ಮಾಡಿದ ಪ್ರಯತ್ನಗಳೆಲ್ಲಾ ವ್ಯರ್ಥವಾಗಿ ಆತಂಕಮೂಡಿತ್ತು. ಆದರೆ ಇಂದು ದೂರವಾಣಿಗೆ ಲಭ್ಯವಾದರು. ಕೌಟುಂಬಿಕ ಕಾರ್ಯಕ್ರಮಗಳ ಒತ್ತಡದಲ್ಲಿದ್ದಾರೆ.ಬಹುಷ: ನಾಳೆ ಅವರು ಬರೆಯಬಹುದು. ಈ ಮಧ್ಯೆ ಅವರ ಅಂತರ್ಜಾಲಸಂಪರ್ಕವೂ ಕೈಕೊಟ್ಟಿತ್ತು.ಅದರಿಂದ ಸ್ವಲ್ಪ ಅವರಿಗೆ ಬರೆಯುವುದು ಕಷ್ಟವಾಗಿದೆ]

  ReplyDelete