ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, February 6, 2010

ಜಾಣ ಬಾ ತಡೆದು ಮನೆಗೆ !


ಬೈದುಕೊಳ್ಳಬೇಡಿ ಭಾನುವಾರವೂ ಬಿಡುವುದಿಲ್ಲ ಅಂತ, ನಾನೂ ಅದರ ಬಗ್ಗೇ ತಮ್ಮನ್ನೆಲ್ಲಾ ಸೇರಿಸಿಕೊಂಡು ಒಂದು ಸಣ್ಣ ಹಾಡು ಬರೆದಿದ್ದೇನೆ. ಹಾಡಿಕೊಳ್ಳಲು ಬರುವ, ಮುದನೀಡುವ, ಅಜ್ಞಾಪಿಸುವ,ಪ್ರಶ್ನಿಸುವ ಎಲ್ಲ ಭಾವನೆಗಳನ್ನೂ ನನ್ನಲ್ಲಿ ಭರಪೂರ ತುಂಬಿಕೊಂಡು ನಿಮ್ಮ ಪರವಾಗಿ ವಕೀಲಿ ವೃತ್ತಿ ಮಾಡಿದ್ದೇನೆ ಈ ಹಾಡಿನಲ್ಲಿ ! ನನ್ನೀ ಹಾಡು ತಮ್ಮ ಮನದಲ್ಲಿ ಸದಾ ಭಾನುವಾರದ ಹಾಡಾಗಿ ಗುನುಗುನಿಸಲಿ ಎಂಬುದು ನನ್ನ ಆಶಯ. ಕವಿಗೆ- ಕಲ್ಪನೆಗೆ ಮೊದಲೇ ಹೇಳಿದ ಹಾಗೇ ಹೊತ್ತುಗೊತ್ತು ಇಲ್ಲ. ಇದು ೯:೦೦ ರಿಂದ ೬:೦೦ ರ ಕೆಲಸದ ಅವಧಿಯ ಪರಿಮಿತಿಗೊಳಪಡುವುದಿಲ್ಲ. ಉಪಜೀವನಕ್ಕಾಗಿ ಮನುಷ್ಯ ಏನೆಲ್ಲಾ ಕಸರತ್ತು ಮಾಡುತ್ತಾ ಬಿಡುವಿರದ ದುಡಿಮೆಯಲ್ಲಿ ತೊಡಗಿರುತ್ತಾನೆ. ಬಿಡುವೇ ಇಲ್ಲದ ಅವನಿಗೆ ಎಲ್ಲೋ ಒಂದು ದಿನ ಸ್ವಲ್ಪ ಜಾಸ್ತಿ ಹೊತ್ತು ಮಲಗಿದ್ದು ತಡವಾಗಿ ಎಳೋಣವೆಂದು ಅನಿಸುತ್ತದೆ, ಆದರೆ ಮನೆಯ ಮಿಕ್ಕುಳಿದ ಜನ, ಬಂಧು-ಮಿತ್ರರು ಏನಂದುಕೊಂಡಾರು ಎಂಬ ಸಂಕೋಚ,ನಾಚಿಕೆಯಿಂದ ಬೇಗ ಏಳುವ ಮನಸ್ಸಿಲ್ಲದಿದ್ದರೂ ಅರೆಬರೆ ಮನಸ್ಸಿನಿಂದ ಎದ್ದು ಕೆಲಸಮಾಡಲು ಆರಂಭಿಸುತ್ತಾನೆ. ಅಂತಹ ಮನಸ್ಸು ಸೂರ್ಯನಿಗೇ ತಡವಾಗಿ ಬರುವಂತೆ ಆದೇಶಿಸುವ ಒಂದು ಸನ್ನಿವೇಶದಲ್ಲಿ ಈ ಹಾಡು ರಚಿತವಾಗಿದೆ.

ಜಾಣ ಬಾ ತಡೆದು ಮನೆಗೆ !

ಸೂರ್ಯ ನಿನಗಾಯಿತದೊ ಭಾಳ ಬೇಗನೆ ಬೆಳಗು
ಬಾರದಿರು ಸ್ವಲ್ಪ ತಾಳು
ಇರುಳ ಪರದೆಯ ಸರಿಸಿ ಜಗಕೆ ಬೆಳಕನು ಹರಿಸಿ
ಸಾರದಿರು ದಿನವ ಕೇಳು !

ಬಹಳ ದಿನವಾಯಿತದೊ ನಿನ್ನಲ್ಲಿ ಹೇಳದೆಯೆ
ಮಲಗದೆಯೆ ಬಹಳ ಸಮಯ
ಕಹಳೆಯೂದುವರೆಲ್ಲ ಹೊತ್ತಾರೆ ಏಳದಿರೆ
ಹಲವು ಥರ ನಾಚಿಕೆ ಭಯ !

ಮಂಜಮುಂಜಾನೆಯಲಿ ಗುಂಜಿಸಿದ ದುಂಬಿಗಳ
ಕಂಡಾಯ್ತು ಬಹಳ ಹಿಂದೆ
ಸಂಜೆಗೆಂಪಿನ ನಿನ್ನ ಹಣ್ಣು ಕೆನ್ನೆಯ ನೋಡೆ
ಎಲ್ಲಿಹುದು ಸಮಯ ಮುಂದೆ ?

ಬೆಳಗು ಬೈಗಿನ ಲೆಕ್ಕ ನಮಗಿಹುದೆ ಕೆಲಸದಲಿ?
ಕಳೆಯುವುದು ಬದುಕು ಹೀಗೇ
ಒಳಗೆ ನೆಮ್ಮದಿಯಿಲ್ಲ ಸಾಕಾಯ್ತು ಅಲೆದಲೆದು
ಅನುದಿನವು ಹೊರಗೆ ಹೊರಗೆ

ಭಾನುವಾರದ ಬೆಳಗು ರಜೆಯ ದಿನದಾ ಸೊಬಗು
ಬಗೆಬಗೆಯ ಭಕ್ಷ್ಯಭೋಜ್ಯ
ಸಾನುರಾಗದ ಬಾಳ್ವೆ ಸಂಗೀತ ಸಾಹಿತ್ಯ
ಸಿಗಲುಂಟೆ ಕೆಲವು ಗಳಿಗೆ ?

ನಾವೂ ಮನುಜರು ಕಣಾ ನಾವೇನು ಯಂತ್ರಗಳೆ ?
ಆಣೆ ಮಾಡುವೆನು ನಿನಗೆ
ನೋವು ಕಳೆಯಲು ಹಾಗೆ ಹೊದ್ದು ಮಲಗಲು ಹೀಗೆ
ಜಾಣ ಬಾ ತಡೆದು ಮನೆಗೆ !

Friday, February 5, 2010

ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪಾ.....












ನಿನ್ನ
ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪಾ.....

ನಮ್ಮ ಶರೀರದಲ್ಲಿ ಕಿವಿ,ಮೂಗು,ಕಣ್ಣು, ತಲೆ, ಕೈ,ಕಾಲು ಎಲ್ಲವೂ ಹೇಗೆ ಒಂದೊಂದೂ ತುಂಬಾ ಮುಖ್ಯವೋ ಹಾಗೇಯೇ ಸಾಹಿತ್ಯಾಸಕ್ತರಿಗೆ ಎಲ್ಲ ರಂಗಗಳಲ್ಲಿ ಸೇವೆ ಸಲ್ಲಿಸಿದ, ಜನಸಾಮಾನ್ಯನ ಒಳಿತಿಗಾಗಿ ಮಿಡಿದ ಹೃದಯಗಳನ್ನು ನೆನಪುಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಹೇಗೆ ಒಂದು ಖಾದ್ಯಕ್ಕೆ ಉಪ್ಪು-ಹುಳಿ-ಖಾರ-ಸಿಹಿ ಇವೆಲ್ಲ ತಕ್ಕ ಪ್ರಮಾಣದಲ್ಲಿ ಮಿಳಿತವಾದಾಗ ಅಡುಗೆ ರುಚಿಯಾಗಿರುತ್ತದೋ ನಮ್ಮ ಸಮಾಜ ಕೂಡ ಹಾಗೇ, ಇಲ್ಲಿ ಎಲ್ಲಾ ವೃತ್ತಿಯವರೂ ಬೇಕು. ಆಗ ಸುಖಕರ-ಸ್ವಸ್ಥ ಸಮಾಜದ ಸೃಷ್ಟಿಯಾಗಲು ಸಾಧ್ಯ ಕೆಲವರು ನಮ್ಮ ಮಧ್ಯೆಯೇ ಇದ್ದು ತಮ್ಮ ಕರ್ತವ್ಯ ಪೂರೈಸಿ, ತಮ್ಮ ವೈಯಕ್ತಿಕ ಆಶೋತ್ತರಗಳಿಗೆ ಅಷ್ಟಾಗಿ ಹಂಬಲಿಸದೇ, ಯಾವ ಪ್ರಚಾರವನ್ನೂ ಬಯಸದೇ ಎಲೆ ಮರೆಯ ಕಾಯಿ ಇದ್ದ ಹಾಗೇ ಇದ್ದು ನಿರ್ಗಮಿಸಿ ಬಿಡುತ್ತಾರೆ. ಇಂಥವರಿಗೆ ಗೀತೆಯಲ್ಲಿ ಶ್ರೀಕೃಷ್ಣ 'ಕರ್ಮಯೋಗಿಗಳು' ಅನ್ನುತ್ತಾನೆ. ವ್ಯಕ್ತಿ ಪಡೆದ ಪೂರ್ವಾರ್ಜಿತದ ಪುಣ್ಯದಿಂದ ತಾನು ದೊಡ್ಡ ಸ್ಥಾನ ಅಲಂಕರಿಸಿದಮೇಲೂ 'ದೊಡ್ದವನಾಗುವುದು' ತನ್ನ ವಿದ್ಯಾರ್ಹತೆ,ಸ್ಥಾನಮಾನ ಇವನ್ನೆಲ್ಲ ಮರೆತು 'ಎಲ್ಲರೊಂದಿಗೆ ತನ್ನ ಬದುಕು, ಎಲ್ಲರಂತೆ ತಾನು' ಎಂಬ ಭಾವನೆಯನ್ನು ತಳೆದಾಗ. ತನ್ನಿಂದಾಗಬಹುದಾದ ಒಳಿತನ್ನು ಸಮಾಜಕ್ಕೆ ಮಾಡಿ, ಉಪಕಾರ ಸ್ಮರಣೆಗಾಗಿ,ಪ್ರತಿಫಲಕ್ಕಾಗಿ ಎಂದೂ ಹಂಬಲಿಸದೇ,ಕೊರಗದೇ ಸಮಾಜವೆಂಬ ಆಕಾಶದಲ್ಲಿ ಧ್ರುವತಾರೆಯಾಗುತ್ತಾರೆ! ಕವಿ ತನ್ನ ಕಾವ್ಯದಿಂದ ಕಲ್ಪನಾ ಜಗತ್ತನ್ನು ಕಟ್ಟಿಕೊಟ್ಟರೆ,ಕಲಾವಿದ ಕುಂಚದಿಂದಲೂ, ಸಂಗೀತ ವಿದ್ವಾನ್ ತನ್ನ ಸಂಗೀತದಿಂದಲೂ ಪ್ರೌಢಿಮೆಯನ್ನು ಮೆರೆಯುತ್ತಾರೆ. ಕೆಲವರು ವೇದಿಕೆಯ ಮೇಲೂ, ಇನ್ನು ಕೆಲವರು ನೇಪಥ್ಯದಲ್ಲೂ ಕೆಲಸಮಾಡುತ್ತಾರೆ. ಬಟಾಬಯಲನ್ನೇ ತನ್ನ ವೇದಿಕೆಯನ್ನಾಗಿ ಮಾಡಿಕೊಂಡು ಕೆಲಸಮಾಡುವ ತೀರಾ ಅಪರೂಪದ ವ್ಯಕ್ತಿಗಳು ಕೆಲವರಿರುತ್ತಾರೆ. ಅಂತಹ ಒಂದು ದೈತ್ಯ ಪ್ರತಿಭೆಯನ್ನು ತಮ್ಮ ಮುಂದೆ ತರಲು ಬಹಳ ಸಂತಸವೆನಿಸುತ್ತದೆ. ಅವರಿಗೊಮ್ಮೆ ಶಿರಬಾಗಿ ನಿಮ್ಮ ಮುಂದೆ ಅವರ ಬಗ್ಗೆ ಪ್ರಸ್ತಾಪಿಸುತ್ತೇನೆ.

ಹೌದು, ನಿಮ್ಮ ಲೆಕ್ಕಾಚಾರ ತಪ್ಪಾಗಿದ್ದು ಸಿನಿಮಾ ಹಾಡಿನ ಸಾಲು ನೋಡಿ ! ಆದರೆ ನಾನು ಹೇಳ ಹೊರಟಿರುವುದು ಕಣ್ಣಿನ ಬಗ್ಗೇನೆ ! ಅದು ಕಣ್ಣಿನ ಮಾಯದ ಮೋಡಿಗಾರ ಪದ್ಮಶ್ರೀ , ಪದ್ಮಭೂಷಣ ದಿ| ಡಾ| ಎಮ್.ಸಿ.ಮೋದಿ ಯವರ ಬಗ್ಗೆ. ೧೯೧೫ ರಲ್ಲಿ ಉತ್ತರ ಕರ್ನಾಟಕದ ಬಿಜಾಪುರದಲ್ಲಿ ಜನಿಸಿದ ಮುರುಗಪ್ಪ ಚನ್ನವೀರಪ್ಪ ಮೋದಿ ಭಾರತ ಮಾತೆಯ ಹೆಮ್ಮೆಯ ಮಗುವಾಗಿದ್ದರು. ಸೇವೆ ಎಂಬ ಸೋಗಿನಲ್ಲಿ ವ್ಯಾಪಾರೀಕರಣ ನಡೆದಿರುವ ಈ ದಿನಗಳಲ್ಲಿ ಬಡಜನರಿಗೆ ಭಾಗ್ಯವಿಧಾತರಾಗಿ ಬಂದ ಸೌಭಾಗ್ಯ ನಿಧಿ ಡಾ|ಮೋದಿ.

ಯಾವ ಚಿಕಿತ್ಸೆಗಳು ಇಂದು ಗಹನವೆಂದು ಪರಿಗಣಿಸಲ್ಪಟ್ಟು ವಿಶೇಷ ಚಿಕಿತ್ಸಾ ಕೊಠಡಿಗಳಲ್ಲಿ ಮಾಡಲ್ಪಡುತ್ತವೆಯೋ ಅದನ್ನು ಒಂದುಕಾಲದಲ್ಲಿ ಹಳ್ಳಿ ಹಳ್ಳಿಗೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಷ್ಟೇ ಅಲ್ಲ ಹೆಚ್ಚಿನ ಚಿಕಿತ್ಸಾ ಉಪಕರಣಗಳಿಲ್ಲದೇ ಅವರು ಕಣ್ಣಿನ ಚಿಕಿತ್ಸೆ ಮಾಡಿದ ಹೆಗ್ಗಳಿಕೆಯ ಗರಿಯೂ ಅವರ ಕಿರೀಟಕ್ಕೇರುತ್ತದೆ !

೧೯೪೩ರಲ್ಲಿ ಸವ್ಯಸಾಚಿಯ ಥರ ಕೆಲಸ ಆರಂಭಿಸಿದ ಡಾ|ಮೋದಿ ತನ್ನ ಸೇವಾವಧಿಯಲ್ಲಿ ೪೬,೧೨೦ ಹಳ್ಳಿಗಳಿಗೆ ಸೇವೆಗಾಗಿ ಭೇಟಿ ಇತ್ತರು, ಕ್ಯಾಂಪ್ ನಡೆಸಿದರು. ಒಂದು ಅಂದಾಜಿನ ಪ್ರಕಾರ ೧,೨೧,೧೮,೬೩೦ ಕಣ್ಣಿನ ರೋಗಿಗಳನ್ನು ತಪಾಸಣೆ ನಡೆಸಿದರು, ಅಲ್ಲದೇ ಸುಮಾರು ೬,೧೦,೫೬೪ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿದರು. ೧೯೫೦ರ ಸುಮಾರಿಗೆ ತಿರುಪತಿಯಲ್ಲಿ ಒಂದೇ ದಿನದಲ್ಲಿ ೬೯೫ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ ದಿಡೀರ್ ಖ್ಯಾತಿಗಳಿಸಿದ ಮೋದಿಯವರು ಒಂದೇ ದಿನದಲ್ಲಿ ೮೩೩ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ ಗಿನ್ನೆಸ್ ಬುಕ್ ನಲ್ಲಿ ದಾಖಲಾದರು. ಈ ವಿಷಯ ನಂಬಲು ಅಸಾಧ್ಯವೆನಿಸಿದರೂ ನಡೆದದ್ದನ್ನು, ದಾಖಲಿಸಿದ್ದನ್ನು ಒಪ್ಪಲೇಬೇಕಲ್ಲ? ಅನೇಕ ವಿಜ್ಞಾನಿಗಳಿಗೆ ಇವರು ಈ ವಿಷಯದಲ್ಲಿ ಸವಾಲಾಗಿದ್ದಾರೆ! ದಿನಕ್ಕೆ ೮೦೦ರಷ್ಟು ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸುವುದು ಹೇಗೆ ? ಅದು ಎಷ್ಟರಮಟ್ಟಿಗೆ ಸುರಕ್ಷಿತ ? ಚಿಕಿತ್ಸೆ ಮಾಡಿಸಿಕೊಂಡವರ ಅನಿಸಿಕೆ ಏನು? ಹಲವು ರೀತಿಯ ಪ್ರಶ್ನೆಗಳು ಹುಟ್ಟಿಕೊಂಡವು. ಇಲ್ಲಿಯೂ ಕೂಡ ಅವರಲ್ಲಿ ಅಂತಹುದೇನಿದೆ ? ಎಂಬುದೇ ತರ್ಕಕ್ಕೆ ನಿಲುಕದ ಅದ್ಬುತ ವಿಷಯವಾಯಿತು!

ಯವುದೇ ಮಾಧ್ಯಮಗಳಿಗೆ ಮೋದಿಯವರು ಸೊಪ್ಪು ಹಾಕುತ್ತಿರಲಿಲ್ಲ. ವ್ಯರ್ಥ ಮಾತುಕತೆಗಿಂತ ಕೃತಿಯಲ್ಲಿ ತಮ್ಮ ಸೇವೆಯನ್ನು ತೋರಿಸಿದ ಪ್ರಚಂಡ ಪ್ರತಿಭೆ ಇದು. ಅನೇಕರು ಹಲವಾರು ಪ್ರಶ್ನೆ ಕೇಳುತ್ತಿದ್ದರೂ ಅವರು ಅದಕ್ಕೆಲ್ಲ ತೀರಾ ತಲೆಕೆಡಿಸಿಕೊಂಡವರಲ್ಲ. ಹಾಗಂತ ಯಾರನ್ನೂ ಅಸಡ್ಡೆ ಮಾಡುತ್ತಿರಲಿಲ್ಲ. ಬಿಡುವಿದ್ದ ಸಮಯ ಕೆಲವರು ಪ್ರಶ್ನಿಸಿದರೆ ತಾವು ಉತ್ತರಿಸುತ್ತಿದ್ದರು.

’ಸಾಮೂಹಿಕ ಕಣ್ಣಿನ ಶಸ್ತ್ರ ಚಿಕಿತ್ಸೆ’ ಎಂಬ ಹೊಸ ಆಂದೋಲನವನ್ನೇ ನಡೆಸಿ ಕಣ್ಣಿನ ತೊಂದರೆಗೊಳಗಾಗಿರುವ ಬಡವರ, ಆರ್ತರ ಚಿಕಿತ್ಸೆಗೆ ತನ್ನ ಜೀವನವನ್ನೇ ಮುಡುಪಾಗಿಟ್ಟರು. ಮೋದಿಯವರು ದುಡ್ಡು ಮಾಡುವ ಚಟಕ್ಕೆ ಎಂದೂ ಬಲಿಬೀಳದೇ ತನ್ನ ನಿಜವಾದ ಸೇವಾ ಸೌಜನ್ಯವನ್ನು ತೋರಿದವರು. ನಾವು ಬರೇ ಮದರ್ ಥೆರೆಸಾ ಎನ್ನುತ್ತೇವೆ, ಒಂದರ್ಥದಲ್ಲಿ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದವರು ಡಾ|ಮೋದಿ.

ಅವರ ಚಿಕಿತ್ಸೆಗಳು ಅದ್ಬುತ ಯಶಸ್ಸನ್ನು ಕಂಡವು. ಹೀಗಾಗಿ ಜನರು ಡಾ|ಮೋದಿಯನ್ನು ದೇವರೋಪಾದಿಯಲ್ಲಿ ಪೂಜಿಸುವಷ್ಟು ಅವರು ಮನೆಮಾತಾಗಿದ್ದರು. ಕ್ಷಣಾರ್ಧದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವುದು ಅವರಿಗೆ ಸಿದ್ಧಿಸಿದ ವಿಷಯವಾಗಿತ್ತು. ಈ ಸುದ್ದಿ ವಿದೇಶೀ ವೈದ್ಯರುಗಳಿಗೆ ನುಂಗಲಾರದ ತುತ್ತಾಗಿತ್ತು! ಒಬ್ಬ ಭಾರತೀಯ ಬುಡ್ಡ ಬಂದು ಇಷ್ಟೆಲ್ಲ ಸಾಧಿಸಲು ಹೇಗೆ ಸಾಧ್ಯ, ಇವನನ್ನು ಎಲ್ಲಾದರೂ ಸಿಕ್ಕಿಸಿಹಾಕಬೇಕೆಂದು ಬಹಳ ವಿಧದಲ್ಲಿ ಪ್ರಯೋಗ ನಡೆಸಿದರು, ಯಾವ ಸನ್ನಿವೇಶವೇ ಬಂದರೂ ವಿಜಯಲಕ್ಷ್ಮಿ ಡಾ|ಮೋದಿಯವರ ಬೆನ್ನಿಗೇ ಶಾಶ್ವತವಾಗಿ ಅಂಟಿಕೊಂಡುಬಿಟ್ಟಿದ್ದಳು!

ಇವರ ನಿಸ್ವಾರ್ಥ ಸೇವೆ ಗಮನಿಸಿ ಆಗಿನ ಘನ ಸರಕಾರಗಳು ೧೯೫೬ ರಲ್ಲಿ ಪದ್ಮಶ್ರೀ ಮತ್ತು ೧೯೬೮ ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ಕೊಟ್ಟು ಪುರಸ್ಕರಿಸಿದವು. ಅವರ ಕೆಲಸವನ್ನು ಹೆನ್ರಿ ಫೋರ್ಡ್ ಅವರ ಕೆಲಸಗಳಿಗೆ ಹೋಲಿಸಲಾಗುತ್ತಿತ್ತು. ಕಣ್ಣಿಗೆ ಚಿಕಿತ್ಸೆ ನೀಡಲು ಇರುವ ಸಾಗಾಣಿಕಾ ಪಟ್ಟಿ [conveyor belt] ಎಂದರೆ ಅದು ಡಾ|ಮೋದಿ ಎಂಬಷ್ಟು ಖ್ಯಾತಿಗಳಿಸಿದ್ದ ಶ್ರೀಯುತರು ಬೆಂಗಳೂರಿನ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಸೇವಾರ್ಥ /ಧರ್ಮಾರ್ಥ ಕಣ್ಣಿನ ಚಿಕಿತ್ಸಾ ದವಾಖಾನೆಯನ್ನು ತೆರೆದರು, ಅದು ಇಂದಿಗೂ ಕೆಲಸಮಾಡುತ್ತ ಅನೇಕ ರೋಗಿಗಳಿಗೆ ಸಹಾಯ ಮಾಡುತ್ತಿದೆ.

ಕೇವಲ ಇಂಥವರನ್ನು ಕಂಡಾಗ ಮಾತ್ರ ನಮಗೆ ನೆನಪಾಗುವುದು

||ವೈದ್ಯೋ ನಾರಾಯಣೋ ಹರಿಃ||

ಹೇಗೆ ಕವಿಗಳು-ಸಾಹಿತಿಗಳು ಅದಕ್ಕಾಗೇ ಹುಟ್ಟಿರುತ್ತಾರೋ ಹಾಗೇ ಡಾ|ಮೋದಿ ಜನರ ಕಣ್ಣಿನ ನೋವಿಗೆ ಸ್ಪಂದಿಸಲೆಂದೇ ಭುವಿಗೆ ಬಂದಿದ್ದ ವಿಶೇಷ ನೇತ್ರಾಧಿಕಾರಿ ! ಹಾಗಾಗೇ ಅವರು ಬದುಕಿರುವಾಗಲೇ ದಂತಕಥೆಯಾಗಿದ್ದರು ! ಬಹುಶಃ ಇಂತವರನ್ನೆಲ್ಲ ಕಳಿಸುವುದಕ್ಕೇ ಭಗವಂತ ಹೇಳಿರಬೇಕು ' ತದಾತ್ಮಾನಂ ಸೃಜಾಮ್ಯಹಂ ' ಅಂತ. ಡಾ|ಮೋದಿ ೯೦ ವಯಸ್ಸಿನ ಕಾಲ ಜೀವಿಸಿದ್ದರು, ೨೦೦೫ ರ ನವೆಂಬರ್ ೧೧ ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮರಣಿಸಿದರೂ ಭಾರತದ ಲಕ್ಷೋಪಲಕ್ಷ ಜನರ ಕಣ್ಣುಗಳಿಗೆ ಬೆಳಕನ್ನು ಕೊಟ್ಟು 'ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪಾ....' ಎಂದು ರೋಗಿಗಳನ್ನು ರೋಗಮುಕ್ತರನ್ನಾಗಿಸಿ ಭಾರತದಲ್ಲಿ ಶಾಶ್ವತವಾಗಿ ಬೆಳಗುವ ಹಣತೆಯಾಗಿದ್ದಾರೆ ಎಂದರೆ ಅದು ಅತಿಶಯೋಕ್ತಿಯಲ್ಲ.

Thursday, February 4, 2010

ಇಂದು ಕೆಂದಾವರೆಯ ದಳದಳಿಸಿದಾರಿಯಲಿ...........












ಇಂದು
ಕೆಂದಾವರೆಯ ದಳದಳಿಸಿ ದಾರಿಯಲಿ...........


ಬಹುತೇಕ ಕನ್ನಡದ ಹಿರಿಯ ಕವಿಗಳೆಲ್ಲ ಆರ್ಥಿಕವಾಗಿ ಬಡವರಾಗಿದ್ದರು. ಕಾವ್ಯ-ಸಾಹಿತ್ಯವೇ ಅವರ ಆಸ್ತಿ-ಪಾಸ್ತಿ.
ಅವರು ಅದನ್ನೇ ಉಸಿರಾಡಿದರು,ತಿಂದರು,ಅದನ್ನೇ ಕುಡಿದರು,ಕುಣಿದರು,ಹಂಚಿಕೊಂಡು ನಗೆಯಾಡಿದರು. ಅವರೆಂದೂ ರಾಜಕಾರಣಿಗಳ ಹಿಂದೆ ಬಿದ್ದವರಲ್ಲ! ಆಗ ರಾಜಕೀಯವೂ ರೀತಿ ಹೊಲಸಾಗಿರಲಿಲ್ಲ! ಬಡತನ-ಉಪವಾಸ-ಕೆಲಸಕ್ಕಾಗಿ ಅಲೆದಾಟ ಇದು ನಮ್ಮ ಕವಿಗಳಲ್ಲೂ ಇತ್ತು, ವಿಪರ್ಯಾಸವೆಂದರೆ ಇಂದು ನಾವು ಸಾಮಾನ್ಯ ತೊಂದರೆಗೂ ಬೋಬ್ಬಿರಿಯುತ್ತೇವೆ, ಆದರೆ ಅಂದು ಅವರು ಅದನ್ನೇ ಗಣಿಸದೇ ಅದನ್ನೇ ಆಧಾರವಾಗಿಟ್ಟುಕೊಂಡು ಬೇರೆಬೇರೆ ಕವನ-ವಚನ-ಸಾಹಿತ್ಯಗಳನ್ನು ಸೃಷ್ಟಿಸಿದರು. ವರಕವಿ ಬೇಂದ್ರೆಯವರ ಮನೆಯಲ್ಲಿ ಉಪವಾಸವಿರುವ ಎಷ್ಟೋ ದಿನಗಳಿರುತ್ತಿದ್ದವು. ಅಂತಹ ಸಮಯದಲ್ಲಿ " ಕುಣಿಯೋಣು ಬಾರಾ ಕುಣಿಯೋಣು ಬಾ ......" ಎಂದು ಕುಣಿದು ಹಾಡನ್ನು ಬರೆದರು. ಅವರು ಕಾಲವಾಗಿ ಅನೇಕ ವರ್ಷಗಳ ಮೇಲೆ ಧಾರವಾಡಕ್ಕೆ ನಾನು ಹೋದಾಗ ಸಾಧನಕೇರಿಯ ಅವರ ಮನೆಯನ್ನು ಹುಡುಕಿಕೊಂಡು ಹೋಗಿದ್ದೆ. "ಬಾರೋ ಸಾಧನಕೇರಿಗೆ" ಎಂದಿದ್ದರಲ್ಲ , ದಕ್ಕೆ! ಸ್ವತಃ ನಾನು ನಮ್ಮ ಮಲ್ಲಿಗೆ ಕವಿ ನರಸಿಂಹ ಸ್ವಾಮಿಯವರನ್ನು ಭೇಟಿ ಮಾಡಿದ್ದೆ, ನನಗೆ ಕವಿಗಳು ಹೇಗೆ ಬದುಕುತ್ತಾರೆ ಎಂಬುದು ಕುತೂಹಲವಾಗಿತ್ತು ! ಬಹುಶಃ ೧೯೯೭ ರಲ್ಲಿ ಎಂದೆನಿಸುತ್ತದೆ. ಕತ್ರಿಗುಪ್ಪೆಯಲ್ಲಿರುವ ಅವರ ಮನೆಗೆ ಹೋದಾಗ ಸ್ವಾಗತಿಸಿದ್ದೇ ಅವರು. ಅವರ 'ಶಾರದೆ ' [ಇತ್ತೇಚೆಗೆ ಅವರು ತೀರಿಕೊಂಡರು]ನನಗೆ ಕೊಟ್ಟ ಲಿಂಬೂ ಪಾನಕದಲ್ಲಿ ಅದೆಂತಹ ಅದ್ಬುತ ರುಚಿಯಿತ್ತು, ಇವತ್ತಿನ ರೆಡಿ ಮಿಕ್ಸ್ ಅಲ್ಲ ಅದು! ನನ್ನ ಅಜ್ಜಿಯಥರವಯಸ್ಸಿನ ಅವರ ಮಡದಿ ಬೇಡವೆಂದರೂ ಕೇಳದೆ ನನ್ನನ್ನು , ಒಬ್ಬ ಸಾಮಾನ್ಯ ಹುಡುಗನನ್ನು ಆದರಿಸಿದ ಅವರ ಆತ್ಮೀಯತೆ ನೋಡಿ ಅಲ್ಲೇ ಅಂದುಕೊಂಡೆ ನಿಜವಾಗಿ ಕವಿ 'ಶಾರದೆ'ಯನ್ನು ಕಂಡಿದ್ದಾರೆ ! ಕಂಡು 'ಮೈಸೂರು ಮಲ್ಲಿಗೆ ' ಬರೆದಿದ್ದಾರೆ.ಹೀಗೇ ಕನ್ನಡದ ಪ್ರತಿಯೊಬ್ಬ ಕವಿ-ಸಾಹಿತಿಯೂ ಕೂಡ ಬರೇ ಪುಸ್ತಕದಲ್ಲಿ-ಸಾಹಿತ್ಯದಲ್ಲಿ ಅಲ್ಲದೆ ತಮ್ಮ ಬದುಕಿನ ತುಂಬಾ ಆಚರಣೆಯಲ್ಲಿ ಅನನ್ಯ ಅತಿಥಿ ಸತ್ಕಾರದ ಸಂಸ್ಕೃತಿಯನ್ನು ಮೆರೆದಿದ್ದಾರೆ-ಈಗಿರುವವರು ಮೆರೆಯುತ್ತಿದ್ದಾರೆ. ತಮ್ಮ ನೋವನ್ನು ನುಂಗಿ ನಮಗೆಲ್ಲ 'ಆಸ್ತಿ' ಮಾಡಿಟ್ಟ ಇಂತಹಮಹಾನ್ ಚೇತನಗಳ ಬಗ್ಗೆ , ಈ ಮಾಲಿಕೆಯಲ್ಲಿ ಆಗಾಗ ನಮ್ಮೆಲ್ಲಾ ಕವಿಗಳ ಬಗ್ಗೆ ಬರೆಯುತ್ತೇನೆ.


ಕನ್ನಡ ತಾಯಿ ಹೆತ್ತ ಅನೇಕ ಕವಿಪುಂಗವರಲ್ಲಿ ದಿ|ಶ್ರೀ ಮೊಗೇರಿ ಗೋಪಾಲಕೃಷ್ಣ ಅಡಿಗರೂ ಒಬ್ಬರು. ೧೯೧೮ ರಲ್ಲಿ ಈಗಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಸಣ್ಣ ಹಳ್ಳಿಯಲ್ಲಿ ಸಂಪ್ರದಾಯಸ್ಥ ಬಡ ಬ್ರಾಹ್ಮಣ ದಂಪತಿಗೆ ಜನಿಸಿದ ಶ್ರೀಯುತರು ಬಾಲ್ಯದಲ್ಲಿ ಪ್ರಾಥಮಿಕ ಶಾಲೆಯನ್ನು ಬೈಂದೂರಿನಲ್ಲಿ ಪೂರೈಸಿದರು. ಆಗಿನ ಕಾಲಕ್ಕೆ ಅಲ್ಲಿ ಹತ್ತಿರ ಪ್ರೌಢಶಾಲೆ ಇರದ ಕಾರಣ ೧೪ ಕಿಲೋ ಮೀಟರ್ ದೂರದ ಕುಂದಾಪುರಕ್ಕೆ ಹೋಗಿ ಅಭ್ಯಸಿಸಿದರು. ಅಲ್ಲಿಗೆ ನಾ ನಾ ರೀತಿಯ ಆರ್ಥಿಕ ಮುಗ್ಗಟ್ಟು ವಗೈರೆ ತೊಂದರೆಯಾಗಿ ಅವರ ವಿದ್ಯಾಭ್ಯಾಸ ಸ್ವಲ್ಪ ತಡವರಿಸಿತು. ಮನೆಯವರೆಲ್ಲರಿಗೆ ವಿರುದ್ಧವಾಗಿ, ನಂತರ ಅವರ ಹತ್ತಿರದ ಬಂಧು ಮಹಿಳೆಯೊಬ್ಬರು ತಮ್ಮ ಸಹಾಯವನ್ನಿತ್ತು ಪ್ರೋತ್ಸಾಹಿಸಿದ ಮೇಲೆ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ[ಅನ್ಸ್] ಮುಗಿಸಿದರು.

ಅನೇಕ ಚಿಕ್ಕಪುಟ್ಟ ನೌಕರಿ ಮಾಡುತ್ತ ಅಡಿಗರು ಕೊನೆಗೊಮ್ಮೆ ಮೈಸೂರಿನ ’ಶಾರದಾ ವಿಲಾಸ ಕಾಲೇಜಿ’ನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ೧೯೪೮ ರಿಂದ ೧೯೫೨ರ ವರೆಗೆ ಕೆಲಸ ನಿರ್ವಹಿಸಿದರು. ಈ ಸಮಯದಲ್ಲಿ ಅವರು ನಾಗಪುರ ವಿಶ್ವವಿದ್ಯಾಲಯದಿಂದ ಮಾಸ್ಟರ್ ಡಿಗ್ರಿ ಮುಗಿಸಿದರು. ಅನಂತರ ಮೈಸೂರಿನ ಸೇಂಟ್ ಫಿಲೊಮಿನಾ’ಸ್ ಕಾಲೇಜ್ ನಲ್ಲಿ ಹತ್ತು ವರ್ಷಗಳಕಾಲ ಕೆಲಸ ಮಾಡಿದರು. ೧೯೬೦ ರಲ್ಲಿ ಶ್ರೀಯುತರು ಸಾಗರದಲ್ಲಿ ಹೊಸದಾಗಿ ಸ್ಥಾಪಿತವಾದ ಲಾಲ್ ಬಹದ್ದೂರ್ ಶಾಸ್ತ್ರೀ ಕಾಲೇಜಿನಲ್ಲಿ ಕೆಲಕಾಲ ಪ್ರಾಂಶುಪಾಲರಾಗಿ ದುಡಿದರು. ನಂತರ ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಕೆಲಸಮಾಡಿದರು. ೫ ಜನ ಮಕ್ಕಳು ಮತ್ತು ೯ ಜನ ಮೊಮ್ಮಕ್ಕಳ ತುಂಬಿದ ಸಂಸಾರವನ್ನು ನಡೆಸಿದರು.

ವೃತ್ತಿಯಿಂದ ಇಂಗ್ಲೀಷ್ ಅಧ್ಯಾಪಕರಾದರೂ ಅವರು ನೆಚ್ಚಿಕೊಂಡದ್ದು ಕನ್ನಡಸಾಹಿತ್ಯವನ್ನೇ. ಅತ್ಯುತ್ತಮ ಕವಿ, ವಿಮರ್ಶಕ, ಮತ್ತು ಹೊಸತನದ ಚಿಂತಕರಾಗಿ ಕನ್ನಡಕ್ಕೆ ಒಳ್ಳೊಳ್ಳೆಯ ಕೃತಿಗಳನ್ನು ಕೊಡುಗೆಯಾಗಿ ಕೊಟ್ಟರು. ಸಮಾಜ ಅವರನ್ನು 'ನವೀನ ಸಾಹಿತ್ಯದ ಹರಿಕಾರ ' ಎಂದೇ ಗೌರವಿಸಿತ್ತು. ಇಡೀ ಐವತ್ತು ವರ್ಷಗಳ ಸಾಹಿತ್ಯ ಜೀವನದಲ್ಲಿ ಅವರು ೧೯೬೧ರಲ್ಲಿ ಒಂದೇ ಒಂದು ಇಂಗ್ಲೀಷ್ ಕವಿತೆಯನ್ನು ರ್ಯಾಡಿಕಲ್ ಹುಮನಿಸ್ಟ್ ಮ್ಯಾಗಜಿನ್ ನ ಎಮ್.ಎನ್.ರಾಯ್ ಅವರ ವಿನಂತಿಯ ಮೇರೆಗೆ ,ಕವಿ ದಿ|ಶ್ರೀ ರವೀಂದ್ರನಾಥ ಠಾಗೋರರ ಮೆಲೆ ಬರೆದರು.

ಸ್ವಾತಂತ್ರ್ಯ ಬಂದ ವೇಳೆ 'ಭಾರತದ ನವೋದಯ ಸಾಹಿತ್ಯ' ವೆಂಬ ಚಳುವಳಿ ಮಾಡಿದರು . ಸಂಪ್ರದಾಯಬದ್ಧ ಭಾರತದ ಸಾಹಿತ್ಯಕ್ಕೆ ಪಾಶ್ಚಿಮಾತ್ಯ ಸಾಹಿತ್ಯದ ಚಳುಕನ್ನು-ಥಳುಕನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಎಲ್ಲಾ ಕೃತಿಗಳು ನಮ್ಮ ಮಧ್ಯಮ ವರ್ಗದ ಜನರ ನಾಡಿಮಿಡಿತಗಳಾಗಿವೆ. ಅಡಿಗರ ಕೃತಿಗಳನ್ನು ಕೇವಲ ಕೆಲವು ಪ್ರತಿಭಾವಂತರು ಮಾತ್ರ ಭಾಷಾಂತರಿಸಿದರು. ಅಂತವರಲ್ಲಿ ಸರ್ವಶ್ರೀ ಎ.ಕೆ.ರಾಮಾನುಜನ್, ಎಮ್.ಜಿ.ಕೃಷ್ಣಮೂರ್ತಿ, ರಾಜೀವ್ ತಾರಾನಾಥ್,ಸುಮತೀಂದ್ರ ನಾಡಿಗ ಮತ್ತು ಎಮ್.ಕೆ.ಅನಿಲ್ ಇವರು ಪ್ರಮುಖರು. ೨೦೦೭ರಲ್ಲಿ ಡಾ|ನಾಡಿಗರು ಅಡಿಗರ ಆಯ್ದ ಕವನಗಳ ಸಂಕಲನವನ್ನು ಹೊರತಂದರು,ಇದನ್ನು ಭಾರತೀಯ ಸಾಹಿತ್ಯ ಪರಿಷತ್ತು ಪರಿವೀಕ್ಷಿಸಿತು.

ಅವರ ಬರವಣಿಗೆ ವಿಶಿಷ್ಟವಾಗಿತ್ತು, ಜೊತೆಗೆ ಅವರು ಕಥೆ,ಕವನ-ಸಾಹಿತ್ಯಗಳಲ್ಲಿ ತನ್ನನ್ನು ಪ್ರಚಾರಕ್ಕೆ ಒಳಪಡಿಸಿಕೊಳ್ಳಲಿಲ್ಲ. ಎಂದೂ ಡೊಗ್ಗು ಸಲಾಮು ಹೊಡೆದು ತನ್ನ ಕೆಲಸ ಮಾಡಿಸಿಕೊಂಡವರಲ್ಲ. ಅವರಿಗೆ ಮಾಧ್ಯಮಗಳು[ಆ ಕಾಲಕ್ಕೆ ಪತ್ರಿಕೆಗಳು,ರೇಡಿಯೋ ಇತ್ಯಾದಿ] ಪ್ರಚಾರ ಎನ್ನುವುದಕ್ಕಿಂತ ಹಸಿರನ್ನು ಸದಾ ಇಷ್ಟಪಡುವ ಜೀವ ಅದಾಗಿತ್ತು! ಪ್ರಾಯಶಃ ಕರಾವಳಿಯ ಹಳ್ಳಿಯಲ್ಲಿ ಹುಟ್ಟಿ ಬೆಳೆದದ್ದರಿಂದ ಆ ರೀತಿ ಅವರು ಗಿಡ-ಮರಗಳನ್ನು ಪ್ರೀತಿಸುತ್ತಿದ್ದರೇನೋ ಅನಿಸುತ್ತಿದೆ.

ಅವರ ಪ್ರಮುಖ ಕೃತಿಗಳು :

ಭಾವತರಂಗ - ೧೯೪೬
ಅನಂತೆ - ೧೯೮೬ರಲ್ಲಿ (ಕಾದಂಬರಿ)
ಭೂಮಿ ಗೀತ - ೧೯೫೯
ಮಣ್ಣಿನ ವಾಸನೆ (ಪ್ರಬಂಧಗಳ ಪುಸ್ತಕ) - ೧೯೬೬
ವರ್ಧಮಾನ - ೧೯೭೨
ಇದನ್ನ ಬಯಸಿರಲಿಲ್ಲ (ಕವಿತೆಗಳು) - ೧೯೭೫
ಸಮಗ್ರ ಕಾವ್ಯ (ಕವನ ಸಂಕಲನ) - ೧೯೭೬

ನಮ್ಮ ಕವಿಗಳು ಎಷ್ಟೆಲ್ಲಾ ಭಾವತುಂಬಿ, ಮನದುಂಬಿ ಬರೆಯುತ್ತಿದ್ದರೆಂದರೆ ಅದನ್ನು ಶುಶ್ರಾವ್ಯವಾಗಿ ಹಾಡಿದಾಗ ಕೇಳಿ ಅನುಭವಿಸಬೇಕೇ ಹೊರತು ಬರೇ ಶಬ್ಧಗಳಿಂದ ಬಣ್ಣಿಸಲು ಸಾಧ್ಯವಾಗುವುದಿಲ್ಲ. ಅಡಿಗರ ಅಂತಹ ಒಂದು ಅದ್ಬುತ ಗೀತೆಯನ್ನು ತಮ್ಮ ಮುಂದಿಡಲು ಅಪೇಕ್ಷಿಸಿದ್ದೇನೆ:

ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ...........
ಶ್ರೀಮತಿ ಮಂಜುಳಾ ಗುರುರಾಜ್ ಹಾಡಿದ್ದಾರೆ, ಮೈಸೂರು ಅನಂತಸ್ವಾಮಿ ಇದಕ್ಕೆ ಸಂಗೀತವನ್ನು ಅಳವಡಿಸಿದವರು. ಇದನ್ನುತಾವೊಮ್ಮೆ ಕೇಳಿ, ಆಸ್ವಾದಿಸಿ..ಬಹುಶಃ ನಂತರ ತಾವು ಅಡಿಗರು ಎಷ್ಟು ನಿಸರ್ಗಪ್ರಿಯರಾಗಿದ್ದರು ಎಂಬುದನ್ನು ಮನಗಾಣುತ್ತೀರಿ
[ಇದು ಯೂ ಟ್ಯೂಬ್ ನಲ್ಲಿದೆ. ಕೆಳಕಂಡ ಲಿಂಕ್ ಕಾಪಿ ಮಾಡಿ ಬ್ರೌಸರ್ನಲ್ಲಿ [ಅಡ್ರೆಸ್] ಪೇಸ್ಟ್ ಮಾಡಿ, ಎಂಟರ್ ಕೀ ಪ್ರೆಸ್ ಮಾಡಿ ನಂತರ ಅದರ ಮೋಡಿ ನೋಡಿ !]

http://video.disney-bg.com/video/XzFLCnvkjNU

[ಇದನ್ನು ಬಾಂಬೆ ಜಯಶ್ರೀ ಕೂಡ ಹಾಡಿದ್ದಾರೆ. ]ತುಂಬಾ ಸುಶ್ರಾವ್ಯವಾಗಿ ಹಾಡಿರುವ ಮಂಜುಳಾ ಅವರಿಗೂ, ಕಿವಿಯ ಮೂಲಕ ಹೃದಯದ ಬಾಗಿಲನ್ನು ತಟ್ಟುವ ಅನಂತ ಸ್ವಾಮಿಯವರಿಗೂ, ಹಾಗೂ ಕವಿ ಅಡಿಗರಿಗೂ ನಮ್ಮ ಕೃತಜ್ಞತೆಗಳನ್ನು ಅರ್ಪಿಸೋಣವೇ ? ಭಾವನೆಗೆ ತಕ್ಕ ದೃಶ್ಯ ಮಾಧ್ಯಮವನ್ನೂ ಅಳವಡಿಸಲಾಗಿದೆ-ಅದೂ ಕೂಡ ತುಂಬಾ ಸುಂದರವಾಗಿ ಮೂಡಿಬಂದಿದೆ[ ಅದನ್ನು ಅಳವಡಿಸಿದವರ ವಿವರ ಸಿಕ್ಕಿಲ್ಲ ಅವರಿಗೂ ನಮ್ಮ ನಮನಗಳು]

ಸಂತೃಪ್ತ ಜೀವನ ನಡೆಸಿದ ಅಡಿಗರು ೧೯೯೨ ಬೆಂಗಳೂರಿನಲ್ಲಿ ತಮ್ಮ ಜೀವನ ಯಾತ್ರೆ ಪೂರೈಸಿದ್ದಾರೆ. ಅವರು ಕಾವ್ಯ-ಸಾಹಿತ್ಯಗಳಲ್ಲಿ ಇನ್ನೂ ಬದುಕಿಯೇ ಇದ್ದಾರೆ !

Wednesday, February 3, 2010

ಹಾರ್ಮೋನ್ ಮಾಸ್ತರ್


ಹಾರ್ಮೋನ್ ಮಾಸ್ತರ್

[ಮೇಲಿನ ಚಿತ್ರ ಕೇವಲ ಕಾಲ್ಪನಿಕ,ಕಥೆಯ ಪ್ರಸ್ತುತಿಗಾಗಿ ಮಾತ್ರ ಬಳಸಲಾಗಿರುತ್ತದೆ ]

ಪಾಹಿ ಶಾಂತ ಭುವನೇಶ್ವರ ಸುಮನೋಹರ ಭುವನ ಸಾರ
ಪಾಪ ಹಾರ ................

ಸರಿಗಮಪ ಗಮಪ ಗಮಪ ಪದನಿ ಪದನೀ ಪದನೀ....... ಮಾಸ್ತರ್ ನುಡಿಸುತ್ತಿದ್ದಾರೆ ಹಾರ್ಮೋನಿಯಮ್ ಅನ್ನು, ನಾವೆಲ್ಲ ಹಳ್ಳಿ ಜನ ಅವರನ್ನು ಹಾರ್ಮೋನ್ ಮಾಸ್ತರ್ ಎಂದೇ ಕರೆಯುವುದು, ಅವರಿಗೆ ಹಾಗೆ ಕರೆದರೆ ತುಂಬಾ ಖುಷಿ ! ಅವರಿಗೆ ಹಾರ್ಮೋನಿನದ್ದೇ ಖಯಾಲಿ. ಹಾರ್ಮೋನು ಅಂದರೆ ಜೀವ ! ಒಂದು ಬೀಡಿ ಮತ್ತು ಹಾರ್ಮೋನು ಕೊಟ್ಟು ಬಿಟ್ಟರೆ ಊಟದೆ ಗೊಡವೆಯೇ ಇಲ್ಲ, ಇದ್ದರೂ ಸರಿ-ಇರದಿದ್ದರೂ ಸರಿ. ಅವರಿಲ್ಲದಿದ್ದರೆ ನಮ್ಮೂರಲ್ಲೆಲ್ಲ ಸಂಗೀತ, ನಾಟಕ ಇತ್ಯಾದಿಗಳಿಗೆ ಕಳೆಯೇ ಇಲ್ಲ ! ಒಂದರ್ಥದಲ್ಲಿ ಅವರು ದಿಗ್ದರ್ಶಕರು /ನಿರ್ದೇಶಕರು ಕೂಡ.


ಹಾರ್ಮೋನ್ ಮಾಸ್ತರ್ ಎಂದೇ ಖ್ಯಾತರಾದವರು ರಂಗರಾವ್ ಹವಾಲ್ದಾರ್. ಇವರು ಜಾಸ್ತಿ ಓದಿದವರಲ್ಲ.ಚಿಕ್ಕವರಿರುವಾಗ ಅಲ್ಲಿ ಇಲ್ಲಿ ಪೌರಾಣಿಕ ನಾಟಕಗಳಿಗೆ ಹೋಗುತ್ತಿದ್ದರಂತೆ. ಚಿಕ್ಕಮಕ್ಕಳಿಗೆ ಯಾರೂ ಹಾರ್ಮೋನ್ ಮುಟ್ಟಲು ಬಿಡುತ್ತಿರಲಿಲ್ಲವಂತೆ. ತಲೆತಲಾಂತರದಿಂದ ಮನೆಯಲ್ಲಿ ಜಮ್ಖಾನ [ನೆಲಕ್ಕೆ ಹಾಸುವ ಬಟ್ಟೆ]/ಗುಡಾರ ಗಳನ್ನು ಬಾಡಿಗೆಗೆ ಕೊಡುತ್ತಿದ್ದರಂತೆ. ಎಲ್ಲೇ ಕಾರ್ಯಕ್ರಮವಿರಲಿ ಇವ್ರಮನೆ ಜಮ್ಖಾನ ಬಂದೇ ಬಿಡುತ್ತದೆ. ಅದಕ್ಕೆ ಬಣ್ಣ ಎಂಬುದೇ ಇಲ್ಲ, ಅಲ್ಲಲ್ಲಿ ಸಣ್ಣ ತೂತುಗಳು, ಚಾ,ಕಾಪಿ ಚೆಲ್ಲಿದ ಕಲೆಗಳು, ಸುಣ್ಣದ ಗೀಟು, ಒಂಥರ ಕಮಟು ವಾಸನಾಯುಕ್ತ ಜಮ್ಖಾನ. ರಾತ್ರಿ ಸರಿಹೊತ್ತಿನಲ್ಲಿ ಅದರಮೇಲೆ ಮಲಗಿದರೆ ಅದರ ಆತ್ಮಕಥೆಯನ್ನು ನಮ್ಮಜೊತೆ ಹೇಳಿಕೊಳ್ಳಬಹುದೇ ಎಂಬಷ್ಟು ಮುದುಕು. ಕೆರೆ-ತೊರೆಗಳಲ್ಲಿ ನಿರಲ್ಲಿ ನೆನೆಸಿದರೆ ಹಾಗೇ ಮರದ ಹಲಗೆಯ ಥರ ಗಟ್ಟಿಯಾಗಿ ಅಡ್ಡ ಮಲಗಬಹುದಾದ ತಾಕತ್ತು ಈ ಜಮ್ಖಾನಕ್ಕೆ! ಬಹುಶಃ ಹುಟ್ಟಿದಾರಭ್ಯ ನೀರನ್ನೇ ಕಂಡಿಲ್ಲ! ಇರಲಿ, ಅಂತೂ ಈ ಗುಡಾರಗಳನ್ನು ಬಾಡಿಗೆಗೆ ಕೊಡುವುದು ಅವರಮನೆಯ ವೃತ್ತಿ. ಏನೇ ಕಾರ್ಯಕ್ರಮದಲ್ಲಿ ಎಲ್ಲರೂ ಎದ್ದು ಹೋದರೂ ಕೊನೆಯವರೆಗೂ ಕುಳಿತು ಬಹಳ ಆಸಕ್ತಿ ಇದ್ದವರಂತೆ ನೋಡುವ ವ್ಯಕ್ತಿ ನಮ್ಮ ಹಾರ್ಮೊನ್ ಮಾಸ್ತರ್ : ಕಾರಣ ಅವರು ಆ ಜಮ್ಖಾನವನ್ನು ಮರಳಿ ಮನೆಗೆ ಹಾಕಿಸಿಕೊಂಡು ಹೋಗಬೇಕು!

ಹೀಗೇ ಅನೇಕ ನಾಟಕ ವಗೈರೆ ಕಾರ್ಯಕ್ರಮಗಳಲ್ಲಿ ಕೂತು ಕೂತು ಬೇಜಾರಾಗಿ, ಆ ಬೇಜಾರು ಕಳೆಯಲು ಕಂಡುಕೊಂಡ ದಾರಿ ಹಾರ್ಮೋನ್! ಅದನ್ನು ಹೇಗಾದರೂ ಮಾಡಿ ಕಲಿಯಬೇಕೆಂಬ ಹಠ. ಸರಿಗಮಪ...ಸರಿಗಮಪ....ಸ ರಿ..ಗ..ಮ..ಪ.. ಕೇಳಿಬಿಟ್ಟರೆ ಸಾಕು ಮೈಯೆಲ್ಲ ರೋಮಾಂಚನ! ಹೀಗೆ ಸಾಗಿ ಬಂದ ದಾರಿಯಲ್ಲಿ ಅಡ್ಡ ಸಿಕ್ಕವರು ಸೀತಾರಾಮ್ ಮೇಷ್ಟ್ರು, ಹಾರ್ಮೋನ್ ನಲ್ಲಿ ಘನವಿದ್ವತ್ತು ಎಂದೇ ಖ್ಯಾತಿಗೊಳಗಾದ ಸೀತಾರಾಮ್ ಮೇಷ್ಟ್ರಿಗೆ ಮಕ್ಕಳೆಂದರೆ ನಮ್ಮ ನೆಹರೂ ಕಂಡಿದ್ದಕ್ಕಿಂತ ಹೆಚ್ಚು ಪ್ರಾಣ, " ಪಾಪದವು, ಹಾರ್ಮೋನ್ ಅಂದ್ರೆ ಇಷ್ಟಪಟ್ಟು ನೋಡ್ತವೆ, ಬಾರಿಸಬೇಕು [ನುಡಿಸಬೇಕು ಎನ್ನುವುದಕ್ಕೆ ನಮ್ಮಲ್ಲಿಯ ಗ್ರಾಮ್ಯ ಭಾಷೆ] ಅಂತ ಬಹಳ ಆಸೆ ಅಲ್ವಾ ?" ಎನ್ನುತ್ತ ಎಲ್ಲರನ್ನೂ ಮುದ್ದಾಡೋದು ಅವರ ಪ್ರವೃತ್ತಿ.

ಹೀಗೇ ಒಂದಿನ "ಗುರೂಜಿ, ನಂಗೆ ಹಾರ್ಮೋನ್ ಹೇಳ್ಕೊಡ್ತ್ರ್ಯಾ?" -ತುಂಬಾ ಆಸಕ್ತಿಯಿಂದ ಕೇಳಿದ್ದು ನಮ್ಮ ರಂಗರಾವ್ ಹವಾಲ್ದಾರ್.

"ಆಯ್ತಪ್ಪ, ನೀನು ಭಾಳ ದಿವ್ಸದಿಂದ ಕೇಳೇ ಇದೀಯ, ಕಲಿಸ್ತೀನ್ ತಗೋ " ಎಂದು ಸ್ಯಾಂಕ್ಶನ್ ಮಾಡಿಬಿಟ್ಟರು.

ರಂಗರಾವ್ ಹವಾಲ್ದಾರ್ ಗೆ ಸ್ವರ್ಗಕ್ಕೆ ಮೂರೇ ಗೇಣು! ಹೀಗೆ ಅವರ ಹಾರ್ಮೋನ್ ವಾದನ ಶುರುವಾಯಿತು. ಅಲ್ಲಿಂದ ಹಿಡಿದವರು ಅದು ಇವರ ಕೈಬಿಟ್ಟರೂ ಇವರು ಮಾತ್ರ ಹಾರ್ಮೋನ್ ಬಿಟ್ಟವರಲ್ಲ.


" ಹೋಯ್ ಹಾರ್ಮೋನ್ ಮಾಸ್ತರೆ ಎತ್ಲಾಕಡಿಗೊಂಟ್ರಿ ?" ಗಂಪಣ್ಣ ದಾರೀಲಿ ಸಿಕ್ಕದ್ರು.

" ಇಲ್ಲೇ ಹೋಗ್ತೀನಿ ಇವತ್ತು ’ಮುಳ್ಳಿನಹಾಸಿಗೆ’ ನಾಟ್ಕಾ ಐತ್ರೀಯಪ್ಪ ಅದಕ್ಕ ತಯಾರೀಗ್ ಹೊಂಟೇನಿ. "

" ಹೌದಾ, ಭಾಳ ಚೆನ್ನಾಗಿದೆ, ನಿಮ್ ನಾಟ್ಕ ಅಂದ್ರೆ ಕೇಳ್ಬೇಕಾ ? " ಎನ್ನುತ್ತ ಗಂಪಣ್ಣ ದಿಕ್ಕು ಬದಲಾಯಿಸಿದರು.

ಸರಿಗಮಪ ಸರಿಗಮಪ ...ಗುನುಗುತ್ತ ನಮ್ಮ ಹಾರ್ಮೋನ್ ಮಾಸ್ತರ್ ಮುಂದೆ ಹೋದರು. ಹೀಗೇ ದಿನವೂ ಊರೂರು ಸುತ್ತೋರು.

ಹೀಗೆ ಒಂದಿನ ಮನೇಲಿ ಸಾಮಾನೆಲ್ಲ ಖಾಲಿಯಾಗಿತ್ತು. ದುಡ್ಡೂ ಇರ್ಲಿಲ್ಲ, ಎನ್ಮಾಡುದು, ಮಾಸ್ತರ್ ಅಲ್ವೇ ಎನೋ ಪ್ಲಾನ್ ಮಾಡಿದರು. ’ಯುರೆಕಾ ಯುರೆಕಾ’ ಎಂಬಷ್ಟು ಖುಷಿಯಾಯಿತು. ಊರಲ್ಲಿ ಇಟ್ಲ ಕಮ್ತಿ [ವಿಟ್ಠಲ್ ಕಾಮತ್] ಜ್ಯೊತಿಷ್ಯ ಹೇಳುತ್ತಿದ್ದರು,ಅವರದ್ದೇ ಕಿರಾಣಿ ಅಂಗಡಿಯೂ ಇತ್ತು. ಸರಿ ನಮ್ಮ ಮಾಸ್ತರ್ ಅಲ್ಲಿಗೆ ಹಾಜರ್! ಮೊದ್ಲು ಜ್ಯೋತಿಷ್ಯ ಕೇಳ್ದ್ರು.

" ಕಾಮತ್ರೆ ನಾನು ಈಸಲ ಸಾಲಮಾಡ್ಕೊಂಡ್ರ ನನ್ಹತ್ರ ವಾಪಸ್ ಕೊಡಾಕ ಆಗತೈತೇನ್ರಿ?"

ವಿಟ್ಠಲ್ ಕಾಮತ್ ಭವಿಷ್ಯ ನುಡಿದರು " ಕೊಡ್ತೀರಿ, ಯಾಕಾಗೂದಿಲ್ಲ? " ಸ್ವಲ್ಪ ಹೊತ್ತು ಅದೂ ಇದೂ ಕೇಳಿದಮೇಲೆ ಈ ಕಡೆ ಅವರ ಕಿರಾಣಿ ಅಂಗಡಿಗೆ ಬಂದ್ರು. ವಿಟ್ಠಲ್ ಕಾಮತ್ರ ಮಗ ಸಾಮಾನು ಕೊಡ್ತಾ ಇದ್ದ.

" ನೋಡಪಾ ನಂಗೆ ೨೫ಕೆಜಿ ಅಕ್ಕಿ ಮತ್ತ ........" ಅಂತೆಲ್ಲ ತೂಕಮಾಡಿ ಚೀಲಕ್ಕೆ ತುಂಬಿಸಿಕೊಂಡರು. ಕಾಮತ್ರ ಮಗ ದುಡ್ಡು ಕೇಳಿದಾಗ " ಸ್ವಲ್ಪ ನಿಲ್ಲಲೇಯಪ್ಪ, ಸ್ವಲ್ಪ ದಿನ ಬಿಟ್ಟಿ ಕೊಡ್ತೇನು, ನಿಮ್ ತಂದಿ ಈಗಷ್ಟೆ ಹೇಳ್ಯಾರ ನನಗ, ಯಾರ್ ಕೂಡೆ ನಾನ್ ಸಾಲಾ ಮಾಡ್ಲಿ ನನಗ ವಾಪಸ್ ಕೊಡಾಕ್ ಬರ್ತೈತಿ ಅಂದಾರ, ಬೇಕಾದ್ರ ಕೇಳ್ಕೊಂಬಾ, ಅಲ್ಲಿ ಮಟ ನಾನಿಲ್ಲೇ ಇರ್ತೇನು"

ಕಾಮತ್ರ ಮಗ ತಂದೆಗೆ ಚೀಟಿ ಕಳಿಸಿ ಕೇಳಿದ, ಅವರು ಅಡಿದ ಭವಿಷ್ಯದ ಮಾತನ್ನು ಉಳಿಸಿಕೊಳ್ಳಲು "ಕೊಡು" ಎಂದು ಬರೆದಿದ್ದರು ! ಮಾಸ್ತರ್ ಯೋಗ ಖುಲಾಯಿಸ್ತು,ಬದುಕಿಕೊಂಡರು. ಇಲ್ಲಾಂದ್ರೆ ಮಾಸ್ತರ್ ಹತ್ರ ದುಡ್ಡು ಕಾಸು ಇರಲ್ಲ. ಪುಡಿಗಾಸು ಇದ್ದ್ರೆ ಅದು ಬೀಡಿ-ತಿರುಗಾಟ ಅಂತ ಖರ್ಚು. ಜನಾನೂ ಅವರ ಹತ್ತಿರ ಅದೂ ಇದೂ ಕೆಲ್ಸ ತಗೋತಿದ್ರೆ ವಿನಃ ಜಾಸ್ತಿ ದುಡ್ಡು ಕೊಡೋರಲ್ಲ!

ಹೀಗೊಂದು ದಿನ ತಾಲೀಮು ನಡೆಯುತ್ತಿತ್ತು.

ಪಾಹಿ ಶಾಂತ ಭುವನೇಶ್ವರ ಸುಮನೋಹರ ಭುವನ ಸಾರ ................
ಇದು ಅನೇಕರಿಗೆ ಗೊತ್ತಿರುವ ರಂಗದ ಮೊದಲನೆಯ ಗೀತೆ.
ಅಂಕದ ಪರದೆ ಎತ್ತುವ ಮುನ್ನ, ವೇದಿಕೆಗೊಂದು ಪೂಜೆ ಮಾಡಿ ಈ ಹಾಡನ್ನು ಹಾಡುವುದು ವಾಡಿಕೆ. ಮಾಸ್ತರು ಹಾಡುತ್ತಾ ಹಾಡುತ್ತಾ ತಾಲೀಮು ಪ್ರಾರಂಭಿಸಿದ್ದರು. ಯಾರೋ ಕೂಗುತ್ತ ಬಂದ್ರು " ಮೇಷ್ಟ್ರೆ ನಿಮ್ಮ ಮಗಳು ಕಾಣ್ತಾ ಇಲ್ವಂತೆ, ಎಲ್ಲೋ ಹೋಗ್ಬುಟ್ಟಿದಾಳೆ"

ಮಾಸ್ತರಿಗೆ ಚಿಂತೆ ಶುರುವಾಯ್ತು. ಮಗಳು ಎಲ್ಲಿಗೆ ಹೋಗಿರಬಹುದು ? ಹುಡುಕುವ ಕೆಲ್ಸದಲ್ಲಿ ತಾಲೀಮನ್ನು ನಿಲ್ಲಿಸಿ ಹೊರಟರು.ತನ್ನ ಕೆಲಸದಲ್ಲಿ ಜಗತ್ತನ್ನೇ ಮರೆಯುತ್ತಿದ್ದ ಮಾಸ್ತರಿಗೆ ಮಗಳ ಬೇಕು-ಬೇಡಗಳ ಪರಿವೆಯೇ ಇರಲಿಲ್ಲ. ಈಗಿನ ಕಾಲದ ಮಕ್ಕಳು ನೋಡಿ ಅವರಿಗೆ ಎಲ್ಲರ ಮನೆಯ ಹಾಗೇ ತಾವೂ ಶಿಸ್ತಾಗಿ ಇರಬೇಕು, ಓದಬೇಕು, ಸಿನಿಮಾ ನೋಡಬೇಕು ಎಂಬೆಲ್ಲ ಬಯಕೆ. ಆದರೆ ಮನೆಯ ಪರಿಸ್ಥಿತಿಯಲ್ಲಿ ಆಗಬೇಕಲ್ಲ. ಕಷ್ಟದಲ್ಲೇ ವ್ಯಾಸಂಗ ಮಾಡುತ್ತ ಮಾಡುತ್ತ ಈಗ ಕಾಲೇಜು ಓದುತ್ತಿದ್ದಳು. ಕಾಲೇಜಿನಲ್ಲಿ ದೂರದ ಊರಿಗೆ ಪ್ರವಾಸವನ್ನು ಗೊತ್ತುಪಡಿಸಿದ್ದರು. ಎಲ್ಲ ಸಹಪಾಠಿಗಳೂ ಹೋಗುವವರಿದ್ದರು. ತನಗೆ ಹೋಗಲಾಗುತ್ತಿಲ್ಲ ಎಂಬುದೇ ಅವಳ ಕೊರಗಾಗಿತ್ತು. ಕೊರಗಿನಲ್ಲಿ ಅವಳು ಮನೆಬಿಟ್ಟು ಹೊರಟುಹೋಗಿದ್ದಳು.

ಮಾಸ್ತರು ಹುಡುಕಿಯೇ ಹುಡುಕಿದರು, ಉಚ್ಚಂಗಿ ದೇವರಿಗೆ ಹರಕೆ ಹೊತ್ತರು, ಇನ್ನೇನೇನೋ ಮಾಡಿದರು. ಆದರೆ ಹುಡುಗಿ ಸಿಗಲೇ ಇಲ್ಲ. ದಿನಗಳು ಉರುಳಿ ನಾಟಕದ ದಿನ ಹತ್ತಿರ ಬಂದುಬಿಟ್ಟಿತು. ಮಾಸ್ತರು ತನ್ನ ಕಷ್ಟಗಳನ್ನು ಯಾರಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ, ಜನರು ಅದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನಾಟಕ ಶುರುವಾಯಿತು.

" ಹಾರಿಹೋದೆಯ ಗಿಣಿಯೆ ನೀನು ಪಂಜರದಿಂದ
ಆರು ಕರೆದರು ನಿನ್ನ ದೂರದೆಡೆಗೆ ........"

ಪ್ರತೀ ಹಾಡಿಗೆ ಚಪ್ಪಾಳೆಗಳ ಸುರಿಮಳೆ, ಅದ್ಭುತ ಹಾರ್ಮೋನ್ ವಾದನ, ನಿಜವಾಗಿಯೂ ಅದು ಹಾಗಿತ್ತು. ತನ್ನ ವ್ಯಕ್ತಿಗತ ದುಃಖದ ಗಾಢಛಾಯೆ ಆ ದುಃಖಭರಿತ ಸನ್ನಿವೇಶಗಳ ನಾಟಕಕ್ಕೆ ಪೂರಕವಾಗಿ ನಾಟಕ ಎಲ್ಲಿಲ್ಲದ ಅದ್ಬುತ ಯಶಸ್ಸನ್ನು ಕಂಡಿತು. ’ವಾಹ್ ವಾಹ್ ವಾಹ್ ವಾಹ್ ’ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈಕಡೆ ಮಾಸ್ತರು ಬಹಳವಾಗಿ ಒಳಗೊಳಗೇ ನೋಯುತ್ತಿದ್ದರು, ಬೇಯುತ್ತಿದ್ದರು.

ಮಗಳಿಲ್ಲದಿದ್ದರೂ ವೃತ್ತಿಯನ್ನು ಬಿಡುವಹಾಗಿಲ್ಲ, ಊಟಕ್ಕೆ ಅಂತ ಬೇಕಲ್ಲ ! ನಾಟಕ ನೂರಾರು-ಸಾವಿರಾರು ಪ್ರದರ್ಶನ ಕಂಡಿತು. ಮಾಸ್ತರ್ ಘನತೆ ಹೆಚ್ಚುತ್ತಲೇ ಇತ್ತು. ಒಳಗೆ ಮಾಸ್ತರ್ ಒಣಗಿ ಹೋಗುತ್ತಿದ್ದರು, ಬಾಡಿ ಬಸವಳಿದಿದ್ದರು, ಮಗಳಿಲ್ಲದೇ ಅರೆಹುಚ್ಚರಾಗುವಂತ ಸ್ಥಿತಿ! ಇಷ್ಟಿದ್ದರೂ ಸರಕಾರ ಅವರಕಡೆ ಗಮನ ಹರಿಸಿರಲಿಲ್ಲ. ಅವರಿಗೆ ಪ್ರಶಸ್ತಿಗಳನ್ನು ಕೊಡಲಿಲ್ಲ, ಸಹಾಯಧನ-ಮಾಶಾಸನ ಯಾವುದೂ ಸಿಗಲಿಲ್ಲ. ಮಾಸ್ತರು ಮಗಳ ನೆನಪಿನಲ್ಲೇ ಕಾಲಹಾಕುತ್ತಿದ್ದರು.

ಹೀಗೇ ದಿನ ಕಳೆಯುತ್ತ ಒಂದುದಿನ ಬಹಳ ಅದ್ಬುತ ನಾಟಕ, ಹೊಸ ಪ್ರಯೋಗ, ಎಂದಿನಂತೇ ಸರಿಗಮಪ.. ಸರಿಗಮಪ...
ತನ್ಮಧ್ಯೆ ಊರವರಿಂದ ಅಂತೂ ಮಾಸ್ತರಿಗೆ ಒಂದು ಸನ್ಮಾನವಾಯಿತು. ನಾಟಕ ಮುಗಿಯಿತು. ಸಹಜವಾಗಿ ಎಲ್ಲರೂ ಮನೆಗೆ ಹೋದಂತೆ ಮಾಸ್ತರೂ ಮನೆಗೆ ಹೋದರು. ಮನೆಯ ಮುಂದೆ ತುಂಬಾಜನ ಜಮಾಯಿಸಿದ್ದರು ! ಯಾಕಿರಬಹುದು ? ಗೊತ್ತಾಗಲಿಲ್ಲ.

ಹತ್ತಿರ ಹೋದರು. ಅಲ್ಯಾರೋ ಪೋಲೀಸರ ಥರ ಕಾಣುತ್ತಿದ್ದರು. ವಿಚಾರಿಸಲಾಗಿ ಮಾಸ್ತರಮಗಳು ಅಹಲ್ಯಾಬಾಯಿ ನಕ್ಸಲೈಟ್ ಗುಂಪಿಗೆ ಸೇರಿದ್ದಳೆಂದೂ, ಪೋಲೀಸರ್ ಗುಂಡಿನ ಚಕಮಕಿಗೆ ಪ್ರಾಣತೆತ್ತಳೆಂದೂ ಎಲ್ಲರೂ ಹೇಳತೊಡಗಿದ್ದರು. ಮಾಸ್ತರು ನೋಡಿದಾಕ್ಷಣ ಕುಸಿದು ಬಿದ್ದರು. ಅವರ ಹೆಂಡತಿಗೆ ಮೊದಲೇ ಎಚ್ಚರತಪ್ಪಿ ಹೋಗಿತ್ತು. ಎಲ್ಲರೂ ಕಾಯುತ್ತಿದ್ದರು. ಮಾಸ್ತರು ಮರಳಿ ಈ ಲೋಕಕ್ಕೆ ಬರಲೇಇಲ್ಲ . ಸಂಗೀತದ ಹಾಡುಹಕ್ಕಿ ಪಂಜರ ತೊರೆದು ಸರಿಗಮಪ.. ಸರಿಗಮಪ... ಎನ್ನುತ್ತ ಹಾರಿಹೋಗಿತ್ತು.

" ಹಾರಿಹೋದೆಯ ಗಿಣಿಯೆ ನೀನು ಪಂಜರದಿಂದ
ಆರು ಕರೆದರು ನಿನ್ನ ದೂರದೆಡೆಗೆ ........"

Tuesday, February 2, 2010

ಅಂತರಂಗದ ಬಯಕೆ

ಕನ್ನಡದ ಮಲ್ಲಿಗೆ ಕವಿ,ಪ್ರೇಮಕವಿ ದಿ|| ಶ್ರೀ ಕೆ.ಎಸ್. ನರಸಿಂಹಸ್ವಾಮಿಯವರ ನೆನಪಿನಲ್ಲಿ, ಅವರ ಜಾಡು ಹಿಡಿದು ಬರೆದ ನನ್ನ ಕವನ. ಇಲ್ಲಿ ಮನೆಯಲ್ಲಿ ಈ ಅಂತರಂಗ ಗಂಡ-ಹೆಂಡಿರ ನಡುವಿನದು. ಹೆಂಡತಿಯ ಅನಾರೋಗ್ಯದಿಂದ ಬಸವಳಿದ ಗಂಡ ಮದುವೆಯಾದ ಹೊಸದರಲ್ಲಿನ ತನ್ನಕೆಲವು ನೆನಪುಗಳನ್ನು ಕೆದಕುತ್ತಾನೆ. ಆ ಪ್ರೀತಿಯಲ್ಲಿ ಹರಿಯುವ ನೀರಿನ ಸೆಳವು ಇದೆ, ಹೊಳೆವ ಮಿಂಚಿನ ಚಳುಕು ಇದೆ. ಆ ಪ್ರೀತಿ ಒಂದು ಅಮೃತತ್ವದ ಸಂಕೇತ. ಊರಲ್ಲಿ ಜಾತ್ರೆ- ಹರಿದಿನ ಏನೇ ಇದ್ದರೂ, ತನ್ನ ಮನದನ್ನೆ ಅನಾರೋಗ್ಯದಿಂದಿದ್ದು ಮಲಗಿದಲ್ಲಿಂದ ಏಳಲಾಗದ ಸ್ಥಿತಿಯಲ್ಲಿದ್ದರೂ ಗಂಡನನ್ನು ಜಾತ್ರೆಗೆ ಹೋಗಿಬರುವಂತೆ ಕೇಳಿಕೊಂಡಾಗ ಆತ ಹೋಗಲಾರ! ತನ್ನ ಪ್ರೀತಿಯ ಮಡದಿ ವರುಷಗಳ ಕಾಲ ಹೀಗೆ ಮಲಗಿರುವಾಗ ಸರಿಯಾದ ಯಾವ ಗಂಡನಿಗೆ ಹಬ್ಬ-ಜಾತ್ರೆಯ ಆಚರಣೆಗೆ ಹೋಗಲು ಮನಸು ಬಂದೀತು ? 'ನಿನ್ನ ಬಿಟ್ಟು ಇರಲು ತನ್ನಿಂದ ಸಾಧ್ಯವೇ ಇಲ್ಲ ' ಎಂಬ Dedication. ಅಲ್ಲಿನ ನೋವಲ್ಲೂ-ನೋವಿನ ನಲಿವಲ್ಲೂ ಅನ್ಯೋನ್ಯ ದಾಂಪತ್ಯದ ಕ್ಷಣದ ಹಂದರವನ್ನು ತಮಗೆ ತೋರಿಸಲು ಕೊಂಚ ಪ್ರಯತ್ನಿಸಿದ್ದೇನೆ.



ಅಂತರಂಗದ ಬಯಕೆ

ಹೇಳಿಬಿಡಲೇ ನಿನಗೆ ಅಂತರಂಗದ ಬಯಕೆ ?
ತಾಳದಿರು ಬಿಗುಮಾನ ಮತ್ತೆ ಮೌನ
ನಾಳಿನಾ ದಿನಗಳಲಿ ನಾನೂರು ಕನಸಿನಲಿ
ಬಾಳ ದೀವಿಗೆಯಾಗಿ ನಡೆಸು ಯಾನ

ಮೂರು ದಿನದಾ ಬದುಕು ದಾರಿ ಸುಲಭವಿದಲ್ಲ
ಭಾರ ತಪ್ಪಿಸಲೆಳಸಿ ಸಾರಿ ಬಂದೆ
ವಾರದಾ ದಿನಗಳಲಿ ತಿಂದೆ ನೋವನು ಬಳಲಿ
ಯಾರ ಸಂಘವು ನನಗೆ ಇಷ್ಟವಿಲ್ಲ

ಮೊನ್ನೆ ಕಾನೂರಿನಲಿ ಸಣ್ಣ ದೇವರ ಜಾತ್ರೆ
ಮುನ್ನವೇ ತಾವ್ ನಡೆದು ಹೋದರೆಲ್ಲ!
ಕನ್ನ ಹಾಕಿದ ಹುಡುಗಿ ನೀನಿಲ್ಲಿ ಮಲಗಿರಲು
ಅನ್ನ-ನೀರನು ಕೊಡಲು ಅನ್ಯರುಂಟೇ ?

ಯಾರ ಪಾಪದ ದೃಷ್ಟಿ ಹಾರಿ ತಾಗಿತು ನಿನಗೆ ?
ಊರು ಸುತ್ತುವ ಗಳಿಗೆ ಹಾದಿಯಲ್ಲಿ
ಘೋರದುರಿತವನರಿತು ವೈದ್ಯರೆಡೆಯಲಿ ಹೋದೆ
ಬೇರುನಾರಿನ ಪಥ್ಯ ಕೊಟ್ಟರಿಲ್ಲಿ

ಅರಸುತಿಹ ಮೊಗ್ಗೊಂದು ಕೈಗೆ ಸಿಕ್ಕಿರುವಾಗ
ಅರಸನಂದದಿ ಸುಖವ ಕಂಡೆ ನಾನು
ಬಿರುಸಾದ ಈ ಗಾಳಿ ನುಸುಳಿರಲು ಮಧ್ಯದಲಿ
ಹರುಷವೆನಗುಂಟೆಲ್ಲಿ ಹಳೆಯನೆನಪು

ಹಾಡು-ಹಸೆಯಿಲ್ಲದಲೆ ಬಾಡಿಹೋಗಿದೆ ಬದುಕು
ಗಾಢ ಗಡುತರ ದಿನವು ಕ್ಷಣವು ಕ್ಷಣವು
ಆಡಿಕೊಂಬರು ನೂರು ಆತು ಬರುವರು ಯಾರು?
ಗಾಡಿಕಾರನೆ ಬಂದು ಸಲಹ ಬೇಕು !

ನಿನ್ನ ಬಿಟ್ಟರೆಘಳಿಗೆ ಬದುಕು ಸಾಧ್ಯವೆ ನನಗೆ?
ನನ್ನ ಮನವನು ಬಲ್ಲ ನೀನು ತಿಳಿಸು
ಚಿನ್ನಕಿಂತಲು ಭಾರ ನಿನ್ನ ಪ್ರೀತಿಯ ಹರವು
ಇನ್ನು ಹೇಳಲು ಅದಕೆ ಸಾಟಿಯುಂಟೇ ?

Monday, February 1, 2010

ಬ್ರಿಟಿಷ್ ಸರಕಾರದಿಂದ ತಸ್ತೀಕನ್ನು ಪಡೆದ ಭೂಪ ಈ ಗಣಪ !








ಬ್ರಿಟಿಷ್ ಸರಕಾರದಿಂದ ತಸ್ತೀಕನ್ನು ಪಡೆದ ಭೂಪ ಈ ಗಣಪ !


ಇಡಗುಂಜಿ ಶ್ರೀ ಮಹಾಗಣಪತಿಯ ಬಗೆಗೆ ಹೇಳಹೊರಟಿದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ, ಶ್ರೀಮತ್ ಶರಾವತೀ ನದೀ ತಟದಲ್ಲಿ , ಹೊನ್ನಾವರದಿಂದ ಸುಮಾರು ೧೪ ಕಿಲೋಮೀಟರ್ ದೂರದಲ್ಲಿ, ಆಗ್ನೇಯ ದಿಕ್ಕಿನಲ್ಲಿ ನೆಲೆನಿಂತ ಒಂದು ಜಾಗ ಶ್ರೀಕ್ಷೆತ್ರ ಇಡಗುಂಜಿ. ಇಲ್ಲಿಯ ಗಣಪತಿ ದೇವರು ತನ್ನ ಪ್ರಖರ ಪ್ರಭಾವದಿಂದ ಜಗತ್ಪ್ರಸಿದ್ಧನಾಗಿದ್ದಾನೆ.

ಹಿನ್ನೆಲೆ
: ಸುಮಾರು ೧೫೦೦ ವರ್ಷಗಳ ಇತಿಹಾಸ ಹೊಂದಿರುವ[ಇದಕ್ಕೂ ಪೂರ್ವದ ದಾಖಲೆಗಳು ಸಿಗುತ್ತಿಲ್ಲ, ಇದು ಇನ್ನೂ ಪುರಾತನವೆಂಬುದು ನಿಸ್ಸಂಶಯ]ಇಡಗುಂಜಿ ದೇವಸ್ಥಾನ ಅನೇಕ ಅರಸುಮಕ್ಕಳಿಗೆ ಶ್ರದ್ಧೆಯ ಆರಾಧನಾ ಕೇದ್ರವಾಗಿತ್ತು ಎಂದು ಇತಿಹಾಸದಲ್ಲಿ ಕಂಡು ಬರುತ್ತದೆ. ಹುಬ್ಬಾಸಿ ಎಂಬ ರಕ್ಕಸನ ಉಪಟಳ ಜಾಸ್ತಿಯಾಗಿ ಕರಾವಳಿಯಲ್ಲಿ ಜನರೆಲ್ಲ ನೊಂದಿರುವ ಕಾಲದಲ್ಲಿ ರಾಜಮನೆತನದವರು ಅವನನ್ನು ನಿಗ್ರಹಿಸಿದರೆಂದೂ,  ಸರಿಯಾದ ಪೂಜೆ ಪುನಸ್ಕಾರಕ್ಕಾಗಿ ಬನವಾಸಿಯ ಕದಂಬರು ಉತ್ತರದ ಅಹಿಕ್ಷೇತ್ರದಿಂದ ಆಚಾರವಂತ ಬ್ರಾಹ್ಮಣರನ್ನು ಕರೆತಂದು ಆಶ್ರಯವಿತ್ತು, ಮುಂದೆ ತಮ್ಮ ರಾಜ್ಯಭಾರ ಚೆನ್ನಾಗಿ ನಡೆಯಲೆಂದು ಪ್ರಾರ್ಥಿಸಿದರೆಂದು ತಿಳಿದುಬರುತ್ತದೆ. ಕೆಳದಿಯ ರಾಜ ಶಿವಪ್ಪನಾಯಕನಿಂದ ಕಟ್ಟಡದ ಜೀರ್ಣೋದ್ಧಾರ ನಡೆಸಲ್ಪಟ್ಟ ದಾಖಲೆಗಳಿವೆ.

ಕ್ಷೇತ್ರ ಪುರಾಣ
: ದ್ವಾಪರ ಯುಗದಲ್ಲಿ ವಾಲಖಿಲ್ಯ ಎಂಬ ಮಹರ್ಷಿ ಅನೇಕವರ್ಷಗಳಕಾಲ ಈ ಶರಾವತೀ ತೀರದಲ್ಲಿರುವ ಕುಂಜಾವನದಲ್ಲಿ [ಗುಂಜಾರಣ್ಯದಲ್ಲಿ] ಅಘೋರ ತಪಸ್ಸನ್ನು ಆಚರಿಸುತ್ತ ಅದಕ್ಕೆ ತಕ್ಕುದಾದ ಫಲಶ್ರುತಿ ಕಾಣದೇ ಇರುವಾಗ ದೇವರ್ಷಿ ನಾರದರು ಅಲ್ಲಿಗೆ ಬರುತ್ತಾರೆ. ಬಂದ ನಾರದರಿಗೆ ತನ್ನ ಸಂಕಷ್ಟವನ್ನು ನಿವೇದಿಸಿದ ವಾಲಿಖಿಲ್ಯರಿಗೆ ಈ ಸ್ಥಳದ ಹಾಗೂ ಮನುಕುಲದ ಹಿತ ದೃಷ್ಟಿಯಿಂದ ಇಲ್ಲಿ ಪೂರ್ಣಕಳೆಯ ಗಣೇಶನನ್ನು ಸ್ಥಾಪಿಸಿ ಪೂಜಿಸಲು ಸಲಹೆನೀಡುತ್ತಾರೆ. ಪೂರ್ಣಕಳೆಯ ಗಣೇಶ ಆಗಬೇಕೆಂದರೆ ಸ್ವತಃ ಗಣೇಶ ಭೂಮಿಗೆ ಬರಬೇಕು, ಇದಕ್ಕೆ ಉಪಾಯವೇನೆಂದು ಕೇಳಲಾಗಿ ನಾರದರು ತಾನು ಗಣೇಶನನ್ನು ಕರೆತರುವುದಾಗಿ ಕೈಲಾಸಕ್ಕೆ ತೆರಳುತ್ತಾರೆ. ಕೈಲಾಸಕ್ಕೆ ನಾರದರು ತೆರಳಿದ ವೇಳೆ ಅಪ್ಪ-ಅಮ್ಮನ ಮಧ್ಯೆ ಸಿಹಿತಿಂಡಿಗಾಗಿ ಹಠಹಿಡಿದ ಬಾಲಗಣಪ ಕಾಣಸಿಗುತ್ತಾನೆ.[ಗಣಪತಿ ಮೂಲರೂಪದಿಂದ ಪರಬ್ರಹ್ಮಸ್ವರೂಪವಾಗಿದ್ದರೂ ಬಹು ಪ್ರಚಲಿತವಿರುವ ಗಣಪತಿಯ ಅವತಾರಗಳಲ್ಲಿ ಪಾರ್ವತೀಸುತ ಕೂಡ ಒಂದು ಅವತಾರ!] ಹೀಗೆ ಕಂಡ ಗಣಪನನ್ನು ಮೂಲರೂಪದಿಂದ ಪ್ರಾರ್ಥಿಸಲು ತನಗೆ ದಿನಂಪ್ರತಿ ಎಡಬಿಡದೆ ಸಿಹಿತಿಂಡಿ-ಮೋದಕ-ಪಂಚಕಜ್ಜಾಯ ಇವನ್ನೆಲ್ಲ ಕೊಡುವ ಹಾಗಿದ್ದರೆ ಭೂಮಿಗೆ ನಾರದರ ಜೊತೆ ಬರುವುದಾಗಿ ಭರವಸೆ ಕೊಡುತ್ತಾನೆ. ಅದನ್ನೇ ನಿರೀಕ್ಷಿಸುತ್ತಿದ್ದ ನಾರದರು "ತಥಾಸ್ತು" ಎಂದುಬಿಡುತ್ತಾರೆ,ಗಣಪನನ್ನು ಭೂಮಿಗೆ ಕರೆತರುತ್ತಾರೆ. ಭುವಿಗೆ ಬಂದ ವಿಘ್ನೇಶ್ವರ ವಾಲಖಿಲ್ಯರ ವಿಘ್ನಗಳನ್ನೆಲ್ಲ ತೊಡೆದು ಹಾಕಿ ಹೊರಡಲು ಕಾತುರನಾಗಿದ್ದ ವೇಳೆ, ಮುನಿಯ ಸತತಕೋರಿಕೆಯ ಮೇರೆಗೆ ದೇವಾನುದೇವತೆಗಳೆಲ್ಲ ಸೇರಿ ಗಣಪತಿಯನ್ನು ಅಲ್ಲೇ ಶಾಶ್ವತವಾಗಿ ಅಂಶರೂಪದಿಂದ ಉಳಿಯುವಂತೆ ಪ್ರಾರ್ಥಿಸುತ್ತಾರೆ. ಅನೇಕಸಲ ಒಲ್ಲೆ ಎಂದ ಗಣೇಶ ಅಂತೂ ಸಮ್ಮತಿಸುತ್ತಾನೆ. ದೇವಶಿಲ್ಪಿ ವಿಶ್ವಕರ್ಮ ಅತೀ ಅಪರೂಪದ ವಿಗ್ರಹವೊಂದನ್ನು ಕಡೆದುಕೊಡುತ್ತಾನೆ, ಸ್ವತಃ ನಾರದರು ಅಭೂತಪೂರ್ವವಾದ ಒಂದು ಮುಹೂರ್ತ ಹುಡುಕಿ ಆ ಗಣಪನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪ್ರಥಮ ಪೂಜೆ ನಡೆಸುತ್ತಾರೆ. ಗಂಧರ್ವ-ಯಕ್ಷ, ಕಿನ್ನರ-ಕಿಂಪುರುಷರು ನಾ ನಾ ವಾದ್ಯಗಳೊಂದಿಗೆ ಗಾಯನ,ನರ್ತನಾದಿಗಳಿಂದ ಗಣೇಶನನ್ನು ಸಂಪ್ರೀತಗೊಳಿಸುತ್ತಾರೆ. ದೇವಗಣ ಜಯಜಯಕಾರವನ್ನು ಮೊಳಗಿಸುತ್ತದೆ. ಹೀಗೆ ಬ್ರಹ್ಮ-ವಿಷ್ಣು-ಮಹೇಶ್ವರಾದಿ ಸಕಲರೂ ಅಷ್ಟದಿಕ್ಪಾಲಕರೂ,ಅಷ್ಟಮಾತೃಕೆಗಳೂ ಬಂದು ಆ ಸಮಾರಂಭವನ್ನು ಬಹಳ ವಿಜೃಂಬಣೆಯಿಂದ ಆಚರಿಸುತ್ತಾರೆ. ಆನಂದತುಂದಿಲನಾದ ಗಜಾನನ ಪ್ರಸನ್ನನಾಗಿ, ಭುವಿಯ ಭಕ್ತರನ್ನೆಲ್ಲ ಅವರ ಇಷ್ಟಾರ್ಥನೆರವೇರಿಸುತ್ತ ಬಹಳ ಪ್ರಸಿದ್ಧನಾಗುತ್ತಾನೆ. ಇಂದಿಗೂ ಬೆಳಗಿನಜಾವ ಬ್ರಾಹ್ಮಿ ಮುಹೂರ್ತದಲ್ಲಿ ನಾರದರು ಮೊದಲ ಪೂಜೆಯನ್ನು ನಡೆಸುತ್ತಾರೆಂಬ ಪ್ರತೀತಿ ಜನಜನಿತವಾಗಿದೆ.


ಇತಿಹಾಸದಲ್ಲಿ : ಗಣೇಶ ಮಾತೋಬಾರ ಶ್ರೀ ಸಿದ್ಧಿವಿನಾಯಕನಾದ ಬಗೆ
ಇಂತಹ ಗಣಪತಿಗೆ ದಿನಾಲೂ ಕೊಪ್ಪರಿಗೆಯಲ್ಲಿ ಬೆಲ್ಲದಿಂದ ತಯಾರಿಸಿದ ’ಪಂಚಕಜ್ಜಾಯ’ವೆಂಬ ತಿನಿಸನ್ನು ನಿವೇದಿಸಲಾಗುತ್ತದೆ. ದಿನವೂ ಹತ್ತಾರು ಕ್ವಿಂಟಾಲ್ ’ಪಂಚಕಜ್ಜಾಯ’ ಮಾಡಿ ನಿವೇದಿಸುತ್ತಾರೆ. ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷ್ ಮಾಮಲೇದಾರನೊಬ್ಬ ಇಡಗುಂಜಿಗೆ ಬೇಟಿ ಕೊಡುತ್ತಾನೆ. ಅಲ್ಲಿನ ನೈವೆದ್ಯಕ್ಕೆ ಅಷ್ಟೆಲ್ಲ ಪದಾರ್ಥಗಳನ್ನು ಬಳಸುವುದನ್ನು ಕಂಡು " ವ್ಹಾಟ್ ಏ ವೇಸ್ಟ್ " ಅನ್ನುತ್ತಾನೆ. ಆಗ ಅಲ್ಲಿನ ಅರ್ಚಕರು ಗಣಪತಿಗೆ ಅಷ್ಟು ದಿನಾಲೂ ಬೇಕೆಂದೂ ಅದನ್ನು ಗಣೇಶ ತಿನ್ನುತ್ತಾನೆಂತಲೂ ತಿಳಿಸುತ್ತಾರೆ. ಬ್ರಿಟಿಷ್ ಮಾಮಲೇದಾರನಿಗೆ ಗಣಪತಿಯನ್ನು ಟೆಸ್ಟ್ ಮಾಡುವ ಹುಚ್ಚು ಹುಟ್ಟುತ್ತದೆ, ಅವನು ಅರ್ಚಕರಿಗೆ ಗಣಪತಿ ಕೊಪ್ಪರಿಗೆಯಷ್ಟು ಪಂಚಕಜ್ಜಾಯವನ್ನು ತಿನ್ನುವುದನ್ನು ತೋರಿಸೆಂದೂ ಒಂದೊಮ್ಮೆ ಅದು ಸುಳ್ಳಾದರೆ ಅರ್ಚಕರನ್ನು ಕಾರಾಗ್ರಹಕ್ಕೆ ಕಳುಹಿಸುವುದಾಗಿಯೂ ತಾಕೀತು ಮಾಡುತ್ತಾನೆ. ತಯಾರಿ ನಡೆಯುತ್ತದೆ. ಬ್ರಿಟಿಷ್ ಮಾಮಲೇದಾರ ಬೆಳ್ಳಿಯ ಹಗ್ಗವೊಂದನ್ನು ಮಾಡಿಸಿ ತರುತ್ತಾನೆ. ಅದನ್ನು ಗಣಪತಿಯ ಹೊಟ್ಟೆಗೆ ಕಟ್ಟಿ ಕುಣಿಕೆಯಿಂದ ಬಿಗಿಯಲಾಗುತ್ತದೆ. ಮಹಾಪೂಜೆ ಆದ ಮೇಲೆ ಎಲ್ಲರ ಎದುರು ಕೊಪ್ಪರಿಗೆಯನ್ನು ಗರ್ಭಗುಡಿಯ ಒಳಭಾಗದಲ್ಲಿ ದೇವರ ಎದುರು ಇಟ್ಟು ಬಾಗಿಲನ್ನು ಹಾಕಲಾಗುತ್ತದೆ. [ಒಂದೇ ಬಾಗಿಲು ಬಿಟ್ಟು ಬೇರೆ ಯಾವ ಬಾಗಿಲೂ ಇರುವುದಿಲ್ಲ ಎಂಬುದು ನೆನಪಿರಲಿ] ಅರ್ಚಕರಿಗೆ ಅಯೋಮಯ. ಹೊರಗಡೆ ಎಲ್ಲರ ಜೊತೆ ಕುಳಿತುಕೊಂಡು ಮನಸ್ಸಿನಲ್ಲಿ ಸದಾ ಪೂಜಿಸುವ ಗಣೇಶನನ್ನು ವಿಧ ವಿಧವಾಗಿ ಪ್ರಾರ್ಥಿಸುತ್ತಾರೆ. ಯತಾವತ್ ಕೊಟ್ಟ ಸಮಯ ಮೀರುತ್ತದೆ, ಬಾಗಿಲು ತೆರೆಯುತ್ತಾರೆ! ಏನಾಶ್ಚರ್ಯ ! ಕೊಪ್ಪರಿಗೆ ತುಂಬಾ ಇದ್ದ ಇದ್ದ ಪಂಚಕಜ್ಜಾಯ ಖಾಲಿ ಖಾಲಿ. ಕಟ್ಟಿದ ಬೆಳ್ಳಿಯ ಹಗ್ಗ ಎತ್ತಲು ಬರದಷ್ಟು ತುಂಡು ತುಂಡಾಗಿ ಬಿದ್ದಿರುತ್ತದೆ ! ಇದನ್ನು ಬ್ರಿಟಿಷ್ ಮಾಮಲೇದಾರ ಸಾಕ್ಷೀಕರಿಸಿದ್ದಾನೆ ಅಲ್ಲದೆ ತಪ್ಪಿನ ಅರಿವಾಗಿ ಕ್ಷಮಿಸೆಂದು ಪೂಜೆ ಸಲ್ಲಿಸಿ ಅಂದಿನಿಂದ ಬ್ರಿಟಿಷ್ ಸರಕಾರದ ವತಿಯಿಂದ ಪ್ರತಿದಿನ ೪ರೂಪಾಯಿ ’ತಸ್ತೀಕ್’ ಅನ್ನು ಪಂಚಕಜ್ಜಾಯಕ್ಕೆ ಅಂತ ಘೋಷಣೆ ಮಾಡಿ ಕೊಡಮಾಡುತ್ತಾರೆ. ಇದು ಕಾರವಾರದ ಅಂದಿನ ಬ್ರಿಟಿಷ್ ದಾಖಲೆಗಳಲ್ಲಿ ಉಲ್ಲೇಖಗೊಂಡಿದೆ. ಅರ್ಚಕರ ಮಾತು ಉಳಿಸಿದ ಗಣೇಶ ಮಹತಿ ಭಾರವನ್ನು ಹೊತ್ತು, ತನ್ನ ಮಾತೃತ್ವವನ್ನು ಮೆರೆದು ಮಾತೋಬಾರ ಸಿದ್ಧಿವಿನಾಯಕನೆಂದು ಪೂಜೆಗೊಳ್ಳುತ್ತಾನೆ.ಅತ್ಯಂತ ಜಾಗೃತ ಕ್ಷೇತ್ರವಾದ ಇಡಗುಂಜಿ ಇಂದಿಗೂ ಬರುವ ಎಲ್ಲಾ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತ ಗಣಪತಿ ವಿಶ್ವವ್ಯಾಪಿಯಾಗಿದ್ದಾನೆ. ಪ್ರತಿದಿನ ಸಾವಿರಾರು ಭಕ್ತರಿಗೆ ದರುಶನ ನೀಡುವ ಬೆನಕ ವಿಶೇಷ ಹಬ್ಬ ಹರಿದಿನಗಳಲ್ಲಿ, ಸಂಕಷ್ಟ ಚತುರ್ಥಿಗಳಲ್ಲಿ ಲಕ್ಷಾಂತರ ಜನರಿಗೆ ಆಶೀರ್ವದಿಸುತ್ತಾನೆ! ಮಾಹಾ ಚೌತಿ ಮತ್ತು ರಥ ಸಪ್ತಮಿ ಅತೀ ವಿಶೇಷ ಪರ್ವಕಾಲಗಳಾಗಿದ್ದು ಆ ದಿನಗಳಲ್ಲಿ ದಿನವೊಂದಕ್ಕೆ ೫-೬ ಲಕ್ಷ ಜನರಿಗೆ ತನ್ನ ಬಗೆಬಗೆಯ ರೂಪವನ್ನು ತೋರ್ಪಡಿಸುತ್ತಾನೆ ಇಲ್ಲಿನ ಇನ್ನೊಂದು ವಿಶೇಷವೆಂದರೆ ವಿಗ್ರಹದ ಮೇಲೆ ಹೂವನ್ನೋ , ಬಟ್ಟೆಯನ್ನೋ ಅಥವಾ ಆಭರಣವನ್ನೋ ಯಾವುದನ್ನೂ ಹೇಗೇ ಇಟ್ಟರೂ ವಿಗ್ರಹ ಬೇರೆಬೇರೆ ರೀತಿಯಲ್ಲಿ ಅಂದವಾಗಿ ಕಾಣುತ್ತದೆ.ಮೂಲ ವಿಗ್ರಹ ದೇವ ಶಿಲ್ಪಿಯದಾದ್ದರಿಂದ ಅಲಂಕರಿಸದೆ ಹಾಗೆ ಬಿಟ್ಟರೆ ಅದರ ಮೂಲರೂಪದಲ್ಲೇ ಈ ಬಾಲರೂಪಿ ದ್ವಿಭುಜ ಗಣಪ ಕಂಗೊಳಿಸುತ್ತಾನೆ. ಸತ್ಯಗಣಪತಿ ವೃತ ಮತ್ತು ಗಣಹೋಮ ಇತ್ಯಾದಿ ಹರಕೆ ಸೇವೆಗಳು ದಿನವೂ ನಡೆಯುತ್ತವೆ . ಯಕ್ಷಗಾನ ಪ್ರಿಯನಾದ ಈತನ ಕಾರಣಿಕ ದೃಷ್ಟಿಯಿಂದ 'ಕೆರೆಮನೆ ಮೇಳ' ಜಗತ್ತನ್ನು ಸುತ್ತಿದ ಮೊದಲ ಯಕ್ಷಗಾನ ಮೇಳವಾಗಿಯೂ,ಸಮಗ್ರ ಕಲೆಯನ್ನು ಸಮರ್ಪಕವಾಗಿ ಪ್ರದರ್ಶಿಸುತ್ತಿದ್ದಾರೆ. ಯಕ್ಷಗಾನಕ್ಕೆ ರಾಷ್ಟ್ರಪ್ರಶಸ್ತಿಗಳಿಸಿ ಗೌರವ ತಂದಿತ್ತ ದಿ|ಶ್ರೀ ಶಿವರಾಮ ಹೆಗಡೆ ಹಾಗೂ ಎಲ್ಲಾ ಕೆರೆಮನೆ ಬಳಗದವರು ಗಣಪನ ಕರುಣೆಗೆ ಪಾತ್ರರಾಗಿ ಅವನನ್ನೇ ಆರಾಧ್ಯದೈವವಾಗಿ ಆ ಹೆಸರಿನಿಂದಲೇ ಮೇಳವನ್ನು ನಡೆಸಿಬಂದಿದ್ದಾರೆ. ರಾಜಕಾರಣಿಗಳು,ಮಂತ್ರಿ-ಮಹೋದಯರು-ಸಿನಿಮಾ ತಾರೆಯರು ಇತ್ಯಾದಿ ಎಲ್ಲರೂ ಬಂದು ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ.ಒಟ್ಟಿನಲ್ಲಿ ಈ ಕ್ಷೇತ್ರ ಕಾರಣಿಕ ಪುಣ್ಯಕ್ಷೇತ್ರವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ತನ್ನ ಭಕ್ತರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುವ ಈ ದೇವರು ಮಾತನಾಡದೇ ಇದ್ದರೂ 'ಮಾತನಾಡುವ ದೇವರು' ಎಂದೇ ಖ್ಯಾತನಾಮನಾಗಿದ್ದಾನೆ!

ಇಷ್ಟು ಕೇಳಿದ ಮೇಲೆ ನನ್ನ ಕವಿ ಹೃದಯದ ಒಂದು ಹಾಡನೊಂದಿಗೆ ಆತನನ್ನು ಪೂಜಿಸೋಣವೇ ?
ನೆನೆವುದೆನ್ನಮನ............

ನೆನೆವುದೆನ್ನಮನ
ನೆನೆವುದೆನ್ನಮನ
ನೆನೆವುದೆನ್ನಮನ ಶ್ರೀ ಗಜಾನನ
ಕನವರಿಸುವೆ ಸದಾ ನಿನ್ನ ಸನ್ನಿಧಿಯ
ಬೆನಕ ಬಾರಯ್ಯ ಇದೊ ನೂರೆಂಟು ನಮನ

ಬಾಲ ಭಾಸ್ಕರ ನೀನೆ ಕೋಟಿ ಸೂರ್ಯನು ನೀನೆ
ಕಾಲ ಗರ್ಭದಲಿ ಹುದುಗಿ ಕುಳಿತವ ನೀನೆ
ಭಾಲಚಂದ್ರನು ನೀನೆ ಧೂಮ್ರಕೇತುವು ನೀನೆ
ಲೀಲಾ ನಾಟಕ ವಿಕಟ ವಿಘ್ನಹರನು ನೀನೆ

ದೇಶ ಕೋಶಗಳ ಮೀರಿದ ಮಹಿಮಾ
ದಾಶರಥಿಗೆ ಜಯ ಕರುಣಿಸಿದ ಗರಿಮಾ
ಕ್ಲೇಶನಾಶ ವಿಪ್ಲವಹರ ಲಘಿಮಾ
ವೇಷದಿ ಲಿಂಗ ಧರೆಗಿಳಿಸಿಹ ಗಣಿಮಾ

ಮೋದಕ ಪ್ರಿಯ ಬಾರೊ ಮುಗ್ಧರೂಪನೆ ಬಾರೊ
ಸಾಧಕರಿಗೆ ಸಕಲ ಸಿದ್ಧಿಗಳನು ತಾರೊ
ಬಾಧಕಗಳ ನೀಗೆ ಭವಭಯಹರ ಬಾರೊ
ನಾದ ಬ್ರಹ್ಮನೆ ಬಾರೊ ರತ್ನಗರ್ಭನೆ ಬಾರೊ

ರಾಶಿವಿದ್ಯೆಗಳ ಅಧಿಪತಿ ಗಣಪತಿ
ಭಾಷೆ ಸಾಲದು ನಿನಗೆ ನಮಿಸಲು ದಿನಪತಿ
ರೋಷದಿ ಚಂದ್ರನ ಶಪಿಸಿದ ಶ್ರೀಪತಿ
ಪಾಶಾಂಕುಶಧರನೆ ಮಂಗಲದಾರತೀ

Sunday, January 31, 2010

ಶನಿಗೂ ಬಂತು ಗ್ರಹಚಾರ !!




ಶನಿಗೂ ಬಂತು ಗ್ರಹಚಾರ !!

ಶನಿಮಹಾತ್ಮನ ಬಗ್ಗೆ ಅನೇಕ ಕಥೆಗಳಿವೆ. ಹುಟ್ಟಿನಿಂದ ಶನಿ ತಂದೆ ಸೂರ್ಯನನ್ನೇ ಬಿಡಲಿಲ್ಲ -ಕಾಡಿದ ಎಂಬುದಾಗಿ. ಶನಿ ಎಂದರೆ ನಮ್ಮ ರಾಜ್ಯಸರಕಾರದಲ್ಲಿ ಲೋಕಾಯುಕ್ತರಿರ್ವ ಹಾಗೇ, ಅಂಥದ್ದೇ ಪೋಸ್ಟು. ಇಲ್ಲಿ ಶನಿ ಪರ್ಮಮನೆಂಟ್ ಜಾಬ್ ಹೋಲ್ಡರ್, ಇದೇ ಒಂದು ಸ್ವಲ್ಪ ಬದಲು. ಬ್ರಹ್ಮಾಂಡದ ನಿರ್ವಹಣೆಗೆ ಪರಬ್ರಹ್ಮ ಶಕ್ತಿ ತನ್ನನ್ನೇ ತಾನು ಬೇರೆ ಬೇರೆ ಅಂಶಾಂಶ ರೂಪದಲ್ಲಿ ಸೃಜಿಸಿಕೊಂಡು ಕಾರ್ಯ ನಿರ್ವಹಿಸುತ್ತದೆ ಎಂಬುದು ಜಿಜ್ಞಾಸುಗಳ ಪ್ರತಿಪಾದನೆ. ಇದ್ದರೂ ಇರಬಹುದು ಎಂದಿಟ್ಟುಕೊಳ್ಳೋಣ.

ಅತಲ, ವಿತಲ, ಸುತಲ, ತಲಾತಲ, ರಸಾತಲ, ಪಾತಾಳ, ಭೂಲೋಕ, ಭುವರ್ಲೋಕ, ಸುವರ್ಲೋಕ, ಮಹರ್ಲೋಕ, ಜನರ್ಲೋಕ,ತಪೋಲೋಕ, ಸತ್ಯಲೋಕ...ಎಂಬಿತ್ಯಾದಿ ಹದಿನಾಲ್ಕು ಲೋಕಗಳಲ್ಲಿ ಯಾರು ಸರಿಯಾದ ಧರ್ಮ-ಕರ್ಮ ನಿರತರಲ್ಲವೋ ಅಂಥವರನ್ನು ಹುಡುಕಿ, ಕೇಸು ಜಡಿದು, ಕಾಲಾಕಾಲದಲ್ಲಿ ಅವರನ್ನು ಶಿಕ್ಷಿಸುವುದು,ದಂಡಿಸುವುದು, ಮತ್ತು ಅವರು ತಪ್ಪು ತಿದ್ದಿ ಕೊಳ್ಳುವವರೆಗೆ, ತನಗಿಂತ ಹೆಚ್ಚಿನದಾದ ಶಕ್ತಿಯೊಂದಿದೆ ಎಂಬ ಅರಿವು ಅವರಿಗೆ ಮೂಡುವವರೆಗೆ ಅವರನ್ನು ಬಿಡದೇ ಕಾಡುವುದು ಲೋಕಾಯುಕ್ತ ಶನಿಮಹಾತ್ಮರ ಕರ್ತವ್ಯ. ಕೊನೆಗೊಮ್ಮೆ ಸೋತು ಸುಣ್ಣವಾದ ಜನರಿಗೆ ತನ್ನ ಪೀಡನೆಯಿಂದ ಬಿಡುಗಡೆಮಾಡಿ ಅವರು ಕಳೆದುಕೊಂಡಿದ್ದನ್ನೆಲ್ಲ ಮರಳಿಸುವುದು ಶ್ರೀಮಾನ್ ಲೋಕಾಯುಕ್ತ ಶನಿಮಹಾತ್ಮರ ಕಾರ್ಯವೈಖರಿ. ಇಂತಿಪ್ಪ ಶನಿ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ-- ದಿನಂಪ್ರತಿ ನಮಗೆ ಹಾಜರಿತೋರಿಸುವ, ತನ್ನ ಪ್ರಸ್ತುತಿಯಿಂದ ಜಗದ ಜೀವರಾಶಿಗೆ ಚೈತನ್ಯ ತುಂಬುವ ಸೂರ್ಯದೇವ ನಮ್ಮ ಶನಿಮಹಾತ್ಮರ ತಂದೆ. ಸೂರ್ಯದೇವನ ಹೆಂಡತಿ ಛಾಯಾ[ಬಾಯಿ]ದೇವಿ ಶನೈಶ್ಚರನ ತಾಯಿ. ಮಗ ಹುಟ್ಟಿದ ಅಂತ ಪ್ರೀತಿಯಿಂದ ಮಗನನ್ನು ನೋಡಲಿಕ್ಕೆ ತನ್ನ ಕೆಲಸವನ್ನು ಸ್ವಲ್ಪ ನಿಲ್ಲಿಸಿ ಬಂದ ಅಂತ ತಂದೆಯನ್ನೇ ದುರುಗುಟ್ಟಿ [ಗುರಾಯಿಸಿ]ನೋಡಿದರಂತೆ ನಮ್ಮ ಶನಿಮಹಾತ್ಮ! ಇದರಿಂದ ಕೆಲವು ಕಾಲ ಸೂರ್ಯದೇವರಿಗೆ ಕಣ್ಣೇ ಕಾಣಿಸಲಿಲ್ಲವಂತೆ,ಕುಷ್ಟರೋಗ ಬಂತಂತೆ. ಯಾರನ್ನೂ ಬಿಡದೇ, ಲಂಚ ತೆಗೆದುಕೊಳ್ಳದೇ ಕೆಲಸಮಾಡುವ ಒಂದೇ ಪೋಸ್ಟು ನಮ್ಮ ಶನಿಮಹಾರಾಜರದ್ದು! [ಇಲ್ಲಾಂದರೆ ನಮ್ಮ ಜನ ಬಿಡುತ್ತಿದ್ದರೇ?] ಅವರು ಕಾಡಿದ ಕೆಲವೊಂದು ವಿಶೇಷ ವ್ಯಕ್ತಿಗಳನ್ನು ಕಾಲಕ್ರಮದಲ್ಲಿ ನೋಡೋಣ.


ಹೀಗೇ ಇಷ್ಟೆಲ್ಲ ಪರಾಕ್ರಮಿಯಾದ ನಮ್ಮ ಶನಿಮಹಾರಾಜರೂ ಕೂಡ ಪೇಚಿಗೆ ಸಿಲುಕಿದ ಅಪರೂಪದ ಪ್ರಸಂಗಗಳೆರಡು ನಮಗೆ ಪುರಾಣದಲ್ಲಿ ಕಾಣಸಿಗುತ್ತವೆ. ಶನಿಮಹಾರಾಜರನ್ನು ಪೇಚಿಗೆ ಸಿಲುಕಿಸಿದವರಲ್ಲಿ ಒಬ್ಬ ನಮ್ಮ ನಿಮ್ಮೆಲ್ಲರ ಪ್ರೀತಿಯ ಬೊಬ್ಬೆ ಗಣಪ ಅಲಿಯಾಸ್ ಮಹಾಗಣಪತಿ [ದೇವರನ್ನು ಗೇಲಿಮಾಡುವುದು ಕೂಡ ಒಂದು ಸೇವೆಯಂತೆ ನೆನಪಿರಲಿ, ಕೊನೆಪಕ್ಷ ಯಾರಿಗೆ ದೇವರ ಸ್ಮರಣೆ ಇಷ್ಟವಿಲ್ಲವೋ ಅಂಥವರು ದೇವರನ್ನು ಗೇಲಿಯಾಡಿಕೊಳ್ಳಿ-ಅದರಿಂದಲಾದರೂ ಒಳಿತಾದೀತು!],ಇನ್ನೊಬ್ಬ ನಮ್ಮ ಹನ್ಮಣ್ಣ ಅಲಿಯಾಸ್ ಆಂಜನೇಯ. ಇದನ್ನು ಒಂದೊಂದಾಗಿ ಹೇಳುತ್ತೇನೆ ಕೇಳಿ.

ಪ್ರಸಂಗ-೧ [ಶನಿಮಹಾರಾಜ
V/s ಮಹಾಗಣಪತಿ]

ಹೀಗೆ ತಿರುಗುತ್ತ ನಮ್ಮ ಶನಿಮಹಾರಾಜರು ಒಂದುದಿನ ಗಣಪತಿಯ ಮನೆಗೆ ಏಕಾಏಕಿ ರೈಡ್ ಮಾಡಿದ್ರು. ದೇವತೆಗಳಲ್ಲೇ ಬಲು ಕುಶಾಗ್ರಮತಿ ಎಂಬ ಹೆಗ್ಗಳಿಕೆ ಪಡೆದುಕೊಂಡ ನಮ್ಮ ಶ್ರೀಮನ್ ಮಹಾಗಣಪತಿಯವರು ಸ್ವಲ್ಪ ಹೊತ್ತು ಯೋಚಿಸಿ ತನಗೆ ಕಾರ್ಯಬಾಹುಳ್ಯದ ನಿಮಿತ್ತ ಇವತ್ತು ನಿನ್ನೊಂದಿಗೆ ಕಾಲಕಳೆಯಲು ಸಾಧ್ಯವಿಲ್ಲವೆಂದೂ, ಶನಿಮಹಾರಾಜರು ಈ ದಿನವನ್ನು ಬಿಟ್ಟು ನಾಳೆಯ ಮೇಲೆ ಯಾವಾಗಲಾದರೂ ಬರಬಹುದು ಎಂದು ಅಪಾಯಿಂಟ್ ಮೆಂಟ್ ಕೊಟ್ಟೂ ’ಇಂದಲ್ಲ ನಾಳೆ ಬಾ’ ಎಂಬ ಬೋರ್ಡನ್ನು ತನ್ನ ಮನೆ ಮುಂದೆ ತಗುಲಿಹಾಕಿಸಿದರು. ಅದಾದ ಪಶ್ಚಾತ್, ದಿನವೂ ಬಿಡದೇ ನಮ್ಮ ಶನಿಮಹಾರಾಜರು ಮಹಾಗಣಪತಿಯವರ ಮನೆಗೆ ಬರಹತ್ತಿದರು. ಯಾವಾಗ ಬಂದರೂ ನಮ್ಮ ಗಣಪಣ್ಣ ಹೇಳಿದ್ದು ಒಂದೇ ’ಇಂದಲ್ಲ ನಾಳೆ ಬಾ’ - ಈ ಬೋರ್ಡು ಶಾಶ್ವತವಾಗಿ ಬಿಟ್ಟಿತು! [ಅದಕ್ಕೇ ಇಂದಿಗೂ ನಮ್ಮ ಸರಕಾರೀ ನೌಕರರಲ್ಲಿ ಅನೇಕರು ಅದೇ ಬೋರ್ಡನ್ನು ಕಾಯಮ್ಮಾಗಿ ಗೌಪ್ಯವಾಗಿ ಇಟ್ಟುಕೊಂಡುಬಿಟ್ಟಿದ್ದಾರೆ.] ಹೀಗೇ ತಿರುಗೀ ತಿರುಗೀ ತಿರುಗೀ ಬೇಸತ್ತು ಹೋದ ನಮ್ಮ ಶನಿಮಹಾರಾಜರಿಗೆ ಅದ್ಯಾವುದೋಘಳಿಗೆಯಲ್ಲಿ ಒಳ್ಳೆಯ ಮೂಡ್ ಬಂತು. ಬಲಾಬಲದಲ್ಲಿ ವಿಚಾರಿಸಿದರೆ ಈ ಗಣಪತಿ ತಂಟೆಗೆ ಹೋದರೆ ತನ್ನ ಪೋಸ್ಟ್ ಕಳೆದುಕೊಳ್ಳುವ ಹೆದರಿಕೆ ಶುರುವಾಯ್ತು. ಆ ಮೂಡ್ ನಲ್ಲಿ ಅವರು ಮಹಾಗಣಪತಿಯವರಿಗೆ ’ಬುದ್ಧಿವಂತ’ ಎಂಬ ಪದಾಭಿದಾನವನ್ನಿತ್ತರು ! [ಕಾಣುವ 'ಕೈ'ಯವರು ತಮ್ಮ 'ಕೈ'ವಾಡ ವಿಲ್ಲ ಎಂದಮೇಲೆ ಮೊನ್ನೆ ಮೊನ್ನೆ ನಮ್ಮ ಯಡ್ಡ್ಯೂರಪ್ಪಾಜಿಯವರು ಕಾಣದ ಕೈಗೆ [ಗಣಿಧಣಿಗಳಿಗೆ! ] ಸಲಾಮುಹಾಕಲಿಲ್ವೇ ಹಾಗೆ] ಮತ್ತು ಅವರಲ್ಲಿಗೆ ಎಡತಾಕುವುದನ್ನೂ ನಿಲ್ಲಿಸಿಬಿಟ್ಟರು.


ಪ್ರಸಂಗ-೨ [ಶನಿಮಹಾರಾಜರು
V/s ಆಂಜನೇಯ]

ರಾಮಾಯಣದಲ್ಲಿ ನಮಗೆ ಅತ್ಯಂತ ನಿಷ್ಠೆಯ ಪಾತ್ರವೊಂದು ಕಾಣಸಿಗುತ್ತದೆ. ಅದುವೇ ಶ್ರೀ ಆಂಜನೇಯ. ರುದ್ರಾಂಶ ಸಂಭೂತನಾಗಿ, ವಾಯು ಮತ್ತು ಅಂಜನಾದೇವಿಯರ ಪುತ್ರನಾಗಿ ಜನಿಸಿ, ಶ್ರೀರಾಮನ ಸೇವೆಗೆ ತನ್ನನ್ನೇ ಅರ್ಪಿಸಿಕೊಂಡಂತ ಪಾತ್ರ ಇನ್ನೆಲ್ಲೂ ಇಂತಹ ಪಾತ್ರ ನೋಡಸಿಗುವುದಿಲ್ಲ. ತನ್ನ ನಿರಂತರ ಸೇವಾ ಕೈಂಕರ್ಯದಿಂದ ಚಿರಂಜೀವಿಯಾಗಿರುವಂತೆಯೂ ಕಲ್ಪಾಂತರದಲ್ಲಿ ಬ್ರಹ್ಮಪದವಿಯನ್ನು ಪಡೆಯೆಂದೂ ವರವನ್ನು ಪಡೆದ ಅತಿ ವಿಶಿಷ್ಟ ಜೀವ ಇದು-ಸಂಜೀವ. ಸಂಜೀವಿನಿಯನ್ನು ತಂದಿದ್ದರಿಂದ ಸಂಜೀವರಾಯನೆಂದೂ, ಸೀತಾಮಾತೆಯಿಂದ ನದಿಯಲ್ಲಿ ಕಳೆಯಲ್ಪಟ್ಟ ಮುತ್ತನ್ನು ಹುಡುಕಿ ತಂದು ಕೊಟ್ಟಿದ್ದರಿಂದ ಮುತ್ತೆತ್ತಿರಾಯ-ಅಥವಾ ಮುತ್ತೂರಾಯ ಎಂಬೆಲ್ಲ ಬಿರುದು-ಬಾವಲಿ ಗಳನ್ನು ಪಡೆದು ತನ್ನ ನಿರಂತರ ಜಪ-ಧ್ಯಾನವನ್ನು ನಡೆಸುತ್ತಿರುವವರು ಶ್ರೀ ಹನುಮಣ್ಣನವರು.

ತಿರುಗುತ್ತ ತಿರುಗುತ್ತ ನಮ್ಮ ಲೋಕಾಯುಕ್ತ ಶನಿಮಹಾರಾಜರ ಸವಾರಿ ಬಂತು -ಆನ್ಜನೆಯನ ಸನ್ನಿಧಿಗೆ.[ದೇವಸ್ಥಾನವಲ್ಲ!]ಬಂದಾಗ ನಮ್ಮ ಆಂಜನೇಯನವರು ಧ್ಯಾನನಿರತರಾಗಿದ್ದರು. ’ಉದ್ಯೊಗವಿಲ್ಲದ ಆಚಾರಿ[ಬಡಗಿ]ಮಗುವಿನ ಕುಂಡೆಯನ್ನು [ಪೃಷ್ಟವನ್ನು]ಕೆತ್ತಿದ್ದನಂತೆ’-ಎಂಬ ಗಾದೆ ಇದೆ. ಅದೇ ರೀತಿ ಕೆಲವೊಮ್ಮೆ ನಮ್ಮ ಶನಿಮಹಾರಾಜರು ಫ್ರೀ ಇರುತ್ತಾರೆ ಅನಿಸುತ್ತದೆ, ಹೀಗಾಗಿ ಕಣ್ಣಿಗೆ ಬಿದ್ದರೆ ವಕ್ಕರಿಸಿಬಿಡುತ್ತಾರೆ, ಅದಕ್ಕೇ ಕೆಲವರು ’ಶನಿ’ ಎಂಬ ಶಬ್ಧಪ್ರಯೋಗವನ್ನೂ ಮಾಡಲೂ ಹೆದರುತ್ತಾರೆ! ನಮ್ಮ ಶನಿಮಹಾರಾಜರು ಸುಮ್ಮನಿರಬೇಕೋ ಬೇಡವೋ ? ಹೀಗೇ ಇಲ್ಲದ ಬಾಲವನ್ನು ಅಲ್ಲಾಡಿಸಿಕೊಂಡು ಬಂದ ನಮ್ಮ ಶನಿಮಹಾರಾಜರು ಬಾಲ ಇರುವ ಕಪಿಯನ್ನು ಕೆಣಕಿಬಿಟ್ಟರು!

" ಮಾತಾ ರಾಮೋ ಮತ್ ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್ ಸಖಾ ರಾಮಚಂದ್ರಃ |
ಸರ್ವಸ್ವಮ್ ಮೇ ರಾಮಚಂದ್ರೋ ದಯಾಲುಃ
ನಾನ್ಯಮ್ ಜಾನೇ ನೈವ ಜಾನೇ ನ ಜಾನೇ || "

ಧ್ಯಾನದಿಂದ ಎಚ್ಚೆತ್ತ ಹನುಮನಿಗೆ ಕಂಡಿದ್ದು ಕಪ್ಪನೆಯ ವಿಕೃಷ್ಟ ಆಕೃತಿ. ಛೆ ! ಭುವಿಯೆಂಬ ಭುವಿಯಲ್ಲಿ ಎಲ್ಲೆಲ್ಲೂ ನೋಡಿರದ, ಕೇಳರಿಯದ ಎಂತಹ ಕಲಾಕೃತಿ ! ತೊಳೆದಿಟ್ಟ ಕೆಂಡದ ಬಣ್ಣ, ಕೆನ್ನಾಲಿಗೆ , ಹೆಗಲಮೇಲೊಂದು ಚಂದಗಾವಿಯ ಶಾಲು, ಕೊರಳಲ್ಲಿ ಚಂದ್ರಹಾರ, ಪಕ್ಕದಲ್ಲಿ ಕಾಗೆ ! [ವಾಹನ] ಅರೆಕ್ಷಣ ಹನುಮ ವಿಚಾರಿಸಿದ.

"ತ್ರಿಕರಣ ಪೂರ್ವಕವಾಗಿ [ಅಂದರೆ ಕಾಯಾ ವಾಚಾ ಮನಸಾ-ದೇಹದಿಂದಲೂ, ವಚನದಿಂದಲೂ, ಮನಸ್ಸಿನಿಂದಲೂ] ಅನನ್ಯ ಶರಣನಾಗಿ ಸ್ವಾಮಿ ಶ್ರೀರಾಮಚಂದ್ರನನ್ನೇ ಸರ್ವಸ್ವ ಎಂದು ತಿಳಿದು ಕರ್ತವ್ಯನಿರತನಾಗಿ-ಧ್ಯಾನಾಸಕ್ತನಾಗಿದ್ದ ನನ್ನನ್ನು ಯಾರಾತ ಎಬ್ಬಿಸಿದ್ದು ?" [ನಿಮ್ಮಲ್ಲೇ ಇರಲಿ --ನಿಜವಾಗಿ ಬೊಬ್ಬೆಹೊಡೆದಿದ್ದು ಹನುಮ, ಗಣಪನಲ್ಲ, ಫಲಾನುಭವಿಯಷ್ಟೇ ಗಣಪ, ನಮ್ಮ ಸರಕಾರೀ ಕೆಲಸದಲ್ಲಿ ಪುಸ್ತಕದಲ್ಲಿ ಫಲಾನುಭವಿ ಹೆಸರು ರೈತರದ್ದು ಫಲಾನುಭವಿ ಮಧ್ಯೆಕುಳಿತ ಕುತ್ಸಿತ ವ್ಯಕ್ತಿ [ಆದರೆ ಇದು ಹಣದ ಫಲಾನುಭವಿಯ ಕೇಸಲ್ಲವಾದ್ದರಿಂದ ಹನುಮ ಕುತ್ಸಿತ ವ್ಯಕ್ತಿಯೆಂದು ತಿಳಿಯಬೇಡಿ .] ಆಗಿರುವುದಿಲ್ಲವೋ ಹಾಗೇ!

ಹನುಮ ಬೊಬ್ಬಿರಿದ, ಕೂಗು ಹಾಕಿದ. ಕೋಪಗೊಂಡ. ಎದುರಿಗೆ ಶ್ರೀಮಾನ್ ಶನಿಮಹಾರಾಜರು ನಿಂತಿದ್ದಾರೆ. ಅವರನ್ನು ನಖ-ಶಿಖಾಂತ ಕೆಂಗಣ್ಣಿನಿಂದ ನುಂಗುವಂತೆ ನೋಡುತ್ತಿದ್ದಾನೆ ಹನುಮ. ಶನಿಮಹಾರಾಜರಿಗೆ ನಡುಕ ! ಹನುಮ ರುದ್ರಾಂಶ ಸಂಭೂತ ಅಂತ ಮೊದಲೇ ಹೇಳಿದ್ದೇನೆ, ಯಾರಿಗೂ ಹೆದರುವ ಗಿರಾಕಿ ಅಲ್ಲ ! ಕೇಳಿಯೇ ಬಿಟ್ಟ ಹನುಮ--

" ಎನಯ್ಯಾ, ನನ್ನ ತಪವನ್ನು ಕೆಡಿಸಿ ಹೀಗೆ ನಿಂತಿರುವೆಯಲ್ಲ, ನಿನ್ನನ್ನು ಅರೆಕ್ಷಣವೂ ಬಿಡದೇ ನಜ್ಜುಗುಜ್ಜಾಗಿಸುತ್ತೇನೆ" ಎಂದು ತಿರುಗಿ ಉತ್ತರಕ್ಕೂ ಕಾಯದೆ ಶನಿಮಹಾರಾಜರನ್ನು ತನ್ನ ಬಾಲದಿಂದ ಅನೇಕಸುತ್ತು ಸುತ್ತಿಕಟ್ಟಿಕೊಂಡು ನದಿಗೆ ಧುಮುಕಿ ಬಿಟ್ಟ!

" ರಾಮ್ ರಾಮ್ ರಾಮ್, ಜಯ ರಾಮ್ ರಾಮ್ ರಾಮ್" ಎಂದಷ್ಟೇ ಕೂಗುತ್ತ ನಾಲ್ಕಾರಾವರ್ತಿ ಮುಳುಗಿಸಿ ತೆಗೆದು ಇನ್ನೇನು ಬಂಡೆಗೆ ಅಪ್ಪಳಿಸಬೇಕು ಅಷ್ಟರಲ್ಲಿ ನಮ್ಮ ಶನಿಮಹಾರಾಜರು ಆರ್ತಸ್ವರದಿಂದ ಪ್ರಾರ್ಥಿಸಿದರು

ಯತ್ರ ಯತ್ರ ರಘುನಾಥ ಕೀರ್ತನಮ್
ತತ್ರ ತತ್ರ ಕೃತ ಮಸ್ತಕಾಂಜಲಿಮ್|
ಭಾಷ್ಪವಾರಿ ಪರಿಪೂರ್ಣಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್||

ಪರಿ ಪರಿಯಾಗಿ
ಪ್ರಾರ್ಥಿಸಿದ ಮೇರೆಗೆ ಶನಿಮಹಾರಾಜರ ದಯನೀಯ ಸ್ಥಿತಿಯನ್ನು ಕಂಡು ಮಾರುತಿ ಮರುಗಿದ,ಕರಗಿದ,ಆವೇಶ ಇಳಿಯಿತು. ತನ್ನನ್ನು ಮರಳಿ ತಾನು ನಿಂತಿರುವಲ್ಲಿಗೆ ಬಿಟ್ಟ ಹನುಮನನ್ನು ನೋಡುತ್ತ ಶನಿಮಹಾರಾಜರು ಹೇಳಿದರು
" ತಪ್ಪಾಯ್ತು ಹನುಮಾ, ನಿನ್ನನ್ನು ತಪ್ಪಾಗಿ ಭಾವಿಸಿಬಿಟ್ಟಿದ್ದೆ [ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು!], ನಿನ್ನ ಸ್ವಾಮಿನಿಷ್ಠೆಗೆ, ನಿನ್ನ ಕರ್ತವ್ಯಪರತೆಗೆ ಮನಸೋತಿದ್ದೇನಪ್ಪಾ, ಇನ್ನು ಮುಂದೆ ಯಾರು ನನ್ನಿಂದ ಪೀಡನೆಗೆ ಒಳಗಾಗುತ್ತಾರೋ ಅಂಥವರು ನಿನ್ನನ್ನು ಪೂಜಿಸಿದರೆ, ನಿನಗೆ ಎಳ್ಳೆಣ್ಣೆಯಿಂದ [ತಿಲತೈಲ]ಅಭಿಷೇಕಮಾಡಿಸಿದರೆ/ಮಾಡಿದರೆ, ನಿನಗೆ ಸಲ್ಲುವ ಪೂಜೆಯಿಂದ ನಾನು ಸಂತುಷ್ಟಿಗೊಳ್ಳುತ್ತೇನೆ" ಎಂದು ವಚನ ಕೊಟ್ಟರು.

[ಏನುವಚನವೋ ಏನೋ, ಹೀಗೆ ಅನವಶ್ಯಕವಾಗಿ ಇನ್ನೊಬ್ಬರಿಗೆ ತೊಂದರೆ ಕೊಡುವವರು ಜೀವನದಲ್ಲಿ ಹಲವರಿರುತ್ತಾರೆ. ಅಂಥವರು ಹಿಂದೆಬಿದ್ದಾಗ ಜನ ಇಂದಿಗೂ ಶನಿಯ ಹಾಗೆ ಕಾಡುತ್ತಿದ್ದಾನಪ್ಪ ಅಂತಾರೆ!]
ಹನುಮ ಸಂತಸಗೊಂಡ, ಶನಿಮಹಾರಾಜರನ್ನು ಅಂತೂ ಹೋಗಗೊಟ್ಟ!!


ಏನಿದ್ದರೂ ನಮ್ಮ-ನಿಮ್ಮಂತವರಿಗೆ ಹೇಳಿಸಿದ್ದಲ್ಲ ಬಿಡಿ, ತೀರ ದೊಡ್ಡವರ ವಿಚಾರ-ದೇವರುಗಳ ವಿಚಾರ, ಜನಸಾಮಾನ್ಯವಿಧಾನಸೌಧಕ್ಕೆ ನಡೆದು ಸುಧಾರಿಸಲು ಸಾಧ್ಯವೇ ? ಹಾಗಾಗಿ ಮರೆತು ಬಿಡೋಣ! ನಮ್ಮನ್ನು ಶನಿಮಹರಾಜರು ಪೀಡಿಸಿದರೆ ತಪ್ಪಿಸಿಕೊಳ್ಳಲು ಬೇರೇ ದಾರಿ ಇಲ್ಲ, ಬರೇ ಪ್ರಾರ್ಥನೆ ಅಷ್ಟೇ . ಪ್ರಾರ್ಥನೆಯಿಂದ ಪರಿವರ್ತನೆ ಸಾಧ್ಯ ಎಂಬುದು ಅನುಭವಿಸಿನೋಡಿದ ಮಹಾತ್ಮರು ಹೇಳಿದ್ದಾರೆ , ಇದಕ್ಕೆ ವಿವರಣೆ ಬೇಕಿದ್ದರೆ ಅನುಭವದ ಅನುಭಾವ ಆಗಿಬೇಕಿದ್ದರೆ ಸ್ವಾಮೀ ವಿವೇಕಾನಂದರು-ಸಿಸ್ಟರ್ ನಿವೇದಿತಾ ಇವರ ಸಂವಾದವನ್ನು ನೋಡಿದರೆ ಸಿಗುತ್ತದೆ! ಹಾಗಾದ್ರೆ ಮುಚ್ಚುಮರೆಯಿಲ್ಲದೆ ಶನಿಮಹಾರಾಜರನ್ನು ಒಮ್ಮೆಪ್ರಾರ್ಥಿಸೋಣ ಬನ್ನಿ --

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ |
ಛಾಯಾ ಮಾರ್ತಾಂಡ ಸಂಭೂತಂ ತಮ್ ನಮಾಮಿ ಶನೈಶ್ಚರಂ ||

Saturday, January 30, 2010

ಈ ಟಚ್ಚಲಿ ಏನೋ ಇದೆ

ಈ ಟಚ್ಚಲಿ ಏನೋ ಇದೆ

ಜೀವನದಲ್ಲಿ ನಾವು ಅನೇಕ ವ್ಯಕ್ತಿಗಳನ್ನು ನೋಡುತ್ತೇವೆ. ||ಲೋಕೋ ಭಿನ್ನ ರುಚಿಃ ||ಎಂಬಂತೆ ಅವರವರ ಕಾರ್ಯಕ್ಷೇತ್ರ ಮತ್ತುವ್ಯಾಪ್ತಿ ವಿಭಿನ್ನವಾಗಿರುತ್ತದೆ. ಎಲ್ಲರೂ ಎಲ್ಲಾ ಕೆಲಸಗಳಲ್ಲೂ ಅಥವಾ ಹಿಡಿದ ಒಂದೇ ಕೆಲಸದಲ್ಲೂ ಪರಿಪಕ್ವವಾಗಿರುವುದಿಲ್ಲ. ಕೆಲವರಂತೂ ಮಾಡುವ ಕೆಲಸವನ್ನು ಯಾಕಾದರೂ ಮಾಡಬೇಕೋ ಎಂದುಕೊಂಡು ಮಾಡುತ್ತಾರೆ. ಆದರೆ ಪರಿಪಕ್ವ ಸ್ಥಾನವನ್ನುಪಡೆದವರು ಅದನ್ನು ವೃತ್ತಿ ಅಥವಾ ಕೆಲಸ ಎನ್ನದೆ ಪೂಜೆ ಎಂದು ಅದನ್ನೇ ಎಂಜಾಯ್ ಮಾಡುತ್ತಾರೆ. ಹೀಗೇ ಬಾಯಲ್ಲಿ ಹೆಳಿದರೂ ಬಹುತೇಕರಿಗೆ ಇದು ಸಾಧ್ಯವಿಲ್ಲ-ಕಾರಣ ಗೊತ್ತಿಲ್ಲ.

ಕೆಲವರ ಸಾಧನೆಯನ್ನು, ಆ ಒಲವನ್ನು, ಆ ತಾದಾತ್ಮ್ಯತೆಯನ್ನು ಒಮ್ಮೆ ಮೆಲುಕು ಹಾಕೋಣ.


ಮೊದಲನೆಯದಾಗಿ ಅಚ್ಚಕನ್ನಡಿಗ ಶ್ರೀಯುತ ಆರ್.ಗಣೆಶ್. ಒಬ್ಬ ಮೆಕಾನಿಕಲ್ ಎಂಜಿನೀಯರ್, ಅದರೆ ಅವರು ಬಹುಭಾಷಾ ಪ್ರವೀಣರು. ಸುಮಾರು ೮ಕ್ಕಿಂತಲೂ ಜಾಸ್ತಿ ಭಾಷೆಯಲ್ಲಿ ವ್ಯಾಕರಣ-ಸಾಹಿತ್ಯ ಸಹಿತ ಪ್ರೌಢಿಮೆಯಿದೆ. ಶತಾವಧಾನಿ ಎಂದೇ ಖ್ಯಾತರು. ಅವರಿಗೆ ಯವುದೇ ವಿಷಯವಸ್ತು ಕೊಡಿ, ಅವರು ವ್ಯಾಖ್ಯಾನಿಸಿದರೆ ಅದರ ಮುಂದೆ ಬೇರೆ ಯಾರ ಅನಾಲಿಸಿಸ್ ಕೂಡ ಶೂನ್ಯವಾಗಿರುತ್ತದೆ. ಏಕಕಾಲಕ್ಕೆ ಎರಡು ಮಂದಿಗೆ ಉತ್ತರಿಸುವಾಗ ನಾವು ಬೆ ಬೆ ಬೆ ಅಂದುಬಿಡುತ್ತೇವೆ. ಆದರೆ ಅವರು ಅನುಕ್ರಮವಾಗಿ ನೂರುಜನರಿಗೆ, ಅಷ್ಟೇ ಏಕೆ ಸಾವಿರ ಜನರಿಗೆ ಅವರವರ ಪ್ರಶ್ನೆಗಳಿಗೆ, ಕೊಟ್ಟ ಅವಧಿಯಲ್ಲಿ, ಅಪ್ರಸ್ತುತ-ಪ್ರಸ್ತುತಿ ಎಂಬ ’ಅಧಿಕ ಪ್ರಸಂಗಿ’ಯನ್ನು ನಿಭಾಯಿಸುತ್ತ ಉತ್ತರಿಸುವ ಪರಿ ನೀವು ನೋಡಬೇಕು! ಏನಿದೆ ಅವರ ಮೆದುಳಿನಲ್ಲಿ ?

ರಡನೆಯವರು ಅಪ್ರತಿಮ ಕುಂಚಕಲಾವಿದ ಶ್ರೀಯುತ ಬಿ.ಕೆ.ಶ್ರೀನಿವಾಸ ವರ್ಮಾ. ಹಲವಾರು ವೇದಿಕೆಗಳಲ್ಲಿ ತಾವು ಅವರ ಚಿತ್ರ ಬಿಡುಸುವಿಕೆಯನ್ನು ನೋಡಿರುತ್ತೀರಿ. ಮಸಿಯಲ್ಲಿ ಅದ್ದಿದ ದಾರದಿಂದ, ಕಡ್ಡಿಯಿಂದ ಅಥವಾ ಏನೂ ಬೇಡ ಬರ‍ೇ ಮಸಿ ಮತ್ತು ಕೈ ಬಳಸಿ ಬಹು ಸುಂದರ ಕಲಾಕೃತಿಗಳನ್ನು ೩-೪ ನಿಮಿಷಗಳಲ್ಲಿ ಬಿಡಿಸುತ್ತಾರೆ.ಇನ್ನು ಅವರ ಬಣ್ಣದ ಕಲಾಕೃತಿಗಳು ಅತೀ ಸುಂದರ. ಲಕ್ಷಗಟ್ಟಲೆ ಕಲಾವಿದರಿದ್ದರೂ ಅವರು ಭಿನ್ನವಾಗಿ ತೋರುತ್ತಾರೆ.


ಹಾ
ಡುಗಾರ್ತಿಯರು ಅನೇಕ, ಅತ್ಯಂತ ಹೈ ಪಿಚ್ ನಲ್ಲಿ ಅತೀ ಸಂತೋಷದಿಂದ ಹಾಡುವ ಶ್ರೀಮತಿ ಎಮ್.ಡಿ.ಪಲ್ಲವಿ ಇದ್ದಾರೆ. ಅವರನ್ನು ನೋಡುತ್ತಿದ್ದರೆ ಪ್ರಾಯಶಃ ಅವರು ಸಂಗೀತ ಸರಸ್ವತಿಯ ಮಗಳೇ ಎಂದರೆ ತಪ್ಪಾಗಲಾರದಲ್ಲ?


ಪಿಟೀಲು ನುಡಿಸುವವರು ಅನೇಕಮಂದಿ. ಆದರೆ ವಾಯೊಲಿನ್ [ಪಿಟೀಲು]ವಾದ್ಯಕ್ಕೆ ಚೌಡಯ್ಯನವರನ್ನು ಬಿಟ್ಟಮೇಲೆ ಗೌರವ ತಂದುಕೊಟ್ಟ ಮಹೋನ್ನತ ವ್ಯಕ್ತಿ ಕಲೈ ಮಾಮಣಿ ವಿದ್ವಾನ್ ದಿ||ಕುನ್ನುಕುಡಿ ವೈದ್ಯನಾಥನ್.




ಸಂಸ್ಕೃತ ಶ್ಲೋಕಗಳನ್ನು, ಸ್ತೋತ್ರಗಳನ್ನು ಎಲ್ಲರಿಗಿಂತ ಚೆನ್ನಗಿ ನಮಗೆ ಶ್ರುತಪಡಿಸುವುದು ದಿ||ಶ್ರೀಮತಿ ಎಮ್.ಎಸ್.ಸುಬ್ಬಲಕ್ಷ್ಮಿ. ಜಗದ್ಗುರು ಆದಿಶಂಕರರು ಮಹಾ ಮಹೋಪಾಧ್ಯಾಯರಾಗಿಯೂ, ಮಹಾಕವಿಯಾಗಿಯೂ ಸಂಸ್ಕೃತದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕ್ಲಿಷ್ಟ ಶಬ್ಧಗಳಿರುವ ಅವರ ಕೃತಿಗಳನ್ನು ಬಹು ಲೀಲಾಜಾಲವಾಗಿ, ಸಲೀಸಾಗಿ,ಸುಶ್ರಾವ್ಯವಾಗಿ ನಮ್ಮ ಕಿವಿಗೆ ಕ್ಯಾಸೆಟ್ ಗಳಮೂಲಕ ಇಂದಿಗೂ ತಲ್ಪಿಸುತ್ತಿರುವ ಸುಬ್ಬಲಕ್ಷ್ಮಿಗೆ ಶರಣು ಎನ್ನೋಣವೇ ?


ಕದ್ರಿ ಗೊಪಾಲನಾಥ್ ಅಂದರೆ ಸಾಕು ಅನೇಕ ಮಕ್ಕಳೂ ಕೂಡ ಅವರ ಬಗೆಗೆ ಹೇಳಲು ಪ್ರಾರಂಭಿಸುತ್ತಾರೆ. ವಿದೇಶೀ ವಾದ್ಯವಾದ ಸ್ಯಾಕ್ಸೋಫೋನ್ ಅನ್ನು ನಮ್ಮ ಕವಿಗಳ ಕೃತಿಗಳಿಗೆ ಸಮರ್ಪಕವಾಗಿ ಅಳವಡಿಸಿದ ಗೌರವ ಇವರಿಗೆ ಸಲ್ಲಲೇಬೇಕು ತಾನೆ ? ಅಂತೆಯೇ ಈ ವಾದ್ಯವನ್ನು ಉಸಿರು ಬಿಗಿ ಹಿಡಿದು ತಾರಕ ಸ್ವರದಲ್ಲಿ ನುಡಿಸುವದು ಸುಲಭದ ಮಾತೇನಲ್ಲವಲ್ಲ?




ಅದೇರೀತಿಯಲ್ಲಿ ಸಮಯೋಚಿತ ಹಾಗೂ ತುಲನಾತ್ಮಕ, ಅಚ್ಚುಕಟ್ಟಾದ ಲೇಖನಗಳನ್ನೊಳಗೊಂಡ, ಸುದ್ದಿ-ಸಾರವನ್ನು,ಕಾವ್ಯ ಪದ ಪಾಯಸವನ್ನು ಒಳಗೊಂಡ ದಿನಪತ್ರಿಕೆಯನ್ನು ದಿನಾಲೂ ನಮ್ಮ ಕೈಗಿಡುವುದು ಸುಲಭದ ಮಾತೇ? ಅತೀ ವಿಶಿಷ್ಟವಾಗಿ, ನಿಖರವಾಗಿ, ನಿರ್ಭಿಡೆಯ ನಡೆಯಿಂದ, ಸಲ್ಲಕ್ಷಣ ಭರಿತವಾಗಿ, ಕೊಟ್ಟ ಕಾಸಿಗೆ ಎಲ್ಲೂ ಮೋಸವಾಗದಂತೆ, ಅತೀ ಹೆಚ್ಚಿನ ಹಾಗೂ ತೀರಾ ತಡರಾತ್ರಿಯಲ್ಲಿ ಸಿಗುವ ವರದಿಗಳನ್ನು ಕ್ರೋಢೀಕರಿಸಿ ನಮ್ಮ ಕೈಗಿಡುವ ವಿಜಯಕರ್ನಾಟಕ ದಿನಪತ್ರಿಕೆಯ ಸಂಪಾದಕ ಶ್ರೀಯುತ ವಿಶ್ವೇಶ್ವರ ಭಟ್ ಒಬ್ಬ ’ಔಟ್ ಸ್ಟ್ಯಾಂಡಿಂಗ್ ಪರ್ಸ್ನಾಲಿಟಿ’ ಅಥವಾ ’ಇಂಡಸ್ಟ್ರಿಯಸ್ ’ ಎಂತ ಅನ್ನೋಣವೇ? [ಇದೀಗ ಅವರಿಗೆ ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ, ಇದಕ್ಕಾಗಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ]


ಒಬ್ಬ ಸಾಮಾನ್ಯ, ಅತೀ ಬಡ ಕುಟುಂಬದಿಂದ ಬಂದ ವ್ಯಕ್ತಿ , ಕೇವಲ ತನ್ನ ಜ್ಞಾನ ಮತ್ತು ಕ್ರಿಯಾ ಶಕ್ತಿಯಿಂದ ವಿಜ್ನಾನಿಯಾಗಿ, ರಾಷ್ಟ್ರಪತಿಯಾಗಿ ಬೆಳಗಿದ ಹೆಮ್ಮೆಯ .ಪಿ.ಜೆ. ಅಬ್ದುಲ್ ಕಲಾಮ್ ಅವರಲ್ಲಿ ಯಾವಶಕ್ತಿಕೆಲಸಮಾಡುತ್ತಿದೆ ? ಅವರ ಚಿಂತನಶೀಲ ಮೆದುಳಿಗೆ ಎಲ್ಲಿಂದ ಪ್ರೋತ್ಸಾಹ ಬರುತ್ತದೆ?



ವಿದೇಶದಲ್ಲಿದ್ದೂ ನಮ್ಮ ಭಾಷೆಯಲ್ಲಿ ತನ್ನದೇ ಛಾಪು ಮೂಡಿಸಿದ ಅಮೆರಿಕನ್ನಡಿಗ ಶ್ರೀಯುತ ಶ್ರೀವತ್ಸ ಜೋಶಿಯವರ ಬಗ್ಗೆ ಹಾಗೂ ಅವರ ಕಣ್ಣಿಗೆ ಕಟ್ಟುವಂತೆ ವಿವರಿಸುವ ಆ ವಿವರಣಾ ಚಾತುರ್ಯ, ಭಾಷೆಯ ಛಂದಸ್ಸು, ವ್ಯಾಕರಣ ಆದಿಯಾಗಿ ಅತ್ಯಂತ ಕಾಳಜಿಯಿಂದ, ಸೃಜನಾತ್ಮಕತೆಯಿಂದ, ವಾರ ವಾರಕ್ಕೂ ನವನಾವೀನ್ಯತೆಯಿಂದ ಕೂಡಿದ ಅವರ ಲೇಖನಗಳಲ್ಲಿ ತೋರ್ಪಡುವ ನಿಷ್ಕಲ್ಮಶ ಕನ್ನಡ ಪ್ರೀತಿಯನ್ನ ಏನನ್ನೋಣ? ಒಬ್ಬ ಟೆಕ್ನಾಕ್ರಾಟ್ ಭಾಷಾರಂಗದಲ್ಲಿ ಅಷ್ಟು ರುಚಿಕರವಾಗಿ ಇಷ್ಟೆಲ್ಲ ಬರೆಯಲು ಸಾಧ್ಯವೇ ? ಅವರ ’ಪರಾಗ ಸ್ಪರ್ಶ’ಹೆಸರಿಗೆ ಅನ್ವರ್ಥಕವಾಗಿದೆಯಲ್ಲವೇ ?


ಸದಾನಂದಮಯ್ಯ ಅವರ ಬಗ್ಗೆ ಇತ್ತೀಚೆಗೆ ಕೇಳಿದ್ದೀರಿ, ಆದ್ರೆ ಎಮ್.ಟಿ.ಆರ್. ಬಗ್ಗೆ ೫೦ ವರ್ಷಗಳಿಂದ ಕೇಳುತ್ತಿದ್ದೀರಿ. ಶುಚಿ ಹಾಗೂ ರುಚಿ ಎಂಬ ಶಬ್ಧಕ್ಕೆ ಅರ್ಥವನ್ನು ಸೃಸ್ಟಿಸಿಕೊಟ್ಟವರು, ಹೊಸ ಕಾಯ್ದೆ ಬರೆದವರು ಇವರಲ್ಲವೇ? ಒಂದು ಹೋಟೆಲ್ ಉದ್ಯಮ ದಿಢೀರ್ ತಯಾರಿಸುವ ತಿಂಡಿಯ ಪರಿಕಲ್ಪನೆಗಿಳಿದು ಅದಕ್ಕೆ ವಿಶ್ವವ್ಯಾಪಕತ್ವವನ್ನು ತಂದುಕೊಟ್ಟು ಜನಮಾನಸದಲ್ಲಿ ಸ್ಥಾನ ಪಡೆದ ಮಯ್ಯ ಅವರು ಕೂಡ ವಿದ್ಯೆಯಿಂದ ಒಬ್ಬ ಮೆಕಾನಿಕಲ್ ಎಂಜಿನೀಯರ್ ಎಂದರೆ ಆಶ್ಚರ್ಯವಾಗುವುದೇ?


ಅಕ್ಷರವನ್ನೇ ಕಲಿಯದ ಒಬ್ಬ ವ್ಯಕ್ತಿ, ನವರಸ ಭರಿತವಾಗಿ ಸಂಪೂರ್ಣ ಶುದ್ಧಕಲೆಯಾದ ಯಕ್ಷಗಾನಕ್ಕೆ ತನ್ನ ಅದ್ಬುತ ಕುಣಿತ,ಹಾವ-ಭಾವ, ಆಂಗಿಕಾಭಿನಯ, ವಿಶಿಷ್ಟ ’ಎಕ್ಸ್ ಪ್ರೆಶನ್’ ನಿಂದ ಜನಶಕ್ತಿ ಬೆರಳಿಟ್ಟು ಗೌರವಿಸುವ ರಾಜ್ಯ-ರಾಷ್ಟ್ರ ಪ್ರಶಸ್ತಿಗಳಿಸಿದ ಶ್ರೀಯುತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ತಿಳಿದಿರುವಿರಲ್ಲ.ಅಧ್ಯಯನದ ಅಭಾವದಿಂದ ಅಸ್ಖಲಿತ ಮಾತುಗಳನ್ನಾಡಲು ಬಾರದಿದ್ದರೂ ಕೇವಲ ತನ್ನ ಹಿತ-ಮಿತ ಸಂಭಾಷಣೆಯಿಂದ, ನವಿಲಿಗೆ ಸರಿಗಟ್ಟುವ ಮನಮೋಹಕ ನೃತ್ಯದಿಂದ ಖ್ಯಾತನಾಮರಾಗಿರುವರಲ್ಲ! ಎಪ್ಪತ್ತೈದರ ಇಳಿವಯಸ್ಸಿನಲ್ಲೂ[ ಒಬ್ಬ ಮುದುಕನಾಗಿದ್ದೂ] ಕುಣಿದು ಜನರನ್ನು ರಂಜಿಸುವ ತನ್ಮೂಲಕ ತಾನೂ ಅದನ್ನೇ ಎಂಜಾಯ್ ಮಾಡುವ ಯಾವ ಶಕ್ತಿ ಅವರಲ್ಲಿ ಅಡಗಿದೆಯಪ್ಪಾ? ಇದೇರೀತಿಯಲ್ಲಿ ಆದರೆ ತನ್ನ ಭಾಷಾ ಲಾಲಿತ್ಯದಿಂದ ಹಾಗೂ ಪಾತ್ರದಲ್ಲಿನ ತನ್ಮಯತೆಯಿಂದ ಜನಮಾನಸದಲ್ಲಿ ನೆಲೆನಿಂತ ದಿ||ಶ್ರೀಯುತ ಶಂಭು ಹೆಗಡೆ, ಹಾಗೂ ದಿ||ಶ್ರೀಯುತ ಮಹಾಬಲ ಹೆಗಡೆ ಇವರೆಲ್ಲರಲ್ಲಿ ಅಂತಹ ಯಾವಶಕ್ತಿ ಮನೆಮಾಡಿತ್ತು?


ತನ್ನ ಸುಶ್ರಾವ್ಯ ಗಾಯನದಿಂದ ಯಕ್ಷಗಾನದ ನವರಸಗಳನ್ನು ಆಸ್ವಾದಿಸಲು ಹಿಮ್ಮೇಳದಲ್ಲಿದ್ದು ಹೀರ‍ೋ ಆದ ಭಾಗವತ ಶ್ರೀಯುತ ಸುಬ್ರಹ್ಮಣ್ಯ ಧಾರೇಶ್ವರರನ್ನು ಪ್ರತ್ಯೇಕ ವಿವರಿಸಬೇಕೆ?



ಹೆಚ್ಚೇಕೆ ನಮ್ಮ ನೆಚ್ಚಿನ ಸರ್ ಎಂ.ವಿಶ್ವೇಶ್ವರಯ್ಯ ನವರಿದ್ದರಲ್ಲ, ತನ್ನದೆಲ್ಲವನ್ನೂ ರಾಜ್ಯಕ್ಕೆ-ದೇಶಕ್ಕೆ ಅರ್ಪಿಸಿದ ಈ ಕರ್ಮಯೋಗಿ ಎಲ್ಲಿ ನೀರಿಲ್ಲವೋ ಅಲ್ಲಿ ನೀರನ್ನು ಒದಗಿಸುವ, ಎಲ್ಲಿ ಬೆಳಕಿಲ್ಲವೋ ಅಲ್ಲಿ ಬೆಳಕನ್ನು 'ಉತ್ಪಾದಿಸುವ', ಎಲ್ಲಿ ನಿರುದ್ಯೋಗವೋ ಅಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಮಹಾನ್ ಮೇಧಾವಿಯಾಗಿ ವಿಶ್ವವಂದ್ಯರಾಗಿ, ಸತ್ತಮೇಲೂ ತಮ್ಮ ಮೆದುಳಿನ ಬಗೆಗೆ ಬೇಡಿಕೆ ಪಡೆದ ಇಂತಹ ವ್ಯಕ್ತಿಯಲ್ಲಿ ಪ್ರಚುರಗೊಂಡಿದ್ದ ಯಾವ ಇಚ್ಛೆ ಅವರಿಂದ ಅನೇಕ, ಆ ಕಾಲಕ್ಕೆ ಅಸಾಧ್ಯವೆಂದು ಪರಿಗಣಿಸಲ್ಪಟ್ಟ ಕೆಲಸವನ್ನು ಮಾಡಿಸಿತು ?


ಸಂಗೀತದ ಮೇರು ಎನಿಸಿಕೊಂಡ ಶ್ರೀಯುತ ಭೀಮಸೇನ ಜೋಷಿಯವರ ಹಾಡುಗಳನ್ನು ಕೇಳಿಯೇ ಇರುತ್ತೀರಿ. ಆ ಗಂಧರ್ವ ಗಾನ ಹೊರ ಹೊಮ್ಮಲು ಅಂಥಾ ಕಂಠ ಅವರಲ್ಲಿ ಆಶ್ರಯಿಸಲು, ಅವರು ಅಸ್ಟು ಆಸ್ತೆವಹಿಸಿ ಹಾಡಲು ಏನಿರಬಹುದು ಕಾರಣ ?



ಶ್ರೀಯುತ ಎನ್.ಆರ್.ನಾರಾಯಣಮೂರ್ತಿಯವರು ಇನ್ಫೋಸಿಸ್ ಎಂಬ 'ಕೂಸನ್ನು' ೧೦,೦೦೦ ರೂಪಾಯಿಗಳಿಂದ ಆರಂಭಿಸಿ ಇಂದಿನ ೧೦,೦೦೦ ಕೋಟಿ ರೂಪಾಯಿಗಳವರೆಗೆ ಬೆಳೆಸಿದ ಆ ದೂರದರ್ಶಿತ್ವ ಎಲ್ಲಿಂದ ಬಂದಿರಬಹುದು? ಅವರಲ್ಲಿಯ ಅತುತ್ತಮ ಕೆಲಸಗಾರನಿಗೆ ತರಬೇತಿ ನೀಡಿದಾತ ಯಾರು? ದಣಿವಿಲ್ಲದೆ ಬೇಸರವಿಲ್ಲದೆ ಅವರು ಪ್ರಾರಂಭದ ತಮ್ಮ ದಿನಗಳನ್ನು ಹೇಗೆ ಕಷ್ಟಸಹಿಸಿ ಕಳೆದರು?

ಇದನ್ನೆಲ್ಲ ವಿವರಿಸಲು ಯಾವ ತರ್ಕಕ್ಕೆ ಸಾಧ್ಯ? ಕನ್ನಡದ ಅತ್ಯಂತ ಶ್ರೇಷ್ಟ ಕವಿಗಳಲ್ಲಿ ಒಬ್ಬರಾದ ಶ್ರೀಯುತ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಅನೇಕ ’ಕವಿತೆ’ ಎಂಬ ರತ್ನಗರ್ಭಗಳನ್ನೇ ಬರೆದಿದ್ದಾರೆ. ಇಂತಹ ಕಾವ್ಯಕನ್ನಿಕೆಗಳು ಕವಿಯಿಂದ ಹೇಗೆ ಸೃಜಿಸಲ್ಪಟ್ಟವು? ಯಾವ ಕವಿತೆಯ ಚರಣದಿಂದ ಮೊನ್ನೆ ತಮಗೆ ಮಹಾತ್ಮರ ಕಥನವನ್ನು ವಿವರಿಸಿದ್ದೆನೋ ಅದೇ ಕವಿತೆಯನ್ನು ಕವಿ ಇದೇ ಅರ್ಥದಲ್ಲಿ ಬರೆದರೇ ?? ಬಹುಶಃ ನಮ್ಮೆಲ್ಲ ಇಷ್ಟಾನಿಷ್ಟಗಳು ನಮ್ಮದೇ ಕೈಯ್ಯಲ್ಲಿದ್ದರೂ ಅದರ ಸೂತ್ರ ಬೇರೆ ಕಡೆಗೆ ಇದೆ ಎಂಬ ಈ ಪುನರ್ಜನ್ಮದ ಸೆಳಕು ಈ ಕವಿತೆಯಲ್ಲಿದೆಯೆ ? ಆಗಬಾರದೇಕೆ? ಹೇಗೆ ಮೊಬೈಲ್ ನಲ್ಲಿ ಸಿಮ್ಮನ್ನು ಇಟ್ಟು ಆ ಸಿಮ್ಮಿನ್ನು ಹೊರಗಿನಿಂದಲೇ ನಿಯಂತ್ರಿಸುತ್ತಾರೋ ಹಾಗೇ ನಮ್ಮ ದೇಹವೆಂಬ ಮೊಬೈಲ್ ನಲ್ಲಿ ಆತ್ಮವೆಂಬ ಸಿಮ್ ಇಟ್ಟು ಕಾಣದ ಟಾವರ್ ಮತ್ತು ಬೋರ್ಡ್ ಗಳಿಂದ ಸಿಗ್ನಾಲ್ ಕಳಿಸಿ ಎಲ್ಲವನ್ನೂ ಯಾರೋಪ್ರೋಗ್ರಾಮಿಂಗ್ ಮಾಡಿರಬೇಕಲ್ಲವೇ? ಈ ಜನ್ಮಾಂತರದ ಟಚ್ಚಲ್ಲಿ ನಮ್ಮ 'ಪಡೆದ ಪುಣ್ಯದಿಂದ' ನಾವು ಯಾವ ಗಮ್ಯ ಸ್ಥಾನವನ್ನು ಸೇರಬೇಕೋ ಅದು ನಿರ್ಧರಿಸಲ್ಪಡುತ್ತದೆ ಎಂದರೆ ತಪ್ಪೆ?

'ಯಾವುದೀ ಹೊಸಸಂಚು ಎದೆಯಂಚಿನಲಿ ಮಿಂಚಿ........'
ಇಂತಹ ಅರ್ಥಗರ್ಭಿತ ಸುಶ್ರಾವ್ಯವಾಗಿ ಹಾಡಬಲ್ಲ ಕವನವನ್ನು ಕೊಟ್ಟಿದ್ದಕ್ಕೆ ಲಕ್ಷ್ಮೀನಾರಾಯಣ ಭಟ್ಟರಿಗೆ ನಮ್ಮ ನೆನಕೆಗಳನ್ನು ಅರ್ಪಿಸುತ್ತ ಅವರಿಂದ ಇನ್ನೂ ಅನೇಕ ಭಾವಗೀತೆಗಳು ಬರಲೆಂದು ಅಪೇಕ್ಷಿಸೋಣವೇ?

ನಿಮ್ಮೊಡನೆ ವಿ.ಆರ್.ಭಟ್: ಸಮಗ್ರ ಫೋನಾಯಣಂ

ನಿಮ್ಮೊಡನೆ ವಿ.ಆರ್.ಭಟ್: ಸಮಗ್ರ ಫೋನಾಯಣಂ

Friday, January 29, 2010

ಸಮಗ್ರ ಫೋನಾಯಣಂ


ಸಮಗ್ರ ಫೋನಾಯಣಂ


ರಾಮಾಯಣವನ್ನು ಕೇಳಿದ್ದೀರಿ, ಆದರೆ ಅದರ ಸನಿಹಕ್ಕೂ ಬಾರದ ಒಂದು ಪ್ರಸಂಗವೇ ಸಮಗ್ರ ಫೋನಾಯಣ.

ಹೀಗೆ ನನ್ನ ಬಾಲ್ಯಕಾಲ, ಕರಾವಳಿಯಲ್ಲಿಯ ನಮ್ಮೂರು ಆಗೊಂದು ಕುಗ್ರಾಮ.[ಸಣ್ಣ ಹಳ್ಳಿ]ಎಲ್ಲೆಲ್ಲೂ ಸರಿಯಾದ ಸಂಪರ್ಕವೇ ಇಲ್ಲದಿದ್ದ ಕಾಲ. ಓಡಾಟಕ್ಕೆ ಸರಿಯಾದ ರಸ್ತೆ ಇಲ್ಲ, ಇದ್ದರೆ ವಾಹನ ಸೌಲಭ್ಯ ಇಲ್ಲ. ಒಟ್ಟು ಹೇಗೋ ಓಡಾಟ, ಕೆಲಸ ಈ ರೀತಿ. ನಮ್ಮ ಮನೆ ಒಂದು ಅವಿಭಕ್ತ ಕುಟುಂಬ. ಹೆಚ್ಚು ಕಮ್ಮಿ ಒಂದು ೧೨-೧೩ ಜನರು ಇದ್ದ ಮನೆ. ಇದ್ರಲ್ಲಿ ಕೆಲವರು ಮುದುಕರು, ಕೆಲವರು ಎಡಮುದುಕರು[ಮಧ್ಯವಯಸ್ಸು ಅಂತ]ಹೀಗೆಲ್ಲ, ಕೆಲವರಿಗೆ ಎಲ್ಲಾದರೂ ಅನಾರೋಗ್ಯವಾದರೆ ಆಸ್ಪತ್ರೆಗೆ ಅಂತ ೧೨-೧೩ ಕಿಲೊ ಮೀಟರ್ ಹೋಗಬೇಕು. ಅದು ರಾತ್ರಿಯಲ್ಲಾದರೆ ಶಿವನೇ ಗತಿ. ಹೀಗಾಗಿ ತುರ್ತು ಚಿಕಿತ್ಸೆಗೆ ಬಾಡಿಗೆ ವಾಹನ ತರಿಸಲಾದರೂ ಇರಲಿ ಅಂತ ನನ್ನ ಚಿಕ್ಕಪ್ಪ ಯಾರ್ಯಾರನ್ನೋ ಹಿಡಿದು ಒಂದು ದೂರವಾಣಿ ಸಂಪರ್ಕವನ್ನು ಪಡೆದರು. ಮೊನ್ನೆ ನಿಮಗೆ ಲಾಟೀನಿನ ಬಗ್ಗೆ ಹೇಳಿದಹಾಗೆ ಇದು ಅಂತಸ್ತಿನ ಪ್ರಶ್ನೆಯಾಗಿರದೆ ಅನಿವಾರ್ಯದ ಪ್ರಶ್ನೆ ಆಗಿತ್ತು.


ಟರರ್ ಟರರ್ ರೊಟ ರೊಟ ರೊಟ ರೊಟ ........ಇದು ಆಕಾಲದ ಉರುಟು ಡಯಲ್ ಪ್ಯಾಡ್ ಉಳ್ಳ ಫೋನ್.

ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ...ಬಂತು ರಿಂಗು.ಕಟ್ಟಾಯ್ತು, ಬಿಡಿ, ರಿಂಗಾಯಿತೆಂದರೆ ಎಲ್ಲಿದ್ದರೂ ಓಡಿಬರಬೇಕು. ಯಾಕೆಂದ್ರೆ ಅದು ಎಷ್ಟು ದೂರದ ಕಾಲೋ....ಆಗ ಎಸ್.ಟಿ.ಡಿ. ಇರಲಿಲ್ಲ. ಟ್ರಂಕ್ ಬುಕ್ಕಿಂಗ್ ಎಂಬ ಮಾದರಿ. ನಾವು ತಾಲೂಕಿನ ಕೇಂದ್ರದಲ್ಲಿರುವ ದೂರವಾಣಿ ’ಎಕ್ಸ್ ಚೇಂಜ್ ’ ಗೆ ಫೋನಾಯಿಸಿ ಫೋನಣ್ಣ ಅಥವಾ ಫೋನಕ್ಕನ್ನ [operators]ಮಾತಾಡಿಸಿ, ನಾವು ಇಂಥವರು ಮೆಂತೆಕದ್ದವರು ಅಂತೆಲ್ಲ ಪುರಾಣ ಹೇಳಿ, ನಮಗೆ ಬೇಕಾದ ಊರು, ಅವರ ನಂಬರು ಕುಲ ಗೋತ್ರ ಎಲ್ಲಾ ಕೊಟ್ಟು ಕಾಯಬೇಕು. ಇಸ್ಪೀಟಾಟದಲ್ಲಿ ಮಗ್ನರಾಗಿರುವ ಫೋನಣ್ಣ ಅಥವಾ ಫೋನಕ್ಕ ಅವರ ಬಿಡುವಿನಲ್ಲಿ ಅದೇನೋ ಕಡ್ಡಿ ಹಚ್ಚಿ ಅದು ಅಲ್ಲಿಗೆ ತಲ್ಪಿದಾಗ ನಮಗೆ ವಾಪಸ್ ಕಾಲ್ ಮಾಡಿ ಹೇಳೋರು. "ಇಂತವ್ರೇನ್ರೀ ಇಂತಾಕಡೆ ಫೋನಿದೆ ತಗೊಳಿ" -ಇದು ಅವರ ಉತ್ತರ ಆಕಡೆಯಿಂದ. ಲೈನು ಸಿಗುವ ಚಾನ್ಸೇ ಕಮ್ಮಿ. ಸಿಕ್ಕಿದರೆ ಬಹಳ ಸಲ ನಾ ನಾ ಥರದ ಕೇಳಲಾರದ ವಾದ್ಯಗೋಷ್ಠಿ [ಆರ್ಕೆಸ್ಟ್ರಾ] !

ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ...ಬಂತು ರಿಂಗು,
" ಹಲೋ ನಾನು ಹೊಸ್ಮನೆ ಸುಬ್ರಾಯ, ಭಾರತಿ ಕರೀರಿ"


" ಎಲ್ಲೀ ಭಾರತಿ? ಇಲ್ಲಿ ಅಂತಾ ಹೆಸ್ರನವ್ರು ಯಾರೂ ಇಲ್ಲ "

"ಗುಣವಂತೆ ಅಲ್ವಾ?"

" ಅಲ್ಲ"
ಹೀಗೆ ಆಗಾಗ ರಾಂಗ್ ಕಾಲ್ ಗಳು, ಯಾರನ್ನೋ ಪಕ್ಕದಮನೆಯವರನ್ನ ಕರೀರಿ ಎಂತೆಲ್ಲ. ಅದು ಹೋಗ್ಲಿ, ಹಳ್ಳಿ ಅಲ್ವ, ಮೈಲು ದೂರದ ಯಾವುದೋ ಮನೆಯವರನ್ನು ಕರೆದು ಬರುವಂತೆ ಕಾಲು, ಅದೇರೀತಿ ಏನನ್ನೋ ಎಷ್ಟೋದೂರದ ಮನೆಗೆ ಹೇಳಿಬರಲು ಅರ್ಜೆಂಟ್ ಆಗಿ ತಾಕೀತು ಮಾಡುವಂತೆ ಹೇಳುತ್ತಿದ್ದರು.

ಹಲವೊಮ್ಮೆ ನಮ್ಮ ಫೋನ್ ಸರಿಯಿರುತ್ತಿರಲಿಲ್ಲ. ಎತ್ತಿದರೆ ಒಂಥರಾ ಹಂದಿ ಕೂಗಿದ ಹಾಗೆ....ಅಥವಾ ಕೆಲವೊಮ್ಮೆ

"ಎಣ್ಣೆ ಡಬ್ಬ ಬಂದದೆ, ಚಲೋ ಅದೆ, ೪೫೦ ರೂಪಾಯ್ ಮಣ್ ಸಾಂಗ್, ಕಳನಾತುಕ....ಮಕ್ ಕಬರ್ನಾ ಅಶಿಲೆ ಮಾರಾಯಾ" ಎಂಬೆಲ್ಲ ಯಾರ್ಯಾರದೋ ಕೊಂಕಣಿ ವ್ಯಾಪಾರಸ್ತರ ಮಾತು, ಅಥವಾ ಇನ್ನೇನೋ ಕೇಳುತ್ತಿತ್ತು. ಒಂದರ್ಥದಲ್ಲಿ ಮಜಾ ತಗೊಳ್ಳುವವರಿಗೆ ಈಗಿನ ಮಲ್ಟಿಮೀಡಿಯಾಕ್ಕಿಂತ ಖುಷಿಕೊಡುತ್ತಿತ್ತು! ಎಷ್ಟೋ ಸಲ ಡೆಡ್ ಆಗಿರುತ್ತಿತ್ತು. ಹೊರಗಡೆ ದಾರಿಯಲ್ಲಿ ಎರಡು ಲೈನುಗಳು ಥಳಕು ಹಾಕಿಕೊಂಡುಬಿಡುತ್ತಿದ್ದುದುಂಟು. ಇದಕ್ಕೆ ಲೈನ್ಮನ್ ಅಂದು ನಮ್ಮನ್ನು ಕೂಗಿ ಕರೆದು ಏಣಿ, ದೋಟಿ [ಉದ್ದನೆಯ ಬಿದಿರು ಕೋಲು] ಇತ್ಯಾದಿ ತರಲು ಹೇಳುತ್ತಿದ್ದುದನ್ನೆಲ್ಲ ನೆನೆಸಿಕೊಂಡರೆ ಈಗಲೂ ಅಬ್ಬಾ !ಮತ್ತೆಂದೂ ಈ ಸಹವಾಸ ಬೇಡ.


ಟರರ್ ಟರರ್ ರೊಟ ರೊಟ ರೊಟ ರೊಟ

ಇದು ನೆನಪಾದಾಗ ಒಂದು ಹಾಡುಕೂಡ ನೆನಪಾಗುತ್ತದೆ ----


ನಮ್ಮ ಮನೆಯಲೊಂದು ಸಣ್ಣ ಫೋನು ಇರುವದು
ಎತ್ತಿಕೊಳಲು ಹೋದರದಕೆ ರೊಚ್ಚೆ ಹಿಡಿವುದು.
ರೊಚ್ಚೆಹಿಡಿದು ಎತ್ತಿದಾಗ ಕಿರುಚಿಕೊಳುವುದು
ಕಿರುಚಿಕೊಂಡು ನಮ್ಮ ಕಿವಿಯಲರಚಿಬಿಡುವುದು

ಇನ್ನೂ ಸ್ವಾರಸ್ಯ ಅಂದರೆ ನಮ್ಮ ಮನೆಯೆ ಒಂಥರ ಪಬ್ಲಿಕ್ ಸರ್ವಿಸ್ ಬೂತ್ ಥರಾ ಆಗಿಬಿಟ್ಟಿತ್ತು! ಸುತ್ತಲ ಅನೇಕ ಜನ ಫೋನ್ ಮಾಡಲೋ ಅಥವಾ ಯಾರದೋ ಕಾಲ್ ರಿಸೀವ್ ಮಾಡಲೋ ಬರುತ್ತಿದ್ದರು. ಬಂದವರಿಗೆ ಊಟ-ತಿಂಡಿ ಎಲ್ಲ ಉಪಚಾರವೂ ನಡೆಯುತ್ತಿತ್ತು. ಅವರು ಎಸ್.ಟಿ.ಡಿ. ಗೆ ಕಾಯುತ್ತಿದ್ದರೆ ಇಡೀದಿನವಾದರೂ ಆಗುತ್ತಿತ್ತು. ಮನೆಯಲ್ಲಿ ದಿನಾಲೂ ಸಮಾರಾಧನೆ. ಅಡಿಗೆ ಮಾಡೀ ಮಾಡೀ ಹೆಂಗಸರ ಕೈಕಾಲು ಬಿದ್ದುಹೋಗ್ಬೆಕು ಆ ರೀತಿ.

ಇನ್ನೊಂದು ತಕರಾರೆಂದರೆ, "ಯಾರಾದರೂ ಫೋನ್ ಮಾಡಲು ಹೋದರೆ ಅವರಮನೆಯಲ್ಲಿ ದುಡ್ಡು ತಗೋತಾರೆ, ಎಷ್ಟು ಗಂಟು ಮಾಡಿದ್ದಾರೋ !"

ಸ್ವಾಮೀ ನಿಮ್ಮ ಗಂಟಿನಕಥೆ ಹಾಳುಬೀಳಲಿ, ತಿಂಗಳ ಬಿಲ್ಲನ್ನು ತುಂಬುವಾಗ ಮನೆಯವರು ಎರಡೆರಡು ಶ್ವಾಸನಾಳದಲ್ಲಿ ಏದುಸಿರುಬಿಡುವ ಪ್ರಸಂಗ ಬರುತ್ತದೆ ಎಂದು ಹೇಳಬೇಕೆನಿಸಿದರೂ ಹೇಳಿಹಾಳಾಗಬೇಕಲ್ಲ ಎಂಬುದು ಬಹಳ ಹಿಮ್ಮೆಟ್ಟಿಸುತ್ತಿತ್ತು-ಇದು ದೊಡ್ಡವರಾಡಿಕೊಳ್ಳುತ್ತಿದ್ದ ಮಾತು. ನಾವೆಲ್ಲ ಚಿಕ್ಕವರು,. ನಮಗೇನು ತಿಳಿದೀತು.

ಫೋನ್ ನಲ್ಲಿ ಮಾತಾಡುವ ಕುತೂಹಲದಿಂದ ಕೆಲವರು ಅನಾವಶ್ಯಕವಾಗಿ ಮಾತನಾಡುತ್ತಿದ್ದರು. "ಹಲೋ, ಊಟ ಆಯ್ತಾ? ತಿಂಡಿಆಯ್ತಾ? ಮಲ್ಕೊಂಡ್ಬಿಟ್ರಾ ? ."......ಹೀಗೇ ಏನೇನೋ ....

ಕೆಲವರು ತಮ್ಮ ದೈನಂದಿನ ಚಿಕ್ಕ ಚಿಕ್ಕ ವ್ಯವಹಾರವನ್ನೂ ಫೋನ್ ಮೂಲಕ ಮಾಡಲು ಶುರುವಿಟ್ಟುಕೊಂಡಿದ್ದರು. ಒಂದು ದಿನ ಮೂಗಿಮನೆ ಮಂಜುನಾಥ ಬಂದು ೬ಕಿಲೊ ಮೀಟರ್ ದೂರದ ಯಾವುದೊ ಮನೆಗೆ ಫೋನ ಮಾಡಿದ
" ಹಲೋ ನಾನು ಮಂಜನಾಥ, ಎಮ್ಮೆ ರಾತ್ರಿ ಮೇಯಕ್ಕೆ ಬಿಟ್ಟದ್ದು ಬರ್ಲಿಲ್ಲ ಹೀಗಾಗಿ ಇವತ್ತು ಬರೋದಿಲ್ಲ ಅಲ್ಲಿಗೆ "

ಯಾರದೋ ಫೋನು ಎಲ್ಲಮ್ಮನ ಜಾತ್ರೆ !!



ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ...ಬಂತು ರಿಂಗು..." ಹಲೋ ಹಲೋ ಹಲೋ ...........
ಕೇಳಿಸ್ತಾನೇ ಇಲ್ಲ..... ಇದು ಬೊಂಬೈ ಕಾಲು ಗ್ಯಾರಂಟಿ !......ಹಲೋ ......ಹಲೋ........
ಟರರ್ ಟರರ್ ರೊಟ ರೊಟ ರೊಟ ರೊಟ ಟೊಂಯ್ ಟಕ್ ಟರರ್ ಟರರ್ ರೊಟ ರೊಟ ರೊಟ ರೊಟ "

"ಹಲೋ ನಾನು ಸುಧೀರಪ್ರಭು ಮಾತಾಡುದು ಬೊಂಬೈಯಿಂದ, ನಮ್ಮ ಮಾವನಮನೆ ವಾಸುದೇವ್ ಕಾಮತ್ ಇದಾರಲ್ಲ ಅವರಹತ್ರ ಸ್ವಲ್ಪ ಬಂದು ಫೋನ್ ಮಾಡ್ಲಿಕ್ಕೆ ಹೇಳ್ತೀರಾ...ಸ್ವಲ್ಪ ಅರ್ಜೆಂಟದೆ ಹಾ..."

ಬಂತು ಕೆಲ್ಸ, ಬಿಟ್ಟಿ ತಿರುಗಾಟ, ೫ಕಿಲೊಮೀಟರು, ಹೋಗಿ-ಬಂದ್ರೆ ೧೦, ಏನಪ್ಪಾ ಮಾಡೋದು, ಛೆ! ಅಂತೂ ಹೇಳಿಬಂದಿದ್ದಾಯ್ತು.
ವಾಸುದೇವ್ ಕಾಮತ್ ಬಂದರು. ಅಗೇನ್ ಸೇಮ್ ಪ್ರಾಸೆಸ್.......

" ಟರರ್ ಟರರ್ ರೊಟ ರೊಟ ರೊಟ ರೊಟ ಟೊಂಯ್ ಟಕ್ ಟರರ್ ಟರರ್ ರೊಟ ರೊಟ ರೊಟ ರೊಟ ".......ಫೋನಕ್ಕ ಮಾತಾಡಿದ್ಲು, ಮಾಮೂಲಿ ಟ್ರಂಕ್ ಕಾಲ್, ೩ ತಾಸು ಹೋಗಿದ್ದು ತಿಳಿಯಲೇ ಇಲ್ಲ.

ಇಂತಹ ಸಾವಿರಾರು ಸಮಾಜಸೇವೆ ಕೆಲಸಗಳನ್ನು ಅವಾರ್ಡ್ ತೆಗೆದುಕೊಳ್ಳದೇ ಮಾಡಿದ್ದೇವೆ!


ನಾನು ಎಲ್ಲೋ ’ಗೋಪಾಲ್ ಭಟ್ಟರ ಹುಲಿ’ ಎಂಬ ಯಾವುದೋ ಹಾಸ್ಯ ಲೇಖನ ಓದಿದ್ದೆ, ಆಥರ ನಮ್ಮ ಮನೆಯಲ್ಲಿ ಅನುಕೂಲಕ್ಕಾಗಿ ತಂದ ಫೋನ್ ಅವಾಂತರಕಾರಿಯಾಗಿತ್ತು. ಅದನ್ನು ಹಾಕಿಸಿಕೊಂಡಿದ್ದಕ್ಕೆ ಚಿಕ್ಕಪ್ಪಂದಿರಿಗೆ ಹೆಂಗಸರು ಸಹಸ್ರನಾಮಾವಳಿ ನಡೆಸಿದ್ದಾರೆ. ಒಂದು ದಿನ ಮನೆಯ ಎಲ್ಲರೂ ’ಮೀಟಿಂಗ್’ ಮಾಡಿ ಫೋನ್ ಇದ್ದರೇ ತೊಂದರೆ ಇನ್ನು ಮೇಲೆ ಫೋನ್ ಬೇಡ ಎಂಬ ತೀರ್ಮಾನಕ್ಕೆ ಬಂದೆವು. ಇನ್ನೇನು ಅಪ್ಲಿಕೇಶನ್ ಕೊಡಬೇಕು ಅಷ್ಟರಲ್ಲಿ ನಮ್ಮ ಊರಿಗೆ ೨ಕಿಲೋಮೀಟರ್ ದೂರದಲ್ಲಿ ಹೊಸ ಏಕ್ಸ್ ಚೇಂಜ್ ಬರುತ್ತದೆಂದೂ ಫೋನ್ ಬೇಕಾದವರೆಲ್ಲ ಸೇರಿ ಅರ್ಜಿ ಕೊಡಿರೆಂದೂ ಮಾಹಿತಿ ಬಂತು. ಆಗ ಕೆಲವರು ತಮ್ಮ ತಮ್ಮ ಮನೆಗೆ ಫೋನ್ ಹಾಕಿಸಿಕೊಳ್ಳಲು ಅರ್ಜಿಕೊಡುವಂತೆ ನಾವೇ ಸ್ವಲ್ಪ ಫೋನ್ ನ ಅನುಕೂಲಗಳಬಗ್ಗೆ ಭಾರೀ ಹೇಳಿದೆವು. ಹೀಗಾಗಿ ಅವರಲ್ಲಿ ಕೆಲವರು ನಾವು ಹೇಳಿದಂತೆ ಫೋನ್ ತೆಗೆದುಕೊಂಡರು. ಹೀಗಾಗಿ ನಮ್ಮಮನೆಯ ಫೋನ್ ತನ್ನ ’ಖುರ್ಚಿ’ಕಳೆದುಕೊಳ್ಳಲಿಲ್ಲ ಎಂಬಲ್ಲಿಗೆ ಫೋನಾಯಣಮ್ ಸಂಪೂರ್ಣಂ.

ಫಲಶ್ರುತಿ

ಇದನ್ನು ಹೇಳಿದವರಿಗೆ, ಹೇಳಿಸಿದವರಿಗೆ, ಕೇಳಿದವರಿಗೆ, ಕಾಪಿಮಾಡಿದವರಿಗೆ, ತರ್ಜುಮೆಮಾಡಿದವರಿಗೆ,ಅವರಿಂದ ಇವರಿಗೆ-ಇವರಿಂದ ಅವರಿಗೆ ಹೇಳಿದವರಿಗೆ, ಮನೆಯಲ್ಲಿ ದಿನಾಲೂ ಅನೇಕಸಲ ಪಠಿಸುವವರಿಗೆ ಶ್ರೀದೂರವಾಣಿತಾಯಿ ರೊಟ ರೊಟ ಎನ್ನದೇ ಸಕಲ ಸೌಲಭ್ಯವನ್ನೂ ಇತ್ತು ದೂರಸಂಪರ್ಕ ಸರಿಯಾಗಿ ಕಲ್ಪಿಸಲಿ

ದಿನದಲ್ಲಿ ಒಂದುಸಲ ಪಠಿಸಿದರೆ ಕಂಠಪಾಟವಾಗುವಂತೆಯೂ, ಎರಡುಸಲ ಪಠಿಸಿದರೆ ಪಕ್ಕದಮನೆಯವರು ಜೊತೆಗೆ ಸೇರಿ ಸಂಘ ಶುರುವಾಗಲೆಂದೂ, ಮೂರುಸಲ ಜಪಿಸಿದರೆ ಅಕ್ಕ-ಪಕ್ಕದ ಮನೆಗಳವರೂ ಸಂಘಕ್ಕೆ ಸೇರಲೆಂದೂ, ಮೂರಕ್ಕಿಂತ ಹೆಚ್ಚಿನಸಲ ಜಪಿಸಿದವರಿಗೆ ಮೊಬೈಲ್ ತೆಗೆದುಕೊಳ್ಳಬೇಕಾಗುತ್ತದೆಂದೂ ತಿಳಿಸಲು ವಿಷಾದಿಸುತ್ತೇವೆ!

ರುಖಾವಟ್ ಕೇಲಿಯೇ ಖೇದ್ ಹೈ..............ಟರರ್ ಟರರ್ ರೊಟ ರೊಟ ರೊಟ ರೊಟ



Thursday, January 28, 2010

ಯಾವುದೀ ಹೊಸಸಂಚು ಎದೆಯಂಚಿನಲಿ ಮಿಂಚಿ...


ಯಾವುದೀ ಹೊಸಸಂಚು ಎದೆಯಂಚಿನಲಿ ಮಿಂಚಿ...

ಜಯದೇವಾ ಜಯದೇವಾ
ಜಯಶ್ರೀ ಗುರುವರಗೆ ಜಯ ಸದ್ಗುರುವರಗೆ
ಜಯಜಯ ನಿತ್ಯ ನಿರಂಜನ ನಿರುತಾನಂದನಿಗೆ ”

ಯಾವ ಮಿಲಿಟರಿ ಪಡೆಯೂ ಕೂಡ ಅಷ್ಟು ಅಚ್ಚುಕಟ್ಟಾಗಿ ದೇಶ ಭಕ್ತಿಗೀತೆ ಹಾಡಲಿಕ್ಕಿಲ್ಲ, ಅಂತಹ ರೀತಿಯಲ್ಲಿ ಸುಲಭ-ಸರಳಸಾಹಿತ್ಯಹೊಂದಿರುವ ಅಜ್ಞಾತ ಕವಿಯಿಂದ ರಚಿಸಲ್ಪಟ್ಟ ಸ್ತುತಿಗೀತೆಯನ್ನು ನೀವೊಮ್ಮೆ ಕೇಳಬೇಕು. ಅಲ್ಲಿ pindrop silence. ಅದರ ಭಾವತರಂಗಗಳು ನಮ್ಮ ಮನಕ್ಕೆ ತಲ್ಪುತ್ತಿದ್ದಂತೆ ಏನೋ ಒಂದು ಅವಿಸ್ಮರಣೀಯ ಆನಂದ.



ಬಹುಶಃ ಇದರಬಗ್ಗೆ ತಮಗೆ ತಿಳಿದಿರದಿದ್ದರೂ ಮುರುಡೇಶ್ವರದ ಬಗ್ಗೆ ತಮಗೆ ಹೊಸದಾಗಿ ಹೇಳುವುದು ಬೇಡ. ಇವತ್ತು ಜಗತ್ಪ್ರಸಿದ್ಧಿ
ಪಡೆದ ಮುರುಡೇಶ್ವರ ದೇವಸ್ಥಾನ ಸುಮಾರು ೪೦ ವರ್ಷಗಳ ಹಿಂದೆ ಕುಸಿದು ಬೀಳುವಷ್ಟು ಶಿಥಿಲವಾಗಿತ್ತು. ಅದು ಮುಂದೆ ಸರಿಯಾದ ವ್ಯಕ್ತಿಯೊಬ್ಬರಿಂದ ಜೀರ್ಣೋದ್ಧಾರಗೊಂಡು ಬಹಳ ಉತ್ತಮ ಮಟ್ಟಕ್ಕೆ ತಲ್ಪುತ್ತದೆ ಎಂದು ತಮ್ಮ ಯೋಗಬಲದಿಂದ ಆಗಲೇ ಸಾರಿದ್ದ, ಮಕ್ಕಳಿರದಿದ್ದ ಮೈಸೂರು ಜಯಚಾಮರಾಜೇಂದ್ರರಿಗೆ ಮಗು ಶ್ರೀಕಂಠದತ್ತನರಸಿಂಹರಾಜರು ಜನಿಸುವಂತೆ ಆಶೀರ್ವದಿಸಿದ್ದ, ಮೈಸೂರಿನಲ್ಲಿ ಏಕಕಾಲದಲ್ಲಿ ಸ್ಥಳಗಳ ವೇದಿಕೆಯಲ್ಲಿ ಆಶೀರ್ವಚನ ನೀಡಿದ್ದ, ನಮ್ಮ ವಿಧಾನಸೌಧದ ಕಟ್ಟಡ ಅದ್ಬುತವಾಗಿ ರೂಪುಗೊಳ್ಳಲೆಂದು ಹರಸಿದ್ದ ಅದಮ್ಯ ದಿವ್ಯ ಚೇತನ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು.

ಉತ್ತರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಲಾಡ್
ಚಿಂಚೋಳಿಯಲ್ಲಿ ಬಡ ಬ್ರಾಹ್ಮಣ ಕುಟುಂಬದಲ್ಲಿ ದತ್ತಾತ್ತ್ರೇಯನ ಅವತಾರವಾಗಿ ಜನಿಸಿದ್ದರು. ದೇಶದುದ್ದಗಲ ಸಂಚರಿಸಿ ಜನರ ಕಷ್ಟಕಾರ್ಪಣ್ಯಗಳನ್ನು ದೂರಮಾಡಿದ ಮಹಾನ್ ಚೇತನಗಳಲ್ಲಿ ಶ್ರೀಗಳೂ ಒಬ್ಬರು. ಬಹುಶಃ ಶ್ರೀ ಆದಿಶಂಕರರ ನಂತರ ದೇಶದುದ್ದಗಲ ಸಂಚರಿಸಿ ಜನರಿಗೆ ನೆರವಾದ ಸನ್ಯಾಸಿ ಇವರೊಬ್ಬರೇ ಅಂದರೆ ತಪ್ಪಾಗಲಾರದು.

ನಾವು ಅನೇಕ ಮಹಾತ್ಮರ ಬಾಲ್ಯದ ಬಗ್ಗೆ ಕೇಳಿದ್ದೇವೆ. ಆದರೆ ಅತೀವ ಕಷ್ಟದ, ಬಡತನದ ಬಾಲ್ಯ ಮಿಕ್ಕುಳಿದವರ ಚರಿತ್ರೆಗಳಲ್ಲಿ
ಕಂಡುಬರುವುದಿಲ್ಲ. ಪ್ರಾಯಶಃ ಅವರ ಬಾಲ್ಯದ ಬಗೆಗೆ ಓದುವಾಗ ನಮಗೆ ಕಣ್ಣೀರೊರೆಸಿ ಹಿಂಡಲು ಪ್ರತ್ಯೇಕ ಬಟ್ಟೆಯೇ ಬೇಕು. ಇಂತಹ ಅತಿ ಕಠಿಣ ಬಾಲ್ಯವನ್ನು ಸಹಿಸಿ, ಕುಟುಂಬದ ಎಲ್ಲರನ್ನೂ ಕಳೆದುಕೊಂಡು, ವಾಸಿಸಲು ಸರಿಯಾದ,ಸ್ಥಿರವಾದ ಮನೆಯಿಲ್ಲದೇ ಮುನ್ನಡೆದ ಬಾಲಕ ಮುಂದೊಂದು ದಿನ ಆರ್ತರ ಕಣ್ಣೀರೊರೆಸುವ ಮಹಾನ್ ಯೋಗಿಯಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಅವರು ಹುಟ್ಟಿದ್ದೇ ಬೇರೆಯವರ ಸೇವೆಗಾಗಿ ಎಂಬುದು ಸ್ಥೂಲವಾಗಿ ನೋಡಿದಾಗ ಗೊತ್ತಾಗುತ್ತದೆ.

|| ಮೋಕ್ಷಶ್ರಿಯಂ ಧರತೀ ಇತಿ ಶ್ರೀಧರಃ ||

ಶ್ರೀಧರಎನ್ನುವ ಹೆಸರು ಬಹಳ ಅರ್ಥಗರ್ಭಿತ. ಮೋಕ್ಷಶ್ರೀಯನ್ನು ಧರಿಸಿದಾತನೇ ಶ್ರೀಧರ. ಸಂಸ್ಕೃತದಲ್ಲಿ || ವರ್ಣಮಾತ್ರಂ
ಗುರುಃ || ಎನ್ನುತ್ತಾರೆ. ಅಂದರೆ ಒಂದೇ ಒಂದು ಅಕ್ಷರವನ್ನು ಕಲಿಸಿ/ತಿಳಿಸಿಕೊಟ್ಟರೂ ಆತಗುರುಎಂದು ಗೌರವಿಸುತ್ತಾರೆ. ಜನನಿ ಮೊದಲಗುರು ಎಂದೂ ನಂತರ ಮಿಕ್ಕುಳಿದ ಹಲವಾರು ರೀತ್ಯಾ ಗುರುಗಳು ಜೀವನದಲ್ಲಿ ಬರುತ್ತಾರೆ. ಆದರೆ ನಮ್ಮ ಆತ್ಮಕ್ಕೆ ಸರಿಯಾದ ಪಾರಮಾರ್ಥಿಕ ದಾರಿಯನ್ನು ತೋರಿ ನಮ್ಮನ್ನು ಜನ್ಮಾಂತರಗಳ ಬಂಧನದಿಂದ, ಕುಣಿಕೆಯಿಂದ ತಪ್ಪಿಸುವಾತನೇ ನಿಜವಾದ ಗುರು ಎಂದು ಪರಿಗಣಿಸಲ್ಪಡುತ್ತಾನೆ. ಇಲ್ಲಿ ನಾಸ್ತಿಕರು ವಾದಿಸಿದರೆ ಅವರಲ್ಲಿ ನನ್ನ ಪ್ರಶ್ನೆಗಳೊಂದೆರಡು-

ಆತ್ಮ ಎಂಬ ಚೇತನ ಯಾವರೂಪದಲ್ಲಿದೆ? ಅದು ದೇಹದಲ್ಲಿ ಎಲ್ಲಿರುತ್ತದೆ? ಅದು ಬರುವಾಗ ಎಲ್ಲಿಂದ ಬಂತು? ಸತ್ತಮೇಲೆ ಎಲ್ಲಿಗೆ
ಹೋಗುತ್ತದೆ ?

. ಸೂರ್ಯ ಚಂದ್ರಾದಿ ಆಕಾಶ ಕಾಯಗಳನ್ನು ಯಾ ಸ್ಥಾನಗಳಲ್ಲಿ ಸರಿಯಾಗಿ ಇರುವಂತೆ ಆಡಳಿತ ನಡೆಸುವ ಗುರುತ್ವ
ಶಕ್ತಿ ಯಾಕೆ, ಹೇಗೆ ಸೃಜಿಸಲ್ಪಟ್ಟಿತು?

. ವಿಜ್ಞಾನಿಗಳು ಕುಳಿತು ನಮಗೆ ಬೇಕಾದ ನೀರಿಗಾಗಿ H2O Formula ಮಾಡಿ ನೀರು ತಯಾರಿಸುತ್ತಾರೆಯೇ? ಅಥವಾ
ಗಾಳಿಯಲ್ಲಿ ಆಮ್ಲಜನಕವನ್ನು ತುಂಬಿದವರು ಅವರೇನಾ?

ಇಂತಹ ಅನೇಕ ಪ್ರಶ್ನೆಗಳು ಇಂದಿಗೂ ಉತ್ತರ ರಹಿತ ! ಹೀಗಾಗಿ ಮಾರ್ಮಿಕವಾಗಿ ಚಿಂತನ ನಡೆಸುವಾಗ ನಮ್ಮ ಹೃದಯದಲ್ಲಿ
ಇರುವ ಸಂಚಿನ ಅರ್ಥ ನಮಗೇ ಅರಿವಿಲ್ಲವಲ್ಲ ಎಂಬುದು ಸ್ಪಷ್ಟ !

ಜೀವನದಲ್ಲಿ ಸದ್ಗುರುವನ್ನು ಪಡೆಯಲೂ ಯೋಗಬೇಕು, ಅವರ ಅಪ್ಪಣೆ ಸಿಗಬೇಕು. ಗುರುವನ್ನು ಕಾದು ದರ್ಶನ ಮಾಡಬೇಕು.ಜನರ
ಅಹವಾಲುಗಳನ್ನು ಸ್ವೀಕರಿಸಿ ಅವರ ಕಷ್ಟಗಳನ್ನೆಲ್ಲ ತಾನು ಅನುಭವಿಸವಂತೆ ಪಡೆದು, ತಪೋಬಲದಿಂದ ಅವರೆಲ್ಲರ ಕಣ್ಣೀರೊರೆಸಿದ, ಅವರಿಗೆ ಹೊಸ ಜೀವನ, ಮಾರ್ಗ ಕಲ್ಪಿಸಿದ ಶ್ರೀಧರರು ಮಹಾರಾಷ್ಟ್ರದ ಸನ್ಯಾಸಿ ಸಮರ್ಥ ರಾಮದಾಸರ ಶಿಷ್ಯರಾಗಿ, ದೇಶಾಂತರ ತಿರುಗುತ್ತ ಶಿವಮೊಗ್ಗೆಯ ಸಾಗರ ಪ್ರಾಂತದಲ್ಲಿ ವರದಪುರ ಎಂಬ ಗುಡ್ಡದಮೇಲೆ ಲೋಕೋದ್ಧಾರಕ್ಕಾಗಿ ಅಖಂಡ ತಪಸ್ಸನ್ನು ನಡೆಸಿದರು.ಹಾಗೆ ಮಾಡಲು ಕಾರಣಗಳಿವೆ.ವರದಪುರ ಬಹಳ ರಮ್ಯ-ಮನಮೋಹಕ ತಾಣ. ಸಹಜವಾಗಿ ಋಷಿಗಳಿಗೆ ಹೇಳಿಮಾಡಿಸಿದ ಹಾಗಿರುವ , ಹಿಂದೆ ಅಗಸ್ತ್ಯರಾದಿಯಾಗಿ ಅನೇಕರು ತಪಸ್ಸುನಡೆಸಿದ ತಪೋಭೂಮಿ. ಇಂತಹ ಕ್ಷೇತ್ರವನ್ನು ಆಯ್ದುಕೊಂಡು ಅಲ್ಲಿ ಪವಿತ್ರ ತೀರ್ಥವನ್ನು ಸೃಜಿಸಿ ಗಂಗಾದಿ ಸರ್ವ ತೀರ್ಥಗಳನ್ನೂ ಅಲ್ಲಿಗೆ ಆಕರ್ಶಿಸಿ ತಮ್ಮ ತಪದ ಧಾರೆಯನ್ನೇ ಆ ಜಲಧಾರೆಗೆ ತುಂಬಿ ಅದನ್ನೇ ದಿವ್ಯೌಷಧವೆಂದು ಘೋಷಿಸಿದರು.




೧೯೦೮ ರಲ್ಲಿ ಜನಿಸಿದ ಶ್ರೀಗಳು ೧೯೭೩ ತನಕ ದೇಹದಿಂದಿದ್ದರು. ಅವರ ಬಗೆಗಿನ ಅವರ ಚರಿತ್ರೆಯಲ್ಲಿ ಸಾ
ವಿರ ಸಾವಿರದೋಪಾದಿಯಲ್ಲಿ ವಿಚಿತ್ರ ಘಟನೆಗಳು ನೋಡಸಿಗುತ್ತವೆ. ಅವೆಲ್ಲವನ್ನೂ ಕಾಲದ ಹಾಗೂ ಸ್ಥಳದ ಪರಿಮಿತಿಯಿಂದ ಇಲ್ಲಿ ಹೇಳಲಾಗುತ್ತಿಲ್ಲ. ಆಸಕ್ತರು ನೇರವಾಗಿ ಶ್ರೀಧರರ ಅಶ್ರಮಕ್ಕೆ ಹೋಗಿ ಪಡೆಯಬಹುದು. ಬೆಂಗಳೂರಿಗೆ ಬಂದ ಗುರುಗಳನ್ನು ಗೌಡರೊಬ್ಬರು ತಮ್ಮ ಮನೆಯವರ ವಾಸಿಮಾಡಲಾಗದ ಕಾಯಿಲೆಯನ್ನು ನಿವಾರಿಸುವಂತೆ ಪ್ರಾರ್ಥಿಸಿದಾಗ ಅವರ ಕಾಯಿಲೆ ವಾಸಿಯಾಗಿ, ಗುರುಗಳಿಗೆ ಪ್ರತಿಯಾಗಿ ಏನಾದರೂ ಸ್ವೀಕರಿಸಬೇಕೆಂದು ಹಠ ಹಿಡಿದರಂತೆ. ಯಾವತ್ತೂ ಯಾರಿಂದಲೂ ಏನನ್ನೂ ಬಯಸದ-ಸ್ವೀಕರಿಸದ ಶ್ರೀಗಳು ವಸಂತಪುರದಲ್ಲಿ ಗೌಡರ ಮನೆಯ ಪಕ್ಕದಲ್ಲಿ ಸ್ವಲ್ಪ ಜಾಗವನ್ನು ದಾನವಾಗಿ ಪಡೆದರು. ಅದು ನಮ್ಮ ಬೆಂಗಳೂರಿಗರಿಗೆ ಇಂದು ಶ್ರೀಧರ ಪಾದುಕಾಶ್ರಮವಾಗಿ ಹರಸುತ್ತಿದೆ.

ಅವರ ಉಪಸ್ಥಿತಿಯಲ್ಲಿ ಪಶು-ಪಕ್ಷಿಗಳೂ ಕೂಡ ಆನಂದವನ್ನು ಅನುಭವಿಸುತ್ತಿದ್ದವು ಎಂಬುದಕ್ಕೆ ಸಾಕ್ಷಿಯಾಗಿ ವರದಪುರದಲ್ಲಿ ಅವರ ಸಮಾಧಿಗೆ
ಮಧ್ಯಾಹ್ನದ ಮಂಗಲಾರತಿ ವೇಳೆ ಎಲ್ಲಾ ನಾಯಿಗಳೂ ಮುಖ ಮೇಲೆತ್ತಿ ಅಳುವರೀತಿಯಲ್ಲಿ ಕೂಗುವುದು ಬಲು ಸೋಜಿಗವೇಸರಿ!ತಾಯಿಗೂ ಮಿಗಿಲಾಗಿ ಎಲ್ಲರ ತಾಯ್ತಂದೆಯಂತಿದ್ದ ಶ್ರೀಗಳ ಜನ್ಮ ಶತಮಾನೋತ್ಸವ ಕಳೆದವರ್ಷ ನಡೆಯಿತು. ಇಂತಹ ಮಹಾತ್ಮರು ಮತ್ತೆ ಜನಿಸಲಿ, ನಿಜವಾಗಿ ಜನತೆಯ ಕಣ್ಣೀರೊರೆಸಲಿ ಎಂದು ಪ್ರಾರ್ಥಿಸೋಣ.