ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, October 24, 2010

’ಅನಾತ್ಮಾ’ವಲೋಕನ


’ಅನಾತ್ಮಾ’ವಲೋಕನ

ಮೊನ್ನೆ ಆತ್ಮದ ಬಗ್ಗೆ ಹೇಳಿದೆ. ಇಂದು ಅನಾತ್ಮದ ಬಗ್ಗೆ ಹೇಳುತ್ತಿದ್ದೇನೆ. ಅನಾತ್ಮ ಎಂಬ ಶಬ್ಧಕ್ಕೆ ಇಲ್ಲಿ ಅರ್ಥವನ್ನು ಹೇಳಿರುವುದು ಇದು ಕೇವಲ ಒಬ್ಬರ ಆತ್ಮಕಥೆಯಲ್ಲ ಬದಲಾಗಿ ಹಲವು ಸಾಮಾಜಿಕ ಕಥೆಗಳಂತೇ ಒಬ್ಬ ವ್ಯಕ್ತಿಯ ಅನುಭವಕ್ಕೆ ಬಂದ ಘಟನೆಗಳು ಕಥೆಗಳಾಗಿ ರೂಪುಗೊಂಡಿರುವುದು. ಒಂದರ್ಥದಲ್ಲಿ ಕಾವ್ಯ-ಸಾಹಿತ್ಯರಂಗದ ನನ್ನ ಗುರುಗಳನೇಕರ ಸಾಲಿನಲ್ಲಿ ಕುಳಿತಿರುವ ಡಾ| ಶ್ರೀ ಎಚ್.ಎಸ್. ವೆಂಕಟೇಶಮೂರ್ತಿಗಳ ಕೃತಿ ’ಅನಾತ್ಮಕಥನ’. ಹೆಸರೂ ಸುಂದರವಾಗಿರುವಂತೇ ವಸ್ತುವಿಷಯಗಳ ಹರವೂ ಸುಂದರ, ಅವು ಮನವನ್ನು ಕೆದಕಿ ಕೆರಳಿಸುತ್ತ, ಬಸ್ಸಿನ ಭರ್ತಿಯಾಗಿರುವ ಸೀಟೊಂದರಲ್ಲಿ ಜಾಗಮಾಡಿ ಕುಳಿತುಕೊಂಡ ಹಾಗೇ ಮನದಲ್ಲೇ ಆಸೀನವಾಗಿಬಿಡುವ ಭಾವಬಂಧುರ.

ಬಿಪಿ ವಾಡಿಯಾ ಸಂಭಾಂಗಣದಲ್ಲಿ ಇಂದು ಎರಡನೇಬಾರಿ ಬಿಡುಗಡೆಗೊಂಡ ಕೃತಿ ಇದು. ನಾಲ್ಕುವಾರಗಳ ಹಿಂದೆ ಅಮೇರಿಕಾದಲ್ಲಿ ದಿ| ಶ್ರೀ ಪು.ತಿ.ನ ಅವರ ಮಗಳಮನೆಯಲ್ಲಿ ಒಮ್ಮೆ ಬಿಡುಗಡೆಗೊಂಡ ಕೃತಿ ಕನ್ನಡ ಜನತೆಯ ಸಂಭ್ರಮಕ್ಕೆನ್ನುವಂತೇ ಇಂದು ಇನ್ನೊಮ್ಮೆ ಇಲ್ಲಿ ಸಾಂಪ್ರದಾಯಿಕ ಲೋಕಾರ್ಪಣ ಸಂಸ್ಕಾರವನ್ನು ಕಂಡಿತು. ಅತಿರಥ ಮಹಾರಥರೇ ಮಂಡಿಸಿದ್ದ ಸಭೆಯಲ್ಲಿ ವೇದಿಕೆಯ ಮೇಲೂ ಕೆಳಗೂ ಎಲ್ಲೆಲ್ಲೂ ಗಣ್ಯರದೇ ಸಾಲು ಕಾಣುತ್ತಿತ್ತು. ವೇದಿಕೆಯಲ್ಲಿ ಶ್ರೀ ರವಿಬೆಳಗೆರೆ, ಶ್ರೀ ಬಿ.ಆರ್.ಲಕ್ಷ್ಮಣರಾವ್, ಶ್ರೀ ಗಿರೀಶ್ ರಾವ್ [ಜೋಗಿ] , ಶ್ರೀ ವಸುಧೇಂದ್ರ ಆಚೀಚೆ ಕುಳಿತಿದ್ದರೆ, ಮಧ್ಯೆ ಶ್ರೀ ವೆಂಕಟೇಶಮೂರ್ತಿಗಳು ಕುಳಿತಿದ್ದರು. ಶ್ರೋತೃಗಳಲ್ಲಿ ಶ್ರೀ ಎಚ್.ಜಿ.ಸೋಮಶೇಖರ ರಾವ್, ಶ್ರೀ ಟಿ.ಎನ್.ಸೀತಾರಮ್, ಶ್ರೀ ನಡಹಳ್ಳಿ ಬಾಲಸುಬ್ರಹ್ಮಣ್ಯ ಮುಂತಾದ ಹಲವು ಗಣ್ಯರು ಆಸೀನರಾಗಿದ್ದರು. ಅನೇಕ ಬ್ಲಾಗಿಗ ಮಿತ್ರರು ಬಂದಿದ್ದರು ಎಂಬುದು ಬಹಳ ಸಂತೋಷ. ಕಾರ್ಯಕ್ರಮದ ಬಗ್ಗೆ ಹೊಸದಾಗಿ ಬರೆಯುವ ಅವಶ್ಯಕತೆಯಿದೆಯೇ ? ನೀವೇ ಊಹಿಸಿಕೊಳ್ಳಿ ! ಕನ್ನಡ ಸಾರಸ್ವತ ಲೋಕಕ್ಕೆ ಆತ್ಮಕಥನದ ಪರಿಚಯವಿದೆ, ಅದರಲ್ಲಿ ಹಲವು ರೀತಿಯ ಆತ್ಮಕಥೆಗಳೂ ಬಂದಿವೆ. ವಿಭಿನ್ನವಾದ ಶೈಲಿಯಲ್ಲಿ ಅತೀ ಮುದ್ದಾಗಿ ಮತ್ತು ಪುಟ್ಟಪುಸ್ತಕವಾಗಿ ಓದಲು ಬಹಳ ಇಷ್ಟವಾಗುವ ಕೃತಿ ’ಅನಾತ್ಮಕಥನ’. ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಶ್ರೀ ಮೋಹನ್ ಅವರಿಗೂ ಹಾಗೂ ಎಚ್ಚರಿಸಿ ಕರೆದೊಯ್ದ ಮಿತ್ರ ಶ್ರೀ ಪರಾಂಜಪೆಯವರಿಗೂ ಒಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ನನ್ನ ನೆಚ್ಚಿನ ಶ್ರೀ ಎಚ್.ಎಸ್.ವಿಯವರು ಸ್ವತಃ ಆಗಮಿಸುತ್ತಿದ್ದಂತೇ [ಅಲ್ಲಿಗೆ ತಂದಿಟ್ಟಿರುವ] ಕಾಫೀ ಕುಡಿಯಲು ಆಹ್ವಾನಿಸಿದರು, ಸರಳ,ನಿಗರ್ವೀ ಜೀವನಕ್ಕೆ ಬೇರೆ ಉದಾಹರಣೆ ಬೇಕೆ? ಸಾರಸ್ವತಲೋಕದಲ್ಲಿರುವ ವ್ಯಕ್ತಿ ತನ್ನ ಕೃತಿಗಳ ಬಗ್ಗೆಯೇ ಕೇಂದ್ರೀಕೃತವಾಗದೇ ಬಾಹ್ಯಪ್ರಪಂಚದ, ನಿತ್ಯಜೀವನದ ಬಗ್ಗೆ ಸಹಜವಾಗಿ ಮಾತನಾಡಲು ಹೊರಟಾಗ ಮಾತ್ರ ಎಲ್ಲರಿಗೂ ಅದು ಇಷ್ಟವಾಗುತ್ತದೆ ಎಂಬ ಅವರ ಅನಿಸಿಕೆ ನಿಜಕ್ಕೂ ಸತ್ಯವಷ್ಟೇ ?

ಎಚ್.ಎಸ್.ವಿಯವರ ಜೀವನದಲ್ಲಿ ಆಗಾಗ ಬಂದುಹೋದ ಹಲವಾರು ಪಾತ್ರಗಳು ಕಥೆಗಳಮೂಲಕ ನಮ್ಮ ಬದುಕಿಗೂ ಲಗ್ಗೆಇಟ್ಟುಬಿಡುವುದು ಅವರ ವಿಶಿಷ್ಟ, ಸರಳ ಹಾಗೂ ಅದ್ಬುತ ಶೈಲಿಯ ಮೂಲಕ. ಅನೇಕ ಕವಿ-ಸಾಹಿತಿಗಳನ್ನೂ ಹಾಗೂ ಅವರ ಬದುಕು-ಬರೆಹಗಳನ್ನೂ ಸೇರಿಸಿದಂತೆ ಅವರೇ ಬರೆದಿರುವ ಆತ್ಮಕಥೆಗಳನ್ನೂ ಕೇಳಿದ್ದೇವೆ; ಎಷ್ಟೋ ಇಷ್ಟವಾಗಿದೆ-ಕೆಲವನ್ನು ಓದುವುದೇ ಕಷ್ಟವಾಗಿದೆ. ಆದರೆ ಇಲ್ಲಿ ನಾವು ಅನಾತ್ಮಕಥನವನ್ನು ತೆರೆದರೆ ಆರಂಭದ ಪುಟದಿಂದ ಓದಲು ಶುರುಮಾಡಿದರೆ ಅದು ಅಂತ್ಯವಾಗುವವರೆಗೂ ಪ್ರತೀ ಕಥೆ ಅಥವಾ ಘಟನೆ ನಮ್ಮನ್ನು ಮುಂದೆ ಓದುವಂತೆ ಸೆಳೆಯುತ್ತಲೇ ಹೋಗುತ್ತದೆ ! ಏನಿಲ್ಲಾ ಎಂದರೆ ಎಲ್ಲವೂ ಇದೆ ಎನ್ನುವ ಸಾಂಬಾರ್ ಬಟ್ಟಲು ಅನಾತ್ಮಕಥನ. ನವರಸಗಳನ್ನೂ ಕುಟ್ಟಾಣಿಯಲ್ಲಿ ಹಾಕಿ ಯಾವುದೋ ಆಯುರ್ವೇದದ ಔಷಧವನ್ನು ಅರೆಯುವಂತೇ ಕುಟ್ಟಿ ಸಮ್ಮಿಶ್ರಗೊಳಿಸಿ ತಿನ್ನುವ ಗುಳಿಗೆಗಳನ್ನಾಗಿ ಕೊಟ್ಟಿದ್ದಾರೆ ಎಚ್.ಎಸ್.ವಿಯವರು. ಇದು ಗದ್ಯ ಅನ್ನುವುದಕ್ಕಿಂತ ಕಾವ್ಯಗಳಾಗಬೇಕಿದ್ದ ಅವರ ಕೆಲವು ಅನಿಸಿಕೆಗಳು-ಅನುಭವಗಳು ಗದ್ಯವಾಗಿ ಬರೆಯಲ್ಪಟಿವೆ. ಮನೆಜನ, ದೂರದ ಗೆಳೆಯರು, ಡಾ| ರಾಜಕುಮಾರ್, ಸಿ.ಅಶ್ವತ್ಥ್, ಮೈಸೂರು ಅನಂತಸ್ವಾಮಿ ಮುಂತಾದ ಹಲವರು ಬಂದುಹೋಗುವ ’ವೇದಿಕೆ’ ಅನಾತ್ಮಕಥನ.

ಇಲ್ಲಿ ಪ್ರಾಣಿಗಳಿಗೂ ಮಾನ್ಯತೆಯಿದೆ. ಸಾಕು ಪ್ರಾಣಿಗಳ ಬಗ್ಗೆ ನಾವು ಅಷ್ಟಾಗಿ ಆಲೋಚಿಸುವುದು ವಿರಳವಷ್ಟೇ? ಆದರೆ ಎಚ್.ಎಸ್.ವಿ ಘಟನೆಯೊಂದನ್ನು ಬರೆಯುತ್ತ ರೂಬಿ ಎಂಬ ನಾಯಿಯ ಬಗ್ಗೆ ಬರೆಯುತ್ತಾರೆ. ಕಥೆಗಳ ಬಗ್ಗೆ ನಾನು ಹೇಳುವುದಕ್ಕಿಂತ ಅದನ್ನು ನೇರವಾಗಿ ಓದಿದರೇ ಪರಿಣಾಮ ಸರಿಯಾಗಿರುತ್ತದೆ. ಕೇವಲ ೧-೨ ಘಂಟೆಗಳನ್ನು ಅಥವಾ ಒಂದು ಸಿನಿಮಾ ನೋಡಲೋ ಅಥವಾ ಹೊರಗಡೆ ಸುತ್ತಲೋ ಬಳಸುವ ಸಮಯದ ಭಾಗವನ್ನು ಒಂದುದಿನ ಮೀಸಲಾಗಿರಿಸಿದರೆ ಒಂದೇಒಂದುಸಲ ಆಕಳಿಸದೇ, ಕುಳಿತಲ್ಲೇ ತಲೆ ಓಲಾಡದೇ ಹಿಡಿದಿಟ್ಟು ಓದಿಸಿ ಖುಷಿಕೊಡುವ ಕೃತಿ ಇದು. ಜೀವನದಲ್ಲಿ ಬೇಸರಗೊಂಡ ವ್ಯಕ್ತಿಗೆ ತನ್ನೊಬ್ಬನ ಜೀವನದಲ್ಲಿ ಮಾತ್ರ ಈ ರೀತಿಯಾಯಿತೇ ಎಂಬ ಹಳವಂಡಗಳಿದ್ದರೆ ಅನಾತ್ಮಕಥನವನ್ನು ಓದುವುದರಿಂದ ಎಂತೆಂತಹ ಸನ್ನಿವೇಶಗಳನ್ನು ಎಚ್.ಎಸ್.ವಿ ಅನುಭವಿಸಿದ್ದಾರಪ್ಪ ಎಂಬುದು ಅರಿವಿಗೆ ಬರುತ್ತದೆ. ಈ ಘಟನೆಗಳಂತಹದೇ ಹಲವಾರು ಘಟನೆಗಳು ನಮ್ಮ-ನಿಮ್ಮ ಜೀವನದಲ್ಲೂ ಆಗಿಹೋಗಿರುವುದರಿಂದ, ಆಗುತ್ತಿರುವುದರಿಂದ, ಆಗಬಹುದಾದುರಿಂದ ಕಥೆಗಳು ನಮ್ಮದೇ ಕಥೆಗಳೇನೋ ಅಥವಾ ಘಟನೆಗಳ ಪ್ರತ್ಯಕ್ಷದರ್ಶಿಗಳು ನಾವೂ ಸಹ ಹೌದೇನೋ ಎಂಬ ಅನಿಸಿಕೆ ಮೂಡುತ್ತದೆ. ಆ ಕ್ಷಣದಲ್ಲಿ ಎಚ್.ಎಸ್.ವಿ ಬರಹಗಳು ನಮ್ಮ ದೇಹದ ಕಣಕಣವನ್ನೂ ವ್ಯಾಪಿಸಿ, ವಿಜ್ರಂಭಿಸಿ, ಮನಸ್ಸಲ್ಲಿ ಸಂತಸದ ಮೆರವಣಿಗೆ ಹೊರಡಿಸುವುದರಿಂದ ಯಾವುದೇ ಜಾತ್ರೆಗೆ ಹೋಗಿಬಂದದ್ದಕ್ಕಿಂತಲೂ ನೆಮ್ಮದಿ ಕೃತಿಯನ್ನೋದುವುದರಿಂದ ಸ್ವಾನುಭವಕ್ಕೆ ಸಿದ್ಧಿಸುತ್ತದೆ.
ದೇಶ ತಿರುಗು ಅಥವಾ ಕೋಶ ಓದು ಎಂಬ ಗಾದೆಗೆ ತಕ್ಕುದಾಗಿ ಯಾವುದೇ ಅನುಭವಗಳ ಕೋಶಕ್ಕೂ ಕಮ್ಮಿಯಿರದ ಕೃತಿ ಅನಾತ್ಮಕಥನ.

ಹೇಳಿಬಿಡುತ್ತೇನೆ ಕೇಳಿ: ನಾನು ಶ್ರೀ ಎಚ್.ಎಸ್.ವಿ ಯವರು ಅವರ ’ಪರಸ್ಪರ’ ಬ್ಲಾಗಿನಲ್ಲಿ ಹಾಕಿದ್ದ, ಅಡಿಗರ ಕುರಿತಾದ ಘಟನೆಯೊಂದನ್ನು ಓದಿದ್ದೆ, ಅಡಿಗರು-ಅವರಿಗೆ ಬೆಕ್ಕಿನಮೇಲಿರುವ ಪ್ರೀತಿ-ಅವರು ಮನೆಬದಲಾಯಿಸಿ ಹೋದಾಗ ಬೆಕ್ಕು ಆ ಮನೆಯನ್ನು ತೊರೆದು ಬರದೇ ಇದ್ದುದೇ ಮೊದಲಾಗಿ ಅಳೆ ಎಳೆಯ ಆಪ್ತವಿಚಾರಗಳು ಅದರಲ್ಲಿದ್ದವು. ಅದರ ನಂತರ ’ನಾಣೀಭಟ್ಟನ ಭೂತ’ ಎಂಬ ಅವರ ತಂದೆ ಹಾಗೂ ಅವರ ಕುರಿತಾದ ಕಥೆಯನ್ನೂ ಓದಿದೆ. ಹೀಗೇ ಓದುತ್ತಾ ಓದುತ್ತಾ ಶ್ರೀ ಜಿ.ಎನ್. ಮೋಹನ್ ಅವರು ಅವಧಿಯಲ್ಲಿ ಪ್ರಕಟಿಸಿರುವ, ಎಚ್.ಎಸ್.ವಿಯವರು ಬರೆದಿರುವ ಕೆಲವು ಕಥನಗಳನ್ನೂ ಓದಿದೆ. ಒಂದಕ್ಕಿಂತಾ ಒಂದು ರಸಗವಳ. ವಾರಗಳ ಕಾಲ ಮತ್ತೆ ಬೇರೇನೋ ಹಾಕುತ್ತಾರೇನೋ ಎಂದು ಕಾದಿದ್ದೆ, ಆದರೆ ಅಲ್ಲಿ ಹಾಕಲಿಲ್ಲ ಬದಲಾಗಿ ಅವುಗಳನ್ನೇ ಪೋಣಿಸಿ ಪುಸ್ತಕರೂಪದಲ್ಲಿ ಪ್ರಕಟಿಸುವ, ಪ್ರಕಾಶಿಸುವ ಇರಾದೆಯನ್ನು ಅವರು ಎಚ್.ಎಸ್.ವಿಯವರಲ್ಲಿ ಹೇಳಿದಾಗ ಎಚ್.ಎಸ್.ವಿಯವರು ಒಪ್ಪಿಕೊಂಡು ಅತ್ಮೀಯವಾಗಿ ಬರೆದ ಲೇಖನಗಳ ಕಟ್ಟು ಅನಾತ್ಮಕಥನ. ಈ ವಿಷಯದಲ್ಲಿ ಮೇಫ್ಲವರ್ ಮತ್ತು ಗುಲ್ ಮೋಹರ್ ಒತ್ತಟ್ಟಿಗೆ ಸೇರಿಸಿ ಈ ಕೃತಿ ಪ್ರಕಾಶಿಸಿದ ಮೋಹನ್ ಅವರಿಗೆ ನಾನು ಆಭಾರಿ.

ಹಳಬರೊಂದಿಗೂ ಎಳಬರೊಂದಿಗೂ ಹೊಂದಾಣಿಕೊಂಡು, ಎಲ್ಲರನ್ನೂ ಅಷ್ಟೇ ಪ್ರೀತಿಯಿಂದ, ಆತ್ಮೀಯತೆಯಿಂದ ಕಾಣುವ ಸಹೃದಯೀ ಕವಿ-ಸಾಹಿತಿಯಾದ ಎಚ್.ಎಸ್.ವಿಗಳು ಮೊಸರು ಕಡೆದು ತೆಗೆದು ತಿನ್ನಲು ಕೊಟ್ಟ ನವನೀತ ಇದು; ಕಾಯಿ-ಬೆಲ್ಲ ತುಂಬಿ ಕರಿದು ಮಟ್ಟಸವಾಗಿ ಜೋಡಿಸಿಟ್ಟು ತಣಿಸಿ ಮೆಲ್ಲಲು ಕೊಟ್ಟ ಮೋದಕ ಇದು. ಸಾಹಿತ್ಯಾಸಕ್ತರು, ಸಜ್ಜನರು, ಕವಿಗಳು, ಬ್ಲಾಗಿಗರು ಅಲ್ಲದೇ ಯಾರೇ ಆಗಲಿ: ಕನ್ನಡ ಬಲ್ಲವರು ಕೊಂಡು ಓದಬಹುದಾದ, ಓದಬೇಕಾದ ಕೃತಿ ’ಅನಾತ್ಮಕಥನ’ .

Saturday, October 23, 2010

ಭಾವನೆಯ ಕೊಳದಲ್ಲಿ


ಭಾವನೆಯ ಕೊಳದಲ್ಲಿ

ಕಾಡ ಮಧ್ಯದಲಿರುವ ತಣ್ಣೀರ ತಿಳಿಗೊಳದಿ
ಹಾಡಿನಾ ಸೊಗಡು ಕಲ್ಲುದುರಿ ಅಲೆಯೇಳೆ !
ನೋಡುವಾ ಕೇಳುವಾ ಆಸೆಗಳ ಪುದುವೊಟ್ಟು
ಮಾಡಿ ಮನೋರಥದಿ ಮೆರೆಸುವಾ ವೇಳೆ

ಒಡನಾಡಿಗಳ ಮರೆತು ನೀರವದಿ ಅರೆಘಳಿಗೆ
ಗಡಿದಾಟಿ ಜನರ ಜಂಜಡಗಳನು ಕಳೆದು
ಅಡಿಗಡಿಗೆ ಗುಡಿಯು ಮಂದಿರ ಮಸೀದಿಗಳೆಂಬ
ಬಡಬಡಿಕೆಯಿರದಂಥ ಭಾವವದು ಬೆಳೆದು

ಭಾವಗಳು ನೂರ್ಮಡಿಸಿ ಮಗುಚಿರಲು ಮನದೊಳಗೆ
ಜೀವಕಳೆ ಚೇತನವ ಪಡೆದು ಪುಟಿಯುತಲಿ
ದೇವಸೃಷ್ಟಿಯ ಲೋಕ ಸೆಳೆಯುತ್ತ ತನ್ನೆಡೆಗೆ
ಯಾವಲೆಕ್ಕಕು ಸಿಗದ ಹರುಷವನು ನೀಡುತಲಿ

ಯಾವುದೋ ರಾಜನೊಂದಾನೊಂದು ಕಾಲದಲಿ
ಕಾವೇರಿ ಬೇಟೆಯನು ಬೆನ್ನಟ್ಟಿ ಬಂದು
ದಾವಾರಿಸಿಕೊಳಲು ಇಳಿದೊಮ್ಮೆ ನೀರ್ಕುಡಿದು
ಸಾವಿರದ ಬದುಕ ನೆನೆಯುತ್ತೊಮ್ಮೆ ನಿಂದು

ಆನೆ ಹುಲಿ ಸಿಂಹ ಮಿಕ ಮುಂತಾದ ಮೃಗಗಳವು
ಜೇನು ತಿಂದಾ ಕರಡಿಯೂ ಜತೆಗೆ ಸೇರಿ
ಬಾನಾಡಿಗಳು ಹಾರಿ ಬಸವಳಿದು ಕೆಳಗಿಳಿದು
ಗಾನಮಾಡುತ ಅಮೃತಬಿಂದುವನು ಹೀರಿ

ಕೆಂದಾವರೆಗಳವು ಅರಳಿ ದೂರದಲಿ ಒಂದೆಡೆಗೆ
ಅಂದವನು ಬಿಚ್ಚಿಡುತ ಸೂರ್ಯನರಸಿರಲು
ಬಂದವರ ಮನಸೂರೆಗೊಳ್ಳುತ್ತ ಕೊಳವಲ್ಲಿ
ಸಂದಕಾಲದ ಪರಿವೆಯಿಲ್ಲದಂತಿರಲು

Friday, October 22, 2010

ಚಿದಾನಂದ-ರೂಪಂ ಶಿವೋಹಂ ಶಿವೋಹಂ


ಚಿದಾನಂದ-ರೂಪಂ ಶಿವೋಹಂ ಶಿವೋಹಂ

ಅಹಂ ನಿರ್ವಿಕಲ್ಪೋ ನಿರಾಕಾರ-ರೂಪೋ
ವಿಭುರ್ವ್ಯಾಪ್ಯ ಸರ್ವತ್ರ ಸರ್ವೇಂದ್ರಿಯಾಣಾಂ |
ಸದಾ ಮೇ ಸಮತ್ವಂ ನ ಮುಕ್ತಿರ್ನ ಬಂಧಃ
ಚಿದಾನಂದ-ರೂಪಃ ಶಿವೋಹಂ ಶಿವೋಹಂ ||

ಆತ್ಮ ಷಟ್ಕಮ್ ಎಂಬ ಷಟ್ಕದ ೬ ನೇ ಶ್ಲೋಕದ ಮೂಲಕ ಸಾಧಕರ ಬಗ್ಗೆ ಒಂದೆರಡು ಮಾತು ಬರೆಯುವುದು ಹಿತವೆನಿಸುತ್ತದೆ. ಆತ್ಮದ ಮೂಲರೂಪಕ್ಕೆ ಯಾವುದೇ ಹಕ್ಕು-ಬಾಧ್ಯತೆಗಳು ಎಡತಾಕುವುದಿಲ್ಲಾ ಎಂಬುದನ್ನು ಆತ್ಮ ಷಟ್ಕ ವಿವರಿಸುತ್ತದೆ. ಅಸಲಿಗೆ ಆಕಾರವೇ ಇರದ, ನಿರ್ವಿಕಲ್ಪ ಸ್ವರೂಪವಾದ ಆತ್ಮ ದೇಹವೆಂಬ ಪಂಜರದಲ್ಲಿ ಬಂದು ಕುಳಿತುಕೊಳ್ಳುತ್ತದೆಯೇ ವಿನಃ ಅದಕ್ಕೆ ಯಾವುದೇ ಬಂಧನಗಳಿಲ್ಲ. ಅದರಲ್ಲಂತೂ ಮಹಾತ್ಮರು ಮಾನವ ದೇಹದಿಂದ ಜನಿಸುವುದು ಭುವಿಯ ಜನರ ಭಾಗ್ಯ.

ಯಾವುದೇ ನಾಸ್ತಿಕನೂ ಜೀವನದ ಅಂತ್ಯಭಾಗದಲ್ಲಿ ಒಮ್ಮೆ ತಾನು ನಾಸ್ತಿಕನಾಗಿ ಕೆಟ್ಟೆ ಎಂಬ ಭಾವನೆಗೆ ಒಳಗಾದರೆ ಅದರಲ್ಲಿ ಆಶ್ಚರ್ಯವಿಲ್ಲ. ಹಾಗೆ ಬೀಳುವವರೆಗೂ ಅಂತಹ ನಾಸ್ತಿಕರೆಲ್ಲ ಜಪಿಸುವ ಘೋಷವಾಕ್ಯ ’ ದೇವರು ಅಥವಾ ನಮಗಿಂತ ಹಿರಿದಾದ ಶಕ್ತಿಯೇ ಇಲ್ಲ. ಆಕಾಶ್,ಭೂಮಿ,ವಾಯು,ಅಗ್ನಿ, ನೀರು ಎಲ್ಲವೂ ನಿಸರ್ಗ, ಮನುಷ್ಯ ಕೇವಲ ತನ್ನ ಪ್ರಯತ್ನದಿಂದಲೇ ಎಲ್ಲವನ್ನೂ ಸಾಧಿಸಬಹುದು’ ಎಂಬುದು. ಅಡಿಗೆ ಬಿದ್ದರೂ ಮೂಗು ಮಣ್ಣಾಗಲಿಲ್ಲ--ಎಂಬೊಂದು ಗಾದೆಯಂತೇ ಆಸ್ತಿಕರು ಕೇಳುವ ಪ್ರಶ್ನೆಗಳಿಗೆ ಅವರು ಹಾರಿಕೆಯ ಉತ್ತರ ಕೊಡುತ್ತಾರೆ.

ನಮ್ಮೀ ಭೌತಿಕ ಜಗತ್ತಿನಲ್ಲಿ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಎಂಬ ಕೋಶಗಳಿವೆ ಎಂಬುದಾಗಿ ವೇದ ಸಾರುತ್ತದೆ. ಜನಸಾಮಾನ್ಯರಾದ ನಮಗೆಲ್ಲಾ ಮೊದಲಿನ ಮೂರು ಗೋಚರವಾದರೆ ವಿಜ್ಞಾನದ ನಿತ್ಯಾನುಸಂಧಾನದಿಂದ ವಿಜ್ಞಾನಮಯ ಕೋಶಗಳ ಕೆಲವು ಸ್ತರಗಳನ್ನು ಆಗಾಗ ಅಲ್ಲಲ್ಲಿ ಕೆಲವು ವಿಜ್ಞಾನಿಗಳು ಕಾಣುತ್ತಾರೆ. ಹಾಗೆ ಕಾಣುವಾಗ, ಅವರು ಯಶಸ್ಸು ಪಡೆಯುವಾಗ ಆ ದಿಸೆಯಲ್ಲಿ ಪ್ರಯೋಗಾಲಯಗಳಲ್ಲಿ ಅವರು ಬಹುಕಾಲ ಅದಕ್ಕೆ ಸಂಬಂಧಿಸಿದ ತಪಸ್ಸಿನಲ್ಲಿ ನಿರತರಾಗಿರುತ್ತಾರೆ. ತಪಸ್ಸೆಂದರೆ ಕೇವಲ ಬಾಹ್ಯ ದೇಹವನ್ನು ಒಂದು ಕಡೆ ಆಸನದಮೇಲೆ ಕೂರಿಸಿ, ಮೂಗು ಹಿಡಿದೋ ಅಥವಾ ಕಣ್ಣುಮುಚ್ಚೋ ಏನನ್ನೋ ಗುನುಗುನಿಸುವುದಲ್ಲ, ಬದಲಿಗೆ ಇಟ್ ಈಸ್ ಆನ್ ಅಲೈನ್ ಮೆಂಟ್ ಪ್ರೊಸಿಜರ್ ಟು ಪ್ಲೇಸ್ ಅವರ್ ಸೌಲ್ ಇನ್ಲೈನ್ ವಿಥ್ ದಿ ಸುಪ್ರೀಮ್ ಸೌಲ್ ! ಹೇಗೆ ಕೃತಕ ಉಪಗ್ರಹವನ್ನು ಕಕ್ಷೆಗೆ ಸೇರಿಸುವುದನ್ನು ತಿಳಿಯುತ್ತೇವೋ ಹಾಗೇ ಇಲ್ಲಿನ ಅಥವಾ ಇಹದ ಬಂಧನಗಳನ್ನು, ಹಕ್ಕು-ಬಾಧ್ಯತೆಗಳನ್ನು ಯಾ ಭವದ ಭೌತಿಕ ಅಸ್ಥಿತ್ವವನ್ನೇ ಮರೆಯುವ ಆ ಆನಂದಮಯ ಕಕ್ಷೆಗೆ ಸೇರಲು ಪ್ರಯತ್ನಿಸುವುದು.

ಅಯ್ಯಪ್ಪ ಭಕ್ತರು ವೃತನಿಷ್ಟರಾದಾಗ ಮಾತ್ರ ಆ ಕಾಲದಲ್ಲಿ ಬಾಹ್ಯವಾಗಿ ಅದೂ ಇದೂ ಆಚರಣೆಯಲ್ಲಿ ನಿರತರಾಗಿರುತ್ತಾರೆ, ಆಮೇಲೆ ಅದನ್ನೆಲ್ಲಾ ಮರೆತು ಮತ್ತೆ ಕರ್ಕ ಮಕರಸಂಕ್ರಮಣ ಬರುವವರೆಗೆ ಬೇಕಾದಹಾಗೆಲ್ಲಾ ಇದ್ದುಬಿಡುತ್ತಾರಲ್ಲಾ--ಇದು ಸರಿಯಲ್ಲ. ಅಲ್ಲಿ ೧೮ ಮೆಟ್ಟಿಲುಗಳನ್ನು ಏರಲು ಹದಿನೆಂಟು ಸಾಧನೆಗಳನ್ನು ಮಾಡಬೇಕೆಂಬ ನಿಯಮವಿದೆ. ಬಹುತೇಕರು ಆ ಸಾಧನೆಯನ್ನು ಸಾಧಿಸುವುದಿಲ್ಲ! ಆದರೂ ದೇವರನ್ನು ಆ ಮೆಟ್ಟಿಲುಗಳನ್ನು ಏರಿಯೇ ದರ್ಶನಮಾಡುತ್ತಾರೆ. ಕಾಸಿದ್ದರೆ ಕರೆದೊಯ್ದು ನೇರವಾಗಿ ತಿರುಪತಿಯ ತಿಮ್ಮಪ್ಪನ ದರುಶನ ಮಾಡಿಸುವ ಏಜೆಂಟರಿದ್ದಾರೆ. ಆದರೆ ಈ ಯಾವುದೇ ಕ್ರಿಯೆ ದೇವರ ಹತ್ತಿರಕ್ಕೆ ನಮ್ಮನ್ನು ಕರೆದೊಯ್ಯಲು ಸಾಧ್ಯವಿಲ್ಲ. ದೇವರ ದರುಶನಕ್ಕೆ ಆಯಾಯ ಕ್ಷೇತ್ರಗಳಲ್ಲಿ ನಿಬಂಧಿಸಿರುವ ನಿಯಮಗಳನ್ನು ಉಲ್ಲಂಘಿಸದೇ ಪ್ರಯಾಸಪೂರ್ವಕವಾಗಿ ಮಾಡಿದ ದರ್ಶನವೇ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇಲ್ಲಾಂದರೆ ದುಡ್ಡು ಕೊಟ್ಟು ಕೊಳ್ಳುವ ಬೇಕರಿಯ ತಿನಿಸಿಗೂ ಪರಮಾತ್ಮನಿಗೂ ಏನೂ ವ್ಯತ್ಯಾಸ ಕಾಣಿಸುವುದಿಲ್ಲ. ಭಗವಂತ ಅಷ್ಟು ಸುಲಭಸಾಧ್ಯನಲ್ಲ ! ಅದರೆ ಸುಲಭ ಸಾಧ್ಯನೂ ಹೌದು. ಅದು ಅಂತಹ ಸಾಧಕ ಮನಸ್ಕರಿಗೆ ಮಾತ್ರ. ನಮ್ಮ ಮನಸ್ಸನ್ನು ತಹಬಂದಿಗೆ ತಂದು, ನಮ್ಮ ಕೈಯ್ಯಲ್ಲಿ ಮನಸ್ಸನ್ನು ಯಾವುದೋ ವಸ್ತುವನ್ನು ಹಿಡಿದಂತೇ ಗಟ್ಟಿಯಾಗಿ ಹಿಡಿದು, ಏಕಾಗ್ರತೆ ಸಾಧಿಸಿದರೆ ಆಗ ನಾವು ಮಾಡುವ ಧ್ಯಾನ ಅಥವಾ ನಿರಾಕಾರ ಧ್ಯಾನ, ನಿರ್ವಿಷಯ ಧ್ಯಾನ ನಮ್ಮನ್ನು ನಿರ್ವಿಕಲ್ಪದೆಡೆಗೆ ಕರೆದೊಯ್ಯಲು ಪ್ರಾರಂಭಿಸುತ್ತದೆ.

ಇದನ್ನೆಲ್ಲಾ ನಾನು ಬರೆದೆನೆಂದ ಮಾತ್ರಕ್ಕೆ ಎಲ್ಲರೂ ಓದುವುದಿಲ್ಲ. ಬಹಳಜನ ಓದಿದರೂ ಓದುವಾಗ ಆಕಳಿಕೆಯೊಂದಿಗೇ ಓದುತ್ತಾರೆ. ಕೇವಲ ಕೆಲವು ಜನ ಇದರಲ್ಲೇನಿದೆ ಎಂದು ಅರಿಯಬಯಸುತ್ತಾರೆ. ಪರಮಾತ್ಮನಲ್ಲಿನ ಆಸಕ್ತಿ ಕೂಡ ಹಾಗೇ. ಕಾಣುವ ತೀಟೆಯುಳ್ಳ ನಮ್ಮ ಕಣ್ಣಿಗೆ ಚೆನ್ನಾಗಿ ಕಾಣಲೆಂದು ಹಲವು ರೂಪಗಳಲ್ಲಿ ಭಗವಂತನನ್ನು ತೋರಿಸಿದರು, ಕೇಳುವ ಕಿವಿಯ ಆಹ್ಲಾದಕತೆಗೆ ಬೇಕಾಗಿ ಭಗವಂತನ ಕುರಿತಾದ ಸ್ತುತಿ, ಸಂಗೀತಗಳನ್ನು ರಚಿಸಿದರು, ಸ್ಪರ್ಶಸುಖಕ್ಕೆ ಹಾತೊರೆವ ಚರ್ಮಕ್ಕೆ ಸೋಕಲೆಂದು ವಿಗ್ರಹ ಮುಟ್ಟಿ ದರುಶನಮಾಡಲು ಕೆಲವು ಕಡೆ ಅನುವುಮಾಡಿಕೊಟ್ಟರು, ಜಿಹ್ವಾಚಾಪಲ್ಯಕ್ಕೆ ಇರಲೆಂದು ಭವಂತನಿಗೆ ನಿವೇದಿಸಿದ ಬಗೆಬಗೆಯ ಭಕ್ಷ್ಯಗಳನ್ನು ತಿನ್ನಲುಕೊಟ್ಟರು, ಆಘ್ರಾಣಿಸುವ ಮೂಗಿಗೆ ಅನುಕೂಲವಾಗಲೆಂದು ಧೂಪ-ದೀಪ-ಅಗರು ಕಸ್ತೂರಿ-ಚಂದನಗಳನ್ನು ಬಳಸಿದರು. ಆದರೆ ಇವು ಮತ್ತೆ ನಮ್ಮ ಇಂದ್ರಿಯಪರಿಧಿಗಷ್ಟೇ ಮೀಸಲು ! ಈ ಪರಿಧಿಯನ್ನು ಬಿಟ್ಟು ಹೊರಪರಿಧಿಗೆ ಹೊರಟಾಗ ಮಾತ್ರ ನಮಗೆ ಆಂತರ್ಯದ ಪ್ರಪಂಚ ಅರಿವಿಗೆ ಬರುತ್ತದೆ. ಆ ಪ್ರಪಂಚದ ಅರಿವಾದ ಜನರಿಗೆ ಈ ಪ್ರಪಂಚ ಬಹುಗೌಣವಾಗುತ್ತದೆ. ಆದರೂ ಕೆಲವೊಮ್ಮೆ ಸಾಧಕರು ಭಕ್ತರಿಗೆ/ಶಿಷ್ಯರಿಗೆ ಬೇಕಾಗಿ ಅಲಂಕರಿತ ಪಲ್ಲಕ್ಕಿಯಲ್ಲಿ ಕೂರುವುದೋ, ಪೀಠದಲ್ಲಿ ಕುಳಿತು ದರ್ಬಾರ್ ನಡೆಸುವುದೋ ಇಂತಹದ್ದನ್ನೆಲ್ಲಾ ಮಾಡಲೂಬಹುದು.

ಜಿಲ್ಲಾಮಟ್ಟದ ವ್ಯಾವಹಾರಿಕನಿಗೆ ತಾಲೂಕು ಚಿಕ್ಕದು, ರಾಜ್ಯಮಟ್ಟದವನಿಗೆ ಜಿಲ್ಲಾಮಟ್ಟ ಚಿಕ್ಕದು, ದೇಶಮಟ್ಟದವನಿಗೆ ರಾಜ್ಯಮಟ್ಟ ಚಿಕ್ಕದು, ಅಂತರ್ರಾಷ್ಟ್ರೀಯ ವ್ಯವಹಾರಸ್ಥನಿಗೆ ದೇಶಕೂಡ ಚಿಕ್ಕದು--ಹೀಗೇ ಅಂತರ್ರಾಷ್ಟ್ರೀಯ ಮಟ್ಟದ ವ್ಯವಹಾರಸ್ಥ ಆಗಾಗ ಆಗಾಗ ವಿದೇಶಗಳಿಗೆ ವಿಮಾನವೇರಿ ಹೋಗಿ ಬಂದಂತೇ ಆಂತರ್ಯದ ಪ್ರಪಂಚವನ್ನು ಅರಿತವರಿಗೆ ಈ ಪ್ರಪಂಚ ಚಿಕ್ಕದಾಗಿ ಕಾಣಿಸುತ್ತದೆ, ನಶ್ವರವಾಗಿ ಕಾಣಿಸುತ್ತದೆ! ಅವರು ಆಗಾಗ ಆಗಾಗ ಅಥವಾ ದಿನವೂ ಒಂದೆರಡಾವರ್ತಿ ಧ್ಯಾನಸ್ಥರಾಗಿ ಆ ಪ್ರಪಂಚಕ್ಕೆ ಹೋಗಿಬರುತ್ತಾರೆ. ಇಲ್ಲಿ ಅವರೇರುವ ವಿಮಾನವೇ ತಹಬಂದಿಗೆ ತಂದ ಮನಸ್ಸು. ಹೇಗೆ ವಿಮಾನ ಅಪಘಾತವಾದರೆ ಕಷ್ಟವೋ ಹಾಗೇ ಮನಸ್ಸೆಂಬ ಪೈಲಟ್ ರಹಿತ ವಿಮಾನ ನಮ್ಮನ್ನು ಎಲ್ಲೆಲ್ಲೋ ಹೈಜಾಕ್ ಮಾಡಿಬಿಡುವ ಸಾಧ್ಯತೆಗಳಿರುತ್ತವೆ. ಮನಸ್ಸೆಂಬ ವಿಮಾನ ಬೇರಾವ ಅಪಘಾತಕ್ಕೆ ಈಡಾಗದಿದ್ದರೂ ಈ ಹೈಜಾಕ್ ಆಗುವ ಪ್ರಕ್ರಿಯೆಯೇ ಅಪಘಾತವೆಂದು ತಿಳಿದರೆ ತಪ್ಪಲ್ಲ. ಈ ಮನಸ್ಸೆಂಬ ವಿಮಾನದ ಪೈಲಟ್ ಆಗಲು ಒಂದು ಮಾರ್ಗ ಲಭ್ಯವಿದೆ. ಅದೇ ಅಷ್ಟಾಂಗ ಯೋಗ. ಯಮ,ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ--ಈ ಮೆಟ್ಟಿಲುಗಳು ನಮ್ಮನ್ನು ಪರಾತತ್ವದೆಡೆಗೆ ಕರೆದೊಯ್ಯುತ್ತವೆ.

ತಿನ್ನಲಾರದ ದ್ರಾಕ್ಷಿ ಹುಳಿಯೆಂದ ನರಿಕಥೆಯನ್ನೂ, ಮೊಲಕ್ಕೆ ಮೂರೇ ಕಾಲೆಂದು ವಾದಿಸಿದ ವಿತಂಡವಾದಿಗಳ ತತ್ವವನ್ನೂ ನಾವು ಕೇಳಿದ್ದೇವೆ. ನಾಸ್ತಿಕರೂ ಕೂಡ ಇಲ್ಲೇ ಎಲ್ಲೋ ಅಕ್ಕ-ಪಕ್ಕ ನಿಲ್ಲುತ್ತಾರೆ. ಇದಕ್ಕೂ ಮುಂದೆ ಅವರು ಸಾಗುವುದಿಲ್ಲ. ಯಾಕೆಂದರೆ ಅವರಿಗೆ ಅದು ಸಾಧ್ಯವಿಲ್ಲ- ಸಾಧ್ಯವಿಲ್ಲದ್ದು " ಇಲ್ಲವೇ ಇಲ್ಲ "
ಎಂದುಬಿಟ್ಟರೆ ಅವರ ಅಹಂ ಗೆ ತೊಂದರೆಯಾಗುವುದಿಲ್ಲ. ಹೀಗಾಗಿ ದೇವರೂ ಸುಳ್ಳು, ಎಲ್ಲವೂ ಸುಳ್ಳು ಎಂಬುದೇ ಅವರು ಹೇಳುವ ಅಪ್ಪಟ ಸುಳ್ಳು ಎಂಬುದನ್ನು ಸಹೃದಯ ಓದುಗರಲ್ಲಿ ಭಿನ್ನವಿಸುತ್ತಿದ್ದೇನೆ.

ಈ ನಡುವೆ ಗೀತೆಯಲ್ಲಿ ಭಗವಂತ ಹೇಳುತ್ತಾನೆ - ಒಂದೊಮ್ಮೆ ಸಾಧಿಸಲು ಪ್ರಯತ್ನಿಸಿ ವಿಫಲನಾದರೆ ಆತನಿಗೆ ಮುಂದಿನ ಜನ್ಮದಲ್ಲಿ ಅದಕ್ಕೂ ಮುಂದಿನ ಹಂತವನ್ನೋ ಅಥವಾ ಆತ ಸಾಧಿಸಿದರೆ ಮೋಕ್ಷವನ್ನೋ ಕರುಣಿಸುತ್ತೇನೆ ಎಂದು. ಉದಾಹರಣೆಗೆ: ಉಡುಪಿಯ ವಿದ್ಯಾಭೂಷಣರು ಸಾಧನೆಯ ಹಾದಿಯಲ್ಲಿದ್ದರು. ಆದರೆ ಲೌಕಿಕದ ಆಕರ್ಷಣೆಯಿಂದ ಮನಸ್ಸು ವಿಚಲಿತವಾಯಿತು. ಆಂತರ್ಯದಲ್ಲೊಂದು ಬಾಹ್ಯದಲ್ಲೊಂದು ರೀತಿಯಲ್ಲಿ ಬದುಕಲು ಇಷ್ಟಪಡದೇ ನೇರವಾಗಿ ಸಮಾಜದಿಂದ, ಉಳಿದ ಪೀಠಾಧಿಪತಿಗಳಿಂದ ಆಗಬಹುದಾದ ಮಾನಸಿಕ ಆಘಾತಗಳನ್ನು ಗ್ರಹಿಸಿಯೂ ಆತ ಸನ್ಯಾಸಧರ್ಮ ತ್ಯಜಿಸಿ ಸಂಸಾರಿಯಾದರು. ಇದು ಒಂದರ್ಥದಲ್ಲಿ ಒಳ್ಳೆಯದೇ. ಈಗ ಅವರ ಸನ್ಯಾಸದಲ್ಲಿದ್ದಾಗ ನಡೆಸಿದ ಜಪ-ತಪದ ಆಧ್ಯಾತ್ಮಿಕ ಬ್ಯಾಂಕ್ ಬ್ಯಾಲೆನ್ಸ್ ಹಾಗೇ ಇರುತ್ತದೆ. ಮುಂದಿನ ಜನ್ಮದಲ್ಲಿ ಮತ್ತೆ ಸನ್ಯಾಸಿಯಾಗಿ ಹುಟ್ಟು ಇನ್ನೂ ಮೇಲ್ಪಂಕ್ತಿಗೋ ಮುಕ್ತಿಗೋ ಹೋಗಲು ದೇವರು ಅನುಕೂಲ ಕಲ್ಪಿಸುತ್ತಾನೆ. ವಿದ್ಯುದೀಪ ಉರಿಯುತ್ತಿರುವಾಗ ವಿದ್ಯುತ್ತು ಹೋದರೆ ಮರಳಿಬಂದಾಗಾ ಪುನಃ ಹೇಗೆ ಆ ದೀಪ ಉರಿಯುವುದೋ [ ನಾವು ಗುಂಡಿಯನ್ನು ಅದುಮಿ ಆರಿಸಿದ್ದರೆ ಆ ಪ್ರಶ್ನೆ ಬೇರೆ !] ಹಾಗೇ ಎಲ್ಲಿಗೇ ನಿಲ್ಲಿಸಿದ್ದರೋ ಅಲ್ಲಿಂದಲೇ ಹಿಡಿದೆತ್ತಿ ಮುಂದೆ ಅವಕಾಶ ಕಲ್ಪಿಸುತ್ತೇನೆ ಎಂಬುದು ಭಗವಂತನ ಹೇಳಿಕೆ.

ವಿಮಾನ ಚಾಲಕನಿಗೆ ವಾತಾವರಣದ ಪ್ರಕ್ಷುಬ್ಧತೆ ಪರಿಣಾಮ ಬೀರುವ ಹಾಗೇ ಮನೋವಿಮಾನ ಚಾಲಕನಿಗೆ ಬಾಹ್ಯಾಚರಣೆಗಳ ಪ್ರಕ್ಷುಬ್ಧತೆ ಆತನ ವೈಫಲ್ಯಕ್ಕೆ ಕಾರಣವಾಗಬಹುದು. ರಸ್ತೆಯಲ್ಲಿ ನಡೆಯುವ ಚಿಕ್ಕಮಕ್ಕಳನ್ನು ಬರಹೋಗುವ ವಾಹನಗಳಿಗೆ ಸಿಲುಕದಂತೆ ತಪ್ಪಿಸಲು ಕೈಹಿಡಿದು ಹೇಗೆ ನಡೆಸುತ್ತೇವೆಯೋ ಹಾಗೆಯೇ ನಮ್ಮ ಮನಸ್ಸನ್ನು ದುರ್ಗಮವಾದ ಹಾಗೂ ಕಡಿದಾದ ಈ ಶಿಖರದ ಹಾದಿಯಲ್ಲಿ ನಡೆಸುವುದು ಭಗವಂತ ನಮಗೇ ಕೊಟ್ಟ ಹೊಣೆಗಾರಿಕೆಯಾಗಿರುತ್ತದೆ. ಅದಕ್ಕೆಂದೇ ಸನ್ಯಾಸಿಗಳು ಬಾಹ್ಯಾಚರಣೆಯಲ್ಲಿ ಸಂಗೀತ ಪರಿಕರಗಳನ್ನು ನುಡಿಸುವುದು, ಹಾಡುವುದು, ನರ್ತಿಸುವುದೇ ಮುಂತಾದ ಐಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದೆಂಬ ನಿಯಮವಿದೆ. ಅದಲ್ಲದೇ ಸನ್ಯಾಸಿಗಳ ಮುಖ್ಯ ಕರ್ತವ್ಯಾ ತಪಸ್ಸನ್ನು ಆಚರಿಸುವುದು ಮತ್ತು ಸತ್ಯ-ನ್ಯಾಯ-ಧರ್ಮ ಮಾರ್ಗವನ್ನು ಶಿಷ್ಯರಿಗೆ ಬೋಧಿಸುವುದಾಗಿರುತ್ತದೆ. ಮಿಕ್ಕುಳಿದ ಎಂಜಿನೀಯರಿಂಗ್ ಕಾಲೇಜು ನಡೆಸುವುದು, ಆಸ್ಪತ್ರೆ ಕಟ್ಟುವುದು ಇವೆಲ್ಲಾ ರಾಜಕೀಯವನ್ನು ಹಿಡಿದು ಆಳುತ್ತಿರುವವರ ಜವಬ್ದಾರಿಯೇ ಹೊರತು ಯಾರೋ ಸ್ವಾಮಿಗಳು ತಮಗೆ ಏನನ್ನೂ ಮಾಡಲಿಲ್ಲಾ ಎಂಬುದು ಸರಿಯಲ್ಲ. ಬದಲಾಗಿ ಸಮಾಜ/ಶಿಷ್ಯರು ತಂತಮ್ಮ ಆತ್ಮೋನ್ನತಿಗೆ ಬೇಕಾಗಿ ಮಾರ್ಗದರ್ಶಿಸಲು ಬೇಕಾಗಿ ಅಂತಹ ಗುರುವನ್ನು ಗುರುತಿಸುವುದು,ಗೌರವಿಸುವುದು ಮಾಡಬೇಕಾದುದು ಶಿಷ್ಯರಾದವರ ಧರ್ಮ. ಸನ್ಯಾಸಿಗಳು ತಾನೇ ತಾನಾಗಿ ಸಮಾಜಕ್ಕೆ ವಿದ್ಯೆಯನ್ನೋ ಆರೋಗ್ಯವನ್ನೋ ಕೊಡಲು ಮುಂದಾಗಿ ಕೆಲವಾರು ಸಂಸ್ಥೆಗಳನ್ನು ನಡೆಸಿದರೆ ಅದು ಅವರ ಸ್ವ-ಇಚ್ಛೆ. ಹೀಗೆ ನಡೆಸುವಾಗ ಕಾರಣಾಂತರಗಳಿಂದ ಬಾಹ್ಯಾಚರಣೆಯ ಪ್ರಕ್ಷುಬ್ಧತೆ ತನ್ನನ್ನು ಕಾಡದಂತೆ ಅವರು ಎಚ್ಚರವಹಿಸಬೇಕಾಗುತ್ತದೆ, ಯಾಕೆಂದರೆ ಸನ್ಯಾಸಿಗಳಿಗೆ ಕರ್ಮಾಧಿಕಾರವಿಲ್ಲ, ಪ್ರತೀ ಕೆಲಸಕ್ಕೂ ಅವರು ಪರಾವಲಂಬಿಯಾಗಿ ಬದುಕಬೇಕಾಗುತ್ತದೆ, ಊಟಮಾಡುವಾಗ ಕೂಡ ಶಿಷ್ಯನೊಬ್ಬ ಉದ್ದರಣೆಯಿಂದ ಹಸ್ತೋದಕ ಹಾಕಿದರೇ ಊಟಮಾಡಬೇಕು ಇಲ್ಲಾಂದರೆ ಹಾಗೇ ಉಳಿಯಬೇಕು-- ಇದು ಸನ್ಯಾಸಾಶ್ರಮದ ಅನಿವಾರ್ಯತೆ !

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಥೋ ನ ವೇದಾ ನ ಯಜ್ಞಾಃ |
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದ-ರೂಪ ಶಿವೋಹಂ ಶಿವೋಹಂ ||

ಎಂತಹ ಚಂದದ ವಾಖ್ಯಗಳು, ಎಷ್ಟು ಅರ್ಥಗರ್ಭಿತ ! ಆತ್ಮದ ಮೂಲರೂಪಕ್ಕೆ ಯಾವುದೇ ಪಾಪ-ಪುಣ್ಯ, ಸುಖ-ದುಃಖಗಳ ಗೊಡವೆಯಿಲ್ಲ, ಯಾವುದೇ ತೀರ್ಥ- ಮಂತ್ರ, ವೇದ-ಯಜ್ಞಗಳ ಅನುಷ್ಠಾನವಿಲ್ಲ, ಊಟವಿದ್ದರೂ ಇರದಿದ್ದರೂ ಒಂದೇ ಸ್ಥಿತಿ--ಅದೇ ಚಿದಾನಂದ ರೂಪ !

ನೀವೀಗ ಕೇಳುತ್ತೀರಿ ಅರೆರೆ ಆತ್ಮೋದ್ಧಾರಕ್ಕೆ ಏಕಾಗ್ರಚಿತ್ತದಿಂದ ಧ್ಯಾನಮಾಡಬೇಕೆಂದು ಹೇಳಿದ ನಾನೇ ಈಗ ಆತ್ಮಕ್ಕೆ ಯಾವುದೂ ಬಾಧಕವಲ್ಲ ಎಂಬುದನ್ನು ಪ್ರತಿಪಾದಿಸುತ್ತಿರುವುದು ವಿರೋಧಾಭಾಸವಾಗಿ ಕಾಣಬಹುದು. ಹೇಳುತ್ತೇನೆ ಕೇಳಿ: ಆತ್ಮದಲ್ಲಿ ಹಲವು ಜೋಡಣೆಗಳಿವೆ. ಅವು ಕೇವಲಾತ್ಮಕ್ಕೆ ಅಂಟಿಕೊಂಡಿರುತ್ತವೆ. ಹಾಗೆ ಅಂಟಿಕೊಂಡಿರುವ ನಂಟನ್ನು ಕಳೆಯಲೇ ನಾವು ಸಾಧನೆಯ ಮಾರ್ಗ ಹಿಡಿಯಬೇಕಾಗುತ್ತದೆ. ಒಂದು ಉದಾಹರಣೆ ಕೇಳಿ- ಶೇಂಗಾ ಅಥವ ನೆಲಗಡಲೆ ಮೂಲದಲ್ಲಿ ಒಂದೇ. ಆದರೆ ನಾವದನ್ನು ಹಲವು ರೀತಿಯಲ್ಲಿ ಕಾಣುತ್ತೇವೆ. ಆಗತಾನೇ ಕಿತ್ತ ಹಸಿಶೇಂಗಾ, ಸಿಪ್ಪೆಸಹಿತ ಒಣಗಿದ ಶೇಂಗಾ, ಸಿಪ್ಪೆರಹಿತ ಒಣಗಿದ ಶೇಂಗಾ, ಹುರಿದ ಶೇಂಗಾ, ಕರಿದ ಶೇಂಗಾ ......ಹೀಗೇ..., ಅದೇ ರೀತಿ ಆತ್ಮ ದೇಹದಲ್ಲಿ ಆಸೀನವಾದಾಗ ಅದಕ್ಕೆ ಸ್ಥಿತ್ಯಂತರದ ಪ್ರಭಾವವಿರುತ್ತದೆ. ದೇಹದೊಳಗಿನ ಆತ್ಮ ಬಾಣಲೆಯಲ್ಲಿರುವ ಶೇಂಗಾದಂತೇ ಆದಾಗ ಮಾತ್ರ ಅದು ಕೇವಲಾತ್ಮವಾಗುತ್ತದೆ. ಹೇಗೆ ಹುರಿದ/ಕರಿದ ಶೇಂಗಾ ಭುವಿಯಲ್ಲಿ ನೆಟ್ಟರೆ ಸಸಿಹುಟ್ಟಲಾರದೋ ಕೇವಲಾತ್ಮ ಸ್ಥಿತಿಗೆ ತಲ್ಪಿದ ಆತ್ಮ ಮತ್ತೆ ಮರುಹುಟ್ಟು ಪಡೆಯದೇ ಪರಮಾತ್ಮದಲ್ಲಿ ಅಥವಾ ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ. ಈ ಮೇಲಿನ ಶ್ಲೋಕ ಕೇವಲಾತ್ಮದ ಕುರಿತಾಗಿ ಹೇಳಿದ್ದಿರುತ್ತದೆ. ಕೇವಲಾತ್ಮಕ್ಕೂ ಪರಮಾತ್ಮಕ್ಕೂ ಭಿನ್ನತೆ ಇರುವುದಿಲ್ಲ. ಕೇವಲಾತ್ಮ ಅತ್ಯಂತ ಶಕ್ತಿಸಾಮರ್ಥ್ಯವುಳ್ಳದ್ದಾಗಿರುತ್ತದೆ.

ನ ಮೃತ್ಯುರ್ನಶಂಕಾ ನ ಮೇ ಜಾತಿಭೇದಃ
ಪಿತಾನೈವ ಮೇ ನೈವ ಮಾತಾ ನ ಜನ್ಮ |
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದ-ರೂಪಂ ಶಿವೋಹಂ ಶಿವೋಹಂ ||

ಹುಟ್ಟೂ-ಸಾವು , ಯಾವುದೇ ಶಂಕೆ, ಜಾತಿ ಭೇದ, ತಂದೆ-ತಾಯಿ, ಬಂಧು-ಮಿತ್ರ, ಗುರು-ಶಿಷ್ಯ ಇವ್ಯಾವ ಪರಿಧಿ-ಕಟ್ಟುಪಾಡುಗಳೂ ಕೇವಲಾತ್ಮಕ್ಕೆ ತಟ್ಟುವುದಿಲ್ಲ. ಅದಕ್ಕೆ ಅಪ್ಪನೂ ಇಲ್ಲ-ಅಮ್ಮನೂ ಇಲ್ಲ, ಬಂಧುವೂ ಇಲ್ಲ-ಮಿತ್ರರೂ ಇಲ್ಲ, ಜಾತಿಯೂ ಇಲ್ಲ-ಭೇದವೂ ಇಲ್ಲ,ಗುರುವೂ ಇಲ್ಲ-ಶಿಷ್ಯನೂ ಇಲ್ಲ. ಇದುವೇ ಆತ್ಮದ ಚಿದಾನಂದ ರೂಪ.

ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ
ಮದೋ ನೈವ ಮೇ ನೈವ ಮಾತ್ಸರ್ಯ ಭಾವಃ |
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ
ಚಿದಾನಂದ-ರೂಪಂ ಶಿವೋಹಂ ಶಿವೋಹಂ ||

ಯಾವುದೇ ರಾಗದ್ವೇಷವಿಲ್ಲ, ಲೋಭ-ಮೋಹಗಳೂ ಇಲ್ಲ, ಸೊಕ್ಕೂ ಇಲ್ಲ, ಸಿಡುಕೂ ಇಲ್ಲ, ಹೊಟ್ಟೆಕಿಚ್ಚೂ ಇಲ್ಲ, ಯಾವುದೇ ಧರ್ಮವೂ ಇಲ್ಲ, ಧನವೂ ಇಲ್ಲ, ಕಾಮವಾಂಛೆಯೂ ಇಲ್ಲ, ಮೋಕ್ಷವೂ ಇಲ್ಲ....ಈ ಸ್ಥಿತಿಯೇ ಆತ್ಮದ ಚಿದಾನಂದ ಸ್ಥಿತಿ.

ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯುಃ
ನ ವಾ ಸಪ್ತಧಾತುರ್ನ ವಾ ಪಂಚಕೋಶಃ |
ನ ವಾಕ್ಪಾಣಿ-ಪಾದೌ ನ ಚೋಪಸ್ಥಪಾಯೂ
ಚಿದಾನಂದ-ರೂಪಂ ಶಿವೋಹಂ ಶಿವೋಹಂ ||

ಪ್ರಾಣದ ಸಂಜ್ಞೆಯಿಲ್ಲ, ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನ ಎಂಬ ಪಂಚ ವಾಯುಗಳ ಪರಿಷೇಚನೆಯಿಲ್ಲ, ಸಪ್ತಧಾತುಗಳಾಗಳೀ ಪಂಚಕೋಶಗಳಾಗಲೀ ಕಾರ್ಯಕಾರಣವಲ್ಲ, ಮಾತನಾಡುವುದಿಲ್ಲ, ಹಸ್ತ-ಪಾದಗಳೆಂಬ ಅವಯವಗಳೂ ಇಲ್ಲ--ಇದೇ ಚಿದಾನಂದ-ರೂಪ.

ಮನೋಬುದ್ಧ್ಯಹಂಕಾರ-ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣನೇತ್ರೇ |
ನ ಚ ವ್ಯೋಮಭೂಮಿರ್ನ ತೇಜೋ ನ ವಾಯುಃ
ಚಿದಾನಂದ-ರೂಪಂ ಶಿವೋಹಂ ಶಿವೋಹಂ ||

ಬುದ್ಧಿ-ಮನಸ್ಸು-ಚಿತ್ತಗಳಿಲ್ಲ, ಕೇಳುವ ಕಿವಿಯಾಗಲೀ, ನೋಡುವ ಕಣ್ಣಾಗಲೀ, ಆಘ್ರಾಣಿಸುವ ನಾಸಿಕವಾಗಲೀ, ರುಚಿನೋಡುವ ನಾಲಿಗೆಯಾಗಲೀ ಇಲ್ಲ, ಭೂಮಿ-ಆಕಾಶ-ಅಗ್ನಿ-ವಾಯು-ವರುಣ[ಜಲ]ರೆಂಬ ಪಂಚಭೂತಗಳ ಪ್ರಲೋಭನೆಯಿಲ್ಲ--ಇದೇ ಚಿದಾನಂದರೂಪ--ಇದೇ ಸದಾನಂದ ರೂಪ.

ಇವತ್ತು ಯಾರೋ ವಿಜ್ಞಾನಿಯೊಬ್ಬ ಯಾವುದೋ ಪ್ರಯೋಗದಲ್ಲಿ ತೊಡಗಿದ್ದರೆ ನಾವು ಆತನನ್ನು ವಿಜ್ಞಾನಿಯೆಂದು ಗುರುತಿಸುತ್ತೇವೆ, ಗೌರವಿಸುತ್ತೇವೆ. ಅದೇ ಮನುಷ್ಯನಿಗೂ ಮಿಗಿಲಾದ ಅತಿಮಾನುಷ ಶಕ್ತಿಯನ್ನು ಆವರ್ಭವಿಸಿಕೊಳ್ಳಲು ಕಾತ್ರರಾಗಿರುವ, ಅದನ್ನು ತಲುಪಲು ಬಯಸುವ, ಆ ಶಕ್ತಿಯನ್ನು ತನ್ನಲ್ಲಿ ಭಾಗಶಃ ಹುದುಗಿಸಿಕೊಂಡು ತನ್ನ ಸುತ್ತಲಿನ ಶಿಷ್ಯವೃಂದಕ್ಕೆ ಸನ್ಮಾರ್ಗವನ್ನು ತೋರಿಸುವ, ಶಿಷ್ಯವೃಂದದ ಜನ್ಮಾಂತರದ ಕಷ್ಟಕಾರ್ಪಣ್ಯಗಳನ್ನು ನೀಗುವ ಯೋಗೀಂದ್ರನೊಬ್ಬ ನಮ್ಮ ನಡುವಿದ್ದರೆ ಅವರನ್ನು ಕಾಣದಾಗುತ್ತೇವೆ. ಆಧುನಿಕತೆಯ ಸೋಗಿನಲ್ಲಿ ತಾವು ಬುದ್ಧಿಜೀವಿಗಳೆಂದು ಬೋರ್ಡುಹಾಕಿಕೊಳ್ಳುವ ನಾವು ನಮಗಿಂತ ಉತ್ತಮ ಸ್ತರದಲ್ಲಿದ್ದ ಬುದ್ಧಿಜೀವಿಗಳು ಅನುಭವಿಸಿದ, ಅನುಭಾವಿಗಳಾಗಿ ನಮ್ಮೊಳಿತಿಗಾಗಿ ಹಂಚಿದ ಜ್ಞಾನವನ್ನು ಅರ್ಥಹೀನವೆಂದು ಪರಿಗಣಿಸುತ್ತೇವೆ. ವಿವೇಚಿಸದೇ ಕೈಲಾಗದವರು ಸನ್ಯಾಸಿಗಳೋ ಸಾಧುಗಳೋ ಆಗುತ್ತಾರೆಂದು ತಿಳಿಯುತ್ತೇವೆ. ನಮ್ಮತನವೇ ದೊಡ್ಡದೆಂದು ಹೆಮ್ಮೆಯಿಂದ ಸಂಭ್ರಮಿಸುತ್ತೇವೆ. ಅರಿಯದೇ ಉರಿಯುತ್ತೇವೆ-ಇದು ನಮ್ಮ ಅಜ್ಞಾನವೇ ಹೊರತು ನಿಜವಾದ ಸಾಧು-ಸಂತರು ಅಜ್ಞಾನಿಗಳಲ್ಲ. ಅವರು ಆಧ್ಯಾತ್ಮ ವಿಜ್ಞಾನಿಗಳು! ಅವರೂ ಸಂಶೋಧಕರೇ. ಅವರವರು ಅವರವರದೇ ಆದ ಶಿಸ್ತಿನಲ್ಲಿ, ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಮೋಕ್ಷವನ್ನು ಪಡೆಯಲು ಈಸಿ ಫಾರ್ಮುಲಾ ಸಂಶೋಧಿಸುತ್ತಾರೆ.

ಇಂತಹ ಸಂತ-ಮಹಂತರ ಸಾಲಿಗೆ ಶ್ರೀ ಶ್ರೀ ಕೇಶವಮೂರ್ತಿಗಳೆಂಬ ಸಾಧುಗಳೂ ಸೇರಿದ್ದರು. ಅವರ ಕುಟುಂಬದ ಹಿರಿಯರು ಈಗ ಯಾರೂ ಇರಲಾರರೇನೋ--ಯಾಕೆಂದರೆ ಮೊನ್ನೆ ಅವರು ಮುಕ್ತರಾದಾಗ ಅವರಿಗೆ ೯೮ ವರ್ಷ ವಯಸ್ಸಾಗಿತ್ತು. ತುಂಬಾ ಎಳವೆಯಲ್ಲೇ ತೆಂದೆ-ತಾಯಿಗಳನ್ನು ಕಳೆದುಕೊಂಡಿದ್ದರಿಂದಲೂ, ಊರನ್ನು ಬಿಟ್ಟು ಹಲವಾರೆಡೆಗೆ ಸಾಧುಜೀವನ ನಡೆಸಿದ್ದರಿಂದಲೂ ಅವರ ಕುಟುಂಬ-ಬಂಧುವರ್ಗದ ಎಳೆಯ ವ್ಯಕ್ತಿಗಳಿಗೆ ಅವರ ಪರಿಚಯವಿತ್ತೋ ಇಲ್ಲವೋ ತಿಳಿದಿಲ್ಲ. ಕೇಶವಮೂರ್ತಿಗಳನ್ನು ಈ ವಿಷಯದಲ್ಲಿ ಬಹಳವಾಗಿ ಯಾರೂ ಕೆದಕುತ್ತಿರಲಿಲ್ಲ. ಅವರೊಬ್ಬ ಸಾಂಕೇತಿ ಬ್ರಾಹ್ಮಣ ಕುಟುಂಬದ ಹಿನ್ನೆಲೆಯಿಂದ ಬಂದವರೆಂದು ಅವರೇ ಹೇಳಿದ್ದರಂತೆ. ಬಹಳ ಸಾದಾ ಸೀದಾ ಇದ್ದ ಅವರು ಆಜಾನುಬಾಹುವೇನೂ ಆಗಿರಲಿಲ್ಲ. ಸುಮಾರು ೫ ಅಡಿ-೩ ಅಂಗುಲ ಎತ್ತರವಿದ್ದರು. ಶಜವಾಗಿ ಕೃಶಶರೀರಿ. ಒಪ್ಪೊತ್ತೂಟ- ಅದಕ್ಕೂ ಸಂಕೋಚ. ಶ್ರೀಧರಾಶ್ರಮದಲ್ಲಿ ತಮ್ಮೆಲ್ಲಾ ಕೆಲಸಗಳನ್ನು ಕೊನೆಯವರೆಗೂ ತಾವೇ ಮಾಡಿಕೊಳ್ಳುತ್ತಿದ್ದರು. ಬೆಳಗಿನಜಾವದಿಂದ ಮಧ್ಯಾಹ್ನದವರೆಗೆ ಧ್ಯಾನದಲ್ಲಿರುತ್ತಿದ್ದ ಅವರು ೧೨ ಗಂಟೆಗೆ ಅವರಿರುವ ಕೊಠಡಿಯಿಂದ ಸುಮಾರು ೬೦-೭೦ ಮೆಟ್ಟಿಲೇರಿ ಶ್ರೀಧರರ ಸಮಾಧಿಮಂದಿರಕ್ಕೆ ಮಹಾಮಂಗಲಾರತಿಗೆ ನಿತ್ಯವೂ ತಪ್ಪಿಸದೇ ಬರುತ್ತಿದ್ದರು. ಆಮೇಲೆ ೧:೩೦ರ ವೇಳೆಗೆ ಮತ್ತೆ ಕೆಳಗಡೆ ದೂರದಲ್ಲಿರುವ ಭೋಜನಶಾಲೆಗೆ ನಡೆದೇ ಹೋಗಿ ಆಶ್ರಮದ ಇತರ ವಟುಗಳೊಡನೆ ಸಹಪಂಕ್ತಿ ಭೋಜನದಲ್ಲಿ ಊಟ ಸೇವಿಸುತ್ತಿದ್ದರು. ಊಟದ ನಂತರ ತಮ್ಮ ತಟ್ಟೆಯನ್ನು ತಾವೇ ತೊಳೆದಿಟ್ಟು ಹೋಗುತ್ತಿದ್ದರು. ಬರೇ ಒಂದೇ ಊಟ. ಮತ್ತೆ ಹೊಟ್ಟೆಗೆ ಆಹಾರ ಬೀಳುತ್ತಿದ್ದುದು ಮಾರನೇ ದಿನ ಮಧ್ಯಾಹ್ನವೇ ! ಆಶ್ರಮದ ಆಡಳ್ತೆಯ ಸದಸ್ಯರೊಬ್ಬರು ಕೇಶವಮೂರ್ತಿಗಳ್ಯಾಕೆ ಸನ್ಯಾಸ ದೀಕ್ಷೆ ಸ್ವೀಕರಿಸಿಲ್ಲಾ ಎಂದು ಕೇಳಿದರೆ, "ನಾನು ಹಾಗೇ ಮಾಡಿದರೆ ಕರ್ಮಾಧಿಕಾರ ಹೋಗಿ ನಿಮ್ಮೆಲ್ಲರಿಂದ ಸೇವೆ ಮಾಡಿಸ್ಕೊಳ್ಳಬೇಕಾಗುತ್ತಪ್ಪಾ " ಎಂದುಬಿಟ್ಟರಂತೆ ! ಪಾಠಶಾಲೆಯ ಹುಡುಗರು ಕೆಲವೊಮ್ಮೆ ಅವರ ಕೂಡ ತರಲೆಮಾಡುತ್ತಿದ್ದರು. ಆದರೂ ಅವರನ್ನೆಲ್ಲಾ ಸಹಿಸಿಕೊಂಡೇ, ಕ್ಷಮಿಸುತ್ತಲೇ ಬದುಕಿದ ದಿವ್ಯರೂಪವದು. ಎಲ್ಲರಿಗೂ ಹಿರಿಯಜ್ಜನ ಥರ ಇದ್ದ ಅವರು ಹೊರಗಡೆ ಬರುತ್ತಿದ್ದುದು ಕಮ್ಮಿ-ಹೀಗಾಗಿ ಬಹಳ ಮಂದಿಗೆ ಅವರ ದರ್ಶನವಾಗಲೀ, ಪರಿಚಯವಾಗಲೀ ಆಗಿಲ್ಲ. ಅಂತೂ ಅವರೊಬ್ಬ ಮಹಾನ್ ಚೇತನವೆಂಬುದು ಸುಳ್ಳಲ್ಲ.

ಹತ್ತುವರ್ಷಗಳ ಹಿಂದೆ ತಡವಾಗಿ ಗುರುತಿಸಿದ ಆಶ್ರಮದ ಸಮಿತಿ ಅವರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದೆ. ಅವರ ಹೆಸರು ಶಾಶ್ವತವಾಗಿ ಆಶ್ರಮದ ಯಾತ್ರಾರ್ಥಿಗಳಿಗೆ ಗೋಚರಿಸುವ ಹಾಗೇ ಏನಾದರೊಂದು ಸ್ಮರಣೀಯವಾದುದನ್ನು ಮಾಡಬೇಕೆಂಬ ಆಶಯವನ್ನು ಸಮಿತಿ ಹೊಂದಿದೆ. ಸಜ್ಜನರು ಸಿಗುವುದು ದುರ್ಲಭ, ಅದರಲ್ಲಂತೂ ಬದುಕಿನುದ್ದಕ್ಕೂ ಯಾರಿಂದಲೂ ಸೇವೆ ಅಪೇಕ್ಷಿಸದೇ, ನಿಸ್ವಾರ್ಥರಾಗಿ, ಸಮಾಜದ ಎಲ್ಲರ ಒಳಿತಿಗಾಗಿ ಆಶ್ರಮದಲ್ಲಿದ್ದು ತಪಗೈದ ಅವರ ಕಾರ್ಯ ಶ್ಲಾಘನೀಯ ಮತ್ತು ಮನನೀಯ. ಸಾಧುವಿಗೂ ಸನ್ಯಾಸಿಗೂ ಬರೇ ದೀಕ್ಷೆಯಷ್ಟೇ ಅಂತರವಾದರೂ ಸನ್ಯಾಸಿಗಳಿಗೆ ಸಿಗುವ ಸೌಲಭ್ಯ ಸಾಧುಗಳಿಗೆ ಸಿಗುವುದಿಲ್ಲ. ಅಂತ್ಯಕಾರ್ಯಕೂಡ ಸಾಧುಗಳಿಗೆ ಸಾದಾ ಜನರಂತೇ ನಡೆದರೆ ಸನ್ಯಾಸಿಗಳಿಗೆ ಅದರ ಕ್ರಮ ವಿಭಿನ್ನವಾಗಿರುತ್ತದೆ. ಏನೇ ಇದ್ದರೂ ಯಾವೊಬ್ಬ ಸನ್ಯಾಸಿಗಿಂತ ತೂಕ ಹೆಚ್ಚಿರಬಹುದಾದ ತಪಸ್ಸಾಧನೆಗೈದ ಶ್ರೀ ಶ್ರೀ ಕೇಶವಮೂರ್ತಿಗಳಿಗೆ ತ್ರಿಕರಣಪೂರ್ವಕ ಪಾದಾಭಿವಂದನೆ, ಸಾಷ್ಟಾಂಗ ವಂದನೆ. ಗುರುವಿನ ಬೆಳಕು ಚೆಲ್ಲುವ ಅವರ ಚೇತನವನ್ನು ನೆನೆದು ಸ್ತುತಿಗೀತೆಯೊಂದನ್ನು ಬರೆದೆ. ಅದು ನಿಮ್ಮೆಲ್ಲರ ಓದಿಗಾಗಿ ಇಲ್ಲಿದೆ:

ಗುರುವೆ ನಮ್ಮ ತಾಯಿ-ತಂದೆ
ಗುರುವೆ ನಮ್ಮ ಬಂಧು-ಬಳಗ
ಗುರುವೆ ಸಕಲ ಸಂಪದವೂ
ಹರಿಯು ಹರನು ಬ್ರಹ್ಮನು

ನಶ್ವರವಿದು ಈ ಶರೀರ
ಶಾಶ್ವತದೆಡೆ ಸಾಗುಬಾರ
ನಿಶ್ಚಯವದು ಪರದಸ್ಥಿತ್ವ
ನೆಚ್ಚಿ ನಡೆಯೆಸಿಗುವುದು !

ಜ್ಯೋತಿ ಬೆಳಕನೀಡಿ ಜಗದಿ
ಅಂಧಕಾರ ಕಳೆಯುವಂತೆ
ನೀತಿ-ನಿಯಮ ಬೋಧೆತಿಳಿದು
ಬೆಳಗಲಾತ್ಮ ಚೇತನ

ದಾಸರಾಗಲಿಲ್ಲ ನಾವು
ಸಾಧುವಾಗದಕ್ಕೆ ನೋವು
ಸಾಧಕರ ಪಾದದಡಿಯ
ಧೂಳಾಗಲಿ ಮೈಮನ

ನಗುವಿನಲೀ ನೋವಿನಲೀ
ಬಗೆಯ ಭೇದ ಕಾಣದಂತ
ನಿಜದ ಬ್ರಹ್ಮಜ್ಞಾನವರಿತು
ಭಜನೆಮಾಡು ದೇವನ

ಗುರುಕರುಣೆಯ ಜ್ಯೋತಿಯಲ್ಲಿ
ಅವರ ಮಂದಹಾಸದಲ್ಲಿ
ಗುರುಪಾದದ ಸೇವೆಯಲ್ಲಿ
ನಡೆಯಲೆಮ್ಮ ಜೀವನ


Thursday, October 21, 2010

ಚೋರ ಬುದ್ಧಿ


ಚೋರ ಬುದ್ಧಿ

ಸಾವಿರಾರು ಆಸೆಗಳವು
ಬೇರುಬಿಟ್ಟು ಮನದತುಂಬ
ನೇರ ಒಮ್ಮೆ ಬೆಳೆಯಗೊಡದ
ಚೋರ ಬುದ್ಧಿ ಜನಿಸಿತು

ಹಾರ ಬೇಕು ತಿನ್ನೆಮೊದಲು
ದಾರಬೇಕು ಮೈಮುಚ್ಚಲು
ಧಾರಿಣಿಯಲಿ ಮಲಗೆ ಜಾಗ
ಮೂರು ವಿಷಯ ತೋರಿತು

ನಾರಿ ಬಯಸಿ ನರನ ಸಂಗ
ಜಾರಿಬಿದ್ದು ಜೀವಸೃಷ್ಟಿ
ಊರುತುಂಬ ಜನರು ತುಂಬಿ
ಆರು ಅದಕೆ ಸೇರಿತು

ಹಾರಲು ವಿಮಾನವಿರಲಿ
ಏರಬಯಸೆ ನೆಗವದಿರಲಿ
ಭಾರೀ ಮಹಲು ಸ್ವಂತಕಿರಲಿ
ಮೂರು ಮತ್ತೆ ಕೂಡಿತು

ಊರಹೊರಗೆ ತೋಟವಿರಲಿ
ತೇರೆತ್ತರ ಲಾಭಬರಲಿ
ಕೂರುವಲ್ಲೇ ಮುಗಿವಕೆಲಸ
ಕೋರಿಕೆಗಳು ಕೂಡುತ

ಮೇರೆಮೀರುವಷ್ಟು ಬಯಕೆ
ತೋರುತಿತ್ತು ಧ್ಯಾನದಲ್ಲಿ
ಯಾರುಕರೆದರವುಗಳನ್ನು ?
ಸೇರಿಬಂದವೆಲ್ಲವು !

ಮಾರುದ್ದದ ಬೀಳಲುಗಳ
ನೀರಹೀರೆ ಆಳಕಿಳಿಸಿ
ಸಾರಹೀನವಾಯ್ತು ಬದುಕು
ದಾರಿಕಾಣದೊಮ್ಮೆಲೇ !

Monday, October 18, 2010

ನಾವು ನೀವು ಮತ್ತು ಅವರು

ಚಿತ್ರ ಕೃಪೆ : ಅಂತರ್ಜಾಲ
ನಾವು ನೀವು ಮತ್ತು ಅವರು


ಈ ಹೆಸರನ್ನು ಕೇಳುತ್ತಿದ್ದಾಗ ಯಾವುದೋ ಹಿಂದೀ ಸಿನಿಮಾ ತಲೆಬರೆಹವೇನೋ ಅನಿಸುತ್ತದಲ್ಲವೇ ? ಸದ್ಯಕ್ಕೆ ಇದು ಅದಲ್ಲ. ಇದು ಒಬ್ಬ ಮಹಾತ್ಮರ ಕುರಿತಾದ ವಿಷಯ! ಅನೇಕಸಲ ನಾವು ನಮ್ಮ ನಡುವೆ ಯಾರ್ಯಾರೆಲ್ಲ ಇದ್ದಾರೆಂಬುದನ್ನು ಲಕ್ಷ್ಯಕ್ಕೇ ತೆಗೆದುಕೊಳ್ಳುವುದಿಲ್ಲ. ಇಹದಲ್ಲಿ ಹುಟ್ಟಿದ ಪ್ರತೀ ಜೀವಿಗೂ ’ಮರಣವೇ ಮಹಾನವಮಿ’ ಎಂಬುದು ಗಾದೆ. ಆದರೆ ಮಹಾನವಮಿಯಂದು ಅತಿಸಹಜ ಮರಣವನ್ನು ಪಡೆಯಲು ಅದೃಷ್ಟಬೇಕೆಂಬುದು ಬಲ್ಲವರು ತಿಳಿಹೇಳುವ ಸತ್ಯ. ಇಂತಹ ಮಹಾನವಮಿಯ ಮರಣವನ್ನು ಪಡೆದ ಶ್ರೇಷ್ಠ ಸಾಧುವೊಬ್ಬರ ಬಗ್ಗೆ ಬರೆಯಲು ಮನಸ್ಸು ಹವಣಿಸಿತು. ಪ್ರಾಯಶಃ ಇಂಥವರ ಕಥೆಯನ್ನು ಹೇಳುವುದೂ ಕೇಳುವುದೂ ಕೂಡ ಒಂದು ಪುಣ್ಯಭಾಜನ ಕೆಲಸ ಎಂಬನಿಸಿಕೆಯಿಂದ ಇಲ್ಲಿ ಬರೆಯತೊಡಗಿದ್ದೇನೆ.

ಹಾಸನ ಜಿಲ್ಲೆಯ ಹಳ್ಳಿಯೊಂದರಲ್ಲಿ ಒಬ್ಬ ಹುಡುಗನ ಜನನ: ಸರಿಸುಮಾರು ೯೮ ವರ್ಷಗಳ ಹಿಂದೆ ಆಯಿತು. ಮಗು ಅತಿ ಸಣ್ಣವಿರುವಾಗಲೇ ತಾಯಿ-ತಂದೆಯರ ಅಗಲುವಿಕೆ. ಮನೆಯಲ್ಲಿ ಇನ್ನಾರೂಗತಿಯಿರದ ಸ್ಥಿತಿಯಲ್ಲಿ ಸೋದರಮಾವನಲ್ಲಿ ಒಂದಷ್ಟುಕಾಲ ತಂಗಿದ್ದ ಈ ಹುಡುಗ ಕಾಲಾನಂತರ ತನಗೆ ಸಂಸಾರಿಗಳಿಗಿಂತ ಸನ್ಯಾಸಿಗಳ ಬದುಕೇ ಹತ್ತಿರವಾಗುವುದನ್ನೂ, ಇಷ್ಟವಾಗುವುದನ್ನೂ ಕಂಡ. ಪಾಲಕರಿಲ್ಲದ ಬಾಲ್ಯದಲ್ಲಿ ಆತನಿಗೆ ಅನೇಕ ಕಹಿದಿನಗಳನ್ನು, ಕಷ್ಟಗಳನ್ನು ಮತ್ತು ಮೂದಲಿಕೆಗಳನ್ನು ಅನುಭವಿಸಬೇಕಾಗಿ ಬಂತು. ಅನೇಕ ದೇವಾಲಯಗಳು, ಊರುಗಳು, ಪುಣ್ಯಕ್ಷೇತ್ರಗಳನ್ನು ಸಂಚರಿಸುತ್ತಾ ಬ್ರಾಹ್ಮಣ್ಯದ ಕರ್ತವ್ಯವಾದ ವೇದಗಳನ್ನು ಕಂಠಸ್ಥಮಾಡಿಕೊಂಡ. ಅದ್ವೈತದ ಪ್ರತಿಪಾದಕರಾದ ಶ್ರೀಶಂಕರರ ತತ್ವಗಳು ಬಹಳ ಆಪ್ತವಾದವು. ತಿರುಗುತ್ತಾ ತಿರುಗುತ್ತಾ ಮಧುಕರೀ ಭಿಕ್ಷಾನ್ನಸೇವಿಸುತ್ತ ನೈಷ್ಠಿಕ ಬ್ರಹ್ಮಚರ್ಯವನ್ನು ಪರಿಪಾಲಿಸುತ್ತ ಆತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಲಸೆ ಗ್ರಾಮಕ್ಕೆ ಬಂದ. ಅಲ್ಲಿ ಶೀಗೇಹಳ್ಳಿಯ ಶಿವಾನಂದ ಸ್ವಾಮಿಗಳ ಶಿಷ್ಯರಾದ ಗಣೇಶ ಸಾಧುಗಳ ಪರಿಚಯವಾಗಿ ಅವರೊಂದಿಗೇ ಬದುಕನ್ನು ತಪಸ್ಸಿನಲ್ಲಿ ಕಳೆಯಲು ನಿರ್ಧರಿಸಿದ. ಅಲ್ಲಿ ಈ ರೀತಿ ಮೂರು ಸಾಧಕ ಸಾಧುಗಳು ಒಟ್ಟಿಗೇ ಮಧುಕರೀ ಭಿಕ್ಷಾನ್ನ ಸೇವಿಸುತ್ತ ತಂತಮ್ಮ ತಪಸ್ಸಿನಲ್ಲಿ ಕಳೆದರು.

ಕಾಲಕ್ರಮೇಣ ಸಾಧುಗಳಲ್ಲಿ ಹಿರಿಯರಾದ ಗಣೇಶ್ ಸಾಧುಗಳು ನಿಧನರಾದರು. ಅಲ್ಲಿ ಇಬ್ಬರೇ ಇರಬೇಕಾಯಿತು. ಈ ಪೈಕಿ ಹಾಸನದ ಆ ಸಾಧುವಿಗೆ ಬಹಳಕಾಲ ಅಲ್ಲಿರಲು ಮನಸ್ಸಾಗಲಿಲ್ಲ. ಆಧ್ಯಾತ್ಮದ ಶಿಖರವನ್ನೇರಬಯಸಿದ್ದ ಮನಸ್ಸು ತಕ್ಕ ಪರಿಸರವನ್ನೂ, ಪ್ರಭಾವಿ ಗುರುವನ್ನೂ ಹುಡುಕುತ್ತಿತ್ತು. ಅಲ್ಲಿಂದ ಹೊರಗೆ ನಡೆದುಬಿಟ್ಟರು. ಹೊರಗಡೆ ಚರಯೋಗಿಯಾಗಿ ಅಲೆದಾಡುವಾಗ ಅವರ ನಿತ್ಯದ ಅನ್ನಬೇಯಿಸುವ ಪಾತ್ರೆಗಳನ್ನೂ, ಅವರಹತ್ತಿರವಿದ್ದ ಯಾರೋ ಭಕ್ತರು ನೀಡಿದ್ದ ಕಾಣಿಕೆಯ ಹಣವನ್ನೂ ಪಾಪಿಗಳ್ಯಾರೋ ಕದ್ದರು. ಹೀಗಾಗಿ ಎಲ್ಲೆಲ್ಲೋ ಅಲೆಯುತ್ತ ಇರುವ ಕಾಲವಿದಲ್ಲ, ಮುಪ್ಪಡರಿದ ಈ ವೇಳೆ ತಮಗೆ ಸದ್ಗುರುವೊಬ್ಬರ ದಿವ್ಯ ಕ್ಷೇತ್ರ ಸಿಕ್ಕರೆ ಅದು ಭಾಗ್ಯವೆಂದು ನೆನೆಸುತ್ತಾ ದಿನಗಳೆಯುತ್ತಿರುವಾಗ ಹುಡುಕುತ್ತ ಆತ ಕಂಡಿದ್ದು ವರದಹಳ್ಳಿ ಕ್ಷೇತ್ರ. ಮಹಾಮಹಿಮ ಶ್ರೀ ಶ್ರೀಧರ ಭಗವಾನರು ತಮ್ಮ ಅಖಂಡ ತಪೋಬಲದಿಂದ ತೀರ್ಥವನ್ನು ಸೃಜಿಸಿ, ಅಲ್ಲಿಯೇ ವಾಸವಿದ್ದು-ತಪಗೈದು ಲಕ್ಷಾಂತರ ಜನರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದ, ಸಮಾಧಿಸ್ಥರಾಗಿದ್ದರೂ ಇನ್ನೂ ಭಕ್ತರ ಅಹವಾಲುಗಳನ್ನು ಸ್ವೀಕರಿಸುತ್ತಿರುವ ಸ್ಥಳ ಕಣ್ಣೆದುರಿಗೆ ನಿಂತಿತ್ತು. ಅಲ್ಲಿಗೇ ಹೋಗಿಬಿಡುವುದಾಗಿ ತೀರ್ಮಾನವಾಯಿತು. ಆದರೆ ಅಲ್ಲಿ ಆಶ್ರಮದ ಕಟ್ಟುಪಾಡಿನಂತೇ ಆಶ್ರಮದ ಆಡಳ್ತೆಯ ಪದಾಧಿಕಾರಿಗಳು ಹಾಗೆಲ್ಲ ಕಂಡಕಂಡ ಸಾಧುಗಳಿಗೆ ಪುರಸ್ಕಾರವೀಯುವ ಪರಿಪಾಠವಿರಲಿಲ್ಲ. ತಾನು ಹೀಗೆ ಎಂಬ ಪ್ರಲೋಭನೆಯನ್ನು ಉಂಟುಮಾಡಿ ಉಳಿಯುವ ಮನೋಭಾವ ಈ ವ್ಯಕ್ತಿಯದಲ್ಲ! ಏನುಮಾಡುವುದು ? ಗಣೇಶ್ ಸಾಧುಗಳ ಪೂರ್ವಾಶ್ರಮ ಮನೆತನದಲ್ಲಿ ಕೆಲವರು ಅವರ ಹೊಣೆಗಾರಿಕೆಯನ್ನು ಹೊತ್ತು ತಮ್ಮಲ್ಲೇ ಉಳಿದುಕೊಳ್ಳಲು ಅವಕಾಶಕಲ್ಪಿಸಿದರೂ ಈ ಸಾಧು ಮಹಾತ್ಮ ಬಹಳಕಾಲ ಅಲ್ಲಿರಲು ಒಪ್ಪಲಿಲ್ಲ. ಆಗಲೇ ತುಂಬಾ ವಯಸ್ಸಾಗಿತ್ತು. ಸುಮಾರು ೮೦ಕ್ಕೂ ಹೆಚ್ಚಿನ ವಯಸ್ಸು. ಕೈಕಾಲಿನಲ್ಲಿ ಅಷ್ಟೊಂದು ತ್ರಾಣವಿರಲಿಲ್ಲ. ಆದರೆ ಮನಸ್ಸು ಮಾತ್ರ ಯಾರಸೇವೆಯನ್ನೂ ಪಡೆಯಲು ಒಪ್ಪುತ್ತಿರಲಿಲ್ಲ. ಹಠಯೋಗದಿಂದಲೂ, ದಿನದಲ್ಲಿ ಮಧ್ಯಾಹ್ನದಲ್ಲಿ ಕೇವಲ-ಕೇವಲ-ಕೇವಲ ಒಂದೇ ಊಟದಿಂದಲೂ
ತಮ್ಮ ಭೌತಿಕ ಕಾಯವನ್ನು ಮಣಿಸಿದ್ದರು ಈ ಯೋಗಿಗಳು.

ಅಂತೂ ಹಾಗೂ ಹೀಗೂ ಮಾಡಿ ವರದಹಳ್ಳಿಯ ಅಮ್ಮನವರ ದೇವಸ್ಥಾನದಲ್ಲಿ, ಅಲ್ಲಿನ ಸಮಿತಿಗೆ ಹೇಳಿ ಕೊಠಡಿಯೊಂದು ದೊರೆಯಿತು. ಅಲ್ಲೇ ಅನ್ನಮಾಡಿಕೊಂಡು ಒಪ್ಪೊತ್ತೂಟ ಮುಂದುವರಿಸಿ ತಮ್ಮ ನೇಮನಿಷ್ಠೆಯಲ್ಲಿ ಯಾವಕೊರತೆಯನ್ನೂ ಮಾಡದೇ ಮುಂದುವರಿದರು. ಮುಪ್ಪಿನ ದೇಹದಲ್ಲಿ ವರದಹಳ್ಳಿಯ ಶ್ರೀಧರರ ಸಮಾಧಿ ಸ್ಥಳಕ್ಕೆ ಹೋಗುವ ಮೆಟ್ಟಿಲುಗಳನ್ನು ಏರುವುದು ಅನೇಕರಿಗೆ ಆಗದ ಕೆಲಸ. ಆದರೂ ಈತ ಮಾತ್ರ ನಿತ್ಯವೂ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲೇ ತಣ್ಣೀರಿನಲ್ಲಿ ಶೌಚ-ಸ್ನಾನಾದಿಗಳನ್ನು ಪೂರೈಸಿ, ಅನುಷ್ಠಾನಕ್ಕೆ ಕುಳಿತರೆ ಮಧ್ಯಾಹ್ನ ೧೨ರ ವರೆಗೆ ನಿತ್ಯವೂ ತಪೋನಿರತರಾಗಿರುತ್ತಿದ್ದರು. ಈ ವೇಳೆಯಲ್ಲಿ ಬೆಳಿಗ್ಗೆ ನೀರನ್ನು ಬಿಟ್ಟರೆ ಯಾವುದೇ ಆಹಾರ ಸೇವಿಸುತ್ತಿರಲಿಲ್ಲ.

ಒಮ್ಮೆ ಇವರು ಅಮ್ಮನವರ ದೇವಸ್ಥಾನದಿಂದ ಸಮಾಧಿಮಂದಿರಕ್ಕೆ ಹೋಗಿಬರುವ ವೇಳೆ ಮಳೆಯಲ್ಲಿ ಜಾರಿ ಬಿದ್ದುಬಿಟ್ಟರಂತೆ. ಆಗ ಹಣೆಯಭಾಗ ಒಡೆದು ಬಹಳ ನೋವು ಅನುಭವಿಸಿದರೂ ಆಶ್ರಮದ ಜನರಲ್ಲಿ ಯಾರ ಸಹಾಯವನ್ನೂ ಇವರು ಬಯಸಲಿಲ್ಲ. ಸನ್ಯಾಸ ದೀಕ್ಷೆಯನ್ನು ಪಡೆದರೆ ತಾನು ಕರ್ಮಾಧಿಕಾರವಿಲ್ಲದೇ ಪರರಿಂದ ಸೇವೆಮಾಡಿಸಿಕೊಳ್ಳಬೇಕಾಗುತ್ತದೆಂಬ ಒಂದೇ ಉದ್ದೇಶದಿಂದ ಸನ್ಯಾಸದೀಕ್ಷೆಯನ್ನು ತೆಗೆದುಕೊಳ್ಳದೇ ಸಾಧುವಾಗಿ ಬದುಕಿದ ಈ ಮಹಾನ್ ವ್ಯಕ್ತಿಯ ವ್ಯಕ್ತಿತ್ವದ ಅನುಭವ ಆಶ್ರಮದ ಆಡಳ್ತೆಯವರಿಗೆ ಆಗ ಅರಿವಿಗೆ ಬಂತು. ಅವರನ್ನು ಕರೆದು ಸಮಾಧಿ ಮಂದಿರಕ್ಕೆ ಹತ್ತಿರದಲ್ಲಿರುವ ಗುರುಕುಲ ಕುಟೀರದಲ್ಲಿ ಕೊಠಡಿಯೊಂದನ್ನು ಕೊಟ್ಟರು.

ಏನೇ ಕೊಡಲಿ ಬಿಡಲಿ ತಾನಾಯಿತು ತನ್ನ ಕರ್ತವ್ಯವಾಯಿತು ಎಂದುಕೊಂಡಿದ್ದ ಅವರೇ ಶ್ರೀ ಕೇಶವಮೂರ್ತಿಗಳು. ಮೊನ್ನೆ ಮಹಾನವಮಿಯ ದಿನ ಅನಾಯಾಸವಾಗಿ ಆಶ್ರಮದ ಪರಿಸರದಲ್ಲೇ ತಮ್ಮ ಇಹಲೋಕಯಾತ್ರೆ ಪೂರೈಸಿದ ಈ ಸಾಧುಗಳಿಗೆ ದಿನವೊಂದರಹಿಂದೆ ಸ್ವಲ್ಪ ಅಸ್ವಾಸ್ಥ್ಯ ಬಾಧಿಸಿದ ಕಾರಣ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲು ಕೆಲವು ಭಕ್ತರು ಹವಣಿಸಿದರೂ ಆಗಲೇ ಅವರು ಹೇಳಿದ್ದರಂತೆ " ನನ್ನನ್ನು ಇಲ್ಲೇ ಬಿಡಿ, ನನಗೆ ಚಿಕಿತ್ಸೆ ಬೇಡ, ನಾನು ಇವತ್ತೇ ತೆರಳುತ್ತೇನೆ " ಎಂಬುದಾಗಿ. ಹಾಗೆ ಅವರು ಹೇಳಿದರೂ ಮನಸ್ಸುತಡೆಯದೇ ಅವರನ್ನು ವಾಹನವೊಂದರಲ್ಲಿ ಕುಳ್ಳಿರಿಸಿ ಕರೆದೊಯ್ಯಲು ತಯಾರಿ ನಡೆಸುತ್ತಿರುವಾಗಲೇ ಅವರು ಇಹವನ್ನು ತೊರೆದುಬಿಟ್ಟರು. ವರದಹಳ್ಳಿಯ ಕ್ಷೇತ್ರಕ್ಕೆ ಇಂತಹ ತಪೋಧನರು ಕೆಲವರು ಬರುತ್ತಿರುತ್ತಾರೆ. ಎಷ್ಟೆಂದರೂ ಅದು ಸಾಧಕರೊಬ್ಬರ ಅಪ್ರತಿಮ ಸಾಧನೆಯ ಸಿದ್ಧಿಕ್ಷೇತ್ರ. ಆಶ್ರಮದ ಆಡಳ್ತೆಯವರು, ಆಶ್ರಮದ ವೇದಪಾಠಶಾಲೆಯ ವಿದ್ಯಾರ್ಥಿಗಳು, ಹಾಗೂ ಅನೇಕ ಭಕ್ತರು ಕಣ್ಣೀರ್ಗರೆದರು. ಗುರು ಶ್ರೀಧರಭಗವಾನರ ಇಚ್ಛೆಯಂತೇ ಶ್ರೀ ಕೇಶವಮೂರ್ತಿಗಳ ಮರಣ ಆಶ್ರಮದ ತಾಣದಲ್ಲೇ ನಡೆಯಿತು. ಪುರಜನರು, ಪರಿಜನರು, ಭಕ್ತರು, ವಿದ್ಯಾರ್ಥಿಗಳು ಎಲ್ಲರೂ ಸೇರಿ ಆಶ್ರಮದ ಹೊರವಲಯದ ಬೆಟ್ಟದಲ್ಲಿ ಅವರ ಅಂತ್ಯೇಷ್ಟಿಗಳನ್ನು ನೆರವೇರಿಸಿದರು. ಸಾಧುವೊಬ್ಬರ ದೇಹ ಪಂಚಭೂತಗಳಲ್ಲಿ ಲೀನವಾಯಿತು, ಅವರ ಆತ್ಮ ವರದಹಳ್ಳಿಯ ಪರಿಸರದಲ್ಲಿ ಐಕ್ಯವಾಯಿತು;ಮೋಕ್ಷಪಡೆಯಿತು. ಅವರ ಮುಂದಿನ ಕೃತುಗಳನ್ನು ಆಶ್ರಮದವರು ಮತ್ತು ಭಕ್ತರು ಸೇರಿ ನಡೆಸಲಿದ್ದಾರೆ. ಇದನ್ನೆಲ್ಲಾ ನೋಡಿದ ನನಗೆ ಭಗವಂತ ಗೀತೆಯಲ್ಲಿ ಹೇಳಿದ ಈ ನುಡಿ --

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||

ಯಾರು ನನ್ನಲ್ಲಿ ಅನನ್ಯ ಶರಣತೆಯನ್ನು ಹೊಂದಿರುತ್ತಾರೋ ಅವರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ, ನಾನೇ ವಹಿಸಿಕೊಳ್ಳುತ್ತೇನೆ.

--ಎಂಬ ಆ ಮಾತನ್ನು ಆಗಾಗ ಆಗಾಗ ನಾವು ದೃಷ್ಟಾಂತಗಳ ಮೂಲಕ ಕಾಣುತ್ತೇವಲ್ಲವೇ ?

ಯಾವಪ್ರಚಾರವನ್ನೂ ಬಯಸದೇ, ಎಲ್ಲಾ ಅರ್ಥದಲ್ಲಿ ಸರ್ವಸಂಗ ಪರಿತ್ಯಾಗಿಗಳಾಗಿ, ಆಶ್ರಮದಲ್ಲಿ ಇದ್ದೂ ಇಲ್ಲದಂತೇ ನೆಲೆಸಿದ್ದ ಇಂತಹ ತಪೋಧನರಿಗೆ ಎತ್ತಿ ಒಮ್ಮೆ ಕೈಮುಗಿದರೆ ನಮ್ಮ ಸಾಸಿವೆಯ ಭಕ್ತಿಯಾದರೂ ಸಂದೀತು ಎನ್ನುವುದು ನನ್ನ ಭಾವನೆ. ಇಂದಿನ ದಿನಮಾನದಲ್ಲಿ ಸಾಧಿಸಂತರಿಗೆ ಅಷ್ಟಾಗಿ ಅನುಕೂಲವಿಲ್ಲ. ಶುದ್ಧ ಆಹಾರ,ವಿಹಾರಗಳಿಗೆ ಅವರಿಗೆ ಮುಕ್ತ ಪರಿಸರ ದೊರೆಯುವುದಿಲ್ಲ. ಶ್ರೀಧರರ ದಿವ್ಯದೃಷ್ಟಿಗೆ ಈ ಚೇತನ ಕಂಡಿತ್ತಿರಬೇಕು. ತನ್ನಲ್ಲಿಗೇ ಕರೆಸಿಕೊಂಡು ತನ್ನಲ್ಲೇ ಇರಿಸಿಕೊಂಡು ತನ್ನಲ್ಲೇ ಅಡಕಮಾಡಿಕೊಂಡರು. ಮಹಾತ್ಮರ ಜನ್ಮವೆಲ್ಲ ಹೀಗೇ! ಅವರೆಲ್ಲಾ ಬೆಂಕಿಯಲ್ಲಿ ಅರಳಿದ ಹೂವುಗಳಾಗಿರುತ್ತಾರೆ. ಶಾಪಾನುಗ್ರಹ ಸಮರ್ಥರಾಗಿದ್ದರೂ ಯಾವ ಅಹಂಕಾರವೂ ಇಲ್ಲದೇ ಸಾತ್ವಿಕರಾಗಿ ನಮ್ಮ ನಡುವೆ ಬಾಳಿ-ಬದುಕಿ ತಮ್ಮ ಬಂದ ಕೆಲಸ ತೀರಿದ ಮೇಲೆ ಕ್ಷಣವೂ ನಿಲ್ಲದೇ ನಿರ್ಗಮಿಸಿಬಿಡುತ್ತಾರೆ. ವರದಹಳ್ಳಿ ಇಂತಹ ಅನೇಕ ತಪೋಧನರ ದಿವ್ಯಕ್ಷೇತ್ರವಾಗಿದೆ ಎಂಬುದು ತೋರಿಬರುವ ಸತ್ಯ. ನಾವೂ ನೀವೂ ಇರುತ್ತೇವೆ, ನಮ್ಮಿಂದ ಹೆಚ್ಚಿನದೇನೂ ಸಾಧಿಸಲಾಗಲಿಲ್ಲ, ಆದರೆ ’ಅವರು’ ಎಂಬುದೇ ಇಲ್ಲಿ ಇಂತಹ ಮಹಾನುಭಾವರಿಗೆ ಬಳಸಿದ ಶಬ್ದ, ಅವರು ನಮ್ಮಂತಲ್ಲ, ಅವರ ಎಳ್ಳಷ್ಟೂ ಯೋಗ್ಯತೆ ನಮ್ಮಲ್ಲಿಲ್ಲ. ಅವರಂತೇ ಆಗಲು ಜನ್ಮಾಂತರಗಳಲ್ಲೂ ಸಾಧ್ಯವೋ ಅಸಾಧ್ಯವೋ ತಿಳಿದಿಲ್ಲ. ಆದರೆ ಆಗಾಗ ಎಲ್ಲಾದರೂ ಕಾಣುವ ಇಂತಹ ’ಅವರಿಗೆ’ ನಾವು ಶರಣಾಗೋಣ, ಶಿರಬಾಗಿ ನಮಿಸೋಣ.

Wednesday, October 13, 2010

ಮನದ ತಂತಿಯಲ್ಲಿ ಹರಿದು

ಚಿತ್ರಋಣ : ಶೃಂಗೇರಿ. ನೆಟ್ [ಶೃಂಗೇರಿ ಮಠದ ಕೃಪೆಯಿಂದ ]

ಮನದ ತಂತಿಯಲ್ಲಿ ಹರಿದು

[ಪೀಠಸ್ಥ ಶ್ರೀ ಶಾರದಾಮಾತೆಯನ್ನು ನೆನೆದಾಗ ಕಣ್ತುಂಬಿ-ಮನದುಂಬಿ ತಂತಾನೇ ಹರಿದ ಗೇಯಗೀತೆ. ನಮ್ಮ ಮನದ ಭಾವಕ್ಕೆ ಮೂಲ ಪ್ರೇರಣೆ ದೈವದ ಈ ರೂಪದಲ್ಲಿ ಅಲ್ಲವೇ ? ತಪ್ಪೋ ಒಪ್ಪೋ ನಮ್ಮನ್ನು ಭುವಿಗೆ ವಿಧಿಬರೆಹ ಬರೆದು ಕಳಿಸಿರುವ ಅಮ್ಮಾ ಶಾರದೆ ನಮ್ಮನ್ನು ಅನುಗ್ರಹಿಸು - ಎಂಬುದು ಪ್ರಾರ್ಥನೆ. ಇದರಲ್ಲಿ ನನ್ನ ಜೊತೆ ನೀವೆಲ್ಲಾ ಸೇರಿರುವಿರೆಂದು ನಂಬಿರುತ್ತೇನೆ, ಎಲ್ಲರಿಗೂ ಶರನ್ನವರಾತ್ರಿಯ, ಶುಭದಸರೆಯ ಹಾರ್ದಿಕ ಶುಭಾಶಯಗಳು. ]

ಮನದ ತಂತಿಯಲ್ಲಿ ಹರಿದು
ಬೆಳಗಲೆಮ್ಮ ಶಾರದೆ
ಬಂದಳೊಮ್ಮೆ ದಸರೆಯಲ್ಲಿ
ಇರುವಳೇನು ಬಾರದೆ ? || ಪ ||

ಅಮ್ಮನಿನ್ನ ಪ್ರೇರಣೆಯು
ನಮ್ಮ ಬುದ್ಧಿ ತಿಳಿಯಲೊಮ್ಮೆ
ಸುಮ್ಮನಿರುವೆವಿಲ್ಲಿ ಭವದಿ
ಎಮ್ಮಮೂಲ ತಿಳಿಸು ಒಮ್ಮೆ
ಕಮ್ಮಗೋಲನೆಸೆವ ಬಾಣಗಳನು ತಡೆದು ಬದುಕಲು
ಹೆಮ್ಮೆಯಿಂದ ಜೀವಿಸುವೆವು ಅಮ್ಮ ನೀನು ಹರಸಲು || ೧ ||

ಕಾರುಣ್ಯದಿ ಕಾಣಲೊಮ್ಮೆ
ಧಾರೆಯಾಗಿ ಸ್ಫುರಿಸಲೊಮ್ಮೆ
ಭಾರಗಳನು ನೀಗಲೊಮ್ಮೆ
ಚೋರಮನವ ಶಿಕ್ಷಿಸೊಮ್ಮೆ
ದಾರಿಯುದ್ದ ಸಿಗುವ ಭಾರೀ ಕಷ್ಟಗಳನು ಹರಿಸಲು
ಭೇರಿ ಬಾರಿಸುತ್ತ ನಿನ್ನ ನೆನೆದು ಒಮ್ಮೆ ಕುಣಿಯಲು || ೨ ||

ವಿಧಿಯರೂಪ ವಿದ್ಯೆಯಲ್ಲಿ
ಕದಿಯಲಾಗದಂಥಾ ಶ್ರೇಷ್ಠ
ನಿಧಿಯತಂದು ನಮ್ಮೊಳಿರಿಸಿ
ಬದಿಗೆ ಸರಿದು ನೇಪಥ್ಯದಿ
ಸದಭಿರುಚಿಯ ಸಾಹಿತ್ಯಗಳ ಸೃಜಿಸುವಂತೆಮಾಡಿದೆ
ಅದಕೆ ತಕ್ಕ ಶಬ್ದವಾಗಿ ಲೇಖನಿಯಲಿ ಮೂಡಿದೆ || ೩ ||

ಜಗವುಗೌಣ ನೀನಿಲ್ಲದೆ
ನಗುವದಿಲ್ಲ ನಲಿವಿಲ್ಲದೆ
ಬಗೆಯ ಬರೆದು ಹಣೆಯಮೇಲೆ
ನಗುವ ನಿನ್ನ ತೋರಲೊಮ್ಮೆ
ಅಗರು ಮಂಗಳಾರತಿಯನು ಜಗದಲಿ ಸ್ವೀಕರಿಸಲೊಮ್ಮೆ
ಮುಗುದರನ್ನು ಕಂಡು ಹರಸಿ ಪೀಠದಲ್ಲಿ ಕೂರಲೊಮ್ಮೆ || ೪ ||

Tuesday, October 12, 2010

ಕುದುರೆಲಾಯದಲ್ಲಿ ನಗೆಲಾಯ !


ಕುದುರೆಲಾಯದಲ್ಲಿ ನಗೆಲಾಯ !

ವೇದಾಂತಿ ಹೇಳಿದನೂ ಹೊನ್ನೆಲ್ಲ ಮಣ್ಣೂ ಮಣ್ಣೂ
ಗಣಿಲೊಬ್ಬ ಹೇಳಿದನು ಮಣ್ಣೆಲ್ಲ ಹೊನ್ನೂ ಹೊನ್ನೂ !
ಅಧ್ಯಕ್ಷ ಹೇಳಿದನು ಈ ವೇಳೆ ಶೂನ್ಯ ಶೂನ್ಯ
ಸಿದ್ದು-ಕುಮಾರ ಹೇಳಿದರು ರೀ ನಮ್ಮದೈತೆ ಭವ್ಯ !


ದೊಡ್ಡ ಬಂಡೆ, ಶಿಲ್ಪಿಯೊಬ್ಬ ಚಾಣದಿಂದ ಚೇಣುಹಾಕುತ್ತಿದ್ದ. ಈತ ಸರಸರ ಅಲ್ಲಿಗೆ ಬಂದವನೇ " ಏನುಮಾಡುತ್ತಿದ್ದೀರಿ ಶಿಲ್ಪಿಗಳೇ ? " ಎಂದ

ಶಿಲ್ಪಿಯಿಂದ ಬಂದ ಉತ್ತರ " ಈ ಬಂಡೆಯಲ್ಲಿ ಬಂಧಿಸಲ್ಪಟ್ಟಿರುವ ದೇವತೆಯನ್ನು ಬಂಧಮುಕ್ತಗೊಳಿಸುತ್ತಿದ್ದೇನೆ "

ಆತ ಮುನ್ನಡೆದ. ಚಿತ್ರಕಾರನೊಬ್ಬನನ್ನು ಕಂಡ ಮತ್ತು ಕೇಳಿದ " ಏನುಮಾಡುತ್ತಿರುವಿರಿ ಚಿತ್ರಕಾರರೇ ?"

ಚಿತ್ರಕಾರ ಉತ್ತರಿಸಿದ " ಕವಿಯ ಕಲ್ಪನೆಗೊಂದು ಚಿತ್ತಾರದ ಆಕಾರ ಕೊಡುತ್ತಿದ್ದೇನೆ"

ಆತ ಮುನ್ನಡೆದು ವಿಧಾನಸೌಧದ ಎದುರು ಬಂದ. ಅಲ್ಲಿ ನಿಂತಿದ್ದ ರಾಜಕೀಯ ನಾಯಕರನ್ನು ಕುರಿತು ಕೇಳಿದ " ಏನು ಮಾಡುತ್ತಿರುವಿರಿ ರಾಜಕೀಯ ನಾಯಕರೇ ? "

ರಾಜಕಾರಣಿ ಉತ್ತರಿಸಿದ " ನಮ್ಮ ಮುಂದಿರುವ ಈ ಭವ್ಯ ಕಟ್ಟಡದಲ್ಲಿ ಕುದುರೆ ವ್ಯಾಪಾರಕ್ಕೆ ಹೊಸ ಶಾಶ್ವತ ಕೇಂದ್ರವನ್ನು ಇಲ್ಲಿ ಕಾಣುತ್ತಿದ್ದೇವೆ, ಶತಶತಮಾನಗಳ ಹಿಂದೆ ಆಗಬೇಕಾಗಿದ್ದ ಕೆಲಸ, ಸ್ವಾತಂತ್ರ್ಯ ಬಂದು ಅದೆಷ್ಟೋ ವರ್ಷಗಳಾದ್ರೂ ಆಗಿರ್ಲಿಲ್ಲ, ಈಗ ಅದು ಒಂದು ರೂಪಕ್ಕೆ ಬರುತ್ತಿದೆ "


------------

ರಾಜನೊಬ್ಬ ಮಂತ್ರಿಗೆ ಮರದಮೇಲಿದ್ದ ಕಾಗೆಗಳನ್ನು ಎಣಿಸಿ ತಿಳಿಸಲು ಹೇಳಿದ್ದನ್ನು ನೆನೆಸಿಕೊಂಡ ಈತ ರಾಜಕೀಯ ನಾಯಕರೊಬ್ಬರ ಹತ್ತಿರ ಕೇಳಿದ " ಸ್ವಾಮೀ ನಿಮ್ಮ ಸಂಖ್ಯೆ ಎಷ್ಟು ? "

ರಾಜಕಾರಣಿ ಪಟ್ಟನೆ ಉತ್ತರಿಸಿದ " ನಮ್ಮದು ೧೨೦ "

ಈತ ಕೇಳಿದ " ಅದು ಹೇಗೆ ಹೇಳುತ್ತೀರಿ ?

" ಸದ್ಯಕ್ಕೆ ಎಣಿಸಿದಾಗ ಕಾಣುವುದು ೧೨೦, ಹತ್ತು-ಹನ್ನೆರಡು ಜಾಸ್ತಿಯಾದರೆ ಎಲ್ಲಿಂದಲೋ ಅವು ಬಂದಿವೆ ಎಂದರ್ಥ, ೧೬-೧೭ ಕಮ್ಮಿ ಇದ್ದರೆ ಎಲ್ಲಿಗೋ ಅವು ಹೋಗಿವೆ ಎಂದರ್ಥ "

-------------

ಎಲಿಜಬೆತ್ ಟೇಲರ್ ನ ಬಹುವಾಗ ನೆನೆಸಿಕೊಂಡ ಈತ ಯಾಕೋ ತಲೆತುರಿಕೊಳ್ಳುತ್ತಿದ್ದ. ಯಾರೋ ಪರಿಚಯದವರು ಕೇಳಿದರು " ಯಾಕಯ್ಯಾ ಬಹಳ ಸುಸ್ತಾಗಿದ್ದೀಯಾ ? "

" ಏನಿಲ್ಲಾ ಸ್ವಾಮೀ, ಎಲಿಜಬೆತ್ ಟೇಲರ್ ಒಬ್ಬಳೇ ಹಲವಾರು ಮದುವೆಯಾದಳು, ಮದುವೆಯಾಗಿ ತೊರೆದಿದ್ದ ಗಂಡನನ್ನೇ ಮತ್ತೆ ಮದುವೆಯಾದಳು. ನಮ್ಮಲ್ಲಿ ರಾಜಕೀಯ ಪಕ್ಷಗಳು ಅವಳ ಹಾದಿಯಲ್ಲೇ ಇವೆ. ಅವುಗಳಿಗೆ ಹಳೇ ಸ್ನೇಹಿತರು, ಒಟ್ಟಿಗೆ ಪಡೆದದ್ದು, ತಿಂದಿದ್ದು, ನುಂಗಿದ್ದು ಎಲ್ಲಾ ನೆನಪಿಗೆ ಬಂದಾಗ ಮತ್ತೆ ಒಂದಾಗಿಬಿಡುತ್ತವೆ "


---------------


ಈತ ನಡೆಯುತ್ತಾ ಹೋಗುವಾಗ ಮರಮೇಲೆ ಮಂಗವೊಂದು ಬಹಳೇ ಹಾರಾಡುತ್ತಿತ್ತು! ಕಲ್ಲೆಸೆದು ಓಡಿಸಲು ಹೋದರೆ ತನಗೇ ಏನಾದರೂ ಮಾಡಿಬಿಡಬಹುದೆಂಬ ಹೆದರಿಕೆಯಲ್ಲಿ ಮುನ್ನಡೆದುಹೋದ. ಮರಳಿಬರುವಾಗ ಮಂಗ ಮರ ಕೆಳಗೆ ನೆಲದಮೇಲೆ ಮಲಗಿತ್ತು! ಅದರ ಹಾರಾಟ ತಂತಾನೇ ನಿಂತುಹೋಗಿತ್ತು ಯಾಕೆಂದರೆ ಕಾಲು ಮುರಿದಂತಿತ್ತು. ಈತ ತಲೆಕೆಡಿಸಿಕೊಳ್ಳಲಿಲ್ಲ, ಆದರೆ ತುಲನೆಮಾಡಿದ, ಬುದ್ಧಿವಂತ ಎನಿಸಿಕೊಂಡ ಮಂಗಗಳು ನೀರಲ್ಲಿನ ಮೀನಿನ ಹೆಜ್ಜೆಯ ಗುರುತು ಹೇಗೆ ಸಿಗದೋ ಹಾಗೇ, ಮುಸುಕಲ್ಲಿ ಗುದ್ದಿದ್ದು ನೋವಾದರೂ ಗಾಯ ಹೇಗೆ ಕಾಣದೋ ಹಾಗೇ, ಕಾನೂನಿನ ಚೌಕಟ್ಟಿಗೆ ಕಾಗದದಲ್ಲಿ ಸಿಗದಂತೇ ತಪ್ಪಿಸಿಕೊಂಡು ಹಾರಾಡಿ ಹಾರಾಡಿ ಇನ್ನೇನು ’ಎಣ್ಣೆ ಬರುವಾಗ ಗಾಣ ಮುರಿದಂತೇ’ ಆದಾಗ ಹತಾಶೆಯಿಂದ ಕುಳಿತಿದ್ದನ್ನು ನೆನೆಸಿಕೊಂಡ

------------------

ಮಗ್ಗಿ ಹೇಳು ಎಂದರು ಮೇಷ್ಟ್ರು. ಈತ ಹೇಳಿದ. ೧೨೧-೧೦೫+೧ ನ್ನು ಸೇರಿಸಿ ಒಂದೇ ನಿಮಿಷದಲ್ಲಿ ಹೇಳಿಬಿಟ್ಟ-೧೦೬. ಪಾಪ ಗಣಿತದಲ್ಲಿ ಪಕ್ಕಾ! ಆದರೇನು ಮಾಡೋದು " ಯಾಕಪ್ಪಾ ಅಷ್ಟು ಅವಸರ ಮಾಡಿದೆ" ಎಂದರೆ ಕುದುರೆ ಖರೀದಿಸಿದ ಜನ ಮಗ್ಗಿ ತಪ್ಪು ಎಂದು ಹೊಡೆಯಲು ಬಂದಿದ್ದರು, ಅದಕ್ಕೇ ಅನಿವಾರ್ಯವಾಗಿ ಹಾಗೆಮಾಡಿದೆ ಎನ್ನುವುದನ್ನೇ ಬೇರೇ ರೀತಿ ಹೇಳಿದ.

----------------

ಈತನಿಗೆ ಸಂಭ್ರಮವೂ ಇರಲಿಲ್ಲ, ಭ್ರಮೆಯೂ ಇರಲಿಲ್ಲ! ಯಾಕೆಂದರೆ ಅದರಲ್ಲಿ ಹುರುಳೇ ಇಲ್ಲ ಎಂಬುದು ಈತನ ಅನಿಸಿಕೆ. ಯಾರೋ ಹೇಳಿದರು ಮತ್ತೆ ರೆಕ್ಕೆ-ಪುಕ್ಕ ಬಲಿಯುತ್ತಿದೆ, ಕುದುರೆವ್ಯಾಪಾರಕ್ಕೆ ಕಣ ತಯಾರಾಗುತ್ತಿದೆ! --ಎಂದು. ಈತ ಆತನನ್ನು ನೋಡಿದ. ಆತ ಏನೂ ತಿನ್ನದ ಸೊಳ್ಳೆಯಂತಿದ್ದ, ಯಾವ ಥೆರಪಿಯಿಂದಲೂ ಆತ ರಿಪೇರಿ ಕಂಡಿರಲಿಲ್ಲ. ಯಾಕೋ ಒಂದು ಕೈ ನೋಡೋಣವೆನ್ನುವ ಮನಸ್ಸಾಯಿತು ಆತನಿಗೆ. ತಾನು ಬೇಹುಗಾರಿಕೆಯಲ್ಲಿ ಬಹಳಜಾಣ ಎಂದ! ಆಚೀಚೆ ಓಡಡತೊಡಗಿದ ನೋಡಿ--ಸೊಳ್ಳೆಯಂತಿದ್ದವ ತಿಂದೂ ತಿಂದೂ ’ಉಬ್ಬಿ’ಹೋದ !

----------------

ಈತ ಇನ್ನೇನು ಮನೆಗೆ ಹೊರಟಿದ್ದ. ದಾರಿಯಲ್ಲಿ ಯಾರದೋ ಆರ್ತನಾದ " ಕಾಪಾಡೀ ಕಾಪಾಡೀ ". ಹೋಗಿ ನೋಡುತ್ತಾನೆ. ’ವಿದಳನ’ ಕ್ರಿಯೆಯಲ್ಲೂ, ಜಯಸಿರಿ-ಜಯಲಕ್ಷ್ಮಿ ದೊರೆತಾಗ ’ವಿಲೀನ’ಕ್ರಿಯೆಗೂ ಬಹಳವಾಗಿ ತೊಡಗಿಕೊಂಡಿದ್ದ ಪ್ರಾಣಿ-ಗೋಸುಂಬೆ ಎಂಬ ನಾಮಾಂಕಿತ ಪಡೆದು ಖ್ಯಾತಿವೆತ್ತ ಮಹಾನುಭಾವ ಜೀವಿ! ಈತ ಕೇಳಿದ " ಯಾಕಪ್ಪಾ ಏನಾಯ್ತು ? "

ಬಂದ ಉತ್ತರ " ನಾವೆಲ್ಲಾ ಸುಮ್ನೇ ಹೋಗಿದ್ದಲ್ಲಾ, ನಮ್ನೆಲ್ಲಾ ರೌಡಿಗಳು ಬಂದು ಹೆದರಿಸಿ ಕರ್ಕೊಂಡು ಹೋದ್ರು "
ಈತ ಕೇಳಿದ " ಅಲ್ಲಯ್ಯಾ ಮತ್ತೆ ೪-೫ದಿನ ಅಲ್ಲಿ ಆರಾಮಾಗಿ ಮೇದ್ಕೊಂಡಿದ್ದೆ "

" ಇಲ್ಲಣ್ಣಾ, ನಾನೆಲ್ ನಿಂತ್ ಬೇಕಾರೂ ಹೇಳ್ತೀನಿ, ನಾನು ಪಕ್ಷವಿರೋಧಿ ಅಲ್ಲ "

ಈತನಿಗೆ ನಗಬೇಕೋ ಅಳಬೇಕೋ ಒಂದೂ ತಿಳೀಲಿಲ್ಲ! ಹಾಳಾಗ್ ಹೋಗ್ಲಿ ನಮ್ ಹಣೇಬರ ಎಂದ್ಕೋತಾ ಮನೆದಾರಿ ಹಿಡ್ದ.

Monday, October 11, 2010

ಅಯೋಮಯ!


ಅಯೋಮಯ!

ಉಂಡಮನೆಗೆ ಎರಡು ಬಗೆವ
ಭಂಡ ರಾಜಕೀಯದವರ
ಕಂಡುಸೋತು ಮನವು ದಿನವು ಬರೆಯದಾಯಿತು !
ಕಂಡಕಂಡಲೆಲ್ಲ ಅಲೆದು
ಮೊಂಡು ಬುದ್ಧಿಬಹಳ ಮೆರೆದು
ಕೊಂಡು-ಕೊಡುವ ಕುದುರೆ ವ್ಯಾಪಾರನೋಡಿತು !

ಮಂಡೆಬಿಸಿ ಮಾಡಲೊಮ್ಮೆ
ಅಂಡಿಗೆ ಬಿಸಿಮುಟ್ಟಿಸುತ್ತ
ಚಂಡು ತೂರಿ ಮಜವಪಡೆವ ಶಾಸಕರನೋಡಿತು!
ಭಂಡಧೈರ್ಯದಿಂದ ಕೋಟಿ
’ಬಂಡವಾಳ’ದಂತೆ ಸುರಿವ
ಪುಂಡು ಹುಡುಗುರಾಜಕೀಯವನ್ನು ಕಂಡಿತು !

ಹೆಂಡ-ಹೆಣ್ಣು-ಹಣವ ಪಡೆದು
ಮಂಡಿಯೂರಿ ನಮಿಸುವಂತ
ಉಂಡೆನಾಮವಿಟ್ಟ ಶಾಸಕರ ಹುಡುಕಿತು !
ಹಿಂಡುಕಟ್ಟಿಕೊಂಡು ತಾವು
ಗೂಂಡಾಗಳು ಎಂದು ತೋರಿ
ಥಂಡುಹೊಡೆದು ದಾಸರಾದುದನ್ನು ಅರಿಯಿತು!

ಸಂಡಿಗೆ ಕಜ್ಜಾಯ ಮೆದ್ದು
ಗುಂಡಿಗೆಯಲಿ ತಂತ್ರಹೂಡಿ
ಮುಂಡೆಮದುವೆಯಲುಂಬ ಕೆಲವು ’ಕೈ’ಯನಂಬಿತು!
ಅಂಡುಸುಟ್ಟ ಬೆಕ್ಕಿನಂತೆ
ಅಂಡೆಚೆಡ್ಡಿ ಚಿವುಟಿಗೊಳುತ
ಕೊಂಡು-ಕಳೆದು ಹಪಹಪಿಸಿದ ’ದಳ’ವ ಕಂಡಿತು!

ಬೆಂಡೆಕಾಯಿ ಹುರಿದರೀತಿ
ಗುಂಡಿಯದುಮಿ ಬರೆದುಹರಿದು
ಬಂಡಿತುಂಬ ಮತವೆಣಿಸಿದ ರೀತಿ ನೆನೆಸಿತು!
ಕಂಡೂ ಕಂಡೂ ಕೊಡುವೆವಲ್ಲ
ಕುಂಡೆ-ಹೊಟ್ಟೆ ಬೆಳೆದ ಜನಕೆ
ಮಂಡೆಸರಿಯಿಲ್ಲ ನಮಗೆ ಎಂದು ಮರುಗಿತು !

Saturday, October 9, 2010

ಜಗವೆಂಬ ಹಕ್ಕಿ ಗೂಡು


ಜಗವೆಂಬ ಹಕ್ಕಿ ಗೂಡು

ಜಗವದೊಂದು ಹಕ್ಕಿ ಗೂಡು
ಅದಕೆ ತಾಯ ರೆಕ್ಕೆ ಮಾಡು
ಮರಿಗಳಿಹವು ಚಿಲಿಪಿಲಿಪಿಲಿ
ಗುಟುಕಿಗಾಗಿ ಗಲಿಬಿಲಿ !

ನಗುವು ನಲಿವು ಏಳುಬೀಳು
ಅಗಲಿಬಾಳದಂತ ಬಯಕೆ !
ತಾಯಿ ಮುನಿಸಿಕೊಂಡರಾಗ
ಸಹಿಸಿ ಬಾಳಲಾರೆವು

ಅಮ್ಮ ಪ್ರೀತಿ ತೋರ್ವಳೊಮ್ಮೆ
ಸುಮ್ಮನೇ ಕುಕ್ಕುವಳಿನ್ನೊಮ್ಮೆ
ನಮ್ಮ ಹುಟ್ಟು ಏತಕೆಂಬ
ಆಳ ಅರಿಯದಾದೆವು

ಹುಟ್ಟನಿರೀಕ್ಷಿತವು ಎಮಗೆ
ಸಾವು ಅನಿವಾರ್ಯದಾ ಘಳಿಗೆ
ಹುಟ್ಟು ಮತ್ತು ಸಾವ ನಡುವೆ
ಗೂಡಲೊಮ್ಮೆ ಚಿಗಿತೆವು !

ಜನುಮಜಾತ ಕರ್ಮದಲ್ಲಿ
ಭವದ ಬಂಧ ತೊರೆವುದೆಲ್ಲಿ ?
ನಗದು ಪುಣ್ಯಗಳಿಸಿ ಇಹದ
ಸಾಲ ತೀರಿಸುವೆವು !

ಗೆಲುವ ಸೂರ್ಯ ಕಿರಣ ಹೊಳೆದು
ಬಳಿಕ ರೆಕ್ಕೆ-ಪುಕ್ಕ ಬಲಿದು
ಅಮ್ಮ ಹಾರಕಲಿಸೆ ಒಮ್ಮೆ
ದೂರಹೊರಗೆ ಹೊರಟೆವು !

Friday, October 8, 2010

ನವರಾತ್ರಿ ಪ್ರಾರ್ಥನೆ


ನವರಾತ್ರಿ ಪ್ರಾರ್ಥನೆ

ನವದುರ್ಗೆಯಯರ ಆರಾಧನೆಯ ಪರ್ವಕಾಲ. ಪ್ರತೀ ಜೀವಿಗೆ ಅಮ್ಮನ ಸ್ಥಾನ ದೊಡ್ಡದಲ್ಲವೇ? ಅಂತಹ ಅಮ್ಮನ ಪ್ರತಿರೂಪಗಳಾದ ಬ್ರಾಹ್ಮೀ, ಕೌಮಾರೀ, ವಾರಾಹೀ ಇವೇ ಮೊದಲಾದ ಒಂಬತ್ತು ರೂಪಗಳಲ್ಲಿ ದೇವಿಯನ್ನು ಆರಾಧಿಸುತ್ತೇವೆ. ಜಗಕ್ಕೆ-ದೇಶಕ್ಕೆ ಅನ್ನದಾತ ದೈವ. ನಾವೆಷ್ಟೇ ಪ್ರಯತ್ನಿಸಿದರೂ ಆತ ಮುನಿಸಿಕೊಂಡರೆ ನಮ್ಮ ಬೇಳೆ ಬೇಯುವುದಿಲ್ಲ. ಇದನ್ನರಿತು ಮಹಾನ್ ತಪಸ್ವಿಗಳಾದ ಶ್ರೀ ಶಂಕರರು ಹೇಳಿದರು :

|| ತೇನವಿನಾ ತೇನವಿನಾ ತೃಣಮಪಿ ನ ಚಲತಿ ತೇನವಿನಾ ||---ಎಂದು.

ಪ್ರಾಯದಲ್ಲಿ ನಮ್ಮ ದೇಹ ಸಶಕ್ತವಾಗಿರುವಾಗ, ಯಾವುದೇ ರೋಗಗಳು ಬಾಧಿಸದಾಗ, ಆರ್ಥಿಕವಾಗಿ ನಾವು ಸಬಲರಾಗಿದ್ದಾಗ, ಅಧಿಕಾರದಲ್ಲಿದ್ದಾಗ, ಹೋದಲ್ಲೆಲ್ಲಾ ನಮ್ಮ ಕುದುರೆ ಗೆದ್ದಾಗ ನಮಗೆ ಅನಿಸುವುದು ’ಲೈಫು ಇಷ್ಟೇನೆ’ ಎಂದು. ಆಗೆಲ್ಲಾ ನಾವು ಏರುವುದು ಐಷಾರಮೀ ಜೀವನದ ಬಂಡಿ. ಜಗತ್ತನ್ನೇ ಗೆಲ್ಲುವ ಹುಮ್ಮಸ್ಸೂ ಕೂಡ ಬಂದರೂ ತಪ್ಪಿಲ್ಲ. ಆದರೆ ಅದೆಲ್ಲಾ ಕೇವಲ ನಮಗೆ ಗೊತ್ತಿರದ ಮಾಯೆ. ಆ ಮಾಯೆಯನ್ನೇ ವಿಜ್ಞಾನದಲ್ಲಿ ಬೇರೆ ಬೇರೆ ರೂಪಗಳಲ್ಲಿ ಕಾಣುವ ಸಂಧಿಸುವ ಕೆಲಸ ನಡೆಯುತ್ತಿದೆ. ಬರೇ ವಿಜ್ಞಾನವಲ್ಲದೇ ಬೇರೆ ಮಾರ್ಗಗಳಿಂದಲೂ ಅದನ್ನು ರೀಚ್ ಆಗಬಹುದು ಎಂಬುದಕ್ಕೆ ಭಾರತೀಯ ತತ್ವಜ್ಞಾನ ಒಂದು ಉದಾಹರಣೆ. ಅದರಲ್ಲಂತೂ ಇಲ್ಲಿನ ಅದ್ವೈತ ತತ್ವವನ್ನು ಪ್ರತೀ ಹಂತದಲ್ಲಿ ನಾವು ಕಾಣುತ್ತೇವೆ, ಅನುಭವಿಸುತ್ತೇವೆ. ಈ ಅದ್ವೈತವನ್ನು ತಾನು ಬಹಳ ಮೊದಲೇ ಅರಿತಿದ್ದರೆ ಬಹಳ ಒಳ್ಳೆಯದಿತ್ತು, ತಡವಾಗಿಯಾದರೂ ಓದಿದೆನಲ್ಲ ಎಂಬುದು ಪರಮಾಣು ವಿಜ್ಞಾನಿಯಾಗಿದ್ದ ಡಾ| ರಾಜಾರಾಮಣ್ಣ ಅವರ ಅನಿಸಿಕೆ. ಶಾಂಕರ ತತ್ವ ಪರಮೋಚ್ಚ ಸ್ಥಿತಿ, ಅದು ಪರಿಪೂರ್ಣ, ಆ ಹಂತಕ್ಕೆ ಎಲ್ಲರೂ ಏರಲಾಗುವುದಿಲ್ಲಾ ಎಂಬುದನ್ನು ರಾಜಾರಾಮಣ್ಣ ಹೇಳಿದ್ದಾರೆ.


೧೯೮೩ ರಲ್ಲಿ ’ಜಾಗತಿಕ ಪರಮಾಣು ಸಮನ್ವಯ ಸಮಿತಿ’ಯ ಸಭೆ ಮುಗಿಸಿ ಕೌಲಲಾಂಪುರದಿಂದ ಭಾರತಕ್ಕೆ ಮರಳುವಾಗ ಅವರಿದ್ದ ವಿಮಾನ ಮುಂಬಯಿಯಲ್ಲಿ ಬೆಳಗಿನಜಾವ ೪ ಗಂಟೆಗೆ ತುರ್ತು ಭೂಸ್ಪರ್ಶಮಾಡಿತು. ಚಾಲಕ ಅದೇಕೆ ಹಾಗೆ ಮಾಡಿದ ಎನ್ನುವಷ್ಟರಲ್ಲಿ ಮುಂದೆ ಮತ್ತೇನೋ ಸಪ್ಪಳ! ವಿಮಾನ ಹೊಯ್ದಾಡಿದ ಅನುಭವ! ಮುಂದಿದ್ದ ಹಲವರು ಭಯದಿಂದ ಕೂಗಿಕೊಂಡರು. ಯಾರೋ ಎಮರ್ಜೆನ್ಸಿ ಬಾಗಿಲನ್ನು ತೆರೆದರು. ನೋಡುತ್ತಾರೆ ವಿಮಾನದ ಗಾಲಿಗಳು ತುಂಡಾಗಿವೆ, ವಿಮಾನ ಮೂರು ಭಾಗವಾಗಿ, ಹಿಂಭಾಗದಲ್ಲಿದ್ದ ೨೦ ಮಂದಿ ಮಡಿದಿದ್ದಾರೆ! ಆದರೆ ಮುಂದಿರುವ ಕೆಲವರಿಗೆ ಏಟುಗಳು ಬಿದ್ದಿದ್ದವು. ಆದರೆ ರಾಜಾರಾಮಣ್ಣ ಏನೂ ಆಗದ ರೀತಿಯಲ್ಲಿದ್ದರು. ಆಗಲೇ ಅವರು ಜಗತ್ತಿನಲ್ಲಿ ಕಾಣದ ಶಕ್ತಿಯ ಕೈವಾಡವಿದೆ, ನಮಗೂ ಮೀರಿದ ಹಿರಿದಾದ ಶಕ್ತಿಯೊಂದಿದೆ ಎಂದು ಪ್ರತಿಪಾದಿಸುತ್ತಾರೆ!

ವಿಜ್ಞಾನದಲ್ಲಿ ಪರಮಾಣು ವಿಭಜಿಸಿ ಶಕ್ತಿ ಪಡೆವಾಗ ಅದರ ಮೂಲರೂಪಕ್ಕೆ ಇಳಿಯುವಾಗ ಆಗುವ ರಿಯಾಕ್ಷನ್ ಬಗ್ಗೆ ಹೇಳುತ್ತ ಅಲ್ಲೇ ತನಗೆ ಅದ್ವೈತದ ಅನನ್ಯ ಅನುಭವ ಆಯ್ತು ಎಂದು ಹೇಳುತ್ತಾರೆ. ಪರಿಕರಗಳೇ ಇಲ್ಲದ ಅಂದಿನ ಭಾರತದಲ್ಲಿ ಮುಂಬಯಿಯ ಚೋರ್ ಬಜಾರ್ ಮತ್ತಿತರ ಜಾಗಗಳಿಂದಬ್ರಿಟಿಷರು ಬೇಡದೇ ಅಲ್ಲಿದ್ದವರಿಗೆ ಮಾರಿದ್ದ ವಿದ್ಯುನ್ಮಾನದ ಬಿಡಿಭಾಗಗಳನ್ನು ಖರೀದಿಸಿ, ಅವುಗಳನ್ನೇ ಹಲವು ವಿಧದಲ್ಲಿ ಜೋಡಿಸಿ ಕೆಲವು ಬೇಕಾದ ಮಾರ್ಪಾಡುಗಳನ್ನು ತಾವೇ ಮಾಡಿಕೊಂಡು ಸೃಜಿಸಿದ ಉಪಕರಣಗಳಿಂದ ನಿರೀಕ್ಷಿಸಿದ ಪ್ರತಿಫಲವನ್ನು ಕಾಣುವಾಗೆಲ್ಲಾ ಅವರಿಗೆ ಕಂಡಿದ್ದು ಅನ್ಯಾದೃಶ ಅದ್ವೈತ. ಹುಟ್ಟಾ ಶ್ರೀವೈಷ್ಣವರಾದ ಒಬ್ಬ ವ್ಯಕ್ತಿ ಜ್ಞಾನಿಯಾಗಿ ವಿಜ್ಞಾನಿಯಾಗಿ ಬೆಳೆದು ಅಣುವನ್ನೇ ನಿಯಂತ್ರಿಸ ಹೊರಟಾಗ ಕಂಡ ಸತ್ಯವನ್ನು ಅವರ ಆತ್ಮ ಚರಿತ್ರೆ ’ಈಯರ್ಸ ಆಫ್ ಪ್ರಿಲ್ಗ್ರಿಮೇಜ್’ ನಲ್ಲಿ ನಿವೇದಿಸುತ್ತಾರೆ.

ದೇವರು ಒಬ್ಬನೇ, ನಾಮ ಮಾತ್ರ ಹಲವು ಎಂದು ತಿಳಿದಿದ್ದೇವಲ್ಲ. ಅಲ್ಪರಾದ ನಮಗೆ ದೇವರ ಹಲವು ರೂಪಗಳ ಮೂರ್ತಿಗಳು ಕಾಣಲಿ ಎಂಬ ದೃಷ್ಟಿಯಿಂದ ಪೂರ್ವಜರು ಅನೇಕ ಅವತಾರಗಳನ್ನೂ, ಮೂರ್ತಿಗಳನ್ನೂ ತೋರಿಸಿಕೊಟ್ಟರು. ಅವುಗಳೆಲ್ಲದರ ಹಿಂದಿನ ಶಕ್ತಿ ಒಂದೇ. ಆ ಶಕ್ತಿಗೆ ನಮಿಸೋಣ.

ಇದನ್ನೆಲ್ಲಾ ಅರಿತಿದ್ದ ನಮ್ಮ ರಾಜಮಹಾರಾಜರು ಶಕ್ತಿಯ ಆರಾಧನೆಯನ್ನು ಹಲವು ರೂಪಗಳಲ್ಲಿ ನಡೆಸಿಕೊಂಡು ಬಂದರು. ಇತಿಹಾಸದಲ್ಲಿ ವಿಜಯನಗರದ ಅರಸರು ನವರಾತ್ರಿಯನ್ನು ರಾಜ್ಯದ ಶ್ರೇಯೋಭಿವೃದ್ದಿಗಾಗಿ ಆಚರಿಸಿದರು. ಪ್ರಾಯಶಃ ಶೃಂಗೇರಿಯ ಅಂದಿನ ಜಗದ್ಗುರು ಮಹರ್ಷಿ ವಿದ್ಯಾರಣ್ಯರು ವಿಜಯನಗರದ ಸ್ಥಾಪನೆಗೆ ಮೂಲಕಾರಣೀಕರ್ತರಾಗಿದ್ದರಿಂದ ಇರಬಹುದು, ರಾಜರುಗಳು ದೇವಿಯ ಉಪಾಸಕರಾದರು. ಅವರ ಅಂದಿನ ಪರಂಪರೆಯನ್ನು ಅನುಕರಿಸಿದವರು, ಅನುಸರಿಸಿದವರು ಮೈಸೂರಿನ ಅರಸರು. ಅಂತೂ ನಮ್ಮ ಕನ್ನಡನಾಡಿನ ಸೌಭಾಗ್ಯವೆಂಬಂತೇ ಈ ಹಬ್ಬ ನಿಲ್ಲದೇ ನಡೆಯಿತು. ಕಾಲಾನಂತರದಲ್ಲಿ ಪ್ರಜಾಪ್ರಭುತ್ವ ಬಂದಮೇಲೂ ಶಕ್ತಿದೇವತೆಯ ಈ ಆರಾಧನೆಯನ್ನು ನಿಲ್ಲಿಸಬಾರದೆಂಬ ಉದ್ದೇಶದಿಂದಲೂ ನಾಡದೇವತೆಯಾಗಿ ಶಕ್ತಿಯನ್ನೇ ಅಧಿಕಾರದಲ್ಲಿದ್ದವರು ಆರಾಧಿಸುತ್ತ ಬಂದಿದ್ದರಿಂದಲೂ ಈ ಹಬ್ಬವನ್ನು ನಾಡಹಬ್ಬವಾಗಿ ಆಚರಿಸುವುದು ಸಂಪ್ರದಾಯವಾಯಿತು.

ಇವತ್ತಿನ ಅತಂತ್ರ ರಾಜಕೀಯ ಸ್ಥಿತಿ ಈ ಹಬ್ಬದ ವೇಳೆ ಬಯಸದೇ ಬಂದ ಅನಿವಾರ್ಯತೆ! ವಿಧಿಯಿಚ್ಛೆಯಂತೇ ನಡೆಯಬೇಕಲ್ಲವೇ ? ರಾಜಕೀಯದಲ್ಲಿ ಖೊಳ್ಳೆ ಹೊಡೆಯುವ ಕುದುರೆ ವ್ಯಾಪಾರದ ಖೂಳರು ಈ ಸಮಯದಲ್ಲಾದರೂ ಸುಮ್ಮನಿದ್ದು ತಮ್ಮ ಬೇಕು-ಬೇಡಗಳನ್ನು ನವರಾತ್ರಿ ಕಳೆದಮೇಲೆ ಕೈಗೆತ್ತಿಕೊಳ್ಳಬಹುದಿತ್ತು, ಆದರೇನುಮಾಡೋಣ ಇಂದಿಗೆ ನಾವು ರಿಸಾರ್ಟ್ ರಾಜಕೀಯದಲ್ಲಿ ತೊಳಲಾಡುತ್ತಿದ್ದೇವೆ. ನೀಚರ ನೀಚ ಪ್ರವೃತ್ತಿ ತೊಲಗಲು ಶಕ್ತಿರೂಪಿಣಿಯ ಆವಾಸವೇ ಸರಿಯಾದ ಮಾರ್ಗ. ನವಶಕ್ತಿ ರೂಪಿಣಿಯಾದ ಅಮ್ಮ ನೀಚರಿಗೆ ಒಳ್ಳೆಯ ಬುದ್ಧಿಕೊಡಲಿ ತನ್ಮೂಲಕ ನಾಡು-ದೇಶ-ಜಗತ್ತು ಸುಭಿಕ್ಷವಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ:

ನವರಾತ್ರಿಯ ನವದಿನದಲಿ
ನವಲಾಸ್ಯ ಭರಿಸಲಿ
ನವಜೀವನ ನವಯೌವ್ವನ
ನವಭಾವಮಿಳಿಸಲಿ
ನವದುರ್ಗೆಯರಿಗೆ ನಮಿಪೆ
ನವಕಾಂತಿ ಬೆಳಗಲಿ ನವಕಹಳೆ ಮೊಳಗಲಿ

ನವದೇವಿಯರಾ ದಂಡು
ನವವಾಹನದಲಿ ಕುಳಿತು
ನವವೈಭವದಲಿ ಮೆರೆದು
ನವಕಳೆಯ ಬಿಂಬಿಸಿ
ನವರಾಜಯೋಗ ಹರಸಿ
ನವ ಭೋಗಭಾಗ್ಯ ಬೆರೆಸಿ ನವೋಲ್ಲಾಸ ನೀಡಲಿ

ನವಕಾಳಿ ಲಕ್ಷ್ಮಿ ವಿದ್ಯಾ
ನವಚೇತನಗಳ ತುಂಬಿ
ನವನಾಟ್ಯ ಕಲೆ ಸಂಗೀತ
ನವನೀತ ಪಂಚಭಕ್ಷ್ಯ
ನವಧಾನ್ಯ ಬೆಳೆಯುವಂತ
ನವಜಾಯಮಾನದೊಡನೆ ನವಶಕ್ತಿ ತುಂಬಲಿ

ಅಮ್ಮಾ ಭಗವತೀ, ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನ ಇಂತಹ ನವವಿಧ ಭಕ್ತಿಗಳಿಂದ ನಿನ್ನನ್ನು ಆರಾಧಿಸಲು ನಾವು ಶಕ್ತರಲ್ಲ, ನೀನೇ ಅನುಗ್ರಹಿಸಿದ ಕಾಲ, ಮಾನ, ದೇಶ, ಕೋಶ, ಶರೀರ, ಬುದ್ಧಿ ಇವುಗಳನ್ನೆಲ್ಲಾ ಸದುಪಯೋಗ ಪಡಿಸುಕೊಳ್ಳುವಂತೇ ಆದಷ್ಟೂ ಜ್ಞಾನದೆಡೆಗೆ ನಿನ್ನನ್ನು ಕಾಣುವ ಮಾರ್ಗದೆಡೆಗೆ ನಾವು ತೆರಳುವಂತೆ ನಮ್ಮನ್ನು ಅನುಗ್ರಹಿಸು. ಅಲ್ಪರಾದ ನಮ್ಮಿಂದ ನೀನೇನೇ ಕೇಳಿದರೂ ಪಡೆಯಲು ಸಾಧ್ಯವೇ ? ಅಮ್ಮಕೊಡುವ ಪ್ರೀತಿಗೆ ಮಕ್ಕಳು ಭಾಜನರೇ ವಿನಃ ಅಮ್ಮನ ಋಣವನ್ನು ಮಕ್ಕಳು ತೀರಿಸಲಾದೀತೇ ? ಹೀಗಾಗಿ ಅಮ್ಮಾ, ನೀನೇ ಕೊಟ್ಟಿರುವ ಈ ತ್ರಿಕರಣವನ್ನು ಒಮ್ಮೆ ಒಂದು ನಿಮಿಷ ನಿನ್ನ ಮುಂದೆ ಹಿಡಿದರ್ಪಿಸುತ್ತಿದ್ದೇವೆ, ನಮ್ಮ ಸಕಲ ಅಪರಾಧಗಳನ್ನೂ ಕ್ಷಮಿಸಿ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಬೇಕೆಂಬುದು ಪ್ರಾರ್ಥನೆ. ಅಮ್ಮಾ ನೀನು ಇಡೀ ವಿಶ್ವಕ್ಕೇ ಮಂಗಳವುಂಟುಮಾಡಲಾರೆಯೇ ?

ಕಲ್ಯಾಣಾಯುತ-ಪೂರ್ಣಚಂದ್ರವದನಾಂ ಪ್ರಾಣೇಶ್ವರಾನಂದಿನೀಮ್
ಪೂರ್ಣಾಪೂರ್ಣತರಾಂ ಪರೇಶಮಹಿಷೀಂ ಪೂರ್ಣಾಮೃತಾಸ್ವಾದಿನೀಮ್ |
ಸಂಪೂರ್ಣಾಂ ಪರಮೋತ್ತಮಾಮೃತಕಲಾಂ ವಿದ್ಯಾವತೀಂ ಭಾರತೀಮ್
ಶ್ರೀಚಕ್ರಪ್ರಿಯ-ಬಿಂದು-ತರ್ಪಣಪರಾಂ ಶ್ರೀ ರಾಜರಾಜೇಶ್ವರೀಮ್ ||

|| ಲೋಕಾಸಮಸ್ತಾಃ ಸುಖಿನೋ ಭವಂತು ||

Thursday, October 7, 2010

ಮಲ್ಟಿ ಮಸ್ಸಾಜ್ ಥೆರಪಿ !!





ಮಲ್ಟಿ ಮಸ್ಸಾಜ್ ಥೆರಪಿ!!


" ನಮಸ್ಕಾರ ವೀಕ್ಷಕರೇ, ನಿಮಗೆಲ್ಲಾ ಕಳಪೆ ಟಿವಿಗೆ ಸ್ವಾಗತ ಈ ಹಿಂದೆ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ನೀಡಿ ಭಾರತದಲ್ಲಿಯೇ ನಂಬರ್ ಒನ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಳಪೆ ಟಿವಿ ಪ್ರತೀವಾರ ತಮಗೊಂದು ಹೊಸ ಹೊಸ ವಿಚಾರ ಮುಂಡಿಡುತ್ತಿದೆ. ಇವತ್ತೂ ಕೂಡ ನಮ್ಮ ಈ ವಿಶೇಷ ಮಲ್ಟಿ ಮಾಸಾಜ್ ಥೆರಪಿ ಕಾರ್ಯಕ್ರಮದ ಮೂಲಕ ತಮಗೆಲ್ಲಾ ಹಲವು ಗೊತ್ತಿರದ ಮಸಾಜ್ ಥೆರಪಿಗಳ ಬಗ್ಗೆ ಹೇಳಲಿಕ್ಕಿದ್ದೇವೆ. ಈ ನಮ್ಮ ಕಾರ್ಯಕ್ರಮಕ್ಕೆ ಮಲ್ಟಿ ಥೆರಪಿಸ್ಟ್ ಡಾ| ಕಪ್ಪೆಚೆನ್ನಿಗಪ್ಪ ಅವರು ಚಿಕಾಗೋದಿಂದ ಬಂದಿದಾರೆ, ಅವರು ಚಿಕಾಗೋದಲ್ಲಿ ಈ ಒಂದು ರಂಗದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತ ಬಹಳ ಪ್ರಖ್ಯಾತರಾಗಿದ್ದಾರೆ ಹಾಗೂ ಡಾ| ವಿನಯಾ ವೈಭವಿಯವರು ಬಂದಿದ್ದಾರೆ, ಅವರು ಡೆನ್ಮಾರ್ಕ್ ನಲ್ಲಿ ತಮ್ಮ ಥೆರಪಿ ಸೆಂಟರ್ ನಡೆಸುತ್ತಾ ಖ್ಯಾತಿಹೊಂದಿದ್ದಾರೆ. ಡಾ| ಕಪ್ಪೆಚೆನ್ನಿಗಪ್ಪನವರಿಗೆ ನಮಸ್ಕಾರ, ಕಾರ್ಯಕ್ರಮಕ್ಕೆ ಸ್ವಾಗತ"

" ನಮಸ್ಕಾರ "

" ಡಾ| ವಿನಯಾ ವೈಭವಿಯವರಿಗೆ ನಮಸ್ಕಾರ ಹಾಗೂ ಕಾರ್ಯಕ್ರಮಕ್ಕೆ ಸ್ವಾಗತ"

" ನಮಸ್ಕಾರ "

" ಡಾ| ಕಪ್ಪೆಯವ್ರೇ, ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನದ ಕೆಲಸದ ಒತ್ತಡಗಳು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂಬುದನ್ನು ಸಮಾಜ ಮನಗಂಡಿದೆ. ದಿನವೂ ಒಂದಿಲ್ಲೊಂದು ಕಾಯಿಲೆ ಇದರಿಂದ ಹುಟ್ಟಿಕೊಳ್ಳುಟ್ಟಲೇ ಇದೆ. ಈ ನಿಟ್ಟಿನಲ್ಲಿ ಮಾನಸಿಕ ಒತ್ತಡಗಳನ್ನು ದೇಹವನ್ನು ಮಸಾಜ್ ಮಾಡುವ ಮೂಲಕ ಪರಿಹರಿಸಬಹುದೆಂದು ತಜ್ಞರು ಹೇಳುತ್ತಾರೆ. ಮಸಾಜ್ ಗಳಲ್ಲಿ ಹಲವು ತೆರನಾದ ಮಸಾಜ್ ಗಳು ಮನುಷ್ಯನಿಗೆ ಮುದನೀಡುತ್ತವೆ. ಅದರಲ್ಲಂತೂ ಪ್ರಾಯೋಗಿಕವಾಗಿ ತಜ್ಞರು ಕಂಡುಹಿಡಿದ ಹೊಸ ಹೊಸ ಥೆರಪಿಗಳು ಒಂದಕ್ಕಿಂತ ಒಂದು ಭಿನ್ನ ಮತ್ತು ವಿಶೇಷ. ಬನ್ನಿ ಈ ವಿಷಯದ ಬಗ್ಗೆ ನುರಿತ ತಜ್ಞರು ಏನುಹೇಳುತ್ತಾರೋ ನೋಡೋಣ. ಡಾ| ಕಪ್ಪೆಯವರೇ ತಾವೇನಂತೀರಿ "

" ಇದೀಗ ತಾವು ಹೇಳಿದಂತೇ ಮಸಾಜ್ ಥೆರಪಿಗಳು ಮಾನವನ ಬಾಡಿ ಹಾಗೂ ಮೈಂಡ್ ಗೆ ರಿಲಾಕ್ಸ್ ಆಗಲು ಸಹಾಯಮಾಡುತ್ತವೆ. ನಮ್ಮ ಥೆರಪಿ ಸೆಂಟರಿನಲ್ಲಿ ನಾವು ಕಪ್ಪೆ ಮಸಾಜ್ [ಫ್ರಾಗ್ ಮಸಾಜ್] ಎಂಬ ಹೊಸ ರೀತಿಯ ಥೆರಪಿಯನ್ನು ಕಂಡುಹಿಡಿದಿದ್ದೇವೆ. ಇದು ಬಹಳ ಫಲಪ್ರದವಾಗಿ ಕಂಡುಬರುತ್ತದೆ. ತರಬೇತುಗೊಳಿಸಿದ ೧೦-೧೨ ದೊಡ್ಡ ಕಪ್ಪೆಗಳನ್ನು ರೂಮಿನಲ್ಲಿ ಬೆಡ್ ಮೇಲೆ ಮಲಗಿದ ವ್ಯಕ್ತಿಯ ಮೈಮೇಲೆ ಬಿಡಲಾಗುತ್ತದೆ. ಅವು ಅತ್ತಿಂದಿತ್ತ ಜಿಗಿಯುತ್ತ ಕೂಗುತ್ತ, ಉಚ್ಚೆಹಾರಿಸಿದಾಗ ಎಂತಹ ಟೆನ್ಶನ್ ಇದ್ದರೂ ತಂತಾನೇ ಇಳಿದುಹೋಗುತ್ತದೆ. ೩ ವರ್ಷಗಳ ಹಿಂದೆ ಪ್ರಪ್ರಥಮವಾಗಿ ಇದನ್ನು ನಾಸಾದ ವಿಜ್ಞಾನಿಯೊಬ್ಬರ ಮೇಲೆ ಪ್ರಾಯೋಗಿಕವಾಗಿ ನೋಡಬೇಕೆಂದುಕೊಂಡಾಗ ಬೆಂಗಳೂರಿನಿಂದ ಮಗಳಮನೆಗೆ ಬಂದ ರಾಮೇಗೌಡರು ಮೊದಲಾಗಿ ತಾವೇ ಬರುತ್ತೇವೆ ಎಂದು ಹಠಮಾಡಿದ್ದರಿಂದ ಅವರ ಮೇಲೇ ಪ್ರಯೋಗಿಸಿದೆವು. ಪ್ರಯೋಗ ಮುಗಿದು ಹೊರಗೆ ಬಂದಾಗ ರಾಮೇಗೌಡರ ಟೆನ್ಶನ್ ನಿವಾರಣೆಯಾಗಿ ಬರೇ ಕಪ್ಪೆ ಕಪ್ಪೆ ಎನ್ನುತ್ತಿದ್ದರು. ಸ್ವಲ್ಪ ಹೆದರಿದ್ದಾರೇನೋ ಎನಿಸಿತು. ಮಾರನೇ ದಿನದಿಂದ ಆರಾಮಾಗಿದ್ದಾರೆ. ಕಪ್ಪೆಯನ್ನು ಕಂಡರೆ ಆಗೋದಿಲ್ಲ ಅಷ್ಟೇ "

" ಡಾ| ವಿನಯಾ ಅವರೇ ತಮ್ಮ ಅಭಿಪ್ರಾಯವೇನೆಂದು ತಿಳಿದುಕೊಳ್ಳಬಹುದೇ ? "

" ಡಾ| ಕಪ್ಪೆಚೆನ್ನಿಗಪ್ಪ ಹೇಳಿದ ಹಾಗೇ ಹೊಸ ಥೆರಪಿಗಳು ಬಹಳ ಉತ್ತಮ ಫಲಿತಾಂಶೆ ನೀಡುತ್ತಿವೆ. ಡೆನ್ಮಾರ್ಕ್ ನ ನಮ್ಮ ಯೂನಿಟ್ ನಲ್ಲಿ ನಾವು ಭಾರತೀಯ ಮೂಲದ ಗಿಳಿಗಳನ್ನು ಕೊಂಡೊಯ್ದು ಗಿಳಿ ಥೆರಪಿ [ಪ್ಯಾರಟ್ ಮಸಾಜ್] ಮಾಡುತ್ತೇವೆ, ಇದಲ್ಲದೇ ಮಾಸ್ಕ್ವಿಟೋ ಮಸಾಜ್ ಅಥವಾ ಸೊಳ್ಳೆ ಥೆರಪಿ ಸಹಿತ ನಡೆಸುತ್ತಿದ್ದೇವೆ. ಬೆಡ್ಬಗ್ ಮಸಾಜ್ ಅಥವಾ ತಿಗಣೆ ಥೆರಪಿ ಕೂಡಾ ಪ್ರಾಯೋಗಿಕ ಹಂತದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅದನ್ನೊ ಸಹಿತ ಭಾರತಕ್ಕೆ ಬಂದು ಸಾರ್ವಜನಿಕ ಸೇವೆಗೆ ಅರ್ಪಿಸಲಿದ್ದೇವೆ. "

" ತಮ್ಮ ಥೆರಪಿಗಳ ಬಗ್ಗೆ ಸ್ವಲ್ಪ ವಿವರವಾಗಿ ತಿಳ್ಕೋಬೌದಾ ಡಾ| ವಿನಯಾ ಅವರೇ ? "

" ಅವಶ್ಯವಾಗಿ, ಮೊದಲನೇದಾಗಿ [ಪ್ಯಾರಟ್ ಮಸಾಜ್] ಗಿಳಿಥೆರಪಿಯಲ್ಲಿ ಹತ್ತಾರು ಗಿಳಿಗಳನ್ನು ಟ್ರೇನ್ ಮಾಡಿ ಅವುಗಳು ಕುಳಿತಿರುವ ರೂಮಿನಲ್ಲಿ ವ್ಯಕ್ತಿಯನ್ನು ಬಿಡಲಾಗುತ್ತದೆ. ಲೈಟ್ ಆಗಿ ಬ್ಯಾಡಾಗಿಮೆಣಸಿನ ಹೊಗೆ ಹಾಕಿದಾಗ ಗಿಳಿಗಳು ಕ್ರೋಧಗೊಂಡು ಹಾರಾಡತೊಡಗುತ್ತವೆ. ಅವುಗಳ ಜೊತೆ ವ್ಯಕ್ತಿಕೂಡ ಸ್ವಲ್ಪ ಕೆಮ್ಮುತ್ತ ಕುಣಿಯುವುದರಿಂದ ಗಿಳಿಗಳು ಹೆದರಿ ಆ ವ್ಯಕ್ತಿಯ ಮೈಮೇಲೆ ಹಿಕ್ಕೆ ಹಾಕುತ್ತವೆ ಮತ್ತು ಕೆಲವೊಮ್ಮೆ ಸ್ವಲ್ಪ ಕಚ್ಚುತ್ತವೆ. ಸರಿಯಾದ ಆಯಕಟ್ಟಿನ ನರಮಂಡಲವಿರುವ ಭಾಗಗಳಲ್ಲಿ ಅವು ಕಚ್ಚುವುದರಿಂದ ಕೇವಲ ೧೫ ನಿಮಿಷದಲ್ಲಿ ವ್ಯಕ್ತಿ ರಿಲಾಕ್ಸ್ ಆಗಿಬಿಡುತ್ತಾನೆ "

" ಇನ್ನು ಸೊಳ್ಳೆ ಥೆರಪಿಕೂಡ ಹಾಗೇ , ಸುಮಾರು ನೂರಿನ್ನೂರು ಸೊಳ್ಳೆಗಳು ತುಂಬಿರುವ ರೂಮಿನಲ್ಲಿ ವ್ಯಕ್ತಿಯನ್ನು ಅಂಗಾತ ಮಲಗಿಸಿ ಹೊಟ್ಟೆಯ ಮೇಲೆ ತಣ್ಣೀರು ಪಟ್ಟಿ ಹಚ್ಚಲಾಗುತ್ತದೆ. ತರಬೇತುಗೊಂಡು ತಯಾರಾಗಿರುವ ಡಾಕ್ಟರ್ ಸೊಳ್ಳೆಗಳು ಒಂದೇ ಸಮನೆ ಗುಂಯ್ ಕಾರದಿಂದ ಮುತ್ತಿಕೊಂಡು ಮುತ್ತುಕೊಡುತ್ತವೆ. ಅಲ್ಲಲ್ಲಿ ಕಡಿಯುವುದು ಶರೀರಕ್ಕೆ ಬಹಳ ಹಿತಕರವಾಗಿರುತ್ತದೆ. ಮೇಲಾಗಿ ಸುಖದ ಸುಪ್ಪತ್ತಿಗೆಯಲ್ಲಿರುವ ಬಹಳ ಜನರಿಗೆ ಸೊಳ್ಳೆಯ ಕಡಿತದ ರುಚಿ ನೋಡಸಿಗುವುದಿಲ್ಲ, ಇಲ್ಲಿ ಅದನ್ನು ಅನುಭವಿಸಿ ಬಹಳ ಖುಷಿಪಡುತ್ತಾರೆ. ಥೆರಪಿ ಮುಗಿದು ಹೊರಡುವಾಗ ಬಾಯ್ತುಂಬಾ ಹೊಗಳುತ್ತಾರೆ. ಒಬ್ಬರಂತೂ ಕೆಲವು ಸೊಳ್ಳೆಗಳನ್ನು ಗುರುತಿಸಿ ನಾಮಕರಣಮಾಡಿದ್ದಾರೆ. ಕಡಿಯುವುದರಲ್ಲಿ ನಿಸ್ಸೀಮವಾದ ಕೆಲವು ಸೊಳ್ಳೆಗಳನ್ನು ಒಬ್ಬರು ತಮಗೆ ಸಾಕಲುಕೊಡಿ ಎಂದು ದುಂಬಾಲು ಬಿದ್ದರು. ಈಗಾಗಲ್ಲ, ಇನ್ನೇನು ಬ್ರೀಡಿಂಗ್ ಆಗ್ತಾ ಇದೆ, ನೆಕ್ಸ್ಟ್ ನೀವು ಬಂದಾಗ ಹತ್ತಿಪ್ಪತ್ತು ಕೊಡೂತ್ತೇವೆ ಎಂದಿದ್ದೇನೆ. ಅನೇಕರು ಸೊಳ್ಳೆಗಳು ಅಪಾಯಕಾರಿ ಎಂದು ಸುಮ್ಮನೇ ದೂರುತ್ತಾರೆ, ಆದರೆ ಅವುಗಳ ಉಪಯೋಗವನ್ನು ಒಮ್ಮೆ ಅರಿತರೆ ಅವುಗಳನ್ನು ಸಾಕಲು ತೊಡಗುತ್ತಾರೆ. ಸೊಳ್ಳೆ ಸಾಕಣೆ ನಿಟ್ಟಿನಲ್ಲಿ ಬಹಳ ಜನ ಮುಂದೆ ಬಂದರೆ ನಮ್ಮ ದೇಶ ಉದ್ಧಾರವಾದಹಾಗೇ. ಅದಕ್ಕೇ ನಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನೂ ಕಿಂಚಿತ್ತೂ ಕೊರತೆಯಿಲ್ಲದೇ ನಡೆಸುತ್ತಿದ್ದೇವೆ."

" ಇನ್ನು ತಿಗಣೆ ಥೆರಪಿಯಂತೂ ಸಮಾಜಕ್ಕೆ ಬಹುದೊಡ್ಡ ವರವಾಗಿದೆ. ಪಳಗಿದ ಕಡಲೇಕಾಳಿನ ಗಾತ್ರದ ತಿಗಣೆಗಳನ್ನು ಮಲಗಿರುವ ವ್ಯಕ್ತಿಯ ಸಮೀಪಬಿಟ್ಟಾಗ ವ್ಯಕ್ತಿಯನ್ನು ಮುದ್ದಿಸಿ ಆತನ ಶರೀರದಿಂದ ಮಲಿನ ರಕ್ತವನ್ನು ಅವು ಕುಡಿಯುವುದರಿಂದ ವ್ಯಕ್ತಿಗೆ ಹೊಸ ಜೀವಕಳೆ ಬರುತ್ತದೆ. ಸ್ವಲ್ಪವೇ ತುರಿಕೆ ಇದ್ದರೂ ಸಹಿತ ತನ್ನ ಮನೆಯನ್ನೇ ಮರೆಯುವ ವ್ಯಕ್ತಿ, ದೈನಂದಿನ ವ್ಯವಹಾರ-ಜಂಜಾಟ ಇವುಗಳನ್ನೆಲ್ಲಾ ಮರೆತು ಶಾಂತನಾಗುತ್ತಾನೆ, ವಿಶ್ರಾಂತಿಯಿಂದ ಎಚ್ಚೆತ್ತಾಗ, ಸಚಿನ್ ತೆಂಡೂಲ್ಕರ್ ’ ಮೈ ಕಂಹಾ ಹೂಂ ’ ಎಂದು ಕೋಲಾ ಕುಡಿದು ಹೇಳಿದ ರೀತಿಯಲ್ಲೇ ಉದ್ಗರಿಸುತ್ತಾನೆ. ಇದು ಆತ ಅನುಭವಿಸಿದ ಅತೀವ ವಿಶ್ರಾಂತಿಯ ಉಚ್ಛ್ರಾಯ ಸ್ಥಿತಿ. ಅಲ್ಲಿಂದ ಎದ್ದು ಆಚೆ ಬಂದ ವ್ಯಕ್ತಿಗೆ ವಾರಗಟ್ಟಲೆ ಅದರ ಗುಂಗೇ ಇರುವುದರಿಂದ ಬೇರೆಲ್ಲಾ ಟೆನ್ಶನ್ ಮಾಯವಾಗಿಬಿಡುತ್ತದೆ. ಹೀಗಾಗಿ ಪ್ರಾಯೋಗಿಕ ಹಂತದಲ್ಲಿರುವ ಈ ಚಿಕಿತ್ಸೆ ಸೇವೆಗೆ ಲಭ್ಯವಾದಮೇಲೆ ಭಾರತದಲ್ಲಿ ಇರುವ ಎಲ್ಲಾ ತಿಗಣೆಕುಲಗಳನ್ನೂ ಪರಿಶೋಧಿಸಿ ಅವುಗಳ ಯಜಮಾನರಿಗೆ ಗುರುತಿನ ಚೀಟಿ ಕೊಡಲಾಗುತ್ತದೆ. ಅತೀ ಹೆಚ್ಚು ತಿಗಣೆಗಳನ್ನು ಬೆಳೆಸಿದ ಒಬ್ಬ ವ್ಯಕ್ತಿಗೆ ಪ್ರತೀವರ್ಷ ’ಪಂದ್ಯ ಪುರುಷೋತ್ತಮ’ ಪ್ರಶಸ್ತಿ ನೀಡಿ ವೈಟ್ ಮೆಟಲ್ ತಿಗಣೆ ಸೇರಿದಂತೆ ಫಲತಾಂಬೂಲವಿತ್ತು ನೆರೆಯುವ ಸಾವಿರ ಸಾವಿರ ತಿಗಣೆ ಕೃಷಿಕರಮುಂದೆ ಸನ್ಮಾನಿಸಲಾಗುತ್ತದೆ. ಇವೆಲ್ಲಾ ನಮ್ಮ ಭವಿಷ್ಯದ ಯೋಜನೆಗಳು "

" ವೀಕ್ಷಕರೇ ಸಮಯ ಯಾರಿಗೂ ಕಾಯುವುದಿಲ್ಲ. ನಾವು ಮಲ್ಟಿ ಮಸಾಜ್ ಗಳ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ಡಾ| ಕಪ್ಪೆಚೆನ್ನಿಗಪ್ಪ ಮತ್ತು ಡಾ| ವಿನಯಾ ವೈಭವಿಯವರುಗಳಿಂದ ಪಡೆದಿದ್ದೇವೆ. ಕಾರ್ಯಕ್ರಮಕ್ಕೆ ಬಂದು ತಮ್ಮ ಅನುಭವವನ್ನು ಹಂಚಿಕೊಂಡು ನಮಗೆ ಪೂರಕ ಮಾಹಿತಿಯನ್ನು ಒದಗಿಸಿಕೊಟ್ಟಿದ್ದಕ್ಕೆ ಡಾ| ಕಪ್ಪೆಚೆನ್ನಿಗಪ್ಪ ಮತ್ತು ಡಾ| ವಿನಯಾರವರುಗಳಿಗೆ ಕಳಪೆ ಟಿವಿಯ ಪರವಾಗಿ ನಮ್ಮ ತಂಡದಿಂದ ಅಭಿನಂದನೆಗಳು."

" ನಮಸ್ಕಾರ "

Wednesday, October 6, 2010

ಹರಿಣಾಕ್ಷಿ

ರಾಜಾರವಿವರ್ಮ ರಚಿತ ಚಿತ್ರ ಕೃಪೆ : ಅಂತರ್ಜಾಲ

ಹರಿಣಾಕ್ಷಿ
ಹರಿಣಿಯು ಜಿಗಿವಾ ತರೆದಲಿ
ಭರದಲಿ ಹರಿಣಾಕ್ಷೀ ನೀ
ಕರೆದೆಯೇನೆ ? ಶರವೆಸೆದೆಯೇನೆ ?
ಥರಥರ ಜಿಗಿದೂ ಕಂಗಳ ಸೆಳೆದೂ
ಅರೆವಳಿಕೆಯ ಕೊಟ್ಟಿರುವೆಯೇನೆ ?

ಬಿರುಬಿಸಿಲ ಝಳ ಮರೆತಿರುವಾಗಿನ
ಹರವು ಬಲುತಂಪು ಹಿತವೆನಗೆ
ನೊರೆಹಾಲ ಕೊಟ್ಟ ಕೈ ತೊರೆವೆನೇನೆ ?
ಮರೆವೆನೇನೆ ? ಮೈಮರೆಯನೇನೆ ?

ತಿರೆಯೆಲ್ಲವು ದೇವೇಂದ್ರನ ನಂದನ
ತಿರುಗುತ್ತಿರೆ ನೀ ಒಳಹೊರಗೆ
ಇರಿವ ಕಣ್ಣೋಟ ನಿನ್ನ ಮೈಮಾಟ
ಸರಿಯುಂಟೇ ? ಮಿಗಿ ಮಿಗಿಲುಂಟೇ ?

ಬರಿದೆ ಮಸಲತ್ತು ಮತ್ತು ಬರಿಸುತಿದೆ
ನೆರೆಕೆರೆಯ ಜನರು ನೋಡುವರು
ಹರಿವಾಣದಂತ ನನ್ನೆದೆಯ ತುಂಬಿರುವ
ಪರಿಕಾಣದೇನೆ ? ಮನಗಾಣದೇನೆ ?

ತೊರೆಪಕ್ಕದಲ್ಲಿ ಬೆಳೆದಿರುವ ರಂಭೆಯಾ
ಭರಪೂರ ಬೆಳೆದ ಆ ನಿನ್ನ ಊರು
ಕರವೀರ ಸಂಪಿಗೆಯ ನಾಸಿಕದವಳೇ
ಗುರಿಯಿಟ್ಟೆಯೇನೆ ? ಅಂಬೆಸೆದೆಯೇನೆ ?

ಹರೆಯ ಹುಡುಕಿತ್ತು ನಿನ್ನಕಂಡಾಗಿಂದ
ಬರಿದಾಯ್ತು ಬದುಕು ನೀನದಕೆಬೇಕು
ಪರಿಪಕ್ವಗೊಳ್ಳುವರೆ ಕಾಯಲಾರೆ
ಬರಲಾರೆಯೇನೆ ? ಇರಲಾರೆಯೇನೆ ?

ಮೊರೆಮೊರೆದು ಸ್ವಾಗತಿಪ ಕುರುಹಕಂಡೆ
ಗರಿಬಿಚ್ಚಿ ನಿಂತ ನವಿಲನ್ನು ಕಂಡೆ
ಅರೆನಿದ್ದೆಯ ನಟಿಸುವ ನಯನಕಂಡೆ
ತರವೇನೆ ನಿನಗೆ? ಬರಲೊಲ್ಲೆಯಾಕೆ
?

Tuesday, October 5, 2010

ಯಕ್ಷಗಾನ-ದಶಾವತಾರಕಥೆಗಳಿಗೆ ಮೀಸಲಾಗಿರಲಿ


ಯಕ್ಷಗಾನ-ದಶಾವತಾರಕಥೆಗಳಿಗೆ ಮೀಸಲಾಗಿರಲಿ


ಕರಾವಳಿ ಜಿಲ್ಲೆಗಳ ಯಕ್ಷಗಾನವನ್ನು ನಮ್ಮ ಪೂರ್ವಜರು ಅತ್ಯಂತ ಬೇಸರದ ದಿನಗಳಾದ ಮಳೆಗಾಲದಲ್ಲಿ ಅವರ ಸಮಯಕಳೆಯುವದರ ಜತೆಗೆ ದೇವರ ಸೇವೆ ಎಂಬರೀತಿ ನಡೆಸಿಕೊಂಡು ಬಂದರು. ಅಂದಿನ ಪುಣ್ಯಪುರುಷರು ಬರೆದ ಆ ರಸಗವಳಗಳಲ್ಲಿ ಅದ್ಬುತ ಪ್ರಾಸಬದ್ಧ ಸಾಹಿತ್ಯ, ಪೂರಕ ಅರ್ಥ ಮತ್ತು ನವರಸಗಳ ರಸಪಾಕ ಇಳಿಸಿ ಸೋಸಿಕೊಟ್ಟ ಜಗನ್ನಿಯಾಮಕ ಮಹಾವಿಷ್ಣುವಿನ ದಶಾವತರದ ಕಥೆಗಳೇ ಅಡಕವಾಗಿವೆ. ರಾಮಾಯಣ, ಮಹಾಭಾರತ ಅಥವ ಭಾಗವತದಲ್ಲಿ ಬರುವ ಎಲ್ಲಾ ಕಥಾಭಾಗಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ತಕ್ಕಹಾಗೆ ಅಲ್ಲಿಬರಬಹುದಾದ ಘಟನೆಗಳನ್ನೇ ಆಧರಿಸಿ ಹಾಸ್ಯಹೂರಣವನ್ನೂ ತುಂಬಿದರು. ಆದರೆ ಮೂಲಕಥಾಭಾಗಗಳಿಗೆ ಎಲ್ಲೂ ಘಾಸಿಯಾಗದಂತೇ, ಎಲ್ಲೂ ಆಭಾಸವಾಗದಂತೇ ಪ್ರಸಂಗಗಳನ್ನು ರಚಿಸಿದರು. ಅವುಗಳನ್ನು ಮೂಲವಾಗಿ ತಾಳಮದ್ದಲೆ ಎಂಬುದಾಗಿ ಪ್ರಾಯೋಗಿಕವಾಗಿ ಉಪಯೋಗಿಸಿ ಆಮೇಲೆ ನಾನಾ ಆವಿಷ್ಕಾರಗಳನ್ನು ಹಂತಹಂತವಾಗಿ ರೂಪಿಸಿದರು. ಇಂತಿಂತಹ ಪಾತ್ರಗಳಿಗೆ ಇಂತಿಂತಹ ವೇಷಭೂಷಣಗಳೆಂಬ ಒಂದು ಸತ್ಸಂಪ್ರದಾಯವನ್ನು ಹುಟ್ಟುಹಾಕಿದರು.

ಸಭಾಲಕ್ಷಣ ಅಥವಾ ಸಭಾಪೂಜೆಯೊಂದಿಗೆ ಪ್ರಾರಂಭವಾಗುತ್ತಿದ್ದ ರಂಗಪ್ರಸಂಗ ತನ್ನೊಳಗೆ ಆದಿಪೂಜಿತನಾದ ಗಣಪನನ್ನು ಸ್ತುತಿಸಿ ಅಮೇಲೆ ಶಾರದಂಬೆಯನ್ನೂ ಹಲವು ಕವಿಜನರನ್ನೂ ಒತ್ತಟ್ಟಿಗೆ ನಮಿಸಿ ನಂತರ ಹೆಣ್ಣುವೇಷ, ಬಾಲಗೋಪಾಲರವೇಷ ಹೀಗೇ ಸಾಗಿ ಆನಂತರದಲ್ಲಿ ತೆರೆಕುಣಿತದೊಂದಿಗೆ ಸಭಾಲಕ್ಷಣಭಾಗ ಅಂತ್ಯವಾಗಿ ಪ್ರಮುಖ ಆಖ್ಯಾನದ ಕಥಾಭಾಗ ಪ್ರಾರಂಭಗೊಳ್ಳುತ್ತಿತ್ತು. ಪೂರ್ಣರಾತ್ರಿ ನಡೆಸಲ್ಪಡುವ ಈ ಯಕ್ಷಗಾನ ಅಂದಿನ ಆ ಕಾಲದಲ್ಲಿ ದೀವಟಿಗೆಗಳ ಬೆಳಕಿನಲ್ಲಿ ನಡೆಸಲ್ಪಡುತ್ತಿತ್ತು ಎಂಬುದು ತಿಳಿದುಬರುತ್ತದೆ. ಓದಲು ಬರೆಯಲು ಬಾರದ ಹಳ್ಳಿಯಜನರಿಗೂ ಸೇರಿದಂತೆ ಸಮಸ್ತಸಮಾಜಕ್ಕೆ ಒಳಿತನ್ನು ಪೌರಾಣಿಕ ಕಥೆಗಳ ಮೂಲಕವೇ ತಿಳಿಹೇಳುತ್ತಿದ್ದ ಕಾಲ ಅದಾಗಿತ್ತು. ಸಮಾಜದ ದ್ವೇಷ-ವೈಷಮ್ಯ, ದುಃಖ-ದುಮ್ಮಾನ, ಕಷ್ಟಕಾರ್ಪಣ್ಯ, ನೋವು-ನಲಿವು ಎಲ್ಲವನ್ನೂ ಸಮಷ್ಟಿಯಲ್ಲಿ ಬರುವಂತೇ ಬ್ಯಾಲೆನ್ಸಿಂಗ್ ಆಕ್ಟ್ ನಡೆಸುವುದು ಯಕ್ಷಗಾನದ ಉದ್ದೇಶವಾಗಿತ್ತು.

ಇಂತಹ ಕಥಾಭಾಗವನ್ನು ರಾಗ,ತಾಳ, ಲಯ-ಲಾಲಿತ್ಯಗಳಿಂದ, ಹಾವ-ಭಾವ ಭಂಗಿಗಳಿರುವ ಅತಿವಿಶಿಷ್ಟ ಕುಣಿತಗಳಿಂದ ಜನರನ್ನು ರಂಜಿಸುವಲ್ಲಿ ಸಮಗ್ರ ಕಲೆಯಾಗಿ ಯಕ್ಷಗಾನ ನಡೆದುಬಂದಿತ್ತು. ಪ್ರಾಯಶಃ ಬ್ರಿಟಿಷರ ಆಳ್ವಿಕೆಯ ಕಾಲದಲ್ಲೂ ಕೂಡ ಇದು ಸರಿಯಾಗೇ ನಡೆದಿತ್ತೆಂದರೆ ತಪ್ಪಾಗಲಿಕ್ಕಿಲ್ಲ! ಹಲವಾರು ಕಲಾವಿದರು ತಮ್ಮ ತಮ್ಮಲ್ಲೇ ಆ ಕಲೆಯ ಅಭಿವ್ಯಕ್ತಿಯನ್ನು ಸಾದರಪಡಿಸುವಲ್ಲಿ ಒಳ್ಳೆಯ ಕಂಠಸಿರಿಯಿಂದ ಭಾಗವತಿಕೆಯನ್ನೂ, ಲಯದ ಹದವರಿತು ಮದ್ದಲೆಯನ್ನೂ, ಪೂರಕವಾಗಿ ಗಚ್ಚುಗಾರಿಕೆಗಾಗಿ ಚಂಡೆಯನ್ನೂ ಮೈಗೂಡಿಸಿಕೊಂಡು ತೋರ್ಪಡಿಸಿದರೆ, ಕುಣಿತದಲ್ಲಿ ಹಾಗೂ ಮಾತುಗಾರಿಕೆಯಲ್ಲಿ ತಮ್ಮದೇ ಆದ ಘನತೆ,ಗಾಂಭೀರ್ಯ ಮತ್ತು ಪಾಂಡಿತ್ಯವನ್ನು ಪ್ರದರ್ಶಿಸಲು ಮುಮ್ಮೇಳದ ಕಲಾವಿದರು ಅವಿರತ ಶ್ರಮವಹಿಸುತ್ತಿದ್ದರು. ಯಕ್ಷಗಾನವನ್ನು ಕೇವಲ ಹೊಟ್ಟೆಪಾಡಿಗಾಗಿ ಅಳವಡಿಸಿಕೊಳ್ಳದೇ ರಂಜನೀಯ ಕಲಾಪ್ರಾಕಾರವಾಗಿ, ಸಮಾಜದ ಸೇವೆಯಾಗಿ ತನ್ಮೂಲಕ ಜನತಾಜನಾರ್ದನ ಸೇವೆಯಾಗಿ ಅದನ್ನು ನಡೆಸಿಕೊಡುತ್ತಿದ್ದರು. ಬಹುತೇಕ ಬಯಲಾಟಗಳೇ ನಡೆಯುತ್ತಿದ್ದ ಆ ಕಾಲದಲ್ಲಿ ಎಲ್ಲವೂ ಪೌರಾಣಿಕ ಪ್ರಸಂಗಗಳೇ ಆಗಿದ್ದವು. ನೋಡಿದ ಪ್ರಸಂಗವನ್ನೇ ನೋಡಲು ಬೇಸರವೇನೂ ಆಗುತ್ತಿರಲಿಲ್ಲ. ಕಾರಣವಿಷ್ಟೇ: ಒಂದೇ ಹಾಡನ್ನು ಹಲವರ ಕಂಠಸಿರಿಯಲ್ಲಿ ಹಲವು ರಾಗಗಳಲ್ಲಿ ನಾವು ಸಂಗೀತರಂಗದಲ್ಲಿ ಬಹಳಸರ್ತಿ ಕೇಳುವಂತೇ ಇಲ್ಲೂ ಕಲಾವಿದರು ಬದಲಾಗುತ್ತಿದ್ದರು, ಅಥವಾ ಉಳಿದ ರಂಗಭೂಮಿಯಂತೇ ಬಾಯಿಪಾಠ ಯಾ ಕಂಠಪಾಠಮಾಡಿ ಹೇಳುವ ಸಂಭಾಷಣೆಗಳು ಇಲ್ಲವಾದುದರಿಂದ ಪ್ರತೀದಿನ ಅದೇ ಪ್ರಸಂಗದ ಪುನರಾವರ್ತನೆಯಾದರೂ ಅರ್ಥಗಾರಿಕೆಯಲ್ಲಿ ವ್ಯತ್ಯಾಸವನ್ನು ಕಾಣಬಹುದಿತ್ತು. ಕೆಲವೊಮ್ಮೆ ಅತೀ ಉತ್ಕೃಷ್ಟ ಸನ್ನಿವೇಶಗಳು ಪಾತ್ರಧಾರಿಗಳ ಮಾತಿನ ಚಕಮಕಿಯಿಂದಲೋ ಅಥವಾ ಕುಣಿತದ ಭಂಗಿಗಳ ಪೈಪೋಟಿಯಿಂದಲೋ ಜನರಿಗೆ ಹರ್ಷವನ್ನು ತಂದುಕೊಡುತ್ತಿದ್ದವು.

೬೦ರ ದಶಕದ ನಂತರ ಕಾಲದಲ್ಲಿ ಬಹಳ ಪರಿವರ್ತನೆಗಳಾದವು. ಬಯಲಾಟದ ತಂಡಗಳೆಲ್ಲಾ ವ್ಯವಸಾಯೀ ಮೇಳಗಳಾಗಿ ತಂಬು-ಗುಡಾರ ಸಮೇತ ತಮ್ಮ ಬಿಡಾರವನ್ನು ಊರಿಂದೂರಿಗೆ ವರ್ಗಾಯಿಸುತ್ತ ಟಿಕೆಟ್ ಇಟ್ಟು ಆಟ ಆಡಿದರು. ಸಲ್ಲಬೇಕಾದ ಗೌರವವೇ, ತಪ್ಪೇನಿರಲಿಲ್ಲ. ಒಂದೊಂದು ಮೇಳಕ್ಕೂ ಒಬ್ಬೊಬ್ಬ ಯಜಮಾನರು, ಅವರ ಕೆಳಗೆ ಮೇಳದ ದಿನದ ವಹಿವಾಟಿನ ಉಸ್ತುವಾರಿಗೆ ಸಂಬಳದ ಮೇಲೆ ವ್ಯವಸ್ಥಾಪಕರು ಅವರ ಕೆಳಗೆ ಕಲಾವಿದರು, ತಂಬುಕಟ್ಟುವವರು ಹೀಗೇ ಎಲ್ಲರೂ ಸಮಯಕ್ಕನುಗುಣವಾಗಿ ತಂತಮ್ಮ ಕೆಲಸದಲ್ಲಿ ನಿರತರಾಗಿರುತ್ತ ಮೇಳವನ್ನು ನಡೆಸುವಲ್ಲಿ ಸಹಕರಿಸುತ್ತಿದ್ದರು. ಆನಂತರ ಕಂತ್ರಾಟುದಾರರು ತಯಾರಾದರು. ಓಮ್ದು ಪ್ರಸಂಗಕ್ಕೆ ಇಂತಿಷ್ಟು ಅಂತ ಮೇಳದ ಯಜಮಾನರಿಗೆ ಕೊಟ್ಟುಬಿಡುವುದು, ಟಿಕೆಟ್ ಕಂತ್ರಾಟುದಾರರೇ ವಿತರಿಸಿಕೊಂಡು ಬರುವ ಹೆಚ್ಚಿನ ಹಣವನ್ನು ಯಾವುದೋ ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳಲು ಆರಂಭಿಸಿದರು.

ಸಿನಿಮಾ ಮತ್ತು ಟಿವಿ ಮಾಧ್ಯಮ ಪ್ರಚಾರಕ್ಕೆ ಬಂದಮೇಲೆ, ಬಳಕೆ ಜಾಸ್ತಿಯಾದಮೇಲೆ, ಯುವಜನಾಂಗ ತಮ್ಮ ಉದರಂಭರಣೆಗಾಗಿ ಪರಊರಿಗೆ ಹೊರಟಮೇಲೆ ಯಕ್ಷಗಾನದ ಪ್ರೇಕ್ಷಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂತು. ಮೇಳಗಳನ್ನು ನಡೆಸುತ್ತಿದ್ದ ಯಜಮಾನರುಗಳು ಕೈಸುಟ್ಟುಕೊಂಡರು. ಹಾಗೂ ಹೀಗೂ ಹತ್ತಾರು ವರ್ಷ ಸಾಲದಲ್ಲೋ ಸೋಲದಲ್ಲೋ ನಡೆಸುತ್ತ ಆಮೇಲೆ ಮೇಳದ ಬೋರ್ಡುಮಾತ್ರ ಹಾಗೇ ಇಟ್ಟುಕೊಂಡು ಮಿಕ್ಕುಳಿದ ತಂಬು-ತುರಾಯಿಗಳನ್ನು ಹುಟ್ಟಿದಷ್ಟಕ್ಕೆ ಮಾರಾಟಮಾಡಬೇಕಾಗಿ ಬಂದದ್ದು ಕಾಲಘಟ್ಟದಲ್ಲಿ ನಡೆದ ವಿಪರ್ಯಾಸ. ಈ ದಿಸೆಯಲ್ಲಿ ದಿ| ಕೆರೆಮನೆ ಶಂಭು ಹೆಗಡೆಯವರು ತಮ್ಮ ಮುಂದಾಲೋಚನೆಯಿಂದ ಬಹಳ ಶೀಘ್ರವಾಗಿ ಮೇಳವನ್ನು ಮೊಟಕುಗೊಳಿಸಿ ಕಾಲಮಿತಿ ಪ್ರಯೋಗವೆಂಬ ಹೊಸತನವನ್ನು ರೂಪಿಸಿದರು. ಕೇವಲ ೩ ಘಂಟೆಯಲ್ಲಿ ಪ್ರಸಂಗವನ್ನು ಮುಗಿಸುವ ಪರಿಪಾಠ ಬೆಳೆಯಿತು. ಆನಂತರ ಹಲವರು ಅವರನ್ನು ಅನುಸರಿಸಿದರು.

ಯಕ್ಷಗಾನದ ನಿಜವಾದ ಅಭಿವ್ಯಕ್ತಿ ಬರುವುದು ಅದನ್ನು ಪ್ರಸಂಗದಲ್ಲಿ ಇರುವ ಎಲ್ಲಾ ಹಾಡುಗಳನ್ನೂ ಸನ್ನಿವೇಶಗಳನ್ನೂ ಬಳಸಿ ಪ್ರದರ್ಶಿಸಿದಾಗ ಮಾತ್ರ! ಹಾಡುಗಳನ್ನು ಕತ್ತರಿಸಿ, ಅರ್ಥವನ್ನೂ ಮೊಟಕುಗೊಳಿಸಿ ಮಾಡುವ ಯಕ್ಷಗಾನ ಹೊಸದಾಗಿ ನೋಡುವವರಿಗೆ ಅರ್ಥವಾಗದೇ ಹೋದರೆ ಹಳಬರಿಗೆ ಹುಣಿಸೇಹಣ್ಣು ತಿಂದ ಅನುಭವ! ಏತನ್ಮಧ್ಯೆ ತೆಂಕು-ಬಡಗು-ಬಡಾಬಡಗು ಎಂಬ ಮೂರುತೆರನಾದ ಯಕ್ಷಗಾನ ತಿಟ್ಟುಗಳಲ್ಲಿ ಕೆಲಸಕ್ಕೆ ಬಾರದ ಏನನ್ನೋ ಕೂಗುವ ಭಾಗವತರುಗಳು ಹುಟ್ಟಿಕೊಂಡರು! ಇಂದು ಇಲ್ಲಿ ನಾಳೆ ಮತ್ತೆಲ್ಲೋ, ಒಟ್ಟಿನಲ್ಲಿ ದುಡ್ಡಿಗಾಗಿ ಕಲೆಯನ್ನು ಪ್ರಚುರಪಡಿಸುವ ’ಕಲಾವಿದರೇ’ ಜಾಸ್ತಿಯಾದರು. ಇಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಟ್ಟರೆ ಮಿಕ್ಕುಳಿದಂತೇ ಎಲ್ಲೂ ಯಕ್ಷಗಾನದ ವೃತ್ತಿನಿರತ ಪರಿಪೂರ್ಣ ಮೇಳಗಳಿಲ್ಲ. ಕಲಾವಿದರು ಕಟ್ ಆಂಡ್ ಪೇಸ್ಟು ! ನೀವೇ ಓದಿದ ಹಲವಾರು ಹ್ಯಾಂಡ್ ಬಿಲ್ ಗಳಲ್ಲಿ ಹಿಮ್ಮೇಳ ಮತ್ತು ಮುಮ್ಮೇಳಗಳನ್ನು ಪರಿಗಣಿಸಿ, ಬಹುತೇಕ ಎಲ್ಲರೂ ಎಲ್ಲಕಡೆಗೂ ಇರುತ್ತಾರೆ! ಹೀಗಾಗಿ ಇಂಥವರು ಇಂಥಾ ಮೇಳಕ್ಕಷ್ಟೇ ಸೀಮಿತ ಎಂಬ ಕಾಲ ಹೊರಟುಹೋಗಿದೆ. ಇದನ್ನೂ ಸಹಿಸಿಕೊಳ್ಳೊಣ.

ಆದರೆ ದುರದೃಷ್ಟವೆಂದರೆ ಪೌರಾಣಿಕ ಪ್ರಸಂಗಗಳು ನಿಧಾನವಗಿ ಮರೆಯಾಗಿ ಸಾಮಾಜಿಕ ಪ್ರಸಂಗಗಳು ಕಾಲಿಟ್ಟಿವೆ. ಕಮರ್ಷಿಯಲ್ ಸಿನಿಮಾಗಳ ರೀತಿಯಲ್ಲೇ ಯಾವುದೋ ರಾಜ, ಒಂದು ಯುದ್ಧ, ಒಂದೆರಡು ಹಾಸ್ಯಮಯ ಸನ್ನಿವೇಶ, ಒಂದು ಡ್ಯೂಯೆಟ್ ಇದೆಲ್ಲಾ ಶುರುವಾಗಿ ಇದೂ ಯಕ್ಷಗಾನವೇ ? ಎಂದು ನಮ್ಮಂತರಂಗವನ್ನೇ ನಾವು ಕೇಳಿಕೊಳ್ಳಬೇಕಾದ ಸಮಯ ಬಂದಿದೆ. ಸಾಮಾಜಿಕ ಪ್ರಸಂಗ ಅದು ಎಷ್ಟೇ ಚೆನ್ನಾಗಿದ್ದರೂ ಪೌರಾಣಿಕ ಸತ್ಯಗಳನ್ನು, ಸತ್ವಗಳನ್ನು ಹೊಂದಿರಲು ಸಾಧ್ಯವಿಲ್ಲ, ಮತ್ತು ಜನತೆ ಪರಮಾತ್ಮನ ಕ್ರಿಯೆಗಳನ್ನು ಒಪ್ಪಿಕೊಳ್ಳುವುದಕ್ಕೂ ಯಾವುದೋ ಸಾಮಾಜಿಕ ಪುರುಷನ ಕ್ರಿಯೆಗಳನ್ನು ಒಪ್ಪಿಕೊಳ್ಳುವುದಕ್ಕೂ ಅಜಗಜಾಂತರವಿದೆ. ಇಂದಿನ ಯುವ ಪೀಳಿಗೆಗೆ ಒಳ್ಳೆಯ ಸಂದೇಶಗಳು ಸಿಗಬೇಕಾದ ಕಾಲ ಹೋಗಿ ಪ್ರೇಕ್ಷಕರಲ್ಲೂ ಸಿನಿಮಾ ನೋಡುವಂತೇ ಕಳಪೆ ತರಗತಿಯ ಪ್ರೇಕ್ಷಕರು ತಯಾರಾಗುತ್ತಿದ್ದಾರೆ. ಸಂಪ್ರದಾಯ ಬದ್ಧ ಯಕ್ಷಕಲಾಭಿಮಾನಿಗಳಿಗೆ ಇದು ನುಂಗಲಾರದ ಬಿಸಿತುತ್ತಾಗಿದೆ. ಆದರೂ ಯಕ್ಷಗಾನವೇ ಮರೆಯಾಗಬಾರದೆಂಬ ಒಂದೇ ಸದಾಶಯದಿಂದ ನನ್ನಂತಹ ಹಲವು ಪ್ರೇಕ್ಷಕರು ಸುಮ್ಮನೇ ಸಹಿಸಿ ಕಣ್ಣು ಕಣ್ಣು ಬಿಡುತ್ತಿದ್ದೇವೆ!

ದಿ| ಶಂಭುಹೆಗಡೆ ಅಥವಾ ದಿ| ಮಹಾಬಲ ಹೆಗಡೆಯವರು ಪೌರಾಣಿಕ ಪ್ರಸಂಗಗಳ ಹೊರತು ಒಂದೇ ಒಂದು ಹೆಜ್ಜೆಯನ್ನು ಬೇರೆಡೆ ಇಡಲಿಲ್ಲ. ಯಕ್ಷಗಾನದ ಪೌರಾಣಿಕ ಮೌಲ್ಯವರ್ಧನೆಗೆ ಕೆರೆಮನೆಯವರ ಕೊಡುಗೆ ಬಹಳ. ಕೆರೆಮನೆ ಮೇಳ ಇಂದು ಹೊರಗಿನ ಹಲವು ಕಟ್ ಆಂಡ್ ಪೇಸ್ಟ್ ಕಲಾವಿದರನ್ನೇ ಕರೆತಂದು ಪ್ರಸಂಗ ಮಾಡಿದರೂ ಪೌರಾಣಿಕ ಪ್ರಸಂಗವನ್ನು ಮಾತ್ರ ನಡೆಸುವುದು ಮೆಚ್ಚತಕ್ಕ ವಿಷಯ. ಇದು ಶಂಭುಹೆಗಡೆಯವರ ಆಶಯವಾಗಿತ್ತು. ಹೇಳಬೇಕೆಂದರೆ ಮುಖ್ಯವಾಗಿ ದಕ್ಷಿಣಕನ್ನಡ ಜಿಲ್ಲೆಯ ಮೇಳಗಳಲ್ಲಿ ಕೆಲವು ಮೇಳಗಳು ತಮ್ಮ ಅಸ್ಥಿತ್ವವನ್ನು ಕಾಪಾಡಿಕೊಳ್ಳಲು ಪ್ರೇಕ್ಷಕರನ್ನು ಆಕರ್ಷಿಸುವ ಸಲುವಾಗಿ ನೂತನ ಸಾಮಜಿಕ ಪ್ರಸಂಗಗಳನ್ನು ಆಡುತ್ತಿದ್ದಾರೆ. ಇದು ನನಗನಿಸಿದಂತೇ ಖಂಡನಾರ್ಹ ಬೆಳವಣಿಗೆ. ಇದಲ್ಲದೇ ಒಂದೇ ರಾತ್ರಿ ಒಳ್ಳೊಳ್ಳೆಯ ನಾಲ್ಕಾರು ಪೌರಾಣಿಕ ಪ್ರಸಂಗಗಳನ್ನು ಅಡುವುದು ಆ ಪ್ರಸಂಗಗಳಿಗೆ ಮಾಡುವ ಅಪಚಾರ. ಕಲಾವಿದರನೇಕರನ್ನು ಒಗ್ಗೂಡಿಸಿ ಕಂತ್ರಾಟು ತೆಗೆದುಕೊಂಡು ನಗರಗಳಲ್ಲಿ ಈ ಥರರ ಪ್ರಯೋಗ ನಡೆಸುತ್ತಿರುವವರು ಬಹಳಜನ ಇದ್ದಾರೆ. ಸ್ವಾಮೀ ನಿಮ್ಮ ಜೇಬು ತಾತ್ಕಾಲಿಕವಾಗಿ ತುಂಬಬಹುದು, ಪ್ರಸಂಗದ ಔಚಿತ್ಯ ಮರೆಯಾಗಿ, ಕಲೆಯ ಕೊಲೆಯಾಗಿ ಎಲ್ಲ ಪ್ರಸಂಗಗಳೂ ಚೌ ಚೌ ಆಗಿ ಯಕ್ಷಗಾನವನ್ನು ನೊಡಿದ್ದ ಮೊದಲಿನ[ಹಳೆಯ] ಖುಷಿಯೂ ಅಳಿಸಿಹೋಗಿ ಹೇಸಿಗೆಹುಟ್ಟಬಹುದು.
ಎರಡು ಚಿಕ್ಕ ಪ್ರಸಂಗಗಳು ಅಥವಾ ಒಂದೇ ದೊಡ್ಡ ಪ್ರಸಂಗವಿದ್ದರೆ ಸಾಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.


ನಾನು ಯಕ್ಷಗಾನ ಕಲವಿದರಲ್ಲಿ ಒಂದು ಪ್ರಾಮಾಣಿಕ ಹಾಗೂ ನೇರ ವಿನಂತಿಯನ್ನು ಮಾಡಲು ಬಯಸುತ್ತೇನೆ:
ನಿಮ್ಮಲ್ಲಿ ಬಹುತೇಕರು ಬಡವರು, ಸ್ಥಿತಿವಂತರಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಅನಿವಾರ್ಯ ಸಹಜ ವಿಷಯ. ಜೀವನದಲ್ಲಿ ನೀವು ಹಣಗಳಿಕೆಯನ್ನೇ ಮುಖ್ಯಗುರಿಯಾಗಿ ಇಟ್ಟುಕೊಳ್ಳದೇ, ಊಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಂಡು [ನೌಕರಿಯೋ, ಬೇರೇ ವೃತ್ತಿಯೋ, ಕೃಷಿಯೋ ಇತ್ಯಾದಿ ] ಕೇವಲ ನಿಮ್ಮಲ್ಲಿರುವ ಕಲೆಯನ್ನು ಬಳಸಿ ಸಮಾಜದಲ್ಲಿ ಒಂದಷ್ಟು ಒಳಿತನ್ನು ಮಾಡಲು ಯಕ್ಷಗಾನವನ್ನು ಬಳಸಿ. ಯಾವುದೇ ಕಾಲಘಟ್ಟವನ್ನು ತೆಗೆದುಕೊಂಡರೂ ಕವಿ,ಕಲಾವಿದರು ಶ್ರೀಮಂತರೇನಲ್ಲ. ಇದು ಸಿನಿಮಾರಂಗದ ಕೆಲವರನ್ನು ಬಿಟ್ಟು ಅಲ್ಲೂ ಉಳಿದವರಿಗೆ ಅನ್ವಯಿಸುತ್ತದೆ. ಬಡತನದಲ್ಲೇ ಬದುಕಬೇಕೆಂದು ಬರೆದಿದ್ದರೆ ಅದನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲವಲ್ಲ. ಹೀಗಾಗಿ ಕೇವಲ ಬಡತನ ನಿವಾರಣೆಗಾಗಿ ಕಲೆಯನ್ನು ಮಾಧ್ಯಮವಾಗಿ ಇಟ್ಟುಕೊಂಡು ಯಾಂತ್ರಿಕವಾಗಿ ಪಾತ್ರಪೋಷಣೆ ಮಾಡಿದರೆ ಅದರಲ್ಲಿ ಹುರುಳಿರುವುದಿಲ್ಲ. ದುಡ್ಡು ಬೇಕು ನಿಜ, ದುಡ್ಡಿಗಿಂತ ನಿಮ್ಮ ಸೇವಾ ಮನೋಭಾವ ನಿಮ್ಮನ್ನು ಸತ್ತಮೇಲೂ ಜೀವಂತವಾಗಿಡಬಲ್ಲದು.

ವರಕವಿ ಬೇಂದ್ರೆ, ಖ್ಯಾತ ಕವಿ-ಸಾಹಿತಿ ಡೀವೀಜಿ ಇವರೆಲ್ಲಾ ಬಡತನದಲ್ಲೇ ಇದ್ದರು. ಡೀವಿಜಿಯವರಿಗೆ ಸನ್ಮಾನಮಾಡಿ ಕೊಟ್ಟ ಅಂದಿನ ಕಾಲದಲ್ಲಿ ಒಂದುಲಕ್ಷ ಮೊತ್ತದ ಹಣವನ್ನು ಅವರು ಬಳಸಲಿಲ್ಲ, ಬದಲಾಗಿ
ಅದನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ಕೊಟ್ಟು ತಮ್ಮ ಔದಾರ್ಯಮೆರೆದರು. ಅವರು ತೀರಿಕೊಂಡಾಗ ಅವರಲ್ಲಿದ್ದ ಹಳೆಯ ಕಬ್ಬಿಣದ ಪೆಟ್ಟಿಗೆಯೊಂದನ್ನು ತೆರೆದು ನೋಡಿದಾಗ ಅವರಿಗೆ ಬಂದಿದ್ದರೂ ಉಪಯೋಗಿಸದೇ ಇದ್ದ ಹಲವು ಚೆಕ್ ಗಳು ಕಾಣಸಿಕ್ಕವು! ಹಾಗಂತ ಸನ್ಮಾನದ ಮರುದಿನವೇ ಮನೆಗೆ ಬಂದ ನೆಂಟರಿಗೆ ಕಾಫಿ-ತಿಂಡಿ ಕೊಡಲು ಸಾಮಗ್ರಿಯಿರದೇ ಪಕ್ಕದ ಶೆಟ್ಟರ ದಿನಸಿ ಅಂಗಡಿಗೆ ಚೀಟಿಕೊಟ್ಟು ಕಳಿಸಿ ದಿನವೆರಡರ ಮಟ್ಟಿಗೆ ಸಾಲದ ರೂಪದಲ್ಲಿ ಸಾಮಗ್ರಿ ಒದಗಿಸುವಂತೇ ಕೇಳಿದ ಮಹಾನುಭಾವರು ಡೀವೀಜಿ!

ಪ್ರೇಕ್ಷಕರಲ್ಲಿ ಮತ್ತು ಯಕ್ಷಗಾನ ಅಭಿಮಾನಿಗಳಲ್ಲಿ ಒಂದು ವಿಜ್ಞಾಪನೆ:
ಆದಷ್ಟು ಹೆಚ್ಚಿನ ರೀತಿಯಲ್ಲಿ ನಾವು ಕಲಾವಿದರಿಗೆ ಸಹಕರಿಸೋಣ. ಅವರಲ್ಲಿ ಅನೇಕರಿಗೆ ಕಾಯಿಲೆ-ಕಸಾಲೆ ಆದರೂ ಕೂಡ ಖರ್ಚಿಗೆ ಇಲ್ಲದ ಅಯೋಮಯ ಪರಿಸ್ಥಿತಿ ಇದೆ. ಕೆಲವರಂತೂ ಚಿಂತೆ ಮರೆಯಲು ಚಟಗಳ ದಾಸರಗಿದ್ದಾರೆ. ಹೀಗಿರುವಾಗ ಬೇರೆ ಬೇರೆ ವೃತ್ತಿಯಲ್ಲಿರುವ ನಾವು ನಮ್ಮ ಕೈಲಾದ ಮಟ್ಟಿಗೆ ಆರ್ಥಿಕವಾಗಿ ಕಲೆಯನ್ನು ಪೋಷಿಸಲು ನೆರವಾಗೋಣ ಎಂದು ಕೋರಿಕೊಳ್ಳುತ್ತೇನೆ. ಅಲ್ಲದೇ ಪೌರಾಣಿಕ ಪ್ರಸಂಗಗಳ ಉಳಿವಿಗಾಗಿ ಪೂರ್ಣರಾತ್ರಿ ಪ್ರದರ್ಶನಗಳನ್ನು ಪ್ರೋತ್ಸಾಹಿಸಲೂ ಕೂಡ ಪ್ರಾರ್ಥಿಸುತ್ತೇನೆ.

ಯಕ್ಷಗಾನದ ಅಭಿಮಾನಿಗಳಲ್ಲಿ ಇಷ್ಟನ್ನು ತೋಡಿಕೊಳ್ಳಬೇಕಿತ್ತು, ಹೇಳಿಕೊಂಡಿದ್ದೇನೆ. ಭರತ ಭೂಮಿಯ, ಅದರಲ್ಲೂ ಕರ್ನಾಟಕದ ಸಮಗ್ರ ಕಲೆಯಾದ ಯಕ್ಷಗಾನ ಚಿರಕಾಲ ತನ್ನತನವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೆಗ್ಗಳಿಕೆ ಮತ್ತು ಕರ್ತವ್ಯಕೂಡ, ಈ ದಿಕ್ಕಿನಲ್ಲಿ ಯೋಚಿಸಿ ಹೆಜ್ಜೆ ಇರಿಸೋಣವೇ ? ನಮಸ್ಕಾರ.

Monday, October 4, 2010

'ಅರ್ಥಹೀನ'


'ಅರ್ಥಹೀನ'

[ನವ್ಯ ಪ್ರೇಮೀ ಸ್ನೇಹಿತರೇ ನಿಮಗಾಗಿ ಬರೆಯುತ್ತಿರುವ ಕಾವ್ಯಗಳ ಸಾಲಿನಲ್ಲಿ ಸದ್ಯಕ್ಕೆಇಲ್ಲೊಮ್ಮೆ ನಿಲ್ಲುತ್ತೇನೆ--ಈ ಕವನದೊಂದಿಗೆ, ಮತ್ತೆ ಬಿಡುವಾದಾಗ ನವ್ಯದಲ್ಲಿ, ಅಲ್ಲೀವರೆಗೆ ಬೇರೆಲ್ಲಾ ಕೃತಿಗಳು ]


ಪಕ್ಕದೂರಲ್ಲೇ ಕವಿ ಇದ್ದಾನೆಂದು
ಒಂಬತ್ತುಮೊಳದ ಧೋತಿ ಉಟ್ಟು
ಅಲ್ಲಾಡಿಸುತ್ತಾ ಬಂದಿದ್ದರು ಗಣಪತಿರಾಯರು
ದೇಶಾವರಿ ನಗೆ ನಕ್ಕರು
ನಾನೂ ಅಂದರಾಗಲಿಲ್ಲವಂತೆ
ತುಂಬಾ ಅಭಿಮಾನವಂತೆ !
ತನ್ನ ಜೀವನವನ್ನೇ ಒಂದು
ಕವನಮಾಡಿದರೆ ಹೇಗೆ ಎಂಬುದು
ಅವರ ಚಿಂತನೆ !
ಕೆಲವೊಮ್ಮೆ ನನ್ನೊಳಗೆ ನಾನೇ
ಅಂದುಕೊಳ್ಳುವುದಿದೆ
ಅಯ್ಯಾ ನಾ ಬರೆದ ಅರ್ಥವಿಲ್ಲದ
ಕವನಕ್ಕೆ ಜನ ಬಹಳ ಅರ್ಥಹಚ್ಚುತ್ತಾರೆ !
ಯಾಕೆಂದರೆ ಅದು ಅವರಿಗೂ ಅರ್ಥವಾಗದ್ದು!
ಹೀಗೇ ಅರ್ಥವಿಲ್ಲದ ನೂರಾರು ಕವನಗಳು
ನನ್ನ ಬತ್ತಳಿಕೆಯಲ್ಲಿವೆ
ನೀವು ನಂಬುವುದಾದರೆ ನಂಬಿ ಬಿಟ್ಟರೆಬಿಡಿ
ಶೇಂಗಾರಾಶಿಯಲ್ಲಿ ಪೊಕ್ಕು ಟೊಳ್ಳು ಶೇಂಗಾ ಇರುವಂತೇ !
ಕುಂಬಾರನ ಮನೆಯಲ್ಲಿ ಅರ್ಧವಾಗಿ ಬಿದ್ದ
ಮಣ್ಣಿನ ಮಡಿಕೆ-ಪಾತ್ರೆಗಳಿರುವಂತೇ !
ಶಿಲ್ಪಿಯ ಚಾಣದ ಚೇಣನ್ನು ತಿಂದು
ಇನ್ನೂ ಪೂರ್ತಿಯಾಗಿ ಮೂರ್ತಿಯಾಗದೇ ಉಳಿದ
ಶಿಲಾಭಾಗದಂತೇ !

ಹಾಗಂತ ಹೋಯ್ ಇಲ್ಕೇಳಿ
ನಾನಿದನ್ನೆಲ್ಲಾ ಗಣಪತಿರಾಯರಿಗಿರಲಿ
ನನ್ನ ಹೆಂಡತಿಗೇ ಹೇಳಿದವನಲ್ಲ
ಅಕಸ್ಮಾತ್ ಹೀಗೆಲ್ಲಾ ಹೇಳಿದರೆ
ಕವಿಯವಿತೆಗೆದುಪಿಬರೆದರೆ ಕಷ್ಟ!
ಹಾಗಂತ ನನಗೇನೂ ಜ್ಞಾನಪೀಠ
ಪ್ರಶಸ್ತಿಯೆಲ್ಲ ಬೇಡ
ಒಂದೊಮ್ಮೆ ಬಂದರೆ ಅದು ನನ್ನ ತಪ್ಪಲ್ಲ !
ನನ್ನ ಪಾಡಿಗೆ ನಾನು ಬರೆಯುವುದು ಬರೆಯುವುದೇ.
ಎಷ್ಟೋ ಕಲಾವಿದರ ನವ್ಯಶೈಲಿಯ ಚಿತ್ರಗಳಂತೇ !
ಅನೇಕ ಸಂಗೀತಜ್ಞರ ದನಿಹೊರಡದ ಗಾಯನದಂತೇ !
ಅದು ಕಲೆಯ-ಸಂಗೀತದ ಆಳವಾದ ಭಾವ !
ಅರ್ಥವಾಯಿತೇ ? ಇನ್ನೂ ಅರ್ಥವಾಗಲಿಲ್ಲಾ ಎಂದರೆ
ಜಪ್ಪಿಕೊಳ್ಳಲಿಕ್ಕೆ ಸದ್ಯ ನಾನು ಕೂತಿದ್ದು ಸೈಬರ್ ಕೆಫೆಯಲ್ಲಿ
ಸೌಂಡಿಗೆ ಎದ್ದು ಓಡಿಬರುವ ಕೆಫೆಯ ಮಾಲೀಕ
ಗಡದ್ದಾಗಿ 'ಕಾಫೀ' ಕೊಟ್ಟರೆ ಕಷ್ಟ!
ಒಟ್ಟಾರೆ ಎಲ್ಲೂ ಸುಸೂತ್ರವಿಲ್ಲ.

ಬರೆದೆ ಕೊಟ್ಟೆ
ತೆಗೆದುಕೊಂಡಿದ್ದು ಒಂದಿಡೀದಿನ!
ಉದ್ಯೋಗವಿಲ್ಲದ ಆಚಾರಿ
ಮಗುವಿನ ಕುಂಡೆ ಕೆತ್ತನಂತೆ !
ಅದೇ ರೀತಿ ನಮ್ಮ ಗಣಪತಿರಾಯರಿಗೆ
ಅವರ ಜೀವನಕಾವ್ಯ ಬರೆದುಕೊಟ್ಟೆ
ಓದಿದರು ತಿರುಗಿಸಿ ಮುರುಗಿಸಿ ಓದೇ ಓದಿದರು
ಬಹಳ ಚೆನ್ನಾಗಿದೆ ಎಂದರು
ಬ್ಲಾಗಿಗರು ಹಾಕಲಾರದೇ ಕಾಮೆಂಟು ಹಾಕುವ ರೀತಿ !
ಅದೊಂಥರಾ ಭಾವಮಿಲನ !
ಬ್ರಾಂಡು ಬಿದ್ದ ಮೇಲೆ ಮುಗಿಯಿತು
ಬರುವುದು ಸೊರಬಿತುಂಬಿದ ಆಕ್ಕಿಯಾದರೂ ಸರಿ
ಸಕ್ಕರೆ ರಹಿತ ಸ್ಪೆಷಲ್ ಮಿಲ್ಕ್ ಬ್ರೆಡ್ ಆದರೂ ಸರಿ
ವಾಸನೆಯೇ ಆಗಿದ್ದರೂ ಸಹಿಸುವ ಬಯಕೆ
ಅದು ಬ್ರಾಂಡಿನ ಮಹಿಮೆ !
ಕವಿಯ ಬ್ರಾಂಡು ಬಿದ್ದ ಕವನ
ಮತ್ತೊಮ್ಮೆ ಬಹಳ ಅರ್ಥಗರ್ಭಿತ ಎಂದರು
ಗಣಪತಿರಾಯರು ಹೊರಟುನಿಂತು
ಹೆಂಡತಿ ಕಣ್ಣಲ್ಲೇ ನನಗೆ ಕೇಳಿದಳು
ಪೈಸೆ ಬಂತೇ ?
ಕವಿಗೆ ಪೈಸೆಯೆಲ್ಲಾ ಯಾವ ಲೆಕ್ಕ ?
ಆತನ ಲೋಕವೇ ಬೇರೆ ! ಬರೇ ಪೈಸೆಗಾಗಿ
ಬರೆವ ಜನವಲ್ಲ ಇದು ! ನಮ್ಗೂ ಸ್ವಲ್ಪ
ಧರ್ಮ-ಕರ್ಮ ಇದೆ ಸ್ವಾಮೀ
ಗಣಪತಿರಾಯರು ಆಗರ್ಭಶ್ರೀಮಂತರು
ಹೀಗಾಗಿ ಕೇಳಿದಳು ಅವರು ಏನಾದರೂ ಕೊಟ್ಟರೇ ?
ನಾನು ಕಣ್ಣು ಸ್ವಲ್ಪ ದೊಡ್ಡದುಮಾಡಿದೆ
ಕೈ ಮರೆಯಲ್ಲಿ : ಗಣಪತಿರಾಯರು ನೋಡಬಾರ್ದಲ್ಲ!
ಮತ್ತೆ ಅದೇ ದೇಶಾವರಿ ನಗೆ ನಕ್ಕರು
ನಾನೂ ನಕ್ಕೆ
ಇಲ್ಲಿಗೆ ಕಥೆ ಕಾಶಿಗೆ ಹೋಯಿತು ನಾನು ಮನೆಗೆ ಹೊರಟೆ
ಅರ್ಥವಾಯಿತೇ ? ಅರ್ಥವಾದರೆ ಇದು
ಮಹಾನ್ವೇಷಣಂ ಮಹಾಕಾವ್ಯದ ಒಂದು ಭಾಗ
ಅರ್ಥವಾಗಗಲಿಲ್ಲವೋ ನಿಮ್ಮೆದುರಿಗಿರುವ
ಮಾನಿಟರ್ ಕುಟ್ಟಿ ಅಥವಾ ಪೇಜು ಹರಿದು
ಮಾಡಿ ಇಬ್ಭಾಗ !
ಅಲ್ಲೇ ಕಾಣಿರಿ ಕವನದ ಸಿರಿ ವೈಭೋಗ!

Saturday, October 2, 2010

’ ರಾಜಕೀಯ ಸನ್ಯಾಸ ’


’ ರಾಜಕೀಯ ಸನ್ಯಾಸ ’

ನಮ್ಮ ದೇಶದಲ್ಲಿ ಫಸ್ಟ್ ಕ್ಲಾಸಿನವರು
ಡಾಕ್ಟರು-ಎಂಜಿನೀಯರು
ಹೀಗಾಗಿ ಅವರೆಲ್ಲಾ ಅವರವರ
ಕೆಲಸದಲ್ಲಿ ತೊಡಗಿ ಬ್ಯೂಸಿಯಾಗಿದ್ದಾರೆ
ಸೆಕೆಂಡ್ ಕ್ಲಾಸಿನವರು ಎಂಬಿಎ ಗಳು ಅವರು
ಫಸ್ಟ್ ಕ್ಲಾಸಿನವರನ್ನು ಕಂಟ್ರೋಲ್ ಮಾಡುತ್ತಾರೆ
ಥರ್ಡ್ ಕ್ಲಾಸಿನವರು ರಾಜಕಾರಣಿಗಳು
ಅವರು ಫಸ್ಟ್ ಮತ್ತು ಸೆಕೆಂಡ್ ಕ್ಲಾಸಿನವರನ್ನು
ಕಂಟ್ರೋಲ್ ಮಾಡುತ್ತಾರೆ
ಫೇಲ್ ಆದವರು ಅಂಡರ್ವರ್ಲ್ಡಿನಲ್ಲಿದ್ದು
ಎಲ್ಲರನ್ನೂ ಕಂಟ್ರೋಲ್ ಮಾಡುತ್ತಾರೆ
ಎಂಬ ಎಸ್ಸೆಮ್ಮೆಸ್ಸು ಬಂದ ಮರುಘಳಿಗೆಯೇ
ಹೊರಟು ಮಂತ್ರಿಮಾಲಿನ ಮೂರನೇ ಮಹಡಿಯ
ಮೂಲೆಯೊಂದನ್ನು ಹಿಡಿದು ತಪಸ್ಸಿಗೆ ಕುಳಿತುಬಿಟ್ಟೆ
ತಪೋಭಂಗಕ್ಕೆ ಹಲವರು ರಂಭೆ
ಮೇನಕೆ ತಿಲೋತ್ತಮೆಯರು ಬಂದರು
ಹಿಡಿಂಬೆ ಪೂತನಿಗಳಂತವರೂ ಬಂದರು
ರಾವಣ ಭಕಾಸುರ ಎಲ್ಲರ
ಏಷ್ಯಾದಲ್ಲೇ ಮರೆಯಲಾರದ
ಗುಡಾಣಹೊಟ್ಟೆಗಳನ್ನೂ ಕಂಡೆ
ಹತ್ತು ಮೀಟರ್ ಬಟ್ಟೆಯಲ್ಲೂ ಹೊಲಿದು
ಯಾವ ಆಕಾರದಿಂದಲೂ ಒದಗಿಸಿ ಮುಗಿಸಲಾರದ
ಅಕರಾಳ ವಿಕರಾಳ ಸ್ವರೂಪ ಕಂಡಾಗ
ಶ್ರೀಕೃಷ್ಣನ ನೆನಪಾಯ್ತು
ನನಗೆ ದಿವ್ಯಚಕ್ಷುವೇ ಬೇಕೇನೋ ಅಂತ !
ಮಾಲಿನ ಬಿಲ್ಡಿಂಗಿನ ಪಿಲ್ಲರುಗಳು ಕಣ್ಮುಂದೆ ಬಂದು
"ಸ್ವಾಮೀ" ಅಂದಹಾಗೆನಿಸಿ ಪಾಪ ಅನ್ನಿಸಿತು !
ಆದಷ್ಟೂ ಬೇಗ [ಪುಣ್ಯ?] ಒಂದಷ್ಟು ಕೋಟಿಮಾಡಿ
ನಿಮಗೆಲ್ಲಾ ಮೋಕ್ಷಕರುಣಿಸುತ್ತೇನೆಂದು ಭರವಸೆಗಳ
ಇಪ್ಪತ್ತು ಅಂಶಗಳ ಮಾಲಿಕೆಯನ್ನೇ ಕೊಟ್ಟೆ!

ತಪಸ್ಸಿನ ಮಧ್ಯೆ ಹಲವು ಅಪಶಕುನಗಳು
ಕಟ್ಟಾನ ಬಾಲಬಡುಕರು ಅಟ್ಟಿಸಿಕೊಂಡು ಬಂದಹಾಗೇ
ನಿತ್ಯಾನಂದ ಕಿವಿ ತೂತು ಬೀಳುವಂತೇ
ಗಹಗಹಿಸಿ ನಕ್ಕಹಾಗೇ !
ರೇಣುಕನ ವ್ಯಾಯಾಮ ಬೇಳೂರಿನ ಊಳು
ಹಾಲಪ್ಪನ ತುಪ್ಪದ ರಂಪ
ಸಂಪಂಗಿಯ ಘಮಘಮ ಘಾಟುಪರಿಮಳ
ಲಿಂಬೆಹುಳಿ ಉಪ್ಪು ಖಾರ ಎಲ್ಲಾ ತೆಗೆದಮೇಲೆ
ಮೊಳೆ ತಂತಿ ಫೆವಿಕಾಲು ಸುತ್ತಿಗೆ ಇಟ್ಟುಕೊಂಡು
ಡಾ| ಯಡ್ಯೂರಣ್ಣ ಖುರ್ಚಿ ರಿಪೇರಿಮಾಡುತ್ತಿರುವ ಹಾಗೆ
ಯಾರೋ ಮೈಸೂರಿಂದ ಕೂಗುತ್ತಿದ್ದರು !
ಇನ್ನಾರೋ ಬಸ್ಸಿಗೆ ಕಲ್ಲು ತೂರಲು ಹೇಳಿ
ತನ್ನ ಕಸುವನ್ನು ಮೆರೆಯುತ್ತಿದ್ದರು
ಮತ್ಯಾರೋ ಬೆಂಕಿ ಹಚ್ಚಿ ಅಮೇಲೆ ನೋಡುವಾ ಅಂದರು !
ಬಲಗಡೆಯಿಂದ ರಾಜಕೀಯದ ಕರಿಬೆಕ್ಕು
ಎಡಕ್ಕೆ ಹೋಗಿ ಎಡವಿಬಿದ್ದಹಾಗೇ !
ಬಡವರ ತಲೆಯನ್ನೆಲ್ಲಾ ನುಣ್ಣಗೆ ಬೋಳಿಸಿ
ಡಾಮರು ಬಳಿದ ಹಾಗೇ !
ಛೇ, ಎಂಥೆಂಥಾ ಕೆಟ್ಟ ಶಕುನಗಳು
ತುಪ್ಪದ ದೀಪಹಚ್ಚಿದರೂ ಇಲ್ಲ, ಕೈಮುಗಿದರೂ ಅಲ್ಲ
ಕಾಲಿಗೆರಗಿ ಬೇಡಲೂ ಸಲ್ಲ ಮತ್ತಿನ್ನೇನು ಮಾಡಲಿ ?

ಪ್ರಯತ್ನಿಸುತ್ತಲೇ ಇದ್ದೆ
ಫಲಾಫಲ ಭವಂತನಿಗೆ ಬಿಟ್ಟಿದ್ದು !
ತಪಸ್ಸು ಮಾಡುವುದು ಮಾಡುವುದೇ.
ಅದೂ ಕುಳಿತದ್ದು ಮಂತ್ರಿಮಾಲೆಂಬ ಜನಾರಣ್ಯದಲ್ಲಿ !
ಅನೇಕ ’ಸಿದ್ಧಪುರುಷರು’ ಸಾಧನೆಗೈದ
ಏಷ್ಯಾದಲ್ಲೇ ಮೊದಲಸ್ಥಾನವೆಂದು
ತಾವೇ ಘೋಷಿಸಿಕೊಂಡ ದಿವ್ಯಕ್ಷೇತ್ರ !
ಬರೋಬ್ಬರಿ ೩ ತಾಸು ಜಪಮಾಡಿದ್ದೇನೆ!
ಕಲಿಯುಗದಲ್ಲಿ ’ದರ್ಶನ’ವೆಲ್ಲ ಬೇಗನೇ!
ಬರಿದೇ ಈ ಮೂಲೆ ಹಿಡಿದು ಕುಂತರೆ ಆಗದು
ಎಂಬ ಜ್ಞಾನೋದಯವಾಗುತ್ತಿದ್ದಂತೆಯೇ
ನನಗೆ ’ಸಾಕ್ಷಾತ್ಕಾರ’ವಾಗಿದೆಯೆಂದು ಹೇಳಿ ಕಳಿಸಿದಾಗ
[ಡಾ|| ?]ಕುಮಾರಣ್ಣ [ನಮ್ಮನ್ನು]ಸ್ವಾಮಿಗಳನ್ನು ನೋಡಲು
ಡೀನೋಟಿಫೈ ಮಾಡಿರುವ ದಾಖಲೆಗಳ
ಆರತಿ ತಟ್ಟೆಹಿಡಿದು ಬಂದಿದ್ದ!
ಸ್ವೀಕರಿಸಿ ಅವರನ್ನೆಲ್ಲಾ ಹರಸಿ
ನಾನಿನ್ನು ಇಲ್ಲಿದ್ದಿದ್ದು ಸಾಕು
ಭಕ್ತರಾದ ನೀವೆಲ್ಲಾ ನನ್ನನ್ನು
ಇಷ್ಟೊಂದು ಪ್ರೀತಿಸುತ್ತಿರುವಾಗ
ನಿಮ್ಮ ’ಕೈ’ ’ಕಮಲ’ ’ದಳ’ಗಳನ್ನು ಅರ್ಪಿಸುತ್ತಿರುವಾಗ
ನಾನು ವಿಧಾನಸೌಧದಲ್ಲೇ
ತಪಸ್ಸಿಗೆ ಕೂರುತ್ತೇನೆ
ನಿಮ್ಮೆಲ್ಲರ ಕಷ್ಟಗಳನ್ನೂ ನಿವಾರಿಸಿ
ತನ್ಮೂಲಕ ನಾನೂ ’ಕೋಟಿ- ಜನ್ಮ’ದ ಫಲವನ್ನ
ಪಡೆಯುತ್ತೇನೆ ಎಂದು ಹೊರಟೆ!