ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, March 21, 2010

ಎಂಥ ದಿವ್ಯ ಸ್ಪರ್ಶ

ಮಗುವಿನ ಬಗ್ಗೆ ಬರೆಯಲು ಹೊರಟೆ, ಕಾರಣ ಇಷ್ಟೇ, ಮಗನಿಗೆ ಹುಷಾರಿರದೆ ೩ ದಿನಗಳಾದವು, ವಿಪರೀತ ಜ್ವರ, ಯಾವ ಔಷಧವನ್ನೂ ಲೆಕ್ಕಿಸದ ಜ್ವರ, ಮಗುವಿನ ಮುಖದ ನಗೆ ಮಾಯವಾದಾಗ ಅದು ನಮ್ಮ ಮುಖ-ಮನಗಳ ಸಂಪೂರ್ಣ ಅಂತಃಸ್ಸತ್ವವನ್ನು ಎಳೆದು ಹಾಕಿದ ಹಾಗೇ.ಈ ಮಧ್ಯೆ ನಿನ್ನೆ ಒಂದು ಕ್ಷಣ ಆಚೆ ಬಂದು ಮಗನಕಡೆ ಹೋಗುವಷ್ಟರಲ್ಲಿ ತನ್ನ ಬಾಲ್ಯ ಸಹಜ ಕುತೂಹಲದಿಂದ ಕಂಕುಳಲ್ಲಿಟ್ಟ ಥರ್ಮಾಮೀಟರ್ ತೆಗೆದು ಬಾಯಲ್ಲಿ ಇಟ್ಟುಕೊಂಡು ಕಚ್ಚಿ, ಅದರ ಪಾದರಸವಿರುವ ಭಾಗ ಬಾಯಲ್ಲಿ ಒಡೆದುಹೋಯಿತು, ಪಾದರಸವೆಂಬುದು ತುಂಬಾ ವಿಷವಾದ್ದರಿಂದ ನಾವು ಸುತ್ತದ ಆಸ್ಪತ್ರೆಗಳಿಲ್ಲ, ಭಾನುವಾರವಾದ್ದರಿಂದ ಎಲ್ಲಾ ಆಸ್ಪತ್ರೆಗಳಲ್ಲೂ ಗೊತ್ತಿರುವ ತಜ್ಞ ವೈದ್ಯರಿಲ್ಲ! ದೇವರಮೇಲೆ ಭಾರಹಾಕಿ ರಾತ್ರಿ ಕಳೆದಿದ್ದೇವೆ. ಇದರ ಬಗ್ಗೆ ಬಹಳ ಬರೆಯಲು ಇಂದು ಸಮಯವಿರದ ಕಾರಣ ತಮ್ಮಲ್ಲಿ ಕ್ಷಮೆ ಕೇಳಿ ಬರೇ ಒಂದು ಚಿಕ್ಕ ಹಾಡನ್ನು ಬರೆದಿದ್ದೇನೆ


ಎಂಥ ದಿವ್ಯ ಸ್ಪರ್ಶ

ಎಂಥ ದಿವ್ಯ ಸ್ಪರ್ಶ ನಿನದು ಮಂತ್ರ ಮುಗ್ಧ ಮಾಡಿತು !
ಬಂತು ಯಾಕೆ ತಾಪ ಜ್ವರವು ನಗುವ ನುಂಗಿ ಹಾಕಿತು?

ಕಾರಣವೇ ಇಲ್ಲ ಅದಕೆ ಬರಿದೇ ಬಂದು ನೂಕಿತು
ವಾರವಿಡೀ ನಮ್ಮ ಬದುಕು ಹೊರಳಿ ಬಾಡಿ ನರಳಿತು

ದೇವನಿತ್ತ ಶರೀರ ಪಂಚಭೂತ ಪರಿಧಿಯೋಳ್
ಭಾವದಟ್ಟ ಕಟ್ಟಳೆಗಳ ಗೂಡಿದು ವಿಶ್ರಮಿಸುವೋಲ್

ನಿನ್ನ ಮುಗುಳು ನಗೆಯು ತಂತು ಹಲವುಶಕ್ತಿ ಪೂರಕ
ಮೊನ್ನೆಯಿಂದ ನಗುವೇ ಇಲ್ಲ ಯಾವುದು ಮಾರಕ

ನಮ್ಮ ದುಃಖವ ದುಮ್ಮಾನವ ಕಳೆದೆವು ನಿನ್ನ ನೋಡುತ
ಒಮ್ಮೆ ಮತ್ತೆ ನಗೋ ಮಗುವೆ ಪುನಃ ಚೇತರಿಸುತ

Saturday, March 20, 2010

ಡಿಶ್ಶು ಎಂಬ ಅರ್ಥವಾಗದ ಕೊಡೆ



ಡಿಶ್ಶು ಎಂಬ ಅರ್ಥವಾಗದ ಕೊಡೆ

ಹೀಗೇ ನನ್ನ ಬಾಲ್ಯಕಾಲ, ಮೊದಲೊಮ್ಮೆ ಹೇಳಿದಂತೆ ಅವಿಭಕ್ತ ಕುಟುಂಬವಾದ್ದರಿಂದ ನಮಗೆಲ್ಲ ಅಜ್ಜ-ಆಜ್ಜಿ, ಚಿಕ್ಕಪ್ಪಂದಿರು, ಅತ್ತೆ ಹೀಗೇ ಎಲ್ಲಾ ಒಟ್ಟಿಗೆ ಇದ್ದೆವು. ಅದು ಬಹಳ ಮೌಲ್ಯದ ಕಾಲ ಹಣಕ್ಕಿಂತ ಮಾನವ ಗುಣಕ್ಕೆ ಬೆಲೆ ಇದ್ದಕಾಲ.ಎಲ್ಲರೂ ಸಣ್ಣ ವಿಶೇಷವನ್ನೂ ದೊಡ್ಡದಾಗಿ ಹಂಚಿ ಬದುಕಿದ ಕಾಲವದು. ಹೀಗೇ ಒಂದು ದಿನ ಭಾನುವಾರವಾದ್ದರಿಂದ ಶಾಲೆಗೆ ರಜಾ ಇತ್ತು. ನಮ್ಮೂರ ಪಟೇಲರ ಮನೆ ಸಹಜವಾಗಿ ಶ್ರೀಮಂತರ ಮನೆ ಎನಸಿ ಕೊಂಡದ್ದರಿಂದ ಹೊಸದೇನಾದರೂ ಬಂದರೆ ಮೊದಲ ಬಾರಿ ಅಲ್ಲಿಗೇ ಬರುವುದಿತ್ತು. ಅದನ್ನು ನೋಡಿ ನಂತರ ಸಾಧ್ಯವಾದವರು ಅದೆರೀತಿಯ ಪ್ರಾಡಕ್ಟ್ ಕೊಳ್ಳಲು ಏನಿಲ್ಲಾ ಅಂದರೂ - ವರ್ಷಗಳ ಅಂತರವಿರುತ್ತಿತ್ತು.

ಅಪರೂಪಕ್ಕೆ ನಮ್ಮೂರ ಪಟೇಲರ ಮನೆಗೆ ಟಿವಿ ಮತ್ತು ಡಿಶ್ ಎಲ್ಲಾ ಬಂದಿದೆ ಎಂಬ ಸುದ್ದಿ ಬಂತು.ಎಂದಿನ ಹಾಗೆ ನಮ್ಮದು ನೋಡುವ ಬಳಗ! ನಾವೆಲ್ಲಾ ತರಾ ತುರಿಯಿಂದ ಓಡಿದ್ದೇ ಓಡಿದ್ದು. ಏನಿಲ್ಲಾ ಅಂದ್ರೂ ಸುಮಾರು ೩೦೦-೪೦೦ ಜನ ಸೇರಿದ್ವಿ-ಕಾರಣ ಏನೆಂದರೆ >ಟಿವಿ ಮತ್ತು ಡಿಶ್ ಪ್ರತಿಷ್ಠಾಪಿಸಲು ಯಾರೋ ಹುಬ್ಬಳ್ಳಿಯಿಂದ ಬಂದಿದ್ದ !

ಅಲ್ಲಿಗೆ ನಾವು ಹೋದಾಗ ನೋಡಿದ್ದು ಎರಡೇ
ಒಂದು ಕಪ್ಪನೆಯ ದೊಡ್ಡ ಪಟ್ಟಿಗೆ, ಎರಡನೆಯದು ಏನೋ ಡಿಶ್ ಅಂತಾರಲ್ಲ ಅದು. ಅರ್ಥವಾಗದ ಬದುಕು ! ಬಹಳ ತಲೆಕೆಡಿಸಿಕೊಂಡರೂ ಅದು ಏನೆಂಬುದೇ ಅರ್ಥವಾಗುತ್ತಿರಲಿಲ್ಲ. ಪಟೇಲರ ಮನೆಯವರು ಏನೂ ಹೇಳಲಿಲ್ಲ.

" ಹುಡುಗ್ರೆ ಸುಮ್ನೇ ಇರಿ, ಗಲಾಟೆ ಮಾಡ್ಬೇಡಿ, ಬಂದಿದಾರಲ್ಲ ಹುಬ್ಬಳ್ಳಿ ಸರು ಅವರು ಏನ್ಮಾಡ್ತಾರೆ ಅಂತ ಸುಮ್ನೇ ನೋಡ್ತಾ ಇರಿ ನಿಮ್ಗೇ ಗೊತ್ತಾಗ್ತದೆ "
ಅಂತ ಪಟೇಲರ ಮೊಮ್ಮಗ ಹೇಳಿದ. ನಮ್ಮನೆದಲ್ಲವಲ್ಲ, ಅವರು ನೋಡಲು ಕೊಡುವ ಅವಕಾಶವೇ ದೊಡ್ಡದು. ಹೀಗಾಗಿ ಸುಮ್ಮನೇ ಕುಳಿತು ನೋಡುತ್ತಿದ್ದೆವು.

ಹುಬ್ಬಳ್ಳಿ ಮಾವ ಕಪ್ಪು ಬಾಕ್ಸನ್ನು ತೆಗೆದು ಜೋಡಿಸಿ ಹಚ್ಚಿ ನೋಡುವಾಗ ನಮಗೆ ತಡೆಯಲಾರದ ಕಾತುರ, ಆದರೆ ಅತ ಹೇಳಿದ ಡಿಶ್ ಸರಿಯಾಗಿ ಕೂತಿಲ್ಲ ಅದು ಕೂತರೇನೆ ಡಿಡಿ ಬರುತ್ತೆ ಎಂದು. ಡಿಡಿ ಎಂದರೇನು ಅದು ಹೇಗೆ ಬರುತ್ತೆ ?
ಅದಕ್ಕೆಲ್ಲ ತಾಳ್ಮೆಯಿಂದ ಏನೋ ಸಿಗ್ನಾಲು ಅಂತೆಲ್ಲ ಉತ್ತರ ಹೇಳಿದ ಆತ ಪಾಪ.

ಆಮೇಲೆ ಡಿಶ್ ಪ್ರತಿಷ್ಠಾಪನೆಗೆ ತೊಡಗಿದ. ದೊಡ್ಡದೊಂದು ಬೆಳ್ಳಿಯ ಥರದ ಕೊಡೆ,. ಮಳೆ ಬಂದರೆ ನಾವು ಕೊಡೆಯನ್ನು ಹಿಡಿಯುತ್ತೇವೆ ಆದರೆ ಇಲ್ಲಿ ಉಲ್ಟಾ ಕೇಸು ! ಕೊಡೆಯನ್ನು ಮೇಲೆಮಾಡಿ ಹಿಡಿಯಬೇಕು, ಅದನ್ನು ಆಚೀಚೆ ತಿರುಗಿಸಿ ಅಡ್ಜಸ್ಟ್ ಮಾಡಬೇಕು ! ನಮಗಿದೆಲ್ಲಾ ಹೊಸದು.

ನಾನು ನೋಡುತ್ತಾ ನೋಡುತ್ತಾ ನೋಡುತ್ತಾ ತುಂಬ ಹತ್ತಿರದಿಂದ ಆತನಿಗೆ ಅಲರ್ಜಿಯಾಗುವಷ್ಟು ನೋಡಿದೆ ಆತನಿಗೋ ಇದನ್ನೆಲ್ಲಾ ದಿನಾಲೂ ನೋಡೀ ನೋಡೀ ಬೇಸರವಾದ ಹಾಗಿತ್ತು. ಆತ

" ಅದನ್ನೇನು ನೋಡುತ್ತೀಯಾ, ಅದರಲ್ಲಿ ಏನೂ ಇಲ್ಲಾ " ಎಂದ, ಬಹುಶಃ ಆತ ಏನಾದರೂ ಭೀಮಸೇನ್ ಜೋಷಿಯವರ ಭಕ್ತನಾಗಿದ್ದು , ಹಾಡು ಹಾಡಿದ್ದರೆ ರೀತಿ ಹಾಡುತ್ತಿದ್ದನೇನೋ



[ ಚಿತ್ರ ಋಣ : ಅಂತರ್ಜಾಲ ]

ಡಿಶ್ಶು ನೋಡಲು ಬಂದೆಯಾ ಎನ್ನಯತಂದೆ
ಡಿಶ್ಶು ನೋಡಲು ಬಂದೆಯಾ
ಅಪ್ಪನಿನ್ನ ನೋಡಿ ನಕ್ಕು ನಾ ಸುಸ್ತಾದೆನೇ ?

ಅಳಿಲು ಕಾಗೆಯ ರೀತಿ ತಲೆಯ ಆಚೀಚೆ ತಿರುಗಿ
ಕುಳಿತು ಕಾಣಲು ಅದರಡಿಗೆ ಹೋಗಿ
ಬಳಲಿ ಬೆಂಡಾದ ನಿನ್ನ ಮುಖವನೆ ನೋಡುತ
ಬಳಿಬಂದು ಹೇಳಲು ಏನಿದೆ ಅದರಲಿ

ದೊಡ್ಡದಾದೊಂದು ಕೊಡೆಯು ಅದರ ನಡುವೆ
ಗಿಡ್ಡದೊಂದು ಬಾಕ್ಸು
ಅಡ್ಡಡ್ಡ ಹಲವು ಕಡ್ಡಿಯ ಗೂಡದು ಅಲ್ಯೂಮೀನಿಯಂ
ದಡ್ಡ ನೋಡಲೇನುಂಟಾಥರ ಅದರಲಿ

ನಿನ್ನಂಥಾ ಹುಡುಗರಿಲ್ಲ ಎನ್ನಂತೆ ನಗುವರಿಲ್ಲ
ಸಣ್ಣ ಹುಡುಗನೆಂದು ಜಾಸ್ತಿ ನಾ ನಗಲಿಲ್ಲ
ಸುಮ್ಮನೇ ಇರಲಿನ್ನು ಸಾಧ್ಯವಾಗದು ಎನಗೆ
ತಮ್ಮ ಹೇಳುವೆ ಕೇಳು ಏನಿಲ್ಲ ಅದರಲಿ

ಹುಲಿಯಂತೆ ಹಸಿದ ಕಣ್ಣುಗಳಿಂದ ನೋಡಲು
ಅಲೆಯುವುದೇ ಬರಿದೇ ಎಡತಾಕಲು
ಬಲವೇ ಸಾಲದು ಕಣೋ ನಕ್ಕು ಸೋತುಹೋದೆ
ಸಲಿಗೆಯಿಂದಿರುವ ನಮ್ಮ ನರಹರಿ ವಿಠಲ

ಅಂತೂ ಡಿಶ್ ಪ್ರತಿಷ್ಠಾಪಿಸಿ ಆಯ್ತು.ನಂತರ ಟಿವಿ ಚಾಲೂ ಮಾಡುವುದು. ಪಟೇಲರ ಮನೆಯಲ್ಲಿ ಈಗ ಹಳೆಯ ಪಟೇಲರಿಲ್ಲ, ಅವರೀಗ ದಿವಂಗತರು. ಅವರಮಗ ಎಲ್ಲರಜೊತೆ ಆಗಾಗ ಸುಮ್ಸುಮ್ನೆ ಎಂಬ ಶಬ್ಧಬಳಸಿ ಮಾತಾಡೋದರಿಂದ ಅವನನ್ನು ' ಸುಮ್ಸುಮ್ನೆ ಸುರೇಶ' ಅಂತ ಊರವರು ಕರೀತಾ ಇದ್ರು. ಸುಮ್ಸುಮ್ನೆ ಸುರೇಶ್ರದ್ದೂ ಕೂಡ ಈಗ ಮಾಜಿ ಪಟೇಲ್ಕೆ, ಯಾಕೆಂದ್ರೆ ಪಟೇಲ ಅನ್ನೋ ಶಬ್ದ ಹೋಗಿಬಿಟ್ಟಿದೆ ಈಗ. ಅದರೂ ಗತ್ತಿಗೆ ಏನೂ ಕಮ್ಮಿ ಇರಲಿಲ್ಲ ಬಿಡಿ! ಥೇಟ್ ಅಪ್ಪನ ಪಡಿಯಚ್ಚು, ಪೊದೆ ಮೀಸೆ, ಕೈಯಲ್ಲಿ ಎರಡುಮೊಳದುದ್ದ ಇರುವ ಬೆಳ್ಳಿ ಕಟ್ಟಿಸಿದ ದೊಣ್ಣೆ, ಹೆಗಲಮೇಲೊಂದು ಚಂದಗಾವಿ ಶಾಲು. [ಇದು ಕಾಶಿಗೆ ಹೋದಾಗಅವರಪ್ಪ ತಂದಿದ್ದು! ] ಅಂತೂ ರಾಯರು ಉದ್ಘಾಟನೆ ಮಾಡಲು ಬಂದರು ! ಬಂದು ಆನ್ ಮಾಡಿದ್ದೇ ಕಪ್ಪು ಬಾಕ್ಸೊಳಗೆ ಅದೇನೋಗಜಿಬಿಜಿ ಗಜಿಬಿಜಿ, ಬೆಳ್ಳಗಿರುವ ಪರದೆ ತುಂಬಾ ಲಕ್ಷಗಟ್ಟಲೆ ಚುಕ್ಕಿಗಳು, ಹುಬ್ಬಳ್ಳಿ ಮಾವ ಅಡ್ಜಸ್ಟ್ ಮಾಡುತ್ತಲೇ ಇದ್ದ;ಎದುರಿಗಿರುವ ಸುಣ್ಣದ ಅಂಡೆಯ ಥರದ ಏನನ್ನೋ ತಿರುಗಿಸಿ ತಿರುಗಿಸಿ ಸೋತ ! ಏನಾಶ್ಚರ್ಯ ಅಂತೂ ಸುಮಾರು ಹೊತ್ತಾದ ಮೇಲೆ ಅದರೊಳಗೆಮನುಷ್ಯರು ಬಂದರು ! ಎಲ್ಲರೂ ಚಪ್ಪಾಳೆ ಹೊಡೀರೋ ಅಂತ ಪಟೇಲರ ಮೊಮ್ಮಗ ಹೇಳಿದ, ಎಲ್ಲರೂ ಚಪ್ಪಾಳೆ ಹೊಡೆದೆವು. ಟಿವಿ ಉದ್ಘಾಟನೆಗೆ ಕೋಸಂಬರಿ ಪನವಾರ ಮಾಡಿದ್ದರು ಜೊತೆಗೊಂದು ಹಲ್ವ ಪೀಸು, ಟಿವಿಗೆ ಮಂಗಳಾರತಿ ಮಾಡಿ ಎಲ್ಲರಿಗೂ ಪ್ರಸಾದವಿತರಣೆ ಆಯಿತು. ಎಲ್ಲರಿಗೂ ಖುಷಿಯೋ ಖುಷಿ, ಅದರಲ್ಲೂ ಸುಮ್ಸುಮ್ನೆ ಸುರೇಶ್ರಿಗೆ ಇನ್ನೂ ಖುಷಿ! ಯಾರಮನೆಯಲ್ಲೂ ಥರ ಟಿವಿ ಇರಲಿಲ್ಲ, ಟಿವಿ ನೋಡಿದ್ದೇ ನೋಡಿದ್ದು.ಅಷ್ಟು ಸಣ್ಣ ಬಾಕ್ಸೊಳಗೆ ಮನುಷ್ಯರು ಹೇಗೆ ಹೊಕ್ಕು ಕುಣಿಯುತ್ತಾರೆ ಎಂಬುದು ನನ್ನ ಸಮಸ್ಯೆ, ಮತ್ತು ಅವರು ಎಷ್ಟು ಹೊತ್ತಿನಲ್ಲಿ ಟಿವಿ ಎಂಬ ಕಪ್ಪು ಬಾಕ್ಸೊಳಗೆ ಬರುತ್ತಾರೆ --ಇದೆಲ್ಲಾ ಅರ್ಥವಾಗಿರಲಿಲ್ಲ, ನನಗೊಂದೇ ಅಲ್ಲ ಅಲ್ಲಿರುವ ಯಾರಿಗೂ, ಬಹುಶಃ ಸುಮ್ಸುಮ್ನೆ ಧಣಿಗೂ !

Friday, March 19, 2010

ದೀಪಂ ದೇವ ದಯಾನಿಧೇ



ದೀಪಂ ದೇವ ದಯಾನಿಧೇ
[ ಜಗದ್ಗುರು ಶ್ರೀ ಶ್ರೀ ಆದಿಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ ಭಾಗ-೧ ]


ಚೈತನ್ಯಃ ಶಾಶ್ವತಃ ಶಾಂತೋ ವ್ಯೋಮಾತೀತೋ ನಿರಂಜನಃ |
ಬಿಂದುನಾದಕಲಾತೀತಃ ತಸ್ಮೈ ಶ್ರೀಗುರವೇ ನಮಃ ||

ಭಾರತ ಮಾತೆ ಕಂಡ ಅತಿ ಶ್ರೇಷ್ಠ ಯತಿಗಳಲ್ಲಿ ಶ್ರೀ ಆದಿ ಶಂಕರಾಚಾರ್ಯರು ಒಬ್ಬರು, ಬದುಕಿದ್ದು ಕೇವಲ ೩೨ ವರ್ಷವಾದರೂ ಅವರ ಸಾಧನೆಯನ್ನು ಮೀರಿಸುವಂತ ಸಾಧನೆ -ಸಾಹಸ ಯಾರಿಂದಲೂ ಸಾಧ್ಯವಾಗಿಲ್ಲ. ವೇದವನ್ನು ಓದಿದ ಜನರು ಶ್ರೇಷ್ಠರೆಂತಲೂ ಮಿಕ್ಕುಳಿದ ಜನರು ಅವರನ್ನು ಅನುಸರಿಸಲು ಪ್ರಯತ್ನಿಸಿ ಭಾರತದ ಸಂಸ್ಕೃತಿಯನ್ನು ಕಲಿಯಬೇಕೆಂತಲೂ ಅವರು ಪ್ರತಿಪಾದಿಸಿದರು. ಪ್ರತ್ಯಕ್ಷ ಶಂಕರನ ಅವತಾರವೆಂದೇ ಖ್ಯಾತಿಗೊಳಗಾದ ಶಂಕರರು ಮನುಷ್ಯನೊಬ್ಬ ಇಂತಹ ಎಳೆಯ ವಯಸ್ಸಿಗೆ ಸಾಧಿಸಲಾರದ್ದನ್ನು ಸಾಧಿಸಿ ತಾವು ಅವತಾರಿ ಪುರುಷ ಹೌದೆಂಬುದನ್ನು ಸಾಬೀತುಪಡಿಸಿದರು. ವಾಹನ ಸೌಲಭ್ಯವಿಲ್ಲದ ಕಾಲಕ್ಕೆ ಅದು ಯಾವ ವಿಚಿತ್ರದಲ್ಲಿ ಅಷ್ಟೊಂದು ಓಡಾಡಿದರೋ ಅಂತೂ ಆಸೇತು-ಹಿಮಾಚಲ ಓಡಾಡಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಹಿಂದೂ ಧರ್ಮವನ್ನು ಮರುಸ್ಥಾಪಿಸಿ ಅದಕ್ಕೊಂದು ಸಾತ್ವಿಕ ಕಳೆಕೊಟ್ಟರು ! ಹಿಂಸೆಯನ್ನು ತೊರೆಯುವಂತೆ ಬೋಧಿಸಿ ಗ್ಲಾನಿಯಲ್ಲಿದ ಭಾರತದ ಸನಾತನ ಧರ್ಮವನ್ನು 'ಹೀಗೆ ನಡೆದುಕೊಳ್ಳಿ ಎಂದು' ತಿಳಿಹೇಳಿ ಮುನ್ನಡೆಸಿದ ಮಹಾನುಭಾವ ಸಂತ,ಮಹಂತ,ಸಾಧಕ, ಶ್ರೇಷ್ಠಕವಿ,ಉದ್ಧಾಮ ಪಂಡಿತ, ಉತ್ಕೃಷ್ಟ ತತ್ವಜ್ಞಾನಿ ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ಬದುಕಿರುವಾಗಲೇ ದಂತಕಥೆಯಾಗಿದ್ದ ಅವರ ಜೀವನ ಒಂದು ಅಸಾಮಾನ್ಯ ಯಶೋಗಾಥೆ. ಇಂತಹ ಪುಣ್ಯಕಥಾನಕವನ್ನು ಪ್ರಾರಂಭಿಸಿ ತಮಗೆಲ್ಲ ಹೇಳುವರೇ ಪ್ರಯತ್ನಿಸುತ್ತಿದ್ದೇನೆ. ಇಂದು ಮೊದಲಾಗಿ ಹಲವಾರು ಕಂತುಗಳಲ್ಲಿ 'ಭಕ್ತಿ ಸಿಂಚನದಲ್ಲಿ' ಬಂದು ಹೋಗುವ ಅನೇಕ ನಡುನಡುವಿನ ಕಂತುಗಳು ಶ್ರೀಶಂಕರರ ಜೀವನಕ್ಕೆ ಮೀಸಲಾಗಿದ್ದು ಇಂತಿಷ್ಟೇ ಕಂತಿಗೆ ಮುಗಿಸುವೆನೆಂದು ಮಿತಿಗೊಳಿಸದೆ ಮೊಗೆದು ಬಡಿಸುವ ಕೆಲಸವನ್ನು, ಸೇವೆಯನ್ನು ನನ್ನಿಂದ ಶಂಕರರೇ ನಿಂತು ಮಾಡಿಸಿಕೊಳ್ಳಲಿ ಅಂತ ಪ್ರಾರ್ಥಿಸಿ ಆಸ್ತಿಕ ಭಕ್ತಮಹಾಜನರ ಮನಸ್ಸಿಗೆ ಮುದನೀಡುವ ರೀತಿಯಲ್ಲಿ ಅದನ್ನು ಪ್ರಸ್ತುತ ಪಡಿಸಲು ಉದ್ಯುಕ್ತನಾಗುತ್ತಿದ್ದೇನೆ.

ಕರಿನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿಸ್ತರದ
ಗಣಪತಿಯೇ ಮಾಳ್ಪುದು ಮತಿಗೆ ಮಂಗಳವ

ಕನ್ನಡದ ಮಹಾಕವಿ ಕುಮಾರವ್ಯಾಸ ಬರೆದಂತೆ ಆದಿಪೂಜಿತನನ್ನೊಮ್ಮೆ ಧ್ಯಾನಿಸುತ್ತ ಆತ ಆನಂದ ತುಂದಿಲನಾಗಿ ಅನುಮೋದಿಸಿ ನಿಂತು ನಡೆಸಲೆಂಬಂತೆ ಹಾಗೆ ನಿಂತೊಮ್ಮೆ ಆತನ ಕೃಪೆಯನ್ನು ಅವಲೋಕಿಸಿದ್ದೇನೆ. ವ್ಯಾಸ-ವಾಗ್ದೇವಿಯರ ಅಡಿಗಳಿಗೆರಗಿ ಸಕಲ ಮುನಿಜನ-ಕವಿಜನಸಂದಣಿಗೆ ನಮಿಸುತ್ತಾ ನಿಮಗೆ ಇದನ್ನು ಹೇಳಲು ಉಪಕ್ರಮಿಸುತ್ತೇನೆ.


೮ ನೇ ಶತಮಾನದ ಆದಿ ಭಾಗದಲ್ಲಿ ಕೇರಳದ 'ಕಾಲಟಿ' ಎಂಬ ಸುಂದರವಾದ ಒಂದು ಊರಿತ್ತು-ಅದು ಈಗಲೂ ಅದೇ ಹೆಸರಿಂದ ಪ್ರಸಿದ್ಧವಾಗಿದೆ. ಕೇರಳವೆಂದರೆ ನಿಮಗೆ ಗೊತ್ತೇ ಇದೆ ಅದು GOD'S OWN COUNTRY ಎಂದು ಹೆಸರು ಪಡೆದ ಜಾಗ, ಅಂತಹ ಕಾಲಟಿಯಲ್ಲಿ ಶಿವಗುರು ಮತ್ತು ಆರ್ಯಾಂಬ ಎಂಬ ಸಂಪ್ರಾದಾಯಸ್ಥ ನಂಬೂದರಿ ಬ್ರಾಹ್ಮಣ ದಂಪತಿಗೆ ಮಕ್ಕಳಿರಲಿಲ್ಲ, ಬಹುಕಾಲ ಮಕ್ಕಳಿಲ್ಲದ ಕೊರಗಿನಲ್ಲೇ ಬದುಕಿದ್ದ ಆಸ್ತಿಕ ದಂಪತಿ ಹಿತೈಷಿಗಳನೇಕರ ಅಭಿಪ್ರಾಯದಂತೆ ಅಂದಿನಕಾಲಕ್ಕೆ ನಂಬಿ ಮೊರೆಹೋಗಿದ್ದು ತ್ರಿಚೂರಿನ ಹತ್ತಿರದಲ್ಲಿರುವ ವೃಷಾಚಲೇಶ್ವರ ದೇವರನ್ನು. ಅಲ್ಲಿನ ದೈವೀಕಳೆಯಿರುವ ಆ ವಿಗ್ರಹ ಅವರನ್ನು ತುಂಬಾ ಆಕರ್ಷಿಸಿತು. ಬಹುವಿಧವಾಗಿ ಬಹಳ ಸೇವೆಗೈಯ್ಯುತ್ತ ವೃಷಾಚಲೇಶ್ವರನಲ್ಲಿ ತಮ್ಮ ಬೇಡಿಕೆಯೊಂದಿಗೆ ಮೊರೆಯಿಟ್ಟರು. ಅನೇಕದಿನಗಳ ತರುವಾಯ ಒಂದು ರಾತ್ರಿ ಈ ದಂಪತಿಗೆ ಕನಸಲ್ಲಿ ವೃಷಾಚಲೇಶ್ವರ ಕಾಣಿಸಿಕೊಂಡು ಒಂದು ಪ್ರಶ್ನೆ ಕೇಳುತ್ತಾನೆ.

" ಭಕ್ತ ದಂಪತಿಯೇ, ನಿಮ್ಮ ಅಚಲ ಶೃದ್ಧಾ-ಭಕ್ತಿಗಳಿಗೆ ಮೆಚ್ಚಿದ್ದೇನೆ,ಪ್ರಸನ್ನನಾಗಿದ್ದೇನೆ, ನಿಮ್ಮ ಬೇಡಿಕೆ ಈಡೇರಿಸಲು ಬಂದಿದ್ದೇನೆ. ನನ್ನದೊಂದು ಪ್ರಶ್ನೆ ನಿಮ್ಮಲ್ಲಿ - ನಿಮಗೆ ಕಡಿಮೆ ಆಯುಷ್ಯವುಳ್ಳ ತತ್ವಜ್ಞಾನಿಯಾಗಿ ಇಡೀ ವಿಶ್ವಕ್ಕೆ ತತ್ವ ಬೋಧಿಸುವ ಶಿಕ್ಷಕನಾಗುವ ಒಬ್ಬನೇ ಮಗ ಬೇಕೋ ಅಥವಾ ದೀರ್ಘಾಯುಷಿಗಳಾಗಿ ಪೆದ್ದರಾಗಿ ಬದುಕುವ ಅನೇಕ ಮಕ್ಕಳು ಬೇಕೋ ? ಎರಡರಲ್ಲಿ ಒಂದನ್ನು ಆಯ್ಕೆಮಾಡಿ "

" ಓ ನಮ್ಮ ದೇವರೇ , ನಾವು ಏನನ್ನೂ ಹೇಳಲು ಅರಿಯೆವು, ಎಲ್ಲಾ ನಿನಗೇ ಬಿಟ್ಟಿದ್ದು,ನಿನ್ನಿಷ್ಟ ಹೇಗೋ ಹಾಗೇ ಆಗಲಿ "

" ನನ್ನ ಪ್ರೀತಿಯ ಭಕ್ತರೇ, ನಿಮಗೆ ಜಗದೋದ್ಧಾರಕನಾದ, ವಿಶ್ವಕ್ಕೆ ಗುರುವಾದ ಮಗು ಸಾಕ್ಷಾತ್ ಈಶ್ವರನ ಪ್ರತಿರೂಪವಾಗಿ ಜನಿಸಲಿ " ಎಂದು ಹರಸುತ್ತಿದ್ದಂತೆ ಮಾರುತ್ತರಕ್ಕೂ ಕಾಯದೇ ಅದೃಶ್ಯನಾಗುತ್ತಾನೆ.ಅದ್ಬುತ ಮತ್ತು ಅತೀ ಸುಂದರವಾದ ಈ ಕನಸು ಅವರಿಗೆ ಬಹಳ ಹರುಷ ತಂದಿತು. ದೇವರು ಕೊಟ್ಟ ಪ್ರಸಾದ ಎಂದಿಕೊಂಡು ಆ ದಂಪತಿ ತಮ್ಮ ಪಾದಯಾಗೆ ತಾವಿರುತ್ತ ಕೆಲವೇ ದಿನಗಳಲ್ಲಿ ಸಾಧ್ವಿ ಶಿರೋಮಣಿ ಆರ್ಯಾಂಬೆ ಗರ್ಭಿಣಿಯ ಲಕ್ಷಣವನ್ನು ಪಡೆಯುತ್ತಾಳೆ; ಗರ್ಭಧರಿಸುತ್ತಾಳೆ. ದಂಪತಿಯ ಸಂತೋಷಕ್ಕೆ ಪಾರವೇ ಇಲ್ಲ ! ನವಮಾಸ ತುಂಬಿ ಆ ತಾಯಿ ಒಂದುದಿನ ವೈಶಾಖಮಾಸದ ಶುಕ್ಲಪಕ್ಷದ ಪಂಚಮಿಯ ಶುಭ ಗಳಿಗೆಯಲ್ಲಿ ಮಗುವಿಗೆ ಜನ್ಮ ನೀಡುತ್ತಾಳೆ. ಹಾಗೆ ಹುಟ್ಟಿದ ಮಗುವಿಗೆ ಶಂಕರನ ವರಪುತ್ರನಾದುದರಿಂದ "ಶಂಕರ" ಎಂದೇ ನಾಮಕರಣ ಮಾಡುತ್ತಾರೆ.

ಮುಖದಲ್ಲಿ ಪ್ರಭುದ್ಧ ಕಳೆ ಹೊಂದಿದ್ದ ಸಲ್ಲಕ್ಷಣಭರಿತವಾದ ಮುದ್ದು ಬಾಲಕ ಶಂಕರ ಬಾಲಪ್ರತಿಭೆಯಾಗಿ ದಿನೇ ದಿನೇ ಬೆಳೆಯುತ್ತ ಅನೇಕ ಹೊಸ ಹೊಸ ಮತ್ತು ಮಗುವಿನ ಆ ವಯಸ್ಸಿಗೆ ಮಾಡಲು ಸಾಧ್ಯವಾಗದ ಕೆಲಸಗಳನ್ನು ಮಾಡಹತ್ತಿದ. ಮೊದಲನೇ ವರ್ಷದಲ್ಲಿ ಮಲೆಯಾಳೀ ಮತ್ತು ಸಂಸ್ಕೃತ ಭಾಷೆಗಳನ್ನು ಮಾತಾಡಲು ಕಲಿತ ಶಂಕರ ಎರಡನೇ ವಯಸ್ಸಿನಲ್ಲಿ ಅವುಗಳನ್ನು ಬರೆಯಲು, ಓದಲು ಕಲಿತ. ಮುಂದೆ ಮೂರನೇ ವಯಸ್ಸಿನಲ್ಲಿ ಈ ಭಾಷೆಗಳಲ್ಲಿ ಕಥೆ-ಕವನ ಸಾಹಿತ್ಯಗಳನ್ನು ಓದಿ ಅವುಗಳ ಅರ್ಥ ಹೇಳತೊಡಗಿದ ! ಯಾವ ವಯಸ್ಸಿನಲ್ಲಿ ಹೊರಗಡೆ ಹೋದರೆ ತೊಂದರೆ ಆಗಿಬಿಡಬಹುದು ಎಂದು ಮಗುವನ್ನು ಜೋಪಾನ ಮಾಡುತ್ತೇವೋ, ಯಾವ ವಯಸ್ಸಿನಲ್ಲಿ ಮಗುವಿಗೆ ಲಾಲಿ ಹಾಡಿ ರಮಿಸುತ್ತೆವೋ ಅಂತಹ ವಯಸ್ಸಿನಲ್ಲಿ ಪುರಾಣ-ಭಾಗವತದ ಕಥೆಗಳನ್ನು ತನ್ನ ಸುತ್ತ ಇರುವ ಜನರಿಗೆ ಹೇಳುತ್ತಿದ್ದ ಶಂಕರ ಅಂದಿಗೆ ವಿಚಿತ್ರ ಮಗು ! ಐದನೇ ವರ್ಷದಲ್ಲಿ ಉಪನಯನ ಪೂರೈಸಿಕೊಂಡ ಶಂಕರ ಎಂಟನೇ ವಯದಲ್ಲಿ ನಾಲ್ಕೂ ವೇದಗಳಲ್ಲಿ ಪಾರಂಗತನಾದ. ಹೀಗೇ ಇಂದು ಇದು ನಂಬಲಸಾಧ್ಯವಾದರೂ ನಡೆದು ದಾಖಲಿಸಿದ ಘಟನೆಯನ್ನು ನಂಬಲೇ ಬೇಕಲ್ಲ ಯಾಕೆಂದರೆ ಅದು ಲಕ್ಷಗಟ್ಟಲೆ ಜನ ನೋಡಿದ ಸತ್ಯ. ಇಂದಿಗೂ ಅಲ್ಲಲ್ಲಿ ಬೇರೆಬೇರೆ ವಿಷಯಗಳಲ್ಲಿ ಬಾಲಪ್ರತಿಭೆ ಗಳನ್ನು ನೋಡುತ್ತೇವೆ. ಅವುಗಳ ಹಿಂದೆ ಪೂರ್ವಜನ್ಮದ ಸಂಸ್ಕಾರವಿರದೆ ಅವು ಹಾಗೆ ಬೆಳೆಯಲು ಸಾಧ್ಯವೇ ಇಲ್ಲ. ಇಂತಹ ಮಹಾತ್ಮನಿಗೆ ಜೋಗುಳ ಹಾಡಿದ್ದೇನೆ ---

ಜೋಜೋ ಹೇಳಲೇ ನಿನಗೇ ಶಂಕರಾ
ರಾಜಿಪ ಕರುಣಾಂಬುಧಿ ಮುನಿವರ || ಪ ||

ಈಶ ನಿನಗೆ ನನ್ನೀ ಮನದಾಳದಿ
ದೋಷವ ಕಳೆಯಲು ರೋಷವ ನೀಗಲು
ರಾಶಿವಿದ್ಯೆ ಕಲಿಸುತ ಸಂಸಾರದಿ
ಭೀಷಣದೀ ಭವ ಸಾಗರ ದಾಟಲು || ೧||

ಕೇರಳ ಕಾಲಟಿಯಾ ಕುಟೀರದಿ
ಹೇರಳ ವಿದ್ಯೆಯ ಬಾಲ್ಯದಿ ಪಡೆದು
ಆರೇಳುವಯಸಲಿ ಆ ನದಿತೀರದಿ
ಗಾರುಡಿ ರೂಪದಿ ಗುರುತನ ಪಿಡಿದು ||೨||

ವೇದ ವೇದಾಂತದ ಸೂತ್ರ ಪಾರಂಗತ
ಆದಿ ಶಂಕರನೆಂಬ ಹೆಸರನು ಪಡೆದೆ
ವ್ಯಾಧಿಯಲೀ ಜೀವನದಂತರ್ಗತ
ಬಾಧೆ ಕಳೆಯೆ ಸನ್ಯಾಸವ ನಡೆಸಿದೆ ||೩||



ಅನುಗಚ್ಛಂತಿ ಗಚ್ಛಂತಿ ಕೌತುಕಂ ಕೌತುಕಾನ್ವಿತಂ |
ಪದೇ ಪದೇ ಕೃತಫಲಂ ಲಭತೇ ನಾತ್ರ ಸಂಶಯಃ ||

[ಮುಂದುವರಿಯುವುದು ............]

Thursday, March 18, 2010

ಭೂರಮೆಯ ಭೂರಿಯೂಟ

ಮನಸ್ಸು ಬಾಡಿದಾಗ, ನೋವಿಗೀಡಾದಾಗ, ಕೋಪಗೊಂಡಾಗ,ಪರಿತಾಪ ಪಡುವಾಗ, ನಿಶ್ಚೇಷ್ಟಿತವಾದಾಗ, ದುಃಖಿತವಾದಾಗ, ತಾಳ್ಮೆ ಕಳೆದುಕೊಂಡಾಗ, ಸೈರಣೆ ಇಲ್ಲದಾದಾಗ, ಅಸಹನೆ ಜಾಸ್ತಿಯಾದಾಗ, ವೈರುಧ್ಯ ತುಂಬಿಕೊಂಡಾಗ, ಗೊಂದಲದ ಗೂಡಾದಾಗ, ದಾರಿಯೇ ಕಾಣದಾದಾಗ, ಮಸುಕು ಮಸುಕಾಗಿ ಕುಂತಾಗ, ತಲೆಗೇನೂ ತೋಚದಾದಾಗ, ದ್ವೇಷ ಭುಗಿಲೆದ್ದಾಗ, ಅವಮಾನಿತವಾದಾಗ, ಏನೋ ಕಳೆದುಹೋದ ಸ್ಥಿತಿ ಅನುಭವಿಸುವಾಗ, ಪ್ರೀತಿಪಾತ್ರರನ್ನು ಕಳಕೊಂಡ ಹಸಿಹಸಿ ಬಿಟ್ಟಿರಲಾರದ ತುಡಿತಕ್ಕೊಳಗಾದಾಗ. ಸಂಪ್ಪತ್ತು ಕಳ್ಳತನದಲ್ಲಿ ಕಳೆದು ಹೋದಾಗ -- ಎಲ್ಲಾ ಹೊತ್ತಿನಲ್ಲೂ ನಮ್ಮನ್ನು ತನ್ನ ಮಕ್ಕಳೆಂದು ಅತೀ ಪ್ರೀತಿಯಿಂದ ನೋಡುವುದು ನಿಸರ್ಗ-ಭೂತಾಯಿ-ಭೂರಮೆ ಮಾತ್ರ!

ನಾವು ಏನೇ ಕೊಡಲಿ, ಕೊಡದಿರಲಿ, ಭೂಮಿಯನ್ನು , ಅದರ ನೇರ ಮಕ್ಕಳಾದ ಗಿಡಮರಗಳನ್ನು ಕಡಿದು-ಕತ್ತರಿಸಿದರೂ, ಭೂಮಿಯನ್ನೇ ಅಗೆದರೂ, ಉತ್ತರೂ , ಬೀಜ ನೆಟ್ಟರೂ, ತಾರು ರಸ್ತೆ ನಿರ್ಮಿಸಿದರೂ, ಬಂಗಲೆ -ಮಹಲುಗಳನ್ನು ಕಟ್ಟಿದರೂ, ದೇವಸ್ಥಾನ-ಮಸೀದಿ-ಚರ್ಚು-ಗುರುದ್ವಾರ ಹರಿದ್ವಾರಗಳೆಂದು ಬಡಿದಾಡಿದರೂ ಪ್ರಕೃತಿ ಮಾತೆ ಸದಾ ನಿರ್ವಿಣ್ಣ, ನಿರಪೇಕ್ಷಿತ ಅಲ್ಲವೇ ? ನಮ್ಮಿಂದ ಏನನ್ನೂ ಬಯಸದೇ ನಮಗೆ ಎಲ್ಲವನ್ನೂ ಕೊಡುವ ನಿಸರ್ಗಮಾತೆಯ ಋಣ ತೀರಿಸಲು ನಮ್ಮಿಂದ ಸಾಧ್ಯವೇ ? ಅದು ಎಂದಿದ್ದರೂ ಕನಸಿನ ಮಾತೇ ಸರಿ !

ಏನೇ ನೋವುಕೊಡಲಿ ಅದನ್ನೆಲ್ಲಾ ನಲಿವಿನಿಂದ ಸ್ವೀಕರಿಸಿ, ಬಡವ-ಬಲ್ಲಿದ, ಜಾತಿ-ಮತಗಳ ಭೇದ ಇಲ್ಲದೇ ಏಕರೂಪವಾಗಿ ಮತ್ತು ಅದೇ ಪ್ರೀತಿಯಿಂದ ನೋಡುವುದು ಈ ಭೂರಮೆ. ನಮ್ಮಿಂದ ಏನೊಂದನ್ನೂ ಬಯಸದೇ, ತನ್ನಷ್ಟಕ್ಕೇ ತಾನಿದ್ದು ಪರೋಪಕಾರಿಯಾಗಿ ಕಣ್ಣಿಗೆ ಕಾಣುವ ಪ್ರಪಂಚದ ಪಂಚ ಭೂತಗಳಲ್ಲಿ
ಒಂದಾದ ಈ ಭೂರಮೆಯನ್ನು ಎಷ್ಟೇ ಕೊಂಡಾಡಿದರೂ ಅದು ನಮ್ಮ ಖುಷಿಗಷ್ಟೇ ಹೊರತು ನಮ್ಮಿಂದ ಹೊಗಳಿಕೆ ಬಂದಿಲ್ಲ ಎಂದು ಭೂರಮೆ ಎಂದೂ strike ಮಾಡುವುದಿಲ್ಲ, ಎಂದೂ ಧರಣಿ ನಡೆಸುವುದಿಲ್ಲ. ಸ್ವತಃ ಅವಳೇ ಧರಿತ್ರಿ-ಧರಣಿ ! ಇಂತಹ ಭೂತಾಯ ನಿಸರ್ಗದ ಮಡಿಲಲ್ಲಿ ಮುಂಜಾನೆ ಒಮ್ಮೆ ಹೀಗೇ round ಹೋಗಿಬನ್ನಿ, ಕೇವಲ ಕೇವಲ ಅರ್ಧ ಗಂಟೆ ಸಾಕು ! ನಿಮ್ಮಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಅಲ್ಲಿದೆ ಉತ್ತರ, ಅದು ಪೇಯಗಳಿಂದ, ಆಲ್ಕೊಹಾಲಿನಿಂದ, ಮಾದಕ ವ್ಯಸನಗಳಿಂದ,ಗುಟ್ಕಾ-ತಂಬಾಕಿನ ಚಟಗಳಿಂದ ಬರಲಾರದ-ಸಿಗಲಾರದ ಅದಮ್ಯ solution. Solution for all your needs ! ಮನುಷ್ಯನ ಅತೀ ಕೊನೆಯ ಆಸೆ ಅಂದರೆ ಮನಸ್ಸು ತೃಪ್ತಿಯಿಂದ-ಸಂತೋಷದಿಂದ-ನೆಮ್ಮದಿಯಿಂದ ಇರುವುದು. ಎಷ್ಟಿದ್ದರೇನು ಅದನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲವಲ್ಲ ? ಹೀಗಾಗಿ ನಿಸರ್ಗದ ಮಡಿಲಲ್ಲಿ ಸಹಜವಾಗಿ ಆ ಅಮ್ಮ ಕೊಡುವ ಪ್ರೀತಿ ತಕ್ಕ ಮಟ್ಟಿಗೆ ಸಿಗುತ್ತದೆ. ಅದು ಪರೋಕ್ಷ, ಅದು ಸ್ಫೂರ್ತಿ, ಅದು ಚೈತನ್ಯ, ಅದು ನೂರಾನೆ ಬಲ, ಅದು ಸ್ಥೈರ್ಯ , ಅದು instant recharge. ನಮ್ಮನ್ನೇ ಮರೆತು ಸುಮ್ಮನೇ ಏನೂ ಮಾತಾಡದೆ ಹೋಗಿ ತಿರುಗಾಡಿ ಒಮ್ಮೆ ಪ್ರಯತ್ನಿಸಿ ನೋಡಿ. ಅದನ್ನು ನೋಡಿಯೇ ಬರೆದ ಕವನ ನಿಮಗಾಗಿ -



[ಚಿತ್ರ ಋಣ: ಅಂತರ್ಜಾಲ]

ಭೂರಮೆಯ ಭೂರಿಯೂಟ

ಮಂಜಮುಂಜಾವದಲಿ ಹೀಗೊಮ್ಮೆ ನಲಿಯಿತದು ಮನಸು
ರಂಜನೆಯೇ ಅದಕಾಯ್ತು ನಸುನಗುತಿರಲೊಮ್ಮೆ ಬಲು ಸೊಗಸು

ಸುಮ್ಮ ಸುಮ್ಮನೇ ನಾ ನಡೆಯುತುದ್ಯಾನದಲಿ
ನಲಿವೆ ಗಿಡಮರಗಳ ಕಂಡು
ಹೆಮ್ಮೆಯಾತಕೋ ಮನದಿ ಭಿಮ್ಮನೇ ಬೀಗುವೆ
ಅವುಗಳ ಸಿರಿವಂತಿಕೆಯನುಂಡು

ಬಾಳಬಾಂದಳದಲ್ಲಿ ಮುನ್ನೋಟ ಬೀರುತ್ತ ಪ್ರಕೃತಿಯ
ಬಿಟ್ಟಿರಲು ನನಗದಸಾಧ್ಯ
ಆಳಅಗಲಗಳ ಅಳೆಯಲದು ವಿಸ್ತಾರ ವಿಸ್ತಾರ
ಸಾಗರದಾದಿಯ ನೈವೇದ್ಯ !

ನೀರವ ಮೌನದ ನಡುವೆ ನೂರೆಂಟು ಹಕ್ಕಿಗಳ
ಪ್ರೀತಿಯ ಕಲರವದಿಂಚರವೂ
ಅರ್ಣವನೋಡೋಡಿ ಮೇಲೆದ್ದು ಬರಲಾಗ ಅಹಹಾ
ನನ್ನಲಿ ಮಿಂಚಿನ ಸಂಚಾರವೂ

ಜಾರಿಬಿದ್ದರೂ ಖುಷಿಯೇ ಮೇಲಕೆದ್ದರೂ ಹಿತವೇ
ಭೂರಮೆಯ ಭೂರಿಯೂಟ ನೆನೆದು
ವಾರದುದ್ದಕೂ ದಿನವೂ ವಿಶ್ರಮಿಸೆ ನನಗಾಯ್ತು
ಗುನುಗುನುಗುನಿಸುತಾ ನಲಿದು

ಹಸಿರು ಕೆಂಪು ಹಳದಿ ನೀಲಿ ಬಿಳಿ ತಿಳಿಹಸಿರು
ಒಂದೆರಡೇ ಬಣ್ಣಗಳಾ ಚಿತ್ತಾರ ?
ಉಸಿರು ಜೀವನಕೆ ಗಳಿಗೆ ಗಂಟೆ ನಿಮಿಷವದಾಗಿ
ಸಣ್ಣಗಾಗಿ ನಲ್ಮೆಯ ಸಾಕಾರ !

Wednesday, March 17, 2010

'ವಿಕೃತಿ'ಯಲ್ಲಿ ಸಿಕ್ಕ ವಿಕೃತ ಕಲಾವಿದ



Naked Bharatmata - Hussain has shown naked woman

ಮುಸ್ಲಿಂ ಬಾಂಧವರು ಕ್ಷಮಿಸಬೇಕು, ಇವತ್ತಿನ ಕೃತಿ ಅವರಬಗ್ಗೆ ಹೇಳಿದ್ದಲ್ಲ, ಬದಲಾಗಿ ಕಲಾವಿದ ಎನ್ನಿಸಿಕೊಂಡ ಮೂರ್ಖನೊಬ್ಬ ಕಲೆಯ ಹೆಸರಲ್ಲಿ ಕುಲಗೆಡಿಸಿದ ಆತನ 'ಕಲೆಯ' ಕಲೆ ಬಗ್ಗೆ ಬರೆದಿದ್ದೇನೆ. ಇದು ಬಟ್ಟೆಯ ಮೇಲಾದುದಾದರೆ ತೊಳೆಯಬಹುದಿತ್ತು, ಮನಸ್ಸಿಗೆ ಆದ ಕಲೆ ! ಮನಸ್ಸಿಗೆ ಎಳೆದ ಬರೆ ! ಇಂಥವರೂ ಇರುತ್ತಾರೆ ನಮ್ಮಲ್ಲಿ, ಕಳ್ಳ ಕಾವಿಗಳಿಗೂ ಇವರಿಗೂ ಬಹಳ ಅಂತರವಿಲ್ಲ ! ಅವರು ಕಾವಿ ವೇಷ ಹಾಕಿದ್ದರೆ ಇವರು ಜೀನ್ಸ್ ಹಾಕಿದ್ದಾರೆ,ಖಾದಿ ಹಾಕಿದ್ದಾರೆ ಅಷ್ಟೇ ! ಅಲ್ಲಿ ದೇವರ ಹೆಸರಲ್ಲಿ ಬೂಟಾಟಿಕೆ ಇಲ್ಲಿ ಕಲೆಯ ಹೆಸರಲ್ಲಿ ಸಲ್ಲದ ನಡವಳಿಕೆ ! ಎರಡೂ ವಿಕೃತವೇ ಇದು ನಮಗೆ ಬಂದ ಮೊದಲ 'ವಿಕೃತಿ'ಯ ವಿಕೃತ ! ಹಾಸ್ಯಸ್ಪದವೇ ಓದಬನ್ನಿ ----



Naked Draupadi.



Mother Teresa fully clothed




Muslim poets Faiz, Galib are shown well-clothed




Photo of MF Hussain




Naked Saraswati




M.F. Hussain's Mother fully clothed



Full Clad Muslim King and naked Hindu Brahmin. The above painting clearly indicates Hussain's



Goddess Lakshmi naked on Shree Ganesh's head



Hussain's Daughter well clothed

'ವಿಕೃತಿ'ಯಲ್ಲಿ ಸಿಕ್ಕ ವಿಕೃತ ಕಲಾವಿದ


Goddess Durga in sexual union with Tiger



Well clothed Muslim Lady.


Naked Lord Hanuman and Goddess Sita sitting on thigh of Ravana


ಸಂಗೀತ-ಸಾಹಿತ್ಯ-ಕಲೆ ಎಂಬುದು ಒಳ್ಳೆಯ ದಿಕ್ಕಿನತ್ತ ಸಾಗಿದರೆ ಅದು ತರುವ ಸಂತೋಷ ಅಪಾರ. ಅದರಿಂದ ಜನಮಾನಸಕ್ಕೆ ಉಂಟಾಗುವ ಒಳ್ಳೆಯ ಪರಿಣಾಮವೂ ಅಪಾರ. ಅದಕ್ಕೇ ನಮ್ಮ ಸಂಸ್ಕೃತದಲ್ಲಿ

|| ಸಂಗೀತ-ಸಾಹಿತ್ಯ-ಕಲಾ ವಿಹೀನಾಂ ಸಾಕ್ಷಾತ್ ಪಶೂನಾಂ ಪರಪುಚ್ಚ ವಿಹೀನಃ ||

ಎಂದಿದ್ದಾರೆ ಅಂದರೆ ಈ ಮೂರರ ಗಂಧ-ಗಾಳಿ ಯಾರಿಗೆ ಇರುವುದಿಲ್ಲವೋ ಅಂಥವರು ಪಶುವಿಗೂ ಕಡೆ ಎಂದಿದ್ದಾರೆ-ಪ್ರಾಜ್ಞರು. ಯಾರ ಜೀವನದಲ್ಲಿ ಇವುಗಳಲ್ಲಿ ಆಸಕ್ತಿ ಇರುವುದಿಲ್ಲವೋ ಅವರ ಜೊತೆ ಬದುಕುವುದು ಮತ್ತು ಒಡನಾಡುವುದು ಕೂಡಾ ಕಷ್ಟದ ಕೆಲಸ. ತಾಳ್ಮೆಯಿಂದ ಅವಲೋಕಿಸಿ ಇವುಗಳ ರಸಾಸ್ವಾದನೆ ಮಾಡಿದಾಗ ನಮಗಿರುವ ಹೆಚ್ಚಿನ ರಕ್ತದೊತ್ತಡ, ಸಕ್ಕರೆ ಕಾಯಿಲೆ, ನರ ದೌರ್ಬಲ್ಯ, ಮಾನಸಿಕ ಕ್ಲೀಷೆ,ಕ್ಲೇಶ, ಅಸಮಾಧಾನ, ಅಸಂತೋಷ, ಕ್ಷಣಿಕ ಮನೋ ವಿಕೃತಿಗಳು, ಕೋಪ-ತಾಪ, ಗೊತ್ತಿರದ ವಿಷಯಕ್ಕೆ ಗೊಂದಲ, ಏನೋ ಆತಂಕ ಇನ್ನೂ ಹಲವಾರು ದುಗುಡಗಳು ನಿವಾರಿಸಲ್ಪಡುತ್ತವೆ. ಇದಕ್ಕೆ ಉದಾಹರಣೆಯಾಗಿ ಒಂದು ಚಿಕ್ಕ ಮಗುವಿನ ಅಳುವನ್ನು ನಿಲ್ಲಿಸುವಾಗ, ಮಗುವನ್ನ್ನು ನಿದ್ದೆಮಾಡಿಸುವಾಗ ಅಮ್ಮ ಹಾಡನ್ನು ಹಾಡುತ್ತಾಳೆ. ಬಹಳ ಸಂಪರ್ಕ ಮಾಧ್ಯಮಗಳಿರದ ಆ ಕಾಲದಲ್ಲೇ ನಮ್ಮ ಜನಪದರು ಹಾಡಿದರು

ಕಾಡೀಗಚ್ಚಿದ ಕಣ್ಣು ತೀಡೀ ಮಾಡಿದ ಹುಬ್ಬು
ಮಾವೀನ ಹೋಳು ನಿನ ಕಣ್ಣು
ಮಾವೀನ ಹೋಳು ನಿನ ಕಣ್ಣು ಕಂದಮ್ಮ
ಮಾವ ಬಣ್ಣಿಸೀ ಕರೆದಾನ

ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ್ಕ
ಕೂಸು ಕಂದಮ್ಮ ಒಳ ಹೊರಗ
ಕೂಸು ಕಂದಮ್ಮ ಒಳ ಹೊರಗ ಆಡಿದರ
ಬೀಸಣಿಕೆ ಗಾಳೀ ಸುಳಿದಾS


ಅಂದರೆ ನಾವು ತಿಳಿಯಬೇಕು ಸಂಗೀತ-ಸಾಹಿತ್ಯ-ಕಲೆ ಎಂಬುದು ನಮ್ಮೆಲ್ಲರ ಬದುಕಿನ ಹಾಸು-ಹೊಕ್ಕು, ನಮ್ಮ ಮನಸ್ಸಿನಲ್ಲಿ ಅಚ್ಚೊತ್ತು ಉಳಿವ ಬಣ್ಣದ ರಂಗೋಲಿಗಳವು. ನನ್ನ ಪ್ರೀತಿಯ ಕವಿಗಳಲ್ಲಿ ಒಬ್ಬರಾದ ಶ್ರೀಯುತ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕವನ ತಾವು ಕೇಳಿರುತ್ತೀರಿ --

ಮಲಗೋ ಮಲಗೆನ್ನ ಮರಿಯೇ
ಬಣ್ಣದ ನವಿಲಿನ ಗರಿಯೇ
ಎಲ್ಲಿಂದ ಬಂದೆ ಈ ಮನೆಗೆ ?
ನಂದನ ಇಳಿದಂತೆ ಭುವಿಗೆ

ಕವಿ ಬಾಲ್ಯವನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಈ ಕಾವ್ಯದಲ್ಲಿ. ಇದರಲ್ಲಿ ಮುಂದೆ ಎಲ್ಲಿಯವರೆಗೆ ಹೇಳಿದ್ದಾರೆಂದರೆ ಮಗುವಿನ ಸೌಂದರ್ಯ [ಎಲ್ಲರೂ ಸಹಜವಾಗಿ ಹೇಳುವುದು ಮೊಸಹೊಗುವುದಕ್ಕೆ ನಾಮಹಾಕಿಸಿಕೊಳ್ಳುವುದು ಅಂತ, ಅದಕ್ಕೆತಿರುಪತಿ ನಾಮ ಅಂತಲೂ ಅನ್ನುವುದಿದೆ !] ತಿರುಪತಿ ತಿಮ್ಮಪ್ಪನಿಗೇ ಮೂರು ನಾಮ ಹಾಕುವಷ್ಟು ಎಂದು! ಅಂದರೆ ಕವಿಯ ಕಲ್ಪನೆ ನೋಡಿ, ಇದು ಒಂದು ಅದ್ಬುತ ರಸಾನುಭೂತಿ ! ಹೀಗೇ ಸಂಗೀತ-ಸಾಹಿತ್ಯ-ಕಲೆಗಳು ಸಮಾಜದ ಒಳಿತನ್ನು ವರ್ಣಿಸಲು, ಸಂಸ್ಕೃತಿಯನ್ನು ಎತ್ತಿಹಿಡಿಯಲು ಉಪಯೋಗವಾಗಬೇಕೆ ಹೊರತು ಅವು ವಿಕೃತಿಯ ದಾರಿ ಹಿಡಿದರೆ ಆಗ ಸಮಾಜದಲ್ಲಿ ಋಣಾತ್ಮಕ ಸಂದೇಶ ಹೊಮ್ಮುತ್ತದೆ, ಅದು NEGATIVE ENERGY ಆಗಿ ಪರಿಣಮಿಸುತ್ತದೆ. ಅಂತಹ ಋಣಾತ್ಮಕತೆಯನ್ನು ಸೃಜಿಸುವ-ಪೋಷಿಸುವ-ಬೆಳೆಸುವ 'ಕಲೆ' ನಮ್ಮ ಸಮಾಜದ ಕೆಲವು ಸ್ತರಗಳಲ್ಲಿ ಕಂಡುಬಂದಿದೆ. ಇದಕ್ಕೆ ಉದಾಹರಣೆ ಎಂದರೆ ರಾಷ್ಟ್ರೀಯ ಮಟ್ಟದಲ್ಲಿ ಕಲಾವಿದ[ಅವರ ಕಲೆ ದೇವರಿಗೆ ಪ್ರೀತಿ!] ಎನಿಸಿಕೊಂಡ ಒಬ್ಬ ವ್ಯಕ್ತಿ ಇಂತಹ ಕೆಟ್ಟ ಭಾವನೆಗಳು ಕೆರಳುವಂತಹ ಚಿತ್ರಗಳನ್ನು ಗೀಚಿದ್ದಾರೆ! ಯಾರು ಎಂದಿರೇ ? ಆ ಕೆಟ್ಟ ಕ-ಲಾವಿದನೇ M.F.HUSSAIN


ಹುಣಿಸೆ ಮುದುಕಾದರೂ ಹುಳಿ ಮುಪ್ಪೇ ಎನ್ನುವಂತೆ ಇನ್ನೂ ಕಾಮದಿಚ್ಛೆ ಹೊಂದಿರುವ ಮುದಿ ಹಂದಿಗಳಲ್ಲಿ ಇದೂ ಒಂದು. ಇಷ್ಟು ಹೇಳಲು ಕಾರಣ ಅವರು ಇತ್ತೇಚೆಗೆ ಚಿತ್ರಿಸಿದ ಕೆಲವು ಚಿತ್ರಗಳು. ಅವುಗಳನ್ನು ತಮ್ಮೆಲ್ಲರ ಅವಲೋಕನೆಗೆ ಇಲ್ಲಿ ಸಾಧ್ಯವಾದಷ್ಟು ಬಿತ್ತರಿಸುತ್ತಿದ್ದೇನೆ. ನಾನು ಹುಸೇನ್ ಬಗ್ಗೆ ಲೇಖನ ಹಾಕುತ್ತಿರಲಿಲ್ಲ, ಸ್ನೇಹಿತ ಕೆರೆಮನೆ ಶಿವಾನಂದ ಹೆಗಡೆಯವರು ನಿನ್ನೆ ಮತ್ತೆ ಮಿಂಚಂಚೆ ಕಳಿಸಿ ಇದರ ಬಗ್ಗೆ ಬರೆದರೆ ಒಳ್ಳೆಯದೆಂಬ ಅಭಿಪ್ರಾಯ ಸೂಚಿಸಿದರು, ಅವರ ಹಾಗೂ ಸರಿಸುಮಾರು ಸಾವಿರ ಸಂಖ್ಯೆಯ ಸ್ನೇಹಿತರು ಈ ವಿಷಯದ ಸಲುವಾಗಿ ನನಗೆ ಮಿಂಚಂಚೆ ಕಳಿಸುತ್ತಲೇ ಇದ್ದಾರೆ-ಈ ಎಲ್ಲರ ಇಚ್ಛೆಯಂತೆ ಅಂತೂ ಇಂದು ಬರೆಯೋಣ ಅಂತ ಬರೆದಿದ್ದೇನೆ.

ಇದರ ಬಗ್ಗೆ ಬರೆಯಲು ಮನಸ್ಸಿರಲಿಲ್ಲ, ಯಾಕೆಂದರೆ ಮುದುಕನೊಬ್ಬ ನಟೀಮಣಿಯರ ಹಿಂದೆ ಬಿದ್ದು ನಗೆಯಾಡುತ್ತ ಅವರ ಸಾಮೀಪ್ಯಕ್ಕೆ, ಆವರ ದೇಹ ಗಂಧಕ್ಕೆ-ಚಂದಕ್ಕೆ, ಅವರ ಕಡೆಗಣ್ಣ ಕುಡಿನೋಟಕ್ಕೆ, ಅವರು ಎಳೆಯ Low Jeans ಪಡ್ಡೆ ಹುಡುಗರ ಮೇಲೆ ಬಿಡುವ ಕುಡಿನೋಟಕ್ಕೆ, ಅವರ ಜೊತೆಗಿನ ಸಲ್ಲಾಪಕ್ಕೆ, ಅವರ ಪ್ರೀತಿಯ ಮೈ ಸೋಕಿಗೆ, ಶೋಕಿಗೆ, ಅವರು ಬೀಸಿದ ನಗೆಯ ಅಲೆಯ ಹಿಂದೆ ಕಳೆದುಹೋಗಿ ತನ್ನನ್ನೇ ತಾನು ಹುಡುಕಿಕೊಳ್ಳುವ ಸಮಸ್ಯೆ ಎದುರಿಸುತ್ತ ಅಂತೂ ಅವರನ್ನಪ್ಪಿ ಮುದ್ದಾಡುವ ಮುಪ್ಪಿನ 'ಕಾಮ ವಾಂಛೆ'ಗೆ, ತನ್ನ ತೋಳ್ತೆಕ್ಕೆಯಲ್ಲಿ ಬಹುಕಾಲ ಅವರನ್ನು ಬಂಧಿಸಬೇಕೆಂಬ ಹುಚ್ಚು ಕುದುರೆಯ ಹೆಗಲೇರಿದ ಬೊಚ್ಚು ಬಾಯಿಯ ಬೊಂಬಾಯಿ ಮನುಷ್ಯನ ಬಗ್ಗೆ ಬರೆಯಬೇಕೆ ? ಆದರೂ ನಿಮ್ಮೆಲ್ಲರ ಸಲುವಾಗಿ ನವ್ಯ ಕಾವ್ಯವನ್ನೂ ಬರೆದಿದ್ದೇನೆ, ಓದಿಕೊಳ್ಳಿ ಇದು ನಮ್ಮ ಹುಚ್ಚು ಹುಸೇನರ ಹಚ್ಚಹಸನಾದ ಹುಚ್ಚಿನ ಕಲೆ !


ಹುಸೇನಗೊಂದು ಹುಚ್ಚು ಕವನ

ಎಂ. ಎಫ್.ಹುಸೇನನೋ ಎಮ್ಮೆಪುಸೇನನೋ ಅರಿಯದಾದೆ
ಹಮ್ಮಿನಲ್ಲಿ ಎಳೆದ ಗೆರೆಗಳಿಗೆ
ಅರ್ಥವಿರದ ಅಸಂಬದ್ಧಗಳಿಗೆ !
ದಮ್ಮು ಎಳೆಯುತ್ತ ಬರೆದ ತನ್ನ 'ಮಾನಸಿಕ ಹುಣ್ಣುಗಳಿಗೆ'
ಸುಮ್ಮನೇತಕೆ ಜನ ಕರೆವರು ನಿನ್ನ ಕಲಾವಿದನೆಂದು ?

ನೀನೇನೋ ಬರೆವೆಯೋ ಮಂಕೆ ?
ಬರೆದಿದ್ದೆಲ್ಲ ಒಪ್ಪಿಕೊಳ್ಳಲೇ ಬೇಕೇ ?
ನಿನಗೆ ರಾಜಕೀಯದವರ ಬೆಂಬಲವೇ?
ನೀನೂ ಒಬ್ಬ ಕಲಾವಿದನೇ?
ನನಗ್ಯಾಕೋ ಡೌಟು !
ಯಾರು ಹೇಳಿದರಯ್ಯ ನೀನೊಬ್ಬ ಕಲಾವಿದನೆಂದು ?
ನೋಡಿದರೆ ಹೇಳಬಹುದು ನೀನೊಬ್ಬ ತಲೆಹಿಡುಕನೆಂದು !

ನಿನಗೊಂದು ಕವನವೇ ಛೆ !
ನಿನಗೇಕೆ ಅದು ವೇಸ್ಟು ?
ನೀನೊಬ್ಬ ತರಲೆ ಬುರುಡೆ
ನೀನೊಬ್ಬ ಅರಳು-ಮರಳು
ನೀನೊಬ್ಬ ತಿಳಿಗೇಡಿ !
ಹಿಂದೀ ಚಿತ್ರನಟಿಯರ ಹಿಂದೆ ಬಿದ್ದ ಸೋಗಲಾಡಿ !
ಅವರ ಚಿತ್ರವನ್ನು ಗಜಗಾಮಿನಿಯಾಗಿ ಬರೆಯುವ
ಮುದುಕಾದರೂ ಇನ್ನೂ ಚಾಲ್ತಿಯಲ್ಲಿ ಇಟ್ಟಿರುವ 'ಮಶಿನ್ನು' ನಿನ್ನದು !

ಏನಯ್ಯ
ನಿನಗೆ ಕೆಲಸವಿಲ್ಲವೇ ?
ಬೇರೆಲ್ಲಾ ಚಿತ್ರಗಳಿಗೆ ಬಟ್ಟೆ
ನಿನಗೆ ಬೇಡದ ಚಿತ್ರಗಳು ವಿವಸ್ತ್ರ ?
ಹಿಂದೂ ದೇವತೆಗಳನ್ನು ಗುತ್ತಿಗೆ ಹಿಡಿದೆಯೇನೋ ತಲೆಹಿಡುಕ ?
ಓಡು ದೇಶವ ಬಿಟ್ಟು ಖಾಲೀಮಾಡು
ನೀನಿದ್ದರೆ ತಲೆ ಚಿಟ್ಟು
ನೀನು ತಲೆಯ ಹೊಟ್ಟು !
ನೀನು ದೇಶಕಂಡ ತರಲೆ ವಿಕೃತ ಕಲಾವಿದ
ದೇಶದ ದುರಂತಕ್ಕೆ ನಾಂದಿ ಹಾಡಬಹುದಾದ ನಿನಗೆ
ಇನ್ನೂ ಮಣೆಹಾಕಿದರೆ ಆ ಮಣೆಹಾಕುವವರಿಗೂ ಧಿಕ್ಕಾರ!
ನಿನಗೆ ಮೊದಲೇ ಧಿಕ್ಕಾರ!
ಇದು ಸಾಕಾಗಲ್ಲ
ಬೀದಿಗಿಳಿದು ಗುಲ್ಲೆಬ್ಬಿಸಿ ಮಾರಿ ಬಿಡಿಸಿದರೇನೆ
ಸ್ವಲ್ಪ ......
ತಾಗಬಹುದೇನೋ ನಿನಗೆ
ಇಲ್ಲದಿರೆ ನಿನ್ನ ' ಕಲೆಯ ಸೊಬಗು '
ಆ ಹುಚ್ಚುತನ ಹೆಚ್ಚುತ್ತಲೇ ಹೋಗುವ ನಿರೀಕ್ಷೆ !
ಹಳೇ ಪೊರಕೆ ಚಪ್ಪಲಿಗಳೇ ಬೇಕೇ ?
ಬಾಯಿ ಮಾತು ಸಾಕೆ ?
ಹೋಗು ಹೋಗೆಲೋ ಮೂರ್ಖ
ನೀನೂ ಕ-ಲಾವಿದ ?? !!!!


ಜಗದಮಿತ್ರ ಬಂದು ಕೊನೆಗೊಮ್ಮೆ ಹಾಡಿದ್ದಾನೆ------------

ಸಂಗೀತ ಸಾಹಿತ್ಯ ಕಲೆಗಳೆಲ್ಲವು ನಿನ್ನ
ಅಂಗಾಂಗಗಳು ಬದುಕ ತುಂಬಿ ನೀ ಬದುಕೆ
ಭಂಗತಾರದ ರೀತಿ ಬಳಸು ನೀ ಅವುಗಳನು
ನುಂಗದದು ಮಿತಿಮೀರೆ | ಜಗದಮಿತ್ರ


Tuesday, March 16, 2010

ವಿಕೃತಿಯ ಅಹವಾಲು



ದಕ್ಷಿಣೋತ್ತರ ಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳ ಗಂಡು ಮೆಟ್ಟಿನ ಕಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿ, ತನ್ನ ಸಮಗ್ರತನದ ವೈಶಿಷ್ಟ್ಯದಿಂದ ವಿದೇಶಗಳವರೆಗೆ ವ್ಯಾಪಿಸಿ ಜಗನ್ಮಾನ್ಯವಾದ ಪ್ರಸಿದ್ಧ ಕಲೆ ಯಕ್ಷಗಾನ. ಬಲ್ಲವರಿಗೆ ಆ ಬಣ್ಣದ ವೇಷವಷ್ಟೇ ಅಲ್ಲದೇ ಅದರಲ್ಲಿ ಸಂಪೂರ್ಣ ಸಾಹಿತ್ಯ-ಸಂಗೀತ-ನೃತ್ಯವೇ ಮೊದಲಾದ ನವರಸಗಳೂ ಮೇಳೈಸಿ ಷಡ್ರಸೋಪೇತವಾದ ಪಂಚಭಕ್ಷ್ಯ ಪರಮಾನ್ನವಾಗಿ ಪರಿಣಮಿಸಿದ ಈ ಕಲೆಯ ಬಡಗುತಿಟ್ಟಿನ ಶೈಲಿಯಲ್ಲಿ ವಿಕೃತಿಯ ಆದಿಯಲ್ಲಿ ನಮ್ಮ ಆದಿಪೂಜಿತ ಇಡಗುಂಜಿ ಮಹಾಗಣಪತಿಯಲ್ಲಿ ಪ್ರಾರ್ಥಿಸುವ ರೀತಿಯಲ್ಲಿ, ಒಂದೇ ಒಂದು ರಾಗವನ್ನು ಬಳಸಿಕೊಂಡು ಪ್ರಯತ್ನಿಸಿ ಬರೆದ, ಬರೇ ಮದ್ದಲೆ-ತಾಳಗಳೊಂದಿಗೆ ಹಾಡಿಕೊಳ್ಳಬಹುದಾದ ಈ ಹಾಡು- ಇದು ಇಂದಿನ ನೈವೇದ್ಯ -- ಮೊದಲಾಗಿ ಮಹಾಗಣಪತಿಗೆ ತನ್ಮೂಲಕ ನಿಮಗೆ----



[ಯಕ್ಷಗಾನದ ದಿಗ್ಗಜ ರಾಷ್ಟ್ರಪ್ರಶಸ್ತಿ ವಿಜೇತ ದಿ| ಶಂಭು ಹೆಗಡೆ ಕೆರೆಮನೆಯವರ ಚಿತ್ರ]

ವಿಕೃತಿಯ ಅಹವಾಲು

ಹೆಸರುಂಡೆ ಕಾಯ್ಗಡುಬು ಮೊಸರು ಪಂಚಖಾದ್ಯ ಹೊಸಹೊಸ ಬಕ್ಷ್ಯಂಗಳು |
ನಸುನಕ್ಕು ಇಡಗುಂಜಿ ಗಣರಾಯ ಮೆಲ್ಲುತಾ ಖುಷಿಯಿಂದ ತಾ ಕುಣಿದನು ||

ಸಕಲಗ್ರಹ ಬಲ ನೀನೆ ನೆರೆನಂಬಿಹೆನು ನಿನ್ನ ವಿಕೃತಿ ಬಂದೆರಗಿಹುದು |
ಭಕುತಿಯೋಳ್ ನಿನ್ನಯ ಅಡಿದಾವರೆಗೆರಗಿ ಯುಕುತಿಪಾಲಿಸು ಎಂಬೆನು ||



ಇಳೆಯೊಳು ನೂರೆಂಟು ರಾಜಕೀಯದ ಕೆಲಸ ಭರದಿಂದ ಸಾಗಿಹುದು |
ಹೊಳೆವ ದಿರಿಸಿನಲ್ಲಿ ಹಗಲಿರುಳು ಮೆರೆಯುತ್ತಾ ಕೊಳೆಯತುಂಬುತಲಿಹರು ||

ಗಣಿ ಧಣಿಗಳು ಸೇರಿ ಗುಣವತಿ ಭೂತಾಯ ಹಣಕಾಗಿ ಹಾಳ್ಗರೆವರೂ |
ಎಣಿಸದೇ ಲೋಕದ ಮುಂದಿನ ಬದುಕನ್ನು ಬಣಬಣಮಾಡುವರೂ ||

ಸಿರಿವಂತ ಮಿತ್ತಲ ಮೊದಲಾದ ಜನರೆಲ್ಲಾ ಹೊತ್ತಲೇ ಮಾತನಾಡಿ |
ದೊರೆವಂತ ಅದಿರಿನ ನಿಕ್ಷೇಪಗಳನೆಲ್ಲ ಪಡೆವರೂ ಸಂಚುಮಾಡಿ ||

ಗೇಣಿ ಕಾಲವು ಹೋಗಿ ಖೇಣಿ ಕಾಲವು ಬಂದು ನೈಸು ರಸ್ತೆಯ ಮಾಳ್ಪರು |
ಗಾಣದೆತ್ತಿನ ರೀತಿ ಬದುಕನು ಬದುಕುತ್ತ ಕಾಣದಾದರು ರೈತರು ||

ಪರಮಾರ್ಥದೊಳು ನಿನ್ನ ಪರಿರ್ಪೂರ್ಣರೂಪವ ಶರಣೆಂದು ತಾವ್ ಪಡೆಯಲು
ದರುಮಾರ್ಥದೊಳು ತಮ್ಮ ಸುಖದ ಜೀವನ ತ್ಯಜಿಸಿ ಸಕಲರ ಮುನ್ನಡೆಸಲು |

ಕಾವಿಯ ತಾವ್ ತೊಟ್ಟು ನೇಮನಿಷ್ಠೆಯ ಬಿಡದೆ ಭೂಮಿಯ ಸುಖ ತೊರೆದರು
ಕಾವಿವೇಷವ ತೊಟ್ಟು ಬಿಟ್ಟೂ ಬಿಡದೆ ಸುಖಿಸಿ ಮಸಿಬಳಿಯೇ ಹಲವರಿಹರು ||

ಇಂತಿಪ್ಪ ಕನ್ನಡ ರಾಜ್ಯದ ವರದಿಯ ಪರಿತಪಿಸುತ ತಂದೆನು |
ಬಂತಪ್ಪ ಹೊಸ ವತ್ಸರವದು ತಿಳಿಯದು ಕಂತುಪಿತನೆ ನೆನೆದೆನು ||

ಹೊಸವರ್ಷದಲಿ ನಮಗೆ ಕಸುವಿತ್ತು ಕಾಪಾಡು ನೊಸಲ ನೇವರಿಸೆನ್ನಲು |
ಬಿಸುಸುಯ್ದು ಅಳಲೇಕೆ ಭುವಿಯಲ್ಲೇ ಇರ್ಪೆನು ಹೆಸರಿಟ್ಟು ನಡೆಯೆಂದನು ||


Monday, March 15, 2010

ವಸಂತೋತ್ಸವ

ಯುಗಾದಿಯ ಬಗೆಗೆ ಹೊರಟರೆ ಅದು ಬರೆಯುವ ಅಧ್ಯಾಯ ಬಹಳ ಅಗಾಧ,ಹೊಸ ವರ್ಷವನ್ನು ತನ್ನ ರಂಗೋಲಿಯೊಂದಿಗೆ ಆರಂಭಿಸುವ ಈ ಯುಗಾದಿ ಜೀವನದಲ್ಲಿ ಹೊಸತನವನ್ನು ನೀಡುವ ಹರಿಕಾರ! ಬಳಲಿ ಬೆಂಡಾದ ಮನಕ್ಕೆ, ಹಳತನ್ನೇ ನೋಡಿ ಬೇಸತ್ತ ಮನಕ್ಕೆ ಹೊಸದೇನನ್ನೋ ಹೊತ್ತುತರುವ ಈ ಘಳಿಗೆ ಹೊಸದಾಗಿ ಹಸಿರುಡುವ ಗಿಡಮರಗಳಲ್ಲಿ ಬಣ್ಣ ಬಣ್ಣದ ಹೂಗಳನ್ನರಳಿಸಿ, ತರಾವರಿ ಬಣ್ಣದ ಚಿಟ್ಟೆಗಳನ್ನು ಹಾರಿಸಿ, ದೂರಬಾನಲ್ಲಿ ಸ್ವಲ್ಪ ಮೋಡಗಟ್ಟಿ ತುಂತುರು ಮಳೆಯ ಸಿಂಚನಮಾಡಿ-ಮಂತ್ರದಾತೀರ್ಥ ಪ್ರೋಕ್ಷಣೆ ಮಾಡಿ, ಚಿಕ್ಕ ಚೊಕ್ಕ ಕಾಮನಬಿಲ್ಲು ಸೃಜಿಸಿ, ಆಗಸದ ಗಡಿಗೆ ಒಮ್ಮೊಮ್ಮೆ ಬೆಳ್ಳಿಯ ಚಿತ್ತಾರ ಮೂಡಿಸಿ, ಮಾವಿನ ತೋರಣಕಟ್ಟಿ ನಮ್ಮೆಲ್ಲರ ಕಣ್ಮನ ತಣಿಸುವ ಋತು ವಸಂತ ನಿಜಕ್ಕೂ ನಿಸರ್ಗದಚ್ಚರಿ ! ವಿಧ ವಿಧ ಪಶು ಪಕ್ಷಿಗಳು ಅವುಗಳ ಕೂಗು-ಕಲರವ ಬಹುತರ ಹಣ್ಣು-ಕಾಯಿಗಳು ಇದನ್ನೆಲ್ಲ ನೋಡಲು ಎರಡು ಕಣ್ಣಜೊತೆ ಸಾವಿರ ಕಣ್ಣುಗಳ ಮನಸ್ಸು ಬೇಕು. ಮೈಯೆಲ್ಲಾ ಕಣ್ಣಾಗಿ ಆಸ್ವಾದಿಸಿದಾಗ ಅದರ ಸ್ವಾದವೇ ಬೇರೆ. ನಿಸರ್ಗ ನೋಂಪಿಯ ಈ ಶುಭ ಘಳಿಗೆ ವರುಷ ವರುಷವೂ ಬರಲಿ, ಮರಳಿ ಮರಳಿ ಬರಲಿ, ನಮಗೆಲ್ಲ ಹೊಸ ಹೊಸತನು ತರಲಿ, ಬದುಕು ನವ ನಾವೀನ್ಯತೆ ತುಂಬಿ ನಳನಳಿಸಲಿ, ದೀರ್ಘ ಆಯುಷ್ಯ-ಆರೋಗ್ಯ- ಐಶ್ವರ್ಯ-ಜ್ಞಾನ-ಸುಖ-ಸಮೃದ್ಧಿ ದೊರೆಯಲಿ ಎಂಬುದೀ ಕವಿಮನದ ಆಶಯ, ಸದಾಶಯ, ಶುಭಾಶಯ.























[ಚಿತ್ರಗಳ ಋಣ- ಶುಭಾಶಯ.ಕಾಂ ಮತ್ತು ಅಂತರ್ಜಾಲ]




ವಸಂತೋತ್ಸವ



















ಬಂದನಾ ವಸಂತ ರಾಜ ಬಣ್ಣದ ರಥವೇರುತಾ
ಚಂದದಾ ವಿಹಾರ ನಡೆಸಿ ನಮ್ಮನೆಲ್ಲ ನಲಿಸುತಾ


ಹೂ ಗಿಡಗಳು ಅರಳಿನಿಂತು ಮಘಮಘಿಸುತ ಮೈಮನ
ಕೂಗುತಿಹವು ಕೋಗಿಲೆಗಳು ಭುವಿಯದಾಯ್ತು ನಂದನ
ಮಾಗಿನಿಂತ ಹಣ್ಣುಗಳವು ಬಾಗಿಕರೆಯೆ ಕಾಮನಾ
ಯೋಗಬೇಕು ಭೋಗಿಸಲ್ಕೆ ಬೀಗುತಿಹುದು ಜನಮನ


























ಹಸಿರಸೀರೆ
ಉಟ್ಟ ಮರದಿ ಕೆಂಪು ಚಿತ್ರದೌತಣ

ಬಿಸಿಲ ಬೇಗೆ ಕಳೆಯಲದಕೆ ತಂಗಾಳಿಯ ಸೇಚನ
ನಸುನಾಚುವ ಅಳಿಲಮೊಗದಿ ತುಂಟನಗುವ ನರ್ತನ
ರಸಗಳಿಗೆಯ ಕವಿಯು ಹಾಡೆ ಕಬ್ಬವಾಯ್ತು ಕವಿಮನ



ಕೊಸರಿಕೊಂಡು ಹಾರುವಾಗ ಚಿಟ್ಟೆ ಬರೆದ ಪತ್ರವು

ನೊಸಲಿಗಂಟಿದಂಟಿನಾಟ ಅಹಹ ಎಂಥ ಸ್ಪರ್ಶವು
ಒಸಗೆಯದುವೆ ಬದುಕಿನಲ್ಲಿ ಬೀಗತನದ ಹರ್ಷವು
ಪಿಸುಮಾತಿನ ಗಿಳಿಸಾರಿತು ಬರಲಿ ವರ್ಷವರ್ಷವೂ















ಸೇರು
ಪಾವು ಅಳೆದು ತೂಗಿ ಕೊಡಲೆನಗೆ ಅಸಮ್ಮತ

ಸಾರಿ ಹೇಳ್ವೆ ಸಾಗರದೋಪಾದಿಯಲಿರೆ ಸಮ್ಮತ
ಸೇರಿಬನ್ನಿರೆಲ್ಲಕೂಡಿ ಮೆರೆವ ಯುಗದ ಪದಪಥ
ಸೂರೆ ಹೊಡೆಯೆ ಸುರರು ನೆನೆದು ಮತ್ಸರಿಸಲಿ ಸಾಂಪ್ರತ



ಮುಂಚಿತವೇ ಹೇಳ್ವ ನಾವು ಯುಗಾದಿ ಜಗದೋತ್ಸವ
ಕಿಂಚಿತ್ತೂ ಕೊರತೆಯಿಲ್ಲ ಶುಭದ ವಸಂತೋತ್ಸವ
ಸಂಚಿಯಿಂದ ತೆಗೆದು ಹಂಚಿ ಬೇವು-ಬೆಲ್ಲದುತ್ಸವ
ಮಿಂಚಲಿ ನಮ್ಮೆಲ್ಲರ ಬಾಳದು ನವನವೋತ್ಸವ






ಮಧುವಾತಾ ಋತಾಯತೇ ಮಧುಕ್ಷರಂತಿ ಸಿಂಧವಃ |
ಮಾಧ್ವೀರ್ನಃ ಸಂತ್ವೋಷ ಧೀಃ ||
ಮಧುನಕ್ತಮುತೋಷಸಿ ಮಧುಮತ್ಪಾರ್ಥಿವಗ್೦ ರಜಃ |
ಮಧು ದ್ಯೌರಸ್ತು ನಃ ಪಿತಾ ||
ಮಧುಮಾನ್ನೋ ವನಸ್ಪತಿರ್ಮಧುಮಾಗ್೦ ಅಸ್ತು ಸೂರ್ಯಃ |
ಮಾಧ್ವೀರ್ಗಾವೋ ಭವಂತು ನಃ ||

ನಮ್ಮ ಸುತ್ತ ಇರುವ ಎಲ್ಲಾ ಗಿಡಮರಗಳು ನಮಗೆ ಅಮೃತತುಲ್ಯವಾದ ಹಣ್ಣು-ಕಾಯಿಗಳನ್ನೂ, ಔಷಧಗಳನ್ನೂ ನೀಡುವಷ್ಟು ಸಶಕ್ತವಾಗಲಿ, ನಮ್ಮ ನದಿ-ತೊರೆ ಜಲಾಶಯಗಳು ಸದಾ ತುಂಬಿರಲಿ,ನಮ್ಮ ಗೋವುಗಳು ಸದಾ ಕ್ಷೀರ ಸಮೃದ್ಧಿಯನ್ನೀಯಲಿ, ದಿನಬೆಳಗುವ ಭಾಸ್ಕರ, ನಮ್ಮೆಲ್ಲರ ಮಿತ್ರ ಸೂರ್ಯ ನಮಗೆ ತನ್ನ ಔಷಧೀಯ ಕಿರಣಗಳನ್ನ ಸೂಸಿ ಹರಸಲಿ, ಒಟ್ಟಾರೆ ನಮ್ಮ ಜೀವಿತಕ್ಕೆ ಬೇಕಾಗುವ ಎಲ್ಲಾ ಕಸುವು-ಸುಖ-ಸಂಪತ್ತನ್ನು ಭಗವಂತ ಕರುಣಿಸಲಿ ಎಂದು ಮನಸಾ ಭಗವಂತನಿಗೆ ಜೇನುತುಪ್ಪದಿಂದ ಅಭಿಷೇಚಿಸಿ ಸಂಪೂರ್ಣ ಪಂಚಾಮೃತವನ್ನೆರೆದು, ಷೋಡಷೋಪಚಾರಗೈದು ಸಂಪೂರ್ಣ ಫಲದ ಹರಿವಾಣವಿಟ್ಟು ನಿವೇದಿಸಿ, ಮಂಗಲಾರತಿಯೆತ್ತಿ ತಮ್ಮೆಲ್ಲರ ಪರವಾಗಿ ಕವಿ ಜಗದಮಿತ್ರ ಪ್ರಾರ್ಥಿಸಿದ್ದಾನೆ -

ವಸುಧೈವಕುಟುಂಬವೆನ್ನದು ನಮ್ಮೊಳಗಿರ್ಪ
ಕೆಸರತೊಳೆಯೆನುತ ಶಿವನನು ಧ್ಯಾನಿಸುತ
ವಸುಧೆಯೋಳ್ ಪಂಚಾಮೃತವಿತ್ತು ತಾ ಬೆಳಗಿ
ಹಸನುಮಾಡೈ ನೀನು | ಜಗದಮಿತ್ರ

Sunday, March 14, 2010

ಹರಕಂಗಿ ಮಾಬ್ಲೇಶ್ವರ ಪುರಾಣವು

ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಕಾಮಕಾಂಡದ ಕಾವೀಪರ್ವದ 420 ನೇ ಶ್ಲೋಕದಲ್ಲಿ 8 ನೇ ಉಪಸರ್ಗದಲ್ಲಿ ಉಲ್ಲೇಖವಿದೆ. " ಕಾಮಾತುರಾಣಾಂ ನ ಭಯಂ ನ ಲಜ್ಜಾ " ಅಂದರೆ ಕಾಮದಲ್ಲಿ ಅತೀವ ಆಸಕ್ತಿಯುಳ್ಳವನಿಗೆ ಯಾವ ಭಯವೂ ನಾಚಿಕೆಯೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದೂ ಅವನೊಳಗಿನ 'ಕಳ್ಳ ಬೆಕ್ಕು ಇಲಿಹಿಡಿಯಲು' ಹಗಲಿರುಳೂ ಸತತ ಪ್ರಯತ್ನಿಸುತ್ತಿರುತ್ತದೆಂದೂ ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ.

ವನವಾಸ
- ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ಬಿಡದಿ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಅತೃಪ್ತ ಆತ್ಮದ ಆರ್ತನಾದ ಅವನಿಗೆ ಕೇಳಿಸಿತು . ಈಗ ಆತ್ಮಗಳು ಅಳುತ್ತವೆಯೇ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಅತೃಪ್ತ ಆತ್ಮಗಳದ್ದೂ ಒಂದು ಲೋಕವಿದೆ ಅಂತ ಒಪ್ಪಿಕೊಳ್ಳದಿದ್ದರೂ ದೆವ್ವ-ಭೂತ-ಪಿಶಾಚಾದಿಗಳು ಭುವಿಯಲ್ಲಿ
ಮನೆಮಾಡಿರುವುದಂತೂ ಸತ್ಯ ಎಂದು ಇವತ್ತಿನ ವಿಜ್ಞಾನವೇ ಒಪ್ಪಿಕೊಂಡಿದೆ. ಹೀಗಾಗಿ ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ " ತರುಲತೆಗಳೇ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು??? ................. ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆರ್ತಸ್ವರ ಕೇಳಿದ ರಾಮ ಅದರ ಬಳಿ ಬಂದು "ಏನಾಯಿತು ?" ಎಂದು ಕೇಳಿದಾಗ ಅತೃಪ್ತ ಆತ್ಮ ಹೀಗೆ ಉತ್ತರಿಸಿತು .

"ನೋಡು ರಾಮ ನಿನ್ನ ತಮ್ಮ ಲಕ್ಷ್ಮಣನಿಂದ ಬಾಣವನ್ನು ತಿಂದು ದೇಹವನ್ನು ತ್ಯಜಿಸಿದ ಲಂಕೆಯ ಹಲವಾರು ರಕ್ಕಸರಲ್ಲಿ ಓರ್ವ ಖೂಳ ರಕ್ಕಸ ನಾನು . ನನ್ನನ್ನು ಹಿಂಡಿ ರಸ ತೆಗೆದು ಬಿಸಾಕುವ ಕಬ್ಬಿನ ಸಿಪ್ಪೆಯಂತೆ ಮಾಡಿದ ಲಕ್ಷ್ಮಣಾದಿಗಳು ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು ಹೋಗಿದ್ದಾರೆ. ಇರುವುದಕ್ಕೆ ದೇಹವಿರದೇ ನನ್ನಲ್ಲಿರುವ ಬಹಳ ಬಯಕೆಯ ಸುಖೋಪಭೋಗಗಳನ್ನು ಪಡೆಯಲಾರದೇ ಬಹುಕಾಲದಿಂದ ಪರಿತಪಿಸುತ್ತಿರುವೆ. ರಾಮರಾಜ್ಯದಲ್ಲಿ ಇದು ನ್ಯಾಯವೇ ??" ಎಂದು ಕೇಳಿದಾಗ ರಾಮ ಹೇಳಿದ " ಎಲೈ ರಕ್ಕಸಾತ್ಮವೇ ಹೀಗೆ ಮರದ ಕೆಳಗೆ ಬೀಳುವುದು ನಿನ್ನ ಪೂರ್ವ ಜನ್ಮದ ಕರ್ಮ ಫಲ. ನಾನು ವಿಧಿಗೆ ವಿರುದ್ಧವಾಗಿ ನಿನ್ನನ್ನು ಬದುಕಿಸಲಾರೆ . ಆದರೆ ನನ್ನ ತಮ್ಮನ ಬಾಣದಿಂದ ಗತಿಸಿದ್ದಕ್ಕಾಗಿ ಕಲಿಯುಗದಲ್ಲಿ ನಿನಗೆ ಪುನರ್ಜನ್ಮ ಪ್ರಾಪ್ತಿಯಾಗಲೆಂದು ಆಶೀರ್ವದಿಸುತ್ತೇನೆ.ಅಲ್ಲಿ ನೀನು ಎಲ್ಲರನ್ನೂ ವಂಚಿಸುತ್ತಾ ನಿನ್ನ ಐಹಿಕ ಭೋಗಗಳನ್ನು ಯಥೇಚ್ಛ ತೀರಿಸಿಕೊಂಡು ಪುನರಪಿ ರೌರವ ನರಕಕ್ಕೆ ಬರುವಷ್ಟು ಪಾಪಗ್ರಸ್ತವಾಗುವಂತೆ ಅನುಗ್ರಹಿಸುತ್ತೇನೆ, ಆ ಮೂಲಕವಾದರೂ ಮತ್ತೆ ಬೇರೆ ಏನಾದರೂ ಆಗಿ ಜನ್ಮಾಂತರಗಳಲ್ಲಿ ಪುಣ್ಯ ಸಂಚಯನ ಮಾಡಿ ಕೊನೆಗೆ ಮಾಮೂಲಿ ಮನುಷ್ಯನಂತೆ ಮರಳಿ ಜನಿಸು "ಎಂದು ಹರಸಿದ . ಅದರ ಪರಿಣಾಮವಾಗಿ ಹುಟ್ಟಿದ ಅವತಾರವೇ ನಮ್ಮ ಕಳ್ಳಕಾವಿಯ ಅವತಾರ.

ತನ್ನ ಅಂಗಿ ಹರಿದಿದ್ದರಿಂದ, ಬೇರೆ ಹೊಲಿಸಿಕೊಳ್ಳಲು ಬಡತನವಿದ್ದದ್ದರಿಂದ ಅದೇ ಹರುಕು ಅಂಗಿಯನ್ನೇ ತನ್ನ ಕಾವ್ಯನಾಮವಾಗಿಸಿಕೊಂಡು ಆದಿಕವಿ ಮಾಬ್ಲೇಶ್ವರ ತನ್ನ ' ಹರಕಂಗಿ ಮಾಬ್ಲೇಶ್ವರ ಪುರಾಣವು ' ವೆಂಬ ಹೆಸರಿನಿಂದ ಈ ಮಹಾಕಾವ್ಯವನ್ನು ಧರೆಯ ಜನರುಪಕಾರಕ್ಕೆ ಲಿಖಿತ ರೂಪದಲ್ಲಿ ಕೊಟ್ಟ. ಇದರ ಫಲಶ್ರುತಿಯಂತೆ ಇದನ್ನು ಓದಿದವರಿಗೆ, ಬೇರೆಯವರಿಗೆ ಓದಲು ಹೇಳಿದವರಿಗೆ, ಓದಿ ಯತಾನ್ ಶಕ್ತಿ ನಗುವವರಿಗೆ , ಇದರ ಸಲುವಾಗಿ ಈ ಮೇಲ್ ಮಾಡಿ ಸ್ನೇಹಿತರನ್ನು ರಂಜಿಸುವವರಿಗೆ, ಕೆಲಸವಿಲ್ಲದೇ ಗಣಕಯಂತ್ರದ ಮುಂದೆ ಕುಳಿತು ಹೊಟ್ಟೆಬರಿಸಿ ಕೊಂಡವರಿಗೆ, ಬಂದ ಹೊಟ್ಟೆ ಕರಗಲೆಂದು ಶತಾಯಗತಾಯ ಪಾರ್ಕಲ್ಲಿ ತಕತಕತಕನೆ ಕುಣಿವವರಿಗೆ, ಇಂತಹ ಪಾಪಾತ್ಮರ ಪಾಪಜನ್ಮದ ಕಥೆ ಕೇಳಿ ಇಹದಲ್ಲಿ ಬಳಲಿ ಬೆಂಡಾಗಿರುವ ನತದೃಷ್ಟ ಕುವರಿಯರಿಗೂ ಇದರಿಂದ ಅವರವರ ಸಂಕಷ್ಟ ನಿವಾರಣೆಯಾಗಿ ಒಳಿತಾಗಲೆಂದೂ ಪುರಾಣ ಸಾರುತ್ತದೆ. ಅದರ ಆಯ್ದ ಭಾಗಗಳನ್ನು ಸಂಪ್ರದಾಯದಂತೆ ಆದಿ-ಅಂತ್ಯಭಾಗಗಳೊಂದಿಗೆ ಯಥಾವತ್ ಇಲ್ಲಿ ಕೊಡಲಾಗಿದೆ--





ಹರಕಂಗಿ ಮಾಬ್ಲೇಶ್ವರ ಪುರಾಣವು

ಪುರಾಣದ ಆದಿ ಭಾಗದಲ್ಲಿ ಕವಿ ತನ್ನ ಸ್ವಗತದಲ್ಲಿ ........

ವಂದಿಪೆನು ಗಣನಾಥಗೊಂದಿಪೆನು ಶಾರದೆಗೆ ಬಂದ ಭಂಗವ ಕಳೆಯಲ್ಕೆ ಸುಕೃತವ ನೀವ ಕಥೆಯ ಹೊಸೆಯಲ್ಕೆ ಹರಸು ಹರಸೆಂದೆನುತ
ನಮಿಸಿ ನಾರಾಯಣನ ನರನ ಪುರುಷೋತ್ತಮನ ವ್ಯಾಸವಾಲ್ಮೀಕಿಗಳ ಬಳಿಕ ಪೇಳ್ವುದು ಜಯವ

ಪುರಾಣದ ಮಧ್ಯಭಾಗ ಬಹಿರ್ಗತದಲ್ಲಿ .........


ರೂಢಿಯೋಳ್ ನಮಗೆ ಮೀಡಿಯದವರ ಬೆಂಬಲವು ನೋಡಿಬಂದಿದೆ ಹಲವು ಬೆಳಕಿಂಡಿಗಳಲಿ ಜಾಡು ಹಿಡಿದು ಝಾಡಿಸಲ್ಕೀ ಲಾಡು ಪಂಚಾ -ಮೃತವ ನಿತ್ಯ ಸತ್ಯದ ಪೂಜೆಯ ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಬಿಸಜನಾಭನ ಪೂಜೆ ಕೈಂಕರ್ಯ ಕೈಕಸುಬಿನಿಂ ಪೂರೈಸಿ ಕಪಟದಲಿ ಕನವರಿಸೆ ಪಂಚತಾರಾ ವ್ಯವಸ್ಥೆಯೋಳ್ ಕೆಸರಿಲ್ಲದ ಸರೋವರಂಗಳನು ಕೃತ್ರಿಮ ನಿರ್ಮಿಸಲ್ಕೆ ಮನದಲಿ ಕೆಸರಿಲ್ಲದ ಭಕ್ತರದೋ ತಾವ್ ಬಂದು ಧೊಪ್ಪೆಂದು ಮುಗಿಬಿದ್ದರದಾ ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಶಾವಿಗೆ ಬಾತು ಖೀರು ಪರಮಾನ್ನ ಮಾಳಿಗೆಯ ವಸತಿ ಮೃದ್ವಂಗಿ ಕೈಕಾಲು ಹೊಸೆಯಲ್ಕೆ ಚಿತ್ರತಾರೆಯರಿಟ್ಟು ಮಿಗೆ ಎಲ್ಲ ಶಿಷ್ಯಂಗಳ್ಗೆ ಬ್ರಹ್ಮಪದ ಬೋಧಿಸುವೋಲ್ ನೀಮು ಮದುವೆಯಪ್ಪುದು ನಿಮಗೆ ಬಿಟ್ಟಿದ್ದೆನುತ ಕಾವಿಯೋಳ್ ಕಣ್ಕಟ್ವರೈ ಹರಹರಾ ಹರಕಂಗಿ ಮಾಬ್ಲೇಶ್ವರಾ!

ವ್ಯಸನದೋಳ್ ತಲೆಕಾಯ್ವರಿಲ್ಲೆನಗೆ ಅದಕೆ ಮಸಿಯ ಬಳಿಯಲುಪಕ್ರಮಿಸಿಹರು ಎಂದು ತಿಳಿಯದೇ
ಸ್ವಯಂಕೃತಾಪರಾಧವಂ ಮಾಡಿ ಸೀಡಿಯಲಿ ಸಕಲರ್ಗೆ ತೋರಿಸಲ್ಕೆ ಭಕುತರೆಲ್ಲ ಹೌಹಾರಿ ಬಿಡದಿಯ ತೊರೆದು
ರಕುತಬಸಿಯುತ ಹಾರೋಡಿ ಹೋದರೈ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಪಕಪಕನೆ ಅರ್ಥಮಪ್ಪ ಆಂಗ್ಲಭಾಷೆಯ ಸುಖದಿ ಉಚ್ಚರಿಸುತ್ತ ಮತಿಹೀನ ನಾನಾದೆನೇಂ ಎನುಕೊಳುತ ಮತ್ತೆ ಪುನರಾವರ್ತಿಸದಂತೆ ಎಚ್ಚರೆಚ್ಚರಮಿರುವೆನೆನುತ ಯುಕುತಿಯ ಮೆರೆಯೇಮ್ ಸಂದರ್ಶಕನಿಟ್ಟ ಚಿಲ್ಲರೆ ಪ್ರಶ್ನೆಗಳಿಗೇಂ ಉತ್ತರಿಸುತ ಎಡವಿದ ಕಥೆಯಪೇಳ್ದನು ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!


ಬಿಸಿಲಝಳ ಅಬ್ಬರಿಸೆ ಸುಖವಿಲ್ಲ ದೇಹದಲಿ ಇಸಿದುಕುಡಿದರೆ ಶಾಂಪೇನು ಕಷಾಯವಂ ಶಯ್ಯೆಯೋಳ್
ನಸುನಾಚಿ ಬರ್ಪ ಹಸುಗೂಸ ನೆನೆನೆನೆದು ರಂಜಿತಾನಂದದಿಂದ ಮುಸಲ ಮುದ್ಗಲ ವಜ್ರಾಯುಧಗಳೆಲ್ಲ ಬೀಸಿ ವಕ್ಕರಿಸುವ ನಿರೀಕ್ಷೆಯಂ ಕಳೆದುಕೊಂಡು ನಸುನಕ್ಕು ಮೂರುದಿನ ಲೇಟಾಗಿ ಯೂಟ್ಯೂಬಲೆಂದ ನೋಡಾ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಏನುತಿಳಿದಿರಿ ನೀಮು ಎನ್ನನೇನು ತಿಳಿದಿರಿ ಆತುರದಿ ನಿರ್ಧರಿಸಬೇಡೀ ಯೆನುತ ಆತುಕೊಂಡಾ ಮಂಚವೆಲ್ಲಂ ಬರೇ ಕಪೋಲಕಲ್ಪಿತಮಕ್ಕು ರಾಶಿಕಾಂಚಾಣಮಂ ನಾ ಸುರಿಯೇ ರಾಜಕೀಯವೇ ಹಾಸುಹೊಕ್ಕಾಗಿರ್ಪ ಆಶ್ರಮದೊಳೆಂದ ನೋಡಾ ಹರಹರಾ ಹರಕಂಗಿ ಮಾಬ್ಲೇಶ್ವರಾ!

ವನಜಮುಖಿಯರು ತಾಮು ಹಲವುಕಾಲದಿ ಇರ್ಪರ್ ಯೆನಗದೆಲ್ಲ ಹೊಸದಲ್ಲವೈ ಯೀಗ ಕಣಜದುಡ್ಡಿನದಾಯ್ತು ಬಹಳ ಜನ ಮುಗಿಬಿದ್ದರದಕೆ ತಾ ಪಾಲು ಕೊಡದಿರ್ಪೆ ಅದಕೀಗಲಂ ಅವರುಗಳ್ ಸಂದಿಯೋಳ್ ಕ್ಯಾಮರಮಿಟ್ಟು ನಡೆಪ ಆಷ್ಟಾಂಗಯೋಗವಂ ಚಿತ್ರೀಕರಿಸಿ ಬಿತ್ತರಿಪರ್ ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಪೊರಗೆ ನಮ್ಮನು ನೋಡಿ ಪೊಗಳಲ್ಕೆ ಒಂದು ಕಾಮನ್ ಕಾರಣವಂ ಮುಂದಿಟ್ಟುಮಿಗೆಯಿದಕೆ 'ರಾಜಕೀಯ ಷಡ್ಯಂತ್ರ' ಮೆನುತ ಪೆಸರಿಸುವೋಲ್ ಕೆಲಮಂದಿಯಿರ್ಕು ಅವರ್ಗೆ ಬೇರೆ ಕಸುಬಿಲ್ಲ ನಮ್ಮಂಥ ಬಣ್ಣದ ಕಾವಿಯಂ ಬೆಂಬಲಿಸಲ್ ಭರದಿ ಬರ್ಪರ್ ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಕಾಕಶುಕಪಿಕವಾಗಿ ಪಂದಿನಾಯಿಯದಾಗಿ ಮೇಕೆಕುರಿಮರಿಯಾಗಿ ಏನದರೊಂದಾಗಿ ಮೇಣ್ ಮರಿದುಂಬಿಯಾಗಿ ಹಲವು ಪೂವುಗಳ್ಗೆ ಪರಾಗವನಿಕ್ಕೆ ಕಾವಿಯಂ ಭರದಿ ಅಂಬರದೆತ್ತರಕೇರಿ ಉದ್ಧರಿಪ ಸಸಾರವಲ್ಲದ ಸಂಸಾರಮಿದು ಸಂ-ನ್ಯಾಸ ನ್ಯಾಸದಿಂ ಪೂರ್ಣಗೊಳಿಪೆನೆಂದ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಫಲಶೃತಿ....

ಭಕ್ತಿಯಿಂದೀಪುರಾಣಮಂ ಕೇಳ್ವರ್ಗೆ ಬೋಧಿಪರ್ಗೆ ಮಿತ್ರರಂದದಿಂ ಈ -ಮೇಲ್ ಮಾಳ್ಪರ್ಗೆ ಶಕ್ತ್ಯಾನುಸಾರ ಸತತಂ ನಕ್ಕು ಮತ್ತೆಯೀಪುರಾಣಮಂ ಎತ್ತಿಟ್ಟು ಕೊಡಲ್ಕೆ ಹಲವರ್ಗೆ ಬೇಕಾದ ರೀತಿ ಓದಿ ಸಂತಸವಂ ಪಡೆಯಲ್ಕೆ ಮುಕ್ತದ್ವಾರದಿ ಗೂಗಲ್ ಬಜ್ಜಿನೋಳ್ ಗುಜ್ಜಾಡಿಪರ್ಗೆ ಮಿದಲ್ಲದೇ ನಜ್ಜುಗುಜ್ಜಾಗಿ ಕನಸು ಕಳಕೊಂಡ ಕುವರಿಯರ್ಗೆ ಬೊಜ್ಜುದೇಹವಂ ದಣಿಸದೆ ಗಣಕಯಂತ್ರದ ಮುಂದೆ ಕುಂತಿರ್ಪ ಸಕಲರ್ಗೆ ಸದಾ ಸನ್ಮಂಗಳಮಪ್ಪುದು

ಪುರಾಣದ ಅಂತ್ಯಭಾಗ ಪುನಃ ಸ್ವಗತದಲ್ಲಿ .......

ಜಯಜಯಮೆನುವೆ ಸರಸತಿಗೆ ಜಯಮು ಪಾರ್ವತಿಪತಿಗೆ ಜಯಮು ಲಕ್ಷ್ಮೀರಮಣ ಗೋವಿಂದಗೇ ಭಯವ ಕಳೆಯಲ್ಕೆರಗಿ ಹನುಮ ಮೂರುತಿಗೆ ಸುಮನಸಗೆ ಸ್ಕಂದ ಸಿರಿಗಣನಾಥಗೇ