ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 14, 2011

ಅವರು ಬಿಟ್ಟು ಹೋದರು; ನಾವು ಒಟ್ಟಾರೆ ಇದ್ದೇವೆ !!



ಅವರು ಬಿಟ್ಟು ಹೋದರು; ನಾವು ಒಟ್ಟಾರೆ ಇದ್ದೇವೆ !!


ಯಾವಾಗಲೂ ತೊಂದರೆಗಳ/ ಸಮಸ್ಯೆಗಳ ರಾಗವನ್ನೇ ಹಾಡಿದರೆ ಓದುವವರಿಗೂ ಬೇಜಾರಾಗ್ತದೆ ಅನ್ನೋದು ನಂಗೂ ಗೊತ್ತು. ಆದರೆ ಅಂಗೈ ಹುಣ್ಣಿಗೆ ಕನ್ನಡಿ ಹಿಡಕೊಂಡು ಬಾವುಟಹಾರಿಸಿ ಊದ್ದುದ್ದ ಮೇಜುಗುದ್ದುವ ಭಾಷಣಗಳನ್ನು ಸಿಡಿಸಿ ಸ್ವಲ್ಪ ಸಿಹಿ ಹಂಚಿಬಿಟ್ಟರೆ ಅದು ಸ್ವಾತಾಂತ್ರ್ಯೋತ್ಸವ -ನಮ್ಮ ಲೆಕ್ಕದಲ್ಲಿ. ಯಾರದರೂ ನನ್ನೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸ್ತಾ ಇದ್ದೇವೆ ಅಂದ್ರೆ ಅವರನ್ನೆಲ್ಲಾ ಕಲೆಹಾಕಿ ಕೂತು ಒಂದು ಬೈಠಕ್ಕು ಮಾಡಬೇಕು ಅನ್ನಿಸ್ತಾ ಇದೆ. " ಗಂಡೆದೆ ಇದ್ರೆ ಕಾಶ್ಮೀರ ಬಿಡಸ್ಕೊಳ್ರೀ ಆಮೇಲೆ ಬಾವುಟ ಇನ್ನೂ ಚೆನ್ನಾಗಿ ಹಾರ್ಸೋಣ " ಅಂತಿದ್ದೆ.

ಯಾರೋ ತಮಾಷೆಗೆ ಹೇಳ್ತಾರೆ "ಗಾಂಧೀಜಿ ಥರದವ್ರು ದಶಕಗಳ ಕಾಲ ಮಾಡಲಾಗದ ಕೆಲಸಾನ ನೆಹರೂ ಒಂದೇ ರಾತ್ರೀಲಿ ಮಾಡ್ಬುಟ್ರು ಕಣ್ರೀ" ಅಂತ. ಅದು ಪಕ್ವವೋ ಅಪಕ್ವವೋ ನಮಗೆ ಬೇಡ. ಆದರೆ ನೆಹರೂ ಮತ್ತು ಲೇಡೀ ಮೌಂಟ್ ಬ್ಯಾಟನ್ ಒಟ್ಟಿಗೇ ಬಹಳ ಸಮಯ ಕಳೀತಾ ಕಳೀತಾ ಅಂತೂ ಆ ದಿನ ಮಧ್ಯರಾತ್ರೀಲಿ ಆಕೆಯ ಯಜಮಾನನ ಮನವೋಲೈಸುವಲ್ಲಿ ನೆಹರೂ ಯಶಸ್ಸು ಪಡೆದಿರಬಹುದು ಅಲ್ಲಾ ಅನ್ನೋಕೂ ಆಗದ ಪುರಾವೆಗಳು ಸಿಕ್ಕಿವೆ ಬಿಡಿ ಅತ್ಲಗೆ. ಆದರೆ ಅಲ್ಲೀವರೆಗೆ ನೈತಿಕ ನಿಷ್ಠೆಯಿಂದ ಹೋರಾಡಿ ವೀರಮರಣವನ್ನಪ್ಪಿದ ಲಕ್ಷೋಪಲಕ್ಷ ಜನ ದೇಶಬಾಂಧವರ ನಿಸ್ವಾರ್ಥ ಸೇವೆಯನ್ನು ಅಲ್ಲಗಳೆಯಲೂ ಆಗುವುದಿಲ್ಲ. ನೆಹರೂ ಡೀಲು ಕುದುರಿಸುವುದರ ಹಿಂದೆ ಪ್ರಧಾನಿ ಗಾದಿ ಮೇಲೆ ನೆಹರೂಗೆ ಕಣ್ಣು ಬಿದ್ದಿತ್ತು. ತಂದೆ ಮೋತಿಲಾಲ ನೆಹರೂರಷ್ಟು ಸಾಚಾ ವ್ಯಕ್ತಿಯಾಗಿರಲಿಲ್ಲ ಜವಾಹರ.

ಮೋತೀಲಾಲರ ಬಗ್ಗೆ ಕಥೆಯೊಂದು ಹೀಗಿದೆ: ಬಡವನೊಬ್ಬ ಬಂದು ತನ್ನ ಮಗಳ ಮದುವೆಗೆ ೮೦೦ ರೂಪಾಯಿ ಹಣ ಬೇಕಾಗಬಹುದೆಂದು ಹೇಳಿ ಬೇಡುತ್ತಾನೆ; ಮೋತೀಲಾಲರು ತಕ್ಷಣ ಉತ್ತರಿಸೋದಿಲ್ಲ, ಆದರೆ ಆತನಿಗೆ ಸಾಯಂಕಾಲ ಬಾ ನೋಡೋಣ ಅಂತಾರೆ. ಅಂದಿನ ವ್ಯಾಪಾರ ವೈವಾಟಿನಲ್ಲಿ ಬಂದ ಹಣವನ್ನೆಲ್ಲಾ ಪ್ರತ್ಯೇಕ ಎತ್ತಿಡಲು ತನ್ನ ಗುಮಾಸ್ತನಿಗೆ ಹೇಳ್ತಾರೆ. ಬಡವನ ಹಾಗೂ ಮೋತಿಲಾಲರ ಸಂಭಾಷಣೆ ನಡೀವಾಗ ಆ ಗುಮಾಸ್ತ ಕೂಡ ಕೇಳಿಸಿಕೊಂಡಿದ್ದ. ಸಾಯಂಕಾಲ ಬಂದ ಹಣವನ್ನೆಲ್ಲಾ ತಂದು ಕೊಡುವಂತೇ ಮೋತೀಲಾಲರು ಕೇಳಿದಾಗ " ಸ್ವಾಮೀ ಅಲ್ಲಿ ಸಾವಿರದ ಇನ್ನೂರು ರೂಪಾಯಿಗಳಿವೆ ಎಲ್ಲವನ್ನೂ ಕೊಡಲೇ ಅಥವಾ ...." ಮೋತೀಲಾಲರು ಎಲ್ಲವನ್ನೂ ಕೊಡಲು ಹೇಳುತ್ತಾರೆ. ತಂದ ಆ ಹಣದ ಗಂಟನ್ನು ಬಡವನಿಗೆ ಕೊಟ್ಟುಬಿಡ್ತಾರೆ. ನಂತರ ಗುಮಾಸ್ತನಲ್ಲಿ ಹೇಳ್ತಾರೆ " ನಾನು ಬೆಳಿಗ್ಗೆ ಆತ ಬಂದಾಗಲೇ ಸಂಕಲ್ಪಿಸಿದ್ದೆ ಈ ದಿನದ ದುಡಿತವನ್ನು ಅದೆಷ್ಟೂ ಬರಲಿ ಆತನಿಗೆ ಕೊಟ್ಟುಬಿಡೋದು ಅಂತ, ಅದರಲ್ಲಿ ಮತ್ತೆ ಪೈಸೆ ಉಳಿಸಿಕೊಂಡ್ರೂ ದೇವರು ಕ್ಷಮಿಸಲಾರ." ಇದು ಮೋತೀಲಾಲರ ಮಟ್ಟಾದರೆ ಜವಾಹರ ಕೊಟ್ಟಿದ್ದಕ್ಕಿಂತ ಪಡೆದದ್ದೇ ಜಾಸ್ತಿ.

ನಮ್ಮಲ್ಲಿ ಕೆಲವು ಕುರುಡು ಸಂಪ್ರದಾಯಗಳು ನಡ್ಕೊಂಡು ಬಂದುಬಿಟ್ಟಿವೆ. ನೆಹರೂ ಅಂದ್ರೆ ಮಕ್ಕಳ ಚಾಚಾ, ಕೋಟಿಗೆ ಕೆಂಪು ಗುಲಾಬಿ ಹೂ ಸಿಕ್ಕಿಸಿದ ಒಂದು ಚಿತ್ರ ಕಣ್ಣಿಗೆ ಕಟ್ಟುತ್ತದೆ; ಮಕ್ಕಳು ಯಾರಿಗೆ ಇಷ್ಟವಲ್ಲ ಹೇಳಿ? ಆ ಕಾರಣಕ್ಕೆ ಮಕ್ಕಳಿಗೇ ಪಠ್ಯಕ್ರಮದಲ್ಲಿ ಅವರನ್ನು ಮಹಾನ್ ಸಾಧಕರು/ದೇಶಭಕ್ತರು ಎಂಬಂತೇ ಬಿಂಬಿಸಿ ಇಂದಿಗೂ ಅದನ್ನೇ ತಲೆಗೆ ತುಂಬ್ತಾ ಇದಾರೆ. ನೆಹರೂ ಅವರ ಗಾದೀ ಭಕ್ತರಾಗಿದ್ದರು ಎಂಬುದು ಎಷ್ಟೋ ಜನರಿಗೆ ಇನ್ನೂ ನಂಬೋದಕ್ಕೆ ಕಷ್ಟವಾಗ್ತದೆ. ಡಾರ್ಜೀಲಿಂಗಿನ ಸೆರೆಮನೆಯಲ್ಲಿದ್ರಂತೆ ಮಗಳಿಗೆ ಬಣ್ಣಬಣ್ಣದ ಪತ್ರ ಬರೀತಾ ಇದ್ರಂತೆ; ಆ ಮಗಳೂ ಅದ್ಕೇನೇ ಹಾಗೇ ಗಾದೀ ಭಕ್ತಳಾಗಿ ನೆಹರೂ ಪರಂಪರೆ ಮುಂದುವರೀತು!!

ನೆಹರೂ ಹೋದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿಗಳು ಅನಾಯಾಸವಾಗಿ ಗಾದಿಗೆ ಬಂದಿದ್ರು. ಆದ್ರೆ ಗಾದೀಮೇಲೆ ಇಂದಿರಾ ಗಾಂಧಿಯ ಕಣ್ಣಿತ್ತಲ್ಲಾ ಹೀಗಾಗಿ ತಾಷ್ಕೆಂಟ್ ಒಪ್ಪಂದಕ್ಕೆ ಸಹಿಹಾಕಲು ಹೋದವರು ಅಲ್ಲೇ ’ಏನೋ’ ಆಗಿ ಸತ್ತಿದ್ದಾರೆ, ಅದು ಬಹುತೇಕರಿಗೆ ಒಳತೋಟಿಯಿಂದ ಗೊತ್ತಿರೋ ವಿಷಯ ಬಿಟ್ಟಾಕಿ ಅತ್ಲಗೆ ! ಶಾಸ್ತ್ರಿಯವರ ಮರಣಾನಂತರ ಪಟ್ಟಕ್ಕೆ ಇಂದಿರಾ ಬಂದೇ ಬಿಟ್ಟಳು. ಇಂದಿರಾಗೂ ಇಂಡಿಯಾಗೂ ಮೂರುಮೂರೇ ಅಕ್ಷರಗಳು ಆದ್ರೆ ಎರಡೂ ಸಮತೂಕದ್ದು ಎಂದು ಬಿಂಬಿತವಾಗೋ ಹಾಗೇ ಭ್ರಮಾಲೋಕ ಸೃಷ್ಟಿಸತೊಡಗಿದ್ಲು. ತನ್ನ ಅನ್ಯಾಯಗಳ ವಿರುದ್ದ ಸಿಡಿದೆದ್ದ ಅತಿರಥ ಮಹಾರಥರನ್ನು ಮೀಸಾ ಕಾಯ್ದೆಯ ಮೂಲಕ ಜೈಲಿಗೆ ತಳ್ಳಿಬಿಟ್ಟಳು. ಇಡೀ ದೇಶದ ಇತಿಹಾಸದಲ್ಲೇ ಅದೊಂದು ಕರಾಳ ಛಾಯೆ ಇಂದಿಗೂ ಇದೆ; ಆದರೂ ಜನ ಎಣ್ಣೆಗೆ ೧೦೦ ರೂ ಇಸ್ಕಂಡು ’ಕಾಂಗೈ ಕಾಂಗೈ’ ಅಂತಾರೆ.

ದುರದೃಷ್ಟಕ್ಕೆ ಆ ಕಾಲಕ್ಕೆ ಮಾಹಿತಿಗಳ ಆಕರ ಗ್ರಂಥಗಳು ಯಾವುದೂ ಲಭ್ಯವಿರದೇ ಸ್ವಾನುಭವದಿಂದ ಆಲೋಚಿಸಿ ’ಸಂವಿಧಾನ’ ಎಂಬ ಕರಡನ್ನು ಅಂಬೇಡ್ಕರ ಸಾಹೇಬರು ಬರೆದ್ರು. ಅದು ಅವರ ತಪ್ಪಲ್ಲ-ಕಾಲ ಹಾಗಿತ್ತು. ಓಬೀರಾಯನ ಕಾಲದ ಉಗಿಬಂಡಿಯನ್ನೇ ಇಂದೂ ಓಡಿಸುತ್ತಿದ್ದರೆ ಹೇಗಾಗುತ್ತಿತ್ತು ಆಲೋಚಿಸಿ-- ಅದೇ ರೀತಿ ನಮ್ಮ ಸಂವಿಧಾನ ಹಳೇ ಉಗಿಬಂಡಿಯಾಗಿದೆ, ಹೊಸ ರೈಲು ನಮಗೆ ಬೇಕಾಗಿದೆ ಆದರೆ ಮಾಡಲು ಇಂದಿನ ಬ್ರಷ್ಟಾಚಾರಿಗಳು ಒಪ್ಪುತ್ತಿಲ್ಲ. ಸಂವಿಧಾನದ ಲೋಪದೋಷಗಳನ್ನು ಸರಿಪಡಿಸಿಬಿಟ್ಟರೆ ನಾಳೆ ತಮ್ಮ ಕಬಳಿಕೆಯೆಲ್ಲಾ ತಿಳಿದುಹೋಗುತ್ತದೆ ಎಂಬ ದುರಾಲೋಚನೆಯಿಂದ ತಿದ್ದುಪಡಿ ಮಾಡಲು ಲೋಕಸಭೆಯಲ್ಲಿ ಠರಾವು ಮಂಜೂರಾಗುವುದೇ ಇಲ್ಲಬಿಡಿ!!

ಜೈಲಿನಲ್ಲಿ ಸಾಕಷ್ಟು ಉಪವಾಸ ವನವಾಸ ಬಿದ್ದು ನೋವುತಿಂದು ನೊಂದ ಸಮಾನಮನಸ್ಕ ಹಲವು ಜನ ಸೇರಿ ಜನಸಂಘದ ಸ್ಥಾಪನೆಯಾಯಿತು. ಜನಸಂಘ ಕ್ರಮೇಣ ’ಜನತಾಪಕ್ಷ’ವೆಂಬ ರೂಪ ಪಡೀತು. ಜೈಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ ಮೊದಲಾದ ಹಲವು ಗಣ್ಯರು ಮುಂಚೂಣಿಯಲ್ಲಿದ್ರು; ಅವರಿಗೆಲ್ಲಾ ಗಾದಿಗಿಂತ ದೇಶಸೇವೆ ಬೇಕಾಗಿತ್ತು ! ಆದರೆ ನಮ್ಮ ಜನರಿಗೆ ಅದು ಅರ್ಥವಾಗದೇ ಹೋಗಿ ’ಈ.ಹೆ.ಗು.’ಗಳೇ ಜಾಸ್ತಿಯಿದ್ದುದರಿಂದ ಚುನಾವಣೆ ಅಂದ್ರೆ ಒಂದು ಹಬ್ಬ-ಹೆಂಡ,ಮೋಜು-ಮಜಾ ಅನ್ನೋ ಮಟ್ಟಕ್ಕೆ ನಮ್ಮ ಪರಂಪರಾಗತ ಕಾಂಗೈ ನಡೆಸಿಕೊಂಡು ಬಂತು--ಅದೇ ಕಾಂಗ್ರೆಸ್ ಸಾಧಿಸಿದ ಮಹತ್ಸಾಧನೆ ಅಷ್ಟೇ !! ಪಾರ್ಟಿ ಫಂಡು ಅಂತ ಜಾಸ್ತಿ ಏನೂ ಇಲ್ದೆ ಇದ್ದ ಜನತಾಪಕ್ಷ ಅಬ್ಬರದ ಪ್ರಚಾರಕ್ಕಾಗಲೀ ಹಣ-ಹೆಂಡ ಹಂಚುವ ’ಗಾದೀಕುಲ’ದವರ ತೆರನ ತಂತ್ರಗಾರಿಕೆಯನ್ನು ಬಳಸಲಾಗಲೀ ಹೋಗಲಿಲ್ಲ; ಹೀಗಾಗಿ ಮಹಾಚುನಾವಣೆಗಳಲ್ಲಿ ಜನತಾಪಕ್ಷ ಅನೇಕಸಲ ದೊಪಕ್ಕನೇ ಬಿದ್ದುಬಿಡುತ್ತಿತ್ತು.

ಅದೇನು ಸ್ವಾತಂತ್ರ್ಯ ಅಂತೀರೋ ಆಂಗ್ಲರು ಎದ್ದುಹೋದಮೇಲೆ ಸರಿಸುಮಾರು ೪೦ ವರ್ಷಗಳಿಗೂ ಅಧಿಕ ತಾನೇ ಆಡಳಿತ ನಡೆಸಿದ ಕಾಂಗ್ರೆಸ್ಸು ತನ್ನ ಪಂಚವಾರ್ಷಿಕ ಯೋಜನೆಗಳಲ್ಲಿ ಹಂಗ್ಮಾಡ್ತೀವಿ ಹಿಂಗ್ಮಾಡ್ತೀವಿ ಎಂದು ಕಣ್ಣೊರಿಸಿದ್ದೇ ಬಿಟ್ರೆ ಇವತ್ತಿಗೆ ಒಬ್ಬ ಟಾಟಾ ಇನ್ನೊಬ್ಬ ಬಿರ್ಲಾ ಇರದಿದ್ದರೆ ದೇಶದಲ್ಲಿ ಯಾವ ಹೊಸಬದಲಾವಣೆಯೂ ಆಗುತ್ತಿರಲಿಲ್ಲವೇನೋ. ಕಾಂಗೈ ಕೊಡಲಾಗದ ಸೌಲಭ್ಯಗಳನ್ನು ಒಬ್ಬ ವಾಜಪೇಯಿ ಕೇವಲ ಒಂದೇ ಟರ್ಮಿನಲ್ಲಿ ಕೊಟ್ಟುಬಿಟ್ಟರು; ಅದೂ ೧೦-೧೧ ವಿಭಿನ್ನ ಪಕ್ಷಗಳನ್ನು ಸೇರಿಸಿ ತೇಪೆಹಾಕಿಕೊಂಡ ಸಮ್ಮಿಶ್ರ ಸರಕಾರದ ಮುಖಂಡನಾಗಿ!!

ದೇಶದ ಆಯಕಟ್ಟಿನ ಜಾಗಗಳಲ್ಲಿ ದೇಶಭಕ್ತರನ್ನು ನೇಮಿಸುವ/ಕೂರಿಸುವ ಕೂರಿಸಿ ಗೌರವಿಸುವ ಇಚ್ಛೆ ವಾಜಪೇಯೀ ಸರಕಾರಕ್ಕಿತ್ತು. ಹಾಗಾಗೇ ನಮ್ಮ ಮೇಧಾವಿ ಎ.ಪಿ.ಜೆ ಅಬ್ದುಲ್ ಕಲಾಂ ಅಂದು ಭಾರತದ ಪರಮೋಚ್ಚ ಸ್ಥಾನವನ್ನು ಅಲಂಕರಿಸಿದರು; ಅದರ ಘನತೆಯನ್ನು ಹೆಚ್ಚಿಸಿದ್ರು. ವಿಪರ್ಯಾಸ ನೋಡಿ ಇನ್ನೊಂದು ಟರ್ಮಿಗೆ ಅವರನ್ನು ಮುನ್ನಡೆಸುವ ಬದಲು ಕೆಲಸಕ್ಕೆ ಬರದ ಮುದುಕರನ್ನೂ ಮೃದಂಗಬಾರಿಸುವವರನ್ನೂ ತಂದು ಕೂರಿಸಲಾಯಿತು ಯಾಕೆಂದರೆ ಅಲ್ಲಿ ರಬ್ಬರ್ ಸ್ಟಾಂಪ್ ಇದ್ದರೇ ಆಳುವ ಪಕ್ಷಕ್ಕೆ ಒಳ್ಳೇದು. ಹೀಗಾಗಿ ನಿಜವಾಗಿ ಮುಂದುವರಿಯಬೇಕಾದ ಆ ಗೌರವ ಕಲಾಂ ಅವರಿಗೆ ಅರ್ಹತೆ ಬೇಕಾದ್ದಕ್ಕಿಂತ್ಲೂ ಜಾಸ್ತೀನೇ ಇದ್ರೂ ದಕ್ಕಲಿಲ್ಲ.



ತೀರಾ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನಿತ್ಯ ಅದನ್ನೇ ಕೇಳ್ತಾ ನೋಡ್ತಾ ಇದೀರಿ ಮತ್ತೆ ಹೇಳ್ಬೇಕಾದ ಅಗತ್ಯವೇನೂ ಕಾಣಿಸ್ತಿಲ್ಲ. ಮೀಟರ್ ಹಿಡಿದು ನೋಡಿದ್ರೆ ಸ್ವಾತಂತ್ರ್ಯ ಪೂರ್ವದ ಪ್ರಜೆಗಳಿಗೂ ಇಂದಿನ ದೇಶವಾಸಿಗಳಿಗೂ ಪಡೆದ ಸೌಲಭ್ಯಗಳಲ್ಲಿ ಅಷ್ಟೇನೂ ಬದಲಾವಣೆಕಾಣಿಸೋದೇ ಇಲ್ಲ ಸ್ವಾಮೀ. ಅಂದು ಹಳ್ಳಿಗಳಲ್ಲಾದ್ರೂ ರಾಜಕೀಯ ಇರ್ಲಿಲ್ಲ-ಇಂದು ಮನೆಮನೆಗೂ ರಾಜಕೀಯ ಹೊಕ್ಕು ಎಲ್ಲಾ ರಾಜಕೀಯಮಯವಾಗಿದೆ. ತಮಾಷೆಗೆ ಹೀಗೆ ಹೇಳಬಹುದು ಅಪ್ಪ ಬೀಜೆಪಿ ಮಗ ಜೇಡಿಎಸ್ಸು ಆದ್ರೆ ಯಾಕೋ ಹೊಟ್ಟೆನೋವಿನಿಂದ ಅಪ್ಪ ಊಟಮಾಡದಾಗ ಮಗ ಹೇಳ್ತಾನೆ " ನಮ್ಮಪ್ಪ ಊಟ ಮಾಡ್ದೇ ಇರೋದ್ರಲ್ಲಿ ಏನೋ ರಾಜಕೀಯ ಷಡ್ಯಂತ್ರ ಇದೆ " !!

ದೇಶದಲ್ಲಿ ಇನ್ನೂ ಬಡವರ, ನಿರ್ಗತಿಕರ, ಅನಕ್ಷರಸ್ಥರ, ಭಿಕ್ಷುಕರ ಸಂಖ್ಯೆ ಬಹಳ ಜಾಸ್ತೀನೇ ಇದೆ. ನಿನ್ನೆ ಫೇಸ್ಬುಕ್‍ನಲ್ಲಿ ಮಿತ್ರ ಅರುಣ್ ಕಶ್ಯಪ್ ಒಂದು ವೀಡಿಯೋ ಹಾಕಿದ್ರು. ನೋಡ್ದಾಗಿಂದ ಶರೀರದ ಕಣಕಣವೂ ಕೊತಕೊತ ಕುದೀತಾ ಇದೇರಿ. ಇಲ್ಲೇ ಕೆಳಗೆ ಲಿಂಕ್ ಹಾಕ್ತೇನೆ ನೀವೂ ಒಮ್ಮೆ ನೋಡಿ. ನಾಳೆ ದಿನ ನೀವೆಲ್ಲಾ ದೇಶದಲ್ಲಿ ಇರ್ಬೇಕು ಅಂದ್ರೆ ಯಾವ ಧೈರ್ಯದಿಂದ ಇರ್ತೀರಿ? ಮುಂಬೈ ತಾಜಮಹಲ್ ಸುಟ್ಟು ನೂರಾರು ಅಮಾಯಕರನ್ನು ಬಲಿತೆಗೆದುಕೊಂಡ ಪಾಕಿಗಳು ಮತ್ತೆ ಅದಿನ್ನೂ ಹಸಿಹಸಿಯಿರುವಾಗಲೇ ಮುಂಬೈಯ್ಯಲ್ಲಿ ಬಾಂಬ್ ಹಾಕುವಷ್ಟು ತಯಾರಾಗಿದ್ದಾರೆ ಎಂದಮೇಲೆ ಒಬ್ಬ ಸಾಮಾನ್ಯ ಪ್ರಜೆಯ ಜೀವಕ್ಕೆ ಎಲ್ಲಿ ಬೆಲೆ ಇದೆ ಸ್ವಾಮೀ?

http://youtu.be/xzLmq5kd9ZQ

http://youtu.be/B5JWTQlILW8



ಯಾರೋ ದಾವೂದನಂತೆ ಮತ್ತೊಬ್ಬನಂತೆ, ನಮ್ಮ ದೇಶದ ಸ್ಥಿತಿಗತಿಯನ್ನು ಅಲ್ಲಾಡಿಸುವ ಯಾವುದೇ ದೇಶವನ್ನೇ ಆಗಲಿ ಬರಿದೇ ಯಾಕೆ ಬಿಡ್ತಾರೆ ಈ ಆಡಳಿತದ ಮಂದಿ? ಎಷ್ಟು ದಿನ ಸಂಯಮ ಸಂವಹನ ಇದೆಲ್ಲಾ? ಸಾಮ ದಾನ ಭೇದ ದಂಡ ಇತ್ಯಾದಿ ಕೆಲವು ಸೂತ್ರಗಳನ್ನು ನಮ್ಮಲ್ಲಿನ ಪಂಚತಂತ್ರವೇ ಹೇಳಿದ್ಯಲ್ಲ-ಅದನ್ನಾದ್ರೂ ತಿಳ್ಕೊಂಡು ಮೇಲೇರಿ ಬರುವ ರಾಷ್ಟ್ರವನ್ನು ಮಟಾಷ್ ಮಾಡಿಬಿಟ್ಟರೆ ಮತ್ತೆ ಮತ್ತೆ ಮೂಗಿಗೆ ಸೀತಬಾಧಿಸಿದ ಹಾಗೇ ಇಂತಹ ಕಿರಿಕಿರಿ ಇರುತ್ತಿರಲಿಲ್ಲ ಅಲ್ಲವೇ? ಇಂದು ದೇಶವ್ಯಾಪಿ ನಮ್ಮಲ್ಲೇ ಕೆಲವರು ಬೇಹುಗಾರರಿದ್ದಾರೆ!! ಅವರು ಪಾಕಿಸ್ತಾನದ ಭಕ್ಷೀಸು ಪಡೆಯುತ್ತಿರುತ್ತಾರೆ. ಅಲ್ಪಸಂಖ್ಯಾತರನ್ನು ಪ್ರಶ್ನಿಸುವ ಹಕ್ಕು ಬಹುಸಂಖ್ಯಾಕರಿಗಿಲ್ಲ, ರಿಯಾಲಿಟಿಯಲ್ಲಿ ಇಂದು ಯಾರೂ ಅಲ್ಪಸಂಖ್ಯಾಕರಲ್ಲ!!

ಬೇರೇ ದೇಶಗಳ ಜನ ಬಂದು ನಮ್ಮಲ್ಲಿನ ಧೂರ್ತರನ್ನೇ ತಮ್ಮ ಮತಕ್ಕೆ ಅನುಯಾಯಿಗಳನ್ನಾಗಿ ಮಾಡಿಕೊಂಡು ಒಂದಷ್ಟು ಹಣ-ಸೌಲಭ್ಯಗಳ ಅಮಿಷವೊಡ್ಡಿ ಇಂದು ಅವರೇ ನಾವು ತಿಳಿಯುವ ಅಲ್ಪಸಂಖ್ಯಾತರಾಗಿದ್ದಾರೆ!! ಆ ಅಲ್ಪಸಂಖ್ಯಾತರನ್ನೇ ಮುಂದೆ ಬಿಟ್ಟುಕೊಂಡು ಕದ್ದೂಮುಚ್ಚಿ ಮತ್ತೆ ಮತಾಂತರದ ವ್ಯವಹಾರ ಕತ್ತಲಲ್ಲಿ ಸದಾ ಜಾಗೃತವಾಗಿದೆ. ಬುದ್ಧಿ ಕಮ್ಮಿಯಿರುವ ಹುಂಬರಿಗೆ ಜಾಸ್ತಿ ಹಣದ ಆಸೆ ತೋರಿಸಿ ಮತಾಂಧರನ್ನಾಗಿ ಮಾಡಿ ಅಂಥವರಿಂದಲೇ ಅಲಲ್ಲಿ ದುಷ್ಕೃತ್ಯಗಳಿಗೆ ಪ್ಲಾನು ಮಾಡಿಸ್ತಾರೆ!! ---ಇದೆಲ್ಲಾ ಗೊತ್ತಿರದ ವಿಷಯ ಅಂದುಕೊಂಡ್ರೇನು? ದರಿದ್ರ ರಾಜಕಾರಣಿಗಳಿಗೆ ಅವರ ವೋಟಿನ ಆಸೆ ಹೀಗಾಗಿ ವೋಟ್ ಬ್ಯಾಂಕ್ ರಾಜಕಾರಣ ಎಲ್ಲವನ್ನೂ ತನಗೆ ಬೇಕಾದ ರೀತಿಯಲ್ಲೇ ನಿರ್ವಹಿಸುತ್ತದೆ!! ಇದೇ ಕಾರಣದಿಂದ ರಕ್ಕಸ ದಾವೂದು ಚೋಟಾ ಶಕೀಲು ಇಂಥವರೆಲ್ಲಾ ಮೆರೀತಾರೆ.

ಗೋವಿನ ಹಾಲನ್ನು ಉಂಡು ಅದರಿಂದ ಹಲವಾರು ಉಪಕಾರ ಪಡೆದ ಜನವೇ ಗೋವನ್ನು ಕಡೀತಾರೆ-ಅದೂ ಚಿತ್ರಹಿಂಸೆ ಕೊಟ್ಟು ಕಡೀತಾರೆ. ಅದನ್ನು ತಡೀಲಿಕ್ಕೆ ಹೋದರೆ ಕೋಮುಘರ್ಷಣೆ!! ಯಾವ ನ್ಯಾಯ ಸ್ವಾಮೀ?? ದನ ತಿನ್ನುವವರೇ ನೀವು ನಮ್ಮ ದೇಶದಲ್ಲಿ ಬದುಕಬೇಕು ಅಂತಿದ್ರೆ ಆ ಕೆಲ್ಸ ಬಿಡಿ ಅಥವಾ ದೇಶಾನೇ ಬಿಟ್ಟು ತೊಲಗಿ ಅನ್ನೋದ್ರಲ್ಲಿ ತಪ್ಪೇನಿದೆ ಹೇಳಿ? ದೇಶದ ಮೂಲವಾಸಿಗಳ ಬೇಕುಬೇಡಗಳನ್ನು ಕೇಳುವವರೇ ಇಲ್ಲ--ಇಲ್ಲಿನ ಆದ್ಯತೆ ವೋಟ್ ಬ್ಯಾಂಕ್ ನೋಡಿಕೊಂಡು ಮಾತ್ರ. ಬೇರೇ ಮನೆಯಿಂದ ಸುಮ್ನೇ ಇರಲು ಬಂದವ ಇದು ತನ್ನದೇ ಮನೆ ನಿಮಗ್ಯಾರಿಗೂ ಹಕ್ಕಿಲ್ಲ ಅಂದಹಾಗಾಯ್ತು ಮೂಲನಿವಾಸಿಗಳ ಬದುಕು. ಹಿಂದೂ ಎನ್ನುವ ಹಾಗೇ ಇಲ್ಲ!! ಹಿಂದೂ ಎಂದರೇ ಗುಂಡಿಟ್ಟು ಕೊಲ್ಲುವ ಕಾಲ ಬರುವುದು ಬಹಳ ದೂರವಿಲ್ಲ ಬಿಡಿ. ಅಷ್ಟಕ್ಕೂ ಹಿಂದೂ ತತ್ವ ಸಂಪ್ರದಾಯ ವೇದಗಳನ್ನಾಧರಿಸಿದ್ದು, ವೇದಗಳು ಮಾನವ ಜೀವನ ಮೌಲ್ಯವನ್ನು ತಿಳಿಸುತ್ವೆ ಎಂದು ಎಷ್ಟೇ ತಿಳಿಸಿದರೂ ಅದಕ್ಕೆ ಮಾನ್ಯತೆಯೇ ಇಲ್ಲ!!

ರಾಮ ಹುಟ್ಟಿದ ಬೆಳೆದ, ನಡೆದಾಡಿದ, ದೇಹವಿಸರ್ಜಿಸಿ ತನ್ನ ಮೌಲ್ಯಗಳನ್ನೂ ಪ್ರೀತಿಯನ್ನೂ ಬಿಟ್ಟುಹೋದ ಅವನದಾದ ಈ ನೆಲದಲ್ಲಿ ರಾಮಮಂದಿರ ನಿರ್ಮಿಸುವುದಕ್ಕೆ ಯಾವುದೋ ಬಾಬರಿಯ ಅಡ್ಡಗಾಲು! ಜೀವ ಇದ್ಯೇನ್ರೀ ಪ್ರಜೆಗಳೇ ನಿಮ್ಗೆ? ರಾಮ ಇಲ್ಲಿನ ಜೀವಜೀವಾಳ. ಹಿಂದೂ ಎಂದವನ ರಕ್ತದ ಅಣುಅಣುವಿನಲ್ಲೂ ರಾಮ ತುಂಬಿದ್ದಾನೆ. ಪುರಾತನಕಾಲದಿಂದ ಇದ್ದ ಆತ ಹುಟ್ಟಿದ ಜಾಗದಲ್ಲಿದ್ದ ದೇವಸ್ಥಾನ ಅದ್ಯಾವುದೋ ಅಡ್ಡಕಸಬಿ ಬಾಬರಿ ಕೆಡವಿದ. ಆಗಲೇ ನಮ್ಮಲ್ಲಿ ತಾಕತ್ತಿರ್ಲಿಲ್ಲ ನೋಡಿ. ಇಲ್ಲಾಂದ್ರೆ ಬಾಬರಿಗೆ ಯಾಕೆ ಬಿಡಬೇಕಾಗಿತ್ತು? ಹೋಗಲಿ ಬಾಬರಿ ಸಾಬಿ ಮಧ್ಯೆ ಬಂದವ ದೇವಾಲಯ ಮೊದಲೇ ಇದ್ದುದಕ್ಕೆ ಸಾಕ್ಷ್ಯಗಳಿವೆ ಅಂತ ಆ ಜಾಗದಲ್ಲಿ ಉತ್ಖನನ ಮಾಡಿ ಅವಶೇಷಗಳನ್ನು ಒದಗಿಸಿದ್ರೂ ರಾಮನಿಗೆ ಅಲ್ಲಿ ಜಾಗವಿಲ್ಲ--ಇದು ಇಂದಿನ ನಮ್ಮತನ.

ರಾಜಕಾರಣಿಗಳು ಪೂಜ್ಯರಲ್ಲ, ದೇವರಲ್ಲ, ವೃತ್ತಿಯಿಂದ ಅವರು ಗಣ್ಯರಲ್ಲ ಅವರು ಪ್ರಜೆಗಳ ಸೇವಕರು. ಅವರನ್ನು ಕಂಡಲ್ಲೆಲ್ಲಾ ಹಾರತುರಾಯಿ ಹಾಕುವ ಹಳೆಯ ಗೊಡ್ಡು ಸಂಪ್ರದಾಯ ಬಿಡಿ. ಯಾರೋ ಮಂತ್ರಿಯಂತೆ ಬಂದ್ಬುಡ್ತಾನೆ ಅಲ್ಲಾಡಸ್ಕೊಂಡು ! ಆ ಎಲ್ಲಾ ನನ್ಮಕ್ಳಿಗೂ ಫಾರಿನ್ ಮೇಕ್ ಏಸಿ ಕಾರು! ಎಲ್ಲಾ ಸೈಕಲ್ಲು ತುಳ್ಕಂಡು ಸಮಾಜ ಸೇವೆ ಮಾಡೋ ಹಾಗಾಗ್ಲಿ. ಯಾವುದೇ ಕೆಲಸ ನ್ಯಾಯಯುತವಾಗಿ ಆಗಿಲ್ದೇ ಇದ್ರೆ, ಅದಕ್ಕೆ ಸಂಬಂಧಿಸಿದ ಮಂತ್ರಿಯ ಲಾಬಿ ನಡೆದಿದ್ದು ಕಂಡ್ರೆ ರೋಡ್ ರೋಡ್‍ನಲ್ಲಿ ಎಳೆದು ಹೊಡೀರಿ. ಜನಸೇವೆಗೆ ಕಂಕಣ ತೊಡುವ ನಿಷ್ಠಾವಂತ ಮಾತ್ರ ರಾಜಕೀಯಕ್ಕೆ ಬರ್ಲಿ, ರೊಕ್ಕ ತಿನ್ನೋ ಬಿಳೀ ಡ್ರಮ್ಮುಗಳೆಲ್ಲಾ ಮನೇಲೇ ಮಲಗಿರ್ಲಿ, ಏನಂತೀರಿ ?

ನೋಡೀ ಸ್ವಾಮೀ ಓದುತ್ತಿರುವವರು ನೀವ್ಯಾರೇ ಆಗ್ಲಿ, ಇರುವುದನ್ನು ಖಾಡಾಖಾಡಿ ವಾದಿಸುವ ಮನುಷ್ಯ ನಾನು. ಮೂಲದಲ್ಲಿ ಇದ್ದ ಮೌಲ್ಯಗಳಿಗೆ ಬೆಲೆಕೊಟ್ಟು ಬದುಕುವ ಜನ ಬದುಕಲಿ- ಇಲ್ಲಾ ಕ್ರಾಂತಿಯೇ ಆಗಿಬಿಡಲಿ ಬಿಡಿ;ಎಷ್ಟು ದಿನ ಕಷ್ಟ ಸಹಿಸಲು ಸಾಧ್ಯ? ಅಣ್ಣಾ ಹಜಾರೆಯವರ ಮಾತುಗಳನ್ನು ಕೇಳಿದ್ದೀರಿ. ಅವರ ಆಂದೋಲನಕ್ಕೆ ಬೆಂಬಲ ಸದಾ ಕೊಡಿ. ದೇಶಭಕ್ತಿ ನಿಮ್ಮೆಲ್ಲರಲ್ಲಿ ಪ್ರತೀಕ್ಷಣ ಹರಿಯುತ್ತಿರಲಿ. ಹಲ್ಲುಗಳ ಮಧ್ಯೆ ಹುಳುಕುಹಲ್ಲೂ ಇದ್ದಾಗ ಅದಕ್ಕೆ ಯಾವರೀತಿ ಟ್ರೀಟ್‍ಮೆಂಟ್ ಕೊಡುತ್ತೇವೋ ಅದೇ ರೀತಿ ನಮ್ಮೊಳಗೇ ಇರುವ ಧೂರ್ತರಿಗೆ ಶಾಕ್ ಟ್ರೀಟ್‍ಮೆಂಟ್ ಕೊಡುವ ಅವಶ್ಯಕತೆ ಇದೆ. ದುಡ್ಡಿಗಾಗಿ ಮೌಲ್ಯವನ್ನು ಮಾರಬೇಡಿ, ಹಣಕ್ಕಾಗಿ ದೇಶವನ್ನು ಮಾರಬೇಡಿ. ಬ್ರಿಟಿಷರು ಅಂತೂ ಹೇಗೋ ಬಿಟ್ಟುಹೋದರೂ ಕೊಟ್ಟದ್ದನ್ನು ಉಳಿಸಿಕೊಳ್ಳಲಾಗದೇ ಮತ್ತೆ ನಾವು ವಿಭಜಿಸಿಬಿಟ್ಟೆವು. ಇನ್ನಾದರೂ ಮತ್ತೆ ಅಂತಹ ಪರಿಸ್ಥಿತಿ ಬಾರದಿರಲಿ. ಒಟ್ಟಾರೆ ನಾವು ಬದುಕಿದ್ದೇವೆ ಎಂದು ಹೆದರಿ ಉಸಿರು ಹಿಡಿದಿರುವುದಕ್ಕಿಂತ ಒಬ್ಬ ಭಗತ್ ಸಿಂಗ್ ಆಗಿ, ಒಬ್ಬ ಮಂಗಲ ಪಾಂಡೆಯಾಗಿ, ಒಬ್ಬ ಝಾಂಸೀರಾಣಿಯಾಗಿ ದೇಶಸೇವೆ ಮಾಡಲು ಸಿದ್ಧರಾಗಿರೋಣ; ಸಮಯಬಂದರೆ ವೀರಮರಣಕ್ಕೂ ಸಿದ್ಧರಾಗೇ ಮುನ್ನಡೆಯೋಣ ಬನ್ನಿ: ಬ್ರಷ್ಟಾಚಾರ, ಬೇಹುಗಾರಿಕೆ, ಕೋಮುಘರ್ಷಣೆ, ಆಂತರಿಕ ಸಮಸ್ಯೆಗಳು ಎಲ್ಲದಕ್ಕೂ ಇತಿಶ್ರೀ ಹಾಡಿಬಿಡೋಣ; ಮತಭೇದವಿಲ್ಲದೇ ದೇಶದ ಆಸ್ತಿಯನ್ನು ಲಪಟಾಯಿಸುವ ಈಗಿರುವ ರಾಜಕೀಯದ ಎಲ್ಲರನ್ನೂ ಮನೆಗ್ ಕಳಿಸೋಣ ಬನ್ನಿ.

ದೇಶಭಕ್ತ ಜನರಿಂದ ಹೊಸ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆಬರಬೇಕು. ಯಾರಿಗೂ ತೊಂದರೆಯಾಗದ ಮತ್ತು ದೇಶದ ಮೂಲನಿವಾಸಿಗಳ ಹಕ್ಕುಬಾಧ್ಯತೆಗಳನ್ನು ರಕ್ಷಿಸುವ ಹೊಸ ಆಯಾಮ ತೆರೆದುಕೊಳ್ಳಬೇಕು. ಭಯೋತ್ಫಾತಕ ರಕ್ಕಸರು ಭಾರತವನ್ನು ಕನಸಲ್ಲಿ ನೆನೆದರೂ ಹೆದರಿಕೊಳ್ಳಬೇಕು. ಹಾಗಾಗಲಿ ನಮ್ಮ ಭಾರತ, ಎಲ್ಲರಿಗೂ ಸುಖ ಸಮೃದ್ಧಿ ಸಾರುತ್ತಾ




ಜೈ ಹಿಂದ್ ಜೈಹಿಂದ್ ಜೈ ಹಿಂದ್



Saturday, August 13, 2011

ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ !!

[ಅಂತರ್ಜಾಲದ ಕೃಪೆಯಿಂದ ದೊರೆತ ಚಿತ್ರ ಕೇವಲ ಕಲ್ಪನೆಗೆ -ಇದು ನಾನು ಹೇಳಹೊರಟ ಜಾಗಕ್ಕೆ ಸಂಬಂಧಿಸಿದ್ದಲ್ಲ, ದಯಮಾಡಿ ಕ್ಷಮೆಯಿರಲಿ ]

ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ !!


ಹವಿಗನ್ನಡದಲ್ಲಿ ಇಂದಿನ ನೈಜ ಸ್ಥಿತಿಯನ್ನು ವರ್ಷದ ಹಿಂದೆ ಶಿರಸಿಯ ಹೆಗಡೆ ಎನ್ನುವವರೊಬ್ಬರು ರಚಿಸಿ ಹಾಡಿದ್ದನ್ನು ಯಾರೋ ಯೂಟ್ಯೂಬಿಗೆ ಅಪ್ಲೋಡ್ ಮಾಡಿದ್ದು ಒಳ್ಳೇದಾಯ್ತು. ಎರಡು ಕಂತುಗಳಲ್ಲಿರುವ ಈ ಲೇಖನದ ಆರಂಭ ಮತ್ತು ಅಂತ್ಯದ ಸಮಯಗಳಲ್ಲಿ ಈ ಹಾಡನ್ನು ಕೇಳಲು ತಮ್ಮಲ್ಲಿ ವಿನಂತಿಸುತ್ತೇನೆ.



ಚನ್ನಕೇಶವನ ಪಾದಾರವಿಂದಗಳಿಗೆ ಸಾಷ್ಟಾಂಗವೆರಗುತ್ತ ಜಗನ್ನಿಯಾಮಕನಾದ ಆತನ ಸುಂದರ ಬಿಂಬವೊಂದರ ಪೂಜೆಗೆ ಸಂಬಂಧಿಸಿದ ಕಥಾನಕವನ್ನು ನಿಮ್ಮೊಂದಿಗೆ ನೂಲುಹುಣ್ಣಿಮೆಯ ಈ ಸಂದರ್ಭದಲ್ಲಿ ಹಂಚಿಕೊಳ್ಳಲು ದಾಂಗುಡಿ ಇಡ್ತಾ ಇದ್ದೇನೆ. ಅದೊಂದು ಅತ್ಯಂತ ರಮ್ಯ ಭಯಾನಕ ಕ್ಷೇತ್ರ. ಭಯಾನಕ ಯಾಕೆಂದು ನಿಮ್ಗೆ ಮುಂದೆ ಓದ್ತಾ ತಿಳೀತದೆ ಬಿಡಿ. ಸುತ್ತಲೂ ಕಗ್ಗಾಡು ಮನೆಯೆಂಬುದನ್ನು ಕಾಣಬೇಕೆಂದರೆ ಕನಿಷ್ಠ ಮೂರು ಕಿ.ಮೀ ನಡೆಯಲೇಬೇಕಾಗಿತ್ತು. ಹಚ್ಚ ಹಸಿರಿನ ದಟ್ಟ ಅಡವಿಯ ಗುಡ್ಡಗಳ ನಡುವಿನ ಅಗಲ ಕಣಿವೆ[ವ್ಯಾಲಿ]ಯಾಕಾರದ ಪ್ರದೇಶದಲ್ಲಿ ಒಂದೇ ಒಂದು ಜಾಗೃತ ದೇವಸ್ಥಾನ !! ತಿರುಪತಿ, ಉಡುಪಿ ಇಂಥಾ ಕೆಲವನ್ನು ಬಿಟ್ರೆ ಬಹುಶಃ ಶ್ರೀಹರಿಯ ಜಾಗೃತ ದೇವಸ್ಥಾನಗಳು ಹಳ್ಳಿಗಳಲ್ಲಿ ಇರುವುದು ಸ್ವಲ್ಪ ಕಮ್ಮಿಯೇ. ಆದರೂ ಹೊನ್ನಾವರ ತಾಲೂಕಿನ ದಿಬ್ಬಣಗಲ್ ಎಂಬ ಪ್ರದೇಶದಿಂದ ಸರಿಸುಮಾರು ನಾಲ್ಕು ಕಿ.ಮೀ. ಅಳತೆಯಲ್ಲಿದೆ ಈ ಜಾಗ ಕಾನುಗೋಡು. ನಾನು ಹೇಳುತ್ತಿರುವುದು ಉತ್ಪ್ರೇಕ್ಷೆ ಅಂದುಕೊಳ್ಳಬೇಡಿ ಅಲ್ಲಿರುವ ಈಗಿನ ಕಟ್ಟಡಬಿಟ್ಟಡ ಎಲ್ಲಾ ಮರೆತುಬಿಡೋಣ, ಗರ್ಭಗುಡಿಯಲ್ಲಿ ನಿಂತ ಏಕಶಿಲಾ ವಿಗ್ರಹ ಅದ್ಯಾವ ಅನಾದಿ ಕಾಲದ್ದೋ ಯಾವ ಪುಣ್ಯಾತ್ಮ ಮಹರ್ಷಿ ಅಲ್ಲಿ ಹಾಗೆ ಪ್ರತಿಷ್ಠಾಪಿಸಿದ್ದೋ ಕಾಲಗರ್ಭ ಇತಿಹಾಸವನ್ನು ಅಳಿಸಿಹಾಕಿಬಿಟ್ಟಿದೆಯಾದರೂ ಅಂತಹ ಅತ್ಯಂತ ಸುಂದರ ವಿಗ್ರಹ ಈ ಜಗದಲ್ಲೇ ನಿಮಗೆ ಇನ್ನೊಂದು ಸಿಗುವುದಿಲ್ಲ, ಅದು ಬೇಲೂರು ಹಳೇಬೀಡು ಅಥವಾ ಹಂಪೆ ಬಾದಾಮಿಗಳಲ್ಲೂ ಇರುವಂತಹದಲ್ಲ, ಬರೇ ೫ ಅಡಿ ಎತ್ತರ ಪಾಣಿಪೀಠವೂ ಸೇರಿ !! ಮೂರ್ತಿಯ ಪ್ರಭಾವಳಿಯ ಕುಸುರಿ ಕೆತ್ತನೆ ನೋಡಲು ಹೊಸ ಚಸ್ಮಾಹಾಕಿಕೊಂಡು ಹೋಗ್ಬೇಕಾಗ್ತದೆ!! ನಾಮಧೇಯ : ಶ್ರೀಚನ್ನಕೇಶವ !! ನಿಜಕ್ಕೂ ಅನ್ವಯಿಸಿದ ಅನ್ವರ್ಥನಾಮ.

ಜಿಂಕೆಗಳು ಅಲ್ಲಲ್ಲಿ ಮೇಯ್ತಾ ಇದ್ವು. ಕಡವೆಗಳು ಗಡಾನೆದ್ದು ಓಡ್ತಾ ಇದ್ವು. ವಿವಿಧ ಹಕ್ಕಿಪಕ್ಕಿಗಳು ಹಲವು ರಾಗಗಳಲ್ಲಿ ಮಧುರಾಲಾಪಗೈತಾ ಇದ್ವು. ಕಾಡುಕೋಳಿಗಳ ಸರಸರ ಓಡಾಟ ಅಲಲ್ಲಿ ಕಾಣಸ್ತಾ ಇತ್ತು. ನವಿಲುಗಳು ತಮ್ಮ ಸ್ವಂತದ ಠಾವಿನಲ್ಲಿ ಕುಣಿಯುತ್ಲೋ ಕೂಗುತ್ಲೋ ಆಗಾಗ ಆಗಾಗ ಮನೋರಂಜಕವಾಗಿದ್ವು. ನಡೆವ ಕಾಲುದಾರಿಯ ಇಕ್ಕೆಲಗಳಲ್ಲಿ ಸಾಗವಾನಿ, ಗಂಧ, ಮತ್ತಿ, ಬೀಟೆ, ಭರಣಿಗೆ, ದೇವದಾರು, ನಂದಿ, ಹೆಬ್ಬಲಸು, ಖೈರ, ರಕ್ತಚಂದನ, ಧೂಪ ಹೀಗೇ ಒಂದೇ ಎರಡೇ ನಂಗೇ ಹೆಸರು ಗೊತ್ತಿಲ್ಲದ ಹಲವಾರು ಮರಗಳು ಮಹಾಮಹಾ ಎತ್ತರದ ಮರಗಳು ನಿಂತು ಸ್ವಾಗತ ಕೋರ್ತಿದ್ವು, ಅಜ್ಜಿಯ ಕಥೆಯಲ್ಲಿ ಕೇಳಿದ ಕೆಲವು ರಾಮಾಯಣದ ಚಿತ್ರಕೂಟದಂತಹ ಸನ್ನಿವೇಶಗಳು ಕೂಡಾ ಗೋಚರಿಸುತ್ತಿದ್ವು. ಮುಗ್ಧಮಕ್ಕಳಾದ ನಾವೆಲ್ಲಾ ಹಿರಿಯ ಜೊತೆ ಹೆಜ್ಜೆಹಾಕುತ್ತಾ ಅಷ್ಟಷ್ಟು ದೂರ ಹೋದಾಗ ಸ್ವಲ್ಪ ಕೂತು ಮತ್ತೆ ಮುಂದೆ ಸಾಗುತ್ತಿದ್ದೆವು. ಮಧ್ಯೆ ಒಂದೆರಡು ನೀರಿರುವ ಜಾಗಗಳಲ್ಲಿ ನೀರು ಕುಡಿದು ನಮ್ಮ ಬಾಯಾರಿಕೆ ನೀಗಿಸಿಕೊಳ್ತಿದ್ವು. ನನ್ನ ತಾಯಿಯ ತವರೂರ ದಾಯಾದೀ-ಹತ್ತುಸಮಸ್ತರು ಪಾಳಿಯಲ್ಲಿ ಪಾಲಿಗೆ ಬರುವ ದಿನಗಳಲ್ಲಿ ಅಲ್ಲಿಗೆ ಹೋಗಿ ಪೂಜೆ ಸಲ್ಲಿಸ್ತಾ ಇದ್ರು. ಕೆಲವರಿಗೆ ವರ್ಷದಲ್ಲಿ ೨ ತಿಂಗ್ಳು ಪೂಜೆ ಜವಾಬ್ದಾರಿ ಇದ್ರೆ ಇನ್ನು ಕೆಲವರಿಗೆ ಒಂತಿಂಗ್ಳು, ಇನ್ನೂ ಕೆಲವರಿಗೆ ಒಂದ್ವಾರ, ಕೆಲವರಿಗಂತೂ ಮೂರೇ ದಿವಸಗಳ ಭಾಗ್ಯ! ಅದು ನಿಜಕ್ಕೂ ಪರಮ ಭಾಗ್ಯವೇ ಬಿಡಿ.

ಚನ್ನಕೇಶವನನ್ನು ಮೊದಲಾಗಿ ಈ ವಂಶದ ಹಿರಿಯರು ಯಾರೋ ಕಾಡಿಗೆ ಹೋದಾಗ ಕಂಡಿರ್ಬೇಕು. ಹಚ್ಚಹಸಿರಿನ ನಡುವೆ ಕಂಡ ಶಿಶುವಿನ ಮಂದಹಾಸಬೀರಿದ ಮುಖದ ಆ ಸ್ಫುರದ್ರೂಪಿಯನ್ನು ಬಿಟ್ಟಿರಲು ಇವರಿಂದ ಆಗದಾಯ್ತೇನೋ. ದೂರಬೇರೆ, ಹಿಂಸ್ರ ಪಶುಗಳೂ ಓಡಾಡುವ ಜಾಗ ಬೇರೆ. ಹೀಗಾಗಿ ಕೇಶವನಿಗೆ ಏಕ ಪೂಜೆ. ನಿತ್ಯವೂ ಮಧ್ಯಾಹ್ನ ಮಾತ್ರ. ತಲೆಹೊರೆಯಲ್ಲಿ ಬಾಳೆಹಣ್ಣು-ತೆಂಗಿನಕಾಯಿ-ಕರ್ಪೂರ-ಬತ್ತಿ-ದೀಪಕ್ಕೆ,ಅಡಿಗೆಗೆ ಒಂದಷ್ಟು ಕೊಬ್ಬರಿ ಎಣ್ಣೆ, ನೈವೇದ್ಯಕ್ಕೆ ಅನ್ನಮಾಡಲು ಸಾಕಷ್ಟು ಅಕ್ಕಿ, ಮಧ್ಯಾಹ್ನದ ಭೋಜನಕ್ಕೆ ಗೊಜ್ಜು-ಪಜ್ಜು ಮಾಡಿಕೊಳ್ಳಲು ಸ್ವಲ್ಪ ಹಿತ್ಲಕಾಯಿ, ಪಾತ್ರೆ ಸರಂಜಾಮು ಬುಟ್ಟಿಗಳಲ್ಲಿಟ್ಟು ಹೊತ್ತು ಬೆಳಿಗ್ಗೆ ೯ಕ್ಕೆ ಹೊರಟರೆ ದಿಬ್ಬಣಗಲ್ ತಲ್ಪುವಾಗಲೇ ೯:೩೦, ಅಲ್ಲಿಂದ ಮುಂದೆ ಮೂರೂವರೆ ಕಿ.ಮೀ ಒಳಗಡೆಗೆ ತೆರಳಬೇಕಿತ್ತು. ಹವ್ಯಕರಿಗೆ ಪೂಜೆಯೇನೂ ಹೊಸದಲ್ಲವಲ್ಲ ಆದ್ರೂ ಹಾಗೆಲ್ಲಾ ವ್ರತಾಚರಣೆಯಿಲ್ಲದೇ ಶರೀರಶುದ್ಧಿಯಿಲ್ಲದೇ ಕೇಶವನನ್ನು ಪೂಜಿಸುವ ಹಾಗಿರಲಿಲ್ಲ. ಹಗಲಲ್ಲಿ ಹಿರಿಯರಿಗೆ ಕಂಡ ಕೇಶವ ಕಾಲಕಾಲಕ್ಕೆ ಇರುಳಲ್ಲಿ ಕಿರಿಯರ ಕನಸಲ್ಲಿ ಕಂಡು ತನ್ಗೆ ಇದುಬೇಕು- ಅದು ಬೇಡ ಹೀಗೆ ಮಾಡು ಎಂದೆಲ್ಲಾ ತಿಳಿಸಿ ಪೂಜೆಮಾಡಿಸಿಕೊಳ್ಳುವ ವೈಖರಿ ಮಾತ್ರ ಅಚ್ಚರಿ ಮೂಡಸ್ತಾ ಇತ್ತು.

ಹವ್ಯಾಗ್ನಿ[ಜೀವಿತದ ಕಾಲದಲ್ಲಿ ಹೋಮ-ಹವನಕ್ಕೆ ಬಳಸುವ ಅಗ್ನಿ] ಮತ್ತು ಕವ್ಯಾಗ್ನಿ[ಸತ್ತಾಗ ಅಂತ್ಯೇಷ್ಟಿಗಳಲ್ಲಿ ಅಲ್ಲದೇ ಅಲ್ಲಿ ನಡೆಸುವ ಶಾಂತಿ/ಅಪರಹೋಮಗಳಲ್ಲಿ ಬಳಸುವ ಅಗ್ನಿ] ಎರಡರಲ್ಲೂ ಪ್ರಬುದ್ಧ ಹಿಡಿತವುಳ್ಳ ಬ್ರಾಹ್ಮಣರನ್ನು ತನ್ನ ರಾಜ್ಯಕ್ಕೆ ಮೊಟ್ಟಮೊದಲ ಕನ್ನಡ ದೊರೆ ಬನವಾಸಿಯ ಮಯೂರವರ್ಮ ಉತ್ತರದ ಸಿಂಧೂನದಿಯ ದಡದ ಅಹಿಕ್ಷೇತ್ರದಿಂದ ಬನವಾಸೀ ರಾಜ್ಯಾಂತರ್ಗತ ಬಹುಭಾಗಗಳ ದೇವಳಗಳ ಪೂಜೆಗಾಗಿ ಕರೆತಂದನೆಂದು ಇತಿಹಾಸ ಹೇಳುತ್ತದೆ. ಕಾಲಾನಂತರದಲ್ಲಿ ರಾಜಾಶ್ರಯ ತಪ್ಪಿದ ಘಳಿಗೆಯಲ್ಲಿ ಹಲವಾರು ಸಾಮಾಜಿಕ ಮಾರ್ಪಾಡುಗಳ ನಡುವೆ ಉಪಜೀವನಕ್ಕೆ ಆಶ್ರಯದಾತರು ಇಲ್ಲದಾದಾಗ ಹವ್ಯಕರು ಪೂಜೆಯ ಜೊತೆಗೇ ಭೂಮಿತಾಯಿಯ ಉಳುಮೆಯನ್ನೂ/ಕೃಷಿಯನ್ನೂ ಅವಲಂಬಿಸಿ ಸ್ವಾವಲಂಬನೆಯ ಸಾಮಾಜಿಕ ಮಂತ್ರವನ್ನೂ ಪಠಿಸಿದರು! ಅಖಂಡ ಭಾರತದಲ್ಲಿ ಸ್ವತಃ ಕೃಷಿಯಲ್ಲಿ ತೊಡಗಿದ ಬ್ರಾಹ್ಮಣ ವರ್ಗವೊಂದಿದ್ದರೆ ಅದು ಹವ್ಯಕರೇ; ಈಗ ಮತ್ತಿತರ ವರ್ಗಗಳೂ ಮಾಡುತ್ತಿವೆ ಅದು ಬೇರೇ ವಿಷಯ. ರಾಜಾ ಮಯೂರವರ್ಮನ ಉಂಬಳಿಯಲ್ಲಿ ಸಿಕ್ಕಿದ ಅಗ್ರಹಾರವೆಂಬ ಹಳ್ಳಿಗಳಲ್ಲಿ ತಮ್ಮ ಹೊಲಮನೆ ಗುಡಿಗುಂಡಾರಗಳನ್ನು ನಿರ್ಮಿಸಿಕೊಂಡು ಅನ್ನದಾತ ಪ್ರಭುವನ್ನು ಇನ್ನೂ ಮರೆಯದ ಈ ಜನಾಂಗದ ಇಂದಿನ ಕುಡಿಗಳು ಕೃಷಿಯನ್ನು ಮರೆಯುವತ್ತ ಮನಮಾಡಿದ ಅನಿವಾರ್ಯ ದಾರುಣ ಕಥೆ ’ಅಪ್ಪಯ್ಯ ಯೆಂಗೆ ಬೇಕು ಚಂದಾಗಿದ್ದಂವ ’ !!

ಹವ್ಯಕರಲ್ಲಿ ಕನಿಷ್ಠ ೮ವರ್ಷ ವಯಸ್ಸು ತುಂಬಿದವರಿಗೆ ಮಾತ್ರ ಮುಂಜಿ ಈಗ ಬಿಡಿ ೧೨, ೧೩, ೧೫ರವರೆಗೂ ಮಾಡ್ತಾರೆ. ಶಾಸ್ತ್ರರೀತ್ಯಾ ಗರ್ಭಾಷ್ಟಮ, ಗರ್ಭದಿಂದಲೇ ಲೆಕ್ಕಹಾಕಿ ೭ ಮುಗಿದು ಎಂಟು ಆರಂಭವಾಗ್ತಿರೋ ಕಾಲ್ದಲ್ಲಿ ಆತ ’ದ್ವಿಜ’ನಾಗಬೇಕು. [ದ್ವಿ-ಜ[ನ್ಮ]ಉಳ್ಳವನಿಗೆ ಅಂದರೆ ಪಾಲಕರು ಒಮ್ಮೆ ಜನ್ಮಕೊಟ್ಟ ಬಳಿಕ ಮಾತೆ ಗಾಯತ್ರಿ ಶರೀರ ಪ್ರವೇಶಿಸಿ ಇನ್ನೊಂದು ಜನ್ಮವನ್ನು ನೀಡುತ್ತಾಳೆ ಎಂಬುದು ಸೂಚ್ಯರ್ಥ]ಮುಂಜಿಯಾದ ಕಿರಿಯ ದ್ವಿಜರಿಗೂ ಹಾಗೆಲ್ಲಾ ಗರ್ಭಗೃಹ ಪ್ರವೇಶವಿರುವುದಿಲ್ಲ. ಹೇಗೆ ಪೋಲೀಸ್ ಪೇದೆಗಳಿಗೋ ಅರಣ್ಯಾಧಿಕಾರಿಗಳಿಗೋ ಟ್ರೇನಿಂಗ್ ಕೊಡ್ತಾರೋ ಹಾಗೇ ಪೂಜಾ ಪ್ರಾತ್ಯಕ್ಷಿಕೆ ಪ್ರಾಯೋಗಿಕವಾಗಿ ಆದಮೇಲೆ ಅವರನ್ನು ಪರೀಕ್ಷಿಸಿ ನಂತರ ಸುಮಾರು ೧೫-೧೬ ವಯಸ್ಸಿನ ಬಳಿಕವಷ್ಟೇ ಅಂತಂಥಾ ದೇವಸ್ಥಾನದ ದೇವರನ್ನು ಪೂಜೆಮಾಡಲು ಅನುಮತಿ ದೊರೀತಾ ಇತ್ತು; ಅಷ್ಟರೊಳಗೆ ಅವರಿಗೆ ಕಾಲೋಚಿತ ವೇದಪಾಠ ಕೂಡ ಕಲಿತಾಗಿಬಿಡಬೇಕಿತ್ತು.

ಯಾವ ಶಿಲ್ಪಿ ಕಡೆದನೋ ಯಾವ ದಿನದಲ್ಲಿ ಅದ್ಯಾವ ರಾಜಾಶ್ರಯದಲ್ಲಿ ಕೂತು ಕಡೆದನೋ, ಯಾವುದೋ ಮುನಿ ತನ್ನ ಘೋರ ತಪದ ಫಲದಿಂದ ನೀರು ಪ್ರೋಕ್ಷಿಸಿ ಸೃಷ್ಟಿಸಿದ್ನೋ ಅಂತೂ ಆ ವಿಗ್ರಹ ಮಾತ್ರ ಅಂತಹ ರೂಪುರಂಗಿನದು. ಅಚ್ಚಕಪ್ಪು ಬಣ್ಣದ ಶಿಲೆಯಲ್ಲಿ ಮಿರಿಮಿರಿ ಮಿಂಚುವ ನಯವಾದ ಮೂರ್ತಿ ಯಾರೇ ನೋಡಿದರೂ ಅವರನ್ನೇ ನೋಡ್ತಾ ಅವರೆಡೆಗೇ ಮಂದಹಾಸ ಬೀರ್ತಾ ಇರೋ ಥರಾ ಇರುತ್ತೆ ! ನಾನು ನೋಡಿದ ದಿನಗಳಲ್ಲಿನ ಕಥೆ ನಾ ಹೇಳ್ತಾ ಇದ್ದೇನೆಯೇ ಹೊರ್ತು ಅದಕ್ಕಿಂತಾ ಅದೆಷ್ಟೋ ಶತಮಾನಗಳ ಹಿಂದಿನಿಂದ ಅದು ಅಲ್ಲಿ ನೆಲೆನಿಂತಿದೆ.

ಕಾಲುದಾರಿಯಲ್ಲಿ ಸಾಗಿ ಗಮ್ಯಸ್ಥಾನ ತಲ್ಪಿದ್ರೆ ಅಲ್ಲೊಂದು ಚಿಕ್ಕ ಕಟ್ಟಡ. ಕಟ್ಟಡದ ಪ್ರವೇಶದ್ವಾರಕ್ಕೂ ಮುನ್ನ ಎರಡೂ ಬದಿಗೆ ಎರಡೆರಡು ಹೆಮ್ಮರಗಳು. ಅವುಗಳ ಬುಡದಲ್ಲಿ ಬಾಗಿಲು ಜಟ್ಗ [ಜಯ-ವಿಜಯ]ಗಳು. ಹಾಗೆ ಹಿರಿಯರು ಮೊದಲಾಗಿ ತೋರಿಸಿದಾಗ ಜಟ್ಗ ಎಂದ ಜಾಗದಲ್ಲಿ ಊದ್ದುದ್ದ ಒಂದೊಂದು ಶಿಲೆಯ ಕಲ್ಲುಗಳನ್ನು ನೆಟ್ಟಿದ್ದರು. ಜಟ್ಗ ಕಾಣಿಸಲಿಲ್ಲವಲ್ಲಾ ಎಂದು ಕೇಳಿದರೆ ಅದು ಶಕ್ತಿ ಅಡಗಿರ್ತದೆ, ಮೈಲಿಗೆಯಾದ್ರೆ ಹಿಡ್ಕೊಂಡ್ ಬಿಡ್ತದೆ ಅಂದಿದ್ರು. ಜಾಸ್ತಿ ಏನೂ ಬೇಡ ಏನಾದ್ರೂ ಆದ್ರೆ ಕಷ್ಟ ಎಂಬ ಭಯದಿಂದ ಮುಂದೆ ಹಳೇದಾದ ಆ ಕಟ್ಟಡವನ್ನು ಹೊಕ್ಕರೆ ಅಲ್ಲಿ ವನ್ಯಮೃಗಗಳ ಕೊಂಬುಗಳಿಂದ ಮಾಡಿದ ಅಲಂಕಾರಿಕ ಸಾಮಾನುಗಳನ್ನು ದೇವರ ಪ್ರೀತ್ಯರ್ಥವಾಗಿ ಹಾಕಿದ್ರು. || ಅಲಂಕಾರ ಪ್ರಿಯೋ ವಿಷ್ಣುಃ || ಅಂತಾರಲ್ಲ ಅದ್ಕೇ ಸುತ್ತಲ ದೂರದ ಹಳ್ಳೀಜನ ಆಗಾಗ ಬರುವಾಗ ದಾರಿಯಲ್ಲಿ ಸತ್ತುಹೋಗಿ ಕೊಂಬುಮಾತ್ರ ಉಳಿದ ಮಿಕಗಳಿಂದ ಅವುಗಳನ್ನು ತಂದು ಒಪ್ಪಿಸುತ್ತಿದ್ದರಂತೆ. ಇನ್ಯಾವುದೋ ಭಕ್ತ ಆಚಾರಿ ಅದನ್ನು ಒಣ್ಗಿದ ಮರದತುಂಡು ತಂದುಕೊಂಡು ಮೃಗಗಳ ಮುಖದಂತೇ ಕೆತ್ತಿ ಅಲಂಕರಿಸಿದ್ದ!! ಅಬ್ಬಬ್ಬಾ ಶಿವನೇ ಕೇಶವನೇ ಎಂತೆಂಥಾ ಸೇವೆ ನಿನಗಪ್ಪಾ! ಹಾಗೆ ನೋಡಲೇ ಬಹಳ ಸಮಯ ಹಿಡೀತಿತ್ತು. ಅದ್ಕೇ ಪೂಜೆಗೆ ತೊಡಗುವ ಹಿರಿಯರು ಹೋದವ್ರೇ ಸಾಮಾನು ಸರಂಜಾಮು ಅಲ್ಲೇ ಇರುವ ಚಿಕ್ಕ ಪಡಸಾಲೆಯಲ್ಲಿ ಇಳಿಸಿ ಸೀದಾ ಬಾವಿಕಟ್ಟೆಗೆ ಸ್ನಾನಕ್ಕೆ ಹೋಗಿಬಿಡ್ತಾ ಇದ್ರು.

ಬಾವಿ ಎಂದ್ರೆ ಬಹಳ ಆಳದ್ದು ಅಂತ ತಿಳೀಬೇಡಿ. ಮಳೆಗಾಲ್ದಲ್ಲಿ ಮೊಗೆದು ತೆಗೆಯುವ ನೀರು, ಬೇಸಿಗೆಯ ಕಟ್ಟಕಡೆಗೆ ೪ ಅಡಿ ಆಳಕ್ಕೇ ನೀರು! ಎಳೆನೀರು ಎಳೆನೀರು--ಅಂಥಾ ಸ್ಫಟಿಕ ಸದೃಶ ನೀರು ಕಣ್ರೀ. ಕಾಡಿನ ವನಸ್ಪತೀ ಬೇರುಗಳ ಮೂಲಕ ನಿಧಾನಕ್ಕೆ ಹರಿದ ಗಂಗೆ ಅಲ್ಲಿಗೆ ಬಂದಿರೋದ್ರಿಂದ ನೈಸರ್ಗಿಕ ಖನಿಜಯುಕ್ತ ಸಿಹಿಸಿಹಿ ನೀರು; ರೋಗನಿವಾರಕ ಶಕ್ತಿಯುಳ್ಳ ಕೇಶವನ ತೀರ್ಥದ ರೀತಿಯ ನೀರು. ಹೇಗೂ ಮನೇಲೊಮ್ಮೆ ಸ್ನಾನ ಆಗಿರ್ತಿತ್ತು. ಅಲ್ಲಿ ಮತ್ತೆ ನಡೀವಾಗ ಧೂಳು-ಎಂಜಲು ಇತ್ಯಾದಿ ಮೈಗೆ ಸೋಕಿರ್ತದಲ್ಲ ಅಂತ ಗಡಗಡನೆ ಎರಡು ಕೊಡಪಾನ ನೀರೆತ್ತಿ ತಲೆಮೇಲೆ ಮಗುಚಿಕೊಂಡವರೇ ಗಣಪತೀ ಉಪನಿಷತ್ತು ಪಠಿಸುತ್ತಾ ಮಾಯ್ನಕುರಿ ಕೈಮಗ್ಗದ ಬಿಳೀ ಪಂಚೆಯನ್ನೇ ಒದ್ದೆಮಾಡಿ ನೀರು ಹಿಂಡಿ ಮತ್ತದನ್ನೇ ಉಟ್ಟು ಹೆಗಲಿಗೊಂದು ಒದ್ದೆ ಟವೆಲ್ಲು ಹಾಕ್ಕೊಂಡು ದೇವರಕೊಡದಲ್ಲಿ ಮಡಿನೀರು ತರುತ್ತಿದ್ದರು.

ಗರ್ಭಗುಡಿಗೂ ಮುಖಮಂಟಪಕ್ಕೂ ನಡುವೆ ಸಾಮಾನ್ಯವಾಗಿ ಚಿಕ್ಕದೊಂದು ಮೈಸುತ್ತುವ ಜಾಗ ಇರ್ತದೆ. ಅಲ್ಲಿ ಪೂಜಾ ಸಾಮಾನುಗಳನ್ನು ಇಟ್ಕೊಳ್ಳೋದು, ಗಂಧ ತೇಯ್ಕೊಳ್ಳೋದು, ಆರ್ತಿ ಬೀರ್ತಿ ಇಡೋದು, ಅರ್ಚಕರು ವೈಯ್ಯಕ್ತಿಕ ಧ್ಯಾನ ಮಾಡ್ಕೊಳ್ಳೋದು ಇತ್ಯಾದಿ ಹಲ್ವಾರು ಕೆಲ್ಸಗಳಿಗೆ ಆ ಜಾಗ ಅಗತ್ಯವೂ ಹೌದು ಉಪಯುಕ್ತವೂ ಹೌದು. ಅಲ್ಲಿಗೆ ಹೋಗುವ ಅವರು ಮಂತ್ರಪಠಿಸುತ್ತಲೇ ಶ್ರೀಗಂಧ, ರಕ್ತಚಂದನಾದಿಗಳನ್ನು ತೇಯ್ದುಕೊಳ್ತಾ ಇದ್ರು. ಗಂಧತೇಯುವಾಗಲೇ ಆ ಘಮಘಮ ಹೊರವಲಯದ ವರೆಗೂ ಬರ್ತಿತ್ತು. ಮನೆಯಿಂದ ಬರುವಾಗ ತಂದ ಥರಥರದ ಹೂಗಳು, ತುಳಸಿ ಎಲ್ಲವನ್ನೂ ಜೋಡಿಸಿ ಇಟ್ಟುಕೊಂಡು ಕವಾಟು ತೆರೀತಾ ಇದ್ರು! ಕವಾಟು ಎಂದ್ರೆ ಅಲ್ಲಿನ ಗರ್ಭಗುಡಿಯ ಬಾಗಿಲು. ಕವಾಟು ತೆಗೆದಮೇಲೆ ದೇವರಿಗೆ ಪೂಜೆಯಾಗ್ಲೇ ಬೇಕಂತೆ. ಕವಾಟು ತೆಗೆದು ಪೂಜೆ ಮಾಡಿದ ನಂತ್ರ ಮಧ್ಯಾಹ್ನ ೩ ಗಂಟೆಗೆ ಮತ್ತೆ ಕವಾಟು ಬಂದೋಬಸ್ತ್ ಮಾಡ್ಬಿಟ್ರೆ ಮತ್ತೆ ನಾಳೇನೇ ತೆಗ್ಯೋದು!

.........ಮತ್ತೆ ನೋಡೊಣ ಮುಂದಿನ ಭಾಗದಲ್ಲಿ , ನಮಸ್ಕಾರ

Thursday, August 11, 2011

" ಬೆಕ್ಕು ಅದು " !!


" ಬೆಕ್ಕು ಅದು " !!

ಸಮಯಪ್ರಜ್ಞೆ ಮತ್ತು ಸಮಯಸ್ಫೂರ್ತಿ ಇವೆರಡು ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬೇಕಾದ ಪ್ರಮುಖ ಅಂಶಗಳು. ಕೆಲವರಿಗೆ ಸಮಯಪ್ರಜ್ಞೆ ಎಂದರೇನೆಂಬುದೇ ಗೊತ್ತಿರುವುದಿಲ್ಲ. ಯವುದಾದರೂ ಕೆಲಸವನ್ನು ಎಷ್ಟಾದರೂ ಸಮಯ ತೆಗೆದುಕೊಂಡು ಹೇಗಾದರೂ ಮಾಡಿಮುಗಿಸುತ್ತಾರೆ. ನನಗೆ ತಿಳಿದಿರುವ ಸರಕಾರೀ ಅಧಿಕಾರಿಯೊಬ್ಬರು ಅವರ ನೆಂಟರ ಮನೆಗಳಿಗೆ ಹೋದಾಗ ತಮ್ಮ ಮನೆಯಲ್ಲಿ ಹೇಗೆ ಗಂಟೆಗಟ್ಟಲೆ ಸ್ನಾನಮಾಡುತ್ತಿದ್ದರೋ ಹಾಗೇ ಅಲ್ಲೆಲ್ಲಾ ಹಾಗೇ ನಡೆದುಕೊಳ್ಳುತ್ತಿದ್ದರು. ತನ್ನಿಂದ ಬೇರೆಯವರಿಗೆ ಸಮಯಕ್ಕೆ ತೊಂದರೆಯಾಗಬಹುದು ಎಂಬ ಕಿಂಚಿತ್ ಪರಿಜ್ಞಾನವೂ ಅವರಿಗಿರಲಿಲ್ಲ. ಸರಕಾರೀ ಇಲಾಖೆಯಲ್ಲಿ ಉತ್ತಮ ಸ್ಥಾನದಲ್ಲಿದ್ದರೂ ವೈಯ್ಯಕ್ತಿಕ ಕೆಲಸಗಳಲ್ಲಿ ಬಹಳ ಜಬ್ಬ. ನಿತ್ಯೋಪಯೋಗಿ ಒಳ ಉಡುಪು ತೊಳೆಯಲು ಕನಿಷ್ಠ ೩೦ ನಿಮಿಷ, ಹಲ್ಲುಜ್ಜಲು ೨೦ ನಿಮಿಷ[ಅಸಭ್ಯರೀತಿಯಲ್ಲಿ ಗಂಟಲುತನಕ ಕೈಹಾಕಿ ಕೆಮ್ಮಿ ಕೆಮ್ಮಿ ವಾಂತಿಮಾಡಿದ ರೀತಿ ಮಾಡುವುದೂ ಸೇರಿದಂತೇ], ಗಡ್ಡ ಮಾಡಲು ೩೦ ನಿಮಿಷ, ಇನ್ನು ಮಿಕ್ಕುಳಿದ ಸಮಯ ಸ್ನಾನಕ್ಕೆ --ನೀವೇ ಊಹಿಸಿ !

ಬೆಕ್ಕಿಗೆ ಹಾಲು ಪ್ರೀತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ತೆನ್ನಾಲಿ ರಾಮನ ಬೆಕ್ಕಿಗೆ ಹಾಲು ಇಷ್ಟವಲ್ಲ ಯಾಕೆ ಎಂಬುದೂ ಸಹ ಎಲ್ಲರಿಗೂ ಗೊತ್ತಿರುವ ಅಷ್ಟೇ ಸತ್ಯದ ವಿಚಾರ. ಮೇಲೆ ಹೇಳಿದ ನಮ್ಮ ರಾಯರು ಬಂದರೆಂದರೆ ಕೆಲವು ಮನೆಗಳಲ್ಲಿ ಎಲ್ಲರೂ ತೆನ್ನಾಲಿಯ ಬೆಕ್ಕು ಹಾಲುಕಂಡಂತೇ ವರ್ತಿಸುತ್ತಿದ್ದರು. ಬೆಳಿಗ್ಗೆಯೇ ಬಚ್ಚಲುಮನೆ ಹೊಕ್ಕರೆ ೨ ಗಂಟೆ ಸಮಯವಾದರೂ ಬೇಕಾಗುತ್ತದೆ, ೯ ರೊಳಗೆ ಖಾಸಗೀ ಕಂಪನಿಗಳಲ್ಲಿ ನೌಕರಿ ಮಾಡುವವರು ಹಾಜರಾಗಬೇಕಲ್ಲಾ ರಾಯರ ವ್ಯಾಪಾರ ಅವರ ಸ್ನಾನ,ತಿಂಡಿ-ತೀರ್ಥ ಈ ಎಲ್ಲಾ ಕೆಲಸಗಳಲ್ಲಿ ಅಲ್ಲೋಲಕಲ್ಲೋಲ ! ಕೆಲವರು ಒಳಗೊಳಗೇ ಶಪಿಸುತ್ತಿದ್ದಿರಲೂ ಬಹುದು. ಸಮಯದ ಮಹತ್ವ ಅರಿಯದ ಜನ ಎಷ್ಟೇ ಉತ್ತಮ ವ್ಯಕ್ತಿಯೇ ಆಗಿದ್ದರೂ ಸರ್ವಬಣ್ಣ ಮಸಿನುಂಗಿತು ಅನ್ನೋ ಹಾಗೆ ಅವರ ಎಲ್ಲಾ ಸದ್ಗುಣಗಳೂ ಮರೆತುಹೋಗಿ ಸಮಯದಲ್ಲಿ ಅವರು ತೋರುವ ಜಬ್ಬತನವೇ ಮೆರೆಯತೊಡಗುತ್ತದೆ!

ಕೆಲವರಿಗೆ ಹೇಳಿದ್ದನ್ನೇ ಹೇಳುತ್ತಾ ಪಿಟೀಲು ಕುಯ್ಯುತ್ತಾ ಇರುವ ಸ್ವಭಾವ. ಕೇಳಿಸಿಕೊಳ್ಳುವವರ ಕಿವಿ ತೂತು ಬೀಳುವಷ್ಟಾದರೂ ಅವರ ಬಾಯಿ ಬಂದಾಗುವುದಿಲ್ಲ. ಬೇಡದ ಎಲ್ಲಾ ಕಥೆಗಳು ಸ್ವಯಂ ಸ್ತುತಿಯ ಹಲವು ಉಪಕಥೆಗಳು ಅವರಲ್ಲಿರುತ್ತವೆ. " ೮೪ನೇ ಇಸವೀಲಿ ಒಂದ್ಸರ್ತಿ...." ಅಂತ ಆರಂಭಿಸಿದ್ರೆ ನಮಗೇ ೮೪ ವಯಸ್ಸಾದ್ರೂ ಅವರ ಮಾತು ಮುಗಿಯೋ ಲಕ್ಷಣ ಕಾಣ್ಸೋದಿಲ್ಲ. ಹೊತ್ತುಗೊತ್ತಿನ ಪರಿವೆಯೇ ಇರದ ಅಂಥವರು ತಮ್ಮ ಕಥೆಗಳನ್ನು ಆಲಿಸದ ಜನರಮೇಲೆ ಕೋಪಗೊಳ್ಳುತ್ತಾರೆ. ಆದರೂ ಪರವಾಗಿಲ್ಲ ಅಂಥಾ ಪಿಟೀಲುವಾದಕರು ಸಿಕ್ಕಿದರೆ ಅವರ ಕಥೆಗಳನ್ನು ಅಲ್ಲಲ್ಲಿಗೇ ನಿಲ್ಲಿಸಿಬಿಡಿ. ಅದು ಅವರಿಗೂ ನಿಮಗೂ ಎಲ್ಲರಿಗೂ ಒಳ್ಳೇದು. Otherwise it is a national waste. ಕೆಲವು ಸ್ತ್ರೀಯರಿಗೆ ಅಂಥಾ ಕುಯ್ಯುವ ನೆಂಟರು ಕುಯ್ತಾ ಇರೋವಾಗ ನಿಲ್ಲಿಸಿ ಅಂತ ಹೇಳುವುದಕ್ಕೆ ಎಲ್ಲಿ ತಮ್ಮ ಹೆಸರಿಗೆ ಮಸಿ ಬಳಿಯುತ್ತಾರೋ ಎಂಬ ಅಂಜಿಕೆಯಿರುತ್ತದೆ. ಒಂದು ಮಾತು ನೆನಪಿರಲಿ--ಅಂತಹ ಪಿಟೀಲು ವಾದಕರ ವೈಖರಿ ಬಹಳ ಜನರಿಗೆ ಗೊತ್ತಿರುತ್ತದೆ, ಹೀಗಾಗಿ ಅವರು ಹೇಳಿದ್ದನ್ನೆಲ್ಲಾ ಎಲ್ಲರೂ ಮಾನ್ಯಮಾಡುವುದಿಲ್ಲ.

ನಮ್ಮಲ್ಲಿನ ಹಲವಾರು ವೇದಿಕೆಯ ಕಾರ್ಯಕ್ರಮಗಳಿಗೆ ಬರುವ ಪತ್ರಕರ್ತರು, ಸಿನಿಮಾಮಂದಿ ಎಲ್ಲಾ ಸಭೆ ಆರಂಭವಾಗಿ ಅರ್ಧಗಂಟೆಯಾದಮೇಲೆ ಮಧ್ಯೆ ತಮ್ಮ ಪಟಾಲಮ್ಮಿನೊಂದಿಗೆ ಬಂದು ವೇದಿಕೆಯೆಡೆಗೆ ತೆರಳುತ್ತಾರೆ. ಸಭೆಯ ಆರಂಭಕ್ಕೂ ೫ ನಿಮಿಷ ಮುನ್ನ ಅವರು ಹಾಜರಿದ್ದರೆ ಅವರ ಗಂಟೇನುಹೋಗುತ್ತದೆ ? ನಮ್ಮ ಜನವೂ ಕೂಡ ಹಾಗೇ ವರದಕ್ಷಿಣೆ ತೆಗೆದುಕೊಳ್ಳದೇ ಮದುವೆಯಾಗುತ್ತೇನೆ ಎನ್ನುವ ಹುಡುಗ ಸಿಕ್ಕಿದರೆ ಆತನಲ್ಲೇನೋ ಐಬಿರಬೇಕು ಎಂದುಕೊಳ್ಳುತ್ತಾರೆ ಹೇಗೋ ಸಭೆಗೂ ಮುನ್ನ ಪ್ರಚಾರದಲ್ಲಿರುವ ವ್ಯಕ್ತಿಗಳು ಬಂದುಬಿಟ್ಟರೆ " ಇವತ್ತೆಲ್ಲೂ ಕೆಲ್ಸ ಇರ್ಲಿಲ್ಲಾ ಅನ್ಸುತ್ತೆ ಅದ್ಕೇ ಬೇಗ ಬಂದ್ಬುಟಿದಾರೆ " ಅಂದ್ಕೊಳ್ಳುವವರೂ ಇದ್ದಾರೆ. ಯಾರು ಏನೇ ಅಂದುಕೊಂಡರೂ ಸಮಯಕ್ಕೆ ಮಹತ್ವವನ್ನು ಕೊಡುವ ಜನ ಯಾರದೋ ಹೇಳಿಕೆಯನ್ನು ಗಣನೆಗೆ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಸಮಯಕ್ಕೆ ಮಹತ್ವಕೊಡದ ಯಾವುದೇ ಗಣ್ಯವ್ಯಕ್ತಿಯಾದರೂ ನನ್ನ ಲೆಕ್ಕದಲ್ಲಿ ನಗಣ್ಯರೇ ಸರಿ. ಎಲ್ಲೋ ಅಪ್ಪಿ-ತಪ್ಪಿ ಅಸ್ವಾಸ್ಥ್ಯದಿಂದ ಯಾ ವಾಹನಗಳ ತೊಂದರೆಯಿಂದ ತಡವಾಗುವ ಅನಿವಾರ್ಯತೆ ಬರಬಹುದು, ಪ್ರತಿಯೊಂದೂ ಕಾರ್ಯಕ್ರಮಕ್ಕೂ ತಡವಾಗಿ ಬಂದು ಬಿಲ್ಡಪ್ ತೋರುವವರು ನಿಜಕ್ಕೂ ಬೇರೆಯವರ ಸಮಯವನ್ನು ಹಾಳುಮಾಡುವವರಾಗಿದ್ದಾರೆ. ರಾಜಕಾರಣಿಗಳು ಇದರಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ !

ಸರ್ ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಮಧ್ಯಾಹ್ನ ಊಟಮಾಡಿ ಸ್ವಲ್ಪಹೊತ್ತು ಮಲಗಿರುತ್ತಿದ್ದರು. ಯಾವುದೋ ಕೆಲಸದ ನಿಮಿತ್ತ ವ್ಯಕ್ತಿಯೊಬ್ಬ ಅವರನ್ನು ಕಾಣಲು ಬಂದಾಗ ಮಧ್ಯಾಹ್ನದ ೨ ಗಂಟೆ ೩೦ ನಿಮಿಷಗಳಾಗಿದ್ದವು. ದಿವಾನಖಾನೆಯಲ್ಲಿರುವ ಜವಾನ " ಸಾಹೇಬರು ವಿಶ್ರಾಂತಿಯಲ್ಲಿದ್ದಾರೆ ಕುಳಿತುಕೊಳ್ಳಿ ೨:೪೦ಕ್ಕೆ ಬರುತ್ತಾರೆ " ಎಂದ. ಹತ್ತುನಿಮಿಷ ಯಾವ ಮಹಾ ಎಂದುಕೊಂಡ ಬಂದ ವ್ಯಕ್ತಿ ಅಲ್ಲೇ ಹೊರಗಡೆ ಕುಳಿತುಕೊಂಡ. ಆತನ ಲೆಕ್ಕದಲ್ಲಿ ಊಟಮಾಡಿ ವಿಶ್ರಾಂತಿ ತೆಗೆದುಕೊಳ್ಳುವವರು ೪ಗಂಟೆಯ ಹೊತ್ತಿಗೆ ಸಿಕ್ಕಿದರೇ ಹೆಚ್ಚು ನೋಡೋಣ ಜವಾನ ಹೀಗೆ ಹೇಳಿದ್ದಾನಲ್ಲಾ ಎಂಬ ಧೋರಣೆ. ನೋಡನೋಡುತ್ತಾ ೨:೪೦ ಆಗೇಹೋಯ್ತು. ವ್ಯಕ್ತಿ ಪುನಃ ಜವಾನನನ್ನು ಸಂಪರ್ಕಿಸಿದ. ಜವಾನ ಒಳಗೆ ಕಳುಹಿಸಿದ. ಸಾಹೇಬರು ಕೆಲಸದಲ್ಲಿ ಅದಾಗಲೇ ತೊಡಗಿಕೊಂಡಿದ್ದರು! ವಿಶ್ವೇಶ್ವರಯ್ಯನವರ ಸಮಯಪ್ರಜ್ಞೆ ಮಹಾರಾಜರನ್ನೂ ದಂಗುಬಡಿಸಿತ್ತು! ಅಂತಹ ಸಮಯಪ್ರಜ್ಞೆಯುಳ್ಳ ಮಹಾಮೇಧಾವಿ ಕನ್ನಡಿಗರೇ ಆಗಿದ್ದರು ಎಂದುಕೊಳ್ಳಲು ಎಷ್ಟು ಖುಷಿಯಾಗುತ್ತದೋ ಅಂತಹ ಜನ ಇವತ್ತಿನ ದಿನಮಾನದಲ್ಲಿ ಆಡಳಿತ ಯಂತ್ರದಲ್ಲಿ ಯಾರೂ ಇಲ್ಲವಲ್ಲ ಎಂಬುದನ್ನು ನೆನೆದಾಗ ಅಷ್ಟೇ ಖೇದವಾಗುತ್ತದೆ.

ಬ್ಯಾಂಕಿನವರಿಗೆ ಮಾತ್ರ ಕಚೇರಿಯ ಸಮಯಪ್ರಜ್ಞೆ ಬಹಳ ಜಾಗ್ರತವಾಗಿದೆ. ಮೊದಲೆಲ್ಲಾ ವ್ಯವಹಾರದ ಸಮಯ ೯-೧ ಆಗಿತ್ತು. ಆಮೇಲೆ ೯-೨ ಅಂತ ಮಾಡಿದರು. ಈಗ ಖಾಸ್ಗೀ ಬ್ಯಾಂಕುಗಳ ವ್ಯಾಪಾರದ ಭರಾಟೆಯಲ್ಲಿ ಚೇಣುತಿಂದು ೧೦-೪ ಅಂತ ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳು ತಿದ್ದಿಕೊಂಡಿವೆ. ಅಲ್ಲಿ ಆರಂಭಕಾಲ ಹತ್ತುನಿಮಿಷ ಸರ್ವರ್ ಆರಂಭಿಸುವುದರಲ್ಲೇ ಕಳೆದುಹೋಗುತ್ತದೆ. ನಂತರದ ೫-೬ ನಿಮಿಷ ಗುಮಾಸ್ತಿಣಿಯರ ಗಿಣಿಸಂಭಾಷಣೆ-ಸೀರೆ, ಒಡವೆ ಇತ್ಯಾದಿಗಳ ಬಗ್ಗೆ. ಮಧ್ಯದಲ್ಲಿ ಗಿರಾಕಿ ತಕರಾರು ಮಾಡಿದರೆ ಇವತ್ತಿಗೂ ಬೈದುಕಳಿಸುವ ಬ್ಯಾಂಕ್ ಸಿಬ್ಬಂದಿ ಇದ್ದಾರೆ! ಗಿರಾಕಿಗಳಿದ್ದರೇ ತಮ್ಮ ನೌಕರಿ ಉಳಿಯುವುದು ಎಂಬ ಕನಿಷ್ಠ ಪ್ರಜ್ಞೆಯೂ ಅವರಿಗಿಲ್ಲ. ಹಾಗೂ ಹೀಗೂ ೧೦:೧೫ಕ್ಕೆ ಆರಂಭಗೊಳ್ಳುವ ವಹಿವಾಟು ಸಂಜೆ ೪ ಗಂಟೆಗೆ ಹತ್ತುನಿಮಿಷ ಮೊದಲೇ ಮುಗಿದುಹೋಗುತ್ತದೆ! ಸರಿಯಾಗಿ ನಾಲ್ಕುಗಂಟೆಗೆ ನೀವು ಹೋಗಿನೋಡಿ," ಕ್ಲೋಸ್ ಆಯ್ತು " ಎನ್ನುತ್ತಾರೆ-ದೂಸರಾ ಮಾತಿಲ್ಲ !

ಸಮಯಸ್ಫೂರ್ತಿಯ ಬಗ್ಗೆ ತಮಾಷೆಯ ಕಥೆಯೊಂದನ್ನು ಹೇಳುತ್ತೇನೆ ಕೇಳಿ :

ಕಳ್ಳರಿಬ್ಬರು ಸ್ನೇಹಿತರಾಗಿದ್ದರು. ಹೊಸದಾಗಿ ಆ ವೃತ್ತಿ ಆರಂಭಿಸಿದ್ದರು. ಇಬ್ಬರೂ ರಾತ್ರಿ ಒಂದೊಂದು ಮನೆ ಹೊಕ್ಕು ಕಳ್ಳತನ ಮಾಡಲು ಹವಣಿಸಿದರು. ಒಬ್ಬಾತ ಚೆನ್ನಾಗಿಯೇ ಕದ್ದ. ಇನ್ನೊಬ್ಬನಿಗೆ ಕಳುವುಮಾಡಲು ಆಗಲೇ ಇಲ್ಲ. ಮಾರನೇ ಬೆಳಿಗ್ಗೆ ಮತ್ತೆ ಭೇಟಿಯಾದಾಗ ಇಬ್ಬರೂ ಮಾತನಾಡಿಕೊಂಡರು. ಕದ್ದಮಾಲಿನೊಂದಿಗೆ ಖುಷಿಯಲ್ಲಿದ್ದಾತ ಹೇಳಿದ

" ರಾತ್ರಿ ನಾನು ಆ ಮನೆಗೆ ಹೋದ್ನಾ ಕಾಲುತಾಗಿ ಪಾತ್ರೆಗಳು ಸದ್ದುಮಾಡಿದವು. ಮನೆಯ ಯಜಮಾನ ಹೆಂಡತಿಯೊಂದಿಗೆ ಮಾತನಾಡಿ ’ಏನೋ ಸಪ್ಪಳ ಆಗ್ತಿದೆ ಕಣೇ ಕಳ್ರು ಬಂದಿರಬೇಕು’ ಅಂದಿದ್ದು ಕೇಳಿಸಿತು. ಮ್ಯಾಂವ್ ಮ್ಯಾಂವ್ ಎಂದು ಬೆಕ್ಕಿನದನಿಯಲ್ಲೇ ಕೂಗ್ದೆ, ಬೆಕ್ಕೇ ಇರಬೇಕು ಅನ್ಕೊಂಡು ಸುಮ್ನಾಗಿಬಿಟ್ರು ನಾನು ಕದ್ದುಕೊಂಡು ಬಂದ್ಬಿಟ್ಟೆ ."

ಆ ರಾತ್ರಿ ಮತ್ತೆ ಕಳ್ಳತನಕ್ಕಾಗಿ ಇಬ್ಬರೂ ಹೋದರು. ಎರಡನೇ ಕಳ್ಳ ಮನೆಯೊಂದನ್ನು ಹೊಕ್ಕು ಶೋಧಿಸುತ್ತಿರುವಾಗ ಪಾತ್ರೆಗಳು ತಾಗಿ ಸದ್ದಾಯಿತು. ಅಲ್ಲಿಯ ಯಜಮಾನ ಮಲಗಿದಲ್ಲೇ ಹೆಂಡತಿಯೊಂದಿಗೆ ಮಾತನಾಡಿ " ಯಾರೋ ಕಳ್ಳರು ಬಂದಹಾಗಿದೆ " ಎಂದ. ಅದನ್ನು ಕೇಳಿಸಿಕೊಂಡ ಈ ಕಳ್ಳ ಜೋರಾಗಿ " ಬೆಕ್ಕು ಅದು " ಅಂದುಬಿಟ್ಟ ! ಕಥೆಯ ಮುಂದಿನ ಹಂತವನ್ನು ನಿಮ್ಮ ಊಹೆಗೆ ಬಿಡುತ್ತೇನೆ.

ಸಮಯಸ್ಫೂರ್ತಿ ಎನ್ನುವುದು ಆ ಯಾ ಸಮಯಕ್ಕೆ ಅಲ್ಲಲ್ಲಿನ ಪರಿಸರಕ್ಕೆ ತಕ್ಕಂತೇ ವರ್ತಿಸಲು ಕಲಿಯುವ ಮಟ್ಟು. ಯಾರೋ ಹೇಳಿಕೊಟ್ಟು ಅದನ್ನು ಕಲಿಯುವುದು ಸಾಧ್ಯವಿಲ್ಲದ ಮಾತು. ಮಳೆಬಂದಾಗ ಕೊಡೆ ಬಿಡಿಸಿಕೊಳ್ಳಬೇಕೆಂದು ಹೇಗೆ ನಮಗನಿಸುತ್ತದೋ ಚಳಿಗೆ ದಪ್ಪ ಬಟ್ಟೆ /ಉಣ್ಣೆಬಟ್ಟೆಯನ್ನು ಹೇಗೆ ಧರಿಸಬೇಕೆನಿಸುತ್ತದೋ ಹಾಗೆಯೇ ಸಮಯಾನುವರ್ತಿಯಾಗಿ ಆ ಕ್ಷಣದಲ್ಲೇ ಉಪಾಯಮಾಡಿ ನಮಗೆ ಒದಗಬಹುದಾದ ಆಪತ್ತುಗಳಿಂದ ಪಾರಾಗುವುದು ಅಥವಾ ನಮ್ಮಿಂದ ಇತರರಿಗೆ ಸಹಾಯವನ್ನು ಒದಗಿಸುವುದು ಇದರ ವಿಶೇಷ.

ಯಾರೋ ಬಾವಿಗೆ ಬಿದ್ದಿದ್ದನ್ನು ಕಂಡರೆ
" ಬಾವಿಗೆ ಬಿದ್ದಿದ್ದಾರೆ ಕಾಪಾಡಿ ಕಾಪಾಡಿ " ಎನ್ನುವುದು ಒಂದು ರೀತಿಯ ಸಮಯಸ್ಫೂರ್ತಿಯಾದರೆ ಬಾವಿಗೆ ಬಿದ್ದವರನ್ನು ಬದುಕಿಸಲು ನೇರವಾಗಿ ತಾನೂ ಪ್ರಯತ್ನಿಸುವುದು ಇನ್ನೊಂದು ರೀತಿಯದು; ನೇರವಾಗಿ ಸಹಾಯಮಾಡುವವನಿಗೆ ಈಜೂ ಬರಬೇಕು, ನೀರಲ್ಲಿ ಬಿದ್ದವರನ್ನು ಮೇಲೆತ್ತುವ ಎದೆಗಾರಿಕೆಯೂ ಬೇಕು. ಇವೆರಡೂ ಇರದಿದ್ದರೆ ಕೊನೇಪಕ್ಷ ಆತ " ಕಾಪಾಡಿ ಕಾಪಾಡಿ " ಅಂತ ಕೂಗಿ ದಾರಿಹೋಕರನ್ನೋ ಸುತ್ತಲ ಪರಿಸರದವರನ್ನೋ ಕರೆದು ಮುಳುಗುವವರನ್ನು ಬದುಕಿಸಬಹುದು. ಬಾವಿಗೆ ಬಿದ್ದವರನ್ನು ಕಂಡೂ ಕಾಣದಂತೇ ಹೋಗುವ ಕೆಲವು ಜನ ಇದ್ದಾರೆ. " ನಮಗ್ಯಾಕೆ ಬೇಕು ಆ ಉಸಾಬರಿ " ಎಂದುಕೊಳ್ಳುವ ಅತೀ ಸ್ವಾರ್ಥಿಗಳು! ಅವರಲ್ಲಿ ಯಾವಪ್ರಜ್ಞೆಯೂ ಸ್ಫೂರ್ತಿಯೂ ಕೆಲಸಮಾಡುವುದಿಲ್ಲ.

’ಆನಂದಕಂದ’ನೆಂಬ ಹೆಸರಿನಲ್ಲಿ ಬೆಟಗೇರಿ ಕೃಷ್ಣಶರ್ಮರು ’ಕಳ್ಳರ ಗುರು’ ಎಂಬ ಕಥೆಯೊಂದನ್ನು ಬರೆದಿದ್ದಾರೆ. ಮಧ್ಯರಾತ್ರಿಯಲ್ಲಿ ಬಾಗಿಲುಬಡಿದ ಸದ್ದುಕೇಳಿ ವೈದ್ಯರು ಬಾಗಿಲು ತೆರೆದಾಗ ಕಂಡಿದ್ದು ಕಳ್ಳರಪಡೆ. ಮುಂದಿದ್ದ ಕಳ್ಳರಗುರುವಿನ ಕೈಲೊಂದು ಉರಿಯುವ ಹಿಲಾಲು.

" ಸ್ವಾಮೀ ನಮ್ಮ ಮಗಳಿಗೆ ತುಂಬಾನೇ ಹುಷಾರಿಲ್ಲ, ತಾವು ಈಗಲೇ ನಮ್ಮಲ್ಲಿಗೆ ಬಂದು ಚಿಕಿತ್ಸೆನೀಡಿ ವಾಸಿಮಾಡುವಂಥವರಾಗಿ "

ವೈದ್ಯರಿಗೆ ಒಳಗೊಳಗೇ ಭಯ. ಕರೆದವರು ಕಳ್ಳರು ಬೇರೆ. ಚಿಕಿತ್ಸೆನೀಡಿದರೆ ನಾಳೆ ಸಮಾಜ ’ಕಳ್ಳರಿಗೆ ಉಪಚರಿಸುವವ’ ಎಂದು ತನ್ನನ್ನು ಧಿಕ್ಕರಿಸಬಹುದು ಎಂಬ ಆತಂಕ. ಆದರೂ ಮಾನವೀಯ ಮೌಲ್ಯಕ್ಕೆ ಬೆಲೆಕೊಟ್ಟು ಒಂದು ಜೀವದ ಉಳಿವಿಗಾಗಿ ವೈದ್ಯರು ಕಳ್ಳರ ಗುರುವಿಗೆ ಬರುವುದಾಗಿ ತಿಳಿಸಿ ಅವರ ಹಿಂದೆಯೇ ತನ್ನ ಚಿಕಿತ್ಸಾ ಸಾಮಗ್ರಿಗಳೊಂದಿಗೆ ತೆರಳಿ ಚಿಕಿತ್ಸೆನೀಡಿ ಮಗುವನ್ನು ಬದುಕಿಸುತ್ತಾರೆ; ಕಳ್ಳರಗುರುವಿಗೇ ಒಳ್ಳೆಯ ಗುರುವಾಗುತ್ತಾರೆ. ಮಾರನೇದಿನ ಗದ್ಗದಿತ ಕಂಠದಲ್ಲಿ ಕಳ್ಳರಗುರು ತಾನು ನಿಮಗೇನು ಕಾಣಿಕೆ ಕೊಡಲಿ ಎಂದಾಗ ಕಳ್ಳತನಬಿಟ್ಟು ಸನ್ಮಾರ್ಗದಲ್ಲಿ ಯಾವುದಾದರೂ ವೃತ್ತಿನಿರತನಾಗಿ ಬದುಕಲು ಪ್ರೇರೇಪಿಸುತ್ತಾರೆ. ಸಮಯಪ್ರಜ್ಞೆ ಮತ್ತು ಸಮಯಸ್ಫೂರ್ತಿ ಎರಡಕ್ಕೂ ಈ ಕಥೆ ಉತ್ತಮ ಉದಾಹರಣೆಯಾಗಿದೆ. ಉತ್ತಮ ವ್ಯಕ್ತಿತ್ವಕ್ಕೆ ಸಮಯಪ್ರಜ್ಞೆ ಮತ್ತು ಸಮಯಸ್ಫೂರ್ತಿ ಭಾಗಶಃ ಕಾರಣವಾಗುತ್ತದೆ.

Sunday, August 7, 2011

ಇರುವುದೊಂದೇ ಭೂಮಿ ಉರಿವುದೊಂದೇ ದೀಪ


ಇರುವುದೊಂದೇ ಭೂಮಿ ಉರಿವುದೊಂದೇ ದೀಪ

ಟಪಟಪಟಪ ಹನಿಗಳನ್ನು ಮುಂಗಾರಿನ ಆರಿದ್ರಾ ಮಘಾ ಹುಬ್ಬಾ ನಕ್ಷತ್ರದ ಮಳೆಗಳು ಹನಿಸುತ್ತಿರುವಾಗಲೇ ಅಜ್ಜಿ ಕಂಬಳಿ ಕೊಪ್ಪೆ ಹಾಕಿಕೊಂಡು ಮನೆಯ ಎಡಪಾರ್ಶ್ವದಲ್ಲಿ ಎತ್ತರದಲ್ಲಿ ಇದ್ದ ಚಿಕ್ಕ ಹಿತ್ತಿಲ ಕಡೆಗೆ ಸಣ್ಣ ಕತ್ತಿ ಹಿಡಿದು ಹೋಗುತ್ತಿದ್ದಳು. ಅಜ್ಜಿ ಹೊರಗಡೆ ಹೊರಟಳೆಂದರೆ ಮಕ್ಕಳ ಮೆರವಣಿಗೆ ಜೊತೆಗೆ ಹೊರಟಿತೆಂದೇ ಅರ್ಥ. ಯಾರೇ ತಪ್ಪಿಸಿಕೊಂಡರೂ ನಾನು ಮಾತ್ರ ಅಜ್ಜಿಯ ಜೊತೆ ಹಿತ್ತಿಲಕಡೆ ಅಡಕೆ ತೋಟದ ಕಡೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಜಾರುವ ಏರಿಯ ಕಲ್ಲು [ಲ್ಯಾಟರೈಟ್]ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಹೋಗುವಾಗ ಅಜ್ಜಿಯ ಕೈಲಿ ಹಲವು ಸಾಮಾನುಗಳಿರುವುದರಿಂದ ಕೆಲವೊಮ್ಮೆ ನಮ್ಮ ಕೈಗಳನ್ನು ಹಿಡಿದುಕೊಂಡು ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಜಾರೆಯಲ್ಲಿ ಮೆಟ್ಟಿಲು ಜಾರಿ ಕುಂಡೆಗೆ ಹೊಡೆತ ಬಿದ್ದು ಕಾಲಿಗೆ ಗೀರಿನ ಗಾಯವಾಗಿ ಆ ನೋವಲ್ಲೂ ಅಜ್ಜಿಯ ಬೆನ್ನು ಹತ್ತದೇ ಬಿಡುತ್ತಿರಲಿಲ್ಲ. " ಬ್ಯಾಡ ಮಗ್ನೇ ಮಳೆ ಬೇರೆ ಬರ್ತಾ ಇದೆ ಜಾರ್ಕೆ ಬೇರೆ ಮನೆಗೆ ಹೋಗು ನಾನು ಸಣ್ಣ ಕೆಲ್ಸ ಮುಗಿಸಿ ಬೇಗ ಬತ್ತೆ ಅಕ್ಕಾ ? " ಎಂಬ ಹೇಳಿಕೆಗಳನ್ನೆಲ್ಲಾ ಸಾರಾಸಗಾಟಾಗಿ ತಿರಸ್ಕರಿಸಿದ ’ತೇನಸಿಂಗರು’ ನಾವು !

ಹಿತ್ತಿಲಿಗೆ ಹೋದ ಅಜ್ಜಿ ಮಳೆಗಾಲದ ಆರಂಭದಲ್ಲಿ ಮಣ್ಣು ಪೇರಿಸಿ ಅದರಲ್ಲಿ ಹಾಕಿದ್ದ ಮೊಗೆ[ಮಂಗಳೂರು ಸೌತೆ], ಸೌತೆ, ಹೀರೆ ಇತ್ಯಾದಿ ಹಿತ್ಲಕಾಯಿಗಳ ಬಳ್ಳಿ ಅದಾಗಲೇ ಮೊಳಕೆಯೊಡೆದು ಗುಂಗುರು ಗುಂಗುರು ಪಾದಗಳನ್ನೆಲ್ಲಾ ನೆಲಕ್ಕೆ ಊರಿ ಹಬ್ಬಿದ್ದನ್ನು ನೋಡಿ ಸಂತಸಪಡುತ್ತಿದ್ದಳು. ಹಸಿರಾದ ಬಳ್ಳಿಗಳು ಠುಂ ಠುಂ ಮೈದುಂಬಿ ಊರಗಲ ಅಡ್ಡಾದಿಡ್ಡಿ ಹರದಾಡಿ ಬೆಳೆಯತೊಡಗುತ್ತಿದ್ದವು. ಅವುಗಳ ಮಾರ್ಗವನ್ನು ನಿರ್ದೇಶಿಸುವ ಸಲುವಾಗಿ ಅಜ್ಜಿ ಅಲ್ಲಿಗೆ ಆಗ ಹೋಗುತ್ತಿದ್ದಳು. ಬೆಟ್ಟದಲ್ಲಿ ಸಿಗುವ ಹಸಿರು ಗಿಡಗಂಟಿಗಳ ಪಕ್ಕೆಗಳ ಗುಜರನ್ನು ಯಾರೋ ಆಳುಗಳು ಕೊಟ್ಟಿಗೆಗೆ ಸೊಪ್ಪು ತರುವಾಗ ಕಾಡೀ ಕಾಡೀ ತರಿಸಿಕೊಂಡು ಅವು ಕೈಗೆ ಸಿಕ್ಕಿದ ಮಾರನೇ ದಿನ ಈ ಕೆಲಸ ನಡೆಯುತ್ತಿತ್ತು. ಹರೆಯುವ ಬಳ್ಳಿಗಳ ಇಕ್ಕೆಲಗಳಲ್ಲಿ ಎತ್ತರದ ಅಡಕೆ ದಬ್ಬೆಗಳನ್ನು ಹೂತು ಮೇಲೆ ಅಡ್ಡಡ್ಡ ಮತ್ತೊಂದು ಅಡಕೆ ದಬ್ಬೆ ಕಟ್ಟಿ ಮಧ್ಯೆ ಸಾಲಾಗಿ ಗುಜರುಗಳನ್ನು ಆನಿಸಿ ಕಟ್ಟಿದರೆ ಬೆಳೆಯುವ ಬಳ್ಳಿಗಳು ಗುಜರಿನ ಆಸರೆಯನ್ನು ಪಡೆದು ಮೇಲಕ್ಕೆ ಹಬ್ಬುತ್ತಿದ್ದವು.

ಹಬ್ಬಿದ ಬಳ್ಳಿಗಳಿಗೆ ತಿಂಗಳಲ್ಲೇ ಬಿಳಿ/ಹಳದಿ ಹೂವುಗಳು ಆಮೇಲೆ ನಿಧಾನಕ್ಕೆ ಹೂವು ಉದುರಿಬೀಳುವ ಸಮಯದಲ್ಲೇ ಅದರ ಹಿಂಭಾಗಕ್ಕೆ ಅಂಟಿಕೊಂಡೇ ಬರುವ ಚಿಕ್ಕ ಚಿಕ್ಕ ಪೀಚುಗಾಯಿಗಳು. ಅಲ್ಲಲ್ಲಿ ಹಾಗೆ ಕಾಣುವ ಪೀಚುಗಾಯಿಗಳನ್ನು ನೋಡಿದಾಗ ಅಜ್ಜಿಯ ಕಣ್ಣುಗಳಲ್ಲಿ ಮುಖದಲ್ಲಿ ಅರಳುವ ಸಂತಸದ ಆ ಭಾವ ಇವತ್ತಿಗೂ ಮರೆಯಲಾಗದ್ದು, ಚಿತ್ರದಲ್ಲೋ ಕವನದಲ್ಲೋ ಕಟ್ಟಿಡಲಾಗದ್ದು. ಬೆಟ್ಟದಲ್ಲಿ ಆಡುವ ಕೋಡಗಳು[ಮಸಿಮಂಗಗಳು] ಹಾರುತ್ತಾ ಜೀಕುತ್ತಾ ಊರಕಡೆ ಬರುವ ವಾಡಿಕೆಯಂತೂ ಇದ್ದೇ ಇತ್ತು. ತೋಟದ ಬದುವಿನಲ್ಲಿ ಬೆಳೆದ ಬಾಳೆಯ ಗೊನೆಗಳನ್ನೂ ಹಿತ್ತಲಲ್ಲಿ ಇರುವ ಬೇರಹಲಸು, ಪಪ್ಪಾಯಿ ಕಾಯಿಗಳನ್ನೂ ಜೊತೆಗೆ ಸಿಗಬಹುದಾದ ಇನ್ನಿತರ ಹಣ್ಣು-ಕಾಯಿಗಳನ್ನು ತಿನ್ನಲು ವಕ್ಕರಿಸುವ ಕೋಡಗಳು ಬಂದರೆ ಹಾಗೆಲ್ಲಾ ಮುಗಿಸದೇ ಬಿಡುವ ಪ್ರಾಣಿಗಳೇ ಅಲ್ಲ! ಮಂಗ ಹೊಕ್ಕ ಬಾಳೆತೋಟ ಎಂಬ ಗಾದೆಯೇ ಇದೆಯಲ್ಲಾ ? ಹಾಗೆ ಹಾರಿಬರುವ ಕೋಡಗಳು ಹಿತ್ತಲ ಪೀಚುಗಾಯಿಗಳನ್ನು ಎತ್ತಿಕೊಂಡು ಬಳ್ಳಿಗಳ ಬೆಳವಣಿಗೆಗೆ ಹಾಕಿದ ಚಪ್ಪರ ಮುರಿದು ಅನಾಚಾರವೆಸಗಿ ಹೋಗುವ ದಿನಗಳೂ ಇದ್ದವು.

ಕೋಡಗಳು ಬಂದ ಸುದ್ದಿ ಯಾರಾದರೊಬ್ಬರ ಕಣ್ಣಿಗೆ ಕಂಡು ಹಬ್ಬುತ್ತಿದ್ದಂತೇ ಜಾಗಟೆ ಬಡಿದು ಬರೇ ಪುಸ್ಸೆನ್ನುವ ಥಂಡಿಹಿಡಿದ ಲಕ್ಷ್ಮೀಪಟಾಕಿ ಹಚ್ಚಿ ವಿಚಿತ್ರವಾಗಿ ನಾವೆಲ್ಲಾ ಹುಯ್ಕೋ ಹುಯ್ಕೋ ಹಾಕಿ ಗಂಟಲು ಬಿದ್ದುಹೋಗುವ ವರೆಗೂ ಕೂಗಿ ಊರಿಗೆ ಊರೇ ಪುಕ್ಕಟೆ ಜಾತ್ರೆ ಅನುಭವಿಸುವ ರೀತಿ ಆಗಿಬಿಡುತ್ತಿತ್ತು. ಕೆಲವೊಮ್ಮೆ " ಅಮ್ಮಾ ಮಂಗ ಬಂದದ್ರೋ " ಎಂದು ಎಚ್ಚರಿಸಿದ ಆಳುಗಳೂ ಕೋಡಗಳನ್ನು ಓಡಿಸಲಿಕ್ಕೆ ಸಹಾಯ ಮಾಡಬೇಕಾದ ಪರಿಸ್ಥಿತಿ ಇತ್ತು. ಒಂದು ಗುಂಪಿನಲ್ಲಿ ಕನಿಷ್ಠ ೧೮-೨೦ ಕೋಡಗಳು ಇರುತ್ತಿದ್ದವು. ಅಂತೂ ಹೆದರಿಸಿದ ಮೇಲೆ ಆ ಗಡಿಬಿಡಿಯಲ್ಲೂ ಪೀಚುಗಾಯಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಹಾರಿಹೋಗಿ ಮನೆಗಳ ಹಂಚಿನಮೇಲೆ ಕೂತುಬಿಡುತ್ತಿದ್ದವು.

ಹಾರುವಾಗ ಹಂಚು ಒಡೆದು ಮನೆಯೊಳಗೆಲ್ಲಾ ಮಳೆ ನೀರು ಸುರಿಯುವುದೂ ಇತ್ತು. ಹಾಗೊಮ್ಮೆ ಹಂಚು ಒಡೆದರೆ ದುರಸ್ತಿ ಅಥವಾ ಬದಲಾಯಿಸುವ ಕೆಲಸ ನಡೆಸುವುದೇ ಕಷ್ಟವಾಗುತ್ತಿತ್ತು. ಕೋಡಗಳ ಉಪದ್ವ್ಯಾಪ ಜಾಸ್ತಿಯಾದಾಗ ಮನೆಯ ಬಾಕಿಜನ ಅಜ್ಜಿಯ ಹಿತ್ತಿಲನ್ನೇ ಗುರಿಯಾಗಿಸಿ ಅಣಕಿಸುತ್ತಿದ್ದರು. ಒತ್ತಾಸೆಯಿಂದ ಬೆಳೆಸಿದ ಹಿತ್ತಿಲಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋದಾಗ ಅಜ್ಜಿಯ ಮುಖದಲ್ಲಿನ ಆ ನೋವಿನ ಕ್ಷಣಗಳೂ ಗೋಚರಿಸುತ್ತಿದ್ದವು. ಅಜ್ಜಿಯ ಅಂದಿನ ನೋವಿನಲ್ಲಿ ನಾವೂ ಸಹಭಾಗಿಗಳೇ ಬಿಡಿ; ಅದು ಅವರಿಗೂ ಗೊತ್ತು. " ಥೂ ದರಿದ್ರ ಕೋಡ ಎಲ್ಲಿತ್ತೋ ಸಾಯಕ್ಕೆ ಬಂದೆಲ್ಲಾ ಹಾಳ್ಮಾಡ್ಬುಡ್ತು " ಎನ್ನುತ್ತಾ ಬಿದ್ದ ಚಿಕ್ಕಮಕ್ಕಳೆದುರಲ್ಲಿ ನೆಲವನ್ನು ಗುದ್ದಿ " ನೋಡು ಈ ನೆಲಕ್ಕೆ ಹೊಡದೆ ಸುಮ್ನಿರು " ಎಂದು ಪುಸಲಾಯಿಸಿದ ರೀತಿ ಅಜ್ಜಿಗೆ ನಮ್ಮದೇ ಸಾಂತ್ವನ ಕೊಡುವ ವೈವಾಟಿತ್ತು!


ಎಳೆಯ ಸೌತೇ ಕಾಯಿಗಳು ತಿನ್ನಲು ಬಲುರುಚಿ ಅಲ್ವೇ ? ನಮ್ಮಲ್ಲಿ ಎಳೆಯ ಸೌತೇಕಾಯಿಗಳನ್ನು ಕೊಯ್ಯಲು ಬಿಡುತ್ತಿರಲಿಲ್ಲ. ಕೃಷ್ಣಾಷ್ಟಮಿಯ ದಿನ ಮೊದಲನೇ ಸೌತೇಕಾಯಿ ಕೋಸಂಬರಿ ಕೃಷ್ಣಯ್ಯನಿಗೆ ಕೊಟ್ಟಾದಮೇಲೇ ನಾವೆಲ್ಲಾ ಸೌತೆಕಾಯಿ ತಿನ್ನುವ ಅಲಿಖಿತ ಕಾಯ್ದೆಯೂ ಜಾರಿಯಲ್ಲಿತ್ತು. ಎಷ್ಟೆಂದರೂ ಉಂಡೆ ಕೊಡಿಸುವ ಕೃಷ್ಣಯ್ಯ ನಮಗೂ ಪ್ರೀತಿಯೇ ಅಂದ್ಕಳಿ. ಆದರೂ ಚಪ್ಪರದಲ್ಲಿ ಅಲ್ಲಲ್ಲಿ ಕಣ್ಣುಮಿಟುಕಿಸಿ ಜೋತಾಡುವ ಎಳೆಯ ಸೌತೇಮಿಡಿಗಳು ನಮ್ಮನ್ನು ಕೃಷ್ಣಾಷ್ಟಮಿಗೂ ಮೊದಲೇ ತಮ್ಮತ್ತ ಕರೆದುಬಿಡುತ್ತಿದ್ದವು! ಕೃಷ್ಣಯ್ಯ ಬೆಣ್ಣೆಕದ್ದ ಕಥೆಯನ್ನೆಲ್ಲಾ ಕೇಳುತ್ತಿದ್ದ ನಮಗೆ ಸೌತೇ ಮಿಡಿಗಳಲ್ಲಿ ಕೆಲವನ್ನು ಹಾರಿಸಿಬಿಟ್ಟರೆ ಎಂಬ ಆಲೋಚನೆ ಬಂದಿದ್ದೇ ತಡ ಅದನ್ನು ಪ್ರಾಯೋಗಿಕವಾಗಿ ಮಾಡಿ ಆಮೇಲೆ ಅದನ್ನೇ ಪಕ್ಕಾಮಾಡಿ ಲೆಕ್ಕತಪ್ಪಿಸಿ ತಿನ್ನುವುದೂ ಆಗೋಯ್ತು. ಹಾವುರಾಣಿ, ಹಸಿರು ಬಣ್ಣದ ಕಣ್ಕುಟ್ಟುವ ಹಾವು ಇವೆಲ್ಲಾ ಚಪ್ಪರದ ಬಳಗದವರು ಎನ್ನಬೇಕೇನೋ. ಅವುಗಳಮೇಲೆ ತಪ್ಪು ಹೊರಿಸಿ ಎಲ್ಲೋ ಅವುಗಳೇ ಎಳೆಯ ಮಿಡಿಗಳನ್ನು ಕಚ್ಚಿ ಉದುರಿಸಿದವೇನೋ ಎಂಬಂತೇ ಅಜ್ಜಿಯೆದುರು ಸಂಭಾವಿತ್ಗೆ ಮೆರೆದ ಜನ ನಾವು...ಎಷ್ಟೆಂದರೂ ಮಕ್ಕಳಲ್ಲವೇ? ಹಾಗಂತ ಮಿಡಿಗಳನ್ನು ಲಪಟಾಯಿಸುವಾಗ [ ಬೇಡ ಬೇಡ 'ಲಪಟಾಯಿಸು' ಶಬ್ದ ಯಾಕೋ ಹೆಚ್ಚಿನ ತೂಕದ್ದು ಎನಿಸುತ್ತದೆ ಸಾಮಾನ್ಯದ್ದನ್ನೇ ಬಳಸೋಣ], ಹಾರಿಸುವಾಗ ಒಂದೆರಡು ಬಾರಿ ಅನುಮಾನಾಸ್ಪದವಾಗಿ ಬಂದ ಅಜ್ಜಿಕೈಗೆ ಸಿಕ್ಕಾಕಿಕೊಂಡು ಮುಖ ಬಿಳಿಚಿಕೊಂಡ ವ್ಯಕ್ತಿಗಳೂ ನಾವೇ ಬಿಡಿ! ಆಮೇಲೆ ನಮಗೆ ಮಿಡಿಸೌತೆ ಪ್ರೀತಿಯೆಂಬ ಕಾರಣಕ್ಕೆ ಆಗಾಗ ಕೆಲವು ಮಿಡಿಗಳು ಅಜ್ಜಿಯ ಕೃಪೆಯಿಂದ ದೊರೆಯುತ್ತಿದ್ದವು.

ಚಪ್ಪರದಮೇಲೆ ಕಣ್ಣುಕುಟ್ಟುವ ಹಸಿರು ಹಾವು ಇರುತ್ತಿತ್ತಲ್ಲಾ ಅದು ತೆಳ್ಳತೆಳ್ಳಗೆ ಇರುವ ಸೈಜ್ ಜೀರೋ ಹಾವು! ಮನುಷ್ಯರ ಕಣ್ಣಿಗೇ ಗುರಿಯಿಟ್ಟು ಹಾರಿಬಿಡುತ್ತದಂತೆ ಅದು, ಅಪ್ಪಾ ನಮೆಗೆಲ್ಲಾ ಅದನ್ನು ಕಂಡರೇ ಒಂಥರಾ ಹೆದರಿಕೆ, ಆದರೂ ಸಣ್ಣಗಿರುವುದರಿಂದಲೋ ಏನೋ ತೀರಾ ಜಾಸ್ತಿ ಭಯವೂ ಆಗುತ್ತಿರಲಿಲ್ಲ. ಅಜ್ಜಿಯ ಕಥೆಗಳಲ್ಲಿ ಹಾವು ಚೇಳು ಉಡಮೊದಲಾದ ಹಲವಾರು ಜೀವ ವೈವಿಧ್ಯಗಳು, ಸರೀಸೃಪಗಳು, ಸಸ್ತನಿಗಳ ವರ್ಣನೆಯಿರುತ್ತಿತ್ತು. ಇಂತಿಂಥಾ ಪ್ರಾಣಿ ಇಂತಿಂಥಲ್ಲಿ ವಾಸವಿರುತ್ತದೆ, ಅದು ಇಂತಿಂಥಾ ಆಹಾರ ತಿನ್ನುತ್ತದೆ ಎಂಬೆಲ್ಲಾ ಮಾಹಿತಿ ನಮಗೆ ಸಿಕ್ಕಿಬಿಡುತ್ತಿತ್ತು. ಮೊದಲಾಗಿ ಶತಪದಿ ಸಹಸ್ರಪದಿ ಹೊರಗಡೆ ಜಗುಲಿಗೆ ದೌಡಾಯಿಸಿದಾಗ ಹೆದರಿದ್ದ ನಾವು ಆಮೇಲಾಮೇಲೆ ಸಣ್ಣ ಸಾಮಾನ್ಯ ಪ್ರಾಣಿಗಳಿಗೆಲ್ಲಾ ಕ್ಯಾರೇ ಮಾಡ್ತಿರಲಿಲ್ಲ ಬಿಡಿ. ಜಗುಲಿ ಕಟ್ಟೆಗೆ ಹರೆದು ಬರುವ ಚೋರಟೆ[ಸಹಸ್ರಪದಿ] ಹಿಸ್ಗ[ಬಸವನ ಹುಳು] ಇವನ್ನೆಲ್ಲಾ ಕಾಲಲ್ಲೇ ಸರಿಸಿ ಬಿಸಾಕಿದ ಅಸಾಮಾನ್ಯ ಧೈರ್ಯಶಾಲಿಗಳು ನಾವು, ಏನ್ತಿಳ್ಕೊಂಡಿದೀರಿ !

ಹೊಯ್ಸಳರಿಗಿಂತಲೂ ನಮ್ಮ ತೂಕ ತುಸು ಜಾಸ್ತಿಯೇ ಎಂದುಕೊಳ್ಳುತ್ತಿರುವಾಗಲೇ ಹೊಸ ಸಂಗತಿಯೊಂದು ನಮ್ಮ ಉಡದಾರವನ್ನೇ ಸಡಿಲುಮಾಡಿಬಿಟ್ಟಿತ್ತು ! ಮೂರ್ತಜ್ಜನ ಮನೆ ಅನಂತ ಅತ್ಯಂತ ಸ್ಫುರದ್ರೂಪಿ ಹುಡುಗ. ಓರಗೆಯಲ್ಲಿ ನಮಗಿಂತ ತುಸು ಹಿರಿಯ. ಶಾಲೆಯಲ್ಲಿ ನಮಗೂ ಅವನಿಗೂ ನಾಕು ಕ್ಲಾಸುಗಳ ಅಂತರ; ನಾವೆಲ್ಲಾ ಒಂದನೇ ತರಗತಿ ಇದ್ದಾಗ ಅತ ೫ನೇ ತರಗತಿ ಓದುತ್ತಿದ್ದ. ಹೀಗೇ ಆಡುತ್ತಾ ಇದ್ದವ ಬಚ್ಚಲುಮನೆಯಲ್ಲಿ [ಹಳ್ಳಿಯ ಮನೆಗಳಲ್ಲಿ ಬಚ್ಚಲು ಮನೆ ಮನೆಯ ಹೊರಗಡೆ ಪ್ರತ್ಯೇಕ ಜಾಗದಲ್ಲಿರುತ್ತಿತ್ತು. ಅಲ್ಲಿ ರಾತ್ರಿ ವಿದ್ಯುದ್ದೀಪವಾಗಲೀ ಮತ್ಯಾವುದೇ ದೊಡ್ಡ ಬೆಳಕಿನ ವ್ಯವಸ್ಥೆಯಾಗಲೀ ಇರುತ್ತಿರಲಿಲ್ಲ. ಹಗಲು ಹೊತ್ತಿನಲ್ಲೇ ಮೋಡ ಕಪ್ಪುಗಟ್ಟಿದಾಗ ಒಳಗಡೆ ಕತ್ತಲೆ ಇರುತ್ತಿತ್ತು.] ಗೋಡೆಯಲ್ಲಿ ಬಿಲವೊಂದಿತ್ತಂತೆ. ಅದರಲ್ಲಿ ಕಡ್ಡಿ ಹಾಕಿ ಆಡುತ್ತಿರುವಾಗ ಏನೋ ಕಚ್ಚಿದಂತಾಗಿ ಕೂಗಿಕೊಂಡನಂತೆ. ಪಾಲಕರು ಬಂದು ನೋಡುತ್ತಾರೆ ಹಾವುಕಡಿದ ಗುರುತು ಆತನ ಬೆರಳಿನ ಮೇಲೆ ಮೂಡಿತ್ತು.

ಮರುಕ್ಷಣ ಕಂಗಾಲಾದ ಪಾಲಕರು ಮಗನನ್ನು ದೂರದ ಆಸ್ಪತ್ರೆ [ಆಗಷ್ಟೇ ತಾಲೂಕು ಪ್ರದೇಶದಲ್ಲಿ ಕ್ಲಿನಿಕ್ಕುಗಳು ಆರಂಭವಾಗಿದ್ದವು]ಎತ್ತಿಕೊಂಡು ಹೋದರು. ಬಾಡಿಗೆ ವಾಹನ ತರಿಸಿ ಅದರಲ್ಲಿ ಹೋಗುವ ವರೆಗೆ ಅನಂತನ ಮೈ ಕಪ್ಪುಗಟ್ಟುತ್ತಾ ಸಾಗಿತ್ತು. ಆಸ್ಪತ್ರೆಗೆ ಹೋದ ಪಾಲಕರು ವೈದ್ಯರನ್ನು ಕಂಡು ಏನೇ ಪ್ರಯತ್ನಮಾಡಿದರೂ ನೊರೆಯುಗುಳಿದ ಅನಂತ ಅನಂತದಲ್ಲಿ ಲೀನವಾಗೇಬಿಟ್ಟ. ಸತ್ತ ಅನಂತನ ಕಳೇಬರ ಹೊತ್ತು ಊರಿಗೆ ಮರಳಿದ ಪಾಲಕರ ರೋದನ ಮತ್ತು ವೇದನೆ ನಮಗೆಲ್ಲಾ ಆ ಕಾಲಕ್ಕೆ ಅಷ್ಟೆಲ್ಲಾ ಅರ್ಥವಾಗದ್ದು. ರೋಷದಿಂದ ಊರಜನ ಬಚ್ಚಲುಮನೆಯ ಗೋಡೆಯನ್ನು ಅಗೆದು ಅಡಗಿದ್ದ ಕೃಷ್ಣಸರ್ಪ[ಕಾಳಿಂಗ]ವನ್ನು ಹೊರಗೆಳೆದು ಕೊಂದೇಬಿಟ್ಟರಂತೆ. ಊರಲ್ಲಿ ಆಗೆಲ್ಲ ಒಬ್ಬರಿಗೊಬ್ಬರು ತುಂಬಾ ಆಪ್ತರಾಗಿದ್ದರು; ಈಗಿನಂತೇ ಬೀಜೇಪಿ, ಜೇಡಿಎಸ್ಸು, ಕಾಂಗ್ರೆಸ್ಸು ವಗೈರೆ ಇರಲಿಲ್ಲ. ನೋವು-ನಲಿವುಗಳಲ್ಲಿ ಪರಸ್ಪರ ಭಾಗಿಗಳು, ಊರಮಂದಿ ಪರಸ್ಪರ ಕಷ್ಟಸುಖಕ್ಕೆ ಆಗಿಬರುತ್ತಿದ್ದರು. ಊರಜನೆರಲ್ಲಾ ಸೇರಿ ಸತ್ತ ಅನಂತನಿಗೆ ಅಂತಿಮ ಗೌರವವನ್ನೂ ಸಮರ್ಪಿಸಿ ಆತನ ಕಳೇಬರವನ್ನು ನೆಲದಲ್ಲಿ ಹೂಳಿದರು ಎಂಬುದು ಮಕ್ಕಳಾದ ನಮಗೆ ತಿಳಿದ ಸಂಗತಿ.

ಈ ಲೋಕದಲ್ಲಿ ಅರಳಬೇಕಾಗಿದ್ದ ಸುಂದರ ಮಗುವನ್ನು ಹಾವೊಂದು ಬಲಿಪಡೆದಿತ್ತು. ಅಲ್ಲಿ ಮಗುವಿನ ತಪ್ಪೂ ಇರಲಿಲ್ಲ, ಹಾವಿನ ತಪ್ಪೂ ಇರಲಿಲ್ಲ. ಪಾಲಕರ ನಿರ್ಲಕ್ಷ್ಯ ಎನ್ನಲೂ ಬರುವುದಿಲ್ಲ; ಅದು ವಿಧಿಯಿಚ್ಛೆ ಅಷ್ಟೇ. ಹಾವು ತನ್ನನ್ನು ರಕ್ಷಿಸಿಕೊಳ್ಳಲು ಬಿಲದಲ್ಲಿ ಹುದುಗಿತ್ತು, ಮಗು ಆಟವಡುತ್ತಾ ಸಹಜವಾಗಿ ಬಿಲಕ್ಕೆ ಕೋಲು ತೂರಿತ್ತು, ಮಗು ಆಡಿಕೊಂಡಿದೆ ಎಂದು ಸುಮ್ಮನಿದ್ದ ಪಾಲಕರು ತಂತಮ್ಮ ನಿತ್ಯದ ಕೆಲಸದಲ್ಲಿ ತೊಡಗಿಕೊಂಡಿದ್ದರು--ನೀವೇ ಹೇಳಿ ಇಲ್ಲಿ ಯಾರದು ತಪ್ಪು? ಅಂತೂ ನಮ್ಮೆಲ್ಲರ ಪ್ರೀತಿಯ ಗೆಳೆಯ ಅನಂತ ಕಾಣದ ಲೋಕಕ್ಕೆ ಮರಳಿಯೇ ಬಿಟ್ಟಿದ್ದ. ನಿನ್ನೆಯವರೆಗೆ ಕಂಡಿದ್ದ, ಒಟ್ಟಿಗೇ ಶಾಲೆಯ ಬಿಡುವಿನಲ್ಲಿ ಆಡಿದ್ದ ಅನಂತ ಸತ್ತುಹೋದ ಎಂಬ ಸಂಗತಿ ಜೀರ್ಣಮಾಡಿಕೊಳ್ಳಲು ಎಳೆಯ ಮನಸ್ಸಿನ ನಮಗೆ ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ಬಹಳ ಕಾಲ ಆ ನೆನಪು ನಮಗೇ ಕಾಡುತ್ತಿತ್ತು-ಈಗಲೂ ಬರೆಯುತ್ತಿದ್ದೇನೆ ಎಂದಮೇಲೆ ನಿಮಗೆ ಅರ್ಥವಾಗಬೇಕು!

ಬದಲಾದ ಇಂದಿನ ಪರಿಸರದಲ್ಲಿ ಪೇಟೆ ಪಟ್ಟಣಗಳಲ್ಲಿ ವರ್ಗಾ ವರ್ಗೀ ಆಗಿಹೋಗುವ ಸರಕಾರೀ ಯಾ ಖಾಸಗೀ ನೌಕರರ ಚಿಕ್ಕಮಕ್ಕಳಲ್ಲಿ ಕಲಿಯುವ ಶಾಲೆಗಳನ್ನು ಅನಿವಾರ್ಯವಾಗಿ ಬದಲಾಯಿಸಿದಾಗ, ಅನ್ಯೋನ್ಯ ಸ್ನೇಹಿತರು ಅಗಲಬೇಕಾಗಿ ಬಂದಾಗ ಹೇಳಿಕೊಳ್ಳಲಾಗದ ನೋವು ಅನುಭವಿಸಬೇಕಾಗಿ ಬರುತ್ತದೆ. ನೋವು ದೊಡ್ಡದಲ್ಲದಿದ್ದರೂ ಮಕ್ಕಳ ಮನಸ್ಸಿನಲ್ಲಿ ಅದು ಕಾಡುತ್ತದೆ, ಮುಂದೆ ಜೀವನದ ದಾರಿಯಲ್ಲಿ ಎಲ್ಲೋ ಒಮ್ಮೆ ಅನಿರೀಕ್ಷಿತವಾಗಿ ಹಳೆಯ ಸ್ನೇಹಿತರು ಸಿಕ್ಕಿದರೆ ಸಿಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಮಕ್ಕಳಲ್ಲಿ ಜಾತಿ-ಮತಗಳ ಗೊಂದಲವಿರುವುದಿಲ್ಲ. ಶ್ರೀಮಂತ, ಬಡವ ಎಂಬ ಭಾವನೆಗಳೂ ಇರುವುದಿಲ್ಲ. ಅವರೆಲ್ಲಾ ಒಂದೇ--ಆಡಬೇಕೋ ಆಡಬೇಕು, ಒಟ್ಟಾಗಿ ಇದ್ದು ಸಂತಸಪಡಬೇಕು. ಆವೆಮಣ್ಣಲ್ಲಿ ಮನೆ ಕಟ್ಟಬೇಕು, ಅದೇ ಮಣ್ಣಿನಲ್ಲಿ ಉಂಡೆ, ಕಜ್ಜಾಯ[ಅತ್ರಾಸ], ಕೋಡುಬಳೆ, ಚಕ್ಕುಲಿ ಎಲ್ಲವನ್ನೂ ಮಾಡಬೇಕು. ವೈದ್ಯ-ರೋಗಿ, ಕಳ್ಳ-ಪೋಲೀಸ್, ಅವಲಕ್ಕಿ-ತವಲಕ್ಕಿ, ಹಾಣೆಗೆಂಡೆ[ಚಿನ್ನಿದಾಂಡು], ಹುತುತು[ಕಬಡ್ಡಿ] ಖೋಖೋ, ಮರಕೋತಿ ಹೀಗೇ ಆಡಿದ ಯಾವುದನ್ನೂ ಮರೆಯಲಾರವು. ವಿಶಾಲಸಾಗರ ದಡದ ಮರಳಿನಲ್ಲಿ ಬೆರಳಿಂದ ಹೆಸರನ್ನು ಕೊರೆದು ಅಲೆಬಂದು ಅದು ಅಳಿಸುವುದನ್ನು ನೋಡುವ ಕೌತುಕ ಮಿಳಿತ ಆನಂದ ಬಲಿತ ಮನಸ್ಸುಗಳಲ್ಲಿ ಇರುವುದಿಲ್ಲ! ಹತ್ತುಸಾವಿರದ ಕಂತೆಯನ್ನು ಆಟದ ಸಾಮಾನುಗಳ ಪಕ್ಕಕ್ಕೆ ಇಟ್ಟರೆ ಅವು ಅದನ್ನು ಮೂಸೂ ನೋಡುವುದಿಲ್ಲ, ಮಕ್ಕಳಿಗೆ ದುಡ್ಡಿನ ವ್ಯಾಮೋಹ ಇರುವುದಿಲ್ಲ. ಮಕ್ಕಳು ಎಂದಿದ್ದರೂ ಮಕ್ಕಳೇ. ಬಾಲ್ಯಕಾಲದಲ್ಲಿ ಕೃಷ್ಣ-ಕುಚೇಲ ಗೆಳೆಯರಾಗಿದ್ದುದು ಬಡತನಕ್ಕೆ ಪರಮೋಚ್ಚ ಉದಾಹರಣೆಯಾದ ಸುದಾಮನ ಹಿಡಿಯವಲಕ್ಕಿಯನ್ನೇ ತಿಂದು ಸ್ವರ್ಣ ಸೌಧವನ್ನೇ ಅನುಗ್ರಹಿಸಿದ ಗೆಳೆಯ ಕೃಷ್ಣನನ್ನು ಯಾರುತಾನೇ ಮರೆಯಲು ಸಾಧ್ಯ?

ಈಗಿನ ಸಮಾಜದಲ್ಲಿ ಜನ ಬಡಿದಾಡುವುದನ್ನು ನೋಡಿದರೆ ಒಮ್ಮೊಮ್ಮೆ ಹೀಗೊಂದು ಅನಿಸಿಕೆಯ ಉದ್ಭವವಾಗುತ್ತದೆ :

ಇರುವುದೊಂದೇ ಭೂಮಿ ಉರಿವುದೊಂದೇ ದೀಪ[ಅಗ್ನಿ]
ಹರಿವುದೊಂದೇ ನೀರು ತಿರುವುದದೆ ಗಾಳಿ
ತೆರೆ ಬೆಳ್ಳಿ ಬೆಳಕಿನದು ಆಗಸದ ಅವಕಾಶ
ಮರೆತವಗೆ ಮತಭೇದ | ಜಗದಮಿತ್ರ

ಸರಿಯಾಗಿರುವಾಗ ಮನುಷ್ಯ ಮನುಷ್ಯರಲ್ಲಿ ಜಾತಿ-ಮತ ಜನಾಂಗಗಳೆಂಬ ಹಲವು ಭೇದಗಳನ್ನು ಕಾಣುತ್ತೇವೆ. ನಿಸರ್ಗವೇ ತಿರುಗಿಬಿದ್ದಾಗ ಎಲ್ಲವನ್ನೂ ಬಿಟ್ಟು ಮನುಷ್ಯ ಮನುಷ್ಯತ್ವಕ್ಕೆ ಬೆಲೆಕೊಡುತ್ತಾನೆ. ಅಲ್ಲೀವರೆಗೂ ಹಾರಾಟ ತಪ್ಪಿದ್ದಲ್ಲ. ಅಲೆಕ್ಸಾಂಡರ್ ಇಡೀ ಜಗತ್ತನ್ನೇ ಗೆದ್ದವನಾದರೂ ಆತನ ಮನಸ್ಸನ್ನು ಗೆಲ್ಲಲು ಆತನಿಂದಲೇ ಆಗಲಿಲ್ಲ. ಈ ಲೋಕದ ಜಗಳ, ದೊಂಬಿ, ಗಲಾಟೆ, ಮುಷ್ಕರ, ಧರಣಿ, ಹಿಂಸೆ ಈ ಎಲ್ಲಾ ಮೂರು ಪ್ರಮುಖ ಉದ್ದೇಶಗಳ ಸುತ್ತ ಘಟಿಸುತ್ತವೆ. ಹೆಣ್ಣು, ಹೊನ್ನು, ಮಣ್ಣು--ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೂ ಅದನ್ನು ಬಿಡಲು ಸಾಮಾನ್ಯ ಮನುಷ್ಯರಿಂದ ಸಾಧ್ಯವಾಗುವುದಿಲ್ಲ.

ಗೆಳೆತನದ ಪರಿಧಿಯಲ್ಲಾದರೂ ಈ ವಿಷಯಾಸಕ್ತಿಗೆ[ಇಂದ್ರಿಯಾಸಕ್ತಿಗೆ] ಕಡಿವಾಣ ಬೀಳಲಿ, ಸ್ನೇಹಿತರೇ ಅಧಿಕವಾದಾಗ ದ್ವೇಷ-ವೈಷಮ್ಯ ಕಮ್ಮಿಯಾಗುತ್ತದೆ ಎಂಬ ಭಾವನೆ ಮೂಡುತ್ತದೆ. ಸಹಜವಷ್ಟೇ ? ನನ್ನೆಲ್ಲಾ ಮಿತ್ರರಿಗೂ ಸ್ನೇಹಿತರ ದಿನದ ಶುಭಾಶಯಗಳು, ಧನ್ಯವಾದಗಳು.


Saturday, August 6, 2011

ಕುಳಿತೋದದೆಯುಂ ಕಾವ್ಯ ಪರಿಣತಮತಿಗಳ್ !


ಕುಳಿತೋದದೆಯುಂ ಕಾವ್ಯ ಪರಿಣತಮತಿಗಳ್ !

ಶಂಭೋ ಶಂಕರ !

ದಿನವೂ ವೇದಾಂತವನ್ನೇ ಕೊರೆದರೆ ಸಂಸಾರಿಗಳಾದ ನಮ್ಮಲ್ಲಿ ಬಹುತೇಕರಿಗೆ ಅದು ರುಚಿಸುವುದಿಲ್ಲ ಅಲ್ಲವೇ? ಯಾಕೆಂದರೆ ನಾವು ರಾಜಸರು. ರಾಜಸರಿಗೆ ರಾಜಸ ಗುಣಗಳುಳ್ಳ ಆಹಾರ, ವಿಹಾರ ಅಥವಾ ಸುರಿದುಣ್ಣುವ ಪರಮಾನ್ನ ಗೊರೆತದ ನಿದ್ರೆ ಎಲ್ಲಾ ಬೇಕು. ಆಚೆಮನೆ ಉಪ್ಪಿನಕಾಯಿ, ಉಪ್ಪಿಟ್ಟು, ಪಲ್ಯ, ಸಾರು ಈಚೆಮನೆ ಕಡಬು, ಎಳ್ಳುಂಡೆ, ತಂಬಿಟ್ಟು ರಾಜಾರಾಯರ ಮನೆ ಬೆಣ್ಣೆ ಮುರುಕು, ನಾಣ ಗೌಡ್ರ ಮನೆ ಮುದ್ದೆ-ಬಸ್ಸಾರು ಇದೆಲ್ಲಾ ಸೇರಿ ನಮ್ದೊಂಥರಾ ವಿಚಿತ್ರಾನ್ನದ ಬದುಕು. ಸೃಷ್ಟಿಸಿದ ಬೊಮ್ಮಂಗೂ ಇಲ್ಲದ ಕಾಳಜಿ ನಮ್ಗೇ ಇದೆ ಈ ಪ್ರಪಂಚದ ಬಗ್ಗೆ!

ಛೆ ಛೆ ಅಳ್ತೆ ಗಿಳ್ತೆ ಎಲ್ಲಾ ಇಲ್ದೆ ಸುಮ್ನೇ ಹೇಳೋ ಜನವೇ ಅಲ್ಲ ನಾವು. ಅದ್ಯಾಕ ಹಾಗ್ ನೋಡ್ತೀರಿ. ಗೋಪಾಲನ ದುಡ್ನಲ್ಲಿ ಬೈಟೂ ಕಾಫೀ ಕುಡಿಯೋದು, ಶೆಟ್ರ ಅಂಗಡೀಲಿ ಸಾಲದ ಸಿಗರೇಟು ಸೇದೋದು, ಪಕ್ಕದ ಸೀಟ್ನಲ್ಲಿ ಕೂತವರ ಕೈಲಿಂದ ಡೈಲಿ ಪೇಪರ್ ಇಸ್ಗೊಂಡು ಸಲ್ಪ ನೋಡ್ಕೊಕ್ಹೋಗಿ ಅವರು ಬಸ್ ಇಳಿದು ಹೋದರೂ ವಾಪಸ್ ಕೊಡದೇ ಓದೋದು, ಬ್ಯಾಂಕಿನಲ್ಲಿ ಬೇರೆಯವರ ಪೆನ್ನು ಕಿತ್ಗೊಂಡು ಬರೀತಾ ಬರೀತಾ ನಮ್ ಜೇಬಿಗೆ ಬಿಟ್ಗೊಂಡ್ಹೋಗೋದು ಇವೆಲ್ಲಾ ಇಲ್ದಿದ್ರೆ ಜೀವನದಲ್ಲಿ ಏನೇನೂ ಹುರುಳೇ ಇರೋದಿಲ್ಲ!

ಹಾಗಂತ ದೇಶ ತಿರುಗೋದಾಗ್ಲೀ ಕೋಶ ಓದೋದಾಗ್ಲೀ ನಮ್ಗೆ ಬೇಕಾಗೇ ಇಲ್ಲ. ಯಾಕಂದ್ರೆ ಹಿಂದ್ನೋರೇ ಹೇಳ್ಬುಟ್ರಲ್ಲ "ಕುಳಿತೋದದೆಯುಂ ಕಾವ್ಯ ಪರಿಣತಮತಿಗಳ್" ಎಂದು. ಅವರು ಹೇಳಿದ್ ಮೇಲೆ ಮುಗ್ದೇ ಹೋಯ್ತು. ದಿನಾ ಒಂದಷ್ಟು ಸೀರಿಯಲ್ ನೋಡ್ಬುಟ್ರೆ ಸಾಕು. ಮುಕ್ತ ಮುಕ್ತ, ಮನೆಯೊಂದು ಮೂರು ಸಾವಿರ ಬಾಗಿಲು ! ಹಬ್ಬಗಳನ್ನೂ ಅಲ್ಲೇ ಆಚರಿಸಿಬಿಡ್ತೇವೆ ನಾವು. ನಾಗರಪಂಚಮಿ ಇರ್ಲಿ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಹೀಗೇ ಬಂದಿದ್ದೆಲ್ಲಾ ಅಲ್ಲೇ. ಹಾಗಂತ ನಮಗೇನೂ ಗೊತ್ತಿಲ್ಲಾ ಅಂದ್ಕೋಬೇಡಿ ಸ್ವಾಮೀ ಶ್ರಾವಣ ಮಾಸ ಅಂದ್ರೆ ದೇವರೆಲ್ಲಾ ಉಪಾಸಬಿದ್ದು ಭೂಮಿಗೆ ಬತ್ತವೆ! ಬಂದ ನಾನಾಥರದ ದೇವರಿಗೆ ಮೊಸರನ್ನವಂತೆ, ಪೊಂಗಲ್ಲು ಇನ್ಕೆಲವಕ್ಕೆ ಪುಳಿಯೋಗರೆ ಹೀಗೇ ಪೂಜಾರಪ್ಪ ಹೇಳ್ತಾಯಿತ್ತಪ್ಪ! ಆಯ್ತು ತಗಳಿ ಸೇವೆ ಮಾಡೋಮಿ ಏನ್ ತೊಂದ್ರೆಯಿರಾಕಿಲ್ಲ ಅಂದ್ವು ನಾವು.

ನಮ್ಮಪ್ಪ ನಮ್ಕೊಟ್ಟಿರದ್ ಅಷ್ಟಕಷ್ಟೇ ಐತೆ, ಸ್ಕೂಲು ಅಂತ ಹೋತಿದ್ವಲ್ಲಾ ಅಲ್ಲೇ ನಮ್ಮೆಂಡ್ರುಗೋಳು ವೈನಾಗಿ ಓಡ್ಯಾಡ್ಕಂಡಿದ್ರು. ಕಂಡಿದ್ದೇ ಹಿಂದ್ಬಿದ್ವಾ ಅವ್ರಪ್ಪಂದ್ರು ಅವ್ರತಾತಂದ್ರು ಸೇರ್ಕೆಂಡು ನಮ್ಗೇ ಕೊಡೋದು ಅಂತಾವ ನಿರ್ಣಯಿಸ್ಬುಟ್ರು. ಜಾಸ್ತಿ ಏನಿಲ್ಲಾ ಅಳೀಮಯ್ಯನ ಮರ್ವಾದೆಗೆ ಕಮ್ಮಿ ಆಗ್ದಂಗೆ ಇದೇ ಬೆಂಗಳೂರಾಗೆ ಒಂದ್ ಸೈಟು, ಒಂದ್ ಸೂಟು, ಆ ಕಾಲಕ್ಕೆ ಹೆಚ್.ಎಮ್.ಟಿ ಗೋಲ್ಡ್ ವಾಚು, ಬೀರು, ಫ್ರಿಡ್ಜು, ವಾಷಿಂಗು, ಬಜಾಜ್ ಸ್ಕೂಟ್ರು, ಖರ್ಚಿಗೊಂದಷ್ಟು ಇದ್ಕಳ್ಳಿ ಅಂತಾವ ಅಕೌಂಟ್ನಗೆ ಎರಡಲಕ್ಸ ಇದಿಷ್ಟು ಮಾತ್ರ ಕೊಟ್ಟವ್ರೆ. ಗಂಡೆಂಬೋ ಗಂಡಸರ್ಗೆ ಇಷ್ಟ ಮಾತ್ರಾ ಕೊಟ್ರೆ ಸಾಕಾ ? ನಾಮೂ ಬಿಡ್ಲಿಲ್ಲ ಹೆಂಡ್ರನೆಲ್ಲಾ ಅಗಲಗಲ ತೌರ್ಗೆ ಕಳಸ್ಕ್ಯಬುಟ್ಟು ತಗಂಬಾ ಅಂತದ್ವಿ. ಮಾವ್ಗೇನ್ ನಾವ್ ಬಿಟ್ಟೀಲ್ ಸಿಕ್ಕುದ್ವಾ ? ಓ ಬಾಳಾ ಚೆನ್ನಾಗಿದೆ ನೀವ್ಯೋಳೋದು. ಏನೋ ನಮ್ಮಪ್ಪ ನಮಗೆ ಕೊಡ ಕಾಗ್ಲಿಲ್ಲ ಅಂದ್ಬುಟ್ಟು ನಾವೇನ್ ಅಬ್ಬೆ ಪಾರಿ ಜನ ಅಲ್ಲ ಸ್ವಾಮೀ, ತಿಳ್ಕಳಿ ನಾವು ಇದೇ ಬೆಂಗಳೂರಾಗೇ ಉಟ್ ಬೆಳದಿರಾದು, ಸಲ್ಪ ನಿಮ್ಮಷ್ಟು ಓದ್ದೋರಲ್ಲ ಒಪ್ಗಳವ, ಹಾಗಂತ ಏನೂ ತಿಳೀದೇ ಇರೋ ಮೂದೇವಿಗ್ಳು ಅಂತೆಲ್ಲಾ ಯೋಳುದ್ರೆ ಯಾವ್ ನನ್ಮಗಂಗೆ ಕೋಪ ಬಾರಕಿಲ್ಲ ಯೋಳಿ!

ವ್ಯವಾರ್ದಾಗೆ ನಮ್ಮಷ್ಟ್ ಮುಂದೆ ಯಾರೂ ಹೋಗಾಕಿಲ್ಲ. ಬರ್ಮುಡಾ ಬಂತಾ ಬಂದ್ಮಾರ್ನೇ ದಿನವೇ ಹಾಕಂಡ್ವಿ, ನಮ್ಮೆಂಡ್ರು ನೈಟೀನೇ ಎಲ್ಲಾ ಕಡೆಗೂ ಬಳ್ಸೋದು, ನಾವೂ ಅಷ್ಟೆ ಬ್ಯಾಂಕ್ಗೋಗ್ಲಿ, ಸಿನ್ಮಾ-ನಾಟ್ಕ-ಮಾಲು ಗೀಲು ಅಂತ ಎಲ್ಲಾನಾ ಓಗ್ಲಿ ಬರ್ಮುಡಾ ಟೀಸರ್ಟು ಆರಾಮಾತದೆ! ಮೊನ್ನೆ ನಮ್ಮ ಫ್ರೆಂಡ್ ದೀರು ಸಿಕ್ಕುದ್ರು ಹವ್ರೂ ಅದನ್ನೇ ಡಜನ್ ಡಜನ್ ಮಡ್ಗವ್ರಂತೆ. ಮೊಬೈಲ್ ಹುದ್ಗಾಟ್ನೆ ಮಾಡಿದ್ದೇ ನಾವು. ಬೆಂಗ್ಳೂರಗೆ ಹದೂ ಹಾ ಕಾಲ್ದಗೆ ಸ್ಪೈಸು ಜೆಟಿಎಮ್ಮು ಎರಡೇ ಇತ್ತಲ್ಲಾ ಹಾಗ್ಲೇ ಅವರು ಟಾವರ್ ಕರ್ಚ್ಗೇ ಇಲ್ಲಾ ಕಣ್ಸಾಮೀ ನೀವೂ ತಗಳಿ ಅಂತಾವ ಮನೆ ಬಾಗ್ಲಿಗೆ ಹುಡೀಕ ಬಂದುದ್ರು. ಅಂಥಾ ಯೋಗ್ತೆ ಉಳ್ಳ ಜನಾ ನಾವು ತಿಳ್ಕಳಿ!

ಮಾವ ಕೊಟ್ಟ್ ಸೈಟಿತ್ತಲ್ಲಾ ಖಾಲೀ ಸೈಟು ಯಾವ್ ನನ್ಮಗುಂಗೆ ಬೇಕು ಮನೆ ಕಟ್ಟಿಸ್ಕೊಡಿ ಇಲ್ಲಾ ಮಗಳ್ನ ನಿಮ್ಮನೆಲೇ ಇಟ್ಕಬುಡಿ ಅಂದಿದ್ದಕ್ಕೆ ನಮ್ಮಾವ ೧೬೦೦ ಚದರದ್ ದೊಡ್ ಮನೆ ಕಟ್ಸಾಕ್ಬುಟ್ಟ. ಇದ್ಕಳ್ಳಿ ಬಿಡಿ ಅಳೀಮಯ್ಯ ಮೊಮ್ಮಕ್ಳಗಾದ್ರೂ ಆತದೆ ಅಂತ ಬಾಳ ಧಾರಾಳಿ ಬುಡಿ. ಹೀಗ ಹದೇ ಮನೇ ಬಿಲ್ಡಿಂಗ್ ನಗೆ ಪಾಲ್ಟೀಶನ್ ಹೊಡ್ದು ಒಟ್ಟೂ ಹತ್ ಮನೆ ಐತೆ. ಒಂದ್ ನಮಗಾ ಮಿಕ್ಕಿದ್ದೆಲ್ಲಾ ಬಾಡ್ಗೆ ಕೊಟ್ಟೀವಿ. ತಿಂಗ್ಳಾ ಒಂದ್ ಲಕ್ಸ ಬಾಡ್ಗೆಗೇನ್ ಮೋಸ ಇಲ್ಲ ಬುಡಿ! ಇದ್ಕಿಂತಾ ಇನ್ನೇನ್ ಬೇಕು ಮನ್ಸಂಗೆ ?

ಮದ್ಲೆಲ್ಲಾ ಪ್ಯಾಕ್ಟ್ರಿ ತಾವ ಹದೂ ಇದೂ ಕೆಲ್ಸ ಮಾಡ್ತಿದ್ವಾ ಹೀಗ ಸಾಕು ಹಂತವ ಬುಟ್ಬುಟ್ಟೀವಿ. ಎಂಗೂ ವರಮಾನ ಬತ್ತದೆ ಇನ್ಯಾಕೆ. ಬೇರೇನೂ ತೊಂದ್ರಿಲ್ಲಾ ನಮ್ಮ ಕಿರೀ ಮಗಳವಳಲ್ಲಾ ಕಾಲೇಜ್ಗೆ ಹೋತಾ ಇದ್ಲಾ ಹಲ್ಲಿ ಅದ್ಯಾವನೋ ಅಡ್ಕಸಬಿ ನನ್ಮಗ ಸಿಕ್ಕಾಕಂಬುಟ್ಟು ಲವ್ವು ಲವ್ವು ಹಂತಾವ ಗಂಟ ಬಿದ್ಕಬುಟ್ನಾ ಹಿವ್ಳೂ ಅವನ ಪಕ್ಸವೇ ಆಕ್ಕಬುಟ್ಟವಳೆ ! ತಮ್ದಿಬ್ರುದೂ ಶಾನೆ ದಿವ್ಸಾ ಆಯ್ತು ಅದಾಗಲೇ ಮೂರ್ತಿಂಗ್ಳು ನಿಮ್ಮಗೀಗೆ ನಂಗೇನ ಮದ್ವೆ ಮಾಡ್ಕಬೇಕು ಹಂದೇನಿಲ್ಲ, ಮಾಡ್ಕಬೇಕು ಹಂದ್ರೆ ಒಂದ್ ಸೈಟು ಸೇರ್ದಂಗೆ ಒಂದಷ್ಟು ಯೋಳ್ತೀವಿ ಕೊಡಿ ಆಮ್ಯಾಕೇಯ ಬಾಕಿ ಮಾತು ಅಂತವ್ನೆ.. !

" ಹುಡ್ಗಾ ಯೆಂಗವ್ನೆ "

" ಕಾಣಕೇನೋ ಬೋ ಸಂದಾಕೇ ಅವ್ನೆ....ಪರ್ವಾ ಇಲ್ಲ ಒಳ್ಳೇ ಮಂತನ ಅಂತಾವ ಯಾರ್ನೋ ಇಚಾರ್ಸ್ದಾಗ ಗೊತ್ತಾಯ್ತು "

" ಕೊಟ್ಬುಡಿ ಅತ್ಲಗೆ ....ನಿಮ್ಗೂ ವೈಸಾಯ್ತಾ ಹೋತದೆ. ಹಿನ್ನು ಗಂಡ್ಮಕ್ಳು ನಾಳೆದಿನ ತಂಗೀನ ಚೆನ್ನಾಗ್ ನೋಡ್ಕತವೆ ಹನ್ನೋಕಾಗಲ್ಲ, ನಿಮ್ಕಣ್ಮುಂದೆ ನೀವ್ಗಟ್ಟಿ ಹಿರೋವಾಗ್ಲೆ ಮಗುಳ್ನ ಮದ್ವೆ ಮಾಡ್ಕ್ಯಬುಟ್ರೆ ಸಲೀಸು "

" ಬುಡ್ರೀರೀ ನಂಗಿನ್ನೂ ನಲ್ವತ್ ವರ್ಸ, ಆಕಿಗಿನ್ನೂ ನನ್ನರ್ಧ ! ಇಷ್ಟ ಬೇಗ ಮಾಡಾಕ್ಬುಡೋದಾ ? ಹೋಕ್ಕಳಿ ಆ ನನ್ಮಗಂದು ಡಿಮ್ಯಾಂಡು ತುಂಬಾ ಐತೆ "

" ಹಿರ್ಲಿ ಬಿಡಿ ನಿಮ್ದೇ ಜನಿಕ್ಕೆ ಕೊಟ್ಟಾಂಗಾತದೆ! ನಿಮ್ಮಳ್ಗು ಮೊಮ್ಮಕ್ಳು ಆರಾಮಾಗಿ ತಿಂದ್ಕತವೆ ಬುಡಿ "

" ಹದ್ಯಾರು ಬರ್ತಿದಾರಲ್ಲ ? "

" ಚಲ್ವಯ್ಯ "

" ಬನ್ನಾ ಬರ್ಲಿ ಬರ್ಲಿ ಆವಯ್ಯಂಗೆ ಇನ್ನು ಮಧ್ಯಾಹ್ನತಕ ಬೇರೇ ಕೆಲ್ಸಿರಂಗಿಲ್ಲ "

" ವಿಸ್ಯ ನಿಮ್ಮಲ್ಲೇ ಇರ್ಲಿ ಚಲ್ವಯ್ಯಂಗೆ ತಿಳುದ್ರೆ ಊರ್ಗೆಲ್ಲಾ ಡಾಣಾ ಡಂಗ್ರಾ "
------
ಮಾತುಕತೆ ಮುಂದುವರಿದಿತ್ತು. ಪಾರ್ಕಿನ ಕಲ್ಲಿನ ಬೆಂಚಿನಮೇಲೆ ಪ್ರತಿನಿತ್ಯ ಮೂರ್ನಾಕು ಜನರದ್ದು ಇದೇ ರೀತಿ ಪ್ರಹಸನ, ಕಾವ್ಯ, ಮಹಾಕಾವ್ಯ ಲಹರಿ. ಬೆಂಗಳೂರಿನಲ್ಲಿರೋ ಅನೇಕ ಜನ ಲ್ಯಾಂಡ್ ಲಾರ್ಡ್‍ಗಳು ಇದೇ ರೀತಿ. ಇಲ್ಲೇ ಹುಟ್ಟಿ ಬೆಳೆದಿರೋ ಹಲವು ಜನರಿಗೆ ಅಪ್ಪನೋ ಮಾವನೋ ಮಾಡಿಟ್ಟ, ಕೂಡಿಟ್ಟ ಆಸ್ತಿಯನ್ನು ಅನುಭವಿಸುತ್ತಾ ಮಜಾ ಉಡಾಯಿಸುವುದೇ ಕೆಲಸವಾಗುತ್ತಿತ್ತು. ಯಾವಾಗ ಸೈಕಲ್ ಮುಂದೆ ತಿರುಗಿತೋ ಆಗ ಕೆಲವರಿಗೆ ಜವಾಬ್ದಾರಿ ಬಂತು; ಇನ್ನೂ ಕೆಲವರಿಗೆ ಬರುವುದರಲ್ಲೇ ಇದೆ !

ಎಲ್ಲಾ ರೀತಿಯ ಅನುಕೂಲಗಳಿದ್ದರೂ ಜೀವನಕ್ರಮದಲ್ಲಿ ಶಿಸ್ತು ಇಲ್ಲವೇ ಇಲ್ಲ. ಸಂಸ್ಕಾರದ ಬಗ್ಗೆ ಬರೆಯೋದೇ ಬೇಡ ಬಿಡಿ. ಸ್ನಾನ ವಾರಕ್ಕೆ ಒಂದು ಸರ್ತಿ ಆದರೆ ಸಾಕು; ಅದೂ ಯಾರಿಗೋ ಬೇಸರವಾಗದಿರಲಿ ಎಂಬುದಕ್ಕಾಗಿ. ತಮ್ಮ ಮೈಯ್ಯ ವಾಸನೆಯಲ್ಲೇ ಮಹಾಕಾವ್ಯ ಬರೆಯುವ ತಾಕತ್ತುಳ್ಳ ಇಂತಹ ನಿಸ್ಸೀಮರನ್ನು ನಮ್ಮ ಕವಿಯೇನಾದರೂ ಕಂಡಿದ್ನೇ ? ಗೊತ್ತಿಲ್ಲ. ಆದರೂ ಕವಿಯ ಒಂದು ವಾಣಿ ನೆನಪಾಯ್ತು : ’ಕುಳಿತೋದದೆಯುಂ ಕಾವ್ಯಪರಿಣತಮತಿಗಳ್.’ ಸಾಂಸ್ಕೃತಿಕವಾಗಿ ಯಾವುದೇ ಮೌಲ್ಯಕ್ಕೂ ತೂಗದ ಈ ಜನ ತಿನ್ನುವುದಕ್ಕಾಗೇ ಬದುಕಿರುವುದಂತೂ ಸುಳ್ಳಲ್ಲ![ಕೆಲವು ಅಪವಾದಗಳಿರಬಹುದು] ಹುಟ್ಟು-ಆದಷ್ಟೂ ಬಿಟ್ಟಿ ಆಸ್ತಿಮಾಡು-ತಿನ್ನು-ಕುಪ್ಪಳಿಸು-ನೆಗೆದುಬೀಳು ----ಇದೇ ಅವರ ಜೀವನಚಕ್ರ. ಹೌದು ಕಣ್ರೀ ಇದೂ ಒಂದು ಶೈಲಿಯ ಜೀವನವೇ!


ಶಂಭೋ ಶಂಕರ !

Thursday, August 4, 2011

ಆತಿಥ್ಯ

ಆತಿಥ್ಯ

ಯಾರದೋ ಮನೆಯಲ್ಲಿ ಬಹಳ ದಿನ ಕಳೆಯುತ್ತ
ಭಾರವಾಗಲು ಬೇಡ ಅವರ ಜೀವನಕೆ
ಬೇರೆ ಜಾಗವ ಹುಡುಕಿ ತೂರಿಕೊಳು ಅದರಲ್ಲಿ
ದಾರಿ ಹಲವನು ಗ್ರಹಿಸು | ಜಗದಮಿತ್ರ

ನವಯುಗದ ಹವೆಯಲ್ಲಿ ದುಷ್ಕರದ ದಿನ ಜಾಸ್ತಿ
ಸವೆಯುವುದು ಸಮಯವದು ವ್ಯಾಜ್ಯ ಸಂಕಟದಿ
ಅವಯವಕು ಒಂದೊಂದು ತೊಂದರೆಯೊ ಎಂಬಂತೆ
ಭವವು ಸುಖಕೊಂದಲ್ಲ | ಜಗದಮಿತ್ರ

ಇಲ್ಲಿರಲು ಆ ಕೆಲಸಕಲ್ಲಿಹೋಗಲೆಬೇಕು
ಅಲ್ಲಿರಲು ಬರುವಂತೆ ಮತ್ತಿಲ್ಲಿ ಕರೆಯು
ಎಲ್ಲವೂ ಬೇರೆಯೇ ನಿನ್ನೆಣಿಕೆ ಕರ್ತವ್ಯ
ಬಲ್ಲವರ ಅನುಸರಿಸು | ಜಗದಮಿತ್ರ

ಮೊದಲದಿನ ಇಗೊಮಣೆಯು ಎಂಬರಾದರದಿಂದ
ಅದೊ ನೋಡು ತಗೊಮಣೆಯು ಎರಡನೇ ದಿನದಿ
ಅದುಹೋಗಿ ತಾ ಮಣೆಯರೆಂಬರು ನಂತರದಿ
ಸದರಪ್ಪೆ ಅತಿಯಾಗೆ | ಜಗದಮಿತ್ರ

ಹದವರಿತು ಸ್ವೀಕರಿಸು ಆಹ್ವಾನಗಳನೆಲ್ಲ
ಹೃದಯದೊಳಕರೆಯೊ ಹೊರಕರೆಯೊ ನಿರ್ಣಯಿಸಿ
ಬೆದಕುತ್ತ ಹೆಜ್ಜೆಯಿಡು ಅದಕೆ ಉತ್ತರಿಸುವೊಲು
ಬದುಕು ನಿರ್ಣಯ ಶರಧಿ | ಜಗದಮಿತ್ರ

ಕೊಡುವುದೆಲ್ಲವ ಕಂಡು ಕಣ್ಣನರಳಿಸಬೇಡ
ಪಡೆಯುವುದಕಿಂತ ಕೊಡುವಾಧರ್ಮ ಮಿಗಿಲು
ಅಡಿಗಡಿಗು ತಡೆತಡೆದು ಗಣಿಸು ಪಡೆದಿಹಲೆಕ್ಕ
ಕೊಡುಗೆ ಋಣಭಾರದ್ದು | ಜಗದಮಿತ್ರ

ಅತಿಥಿಗಳು ನಾವಿಂದು ಇಲ್ಲಿ ಈ ಜಗದಲ್ಲಿ
ಮಥಿತ ಬುದ್ಧಿಯನಾಂತು ಕಳೆಯುವುದು ದಿನವ
ಕಥೆಗಳವು ಎಷ್ಟೆಷ್ಟೊ ಜನ್ಮಜನ್ಮಾಂತರದಿ
ವ್ಯಥೆಯು ಜೀವನ ಮಜಲು | ಜಗದಮಿತ್ರ

ಅತಿಥಿ ಸತ್ಕಾರವನು ನಡೆಸುವುದು ಸದ್ಧರ್ಮ
ಪತಿತ ಜೀವಿತದಲ್ಲೂ ಅದು ಪಥ್ಯವಹುದು
ಅತಿಹಸಿವು ಬಾಧೆಯಲು ಅತಿಥಿಯಂ ಮರೆಯದಿರು
ಅತಿಸೌಖ್ಯ ಒದಗುವುದು | ಜಗದಮಿತ್ರ

ಕರೆದು ಅನ್ನವನಿಕ್ಕು ಕಲಿವ ಬಡಮಕ್ಕಳಿಗೆ
ಹೊರೆಯಲ್ಲ ಗತಿಹೀನ ಮಕ್ಕಳಾಶ್ರಮದಿ
ತೊರೆದಿಹರು ಹಡೆದಪ್ಪ-ಅಮ್ಮ ನತದೃಷ್ಟರನು
ಎರೆದು ದಾರಿಯ ತೋರು | ಜಗದಮಿತ್ರ

ಮುಪ್ಪಿನಾ ಮನೆಜನರ ಬೆಪ್ಪೆಂದು ಜರಿಯದಿರು
ತಪ್ಪಿ-ಹಳಿ ಉಗಿಬಂಡಿ ವೇಗ ಕಳೆಯುವುದು
ತಪ್ಪೇನು ಸರಿಯೇನು ಲೆಕ್ಕಿಸದೆ ಗೌರವಿಸು
ಮುಪ್ಪು ಜೀವನ ಸಂಜೆ | ಜಗದಮಿತ್ರ

Wednesday, August 3, 2011

ನಾಗರ ಹಾವೇ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯ ಠಾವೇ !


ನಾಗರ ಹಾವೇ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯ ಠಾವೇ !

ಸೃಷ್ಟಿಕರ್ತ ಬ್ರಹ್ಮನ ಮಗ ಋಷಿ ಕಷ್ಯಪನ ನಾಲ್ಕು ಮಡದಿಯರಲ್ಲಿ ಮೂರನೆಯವಳಾದ ಕದ್ರು ಎಂಬಾಕೆಯಲ್ಲಿ ನಾಗಗಳು ಜನಿಸಿದವು ಎಂಬುದು ಪುರಾಣೋಕ್ತ ಮಾಹಿತಿ. ನಾಗಗಳ ಅಧಿಪತ್ಯವಿರುವುದು ಪಾತಾಳಲೋಕದಲ್ಲಿ ಎಂದೂ ಪುರಾಣಗಳು ಹೇಳುತ್ತವೆ. ಜನಮೇಜಯ ಸರ್ಪಯಾಗವನ್ನೇ ನಡೆಸಿ ಸಹಸ್ರಾರು ನಾಗ ಸಂಕುಲಗಳು ನಶಿಸಿಹೋದರೂ ’ಆಸ್ತಿಕ’ನೆಂಬ ಬ್ರಾಹ್ಮಣ ಕುವರನ ತಡೆಯುವಿಕೆಯಿಂದಾಗಿ ಒಂಬತ್ತು ಪ್ರಮುಖ ನಾಗಗಳು ಮತ್ತು ಅವುಗಳ ವಂಶಗಳು ಉಳಿದುಕೊಂಡವು ಎಂದು ತಿಳಿದುಬರುತ್ತದೆ.


अनन्तं वासुकिं शेषं पद्मनाभं च कम्बलम् ।
शंखपालं धार्तराष्ट्रं तक्षकं कालियं तथा ||

[ ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್|
ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ || ]

ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧಾರ್ತರಾಷ್ಟ್ರ, ತಕ್ಷಕ ಮತ್ತು ಕಾಲಿಯ ಹೀಗೇ ಒಂಬತ್ತು ಪ್ರಮುಖ ನಾಗಗಳನ್ನು ಹೆಸರಿಸಿದ್ದಾರೆ. ಹೀಗೆ ಉಳಿದುಕೊಂಡ ನಾಗಗಳಲ್ಲಿ ಕಾಲಿಯನನ್ನು ದ್ವಾಪರಯುಗದಲ್ಲಿ ಶ್ರಾವಣ ಮಾಸದ ಶುದ್ಧ ಅಥವಾ ಶುಕ್ಲಪಕ್ಷದ ಪಂಚಮಿಯ ದಿನ ಶ್ರೀಕೃಷ್ಣ ಮರ್ದಿಸಿ ಆತನ ವಿಷದೂಷಣಗಳನ್ನು ನಿಲ್ಲಿಸಿದ ಎಂಬುದೊಂದು ಐತಿಹ್ಯ.

ಹಿಂದೊಮ್ಮೆ ಕ್ಷತ್ರಿಯ ನಾಗಕುಲವೇ ಜಗತ್ತಿನ ಬಹುಭಾಗವನ್ನು ಆಳಿತ್ತು ಎಂಬ ಕಥೆಯೂ ಇದೆ! ಅವುಗಳಲ್ಲಿ ಮೊದಲನೆಯ ರಾಜ ಅನಂತ- ಇದೀಗ ಸುದ್ದಿಯಲ್ಲಿರುವ ಕೇರಳದ ತಿರುವನಂತಪುರವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದನಂತೆ. ವಾಸುಕಿ ಕೈಲಾಸದಲ್ಲಿ ನಿಂತು ಆಳಿದರೆ ತಕ್ಷಕ ತಕ್ಷಶಿಲೆಯಲ್ಲಿ ನೆಲೆನಿಂತು ರಾಜ್ಯಭಾರ ನಡೆಸುತ್ತಿದ್ದ. ಇನ್ನುಳಿದಂತೇ ಕಾರ್ಕೋಟಕ, ಪಿಂಗಳ ಮತ್ತು ಐರಾವತ ಹೀಗೇ ಹಲವು ನಾಗಗಳು ಇಂದಿನ ಪಂಜಾಬಿನ ಐರಾವತಿ ಅಥವಾ ರಾವಿ ನದೀ ಮುಖಜ ಭೂ ಪ್ರದೇಶದಲ್ಲಿ ಆಳುತ್ತಿದ್ದರು. ಇಂತಹ ಒಂದು ಪ್ರದೇಶ ಗಂಗಾನದಿಯೆಡೆಯಲ್ಲೂ ಇತ್ತು. ಅಲ್ಲಿಂದಲೇ ಅರ್ಜುನನ ಹೆಂಡತಿಯಾಗಿ ಉಲೂಪಿ ಬಂದಿದ್ದಳು ಎಂದೂ ಪ್ರತೀತಿ ಇದೆ. ಮತ್ಸ್ಯ ಪುರಾಣದ ಹತ್ತನೇ ಅಧ್ಯಾಯದಲ್ಲಿ ನಾಗಗಳ ಬಗ್ಗೆ ವಿಶೇಷ ಮಾಹಿತಿ ದೊರೆಯುತ್ತದೆ. ಆ ಸಮಯದಲ್ಲಿ ಕತ್ತಲೆಯಕಾಲದಲ್ಲಿ ಸುಮಾರು ೧೦೦ ವರ್ಷಗಳ ಕಾಲ ನಾಗಗಳು ಆಳಿದ್ದಾಗಿಯೂ ಅವುಗಳಲ್ಲಿ ಕೆಲವು ಬೌದ್ಧಮತಾವಲಂಬಿಗಳಾಗಿದ್ದರೆಂದೂ ಕ್ರಮೇಣ ಗಂಗಾನದಿಯಲ್ಲಿ ಸ್ನಾನಮಡುತ್ತಾ ಅಶ್ವಮೇಧ ಯಾಗವನ್ನು ಮಾಡಿದ ತರುವಾಯ ಅವರೆಲ್ಲಾ ವೈಷ್ಣವ ಮತವನ್ನು ಸ್ವೀಕರಿಸಿದರು ಎಂದೂ ಆ ಪುರಾಣ ಹೇಳುತ್ತದೆ! ಮಥುರಾ, ಪದ್ಮಾವತಿ, ಕಾಂತಿಪುರ ಮತ್ತು ತಿರುವನಂತಪುರ ಇವು ನಾಗಗಳ ಪ್ರಮುಖ ರಾಜಧಾನಿಗಳಾಗಿದ್ದವು ಎಂಬ ಸಂಗತಿಯೂ ತಿಳಿದುಬರುತ್ತದೆ. ಇಂದಿನ ನಾಗ್ಪುರ್ ಪ್ರದೇಶ ಕೂಡ ನಾಗಗಳಿಗೆ ಸಂಬಂಧಿಸಿದ್ದೇ ಆಗಿತ್ತು ಎಂದೂ ಪುರಾಣೋಕ್ತ ದಾಖಲೆಗಳು ಹೇಳುತ್ತವೆ.

ಇಂದಿಗೂ ನಾಗವಂಶಿ ಕ್ಷತ್ರಿಯರು ಎನಿಸಿರುವ ಹಲವು ಜನ ರಾಜಸ್ತಾನದ ಕೆಲವು ಭಾಗಗಳು, ಮಧ್ಯಪ್ರದೇಶದ ಕೆಲವುಭಾಗಗಳು ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲೂ ಕಂಡುಬರುತ್ತವೆ. ಕರ್ನಾಟಕದ ತುಳುನಾಡು ಅಥವಾ ದಕ್ಷಿಣ ಕನ್ನಡ ಮತ್ತು ಕೇರಳದಲ್ಲಿ ಕೆಲಭಾಗಗಳಲ್ಲಿಯೂ ಇವರು ಸಿಗುತ್ತಾರೆ.

ನಾಗಪಂಚಮಿ ಅಥವಾ ನಾಗರಪಂಚಮಿಯನ್ನು ಭಾರತದಲ್ಲಷ್ಟೇ ಅಲ್ಲದೇ ನೇಪಾಳೀಯರೂ ಆಚರಿಸುತ್ತಾರೆ. ಜಗತ್ತಿನಲ್ಲಿ ಪರಿಪೂರ್ಣ ಮತ್ತು ಏಕೈಕ ಸನಾತನ ಧರ್ಮ ಇರುವುದು ನೇಪಾಳದಲ್ಲಿ ಮಾತ್ರ! ಅಂತಹ ನೇಪಾಳದ ಕಠ್ಮಂಡುವಿನಲ್ಲಿ ಒಂದಾನೊಂದು ಕಾಲದಲ್ಲಿ ನಾಗಗಳೇ ತುಂಬಿಕೊಂಡಿದ್ದವಂತೆ! ಜನವಸತಿ ಬೆಳೆದಂತೇ ಜನರಿಗೆ ತೊಂದರೆಯಾಗತೊಡಗಿತು. ಹಾವುಗಳಿಗೂ ಕಷ್ಟಕೋಟಲೆ ಎದುರಾಯಿತು. ಅದನ್ನು ನಿವಾರಿಸಿಕೊಳ್ಳಲು ನೇಪಾಳದ ರಾಜ ನಾಗಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಅವುಗಳಿಗೇ ಅಂತಲೇ ಕೆಲವು ಜಾಗಗಳನ್ನು ಬಿಟ್ಟುಕೊಟ್ಟ ಎಂಬುದೂ ಕೂಡ ಇನ್ನೊಂದು ಕಥೆ.

ಹಾಗೆ ನೋಡುತ್ತಾ ನೋಡುತ್ತಾ ಹೋದರೆ ನಾಗಗಳು ಮಳೆಯ ದೇವತೆಗಳೆಂದೂ ಮಳೆಯನ್ನು ನಿಯಂತ್ರಿಸುವ ಅಥವಾ ಬರಿಸುವ ತಾಕತ್ತು, ಆ ಅಧಿಕಾರ ನಾಗಗಳಿಗೆ ಮಾತ್ರ ಇದೆಯೆಂಬುದೂ ಅಲ್ಲಿನ ಜನರ ನಂಬಿಕೆ. ಹಾಗಾಗಿ ರಾಜನಾದವನಿಗೆ ತಾಂತ್ರಿಕ ಶಕ್ತಿಯನ್ನು ಕೊಟ್ಟು ಮಳೆ-ಬೆಳೆಗಳು ಸಕಾಲಕ್ಕೆ ಆಗುವಂತೇ ಮಾಡುವುದು ನಾಗಗಳು ಎನ್ನುತ್ತಾರೆ. ನಾಗಪಂಚಮಿಯ ದಿನ ಅಲ್ಲಿನ ಮನೆಗಳಲ್ಲಿ ನಾಗರ ಛಾಯಾಚಿತ್ರಗಳಿಗೆ ಪೂಜೆ ಸಲ್ಲಿಸುತ್ತಾರೆ. ಪ್ರತೀಮನೆಯ ಮುಂಭಾಗದ ಬಾಗಿಲಿನ ಮೇಲೆ ನಾಗನ ಚಿತ್ರ ಅಂಟಿಸಿ ದುಷ್ಟಶಕ್ತಿಗಳು ಬರಗೊಡದಂತೇ ನಾಗನಲ್ಲಿ ಪ್ರಾರ್ಥಿಸುತ್ತಾರೆ. ಭಾರತದಲ್ಲಿ ಇರುವಂತೇ ಅಲ್ಲಿಯೂ ಹಾಲು, ಹೂವು ಹಣ್ಣು ಇತ್ಯಾದಿಗಳಿಂದ ಪೂಜೆ ನಡೆಯುತ್ತದೆ ಎಂಬುದು ಗಮನಾರ್ಹ.


ಇನ್ನು ಭಾರತದಲ್ಲಿ ಅದರಲ್ಲಂತೂ ದಕ್ಷಿಣಭಾರತದಲ್ಲಿ ದ್ರಾವಿಡರು ನಾಗಪೂಜೆ ಇತಿಹಾಸದಲ್ಲೂ ಕಂಡುಬರುತ್ತದೆ. ಇತಿಹಾಸದಲ್ಲಿ ಹೆಸರಿಸಿದ ಪಂಚದ್ರಾವಿಡ ದೇಶಗಳಲ್ಲಿ ನಮ್ಮ ಕರ್ನಾಟಕವೂ ಒಂದು. ಕರ್ನಾಟಕದಲ್ಲಿ ನಾಗರ ಪಂಚಮಿಯಂದು ಕೆಲವೆಡೆ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ತವರಿಗೆ ತೆರಳಿ ತಮ್ಮ ಅಣ್ಣ-ತಮ್ಮಂದಿರಿಗೆ ತನಿ ಎರೆಯುವ ಪದ್ಧತಿ ಇದೆ. ಇದೊಂದು ಮಮತೆ ತುಂಬಿದ, ಅಕ್ಕರೆ ತುಂಬಿದ ಆತ್ಮೀಯತೆಯ ಕೈಂಕರ್ಯ. ಮದುವೆಯಾಗಿ ಹೋದ ತಂಗಿಯೋ ಅಕ್ಕನೋ ತವರಲ್ಲಿ ಇರುವ ತನ್ನ ಸಹೋದರರನ್ನು ಮರೆತಿಲ್ಲಾ ಎಂಬುದನ್ನು ನೆನಪಿಸುವ ಸಲುವಾಗಿಯೂ ಮತ್ತು ಗಂಡನ ಮನೆಗೆ ತೆರಳಿ ಅಲ್ಲಿನ ಕೆಲಸ-ಕಾರ್ಯಗಳಲ್ಲಿ ಸದಾ ತೊಡಗಿಕೊಂಡಿದ್ದ ಆಕೆಗೆ ಕಾಡುವ ತವರಿನ ನೆನಪು ಮರುಕಳಿಸುತ್ತಾ ಆಕೆ ಬೇಸರಗೊಳ್ಳದಿರಲಿ ಎಂಬುದೂ ಕೂಡ ಇದರ ಹಿಂದಿರುವ ಉದ್ದೇಶ.

ಕೆಲವು ಊರುಗಳಲ್ಲಿ ಇದೇ ಸಮಯ ಜೋಕಾಲಿಗಳನ್ನೂ ಕಟ್ಟಿ ಜೀಕುವ ಪರಿಪಾಠವಿದೆ. ಇನ್ನು ಹಲವೆಡೆ ಮದರಂಗಿಯನ್ನು ಹಚ್ಚಿಕೊಳ್ಳುವ ಅಭ್ಯಾಸಕೂಡ ಇದೆ. ಒಟ್ಟಿನಲ್ಲಿ ನಾಗಪಂಚಮಿಯ ಹೆಸರಿನಲ್ಲಿ ಒಂದಷ್ಟು ಸಂತಸವನ್ನು ಪಡೆದುಕೊಳ್ಳುವ ಸಮಯ ಇದಾಗಿದೆ. ಉತ್ತರಕರ್ನಾಟಕದ ಬತ್ತೀಸ್ ಶಿರಾಳ ಮೊದಲಾದ ಕಡೆ ಜೀವಂತ ಹಾವುಗಳನ್ನೇ ಹಿಡಿದು [ಹಾವಾಡಿಗರ ಸಹಾಯದಿಂದ] ಪೂಜಿಸುವ ವೈಖರಿಯೂ ಇದೆ ! ಉತ್ತರ ಕರ್ನಾಟಕದಲ್ಲಿ ಪಂಚಮಿ ಹಬ್ಬ ಪ್ರಮುಖ ಹಬ್ಬಗಳಲ್ಲೊಂದು, ಹಾಗಾಗಿ ೩ ರಿಂದ ೫ ದಿನಗಳ ವರೆಗೆ ಆಚರಿಸಲ್ಪಡುತ್ತದೆ. ಪಂಚಮಿ ಹಬ್ಬಕ್ಕೆ ಕರೆಯಲು ಅಣ್ಣ ಇನ್ನೂ ಬರಲೇ ಇಲ್ಲವಲ್ಲಾ ಎಂಬ ಕಳವಳದಲ್ಲಿ ತಂಗಿ ಹಾಡಿದ ಜಾನಪದ ಗೀತೆ :

ಪಂಚ್ಮಿ ಹಬ್ಬ ಉಳಿದಾವ ದಿನನಾಕ
ಅಣ್ಣ ಬರಲಿಲ್ಲ ಯಾಕ ಕರಿಲಾಕ ?

....... ಎಂಬ ಹಾಡನ್ನು ನಾವು ಕೇಳಿಯೇ ಇದ್ದೇವಷ್ಟೇ ?


ನಾಗ ಸಮೃದ್ಧಿಯ ಸಂಕೇತ. ನಾಗನನ್ನು ತೊರೆದರೆ, ಮರೆತರೆ, ಹೊಡೆದು-ಘಾಸಿಗೊಳಿಸಿ ಅನಾಚಾರ ಮಾಡಿದರೆ, ಹುತ್ತಮೊದಲಾದುವನ್ನು ಕೆಡವಿ ಅಪಚಾರವೆಸಗಿದರೆ ಎದುರಿಗೆ ಕಾಣದೇ ಇದ್ದರೂ ಪರೋಕ್ಷವಾಗಿ ನಾಗದೋಷ ಪ್ರಾಪ್ತವಾಗುತ್ತದೆ ಎಂಬುದು ಜನಜನಿತ ವಿಷಯ. ಸಂತತಿ ಮತ್ತು ಸೌಭಾಗ್ಯ, ಪ್ರಗತಿ-ಅಭಿವೃದ್ಧಿ ಇವನ್ನೆಲ್ಲಾ ಪಡೆಯಲು ನಾಗನ ಕೃಪೆ ಬೇಕೆಂಬುದೂ ಕೂಡ ತಿಳಿದುಬರುವ ಅಂಶವಾಗಿದೆ. ಅದಕ್ಕೆಂತಲೇ ನಾಗಬಲಿ ಅಥವಾ ಆಶ್ಲೇಷಾ ಬಲಿ, ನಾಗಮಂಡಲ, ನಾಗಪ್ರತಿಷ್ಠೆ ಮೊದಲಾದ ಪೂಜಾವಿಧಿಗಳನ್ನು ನಡೆಸುತ್ತಾರೆ. ಸತ್ತ ನಾಗರಹಾವು ಕಂಡರೆ ಅಥವಾ ಎಲ್ಲಿಂದಲೋ ಬಂದ ನಾಗರಹಾವು ಕಾಣುವ ಜಾಗದಲ್ಲೆಲ್ಲೋ ಮರಣಿಸಿದರೆ ಆಗ ಒಬ್ಬ ಕರ್ಮಠ ಬ್ರಾಹ್ಮಣನ ಅಂತ್ಯೇಷ್ಠಿಗಳನ್ನು ನೆರವೇರಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಅದರ ಅಂತ್ಯಕ್ರಿಯೆಗಳನ್ನು ನಡೆಸುವ ಭಕ್ತರು, ಆಸ್ತಿಕರು ಇದ್ದಾರೆ.

ಒಂದುಕಾಲಘಟ್ಟದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ತಕ್ಷಕಮೊದಲಾದ ಸರ್ಪಗಳು ಕಾರ್ತಿಕೇಯನನ್ನು ಆಶ್ರಯಿಸಿದವು ಎಂದು ತಿಳಿಯಲ್ಪಟ್ಟಿದೆ. ಅಲ್ಲಿಂದ ಮುಂದಕ್ಕೆ ಸುಬ್ರಹ್ಮಣ್ಯನಿಗೂ ನಾಗಸಂಕುಲಕ್ಕೂ ಅವಿನಾಭಾವ ಸಂಬಂಧವೇರ್ಪಟ್ಟಿದೆ. ನಾಗನ ಇನ್ನೊಂದು ರೂಪವೇ ಸುಬ್ರಹ್ಮಣ್ಯ ಎಂಬಷ್ಟು ಆ ಅನ್ಯೋನ್ಯತೆ ಬೆಳೆದುನಿಂತಿದೆ. ದಕ್ಷೀಣಕನ್ನಡದ ಕುಕ್ಕೆ, ಕೋಲಾರದ ಘಾಟಿ ಹಾಗೂ ಉತ್ತರಕನ್ನಡದ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರಗಳು ನಾಗಗಳ ಅರಾಧನೆಗೆ ವಿಶೇಷ ಆದ್ಯತೆ ನೀಡಿವೆ, ಪ್ರಸಿದ್ಧವಾಗಿವೆ. ಸಂತಾನಹೀನರು ಪೂಜಿಸಿ, ಪ್ರಾರ್ಥಿಸಿ ಮಕ್ಕಳನ್ನು ಪಡೆದ ಸಾಕ್ಷ್ಯಗಳೂ ದೊರೆಯುತ್ತವೆ!

ಇಂದಿನ ದಿನಗಳಲ್ಲಿ ಎಷ್ಟೇ ಜಂಜಡಗಳಿದ್ದರೂ ಹೆಂಗಳೆಯರು ತಮ್ಮ ನೆಮ್ಮದಿಗಾಗಿ ನಾಗರ ಪಂಚಮಿಯ ದಿನ ಹೊತ್ತಾರೆ ಎದ್ದು ಶೌಚಸ್ನಾನಾದಿಗಳನ್ನು ಮುಗಿಸಿ, ಕಡುಬು-ತಂಬಿಟ್ಟು ಮೊದಲಾದ ತಿನಿಸುಗಳನ್ನು ಮಡಿಯಲ್ಲಿ[ಶುಚಿಯಲ್ಲಿ] ಮಾಡಿ, ಅರಿಶಿನ-ಕುಂಕುಮಾದಿ ಮಂಗಳದ್ರವ್ಯಗಳನ್ನೊಡಗೂಡಿದ ಪೂಜಾ ಸಾಮಗ್ರಿಗಳೊಂದಿಗೆ ನಾಗಸ್ಥಾನಗಳಿಗೆ ತೆರಳಿ ಅಲ್ಲಿ ಹಾಲಿನಿಂದ ಅಭಿಷೇಕಮಾಡಿ ಪೂಜೆಗೈದು ನೈವೇದ್ಯ ಅರ್ಪಿಸುವುದು ಕಾಣುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಎಳೆಯ ತೆಂಗಿನ ಗರಿಗಳ ಓಲೆಗಳಿಂದ ಹಾವು, ಗಿಳಿ ಮೊದಲಾದ ಆಕೃತಿಗಳನ್ನು ಮಾಡಿ ನಾಗಬನಕ್ಕೆ ಅದನ್ನು ಹಚ್ಚುವುದು ಕಂಡುಬರುವ ಆಚರಣೆ. ಅಲ್ಲಲ್ಲಿ ಅನಾದಿ ಕಾಲದಿ ನಾಗಬನಗಳು ಮರದ ಬೀಳಲುಗಳಿಂದ ದೊಡ್ಡ ದೊಡ್ಡ ಮರಗಳಿಂದ ಅಥವಾ ಬಿದಿರುಮೆಳೆಗಳಿಂದ ಆವೃತವಾಗಿದ್ದು ಮಧ್ಯೆ ವಿರಾಜಿಸುವ ಕಲ್ಲಿನ ಅಪರೂಪದ ನಾಗಾಕೃತಿಗಳು ಕಣ್ಣಿಗೆ ನಾಗರ ಹಬ್ಬವನ್ನು ರಂಜನೀಯವಾಗಿಸುತ್ತವೆ.

ಕರಾವಳಿ ಜಿಲ್ಲೆಗಳಲ್ಲಿ ಈ ದಿನ 'ಸುಳಿರೊಟ್ಟಿ' ಎಂಬ ಸಿಹಿ ತಿನಿಸು ಮಾಡುತ್ತಾರೆ. ನಾದುವ ಹದಕ್ಕಿರುವ ಅಕ್ಕಿ ಹಿಟ್ಟನ್ನು ಅರಿಶಿನ ಕೀಳೆಗಳಲ್ಲಿ ಹಚ್ಚಿ ಅದರಮೇಲೆ ಕಾಯಿಸಿ ಹದಗೊಳಿಸಿದ ಕಾಯಿಬೆಲ್ಲ ಲೇಪಿಸಿ ಅದನ್ನು ಮಡಚಿ ಕಾವಲಿಯಮೇಲೆ ಬೇಯಿಸುವ ಒಂದು ಕ್ರಮ ಇದು. ಅಪ್ಪಟ ಅರಿಶಿನದ ಘಮಘಮ ಅಡಿಗೆಮನೆಯನ್ನು ತುಂಬಿಕೊಳ್ಳುವುದೂ ಅಲ್ಲದೇ ತಿನ್ನುವವರಿಗೆ ಅಮೃತತುಲ್ಯ ಸಂತುಷ್ಟಿಯನ್ನು ನೀಡುತ್ತದೆ.

ಹಬ್ಬಗಳು ಬರುವುದು ಮನುಷ್ಯ ಮನುಷ್ಯರ ಸಂಬಂಧವನ್ನು ಬಳಸಲಿಕ್ಕೆ ಮತ್ತು ಗಟ್ಟಿಗೊಳಿಸಲಿಕ್ಕೆ. ಹಬ್ಬಗಳಿಲ್ಲದೇ ಇದ್ದರೆ ಎಂದಿನಂತೇ ಎಡಬಿಡದ ವ್ಯಾವಹಾರಿಕ, ವ್ಯಾವಸಾಯಿಕ ಒತ್ತಡಗಳ ನಡುವೆ ಬದುಕು ಸಂಪೂರ್ಣ ಯಾಂತ್ರಿಕವಾಗಿಬಿಡುತ್ತದೆ. ಇದನ್ನೆಲ್ಲಾ ನಮ್ಮ ಪೂರ್ವಜರು ಅರಿತಿರಲೂ ಸಾಕು. ಹೀಗಾಗಿ ಮಳೆಗಾಲದಲ್ಲಿ ಉಳಿದೆರಡು ಕಾಲಗಳಿಗೆ ಹೋಲಿಸಿದರೆ ಸ್ವಲ್ಪ ಜಾಸ್ತಿ ಬಿಡುವಿರುವುದರಿಂದ ಹಬ್ಬಗಳ ಸರದಿ ಈ ಕಾಲದಲ್ಲೇ ಜಾಸ್ತಿ ಇರುತ್ತದೆ! ಅದಕ್ಕೆ ಮೇಲುಹೊದಿಕೆಯಾಗಿ ದಕ್ಷಿಣಾಯಣದಲ್ಲಿ ಸ್ವರ್ಗದ ಬಾಗಿಲು ಹಾಕಿ ದೇವತೆಗಳೆಲ್ಲಾ ಭೂಮಿಯಲ್ಲಿ ಸಲ್ಲಿಸುವ ಪೂಜೆಗಳನ್ನು ಸ್ವೀಕರಿಸಲು ಇಲ್ಲಿಗೆ ಬರುತ್ತಾರೆ ಎಂದೂ ಹೇಳಲಾಗಿದೆ.

ನಮಗೆ ತಿಳಿಯದ ಆಳಗಲ ಈ ಬ್ರಹ್ಮಾಂಡದಲ್ಲಿ ಎಲ್ಲೆಲ್ಲಿ ಏನೇನು ಅಡಗಿದೆಯೋ ಅದರ ಪರಿಪೂರ್ಣ ಅರಿವು ಸಾಮಾನ್ಯ ಮನುಷ್ಯರಿಗೆ ಯಾರಿಗೂ ಇರುವುದಿಲ್ಲ. ಬೇರೇ ಲೋಕಗಳು ಇರಲಿಕ್ಕೂ ಸಾಕು ಅವುಗಳಲ್ಲಿ ನಮ್ಮನ್ನು ಜರಾಮರಣ ಚಕ್ರದಲ್ಲಿ ಬಂಧಿಸಿರುವ ಶಕ್ತಿಯ ಆವಾಸವಿರಲೂ ಸಾಕು ಯಾರಿಗೆ ಗೊತ್ತು ? ಅಲ್ಲವೇ ? ನಾಗಗಳು ವಿನಾಕಾರಣ ಕಡಿಯುವುದೂ ಇಲ್ಲ. ಕೆಲವರನ್ನು ಮಾತ್ರ ಅಟ್ಟಿಸಿಕೊಂಡು ಬಂದು ಎಲ್ಲಿದ್ದರೂ ಬಿಡದೇ ಕಚ್ಚುತ್ತವೆ. ಇಂತಹ ವೈಜ್ಞಾನಿಕತೆ ಎಂದು ಕೊಚ್ಚಿಕೊಳ್ಳುವ ದಿನಗಳಲ್ಲೂ ಕೆಲವು ಪ್ರದೇಶಗಳಲ್ಲಿ ಕೆಲವರು ವಿಷ ಸರ್ಪಗಳ ಕಡಿತವನ್ನು ಕೇವಲ ನಮಗೆಲ್ಲಾ ಹೇಳದಿರುವ ಯಾವುದೋ ಮಂತ್ರದಿಂದ ಹೊರತೆಗೆದು ವಾಸಿಮಾಡುವುದು ಚಮತ್ಕಾರದ ವಿಷಯವಾಗಿದೆ! ದೂರದಲ್ಲಿ ಯಾರಿಗೋ ಹಾವು ಕಚ್ಚಿದರೆ ಆತ/ ಆತನ ಕಡೆಯವರು ದೂರವಾಣಿಯ ಮೂಲಕ ಆ ವ್ಯಕ್ತಿಗಳಿಗೆ ತಿಳಿಸಿಬಿಟ್ಟರೆ ಕರವಸ್ತ್ರವೊಂದನ್ನು ಗಂಟುಹಾಕುತ್ತಾ ಬಾಯಲ್ಲಿ ಏನೋ ಮಟಮಣ ಮಟಮಣ ಮಾಡುವ ಅವರು ಹಾವುಕಡಿದವನನ್ನು ಅವರಲ್ಲಿಗೆ ಕರೆದುಕೊಂಡು ಹೋಗುವವರೆಗೂ ಏನೂ ಆಗದಂತೇ ಬಂಧನ ಹಾಕುತ್ತಾರೆ! ನಂತರ ಅವರಲ್ಲಿಗೆ ಹೋದಾಗ ಸ್ವಲ್ಪ ನೀರು ಹೊಡೆದು ಏನೋ ಹೇಳಿಬಿಟ್ಟರೆ ವ್ಯಕ್ತಿ ಮಾಮೂಲಿಯಾಗಿ ಎದ್ದು ಕೂರುತ್ತಾನೆ! ಇದೆಲ್ಲವನ್ನೂ ನೋಡಿದಾಗ ಅನಿಸುವುದು ನಾಗಗಳೂ ಕೂಡ ಯಾವುದೋ ಹೊಸ ಆಯಾಮವುಳ್ಳ ಲೋಕದ ಕನೆಕ್ಷನ್ ಇರುವಂಥವು ಎಂಬುದು!

ಏನೂ ಇರಲಿ ಎಲ್ಲಾ ನಾಗಗಳನ್ನೂ ನಿರಾಶ್ರಿತ ನಾಗಗಳ ಅಧಿಪತಿಯೆನಿಸಿರುವ ನಾಗೇಶ ಶ್ರೀಸುಬ್ರಹ್ಮಣ್ಯನನ್ನು ಧ್ಯಾನಿಸುತ್ತಾ ನಾಗಪಂಚಮಿಯ ಶುಭಸಂದೇಶಗಳನ್ನು ನಿಮಗೆಲ್ಲಾ ಹಂಚುತ್ತಿದ್ದೇನೆ, ಎಲ್ಲರಿಗೂ ಒಳಿತಾಗಲಿ, ಧನ್ಯವಾದ :

सर्पाधीश नमस्तुभ्यम्
नागानां च गणाधिपः ।
सर्वारिष्ट प्रशमनं
भक्तानां अभयप्रदः ॥

ಸರ್ಪಾಧೀಶ ನಮಸ್ತುಭ್ಯಮ್
ನಾಗಾನಾಂ ಚ ಗಣಾಧಿಪಃ |
ಸರ್ವಾರಿಷ್ಟ ಪ್ರಶಮನಂ
ಭಕ್ತಾನಾಂ ಅಭಯಪ್ರದಃ ||

|| ಓಂ ಸ್ವಸ್ತಿ ||

Tuesday, August 2, 2011

ಜಯಸಿಂಹಾ ಬಂದಾ ಜಯಸಿಂಹಾ ......


ಜಯಸಿಂಹಾ ಬಂದಾ ಜಯಸಿಂಹಾ ......



ಹಾಡು ಕೇಳಿದಾಗ ಮೈಮನ ತುಂಬಿಕೊಳ್ಳುವ ದಿ| ವಿಷ್ಣುವರ್ಧನ್ ಅಭಿನಯದ ’ಜಯಸಿಂಹ’ದ ಜಯಸಿಂಹನ ಪಾತ್ರ ದೃಶ್ಯಮಾಧ್ಯಮದಲ್ಲಿ ಅದನ್ನು ವೀಕ್ಷಿಸುವಾಗ ಕಾಡಿನ ಅಗಾಧ ಅನುಭೂತಿ ಭಾವುಕರಿಗೆ ಭಾಸವಾಗುತ್ತದೆ. ಮುಂದೊಂದು ದಿನ ಕೇವಲ ಕಥೆಗಳಲ್ಲಷ್ಟೇ ಅಸ್ತಿತ್ವದಲ್ಲಿರುವ ಕಾಡುಗಳು ನಿಸರ್ಗದ ರಮಣೀಯತೆಯ ಅವಿಭಾಜ್ಯ ಅಂಗಗಳು. ಹಲವು ನದಿ ತೊರೆಗಳು ಜೀವಜಂತುಗಳಿಗೆ ಪಶು-ಪಕ್ಷಿಗಳಿಗೆ ಆಶ್ರಯತಾಣಗಳಾಗಿರುವ ಅಂತಹ ಕಾಡುಗಳಲ್ಲಿ ವಿಭಿನ್ನ ಜೀವಸಂಕುಲಗಳು ಮನೆಮಾಡಿ ತಂತಮ್ಮ ಆಹಾರಗಳನ್ನೂ ಅಲ್ಲಲ್ಲೇ ಕಂಡುಕೊಂಡು ಹಾಯಾಗಿರುವುದು ಈ ಸೃಷ್ಟಿಯ ಔಚಿತ್ಯಗಳಲ್ಲೂ ಅದ್ಭುತಗಳಲ್ಲೂ ಒಂದು. ಆಹಾರ ಸರಪಳಿಯ ಮೂಲಕ ವೇದಾಂಗಗಳಲ್ಲಿ ಹೇಳಿದ | ಜೀವೋ ಜೀವಸ್ಯ ಜೀವನಂ | ಎಂಬ ಅಂಶವನ್ನು ಸ್ವಲ್ಪ ಕ್ರೌರ್ಯವೇ ಅನಿಸಿದರೂ ವಿಚಿತ್ರಗತಿಯಲ್ಲಿ ಸಮತೋಲನದಲ್ಲಿರಿಸಿದ್ದ ಸೃಷ್ಟಿಯ ಚಮತ್ಕಾರ ಯಾವುದೇ ವೈಜ್ಞಾನಿಕ ವಿಶ್ಲೇಷಣೆಗೆ ನಿಲುಕುವ ಸೂತ್ರವಲ್ಲ !

ಬೆಟ್ಟದ ತುಂಬ ಹಸಿರು ಕಾಡು ಬೆಳೆದಿದ್ದರೆ, ಅಲ್ಲಿ ಅಸಂಖ್ಯ ಮರಮಟ್ಟುಗಳು ಹಲವು ಪ್ರಭೇದಗಳನ್ನು ತೋರುತ್ತಾ ನಿಂತಿದ್ದರೆ, ವಿಧವಿಧದ ಹೂವು-ಕಾಯಿ-ಹಣ್ಣು-ಹಂಪಲು ತುಂಬಿ ಗಿಡಬಳ್ಳಿಗಳು ಆ ಭಾರಕ್ಕೆ ಬಾಗಿ ತೊನೆಯುತ್ತಿದ್ದರೆ, ಬಹುವಿಧದ ಹಕ್ಕಿಗಳ ಕಲರವ ಅಲ್ಲಿನ ಕ್ಷೇತ್ರದಲ್ಲಿ ಇಂಪಾದ ಗಂಧರ್ವಲೋಕವನ್ನು ಸೃಜಿಸಿದ್ದರೆ, ಹರಿವ ನದಿತೊರೆಗಳ ಜುಳುಜುಳು ನಿನಾದ ತಮ್ಮತನವನ್ನು ಮೆರೆದಿದ್ದರೆ, ಹಾರುತ್ತಾ ಜಿಗಿಯುತ್ತಾ ಮೇಯುವ ಜಿಂಕೆ,ಕಡವೆ, ಸಾರಂಗ, ಕೃಷ್ಣಮೃಗ, ಮೊಲ ಮೊದಲಾದ ಸಸ್ಯಾಹಾರೀ ಸಾತ್ವಿಕ ಪಶುಗಳು ಅಲ್ಲಲ್ಲಿ ನಿಂತು ಮೇಯುತ್ತಾ ಕಿವಿನಿಮಿರಿಸಿ ಎತ್ತೆತ್ತಲೋ ತಮ್ಮ ಚಂಚಲ ಕಣ್ಣುಗಳಿಂದ ನೋಡುತ್ತಾ ಇದ್ದರೆ ಆ ದೃಶ್ಯಕಾವ್ಯಕ್ಕಿಂತಾ ಬೇರೆ ಮಹಾಕಾವ್ಯ ಲೋಕದಲ್ಲೇ ಇಲ್ಲವೇನೋ ಅನಿಸಿಬಿಡುತ್ತದೆ !

ಮಳೆಗಾಲದಲ್ಲಿ ಮೋಡಗಳನ್ನು ನೋಡಿ ಹೆಮ್ಮೆಯಿಂದ ಗರಿಬಿಚ್ಚಿ ಕುಣಿಯುವ ನವಿಲುಗಳು-ಅವುಗಳ ನರ್ತನದ ಜೊತೆಗಿನ ಕೂಗು, ಹಸಿರು, ತಿಳಿಹಸಿರು, ನೀಲಿ, ತಿಳಿಹಳದಿ ಬಣ್ಣಗಳಲ್ಲಿ ನಾನಾ ಗಾತ್ರ ವೈವಿಧ್ಯಗಳಲ್ಲಿ ಕಾಣುವ ಗಿಳಿಗಳು, ಅಲ್ಲಲ್ಲಿ ಕಾಣುವ ಚಕೋರ ಪಕ್ಷಿಗಳು, ಕ್ರೌಂಚಪಕ್ಷಿಗಳು, ಮಂಗಟ್ಟೆ ಹಕ್ಕಿಗಳು, ಯಾರದೋ ಭೇಟಿಗೆ ತಡವಾಯಿತೆಂಬಂತೇ ಸರಸರನೇ ಜಿಗಿಯುತ್ತಾ ಸರಿದಾಡುತ್ತಾ ಓಡಾಡುವ ಅಳಿಲುಗಳು, ಚಂಪ್ ಚಂಪ್ ಚಂಪ್ ಚಂಪ್ ಎಂದು ವಿಶಿಷ್ಟ ದನಿಯಲ್ಲಿ ಕೂಗುವ ಕೆಂಚಳಿಲುಗಳು[ ಕ್ಯಾಸಾಳಗಳು], ನಿಧಾನವಾಗಿ ನಡೆಯುತ್ತಾ ಹಾರುತ್ತಾ ಸಾಗುವಾ ಮೈನಾ ಹಕ್ಕಿಗಳು-ಹುರ್ಸಾನ್ಹಕ್ಕಿಗಳು, ಬುಲ್‍ಬುಲ್‍ಗಳು, ಕವಿಯು ಬರೆದಿದ್ದನ್ನು ಬಾಯಿಪಾಠಮಾಡಿ ಹಾಡುವ ಗಾಯಕಿಯರಂತೇ ಹಾಡುವ ಕೋಗಿಲೆಗಳು ಒಂದೇ ಎರಡೇ ಮುಂದಿನ ಹಲವು ವರ್ಷಗಳು ಇರಬೇಕಾದ ಮುಂದಿನ ಮಾನವ ಸಂಕುಲಕ್ಕೆ ಮುದನೀಡಬೇಕಾದ ಅವುಗಳ ಮನೆಗಳು ಕುಲಗಳು, ವಂಶಗಳು ವಿನಾಶದ ಅಂಚಿನಲ್ಲಿರುವುದು ನಿಸರ್ಗ ಪ್ರಿಯರಿಗೆ ವಿಷಾದನೀಯ ಸಂಗತಿ.

ಪ್ರಾಣಿವರ್ಗದಲ್ಲೇ ಬರುವ ಮಾನವ ಮೂಲಭೂತವಾಗಿ ಹಸಿರುಪ್ರಿಯನಂತೆ. ಹಾಗಂತ ಮನೋವೈಜ್ಞಾನಿಕ ಸಂಶೋಧನೆಗಳೇ ಹೇಳಿವೆ. ದುಡ್ಡು ಕೋಟಿಗಟ್ಟಲೇ ಇದ್ದರೂ ಕಾಡುಗಳಿಲ್ಲದ ಬೋಳುಗುಡ್ಡಗಳ ಜೊತೆಗೆ ವಾಸ ಸಾಧ್ಯವೇ ಇಲ್ಲದ ಮಾತು. ಹಿಂದೆಲ್ಲಾ ನಾವು ಓದುತ್ತಿದ್ದೆವು--ಮರಗಳು ನಮಗೆ ಯಾವೆಲ್ಲಾ ರೀತಿಯಲ್ಲಿ ಉಪಕಾರಿಗಳು ಎಂಬಬಗ್ಗೆ. ಮರಗಳು ಯಾವ ರೀತಿಯಲ್ಲಿ ಉಪಯೋಗಕ್ಕೆ ಬರುವುದಿಲ್ಲಾ ಎಂಬುದನ್ನು ಪಟ್ಟಿಮಾಡಿದರೆ ಆ ಪಟ್ಟಿ ಪ್ರಾಯಶಃ ಖಾಲಿಯೇ ಇರುತ್ತದೆ. ಹುಟ್ಟಿದಾರಭ್ಯ ಸಾಯುವವರೆಗೆ ಜಾತಿ-ಮತಗಳ ಭೇದವಿಲ್ಲದೇ ಎಲ್ಲರ ಮನೆಗಳ ಭಾಗವಾಗುವ ಮರಮಟ್ಟುಗಳ ಭಾಗಗಳು ಸತ್ತಮೇಲೂ ಸುಡಲಿಕ್ಕೋ ಶವಪೆಟ್ಟಿಗೆಗೋ ಬಳಸಲ್ಪಡುವುದು ಕಂಡುಬರುತ್ತದೆ. ಇಂದು ಅಧುನಿಕೀಕರಣದಲ್ಲಿ ಸತ್ತನಂತರ ಪರ್ಯಾಯ ಪರಿಕರಗಳನ್ನು ಬಳಸಿದರೂ ಕೊನೇಪಕ್ಷ ಅಲ್ಲೀವರೆಗಾದರೂ ಮರಗಳ ಸಾಂಗತ್ಯ ನಮಗೆ ಬೇಕೇ ಬೇಕಾಗುತ್ತದೆ ಎಂಬುದನ್ನು ಒಮ್ಮೆ ಅವಲೋಕಿಸಿ!

ಜಗತ್ತು ಎಷ್ಟೇ ಮುಂದುವರಿದರೂ ಉಪಜೀವನಕ್ಕೆ ಯಾವ್ಯಾವುದೋ ನೌಕರಿಯೋ ದಂಧೆಯೋ ವಹಿವಾಟೋ ಇದ್ದರೂ, ಹಲವರಿಗೆ ಕೃಷಿ-ವ್ಯವಸಾಯವಿದ್ದರೂ, ಕೈಗಾರಿಕಾ ವಸಾಹತುಗಳು ಕಾಡುಗಳನ್ನು ಮೀರಿಸುವ ಮಟ್ಟದಲ್ಲಿ ಬೆಳೆದಿದ್ದರೂ ಕೇವಲ ಆ ಮೂಲಗಳಿಂದ ಮಾನವ ಜೀವನ ಪರಿಪೂರ್ಣವಾಗುವುದಿಲ್ಲ. ಇವತ್ತಿಗೆ ನಾವು ಮರದ ಪೀಠೋಪಕರಣಗಳಿಗೆ ಬದಲಾಗಿ ಉಪಭೋಗಿಸುತ್ತಿರುವ ಪ್ಲಾಸ್ಟಿಕ್ ಮತ್ತು ಕಬ್ಬಿಣದ ಅಥವಾ ಗಾಜಿನ ಪೀಠೋಪಕರಣಗಳು ಮರದ ತುಂಡುಗಳು ನೀಡುವ ಸರ್ವಋತು ಸ್ಪಂದನಾ ಗುಣಮಟ್ಟವನ್ನು ತೋರುವುದಿಲ್ಲ. ಉದಾಹರಣೆಗೆ ಮಳೆ/ಚಳಿಗಾಲದಲ್ಲಿ ಬೆಚ್ಚಗಾಗಿಯೂ ಬೇಸಿಗೆಯಲ್ಲಿ ತಂಪಾಗಿಯೂ ಭಾಸವಾಗುವ ಮರದ ಪೀಠೋಪಕರಣಗಳು ನಮ್ಮ ಚರ್ಮಕ್ಕೆ ಅತ್ಯಂತ ಅನುಕೂಲಕರ ಆಯಾಮಗಳನ್ನು ಕೊಡುವಂಥವು. ಅಲಂಕಾರದಲ್ಲಿಯೂ ಮರಗಳು ನೀಡುವ ’ಫಿನಿಶಿಂಗ್ ಟಚ್’ ಬೇರೇ ಯಾವ ಮೂಲದ ಪರಿಕರಗಳೂ ನೀಡಲು ಸಾಧ್ಯವೇ ಇಲ್ಲ. ಅಂತರವಿಷ್ಟೇ ಮೈಗೆ ಎಣ್ಣೆಹಚ್ಚಿಕೊಳ್ಳುವುದಕ್ಕೂ ನೀರುಹಚ್ಚಿಕೊಳ್ಳುವುದಕ್ಕೂ ಇರುವಂಥದ್ದು. ಎಣ್ಣೆಯಿಂದ ಚರ್ಮ ಸುಕ್ಕುಗಟ್ಟುವುದಿಲ್ಲ; ನೀರು ಬೇಗ ಆರಿಹೋಗುವುದರಿಂದ ಚರ್ಮಕ್ಕೆ ಆರ್ದ್ರತೆಯನ್ನು ಬಹಳಕಾಲ ಕೊಡುವುದಿಲ್ಲ.

ಕಾಡುಗಳು ಅದು ಹೇಗೆ ಸೃಷ್ಟಿಯಾದವೋ ಸಹಸ್ರಾರು ಜೀವಸಂಕುಲಗಳು ಅಲ್ಲಿ ಹೇಗೆ ಮೈದಳೆದವೋ ಸೃಷ್ಟಿಕರ್ತನಿಗೆ ಮಾತ್ರ ಗೊತ್ತು! ಅಂತಹ ಕಾಡುಗಳನ್ನು ಮನುಷ್ಯ ಪುನಃ ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಇರುವ ಪ್ರಾಣಿ-ಪಕ್ಷಿ ಪ್ರಭೇದಗಳನ್ನು ಕಲೆಹಾಕಿ ಅವುಗಳ ಸಂತಾನೋತ್ಫತ್ತಿಯಲ್ಲಿ ತೊಡಗುತ್ತೇನೆನ್ನುವ ಮನುಷ್ಯನ ಕೈಯ್ಯಲ್ಲಿ ಅವುಗಳ ಅಭ್ಯುದಯವಿಲ್ಲ. ಅವು ಹೇಗೋ ಹುಟ್ಟಿದವು, ತೊಂದರೆಕೊಡದಿದ್ದರೆ ಬೆಳೆಯುತ್ತಿದ್ದವು, ಬಾಳುತ್ತಿದ್ದವು, ತೊಂದರೆಯುಂಟುಮಾಡಿ ಈಗ ರಕ್ಷಿಸುತ್ತೇನೆ ಎಂದರೆ ಅವು ಮರಳಿ ಬರಲಾರವು! ನಾನು ಚಿಕ್ಕವನಿರುವಾಗ ಒಂದಷ್ಟು ದೂರದ ಕಾಡೊಳಗೆ ನಡೆದರೆ ಕಾಣುವ ವನ್ಯಜೀವಿಗಳು-ಕಾಡುಹಕ್ಕಿಗಳು ಇವತ್ತು ಕಾಣುತ್ತಿಲ್ಲ! ಅಂದರೆ ಅರ್ಥಮಾಡಿಕೊಳ್ಳಿ ವರ್ಷಾ ವರ್ಷಾ ಅವುಗಳ ಸಂತತಿ ಕ್ಷೀಣಿಸುತ್ತಲೇ ಇದೆ.

ಮಂಡ್ಯ-ಮೈಸೂರು, ಹಾಸನ-ಸಕಲೇಶಪುರ-ಕೊಡಗಿನ ಕಾಡುಗಳ ಸುತ್ತಮುತ್ತ ಆನೆಗಳ ಹಾವಳಿ ತೀವ್ರವಾಗಿದೆ ಎಂಬುದು ನಮಗೆ ನಿತ್ಯವೂ ಕೇಳಿಬರುವ ಸುದ್ದಿ. ವಾಸ್ತವಿಕತೆಯೆಂದರೆ ಅವುಗಳ ಮೂಲ ಆಹಾರವಾದ ಬಿದಿರಿನ ಬೊಂಬುಗಳು ಹೂ ಬಿಟ್ಟು ಕಾಡಿನಲ್ಲಿ ಬಿದಿರು ಸಂತತಿ ಒಮ್ಮಿಂದೊಮ್ಮೆಲೇ ನಾಶವಾಗುತ್ತಿದೆ. ಅದು ಕೆಲವಾರು ವರ್ಷಗಳಿಗೊಮ್ಮೆ ನಡೆಯುವ ನೈಸರ್ಗಿಕ ಪ್ರಕ್ರಿಯೆ. ನಾಶವಾದ ಬಿದಿರು ಪುನಃ ಚಿಗಿತು ಮೇಲೇಳಲು ಒಂದೆರಡು ವರ್ಷಗಳಾದರೂ ಬೇಕು! ಅಲ್ಲೀವರೆಗೆ ದೈತ್ಯದೇಹೀ ಪ್ರಾಣಿಗಳಿಗೆ ಉದರ ನಿಮಿತ್ತಂ ....ಊಹುಂ ! ಹಿಂದೆಲ್ಲಾ ಹೀಗಾದಾಗ ಪ್ರದೇಶದಿಂದ ಪ್ರದೇಶಕ್ಕೆ ಓಡಾಡುತ್ತಾ ಪರ್ಯಾಯವಾಗಿ ಸಿಗಬಹುದಾದ ಬೈನೆ ಮರಗಳ ತಿರುಳನ್ನೋ ಮತ್ಯಾವುದೋ ಸೊಪ್ಪನ್ನೋ ತಿಂದು ಹೊಟ್ಟೆಹೊರೆದುಕೊಳ್ಳುತ್ತಿದ್ದವು. ಒಂದು ಆನೆಗೆ ಸರಾಸರಿ ೨೫೦ ಕೆಜಿ ಆಹಾರ ಪ್ರತಿನಿತ್ಯ ಬೇಕಾಗುತ್ತದೆ ಎಂದರೆ ಇರುವ ಎಲ್ಲಾ ಆನೆಗಳಿಗೆ ಎಲ್ಲಿ ಆಹಾರವಿದೆ ? ಹಾಗಾದರೆ ಮೊದಲು ಎಲ್ಲಿತ್ತು ?

ಇತ್ತು ಸ್ವಾಮೀ ! ಮೊದಲು ಕಾಡುಗಳೇ ಹೇರಳವಾಗಿದ್ದವು. ಅವುಗಳು ತಿರುಗಾಡಲು ಅವುಗಳದ್ದೇ ರಹದಾರಿಗಳಿದ್ದವು. ವಾಡಿಕೆಯಲ್ಲಿ ನಮ್ಮಲ್ಲಿ ’ಹಾವಸಾಲು’ ಅನ್ನೋ ಪದ ಬಳಕೇಲಿದೆ. ಹಾವಸಾಲು ಎಂದರೆ ಅವು ತಿರುಗಾಡಿ ತಿರುಗಾಡಿ ಸದಾ ಹಾಗೇ ತಿರುಗಾಡುವ ಕೆಲವು ಮಾರ್ಗಗಳು ಅವಕ್ಕೆ ಗುರುತಾಗಿರುತ್ತವೆ. ವೈಜ್ಞಾನಿಕವಾಗಿ ನೋಡಿದರೆ ಅವುಗಳ ಶಾರೀರಿಕ ರಕ್ಷಣೆಗೆ ಒಗ್ಗಬಹುದಾದ ತಗ್ಗು-ದಿಣ್ಣೆ ಜಾಗಗಳನ್ನು ಅವಲೋಕಿಸಿ ಪರಂಪರೆಯಿಂದ ಅವುಗಳು ಆ ಮಾರ್ಗವಾಗಿಯೇ ನಡೆದಾಡುತ್ತಿವೆ. ಅನಾದಿಯಲ್ಲಿ ಅವುಗಳ ಪೂರ್ವಜರು ಹಾಕಿದ ಅಂತಹ ಮಾರ್ಗಗಳ ಮಧ್ಯೆ ಇಂದು ಅಕ್ರಮ-ಸಕ್ರಮಗಳೆಂಬ ಹಲವಾರು ನಾಟಕಗಳಿಂದ ಕಾಡುಗಳು ಕೃಷಿಕರ, ಮಾನವರ ವಶವಾಗಿ ಅಲ್ಲೆಲ್ಲಾ ಮಾನವ ವಸಾಹತು ತಲೆಯೆತ್ತಿದೆ. ತಮ್ಮದಾದ ಜಾಗದಲ್ಲಿ ಇನ್ಯಾರೋ ಬಂದರೆ ನಾವಾದ್ರೆ ಏನುಮಾಡುತ್ತೇವೆ ಎಂಬುದು ನಿಮಗೆಲ್ಲಾ ತಿಳಿದೇ ಇದೆ! ನಿರುಪದ್ರವಿ ಆನೆಗಳು, ಕಾಡುಪ್ರಾಣಿಗಳು ತಮ್ಮ ದಾರಿ, ತಮ್ಮ ಆಹಾರದ ಕಸಿತಕ್ಕೆ ಒಳಗಾಗಿ ಪರೋಕ್ಷ ದೌರ್ಜನ್ಯಕ್ಕೊಳಗಾಗಿ ಬದುಕುವ ಹಂಬಲದಲ್ಲಿ ಹಸಿದ ಹೊಟ್ಟೆಹೊತ್ತು ಮರಿಗಳೊಂದಿಗೆ ಹಳೆಯ ಜಾಗಗಳನ್ನರಸಿ ಹೊರಡುತ್ತವೆ.

ಅವುಗಳ ಹಳೆಯ ಜಾಡು ಇಂದು ಇಟ್ಟಿಗೆ-ಸಿಮೆಂಟುಗಳು ಗೂಡು ! ಅಥವಾ ಕೃಷಿಕರ ಕೆಲಸದ ಒಳಗೂಡು. ಹೀಗಾಗಿ ಒಂದುಕಾಲಕ್ಕೆ ತಾವು ತಮ್ಮ ವಂಶಸ್ಥರು ಉಪಭೋಗಿಸಿದ್ದ ಜಾಗ ತಮಗೆ ದಕ್ಕದೇ ಇರುವುದರಿಂದಲೂ ಆ ಮಾರ್ಗಗಳನ್ನು ಬಿಟ್ಟು ಪರ್ಯಾಯ ಮಾರ್ಗಗಳು ತಿಳಿಯದೇ ಇರುವುದರಿಂದಲೂ ಅವು ನೇರವಾಗಿ ಆ ಮಾರ್ಗಗಳಲ್ಲೇ ಬರುತ್ತವೆ! ಅದರಲ್ಲೇನಿದೆ ತಪ್ಪು ? ಚಿಂತಿಸಿನೋಡಿ-ಅವುಗಳ ಆಹಾರಕ್ಕೆ ಅವು ಈಗ ಏನುಮಾಡಬೇಕು ? ವಿಧಾನಸೌಧದ ಎದುರು ಸೊಂಡಿಲಲ್ಲಿ ಪತಾಕೆ ಹಿಡಿದು ಧರಣಿನಿಲ್ಲಬೇಕೇ? ಕಬಳಿಸುತ್ತಾ ಬರುವ ಗಣಿಧಣಿಗಳ ಯಂತ್ರಗಳಿಗೆ ತಮ್ಮ ಸಂತಾನವೂ ಸೇರಿದಂತೇ ತಾವು ಬಲಿಯಾಗಬೇಕೇ? ಅಥವಾ ವೀರಪ್ಪನ್ ರೀತಿಯ ಇನ್ನೂ ಅವಿತಿರುವ ಹಲವು ಕಾಡುಗಳ್ಳರ ಗುಂಡಿಗೆ ಬಲಿಯಾಗಬೇಕೆ ? ಅವುಗಳಿಗೂ ಸಾಮಾಜಿಕ ನ್ಯಾಯಬೇಡವೇ? ಮೀಸಲಾತಿ ಬೇಡವೇ ? ಅವುಗಳಿಗೆ ರೇಷನ್ ಕಾರ್ಡ್ ಕೊಡುತ್ತೀರೇ ? ಅನಾರೋಗ್ಯ ಪೀಡಿತವಾದಾಗ ನೈಸರ್ಗಿಕವಾಗಿ ಸಿಗುತ್ತಿದ್ದ ಗಿಡಮೂಲಿಕೆಗಳು ನಾಶವಾಗಿ ಅನಾರೋಗ್ಯ ಉಲ್ಬಣಿಸುತ್ತಿದ್ದರೆ ನಿಮ್ಮ ಯಾವುದೋ ಲಸಿಕೆಗಳು ಅವುಗಳ ಆರೋಗ್ಯವನ್ನು ಕಾಪಿಡಲು ಸಾಧ್ಯವೇ ? ಮರಿಗಳಿಗೆ ಓಡಾಡಲು ಆಟವಾಡಲು ಸ್ವಲ್ಪವಾದರೂ ಕಾಡುಬೇಡವೇ ? ಉತ್ತರ ಇದ್ದರೆ ಮಾತನಾಡಿ!

ರಾಜಕಾರಣದ ಅರಾಜಕತೆಯಲ್ಲಿ ಹೇಳಕೇಳುವವರಿಲ್ಲದ ಕಾಡುಮೇಡುಗಳಲ್ಲಿ ಹಗಲೂರಾತ್ರಿ ತಾವೇ ನೇಮಿಸಿದ ಅರಣ್ಯಾಧಿಕಾರಿಗಳನ್ನೂ ಅರಣ್ಯಪಾಲಕರನ್ನೂ ಬೆದರಿಸಿ ಸುಮ್ಮನಿರುವಂತೇ ಮಾಡಿ ಗಿಡಮರಗಳ, ಪಶುಪಕ್ಷಿಗಳ ಮಾರಣಹೋಮ ಮಾಡಿ ಅವುಗಳಿಂದ ಸಿಗಬಹುದಾದ ಏಕಕಾಲದ ದೊಡ್ಡ ಲಾಭದ ’ಲಾಬಿ’ಗೆ ಮುಂದಾದ ಇಂದಿನ ರಾಜಕಾರಣಿಗಳಿಗೆ ಕಿಂಚಿತ್ತಾದರೂ ಆ ಬಗ್ಗೆ ಆಸಕ್ತಿಯಿದೆಯೇ ? ಕಾಡುಗಳನ್ನು ಉಳಿಸುವ ತನ್ಮೂಲಕ ವನ್ಯಜೀವಿಗಳನ್ನೂ ಕಾಪಾಡುವ ಜವಾಬ್ದಾರಿಯನ್ನು ಯಾರಾದರೂ ಒಬ್ಬನೇ ಒಬ್ಬ ಕಂಕಣಬದ್ಧನಾಗಿ ನಡೆಸಿದ ದಾಖಲೆ ಇದೆಯೇ ? ಪುಸ್ತಕಗಳಲ್ಲಿ [ತೆನ್ನಾಲಿ ರಾಮನೋ ಬೀರ್ಬಲ್ಲನೋ ಹೇಳಿದಂತೇ ]ಮರದಮೇಲೆ ಕುಳಿತ ಹಕ್ಕಿಗಳ, ಅಲೆದಾಡುವ ಆನೆ-ಹುಲಿಗಳ ಲೆಕ್ಕವನ್ನು ಇವರು ಬರೆಯಲು ಹೇಳುತ್ತಾರೆಯೇ ಹೊರತು ನಿಜವಾಗಿಯೂ ಬರೆದಷ್ಟಾದರೂ ಇವತ್ತು ಇವೆಯೇ ? ನಿಜಕ್ಕೂ ಈ ಸಂಖ್ಯೆ ಪ್ರಶ್ನಾರ್ಹವಾಗಿದೆ.

ಡಾರ್ವಿನ್ ವಿಕಾಸವಾದದಂತೇ ಪ್ರತಿಯೊಂದೂ ಜೀವಿ ತನ್ನ ಉಳಿವಿಗೆ ಹೋರಾಡುವ ಸನ್ನಿವೇಶದ ಒಂದು ಪರಿ ಆನೆಗಳ ಚಿರತೆಗಳ ಅಥವಾ ಕಾಡುಪ್ರಾಣಿಗಳ ಪುರಪ್ರವೇಶ! ನಾವೇನಾದರೂ ಅವುಗಳ ಮನೆಗಳನ್ನು ಹೊಕ್ಕದೇ ಇದ್ದಿದ್ದರೆ, ಅವುಗಳ ವಸಾಹತುಗಳನ್ನು ಬಲಿತೆಗೆದುಕೊಳ್ಳದೇ ಇದ್ದಿದ್ದರೆ ಸರ್ವಥಾ ಅವು ನಮ್ಮ ಪುರಗಳಿಗೆ ಪ್ರವೇಶಿಸುತ್ತಿರಲಿಲ್ಲ. ಒಂದು ಹಕ್ಕಿ ತನ್ನ ಗೂಡಿನಿಂದ ಕೆಳಗೆ ಬಿದ್ದ ರೆಕ್ಕೆ ಬಲಿಯದ ಮರಿಯನ್ನು ಮಾನವ ತನ್ನ ಕೈಯ್ಯಿಂದ ಮುಟ್ಟಿ ಗೂಡಿಗೆ ಮರಳಿಸಿದಾಗ ಪುನಃ ಸೇರಿಸಿಕೊಳ್ಳದಷ್ಟು ತಮ್ಮದೇ ನೀತಿಯುಕ್ತ ಕಟ್ಟುಪಾಡುಗಳಿರುವ ಮರ್ಯಾದಿತ ಕಾಡುಸಮಾಜ ತಮ್ಮ ಮರ್ಯಾದೆ ಹಾಳಾದರೂ ಚಿಂತೆಯಿಲ್ಲಾ ಬದುಕಲು ಆಹಾರ ಸಿಕ್ಕರೆ ಸಾಕು ಎಂದುಕೊಂಡು ಹಾಗೆ ಮರ್ಯಾದೆಗೆಡಕ ಕಾರ್ಯಕ್ಕೆ ಮುನ್ನುಗ್ಗಿವೆ ! ತಮ್ಮದೇ ಆದ ರೀತಿ-ರಿವಾಜುಗಳನ್ನು ಗಾಳಿಗೆ ತೂರಿ ತಾವು ಬದುಕಲು ಪ್ರಯತ್ನಿಸುವ ಜೀವವಿಕಾಸವಾದ ಸರಿಯೆನ್ನುತ್ತೀರಷ್ಟೇ?

ಮೈಸೂರು ಪೇಟಾ ತೊಡುವ ಮಂದಿಗೆ ಕಾಳಜಿ ಇರದಿದ್ದರೆ ಹಾಳಾಗಿ ಹೋಗಲಿ ನಮ್ನಮ್ಮಲ್ಲಿ ನಮನಮಗೆ ಎಷ್ಟು ಅವುಗಳ ಬಗ್ಗೆ ಕಾಳಜಿ ಇದೆ? ಯಾರದರೂ ಆನೆ ಸಾಕಲು ಒಪ್ಪುವಿರೇ ಸಾಧ್ಯವೇ ? ನಾಣ್ನುಡಿಗಾದರೂ ಹೇಳುತ್ತೇವೆ --ಅದನ್ನು ಸಾಕುವುದು ಆನೆಸಾಕಿದಂತೇ ಅಂತ ಅಲ್ಲವೇ ? ಅಂದಮೇಲೆ ತಪ್ಪು ಪ್ರಾಣಿಗಳದಲ್ಲಾ ಮಾನವರದು ಎಂಬುದು ನಿರ್ಣಯಿಸಬೇಕಾದ ವಿಷಯವಷ್ಟೇ ? ಪ್ರತ್ಯಕ್ಷವೋ ಪರೋಕ್ಷವೋ ಸಂಭಾವನೆಯಿಲ್ಲದೇ ಯಾ ಉಪಜೀವನಕ್ಕೆ ಅನುಕೂಲವಿಲ್ಲದೇ ಯಾವ ಸಂಗೀತಗಾರನೂ ಹಾಡಲಾರ, ಯಾವಕಲಾವಿದನೂ ಚಿತ್ರಿಸಲಾರ, ಯಾವ ಸಾಹಿತ್ಯಕಾರನೂ ಬಹಳಕಾಲ ಬರೆಯಲಾರ, ಯಾವುದೇ ವೃತ್ತಿಯವನೂ ಆ ವೃತ್ತಿಯನ್ನು ನಡೆಸಲಾರ ಅಲ್ಲವೇ ? ಅಂದಮೇಲೆ ಹೊಟ್ಟೆಗೆ ಹಿಟ್ಟೇ ಸಿಗದ ಬೋಳಾದ ಕಾಡಿನ ಕಲ್ಲು[ಅದೂ ಇದ್ದರೆ!]ಗಳ ಮೇಲೆ ನಿಂತು ನವಿಲು ನರ್ತಿಸೀತೇ? ಗಿಳಿ ಕಿಚ್ಪಿಚ್ ಕಿಚ್ಪಿಚ್ ಉಲಿದೀತೇ ? ಕೋಗಿಲೆ ಇಂಪಾಗಿ ಹಾಡೀತೇ ? ಇಂತಹ ಜೀವಸಂಕುಲಗಳ ಅಳಿವು ಉಳಿವಿನ ಪ್ರಶ್ನೆ ಈಗೀಗ ಜಾಸ್ತಿ ಎದುರಿಗೆ ಬರುತ್ತಿದೆ.

ಮನಸ್ಸು ಈ ಬೇಗುದಿಯಲ್ಲಿ ಹಾಗೊಮ್ಮೆ ಹುಡುಕುತ್ತಾ ಜಯಸಿಂಹನ ಹಾಡನ್ನು ನೆನಪಿಸಿಕೊಳ್ಳುತ್ತದೆ. ನೋವುಂಡ ಮನ ನಲಿವು ಪಡೆಯಲು, ಬೇಸರಗೊಂಡ ಜೀವನದ ಏಕತಾನತೆಯಿಂದ ಕೆಲಕಾಲ ಹೊರಹೋಗಿ ನೋಡಿ ಆನಂದಿಸಲು [ಕೊನೇಪಕ್ಷ ಆ ಮಟ್ಟಕ್ಕಾದರೂ] ಕಾಡುಗಳೂ ಕಾಡಿನ ಸಮಾಜವೂ ಬೇಕಲ್ಲವೇ ? ಇದನ್ನು ನೀವೇ ನಿರ್ಧರಿಸಿ, ಕಾಡಿಗೆ/ಪ್ರಾಣಿಗಳಿಗೆ ಆಗಬಹುದಾದ ಅನ್ಯಾಯವನ್ನು ನಿಮ್ಮ ಕೈಲಾದ ಮಟ್ಟಿಗೆ ನಿಯಂತ್ರಿಸಿ, ಸಾಮೂಹಿಕವಾಗಿಯೋ ವೈಯ್ಯಕ್ತಿಕವಾಗಿಯೋ ಅಂತೂ ಹಾಗೊಂದಷ್ಟು ಕಾರ್ಯ ನಡೆಯುತ್ತಾ ಹೋದರೆ ಎಲ್ಲೋ ಒಂದೆರಡು ದೇವರಕಾಡುಗಳಾದರೂ ಉಳಿದುಕೊಂಡಾವು, ಬೆರಳೆಣಿಕೆಯ ಹಕ್ಕಿಗಳಾದರೂ ಬದುಕಿಕೊಂಡಾವು, ನಮಸ್ಕಾರ.

Monday, August 1, 2011

ತಪ್ಪು-ಒಪ್ಪುಗಳು


ತಪ್ಪು-ಒಪ್ಪುಗಳು

ತಪ್ಪ ಹೊರಿಸುವಾಗ ತೆಪ್ಪಗಿರಬೇಕೇಕೆ ?
ತಪ್ಪು ಒಪ್ಪುಗಳಂತು ಸಹಜ ಜೀವನದಿ
ಉಪ್ಪರಿಗೆಯರಸರೂ ತಪ್ಪುಮಾಡದೆ ಇರರು
ತಪ್ಪು ಪುನರಪಿ ಸಲ್ಲ | ಜಗದಮಿತ್ರ

ಹಣವ ಗುರಿಯಾಗಿಟ್ಟು ಗುಣಗಳೆಲ್ಲವ ಮರೆತು
ಗಣಿತೆಗೆದು ಮರಕಡಿದು ಕತ್ತಲೊಳು ಮಾರಿ
ಝಣಝಣದ ಕಾಂಚಾಣ ಕೈಸೇರುತಿರಬಹುದು
ಕಣಜ ಹಲವರ ಸ್ವತ್ತು | ಜಗದಮಿತ್ರ

ಕುದುರಿಸುತ ಹೊಸ ತಂತ್ರ ನೀತಿಯೆಲ್ಲವ ಮರೆತು
ಕುದುರೆವ್ಯಾಪಾರದಂತಿರಲು ಮುಂದದುವೇ
ಹದವರಿಯದಾಗುತ್ತ ಒದರಿ ಕೊಸರೋಡುವುದು
ಅದುರುವುದು ಗಣತಂತ್ರ | ಜಗದಮಿತ್ರ

ಜಗಕೆ ಸಂತಸವೀವೆ ಬಗೆಬಗೆಯ ಮೃಷ್ಟಾನ್ನ
ಮೊಗೆದು ಕೊಡುವೆನು ಎಂಬ ಹಮ್ಮು-ಬಿಮ್ಮಿನಲಿ
ಅಗೆದಗೆದು ಭೂಗರ್ಭ ತಾಯ ನೋಯಿಸಿದಾಗ
ಸೊಗೆದೊಗೆಯುವುದು ಪ್ರಕೃತಿ | ಜಗದಮಿತ್ರ

ಆನೆ ಹುಲಿ ಕರಡಿಗಳು ಊರೊಳಗೆ ನುಗ್ಗುವವು
ಬ್ಯಾನೆಯೆದ್ದಾಗೊಮ್ಮೆ ಹಸಿದ ಹೊಟ್ಟೆಯಲಿ
ಮಾನವನ ಕುಕೃತ್ಯ ಕಾಡನುಂಗಿರಲಾಗಿ
ಮೀನಿಗೂ ನೀರಿರದು ! ಜಗದಮಿತ್ರ

ಕೋಟಿಕೋಟಿಯನಳೆದು ಬೇಡದುದ ನಿರ್ಮಿಸಲು
ಆಟದಂಗಳವೇನು ರಾಜ್ಯಭಾರವದು ?
ಮೇಟಿಯೋಗಿಯ ಮರೆತು ಮತ್ತೊಂದ ಹಂಬಲಿಸೆ
ಆಟದಲಿ ಅಪಜಯವು | ಜಗದಮಿತ್ರ

ಪಕ್ಷವನು ಕಟ್ಟುವೊಲು ಅಕ್ಷಿಯನು ಓಡಿಸುತ
ವಕ್ಷದಲಿ ನಿಂತ ವಿರಂಚಿಯಂದದಲಿ
ಕಕ್ಷೆಯನು ಪಡೆದಜನ ಇಕ್ಷುಚಾಪದಿ ಮೆರೆವರ್
ರಕ್ಷೆ ಪಕ್ಷಕೆ ಮುಖ್ಯ | ಜಗದಮಿತ್ರ

’ಅಪ್ಪ-ಮಕ್ಕಳು’ ಸೇರೆ ದೇಶವಾಗುವುದಿಲ್ಲ
ರಪ್ಪನೇ ರಾಚುವುದು ಕಪಟ ಧೂರ್ತತನ !
ತೊಪ್ಪೆಹೊರಿಸುವ ಜನರು ಜಗದಿ ಮುಂದಾಗುವರು
ಅಪ್ಪಟವು ಜನಸೇವೆ | ಜಗದಮಿತ್ರ

ಮಾಯಕದ ’ಕೈ’ಗಳಲಿ ದೇಶದಾಟವೆ ಕೆಡುಗು
ನಾಯಕರ ಕೊರತೆಯಿದೆ ಹಲವು ನಾಯಕರು !
ಆಯಕಟ್ಟಳೊಗಿರುವ ಅವಕಾಶ ಮಾರಿದರು ! [ 2g spretrum ]
ಗಾಯ ಹುಲಿ ಹುಣ್ಣಂತೆ | ಜಗದಮಿತ್ರ

ಪಾಯ ಗಟ್ಟೀಗೊಳಿಸಿ ರಾಷ್ಟ್ರದುನ್ನತಿ ಬಯಸು
ಹಾಯಹರಿಗೋಲಂತೆ ಹರಿದು ಬಿಡಬೇಡ
ಹೇಯಕೃತ್ಯವ ಗೈದ ರಾಜಕೀಯಸುರರನು
ಧ್ಯೇಯದಿಂ ಬಗ್ಗುಬಡಿ | ಜಗದಮಿತ್ರ

Saturday, July 30, 2011

ಹತ್ತಾರು ಜನ ಸೇರಿ ಮನೆಯೊಂದ ಕದ್ದರು ಸಿಕ್ಕಿಬಿದ್ದವನೊಬ್ಬ ಶಿಕ್ಷೆಗೊಳಗಾದ !


ಹತ್ತಾರು ಜನ ಸೇರಿ ಮನೆಯೊಂದ ಕದ್ದರು
ಸಿಕ್ಕಿಬಿದ್ದವನೊಬ್ಬ ಶಿಕ್ಷೆಗೊಳಗಾದ !

ನಿಮ್ಮ ಹತ್ತಿರ ಹೇಳಲೇಬೇಕಾದ ಕೆಲವು ಅಂಶಗಳು ಇದ್ದವು. ಹೇಳದೇ ಇದ್ದರೂ ಎಂದಾದರೂ ನಿಮ್ಮ ಗಮನಕ್ಕೆ ಬರಬಹುದು, ಆದರೆ ತಡವಾಗಿ ಗಮನಕ್ಕೆ ಬಂದಾಗ ಸ್ವಲ್ಪ ಪಶ್ಚಾತ್ತಾಪವಾಗಬಹುದು. ಕೋತಿ ಬೆಣ್ಣೆಯನ್ನು ತಿಂದುಕೊಂಡು ಮೇಕೆಬಾಯಿಗೆ ಒರೆಸಿದ ಕತೆ ಇದು. ಹೀಗೇ ಚಿಂತಿಸುತ್ತಿದ್ದಾಗ ಮನದಲ್ಲಿ ಕೆಲವು ರಾಜಕೀಯದ ದುಗುಡಗಳು ರಕ್ಕಸರೂಪ ತಳೆದವು. ರೂಪತಳೆದ ರಕ್ಕಸರು ತಾವು ತಾವೇ ಹೊಡೆದಾಡಲು ನಿಂತಾಗ ತಡೆಯುವವರೇ ಇಲ್ಲವಾಗಿ ನಿತ್ರಾಣನಾಗುವ ಸ್ಥಿತಿಯಿತ್ತು. ಹಾಗಾಗುವ ಮುನ್ನ ನನ್ನನ್ನು ಬಚಾವ್ ಮಾಡ್ಕೊಳ್ಳುವುದಕ್ಕೆ ದಾರಿ ಹುಡುಕುತ್ತಿರುವಾಗ ನನಗೆ ದಕ್ಕಿದ ಅಂಶಗಳು ಇಷ್ಟು:

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ರಾಜಕೀಯ ಪರಿಸ್ಥಿತಿ ಉದ್ಭವವಾಗಿದ್ದು ನಮ್ಮ ಮತದಾರರ ತಪ್ಪು ಮುಂಧೋರಣೆಯ ಪರಿಣಾಮವೇ. ಅದರಲ್ಲೂ ನಮ್ಮ ಸಂವಿಧಾನದಲ್ಲಿನ ಲೋಪದೋಷಗಳು ಮೆರವಣಿಗೆ ಹೊರಟಾಗ ಪ್ರಜಾಪ್ರಭುತ್ವವೇ ಬಸವಳಿಯುತ್ತದೆ! ಅಂಬೇಡ್ಕರ್ ಕಾಲದ ಸಂವಿಧಾನದ ಕರಡನ್ನು ಇನ್ನೂ ತಿದ್ದದೇ ಇರುವುದು ಮೊದಲ ತಪ್ಪಾಗಿದೆ. ಇವತ್ತಿನ ನೂರಿಪ್ಪತ್ತು ಕೋಟಿ ಜನಸಂಖ್ಯೆಯನ್ನು ಏಕಛತ್ರದಡಿಯಲ್ಲಿ ನಿಭಾಯಿಸುವಲ್ಲಿ ಈಗಿರುವ ಸಂವಿಧಾನದ ಕೆಲವು ಕಟ್ಟುಪಾಡುಗಳು ನ್ಯೂನತೆ ಹೊಂದಿರುವುದು ಕಂಡುಬರುತ್ತದೆ.

ಕರ್ನಾಟಕದಲ್ಲಿ ಬಿಜೆಪಿ ಉಳಿದ ದಕ್ಷಿಣ ಭಾರತದ ರಾಜ್ಯಗಳಲ್ಲಿರುವಂತೇ ಗಂಜಿಯಲ್ಲಿ ಬಿದ್ದ ನೊಣದ ರೀತಿ ಆಗಿಬಿಟ್ಟಿತ್ತು. ಆರಕ್ಕೇಳದ ಮೂರಕ್ಕಿಳಿಯದ ಬಿಜೆಪಿಯ ಶಾಸಕರ ಸಂಖ್ಯೆಯಲ್ಲಿ ಯಡ್ಯೂರಪ್ಪ ಪಕ್ಷವನ್ನು ಸಂಭಾಳಿಸುತ್ತಾ ವಿರೋಧ ಪಕ್ಷದ ನಾಯಕ್ ಸ್ಥಾನದಲ್ಲಿ ಕೊತು ಭಜನೆಯಲ್ಲಿ ಕಾಲ ಕಳೆದಿದ್ದು ಬಹಳ ಸಮಯವಾಗಿತ್ತು. ಪ್ರತೀಬಾರಿ ತಾಳತಂಬೂರಿ ಕೈಯೊಳಗೆ ವಿಠಲನ ಭಜನೆ ಮನದೊಳಗೆ ಎಂದುಕೊಂಡು ನಾವು ಯಾವುದಕ್ಕೂ ಅಡ್ಡಿಪಡಿಸುವವರಲ್ಲ, ನಮಗೆ ಸಂಖ್ಯಾಬಲ ಕಮ್ಮಿ ಇದೆ, ನಾವು ವಿರೋಧಪಕ್ಷದ ಸ್ಥಾನದಲ್ಲಿ ಕೂತುಕೊಳ್ಳುತ್ತೇವೆ ಎಂಬ ಮಾತನ್ನು ಉದ್ಗರಿಸುತ್ತಾ ಸೈಲೆಂಟಾಗಿ ವಿಧಾನಸಭೆಯಲ್ಲಿ ಕೂತ ಜನ ಬಿಜೆಪಿಯವರು. ಆಳುವ ಪಕ್ಷಗಳ ತಪ್ಪುಗಳನ್ನು ಅತಿಸೂಕ್ಷ್ಮವಾಗಿ ಗಮನಿಸುವ ಬುದ್ಧಿಮತ್ತೆಯಾಗಲೀ ನುಂಗಣ್ಣಗಳ ಜಾಡನ್ನು ಹಿಡಿದು ಜಾಲಾಡಿ ಅವರನ್ನು ಹಣ್ಣುಗಾಯಿ-ನೀರುಗಾಯಿ ಮಾಡುವ ಜಾಯಮಾನವಾಗಲೀ ಬಿಜೆಪಿಯ ಜನಕ್ಕಿರಲಿಲ್ಲ.

ಕೆಲವೊಮ್ಮೆ ಅಪರೂಪಕ್ಕೆ ಎಲ್ಲೋ ಕತ್ತಲಲ್ಲಿ ಯಾರೋ ದಾರಿಹೋಕನನ್ನು ಕಂಡು ಬೊಗಳುವ ನಾಯಿಗಳಂತೇ ವಿಧಾನ ಸಭೆಯಲ್ಲಿ ಅಡ್ಡಡ್ಡ ಮುಖಹಾಕಿ ಕೂಗಿದ್ದು ಬಿಟ್ಟರೆ ದಾಖಲೆ ಸಮೇತ ಯಾರನ್ನೂ ಹಿಡಿಯುವ ದಾರ್ಷ್ಟ್ಯತನ ಯಾರಲ್ಲೂ ಕಾಣಲಿಲ್ಲ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಕೆಳಗಿಳಿದ ನಂತರ ಯಾವೆಲ್ಲಾ ಮುಖ್ಯಮಂತ್ರಿಗಳು ಬಂದರೋ ಎಲ್ಲರೂ ಬೇಕಷ್ಟು ಆಸ್ತಿಗಳನ್ನು ಮಾಡಿಕೊಂಡವರೇ. ಯಾರೂ ಸಂಭಾವಿತರೇನಲ್ಲ. ಕನ್ನಡದ ನಟ ರಾಜ್‍ಕುಮಾರ್ ರ ಬಿಡುಗಡೆಗೆ ವೀರಪ್ಪನ್‍ಗೆ ಕೊಡಲು ಹೊಂದಿಸಿದ ಹಣ ಎಲ್ಲಿಂದ ಬಂತು ಎಂಬುದು ಇನ್ನೂವರೆಗೂ ನಿಗೂಢ! ಎಸ್ಸೆಮ್ ಕೃಷ್ಣ ಸರಕಾರ ಅಧಿಕಾರದಲ್ಲಿದ್ದಾಗ ಬೆಂಗಳೂರನ್ನು ಸಿಂಗಪೂರ್ ಮಾಡಲು ಹೊರಟವರು-ಗಾಡಿ ಮುಗ್ಗರಿಸಿಬಿಟ್ಟಿತ್ತು; ಆದರೆ ದಾಖಲಾತಿಗಳಲ್ಲಿ ಖರ್ಚುಗಳು ಕಮ್ಮಿಯೇನಿರಲಿಲ್ಲ! ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಪಡಾಬಿದ್ದ ಜಮೀನುಗಳು ರೆಕ್ಕೆ-ಪುಕ್ಕ ಬಲಿತ ಹಕ್ಕಿಗಳಂತೇ ಗರಿಗೆದರಿ ಮೈಕೊಡವಿಕೊಂಡು ಸೈಟುಗಳಾಗಿ ಬದಲಾದವು, ಬದಲಾದ ಸೈಟುಗಳು ಯಾರ್ಯಾರದೋ ಕೈವಶವಾದವು !

ಯಾವುದೇ ಕಳ್ಳತಂತ್ರಗಳು ನಡೆದು ಆಳುವ ಜನ ತಿಮಿಂಗಲಗಳ ಥರಾ ಕಬಳಿಸುತ್ತಾ ಸಾಗಿದ್ದರೂ ಯಡ್ಯೂರಪ್ಪ ಕಂಬಳಿಹೊದ್ದು ಮಲಗಿಬಿಟ್ಟಿದ್ದರು. ಆಗ ದಾಖಲಾತಿಗಳು ಆಳುವವರ ಅದೃಷ್ಟಕ್ಕೋ ಎನ್ನುವಂತೇ ಗಣಕೀಕೃತವಾಗಿರಲಿಲ್ಲ. ರೈಟ್ ಟು ಇನ್ಫಾರ್ಮೇಷನ್ ಕಾಯಿದೆ ಜಾರಿಗೆ ಬಂದಿರಲಿಲ್ಲ! ಹೀಗಾಗಿ ಸಮರ್ಪಕವಾದ ಸರ್ಕಾರೀ ದಾಖಲಾತಿಗಳ ಕ್ರೋಢೀಕರಣವೂ ಅಷ್ಟು ಸಲೀಸಾಗಿರಲಿಲ್ಲ. ಮಣ್ಣಿನ ಮಗನಾಗಿ ಭೂಮಿಯನ್ನೇ ಅತಿಯಾಗಿ ಪ್ರೀತಿಸುವ ಗೌಡರ ಕುಟುಂಬದ ಮೂಲಮಂತ್ರ ಭೂಮಿಯನ್ನು ವಶಕ್ಕೆ ಪಡೆಯುವುದು, ಬೇನಾಮಿ ಹೆಸರಲ್ಲಿ ಅದನ್ನು ಖಾತೆಬರೆಸಿಕೊಳ್ಳುವುದು ಆಗಿತ್ತು. ತಮ್ಮ ಅನುಕೂಲಕ್ಕೆ ಹೇಗೆಲ್ಲಾ ಬೇಕೋ ಹಾಗೆಲ್ಲಾ ಆಳುವ ಪಕ್ಷದೊಳಗೇ ತೂರಿಕೊಂಡು ಕೆಲಸಮಾಡಲು ನೋಡಿದ ಕುತ್ಸಿತ ರಾಜಕೀಯ ಅವರದ್ದು. ಯಾವ ಪಕ್ಷಬಂದರೂ ಅವರೊಂದಿಗೆ ತಾವಿದ್ದೇವೆ ಎನ್ನುವ ಹೇಳಿಕೆಕೊಡುತ್ತಾ ಸಮಯ ಸಿಕ್ಕಾಗಲೆಲ್ಲಾ ದುರುಪಯೋಗ ಪಡಿಸಿಕೊಂಡ ಜನ ಅವರು.

ಇಂತಹ ಸಮಯದಲ್ಲಿ ಜನತಾದಳ ಇಬ್ಭಾಗವಾದಾಗ ಹುಟ್ಟಿಕೊಂಡ ಜನತಾದಳ [ಸೆಕ್ಯೂಲರ್] ಎಂಬ ಹೆಸರಿನ ಪಕ್ಷಕ್ಕೆ ರಾಷ್ಟ್ರೀಯ ಪಕ್ಷವೆಂದು ಸ್ವಘೋಷಣೆ ಮಾಡಿಕೊಂಡಿದ್ದೂ ಅಲ್ಲದೇ ಮುಂದೆ ಅದರಲ್ಲಿ ತಮ್ಮ ಅನುಕೂಲಕ್ಕಾಗಾಗಿ ಎಳೆದು ಸೇರಿಸಿಕೊಂಡಿದ್ದ ಸಿದ್ಧರಾಮಯ್ಯ, ಸಿಂಧ್ಯಾ ಮೊದಲಾದವರನ್ನು ಬೇಷರತ್ತಾಗಿ ಓಡಿಸಿ ಅಪ್ಪ ರಾಷ್ಟ್ರಾಧ್ಯಕ್ಷ ಮಗ ರಾಜ್ಯಾಧ್ಯಕ್ಷ ಆಗಿ ಮನೆಯ ಪಕ್ಷವೆಂದು ಜಗಜ್ಜಾಹೀರು ಪಡಿಸಿದ ಏಕಮೇವಾದ್ವಿತೀಯ ಸಾಹಸ ಗೌಡರದು. ತಾನು ಜನಾನುರಾಗಿ ಮಣ್ಣಿನ ಮಕ್ಕಳ ಆರೈಕೆ ಮಾಡುತ್ತೇನೆನ್ನುತ್ತಾ ತಿರುಗಿದ ದೊಡ್ಡ ಗೌಡರು ಅದೃಷ್ಟ ಖುಲಾಯಿಸಿ ಪ್ರಧಾನ ಮಂತ್ರಿಯಾದಾಗ ೧೫-೨೦ ಬಾರಿ ಇಡೀ ಬೆಂಗಳೂರಿಗೆ ಮಾವಿನ ತೋರಣ ಹಾಕಿಸಿ ಟ್ರಾಫಿಕ್ ಜಾಮ್ ಮಾಡಿಸಿ ಭೇಟಿಕೊಟ್ಟಿದ್ದು ಬಿಟ್ಟರೆ ತಮ್ಮ ತವರು ಜಿಲ್ಲೆ ಹಾಸನದ ಅಭಿವೃದ್ಧಿಗೂ ಕಡ್ಡೀಕೆಲಸ ಮಾಡಿದವರಲ್ಲ!

ಚುನಾವಣೆಯಲ್ಲಿ ಗೆದ್ದವರು ಅತಂತ್ರರಾದಾಗ ತಾವು ಸಪೋರ್ಟ್ ಕೊಡುತ್ತೇವೆ ಎಂದು ಸೂಟ್ ಕೇಸ್ ವ್ಯವಹಾರ ಆರಂಭಿಸಿದ ಗೌರವಕ್ಕೆ ಪಾತ್ರವಾದುದೂ ಅದೇ ಪಕ್ಷ. ಕಾಂಗ್ರೆಸ್ ಜೊತೆಗೆ ಸಮ್ಮಿಶ್ರ ಸರಕಾರ ರಚಿಸಿ ಅಲ್ಲಿ ತಮ್ಮ ಬೇಳೆ ಬೇಯಲು ತಡವಾದಾಗ ಕಳ್ಳ ದಾರಿ ಹುಡುಕಿ " ಮಗನೇ ಹೀಗೆ ಮಾಡಿಬಿಡೋಣ " ಎಂದು ಕುಮಾರನಿಗೆ ಕಿವಿಯೂದಿ ತಾನು ಮುಖದ ಮೇಲೆ ಟವೆಲ್ ಹಾಕಿಕೊಂಡವರ ರೀತಿ ಏನೂ ಕಾಣಲಿಲ್ಲ ಎಂದುಕೊಳ್ಳುತ್ತಾ ಇತ್ತ ಮಗನನ್ನು ಬಿಜೆಪಿಯವರ ಜೊತೆ ಕಳಿಸಿ ಮತ್ತೆ ಹೊಸ ಸಮ್ಮಿಶ್ರ ಸರಕಾರ ತಂದು ಕಾಂಗ್ರೆಸ್‍ನ್ನು ದೇಶದಿಂದಲೇ ಉಚ್ಛಾಟಿಸಲು ಹೊರಟಿದ್ದ ನಿಸ್ಸೀಮ ಗೌಡರು ತಮ್ಮ ದಾಳವನ್ನು ಪ್ರಯೋಗಿಸುತ್ತಲೇ ಇದ್ದರು. ಯಾವಾಗ ತಾನು ಹೇಳಿದ್ದನ್ನು ಸಖ್ಯದಲ್ಲಿರುವ ಇತರ ಪಕ್ಷಗಳು ಕೇಳುವುದಿಲ್ಲವೋ ಆಗೆಲ್ಲಾ ಭೂತೋಚ್ಛಾಟನೆ ಮಾಡಿದಂತೇ ಅವರನ್ನು ಉಚ್ಛಾಟಿಸುವ ಮನೋಧರ್ಮ ಬೆಳೆಸಿಕೊಂಡ ಅಪ್ಪ-ಮಕ್ಕಳು ಹರದನ ಹಳ್ಳಿಯ ೧೧ ಎಕರೆ ಕೃಷಿ ಜಮೀನಷ್ಟೇ ಮೂಲವಾಗಿ ಹೊಂದಿದ್ದವರು ಇಂದು ಸಾವಿರಾರು ಎಕರೆ ಕೃಷಿಭೂಮಿ, ಕೋಟಿಗಟ್ಟಲೆ ಆಸ್ತಿಮಾಡಿರುವುದು ಜನರ ಕಣ್ಣಿಗೆ ಕಂಡರೂ ಲೋಕಾಯುಕ್ತರಿಗೆ ಸಿಗುವ ಕಡತಗಳು ಮಾಯವಾಗಿವೆ! ಅಸಲಿಗೆ ಅವರು ಗುಳುಂ ಮಾಡುವ ಹೊತ್ತಿಗೆ ಲೋಕಾಯುಕ್ತರಿಗೆ ಅಷ್ಟು ಸ್ವಾತಂತ್ರ್ಯವೇ ಇರಲಿಲ್ಲ!

ಬಿಜೆಪಿಯ ಅಳಿವು ಉಳಿವೇ ಪ್ರಶ್ನೆಯಾಗಿದ್ದಾಗ ತಾವು ಅದನ್ನು ಬಲಪಡಿಸಿದರೆ ಅದರಿಂದ ಅಧಿಕಾರವೂ ಆ ಮೂಲಕ ಎಲ್ಲಾ ಲಾಭವೂ ತಮದಾಗಬಹುದೆಂಬ ಮುಂಧೋರಣೆ ತಳೆದಿದ್ದ ರೆಡ್ಡಿ ಬ್ರದರ್ಸ್ ಬಿಜೆಪಿಯ ಬಾಗಿಲು ತಟ್ಟಿದ್ದರು. ರೋಗಿ ಬಯಸಿದ್ದೂ ಹಾಲು ವೈದ್ಯರು ಹೇಳಿದ್ದೂ ಹಾಲು ಎನ್ನುವ ಹಾಗೇ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಬಿಜೆಪಿಗೆ ಆರ್ಥಿಕ ಸ್ವಾತಂತ್ರಬರುವಂತೇ ಫಂಡಿಂಗ್ ಮಾಡಿಕೊಂಡು ನಿಧಾನವಾಗಿ ಬಿಜೆಪಿಯೊಳಗೆ ಕುಕ್ಕರಿಸಿದವರೇ ರೆಡ್ಡಿಬ್ರದರ್ಸ್ ! ಅಂದಿನ ದಿನಗಳಲ್ಲಿ ಆಗಷ್ಟೇ ಇನ್ನೂ ಕೋಟಿಗಳ ಲೆಕ್ಕದಲ್ಲಿ ಚಿಗಿತಿದ್ದ ಗಣಿದೊರೆಗಳು ಮುಂದೆ ಸಾವಿರಕೋಟಿ ಲಕ್ಷಕೋಟಿ ಎಣಿಸಬಹುದೆಂಬ ಕಾರಣಕ್ಕೆ ಹಾಗೆ ಬಂದರು ಎಂಬುದು ಬಿಜೆಪಿಗೂ ಮೊದಲು ತಿಳಿಯಲಿಲ್ಲ! ಅದು ’ ಆ ಮಟ್ಟಕ್ಕಿದೆ ’ ಎಂದು ಅರ್ಥವಗುವಾಗ ತಡವಾಗಿ ಹೋಗಿತ್ತು ! ಆಕ್ಟೋಪಸ್‍ನಂತೇ ಅವರು ಬಿಜೆಪಿಯನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು. ಸೋತವ ಸತ್ತ ಅನ್ನುವ ಕಾಲ ಇದಾದ್ದರಿಂದ ಗೆಲ್ಲುವ ತಂತ್ರವನ್ನು ಹೆಣೆಯುವಲ್ಲಿ ಬೆಕ್ಕಿಗೆ ಬೆಣ್ಣೆ ತೂಗಲು ಬಂದ ಮಂಗಗಳು ಅವರಾದರು! ಹೊಸದಾಗಿ ಮದುವೆಯಾದ ದಂಪತಿ ತಮ್ಮಲ್ಲಿನ ದೌರ್ಬಲ್ಯಗಳ ಅರಿವಿರದೇ ಅನ್ಯೋನ್ಯವಾಗಿರುವಂತೇ ಈ ಮೈತ್ರಿ ಬೆಳೆಯುತ್ತಲೇ ಸಾಗಿತು.

ತಮಗೆ ಎರಡು ವರ್ಷಗಳ ನಂತರ ಅಧಿಕಾರ ಕೊಡುವುದಾಗಿ ನಂಬಿದ್ದ ಯಡ್ಯೂರಪ್ಪನವರಿಗೆ ಯಾವಾಗ ಭ್ರಮನಿರಸನವಾಯಿತೋ, ಎರಡು ವರ್ಷಗಳು ಮುಗಿದರೂ " ಯಡ್ಯೂರಪ್ಪನವರಿಗೆ ಮುಖ್ಯಮಂತ್ರಿಯಾಗುವ ಯೋಗವೇ ಇಲ್ಲವೆಂದು ಜ್ಯೋತಿಷಿಗಳು ಹೇಳಿದ್ದಾರೆ " ಎಂಬ ಅಸಂಬದ್ಧ ಹೇಳಿಕೆಗಳನ್ನು ಕೊಡುತ್ತಾ ತಾನೇ ಮುಂದುವರಿಯಲು ಹಪಹಪಿಸಿದ ಅಧಿಕಾರದಾಹೀ ಜನ ಕುಮಾರಸ್ವಾಮಿ. ಕುಮಾರಸ್ವಾಮಿಯ ಕಾಲಘಟ್ಟದಲ್ಲಿಯೇ ಗಣಿರಾಜಕರಣ ತಾರಕ್ಕಕ್ಕೇರಿತ್ತು ಎಂಬುದು ಸುಳ್ಳಲ್ಲ. ಪಡೆಯುವ ಕಪ್ಪುಹಣ ಸಾಲದಾಗಿ ರೆಡ್ಡಿಗಳ ಜತೆ ವೈರತ್ವ ಕಟ್ಟಿಕೊಂಡು ಅನಿಲ್ ಲಾಡು-'ಕೇಸ್ರೀಬಾತು' ಮುಂತಾದ ಜನರನ್ನು ಬೆನ್ನುತಟ್ಟಿ ಬೆಳೆಸಿದ [ಅಪ]ಖ್ಯಾತಿ ಆ ಸರಕಾರಕ್ಕೆ ಸಲ್ಲಬೇಕು. ಜನರೊಂದಿಗೆ ಹಳ್ಳಿಗಳಲ್ಲೇ ರಾತ್ರಿಕಳೆಯುತ್ತೇನೆ ಎಂಬ ಹೊಸ ಪ್ರಹಸನ ಆರಂಭಿಸಿ ಉತ್ತರಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಏನೇನೂ ಅನುಕೂಲವಿಲ್ಲದ ಮನೆಗಳಲ್ಲಿ ವಿಶ್ವಾಮಿತ್ರ ಸೃಷ್ಟಿಯಂತೇ ಹೊಸದಾಗಿ ಎಲ್ಲಾ ಅನುಕೂಲಗಳನ್ನೂ ತನ್ನ ಬರುವಿಕೆಯೊಳಗೆ ನಿರ್ಮಿಸಲು ಆದೇಶಿಸಿ, ತನಗೆ ಬೇಕಾದ ಜನ ಆ ಕೆಲಸವನ್ನು ಪೂರೈಸಿದಾಗ ಅಲ್ಲಿಗೆ ಹೋಗಿದ್ದು ಮಾಧ್ಯಮಕ್ಕೆ ಪೋಸುಕೊಟ್ಟು ಅಲ್ಲಿಂದ ಹೊರಟುಹೋದಮೇಲೆ ಮಡಗಿದ್ದ ಎಲ್ಲಾ ಸವಲತ್ತುಗಳನ್ನೂ ಆ ಮನೆಗಳ ಬಡಪಾಯಿಗಳಿಂದ ಕಿತ್ತುಕೊಂಡ ಹೆಗ್ಗಳಿಕೆ ಕುಮಾರಣ್ಣನಿಗೆ ಸಲ್ಲಬೇಕು !

ಚುನಾವಣೆ ಹೇಗೂ ಇರಲಿ, ಯಾರು ಬಂದರೂ ಅಧಿಕಾರ ನಮ್ಮ ಕೈಯ್ಯಲ್ಲೇ ಎಂಬ ಹಿಂಬಾಗಿಲ ತಂತ್ರ ಆರಂಭಿಸಿದ ಜೆಡಿಎಸ್ ಎಂಬ ಅಪ್ಪ-ಮಕ್ಕಳ ಪಕ್ಷ ಅಧಿಕಾರಕ್ಕಾಗಿ ಏನೇನು ಮಾಡಬೇಕೋ ಅಷ್ಟನ್ನೂ ಮಾಡಿ ಆ ಕಸರತ್ತು ಫಲಕೊಡದಾದಾಗ ಆಳುವ ಪಕ್ಷವನ್ನು ಉರುಳಿಸುವ ಕುತಂತ್ರವನ್ನು ಹೆಣೆಯತೊಡಗಿದರು. ಇಂತಹ ಸಮಯದಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡ ಎನ್ನುವ ಸನ್ನಿವೇಶದಲ್ಲಿ ಕಮಲಪಾಳಯಕ್ಕೆ ’ಆಪರೇಶನ್ ಕಮಲ’ ಎಂಬ ಹೊಸ ಸರ್ಕಸ್ಸು ಆರಂಭಿಸಬೇಕಾಗಿ ಬಂತು. ಕುಮಾರಣ್ಣ ಕಲಿಸಿದ ಕುದುರೆವ್ಯಾಪಾರದ ’ನೀತಿ’ಯನ್ನು ಸಹೋದ್ಯೋಗಿಗಳಾಗಿ ಇವರೂ ಕಲಿತಿದ್ದರಲ್ಲಾ ಅದು ಇಲ್ಲಿ ಉಪಕಾರಕ್ಕೆ ಬಂತು! ಆ ಕೆಲಸಕ್ಕೆ ಉಪಯೋಗಿಸಿದ ಹಣಕ್ಕೆ ಬಡ್ಡಿ, ಚಕ್ರಬಡ್ಡಿ ಸಮೇತ ವಸೂಲಾಗಬೇಕು---ಅದಕ್ಕಾಗಿ ತಮಗೆ ಗಣಿಗಳಲ್ಲಿ ಏನಾದರೂ ಮಾಡಲು ಬಿಡಿ ಎಂದು ’ ಬ್ಲ್ಯಾಕ್ ಮೇಲ್’ ತಂತ್ರ ಆರಂಭಿಸಿದ್ದೂ ಅದೇ ಜನ[ರೆಡ್ಡಿ ಬ್ರದರ್ಸ್ ].

ಯಡ್ಯೂರಪ್ಪ ಗಣಿಗಳ ಬಗ್ಗೆ ಅಷ್ಟು ಆಸಕ್ತಿ ತಳೆದವರಾಗಿರಲಿಲ್ಲ. ತನ್ನ ಕುರ್ಚಿಯ ಭದ್ರೆತೆಗಾಗಿ ಗಣಿಧಣಿಗಳು ಹೇಳುವ ಮಾತುಗಳನ್ನು ಅಕ್ಷರಶಃ ಪಾಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಯಡ್ಯೂರಪ್ಪರದಾಗಿತ್ತು. ಸದಾ ತಮ್ಮಮಾತು ನಡೆಯಬೇಕೆಂಬ ಅಪೇಕ್ಷೆಯಲ್ಲಿರುವ ಅನಂ‍ಕುಮಾರ್ ಪಕ್ಷದೊಳಗೇ ತನಗೆ ಪ್ರತ್ಯೇಕ ಬಣವನ್ನೂ ಸೃಷ್ಟಿಸಿಕೊಂಡಿದ್ದ ಜನ. ಹೊರಗಿನಿಂದ ಯಡ್ಯೂರಪ್ಪನವರಿಗೆ ಬೆಂಬಲ ಕೊಟ್ಟರೂ " ನಾವೆಲ್ಲಾ ಸೇರಿ ಬಿಜೆಪಿ ಸರಕಾರವನ್ನು ಯಶಸ್ವಿಗೊಳಿಸಬೇಕು " ಎಂದು ಮೇಜು ಮುರಿಯುವಷ್ಟು ಗುದ್ದಿ ಹೇಳಿದರೂ ಆ ಗುದ್ದು ಯಡ್ಯೂರಪ್ಪನವರಿಗೇ ಪರೋಕ್ಷವಾಗಿ ಬೀಳುತ್ತಿತ್ತು. ಹೀಗೇ ಆ ಕಡೆ ಕುಮಾರ ಈ ಕಡೆ ಅನಂತ ಇನ್ನೊಂದು ಕಡೆ ರೆಡ್ಡಿಬ್ರದರ್ಸ್ ಈ ಮೂರೂ ದಿಕ್ಕುಗಳಿಂದ ಥರಥರದ ಮಹಾಮಹಾ ಅಸ್ತ್ರಗಳು ಪ್ರಯೋಗಿಸಲ್ಪಟ್ಟಾಗಲೆಲ್ಲಾ ದೇವರು-ಹೋಮ-ತೀರ್ಥಯಾತ್ರೆ ಅಂತ ಹೆಗಲಿಗೆ ಶಾಲು ಹೊದ್ದು ಕೈಮುಗಿದುಕೊಂಡು ದೇವರನ್ನು ಮೋರೆಹೋದ ಜನ ಯಡ್ಯೂರಪ್ಪ !

ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎನ್ನುವ ಚಿಂತನೆಯಲ್ಲಿದ್ದ ಯಡ್ಯೂರಪ್ಪರ ಹೃದಯದ ಬಾಗಿಲು ತಟ್ಟಿದ ವ್ಯಕ್ತಿ ಶೋಭಾ. ಅವರ ವೈಯ್ಯಕ್ತಿಕ ವಿಷಯ ಏನೇ ಇದ್ದರೂ ವ್ಯವಹಾರದಲ್ಲಿ ಚಾಣಾಕ್ಷೆ ಮತ್ತು ಸಾಕಷ್ಟು ಓದಿಕೊಂಡಿದ್ದು, ಆರೆಸ್ಸೆಸ್ ಮೂಲದ ಸಂಸ್ಕೃತಿಯನ್ನು ಹೊಂದಿದ್ದರಿಂದ ಮಿಕ್ಕೆಲ್ಲಾ ಧೂರ್ತರಿಗಿಂತ ಆವಳೇ ವಾಸಿ ಎಂಬುದೂ ಯಡ್ಯೂರಪ್ಪನವರಿಗೆ ಸ್ವಲ್ಪ ಕಷ್ಟವನ್ನೇ ತಂದಿತು. ಶೋಭಾ ಚೆನ್ನಾಗೇ ಕೆಲಸ ನಿರ್ವಹಿಸಿದರೂ ಧೂರ್ತರಾಜಕಾರಣಿಗಳನ್ನು ನಿಯಂತ್ರಿಸುವಲ್ಲಿ ’ಒಳಗಿನಿಂದ’ ಕೆಲಸಮಾಡುತ್ತಿದ್ದಳು. ಇದು ರೇಣುಕಾಚಾರ್ಯ, ಬೇಳೂರು ಮುಂತಾದ ಹಲವಾರು ಹಗಲುದರೋಡೆ ಶಾಸಕರಿಗೆ ನುಂಗಲಾರದ ತುತ್ತಾಗಿತ್ತು. ಈ ಸಮಯವನ್ನೇ ಕತ್ತೆಕಿರುಬ ಎಂಬ ಪ್ರಾಣಿ ದೂರದಿಂದ ಕೈಲಾಗದ ಪ್ರಾಣಿಯನ್ನು ಕಂಡು ಬೆನ್ನತ್ತು ಬರುವಂತೇ ಕುಮಾರಣ್ಣ ಬಳಸಿಕೊಂಡ! ಮತ್ತೆ ಕುದುರೆ ವ್ಯಾಪಾರ ಜೋರಾಗಿ ನಡೆಯಿತು. ಯಾವಾಗಲೆಲ್ಲಾ ಸಾಧ್ಯವಾಗುವುದೋ ಆವಾಗೆಲ್ಲಾ ನಾನಾವಿಧದ ಸರ್ಕಸ್ಸು ಮಾಡಿ ಕುರ್ಚಿ ಹಿಡಿಯಲು ನೋಡಿದಾತ ಕುಮಾರ.

ರಾಜಕೀಯ ಬರೇ ಸಂಬಳದ್ದಾದರೆ ಯಾರೂ ಆ ಕೆಲಸ ಮಾಡಲು ಹಿಂದೆಮುಂದೆ ನೋಡುತ್ತಿದ್ದರೇನೋ ! ಆದರೆ ರಾಜಕೀಯ ಇವತ್ತಿಗೆ ಒಂದು ಉದ್ಯಮ! it is an industry by all means ! ರಾಜಕೀಯ ಪ್ರಜಾಸೇವೆಗೆ ಎಂಬುದು ಗಾಂಧೀಜಿಯ ಕಾಲಕ್ಕೇ ಮುಗಿದುಹೋದ ವಿಷಯ. ನೆಹರೂ ಕಾಲದಿಂದಲೇ ರಾಜಕೀಯ ಹದಗೆಟ್ಟುಹೋಯಿತು. ಪಾರ್ಟಿ ಫಂಡಿಂಗ್ ವ್ಯವಹಾರ ಆಗಿನಿಂದಲೇ ಆರಂಭಗೊಂಡಿದ್ದು! ಫಂಡಿಂಗ್ ಮಾಡುವವರಿಗೆ ಅದರ ನಾಲ್ಕುಪಟ್ಟು ಇನ್ನೂ ಕೆಲವರಿಗೆ ಹತ್ತಾರುಪಟ್ಟು ಮರಳಿಪಡೆಯಬಹುದೆಂಬ ಅನಿಸಿಕೆಯೂ ಶುರುವಾಯ್ತು! ಯಾವಾಗ ಈ ಫಂಡಿಂಗ್ ದಂಧೆಯಲ್ಲಿಯೇ ಪೈಪೋಟಿ ಆರಂಭವಾಯಿತೋ ಆಗ ಪ್ರತಿಯೊಬ್ಬರೂ ತಂತಮ್ಮ ಉಳಿವಿಗಾಗಿ ಶಾಸಕ, ಸಂಸದ ಸ್ಥಾನದ ಭದ್ರತೆಗಾಗಿ ಜಾಸ್ತಿ ಜಾಸ್ತಿ ಇನ್ವೆಷ್ಟ್ ಮಾಡಲೇಬೇಕಾಯಿತು.

ಈಗಂತೂ ರಾಜಕೀಯ ಹೇಗಾಗಿದೆಯೆಂದರೆ ಖೂಳರು, ರಕ್ಕಸರು ಮಾತ್ರ ರಾಜಕೀಯ ನಡೆಸುವಂತಾಗಿದೆ ಎಂಬುದು ಪ್ರಜಾಪ್ರಭುತ್ವದ ಅಥವಾ ಪ್ರಜಾಸತ್ತೆ ಸತ್ತನಂತರ ಭೂತವಾಗಿ ಕಾಡುತ್ತಿದೆ ! ಹಾಗನಿಸಿದಾಗಲೆಲ್ಲಾ ನಮಗನಿಸುವುದು ಹಿಂದಿನ ರಾಜರ ಆಳ್ವಿಕೆಗಳೇ ಎಷ್ಟೋ ವಾಸಿಯಾಗಿತ್ತೆಂಬುದು. ಹಣವಿದ್ದರೇ ಸಾಕು- ಕ್ರಿಮಿನಲ್ ಆದರೂ ಪರವಾಗಿಲ್ಲ, ಅರೆಹುಚ್ಚನಾದರೂ ಪರವಾಗಿಲ್ಲ, ಅವಿದ್ಯಾವಂತನಾದರೂ ಪರವಾಗಿಲ್ಲ, ಒಂದೆರಡು ಕೊಲೆಸುಲಿಗೆ ದರೋಡೆ ಮಾಡಿ ತನ್ನ ಸುತ್ತಲ ಸಮಾಜವನ್ನು ಹೆಸರಿಸಿ ಚಕ್ರಾಧಿಪತ್ಯ ಸ್ಥಾಪಿಸಿಕೊಂಡು ಆ ಮೂಲಕ ಅಧರ್ಮದಿಂದ ಅನ್ಯಾಯದಿಂದ ವಾಮಮಾರ್ಗದಿಂದ ಗಳಿಸಿದ ಹಣಚೆಲ್ಲಿ ಚುನಾವಣೆಗೆ ನಿಲ್ಲುವುದು, ಆರಿಸಿಬರುವುದು, ಅಧಿಕಾರ ಹಿಡಿದು ನಮ್ಮನ್ನು ಆಳುವುದು, ಆಳುವಾಗ ಸರಕಾರದ ಹಣ/ಆಸ್ತಿಗಳಲ್ಲಿ ತಮಗೆ ಸಿಗುವಷ್ಟನ್ನೂ ಕಬಳಿಸುವುದು---ಮತ್ತೆ ಮುಂದಿನ ಚುನಾವಣೆಗೆ ವಿರೋಧೀ ಸ್ಥಾನದಲ್ಲಿ ನಿಲ್ಲುವವರನ್ನು ಬಡಿಯಲು ಬೇಕಾಗುವ ಎಲ್ಲಾ ’ವ್ಯವಸ್ಥೆ’ಗಳನ್ನೂ ಮಾಡಿಕೊಳ್ಳುವುದು--ಹೀಗೇ ಇದೊಂದು ಅಧಿಕಾರ ದಾಹೀ ವರ್ತುಲ ನಡೆದೇ ಇದೆ.

ಇಲ್ಲಿ ಯಾರೂ ಸಮಾಜ ಸೇವಕರಿಲ್ಲ. ಪಕ್ಷಾತೀತವಾಗಿ ಎಲ್ಲರೂ ಒಂದೇ. ಹೊರಗೆ ವಿರುದ್ಧವಾಗಿ ಹೇಳಿಕೆಕೊಡು ಜನ ಒಳಗೆ ಒಂದೇ ಮೇಜಿನಮೇಲೆ ಕೈಯ್ಯೂರಿ ಕುಳಿತು ತಿಂದು-ಕುಡಿದು ಮಾಡುತ್ತಾರೆ. ’ರಾಜಕಾರಣಿಗಳಿಗೆ ಆಟ ಪ್ರಜೆಗಳಿಗೆ ಪ್ರಾಣಸಂಕಟ ’ ಎಂಬಂತಾಗಿದೆ. ಇಷ್ಟಾದರೂ ನಮ್ಮ ಜನ ಸಮಾಜದಲ್ಲಿ ಹುಳುಕು ರಾಜಕೀಯದವರು ಮತ್ತೆ ಚಿಗುರಿಸುವ ಜಾತಿ, ಮತಗಳ ವೈಷಮ್ಯಗಳನ್ನು ನಾವೆಲ್ಲಾ ಲಕ್ಷ್ಯಿಸುವುದೇ ಇಲ್ಲ. ಜಾತಿಗೊಬ್ಬ ಸ್ವಾಮಿ, ಮತಕ್ಕೊಬ್ಬ ಗುರು-- ಜಾತೀವಾರು ಪಡೆಯಬೇಕಾದ ಸೌಲಭ್ಯಗಳಿಗೂ ಅಲ್ಲದೇ ಪಡೆಯಲು ಅನರ್ಹವಾದ ಸವಲತ್ತುಗಳೂ ಬೇಕೆಂದು ವಿಧಾನಸಭೆಯ ಮುಂದೆ ಧರಣಿ ಕೂರಲು ಅಂತಹ ಸ್ವಾಮೀ ವೇಷದವರನ್ನು ಸೃಜಿಸಿಕೊಂಡಿದ್ದಾರೆ ! ಸಂಖ್ಯಾಬಲವನ್ನು ತೋರಿಸಲು ಜಾತೀವಾರು ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದೂ ಇಲ್ಲಿನ ಮರ್ಮವಾಗಿದೆ ! ಒಂದುಕಾಲಕ್ಕೆ ಹಾಗೆ ಕರೆಸಿಕೊಂಡಿದ್ದ ಅಲ್ಪಸಂಖ್ಯಾತರು ನಿಯಂತ್ರಣವಿಲ್ಲದೇ ದೇಶಕ್ಕೆ ಸಮರೋಪಾದಿಯಲ್ಲಿ ಮಕ್ಕಳನ್ನು ಹೆತ್ತುಗೊಡುತ್ತಾ ಇದ್ದರೂ ಅವರಿಗೆ ಫ್ಯಾಮಿಲಿ ಪ್ಲಾನಿಂಗ್ ಅಪ್ಲೈ ಆಗುತ್ತಿಲ್ಲ ! ಇಲ್ಲೂ ವೋಟ್ ಬ್ಯಾಂಕ್ ರಾಜಕಾರಣದ ಹಾವು ಹೆಡೆಯೆತ್ತುತ್ತದೆ!

ಆರ್ಥಿಕವಾಗಿ ಬಡವರು / ಹಿಂದುಳಿದವರು ಎಲ್ಲಾ ಜಾತಿಗಳಲ್ಲೂ ಎಲ್ಲಾ ವರ್ಗಗಳಲ್ಲೂ ಇದ್ದಾರೆ. ನಿಜವಾದ ಬಡತನದ ತೊಳಲಾಟದಲ್ಲಿರುವ ಜನರಿಗೆ ಸಿಗಬೇಕಾದ ಸವಲತ್ತುಗಳು ಕೇವಲ ಮೀಸಲಾತಿಗಳೆಂಬ ಸ್ಲ್ಯಾಬ್‍ಗಳಿಂದ ಕೈತಪ್ಪಿ ಹೋಗಿ ಅವರು ಪರದಾಡುವುದನ್ನು ನೋಡಿದಾಗ ಪಶ್ಚಾತ್ತಾಪವಾಗುತ್ತದೆ. ವಿಧಿಯಿಚ್ಛೆಯೇ ಹೀಗಿರುವಾಗ ಪ್ರಜೆಗಳೇನು ಮಾಡಲು ಸಾಧ್ಯ ಎಂಬುದು ಉತ್ತರ ಸಿಗದ ಸಿಕ್ಕಾಗಿದೆ. ಹೀಗಾಗಿ ರಾಜಕಾರಣದಲ್ಲಿ ಯಾರೂ ಸಂಭಾವಿತರಲ್ಲ. ಸಂಭಾವಿತರಾಗಿರುವ ಕೆಲವೇ ಜನ ಒಬ್ಬ ಸುರೇಶ್ ಕುಮಾರ್ ರಂತೇ, ಒಬ್ಬ ಕಾಗೇರಿಯಂತೇ, ಒಬ್ಬ ವಿ.ಎಸ್ ಆಚಾರ್ಯರಂತೇ ’ಕೆಲಸಕ್ಕೆಬಾರದವರು’ ಎನಿಸಿಕೊಳ್ಳುತ್ತಾರೆ. ಯಾಕೆಂದರೆ ಅವರು ಹಣಪಡೆದು ಸರ್ಕಸ್ಸು ತೋರಿಸುವ ಜನವಲ್ಲ! ಹೀಗಾಗಿ ಇಂದಿನ ರಾಜಕೀಯದ ನಾಟಕಕ್ಕೆ ಬಲಿಯಾದ ಯಡ್ಯೂರಪ್ಪ ಕೇವಲ ಒಂದು ಸ್ಯಾಂಪಲ್ಲು! ಹತ್ತಾರು ಜನ ಸೇರಿ ಕದ್ದಮನೆಯಲ್ಲಿ ಹಿಡಿಯಲು ಯಾರೋ ಬಂದಾಗ ಸಿಕ್ಕಿಬಿದ್ದೊಬ್ಬಾತ ಮಾತ್ರ ಶಿಕ್ಷೆಗೊಳಗಾದ ಪರಿ ಇದಾಗಿದೆ ಅಂತ ನಿಮಗನಿಸುವುದಿಲ್ಲವೇ ?

ಈ ಹಿಂದೆ ಕರ್ನಾಟಕದ ಯಾವುದೇ ಮುಖ್ಯಮಂತ್ರಿ ಇದುವರೆಗೆ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಪರದಾಡದಷ್ಟು ಒದ್ದಾಟವನ್ನು ಯಡ್ಯೂರಪ್ಪ ನಡೆಸುತ್ತಲೇ ಅಪ್ಪ-ಮಕ್ಕಳಾಗಲೀ ಇಡೀ ಕಾಂಗ್ರೆಸ್ ತಳಿಯಾಗಲೀ ಕೊಡಲಾಗದ ಪ್ರಗತಿಯನ್ನು ಈ ರಾಜ್ಯದ ಜನತೆಗೆ ಅದರಲ್ಲೂ ಬೆಂಗಳೂರಿಗೆ ಮೂರೇ ವರ್ಷದಲ್ಲಿ ಕೊಟ್ಟಿರುವುದು ಕಣ್ಣಿಗೆ ಕಾಣುವ ಅಂಶವಾಗಿದೆ. ಆ ಮಟ್ಟಿಗೆ ವೈಯ್ಯಕ್ತಿಕವಾಗಿ ಅವರಿಗೆ ನಾನು ಆಭಾರಿ, ಬಹುಶಃ ತಾವೂ ಕೂಡಾ ! ಅವರ ಮುಂದಿನ ನಡೆಗೆ ಶುಭಕೋರೋಣ.