ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, January 21, 2011

ನಾಟ್ಯಮಯೂರಿಯ ಬಯಸಿ

ರಾಜಾರಾವಿವರ್ಮ ಕೃತ ಚಿತ್ರ ಋಣ : ಅಂತರ್ಜಾಲ

ನಾಟ್ಯಮಯೂರಿಯ ಬಯಸಿ


ಇದೊಂದು ಹೊಸಪ್ರಯೋಗ, ಮೂಲ ಭಾವನೆಗಳಿಗೆ ಧಕ್ಕೆಬಾರದ ರೀತಿಯಲ್ಲಿ ಒಂದೇ ಕವನದ ಆದಿ-ಅಂತ್ಯ ಪ್ರಾಸಗಳ ಜುಗಲ್ ಬಂದಿ, ತಮ್ಮೆಲ್ಲರ ಓದಿಗೆ ಅರ್ಪಿಸುತ್ತಿದ್ದೇನೆ:


-೧-

ರಂಗದೆದುರಿದ್ದೆನ್ನ ನೋಡಿ ನಕ್ಕಾ ಗಿಣಿಯೇ
ರಂಗು ಹಚ್ಚಿದೆಯಲ್ಲ ನನ್ನ ಎದೆಗೆ !
ಮಂಗಳದ ನರ್ತನದಿ ಹಲವು ಮನಗಳ ಕದ್ದು
ಭಂಗತಂದಿಡುತ ಓಡಿದೆಯಲ್ಲ ಒಳಗೆ !

/

ನೀ ನಕ್ಕು ನಲಿನಲಿದು ಕುಣಿದಾಗ ಆ ರಂಗ
ಹಚ್ಚಿಬಿಟ್ಟಿತು ಎದೆಗೆ ಹೊಸದೊಂದು ರಂಗ
ಹಲವು ಮನಗಳ ಕದ್ದೆ ನರ್ತಿಸುತ ಬಹಿರಂಗ
ಓಡಿ ಪರದೆಯ ಹಿಂದೆ ತಂದಿಟ್ಟೆ ಭಂಗ

-೨-

ಚಂಗನೇ ಜಿಗಿಯುತ್ತ ಜಿಂಕೆ ಸಾರಂಗಗಳ
ಅಂಗಾಂಗ ಹಾವಭಾವದಲಿ ತೋರಿಸುತಾ
ಮಂಗನಂತಾಗಿರುವ ನನ್ನಂಥ ಕೆಲವರೆಡೆ
ಭಂಗಿಯಲಿ ನಕ್ಕಪರಿ ಎಲ್ಲೋ ಸೆಳೆಯುತಾ

/

ಚಂಗನೇ ಜಿಗಿಯುತ್ತ ಜಿಂಕೆಗಳು ಸಾರಂಗ
ತೋರುತ್ತ ಹಾವಭಾವದಲವುಗಳಂಗ
ನನಂಥ ಕೆಲವರು ಮೈಮರೆತು ಬರಿ ಮಂಗ
ಸೆಳೆಯಿತೆಲ್ಲೋ ನಿನ್ನ ನಗೆ ಭಂಗಿ ಸಂಗ

-೩-

ಮುಂಗಾಲ ನೀವುವಾ ಮುದುಕರನು ಹರೆಯದೆಡೆ
ಬೆಂಗಾವಲಲಿ ತಂತು ತುಂಟ ನರ್ತನವು
ಸಂಗಾತಿಯಾದರೆ ಸಾವಿರದ ಹೊನ್ಕೊಡುವೆ
ಮುಂಗಡವೇ ಇಸಿದುಕೋ ಇಗೋ ಹೃದಯದೊಡವೆ !

/

ಮುಂಗಾಲ ನೀವುವಾ ಮುದುಕರಾದರು ರಂಗ
ನಿನ್ನ ಮೋಡಿಯು ನರ್ತಿಸುತಲಂತರಂಗ !
ಸಾವಿರದ ಹೊನ್ಕೊಡುವೆ ಸೇರು ನನ್ನಯ ಸಂಗ
ಹೃದಯದೊಡವೆಯು ಮುನ್ನ ಪ್ರೀತಿಯತರಂಗ

-೪-
ಕಂಗು ಮಾವಿನ ತಳಿರು ಚಪ್ಪರವ ಹಾಕಿಸುವೆ
ಬಂಗಾರ ಬಣ್ಣದಾ ಕಾಗದವ ಹಚ್ಚಿ
ತಿಂಗಳೊಪ್ಪತ್ತಿನಲಿ ನಾನೂ ನೀನೊಂದಾಗೆ
ಬಂಗಾಳಕೊಲ್ಲಿಯಲಿ ಸಂಗಮಿಸಿದಂತೆ

/

ಚಪ್ಪರವ ಹಾಕಿಸುವೆ ತಳಿರು ಮಾವು-ಕಂಗ
ಹಚ್ಚಿ ಬಂಗಾರದಾ ಚಿತ್ರ ಚದುರಂಗ
ತಿಂಗಳೊಪ್ಪತ್ತಿನಲಿ ನಾವಾಗೆ ಅರ್ಧಾಂಗ
ಬಂಗಾಳಕೊಲ್ಲಿಯಲಿ ನದಿ-ಶರಧಿ ಸಂಗ !


Saturday, January 15, 2011

ಅಪಾನ ವಾಯು ಪುರಾಣವು !


ಅಪಾನ ವಾಯು ಪುರಾಣವು !

ಅಷ್ಟಾದಶ ಪುರಾಣಗಳನ್ನೂ ಮೀರಿ ವಿಶ್ವವ್ಯಾಪಕತ್ವವನ್ನೂ ಅತೀ ಮಹತ್ವವನ್ನೂ ಪಡೆದ ಅಪಾನವಾಯು ಪುರಾಣವನ್ನು ಕೇಳುವುದಕ್ಕೆ ಯೋಗಬೇಕು! ಅದರಲ್ಲೂ ಹಬ್ಬಹರಿದಿನಗಳ ಮಾರನೇದಿನ ಇಂತಹ ಪುಣ್ಯ ಕಥಾನಕಗಳನ್ನು ಕೇಳುವುದು ಜಗತ್ತಿಗೇ ಆನಂದದಾಯಕ! ಹತ್ತಾರುಜನ ಸೇರಿದ ಸಭೆಯಲ್ಲಿ ಮಂಡಿಸಿದ್ದ ತಿಪ್ಪಾ ಭಟ್ಟರು ಸ್ವಲ್ಪ ವಾಲುತ್ತ " ಈಗ ಹೊಟ್ಟೆ ಸ್ವಲ್ಪ ಸಡಿಲಾಯ್ತು" ಎನ್ನುತ್ತಾ ಪುರಾಣವನ್ನಾರಂಭಿಸಿದಾಗ ಮಗ್ಗುಲಲ್ಲಿ ಕಾಡುತ್ತಿರುವ ಕೆಟ್ಟ ಕುತೂಹಲದಿಂದ ಆಲಿಸಲು ಕೂತ ನನಗೆ ಕಿವಿನೆಟ್ಟಗಾಯಿತು. ಸಭಾಲಕ್ಷಣವೆಂಬಂತೇ ಅದೂ ಇದೂ ಶ್ಲೋಕಗಳನ್ನು ಹೇಳುತ್ತಾ ಪುರಾಣಿಕರಾದ ಭಟ್ಟರು ತಮ್ಮ ಪುಸ್ತಕರಹಿತ ವ್ಯಾಖ್ಯಾನಕ್ಕೆ ಅನುವುಗೊಂಡು ಶಾಲನ್ನು ಎಳೆದೆಳೆದು ಹೆಗಲಿನ ಎರಡೂ ಪಕ್ಕಕ್ಕೆ ಬರುವಂತೇ ಸರಿಪಡಿಸಿಕೊಂಡರು.

" ವಾಯುಗಳಲ್ಲಿ ಹಲವಾರು ಥರದ ವಾಯುಗಳಿವೆ" --ಅದು ಸಹಜಬಿಡಿ ನಮಗೆ ವಿಜ್ಞಾನಿಗಳೂ ಹೇಳಿದ್ದಾರೆ.

ಭಟ್ಟರು ಮುಂದುವರಿಸುತ್ತಿದ್ದರು--
" ಅವುಗಳಲ್ಲಿ ಪ್ರಾಣವಾಯು, ಆಪಾನವಾಯು, ಯಾನವಾಯು, ಉದಾನವಾಯು,ಸಮಾನವಾಯು ಇತ್ಯೇತ್ಯಾದಿ ವಾಯುಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ. ಇವುಗಳಲ್ಲಿ ಯಾವೊಂದು ವಾಯುವಿರದಿದ್ದರೂ ನಡೆಯುವುದಿಲ್ಲ. ಇವತ್ತು ನಾವು ಅಪಾನವಾಯುವಿನ ಮಹತ್ವವನ್ನು ತಿಳಿದುಕೊಳ್ಳೋಣ.

ದೇಹದ ಒಳಗೆ ಆಹಾರ ಸೇರಿ ವೈಶ್ವಾನರರೂಪೀ ಅಗ್ನಿ ಅದನ್ನು ಪಚನಗೊಳಿಸಿದ ಮೇಲೆ ಅಲ್ಲಿ ಉದ್ಭವವಾಗುವುದು ಅಪಾನವಾಯು. ಸೇವಿಸಿದ ಆಹಾರವನ್ನು ಅವಲಂಬಿಸಿ ಈ ವಾಯುವಿನ ಉತ್ಫತ್ತಿಯ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. ಆದರೆ ಮಗುವಿನಿಂದ ಹಿಡಿದ ಮುದುಕರವರೆಗೂ ಇದೂ ಅಲ್ಲದೇ ಪ್ರತೀ ಸಸ್ತನಿಯ ದೇಹದಲ್ಲೂ ಈ ಅಪಾನವಾಯುವಿನ ಸನ್ನಿಧಾನವಿದೆ. ಕೆಲವರಲ್ಲಿ ಅದರ ನಿತ್ಯಾನುಸಂಧಾನವಿದ್ದರೆ ಇನ್ನೂ ಕೆಲವರಲ್ಲಿ ಅದರ ಅನುಷ್ಠಾನ ಸ್ವಲ್ಪ ಕಡಿಮೆಮಟ್ಟದಲ್ಲಿರುತ್ತದೆ. ಈ ಅಪಾನವಾಯು ಟಾಟಾ ಬಿರ್ಲಾಗಳನ್ನಾಗಲೀ ’ಅನಿಲ’ ಅಂಬಾನಿ ’ಅನಿಲ’ ಕುಂಬ್ಳೆ ಗಳನ್ನಾಗಲೀ ಬೇರೇ ಬೇರೇ ಎಂದು ತಿಳಿಯುವುದಿಲ್ಲ. ಇದಕ್ಕೆ ಎಲ್ಲರೂ ಒಂದೇ! ಸಾಫ್ಟ್ ವೇರ್ ಅಭಿಯಂತರನೂ ಒಂದೇ ರಸ್ತೆಬದಿಯ ಮೆಕಾನಿಕ್ಕೂ ಒಂದೇ. ಜೀವನದಲ್ಲಿ ಬಡವ ಶ್ರೀಮಂತರೆಂಬ ಬೇಧವೆಣಿಸದ ಯಾವುದಾದರೂ ಇದ್ದರೆ ಅದು ಅಪಾನವಾಯು ಮಾತ್ರ! ಹೀಗಾಗಿ ಅಪಾನವಾಯುವಿಗೆ ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ಬಿರುದನ್ನೂ ಕೊಡಬಹುದು.

ಅಪಾನವಾಯುವಿನ ಉಪಸ್ಥಿತಿ ಎಲ್ಲಾಕಡೆಗಿದ್ದರೂ ಯಾರೂ ಅದನ್ನು ಹೇಳಲು ಹೆದರುತ್ತಾರೆ. ಯಾಕೋ ಬಹಳ ಸಂಕೋಚಪಡುತ್ತಾರೆ. ನಮ್ಮ ಜನಕ್ಕೆ ಈ ವಿಷಯದ ಬಗ್ಗೆ ಮಾತನಾಡಲು ಎಲ್ಲಿಲ್ಲದ ಮರ್ಯಾದೆ ಅಡ್ಡಬರುತ್ತದೆ! ತಮ್ಮ ಸ್ಥಾನಮಾನ ಏನಾಗಬಹುದೆಂಬ ಅನಿಸಿಕೆಯಿಂದ ಇದರ ಬಗ್ಗೆ ಮಾತನಾಡುವುದೇ ಇಲ್ಲ! ಕೊಳೆತ ಕುಂಬಳಕಾಯಿಯನ್ನು ಎಷ್ಟುದಿನ ಬಚ್ಚಿಡಲು ಸಾಧ್ಯವಾಗುತ್ತದೆ ? ಅದರ ವಾಸನೆ ಸುತ್ತಲ ಪ್ರದೇಶಕ್ಕೆಲ್ಲಾ ಹಬ್ಬಲೇಬೇಕಾಗುತ್ತದೆ ಅಲ್ಲವೇ ? ಹೇಳಿದರೂ ಹೇಳದಿದ್ದರೂ ಕುಂಬಳಕಾಯಿ ಕೊಳೆತಿರುವುದು ಹೇಗೋ ಎಲ್ಲರಿಗೂ ತಿಳಿದುಹೋಗುತ್ತದೆ! ಅದೇ ರೀತಿ ಈ ಅಪಾನವಾಯುವಿನ ಮಹಿಮೆ ಅಪಾರ. ಇದರ ಮಹಿಮೆಯನ್ನು ನೀವೆಲ್ಲಾ ಅನುಭವಿಸಿದವರೇ! ಆದರೂ ಇನ್ನೊಮ್ಮೆ ಪುರಾಣಿಕರ ಬಾಯಿಂದ ಕೇಳುವ ಆಸೆಯಾಗಿ ಹೀಗೆ ಕುಳಿತಿದ್ದೀರಿ. ಹೇಳುತ್ತೇನೆ ಕೇಳಿ:

ಶರೀರದಲ್ಲಿ ಅಪಾನವಾಯುವಿನಾ ಜನನವಾದಮೇಲೆ ಅದು ಹೊರಬರಲೇ ಬೇಕು. ಶರೀರದ ಒಳಗೇ ಅದು ಸುತ್ತುತ್ತಿರುವಾಗ ಆಗುವ ಅನಾಹುತ ಅಷ್ಟಿಷ್ಟಲ್ಲ. ಇದನ್ನೇ ನಮ್ಮ ವೈದ್ಯಶಾಸ್ತ್ರಿಗಳು ಆಂಗ್ಲ ಭಾಷೆಯಲ್ಲಿ ’ಗ್ಯಾಸ್ ಟ್ರಬಲ್’ ಅಂತಾರೆ. ಕೆಲವರಲ್ಲಿ ಈ ಅಪಾನಯವು ರಕ್ತನಾಳಗಳಲ್ಲಿ ಸೇರಿಕೊಂಡು ಆಗಾಗ ಅಡಚಣೆಯುಂಟುಮಾಡುವುದಲ್ಲದೇ ಶರೀರದ ಒಳಾಂಗಗಳಲ್ಲಿ ಅದರ ಅಟಾಟೋಪ ಬಹಳ. ಜಠರದಲ್ಲಿ ಹುಟ್ಟಿ ಕರುಳಿನಲ್ಲಿ ಹರಿದು ಹಾಗೇಯೇ ಕೆಲವೊಮ್ಮೆ ಮೇಲೂ ಕೆಳಗೂ ಶರೀರದ ಉದ್ದಗಲಕ್ಕೂ ಓಡಾಡುವ ಅಪಾನಯಾವು ಕೆಲವರಲ್ಲಿ ವಿನಾಕಾರಣ ತೇಗುವುದರಮೂಲಕ ಹೊರಹೋದರೆ ಹಲವರಲ್ಲಿ ಇದು ವಾಮಮಾರ್ಗದಿಂದ ಹೊರಟುಹೋಗುತ್ತದೆ-ಇಲ್ಲೇ ನೋಡಿ ಸ್ವಲ್ಪ ಅವಾಂತರ. ಈ ವಾಮಮಾರ್ಗದಿಂದ ಹೊರಹೋಗುವ ಅಪಾನವಾಯು ತನ್ನಪಾಡಿಗೆ ತಾನು ಹೋಗದೇ ಅನೇಕಾವರ್ತಿ ತಾನು ಹೋದರೂ ತನ್ನ ಮೆರವಣಿಗೆಯ ಘಾಟನ್ನು ಪರಿಸರದಲ್ಲಿ ಸ್ವಲ್ಪಕಾಲ ಗಾಢವಾಗಿ ಉಳಿಸಿಹೋಗಿಬಿಡುತ್ತದೆ!

ವಾಕರಿಕೆ, ತಲೆನೋವು, ಹೊಟ್ಟೆಯಲ್ಲಿ ಉರಿ, ಸುಸ್ತು, ಹೊಟ್ಟೆಯಲ್ಲಿ ಕಲ್ಲುಹಾಕಿದಹಾಗೇ ಆಗುವುದು, ಆಹಾರವೇ ಬೇಡವೆನ್ನಿಸುವುದು, ತಲೆತಿರುಗುವ ಅನುಭವವಾಗುವುದು ಇವೆಲ್ಲಾ ಅಪಾನವಾಯುವಿನ ಪ್ರಭಾವೀ ಲಕ್ಷಣಗಳು. ಜಾತಿ,ಮತ,ಲಿಂಗ, ವಯಸ್ಸು ಯಾವುದರ ಬೇಧವೂ ಇಲ್ಲದೇ ನಿತ್ಯವೂ ಎಲ್ಲರಲ್ಲೂ ಆಗಾಗ ತನ್ನ ಅಸ್ಥಿತ್ವವನ್ನು ತೋರಿಸುವ ಅಪಾನವಾಯು ಹಲವರ ಕೆಂಗಣ್ಣಿಗೆ ಬಲಿಯಾಗುವುದೂ ಇದು. ಆಕಾರದಲ್ಲಿ, ಬಣ್ಣದಲ್ಲಿ ಕೈಗೆ ಸಿಕ್ಕದ -ಕಣ್ಣಿಗೆ ಧಕ್ಕದ ಇದು ತಪ್ಪಿಸಿಕೊಳ್ಳುವುದು ಇದೇ ಕಾರಣದಿಂದ. ಇಲ್ಲಾಂದರೆ ಅನೇಕಜನ ಇದನ್ನು ಬಿಡುತ್ತಿದ್ದರೇ ? ಹಿಡಿದು ಬಡಿಯುತ್ತಿದ್ದರು ! ಸ್ನೇಹಿತರನೇಕರು ಸೇರಿ ಇಂತಹ ಅಪ್ರತಿಮ ಅಪಾನವಾಯುವನ್ನು ಶ್ಲೋಕದ ಮೂಲಕ ಹೊಗಳಿದ್ದಾರೆ -

ಉತ್ತಮೋ ಡುರುಕೋ ರಾಜೋ
ಮಧ್ಯಮೋ ಟರಟರಾಟುರಿ |
ಅಧಮೋ ಪೀಂ ಪೀಂ ಪೂಂ ಪೂಂ
ಪುಸ್ ಪುಸ್ ಪ್ರಾಣಘಾತಕಃ ||

ವಾಮಮಾರ್ಗದಲ್ಲಿ ಓಡಿಹೋಗುವ ಅಪಾನವಾಯುವನ್ನು ಅದರ [ಕುವಾಸನೆಯ]ಪ್ರತಿಶತ ಪರಿಣಾಮವನ್ನು ಅವಲೋಕಿಸಿ ಭಾಗಿಸಿದ್ದಾರೆ. ಡುರುಕ್ ಡುರುಕ್ ಎನ್ನುವುದು ಉತ್ತಮವೆಂತಲೂ ಟರಾಟುರಿ ಎನ್ನುವುದು ಮಧ್ಯಮವೆಂತಲೂ ಪೀಂ ಪೀಂ ಪೂಂ ಪೂಂ ಎನ್ನುವುದು ಅಧಮವೆಂತಲೂ ಮತ್ತು ಪುಸ್ಸೆನ್ನುತ್ತಾ ಹೊರಡುವುದು ಪ್ರಾಣಘಾತಕ ಅಂದರೆ ಪ್ರಾಣವನ್ನೇ ಹಿಂಡುವಷ್ಟು ಘನಘೋರವೆಂತಲೂ ಅಪಾನವಾಯುವಿಹಾರಿಗಳು ವರ್ಣಿಸಿದ್ದಾರೆ. ಶ್ಲೋಕವನ್ನು ನೆನಪಿಟ್ಟುಕೊಳ್ಳಿ: ಅಪಾನವಾಯುವಿನ ಧ್ಯಾನಕ್ಕೆ ಅನುಕೂಲವಾಗುತ್ತದೆ!

ಕರ್ಮಠ ಬ್ರಾಹ್ಮಣರಿಗೆ ಒಂದು ಕಠಿಣ ಪರೀಕ್ಷೆಯೇನು ಗೊತ್ತೇ ? ಅವರು ವ್ರತನಿಷ್ಠರಾಗಿರುವಾಗ ಮತ್ತು ಪೂಜೆ, ಹೋಮ, ಶ್ರಾದ್ಧ ಇವುಗಳಲ್ಲೆಲ್ಲಾ ನಿರತರಾಗಿರುವಾಗ ಶರೀರ ಸಹಜವಾಗಿ ಉದ್ಭವವಾಗುವ ಈ ಅಪಾನವಾಯುವನ್ನು ವಾಮಮಾರ್ಗದಿಂದ ಹೊರಬಿಡುವಂತೇ ಇಲ್ಲ. ಇದು ಕಟ್ಟಪ್ಪಣೆ. ಅಕಸ್ಮಾತ್ ಅವರು ಹೊರಬಿಟ್ಟರೆ ಅವರು ಅದರ ಪಾಪದ ಫಲವನ್ನು ಅನುಭವಿಸಬೇಕಾಗುತ್ತದೆ. ಅದಕ್ಕೇ ಹಲವಾರು ಪೂಜೆ-ಪುನಸ್ಕಾರಗಳ ಮುನ್ನಾದಿನದಿಂದಲೇ ಉಪವಾಸಾದಿ ವ್ರತಗಳಲ್ಲಿ ಅವರು ತಮ್ಮನ್ನು ನಿಯಮಿಸಿಕೊಂಡು ದೇಹವನ್ನೇ ದಂಡಿಸುತ್ತಾರೆ.

ಹೆಂಗಸರಲ್ಲಿ ಅಪಾನವಾಯು ಕಮ್ಮಿಯೇನಿಲ್ಲ. ಹೆಂಗಸರು ಎಲ್ಲಾರಂಗದಲ್ಲೂ ಇದ್ದಾರಲ್ಲವೇ? ಇಲ್ಲೂ ಅವರಿಗೆ ನ್ಯಾಯ ಸಲ್ಲಬೇಕು. ಹಳೆಯ ಮನೆಗಳಲ್ಲಿ ಕೀಂ ಕೂಂ ಎಂದು ಕಿರುಚುವ ಬಾಗಿಲುಗಳನ್ನು ಅವರು ನೋಡಿಕೊಂಡಿರುತ್ತಾರೆ. ಅತಿಥಿಗಳೆದುರು ಅನಿವಾರ್ಯವಾಗಿ ವಾಮಮಾರ್ಗದಲ್ಲಿ ಬಾಂಬು ಹೊರಬಿದ್ದರೆ ಅಂತಹ ಬಾಗಿಲುಗಳನ್ನು ತಳ್ಳಿಬಿಡುತ್ತಾರೆ. ಏಕಕಾಲಕ್ಕೆ ಎರಡೂ ಘಟಿಸುವುದರಿಂದ ಅತಿಥಿಗೆ ಅದರ ಪರಿಣಾಮ ನಂತರ ಮೂಗಿನ ಮಟ್ಟಕ್ಕೆ ’ಬೆಳೆದುನಿಂತಾಗ’ ಮಾತ್ರ ಗೊತ್ತಾಗುತ್ತದೆ. ಆದರೂ ಅತಿಥಿ " ನೀವು ವಾಸನೆ ಬಿಟ್ಟಿರೇ ? " ಎಂದು ಕೇಳಲು ಬರುತ್ತದೆಯೇ ? ಹೀಗಾಗಿ ಹೆಂಗಳೆಯರು ಈ ವಿಷಯದಲ್ಲಿ ಸೇಫು.

ಕೆಲವು ಸಭೆಗಳಲ್ಲಿ ದೊಡ್ಡವರು ಮಾಡಿದ ಅಪರಾಧಕ್ಕೆ ಮಕ್ಕಳು ಅಪವಾದ ಹೊರುವುದಿದೆ. ಹಾಗೊಂದು ಸಭೆಯಲ್ಲಿ ನಿಂತು ಇನ್ನೇನು ಮಾತನಾಡಬೇಕೆಂದಿದ್ದ ಮಹನೀಯರಿಗೆ ಮೀಟರುಗಟ್ಟಲೇ ’ಟರಾಟುರಿ’ ಬಂದುಬಿಟ್ಟಿತು! ಎದುರಿಗೆ ಅಕಸ್ಮಾತ್ ಅನಿರೀಕ್ಷಿತವಾಗಿ ಬಾಲಕನೊಬ್ಬ ಬಂದುಹೋದ. ಆಗ ಅವರು ಆತನನ್ನೇ ಅದಕ್ಕೆ ಗುರಿಮಾಡಿ " ಹೋಗೊ ಹೊಲ್ಸ್ ಹುಡುಗ " ಎಂದು ಬಿಟ್ಟರು. ಪಾಪದ ಕೂಸಿಗೆ ಅರ್ಥವಾಗದೇ ಮಿಕಿಮಿಕಿ ನೋಡುತ್ತಾ ಸಭೆಯ ಹಿಂಭಾಗಕ್ಕೆ ಸರಿದುಹೋಯಿತು ಆ ಬಡಪಾಯಿ! ಇಂತಹದು ದೊಡ್ಡವರು ಮಾಡುವ ಅಕ್ಷಮ್ಯ ಅಪರಾಧವಾಗಿದೆ.

ಇನ್ನು ಪ್ರಯಾಣ ಹೊರಟಾಗ ಸಾರ್ವಜನಿಕ ಬಸ್ಸುಗಳಲ್ಲಿ, ಪಡಿತರಕ್ಕೋ ದೇವರದರ್ಶನಕ್ಕೋ ಸಿನಿಮಾಟಿಕೆಟ್ಟಿಗೋ ಅಥವಾ ಸಿನಿಮಾ ಮಂದಿರಗಳ ಒಳಗೋ ಅಪಾನವಾಯುವಿನ ಮತ್ತೇರಿದ ಕುಣಿತ ನಡೆದೇ ಇರುತ್ತದೆ. ಯಾರೂ ಹೇಳಲೂ ಕೇಳಲೂ ಸಾಧ್ಯವಾಗದ ಸನ್ನಿವೇಶ! ’ಧೂಮಪಾನ ನಿಷೇಧಿಸಿದೆ’ ಎಂದು ಬೋರ್ಡು ಹಾಕಿದಹಾಗೇ ’ಹೂಸು ಬಿಡುವುದು ದಂಡನಾರ್ಹ ಅಪರಾಧ’ ಎಂಬ ಕಟ್ಟಳೆಯನ್ನು ತರಲಾಗುವುದಿಲ್ಲ. ಇದು ಮನುಷ್ಯ ಸಹಜ ಮತ್ತು ಅದುಮಿಟ್ಟುಕೊಳ್ಳಲಾರದ ’ಅದಮ್ಯ ಆಂದೋಲನ’ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಆಂದೋಲನಕ್ಕೆ ಸಮಿತಿಯೂ ಇಲ್ಲ, ಅಧ್ಯಕ್ಷರಾಗಲೀ ಕಾರ್ಯದರ್ಶಿಗಳಾಗಲೀ ಇಲ್ಲವೇ ಇಲ್ಲ. ಕರಾರುಪತ್ರಗಳಾಗಲೀ ನಿಬಂಧನೆಗಳಾಗಲೀ ಇರುವುದಿಲ್ಲ. ನಿರ್ಭಿಡೆಯವಾಗಿ ನಡೆಯುತ್ತಿರುವ ಈ ಆಂದೋಲನಕ್ಕೆ ಎಲ್ಲರೂ ಸದಸ್ಯರೇ. ಸದಸ್ಯತ್ವಕ್ಕೂ ಪದ್ಧತಿಯೂ ಇಲ್ಲ ರದ್ಧತಿಯೂ ಇಲ್ಲ! ಎಂತಹ ಅಪರಿಮಿತ ಪ್ರೇಮದ ಸಂಘ ನೋಡಿ!ಫಲಾನುಭವಿಗಳ ಅವಸ್ಥೆ ಮಾತ್ರ ಹೇಳತೀರ! ಅಪಾನವಾಯುವನ್ನು ತಹಬಂಧಿಯಲ್ಲಿಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಅದನ್ನು ವಿಸರ್ಜಿಸದೇ ಇರುವ ಅನೇಕ ಸುಸಂಕೃತರಿದ್ದಾರೆ. ಅಂಥವರಿಗಂತೂ ಅವರಿರುವ ಜಾಗಗಳಲ್ಲಿ ಅಪಾನವಾಯು ಪ್ರಯೋಗವಾಗಿಬಿಟ್ಟರೆ ಅಶ್ರುವಾಯು ಪ್ರಯೋಗವಾದಂತೇ ಅವರು ಚಡಪಡಿಸುತ್ತಾರೆ!

ಕೊನೆಯದಾಗಿ ಮಠಮಾನ್ಯಗಳಲ್ಲಿ ಅನೇಕ ಜನ ಅದೂ ಇದೂ ಕಡಲೇಕಾಳಿನದೋ ಹಿಟ್ಟಿನದೋ ಪ್ರಸಾದ ತಿಂದು, ತೊಗರಿ ಬೇಳೆಯ ಹುಳಿಯನ್ನೋ ಹೆಸರುಬೇಳೆಯ ತೊವ್ವೆಯನ್ನೋ ಉಂಡು ಅಡ್ಡಾದಾಗ ಅಲ್ಲಿ ನೋಡಬೇಕು -- ಯುನಿಟಿ ಇನ್ ಡೈವರ್ಸಿಟಿ! ಯಾವ ಕಳ್ಳನೇ ಬಂದರೂ ಆ ಬಾಂಬು ಗರ್ನಾಲುಗಳ ಸದ್ದಿಗೆ ಮಾರುದೂರದಿಂದಲೇ ಓಡಿಹೋಗಿಬಿಡುತ್ತಾನೆ. ಇಲ್ಲಿ ಪರಸ್ಪರ ಪ್ರಶ್ನೋತ್ತರಗಳು ನಡೆಯುತ್ತಿರುವ ಹಾಗೇ ಒಬ್ಬರಾದಮೇಲೆ ಒಬ್ಬರು ’ಉಪಾಸನೆ’ ನಡೆಸುತ್ತಲೇ ಇರುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಕೆಲವು ಭಾರತೀಯರಲ್ಲಿ ಈ ’ಹೊಗೆಯಾಡುವ ಫಿರಂಗಿ’ಗಳಿದ್ದರೂ ’ಬ್ರಿಟಿಷ್ ಫಿರಂಗಿ’ಗಳ ಮುಂದೆ ನಮ್ಮ ಫಿರಂಗಿಗಳು ಏನೂ ಅಲ್ಲ ಎನ್ನುವುದು ತಮಾಷೆಯೆನಿಸುತ್ತದೆ.


ಫಲಶೃತಿ

ಸಮಾಜದಲ್ಲಿ ಸದಾ ಹೊಗೆಯಾಡುವ ಫಿರಂಗಿಗಳಿದ್ದಹಾಗೇ ಇರುವ ವಾಮದ್ವಾರಗಳನ್ನು ಇಟ್ಟುಕೊಂಡವರಲ್ಲಿ ಒಂದು ವಿನಂತಿ: ಅಪಾನವಾಯು ಸಹಜವೇ ಆಗಿದ್ದರೂ ಬದುಕೇ ಅಸಹ್ಯವೆನಿಸುವಷ್ಟು ಅವುಗಳ ಅನುಸಂಧಾನ ಬೇಡ. ಆಯುರ್ವೇದದಲ್ಲಿ ಊಟ-ತಿಂಡಿಗಳನ್ನು ಮಾಡುವವರಿಗೂ ತಯಾರಿಮಾಡುವವರಿಗೂ ಒಂದು ಕ್ರಮವನ್ನು ಹೇಳಿದ್ದಾರೆ. ಯಾವುದು ಅಪಾನವಾಯು ಜನಕವೋ ಅದರ ದಮನಕ್ಕೋಸ್ಕರ ಇನ್ನೊಂದು ವಿರುದ್ಧಗುಣ ತತ್ವದ ಆಹಾರವನ್ನು ಜೊತೆಯಲ್ಲಿ ಉಪಯೋಗಿಸಲು ಹೇಳುತ್ತಾರೆ. ಉದಾಹರಣೆಗೆ ಹೋಳಿಗೆ ತಿಂದಾಗ ಅಪಾನವಾಯು ಜಾಸ್ತಿ ಉದ್ಭವಾವಾಗದಂತೇ ಅದಕ್ಕೆ ತುಪ್ಪಸವರಿ ತಿನ್ನಲು ಹೇಳಿದರೆ, ಪುದಿನಾ ಮತ್ತು ಶುಂಠಿ ಇವೆಲ್ಲಾ ಅಪಾನವಾಯು ಮರ್ದಕಗಳಾಗಿವೆ-ಇವುಗಳ ಚಟ್ನಿಯನ್ನು ಸೇವಿಸಬಹುದಾಗಿದೆ. ಹೀಗಾಗಿ ಈ ಅಸಂಘಟಿತ ಸಂಘಟನೆಯ ಆಂದೋಲನಕ್ಕೆ ಕಡಿವಾಣ ಹಾಕಲು ಆಯುರ್ವೇದ ಪದ್ಧತಿಯನ್ನು ಅನುಸರಿಸಿ. ಆಗ ’ಗ್ಯಾಸ್ ಟ್ರಬಲ್’ ಕೂಡ ಕಮ್ಮಿಯಾಗುತ್ತದೆ, ಸಮಾಜದಲ್ಲೂ ’ಗ್ಯಾಸ್ ನಿಂದಾಗುವ ಟ್ರಬಲ್’ ಕಡಿತಗೊಳ್ಳುತ್ತದೆ!

ಮಂಗಲವು ಅಪಾನವಾಯುಗೆ ಲಿಂಗಬೇಧ ರಹಿತಗೆ |
ಅಂಗಳದಿ ನಿತ್ಯವೂ ನಲಿವಗೆ ಭಂಗವಿಲ್ಲದೆ ಬೆಳದಗೇ ||

Friday, January 14, 2011

ಹರಿವ ತೊರೆಗಳು ಬರಿದಾದ ಕಥೆಯು !


ಹರಿವ ತೊರೆಗಳು ಬರಿದಾದ ಕಥೆಯು !


ಮಿತ್ರಾ ರವಿ, ನಮಸ್ಕಾರಗಳು.

ಉಭಯಕುಶಲೋಪರಿ ನಿತ್ಯವೂ ಸಾಂಪ್ರತ! ವ್ಯತ್ಯಾಸವಿಷ್ಟೇ ನೀನು ದಿನವೂ ಉದಿಸಿ ದಿನವೂ ಮುಳುಗಿ ಮತ್ತದೇ ಕ್ರಿಯೆಯಲ್ಲಿರುತ್ತಾ ಜಗತ್ತಿನ ಪ್ರತಿ ಜೀವಸಂಕುಲಕ್ಕೇ ಮಿತ್ರನಾಗಿದ್ದೀಯ, ನಾವೋ ಹುಟ್ಟಿದಾಘಳಿಗೆಯಿಂದ ದಿನವೂ ಮುದುಕಾಗುತ್ತಾ ನಡೆದಿದ್ದೇವೆ ಬಿಟ್ಟರೆ ಜಗತ್ತಿನ ಬಗ್ಗೆ ನಿನ್ನಷ್ಟು ಕಾಳಜಿ ಇಟ್ಟುಕೊಂಡವರಲ್ಲ.

ವಿಜ್ಞಾನಿಗಳು ಹೇಳಿದರು ನೀನು ಕರಗುತ್ತಿದ್ದೀಯ ಒಂದುದಿನ ಪೂರ್ತಿ ಕರಗೇ ಹೋಗುತ್ತೀಯ ಅಂತ! ನನಗೆ ಆ ಮಾತಿನಲ್ಲಿ ಸ್ವಾರಸ್ಯಕಾಣಿಸಲಿಲ್ಲ. ನೀನು ಇನ್ನೂ ಪ್ರಖರವಾಗುತ್ತಲೇ ನಡೆಯುತ್ತೀಯ ಬಿಡು. ನಿನ್ನ ಹತ್ತಿರ ಬರಲು ಮನುಜರಾದ ನಮಗೆ ಅವಕಾಶ ಸಿಕ್ಕಿದ್ದರೆ ನಿನ್ನನ್ನು ನಾವೇ ಕೊಯ್ದು ಒಯ್ದು ಮನೆಯಲ್ಲಿ ದೀಪಕ್ಕಾಗಿ ಬಳಸುತ್ತಾ ಕರಗಿಸಿಬಿಡುತ್ತಿದ್ದೆವು! ಆದರೆ ನಿನ್ನ ಅಗಾಧ ಪರ್ಸನಾಲಿಟಿ ಇದೆಯಲ್ಲಾ ಅದು ಹತ್ತಿರ ಬರುವುದಿರಲಿ ಸರಿಯಾಗಿ ನೋಡಲೂ ಬಿಡುವುದಿಲ್ಲ. ಹೀಗಾಗಿ ನಿರುಪಾಯರಾಗಿ ಕುಳಿತಿದ್ದೇವೆ. ನಮ್ಮಲ್ಲೇ ವಿಜ್ಞಾನಿಗಳೆನಿಸಿಕೊಂಡವರಿಗೆ ತಿನ್ನಲಾರದ ದ್ರಾಕ್ಷಿ ಹುಳಿಯಾಗಿದೆ!

ಹೌದೂ ಕೇಳುವುದಕ್ಕೇ ಮರೆತೆ ನಿನ್ನೊಳಗೇನಿದೆ ಮಹನೀಯ ? ನಾವೆಲ್ಲಾ ಹಲವು ಬ್ಯಾಟರಿಗಳನ್ನೋ ಜನರೇಟರ್ ಗಳನ್ನೋ ಬಳಸಿದರೂ ಬೆಳಕನ್ನು ಪಡೆಯುವುದು ಕೇವಲ ಎಣಿಕೆಯಮೇಲೆ. ಆದರೆ ದಿನವೂ ಅದೇ ಬೆಳಕು ಹರಿಸುವ, ಅದರೊಂದಿಗೆ ಶಾಖನೀಡುವ ಅಲ್ಲದೇ ನಿನ್ನ ಕಿರಣಗಳ ರೂಪದಿಂದ ಕಿಣ್ವಗಳನ್ನು ಆಯಾ ಜೀವಿಗಳಲ್ಲಿ ಸೃಷ್ಟಿಸುವ ನಿನಗೆ ಅಷ್ಟೆಲ್ಲಾ ಶಕ್ತಿ ಎಲ್ಲಿಂದ ಬಂತು ? ಹೇಳಲಾರೆಯಾ ? ಹಾಗಂತ ನಸುಕಿನಲ್ಲಿ ನೀನು ಉದಿಸುವಾಗ ಮತ್ತು ಸಾಯಂಕಾಲ ನೀನು ಸಮುದ್ರದಲ್ಲಿ ಮುಳುಗಿಹೋಗುವಾಗ[!]ನಾವು ನಿನ್ನನ್ನು ಕೆಂಪಗೆ ಕಾಣುತ್ತೇವೆ. ಆಗಮಾತ್ರ ನಿನ್ನನ್ನು ನೋಡುತ್ತೇವೆ, ಆದರೂ ನಮಗೆ ನಿನ್ನ ಗಾತ್ರದ ಲೆಕ್ಕ ಹಾಕುವುದು ಸಾಧ್ಯವೇ ಇಲ್ಲ. ಕಣ್ಣು ಮೂಗು ಕೈಕಾಲು ಏನೂ ಇಲ್ಲದ ನಿನಗೆ ಪೂರ್ವದ ದಿಕ್ಕು ಇಲ್ಲೇ ಇದೆ ಮತ್ತು ಪಶ್ಚಿಮ ಆಕಡೆಗೇ ಇದೆ ಎಂದು ಯಾರು ಹೇಳಿಕೊಡುತ್ತಾರೆ ಮಾರಾಯ? ಒಂದೇಒಂದು ದಿನ ಉತ್ತರಕ್ಕಾಗಲೀ ದಕ್ಷಿಣಕ್ಕಾಗಲೀ ಉದಯಿಸಲಿಲ್ಲವಪ್ಪಾ, ಹಾಗಂತ ಪಶ್ಚಿಮದಿಂದಲೂ ಉದಯಿಸಲಿಲ್ಲ. ಸದಾ ಒಂದೇ ದಿಕ್ಕು-ಪೂರ್ವ! ನಿನ್ನ ಈ ಕರ್ತವ್ಯಶೀಲ ಜೀವನ ಅಪೂರ್ವ!

ವೇದಾಂತಿಗಳು ನಿನ್ನನ್ನು ಸೂರ್ಯನಾರಾಯಣನೆಂದರು, ಭಾಸ್ಕರನೆಂದರು, ದಿವಾಕರ, ಪ್ರಭಾಕರ ಹೀಗೆಲ್ಲಾ ಹೇಳಿಕೊಳ್ಳುತ್ತಾ ನಮಿಸಿದರು, ಸೂರ್ಯನಮಸ್ಕಾರವೆಂಬ ವ್ಯಾಯಾಮವನ್ನೇ ಹುಟ್ಟುಹಾಕಿ ಹೊಸ ಆಯಾಮ ಕಂಡುಕೊಂಡರು. ಆದರೂ ’ಮಿತ್ರಾ’ ಎಂದರಲ್ಲ ಅದೇ ನನಗೆ ಬಹಳ ಹಿಡಿಸಿತು. ಯಾಕೆ ಗೊತ್ತೋ ಒಂದು ದಿನ ನೀ ಬರದಿದ್ದರೆ, ನೀನಿರದಿದ್ದರೆ ನಮಗೆ ಬದುಕಲೇ ಸಾಧ್ಯವಿಲ್ಲ ಇಲ್ಲಿ. ನಾವು ಬದುಕಬೇಕೆಂದಿದ್ದರೆ ನೀನು ಬರಲೇಬೇಕು. ಹೀಗಾಗಿ ನಾವೆಲ್ಲಾ ಜೀವಸಂಕುಲಗಳ ಸಂಘ ನಿನ್ನನ್ನು ಸನ್ಮಾನಿಸಿದರೂ ಅದು ನಿನ್ನ ಘನತೆಗೆ ತೀರಾ ಕಮ್ಮಿಯೇ ಬಿಡು. ಆದರೂ ಸನ್ಮಾನಿಸಲು ನೀನು ಬಿಡುವುದಿಲ್ಲವಲ್ಲ.

ಹುಟ್ಟಿದಾಗಿನಿಂದ ಹಲವು ಬದಲಾವಣೆಗಳನ್ನು ಸುತ್ತಲ ಪರಿಸರಗಳಲ್ಲಿ ಕಂಡಿದ್ದೇವೆ. ಹಿರಿಯರು ಕಾಲನ ಕರೆಯಲ್ಲಿ ಕಾಲವಾದರು. ಕಿರಿಯರು ಬೆಳೆಯುತ್ತಾ ಹಿರಿಯರಾದರು. ಬೀಜ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಮರವಾಗಿ,ಅದರಲ್ಲಿ ಮೊಗ್ಗರಳಿಸಿ ಹೂವಾಗಿ, ಕಾಯಾಗಿ, ಹಣ್ಣಾಗಿ ಆ ಹಣ್ಣಿನಲ್ಲಿ ಮತ್ತೆ ಬೀಜರೂಪ ಕಂಡೆವು! ಕಾಂಡವ ವನವನ್ನು ಅಗ್ನಿ ತನ್ನ ಕೆನ್ನಾಲಿಗೆಯಿಂದ ಆಹಾರವಾಗಿ ಸ್ವೀಕರಿಸಲು ಸಾಕಷ್ಟು ಸಮಯ ಹಿಡಿಯಿತಂತೆ. ಆದರೆ ಇಂದಿನ ನಮ್ಮ ರಾಜಕಾರಣಿಗಳು, ಕಾಡುಗಳ್ಳರು ಇಡೀ ವಿಶ್ವದ ಕಾಡನ್ನೆಲ್ಲಾ ನೈವೇದ್ಯವಾಗಿ ಸ್ವೀಕಾರಮಾಡುವ ವೇಗವನ್ನು ನೋಡಿದರೆ ಕೆಲವೇ ವರ್ಷಗಳಲ್ಲಿ ಕಾಡು ಎಂಬುದು ಕಥೆಯಾಗುತ್ತದೆ!

೩೦ ವರ್ಷಗಳಲ್ಲಿ ಆದ ಪರಿಸರದ ಬದಲಾವಣೆಯೇ ನಮ್ಮನ್ನೆಲ್ಲಾ ತಲ್ಲಣಗೊಳಿಸಿದೆ ಮಿತ್ರಾ. ನಾವೆಲ್ಲಾ ಚಿಕ್ಕವರಿದ್ದಾಗ ಬೇಸಿಗೆಯೇ ಇದ್ದರೂ ಹರಿವತೊರೆಗಳಿದ್ದವು. ಅಲ್ಲಿಂದ ಹರಿವ ನೀರನ್ನು ಹಲವು ಮೃಗ,ಪಕ್ಷಿ,ಪಶುಗಳು ಕುಡಿಯುವುದರ ಜೊತೆಗೆ ಕೃಷಿಕರೂ ಅಲ್ಲಲ್ಲಿ ಬಳಸುತ್ತಿದ್ದರು. ನೂರಾರು ಜಾತಿಯ, ಬಣ್ಣದ, ಗಾತ್ರದ, ರೂಪದ ಹಕ್ಕಿಗಳು ಆ ತೊರೆಗಳ ಬದುವಿನಲ್ಲಿ ಇರುವ ಮರಗಳಲ್ಲಿ ಗೂಡುಕಟ್ಟಿಕೊಂಡು ಸ್ವಚ್ಛಂದವಾಗಿ ವಿಹರಿಸುತ್ತಾ ಆರಾಮಾಗಿದ್ದವು. ಬರುಬರುತ್ತಾ ಆ ಎಲ್ಲಾ ಹರಿವ ತೊರೆಗಳು ಬರಿದಾದವು, ಅವೂ ಕಾಲಗರ್ಭದಲ್ಲಿ ಕಥೆಯಾದವು. ಗಿಡಮರಗಳು ಕಡಿಯಲ್ಪಟ್ಟವು, ಅವುಗಳನ್ನಾಶ್ರಯಿಸಿದ ಜೀವಸಂಕುಲಗಳು ಅಲ್ಲಿಂದ ಎಲ್ಲಿಗೋ ಹೋದವೋ ನಾಶವಾದವೋ ತಿಳಿಯದಾದೆವು-ಅಂತೂ ಕಾಣದಾದವು.

ಓಡಾಟಕ್ಕೆ ರಸ್ತೆಬೇಕು ನಿಜ. ನಮ್ಮ ಸಂಖ್ಯೆಯ ಅತೀವ ಹೆಚ್ಚಳದಿಂದ ಮತ್ತು ನಮ್ಮ ಓಡಾಟದ ಹುಚ್ಚಿನಿಂದ ತಿರುಗಾಟ ಜಾಸ್ತಿಯಾಯಿತು. ತಿರುಗಲು ವಾಹನಗಳು ಬಂದವು, ಎಲ್ಲಾ ಕೆಲಸಗಳಿಗೂ ಯಂತ್ರಗಳು ಬಂದವು. ನಮ್ಮ ಅವಸರಗಳಿಗೆ ತಕ್ಕಂತೇ ವಾಹನಗಳ ಭರಾಟೆ ಅತಿಯಾಗಿದ್ದರಿಂದ ಈಗ ಇದ್ದ ರಸ್ತೆಗಳೆಲ್ಲಾ ಆಗಲಗಲ ಅಗಲಗಲವಾಗುತ್ತಾ ಚತುಷ್ಪಥ, ಪಂಚಪಥ, ಷಷ್ಟಪಥ, ಅಷ್ಟಪಥಗಳಾಗುತ್ತಾ ಮುಂದೊಮ್ಮೆ ಜಾಗವೆಲ್ಲಾ ರಸ್ತೆಗಳಿಗೇ ಮೀಸಲಾಗುವ ಕಾಲವನ್ನು ನಾವೇ ಕೈಯಾರೆ ತಂದುಕೊಳ್ಳುವೆವು. ಕೇವಲ ೩೦ ವರ್ಷಗಳ ಹಿಂದೆ ಜೀವನಕ್ರಮದಲ್ಲಿ ಇಷ್ಟೆಲ್ಲಾ ತ್ವರಿತಗತಿಯಿರಲಿಲ್ಲ. ಜನರಲ್ಲಿ ಪರಸ್ಪರ ಅನ್ಯೋನ್ಯತೆಯಿತ್ತು. ಯಂತ್ರಗಳ ಬಳಕೆ ತೀರಾ ಕಮ್ಮಿಯಿತ್ತು. ಜನರು ಉಪಜೀವನಕ್ಕೆ ಬೇಕಾಗಬಹುದಾದ ಆಹಾರ-ವ್ಯವಹಾರಗಳಲ್ಲಷ್ಟೇ ತೊಡಗಿದ್ದರು.

ಏನಾಯಿತು ಎಂದು ಚಕಿತರಾಗಿ ನೋಡುತ್ತಿರುವಂತೇ ಜೀವನದ ಮೌಲ್ಯಗಳೇ ಬುಡಮೇಲಾದವು. ಝಣ ಝಣ ಕಾಂಚಾಣಕ್ಕೆ ತೀರಾ ಪ್ರಾಮುಖ್ಯತೆ ಕೊಡಲಾಯಿತು. ಮಾನವನ ಗುಣ-ಸ್ವಭಾವಗಳಿಗೆ ಯಾವ ಮಹತ್ವವೂ ಕಾಣಲಿಲ್ಲ. ಎಲ್ಲರಿಗೂ ತಾನು ಬೇಗ ಬೇಗ ಹಣವನ್ನು ಬಾಚಿ ಸಿರಿವಂತನಾಗಬೇಕು ಎಂಬ ಹಪಹಪಿಕೆ ಬಂತು. ನಮ್ಮಲ್ಲೇ ಹಲವರು ಅಡ್ಡದಾರಿಯಲ್ಲಿ ದುಡ್ಡುಮಾಡಲು ತೊಡಗಿದೆವು, ಗಣಿಗಳನ್ನು ಮಾಡಿದೆವು, ಕಾಡುಕಡಿದೆವು, ತೊರೆನೆರೆಗಳನ್ನೆಲ್ಲಾ ಮುಚ್ಚಿಹಾಕಿ ಕಟ್ಟಡಗಳನ್ನೋ ಕೈಗಾರಿಕಾ ವಸಾಹತುಗಳನ್ನೋ ಕೃಷಿಭೂಮಿಯನ್ನೋ ಆಗಿ ಪರಿವರ್ತಿಸಿದೆವು. ಪರಿಸರದಮೇಲೆ ಈ ನಮ್ಮ ದಾಳಿ ನಿತ್ಯವೂ ನೀನು ಉದಯಿಸಿದಷ್ಟೇ ಸತ್ಯವಾಯಿತು. ಅಳಿದುಳಿದ ಜೀವಸಂಕುಲಗಳು ತಮ್ಮ ಉಳಿವಿಗಾಗಿ ಇರುವ ಚೂರುಪಾರು ಕಾಡುಗಳಲ್ಲಿ ಸೇರಿಕೊಂಡವು. ಆದರೆ ಅಲ್ಲಿ ಅವುಗಳಿಗೆ ಆಹಾರವೇ ಸಾಲದಾಯಿತು!

ದಿನವೂ ಉದಯಿಸುವ ಮತ್ತು ಎಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುವ ನೀನು ಇದನ್ನೆಲ್ಲಾ ಗಣಿಸದಾದೆಯೋ ಅಥವಾ ಗಣಿಸಿಯೂ ಸುಮ್ಮನಾದೆಯೋ ತಿಳಿಯದಾಯಿತು. ವರ್ಷಕ್ಕೆ ಎರಡಾವರ್ತಿ ಪಥಬದಲಿಸುವ ನಿನ್ನ ಪರಿಕ್ರಮವೇನೋ ಸರಿಯೇ ಆದರೆ ಇನ್ನೆಷ್ಟು ದಿನ ಈ ಭೂಮಿಯಲ್ಲಿ ಮಿಕ್ಕುಳಿದ ಜೀವಸಂಕುಲಗಳಿಗೆ ಅವಕಾಶ ಎಂಬುದು ತಿಳಿಯದಾಯಿತಾಲ್ಲ ಮಿತ್ರಾ. ಈಗಿನ ತೀವ್ರತರ ಬದಲಾವಣೆಗಳನ್ನು ಕಂಡರೆ ಭೂಮಿ ಗುಂಡಗಿದೆ ಎಂದು ಬೋಳುಭೂಮಿಯನ್ನು ಕಾಣುವ ದಿನ ಹತ್ತಿರವೇ ಬರುತ್ತಿದೆಯೇನೋ ಅನಿಸುತ್ತಿದೆ. ಅದೇನೋ ಓಝೋನ್ ಪದರ ಅಂತ ನಮ್ಮಲ್ಲೇ ಕೆಲವರು ಒಂದಷ್ಟು ದಿನ ಕುಣಿದಾಡಿದರು. ಯಾವುದು ಓಝೋನ್ ಪದರವೋ ಯಾವುದು ಅತ್ಯಾವಶ್ಯಕವೋ ಅದರ ಅರಿವನ್ನು ನಾವು ಪಡೆಯುವ ಮೊದಲೇ ಝಣ ಝಣದ ಝಣತ್ಕಾರಕ್ಕೆ ನಮ್ಮನ್ನೇ ನಾವು ಮಾರಿಕೊಳ್ಳಹತ್ತಿದೆವು!

ನಿನ್ನ ಕಿರಣಗಳು ಸುಂದರ ಹಸಿರು ಗಿಡಮರಗಳಮೇಲೆ, ಹುಲ್ಲುಗಾವಲಿನಮೇಲೆ ಬೀಳುವುದನ್ನು ನೋಡಬೇಕು, ಅಲ್ಲಿ ಬಣ್ಣಬಣ್ಣದ ಜೀವಸಂಕುಲಗಳು ಆಡುವುದನ್ನು, ಬದುಕುವುದನ್ನು ಕಾಣಬೇಕೆಂಬ ನಮ್ಮ ಕೆಲವರ ಅಪೇಕ್ಷೆ ಕೇವಲ ಮನಸ್ಸಿನಲ್ಲಿಯೇ ಉಳಿಯಿತು. ದೂರದಿಂದಲೇ ತನ್ನ ಪಥವನ್ನು ಬದಲಿಸುವೆನೆಂದು ಟಾಟಾ ಮಾಡಿ ಹೋಗುವ ನಿನ್ನಲ್ಲಿ ಒಂದೇ ಪ್ರಶ್ನೆ ಮಿತ್ರಾ .......ಬರಿದಾಗಬಹುದಾದ ಈ ಭೂಮಿಯಲ್ಲಿ ಅಳಿದುಹೋದ ಗಿಡಮರಗಳ, ಜೀವಸಂಕುಲಗಳ ಮರುಹುಟ್ಟು ಸಾಧ್ಯವೇ? ಯುಗದ ಪಾದದಲ್ಲೇ ಇರುವಾಗ ಇಷ್ಟಾದರೆ ಯುಗಾಂತ್ಯವಾಗುವ ಹೊತ್ತಿಗೆ ಇನ್ನೇನು ಉಳಿಯಲು ಸಾಧ್ಯ? ತುಂಬೇ ಗಿಡಕ್ಕೆ ಏಣಿಹಾಕುವ ಆಕಾರಕ್ಕೆ ಮಾನವ ರೂಪತಳೆಯುತ್ತಾನೆ-ಆಗ ಈ ಯುಗಾಂತ್ಯವಾಗುತ್ತದೆ ಎನ್ನುತ್ತವೆ ವೇದಾಂತಗಳು! ಆದರೂ ಗೆಳೆಯಾ ನಿನ್ನಲ್ಲಿ ಒಂದು ಅರಿಕೆ.... ನಮ್ಮ ಜೀವನದಲ್ಲಿ ಒಂದಷ್ಟು ಗಿಡಮರಗಳೂ ಉಳಿದ ಜೀವಸಂಕುಲಗಳೂ ಅಳಿಯದಂತೇ ಏನಾದರೂ ನಿನ್ನದಾದ ಬೇಲಿವ್ಯವಸ್ಥೆ ಮಾಡುತ್ತೀಯಾ ? ಋಣವಿದ್ದರೆ ಮತ್ತೆ ನಿನ್ನನ್ನೂ ನಿನ್ನ ಹೊಳೆಯುವ ಎಳೆಯ ಕಿರಣಗಳನ್ನೂ ಸದಾ ಆ ಹಸಿರುದ್ಯಾನಗಳ ಮೇಲೆ ಕಾಣಬಯಸುತ್ತೇವೆ, ಕೇಳಿಸಿಕೊಂಡೆಯಲ್ಲ? ನಮಸ್ಕಾರ.

Thursday, January 13, 2011

ನೀನಿಲ್ಲದೇ ನನಗೇನಿದೇ ?


ನೀನಿಲ್ಲದೇ ನನಗೇನಿದೇ ?

ಸೂರ್ಯನ ಮೇಲೊಂದು ಕವನ ಬರೆಯಲು ಹೊರಟೆ
ಆ ಯಾರಲ್ಲಿ ? ಪೆನ್ನು ಕಾಗದ ಕೊಂಡು ಬನ್ನಿ
ಯಾರೂ ಬರಲಿಲ್ಲ! ಅರ್ಥವಾಯಿತು ನಾನು ರಾಜನಲ್ಲವಲ್ಲ
ರಾತ್ರಿಯೂ ಸುಮಾರೇ ಆಗಿಹೋಗಿತ್ತು ಹೇಗೂ ಇದೆ
ನಾಳೆ ಬೆಳಿಗ್ಗೆ ಬರೆದರಾಯಿತೆಂದು
ಮುಸುಕೆಳೆದು ಮಲಗಿದರೆ ಬೆಳಿಗ್ಗೆ ಕೆಟ್ಟ ಚಳಿ
ಕಟಕಟ ಕಟಕಟ ಎನ್ನುವ ಹಲ್ಲುಗಳನ್ನು
ಹೊತ್ತು ಅದು ಹೇಗೆ ಬರೆಯಲಿ ?

ಬಂದೇ ಬಿಡುತ್ತಾನಪ್ಪ ಅಷ್ಟು ಬೇಗ
ಆತನಿಗೆ ಚಳಿಯೇ ಇಲ್ಲವೇ ?
ಚಾದರ ಕಂಬಳಿ ಯಾವುದೂ ಇಲ್ಲ
ಲುಂಗಿ ಉಟ್ಟಿದ್ದೂಕಾಣೆ ಅಂಗಿ ಹಾಕಿದ್ದೂ ಕಾಣೆ
ದುಂಡಗೇ ಇರುತ್ತಾನೆ
ಬೆಳಿಗ್ಗೆನೇ ಹೀಗೆ ಹೇಳಿದ್ದು ಕೇಳಿ
ಕೆಂಪಗೆ ಮುಖ ಊದಿಸಿಕೊಂಡ ಹಾಗಿದ್ದನಪ್ಪ !

ಹೊತ್ತಾಯಿತು ಇನ್ನಾದರೂ ಬರೆಯೋಣ
ಹತ್ತು ಹೋಗಿ ಹನ್ನೆರಡು ಹೊಡೆದರೂ
ಮತ್ತದೇ ಕೊಸರುವಿಕೆ: ಸ್ವಲ್ಪ ತಡೆದು ಬರೆಯುವ !
ತಲೆಬಾಗಿಲಲ್ಲಿ ನಿಂತು ನೋಡುತ್ತೇನೆ
ಆತ ನನ್ನನ್ನೇ ದಿಟ್ಟಿಸಿ ನೋಡುತ್ತಾ
ಮೇಲೆ ಮೇಲೆ ಬಂದು ಕೋಪದಿಂದ
ಬುಸುಗುಟ್ಟುವ ಹಾಗಿದ್ದ: ಬಾಯಿಕಾಣಲಿಲ್ಲ
ಹಲ್ಲೂ ತೋರಲಿಲ್ಲ ಕಣ್ಣು ದೊಡ್ಡದುಮಾಡಿದನೋ
ಚಿಕ್ಕದು ಮಾಡಿದನೋ ಕಣ್ಣಿದೆಯೋ ಇಲ್ಲವೋ
ಯಾವುದೂ ತಿಳಿಯದಾಯಿತಲ್ಲ !
ನನ್ನ ಕಣ್ಣುಮಾತ್ರ ಆತನನ್ನು ನೋಡದಾಯ್ತು!
ಹೋಗಲಿ ಬಿಡಿ ಇನ್ನೂ ಸಮಯವಿದೆ
ನಮಗೇನು ೩ ಘಂಟೆಯ ಪರೀಕ್ಷೆಯೇ ?



ಮೂಡು ಬರಲೇ ಇಲ್ಲ!
ಏನಂತ ಬರೆಯುವುದು ? ’ರೊಟ್ಟಿಯ ಹಾಗೇ
ಗುಂಡಗೆ ಇರುವ ಹಳದಿ ಬಣ್ಣದ’ ಎಂದಷ್ಟೇ
ಬರೆದಿದ್ದೆ ಮತ್ತೆ ಕಂಡೆ ಆತನ ಬಣ್ಣ ಕೆಂಪು!
ಈಗ ಆತ ನನಗೆ ಕಣ್ಣು ಬಿಟ್ಟು
ತನ್ನ ಕಣ್ಣೇ ನೋಯ್ದಾಗ ಸಣ್ಣಗಾಗಿ ಹೋಗಿದ್ದ
ಸಾಕು ಎಂದುಕೊಂಡು ದೂರ ಸಾಗುತ್ತಿದ್ದ
ಸೀತಾರಾಮ ಭಟ್ಟರ ತೋಟದ ಆಚೆ
ಶಂಕರ ಶೆಟ್ರ ಶೇಂಗಾ ಬೇಣದ ಇಳಿಜಾರ
ಸಂದಿಯಲ್ಲಿ ಮತ್ತೆ ಸಾಗುವಾನಿ ಮರಗಳ
ಗುಂಪಿನ ಹಿಂದೆ ಇಳಿದಿಳಿದು ಅಡಗುತ್ತಿದ್ದ!
ಅವಿತೂ ಕಂಡೂ ಕೂಕಿಯಾಡುತ್ತಿದ್ದ!
ಕವನ ಬರೆಯಬೇಕೆನ್ನುವಷ್ಟರಲ್ಲಿ
ಕೈಬೀಸಿದರೂ ನಿಲ್ಲದೇ ಓಡಿಹೋದ!
ಮತ್ತೆ ಆತನಿಲ್ಲದ ರಾತ್ರಿ ಅದುಹೇಗೆ ಬರೆಯಲಿ ?

Wednesday, January 12, 2011

ಕಥೆಯಾದರಿವರು ನಮ್ಮ-ನಿಮ್ಮ ನಡುವೆ


ಕಥೆಯಾದರಿವರು ನಮ್ಮ-ನಿಮ್ಮ ನಡುವೆ

ಬಾಲ್ಯದ ಹಲವು ದಿನಗಳನ್ನೂ ಜನರನ್ನೂ ನೆನೆದಾಗ ಕೆಲವು ವ್ಯಕ್ತಿಗಳನ್ನು ಮರೆಯಲು ಸಾಧ್ಯವಾಗುವುದಿಲ್ಲ. ಹಾಗಂತ ಅವರು ನನಗೇನೋ ಸಹಾಯ ಮಾಡಿದವರಲ್ಲ. ಬದಲಾಗಿ ಅವರ ವಿಧಿಲಿಖಿತವೇ ವಿಚಿತ್ರವಾಗಿದ್ದು ಅವರ ಬದುಕಿನ ದಿಕ್ಕೇ ಬದಲಾಗಿ ಅವರೇ ಬದಲಾಗಿ ಹೋದ ವ್ಯಕ್ತಿಗಳು. ಇಂತಹ ಜನರಲ್ಲಿ ಕೆಲವರನ್ನು ನಿಮ್ಮ ಮುಂದೆ ನೆನಪಿಸಿಕೊಳ್ಳುವ ಪ್ರಯತ್ನ ಹೀಗಿದೆ--


ಮಳ್ಳ ಗಣಪ

ಗಣಪ ಎಂಬಾತ ಒಳ್ಳೆಯ ವ್ಯಕ್ತಿ, ಜಾತಿಯಿಂದ ಒಕ್ಕಲಿಗ. ಸಪೂರ ಶರೀರದ ಮೃದು ಮನಸ್ಸಿನ ಸಜ್ಜನ. ಅವನಾಯಿತು, ಅವನ ಕೆಲಸವಾಯಿತು. ಹೆಂಡತಿ-ಮಕ್ಕಳು ಎಲ್ಲರೊಟ್ಟಿಗೆ ಸರಳ ಜೀವನವನ್ನು ನಡೆಸುತ್ತಿದ್ದ ಆತನಿಗೆ ಅದೇಕೋ ಏನೋ ಮನೆಯೇ ಬೇಡವಾಯಿತು. ನಿಂತಲ್ಲಿ ನಿಲ್ಲಾಲಾರ, ಒಂದೆಡೆಗೇ ಬಹಳ ಹೊತ್ತು ಕೂರಲಾರ. ಕೆಲವೊಮ್ಮೆ ಮಾತ್ರ ಒಂಡೆಡೆಗೇ ಬಹಳ ಹೊತ್ತು ಕೂತುಬಿಡುತ್ತಿದ್ದ. ಊಟ ಸಿಕ್ಕಿದರೆ ಮೂರುದಿನಕ್ಕಾಗುವಷ್ಟನ್ನು ಒಮ್ಮೆಲೇ ತಿನ್ನುವ ಪರಿಪಾಠ! ಆಮೇಲೆ ಕೆಲವೊಮ್ಮೆ ದಿನಗಟ್ಟಲೇ ಉಪವಾಸ! ಆಗಾಗ ನಮ್ಮನೆಯ ಅಂಗಳದಲ್ಲಿ ಕಟ್ಟೆಯಮೇಲೆ ಠಿಕಾಣಿ. " ಗಣಪಾ, ಸ್ವಲ್ಪ ಆ ಕೆಲಸ ಇತ್ತಲ " ಎಂದು ಹಿರಿಯರು ಹೇಳಿದರೆ ಸಾಕು-ಆಸಾಮಿ ನಾಪತ್ತೆ! ಬಹಳ ಮಾರ್ಯಾದೆಯ ಮನುಷ್ಯ ಬೇರೆ. ಸಂಕೋಚವೂ ಕೂಡ ಇತ್ತು. ಆದರೂ ತಾಳಲಾರದ ಹಸಿವೆ ಮಾತ್ರ ಆತನನ್ನು ಹಲವರ ಮನೆಗಳಿಗೆ ಆಗಾಗ ಭೇಟಿಕೊಡುವ ಹಾಗೇ ಮಾಡುತ್ತಿತ್ತು. ಪಂಚೆ ಉಟ್ಟು ಅಂಗಿ ಧರಿಸಿ ಹೊರಟ ಗಣಪನಿಗೆ ಎಲ್ಲಿ ಸ್ನಾನವೋ, ಎಲ್ಲಿ ನಿದ್ದೆಯೋ ಒಂದೂ ಗೊತ್ತಿಲ್ಲ. ಮನೆಯಲ್ಲಿ ಹೆಂಡತಿ-ಮಕ್ಕಳು ನೋಡುವಷ್ಟು ನೋಡಿ ಹೇಳಿ-ಕೇಳಿ ಮಾಡಿ ಸಾಕಾಗಿ ಕೈತೊಳೆದುಕೊಂಡಿದ್ದರು.


ಚೀನ್ಕೋಡ ಆಚಾರಿ

ಅಡಿಕೆ ಹಾಳೆ ಮತ್ತು ಕತ್ತಿಯೊಂದಿಗೆ ಬರುತ್ತಿದ್ದ ಈ ಆಸಾಮಿ ಒಂದುಕಾಲದಲ್ಲಿ ಒಳ್ಳೆಯ ಬಡಿಗ-ಆಚಾರಿ[ಮರಗೆಲಸದವ] ಯಾವ ಘಳಿಗೆಯ ತಪ್ಪೋ ಇದ್ದಕ್ಕಿದ್ದಲ್ಲೇ ಚೀನ್ಕೋಡ್ ಆಚಾರಿ ನಗಲು ಆರಂಭಿಸಿದ. ಆತ ಯಾರನ್ನು ಕಂಡರೂ ಏನನ್ನು ಕಂಡರೂ ನಗುತ್ತಲೇ ಉಳಿದ. ಒಂದು ಕೈಲಿ ಅಡಿಕೆ ಹಾಳೆ ಇನ್ನೊಂದರಲ್ಲಿ ಕತ್ತಿ ! ಆಗಾಗ ಬರುತ್ತಿದ್ದ ಈತನನ್ನು ಕಂಡು ನಾವೆಲ್ಲಾ ಮಕ್ಕಳು ಹೆದರಿಕೊಳ್ಳುತ್ತಿದ್ದೆವು. ಆದರೆ ಆತ ನಿರುಪದ್ರವಿಯಾಗಿದ್ದ.


ಮಕ್ ಶೀತಸ ?

ಈತನ ಹೆಸರು ಗೊತ್ತೇಇಲ್ಲ. ಆದರೆ ಕೊಂಕಣಿ ಭಾಷೆಯಲ್ಲಿ ಮಾತನಾಡುತ್ತಿದ್ದ ಈತನಿಗೆ ಆತ ಪದೇ ಪದೇ ಬಳಸುತ್ತಿದ್ದ " ಮಕ್ ಶೀತಸ " ಎಂತಲೇ ಕರೆಯುತ್ತಿದ್ದರು. ಮಕ್ ಶೀತಸ " ನಂಗೆ ಅನ್ನ ಉಂಟಾ ? " ಎಂದರ್ಥವಂತೆ. ನಾವೆಲ್ಲಾ ತೀರಾ ಚಿಕ್ಕವರಾಗಿದ್ದು ಏನಾದರೂ ತರಲೆಮಾಡಿದರೆ ಅಮ್ಮ " ನಿನ್ನ ಮಕ್ ಶೀತಸಂಗೆ ಕೊಟ್ಟು ಬಿಡ್ತೇನೆ ನೋಡು " ಎನ್ನುತ್ತಿದ್ದರು. ಚಡ್ಡಿ-ಅಂಗಿ ಹಾಕಿಕೊಂಡು ಓಡಾಡುತ್ತಿದ್ದ ಆತ ಸತ್ಯನಾರಾಯಣ ಪೂಜೆ ಹಾಡು ಹೇಳು ಎಂದರೆ " ಸತ್ಯನಾರಾಯಣ ಕಾಜಾಯತಮ್ " ಎನ್ನುತ್ತಾ ಒಂದು ವಿಧದ ನರ್ತನ ಮಾಡುತ್ತಿದ್ದ. " ಅಣ್ಣಪ್ಪ ಗಾಡಸ ? " ಎನ್ನುವುದು ಆತನಾಡುತ್ತಿದ್ದ ಇನ್ನೊಂದು ಮಾತು. ಆತ ಎತ್ತಿನಗಾಡಿಯೊಂದನ್ನು ನಡೆಸುತ್ತಿದ್ದು ಅದನ್ನು ಯಾರೋ ಅಣ್ಣಪ್ಪ ತೆಗೆದುಕೊಂಡು ಹೋದನೆಂತಲೂ ಅದನ್ನು ಈತ ಸತತ ಹಾಗೆ ಹೇಳುತ್ತಿದ್ದನೆಂತಲೂ ಜನ ಅಂದುಕೊಳ್ಳುತ್ತಿದ್ದರು.


ಪೈ ಮಾಮ್

ವಿದ್ಯಾವಂತ ಮತ್ತು ಬುದ್ಧಿವಂತನಾದ ಪೈ ಎನ್ನುವ ವ್ಯಕ್ತಿ ಹರುಕು ಪ್ಯಾಂಟ್ ಮತ್ತು ಶರ್ಟ್ ಧರಿಸಿ ಬರುತ್ತಿದ್ದ. ಆತನಿಗೆ ಗೊತ್ತಿಲ್ಲದ ಕೃಷಿಕೆಲಸಗಳಿರಲಿಲ್ಲ. ಮನೆಯಲ್ಲಿ ಅಣ್ಣ-ತಮ್ಮಂದಿರ ನಡುವೆ ಯಾವುದೋ ಜಗಳವಾಗಿತ್ತೋ ಏನೋ! ಪಾಪ ಒಳ್ಳೆಯ ಮನುಷ್ಯನಾಗಿದ್ದ. ಬಂದರೆ ತುಸುಹೊತ್ತು ನಿಲ್ಲುವುದು ಏನಾದ್ರೂ ಕೊಟ್ಟರೆ ತಿನ್ನುವುದು ಮಾಡುತ್ತಿದ್ದ. ಆತನ ಎದುರು ಯಾರಾದರೂ ಕೆಲಸಮಾಡುತ್ತಿದ್ದರೆ ಆ ಕೆಲಸವನ್ನು ಹೇಗೆ ಚೆನ್ನಾಗಿ ಮಾಡಬಹುದು, ಹೇಗೆ ಬೇಗಮಾಡಬಹುದು ಎಂಬುದೆಲ್ಲವನ್ನೂ ಹೇಳಬಲ್ಲ ಬುದ್ಧಿವಂತ. ಆದರೆ ಮನಸ್ಸು ಯಾಕೋ ಮನೆಯ ವಾತಾವರಣದಿಂದ ವಿರಕ್ತವಾಗಿ ಈ ಸ್ಥಿತಿಯಾಗಿತ್ತು.


ಕುಲ್ಲೇಗದ್ದೆ ಮೊನ್ನ

ಕುಲ್ಲೇಗದ್ದೆ ಎಂಬುದೊಂದು ಚಿಕ್ಕ ಮಜರೆ. ಅಲ್ಲಿನ ಹವ್ಯಕ ಬ್ರಾಹ್ಮಣ ಆ ಮೊನ್ನ[ಮೂಕ]. ಆತನಿಗೆ ಮಾತು ಬರುತ್ತಿತ್ತು, ಆದರೂ ಮಾತನಾಡದ ಸ್ಥಿತಿ ತಲುಪಿದ್ದ! ಹತ್ತಾರು ಎಕರೆ ತೋಟವಿದ್ದ ಆತ ತೆಂಗಿನಕಾಯಿ ಕೀಳುವಾಗ ತೋಟದ ಬದುವಿನಲ್ಲಿ ಮೇಯುತ್ತಿದ್ದ ಆಕಳ ತಲೆಯಮೇಲೆ ಕಾಯಿ ಉದುರಿಬಿದ್ದ ಏಟಿನಿಂದ ಆಕಳು ಸ್ಥಳದಲ್ಲೇ ಸತ್ತುಹೋಯಿತಂತೆ. ಅಂದಿನಿಂದ ಆತ ಮನೆಯನ್ನು ಬಿಟ್ಟ. ಊರಿಂದೂರಿಗೆ ಪಯಣ. ದಾರಿಯಲ್ಲಿ ಯಾರಾದರೂ ತಿಂಡಿ ಏನಾದರೂ ಕೊಟ್ಟರೆ ಅವುಗಳನ್ನೆಲ್ಲಾ ಪಂಚೆಯಲ್ಲಿ ಕಟ್ಟುತ್ತಾ ಸಾಯಂಕಾಲವಾಗುವ ಹೊತ್ತಿಗೆ ಎಲ್ಲಾದರೂ ಸಿಗುವ ಒಂದು ಆಕಳಿಗೆ ಆ ಗಂಟನ್ನು ಬಿಚ್ಚಿ ತಿನ್ನಲು ಕೊಟ್ಟು ಕೈಮುಗಿಯುವುದು ಅಭ್ಯಾಸವಾಯಿತಂತೆ. ಚಿಕ್ಕ ಪಂಚೆ ಉಟ್ಟು ಬರುತ್ತಿದ್ದ. ಮೈಗೊಂದು ಕಸೆ ಅಂಗಿ ಕೆಲವೊಮ್ಮೆ ಇದ್ದರೂ ಹಲವೊಮ್ಮೆ ಇರುತ್ತಿರಲಿಲ್ಲ. ದನವನ್ನು ತನ್ನ ಕೈಯ್ಯಾರೆ ಸಾಯಿಸಿಬಿಟ್ಟೆನಲ್ಲಾ ಎಂಬ ಪಶ್ಚಾತಾಪದಿಂದ ನಂತರದ ಇಡೀ ಜೀವನವನ್ನು ಹೀಗೆಯೇ ಕಳೆದ. ನಮಗೆಲ್ಲಾ ನೋಡಿ ಪರಿಚಯವಾಗಿದ್ದರಿಂದ ಸಣ್ಣಗೆ ನಗುತ್ತಿದ್ದ. ನಮಗೆ ಅರ್ಥವಾಗದಿದ್ದರೆ ಸನ್ನೆ ಮಾಡುತ್ತಾ ಚಿಕ್ಕದಾಗಿ "ಆಕಳಿಗೆ ಏನಾದರೂ ಕೊಡು" ಎನ್ನುತ್ತಿದ್ದ. ಹಾಗಂತ ಯಾರಲ್ಲಿಯೂ ತಿಂಡಿ-ಊಟಕ್ಕೆ ನಿಲ್ಲುತ್ತಿರಲಿಲ್ಲ.

ಹೀಗೇ ಜೀವನವೇ ಒಂದು ವಿಚಿತ್ರ. ಇಲ್ಲಿ ಒಬ್ಬೊಬ್ಬರದೂ ಒಂದೊಂದು ಕಥೆ! ಬದುಕಿನ ಯಾವುದೋ ಘಟನೆ, ಯಾವುದೋ ಘಳಿಗೆ ಜೀವನವನ್ನೇ ಬದಲಾಯಿಸಿಬಿಡಬಹುದು. ಹೇಗೋ ಇದ್ದವರು ಇನ್ನ್ಹೇಗೋ ಆಗಿಬಿಡುವುದು ಇಲ್ಲಿನ ವಿಲಕ್ಷಣ ಸಂಗತಿ. ಇಂತಹ ಕೆಲವು ವ್ಯಕ್ತಿಗಳನ್ನು ಅವರ ಮನೆಯ ಜನರೆಲ್ಲಾ ಸೇರಿ ಸರಿಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಅವರು ಮಾತ್ರ ಬದಲಾಗುವುದೇ ಇಲ್ಲ. ಯಾವುದೋ ಶಕ್ತಿ ಅವರನ್ನು ಅವಿರತವಾಗಿ ತನ್ನ ಐಹಿಕಮೂಲವನ್ನೇ ಮರೆತು ಅಲೆದಾಡುವ, ಕೇಳಿಪಡೆಯುವ, ಯಾರೋ ಕೊಟ್ಟರೆ ತಿನ್ನುವ ಅಥವಾ ಉಪವಾಸವಿರುವ ಇಂತಹ ಮಾರ್ಗಕ್ಕೆ ಹಚ್ಚುವುದನ್ನು ಕಂಡಾಗ ಅಂತಹ ಜನರು ಪಡೆದುಬಂದ ಭ್ಯಾಗಯ ಅದೇಯೇನೋ ಎಂಬ ಅನಿಸಿಕೆ ಬರುತ್ತದೆ. ಇದನ್ನೆಲ್ಲಾ ಕಾಣುವಾಗ ಅತಿ ಸಹಜವಾಗಿ ನಮಗೂ ಮೀರಿದ ಶಕ್ತಿಯೊಂದು ಇದೆ ಅನಿಸುವುದಿಲ್ಲವೇ?

ಸಮಾಜದಲ್ಲಿ ಸಿರಿವಂತರೆಂದು ಹಮ್ಮುಬಿಮ್ಮಿನಿಂದ ಮೆರೆಯುವ ಅನೇಕರ ಮನೆಗಳಲ್ಲಿ ಬುದ್ಧಿಮಾಂದ್ಯ ಮಕ್ಕಳು, ಮೂರ್ಛಾರೋಗ ಪೀಡಿತಮಕ್ಕಳು ಹುಟ್ಟುತ್ತಾರೆ ಅಥವಾ ಅನೇಕಕಡೆ ಹುಟ್ಟಿದಾಗ ಸರಿಯಿದ್ದು ಆಮೇಲೆ ಕಾರಣಾಂತರಗಳಿಂದ ಮೂಕರಾಗುವುದು, ಕಿವುಡರಾಗುವುದು, ಕುರುಡರಾಗುವುದು, ಪಾರ್ಕಿನ್ಸನ್ ನಿಂದ ಬಳಲುವುದು ಮುಂತಾದ ಹಲವು ಸಂಗತಿಗಳನ್ನು ಕಾಣಬಹುದಲ್ಲ ಇವೆಲ್ಲಾ ಕೇವಲ ಮನುಷ್ಯನ ಕೈಮೀರಿ ನಡೆಯುವಂತಹ ಕ್ರಿಯೆಗಳಲ್ಲವೇ ? ಆಗಾಗ ಬರಿದೇ ಚಿಂತಿಸಿದಾಗ ಮತ್ತೆ ಮತ್ತೆ ಅನಿಸುವುದು ಇದಕ್ಕೆಲ್ಲಾ ಕಾರಣಗಳೇ ಬೇಕಿಲ್ಲ. ನಿಸರ್ಗವೇ ಎಲ್ಲವನ್ನೂ ನಿಯಂತ್ರಿಸುವುದಾದರೆ ನಮ್ಮ ಕಾಡುಗಳ್ಳರನ್ನೂ ಗಣಿಧಣಿಗಳ ಅಟಾಟೋಪವನ್ನೂ ತಹಬಂದಿಗೆ ತರಲು ಇನ್ನೆಷ್ಟು ಸಮಯ ಕಾಯಬೇಕೋ ಗೊತ್ತಿಲ್ಲ. ಪ್ರಾಯಶಃ ಅವರ ಹಿಂದಿನ ಜನ್ಮದ ’ಬ್ಯಾಂಕ್ ಬ್ಯಾಲೆನ್ಸ್’ ನಲ್ಲಿ ಪುಣ್ಯದ ಅವಶೇಷ ಜಾಸ್ತಿ ಇದ್ದಿರಬೇಕು-ಅದು ಖಾಲಿಯಾಗುವವರೆಗೂ ಅವರು ಮೆರೆಯುತ್ತಲೇ ಇರುತ್ತಾರೆ.

Monday, January 10, 2011

ಅಸಮತೋಲನ


ಅಸಮತೋಲನ

ಹೃದಯ ದೀವಿಗೆಯುರಿದು ಭಾವಗಳು ಸಂಗಮಿಸಿ
ಉದಯವಾಗಲಿ ಜಗದ ಗುಡಿಯು ನೂತನದಿ
ಅದಕಾಗಿ ಜನರೆಲ್ಲ ವಿಶ್ವ ಬಾಂಧವ್ಯದೊಳು
ಹದಮಾಡಿ ಮನಗಳನು ಮುದಗೊಳಿಸುತಿರಲಿ

ವಿಸ್ತರದ ಈ ಜಗಕೆ ಬಾಗಿಲುಗಳೆಲ್ಲಿಹವು ?
ಹೊಸ್ತಿಲದು ಕಾಣಿಸದು ತಿರುಗೆತ್ತ ನೋಡೆ
ವಾಸ್ತವವ ಅರಿತಾಗ ನಾವೆಷ್ಟು ಚಿಕ್ಕವರು !
ಶಿಸ್ತಾಗಿ ಸಹಜೀವನವ ಬಾಳಬೇಕು

ಆರ್ಯಾವರ್ತದ ನಡುವೆ ಹಾರುವಾ ಪಕ್ಷಿಗಳು
ಸೂರ್ಯನುದಿಸುವ ವೇಳೆ ವಲಸೆ ತೆರಳುವವು
ಕಾರ್ಯಮುಗಿದಾವೇಳೆ ಮರಳಿ ತವರಿಗೆ ಬಂದು
ಪರ್ಯಾಯ ಸಂದೇಶ ನಮಗೆ ನೀಡುವವು !

ಗಡಿಗಳಾ ಮಿತಿಯಿರದೇ ಕಾಡೊಳಗೆ ಸಂಚರಿಸಿ
ಸಡಗರದಿ ಆಹಾರ ಭುಂಜಿಪ ಮೃಗಗಳು
ಉಡುಗೊರೆಯ ನೀಡುವವು ಸುಂದರ ದೃಶ್ಯಗಳ
ಗಿಡಮರಗಳಂಚಿನಲಿ ನಿಂತು ನಲಿಯುತಲಿ

ಯಾವುದೇ ಪಶುಪಕ್ಷಿ ಈ ನಿಸರ್ಗದ ನಡುವೆ
ತಾವಾಯ್ತು ತಮ್ಮ ಕೆಲಸಗಳಾಯ್ತೆಂದು ತಿಳಿದು
ಆವ ಸಂಪತ್ತನೂ ಲೂಟಿಮಾಡದೇ ಉಳಿದು
ನಾವು ಮಾಡುವ ಹಾನಿ ನೋಡಿ ಮಿಡಿಯುವವು

ಹಸಿರು ಕಾನನ ಬೇಕು ಶುದ್ಧ ಜಲವದುಬೇಕು
ಉಸಿರಾಡುವೊಲು ನಮಗೆ ನಿರ್ಮಲದ ಗಾಳಿ
ಬಸಿದುಕೊಳ್ಳುವ ಬದಲು ದೋಚಿಬದುಕುವ ನಾವು
ಹೆಸರಿಗೂ ಇರದಂತೆ ಮಾಡುವೆವು ದಾಳಿ !

Sunday, January 9, 2011

ವೇದ ದೀವಿಗೆ


ವೇದ ದೀವಿಗೆ

ಸೇರು ಸಜ್ಜನರನ್ನು ದೂರಗಳ ಮಿತಿಯಿರದೇ
ಸಾರು ಅವರಿರುವೆಡೆಗೆ ದಾರಿ ಹುಡುಕುತಲಿ
ನಾರು ಹೂವಿನ ಜೊತೆಗೆ ದೇವಮುಡಿಗೈದಂತೆ
ಏರು ಆ ಎತ್ತರಕೆ | ಜಗದಮಿತ್ರ

ಯಾರಿಗೂ ಕಮ್ಮಿಯೇಂ ಎಂಬ ಭಾವವು ಬೇಡ
ದಾರಿಹೋಕರು ನಾವು ತಿಳಿಮೊದಲು ಅದನು
ಹೀರುತ್ತ ಈ ಜಗದ ಅಪವಿತ್ರ ಬಳುವಳಿಯ
ಜಾರುವುದು ತರವಲ್ಲ | ಜಗದಮಿತ್ರ

ಹೇರಿ ನಡೆವುದು ಕತ್ತೆ ಭಾರವನು ದೂರದೆಡೆ
ಯಾರದೋ ವಸ್ತುಗಳು ಅದಕೆ ಅರಿವಿರದೇ
ಊರೂರು ಸುತ್ತುವುದು ಭಾರೀ ಪೆಟ್ಟಿಗೆ ಹೆದರಿ
ಕೇರಿ ಬೇಕಾದ್ದು ಪಡೆ | ಜಗದಮಿತ್ರ

ಸೂರು ಸಂತತಿ ಸಂಪದಭಿವೃದ್ಧಿಯಲಿ ತೊಡಗಿ
ತೇರೆತ್ತರದ ಬಯಕೆ ರಾಶಿಗಳ ನಡುವೆ
ಮೀರುತ್ತ ಕರ್ತವ್ಯ ಮಿತಿಯ ಸ್ವಾರ್ಥಕ್ಕಾಗಿ
ತೂರಿ ಪುನರಪಿ ಬರುವೆ | ಜಗದಮಿತ್ರ

ಯಾರೂ ಹೇಳುವುದಿಲ್ಲ ಬೇರೇ ಮಾರ್ಗವದಿಲ್ಲ
ಪಾರಾಗಲದುವೊಂದೇ ಜ್ಞಾನದ್ಹಾಯ್ದೋಣಿ
ಬೇರು ಎಲ್ಲಿಹುದೆಂದು ಹುಡುಕುತ್ತ ಮುನ್ನಡೆದು
ಭೂರಿ ಆನಂದ ಪಡೆ | ಜಗದಮಿತ್ರ

ಹಾರಿಹೋಗುವ ಮೊದಲು ಅರಿಯುತ್ತ ವೇದಗಳ
ದಾರಿದೀವಿಗೆಯಾಗಿ ಬಳಸು ತತ್ವಗಳ
ಖಾರ-ಉಪ್ಪುಗಳತಿಯ ಹಿಂಸೆಯಿರುವಶನಗಳ
ದೂರವಿಡು ತಿನ್ನದಲೇ | ಜಗದಮಿತ್ರ

ವಾರವಾರಕು ನವ್ಯ ವರುಷವರುಷಕು ದಿವ್ಯ
ಯಾರೋ ಕವಿ-ಸಾಹಿತಿಯ ಸೃಷ್ಟಿಯಂತಲ್ಲ
ನೂರಾರು ಯುಗಗಳನು ದಾಟುತ್ತ ನಡೆತಂದು
ಸೋರಿಕರಗದು ವೇದ | ಜಗದಮಿತ್ರ

Saturday, January 8, 2011

”ವೇದಸುಧೆ’ಯ ವಾರ್ಷಿಕೋತ್ಸವ

’ವೇದಸುಧೆ’ಯ ವಾರ್ಷಿಕೋತ್ಸವ

ಸಹೃದಯರೇ,

ನಮ್ಮ ನಿಮ್ಮೆಲ್ಲರ ಪ್ರೀತಿಯ ವೇದಿಕೆ ’ವೇದಸುಧೆ’ ---ಜಾತಿ,ಮತ,ಪಂಥ,ಜನಾಂಗವನ್ನೆಲ್ಲಾ ಮೀರಿನಿಂತ ಜ್ಞಾನದಾಹೀ ಬಳಗ. ವೇದಸುಧೆ ಎಂದರೆ ಕೇವಲ ಮಡಿಯುಟ್ಟವರ ತಾಣ ಎಂಬ ಪರಿಕಲ್ಪನೆ ಹೊರಗೋಡಿಸಿ ತಮ್ಮೆಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಬಯಸುತ್ತೇವೆ. ವೇದ ಎಂದರೆ ಜ್ಞಾನವೇ ಹೊರತು ಮತ್ತೇನೋ ಅರಗಿಸಲಾರದ ಕಬ್ಬಿಣದ ಕಡಲೇಕಾಳಲ್ಲ. ಹಿರಿಯರಾದ ಶತಾಯುಷಿ ಪಂಡಿತ್ ಸುಧಾಕರ ಚತುರ್ವೇದಿಯವರು ಬಯಸಿ, ವೇದಮೂರ್ತಿ ಸುಧಾಕರ ಶರ್ಮಾರವರು ಅನುಮೋದಿಸಿ, ಅಭಿಯಂತರರೂ ಮಿತ್ರರೂ ಆದ ಹರಿಹರಪುರ ಶ್ರೀಧರ್ ರವರು ತಮ್ಮ ನಿತ್ಯಬೆಳಕುನೀಡುವ ವೃತ್ತಿಯೊಂದಿಗೆ ಸೇವೆಗಾಗಿ ಈ ಒಂದು ಬಳಗವನ್ನು ರೂಪಿಸಿದರು. ದೈವೀಪ್ರೇರಣೆಯೋ ನಿಸರ್ಗದ ಇಚ್ಛೆಯೋ ಎಲ್ಲೆಲ್ಲೋ ಇದ್ದ ನಾವುಗಳನೇಕರು ’ವೇದಸುಧೆ ಬಳಗ’ವಾಗಿ ಬೆಳೆಯುತ್ತಿದ್ದೇವೆ. ಯಾವುದೇ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೇ ಕೇವಲ ಎಲ್ಲರ ಒಳಿತಿಗಾಗಿ ಒಂದಷ್ಟು ಜ್ಞಾನವನ್ನು ಹಂಚುವ ಸಲುವಾಗಿ ’ವೇದಸುಧೆ’ ಒಂದುವರ್ಷದಿಂದ ಶ್ರಮಿಸುತ್ತಿದೆ.

ಹಿಂದೂ ತಮ್ಮನ್ನೆಲ್ಲಾ ಆಗಾಗ "ವೇದಸುಧೆಗೆ ಬನ್ನಿ" ಎಂದು ಕರೆದಿದ್ದೇನೆ. ಈಗ ವೇದಸುಧೆ ವರ್ಷದ ಕೂಸು. ನಿಧಾನಕ್ಕೆ ಅಂಬೆಗಾಲಿಕ್ಕುತ್ತಿದೆ. ಈ ಕೂಸಿನ ಬೆಳವಣಿಗೆಯ ಜೊತೆಜೊತೆಗೆ ನಮ್ಮೆಲ್ಲರ ಮಾನಸಿಕ ವಿಕಸನ ಸಾಧ್ಯ ಎಂಬುದು ಹಲವು ಓದುಗರ ಅಭಿಪ್ರಾಯ. ಇಲ್ಲಿ ವೇದ ಮಂತ್ರಗಳನ್ನಷ್ಟೇ ಅಲ್ಲದೇ ಹಲವು ಜ್ಞಾನಪೂರಿತ ಕವನಗಳು, ಮುಕ್ತಕಗಳು, ಸ್ವಾರಸ್ಯಕರ ಘಟನೆಗಳು, ಧ್ವನಿಮುದ್ರಿತ ಹಾಡುಗಳು, ಪ್ರವಚನಗಳು ಇತ್ಯಾದಿ ಹಲವು ಹತ್ತು ಕೃತಿಗಳನ್ನು ತಾವು ಕಾಣಬಹುದಾಗಿದೆ. ನಮ್ಮ ನಿಮ್ಮೆಲ್ಲರ ವೇದಸುಧೆಗೆ ವರ್ಷ ತುಂಬಿದ ಹರ್ಷವನ್ನು ಹಂಚಿಕೊಳ್ಳಲು 'ವೇದಸುಧೆ ಬಳಗ' ಹಾಗೂ ಹಾಸನದ 'ಮನೆಮನೆ ಕವಿಗೋಷ್ಠಿ'ಯ ಸದಸ್ಯರಿಂದ ಇದೇ ಜನವರಿ ೩೦ ರಂದು ಭಾನುವಾರ ಹಾಸನದ ಶ್ರೀಶಂಕರಮಠದ ಸಭಾಭವನದಲ್ಲಿ ದಿನಪೂರ್ತಿಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜ್ಞಾನದಾಯೀ ಕಾರ್ಯಕ್ರಮಗಳ ಜೊತೆಗೆ ಮನೋರಂಜಕ ಗೀತಗಾಯನಗಳು, ಗೋಷ್ಠಿಗಳು ನಡೆಯುತ್ತವೆ. ವೇದಸುಧೆ ಬಳಗದ ಸದಸ್ಯಮಿತ್ರರಾದ ಕವಿನಾಗರಾಜರ ಪುಸ್ತಕ ಹಾಗೂ ಇನ್ನಿತರ ಒಂದೆರಡು ಪುಸ್ತಕಗಳ ಬಿಡುಗಡೆಯೂ ಇದೆ.

ಹಾಸನದ ಜನರ ಉತ್ತಮ ಮನೋಭೂಮಿಕೆ ಹೇಗಿದೆಯೆಂಬುದು ಅಲ್ಲಿಗೆ ನೇರವಾಗಿ ಹೋಗಿ ನೋಡಿವದರಿಗೆ ಮಾತ್ರ ಗೊತ್ತಾಗುವ ವಿಷಯ. ಸಜ್ಜನರನೇಕರು ಸೇರಿರುವ ಹಾಸನದ ಕೇಂದ್ರ ಭೂಮಿಕೆಗೆ ಬೆಂಗಳೂರೂ ಸೇರಿದಂತೇ ರಾಜ್ಯದ/ದೇಶದ/ವಿಶ್ವದ ಎಲ್ಲಾ ಕಡೆಯ ಜನರನ್ನು ಆಹ್ವಾನಿಸುತ್ತಿದ್ದೇವೆ. ವಿವರಗಳನ್ನು ಈ ಕೆಳಗೆ ಲಗತ್ತಿಸಿದ ಆಹ್ವಾನ ಪತ್ರಿಕೆಯಲ್ಲಿ ನೋಡಿ.




http://vedasudhe.blogspot.com/

ಮತ್ತಷ್ಟು ವಿವರಗಳಿಗೆ ಭೇಟಿಕೊಡಿ :
http://vedasudhe.blogspot.com/2011/01/normal-0-false-false-false-en-us-x-none.html
ಬರಲಿಚ್ಛಿಸುವವರು ತಮ್ಮ ವಿವರಗಳನ್ನು ವೇದಸುಧೆಗೆ [ ಮಿಂಚಂಚೆಯ] vedasudhe@gmail.com ಮೂಲಕ ಕಳುಹಿಸಿದರೆ ವ್ಯವಸ್ಥೆಗೆ ಅನುಕೂಲವಾಗುತ್ತದೆ.

ತಮಗೆಲ್ಲಾ
ಆದರದ ಸ್ವಾಗತ. ಬನ್ನಿ ವೇದಸುಧೆಗೆ ಕೈಜೋಡಿಸೋಣ, ಇದು ವೇದದ ಪ್ರಚಾರಕ್ಕಾಗಿಯಲ್ಲ-ಬದಲಾಗಿ ನಮ್ಮ ಒಳಿತಿಗಾಗಿ ವೇದವನ್ನು ತಿಳಿಯುವ ಸಲುವಾಗಿ. ತಮ್ಮೆಲ್ಲರ ಉಪಸ್ಥಿತಿಯನ್ನು ಅಪೇಕ್ಷಿಸಿ ಈ ಆಮಂತ್ರಣ, ನಮಸ್ಕಾರ.


Thursday, January 6, 2011

"ಒಂಬಲತಿ ಬರುತ್ತಾಳೆ ಕವಳಾ ಕೊಡು ಎನ್ನುತ್ತಾಳೆ !"

ಚಿತ್ರಗಳ ಕೃಪೆ : ಅಂತರ್ಜಾಲ

"ಒಂಬಲತಿ ಬರುತ್ತಾಳೆ ಕವಳಾ ಕೊಡು ಎನ್ನುತ್ತಾಳೆ !"

[ಪ್ರೇತಾತ್ಮಗಳ ಇರುವಿಕೆಯನ್ನು ವಿಜ್ಞಾನ ಒಪ್ಪುತ್ತದೆ ಆದರೆ ಅವುಗಳ ರೂಪವನ್ನಾಗಲೀ ಆಕೃತಿಯನ್ನಾಗಲೀ ಹೀಗೇ ಅಂತ ಯಾರೂ ಬಣ್ಣಿಸಲಾರರು, ಇದೊಂದು ಮೂರನೆಯ ಆಯಾಮವನ್ನು ಮಕ್ಕಳು ಅನುಭವಿಸುವ ಲೇಖನ]

ಓದುಗಾಯಾಂ ಪ್ರತಿಬೋಧಿತಾಂ ಲೇಖಕಾಂ ವಿ.ಆರ್.ಭಟ್ಟೇನ ಸ್ವಯಂ
ಸ್ವಾನಂದಂ ಮಿಶ್ರಿತಾಂ ಹಲವೆಡೆ ಲಘುಹಾಸ್ಯದಿಂ ಪೂರಿತಾಂ |
ಭಯಕೃದ್ಭಯನಾಶಿನೀಂ ಲೇಖನಂ ಏಕಾಧ್ಯಾಯದಿ ವಿರಚಿತಾಂ
ಅನುಕಂಪ
ಜನಕಂ ಇಹದೊಳು ನಿಶಾಸಮಯ ದ್ವೇಷಿಣಂ||
[ತಮಾಷೆಗೆ ಬರೆದ ಮೇಲಿನ ಶ್ಲೋಕಕ್ಕೆ ವ್ಯಾಕರಣ-ಛಂದಸ್ಸು,ಭಾಷಾಲಂಕಾರಗಳನ್ನು ಪರಿಗಣಿಸಬೇಡಿ]

ಮಕ್ಕಳ ಜಗತ್ತೇ ಬೇರೆ. ಆವರ ಆಟ-ಪಾಟಗಳ ವೈಖರಿ ಎಂಥವರಿಗೂ ಮುದನೀಡುವಂಥದ್ದು. ಯಾರಮೇಲೇ ಕೋಪವೋ ತಾಪವೋ ಪರಿತಾಪವೋ ಇದ್ದರೂ ಮಕ್ಕಳನ್ನು ನೋಡಿದಾಗ ಅದೆಲ್ಲಾ ಮರೆತುಹೋಗುತ್ತದೆ! ಅದಕ್ಕೇ ಇರಬೇಕು ಮಕ್ಕಳ ಆ ಜೀವನದ ಮಜಲುಗಳನ್ನು, ಬಾಲ್ಯವನ್ನು ಜೀವಮಾನಪೂರ್ತಿ ಇರಗೊಡುವುದಿಲ್ಲ ಸೃಷ್ಟಿ. ಒಂದೊಮ್ಮೆ ಎಲ್ಲರೂ ಮಕ್ಕಳ ಥರಾ ಇದ್ದಿದ್ದರೆ ಕಡಿದುಹೋದ ಸಂಬಂಧಗಳು ಮತ್ತೆ ಬೆಸೆಯುತ್ತಿದ್ದವೇನೋ. ಮಣ್ಣು ಮರಳು ನೀರು ಬಣ್ಣ ಪೆನ್ಸಿಲ್ ಕಾಗದ ಕಡ್ಡಿ ಏನೇ ಸಿಕ್ಕರೂ ಸಿಕ್ಕಿದವಸ್ತುವಿಗೆ ತಕ್ಕಹಾಗೇ ಆಟ ಆರಂಭವಾಗುತ್ತದೆ. ಮಕ್ಕಳು ಇಲ್ಲದಿದ್ದರೆ ಗಿಜಿಗುಡುವ ಈ ಜಗವೆಲ್ಲಾ ಹಕ್ಕಿಗಳಿಲ್ಲದ ಜಾಗದಂತೇ ಆಗುತ್ತಿತ್ತೇನೋ.

ನಾವೆಲ್ಲಾ ಚಿಕ್ಕವರಿರುವಾಗ ಸಾಯಂಕಾಲವಾದರೆ ಸಾಕು ನಮಗೆ ಕತ್ತಲೆ ಇರುವೆಡೆ ಹೋಗಲು ಹೆದರಿಕೆ, ಒಂಥರಾ ಪುಕು ಪುಕು ನಡುಕ, ಬರೀ ಪುಕ್ಕಲುತನ. ಕೆಲವೊಮ್ಮೆ ಒಬ್ಬರೇ ಇರಬೇಕಾದ ಜಾಗದಲ್ಲಿ ಕುಂತಲ್ಲೇ ಚಳಿಮಳೆಗಾಲವನ್ನೂ ಲೆಕ್ಕಿಸದೇ ಇಳಿಯುವ ಬೆವರು! ಮಕ್ಕಳಿಗೆ ದೊಡ್ಡವರಿಗಿಂತಾ ಹೆದರಿಕೆ ತುಂಬಾ ಜಾಸ್ತಿ ಇರುತ್ತದೆ ಎಂಬುದನ್ನು ವಿಜ್ಞಾನವೂ ಒಪ್ಪಿಕೊಂಡಿದೆ. ನಮ್ಮಲ್ಲಿ ನಾವೆಲ್ಲಾ ಚಿಕ್ಕವರಿರುವಾಗ ಶಾಲೆಗೆ ಹೋಗಿ ಬರುವಾಗೆಲ್ಲಾ ಯಾವುದಾದರೊಂದು ಕಥೆಗಳು ಸುದ್ದಿಗಳು ನಮ್ಮೊಳಗೆ ಹರಿದಾಡುತ್ತಲೇ ಇರುತ್ತಿದ್ದವು. ಕಾಗೆ ಎಂಜಲು ಮಾಡಿದ ಹುಳಿಸೇಬೀಜ, ಮಾವಿನಮಿಡಿ, ಇತ್ಯೇತ್ಯಾದಿಗಳಿಂದ ಹಿಡಿದು ಹಬ್ಬದ ಸಾಲಿನ ತಿಂಡಿಗಳಾದ ಚಕ್ಕುಲಿ, ಉಂಡೆ ಮುಂತಾದುವುಗಳನ್ನು ಹಂಚಿಕೊಂಡು ಅದೂ ಇದೂ ಮಾತನಾಡುತ್ತಾ ಹಳ್ಳಿಯ ಕಾಲು ಹಾದಿಗಳಲ್ಲಿ ಅಡ್ಡಾ ದಿಡ್ಡೀ ಓಲಾಡುತ್ತಾ ಸಾಗುವ ನಮ್ಮ ವೈಖರಿಯೇ ಬಹಳ ಆಮೋದಕರವಾಗಿರುತ್ತಿತ್ತು. ಅಲ್ಲಿ ಒಬ್ಬೊಬ್ಬರು ಒಂದೊಂಥರಾ ಕಥೆಗಳನ್ನು ಹೊತ್ತುಬರುತ್ತಿದ್ದರು! ಕಥೆಗಳಲ್ಲಿನ ಪಾತ್ರಗಳು ಕೆಲವೊಮ್ಮೆ ಕಣ್ಣೆದುರೇ ಬರುತ್ತಿವೆಯೇನೋ ಎಂಬಂತೇ ಬಣ್ಣಿಸುವ ಕಲಾವಿದರು ನಮ್ಮಲ್ಲಿದ್ದರು.

ಇಂತಹ ಕಥೆಗಳಲ್ಲಿ ದೆವ್ವ-ಭೂತ-ಪಿಶಾಚಿಗಳ ಕಥೆಯೇನೂ ಕಮ್ಮಿ ಇರುತ್ತಿರಲಿಲ್ಲ. ಊರಲ್ಲಿ ಮುದುಕರು ಯಾರಾದ್ರೂ ತೀರಿಕೊಂಡರೆ ವಾರಗಟ್ಟಲೆ ಅಂಥದ್ದೇ ಸುದ್ದಿ. ಸತ್ತವರು ಏನಾಗುತ್ತಾರೆ. ಭೂತ-ಪ್ರೇತವಾದವರು ಏನುಮಾಡುತ್ತಾರೆ-ಇವೆಲ್ಲಾ ಹಾದಿಯುದ್ದಕ್ಕೂ ಹಲವು ದಿನ ಗ್ರಾಸವಾದ ವಿಷಯಗಳು. ಅದರಲ್ಲಂತೂ ನಾವು ಚಿಕ್ಕವರಿರುವಾಗ ಬಂದ " ನಾ ನಿನ್ನ ಬಿಡಲಾರೆ’ ಸಿನಿಮಾವನ್ನು ನಮ್ಮ ಸದಾಶಿವ ನೋಡಿಬಿಟ್ಟಿದ್ದ! ಆತ ಹೇಳಿದ ಕಥೆ ಕೇಳಿ ತಿಂಗಳುಗಟ್ಟಲೇ ನಮಗೆ ಹೇಳಿಕೊಳ್ಳಲಾಗದ "ಧೈರ್ಯ ಭಯಂಕರ ಧೈರ್ಯ" ! ಧೈರ್ಯ ಎನ್ನುವಾಗ ನಡುಗುತ್ತಿದ್ದೆವು ಎನ್ನಲು ಅಧೈರ್ಯ ! ನಮ್ಮಲ್ಲಿಯೇ ಕೆಲವರನ್ನು ಆಯ್ಕೆಮಾಡಿ ’ಎದಗ’ರೆಂದು ಹೆಸರಿಸಿದ್ದೆವು. ಎದಗ ಎಂದರೆ ಎದೆ ಗಟ್ಟಿ ಇರುವವನು-ಯಾವುದಕ್ಕೂ ಹೆದರುವ ಆಸಾಮಿಯಲ್ಲ ಅಂತ. ಈಗ ಹೇಳುತ್ತೇನೆ ಕೇಳಿ ಅವರೆಲ್ಲಾ ಹೆಸರಿಗೆ ಮಾತ್ರ ಎದಗರಾಗಿದ್ದರು. ಇಂತಹ ಎದಗರ ಜೊತೆಗೆ ನಾವು ಸಾದಾ ಸೀದಾ ಹುಡುಗರು ಹೋಗುವಾಗ ನಮಗೆ ಭಯವಿರಬೇಕೇಕೆ? ಹಾಗಂತ ಕೊಚ್ಚಿಕೊಳ್ಳುವುದು ನಮ್ಮ ಎದಗರು ಎನಿಸಿಕೊಂಡವರದಾಗಿತ್ತು.


ನಮಗೆ ಆಗ ಬೆಳಿಗ್ಗೆ ಮತ್ತು ಸಾಯಂಕಾಲ ಶಾಲೆ ಇರುತ್ತಿದ್ದು ಮಧ್ಯೆ ಊಟಕ್ಕೆ ೧೧ ರಿಂದ ೨ ಗಂಟೆ ಬಿಡುವಿರುತ್ತಿತ್ತು. ಸಾಯಂಕಾಲ ೫:೩೦ಕ್ಕೆ ಶಾಲೆಬಿಟ್ಟಾಗ ಊರದಾರಿಯಲ್ಲಿ ಅವರವರ ಮನೆಗಳು ಬಂದಾಗ ಅವರವರು ಗುಂಪಿಗೆ ವಿದಾಯ ಹೇಳಿ ಗುಂಪು ನಿಧಾನವಾಗಿ ಕರಗುತ್ತಾ ಹೋಗುತ್ತಿತ್ತು. ದೂರ ದೂರ ಒಂಟಿ ಮನೆಯಿರುವವರು ಪಾಪ ಅವರ ಫಜೀತಿ ಹೇಳತೀರ! ಮನೆಯಲ್ಲಿ ಇಂದಿನಂತೇ ಮಕ್ಕಳನ್ನು ಕರೆದೊಯ್ಯಲು ಯಾರೂ ಬರುತ್ತಿರಲಿಲ್ಲ. ನಮಷ್ಟಕ್ಕೆ ನಾವೇ ಸ್ವತಂತ್ರರು. ಯಾವ ಬೀದಿನಾಯಿಗೂ ಕಲ್ಲೆಸೆಯ ಬಹುದಿತ್ತು;ಅಟ್ಟಿಸಿಕೊಂಡು ಬಂದರೆ ಮರವೇರಿ ತಪ್ಪಿಸಿಕೊಳ್ಳಬಹುದಿತ್ತು, ಅದಿಲ್ಲಾ ಎಲ್ಲೋ ಅಪ್ಪೀತಪ್ಪೀ ಕಚ್ಚಿದರೆ ಏನೂಮಾಡಲಾಗದ ಸ್ಥಿತಿ ಇರುತ್ತಿತ್ತು. ಆದರೂ ಅಲ್ಲಲ್ಲಿ ಯಾರ್ದೋ ಮಾವಿನ ಮರಗಳಿಗೆ ಕಾಯಿಬಿಟ್ಟಾಗ ಕಲ್ಲೆಸೆಯುವುದು,ಜಂಬೇ ಹಣ್ಣು [ಗುಲಾಬಿ ಬಣ್ಣದ ಜಂಬುನೇರಳೆ ಹಣ್ಣು] ಕೊಯ್ಯುವುದು ಇದೆಲ್ಲಾ ಸರ್ವೇಸಾಮಾನ್ಯ ಕಿತಾಪತಿ. ನಮ್ಮ ಮಧ್ಯೆಯೂ ಕೆಲವೊಮ್ಮೆ ಪಕ್ಷಪಂಗಡಗಳು ಹುಟ್ಟಿಕೊಳ್ಳುತ್ತಿದ್ದವು. ಆಗಾಗ ವಿಭಜನೆ, ಮತ್ತೆ ವಿಲೀನ, ಮತ್ತೆ ವಿಭಜನೆ ಮತ್ತೆ ವಿಲೀನ--ಇದೂ ಕೂಡ ಸತತ ಅನುಷ್ಠಾನದಲ್ಲಿರುವ ಕಾರ್ಯವಾಗಿತ್ತು.


ದೆವ್ವಕ್ಕೆ ಕಾಲು ತಿರುವುಮುರುವಾಗಿರುತ್ತದಂತೆ, ದೆವ್ವ ಬಿಳಿಯ ಬಣ್ಣದಲ್ಲಿ ಇರುವುದಂತೆ, ರಾತ್ರಿ ಹೊತ್ತಲ್ಲಿ ಗುಡ್ಡಗಳಲ್ಲಿ ಕೊಳ್ಳಿ ದೀಪಗಳನ್ನು ಹಿಡಿದು ಓಡಾಡುತ್ತವಂತೆ. ಅಕಸ್ಮಾತ್ ಯಾರಾದರೂ ಸಿಕ್ಕಿದರೆ ಅವರಿಗೆ ಗ್ರಹಚಾರ ಕಟ್ಟಿಟ್ಟದ್ದಂತೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗಳ ರಾತ್ರಿಗಳಲ್ಲಿ ಒಡ್ಡೋಲಗವೆತ್ತಿಕೊಂಡು ನಾನಾ ವಾದ್ಯಗಳನ್ನು ಬಾರಿಸಿಕೊಳ್ಳುತ್ತಾ ಅವು ಸಾಗುತ್ತವಂತೆ. ಶಿವನ ದೇವಸ್ಥಾನವಿರುವಲ್ಲಿಯವರೆಗೂ ಅವು ಹಾಗೇ ನಡೆದು ಹೋಗಿಬಂದು ಮಾಡುತ್ತಲೇ ಇರುತ್ತವಂತೆ. ಕಣ್ಣು ಅತ್ಯಂತ ಕೆಂಪಗಿರುತ್ತದಂತೆ. ಕೈಬೆರಳುಗಳು ಚೂಪಾಗಿದ್ದು ಹೊಟ್ಟೆ ಬಗೆದು ರಕ್ತಹೀರಲು ಅದು ಅವುಗಳಿಗೆ ಸಹಕಾರಿಯಂತೆ. ಅವುಗಳಲ್ಲಿ ಕೆಲವು ದೆವ್ವಗಳು ಮನುಷ್ಯರಿಗೆ ಉಪಕಾರಿಗಳಾದರೆ ಇನ್ನೂ ಕೆಲವು ದೆವ್ವಗಳು ಅಪಕಾರಿಗಳಾಗಿದ್ದು ಅತ್ಯಂತ ಕ್ರೂರ ಸ್ವಭಾವದವಂತೆ.---ಹೀಗೇ ಇಲ್ಲಸಲ್ಲದ ವರ್ಣನೆಗಳುಳ್ಳ ಕಥೆಗಳನ್ನು ಹೇಳಿದರೆ ಅದೇ ಒಂದು ಕಾದಂಬರಿಯಾದೀತು! ಮಾಧ್ಯಮವಾಹಿನಿಗಳೂ ಯಾವುದೇ ಭಯಾನಕ ಧಾರಾವಾಹಿಗಳೂ ಇಲ್ಲದ ಆ ಕಾಲದಲ್ಲಿಯೇ ಆ ರೀತಿಯ ನಡುಕ ಹುಟ್ಟಿಸುತ್ತಿದ್ದ ವಿಷಯಗಳು ಇವತ್ತಿನ ಪುಟಾಣಿಗಳಿಗೆ ಹೇಗನಿಸಬಹುದು ಎಂಬುದು ತರ್ಕಿಸಬೇಕಾದ ವಿಷಯ.

ದೆವ್ವಗಳು ಕಾಣಿಸಿಕೊಳ್ಳುವ ಜಾಗಗಳೂ ಕೆಲವು ಗುರುತಿಸಲ್ಪಟ್ಟಿದ್ದವು. ಜನನಿಬಿಡ ಸ್ಥಳಗಳಲ್ಲಿ, ಊರುಕೇರಿಗಳ ಮನೆಗಳ ಮಧ್ಯದಲ್ಲಿ ದೆವ್ವಗಳು ಕಾಣಿಸುತ್ತಿರಲಿಲ್ಲ. ಯಾರೂ ಜಾಸ್ತಿ ತಿರುಗಾಡದ ಜಾಗಗಳಲ್ಲೇ ಅವುಗಳ ಅಬರ್ತಳ ಜೋರು! ಒಬ್ಬರೇ ಯಾರಾದರೂ ಅಂತಹ ಜಾಗಗಳ ಮುಖಾಂತರ ಹಾದುಹೋಗುವಾಗ ಅವರಿಗೆ ಕೆನ್ನೆಗೆ ಬಾರಿಸುವುದು, ಕಲ್ಲೆಸೆಯುವುದು, ವಿಕೃತಸ್ವರದಲ್ಲಿ ಕೂಗುವುದು, ಅಕರಾಳವಿಕರಾಳ ರೂಪದಲ್ಲಿ ಕಂಡು ಪ್ರಜ್ಞೆತಪ್ಪಿಸುವುದು, ದೆವ್ವಕಂಡು ಹೆದರಿದ ಕೆಲವರು ಜ್ವರದಿಂದ ವಾರಗಟ್ಟಲೇ ಮೇಲೇಳದಿದ್ದುದು-ಕೆಲವರು ಹೆದರಿ ಅಸುನೀಗಿದ್ದು ಇಂಥದ್ದಕ್ಕೆಲ್ಲಾ ದೆವ್ವಗಳು ಕಾರಣ ಅಂತ ನಾವು ಕೇಳಿದ್ದಷ್ಟೇ, ಆದರೆ ದೆವ್ವಗಳನ್ನು ನೋಡಿರಲಿಲ್ಲ. ನಮ್ಮೂರಲ್ಲಿ ’ಗೋಳ್‍ಮಕ್ಕಳ ಹೊಂಡ’ , ಬೆಳ್ಳರೆ, ಶಿಂಗಾರಬೇಣ, ಬೋಳಗುಡ್ಡೆ ಹೀಗೇ ಇವೆಲ್ಲಾ ದೆವ್ವಗಳ ರಂಗಸ್ಥಳಗಳು ಈ ಜಾಗಗಳಾಗಿದ್ದವು. ಆ ಜಾಗಗಳ ಮನೆ ಹಾಳುಬೀಳಲಿ ಬೇರೇ ಖಾಲೀ ಜಾಗಗಳಲ್ಲಿ ಒಂದರ್ಧ ಕಿಲೋಮೀಟರು ಒಬ್ಬರೇ ನಡೆಯಬೇಕೆಂದರೆ ಅಲ್ಲೂ ದೆವ್ವಗಳು ಕಾಣಿಸುತ್ತವೇನೋ ಎಂಬ ಭಯವಿತ್ತಲ್ಲ ಅದನ್ನೀಗ ನೆನೆದರೆ ನಗು ಬರುತ್ತದೆ. ’ಗೋಳ್‍ಮಕ್ಕಳ ಹೊಂಡ’ ಎಂಬ ಹೆಸರು ಕೇಳಿದರೇ ಒಂಥರಾ ನಮ್ಮ ನರನಾಡಿಗಳನ್ನೆಲ್ಲಾ ದೆವ್ವಗಳು ಹಿಡಿದು ಎಳೆದಹಾಗೇ ಆಗುತ್ತಿತ್ತು !


ರಾತ್ರಿಹೊತ್ತಿನಲ್ಲಿ ವಿದ್ಯುದ್ದೀಪಗಳು ಹಠಾತ್ತನೇ ಹೋಗಿಬಿಟ್ಟರೆ ನಮ್ಮ ಕಥೆ ಅದೊಂದು ಹೇಳಲಾಗದ ವ್ಯಥೆ! ಯಾರೇ ದೊಡ್ಡವರು ಹತ್ತಿರವಿದ್ದರೂ ಅವರನ್ನು ಕಂಡರೇ ದೆವ್ವ ಆ ರೂಪದಲ್ಲಿ ಬಂದುಬಿಟ್ಟಿತೇನೋ ಎಂಬ ಭಯದಲ್ಲಿ ನಮ್ಮ ಪ್ರಸಾದವೆಲ್ಲಾ ಒಣಗಿಹೋಗುತ್ತಿತ್ತು. ಕತ್ತಲೆಯಲ್ಲಿ ಬೆಕ್ಕು ಕೂಗಿದರೆ, ಪಕ್ಕದ ಗುಡ್ಡದಲ್ಲಿ ನರಿ ಕೂಗಿದರೆ ನಮಗೆಕೋ ಅನುಮಾನ ! ವಿದ್ಯುತ್ತು ಮರಳಿಬಂದಮೇಲೇ, ಸೌದೆಯ ಒಲೆಯಲ್ಲಿ ಆರುತ್ತಿರುವ ಕಿಡಿಯೊಂದು ಮತ್ತೆ ಹೊಗೆಯಾಡಿ ಹೊತ್ತಿಕೊಂಡಂತೇ ಕುಟುಕುಜೀವ ನಮ್ಮ ಶರೀರದಲ್ಲಿ ಮತ್ತೆ ಉಸಿರಾಡಿ ನಮ್ಮ ದೇಹದಲ್ಲಿ ಚೈತನ್ಯ ಮರಳಿಬರುತ್ತಿತ್ತು. ಯಾರೋ ಪುಣ್ಯಾತ್ಮ ವಿಶ್ವೇಶ್ವರಯ್ಯನಂತೆ ಆ ದೀಪವನ್ನು ತಯಾರಿಸಲು ಆರಂಭಿಸಿದ್ದು, ಅವನಿಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು. ಬಡಪಾಯಿ ಮಕ್ಕಳನ್ನು ಕಂಡು ಆ ವ್ಯಕ್ತಿಗೆ ವಿದ್ಯುತ್ ತಯಾರಿಸುವ ಬುದ್ಧಿಯನ್ನು ದೇವರೇ ನೀಡಿರಬೇಕು ! ಅಂತಹ ದೀಪವೊಂದು ಇರದಿರುತ್ತಿದ್ದರೆ ದೆವ್ವಗಳು ಖಂಡಿತಾ ನಮ್ಮನ್ನು ಬದುಕಬಿಡುತ್ತಿರಲಿಲ್ಲ ! ಆದರೂ ನಮಗೆ ರಾತ್ರಿ ಹೊತ್ತಿನಲ್ಲಿ ಉಚ್ಚೆಗೆ ಅವಸರವಾದರೆ ಸ್ವಲ್ಪ ಕಷ್ಟವಾಗುತ್ತಿತ್ತು. ಯಾಕೆಂದರೆ ಅಪ್ಪಟ ಸಂಪ್ರದಾಯವಾದಿಗಳಾದ ನಮ್ಮಲ್ಲೆಲ್ಲಾ ಆ ಕಾಲಕ್ಕೆ ಕಕ್ಕಸು-ಬಚ್ಚಲುಮನೆ ಮನೆಯೊಳಗೇ ಇರುತ್ತಿರಲಿಲ್ಲ. ಹೊರಗೆ ಅನತಿ ದೂರದಲ್ಲಿ ಇರುವ ಅವುಗಳಿಗೆ ವಿದ್ಯುದ್ದೀಪದ ವ್ಯವಸ್ಥೆ ಇರುತ್ತಿರಲಿಲ್ಲ.ದೊಡ್ಡವರನ್ನು ಎಬ್ಬಿಸಿ ವಿನಂತಿಸಿ ಕರೆದೊಯ್ದರೂ ಮೂತ್ರಬಿಡುವಾಗ ನಮ್ಮ ಕೈಕಾಲು ಥರಥರಥರ ನಡುಗುತ್ತಿತ್ತು. ಅಸಲಿಗೆ ನಾವೆಲ್ಲಾ ಚಿಕ್ಕವರಿರುವಾಗ ಕಕ್ಕಸು ಮನೆಯೇ ಇರಲಿಲ್ಲ. ಎಲ್ಲರೂ ಸುತ್ತಲ ಗುಡ್ಡಗಳಿಗೆ ಚೊಂಬಿನಲ್ಲಿ ನೀರು ತೆಗೆದುಕೊಂಡು ಹೋಗಿ ಮಲವಿಸರ್ಜನೆ ಮಾಡಿಬರಬೇಕಾಗಿತ್ತು. ಅಲ್ಲೆಲ್ಲೋ ಕುರುಚಲು ಪೊದೆಗಳ ನಡುವೆ ಹಾವಿಗೆ,ಚೇಳಿಗೆ ಹೆದರುತ್ತಾ ಅಂತೂ ಹೊರಹಾಕಲೇ ಬೇಕಾಗಿದ್ದನ್ನು ಹೊರಹಾಕಿ ವಾಪಸ್ಸಾಗುತ್ತಿದ್ದೆವು. ಮಳೆಗಾಲದಲ್ಲಿ ಸೋನೆಮಳೆ ಸುರಿಯುವಾಗ ಕಕ್ಕಸಿಗೆ ಅವಸರವಾದರೆ ಕೊಡೆಯನ್ನು ಹಿಡಿದೇ ಕುಕ್ಕರುಗಾಲಿನಲ್ಲಿ ಕುಳಿತು ವಿಸರ್ಜನಾ ಕ್ರಿಯೆ ನಡೆಯುತ್ತಿತ್ತು. ಅಲ್ಲೂ ದೆವ್ವಗಳು ಬಂದರೆ ಎಂಬಾಭಯ ನಮ್ಮನ್ನು ಬಿಟ್ಟಿರುತ್ತಿರಲಿಲ್ಲ!


ಒಂಬಲತಿ ಎಂಬುದು ಹೆಣ್ಣು ದೆವ್ವ. ಸಾಮಾನ್ಯ ಹೆಂಗಸಿನ ರೂಪವೇ ಇರುತ್ತದಂತೆ. ಆದರೆ ಆಕೆಯ ಅಂಗೈ ತೂತಂತೆ. ಅವಳು ಬಂದರೆ ತನ್ನ ಕೈಮುಂದೆ ಮಾಡಿ ಕವಳ [ಎಲೆಯಡಿಕೆ] ಕೊಡು ಎನ್ನುತ್ತಾಳಂತೆ. ಕವಳ ಕೊಟ್ಟಾಗ ಕೈಯ್ಯ ತೂತಿನ ಮೂಲಕ ಅದು ಕೆಳಗೆ ಬೀಳುತ್ತದಲ್ಲಾ ಆಗ ಅದನ್ನು ಎತ್ತಿಕೊಡು ಎನ್ನುತ್ತಾಳಂತೆ. ಅದನ್ನು ಎತ್ತಲು ನಾವು ಬಗ್ಗಿದಾಗ ಕುತ್ತಿಗೆಮುರಿಯುತ್ತಾಳಂತೆ. ಆದರೆ ಚರ್ಮದ ಚಪ್ಪಲಿಗೂ ಅವಳಿಗೂ ಬದ್ಧ ದ್ವೇಷವಂತೆ. ಚರ್ಮದ ಚಪ್ಪಲಿ ಕಂಡರೆ ಸಾಕು ಬೆಂಕಿಯನ್ನು ಕಂಡ ಕಾಡುಪ್ರಾಣಿಯಂತೇ ದೂರ ಓಡುತ್ತಾಳಂತೆ. ಆಕೆ ಕೂಡಾ ಬರುವುದು ಒಬ್ಬರೇ ಓಡಾಡುವಾಗ! ಹಾಗೆಲ್ಲಾ ಜನಸಂದಣಿಯ ನಡುವೆ ಆಕೆ ಕಾಣಿಸಿಕೊಳ್ಳುವುದಿಲ್ಲ. ಇಂತಹ ಜನಜನಿತ ಊಹಾಪೋಹಗಳೂ ಕಲ್ಪನೆಗಳೂ ಸೇರಿ ಇದ್ದಬದ್ದ ನಮ್ಮ ಶಕ್ತಿಯನ್ನೆಲ್ಲಾ ಉಡುಗಿಹಾಕಿಬಿಡುತ್ತಿದ್ದವು. ನಾವೆಲ್ಲಾ ಹವಾಯಿ ಚಪ್ಪಲಿ ಹಾಕುತ್ತಿದ್ದುದರಿಂದ ಚರ್ಮದ ಚಪ್ಪಲಿ ಯಾವುದೆಂಬುದು ಅಷ್ಟಾಗಿ ತಿಳಿಯದು. ಆದರೂ ಸಾಲ್ಕೋಡ್ ಹೆಗಡೇರು ಹಾಕುತ್ತಾರಲ್ಲಾ ನಡೆಯುವಾಗ ನರ್ ಚರ್ ನರ್ ಚರ್ ನರ್ ಚರ್ ಎನ್ನುವ ಚಪ್ಪಲಿ ಆ ಚಪ್ಪಲಿಯೇ ಚರ್ಮದ ಚಪ್ಪಲಿ ಎಂದು ಯಾರೋ ಹೇಳಿದ್ದರು. ಹೀಗಾಗಿ ಆಪತ್ಕಾಲಕ್ಕಾಗಿ ದರೋಡೆಕೋರರನ್ನು ನಿಭಾಯಿಸಲು ಏ.ಕೆ.೪೭ ಇಟ್ಟುಕೊಂಡಂತೇ ನನಗೂ ಅಂತಹ ನರ್ ಚರ್ ಎನ್ನುವ ಚರ್ಮದ ಚಪ್ಪಲಿಯೊಂದನ್ನು ಇಟ್ಟುಕೊಳ್ಳುವ ಆಸೆಯಾಗಿತ್ತು ! ಅದನ್ನು ಧರಿಸಿ ನಡೆಯುವಾಗ ಹೇಗೂ ಒಂಬಲತಿ ಬರುವುದಿಲ್ಲ;ಒಂಬಲತಿ ಹಾಗಿರಲಿ ದೆವ್ವಗಳೇ ಬರುವುದಿಲ್ಲ ಎಂದಮೇಲೆ ಅದು ಬ್ರಿಟಿಷರು ಭಾರತಕ್ಕೆ ಕೊಟ್ಟ ಸ್ವಾತಂತ್ರ್ಯಕ್ಕಿಂತಾ ದೊಡ್ಡ ಸ್ವಾತಂತ್ರ್ಯದ ಥರಾ ನನಗೆ ಭಾಸವಾಗುತ್ತಿತ್ತು! ಒಪಕ್ಷ ಒಂಬಲತಿ ಬಂದುಬಿಟ್ಟರೆ ಮೆಟ್ಟಿರುವ ಚರ್ಮದ ಚಪ್ಪಲಿಯನ್ನು ಅವಳೆಡೆಗೆ ಬೀಸಿ ಎಸೆದುಬಿಟ್ಟರೆ ಪಾಕಿಗಳು ಭಾರತಕ್ಕೆ ಬಾಂಬು ಎಸೆದಂತೇ ಆಗಿಬಿಡುವುದಲ್ಲವೇ? ಓಹೊಹೊ ನಗೆಯಾಡಬೇಡಿ ಸ್ವಾಮೀ ನಮ್ಮ ಪಾಡು ಯಾರಿಗೆಬೇಕು ಹೇಳಿ ! ದೊಡ್ಡವರನ್ನು ಕೇಳಿದರೆ ಬೈತಾರೆ, ಚಿಕ್ಕವರಲ್ಲಿ ಯಾರೂ ದೆವ್ವಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ನುರಿತವರಲ್ಲ. ಒಂದು ಗುಟ್ಟು ಹೇಳಲೋ ? ನಮ್ಮಲ್ಲಿ ಅನೇಕ ದೊಡ್ಡವರಿಗೂ ದೆವ್ವದ ಭಯ ಇತ್ತು. ಅವರಲ್ಲೂ ಕೆಲವರು ರಾತ್ರಿ ಮೂತ್ರವಿಸರ್ಜನೆಗೆ ಅವಸರವಾದರೂ ನೋವನುಭವಿಸುತ್ತಾ ತಡೆದುಕೊಂಡು ಬೆಳಿಗ್ಗೇನೇ ಹೋಗುವುದು ನಮಗೆ ಗೊತ್ತಿರದ ವಿಷಯವೇನಲ್ಲ ಬಿಡಿ !

ಇನ್ನು ನೆಂಟರಮನೆಗಳಿಗೆ ಹೋದರೆ ಅಲ್ಲಿಯ ದೆವ್ವ-ಭೂತ-ಪಿಶಾಚಿಗಳ ನೆಟ್‍ವರ್ಕೇ ಬೇರೆ ! ಇದೆಲ್ಲಾ ಒಂಥರಾ ಮೊಬೈಲ್ ನೆಟ್‍ವರ್ಕ್ ಇದ್ದಹಾಗೇ. ಕೆಲವು ರೋಮಿಂಗ್ ನಲ್ಲಿರುತ್ತವೆ. ಕೆಲವು ರೋಮಿಂಗ್ ಸೌಲಭ್ಯ ಇಲ್ಲದವು. ರೋಮಿಂಗ್ ಸೌಲಭ್ಯ ಇದ್ದವು ಅಲ್ಲೂ ಬರುತ್ತಿದ್ದವು! ಅಮ್ಮನ ಜೊತೆಗೆ ಅಮ್ಮನ ತವರುಮನೆಗೆ ಹೋದಾಗ ಅಥವಾ ಇನ್ನೆಲ್ಲಿಗೋ ಹೋದಾಗ ನಮಗೆ ಈ ವಿಷಯದಲ್ಲಿ ಯಮಯಾತನೆ! ಅಲ್ಲಿ ಇನ್ನೂ ಕಷ್ಟ. ರಾತ್ರಿ ಎಲ್ಲಾಕಡೆಯೂ ನಮ್ಮನೆಯ ರೀತಿಯಲ್ಲೇ ದೀಪ ಇರಲು ಸಾಧ್ಯವೇ ? ಅಲ್ಲಿರುವ ದೀಪವನ್ನೇ ಅವಲಂಬಿಸಿ ನಾವು ನಮ್ಮ ವಿಸರ್ಜನಾ ವ್ಯವಹಾರವನ್ನು ತಹಬಂದಿಗೆ ತಂದುಕೊಳ್ಳುವುದು ಬಾರೀ ಸಾಹಸದ ಕೆಲಸವೇ ಆಗುತ್ತಿತ್ತು. ಹಗಲು ಹೊತ್ತಿನಲ್ಲಿ ಅಲ್ಲಿನ ಹುಡುಗರ ಜೊತೆ ಆಡಿ ಹೊತ್ತುಕಳೆಯುವ ನಮಗೆ ಹಾಗೂ ಹೀಗೂಮಾಡಿ ರಾತ್ರಿಯನ್ನು ಕಳೆಯಬೇಕಾಗಿ ಬರುತ್ತಿತ್ತು. ಕನಸಿನಲ್ಲಿ ದೆವ್ವಗಳನ್ನು ಕಂಡರಂತೂ ಹಾಸಿಗೆಯೆಲ್ಲಾ ಒದ್ದೆಯಾಗುವ ಪ್ರಸಂಗ! ಯಾರಲ್ಲಿ ಹೇಳುವುದು ? ಹೇಳಲಾರೆವು ಹೇಳದೇ ಇರಲಾರೆವು.

ದೆವ್ವಗಳ ಕಾಟ ಕೆಲವು ಊರುಗಳಲ್ಲಿ ತುಂಬಾ ಜಾಸ್ತಿ ಇತ್ತೆಂದು ಕೇಳುತ್ತಿದ್ದೆವು. ಊರಿನಲ್ಲಿ ವರ್ಷಕ್ಕೊಮ್ಮೆ ಹಸಿರುಪೂಜೆ/ ಗಡಿ ಪೂಜೆ/ ಊರಹಬ್ಬ / ಆರಿದ್ರಾಮಳೆ ಹಬ್ಬ ಎಂಬೆಲ್ಲಾ ಹೆಸರಲ್ಲಿ ಕರೆಸಿಕೊಳ್ಳುವ ಬೇಸಿಗೆ-ಮಳೆ ಗಡಿಕಾಲದ ಪೂಜೆಯೊಂದು ನಡೆಯುತ್ತಿತ್ತು. ಆಗ ಅಲ್ಲಿ ಸಾವಿರಾರು ಬಾಳೆಹಣ್ಣುಗಳನ್ನೂ, ಹತ್ತಾರು ಎಳೆನೀರುಗಳನ್ನೂ, ನೂರಾರು ತೆಂಗಿನಕಾಯಿಗಳನ್ನೂ, ಅನ್ನ, ಹಲಸಿನ ಹಣ್ಣಿನ ಕಡುಬು ಮೊದಲಾದವನ್ನೂ ಊರ ಜಟಗ, ಮಾಸ್ತಿ[ಮಹಾಸತಿ], ಚೌಡಿ, ನಾಗರು, ಕೀಳು ಇವುಗಳಿಗೆಲ್ಲಾ ನಿವೇದಿಸುತ್ತಿದ್ದರು. ಕೀಳಿಗೆ ಹಾಕುವ ಅನ್ನದ ಬಲಿಯನ್ನು ನೋಡಿದಾಗ ಅವುಗಳಿಗೆ ಕುಡಿಯಲು ಎಳೆನೀರು ಕಡಿದು ಅಲ್ಲಲ್ಲಿ ಇಡುವಾಗ 'ಕೀಳು' ಎಂದರೇನೆಂದು ಯಾರನ್ನಾದರೂ ಕೇಳಿದರೆ ಅವರು ಸರಿಯಾಗಿ ಉತ್ತರಿಸುತ್ತಲೇ ಇರುತ್ತಿರಲಿಲ್ಲ. ಕೀಳು ಎಂದರೆ ದೆವ್ವ-ಭೂತಗಳಿಗೆ ಇರುವ ಪರ್ಯಾಯ ಪದ ಎನ್ನುವುದು ನಮಗೆ ತಿಳಿದಿರಲಿಲ್ಲ. ಊರು ಬೆಳೆಯುತ್ತಾ ಬಂದಹಾಗೇ ದೆವ್ವಗಳ ಸಂಖ್ಯಾಬಲ ಕಮ್ಮಿಯಾಯಿತೋ ಅಥವಾ ಜನರಿಗೆ ಆ ಭಾವನೆ ಕಮ್ಮಿಯಾಯಿತೋ ಸೃಷ್ಟಿಕರ್ತನೇ ಬಲ್ಲ. ಈಗೀಗ ದೆವ್ವಗಳ ಸುದ್ದಿ ಅಷ್ಟಾಗಿ ಕೇಳುವುದಿಲ್ಲವಪ್ಪ ! ಹಳ್ಳಿಗಳಲ್ಲಿ ಪ್ರತೀ ಮನೆಯ ತೋಟದಲ್ಲೋ ಗದ್ದೆಯಲ್ಲೋ ಮನೆಯ ಹಿತ್ತಿಲಲ್ಲೋ ಬೀಡುಬಿಟ್ಟು ಸ್ಥಾನ ಪಡೆಯುವ ನಾಗ ಚೌಡಿಗಳಿಗೆ ಪಟ್ಟಣ ಮತು ಶಹರಗಳಲ್ಲಿ ಅಷ್ಟೆಲ್ಲಾ ಆಸಕ್ತಿ ಇರುವುದಿಲ್ಲವೇ ? ಇಂಚಿಂಚು ಜಾಗಕ್ಕೂ ಕೊರತೆಯಿರುವ ಈ ಕಾಂಕ್ರೀಟ್‍ಕಾಡು ಅವಕ್ಕೆ ಬೇಸರವೇನೋ ಅನಿಸುತ್ತದೆ. ನೀವೇ ನೋಡಿ ನಗರಗಳಲ್ಲಿ ಎಲ್ಲೋ ಅಲ್ಲಲ್ಲಿ ದೇವಸ್ಥಾನಗಳ ಸಮೀಪ ಬಿಟ್ಟರೆ ಇನ್ನೆಲ್ಲಾದರೂ ನಾಗ ಚೌಡಿ ಮುಂತಾದ ದೇವತೆಗಳ ಜಾಗವನ್ನು ಕಾಣುವಿರೇ?

ದೆವ್ವ ಕಲ್ಲೆಸೆಯುವುದು ಒಂದು ಚಮತ್ಕಾರ! ಒಮ್ಮೆ ನಮ್ಮಲ್ಲಿನ ಗಾಜಣ್ಣನ ಕಣ್ಣಿಗೆ ದೆವ್ವ ಕಲ್ಲೆಸೆದಿತ್ತು. ಆತನಿಗೆ ಕಣ್ಣೊಳಗೆ ಸಣ್ಣ ಕಲ್ಲು ತುಣುಕು ಓಡಾಡಿದಂತೇ ಭಾಸವಾಗಿ ನೋವಾಗುತ್ತಿತ್ತಂತೆ. ಕಣ್ಣು ಕೆಂಪಾಗಿ ಊದಿಕೊಂಡಿದ್ದುದ್ದನ್ನು ನೋಡಿದ್ದಕ್ಕೆ ನಾನೇ ಸಾಕ್ಷಿ! ಆದರೆ ಅದು ದೆವ್ವದ ಕಲ್ಲೆಸೆತವೇ ಅಥವಾ ಗಾಳಿಯಲ್ಲಿನ ಧೂಳು ಗಾಳಿಬೀಸುವ ರಭಸಕ್ಕೆ ಕಣ್ಣಿಗೆ ಹಾರಿರುವುದೇ ಎಂಬುದು ಅರ್ಥವಾಗದೇ ಉಳಿದ ವೈಜ್ಞಾನಿಕ ವಿಚಾರ. ದೆವ್ವಗಳನ್ನು ’ಗಾಳಿ’ ಎಂದೂ ಕರೆಯಲಾಗುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗಳಂದು ಚಿಕ್ಕಮಕ್ಕಳನ್ನು ಕೆಟ್ಟಜಾಗಗಳೆಂದು ಗುರುತಿಸಲ್ಪಟ್ಟ ’ಗೋಳ್‍ಮಕ್ಕಳ ಹೊಂಡ’ ದಂತಹ ಜಾಗಗಳ ಹತ್ತಿರವೂ ಕರೆದೊಯ್ಯಬಾರದಂತೆ! ಅಕಸ್ಮಾತ್ ಕರೆದೊಯ್ದರೆ ಅವರಿಗೆ ಮರಳಿ ಬಂದಮೇಲೆ ಕೆಂಪು ಹಾನ ಎತ್ತುವುದು [ಓಕುಳಿನೀರು], ಕಲ್ಲುಪ್ಪು ಮಂತ್ರಿಸಿ ಬೆಂಕಿಗೆ ಎಸೆಯುವುದು ಇದೆಲ್ಲಾ ನಡೆಯುತ್ತಿತ್ತು. ಹಾಗೂ ಮಕ್ಕಳು ರಾತ್ರಿ ಚೀರುತ್ತಲೇ ಇದ್ದರೆ ಮಾರನೇ ದಿನ ಸತ್ಯಹೆಗಡೇರು, ಕೊಡ್ಲಮನೆ ಭಟ್ರು ಇವರಲ್ಲಿ ಯಾರಾದ್ರೂ ವಿಭೂತಿ ಮಂತ್ರಿಸಿಕೊಡುತ್ತಿದ್ದರು. ಅದನ್ನು ತಂದು ಹಾಕಿದಾಗ ಮಗುವಿನ ಕೂಗು ಮಾಯ ! ಇದು ಕಾಕತಾಳೀಯವೋ ಅಥವಾ ನಮಗರಿವಿರದ ಇನ್ಯಾವುದೋ ಕ್ರಿಯೆಯೋ ಅರ್ಥವಾಗದಲ್ಲ.


ಕೆಲವು ಜನಾಂಗಗಳಲ್ಲಿ ದೆವ್ವ ಕಡಿಯುವ ಪರಿಪಾಠವಿತ್ತು. ಯಾರಿಗಾದರೂ ದೆವ್ವದ ಕಾಟ ಶುರುವಾಗಿದೆಯೆಂದು ತಿಳಿದರೆ ’ನೋಟ ನೋಡುವವ’ರನ್ನು ಕರೆಯುತ್ತಿದ್ದರು. ನೋಟನೋಡುವುದು ಎಂದರೆ ಅದೊಂದು ಚಿಕಿತ್ಸೆ. ಅದರ ಕ್ರಮ ಹೇಗೆಂದರೆ ಮನೆಯ ಜಗುಲಿಯ ಮೂಲೆಯೊಂದರಲ್ಲಿ ಮಣೆಯಮೇಲೆ ಹಂದಿದಾಡೆಯಲ್ಲಿ ನೋಟನೋಡುವ ಅನಕ್ಷರಸ್ಥ ವ್ಯಕ್ತಿ ಅದೇನನ್ನೋ ಗೀಚುತ್ತಾ ಕಂಡ ಕಂಡ ಹಾಗೇ ಏನನ್ನೋ ಬಡಬಡಾಯಿಸುತ್ತಾ ಮಧ್ಯೆಮಧ್ಯೆ ಸುತ್ತಿದ ಬಾಳೆ ಎಲೆಯನ್ನು ಕತ್ತರಿಸುತ್ತಾ ಕೂರುತ್ತಿದ್ದ. ತಲೆಯನ್ನು ಜೋರಾಗಿ ಅಲ್ಲಾಡಿಸುವ ಆತ ಸ್ವಲ್ಪಮಟ್ಟಿಗೆ ಕೂದಲನ್ನೂ ಅಲ್ಲಾಡಿಸುತ್ತಾ ಬಾಯಲ್ಲಿ

"ಓಹೋಹೋಸ್ಸುಹಾ.....ಉಸುವಸುವಾ......ಉಸುವಸುವಾ.....ಊಂ.ಹೂಂ....ಸ್ಸುವಾ....ಮಾರಮ್ಮ ನಿನುಗೇ ಮೂರ್ಕೋಳಿ ನಿನುಗೇ ಆರ್ಕೋಳಿ ನಿನುಗೇ ಅಹ ಅಹ ಹಾಂ ಹಾಂ ಹಾಂ ಷಟ್ "

ಎಂದೆಲ್ಲಾ ಹಲುಬುತ್ತ ವಿಶಿಷ್ಟವಾದ ಧ್ವನಿಯನ್ನು ಹೊರಡಿಸುತ್ತಿದ್ದ. ಗಂಟೆಗಟ್ಟಲೇ ಒದರಾಡುವ ಆತ ಕೊನೆಯ ಘಟ್ಟದಲ್ಲಿ ಮುಂದೆ ಇಟ್ಟ ತೆಂಗಿನಕಾಯಿಯನ್ನು ಎತ್ತಿ ಒಂದೇ ಏಟಿಗೆ ಅದನ್ನು ನೆಲಕ್ಕಪ್ಪಳಿಸಿ ಒಡೆದಾಗ ದೆವ್ವ ಕಡಿದು ಮುಗಿಯಿತೂ ಅಂತರ್ಥ! ನೋಟನೋಡಿಸುತ್ತಾರೆಂಬ ಗಾಳಿಸುದ್ದಿ ನಮಗೆ ಮೊದಲೇ ಬೇರೆ ಮಕ್ಕಳ ಮುಖಾಂತರ ಸಿಕ್ಕಿರುತ್ತಿದ್ದು, ದೂರದವರೆಗೆ ಕೇಳಿಸುವ ಆತನ ಅಬರಾಟದ ಸದ್ದಿಗೆ ಆತ ಕುಳಿತ ಅಂತಹ ಮನೆಗೆ ನಾವು ನೋಡಲು ಹೋಗುತ್ತಿದ್ದೆವಾದರೂ ಕೊನೇಕ್ಷಣದಲ್ಲಿ ಕಣ್ಣೆಲ್ಲಾ ಕೆಂಪಗೆಮಾಡಿಕೊಂಡು ಆತ ತೆಂಗಿನಕಾಯಿ ಬಡಿದು ಒಡೆಯುವ ಸಮಯದಲ್ಲಿ ದೂರದಲ್ಲಿ ಅಡಗಿ ನೋಡುತ್ತಿದ್ದೆವು! ಸೊಸೆ ಇರುವ ಮನೆಯಲ್ಲಿ ಕೆಲವೊಮ್ಮೆ ಅತ್ತೆಗೂ ಸೊಸೆಗೂ ಆಗಿಬರದಾಗ ಸೊಸೆಯ ಮೈಮೇಲೆ ’ದೆವ್ವ’ ಬರುತ್ತಿತ್ತು ! ನೋಟನೋಡಿದಾಗ ಬಿಟ್ಟುಹೋಗುವ ಆ ದೆವ್ವ ಕೆಲವು ತಿಂಗಳುಗಳ ನಂತರ ಮತ್ತೆ ಒಕ್ಕರಿಸುತ್ತಿತ್ತು. ಕೆಲವು ಗೂರಲು ಉಬ್ಬಸದ ರೋಗಿಗಳಿಗೆ ರೋಗ ಉಲ್ಬಣಿಸಿ ಶ್ವಾಸೋಚ್ವಾಸವೇ ಕಷ್ಟವಾದಾಗ ಅದು ’ಗಾಳಿ ಮೆಟ್ಟಿದ್ದು’ ಎನ್ನುವ ಜನರಿದ್ದು ನೋಟನೋಡಿದರೆ ಕಮ್ಮಿಯಾಗುತ್ತಿತ್ತಂತೆ. ಅದಕ್ಕೆ ಯಾವ ವೈಜ್ಞಾನಿಕ ಕಾರಣವಿತ್ತು ಅದೂ ಅರ್ಥವಾಗಲಿಲ್ಲ. ಕೊಳ್ಳಿದೆವ್ವ ಎಂಬುದನ್ನು ನೀವೆಲ್ಲಾ ಕೇಳಿಯೇ ಇರುತ್ತೀರಿ ಬಿಡಿ. ಯಾಕೆಂದರೆ ನಿಮ್ಮೆಲ್ಲರ ಜೀವನದಲ್ಲೂ ಅಲ್ಲಿಲ್ಲಿ ಆ ಸುದ್ದಿ ಬಂದಿರುತ್ತದೆ. ಕೊನೇಪಕ್ಷ ಮಾಧ್ಯಮದಲ್ಲಾದರೂ ನೋಡಿರುತ್ತೀರಿ. ಕೊಳ್ಳಿದೆವ್ವಗಳು ಕಗ್ಗತ್ತಲ ರಾತ್ರಿಯಲ್ಲಿ ತಮ್ಮ ಕೈಬೆರಳುಗಳನ್ನೇ ಬೆಂಕಿಯಕೊಳ್ಳಿಯಂತೇ ಉರಿಸಿಕೊಂಡು ಓಡಾಡುವ ಇನ್ನಿಲ್ಲದ ವೈಷಿಷ್ಟ್ಯದವು.

ದೆವ್ವಗಳ ಬಗ್ಗೆ ಸ್ವಾರಸ್ಯಕರ ಘಟನೆಗಳೂ ಇವೆ. ಒಂದಿನ ನಮ್ಮ ಗುರುಮಾಸ್ತರು ದೆವ್ವದಕಥೆಯೊಂದನ್ನು ತರಗತಿಯಲ್ಲಿ ಬಿತ್ತರಿಸಿದ್ದರು. ಅದೇನೆಂದು ಕೇಳಿ-- ಬಡ ಬ್ರಾಹ್ಮಣನೊಬ್ಬನಿಗೆ ದೆವ್ವಾ ಎಂದರೆ ಭಯಂಕರ ಹೆದರಿಕೆಯಿತ್ತಂತೆ. ಆತ ಕಾಡದಾರಿಯಲ್ಲಿ ಒಮ್ಮೆ ನಡೆದುಹೋಗುವಾಗ ಹೆಗಲಮೇಲಿದ್ದ ಅಂಗವಸ್ತ್ರ [ಟವೆಲ್ ಥರದ ಶಾಲು] ಹಾದಿಯ ಪಕ್ಕದ ಮುಳ್ಳಿನ ಗಿಡದ ಕೊಂಬೆಗೆ ಸಿಕ್ಕಾಕಿಕೊಂಡು, ಆತ ಮುಂದೆ ಹೋಗಲು ಪ್ರತ್ನಿಸಿದಾಗಲೆಲ್ಲಾ ಹಿಂದೆ ಯಾರೋ ಎಳೆದ ಅನುಭವ! ತಿರುಗಿ ನೋಡಿಬಿಟ್ಟರೆ ದೆವ್ವ ಏಕ್ ದಂ ಝಾಡಿಸಿ ಮುಖಕ್ಕೇ ಹೊಡೆದರೆ ಎಂಬ ಅತೀವ ಆತಂಕ. ಹೃದಯಬಡಿತ ೭೨ ಹೋಗಿ ೧೨೨ ! ವೇದ ಓದುವಾಗ ಗುರುಗಳು ಹೇಳಿದ್ದರಂತೆ " ನೋಡಪ್ಪಾ ವೃಕ್ಷಗಳಲ್ಲಿ ಅದರಲ್ಲೂ ಅಶ್ವತ್ಥವೃಕ್ಷದಲ್ಲಿ ಭಗವಂತನ ಸಾನ್ನಿಧ್ಯವಿರುತ್ತದೆ. ಬುಡದಲ್ಲಿ ಬ್ರಹ್ಮನೂ ಮಧ್ಯದಲ್ಲಿ ವಿಷ್ಣುವೂ ತುದಿಯಲ್ಲಿ ಶಿವನೂ ಇರುತ್ತಾರೆ. ಅದಕ್ಕೇ ಅಶ್ವತ್ಥವೃಕ್ಷವನ್ನು ವೃಕ್ಷರಾಜ ಎನ್ನುತ್ತಾರೆ. ಅಕಸ್ಮಾತ್ ಕಾಡುಮೇಡುಗಳಲ್ಲಿ ಅಲೆಯುವಾಗ ನಮಗೆ ಹೆದರಿಕೆಯಾದರೆ

ಮೂಲತೋ ಬ್ರಹ್ಮರೂಪಾಯಾ ಮಧ್ಯತೋ ವಿಷ್ಣುರೂಪಿಣೇ |
ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ ||

ಎಂದು ಪ್ರಾರ್ಥಿಸಿದರೆ ದೇವರು ನಮ್ಮನ್ನು ರಕ್ಷಿಸುತ್ತಾನೆ. " ಎಂಬುದಾಗಿ. ಗಡಿಬಿಡಿಯಲ್ಲಿ ಆತ ಆ ಶ್ಲೋಕವನ್ನು ನೆನಪಿಸಿಕಳ್ಳುತ್ತಿದ್ದರೂ ದೇಹಪೂರ್ತಿ ಬೆವತುಹೋಗಿ ಕಂಪಿಸುತ್ತಾ

ಮೂಲತೋ ಮಧ್ಯರೂಪಾಯ ಮಧ್ಯತೋ ಮೂಲರೂಪಿಣೇ |
ಅಗ್ರತೋ ...........ಎಂದೆಲ್ಲಾ ತೊದಲುತ್ತಾ ಹೇಗೂ ಸಾಯುವುದೇ ಗ್ಯಾರಂಟಿ ಎಂದುಕೊಂಡು ಮನೆಯವರನ್ನೆಲ್ಲಾ ನೆನಪಿಸಿಕೊಂಡು ದುಃಖಿಸುತ್ತ ಒಮ್ಮೆ ಮನಸ್ಸು ಗಟ್ಟಿಮಾಡಿ ಓರೆಗಣ್ಣಿನಲ್ಲಿ ನಿಧಾನಕ್ಕೆ ಕತ್ತು ತಿರುವಿ ನೋಡಿದನಂತೆ.....ನೋಡುತ್ತಾನೆ ಪಂಚೆ ಮುಳ್ಳಿನ ಪೊದೆಗೆ ಸಿಕ್ಕಿಕೊಂಡಿತ್ತು! ’ಬದುಕಿದೆಯಾ ಬಡಜೀವವೇ?’ ಎಂದುಕೊಳ್ಳುತ್ತಾ ಮನಗೆ ಬಂದು ಗಂಟೆಗಟ್ಟಲೇ ವಿಶ್ರಮಿಸಿದನಂತೆ!

ದೆವ್ವಗಳಲ್ಲಿ ಮರಾಠಿ ದೆವ್ವ, ಕನ್ನಡ-ತಮಿಳು-ತೆಲುಗು ಈ ರೀತಿ ಭಾಷಾವಾರು ದೆವ್ವಗಳಿದ್ದವೋ ಇಲ್ಲವೋ ಗೊತ್ತಿಲ್ಲ. ಆದರೂ ದೇಶಾದ್ಯಂತ ದೆವ್ವಗಳು ಇದ್ದವು ಎಂಬುದು ಮಾತ್ರ ಖಾತ್ರಿ. ದೆವ್ವಗಳು ಈಗ ಅಲ್ಪಸಂಖ್ಯಾತರ ಸಾಲಿಗೆ ಸೇರಿವೆಯೇನೋ ಅನಿಸುತ್ತಿದೆ! ಅಲ್ಪಸಂಖ್ಯಾತರಿಗೆ ಕೊಡಬೇಕಾದ ಆದ್ಯತೆಗಳನ್ನು ತಮಗೂ ಕೊಡಿ ಎಂದು ಹೇಳಲು ಅವು ಮುಂದೆಬಂದರೆ ನೋಡಲಾದರೂ ಸಿಗುತ್ತಿದ್ದವೇನೋ! ಸಾಕು ಆಯ್ತಾ ? ಹುಷಾರು ನೀವಿದನ್ನು ಓದಿ ಮುಗಿಸಿದ ದಿನ ಎಲ್ಲಾದರೂ ಕೊಳ್ಳಿದೆವ್ವ ಸಿಕ್ಕಿದರೆ ಹೇಳಲು ಮರೀಬೇಡಿ. ದೆವ್ವಗಳ ಭಯದಲ್ಲಿ ಅನುಕೂಲವಾಗಲಿ ಎಂದು ಕವಿ ದಿ| ಬಿ.ಎಂ.ಶ್ರೀಕಂಠೈಯ್ಯನವರು ನಮಗೆ ಕರುಣಿಸಿದ ಹಾಡಿನೊಂದಿಗೆ[ಹಾಡನ್ನು ಕತ್ತಲೆಯಲ್ಲಿ ಬೆಳಕೇ ಕೈ ಹಿಡಿದು ಮಕ್ಕಳನ್ನು ಕಾಪಾಡು ಎಂಬ ಈ ಅರ್ಥದಲ್ಲಿ ಬಳಸಿಕೊಂಡು] ದೆವ್ವಗಳ ಪುರಾಣವನ್ನು ಸದ್ಯಕ್ಕೆ ಮಡಚಿಟ್ಟು ಅದಕ್ಕೆ ಮಂಗಲಾರತಿ ಮಾಡೋಣ:


ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆಮ್ಮನು .......

Monday, January 3, 2011

ಸೂತ್ರಧಾರಗೊಂದನೆ


ಸೂತ್ರಧಾರಗೊಂದನೆ

ಇಗೋ ನಿನಗೆ ವಂದನೇ
ತಗೋ ಸದಾಭಿನಂದನೇ

ಮುನ್ನ ನೋವನೆಲ್ಲ ಮರೆತು
ನನ್ನ ಮನದಿ ಭಾವತಳೆದು
ಚೆನ್ನಾಗಿಹ ಶಬ್ದಗಳನು
ತಿನ್ನಬಡಿಸುವಾತನೇ

ರನ್ನ ಪಂಪ ಹರಿಹರಾದಿ
ಚಿನ್ನದಂಥ ಕವಿಗಳಿಂದ
ಕನ್ನವಿಟ್ಟು ಜನರಹೃದಯ
ಜೊನ್ನ ಸಮಯದೊಯ್ದನೇ !

ಅನ್ನನೀರು ಬಿಟ್ಟು ಅಳುವ
ಸೊನ್ನೆಯಾದ ಹಲವು ಮನಕೆ
ಕೆನ್ನೆ ಚಿವುಟಿ ಮುದವನೀಡಿ
ಪನ್ನದಲ್ಲಿ ಅಳೆದನೇ

ಹೊನ್ನು ಹೆಣ್ಣು ಮಣ್ಣಿಗೆಲ್ಲಾ
ಮನ್ನಣೆಯನು ನೀಡದಂತೇ
ಬೆನ್ನು ತಟ್ಟಿ ಬುದ್ಧಿಹೇಳಿ
ಚೆನ್ನುಡಿಯಲಿ ನಗುವನೇ

ಹುನ್ನಾರದ ಹುಳುಕು ಮನಕೆ
ನಿನ್ನೆ ಮೊನ್ನೆ ಗಳನು ತಿಳಿಸಿ
ಸನ್ನೆಯಲೇ ತಿದ್ದಿ ತೀಡ್ವ
ನನ್ನೊಡೆಯನೇ ವಂದನೇ

Sunday, January 2, 2011

ಸೊಗದೇಬೇರಿನ ಶರಬತ್ತು !


ಸೊಗದೇಬೇರಿನ ಶರಬತ್ತು !

ಹದಿನಾರಾಣೆ ಸತ್ಯ ಅಂದರೆ ನಮಗ್ಯಾರಿಗೂ ಗೊತ್ತಿರದ ನಾರು ಬೇರುಗಳ ಕಷಾಯಗಳನ್ನು ಯಾವುದೋ ಒಂದು ಹದದಲ್ಲಿ ಬೆರೆಸಿ ಅಂತೂ ರೋಗಗಳನ್ನು ವಾಸಿಮಾಡುವ ನಮ್ಮ ತಿಪ್ಪಾ ಭಟ್ಟರಿಗೆ ಸೊಗದೇಬೇರಿನ ಶರಬತ್ತು ಎಂದರೆ ಎಲ್ಲಿಲ್ಲದ ಪ್ರೀತಿ ! ಅವರಾಯಿತು ಅವರ ಕೆಲಸವಾಯಿತು ಪಾಪ ಯಾರ ಗೋಜಿಗೂ ಹೋಗದ ಮುಗ್ಧ ಜೀವ ಅದು! ಭಟ್ಟರು ಕಾಯಂ ಬಳಸುವ ದ್ರಾವಣಗಳಲ್ಲಿ ಸೊಗದೇಬೇರಿನ ಶರಬತ್ತೂ ಒಂದು. ಯಾರಿಗೇ ಏನೇ ಆದರೂ ಪ್ರಥಮವಾಗಿ ಅವರು ಕುಡಿಯಲು ಕೊಡುವುದು ಸೊಗದೇಬೇರಿನ ಶರಬತ್ತು. ಅಂದಹಾಗೆ ಈ ಶರಬತ್ತಿನ ಪರಿಚಯ ನಿಮಗಿರಬೇಕಲ್ಲ? ಇಲ್ಲವೇ ? ಹಾಗಾದರೆ ಒಂದೋ ನಾಗಸಂದ್ರದ ಮೂರನೇ ಅಡ್ಡರಸ್ತೆ ಹಾಗೂ ನಾಲ್ಕನೇ ಮುಖ್ಯರಸ್ತೆ ಸೇರುವ ಜಾಗದಲ್ಲಿರುವ ’ತಿರುಮಲೇಶ’ ನಾಮಧೇಯದ ಮನೆಗೆ ಭೇಟಿಕೊಡಿ ಅಥವಾ ಇದು ಸಾಧ್ಯವಾಗದಿದ್ದ ಪಕ್ಷದಲ್ಲಿ ಯಾವುದೇ ಆಯುರ್ವೇದದ ಅಂಗಡಿಗೆ ತೆರಳಿ ಅಲ್ಲಿ ಕೇಳಿ ಸಿಗುತ್ತದೆ! ಅದರ ರುಚಿಯನ್ನು ಬಲ್ಲವರೇ ಬಲ್ಲರು-ಇದು ಭಟ್ಟರಿಂದ ಕಡಾ ಪಡೆದು ಹೇಳಿದ ಮಾತು !

ಎಡವಟ್ಟಾಗಿದ್ದು ಎಲ್ಲಿ ಗೊತ್ತೇ? ಕೆಲವು ವರ್ಷಗಳ ಹಿಂದೆ ನಾನೂ ಅವರೂ ಯಾರದೋ ಮನೆಯಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ ರೇಡಿಯೋ ಕೂಗುತ್ತಿತ್ತು. ಬೆಳ್ಳಂಬೆಳಿಗ್ಗೆ " ಮಗೂಗೆ ಏನಾಯ್ತು .......ವುಡ್ವರ್ತ್ ಗ್ರೈಪ್ ವಾಟರ್ ಕೋಡೀಯಾ ಮಗುವಾಗಿದ್ದಾಗ ನಿಮ್ಮಮ್ಮಂಗೂ ನಾನು ಅದನ್ನೇ ಕೊಡ್ತಿದ್ದೆ " ಎಂದು ಅಜ್ಜಿ ಜಾಹೀರಾತಿನಲ್ಲಿ ಕೂಗುತ್ತಿರುವುದು ಭಟ್ಟರನ್ನು ಕೆರಳಿಸಿಬಿಟ್ಟಿತ್ತು !

" ಇವ್ಕೆಲ್ಲಾ ತಲೆಯಿಲ್ಲ ಜನಮಳ್ಳೊ ಜಾತ್ರೆಮಳ್ಳೋ ನಾವೆಲ್ಲಾ ಬದುಕಿ ಬೆಳೀಲಿಲ್ವಾ ಹೇಳ್ತಾರಪ್ಪ ಗ್ರೈಪ್ ವಾಟರಂತೆ ಗ್ರೈಪ್ ವಾಟರು ನಾವು ಕುಡಿಯೋ ಕಷಾಯಾನೋ ಸೊಗದೇಶರಬತ್ತನ್ನೋ ಕುಡಿಸಿದರೆ ಆಯ್ತಪ್ಪ....ಮಕ್ಳಿಗೆಲ್ಲಾ ಏಕ್ ದಂ ಕಮ್ಮಿ ಆಗ್ತದೆ ಮಾಡೂಕೆ ಬೇರೇ ಕೆಲ್ಸಿಲ್ಲಾ ಅದಕೇ ಇಂಥಾದ್ನೆಲ್ಲಾ ಹಾಕ್ತರೆ ರೇಡಿಯೋದಲ್ಲಿ "

ಭಟ್ಟರು ಏಕಾಏಕಿ ಕೋಪಾವಿಷ್ಟರಾಗಿದ್ದರು. ಅಷ್ಟು ಸಣ್ಣ ವಿಷಯಕ್ಕೆ ಭಟ್ಟರು ನಾರಸಿಂಹಾವತಾರ ತಾಳಿಬಿಟ್ಟಿದ್ದರು. ನಿಮಗೆ ಹೇಳಲು ಮರೆತಿದ್ದೆ-- ಅಲ್ಲಿಗೆ ನಾವು ಹೋಗಿದ್ದು ಯಾರಿಗೋ ಚ್ಯವನಪ್ರಾಶ ಮಾಡಿಕೊಡಲಾಗಿ. ಚ್ಯವನಪ್ರಾಶವನ್ನು ನೀವು ಮನದಣಿಯೇ ತಿಂದಿರಬಹುದು ಅಥವಾ ಕಾಸು ಜಾಸ್ತಿ ಅಂತ ಬಿಟ್ಟಿರಲೂ ಬಹುದು. ಕ್ಯಾಡ್ ಬರೀಸ್ ಚಾಕೋಲೇಟ್ ಗಿಂತ ರುಚಿಯಲ್ಲಿ ಹೆಜ್ಜೆ ಮುಂದಿರುವ ಚ್ಯವನಪ್ರಾಶದಲ್ಲಿ ಇರುವ ಸಾಮಾನುಗಳೇ ಅಂಥದ್ದು. ಉತ್ತುತ್ತೆ,ಒಣ ದ್ರಾಕ್ಷಿ, ಬಾದಾಮಿ, ಯಾಲಕ್ಕಿ, ಲವಂಗ, ಗಸಗಸೆ, ತುಪ್ಪ ಇತ್ಯೇತ್ಯಾದಿ ಘಟಾನುಘಟಿ ಪದಾರ್ಥಗಳನ್ನೆಲ್ಲಾ ಗೊತ್ತಾದ ಹದಕ್ಕೆ ಮಿಶ್ರಣಮಾಡಿ ಜಜ್ಜಿ-ಅರೆದು ಯಾವುದೋ ಹಂತದಲ್ಲಿ ಅಂತೂ ಕಾಯಿಸಿಯೋ ಬೇಯಿಸಿಯೋ ಎಲ್ಲಾ ಮುಗಿದಮೇಲೆ ತಣ್ಣಗಾದ ಅದುವೆ 'ಚ್ಯವನಪ್ರಾಶ'.

ಚ್ಯವನಪ್ರಾಶ ಎಂಬ ಹೆಸರು ಅದಕ್ಕೆ ಬರಲು ಕಾರಣವಿದೆ. ಚ್ಯವನನೆಂಬ ಋಷಿಕುಮಾರನಿಗೆ ಎಳವೆಯಲ್ಲೇ ಇರಬೇಕೆಂದೂ ಮುಪ್ಪು ಆವರಿಸಬಾರದೆಂದೂ ಆಸೆ ಹುಟ್ಟಿತು. ಆಗ ಆತ ಹಲವು ಮಾರ್ಗಗಳಲ್ಲಿ ಅದಕ್ಕೆ ಚಿಕಿತ್ಸೆಗಳನ್ನು ಮಾಡಿಕೊಳ್ಳತೊಡಗಿದ. ಆಗ ಹುಟ್ಟಿದ್ದೇ ಈ ಚ್ಯವನಪ್ರಾಶ. ’ಪ್ರಾಶ’ ಎನ್ನುವುದು ಸಂಸ್ಕೃತದ ಮರಿ! ಪ್ರಾಶನ ಎಂದರೆ ತಿನ್ನಿಸುವುದು, ಅದರ ಬಾಲ ಕತ್ತರಿಸಿದಾಗ ಸಿಗುವುದೇ ಪ್ರಾಶ. ಆ ಪ್ರಾಶವನ್ನು ಅಂದರೆ ತಿನ್ನಬಹುದಾದದ್ದನ್ನು ಚ್ಯವನನ ನೆನಪಿನಲ್ಲಿ ಅದೇ ಹೆಸರಿಗೆ ಜೋಡಿಸಿ ಚ್ಯವನಪ್ರಾಶವಾಯಿತು. ಚ್ಯವನಪ್ರಾಶ ತಿಂದವರೆಲ್ಲಾ ಎಳಬರಾಗೇ ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಒಂದಷ್ಟು ಶಕ್ತಿಯಂತೂ ಬರುವುದು ಖಚಿತ--ಈ ಸಲಹೆ ನಿಮಗೆ ಉಚಿತ ! ಸುಕನ್ಯೆ ಚ್ಯವನನ ರೂಪರಾಣಿ. ಅವಳಿಗಾಗಿ ತನ್ನ ಪ್ರಾಯ ಕಾಪಿಡಲು ಚ್ಯವನ ಪ್ರಯತ್ನಿಸಿದ ಎಂದಮೇಲೆ ನಮ್ಮ ಯುವಜನಾಂಗ ಈ ಕುರಿತು ಸ್ವಲ್ಪ ಯೋಚಿಸಬೇಕಾದ್ದು ನ್ಯಾಯ!

ಭಟ್ಟರಿಗೂ ಚ್ಯವನಪ್ರಾಶಕ್ಕೂ ತೀರಾ ಅನ್ಯೋನ್ಯತೆ ಥಳುಕುಹಾಕಿದ್ದೇನಿಲ್ಲ. ಆದರೆ ಹಲವಾರು ಔಷಧಗಳನ್ನು ಮನೆಯಲ್ಲೇ ತಯಾರಿಸಿಕೊಡುವ ಭಟ್ಟರು ಪುರೋಹಿತರಂತೇ ಅಲ್ಲಲ್ಲಿ ಅಲ್ಲಲ್ಲಿ ತನ್ನ ಅಭಿಮಾನೀ ಶಿಷ್ಯಬಳಗವನ್ನೇ ಹೊಂದಿದ್ದು ಆಗಾಗ ಅವರಿಗೆಲ್ಲಾ ಬೇಕಾದ ಔಷಧವನ್ನೋ ಕಷಾಯವನ್ನೋ ಅವರವರ ಮನೆಗೇ ತೆರಳಿ ಮಾಡಿಕೊಡುವುದು ಭಟ್ಟರ ವಾಡಿಕೆ. ಹಾಗಂತ ಭಟ್ಟರು ಯಾರಲ್ಲೂ ಇದನ್ನು ಬಡಾಯಿ ಕೊಚ್ಚಿಲ್ಲ. ಅವರನ್ನೇ ಕೇಳಿ ಯಾವುದೇ ಕೆಲಸವನ್ನೇ ಆಗಲಿ

" ಆಡದೇ ಮಾಡುವವ ರೂಢಿಯೊಳಗುತ್ತಮನು.
ಆಡಿಮಾಡುವವ ಮಧ್ಯಮನು
ಅಡಿಯೂ ಮಾಡದವ ಅಧಮನೆಂದಾ | ಸರ್ವಜ್ಞ "

ಹೀಗಾಗೀ ನಮ್ಮ ಭಟ್ಟರು ಹಾಗೆಲ್ಲಾ ಮಾತಾಡಿ ಕೆಡಿಸುವುದಿಲ್ಲ. ಒಂದು ಲೋಟ ಸೊಗದೇಶರಬತ್ತನ್ನು ಏರಿಸಿಕೊಂಡು ಚ್ಯವನಪ್ರಾಶ ಮಾಡಲು ಕುಳಿತುಬಿಟ್ಟರೆ ಆರು ಮೂರಾಗಲಿ ಮೂರು ಆರಾಗಲಿ ಅದು ಮುಗಿದಮೇಲೆಯೇ ಏಳುವುದು. ಮಧ್ಯೆ ವಿರಾಮವವೇ ಇರುವುದಿಲ್ಲ. ಚ್ಯವನಪ್ರಾಶ ಮಾಡುವುದು ತಿಂದಷ್ಟು ಸುಲಭವಲ್ಲ, ಕಮ್ಮೀ ಕಮ್ಮೀ ಅಂದ್ರೂ ೩-೪ ಗಂಟೆಕಾಲ ಬೇಕೇ ಬೇಕು, ಮಧ್ಯೆ ನಿಲ್ಲಿಸುವ ಹಾಗಿಲ್ಲ. ಹೆಚ್ಚೇಕೆ ಉಚ್ಚೆಗೆ ಎದ್ದುಹೋಗಲೂ ಆಗುವುದಿಲ್ಲ. ಅದನ್ನು ಮಾಡುವುದು ವೃತಮಾಡಿದಷ್ಟೇ ಪ್ರಯಾಸಕರ! ಆದರೂ ಯಾವುದೇ ಬೇಸರವಿಲ್ಲದೇ ಈ ಕಾಯಕದಲ್ಲಿ ತಲ್ಲೀನರಾಗುತ್ತಾರೆ. ಅರ್ಥಾತ್ ಬಸವಣ್ಣ ಹೇಳಿದ ಕಾಯಕಯೋಗಿ ಅವರು, ಶ್ರೀಕೃಷ್ಣ ಹೇಳಿದ ಹಾಗೇ ಕರ್ಮಯೋಗಿ ಅವರು.

ಚ್ಯವನಪ್ರಾಶ ಮಾಡುವುದರಲ್ಲೂ ಅದ್ಭುತ ಯಶಸ್ಸನ್ನು ಗಳಿಸಿರುವ ಶ್ರೀಯುತರು ಮಾಡಿದ ಚ್ಯವನಪ್ರಾಶ ತಿಂದವರು ಹೇಳುವಂತೇ " ಒಮ್ಮೆ ತಿಂದರೆ ಬೇರೇ ಬ್ರಾಂಡೆಡ್ ಚ್ಯವನಪ್ರಾಶಗಳನ್ನೆಲ್ಲಾ ನೀವು ಮೂಸಿ ಕೂಡ ನೋಡುವುದಿಲ್ಲ " ಸಾಕಾ ಸರ್ಟಿಫಿಕೇಟು ? ಹಾಗಂತ ಅವರು ಬಳಸುವ ಫಾರ್ಮ್ಯುಲಾಕ್ಕೊಂದು ಪೇಟೆಂಟ್ ಪಡೆಯಬೇಕೆಂಬುದು ಭಟ್ಟರ ಇರಾದೆ. ಆದರೂ ಕೆಲವೊಮ್ಮೆ ಅದರಲ್ಲಿ ವಿರಕ್ತಿ-" ಹೋಗ್ಲಿ ಬಿಡು ಒಬ್ಬನ ಜೀವಮಾನ ಎಷ್ಟ್ ದಿನಾ ಅಂತೀಯ ? ನಾ ಸತ್ತಮೇಲಾದ್ರೂ ಇದೇ ಥರ ಮಾಡೋದ್ನ ನಾಲ್ಕ್ ಜನ ಕಲ್ತಿದ್ರೆ ಮಾಡ್ಬೋದಲ್ವ? ಒಂದೊಮ್ಮೆ ಯಾರಿಗೂ ಬರ್ದೇ ಇದ್ರೆ ನಾ ಕಲಿತ ಈ ವಿದ್ಯೆ ಹಾಗೇ ಮರೆಯಾಗ್ತದಲ್ಲ ? ಬೇಕಾದವ್ರು ಬೇಕಾದ್ದು ಮಾಡ್ಕಳ್ಳಿ ಬಿಡು " ಅಂತಿದ್ರು. ಚ್ಯವನಪ್ರಾಶ ಮುಗಿದಮೇಲೆ ಮತ್ತೊಮ್ಮೆ ಸೊಗದೇಶರಬತ್ತನ್ನು ಸ್ವಲ್ಪ ಕುಡಿದರೆ ಅದರಿಂದ ಸಿಗುವ ಪರಮಾನಂದವೇ ಬಣ್ಣಿಸಲಸದಳ ಅಂತಾರೆ ಭಟ್ರು.

ಯಂಕೋಜಿ ಕೆಲವೊಮ್ಮೆ ಮಂಕಾಗಿ ಕೂತಾಗೆಲ್ಲಾ ಅವನ ತಾತ ಹೇಳೋದುಂಟು" ಹೋಗೋ ಮಂಕೆ ಭಟ್ರ ಮನೆಗೆ ಹೋಗಿ ಒಂದು ಗ್ಲಾಸು ಸೊಗದೇ ಶರಬತ್ತು ತೆಗೆದುಕೊಂಡು ಬಾ ಅದನ್ನು ಕುಡಿ ನಿಂಗಿರೋ ಆಲಸ್ಯ ಎಲ್ಲಾ ಬಿಟ್‍ಹೋಗುತ್ತೆ ನೋಡು. " ! ಕೆಲಸದಲ್ಲಿ ನಿರುತ್ಸಾಹ, ನಿದ್ರಾಹೀನತೆ, ನಿರಾಸಕ್ತಿ, ಹೊಟ್ಟೆಯ ತಳಮಳ, ಸುಸ್ತು ಇಂಥದ್ದಕ್ಕೆಲ್ಲಾ ಸೊಗದೇಬೇರಿನ ಶರಬತ್ತು ದಿವ್ಯೌಷಧ ಅಂತಾರೆ ನಮ್ ತಿಪ್ಪಾಭಟ್ರು.

ಸರಳಜೀವನ ನಡೆಸಿಬಂದ ಭಟ್ಟರನ್ನು ಎದುರಿಗೇ ಸಿಕ್ಕಿದರೂ ನೀವು ಗುರುತಿಸಲು ಸಾಧ್ಯವಿಲ್ಲ. ಆದರೆ ಗೊತ್ತಿದ್ದವರು ಅರ್ಧಾ ಕಿಲೋಮೀಟರ್ ದೂರದಿಂದಲೇ ಅವರ ಬಿಳಿಚಾಟಿ [ಕಪ್ಪು ಕೊಡೆ ಬಿಸಿಲಿನಲ್ಲಿ ತಿರುಗೀ ತಿರುಗೀ ಬೆಳ್ಳಗಾಗಿದ್ದು]ಕೊಡೆಯನ್ನು ಕಂಡೇ ಗುರುತು ಹಿಡಿಯುತ್ತಾರೆ. ಅಲ್ಲಲ್ಲಿ ತೂತುಗಳೂ ಇರುವ ಕೊಡೆಯನ್ನು ಸದಾ ಸಂಗತಿಯನ್ನಾಗಿ ಇರಿಸಿಕೊಂಡ ಭಟ್ಟರಿಗೆ ಕೊಡೆಯೆಂದ್ರೆ ಬಹಳ ಇಷ್ಟ. ಅದೊಂಥರಾ ಋಣಾನುಬಂಧ ಇದ್ದಹಾಗೇ ಅಂತಾರೆ! ಹತ್ತಾರುಸಲ ದುರಸ್ತಿ ನಡೆದಿದ್ರೂ, ಕಡ್ಡಿಗಳೆಲ್ಲಾ ತುಕ್ಕು ಹಿಡಿದು ವೇಗದ ಗಾಳಿಗೆ ಮುರಿದುಬೀಳುವಷ್ಟು ಮುದುಕಾಗಿದ್ರೂ ಭಟ್ಟರಿಗೆ ಅದೇ ಕೊಡೆಯ ಸೇವೆ ಪ್ರೀತಿ. ಅದನ್ನು ಮಾತ್ರ ಬಿಟ್ಟವರಲ್ಲ. ಅವರ ಈ ರೀತಿಯನ್ನು ನೋಡೇ ನಮ್ಮ ಕವಿಯೊಬ್ಬರು -

ತಿಪ್ಪಾ ಭಟ್ಟರ ಚೆಂದ ಕೊಡೆ
ಸಾವಿರ ತೂತುಗಳಿಂದ ಕೊಡೆ
ಮಳೆನೀರೆಲ್ಲಾ ಒಳಗಡೆಗೆ
ಭಟ್ಟರು ಮಿಂದರು ಕೊಡೆಯೊಳಗೆ

--ಎನ್ನುವ ಹಾಡನ್ನು ಬರೆದಿರಬೇಕು ಎನಿಸುತ್ತದೆ.

ಒಮ್ಮೆ ಭಟ್ಟರ ಮಗಳನ್ನು ಪರವೂರ ಗಂಡಿನಕಡೆಯವರು ನೋಡಲು ಬಂದಿದ್ದರು. ಅವರಿಗೆಲ್ಲಾ ಸ್ವಾಗತಕೋರಿದ ಭಟ್ಟರ ಮೊದಲ ಶೈತ್ಯೋಪಚಾರ ಎಂದರೆ ಸೊಗದೇಬೇರಿನ ಶರಬತ್ತು! ಸರಿಸುಮಾರು ಮುಕ್ಕಾಲುಗಂಟೆ ಶರಬತ್ತಿನ ಬಗ್ಗೆ ಭಾಷಣಮಾಡಿದ ಭಟ್ಟರ ವಾಗ್ಝರಿಯಲ್ಲಿ ಗಂಡಿನಕಡೆಯವರು ಬಂದ ಕೆಲಸವನ್ನೇ ಮರೆತಿದ್ದರು! ಅಮೇಲೆ ಭಟ್ಟರ ಮುಗ್ದ ಸ್ವಭಾವ, ಹುಡುಗಿಯ ಸೌಂದರ್ಯ-ಅರ್ಹತೆ ಎಲ್ಲಾ ಹಿಡಿಸಿದ್ದರಿಂದ ಮದುವೆಯೂ ನಡೆದುಹೋಯಿತು. ಮದುವೆಯಲ್ಲಿ ಬಳುವಳಿ ಸಾಮಾನುಗಳ ಜೊತೆಗೆ ತಾವೇ ತಯಾರಿಸಿದ ಸೊಗದೇಬೇರಿನ ಶರಬತ್ತಿನ ಬಾಟಲನ್ನು ಕೊಡಲು ಭಟ್ಟರು ಮರೆಯಲಿಲ್ಲ !

ಮೊನ್ನೆ ’ಆಯುರ್ವೇದ ಕಾಂಗ್ರೆಸ್’ ಎನ್ನುವ ಆಯುರ್ವೇದದ ಬಗೆಗಿನ ಮಾಹಿತಿ ಹಾಗೂ ಪ್ರಚಾರವನ್ನು ಸರಕಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿತ್ತಲ್ಲ ? ಆಗ ಅಲ್ಲಿಗೆ ಬರುವ ಆಸೆ ಇತ್ತಂತೆ ಭಟ್ಟರಿಗೆ. ಆದರೆ 'ಕಾಂಗ್ರೆಸ್' ಅಂತಿದೆಯಲ್ಲ ಒಂದೊಮ್ಮೆ ಅದು ಕಾಂಗ್ರೆಸ್ ಪಾರ್ಟಿ ವತಿಯಿಂದ ನಡೆಸುವಂತಹದ್ದಿರಬಹುದು ತನಗೆ ಯಾವ ಪಕ್ಷವೂ ಬೇಡ ಎನ್ನುವ ಅಂಬೋಣದಿಂದ ಅವರು ತಪ್ಪಿಸಿಕೊಂಡರಂತೆ. ಆಮೇಲೇ ತಿಳಿದದ್ದು ಕಾಂಗ್ರೆಸ್ ಅಂದರೆ ಅದೊಂದು ಸಮಾವೇಶವೇ ಹೊರತು ಕಾಂಗ್ರೆಸ್ ಪಕ್ಷಕ್ಕಷ್ಟೇ ಸೀಮಿತವಲ್ಲ ಎಂಬುದು. ಇಲ್ಲದಿದ್ದರೆ ಭಟ್ಟರ ಸೊಗದೇಬೇರಿನ ಶರಬತ್ತು ತುಂಬಿದ ಕೆಲವು ಬಾಟಲಿಗಳಾದರೂ ಅಲ್ಲಿ ಕಾಣಸಿಗುತ್ತಿದ್ದವು! ಶರಬತ್ತಿಗೆ ’ತಿಪ್ಪಾ ಭಟ್ಟರು ತಯಾರಿಸಿದ ’ ಎಂದಿರುತ್ತದೆ ಬಿಟ್ಟರೆ ಬೇರೇ ಯಾವುದೇ ಬ್ರ್ಯಾಂಡ್ ಹಾಕುವುದಿಲ್ಲ. ಭಟ್ಟರೇನಾದರೂ ಕಂಪನಿ ತೆರೆದು ಬ್ರ್ಯಾಂಡ್ ಹಾಕಿದ್ದರೆ ಇಷ್ಟೊತ್ತಿಗೆಲ್ಲಾ ನಟನಟಿಯರನ್ನಿಟ್ಟು ಜಾಹೀರಾತು ಕೊಟ್ಟು ಮಾರುಕಟ್ಟೆ ಗಳಿಸುವ ಅನೇಕ ಕಂಪನಿಗಳನ್ನು ಹಿಂದೆಹಾಕುತ್ತಿದ್ದರು.


ಪುರಾಣ
ಕೇಳಿದಿರಲ್ಲ ನಿಮಗೇನಾದರೂ ಭಟ್ಟರ ತಯಾರಿಕೆಯ ಸೊಗದೇ ಶರಬತ್ತು ಬೇಕೆ ? ಬೇಕೆಂದಿದ್ದಲ್ಲಿ ಮತ್ತೊಮ್ಮೆ ಅವರು ಎಲ್ಲಿ ಸಿಗುತ್ತಾರೆಂದು ವಿಚಾರಿಸಿ ಹೇಳುತ್ತೇನೆ ಆಗದೇ? ಮರೆಯದಿರಿ ಮರೆತು ನಿರಾಶರಾಗದಿರಿ ’ತಿಪ್ಪಾಭಟ್ಟರು ತಯಾರಿಸಿದ ಸೊಗದೇಬೇರಿನ ಶರಬತ್ತು’ !


Friday, December 31, 2010

ಸಂಕಲ್ಪದಲ್ಲೇ ಮುಗಿಯುವ ಸಾಧನೆಗಳು!


ಸಂಕಲ್ಪದಲ್ಲೇ ಮುಗಿಯುವ ಸಾಧನೆಗಳು!

ಎಲ್ಲರಿಗೂ ೨೦೧೧ ಹಾರ್ದಿಕ ಶುಭಾಶಯಗಳು

ಪ್ರತೀವರ್ಷ ಡಿಸೆಂಬರ್ ೩೧ ರ ರಾತ್ರಿಯನ್ನು ಅನೇಕರು ಎಣ್ಣೆ[ಮದ್ಯ]ಕುಡಿಯುವುದರೊಂದಿಗೆ, ಅರೆನಗ್ನ ಹುಡುಗಿಯರ ನೃತ್ಯ ವೀಕ್ಷಿಸುವುದರೊಂದಿಗೆ, ಹಂಗಾಮೀ ಸಂಗಾತಿಗಳೊಂದಿಗೆ ನರ್ತಿಸಿ ಮಜಾಪಡೆಯುವುದರೊಂದಿಗೆ ಕ್ರಿಸ್ತಿಯನ್ ಹೊಸವರ್ಷವನ್ನು ಸ್ವಾಗತಿಸುತ್ತೇವೆ. ಹೊಸವರ್ಷದ ಆದಿಯಲ್ಲೇ ಎಲ್ಲಾ ಮಜಾವನ್ನೂ ಅನುಭವಿಸುವ ನಮ್ಮ ಮನಸ್ಸಿಗೆ ವಿದೇಶೀ ಆಚರಣೆಗಳ ಈ ನಂಟು ಇತ್ತೀಚೆಗೆ ತುಂಬಾ ಹೆಚ್ಚಿನಮಟ್ಟದಲಿ ಅಂಟಿಕೊಂಡುಬಿಟ್ಟಿದೆ. ವಾಸ್ತವವಾಗಿ ಯಾವುದೇ ನೈಸರ್ಗಿಕ ಬದಲಾವಣೆ ಇಲ್ಲದ ಈ ದಿನದಲ್ಲಿ ಕೇವಲ ೩೬೫ದಿನ ಪೂರೈಸಿತು ಎಂಬ ಲೆಕ್ಕದಭರ್ತಿಗಾಗಿ ಮಾತ್ರ ಇದನ್ನು ಕ್ಯಾಲೆಂಡರ್ ಬದಲಾವಣೆ ದಿನವಾಗಿ ಬಳಸುತ್ತಿದ್ದೇವೆ.ಬ್ರಿಟಿಷರು ಭಾರತಕ್ಕೆ ಬಂದಾಗ ಕೊಟ್ಟುಹೋದ ಬಳುವಳಿಗಳಲ್ಲಿ ಇದೂ ಒಂದು. ಯಾವಾಗ ಅವರ ಅನುಕೂಲಕ್ಕಾಗಿ ಅವರೇ ಬರೆದಿರುವ ಕ್ಯಾಲೆಂಡರ್ ಪ್ರಚುರಗೊಂಡಿತೋ ಅಲ್ಲಿಂದ ಮುಂದೆ ಅದೇ ತನ್ನ ಏಕಸ್ವಾಮ್ಯ ಚಕ್ರಾಧಿಪತ್ಯವನ್ನು ಜನಸಾಮಾನ್ಯರ ಮನದಲ್ಲಿ ಸ್ಥಾಪಿಸಿತು. ಇಂದು ಅದು ಎಷ್ಟರಮಟ್ಟಿಗಿದೆಯೆಂದರೆ ನಮ್ಮೆಲ್ಲಾ ದಿನಗಳ ಲೆಕ್ಕಾಚಾರದ ಬಳಕೆಗೆ ಅದೇ ಕ್ಯಾಲೆಂಡರ್ ಬಳಸುತ್ತಿದ್ದೇವೆ. ಮೂಲ ಭಾರತದ ಸನಾತನ ಶಕೆಗಳನ್ನೂ ಇಲ್ಲಿನ ಕ್ಯಾಲೆಂಡರ್ ಗಳನ್ನೂ ಮರೆತಿದ್ದೇವೆ.

ಹುಡುಗ-ಹುಡುಗಿಯರು ಸ್ವೇಚ್ಛೆಯಿಂದ ರಾತ್ರಿಪೂರ್ತಿ ಕುಡಿದು,ಕುಣಿದು ಕುಪ್ಪಳಿಸಿ ಪರಸ್ಪರ ಅಪ್ಪಿಕೊಂಡು, ಕಾಣದ ತಾಣಗಳಲ್ಲೆಲ್ಲೋ ಅನೈತಿಕವಾಗಿ ಒಂದಾಗುವುದು, ಆ ಒಂದಾಗುವುದರಿಂದ ಹಲವು ಹುಡುಗಿಯರು ತಮ್ಮತನ ಕಳೆದುಕೊಳ್ಳುವುದು, ಬೇಡದ ಗರ್ಭಕ್ಕೆ ಕೆಲವೊಮ್ಮೆ ನಾಂದಿಯಾಗುವುದು, ಧರಿಸಿದ ಗರ್ಭವನ್ನು ಮನೆಯಲ್ಲಿ ಹೇಳದೇ ೩-೪ ತಿಂಗಳ ತರುವಾಯ ತಿಳಿದಾಗ ಅಂತೂ ಇಂತೂ ೯ ತಿಂಗಳು ನಡೆಸಿ ಹಡೆದು ಕಂಡಲ್ಲಿ ಆ ಬೇಡದ ಶಿಶುವನ್ನು ಬಿಸಾಡುವುದು ಅಥವಾ ಬೇಡದ ಭ್ರೂಣವನ್ನು ಗರ್ಭಪಾತಮಾಡಿಸಿ ತೆಗೆದುಹಾಗುವುದು. ಅಮೇಲೆ ಏನೂ ನಡೆದೇ ಇಲ್ಲಾ ಎನ್ನುವ ರೀತಿಯಲ್ಲಿ ’ಪೋಸು’ಕೊಡುವುದು ನಮಗೆಲ್ಲಾ ತಿಳಿದೇ ಇದೆ. ನಾಗರಿಕ ಜಗತ್ತಿನಲ್ಲಿ ಇದಕ್ಕಿಂತಾ ಹೇಯಕೃತ್ಯ ಇನ್ನೊಂದಿಲ್ಲ. ಕೆಲಸದಲ್ಲಿರುವ ಕೆಲವು ಮಹಿಳೆಯರು ಉನ್ನತ ಅಧಿಕಾರಿಯ ಒತ್ತಾಯಕ್ಕೆ ಕಟ್ಟುಬಿದ್ದು ಅವರೊಟ್ಟಿಗೆ ಗೋವಾ, ಊಟಿ ಮೊದಲಾದ ದೇಶೀಯ ಅಥವಾ ಮಲೇಶಿಯಾ,ಹಾಂಕಾಂಗ್, ಸಿಂಗಾಪೂರ್ ಮುಂತಾದ ವಿದೇಶೀಯ ಸ್ಥಳಗಳಿಗೆ ತೆರಳಿ ಅವರಿಗೆ ಮಜಾಕೊಡುವುದೂ ಕೂಡ ನಮ್ಮರಿವಿಗೆ ಇರುವ ವಿಷಯವೇ. ಈ ಮಜಾ ಕೊಡುವ-ಪಡೆಯುವ ಹಲವರ ಮನೆಗಳು-ಮನಗಳು ಕ್ರಿಸ್ತಿಯನ್ ಹೊಸವರ್ಷದ ಆಗಮನದ ದಿನವೇ ಮುರಿದುಹೋದರೂ ಆಶ್ಚರ್ಯಪಡಬೇಕಾಗಿಲ್ಲ!

ಮನುಷ್ಯರಾಗಿ ನಾವು ಬದುಕುವುದು ಕೇವಲ ಇದ್ದಷ್ಟು ದಿನಾ ಮಜಪಡೆಯಲೇಂದೇ ಅಲ್ಲವಲ್ಲ? ಲೈಫು ಇಷ್ಟೇನೆ ಎಂದುಕೊಳ್ಳುತ್ತಾ ಬರಿದೇ ಬೇಡದ ದುಂದುಗಾರಿಕೆಯಲ್ಲಿ, ಪರಕೀಯ ಸಂಸ್ಕೃತಿಯ ಪ್ರಲೋಭನೆಯಲ್ಲಿ, ಅನುಕೂಲವೇ ಆಯಿತೆಂಬ ಹಲವರ ಮನದಿಂಗಿತವಿದ್ದರೆ ನಂತರದ ಪರಿಣಾಮಗಳ ಅವಲೋಕನ ಮಾಡಿದರೆಮಾತ್ರ ತಿಳಿಯುವುದು ಅದು ವ್ಯಭಿಚಾರಕ್ಕೊಂದು ಮಾರ್ಗ! ಮಹಾತ್ಮಾ ಗಾಂಧಿ ಹೇಳಿದರು --ಮದ್ಯ,ಮಾಂಸ,ಮಾನಿನಿ ಈ ಮೂರು ಎಲ್ಲಿವರ್ಜಿಸಲ್ಪಡುವುದೋ ಆ ಪ್ರದೇಶದ ಉದ್ಧಾರ ಸಾಧ್ಯವೇ ಹೊರತು ಅವುಗಳ ಆಸೆ, ಆಮಿಷಗಳಲ್ಲಿ ಹಲವನ್ನು ಕಳೆದುಕೊಳ್ಳುವ ಹಲವುಜನರನ್ನು ನಾವು ನೋಡುತ್ತಲೇ ಇರುತ್ತೇವೆ, ಅದರಲ್ಲಿ ನಮ್ಮಪಾತ್ರವೆಷ್ಟು ಎಂಬುದನ್ನು ಅರಿಯಬೇಕಾದ ಅನಿವಾರ್ಯತೆ ಒದಗಿಬರುತ್ತಿದೆ.

’ಹೆಣ್ಣು ತಿರುಗಾಡಿ ಕೆಟ್ಟಳು ಗಂಡು ಕೂತು ಕೆಟ್ಟ’ ಎಂಬ ಗಾದೆ ಯಾಕೆ ಹುಟ್ಟಿತು ಎಂಬುದರ ಸ್ವಾರಸ್ಯದ ಅರಿವು ಸಹಜವಾಗಿ ನಮಗಾದರೆ ಅದು ಒಳ್ಳೆಯದು. ಇವತ್ತಿನ ದಿನಮಾನ ಹೇಗಿದೆಯೆಂದರೆ ಹೆಂಗಸರ ಬಗ್ಗೆ ಮಾತನಾಡಿದರೇ ಸಾಕು ಸ್ತ್ರೀ ಸ್ಂಘಟನೆಗಳು ಒಟ್ಟಾಗಿ ಹೊಡೆಯಲು ಬರುತ್ತವೆ. ವಾಸ್ತವವನ್ನು ತಿಳಿದರೆ ಪೂರ್ವದಲ್ಲಿ ಎಂದು ಸ್ತ್ರೀ ಮನೆಯಲ್ಲಿ ಗೃಹಿಣಿಯಾಗಿದ್ದಳೋ, ಸಾಧ್ವಿಯಾಗಿದ್ದಳೋ ಆ ಕಾಲದಲ್ಲಿ ಇಷ್ಟೊಂದು ವಿಚ್ಛೇದನಗಳು ನಡೆಯುತ್ತಿರಲಿಲ್ಲ. ಇಷ್ಟೊಂದು ಭ್ರೂಣಹತ್ಯೆ ನಡೆಯುತ್ತಿರಲಿಲ್ಲ. ಮನೆಯಲ್ಲಿ ಅನ್ನ-ನೀರಿಗೆ ಕೊರತೆಯಿರುತ್ತಿರಲಿಲ್ಲ. ಮನೆಯ ಉಸ್ತುವಾರಿಯನ್ನು ಯಾರೋ ಸಂಬಳದ ನಾರಿ ಗಂಟೆಯ ಲೆಕ್ಕದಲ್ಲಿ ನಿಭಾಯಿಸಬೇಕಾದ ಅವಶ್ಯಕತೆಯಿರುತ್ತಿರಲಿಲ್ಲ. ಮಕ್ಕಳಿಗೆ ಅಮ್ಮನ ಪ್ರೀತಿಯ ಕೊರತೆ ಕಾಡುತ್ತಿರಲಿಲ್ಲ. ಇವೆಲ್ಲಾ ನಷ್ಟಗಳ ಹಿಂದೆ ಸ್ತ್ರೀ ಓಡಾಟವೇ ಕಾರಣೀಭೂತವಾಗಿದೆಯೆಂದರೆ ಅದನ್ನು ಪ್ರಮಾಣಿಸಿ ತೋರಿಸುವಷ್ಟು ಸರಕುಗಳು ನನ್ನಲ್ಲಿವೆ. ಕುಟುಂಬ ವ್ಯವಸ್ಥೆಯ ಮೌಲ್ಯಗಳೇ ಕುಸಿದುಹೋಗುತ್ತಿರುವ ಈ ಕಾಲದಲ್ಲಿ ಬೇಕಾದಷ್ಟು ದಿನ ಒತ್ತಟ್ಟಿಗೆ ಇರುವುದು ಆಮೇಲೆ ಬಿಟ್ಟುಬಿಡುವುದು ಆರಂಭವಾಗಿರುವುದರಿಂದ ಭಾರತೀಯ ಮೌಲ್ಯಗಳ ಸ್ಥಾನಪಲ್ಲಟವಾಗಿದೆ. ದುಡಿಯುವ ಮಹಿಳೆಯ ದಿನದ ಧಾವಂತವೇ ಇಡೀ ಮನೆಯ ನಗೆಯನ್ನು ನುಂಗಿಹಾಕಿದೆ! ಇಬ್ಬರೂ ದುಡಿಯುತ್ತ ಮನೆಸೇರಿದಾಗ ಯಾರು ಮನೆಗೆಲಸಗಳಲ್ಲಿ ತೊಡಗಿಕೊಳ್ಳಬೇಕೆಂಬುದು ಪ್ರಶ್ನಾರ್ಹವಾಗಿದೆ. ಹಿರಿಯರನ್ನು ದೂರವಿರಿಸುವ ಸ್ವಭಾವ ಬೆಳೆದು ಕುಟುಂಬವೆಂಬುದೇ ಒಂದು ಯಾಂತ್ರಿಕ ಜೀವನವಾಗಿದೆ!

ನವಿಲುಕುಣಿಯಿತು ಎಂದು ಕೆಂಬೂತ ತಾನೂ ಕುಣಿಯಲು ಹೊರಟಿತ್ತು ಎನ್ನುವುದು ಹಳೆಯಗಾದೆ. ಅದನ್ನು ತಿರುಗಿಸಿ ಕೆಂಬೂತ ಕುಣಿಯಿತು ಎಂದು ನವಿಲೆಂಬ ನವಿಲೇ ತನ್ನ ಅಂದವನ್ನೂ ಅಲಂಕಾರವನ್ನೂ ನೃತ್ಯಪಟುತ್ವವನ್ನೂ ಮರೆತು ಕೆಂಭೂತನ ಕುಣಿತಕ್ಕೆ ಮರುಳಾಗಿ ಅದನ್ನು ಅನುಕರಿಸಲು ತೊಡಗಿರುವುದು ಎಂತಹ ವಿಪರ್ಯಾಸ ಎನಿಸುವುದಿಲ್ಲವೇ? ನಿಜಕ್ಕೂ ನೋಡಿ ನಮ್ಮ ಮಹಿಳೆಯರಲ್ಲಿ ಅನೇಕರಿಗೆ ನೌಕರಿ ಬೇಕಾಗಿಲ್ಲ. ಕೇವಲ ಟೈಮ್ ಪಾಸ್ ಗೆ ಅಂತ ಹಲವರು ತೆರಳಿದರೆ ಇನ್ನೂ ಕೆಲವರು ಮಜಾ ತೆಗೆದುಕೊಳ್ಳುವುದಕ್ಕೋ ಮತ್ತಷ್ಟು ಮಹಿಳೆಯರು ತಾವೂ ಬೇರೇ ಮಹಿಳೆಯರಿಗಿಂತ ಏನೂ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಲೋಸುಗವೋ ನೌಕರಿಗೆ ಸೇರುತ್ತಾರೆ. ಹೆಣ್ಣೊಬ್ಬಳು ಬಣ್ಣಬಣ್ಣದ ದಿರಿಸಿನಲ್ಲಿ ಬೇರೆ ಬೇರೇ ಕಛೇರಿಗಳಲ್ಲಿ ಕೆಲಸಮಾಡುತ್ತಾ ಕಾಮುಕ ಗಂಡಸರ ದೃಷ್ಟಿಗೆ ಬೀಳುವುದು ಅನಾಯಾಸವಾಗಿ ನಡೆಯುವ ಕ್ರಿಯೆ. ನಂತರ ಅಂತಹ ಗಂಡಸರು ಆ ಕೆಲಸದಲ್ಲಿರುವ ಮಹಿಳೆಯರನ್ನು ಬಳಸಿಕೊಳ್ಳುವುದು, ತೆವಲು ತೀರಿಸಿಕೊಳ್ಳುವುದು ಅದಕ್ಕೆ ಸಿಗುವ ಪ್ರಕ್ರಿಯೆ! ಬಂದ ಪರಿಸ್ಥಿತಿಯನ್ನು ಭಯದಿಂದಲೂ ಅಪರಾಧೀ ಮನೋಭಾವದಿಂದಲೂ ಹೇಳಲಾಗದೇ ಅದನ್ನೇ ಸ್ವೀಕರಿಸಿ ಬದುಕುವ ಮಹಿಳೆಯರು ಹಲವರಿದ್ದಾರೆ! ಎಲ್ಲೋ ಅಲ್ಲಿಲ್ಲಿ ತನಗೆ ಬೇಕಾದ ಬೇರೇ ಗಂಡಸಿನ ಸಹಾಯದಿಂದ ತನಗೆಬೇಡದ ಗಂಡಸಿನ ವಿರುದ್ಧ ದನಿಯೆತ್ತಿ ತಾನು ’ಪತಿವೃತೆ’ಯೆಂದು ಬೂಟಾಟಿಕೆ ತೋರುವ ಥರದವರೂ ಇದ್ದಾರೆ. ಎಲ್ಲೋ ಕೆಲವು ಪ್ರತಿಶತ ಮಹಿಳೆಯರು ತಮ್ಮತನವನ್ನು ಉಳಿಸಿಕೊಂಡಿರಬಹುದು-ಅದನ್ನು ಅಲ್ಲಗಳೆಯುತ್ತಿಲ್ಲ. ಆದರೆ ಬಹುತೇಕರು ಸಮಾಜದ ಹಲವು ಸ್ತರಗಳಲ್ಲಿ ಗಂಡಸರ ಗೊಂಬೆಗಳಾಗಬೇಕಾಗಿ ಬರುವುದು ಪರಿಸ್ಥಿತಿ ನಿರ್ಮಿಸುವ ಬೇಡಿಕೆಯಾಗಿದೆ.

ಇದನ್ನೆಲ್ಲಾ ಅರಿತೇ ನಮ್ಮ ಪೂರ್ವಜರು ’ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದಿದ್ದರು. ಅದರರ್ಥ ಸ್ತ್ರೀಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಬಾರದೆಂಬುದಲ್ಲ, ಪ್ರತೀ ಸ್ತ್ರೀಯ ಹಿಂದೆ ಅವಳಿಗೆ ಸಂಬಂಧಿಸಿದ ಕೈ ಅವಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲಿ, ಅವಳಿಗೆ ತೊಡಕಾಗದಿರಲಿ ಎಂಬುದಾಗಿಯಾಗಿತ್ತು. ಬಾಲ್ಯದಲ್ಲಿ ತಂದೆಯೂ, ಯೌವ್ವನದಲ್ಲಿ ಗಂಡನೂ ಮತ್ತು ವಾರ್ಧಕ್ಯದಲ್ಲಿ ಮಕ್ಕಳೂ ಹೆಣ್ಣನ್ನು ರಕ್ಷಿಸಲಿ ಎಂಬುದು ಆರ್ಷೇಯ ವಾದವಾಗಿತ್ತು. ಇದೇ ದೃಷ್ಟಿಯಿಂದ ದೈಹಿಕವಾಗಿ ಮಾಸಿಕಸ್ರಾವದಿಂದ ಬಳಲುವ ಮಹಿಳೆಗೆ ವಿಶ್ರಾಂತಿಯನ್ನು ಕೊಡಬಯಸಿ ಅದನ್ನು ’ಮೈಲಿಗೆ’ ಎಂದು ಪಟ್ಟಕೊಟ್ಟು ನಡೆಸಿಕೊಂಡು ಬಂದಿದ್ದರು. ಆದರೆ ಅದನ್ನೇ ದೊಡ್ಡ ಕಂತೆಪುರಾಣಮಾಡಿ ಆಧುನಿಕತೆಯ ಅಮಲಿನಲ್ಲಿ ಬಟ್ಟೆಗಂಟು ಕಟ್ಟಿಕೊಂಡು ಹೊಟ್ಟೆನೋವಿದ್ದರೂ ಸರಿ ತಲೆನೋವಿದ್ದರೂ ಸರಿ ಕೆಲಸಮಾಡುತ್ತಲೇ ಇರಬೇಕಾದುದು ಇಂದಿನ ಪಟ್ಟಣದ ನಾರಿಯರು ಆಯ್ದುಕೊಂಡ ಇಚ್ಛಾಪ್ರಾರಬ್ಧ! ಸಂಸ್ಕೃತದ ಯಾವ ಉಲ್ಲೇಖವನ್ನೇ ತೆಗೆದುಕೊಳ್ಳಿ ಅದು ಎಲ್ಲರಿಗೂ ಒಳಿತನ್ನೇ ಬಯಸುತ್ತದೆ. ಅಪಾರ್ಥದಿಂದ ವಿಕಲ್ಪಮಾಡಿಕೊಂಡರೆ ಅದಕ್ಕೆ ಸಂಸ್ಕೃತ ಹೊಣೆಯಲ್ಲ.

ಹೊಸವರ್ಷದ ಹೊಸ್ತಿಲಲ್ಲಿ ಹಲವು ಒಳ್ಳೆಯ ಕೆಲಸ ಕಾರ್ಯಗಳು ನಡೆಯಬೇಕೇ ಹೊರತು ಮೋಜುಮಜಾಮಸ್ತಿಯಲ್ಲ. ಆದರೆ ಇಂದು ಅದೇ ಸಂಪ್ರದಾಯವಾಗುತ್ತಿರುವುದು ಶೋಚನೀಯ. ನಾವು ಹಲವು ಸಂಕಲ್ಪ[ನ್ಯೂ ರೆಸಾಲ್ಯೂಶನ್]ಗಳನ್ನು ಪಟಪಟನೇ ಕೈಗೊಳ್ಳುತ್ತೇವೆ--ಆದರೆ ಅವು ಎಷ್ಟರಮಟ್ಟಿಗೆ ಕಾರ್ಯುಗತವಾಗುತ್ತವೆ ಎಂಬುದು ನಮಗೆ ತಿಳಿಯುವುದಿಲ್ಲ. ಸುಮ್ಮನೇ ಇರಲಿ ಎಂದು ಎಲ್ಲರಲ್ಲೂ ನಮ್ಮ ಸಂಕಲ್ಪಗಳ ಬಡಾಯಿಕೊಚ್ಚಿಕೊಳ್ಳುತ್ತೇವೆ. ಆದರೆ ಕೊಚ್ಚಿದಂತೇ ನಡೆದುತೋರಿಸಿದೆವೋ ಎಂಬುದು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾದ ಅಂಶವಾಗಿದೆ. ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂಬುದೆಲ್ಲಾ ಸರಿ, ಹಾಗೆ-ಹೀಗೆ ಎಲ್ಲಾ ಮಾಡಲು ಸಾಧ್ಯವಾಯಿತೋ, ಪ್ರಯತ್ನಿಸಿದೆವೋ, ಪ್ರಯತ್ನಿಸಿ ವಿಫಲರಾದೆವೋ ಎಂದು ನೋಡಿಕೊಳ್ಳಬೇಕಾದುದು ಮಹತ್ವದ್ದು. ಇಲ್ಲದಿದ್ದಲ್ಲಿ ಮಹಾಭಾರತದ ಉತ್ತರಕುಮಾರನಿಗೂ ನಮಗೂ ಬಹಳ ವ್ಯತ್ಯಾಸ ಇರುವುದಿಲ್ಲ!

ಸಂಕಲ್ಪಕ್ಕೆಲ್ಲಾ ಮತ್ತದೇ ನಮ್ಮ ಮನಸ್ಸು ಮುಖ್ಯ. ಮನಸ್ಸನ್ನು ನಿಗ್ರಹಿಸುವ, ಉತ್ತಮ ನೀರನ್ನು ಜಮೀನಿಗೆ ಹರಿಸಿದಂತೇ ಮನಸ್ಸಿಗೆ ಒಳ್ಳೆಯ ಪ್ರೇರೇಪಣೆ ಪಡೆಯುವ ಕೆಲಸವಾಗಬೇಕು,ಜಮೀನಿನಲ್ಲಿ ಉತ್ತಮ ಬೆಳೆತೆಗೆದಂತೇ ಪಡೆದ ಒಳ್ಳೆಯ ಮನೋಭೂಮಿಕೆಯಲ್ಲಿ ಉತ್ತಮ ಸಂಕಲ್ಪಗಳನ್ನು ಆವಾಹಿಸಬೇಕು. ಕಾಲಕಾಲಕ್ಕೆ ನೀರು-ಗೊಬ್ಬರ ಇತ್ಯಾದಿಕೊಟ್ಟು ಬೆಳೆತೆಗೆಯುವಂತೇ ನಮ್ಮ ದೃಢೀಕೃತ ಸಂಕಲ್ಪಗಳಿಗೆ ಕಾರ್ಯರೂಪಕೊಡಬೇಕು. ಕೃಷಿಭೂಮಿಯಲ್ಲಿ ಕಳೆತೆಗೆಯುವಂತೇ ನಮ್ಮ ಮನಸ್ಸಿನಲ್ಲಿ ಇರಬಹುದಾದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು, ಋಣಾತ್ಮಕ ಭಾವಗಳನ್ನು ಕಿತ್ತೆಸೆಯಬೇಕು. ನಾಳೆಯಿಂದ ಮದ್ಯ ಬಿಟ್ಟುಬಿಡುತ್ತೇನೆ ಎಂದು ಡಿಸೆಂಬರ್ ೩೧ ರ ರಾತ್ರಿ ಅಂದುಕೊಂಡವ ೧ ನೇ ತಾರೀಕಿನ ರಾತ್ರಿ ಮತ್ತೆ ಅದಕ್ಕೆ ಎಡತಾಕುವುದೂ ಮದ್ಯಸೇವಿಸುವುದೂ ಸರ್ವೇಸಾಮಾನ್ಯ. ಮದ್ಯವನ್ನು ವರ್ಜಿಸಲೂ ಧೂಮಪಾನವನ್ನು ತೊರೆಯಲೂ ತಿಂಗಳದಿನದ ಸತತ ಮನೋನಿಗ್ರಹ ಮುಖ್ಯವಾಗುತ್ತದೆ. ಮನಸ್ಸನ್ನು ನಿಗ್ರಹಿಸಲು ಯೋಗ ಮತ್ತು ಪ್ರಾಣಾಯಾಮ ವಿಧಾನಗಳೇ ಸಾಧನಗಳಾಗುತ್ತವೆ. ನಮ್ಮ ಪ್ರತಿಜ್ಞೆಗಳು ಒಳ್ಳೆಯ ಉದ್ದೇಶಗಳಿಂದ ಕೂಡಿದ್ದು ಭೀಷ್ಮ ಪ್ರತಿಜ್ಞೆಗಳ ರೀತಿ ಇದ್ದರೆ ಮಾತ್ರ ಅವುಗಳಿಗೆ ನೈತಿಕಬಲವೂ ಒದಗಿಬರುತ್ತದೆ. ಪರರ ಹಿತವನ್ನು ಬಯಸಬೇಕೇ ಹೊರತು ಯಾರಿಗೂ ಕೇಡನ್ನು ಬಯಸಬಾರದು. " ಈ ವರ್ಷದಲ್ಲಿ ನಾನು ಆತನಿಗೆ ಬುದ್ಧಿ ಕಲಿಸೇ ಕಲಿಸುತ್ತೇನೆ " ಎಂತಲೋ " ಈ ವರ್ಷ ಆ ಹುಡುಗಿಯನ್ನು ನಾನು ಪಡೆದೇ ತೀರುತ್ತೇನೆ " ಎಂತಲೋ ಸಂಕಲ್ಪಿಸುವುದು ನೈತಿಕ ಸಂಕಲ್ಪವಲ್ಲ. ವ್ಯಕ್ತಿಯೊಬ್ಬ ಡಿಸೆಂಬರ್ ೩೧ ರ ರಾತ್ರಿ ಮೋಜುಮಜಾ ಪಾರ್ಟಿಗಾಗಿ ಹುಡುಗಿಯರ ಶೋಕಿಗಾಗಿ ಖರ್ಚುಮಾಡುವ ಲಕ್ಷಗಟ್ಟಲೇ ಹಣವನ್ನು ಅನಾಥಮಕ್ಕಳಿಗೆ, ಬಡರೋಗಿಗಳಿಗೆ, ನಿರ್ಗತಿಕರಿಗೆ ಕೊಟ್ಟು ಅವರ ಸಂತಸಕ್ಕೆ ಕಾರಣನಾಗುವುದರಲ್ಲಿ ತಾನು ಸಂಭ್ರಮಿಸಿದರೆ ಅದು ಉನ್ನತ ಸಂಕಲ್ಪ.

ಹಾಗೆ ನೋಡಿದರೆ ಸಂಕಲ್ಪ ಮಾಡುವುದಕ್ಕೂ ಕೂಡ ಉತ್ತಮ ಸಂಸ್ಕಾರ ಬೇಕು. ಮಹಾತ್ಮರ ಸಂಕಲ್ಪಗಳು ಸಿದ್ಧಿಸುತ್ತವೆ. ಉಚ್ಛಮಟ್ಟದ ಮುಮುಕ್ಷುಗಳು ಕೇವಲ ಸಂಕಲ್ಪಿಸಿದ ತಕ್ಷಣದಲ್ಲೇ ಫಲವನ್ನೂ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಜನಸಾಮಾನ್ಯರಾದ ನಮಗೆ ಸಂಕಲ್ಪದ ಮಹತ್ವವೂ ಗೊತ್ತಿಲ್ಲ, ಅದನ್ನು ನಿಭಾಯಿಸಲೂ ತಿಳಿದಿಲ್ಲ. ಅಸಲಿಗೆ ನಮ್ಮ ಸಂಕಲ್ಪವೆಲ್ಲಾ ನಿಸರ್ಗ ನಿಯಂತ್ರಿತವೇ ಹೊರತು ಸಂಕಲ್ಪಮಾಡುವುದನ್ನೆಲ್ಲಾ ನಾವು ನಡೆಸಲು ಸಾಧ್ಯವಾಗುವುದಿಲ್ಲ. ಆದರೂ ಉತ್ತಮ ಸಂಕಲ್ಪಕ್ಕೆ ನಿಸರ್ಗವೇ ಆದ್ಯತೆ ನೀಡಿ ಪುರಸ್ಕರಿಸುತ್ತದೆ. ಅದು ಫಲಿಸುತ್ತದೆ. ಪ್ರತಿಯೊಂದೂ ಆಚರಣೆಯ ಹಿಂದೆ ಅಡಗಿರುವ ತತ್ವವನ್ನು ನಾವು ಹುಡುಕಿ, ಅರಿತು ನಡೆದರೆ ಅದು ಅರ್ಥಪೂರ್ಣವಾಗುತ್ತದೆ. ಕ್ರಿಸ್ತಿಯನ್ ಸಂಸ್ಕೃತಿಯಲ್ಲಿ ದೀಪವನ್ನು ಆರಿಸಿ ಹುಟ್ಟುಹಬ್ಬವನು ಆಚರಿಸುವುದು ಹಿಂದೂಗಳಿಗೆ ಅನುಕರಣೀಯವಲ್ಲ. ದೀಪ ಅಂಧಕಾರವನ್ನು ಕಳೆಯುತ್ತದೆಯಲ್ಲವೇ? ದೀಪವನ್ನು ಬೆಳಗಬೇಕೇ ವಿನಃ ನಂದಿಸಬಾರದು. ಕುಟುಂಬದಲ್ಲಿ ಅಣ್ಣ-ತಮ್ಮ ಅಕ್ಕ-ತಂಗಿಯರಲ್ಲಿ ಎಲ್ಲರಲ್ಲೂ ಒಂದೇ ಸಮನಾದ ಶಕ್ತಿ-ಜ್ಞಾನ ಇರುವುದಿಲ್ಲ, ಆದರೂ ನಾವೆಲ್ಲಾ ಹೊಂದಿಕೊಳ್ಳುವಂತೇ ವಸುಧೆಯೇ ಒಂದು ಕುಟುಂಬವೆಂದು ತಿಳಿದ ಸನಾತನರು || ವಸುಧೈವ ಕುಟುಂಬಕಮ್ || ಎಂದಿದ್ದಾರೆ. ನಮ್ಮಲ್ಲಿ ಎಲ್ಲಾ ಜನಾಂಗಗಳಲ್ಲೂ ಜ್ಞಾನದ ಮಟ್ಟ ಒಂದೇತೆರನಾಗಿಲ್ಲ. ಜ್ಞಾನಿಗಳು ತಿಳಿಸಿದ ಮಾರ್ಗಕ್ಕೆ ಪುಷ್ಟೀಕರಣ ದೊರೆಯುತ್ತದೆ. ಅಂತಹ ಜ್ಞಾನಮಾರ್ಗ ನಮ್ಮದಾಗಲಿ. ಸಂಕಲ್ಪಗಳಿಗೆ ಸಿದ್ಧಿಸಿಗುವ ಜ್ಞಾನಿಗಳಾಗಿ ನಡೆಯೋಣವೆಂಬ ಸದಾಶಯಗಳೊಂದಿಗೆ ಶುಭಾಶಯಗಳೊಂದಿಗೆ ಮದ್ಯರಹಿತ ೨೦೧೧ನ್ನು ಸ್ವಾಗತಿಸೋಣವೇ ?

Thursday, December 30, 2010

ಕಾಡುತಿದೆ ನಿನ್ನ ನನೆಹೂ

ರಾಜಾರವಿವರ್ಮ ಕೃತ ಚಿತ್ರ ಕೃಪೆ :ಅಂತರ್ಜಾಲ
ಕಾಡುತಿದೆ ನಿನ್ನ ನೆನಹೂ
[ನವ್ಯ ಪ್ರಿಯರಿಗಾಗಿ ಈ ಕವನ]
ಕಾಡುತಿದೆ ನಿನ್ನ ನೆನಹೂ
ಅನುದಿನವೂ ಅನುಕ್ಷಣವೂ
ಬೆಂಬತ್ತು ಬೇಸರಿಸಿ
ನೆನೆಯುತಿದೆ ನನ್ನ ಮನವೂ

ರಾಮಕೇಳಿದ ರೀತಿ
ಪಶುಪಕ್ಷಿ ತರುಲತೆಗಳನು ಕಂಡು
ಬಳಿಸಾರಿ ಪ್ರಾರ್ಥಿಸಲೇ ತೋರಿರೆಂದೂ ?

ಭೀಮ ದ್ರೌಪದಿಗಾಗಿ
ಸೌಗಂಧಿಕಾ ಪುಷ್ಪವಿರುವ ತಾಣವನರಸಿ
ಅನುಜ ಹನುಮಗೆ ನಮಿಸಿ ಮಾರ್ಗತಿಳಿದಂತೇ !

ಆಗಾಗ ಅಲೆದಾಡಿ
ಗುಂಯ್ಯೆಂದು ಹಾರುತ್ತ ಹೂ ಬನದಿ ಮಕರಂದ
ಹುಡುಕಿ ಹೀರುವ ಭೃಂಗರಾಜನ ಕೇಳಲೇ ?

ರಾಗ ಹಿಂದೋಳದಲಿ
ಸ್ವರಹಿಡಿದು ಆಲಾಪಿಸುತಲಲ್ಲಿ ತನ್ಮಗ್ನ
ತಲ್ಲೀನನಾಗುತ್ತ ತನ್ನ ತಾನೇಮರೆವನಲಿ ಮೊರೆಯಿಡಲೇ ?

ದಿನವು ಸೂರ್ಯನು ಉದಿಸಿ
ಬರುವ ಬಾನೆತ್ತರಕೆ ಕತ್ತೆತ್ತಿ ಕಾಲುಪ್ಪರಿಸಿ
ಮತ್ತೆ ಅಲ್ಲೆಲ್ಲೋ ಹೊಸ ಕುರುಹಿಗಾಗಿ ಹಂಬಲಿಸಲೇ ?

ಬಳಸಿ ಬೇಸರವಾಗಿ
ತೆಗೆದಿಟ್ಟ ಬಳೆಗಳನು ಕಿಣಿಕಿಣಿಸುತಾಧ್ವನಿಯ
ಮಾರ್ದವದಲ್ಲಿ ಆ ದಿನದ ಸೊಬಗನು ನೆನೆದೆನೂ !

ಮರೆಯಲಾರೆನು ಮುಡಿದ
ಮಲ್ಲಿಗೆಯ ಒಣಗಿರುವ ಪಕಳೆಗಳ ಮೆತ್ತನಾ
ದಿಂಬಿಗಂಟಿದ ತಲೆಯ ಪರಿಮಳವ ಹೃದಯದಲಿ ಕಾಪಿಡುವೆನೂ!
ಇಂದಿಗೂ ಅಗಲೆನೂ
ಎಂದಿಗೂ ತೊರೆಯೆನೂ !

Sunday, December 26, 2010

ನಗೆ ಬಂದೇ ಬಿಡ್ತು !


ನಗೆ ಬಂದೇ ಬಿಡ್ತು !

ಬೆಳಿಗ್ಗೆಯಿಂದ ನಗಬೇಕೆಂದು
ಹತ್ತುಸಲ ಪ್ರಯತ್ನಿಸಿದೆ
ಕನ್ನಡಿ ಎದುರು ನಿಂತೆ
೩೨ ಹಲ್ಲು ಇದೆಯೋ ನೋಡಿಕೊಂಡೆ
ನಗಲು ಯತ್ನಿಸಿದಾಗಲೆಲ್ಲಾ
ರಾಜಕಾರಣಿಗಳು ನೆನಪಾದರು
ಅದೇ ರಾಗ ಅದೇ ತಾಳ ಅದೇ ಮೇಳ
ಕೆಲವರು ಬರ್ತಾರೆ
ಕೆಲವರು ಹೋಗ್ತಾರೆ
ಯಾರು ಬಂದ್ರೂ ಒಂದೇ
ನಗಲು ಸಾಧ್ಯವೇ ಇಲ್ಲ !

ಅದ್ರೂ ನಗಬೇಕು ಎಂಬ ಆಸೆ ಇತ್ತಲ್ಲ ?
ಅದಕ್ಕೇ ಉದ್ಯಾನದಲ್ಲಿ ಚಪ್ಪಾಳೆತಟ್ಟಿಕೊಂಡು
ನಗುವವರ ಜೊತೆ ಸೇರಿಬಿಟ್ಟರೆ
ಅಂದುಕೊಂಡೆ ಅವರು ಮನೆಯಲ್ಲಿ ನಗುವುದಿಲ್ಲ
ಬೇರೆಲ್ಲೂ ನಗುವುದಿಲ್ಲ
ಅದಕ್ಕೇ ಪಾಪ ಬೆಳಿಗ್ಗೆ ಎದ್ದು
ಉದ್ಯಾನಕ್ಕೆ ಬಂದು ಬಾರದ
ನಗುವನ್ನು ಅಬ್ಬರಿಸಿ ಬರಿಸುತ್ತಾರೆ !

ನಗುವಿನ ಬಗ್ಗೆ ನೆನೆದಾಗ ರಾಗಿಮುದ್ದೆ
ತಿಂದರೆ ಹೇಗೆ ಎಂಬ ಹಂಬಲ !
ಛೆ ಅದಕ್ಕೂ ಇದಕ್ಕೂ ನಂಟೇ ಇಲ್ಲಾಂತಾರೆ
ನಮ್ಮ ಮಣ್ಣಿನ ಮಕ್ಳು
ಲಾಫಿಂಗ್ ಗ್ಯಾಸ್ ಆದರೂ ತರೋಣವೆಂದರೆ
ಇವತ್ತು ರಜಾ ಇದೆಯಲ್ಲ ಅದೂ ಸಿಗಲ್ಲ
ದುಬಾರಿ ಬೇರೆ ಬಿಡಿ
ಆ ಕಾಸಿಗೆ ಬೇರೇ ಏನಾರೂ ಘನಾ ವಸ್ತು ಬರುತ್ತೆ

ಛೆ ಛೆ ಸುಮ್ನೇ ಮನ್ಸೆಲ್ಲಾ ಗೊಂದ್ಲ ಅಂತ
ಒಂದ್ ರೌಂಡ್ ತಿರುಗಾಡೋಕೆ ಹೊರಟೆ
ಅಷ್ಟು ದೂರ ಹೋಗುವಾಗ ಒಳಗೆ
ಪರಮಾತ್ಮನ್ನ ಬಿಟ್ಕಂಡಿದ್ದ ಮಹಾಪುರುಷ
ಅಂಗಾತ ಮಲಗಿ " ಆಕಾಸದಲ್ಲಿ
ಅಗಲಲ್ಲಿ ಯಾಕೆ ನಕ್ಸತ್ರ ಬರಲ್ಲ ?
ಕುಮಾರಣ್ಣ ಮುಕ್ಮಂತ್ರಿ ಆದಾಗ ಬತ್ತಿತ್ತು
ಈ ಆಳಾದವ್ರು ಬಂದ್ ಎಲ್ಲಾ ಆಳಾಗೋಗದೆ
ಅಲ್ಲಿರೋ ಮೆಸಿನ್ನು ಓಡಾಕಿಲ್ಲ " ಅಂತ
ಏನೇನೋ ಕೂಗ್ತಾ ಇದ್ದ
ಅಬ್ಬಾ ಕುಮಾರಣ್ಣ ಎಂಥೆಂಥೋರ್ಗೆಲ್ಲಾ
ಎಂಥೆಂಥಾ ಪಾಠ ಕಲ್ಸವ್ನಪ್ಪಾ ಅನ್ನೋದ್
ನೆನದಾಗ ಒಬ್ಬನೇ ನಕ್ಕೆ-ಜೋರಾಗಿ
ಸದ್ಯಕ್ಕೆ ಅಲ್ಲಿ ಮತ್ಯಾರೂ ಇರಲಿಲ್ಲ !

Friday, December 24, 2010

ಕಾಮ-ರಾಜ-ರಾಣಿ ಮಾರ್ಗಕ್ಕೆ ಮಿತಿಯಿಲ್ಲವೇ ?

ಚಿತ್ರ ಋಣ : ಅಂತರ್ಜಾಲ

ಕಾಮ-ರಾಜ-ರಾಣಿ ಮಾರ್ಗಕ್ಕೆ ಮಿತಿಯಿಲ್ಲವೇ ?
[ಅನ್ ಫೋಲ್ಡೆಡ್ ಲೈಫ್ ಸ್ಟೈಲ್ ಆಫ್ ನ್ಯೂ ಎರಾ]

ಮೊದಲಾಗಿ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.

ಹಲವು ಮಾಧ್ಯಮಗಳಲ್ಲಿ ನಾವು ಇಂದು ಸಂವಹಿಸುತ್ತೇವೆ. ಸಂವಹಿಸಲು ನಮಗೆ ತ್ವರಿತಗತಿಯ ಮಾಧ್ಯಮಗಳಾದ ಜಂಗಮ ದೂರವಾಣಿ ಹಾಗೂ ಅಂತರ್ಜಾಲಗಳು ಉಪಯುಕ್ತವಾಗಿವೆ. ಆದರೆ ಇದೇ ತಂತ್ರಜ್ಞಾನ ನಮ್ಮ ಬುದ್ಧಿಗೆ ಹಲವೊಮ್ಮೆ ಮಂಕನ್ನೂ ಕವಿಸುತ್ತದೆ. ಅದರಲ್ಲಂತೂ ಹದಿಹರೆಯದವರಿಗೆ ಮತ್ತು ಪಾತರಗಿತ್ತಿಯ ಸ್ವಭಾವದವರಿಗೆ ಈ ಮಾಧ್ಯಮಗಳು ಬಹಳ ಉತ್ತೇಜಕವಾಗಿವೆ. ಬೇಕೋ ಬೇಡವೋ ಕಾರಣಗಳೂ ಇಲ್ಲದೇ ’ಸೋಶಿಯಲ್ ನೆಟ್‍ವರ್ಕ್ ನೆಪದಲ್ಲಿ ಹಲವರು ಸ್ನೇಹಿತರಾಗುತ್ತಾರೆ. ಕೆಲವರಂತೂ ಸ್ನೇಹಬಯಸುವುದೇ ಒಳ ಉದ್ದೇಶಕ್ಕಾಗಿ ! ಮನುಷ್ಯನ ಸಹಜ ಸ್ವಭಾವ ರೂಪಕ್ಕೆ ಮರುಳಾಗುವುದು. ಇದಕ್ಕೆ ಅಪವಾದಗಳು ಇರಬಹುದು ಆದರೆ ಇದಕ್ಕೆ ಬಲಿ ಬೀಳುವವರೇ ಜಾಸ್ತಿ. ಹೀಗೇ ಹುಡುಗ-ಹುಡುಗಿ ಪರಸ್ಪರ ಅಂತರ್ಜಾಲದ ಮೂಲಕ ಪರಿಚಿತರಾಗುತ್ತಾರೆ. ವಾಸ್ತವದಲ್ಲಿ ಅವರಿಗೆ ಪರಸ್ಪರರ ಬಗ್ಗೆ ಜಾಸ್ತಿ ತಿಳಿದಿರುವುದಿಲ್ಲ. ದೂರದಲ್ಲೆಲ್ಲೋ ಇದ್ದೂ ಅತೀ ಹತ್ತಿರವೇನೋ ಎಂಬ ಭ್ರಮೆ ಹುಟ್ಟಿಸುವ ಈ ತಾಣಗಳ ಮೂಲಕ ಬಾಂಧವ್ಯ ಬೆಸೆಯುತ್ತದೆ. ಸ್ನೇಹ ಹಲವೊಮ್ಮೆ ಕ್ರಮೇಣ ಪ್ರೇಮಕ್ಕೆ ತಿರುಗುತ್ತದೆ. ಜಂಗಮದೂರವಾಣಿಗಳ ಸಂಖ್ಯೆ ವಿನಿಮಯವಾಗುತ್ತದೆ. ಶುರುವಾಯ್ತು ತಕಳಿ ಮಾರನೇ ಆ ಕ್ಷಣದಿಂದಲೇ ಎಸ್.ಎಮ್.ಎಸ್ ಮತ್ತು ಕಾಲ್ ಮಾಡಲು !

ಎಷ್ಟೋ ಸರ್ತಿ ಹುಡುಗ-ಹುಡುಗಿಯರು ತಮ್ಮ ಸಂಪರ್ಕದ ಈ ಕೊಂಡಿಗಳನ್ನು ಮನೆಯವರಿಗಾಗಲೀ ಆಪ್ತ ಸ್ನೇಹಿತರಿಗಾಗಲೀ ತಿಳಿಸುವುದೇ ಇಲ್ಲ. ಇದಕ್ಕೆ ಪೂರಕವಾಗಿ ’ಮೊಬೈಲ್ ಡೇಟಿಂಗ್’ ಎಂಬ ವ್ಯವಸ್ಥೆ, ಅಂತರ್ಜಾಲದ ಹಲವು ತಾಣಗಳ ಮೂಲಕ, ವೈವಾಹಿಕ ಸಂಪರ್ಕತಾಣಗಳ ಮೂಲಕ ಡೇಟಿಂಗ್ ವ್ಯವಸ್ಥೆಗೆ ಬೆಂಬಲ ದೊರೆಯುತ್ತದೆ. ಟೈಮ್ಸ್ ಆಫ್ ಇಂಡಿಯಾ ಥರದ ಪತ್ರಿಕೆಕೂಡ ಕೆಲವುಸಮಯ ಡೇಟಿಂಗ್ ವ್ಯವಸ್ಥೆ ನಡೆಸುತ್ತಿತ್ತು. ಅದರ ಅಂಗಸಂಸ್ಥೆಗಳಲ್ಲಿ ಇಂದಿಗೂ ಈ ಸೌಲಭ್ಯಗಳು ಲಭ್ಯವಿವೆ. ಹಾಗಾದರೆ ನಮಗೆಲ್ಲಾ ಈ ಸೌಲಭ್ಯ ಬೇಕೇ ? ಭಾರತೀಯ ಉಚ್ಚ ಸಂಸ್ಕೃತಿಯ ತಳಹದಿಯಾದ ಕೌಟುಂಬಿಕ ವ್ಯವಸ್ಥೆಯನ್ನೇ ಬುಡಮೇಲುಮಾಡುವ ಇಂತಹ ವ್ಯವಸ್ಥೆಗಳು ನಮಗೆ ಅನಿವಾರ್ಯವೇ ? ಕೇಳುವವರಾರು? ಅಮೇರಿಕಾದಂಥ ಮುಂದುವರಿದ ರಾಷ್ಟ್ರ ಮಾಡುತ್ತಿದೆ ಅಂತ ನಾವೂ ಮಾಡುತ್ತೇವೆಯೇ ಹೊರತು ಅದರಲ್ಲಿ ಹುರುಳಿದೆಯೇ ಅಥವಾ ಅದರ ಸಾಧಕಬಾಧಕಗಳೇನು ಎಂಬುದರ ಬಗ್ಗೆ ನಮಗೆ ಅರಿವಾಗದಲ್ಲ.

ತೀರಾ ಫ್ಯಾಶನ್ ಪ್ರಿಯರಾದ ನಮ್ಮ ಯುವಪೀಳಿಗೆಯಲ್ಲಿ ಪರಸ್ಪರರ ದಿರಿಸುಗಳು ಬಹಳ ಕಾಮೋದ್ದೀಪಕವಾಗಿ ಪಾರದರ್ಶಕವೆಲ್ಲಾ ’ಅಪಾರ’ದರ್ಶಕವಾಗಿ ಕಣ್ಣುಕೋರಿಸುತ್ತಿರುವ ಈ ದಿನಗಳಲ್ಲಿ ಹುಡುಗಿಯರಿಗೆ ವಿದ್ಯಾಲಯಗಳಲ್ಲಿ ’ಇಂಥದ್ದನ್ನು ಧರಿಸಬೇಡಿ’ ಎನ್ನುವಹಾಗಿಲ್ಲ !ಅವರು ಆಡಿದ್ದೇ ಆಟವಾಗಿ, ಪಾಲಕರಿಗೂ ಅದು ನುಂಗಲಾರದ ತುತ್ತಾಗಿ ಹಲವೊಮ್ಮೆ ಹುಡುಗರ ವಿಕೃತ ಮನೋಸ್ಥಿತಿಗೆ ಪರ್ಯಾಯ ಕಾರಣ ಇದೇ ಎಂದರೆ ತಪ್ಪಾಗಲಾರದೇನೋ. ಕಾಲ ಹೇಗಿದೆಯೆಂದರೆ ಅಸಲಿಗೆ ಯಾರು ಹುಡುಗಿಯರು ಮತ್ತು ಯಾರು ಮದುವೆಯಾದ ಹೆಂಗಸರು ಎಂದು ಹುಡುಕಬೇಕಾದ ಕಾಲ ಒದಗಿಬಂದಿದೆ. ಹಿಂದೆ ಹೆಣ್ಣು ದುಡಿಯದಿದ್ದಾಗ, ಜಾಸ್ತಿ ತಿರುಗದಿದ್ದಾಗ ಕೌಟುಂಬಿಕ ವ್ಯವಹಾರಗಳಲ್ಲಿ ಇಷ್ಟೊಂದು ವೈಷಮ್ಯ ಕಂಡುಬರುತ್ತಿರಲಿಲ್ಲ. ಆದರೆ ಇಂದು ಹೆಣ್ಣು ತಿರುಗುತ್ತಾಳೆ, ಅಲ್ಲಿ ಇಲ್ಲಿ ಕಛೇರಿಗಳಲ್ಲಿ ಕೆಲಸಮಾಡುತ್ತಾಳೆ, ಅಲ್ಲೆಲ್ಲೋ ಆಕೆ ಯಾರದೋ ಕೃಪೆಗೋ ಅವಕೃಪೆಗೋ ಪಾತ್ರಳಾಗುತ್ತಾಳೆ. ಬೇಕಾಗಿಯೋ ಬೇಡದೆಯೋ ಇಲ್ಲದ ಸಂಬಂಧಗಳು ಹುಟ್ಟುಕೊಳ್ಳುತ್ತವೆ!

ಮನುಷ್ಯ ಸಂಬಂಧಗಳು ಕೂದಲೆಳೆಗಿಂತಾ ಸೂಕ್ಷ್ಮವಲ್ಲವೇ? ಕೇಳಿಪಡೆದರೆ ಅದು ಪ್ರೀತಿಯಿಂದ ನೀಡಿದ್ದೆನಿಸಿದರೆ ಕಸಿದು ಪಡೆದರೆ ಅದು ಬಲಾತ್ಕಾರವಾಗುತ್ತದೆಯಷ್ಟೇ? ಯಾವುದನ್ನು ಕೇಳಿಪಡೆಯಲು ಸಾಧ್ಯವಿಲ್ಲವೋ ಅದು ಬಲಾತ್ಕಾರಕ್ಕೆ ಕುಮ್ಮಕ್ಕು ಕೊಡಲು ಮುಂದಾಗುತ್ತದೆ. ಕೆಲವೊಮ್ಮೆ ಕಾರಣಾಂತರಗಳಿಂದ ಬಲಾತ್ಕಾರ ನಡೆಯುವುದು ಬಹಿರಂಗಗೊಳ್ಳದಿದ್ದರೆ ಇನ್ನು ಕೆಲವೊಮ್ಮೆ ಒಮ್ಮೆ ನಡೆದ ಘಟನೆಗೇ ಅಂಟಿಕೊಂಡ ಮನಸ್ಸು ಮತ್ತದನ್ನೇ ಅನಿವಾರ್ಯವೆನ್ನುವಂತೇ ಒಪ್ಪಿಕೊಳ್ಳುವ ಸ್ಥಿತಿಯೂ ಇರುತ್ತದೆ! ಈ ವಿಷಯದಲ್ಲಿ ಚಲನಚಿತ್ರ ರಂಗದವರಂತೂ ಬಹಳವಾಗಿ ನಾರುತ್ತಾರೆ! ತಾವು ಮಾಡುವ ತಪ್ಪನ್ನು ಮುಚ್ಚಲಿಕ್ಕೆ ಹಲವು ದಾರಿಗಳನ್ನು ಅನುಸರಿಸುತ್ತಾರೆ. ಕೊನೆಗೂ ಹೆಜ್ಜೆ ತಪ್ಪಿದ ಬದುಕಿನ ಛಾಯೆ ಅವರ ಮನಗಳಲ್ಲಿ ಅಚ್ಚಳಿಯದೇ ನಿಲ್ಲುತ್ತದೆ.

ಇನ್ನು ಎಷ್ಟೋ ಹುಡುಗ-ಹುಡುಗಿಯರಿಗೆ ಪ್ರೀತಿಸುವುದೇ ಒಂದು ಮಜಾತೆಗೆದುಕೊಳ್ಳುವ ಆಟವಾಗಿ ಪರಿಣಮಿಸಿದೆ. ಒಬ್ಬೊಬ್ಬರೂ ನಾಲ್ಕೈದು ಅಥವಾ ಹೆಚ್ಚು ಸಂಬಂಧಗಳನ್ನು ಇಟ್ಟುಕೊಳ್ಳುತ್ತಿರುವುದು, ಒಬ್ಬರಾದಮೇಲೆ ಒಬ್ಬರೆಂಬಂತೇ ಅವರನ್ನು ಕಣಕ್ಕೆ ಬಿಟ್ಟುಕೊಳ್ಳುವುದು, ಬೇಸರವಾದಾಗ ಅವರನ್ನು ಕಿತ್ತೆಸೆಯುವುದು ಕಂಡುಬರುತ್ತಿರುವ ಅಂಶವಾಗಿದೆ. ಈ ಮಧ್ಯೆ ಕೆಲವರು ನಿಜವಾಗಿಯೂ ಹುಚ್ಚು ಪ್ರೀತಿಯ ಆಳಕ್ಕೆ ಇಳಿದು ತಮ್ಮನ್ನೇ ಕೊಟ್ಟುಕೊಂಡು ತಮ್ಮ ಸಂಗಾತಿ ಇಲ್ಲದಿದ್ದರೆ ತಮಗೆ ಬದುಕಲೇ ಸಾಧ್ಯವಿಲ್ಲ ಎಂಬಂತಿರುತ್ತಾರೆ. ಹುಡುಗನೊಬ್ಬನನ್ನು ಪ್ರೀತಿಸಿ ಮಂಗಳೂರಿನತನಕ ವಿಮಾನದಲ್ಲಿ ಹೋಗಿ, ಅಲ್ಲೇ ಆರ್ಯಸಮಾಜದಲ್ಲಿ ಮದುವೆಯಾದ ಹುಡುಗಿ ಕೆಲವೇ ದಿನಗಳಲ್ಲಿ ಮರಳಿಬಂದು ಪಾಲಕರನ್ನು ಸೇರಿಕೊಂಡು " ಸ್ನೇಹಿತನಾಗಿದ್ದ ನೀನು ನನ್ನನ್ನು ಗನ್ ಪಾಯಿಂಟ್‍ನಲ್ಲಿ ಹೆದರಿಸಿ ಮದುವೆಯಾಗು ಅಂತ ಹೇಳಿದೆ, ನನಗಿಷ್ಟವಿರದಿದ್ದರೂ ನಿನ್ನನ್ನು ಮದುವೆಯಾದೆ " ಎನ್ನುತ್ತಾಳೆ. ಹುಡುಗ "ಕೂಡಲೇ ಮದುವೆಯಾಗದಿದ್ದರೆ ನನಗೆ ಜೀವಸಹಿತ ಇರಲಿಕ್ಕೇ ಬೇಜಾರು " ಅಂತಿದ್ಲು ಅಂತಾನೆ. ಅಂದರೆ ಈ ಮಧ್ಯೆ ಯಾರದು ತಪ್ಪು ಯಾರದು ಒಪ್ಪು? ಸರ್ಕಾರದ ಉಚ್ಚ ನ್ಯಾಯಲಯದಲ್ಲೇ ಪ್ರೀತಿಸಿ ಮದುವೆಯಾಗಲಿಲ್ಲ ಎಂಬ ಕಾರಣಕ್ಕಾಗಿ ವಕೀಲನೊಬ್ಬ ವಕೀಲೆಯನ್ನು ಕೊಂದುಹಾಕಿದ್ದಾನೆ! ಎಲ್ಲಾ ಬರೀ ಡಂಭಾಚಾರದ ಪ್ರೀತಿ ಮತ್ತು ದೈಹಿಕ ಆಕರ್ಷಣೆಯೇ ಹೊರತು ಇದರಲ್ಲಿ ಲವಲೇಶವೂ ಪ್ರೀತಿ ಇರಲಿಲ್ಲ ಎನಿಸುವುದಿಲ್ಲವೇ ? ಇವತ್ತಿನ ದಿನ ಕಾಲೇಜು ಓದುವ ಹುಡುಗ-ಹುಡುಗಿಯರು ಪಾಲಕರ ಕಣ್ತಪ್ಪಿಸಿ ಎಲ್ಲೆಲ್ಲೋ ಸುತ್ತಾಡುವುದುದಂತೂ ನಮಗೆ ತಿಳಿದೇ ಇದೆ, ಆದರೆ ಅಂತರ್ಜಾಲದ ಪ್ರೀತಿಯ ಬಲೆಯಲ್ಲಿ ಸಿಲುಕಿ ಕಾಣದ ಪ್ರದೇಶದ ಹುಡುಗ-ಹುಡುಗಿ ಪರಸ್ಪರ ಹತ್ತಿರವಾಗುವುದು, ’ಅಗಲಿರಲಾರೆ’ ಎನ್ನುವುದು ಯಾವ ವ್ಯಾಮೋಹ ಹೇಳಿ ?

ಈ ವಿಷಯದಲ್ಲಿ ಮದುವೆಯಾದ ಗಂಡಸರಾಗಲೀ ಹೆಂಗಸರಾಗಲೀ ಹೊರತಾಗಿಲ್ಲ. ನಿಜಕ್ಕೂ ಹೇಳಬೇಕೆಂದರೆ ಕೆಲವರಿಗೆ ಇಂತಹ ವ್ಯವಸ್ಥೆಯ ಅವಶ್ಯಕತೆಯಿತ್ತು ಅನಿಸುತ್ತದೆ. ಎರಡು ಮೂರು ಮಕ್ಕಳಿರುವ ಹೆಂಗಸರು ಮತ್ತು ಗಂಡಸರು ಪರಸ್ಪರ ಪ್ರೇಮಪಾಶದಲ್ಲಿ ಬೀಳುವುದು ಬಾಹ್ಯ ಸೌಂದರ್ಯಕ್ಕಲ್ಲದೇ ಮತ್ತಿನ್ನೇನು? ಎಷ್ಟೋ ಹೆಂಗಸರಿಗೆ ಗಂಡನ ಒಳ್ಳೆಯತನದ ಬಗ್ಗೆ ಗೊತ್ತಿದ್ದರೂ ಅವನನ್ನು ಬಿಡಲಾಗದಿದ್ದರೂ ಕಾಮದ ತೆವಲು, ಹತ್ತಿಕ್ಕಲಾಗದ ಕಾಮದ ತುಡಿತಕ್ಕೆ ಇನ್ನೊಬ್ಬ ಗಂಡಸು ಬೇಕು ಎಂದರೆ ನಂಬುತ್ತೀರಾ? ಮೈಮಾಟವನ್ನೇ ನೋಡಿ ಮನಸೋಲುವ ಗಂಡಸರಿಗೆ ತಮ್ಮತ್ತ ವಾಲಿ ತಮ್ಮ ತೆವಲಿಗೆ ಸಿಗುವ ಎಲ್ಲಾ ಹುಡುಗಿಯರೂ ಬೇಕಾಗಬಹುದಾದ ಮನೋಸ್ಥಿತಿ! ಎಲ್ಲರೂ ಹಾಗೇ ಅಂತಲ್ಲ, ಆದರೆ ಅನೇಕರು ಹೀಗೇ ಇದ್ದಾರೆ, ಇರುತ್ತಾರೆ. ಈ ಅಸಡ್ಡೆಯ ಕಾಮತೃಷೆಯ ಉರಿಯನ್ನು ಹೆಚ್ಚಿಸುವುದು ಅರ್ಧಂಬರ್ಧ ತೋರಿಸುವ ದೃಶ್ಯಗಳು, ಆಲ್ಕೋಹಾಲು, ಲೈವ್ ಬ್ಯಾಂಡು, ಹಲವು ಚಲನಚಿತ್ರಗಳು ಮತ್ತು ಇಂದಿನ ಕನಿಷ್ಠ ಉಡುಪಿನ ಬಳಕೆಯ ಆಂದೋಲನ! ಕನಿಷ್ಠ ಉಡುಪು ಬಳಸುವ ಆಂದೋಲನಕ್ಕೆ ಯಾರು ಗುರುವೋ ಗೊತ್ತಿಲ್ಲ. ಹಾಗೊಮ್ಮೆ ನೋಡಿದರೆ ಇಂತಹದಕ್ಕೆ ಗುರುವಿನ ಅವಶ್ಯಕತೆಯೇ ಇಲ್ಲ.

ಅಂತರ್ಜಾಲದಲ್ಲಿ ಸಿಗುವ ಕಾಮಾದಾಟದ ತಾಣಗಳಿಗೆ ಎಳೆಯ ಹುಡುಗರು ಲಗ್ಗೆಇಡುತ್ತಾರೆ. ಗಂಡಸರು ಹೆಂಗಸರು ಕದ್ದು ನೋಡುತ್ತಾರೆ! ಜಾಹೀರಾತುಗಳು ಅನೇಕಬಾರಿ ಎಲ್ಲವನ್ನೂ ತೆರೆದುತೋರುವ ಮಟ್ಟಕ್ಕೆ ಬೆಳೆದಿವೆ. ’ಜಸ್ಟ್ ಜಾಕೀಯಿಂಗ್’ ಎಂದು ಬರುವ ಜಾಕಿ ಕಂಪನಿಯ ಜಾಹೀರಾತು ನೋಡಬೇಕು, ಖೋಡೇ ಮತ್ತು ಕಿಂಗ್ ಫಿಷರ್ ಕಂಪನಿಗಳ ಕ್ಯಾಲೆಂಡರ್ ಗಳು ಬಿಕನಿ ತೊಟ್ಟ ಯುವತಿಯರನ್ನು ತೋರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಪೇಜ್ ತ್ರೀ ಎಂಬ ಹೆಸರಿನಲ್ಲಿ ಆಂಗ್ಲ ಮಾಧ್ಯಮದ ಪತ್ರಿಕೆಯೊಂದು ಹೆಂಡದ ಪಾರ್ಟಿ ಸಂಸ್ಕೃತಿಯ ಚಿತ್ರಗಳನ್ನು ದಿನವೂ ಪ್ರಕಟಿಸುತ್ತದೆ. ಐಟೆಂ ಸಾಂಗ್ ಎಂಬ ಸೋಗಿನಲ್ಲಿ ಯುವತಿಯ ಅಂಗಾಂಗಕ್ಕೆ ಒತ್ತುಕೊಡುವ ನರ್ತನವನ್ನು ಮಾಡಿಸುವ ಚಲನಚಿತ್ರಗಳಿವೆ. ಇದಲ್ಲದೇ ಹಳ್ಳಿ ಹಳ್ಳಿಗಳಲ್ಲೂ ಅಲ್ಲಲ್ಲಿ ಅಲ್ಲಲ್ಲಿ ನಂಗಾನಾಚ್ ನಂಥ ಕೆಟ್ಟ ನರ್ತನಗಳು ಪ್ರದರ್ಶಿತವಾಗುತ್ತಿವೆ. ರಾಜಕಾರಣಿಗಳು ಬಹಿರಂಗವಾಗಿ ತಮ್ಮ ’ರಾಣಿ’ಯರನ್ನು ತೋರಿಸುವ ಕಾಲ ಇದಾಗಿದೆ: ಬೇಕಾದರೆ ಮಾಮು ಕುಮಾರಸ್ವಾಮಿಯನ್ನೇ ಕೇಳಿ. ಬೆಳಗೆರೆಯಂಥವರು ಬಾಯಿ ಚಪ್ಪರಿಸುವ ಶೈಲಿಯಲ್ಲಿ ’ಕಾಮರಾಜಮಾರ್ಗ’ ಬರೆದರೆ ೧೬,೦೦೦ಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿ ದಶಮಾನಕ್ಕೂ ಹಿಂದೆ ಲೋಕಾರ್ಪಣೆಗೊಂಡ ಒಳ್ಳೆಯ ಪುಸ್ತಕಗಳ ಮಾರಾಟವನ್ನೇ ಮೀರಿಸಿ ದುಪ್ಪಟ್ಟು ದಿಪ್ಪಟ್ಟು ಮಾರಲ್ಪಟ್ಟು ಮರುಮರುಮರು ಮುದ್ರಣ ಕಂಡರೆ ಇದು ಇವತ್ತಿನ ನಮ್ಮ ಜನಾಂಗದ ಅಭಿರುಚಿಯನ್ನು ತೋರಿಸುತ್ತದೆ!

ತಿಂಗಳ ಶಿಶುವೊಂದು ತುಮಕೂರಿನ ರಸ್ತೆಯಲ್ಲಿ ಬಿದ್ದಿರುತ್ತದೆ ಅಥವಾ ಬೆಂಗಳೂರಿನ ಇನ್ನೆಲ್ಲೋ ಕಸದತೊಟ್ಟಿಗಳಲ್ಲಿ ಆಗಾಗ ಶಿಶುಗಳು ಕಾಣಿಸಿಕೊಳ್ಳುತ್ತವೆ. ಎಷ್ಟೋ ಗರ್ಭಸ್ಥ ಶಿಶುಗಳು ಲೋಕವನ್ನು ಕಣ್ತೆರೆದು ನೋಡುವುದಕ್ಕೂ ಮುನ್ನವೇ ಇಹಲೋಕಯಾತ್ರೆ ಪೂರೈಸಿಬಿಡುತ್ತವೆ!----ಇವೆಲ್ಲಾ ಪಾಪದ ಕೂಸುಗಳಲ್ಲವೇ? ಇವುಗಳಿಗೆ ಕಾರಣಯಾರು? ಒಂಬತ್ತನೇ ತರಗತಿಯಲ್ಲಿರುವ ಹುಡುಗಿಗೆ ಮಾಸಿಕ ಸ್ರಾವ ಸಂಭವಿಸದೇ ಇದ್ದು ಕುಂತಲ್ಲೇ ನಿದ್ದೆ ಮಾಡುವಾಗ ಆಕೆಯ ತಾಯಿ ಆಕೆಯನ್ನು ವೈದ್ಯರಲ್ಲಿಗೆ ಒಯ್ದು ಪರೀಕ್ಷಿಸಲಾಗಿ ಆಕೆ ಗರ್ಭಿಣಿ ಎಂದು ತಿಳಿದುಬರುತ್ತದೆ! ಹುಡುಗಿಯನ್ನು ಬಲವಂತವಾಗಿ ಕೇಳಿದಾಗ ತನ್ನ ತರಗತಿಯ ಹುಡುಗನೊಬ್ಬನನ್ನು ತೋರಿಸುತ್ತಾಳೆ--ಎಂತಹ ವಿಪರ್ಯಾಸವಲ್ಲವೇ? ಇಂತಹದ್ದನ್ನೆಲ್ಲಾ ಹತ್ತಿಕ್ಕಲು ಹಿಂದಕ್ಕೆ ಕೆಲವು ರೀತಿರಿವಾಜುಗಳಿದ್ದವು, ಆದರೆ ಇಂದಿಗೆ ಅವು ಅರ್ಥಹೀನ ಸೂತ್ರಗಳಾಗಿ ಶಸ್ತ್ರಹೀನ ಯೋಧನೊಬ್ಬ ಪ್ರಚಂಡ ರಣರಂಗದಲ್ಲಿ ಕುಸಿದು ಕುಳಿತಂತೇ ಎಂದರೆ ತಪ್ಪೂಂತೀರಾ? || ಯದ್ಭಾವೋ ತದ್ಭವತಿ || ಎಂಬ ಸಂಸ್ಕೃತದ ವ್ಯಾಖ್ಯೆಯಂತೇ ನಮ್ಮ ನಮ್ಮ ಭಾವನೆಗಳು ಎಲ್ಲದಕ್ಕೂ ಕಾರಣವಷ್ಟೇ ? ಆ ಭಾವನಗಳು ಹುಟ್ಟಿಕೊಳ್ಳಲು ಪೂರಕ ಪರಿಸರವೇ ಕಾರಣವಲ್ಲವೇ? ಜನಸಾಮಾನ್ಯರಾದ ನಮಗೆ ಎಲ್ಲರಿಂದಲೂ ಮನೋನಿಗ್ರಹ ಸಾಧ್ಯವೇ? ಇಲ್ಲಾ ಎಂತಾದಮೇಲೆ ಭಾವನೆ ಕೆಣಕುವ, ಕಾಮೋತ್ತೇಜಕ ಪರಿಸರವನ್ನು ನಾವು ಅನುಮೋದಿಸಬೇಕೇ?

ಎಷ್ಟೋ ಕುಟುಂಬವೇ ಒಡೆದು ಹಾಳಾಗುವುದು ಈ ಥರದ ಅಸಭ್ಯ, ಅನೈತಿಕ ಸಂಬಂಧಗಳಿಂದಲ್ಲವೇ? ಇದೇ ಕಾರಣವಾಗಿ ಬದಲಾಗಿಹೋಗುವ ಪಾಲಕರ ಮಧ್ಯೆ ಹುಟ್ಟಿ ಬೆಳೆಯುವ ಕಂದಮ್ಮಗಳಿಗೆ ಒಂದೋ ಅಪ್ಪನೋ ಇಲ್ಲಾ ಅಮ್ಮನೋ ಸಿಗದಾಗುವ ಕಾಲಬಂದಾಗ, ಬೇರೆಯಾಗುವ ಕಾಲ ಬಂದಾಗ ಮಗುವಿನ ಮುಗ್ಧ ಮನದಲ್ಲಿ ಏಳಬಹುದಾದ ನೋವಿನ ಅಲೆ ಎಂಥದ್ದಿರಬಹುದು ನಮಗೆ ಅರ್ಥವಾಗುತ್ತದೆಯೇ? ’ನೋ ಸ್ಟ್ರಿಂಗ್ಸ್ ಅಟ್ಯಾಚ್ಡ್’ ಎಂದು ಮೊದಲೇ ಸಾರುವ ತನ್ನ ಪರಾಗ ಬೀರುವ ಗಂಡುದುಂಬಿಗೆ ಬಿರಿಯುವ ಸ್ವೀಕರಿಸುವ ಗುಣಧರ್ಮದವುಳ್ಳ ಹೆಣ್ಣುದುಂಬಿ ಸೇರಲು ಹಾತೊರೆಯುತ್ತದೆ. ಸೇರುವ ಕಾಲದಲ್ಲಿ ಇರುವ ಮಧುರಕ್ಷಣಗಳು ತದನಂತರ ಇಲ್ಲದಾದಾಗ ಬೆಂಕಿಗೆ ಬಿದ್ದ ಪತಂಗದ ರೀತಿ ತನ್ನನ್ನೇ ತನ್ನ ಜೀವನವನ್ನೇ ಅರ್ಪಿಸಿಕೊಂಡು ಒದ್ದಾಡುತ್ತದೆ. ಇರುಳು ಕಂಡ ಹಾಳು ಬಾವಿಗೆ ಹಗಲು ತಾನಾಗೇ ನಡೆದುಬಂದು ಬೀಳುತ್ತದೆ. ಗುರುತು ಪರಿಚಯವಿಲ್ಲದ ಹುಡುಗನೊಬ್ಬ ಕಾರಲ್ಲಿ ಬಂದು ಕರೆದಾಗ ಕೇವಲ ಜಾಲತಾಣದ ಪರಿಚಯವಷ್ಟನ್ನೇ ಆಧಾರವಾಗಿ ಹಿಡಿದು ಹುಡುಗಿ ಆತನ ಕಾರಿನ ಹಿಂಬದಿಯ ಆಸನದಲ್ಲಿ ಕುಳಿತು ಸಾಗುತ್ತಾಳೆ; ಸಾಗುತ್ತಾ ತನ್ನತನವನ್ನು ಆತನಿಗೆ ಅರ್ಪಿಸುತ್ತಾಳೆ. ಯಾವುದೋ ಮಾಲ್ ಬಳಿ, ಚಿತ್ರಮಂದಿರದಬಳಿ, ಹೋಟೆಲ್ ಬಳಿ ಕಾದು ನಿಂತ ಹಸಿದ ಹುಲಿಯ ಬಾಯಿಗೆ ಸುಂದರ ಹೆಣ್ಣು ಮೃಗ ತಾನಾಗೇ ಬಂದು ಬೀಳುವ ಈ ಕ್ರಿಯೆ ’ಡೇಟಿಂಗ್’! ಒಬ್ಬರನ್ನೊಬ್ಬರು ಅರಿಯಲು, ನಮಗೆ ಬ್ಲೈಂಡ್ ಡೇಟ್ ಅನುಕೂಲ ಎನ್ನುವ ಜನ ಪಾಲಕರ ಇತಿಮಿತಿಗಳನ್ನೂ ಮೀರಿ ಅವರ ಹಕ್ಕು-ಬಾಧ್ಯತೆಗಳನ್ನು ಲೆಕ್ಕಿಸದೇ ಕೇವಲ ತಾವೇತಾವಾಗಿ ಅಲ್ಲಿಲ್ಲಿ ಕೂತು, ನಿಂತು ಆಮೇಲೆ ನಿಧಾನಕ್ಕೆ ಮೈಗೊರಗಿ ಹೀಗೆಲ್ಲಾ ಚೇಷ್ಟೆಗಳಲ್ಲಿ ತೊಡಗಿ ಮತ್ತದೇ ಕಾಮದಾಟ ಮುಗಿದು ಅದರಲ್ಲೇ ಪರ್ಯವಸಾನವಾಗುವ ಕ್ರಿಯೆಯೇ ಡೇಟಿಂಗ್.

ಕೆಲವು ರಿಯಾಲಿಟಿ ಶೋ ಗಳಲ್ಲಿ ನಡೆಸುವ ವೈವಾಹಿಕ ಸಂದರ್ಶನಗಳೂ ಕೂಡ ಪರೋಕ್ಷ ನಮ್ಮದಲ್ಲದ ಒಂದು ರಾಜಸ ಪ್ರವೃತ್ತಿಗೆ ಕಾರಣವಾಗುತ್ತವೆ. ಹಳ್ಳಿಯ ಹುಡುಗರನ್ನು ಪೇಟೆಗೂ ಪೇಟೆಯ ಹುಡುಗಿಯರನ್ನು ಹಳ್ಳಿಗೂ ಕರೆದೊಯ್ದು ವಾಹಿನಿಗಳು ನಡೆಸುತ್ತಿರುವ ಅಧ್ವಾನದ ಶೋಗಳನ್ನು ನೋಡಿದರೆ ಇದೂ ಕೂಡ ಒಂಥರಾ ಹಿಂಸೆಯಲ್ಲವೇ ಅನಿಸುತ್ತದೆ. ಸಿನಿಮಾ ಸೇರಲೆಂದು ಬಂದ ಅನೇಕ ಹುಡುಗಿಯರು ಕಾಲಕ್ರಮದಲ್ಲಿ ಕಾಲ್ ಗರ್ಲ್ ಗಳಾದರೆ ಧನಿಕರ ಮನೆಯ ಹೆಣ್ಮಕ್ಕಳು ಮಜಾಕ್ಕಾಗಿ ಕಾಲ್ ಗರ್ಲ್ ಗಳಾಗುತ್ತಿದ್ದಾರೆ. ’ಲಿವ್-ಇನ್ ರಿಲೇಶನ್ಶಿಪ್’, ’ಒನ್ ನೈಟ್ ಸ್ಟೇ’ ಇವೆಲ್ಲಾ ಅತಿಯಾಗಿ ವಿಜೃಂಭಿಸುತ್ತಿವೆ. ಬೇಡದ ಗರ್ಭವನ್ನು ಆರಂಭದಲ್ಲೇ ನಿವಾಳಿಸಿ ಎಸೆಯುವ ಸಲುವಾಗಿ ಭೋಗನಡೆದು ೭೨ ಗಂಟೆಗಳ ನಂತರವೂ ನಿಭಾಯಿಸಬಲ್ಲ ಮಾತ್ರೆಗಳು ದೊರೆಯುತ್ತವೆ. ಯಾರಹಂಗೂ ಇಲ್ಲದೇ ಸ್ವೇಚ್ಛೆಯಿಂದ ಕಾಮದಾಟ ಪೂರೈಸಿಕೊಳ್ಳುವ ಹರೆಯದ ಹಕ್ಕಿಗಳಿಗೆ ರಂಗ ಸದಾ ಅನುಕೂಲವನ್ನೇನೋ ಕಲ್ಪಿಸಿದೆ; ಆದರೆ ಅದರಿಂದ ಆವರಿಸುವ ಮಾನಸಿಕ ಸಮಸ್ಯೆಗಳಿಗೆ, ಬಯಕೆಗಳಿಗೆ, ಖಿನ್ನತೆಗಳಿಗೆ, ಪಾಪಪ್ರಜ್ಞೆಗೆ ಯಾವ ಮಾತ್ರೆಯೂ ಇಲ್ಲ, ಅದು ಬರಲು ಸಾಧ್ಯವೂ ಇಲ್ಲ! ಹುಚ್ಚು ಹುಡುಗಾಟಕ್ಕೆ ಹಿಂದೂ ಸಂಪ್ರದಾಯದಂತೇ ಮಧ್ಯವಯಸ್ಕರಾದ ಅರುಣ್ ನಾಯರ್ ಮತ್ತು ಲಿಜ್ ಹರ್ಲೀ ಮದುವೆಯಾಗುತ್ತಾರೆ. ಗೋಸುಂಬೆಯ ಚಾಳಿಯ ಲಿಜ್ ತಿಂಗಳಲ್ಲೇ ಮತ್ತೆ ಬೇರೇ ಗಂಡಸರಲ್ಲಿ ಆಸಕ್ತಳಾಗುತ್ತಾಳೆ. ಇಂತಹ ಕಾಮಪುರಾಣಗಳನ್ನು ನಮ್ಮ ಮಾಧ್ಯಮಗಳು ಪುಂಖಾನುಪುಂಖವಾಗಿ ವಿಜೃಂಭಿಸಿ ತಿಳಿಸುತ್ತವೆ-ಇದಕ್ಕೆಲ್ಲಾ ಅರ್ಥವಿದೆಯೇ ?

ಇದನ್ನೆಲ್ಲಾ ನೋಡಿದಾಗ ನಮ್ಮ ಪೂರ್ವಜರು ರಾಮಾಯಣ ಮಹಾಭಾರತ ಮೊದಲಾದ ಮೌಲಿಕ ಮಹಾಕಾವ್ಯಗಳನ್ನು ಯಾಕೆ ಬರೆದರು ಎಂಬುದು ಅರ್ಥವಾಗುತ್ತದೆ. ಕೇವಲ ದೈಹಿಕ ಸುಖವೇ ಮಹತ್ವವೆಂದು ತಿಳಿದು ಹಾಳಾಗಬೇಡಿ ಎಂಬ ಉದಾತ್ತ ಧ್ಯೇಯಗಳನ್ನು ಉಣಬಡಿಸುವ ದಾಸರ ಹಲವು ಪದಗಳನ್ನು ನಾವು ಕೇಳಿಯೇ ಕೇಳುತ್ತೇವೆ ಆದರೂ ಹಲವೊಮ್ಮೆ ಅವನ್ನೆಲ್ಲಾ ಮರೆತುಬಿಡುತ್ತೇವೆ. ಇದು ಒಳ್ಳೆಯ ಲಕ್ಷಣವಲ್ಲ, ವಿದೇಶೀಯರು ಧನಿಕರಾಗಿರಬಹುದೇ ಹೊರತು ಅವರಿಗೆ ಮನಃಶ್ಶಾಂತಿಯಿಲ್ಲ. ಅದನ್ನರಸಿ ಅವರು ಭಾರತಕ್ಕೇ ಬರುತ್ತಾರೆ. ಯಾವುದೋ ಸನ್ಯಾಸಿಯೋ ಬಾಬಾನೋ ಸಿಕ್ಕರೆ ಅಲ್ಲಿ ಶಾಂತಿಗಾಗಿ ಬೇಡುತ್ತಾರೆ. ಹಾಗೆನೋಡಿದರೆ ಅಲ್ಲಿ ಸೂತ್ರ ಗೋತ್ರ ಗೊತ್ತಿರದ ಪಶುಗಳ ಸಂತತಿಯ ರೀತಿಯಲ್ಲೇ ಬದುಕುವ ಬದುಕದು. ಪ್ರಾಮಾಣಿಕವಾಗಿ ನೋಡಿ--ನಿಜವಾಗಿಯೂ ಜನಿಸುವ ಪ್ರೀತಿ ಸಂಗಾತಿಯನ್ನು ಅವಿರತವಾಗಿ ಕಾಳಜಿಯಿಂದ ನೋಡಿಕೊಳ್ಳುತ್ತದೆ. ಅಲ್ಲಿ ಕಾಮಕ್ಕೆ ಪ್ರಾಮುಖ್ಯತೆ ಇರುವುದಿಲ್ಲ. ಕಷ್ಟ-ಸುಖಗಳೆಂಬ ಜೀವನದ ಉಯ್ಯಾಲೆಯ ಎರಡೂ ಕಡೆಯ ಓಲಾಟಗಳಲ್ಲಿ ಅವರು ಪರಸ್ಪರರನ್ನು ಅರಿತು ಊರುಗೋಲಾಗಿ ಬದುಕುತ್ತಾರೆ. ಹರೆಯ ಕಳೆದರೂ ಮನದಲ್ಲಿ ಅದು ಹಸಿರಾಗೇ ಇರುತ್ತದೆ. ಗಂಡ-ಹೆಂಡತಿ ಎಂಬ ಅನ್ಯೋನ್ಯತೆ ಮತ್ತು ಅನುರಾಗ ಸದಾ ಅರಳಿರುತ್ತದೆ. ಬೆಳೆಯುವ ಮಕ್ಕಳಿಗೂ ಕೂಡ ಅಪ್ಪ-ಅಮ್ಮನ ಪ್ರೀತಿಯ ಆರೈಕೆ ದೊರೆಯುತ್ತದೆ. ನಮಗೆ ಜನ್ಮವಿತ್ತ ನಮ್ಮಪ್ಪ ಅಮ್ಮ ಎಷ್ಟು ಚೆನ್ನಾಗಿದ್ದಾರೆ/ದ್ದರು ನೋಡಿ ಅದೇರೀತಿ ನಾವೂ ಮುನ್ನಡೆದರೆ ಆಗ ಸ್ವಸ್ಥ ಸಮಾಜ ಮುನ್ನಡೆಯುತ್ತದೆ. ಪರಸ್ಪರರನ್ನು ಅರಿಯಲು ಡೇಟಿಂಗ್ ಪರಿಹಾರವಲ್ಲ, ಬದಲಾಗಿ ಪಾಲಕರಿರುವ ಪರಿಸರದಲ್ಲೇ ಮದುವೆಗೂ ಮುನ್ನ ಮುಕ್ತವಾಗಿ ಮಾತನಾಡಿ ಅರಿಯುವ ನಡವಳಿಕೆ ಒಳ್ಳೆಯದು. ಆ ಕಾಲ ನಮ್ಮದಾಗಿರಲಿ; ಮದುವೆಗೂ ಮುನ್ನ ನಡೆಯುವ, ಮದುವೆಯ ಹೊರತಾಗಿ ನಡೆಯುವ ದೈಹಿಕ ಸಂಬಂಧ ದೂರವಾಗಲಿ ಎಂಬ ನನ್ನಸಿಕೆಯೊಡನೆ ಮತ್ತೊಮ್ಮೆ ಸಿಗಲು ಈಗ ವಿದಾಯಕೋರುತ್ತೇನೆ.