ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, February 7, 2012

ಹರಿಣವೊಂದು ಮರಳಿ ಬಂದು ........


ಹರಿಣವೊಂದು ಮರಳಿ ಬಂದು ........

ಒಂದೂರಿನಲ್ಲಿ ಒಬ್ಬ ಮಹಾರಾಜನ ಸಂಸ್ಥಾನವಿತ್ತು. ಅರಮನೆಯ ಕಲ್ಪನೆ ಮಾಡಿಕೊಳ್ಳಿ ಮತ್ತದಕ್ಕೆ ವಿವರಣೆ ಬೇಡ. ಅಂತಃಪುರದಲ್ಲಿ ರಾಜನ ಪಟ್ಟದ ರಾಣಿ. ಈ ರಾಣಿ ಬಹಳ ದಢೂತಿ, ತಿಂದೂ ತಿಂದೂ ತಿಂದೂ ಶರೀರ ನಡೆಯಲಾಗದಷ್ಟು ಭಾರವಾಗಿತ್ತು. ಆದರೂ ಜಿಹ್ವಾಚಾಪಲ್ಯ ಮಾತ್ರ ನಿಂತಿರಲಿಲ್ಲ; ಬೇಡುತ್ತಲೇ ಇತ್ತು. ಬೇಕಾದ್ದು ಸಿಗುವಾಗ ಆ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವ ವಿಚಾರ ರಾಣಿಗೆ ಬರಲೇ ಇಲ್ಲ. ಇಡೀ ದಿನ ಮಲಗಿರುವುದು, ವಿಶಾಲವಾದ ಆ ಮಹಲಿನಲ್ಲಿ ಅಲ್ಲಿಲ್ಲಿ ಕೂತು ಕಾಲಹರಣಮಾಡುವುದು ಮಾಡುತ್ತಿದ್ದಳು. ಅವಳಿಗೊಬ್ಬ ಮುದುಕಿ ಮುಖ್ಯ ಬಾಣಸಿಗಳಾಗಿ ಕೆಲಸ ಮಾಡುತ್ತಿದ್ದಳು. ನಿತ್ಯವೂ ತರತರದ ನೈವೇದ್ಯ ತಯಾರಾಗುತ್ತಿತ್ತು. ನಾನಾ ವಿಧ ಭಕ್ಷ್ಯ ಭೋಜ್ಯಗಳನ್ನು ತಯಾರಿಯ ಪೂರ್ವದಲ್ಲೇ ಮಹಾರಾಣೀಸಾಹೇಬಳನ್ನು ಕೇಳಿ ತಯಾರಿಸುತ್ತಿದ್ದರು. ಮಾಡಿದ ಅಡುಗೆಯಲ್ಲೂ ಅದಿಲ್ಲಾ ಇದಿಲ್ಲಾ ಎನ್ನುತ್ತಾ ಮಲೆದಾಡುವುದು ರಾಣಿಯ ಸ್ವಭಾವ. ಅಡುಗೆ ಅಜ್ಜಿಗೆ ಕೋಪ ಬಂದರೂ ಅದನ್ನು ತೋರಿಸಿಕೊಳ್ಳುವುದು ಸಾಧ್ಯವಿರಲಿಲ್ಲ.

ಹೀಗೇ ಒಂದು ದಿನ ಅಡುಗೆ ಸಿದ್ಧವಾಗಿತ್ತು. ಲಡ್ಡು, ಶ್ಯಾವಿಗೆ, ಕೋಸಂಬರಿ ನಾನಾ ಸೋಪಸ್ಕರಗಳು ಮೇಜವಾನಿಗೆ ಊಟದ ಮೇಜಿನಮೇಲೆ ಇಡಲ್ಪಟ್ಟಿದ್ದವು. ಅಡುಗೆ ಅಜ್ಜಿ ರಾಣಿಯನ್ನು ಊಟಕ್ಕೆ ಎಬ್ಬಿಸಿ ಕರೆತಂದಳು. ರಾಣಿ ಬಂದವಳೇ ಎಲ್ಲವನ್ನೂ ತೋರಿಸು ಎಂದಳು. ಮುಚ್ಚಳ ತೆಗೆದು ಬಿಸಿಬಿಸಿಯಾಗಿರುವ ಎಲ್ಲಾ ಪದಾರ್ಥಗಳನ್ನೂ ಅಡುಗೆಯಾಕೆ ತೋರಿಸಿದಳು. ಎಲ್ಲವನ್ನೂ ಕಣ್ತುಂಬಾ ನೋಡಿದ ರಾಣಿ ತನಗಿವತ್ತು ಜಿಂಕೆಯ ಮಾಂಸವನ್ನು ತಿನ್ನುವ ಆಸೆಯಾಗಿದೆ, ಜಿಂಕೆಮಾಂಸ ತರಿಸಿ ಅಡುಗೆ ಮಾಡು ಆಮೇಲೇ ನಾನು ಊಟಮಾಡುವುದು ಎಂದು ಹಠಮಾಡತೊಡಗಿದಾಗ ಅಡುಗೆ ಅಜ್ಜಿ ನಾಳೆ-ನಾಡಿದ್ದರಲ್ಲಿ ಅದನ್ನೇ ಮಾಡಿಕೊಡುತ್ತೇನೆ ಇವತ್ತು ಹೇಗಾದರೂ ದಯವಿಟ್ಟು ಸ್ವೀಕರಿಸಿ ಎಂದು ಅಂಗಲಾಚಿದಳು. ರಾಣಿ ಅರೆ ಮನಸ್ಸಿನಿಂದಲೇ ಊಟ ಪೂರೈಸಿದಳು. ಅಡುಗೆಯ ಅಜ್ಜಿ ದೂತರ ಮುಖೇನ ಮಹಾರಾಜರಿಗೆ ವಿಷಯ ತಿಳಿಸಿ ಹರಿಣದ ಮಾಂಸ ತರಿಸಿಕೊಡುವಂತೇ ಕೇಳಿಕೊಂಡಳು.

ಮಹಾರಾಜಾಧಿರಾಜನ ಸಭೆ ಮುಗಿದ ತರುವಾಯ ದೂತನಿಂದ ವಿಷಯ ತಿಳಿದು ರಾಜ ಅಂತಃಪುರಕ್ಕೈತಂದ. ಬಿಜಯಂಗೈದ ಮಹಾರಾಜನನ್ನು ರಾಣಿ ಆದರಿಸಲಿಲ್ಲ. ಆಕೆ ಮಲಗೇ ಇದ್ದಳು. ಕೊನೆಗೊಮ್ಮೆ ರಾಜ ಕರೆದಾಗ ಎದ್ದಳು. ರಾಜ ಕೇಳಿದ ಯಾಕೆ ಸರಿಯಾಗಿ ಊಟಮಾಡಲಿಲ್ಲವಂತೆ ? ಎಂದು. ತನಗೆ ಜಿಂಕೆಯ ಮಾಂಸದ ಬಯಕೆ ಇರುವುದನ್ನು ಆಕೆ ತಿಳಿಸಿ ತುರ್ತಾಗಿ ಅದರ ವ್ಯವಸ್ಥೆಯಾಗಬೇಕು ಎಂದಳು. ರಾಜ ಅರಮನೆಯ ಹಜಾರದೆಡೆಗೆ ನಡೆದುಬಂದ. ದೂತರ ಮುಖಾಂತರ ಅರಮನೆಯ ಬೇಟೆಗಾರನನ್ನು ಕರೆಸಿದ. ಬೇಟೆಗಾರನಿಗೆ ಹರಿಣವೊಂದನ್ನು ತರಿದು ಮಾಂಸವನ್ನು ತರುವಂತೇ ಆಜ್ಞಾಪಿಸಿದ. ರಾಜಾಜ್ಞೆ ಶಿರಸಾವಹಿಸಿದ ಬೇಟೆಗಾರ ಕಾಡಿಗೆ ತೆರಳಿದ. ಕಾಡಲ್ಲಿ ಅಲೆದೂ ಅಲೆದೂ ಬಹುದೂರ ಪ್ರಯಾಣಿಸುತ್ತಾ ಇದ್ದಾಗ ಸುಸ್ತಾಗಿ ನಿದ್ದೆ ಬರುವ ರೀತಿ ಆಯ್ತು. ನೆಲದಮೇಲೆ ಮಲಗಿದರೆ ಹುಲಿ-ಸಿಂಹಗಳೋ ಕರಡಿಗಳೋ ಬರಬಹುದಲ್ಲ. ಸುರಕ್ಷತೆಗಾಗಿ ಹತ್ತಿರದಲ್ಲೇ ಇದ್ದ ಪ್ರಾಣಿಗಳು ಏರಲಾರದ ಮರವೊಂದನ್ನೇರಿ ಅಗಲದ ಟೊಂಗೆಯಮೇಲೆ ತನ್ನನ್ನು ಹಗ್ಗದಿಂದ ಬೀಳದಂತೇ ಬಂಧಿಸಿಕೊಂಡು ನಿದ್ದೆ ಮಾಡಿದ.

ಸಮಯ ಮೀರಿ ಹೋಗುತ್ತಿತ್ತು. ರಾಜನ ಆಸ್ಥಾನಕ್ಕೆ ಬೇಗ ಮರಳಿ ಹೋಗಬೇಕಾಗಿತ್ತು. ಬೇಟೆ ಸಿಗದ್ದಕ್ಕೆ ಬೇಸರದಿಂದಲೇ ಎಚ್ಚರಗೊಂಡ ಬೇಡ ದೂರದ ಜಾಗವೊಂದರಲ್ಲಿ ಹರಿಣದ ಮರಿಯೊಂದು ಜಿಗಿಯುವುದನ್ನು ಕಂಡ. ಅಹಹಾ ಎಂತಹ ಸುಂದರ ಮರಿ. ಆ ಪುಟ್ಟ ಮರಿಯ ಜೊತೆ ತಾಯಿ ಹರಿಣವೂ ಇರಲೇಬೇಕೆಂದು ಮರವಿಳಿದು ಬೇಗನೇ ಹುಡುಕುತ್ತಿದ್ದ. ಹುಲ್ಲೆಯ ಮರಿ ಜಿಗಿಜಿಗಿದು ಹಾರುತ್ತಾ ಹಸಿರು ಹುಲ್ಲನ್ನು ಅಲ್ಪ ತಿನ್ನುತ್ತಾ ಆಟವಾಡುತ್ತಿತ್ತು. ಅನತಿ ದೂರದಲ್ಲಿ ಅಮ್ಮ ಜಿಂಕೆ ಮೇಯುತ್ತಿದ್ದುದನ್ನು ಕಂಡ ಬೇಡ ಅದರೆಡೆಗೆ ಬಾಣ ನೆಟ್ಟ. ಇನ್ನೇನು ಬಾಣಬಿಡಬೇಕು....ಅಷ್ಟರಲ್ಲಿ ಆ ಅಮ್ಮ ಜಿಂಕೆ ಬೇಡನೆಡೆಗೇ ನಡೆದು ಬಂತು. ಬೇಡ ಕ್ಷಣಕಾಲ ತನ್ನ ಕಣ್ಣುಗಳನ್ನೇ ನಂಬದಾದ. ಬೇಕಾಗಿದ್ದ ವಸ್ತು ನಿರಾಯಾಸವಾಗಿ ದೊರೆತ ಖುಷಿಯಲ್ಲಿ ಬಾಣವನ್ನು ತಡೆಹಿಡಿದ. ಮುಂದೆ ಬಂದ ಜಿಂಕೆ ಬೇಡನ ಮುಂದೆ ನಿಂತು ತನ್ನ ದಯನೀಯ ಸ್ಥಿತಿಯನ್ನು ಹೇಳಿಕೊಂಡಿತು.

" ಅಯ್ಯಾ ಅರಮನೆ ಬೇಟೆಗಾರನೇ, ದಯವಿಟ್ಟು ನನ್ನ ಮಾತು ಕೇಳು. ನನ್ನ ಪತಿರಾಯನಿಗೆ ಆರೋಗ್ಯ ಸರಿಯಿಲ್ಲ. ಆತ ಆಹಾರ ತಿನ್ನಲಾರದೇ ಬಳಲುತ್ತಿದ್ದಾನೆ. ದೂರದ ನಮ್ಮ ವಸತಿಯೆಡೆಯಲ್ಲಿ ಮಲಗಿದ್ದಾನೆ. ಆತನಿಗೆ ಔಷಧಿಯ ಹುಲ್ಲನ್ನು ತೆಗೆದುಕೊಂಡು ಹೋಗಿ ಕೊಟ್ಟು ಮರಳಿ ನಿನ್ನಲ್ಲಿಗೆ ಬರುತ್ತೇನೆ. ಅ ಮೇಲೆ ನೀನು ನನ್ನನ್ನು ವಧಿಸುವವನಾಗು. ನಾನು ವಚನಬ್ರಷ್ಟಳಾಗಲಾರೆ, ಕೊಟ್ಟ ಮಾತಿನ ಪ್ರಕಾರ ಮರಳಿ ನಿನಗೆ ಶರಣಾಗುತ್ತೇನೆ, ದಯಮಾಡಿ ಅಲ್ಲಿನ ತನಕ ನನಗೆ ಅವಕಾಶ ಕೊಡು " ಎಂದು ಪ್ರಾರ್ಥಿಸಿತು. ಕಟುಕನಾದ ಬೇಡನೂ ಚಣಕಾಲ ಆಲೋಚಿಸಿದ. ದೈವವೇ ತನಗೆ ಹರಿಣವನ್ನು ತೋರಿಸಿತ್ತು, ಅಂತಹ ದೈವವನ್ನೇ ನಂಬಿ, ಹರಿಣ ಮರಳಿಬರುತ್ತದೆ ಎಂಬ ಅನಿಸಿಕೆಯಿಂದ, ಸಾಯುವ ಮುನ್ನ ತನ್ನ ಪತಿಗಾಗಿ ಔಷಧವನ್ನು ಕೊಟ್ಟುಬರುವ ಅವಕಾಶವನ್ನು ನೀಡಬೇಕು ಎಂದು ನಿರ್ಧರಿಸಿ ಒಪ್ಪಿಗೆ ನೀಡಿದ. ಬೇಡನ ಅನುಮತಿ ಪಡೆದ ಜಿಂಕೆ ಆತನಿಗೆ ನಮಿಸಿ ತನ್ನ ಏನೂ ಅರಿಯದ ಪುಟ್ಟ ಮರಿಯೊಡನೆ ಪತಿಯೆಡೆಗೆ ತೆರಳಿತು.

ಬೇಗ ಬರುತ್ತೇನೆಂದಿದ್ದ ಮಡದಿ ತಡವಾಗಿ ಬಂದಿದ್ದು ಗಂಡು ಹರಿಣಕ್ಕೆ ಆಶ್ಚರ್ಯವಾಗಿತ್ತು! ಬಂದ ಮಡದಿಯ ಮುಖದಲ್ಲಿ ಎಂದಿನ ಹುರುಪಿನ ಕಳೆ ಇರಲಿಲ್ಲ. ಬಹುಶಃ ತನ್ನ ಅನಾರೋಗ್ಯದಿಂದ ಪತ್ನಿಗೆ ಬೇಜಾರಾಗಿರಬೇಕೆಂದು ಯೋಚಿಸಿತು ಗಂಡು ಜಿಂಕೆ. ಪತಿರಾಯನಿಗೆ ಅವಸರದಲ್ಲಿ ಔಷಧಯುಕ್ತ ಹುಲ್ಲನ್ನು ನೀಡಿ ತಾನು ತಡವಾಗಿ ಬಂದಿದ್ದಕ್ಕೆ ಕಾರಣ ತಿಳಿಸಿತು. ವಚನ ನೀಡಿದ ತಾನು, ಇನ್ನೂ ಬೆಳೆಯ ಬೇಕಾದ ಕಂದಮ್ಮನನ್ನೂ ಔಷಧದ ಹುಲ್ಲನ್ನೂ ತಲುಪಿಸಿ ಮರಳಿ ಹೋಗಲು ಬಂದಿರುವುದಾಗಿ ತಿಳಿಸಿತು. ಔಷಧಿಯ ಹುಲ್ಲನ್ನು ತಿಂದ ಪತಿರಾಯ ಪತ್ನಿಹುಲ್ಲೆಯೊಡನೆ ಮಾತಿಗಿಳಿದ. ನಮಗಿನ್ನೂ ಚಿಕ್ಕ ಮಗುವಿದೆ. ನಾನು ಹೋದರೆ ನಿಮಗೇನೂ ತೊಂದರೆಯಾಗಲಾರದು. ನೀನಾದರೋ ಮರಿಗೆ ಹಾಲೂಡಿಸಬೇಕಾಗುತ್ತದೆ. ನೀನು ಗತಿಸಿದರೆ ಮರಿಗೆ ಹಾಲು ಕೊಡುವವರಾರು ? ಹೇಗೂ ಶೀಕಿಗೆ ಬಿದ್ದವ ತಾನು. ಬೇಡನಿಗೆ ನೀನಿತ್ತ ವಚನ ಪೂರೈಕೆಗಾಗಿ ತಾನೇ ಅಲ್ಲಿಗೆ ಹೋಗಿ ತನನ್ನೇ ಅವನಿಗೆ ಅರ್ಪಿಸಿಕೊಳ್ಳುವುದಾಗಿ ಹೇಳಿತು ಗಂಡು ಹರಿಣ. ಹೆಣ್ಣು-ಗಂಡು ಜಿಂಕೆಗಳು ಮಾತನಾಡುತ್ತಿರುವ ವಿಷಯವನ್ನು ಆಲಿಸುತ್ತಿದ್ದ ಮರಿ ಜಿಂಕೆ ಅಪ್ಪ-ಅಮ್ಮರಲ್ಲಿ ಯಾರನ್ನೂ ಕಳೆದುಕೊಂಡು ಬದುಕಲು ನನಗಿಷ್ಟವಿಲ್ಲಾ ತಾನೇ ಅಲ್ಲಿಗೆ ಹೋಗುವುದಾಗಿ ಹೇಳಿತು. ವಿಷಯ ಇತ್ಯರ್ಥವಾಗದೇ ಆ ಇಡೀ ಹರಿಣ ಕುಟುಂಬ ಬೇಡನೆಡೆಗೆ ನಡೆದುಬಂತು.

ಬೇಡನಿಗೆ ಆಶ್ಚರ್ಯವೋ ಆಶ್ಚರ್ಯ! ತಾನು ಬಯಸಿದ್ದು ಒಂದೇ ಹರಿಣ. ಈಗ ದೊರೆಯುವುದು ಒಂದಕ್ಕಿಂತಾ ಹೆಚ್ಚು ! ದೂರದಿಂದಲೇ ನಗುತ್ತಿದ್ದ ಆ ಬೇಡ. ಹರಿಣಗಳು ಬೇಡನ ಹತ್ತಿರಕ್ಕೆ ನಡೆತಂದವು. ತಮ್ಮಲ್ಲಿ ಇತ್ಯರ್ಥವಾಗದ ವಿಷಯವನ್ನೂ ಮತ್ತು ಕೊಟ್ಟವಚನವನ್ನು ಪಾಲಿಸುವ ಧರ್ಮ ಸಮ್ಮತ ನಡೆಯನ್ನೂ ತಿಳಿಸಿ ತಾವು ಮರಳಿ ಬಂದುದಾಗಿ ಹೇಳಿದವು. ವಿಷಯ ತಿಳಿದ ಬೇಡನ ಮನಸ್ಸು ವಿಲವಿಲನೆ ಒದ್ದಾಡಿತು. ಅವರೊಳಗಿನ ಕುಟುಂಬದ ಆ ಪ್ರೀತಿಯನ್ನು ಅಗಲಿರಲಾರದ ಆ ಬದುಕನ್ನೂ ನೆನೆದು ವಧಿಸಲು ಬಳಸುವ ಬಾಣವನ್ನು ಪುನಃ ಅದರ ಸ್ವಸ್ಥಾನಕ್ಕೆ ಸೇರಿಸಿದ. ಹರಿಣಗಳಿಗೆ ಮಂಡಿಯೂರಿ ಕಣ್ಣೀರ್ಗರೆದು ಕೈಮುಗಿದ. ತಾನು ಉಪವಾಸವೇ ಇದ್ದರೂ ಚಿಂತೆಯಿಲ್ಲಾ ನಿಮ್ಮಂತಹ ಕುಟುಂಬವನ್ನು ನಾಶಮಾಡಲಾರೆ. ಇಂದಿನಿಂದ ನನಗಿದೊಂದು ಪಾಠ. ಇನ್ನು ಮೇಲೆ ನಾನು ಪ್ರಾಣಿಗಳನ್ನು ವಧಿಸಲಾರೆ ಎಂದು ತಿಳಿಸಿ ಅವುಗಳಿಂದ ಬೀಳ್ಕೊಂಡ.

ಬೇಡನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದ ಮಹಾರಾಜ, ಆತ ಬಂದ ಸುದ್ದಿ ತಲುಪಿ ಅರಮನೆಯ ಹಜಾರಕ್ಕೆ ಬಂದ. ಬಂದರಾಜನನ್ನು ಕಂಡು ಬೇಡ ಸಾಷ್ಟಾಂಗ ವಂದಿಸಿದ. ಬಿಲ್ಲು-ಬತ್ತಳಿಕೆಗಳನ್ನು ರಾಜನ ಪಾದಕ್ಕೆ ಅರ್ಪಿಸಿ ತಾನಿನ್ನು ಅರಮನೆ ಬೇಟೇಗಾರನ ಹುದ್ದೆಯಿಂದ ನಿವೃತ್ತಿ ಬಯಸಿದ್ದಾಗಿ ತಿಳಿಸಿದ. ಮತ್ತು ಜಿಂಕೆಯ ಮಾಂಸವನ್ನು ತರದಿದ್ದುದಕ್ಕೆ ಕಾರಣವನ್ನೂ ವಿವರಿಸಿದ. ಬೇಡನ ಆಂತರ್ಯದ ಬದಲಾವಣೆಯನ್ನು ಕಂಡು ಚಕಿತಗೊಂಡ ಮಹಾರಾಜ ಅವನಿಗೆ ನೂರು ವರಹಗಳನ್ನೂ ಹೊನ್ನಸರವನ್ನೂ ಕೊಟ್ಟು ಸತ್ಕರಿಸಿದ. ತನ್ನ ರಾಜ್ಯದಲ್ಲಿ ಇಂತಹ ಅಪ್ಪಟ ಹೃದಯ ವೈಶಾಲ್ಯತೆ ಇರುವ ವ್ಯಕ್ತಿಯನ್ನು ಕಂಡು ತಾನು ಬಹಳ ಸಂತುಷ್ಟನಾಗಿದ್ದೇನೆ ಮಾತ್ರವಲ್ಲಾ ಆ ನೆನಪಿನಲ್ಲಿ ಈ ದಿನದಿಂದಲೇ ಅರಮನೆಯಲ್ಲಿ ಮಾಂಸಾಹಾರವನ್ನು ನಿಷೇಧಿಸುವುದಾಗಿ ಘೋಷಿಸಿದ. ಅಂದಿನಿಂದ ರಾಣಿಯ ನಡವಳಿಕೆಯಲ್ಲೂ ಹಲವು ಮಾರ್ಪಾಟುಗಳಾದವು. ಕಟುಕ ಹೃದಯದ ಬೇಡನೊಬ್ಬ ದಯೆ, ಕರುಣೆ, ವಾತ್ಸಲ್ಯದ ಪಾಠವನ್ನು ಆ ಇಡೀ ಅರಮನೆಗೇ ಬೋಧಿಸಿದ್ದ!

ಮನುಷ್ಯರಾದ ನಾವು ನಮ್ಮ ಹೊಟ್ಟೆಗಾಗಿ ಹಲವು ಪ್ರಾಣಿಗಳನ್ನು ವಧಿಸುತ್ತೇವೆ. ಹರಣಮಾಡುವ ಜೀವಗಳ ಸಂಖ್ಯೆಗೆ ಲೆಕ್ಕವಿಲ್ಲ! ಆಹಾರಕ್ಕಾಗಿಯೋ, ಚರ್ಮದ ಉಡುಗೆ-ತೊಡುಗೆಗಳಿಗಾಗಿಯೋ ಪ್ರಾಣಿಗಳ ವಧೆ ನಡೆದೇ ಇದೆ. ನಮಗೆಲ್ಲಾ ಕುಟುಂಬ ವ್ಯವಸ್ಥೆ ಇರುವಂತೇ ಅವುಗಳಿಗೂ ಇರಬಹುದಲ್ಲಾ ಎಂಬುದರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ತರಕಾರಿಗಳಿಗೆ/ ಆಹಾರ ಧಾನ್ಯಗಳಿಗೆ ಜೀವನವೇ ಅಷ್ಟು! ಅವುಗಳಿಗೆ ಆ ಮಟ್ಟದ ಮೆದುಳೆಂಬ ಅಂಗವನ್ನು ಪರಮಾತ್ಮ ನೀಡಿಲ್ಲ. ಹೀಗಾಗಿ ಅವುಗಳ ಸೇವನೆ ಯಾವುದೇ ವಧೆಯಲ್ಲ. ಆದರೂ ಧಾನ್ಯಗಳೂ ಬೀಜಗಳೂ ಹಾಗೇ ಇರುತ್ತಿದ್ದರೆ ಇನ್ನೊಂದು ಹುಟ್ಟಿಗೆ ಕಾರಣವಾಗುತ್ತವಾದ್ದರಿಂದ ಅವುಗಳನ್ನು ಸಂಸ್ಕರಿಸಿ ಭುಂಜಿಸುವಾಗ ಭಾವುಕರು ಅನ್ನಬ್ರಹ್ಮನಿಗೆ ಕೈಮುಗಿದು ಬದುಕುವುದಕ್ಕಾಗಿ ಮಾತ್ರ ನಿನ್ನನ್ನು ಸೇವಿಸಬೇಕಾಗಿ ಬಂದುದಾಗಿ ಪ್ರಾರ್ಥಿಸುತ್ತಾರೆ. ಇಂದಿನ ನವಜನಾಂಗ ತಿನ್ನುವುದಕ್ಕಾಗೇ ಬದುಕುತ್ತದೆ ಎಂಬುದು ವಿಪರ್ಯಾಸ!

ಉತ್ತಮ ಸಂಸ್ಕಾರಗಳು ಮನುಷ್ಯನನ್ನು ದೈವತ್ವದೆಡೆಗೆ ಕೊಂಡೊಯ್ಯುತ್ತವೆ. ಅಂತಹ ಉತ್ತಮ ಸಂಸ್ಕಾರಗಳು ನಮಗೊದಗಬೇಕಾದರೆ ನಾವು ಅವುಗಳನ್ನು ನಮ್ಮದಾಗಿಸಿಕೊಳ್ಳಬೇಕಾದರೆ ಮಾಂಸಾಹಾರವನ್ನು ತ್ಯಜಿಸಬೇಕಾಗುತ್ತದೆ. ನನ್ನ ಹಲವು ಲೇಖನಗಳನ್ನು ಓದುವ ಅನೇಕ ’ಟ್ಯಾಬ್ಲಾಯ್ಡ್ ಕಲಾವಿದರು’ ಗುಂಪು ಗುಂಪಾಗಿ ಬಂದು ವಿಷಕಾರುವ ಬ್ರಾಹ್ಮಣ, ಕೆಟ್ಟ ಬ್ರಾಹ್ಮಣರ ಕುಲ ಎಂದೆಲ್ಲಾ ಆಡುವುದನ್ನು ಅವಲೋಕಿಸಿದ್ದೇನೆ. ಅದು ಅವರ ತಪ್ಪಲ್ಲ. ಅದು ಅವರ ಅಜ್ಞಾನ. ಅವರ ಜೀವಿತದಲ್ಲಿ ಮೊಲಕ್ಕೆ ಮೂರೇ ಕಾಲು ಎಂಬುದನ್ನು ಅವರು ನಂಬುತ್ತಾರೆ, ಅದಷ್ಟೇ ಅವರಿಗೆ ಕಾಣಸಿಗುತ್ತದೆ. ಮೊಲದ ಓಟದ ಪರಿಮಿತಿಗೆ ಇವರ ಓಟ ಹೋಗಲಾಗದುದರಿಂದ ಹಾರುವ ಮೊಲಕ್ಕಿರುವುದು ಮೂರೇ ಕಾಲು ಎಂದು ದೂರದಲ್ಲಿರುವ ಅವರಿಗೆ ಭಾಸವಾಗುವುದು ಸತ್ಯ. ಮಾಂಸಾಹಾರ ಜನ್ಯ ಅಹಂಕಾರ, ತಾಮಸ ಬುದ್ಧಿಯಿಂದ ಅವರ ಸಂಸ್ಕಾರಗಳು ಆ ಮಟ್ಟದಲ್ಲೇ ಆಡುತ್ತಿರುತ್ತವೆ. ತಪ್ಪಿದ್ದರೂ ಯಾವತ್ತೂ ಯಾರಲ್ಲೂ ಕ್ಷಮೆ ಬೇಡುವ ಪರಿಪಾಟ ಅವರದ್ದಾಗುವುದಿಲ್ಲ. " ಬ್ರಾಹ್ಮಣರು ಜರಿದರು, ಬ್ರಾಹ್ಮಣರು ನಮ್ಮನ್ನು ಹತ್ತಿಕ್ಕಿದರು, ಬ್ರಾಹ್ಮಣರು ತಮಗೆ ಸಹಪಂಕ್ತಿ ಕೊಡುವುದಿಲ್ಲ. ಬ್ರಾಹ್ಮಣರು ತಮ್ಮನ್ನು ಕೀಳಾಗಿ ಕಾಣುತ್ತಾರೆ " ಎಂಬ ಘೋಷವಾಕ್ಯ ಎಲ್ಲೆಲ್ಲೂ ರಾರಾಜಿಸುತ್ತದೆ.

ನನ್ನ ದೇಶಬಾಂಧವರೇ,ನಿಮಗಿದೋ ನನ್ನ ಆತ್ಮೀಯ ಕರೆ: ಬನ್ನಿ ಎಲ್ಲರೂ ಬ್ರಾಹ್ಮಣರಾಗಿ. ನಾವು ’ವೇದಸುಧೆ’ಯಲ್ಲಿ ಅದನ್ನೇ ಹೇಳುತ್ತಲೇ ಬಂದಿದ್ದೇವೆ. ಮಾಂಸಾಹಾರ ವರ್ಜಿಸಿ;ಶಾಕಾಹಾರಿಗಳಾಗಿ. ಉತ್ತಮ ಸಂಸ್ಕಾರಗಳು ನಿಮ್ಮದಾಗಲಿ. ಭಾರತೀಯ ಮೂಲದ ಉತ್ತಮ ಗ್ರಂಥಗಳು, ಮಹಾಕಾವ್ಯಗಳೂ, ವೇದ-ವೇದಾಂಗಗಳೂ ನಿಮ್ಮ ನಿಲುವಿಗೆ ದೊರೆಯಲಿ ಎಂದು ಆಹ್ವಾನಿಸುತ್ತಿದ್ದೇನೆ. ಬರಿದೇ ಜರಿಯುವುದರಲ್ಲಿ ಹುರುಳಿರುವುದಿಲ್ಲ. ಯಾರೋ ಮೊನ್ನೆ ಅನಾನಿಮಸ್ಸೆಂಬ ಹೆಸರಲ್ಲಿ ತಮಗೆ ಮೇಲ್ಮಟ್ಟಕ್ಕೆ ಬರಲು ಅವಕಾಶ ಕೊಡುತ್ತಿಲ್ಲಾ ಎಂದು ಆಕ್ರೋಶ ತೋಡಿಕೊಂಡಿದ್ದಾರೆ. ನೋಡೀ, ಎಲ್ಲರಿಗೂ ಆ ಅವಕಾಶಗಳು ಹಿಂದೂ ಇದ್ದವು, ಈಗಲೂ ಇವೆ, ಮುಂದೂ ಇರುತ್ತವೆ: ಇದಕ್ಕೆ ಉತ್ತಮ ಉದಾಹರಣೆ ಮಹರ್ಷಿ ಮಹೇಶ್ ಯೋಗಿಗಳು. ಅವರು ಹುಟ್ಟಾ ಬ್ರಾಹ್ಮಣರಲ್ಲ! ಆದರೆ ಬ್ರಾಹ್ಮಣ್ಯವನ್ನು ಅನುಸರಿಸಿದರು; ಬ್ರಾಹ್ಮಣರಾದರು!

ಮೊನ್ನೆ ಉಡುಪಿಯ ಹತ್ತಿರದ ಸೇಂಟ್ ಮೇರೀಸ್ ದ್ವೀಪದಲ್ಲಿ ವಿದೇಶೀಯರನ್ನು ಸ್ವಾಗತಿಸಿ ಅರೆಬೆತ್ತಲೆ ಕುಣಿತವನ್ನು ನಡೆಸಿದ್ದಾರೆ. ನಿನ್ನೆ ಮಂತ್ರಿಯೊಬ್ಬರು ವಿಧಾನಸಭೆಯಲ್ಲಿ ಕಾಮಕೇಳಿಯ ದೃಶ್ಯವಿಹಾರಕ್ಕೆ ನಾಂದಿ ಹಾಡಿದ್ದಾರೆ! ಇದೆಲ್ಲಾ ನಡೆಯುತ್ತಿರುವುದು ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಪ್ರಜಾಸತ್ತೆಯ ಅನಿವಾರ್ಯ ಅಂಗವಾದ ಚುನಾವಣೆಗಳಲ್ಲಿ ಬಹುತೇಕ ರೌಡಿಗಳೇ ಸ್ಪರ್ಧಿಸುತ್ತಾರೆ! ಹಿಂದೊಂದು ಕಾಲಕ್ಕೆ ಆಳುವ ರಾಜರು ದೈವತ್ವವನ್ನು ಪಡೆದಿರುತ್ತಿದ್ದರು. ಪ್ರಜೆಗಳನ್ನು ದೇವರೆಂದು ರಾಜರೂ ರಾಜರನ್ನು ದೇವರೆಂದು ಪ್ರಜೆಗಳೂ ಪೂಜನೀಯ ಭಾವದಿಂದ ಕಾಣುತ್ತಿದ್ದರು. ಕರ್ನಾಟಕದ ಎಷ್ಟೊಂದು ಮನೆಗಳಲ್ಲಿ ಮೈಸೂರು ಮಹಾರಾಜರ ಫೊಟೋ ಇಲ್ಲ ? ಮೈಸೂರಿನ ಆಡಳಿತವಿದ್ದ ಪ್ರದೇಶಗಳಲ್ಲಿ ದಸರಾ ಬೊಂಬೆಗಳಲ್ಲಿ ಪ್ರಮುಖವಾಗಿ ಕಾಣುವುದು ರಾಜ-ರಾಣಿಯರನ್ನು ! ರಾಜ-ರಾಣಿಯರನ್ನು ಜನ ಆದರದಿಂದ ಪೂಜಿಸುವ ಮಟ್ಟಕ್ಕೆ ಏರಿಸಿದ್ದರು ಎಂದಮೇಲೆ ರಾಜ-ರಾಣಿಯ ಔನ್ನತ್ಯ ಎಂತಹದಿದ್ದೀತು? ಬ್ರಿಟಿಷರು ಇದ್ದಾಗಲೂ ಇಲ್ಲಿನ ನೈತಿಕ ಮೌಲ್ಯಗಳಿಗೆ ಅವರು ಭಾರೀ ಗೌರವ ಕೊಟ್ಟಿದ್ದರು. ಇದನ್ನು ಸ್ವತಃ ನನ್ನಜ್ಜ ಹೇಳಿದ್ದರ ಜೊತೆಗೆ ಮೊನ್ನೆ ಬೆಂಗಳೂರಿಗೆ ಬಂದಿದ್ದ, ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಚೆನ್ನೈ ಮೂಲದ ಕಲ್ಯಾಣಮ್ ಕೂಡ ಹೇಳಿದ್ದಾರೆ.

ಬರಿದೇ ಬ್ಲೈಂಡ್ ಫಾಲೋವರ್ಸ್ ಆಗಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸಬೇಡಿ: ಅದು ನಮ್ಮ ಉದ್ಧಾರಕ್ಕಿರುವುದಲ್ಲ ಬದಲಿಗೆ ವಿನಾಶಕ್ಕೆಳಸುವುದು. ಭಾರತೀಯ ಮೂಲ ಗ್ರಂಥಗಳ ಬಗ್ಗೆ ಮಿತ್ರ ಶ್ರೀವತ್ಸ ಜೋಶಿ ಕಳೆದ ಭಾನುವಾರ ’ವಿಜಯ ಕರ್ನಾಟಕ’ದಲ್ಲಿ ಅವರ ’ಪರಾಗಸ್ಪರ್ಶ’ ಅಂಕಣದಲ್ಲಿ ’ಅಗ್ನಿಮೀಳೇ ಪುರೋಹಿತಂ’ ಎಂಬ ಲೇಖನ ಬರೆದಿದ್ದನ್ನು ಅನೇಕರು ಓದಿರಬಹುದಲ್ಲ ? ಮೂಲವನ್ನೇ ಗೌರವಿಸದೇ ಕಣ್ಣಿಗೆ ಹಳದಿಬಣ್ಣದ ಪಟ್ಟಿಕಟ್ಟಿಕೊಂಡು ಎಲ್ಲವೂ ಹಳದಿಯಾಗಿ ಕಾಣುತ್ತಿದೆ-ಏನೂ ಹುರುಳಿಲ್ಲ ಎಂಬ ತೀರ್ಮಾನಕ್ಕೆ ಬರಬೇಡಿ. ಹೆಂಡವನ್ನು ರುಚಿ ನೋಡಲೆಂದು ಮೊದಲು ಕುಡಿಯುತ್ತಾರಂತೆ, ಆಮೇಲೆ ಒಳಗೆ ಸೇರಿದ ಹೆಂಡ ಹೊರಗಿನ ಹೆಂಡವನ್ನು ಬಾ ಎನ್ನುತ್ತದಂತೆ, ಆಮೇಲೊಂದು ದಿನ ಅದೇ ಹೆಂಡ ಹೊರಗೆ ನಿಂತು ಬಾ ಎಂದು ಕುಡುಕನನ್ನು ಹೊಂಡದಲ್ಲಿ ಮುಚ್ಚಿಸುತ್ತದಂತೆ! ಇವತ್ತಿನ ಮನೆಗಳಲ್ಲಿ ಟೆರೇಸ್ ಗಾರ್ಡನ್ ಮಾಡಿ ಕುಳಿತು ಹೆಂಡದ ಪಾರ್ಟಿಗಳನ್ನು ನಾವು ಮಾಡುವುದಕ್ಕೆ ಸನ್ನದ್ಧರಾಗುತ್ತಿದ್ದೇವೆ. ಯಾವುದೆಲ್ಲಾ ನಮಗೆ ಬೇಡವೋ ಅವಷ್ಟೂ ಬಂದಿವೆ, ಬರುತ್ತಿವೆ, ಬರುತ್ತವೆ. ಅವುಗಳನ್ನು ತರಲು ಆ ಯಾ ಸಂಸ್ಕೃತಿಗೆ ಇದೀಗಾಗಲೇ ಮನಸೋತ ವಿಟಪುರುಷರು ರಾಯಭಾರಿಗಳಾಗಿದ್ದಾರೆ! ಮಹಾತ್ಮರನ್ನೂ, ಪ್ರಸಿದ್ಧ ಕ್ಷೇತ್ರಗಳನ್ನೂ ಕುಡಿದ ಅಮಲಿನಲ್ಲಿ ನಾವು ಚಿತ್ರಿಸ ಹೊರಡುತ್ತೇವೆ; ನಮ್ಮ ಮೇಲೇ ನಾವು ಚಪ್ಪಡಿ ಎಳೆದುಕೊಳ್ಳುತ್ತಿದ್ದೇವೆ. ಅರಿತೋ ಅರಿಯದೆಯೋ ಕುರಿಮೆಂದೆಯಲ್ಲಿರುವ ಇನ್ನೊಂದು ಕುರಿಯಂತೇ ಎಡಪಂಥದ ಬುದ್ಧಿಜೀವಿಗಳು ಎನಿಸಿಕೊಳ್ಳುವುದಕ್ಕೆ ಯುವ ಜನಾಂಗ ಇಷ್ಟಪಡುತ್ತದೆ.

ಯಾವ ನೆಲದಲ್ಲಿ ಸಂತರು, ಹರಿದಾಸರು ಗೋಪಾಲಬುಟ್ಟಿಯನ್ನೂ ಹರಿದೀಕ್ಷೆಯನ್ನೂ ಪಡೆದರೋ ಅದೇ ನೆಲದಲ್ಲಿ ’ಬಾಟಲಿ’ಯನ್ನೂ ’ಬುದ್ಧಿಜೀವಿಚೀಲ’ವನ್ನೂ ದೀಕ್ಷೆಯಾಗಿ ನಾವಿಂದು ಪಡೆಯಹೊರಟಿದ್ದೇವೆ! ಹಿಂದೆ ಇದ್ದವರಿಗೆ ಆಗಿಹೋದವರಿಗೆ ಬುದ್ಧಿ ಇರಲಿಲ್ಲಾ ಆವರೆಲ್ಲಾ ಮಂಕುದಿಣ್ಣೆಗಳೆಂದು ಅವರೆಲ್ಲರುಗಳ ಮೇಲೆ ಗೂಬೆ ಕೂರಿಸುತ್ತಾ ಲೋಕೋಪಕಾರಕ್ಕಾಗಿ ನಮ್ಮ ಜನನವಾಗಿದೆ ಎಂದೇ ಭಾವಿಸುತ್ತೇವೆ; ಹಾಗೇ ಅಹಂಕಾರದಿಂದ ಮೆರೆಯತೊಡಗುತ್ತೇವೆ. ’ಅಗ್ನಿಮೀಳೇ ಪುರೋಹಿತಂ’ ಎಂಬುದರ ಅರ್ಥಕ್ಕೆ ಅನರ್ಥಹಚ್ಚಿ ಓಹೋ ಪುರೋಹಿತರು ತಮಗೆ ಮಾತ್ರ ಅಗ್ನಿ ಎಂದು ಹೇಳುತ್ತಾರೆ ಎಂದುಕೊಳ್ಳುತ್ತೇವೆ; ಸಂಸ್ಕೃತಿಯ ಆಕರವಾದ ತಾಯಿ ಸಂಸ್ಕೃತಕ್ಕೆ ’ಸತ್ತ ಭಾಷೆ’ ಎಂಬ ಬಿರುದು ಕೊಟ್ಟಿದ್ದೇವೆ. ಒಬ್ಬ ಕುಣಿದ ಎಂದು ಇನ್ನೊಬ್ಬ ಕುಣಿದ, ಇನ್ನೊಬ್ಬ ಕುಣಿದಾ ಎಂದು ಮತ್ತೊಬ್ಬ ಕುಣಿದ ....ಹೀಗೇ ಬ್ರಾಹ್ಮಣರು ನಮ್ಮನ್ನು ತುಳಿದರು ಎನ್ನುತ್ತಾ ಹೊರಗೆ ತೋರಗೊಡದೇ ಬಚ್ಚಿಟ್ಟ ವಿಷಗಳಿಂದ ಬುಸುಗುಟ್ಟುವ ಕಾಳಿಂಗಗಳಾಗಿದ್ದೇವೆ. ಭಾರತೀಯ ಸಂಸ್ಕೃತಿಯನ್ನು ಇನ್ನಾದರೂ ಅರಿಯಲು ನೀವೆಲ್ಲಾ ಮೇಲಿನ ಕಥೆಯ ಬೇಡನಲ್ಲಾದ ಬದಲಾವಣೆಯನ್ನು ತಂದುಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ; ಅದನ್ನೇ ಸ್ವಾಗತಿಸುತ್ತೇನೆ.


[ಈಗ ಸಮಷ್ಟಿಯಲ್ಲಿನ ನಮ್ಮ ಎಂಬುದನ್ನು ಇಲ್ಲಿಗೆ ನಿಲ್ಲಿಸುತ್ತಾ ] ಬ್ರಾಹ್ಮಣರೆನಿಸಿದ ನಮ್ಮ ಬಗ್ಗೆ :

ಇನ್ನು ಜಾತಿಯಿಂದಲೂ ನೀತಿಯಿಂದಲೂ ವಸುಧೈವ ಕುಟುಂಬಕಮ್ ಎಂಬುದನ್ನು ನಂಬಿ, ಕೆಲವು ಆದರ್ಶಗಳನ್ನು ಆತು, ಬೈಸಿಕೊಳ್ಳುವ ಬ್ರಾಹ್ಮಣರಾದರೂ ಸಮಸ್ತರಿಗೂ ಒಳಿತಾಗಲಿ ಎಂದೇ ನಾವು ಸದಾ ಹಾರೈಸಿದ್ದೇವೆ; ಹಾರೈಸುತ್ತಿದ್ದೇವೆ; ಹಾರೈಸುತ್ತೇವೆ:

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ ದುಃಖಭಾಗ್ ಭವೇತ್ ||

|| ಸರ್ವೇ ಜನಾಃ ಸುಖಿನೋ ಭವಂತು ||

Monday, February 6, 2012

ನಾನರಿಯದೇ ನಿನ್ನ


ನಾನರಿಯದೇ ನಿನ್ನ

ನಾನರಿಯದೇ ನಿನ್ನ ನೆನೆಯಿತದೋ ನನ್ನ ಮನ
ಅನವರತ ಕನವರಿಸುತಾ |
ತಾನು ತನ್ನದು ಎಂಬ ಮೋಹ-ದುರಭಿಮಾನ
ಕೆನೆಯಿತದೋ ಬರಸೆಳೆಯುತಾ || ಪ ||

ಹೀನ ಬುದ್ಧಿಯಲೊಮ್ಮೆ ನಾನುಲಿದೆ ಬಾಲಿಶವ
ಹಾನಿ ಲೆಕ್ಕವ ಗಣಿಸುತಾ |
ಕಾನ ಗಿರಿಯಲಿ ನಿಂದು ತಪಗೈದ ಯೋಗಿವರ
’ನಾನು’ ಎಂಬುದ ಕಳೆಯುತಾ || ೧ ||

ಮಾನವೇನ್ ಪ್ರಾಣವೇನ್ ಸಕಲ ನಿನಗರ್ಪಣವು
ಧೇನಿಸುವೆ ಸಾಲಂಕೃತಾ |
ಗಾನಮಾಡುವೆ ಭಜಿಸಿ ನಾಮದಷ್ಟೋತ್ತರವ
ಪಾನಮಾಡುತ ಸಂತತಾ || ೨ ||

ಸ್ನಾನಮಾಡುವೆನಲ್ಲಿ ಸ್ಫಟಿಕಶುಭ್ರತೀರ್ಥ
ಧ್ಯಾನದಲಿ ಕುಳಿತುಕೊಳುತಾ |
ದಾನ-ದರುಶನ ನೀಡು ಶ್ರೀಸ್ವಾಮಿ ಶ್ರೀಧರನೆ
ಆನಂದಘನನಾಗುತಾ || ೩ ||

Thursday, February 2, 2012

ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !


ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !

[ಮುಂದುವರಿದು ಓದಿ ಮುಗಿಸೋಣವೇ ?....]

ಬಸವನ ಕೊಟ್ಗೆ ಬೀಜದ ಮರ ಎಂಬ ಮರವೊಂದು ಜಮೀನಿನ ಮನೆಯ ಹತ್ತಿರವೇ ಇತ್ತು. ಅದರ ಕಾಯಿಗಳು ಒಂಥರಾ ಅಡ್ಡ ವಾಸನೆಯುಳ್ಳವು. ಅದರ ಹೊರಕವಚ ಒಡೆದು ತೆಗೆದಾಗ ಒಳಗೆ ಬಾದಾಮಿಯಂತಹ ಬೀಜ-ಎಂತಹ ರುಚಿ! ಅಂತಹ ನಾಕಾರು ಕಾಯಿಗಳು ಸಿಕ್ಕರೆ ನಮ್ಮ ಪುಣ್ಯ. ಎತ್ತರದ ಮರದಲ್ಲಿ ತೂಗಾಡುವ ಕಾಯಿಗಳು ಗಾಳಿಗೇ ಬೀಳಬೇಕೇ ವಿನಃ ನಾವು ಬೀಸಿ ಎಸೆದ ಕಲ್ಲುಗಳು ತಾಗುತ್ತಲೇ ಇರಲಿಲ್ಲ. ಆದರೂ ಗಾಳಿಬೀಸಿ ಬೀಜದ ಉದುರುವಿಕೆಗಾಗಿ ಗಂಟೆಗಟ್ಟಲೆ ನಾವು ಕಾದು ಕೂತಿರುತ್ತಿದ್ದೆವು. ಮರದ ಪಕ್ಕದಲ್ಲೇ ಇನ್ನೊಂದೆರಡು ಚಿಕ್ಕಮರಗಳು. ಮರಕೋತಿ ಆಟಕ್ಕೆ ಕೋತಿಗಳೇ ಆಗಿದ್ದ ನಮಗೆ ಹೇಳಿಮಾಡಿಸಿದ್ದ ಜಾಗ ! ಅಲ್ಲೇ ಕೆಲವೊಮ್ಮೆ ಅಡಗಿಕೊಳ್ಳುವ ಆಟ, ಕಿವರ್ ಬಿಟ್ ಕಿವರ್ಯಾರು ?-ಆಟ ಎಲ್ಲಾ ನಡೆಯುತ್ತಿತ್ತು.

ಕಾಡಿನ ತುಂಬಾ ಎಲ್ಲೇ ಓಡಾಡಿದರೂ ಒಂದಿಲ್ಲೊಂದು ಕಾಡ ಮರದ ಘಮ ಮೂಡಿಗೆ ಬಡಿಯುತ್ತಿತ್ತು. ಅದು ಇಂತಿಂಥದ್ದೇ ಎಂದು ಗುರ್ತು ಹಿಡಿಯಲಾಗದಿದ್ದರೂ ಕೆಲವು ಔಷಧೀಯ ಮೂಲಿಕೆಗಳೂ ಅಂತಹ ಮರಗಳಲ್ಲಿರುತ್ತಿದ್ದವು. ಕೆಲವೊಮ್ಮೆ ಹಾದುಹೋಗುವಾಗ ಇಂದು ನಾವು ಉಪಯೋಗಿಸುವ ವಿಕ್ಸ್ ಪರಿಮಳ ಬರುತ್ತಿತ್ತು. ಇನ್ನೂ ಕೆಲವೊಮ್ಮೆ ಮಸಾಲೆಗೆ ನಾವು ಬಳಸುವ ದಾಲ್ಚಿನಿ ಎಲೆಯ ಸುಗಂಧ! ನಡುನಡುವೆ " ಅದೋ ಅಲ್ನೋಡು ಹುಲಿ ಹೆಜ್ಜೆ " ಎಂದು ಮಾವನ ಮಕ್ಕಳು ತೋರಿಸುತ್ತಿದ್ದರು. ಹುಲಿಯ ಹೆಜ್ಜೆ ಗುರುತು ಕಂಡ ನಮಗೆ ಒಳಗೊಳಗೇ ನಡುಕ! ಆದರೂ ಹುಲಿಯನ್ನು ಎಲ್ಲಾದರೂ ಜೀವಂತ ಕಾಣುವ ತವಕ!-- ಈ ಎರಡೂ ಭಾವನೆಗಳ ತಾಕಲಾಟದಲ್ಲಿ ಒಮ್ಮೊಮ್ಮೆ ನಡುಕ ಜಾಸ್ತಿಯಾದ್ರೆ ಇನ್ನೊಮ್ಮೊಮ್ಮೆ ತವಕ ಜಾಸ್ತಿ ! ಹುಲಿಗಳ ಇರುವಿಕೆ ಮತ್ತು ಓಡಾಟವಂತೂ ಖಾತ್ರಿಯಾಗಿತ್ತು. ಆದರೆ ಅಂದೆಲ್ಲಾ ಪ್ರಾಣಿಗಳು ಹಾಗೆ ಏಕಾಏಕಿ ಮನುಷ್ಯರ ವಸಾಹತುಗಳಿಗೆ ಹಗಲು ಹೊತ್ತು ಭೇಟಿ ನೀಡುತ್ತಿರಲಿಲ್ಲ. ಬೆಳಗಿನ ೫ ಗಂಟೆಯೊಳಗೆ ಅವುಗಳ ಓಡಾಟ ಮುಗಿದು ಅವು ಕಾಡನ್ನೋ ಕಾಡೊಳಗಿನ ಗವಿಗಳನ್ನೋ ಸೇರಿಬಿಡುತ್ತಿದ್ದವು. ಅವು ಹೊರಬರುವುದೇ ರಾತ್ರಿ ಹೊತ್ತಿನಲ್ಲಿ; ನಮಗೆ ನಡುಕ ಜೋರಾಗುವುದೂ ಆದೇ ಕತ್ತಲಲ್ಲಿ.

ಒಮ್ಮೆ ನಾವು ಜಮೀನಿನಲ್ಲಿರುವ ರಾತ್ರಿ, ಹುಲಿಯೊಂದು ಭಯಂಕರವಾಗಿ ಆರ್ಭಟಿಸಿತ್ತು. ಹಾಂಕೂಂ ಹಾಂಕೂಂ ಹಾಂಕೂಂ......ಸದ್ದಿಗೆ ನಮಗೆಲ್ಲಾ ಚಳಿಯಲ್ಲೂ ಬೆವರು ಹರಿಯುತ್ತಿತ್ತು, ಉಚ್ಚೆಗೆ ಅವಸರವಾದರೂ ಬಚ್ಚಲು ಹೊರಗೆ ಇದ್ದಿದ್ದರಿಂದ ಹೋಗಲು ಭಯವಾಗುತ್ತಿತ್ತು. ಇನ್ನು ಹೊರಗಡೆ ಜಮೀನಿನ ಜಾಗದಲ್ಲಿ ಎಲ್ಲಾದರೂ ಉಚ್ಚೆಗೆ ಹೋಗೋಣ ಎಂದರೆ ಅಲ್ಲೇ ಎಲ್ಲಾದರೂ ಹುಲಿ ಕೂತಿದ್ದರೆ ಎಂಬ ಅನಿಸಿಕೆ ಬೇರೆ. ಯಾರಲ್ಲೂ ಹೇಳಿಕೊಳ್ಳಲಾರೆವು, ಒತ್ತಡ ತಾಳಿಕೊಳ್ಳಲಾರೆವು. ಹಾಗೂ ಇದ್ದಬದ್ದ ದೇವರನ್ನೆಲ್ಲಾ ನೆನೆಯುತ್ತಾ ಚಾದರವನ್ನು ಮುಸುಕುಹಾಕಿಕೊಂಡು ಮಲಗಿ ಗಂಟೆಗಟ್ಟಲೆ ಕಳೆದು ನಿಧಾನವಾಗಿ ಮಾವನ ಮಕ್ಕಳನ್ನು ಕರೆದು ಎಬ್ಬಿಸಿಕೊಂಡು ಬಚ್ಚಲಿಗೆ ಹೋಗಿದ್ದೆವು. ಬಚ್ಚಲಿಗೆ ಹೋಗುವಾಗ ಕೈಕಾಲು ತರತರ ತರತರ. ಮತ್ತೆ ಮನೆಯೊಳಗೆ ಬಂದಮೇಲೇ ಬದುಕುವುದು ಗ್ಯಾರಂಟಿ ಎಂದು ಅಂದುಕೊಂಡಿದ್ದು! [ಹಗಲು ಹೊತ್ತಾದರೆ ನಾವು ಬಿಡುತ್ತಿರಲಿಲ್ಲ ಓಹೊಹೊ ಹಾಗೇನೂ ತಿಳೀಬೇಡಿ , ಕತ್ತಲೆಯಲ್ಲಿ ಏನೋ ಪಾಪ ಅಂತಾ ಸುಮ್ನಿದ್ದೆವಪ್ಪ!] ಮಾರನೇ ಬೆಳಿಗ್ಗೆ ಪಕ್ಕದ ಮರಾಠಿ ಕೇರಿಯಿಂದ ಬಂದ ಸುದ್ದಿ ಆಘಾತಕಾರಿಯಾಗಿತ್ತು. ಅಲ್ಲೊಂದು ಮನೆಯ ಬಾಗಿಲಿರದ ತಟ್ಟಿಯ ಕೊಟ್ಟಿಗೆಗೆ ನುಗ್ಗಿದ್ದ ಹುಲಿ ಕರುವೊಂದನ್ನು ಮುರಿದು ಎಳೆದುಕೊಂಡು ಹೋಗಿತ್ತು! ಪಾಪದ ಜೀವವೊಂದರ ಹರಣವಾಗಿತ್ತು- ಅದು ಇನ್ನೊಂದು ರಕ್ಕಸ ಜೀವಕ್ಕೆ ಆಹಾರವಾಗಿತ್ತು.

ಒಂದು ಬೆಳಿಗ್ಗೆ ಅತ್ತೆ ಘಟನೆಯೊಂದನ್ನು ಹೇಳಿದ್ದಳು. ಬೆಳಗಿನ ಆರುಗಂಟೆಗೆ ಎಂದಿನಂತೇ ತಣ್ಣಗಿನ ವಾತಾವರಣ. ಇನ್ನೇನು ಬೆಳಕು ಪೂರ್ತಿ ಹರಿದಿಲ್ಲ. ಅಂತಹ ಸಮಯದಲ್ಲಿ ಮನೆಗೆ ಕುಡಿಯುವ ನೀರು ತರುವ ಸಲುವಾಗಿ ಜಮೀನಿನ ಕೆಳಭಾಗದಲ್ಲಿದ್ದ ಬಾವಿಗೆ ಹೋಗಿದ್ದಳು. ಹೋದವಳೇ ಪುಸಕ್ಕನೆ ಬಿಂದಿಗೆಗೆ ಹಗ್ಗ ಕಟ್ಟಿ ಬಾವಿಗೆ ಬಿಟ್ಟು ನೇರು ಸೇದುತ್ತಿರುವಾಗ ಎಡಕ್ಕೆ ತಿರುಗಿ ನೋಡಿಬಿಟ್ಟಿದ್ದಾಳೆ. ನಾಲ್ಕು ಮಾರು ದೂರದಲ್ಲಿ ಪರ್ವತದಂತಹ ಕಪ್ಪು ಆಕೃತಿ ಬಾಳೆಮರಗಳ ಮಧ್ಯೆ ನಿಂತುಬಿಟ್ಟಿದೆ! ಹಗ್ಗ ಕೈಬಿಟ್ಟವಳೇ " ಅಯ್ಯಯ್ಯೋ ಅಪ್ಪೋ ನಾ ಸತ್ನೋ " ಎಂದು ಕೂಗುತ್ತಾ ಮನೆಗೆ ಓಡಿದ್ದಾಳೆ. ಬಂದಿದ್ದು ಶ್ರೀಮಾನ್ ಗಜರಾಜರು ! ಅವರು ಒಂಟಿ ಸಲಗ ಬೇರೆ ಆಗಿದ್ದರು ಎಂಬುದು ಮಾವನ ಅಂಬೋಣ. ಉದ್ದುದ್ದ ದಂತಗಳನ್ನು ಹೊಂದಿದ್ದ ಆ ಆನೆ ಬಹಳ ಎತ್ತರವಾಗಿದ್ದುದು ಸತ್ಯವಂತೆ. ಅಲ್ಲಿಂದ ಮೇಲೆ ಅತ್ತೆ ಶಾಸ್ತ್ರಗಳನ್ನೆಲ್ಲಾ ಬದಿಗಿಟ್ಟು ಬೆಳ್ಳಂಬೆಳಿಗ್ಗೆ ನೀರು ತರುವುದಕ್ಕೇ ಹೋಗುವುದನ್ನೇ ನಿಲ್ಲಿಸಿದಳಂತೆ.

ಒಮ್ಮೆ ನಾವು ಮಾಳದಲ್ಲಿ ಇದ್ದಾಗ ಸುಮ್ಮನೇ ಅಲ್ಲಿರುವ ಸಾಮಾನುಗಳನ್ನು ತಡಕಾಡುತ್ತಿದ್ದೆವು. ಮೊದಲು ನಮಗೆ ಕಣ್ಣಿಗೆ ಬಿದ್ದಿದ್ದು ಬೀಡಿ ಕಟ್ಟು ಮತ್ತು ಬೆಂಕಿಪೊಟ್ಟಣ. ಅಲ್ಲಿ ನಾವು ಮಕ್ಕಳ ಹೊರತು ಬೇರೇ ಯಾರೂ ಇರಲಿಲ್ಲ. ನಮ್ಮದೇ ರಾಜ್ಯ! -ಕೇಳಬೇಕೇ ? ಮನೆ ದೂರದಲ್ಲಿ ಕಾಣುತ್ತಿದ್ದರೂ ಮಾಳದಲ್ಲಿ ಏನು ನಡೆಯುತ್ತಿದೆ ಎಂಬುದು ಮನೆಯಲ್ಲಿರುವವರಿಗೆ ತಿಳೀತಾ ಇರ್ಲಿಲ್ಲ. ಮಾವನ ಗಂಡುಮಕ್ಕಳು ಸೇರಿದಂತೇ ನಾವು ಒಂದು ಚಾನ್ಸ್ ತೆಗೆದುಕೊಳ್ಳೋಣ ಏನೋ ಮಜಾ ಇರ್ಬೇಕು ಅದರಲ್ಲಿ ಎಂದು ಅಂದುಕೊಳ್ಳುತ್ತಿದ್ದೆವು. ನಿತ್ಯವೂ ಮಾವ ಅಗ್ನಿಯನ್ನು ತ್ರಿಕಾಲವಲ್ಲ ಅದೆಷ್ಟೋ ಕಾಲ ಆವಾಹನೆ ಮಾಡಿ ಹೊಗೆ ಬಿಡುವುದನ್ನೂ ಹೊಗೆ ಬಿಡುತ್ತಾ ಅದೇನೋ ಒಂದು ರೀತಿ ಗಮ್ಮತ್ತು ಇರುವ ಮುಖಭಾವ ಪಡೆಯುವುದನ್ನೂ ನೋಡಿದ್ದೆವು. ಅಲ್ಲೀಗ ತಡೆಹಾಕಲು ಯಾರೂ ಇರಲಿಲ್ಲ. ಮಕ್ಕಳಿಗೆಲ್ಲರಿಗೂ ಒಂದೇ ಆಸೆ, ಅದು ಹೇಗಿರುತ್ತದೆ ಎಂದು ನೋಡಬೇಕೆಂಬುದು. ಕಡ್ಡಿ ಗೀರಿ ಬೆಂಕಿ ಹಚ್ಚಿ ಸೇದಲು ಪ್ರಯತ್ನಿಸಿದೆವು. ಕೆಮ್ಮು...ವಾಕರಿಕೆ...ಥೂ.....ಹಾಳಾದ್ದು...ಬಾಯೆಲ್ಲಾ ಕೆಟ್ಟ ನಾತ! ಗಂಟೆಗಟ್ಟಲೆ ಹೊಟ್ಟೆ ತೊಳೆಸಿದಂತಾಗಿತ್ತು. ಇಂಥಾ ಹೊಲಸು ನಾತ ಮಾವನಿಗೆ ಅದೇನು ತೃಪ್ತಿ ಕೊಡುತ್ತದೋ ದೇವರೇಬಲ್ಲ. ಅಂದಿನಿಂದ ಮತ್ತೆ ಅದಕ್ಕೆ ಮತ್ತೆ ತಲೆಹಾಕಲಿಲ್ಲ.

ಇನ್ನೊಂದು ದಿನ ಬೆಳಿಗ್ಗೆ ಯಾವುದೋ ತುರ್ತಿನ ಕೆಲಸದಲ್ಲಿ ಮನೆಗೆ ಮರಳಿದ ಮಾವ ಕೋವಿಯನ್ನು ಮಾಳದಲ್ಲೇ ಬಿಟ್ಟಿದ್ದರು. ಆಡುತ್ತಾ ಆಡುತ್ತಾ ಮಾಳಕ್ಕೆ ಹೋದ ನಾವು, ಹಾಸಿದ್ದ ಗೋಣೀಚೀಲದ ಕೆಳಗೆ ಮಲಗಿಸಿಟ್ಟ ಕೋವಿಯನ್ನು ಕಂಡಿದ್ದೆವು. ಇರುವವರೆಲ್ಲಾ ಬಹಳ ಗುರಿಕಾರರೇ ಆಗಿದ್ದರು! ನಾಮೇಲು ತಾಮೇಲು ಎಂದು ಕೋವಿ ಎತ್ತಿಕೊಂಡು ಗುರಿ ಹಿಡಿಯಲು ತೊಡಗಿದ್ದೆವು. ಬಂದೂಕಿನ ಅಗುಳಿಯನ್ನು ಎಳೆಯುತ್ತಿದ್ದಂತೇ ಅದು ಹಿಂದಕ್ಕೆ ಒದೆಯುವುದಂತೆ ಎಂದು ಮಾವನ ಮಕ್ಕಳು ಹೇಳಿದರು. ಬಂದೂಕು ಎಳೆದವನ ಗತಿ ಏನಾಗಬೇಡ!! ಮೊದಲೇ ಬಂದೂಕನ್ನು ಅದು ವರೆಗೂ ಕಂಡಿದ್ದು ಚಿತ್ರದಲ್ಲಷ್ಟೇ ಆಗಿತ್ತು. ಜಮೀನಿಗೆ ಬಂದಮೇಲಷ್ಟೇ ಕೋವಿಯ ಪ್ರತ್ಯಕ್ಷ ದರ್ಶನವಾಗಿದ್ದು! ಅಗುಳಿ ಎಳೆದು ಹಿಡಿದಿದ್ದೇನೆ.....ಬಿಟ್ಟರೆ ಕೋವಿ ಹಿಂದಕ್ಕೆ ಒದ್ದರೆ ನನ್ನ ಗತಿ ಏನು ಎಂಬ ಹೆದರಿಕೆ. ಇಡೀ ಶರೀರವೆಲ್ಲಾ ಕಂಪಿಸಿ "ಅಯ್ಯೋ ಬದುಕಿದ್ದರೆ ಇನ್ನು ಜಮೀನಕಡೆ ತಲೆ ಹಾಕಬಾರದು" ಎಂದುಕೊಂಡಿದ್ದೆ. ಅಷ್ಟರಲ್ಲೇ ಮಾವ ಯಾವುದೋ ಕೆಲಸಕ್ಕೆ ಹೋದವರು ಕೋವಿಯನ್ನು ಮಾಳದಲ್ಲೇ ಬಿಟ್ಟಿದ್ದು ನೆನಪಾಗಿ ಓಡೋಡಿ ಬಂದರು. ವಾಸ್ತವಕ್ಕೆ ಕೋವಿಯಲ್ಲಿ ಈಡು ತುಂಬಿರಲಿಲ್ಲವಂತೆ. ಅದು ಖಾಲೀ ಇತ್ತು. ಹೀಗಾಗಿ ನನ್ನ ಕೈಯ್ಯಿಂದ ಅದನ್ನು ಕಸಿದುಕೊಂಡರು! ಎಲ್ಲರನ್ನೂ ಒಂದಷ್ಟು ಬೈದು ಹೋದರು.

ಗದ್ದೆಯ ಬದಿಯಲ್ಲಿ ಬೆಳ್ಳಕ್ಕಿಗಳ ವಿಹಾರವಂತೂ ಸದಾ ಇರುತ್ತಿತ್ತು. ಒಂಟಿಕಾಲಲ್ಲಿ ನಿಲ್ಲುವ ಬಕಗಳೂ ಇದ್ದವು. ಹಾರುತ್ತಾ ಕೂಗುತ್ತಾ ಅಲ್ಲಲ್ಲಿ ಹಿಂಡು ಹಿಂಡಾಗಿ ಗದ್ದೆಯ ಕೀಟಗಳನ್ನೋ ಹುಳ-ಹುಪ್ಪಡಿಗಳನ್ನೋ ತಿನ್ನುತ್ತಿದ್ದವು. ಹಸಿರುಟ್ಟ ಗದ್ದೆಗಳಲ್ಲಿ ಬಿಳಿಯ ರಂಗೋಲಿ ಇಟ್ಟಂತೇ ಕಾಣುವ ಆ ದೃಶ್ಯದಲ್ಲಿ ರಂಗೋಲಿಗೆ ನಿರ್ದಿಷ್ಟವಾದ ಆಕಾರವಂತೂ ಇರಲಿಲ್ಲ! ಬದಲಾಗುವ ಬಿಳಿಯ ರಂಗೋಲಿಗಳ ಪಕ್ಕದಲ್ಲೇ ಉರ್ಸಾನಕ್ಕಿಗಳೆಂಬ ಹಕ್ಕಿಗಳೂ ಬರುತ್ತಿದ್ದವು. ಅವುಗಳ ಬಣ್ಣ ಗಾಢ ಕಂದು. ಗದ್ದೆಯ ಬದುವಿನ ಏರಿಯಲ್ಲಿ ಅಲ್ಲಲ್ಲಿ ಹೂ ಗಿಡಗಳಿದ್ದವು. ಮಾಗಿ, ಮಲ್ಲಿಗೆ, ಜಾಜಿ-ಜೂಜಿ ಹೀಗೇ ಹಲವು ತೆರನಾದ ಹೂಗಳು ಬಿಡುತ್ತಿದ್ದವು. ಅವುಗಳ ಮಕರಂದ ಹೀರಲು ಹಲವು ವಿಧದ ದುಂಬಿಗಳೂ ಚಿಕ್ಕ ಪುರ್ಲೆ ಹಕ್ಕಿಗಳೂ ಬರುತ್ತಿದ್ದವು. ಅಂಗೋಡಂಗ ಫಲವಿರಬೇಕು ಇವತ್ತು ನಮಗೆ ಹಣ್ಣು ಸಿಗದಿದ್ದರೂ ನಾಳೆ ಮತ್ತಿನ್ಯಾರೋ ಜನಾಂಗ ತಿನ್ನುತ್ತದೆ ಬಿಡು ಎಂಬ ಅವನದೇ ಉದಾತ್ತ ಭಾವದಿಂದ ಅಜ್ಜ ಜಮೀನಿನ ಹಲವೆಡೆ ಸಾಧ್ಯವಾಗುವಲ್ಲೆಲ್ಲಾ ಮಾವು, ಪೇರಲೆ, ಚಿಕ್ಕು, ಹಲಸು ಹೀಗೇ ಹಣ್ಣುಬಿಡುವ ಸಸ್ಯ ವೈವಿಧ್ಯವನ್ನು ನೆಡಿಸಿದ್ದ. ಕೆಲವೊಮ್ಮೆ ತಾನೇ ಸ್ವತಃ ನಿಂತು ಮಣ್ಣು-ಗೊಬ್ಬರಗಳ ಕೆಲಸ ಮಾಡಿದ್ದೂ ಇದೆ. ನಮ್ಮೂರಲ್ಲೂ ಅಷ್ಟೇ: ಬೆಳೆದ ಹಣ್ಣುಗಳನ್ನು ಅಲ್ಲಿರಬಹುದಾದ ಎಲ್ಲರಿಗೂ ಅಜ್ಜ ಹಂಚುತ್ತಿದ್ದ, ಹಂಚಿಯೇ ತಿನ್ನಬೇಕೆಂಬ ಅಭ್ಯಾಸ ಅಜ್ಜನದಾಗಿತ್ತು.

ಜಮೀನಿನ ಕೆಳಭಾಗದಲ್ಲಿ ಉದ್ದಕ್ಕೂ ಹರಿಯುವ ದೊಡ್ಡ ಹಳ್ಳವೊಂದಿತ್ತು ಎಂದಿದ್ದೆನಲ್ಲಾ ..ಅದರಲ್ಲಿ ನಾವು ಈಜಲು ಹೋಗುತ್ತಿದ್ದೆವು. ಆ ಹಳ್ಳದಲ್ಲಿ ವಾಟೆಚಪ್ಪಿನ ಸಂದಿಗಳಿಂದ ಹಾಯ್ದು ಬರುವ ತಣ್ಣನೆಯ ಸ್ಫಟಿಕಸದೃಶ ನೀರು ಹರಿಯುತ್ತಿತ್ತು. ಯಾರೂ ಗಲೀಜು ಮಾಡಿರದ ಪರಿಶುದ್ಧ ನೀರು ಅದು. ಪೊಡವಿಯ ಅಡವಿಯ ನಡುನಡುವೆ ಹುದುಗಿರುವ ಗಿಡಗೋಪಾಲಕೃಷ್ಣನ ಮೂಲಿಕಾ ತೀರ್ಥ ಅದಾಗಿತ್ತು! ಅದರಲ್ಲಿ ಅದೆಷ್ಟು ಖನಿಜಪದಾರ್ಥಗಳು ಇದ್ದವೋ ಶಿವನೇ ಬಲ್ಲ. ಹಳ್ಳದಲ್ಲಿ ಬಂಡೆಗಳಿದ್ದವು, ಚಿಕ್ಕ ಚಿಕ್ಕ ಕಲ್ಲುಗಳಿದ್ದವು. ಹಾಗೆಯೇ ಹಾವಸೆಯೂ ಇದ್ದಿದ್ದರಿಂದ ಜಾರುತ್ತಿತ್ತು. ಕಲ್ಲಿನಮೇಲೆ ಕಾಲಿರಿಸಿ ’ಕಾಸು ಎಣಿಸಿಕೊಂಡ’ ಅನುಭವ ಇದೆ ಬಿಡಿ. ಆದರೆ ಇನ್ನೂ ಎಳೆಯ ಪ್ರಾಯ ಆಗಿದ್ದರಿಂದ ಬಿ.ವಿ.ಪಂಡಿತರ ತೈಲ ಹಚ್ಚಿಕೊಳ್ಳುವ ಪ್ರಮೇಯ ಆಗ ಬಂದಿರಲಿಲ್ಲ! ಕೆಲವೊಮ್ಮೆ ನೀರಿನಲ್ಲೇ ಅಟ್ಟಾಡಿಸಿಕೊಂಡು ಮುಖ ಮೂತಿ ಜರಿದುಕೊಂಡೋ ಕುಂಡೆಗೆ ಹೊಡೆತಬಿದ್ದು ನೊಂದುಕೊಂಡೋ ಉಜ್ಜಿಕೊಳ್ಳುತ್ತಾ ಕೂತಿದ್ದಿದೆ. ಮುಖವಡಿಯಾಗಿ ಬಿದ್ದರೂ ಮೂಗಿಗೆ ಏನೂ ಆಗಿಲ್ಲಾ ಎನ್ನುವ ಇವತ್ತಿನ ಅಂಹಕಾರಿಗಳಂತೇ ನಾವು ಬಿಟ್ಟುಕೊಡುವ ಜನವಾಗಿರಲಿಲ್ಲ! ಕಾಲಲ್ಲಿ ಆದ ಗಾಯಗಳು ವಾರಗಟ್ಟಲೆ ನೋವು ಕೊಟ್ಟರು ಹಳ್ಳದಲ್ಲಿ ಆಡುವ ಖುಷಿ ಇವತ್ತಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ಸಿಗುವುದಿಲ್ಲ!

ಹಳ್ಳದಲ್ಲಿ ಅಲ್ಲಲ್ಲಿ ಹಲವಾರು ಕಾಲುಗಳಿರುವ ಊದ್ದದ ಒಂದು ರೀತಿ ಹುಳಗಳಿರುತ್ತಿದ್ದವು. ಅವು ನೀರಲ್ಲಿ ಈಜಾಡುತ್ತಾ ಬಂಡೆಗಳ ಸಂದಿನಲ್ಲಿ ಸೇರಿಕೊಂಡು ಬಿಡುತ್ತಿದ್ದವು. ಅವುಗಳು ಹೆಸರು ಅಂದಿಗೆ ನಮಗೆ ಗೊತ್ತಾಗಿರಲಿಲ್ಲ. ನಂತರ ತಿಳಿದಿದ್ದು ಅವು ಸೀಗಡೀ ಮೀನುಗಳು ಎಂದು. ಅವುಗಳನ್ನು ನಾವು ಹಿಡಿಯಲು ಪ್ರಯತ್ನಿಸುತ್ತಿದ್ದೆವು. ಇನ್ನೇನು ಮರಿ ಸೀಗಡಿಯೊಂದು ಸಿಕ್ಕೇ ಬಿಟ್ಟಿತು ಎಂದುಕೊಳ್ಳುವಷ್ಟರಲ್ಲಿ ಅದು ಸದ್ದಿಲ್ಲದೇ ಅದೆಲ್ಲೋ ಮಾಯವಾಗಿಬಿಡುತ್ತಿತ್ತು! ಸ್ವಲ್ಪ ದೊಡ್ಡ ಸೀಗಡಿಯಾದರೆ ಅಕಸ್ಮಾತ್ ಸಿಕ್ಕಿದರೂ ಕಚ್ಚುತ್ತದೇನೋ ಎಂಬ ಅಂಜಿಕೆ ನಮ್ಮಲ್ಲಿ. ಮಾವನ ಮಕ್ಕಳು ತಾವು ಅದನ್ನು ಕೈಲಿ ಮುಟ್ಟಿದ್ದೇವೆ ಎಂದಾಗ ನಾವೇಕೆ ಕಮ್ಮಿಯಾಗಬೇಕು ಹೇಳಿ ! ಹಿಡಿದು ಒಮ್ಮೆ ಮುಟ್ಟಿ ಮತ್ತೆ ನೀರಿಗೇ ಬಿಡುವುದು ನಮ್ಮ ಇಚ್ಛೆ! ಸೀಗಡಿ ಹಿಡಿದೇ ತೀರಬೇಕೆಂಬ ಛಲ ಹೊತ್ತು ಗಂಟೆಗಟ್ಟಲೆ ಅಲೆದಿದ್ದಿದೆ! ಮನೆಯಿಂದ ಕೂಗು ಕೇಳಿಸಿ ಇನ್ನೇನು ಬಡಿಗೆ ಬರುತ್ತದೆ ಎಂಬ ಡೌಟು ಬರುವವರೆಗೂ ನಾವು ಹೊರಡುವ ಪ್ರಮೇಯವೇ ಇರಲಿಲ್ಲ! ಅದು ಹೊತ್ತುಗೊತ್ತಿನ ಪ್ರಶ್ನೆಯಲ್ಲ, ಆಡುವುದೊಂದೇ ಗೊತ್ತು!

ತೋಟದಲ್ಲಿ ಗೊನೆಕಿತ್ತನಂತರ ಹಾಗೇ ಬಿದ್ದ ಬಾಳೆಮರಗಳನ್ನು ಕಡಿದುರುಳಿಸಿದಾಗ ಕತ್ತಲಲ್ಲಿ ಕಾಡುಗಳ್ಳರು ಕರಗಾಸ [ಗರಗಸ] ಕಾಮಗಾರಿ ನಡೆಸಿ ಶ್ರೀಗಂಧದ ಮರಗಳನ್ನು ಕಡಿದು ಪಡೆದ ಸಂತೃಪ್ತಿಗಿಂತಾ ಅಧಿಕ ತೃಪ್ತಿ ನಮ್ಮದಾಗುತ್ತಿತ್ತು! ಅಂತಹ ಬಾಳೆ ದಿಮ್ಮಿಗಳನ್ನು ನಿಧಾನಕ್ಕೆ ಎಳೆದೊಯ್ದು ಹಳ್ಳಕ್ಕೆ ರವಾನಿಸಿಕೊಂಡು ಅಲ್ಲಿ ನಾಕಾರು ದಿಮ್ಮಿಗಳನ್ನು ಒಂದರ ಪಕ್ಕ ಇನ್ನೊಂದು ಜೋಡಿಸಿಕೊಳ್ಳುತ್ತಿದ್ದೆವು. ಬಿದಿರ ಗೂಟಗಳನ್ನು ತಂದು ಆ ಕೊನೆಗೆ ಈ ಕೊನೆಗೆ ಮತ್ತು ಮಧ್ಯಕ್ಕೆ ಒಂದೊಂದು ಬರುವಂತೇ ಅಡ್ಡಡ್ಡ ಅವುಗಳ ಮಧ್ಯೆ ತೂರಿಸಿಬಿಟ್ಟರೆ ತೆಪ್ಪ ರೆಡಿ ! ನಂತರ ಬಹಳ ಹೊತ್ತು ಮಕ್ಕಳು ಸ್ವಾಮಿಗಳ ’ತೆಪ್ಪೋತ್ಸವ’! ಹಳ್ಳದಲ್ಲಿ ಉದ್ದಕ್ಕೂ ಅಗಲಕ್ಕೂ ಒಂದಷ್ಟು ದೂರ ಕ್ರಮಿಸುವುದು. ತೆಪ್ಪವನ್ನು ಗಿರಿಗಿಟ್ಲೆಯಂತೇ ತಿರುಗಿಸುವುದು. ಹೀಗೇ ಅದರಲ್ಲಿಯೇ ಆಟ. ಸುಮಾರು ಆಳವಿದ್ದ ಕೆಲ ಭಾಗಗಳಲ್ಲಿ ಈಜು ಹೊಡೆಯುವುದು ಬಲು ಮೋಜು! ಹಾಗೆ ಈಜು ಹೊಡೆಯುವಾಗ ತೆಪ್ಪದ ಕೆಳಗೆ ಮುಳುಗಿ ಅಡಗಿದ್ದ ನನ್ನನ್ನು ನೀರಲ್ಲಿ ಮುಳುಗಿ ಹೋಗೇಬಿಟ್ಟ ಎಂದು ಹೆದರಿ ಓಡಿ ಮಾವನನ್ನು ಕರೆತಂದಿದ್ದರು ಉಳಿದ ಮಕ್ಕಳು!

ಮರವೊಂದಕ್ಕೆ ಬಾವಿ [ತೆಂಗಿನನಾರಿನ] ಹಗ್ಗ ಕಟ್ಟಿ ಕೆಳಗೆಬಿಟ್ಟುಕೊಂಡು ಅದಕ್ಕೊಂದು ಹಲಗೆ ತುಂಡು ಸಿಕ್ಕಿಸಿಕೊಂಡು ’ಉಯ್ಯಾಲೆ ಸೇವೆ ’ ನಡೆಯುತ್ತಿತ್ತು. ತೂಗೀ ತೂಗೀ ತೂಗೀ ಹಗ್ಗ ಸವೆದು ಹರಿದು ಬಿದ್ದಾಗ ತಿರುಪತಿ ತಿಮ್ಮಪ್ಪಸ್ವಾಮಿ ಗೋವಿಂದಾ...ಗೋವಿಂದ! ದೀಪಾವಳಿಯಲ್ಲಿ ಆಕಾಶಬುಟ್ಟಿಯನ್ನು ಮನೆಯಲ್ಲೇ ತಯಾರುಮಾಡುವ ವೈಖರಿ ಹಿಂದಕ್ಕೆ ಇತ್ತು. ಬಿದಿರುಕಡ್ಡಿಗಳು, ಬಣ್ಣದ ಕಾಗದದ ತುಂಡುಗಳು, ಅಂಟು, ದಾರ ಇವುಗಳಿಂದ ನಾಜೂಕಾಗಿ ಜೋಡಿಸಿ ಮಾಡುವ ದೊಡ್ಡ ಆಕಾಶಬುಟ್ಟಿ ರೆಕ್ಕೆ ಪುಕ್ಕಗಳನ್ನು ಹಾರಿಸುತ್ತಾ ಎತ್ತರದ ಮರದ ಕೊಂಬೆಗೆ ಅಡ್ಡಲಾಗಿ ಹೊರಚಾಚುವಂತೇ ಕಟ್ಟಿದ್ದ ಗೂಟವೊಂದರ ತುದಿಗೆ ಕಟ್ಟಲಾದ ಗಡಗಡೆ [ಚಿಕ್ಕ ರಾಟಿ]ಯ ಮೂಲಕ ನಿತ್ಯವೂ ಮೇಲೇರಿ ಕೆಳಗಿಳಿದು ಮಾಡುತ್ತಿತ್ತು! ವಿದ್ಯುತ್ತಿರದ ಕಾರಣ ಅದರಲ್ಲಿ ಮೊಂಬತ್ತಿಯನ್ನೋ ಹಣತೆಯನ್ನೋ ಇಡುವ ವ್ಯವಸ್ಥೆ ಇರುತ್ತಿತ್ತು, ಬೆಂಕಿ ಸುತ್ತಲ ಕಾಗದಕ್ಕೆ ತಾಗದ ರೀತಿ ಇರುತ್ತಿತ್ತು. ದೀಪ ಹಚ್ಚಿದ ಆಕಾಶಬುಟ್ಟಿ ಧ್ವಜಾರೋಹಣದಂತೇ ಮೇಲೇರುವುದನ್ನು ನೋಡುವುದೇ ಬಲುಖುಷಿಯ ಕೆಲಸವಾಗಿತ್ತು. ಇಬ್ಬನಿ ಬಿದ್ದು ಬಣ್ಣದ ಕಾಗದ ಕಳಾಹೀನವಾಗದಿರಲಿ ಎಂಬ ಕಾರಣಕ್ಕೆ ಆಕಾಶಬುಟ್ಟಿ ನಿಲ್ಲುವ ಆ ಎತ್ತರಕ್ಕೂ ಮಾರು ಮೇಲೆ ಅದೇ ಮರದ ಸಹಾಯದಿಂದ ತಾಳೆಯಗರಿಯ ಛಾವಣಿಯನ್ನು ಮಾವ ಕಟ್ಟಿದ್ದು ಇನ್ನೂ ನೆನಪಿಗೆ ಬರುತ್ತಿದೆ.

ಅಜ್ಜನ ಇಂತಹ ಪ್ರೀತಿಯ ಅಶ್ರಯದಲ್ಲಿ ಬೆಳೆದ ಮಕ್ಕಳು ಅನುಭವಿಸಿದ ಆನಂದ ಇಂದಿನ ಮಕ್ಕಳಿಗೆ ಲಭ್ಯವಿಲ್ಲ. ಕಾಡುಗಳೂ ನಾಶವಾಗಿ ನಾಡೆಲ್ಲಾ ಕಾಂಕ್ರೀಟು ಕಾಡುಗಳಾದ ಪರಿಣಾಮ ಮುಂದೊಂದು ದಿನ ಇವೆಲ್ಲಾ ಕೇವಲ ಕಟ್ಟುಕಥೆಗಳಂತೇ ಕಾಣಿಸಿದರೆ ಆಶ್ಚರ್ಯವಿಲ್ಲ. ಇವತ್ತಿನ ಮಕ್ಕಳು ಬರೇ ಪೋಗೋ ಮತ್ತು ಇನ್ನಿತರ ವಾಹಿನಿಗಳಲ್ಲಿ ಕಾಣಸಿಗುವ ಕಾಲ್ಪನಿಕ ಆನಿಮೇಟೆಡ್ ಕಾಡನ್ನು ನೋಡಬೇಕಾಗಿದೆ. ನ್ಯಾಷನಲ್ ಜಿಯೋಗ್ರಾಫಿಕ್, ಡಿಸ್ಕವರಿ ಇಂತಹ ಕೆಲವು ಮಾಧ್ಯಮವಾಹಿನಿಗಳು ಕಾಡುಗಳನ್ನೂ ವನಚರಗಳನ್ನೂ ಅವುಗಳ ಬದುಕಿನ ಮಜಲುಗಳನ್ನೂ ತೋರಿಸುತ್ತಿರುವುದು ನಿಜಕ್ಕೂ ಆನಂದದಾಯಕ. ಮುಂದಿನ ಪೀಳಿಗೆಗೆ ಅಲ್ಪವಾದರೂ ಕಾಡುಗಳನ್ನು ನಾವು ಉಳಿಸುತ್ತೇವೇಯೇ ಎಂಬುದು ಚಿಂತನಾಕಾರಕ, ನಮಸ್ಕಾರ.

Tuesday, January 31, 2012

ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !


ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !

ಚಳಿಗಾಲದ ಸಂಜೆಯ ಚುಮು ಚುಮು ಚಳಿಯಲ್ಲಿ ಅಜ್ಜ ಕೇರಿಯ ಯಾರೊಟ್ಟಿಗೋ ಮಾತು-ಕಥೆಯಾಡುತ್ತಿರುವಾಗ ಎಡತಡಸುವ ಚಿಕ್ಕ ಹುಡುಗ ನಾನಾಗಿದ್ದೆ. ಅಡ್ಡ ಬರುವುದಕ್ಕೆ ಸಿಟ್ಟುಬಂದರೂ ಮೊಮ್ಮಗನ ಮೇಲಿನ ವ್ಯಾಮೋಹಕ್ಕೇನೂ ಕೊರತೆಯಿರಲಿಲ್ಲ; ಹಾಗೆ ಕರೆದು ತನ್ನ ಕಾಲ ಸಂದಿಯಲ್ಲಿ ಕೂರಿಸಿಕೊಂಡಾಗ ಅಜ್ಜ ಹೊದ್ದ ಪಂಚೆಯೋ ಶಾಲೋ ನನ್ನನ್ನೂ ಮುಚ್ಚುತ್ತಿತ್ತು. ಅಜ್ಜನ ಮೈಯ್ಯ ಶಾಖ ಆ ಬಟ್ಟೆಯೊಳಗೇ ಇದ್ದು ಹೊರಗಿನ ಚಳಿ ತಾಗದೇ ಒಂಥರಾ ಹಾಯೆನಿಸುವ ಖುಷಿ ಬೇರೆ. ರೈತರ ಮನೆಯಾಗಿದ್ದರಿಂದ ರೈತಾಪಿ ವರ್ಗದ ಅನೇಕ ಕಷ್ಟಸುಖಗಳ ಕಥಾನಕಗಳು ಮಾತುಕಥೆಗಳಲ್ಲಿ ಅಡಕವಾಗೇ ಇರುತ್ತಿದ್ದವು. ಬೆಳೆದ ಫಸಲಿಗೆ ಸಿಗಬಹುದಾದ ಧಾರಣೆಯಿಂದ ಹಿಡಿದು ಬೆಳೆಗಳಿಗೆ ತಗಲುವ ಬಾಧೆಗಳು, ಗಂಟಿ[ದನ]ಕರುಗಳ ರೋಗ-ರುಜಿನಗಳು, ಆಹಾರ-ಧಾನ್ಯಗಳು, ಮದುವೆ-ಮುಂಜಿ ಕಾರ್ಯಕಟ್ಲೆ ಸುದ್ದಿಗಳು ಹೀಗೇ ವೈವಿಧ್ಯಮಯ ವಿಚಾರಗಳು ಜಗಲಿಯಲ್ಲಿ ಮಂಡಿಸಲ್ಪಡುತ್ತಿದ್ದವು. ಅಜ್ಜ ಹಾಗೆ ಸಿಗುವುದು ತೀರಾ ಅಪರೂಪ; ಇದು ನಿತ್ಯದ ವೈಖರಿಯಲ್ಲ, ಅಪರೂಪಕ್ಕೆ ೧೫ ದಿನಕ್ಕೋ ೨೨ ದಿನಕ್ಕೋ ಸಿಗುವ ಅವಕಾಶ. ಒಮ್ಮೊಮ್ಮೆ ಈ ಕೂಟ ಚಾ ಕುಡಿಯುವುದರೊಂದಿಗೆ ಮುಗಿಯುತ್ತಿತ್ತು. ಚಾ ಕುಡಿದರೆ ಆಗುವ ಅಡ್ಡ-ಉದ್ದ ಪರಿಣಾಮಗಳ ಬಗ್ಗೆ ನಮಗೆ ಅರಿವಿರದ್ದರಿಂದ ’ಬರಿದೇ ಮಕ್ಕಳು ಚಾ ಕುಡಿಯಬಾರದೆಂದು ಹೇಳ್ತಾರೆ ತಾವು ಮಾತ್ರ ಕುಡೀತಾರೆ’ ಎಂಬ ಗೊಣಗಿಕೊಳ್ಳುವಿಕೆಯಿಂದ ಸುಮ್ಮನಾಗುತ್ತಿದ್ದೆವು.

ಅಜ್ಜ ಸ್ವಾತಂತ್ರ್ಯ ಪೂರ್ವದಲ್ಲಿ ೧೯೧೭ರಲ್ಲಿ ಜನಿಸಿದ್ದ. ತಕ್ಕಮಟ್ಟಿಗೆ ಸ್ವಾತಂತ್ರ್ಯ ಸಂಗ್ರಾಮಗಳ ಗಾಳಿ ಅಜ್ಜನಿಗೆ ತಟ್ಟಿದ್ದರೂ ತಾನು ಸ್ವಾತಂತ್ರ್ಯ ಹೋರಾಟಗಾರ ಎಂದು ಯಾವತ್ತೂ ಅಜ್ಜ ಹೇಳಿಕೊಳ್ಳಲಿಲ್ಲ. ಮನೆಯಲ್ಲಿ ಅಜ್ಜನ ತಂದೆಯವರಿಗೆ ಮೂರ್ನಾಲ್ಕು ಮಕ್ಕಳು. ಸಹಜವಾಗಿ ಕಿತ್ತು ತಿನ್ನುವ ಬಡತನ. ಆ ಕಾಲಕ್ಕೆ ಏನೂ ಇರಲಿಲ್ಲವಂತೆ. ಬಡತನ ಎಷ್ಟಿತ್ತೆಂದರೆ ಆನಬಾಳೇಕಾಯಿ[ದಪ್ಪ ಬಾಳೇಕಾಯಿ]ಪಲ್ಯವನ್ನು ಬೆಳಿಗ್ಗೆಯ ತಿಂಡಿಯಾಗಿ ತಿನ್ನುತ್ತಿದ್ದರಂತೆ. ಅಂದು ಇಂದಿನಂತೇ ಅಂಗಡಿಮುಂಗಟ್ಟುಗಳು ತಾಲೂಕು ಬಿಟ್ಟು ಹಳ್ಳಿಗಳಲ್ಲಿ ಇರಲಿಲ್ಲ. ಹಿಟ್ಟಿನ, ಅವಲಕ್ಕಿಯ ಗಿರಣಿಗಳು ಇರಲಿಲ್ಲ. ಎಲ್ಲವೂ ಮನೆಯಲ್ಲೇ ಇರುವ ಬೀಸುವ ಒಳಕಲ್ಲು, ಗೋಧಿ ಕಲ್ಲು, ಅವಲಕ್ಕಿ ಕುಟ್ಟುವ ಕಲ್ಲು ಇವುಗಳಲ್ಲೇ ಆಗಬೇಕು! ಅವಲಕ್ಕಿ ಮತ್ತು ಅಕ್ಕಿಗಳನ್ನು ಒನಕೆಯಿಂದ ಕುಟ್ಟಿಯೇ ತಯಾರಿಸುತ್ತಿದ್ದರಂತೆ. ಚಿಟಗನಕ್ಕಿ ಭತ್ತದ ಅವಲಕ್ಕಿ ತಿನ್ನಲು ತುಂಬಾ ರುಚಿಯಿರುತ್ತಿತ್ತು. [ಆ ತಳಿಯ ಭತ್ತದ ಅವಲಕ್ಕಿ ನಾನು ಚಿಕ್ಕವನಿರುವಾಗ ಕೂಡ ನನಗೆ ಸಿಕ್ಕಿತ್ತು!] ಆದರೆ ಪ್ರತಿದಿನ ಮಾಡಿಕೊಳ್ಳುವಷ್ಟು ಅಜ್ಜ ಸಿರಿವಂತನಾಗಿರಲಿಲ್ಲ. ಆ ಕಾಲಕ್ಕೆ ದೋಸೆ ಎಂಬುದು ಒಂದು ವಿಶೇಷ ಕಜ್ಜಾಯವಾಗಿತ್ತು ಎಂದು ಅಜ್ಜ ಹೇಳುತ್ತಿದ್ದುದು ನೆನಪಿದೆ! ಅಜ್ಜ ೧೬ನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡ; ಕುಟುಂಬದ ಭಾರ ಹೆಗಲಿಗೆ ಬಿತ್ತು. ಆಗಲೇ ಅಣ್ಣ-ತಮ್ಮಂದಿರಿಗೆ ಮದುವೆ ಬೇರೆ. ಅಣ್ಣ-ತಮ್ಮಂದಿರು ಇರುವ ಭೂಮಿ ಹಿಸ್ಸೆಮಾಡಿಕೊಂಡು ಬೇರೇ ಬೇರೆಯಾಗಿದ್ದರು.

ಅಜ್ಜನಿಗೆ ಮುಂದೆ ನಾಕು ಗಂಡು ಎರಡು ಹೆಣ್ಣು ಒಟ್ಟಿಗೆ ಆರು ಮಕ್ಕಳು ಜನಿಸಿದರು. ಮಕ್ಕಳ ಲಾಲನೆ-ಪಾಲನೆ ಜೊತೆಗೆ ಅಜ್ಜ-ಅಜ್ಜಿ ಇಬ್ಬರೂ ಇರುವ ಅಡಕೆಯ ತೋಟದಲ್ಲಿ ಸ್ವತಃ ಗೇಯುತ್ತಿದ್ದರು. ಅಜ್ಜಿ ಕೊಟ್ಟಿಗೆಯಿಂದ ಆಕಳ ಗೊಬ್ಬರವನ್ನು ಹೆಡಗೆಗಳಲ್ಲಿ ಹೊತ್ತು ತಾನೂ ಸಹಕರಿಸುತ್ತಿದ್ದಳಂತೆ. ಒಮ್ಮೆ ಚಿಕ್ಕ ಮಗುವಾಗಿದ್ದ ಚಿಕ್ಕಪ್ಪನನ್ನು ತೋಟದ ಅಡಕೆಮರದ ಮರದ ಬೊಪ್ಪೆಯ[ಬುಡದ]ಮೇಲೆ ಮಲಗಿಸಿಟ್ಟು ತುಸುದೂರದಲ್ಲಿ ಕೆಲಸಮಾಡುತ್ತಿರುವಾಗ ಮಗು ಹೊರಳಿ ಅಂಬೆ ಹರೆದು ನೀರಿಲ್ಲದ ಚಿಕ್ಕ ೭-೮ ಅಡಿಯ ಬಾವಿಗೆ ಬಿದ್ದುಬಿಟ್ಟಿತಂತೆ! ದೇವರು ದೊಡ್ಡವನು-ಮಗು ಸಾಯಲಿಲ್ಲ, ಚಿಕ್ಕಪುಟ್ಟ ಪೆಟ್ಟುಗಳಾಗಿದ್ದವಂತೆ. ಆಗೆಲ್ಲಾ ಕತ್ತಲ ಕಾಲ; ವಿದ್ಯುದ್ದೀಪ ಇನ್ನೂ ಬಂದಿರಲಿಲ್ಲ. ರಾತ್ರಿ ಚಿಮಣಿ ಬುಡ್ಡಿ ದೀಪವೇ ಎಲ್ಲದಕ್ಕೂ. ಒಮ್ಮೆ ಬುಡ್ಡಿಯನ್ನು ದೂರದಲ್ಲಿಟ್ಟು ಆಗ ಮಗುವಾಗಿದ್ದ ಇನ್ನೊಬ್ಬ ಚಿಕ್ಕಪ್ಪನನ್ನು ಮಲಗಿಸಿ ಹೋಗಿದ್ದರೆ ಆ ಪುಣ್ಯಾತ್ಮ ಸೂರ್ಯನನ್ನು ಹಣ್ಣೆಂದು ಭಾವಿಸಿದ ಹನುಮನಂತೇ ಬೆಂಕಿಯ ಜೊತೆ ಸರಸವಾಡಲು ಬುಡ್ಡಿಯನ್ನೇ ಬರಸೆಳೆದು ಅಜ್ಜಿ ಓಡಿಬರುವಷ್ಟರಲ್ಲಿ ಹೊಟ್ಟೆಯ ಕೆಲಭಾಗ ಸುಟ್ಟುಹೋಗಿತ್ತು! ಇಲ್ಲೂ ಅಷ್ಟೇ ಭಗವಂತ ದೊಡ್ಡವನು; ತೀರಾ ಸಾಯುವಷ್ಟು ಸುಟ್ಟಿರಲಿಲ್ಲ, ಆದರೂ ಕಲೆ ಈಗಲೂ ಇದೆ.

ಸಂಸಾರದ ಭಾರವನ್ನು ಹೊತ್ತ ಅಜ್ಜನಿಗೆ ಇರುವ ತೋಟದ ಗಳಿಕೆ ವರ್ಷದ ಮೂರುತಿಂಗಳೂ ಸಾಲುವಷ್ಟಿರಲಿಲ್ಲವಂತೆ. ಆಗ ಮರ್ಯಾದೆಗೆ ಬಹುದೊಡ್ಡ ಮೌಲ್ಯವಿದ್ದಕಾಲ. ಯಾರಾದರೂ ನೆಂಟರು-ಇಷ್ಟರು ಬಂದರೆ ಸತ್ಕರಿಸಬೇಕು. ಊರೂರು ಅಲೆಯುವ ಸಂಭಾವನೆ ಬೇಡುವವರು, ಯಾವುದೋ ವಂತಿಗೆ-ವರಾಡಿಯವರು, ಭಿಕ್ಷುಕರು ಅವರು ಇವರು ಅಂತ ಯಾರ್ಯಾರೋ ಬರುತ್ತಿದ್ದರಂತೆ. ಊಟದ ಹೊತ್ತಿಗೆ ಬಂದ ಯಾರನ್ನೂ ಹಾಗೇ ಕಳಿಸುವ ವೈವಾಟು ನಮ್ಮಲ್ಲಿರಲಿಲ್ಲ. ಕಷ್ಟದ ದಿನಗಳಲ್ಲಿ ಅಜ್ಜ ಕೈಚೆಲ್ಲಿ ಕೂತಿರಲಿಲ್ಲ. ಬೇರೆಯವರ ಮನೆ ಕೂಲಿ ಕೆಲಸಮಾಡಿ ದುಡಿಯುತ್ತಿದ್ದರು. ನಮ್ಮಲ್ಲಿನ ರೈತಾಪಿ ಕೆಲಸಗಳಾದ ಕೊಟ್ಟೆಕಟ್ಟುವುದು[ ಅದು ಈಗ ಬರೇ ಇತಿಹಾಸದ ಪುಟದಲ್ಲಿ ಮಾತ್ರ ಕೇಳಸಿಗುತ್ತದೆ] ಕೊನೆಕೊಯ್ಯುವುದೇ ಮೊದಲಾಗಿ ಮರಗೆಲಸ[ಮರದಮೇಲಿನ ಕೆಲಸ]ಗಳನ್ನೂ ಮಾಡಿ ಮಕ್ಕಳನ್ನೂ ಹೆಂಡತಿಯನ್ನೂ ಸಲಹಿದ್ದು ಕೇಳಿದ್ದೇನೆ. ಇಂತಹ ಅಜ್ಜ ಕಲಿತಿದ್ದು ಕನ್ನಡ ಪ್ರಾಥಮಿಕದ ಮೂರನೇ ತರಗತಿಯನ್ನು. ಆದರೂ ಆತನ ವ್ಯವಹಾರದ ಶಿಸ್ತು ಸಿಪಾಯಿಯ ಶಿಸ್ತಿನಂತಿತ್ತು. ಹಲವರ ಒಡನಾಟದಿಂದ ಅಜ್ಜ ಅನೇಕ ಆಂಗ್ಲ ಮತ್ತು ಹಿಂದೀ ಪದಗಳನ್ನು ಅರ್ಥಮಾಡಿಕೊಳ್ಳುತ್ತಿದ್ದ, ಅಂಥವರ ಜೊತೆ ಅಂತಂಥದೇ ಶಬ್ದಗಳನ್ನು ಬಳಸುವುದನ್ನು ನೋಡಿದ ನನಗೇ ಆಶ್ಚರ್ಯವಾಗುತ್ತಿತ್ತು.

ಸರಿಯಾಗಿ ಉಳಿದುಕೊಳ್ಳಲು ಮನೆಯೂ ಇಲ್ಲದ ಗುಡಿಸಲಿನ ವಾತಾವರಣವಿದ್ದ ಕಾಲದಲ್ಲಿ ಅಜ್ಜನಿಗೆ ಹೇಗಾದರೂ ಮಾಡಿ ಚಿಕ್ಕ ಮನೆ ಕಟ್ಟುವ ಅಸೆಯಾಯ್ತು. ದುಡಿಯುವ ದುಡ್ಡಿನಲ್ಲಿ ಬಿಡಿಗಾಸೂ ಉಳಿಯುತ್ತಿರಲಿಲ್ಲ. ಅದಕ್ಕಾಗಿ ಅಜ್ಜ ಅಡಕೆ ವ್ಯಾಪಾರಕ್ಕೆ ತೊಡಗಿದ. ವ್ಯಾಪಾರ ಅಜ್ಜನ ಕೈಹಿಡಿಯಿತು ಎಂದು ಅವರ ಜೀವನದ ಗತಿಯೇ ಹೇಳುತ್ತದೆ. ಇದೇ ಸಮಯದಲ್ಲಿ ಮಹಾತ್ಮರಾದ ಭಗವಾನ್ ಶ್ರೀಧರರು ನಮ್ಮಲ್ಲಿಗೆ ಬಿಜಯಂಗೈದಿದ್ದರು. ಅಜ್ಜ ಭಕ್ತಿಯಿಂದ ಪಾದಪೂಜೆ ನಡೆಸಿದ್ದನಂತೆ. " ತಮ್ಮಾ ಕರಿಕಾನಮ್ಮನ ದೇವಸ್ಥಾನ ಕಟ್ಟುವುದಕ್ಕೆ ನನ್ನ ಜೊತೆಗೆ ಬಂದವರಿಗೆ ಏನಾದರೂ ಕೊಡು ಅದು ನಿನಗೆ ಮೂರುಪಟ್ಟಾಗುವುದು" ಎಂದಿದ್ದರಂತೆ. [ಆಗ ಜಾಗ್ರತ ಸ್ಥಳವಾದ ಹೊನ್ನಾವರ ತಾಲೂಕಿನ ಶ್ರೀಕರಿಕಾನ್ ಪರಮೇಶ್ವರೀ ದೇಗುಲವನ್ನು ಕಟ್ಟಲು ಅನೇಕ ಜನ ಸೇರಿ ಸಂಕಲ್ಪಿಸಿದ್ದರೂ ಅದು ದೈವೀಶಕ್ತಿಯಿರುವ ಜನರಿಂದ ಮಾತ್ರ ಸಾಧ್ಯ ಎಂಬ ಕಾರಣಕ್ಕೆ ನಿಂತುಹೋಗಿದ್ದು ಶ್ರೀಧರರು ಅದನ್ನು ತಿಳಿದು ತಾವೇ ಆ ಕೆಲಸ ಮುಗಿಸಿಕೊಡಲು ಮುಂದೆ ನಿಂತಿದ್ದರು.] ಸರ್ವಸಂಗ ಪರಿತ್ಯಾಗಿಯಾದ ಪರಮಹಂಸ ಸನ್ಯಾಸಿಯೊಬ್ಬರು ನಿಸ್ಪೃಹರಾಗಿ ಸ್ವತಃ ತನ್ನಲ್ಲಿ ಏನಾದರೂ ಕಟ್ಟಡಕ್ಕೆ ಕೊಡು ಎಂದಿದ್ದನ್ನು ಕೇಳಿ ಅಜ್ಜನಿಗೆ ಮನಸ್ಸು ಬಹಳ ಆರ್ದ್ರವಾಯ್ತು. ಅಂದಿನ ಕಾಲಕ್ಕೆ ವ್ಯಾಪಾರದಲ್ಲಿ ಬಳಸುತ್ತಿದ್ದ ಒಂದು ಸಾವಿರವನ್ನು ಅಜ್ಜ ಗುರುಗಳ ಜೊತೆಗಾರರಿಗೆ ನೀಡಿದನಂತೆ. ಕೈಲಿದ್ದ ನಗದನ್ನೆಲ್ಲ ಅಜ್ಜ ದೇವರಿಗೆ ನೀಡಿದ್ದ, ಮುಂದಿನ ಖರ್ಚಿಗೆ ದುಡ್ಡು ಬೇಕೆಂದರೆ ಇದ್ದ ಅಡಕೆ ಮಾರಬೇಕು. ಖರೀದಿಸಿದ ಅಡಕೆ ಮನೆಯಲ್ಲಿ ರಾಶಿ ಬಿದ್ದಿತ್ತು. ಅದನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಒಯ್ದಾಗ ಅಜ್ಜನಿಗೆ ಅದಕ್ಕೆ ತಗುಲಿದ ವೆಚ್ಚಕ್ಕೆ ಮೂರುಪಟ್ಟು ಹಣ ಬಂತು ! ಸದ್ಗುರುಗಳ ಸಂಕಲ್ಪವನ್ನು ಅಜ್ಜ ಕೊನೆಯವರೆಗೂ ನೆನೆಯುತ್ತಿದ್ದ.

ಹೀಗೇ ಮುಂದೆ ವ್ಯಾಪಾರದಲ್ಲಿ ಅಷ್ಟಿಷ್ಟು ಹಣಗಳಿಸಿ ಮನೆಯೊಂದನ್ನು ಅಜ್ಜ ಕಟ್ಟಿದ. ಅದೂ ಆ ಕಾಲಕ್ಕೆ ಮಹಡಿ ಮನೆ. ಕೈಲಾಗುತ್ತಿಲ್ಲ; ಮನಸ್ಸು ಕೇಳುತ್ತಿಲ್ಲ. ಖರ್ಚಿಗೆ ಪೂರ್ತಿ ಹಣವಿಲ್ಲ. ಯಾರೋ ಉದ್ರಿಯಲ್ಲಿ ಬಿಜಗರ, ಮೊಳೆ, ಕಬ್ಬಿಣ-ಹಿತ್ತಾಳೆ ಸಾಮಗ್ರಿಗಳನ್ನು ಕೊಟ್ಟರು. ಇನ್ಯಾರೋ ಗೋಡೆಕಟ್ಟಲು ಕಲ್ಲು[ನಮ್ಮಲ್ಲಿನ ಲ್ಯಾಟರೈಟ್] ತರಿಸಿಕೊಟ್ಟರು. ಅದ್ಯಾರೋ ಮರದ ತೊಲೆಗಳನ್ನೂ ದಿಮ್ಮಿಗಳನ್ನೂ ಕೊಟ್ಟರು, ಮತ್ತಿನ್ಯಾರೋ ಗಿಲಾಯಿಮಾಡಿ ಬಣ್ಣ-ಸುಣ್ಣ ಬಳಿಯಲು ಅನುಕೂಲ ಮಾಡಿಕೊಟ್ಟರು! ಇದೆಲ್ಲಾ ನಡೆದುದು ಗುರು ಶ್ರೀಧರರ ಕೃಪೆಯಿಂದ ಎಂಬುದು ಅಜ್ಜನ ಅನಿಸಿಕೆಯಾಗಿತ್ತು; ಅದು ಸತ್ಯವೂ ಕೂಡ. ಎಲ್ಲೆಲ್ಲೂ ಅಜ್ಜನಿಗೆ ತುಂಬಾ ವ್ಯಕ್ತಿಮೌಲ್ಯ[ಕ್ರೆಡಿಬಲಿಟಿ] ದೊರೆತಿತ್ತು. ಹೇಗೋ ತಮಗೆ ಹಣ ಮರಳಿಸುವನೆಂಬ ನಂಬಿಕೆ ಎಲ್ಲರದಾಗಿತ್ತು. ಅಜ್ಜನ ಸ್ನೇಹ ಬಯಸಿ ಅನೇಕ ಜನ ಒಡನಾಡುತ್ತಿದ್ದರು. ಯಾರೋ ಆರ್ತರು, ಯಾರೋ ಅನಾಥರು, ಯಾರೋ ಬಡವರು ದೇಹಿ ಎಂದರೆ ಅಜ್ಜ ಕೂಡ ಹಾಗೇ ಕೈ ತಿರುಗಿಸುತ್ತಿರಲಿಲ್ಲ. ಅನೇಕ ಜನರಿಗೆ ಅಜ್ಜ ದಾರಿ ಕಲ್ಪಿಸಿದ್ದನ್ನು ನಾನು ಕೇಳಿಬಲ್ಲೆ. ಇಂತಹ ಅಜ್ಜನ ಮೊಮ್ಮಗನಾಗಿ ನಾನು ಜನಿಸಿದ್ದು ನನ್ನ ಪುಣ್ಯ ಎಂದು ಏಷ್ಟೋ ಸರ್ತಿ ನಾನಂದುಕೊಂಡಿದ್ದೇನೆ.


ಅಜ್ಜ ಊರಲ್ಲಿ ಜಮೀನು ಖರೀದಿಸಿದ. ಹಲವು ದೋಸ್ತರ ಬಳಗದೊಂದಿಗೆ ಕುಮಟಾದಲ್ಲಿ ಅಡಕೆ ಮಂಡಿ ಆರಂಭಿಸಿದ. ಆರಂಭಿಸಿದ ವರ್ಷವೊಂದರಲ್ಲೇ ಊರಕಡೆಯ ಆ ದೋಸ್ತರೆಲ್ಲಾ ತಮಗೆ ಬೇಕಾದವರಿಗೆ ಸಾಲ ಕೊಡು ಎಂದು ಚೀಟಿಕೊಟ್ಟು [ಇಂದಿನ ಎಮ್ಮೆಲ್ಲೆ ಶಿಫಾರಸ್ಸಿನ ಹಾಗೇ!] ಕುಮಟಾದಲ್ಲಿರುತ್ತಿದ್ದ ಅಜ್ಜನ ಹತ್ತಿರ ಕಳಿಸುತ್ತಿದ್ದರು. ದುಡಿವ ಬಂಡವಾಳ ಖಾಲಿಯಾಗುತ್ತಾ ನಡೆದಾಗ ವ್ಯವಹಾರ ನಿಭಾಯಿಸುವುದು ಕಷ್ಟವಾಗಿ ಅದನ್ನು ಗಮನಿಸಿದ ಅಜ್ಜ ಸಾಲ ಕೊಡುವುದಕ್ಕೆ ಮೂಲ ಬಂಡವಾಳ ಜಾಸ್ತಿ ಕ್ರೋಡೀಕರಿಸಬೇಕೆಂದು ಕೇಳಿದ್ದಕ್ಕೆ ಎಲ್ಲಾ ದೋಸ್ತರ ಕಣ್ಣೂ ಕೆಂಪಗಾಗಿದೆ; ತೊಡಗಿಸಿದ ಬಂಡವಾಳದ ಭಾಗವನ್ನು ಮರಳಿ ಕೊಡುವಂತೇ ಹಿಂದೆಬಿದ್ದಿದ್ದಾರೆ. ಗುರುವನ್ನು ಸ್ಮರಿಸಿ ಇಡೀ ಮಂಡಿಯ ವ್ಯವಹಾರವನ್ನು ಒಬ್ಬನೇ ವಹಿಸಿಕೊಂಡು ಕೇವಲ ಅತಿ ಸಣ್ಣ ಸಮಯಾವಧಿಯಲ್ಲಿ ಎಲ್ಲರ ಹಣವನ್ನೂ ಮರಳಿಸಿದ ಛಾತಿ ಅಜ್ಜನದು. ಮಾತ್ರವಲ್ಲ ಅಲ್ಲೇ ದುಡಿದು ಅದೇ ಜಾಗವನ್ನು ಖರೀದಿಸಿದ್ದೂ ಆಯ್ತು! ಅದೇ ಸಮಯಕ್ಕೆ ಸ್ವಲ್ಪ ಕಾಸು ಹೊಂದಿಸಿ ಮಕ್ಕಳ ಮುಂದಿನ ಜೀವನಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನಮ್ಮೂರಿಂದ ೧೦ ಕಿ.ಮೀ ದೂರದಲ್ಲಿ ಜಮೀನನ್ನೂ ಖರೀದಿಸಿದ.

ಅಜ್ಜ ಖರೀದಿಸಿದ ದೂರದ ಆ ಜಮೀನು ಕಾಡ ಮಧ್ಯೆ ಇತ್ತು. ಒಂದು ಕಡೆ ತೊರೆಯೊಂದು ಚಿಕ್ಕ ನದಿಯಾಗಿ ಹರಿಯುತ್ತಿತ್ತು. ಇನ್ನೊಂದೆಡೆ ದಟ್ಟ ಕಾಡು. ಜಮೀನಿಗೆ ೩ ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಬೇಕಿತ್ತು. ನಡೆಯುವಾಗ ಆ ಕಾಲು ಹಾದಿ ಕಾಡ ಮಧ್ಯೆಯೇ ಹಾದುಹೋಗುತ್ತಿತ್ತು. ಹಾದಿಯ ಕೆಲವೆಡೆ ಚಿಕ್ಕ ಪುಟ್ಟ ತೊರೆಗಳು ಹರಿಯುವುದನ್ನು ನೋಡಬಹುದಿತ್ತು. ಎಲ್ಲೆಲ್ಲೂ ಹಸಿರು ತುಂಬಿದ ಮರಗಳು. ಮರಗಳ ಮೇಲೆ ಹಲವುವಿಧದ ವನಚರಗಳು, ಪಕ್ಷಿಗಳು. ಝೀಂಕರಿಸುವ ಜೀರುಂಡೆಗಳು, ಬಿಸಿಲ ಹೊತ್ತಿಗೆ ಗುಟುರ್ ಗುಟುರ್ ಎಂದು ವಿಶಿಷ್ಟವಾಗಿ ಧ್ವನಿಹೊಮ್ಮಿಸುವ ಹಕ್ಕಿಗಳು. ಕೇಶಳಿಲು-ಕೆಂಬೂತಗಳು. ನವಿಲು-ಗಿಳಿಗಳು. ಸಿಳ್ಳೆ ಕ್ಯಾತ-ಮಸಿಮಂಗ[ಕೋಡ] ಮತ್ತು ಬಿಳಿಮಂಗಗಳು....ಹೀಗೇ ಹತ್ತಾರು ಜೀವವೈವಿಧ್ಯವನ್ನು ನಾವು ಚಿಕ್ಕಮಕ್ಕಳು ಅಲ್ಲಿ ಕಂಡಿದ್ದೇವೆ. ಶಾಲೆಗೆ ರಜಾ ಬರುವುದನ್ನೇ ಕಾಯುತ್ತಿದ್ದ ನಾವು ಅಲ್ಲಿಗೆ ತೆರಳಲು ತುದಿಗಾಲಿನಲ್ಲಿರುತ್ತಿದ್ದೆವು. ಜಮೀನು ನೋಡಿಕೊಳ್ಳಲು ಅಜ್ಜ ಮಗಳು-ಅಳಿಯನನ್ನು ಅಲ್ಲಿ ಬಿಟ್ಟಿದ್ದ; ವಿಷಯವಿಷ್ಟೇ ಒಬ್ಬ ಮಗಳು-ಅಳಿಯನಿಗೆ ಮನೆಯಲ್ಲಿ ತೀರಾ ಏನೂ ಇರಲಿಲ್ಲ. ಅವರನ್ನೂ ಅಜ್ಜನೇ ನೋಡಬೇಕಾದ ಸ್ಥಿತಿ ಇತ್ತು. ಕೊಂಡ ಜಮೀನಿನಲ್ಲಿ ಅರ್ಧವನ್ನು ಕೊಡುವ ಮನಸ್ಸಿನಲ್ಲಿ ಅವರನ್ನೇ ಆ ಜಮೀನಿನ ಉಸ್ತುವಾರಿಗೆ ಬಿಟ್ಟಿದ್ದ. ಆಗಾಗ ಖರ್ಚಿಗೆ [ಇನ್ನೂ ಹೊಸ ಜಮೀನಾಗಿದ್ದುದರಿಂದ ಅಲ್ಲಿ ಏನೂ ಇರಲಿಲ್ಲ]ಹಣ, ಧವಸ-ಧಾನ್ಯಗಳನ್ನು ಕಳುಹಿಸಿಕೊಡುತ್ತಿದ್ದ. ನಾವು ಮಕ್ಕಳು ಅತ್ತೆಮನೆಗೆ ಹೋಗುತ್ತೇವೆ ಎಂಬ ನೆವದಿಂದ ಜಮೀನಿಗೆ ತೆರಳಲು ಅವಕಾಶ ಹುಡುಕುತ್ತಿದ್ದೆವು!

ಹೊಸದಾಗಿ ಖರೀದಿಸಿದ ಜಮೀನಿನ ಕೆಲವು ಭಾಗದಲ್ಲಿ ಗದ್ದೆಗಳು ಇದ್ದವು. ಹಸಿರು ತುಂಬಿದ ಗದ್ದೆಗಳ ಮಧ್ಯೆ ರಾತ್ರಿಯ ಹೊತ್ತಿನ ಕಾವಲಿಗಾಗಿ ಒಂದೆರಡು ಮಾಳಗಳನ್ನು ನಿರ್ಮಿಸಲಾಗಿತ್ತು. ಮಾಳಗಳಲ್ಲಿ ಆಳುಗಳಾಗಲೀ ನಮ್ಮ ಮಾವನಾಗಲೀ [ಅತ್ತೆಯ ಯಜಮಾನ್ರು]ಇರುತ್ತಿದ್ದು ಆಗಾಗ ಎದ್ದು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ನಾಶಪಡಿಸಿದಂತೇ ಏನಾದರೂ ಸದ್ದುಮಾಡುವುದು, ಹಳೆಯ [ಎಣ್ಣೆತುಂಬಲು ಬಳಸುವ ದೊಡ್ಡ ಸೈಜಿನ ] ಡಬ್ಬಿಕಡಿ ಬಡಿಯುವುದು ಇತ್ಯಾದಿ ನಡೆಸಿ ಆ ಶಬ್ದಕ್ಕೆ ಪ್ರಾಣಿಗಳು ಹೆದರಿ ಜಮೀನಿಗೆ ಕಾಲಿಡದಂತೇ ರಕ್ಷಿಸುತ್ತಿದ್ದರು. ಪ್ರಾಣಿಗಳಿಗೂ ಕಾಡಿನಲ್ಲೇ ಸಾಕಷ್ಟು ತಿಂಡಿ-ತೀರ್ಥ ಲಭ್ಯವಿತ್ತಾದ್ದರಿಂದ ಅವೂ ಹೊಟ್ಟೆಗಾಗಿ ಅನಿವಾರ್ಯವಾಗಿ ಮಾನವ ನಿರ್ಮಿತ ಪ್ರದೇಶಗಳಿಗೋ ಗದ್ದೆ-ತೋಟಗಳಿಗೋ ನುಗ್ಗುತ್ತಿರಲಿಲ್ಲ. ಎಲ್ಲೋ ಆಹಾರಕ್ಕಾಗಿ ಅಲೆಯುವಾಗ ಅಪ್ಪಿತಪ್ಪಿ ಬಂದರೆಮಾತ್ರ ಬೆಳಗಿನ ಜಾವದವರೆಗೂ ಕೈಲಾಗುವಷ್ಟನ್ನು ತಿಂದು ಮುಗಿಸಿಯೇ ಹೋಗುವುದು ಅವುಗಳ ಅಭ್ಯಾಸವಾಗಿತ್ತು. ಒಂದೆರಡು ಬಾರಿ ಇದನ್ನು ನೋಡಿದ ಜಮೀನಿನ ಉಸ್ತುವಾರೀ ಅಧಿಕಾರಿ ಮಾವ ಅದಕ್ಕೆ ಪರಿಹಾರವಾಗಿ ಮಾಳಹಾಕಿ ಕಾವಲುಕಾಯುವ ರೂಢಿ ಬೆಳೆಸಿದ್ದರು; ಅದು ಇಂದಿಗೂ ಕಾಡ ಪಕ್ಕದ ಹಳ್ಳಿಗಳಲ್ಲಿ ಅಲ್ಲಲ್ಲಿ ತೋರಿಬರುವ ನಡಪತ್ತು.

ಜಮೀನಿರುವ ಆ ಪ್ರದೇಶಕ್ಕೆ ಕೊಟ್ಗೆಮಕ್ಕಿ ಎಂಬ ಹೆಸರು. ಕೊಟ್ಗೆಮಕ್ಕಿಗೆ ನಾವು ಹೋದಾಗ ನಮಗೆ ಹಗಲಿರುಳೂ ಕಥೆಗಳಲ್ಲಿ ಕೇಳಿದ್ದ ಕಾಡುಪ್ರಾಣಿಗಳನ್ನೂ ಪಕ್ಷಿಗಳನ್ನೂ ಕಾಂಬ ಆಸೆ. ಒಮ್ಮೆ ಜಮೀನಿಗೆ ಹರಿದು ಬರುವ ನೀರು ನಿಂತುಹೋಗಿತ್ತು. ಕಾನ ದಾರಿಯಲ್ಲಿ ದೂರದ ಕೆಂಬಾಲ್ ಕಡೆಗೆ ಕಿಲೋಮೀಟರುಗಟ್ಟಲೆ ನಡೆದು ಅದರ ಮೂಲದೆಡೆಗೆ ಹೋಗಿ ಎಲ್ಲಿ ಏನಾಗಿದೆ ಎಂಬುದನ್ನು ಹುಡುಕಬೇಕಿತ್ತು. ಮಾವನ ಮಕ್ಕಳು ಮತ್ತು ನಾವು ಹಾಗೊಮ್ಮೆ ಕಾಡ ಹಾದಿಯಲ್ಲಿ ಸಾಗಿಬರುವ ಆ ನೀರ ಅವಳೆಯ ಪಕ್ಕದಲ್ಲೇ ನಡೆಯುತ್ತಾ ಸಾಗುತ್ತಿದ್ದೆವು. ಮಾವನ ಮಕ್ಕಳಿಗೆ ಅದಾಗಲೇ ಕಾಡುಜೀವನ ಕರಗತವಾಗಿತ್ತು. " ಅಗೋ ಅಲ್ಲಿನೋಡು ಆನೆ ಹೆಜ್ಜೆ ಇಲ್ಲಿ ನೋಡು ಹಂದಿ ಅಗೆದಿದ್ದು " ಎನ್ನುತ್ತಾ ಅವರು ಮುಂದೆಸಾಗಿದರೂ ನಾವು ಅದರ ಹತ್ತಿರವೇ ನಿಂತು ಆನೆ ಎಷ್ಟು ಹೊತ್ತಿಗೆ ಬಂದು ಹೋಗಿರಬಹುದು? ಹೇಗಿತ್ತೋ ಏನೋ? ಹಂದಿ ಯಾವ ರೀತಿ ಅಗೆಯುತ್ತದೆ?-ಎಂಬುದನ್ನೆಲ್ಲಾ ಮನಸ್ಸಲ್ಲೇ ಊಹಿಸಿಕೊಳ್ಳುತ್ತಾ ತೆರಳುತ್ತಿದ್ದೆವು. ಇದನ್ನೆಲ್ಲಾ ನೋಡಿದ ಮಾವನ ಮಕ್ಕಳು ನಮ್ಮನ್ನು ಛೇಡಿಸುವುದಿತ್ತು. ಹಾದಿಯಲ್ಲಿ ಕೆಲವೊಮ್ಮೆ ಆನೆಯ ಲದ್ದಿಗಳನ್ನೂ ನೋಡಿದ್ದಿದೆ. ಎಲ್ಲಾದರೂ ಜಿಂಕೆ, ಕಡವೆ , ಸಾರಂಗಗಳು ನಮಗೆ ಕಾಣಸಿಗಬಹುದೇ ಎಂಬ ಬಾಲ್ಯ ಸಹಜ ಕುತೂಹಲದಿಂದ ಕಣ್ಣರಳಿಸಿ ಹುಡುಕುತ್ತಿದ್ದೆವು. ಯಾವುದೋ ಸರಸರ ಸಪ್ಪಳ ಕೇಳಿದರೆ ಕಾಡುಕೋಳಿ ಓಡಿಹೋಗಿರಬೇಕು ನೋಡಲಾಗುತ್ತಿತ್ತಲ್ಲಾ ಅಯ್ಯೋ ದೇವರೇ ಎಂದು ವಿಷಾದಪಡುವುದೂ ಇತ್ತು! ನೀರಿನ ಅವಳೆಗೆ ಮರದ ಬೊಡ್ಡೆಯೊಂದು ಅಡ್ಡ ಬಿದ್ದು ನೀರು ಬೇರೆಡೆಗೆ ಹರಿದುಹೋಗುತ್ತಿತ್ತಾದ್ದರಿಂದ ನೀರು ಕೆಳಪ್ರಾಂತದಲ್ಲಿರುವ ನಮ್ಮ ಜಮೀನಿಗೆ ಬರುವುದು ನಿಂತಿತ್ತು, ಇದು ಗಾಳಿ-ಮಳೆಯ, ಪ್ರಾಣಿಗಳ ಓಡಾಟದ ಪರಿಣಾಮವಾಗಿ ಆಗಾಗ ಮರುಕಳಿಸುವ ನೈಸರ್ಗಿಕ ಪ್ರಕ್ರಿಯೆಯಾಗಿತ್ತು.

ಜಮೀನಿನಲ್ಲಿ ಹಾಕಿರುವ ಮಾಳಗಳಲ್ಲಿ ಸಾಯಂಕಾಲದ ಹೊತ್ತಿಗೆ ಹೋಗಿ ಕೂತುಬಿಟ್ಟರೆ ಮಾವನ ಮಕ್ಕಳ ಜೊತೆಗೆ ಹುಲಿ, ಕರಡಿ, ಕತ್ತೆಕಿರುಬ ಮೊದಲಾದ ಪ್ರಾಣಿಗಳ ಸುದ್ದಿ. ಅವರುಗಳೂ ಆಗಾಗ " ಹುಲಿ ನಾಕು ದಿನದ ಕೆಳಗೆ ಅಲ್ಲಿ ಬಂದಿತ್ತು ಇಲ್ಲಿ ಬಂದಿತ್ತು " ಎಂಬ ಘಟನೆಗಳನ್ನು ಮೆಲುಕುಹಾಕುತ್ತಿದ್ದರು. ಜಮೀನಿನಲ್ಲಿ ಮಾವ ಸಾಕಿದ ಹಸುಕರು-ಹೋರಿಗಳು ನಿತ್ಯ ಕಾಡಿಗೆ ಹಸಿರು ಮೇವರಸಿ ಹೋಗುತ್ತಿದ್ದವು. ಸಾಯಂಕಾಲ ೫ ಗಂಟೆಗೆಲ್ಲಾ ಅವುಗಳನ್ನು ಹುಡುಕಿ ಮರಳಿಸಿಕೊಂಡು ಬರುತ್ತಿದ್ದರು. ಒಮ್ಮೆ ಒಂದು ಹೋರಿ ಗುಂಪಿನಿಂದ ಬೇರೆಯಾಗಿಬಿಟ್ಟಿತ್ತು. ಆ ದಿನ ಮಾವನವರಿಗೆ ಅದು ಹೇಗೂ ಹುಲಿಯ ಬಾಯಿಗೆ ಬಿತ್ತು ಎಂದೇ ಅನಿಸಿತ್ತಂತೆ. ಆ ರಾತ್ರಿ ಮಾವ ಮತ್ತು ಮನೆಯವರೆಲ್ಲಾ ಬಹಳ ಹೊತ್ತು ಚಿಂತೆಗೀಡಾಗಿದ್ದರು. ಮಾವ ಇನ್ನೇನು ಸರಿಯಾಗಿ ಊಟವನ್ನೂ ಮಾಡದೇ "ದೇವರು ಇಟ್ಟಹಾಗಾಗಲಿ” ಎಂದುಕೊಂಡು ಕೋವಿ ಹೆಗಲಿಗೇರಿಸಿಕೊಂಡು ಗದ್ದೆಯ ಮಾಳಕ್ಕೆ ಹೊರಟಿದ್ದಾಗ ಕೊಟ್ಟಿಗೆಯ ಹತ್ತಿರ ಬೆದರಿದ ಧ್ವನಿಯಲ್ಲಿ "ಅಂಬಾ ಅಂಬಾ " ಎಂದು ಒಂದೇ ಸಮನೆ ಕೂಗುತ್ತಿದ್ದ ಹೋರಿ ಕಂಡುಬಂದಿತ್ತು. ನಿಜ ಅದನ್ನು ಹುಲಿ ಅಟ್ಟಿಸಿಕೊಂಡು ಮೈಮೇಲೆ ಹಾರಿ ತನ್ನ ಪಂಜಾಗಳಿಂದ ಸಾಕಷ್ಟು ಹೊಡೆದಿತ್ತು. ಇಡೀ ಮೈಯ್ಯೆಲ್ಲಾ ರಕ್ತಸಿಕ್ತವಾಗಿತ್ತು. ಆದರೂ ಆ ಹೋರಿ ತಪ್ಪಿಸಿಕೊಂಡು ಬದುಕುಳಿದು ಬಂದಿತ್ತು! ಆ ಹೋರಿಯನ್ನು ನಾನೂ ಕಣ್ಣಾರೆ ಕಂಡಿದ್ದೇನೆ. ಅದರ ಮೈಮೇಲೆ ಕೆಲವೆಡೆ ಮಾಸಿದ ಗಾಯದ ಕಲೆಗಳಿದ್ದವು. [ಇದಾದ ಕೆಲವು ವರ್ಷಗಳನಂತರ ’ಗಾಂವ್ ಕಾ ಶೇರ್’ ಹಿಂದೀ ಪಾಠವನ್ನು ನಾನೋದಿದ್ದೆ. ಅದರಲ್ಲಿರುವ ಹೋರಿಗೂ ನಾನು ಹೇಳಿದ ಹೋರಿಗೂ ವ್ಯತ್ಯಾಸ ಕಾಣಲಿಲ್ಲ.] ಇಂತಹ ರೋಮಾಂಚಕ ಕಾನನದ ಕಥೆಗಳು ಮಕ್ಕಳಾದ ನಮ್ಮನ್ನು ಬಹಳವಾಗಿ ತಟ್ಟುತ್ತಿದ್ದವು.

ಹುಲಿ ಹೇಗಿರಬಹುದು? ಅದು ಪೊದೆಯೊಳಗೆ ಅಡಗಿ ಕೂತು ಹೇಗೆ ಕದ್ದು ನೋಡಬಹುದು? ಹುಲಿಗೂ ಚಿರತೆಗೂ ಎದುರಾ ಬದುರಾ ಸಿಕ್ಕಿ ಜಗಳವಾದರೆ ಯಾವುದು ಗೆಲ್ಲಬಹುದು? ಚಿರತೆಯ ಕೂಗು ಹುಲಿಯ ಕೂಗಿಗಿಂತ ಭಿನ್ನ ಹೇಗೆ ? ಅಷ್ಟೆತ್ತರದ ಆನೆ ಮನಸ್ಸು ಮಾಡಿ ಕಾಲಿನಿಂದ ಝಾಡಿಸಿ ಒದ್ದರೆ ಹುಲಿಯೆಲ್ಲಾ ಯಾವ ಮಹಾ ಅಲ್ಲವೇ? ---ಎಂಬೀಥರದ ನೂರಾರು ಪ್ರಶ್ನೆ-ಮರುಪ್ರಶ್ನೆಗಳು ಉದ್ಭವಿಸಿ ಹುಲಿಯ ಬರುವಿಕೆಯನ್ನು ನಿರೀಕ್ಷಿಸುತ್ತಾ ಮಾಳದಲ್ಲೇ ಕಾಯುತ್ತಿದ್ದೆವು! [ಅಂದಿಗೆ ನಮಗೆ ನ್ಯಾಷನಲ್ ಜಿಯಾಗ್ರಫಿಕ್ ಮುಂತಾದ ವಾಹಿನಿಗಳಾಗಲೀ, ಟಿವಿ ಮಾಧ್ಯಮವಾಗಲೀ ಇರಲಿಲ್ಲವಲ್ಲಾ...ಅಸಲಿಗೆ ಬಹಳ ಹೊತ್ತು ವಿದ್ಯುತ್ ಸೌಲಭ್ಯ ಇರುವುದೇ ದೊಡ್ಡ ಉಪಕಾರವಾಗುತ್ತಿತ್ತು, ಹಾಗಂತ ಜಮೀನಿನಲ್ಲಿ ನಾವು ಪ್ರಾಥಮಿಕ ಶಾಲೆ ಮುಗಿಸುವವರೆಗೂ ವಿದ್ಯುತ್ ಸೌಲಭ್ಯ ಇರಲಿಲ್ಲ.] ಕತ್ತಲಾದಮೇಲೆ ಬ್ಯಾಟರಿ ಡೌನ್ ಆದ ವಾಹನದಂತೇ ನಮ್ಮ ಗತಿ ! ಒಳಗೊಳಗೇ ಪುಕುಪುಕು ಆರಂಭವಾಗಿ ಕಕ್ಕಸು ಬಂದೇ ಬಿಡುತ್ತದೇನೋ ಎಂದು ಭಾಸವಾಗಿ ನಿಧಾನಕ್ಕೆ ಎತ್ತರದ ಮಾಳದಿಂದ ಕೆಳಗಿಳಿದು ನಾವು ಮಾಳಕ್ಕೆ ಹೋಗಿದ್ದೇ ಸುಳ್ಳು ಎನ್ನುವ ರೀತಿಯಲ್ಲಿ ಮನೆ ಸೇರಿಕೊಳ್ಳುತ್ತಿದ್ದೆವು! [ಯಾರಿಗೋ ಹೇಳಬೇಡಿ,
ಇದು ನಮ್ನಿಮ್ಮಲ್ಲೇ ಆದ್ರಿಂದ ಹೇಳ್ತಾ ಇದೇನೆ; ಹುಲಿ ವಿಷಯ ನೋಡಿ! ಸಾಮಾನ್ಯದ್ದಾದ್ರೆ ತೊಂದ್ರೆ ಇಲ್ಲ, ಹಾಗೆಲ್ಲಾ ಹೆದರೋ ಮರಿಗಳಲ್ಲ ನಾವು ...... ಸುಮ್ನೆ ಯಾಕೆ ಅಂತ ಅಷ್ಟೇ!]


[ ಬಹಳ ವಿಸ್ತೃತವಾದುದರಿಂದ ಮುಂದಿನ ಭಾಗದಲ್ಲಿ ಓದೋಣ ಆಗದೇ... ?]

Thursday, January 26, 2012

ಪದ್ಮಶ್ರೀ ಪಡೆದ ಯಕ್ಷನಟಸಾರ್ವಭೌಮನಿಗೆ ಅಕ್ಷರಾಭಿನಂದನೆಗಳು !

ಭಸ್ಮಾಸುರ ವೇಷದ ಚಿತ್ರ ಋಣ : ಪ್ರಕಾಶ್ ಹೆಗಡೆ

ಪದ್ಮಶ್ರೀ ಪಡೆದ ಯಕ್ಷನಟಸಾರ್ವಭೌಮನಿಗೆ ಅಕ್ಷರಾಭಿನಂದನೆಗಳು !

ಹಳ್ಳಿ ಕೊಂಪೆಯ ಮುಗ್ಧ ಬಾಲಕನೊಬ್ಬನಿಗೆ ನರ್ತಿಸುವುದೇ ಬೇಕಾದದ್ದಾಗಿತ್ತು. ಹೇಳಿಕೇಳಿ ಶಾಲೆಗಳೂ ಜಾಸ್ತಿ ಇಲ್ಲದ ಕುಗ್ರಾಮಗಳ ಬೀಡಾದ ಉತ್ತರಕನ್ನಡದ, ಹೊನ್ನಾವರದ, ಹೊಸಾಕುಳಿಯಲ್ಲಿ ಚಿಟ್ಟಾಣಿ ಎಂಬುದೊಂದು ಚಿಕ್ಕ ಮಜರೆ! ಭಾಸ್ಕೇರಿ ಹೊಳೆಯ ಬದುವಿನಲ್ಲಿನ ಚಿಕ್ಕ ಕೇರಿ ಚಿಟ್ಟಾಣಿ ಒಬ್ಬನೇ ವ್ಯಕ್ತಿಯಿಂದಾಗಿ ಆ ಹೆಸರನ್ನೇ ಹಲವು ಜನ ಮೆಲುಕುವಂತೇ ಆದದ್ದು ಚಿಟ್ಟಾಣಿ ವಾಸಿಗರ ಸೌಭಾಗ್ಯ! ಅಂಗಳದ ತುದಿಯ ಬಚ್ಚಲ ಮೂಲೆಯಲ್ಲಿದ್ದ ಮಶಿನಿಂಗಳ[ಇದ್ದಿಲು]ವನ್ನು ತೇಯ್ದು ಕಪ್ಪು ಬಣ್ಣವನ್ನೂ ಕೆಮ್ಮಣ್ಣು,ಅರಿಶಿನ-ಕುಂಕುಮಗಳಿಂದ ಉಳಿದ ಬಣ್ಣಗಳನ್ನೂ ಮಾಡಿ ಆಡುತ್ತಿದ್ದ ಅಂದಿನ ಆ ದಿನಗಳಲ್ಲಿ ಹಿರಿಯರ ಕಣ್ಣುತಪ್ಪಿಸಿ ಹೊರಟಿದ್ದು ಗುಡ್ಡಧರೆಗಳ ಸಮತಟ್ಟಿನ ಪ್ರದೇಶಗಳಿಗೆ! ಶಾಲೆ ಕಲಿ ಎಂದು ತೀರಾ ಒತ್ತಾಯಿಸುವವರಿಲ್ಲ, ಖರ್ಚಿಗೆ ಜಾಸ್ತಿ ಹಣವೂ ಇಲ್ಲದ ಬಡಸ್ತಿಕೆಯಲ್ಲಿ ಮಗ ದೊಡ್ಡವನಾಗಿ ಇರುವ ಏನೋ ಅಲ್ಪ ಅಡಕೆ-ಪಡಕೆ ತೋಟ-ಗದ್ದೆಗಳಲ್ಲಿ ಕಾಟಾಕಸರಿ ಕೆಲಸಮಾಡಿಕೊಂಡು ಬದುಕನ್ನು ನಡೆಸಲಿ ಎಂಬುದು ಹಿರಿಯರ ಅಪೇಕ್ಷೆಯಾಗಿತ್ತು. ಆದರೆ ಮಗನ ಮನಸ್ಸಿನ ಭಾವನೆಗಳು ಕುಣಿಯತೊಡಗಿದ್ದು ಅವರಿಗೆ ಅರ್ಥವಾಗಿರಲೇ ಇಲ್ಲ!

ಚಿಟ್ಟಾಣಿ ಎಂಬೀ ಮಜರೆ ನಮ್ಮೂರಿಗೆ ಕೂಗಳತೆಯ ದೂರದ ಜಾಗ! ಬಾಲ್ಯದಿಂದಲೂ ನಾನು ಈ ಚಿಟ್ಟಾಣಿಯನ್ನೂ ಮತ್ತು ನಮ್ಮ ಕಲಾವಿದ ಚಿಟ್ಟಾಣಿಯನ್ನೂ ಕೇಳಿಬಲ್ಲೆ. ಶಾಲೆ ಓದದ ಬಾಲಕನಿಗೆ ಮಾತಿನ ಗಮ್ಮತ್ತು ಮೈಗೂಡಿರಲಿಲ್ಲ! ಸಾಹಿತ್ಯಕ ಶಬ್ದಭಂಡಾರವಿರಲಿಲ್ಲ. ಅವರದೇನಿದ್ದರೂ ಬರೇ ನರ್ತನ, ಹಾವ-ಭಾವ. ಮೋಹಿನಿಗೆ ಕಣ್ಣು ಹೊಡೆಯುವ ಭಸ್ಮಾಸುರನನ್ನು ನೋಡಿ ಅದೆಷ್ಟು ಜನ ಅದನ್ನೇ ಅಭ್ಯಾಸಮಾಡಿಯೂ ವಿಫಲರಾದರೋ ಗೊತ್ತಿಲ್ಲ! ಕಾಲು ಹಿಂದಕ್ಕೆ ಅಡ್ಡಡ್ಡ ಬೀಸುವ ಚಿಟ್ಟಾಣಿ ಕುಣಿತವೆಂದೇ ಕರೆಸಿಕೊಂಡ ಆ ಮಟ್ಟು ಯಕ್ಷರಂಗದಲ್ಲೇ ಬೇರೇ ಯಾರಿಗೂ ಸಾಧ್ಯವಾಗಲಿಲ್ಲ. ಬಾಲಕ ಯುವಕನಾಗುವ ಹೊತ್ತಿಗೆ ಆಗಿನ್ನೂ ಯಕ್ಷಕಲೆಗೆ ಅಷ್ಟೊಂದು ಪ್ರೋತ್ಸಾಹವಿರಲಿಲ್ಲ. ಕೆಲಸಕ್ಕೆ ಬಾರದವರು ಯಕ್ಷಗಾನ ಕುಣೀತಾರೆ ಎಂಬರ್ಥವೂ ಇತ್ತು ಎಂದಿಟ್ಟುಕೊಳ್ಳೋಣ! ಹುಡುಗಿ ಕೊಟ್ಟು ಮದುವೆಮಾಡುವುದಂತೂ ಯಾವ ಮಾವಂದಿರಿಗೂ ತೆಗೆದು ಹಾಕಿದ ವಿಷಯ! ಇಂತಹ ಕಾಲಘಟ್ಟದಲ್ಲಿ ಹಲವು ವೈರುಧ್ಯಗಳ ನಡುವೆ ತಾನು ಯಕ್ಷಗಾನಕ್ಕೇ ಮೀಸಲು ಎಂದು ಅದನ್ನೇ ಆತುಕೊಂಡ ಕಲಾವಿದ ರಾಮಚಂದ್ರ ಹೆಗಡೆಯವರು.

ವಾಸ್ತವಿಕವಾಗಿ ಮೂಡಲಪಾಯ ನಿಜವಾದ ಯಕ್ಷಗಾನವಲ್ಲ. ಯಕ್ಷಗಾನವೆಂಬುದು ಜಾನಪದವೂ ಅಲ್ಲ. ಯಕ್ಷಗಾನಕ್ಕೆ ದಕ್ಷಿಣೋತ್ತರಕನ್ನಡ [ಅಂದಿನ ಅವಿಭಜಿತ]ಜಿಲ್ಲೆಗಳ ಅನೇಕ ಕವಿಗಳ ರಸಭಾವಗಳು ಹೊಮ್ಮಿದ ಚಂದದ ಕೃತಿಗಳ ಆಧಾರವಿದೆ. ಯಕ್ಷಗಾನವೊಂದು ಸಮಗ್ರ ಕಲೆ ಎಂಬುದನ್ನು ಯಕ್ಷಗಾನದ ಕುರಿತಿರುವ ಹಿಂದಿನ ನನ್ನ ಬರಹಗಳಲ್ಲಿ ಎಷ್ಟೋ ಸಲ ಹೇಳಿದ್ದೇನೆ. ಮಹಾವಿಷ್ಣುವಿನ ದಶಾವತಾರದ ಪೌರಾಣಿಕ ಪ್ರಸಂಗಗಳನ್ನೇ ಇಲ್ಲೂ ಪ್ರಸಂಗಗಳೆಂದೇ ಬರೆದಿದ್ದಾರೆ! ತೆಂಕು, ಬಡಗು, ಬಡಾಬಡಗುಗಳೆಂಬ ಮೂರು ತಿಟ್ಟುಗಳಲ್ಲಿ ಯಕ್ಷಗಾನ ಪ್ರತಿಪಾದಿತವಾಗಿ ಇನ್ನೂ ಊರ್ಜಿತವಾಗಿದೆ. ತೆಂಕಿನ ವೇಷಗಳಲ್ಲಿ ನೃತ್ಯ ಮತ್ತು ಹಾವ-ಭಾವಕ್ಕೆ ಹೆಚ್ಚಿನ ಆದ್ಯತೆ ನೀಡದೇ ಆಕರ್ಷಕ ಬಣ್ಣಗಾರಿಕೆ ಮತ್ತು ಕಥಕ್ಕಳಿಯನ್ನು ಹೋಲುವ ವೇಷಭೂಷಣಗಳನ್ನು ಅಳವಡಿಸಿದ್ದರೆ ಬಡಗು ಮತ್ತು ಬಡಾಬಡಗುಗಳಲ್ಲಿ ಯಕ್ಷಗಾನಕ್ಕೆ ಪೊಗಡೆ, ಕಿರೀಟ ಇತ್ಯಾದಿಗಳೂ ಸೇರಿದಂತೇ ಅದರದ್ದೇ ಆದ ಸ್ವಂತಿಕೆಯ ವೇಷಭೂಷಣಗಳು ಅಳವಡಿಸಲ್ಪಟ್ಟಿವೆ. ಸಮಗ್ರ ಕಲೆಯ ದಿವ್ಯಾನುಭೂತಿಯನ್ನು ಬಡಾಬಡಗು ತಿಟ್ಟಿನಲ್ಲಿ ಮಾತ್ರ ಪರಿಪೂರ್ಣವಾಗಿ ಅನುಭವಿಸಲು ಸಾಧ್ಯ. ಕೇವಲ ಚಂಡೆ, ಮದ್ದಳೆ, ಹಾರ್ಮೋನಿಯಂ ಮತ್ತು ತಾಳಗಳಿಂದ ಹೊರಹೊಮ್ಮುವ ಕರ್ಣಾನಂದಕರ ಸಂಗೀತಕ್ಕೆ ಮರುಳಾಗದ ಜನವಿಲ್ಲ! ಯಾಕೆಂದರೆ ಯಕ್ಷಗಾನದಲ್ಲಿರುವ ಪ್ರತೀ ಹಾಡುಗಳೂ ಅಂದಿನ ಕವಿಗಳು ಹೊಸೆದವಾಗಿದ್ದು ಎಲ್ಲವೂ ಪ್ರಾಸಬದ್ಧವಾಗಿಯೂ ಛಂದೋಬದ್ಧವಾಗಿಯೂ, ವ್ಯಾಕರಣ ಶುದ್ಧವಾಗಿಯೂ ಇವೆ. ನನಗೆ ಸಾಹಿತ್ಯದ ಗೀಳು ಹಿಡಿಸಿದ್ದೇ ನಮ್ಮ ಈ ಯಕ್ಷಗಾನ ಕಲೆ. ಪುರಾತನ ಭಾರತದ ಮೂಲ ಸಂಸ್ಕೃತಿಯ ಮೌಲ್ಯಗಳನ್ನೂ ಆದರ್ಶಗಳನ್ನೂ ಎತ್ತಿ ಹಿಡಿಯುವ ಯಕ್ಷಗಾನ ಪುಸ್ತಕಗಳನ್ನೂ/ಮಹದ್ಗ್ರಂಥಗಳನ್ನೂ ಓದಲಾಗದ ಜನತೆಗೆ ಪೌರಾಣಿಕ ಕಥಾಹಂದರಗಳ ಮೂಲಕ ಅವುಗಳನ್ನು ತಲ್ಪಿಸುವಲ್ಲಿ ಯಶಸ್ವಿಯಾಗಿದೆ; ಚಿಕ್ಕ ಹುಡುಗನಾಗಿದ್ದ ಆ ಕಾಲದಲ್ಲಿ ಅದರ ಫಲಾನುಭವಿಗಳಲ್ಲಿ ನಾನೂ ಒಬ್ಬ!

ಚಿಟ್ಟಾಣಿಯವರ ಮೇಲೆ ನಾನು ಬರೆಯುತ್ತಿರುವುದು ಇದೇ ಮೊದಲಲ್ಲ; ಇದಕ್ಕೂ ಮೊದಲಿನ ಕಥೆಯನ್ನು ಇಲ್ಲಿ ನೀವು ಓದಬಹುದಾಗಿದೆ : ನಿನ್ನಯ ಬಲು ಹೇಳು ಮಾರುತಿಯನ್ನು ನಿರೀಕ್ಷಿಪೆನು.....ಚಿಕ್ಕ ವಯಸ್ಸಿನಲ್ಲಿ ನಾವೆಲ್ಲಾ ಕೇಳಿದ್ದು ಯಕ್ಷಗಾನದಲ್ಲಿ ಮೂಡ್ಕಣಿ ನಾರಾಯಣ ಹೆಗಡೆ, ಮೂರೂರು ದೇವರು ಹೆಗಡೆ, ಕಾಸರಕೋಡ ಸದಾನಂದ ಹೆಗಡೆ, ಕರ್ಕಿ ಪರಮ ಹಾಸ್ಯಗಾರರು, ಇವೇ ಮೊದಲಾದ ಹಳೆಯ ತಲೆಮಾರಿನ ಹೆಸರುಗಳು. ಆಗೆಲ್ಲಾ ಯಕ್ಷಗಾನವೆಂದರೆ ಬಯಲಾಟವೆಂದೇ ಕರೆಯುತ್ತಿದ್ದರು! ಬೇಸಿಗೆಯಲ್ಲಿ ಊರ ಪಕ್ಕದ ಗದ್ದೆ ಬಯಲುಗಳಲ್ಲಿ ಆಡುವ ಆಟ ಬಯಲಾಟ ಎನಿಸಿಕೊಂಡಿತ್ತು. ನಂತರ ಕೆರೆಮನೆ ಶಿವರಾಮ ಹೆಗಡೆಯವರು ಅದಕ್ಕೆ ಮೇಳದ ರೂಪಕೊಟ್ಟು ತಂಬು[ಟೆಂಟ್] ವ್ಯವಸ್ಥೆ, ರಂಜಸಜ್ಜಿಕೆಯ ವ್ಯವಸ್ಥೆ ಪರಿಕಲ್ಪಿಸಿಕೊಂಡು ವಾಣಿಜ್ಯದ/ವೃತ್ತಿಯ ಮೇಳವಾಗಿ ಮುನ್ನಡೆಸಿದರು. ಕಾಸರಕೋಡ ಸದಾನಂದ ಹೆಗಡೆಯವರ ಕೊನೆಯ ಪಾತ್ರ[ ೯೦ಕ್ಕೂ ಹೆಚ್ಚು ವಯಸ್ಸಿನ ಮುದುಕರಾಗಿದ್ದರಿಂದ ಕೇವಲ ವೇಷಹಾಕಿ ಮಾತಿನಾಡಿದ ಪಾತ್ರ], ಕೆರೆಮನೆ ಶಿವರಾಮ ಹೆಗಡೆಯವರ ಪಾತ್ರ, ಇತ್ತೀಚಿನವರೆಗೂ ಬದುಕಿದ್ದ ಕೆರೆಮನೆ ಶಂಭು ಹೆಗಡೆ-ಮಹಾಬಲ ಹೆಗಡೆಯವರುಗಳ ಪಾತ್ರವನ್ನು ನೋಡಿದ ಅನುಭವವಿದೆ. ಅದೇ ರೀತಿ ಚಿಟ್ಟಾಣಿಯವರ ಹಲವು ಪಾತ್ರಗಳನ್ನೂ ನಾನು ನೋಡಿದ್ದೇನೆ. ಒಬ್ಬೊಬ್ಬರಲ್ಲೂ ಭಿನ್ನ ಭಿನ್ನ ತಿಟ್ಟು ಸಾಮರ್ಥ್ಯಗಳನ್ನು ಕಂಡಿದ್ದೇನೆ. ನರ್ತನದಲ್ಲಿ ಚಿಟ್ಟಾಣಿಯವರಷ್ಟು ವೈಶಿಷ್ಟ್ಯ ಒಗ್ಗೂಡಿಸಿ ಮೆರೆದ ಕಲಾವಿದ ನನಗೆ ಬೇರೇ ಸಿಗಲಿಲ್ಲ!

ಒಂದಕೊಟ್ಟರೆ ಶಿವ ಇನ್ನೊಂದ ಕೊಡ ಎನ್ನುವಂತೇ ಅಭಿನಯ ಚಾತುರ್ಯವನ್ನು ಸಂಪೂರ್ಣವಾಗಿ ಅನುಗ್ರಹಿಸಿದ್ದ ಭಗವಂತ ಚಿಟ್ಟಾಣಿಗೆ ಮಾತುಗಾರಿಕೆಯ ಪ್ರಾವೀಣ್ಯತೆಯನ್ನು ಕೊಡಲಿಲ್ಲ. ಏನಿದ್ದರೂ ಕುಣಿತದಲ್ಲಿ-ಹಾವಭಾವ ಭಂಗಿಗಳಲ್ಲೇ ರಥ ಮುಂದಕ್ಕೆ ಹೊಡೆದುಕೊಂಡು ಹೋಗಬೇಕಾಗಿತ್ತು. ಆ ಅನಿವಾರ್ಯತೆ ಅವರನ್ನು ಚಿಂತನೆಗೆ ಹಚ್ಚಿ ಜನರನ್ನು ಕೇವಲ ತನ್ನ ಮುಖವರ್ಣಿಕೆ, ಮುಖದ ನರನಾಡಿಗಳಲ್ಲೂ ಕಣ್ಣುಗಳಲ್ಲೂ ಭಾವಸ್ಪಂದನ, ವಿಶಿಷ್ಟ ಭಂಗಿಗಳ ಕುಣಿತ ಇವುಗಳಿಂದಲೇ ತನ್ನತ್ತ ಸೆಳೆದುಕೊಂಡು ರಂಜಿಸುವ ಗತ್ತುಗಾರಿಕೆಯನ್ನು ಅವರು ಬೆಳೆಸಿಕೊಂಡರು. ಅಂದಿನ ಸಮಾಜದ ಅನೇಕರು ಅಕ್ಷರ ಓದಲು ಬಾರದ ಜನರಾಗಿದ್ದರೂ ಅಸಂಸ್ಕೃತರೇನಲ್ಲವಲ್ಲಾ ! ಮನುಷ್ಯನಿಗೆ ಮೂಲಭೂತವಾಗಿ ಬೇಕಾಗುವುದೇ ಆಂಗಿಕಾಭಿನಯ. ಇದನ್ನೇ ಬಾಡೀ ಲ್ಯಾಂಗ್ವೇಜ್ ಎನ್ನುತ್ತಾರಲ್ಲಾ, ಅಂತಹ ಬಾಡೀ ಲ್ಯಾಂಗ್ವೇಜ್ ಮೂಲಕವೇ ಚಿಟ್ಟಾಣಿ ಚಪ್ಪಾಳೆ ಗಿಟ್ಟಿಸಿದರು; ಒಪ್ಪುವಂತೇ ಮಂದಿಗೆ ಪಾತ್ರವನ್ನು ತೋರಿಸಿದರು. ದುರುಳರ ಪಾತ್ರಗಳಲ್ಲಿ ಅವರ ಪರಕಾಯಪ್ರವೇಶವೇ ಆಗಿಬಿಟ್ಟಿರುತ್ತಿತ್ತೋ ಎನ್ನುವಂತೇ ಅಂತಹ ಪಾತ್ರಗಳು ರಂಗಸ್ಥಳಕ್ಕೆ ಪ್ರವೇಶಿಸುವಾಗಲೇ ಅತಿವಿಶಿಷ್ಟ ಗತ್ತನ್ನು ಮೆರೆದ ತಾಕತ್ತು ಅವರದ್ದು. ನಾನಿನ್ನೂ ಹರೆಯಕ್ಕೆ ಬರುವ ಮೊದಲು ಕೊಳಗದ್ದೆ ತೇರಿನಲ್ಲೋ ಕವಲಕ್ಕಿಯಲ್ಲೋ ನಡೆಸಿದ [ಅಂದು ಅವರು ಅಮೃತೇಶ್ವರೀ ಯಕ್ಷಗಾನ ಮಂಡಳಿಯಲ್ಲಿದ್ದರು]ಆಟಗಳಲ್ಲಿ ಜನ ಟೆಂಟು ಹರಿಯುತ್ತಿದ್ದರು--ಇದರರ್ಥ ಏನೆಂದರೆ ಪ್ರೇಕ್ಷಕರು ಎಲ್ಲೆಲ್ಲಿಂದಲೋ ಕಿತ್ತೆದ್ದು ಬಂದು ಟಿಕೆಟ್ ಸಿಗದಾಗ ವಾಪಸ್ಸು ಹೋಗುವ ಪರಿಪಾಟ ಇರಲಿಲ್ಲ, ಬದಲಾಗಿ ಮೇಲೆಬಿದ್ದು ಹೇಗಾದರೂ ಮಾಡಿ ಒಳಗೆ ಪ್ರವೇಶ ಪಡೆದು ನಿಂತೇ ನೋಡಿದ ದಾಖಲೆಗಳು ಇವೆ.



ಉತ್ತರಕನ್ನಡದ ಹೊನ್ನಾವರದ ಗುಂಡಬಾಳೆ ವರ್ಷದಲ್ಲೀಗ ೬ ತಿಂಗಳು ಸತತ ಒಂದೇ ಕಡೆ ಯಕ್ಷಗಾನ ನಡೆಯುವ ಸ್ಥಳವಾಗಿದೆ. ಮೊದಲು ೩-೪ ತಿಂಗಳು ಮಾತ್ರ ನಡೆಯುತ್ತಿತ್ತು. ಅಲ್ಲಿನ ಮುಖ್ಯಪ್ರಾಣನಿಗೆ ಯಕ್ಷಗಾನವೆಂದರೆ ಎಲ್ಲಿಲ್ಲದ ಪ್ರೀತಿ! ಆತ ಜನರಿಂದ ಕೇಳುವ ಅತಿದೊಡ್ಡ ಹರಕೆಯೇ ಅದು! ಆತನ ಎದುರಿಗೆ ಯಕ್ಷಗಾನ ನಡೆಸಿ ಕಲಾವಿದರಿಗೆ ಸಂಭಾವನೆ ಕೊಡುವುದು ಒಂದು ಸೇವೆ. ಆ ಸೇವೆಯಿಂದ ಭಕ್ತ-ಭಾವುಕ ಜನರ ಇಷ್ಟಾರ್ಥ ಸಿದ್ಧಿ ! ಅದು ಇಂದಿಗೂ ನಡೆದಿದೆ. ಚಿಟ್ಟಾಣಿ ಮತ್ತು ಅವರ ಸಮಕಾಲೀನ ಬಹುತೇಕ ಕಲಾವಿದರು ಅಲ್ಲಿಯೇ ಅನೇಕ ದಿನಗಳಕಾಲ ಪಾತ್ರಪೋಷಿಸಿದ್ದಾರೆ. ಈಗಲೂ ವರ್ಷಕೊಮ್ಮೆಯಾದರೂ ಒಂದು ಪಾತ್ರವನ್ನು ಮಾಡಿ ಮುಖ್ಯಪ್ರಾಣನಿಗೆ ನಮಿಸಿ ಬರುವುದು ಅವರ ವಾಡಿಕೆ. ನಾವು ಚಿಕ್ಕವರಿದ್ದಾಗ ಅಲ್ಲಿಗೆ ವಾಹನ ಸೌಕರ್ಯ ಇರಲಿಲ್ಲ. ಅಡವಿಯ ಹಾದಿ. ಕಾಲುನಡಿಗೆಯಲ್ಲೇ ತೆರಳಬೇಕು. ನಮ್ಮೂರಿಂದ ಗುಂಡಬಾಳೆ ೬. ಕಿ. ಮೀ ದೂರ. ಚಿಟ್ಟಾಣಿ ಅಲ್ಲಿಗೆ ಬರುವುದು ಅನಿರೀಕ್ಷಿತವಾಗಿರುತ್ತಿತ್ತು. ಆದರೂ ಯಾವ ಜಾಹೀರಾತು ಕೂಡ ಇರದೇ ಚಿಟ್ಟಾಣಿ ಬರುತ್ತಾರೆ ಎಂಬ ಮೂಗ್ಗಾಳಿಯಿಂದಲೇ ಸುತ್ತಲ ಹತ್ತಾರು ಹಳ್ಳಿಗಳ ಜನ ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾಯಿಸಿ ಬಿಡುತ್ತಿದ್ದರು! ಒಂದೊಂದು ಪದ್ಯಕ್ಕೂ ಚಪ್ಪಾಳೆ ಚಪ್ಪಾಳೆ ಚಪ್ಪಾಳೆ! ಕಣ್ಣಿನ ಚರ್ಯೆಯನ್ನು ಗಮನಿಸಲಾಗಿ ಇಂತಿಂಥಾ ಕಡೆಗೇ ಕೂತುಕೊಳ್ಳ ಬಯಸುವ ಜನರೂ ಪ್ರೇಕ್ಷಕ ಗಣದಲ್ಲಿರುತ್ತಿದ್ದರು!

ಯಕ್ಷಗಾನದ ಮುಮ್ಮೇಳದ ಕಲಾವಿದನಿಗೆ ಹಿಮ್ಮೇಳದ ಉತ್ತಮ ಕಲಾವಿದರ ಸಾಥ್ ಬಹಳ ಮುಖ್ಯ. ಅಲ್ಲಿ ಕೆಲಸಕ್ಕೆ ಬಾರದ ವೃತ್ತಿಪರರಲ್ಲದ, ನಿಪುಣರಲ್ಲದ ಜನರಿದ್ದರೆ ಎಂತಹ ಕಲಾವಿದನನ್ನೂ ಅದು ಕಂಗೆಡಿಸುತ್ತದೆ. ಅಂತಹ ಸನ್ನಿವೇಶಗಳಲ್ಲೂ ತಾವೇ ತೂಗಿಸಿಕೊಂಡು ಹೋಗುವ ಚಾಕಚಕ್ಯತೆ ಚಿಟ್ಟಾಣಿಗೆ ಇತ್ತೆಂದರೆ ಜನ ಅವರನ್ನು ಎಷ್ಟು ಬಯಸಿದ್ದರು ಎಂಬುದನ್ನು ತಾವು ಅರಿತುಕೊಳ್ಳಬಹುದು. ಗುಂಡ್ಮಿ ಕಾಳಿಂಗ ನಾವುಡರು ಬಂದಮೇಲೆ ಭಾಗವತಿಕೆಯಲ್ಲಿ ಹೊಸ ಆಯಾಮಗಳನ್ನು ಅವರು ಹುಟ್ಟುಹಾಕಿದರು! ದುರ್ಗಪ್ಪ ಗುಡಿಗಾರರು ಮದ್ದಳೆಯನ್ನು ಮಾತನಾಡಿಸುತ್ತಿದ್ದರು ! ಇಂತಹ ಹಿಮ್ಮೇಳದ ಜೊತೆ " ನೀಲ ಗಗನದಲಿ ಮೋಡಗಳಾ ಕಂಡಾಗಲೆ ....ನವಿಲು ಕುಣಿಯುತಿದೆ .." ಎಂಬ ಶೃಂಗಾರ ರಸಪೂರಿತ ಸನ್ನಿವೇಶಕ್ಕೆ ಚಿಟ್ಟಾಣಿ ನವಿಲನ್ನೂ ನಾಚಿಸುವ ರೀತಿ ನರ್ತಿಸುತ್ತಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಇಂದು ಆ ಕಾಳಿಂಗನಾವುಡರಾಗಲೀ ದುರ್ಗಪ್ಪ ಗುಡಿಗಾರರಾಗಲೀ ಬದುಕಿಲ್ಲ. ಆದರೂ ಹೊಸ ಪೀಳಿಗೆಯ ಹಿಮ್ಮೇಳದ ಜೊತೆಗೆ ಹೆಜ್ಜೆಹಾಕುತ್ತಿರುವ ಚಿಟ್ಟಾಣಿಯವರಿಗೆ ಅದಾಗಲೇ ೭೭ ತುಂಬಿದೆ ಎಂದರೆ ನಂಬಲೂ ಆಗುತ್ತಿಲ್ಲ! ದೇಶ-ವಿದೇಶಗಳಲ್ಲಿ ಅವರಾಗಲೇ ಕುಣಿದು, ನರ್ತಿಸಿ, ಯಕ್ಷಗಾನ ಪ್ರದರ್ಶಿಸಿ ಹೆಸರುವಾಸಿಯಾಗಿದ್ದಾರೆ ಎಂಬುದು ಮಾತ್ರ ಗೊತ್ತು.

೬೦ ವಯಸ್ಸಿನ ನಂತರ " ನಮ್ದೆಲ್ಲಾ ಇನ್ನೆಂಥದಪ್ಪಾ ಊರು ಹೋಗು ಹೇಳ್ತು ಕಾಡು ಬಾ ಹೇಳ್ತು " ಎನ್ನುತ್ತಾ ಮೊಳಕಾಲುಗಳಿಗೆ ಎಣ್ಣೆ ಉಜ್ಜಿಕೊಳ್ಳುತ್ತಾ ಇರುವ ಅನೇಕರಿಗೆ ಚಿಟ್ಟಾಣಿ ಸೊಂಟ ಕುಲುಕಿಸಿ ಚಟ್ಟನೆ ಜಿಗಿಯುತ್ತಾ ಕುಣಿಯುವ ದೃಶ್ಯಕಂಡಾಗ ಏನಿದು ವಿಚಿತ್ರ ಎನ್ನಿಸಬಹುದು. ಚಿಟ್ಟಾಣಿಯ ಶರೀರದ ಎಂಜಿನ್ನಿಗೆ ಯಾವ ಕೀಲೆಣ್ಣೆಯನ್ನು ಪರಮಾತ್ಮ ಕೊಟ್ಟಿರಬಹುದು? ಸದಾ ಬೀಡಿ ಸೇದುವ ಚಿಟ್ಟಾಣಿಗೆ ಕವಳದ ಹಿಡಿಸುವುದಿಲ್ಲ. ಮೋಟು ಬೀಡಿಯನ್ನೂ ಕೈಗೆ ಇನ್ನೇನು ಬೆಂಕಿತಾಗುತ್ತದೆ ಎನ್ನುವವರೆಗೂ ದಮ್ಮು ಎಳೆದು ಆಮೇಲೆ ಬಿಸಾಕಿದರೇ ಅವರಿಗೆ ಸಮಾಧಾನ! ಚೌಕಿಯಲ್ಲಿ ವೇಷಕಟ್ಟಿಕೊಂಡು ಹಚ್ಚಿದ ಬೀಡಿಕಚ್ಚಿಕೊಂಡು ಅದರ ಹೊಗೆ ಒಳಗೂ ಹೊರಗೂ ಆಡುತ್ತಿರುವಾಗಲೇ ಅಲ್ಲೇ ಮುಂದಿನ ತನ್ನ ವೇಷದ ಪರಿಪೂರ್ಣ ಪರಿಕಲ್ಪನೆಯನ್ನು ಮನದಲ್ಲಿ ರೂಪಿಸಿಕೊಳ್ಳುವ ಚಿಟ್ಟಾಣಿಗೆ ಬೀಡಿ ಇಲ್ಲದಿದ್ದರೆ ಆಗುವುದೇ ಇಲ್ಲ! ಬೀಡೀ ಸೇದುವುದರಲ್ಲೂ ದಾಖಲೆಯನ್ನೇ ನಿರ್ಮಿಸಿರಬಹುದು-ಲೆಕ್ಕ ಇಟ್ಟವರಾರು ?

ಯಕ್ಷಗಾನ ಕಲೆಯನ್ನು ಆಸ್ವಾದಿಸುತ್ತಿದ್ದ ಜನ ಬೆಳಗಿನ ಜಾವ ೬ ಗಂಟೆಗೆ ಸುಮ್ಮನೆ ಪುಸಕ್ಕನೆ ಜಾಗ ಖಾಲಿ ಮಾಡುತ್ತಿದ್ದರು. ಯಕ್ಷಗಾನದಿಂದ ಸಿಗುವ ಸಂಭಾವನೆ ಬದುಕಿನ ಯಾವ ಮೂಲೆಗೆ ತಾಗುತ್ತಿರಲಿಲ್ಲ. ಅಂತಹ ದಿನಗಳಲ್ಲಿ ಅಂಗಡಿಗಳಲ್ಲಿ ಸಾಲಮಾಡಿ ಬದುಕಿದ ಬಡತನ ಇದೇ ನಮ್ಮ ಚಿಟ್ಟಾಣಿಯವರದ್ದು! ಚಿಟ್ಟಾಣಿಯ ಕಲೆಯ ಮೌಲ್ಯವರಿಯದ ಅಂಗಡಿಕಾರರಿಂದ " ಇನ್ನುಮೇಲೆ ಸಾಲ ಕೊಡುವುದಿಲ್ಲಾ" ಎನಿಸಿಕೊಂಡಿರಲೂ ಬಹುದು ಯಾಕೆಂದರೆ ಪಡೆದ ಸಾಲ ಮರಳಿಸಲು ಅವರು ಪಡಬೇಕಾಗಿದ್ದ ಪಾಡು ಹೇಳತೀರ. ಆದರೂ ನಿಧಾನವಾಗಿ ಪರಿಸ್ಥಿತಿಯಲ್ಲಿ ಬದಲಾವಣೆ ಬಂತು! ಅಲ್ಲಿಲ್ಲಿ ಸನ್ಮಾನಿಸಿ ಕೊಟ್ಟ ಹಣದಲ್ಲೇ ಚಿಕ್ಕದೊಂದು ಜಮೀನನ್ನು ಖರೀದಿಸಿದರು. ಹೊನ್ನಾವರದ ಅಳ್ಳಂಕಿಯ ಹತ್ತಿರದ ಗುಡೇಕೇರಿಯಲ್ಲಿ ಈಗಿನ ವಾಸ. ಮೂರು ಗಂಡುಮಕ್ಕಳು ಸುಬ್ರಹ್ಮಣ್ಯ, ನಾರಾಯಣ ಮತ್ತು ನರಸಿಂಹ. ಸುಬ್ರಹ್ಮಣ್ಯ ಮತ್ತು ನರಸಿಂಹ ಯಕ್ಷಗಾನ ಪಾತ್ರ ಮಾಡುತ್ತಾರೆ, ನಾರಾಯಣ ಮನೆಕಡೆ ಜಮೀನು-ಭೂಮಿ ನೋಡಿಕೊಳ್ಳುತ್ತಾನೆ. ಅವರ ಮಗಳನ್ನು ನಮ್ಮೂರಿಗೇ ಕೊಟ್ಟಿದ್ದಾರೆ. ನಮ್ಮೂರು ಹಡಿನಬಾಳದ ಶೇಡಿಕುಳಿ ಅವರ ಮಗಳಮನೆ. ಹೀಗಾಗಿ ನಮ್ಮೂರಿಗೆ ಅವರ ಸಂಬಂಧವೂ ಇದೆ ಅಂತಿಟ್ಕೊಳಿ. ಹಾಗಂತ ನಾನು ಊರು ಬಿಟ್ಟು ಬೆಂಗಳೂರು ಸೇರಿ ಎಷ್ಟೋ ವರ್ಷಗಳಾದರೂ ಆಗೀಗ ಅವರಿಗೆ ಕಲಾಕ್ಷೇತ್ರದಲ್ಲೋ ಏಡಿಏ ರಂಗಮಂದಿರದಲ್ಲೋ ಸಿಗುತ್ತಿದ್ದೇನೆ. ಈಗ ಪರವಾಗಿಲ್ಲ, ಉಪಜೀವನಕ್ಕೊಂದು ಆರ್ಥಿಕ ಆಧಾರವಾಗಿ ಜಮೀನಿದೆ; ಜೀವನ ಸುಲಲಿತವಾಗಿ ಸಾಗಿದೆ.

ಇಂತಹ ನಮ್ಮ ಚಿಟ್ಟಾಣಿಗೆ ಜನರಾಗಲೇ ನಟಸಾರ್ವಭೌಮ, ರಸಿಕರರಾಜ ಎಂದೆಲ್ಲಾ ನಾಮಕರಣ ಮಾಡಿದ್ದಾರೆ. ಅದನ್ನು ಸರಕಾರ ಕೊಡಬೇಕಾಗಿಲ್ಲ ಬಿಡಿ. ಊಟಕ್ಕುಂಟು ಆಟಕ್ಕಿಲ್ಲ ಎಂಬುದು ಇಲ್ಲಿನ ಗಾದೆ, ಅದು ಒಂದುಕಾಲಕ್ಕೆ ಯಕ್ಷಗಾನ ಕಲಾವಿದರಿಗೆ ವಿರುದ್ಧವಾಗಿ ಅಪ್ಲೈ ಆಗಿತ್ತು. ’ಆಟ’ಕ್ಕುಂಟು ಊಟಕ್ಕಿಲ್ಲ ಎಂದು! ಇಡೀ ರಾತ್ರಿ ಅಷ್ಟೆಲ್ಲಾ ನೋಡಿ ಚಪ್ಪಾಳೆಮೇಲೆ ಚಪ್ಪಾಳೆ ತಟ್ಟಿ ರಂಜನೆಗೊಳಗಾದ ಅದೇ ಜನ ಬೆಳಗಾದಮೇಲೆ ಚಿಟ್ಟಾಣಿ ಯಾರೋ ನಾವು ಯಾರೋ ಎನ್ನುವ ಹಾಗೇ ಹೊರಟುಬಿಡುತ್ತಿದ್ದರು. ಎಲ್ಲೋ ಅಲ್ಲಿಲ್ಲಿ ಯಾರೋ ಆತಿಥ್ಯ ನೀಡಿದರೆ ಅವರಲ್ಲಿ ಕಲಾವಿದರಾದವರು ತಮ್ಮ ಕಷ್ಟ-ಸುಖ ಹೇಳಿಕೊಳ್ಳಲಾದೀತೇ ? ಬೆಂಗಳೂರಿನಲ್ಲಿ ಕಡ್ತೋಕೆಯ ವಿ.ಆರ್ ಹೆಗಡೆಯವರು ’ಯಕ್ಷಗಾನ ಯೋಗಕ್ಷೇಮ ಅಭಿಯಾನ’ವನ್ನು ಆರಂಭಿಸಿದಮೇಲೆ ಒಮ್ಮೆ ಸನ್ಮಾನಿಸಿ ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ನೀಡುವ ಮೂಲಕ ನೆರವಾಗಿದ್ದರು. ಹೀಗೇ ದಕ್ಷಿಣೋತ್ತರ ಕನ್ನಡದ ತಿಳುವಳಿಕೆ ಉಳ್ಳ ಕೆಲವು ಜನ ಆಗಾಗ ಸನ್ಮಾನ ಮಾಡುತ್ತಾ ಚಿಕ್ಕಚಿಕ್ಕ ಮೊತ್ತವನ್ನು ಕೊಡುತ್ತಾ ಕಲಾವಿದನ ಬದುಕು ಇಂದಿನ ಸುಂದರ ಹಂತವನ್ನು ತಲ್ಪುವಲ್ಲಿ ಅನುಕೂಲವಾಯ್ತು. ಈಗ ಮಕ್ಕಳು ಬೆಳೆದಿದ್ದಾರೆ. ಮೊಮ್ಮಗ ಕೂಡ ಯಕ್ಷಗಾನ ಕುಣಿಯಬಲ್ಲ ಎಂದು ಕೇಳಿದ್ದೇನೆ-ನೋಡಿಲ್ಲ. ಮಗ ಸುಬ್ರಹ್ಮಣ್ಯ ಕುಣಿತ ಮತ್ತು ಮಾತು ಎರಡನ್ನೂ ತಕ್ಕಮಟ್ಟಿಗೆ ಮೇಳೈಸಿಕೊಂಡಿದ್ದಾರೆ. ನರಸಿಂಹನಿಗೆ ಅಪ್ಪನ ಕುಣಿತದ ಕೆಲವು ತಿಟ್ಟುಗಳು ಕರಗತವಾದರೂ ಮಾತಿನಲ್ಲಿ ತಾಕತ್ತಿಲ್ಲ!

ನಮಗೆಲ್ಲಾ ಟಿವಿ ಮಾಧ್ಯಮದಲ್ಲಿ ಬರುವ ಮಿಸ್ಟರ್ ಬೀನ್ ಪಾತ್ರಧಾರಿ ರೋವನ್ ಅಟ್ಕಿನ್ ಸನ್ ಬಹಳ ಇಷ್ಟ. ಅದು ದೇಶದ, ಭಾಷೆಯ ಹಂಗಿಲ್ಲದ ಮಾನವ ಸಹಜ ಭಾವನೆ! ಹಾಗೆಯೇ ಕೇವಲ ತನ್ನ ಆಕರ್ಷಕ ಕುಣಿತಗಳಿಂದ ಮೈನುಗ್ಗಾಗಿಸಿಕೊಂಡು ಇಂದಿಗೂ ಜನರನ್ನು ರಂಜಿಸುವ ಅಪೇಕ್ಷೆ ಹೊತ್ತಿರುವ ಚಿಟ್ಟಾಣಿಗೆ ಪದ್ಮಶ್ರೀ ಕಮ್ಮಿಯೇ; ಪದ್ಮಭೂಷಣ ಕೊಡಬೇಕಿತ್ತು. ಇರಲಿ ಯಕ್ಷಗಾನ ಕಲಾವಿದರಲ್ಲಿ ಪದ್ಮ ಪ್ರಶಸ್ತಿ ಪಡೆಯುವಲ್ಲಿ ಮೊದಲಿಗರಾಗಿ ಯಕ್ಷಗಾನ ರಂಗಕ್ಕೂ ಆ ಕೀರ್ತಿಯ ಗರಿಯನ್ನು ತಂದ ಸಾಧನೆ ಕಮ್ಮಿಯದೇನಲ್ಲ ಅದು ಅವರ ಮಾತಿನಲ್ಲಿ "ಬಯಸದೇ ಬಂದ ಭಾಗ್ಯ!" ಪ್ರಶಸ್ತಿಗಾಗಿ ಚಿಟ್ಟಾಣಿ ಎಂದೂ ಕುಣಿಯಲಿಲ್ಲ; ರಾಜಕೀಯ ಮಾಡಲಿಲ್ಲ. ಪ್ರೇಕ್ಷಕರ ಕಣ್ಣನೋಟದಲ್ಲಿ ಕಾಣುವ ಸಂತೃಪ್ತ ಭಾವವೇ ಅವರಿಗೆ ದಕ್ಕಿದ ಅತ್ಯಪೂರ್ವ ಪ್ರಶಸ್ತಿ ಎಂಬುದು ಅವರ ಅನಿಸಿಕೆ. ಸಭಾಂಗಣದಲ್ಲಿ ಯಾವುದೋ ಕಾರಣದಿಂದ ಜನರು ಕಮ್ಮಿ ಇದ್ದರೂ ತನ್ನ ಪಾತ್ರಪೋಷಣೆಯಲ್ಲಿ ಕುಣಿತದಲ್ಲಿ ’ಕಳ್ಳಬಿದ್ದ’ ಜನವಲ್ಲ ಅವರು! ಇದ್ದ ಜನರನ್ನು ಎಷ್ಟೇ ಸಂಖ್ಯೆಯಲ್ಲಿದ್ದರೂ ಅಭಿನಯದಲ್ಲಿ ಗುಲಗುಂಜಿ ತೂಕವನ್ನೂ ಕಮ್ಮಿ ಮಾಡದೇ ಆಡಿ ರಂಜಿಸಿದ ದಿನವೂ ಇದೆ. ದೈಹಿಕ ಅನಾರೋಗ್ಯದಿಂದ ಆಟಕ್ಕೆ ಬರಲಾಗುತ್ತಿಲ್ಲ ಎಂಬ ಸುದ್ದಿ ಬಂದಾಗ ಸೇರಿದ ಜನ ಬಹಳ ಸಿಟ್ಟಾಗುತ್ತಿದ್ದರು; ರೇಗುತ್ತಿದ್ದರು, ವ್ಯವಸ್ಥಾಪಕರಲ್ಲಿ ಜಗಳವಾಡುತ್ತಿದ್ದರು. ಇದನ್ನರಿತ ವ್ಯವಸ್ಥಾಪಕರು ’ಅನಿರೀಕ್ಷಿತವಾಗಿ ತಲೆದೋರಬಹುದಾದ ಬದಲಾವಣೆಗಳಿಗೆ ಪ್ರೇಕ್ಷಕರ ತುಂಬುಹೃದಯದ ಸಹಕಾರವನ್ನು ಬಯಸುತ್ತೇವೆ" ಎಂದು ಹ್ಯಾಂಡ್ ಬಿಲ್ಲಿನಲ್ಲಿ ಪ್ರಕಟಿಸುತ್ತಿದ್ದ ದಿನಮಾನವನ್ನು ಕಂಡಿದ್ದೇನೆ. ಜಗಳ ಮತ್ಯಾಕೂ ಅಲ್ಲ; ಇವತ್ತು ಭಸ್ಮಾಸುರನನ್ನು/ದುಷ್ಟಬುದ್ಧಿಯನ್ನು/ಕೀಚಕನನ್ನು /ಕೌರವನನ್ನು/ಶೃಂಗಾರ ರಾವಣನನ್ನು ನೋಡಲೇಬೇಕು ಎಂದು ಸಂಕಲ್ಪಿಸಿಕೊಂಡು ಬರುತ್ತಿದ್ದ ಪ್ರೇಕ್ಷಕರಿಗೆ ರಸಭಂಗವಾಗುವ ಸನ್ನಿವೇಶ ಎದುರಾದಾಗಿನ ವರ್ತನೆ ಅದಾಗಿರುತ್ತಿತ್ತು. ಅಮೃತೇಶ್ವರೀ, ಬಚ್ಚಗಾರು, ಪಂಚಲಿಂಗೇಶ್ವರ ಮೊದಲಾದ ಮೇಳಗಳಲ್ಲಿ ಕೆಲಸ ನಿರ್ವಹಿಸಿ ದಶಕದ ಹಿಂದೆ ’ವೀರಾಂಜನೇಯ ಯಕ್ಷಗಾನ ಮಂಡಳಿ’ ಎಂಬುದನ್ನು ಕಟ್ಟಿಕೊಂಡು ಯಕ್ಷಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇನ್ನೂ ಶತಮಾನ ಕಾಲ ನಮ್ಮೊಂದಿಗೆ ಇರಲಿ, ಅವರ ಶಕೆ ಅಡಗದಿರಲಿ, ಅವರ ಆ ಜೋಶ್ ಇಂದಿನ ಕಲಾವಿದರಿಗೆ ಮಾದರಿಯಾಗಲಿ ಎಂದು ಹಾರೈಸುತ್ತಾ ಅಭಿಮಾನಪೂರ್ವಕ ಅಭಿನಂದನೆಗಳನ್ನೂ, ವಂದನೆಗಳನ್ನೂ ಸಲ್ಲಿಸುತ್ತಿದ್ದೇನೆ, ಚಿಟ್ಟಾಣಿಯವರೇ ತಮಗೊಮ್ಮೆ ಸಾಷ್ಟಾಂಗ ನಮಸ್ಕಾರ.

Tuesday, January 24, 2012

’ಪದ್ಯಪಾನ’ಮತ್ತನಾಗುತ್ತ ಸಾಗಿದ ನಿನ್ನೆಯ ದಿನ !


’ಪದ್ಯಪಾನ’ಮತ್ತನಾಗುತ್ತ ಸಾಗಿದ ನಿನ್ನೆಯ ದಿನ !

ಭಾವುಕ ಮನಕ್ಕೆ ಧನ-ಕನಕದಿಂದ ಸುಖದ ಸೊಬಗಿಲ್ಲ. ಅದು ಚಿಂತಿಸುವ ವೈಖರಿಯೇ ಬೇರೆ! ಅಲ್ಲಿ ಭಾವನೆಗಳಿಗೆ ಬೆಲೆಯೇ ವಿನಃ ಮಿಕ್ಕುಳಿದವು ಗೌಣ. ಕವಿಜನಗಳು ಬಯಸುವುದು ಭಾವದೌತಣವನ್ನು.ಅವರ ಜೀವನ ಅತ್ಯಂತ ಆಡಂಬರದ್ದಲ್ಲ, ಬದಲಿಗೆ ಸಾದಾ ಸೀದಾ. ನಳನಳಿಸುವ ಬಣ್ಣದ ಬೆಡಗಿನ ಥಳುಕು ತುಂಬಿದ ಈ ಜಗದಲ್ಲಿ ಕಾವಿ ತೊಟ್ಟ ಸನ್ಯಾಸಿ ಒಂದು ಕಡೆಗಾದರೆ ಭಾವ ತೊಟ್ಟ ’ಭಾವ್ಯಾಸಿ’ ಇನ್ನೊಂದೆಡೆ. ಭಾವ ಲೋಕದ ಹಕ್ಕಿಗಳು ನರ್ತಿಸುವ ತಾಳಗತಿಗಳೇ ಬೇರೆ. ಅಲ್ಲಿ ಮಾಮೂಲೀ ಲೋಕದ ಖರ್ಚು-ವೆಚ್ಚ ಬೇಡುವ ಅಟಾಟೋಪಗಳಿರುವುದಿಲ್ಲ. ನೋಡಿದರೆ ದೂರದಿಂದ ಎಂತೆಂಥವರೋ ಎಂಬ ಧೋರಣೆಯನ್ನು ಹೊಂದಿರುವ ಇನ್ನೂ ಮೊಕ್ತಾ ನೋಡದ ಜನರಿಗೆ ನೇರವಾಗಿ ಅಂಥವರು ಮುಖಾಮುಖಿಯಾದಾಗ " ಓ ಇವ್ರೇನಾ ? " ಎಂಬ ಸಂದೇಹದ ಭಾವನೆ. "ಹೌದು ಅವರೇ" ಎಂದು ಇನ್ಯಾರೋ ಪರಿಚಿತರು ಹೇಳಿದಮೇಲೆ ಅವರೇ ಎಂಬುದನ್ನು ತಡವಾಗಿ ಒಪ್ಪಿಕೊಳ್ಳುವುದು.

ಅನೇಕ ಕಡೆ ಬಸ್ಸಿನಲ್ಲೋ ಗಾಡಿಯಲ್ಲೋ ಬುರ್ರನೆ ಬೆಂಗಳೂರಿಗರು ನಾವು ಸಾಗುತ್ತಿರುವಾಗ ಆಗಾಗ ಎದುರಾಗುವ ಗುಂಗುರು ಗೂದಲಿನ ಚಸ್ಮಾ ಧರಿಸಿದ ಉದ್ದನೆಯ ವ್ಯಕ್ತಿ ಶತಾವಧಾನಿ ಆರ್.ಗಣೇಶ್. ಹಾಗೇ ಗಣೇಶ್ ಎಂದರೆ ಎಷ್ಟೋ ಜನರಿದ್ದಾರೆ ಯಾರಿಗೂ ಗುರ್ತು ಸಿಗುವುಇದಿಲ್ಲ; ಅದೇ ’ಶತಾವಧಾನಿ’ ಎನ್ನುವ ಪದ ಹೆಸರಿನ ಹಿಂದೆ ಸೇರ್ಪಡೆಯಾಗಿಬಿಟ್ಟರೆ ಗೊತ್ತು ನಮ್ಮ ಮಂದಿಗೆ- ಇಡೀ ಕರ್ನಾಟಕಕ್ಕೇ ಆ ಹೆಸರಿನ ವ್ಯಕ್ತಿ ಒಬ್ಬರೇ, ಒಬ್ಬರೇ ಮತ್ತು ಒಬ್ಬರೇ! ಮಹಾಭಾರತದಲ್ಲಿ ಸವ್ಯಸಾಚಿ ಎಂಬ ಪದಪ್ರಯೋಗವಿದೆ. ಅದು ಅರ್ಜುನನಿಗೆ ಮಾತ್ರ ಲಾಗು. ಅದು ಏಕಲವ್ಯನಿಗೂ ದಕ್ಕಬಾರದೆಂಬ ಉದ್ದೇಶದಿಂದ ದ್ರೋಣರು ಅವನ ಹೆಬ್ಬೆರಳನ್ನೇ ಗುರುದಕ್ಷಿಣೆಯನ್ನಾಗಿ ಕೇಳಿ ಪಡೆದುಬಿಟ್ಟರು ಪಾಪ. ಸವ್ಯಸಾಚಿ ಏಕಮೇವಾದ್ವಿತೀಯ. ಎರಡನೇ ವ್ಯಕ್ತಿ ಎಂಬಮಾತು ಅಲ್ಲಿರುವುದೇ ಇಲ್ಲ. ಅದೇ ರೀತಿ ನಮ್ಮ ಈ ಕನ್ನಡನಾಡಿನಲ್ಲಿ ಶತಾವಧಾನ ನಡೆಸುವ ಪುಣ್ಯವಂತ ಒಬ್ಬರಿದ್ದರೆ ಅವರೊಬ್ಬರೇ ಶತಾವಧಾನಿ ಆರ್. ಗಣೇಶ್.

’ಅವಧಾನ ಕಲೆ’ ಎಂಬ ಅವರ ಥೀಸಿಸ್ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅರ್ಪಿತವಾದಾಗ ಅಲ್ಲಿ ಅದನ್ನು ಪರಿಶೀಲಿಸುವ ಮಹಾನುಭಾವರಾಗಲೀ ಪರಿಣತರಾಗಲೀ ಯಾರೂ ಇರಲಿಲ್ಲ! ಆಮೇಲೆ ವಿದ್ವಾನ್ ರಂಗನಾಥ ಶರ್ಮರು ಮತ್ತು ವಿದ್ವಾನ್ ಟಿ.ವಿ.ವೇಂಕಟಾಚಲಶಾಸ್ತ್ರಿಗಳು[ಈ ಇಬ್ಬರಲ್ಲಿ ರಂಗನಾಥ ಶರ್ಮರು ಸಂಸ್ಕೃತ ಮತ್ತು ಕನ್ನಡದ ಘನ ವಿದ್ವಾಂಸರೂ ಹೊಸ ಮತ್ತು ಹಳಗನ್ನಡ ಕಾವ್ಯವನ್ನು ವ್ಯಾಖ್ಯಾನಿಸ ಬಲ್ಲ ತಾಕತ್ತಿನವರೂ ಹಲವು ಕೃತಿಗಳ ಲೇಖಕರೂ ಆಗಿದ್ದರೆ, ಶಾಸ್ತ್ರಿಗಳು ಮೈಸೂರುವಿ.ವಿ.ಯಲ್ಲಿದ್ದ ಮಹಾವಿದ್ವಾಂಸರು, ಹಳಗನ್ನಡಭಾಷೆ-ಛಂದಸ್ಸು-ವ್ಯಾಕರಣ- ಶಾಸನ - ನಿಘಂಟು - ಚಿತ್ರಕವಿತೆ ಮುಂತಾದ ವಿಷಯಗಳಲ್ಲಿ ಕನ್ನಡಕ್ಕಿಂದು ಕಟ್ಟಕಡೆಯ ನಿರ್ಣಯವಾಗಿ ಹೇಳಬಲ್ಲವರೆಂದರೆ ಅವರೊಬ್ಬರೇ! ಶತಾಧಿಕಗ್ರಂಥಕರ್ತರು ಕೂಡ. ] ಸೇರಿ ಅದನ್ನು ಓದಿ, ಅರ್ಥೈಸಿಕೊಂಡು ಅದನ್ನು ಒಪ್ಪಿ ವಿಶ್ವವಿದ್ಯಾಲಯಕ್ಕೆ ಡಿ.ಲಿಟ್ ಕೊಡುವಂತೇ ಸಲಹೆ ನೀಡಿದರು! ಒಂದುಕಾಲಕ್ಕೆ ಕರ್ನಾಟಕದ ಬಹಳ ಕಡೆ ಇದ್ದ ಕುಟುಂಬಗಳು ಅವಧಾನಿ ಎಂಬ ಅಡ್ಡ ಹೆಸರನ್ನು ಹೊಂದಿದ್ದು ಅವರು ಅವಧಾನ ಕಲೆಯನ್ನು ನಡೆಸಿದ್ದರು ಎಂಬುದು ತಿಳಿಯುತ್ತದೆ. ಬರುಬರುತ್ತಾ ಅವಧಾನ ಕಲೆ ಸಮಾಜದಲ್ಲಿ ಕಾಣದಾಗಿತ್ತು, ಮರೆಯಾಗಿ ಹೋಗಿತ್ತು. ನಮ್ಮ ಚಿಕ್ಕಂದಿನಲ್ಲಿ ನಾವು ಅಲ್ಲಲ್ಲಿ ಅವಧಾನಿ ಎಂಬ ಹೆಸರನ್ನು ಕೇಳಿದ್ದೆವಾದರೂ "ಪಾಪ ದಾನ ಜಾಸ್ತಿ ಕೊಟ್ಟಿರಬೇಕು ಅದಕ್ಕೇ ಅವಧಾನಿ ಎನ್ನುತ್ತಾರೋ ಏನೋ" ಎಂತಲೋ "ಅವರು ಅವಧೂತರ ಸಂಗಡ ಸಹಾಯಕರಾಗಿ ಅವರ ಕೈಕೆಲಸಕ್ಕೆ ಇರುವವರಿರಬೇಕು" ಎಂತಲೋ ಪರಸ್ಪರ ಹೇಳಿಕೊಳ್ಳುವುದಿತ್ತು! ಪ್ರಾಯಶಃ ನಮ್ಮ ಹಿರಿಯರಿಗೂ ’ಅವಧಾನಿ’ ಹೆಸರಿನ ಮಹಿಮೆ ಗೊತ್ತಿತ್ತೋ ಇಲ್ಲವೋ ಕೇಳಿದವರ್ಯಾರು! ಏಕವ್ಯಕ್ತಿ ಏಕಕಾಲಕ್ಕೆ ಅನೇಕ ವ್ಯಕ್ತಿಗಳ ಸಂಖ್ಯಾಬಂಧ-ಚಕ್ರಬಂಧ-ಪದಬಂಧಗಳನ್ನು ಕರಾರುಗಳ ಸಹಿತ ಛಲವಾಗಿ ಸ್ವೀಕರಿಸಿ ಅದನ್ನು ನಿರ್ವಹಿಸುವ ಕ್ರಮ ಅವಧಾನ. ಅದರಲ್ಲಿ ಸಾಹಿತ್ಯ, ಕಾವ್ಯ, ಮೀಮಾಂಸೆ, ತರ್ಕ, ವ್ಯಾಕರಣ, ದತ್ತಪದ, ಸಂಖ್ಯಾಬಂಧ, ಛಂದಸ್ಸು, ಅಲಂಕಾರ, ಉಪಮೆ, ಶಾಸ್ತ್ರ, ರಾಜಕೀಯ, ಪ್ರಸಕ್ತ ಸಮಾಜದ ವಿದ್ಯಮಾನ ಒಂದೇ ಎರಡೇ ಎಲ್ಲವನ್ನೂ ನಿಭಾಯಿಸುವ ವ್ಯವಧಾನವಿದ್ದರೆ ಅದು ಅವಧಾನಿಗೆ ಮಾತ್ರವೇ ಹೊರತು ಇನ್ಯಾರಾದರೂ ಆದರೆ ಎಲ್ಲವನ್ನೂ ಕಿತ್ತು ಬಿಸಾಕಿ ತಲೆನೋವೇ ಬೇಡಾ ಎಂದು ಎದ್ದೋಡಿ ಹೋಗುವಂತಹ ಜಟಿಲ ಸಮಸ್ಯೆಗಳ ಸುಕ್ಕುಬಿಡಿಸುವ ಕುಸುರಿಕೆಲಸ! ಭಾಗ್ಯಶಾಲಿಗಳಾದ ನಾವು ಇಂದಿಗೆ ನಮ್ಮ ಸಮಕಾಲೀನರಾಗಿ ಗಣೇಶರನ್ನು ಪಡೆದಿದ್ದೇವೆ ಎನ್ನುತ್ತಾ ಬೀಗಲು, ಹೆಮ್ಮೆ ಪಡಲು ಹಿಂಜರಿಯಬೇಕಿಲ್ಲ.

ಸರ್ವಭಾಷಾಮಯೀ ಭಾಷಾ ಎಂದೆನಿಸಿಕೊಂಡ ’ಸಿರಿಭೂವಲಯ’ ಗ್ರಂಥದಂತೇ ಬಹುಭಾಷಾ ಕೋವಿದರಾದ ಗಣೇಶರು ಮಾತೃಭಾಷೆ ಕನ್ನಡಕ್ಕಾಗಿ ತಮ್ಮ ಸಕಲವನ್ನೂ ತೊಡಗಿಸಿ ಅಖಂಡವಾಗಿ ಕನ್ನಡ ಸೇವೆ ಮಾಡುತ್ತಿರುವ ಶಕ್ತಿ. ಶಕ್ತಿ ಏಕೆಂದರೆ ಇವತ್ತಿನ ಯಾವ ಕವಿ-ಸಾಹಿತಿಗೂ ಇರದ ಅಪ್ರತಿಮ ಮೇಧಾ ಶಕ್ತಿಯನ್ನು ಪಡೆದು ನಡೆದಾಡುವ ಗಣಕಯಂತ್ರವೆನಿಸಿದ ಗಣೇಶರು ಕೃತಿ ರಚನೆಯಲ್ಲಿ ತೊಡಗಿದ್ದರೆ ಇಷ್ಟೊತ್ತಿಗೆ ಅದು ಎಷ್ಟು ಸಾವಿರವಾಗುತ್ತಿತ್ತೋ ಗೊತ್ತಾಗದಲ್ಲಾ! ಎಂತಹ ಕ್ಲಿಷ್ಟ, ಸಂದಿಗ್ಧ ಸಮಸ್ಯೆಗಳನ್ನೂ ಒಳಸುಳಿಗಳನ್ನರಿತು ಬಾಳೆಹಣ್ಣು ಸುಲಿದಷ್ಟೇ ಸುಲಭವಾಗಿ ತಿಳಿಸಿಕೊಡುವ, ಬಿಡಿಸಿಕೊಡುವ ಅರ್ಹತೆ ಇರುವುದು, ಆ ಯೋಗ್ಯತೆ ಇರುವುದು ಗಣೇಶರಿಗೆ ಮಾತ್ರ ಎಂದರೆ ತಪ್ಪಾಗಲಾರದು ಎನಿಸುತ್ತದೆ. ಒಬ್ಬ ತಂತ್ರಜ್ಞನಾಗಿ ನಂತರ ಐಚ್ಛಿಕ ವಿಸ್ತರವಾದ ಸಾರಸ್ವತ ಲೋಕಕ್ಕೆ ಹೊಕ್ಕ ಈ ಗಣೇಶರಿಗೂ ಮೇಲೆ ಕೂತಿರುವ ಆ ಗಣೇಶನಿಗೂ ಅನೇಕ ಸಾಮ್ಯತೆ ಕಾಣುತ್ತದೆ-ಬುದ್ಧಿಯಲ್ಲಿ! ದೈಹಿಕವಾಗಿ ಅದು ಅಜ-ಗಜಾಂತರ ಬಿಡಿ ಮಾತಾಡುವ ಪ್ರಶ್ನೆಯೇ ಇಲ್ಲ, ಇವರು ಕೃಶ ಶರೀರಿ ಆತ ಡೊಳ್ಳಿನ ಮುದ್ದು ಗಣಪ. ಅನೇಕರು ನನ್ನಲ್ಲಿ ಕೇಳುತ್ತಿದ್ದುದು ಒಂದೇ ಪ್ರಶ್ನೆ ತಂತ್ರಜ್ಞನೊಬ್ಬ ಈ ರಂಗದಲ್ಲಿ ಸಾಧಿಸುವುದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧದಂತೇ ಅಲ್ಲವೇ ಎಂದು ? ಆದರೆ ಕನ್ನಡ ಸಾಹಿತ್ಯಲೋಕವನ್ನು ತಿಳಿಯ ಹೊರಟರೆ ಇಂದು ಮುಂಚೂಣಿಯಲ್ಲಿ ಕಾರ್ಯನಿರತರಾಗಿರುವ ಕವಿ-ಸಾಹಿತಿಗಳಲ್ಲಿ ತಂತ್ರಜ್ಞರೇ ಹೆಚ್ಚಿಗೆ ಇದ್ದಾರೆ ಎಂಬುದು ಮನಗಾಣಬೇಕಾದ ವಿಷಯ.

ಮೆಕಾನಿಕಲ್ ಎಂಜಿನೀಯರಿಂಗ್ ಮುಗಿಸಿದ ಮೇಲೆ ಉನ್ನತ ಹುದ್ದೆಗಳು ಕೈ ಬೀಸಿ ಕರೆದರೂ ಅವುಗಳಿಗೆ ಟಾ ಟಾ ಹೇಳಿದ ಗಣೇಶರು ಓದಿನ ಅರಮನೆಯಲ್ಲಿ ಸ್ವತಃ ತಮ್ಮನ್ನು ತಾವೇ ರಂಜಿಸಿಕೊಳ್ಳುತ್ತಾ ಸಮಾಜದ ಸಾಹಿತ್ಯ ಪ್ರೇಮಿಗಳ ಸೇವೆಗೆ ತೊಡಗಿದ್ದು ನಮ್ಮ ಸೌಭಾಗ್ಯ ಎನ್ನದೇ ಇನ್ನೇನು ಹೇಳಲಿ ? ಇಷ್ಟೆಲ್ಲಾ ಇದ್ದೂ ಅವರು ಏನೂ ಇಲ್ಲವೇನೋ ಎಂಬ ರೀತಿಯಲ್ಲಿ ಇರುವ ಸರಳತೆ ಇದೆಯಲ್ಲಾ ಅದನ್ನು ನೆನೆದಾಗ ಯಾರೋ ನಮ್ಮಣ್ಣ ಮಾತಾಡಿದ ಅನುಭವ ಆಗುತ್ತದೆ. ಅವರ ಒಡನಾಟಕ್ಕಾಗಿ ಹಗಲೂ ರಾತ್ರಿ ಅವರಲ್ಲಿಗೆ ತೆರಳಿ ತೊಂದರೆ ಕೊಟ್ಟಿದ್ದುಂಟು. ಆದರೂ ಕೊಂಚವೂ ಬೇಸರಿಸದೇ ಪ್ರೀತಿಯಿಂದ ಕಂಡ ಅವರ ಸೌಜನ್ಯಕ್ಕೆ, ಆ ಸಜ್ಜನಿಕೆಗೆ ಆಜನ್ಮ ಪರ್ಯಂತ ಶರಣು. ಮುಪ್ಪಿನಲ್ಲಿ ಎಲ್ಲವನ್ನೂ ಮರೆತು ಮಗುವಿನಂತಾದ ಅಮ್ಮನನ್ನು ಮನೆಯಲ್ಲಿ ಸಂಭಾಳಿಸಿಕೊಳ್ಳುತ್ತಾ ಈ ಬ್ರಹ್ಮಚಾರಿ ಉದರಂಭರಣೆಗೆ ಆಹಾರ ತಾವೇ ಸಿದ್ಧಪಡಿಸಿಕೊಂಡು ಅಮ್ಮನಿಗೆ ತುತ್ತು ನೀಡಿ ಆಮೇಲೆ ತಾವು ಸ್ವೀಕರಿಸುತ್ತಾರೆ. ಮೊದಲೇ ಸಾಕಷ್ಟು ನನ್ನ ಲೇಖನಗಳಲ್ಲಿ ಹೇಳಿದಂತೇ ಕವಿ-ಸಾಹಿತಿಗಳಿಗೆ ತನ್ನ ನೋವು ನೋವಲ್ಲ, ಅದನ್ನೇ ನಲಿವೆಂದು ಸ್ವೀಕರಿಸಿ ಅದರಲ್ಲೇ ಇದ್ದು ಹಲವು ಕೃತಿಗಳಿಂದ ಸಮಾಜವನ್ನು ರಂಜಿಸುತ್ತಾರೆ ಎಂದು...ಅದು ಇಲ್ಲೂ ಸತ್ಯ ಎಂಬುದು ಮತ್ತೊಮ್ಮೆ ಕಾಣುವ ವಿಷಯ. ತಾನು ಕವಿಯೋ ಸಾಹಿತಿಯೋ ವಿಮರ್ಶಕನೋ ಎಂದು ಗಣೇಶರು ಹೇಳಿಕೊಳ್ಳುವುದಿಲ್ಲ. ಅವರನ್ನು ಜನ ಗುರುತಿಸಿದ್ದು ಶತಾವಧಾನಿ ಎಂದೇ! ಅದೇ ಹೆಸರು ಕಾಯಂ ಆಗಿಹೋಯ್ತು.

ಕನ್ನಡ ಸಾಹಿತ್ಯದಲ್ಲಿ ಛಂದೋಬದ್ಧ ಮತ್ತು ವ್ಯಾಕರಣ ಶುದ್ಧ ಕಾವ್ಯ ಬರೆಯುವವರ ಸಂಖ್ಯೆ ನಶಿಸುತ್ತಿದೆ, ಅದನ್ನು ಬೆಳೆಸಬೇಕೆಂಬ ಹಂಬಲದಿಂದ ’ಪದ್ಯಪಾನ’ ಎಂಬ ಜಾಲತಾಣವೊಂದನ್ನು ನಿರ್ಮಿಸಿ ಅನೇಕರಿಗೆ ಅವುಗಳನ್ನು ಕಲಿಸುತ್ತಿದ್ದಾರೆ, ಮಾರ್ಗದರ್ಶಕರಾಗಿದ್ದಾರೆ. ಆಸಕ್ತ ಹತ್ತಾರು ಕವಿ ಮನೋಭಾವದವರು ಅಲ್ಲಿ ತೊಡಗಿಕೊಂಡು ತಮ್ಮನ್ನು ರೀಫೈನ್ ಮೆಂಟ್ ಮಾಡಿಕೊಳ್ಳುತ್ತಿದ್ದಾರೆ. ಏಕಕಾಲದಲ್ಲಿ ಕವನ ಕೇಳಲೂ ಓದಲೂ ಸೊಗಸಾಗಿದ್ದು ಸ್ವಲ್ಪ ಹ್ಯೂಮರಸ್ ಅಗಿದ್ದರೆ, ಅದು ಛಂದೋಬದ್ಧ ಮತ್ತು ವ್ಯಾಕರಣ ಶುದ್ಧವಾಗಿದ್ದರೆ ಸಹಜವಾಗಿ ಅದು ಗೇಯವಾಗುತ್ತದೆ. ಕವನ ಗೇಯವಾದಾಗ ಬಾಯಿಂದ ಬಾಯಿಗೆ ಅದು ಹಬ್ಬುತ್ತದೆ. ಅನೇಕ ವೇದಿಕೆಗಳಲ್ಲಿ ಅದರ ಪ್ರಸ್ತುತಿ ಆಗಲೂ ಬಹುದು. ಜನಸಂದೋಹವನ್ನು ಸಮರ್ಪಕವಾಗಿ ತಲ್ಪಿ ಕವನದಲ್ಲಿನ ವಿಷಯ ಮನದಟ್ಟಾದಾಗ ರಚಿಸಿದ ವ್ಯಕ್ತಿಗೆ ಅದೊಂದು ಖುಷಿಯ ಸಂಗತಿಯಾಗುತ್ತದೆ. ಗದ್ಯದಲ್ಲಿ ಸಾವಿರ ಶಬ್ದಗಳಲ್ಲಿ ಹೇಳಲಾಗದ ಗಹನವಾದ ವಿಷಯವನ್ನು ಪದ್ಯದಲ್ಲಿ ಮೂರ್ನಾಲ್ಕು ಪದಗಳಿಂದ ಬಂಧಿಸುವ ಕಲೆ ಎಲ್ಲರಿಗೂ ಕರಗತವಲ್ಲ. ಅದೊಂದು ಎಣ್ಣೆಗಂಬ. ಹತ್ತಿದಷ್ಟೂ ಜಾರಿ ಜಾರಿ ಜಾರಿ ಬೀಳುವ ಪರಿಸ್ಥಿತಿಯಲ್ಲಿ ಹತ್ತು ಪುಟ ಬರೆದು-ಹರಿದು ದೂರ್ವಾಸಾವತಾರ ತಾಳಿ ಬಿಟ್ಟೆದ್ದು ಹೋಗುವ ಪೈಕಿಯ ಜನವೇ ಹೆಚ್ಚು! ಅಂತಹ ಮಲ್ಲಗಂಬವನ್ನು ಏರಿ ಅದರಲ್ಲೇ ಗಂಟೆಗಟ್ಟಲೆ ಕೂತು ಯೋಗಾಸನದ ಭಂಗಿಗಳನ್ನು ತೋರುವ ಪಟುವಿನಂತೇ ನವರಸಗಳನ್ನು ಸ್ಫುರಿಸುವ ಪದಪುಂಜಗಳಿಂದ ಕವನ ಕಟ್ಟುವುದು ಜಾಣ್ಮೆಯ ವಿಷಯ. ಇಲ್ಲಿ ಬರೆಯುವಾತ ಶಬ್ದ ಭಂಡಾರಿಯಾಗಿರಬೇಕು, ಭಾವುಕನಾಗಿರಬೇಕು, ಪ್ರಸಕ್ತ ವಿದ್ಯಮಾನಗಳನ್ನೂ ಪೂರ್ವದ ಘಟನೆಗಳನ್ನೂ ಅರಿತಿರುವವನಾಗಿರಬೇಕು, ಬರೆದ ಪದಗಳಿಂದ ಯಾರಿಗೂ ನೋವಾಗದ ರೀತಿ ಇರಬೇಕು ಮತ್ತು ಸಮಾಜಕ್ಕೆ ಯಾವುದಾದರೂ ಪ್ರಯೋಜನವಾಗುವ ವಸ್ತುವಿಷಯವನ್ನು ಕಾವ್ಯ ಒಳಗೊಂಡಿರಬೇಕು.

ನಮ್ಮ ಭಾವನೆಗಳಿಗೆ ಬೆಲೆಯೇ ಇಲ್ಲವೇ ಎಂಬ ನವ್ಯೋತ್ತರ ಕವಿಗಳಿಗೆ ನಾನು ಹೇಳುವುದಿಷ್ಟೇ : ಈಗೀಗ ಬರೆಯುತ್ತಿರುವ ಕೆಲವರ ಕವನಗಳನ್ನು ಗದ್ಯ ಎನ್ನಬೇಕೋ ಅಥವಾ ಪದ್ಯ ಎನ್ನಬೇಕೋ ತಿಳಿಯದಲ್ಲಾ ? ಎರಡರಲ್ಲಿ ಯಾವ ಲಿಂಗಕ್ಕೂ ಸೇರದ ವ್ಯಕ್ತಿಗಳ ಗುಂಪಿನ ಜನರ ರೀತಿ ಕಾವ್ಯ ಅಲ್ಲಿಗೇ ಸಲ್ಲುತ್ತದೆ ವಿನಃ ಅದು ಸರಿಯಾದ ಮಾರ್ಗ ಎಂದು ನನಗೆಂದೂ ಅನಿಸಲೇ ಇಲ್ಲ. ಯಾರೋ ಸ್ನೇಹಿತರು ಹೇಳಿದ್ದ ಹಾಗೇ ಪುಟಪೂರ್ತಿ ಬರೆದು ಎಡ ಬಲಗಳಲ್ಲಿ ಆ ಕಡೆ ಒಂದಿಂಚು ಈ ಕಡೆ ಒಂದಿಂಚು ಕತ್ತರಿಸಿದರೆ ಇಂದಿನ ಹಾಡು ಸಿದ್ಧ! ಅನೇಕ ಜನ ಅದನ್ನೇ ಮೆಚ್ಚಿ " ಬಹಳ ಭಾವವಿದೆ ಆಹಹಾ ಎಂಥಾ ಅರ್ಥಗರ್ಭಿತ" ಎನ್ನುವುದನ್ನು ಕಾಣುತ್ತಿದ್ದೇನೆ. ಕನ್ನಡದ ತರುಣ ಪೀಳಿಗೆಯಲ್ಲಿ ವಿದ್ವತ್ಪೂರ್ಣ ಕಾವ್ಯ-ಸಾಹಿತ್ಯವನ್ನು ಓದುವ ಅಭಿರುಚಿ ಕಮ್ಮಿಯಾಗಿದೆ; ಕಮ್ಮಿಯಾಗುತ್ತಿದೆ. ಸೆಲ್ಫ್ ಸರ್ವಿಸ್ ನಲ್ಲಿ ಇಡ್ಲಿವಡೆ ತಿಂದು ಅರ್ಧಕಾಫಿ ಕುಡಿದು ಕೈತೊಳೆದು ಬಸ್ ಏರುವ ಗಡಿಬಿಡಿಯಲ್ಲಿ, ಆ ಧಾವಂತದಲ್ಲಿ ಅವರಿಗೆ ಅರ್ಥವಾಗುವುದು ಕೇವಲ ನವ್ಯೋತ್ತರದ ಕವನಗಳು ಮಾತ್ರ!

ಸದೃಢವಾದ ಕಾವ್ಯ ಗೇಯತೆಯನ್ನು ಪಡೆದುಕೊಂಡು ಸಂಗೀತಗಾರನ ಕೈಗೆ ಸಿಕ್ಕಾಗ ಅದು ಹಾಡಲ್ಪಡುತ್ತದೆ. ಹಾಡಿದ ಹಾಡು ಸಪ್ತಸ್ವರಗಳನ್ನು ಮೇಳೈಸಿಕೊಂಡು ಕರ್ಣಾನಂದಕರ ವಾದ್ಯ ಸಂಗೀತಗಳನ್ನು ಜೊತೆಗೆ ಪೇರಿಸಿಕೊಂಡು ಕೇಳಲು ಹಿತಕರವಾಗಿರುತ್ತದೆ. ಕವನದ ಸಾಹಿತ್ಯ ಅರ್ಥವಾಗುತ್ತಿರುವಂತೆಯೇ ರಾಗ, ತಾಳ, ಲಯ ಸ್ವರಮೇಳಗಳು ಆ ಸಾಹಿತ್ಯಕ್ಕೆ ನೆಕ್ಲೇಸ್, ಹಾರ, ಉಂಗುರ, ವಡ್ಯಾಣಗಳಂತೇ ಆಭರಣಗಳ ರೀತಿ ಶೋಭಿಸುತ್ತವೆ. ಆನೆಗೆ ಅಲಂಕಾರವೇ ಎಂಬುದೊಂದು ಗಾದೆ ಇದೆಯಲ್ಲ! ಕವನವೇ ಅದ್ಭುತವಾಗಿದ್ದರೆ ಆಗ ಅದನ್ನು ಸಂಗೀತಕ್ಕೆ ಅಳವಡಿಸಿದಾಗ ಜಂಬೂಸವಾರಿಯ ಪ್ರಧಾನ ಆನೆಯಂತೇ ಅದು ಕಂಗೊಳಿಸುತ್ತದೆ; ಬಹುಸಂಖ್ಯಾಕರನ್ನು ಅದು ತಲ್ಪಲು ಸಾಧ್ಯವಾಗುತ್ತದೆ. ರುದ್ರ ನಮಕ-ಚಮಕ ಮಂತ್ರಗಳಂತೇ ಸ್ವರಬದ್ಧವಾದ ಸಂಗೀತ ಮನುಷ್ಯನಿಗೆ ಉತ್ತಮ ಆರೋಗ್ಯವನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ. ಇದನ್ನೆಲ್ಲಾ ಅರಿತಿದ್ದ ಹಿಂದಿನ ನಮ್ಮ ಕವಿಗಳು ಅದನ್ನು ಪಾಲಿಸುತ್ತಾ ಬಂದಿದ್ದರು. ಸಂಸ್ಕೃತದ ಎಲ್ಲಾ ಕವಿಗಳೂ ಅದನ್ನು ಪಾಲಿಸಿದ್ದಾರೆ. ಸಂಸ್ಕೃತ ಕನ್ನಡದ ಹಾಗಲ್ಲ, ಅದು ಹೇಗೆಲ್ಲಾ ಬರೆದರೂ ಸ್ವೀಕರಿಸುವುದಿಲ್ಲ- ಎಂಬುದು ಮಿತ್ರ ಕೊಳ್ಳೇಗಾಲದ ಮಂಜುನಾಥರ ಅಭಿಪ್ರಾಯ. ಅದನ್ನೇ ನಾನೂ ಹೇಳುತ್ತಿದ್ದೇನೆ. ಅದೇ ಜಾಡಿನಲ್ಲಿ ನಮ್ಮ ಕನ್ನಡ ಕಾವ್ಯ-ಸಾಹಿತ್ಯವೂ ಬಲಾಢ್ಯವಾದರೆ ಆಗ ನೋಡಲು ತುಂಬಾ ಖುಷಿಯಾಗುತ್ತದೆ. ಇಲ್ಲದಿದ್ದರೆ ಕನ್ನಡಮ್ಮ ಯಾವುದೋ ಕಾರಣಗಳಿಂದ ಬಳಲಿದಂತೇ ತೋರುತ್ತದೆ. ಹಾಗಾಗದಂತೇ ಎಚ್ಚರವಹಿಸಬೇಕಾದ್ದು ನಮ್ಮ ಕರ್ತವ್ಯ ಎಂಬುದು ಸದಭಿರುಚಿಯ ಸಾರಸ್ವತರ ಅನಿಸಿಕೆ.

ಹೊಸಪೀಳಿಗೆಯನ್ನು ತಯಾರಿ ಮಾಡುವಲ್ಲಿ ಗಣೇಶರ ಈ ಪ್ರಯತ್ನ ಅತ್ಯಂತ ಶ್ಲಾಘನೀಯ. ಅವರಿಗಿರುವ ಕೆಲಸದೊತ್ತಡಗಳ ಮಧ್ಯೆ ನಾನಾಗಿದ್ದರೆ ಇದನ್ನೆಲ್ಲಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾನೇಕೆ ನೀವೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದು ಕಡೆ ಯಾವುದೋ ವೇದಿಕೆಯಲ್ಲಿ ವ್ಯಾಖ್ಯಾನ, ಇನ್ನೊಂದು ಕಡೆ ಅಷ್ಟಾವಧಾನ, ಮನೆಯಲ್ಲಿ ಅಡಿಗೆ- ಬೇಕಾದ ಪರಿಕರಗಳ/ದಿನಸಿಗಳ ಪೂರೈಕೆ, ಅಮ್ಮನ ಆರೈಕೆ, ಆಗಾಗ ಮೊಳಗುವ ದೂರವಾಣಿಗೆ ಉತ್ತರ, ಕಲಾವಿದರಾದರನೇಕರಿಗೆ ಥೀಮ್ ಬೇಸ್ಡ್ ನೃತ್ಯಕ್ಕೆ ಹಿನ್ನೆಲೆ ಸಾಹಿತ್ಯ-ಪರಿಕಲ್ಪನೆ, ಏಕವ್ಯಕ್ತೀ ಯಕ್ಷಗಾನ ಪರಿಕಲ್ಪನೆ-ಪ್ರಸಂಗ ರಚನೆ, ಕನ್ನಡ-ಸಂಸ್ಕೃತಗಳಲ್ಲಿ ಕೃತಿಗಳ ರಚನೆ, ಯಾರಿಗೋ ಮುನ್ನುಡಿ-ಬೆನ್ನುಡಿ, ಮತ್ತೆಲ್ಲೋ ಶಾಲೆಯಲ್ಲಿ ಮಕ್ಕಳಿಗೆ ಪಾಠ, ಕಾಲೇಜುಗಳಲ್ಲಿ ಅಧ್ಯಾಪನ ---ಹೀಗೇ ಅವರ ನಿತ್ಯಜೀವನವೇ ಒಂದು ಅಷ್ಟಾವಧಾನ. ಅಷ್ಟರ ಮಧ್ಯೆಯೂ ಹಲವರ ರಚನೆಗಳನ್ನು ಪರಿಶೀಲಿಸಿ ಉತ್ತರಿಸುವುದು, ತಿದ್ದುವುದು ಸಾಮಾನ್ಯದ ತಾಳ್ಮೆಯೇ ಸ್ವಾಮೀ ? ಅಂತಹ ಘನಪಾಠಿ, ಅಂತಹ ಚತುರ್ವೇದಿ, ಅಂತಹ ನಡೆದಾಡುವ ಅದ್ಭುತ ಮಾನವ ಯಂತ್ರ ನಮ್ಮ ಮಧ್ಯೆ ಇದೆ! ಯಾವ ವಿಷಯವನ್ನೇ ಎಲ್ಲೇ ಎಷ್ಟೇ ಹೊತ್ತಿಗೆ ಪ್ರಸ್ತಾಪಿಸಿದರೂ ಅದಕ್ಕೆ ಸಮರ್ಪಕ ಉತ್ತರ ದೊರೆಯುವುದು ಗಣಕಯಂತ್ರದಲ್ಲೂ ಸಾಧ್ಯವಿಲ್ಲ, ಅದು ಇಲ್ಲಿ ಮಾತ್ರ ಸಾಧ್ಯ; ಗಣೇಶರಿಂದ ಮಾತ್ರ ಸಾಧ್ಯ! ಅಂತಹ ಹಿರಿಯ ವ್ಯಕ್ತಿಯೊಬ್ಬರ ಸಂಗ ನನಗೆ ದೊರಕಿದ್ದು ಯೋಗಾಯೋಗವೇ ಇರಬಹುದು.



’ಪದ್ಯಪಾನ’ದಲ್ಲಿ [http://padyapaana.com] ನಿನ್ನೆ ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೆ. ಮೇಲಿನ ಈ ಚಾಪ ಹಸ್ತದ ಬೇಡತಿಯ ಚಿತ್ರಕ್ಕೆ ಇಷ್ಟವಾದ ರೀತಿಯಲ್ಲಿ ಕವನ ಬರೆಯಬೇಕು ಎಂದು ತಿಳಿಸಿದ್ದರು . ಅದರ ಸ್ಯಾಂಪಲ್ಲುಗಳು ಈ ರೀತಿ ಇವೆ:

ನಾಡ ಹರೆಯದ ಹೈಕಳೆದೆಯಲಿ
ಮಾಡಿ ಮೋಡಿಯ ಜಾಗಪಡೆಯುತ
ಕಾಡು ಹೊಕ್ಕರೆ ಮರಳಿ ಸೆಳೆವರು ಬಿಡುವಜನವಲ್ಲ !
ಬೇಡಿ ಬರುವರು ಪ್ರೇಮಭಿಕ್ಷೆಯ
ಕಾಡಿ ಹುಡುಕುತ ನಿನ್ನ ಮೂಲದ
ಜಾಡ ಹಿಡಿವರು ಕೂಡುವಾಸೆಗೆ ಗೊಡವೆ ತರವಲ್ಲ !

ಬೆಡಗಿ ನಿನ್ನಯ ನಡು ನಿತಂಬವ
ಅಡಗುಗಣ್ಣಲೆ ಕಂಡು ಸೋತೆನು
ತುಡುಗು ಬುದ್ಧಿಯು ದೇಹಸಖ್ಯವ ಬಯಸುತಿಹುದಲ್ಲ |
ಒಡೆಯನಾಗುವ ಹುಚ್ಚು ಹಂಬಲ
ಬಿಡದೆ ನೆನೆವೆನು ರಾಮಚಂದ್ರನ
ಕೊಡಲಿ ನಿನ್ನನು ಶಾಶ್ವತಕೆ ನಾ ಬಿಡುವುದೇ ಇಲ್ಲ ||

ನೆಚ್ಚಿಕೊಳ್ಳುವೆ ನಿನ್ನನೋರ್ವಳ
ಅಚ್ಚಕನ್ನಡ ’ಕಾವ್ಯ’ ಜನಿಸಲಿ
ತುಚ್ಛನಾನೆಂದೆಣಿಸಿ ದೂರುತ ದೂರಹೋಗದಿರು |
ಅಚ್ಯುತನ ಪದದಾಣೆಯಲಿಪದ-
ಹಚ್ಚಿ ಪೊಗಳುವೆ ನಿನ್ನನೀ ಪರಿ
ಮೆಚ್ಚಿನೆನೆವೆನು ಭುವನದೊಳು ನೀ ಬಿಟ್ಟರೆನಗಿಲ್ಲ ! ||

ವಿಸ್ತರದಿ ಸಿರಿವತ್ಸಗಾದರ
ಮಸ್ತಕಕೆ ಕಸ್ತೂರಿ ಪೂಸುತ
ವಸ್ತುವಿಷಯವು ಗಹನವಿದ್ದರು ಗೆಲುವು ನಿಚ್ಚಳವು |
ಬೆಸ್ತ ಹುಡುಗಿಯ ಸುತನ ದಯೆಯಿರೆ
ಸುಸ್ತು ಎನಿಸದು ಬದುಕು ಸುಂದರ
ಅಸ್ತು ಎನ್ನುವ ಶತವಧಾನಿಗೆ ಜಯಜಯತು ಜಯವು ||

ಈ ಕವನದ ಭಾಗಗಳಲ್ಲಿ ಕೆಲವರ ಹೆಸರುಗಳೂ ಮತ್ತು ಅವರಿಗೆ ಸ್ವಾಗತಕೋರಿದ್ದು, ವಂದಿಸಿದ್ದೂ ಸೇರಿದೆ! ಮೂಲ ವಸ್ತುವಿಷಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅದನ್ನು ಭಾಮಿನಿ ಷಟ್ಪದಿಯಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ. ಪಾಠ ಬಹಳ ದೀರ್ಘವಾಯ್ತು, ಇವತ್ತಿಗೆ ಇಷ್ಟು ಸಾಕು, ಇಷ್ಟದ ಅಷ್ಟಾವಧಾನಿಗೆ ಸಾಷ್ಟಾಂಗ ನಮಸ್ಕಾರಗಳು. ಜೊತೆಗೆ ಪಾಠ ಕೇಳಿದ ನಿಮಗೆಲ್ಲರಿಗೂ ’ಪದ್ಯಪಾನ’ಕ್ಕೆ ಸ್ವಾಗತ ಮತ್ತು ನಮನಗಳು.

Monday, January 23, 2012

ಖಾಲೀ ಕೊಡವಾದರೂ ಪರವಾಗಿಲ್ಲ ಭಾಗಶಃ ತುಂಬಿದ ಕೊಡವಾಗಬೇಡಿ!


ಖಾಲೀ ಕೊಡವಾದರೂ ಪರವಾಗಿಲ್ಲ ಭಾಗಶಃ ತುಂಬಿದ ಕೊಡವಾಗಬೇಡಿ!

ಲಜ್ಜೆಗೇಡಿಗಳಿಗೆ ಮತ್ತೊಂದು ಹೆಸರು ಮಹಾತ್ಮರನ್ನು ದೂಷಿಸುವವರು ಎಂದೂ ಆಗಬಹುದು. ಈಗಿನ ಪತ್ರಿಕೆಗಳನ್ನು ನೋಡಿದರೆ ಮತ್ತು ಅದರಲ್ಲಿ ಬರೆಯುವ ಕೆಲವರನ್ನು ನೋಡಿದರೆ ವಿಷಯದ ವಿವೇಚನೆ ಇಲ್ಲದೇ ಕೇವಲ ಏಕಮುಖದಿಂದ ಬರೆಯುವುದು ಕಾಣುತ್ತದೆ. ಆಳವಾದ ಅಧ್ಯಯನದ ಕೊರತೆ ಒಂದು ಕಡೆಗಾದರೆ ವಿವಾದದಿಂದ ಓದುಗರನ್ನು ತನ್ನತ್ತ ಸೆಳೆಯುವ ತಂತ್ರಕೂಡ ಇದಾಗಿದೆ ಎಂಬುದು ಯಾರಿಗಾದರೂ ತೋರಿಬರುವ ಸಂಗತಿ. ಹಿಂದಕ್ಕೆ ಪತ್ರಿಕೆಗಳ ಮತ್ತು ಮಾಧ್ಯಮ ವಾಹಿನಿಗಳ ಸಂಖ್ಯೆ ಕಮ್ಮಿ ಇದ್ದಾಗ ವರದಿಗಾರರು ಅಲ್ಲಿಲ್ಲಿ ಏನನ್ನಾದರೂ ಹೆಕ್ಕಿ ತರುತ್ತಿದ್ದರು. ಇವತ್ತು ಅವುಗಳ ಸಂಖ್ಯೆ ಜಾಸ್ತಿಯಾಗಿ ’ಹುಲ್ಲುಗಾವಲು’ ಬರಿದಾಗಿದೆ, ಬಾವಿಯಲ್ಲಿ ನೀರಿನ ಸೆಲೆ ಕಮ್ಮಿ ಇದೆ-ಮೊದಲು ಹೋದವರಿಗೆ ಆದ್ಯತೆ ಇರುತ್ತದೆ. ಆದಗ್ಯೂ ಬಡಿದಾಡಿಕೊಂಡು ತಮ್ಮದೇ ಎಕ್ಸ್‍ಕ್ಲೂಸಿವ್ ವರದಿ ಎಂದು ಬೋರ್ಡು ಹಾಕಿಕೊಂಡು ಬಿತ್ತರಿಸುವ ಪತ್ರಿಕೆಗಳು/ವಾಹಿನಿಗಳು ಇನ್ನೊಂಡೆಡೆ ಅದೇ ವಿಷಯ ಪ್ರಸ್ತಾಪವಾಗುತ್ತಿರುವುದನ್ನು ಓದುಗರು/ವೀಕ್ಷಕರು ತಿಳಿದಿಲ್ಲ/ಕಂಡಿಲ್ಲ ಎಂದು ಹೀಗೆ ಗೂಬೆ ಕೂರಿಸುವ ಕೆಲಸ ತಪ್ಪು. ಕೆಲವು ಕಾಯಂ ಬರಹಗಾರರಿಗೆ ಕೆಲವು ವಾರಗಳಲ್ಲಿ ವಿಷಯವೇ ಇರುವುದಿಲ್ಲ! ಆಗೇನು ಮಾಡುವುದು? ಮಹಾತ್ಮರ ಚರಿತ್ರೆಗಳನ್ನೂ ಕೆದಕಿ ಅಲ್ಲಿನ ಚಿಕ್ಕ ವಿಷಯಗಳನ್ನು ’ಇಲಿ’ ಬದಲಿಗೆ ’ಹುಲಿ’ ಮಾಡಿ ಹೇಳುವುದು ಅವರ ಕರ್ಮ! ಸಸಾರ ನೋಡಿ ಕೇವಲ ಒಂದಕ್ಷರದ ಬದಲಾವಣೆ-ಅಲ್ಲೂ ಕೂಡ ಅಷ್ಟೇ ಕೇವಲ ದೂಷಣೆ, ಜನರಿಗೆ ಗೊತ್ತಿಲ್ಲದ ವಿಷಯಗಳನ್ನು ತಾನು ಆಕರಗಳ ಆಳದಿಂದ ಎತ್ತಿ ಹೇಳುತ್ತಿದ್ದೇನೆ ಎಂಬ ಹಮ್ಮು-ಬಿಮ್ಮು.

ದಿನಪತ್ರಿಕೆಯೊಂದರಲ್ಲಿ ಕೆಲದಿನಗಳ ಹಿಂದೆ ವಿವೇಕಾನಂದರ ಬಗ್ಗೆ ಒಬ್ಬರು ಬರೆದಿದ್ದಾರೆ. ಪಾಪ ಅವರಿಗೆ ಅಷ್ಟಾಗಿ ವಿವೇಕ ಜಾಗ್ರತಗೊಳ್ಳಲಿಲ್ಲ ಎನಿಸುತ್ತದೆ. ನನ್ನ ಗೆಳೆಯರ ಬಳಗದಲ್ಲಿ ಅವರೂ ಇದ್ದಾರೆ, ಹಾಗಂತ ಸ್ನೇಹಿತರೋ ಮನೆಯವರೋ ತಪ್ಪು ಮಾಡಿದರೆ ಅದನ್ನು ಒಪ್ಪುವ ಜಾಯಮಾನ ನನ್ನದಲ್ಲವಲ್ಲಾ! ನದೀಮೂಲ ಋಷಿ ಮೂಲ ಮತ್ತು ಸ್ತ್ರೀ ಮೂಲಗಳನ್ನು ಕೆದಕಬಾರದು ಎಂದು ಹಿಂದೆಯೇ ಶಾಸ್ತ್ರಕಾರರು ಬರೆದಿದ್ದಾರೆ. ಅಲ್ಲಿ ನಮಗೆ ಬೇಡದ ವಿಷಯಗಳೂ ಇರಬಹುದು. ಹಂಸಕ್ಷೀರ ನ್ಯಾಯದಂತೇ ಕೇವಲ ಬೇಕಾದ್ದನ್ನು ಪಡೆದು ಬೇಡದ್ದನ್ನು ಬಿಡುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಅದಕ್ಕೆಂತಲೇ ಭಗವಂತ ನಮಗೆ ’ತಲೆ’ ಕೊಟ್ಟಿದ್ದಾನೆ. ನಾವೆಲ್ಲಾ ಶಾಲೆಗೆ ಹೋಗುವಾಗ ಓದಿದ್ದನ್ನು ಮರೆತು ಏನೇನೋ ತಪ್ಪು ಉತ್ತರಗಳನ್ನು ಹೇಳಿದರೆ ಮಾಸ್ತರು " ತಲೆಯಲ್ಲಿ ಏನಿದೆಯಪ್ಪಾ ಕೊಳೆತ ಬಟಾಟೆ ಇದ್ಯೋ ಅಥವಾ ಕೊಳೆತ ಉಳ್ಳಾಗಡ್ಡೆ[ಈರುಳ್ಳಿ]ನೋ ? " ಎನ್ನುತ್ತಿದ್ದರು. ಬರಹಗಾರರ ತಲೆಯಲ್ಲಿ ಇವತ್ತು ಏನಿದೆ ಎಂದು ಅವರೇ ಕೇಳಿಕೊಳ್ಳಬೇಕಾಗಿದೆ. ನಿನ್ನೆ ಒಬ್ಬರು ರಾಂಟ್ RANT ಶಬ್ದ ಬಳಸಿದ್ದರು. ಹಾಗೆಂದರೆ ನಾವೆಲ್ ಎಂದೂ ಅಥವಾ ವಾಂತಿಯೆಂದೂ ಅರ್ಥವಾಗುತ್ತದೆ. ನಿಮಗೆ ಹೇಗೇ ಬೇಕೋ ಹಾಗೆ ಅರ್ಥಮಾಡಿಕೊಳ್ಳಬಹುದು! ಚೆನ್ನಾಗಿದ್ದರೆ ನಾವೆಲ್ ಎನಿಸಿ ಮರು ಮರು ಮುದ್ರಣ ಕಾಣಬಹುದಾದ ಕೃತಿ ಓದಲಾಗದ ರೀತಿ ಇದ್ದರೆ ಅದನು ರಾಂಟ್ ಎನ್ನಬಹುದಾಗಿದೆ. ಅಂತಹ ರಾಂಟ್‍ಗಳ ಸಾಲಿಗೆ ತನ್ನ ಬರಹ ಇನ್ನೊಂದು ಸೇರ್ಪಡೆಯೇ ಎಂಬ ತಜ್ಜನಿತ[ಅಲ್ಲಲ್ಲೇ ಹುಟ್ಟಿದ] ಆತ್ಮಾವಲೋಕನ ಕ್ರಿಯೆ ಬರಹಗಾರನಿಗೆ ಇದ್ದರೆ ಬರಹಗಾರ ಗೆಲ್ಲಬಹುದು, ಅಥವಾ ಆಕ್ಷಣಕ್ಕೆ ಬರಹಗಾರ ಕಿಸೆ ಭರ್ತಿಮಾಡಿಕೊಳ್ಳಬಹುದೇ ಹೊರತು ಅದು ಪರೋಕ್ಷ ಸಮಾಜದ ದಾರಿತಪ್ಪಿಸಿದ ನಯವಂಚಕ ಮಾರ್ಗದಿಂದ ಬಂದ ಹಣ ಎನಿಸಿಕೊಳ್ಳುತ್ತದೆ!

ಯಾವುದೇ ವಿಷಯವಸ್ತುವನ್ನು ವಿಶ್ಲೇಷಿಸುವಾಗ ನಮಗೆ ಅದರಲ್ಲಿ ಪ್ರೌಢಿಮೆ ಇದೆಯೇ ಎಂಬುದು ಪ್ರಮುಖವಾಗಿ ನೋಡಬೇಕಾದ ಅಂಶ. ವಿವೇಕಾನಂದರ ಒಂದು ಪುಸ್ತಕವನ್ನೂ ಸರಿಯಾಗಿ ಓದದ ವ್ಯಕ್ತಿ ವಿವೇಕಾನಂದರ ಕುರಿತು ಬರೆಯುವುದು ಹೇಗೆ? ಹಿರಿಯ ಮಿತ್ರರಾದ ಶ್ರೀ ಆರ್. ಗಣೇಶರ ಪುಸ್ತಕವೊಂದರ ಕುರಿತು ನಾನು ಬರೆಯುವಾಗ ಅವರು ನನಗೆ ಹೇಳಿದ್ದಿಷ್ಟು : " ಭಟ್ಟರೇ, ಪುಸ್ತಕವನ್ನು ಓದದೇ ಅದರ ಬಗ್ಗೆ ವಿಶ್ಲೇಷಿಸುವುದು ಸರ್ವದಾ ತಪ್ಪು. ಅದು ನಾನೇ ಬರೆದದ್ದಿರಲಿ ಮತ್ತೊಬ್ಬ ಬರೆದಿದ್ದಿರಲಿ." ಎಂತಹ ಔಚಿತ್ಯಪೂರ್ಣ ಮಾತು. ಹಾಗಂತ ನಾನೊಬ್ಬ ವಿಮರ್ಶಕನೆಂಬ ಬೋರ್ಡು ಹಾಕಿಕೊಂಡವನಲ್ಲ. ಮಾಧ್ಯಮಗಳ ಕಛೇರಿಯಲ್ಲಿ ಕುರ್ಚಿ ಅಲಂಕರಿಸಿಲ್ಲ. ಆದರೂ ಅವರು ನನ್ನಲ್ಲಿ ಹೇಳಿದ್ದು ಹಾಗೆ. ಪ್ರಾಯಶಃ ’ತುಂಬಿದ ಕೊಡ ತುಳುಕಿವುದಿಲ್ಲ’ ಎಂದಿದ್ದು ಗಣೇಶ್ ರಂಥವರನ್ನು ನೋಡಿಯೇ ಇರಬೇಕು. ತುಂಬಿದ ಕೊಡವೊಂದೇ ಅಲ್ಲ, ಖಾಲೀ ಕೊಡವೂ ತುಳುಕುವುದಿಲ್ಲ ಎಂಬ ಇಂದಿನ ಹುಡುಗಾಟಿಕೆಯ ಉತ್ತರವನ್ನು ಮೊದಲಾಗಿಯೇ ಪರಿವೀಕ್ಷಿಸಿ ಅದಕ್ಕೂ ಹೇಳಿಬಿಡುತ್ತಿದ್ದೇನೆ: ಖಾಲೀ ಕೊಡವಾದರೂ ಪರವಾಗಿಲ್ಲ, ಭಾಗಶಃ ತುಂಬಿದ ಕೊಡ ಮಾತ್ರ ಆಗಬೇಡಿ! ಗೊತ್ತಿಲ್ಲದ ವಿಷಯಗಳಲ್ಲಿ ಮೂಗು ತೂರಿಸಿ ಬರೆಯಬೇಡಿ ಎಂಬುದು ಆ ಮಿತ್ರರಿಗೆ ನನ್ನ ಸಲಹೆ. ಈಗ ನೀವೆಲ್ಲಾ ಓದುತ್ತಿರುವಂತೇಯೇ ಅವರೂ ಇದನ್ನು ಓದುತ್ತಿರಬಹುದು, ಅವರ ಪಾಡಿಗೆ ಅವರಿಗೆ ಜ್ಞಾನೋದಯವಾಗಬಹುದು ಎಂದುಕೊಳ್ಳುತ್ತೇನೆ.

ವಿವೇಕಾನಂದರು ಹುಟ್ಟಾ ಬ್ರಾಹ್ಮಣ ಜಾತಿಯವರಲ್ಲ. ಹಿಂದೂ ಸಂಪ್ರದಾಯವನ್ನು ಮುರಿದು ಸನ್ಯಾಸ ಸ್ವೀಕರಿಸಿದರು, ಅವರಿಗೆ ಒಂದಲ್ಲಾ ಎರಡಲ್ಲಾ ಮೂವತ್ತೊಂದು ಕಾಯಿಲೆಗಳಿದ್ದವು, ಅವರು ಮಾಂಸಾಹಾರಿಯಾಗಿದ್ದರು, ಅವರಿಗೆ ಎಳವೆಯಲ್ಲೇ ಮುಪ್ಪು ಆವರಿಸಿತ್ತು, ಯಾರಾದರೂ ಮೈಯ್ಯನ್ನು ಮುಟ್ಟಿದರೂ ನೋವು ಎನ್ನುತ್ತಿದ್ದರು, ಕೂದಲು ಪ್ರಾಯದಲ್ಲೇ ಹಣ್ಣಾಗಿತ್ತು. ಸನ್ಯಾಸಿಯಾಗಿಯೂ ಅವರು ಮ್ಲೇಚ್ಛರ ಮನೆಯಲ್ಲಿ ಊಟಮಾಡುತ್ತಿದ್ದರು, ಏಸು ಬದುಕಿದ್ದರೆ ಅವನ ಪಾದವನ್ನು ಕಣ್ಣಹನಿಯಿಂದಲ್ಲ ಹೃದಯದ ರಕ್ತದಿಂದ ತೊಳೆಯುತ್ತಿದ್ದೆ ಎಂದ ಹಿಂದೂ ವಿರೋಧಿಗಳು -ಮುಂತಾಗಿ ಸಿಕ್ಕ ಸಿಕ್ಕ ಹಾಗೇ ಹಲುಬಿದ್ದಾರೆ ಅವರ ಅಂಕಣದಲ್ಲಿ. ಸ್ವಾಮೀ ವಿವೇಕಾನಂದರು ಅವರ ಶರೀರಧರ್ಮಕ್ಕೆ ತಕ್ಕಂತೇ ಏನನ್ನೋ ಮಾಡಿರಲಿ ಆದರೆ ಅವರು ಕೊಟ್ಟ ಸುದೀರ್ಘ ಪ್ರಬಂಧಗಳಲ್ಲಿ ಒಂದನ್ನಾದರೂ ನೀವು ಓದಿ ಅರ್ಥೈಸಿಕೊಂಡಿರೇ? ಖಂಡಿತಾ ಇಲ್ಲ! ನೀವು ಓದಿದ್ದು ಎರಡೇ ವಾಕ್ಯ. ಮೊದಲನೆಯದು " ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖನ ಸಂಖ್ಯೆ ಕಡಿಮೆಯಾದೀತು" ಇನ್ನೊಂದು " ಎದ್ದೇಳಿ ಯುವಕರೇ ಭಾರತದ ಕಲಿಗಳೇ ಏಳಿ ಎಚ್ಚರಗೊಳ್ಳಿ" ಇವೆರಡು ವಾಕ್ಯಗಳಲ್ಲೇ ಮೊದಲನೇ ವಾಕ್ಯ ನಿಮಗೆ ರುಚಿಸಲಿಲ್ಲ, ಎರಡನೆಯದು ಜೀರ್ಣವಾಗಲಿಲ್ಲ! ಹೀಗಿರುವಾಗ ವಿವೇಕಾನಂದರ ಬಗ್ಗೆ ಯಾರೋ ವಿದೇಶೀ ಮಹಿಳೆ ಬರೆದಿದ್ದಳು ಎಂದೆಲ್ಲಾ ಆಧಾರ ಕೊಡುತ್ತಾ ಇಲ್ಲಸಲ್ಲದ್ದನ್ನು ನೀವು ಬರೆದಿದ್ದು ನೋಡಿದರೆ ನೀವು ’ಜ್ಞಾನದ ಆಗರ’ ಎಂಬುದು ಸಾಬೀತಾದ ವಿಷಯದಂತೇ ಕಾಣುತ್ತದೆ! ಸಂಶಯವಿಲ್ಲ.

ಬಹಳ ಹಿಂದೆಯೇ ನಾನು ಬರೆದಿದ್ದೆ, ಬರಹಗಾರರಲ್ಲಿ ಎರಡು ವಿಧ. ಹೊಟ್ಟೆಪಾಡಿನ ಬರಹಗಾರರು ಮತ್ತು ಉತ್ತಮ ಬರಹಗಾರರು ಎಂದು ಮೊದಲನೆಯವರು ಪತ್ರಿಕೆಗಳಲ್ಲೋ ಮಾಧ್ಯಮಗಳಲ್ಲೋ ಕೂತು ’ಜಾಗ ತುಂಬಿಸುವ’ ಕೆಲಸ ಮಾಡಿಕೊಡುತ್ತಾರೆ. ಎರಡನೇ ವರ್ಗದವರು ಸಮಾಜಮುಖಿಗಳಾಗಿ ಅಲ್ಲಲ್ಲಿ ಅಲ್ಲಲ್ಲಿ ತಮ್ಮ ಬರಹಗಳನ್ನು ಪ್ರಕಟಿಸುತ್ತಾ ಆಗಬೇಕಾದ ಕೆಲಸಕ್ಕೆ ಸಂದೇಶ ರವಾನೆ ಮಾಡುತ್ತಿರುತ್ತಾರೆ. ಸದ್ರೀ ಲೇಖಕರು ಮೊದಲನೆಯ ಗುಂಪಿಗೆ ಸೇರಿದವರಾಗಿದ್ದು ಈ ಲೇಖನವನ್ನೋದುತ್ತಿದ್ದಂತೆಯೇ ಅವರ ಚೇಲಾಗಳು ಫ್ಯಾನುಗಳು ವಿಚಿತ್ರ ಕಾಮೆಂಟುಗಳನ್ನು ಹಾಕುವುದು ನಿರೀಕ್ಷಿತವೇ. ಅದಕ್ಕೆಲ್ಲಾ ಹೆದರಿ ಬರೆಯದೇ ಇರುವ ವ್ಯಕಿ ನಾನಂತೂ ಅಲ್ಲ. ’ದಿನೇಶ’ನ ಕಿರಣ ಮೈಮೇಲೆ ಬಿದ್ದಾಗಿನಿಂದ ಆ ಸೂರ್ಯನ ಹೆಸರನ್ನು ಹಾಳುಗೆಡಹುವ ಜನರನ್ನು ಕಂಡರೆ ನನಗೆ ಎಲ್ಲಿಲ್ಲದ ಕೋಪ ಬರುತ್ತದೆ.

ಕಸದಿಂದ ರಸ ಎಂಬುದಕ್ಕೆ ಗೋವು ಸಾಕ್ಷಾತ್ ಉದಾಹರಣೆ. ಕಸವನ್ನೇ ತಿಂದು ಅಮೃತತುಲ್ಯ ’ಹಾಲು’ ಎಂಬ ರಸವನ್ನು ಅದು ಕೊಡುವುದರಿಂದ ಹೀಗೆ ಹೇಳುತ್ತಿದ್ದೇನೆ. ಗೋವಿನ ಕೆಚ್ಚಲಲ್ಲಿ ರಕ್ತವನ್ನು ಬಯಸುವ ಕೆಲಜನ ಅದು ಹಾಲು ಕೊಡುತ್ತಿರುವುದಕ್ಕೆ ಅದನ್ನೇ ಬೈಯ್ಯುತ್ತಾರೆ. ಸಂತ-ಮಹಂತರು ಗೋವಿನ ಹಾಗೇ ಇರುತ್ತಾರೆ. ವಿವೇಕಾನಂದರೂ ಇದಕ್ಕೆ ಹೊರತಾಗಿರಲಿಲ್ಲ. ತಮ್ಮಲ್ಲಿನ ದೌರ್ಬಲ್ಯಗಳನ್ನು ಅವರು ರಾಮಕೃಷ್ಣರಲ್ಲಿ ಹೇಳಿಕೊಂಡರು. ಆಹಾರ ಅವರ ಜನ್ಮಮೂಲದಿಂದ ಬಂದಿದ್ದಾದ್ದರಿಂದ ಕೆಲ ಮಟ್ಟಿಗೆ ಅವರು ಮಾಂಸಾಹಾರವನ್ನು ಭುಂಜಿಸಿರಬಹುದು. ನಮ್ಮ ಅವತಾರಗಳಲ್ಲಿ ರಾಮ, ಕೃಷ್ಣ ಇವರೆಲ್ಲಾ ಮಾಂಸಾಹಾರಿಗಳೇ ಆಗಿದ್ದರು ಸ್ವಾಮೀ. ಆದರೆ ನಾವು ಅವರನ್ನು ದೇವರೆಂದು ಪೂಜಿಸುತ್ತಿಲ್ಲವೇ? ಭಗವಂತ ಅವರಾಗಿ ಅವತಾರ ಎತ್ತಲಿಲ್ಲವೇ? ಇನ್ನು ನನಗೆ ಪರೋಕ್ಷವಾಗಿ ವೇದವನ್ನು ಓದಲು ಪ್ರೇರೇಪಿಸಿದವರು ಮಹರ್ಷಿ ಮಹೇಶ್ ಯೋಗಿ ! ಅವರ ಪಾಠಶಾಲೆಯಲ್ಲೇ ನಾನು ಪ್ರಥಮವಾಗಿ ಕಲಿತಿದ್ದು. ತಿಂಗಳಿಗೆ ಹನ್ನೊಂದು ರೂಪಾಯಿ ಕೊಟ್ಟು ಕಲಿಸಿದರು ಆ ಮಹಾತ್ಮ! ಜನ್ಮ ಮೂಲದಿಂದ ಮಹೇಶ್ ಯೋಗಿ ಬ್ರಾಹ್ಮಣ ಕುಲದವರಲ್ಲಾ ಸ್ವಾಮೀ! ಅವರು ಯಾರು ಎಂಬುದು ಮುಖ್ಯವಲ್ಲ- ಅವರ ಕೊಡುಗೆ ಮುಖ್ಯ. ವಿರಾಗಿಯಾಗಿ, ಸನ್ಯಾಸಿಯಾಗಿ ಮಹೇಶ್ ಯೋಗಿ ಸಾಧನೆಮಾಡಿ ಸ್ವಿಟ್ಜರ್ಲ್ಯಾಂಡ್ ನಲ್ಲಿ ಅನೇಕವರ್ಷಗಳ ಕಾಲ ಧರ್ಮದ ಪುನರುತ್ಥಾನ ಕ್ರಿಯೆಯನ್ನು ನಡೆಸಿದರು. ಇವತ್ತಿಗೂ ಅವರು ಗುರುವೆಂಬ ಭಾವ ನನ್ನಲ್ಲಿದೆ. ಮಹರ್ಷಿ ವಾಲ್ಮೀಕಿ ಒಬ್ಬ ಬೇಡನಾಗಿದ್ದರು. ಮಹರ್ಷಿ ವಿಶ್ವಾಮಿತ್ರರು ಮೊದಲು ಕ್ಷತ್ರಿಯರಾಗಿದ್ದರು. ಇಲ್ಲೆಲ್ಲಾ ನಾವು ಋಷಿ ಮೂಲವನ್ನು ಕೆದಕಲಿಲ್ಲ, ಅವೇ ಕಾಣಿಸಿದವು. ಸ್ವಾಮಿ ವಿವೇಕಾನಂದರ ಮೂಲ ಕೂಡ ಹುದುಗಿಸಿಟ್ಟ ಗೌಪ್ಯದ ವಿಷಯವೇನಲ್ಲ. ಅದನ್ನು ಮೊದಲು ಮನಗಾಣಬೇಕಾದ್ದು ನೀವು.

ಸನ್ಯಾಸಿಯಾದ ಮಾತ್ರಕ್ಕೆ ಈ ಜನ್ಮಕ್ಕೆ ಅಂಟಿದ ಕಾಯಿಲೆಗಳು ವಿನಾಶವಾಗಿಬಿಡುವುದಿಲ್ಲ. ಹಿಂದಿನ ಕರ್ಮಫಲಗಳನ್ನು ಆತ ಅನುಭವಿಸಲೇ ಬೇಕಾಗುತ್ತದೆ. ದೃಷ್ಟಾಂತವೊಂದನ್ನು ಹೇಳುತ್ತಿದ್ದೇನೆ: ಒಮ್ಮೆ ಭಗವಾನ್ ಶ್ರೀಧರರು ಕಾಶಿಯಲ್ಲಿರುವಾಗ ಅವರಿಗೆ ರಕ್ತಬೇಧಿ ಆರಂಭವಾಗಿತ್ತು. ಹತ್ತಿರ ಇದ್ದ ಶಿಷ್ಯರು ಏನೇ ಉಪಚರಿಸಿದರೂ ಅದು ಕಮ್ಮಿಯೇ ಆಗಿರಲಿಲ್ಲ. ಇನ್ನೇನು ಕೃಶಕಾಯರಾಗಿ ಗುರುಗಳು ದೇಹವನ್ನೇ ವಿಸರ್ಜಿಸುವರೋ ಎಂಬ ಹಂತ ತಲ್ಪಿತ್ತು. ಶಿಷ್ಯರ ಒತ್ತಾಯದ ಮೇರೆಗೆ ಲೋಟವೊಂದರಲ್ಲಿ ನೀರನ್ನು ತರಿಸಿದ ಶ್ರೀಧರರು, ಶಿಷ್ಯನ ಕೈಲೇ ಆ ಲೋಟವನ್ನಿರಿಸಿ ಅವರೇ ರಚಿಸಿದ " ನಮಃ ಶಾಂತಾಯ ದಿವ್ಯಾಯ....." ಎಂಬ ಮಂತ್ರವನ್ನು ನೂರೆಂಟಾವರ್ತಿ ಪಠಿಸಲು ಹೇಳಿದರು. ಪ್ರತೀ ಹೊತ್ತಿಗೂ ನೂರೆಂಟಾವರ್ತಿ ಹಾಗೆ ಪಠಿಸುತ್ತಾ ನೀರನ್ನು ಕುಡಿಸುತ್ತಾ ಇದ್ದ ಅಲ್ಲಿದ್ದ ಶಿಷ್ಯ. ವಾರದಲ್ಲಿ ಕ್ರಮೇಣ ಹಂತಹಂತವಾಗಿ ರಕ್ತಬೇಧಿ ನಿಲ್ಲುತ್ತಾ ಬಂತು! ನಾನು ನೋಡಿದ ಅನೇಕ ಸನ್ಯಾಸಿಗಳೂ ಮಹಾನ್ ತಪಸ್ವಿಗಳೂ ತಮ್ಮ ಶರೀರಕ್ಕೆ ಒದಗಿದ ಕಾಯಿಲೆಯನ್ನು ಹಾಗೆ ಇದ್ದಕ್ಕಿದ್ದಲ್ಲೇ ಮಂಗಮಾಯ ಮಾಡುವುದಿಲ್ಲ, ಬದಲಾಗಿ ಎಲ್ಲರಂತೇಯೇ ಅನುಭವಿಸೇ ಹಿಂದಿನ ಋಣವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ರಮಣ ಮಹರ್ಷಿಗಳೂ ಶಿರಡೀ ಸಾಯಿಬಾಬರೂ ಉದಾಹರಣೆಗಳಾಗುತ್ತಾರೆ. ರಮಣ ಮಹರ್ಷಿಗಳಿಗೆ ಹುಣ್ಣಾಗಿ ಹುಣ್ಣಿನಲ್ಲಿ ಹುಳಗಳೂ ಓಡಾಡುತ್ತಿದ್ದವು! ಹುಣ್ಣಿನ ಹುಳಗಳನ್ನು ಅವರು ನಾಶಪಡಿಸುತ್ತಿರಲಿಲ್ಲ, ಬದಲಿಗೆ ಅವು ಋಣದಿಂದ ಮುಕ್ತಿ ಕೊಡುತ್ತಿವೆ ಎನ್ನುತ್ತಿದ್ದರು!

ಅನೇಕಾವರ್ತಿ ಹೇಳುತ್ತಲೇ ಬಂದಿದ್ದೇನೆ. ವಿವೇಕಾನಂದರಂತಹ ಕುಲೀನ ಕ್ಷತ್ರಿಯ ಸನ್ಯಾಸಿಯನ್ನು ಸಮಾಜ ಒಪ್ಪಿಕೊಂಡಿದ್ದು ಯಾಕೆಂದರೆ ಅವರ ಆಳವಾದ ಅಧ್ಯಯನ ಮತ್ತು ಅಧ್ಯಾಪನಕ್ಕಾಗಿ. ರಾಮಕೃಷ್ಣರು ಮಗುವಿನಲ್ಲಿನ ಸಾಮಾಜಿಕ ಕಳಕಳಿಯನ್ನು ನೋಡಿ ಸನ್ಯಾಸವನ್ನು ನೀಡಿದರು; ಶಕ್ತೀಪಾತ ಯೋಗವೆಂಬ ಸಿದ್ಧಿಯಿಂದ ತಾವು ಪಡೆದಿದ್ದ ಪರಿಪೂರ್ಣ ಜ್ಞಾನವನ್ನು ವಿವೇಕಾನಂದರಿಗೆ ಅನುಗ್ರಹಿಸಿದರು. ವಿವೇಕಾನಂದರ ಬಾಳಿನ ಆ ತಿರುವಿನ ನಂತರ ವಿವೇಕಾನಂದರು ಇಡೀ ವಿಶ್ವಕ್ಕೇ ಅಧ್ಯಾಪನ ನಡೆಸಿದರು! ವಿಶ್ವವಂದ್ಯರಾದರು. ಕಮಲದ ಹುಟ್ಟು ಕೆಸರಲ್ಲೇ ಹೊರತು ಸಾಮಾನ್ಯ ನೀರಿನಲ್ಲಿ ಆಗುವುದಿಲ್ಲ. ಕೆಸರಲ್ಲಿ ಹುಟ್ಟಿತೆಂದು ದೇವರಿಗೆ ಅದನ್ನು ಅರ್ಪಿಸುವುದಿಲ್ಲವೇ? ದೇವರು ಅದನ್ನೇ ತನ್ನ ಕುಳಿತುಕೊಳ್ಳುವಿಕೆಗೂ ತನ್ನ ಹೊಕ್ಕಳಿನಿಂದ ಹೊರಹೊರಡಿಸಿ ಅದರಲ್ಲಿ ಬ್ರಹ್ಮನ ಕೂತುಕೊಳ್ಳುವಿಕೆಗೂ ಕಾರಣನಾದನಲ್ಲವೇ? ಸ್ವಾರಸ್ಯ ಹೀಗಿದೆ: ಮನೆಗಳಲ್ಲಿ ನಾವು ಚಪ್ಪಲಿ ಇಡುವಲ್ಲಿ ದೇವರ ಚಿತ್ರಪಟಗಳನ್ನು ಇಡುವುದಿಲ್ಲ. ಆದರೆ ಚಮ್ಮಾರನೊಬ್ಬ ತನ್ನ ಅಂಗಡಿಯಲ್ಲಿ ಚಪ್ಪಲಿಗಳ ಪಕ್ಕದಲ್ಲೇ ಚಿಕ್ಕ ಜಾಗದಲ್ಲಿ ದೇವರ ಪಟ ಇಟ್ಟು ಪೂಜಿಸುತ್ತಾನೆ. ಅದರಂತೇ ಆ ಯಾ ವೃತ್ತಿಯವರು ತಮಗಿರುವ ಜಾಗದಲ್ಲೇ ಭಗವಂತನಿಗೂ ಒಂದು ಪುಟ್ಟ ಜಾಗ ಕೊಡುತ್ತಾರಲ್ಲಾ ಆ ಮನದ ಭಕ್ತಿಯನ್ನು ಭಗವಂತ್ ಅಪೇಕ್ಷಿಸುತ್ತಾನೆ, ನಿರೀಕ್ಷಿಸುತ್ತಾನೆ. ಸಪ್ತರ್ಷಿಗಳ ಅಂಶವೊಂದು ಜಾರಿ ನರೇಂದ್ರನಾಥ[ವಿವೇಕಾನಂದರ ಪೂರ್ವಾಶ್ರಮದ ಹೆಸರು]ನ ಜನನವಾಯಿತೆಂಬ ಹೇಳಿಕೆಯಿದೆ. ಮಹಾತ್ಮರು ಮಿಕ್ಕವರ ಹಾಗೇ ಬಹಳಕಾಲ ಇಲ್ಲೇ ಉಳಿಯುವುದಿಲ್ಲ. ಬಂದ ಸಂಕಲ್ಪ ಸಿದ್ಧಿಯಾದಮೇಲೆ ಅವರು ಹೊರಟುಹೋಗುತ್ತಾರೆ.

೩೯ ವರ್ಷ ೫ ತಿಂಗಳು ೨೪ ದಿನ ಬದುಕಿದ್ದೂ ಆ ಕಾಲದಲ್ಲೇ ಇಷ್ಟೆಲ್ಲಾ ಹೆಸರುಗಳಿಸಲು ಕಾರಣ ಅವರ ಆಂಗ್ಲ ಭಾಷಾ ಪ್ರೌಢಿಮೆ ಎನ್ನುವ ಈ ಲೇಖಕ ವಿವೇಕಾನಂದರು ತರಗತಿಯಲ್ಲಿ ಶತ ದಡ್ಡರಾಗಿದ್ದರು ಎನ್ನುತ್ತಾನೆ. ಖೇತ್ರಿ ಮಹಾರಾಜರ ಮಾಸಿಕ ವೇತನದಿಂದ ವಿವೇಕಾನಂದರ ಅಮ್ಮ ಬದುಕು ನಡೆಸಿದರು ಎನ್ನುತ್ತಾನೆ. ಸನ್ಯಾಸಿಗೆ ಸಂಸಾರದ ಬಂಧವಿಲ್ಲ. ಅಷ್ಟಕ್ಕೂ ವಿವೇಕಾನಂದರು ಅವರಮ್ಮನಿಗೆ ಏಕಮಾತ್ರ ಸಂತಾನ ಎಂದೇನೂ ಇರಲಿಲ್ಲ. ಉಳಿದ ಹತ್ತು ಮಕ್ಕಳು ಏನು ಮಾಡಿದರು ಸರ್ ? ಅಮ್ಮನನ್ನು ಮರೆತುಹೋದರೇ? ವಿವೇಕಾನಂದರು ನಿರುದ್ಯೋಗಿಯಾಗಿದ್ದು ಹರಕಲು ಬಟ್ಟೆ ತೊಟ್ಟು ಕಲ್ಕತ್ತಾದ ಬೀದಿಗಳಲ್ಲಿ ಸುತ್ತುತ್ತಿದ್ದರಂತೆ ಎಂದಿರಲ್ಲಾ ಸನ್ಯಾಸಿಗಳಿಗೆ ತಪಸ್ಸು, ಅಧ್ಯಯನ ಮತ್ತು ಸನ್ಮಾರ್ಗ ಬೋಧನೆ ಬಿಟ್ಟು ಬೇರೇನು ಉದ್ಯೋಗ ಇರುತ್ತದೆ ?

ವಿವೇಕಾನಂದರ ವಿವೇಕ, ಅವರ ಅಗಾಧ ಜ್ಞಾನ, ಧರ್ಮಾಂಧತೆಯ ವಿರುದ್ಧದ ಅವರ ಧೋರಣೆ, ಘನತರ ವಿಷಯಗಳನ್ನೂ ಸುಲಭವಾಗಿ ಎಲ್ಲರಿಗೂ ಅರಿವಾಗುವಂತೇ ತಿಳಿಸಿಕೊಡುವ ಜಾಣ್ಮೆ, ಇತಿಹಾಸದ ಅರಿವು, ಪ್ರಸಕ್ತ ವಿದ್ಯಮಾನಗಳ ಅರಿವು ಇದೆಲ್ಲಾ ಇದ್ದು ಅವರು ಬರೆದ ಬೃಹತ್ ಸಂಹಿತೆಗಳನ್ನು ಅರ್ಥಮಾಡಿಕೊಳ್ಳಲಾಗದವರು ಆಗಲೂ ಇದ್ದರು, ಈಗಲೂ ಇದ್ದಾರೆ. ಹೇಗೆ ಮೂಲ ಭಗವದ್ಗೀತೆ ಎಲ್ಲರಿಗೂ ಅರ್ಥವಾಗುವುದು ಕಷ್ಟಸಾಧ್ಯವೋ ಹಾಗೆಯೇ ವಿವೇಕ ವಾಣಿ ಎಲ್ಲರಿಗೂ ರುಚಿಸುವುದಿಲ್ಲ, ಅರ್ಥವಾಗುವುದಿಲ್ಲ. ದೇಹ ದಾರ್ಡ್ಯತೆಯ ಬಗ್ಗೆ ಹಾಗೆ ತೊಂದರೆಯಿತ್ತು ಹೀಗೆ ಕೊಸರೊಂದಿತ್ತು ಎಂದು ಸರ್ಟಿಫಿಕೇಟ್ ಕೊಟ್ಟಿದ್ದೀರಲ್ಲ ಅವರ ನಿಲುವನ್ನು ಚಿತ್ರದಲ್ಲಾದರೂ ಸರಿಯಾಗಿ ಒಮ್ಮೆ ನೋಡಿದ್ದೀರೇ ? ವಾರಗಳ ಕಾಲ ಸ್ನಾನ ಮಾಡದ ವ್ಯಕ್ತಿ ಕುಂತಲ್ಲೇ ನಾರುವ ಹಾಗೇ ನಿಮ್ಮಂಥಾ ’ಮಹಾಜ್ಞಾನಿಗಳು’ವಾಸನೆ ಹೊಡೆಯುತ್ತಿರುವುದು ಸುತ್ತಲ ಜನರಿಗೆ ಕೂತುಕೊಳ್ಳಲಿಕ್ಕೆ ಆಗುತ್ತಿಲ್ಲ! ಇನ್ನು ಮೇಲಾದರೂ ತಾನೇ ಪಂಡಿತ, ತನ್ನ ಶಂಖದಿಂದ ಬಂದಿದ್ದೇ ತೀರ್ಥ ಎಂಬ ನಿಮ್ಮ ಲಹರಿಯನ್ನು ಕೈಬಿಟ್ಟು ಲೋಕಮುಖರಾಗಿ ವಿವೇಚಿಸಿ ಬರೆಯಿರಿ ಎಂದು ಉನ್ನತ ಶಬ್ದಗಳಲ್ಲಿ ಗೌರವಿಸಿ ಬರೆದಿದ್ದೇನೆ. ಅರ್ಧ ತುಂಬಿದ ಅಥವಾ ಭಾಗಶಃ ತುಂಬಿದ ಕೊಡವಾದರೆ ಬಹಳ ಕಷ್ಟ; ಜನ ಹಿಡಿದು ಬಡಿದೂಬಿಡಬಹುದು! |ಅಲ್ಪವಿದ್ಯಾ ಮಹಾಗರ್ವೀ .....ಕೇಳಿದ್ದೀರಲ್ಲಾ ?

[ಮಾಹಿತಿಗೆ ೧೬.೧.೨೦೧೨ ರ ಕನ್ನಡ ದಿನಪತ್ರಿಕೆಯೊಂದನ್ನು ನೀವು ಬಳಸಿಕೊಳ್ಳಬಹುದು; ಲೇಖನ ಯಾವುದಕ್ಕೆ ಉತ್ತರ ಎಂಬುದು ತಮಗೂ ಸರಿಯಾಗಿ ತಿಳಿಯುತ್ತದೆ]


Friday, January 20, 2012

ಅರ್ಪಾ, ಅಪಸ್ಮಾರ ಮತ್ತು ಅಗೋಚರ ಕಾರಣಗಳು.

ಚಿತ್ರಗಳ ಋಣ : ಅಂತರ್ಜಾಲ

ಅರ್ಪಾ, ಅಪಸ್ಮಾರ ಮತ್ತು ಅಗೋಚರ ಕಾರಣಗಳು.

ಕಳೆದವಾರದಲ್ಲಿ ಈ ಪ್ರಪಂಚ ಅತ್ಯಂತ ಚಿಕ್ಕ ವಯಸ್ಸಿನ ಒಂದು ಪ್ರತಿಭೆಯನ್ನು ಕಳೆದುಕೊಂಡಿತು. ಅರ್ಪಾ ಕರೀಮ್ ರಾಂಧವಾ ಎಂಬ ಈ ಪಾಕಿಸ್ತಾನೀ ಹುಡುಗಿಯ ಸಾಧನೆ ಕಮ್ಮಿಯದೇನಲ್ಲ. ೯ನೇ ವಯಸ್ಸಿನಲ್ಲೇ ಮೈಕ್ರೋ ಸಾಫ್ಟ್ ಸರ್ಟಿಫೈಡ್ ಪ್ರೊಫೆಶನಲ್ [ಎಮ್.ಸಿ.ಪಿ] ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದ ಅರ್ಪಾ ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್‍ನ ಅಚ್ಚರಿಗೆ ಕಾರಣಳಾಗಿದ್ದಳು. ಬದುಕಿದ್ದರೆ ಗೇಟ್ಸ್ ನ ಸಹಾಯ ಪಡೆದು ಇನ್ನೇನೋ ಆಗುವವಳಿದ್ದಳು, ಆದರೆ ವಿಧಿಯಿಚ್ಛೆ ಬೇರೇನೇ ಇತ್ತು! ಕಂಪ್ಯೂಟರ್ ಎಂಬುದು ಹಲವರಿಗೆ ಅನೇಕ ಸೌಲಭ್ಯಗಳನ್ನೂ ಸದವಕಾಶಗಳನ್ನೂ ತಂದುಕೊಟ್ಟಿದೆ. ಅಂಗವಿಕಲರೂ ಕೂಡ ಕುಳಿತಲ್ಲೇ ಕಂಫ್ಯೂಟರ್ ಬಳಸಿ ಏನೇನೋ ಸಾಹಸ ತೋರಿದ್ದನ್ನು ನಾವು ನೋಡಿಯೇ ಇದ್ದೇವೆ. ಆದರೆ ಎಮ್.ಸಿ.ಪಿ. ಎಂಬ ಪರೀಕ್ಷೆಯನ್ನು ೯ನೇ ವಯಸ್ಸಿಗೇ ಪಾಸು ಮಾಡುವುದು ಬಾಳೆಹಣ್ಣು ತಿಂದಹಾಗಲ್ಲ! ಸಾಮಾನ್ಯವಾಗಿ ಹಲವು ವಯಸ್ಕರಿಗೂ ಬರೆದು ಜಯಗಳಿಸಲಾಗದ ಪ್ರಶ್ನೆಗಳಿರುತ್ತವೆ ಅದರಲ್ಲಿ. ಹಾಗಂತ ಅರ್ಪಾ ಅಂಗವಿಕಲಳೇನೂ ಆಗಿರಲಿಲ್ಲ. ಎಲ್ಲರಂತೇ ಸಹಜ ಬೆಳವಣಿಗೆ ಹೊಂದಿದ್ದಳು. ಆದರೆ ಅವಳಿಗೆ ಇದ್ದ ಒಂದೇ ತೊಂದರೆ ಎಂದರೆ ಅಪಸ್ಮಾರ ಅಥವಾ ಮೂರ್ಛೆರೋಗ.



ಮೂರ್ಛೆರೋಗಕ್ಕೆ ಕಾರಣಗಳು ಇಂದಿಗೂ ಲಭ್ಯವಿಲ್ಲ. ವೈಜ್ಞಾನಿಕವಾಗಿ ಅದು ಆ ಸಿಂಡ್ರೋಮ್ ಈ ಸಿಂಡ್ರೋಮ್ ಎಂದು ಗುರುತಿಸಿದರೂ ಮೂರ್ಛೆರೋಗದಿಂದ ಸಂಪೂರ್ಣ ಗುಣಮುಖರಾದವರು ಕಮ್ಮಿ. ಇದ್ದಕ್ಕಿದ್ದಂತೇ ಯಾವುದೋ ಕೆಟ್ಟ ಸಂದೇಶ ಮೆದುಳಿನ ನರಗಳಲ್ಲಿ ಒಡಮೂಡಿ ವ್ಯಕ್ತಿಯು ಕೆಲಹೊತ್ತು ತನ್ನತನವನ್ನೇ ಕಳೆದುಕೊಂಡು ಇಡೀ ಶರೀರ ಅಥವಾ ಭಾಗಶಃ ಶರೀರ ವಿಚಿತ್ರಗತಿಯಲ್ಲಿ ಕಂಪಿಸುವುದು ಯಾ ಒದ್ದಾಡುವುದೇ ಅಪಸ್ಮಾರ. ಅಪಸ್ಮಾರದಲ್ಲಿ ಪ್ರಮುಖವಾಗಿ ಎರಡು ಮಟ್ಟ : ಒಂದು ಲಘು ಅಪಸ್ಮಾರ ಮತ್ತೊಂದು ಗರಿಷ್ಠ ಅಪಸ್ಮಾರ. ಅದೇ ರೀತಿ ಅಪಸ್ಮಾರ ಕೆಲವೊಮ್ಮೆ ಬಾಲ್ಯದಲ್ಲಿ ಮಾತ್ರ ಕಾಡುತ್ತದೆ. ಕೆಲವೆಡೆ ಇದನ್ನು ಬಾಲಗ್ರಹ ಬಾಧೆ ಎನ್ನುವುದೂ ಇದೆ. ಇನ್ನು ಇಡಿಯೋಪಥಿಕ್ ಅಥವಾ ಅನುವಂಶೀಯವಾಗಿ ಬರುವ ಅಪಸ್ಮಾರ ಒಂದು ತೆರನದ್ದಾದರೆ ಕ್ರಿಪ್ಟೋಜೆನಿಕ್ ಅಥವಾ ಕಾರಣವಿಲ್ಲದೇ ಕಾಡುವ ಅಪಸ್ಮಾರ ಇನ್ನೊಂದು ವಿಧದ್ದಾಗಿದೆ. ಅನುವಂಶೀಯತೆಯಿಂದ ಬರುವ ಮೂರ್ಛೆರೋಗ ಬಾಲ್ಯದಲ್ಲಿ ಕಾಡುವುದಿಲ್ಲವಾದ್ದರಿಂದ ಇದಕ್ಕೆ ಚೈಲ್ಡ್ ಹುಡ್ ಎಬ್ಸೆನ್ಸ್ ಎಪಿಲೆಪ್ಸಿ ಎಂದೂ ಅಲ್ಲದೇ ಜುವೆನೈಲ್ ಎಪಿಲೆಪ್ಸಿ, ಎಪಿಲೆಪ್ಸಿ ವಿತ್ ಗ್ರ್ಯಾಂಡ್ ಮಾಲ್ ಸೀಜರ್ಸ್ ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಇದು ಬಾಲ್ಯದಲ್ಲಿ ಎಲ್ಲೋ ಸಲ್ಪ ಲಘುವಾಗಿ ಕೆಲವರಿಗೆ ಕಾಡುವುದರಿಂದ ಬಿನೈನ್ ಫೋಕಲ್ ಎಪಿಲೆಪ್ಸಿ ಆಫ್ ಚೈಲ್ಡ್ ಹುಡ್ ಎಂದೂ ಪರಿಗಣಿಸಲ್ಪಟ್ಟಿದೆ. ಎರಡನೆಯದ್ದು ಕಾರಣವಿಲ್ಲದೇ ಕಾಡುವಂಥದ್ದು, ಇದಕ್ಕೆ ಗರಿಷ್ಠವಾಗಿ ಸಂಭವಿಸುವುದಕ್ಕೆ ವೆಸ್ಟ್ ಸಿಂಡ್ರೋಮ್ ಮತ್ತು ಲಿನಾಕ್ಸ್ ಗೆಸ್ಟಾಟ್ ಸಿಂಡ್ರೋಮ್ ಎಂದೂ ಹೆಸರಿಸಿದ್ದಾರೆ. ಇದರಲ್ಲಿ ಲಘು ಅಥವಾ ಪಾರ್ಶಿಯಲ್ ಆಗಿ ಸಂಭವಿಸುವುದಕ್ಕೆ ಟೆಂಪೋರಲ್ ಲೋಬ್ ಎಪಿಲೆಪ್ಸಿ ಮತ್ತು ಫ್ರಂಟ್ ಲೋಬ್ ಎಪಿಲೆಪ್ಸಿ ಎಂದಿದ್ದಾರೆ ವಿಜ್ಞಾನಿಗಳು ಮತ್ತು ವೈದ್ಯವಿಜ್ಞಾನ ಪರಿಣತರು.

ಅಪಸ್ಮಾರದ ಮೆದುಳಿನ ತಂತು ಚಿತ್ರಣ

ಹೀಗೇ ಅಪಸ್ಮಾರದ ವೈಖರಿ ಈ ರೀತಿ ಇದ್ದರೂ ಅದಕ್ಕೆ ಸಂಪೂರ್ಣವಾದ ಕಾರಣ ಇಂದಿಗೂ ಒದಗಿ ಬಂದಿಲ್ಲ. ನರಸಂಬಂಧೀ ನಿಯಮಿತ ಔಷಧಗಳ ಸತತ ಸೇವನೆಯಿಂದ ಅದನ್ನು ನಿವಾರಿಸಬಹುದೆಂದು ವೈದ್ಯರುಗಳು ಹೇಳಿದರೂ ಸಂಪೂರ್ಣ ನಿವಾರಣೆ ಆಗಿರುವುದು ಕಾಕತಾಳೀಯವಷ್ಟೇ! ನರರೋಗ ತಜ್ಞರು ಅಥವಾ ಮನಶ್ಶಾಸ್ತ್ರಜ್ಞರು ಕೊಡುವ ಅಲೋಪಥಿಕ್ ಮಾತ್ರೆಗಳ ಸತತ ಸೇವನೆಯಿಂದ ಅಡ್ಡ/ಪ್ರತಿಕೂಲ ಪರಿಣಾಮಗಳಂತೂ ಗ್ಯಾರಂಟಿ! ಅಪಸ್ಮಾರ ತಪ್ಪಿಸುವ ಅಂತಹ ಔಷಧ ಕೆಲವರಿಗೆ ನಿದ್ದೆಯ ಮಂಪರು ನೀಡಿದರೆ, ಇನ್ನು ಕೆಲವರು ಆಲಸ್ಯದಿಂದ ಬಳಲುವಂತೇ ಮಾಡುತ್ತದೆ. ಇನ್ನು ಕೆಲವರಿಗೆ ಪರೋಕ್ಷವಾಗಿ ಶರೀರದ ಉಳಿದ ಅಂಗಾಂಗಗಳ ಮೇಲೆ ಆ ಔಷಧಗಳು ಅಡ್ಡ ಪರಿಣಾಮ ಬೀರುತ್ತವೆ ಎಂಬುದರಲ್ಲಿ ಎರಡುಮಾತಿಲ್ಲ. ಆದರೂ ಸಮಾಜದಲ್ಲಿ ಹತ್ತರಜೊತೆ ಹನ್ನೊಂದನೆಯ ವ್ಯಕ್ತಿಯಾಗಿ ಬದುಕು ನಿರ್ವಹಿಸಲು ಮಾತ್ರೆಗಳ ಬಳಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಅದನ್ನು ಅನುಭವಿಸಿದವರು.

ಅಪಸ್ಮಾರ ಬಂದಾಗ ಮೆದುಳಿನ ನೂರಾರು ಜೀವಕೋಶಗಳು ಸಾಯುತ್ತವೆ ಎಂಬುದು ಪರೀಕ್ಷೆಗಳಿಂದ ತಿಳಿದುಬಂದಿದೆಯಾದರೂ ಈಈಜಿ [ಇಲೆಕ್ಟ್ರೋಎನ್ಸಿಫಾಲೋಗ್ರಾಫಿ]ಯಂತ್ರದಲ್ಲಿ ಅಪಸ್ಮಾರದ ಅವತರಣಿಕೆ ಮಾತ್ರ ಕಾಣಲು ಸಾಧ್ಯವಾಗುವುದಿಲ್ಲ. ಪ್ರತೀಬಾರಿ ಅಪಸ್ಮಾರ ಅಪ್ಪಳಿಸಿದಾಗ ವ್ಯಕ್ತಿ ಲಘುವಾದರೆ ಸ್ವಲ್ಪ ಅಥವಾ ಗರಿಷ್ಠವಾದರೆ ತುಂಬಾ ಬಳಲಬೇಕಾಗುತ್ತದೆ. ಗರಿಷ್ಠ ಪ್ರಮಾಣದಲ್ಲಿ ಅಪಸ್ಮಾರ ಘಟಿಸಿದ ಗಂಟೆಗಟ್ಟಲೆ ರೋಗಿಗೆ ಎಚ್ಚರವಿರುವುದಿಲ್ಲ ಯಾಕೆಂದರೆ ಮೆದುಳು ಸಹಜ ಸ್ಥಿತಿಗೆ ಮರಳಿರುವುದಿಲ್ಲ. ಲಘು ಮತ್ತು ಗರಿಷ್ಠ ಎರಡೂ ತೆರನಾದ ಅಪಸ್ಮಾರ ರೋಗಿಗಳನ್ನು ನಾನು ನೋಡಿದ್ದೇನೆ. ಒಮ್ಮೆ ಒಬ್ಬರ ಜೊತೆ ಊಟ ಮಾಡುತ್ತಿದ್ದಾಗ ಅವರಿಗೆ ತುತ್ತು ತಲೆಗೆ ಹತ್ತಿತು, ನೀರು ಕುಡಿಸಿದರೂ ಮಾತಾಡುತ್ತಿರಲಿಲ್ಲ, ಕರೆದರೂ ಮಾತಾಡುತ್ತಿರಲಿಲ್ಲ, ಕಣ್ಣೆಲ್ಲಾ ತಕ್ಷಣಕ್ಕೆ ಕೆಂಪಗಾಗಿ ಅವರು ಸ್ತಬ್ಧವಾಗಿದ್ದರು! ಮೊದಲಾಗಿ ನನಗೆ ಆ ಬಗ್ಗೆ ತಿಳಿದಿರಲಿಲ್ಲ. ಆ ನಂತರವೇ ತಿಳಿದದ್ದು ಅದು ಲಘು ಅಪಸ್ಮಾರ. ಇನ್ನು ಸ್ನೇಹಿತರೊಬ್ಬರು ದ್ವಿಚಕ್ರ ವಾಹನ ಓಡಿಸುವಾಗ ಬಿದ್ದು ಒದ್ದಾಡುತ್ತಿರುವುದನ್ನು ಯಾರೋ ಹೇಳಿದ್ದರು, ಆಮೇಲೆ ಅವರಲ್ಲಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ಸೇರಿಸಿದಾಗಲೇ ತಿಳಿದದ್ದು ಅದು ಗರಿಷ್ಠ ಪ್ರಮಾಣದ ಅಪಸ್ಮಾರ ಅಂತ. ಆ ವ್ಯಕ್ತಿ ತನ್ನನ್ನು ನಾವು ಹತ್ತರಜೊತೆ ಹನ್ನೊಂದಲ್ಲಾ ಎಂದು ದೂರ ಇಡಬಹುದೆಂಬ ಸಂಶಯದಿಂದ ನಮಗೆ ತಿಳಿಸಿರಲೇ ಇಲ್ಲ. ಮೇಲಾಗಿ ಅಪಸ್ಮಾರವಿದ್ದರೆ ಮದುವೆ ಮಾಡಿಕೊಳ್ಳಲು ಹುಡುಗಿ ಕೊಡುತ್ತಾರೋ ಇಲ್ಲವೋ ಎಂಬ ಕಾರಣವೂ ಅವರಲ್ಲಿತ್ತು! ಮಿತ್ರರೇ ಒಂದು ವಿನಂತಿ: ಅಪಸ್ಮಾರವಿದ್ದವರು ಹತ್ತಿರ ಇರುವವರ ಕೂಡ ಅದನ್ನು ತಿಳಿಸಿಟ್ಟರೆ ತುಂಬಾ ಅನುಕೂಲ. ಬಿ.ಎಮ್.ಟಿ.ಸಿ ಬಸ್ ಚಾಲಕನೊಬ್ಬ ಅಪಸ್ಮಾರ ಬಂದು ಅಪಘಾತವಾದ ಘಟನೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಅಪಸ್ಮಾರ ಕಾಯಿಲೆ ಇರುವವರು ದಯವಿಟ್ಟು ವಾಹನ ಚಲಾಯಿಸಬೇಡಿ; ಅದು ನಿಮಗೂ ಮತ್ತು ಸಾರ್ವಜನಿಕರಿಗೂ ಒಳ್ಳೆಯದಲ್ಲ.

ಧ್ಯಾನನಿರತ ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳು

ಅಪಸ್ಮಾರಕಾಯಿಲೆಯನ್ನು ಜನ್ಮಾಂತರದ ಕುಕೃತ್ಯದ ಅವಶೇಷದಿಂದ ಬರುವ ಕಾಯಿಲೆ ಎಂದು ಹಿಂದೂ ಮೈಥಾಲಜಿ ಬಣ್ಣಿಸುತ್ತದೆ. ಒಪ್ಪಿಕೊಳ್ಳೋಣ-ಇಹದ ಈ ಜನ್ಮವೂ ಮತ್ತು ಬರುವ ಎಲ್ಲಾ ಕಾಯಿಲೆಗಳೂ ಜನ್ಮಾಂತರದಿಂದ ಪಡೆದ ಫಲಗಳೇ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಯಾಕೆಂದರೆ ಅದರ ಅನುಭೂತಿಯನ್ನು ಹಲವಾರು ನಿದರ್ಶನಗಳ ಮೂಲಕ ಆಳವಾಗಿ ಅಧ್ಯಯನ ಮಾಡಿದ್ದೇನೆ-ಇನ್ನೂ ಮಾಡುತ್ತಲೇ ಇದ್ದೇನೆ. ಆ ಕುರಿತು ಇಲ್ಲಿ ಮತ್ತೆ ಹೆಚ್ಚಿಗೆ ಬರೆಯುವುದಿಲ್ಲ. ಚಿಕ್ಕದೊಂದು ಘಟನೆ ಹೀಗಿದೆ: ಕರ್ನಾಟಕಕ್ಕೇ ಅಥವಾ ಭಾರತಕ್ಕೇ ಪ್ರಕಾಂಡ ಪಂಡಿತರೆನಿಸಿದ ಶಾಸ್ತ್ರಿಗಳೊಬ್ಬರು[ಹೆಸರನ್ನು ಬುದ್ಧ್ಯಾಪೂರ್ವಕ ಹೇಳುತ್ತಿಲ್ಲ, ಕ್ಷಮಿಸಿ] ಯಾವುದೋ ಕಾರಣವನ್ನು ಆಮೂಲಾಗ್ರ ಗ್ರಹಿಸದೇ ಸನ್ಯಾಸಿಯೊಬ್ಬರನ್ನು ನಿಂದಿಸಿದ್ದರಂತೆ. ಆ ಗುರು ಪ್ರತ್ಯಕ್ಷವಾಗಿ ಬಾಯಿಂದ ಶಪಿಸಲಿಲ್ಲವಾದರೂ ಪರೋಕ್ಷವಾಗಿ ಅವರ ಮನ ನೊಂದಿತ್ತು. ಸನ್ಯಾಸಿಯ ನೊಂದ ಮನದ ಪ್ರತಿಫಲನ ಮಾರನೇ ದಿನದಿಂದಲೇ ಅಪಸ್ಮಾರದ ರೂಪದಲ್ಲಿ ಶಾಸ್ತ್ರಿಗಳಿಗೆ ಕಾಡಿತ್ತು. ಯಾವುದೇ ಔಷಧಿಯಿಂದಲೂ ವಾಸಿಯಾಗದ ಅದರಿಂದ ಬೇಸತ್ತ ಅವರು ಭಗವಾನ್ ಶ್ರೀಧರ ಸ್ವಾಮಿಗಳನ್ನು ಭೇಟಿಯಾಗಿ ಕಣ್ಣೀರ್ಗರೆದು ತೋಡಿಕೊಂಡರು-ಬೇಡಿಕೊಂಡರು. ತಾಯಿಯ ವಾತ್ಸಲ್ಯವನ್ನು ಸಹಜವಾಗಿ ಹೊಂದಿದ್ದ ಶ್ರೀಧರರು ತಮ್ಮ ತೀರ್ಥ-ಮಂತ್ರಾಕ್ಷತೆಗಳನ್ನು ನೀಡಿ ಆ ಮೂಲಕ ಶಾಸ್ತ್ರಿಗಳು ಗುರುನಿಂದನೆಯಿಂದ ಪಡೆದಿದ್ದ ಅಪಸ್ಮಾರವನ್ನು ನಿವಾರಿಸಿದರು ಎಂಬುದು ದಾಖಲಿಸಲ್ಪಟ್ಟ ಇತಿಹಾಸ. ಇದೇ ಸಮಯದಲ್ಲಿ ಶ್ರೀಧರರು ಮಾತನಾಡುತ್ತಾ " ಮಕ್ಕಳೇ, ಇಹದ ಈ ಬಂಧನವನ್ನು ಹಂತಹಂತವಾಗಿ ಕಳಚಿ ಮುಮುಕ್ಷುತ್ವದೆಡೆಗೆ ನಿಮಗೆ ಸಾಗಲಿಕ್ಕೆ ತೀರ್ಥ, ಮಂತ್ರಾಕ್ಷತೆ ಮತ್ತು ಭಸ್ಮಗಳೆಂಬ ಔಷಧಿಗಳನ್ನು ಕೊಡುವ ವೈದ್ಯನಾನಾಗಿದ್ದೇನೆ " ಎಂದಿದ್ದಾರೆ! ಅದಕ್ಕೇ ಇಂತಹ ಯೋಗಿಗಳನ್ನೂ ಮಹಾತ್ಮರನ್ನೂ ’ಭವರೋಗ ವೈದ್ಯಂ ’ ಎನ್ನುತ್ತಾರೆ ಸಂಸ್ಕೃತದಲ್ಲಿ. ಬಹುಶಃ ಇಂತಹ ಅಪಸ್ಮಾರ ಕಾಯಿಲೆಗೆ ಸಂಪೂರ್ಣ ಪರಿಹಾರ ತಪಸ್ಸಿದ್ಧಿಯನ್ನು ಪಡೆದ ಯೋಗಿಗಳಿಂದಲೇ ಆಗಬೇಕೇ ವಿನಃ ಲೌಕಿಕವಾದ ಯಾವುದೇ ಔಷಧಿಯೂ ತಾತ್ಕಾಲಿಕ ಮತ್ತು ಸಮರ್ಪಕ ನಿವಾರಣೋಪಾಯವಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ.

ಮರಳಿ ಅರ್ಪಾಳ ಕುರಿತು ಚಿಂತಿಸೋಣ. ಅರ್ಪಾ ಎಳೆವೆಯಲ್ಲೇ ಅತ್ಯಂತ ಪ್ರಬುದ್ಧ ಮನಸ್ಕಳಾಗಿದ್ದಳು, ಕಂಪ್ಯೂಟರ್ ಜೀನಿಯಸ್ ಎನಿಸಿದ್ದಳು. ಅಪಸ್ಮಾರ ಎಷ್ಟೋ ಲಕ್ಷ ಲಕ್ಷ ಜನರಲ್ಲಿ ಇದೆ. ಅಪಸ್ಮಾರ ಇರುವವರೆಲ್ಲಾ ಸಾಯುವುದಿಲ್ಲ, ಆದರೆ ಅಪಸ್ಮಾರ ಕೆಲವೊಮ್ಮೆ ಸಾವಿಗೂ ಕಾರಣವಾಗುತ್ತದೆ ಎಂಬುದು ತಿಳಿದುಬಂದ ವಿಷಯ. ಹಿಂದೆ ಹೇಳಿದಂತೇ ಅಪಸ್ಮಾರ ಘಟಿಸಿದಾಗ ಮೆದುಳಿನ ಜೀವಕೋಶಗಳಲ್ಲಿ ವಿಚಿತ್ರ ವಿದ್ಯುತ್ತು ಪ್ರವಹಿಸುತ್ತದೆ, ಆ ಮೂಲಕ ಜೀವಕೋಶಗಳು ಸತ್ತುಹೋಗುತ್ತವೆ. ಸತ್ತಜೀವಕೋಶಗಳಲ್ಲಿ ಸಂಗ್ರವಾಗಿದ್ದ ಸಂದೇಶಗಳೂ ಮಾಹಿತಿಗಳೂ ಅಳಿಸಿಹೋಗುತ್ತವೆ. ಕೆಲವೊಮ್ಮೆ ಅಪಸ್ಮಾರ ರೋಗಿಗಳು ಯಾವುದೋ ಕುರಿತಾಗಿ ಯೋಚಿಸುವಾಗ ಅದು ಸಂಪೂರ್ಣ ಸ್ಮರಣೆಗೆ ಬಾರದೇ ಹೋಗಬಹುದು. ಅಪಸ್ಮಾರ ರೋಗವಿದ್ದೂ ಕಂಪ್ಯೂಟರ್ ಅಪರೇಟಿಂಗ್ ಸಿಸ್ಟಮ್ ಕುರಿತಾದ ಅಗಾಧ ಮಾಹಿತಿಯನ್ನು ಚಾಚೂ ತಪ್ಪದೇ ಓದಿ ಅದನ್ನು ನೆನಪಿಸಿಕೊಂಡು ಎಮ್.ಸಿ.ಪಿ ಮುಗಿಸಿ ತೇರ್ಗಡೆಯಾಗಿದ್ದು ನಿಜಕ್ಕೂ ಅವಳ ದೊಡ್ಡ ಸಾಧನೆ.


ಬಿಲ್ ಗೇಟ್ಸ್ ಜೊತೆಗೆ ಅರ್ಪಾ

ಸಾಧನೆಮಾಡಿ ಮನೆಮಂದಿಗೂ ಜನಿಸಿದ ದೇಶಕ್ಕೂ ಕೀರ್ತಿ ತಂದುಕೊಟ್ಟ ಅರ್ಪಾ ಇನ್ನು ನೆನಪುಮಾತ್ರ. ಸಂತಸದಿಂದಿದ್ದ ಆಕೆಯ ಮಾತಾ-ಪಿತೃಗಳಿಗೆ ಅದೆಷ್ಟು ನೋವಾಗಿರಬಹುದು ಅಲ್ಲವೇ? ದೇಶವಾಸಿಗಳಿಗೇ ಏಕೆ ಜಗತ್ತಿನ ಜನರೆಲ್ಲಾ ಚಣಕಾಲ ಭಾರವಾದ ಹೃದಯದಿಂದ ಕೇಳಬೇಕಾದ ಜೀನಿಯಸ್ ಒಬ್ಬಳ ಅಕಾಲಿಕ ವಿದಾಯದ ಕಥೆ ಇದು. ಕೆಲವೊಮ್ಮೆ ಹೀಗೇ ಎಷ್ಟೋ ಘಟನೆಗಳು ನಡೆಯುತ್ತವೆ. ಬಾಲ್ಯದಲ್ಲಿ ಅತ್ಯಂತ ಹೆಚ್ಚಿನ ಸಾಧನೆಮಾಡಿ ಹರೆಯಕ್ಕೆ ಬರುತ್ತಿದ್ದಂತೇಯೇ ಯಾವುದೋ ಕಾರಣದಿಂದ ಇಹಲೋಕಕ್ಕೆ ವಿದಾಯ ಹೇಳುವ ಮೂಲಕ ಜನ್ಮದಾತರಿಗೆ ಆಜನ್ಮ ಪರ್ಯಂತ ನೋವನ್ನು ಬಿಟ್ಟುಹೋಗಿಬಿಡುತ್ತಾರೆ. ಹೋದವರ ನೋವಿಗಿಂತಾ ಮನೆಯವರ ಗೋಳು ದುಃಖ ತರುವ ವಿಷಯ. ಗತಿಸಿದ ಜೀನಿಯಸ್ ಅರ್ಪಾ ಮತ್ತೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಉನ್ನತ ಜನ್ಮ ಪಡೆಯಲಿ, ಜಗತ್ತಿಗೇ ಮಾದರಿಯಾಗುವ ಸೌಭಾಗ್ಯ ಆಕೆಗೊದಗಲಿ ಎಂಬ ಶುಭಹಾರೈಕೆಗಳೊಡನೆ ನಮ್ಮೆಲ್ಲರ ಅಶ್ರುತರ್ಪಣ.

Friday, January 13, 2012

’ರತ್ನಾವತಿ ಕಲ್ಯಾಣ ’ದಿಂದ ರಂಜಿಸಿದ ಮುದ್ದಣ ಕವಿ


’ರತ್ನಾವತಿ ಕಲ್ಯಾಣ ’ದಿಂದ ರಂಜಿಸಿದ ಮುದ್ದಣ ಕವಿ

ಕೆಲವು ಕವಿ-ಸಾಹಿತಿಗಳಿಗೆ ತಾವು ಬರೆಯುತ್ತೇವೆ ಎಂದು ಹೇಳಿಕೊಳ್ಳುವುದು ಸಾಧ್ಯವಾಗುವುದೇ ಇಲ್ಲ. ವಿದ್ಯೆಯಲ್ಲಿ ಯಾವುದೇ ಹೆಚ್ಚಿನ ಪದವಿ ಪಡೆದಿರದ ವೃತ್ತಿಯಲ್ಲೂ ಎಲ್ಲೋ ಉದರಂಭರಣೆಗಾಗುವ ಒಂದಷ್ಟು ಕಾಸು ಒದಗಿಸುವ ರೀತಿಯಲ್ಲಿ ಬದುಕನ್ನು ನಿರೂಪಿಸಿಕೊಳ್ಳುವ ಕೆಲವರು ಕೀಳರಿಮೆಯಲ್ಲೇ ದಿನ ದೂಡುತ್ತಾರೆ. ಬರೆದ ಕೃತಿಗಳನ್ನು ಹಿಂದೆಂದೋ ಒಬ್ಬ ಮಹಾನುಭಾವ ಬರೆದಿದ್ದ-ಅದನ್ನು ಪ್ರಸ್ತುತ ಪಡಿಸಿದ್ದೇನೆ ಎನ್ನುತ್ತಾ ತಮ್ಮ ಇರವನ್ನು ಹೊರಗೆಡಹದೇ, ಬೇರೆ ಬೇರೆ ಹೆಸರುಗಳಲ್ಲಿ ಪದ್ಯ ಮತ್ತು ಗದ್ಯಗಳನ್ನು ರಚಿಸುತ್ತಾರೆ. ಎಲೆಮರೆಯ ಕಾಯಿಯಾಗಿ ಮಾಗಿ ಹಣ್ಣಾಗುವವರು ಕೆಲವರಾದರೆ ಕಾಯಿದ್ದಾಗಲೇ ಕಾಯಿಲೆಕಸಾಲೆಯಿಂದ ಉದುರಿಹೋಗುವವರೂ ಇದ್ದಾರೆ. ಹಾಗೆ ಉದುರಿ ಹೋದ ಕನ್ನಡದ ನಕ್ಷತ್ರಗಳಲ್ಲಿ ಒಬ್ಬ ಕವಿ ಮುದ್ದಣ.

ಪಠ್ಯಪುಸ್ತಕಗಳಲ್ಲಿ ಮುದ್ದಣನೆಂಬ ಕವಿ ಹಿಂದೆಂದೋ ೧೦-೧೨ ನೆಯ ಶತಮಾನದಲ್ಲಿ ಬದುಕಿದ್ದನೇನೋ ಎಂಬ ಹಾಗೇ ಓದುವ ನಾವು ಮುದ್ದಣನ ಕಾಲಮಾನವನ್ನು ನಿಖರವಾಗಿ ಅಳೆಯಲು ಸಾಧ್ಯವಾಗಿರಲಿಲ್ಲ. ೨೧ನೇ ಶತಮಾನದ ಹಿಂದಿನ-ಇಂದಿನ ಕೊಂಡಿಯಾಗಿ ಹಲವು ಜನಪ್ರಿಯ ಕವನಗಳನ್ನು ಸೃಜಿಸಿದ ಕವಿ ಡಾ| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಹೇಳಿಕೆಯಂತೇ ಮುದ್ದಣ ಬಹಳ ಹಿಂದಿನವನಲ್ಲ. ಆತ ೧೯೦೧ರ ವರೆಗೂ ಬದುಕಿದ್ದ. ಉಡುಪಿಯ ನಂದಳಿಕೆ ಗ್ರಾಮದಲ್ಲಿ ಜನಿಸಿದ್ದ ಈ ವ್ಯಕ್ತಿ ವೃತ್ತಿಯಿಂದ ದೈಹಿಕ ಶಿಕ್ಷಕನಾಗಿದ್ದ. ದೈಹಿಕ ಶಿಕ್ಷಕನಾದ ತನ್ನ ಬರಹಗಳನ್ನು ಜನ ಓದಿ ಮೆಚ್ಚಬಹುದೇ ಎಂಬ ಅನುಮಾನದಿಂದಲೇ ಬರೆದ ಎಲ್ಲಾ ಕೃತಿಗಳನ್ನೂ ಮುದ್ದಣನ ಕೃತಿ ಎಂದು ಹೆಸರಿಸಿದ! ಭಟ್ಟರ ಬಾಲ್ಯ ಶಿವಮೊಗ್ಗೆಯಲ್ಲಿ ಕಳೆಯಿತು. ಭಟ್ಟರ ಕುಟುಂಬ ಅಂದಿಗೆ ವಾಸವಿದ್ದಿದ್ದೂ ಮತ್ತು ಮುದ್ದಣನ ಹೆಂಡತಿ ಮನೋರಮೆಯ ತವರುಮನೆ ಇದ್ದಿದ್ದೂ ಒಂದೇ ಕೇರಿಯಲ್ಲಿ! ಎಳವೆಯಲ್ಲಿ ತನ್ನ ಮೂವತ್ತೊಂದನೇ ವಯಸ್ಸಿಗೆ ಕ್ಷಯರೋಗಕ್ಕೆ ತುತ್ತಾಗಿ ತೀರಿಕೊಂಡ ಮುದ್ದಣನ ಹೆಂಡತಿ ಮುಂದಿನ ತನ್ನ ಜೀವನವನ್ನು ಶಿವಮೊಗ್ಗೆಯ ಕಾಗೆ ಕೋಡಮಗ್ಗಿ ಎಂಬ ಜಾಗದಲ್ಲೇ ಕಳೆದಳು. ಮುದ್ದಣನ ಮೊಮ್ಮಗ ಭಟ್ಟರ ಚಡ್ಡೀ ದೋಸ್ತನಾಗಿದ್ದ! ಮುದ್ದಣನ ಮಗನ ಮನೆಗೆ ನಿತ್ಯ ಕೇರಂ ಆಟ ಆಡಲು ಹೋಗುತ್ತಿದ್ದ ಭಟ್ಟರು ತಾನು ಸಾಕ್ಷಾತ್ ಮನೋರಮೆಯನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ! ಇದಕ್ಕೇ ಎನ್ನುವುದು ಪಠ್ಯವೆಂಬ ಬದನೇಕಾಯಿಗಳಲ್ಲಿ ಸಿಗುವ ಮಾಹಿತಿ ಪರಿಪೂರ್ಣವಲ್ಲ, ದೋಷರಹಿತವೂ ಅಲ್ಲ. ಬೇರೇ ಆಕರಗಳನ್ನು ಓದಿದಾಗಲೇ ನಿಜದ ಅರಿವು ನಮಗೆ ಆಗಲು ಸಾಧ್ಯ.

’ಮುದ್ದಣ’ನೆಂಬ ಕಾವ್ಯನಾಮದಲ್ಲಿ ಕವಿ ತಾನು ರಚಿಸಿದ ಕೆಲವೇ ಕೃತಿಗಳಿಂದ ಜನಪ್ರಿಯನಾಗಲು ಕಾರಣ ಆತನೇ ತನ್ನ ಕೃತಿಗಳನ್ನು ಮೂರನೇ ವ್ಯಕ್ತಿಯಾಗಿ ನಿಂತು ವಿಮರ್ಶೆಮಾಡಿಕೊಂಡಿದ್ದು. ’ಮುದ್ದಣ-ಮನೋರಮೆ’ಯರ ಸರಸ ಸಲ್ಲಾಪ ಎಲ್ಲರಿಗೂ ಗೊತ್ತಿರುವ ವಿಚಾರ. ’ರತ್ನಾವತಿ ಕಲ್ಯಾಣ’ವಂತೂ ಯಕ್ಷಗಾನದ ಅತ್ಯಂತ ರಸಮಯ ಪ್ರಸಂಗ. ಅಲ್ಲಿನ ಶಬ್ದಲಾಲಿತ್ಯದಲ್ಲಿ ಕವಿ ಕೇಳುಗರನ್ನು/ಓದುಗರನ್ನು ಯಾವುದೋ ಆನಂದದ ವಿಹಾರಕ್ಕೆ ಕರೆದೊಯ್ಯುತ್ತಾನೆ. ಅದರಲ್ಲಿನ ಸನ್ನಿವೇಶಗಳು ವಿಲಾಸಪೂರ್ಣ. ಯಕ್ಷಗಾನದಲ್ಲಿ ಕೆಲವು ಪ್ರಸಂಗಗಳನ್ನು ಬೀಳು ಪ್ರಸಂಗಗಳು ಎಂದು ಗುರುತಿಸಲಾಗಿದೆ. ಯಾವ ಪ್ರಸಂಗ ಕೆಲವೊಮ್ಮೆ ತನ್ನದೇ ಏಕತಾನತೆಯಿಂದ ಬೋರುಹೊಡೆಸುತ್ತದೋ ಅಂಥಾದ್ದನ್ನು ಬೀಳು ಪ್ರಸಂಗ ಎನ್ನುತ್ತಾರೆ. ಪೂರ್ಣರಾತ್ರಿ ಯಕ್ಷಗಾನದಲ್ಲಿ ಬೋರು ಹೊಡೆಸುವ ಸನ್ನಿವೇಶಗಳು ಬಂದಾಗ ನಾವೆಲ್ಲಾ ಎದ್ದು ಚಾ ಕುಡಿಯಲು ಹೋಗುತ್ತಿದ್ದುದು ನೆನಪಿದೆ. ಪ್ರಸಂಗ ಬೀಳು ಎನಿಸಿದರೂ ಕಥೆ ಪೌರಾಣಿಕವಾಗಿ ಮನ್ನಣೆಗಳಿಸಿರುವುದರಿಂದ ಅಂತಹ ಪ್ರಸಂಗಗಳನ್ನು ಆಡುವುದಿತ್ತು. ಬೇಸತ್ತ ಜನರಿಗೆ ಅಂತಹ ಪ್ರಸಂಗಗಳ ಜೊತೆಯಲ್ಲಿ ’ರತ್ನಾವತಿ ಕಲ್ಯಾಣ'ಆಡಿ ರಂಜಿಸುವುದು ಮೇಳದವರ ಪ್ರಯತ್ನವಾಗಿತ್ತು! ಅದೇ ಮುದ್ದಣ ’ಕುಮಾರ ವಿಜಯ’ ಎಂಬ ಯಕ್ಷಗಾನವನ್ನೂ ಬರೆದಿದ್ದಾನೆ.

ಪುರಾತನ ಕೃತಿಗಳು ಎಂದರೆ ಜನ ಕುತೂಹಲ ಸಹಜದಿಂದ ಓದುತ್ತಾರೆ ಎಂಬ ಅನಿಸಿಕೆಯಿಂದ ಮಾರುವೇಷತೊಟ್ಟು ಕನ್ನಡ ಸಾರಸ್ವತಲೋಕದಲ್ಲಿ ಬದುಕಿದ್ದವ ಈ ಮುದ್ದಣ. ’ರತ್ನಾವತಿ ಕಲ್ಯಾಣ’, ’ಕುಮಾರ ವಿಜಯ’, ’ಅದ್ಭುತ ರಾಮಾಯಣ’, ರಾಮ ಪಟ್ಟಾಭಿಷೇಕ’, ’ರಾಮಾಶ್ವಮೇಧ’ ಮುಂತಾದ ಹೆಚ್ಚಿನದಾಗಿ ರಾಮಕಥೆಯನ್ನೇ ಆಧರಿಸಿದ ಕೃತಿಗಳನ್ನು ಬರೆದ. ೧೮೭೦ ರ ಜನವರಿ ೨೪ರಲ್ಲಿ ಉಡುಪಿಯ ನಂದಳಿಕೆಯಲ್ಲಿ ಜನಿಸಿದ ಲಕ್ಷ್ಮೀನಾರಣಪ್ಪ ಬದುಕಿದ್ದು ಕೇವಲ ೩೧ ವರ್ಷ. ವ್ಯಾಯಾಮ ಶಿಕ್ಷಕನಾಗಿದ್ದ ಈತ ಶ್ರಮಪಟ್ಟು ಹಳಗನ್ನಡವನ್ನು ಅಭ್ಯಾಸ ಮಾಡಿ ಹಳಗನ್ನಡದಲ್ಲೇ ಕೃತಿಗಳನ್ನು ರಚಿಸುವ ಪಾಂಡಿತ್ಯ ಗಳಿಸಿದ. ಹೆಂಡತಿಯ ನಿಜ ನಾಮಧೇಯ ಕಮಲಾಬಾಯಿ. ವಿನೋದಪ್ರಿಯನಾಗಿದ್ದ ಮುದ್ದಣ ಮುಗ್ಧೆಯಾದ ಹದಿಹರೆಯದ ಮನೋರಮೆಯನ್ನು ಆಗಾಗ ರೇಗಿಸಿ ನಗಿಸುತ್ತಿದ್ದನಂತೆ! ಕಮಲಾಬಾಯಿಯನ್ನು ತಾನೇ ಇಟ್ಟ ’ಮನೋರಮೆ’ ಎಂಬ ಹೆಸರಿನಿಂದಲೇ ಕರೆಯುತ್ತಿದ್ದನಂತೆ. ೧೮೯೩ರಲ್ಲಿ ಮುದ್ದಣನಿಗೆ ವಿವಾಹವಾಗಿತ್ತು. ೧೯೦೦ ರಲ್ಲಿ ಮಗ ’ರಾಧಾಕೃಷ್ಣ’ ಹುಟ್ಟಿದ್ದ. ೧೯೦೧ ರಲ್ಲಿ ಮುದ್ದಣ ಗತಿಸಿದಾಗ ಕಮಲಾಬಾಯಿಗೆ ಹದಿನೆಂಟೋ ಇಪ್ಪತ್ತೋ ವಯಸ್ಸಿರಬಹುದು. ಮುಂದೆ ಅವಳನ್ನೂ ರಾಧಾಕೃಷ್ಣನನ್ನೂ ಆಕೆಯ ತವರು ಮನೆಯವರು ತಮ್ಮಲ್ಲಿಗೆ ಕರೆದೊಯ್ದರು ಎನ್ನುತ್ತಾರೆ ಕವಿ ಲಕ್ಷ್ಮೀನಾರಾಯಣ ಭಟ್ಟರು.

ದೊಡ್ಡವನಾದಮೇಲೆ ಮುದ್ದಣನ ಮಗ ರಾಧಾಕೃಷ್ಣಯ್ಯ ಶಿವಮೊಗ್ಗೆಯ ಎ.ವಿ.ಗರ್ಲ್ಸ್ ಸ್ಕೂಲ್‍ನಲ್ಲಿ ಅಧ್ಯಾಪಕರ ಕೆಲಸಕ್ಕೆ ಸೇರಿದ. ಗೆಳೆಯರು ಪರಿಚಿತರು ಬಾಬುರಾವ್ ಎಂಬ ತೋಂಡಿ ಹೆಸರಿನಿಂದ ಅವರನ್ನು ಕರೆಯುತ್ತಿದ್ದರು. ಭಟ್ಟರ ಕಡೆಯ ಅಕ್ಕ ಸಾವಿತ್ರಿ ಎಂಬಾಕೆ ರಾಧಾಕೃಷ್ಣರ ವಿದ್ಯಾರ್ಥಿನಿಯಾಗಿದ್ದಳಂತೆ. ಭಟ್ಟರ ಬಾಲ್ಯದ ಮನೆ ಮತ್ತು ರಾಧಾಕೃಷ್ಣರ ಮನೆ ಇದ್ದಿದ್ದು ಒಂದೇ ಸಾಲಿನಲ್ಲಿ. ಒಂದು ವಠಾರದ ಮನೆಯಲ್ಲಿ ರಾಧಾಕೃಷ್ಣ ಮತ್ತು ಹೆಂಡತಿ ಸರಸ್ವತಮ್ಮ ಹಾಗೂ ಅವರ ಐದು ಜನ ಮಕ್ಕಳು ಜೊತೆಗೆ ತಾಯಿ ಕಮಲಾಬಾಯಿ[ಮನೋರಮೆ] ಇದ್ದರಂತೆ. ಕಮಲಾಬಾಯಿಗೆ ಆಗ ಸುಮಾರು ೬೫ ವರ್ಷ ಕಳೆದಿತ್ತೋ ಏನೋ ಎನ್ನುತ್ತಾರೆ ಭಟ್ಟರು. ಮಕ್ಕಳೆಲ್ಲರ ’ಕಮಲಜ್ಜಿ’ಯಾಗಿದ್ದಳು ಮುದ್ದಣನ ಆ ಮನೋರಮೆ! ರಾಧಾಕೃಷ್ಣಯ್ಯನವರ ಎರಡನೇ ಮಗ ಸೀತಾರಾಮು ಭಟ್ಟರಿಗೆ ಸಹಪಾಠಿಯೂ ಸ್ನೇಹಿತನೂ ಆಗಿದ್ದು ಕೇರಂ ಆಟದ ಹುಚ್ಚು ಭಟ್ಟರನ್ನು ಪ್ರತೀನಿತ್ಯ ಕೇರಂ ಬೋರ್ಡ್ ಇರುವ ರಾಧಾಕೃಷ್ಣಯ್ಯನವರ ಮನೆಗೆ ಹೋಗುವಂತೇ ಮಾಡುತ್ತಿತ್ತು. ಅಲ್ಲಿಗೆ ಹೋದಾಗ ಪ್ರತಿದಿನ ಮನೆಯ ಹಾಲ್ ನಲ್ಲಿ ಗೋಡೆಗೆ ತಗುಲಿಹಾಕಿದ್ದ ಚಿತ್ರಪಟವೊಂದು ಭಟ್ಟರನ್ನು ಸೆಳೆಯುತ್ತಿತ್ತಂತೆ. ಅದರ ಕೆಳಗೆ ’ನಂದಳಿಕೆ ಲಕ್ಷ್ಮೀನಾರಣಪ್ಪ’ ಎಂದು ಬರೆದಿತ್ತು ಎಂದಿದ್ದಾರೆ ಭಟ್ಟರು. ಆ ಚಿತ್ರ ಮುದ್ದಣ ಕವಿಯದ್ದೆಂದಾಗಲೀ ಕಮಲಜ್ಜಿಯೇ ’ಮನೋರಮೆ’ ಎಂದಾಗಲೀ ಅರಿತಿರದ ಭಟ್ಟರಿಗೆ ಆಗ ಹದಿಮೂರು-ಹದಿನಾಲ್ಕು ವಯಸ್ಸು. ಹೇಳಬೇಕೂಂದ್ರೆ ಭಟ್ಟರಿಗೆ ಹೆಚ್ಚಿನ ಕವಿಗಳ ಅದರಲ್ಲೂ ಮುದ್ದಣನ ಹೆಸರೇ ಗೊತ್ತಿರದ ಕಾಲಘಟ್ಟ ಅದು.

ಒಂದು ದಿನ ಎಂದಿನಂತೇ ಬಾಲಕ ಭಟ್ಟರು ಆಡಲು ಹೋದಾಗ ಮಕ್ಕಳ್ಯಾರೂ ಮನೆಯಲ್ಲಿರಲಿಲ್ಲ. ಹಾಲ್ ನಲ್ಲಿ ಗೋಡೆಗೆ ಆನಿಸಿಟ್ಟಿದ್ದ ಕೇರಂ ಬೋರ್ಡ್ ಮತ್ತು ಪಾನು[ಕಾಯಿ]ಗಳ ಡಬ್ಬ ಎತ್ತಿಕೊಂಡು ಆ ಮನೆಯ ವಠಾರದಲ್ಲಿ ಮನೆಯ ಮುಂದಿರುವ ಮಣ್ಣ ಜಗಲಿಯಮೇಲೆ ಹರಡಿಕೊಂಡು ಒಬ್ಬರೇ ಆಟವಾಡುತ್ತಿದ್ದಾಗ " ಏನೋ ಸೀತಾರಾಮು, ನಿನ್ನ ಸ್ನೇಹಿತ ಇನ್ನೂ ಬಂದೇ ಇಲ್ಲ, ಬೆಳಿಗ್ಗೆ ಸಂಜೆ ಬರೇ ಆಟ, ಓದುವುದು ಯಾವಾಗಪ್ಪಾ? " ಎಂದು ಮೊಮ್ಮಗನೇ ಆಡುತ್ತಿದ್ದಾನೆ ಎಂಬ ಭ್ರಮೆಯಲ್ಲಿ ಗದರಿಕೊಂಡಹಾಗೇ ಕೇಳಿದ್ದರಂತೆ. ಅವರಿಗೆ ಆಗ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲವಂತೆ. " ಸೀತಾರಾಮ ಅಲ್ಲ ಕಮಲಜ್ಜಿ ನಾನು ಅಣ್ಣ [ಭಟ್ಟರ ಬಾಲ್ಯದ ಅಡ್ಡ ಹೆಸರು]ಸೀತಾರಾಮ ಎಲ್ಲೋ ಹೋಗಿದ್ದಾನೆ, ನಾನು ಅವನಿಗೇ ಕಾಯ್ತಿದ್ದೀನಿ" ಎಂದಾಗ " ಓ ನೀನಾ ! ಸರಿ ಬಿಡು " ಎಂದಿದ್ದರಂತೆ. " ನಿನ್ನ ಅಮ್ಮ, ಗೌರ, ಸಾವಿತ್ರಿ[ಗೌರಿ, ಸಾವಿತ್ರಿ ಭಟ್ಟರ ಅಕ್ಕಂದಿರು] ಚೆನ್ನಾಗಿದ್ದಾರಾ? " ಎಂದು ಅನೇಕ ದಿನ ಕೇಳುತ್ತಿದ್ದುದೂ ಇತ್ತಂತೆ. ಹೀಗೇ ಮನೋರಮೆಯೊಟ್ಟಿಗೆ ನೇರವಾಗಿ ಸಂಭಾಷಿಸಿದ ಹೆಗ್ಗಳಿಕೆ ಭಟ್ಟರದು. ಭಟ್ಟರ ಬಾಲ್ಯ ಕಳೆದು ಕನ್ನಡ ಆನರ್ಸ್ ಮಾಡಲು ಮೈಸೂರಿಗೆ ಅವರು ಹೋದಾಗ ಅಲ್ಲಿ ಎಸ್.ವಿ.ಪರಮೇಶ್ವರ ಭಟ್ಟರು ಸಂಪಾದಿಸಿದ್ದ ’ಅದ್ಭುತ ರಾಮಾಯಣ’ದ ಮುನ್ನುಡಿಯನ್ನು ಓದುತ್ತಿರುವಂತೆಯೇ ಭಟ್ಟರಿಗೆ ಮುದ್ದಣ-ಮನೋರಮೆಯರ ಬಗ್ಗೆ, ಮುದ್ದಣ ಎಂದರೆ ನಂದಳಿಕೆ ಲಕ್ಷ್ಮೀನಾರಣಪ್ಪ ಎಂಬಬಗ್ಗೆ ತಿಳಿಯಿತೆಂದು ಹೇಳಿದ್ದಾರೆ.

ಮುದ್ದಣ ಬದುಕಿದ್ದರೆ ಮಹಾಕವಿ ಎನಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದಿದ್ದ. ಅವನು ’ಗೋದಾವರಿ’ ಎಂಬ ಕದಂಬರಿಯನ್ನು ಅರ್ಧ ಬರೆದಿದ್ದ. ವಿಧಿ ಅದನ್ನು ಪೂರ್ತಿಮಾಡಲು ಅವಕಾಶ ಕೊಡಲಿಲ್ಲ. ಹಸ್ತಪ್ರತಿಯಲ್ಲಿದ್ದ ಅದೆಲ್ಲೋ ಹಾಗೇ ಜೀರ್ಣವಾಗಿ ಹೋಯ್ತು. ’ರಾಮಪಟ್ಟಾಭಿಷೇಕ’ ಪದ್ಯ ರೂಪದಲ್ಲಿದ್ದರೆ ’ಅದ್ಭುತ ರಾಮಾಯಣ’ ಮತ್ತು ’ರಾಮಾಶ್ವಮೇಧ’ ಗದ್ಯ ರೂಪದಲ್ಲಿವೆ. ಆದರೂ ’ರಾಮಾಶ್ವಮೇಧ’ ಹೆಚ್ಚು ಕಾವ್ಯ ಸತ್ವದಿಂದ ಕೂಡಿದೆ. ’ಜೋ ಜೋ’ ಎಂಬ ಶಬ್ದಾರ್ಥ ಸಂಶೋಧನ ಲೇಖನವೊಂದನ್ನು ’ಚಕ್ರಧಾರಿ’ ಎಂಬ ಕಾವ್ಯನಾಮದಿಂದ ’ಸುವಾಸಿನಿ’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದ. ತನ್ನ ಕೃತಿಗಳನ್ನು ತನ್ನದೆನ್ನದೇ ಹಿಂದಿನ ಯಾರೋ ಹಳಗನ್ನಡದ ಕವಿಯ ಕೃತಿಗಳೆಂದು ಹೇರ್‍ಳಿಕೊಂಡ ಆತನಿಗೆ ತನ್ನ ಕವಿತ್ವವನ್ನು ಜನ ಗುರುತಿಸಿ ತನ್ನ ಕೃತಿಗಳು ಮೆರೆಯುವ ಕಾಲವನ್ನು ನೋಡಬಿಡಲಿಲ್ಲ ಆ ವಿಧಿ; ಉತ್ತಮ ಕೃತಿಗಳನ್ನು ರಚಿಸಿಯೂ ಗೊತ್ತಾಗದಂತೇ ಕರ್ಪೂರದಂತೇ ಕರಗಿಹೋದ ಕವಿ ಮುದ್ದಣ. ಮೈಸೂರಿನ ’ಕಾವ್ಯ ಮಂಜರಿ’ ಮತ್ತು ’ಕಾವ್ಯ ಕಲಾನಿಧಿ’ ಮಾಸಪತ್ರಿಕೆಗಳು ಮುದ್ದಣನ ಮೂರೂ ರಾಮಕಥೆಗಳನ್ನು ಭಾಗ ಭಾಗವಾಗಿ ಪ್ರಕಟಿಸಿದ್ದವಂತೆ. ’ರಾಮಾಶ್ವಮೇಧ’ ಪೂರ್ತಿ ಪ್ರಕಟವಾಗುವುದಕ್ಕೂ ಮೊದಲೇ ತೀರಿಕೊಂಡ ಮುದ್ದಣ ಪ್ರೀತಿಯ ಪತ್ನಿಯನ್ನೂ, ವರ್ಷವೊಂದು ತುಂಬಿದ ಮಗನನ್ನೂ ಬಿಟ್ಟು ಹೊರಟುಹೋದ; ದುರಂತ ಕಥೆಯಾದ. ಲಕ್ಷ್ಮೀನಾರಣಪ್ಪನೇ ಮುದ್ದಣನೆಂದೂ ರಾಮಕಥೆಗಳೆಲ್ಲಾ ಅವನವೇ ಎಂದೂ ತಿಳಿದದ್ದು ಆತ ಮರಣಸಿದ ನಂತರವೇ.

ಮುದ್ದಣನ ಕೃತಿಯಲ್ಲಿ ಪ್ರತಿಮಾತ್ಮಕವಾಗಿ ಪ್ರಕಟಗೊಳ್ಳುವ ವಿಮರ್ಶಾತತ್ವ ಅವನಿಗೆ ಕನ್ನಡದಲ್ಲಿ ಪ್ರತ್ಯೇಕವಾದ ಉನ್ನತ ಸ್ಥಾನ ಕಲ್ಪಿಸಿದೆ. ಆಂಗ್ಲ ಕವಿ ಟಿ.ಎಸ್. ಎಲಿಯೆಟ್ ಬರುವುದಕ್ಕಿಂತ ಮೊದಲು ಕಾವ್ಯ ಸಾಹಿತ್ಯ ಕೇವಲ ಪ್ರತಿಭೆಯ ಫಲ ಎಂಬ ರೋಮಾಂಚಕ ಕಲ್ಪನೆ ಇತ್ತು. ಕಾವ್ಯಕ್ಕೆ ಪ್ರತಿಭೆಯೇನೋ ಅವಶ್ಯಕವೇ ಆದರ ಜೊತೆಜೊತೆಗೆ ಕವಿಯ ಶ್ರಮ ಮತ್ತು ಬುದ್ಧಿಮತ್ತೆ ಬಹಳ ಬೇಕು ಎಂಬುದನ್ನು ಎಲಿಯಟ್ ವಿಷದಪಡಿಸಿದ್ದಾನೆ. ತಾನು ಬರೆದ ಅದೆಷ್ಟೋ ಸಾಲುಗಳನ್ನು ಹೊಡೆದು, ತಿದ್ದಿ, ಬದಲಿಸಿ ಕವಿತೆಗೆ ಬುದ್ಧಿಯ ಚುಚ್ಚುಮದ್ದನ್ನು ನೀಡುವ ಕವಿ ಕೆಲವೊಮ್ಮೆ ಬರಡು ಭೂಮಿಯಲ್ಲಿ ಬೀಜಬಿತ್ತಿ ನೀರು-ಗೊಬ್ಬರ ತಕ್ಕಮಟ್ಟಿಗೆ ಪೂರೈಸಿ, ಮಳೆಗಾಗಿ-ಬೆಳೆಗಾಗಿ ಪ್ರಾರ್ಥಿಸಿ ಕುಳಿತ ರೈತನಂತಿರುತ್ತಾನೆ! ಉತ್ತಮ ಫಸಲು ಬರಬಹುದು ಬರದೇ ಇರಬಹುದು ಅದು ಅವನ ಅದೃಷ್ಟದಾಟ!!

ಇದನ್ನೇ, ಎಲಿಯಟ್ ಬರುವುದಕ್ಕಿಂತಾ ಮೊದಲೇ, ಕನ್ನಡದ ಕವಿ ಮುದ್ದಣ ತನ್ನ ’ರಾಮಾಶ್ವಮೇಧ’ದಲ್ಲಿ ವಾರೆನೋಟದಲ್ಲಿ ಪ್ರತಿಬಿಂಬಿಸಿದ್ದ ಎಂದರೆ ತಪ್ಪಾಗಲಾರದು. ಹೃದ್ಯವಾದ ಪ್ರಸಂಗದಲ್ಲಿ ಮುದ್ದಣ ಮತ್ತು ಪತ್ನಿ ಮನೋರಮೆ ಅ ಕಾವ್ಯದೊಳಗೆ ಸೂತ್ರಧಾರ ನಟನಟಿಯರಂತೇ ಬಂದು ಪಾತ್ರನಿರ್ವಹಿಸುತ್ತಾರೆ. ಮುದ್ದಣ ನಿರ್ದಿಷ್ಟವಾದ ಉದ್ದಿಶ್ಯದಿಂದ ನಿರ್ಮಿಸಿಕೊಂಡಿದ್ದು ಈ ಕಾವ್ಯತಂತ್ರ! ಹಿಂದಿನ ಕವಿಗಳು ತಮ್ಮ ಪಾಂಡಿತ್ಯವನ್ನು ಮೆರಸಲು ಬಳಸಿದ ಕ್ಲಿಷ್ಟಕರ ಶಬ್ದಪ್ರಯೋಗಗಳೂ, ದೇವತಾ ಸ್ತುತಿಗಳೂ , ಅನವಶ್ಯಕವಾದ ವಿದ್ವತ್ಪೂರ್ಣ ಆಡಂಬರದ ಪದಗಳೂ ಕಾವ್ಯವನ್ನು ಕೆಡಿಸುತ್ತವೆ ಎಂಬ ಕಲ್ಪನೆ ಮುದ್ದಣನಿಗಿತ್ತು. ನಡೆದುಬಂದ ಸಂಪ್ರದಾಯಕ್ಕೆ ಏಕಾಏಕಿ ಪೂರ್ಣವಿರಾಮ ಹಾಕಿಬಿಟ್ಟರೆ ಓದುವ ಜನ " ಓಹೋ ಈತನಿಗೆ ಪಾಂಡಿತ್ಯವಿಲ್ಲ" ಎಂದು ಭಾವಿಸಲೂ ಬಹುದು ಅಥವಾ ಕೃತಿಗಳು ಅಂತಹ ಸಂಪ್ರದಾಯವಾದಿಗಳ ಅವಜ್ಞೆಗೆ ಕಾರಣವೂ ಆಗಬಹುದು ಎಂಬ ದೃಷ್ಟಿಕೋನದಿಂದ ತನ್ನ ಕಾವ್ಯವನ್ನೇ ಒರೆಗೆ ಹಚ್ಚುವಲ್ಲಿ ತಾನು ಕಾವ್ಯದೊಳಗೇ ಸೂತ್ರಧಾರ ಪಾತ್ರವಾಗಿ ಸೇರಿಕೊಂಡು ಹೆಂಡತಿಯನ್ನೂ ಹಾಗೇ ಸೇರಿಸಿಕೊಂಡುಬಿಟ್ಟ! ಸೂತ್ರಧಾರ ನಲ್ಲ-ನಲ್ಲೆಯರ ಮಧ್ಯೆ ನಡೆಯುವ ಸರಸ ಸಂಭಾಷಣೆ ಕಾವ್ಯವನ್ನು ವಿಮರ್ಶಿಸುತ್ತಾ ನಡೆಯಿತು!

" ಸ್ವಸ್ತಿ ಶ್ರೀಮತ್ ಸುರಾಸುರೇಂದ್ರ ಮುನೀಂದ್ರ ಫಣೀಂದ್ರ ಮಣಿಮುಕುಟ ತಟಘಟಿತ " ಮುಂತಾಗಿ ಕಾವ್ಯಾರಂಭ ಮಾಡಿದಾಗ ಸುಂದರಿಯೂ ಜಾಣೆಯೂ ಆದ ಮನೋರಮೆ ಆತನನ್ನು ತಡೆದು " ಇದೇನು ನಿನ್ನ ಕಥೆಯ ಹೇಳಾಟ? ನೀರಿಳಿಯದ ಗಂಟಲಲ್ಲಿ ಕಡುಬು ತುರುಕುವುದೇ? ಸಾಮಾನ್ಯಳಾದ ನನಗೆ ಕಥೆ ಹೇಳಲು ಇಂಥಾ ಕಷ್ಟದ ಶೈಲಿ ಬಳಸುತ್ತೀಯಾ? ತಿಳಿಯುಂಥಾ ಮಾತಿನಲ್ಲಿ ಕಥೆ ಹೇಳಬೇಡವೇ? " ಎಂದು ಮೂಗು ಮುರಿಯುತ್ತಾಳೆ. ಮುಂದೆ ಮತ್ತೆಲ್ಲೋ ಆಗಾಗ ಆಡಂಬರದ ಅಲಂಕಾರಗಳು ಜಾಸ್ತಿಯಾದಾಗ " ಯಾರಿಗೆ ಬೇಕು ಆ ವರ್ಣನೆ ಕಥೆ ಮುಂದುವರಿಸು" ಎಂದು ಛೇಡಿಸುತ್ತಾಳೆ. ಇದೇ ರಸಸಂವಾದ ರಾಮಕಥಾನಕವೆಂಬ ರೇಷ್ಮೆಯ ಪೀತಾಂಬರಕ್ಕೆ ಬಂಗಾರದ ಜರಿಯ ಅಂಚಿನಂತಿದ್ದು ಕೃತಿ ಅನನ್ಯವಾಗಿ ಎದ್ದು ನಿಲ್ಲುತ್ತದೆ. ಶೃಂಗಾರ ರಸತುಷಾರದ ಸಿಂಚನದೊಂದಿಗೆ ಪರೋಕ್ಷವಾಗಿ ಕಾವ್ಯವನ್ನು ತಾನೇ ವಿಮರ್ಶೆಗೆ ಒಳಪಡಿಸಿಕೊಳ್ಳುವ ಕನ್ನಡದ ಏಕೈಕ ಕವಿಯನ್ನು ಮುದ್ದಣನಲ್ಲಿ ಕಾಣಬಹುದಾಗಿದೆ!

ಕಡಲಂಚಿನ ಕಾವ್ಯಲಹರಿಯೇ ಯಕ್ಷಗಾನದ ಮೂಲ ಸ್ವತ್ತು! ಹಲವು ರಾಗಗಳಲ್ಲಿ, ಛಂದಸ್ಸುಗಳಲ್ಲಿ ಪ್ರಸಂಗಗಳನ್ನು ಹಾಡುವಂತೇ ಹೊಸೆಯುವ ಕವಿತ್ವವೇ ಅದರಲ್ಲಿನ ತಾಕತ್ತು! ಭಾಮಿನಿ ಷಟ್ಪದಿ, ಭೋಗ ಷಟ್ಪದಿ ರಾಗಗಳನ್ನು ಹಾಡುವಾಗ ಸಹಜವಾಗಿ ಹಳಗನ್ನಡದ ಮೇರು ಕವಿಗಳು ನೆನಪಿಗೆ ಬರುತ್ತಾರೆ.

ನಾಂದಿಯೊಳು ವರವ್ಯಾಸ ಮುನಿವರ ......
ಕವಿಜನಸಂದಣಿಗೆ ಬಲಬಂದು .....
.
.
ಅಂಬುನಿಧಿಯಾತ್ಮಜಗೆ ಕೈಮುಗಿದಂಬುಜಾಸನ ವಾಣಿಯರ
ಪಾದಾಂಬುಜಕೆ ಪೊಡಮಟ್ಟು ಪೇಳುವೆನೀಕಥಾಮೃತವ ...............

ಎಂದು ಭಾಗವತರು ರಾಗವಾಗಿ ನಾಂದಿಹಾಡುತ್ತಿರುವಾಗಲೇ ರನ್ನ, ಪಂಪ, ಹರಿಹರ, ಕುಮಾರವ್ಯಾಸಾದಿ ಹಲವು ಕನ್ನಡ ಕವಿಗಳು ನಮ್ಮ ಮನದಲ್ಲಿ ಹಾದುಹೋಗುವುದು ಸಾಹಿತ್ಯ ರುಚಿಸುವ ಯಕ್ಷಗಾನಾಸಕ್ತರಿಗೆ ಸಹಜ. ಹಿತಮಿತ ಸಂಗೀತ, ಅದ್ಭುತ ಪ್ರಾಸಬದ್ಧ ಸಾಹಿತ್ಯ, ನವರಸಗಳಿಗೆ ತಕ್ಕುದಾದ ರಾಗಪ್ರಸ್ತಾರ, ಅದರದ್ದೇ ಆದ ತಾಳ, ಲಯ, ಬಿಡ್ತಿಗೆ, ಚಂಡೆ-ಮದ್ದಳೆ-ಗೆಜ್ಜೆಗಳ ಸಮ್ಮಿಶ್ರ ಸ್ವರಸಂದೋಹ, ಗೆಜ್ಜೆಯ ನಾದವನ್ನೇ ಹೋಲುವ ತಾಳದ ಸದ್ದು --ಇವೆಲ್ಲಾ ಹಿಮ್ಮೇಳದ ಕೊಡುಗೆಯಾದರೆ ಹಾಡಲು ಸುಲಭವಾಗುವಂತಹ ಪ್ರಾಸಬದ್ಧ ಮತ್ತು ಸ್ವರಶುದ್ಧ ಹಾಡುಗಳಲ್ಲಿ ಯಕ್ಷಗಾನ ಪ್ರಸಂಗಗಳನ್ನು ಪೋಣಿಸಿಕೊಟ್ಟ ಮಹತಿಯ ಔದಾರ್ಯ ಕನ್ನಡ ಕವಿಗಳದ್ದಾಗಿದೆ. ಅಂತಹ ಕವಿಜನಸಂದಣಿಯಲ್ಲಿ ಮುದ್ದಣ ಕೂಡ ಒಬ್ಬ ಎಂಬುದು ನಮಗೆಲ್ಲಾ ಹೆಮ್ಮೆಯ ವಿಷಯ. ಆ ಕವಿಜನಸಂದಣಿಗೂ ನಮಸ್ಕರಿಸುವುದರ ಜೊತೆಗೇ ನಾನು ಬಹಳವಾಗಿ ಮೆಚ್ಚುವ ಕವಿ ಶ್ರೀ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರಿಗೂ ವಂದಿಸುವುದು ಇಂದಿನ ಈ ಲೇಖನದ ಔಚಿತ್ಯ.