ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, January 20, 2010

ತೋರಿಸೇ ಮಾಧವನಾ......


ತೋರಿಸೇ ಮಾಧವನಾ.......

ಮುದ್ದು ಕೃಷ್ಣನ ಮುಖಾರವಿಂದದ ನೆನಪು ಯಾರಿಗೆ ಮುದನೀಡುವುದಿಲ್ಲ? ಬಾಲ್ಯದಲ್ಲಿ-ಶೈಶವಾವಸ್ಥೆಯಲ್ಲಿ ಎಲ್ಲಾ ಕಂದಮ್ಮಗಳನ್ನೂ ಹೋಲಿಸುವುದು ಕೃಷ್ಣನಿಗೆ ಮಾತ್ರ! ಅದರಲ್ಲಂತೂ ಕಿಲಾಡಿಗಾಗಿ ಪ್ರಸಿದ್ಧರಾದವರು ಇಬ್ಬರೇ-ಒಬ್ಬಾತ ಕೃಷ್ಣ[ಕಿಲಾಡಿ ಕಿಟ್ಟ] ಮತ್ತೊಬ್ಬಾತ ಹನುಮಂತ [ಕಿಲಾಡಿ ಹನುಮ] ‘ಯೇ ಕಿಲಾಡಿ ಕಾ ಮಾಮ್ಲಾ ಹೈ’

ನೊಂದ ರಾಧೆ ತನ್ನ ತುಂಟ ಕೃಷ್ಣನನ್ನು ಅವನ ತುಂಟಾಟದ ವೈಭವ, ವೈಖರಿಯೊಂದಿಗೆ ತುಸುಕೋಪದಿಂದ, ಅತಿ ಪ್ರೀತಿಯಿಂದ [ಒಂಥರಾ ಪ್ರೀತಿ, ಒಂಥರಾ ಕೋಪ ಅಂತಾರಲ್ಲ ಹಾಗೇ] ಬಣ್ಣಿಸಿ ತನ್ನ ಸಖಿಗೆ ಆತನನ್ನು ಹುಡುಕಿಕೊಂಡು ಬರಲು ಹೇಳುತ್ತಾಳೆ. ಕೃಷ್ಣ ಎಂದರೆ ಅನೇಕದರಲ್ಲಿ ಏಕ-ಏಕದರಲ್ಲಿ ಅನೇಕ ತತ್ವವನ್ನು ತೋರಿಸಿದ ಅತಿಮಾನುಷ ವ್ಯಕ್ತಿ, ಹೀಗೆ ಜೊತೆಗೆ ಕಂಡೂ ಕಾಣಿಸದ-ಕಾಣಿಸದೆಯೂ ಕಾಣುವ ಈ ತುಂಟಾಟ [ಈ ನನ್ನ ಕವನದಲ್ಲಿ] ರಾಧೆಗೆ ಬೇಸರಮೂಡಿಸುತ್ತದೆ.

ಮಹಾಭಾರತದ ಈ ಪಾತ್ರ: ಗೆಳೆಯನಾಗಿ, ನೆಂಟನಾಗಿ, ಹಿತೈಷಿಯಾಗಿ, ಸಂಧಾನಕಾರನಾಗಿ, ಆಪದ್ಬಾಂಧವನಾಗಿ, ದುಷ್ಟ ಶಕ್ತಿನಿರ್ಮೂಲಕನಾಗಿ, ವಿಶ್ವಕ್ಕೆ ಮನುಜ ಮತವನ್ನೂ, ವಿಶ್ವ ಪಥವನ್ನೂ ಬೋಧಿಸಿ ವಿರಾಟ್ ಸ್ವರೂಪನಾಗುತ್ತಾನೆ; ವಿಶ್ವವಂದ್ಯನಾಗುತ್ತಾನೆ, ‘ಜಗದ್ಗುರು’ವಾಗುತ್ತಾನೆ. ಎಲ್ಲಿಯವರೆಗೆ ಜಗದಲ್ಲಿ ಚಿಕ್ಕಮಕ್ಕಳಿರುತ್ತಾರೋ ಅಲ್ಲಿಯವರೆಗೆ ನಮ್ಮ ‘ತುಂಟಗುರು’ವಿನ ನೆನಪು ಹಸಿರಾಗಿರುತ್ತದೆ; ಹಸಿ ಹಸಿಯಾಗಿರುತ್ತದೆ. ಇಂಥ ‘ತುಂಟಗುರು’ವಿನ ತಂಟೆಯನ್ನು, ‘ಅವನು ನಮ್ಮವ’ ಎಂದು ಬಾಚಿ ತಬ್ಬಿಕೊಳುವ ಹಪಹಪಿಕೆಯನ್ನು ನಿಮ್ಮ ಮುಂದೆ ನನ್ನ ಶಬ್ಧಗಳಲ್ಲಿ ಇಡುವ ಪ್ರಯತ್ನಮಾಡಿದ್ದೇನೆ............

ತೋರಿಸೇ ಮಾಧವನಾ.......ಕೇಳೆಲೆ ಸಖೀ
ತೋರಿಸೇ ಮಾಧವನಾ.......

ಗೋಪಕನ್ನಿಕೆಯರು ಗೋಪಾಲನಕಂಡು
ನೂಪುರಕಟ್ಟಿ ತಾವ್ ನೋಂಪಿಹಾಡಿದರು
ಛಾಪು ಒತ್ತುತ ತನ್ನ ಕಾಪೀ ರಾಗದ ಕೊಳಲ
ಆಪರಿ ನುಡಿಸುತ ನೇಪಥ್ಯ ಸೇರಿದ.......||೧||

ಪರಿಜನ ಪುರಜನ ಹರಿಜನರೆಲ್ಲರು
ಸರಸರ ನಡೆವರೆ ತಡೆದಾಲೈಪರು
ಮರಕತ ಮಾಣಿಕ್ಯ ವೈಡೂರ್ಯಬೇಡದೆ
ಬಿರುಕಿನ ಬಿದಿರಲೆ ಮೋಡಿಯ ಮಾಡಿದ....||೨||

ಮೂರುಜಾವದ ವಿರಹ ನೂರು ಜನ್ಮದ ಥರ
ನಾರೀಹೃದಯದ ಗೋಳು ನೀರೆ ಬಲ್ಲೆಯ ಹೇಳು?
ಖಾರವಾಗಿದೆ ಮನ.. ನೆನೆದು ಮೂರ್ಖತನ
ಮಾರನ ಶರದಬ್ಬರ ಸಾರಿಬರುತಿದೆ...........||೩||

ಮೊಸರು-ಬೆಣ್ಣೆಯ ಕದ್ದು ಹೆಸರು ಕೆಡಿಸಿಕೊಂಡ
ಕೆಸರೊಳಗಾಡುತ ಹಾವನು ತುಳಿದಾತ
ಕಸಿವಿಸಿಗೊಂಡಿಹ ತಾಯಿಗೆ ಬಾಯಲಿ
ನಸುನಗುತಾ ಮೂಜಗವನೆ ತೋರಿದಾ...||೪||


ಆಗೊಮ್ಮೆ ಈಗೊಮ್ಮೆ ಮತ್ತೊಮ್ಮೆ ಮಗದೊಮ್ಮೆ
ಬೇಗಬರುವೆನೆಂದು ಸಾಗಿ ಹೋಗುವನೀತ
ಕೂಗಿಕರೆದರಿಲ್ಲ ಹೋಗಿ ಹುಡುಕಿದರಿಲ್ಲ
ನಾಗವೇಣಿಯೆ ತೋರೆ ಜಾಗಕೆಳೆದುತಾರೆ...||೫||

No comments:

Post a Comment