ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, January 20, 2010

ತೋರಿಸೇ ಮಾಧವನಾ......


ತೋರಿಸೇ ಮಾಧವನಾ.......

ಮುದ್ದು ಕೃಷ್ಣನ ಮುಖಾರವಿಂದದ ನೆನಪು ಯಾರಿಗೆ ಮುದನೀಡುವುದಿಲ್ಲ? ಬಾಲ್ಯದಲ್ಲಿ-ಶೈಶವಾವಸ್ಥೆಯಲ್ಲಿ ಎಲ್ಲಾ ಕಂದಮ್ಮಗಳನ್ನೂ ಹೋಲಿಸುವುದು ಕೃಷ್ಣನಿಗೆ ಮಾತ್ರ! ಅದರಲ್ಲಂತೂ ಕಿಲಾಡಿಗಾಗಿ ಪ್ರಸಿದ್ಧರಾದವರು ಇಬ್ಬರೇ-ಒಬ್ಬಾತ ಕೃಷ್ಣ[ಕಿಲಾಡಿ ಕಿಟ್ಟ] ಮತ್ತೊಬ್ಬಾತ ಹನುಮಂತ [ಕಿಲಾಡಿ ಹನುಮ] ‘ಯೇ ಕಿಲಾಡಿ ಕಾ ಮಾಮ್ಲಾ ಹೈ’

ನೊಂದ ರಾಧೆ ತನ್ನ ತುಂಟ ಕೃಷ್ಣನನ್ನು ಅವನ ತುಂಟಾಟದ ವೈಭವ, ವೈಖರಿಯೊಂದಿಗೆ ತುಸುಕೋಪದಿಂದ, ಅತಿ ಪ್ರೀತಿಯಿಂದ [ಒಂಥರಾ ಪ್ರೀತಿ, ಒಂಥರಾ ಕೋಪ ಅಂತಾರಲ್ಲ ಹಾಗೇ] ಬಣ್ಣಿಸಿ ತನ್ನ ಸಖಿಗೆ ಆತನನ್ನು ಹುಡುಕಿಕೊಂಡು ಬರಲು ಹೇಳುತ್ತಾಳೆ. ಕೃಷ್ಣ ಎಂದರೆ ಅನೇಕದರಲ್ಲಿ ಏಕ-ಏಕದರಲ್ಲಿ ಅನೇಕ ತತ್ವವನ್ನು ತೋರಿಸಿದ ಅತಿಮಾನುಷ ವ್ಯಕ್ತಿ, ಹೀಗೆ ಜೊತೆಗೆ ಕಂಡೂ ಕಾಣಿಸದ-ಕಾಣಿಸದೆಯೂ ಕಾಣುವ ಈ ತುಂಟಾಟ [ಈ ನನ್ನ ಕವನದಲ್ಲಿ] ರಾಧೆಗೆ ಬೇಸರಮೂಡಿಸುತ್ತದೆ.

ಮಹಾಭಾರತದ ಈ ಪಾತ್ರ: ಗೆಳೆಯನಾಗಿ, ನೆಂಟನಾಗಿ, ಹಿತೈಷಿಯಾಗಿ, ಸಂಧಾನಕಾರನಾಗಿ, ಆಪದ್ಬಾಂಧವನಾಗಿ, ದುಷ್ಟ ಶಕ್ತಿನಿರ್ಮೂಲಕನಾಗಿ, ವಿಶ್ವಕ್ಕೆ ಮನುಜ ಮತವನ್ನೂ, ವಿಶ್ವ ಪಥವನ್ನೂ ಬೋಧಿಸಿ ವಿರಾಟ್ ಸ್ವರೂಪನಾಗುತ್ತಾನೆ; ವಿಶ್ವವಂದ್ಯನಾಗುತ್ತಾನೆ, ‘ಜಗದ್ಗುರು’ವಾಗುತ್ತಾನೆ. ಎಲ್ಲಿಯವರೆಗೆ ಜಗದಲ್ಲಿ ಚಿಕ್ಕಮಕ್ಕಳಿರುತ್ತಾರೋ ಅಲ್ಲಿಯವರೆಗೆ ನಮ್ಮ ‘ತುಂಟಗುರು’ವಿನ ನೆನಪು ಹಸಿರಾಗಿರುತ್ತದೆ; ಹಸಿ ಹಸಿಯಾಗಿರುತ್ತದೆ. ಇಂಥ ‘ತುಂಟಗುರು’ವಿನ ತಂಟೆಯನ್ನು, ‘ಅವನು ನಮ್ಮವ’ ಎಂದು ಬಾಚಿ ತಬ್ಬಿಕೊಳುವ ಹಪಹಪಿಕೆಯನ್ನು ನಿಮ್ಮ ಮುಂದೆ ನನ್ನ ಶಬ್ಧಗಳಲ್ಲಿ ಇಡುವ ಪ್ರಯತ್ನಮಾಡಿದ್ದೇನೆ............

ತೋರಿಸೇ ಮಾಧವನಾ.......ಕೇಳೆಲೆ ಸಖೀ
ತೋರಿಸೇ ಮಾಧವನಾ.......

ಗೋಪಕನ್ನಿಕೆಯರು ಗೋಪಾಲನಕಂಡು
ನೂಪುರಕಟ್ಟಿ ತಾವ್ ನೋಂಪಿಹಾಡಿದರು
ಛಾಪು ಒತ್ತುತ ತನ್ನ ಕಾಪೀ ರಾಗದ ಕೊಳಲ
ಆಪರಿ ನುಡಿಸುತ ನೇಪಥ್ಯ ಸೇರಿದ.......||೧||

ಪರಿಜನ ಪುರಜನ ಹರಿಜನರೆಲ್ಲರು
ಸರಸರ ನಡೆವರೆ ತಡೆದಾಲೈಪರು
ಮರಕತ ಮಾಣಿಕ್ಯ ವೈಡೂರ್ಯಬೇಡದೆ
ಬಿರುಕಿನ ಬಿದಿರಲೆ ಮೋಡಿಯ ಮಾಡಿದ....||೨||

ಮೂರುಜಾವದ ವಿರಹ ನೂರು ಜನ್ಮದ ಥರ
ನಾರೀಹೃದಯದ ಗೋಳು ನೀರೆ ಬಲ್ಲೆಯ ಹೇಳು?
ಖಾರವಾಗಿದೆ ಮನ.. ನೆನೆದು ಮೂರ್ಖತನ
ಮಾರನ ಶರದಬ್ಬರ ಸಾರಿಬರುತಿದೆ...........||೩||

ಮೊಸರು-ಬೆಣ್ಣೆಯ ಕದ್ದು ಹೆಸರು ಕೆಡಿಸಿಕೊಂಡ
ಕೆಸರೊಳಗಾಡುತ ಹಾವನು ತುಳಿದಾತ
ಕಸಿವಿಸಿಗೊಂಡಿಹ ತಾಯಿಗೆ ಬಾಯಲಿ
ನಸುನಗುತಾ ಮೂಜಗವನೆ ತೋರಿದಾ...||೪||


ಆಗೊಮ್ಮೆ ಈಗೊಮ್ಮೆ ಮತ್ತೊಮ್ಮೆ ಮಗದೊಮ್ಮೆ
ಬೇಗಬರುವೆನೆಂದು ಸಾಗಿ ಹೋಗುವನೀತ
ಕೂಗಿಕರೆದರಿಲ್ಲ ಹೋಗಿ ಹುಡುಕಿದರಿಲ್ಲ
ನಾಗವೇಣಿಯೆ ತೋರೆ ಜಾಗಕೆಳೆದುತಾರೆ...||೫||

Tuesday, January 19, 2010

ಮಾಘಿಯ ಇಬ್ಬನಿ



ಮಾಘಿಯ ಇಬ್ಬನಿ

ನಸುಕಲೆ ಯಾಕೆ ಕೂಗಿದೆ ಹೇಳೇ
ಮಾಮರದಿ ಕೋಗಿಲೆ?
ಮಾಘಿಯ ಚಳಿಗೆ ಮರದಲಿ ಅವಿತು
ರಾಗವದು ಯಾಕೆಲೆ?

ಮುಂಜಾವದಲೇ ಸೂರ್ಯಬಂದಿರಲು
ಮೇಲೇಳದ ಆಲಸ್ಯ
ಮೈಯ್ಯನು ಮುರಿಯುತ ಹೊದಿಕೆಯ ಎಳೆದರೂ
ಹಾಸಿಗೆ ಬಿಡದು ರಹಸ್ಯ !

ಮಲೆನಾಡಿನ ಮೂಲೆಯೂರಿನ ಮನೆಯಲಿ
ಆಲೆಯ ಗಾಣದ ತಿರುವು
ಗಣಗಣಗುಡಿಸುತ ಗಾಣವ ಎಳೆಯುವ
ಹೋರಿಗಿದೆಯೆ ತುಸು ತೆರವು ?

ಬಿಸಿ ಬಿಸಿ ಕಾಫಿಯ ಲೋಟದೊಳಾಪರಿ
ಏನಡಗಿದೆ ಹೊಸ ಸತ್ವ ?
ಕಸುವು ತುಂಬಿ ಕೆಲಸಕೆ ಅಣಿಗೊಳಿಸುವ
ಬಿಂಕದ ಬಿಸಿರಸ ತತ್ವ !

ಬಚ್ಚಲು ಮನೆಯದು ನೆಚ್ಚಿನ ಆಸರೆ
ದಿನದೀ ಚೊಚ್ಚಲ ಘಳಿಗೆ
ಹುಚ್ಚು ಹರಿಯೆ ಹಂಡೆಯ ಬಿಸಿನೀರಿದೆ
ಬೆಚ್ಚನ ಆ ಒಲೆ ಬಳಿಗೆ


ತೊಟ್ಟಿಲ ಮಗುವಿನ ಕಿಲಕಿಲ ನಗುವಲಿ
ಕಳೆದು ಹೋಗುವ ಬಯಕೆ
ಬೆಟ್ಟವನೇರುತ ಎಳೆ-ಹೂ ಬಿಸಿಲಲಿ
ಮಿಳಿತು ಕುಣಿವ ಮೈ-ಮನಕೆ

ನಸುಗೆಂಪು ನಗೆಯ ಗುಲಾಬಿ ಮೇಲ್ಗಡೆ
ನವಿರಾದ ಮಂಜಹನಿಯು
ತುಸುನಾಚಿ ಮುಂದೆ ಸಾಗುವ ಇರುವೆಗೆ
ತಡಸೀತೆ ನೀರಹನಿಯು ?

ಗಡಬಡಿಸಿ ಓಡ್ವ ಗಡಿಯಾರದ ಮೇಷ್ಟ್ರಿಗೆ
ಯಾಕಿಲ್ಲವೊ ತುಸು ಕರುಣೆ ?
ಎಡಬಿಡದೆ ನಡೆದು ಈ ಜೀವಸಂಕುಲಕೆ
ಕಾಲದ ಒಗ್ಗರಣೆ !


Monday, January 18, 2010

ದಾಮೋದರ ಗುರೂಜಿ


ದಾಮೋದರ ಗುರೂಜಿ

ಹಿಂದೆ ಬೇಲೂರು-ಹಳೇಬೀಡು ದೇವಸ್ಥಾನಗಳನ್ನೆಲ್ಲ ಕೆತ್ತಿ ಕಟ್ಟಿದ್ದು ಜಕಣಾಚಾರಿ ಎಂಬುದು ಹಲವರಿಗೆ ವಿದಿತವಷ್ಟೆ ? ಈ ಸಾಲಿನಲ್ಲಿಮಾನಸಿಕವಾಗಿ’ ನಿಲ್ಲುವವರು ನಮ್ಮ ದಾಮೋದರ ಗುರೂಜಿ!

“ದಾಮೇನ ಉದರಂ ಬದ್ಧಃ ಇತಿ ದಾಮೋದರಃ” ಎಂದುಕೊಳ್ಳುತ್ತ ತಮ್ಮ ಲಂಬೋದರವನ್ನು ನೀಟಾಗಿ ನೀವಿಕೊಳ್ಳುತ್ತನಗೆಯಾಡುವುದು ಬಲು ಆಕರ್ಷಕ. ಹದವಾದ ಹುರಿಮೀಸೆ, ಹಿಂದಕ್ಕೆ ಬಾಚಿ ಹರಡಿದ ತಲೆಗೂದಲು, ಗರಿಗರಿ ಜುಬ್ಬ-ಪೈಜಾಮು, ಹೆಗಲಮೇಲೊಂದು ಶಾಲು, ಕೊರಳಲ್ಲಿ ಒಂದು ನವರತ್ನ ಹಾರ, ಕೈಯ್ಯಲ್ಲೊಂದು ಬ್ಲಾಕ್ ಬೆರ್ರಿ ಮೊಬೈಲು -ಇದು ನಮ್ಮಗುರೂಜಿಯ ಭೌತಿಕ ಸ್ವರೂಪ.

ಹಿನ್ನೆಲೆ [ಯಾರಿಗೂ ಹೇಳತಕ್ಕದ್ದಲ್ಲ; ನಿಮ್ಮಲ್ಲೇ ಇರಲಿ]-ಪೂರ್ವಾಶ್ರಮ
________________________________________
ರಿಪ್ಪನ್ಪೇಟೆಯಲ್ಲಿ ಸಣ್ಣದೊಂದು ಬೀಡಿ ಅಂಗಡಿ ಇಟ್ಟು ಗಿರಾಕಿ ಇಲ್ಲದೇ ಲಾಸು ಹೊಡೆದಿದ್ದ ದಾಮು ಟರ್ನಿಂಗ್ ಪಾಯಿಂಟ್ಗಾಗಿಕಾದಿದ್ದ. ಕಂಡ ಕಂಡ ದೇವರಿಗೆ ಹರಕೆ ಹೊತ್ತಿದ್ದೇ ಹೊತ್ತಿದ್ದು;ಹೇಗೋ ಏನೋ ದೇವರು ಕೃಪೆ ತೋರೇ ಬಿಟ್ಟ. ಕ್ಲಾಸ್ ಮೇಟ್ ಆಗಿದ್ದಸುರೇಶ O2 tv channel ನಲ್ಲಿ ಹೊಸ ಕಾರ್ಯಕ್ರಮ ನೀಡಲು ತಡಕಾಡುತ್ತಿದ್ದ. ಅನಿರೀಕ್ಷಿತವಾಗಿ ದೀಪಾವಳಿಗೆ ಊರಿಗೆ ಬಂದವಶಿವಮೊಗ್ಗದ ಅದ್ಯಾವುದೋ ಬೀದಿಯಲ್ಲಿ ದಾಮು ಎದುರಿಗೆ ಪ್ರತ್ಯಕ್ಷನಾದ. ಪರಸ್ಪರ ಲೋಕಾಭಿರಾಮ ಆದಮೇಲೆಒಳಒಪ್ಪಂದವಾಯ್ತು. ದಾಮು ‘ದಾಮೋದರ ಗುರೂಜಿ’ಎಂಬ ನಾಮಾಭಿದೇಯವನ್ನು ಪಡೆದು ಬೆಂಗಳೂರಿನಚೋಳೂರ್ಪಾಳ್ಯದಲ್ಲಿ ಸಣ್ಣರೂಮ್ನಲ್ಲಿ ಸೆಟ್ಲ್ ಆದರು!
“ ಬನ್ನಿ ವೀಕ್ಷಕರೇ, ನೀವು ಈ ದಿನ ಆಧ್ಯಾತ್ಮಿಕವಾಗಿ ಹಲವು ವರ್ಷಗಳಕಾಲ ಸಾಧನೆಮಾಡಿ ಸಿದ್ಧಿಪಡೆದ, ಆಸ್ಟ್ರಾಲಜಿ ಹಾಗೂವಾಸ್ತುಶಾಸ್ತ್ರಗಳಲ್ಲಿ ಪ್ರಾವೀಣ್ಯತೆಗಳಿಸಿರುವ ಬಹಳ ಅಪರೂಪದ ವ್ಯಕ್ತಿಯನ್ನು ಭೇಟಿಮಾಡಲಿದ್ದೀರಿ. ” --O2 ಬಿತ್ತರಿಸಿತು.

“ ನಮಸ್ಕಾರ ಗುರೂಜಿ, ತಮ್ಮ ಬಗ್ಗೆ ಬಹಳ ಕೇಳಿದ್ದೇನೆ, ನಾನು ಸರೋಜಮ್ಮಾ ಅಂತ ಹಾಸನದಿಂದ ”

“ ನಮಸ್ಕಾರ,ಹೇಳಿ ಯಾವ ವಿಷಯದ ಸಲುವಾಗಿ ಕಾಲ್ ಮಾಡಿದ್ದೀರಿ ?”
“ ನನ್ನ ಮಗನ ಬಗ್ಗೆ ಗುರೂಜಿ, ಆತನಿಗೆ ಎಕ್ಸಿಡೆಂಟ್ ಆಗಿತ್ತು,ಆಸ್ಪತ್ರೆಯ
ಲ್ಲಿ ...............................”
“ಏನೂ ಹೆದರುವ ಅವಶ್ಯಕತೆ ಇಲ್ಲಮ್ಮಾ, ಆತ ಬೇಗ ಗುಣಮುಖನಾಗುತ್ತಾನೆ.”
“ ಗುರೂಜಿ, ಅವನು ತೀರಿಕೊಂಡು 22 ದಿನಗಳಾದವು,ಅವನ ಆತ್ಮಕ್ಕೆ ಸದ್ಗತಿ ಸಿಗುತ್ತಾ ಅಂತ? ”
“ ವೀಕ್ಷಕರೆ ಕ್ಷಮಿಸಿ, ಈ ಕರೆ ಕಟ್ಟಾಗಿದೆ,ನಮ್ಮ ಮುಂದಿನ ಕಾಲರ್ ಯಾರು ಅಂತ ನೋಡೋಣ”-[ಸಂದರ್ಶಕ]
“ನಮಸ್ಕಾರ,ನಾನು ಸುಬ್ಬರಾವ್ ಅಂತ, ಇತ್ತೀಚೆಗೆ recession ಬಂದಾಗಿನಿಂದ ನಮ್ಮ factory ಲಾಸ್ನಲ್ಲಿ ನಡೀತಾ ಇದೆ ”
“ ನಿಮ್ಮ factory building ಯಾವ ದಿಕ್ಕಿಗೆ ಮುಖವಾಗಿದೆ?”
“ ಪೂರ್ವಕ್ಕೆ, ಎದುರಿಗೆ ರಸ್ತೆ ಇದೆ ”

“ ನೀವು ನಿಮ್ಮ factory ಗಿಲನ್ನು ಪಶ್ಚಿಮಕ್ಕೆ ಮಾಡಿ, ಈಶಾನ್ಯ ದಿಕ್ಕಿನಲ್ಲಿ ಒಂದು ವಾಟರ್ ಟ್ಯಾಂಕ್ ಕಟ್ಟಿಸಿ ಎಲ್ಲಾಸರಿಹೋಗುತ್ತೆ,ನಮಸ್ಕಾರ”
ಸಂದರ್ಶಕ-“ ಗುರೂಜಿ ತಮ್ಮ ಬಗ್ಗೆ ತಾವು ಹೇಳುತ್ತಾ ಇದ್ದೀರಿ, ಹೋದಜನ್ಮದಲ್ಲಿ ತಾವು ಜಕಣಾಚಾರಿಯಾಗಿದ್ದೂ, ಕೈಗಳನ್ನುಕಳೆದುಕೊಂಡಿದ್ದೂ ಎಲ್ಲ ಬಹಳ ಆಶ್ಚರ್ಯವಾಗ್ತಾಇದೆ. ಬಹುಶಃ ತಾವು ಜಕಣಾಚಾರಿ ಅಗಿದ್ದುದರಿಂದಲೇ ಈಗ ವಾಸ್ತು ಬಗ್ಗೆಕರಾರುವಾಕ್ಕಾಗಿ ಹೇಳುತ್ತಿದೀರಿ ಅನಿಸುತ್ತದೆ. ”
“ ಹೌದು ಹೌದು, ಅದ್ರಿಂದ್ಲೇ ಇದೆಲ್ಲಾ ಸಾಧ್ಯಾನೇ ಹೊರ್ತು ಇಲ್ಲಾಂದ್ರೆ ಹೇಗೆ? ”
[ಗುರೂಜಿ -ಸ್ವಗತ: TV ಯಲ್ಲಿ ಯಾರ್ಯಾರೋ ಎನೇನೋ ಪ್ರಶ್ನೆ ಕೇಳುತ್ತಾರಲ್ಲಪ್ಪಾ, ಏನು ಮಾಡ್ಲಿ? ಮೆಜೆಸ್ಟಿಕ್ಫ಼ೂಟ್ಪಾತ್ನಲ್ಲಿ ೫೦% ಡಿಸ್ಕೌಂಟ್ನಲ್ಲಿ 5 ಪುಸ್ತಕ ತಂದೆ-ಜ್ಯೋತಿಷ್ಯದ ಮೇಲೆ 3 , ವಾಸ್ತು ಶಾಸ್ತ್ರದಮೇಲೆ 2. ಓದಕ್ಕೂ ಬಿಡಲ್ಲಈ ಜನ. ಅಕಸ್ಮಾತ್ ನಾನು ಹೇಳಿದ್ದು ತಪ್ಪಾಗಿ ನಾಳೆದಿನ ಕಲ್ಲುಹೊಡೆದರೆ ಏನಪ್ಪ ದೇವ್ರೆ ಗತಿ? ಕೆಲವರಿಗೆ ತಪ್ಪಿಸಿಕೊಳ್ಳುವಸಲುವಾಗಿ 6 ತಿಂಗಳು ಅಪಾಯಿಂಟ್ಮೆಂಟ್ ಕೊಡ್ಲೇ ಇಲ್ಲ,ಹಲವರಿಗೆ 1 ವರ್ಷ. ‘ಗುರೂಜಿ ತುಂಬಾ ಬೀಜಿ’ ಅಂದುಕೊಂಡಿರುತ್ತಾರೆ. ಇಲ್ಲಿ ನೋಡಿದ್ರೆ ಕೆಲವೊಮ್ಮೆ ಖರ್ಚಿಗೇ ಸಾಲದು.]
ಅಷ್ಟರಲ್ಲಿ ರಾಜಕಾರಣಿಯೊಬ್ಬರಿಗೆ ಭವಿಷ್ಯಹೇಳಿದ್ದು ಸುಳ್ಳಾಗಿದ್ದು ಅವರು ಚುನಾವಣೆಯಲ್ಲಿ ಸೋತಿದ್ದಾರಾಗಿಯೂ, ಅವರ ಕಡೆಶಿಳ್ಳೇರಾಮ’ಎಂಬ ರೌಡಿಯು ಗುರೂಜಿಗೆ ‘ಗೂಸಾ’ತಿನ್ನಿಸಲು ಬಂದಿದ್ದಾಗಿಯೂ sms ಬಂತು. ಕೂತಲ್ಲೇ ಗುರೂಜಿಗೆ ಬಟ್ಟೆ ಎಲ್ಲಾಒದ್ದೆಯಾಗಿಹೋಯ್ತು. ಹಾಗೂ ಹೀಗೂ 30 ನಿಮಿಷ ಕಳೆದು ಗುರೂಜಿ ತಮ್ಮ ಸ್ವಕ್ಷೆತ್ರ ರಿಪ್ಪನ್ ಪೇಟೆಗೆ ಸೀದಾ ಓಡಿಹೋಗಿತಲೆಮರೆಸಿಕೊಂಡರು. ಅಪಾಯಿಂಟ್ಮೆಂಟ್ಮೇಲೆ ಅವರನ್ನು ಭೇಟಿಮಾಡಲು ಬಂದವರು “ ಗುರೂಜಿಗೆ ಆರೋಗ್ಯ ಸರಿಯಿ,15 ದಿವಸದ ಮೇಲೆ ಬನ್ನಿ “ ಎಂಬ ಉತ್ತರ ತೆಗೆದುಕೊಂಡು ವಾಪಾಸ್ಸಾದರು.


ಗುರೂಜಿ ವಾರತಡೆದು ಗೆಳೆಯ ಸುರೆಶ್ಗೆ ಫೋನ್ ಮಾಡಿದರು-“ಸುರೆಶ, ಏನೋ ತುಂಬಾ ಅಧೈರ್ಯವಾಗ್ಬುಟ್ಟಿದೆ ಕಣಪ್ಪಾ, ಬೆಂಗ್ಳೂರಿಗೆ ಬರಕ್ಕೇ ಬೇಜಾರು”

“ ಯಾಕೆ ಏನಾಯ್ತು ದಾಮು? ಮತ್ತೆ ಬ್ಯುಸಿನೆಸ್ ಡೌನಾ?”
“ಇಲ್ಲ ಕಣೋ, ಆ EX-MLA ಕಡೆ ಶಿಳ್ಳೇರಾಮ ಬಹಳ ತೊಂದ್ರೆ ಕೊಡ್ತಾ ಇದಾನೆ. ಬಹುಶಃ ಆತ ಹಿಂದೆ ಮಹಾಭಾರತದಲ್ಲಿಘಟೋದ್ಗಜ ಆಗಿದ್ದಿರಬೇಕು”

“ನಿನ್ನಂಥಾ ಗೆಳೆಯರನ್ನ ಹಾಗೇ ಬಿಡೋಕಾಗುತ್ತಾ? ನೋದ್ತೀನಿ ಬಿಡು, ಬೇರೆ ಏನಾದ್ರೂ ದಾರಿ ಮಾಡೋಣ”

ಸುರೆಶನ ಮುಖಾಂತರ, ಮರುಚುನಾವಣೆಗೆ ನಿಂತಿದ್ದ EX-MLA ಮುನಿವೆಂಕಟಪ್ಪನ ಸಂಬಂಧ ಕುದುರಿತು.ಯಾವ ಅದೃಷ್ಟವೋ, ಕಾಕತಾಳೀಯವೋ ಮುನಿವೆಂಕಟಪ್ಪಗೆ ಹೇಳಿದ ಭವಿಷ್ಯ ನಿಜವಾಗಿ ಆತ್ ಗೆದ್ದು ಮಂತ್ರಿಯಾದರು. ಎಲ್ಲಾ ರಾಜಕಾರಣಿಗಳಿಗೆ ಇದುಸುದ್ದಿಯಾಯ್ತು. ಮತ್ತೆ ಗುರೂಜಿ ಆಫೀಸ್ ನಲ್ಲಿ ನೂಕುನುಗ್ಗಲು !
ಅಲ್ಲಿಂದಾಚೆ ದಾಮೋದರ ಗುರೂಜಿ ದುಡ್ಡನ್ನು ಗೋಣಿಚೀಲದಲ್ಲೇ ತುಂಬಬೇಕಾಯ್ತು. new aiport ರಸ್ತೆಯಲ್ಲಿ ಆಫ಼ೀಸು, ಓಡಾಡಲು BMW ಕಾರು, ಕೆಲಸಕ್ಕೆ ಇರುವ ಎಲ್ಲಾ ಹಾಂಡ್ಸ್ ಗೆ ಸೇರಿ ಹತ್ತಾರು ಕಾರುಗಳು. ಗುರೂಜಿ ಆಶ್ರಮ ಕಟ್ಟಿದ್ದಾರೆ- 32 ಎಕರೆಗಳಷ್ಟು ವಿಶಾಲವಾದ ಜಾಗದಲ್ಲಿ-ಬಿಡದಿಯ ಹತ್ತಿರದಲ್ಲಿ.ಸದ್ಯದಲ್ಲೇ ಮುನಿವೆಂಕಟಪ್ಪರ ಕೃಪೆಯಿಂದ BMTC ಬಸ್ಸುಆಶ್ರಮಕ್ಕೆ ಹೋಗಿಬರುತ್ತದೆ. ಆಶ್ರಮದ ಆನೆಯನ್ನು ಅದು ಸೊಂಡಿಲಲ್ಲಾಡಿಸುತ್ತ ನಾಣ್ಯ ಸ್ವೀಕರಿಸಿಯೇ ಆಶೀರ್ವದಿಸುವುದುನೋಡಲು ಮನೋಹರ. ಅಶ್ರಮದಲ್ಲಿ ವಿದೇಶೀ ಭಕ್ತರು ಬಂದರೆ ಇರಲಿ ಎಂದು ಸ್ವಿಮ್ಮಿಂಗ್ ಪೂಲ್ ಮತ್ತು ಎಲ್ಲಾ 5 ಸ್ಟಾರ್ವ್ಯವಸ್ಥೆಯುಳ್ಳ ರೂಮ್ ಗಳನ್ನು ಕಟ್ಟಿಸಿದ್ದಾರೆ. ಗುರೂಜಿಗೆ ಯಾರೋ ಭಕ್ತರು ಇತ್ತೀಚೆಗೆ ಬಂಗಾರದ ಪೀಠವನ್ನು ಕೊಡುಗೆ ಯಾಗಿಕೊಟ್ಟಿದ್ದಾರೆ. ಇಷ್ಟೆಲ್ಲಾ ಇದ್ದೂ ನಮ್ಮ ದಾಮೋದರ ಗುರೂಜಿ ವೆರೀ ಸಿಂಪಲ್ಲು.

ಇತ್ತೀಚೆಗೆ ಗುರೂಜಿ ಪುನರ್ಜನ್ಮದ ಕುರಿತು ತಿಳಿಸಿಕೊಡಲು ತಯಾರಿ ನಡೆಸುತ್ತಿದ್ದಾರೆ. ನಿಮ್ಮ ಅನುಕೂಲಕ್ಕಾಗಿ ಮತ್ತು ನೀವು ಅಗತ್ಯಸಂಪರ್ಕಿಸಬೇಕಾದಾಗ ಇರಲಿ ಎಂದು ಇಲ್ಲಿ ಕೊಡುತ್ತಿದ್ದೇನೆ- ಗುರೂಜಿ ಯವರನ್ನು ಸಂಪರ್ಕಿಸಬಹುದಾದ ಮೊಬೈಲ್ : 98450__
_89 ‌‌ ‌‌‌‌ ‌‍‌‌ ‌‌

Saturday, January 16, 2010


ಹಾಡಲೇ ಹಾಡಿನಾ ಪಲ್ಲವೀ ........


ಬರೆಯದೇ ಬಹಳ ಸಮಯದಿಂದ ಹಾಗೇ ಕಾಲ ಕಳೆದುಬಿಟ್ಟಿದ್ದೇನೆ. ಬರೆಯುವ ಹವ್ಯಾಸ ಇದ್ದರೂ ಅದಕ್ಕೆ ಸಮಯಾವಕಾಶ ಕೂಡಿಬರಲಿಲ್ಲ. ಅನೇಕ ಬಾಲ್ಯದ ಚೆಡ್ಡಿ ಗೆಳೆಯರ ಒತ್ತಡ ಶುರುವಾಯ್ತು "ನಿನ್ನ ಬರಹಗಳು ತುಂಬಾ ಚೆನ್ನಾಗಿರುತ್ತಾವಪ್ಪಾ ನೀನುಬರೆಯಲೇಬೇಕು, ಎಂದು? " ಹಠಹಿಡಿದಿದ್ದಾರೆ. ನನ್ನ ಬರಹಗಳು ಅನೇಕರಿಗೆ ರುಚಿಸುವುದೇ!? ಎಂಬ ಅನುಮಾನ ಕಾಡತೊಡಗಿತು. ಆದರೂ ನನ್ನ ತಾಣದ ಓದುಗರನ್ನು ನಿತ್ರಾಣರಾಗಿಸುವಷ್ಟು ಅರ್ಥಹೀನವೇ ನನ್ನ ಬರಹಗಳು ಎಂಬ ದುಗುಡ ಮನಸ್ಸಿನಲ್ಲಿ! ಎಹೇ ನಾನೇನು ಕಮ್ಮಿಯೇ,ಶೇಕಸ್ಪೀಯರ್ ಮೊಮ್ಮಗನ ಥರ ಇದ್ದೇನೆ ! ನಾಲ್ಕು ಸಾಲು ಗೀಚಿದರೆ ಒಂದು ಕವಿತೆ ರೆಡಿಯಪ್ಪ ಅಂತ ಒಂಥರಾ ಒಣ ಜಂಬ ಬಂದುಬಿಟ್ಟಿತೇ? ಒಮ್ಮೊಮ್ಮೆ ನನಗೇ ನಾನು ಅಂದುಕೊಂಡಿದ್ದಿದೆ "ಏಯ್ ಸುಮ್ಮನಿರೋ ಮಾರಾಯ, ಸುಮ್ನೇಏನೋ ಬರೆದು ನನ್ನನ್ನು ಯಾಕೆ ನಗೆಪಾಟಲಿಗೆ ಈಡುಮಾಡ್ತೀಯ? ಬೇರೆ ಕೆಲಸ ಇಲ್ದೇಇದ್ರೆ ಬಾತ್ರೂಮ್ನಲ್ಲಿ ಸಿನಿಮಾ ಹಾಡುಹೇಳು,ಇಲ್ಲಾಂದ್ರೆ ಟಿವಿ ನೋಡು ಸುಮ್ನೇ ನನ್ನನ್ನ ನನ್ನ ಪಾಡಿಗೆ ಬಿಟ್ಟುಬಿಡು". ಬಹುಶಃ ಇದು ಅನೇಕರ ಅನುಭವವೂ ಹೌದಿರಬೇಕು. ಏನೇ ಇರಲಿ ಬರೆದೇ ಬಿಡೋಣ ಅಂತ ಕೆಲವೊಮ್ಮೆ ಸ್ವಲ್ಪ ಹಂದಿಯ ಥರ ಹೂಂಕರಿಸುತ್ತೇನೆ ! ಸ್ವಲ್ಪ ಸ್ಲೋ ಮೋಶನ್ ಆದ್ರೆಗೂಳಿಯ ಥರ ಸಣ್ಣ ಗುಟುರು ಹೊಮ್ಮುತ್ತದೆ ! ಏನಿದ್ರೂ ನನ್ನ ಅನಿಸಿಕೆ ಹೇಳುವುದರಲ್ಲಿ- ನೀವದನ್ನು ಕೇಳುವುದರಲ್ಲಿ ಚೌಕಾಸಿವ್ಯಾಪಾರ ಯಾಕೆ -ಅದೆಲ್ಲ ಏನಿದ್ರೂ ತಳ್ಳು ಗಾಡಿಯವರಹತ್ತಿರ ಅಲ್ಲವೇ ?


ಬರೆದೇ
ಬಿಡುತ್ತೇನೆ ಎಂದು ಮತ್ತೆ ಬಿಲ್ಲು-ಬಾಣ ಹಿಡಿದು
ಬ್ಲಾಗ್ ರಥವೇರುವ ಹೊತ್ತಿಗೆ ಮತ್ತೆ ಅರ್ಜುನನ ರೀತಿ ಕುಸಿದುಬಿಡುತ್ತೇನೆ, ಎಂಥೆಂಥ ಅತಿರಥ ಮಹಾರಥರು ಕಣ್ಣೆದುರಿಗೆ ಬಂದುನಿಲ್ಲುತ್ತಾರೆ. ಛೆ ! ಪ್ರಾತಸ್ಮರಣೀಯರಾದ ಕಾರಂತರು,ಬೇಂದ್ರೆಯವರು, ಮಾಸ್ತಿ, ಕುವೆಂಪು .......ಆದಿಯಾಗಿ ಸಾವಿರಾರು ಸೈನಿಕರು, ಅಜಾನುಬಾಹುಗಳು, ವಿಗಡ ವಿಕ್ರಮರಾಯರುಗಳು ಎದುರಾಗುತ್ತಿದ್ದಾರೆ, ಏನುಮಾಡಲಿ ನನ್ನ ಸಾರಥಿಯಾಗಿ ಇರುವ ಕೃಷ್ಣಮಾತಾಡದೇ ಕುಳಿತುಬಿಟ್ಟಿದ್ದಾನೆ, ಕರೆಯುತ್ತೇನೆ ನೋಡೋಣ"ಕೃಷ್ಣ ,ಹೇ ಕೃಷ್ಣ ಪರಮಾತ್ಮ, ನೋಡಪ್ಪ ನಮ್ಮವರೆಲ್ಲ 'ದೊಡ್ಡದಾದ Parker ಮತ್ತು ಸ್ವಲ್ಪ ಚಿಕ್ಕದಾದ Reynolds' ಹಿಡಿದು ತಯಾರಾಗಿದ್ದಾರಪ್ಪ , ನನ್ನಿಂದ ಯುದ್ಧ ಸಾಧ್ಯವಿಲ್ಲ, ನನ್ನನ್ನು ಕ್ಷಮಿಸು", ತಡೆಯಿರಿ ಯಾವುದೋ ದ್ವನಿ ಕೇಳಿಸುತ್ತಿದೆ ! " ಯಾರಯ್ಯ ನಿನಗೆ ಬರೆಯಲು ಹೇಳಿದ್ದು? ಬರೆಯಲು ಹೊರಟಮೇಲೆ ಬರೆಯಲೇಬೇಕು, ನಿನ್ನ ಹಿರಿಯರು-ಬಂಧು ಮಿತ್ರರು-ನೆಂಟರಿಷ್ಟರು-ಅವರ ಮಕ್ಕಳು-ಅವರಮಕ್ಕಳು-ಮಗುದವರ ಮಕ್ಕಳು-ಮಗುದವರ ಮರಿ ಮೊಮ್ಮಕ್ಕಳು ಎಲ್ಲಾ ಇರುತ್ತಾರಪ್ಪ , ಅವರನ್ನು ಎದುರಾಳಿಗಳು ಎಂತ ನಿನಗೆ ಯಾರು ಹೇಳಿದರು ? " --ನನ್ನ ಕೃಷ್ಣ ಮಾತನಾಡುತ್ತಾನೆ.

" ಕೃಷ್ಣ, ಬರೆಯಲು ಹೊರಟಾಗ ನಾನೇ ಎಲ್ಲರಿಗಿಂತ ದೊಡ್ಡ ಸಾಹಿತಿ-ಬರೆಹಗಾರ,ಸವ್ಯಸಾಚಿ,ಕವಿ-ಗಾಂಡೀವಿ,ಸಾರಸ್ವತಲೋಕದಗಂಡ ಎಂದೆನಿಸಿಕೊಳ್ಳಬೇಕಲ್ಲವೇ ? ಅದನ್ನೆಲ್ಲ ಮಾಡುವಾಗ ನಾನು ಎದುರಾಗಿ ಬರುವ ಎಲ್ಲರನ್ನೂ ಸೋಲಿಸಿ ಸದೆಬಡಿಯಬೇಕಲ್ಲವೇ ? "

ಮತ್ತೆ ಕೃಷ್ಣ ಉವಾಚ " ಅವರನ್ನು ನಿನ್ನ ವೈರಿಗಳು, ಎದುರಾಳಿಗಳು ಎಂದು ಯಾರು ಹೇಳಿದರು ನಿನಗೆ ? ಅವರ ಪಾಡಿಗೆ ಅವರವರು ಯುದ್ಧಮಾಡಿದ್ದಾರೆ, ಮಾಡುತ್ತಿದ್ದಾರೆ, ಮಾಡುತ್ತಾರೆ. ಇದು ನಿಜವಾದ ಯುದ್ಧವಲ್ಲ. ಸುಮ್ಮನೇ ನಾಟಕ-ಯಕ್ಷಗಾನಗಳಲ್ಲಿ ಬಿಲ್ಲು-ಬಾಣ ಹಿಡಿದು ವೇದಿಕೆಯ ಮೇಲೆ ಆಕಡೆ ಈಕಡೆ ಓಡಾಡಿದ ಹಾಗೇ ಮಾಡು, ಅದು ಒಂದು ರೀತಿ ಯುದ್ಧದ ರೀತಿ ಕಾಣಿಸುತ್ತದೆ. ಆದರೆ ಅಲ್ಲಿ ಬಾಣ ಬಿಡುವುದೂ ಇಲ್ಲ;ನೋವು ಕಾವೂ ಇಲ್ಲ. ಅಂತಿಮವಾಗಿ ಕಥೆ ನಿನಗೆ ಮೊದಲೇ ತಿಳಿದಿರುವಂತೆ ಇಲ್ಲಿ ಕೌರವರೂಇಲ್ಲ-ಪಾಂಡವರೂ ಇಲ್ಲ, ಒಂಥರಾ ವೇಷ ಅಷ್ಟೇ ! ಅಂತಿಮವಾಗಿ ಎಲ್ಲರಿಗೂ ಗೆಲುವು. All participants are winners ! -ಎಲ್ಲರಿಗೂ ಏನಾದರೊಂದು ಬಹುಮಾನ ಇದೆ ಅಂತ ಅನೇಕ ಸ್ಥಳೀಯ ಮಾರಾಟ ಪ್ರಕ್ರಿಯೆಯ ಲಾಟರಿಯಲ್ಲಿ ಹೇಳುವುದಿಲ್ಲವೋ ? ಹಾಗೇ. ಹೀಗಾಗಿ ನನ್ನನ್ನೊಮ್ಮೆ ನೋಡು "

"ನೀನು ಬಹಳ ಸಾರಿ ಹಲವಾರು ರೀತಿ ತಿಳಿಸಿ ಹೇಳಿದೆ ಕೃಷ್ಣ, ಆದರೂ ನನಗ್ಯಾಕೋ ಅನುಮಾನ ಕೃಷ್ಣಾ, ನಾನು ಬಿಲ್ಲು ಹಿಡಿಯಲೂ ಅರ್ಹನಲ್ಲ ಅಂತ, ಹೀಗಾಗಿ ಮೇಲೇಳಲೇ ಆಗದೇ polio ಆದವರ ರೀತಿ ಆಗ್ಬಿಟ್ಟಿದೆ, ನನ್ನಿಂದ ಸಾಹಿತ್ಯರಣರಂಗದಲ್ಲಿ ಯುದ್ಧ ಸುತರಾಂ ಸಲ್ಲ "

"ಅರ್ಥವಾಯ್ತು, ನಿನಗಿನ್ನೂ ಅರ್ಥವಾಗಲಿಲ್ಲವೆಂಬುದು ಅರ್ಥವಾಯ್ತು. ನಿನ್ನ ಪರಾಮರ್ಶೆಗಾಗಿ ದೇವನಾದ ನಾನು ಹುಲುಮಾನವನಾದ ನಿನಗೆ ನನ್ನ ನಿಜರೂಪವನ್ನು ತೋರಿಸುತ್ತಿದ್ದೇನೆ ನೋಡು "

" ಕೃಷ್ಣ, ಬಹಳ ಪ್ರಕಾಶಮಾನವಾಗಿದೆ, ನೋಡಲು ಸಾಧ್ಯವೇ ಇಲ್ಲ, ಮೊದಲೇ ಹೇಳಲಿಲ್ಲವೇ, ನನಗೆ ಯಾವ ಗಾಂಡೀವವೂ ಬೇಡ, ಎಲ್ಲಾ ನಿನ್ನಲ್ಲೇ ಇರಲಿ, ದಿನದಲ್ಲಿ ಎರಡು ಹೊತ್ತಿಗೆ ಊಟ, ಎರಡು ಸರ್ತಿ ಕಾಪಿ ಅಥವಾ ಟೀ ಸಿಕ್ಕರೆ ಸಾಕು. Additional ಆಗಿಒಂದು ಮೇಜು ಮತ್ತು ಒಂದು ಕುರ್ಚಿ ಒಂದು ಬರೆಯುವ ಪೆನ್ನು[!] ಮತ್ತು ಕಾಲಿಹಾಳೆ ಸಿಗುವಂತೆ ಅನುಗ್ರಹಿಸು. ನನ್ನಪಾಡಿಗೆನಾನು ಇದ್ದುಬಿಡುತ್ತೇನೆ , ಅತಿಮಾನುಷನಾದ ನೀನು ಬೇರೆ ಅರ್ಜುನನ್ನು ಹುಡುಕಿಕೋ "

" ಛೇ! ಎಲ್ಲಾದರೂ ಉಂಟೆ ಅರ್ಜುನ ? ನಿನಗೆ ದಿವ್ಯ ಚಕ್ಷುಸ್ಸನ್ನು ಕರುಣಿಸಿದ್ದೇನೆ, ಕಣ್ಣಿನಿಂದ ಹೀಗೊಮ್ಮೆ ನೋಡು, ನನ್ನಲ್ಲಿಯೇ ಎಲ್ಲವೂ ಇದೆ, ನಾನೇ ಎಲ್ಲವೂ, ನೀನೂ ನಾನೇ-ನಿನ್ನ ಕಾರಂತರು-ಮಾಸ್ತಿ-ಬೇಂದ್ರೆ ಎಲ್ಲಾ ನಾನೇ, ಕಾಣುತ್ತಿರುವೆಯಷ್ಟೇ ? "

"ಹಾ ಹಾ , ಏನೇನೋ ಕಾಣುತ್ತಿದೆ ಪರಮಾತ್ಮ! ಇದೇನಾಶ್ಚರ್ಯ ! ಕಾರಂತರ ' ಜಗತ್ತು ', ಬೇಂದ್ರೆಯವರ 'ನಾಕು ತಂತಿ ', ಕುವೆಂಪು ಅವರ ' ರಾಮಾಯಣ ದರ್ಶನಂ', .....................ಇನ್ನೂ ಏನೆಲ್ಲಾ ಇದೆ ಎಣಿಸಲಸದಳ ಸ್ವಾಮೀ....... ಒಂದುಕಡೆ ಡಿ.ವಿ.ಜಿ,..ಕೃ, .ರಾ.ಸು., ಇನ್ನೊಂದುಕಡೆ ದೇವುಡು,ಗೊರೂರು,ವಿ.ಕೃ.ಗೋಕಾಕ್, ...........ಇಷ್ಟುದಿನ ಯಾಕೆ ಹೇಳಲಿಲ್ಲ ಸ್ವಾಮೀ, ಸರಕಾರೀ ಗ್ರಂಥಾಲಯಗಳಲ್ಲಿ ಸಿಗದ ಅತ್ಯಮೂಲ್ಯ ಎಲ್ಲಾ ಕೃತಿಗಳನ್ನೂ,ಕರ್ತ್ರುಗಳನ್ನೂ ನಿನ್ನಲ್ಲೇ ಹುದುಗಿಸಿಟ್ಟುಕೊಂಡು ಸುಮ್ಮನೇ ಹಾದಿಹೋಕರ ಹಾಗೇ ನನ್ನಜೊತೆ ಇದ್ದೂ ಸುಮ್ಮನಿದ್ದೆಯಲ್ಲ ಇದು ಯಾವ ನ್ಯಾಯ ? ಇಷ್ಟೆಲ್ಲಾ ಇದೆ ಅಂತ ಗೊತ್ತಿದ್ದರೆ ನಾನು ಮೊದಲೇ ನಿನ್ನಲ್ಲಿ ಕೇಳಿಪಡೆಯುತ್ತಿರಲಿಲ್ಲವೇ ? ಎಲ್ಲಾ ಮುಗಿದ ಮೇಲೆ ತನ್ನಲ್ಲೇ ಇದೆ ಅಂದರೆ ಅದರ ಉಪಕಾರ ಯಾರಿಗೆ ಬೇಕು? ಏನೇ ಇರಲಿ ಇದನ್ನೆಲ್ಲಾ ನನಗೆ ತೋರಿಸಿದ ಹಾಗೇ ಜಗತ್ತಿಗೂ ತೋರಿಸಬಾರದೆ ?"

" ಅರ್ಜುನಾ, ಎಲ್ಲವನ್ನೂ ಎಲ್ಲರಿಗೆ ಕೊಡುವುದು ಸಮಂಜಸವಲ್ಲ. ನೀನು 'ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಹಾಗೆ ' ಎಂಬಗಾದೆಯನ್ನು ಕೆಳಿದ್ದೀಯೇ. ಹಾಗೇ ಸಮುದ್ರದ ನೀರನ್ನು ಒಂದೇ ಪಾತ್ರೆಗೆ ತುಂಬಿಸಲು ಸಾಧ್ಯವಿಲ್ಲವಲ್ಲ; ಹಾಗೇ ನಿನ್ನಂತ ಮನುಜರು ಅವರವರ ಆಸಕ್ತಿಗನುಗುಣವಾಗಿ ಅವರವರ ಇಚ್ಛಾ ಪಾತ್ರೆ ತಂದು ನನ್ನಿಂದ ಜ್ಞಾನವೆಂಬ ನೀರನ್ನು ತುಂಬಿಸಿಕೊಳ್ಳುತ್ತಾರೆ. ಅದಕ್ಕೆಮಾರ್ಗದರ್ಶಿಯಾಗಿ Parmanent ಆಗಿ ಇರಲಿ ಅಂತ ನನ್ನದೇ ರಚಿತ 'ಗೀತೆ' ಎಂಬ ಸಾಹಿತ್ಯವನ್ನು ಇಡುತ್ತೇನೆ-ಅದೂ ನಿನ್ನಪ್ರಾರ್ಥನೆಯ ಮೇರೆಗೆ. ಆಯಿತಲ್ಲ, ಸನ್ನದ್ದನಾಗು "

" ಆಯ್ತು ಪರಮಾತ್ಮ , ಯಾರು ಏನಾದರೂ ಮಾಡಲಿ ಬಿಡಲಿ ನೀನಂತೂ ನನಗೆ ಮಾರ್ಗದರ್ಶಿಯಾಗಿ ಇತರರಿಗೂ ಮಾರ್ಗದರ್ಶಿಸಿದೆ , ನಿನ್ನ direction ನಲ್ಲಿ ನನ್ನ production ಹಣ ವಾಪಸು ಬರುವಂತೆ ನೋಡಿಕೊಳ್ಳುವ ಬರವಸೆ ಕೊಟ್ಟುಬಿಡು, ಯುದ್ಧಕ್ಕೆ ಸನ್ನದ್ದನಾಗುತ್ತೇನೆ."

[[ಕೃಷ್ಣ : ಸ್ವಗತ]ಆಯ್ತಪ್ಪ, ನೀನು ಅಷ್ಟಾಗಿ ಕೇಳಿಕೊಳ್ಳುತ್ತಿರುವೆ , ಈಗ 'ತಥಾಸ್ತು' ಅನ್ನದಿದ್ದರೆ ನಾಳೆ [ನಾಟಕ ಮುಗಿದ ಮೇಲೆ] ಬೀದಿಯಲ್ಲಿ ಹೊಡೆದುಬಿಟ್ಟೀಯ ],
"ತಥಾಸ್ತು "

" ಧನ್ಯೋಸ್ಮಿ ಕೃಷ್ಣ , ಭಗವಂತ, ನಾನಾದೆ ಈಗ ಬುದ್ಧಿವಂತ, ಇಷ್ಟರವರೆಗೆ ನೀನು ಬರೇ ಬಿಲ್ಲು ಬಾಣ ಅಂತೆಲ್ಲ ಅಂತಿದ್ದೆಯಲ್ಲ, ಸಾಹಿತಿಗಳನೇಕರಿಗೆ current bill ಕಟ್ಟುವ ತಾಕತ್ತೂ ಇರಲಿಲ್ಲ! ಬರೆಯುವವರಿಗೆ 'ಬರಪರಿಹಾರ' ಕಾಮಗಾರಿ ನಿನ್ನಿಂದಾಗದಲ್ಲ, ಇಲ್ಲದಿದ್ದರೆ 'ಮರಿಗಳು' ಹುಲುಸಾಗಿ ಬೆಳೆಯುತ್ತಿದ್ದವು, ಅನೇಕ ಕಾರಂತರು-ಬೇಂದ್ರೆಗಳು ಹುಟ್ಟುತ್ತಿದ್ದರು ಅಲ್ಲವೇ ? "

" ಏನೋ ನಿನ್ನದು ಅತಿಯಾಯ್ತು ಕಣೋ ಅರ್ಜುನ, ಎಲ್ಲವನ್ನೂ ಕೊಡಲಿಕ್ಕೆ ನಾನೂ ಅವತಾರೀ 'ವೇಷ' ದವನು ಎಂಬುದು ನಿನಗೆತಿಳಿಯದೇ? ಮತ್ತೆ ಹಪಹಪಿಸಬೇಡ, ನಿನ್ನ ಕರ್ತವ್ಯ ನೀನು ಮಾಡು -ಫಲಾಫಲ ನನಗೆ ಬಿಡು,ಹೊರಡು ಮುಂದಕ್ಕೆ "

" ಬಾವಾ, ನಿನ್ನ ಮರುಳು ಮಾಡುವ ಮುರಳಿಯನ್ನು ಕೇಳುವ ಆಸೆಯಾಗಿದೆ ಸ್ವಲ್ಪ ನುಡಿಸಬಾರದೇ? "


[[ಕೃಷ್ಣ : ಸ್ವಗತ ] ತಾಲೀಮಿನಲ್ಲಿ ಇದು ಇರಲಿಲ್ಲವೋ? ಮೇಷ್ಟ್ರು ಹೇಳಿಕೊಡಲಿಲ್ಲವೋ ? ಫಜೀತಿಗೆ ಬಂತಲ್ಲ !!]
" ಇದು ಯುದ್ಧ ಭೂಮಿ, ಈಗ ಶಸ್ತ್ರಾಭ್ಯಾಸ, ಮುರಳೀ ಗಾಯನ ಸಲ್ಲ, ನೀನು ಮುಗಿಸಿ ಬರುತ್ತೀಯಲ್ಲ ಆಗ ಯಾವುದೋ ಒಂದು ಗಾಯನ ಮಾಡೋಣ ಬಿಡು "

....................................../................ಅಂತೂ ಭಾವನಾ ಲೋಕ ಅಧ್ಬುತ! ಇಲ್ಲಿ ಇಳಿದರೆ ಆಳ-ಅಗಲಗಳ ವ್ಯತ್ಯಾಸ ತಿಳಿಯದು, ಹೀಗೆ ನನ್ನ ಮನಸ್ಸು ಪ್ರಾರಂಭಿಸಿತು. ಮತ್ತೆ ಸಮಯವಾದಾಗ ನಿಮ್ಮೊಟ್ಟಿಗೆ ಇರುತ್ತೇನೆ,ಬರಲೇ ....

Saturday, December 5, 2009

ಆತ್ಮಾನುಸಂಧಾನ



ಆತ್ಮಾನುಸಂಧಾನ


ನಿತ್ಯಸುಖಿಯಾಗು ನೀ ಸತ್ಯಚಿಂತನೆ ಮಾಡಿ
ಹುಚ್ಚುಹರಿಯಲು ಬೇಡ ಓ ನನ್ನ ಮನವೇ ...

ಹತ್ತಾರು ಯಂತ್ರಗಳ ಮತ್ತಾರು ಮಂತ್ರಿಗಳ
ಗತ್ತಿನ ಕಾರುಬಾರಿದು ಮಿಥ್ಯಶಾಲೆ |
ಎತ್ತಹೋದರು ನಿನಗೆ ಹತ್ತಿ ತುಳಿವ ಪರೀಕ್ಷೆ
ಸುಸ್ತು ಬೀಳಲು ಬೇಡ ನಿನಗಿದೋ ಓಲೆ ||

ಹಿಂದೆ ನೀನೆಲ್ಲಿದ್ದೆ ಮುಂದೆ ನೀನೆಲ್ಲಿರುವೆ
ಒಂದೊಮ್ಮೆ ಕುಳಿತು ಯೋಚಿಸು ನಿನ್ನ ಇರಹು|
ಇಂದು ನಿನ್ನೆಯದಿರಲಿ ಮುಂದೆ ನಾಳೆಯದಿರಲಿ
ಎಂದೂ ತಿಳಿಯದು ನಿನಗೆ ಈ ಪಾಕಶಾಲೆ ||

ಕಮ೯ಬಂಧನದಿಂದ ಬಂಧಿಯು ಈ ಗೂಡಿನಲಿ
ಮಮ೯ವರಿಯದೆ ನೀನು ಮತಿಭ್ರಮಣೆಯಲ್ಲಿ|
ಪಂಡಿತರು ಜ್ಯೋತಿಷರು ವೈದ್ಯರಾದಿಯ ತೆರದಿ
ಹಲವು ಹಂಬಲಿಸಿ ಬೆನ್ನಟ್ಟುವೆಯ ಭರದಿ ?

ಚಂದದಲಿ ಸೇರುವರು ಬಂಧುಭಗಿನಿಯರೆಲ್ಲ
ತಿಂದುಂಡು ನಲಿದಾಡಲಿರಲು ಧನಕನಕ !
ಸಂದು ಹೋಪುದು ಕಾಲ ಸವೆದು ಹೋಪುದು ಕನಕ
ಅಂದಿನಲಿ ಯಾರಿಲ್ಲ ನೀನೊಬ್ಬ ತಿರುಕ ||

ಯಾರೂ ಕಾಯುವುದಿಲ್ಲ ಯಾರೂ ಕರುಬುವುದಿಲ್ಲ
ಯಾರಿಗೂ ಯಾರು ನಿಜವಾಗಿ ಇಲ್ಲಿಲ್ಲ |
ದಾರಿ ನಿನಗಿಹುದೊಂದೆ ಮಾರಜನಕನ ಕರುಣೆ
ಮೀರಿ ಎಲ್ಲೆಯ ಹಾರು ತೋರಿಬರ್ಪುದು ಬೆಳಕು||


Thursday, December 3, 2009

ಬನ್ನಿ ನಿಮಗಿದೋ ಸ್ವಾಗತ
ನನ್ನ 'ಬ್ಲಾಗಿಗೆ ಕ್ರಮಿಸುತ
ಮುನ್ನ ನಿಮ್ಮಲಿ ಭಿನ್ನಹ :
ಮನ್ನಿಸಿರಿ ನಿಮ್ಮಭಿಮತ