ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 3, 2010

ಭಿಕ್ಷೆ, ಭಿಕ್ಷು ಮತ್ತು ಭಿಕ್ಷಾಟನೆ

ಭಿಕ್ಷೆ, ಭಿಕ್ಷು ಮತ್ತು ಭಿಕ್ಷಾಟನೆ

ಭಗವಂತ ಕೊಟ್ಟ ಹಲಾವು ದಾರಿಗಳಲ್ಲಿ ನಾವು ದುಡಿಮೆಯಲ್ಲಿ ತೊಡಗಿದ್ದರೂ ಕೊನೆಗೊಮ್ಮೆ ಎಲ್ಲರ ಒಡಲಿಗೆ ದಾಹತಣಿಸಲು ಬೇಕಾದ್ದು ಅನ್ನ. ಅಗ್ನಿಯ ಹಲವು ರೂಪಗಳಲ್ಲಿ ಜಠರಾಗ್ನಿ ಕೂಡ ಒಂದು ಅದನ್ನು ವೈಜ್ಞಾನಿಕವಾಗಿ ನಾವು ದುರ್ಬಲ ಗಂಧಕಾಮ್ಲ ಎನ್ನುತ್ತೇವೆ. ಹೊಟ್ಟೆ ಹಸಿದಾಗ ದುರ್ಬಲ ಗಂಧಕಾಮ್ಲದ ಸ್ರವಿಸುವಿಕೆ ಜಾಸ್ತಿ ಆದಾಗ ಅದು ಜಠರದಲ್ಲಿ ಏನೂ ಇಲ್ಲದಿದ್ದರೆ ಜಠರದ ಗೋಡೆಯನ್ನೇ ಕರಗಿಸಿ ಹುಣ್ಣುಮಾಡಲು ತೊಡಗುತ್ತದೆ, ಇದನ್ನು ' ಅಲ್ಸರ್ ' ಎನ್ನುತ್ತೇವೆ. ಒಂದು ವಿಶೇಷವೆಂದರೆ ಕೆಲವರಿಗೆ ಹೊಟ್ಟೆ ಹಸಿದಿದ್ದರೂ ಅದನ್ನು ಕಟ್ಟಿ ನಿಲ್ಲಿಸುವ ತಾಕತ್ತು ಇರುತ್ತದೆ-ಆದರೆ ನಮ್ಮಂಥ ಜನಸಾಮಾನ್ಯರಿಗೆ ಇದು ಅಸಾಧ್ಯ. ಈ ಹೊಟ್ಟೆಗೆ ನೀಡುವ ಆಹಾರಕ್ಕಾಗಿ ನಾವು ನಮ್ಮನ್ನು ಹಲವು ವೇಷಗಳಲ್ಲಿ ಹಲವು ಕೆಲಸಗಳಲ್ಲಿ ತೊಡಗಿಕೊಂಡಿರುತ್ತೇವೆ. ಅಧ್ಯಯನ,ಅಧ್ಯಾಪನ, ವೈದ್ಯ, ತಂತ್ರಜ್ಞ, ಗಣಿಕಾರ್ಮಿಕ, ಸುವರ್ಣಪರೀಕ್ಷಕ, ಸಿನಿಮಾನಟ, ಹಾಡುಗಾರ,ಸಂಗೀತಗಾರ ಹೀಗೇ ವೃತ್ತಿ ಅನೇಕ. ಇದನ್ನೇ ಸಂಸ್ಕೃತದಲ್ಲಿ ಉದರ ನಿಮಿತ್ತಂ ಬಹುಕೃತ ವೇಷಂ ಅಂದಿದ್ದಾರೆ. ಕೆಲವರು ಬುಕುವುದಕ್ಕಾಗಿ ತಿನ್ನುವ ಪ್ರವೃತ್ತಿಯುಳ್ಳವರಾದರೆ ಇನ್ನು ಕೆಲವರು ತಿನ್ನುವುದಕ್ಕಾಗೇ ಬದುಕಿರುವ ರೀತಿಯಲ್ಲಿ ಇರುತ್ತಾರೆ. ಇದರಲ್ಲಿ ಜ್ಞಾನಿಗಳು ಮೊದಲ ತರಗತಿಯವರು, ಅಂದರೆ ಬುಕುವುದಕ್ಕಾಗಿ ತಿನ್ನುವ ಪ್ರವೃತ್ತಿಯುಳ್ಳವರು.ಮನುಷ್ಯನಿಗೆ ಹಸಿವಿದ್ದಾಗ ಮಾತ್ರ ಆತ ಕೆಲಸದಲ್ಲಿ ತೊಡಗಲು ಸಾಧ್ಯ, ಹೊಟ್ಟೆಯ ಹಸಿವಿದ್ದರೆ ಅನ್ನವನ್ನು ಹೇಗೆ ಸಂಪಾದಿಸಲು ಪ್ರಯತ್ನಿಸುತ್ತಾನೋ ಹಾಗೇ ಜ್ಞಾನದ ಹಸಿವಿದ್ದರೆ ವ್ಯಕ್ತಿ ಓದಿನ/ಕೋಶದ ಮೊರೆಹೋಗುತ್ತಾನೆ. ಬಹಳ ಜ್ಞಾನಿಗಳು ಎಂದೂ ಹೊಟ್ಟೆಬಿರಿ ಊಟಮಾಡುವುದಿಲ್ಲ. ಅದನ್ನೇ ನಮ್ಮ ಸರ್ವಜ್ಞ ಕವಿಯ ಬಾಯಲ್ಲಿ ಕೇಳಿ

ಒಮ್ಮೆ ಉಂಡರೆ ಯೋಗಿ ಮಗುದೊಮ್ಮೆ

ಉಂಡರೆ ಭೋಗಿ ಭಿಮ್ಮಗುಂಡರವರೋಗಿ

ಯೋಗಿಯು ಸುಮ್ಮನಿರುತಿಹನು ಸರ್ವಜ್ಞ

ಹೀಗೇ ಯಾರು ಕಾರ್ಯ ತತ್ಪರರೋ ಅವರಿಗೆ ಬಹಳ ಹೊಟ್ಟೆ ಬಿರಿ ಊಟಮಾಡಿದರೆ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೇ ಇಂಗ್ಲೀಷನಲ್ಲಿ ಕೂಡ ನಾವು working lunch ಎನ್ನುತ್ತೇವೆ. ಜ್ಞಾನಿಗಳು ಅದರಲ್ಲೂ ಯೋಗಿಗಳು ಒಪ್ಪತ್ತಿನ ಊಟ ಮಾಡುತ್ತಾರೆ, ಅದೂ ಸ್ವಲ್ಪ ಮಾತ್ರ, ಇನ್ನೊಂದು ಹೊತ್ತು ಸ್ವಲ್ಪ ಹಾಲು-ಹಣ್ಣು ಸೇವಿಸಿ ಕಾಲಹಾಕುತ್ತಾರೆ. ಇಂತಹ ಯೋಗಿಗಳು, ಸನ್ಯಾಸಿಗಳು ಸ್ವಾರ್ಥರಹಿತರಾಗಿ ಬದುಕುವುದರಿಂದ ಅವರಿಗೆ ಅನ್ನವನ್ನು ಬೇರೆ ದುಡಿಮೆಯ ಮಾರ್ಗದಿಂದ ಸಂಪಾದಿಸುವ ಅವಕಾಶ-ಅನುಕೂಲ ಇರುವುದಿಲ್ಲ;ಅರ್ಥಾತ್ ಅವರು ಕರ್ಮದಿಂದ ವಿಮುಕ್ತರಾಗಿರುತ್ತಾರೆ. ಇಂತಹ ಯೋಗಿಗಳಿಗೆ ಪ್ರತಿಯೊಂದು ಕೆಲಸಕ್ಕೆ ಬೇರೆಯವರ ಸಹಾಯ ಬೇಕು. ಮಧ್ಯಾಹ್ನ ಮಾತ್ರ ಊಟ, ಅದೂ ಊಟಮಾಡಲು ಯಾರೋ ಸತ್ ಶಿಷ್ಯನೊಬ್ಬ ಹಸ್ತೋದಕ [ಕೈ ಮೇಲೆ ಆಪೋಶನಕ್ಕೆ ಅನುಮತಿಸುವ ನೀರು] ಹಾಕಬೇಕು,ಅದಿಲ್ಲದಿದ್ದರೆ ಆತ ಊಟ ಸ್ವೀಕರಿಸಲಾರ ! ಇಂತಹ ಸತ್ಪಾತ್ರರಿಗೆ ಅನ್ನ ನೀಡುವುದು ಒಂದು ಸೇವೆ ಎಂದು ಪರಿಗಣಿತವಾಗಿದೆ. ಅದನ್ನು ' ಯೋಗ ಭಿಕ್ಷೆ ' ಎನ್ನುತ್ತೇವೆ.

ಅನ್ನಪೂರ್ಣೆ ಸದಾ ಪೂರ್ಣೆ ಶಂಕರಃ ಪ್ರಾಣ ವಲ್ಲಭೇ|

ಜ್ಞಾನ-ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂದೇಹಿ ಚ ಪಾರ್ವತಿ||

--ಭಗವಾನ್ ಆದಿ ಶಂಕರರು ಅನ್ನಪೂರ್ಣೆಯಾದ, ಜಗನ್ಮಾತೃವಾದ ಪಾರ್ವತಿಯ ಸನ್ನಿಧಿಯಲ್ಲಿ ಹೀಗೆ ಪ್ರಾರ್ಥಿಸಿದ್ದಾರೆ. ಜ್ಞಾನ-ವೈರಾಗ್ಯದ ಸಿದ್ಧಿಗಾಗಿ ತನಗೆ ಭಿಕ್ಷೆ ನೀಡು ಎಂದು ಬೇಡಿದ್ದಾರೆ. ಹೀಗೇ ದೊರೆತ ಅನ್ನವನ್ನು ಸ್ವೀಕರಿಸುವ ಮುನ್ನ ಗುಟುಕು ಪಾಲನ್ನು ದೈವದ ಹೆಸರಲ್ಲಿ ಎತ್ತಿ ಪಕ್ಕಕ್ಕಿಟ್ಟು ಊಟಮಾಡು ಎನ್ನುತ್ತದೆ ಶಾಸ್ತ್ರ, ಇದು ತಣ್ಣೀರನ್ನು ತಣಿಸಿಕುಡಿ ಎಂಬ ರೀತಿ. ದೊರೆತ ಅನ್ನಕ್ಕೆ ಅದು ದೈವಸ್ವರೂಪವೆಂದು ಕೈಮುಗಿದು, ಅದರಲ್ಲೊಂದೆರಡಗುಳು ಪಕ್ಕಕ್ಕಿಟ್ಟು ಆಮೇಲೆ ಊಟ. ನಮ್ಮ ಪೂರ್ವಜರು ದೂರದೃಷ್ಟಿಯನ್ನು ಪಡೆದಿದ್ದರಿಂದ ಸುತ್ತಲ ಪ್ರಾಣಿ-ಪಕ್ಷಿಗಳನ್ನೂ ಸೇರಿಸಿಕೊಂಡರು, ಸಾಧ್ಯವಾದಾಗ ಕಾಗೆಗೆ-ನಾಯಿಗೆ,ಬೆಕ್ಕಿಗೆ ಈ ರೀತಿ ಎಲ್ಲಾ ಜೀವಿಗಳಿಗೆ ಸ್ವಲ್ಪ ಅನ್ನ ನೀಡಿ ಎಂದರು. ಅದನ್ನೇ ಕಾಕ ಬಲಿ ಎಂದರು. ಗೃಹಸ್ಥರಿಗೆ ಅನ್ನ ಸ್ವೀಕಾರಕ್ಕೂ ಮುನ್ನ ವೈಶ್ವದೇವ, ಗೋ ಗ್ರಾಸ, ಅತಿಥಿ ಸತ್ಕಾರ[ಅದರಲ್ಲಿ ಯೋಗಭಿಕ್ಷೆ ಕೂಡ ಸೇರಿದೆ] ಅಂದರೆ ದಿನಂಪ್ರತಿ ಅನ್ನ ಬೇಯಿಸಿಕೊಡುವ ಅಗ್ನಿದೇವನಿಗೆ ತುತ್ತನ್ನ ಅರ್ಪಿಸಿ, ಗೋವಿಗೆ ಮುಷ್ಠಿ ಅನ್ನ ಅರ್ಪಿಸಿ, ಅತಿಥಿಗಾಗಿ ಕಾದು ಅವರಿಗೆ ಬಡಿಸಿ -- ಇವನ್ನೆಲ್ಲ ನಡೆಸಿ ನಂತರ ಊಟಮಾಡು ಎನ್ನುವ ಕಟ್ಟುಕಟ್ಟಳೆಯಿದೆ. ಎಂತಹ ಆರ್ಷೇಯ ವಾದ ನೋಡಿ ! ಎಂತಹ ಪರಿಕಲ್ಪನೆ ನೋಡಿ ! ಎಂತಹ ಆದರ್ಶ ನೋಡಿ ! ಆದರೆ ಇವತ್ತಿನ ನವೀಕರಣಮಾರ್ಗದಲ್ಲಿ ನಾವು ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ಎಲ್ಲವನ್ನೂ ಮರೆತಿದ್ದೇವೆ, ಅದಕ್ಕೆಲ್ಲಾ ಯಾರಿಗೆ ಪುರುಸೊತ್ತಿದೆ ಅಲ್ವೇ ? ಹೀಗೇ ನಮ್ಮಿಂದ ಅನ್ನ ಸ್ವೀಕರಿಸಿದ ಪ್ರತೀ ಜೀವಿಯೂ ತೃಪ್ತವಾಗಿ ನಮ್ಮನ್ನು ತನ್ಮೂಲಕ ಹರಸುತ್ತದೆ, ಶುಭ ಹಾರೈಸುತ್ತದೆ ! ಇದು ದಾಸರ ಕೆರೆಯ ನೀರನು ಕೆರೆಗೆ ಚೆಲ್ಲಿ ಹಾಡನ್ನು ನೆನಪಿಸುವುದಿಲ್ವೇ ? ಕೊಟ್ಟ ಪರಮಾತ್ಮನ ಹಲವು ರೂಪಗಳೆಂದು ತಿಳಿದು ಸುತ್ತಲ ಜೀವಿಗಳಿಗೆ ಇತ್ತು ಉಂಡಾಗ ಅದು ಆತನೇ ಕರುಣಿಸಿದ್ದನ್ನು ಅವನಿಗೇ ಅರ್ಪಿಸಿದಂತಲ್ಲವೇ ?

ನಮ್ಮಿಂದ ಅನ್ನದ ಸೇವೆ ಪಡೆಯುವವರನ್ನು ಭಿಕ್ಷು ಎನ್ನಬಹುದು[ಇದು ಬೌದ್ಧಮತದಲ್ಲಿ ಸಾಮಾನ್ಯವಾಗಿ ನೋಡ ಸಿಗುವ ಪದ] ಊರು ತಿರುಗಿ " ಭವತಿ ಭಿಕ್ಷಾಂದೇಹಿ " ಎಂದು ಮನೆಗಳ ಬಾಗಿಲಲ್ಲಿ ನಿಂತು ಮಧುಕರಿ ಭಿಕ್ಷೆ ಎತ್ತಿಚೂರು ಚೂರು ತಂದ ಎಲ್ಲವನ್ನೂ ಸೇರಿಸಿ ಅದರಲ್ಲಿ ಭಾಗಮಾಡಿ ಮೇಲೆ ಹೇಳಿದ ಎದುರಾಗುವ ಎಲ್ಲಾ ಜೀವಿಗಳಿಗೆ ಕೊಟ್ಟು ಮಿಕ್ಕುಳಿದರೆ ಉಳಿದದ್ದನ್ನು ಭಗವಂತನ ಹೆಸರಲ್ಲಿ ಕೇವಲ ಭೌತಿಕಕಾಯದಿಂದ ಭುವಿಯಮೇಲೆ ಬದುಕುಳಿಯಲು ಸ್ವೀಕರಿಸುವುದು, ಎಷ್ಟು ತ್ಯಾಗ ನೋಡಿ ! ನಮಗೆ ಇಂದು ಮೃಷ್ಟಾನ್ನ ಇದ್ದರೂ ತೃಪ್ತಿ ಇಲ್ಲ, ಆದರೆ ಯೋಗಿಯೊಬ್ಬ ಇದರಲ್ಲೇ ಸಂಪೂರ್ಣ ತೃಪ್ತ ! ಹೀಗೂ ಇದೆಯೇ ಎಂದರೆ ಆಶ್ಚರ್ಯಪಡಬೇಡಿ, ಇದನ್ನು ಸಾಕ್ಷೀಕರಿಸಿದ ಇತ್ತೀಚಿನ ಮಹಾನ್ ಯೋಗಿಗಳಲ್ಲಿ ವರದಹಳ್ಳಿಯ ಭಗವಾನ್ ಶ್ರೀ ಶ್ರೀಧರಸ್ವಾಮಿಗಳೂ ಒಬ್ಬರು! ಇವರ ತ್ಯಾಗ-ಮತ್ತು ತಪಸ್ಸಿನಬಗ್ಗೆ ಹಿಂದೆ ಬರೆದಿದ್ದೆ, ತಾವು 'ಭಕ್ತಿ ಸಿಂಚನ' ಮಾಲಿಕೆಯಲ್ಲಿ ಅದನ್ನು ಓದಬಹುದು.ಒಬ್ಬ ಸನ್ಯಾಸಿಗೆ ವಿರಕ್ತಿಯಿಂದಿರಲು ಯೋಗ ಭಿಕ್ಷೆ ಅನುಕೂಲ, ಅದು ಪಥ್ಯವೂ ಕೂಡ. ಅದಕ್ಕಾಗಿಯೇ ಸನ್ಯಾಸಿಗಳು ಬೇರೆ ಬೇರೆ ಕಡೆ ಭಿಕ್ಷೆಪಡೆಯುತ್ತಾರೆ, ಸನ್ಯಾಸದ ಹಲವು ಮಾರ್ಗಗಳಲ್ಲಿ ರಾಜ ಸನ್ಯಾಸವೂ ಒಂದು ಅದು ಮಠಾಧೀಶರಿಗೆ ಹೇಳಿರುವುದು.

ಭಿಕ್ಷಾಟನೆ ಅಂದರೆ ಅದು ಹೀನ ವೃತ್ತಿ , ದೈನ್ಯವೃತ್ತಿ , ಕೇವಲ ಬದುಕಿಗಾಗಿ, ತಿನ್ನುವುದಕ್ಕಾಗಿ ಆಲಸ್ಯದಲ್ಲಿ ಕೆಲಸಮಾಡದೆ ಭಿಕ್ಷೆ ಬೇಡುವುದು ಬಹಳ ಅಪವಿತ್ರ ಕೆಲಸ. ಇಂದು ಅನೇಕರು ಸ್ಟಾರ್ ಭಿಕ್ಷುಕರಾಗಿದ್ದಾರೆ ಅಂದರೆ ಎಲ್ಲಾದರೂ ದೇವಾಲಯಗಳ ಮುಂದೆ ಸದಾ ಭಕ್ತರು ಬರುವಲ್ಲಿ ಅವರನ್ನು ಓಲೈಸಿ ಕಾಸು ತೆಗೆದುಕೊಂಡು ಅದರಿಂದ ಸುಮಾರಷ್ಟು ಗಳಿಸಿ ಬ್ಯಾಂಕ್ ಬ್ಯಾಲೆನ್ಸ್ ಮಾಡುವವರು, ಇದೂ ಒಂದು ಗೀಳಾಗಿಬಿಟ್ಟಿದೆ ಈಗ, ಇಂಥವರು ಕೆಲಸಮಾಡಲೊಲ್ಲರು, ಇದು ಜನ್ಮಾಂತರಕ್ಕೆ ಬರುವ ಹೀನ ಕಳೆ, ಬೇರೆಯವರ ಪಾಪ, ದುಷ್ಕೃತಿ ಬೇಡುವವನಿಗೆ ಹಸ್ತಾಂತರವಾಗುತ್ತದೆ, ಸದ್ಯಕ್ಕೆ ಬೇಡುವವ ಆರಾಮಾಗಿದ್ದರೂ ಮರುಜನ್ಮದಲ್ಲಿ ಅವನ ಕಷ್ಟ ಹೇಳತೀರ. ಅದಕ್ಕೇ ನಮ್ಮ ಹಿರಿಯರು ಪ್ರಾರ್ಥಿಸುತ್ತಾರೆ --


ಅನಾಯಾಸೇನ ಮರಣಂ|
ವಿನಾ ದೈನ್ಯೇನ ಜೀವನಮ್||

--ಎಂಬುದಾಗಿ ಅಂದರೆ ಮರಣಿಸುವಾಗ ಅನಾಯಾಸವಾಗಿ ಮರಣ ಬರಲಿ, ಯಾರೊಬ್ಬರಿಗೂ ಹೊರೆಯಾಗದಂತೆ, ತೊಂದರೆಯಾಗದಂತೆ, ಎಂದೂ ಬಹಳ ಕಾಲ ಹಾಸಿಗೆ ಹಿಡಿಯದೆ,ರೋಗ-ರುಜಿನಾದಿಗಳನ್ನು ಬಹಳ ಅನುಭವಿಸದೆ, ನೋಯದೇ-ಬೇಯದೇ ಮರಣಿಸುವ ಸ್ಥಿತಿ, ಉದಾಹರಣೆಗೆ ಕರ್ತವ್ಯವೆಲ್ಲ ಮುಗಿದಮೇಲೆ ಹೃದಯ ಸ್ತಂಬನವಾಗಿ ಹೋಗಿಬಿಡುವುದು. ಹೀಗೇ ಆಗಲು ಪೂರ್ವದ ಸುಕೃತ ಬೇಕು, ಸುಮ್ಮನೆ ಹಾಗೆಲ್ಲ ಮರಣ ನಮ್ಮ ಇಚ್ಛೆಯಲ್ಲ , ಆಯ್ಕೆಯೂ ಅಲ್ಲ. ಅದಕ್ಕಾಗಿಯೇ ನಮಗೆ ಗೊತ್ತಿರದ ಸ್ಥಿತಿ ತಂದು ಎಲ್ಲೋ ದಾರಿಯಲ್ಲೋ, ಇನ್ನೆಲ್ಲೋ ಹೇಗೋ ಏನೋ ಬಿದ್ದು-ತುಳಿಸಿಕೊಂಡು, ಅಪಘಾತವಾಗಿ ಸಾವು ಬೇಡ,ನಮಗೆ ನಮ್ಮ ಜನ್ಮದ ವಾರಸುದಾರರ ಆಶ್ರಯದಲ್ಲಿ ಅವರ ಹಾರೈಕೆಗಳೊಡನೆ , ಅವರೆಲ್ಲರ ಸಂತೋಷದ ಕಾಲದಲ್ಲಿ ಒಳ್ಳೆಯ ಮರಣ ಸಿಗಲಿ, ಮತ್ತು ಇರುವವರೆಗೆ ದೀನರಾಗಿ ಯಾರಲ್ಲಿಯೂ ಕೈಯೊಡ್ಡಿ ಹೊಟ್ಟೆ ತುಂಬಿಸಿಕೊಳ್ಳುವ ಪರಿಪಾಟ ಬರದಿರಲಿ ಎಂದು ಭುವಿಗೆ ಕಳಿಸಿದ ಭಗವಂತನಲ್ಲಿ ಪ್ರಾರ್ಥಿಸುವುದು.

ದೀನನಾನು ಸಮಸ್ತ ಲೋಕಕೆ ದಾನಿ ನೀನು ವಿಚಾರಿಸಲು
ಮತಿಹೀನ ನಾನು ಮಹಾ ಮಹಿಮ ಕೈವಲ್ಯ ಪತಿ ನೀನು
ಏನಬಲ್ಲೆನು ನಾನು ಎನ್ನೊಳು ನೆಲೆಸು ಜ್ಞಾನ ಮೂರುತಿ ನೀನು
ನಿನ್ನ ಸಮಾನರುಮ್ಟೇ ದೇವ ರಕ್ಷಿಸು ನಮ್ಮನನವರತ

--ಎಷ್ಟು ಅಧ್ಬುತ ಕವಿಯ ಸಾಲುಗಳು ! ಬಹುಶಃ ನಮಗೆ ಕವಿಯಾಕೆ ಹಾಗೆ ಹೇಳಿದರೆಂದು ಅದರರ್ಥ ಆಗಿರಲಿಕ್ಕಿಲ್ಲ ಇಲ್ಲಿಯವರೆಗೆಅನ್ನೋಣವೇ

ಬದುಕುವ ಮೂರ್ಕಾಲ ಹಬ್ಬಿರಲಿ ಸ್ನೇಹದಲಿ

ಕೆದಕುತ್ತ ಕಳೆಯೋಣ ಎಲ್ಲ ಸಿಹಿನೆನಪು

ಅದುಬೇಡ ಇದುಬೇಡ ಎನ್ನುವುದದೇ ಬೇಡ

ಕದವ ತಟ್ಟುತ ತೆರೆಯೋ ಜಗದಮಿತ್ರ


ಜಗದಮಿತ್ರ ಮೊದಲೊಮ್ಮೆ ಹೇಳಿದ್ದು ನೆನಪಾಯಿತೇ ?

8 comments:

  1. ವಿಶೇಷವಾಗಿದೆ ಲೇಖನ. ಕೆಲವೊಂದು ಸರಿಪಡಿಸಬೇಕೇನೋ..( ಆಪೋಶನ, ಆದಿ ಶಂಕರ, ಮತ್ತಷ್ಟು ..:)) ...ಉಪವಾಸಾದಿಗಳನ್ನು ಹಿಂದೆ ಆರೋಗ್ಯದ ಹಿತಕ್ಕಾಗೇ ಹೇಳಿದ್ದಾರೆನ್ನುವುದು ಸತ್ಯ. advanced and Hitech ಭಿಕ್ಷುಕರ ಬಗ್ಗೆ ಹೇಳುವುದೇ ಬೇಡ ಬಿಡಿ..! :)

    ReplyDelete
  2. ದಯವಿಟ್ಟು ಗಮನಿಸಿ, ನನ್ನ ಸ್ವಂತದ ಕಂಪ್ಯೂಟರ್ ದುರಸ್ತಿಯಲ್ಲಿರುವ ಕಾರಣ ಕೆಲವೊಂದು ಅನಿವಾರ್ಯತೆಯಲ್ಲೇ ಅಪೂರ್ಣ ಲೇಖನದ ಥರ ಪ್ರಕಟಿಸಿಬಿಟ್ಟಿದ್ದೇನೆ, ಹೀಗಾಗಿ ಕೆಲವು ತಪ್ಪುಗಳು ಇಂದು ಅನಿವಾರ್ಯ! ಕ್ಷಮೆಯಿರಲಿ , ಸುಬ್ರಹ್ಮಣ್ಯರೇ ತಮಗೆ ಧನ್ಯವಾದಗಳು

    ReplyDelete
  3. ಮಾಹಿತಿಯುಕ್ತ ಲೇಖನ. ಭಿಕ್ಷಾಟನೆ ಮಾಡುವ ಭಿಕ್ಷುಕರಲ್ಲಿ ಇ೦ದು ಲಕ್ಷಾದಿಪತಿಗಳೂ ಇದ್ದಾರ೦ತೆ...
    "ಒ೦ದು ಸಲ ಉ೦ಡವ ಯೋಗಿ
    ಎರಡು ಸಲ ಉ೦ಡವ ಭೋಗಿ
    ಮೂರು ಸಲ ಉ೦ಡವ ರೋಗಿ
    ನಾಲ್ಕು ಸಲ ಉ೦ಡವನ ಹೊತ್ತುಕೊ೦ಡು ಹೋಗಿ"-
    ಅನ್ನು ಊಕ್ತಿ ನೆನಪಾಯಿತು

    ReplyDelete
  4. ತುಂಬಾ ಸೊಗಸಾಗಿ ಹೇಳಿದ್ದೀರಿ, ಭರ್ತೃಹರಿಯ ನೀತಿಶತಕದಲ್ಲಿ ಸತ್ಪಾತ್ರರಲ್ಲಿ ದಾನ(ದಾನ, ಭಿಕ್ಷೆ ಬೇರೆ ಬೇರೆ ಬಿಡಿ) ಮಾಡು ಎಂದಿದ್ದು ನೆನಪಾಯ್ತು. ಒಂದು ಕಾಲದಲ್ಲಿ ಭಗವಂತ ಭಿಕ್ಷುಕನ ರೂಪದಲ್ಲೂ ಬರುತ್ತಿದ್ದನಂತೆ, ಈಗ ಭಗವಂತ ಕೂಡ ಭಿಕ್ಷುಕನ ಪಾತ್ರ ಧರಿಸುವ ಮುನ್ನ ನಾಲ್ಕು ಬಾರಿ ಯೋಚಿಸುವಂತಾಗಿದೆ. ಹಾಗಾಗಿದೆ ಈಗಿನ ಭಿಕ್ಷುಕ ಸಂತತಿ.

    ReplyDelete
  5. ನಿಮ್ಮ ಪರಿಚಯ ತಡವಾದರೂ ಆಯ್ತಲ್ಲ. ಹೀಗೇ ನಾಲ್ಕಾರು ಜನರನ್ನು ಭಗವಂತ ನನಗೆ ಕೊಟ್ಟಿದ್ದಾನೆ.ಇನ್ನು ಲೇಖನದ ಬಗ್ಗೆ ಏನು ಹೇಳಲಿ? ನಿತ್ಯವೂ ಇಂತಾ ಮೃಷ್ಟಾನ್ನ ಕೊಡಿ ಎಂದಿಷ್ಟೇ ಹೇಳುವೆ.

    ಒಂದ್ ಹೊತ್ತು ಉಂಡವ ಯೋಗಿ
    ಎರಡು ಹೊತ್ತು ಉಂಡವ ಭೋಗಿ
    ಮೂರ್ ಹೊತ್ತು ಉಂಡವ ರೋಗಿ
    ನಾಕ್ ಹೊತ್ತು ಉಂಡವನನ್ನು ಹೊತ್ಕೊಂಡ್ ಹೋಗಿ, ಅಂತಾ ನಮ್ಮಮ್ಮ ಹೇಳ್ತಿದ್ರು.

    ReplyDelete
  6. ಇವತ್ತು ನನ್ನ ಗಣಕಯಂತ್ರ ತೊಂದರೆಯಲ್ಲಿರುವುದರಿಂದ ಬಹಳ ಬರೆಯಲು ಆಗುತ್ತಿಲ್ಲ, ಸೀತಾರಾಮ್, ಸಾಗರಿ, ಶ್ರೀಧರ್ ಹಾಗೂ ಎಲ್ಲಾ ಓದುಗಮಿತ್ರರಿಗೂ ಧನ್ಯವಾದಗಳು

    ReplyDelete
  7. ಭಿಕ್ಷೆ, ದಾನ, ಊಟ ಮುಂತಾದವುಗಳ ಬಗ್ಗೆ ತುಂಬಾ ತಿಳಿಸಿಕೊಟ್ಟಿದ್ದೀರಾ.
    ನಿಮ್ಮಿಂದ ಹಲವು ಮಾಹಿತಿಗಳು ದೊರಕಿದವು. ಅರ್ಥಪೂರ್ಣ ಲೇಖನ. danyavaadagalu

    ReplyDelete