ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, August 1, 2011

ತಪ್ಪು-ಒಪ್ಪುಗಳು


ತಪ್ಪು-ಒಪ್ಪುಗಳು

ತಪ್ಪ ಹೊರಿಸುವಾಗ ತೆಪ್ಪಗಿರಬೇಕೇಕೆ ?
ತಪ್ಪು ಒಪ್ಪುಗಳಂತು ಸಹಜ ಜೀವನದಿ
ಉಪ್ಪರಿಗೆಯರಸರೂ ತಪ್ಪುಮಾಡದೆ ಇರರು
ತಪ್ಪು ಪುನರಪಿ ಸಲ್ಲ | ಜಗದಮಿತ್ರ

ಹಣವ ಗುರಿಯಾಗಿಟ್ಟು ಗುಣಗಳೆಲ್ಲವ ಮರೆತು
ಗಣಿತೆಗೆದು ಮರಕಡಿದು ಕತ್ತಲೊಳು ಮಾರಿ
ಝಣಝಣದ ಕಾಂಚಾಣ ಕೈಸೇರುತಿರಬಹುದು
ಕಣಜ ಹಲವರ ಸ್ವತ್ತು | ಜಗದಮಿತ್ರ

ಕುದುರಿಸುತ ಹೊಸ ತಂತ್ರ ನೀತಿಯೆಲ್ಲವ ಮರೆತು
ಕುದುರೆವ್ಯಾಪಾರದಂತಿರಲು ಮುಂದದುವೇ
ಹದವರಿಯದಾಗುತ್ತ ಒದರಿ ಕೊಸರೋಡುವುದು
ಅದುರುವುದು ಗಣತಂತ್ರ | ಜಗದಮಿತ್ರ

ಜಗಕೆ ಸಂತಸವೀವೆ ಬಗೆಬಗೆಯ ಮೃಷ್ಟಾನ್ನ
ಮೊಗೆದು ಕೊಡುವೆನು ಎಂಬ ಹಮ್ಮು-ಬಿಮ್ಮಿನಲಿ
ಅಗೆದಗೆದು ಭೂಗರ್ಭ ತಾಯ ನೋಯಿಸಿದಾಗ
ಸೊಗೆದೊಗೆಯುವುದು ಪ್ರಕೃತಿ | ಜಗದಮಿತ್ರ

ಆನೆ ಹುಲಿ ಕರಡಿಗಳು ಊರೊಳಗೆ ನುಗ್ಗುವವು
ಬ್ಯಾನೆಯೆದ್ದಾಗೊಮ್ಮೆ ಹಸಿದ ಹೊಟ್ಟೆಯಲಿ
ಮಾನವನ ಕುಕೃತ್ಯ ಕಾಡನುಂಗಿರಲಾಗಿ
ಮೀನಿಗೂ ನೀರಿರದು ! ಜಗದಮಿತ್ರ

ಕೋಟಿಕೋಟಿಯನಳೆದು ಬೇಡದುದ ನಿರ್ಮಿಸಲು
ಆಟದಂಗಳವೇನು ರಾಜ್ಯಭಾರವದು ?
ಮೇಟಿಯೋಗಿಯ ಮರೆತು ಮತ್ತೊಂದ ಹಂಬಲಿಸೆ
ಆಟದಲಿ ಅಪಜಯವು | ಜಗದಮಿತ್ರ

ಪಕ್ಷವನು ಕಟ್ಟುವೊಲು ಅಕ್ಷಿಯನು ಓಡಿಸುತ
ವಕ್ಷದಲಿ ನಿಂತ ವಿರಂಚಿಯಂದದಲಿ
ಕಕ್ಷೆಯನು ಪಡೆದಜನ ಇಕ್ಷುಚಾಪದಿ ಮೆರೆವರ್
ರಕ್ಷೆ ಪಕ್ಷಕೆ ಮುಖ್ಯ | ಜಗದಮಿತ್ರ

’ಅಪ್ಪ-ಮಕ್ಕಳು’ ಸೇರೆ ದೇಶವಾಗುವುದಿಲ್ಲ
ರಪ್ಪನೇ ರಾಚುವುದು ಕಪಟ ಧೂರ್ತತನ !
ತೊಪ್ಪೆಹೊರಿಸುವ ಜನರು ಜಗದಿ ಮುಂದಾಗುವರು
ಅಪ್ಪಟವು ಜನಸೇವೆ | ಜಗದಮಿತ್ರ

ಮಾಯಕದ ’ಕೈ’ಗಳಲಿ ದೇಶದಾಟವೆ ಕೆಡುಗು
ನಾಯಕರ ಕೊರತೆಯಿದೆ ಹಲವು ನಾಯಕರು !
ಆಯಕಟ್ಟಳೊಗಿರುವ ಅವಕಾಶ ಮಾರಿದರು ! [ 2g spretrum ]
ಗಾಯ ಹುಲಿ ಹುಣ್ಣಂತೆ | ಜಗದಮಿತ್ರ

ಪಾಯ ಗಟ್ಟೀಗೊಳಿಸಿ ರಾಷ್ಟ್ರದುನ್ನತಿ ಬಯಸು
ಹಾಯಹರಿಗೋಲಂತೆ ಹರಿದು ಬಿಡಬೇಡ
ಹೇಯಕೃತ್ಯವ ಗೈದ ರಾಜಕೀಯಸುರರನು
ಧ್ಯೇಯದಿಂ ಬಗ್ಗುಬಡಿ | ಜಗದಮಿತ್ರ

8 comments:

 1. ಚೆಂದದ ಕಗ್ಗಗಳು -ಇಂದಿನ ರಾಜಕೀಯದ ತಿರುಳನ್ನು ಕಂಡು ರೋಸಿ ಅಕ್ರೋಶದೀ ಜಗದ ಮಿತ್ರ ಕಗ್ಗ ಹೊರ ಹೊಮ್ಮಿಸಿರುವನು ಸಮಸ್ತ ಭಾರತೀಯರ ದನಿಯಾಗಿ.

  ReplyDelete
 2. ರಾಜಕೀಯದ ಅರಾಜಕತೆಗೆ ಜಗದಮಿತ್ರ ಚನ್ನಾಗಿ ಹೇಳಿದ್ದಾರೆ.............

  ReplyDelete
 3. Lovely sir,
  DVG yavara nenapu aytu odta,

  aksharagala melina hidita tumba adbhuta

  ReplyDelete
 4. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ.

  ReplyDelete
 5. ಪಾಯ ಗಟ್ಟೀಗೊಳಿಸಿ ರಾಷ್ಟ್ರದುನ್ನತಿ ಬಯಸು
  ಹಾಯಹರಿಗೋಲಂತೆ ಹರಿದು ಬಿಡಬೇಡ
  ಹೇಯಕೃತ್ಯವ ಗೈದ ರಾಜಕೀಯಸುರರನು
  ಧ್ಯೇಯದಿಂ ಬಗ್ಗುಬಡಿ | ಜಗದಮಿತ್ರ

  chaMdada sAlugaLu.

  ReplyDelete
 6. Photo hagu kavana eradu superb

  ReplyDelete