ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, January 20, 2012

ಅರ್ಪಾ, ಅಪಸ್ಮಾರ ಮತ್ತು ಅಗೋಚರ ಕಾರಣಗಳು.

ಚಿತ್ರಗಳ ಋಣ : ಅಂತರ್ಜಾಲ

ಅರ್ಪಾ, ಅಪಸ್ಮಾರ ಮತ್ತು ಅಗೋಚರ ಕಾರಣಗಳು.

ಕಳೆದವಾರದಲ್ಲಿ ಈ ಪ್ರಪಂಚ ಅತ್ಯಂತ ಚಿಕ್ಕ ವಯಸ್ಸಿನ ಒಂದು ಪ್ರತಿಭೆಯನ್ನು ಕಳೆದುಕೊಂಡಿತು. ಅರ್ಪಾ ಕರೀಮ್ ರಾಂಧವಾ ಎಂಬ ಈ ಪಾಕಿಸ್ತಾನೀ ಹುಡುಗಿಯ ಸಾಧನೆ ಕಮ್ಮಿಯದೇನಲ್ಲ. ೯ನೇ ವಯಸ್ಸಿನಲ್ಲೇ ಮೈಕ್ರೋ ಸಾಫ್ಟ್ ಸರ್ಟಿಫೈಡ್ ಪ್ರೊಫೆಶನಲ್ [ಎಮ್.ಸಿ.ಪಿ] ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದ ಅರ್ಪಾ ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್‍ನ ಅಚ್ಚರಿಗೆ ಕಾರಣಳಾಗಿದ್ದಳು. ಬದುಕಿದ್ದರೆ ಗೇಟ್ಸ್ ನ ಸಹಾಯ ಪಡೆದು ಇನ್ನೇನೋ ಆಗುವವಳಿದ್ದಳು, ಆದರೆ ವಿಧಿಯಿಚ್ಛೆ ಬೇರೇನೇ ಇತ್ತು! ಕಂಪ್ಯೂಟರ್ ಎಂಬುದು ಹಲವರಿಗೆ ಅನೇಕ ಸೌಲಭ್ಯಗಳನ್ನೂ ಸದವಕಾಶಗಳನ್ನೂ ತಂದುಕೊಟ್ಟಿದೆ. ಅಂಗವಿಕಲರೂ ಕೂಡ ಕುಳಿತಲ್ಲೇ ಕಂಫ್ಯೂಟರ್ ಬಳಸಿ ಏನೇನೋ ಸಾಹಸ ತೋರಿದ್ದನ್ನು ನಾವು ನೋಡಿಯೇ ಇದ್ದೇವೆ. ಆದರೆ ಎಮ್.ಸಿ.ಪಿ. ಎಂಬ ಪರೀಕ್ಷೆಯನ್ನು ೯ನೇ ವಯಸ್ಸಿಗೇ ಪಾಸು ಮಾಡುವುದು ಬಾಳೆಹಣ್ಣು ತಿಂದಹಾಗಲ್ಲ! ಸಾಮಾನ್ಯವಾಗಿ ಹಲವು ವಯಸ್ಕರಿಗೂ ಬರೆದು ಜಯಗಳಿಸಲಾಗದ ಪ್ರಶ್ನೆಗಳಿರುತ್ತವೆ ಅದರಲ್ಲಿ. ಹಾಗಂತ ಅರ್ಪಾ ಅಂಗವಿಕಲಳೇನೂ ಆಗಿರಲಿಲ್ಲ. ಎಲ್ಲರಂತೇ ಸಹಜ ಬೆಳವಣಿಗೆ ಹೊಂದಿದ್ದಳು. ಆದರೆ ಅವಳಿಗೆ ಇದ್ದ ಒಂದೇ ತೊಂದರೆ ಎಂದರೆ ಅಪಸ್ಮಾರ ಅಥವಾ ಮೂರ್ಛೆರೋಗ.



ಮೂರ್ಛೆರೋಗಕ್ಕೆ ಕಾರಣಗಳು ಇಂದಿಗೂ ಲಭ್ಯವಿಲ್ಲ. ವೈಜ್ಞಾನಿಕವಾಗಿ ಅದು ಆ ಸಿಂಡ್ರೋಮ್ ಈ ಸಿಂಡ್ರೋಮ್ ಎಂದು ಗುರುತಿಸಿದರೂ ಮೂರ್ಛೆರೋಗದಿಂದ ಸಂಪೂರ್ಣ ಗುಣಮುಖರಾದವರು ಕಮ್ಮಿ. ಇದ್ದಕ್ಕಿದ್ದಂತೇ ಯಾವುದೋ ಕೆಟ್ಟ ಸಂದೇಶ ಮೆದುಳಿನ ನರಗಳಲ್ಲಿ ಒಡಮೂಡಿ ವ್ಯಕ್ತಿಯು ಕೆಲಹೊತ್ತು ತನ್ನತನವನ್ನೇ ಕಳೆದುಕೊಂಡು ಇಡೀ ಶರೀರ ಅಥವಾ ಭಾಗಶಃ ಶರೀರ ವಿಚಿತ್ರಗತಿಯಲ್ಲಿ ಕಂಪಿಸುವುದು ಯಾ ಒದ್ದಾಡುವುದೇ ಅಪಸ್ಮಾರ. ಅಪಸ್ಮಾರದಲ್ಲಿ ಪ್ರಮುಖವಾಗಿ ಎರಡು ಮಟ್ಟ : ಒಂದು ಲಘು ಅಪಸ್ಮಾರ ಮತ್ತೊಂದು ಗರಿಷ್ಠ ಅಪಸ್ಮಾರ. ಅದೇ ರೀತಿ ಅಪಸ್ಮಾರ ಕೆಲವೊಮ್ಮೆ ಬಾಲ್ಯದಲ್ಲಿ ಮಾತ್ರ ಕಾಡುತ್ತದೆ. ಕೆಲವೆಡೆ ಇದನ್ನು ಬಾಲಗ್ರಹ ಬಾಧೆ ಎನ್ನುವುದೂ ಇದೆ. ಇನ್ನು ಇಡಿಯೋಪಥಿಕ್ ಅಥವಾ ಅನುವಂಶೀಯವಾಗಿ ಬರುವ ಅಪಸ್ಮಾರ ಒಂದು ತೆರನದ್ದಾದರೆ ಕ್ರಿಪ್ಟೋಜೆನಿಕ್ ಅಥವಾ ಕಾರಣವಿಲ್ಲದೇ ಕಾಡುವ ಅಪಸ್ಮಾರ ಇನ್ನೊಂದು ವಿಧದ್ದಾಗಿದೆ. ಅನುವಂಶೀಯತೆಯಿಂದ ಬರುವ ಮೂರ್ಛೆರೋಗ ಬಾಲ್ಯದಲ್ಲಿ ಕಾಡುವುದಿಲ್ಲವಾದ್ದರಿಂದ ಇದಕ್ಕೆ ಚೈಲ್ಡ್ ಹುಡ್ ಎಬ್ಸೆನ್ಸ್ ಎಪಿಲೆಪ್ಸಿ ಎಂದೂ ಅಲ್ಲದೇ ಜುವೆನೈಲ್ ಎಪಿಲೆಪ್ಸಿ, ಎಪಿಲೆಪ್ಸಿ ವಿತ್ ಗ್ರ್ಯಾಂಡ್ ಮಾಲ್ ಸೀಜರ್ಸ್ ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಇದು ಬಾಲ್ಯದಲ್ಲಿ ಎಲ್ಲೋ ಸಲ್ಪ ಲಘುವಾಗಿ ಕೆಲವರಿಗೆ ಕಾಡುವುದರಿಂದ ಬಿನೈನ್ ಫೋಕಲ್ ಎಪಿಲೆಪ್ಸಿ ಆಫ್ ಚೈಲ್ಡ್ ಹುಡ್ ಎಂದೂ ಪರಿಗಣಿಸಲ್ಪಟ್ಟಿದೆ. ಎರಡನೆಯದ್ದು ಕಾರಣವಿಲ್ಲದೇ ಕಾಡುವಂಥದ್ದು, ಇದಕ್ಕೆ ಗರಿಷ್ಠವಾಗಿ ಸಂಭವಿಸುವುದಕ್ಕೆ ವೆಸ್ಟ್ ಸಿಂಡ್ರೋಮ್ ಮತ್ತು ಲಿನಾಕ್ಸ್ ಗೆಸ್ಟಾಟ್ ಸಿಂಡ್ರೋಮ್ ಎಂದೂ ಹೆಸರಿಸಿದ್ದಾರೆ. ಇದರಲ್ಲಿ ಲಘು ಅಥವಾ ಪಾರ್ಶಿಯಲ್ ಆಗಿ ಸಂಭವಿಸುವುದಕ್ಕೆ ಟೆಂಪೋರಲ್ ಲೋಬ್ ಎಪಿಲೆಪ್ಸಿ ಮತ್ತು ಫ್ರಂಟ್ ಲೋಬ್ ಎಪಿಲೆಪ್ಸಿ ಎಂದಿದ್ದಾರೆ ವಿಜ್ಞಾನಿಗಳು ಮತ್ತು ವೈದ್ಯವಿಜ್ಞಾನ ಪರಿಣತರು.

ಅಪಸ್ಮಾರದ ಮೆದುಳಿನ ತಂತು ಚಿತ್ರಣ

ಹೀಗೇ ಅಪಸ್ಮಾರದ ವೈಖರಿ ಈ ರೀತಿ ಇದ್ದರೂ ಅದಕ್ಕೆ ಸಂಪೂರ್ಣವಾದ ಕಾರಣ ಇಂದಿಗೂ ಒದಗಿ ಬಂದಿಲ್ಲ. ನರಸಂಬಂಧೀ ನಿಯಮಿತ ಔಷಧಗಳ ಸತತ ಸೇವನೆಯಿಂದ ಅದನ್ನು ನಿವಾರಿಸಬಹುದೆಂದು ವೈದ್ಯರುಗಳು ಹೇಳಿದರೂ ಸಂಪೂರ್ಣ ನಿವಾರಣೆ ಆಗಿರುವುದು ಕಾಕತಾಳೀಯವಷ್ಟೇ! ನರರೋಗ ತಜ್ಞರು ಅಥವಾ ಮನಶ್ಶಾಸ್ತ್ರಜ್ಞರು ಕೊಡುವ ಅಲೋಪಥಿಕ್ ಮಾತ್ರೆಗಳ ಸತತ ಸೇವನೆಯಿಂದ ಅಡ್ಡ/ಪ್ರತಿಕೂಲ ಪರಿಣಾಮಗಳಂತೂ ಗ್ಯಾರಂಟಿ! ಅಪಸ್ಮಾರ ತಪ್ಪಿಸುವ ಅಂತಹ ಔಷಧ ಕೆಲವರಿಗೆ ನಿದ್ದೆಯ ಮಂಪರು ನೀಡಿದರೆ, ಇನ್ನು ಕೆಲವರು ಆಲಸ್ಯದಿಂದ ಬಳಲುವಂತೇ ಮಾಡುತ್ತದೆ. ಇನ್ನು ಕೆಲವರಿಗೆ ಪರೋಕ್ಷವಾಗಿ ಶರೀರದ ಉಳಿದ ಅಂಗಾಂಗಗಳ ಮೇಲೆ ಆ ಔಷಧಗಳು ಅಡ್ಡ ಪರಿಣಾಮ ಬೀರುತ್ತವೆ ಎಂಬುದರಲ್ಲಿ ಎರಡುಮಾತಿಲ್ಲ. ಆದರೂ ಸಮಾಜದಲ್ಲಿ ಹತ್ತರಜೊತೆ ಹನ್ನೊಂದನೆಯ ವ್ಯಕ್ತಿಯಾಗಿ ಬದುಕು ನಿರ್ವಹಿಸಲು ಮಾತ್ರೆಗಳ ಬಳಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಅದನ್ನು ಅನುಭವಿಸಿದವರು.

ಅಪಸ್ಮಾರ ಬಂದಾಗ ಮೆದುಳಿನ ನೂರಾರು ಜೀವಕೋಶಗಳು ಸಾಯುತ್ತವೆ ಎಂಬುದು ಪರೀಕ್ಷೆಗಳಿಂದ ತಿಳಿದುಬಂದಿದೆಯಾದರೂ ಈಈಜಿ [ಇಲೆಕ್ಟ್ರೋಎನ್ಸಿಫಾಲೋಗ್ರಾಫಿ]ಯಂತ್ರದಲ್ಲಿ ಅಪಸ್ಮಾರದ ಅವತರಣಿಕೆ ಮಾತ್ರ ಕಾಣಲು ಸಾಧ್ಯವಾಗುವುದಿಲ್ಲ. ಪ್ರತೀಬಾರಿ ಅಪಸ್ಮಾರ ಅಪ್ಪಳಿಸಿದಾಗ ವ್ಯಕ್ತಿ ಲಘುವಾದರೆ ಸ್ವಲ್ಪ ಅಥವಾ ಗರಿಷ್ಠವಾದರೆ ತುಂಬಾ ಬಳಲಬೇಕಾಗುತ್ತದೆ. ಗರಿಷ್ಠ ಪ್ರಮಾಣದಲ್ಲಿ ಅಪಸ್ಮಾರ ಘಟಿಸಿದ ಗಂಟೆಗಟ್ಟಲೆ ರೋಗಿಗೆ ಎಚ್ಚರವಿರುವುದಿಲ್ಲ ಯಾಕೆಂದರೆ ಮೆದುಳು ಸಹಜ ಸ್ಥಿತಿಗೆ ಮರಳಿರುವುದಿಲ್ಲ. ಲಘು ಮತ್ತು ಗರಿಷ್ಠ ಎರಡೂ ತೆರನಾದ ಅಪಸ್ಮಾರ ರೋಗಿಗಳನ್ನು ನಾನು ನೋಡಿದ್ದೇನೆ. ಒಮ್ಮೆ ಒಬ್ಬರ ಜೊತೆ ಊಟ ಮಾಡುತ್ತಿದ್ದಾಗ ಅವರಿಗೆ ತುತ್ತು ತಲೆಗೆ ಹತ್ತಿತು, ನೀರು ಕುಡಿಸಿದರೂ ಮಾತಾಡುತ್ತಿರಲಿಲ್ಲ, ಕರೆದರೂ ಮಾತಾಡುತ್ತಿರಲಿಲ್ಲ, ಕಣ್ಣೆಲ್ಲಾ ತಕ್ಷಣಕ್ಕೆ ಕೆಂಪಗಾಗಿ ಅವರು ಸ್ತಬ್ಧವಾಗಿದ್ದರು! ಮೊದಲಾಗಿ ನನಗೆ ಆ ಬಗ್ಗೆ ತಿಳಿದಿರಲಿಲ್ಲ. ಆ ನಂತರವೇ ತಿಳಿದದ್ದು ಅದು ಲಘು ಅಪಸ್ಮಾರ. ಇನ್ನು ಸ್ನೇಹಿತರೊಬ್ಬರು ದ್ವಿಚಕ್ರ ವಾಹನ ಓಡಿಸುವಾಗ ಬಿದ್ದು ಒದ್ದಾಡುತ್ತಿರುವುದನ್ನು ಯಾರೋ ಹೇಳಿದ್ದರು, ಆಮೇಲೆ ಅವರಲ್ಲಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ಸೇರಿಸಿದಾಗಲೇ ತಿಳಿದದ್ದು ಅದು ಗರಿಷ್ಠ ಪ್ರಮಾಣದ ಅಪಸ್ಮಾರ ಅಂತ. ಆ ವ್ಯಕ್ತಿ ತನ್ನನ್ನು ನಾವು ಹತ್ತರಜೊತೆ ಹನ್ನೊಂದಲ್ಲಾ ಎಂದು ದೂರ ಇಡಬಹುದೆಂಬ ಸಂಶಯದಿಂದ ನಮಗೆ ತಿಳಿಸಿರಲೇ ಇಲ್ಲ. ಮೇಲಾಗಿ ಅಪಸ್ಮಾರವಿದ್ದರೆ ಮದುವೆ ಮಾಡಿಕೊಳ್ಳಲು ಹುಡುಗಿ ಕೊಡುತ್ತಾರೋ ಇಲ್ಲವೋ ಎಂಬ ಕಾರಣವೂ ಅವರಲ್ಲಿತ್ತು! ಮಿತ್ರರೇ ಒಂದು ವಿನಂತಿ: ಅಪಸ್ಮಾರವಿದ್ದವರು ಹತ್ತಿರ ಇರುವವರ ಕೂಡ ಅದನ್ನು ತಿಳಿಸಿಟ್ಟರೆ ತುಂಬಾ ಅನುಕೂಲ. ಬಿ.ಎಮ್.ಟಿ.ಸಿ ಬಸ್ ಚಾಲಕನೊಬ್ಬ ಅಪಸ್ಮಾರ ಬಂದು ಅಪಘಾತವಾದ ಘಟನೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಅಪಸ್ಮಾರ ಕಾಯಿಲೆ ಇರುವವರು ದಯವಿಟ್ಟು ವಾಹನ ಚಲಾಯಿಸಬೇಡಿ; ಅದು ನಿಮಗೂ ಮತ್ತು ಸಾರ್ವಜನಿಕರಿಗೂ ಒಳ್ಳೆಯದಲ್ಲ.

ಧ್ಯಾನನಿರತ ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳು

ಅಪಸ್ಮಾರಕಾಯಿಲೆಯನ್ನು ಜನ್ಮಾಂತರದ ಕುಕೃತ್ಯದ ಅವಶೇಷದಿಂದ ಬರುವ ಕಾಯಿಲೆ ಎಂದು ಹಿಂದೂ ಮೈಥಾಲಜಿ ಬಣ್ಣಿಸುತ್ತದೆ. ಒಪ್ಪಿಕೊಳ್ಳೋಣ-ಇಹದ ಈ ಜನ್ಮವೂ ಮತ್ತು ಬರುವ ಎಲ್ಲಾ ಕಾಯಿಲೆಗಳೂ ಜನ್ಮಾಂತರದಿಂದ ಪಡೆದ ಫಲಗಳೇ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಯಾಕೆಂದರೆ ಅದರ ಅನುಭೂತಿಯನ್ನು ಹಲವಾರು ನಿದರ್ಶನಗಳ ಮೂಲಕ ಆಳವಾಗಿ ಅಧ್ಯಯನ ಮಾಡಿದ್ದೇನೆ-ಇನ್ನೂ ಮಾಡುತ್ತಲೇ ಇದ್ದೇನೆ. ಆ ಕುರಿತು ಇಲ್ಲಿ ಮತ್ತೆ ಹೆಚ್ಚಿಗೆ ಬರೆಯುವುದಿಲ್ಲ. ಚಿಕ್ಕದೊಂದು ಘಟನೆ ಹೀಗಿದೆ: ಕರ್ನಾಟಕಕ್ಕೇ ಅಥವಾ ಭಾರತಕ್ಕೇ ಪ್ರಕಾಂಡ ಪಂಡಿತರೆನಿಸಿದ ಶಾಸ್ತ್ರಿಗಳೊಬ್ಬರು[ಹೆಸರನ್ನು ಬುದ್ಧ್ಯಾಪೂರ್ವಕ ಹೇಳುತ್ತಿಲ್ಲ, ಕ್ಷಮಿಸಿ] ಯಾವುದೋ ಕಾರಣವನ್ನು ಆಮೂಲಾಗ್ರ ಗ್ರಹಿಸದೇ ಸನ್ಯಾಸಿಯೊಬ್ಬರನ್ನು ನಿಂದಿಸಿದ್ದರಂತೆ. ಆ ಗುರು ಪ್ರತ್ಯಕ್ಷವಾಗಿ ಬಾಯಿಂದ ಶಪಿಸಲಿಲ್ಲವಾದರೂ ಪರೋಕ್ಷವಾಗಿ ಅವರ ಮನ ನೊಂದಿತ್ತು. ಸನ್ಯಾಸಿಯ ನೊಂದ ಮನದ ಪ್ರತಿಫಲನ ಮಾರನೇ ದಿನದಿಂದಲೇ ಅಪಸ್ಮಾರದ ರೂಪದಲ್ಲಿ ಶಾಸ್ತ್ರಿಗಳಿಗೆ ಕಾಡಿತ್ತು. ಯಾವುದೇ ಔಷಧಿಯಿಂದಲೂ ವಾಸಿಯಾಗದ ಅದರಿಂದ ಬೇಸತ್ತ ಅವರು ಭಗವಾನ್ ಶ್ರೀಧರ ಸ್ವಾಮಿಗಳನ್ನು ಭೇಟಿಯಾಗಿ ಕಣ್ಣೀರ್ಗರೆದು ತೋಡಿಕೊಂಡರು-ಬೇಡಿಕೊಂಡರು. ತಾಯಿಯ ವಾತ್ಸಲ್ಯವನ್ನು ಸಹಜವಾಗಿ ಹೊಂದಿದ್ದ ಶ್ರೀಧರರು ತಮ್ಮ ತೀರ್ಥ-ಮಂತ್ರಾಕ್ಷತೆಗಳನ್ನು ನೀಡಿ ಆ ಮೂಲಕ ಶಾಸ್ತ್ರಿಗಳು ಗುರುನಿಂದನೆಯಿಂದ ಪಡೆದಿದ್ದ ಅಪಸ್ಮಾರವನ್ನು ನಿವಾರಿಸಿದರು ಎಂಬುದು ದಾಖಲಿಸಲ್ಪಟ್ಟ ಇತಿಹಾಸ. ಇದೇ ಸಮಯದಲ್ಲಿ ಶ್ರೀಧರರು ಮಾತನಾಡುತ್ತಾ " ಮಕ್ಕಳೇ, ಇಹದ ಈ ಬಂಧನವನ್ನು ಹಂತಹಂತವಾಗಿ ಕಳಚಿ ಮುಮುಕ್ಷುತ್ವದೆಡೆಗೆ ನಿಮಗೆ ಸಾಗಲಿಕ್ಕೆ ತೀರ್ಥ, ಮಂತ್ರಾಕ್ಷತೆ ಮತ್ತು ಭಸ್ಮಗಳೆಂಬ ಔಷಧಿಗಳನ್ನು ಕೊಡುವ ವೈದ್ಯನಾನಾಗಿದ್ದೇನೆ " ಎಂದಿದ್ದಾರೆ! ಅದಕ್ಕೇ ಇಂತಹ ಯೋಗಿಗಳನ್ನೂ ಮಹಾತ್ಮರನ್ನೂ ’ಭವರೋಗ ವೈದ್ಯಂ ’ ಎನ್ನುತ್ತಾರೆ ಸಂಸ್ಕೃತದಲ್ಲಿ. ಬಹುಶಃ ಇಂತಹ ಅಪಸ್ಮಾರ ಕಾಯಿಲೆಗೆ ಸಂಪೂರ್ಣ ಪರಿಹಾರ ತಪಸ್ಸಿದ್ಧಿಯನ್ನು ಪಡೆದ ಯೋಗಿಗಳಿಂದಲೇ ಆಗಬೇಕೇ ವಿನಃ ಲೌಕಿಕವಾದ ಯಾವುದೇ ಔಷಧಿಯೂ ತಾತ್ಕಾಲಿಕ ಮತ್ತು ಸಮರ್ಪಕ ನಿವಾರಣೋಪಾಯವಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ.

ಮರಳಿ ಅರ್ಪಾಳ ಕುರಿತು ಚಿಂತಿಸೋಣ. ಅರ್ಪಾ ಎಳೆವೆಯಲ್ಲೇ ಅತ್ಯಂತ ಪ್ರಬುದ್ಧ ಮನಸ್ಕಳಾಗಿದ್ದಳು, ಕಂಪ್ಯೂಟರ್ ಜೀನಿಯಸ್ ಎನಿಸಿದ್ದಳು. ಅಪಸ್ಮಾರ ಎಷ್ಟೋ ಲಕ್ಷ ಲಕ್ಷ ಜನರಲ್ಲಿ ಇದೆ. ಅಪಸ್ಮಾರ ಇರುವವರೆಲ್ಲಾ ಸಾಯುವುದಿಲ್ಲ, ಆದರೆ ಅಪಸ್ಮಾರ ಕೆಲವೊಮ್ಮೆ ಸಾವಿಗೂ ಕಾರಣವಾಗುತ್ತದೆ ಎಂಬುದು ತಿಳಿದುಬಂದ ವಿಷಯ. ಹಿಂದೆ ಹೇಳಿದಂತೇ ಅಪಸ್ಮಾರ ಘಟಿಸಿದಾಗ ಮೆದುಳಿನ ಜೀವಕೋಶಗಳಲ್ಲಿ ವಿಚಿತ್ರ ವಿದ್ಯುತ್ತು ಪ್ರವಹಿಸುತ್ತದೆ, ಆ ಮೂಲಕ ಜೀವಕೋಶಗಳು ಸತ್ತುಹೋಗುತ್ತವೆ. ಸತ್ತಜೀವಕೋಶಗಳಲ್ಲಿ ಸಂಗ್ರವಾಗಿದ್ದ ಸಂದೇಶಗಳೂ ಮಾಹಿತಿಗಳೂ ಅಳಿಸಿಹೋಗುತ್ತವೆ. ಕೆಲವೊಮ್ಮೆ ಅಪಸ್ಮಾರ ರೋಗಿಗಳು ಯಾವುದೋ ಕುರಿತಾಗಿ ಯೋಚಿಸುವಾಗ ಅದು ಸಂಪೂರ್ಣ ಸ್ಮರಣೆಗೆ ಬಾರದೇ ಹೋಗಬಹುದು. ಅಪಸ್ಮಾರ ರೋಗವಿದ್ದೂ ಕಂಪ್ಯೂಟರ್ ಅಪರೇಟಿಂಗ್ ಸಿಸ್ಟಮ್ ಕುರಿತಾದ ಅಗಾಧ ಮಾಹಿತಿಯನ್ನು ಚಾಚೂ ತಪ್ಪದೇ ಓದಿ ಅದನ್ನು ನೆನಪಿಸಿಕೊಂಡು ಎಮ್.ಸಿ.ಪಿ ಮುಗಿಸಿ ತೇರ್ಗಡೆಯಾಗಿದ್ದು ನಿಜಕ್ಕೂ ಅವಳ ದೊಡ್ಡ ಸಾಧನೆ.


ಬಿಲ್ ಗೇಟ್ಸ್ ಜೊತೆಗೆ ಅರ್ಪಾ

ಸಾಧನೆಮಾಡಿ ಮನೆಮಂದಿಗೂ ಜನಿಸಿದ ದೇಶಕ್ಕೂ ಕೀರ್ತಿ ತಂದುಕೊಟ್ಟ ಅರ್ಪಾ ಇನ್ನು ನೆನಪುಮಾತ್ರ. ಸಂತಸದಿಂದಿದ್ದ ಆಕೆಯ ಮಾತಾ-ಪಿತೃಗಳಿಗೆ ಅದೆಷ್ಟು ನೋವಾಗಿರಬಹುದು ಅಲ್ಲವೇ? ದೇಶವಾಸಿಗಳಿಗೇ ಏಕೆ ಜಗತ್ತಿನ ಜನರೆಲ್ಲಾ ಚಣಕಾಲ ಭಾರವಾದ ಹೃದಯದಿಂದ ಕೇಳಬೇಕಾದ ಜೀನಿಯಸ್ ಒಬ್ಬಳ ಅಕಾಲಿಕ ವಿದಾಯದ ಕಥೆ ಇದು. ಕೆಲವೊಮ್ಮೆ ಹೀಗೇ ಎಷ್ಟೋ ಘಟನೆಗಳು ನಡೆಯುತ್ತವೆ. ಬಾಲ್ಯದಲ್ಲಿ ಅತ್ಯಂತ ಹೆಚ್ಚಿನ ಸಾಧನೆಮಾಡಿ ಹರೆಯಕ್ಕೆ ಬರುತ್ತಿದ್ದಂತೇಯೇ ಯಾವುದೋ ಕಾರಣದಿಂದ ಇಹಲೋಕಕ್ಕೆ ವಿದಾಯ ಹೇಳುವ ಮೂಲಕ ಜನ್ಮದಾತರಿಗೆ ಆಜನ್ಮ ಪರ್ಯಂತ ನೋವನ್ನು ಬಿಟ್ಟುಹೋಗಿಬಿಡುತ್ತಾರೆ. ಹೋದವರ ನೋವಿಗಿಂತಾ ಮನೆಯವರ ಗೋಳು ದುಃಖ ತರುವ ವಿಷಯ. ಗತಿಸಿದ ಜೀನಿಯಸ್ ಅರ್ಪಾ ಮತ್ತೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಉನ್ನತ ಜನ್ಮ ಪಡೆಯಲಿ, ಜಗತ್ತಿಗೇ ಮಾದರಿಯಾಗುವ ಸೌಭಾಗ್ಯ ಆಕೆಗೊದಗಲಿ ಎಂಬ ಶುಭಹಾರೈಕೆಗಳೊಡನೆ ನಮ್ಮೆಲ್ಲರ ಅಶ್ರುತರ್ಪಣ.

Friday, January 13, 2012

’ರತ್ನಾವತಿ ಕಲ್ಯಾಣ ’ದಿಂದ ರಂಜಿಸಿದ ಮುದ್ದಣ ಕವಿ


’ರತ್ನಾವತಿ ಕಲ್ಯಾಣ ’ದಿಂದ ರಂಜಿಸಿದ ಮುದ್ದಣ ಕವಿ

ಕೆಲವು ಕವಿ-ಸಾಹಿತಿಗಳಿಗೆ ತಾವು ಬರೆಯುತ್ತೇವೆ ಎಂದು ಹೇಳಿಕೊಳ್ಳುವುದು ಸಾಧ್ಯವಾಗುವುದೇ ಇಲ್ಲ. ವಿದ್ಯೆಯಲ್ಲಿ ಯಾವುದೇ ಹೆಚ್ಚಿನ ಪದವಿ ಪಡೆದಿರದ ವೃತ್ತಿಯಲ್ಲೂ ಎಲ್ಲೋ ಉದರಂಭರಣೆಗಾಗುವ ಒಂದಷ್ಟು ಕಾಸು ಒದಗಿಸುವ ರೀತಿಯಲ್ಲಿ ಬದುಕನ್ನು ನಿರೂಪಿಸಿಕೊಳ್ಳುವ ಕೆಲವರು ಕೀಳರಿಮೆಯಲ್ಲೇ ದಿನ ದೂಡುತ್ತಾರೆ. ಬರೆದ ಕೃತಿಗಳನ್ನು ಹಿಂದೆಂದೋ ಒಬ್ಬ ಮಹಾನುಭಾವ ಬರೆದಿದ್ದ-ಅದನ್ನು ಪ್ರಸ್ತುತ ಪಡಿಸಿದ್ದೇನೆ ಎನ್ನುತ್ತಾ ತಮ್ಮ ಇರವನ್ನು ಹೊರಗೆಡಹದೇ, ಬೇರೆ ಬೇರೆ ಹೆಸರುಗಳಲ್ಲಿ ಪದ್ಯ ಮತ್ತು ಗದ್ಯಗಳನ್ನು ರಚಿಸುತ್ತಾರೆ. ಎಲೆಮರೆಯ ಕಾಯಿಯಾಗಿ ಮಾಗಿ ಹಣ್ಣಾಗುವವರು ಕೆಲವರಾದರೆ ಕಾಯಿದ್ದಾಗಲೇ ಕಾಯಿಲೆಕಸಾಲೆಯಿಂದ ಉದುರಿಹೋಗುವವರೂ ಇದ್ದಾರೆ. ಹಾಗೆ ಉದುರಿ ಹೋದ ಕನ್ನಡದ ನಕ್ಷತ್ರಗಳಲ್ಲಿ ಒಬ್ಬ ಕವಿ ಮುದ್ದಣ.

ಪಠ್ಯಪುಸ್ತಕಗಳಲ್ಲಿ ಮುದ್ದಣನೆಂಬ ಕವಿ ಹಿಂದೆಂದೋ ೧೦-೧೨ ನೆಯ ಶತಮಾನದಲ್ಲಿ ಬದುಕಿದ್ದನೇನೋ ಎಂಬ ಹಾಗೇ ಓದುವ ನಾವು ಮುದ್ದಣನ ಕಾಲಮಾನವನ್ನು ನಿಖರವಾಗಿ ಅಳೆಯಲು ಸಾಧ್ಯವಾಗಿರಲಿಲ್ಲ. ೨೧ನೇ ಶತಮಾನದ ಹಿಂದಿನ-ಇಂದಿನ ಕೊಂಡಿಯಾಗಿ ಹಲವು ಜನಪ್ರಿಯ ಕವನಗಳನ್ನು ಸೃಜಿಸಿದ ಕವಿ ಡಾ| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಹೇಳಿಕೆಯಂತೇ ಮುದ್ದಣ ಬಹಳ ಹಿಂದಿನವನಲ್ಲ. ಆತ ೧೯೦೧ರ ವರೆಗೂ ಬದುಕಿದ್ದ. ಉಡುಪಿಯ ನಂದಳಿಕೆ ಗ್ರಾಮದಲ್ಲಿ ಜನಿಸಿದ್ದ ಈ ವ್ಯಕ್ತಿ ವೃತ್ತಿಯಿಂದ ದೈಹಿಕ ಶಿಕ್ಷಕನಾಗಿದ್ದ. ದೈಹಿಕ ಶಿಕ್ಷಕನಾದ ತನ್ನ ಬರಹಗಳನ್ನು ಜನ ಓದಿ ಮೆಚ್ಚಬಹುದೇ ಎಂಬ ಅನುಮಾನದಿಂದಲೇ ಬರೆದ ಎಲ್ಲಾ ಕೃತಿಗಳನ್ನೂ ಮುದ್ದಣನ ಕೃತಿ ಎಂದು ಹೆಸರಿಸಿದ! ಭಟ್ಟರ ಬಾಲ್ಯ ಶಿವಮೊಗ್ಗೆಯಲ್ಲಿ ಕಳೆಯಿತು. ಭಟ್ಟರ ಕುಟುಂಬ ಅಂದಿಗೆ ವಾಸವಿದ್ದಿದ್ದೂ ಮತ್ತು ಮುದ್ದಣನ ಹೆಂಡತಿ ಮನೋರಮೆಯ ತವರುಮನೆ ಇದ್ದಿದ್ದೂ ಒಂದೇ ಕೇರಿಯಲ್ಲಿ! ಎಳವೆಯಲ್ಲಿ ತನ್ನ ಮೂವತ್ತೊಂದನೇ ವಯಸ್ಸಿಗೆ ಕ್ಷಯರೋಗಕ್ಕೆ ತುತ್ತಾಗಿ ತೀರಿಕೊಂಡ ಮುದ್ದಣನ ಹೆಂಡತಿ ಮುಂದಿನ ತನ್ನ ಜೀವನವನ್ನು ಶಿವಮೊಗ್ಗೆಯ ಕಾಗೆ ಕೋಡಮಗ್ಗಿ ಎಂಬ ಜಾಗದಲ್ಲೇ ಕಳೆದಳು. ಮುದ್ದಣನ ಮೊಮ್ಮಗ ಭಟ್ಟರ ಚಡ್ಡೀ ದೋಸ್ತನಾಗಿದ್ದ! ಮುದ್ದಣನ ಮಗನ ಮನೆಗೆ ನಿತ್ಯ ಕೇರಂ ಆಟ ಆಡಲು ಹೋಗುತ್ತಿದ್ದ ಭಟ್ಟರು ತಾನು ಸಾಕ್ಷಾತ್ ಮನೋರಮೆಯನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ! ಇದಕ್ಕೇ ಎನ್ನುವುದು ಪಠ್ಯವೆಂಬ ಬದನೇಕಾಯಿಗಳಲ್ಲಿ ಸಿಗುವ ಮಾಹಿತಿ ಪರಿಪೂರ್ಣವಲ್ಲ, ದೋಷರಹಿತವೂ ಅಲ್ಲ. ಬೇರೇ ಆಕರಗಳನ್ನು ಓದಿದಾಗಲೇ ನಿಜದ ಅರಿವು ನಮಗೆ ಆಗಲು ಸಾಧ್ಯ.

’ಮುದ್ದಣ’ನೆಂಬ ಕಾವ್ಯನಾಮದಲ್ಲಿ ಕವಿ ತಾನು ರಚಿಸಿದ ಕೆಲವೇ ಕೃತಿಗಳಿಂದ ಜನಪ್ರಿಯನಾಗಲು ಕಾರಣ ಆತನೇ ತನ್ನ ಕೃತಿಗಳನ್ನು ಮೂರನೇ ವ್ಯಕ್ತಿಯಾಗಿ ನಿಂತು ವಿಮರ್ಶೆಮಾಡಿಕೊಂಡಿದ್ದು. ’ಮುದ್ದಣ-ಮನೋರಮೆ’ಯರ ಸರಸ ಸಲ್ಲಾಪ ಎಲ್ಲರಿಗೂ ಗೊತ್ತಿರುವ ವಿಚಾರ. ’ರತ್ನಾವತಿ ಕಲ್ಯಾಣ’ವಂತೂ ಯಕ್ಷಗಾನದ ಅತ್ಯಂತ ರಸಮಯ ಪ್ರಸಂಗ. ಅಲ್ಲಿನ ಶಬ್ದಲಾಲಿತ್ಯದಲ್ಲಿ ಕವಿ ಕೇಳುಗರನ್ನು/ಓದುಗರನ್ನು ಯಾವುದೋ ಆನಂದದ ವಿಹಾರಕ್ಕೆ ಕರೆದೊಯ್ಯುತ್ತಾನೆ. ಅದರಲ್ಲಿನ ಸನ್ನಿವೇಶಗಳು ವಿಲಾಸಪೂರ್ಣ. ಯಕ್ಷಗಾನದಲ್ಲಿ ಕೆಲವು ಪ್ರಸಂಗಗಳನ್ನು ಬೀಳು ಪ್ರಸಂಗಗಳು ಎಂದು ಗುರುತಿಸಲಾಗಿದೆ. ಯಾವ ಪ್ರಸಂಗ ಕೆಲವೊಮ್ಮೆ ತನ್ನದೇ ಏಕತಾನತೆಯಿಂದ ಬೋರುಹೊಡೆಸುತ್ತದೋ ಅಂಥಾದ್ದನ್ನು ಬೀಳು ಪ್ರಸಂಗ ಎನ್ನುತ್ತಾರೆ. ಪೂರ್ಣರಾತ್ರಿ ಯಕ್ಷಗಾನದಲ್ಲಿ ಬೋರು ಹೊಡೆಸುವ ಸನ್ನಿವೇಶಗಳು ಬಂದಾಗ ನಾವೆಲ್ಲಾ ಎದ್ದು ಚಾ ಕುಡಿಯಲು ಹೋಗುತ್ತಿದ್ದುದು ನೆನಪಿದೆ. ಪ್ರಸಂಗ ಬೀಳು ಎನಿಸಿದರೂ ಕಥೆ ಪೌರಾಣಿಕವಾಗಿ ಮನ್ನಣೆಗಳಿಸಿರುವುದರಿಂದ ಅಂತಹ ಪ್ರಸಂಗಗಳನ್ನು ಆಡುವುದಿತ್ತು. ಬೇಸತ್ತ ಜನರಿಗೆ ಅಂತಹ ಪ್ರಸಂಗಗಳ ಜೊತೆಯಲ್ಲಿ ’ರತ್ನಾವತಿ ಕಲ್ಯಾಣ'ಆಡಿ ರಂಜಿಸುವುದು ಮೇಳದವರ ಪ್ರಯತ್ನವಾಗಿತ್ತು! ಅದೇ ಮುದ್ದಣ ’ಕುಮಾರ ವಿಜಯ’ ಎಂಬ ಯಕ್ಷಗಾನವನ್ನೂ ಬರೆದಿದ್ದಾನೆ.

ಪುರಾತನ ಕೃತಿಗಳು ಎಂದರೆ ಜನ ಕುತೂಹಲ ಸಹಜದಿಂದ ಓದುತ್ತಾರೆ ಎಂಬ ಅನಿಸಿಕೆಯಿಂದ ಮಾರುವೇಷತೊಟ್ಟು ಕನ್ನಡ ಸಾರಸ್ವತಲೋಕದಲ್ಲಿ ಬದುಕಿದ್ದವ ಈ ಮುದ್ದಣ. ’ರತ್ನಾವತಿ ಕಲ್ಯಾಣ’, ’ಕುಮಾರ ವಿಜಯ’, ’ಅದ್ಭುತ ರಾಮಾಯಣ’, ರಾಮ ಪಟ್ಟಾಭಿಷೇಕ’, ’ರಾಮಾಶ್ವಮೇಧ’ ಮುಂತಾದ ಹೆಚ್ಚಿನದಾಗಿ ರಾಮಕಥೆಯನ್ನೇ ಆಧರಿಸಿದ ಕೃತಿಗಳನ್ನು ಬರೆದ. ೧೮೭೦ ರ ಜನವರಿ ೨೪ರಲ್ಲಿ ಉಡುಪಿಯ ನಂದಳಿಕೆಯಲ್ಲಿ ಜನಿಸಿದ ಲಕ್ಷ್ಮೀನಾರಣಪ್ಪ ಬದುಕಿದ್ದು ಕೇವಲ ೩೧ ವರ್ಷ. ವ್ಯಾಯಾಮ ಶಿಕ್ಷಕನಾಗಿದ್ದ ಈತ ಶ್ರಮಪಟ್ಟು ಹಳಗನ್ನಡವನ್ನು ಅಭ್ಯಾಸ ಮಾಡಿ ಹಳಗನ್ನಡದಲ್ಲೇ ಕೃತಿಗಳನ್ನು ರಚಿಸುವ ಪಾಂಡಿತ್ಯ ಗಳಿಸಿದ. ಹೆಂಡತಿಯ ನಿಜ ನಾಮಧೇಯ ಕಮಲಾಬಾಯಿ. ವಿನೋದಪ್ರಿಯನಾಗಿದ್ದ ಮುದ್ದಣ ಮುಗ್ಧೆಯಾದ ಹದಿಹರೆಯದ ಮನೋರಮೆಯನ್ನು ಆಗಾಗ ರೇಗಿಸಿ ನಗಿಸುತ್ತಿದ್ದನಂತೆ! ಕಮಲಾಬಾಯಿಯನ್ನು ತಾನೇ ಇಟ್ಟ ’ಮನೋರಮೆ’ ಎಂಬ ಹೆಸರಿನಿಂದಲೇ ಕರೆಯುತ್ತಿದ್ದನಂತೆ. ೧೮೯೩ರಲ್ಲಿ ಮುದ್ದಣನಿಗೆ ವಿವಾಹವಾಗಿತ್ತು. ೧೯೦೦ ರಲ್ಲಿ ಮಗ ’ರಾಧಾಕೃಷ್ಣ’ ಹುಟ್ಟಿದ್ದ. ೧೯೦೧ ರಲ್ಲಿ ಮುದ್ದಣ ಗತಿಸಿದಾಗ ಕಮಲಾಬಾಯಿಗೆ ಹದಿನೆಂಟೋ ಇಪ್ಪತ್ತೋ ವಯಸ್ಸಿರಬಹುದು. ಮುಂದೆ ಅವಳನ್ನೂ ರಾಧಾಕೃಷ್ಣನನ್ನೂ ಆಕೆಯ ತವರು ಮನೆಯವರು ತಮ್ಮಲ್ಲಿಗೆ ಕರೆದೊಯ್ದರು ಎನ್ನುತ್ತಾರೆ ಕವಿ ಲಕ್ಷ್ಮೀನಾರಾಯಣ ಭಟ್ಟರು.

ದೊಡ್ಡವನಾದಮೇಲೆ ಮುದ್ದಣನ ಮಗ ರಾಧಾಕೃಷ್ಣಯ್ಯ ಶಿವಮೊಗ್ಗೆಯ ಎ.ವಿ.ಗರ್ಲ್ಸ್ ಸ್ಕೂಲ್‍ನಲ್ಲಿ ಅಧ್ಯಾಪಕರ ಕೆಲಸಕ್ಕೆ ಸೇರಿದ. ಗೆಳೆಯರು ಪರಿಚಿತರು ಬಾಬುರಾವ್ ಎಂಬ ತೋಂಡಿ ಹೆಸರಿನಿಂದ ಅವರನ್ನು ಕರೆಯುತ್ತಿದ್ದರು. ಭಟ್ಟರ ಕಡೆಯ ಅಕ್ಕ ಸಾವಿತ್ರಿ ಎಂಬಾಕೆ ರಾಧಾಕೃಷ್ಣರ ವಿದ್ಯಾರ್ಥಿನಿಯಾಗಿದ್ದಳಂತೆ. ಭಟ್ಟರ ಬಾಲ್ಯದ ಮನೆ ಮತ್ತು ರಾಧಾಕೃಷ್ಣರ ಮನೆ ಇದ್ದಿದ್ದು ಒಂದೇ ಸಾಲಿನಲ್ಲಿ. ಒಂದು ವಠಾರದ ಮನೆಯಲ್ಲಿ ರಾಧಾಕೃಷ್ಣ ಮತ್ತು ಹೆಂಡತಿ ಸರಸ್ವತಮ್ಮ ಹಾಗೂ ಅವರ ಐದು ಜನ ಮಕ್ಕಳು ಜೊತೆಗೆ ತಾಯಿ ಕಮಲಾಬಾಯಿ[ಮನೋರಮೆ] ಇದ್ದರಂತೆ. ಕಮಲಾಬಾಯಿಗೆ ಆಗ ಸುಮಾರು ೬೫ ವರ್ಷ ಕಳೆದಿತ್ತೋ ಏನೋ ಎನ್ನುತ್ತಾರೆ ಭಟ್ಟರು. ಮಕ್ಕಳೆಲ್ಲರ ’ಕಮಲಜ್ಜಿ’ಯಾಗಿದ್ದಳು ಮುದ್ದಣನ ಆ ಮನೋರಮೆ! ರಾಧಾಕೃಷ್ಣಯ್ಯನವರ ಎರಡನೇ ಮಗ ಸೀತಾರಾಮು ಭಟ್ಟರಿಗೆ ಸಹಪಾಠಿಯೂ ಸ್ನೇಹಿತನೂ ಆಗಿದ್ದು ಕೇರಂ ಆಟದ ಹುಚ್ಚು ಭಟ್ಟರನ್ನು ಪ್ರತೀನಿತ್ಯ ಕೇರಂ ಬೋರ್ಡ್ ಇರುವ ರಾಧಾಕೃಷ್ಣಯ್ಯನವರ ಮನೆಗೆ ಹೋಗುವಂತೇ ಮಾಡುತ್ತಿತ್ತು. ಅಲ್ಲಿಗೆ ಹೋದಾಗ ಪ್ರತಿದಿನ ಮನೆಯ ಹಾಲ್ ನಲ್ಲಿ ಗೋಡೆಗೆ ತಗುಲಿಹಾಕಿದ್ದ ಚಿತ್ರಪಟವೊಂದು ಭಟ್ಟರನ್ನು ಸೆಳೆಯುತ್ತಿತ್ತಂತೆ. ಅದರ ಕೆಳಗೆ ’ನಂದಳಿಕೆ ಲಕ್ಷ್ಮೀನಾರಣಪ್ಪ’ ಎಂದು ಬರೆದಿತ್ತು ಎಂದಿದ್ದಾರೆ ಭಟ್ಟರು. ಆ ಚಿತ್ರ ಮುದ್ದಣ ಕವಿಯದ್ದೆಂದಾಗಲೀ ಕಮಲಜ್ಜಿಯೇ ’ಮನೋರಮೆ’ ಎಂದಾಗಲೀ ಅರಿತಿರದ ಭಟ್ಟರಿಗೆ ಆಗ ಹದಿಮೂರು-ಹದಿನಾಲ್ಕು ವಯಸ್ಸು. ಹೇಳಬೇಕೂಂದ್ರೆ ಭಟ್ಟರಿಗೆ ಹೆಚ್ಚಿನ ಕವಿಗಳ ಅದರಲ್ಲೂ ಮುದ್ದಣನ ಹೆಸರೇ ಗೊತ್ತಿರದ ಕಾಲಘಟ್ಟ ಅದು.

ಒಂದು ದಿನ ಎಂದಿನಂತೇ ಬಾಲಕ ಭಟ್ಟರು ಆಡಲು ಹೋದಾಗ ಮಕ್ಕಳ್ಯಾರೂ ಮನೆಯಲ್ಲಿರಲಿಲ್ಲ. ಹಾಲ್ ನಲ್ಲಿ ಗೋಡೆಗೆ ಆನಿಸಿಟ್ಟಿದ್ದ ಕೇರಂ ಬೋರ್ಡ್ ಮತ್ತು ಪಾನು[ಕಾಯಿ]ಗಳ ಡಬ್ಬ ಎತ್ತಿಕೊಂಡು ಆ ಮನೆಯ ವಠಾರದಲ್ಲಿ ಮನೆಯ ಮುಂದಿರುವ ಮಣ್ಣ ಜಗಲಿಯಮೇಲೆ ಹರಡಿಕೊಂಡು ಒಬ್ಬರೇ ಆಟವಾಡುತ್ತಿದ್ದಾಗ " ಏನೋ ಸೀತಾರಾಮು, ನಿನ್ನ ಸ್ನೇಹಿತ ಇನ್ನೂ ಬಂದೇ ಇಲ್ಲ, ಬೆಳಿಗ್ಗೆ ಸಂಜೆ ಬರೇ ಆಟ, ಓದುವುದು ಯಾವಾಗಪ್ಪಾ? " ಎಂದು ಮೊಮ್ಮಗನೇ ಆಡುತ್ತಿದ್ದಾನೆ ಎಂಬ ಭ್ರಮೆಯಲ್ಲಿ ಗದರಿಕೊಂಡಹಾಗೇ ಕೇಳಿದ್ದರಂತೆ. ಅವರಿಗೆ ಆಗ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲವಂತೆ. " ಸೀತಾರಾಮ ಅಲ್ಲ ಕಮಲಜ್ಜಿ ನಾನು ಅಣ್ಣ [ಭಟ್ಟರ ಬಾಲ್ಯದ ಅಡ್ಡ ಹೆಸರು]ಸೀತಾರಾಮ ಎಲ್ಲೋ ಹೋಗಿದ್ದಾನೆ, ನಾನು ಅವನಿಗೇ ಕಾಯ್ತಿದ್ದೀನಿ" ಎಂದಾಗ " ಓ ನೀನಾ ! ಸರಿ ಬಿಡು " ಎಂದಿದ್ದರಂತೆ. " ನಿನ್ನ ಅಮ್ಮ, ಗೌರ, ಸಾವಿತ್ರಿ[ಗೌರಿ, ಸಾವಿತ್ರಿ ಭಟ್ಟರ ಅಕ್ಕಂದಿರು] ಚೆನ್ನಾಗಿದ್ದಾರಾ? " ಎಂದು ಅನೇಕ ದಿನ ಕೇಳುತ್ತಿದ್ದುದೂ ಇತ್ತಂತೆ. ಹೀಗೇ ಮನೋರಮೆಯೊಟ್ಟಿಗೆ ನೇರವಾಗಿ ಸಂಭಾಷಿಸಿದ ಹೆಗ್ಗಳಿಕೆ ಭಟ್ಟರದು. ಭಟ್ಟರ ಬಾಲ್ಯ ಕಳೆದು ಕನ್ನಡ ಆನರ್ಸ್ ಮಾಡಲು ಮೈಸೂರಿಗೆ ಅವರು ಹೋದಾಗ ಅಲ್ಲಿ ಎಸ್.ವಿ.ಪರಮೇಶ್ವರ ಭಟ್ಟರು ಸಂಪಾದಿಸಿದ್ದ ’ಅದ್ಭುತ ರಾಮಾಯಣ’ದ ಮುನ್ನುಡಿಯನ್ನು ಓದುತ್ತಿರುವಂತೆಯೇ ಭಟ್ಟರಿಗೆ ಮುದ್ದಣ-ಮನೋರಮೆಯರ ಬಗ್ಗೆ, ಮುದ್ದಣ ಎಂದರೆ ನಂದಳಿಕೆ ಲಕ್ಷ್ಮೀನಾರಣಪ್ಪ ಎಂಬಬಗ್ಗೆ ತಿಳಿಯಿತೆಂದು ಹೇಳಿದ್ದಾರೆ.

ಮುದ್ದಣ ಬದುಕಿದ್ದರೆ ಮಹಾಕವಿ ಎನಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದಿದ್ದ. ಅವನು ’ಗೋದಾವರಿ’ ಎಂಬ ಕದಂಬರಿಯನ್ನು ಅರ್ಧ ಬರೆದಿದ್ದ. ವಿಧಿ ಅದನ್ನು ಪೂರ್ತಿಮಾಡಲು ಅವಕಾಶ ಕೊಡಲಿಲ್ಲ. ಹಸ್ತಪ್ರತಿಯಲ್ಲಿದ್ದ ಅದೆಲ್ಲೋ ಹಾಗೇ ಜೀರ್ಣವಾಗಿ ಹೋಯ್ತು. ’ರಾಮಪಟ್ಟಾಭಿಷೇಕ’ ಪದ್ಯ ರೂಪದಲ್ಲಿದ್ದರೆ ’ಅದ್ಭುತ ರಾಮಾಯಣ’ ಮತ್ತು ’ರಾಮಾಶ್ವಮೇಧ’ ಗದ್ಯ ರೂಪದಲ್ಲಿವೆ. ಆದರೂ ’ರಾಮಾಶ್ವಮೇಧ’ ಹೆಚ್ಚು ಕಾವ್ಯ ಸತ್ವದಿಂದ ಕೂಡಿದೆ. ’ಜೋ ಜೋ’ ಎಂಬ ಶಬ್ದಾರ್ಥ ಸಂಶೋಧನ ಲೇಖನವೊಂದನ್ನು ’ಚಕ್ರಧಾರಿ’ ಎಂಬ ಕಾವ್ಯನಾಮದಿಂದ ’ಸುವಾಸಿನಿ’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದ. ತನ್ನ ಕೃತಿಗಳನ್ನು ತನ್ನದೆನ್ನದೇ ಹಿಂದಿನ ಯಾರೋ ಹಳಗನ್ನಡದ ಕವಿಯ ಕೃತಿಗಳೆಂದು ಹೇರ್‍ಳಿಕೊಂಡ ಆತನಿಗೆ ತನ್ನ ಕವಿತ್ವವನ್ನು ಜನ ಗುರುತಿಸಿ ತನ್ನ ಕೃತಿಗಳು ಮೆರೆಯುವ ಕಾಲವನ್ನು ನೋಡಬಿಡಲಿಲ್ಲ ಆ ವಿಧಿ; ಉತ್ತಮ ಕೃತಿಗಳನ್ನು ರಚಿಸಿಯೂ ಗೊತ್ತಾಗದಂತೇ ಕರ್ಪೂರದಂತೇ ಕರಗಿಹೋದ ಕವಿ ಮುದ್ದಣ. ಮೈಸೂರಿನ ’ಕಾವ್ಯ ಮಂಜರಿ’ ಮತ್ತು ’ಕಾವ್ಯ ಕಲಾನಿಧಿ’ ಮಾಸಪತ್ರಿಕೆಗಳು ಮುದ್ದಣನ ಮೂರೂ ರಾಮಕಥೆಗಳನ್ನು ಭಾಗ ಭಾಗವಾಗಿ ಪ್ರಕಟಿಸಿದ್ದವಂತೆ. ’ರಾಮಾಶ್ವಮೇಧ’ ಪೂರ್ತಿ ಪ್ರಕಟವಾಗುವುದಕ್ಕೂ ಮೊದಲೇ ತೀರಿಕೊಂಡ ಮುದ್ದಣ ಪ್ರೀತಿಯ ಪತ್ನಿಯನ್ನೂ, ವರ್ಷವೊಂದು ತುಂಬಿದ ಮಗನನ್ನೂ ಬಿಟ್ಟು ಹೊರಟುಹೋದ; ದುರಂತ ಕಥೆಯಾದ. ಲಕ್ಷ್ಮೀನಾರಣಪ್ಪನೇ ಮುದ್ದಣನೆಂದೂ ರಾಮಕಥೆಗಳೆಲ್ಲಾ ಅವನವೇ ಎಂದೂ ತಿಳಿದದ್ದು ಆತ ಮರಣಸಿದ ನಂತರವೇ.

ಮುದ್ದಣನ ಕೃತಿಯಲ್ಲಿ ಪ್ರತಿಮಾತ್ಮಕವಾಗಿ ಪ್ರಕಟಗೊಳ್ಳುವ ವಿಮರ್ಶಾತತ್ವ ಅವನಿಗೆ ಕನ್ನಡದಲ್ಲಿ ಪ್ರತ್ಯೇಕವಾದ ಉನ್ನತ ಸ್ಥಾನ ಕಲ್ಪಿಸಿದೆ. ಆಂಗ್ಲ ಕವಿ ಟಿ.ಎಸ್. ಎಲಿಯೆಟ್ ಬರುವುದಕ್ಕಿಂತ ಮೊದಲು ಕಾವ್ಯ ಸಾಹಿತ್ಯ ಕೇವಲ ಪ್ರತಿಭೆಯ ಫಲ ಎಂಬ ರೋಮಾಂಚಕ ಕಲ್ಪನೆ ಇತ್ತು. ಕಾವ್ಯಕ್ಕೆ ಪ್ರತಿಭೆಯೇನೋ ಅವಶ್ಯಕವೇ ಆದರ ಜೊತೆಜೊತೆಗೆ ಕವಿಯ ಶ್ರಮ ಮತ್ತು ಬುದ್ಧಿಮತ್ತೆ ಬಹಳ ಬೇಕು ಎಂಬುದನ್ನು ಎಲಿಯಟ್ ವಿಷದಪಡಿಸಿದ್ದಾನೆ. ತಾನು ಬರೆದ ಅದೆಷ್ಟೋ ಸಾಲುಗಳನ್ನು ಹೊಡೆದು, ತಿದ್ದಿ, ಬದಲಿಸಿ ಕವಿತೆಗೆ ಬುದ್ಧಿಯ ಚುಚ್ಚುಮದ್ದನ್ನು ನೀಡುವ ಕವಿ ಕೆಲವೊಮ್ಮೆ ಬರಡು ಭೂಮಿಯಲ್ಲಿ ಬೀಜಬಿತ್ತಿ ನೀರು-ಗೊಬ್ಬರ ತಕ್ಕಮಟ್ಟಿಗೆ ಪೂರೈಸಿ, ಮಳೆಗಾಗಿ-ಬೆಳೆಗಾಗಿ ಪ್ರಾರ್ಥಿಸಿ ಕುಳಿತ ರೈತನಂತಿರುತ್ತಾನೆ! ಉತ್ತಮ ಫಸಲು ಬರಬಹುದು ಬರದೇ ಇರಬಹುದು ಅದು ಅವನ ಅದೃಷ್ಟದಾಟ!!

ಇದನ್ನೇ, ಎಲಿಯಟ್ ಬರುವುದಕ್ಕಿಂತಾ ಮೊದಲೇ, ಕನ್ನಡದ ಕವಿ ಮುದ್ದಣ ತನ್ನ ’ರಾಮಾಶ್ವಮೇಧ’ದಲ್ಲಿ ವಾರೆನೋಟದಲ್ಲಿ ಪ್ರತಿಬಿಂಬಿಸಿದ್ದ ಎಂದರೆ ತಪ್ಪಾಗಲಾರದು. ಹೃದ್ಯವಾದ ಪ್ರಸಂಗದಲ್ಲಿ ಮುದ್ದಣ ಮತ್ತು ಪತ್ನಿ ಮನೋರಮೆ ಅ ಕಾವ್ಯದೊಳಗೆ ಸೂತ್ರಧಾರ ನಟನಟಿಯರಂತೇ ಬಂದು ಪಾತ್ರನಿರ್ವಹಿಸುತ್ತಾರೆ. ಮುದ್ದಣ ನಿರ್ದಿಷ್ಟವಾದ ಉದ್ದಿಶ್ಯದಿಂದ ನಿರ್ಮಿಸಿಕೊಂಡಿದ್ದು ಈ ಕಾವ್ಯತಂತ್ರ! ಹಿಂದಿನ ಕವಿಗಳು ತಮ್ಮ ಪಾಂಡಿತ್ಯವನ್ನು ಮೆರಸಲು ಬಳಸಿದ ಕ್ಲಿಷ್ಟಕರ ಶಬ್ದಪ್ರಯೋಗಗಳೂ, ದೇವತಾ ಸ್ತುತಿಗಳೂ , ಅನವಶ್ಯಕವಾದ ವಿದ್ವತ್ಪೂರ್ಣ ಆಡಂಬರದ ಪದಗಳೂ ಕಾವ್ಯವನ್ನು ಕೆಡಿಸುತ್ತವೆ ಎಂಬ ಕಲ್ಪನೆ ಮುದ್ದಣನಿಗಿತ್ತು. ನಡೆದುಬಂದ ಸಂಪ್ರದಾಯಕ್ಕೆ ಏಕಾಏಕಿ ಪೂರ್ಣವಿರಾಮ ಹಾಕಿಬಿಟ್ಟರೆ ಓದುವ ಜನ " ಓಹೋ ಈತನಿಗೆ ಪಾಂಡಿತ್ಯವಿಲ್ಲ" ಎಂದು ಭಾವಿಸಲೂ ಬಹುದು ಅಥವಾ ಕೃತಿಗಳು ಅಂತಹ ಸಂಪ್ರದಾಯವಾದಿಗಳ ಅವಜ್ಞೆಗೆ ಕಾರಣವೂ ಆಗಬಹುದು ಎಂಬ ದೃಷ್ಟಿಕೋನದಿಂದ ತನ್ನ ಕಾವ್ಯವನ್ನೇ ಒರೆಗೆ ಹಚ್ಚುವಲ್ಲಿ ತಾನು ಕಾವ್ಯದೊಳಗೇ ಸೂತ್ರಧಾರ ಪಾತ್ರವಾಗಿ ಸೇರಿಕೊಂಡು ಹೆಂಡತಿಯನ್ನೂ ಹಾಗೇ ಸೇರಿಸಿಕೊಂಡುಬಿಟ್ಟ! ಸೂತ್ರಧಾರ ನಲ್ಲ-ನಲ್ಲೆಯರ ಮಧ್ಯೆ ನಡೆಯುವ ಸರಸ ಸಂಭಾಷಣೆ ಕಾವ್ಯವನ್ನು ವಿಮರ್ಶಿಸುತ್ತಾ ನಡೆಯಿತು!

" ಸ್ವಸ್ತಿ ಶ್ರೀಮತ್ ಸುರಾಸುರೇಂದ್ರ ಮುನೀಂದ್ರ ಫಣೀಂದ್ರ ಮಣಿಮುಕುಟ ತಟಘಟಿತ " ಮುಂತಾಗಿ ಕಾವ್ಯಾರಂಭ ಮಾಡಿದಾಗ ಸುಂದರಿಯೂ ಜಾಣೆಯೂ ಆದ ಮನೋರಮೆ ಆತನನ್ನು ತಡೆದು " ಇದೇನು ನಿನ್ನ ಕಥೆಯ ಹೇಳಾಟ? ನೀರಿಳಿಯದ ಗಂಟಲಲ್ಲಿ ಕಡುಬು ತುರುಕುವುದೇ? ಸಾಮಾನ್ಯಳಾದ ನನಗೆ ಕಥೆ ಹೇಳಲು ಇಂಥಾ ಕಷ್ಟದ ಶೈಲಿ ಬಳಸುತ್ತೀಯಾ? ತಿಳಿಯುಂಥಾ ಮಾತಿನಲ್ಲಿ ಕಥೆ ಹೇಳಬೇಡವೇ? " ಎಂದು ಮೂಗು ಮುರಿಯುತ್ತಾಳೆ. ಮುಂದೆ ಮತ್ತೆಲ್ಲೋ ಆಗಾಗ ಆಡಂಬರದ ಅಲಂಕಾರಗಳು ಜಾಸ್ತಿಯಾದಾಗ " ಯಾರಿಗೆ ಬೇಕು ಆ ವರ್ಣನೆ ಕಥೆ ಮುಂದುವರಿಸು" ಎಂದು ಛೇಡಿಸುತ್ತಾಳೆ. ಇದೇ ರಸಸಂವಾದ ರಾಮಕಥಾನಕವೆಂಬ ರೇಷ್ಮೆಯ ಪೀತಾಂಬರಕ್ಕೆ ಬಂಗಾರದ ಜರಿಯ ಅಂಚಿನಂತಿದ್ದು ಕೃತಿ ಅನನ್ಯವಾಗಿ ಎದ್ದು ನಿಲ್ಲುತ್ತದೆ. ಶೃಂಗಾರ ರಸತುಷಾರದ ಸಿಂಚನದೊಂದಿಗೆ ಪರೋಕ್ಷವಾಗಿ ಕಾವ್ಯವನ್ನು ತಾನೇ ವಿಮರ್ಶೆಗೆ ಒಳಪಡಿಸಿಕೊಳ್ಳುವ ಕನ್ನಡದ ಏಕೈಕ ಕವಿಯನ್ನು ಮುದ್ದಣನಲ್ಲಿ ಕಾಣಬಹುದಾಗಿದೆ!

ಕಡಲಂಚಿನ ಕಾವ್ಯಲಹರಿಯೇ ಯಕ್ಷಗಾನದ ಮೂಲ ಸ್ವತ್ತು! ಹಲವು ರಾಗಗಳಲ್ಲಿ, ಛಂದಸ್ಸುಗಳಲ್ಲಿ ಪ್ರಸಂಗಗಳನ್ನು ಹಾಡುವಂತೇ ಹೊಸೆಯುವ ಕವಿತ್ವವೇ ಅದರಲ್ಲಿನ ತಾಕತ್ತು! ಭಾಮಿನಿ ಷಟ್ಪದಿ, ಭೋಗ ಷಟ್ಪದಿ ರಾಗಗಳನ್ನು ಹಾಡುವಾಗ ಸಹಜವಾಗಿ ಹಳಗನ್ನಡದ ಮೇರು ಕವಿಗಳು ನೆನಪಿಗೆ ಬರುತ್ತಾರೆ.

ನಾಂದಿಯೊಳು ವರವ್ಯಾಸ ಮುನಿವರ ......
ಕವಿಜನಸಂದಣಿಗೆ ಬಲಬಂದು .....
.
.
ಅಂಬುನಿಧಿಯಾತ್ಮಜಗೆ ಕೈಮುಗಿದಂಬುಜಾಸನ ವಾಣಿಯರ
ಪಾದಾಂಬುಜಕೆ ಪೊಡಮಟ್ಟು ಪೇಳುವೆನೀಕಥಾಮೃತವ ...............

ಎಂದು ಭಾಗವತರು ರಾಗವಾಗಿ ನಾಂದಿಹಾಡುತ್ತಿರುವಾಗಲೇ ರನ್ನ, ಪಂಪ, ಹರಿಹರ, ಕುಮಾರವ್ಯಾಸಾದಿ ಹಲವು ಕನ್ನಡ ಕವಿಗಳು ನಮ್ಮ ಮನದಲ್ಲಿ ಹಾದುಹೋಗುವುದು ಸಾಹಿತ್ಯ ರುಚಿಸುವ ಯಕ್ಷಗಾನಾಸಕ್ತರಿಗೆ ಸಹಜ. ಹಿತಮಿತ ಸಂಗೀತ, ಅದ್ಭುತ ಪ್ರಾಸಬದ್ಧ ಸಾಹಿತ್ಯ, ನವರಸಗಳಿಗೆ ತಕ್ಕುದಾದ ರಾಗಪ್ರಸ್ತಾರ, ಅದರದ್ದೇ ಆದ ತಾಳ, ಲಯ, ಬಿಡ್ತಿಗೆ, ಚಂಡೆ-ಮದ್ದಳೆ-ಗೆಜ್ಜೆಗಳ ಸಮ್ಮಿಶ್ರ ಸ್ವರಸಂದೋಹ, ಗೆಜ್ಜೆಯ ನಾದವನ್ನೇ ಹೋಲುವ ತಾಳದ ಸದ್ದು --ಇವೆಲ್ಲಾ ಹಿಮ್ಮೇಳದ ಕೊಡುಗೆಯಾದರೆ ಹಾಡಲು ಸುಲಭವಾಗುವಂತಹ ಪ್ರಾಸಬದ್ಧ ಮತ್ತು ಸ್ವರಶುದ್ಧ ಹಾಡುಗಳಲ್ಲಿ ಯಕ್ಷಗಾನ ಪ್ರಸಂಗಗಳನ್ನು ಪೋಣಿಸಿಕೊಟ್ಟ ಮಹತಿಯ ಔದಾರ್ಯ ಕನ್ನಡ ಕವಿಗಳದ್ದಾಗಿದೆ. ಅಂತಹ ಕವಿಜನಸಂದಣಿಯಲ್ಲಿ ಮುದ್ದಣ ಕೂಡ ಒಬ್ಬ ಎಂಬುದು ನಮಗೆಲ್ಲಾ ಹೆಮ್ಮೆಯ ವಿಷಯ. ಆ ಕವಿಜನಸಂದಣಿಗೂ ನಮಸ್ಕರಿಸುವುದರ ಜೊತೆಗೇ ನಾನು ಬಹಳವಾಗಿ ಮೆಚ್ಚುವ ಕವಿ ಶ್ರೀ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರಿಗೂ ವಂದಿಸುವುದು ಇಂದಿನ ಈ ಲೇಖನದ ಔಚಿತ್ಯ.

Wednesday, January 11, 2012

ಯಾರಾದ್ರೆ ನಂಗೇನು ?

ಚಿತ್ರ ಕೃಪೆ : ಚಿತ್ರಲೋಕ.ಕಾಂ --ದ್ವಾರಾ : ಅಂತರ್ಜಾಲ

ಯಾರಾದ್ರೆ ನಂಗೇನು ?

ಹಾಂ...ಹಾಂ....ಹಾಂ ಹೌದಮ್ಮಾ ಯಾರಾದ್ರೆ ನಿಂಗೇನು ? ಆದ್ರೆ ಮಿಕ್ಕಿದ ನಾವುಗಳು ಇದ್ದೇವಲ್ಲಾ ನಮಗೆಲ್ಲಾ ಯಾರಾದ್ರೂ ಆಗೋ ಹಾಗಿಲ್ಲ ಹೀಗಾಗಿ ಆ ಒಕ್ಕಣೆ ಬೇಡ ಎಂಬುದು ನಮ್ಮ ವಾದ! ಒಂದು ಕಡೆ ಯೋಗಿಗಳೂ ಸನ್ಯಾಸಿಗಳೂ ಕೆಡುತ್ತಿರುವ ಸಮಾಜವನ್ನು ಸುಧಾರಿಸಲು ಭಗವದ್ಗೀತೆಯನ್ನು ಬೋಧಿಸುತ್ತಿದ್ದಾರೆ; ಗೀತೆಯ ಸೂತ್ರಗಳನ್ನು ಬಳಸಲು ಹೇಳುತ್ತಿದ್ದಾರೆ. ಇನ್ನೊಂದುಕಡೆ ಅಧೋಗತಿಗೆ ಎಳೆಯುವ ಸಿನಿಮಾಗಳು ಹುಚ್ಚುಚ್ಚಾಗಿ ಈ ಥರದ ದುರ್ಬೋಧನೆಗೂ ಇಳಿದುಬಿಡುತ್ತಿವೆ.

|| ಗೋಕರ್ಣಸ್ಸಮಃ ಕಾಶೀ ವಿಶ್ವನಾಥೋ ಮಹಾಬಲ || ಎಂಬ ಉಕ್ತಿಯೊಂದಿತ್ತು. ಗೋಕರ್ಣದಲ್ಲಿರುವ ತಾಮ್ರಗೌರಿ [ಪಾರ್ವತಿ] ತಕ್ಕಡಿಯಲ್ಲಿ ಕಾಶೀ ಮತ್ತು ಗೋಕರ್ಣಗಳೆರಡನ್ನೂ ತೂಗಿದಳಂತೆ. ತೂಕದಲ್ಲಿ ಎರಡೂ ಸಮಕ್ಕೆ ಸಮ ಆಗಿ ತೋರಿದ್ದರಿಂದ ಕಾಶಿಗೆ ಹೋಗಲಾಗದವರು ಗೋಕರ್ಣಕ್ಕೆ ಹೋದರೂ ಪರವಾಗಿಲ್ಲ ಎಂಬ ಭಕ್ತಿಭಾವ ಹಿಂದಿನವರಲ್ಲಿತ್ತು. ಅಂತೆಯೇ ಕಾಶಿ, ಗೋಕರ್ಣ ಮುಂತಾದ ಕ್ಷೇತ್ರಗಳ ಹೆಸರುಗಳನ್ನು ಸಿನಿಮಾಕ್ಕೆ ಬಳಸುತ್ತಿರಲಿಲ್ಲ. ಡಾ| ರಾಜಕುಮಾರ್ ಕಲದ ’ಶಂಕರ್ ಗುರು’ ಎಂಬಲ್ಲಿಂದ ಯಾಕೋ ಸಿನಿಮಾ ಮಂದಿಗೆ ಜನರನ್ನು ಪಶೆಬೀಳಿಸುವ ನೆಶೆ ಹೆಚ್ಚಾಯಿತು. ’ಶಂಕರ್ ಗುರು’ವನ್ನು ಶಂಕರಾಚಾರ್ಯರ ಕುರಿತಾದ ಸಿನಿಮಾ ಎಂದು ನೋಡಿದವರಲ್ಲಿ ನನೂ ಒಬ್ಬ ಪಡ್ಡೆ ಇದ್ದೆ! ಇವತ್ತು ಗತಿ ಹೇಗಾಗಿದೆ ಎಂದರೆ ಹೊರಗಿನ ಹೆಸರನ್ನು ನೋಡಿಕೊಂಡು ಯಾವ ಸಿನಿಮಾವನ್ನೂ ನೋಡುವಹಾಗಿಲ್ಲ, ಹೊರಕವಚದ ಮೇಲೆ ತೋರಿಸಿದಷ್ಟು ಗೋಡಂಬಿ ಬೀಜ ಬಿಸ್ಕತ್ತಿನಲ್ಲಿ ನಮಗೆಂದೂ ದಕ್ಕುವುದಿಲ್ಲ! ಪರವಾಗಿಲ್ಲ. ಅದು ಬೇರೇ ಪ್ರಶ್ನೆ. ಆದ್ರೆ ಅದಕ್ಕಿಂತಾ ಭಿನ್ನವಾಗಿ ಇರುವ ಸಮಸ್ಯೆ ಸಿನಿಮಾಗಳದ್ದು.

ಇಬ್ಬರು ಸ್ನೇಹಿತರು ಮಾತಾಡಿಕೊಂಡಿದ್ರು. ಆಗ ಹಾದಿಹೋಕ ಮುದುಕನೊಬ್ಬ ದಪ್ಪಗಾಜಿನ ಕನ್ನಡಕವನ್ನು ಸರಿಸಿಕೊಳ್ಳುತ್ತಾ ಊರುಗೋಲು ಮುಂದೆ ಹಾಕುತ್ತಾ ನಡೆಯುತ್ತಾ ಹತ್ತಿರ ಬರುತ್ತಿದ್ದ.

" ಹೋಗ್ಲಿಲ್ವಾ ಕಾಶಿಗೆ ? "

" ಹೋಗ್ಲಿಲ್ಲ ಕಣೋ ಹೋಗ್ಬೇಕಾಗಿತ್ತು. "

ಹತ್ತಿರ ಬಂದ ಮುದುಕನ ಕಿವಿ ಬಹಳ ಸೂಕ್ಷ್ಮವಾಗಿತ್ತು; ಎಲ್ಲವನ್ನೂ ಕೇಳಿಸಿಕೊಳ್ಳುತ್ತಿತ್ತು.

" ಪರವಾಗಿಲ್ಲ ನಿಮ್ಗೇನು ಇನ್ನೂ ಪ್ರಾಯದವ್ರು ಕಾಶಿಗೆ ಯಾವಾಗ ಬೇಕಾದ್ರೂ ಹೋಗ್ಬಹುದು " --ಎಂದು ತನ್ನ ಮಾತನ್ನೂ ಸೇರಿಸಿದ ಮುದುಕ. ಎದುರಿದ್ದ ಯುವಕರು ತಮ್ಮೊಳಗೇ ನಕ್ಕವು, ಅರ್ಥವಾಗದ ಮುದುಕನ ಹಲ್ಲಿಲ್ಲದ ಬಾಯಿ ಸಣ್ಣಗೆ ನಗುಸೂಸಿತು ಪಾಪ! ಯುವಕರು ಹೋಗಲಿಕ್ಕಾಗಲಿಲ್ಲ ಎಂದುಕೊಂಡಿದ್ದು ’ ಕಾಶಿ ಬಾರ್ ಅಂಡ್ ರೆಸ್ಟಾರೆಂಟ್’ಗೆ !!

ಇನ್ನೊಂದು ಪ್ರಸಂಗ ಹೀಗಿದೆ ಮಲೆನಾಡಿನ ಅಜ್ಜಿಯೊಬ್ಬರು ತಮ್ಮ ಸ್ನೇಹಿತೆಯಾದ ಇನ್ನೊಬ್ಬ ಅಜ್ಜಿಯಲ್ಲಿ ಕಷ್ಟ-ಸುಖ ಮಾತಾಡಿಕೊಳ್ಳುತ್ತಿದ್ದರು. ಒಬ್ಬ ಅಜ್ಜಿ ಇನ್ನೊಬ್ಬರ ಕೂಡ ಹೀಗೆ ಹೇಳಿದ್ರು" ’ಗೋಕರ್ಣ’ ಸಿನಿಮಾ ಬಂದಿದ್ಯಂತಲ್ಲಾ ಗೋಕರ್ಣಕ್ಕಂತೂ ಹೋಗಕ್ಕಾಗ್ಲಿಲ್ಲ ಅದ್ಕೇ ಆ ಸಿನಿಮಾದಲ್ಲಾದ್ರೂ ಗೋಕರ್ಣ ನೋಡೋಣ ಎಂಬಾಸೆ "! ಉಪೇಂದ್ರ ’ಗೋಕರ್ಣ’ ಎಂಬ ಸಿನಿಮಾ ತಯಾರಿಸಿದ. ಆದರೆ ಯಾಕೆ ಆ ಹೆಸರು ಬೇಕಾಗಿತ್ತು ಎಂಬುದು ನನ್ನಂತಹ ಕೆಲ ಜನರ ಪ್ರಶ್ನೆ. ಅದಕ್ಕೆ ಯಾರಲ್ಲೂ ಉತ್ತರವಿಲ್ಲ.

ಹಣಮಾಡುವ ಒಂದೇ ಉದ್ದೇಶದಿಂದ ಸಿನಿಮಾ ಮಾಡುವುದು ಯಾವ ನ್ಯಾಯ? ಒಬ್ಬ ನಿರ್ದೇಶಕರು ತಮ್ಮ ಸಿನಿಮಾ ಟೈಟಲ್ ಸಮರ್ಥಿಸಿಕೊಳ್ಳುತ್ತಾ " ನಾವು ಎಸ್ಟಂದ್ರೂ ಎಂಟರ್ಟೈನ್‍ಮೆಂಟ್ ಕೊಡೋರು ನಮಗೆ ಅದು ಮಾತ್ರ ಮುಖ್ಯ. ನಿಜಜೀವನದಲ್ಲಿ ನಡೆಯದ ಘಟನೆಗಳನ್ನೇ ಸಿನಿಮಾ ತೋರಿಸುತ್ತದೆ." ಹೌದು ಸ್ವಾಮೀ ಸಿನಿಮಾ ಮತ್ತು ಧಾರಾವಾಹಿಗಳನೇಕವು ಬಂದಮೇಲೇ ಹಲವು ಮನೆಗಳು ಮನಗಳು ಮುರಿದುಹೋಗಿವೆ! ಮನೋರಂಜಕ ಸಿನಿಮಾ ಮನೆಹಾಳು ಕೆಲಸವನ್ನು ನಡೆಸುವ ಉಪದ್ವ್ಯಾಪ ನಿಮಗೇನು ಗೊತ್ತು. ನೀವು ಸಿನಿಮಾ ತೋರಿಸಿ ಕಾಸೆಣಿಸಿಕೊಳ್ಳುತ್ತೀರಿ, ಸಮಾಜದಲ್ಲಿ ಅದರ ಅರ್ಥವನ್ನು ಸರಿಯಾಗಿ ಗ್ರಹಿಸದವರು ಅದನ್ನೇ ಅನುಕರಿಸುತ್ತಾರೆ; ಹದಿಹರೆಯದವರು ಅಂಥದ್ದನ್ನೇ ಆದರ್ಶವೆಂದು ಭಾವಿಸುತ್ತಾರೆ!

ಹುಡುಗ-ಹುಡುಗಿಯ ಹದಿಹರೆಯದ ಜೀವನದ ಕೆಲವು ವರ್ಷಗಳು ಬದುಕನ್ನು ನಿರೂಪಿಸುವ ಹಂತವಾಗಿರುತ್ತವೆ. ಅದೇ ಹೊತ್ತಲ್ಲಿ ಉತ್ತಮ ವಿದ್ಯಾಭ್ಯಾಸ ನಡೆಯಬೇಕು, ಅದೇ ಸಮಯದಲ್ಲಿ ಪ್ರಾಯ ಉಕ್ಕೇರಿ ಸೌಂದರ್ಯ ವರ್ಧಿಸಿ ಪರಸ್ಪರ ದೈಹಿಕ ಆಕರ್ಷಣೆ ’ಪ್ರೀತಿ-ಪ್ರೇಮ’ ಎಂಬ ಹಚ್ಚಡವನ್ನು ಹೊದ್ದು ಬರುತ್ತದೆ. " ನಿನ್ನನ್ನು ಬಿಟ್ಟರೆ ನಂಗೆ ಬದುಕೇ ಇಲ್ಲಾ " ಎಂಬ ಮನೋಭಾವ ಪ್ರೇಮಿಸುತ್ತೇವೆ ಎಂದುಕೊಳ್ಳುವ ಹುಡುಗ ಯಾ ಹುಡುಗಿಯಲ್ಲಿ ಹುಟ್ಟಿಕೊಳ್ಳುತ್ತದೆ. ತಮ್ಮ ಮಗು/ಮಕ್ಕಳು ಓದಲಿ, ತಮ್ಮ ಕಷ್ಟ ಕಳೆಯಲಿ, ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಲಿ, ಚೆನ್ನಾಗಿ ದುಡಿದು ಬಾಳಲಿ ಎಂಬ ಪಾಲಕರ ಬಯಕೆ ಇನ್ನೊಂದೆಡೆ. ಅದೇ ವೇಳೆಗೆ ಹರೆಯದ ಹುಚ್ಚು ಪ್ರೇಮಿಗಳ ಕುರಿತು ಉಪೇಂದ್ರನಂತಹ ಕಮಂಗಿಗಳ ಆಸಿಡ್ ಪ್ರೇಮದ ಸಿನಿಮಾ ಬರುತ್ತದೆ. ಆಸಿಡ್ ಪ್ರಯೋಗ ಕೇಳಿಯೂ ಗೊತ್ತಿರದ ಹುಡುಗ ಅಂಥಾ ಕೆಟ್ಟ ಸಿನಿಮಾ ನೋಡಿ ಅಂಥದ್ದಕ್ಕೆ ಸಿದ್ಧವಾಗುತ್ತಾನೆ. ಉಪೇಂದ್ರನ ಆಸಿಡ್ ಸಿನಿಮಾ ಬಂದಮೇಲೆ ಬೆಂಗಳೂರಿನಲ್ಲೇ ಹಲವು ಆಸಿಡ್-ಪ್ರೇಮ ಘಟನೆಗಳು ಜರುಗಿ ಸುಂದರವಾಗಿದ್ದ ಹೆಣ್ಣುಮಕ್ಕಳು ಕುರೂಪಿಗಳಾಗಿದ್ದಾರೆ, ಕಿವಿ-ಕಣ್ಣು ಕಳೆದುಕೊಂಡಿದ್ದಾರೆ. ಅಂಥಾ ಕೆಟ್ಟ ಸಿನಿಮಾಗಳನ್ನು ನಿರ್ಬಂಧಿಸುವವರು ಯಾರಾದರೂ ಇದ್ದಾರ್ಯೇ ? ಇಲ್ಲ. ಹೋಗಲಿ ಅದರಲ್ಲಿರುವ ಅಂತಹ ಘಟನೆಗಳನ್ನು ತೆಗೆದು ಬೇರೇ ರೀತಿ ಮಾರ್ಪಡಿಸಿ ಎನ್ನುವ ನಿರ್ಣಾಯಕ ನಿರ್ದೇಶನ ನೀಡಬೇಕಾದ ಸೆನ್ಸಾರ್ ಮಂಡಳಿ ಇದೆಯೇ? ಇಲ್ಲ. ಸೆನ್ಸಾರ್ ಮಂಡಳಿಯೂ ಹಣ ಪೀಕುವ ಅನುಮಾನ ನನಗಂತೂ ಇದೆ! ಅಲ್ಲಿ ಕೂತವರು ತೀರಾ ನೀಲಿ ಚಿತ್ರವೊಂದನ್ನು ಬಿಟ್ಟು ಮಿಕ್ಕೆಲ್ಲಕ್ಕೂ ಸರ್ಟಿಫಿಕೇಟ್ ನೀಡಿಬಿಡುತ್ತಾರೆ!

ಪುಟ್ಟಣ್ಣ ಕಣಗಾಲ್‍ರಂತಹ ನಿರ್ದೇಶಕರು ಇರುವವರೆಗೆ ಪ್ರೀತಿ-ಪ್ರೇಮ ಕಥೆಗಳಿಗೆ ಒಂದು ಮಿತಿಮೀರದ ಔಪಚಾರಿಕ ಲೆಪ್ಪ ಇರುತ್ತಿತ್ತು. ಬೆತ್ತಲೆ/ಅರೆಬೆತ್ತಲೆ ತೋರಿಸಬೇಕಾದ ದೃಶ್ಯಗಳನ್ನೂ ಕೂಡ ಆದಷ್ಟು ತಡೆಹಿಡಿಯುತ್ತಿದ್ದರು, ತೋರಿಸಲು ಮುಂದಾಗುತ್ತಿರಲಿಲ್ಲ. ತುಟಿಗೆ-ತುಟಿ ಸೇರುವುದನ್ನು ಸಾಂಕೇತಿಕವಾಗಿ ಹೂ-ದುಂಬಿಗಳ ಚಿತ್ರ ತೋರಿಸಿ ಕಲ್ಪಿಸಲಗುತ್ತಿತ್ತು. ಆ ಕಾಲ ಹೋಗೇ ಬಿಡ್ತುಬಿಡಿ. ಈಗೇನಿದ್ದರೂ ಎಷ್ಟೋ ಮನೆಗಳಲ್ಲೇ ಕದ್ದು-ಮುಚ್ಚಿ ನೀಲಿ ಚಿತ್ರಗಳನ್ನು ನೋಡುವ ಕಾಲ. ವಿದ್ಯೆ ಹೆಚ್ಚಾದ ಅಪ್ಪ-ಮಕ್ಕಳು ಮನೆಯ ರೂಫ್-ಟಾಪ್ ಗಾರ್ಡನ್‍ನಲ್ಲಿ ಒಟ್ಟಾಗಿ ಕೂತು ಕುಡಿಯುವ ಕಾಲ ಬಂದಿದೆ. ಇವತ್ತು ಒಟ್ಟಾಗಿ ಕುಡಿಯುವವರು ನಾಳಿನ ಜನಾಂಗದಲ್ಲಿ ಒಟ್ಟಾಗಿ ಇನ್ನೇನೇನು ಮಾಡುತ್ತಾರೋ ತಿಳಿಯುವುದಿಲ್ಲ.

ಪ್ರಸಕ್ತ ನಾವು ಇಲ್ಲೊಂದು ಚಿಕ್ಕ ಹೆಸರನ್ನು ಗಮನಿಸೋಣ. ’ಯಾರಾದ್ರೆ ನಂಗೇನು ? ’ ಹುಡುಗಿಯೊಬ್ಬಳು ಬೆತ್ತಲೆ ನಿಂತಿರುವ ದೃಶ್ಯದ ಕೆಳಗೆ ’ಯಾರಾದ್ರೆ ನಂಗೇನು ?’ ಎಂಬ ಘೋಷವಾಕ್ಯ ಬರೆದರೆ ಅದರ ಅರ್ಥವಾದರೂ ಸಾಮಾನ್ಯವಾಗಿ ಏನಿರಬಹುದು? ಸಿನಿಮಾ ಕಥೆಯಲ್ಲಿ ಅಂತಹ ದೃಶ್ಯ ಇದ್ದೀತೋ ಇಲ್ಲವೋ ಬೇರೇ ಪ್ರಶ್ನೆ ಆದರೆ ತಕ್ಷಣದ ನೋಡುಗನಿಗೆ ಅಂತಹ ಗೋಡೆಚಿತ್ರಗಳನ್ನು ನೋಡಿದಾಗ ಏನನ್ನಿಸುತ್ತದೆ? ಹಣವೊಂದು ದೊರೆತರೆ ಸಾಕು ಯಾರಾದ್ರೆ ನಂಗೇನು ನಾನು ಎಲ್ಲಾರ್ಜೊತೆ ರೆಡಿ ಎಂಬ ಅರ್ಥ ಬರುವುದಿಲ್ಲವೇ? ಇದು ಬೀದಿನಾಯಿಗಳ ’ಆ ಚಟುವಟಿಕೆಗಳಿ’ಗಿಂತಲೂ ಭಿನ್ನ ಅಲ್ಲ ಹೇಗೆ ? ಸಿನಮಾದಲ್ಲಿ ಉತ್ತಮ ಸಂದೇಶವಿದೆಯಂತೆ. [ಎಲ್ಲರೂ ಆರಂಭದಲ್ಲಿ ಹೇಳೋದೇ ಇದನ್ನು! ಸಂದೇಶ ಯಾವುದೇ ಇರಲಿ, ಸದ್ಯಕ್ಕೆ ಆ ಗೋಡೆಚಿತ್ರ ಹಬ್ಬಿಸುವ ಸಂದೇಶವೇನು ?

ಸಿನಿಮಾ ಮತ್ತು ಮಾಧ್ಯಮ ವಾಹಿನಿಗಳು ನಾಗರಿಕರಿಗೆ ಸಂದೇಶಗಳನ್ನು ಕೊಡುವಾಗಾಗಲೀ ಅಥವಾ ಮನರಂಜನೆ ಒದಗಿಸುವಾಗಾಗಲೀ ತಾವು ಬಳಸುವ ಶಬ್ದಗಳನ್ನೂ ಮತ್ತು ಉಪಯೋಗಿಸುವ ದೃಶ್ಯಗಳನ್ನೂ ನೆನಪಿಟ್ಟುಕೊಂಡು ನಡೆಸುವುದು ಮುಖ್ಯವಾಗಿರುತ್ತದೆ. ಸಮಾಜ ಹೇಗೆ ಸಾಗಿದೆ ಎಂದರೆ ನಮಗೆ ಕೆಲವೊಮ್ಮೆ ಅಲೋಪಥಿಕ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಅವು ಮೈಗೊಂಡುಹೋಗುತ್ತವೆ. ಅವುಗಳಲ್ಲಿನ ರೋಗವಾಸಿಮಾಡುವ ತಾಕತ್ತು ನಮಗೆ ಸಾಕಾಗುವುದಿಲ್ಲ. ಅದೇ ರೀತಿ ಪ್ರತಿನಿತ್ಯ ಮಾಧ್ಯಮಗಳಲ್ಲಿ ಕ್ರೌರ್ಯಗಳನ್ನೂ ಬೆತ್ತಲೆ ದೃಶ್ಯಗಳನ್ನೂ ನೋಡ್ತಾ ನೋಡ್ತಾ ಈಗೀಗ ನೋಡುಗ ಮತ್ತೇನನ್ನೋ ಬಯಸುವಷ್ಟು ಕೆಟ್ಟ ಹಂತಕ್ಕೆ ತಲ್ಪಿದ್ದಾನೆ; ಕ್ರೌರ್ಯವನ್ನು ವೈಭವೀಕರಿಸಿ ಉಣಬಡಿಸಿದ ಕುಖ್ಯಾತಿ ಮಾಧ್ಯಮವಾಹಿನಿಗಳಿಗೆ ಸಲ್ಲುತ್ತದೆ! ಕೆಲವು ಮನೆಗಳಲ್ಲಿ ಮಧ್ಯ ವಯಸ್ಕರಿಗೆ ಪ್ರತೀ ರಾತ್ರಿ ಟಿವಿಗಳಲ್ಲಿ ಒಂದೆರಡು ಹೆಣ ಬಿದ್ದಿದ್ದು ನೋಡಿದ ಹೊರತು ನಿದ್ದೆ ಬರುವುದಿಲ್ಲವಂತೆ ! ಯಾರೋ ರೌಡಿ ಇನ್ನೊಬ್ಬನನ್ನು ಹತ್ಯೆಗೈದಿದ್ದು-ಯಾವನೋ ಪಾಪಿ ವರದಕ್ಷಿಣೆಗೆ ಹೆಂಡತಿಯನ್ನು ಕೊಂದಿದ್ದು, ಯಾವುದೋ ಹುಡುಗ ಹುಡುಗಿ ತನಗೆ ಸಿಗಲಿಲ್ಲಾ ಎಂಬ ಕಾರಣಕ್ಕೆ ಆಕೆ ಪ್ರೀತಿಸುತ್ತಾಳೆ ಎನ್ನಲಾದ ಇನ್ನೊಬ್ಬ ಹುಡುಗನನ್ನು ಬಲಿಹಾಕುವುದು, ವಿಕೃತಕಾಮಿಯೊಬ್ಬ ಹೆಂಗಸಿನ್ನು ಬಲಾತ್ಕರಿಸುವುದು ಇದೆಲ್ಲಾ ನಮಗ್ಯಾಕೆ ಬೇಕ್ರೀ ?

ಒಂದು ಕಾಲಕ್ಕೆ ಪೋಲೀಸ್ ನ್ಯೂಸ್ ಎಂಬ ಪೇಪರ್ ಬರುವುದನ್ನೇ ಕಾಯುವ ವರ್ಗವೊಂದಿತ್ತು. ಆಮೇಲೆ ರವಿಬೆಳಗೆರೆ ಕುಚ್ ಕಟ್ಟಾ ಕುಚ್ ಮೀಟಾ ಅನ್ನೋ ಥರ ಹೊಸ ಶೈಲಿಯಲ್ಲಿ ಅಂತಹ ಕಥೆಗಳನ್ನು ತನ್ನ ಪತ್ರಿಕೆಯಲ್ಲೂ ಮಾಧ್ಯಮವೊಂದರಲ್ಲೂ ತೋರಿಸಿದರು. ರೋಲ್ ಕಾಲ್ ಮಾಡಿ ನಡೆಸುತ್ತಿದ್ದ ಪತ್ರಿಕೆಗಳು ಇಂತಹ ಕಥೆಗಳನ್ನು ಬರೆಯಲು ತೊಡಗಿದ ಮೇಲೆ ಸಮಾಜದ ’ಆ ವರ್ಗ’ ಇಂತಹ ಪತ್ರಿಕೆಗಳನ್ನು ಬಿಸಿ ಬಿಸಿ ದೋಸೆಯಂತೇ ಕೊಂಡುಕೊಂಡವು, ಪತ್ರಿಕೆಗಳು ಹಣಮಾಡಿದವು! ಸಮಾಜದ ’ಆ ವರ್ಗ’ ಮಿಕ್ಕುಳಿದ ವರ್ಗಕ್ಕೂ ಅಂತಹ ಕಥೆಗಳನ್ನು ಓದಲು/ನೋಡಲು ಪ್ರೇರೇಪಿಸಿತು. ಸುದ್ದಿಗಳಿಲ್ಲದೇ ಒದ್ದಾಡುತ್ತಿದ್ದ ಮಾಧ್ಯಮವಾಹಿನಿಗಳಿಗೆ ’ಆ ಕಥೆಗಳು’ ಟೈಂ ಪಾಸ್ ಮಾಡಲು ಅನುಕೂಲವಾದವು. ಊಟದ ನಂತರ ರಾತ್ರಿ ಕೂತು ವಿರಮಿಸುವ ವೇಳೆ ಎಲ್ಲಾ ವಾಹಿನಿಗಳಲ್ಲೂ ಅಂಥದ್ದೇ ಕಥೆಗಳು, ಕೆಲವೊಮ್ಮೆ ಒಂದೇ ಅದೇ ಕಥೆ! ವೀಕ್ಷಕರು ಭಿಕ್ಷುಕರಂತಾದರು-ಬೆಗ್ಗರ್ಸ್ ಆರ್ ನಾಟ್ ಚೂಸರ್ಸ್ ಎಂಬಂತೇ ವೀಕ್ಷಕರಿಗೆ ಬೇರೇ ಆಯ್ಕೆ ಇರಲಿಲ್ಲವಾಗಿ ಅನಿವಾರ್ಯವಾಗಿ ಕೆಲವರು ಅಂಥದ್ದನ್ನೇ ನೋಡಿದರು! ಇನ್ನು ಕೆಲವರು ಟಿವಿ ಸ್ವಿಚ್ ಆಫ್ ಮಾಡಿದರು. ಮಾಧ್ಯಮ ವಾಹಿನಿಗಳ ವೀಕ್ಷಕರಲ್ಲೂ ನನ್ನದೊಂದು ವಿನಂತಿ: ಕ್ರೌರ್ಯವನ್ನು ತೋರಿಸುವ ಕಥೆಗಳು ಇನ್ನೆಷ್ಟು ದಿನ ಹೀಗೇ ಬೇಕು ? ಅವುಗಳ ಬದಲಿಗೆ ಉತ್ತಮ ಸಂಸ್ಕೃತಿ-ಸಂಸ್ಕಾರಗಳ ಕುರಿತಾದ ಸಂವಾದಗಳನ್ನೋ ಮತ್ತೇನನ್ನೋ ತೋರಿಸಲಿ ಅಲ್ಲವೇ?

ಸಿನಿಮಾ ಮಂದಿ ಮತ್ತು ಮಾಧ್ಯಮಗಳವರು ಇನ್ನಾದರೂ ಅರಿತುಕೊಳ್ಳಲಿ. ಕೇವಲ ಒಳಗೆ ಅಂಥಾ ಸಂದೇಶ ಇದೆ ಇಂಥಾ ಸಂದೇಶ ಇದೆ ಎಂದು ರೈಲು ಬಿಡುವುದಕ್ಕಿಂತ ಅಂಥಾ ಸಂದೇಶ ಇದೆ ಎಂಬುದನ್ನು ಸಮಾಜ ಹೇಳಬೇಕು ಹಾಗೆ ನಿರೂಪಿಸಿ ತೋರಿಸಿ. ಕೇವಲ ಏನನ್ನೋ ಮನಸ್ಸಿಗೆ ಬಂದಿದ್ದನ್ನು ತೋರಿಸಿ ದುಡ್ಡು ಬಾಚಿಕೊಂಡು ಜಾಗ ಖಾಲಿ ಮಾಡಲಿಕ್ಕೆ ಇದೇನು ಡೊಂಬರಾಟವೋ ಮಂಗನಾಟವೋ ? ಅದಾದ್ರೆ ಸರಿ ಪಾಪ ಹೊಟ್ಟೆಪಾಡಿಗೆ ಕಸರತ್ತು ಮಾಡುವಾಗ ಏನನ್ನೋ ತೋಚಿದ್ದನ್ನು ತೋರಿಸುತ್ತಾರೆ ಎನ್ನಬಹುದು, ಆದರೆ ಸಿನಿಮಾ ಯಾ ಮಾಧ್ಯಮಗಳವರು ತಾವುಗಳು ಓದಿಕೊಂಡ ಮಹನೀಯರು, ತಾವುಗಳು ಸೆರೆಹಿಡಿದು ತೋರಿಸುವ ದೃಶ್ಯಾವಳಿಗಳು ಒಂದರ್ಥ ಡಾಕ್ಯುಮೆಂಟರಿಗಳು! ಅವು ಯಾವಕಾಲಕ್ಕೂ ಪುನರ್ಲಭ್ಯವಾಗುವಂಥವು ಮಾತ್ರವಲ್ಲ ಸಮಾಜದ ಎಲ್ಲಾ ಸ್ತರಗಳಿಗೂ ಬಹುವೇಗದಲ್ಲಿ ತಲ್ಪುವಂಥವು. ಅವುಗಳಲ್ಲಿನ ಕಥೆ-ಆಖ್ಯಾಯಿಕೆಗಳು ಜನರ ಮನಃಪಟಲದಲ್ಲಿ ನಿಲ್ಲುತ್ತವೆ. ಅದರಲ್ಲಂತೂ ಹದಿಹರೆಯದ ಮಕ್ಕಳು ನಿಮ್ಮ ಕೆಟ್ಟ ಸಂದೇಶಗಳನ್ನೇ‍ ಪ್ರೀತಿಯಿಂದ ಸ್ವೀಕರಿಸಿ ಅಪ್ಪ-ಅಮ್ಮ ಕೊಡುವ ಉತ್ತಮ ಸಂದೇಶಗಳನ್ನೂ ಪಾಲಿಸದಂತಾಗುತ್ತಾರೆ. ಮಕ್ಕಳು ಮನೆಯಲ್ಲಿ ಅಪ್ಪ-ಅಮ್ಮನನ್ನೇ ದ್ವೇಷಿಸತೊಡಗುತ್ತಾರೆ. ಹೀಗಾಗಿ ಸ್ವೇಚ್ಛಾಚಾರವನ್ನು ವೈಭವೀಕರಿಸುವ ನಿಮ್ಮ ಸಂದೇಶಗಳನ್ನು ಹದ್ದುಬಸ್ತಿನಲ್ಲಿಡಿಸಿ ಸಮಾಜ [ಈಗಲೇ ಕೆಲಭಾಗ ಕೆಟ್ಟಿದೆ]ಕೆಟ್ಟುಹೋಗದಂತೇ ನೋಡಿಕೊಳ್ಳಬೇಕಾದ ಸಾಮಾಜಿಕ ಜವಾಬ್ದಾರಿ ಕೂಡ ನಿಮ್ಮದಿರುತ್ತದೆ, ಅಂದಾಗ ಮಾತ್ರ ನಿಮ್ಮ ಮನೋರಂಜನೆಗೊಂದು ಮೌಲ್ಯವಿರುತ್ತದೆ. ಅದು ಬಿಟ್ಟು ಸಿಕ್ಕ ಸಿಕ್ಕ ಹಾಗೆಲ್ಲಾ ಹೇಳಿಕೆ ಕೊಡೋದು, ಸಂದೇಶ ಕೊಡ್ತೀವಿ ಅಂತ ಕೆಟ್ಟ ಸಿನಿಮಾ ತೆಗೆಯೋದು ಮಾಡ್ಬೇಡಿ.

ನನ್ನ ಈ ಅನಿಸಿಕೆಗೆ ಸಮಾಜದಲ್ಲಿ ಕೆಲವರ ಸ್ಪಂದನೆಯಾದರೂ ಇರಬಹುದು. ದುರ್ಗಮ ಪ್ರದೇಶವನ್ನು ಕ್ರಮಿಸುವಾಗ ಅತ್ಯಂತ ಜಾಗರೂಕತೆ ಬೇಕಂತೆ, ಶಿಖರವನ್ನೇರುವಾಗ ಸಹಾಯಕ್ಕೆ ಹಗ್ಗ ಮೊದಲಾದವು ಬೇಕಂತೆ, ಸಮಾಜ ಅಜ್ಞಾನವನ್ನು ತೊಡೆದುಹಾಕುವಾಗ ಭಗವದ್ಗೀತೆಯಂತಹ ಕೈಗನ್ನಡಿ ಬೇಕಂತೆ. ಸಹಸ್ರ ವರ್ಷಗಳ ಹಿಂದೆ ಯುದ್ಧಭೂಮಿಯಲ್ಲಿ ಪ್ರವಚಿಸಿದ್ದೆನ್ನಲಾದ ಗೀತೆ ಎಂಬ ಮಾನವ ಜೀವನ ಧರ್ಮ ಸೂತ್ರಗಳು ಇವತ್ತಿಗೂ ಎಷ್ಟು ಪ್ರಸ್ತುತ ಎಂಬುದು ಆಗೀಗ ನಮಗೆ ತಿಳಿಯುತ್ತಲೇ ಇರುತ್ತದೆ. ನೀತಿಬಾಹಿರ ಕೆಲಸಗಳನ್ನು ನಿರ್ಬಂಧಿಸುವ ಮಾನವ ಕಲ್ಯಾಣವನ್ನು ಎತ್ತಿಹಿಡಿದ ಗೀತಾಚಾರ್ಯ ಶ್ರೀಕೃಷ್ಣನನ್ನು ಅದಕ್ಕೇ ಜಗದ್ಗುರು ಎನ್ನುತ್ತಾರಲ್ಲವೇ? ನಮಗೆ ಗೀತೆಯನ್ನೋದಲು ಸಮಯವಿಲ್ಲ, ಗೀತೆಯ ಉಪನ್ಯಾಸಗಳನ್ನು ಕೇಳಲು ಅನುಕೂಲವಿಲ್ಲ. ಗೀತೆ ಹಿಂದೂ ಧರ್ಮ ಪ್ರಚಾರವೆಂಬ ವಿಷಬೀಜವನ್ನು ನಾವು ಯಾರದೋ ಬಾಯಿಂದ ಕೇಳಿ ಮತ್ತಷ್ಟು ಜನರಿಗೆ ಹಬ್ಬಿಸುತ್ತೇವೆ! ಆದರೆ ಹಗಲೂ-ರಾತ್ರಿ ಮಾಧ್ಯಮವಾಹಿನಿಗಳಲ್ಲಿ ಬರುವ ಕ್ರೌರ್ಯಗಳನ್ನೂ ಕಾಮತೀಟೆಗಳ ಎಪಿಸೋಡ್‍ಗಳನ್ನು ನೋಡಲು ನಮಗೆ ಸಮಯವಿದೆ, ಅನುಕೂಲವೂ ಇದೆ, ಮನಸ್ಸೂ ಇದೆ. ಅಂದಮೇಲೆ ನಮ್ಮ ಮನಸ್ಸು ಅಂಧಕಾರದೆಡೆಗೆ ಹೆಜ್ಜೆಹಾಕುತ್ತಿದೆ; ಬೆಕ್ಕು ಕದ್ದು ಹಾಲು ಕುಡಿಯಲು ಬಯಸುತ್ತದೆ! ಈಗಲೇ ನಿರ್ಧರಿಸಿ, ಈ ಕ್ಷಣ ಅದನ್ನು ನಿಯಂತ್ರಿಸಿ, ಅಸತ್ಯದಿಂದ ಸತ್ಯದೆಡೆಗೆ-ಕತ್ತಲೆಯಿಂದ ಬೆಳಕಿನೆಡೆಗೆ-ಮೃತ್ಯುವಿನಿಂದ ಅಮೃತತ್ವದೆಡೆಗೆ ನಡೆಯೋಣ; ಗೀತೆಯನ್ನು ಸಮರ್ಪಕವಾಗಿ ಅರಿತು ನಮ್ಮ ಜೀವನಧರ್ಮವಾಗಿ ಅದನ್ನು ಅನುಸಂಧಾನಗೊಳಿಸೋಣ, ಧನ್ಯವಾದ.

Monday, January 9, 2012

’ಪುನರ್ಜನ್ಮ’!!


’ಪುನರ್ಜನ್ಮ’!!
[ಇಂದು ನಿನ್ನೆ ಎರಡು ಕೃತಿಗಳು ಶೀಘ್ರಗತಿಯಲ್ಲಿ ಪ್ರಕಟಗೊಂಡಿರುವುದರಿಂದ ಶಂಕರ ಭಗವತ್ಪಾದರ ಕುರಿತ ಇದಕ್ಕೂ ಹಿಂದಿನ ಕೃತಿ ಬಹಳ ಮೌಲ್ಯಯುತವಾಗಿರುವುದರಿಂದ ಅದನ್ನು ಇನ್ನೂ ಓದಿರದ ಓದುಗ ಮಿತ್ರರಲ್ಲಿ ಅದನ್ನೂ ಮರೆಯದಂತೆ ಓದಿಕೊಳ್ಳಲು ಪ್ರಾರ್ಥಿಸುತ್ತೇನೆ]

" ನಾನು ಒಂದು ಎರಡು ಮೂರು ಅಂತ ಎಣಿಸುತ್ತಿರುವುದನ್ನೇ ನೋಡುತ್ತಿರಬೇಕು. ನಿಧಾನಕ್ಕೆ ಮಲಕ್ಕೋ, ನಿಧಾನಕ್ಕೆ ಎರಡೂ ಕಣ್ಣುಗಳನ್ನು ಮುಚ್ಚು. ನಿಧಾನಕ್ಕೆ ಶ್ವಾಸವನ್ನು ಒಳಗೆಳೆದುಕೊಂಡು ನಿಧಾನಕ್ಕೆ ಹೊರಗೆ ಬಿಡಬೇಕು....ಒನ್ ಟೂ ತ್ರೀ ಗೋ ...........ಈಗ ನೀನು ನಿನ್ನ ಹಿಂದಿನ ಜನ್ಮದಲ್ಲಿದ್ದೀಯಾ. ನಿನ್ನ ಕಾಲುಗಳನ್ನು ನೋಡ್ಕೋ. ಏನು ಹಾಕಿಕೊಂಡಿದ್ದೀಯಾ ಕಾಲಿಗೆ ? "

" ಹವಾಯಿ ಹಾಕಿಕೊಂಡಿದ್ದೇನೆ "

" ಹೌದಾ ...ಅಲ್ಲೇ ಸುತ್ತಮುತ್ತ ಇರುವ ವ್ಯಕ್ತಿಗಳನ್ನು ಗುರುತಿಸು ನೋಡೋಣ. ಯಾರ್ಯಾರಿದ್ದಾರೆ? "

" ಯಾರ್ಯಾರೋ ನಿಂತಿದ್ದಾರೆ. ಕಾಡು ಮನುಷ್ಯರ ಥರಾ ಕಾಣಿಸ್ತಾರೆ. ಕಾಡಿನ ಜಾಗದಲ್ಲಿ ಒಂದು ಹಳೇ ಗುಡಿಸಲು. ಏನೇನೂ ವೇಷ ಹಾಕ್ಕೊಂಡಿದಾರೆ. ಮೈಗೆ ಪ್ರಾಣಿ ಚರ್ಮ ಸುತ್ಕೊಂಡಿದಾರೆ. ತಲೆಗೆ ಹಕ್ಕಿಗಳ ಬಣ್ಣಬಣ್ಣದ ಪುಕ್ಕಗಳಿಂದ ಮಾಡಿದ ಟೋಪಿ ಧರಿಸಿದ್ದಾರೆ. ಎಲ್ಲರ ಕೈಲೂ ಈಟಿ-ಭರ್ಚಿಯಂಥಾ ಆಯುಧಗಳಿವೆ. ಹುರ್ರಾ ಹುರ್ರಾ ಹುರ್ರಾ ಹುರ್ರಾ ಅಂತ ಧ್ವನಿ ಹೊರಡಿಸ್ತಾ ಇದ್ದಾರೆ. ಆದರೆ ಒಬ್ಬರದೂ ಪರಿಚಯವಿಲ್ಲ"

" ಹಾಂ ಹೌದಾ ....ಈಗ ಮತ್ತೆ ಒನ್ ಟೂ ತ್ರೀ ಎಣಿಸ್ತಾ ನಿಧಾನಕ್ಕೆ ಹಿಂದಕ್ಕೆ ಹಿಂದಕ್ಕೆ ಹಿಂದಕ್ಕೆ ಹೋಗ್ತಾ ನಿನ್ನ ಅದಕ್ಕೂ ಹಿಂದಿನ ಜನ್ಮಕ್ಕೆ ಹೋಗು..ಒನ್..ಟೂ...ತ್ರೀ...ಗೋ....ಈಗ ನೋಡು ಅಲ್ಲಿ ಯಾರ್ಯಾರೆಲ್ಲಾ ಇದ್ದಾರೆ? "

" ನಮ್ಮಮ್ಮ-ಅಪ್ಪ, ಅಣ್ಣ ಎಲ್ಲಾ ಇದ್ದಾರೆ...ಮೈಸೂರಿನ ಹಳ್ಳಿ. ನಮ್ದು ಹಳ್ಳಿಮನೆ. ಹೊರಗಡೆ ನಾಯಿ ಮಲ್ಕೊಂಡಿದೆ.ಅದರ ಹೆಸರು ’ಟಾಮಿ’. ಮನೆ ಪಕ್ಕ ಒಂದು ತುಂಬಾನೇ ಆಳವಾದ ಒಂದು ಬಾವಿ ಇದೆ. "

" ನಿಮ್ಮಪ್ಪ-ಅಮ್ಮ ಅವರೆಲ್ಲಾ ಏನ್ ಮಾಡ್ತಾ ಇದ್ದಾರೆ ನೋಡು "

" ’ಅಶೂ ಮದುವೆಗೆ ಮೋದಲೇ ಗರ್ಭಿಣಿ ಆಗಿದ್ದು ಕುಟುಂಬದ ಮಾರ್ಯಾದೆಯನ್ನು ಬೀದಿಪಾಲುಮಾಡಿದ ಹಾಗಾಯ್ತು. ಇಂಥಾ ಮಗಳು ಹುಟ್ಟೋದಕ್ಕಿಂತಾ ಹುಟ್ಟದಿದ್ದರೇ ಚೆನ್ನಾಗಿತ್ತು’ ಅಂತ ಮಾತಾಡ್ಕೋತಾ ಇದಾರೆ"

" ನೀನು ಏನಾಗಿದೀಯ ಅಲ್ಲಿ ? "

" ನಾನು ಆ ಮನೆ ಮಗಳು. ಎಸ್. ಎಸ್, ಎಲ್.ಸಿ ಮುಗಿದಮೇಲೆ ಕಾಲೇಜಿಗೆ ಹೋಗಬೇಕು ಅಂದ್ಕೊಂಡಿದ್ದೆ, ಅಪ್ಪ ಬೇಡಾ ಅಂದ್ಬುಟ್ರು. ರಮೇಶ ನನ್ನ ಬಾಲ್ಯದ ಗೆಳೆಯ. ನಾವಿಬ್ರೂ ಬಿಟ್ಟಿರ್ತಾ ಇರ್ಲಿಲ್ಲ. ಸ್ಕೂಲಿಗೆ ಹೋದಾಗ ಏನಿದ್ರೂ ಹೇಳ್ಕೋತಾ ಇದ್ವಿ. ನಮ್ಮಿಬ್ರಲ್ಲಿ ಯಾರಾದ್ರೂ ಸ್ಕೂಲು ತಪ್ಪಿಸ್ಕೊಂಡ್ರೆ ಮಾರನೇದಿನ ನೋಟ್ಸು ಪರಸ್ಪರ ಪಡ್ಕೋತಾ ಇದ್ವಿ. ಆತ ಕಾಲೇಜಿಗೆ ಸೇರ್ಕೊಂಡ್ನಾ ನಾನು ಮಾತ್ರ ಓದಕ್ಕಾಗ್ಲಿಲ್ಲ. "

" ಮುಂದೇನಾಯ್ತು....?"

" ನಾನೂ ಬಿಡ್ಲಿಲ್ಲ. ಹಠಮಾಡಿಕೊಂಡು ಚಿಕ್ಕಮ್ಮನ ಮನೆಗೆ ಹೋಗಿ ಅಲ್ಲಿಂದ ಕಾಲೇಜಿಗೆ ಹೋಗಲು ಆರಂಭಿಸಿದೆ ...ಪಿಯೂ ಮೊದಲ ವರ್ಷದಲ್ಲಿ ನಂಗೆ ಇಂಗ್ಲೀಷ್ ಮೀಡಿಯಮ್ಮಿನಲ್ಲಿ ಅಷ್ಟಾಗಿ ಅರ್ಥವಾಗ್ತಿರಲಿಲ್ಲ. ರಮೇಶ ತುಂಬಾನೇ ಜಾಣ. ಅವನು ಹೇಗೋ ಎಲ್ಲಾನೂ ತಿಳ್ಕೋತಿದ್ದ. ಕಾಲೇಜಿಗೆ ಬಂದ ಆರೇಳು ತಿಂಗ್ಳಲ್ಲೇ ತುಂಬಾ ಎತ್ತರವಾಗಿ ಕಟ್ಟುಮಸ್ತಾಗಿ ಬೆಳೆದಿದ್ದು. ೫ ಫೂಟು ೮ ಇಂಚು ಎತ್ತರ ಇದ್ನೋ ಇರ್ಬೇಕು. ಗೋಧಿ ಮೈಬಣ್ಣದ ಆತನನ್ನು ನೋಡಿದಾಗ ನಂಗೆ ಈಗೀಗ ಅವನನ್ನೇ ಗಂಡನನ್ನಾಗಿ ಪಡೆವ ಆಸೆ ಹುಟ್ಕೊಂಡಿತ್ತು. "

" ಮುಂದೆ... ?"

" ರಮೇಶಂಗೂ ನಾನೆಂದ್ರೆ ಅಷ್ಟಿಷ್ಟ. ಮನೆಯಿಂದ ತಂದ ತಿಂಡಿ ಒಟ್ಟಿಗೇ ತಿಂತಾ ಇದ್ವಿ. ಕೆಲವೊಮ್ಮೆ ಹೋಟೆಲ್ಗೂ ಹೋಗ್ತಾ ಇದ್ವಿ. ಆಗಾಗ ಕಾಲೇಜಿಗೆ ಚಕ್ಕರ್ ಹಾಕಿ ಸಿನಿಮಾಗೂ ಹೋಗ್ತಾ ಇದ್ವಿ. ಮೈಸೂರು ಮಹಾರಾಜರು ನಮ್ಮಂಥಾ ಜನಗೋಳ್ಗೆ ಅಂತ ಒಂದು ಸಿನಿಮಾ ಟಾಕೀಸು ಕಟ್ಸಿದ್ರು. ಅದೇ ಟಾಕೀಸ್ನಾಗೆ ಒಂದೆರಡು ಸಿನಿಮಾ ನೋಡಿದ್ವಿ. ಅವನು ಹತ್ರ ಕುಂತಾಗೆಲ್ಲಾ ಒಂಥರಾ ಆಗ್ತಾ ಇತ್ತು. ಪ್ರೀತಿ ಅಂದ್ರೆ ಅದೇ ಇರ್ಬೇಕು. "

" ಮುಂದೆ ....?"

" ಒಂದಿನ ರಮೇಶ ಅಲ್ಲೆಲ್ಲೋ ಹೋಗೋಣ ಬರ್ತೀಯಾ ? ಅಂದ. "

" ನೀನೇನೆಂದೆ ?......."

" ಆಯ್ತು ಬರ್ತೀನಿ ಎಂದೆ. ಅವನೆಂದ್ರೆ ನಂಗೆ ತುಂಬಾನೇ ಆಸೆ. ಅದ್ಕೇ ಅವನ್ಜೊತೆ ಮೈಸೂರಿನಿಂದ ಕೊಡಗಿಗೆ ಹೋದೆ. ಕೊಡಗು ನೋಡಲು ತುಂಬಾ ಸುಂದರ. ಚಳಿಗಾಲದಲ್ಲಂತೂ ಅಲ್ಲಿನ ವಾತಾವರಣ ನೆನೆಸ್ಕೊಂಡ್ರೆ ಕರ್ನಾಟಕದ ಕಾಶ್ಮೀರ ಅನ್ಬೇಕು. ಅಂಥಾ ಕೊಡಗಿನಲ್ಲಿ ಒಂದೆರಡು ದಿನ ತಂಗಿದ್ವಿ. ತುಂಬಾ ದಿವಸದಿಂದ ಮನಸ್ಸು ಒಟ್ಟಿಗೇ ಇರ್ಬೇಕು ಅಂತ ಬಯಸ್ತಾ ಇತ್ತು. ಅದೆಷ್ಟೋ ದಿನಗಳು ಕಳೆದಮೇಲೆ ಈಗ ಅದಕ್ಕೆ ಕಾಲ ಕೂಡಿಬಂದಿತ್ತು. ಒಟ್ಟಿಗೇ ಇದ್ವಲ್ಲ, ಹಾಗೇ ಒಂದಾಗೋಣ ಅಂದ ರಮೇಶ. ಅವನ ತೋಳಿನಲ್ಲಿ ಬಂಧಿಯಾಗಿದ್ದ ನಂಗೆ ಸ್ವರ್ಗಕ್ಕೆ ಮೂರೇಗೇಣು. ರಮೇಶ ನನ್ನವನೇ ಅಲ್ವೇ ಅದಕ್ಕೇ ಇರ್ಬೇಕು ಮತ್ತು ಆತ ಎಂದೆಂದಿಗೂ ನನ್ನವನಾಗೇ ಇರ್ತಾನೆ ಎಂಬ ಕಾರಣಕ್ಕೂ ಇರ್ಬೇಕು "

" ಮುಂದೆ ......? "

" ಕೊಡಗಿನಲ್ಲಿ ಕಳೆದ ಎರಡೂ ರಾತ್ರಿ ನಾನು ಜೀವನದಲ್ಲೇ ಮರೆಯೋ ಹಾಗಿಲ್ಲ. ಅದೇನು ಖುಷಿ ಏನು ಮಜಾ. ಇಬ್ಬರೂ ಬಹಳ ಸಮಯ ಒಅಬ್ಬರನ್ನೊಬ್ಬರು ತಬ್ಬಿಕೊಂಡೇ ಇದ್ವಿ. ನಮ್ಮಿಬ್ಬರ ಮೈಮನಗಳೆರಡೂ ಬೆರೆತು ಒಂದೇ ಆಗಿಬಿಟ್ಟಿದ್ದವು. ರಾತ್ರಿ ಕಳೆದು ಬೆಳಗಾದರೂ ರಮೇಶನಿಂದ ಬಿಡಿಸಿಕೊಳ್ಳಲು ಇಷ್ಟವಾಗ್ತಿರಲಿಲ್ಲ. "

" ಮುಂದೇನಾಯ್ತು.... ? "

" ಕೊಡಗಿನಿಂದ ಮರಳಿದ ನಂಗೆ ಸ್ವಲ್ಪ ಕಷ್ಟಾನೇ‍ ಕಾದಿತ್ತು. ಮೊದಲಿಗೆ ಮನೇಲಿ ಅಪ್ಪ ಕೋಪಗೊಂಡು ಮೊದ್ಲೇ ಕಾಲೇಜಿಗೆ ಕಳ್ಸಿರ್ಲಿಲ್ಲ. ಈಗ ಇಲ್ಲಿ ಚಿಕ್ಕಮ್ಮನೂ ಹೇಳ್ದೇ ಕೇಳ್ದೇ ಅದ್ಯಾಕೆ ಎಲ್ಲೋ ಹೋಗಿದ್ದಿ ? ಎಂದು ತಗಾದೆ ತಗೆದಿದ್ಲು. ಇದ್ದೊಬ್ಬ ಚಿಕ್ಕಮ್ಮನ್ನೂ ಕೊಂಚ ವಿರೋಧ ಮಾಡ್ಕೊಳೋ ದಿನ ಬಂದ್ಬುಡ್ತು. ಆದ್ರೂ ಏನೋ ಸಬೂಬು ಹೇಳ್ದೆ, ಆ ಕ್ಷಣಕ್ಕೆ ಚಿಕ್ಕಮ್ಮ ಹೋಗ್ಲಿ ಹುಡುಗಿ ಪಾಪ ಅಂತ ಸುಮ್ಮನಾದಳು"

" ಆಮೇಲೆ ....? "

" ಎರಡುವಾರ ಕಳೀತಿರ್ಬೇಕು. ಒಂದಿನ ಕಾಲೇಜಿಗೆ ಹೋದಾಗ ವಾಂತಿ ವಾಂತಿ ವಾಂತಿ. ಶರೀರಕ್ಕೆ ಯಾವ ಆಹಾರಾನೂ ಬೇಡ. ಸುಸ್ತಗಿ ಸುಮ್ನೇ ಮಲಗಿಬಿಟ್ಟೆ. ಚಿಕ್ಕಮ್ಮಂಗೆ ವಾಂತಿ ಬಂದಿದ್ದನ್ನು ಹೇಳಲೇ ಇಲ್ಲ. ಯಾಕೋ ಮೈ ಸರಿಯಿಲ್ಲ ಊಟಬೇಡ ಅಂತ ಸುಮ್ಮನೇ ಮಲಗಿಬಿಟ್ಟೆ. ಹಾಗೂ ಹೀಗೂ ದಿನಗಳು ಕಳೆದ್ವು "

" ಮುಂದೆ ...? "


" ನಂಗಂತೂ ಈಗೀಗ ತುಂಬಾನೇ ಸುಸ್ತು. ನಿಂತ್ರೂ ನಿದ್ದೆ ಕುಂತ್ರೂ ನಿದ್ದೆ. ಮಲ್ಕೊಂಡೇ ಇರೋಣಾ ಅನ್ನಿಸ್ತಿತ್ತು. ಡಾಕ್ಟರ್ ಹತ್ತಿರ ಹೋದಾಗ ಸುಸ್ತು ಕಮ್ಮಿಯಾಗೋ ಮಾತ್ರೆ ಕೊಟ್ರು. ಊಹೂಂ ಏನೂ ಪ್ರಯೋಜನವಾಗಲಿಲ್ಲ. ಮೇಲಾಗಿ ತಿಂಗಳಿಗೆ ಸರಿಯಾಗಿ ನಂಗೆ ಪೀರಿಯಡ್ಸ್ ಆಗ್ತಿರ್ಲಿಲ್ಲ. ಈಗ್ಲೂನೂ ಅಷ್ಟೇ ಮೂರೂವರೆ ತಿಂಗ್ಳು ಆದ್ರೂನೂ ಮುಟ್ಟು ಬಂದಿರ್ಲಿಲ್ಲ."

" ಹೌದಾ..ಹಾಗೆಲ್ಲಾ ಕೆಲವ್ರಿಗೆ ಇರುತ್ತೆ ಬಿಡಮ್ಮ, ಮುಂದೇನಾಯ್ತು ?"

" ಒಂದಿನ ನಾನು ಮನೇಲಿರೋವಾಗ ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದೆ. ಆಗ ಚಿಕ್ಕಮ್ಮ ಮತ್ತು ಅವರ ಮನೇಜನರೆಲ್ಲಾ ಸೇರ್ಕೊಂಡು ಸರಿಯಾಗಿ ಪರೀಕ್ಷಿಸಬೇಕು ಅಂತ ಮೈಸೂರಿನ ಮಹಾರಾಜಾ ಆಸ್ಪತ್ರೆಗೆ ಕರೆದುಕೊಂಡು ಹೋದ್ರು. ಅಲ್ಲಿನ ವೈದ್ಯರು ಎಲ್ಲಾ ರೀತಿ ಟೆಸ್ಟ್ ಮಾಡಿ ನಾನು ಬಸುರಿ ಎಂದು ಹೇಳಿಬಿಟ್ಟರು"

" ಹೌದಾ ಆಂ........ಆಮೇಲೆ ? "

" ವಿಷಯ ಕೇಳಿ ನಮ್ಮ ಚಿಕ್ಕಮ್ಮ ಎಲ್ಲಾ ತುಂಬಾ ಗಾಬರಿಯಾಗಿದ್ರು. ನಮ್ಮಪ್ಪ-ಅಮ್ಮಂಗೂ ಕಾಗ್ದ ಬರ್ದು ವಿಷಯ ತಿಳಿಸಿದ್ರು. ಮೊದಲೇ ನನ್ಕಂಡ್ರೆ ಅಪ್ಪಂಗೆ ಆಗ್ತಿರ್ಲಿಲ್ಲ, ಯಾಕಂದ್ರೆ ತನ್ಮಾತು ಮೀರಿ ಕಾಲೇಜಿಗೆ ಹೋಗ್ತಾಳಲ್ಲ ಅಂತ. ಕಾಗದ ತಲ್ಪಿದ್ದೇ ತಲ್ಪಿದ್ದು ನಮ್ಮಪ್ಪ-ಅಮ್ಮ-ಅಣ್ಣ ಎಲ್ಲಾ ಮನೆಗೆ ಬೀಗ ಜಡಿದು ಚಿಕ್ಕಮ್ಮನ ಮನೆಗೇ ಬಂದುಬಿಟ್ರು. "

" ಅರೆರೇ ಅದೇನೀಗ .......? "

" ಹಾಗೇ, ನಾನು ಬಸುರಿ ಆಗಿದ್ನಲ್ಲಾ ಅದಕ್ಕೇ ಅವರಿಗೆ ಬೆಟ್ಟದಷ್ಟು ಕೋಪ ಬಂದಿತ್ತು. ಬಂದವ್ರೇ ’ಮನೆಹಾಳಿ ಮೊದ್ಲೇ ಹೇಳಿದ್ನಾ ಕಾಲೇಜಿಗೆ ಬೇಡಾ ಅಂತ. ನಿನ್ನ ಮುಗಿಸದೇ ಇದ್ರೆ ನಮ್ಮ ಹೆಸರಿಗೆಲ್ಲಾ ಮಸೀ ಬಳಿದೇ ಹಾಗೇ ಇರೋ ಆಸಾಮಿನೇ ಅಲ್ಲ ನೀನು ’ ಅಂತ ತುಂಬಾನೇ ಬಯ್ದ್ರು "

" ಹೌದಾಅ..ಛೆ.ಛೆ.. ಪಾಪ ಅವರಿಗೇನ್ಗೊತ್ತು ನಿಮ್ ಪ್ರೀತಿ ಮಹತ್ವ ಅಲ್ವೇ ? ಮುಂದೆ "

" ಅದೇ ಆವಗ್ಲೇ ಅಂದ್ನಲ್ಲ ನಮ್ಮಮ್ಮ-ನಮ್ಮಪ್ಪ-ನಮ್ಮಣ್ಣ ಎಲ್ಲಾ ಸೇರಿ ಕುಟುಂಬದ ಮರ್ಯಾದೇನ ಬೀದಿಪಾಲು ಮಾಡಿದ್ಲು ಅಂತ ಚೆನ್ನಾಗಿ ಥಳಿಸಿದ್ರು. ಅದಷ್ಟೇ ಅಲ್ಲ ಯಾರಿಗೂ ತಿಳೀದ ಹಾಗೇ ಅದ್ಯಾವ್ದೋ ನರ್ಸಿಂಗ್ ಹೋಮ್ ನಲ್ಲಿ ಭ್ರೂಣನ ತೆಗ್ಸೋ ವ್ಯವಸ್ಥೆ ಮಾಡಿದ್ರು."

" ಛೆ..ಎಂಥಾ ಕೆಲ್ಸ ಮಾಡ್ದ್ರು... ಸುಮ್ನೇ ನಿಮ್ಮಿಬ್ಬರ್ಗೆ ಮದ್ವೆ ಮಾಡ್ಬುಟ್ರೆ ಆಗ್ತಿತ್ತು ಅಲ್ವೇ ? ಮುಂದೆ ..."

" ಮಾರನೇದಿನವೇ ಅದ್ಯಾವ್ದೋ ನರ್ಸಿಂಗ್ ಹೋಮ್‍ಗೆ ಕರ್ಕೊಂಡ್ಹೋದ್ರು. ಆಪರೇಷನ್ ಥೇಟರ್ನಲ್ಲಿ ದಾಕ್ಟ್ರು ಅದೇನೇನೋ ಮಾಡ್ದ್ರು. ಆಮೇಲೆ ಇನ್ನೂ ಬಲಿತಿರದ ಶಿಶುವನ್ನು ಹೊರಗೆ ತೆಗೆದ್ರು. ಎಷ್ಟು ಮುದ್ದಾದ ಶಿಶು. ಆ ನನ್ ಕಂದ ಇನ್ನೂ ಕಣ್ಣೇ ತೆರೆದಿರಲಿಲ್ಲ. ಒಮ್ಮೆ ಸರಿಯಾಗಿ ನೋಡೋಕೂ ಬಿಡ್ದೇ ಆ ಮಗುನ್ನ ಹಂಗಿಂದಂಗೇ ಅದೆಲ್ಲಿಗೋ ಕಳಿಸಿಬುಟ್ರು. ಮಗುವಿನ ಅಮ್ಮ ನನಗಾದ್ರೂ ಏನಾಗಿರ್ಬೇಡ! ರಮೇಶಂಗೆ ತಿಳಿದ್ರೆ ಆತ ಎಷ್ಟು ನೊಂದ್ಕೋತಾನೋ ಗೊತ್ತಿಲ್ಲ. ನಂಗಂತೂ ಅಲ್ಲಿಂದಾನೇ ತಲೆನೋವು ಆರಂಭವಾಗಿದ್ದು. ಆ ಪ್ರೀತಿಯ ಮಗುವಿನ ಮುಖಾನ ನಾನೆಂದೂ ಮರೀಲಾರೆ. "

" ಮುಂದೆ....."

" ಯಾರೋ ಕೆಲಸದೋರು ಹೇಳ್ತಾ ಬರ್ತಿದ್ರು ’ರೋಡಲ್ಲಿ ತಿಪ್ಪೆಗುಂಡಿ ಪಕ್ಕ ಅದ್ಯಾರೋ ಪಾಪಿಗಳು ಮಗೂನ ಬಿಸಾಕಿದಾರೆ’ ಅಂತ. ಹೆಚ್ಚುಪಕ್ಷ ಅದು ನನ್ಮಗೂನೇ ಇರ್ಬೇಕು. ನಮ್ಮನೆಜನ ಡಾಕ್ಟ್ರು ಎಲ್ಲಾ ಸೇರಿ ಮಗೂನ ಹಾಗೆ ಬಿಸಾಕಿರ್ಬೇಕು. ಅದನ್ನೆಲ್ಲಾ ಕೇಳಿ ನಂಗೆ ಎದೆಗೆ ಹೊನ್ನಶೂಲ ಹೊಕ್ಕಿದ ಅನುಭವ ಆಗ್ತಾ ಇತ್ತು. ನಾನು ಜೋರಾಗಿ ಕಿರಿಚ್ಕೋತಿದ್ದೆ. ’ಎಲ್ಲಿ ನನ್ನ ಮಗು ಎಲ್ಲಿ ನನ್ನ ಪುಟ್ಟ ನನ್ಕೈಗೆ ಕೊಡಿ’ ಎಂದು ಒಂದೇ ಸಮನೆ ಕೂಗ್ತಾ ಇದ್ದೆ. "

" ಆಮೇಲೆ.....? "

" ಕೊನೆಗೂ ಅವರ್ಯಾರೂ ನನ್ನ ಮಾತನ್ನು ಕೇಳಲೇ ಇಲ್ಲ. ಮಗೂನ ನಂಗೆ ಕೊಡ್ಲೇ ಇಲ್ಲ. ಆ ನಡುವೆ ರಮೇಶ ಕೂಡ ಬಂದಿರಲೇ ಇಲ್ಲ. ನಂಗೆ ತುಂಬಾ ಬೇಸರವಾಗಿತ್ತು. ಇದೂ ಜೀವನವೇ ಅನ್ನಿಸಿಬಿಟ್ಟಿತ್ತು. ಅದ್ಕೇ ಒಂದು ನಿರ್ಧಾರಕ್ಕೆ ಬಂದ್ಬುಟ್ಟೆ. ಹೇಗಾದ್ರೂ ಮಗೂನ ಕಳ್ಕೊಂಡೆ. ಇನ್ನು ಯಾರಿಗಾಗಿ? ಅಂಗಡಿಯಿಂದ ನಿದ್ರೆ ಮಾತ್ರೆ ಒಂದಷ್ಟು ಕಟ್ಟಿಸ್ಕೊಂಡು ಮನೆಗೆ ಬಂದಳ್ವೇ ಮನೇಲಿ ಎಲ್ಲರೂ ಹೊರಗೆ ಹೋದವೇಳೆ ಇಪ್ಪತ್ತು ನಿದ್ರೆ ಮಾತ್ರೆ ಸೇವಿಸಿದೆ. ನಿದ್ದೆ ಬರೋಕೂ ಮುನ್ನ ಹೊಟ್ಟೆಯಲ್ಲಿ ಬೆಂಕಿಹಾಕಿದಷ್ಟು ನೋವು, ತಲೆಯಲ್ಲಿ ಇನ್ನೇನೋ ನೋವು ಸಹಿಸಲಸಾಧ್ಯ ವೇದನೆ. ಅಂತೂ ಅದೆಷ್ಟೋ ಹೊತ್ತು ಮಲಗೇ ಇದ್ದೆ! ಮನೆಯವರೆಲ್ಲಾ ಬಂದ್ರು, ಮುಟ್ಟಿ ಎಬ್ಬಿಸ್ತಾ ಇದ್ರು. ನಾನು ಏಳಲೇ ಇಲ್ಲ. ನಾನು ಮತ್ತೆ ಆ ಮನೇಲಿ ಉಳಿಯೋ ಇಷ್ಟ ನಂಗಿರ್ಲಿಲ್ಲ."

" ಈಗ ಹೇಳಮ್ಮ ..ನಿಂಗೆ ಆ ಮಗು ತುಂಬಾ ಇಷ್ಟವಾಗಿತ್ತು ತಾನೇ? ರಮೇಶ ಕೂಡ ಅಷ್ಟೇ ಇಷ್ಟ ಹೌದಲ್ಲಾ? ಈ ಜನ್ಮದಲ್ಲಿ ರಮೇಶ ಎಲ್ಲಿದ್ದಾನೆ ಕಾಣಿಸ್ತಾ ಇದ್ಯಾ? "

" ಈಗ ರಮೇಶ ಸುರೇಶ ಆಗಿದ್ದಾನೆ. ದಿನಾ ನಂಗೆ ಕಾಣಿಸ್ತಾನೆ. ಥೇಟ್ ರಮೇಶನೇ ಅನ್ಬೇಕು, ಅಂಥಾ ಸುಂದರ ಮೈಕಟ್ಟು. ಮುದ್ದ್ಮುದ್ದಾಗಿದಾನೆ. ಮೈಸೂರು ಪ್ರಾಡಕ್ಟ್ಸ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸಮಾಡ್ತಾ ಇದ್ದಾನೆ. ಸೂಟು ಬೂಟು ಹಾಕ್ಕೊಂಡು ಕಾರಲ್ಲೇ ಓಡಾಡ್ತಾನೆ. ಕೈತುಂಬಾ ಸಂಬಳ "

" ಈಗ ಒಂದೊಮ್ಮೆ ನಿನ್ನನ್ನು ಸುರೇಶನಿಗೆ ಕೊಟ್ಟು ಮದುವೆ ಮಾಡಿಬಿಟ್ಟರೆ ಮತ್ತದೇ ಮಗು ನಿನ್ನ ಹೊಟ್ಟೇಲಿ ಜನಿಸುತ್ತೆ ಅಲ್ವೇ? ಹಾಗ್ಮಾಡಿದ್ರೆ ನಿಂಗೆ ಇಷ್ಟಾನಾ ? ಅಲ್ಲಿಗೆ ನಿನ್ನ ನೋವು ಎಲ್ಲಾ ಮಾಯ ಅಂದ್ಕೋತೀನಿ ? "

" ಹೌದು ಹೌದು....ಸುರೇಶನ ಜೊತೆ ನಂಗೆ ಮದುವೆ ಮಾಡ್ಬಿಟ್ರೆ ಎಲ್ಲಾ ಪ್ರಾಬ್ಲಮ್ಮೂ ಸಾಲ್ವ್ ಆಗುತ್ತೆ "

" ಈಗ ನಿಧಾನಕ್ಕೆ ಆ ಜನ್ಮದಿಂದ ಹಿಂದಿನ ಹಾಗೂ ಹಿಂದಿನ ಜನ್ಮದಿಂದ ಈ ಜನ್ಮಕ್ಕೂ ಬರ್ತಾ ಇದ್ದೀಯಾ. ನಾನು ಒನ್ ಟೂ ತ್ರೀ ಎಂದ ತಕ್ಷಣ ಈ ಜನ್ಮದ ರೇಣುಕಾ ನಿಧಾನಕ್ಕೆ ಎಚ್ಚೆತ್ತುಕೊಳ್ಳಬೇಕು.ಎರಡೂ ಹಸ್ತದಿಂದ ಕಣ್ಣನ್ನು ಮೆತ್ತಗೆ ಉಜ್ಜಿಕೊಳ್ಳುತ್ತಾ ನಿಧಾನವಾಗಿ ಕಣ್ಣುತೆರೆಯಬೇಕು. ಒನ್ ಟೂ ತ್ರೀ ....ಯಸ್ ರಿಲಾಕ್ಸ್ ರಿಲಾಕ್ಸ್ ರಿಲಾಕ್ಸ್ "

----

" ಏನಮ್ಮಾ ಸುರೇಖಾ ಈಗ ಹೇಗನ್ನಿಸ್ತಾ ಇದೆ ? "

" ತುಂಬಾನೇ ಡಿಫರೆಂಟಾಗಿದೆ ಗುರೂಜಿ"

" ಡಿಫರೆಂಟ್ ಅಂದ್ರೆ ಏನು ಚೆನ್ನಾಗಿದೆ ಅಂತಾನೋ? ಪ್ರಾಬ್ಲಮ್ಮು ಸಾಲ್ವಾಯ್ತು ಅನ್ನಿಸ್ತಾ ಇದ್ಯೋ ಹೇಗೆ‍ ? "

" ಹೌದು ಗುರೂಜಿ. ನನ್ನಲ್ಲಿರುವ ಪ್ರಶ್ನೆಗಳಿಗೆ ನನಗೆ ಉತ್ತರಗಳು ಸಿಕ್ಕಿವೆ. ಮನಸ್ಸು ಖುಷಿಯಾಗಿದೆ. ಈಗ ಹಾಯಾಗಿದ್ದೇನೆ. ಹೊಸ ಜೀವನವನ್ನು ಎದುರಿಸಲು ತಯಾರಿದ್ದೇನೆ. "

" ಆಯ್ತಮ್ಮ ನಿಮ್ಮ ಮನೆ ಹಿರಿಯರಿಗೆ ಹೇಳಿ ಆದಷ್ಟು ಬೇಗ ಮುಂದಿನ ಕೆಲಸದ ಏರ್ಪಾಟು ಮಾಡೋಣ. "

***

Sunday, January 8, 2012

ದೀಪಂ ದೇವ ದಯಾನಿಧೇ-೩


ದೀಪಂ ದೇವ ದಯಾನಿಧೇ-೩

[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]
ಭಗವದ್ಗೀತೆಯ ಸಮರ್ಪಣೆಯಲ್ಲಿ ನಿರತರಾಗಿರುವ ಜಗದ್ಗುರು ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಪದಕಮಲಕ್ಕೆ ಭಾಗವು ಅರ್ಪಿತವಾಗಿದೆ.


ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |
ಸಮೂಢಮಸ್ಯ ಪಾಗ್ಂಸುರೇ||

ಕೃಷ್ಣಯಜುರ್ವೇದದ ವಿಷ್ಣುಸೂಕ್ತದ ಈ ಶ್ಲೋಕದ ಮೂಲಕ ಮೂಢಮನಸ್ಸಿಗೆ ಕವಿದ ಮೋಡವನ್ನು ದೂಡಿ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು ಎಂಬುದಾಗಿ ಮೊದಲಾಗಿ ಇಲ್ಲೊಂದು ಪ್ರಾರ್ಥನೆ. ಯಾವುದೇ ಯಜ್ಞಕಾರ್ಯಗಳನ್ನು ಮಾಡುವಾಗ ಮಧ್ಯೆ ನಿಲ್ಲಿಸಬೇಕಾದ ಪ್ರಸಂಗ ಬಂದರೆ ಅದನ್ನು ಪುನಃ ಮುಂದುವರಿಸುವ ಸಮಯದಲ್ಲಿ ಈ ಮೇಲಿನ ಶ್ಲೋಕವನ್ನು ಉಚ್ಚರಿಸುವುದು ವಾಡಿಕೆ. ಭಗವತ್ಪಾದರ ಜೀವನಚರಿತ್ರೆಯನ್ನು ಬರೆಯುವುದು, ಓದುವುದು ಯಾ ಪುನರಪಿ ಅವಲೋಕಿಸುವುದು ಅಥವಾ ಗೊತ್ತಿದ್ದೂ ಮನನ ಮಾಡುವುದು ಮಾಡುವವರಿಗೂ/ಮಾಡಿಸುವವರಿಗೂ ಯಜ್ಞದಂತಹ ಒಂದು ಪುಣ್ಯತಮ ಕೆಲಸವೇ ಎಂದು ಭಾವಿಸಿ ಹೀಗೆ ಆ ಶ್ಲೋಕವನ್ನು ಉಚ್ಚರಿಸಿ ಜ್ಞಾನ ದಾಹಿಗಳಾದ ತಮ್ಮೆಲ್ಲರನ್ನೂ ಶಂಕರ ಚರಿತ್ರೆಯ ಈ ಭಾಗಕ್ಕೆ ಸ್ವಾಗತಿಸುತ್ತಿದ್ದೇನೆ. ಹೀಗೆ ಮಾಡುವುದಕ್ಕೆ ಕಾರಣವಿಷ್ಟೇ: ವರ್ಷವೊಂದಕ್ಕೂ ಹಿಂದೆ ಈ ಚರಿತ್ರೆಯನ್ನು ಹೇಳಲಾರಂಭಿಸಿದ್ದೆ, ಆದರೆ ಕಾರಣಾಂತರಗಳಿಂದ ಮುಂದುವರಿಸದೇ ಹಾಗೇ ಬಿಟ್ಟಿದ್ದೆ, ಈಗ ಮುಂದುವರಿಸುತ್ತಿದ್ದೇನೆ. ಹಿಂದಿನ ಭಾಗಗಳನ್ನು ’ದೀಪಂ ದೇವ ದಯಾನಿಧೇ’ ಹೆಸರಿನಲ್ಲೇ ’ಭಕ್ತಿ ಸಿಂಚನ’ಮಾಲಿಕೆಯಲ್ಲಿ ಓದಿಕೊಳ್ಳಬಹುದಾಗಿದೆ. ಮಧ್ಯೆ ಮಧ್ಯೆ ಬೇರೆ ಬೇರೆ ಕೃತಿಗಳ ಜೊತೆ ಇನ್ನು ಮುಂದೆ ಈ ಚರಿತ್ರೆಯ ಭಾಗವೂ ಆಗಾಗ ಬರುತ್ತಿರುತ್ತದೆ; ಮುಂದುವರಿಸಲ್ಪಡುತ್ತದೆ.

ಮೂರನೆಯ ವಯಸ್ಸಿನಲ್ಲಿ ಬಾಲಕ ಶಂಕರನಿಗೆ ತಂದೆ ಶಿವಗುರು ಚೂಡಾಕರ್ಮ ನೆರವೇರಿಸಿದನು. ನಂತರದ ಕೆಲವು ತಿಂಗಳಲ್ಲೇ ಶಿವಗುರು ವಿಧಿವಶನಾದನು. ಶಂಕರರ ಹಾಗೂ ಮನೆಯ ಸಂಪೂರ್ಣ ಜವಬ್ದಾರಿ ಈಗ ಆರ್ಯಾಂಬೆಯ ಹೆಗಲಿಗೆ ಬಂದಿತ್ತು. ವೇದಾಂತದಲ್ಲಿ ಅಪ್ರತಿಮ ಆಸಕ್ತಿ ತೋರುತ್ತಿದ್ದ ಮಗನಿಗೆ ವಿದ್ಯಾಭ್ಯಾಸ ಕೊಡಿಸುವ ಇಚ್ಛೆ ಆರ್ಯಾಂಬೆಯದು. ಆದರೆ ವಿದ್ಯಾಭ್ಯಾಸ ನಡೆಸಲು ಉಪನಯನವಾಗಬೇಕಿತ್ತು. ಕಷ್ಟದಲ್ಲೇ ಹೇಗೋ ತಾನೇ ಮುಂದೆನಿಂತು ಮಗನಿಗೆ ಉಪನಯನವನ್ನು ನಡೆಸಿದಳು ಆರ್ಯಾಂಬೆ. ಪೂರ್ಣಾನದಿಯ ದಡದಲ್ಲಿದ್ದ ಅಗ್ರಹಾರದಲ್ಲಿ ಗುರುಕುಲವಿದ್ದು ಅಲ್ಲಿಗೆ ಶಂಕರರನ್ನು ವಿದ್ಯಾಭ್ಯಾಸಕ್ಕಾಗಿ ಸೇರಿಸಿದಳು. ಗುರುಕುಲದಲ್ಲಿ ಗುರುಗಳು ಹೇಳಿದ ಕೆಲಸಗಳನ್ನು ಪಾಲಿಸುತ್ತಾ ಶ್ರದ್ಧೆಯಿಂದ ಅವರು ಹೇಳಿಕೊಡುವ ವಿದ್ಯೆಗಳನ್ನು ಕಲಿಯಬೇಕಾದುದು ಸಂಪ್ರದಾಯವಾಗಿತ್ತು. ಗುರುಗಳೂ ಕೂಡ ಆದರ್ಶಪ್ರಾಯರಾಗಿದ್ದು ಶಿಷ್ಯರನ್ನು ಸ್ವಂತ ಮಕ್ಕಳಂತೇ ಪರಿಭಾವಿಸಿ ತಮ್ಮಲ್ಲಿರುವ ವಿದ್ಯೆಗಳನ್ನು ಹೇಳಿಕೊಡುತ್ತಿದ್ದರು. ಬಹುಕುಶಾಗ್ರಮತಿಯಾದ ಶಂಕರರು ಗುರುಕುಲದಲ್ಲೇ ಇದ್ದುಕೊಂಡು ವೇದ, ವೇದಾಂಗಗಳು, ಉಪನಿಷತ್ತುಗಳು, ಪುರಾಣಗಳು, ತತ್ವಶಾಸ್ತ್ರ, ನ್ಯಾಯ, ತರ್ಕಶಾಸ್ತ್ರ, ಮೀಮಾಂಸೆ, ವೈಶೇಷಿಕ, ಸ್ಮೃತಿ ಹೀಗೇ ಎಲ್ಲವನ್ನೂ ಕಲಿತುಕೊಂಡರು.

ಗುರುಕುಲದಲ್ಲಿರುವ ವಟುಗಳು ಭಿಕ್ಷಾನ್ನದಿಂದ ಜೀವಿಸಬೇಕೆಂಬ ಒಂದು ಕಟ್ಟುಕಟ್ಟಳೆ ಇದ್ದಿತು. ಪ್ರತಿದಿನ ಬೆಳಿಗ್ಗೆ ಶೌಚಕರ್ಮಗಳನ್ನು ತೀರಿಸಿಕೊಂಡು ಶುಚಿರ್ಭೂತರಾದ ವಟುಗಳು ವಿದ್ಯಾಭ್ಯಾಸದ ಆಯಾದಿನಗಳ ಪಾಠ-ಪ್ರವಚನಗಳನ್ನು ಮುಗಿಸಿಕೊಂಡು ಊರ ಸಜ್ಜನರ ಮನೆಗಳೆದುರು ಭಿಕ್ಷೆ ಎತ್ತುತ್ತಿದ್ದರು. ಹಾಗೆ ತಂದ ಭಿಕ್ಷೆಯನ್ನು ಮಧ್ಯಾಹ್ನದ ಹೊತ್ತಿಗೆ ಭುಂಜಿಸುತ್ತಿದ್ದರು. ಒಂದು ದಿನ ಹೀಗೆ ಮನೆಯೊಂದರ ಮುಂದೆ ನಿಂತು ಭಿಕ್ಷೆ ಬೇಡುತ್ತಿದ್ದಾಗ ಆ ಮನೆಯೊಡತಿ ಹೊರಗೆ ಬಂದು ಮನೆಯಲ್ಲಿ ಏನೂ ಇಲ್ಲವೆಂದೂ ಮನಸಾ ಭಿಕ್ಷೆ ನೀಡುವುದಕ್ಕೆ ಸಿದ್ಧವಿದ್ದರೂ ಕೈಲಾಗದ ಬಡತನಕ್ಕೆ ತಮ್ಮನ್ನು ಕ್ಷಮಿಸಬೇಕು ವಟುವೇ ಎಂದು ಅಲವತ್ತುಕೊಂಡಳು. " ಅಮ್ಮಾ ಏನೂ ಇಲ್ಲಾ ಎನ್ನಬೇಡಮ್ಮಾ ಏನಾದರೂ ಪರವಾಗಿಲ್ಲ ನಿನಗೆ ಕಾಣಿಸುವುದನ್ನು ಕೊಡಮ್ಮಾ " ಎಂದು ಹಠಕ್ಕೆ ಬಿದ್ದ ಶಂಕರರಿಗೆ ಉಪ್ಪಿನಲ್ಲಿ ಹಾಕಿಟ್ಟಿದ್ದ ನೆಲ್ಲಿಯ ಕಾಯೊಂದನ್ನು ತಂದು ಭಿಕ್ಷೆಯಾಗಿ ಅದನ್ನು ಕೊಡುತ್ತಿರುವುದಕ್ಕೆ ಪುನರಪಿ ಕ್ಷಮೆಯಾಚಿಸಿದಳು. ಶಂಕರರು ಅದನ್ನೇ ತೃಪ್ತಿಯಿಂದ ಅಲ್ಲೇ ಸ್ವೀಕರಿಸಿ ಲೋಟ ನೀರು ತರಿಸಿ ಕುಡಿದು ದಾರಿದ್ರ್ಯ ತುಂಬಿದ ಆ ಮನೆಯಲ್ಲಿ ಸಿರಿ-ಸಂಪತ್ತು ತುಂಬಲೆಂದು ತಾಯಿ ಮಹಾಲಕ್ಷ್ಮಿಯನ್ನು ಕುರಿತು ಪ್ರಾರ್ಥಿಸಿದರು. ಮಹಾಲಕ್ಷ್ಮಿ ಶಂಕರರಿಗೆ ಕಾಣಿಸಿಕೊಂಡು " ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ ಈ ಜನ್ಮದಲ್ಲಿ ಆ ಮನೆಗೆ ಇದೇ ಗತಿ" ಎಂದರೂ ಶಂಕರರು ಆಕೆಯ ಮನವೊಲಿಸುವಲ್ಲಿ ಯಶಸ್ವಿಯಾದರು. ಆಗ ಲಕ್ಷ್ಮೀಕಟಾಕ್ಷಕ್ಕಾಗಿ ಶಂಕರರ ಬಾಯಿಂದ ಹೊರಟಿದ್ದೇ ಕನಕಧಾರ ಸ್ತೋತ್ರ. ಶಂಕರರ ಸ್ತುತಿಗೆ ಒಲಿದ ಮಹಾಲಕ್ಷ್ಮಿ ಆ ಮನೆಯಲ್ಲಿ ಬಂಗಾರದ ನೆಲ್ಲಿಕಾಯಿಗಳ ಮಳೆಯನ್ನೇ ಸುರಿಸಿದಳು!

ಶ್ರದ್ಧಾವಾನ್ ಲಭತೇ ಜ್ಞಾನಂತತ್ಪರಃ ಸಂಯತೇಂದ್ರಿಯಃ |
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮ್ ಆಚಿರೇಣಾಧಿಗಚ್ಛತಿ ||

ಇದು ಭಗವದ್ಗೀತೆಯ ಒಂದು ಉಲ್ಲೇಖ. ಶ್ರದ್ಧೆಯುಳ್ಳ ಜಿತೇಂದ್ರಿಯನಾದ ಸಾಧಕನು ಆತ್ಮಜ್ಞಾನ ಲಭಿಸಿ ಪರಮಶಾಂತಿಯನ್ನು ಹೊಂದುತ್ತಾನೆ. ಶಂಕರರು ಶ್ರದ್ಧೆಯುಳ್ಳವರಾಗಿದ್ದರು. ಕರ್ನಾಟಕದ ಕರಾವಳಿಗಳಲ್ಲಿ ಯಕ್ಷಗಾನವಿರುವಂತೇ ಕೇರಳದಲ್ಲಿ ಮೋಹಿನಿಯಾಟ್ಟಂ ಇದೆ. ಅದರ ಅನೇಕ ಪ್ರಸಂಗಗಳನ್ನು ಶಂಕರರು ಅದಾಗಲೇ ನೋಡಿ ಕಥಾಭಾಗಗಳನ್ನು ತಿಳಿದುಕೊಂಡಿದ್ದರು. ಕಲಿತ ವಿದ್ಯೆ ಮತ್ತು ಪರಿಸರ ಶಂಕರರು ತನ್ನನ್ನು ಆಳವಾದ ಚಿಂತನೆಗೆ ಒಳಪಡಿಸಿಕೊಳ್ಳುವಂತೇ ಪ್ರೇರೇಪಿಸಿತು. ವೇದವೇದಾಂತಗಳೇ ಮೂಲ ಗಮನವಾಗಿ ಆತ್ಮಜ್ಞಾನದ ಉತ್ಕಟೇಚ್ಛೆಯಿಂದ ಸದಾ ಸನ್ಯಾಸಿಯಾಗಲು ಹಂಬಲಿಸತೊಡಗಿದ-ಆ ಎಳೆಯ ಬಾಲಕ ಶಂಕರ.

ನ ಕರ್ಮಣಾ ನ ಪ್ರಜಯಾ ಧನೇನ
ತ್ಯಾಗೇನೈಕೇ ಅಮೃತತ್ವಮಾನಶುಃ |
ಪರೇಣ ನಾಕಂ ನಿಹಿತಂ ಗುಹಾಯಾಂ
ವಿಭ್ರಾಜದೇತದ್ಯತಯೋ ವಿಶಂತಿ |
ವೇದಾಂತ ವಿಜ್ಞಾನ ಸುನಿಶ್ಚಿತಾರ್ಥಾಃ
ಸನ್ಯಾಸ ಯೋಗಾದ್ಯತಯಃ ಶುದ್ಧ ಸತ್ತ್ವಾಃ |
ತೇ ಬ್ರಹ್ಮ ಲೋಕೇ ತು ಪರಾಂತ ಕಾಲೇ
ಪರಾಮೃತಾತ್ಪರಿಮುಚ್ಯಂತಿ ಸರ್ವೇ ||

ಕೈವಲ್ಯೋಪನಿಷತ್ತಿನ ಈ ಹೇಳಿಕೆ ಸಾರುವುದು ಯಾವುದೇ ಕರ್ಮಬಂಧನವಿರದ, ಮಕ್ಕಳು-ಸಂಸಾರ ಎಂಬ ಮೋಹಪಾಶವಿರದ, ಧನ-ಕನಕ ಸಂಪತ್ತಿನ ಒಡೆತನವಾಗಲೀ ಅಪೇಕ್ಷೆಯಾಗಲೀ ಇರದ, ತ್ಯಾಗದಿಂದ ಅಮೃತತ್ವದೆಡೆಗೆ ನಡೆಸುವ ಸನ್ಯಾಸ ಜೀವನವೇ ಶ್ರೇಷ್ಠ. ವೇದಾಂತದ ಅರ್ಥವನ್ನು ಸರಿಯಾಗಿ ಗ್ರಹಿಸಿ ಎಳ್ಳಷ್ಟೂ ಸಂದೇಹವಿರಿಸಿಕೊಳ್ಳದೇ ತಿಳಿದು ಆಚರಣೆಗೆ ತರುವುದು ಕೇವಲ ಸಾಮಾನ್ಯರಿಂದ ಸಾಧ್ಯವಿಲ್ಲದ ಮಾತು, ಮತ್ತು ಅದನ್ನು ಸಾಧಿಸುವ ಅಧಿಕಾರ ಅಂದರೆ ಅರ್ಹತೆ ಮತ್ತು ಔಚಿತ್ಯ ಇರುವುದು ಸನ್ಯಾಸ ಯೋಗಕ್ಕೆ ಮಾತ್ರ, ಜೀವಿತಾವಧಿಯಲ್ಲಿಯೇ ಇಹ[ ಈ ಲೋಕ] ಮತ್ತು ಪರ[ಬ್ರಹ್ಮಲೋಕ]ಎರಡನ್ನೂ ಅರಿಯುವ ಮತ್ತು ಜನನ-ಮರಣಗಳ ಚಕ್ರದಿಂದ ಮುಕ್ತಿಪಡೆಯುವ ಸನ್ಯಾಸಿ ನಿಜಕ್ಕೂ ಧನ್ಯ. ಮೋಕ್ಷದಾಯಕವಾದ ವೇದಾಂತವನ್ನು ಆಮೂಲಾಗ್ರ ಅರಿಯತೊಡಗಿದ ಶಂಕರರು ’ತನ್ನೊಳಗಿನ ತನ್ನ’ ಪ್ರಭೆಯಿಂದ ಪರಿಪೂರ್ಣ ಜ್ಞಾನವನ್ನು ಪಡೆದರು; ಅದು ಜ್ಞಾನದ ಪರಿಸಮಾಪ್ತಿ! ಯಾವುದನ್ನು ಅರಿಯುವುದರಿಂದ ಎಲ್ಲದರ ಅರಿವುಂಟಾಗುವುದೋ ಮತ್ತು ಯಾವುದನ್ನು ಅರಿಯದೇ ಅರಿತಿದ್ದೆಲ್ಲವೂ ಮಿಥ್ಯವಾಗಿ ತೋರುತ್ತದೋ ಆ ಗಹನವಾದ ವಿಷಯವೇ ವೇದಾಂತದ ಗುರಿ ಎಂದಿದ್ದಾರೆ ಪ್ರಾಜ್ಞರು. ಅಷ್ಟು ಚಿಕ್ಕವಯಸ್ಸಿಗೇ ಪರಮಜ್ಞಾನವನ್ನು ಪಡೆಯುವ ಹಂಬಲ ಶಂಕರರಲ್ಲಿ ಉಂಟಾಗಿದ್ದು ಅವರೊಬ್ಬ ದೈವಾಂಶ ಸಂಭೂತನೆಂಬುದನ್ನು ತೋರಿಸುತ್ತದೆ.

ವಿದ್ಯಾಭ್ಯಾಸ ಪೂರೈಸಿದ ಶಂಕರರಿಗಿನ್ನೂ ತೀರಾ ಚಿಕ್ಕವಯಸ್ಸು. ಆಗಿನ್ನೂ ಎಂಟನೇ ವಯಸ್ಸು ತುಂಬಿದ್ದ ಕಾಲ. ಆ ಮುಗ್ಧ ಬಾಲಕ ತಾಯಿಯ ಜೊತೆಗೆ ಮನೆಯಿಂದ ತುಸು ದೂರವಿರುವ ಪೂರ್ಣಾ ನದಿಗೆ ಸ್ನಾನಕ್ಕೆ ಹೋಗುತ್ತಿದ್ದ. ಬೇಸಿಗೆಯ ಬಿಸಿಲಿನ ಝಳಕ್ಕೆ ಆ ನದಿಯ ನೀರು ಆರಿಹೋಗಿ ಅಲ್ಲಲ್ಲಿ ನದಿಯ ಮಧ್ಯಭಾಗದಲ್ಲಿ ಮಾತ್ರ ನೀರು ಹರಿಯುತ್ತಿತ್ತು. ನದಿಸ್ನಾನ ಮಾಡುವುದು ತಾಯಿ ಆರ್ಯಾಂಬೆಯ ನಿತ್ಯಕರ್ಮಗಳಲ್ಲಿ ಒಂದು. ನದಿಸ್ನಾನವಿಲ್ಲದೇ ಒಂದು ದಿನವೂ ಹಾಗೇ ಆಹಾರ ಸೇವಿಸಿದ್ದೇ ಇಲ್ಲ. ನದಿ ಸ್ನಾನಕ್ಕಾಗಿ ಹೋಗುವಾಗ ಬತ್ತಿದ ನದೀಪಾತ್ರದ ಭಾಗಗಳಲ್ಲಿರುವ ಮರಳುದಿಬ್ಬಗಳನ್ನು ಕ್ರಮಿಸಿ ಸಾಗಬೇಕಾಗಿತ್ತು. ಒಮ್ಮೆ ಹಾಗೆ ಸ್ನಾನಮಾಡಿಬರುವಾಗ ಜೊತೆಯಲ್ಲಿ ಬಾಲಕ ಶಂಕರನಿದ್ದ. ಅಮ್ಮನ ಕೈಹಿಡಿದು ನಡೆದು ಬರುತ್ತಿದ್ದಾಗ ಶಾರೀರಿಕವಾಗಿ ದುರ್ಬಲಳಾಗಿದ್ದ ಆ ತಾಯಿ ಬಿಸಿಲಲ್ಲಿ ಕುಸಿದು ಬಿದ್ದು ಬಿಟ್ಟಳು. ಉರಿಯುವ ಸೂರ್ಯನ ಪ್ರಖರ ಕಿರಣಗಳ ಸೋಕಿನಿಂದ ಬಸವಳಿದರೋ ಏನೋ. ತಲೆಸುತ್ತು ಬಂದು ಬಿದ್ದ ಅಮ್ಮನನ್ನು ಕಂಡು ಶಂಕರರು [ಅಮ್ಮ ಬಿಂದಿಗೆಯಲ್ಲಿ ತಂದಿದ್ದ] ಪಕ್ಕದಲ್ಲಿ ಬಿದ್ದು ಚೆಲ್ಲುತ್ತಿದ್ದ ಬಿಂದಿಗೆಯ ನೀರನ್ನು ಬೊಗಸೆಯಲ್ಲಿ ಎತ್ತಿಕೊಂಡು ಅಮ್ಮನ ಮುಖದಮೇಲೆ ಪ್ರೋಕ್ಷಿಸಿ ತಲೆಗೂ ಸ್ವಲ್ಪ ನೀರು ಹಾಕಿ ತಟ್ಟಿದರು. ಏನೂ ಅರಿಯದ ವಯಸ್ಸಿಗೇ ಇದನ್ನೆಲ್ಲಾ ಶಂಕರರು ಅದು ಹೇಗೆ ಅರಿತರು ಎಂಬುದನ್ನು ಇಲ್ಲಿಯೇ ಅವಲೋಕಿಸಬೇಕು.

ಸಾವರಿಸಿಕೊಂಡ ಅಮ್ಮ ಎದ್ದನಂತರ ನಿಧಾನವಾಗಿ ಕೈಹಿಡಿದು ಮನೆಗೆ ನಡೆಸಿ ತಂದರು. ಅಂದು ರಾತ್ರಿ ಶಂಕರರು ಜಾಗ್ರತರಾಗಿದ್ದರು. ಅವರಿಗೆ ವಿಶ್ರಾಂತಿಯೇ ಬೇಕಿರಲಿಲ್ಲ. ಕೈಮುಗಿದು ಕುಳಿತು ಪೂರ್ಣಾದೇವಿಯಲ್ಲಿ ಪ್ರಾರ್ಥಿಸಿದರು. " ಹೇ ಜಗನ್ನಿಯಾಮಕ ಶಕ್ತಿಯೇ, ನದಿಯ ರೂಪದಲ್ಲಿ ಅಷ್ಟು ದೂರ ಹರಿಯುತ್ತಿರುವ ನಿನ್ನಲ್ಲಿ ನನ್ನ ಪ್ರಾರ್ಥನೆ. ಅಮ್ಮನಿಗೆ ಮುಪ್ಪು, ಜಾಸ್ತಿ ಓಡಾಡಲಾಗದು, ಕೃಪೆಮಾಡಿ ನೀನು ನಮ್ಮ ಮನೆಗೆ ಹತ್ತಿರದಲ್ಲೇ ಹರಿದು ಅಮ್ಮನ ನದಿಸ್ನಾನದ ಬಯಕೆಯನ್ನು ಪೂರೈಸುವವಳಾಗು." ಆ ರಾತ್ರಿ ಮುಗಿಲುತುಂಬ ಮೋಡ ಕಟ್ಟಿ ಎಲ್ಲಿಲ್ಲದ ಮಳೆ ಭೋರ್ಗರೆಯಿತು. ಎಲ್ಲೆಲ್ಲೂ ನೀರು. ಬೆಳಿಗ್ಗೆ ನೋಡಿದಾಗ ಪೂರ್ಣಾ ತನ್ನ ಪಾತ್ರವನ್ನು ಬದಲಾಯಿಸಿ ಶಂಕರರ ಮನೆಯ ಸಮೀಪವೇ ಹರಿಯತೊಡಗಿದ್ದಳು. ದಿವ್ಯಪುರುಷನಾದ ಆ ಬಾಲಕ ಅಮ್ಮನ ಸಲುವಾಗಿ ತೋಡಿಕೊಂಡ ಅಳಲನ್ನು ದಿವ್ಯಶಕ್ತಿ ಪೂರ್ಣೆ ಮನ್ನಿಸಿದ್ದಳು. ಪ್ರಾಯಶಃ ಶಂಕರರ ಸಾಂಗತ್ಯವೂ ಪರೋಕ್ಷವಾಗಿ ಪೂರ್ಣೆಗೆ ಬೇಕಿತ್ತೋ ಏನೋ. ಊರ ಜನತೆಗೆ ಆಶ್ಚರ್ಯ ಹುಟ್ಟಿಸಿದ ಈ ಘಟನೆ ಶಂಕರ ಎಲ್ಲರಂತೇ ಸಾದಾ ಬಾಲಕನಲ್ಲ ಎಂಬ ಅನಿಸಿಕೆಯನ್ನೂ ನೀಡಿತ್ತು!


ಭಾಗ್ಯದ ಬಾಗಿಲು ತೆರೆಯಿತು ಜಗದಲಿ
ಬಾಲಕ ಶಂಕರ ರೂಪದಲಿ |
ಯೋಗ್ಯತೆ ಬಲು ಅಪರೂಪವು ಯುಗದಲಿ !
ಪಾಲಕರಿಗೆ ಮುದನೀಡುತಲಿ ||

ಪೂರ್ಣಾನದಿಯಾದಂಡೆಯ ಮನೆಯೊಳು
ಪೂರ್ಣಚಂದ್ರನವ ಉದಯಿಸಿದ |
ಕರ್ಣಾನಂದದ ಕೃತಿಗಳ ಕೊಡುವೊಲು
ಪರ್ಣಕುಟಿಯೆಡೆಗೆ ತಾ ನಡೆದ ||

ನೆಲ್ಲಿಯ ಕಾಯಿಯ ಭಿಕ್ಷೆಯ ಪಡೆಯುತ
ಒಲ್ಲದ ಲಕ್ಷ್ಮಿಯ ಪ್ರಾರ್ಥಿಸಿದ |
ಬೆಲ್ಲಭಕ್ಷಗಳು ಧನ-ಕನಕಂಗಳು
ಸಲ್ಲುವ ಧಾರೆಯ ಮಂತ್ರಿಸಿದ ||

ತಾಪಸವೊಂದೇ ಕಳೆವುದು ತಾಪವ
ಈಪರಿ ಜನನ-ಮರಣಗಳ |
ಆಪದ್ಭಾಂಧವನೆಲೆಯನು ತೋರುವ
ರೂಪದೊಳಾತ್ಮವ ನೋಡೆನುತ ||

ಬಲುಮುದದಿಂದಾ ಅಮ್ಮನ ರಮಿಸುತ
ಹಲವೆನ್ನದೆ ಕರಜೋಡಿಸಿದ |
ಗೆಲುವಾಗಲು ಹರಸೆನ್ನನು ನ್ಯಾಸಕೆ
ಕಳುಹಿಸುವಂತೇ ಗೋಗರೆದ ||

|| ಸರ್ವೇ ಜನಾಃ ಸುಖಿನೋ ಭವಂತು ||

.......ಮುಂದುವರಿಯುವುದು

Wednesday, January 4, 2012

ಕನ್ನಡ ನಾಡು ಕಂಡ ಹೆಮ್ಮೆಯ ವಿಠಲ !


ಕನ್ನಡ ನಾಡು ಕಂಡ ಹೆಮ್ಮೆಯ ವಿಠಲ !

ಬೊಗಸೆಕಂಗಳ ಆ ಚಲುವನನ್ನು ನೋಡುವುದೇ ಕಣ್ಣಿಗೆ ಹಿತ; ಆತ ಮಾತನಾಡುವ ಶುದ್ಧ ಕನ್ನಡವಂತೂ ಮನಕ್ಕೆ ಹಿತ. ಮಾಧ್ಯಮಗಳಲ್ಲಿ ಮೊದಲಾಗಿ ಕಂಡಾಗ ಆತ ಯಾರು ಎಂಬುದೇ ನನ್ನ ಪ್ರಶ್ನೆಯಾಗಿತ್ತು. ಉತ್ತಮ ದಿರಿಸುಗಳನ್ನು ಧರಿಸಿ ಸದಾ ಹಸನ್ಮುಖದಿಂದಿರುವ ಆತನನ್ನು ನೋಡುತ್ತಿರುವಾಗಲೇ ಗೌರವಭಾವ ತಂತಾನೇ ಮನದಾಳದ ಮೂಲೆಯಿಂದ ಉಕ್ಕಿ ಬರುತ್ತಿತ್ತು. ಯಾರೆಂದು ಪಕ್ಕಾ ಗೊತ್ತಿಲ್ಲ, ಹುದ್ದೆ ಕೂಡ ತಿಳಿದಿಲ್ಲ, ಆದರೂ ಆ ಪರಿಶುದ್ಧ ಕನ್ನಡದ ವಾಗ್ಝರಿ ನನ್ನ ಮನಸ್ಸನ್ನು ಸೆರೆಹಿಡಿದು ಬಿಟ್ಟಿತ್ತು. ಮಾಧ್ಯಮಗಳು ಹೆಸರನ್ನು ಆಗಾಗ ಬಿತ್ತರಿಸಿದಮೇಲೆ ಕುತೂಹಲ ಕೆರಳಿತು. ಅಂದಿನಿಂದ ಇಂದಿನವರೆಗೂ ನೋಡುತ್ತಲೇ ಬಂದಿದ್ದೇನೆ, ಈ ವಿಠಲ ಐ.ಎಂ.ವಿಠಲ ನಿಜಕ್ಕೂ ನಮ್ಮ ಹೆಮ್ಮೆಯ ವಿಠಲ!

ಒಂದಾನೊಂದು ಕಾಲಕ್ಕೆ ಅಂದರೆ ಎರಡು ದಶಕಗಳ ಹಿಂದೆ ಸರ್ಕಾರೀ ಸ್ವಾಮ್ಯದ ಮೈಸೂರ್ ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿ ಲುಕ್ಸಾನಿನಲ್ಲಿ ನಡೆಯುತ್ತಿತ್ತು. ಮೈಸೂರು ಲ್ಯಾಂಪ್ಸ್ ಲಿಮಿಟೆಡ್ ಥರದಲ್ಲೇ ಇನ್ನೇನು ಮುಳುಗಿಹೋಗುವ ಹಡಗು ಅದು. ಅಂತಹ ಹಡಗಿಗೆ ನಾವಿಕನಾಗಿ ನಡೆದು ಬಂದವರು ದಕ್ಷ ಭಾ.ಆ.ಸೇ ಅಧಿಕಾರಿ ಐ.ಎಂ ವಿಠ್ಠಲಮೂರ್ತಿ. ಕುತ್ಸಿತ ರಾಜಕಾರಣಕ್ಕೆ ನೊಂದಿದ್ದರೂ ಬ್ರಷ್ಟ ರಾಜಕಾರಣಿಗಳ ವರ್ಗಾವರ್ಗಿ ಅವಾಂತರಗಳಿಗೆ ಬೆದರದ ಏಕೈಕ ಅಧಿಕಾರಿ ಅವರು ಎಂದರೆ ತಪ್ಪಲ್ಲ! ತನಗೆ ಇಂತಹ ಜಾಗವನ್ನೇ ಕೊಡಿ ಎಂದು ಮಂತ್ರಿಗಳಲ್ಲಿ ಅವರು ಎಂದೂ ಕೇಳಲಿಲ್ಲ. ಎಲ್ಲಿಗೆ ವರ್ಗಾಯಿಸಿದ್ದಾರೋ ಅಲ್ಲಿಗೆ ಸಾಗಿ ತನಗೆ ಒದಗಿಬಂದ ಕೆಲಸದಲ್ಲಿ ಕರ್ತವ್ಯಪರತೆಯನ್ನು ಅತಿ ಪ್ರಾಮಾಣಿಕವಾಗಿ ಮಾಡಿದ ವ್ಯಕ್ತಿ. ಎಮ್. ಎಸ್. ಐ.ಎಲ್ ಒಂಥರಾ ಹಣವನ್ನು ತಿಂಬ ಯಾವ ಆಡೂ ಮುಟ್ಟದ ಗಿಡವಾಗಿತ್ತು. ಯಾಕೆಂದರೆ ಅದರಲ್ಲಿ ಇರುವ ಸತ್ವವನ್ನು ಹೀರಿ ಹೀರಿ ಬಿಸಾಡಿದ ಕಬ್ಬಿನ ಸಿಪ್ಪೆಯಂತಿತ್ತು ಅದರ ಸ್ವರೂಪ. ಅನೇಕರು ಬಂದರು ಹೋದರು ಆದರೆ ಯಾರೂ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಹಾಳು ಬಾವಿಗೆ ನೂಕಿದಂತೇ ವಿಠ್ಠಲಮೂರ್ತಿಯವರನ್ನು ಅಲ್ಲಿಗೆ ವರ್ಗಾ ಮಾಡಿದರು. ನಮ್ಮ ವಿಠಲ ಕ್ಯಾರೇ ಅನ್ನಲಿಲ್ಲ. ಆದೇಶ ಕೈಗೆ ಬಂದ ಕ್ಷಣದಿಂದ ಎಮ್.ಎಸ್.ಐ.ಎಲ್ ಅನ್ನು ಸುಂದರ ನಂದನವನ್ನಾಗಿ ರೂಪಿಸುವ ಕನಸುಕಂಡರು.

ಅಧಿಕಾರಿಗಳಿಗೆ ಅಧಿಕಾರೀ ವರ್ಗಕ್ಕೆ ತಮ್ಮ ಖಾಸಗೀ ಬೊಕ್ಕಸ ತುಂಬಿಸಿಕೊಳ್ಳುವ ರಹದಾರಿಯ ಚಿಂತೆಯೇ ಸದಾ ಇರುತ್ತದೆ. ಅವರಿಗೆ ಸಂಗೀತ, ಸಾಹಿತ್ಯ, ಕಲೆ ಇವೆಲ್ಲಕ್ಕೂ ಸಮಯ ವ್ಯಯಿಸುವ ವ್ಯವಧಾನವಿಲ್ಲ. ಏನಿದ್ದರೂ ಕಂತೆಗಳನ್ನು ಎಣಿಸಿಕೊಳ್ಳಬೇಕು. ಬರುವುದರಲ್ಲಿ ಮುಕ್ಕಾಲು ಪಾಲು ತನಗೆ, ಕಾಲು ಪಾಲು ಮುಂದಿನ ತನ್ನ ಪೋಸ್ಟಿಂಗ್ ಮಾಡಿಸಿಕೊಳ್ಳಲು ಸಂಬಂಧಿಸಿದ ಮಂತ್ರಿಗೆ ಸೂಟ್ಕೇಸ್ ಸಲುವಾಗಿ! ಇವತ್ತಿಗೆ ಸರಕಾರೀ ಇಲಾಖೆಗಳಲ್ಲಿ ಕೆಲಸ ಮಾಡುವವರ ಹಣೆಬರಹವೇ ಇದು. ಸರ್ಕಾರೀ ನೌಕರಿ ಎಂದ ತಕ್ಷಣ ’ವರ್ಗಾವರ್ಗಿಗೆ’ ಎಂಬ ಅಕೌಂಟನ್ನು ತೆರೆಯಲಾಗುತ್ತದೆ! ಸರಕಾರದಲ್ಲಿರುವ ಮಂತ್ರಿಮಹೋದಯ ಬ್ರಷ್ಟರು ತಮ್ಮ ಖಾತೆ ಹಂಚಿಕೊಳ್ಳುವಾಗಲೂ ಈ ಬೊಕ್ಕಸದಮೇಲೆ ನಿಗಾ ಇರಿಸಿಯೇ ಹಾಗೆ ಕೋರುವುದು. ಖಾತೆ ಸರಿಯಾಗಿಲ್ಲ ಎಂಬ ಅಸಮಾಧಾನದಿಂದ ರಾಜೆನಾಮೆ ಒಗೆದ ಮಂತ್ರಿಗಳೂ ಇದ್ದಾರೆ! ಯಾರು ಪಾಪದ ಶಾಸಕರಾಗಿ ಅನೇಕಬಾರಿ ಆರಿಸಿಬಂದು ಮಂತ್ರಿಯಾಗಲು ಮಿಕ್ಕೆಲ್ಲಾ ಅರ್ಹತೆಗಳನ್ನು ಹೊಂದಿರುತ್ತಾರೋ ಅಂಥವರಿಗೆ ’ಬೊಕ್ಕಸ ರಹಿತ’ ಖಾತೆಗಳನ್ನು ಕರುಣಿಸಲಾಗುತ್ತದೆ. ಪ್ರಧಾನ ಖಾತೆಗಳಲ್ಲಿ ವಿರಾಜಮಾನರಾಗುವ ಶ್ರೀಮಾನ ಮಂತ್ರಿಗಳನ್ನು ಕಾಣಲು ಬರಿಗೈಯ್ಯಿಂದ ಹೋದರೆ ದರ್ಶನಭಾಗ್ಯ ಲಭಿಸಲಾರದು! ಅದಕ್ಕೆ ಏನಿದ್ದರೂ ಸೂಟ್ ಕೇಸ್ ಬೇಕಾಗುತ್ತದೆ. ಅಧಿಕಾರಿಗಳು, ತಂತಮ್ಮ ಕೆಲಸಗಳಿಗೆ ಮಂಜೂರಾತಿ ಬಯಸುವ ನಾಗರಿಕರು, ಪರಿಹಾರ ಕೋರಿ ಬರುವ ಹಳ್ಳಿಗರು ಯಾರೇ ಇರಲಿ |ಕಾಂಚಾಣಂ ಕಾರ್ಯ ಸಿದ್ಧಿಃ | ಅದಿರದಿರೆ ಬಂದ ದಾರಿಗೆ ಸುಂಕವಿಲ್ಲ ಎಂಬ ಗಾದೆಯಂತೇ ತೊಲಗಿ ಎಂಬುದು ಸಚಿವಾಲಯಗಳ ಸೈಲೆಂಟ್ ಸ್ಲೋಗನ್ನು! ಇಂತಹ ಬ್ರಷ್ಟಸಾಗರ[ಸಪ್ತಸಾಗರಗಳಿಗೂ ಬೃಹತ್ತಾದ ಮಹಾಸಾಗರ ಇದು!]ದಲ್ಲಿ ಯಾರಿಂದಲೂ ಪೈಸೆ ಗಿಂಜದೇ, ತನ್ನ ಸೀಟಿನ ಉಳಿವಿಗಾಗಿ ಬ್ರಷ್ಟರಿಗೆ ಸೊಪ್ಪುಹಾಕದೇ ಧೀರನಾಗಿ ಕರ್ತವ್ಯಪಾಲನೆ ಮಾಡಿದ ಹೆಗ್ಗಳಿಕೆ ನಮ್ಮ ವಿಠಲರದು.

ಅಧಿಕಾರಿಗಳೆಲ್ಲರೂ ಮನೆಗಳ ಮೇಲೆ ಮನೆಗಳನ್ನು ಕಟ್ಟುವ, ಹತ್ತಾರು ಸೈಟು ಖರೀದಿಸುವ ಹುನ್ನಾರದಲ್ಲಿದ್ದರೆ ವಿಠಲರು ಕನ್ನಡವನ್ನು ಕಟ್ಟುವ ಯೋಜನೆಯಲ್ಲಿದ್ದರು. ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿಯೂ ಸಾಹಿತ್ಯಕವಾಗಿಯೂ ಅಧಿಕಾರಯುತವಾಗಿಯೂ ಮಾತನಾಡಬಲ್ಲ ಐ.ಎ.ಎಸ್. ಅಧಿಕಾರಿ ಇದ್ದರೆ ಅವರು ವಿಠ್ಠಲ ಮೂರ್ತಿ ಒಬ್ಬರೇ! ತಮಗೆ ಕೊಟ್ಟ ಎಮ್.ಎಸ್. ಐ.ಎಲ್ ಊರ್ಜಿತಗೊಳ್ಳಬೇಕು, ಕನ್ನಡದ ಸೇವೆಯೂ ನಡೆಯಬೇಕು ಈ ಎರಡೂ ಘನ ಉದ್ದೇಶಗಳನ್ನು ಇಟ್ಟುಕೊಂಡು ಹಲವುಕ್ಷಣ ಯೋಚಿಸಿ, ಯೋಜಿಸಿ ಚಂದನದಲ್ಲಿ ’ನಿತ್ಯೋತ್ಸವ’ ಎಂಬ ಕಾರ್ಯಕ್ರಮವನ್ನು ರೂಪಿಸಿದವರು ಇದೇ ವಿಠ್ಠಲಮೂರ್ತಿಗಳು. ಸುಗಮಸಂಗೀತದ ಸೊಗಸಾದ ಪ್ರಸ್ತುತಿಯೊಡನೆ ಅನೇಕ ಹಿರಿಯ ಕವಿಗಳ ಕವಿತೆಗಳ ಮೆಲುಕುವಿಕೆಯೊಡನೆ ಎಮ್.ಎಸ್.ಐ.ಎಲ್ ಎಂಬ ಸಂಸ್ಥೆಯೊಂದಿದೆ-ಅದರ ಉತ್ಫನ್ನಗಳು ಇಂತಿಂಥವು ಎಂಬುದನ್ನು ಜನತೆಗೆ ಮನದಟ್ಟುಮಾಡುವಲ್ಲಿ ಯಶಸ್ವಿಯಾದವರು ವಿಠ್ಠಲಮೂರ್ತಿ. ನಂತರ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಬಂದರು. ಅಲ್ಲೂ ಕೂಡ ತಮ್ಮ ಛಾಪನ್ನು ಒತ್ತಿದರು. ಅವರು ಹೋದಲ್ಲೆಲ್ಲಾ ಕನ್ನಡದ್ದೇ ಸುದ್ದಿ. ಕನ್ನಡದ ಅಭಿವೃದ್ಧಿ ಹೇಗೆ ? ಕನ್ನಡಕ್ಕೆ ಏನೇನು ಕೊಡಲಾದೀತು ? ಇಂಥದ್ದೇ ಮಾತು.

ಜನಪದ ಕಲಾಪ್ರಕಾರಗಳಿಗೆ ಆದ್ಯತೆ ದೊರೆತು ರಾಜಧಾನಿಯಲ್ಲಿ ಅವು ಬಹುಕಾಲ ವಿಜೃಂಭಿಸಿದ್ದೂ ಕೂಡ ವಿಠ್ಠಲಮೂರ್ತಿಗಳ ಪ್ರಯತ್ನದಿಂದಲೇ. ಕನ್ನಡ ನೆಲದ ಯಾವ ಕಲೆಯೂ ಹಿಂದಕ್ಕೆ ಬೀಳಬಾರದು, ಕಡೆಗಣಿಸಲ್ಪಟ್ಟು ನಶಿಸಿಹೋಗಬಾರದು ಎಂಬ ಕಾರಣಕ್ಕಾಗಿ ಬೆಂಗಳೂರು ಸೇರಿದಂತೇ ಅನೇಕ ನಗರಗಳಲ್ಲಿ, ಪಟ್ಟಣಗಳಲ್ಲಿ ಜನಪದ ಸೊಗಡು ಮೆರೆಯುವಂತೇ ಮಾಡಿದರು. ಅನೇಕಾವರ್ತಿ ಹಲವು ವೇದಿಕೆಗಳಲ್ಲಿ ಅವರನ್ನು ಕಾಣುವ ಮೊದಲೇ ಅವರ ಹೆಸರಿನ ಪ್ರಸ್ತುತಿಯಾಗುವ ಮೊದಲೇ ನಾನು ಮನದಲ್ಲೇ ಲೆಕ್ಕಹಾಕಿಕೊಂಡು ಇದು ವಿಠ್ಠಲಮೂರ್ತಿಗಳ ಮಾರ್ಗದರ್ಶನದ ಕಾರ್ಯಕ್ರಮ ಎಂದು ಅನೇಕ ಮಿತ್ರರ ಎದುರಿಗೆ ಹೇಳುವುದಿತ್ತು; ಅದು ಹೌದಾಗಿಯೂ ಇರುತ್ತಿತ್ತು. ಇಂತಹ ವಿಠ್ಠಲಮೂರ್ತಿ ಮಧ್ಯೆ ಮಧ್ಯೆ ಅದೆಲ್ಲೆಲ್ಲಿಗೋ ಎತ್ತಂಗಡಿಯಾದರು. ಎಲ್ಲಿಗೇ ಹೋದರು ತನ್ನತನ ಬಿಡಲಿಲ್ಲ; ಕನ್ನಡತನ ಮರೆಯಲಿಲ್ಲ! ಜಂಬದ ಅಧಿಕಾರಿಗಳು ಆಂಗ್ಲಭಾಷೆಯಲ್ಲಿ ಎರಡು ಮಾತನಾಡಿದರೇ ಜಾಸ್ತಿ ಅಂಥದ್ದರಲ್ಲೂ ಅಚ್ಚಗನ್ನಡದಲ್ಲಿ ನೆಚ್ಚಿಮಾತನಾಡುವ ಪರಭಾಷೆಗಳ ಮಹಾಪೂರದಲ್ಲಿ ಕೊಚ್ಚಿಹೋಗದಂತೇ ಎಚ್ಚರಿಕೆಯ ಗಂಟೆ ಅಲ್ಲಾಡಿಸುವ ಕೆಚ್ಚೆದೆಯ ಕನ್ನಡಿಗ ಅಧಿಕಾರಿ ಇವರಾಗಿದ್ದರಿಂದ ನನಗಿವರು ಅಚ್ಚುಮೆಚ್ಚು, ಅವರನ್ನೊಮ್ಮೆ ಖುದ್ದಾಗಿ ಕಾಂಬ ಹುಚ್ಚು.

ಮೊನ್ನೆ ಸಂಸ್ಕೃತಿ ಬಾಗಿನ ಎಂದು ವರದಿ ಬಂದಾಗಲೇ ನಾನೆಚ್ಚೆತ್ತುಕೊಂಡಿದ್ದು, ಓಹೋ ನಮ್ಮ ವಿಠ್ಠಲಮೂರ್ತಿಗೆ ನಿವೃತ್ತಿಯಾಯ್ತು ಎಂಬುದು. ಅವರನ್ನೂ ಅವರ ಮುಖಲಕ್ಷಣವನ್ನೂ ಅವರ ಶಾರೀರಿಕ ನವಚೈತನ್ಯವನ್ನೂ ನೋಡಿದಾಗ ಹಾಗನ್ನಿಸುವುದೇ ಇಲ್ಲ; ಆದರೂ ದಾಖಲೆಯಲ್ಲಿ ವಯಸ್ಸು ನಮೂದಿತವಾಗಿರುವ ಮೀಟರ್ ಓಡುತ್ತಿರುತ್ತದಲ್ಲಾ ! ಇಂತಹ ಅಧಿಕಾರಿಗಳಿಗೆ ೫೮-೬೦ ವಯಸ್ಸೆಲ್ಲಾ ಲೆಕ್ಕವಲ್ಲ, ಬಹುಶಃ ಜೀವಿತದಲ್ಲಿರುವವರೆಗೂ ಅವರು ಜಾಗ್ರತರಾಗಿರುತ್ತಾರೆ, ನಿರಂತರ ಒಂದಿಲ್ಲೊಂದು ಕೆಲಸಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಇಂಥವರ ಸಲಹೆ ಯಾವಕಾಲಕ್ಕೂ ಸರಕಾರಕ್ಕಾಗಲೀ ಸಮಾಜಕ್ಕಾಗಲೀ ಒಳಿತು. ಅದಕ್ಕೆಂತಲೇ ಜನಪದ ಕಲಾವಿದರು, ಕವಿ-ಸಾಹಿತಿಗಳು, ಗಣ್ಯ-ಮಾನ್ಯರು ಸೇರ್‍ರಿ ಅವರಿಗೆ ಸಂಸ್ಕೃತಿ ಬಾಗಿನ ಅರ್ಪಿಸಿದರು-ಸಲ್ಲಲೇ ಬೇಕಾಗಿದ್ದ ಗೌರವ ಅದು. ನಿವೃತ್ತರಾದ ಅವರು ಹೇಳಿದ್ದು ಒಂದೇ ಮಾತು" ಅಧಿಕಾರಿಗಳೇ ಬ್ರಷ್ಟಾಚಾರಕ್ಕೆ ಮಣಿಯಬೇಡಿ, ವರ್ಗಾವರ್ಗಿಗೆ ಹೆದರಬೇಡಿ ಹಾಕಿದಲ್ಲಿಗೆ ಹೋಗಿ ನಿಮ್ಮತನ ಉಳಿಸಿಕೊಳ್ಳಿ " ಎಂಬುದು. ಹಾಗೊಮ್ಮೆ ಅಧಿಕಾರಿಗಳೆಲ್ಲಾ ಆರಂಭಿಸಿದರೆ ಆಗ ಸೂಟ್ ಕೇಸ್ ವ್ಯವಹಾರ ಕಮ್ಮಿಯಾಗುತ್ತದೆ. ರಾಜಕೀಯದವರ ಖಾಸಗೀ ಬೊಕ್ಕಸದ ಒಂದು ಭಾಗ ಬರಿದಾಗುತ್ತದೆ! ಆದರೆ ಅವರ ಮಾತನ್ನು ಎಷ್ಟುಮಂದಿ ಅಧಿಕಾರಿಗಳು ಕಿವಿಗೆ ಹಾಕಿಕೊಂಡರು? ನಮ್ಮ ನಡುವೆ ಇರುವ ಇಂತಹ ಶುದ್ಧಹಸ್ತರನ್ನು ಗೌರವಿಸುವುದು, ಅವರ ಸಲಹೆಗಳನ್ನು ಪಡೆಯುವುದು ಬಹಳ ಆರೋಗ್ಯಕರ ಎನಿಸುತ್ತದೆ. ಹೆಚ್ಚಿಗೆ ಏನು ಹೇಳಲಿ ಸಂಸ್ಕೃತಿ ಬಾಗಿನ ಪಡೆದ ವಿಠಲರೇ ಕೇವಲ ಸರಕಾರೀ ಅಧಿಕಾರದಿಂದ ನಿವೃತ್ತರಾದ ನಿಮಗೆ ನಮ್ಮೆಲ್ಲರ ಶುಭಹಾರೈಕೆಗಳು ಮತ್ತು ಮುಂದಿನ ನಿಮ್ಮ ದಿನಗಳಲ್ಲಿ ನಾವು ನಿಮ್ಮಿಂದ ಇನ್ನೂ ಹೆಚ್ಚಿನ ಕನ್ನಡ ಸೇವೆಯನ್ನು ಬಯಸುತ್ತೇವೆಯೇ ಹೊರತು ನಿಮಗೆ ಶುಭವಿದಾಯ ಕೋರಲು ನಾವು ಸಿದ್ಧರಿಲ್ಲ! ಕನ್ನಡ ನಾಡು ಕಂಡ ಅಗ್ದೀ ಛೊಲೋ ಅಧಿಕಾರಿಗಳಲ್ಲಿ ನೀವೂ ಒಬ್ಬರೆಂಬುದು ನಮಗೆ ಗೊತ್ತು, ಒಪ್ಪಿಸಿಕೊಳ್ಳಿ: ಈ ಕ್ಷಣಕ್ಕೆ ಈ ಲೇಖನದ ಮೂಲಕ ನಿಮಗೆ ಹೀಗೊಂದು ಗೌರವಪೂರ್ವಕ ನಮಸ್ಕಾರ.

Monday, January 2, 2012

ಅರಿತು ಮುಟ್ಟಿದರೂ ಅರಿಯದೇ ಮುಟ್ಟಿದರೂ ಸುಡುವುದು ಬೆಂಕಿಯ ಧರ್ಮ!


ಅರಿತು ಮುಟ್ಟಿದರೂ ಅರಿಯದೇ ಮುಟ್ಟಿದರೂ ಸುಡುವುದು ಬೆಂಕಿಯ ಧರ್ಮ!

ಈ ಲೋಕದ ಪ್ರತಿಯೊಂದು ವಸ್ತುವಿಗೂ ಜೀವಿಗೂ ಧರ್ಮ ಎಂಬುದೊಂದಿದೆ. ಧರ್ಮ ಎಂದರೆ ಮತವಲ್ಲ. ಧರ್ಮ ಮತಕ್ಕೆ ಹೊರತಾಗಿದೆ. ಮತವೆಂದರೆ ಅದಕ್ಕೊಬ್ಬ ರೂವಾರಿ ಇರುತ್ತಾನೆ, ಮತವನ್ನು ಹುಟ್ಟುಹಾಕಿ ಅದನ್ನು ಪ್ರಚಲಿತಕ್ಕೆ ತಂದು ಮುಂದುವರಿಸುವಂತೇ ಆ ಕುರಿತು ಕೆಲವು ತನ್ನದೇ ಆದ ಸಿದ್ಧಾಂತಗಳನ್ನು ಮಂಡಿಸಿರುತ್ತಾನೆ. ಮತವೆಂಬುದು ಸೀಮಿತ ಪರಿಧಿಯ ಒಂದು ಜೀವಿತ ಕ್ರಮ. ಧರ್ಮ ಎಂಬುದು ಹಾಗಲ್ಲ. ಹುಟ್ಟಿದ ಪ್ರತೀ ಜೀವಿಗೆ ಹಸಿವು ಎಂಬುದಿದೆ, ಹೊಟ್ಟೆಯಿದೆ, ಅದು ಆಹಾರ ಸ್ವೀಕರಿಸುತ್ತದೆ. ಇಲ್ಲಿ ಆಹಾರ ಸ್ವೀಕರಿಸುವುದು ಸಹಜ ಧರ್ಮ. ಮನುಷ್ಯ ಜೀವನಕ್ಕೆ ಆಹಾರ, ವಸತಿ ಮತ್ತು ಬಟ್ಟೆ [ಫುಡ್, ಶೆಲ್ಟರ್ ಅಂಡ್ ಕ್ಲೋದಿಂಗ್] ಅತೀ ಪ್ರಮುಖವಾದ ಅಂಶಗಳು. ತದನಂತರ ನಿದ್ರೆ, ಮೈಥುನ ಇವೆಲ್ಲಾ ಬರುತ್ತವೆ. ಈ ಎಲ್ಲಾ ಅಂಶಗಳು ಮನುಷ್ಯನ ಪ್ರಾಥಮಿಕ ಅವಶ್ಯಕತೆಗಳು. ಮನುಷ್ಯನಿಗೆ ಮಿಕ್ಕೆಲ್ಲಾ ಜೀವಿಗಳಿಗಿಂತ ವಿಶೇಷವಾದ ಪ್ರಾಕೃತಿಕ ಸಂಪತ್ತೊಂದಿದೆ! ಅದೇ ಹೆಚ್ಚಿನ ಶಕ್ತಿಯನ್ನು ಪಡೆದ ಮೆದುಳು. ಆ ಮೆದುಳನ್ನು ಬಳಸಿಕೊಂಡು ಮನುಷ್ಯ ಸ್ವತಂತ್ರವಾಗಿ ಯೋಚಿಸಬಲ್ಲ, ನಾನಾ ಕೆಲಸಕಾರ್ಯಗಳನ್ನು ನಿರ್ವಹಿಸಬಲ್ಲ, ಕೆಲವು ಮಟ್ಟಿಗೆ ಬೇರೇ ಜೀವಿಗಳನ್ನು ನಿಯಂತ್ರಿಸಬಲ್ಲ, ತನಗೆ ಬೇಕಾದ ಯಂತ್ರೋಪಕರಣಗಳನ್ನು ಸೃಜಿಸಿಕೊಳ್ಳುವುದರೊಂದಿಗೆ ಅವುಗಳ ಕಾರ್ಯಗಳನ್ನೂ ನಿಯಂತ್ರಿಸಬಲ್ಲ. ಇದೇ ಮನುಷ್ಯ ಮನುಷ್ಯನಾಗಿ ಹೇಗೆ ಜೀವಿಸಬೇಕು ಎಂಬುದನ್ನು ಕೆಲವೊಮ್ಮೆ ಮರೆತುಬಿಡುತ್ತಾನೆ! ಆ ಮರೆಯುವಿಕೆಯಲ್ಲಿ ತನ್ನ ಸಹಜಧರ್ಮದಿಂದ ಆತ ವಿಚಲಿತನಾಗುತ್ತಾನೆ. ಹಾಗಾದರೆ ಏನಾಗುತ್ತದೆ ಮತ್ತು ಹಾಗಾಗದಿದ್ದರೆ ಏನು ಒಳಿತಾಗುತ್ತದೆ ಎಂಬುದನ್ನು ಉದಾಹರಣೆಗಳ ಮೂಲಕ ವಿಶದಪಡಿಸುವ ಮೂಲಕ ಮಾನವ ಜೀವನ ಧರ್ಮವನ್ನು ಉತ್ಕೃಷ್ಟರೀತಿಯಲ್ಲಿ ಎತ್ತಿ ಹಿಡಿಯುವ ಭಾರತೀಯ ಪುರಾತನ ಗ್ರಂಥವೇ ಭಗವದ್ಗೀತೆ!


ಗೀತೆಯ ಬಗ್ಗೆ ಹಿಂದೊಮ್ಮೆ ಸುಮಾರು ಬರೆದಿದ್ದೇನೆ. ಮತ್ತೆ ಮತ್ತೆ ಅದನ್ನೇ ಬರೆದರೆ ಚಂದವಾಗಲಿಕ್ಕಿಲ್ಲ. ಗೀತೆಯ ಬಗೆಗಿನ ಆ ಲೇಖನವನ್ನು ಇಲ್ಲಿ ಓದಿಕೊಳ್ಳಬಹುದಾಗಿದೆ : http://nimmodanevrbhat.blogspot.com/2011/07/blog-post_24.html [|| ಅಹಂ ಏಕಂ ಶತಂ ವ್ಯಾಘ್ರಂ ಸಪ್ತದೀ ಕುಂಜರಂ ಬಲಂ||]

ಪ್ರಸಕ್ತ ನಾನು ಹೇಳಹೊರಟಿರುವುದು ಇಸ್ಕಾನ್ ಸ್ಥಾಪನಾಚಾರ್ಯರಾದ ಪ್ರಭುಪಾದರ ಅರ್ಥವಿವರಣೆಯ ಕುರಿತು. ಪ್ರಭುಪಾದರ ಕಾಲಘಟ್ಟದಲ್ಲಿ ಅವರು ತಮಗೆ ಲಭಿಸಿದ ಆಕರಗಳ ಮೂಲಕ ಗೀತೆಯನ್ನು ಅರ್ಥವಿಸಿಕೊಂಡಿದ್ದನ್ನು ಹೇಳಿಹೋಗಿದ್ದಾರೆ; ಅದನ್ನೇ ಕನ್ನಡಕ್ಕೂ ಇನ್ನಿತರ ಹಲವು ಭಾಷೆಗಳಿಗೂ ತರ್ಜುಮೆಮಾಡಿ ಕೋಟ್ಯಂತರ ಪ್ರತಿಗಳನ್ನು ಜಗದಾದ್ಯಂತ ಹಂಚಿದ್ದೇವೆ ಎಂಬ ಹೆಗ್ಗಳಿಕೆ ಇಸ್ಕಾನ್ ಭಕ್ತರದು. ಪ್ರಭುಪಾದರು ಹೇಳಿದ್ದೇ ಎಲ್ಲವೂ ಅಲ್ಲ, ಅಲ್ಲಿ ಅರ್ಥಗ್ರಹಣದಲ್ಲಿ ಸ್ವಲ್ಪ ವಿವೇಚಿಸಬೇಕಾಗಿದೆ ಎಂಬುದು ಇಸ್ಕಾನ್ ಹೊರತಂದ ಆ ಅನುವಾದಿತ ಗೀತೆಯನ್ನು ಓದಿದವರ ಅಂಬೋಣ. ಇರಬಹುದು; ಅವರು ಅಂದು ಹೇಳಿದ್ದು ಇಂದಿಗೆ ತೀರಾ ನೂರಕ್ಕೆ ನೂರು ಸಮಂಜಸ ಎನ್ನುವುದು ಕಷ್ಟವಾಗಬಹುದು ಆದರೆ ಪ್ರಭುಪಾದರು ಹೇಳಿದ ಕೆಲವು ಅಂಶಗಳು ಈಗಾಗಲೇ ಸತ್ಯವಾಗಿ ತೋರುತ್ತವೆ! ಹೀಗಾಗಿ ಅವುಗಳನ್ನು ತೀರಾ ಅಲ್ಲಗಳೆಯಲಿಕ್ಕೂ ಆಗುವುದಿಲ್ಲ!

ಪ್ರಭುಪಾದರ ಅನುವಾದಿತ ಆ ಗೀತೆಯಲ್ಲಿ ಒಂದೆರಡು ಮುಖ್ಯ ಅಂಶಗಳು ಹೀಗಿವೆ :
* ಮೊದಲನೆಯದು ವರ್ಣಾಶ್ರಮದ ಬಗ್ಗೆ.
* ಎರಡನೆಯದು ಸಮಾಜದ ಮುಂದಿನ ಪೀಳಿಗೆಯ ಬಗ್ಗೆ.


ಯಾವುದೇ ವ್ಯಕ್ತಿ ತನ್ನ ಸಹಜ ಧರ್ಮವನ್ನು ಒತ್ತಾಯಪೂರ್ವಕವಾಗಿ ಬದಲಾಯಿಸಕೂಡದು ಎಂದು ಅವರು ಪ್ರತಿಪಾದಿಸಿದ್ದಾರೆ. ಉದಾಹರಣೆ ಹೀಗಿದೆ: ವೈಶ್ಯನೊಬ್ಬ ವ್ಯಾಪಾರ ಮಾಡುವುದು ಸಹಜ. ವ್ಯಾಪಾರದಲ್ಲಿ ಮೋಸಮಾಡುವುದೂ ಕೂಡ ಸಹಜ. ಲಾಭವನ್ನೇ ಗುರಿಯಾಗುಳ್ಳ ವ್ಯಾಪಾರಿಗೆ ಪರಹಿತದ ಚಿಂತನೆ ಸಾಧ್ಯವಾಗುವುದಿಲ್ಲ; ಹಾಗೆ ಅದನ್ನೇ ನೋಡುತ್ತಾ ಆತ ವೃತ್ತಿಯನ್ನು ಬದಲಾಯಿಸುವುದು ಸರಿಯಲ್ಲ--ಎನ್ನುತ್ತಾರೆ ಪ್ರಭುಪಾದರು. ಗೀತೆಯನ್ನು ಬೋಧಿಸಿದ ಶ್ರೀಕೃಷ್ಣ ಹೇಳಿದ್ದು : ||ಚಾತುರ್ವಣಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ || ವ್ಯಕ್ತಿ ಕೈಗೊಳ್ಳುವ ವೃತ್ತಿ ಮತ್ತು ಆತನ ಸ್ವಭಾವ ಇವೆರಡನ್ನು ಅವಲಂಬಿಸಿ ವರ್ಣಾಶ್ರಮವನ್ನು ನಾನೇ ನಿರ್ಧರಿಸಿದ್ದೇನೆ ಎನ್ನುತ್ತಾನೆ. ಹಾಗಾದರೆ ವರ್ಣಾಶ್ರಮಗಳು ಯಾವುವು ಎಂಬುದನ್ನೂ ಹೇಳಿದ್ದಾನೆ--ಅದು ತಮಗೆಲ್ಲಾ ವಿದಿತವೇ ಅಗಿದೆ. ಶರೀರವೊಂದರಲ್ಲಿ ಮುಖ ಕೈ ಕಾಲು ಹೊಟ್ಟೆ ಅಥವಾ ಹೃದಯ, ಪುಪ್ಪುಸ, ಜಠರ, ಕರುಳು ಇತ್ಯಾದಿ ಅಂಗಗಳಲ್ಲಿ ಯಾವುದು ಹೆಚ್ಚು ಯಾವುದು ಕಮ್ಮಿ ಎನ್ನಲು ಸಾಧ್ಯವಾಗುವುದಿಲ್ಲ ಹೇಗೋ ಈ ಜೀವನ ಪದ್ಧತಿಯಲ್ಲಿ ವರ್ಣಾಶ್ರಮಗಳಲ್ಲಿ ಇದೇ ಮೇಲು ಇದೇ ಕೀಳು ಎನ್ನಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮನುಷ್ಯರಾದ ನಾವು ಮನಗಾಣಬೇಕಾಗಿದೆ.

ಶರೀರವೊಂದನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ ಇಡೀ ಶರೀರದಲ್ಲಿ ಮುಖ ಅಥವಾ ತಲೆ ಬ್ರಾಹ್ಮಣನೆಂತಲೂ, ಕೈಗಳು ಕ್ಷತ್ರಿಯ ಎಂತಲೂ, ತೊಡೆಯ ಭಾಗ ವೈಶ್ಯ ಎಂತಲೂ ಪಾದದ ಭಾಗ ಶೂದ್ರ ಎಂತಲೂ ಸಾಂಕೇತಿಕವಾಗಿ ನಾವು ಹೇಳಿಕೊಳ್ಳಬಹುದಾಗಿದೆ. ಇಡೀ ಶರೀರಕ್ಕೆ ಆಧಾರಸ್ಥಂಭ ಪಾದಗಳು. ಅವುಗಳಮೇಲೆ ಶರೀರ ನಿಲ್ಲುವಂತೇ ನೋಡುವುದು ಕಾಲು/ತೊಡೆಗಳು. ಶರೀರಕ್ಕೆ ರಕ್ಷಣೆಯನ್ನೊದಗಿಸುವ ಅಥವಾ ಕೆಲಸಗಳನ್ನು ಮಾಡಿ ಆಹಾರ/ವಸ್ತುಗಳನ್ನು ಪೂರೈಕೆ ಮಾಡುವುದು ಕೈಗಳು. ಪಂಚೇಂದ್ರಿಯಗಳನ್ನು ಇರಿಸಿಕೊಂಡು ಸಂದೇಶಗಳನ್ನು ಸ್ವೀಕರಿಸುವ ಮತ್ತು ರವಾನಿಸುವ ಕೆಲಸ ಮಾಡುವುದು ತಲೆ. ಇವುಗಳಲ್ಲಿ ಯಾವುದು ಇರದಿದ್ದರೆ ಕೆಲಸ ನಡೆಯುತ್ತದೆ ? ಎಲ್ಲವೂ ಬೇಕು ಅಲ್ಲವೇ? ಹಾಗೆಯೇ ಜನಜೀವನದಲ್ಲಿ ಆಯಾಯ ವೃತ್ತಿಗಳು ಇಂತಿಂಥಾ ವರ್ಣಗಳಿಗೆ ಸಂಬಂಧಿಸಿವೆ ಎಂಬುದನ್ನೂ ಕೃಷ್ಣ ಹೇಳಿದ. ಕೇವಲ ಹುಟ್ಟಿನಿಂದ ಯಾವನೂ ಯಾವುದೇ ವರ್ಣಕ್ಕೂ ಸೇರಿದಾತ ಎಂಬುದನ್ನು ನಿರ್ಣಯಿಸಲಾಗುವುದಿಲ್ಲ; ಬದಲಾಗಿ ವ್ಯಕ್ತಿ ಕೈಗೊಳ್ಳುವ ವೃತ್ತಿ ಮತ್ತು ಆತನ ಮನೋಧರ್ಮವನ್ನು ತಿಳಿದು ಆತ ಯಾವ ವರ್ಣದವನು ಎಂಬುದನ್ನು ಅಳೆಯಬೇಕಾಗುತ್ತದೆ.

ವೇದಕಾಲದಲ್ಲಿ ವೃತ್ತಿಗಳು ವಂಶಪಾರಂಪರ್ಯವಾಗಿ ಗುರುಕುಲ ಪದ್ಧತಿಯಲ್ಲಿ ನಡೆದುಬಂದವು. ಗುರುವಿಗೆ ಶಿಷ್ಯಂದಿರು ಮಕ್ಕಳೇ ಆಗಿರುವುದೂ ಮಕ್ಕಳಿಗೆ ಮನೆಯಲ್ಲೇ ತಂದೆ ಗುರುವಾಗಿ ಪೂರಕ ವಾತಾವರಣದಲ್ಲಿ ತಾನುತಿಳಿದ ವೃತ್ತಿವಿದ್ಯೆಯನ್ನು ಧಾರೆ ಎರೆಯುವುದು ಸತತವಾಗಿ ನಡೆದುಬಂದಿತ್ತು. ಈಗ ಹಾಗಿಲ್ಲ. ಕಾಲದ ಪರಿಕ್ರಮದಲ್ಲಿ ಭಟ್ಟರೊಬ್ಬರು ಕೋಳಿಫಾರ್ಮ ಮಾಡುತ್ತಾರೆ, ಶೆಟ್ಟರೊಬ್ಬರು ಇಡೀದಿನ ಹೋಮ ಮಾಡುತ್ತಾರೆ, ದಲಿತನೊಬ್ಬ ಅನ್ಯಾಹಾರ ತೊರೆದು ತಪಸ್ಸುಮಾಡತೊಡಗುತ್ತಾನೆ ಹೀಗೇ ಯಾರ್ಯಾರೋ ಯಾವ್ಯಾವುದೋ ವೃತ್ತಿಯನ್ನು ಹಿಡಿಯುತ್ತಾರೆ; ಅದರಿಂದ ತಮ್ಮ ಉಪಜೀವನಕ್ಕೆ ಆದಾಯ ಕಂಡುಕೊಳ್ಳುತ್ತಾರೆ. ಅಂದರೆ ಗುರುಕುಲ ಪದ್ಧತಿಯಲ್ಲಿ ಬಂದಿದ್ದ ವೃತ್ತಿಧರ್ಮ ಈಗ ನಶಿಸಿಹೋಗಿದೆ. ಕಾಲಚಕ್ರದ ಹಲ್ಲುಗಳು ತಿರುಗುವಾಗ ಜಾಗತೀಕರಣ ಬಂದಮೇಲಂತೂ ಕುಂಬಾರರು, ಬಡಿಗರು, ಅಕ್ಕಸಾಲಿಗರೇ ಮೊದಲಾದ ಗುಡಿಕೈಗಾರಿಕೆಯ ವೃತ್ತಿಯವರು ದಿಕ್ಕೆಟ್ಟು ಬದುಕಿಗಾಗಿ ಸಿಕ್ಕ ಸಿಕ್ಕ ದಂಧೆಗಳನ್ನೋ ನೌಕರಿಯನ್ನೋ ಮಾಡಬೇಕಾಗಿ ಬಂತು. ತಂದೆಯ ಮನೆಯಲ್ಲಿ ಹುಟ್ಟಿನಿಂದ ಕಂಡು ಕಲಿತ ವೃತ್ತಿಯಲ್ಲಿ ಪರಿಪೂರ್ಣತೆಯನ್ನು ಅಥವಾ ಪರಿಪಕ್ವತೆಯನ್ನು ಗಳಿಸಿದ್ದ ವ್ಯಕ್ತಿಯೊಬ್ಬ ಅದನ್ನೇ ನೆಚ್ಚಿ ಬದುಕುವ ಕಾಲ ಇಲ್ಲವಾಯ್ತು. ಅಂತಹ ಸ್ಥಿತಿಯಲ್ಲಿ ವ್ಯಕ್ತಿ ತನ್ನ ಬದುಕಿಗಾಗಿ ಬೇರೇ ಬೇರೆ ವಿದ್ಯೆಗಳನ್ನು ವಿಶ್ವವಿದ್ಯಾಲಯಗಳ ಮೂಲಕ ಪಠ್ಯ ಓದಿ ಕಲಿಯಬೇಕಾಯ್ತು. ಕೇವಲ ಪಠ್ಯಮಾತ್ರದಿಂದ ಕಾರ್ಯಾನುಭವ ಸಾಲದಾದಾಗ ವ್ಯಕ್ತಿ ಮುಗ್ಗರಿಸುವ ಸಮಯವೂ ಬಂತು. ಒಟ್ಟಾರೆ ಗುರುಕುಲ ಪದ್ಧತಿ ನಶಿಸಿ ವಿಶ್ವವಿದ್ಯಾಲಯಗಳು ಬಾಗಿಲು ತೆರೆದವು.

ಇವತ್ತಿನ ಮಾನವನಲ್ಲಿ ಪ್ರತಿಯೊಬ್ಬನಲ್ಲೂ ನಾಲ್ಕೂ ವರ್ಣಗಳು ಮಿಳಿತವಾಗಿವೆ ಎಂಬುದು ನನ್ನ ಅಭಿಮತವಾಗಿದೆ. ವ್ಯಕ್ತಿಯೊಬ್ಬ ಶುಚಿರ್ಭೂತನಾಗಿ ಪೂಜೆ ಮಾಡುವಾಗ ಬ್ರಾಹ್ಮಣನಾಗುತ್ತಾನೆ, ತನ್ನನ್ನು ತಾನು ರಕ್ಷಿಸಿಕೊಳ್ಳುವಗ ಕ್ಷತ್ರಿಯನಾಗುತ್ತಾನೆ, ಚಿಕ್ಕ ಪುಟ್ಟ ವ್ಯಾಪಾರಗಳಲ್ಲಿ ಅಲ್ಲಲ್ಲಿ ತೊಡಗಿಕೊಂಡಾಗ ವೈಶ್ಯನಾಗುತ್ತಾನೆ ಮತ್ತು ಸೇವೆಯಲ್ಲಿ [ಸಲಹೆಕೊಡುವುದು, ಕೆಲಸಮಾಡಿಕೊಡುವುದು ಇವಕ್ಕೆಲ್ಲಾ ಪ್ರತಿಯಗಿ ಹಣಪಡೆಯುವುದು] ತೊಡಗಿಕೊಂಡು ಶೂದ್ರನಾಗುತ್ತಾನೆ. ಅಂದಮೇಲೆ ನಾಲ್ಕೂ ವರ್ಣಗಳು ಎಲ್ಲರಲ್ಲೂ ಇವೆ ಎಂದಾಯ್ತಲ್ಲ !

ವರ್ಣಾಶ್ರಮ ನಶಿಸಿದಾಗ ಅಥವಾ ವರ್ಣಸಂಕರವಾದಾಗ ಕೆಲಸಗಳು ಹೇಗೆ ಸಾಗಬೇಕೋ ಹಾಗೆ ಸಾಗುವುದಿಲ್ಲ; ಸಮಾಜದಲ್ಲಿ ಸ್ಥಿತ್ಯಂತರವಾಗಿ ಸ್ವೇಚ್ಛಾಚಾರ ಜಾಸ್ತಿಯಾಗುತ್ತದೆ ಎಂಬುದು ಪ್ರಭುಪಾದರ ಪ್ರತಿಪಾದನೆಯಾಗಿತ್ತು. ಇವತ್ತು ಆಗಿದ್ದೇನು ? ಸಮಾಜದಲ್ಲಿ ಯಾರನ್ನೂ ಯಾರೂ ನಿಯಂತ್ರಿಸುವ ಹಾಗಿಲ್ಲ. ಪ್ರತಿಯೊಬ್ಬನಿಗೂ ಅವನದ್ದೇ ಆದ ಹಕ್ಕುಗಳಿವೆ. ಆತ ಕದ್ದೂ ಮುಚ್ಚಿ ನೂರಾರು ಅನೈತಿಕ ಸಂಪರ್ಕ ಇಟ್ಟುಕೊಳ್ಳಬಹುದು-ಆದರೆ ಕಾಯ್ದೆಬದ್ಧವಾಗಿ ಯಾವುದಕ್ಕೂ ದಾಖಲೆ ಸಿಗದಿದ್ದರಾಯ್ತು! ಬ್ರಾಹ್ಮಣ ಎನಿಸಿಕೊಂಡವನು ಸಾರಾಯಿ ಕುಡಿಯಬಹುದು-ಮಾಂಸ ತಿನ್ನಬಹುದು-ಪರಸ್ತ್ರೀ ಸಂಗ ಮಾಡಬಹುದು; ಆದರೆ ಯಾರಿಗೂ ಗೊತ್ತಾಗದ ಹಾಗೇ ಮಾಡಿಕೊಂಡರಾಯ್ತು! ವರ್ಣಸಂಕರದಿಂದ ಪ್ರಮುಖವಾಗಿ ಏನಾಗುತ್ತದೆ ಎಂದರೆ ವ್ಯಕ್ತಿಗಳ ನ್ಯಾಚುರಲ್ ಹ್ಯಾಬಿಟಾಟ್ ಇರುತ್ತದಲ್ಲ ಅದು ಯೂನಿವರ್ಸಲ್ ಆಗುತ್ತದೆ! ಆಗ ಎಲ್ಲರ ಆಹಾರ ಕ್ರಮವೂ ಒಂದೇ, ಸ್ನಾನ ಮಾಡದೇ ತಿಂದರೂ ಸರಿ ಮಾಡಿದರೂ ಸರಿ, ಎಡಗೈಲಿ ತಿಂದರೂ ಸರಿ ಬಲಗೈಲಿ ಮುಕ್ಕಿದರೂ ಸರಿ, ಹಗಲಿಗೆ ನಿದ್ದೆಮಾಡಿ ರಾತ್ರಿ ಕೆಲಸಮಾಡಿದರೂ ಸರಿ, ಎಲ್ಲರಿಗೂ ಎಲ್ಲವುದಕ್ಕೂ ಸ್ವಾತಂತ್ರ್ಯ--ಏನು ಬೇಕಾದರೂ ಮಾಡಿಕೊಳ್ಳಿ ಎಂಬ ಅಪರಿಮಿತ ಸ್ವೇಚ್ಛೆಯ ಅನುಮತಿ! ಇದಕ್ಕೆ ಒಂದು ಚಿಕ್ಕ ಉದಾಹರಣೆ ಎಂದರೆ ಇವತ್ತಿನ ಸಮಾಜ ನಡೆದು ಮುಂದೆ ಸಾಗುವ ಸ್ಥಿತಿಯನ್ನು ಅವಲೋಕಿಸಿದರೆ ಪಾನಮತ್ತನಾದ ಚಾಲಕ ವಾಹನ ಚಲಾಯಿಸುವ ರೀತಿ ಗೋಚರವಾಗುತ್ತದೆ! ಇದು ಬೇಡವಾಗಿತ್ತು ಎಂಬುದು ಪ್ರಭುಪಾದರ ಪ್ರತಿಪಾದನೆಯಾಗಿತ್ತು.

ಎರಡನೆಯದು ಮುಂದಿನ ಪೀಳಿಗೆಯ ಬಗ್ಗೆ: ಹಲವು ಬ್ಲಾಗ್ ಗಳಲ್ಲಿ ಬರಹಗಳೇನಕವುಗಳಲ್ಲಿ ನಾನು ಓದಿದ್ದು ಹೆಂಗಸರಿಗೆ ಸ್ವಾತಂತ್ರ್ಯವಿಲ್ಲ-ಮುಕ್ತಸ್ವಾತಂತ್ರ್ಯವಿಲ್ಲ ಎಂಬುದನ್ನು. ಇವತ್ತು ಹೆಂಗಸರು ಹೆಣ್ಣುಮಕ್ಕಳು ಮುಕ್ತರಾಗಿದ್ದಾರೆ. ಹೆಣ್ಣು ಎಂಬ ಶಬ್ದಕ್ಕೆ ಹಡೆಯುವುದು ಎಂಬ ಅರ್ಥವೂ ಇದೆ ಎಂದು ಭಾವಿಸುತ್ತೇನೆ. ಅಂದಮಾತ್ರಕ್ಕೆ ಹೆಣ್ಣು ಕೇವಲ ಹಡೆಯುವ ಯಂತ್ರವೇ ಎಂದು ವಿತಂಡ ವಾದ ಬೇಡ. ನೈಸರ್ಗಿಕವಾಗಿ ಹೆಣ್ಣು ಸ್ವೀಕರಿಸುವ ಗುಣವುಳ್ಳವಳು. ಗಂಡು ಬೀರುವ/ಕೊಡುವ ಗುಣವುಳ್ಳವನು. ಆತ್ಮಕ್ಕೆ ಲಿಂಗಭೇದವಿರದಿದ್ದರೂ ಮಾನವ ಜನ್ಮಕ್ಕೆ ಬಂದಮೇಲೆ ಆ ಯಾ ಲಿಂಗಕ್ಕೆ ತಕ್ಕಂತೇ ಮಾನವ ತನ್ನ ಗುಣಧರ್ಮಗಳನ್ನು ಹೊಂದಿರುವುದು ಸಹಜ. ಹೆಣ್ಣನ್ನು ಹೂವಿಗೂ ಗಂಡನ್ನು ದುಂಬಿಗೂ ಹೋಲಿಸುತ್ತಾರೆ ತಿಳಿದವರು. ದುಂಬಿ ಒಂದೆಡೆ ನಿಲ್ಲುವುದಿಲ್ಲ ಹೇಗೋ ಹಾಗೇ ಗಂಡಿಗೆ ಒಂದೆಡೆ ನಿಲ್ಲುವ ಮನೋಧರ್ಮ ಸ್ವಲ್ಪ ಕಡಿಮೆ ಇರುತ್ತದೆ; ಅವಕಾಶ ಸಿಕ್ಕಿದರೆ ದುಂಬಿ ಹಲವು ಹೂವುಗಳಿಗೆ ಹಾರುತ್ತದೆ; ಕೂರುತ್ತದೆ. ಸ್ವೀಕರಿಸುವ ಹೆಣ್ಣಿನಲ್ಲಿ ಸಂತಾನೋತ್ಫತ್ತಿಯ ಪ್ರಕ್ರಿಯೆ ನಡೆಯುತ್ತದೆ. ಹೂವು ಪರಾಗವನ್ನು ಹೀರಿ ಫಲಭರಿತವಾಗುತ್ತದೆ, ಪೀಚು ಕಾಯಿಗಳು ಕಾಣಿಸಿಕೊಳ್ಳುತ್ತವೆ. ಮಾನವನ ಸಂಶೋಧನೆಗಳಿಂದ ಹೆಣ್ಣಿನಲ್ಲಿ ಸಂತಾನೋತ್ಫತ್ತಿ ಆಗದಂತೇ ನಿಯಂತ್ರಿಸಿಕೊಳ್ಳುವ ಹಲವು ದಾರಿಗಳು ಲಭ್ಯವಾಗಿವೆ. ಓದಿದ ಹೆಣ್ಣುಮಕ್ಕಳು ಹಲವು ವೃತ್ತಿಗಳಲ್ಲಿ ಗಂಡಸರಿಗೆ ಸರಿಸಮವಾಗಿ ದುಡಿಯ ಹೊರಟು ಆರ್ಥಿಕವಾಗಿ ಸ್ವತಂತ್ರರಾಗಿದ್ದಾರೆ.

ಈ ಆರ್ಥಿಕ ಸ್ವಾತಂತ್ರದ ಜೊತೆಗೆ ಇಂದಿಗೆ ನಮಗೆ ಸಾಮಾಜಿಕ ಜಾಲತಾಣಗಳು, ಸಂವಹನಕ್ಕೆ ಜಂಗಮ ದೂರವಾಣಿಗಳು, ಮಿಂಚಂಚೆಯ ರಹ[ಸ್ಯ]ದಾರಿಗಳು ಎಲ್ಲವೂ ಲಭ್ಯವಾಗಿವೆ. ಸ್ವಾಮೀ ನಂಬಿದರೆ ನಂಬಿ ಬಿಟ್ಟರೆ ಬಿಡಿ ಹೆಣ್ಣುಮಕ್ಕಳಲ್ಲಿ ಪ್ರೇಮದ ಸಾಫ್ಟ್ ಕಾರ್ನರ್ ಮರೆಯಾಗಿ ಕಾಮದ ತೆವಲು ಜಾಸ್ತಿಯಾಗಿದೆ. ಸಮಾಜದಲ್ಲಿ ಎಲ್ಲೆಂದರಲ್ಲಿ ಬೇಕುಬೇಕಾದ ವೈಖರಿಯ ದಿರಿಸುಗಳನ್ನು ಧರಿಸಿ ಓಡಾಡುವ ಹೆಣ್ಣುಮಕ್ಕಳನ್ನು/ಹೆಂಗಸರನ್ನು ಕಂಡಾಗ ಜನಸಾಮಾನ್ಯ ಹುಡುಗ/ಗಂಡಸು ತನ್ನನ್ನೇ ತಾನು ಮರೆತು ಪುಂಗಿಯ ನಾದಕ್ಕೆ ತಲೆದೂಗುವ ಹಾವಿನಂತಾಗಿ ಅವರ ಹಿಂದೆ ಬೀಳುವುದು ನಡೆಯುತ್ತಿದೆ. ಇಲ್ಲಿ ಎರಡು ವೈಖರಿ. ಹೆಣ್ಣಿಗೆ ತನಗೆ ಬೇಕಾದವ ಸಿಕ್ಕಿದರೆ ಲಿವ್-ಇನ್, ತನಗೆ ಬೇಡದವ ಎಂದಾದರೆ ಗೆಟ್-ಔಟು! ಹೇಳಿಕೊಳ್ಳಲು ನಾಚಿಕೆಯಾಗುತ್ತದೆ ಮದುವೆಯಾದ ಹೆಂಗಸರು/ಮುದುಕಿಯರು ಫೇಸ್ ಬುಕ್ ಗಾಗಿ ನಾನಾ ಥರದ ವೇಷಗಳಲ್ಲಿ ತಾನಿನ್ನೂ ಷೋಡಶಿ ಎಂಬ ರೀತಿ ಪೋಸುಕೊಡುವ ಭಾವಚಿತ್ರಗಳನ್ನು ಪ್ರಕಟಿಸುವುದನ್ನು ತಾವೆಲ್ಲಾ ಕಾಣಬಹುದಾಗಿದೆ! ದಶಕಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ವಿವಾಹ ವಿಚ್ಛೇದನ ಬಹಳೇ ಜಾಸ್ತಿಯಾಗಿದೆ! ನನಗೆ ತಿಳಿದಿರುವಂತೇ ಕಾರಣವೇ ಇಲ್ಲದೇ ನಡೆದ ಮೂರ್ನಾಲ್ಕು ವಿಚ್ಛೇದನಗಳನ್ನು ಕಂಡಿದ್ದೇನೆ. ನಮ್ಮಲ್ಲಿ ಅಜ್ಜಿ ಗಾದೆಯೊಂದನ್ನು ಹೇಳುತ್ತಿದ್ದರು" ಗಂಡು ಕುಳಿತು ಕೆಡ್ತು; ಹೆಣ್ಣು ತಿರುಗಿ ಕೆಡ್ತು" --ಇದರ ಅರ್ಥ ಗಂಡು ಸೊಂಬೇರಿಯಾದರೆ ಆಲಸಿಯಾದರೆ ಸಂಸಾರ ನಡೆಯುವುದಿಲ್ಲ, ಹೆಣ್ಣು ಕಂಡಕಂಡಲ್ಲಿ ತಿರುಗುವಾಗ ನಾಕಾರು ಗಂಡಸರ ಕಣ್ಣು ಹೆಣ್ಣಿನಮೇಲೆ ಬೀಳುವುದರಿಂದ ಆ ಹೆಣ್ಣು ಯಾರ ಸಂಪರ್ಕಕ್ಕೂ ಮುಂದಾಗಬಹುದು, ಅಥವಾ ಅತ್ಯಾಚಾರಕ್ಕೂ ಗುರಿಯಾಗಬಹುದು ಎಂದು. ಹೌದು ಎನ್ನುತ್ತೀರಾ?

ಇವತ್ತಿನ ಅನೇಕ ಕಚೇರಿಗಳಲ್ಲಿ ಕದ್ದು ಮುಚ್ಚಿ ಯಾ ಒತ್ತಡಕ್ಕೆ ಸಿಲುಕಿ ನಡೆಯುವ ಹೆಂಗಸರ ಅನೈತಿಕ ಸಂಬಂಧಗಳು ಬಹಿರಂಗಗೊಂಡರೆ ಭಾರೆತೀಯ ಸಮಾಜದಲ್ಲಿ ಮದುವೆ ಎಂಬ ಪದಕ್ಕೆ ಹೊಸ ಅರ್ಥ ಬರೆಯಬೇಕಾಗಬಹುದೇ? ಇನ್ನು ಸಿನಿಮಾ ಅಥವಾ ರಂಗಭೂಮಿ ಕಲಾವಿದರಲ್ಲಿ ಇದರ ಬಗ್ಗೆ ಹೇಳುವುದೇ ಬೇಡ; ಅದೆಲ್ಲಾ ಅನಿವಾರ್ಯ ಅಂತಾರೆ ಅವರು! ಸಂವಹನ ಪ್ರಕ್ರಿಯೆ, ಪ್ರಚೋದಕ ಸಿನಿಮಾ, ವಿಕೃತ ಸಾಹಿತ್ಯ, ವೈಭವೀಕೃತ ಮಾಧ್ಯಮಗಳ ವರದಿ ಇವೆಲ್ಲಾ ಒದಗಿ ಪ್ರಸ್ತುತ ಪ್ರೌಢಶಾಲೆಯಲ್ಲೇ ಮಕ್ಕಳು ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದಾರೆ. ಅಪ್ಪ-ಅಮ್ಮಂದಿರಿಗೆ ಹೇಗೆ ಟೋಪಿ ಹಾಕಿ ಎಲ್ಲೆಲ್ಲಿ ಬಾಯ್ ಫ್ರೆಂಡು /ಗರ್ಲ್ ಫ್ರೆಂಡುಗಳನ್ನು ಭೇಟಿಯಾಗಬೇಕೆಂಬುದನ್ನು ಯೋಚಿಸುವಷ್ಟು ಮುಂದುವರಿದ ಜನಾಂಗ ಅವರಾಗಿದ್ದಾರೆ! ನನಗೆ ತಿಳಿದ ಬೆಂಗಳೂರಿನ ರಾಜಾಜಿನಗರದ ಒಳ್ಳೆಯ ಹೆಸರುಳ್ಳ ಶಾಲೆಯೊಂದರಲ್ಲಿನ ವಿದ್ಯಾರ್ಥಿನಿಯನ್ನು ತಾಯಿ ಗೈನಾಕಾಲಜಿಸ್ಟ್ ಹತ್ತಿರ ಪರೀಕ್ಷೆಗೆ ಕರೆದೊಯ್ದಾಗ ತಿಳಿದುಬಂದ ವಿಷಯ: ಆಕೆಯ ಸಹಪಾಠಿ ಬಾಯ್ ಫ್ರೆಂಡು ಮತ್ತು ಅವಳು ’ಅದನ್ನು’ ನಡೆಸಿದ್ದರು; ಅದರಿಂದಾಗಿ ಅವಳೀಗ ’ಇದು’ ! ಗುರುವಿಲ್ಲದ ವಿದ್ಯೆ ಜಗತ್ತಿನಲ್ಲಿ ಇದೊಂದೇ ಇರಬೇಕು!

ಕಾಟಾಚಾರಕ್ಕೆ ಮದುವೆ ಎಂಬ ’ಬಂಧನ’ಕ್ಕೆ ಒಳಗಾಗುವ ಇಂದಿನ ಹುಡುಗಿಯರು ಸಾಮಾಜಿಕ ತಾಣಗಳಲ್ಲಿ ತಮ್ಮ ಗಂಡು ಸ್ನೇಹಿತರೊಂದಿಗೆ ಸಂವಹಿಸುವ ವ್ಯಾಖ್ಯೆಗಳನ್ನು ಒಮ್ಮೆ ನೀವು ನಿಗಾ ಇರಿಸಿ ನೋಡಬೇಕು. ಸಮಾಜದಲ್ಲಿ ದಾಂಪತ್ಯದ ಪ್ರೀತಿ ಎಂಬುದು ಮರುಭೂಮಿಯ ಜಲವಾಗಿದೆ. ಹರೆಯ ಇರುವ ವರೆಗೆ, ಸೌಂದರ್ಯ ಇರುವವರೆಗೆ, ಮೈಯ್ಯಲ್ಲಿ ಕಸುವು ಇರುವವರೆಗೆ ಆದಷ್ಟೂ ’ಅನುಭವಿಸಬೇಕು’ ಎಂಬ ಹೊಸಯುಗದ ಪೀಳಿಗೆಯನ್ನು ನೋಡುತ್ತಿದ್ದರೆ ಪ್ರಭುಪಾದರು ಹೇಳಿದ್ದು ನೆನಪಿಗೆ ಬರುತ್ತದಲ್ಲವೇ? ಬಿಗ್ ಬಾಸಿಗೆ ಅವಳ್ಯಾರೋ ಸನ್ನಿ ಲಿಯಾನ್ ಬಂದು ಸುದ್ದಿ ಮಾಡಿದಳಲ್ಲ? ಅವಳೇನೋ ಪತಿವ್ರತೆ ಎಂಬಂತೇ ನಮ್ಮ ಮಂದಿ ಹೊತ್ತು ಕುಣಿದರಲ್ಲಾ ಅಂತಹ ಸಾವಿರಾರು ಘಟನೆಗಳು ಇಂದಿನ ನಮ್ಮ ಸಮಾಜದಲ್ಲಿ ಕಾಣಿಸುತ್ತಿವೆ. ಸ್ವೇಚ್ಛೆಯಿಂದ ತಿರುಗುವ ಬೇಕಾದ್ದನ್ನು ತನ್ನ ಬಾಯ್ ಫ್ರೆಂಡುಗಳ ಥೈಲಿಯಿಂದ ಖರೀದಿಸಬಲ್ಲ ಗಂಡುಬೀರಿ ಹೆಣ್ಣಿನ ಹಿಂದೆ ಅವೆಷ್ಟು ಗಂಡುಗಳು ಅಲೆಯುವುದಿಲ್ಲ? ರಾಜಕಾರಣಿಗಳಿಲ್ಲವೇ? ಸಿನಿಮಾ ಪ್ರಮುಖರಿಲ್ಲವೇ? ಮಂಚದ ಕೆಳಗೆ ಸಂಸಾರ ನಡೆಸುವ ಮತಗಳ ಅನುಯಾಯಿಗಳಿಲ್ಲವೇ ? ಇಂದಿನ ನಮ್ಮ ಮಾಧ್ಯಮಗಳು ಅಂತಹ ಗಂಡುಬೀರಿಯರ ವೃತ್ತಾಂತಗಳನ್ನೇ ಮತ್ತೆ ಮತ್ತೆ ಬಿತ್ತರಿಸಿ ಅವರನ್ನು ಎತ್ತಿ ಹುರಿದುಂಬಿಸುತ್ತಿಲ್ಲವೇ? ಲಿವ್-ಇನ್ ರಿಲೇಶನ್ ಅಥವಾ ಮದುವೆ-ವಿಚ್ಛೇದನ-ಮದುವೆ-ವಿಚ್ಛೇದನಗಳಿಂದ ನಡುವೆ ಜನಿಸುವ ಕೂಸುಗಳು ಮುಂದಿನ ವಾರಸುದಾರರಾದರೆ ಅವರನ್ನು ಅಪೇಕ್ಷೆ ಪಡಬೇಕಾದ ತಂದೆ-ತಾಯಿಗಳ ಪ್ರೀತಿ ವಾತ್ಸಲ್ಯ ಅವರುಗಳಿಗೆ ದೊರೆಯದಾದಾಗ ಆ ಮಕ್ಕಳನ್ನು ಅನಪೇಕ್ಷಿತ ಮಕ್ಕಳೆಂದರೆ ತಪ್ಪೇ? ಅಂತಹ ಮಕ್ಕಳಿಗೆ ಸರಿಯಾದ ಜೀವನ ಮಾರ್ಗದರ್ಶನವಿಲ್ಲದೇ ಮುಂದೆ ಅವರವರೇ ಉಳಿವಿಗಾಗಿ ಬಡಿದಾಡುವ ರಕ್ಕಸ ಮನೋವೃತ್ತಿ ಅವರಲ್ಲಿ ಬರದೇ ಇದ್ದೀತೇ ?

ಇದನ್ನೆಲ್ಲಾ ಕಾಣುತ್ತಾ ನನ್ನಂತಹ ಬಡಪಾಯಿಗೆ ಅಲ್ಲೆಲ್ಲೋ ಒಂದುಕಡೆ ಪ್ರಭುಪಾದರು ಹೇಳಿದ್ದರಲ್ಲಿ ತಪ್ಪು ಕಾಣಿಸುವುದಿಲ್ಲ. ಗೀತೆಯ ಅರ್ಥವ್ಯಾಪ್ತಿ ಬಹಳ ಅಗಾಧವಾಗಿದ್ದುದನ್ನು ಅವರು ಈ ತೆರನಾಗಿ ಅರ್ಥೈಸಿದ್ದರೂ ಇದರಲ್ಲಿ ಹುರುಳಿಲ್ಲ ಎನ್ನಲಾಗುವುದಿಲ್ಲ ಅಲ್ಲವೇ? ಅರಿತು ಮುಟ್ಟಿದರೂ ಅರಿಯದೇ ಮುಟ್ಟಿದರೂ ಸುಡುವುದು ಬೆಂಕಿಯ ಧರ್ಮವಾದ ಹಾಗೇ ನೀತಿಗೆಟ್ಟ ಸಮಾಜದ ಬಹಿರಂಗದಲ್ಲಿ ಗೌರವದ ಲೇಪ ಹಚ್ಚಿ ಬದುಕುವ ನಮಗೆ ಅಂತರಂಗದಲ್ಲಿ ಆಗುತ್ತಿರುವ ಅನಾಹುತಗಳ ಕಲ್ಪನೆ ಇದೆಯೇ? ಆರೋಗ್ಯಕರ ಸಮಾಜವನ್ನು ಭಾರತ ಉಳಿಸಿಕೊಳ್ಳಬೇಕಾದರೆ ಪಶ್ಚಿಮಾಗ್ರಹ ಬಂದು ಪೂರ್ಣವಾಗಿ ಒತ್ತರಿಸುವ ಮುನ್ನ ಎಚ್ಚೆತ್ತುಕೊಂಡು ಭಾರತೀಯ ಕುಟುಂಬವ್ಯವಸ್ಥೆ ಬುಡಮೇಲಾಗದಂತೇ ಕಾಪಾಡುವುದು ನಮ್ಮ ಧರ್ಮವಾಗಿದೆ; ಕರ್ತವ್ಯವಾಗಿದೆ. ಭಾರತೀಯರಿಗೆ ಸಿಗುತ್ತಿರುವ ಗೌರವ ಕೂಡಾ ಇಲ್ಲಿನ ಶಾಂತ ಸಹಜ ಸುಲಲಿತ ಕುಟುಂಬ ವ್ಯವಸ್ಥೆಯ ಮೇಲೆ, ದಾಂಪತ್ಯದ ಲಲಿತಕಲೆಯಮೇಲೆ ಅವಲಂಬಿಸಿದೆ. ಜಗತ್ತಿನಲ್ಲಿ ಅದರಲ್ಲೂ ಭಾರತದಲ್ಲಿ ಮನುಷ್ಯನಾಗಿ ಹುಟ್ಟಿದ್ದಕ್ಕೆ ಮನುಷ್ಯ ಸಹಜಧರ್ಮ ಯಾವುದು ಎಂಬುದನ್ನರಿತು ಇತರೆ ಪ್ರಾಣಿವರ್ಗಗಳಿಂದ ನಮ್ಮನ್ನು ಬೇರ್ಪಡಿಸಿಕೊಳ್ಳಬೇಕಾಗಿದೆ; ಈ ದಿಸೆಯಲ್ಲಿ ಗೀತೆ ಆದರ್ಶಗಳನ್ನು ಎತ್ತಿ ತೋರುತ್ತದೆ.

Friday, December 30, 2011

ಬದುಕಿಗೊಂದು ನಿತ್ಯ ಪಾಠ


ಬದುಕಿಗೊಂದು ನಿತ್ಯ ಪಾಠ

[ಸ್ನೇಹಿತರೆಲ್ಲರಿಗೂ ೨೦೧೨ ಹಾರ್ದಿಕ ಶುಭಾಶಯಗಳು]

ಬದುಕಿಗೊಂದು ನಿತ್ಯ ಪಾಠ ಆಟ ಹಾಸ್ಯ ಹೂರಣ
ಕೆದಕಿತೆಗೆದು ಭಾವಗಳನು ಅದಕೆ ಕಟ್ಟಿ ತೋರಣ !

ಮುಗಿಯದಿರಲಿ ಮಂದಹಾಸ ಲಘುವಿಗದುವೆ ಕಾರಣ
ತೆಗೆದು ಬಿಸುಡಿ ಕೋಪತಾಪ ಜೀವಕದುವೆ ಮಾರಣ !

ನಡೆವ ಹಾದಿಯಲ್ಲಿ ನಾವು ನಮ್ಮಷ್ಟಕೇ ವಾರಣ!!
ಪಡೆವ ಕಷ್ಟ-ಸುಖಗಳೆಲ್ಲ ಖರ-ನಂದನ-ತಾರಣ !

ಗೆಲುವು-ಸೋಲು ಮಜದ ಮಜಲು ತಾರದಿರಲಿ ದಾರುಣ
ಒಲವು-ಸ್ನೇಹ ಎಳೆದುತರಲಿ ಕೊರತೆ ಭರಿಸೆ ಪೂರಣ

ನವನವೀನ ಜಾಯಮಾನ ನಾಗರಿಕತೆ ಪ್ರೇರಣ
ಜನರಾಶಿಯು ಅರಿತು ಬದುಕೆ ದಿನವು ನವ್ಯ ಚಾರಣ !

Thursday, December 29, 2011

ನನ್ನೀ ಜೀವನ ಸಮುದ್ರಯಾನದಿ ಚಿರಧ್ರುವತಾರೆಯು ನೀನು !

ನನ್ನೀ ಜೀವನ ಸಮುದ್ರಯಾನದಿ ಚಿರಧ್ರುವತಾರೆಯು ನೀನು !

೯೪ ರ ಹೂತ್ತಿಗೆ ನಾನಿನ್ನೂ ಏನೂ ಅಲ್ಲದೇ ಬೆಂಗಳೂರಲ್ಲಿ ನೆಲೆನಿಲ್ಲಲು ಸರಿಯಾದ ಜಾಗ ಹುಡುಕುತ್ತಿರುವಾಗಲೇ ಕೇಳಿಬಂದದ್ದು ಕುವೆಂಪು ಅಸ್ತಂಗತರಾದ ಸುದ್ದಿ. ಬಾಲ್ಯದಲ್ಲಿ ಪಠ್ಯಗಳನ್ನು ಓದುವಾಗ ಅವರು ಬರೆದ ಅದೆಷ್ಟು ಹಾಡುಗಳು ಬಂದಿದ್ದವೋ ನೆನಪಿಲ್ಲ, ಒಟ್ಟಾರೆ ಎಲ್ಲಿ ನೋಡಿದರೂ ಕುವೆಂಪು ಕುವೆಂಪು ಕುವೆಂಪು. ಬಾಯಿಪಾಠಮಾಡಲಾಗದ ಹಾಡುಗಳ ಮಧ್ಯದ ಸಾಲುಗಳನ್ನು ನಮ್ಮ ಶಿಕ್ಷಕರು ಕೇಳಿದಾಗ ಒಮ್ಮೊಮ್ಮೆ ಕೋಪದಿಂದ " ಅವನ್ಯಾರೋ ಕುವೆಂಪುವಂತೆ ಕುವೆಂಪು ಯಾಕಾದ್ರೂ ಅಷ್ಟೆಲ್ಲಾ ಹಾಡು ಬರೆದ್ನೋ ಪುಣ್ಯಾತ್ಮ, ಬೇರೆ ಕೆಲ್ಸ ಇರ್ಲಿಲ್ವೆ ಕುವೆಂಪುಗೆ? ಇಲ್ಲಿ ನಮ್ ತಲೆ ತಿಂತಾರೆ" ಎಂದುಕೊಂಡಿದ್ದೂ ಇದೆ! ಆ ವಯಸ್ಸೇ ಹಾಗಿತ್ತು, ಅಲ್ಲಿ ಅಪ್ಪ-ಅಮ್ಮ ನಮಗಾಗಿ ಪಡುವ ಪಾಡು, ಅವರ ಕಷ್ಟ-ಸುಖ, ಕವಿ-ಕಾವ್ಯ-ಪರಂಪರೆ ಇದನ್ನೆಲ್ಲಾ ಅರ್ಥವಿಸಿಕೊಳ್ಳಲಾಗದ ಮುಗ್ಧ ಬುದ್ಧಿಮಟ್ಟ. ಕುವೆಂಪು ಅಂದರೆ ಯಾರು ಆತ ಯಾಕೆ ಹಾಗೆಲ್ಲಾ ಬರೆದರು ಎಂದು ಎಂದೂ ಚಿಂತಿಸುವುದಕ್ಕೆ ಒಗ್ಗದ ಮನ. ಕಾಲ ನಿಲ್ಲುವುದಿಲ್ಲವಲ್ಲ, ಸರಿದೇ ಹೋಗುತ್ತದೆ, ಮುಪ್ಪಡರಿದ ಕುವೆಂಪು ಸಾಹಿತ್ಯಲೋಕವನ್ನು ಬಿಟ್ಟು ಉದಯರವಿಯಲ್ಲಿ ಅಸ್ತಂಗತರಾಗಿದ್ದರು-ಅದು ಈಗ ಕಥೆ ಅಥವಾ ನೆನಪು ಮಾತ್ರ.

ಬರವಣಿಗೆ ಬರಹಗಾರನಿಗೆ ಖುಷಿ ಕೊಡುವುದರ ಜೊತೆಜೊತೆಗೇ ಓದುಗರ ಮಹಾಸಾಗರದಲ್ಲಿ ಎಷ್ಟು ದಿನ ತೇಲುತ್ತದೆ, ಎಷ್ಟುದಿನ ತನ್ನತನವನ್ನು ಎತ್ತಿಹಿಡಿದು ಮೆರೆಸುತ್ತದೆ ಎಂಬುದು ಯೋಚಿಸಬೇಕಾದ ವಿಷಯ. ಅನೇಕ ಲಕ್ಷಮಂದಿ ಬರಹಗಾರರು ಕನ್ನಡ ಸಾರಸ್ವತ ಲೋಕಕ್ಕೆ ತಮ್ಮ ಕೊಡುಗೆಗಳನ್ನು ನೀಡಿದರೂ ಕೇವಲ ಕೆಲವರು ಮಾತ್ರ ತಮ್ಮ ಅತ್ಯುತ್ತಮ ಕೃತಿಗಳಿಂದ ಅಜರಾಮರರಾಗುತ್ತಾರೆ. ರಸಋಷಿಗಳಾದ ಅಂಥವರಿಗೆ ’ಗೌಡಾ’ ಕೊಡುವುದೂ ಬೇಕಾಗಿಲ್ಲ. ಯಾಕೆಂದರೆ ಅವರ ಹೆಸರುಗಳ ಅಂದಗೆಟ್ಟುಹೋಗುತ್ತದೆ. ಉನ್ನತ ಸ್ತರದ ಯಾವುದೇ ವ್ಯಕ್ತಿಗೆ ಡಾ. ಸೇರಿಸಿದರೆ ಮೈಯ್ಯೆಲ್ಲಾ ಉರಿದ ಅನುಭವ, ಪ್ರಾಯಶಃ ಅದು ಇತ್ತೀಚೆಗೆ ಕೊಡು-ಕೊಳ್ಳುವ ವಿಷಯಕ್ಕೆ ಇಳಿದು ಬೆಲೆಕಳೆದುಕೊಂಡಿದ್ದಕ್ಕೋ ಏನೋ. ಅಂತೂ ಕನ್ನಡದ ಹಿರಿಯ ಜೀವಗಳಿಗೆ ಗೌಡಾ ಹಚ್ಚಿದರೂ ಬಿಟ್ಟರೂ ಅವರ ಗೆಲ್ಮೆ ಹೆಚ್ಚಿನದೇ ಆಗಿದೆ. ಯಾಕೆಂದರೆ ಅವರು ಅನುಸರಿಸಿದ ಬಾಳ ಪಥ ಆ ಮಟ್ಟದ್ದಿದೆ. ಕಥೆಗಾರ ಎಸ್. ದಿವಾಕರ್ ಜೊತೆ ಒಮ್ಮೆ ಮಾತನಾಡುವಾಗ ಡೀವೀಜಿಯವರ ಬಗ್ಗೆ ಹೇಳುತ್ತಿದ್ದೆ, ಆಗ ಅವರು ಹೇಳಿದ್ದೂ ಇದನ್ನೇ " ಬರಹಗಾರನ ಬರಹಗಳು ಎಷ್ಟು ಬಾಳಿಕೆ ಬರುತ್ತವೆ, ಎಂಡ್ಯೂರನ್ಸ್ ಎಷ್ಟಿರುತ್ತದೆ ಎಂಬುದರ ಮೇಲೆ ಆತನ ಬರಹವನ್ನು ಗುರುತಿಸಬಹುದು " ಎಂದರು. ಕನ್ನಡಕ್ಕೊದಗಿದ ಅಂತಹ ಮಹಾನುಭಾವರಲ್ಲಿ ಕುವೆಂಪುವೂ ಒಬ್ಬರು.

ಎಂಬತ್ತರ ದಶಕ ಮುಗಿಯುತ್ತಿರುವ ವೇಳೆ ಎಲ್ಲೆಲ್ಲೂ ಕೇಳಿಸಿದ್ದು ಮೈಸೂರು ಅನಂತಸ್ವಾಮಿಗಳು ಹಾಡಿದ " ಓ ನನ್ನ ಚೇತನಾ ಆಗು ನೀ ಅನಿಕೇತನ ...." ಅದನ್ನೇ ಎ ಸೈಡು ಬಿ ಸೈಡು ಕೇಳೀ ಕೇಳೀ ಕೇಳೀ ಬೇಸರವಾದರೂ ಅರ್ಥವನ್ನು ಅವಲೋಕಿಸುತ್ತಾ ನಡೆದಾಗ ನಮ್ಮನ್ನೇ ನಾವು ಕಳೆದುಕೊಳ್ಳುವ ಲೋಕವೊಂದರ ಸೃಷ್ಟಿಯನ್ನು ನಮ್ಮೊಳಗೇ ಹುಟ್ಟಿಸಿಬಿಡುತ್ತದೆ ಆ ಹಾಡು ! ಎಲ್ಲಿಯೂ ನಿಲ್ಲದಿರು... ಮನೆಯನೊಂದ ಕಟ್ಟದಿರು... ಇದು ಕವಿ ಹೃದಯದಲ್ಲಿ ಹೇಗೆ ಬಂತು ಎಂಬುದು ಅವರಿಗಿಂತ ತೀರಾ ಎಳಬನಾದ ನನಗೆ ಸ್ಪಷ್ಟವಿಲ್ಲ. ಕುಪ್ಪಳ್ಳಿಯಂತಹ ಕುಗ್ರಾಮದ ಮಜಭೂತಾದ ತೊಟ್ಟಿಮನೆಯಿಂದ ಮೈಸೂರು ನಗರದ ’ಉದಯರವಿ’ಗೆ ಅವರು ಹೋಗಬೇಕಾಗಿ ಬಂದಾಗ ಹಾಗೆ ಬರೆದರೇ ? ಗೊತ್ತಿಲ್ಲ. ’ಅಣ್ಣನ ನೆನಪು’ ಎಂಬುದನ್ನು ಬರೆದೇ ಅಷ್ಟಿಷ್ಟು ಹೆಸರುಪಡೆದ ಪೂಚಂತೇ ಮಹಾಮೇರು ಕುವೆಂಪುವಿನ ಮಗನಾದರೂ ಆ ಮಟ್ಟಕ್ಕೆ ಬೆಳೆಯಲಿಲ್ಲ! ಅದೊಂದು ಶಕೆ; ಒಬ್ಬರಂತೇ ಇನ್ನೊಬ್ಬರು ಆಗಲು ಸಾಧ್ಯವಾಗದೇ ಹೋಗಬಹುದು, ಬಹುತೇಕರಲ್ಲಿ ಅದು ಸಾಧ್ಯವಾಗುವುದೇ ಇಲ್ಲ. ಸಾಹಿತ್ಯಕ ರಸಾಭಿಜ್ಞತೆಗೆ ಅದರದ್ದೇ ಆದ ಆಯಾಮ ಇದೆ. ಬರೆದಿದ್ದೆಲ್ಲಾ ಸಾಹಿತ್ಯವಾಗುವುದಿಲ್ಲವಲ್ಲ? ಅಂತೆಯೇ ತೇಜಸ್ವಿಯವರ ಬರಹಗಳೆಲ್ಲ ಎಲ್ಲರನ್ನೂ ಮೆಚ್ಚಿಸಬಲ್ಲ ’ಸತ್ಯಾವತಾರ’ದ ನುಡಿಗಳಾಗಿರಲಿಲ್ಲ!

ಪೂಚಂತೇ ಜೊತೆಗೆ ಅವರ ಬರಹಗಳನ್ನು ಬೆರಳಚ್ಚು ಮಾಡಿಕೊಟ್ಟ ಅನುಭವವಿರುವ ಮಿತ್ರ ಪರಾಂಜಪೆ ಹೇಳುತ್ತಿದ್ದರು " ತೇಜಸ್ವಿ ಅಪ್ಪನಷ್ಟು ತಾದಾತ್ಮ್ಯ ಭಾವವನ್ನು ಹೊಂದಿದವರಾಗಿರಲಿಲ್ಲ. ಬರೆಯಬೇಕೋ ಬರೆಯಬೇಕು ಆದರೆ ಬರವಣಿಗೆಯ ಗುಣಮಟ್ಟದ ಬಗ್ಗೆ ಅವರು ತಲೆಕೆಡಿಸಿಕೊಳ್ಳದ ಬರಹಗಾರರು " ಎಂದು. ತೀರಾ ಇತ್ತೀಚೆಗೆ ಕುವೆಂಪು ಅವರ ಮೊಮ್ಮಗಳು ಈಶಾನ್ಯೆ ದಿನಪತ್ರಿಕೆಯೊಂದರಲ್ಲಿ ಚಿಕ್ಕ ಲೇಖನ ಬರೆದಿದ್ದು ಓದಿದೆ; ಇಲ್ಲ-ಕುವೆಂಪು ಮೊಮ್ಮಗಳು ಎನ್ನುವ ಮಟ್ಟದ್ದಲ್ಲ! ಕುವೆಂಪು ಕುವೆಂಪುವೇ; ಅದೊಂದು ರಸಋಷಿಯ ಕನ್ನಡಾವತಾರ !

ಕುವೆಂಪು ಅವರ ತಾದಾತ್ಮ್ಯತೆಯ ಬಗ್ಗೆ ಘಟನೆಯೊಂದು ಹೀಗಿದೆ: ಒಮ್ಮೆ ಕುವೆಂಪು ಮನೆಯಲ್ಲಿ ಕಳ್ಳತನವಾಯ್ತು. ಕದ್ದ ಕಳ್ಳ ಆಮೇಲೆ ದಿನವೆರಡರ ನಂತರ ಸಿಕ್ಕಿ ಬಿದ್ದಾಗ ಆತನನ್ನು ಪೋಲೀಸರು ಕುವೆಂಪು ಅವರ ಮನೆಗೆ ಎಳೆತಂದು ಎಲ್ಲೆಲ್ಲಿ ಹೇಗ್ಹೇಗೆ ಏನೇನು ಕದ್ದೆ ? ಎಂದು ಪ್ರಶ್ನಿಸಿದಾಗ, ಕಳ್ಳ ಹೇಳಿದ್ದು "ನಾನು ಕಳ್ಳತನಮಾಡುವಾಗ [ಕುವೆಂಪುವನ್ನು ಬೆರಳಿಟ್ಟು ತೋರಿಸಿ]ಓ ಇವರು ಇಲ್ಲೇ ಓದ್ತಾ ಕೂತಿದ್ರು " ! ಇನ್ನೊಂದು ಚಿಕ್ಕ ವೈಯ್ಯಕ್ತಿಕ ಟಿಪ್ಪಣಿ ಎಂದರೆ ಆಗಿನ ಕಾಲದಲ್ಲಿ ಅನೇಕರು ಕುವೆಂಪು ಅವರಿಗೆ ಕಾಗದ ಬರೆದು ಮಕ್ಕಳಿಗೆ ಹೆಸರು ಸೂಚಿಸುವಂತೇ ಕೋರುತ್ತಿದ್ದರು. ಉತ್ತರ ಬರೆಯಲು ಅಂಚೆ ಕಾರ್ಡುಗಳನ್ನು ಯಾರಾದರೂ ಕೆಲಸಗಾರರಲ್ಲಿ ಹೇಳಿಕಳಿಸಿ ಕುವೆಂಪು ತರಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಅವರು ಒಂದೋ ಎರಡೋ ರೂಪಾಯಿ ಕೊಡುತ್ತಿದ್ದರಲ್ಲಾ ಖರ್ಚಾಗಿ ಉಳಿದ ಚಿಲ್ಲರೆ ಹಣ ಕೈಗೆ ಮರಳಿ ಬರುವವರೆಗೆ ಕಾರ್ಡು ತಂದವರನ್ನು ಕೇಳುತ್ತಲೇ ಇರುತ್ತಿದ್ದರು.

ವಿಜಯಕರ್ನಾಟಕದಲ್ಲಿ ಹಿಂದೊಮ್ಮೆ ’ಮಹಾಕಾವ್ಯಗಳು ಎಂದರೆ ಅವು ಸಾಮಾನ್ಯರಿಗೆ ಅರ್ಥವಾಗದ್ದು’ ಎಂದು ಅಸಡ್ಡೆಯಾಗಿ ’ಸ್ಫೂರ್ತಿ ಸೆಲೆ’ ಎಂಬ ಶೀರ್ಷಿಕೆಯಡಿಯಲ್ಲಿ ಯಾರೋ ನಿತ್ಯ ಬರೆಯುವವರು ಬರೆದಿದ್ದರು, ಅದನ್ನು ವಿರೋಧಿಸಿ ಅಣಕವನ್ನೂ ಬರೆದ ನೆನಪು ನನಗಿದೆ, ಅದೂ ಈ ಬ್ಲಾಗ್ ನಲ್ಲೇ ಇದೆ. ರಟ್ಟೆಗಾತ್ರದ ಕೆಲಸಕ್ಕೆ ಬಾರದ ಭಾಷಾಂತರಮಾಡಿದ ಪುಸ್ತಕಗಳನ್ನು ಬರೆಯಬಹುದು ಆದರೆ ಮಹಾಕಾವ್ಯಗಳನ್ನು ಬರೆಯುವುದು ಅಷ್ಟು ಸುಲಭವೇ? ನಮ್ಮಲ್ಲಿ ಒಂದು ದಂತಕಥೆಯಿತ್ತು: ’ರಾಮಾಯಣ ದರ್ಶನಂ’ ಬರೆಯುವ ಸಮಯದಲ್ಲಿ ಕುವೆಂಪು ಸ್ನಾನಮಾಡಿಕೊಂಡು ಒದ್ದೆ ಬಟ್ಟೆಯಲ್ಲಿ ಒಂದು ಮಣೆಯಮೇಲೆ ಕುಳಿತು ಬರೆಯುತ್ತಿದ್ದರಂತೆ. ಬರೆಯುತ್ತಾ ಬರೆಯುತ್ತಾ ಬಟ್ಟೆ ಒಣಗಿದಮೇಲೆ ಕಾವ್ಯ ಅಲ್ಲಿಗೇ ನಿಲ್ಲುತ್ತಿತ್ತು ಮತ್ತೆ ಮಾರನೇ ದಿನ ಮುನ್ನಡೆಯುತ್ತಿತ್ತು--ಎಂಬುದಾಗಿ. ಎಷ್ಟು ಸುಳ್ಳೋ ಎಷ್ಟು ಖರೆಯೋ ಗೊತ್ತಿಲ್ಲ, ಆದರೆ ನಾವೆಲ್ಲಾ ಅಂದುಕೊಂಡಿದ್ದಕ್ಕಿಂತ ಹೆಚ್ಚಿನದಾದ ಯಾವುದೋ ಅಂತಃಸತ್ವ ಅವರಲ್ಲಿತ್ತು, ಆ ಧೀ ಶಕ್ತಿ ಆ ದಿನಗಳಲ್ಲಿ ನಿಂತು ಆ ಮಹಾಕಾವ್ಯವನ್ನು ಕನ್ನಡದಲ್ಲಿ ಅವರು ಬರೆದರು ಎಂಬುದಂತೂ ಸತ್ಯವೇ ಸರಿ. ನಾವೆಲ್ಲಾ ಬರೆಯಬೇಕು ಎಂದುಕೊಳ್ಳುತ್ತೇವೆ, ಅಂದುಕೊಂಡಿದ್ದನ್ನೆಲ್ಲಾ ಬರೆಯಲು ಪದಪುಂಜಗಳ ಕೊರತೆ ಕೆಲವರಿಗಾದರೆ, ಸಮಯದ ಮಿತಿ ಇನ್ನು ಕೆಲವರಿಗೆ, ಬರೆಯಬೆಕೆನ್ನುವಷ್ಟರಲ್ಲಿ ಮರೆತುಹೋಗುವ ಬವಣೆ ಇನ್ನೂ ಕೆಲವರಿಗೆ! ಆದರೆ ಯಾವುದನ್ನೂ ತಪ್ಪದೇ ನಿರರ್ಗಳವಾಗಿ ಕುಮಾರವ್ಯಾಸ ಭಾರತವನ್ನು ಬರೆದಂತೇ ಕುವೆಂಪು ರಾಮಾಯಣ ಬರೆದರು ಎಂಬುದು ವಿಶೇಷ; ಅದು ಕನ್ನಡಿಗರಿಗೆ ಹೆಮ್ಮೆ.

೨೯ ಡಿಸೆಂಬರ್ ೧೯೦೪ ರಂದು ಇಂದಿನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಹಿರೇಕೊಡಿಗೆ ಎಂಬ ಕುಗ್ರಾಮದಲ್ಲಿ ಕುಪ್ಪಳಿ ವೆಂಕಟಪ್ಪಗೌಡರ ಮಗನಾಗಿ ಜನಿಸಿದ ಈ ಕಿಂದರಿಜೋಗಿ ಕುಣಿಸದ ಹುಡುಗರಿಲ್ಲ!ಬಾಲ್ಯ ಕಳೆದಿದ್ದು ಮಲೆನಾಡ ಸಿರಿದೇವಿ ನೆಲೆನಿಂತ ಶಿವಮೊಗ್ಗ ಜೆಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ.

ಕುವೆಂಪು ಅವರ ಕುಪ್ಪಳಿ ಮನೆ

ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ದನಿಯು ದನ ಕಾಯುವನ ಕೊಳಲೊಡನೆ ಬರಲಿ

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ ......

ಎಂತಹ ಸಹಜ ಭಾವೋನ್ಮಾದ ನೋಡಿ! ಜಮೀನ್ದಾರರಾದ ತಂದೆ ಮಗನ ಉತ್ತಮ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಶಿಕ್ಷಕರನ್ನು ಕರೆಸಿಕೊಂಡು ಮನೆಯಲ್ಲೇ ಪ್ರಾಥಮಿಕ ಓದು-ಬರಹ ಕಲಿಯುವಂತೇ ಅನುಕೂಲ ಕಲ್ಪಿಸಿದರು; ಬಹುಶಃ ಸುಸಂಕೃತ ದಕ್ಷಿಣ ಕನ್ನಡದ ಸುಶಿಕ್ಷಿತ ಉಪಾಧ್ಯಾಯ ಪಾಠ ಹೇಳದಿದ್ದರೆ ನಮಗೆ ಕುವೆಂಪು ಪ್ರಸಿದ್ಧ ’ಕುವೆಂಪು’ವಾಗಿ ಸಿಗುತ್ತಿದ್ದರೋ ಇಲ್ಲವೋ. ಅಡಿಪಾಯಕ್ಕೆ ಬಳಸಿದ ವಸ್ತುಗಳು ವಜ್ರಾದಪಿ ಕಠಿಣವಾಗಿದ್ದರೆ ಕಟ್ಟಡ ಸಹ ಚೆನ್ನಾಗಿರುವುದಂತೆ, ಹಾಗೇನೇ ಇಲ್ಲೂ ಕುವೆಂಪು ಅವರ ಪ್ರಾಥಮಿಕ ಶಾಲೆ ಮನೆಯಲ್ಲೇ ಸುಲಲಿತವಾಗಿ ನಡೆಯಿತು. ನಂತರ ತೀರ್ಥಹಳ್ಳಿಯಲ್ಲಿದ್ದ ಆಂಗ್ಲೋ ವರ್ನೇಕ್ಯೂಲರ್ ಶಾಲೆಗೆ ಮಧ್ಯಮ ತರಗತಿಗಳ ಓದಿಗಾಗಿ ಸೇರಿದರು. ೧೨ ನೇ ಎಳೆಯ ವಯಸ್ಸಿನಲ್ಲಿ ಇದ್ದಾಗ ತಂದೆ ವೆಂಕಟಪ್ಪ ಗೌಡ ಅನಾರೋಗ್ಯದಿಂದ ಮಡಿದರು. ಪ್ರೌಢಶಾಲೆಗಾಗಿ ಮೈಸೂರಿನ ವೆಸ್ಲಿಯನ್ ಹೈ ಸ್ಕೊಲ್ ಸೇರಿದ ಕುವೆಂಪು ಪದವಿಗಾಗಿ ತೆರಳಿದ್ದು ಮಹಾರಾಜಾ ಕಾಲೇಜಿಗೆ. ೧೯೨೯ರಲ್ಲಿ ಕನ್ನಡ ಪ್ರಾಮುಖ್ಯವಾಗುಳ್ಳ ಪದವಿಯನ್ನು ಪಡೆದರು. ಕಾಲೇಜು ವ್ಯಾಸಂಗದ ವೇಳೆ ಟಿ.ಎಸ್.ವೆಂಕಣ್ಣಯ್ಯ ಮತ್ತು ಬಿ.ಎಂ.ಶ್ರೀಕಂಠಯ್ಯರಂತಹ ಘಟಾನುಘಟಿಗಳ ಕಲಿಸುವಿಕೆ ಮತ್ತು ಪ್ರಭಾವ ಕುವೆಂಪುವಿನಮೇಲಾಯಿತು ಎಂಬುದನ್ನು ಮರೆಯುವಂತಿಲ್ಲ. ೧೯೩೭ ರಲ್ಲಿ ಹೇಮಾವತಿ ಎಂಬ ಕನ್ಯೆಯನ್ನು ಮದುವೆಯಾದರು. ಎರಡು ಹೆಣ್ಣು-ಎರಡು ಗಂಡು ಹೀಗೇ ನಾಕು ಮಕ್ಕಳ ತಂದೆಯ ತುಂಬು ಸಂಸಾರ ನಡೆಸಿದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚಂದ್ರ, ಇಂದುಕಲಾ ಮತ್ತು ತಾರಿಣಿ ಇವು ಆ ಮಕ್ಕಳ ಹೆಸರುಗಳು. ತಾರಿಣಿಯನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಚಿದಾನಂದಗೌಡರಿಗೆ ಮದುವೆಮಾಡಲಾಗಿತ್ತು.

ಹೊಸದಾಗಿ ಕೊಂಡ ಕಾರು ಮನೆಯೆದುರು ಬಂದು ನಿಂತಾಗ " ಚಕ್ರಚರಣಕೆ ಸ್ವಾಗತ" ಎಂದಿದ್ದ ಭಾವಜೀವಿ ಮೈಸೂರಿನ ತಮ್ಮ ಮನೆಗೆ ’ಉದಯರವಿ’ ಎಂದು ಹೆಸರಿಸಿದ್ದರು. ನೂರಾರು ಹೊಸ ಶಬ್ದಗಳನ್ನು ಕನ್ನಡಕ್ಕೆ ಜೋಡಿಸಿದ್ದಲ್ಲದೇ ತನ್ನದೇ ಆದ ವಿಚಾರಲಹರಿಯಲ್ಲಿ ಕನ್ನಡ ಕಾವ್ಯ-ಮಿಮಾಂಸೆಯಲ್ಲಿ ವಿಹರಿಸುತ್ತಾ ಹಲವು ಹತ್ತು ಉಪಯುಕ್ತ ಪದಗಳನ್ನು ನಿಗದಿತವಾಗಿ, ಸರ್ವಸಮ್ಮತ ಬಳಕೆಗೆ ಅರ್ಹವಾಗಿ, ದಾರ್ಶನಿಕ ಆದರ್ಶಗಳಿಂದ ಕೂಡಿದ್ದಾಗಿ ಕಂಡು ಕನ್ನಡದಲ್ಲಿ ಅವುಗಳ ಬಳಕೆಗೆ ಬೇಕಾದ ಪರಿಕಲ್ಪನೆ ತಂದರು. ಈ ಕಾರಣದಿಂದಲೇ ಅನೇಕ ಜನ ಹೊಸದಾಗಿ ಜನಿಸಿದ ತಮ್ಮ ಮಕ್ಕಳಿಗೆ ಹೆಸರು ಸೂಚಿಸುವಂತೇ ಕುವೆಂಪು ಅವರನ್ನು ಕಾಣಲು ಹೋಗುತ್ತಿದ್ದರಂತೆ !

'ಉದಯರವಿ' -ಮೈಸೂರು ಮನೆ

೧೯೨೯ರಲ್ಲಿ ಪದವಿ ಮುಗಿದ ತಕ್ಷಣಕ್ಕೇ ಅಧ್ಯಾಪಕ ವೃತ್ತಿ ಅವರಿಗೆ ಅದೇ ಕಾಲೇಜಿನಲ್ಲಿ ದಕ್ಕಿತು! ನಂತರ ೧೯೩೬ರಲ್ಲಿ ಸಹಾಯಕ ಅಧ್ಯಾಪಕರಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಮತ್ತೆ ೧೯೪೬ರಲ್ಲಿ ಮರಳಿ ಮಹಾರಾಜಾ ಕಾಲೇಜಿಗೆ ಪ್ರಾಧ್ಯಾಪಕರಾಗಿ ಸೇರಿದರು. ೧೯೫೫ ರಲ್ಲಿ ಮಹಾರಾಜಾ ಕಾಲೇಜಿನ ಪ್ರಾಂಶುಪಾಲರಾದರು. ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಅಧಿಕಾರ್ ಸ್ವೀಕರಿಸಿ ೧೯೬೦ರ ಅಂದರೆ ನಿವೃತ್ತಿ ವಯಸ್ಸಿನ ವರೆಗೂ ಅದನ್ನು ನಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಲಿತವರಲ್ಲಿ ಈ ಸ್ಥಾನಕ್ಕೆ ಏರಿದ ಮೊದಲಿಗರಾದರು ಕುವೆಂಪು. ಯಾವುದೋ ರಸನಿಮಿಷದಲ್ಲಿ ಬರೆಯಲು ಆರಂಭಿಸಿದ್ದು ’ಬಿಗಿನರ್ ಮ್ಯೂಸ್’ ಎಂಬ ಆಂಗ್ಲ ಕವನ ಸಂಕಲನ! ಅಚಾನಕ್ಕಾಗಿ ಅವರ ದೃಷ್ಟಿ ಕನ್ನಡದತ್ತ ಹೊರಳಿತು; ನಂತರ ಅವರಲ್ಲಿ ಕನ್ನಡವೇ ಎಲ್ಲದಕ್ಕೂ ಆದ್ಯತೆ ಪಡೆಯಿತು. ಕನ್ನಡಕ್ಕೆ ಅಷ್ಟಾಗಿ ಆದ್ಯತೆ ಇರದ ಕಾಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ’ಕನ್ನಡ ಅಧ್ಯಯನ ಸಂಸ್ಥೆ’ಯನ್ನು ಕಟ್ಟಿದರು. ಕನ್ನಡ ಮಾಧ್ಯಮದಲ್ಲಿ ಓದುವವರಿಗೆ ಹಲವು ಅನುಕೂಲ ಕಲ್ಪಿಸುವಲ್ಲಿ ಕುವೆಂಪು ಬಹಳ ಪ್ರಯತ್ನ ನಡೆಸಿದರು. ಜಿ. ಹನುಮಂತರಾವ್ ಹಿಂದೆ ನಡೆಸಿದ್ದ :ಜನಸಾಮಾನ್ಯನಿಗೆ ಸಿಗಬೇಕಾದ ಜ್ಞಾನಕ್ಕಾಗಿ ಆ ಮಟ್ಟದ ಪುಸ್ತಕಗಳನ್ನು ಹೊರತರುವ ಕಾಯಕದಲ್ಲಿ ಕುವೆಂಪು ಯಶಸ್ವಿಯಾದರು. ತನ್ನ ನಡೆ-ನುಡಿ ಜೀವನಗತಿಗಳಲ್ಲಿ ಜಾತೀಯತೆಯನ್ನು ಮೀರಿನಿಂತ ಕುವೆಂಪು ೧೯೪೬ರಲ್ಲಿ ’ಶೂದ್ರ ತಪಸ್ವಿ’ ಎಂಬ ಕೃತಿಯನ್ನು ಬರೆದು ಶೂದ್ರರು ಜ್ಞಾನವನ್ನು ಪಡೆಯಲು ಅರ್ಹರಲ್ಲ ಎಂಬುದನ್ನು ಅಲ್ಲಗಳೆದರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯ ವಾಕ್ಯವನ್ನು ಗುನುಗುತ್ತಿದ್ದ ಅವರು ಬರೆದ ರಾಮಾಯಣ ದರ್ಶನದಲ್ಲಿ ರಾಮ ಸೀತೆಯೊಂದಿಗೆ ತಾನೂ ಬೆಂಕಿಗೆ ಜಿಗಿದು ತನ್ನ ಸತ್ವಪರೀಕ್ಷೆಮಾಡಿಕೊಳ್ಳುತ್ತಾನೆ! ಬೆಂಗಳೂರು ವಿಶ್ವವಿದ್ಯಾನಿಲಯದ ೧೯೭೪ ರ ಪದವೀಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ಕುವೆಂಪು ಅವರ ಭಾಷಣ ’ವಿಚಾರಕ್ರಾಂತಿಗೆ ಆಹ್ಬಾನ’ ಇಂದಿಗೂ ಪ್ರಸ್ತುತವಾಗಿದೆ. ೧೯೮೭ರಲ್ಲಿ ಕುವೆಂಪು ಅವರ ಗೌರವಾರ್ಥವಾಗಿ ಶಿವಮೊಗ್ಗೆಯಲ್ಲಿ ಜ್ಞಾನ ಸಹ್ಯಾದ್ರಿಯ ಮಡಿಲಲ್ಲಿ ಕುವೆಂಪು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು.

ಕೃತಿಗಳು :
___________

ಮಹಾಕಾವ್ಯ:

ಶ್ರೀ ರಾಮಾಯಣ ದರ್ಶನಂ ಭಾಗ-೧ [೧೯೪೯] ಮತ್ತು ಭಾಗ-೨ [೧೯೫೭]


ಕವನ ಸಂಕಲನಗಳು:

ಕೊಳಲು (೧೯೩೦)
ಪಾಂಚಜನ್ಯ (೧೯೩೬)
ನವಿಲು (೧೯೩೭)
ಕಿಂದರಿಜೊಗಿ ಮತ್ತು ಇತರ ಕವನಗಳು (೧೯೩೮)
ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ (೧೯೪೪)
ಶೂದ್ರ ತಪಸ್ವಿ (೧೯೪೬)
ಕಾವ್ಯ ವಿಹಾರ (೧೯೪೬)
ಕಿಂಕಿಣಿ (೧೯೪೬)
ಅಗ್ನಿಹಂಸ (೧೯೪೬)
ಪ್ರೇಮ ಕಾಶ್ಮೀರ (೧೯೪೬)
ಚಂದ್ರಮಂಚಕೆ ಬಾ ಚಕೋರಿ (೧೯೫೪)
ಇಕ್ಷುಗಂಗೋತ್ರಿ (೧೯೫೭)
ಕಬ್ಬಿಗನ ಕೈಬುತ್ತಿ
ಪಕ್ಷಿಕಾಶಿ
ಜೇನಾಗುವಾ
ಕುಟಿಚಕ
ಕಾದಿರದಕೆ
ಕಥನ ಕವನಗಳು

ರೂಪಕಗಳು :

ಬಿರುಗಾಳಿ (೧೯೩೦)
ಮಹರಾತ್ರಿ (೧೯೩೧)
ಸ್ಮಶಾನ ಕುರುಕ್ಷೇತ್ರಮ್ (೧೯೩೧)
ಜಲಗಾರ (೧೯೩೧)
ರಕ್ತಾಕ್ಷಿ(೧೯೩೨)
ಶೂದ್ರ ತಪಸ್ವಿ (೧೯೪೪)
ಬೆರಳ್ಗೆ ಕೊರಳ್ (೧೯೪೭)
ಯಮನ ಸೋಲು
ಚಂದ್ರಹಾಸ
ಬಲಿದಾನ

ಆತ್ಮಚರಿತ್ರೆ :

ನೆನಪಿನ ದೋಣಿಯಲಿ (೧೯೮೦)


ಕಥಾಸಂಕಲನಗಳು :

ಮಲೆನಾಡಿನ ಚಿತ್ರಗಳು (೧೯೩೩)
ಸನ್ಯಾಸಿ ಮತ್ತು ಇತರೆ ಕತೆಗಳು (೧೯೩೭)
ನನ್ನ ದೇವರು ಮತ್ತು ಇತರ ಕತೆಗಳು (೧೯೪೦)

ಕುವೆಂಪು ಸ್ಮಾರಕ

ಸಾಹಿತ್ಯ ವಿಮರ್ಶೆ :

ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (೧೯೪೪)
ಕಾವ್ಯವಿಹಾರ (೧೯೪೬)
ತಪೋನಂದನ (೧೯೫೧)
ವಿಭೂತಿ ಪೂಜೆ (೧೯೫೩)
ದ್ರೌಪದಿಯ ಶ್ರೀಮುಡಿ (೧೯೬೦)
ವಿಚಾರಕ್ರಾಂತಿಗೆ ಆಹ್ವಾನ (೧೯೭೬)
ಸಾಹಿತ್ಯಪ್ರಾಚರ

ಜೀವನಚರಿತ್ರೆ :

ಸ್ವಾಮಿ ವಿವೇಕಾನಂದ(೧೯೨೬)
ಶ್ರೀ ರಾಮಕೃಷ್ಣ ಪರಮಹಂಸ(೧೯೩೪)
ಗುರುವಿನೊಡನೆ ದೇವರೆಡೆಗೆ

ಮಕ್ಕಳ ಕಥೆಗಳು :

ಬೊಮ್ಮನಹಳ್ಳಿಯ ಕಿಂದರಿಜೋಗಿ(೧೯೩೬)
ಮರಿ ವಿಜ್ಞಾನಿ(೧೯೪೭)
ಮೇಘಾಪುರ(೧೯೪೭)
ನನ್ನ ಮನೆ(೧೯೪೭)
ನನ್ನ ಗೋಪಾಲ
ಅಮಲನ ಕಥೆ

ಸಿನಿಮಾಕ್ಕೆ ಅಳವಡಿಸಿದ ಕಾದಂಬರಿ :

ಕಾನೂರು ಸುಬ್ಬಮ್ಮ ಹೆಗ್ಗಡತಿ
ಮಲೆಗಳಲ್ಲಿ ಮದುಮಗಳು

ಪ್ರಶಸ್ತಿಗಳು :

ಜ್ಞಾನಪೀಠ ಪ್ರಶಸ್ತಿ - ೧೯೬೭ [೪]
ಪದ್ಮ ಭೂಷಣ - ೧೯೫೮[೫]
ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೫೫[೬]
ರಾಷ್ಟ್ರಕವಿ - ೧೯೬೪[೬]
ಪಂಪ ಪ್ರಶಸ್ತಿ - ೧೯೮೭[೬]
ಪದ್ಮ ವಿಭೂಉಷಣ - ೧೯೮೮[೫]
ಕರ್ನಾಟಕ ರತ್ನ- ೧೯೯೨[೬]

ಕುವೆಂಪು ಅವರ ಸಹಿ

ಹೀಗೇ ಅನೇಕ ಕೃತಿಗಳು ಒಂದೊಂದೂ ಜನಮನಗೆಲ್ಲುವಲ್ಲಿ ದಿನೇ ದಿನೇ ದಾಪುಗಾಲು ಹಾಕಿದವು. ಕುವೆಂಪು ನಮ್ಮೊಡನಿಲ್ಲ ೧೧ ನವೆಂಬರ್ ೧೯೯೪ ರಂದು ಅವರು ಇಹಲೋಕ ತೊರೆದರು ಎಂದರೂ ನಂಬಲು ಸಾಧ್ಯವಾಗದಷ್ಟು ಆಪ್ತವಾಗಿ ಓದುಗನ ಹೃದಯಮಂಚವನ್ನೇರಿ ವಿಹರಿಸತೊಡಗಿದ ಬರಹಗಳನ್ನು ಬಾಗಿಲುಹಾಕಿ ಹೊರದ್ದಬ್ಬುವ ದಾರ್ಷ್ಟ್ಯವಾಗಲೀ ಅಗತ್ಯವಾಗಲೀ ಯಾರಲ್ಲೂ ಇರಲಿಲ್ಲ; ಯಾಕೆಂದರೆ ಅವು ನಮ್ಮದೇ ಜೀವನದ ಭಾಗಗಳನ್ನು ಘಳಿಗೆಗಳನ್ನು ಹೋಲುತ್ತಿದ್ದವು! ಮಹಾತಪಸ್ವಿಯೊಬ್ಬ ತನ್ನ ದೇಹತ್ಯಾಗಮಾಡಿದ ಮಹಾಸಮಾಧಿಯ ಸ್ಥಳದಲ್ಲಿ ಯಾವುದೋ ಅವ್ಯಕ್ತ ಪ್ರಭೆ ಅವಿತು ಎಲ್ಲರನ್ನೂ ಪ್ರಲೋಭಿಸುವಂತೇ ಕುಪ್ಪಳಿಯ ಕವಿಯ ಮೂಲ ಮನೆ, ಅಲ್ಲಿನ ಜೀವನ ವಿಧಾನ, ಹಿಂದೊಮ್ಮೆ ಅಲ್ಲಿ ವಾಸವಿದ್ದ ಜನ ಬಳಸಿದ ವಸ್ತುಗಳು, ಕುವೆಂಪು ಬಳಸಿದ ವಸ್ತುಗಳು, ಬರೆಯಲು ಕೂರುತ್ತಿದ್ದ ಜಾಗ, ಆ ಕಾಲದ ಬಾಣಂತೀ ಕೋಣೆ, ಮೀನು ಹುರಿಯುವ ಕಾವಲಿ ಒಂದೇ ಎರಡೇ ಹಲವು ನೆನಪಿನ ಕುರುಹುಗಳು ಅಲ್ಲಿವೆ; ಕರೆಯುತ್ತವೆ. ಮಳೆಗಾಲದಲ್ಲಿ ನೆನೆದು ಬಂದು ಕಂಬಳಿ ಒಣಗಿಸಿ ಜೋರಾಗಿ ಉರಿವ ಬಚ್ಚಲ ಒಲೆಯಲ್ಲಿ ಚಳಿಗೆ ಮೈಕಾಸಿ, ಬಿಸಿ ಬಿಸಿ ನೀರು ಸ್ನಾನಮಾಡಿ, ನಾಮದ ಪೆಟ್ಟಿಗೆ ತೆರೆದು ನಾಮ ಹಚ್ಚಿಕೊಳ್ಳುತ್ತಿದ್ದ ’ಕಥೆಗಾರ ಮಂಜಣ್ಣ’ಮಾತ್ರ ಅಲ್ಲಿಲ್ಲ, ಆತನೂ ಕುವೆಂಪು ಅವರಿಗಿಂತ ಮೊದಲೇ ಕಾಲವಾಗಿರಬೇಕು; ಆದರೂ ಅತ ಕುವೆಂಪು ಅವರೊಟ್ಟಿಗೇ ಬದುಕಿದ್ದಾನೆ-ಅವರ ಕಥೆಗಳಲ್ಲಿ, ಕವನ-ಸಾಹಿತ್ಯಗಳಲ್ಲಿ, ಕುವೆಂಪುವೆಂಬ ಆ ಮಹಾನ್ ಚೇತನಕ್ಕೆ ನಿಮ್ಮೆಲ್ಲರೊಟ್ಟಿಗೆ ನನ್ನದೊಂದು ಸಣ್ಣ ನಮಸ್ಕಾರ.

Monday, December 26, 2011

ಸೀತಾರಾಮ್ ಜೈಜೈರಾಮ್ ಭಜರೇ ಮನ ...!

ಚಿತ್ರ ಕೃಪೆ : ಮಂಜುನಾಥ ಹೆಗಡೆ, ಸಾಯೀಮನೆ.

ಸೀತಾರಾಮ್ ಜೈಜೈರಾಮ್ ಭಜರೇ ಮನ ...!

ದಿನ ಪೂರ್ತಿ ಭಜನೆಗಳ ಮಹಾಪೂರವೇ ಹರಿದರೆ ಕುಳಿತ ದೇವರಿಗೆ ಎಷ್ಟು ಸಂತಸವಾಗಬಹುದು! ಇಂಥಾ ಭಜನೆಗಳ ಮಹಾಪೂರವನ್ನೇ ಭಜನೆ ಪ್ರಹರ ಎಂದು ನಮ್ಮಲ್ಲಿ ಕರೆಯುತ್ತಾರೆ. ಅಪರೂಪಕ್ಕೊಮ್ಮೆ ಈ ಸುಸಂಧಿ ನನಗೊದಗಿತ್ತು! ನನ್ನ ಬಾಲ್ಯದ ದಿನಗಳು, ಚಳಿಯಲ್ಲೂ ಗಡಗಡ ಗುಡುತ್ತಾ ಹರಕಲು ಚಾಪೆಯ ಮೇಲೆ ಕುಳಿತು ಕೈಲಿ ತಾಳ ಹಿಡಿದು ಓರಗೆಯ ಒಂದಿಬ್ಬರು ಬಾಲಕರು ಮತ್ತು ಮಿಕ್ಕುಳಿದ ಹಿರಿಯರೊಡನೆ ನಾನು ಊರ ದೇವಸ್ಥಾನಗಳ ಭಜನೆಪ್ರಹರಗಳಲ್ಲಿ ತಲ್ಲೀನನಾಗುತ್ತಿದ್ದುದು ನೆನಪಿಗೆ ಬಂತು; ಜೊತೆಗೆ ಕೆಲವು ಸ್ನೇಹಿತರು ಕೂಡಾ ಸಿಕ್ಕಿದ್ದು ಸಂತೋಷವನ್ನು ದ್ವಿಗುಣಗೊಳಿಸಿತ್ತು. ಅನೇಕ ಹಿರಿಯ ಜೀವಗಳು ಇನ್ನೂ ಭಜನೆಯಲ್ಲಿ ಆಸ್ಥೆ ವಹಿಸಿದ್ದು ಬಹಳ ಹಿಡಿಸಿತು. ಹಳೇಕಾಲದ ಭಜನೆಗಳು, ಆದಿತಾಳ-ಜಂಪೆತಾಳ-ತ್ರಿತಾಳ-ಏಕತಾಳ ಇತ್ಯಾದಿ ಹಲವು ತಾಳಗಳು, ಸಾಥ್ ಕೊಡುವ ಚಿಕ್ಕ ಭಜನೆ ಡೋಲು, ಹಾರ್ಮೋನಿಯಂ, ತಬಲಾ ಇತ್ಯಾದಿ ಕೆಲವು ಮಿತ ವಾದ್ಯ ಪರಿಕರಗಳಿದ್ದವು. ಪರವೂರ ಕೆಲವು ಭಜನಾಸಕ್ತರು ತಮ್ಮ ಕಂಠಸಿರಿಯನ್ನು ತೋರಿಸಿ ಗಮನ ಸೆಳೆಯಲು ಹತ್ತಾರು ಕಿಲೋಮೀಟರು ಕ್ರಮಿಸಿ ಬಂದಿದ್ದರು.

ಊರಿಗೆ ಹೋದದ್ದು ನಮ್ಮ ಕೆಲವು ವೈಯ್ಯಕ್ತಿಕ ಕಾರ್ಯಕ್ರಮಗಳಿಗಾದರೆ ಅಲ್ಲಿಗೆ ಹೋದಾಗ ತಿಳಿದದ್ದು--ಕಾರ್ತೀಕ ಅಮಾವಾಸ್ಯೆಗೆ ಅಲ್ಲಿನ ಜನರಿಗೆ ಸೂತಕವಿದ್ದುದರಿಂದ ಈ ಸರ್ತಿಯ ಭಜನೆ ಪ್ರಹರನ್ನು ಈ ಮಾರ್ಗಶೀರ್ಷ ಅಮಾವಾಸ್ಯೆಗೆ ನಡೆಸುತ್ತಿದ್ದಾರೆಂದು. ’ಸಿಕ್ತಲೇ ಮಗನೇ ಚಾನ್ಸು’ ಎಂದುಕೊಂಡವನು ನೇರವಾಗಿ ದೌಡಾಯಿಸಿದ್ದೇ ದೇವಸ್ಥಾನಕ್ಕೆ! ಬೆಳಿಗ್ಗೆ ೧೦ಕ್ಕೆ ಆರಂಭವಾದ ಭಜನೆ ಮಾರನೇದಿನ ಬೆಳಿಗ್ಗೆ ೧೦ಕ್ಕೆ ಓಕುಳಿಯಾಗುತ್ತದೆ, ಅಲ್ಲಿಗೆ ತಿಂಗಳದಿನ ಪ್ರತೀ ಸಂಜೆ ನಡೆಸುವ ಭಜನೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ. ಮುಕ್ತಾಯದ ಮಂಗಳದಿನದಂದು ದೇವರಿಗೆ ವಿಶೇಷ ಅಭಿಷೇಕ, ಪೊಜೆ, ಉಪಚಾರ ಮತ್ತು ಮಹಾಮಂಗಳಾರತಿ, ಸೇರಿದ ಭಕ್ತರಿಗೆ ಊಟ. ಇವು ಸದಾ ನಡೆದೇ ಇವೆ. ಸೇವಾ ಸಮಿತಿಯ ಮಂದಿ ವರ್ಗಿಣಿ ಹಾಕಿಕೊಂಡು ನಡೆಸುವ ಕಾರ್ಯಕ್ರಮಗಳಲ್ಲಿ ಹೆಚ್ಚುಳಿದ ಸಾಮಾನುಗಳನ್ನು ಆ ರಾತ್ರಿ ಹರಾಜಿನ ಮೂಲಕ ವಿಲೇವಾರಿ ಮಾಡಿ ಬಂದ ಹಣವನ್ನು ದೇವರ ಬೊಕ್ಕಸಕ್ಕೆ ಸೇರಿಸಿಕೊಳ್ಳುತ್ತಾರೆ.ದೇವರಿಗೇ ಬೊಕ್ಕಸವೇ ಎಂದು ಕೇಳಬೇಡಿ, ಸ್ಥಾನಿಕವಾಗಿ ದೇವರು ತನ್ನ ಆಸ್ಥಾನದಲ್ಲಿ ನಡೆಸುವ ಎಲ್ಲಾ ಚಡಂಗಗಳಿಗೂ ಖರ್ಚಿಗೆ ಬೇಡವೇ ಮತ್ತೆ?

ಸದಾಶಿವ, ಗಜಾನನ ಇತ್ಯಾದಿ ಕೆಲವು ಸ್ನೇಹಿತರೊಂದಿಗೆ ಮಾತುಕತೆ ರಸವತ್ತಾಗಿತ್ತು. ಅದೇ ನಾವೆಲ್ಲಾ ಒಂದೆಲ್ಲಾ ಒಂದು ಕಾಲದಲ್ಲಿ ಈ ದೇವಸ್ಥಾನಗಳಲ್ಲಿ ಭಜನೆ ಪ್ರಹರದ ರಾತ್ರಿ ಚಳಿಕಾಯಿಸಲು ದೇವಸ್ಥಾನದ ಮಗ್ಗುಲ ತುಸುದೂರದ ಖಾಲೀ ಜಾಗದಲ್ಲಿ ಹೊಡಚ್ಲು[ಕ್ಯಾಂಫೈರ್]ಹಾಕಿಕೊಳ್ಳುವುದಿತ್ತು. ಅಕ್ಕಪಕ್ಕ ಗಿಡಮರಗಳಿಂದ ಬಿದ್ದಿರುವ ಕಸ-ಕಡ್ಡಿಗಳನ್ನೂ ಯಾರೋ ಎಸೆದ ಒಂದಷ್ಟು ರದ್ದೀ ಕಾಗದಗಳನ್ನೂ ಯಾವುದೋ ಕೆಲಸಕ್ಕೆ ಅಂತ ತಂದು ಬಳಕೆಗೆ ಜಾಸ್ತಿ ಎನಿಸಿ ಬಿಸಾಕಿದ ಹಗರದಬ್ಬೆಯ ತುಂಡುಗಳನ್ನೂ ಒತ್ತಟ್ಟಿಗೆ ಒಟ್ಟಿ ಕಡ್ಡಿಗೀರಿ ಉರಿಯುವ ಬೆಂಕಿಯ ಸುತ್ತ ಕುಳಿತು ಚಳಿಹೋಯ್ತೆಂದುಕೊಳ್ಳುವುದು ನಮಗೆ ಬಲು ಖುಷಿಕೊಡುತ್ತಿತ್ತು. [ಇಂದು ಅಂತಹ ಮಕ್ಕಳೂ ಇಲ್ಲ, ಮಕ್ಕಳಲ್ಲಿ ಆ ಉತ್ಸಾಹವೂ ಇಲ್ಲ!]ಅದೇ ಮಕ್ಕಳು ನಾವಿಂದು ಒಬ್ಬ ಬಿ.ಇ.ಓ ಆದರೆ ಇನ್ನೊಬ್ಬ ಡಾಕ್ಟರೇಟ್ ಪಡೆದು ಪ್ರಾಂಶುಪಾಲನಾಗಿದ್ದಾನೆ, ನಾನು ಹೀಗಿದ್ದೇನೆ ನಿಮ್ಮೊಡನೆ!--ಹೇಗಿದೆ ಜೀವನ ವ್ಯಾಪಾರ ? ಮಜವೆನಿಸುವುದಿಲ್ಲವೇ?

ಒಂದೆಡೆ ಸೇರಿದ್ದ ನಮ್ಮಲ್ಲಿ ಹಲವು ಮಾತುಕತೆಗಳಾದವು. ಬಾಲ್ಯದ ಲಹರಿಯಿಂದ ಹಿಡಿದು ಇಂದಿನ ಗಡಸು ಜೀವನದ ಹಲವು ಮಗ್ಗಲುಗಳು ಮಾತಿನಲ್ಲಿ ಸುಳಿದವು. ಒಮ್ಮೆಯಾದರೂ ಈ ಸರ್ತಿ ಊರಲ್ಲೊಂದು ಸಾಂಸ್ಕೃತಿಕ ಹಬ್ಬ ಮಾಡಬೇಕು. ಅದಕ್ಕೆ ಜಾತಿ-ಧರ್ಮಗಳ ಬಂಧನವಿಲ್ಲ. ನಮ್ಮ ಊರ ಮಹನೀಯರಲ್ಲಿ ಬಣ್ಣದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಗೋಪಾಲ್ ಮಾಸ್ತರರಿದ್ದಾರೆ, ಗದಾಯುದ್ಧದಲ್ಲಿ ಭೀಮನಾಗಿ ಮಿಂಚಿದ ಡಿಯೇಗ್ ಗೊನ್ಸಾಲ್ವಿಸ್ ಇದ್ದಾರೆ, ನಾಟಕಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸುತ್ತಿದ್ದ ಮಾಜೀ ಯುವಕರ ಸಂಘವೇ ಇದೆ! ಉತ್ತಮ ಸಂಗೀತಗಾರರಿದ್ದಾರೆ, ಉತ್ತಮ ವಕೀಲರಿದ್ದಾರೆ,ವಾಗ್ಮಿಗಳಿದ್ದಾರೆ, ವಿದ್ವಾಂಸರಿದ್ದಾರೆ, ನುರಿತ ವೈದ್ಯರಿದ್ದಾರೆ, ದಂತತಜ್ಞರುಗಳಿದ್ದಾರೆ, ಆಯ್.ಎ.ಎಸ್ ಅಧಿಕಾರಿಗಳಿದ್ದಾರೆ, ಯಕ್ಷಗಾನದ ಪ್ರಮುಖ ಪಾತ್ರಧಾರಿಯಾಗಿ ಮೆರೆದವರಿದ್ದಾರೆ, ಭಾಗವತರಿದ್ದಾರೆ, ಚಿತ್ರಕಲೆಯಲ್ಲಿ ಛಾಪು ಒತ್ತಿದವರಿದ್ದಾರೆ, ಜನಪದ ಸಂಗೀತವನ್ನು ತಮ್ಮದೇ ಸುಶ್ರಾವ್ಯ ಕಂಠದಲ್ಲಿ ಹಾಡುವ ಮಂದಿ ಇದ್ದಾರೆ, ರೈತರಿದ್ದಾರೆ, ಶ್ರಮಿಕರಿದ್ದಾರೆ, ಪುರೋಹಿತರಾಗಿ ದೂರದ ಊರುಗಳಿಗೆ ಸಾಗಿಹೋದ ಜನ ಇದ್ದಾರೆ---ಎಂದಮೇಲೆ ನಮ್ಮೂರಲ್ಲಿ ಯಾವರಂಗದಲ್ಲೂ ಕಮ್ಮಿ ಎನಿಸುವ ಕೊರತೆ ತೋರಿಬರುವುದಿಲ್ಲ. ಆದರೆ ವೃತ್ತಿಯನ್ನಾಧರಿಸಿ ಹಲವಾರು ಮಂದಿ ಊರಿನಿಂದ ಬಹುದೂರ ನೆಲೆಸಿದ್ದಾರೆ. ಅವರುಗಳನ್ನೆಲ್ಲಾ ಕರೆದು ಕಲೆಹಾಕಿ ಕೊನೇಪಕ್ಷ ಏಕದಿನ ಕಾರ್ಯಕ್ರಮ ನಡೆಸಬಹುದೇ ಎಂಬಕುರಿತು ನಾವು ನಾವೇ ಮಾತಾಡಿಕೊಂಡೆವು. ಗೆಳೆಯರ ಬಳಗದಲ್ಲಿ ಅನೇಕ ಜನ ಸಾಹಿತ್ಯಾಸಕ್ತರೂ ಬರಹಗಾರರೂ ಇರುವುದರಿಂದ ಈ ಕಾರ್ಯಕ್ರಮಕ್ಕೂ ಮುಂಚೆ ಬರಹಗಳಲ್ಲಿ ಕೆಲವನ್ನಾದರೂ ಪುಸ್ತಕರೂಪದಲ್ಲಿ ತರುವಂತೇ ಕೇಳಿದ್ದಾರೆ. ಕ್ಷಣವೊಮ್ಮೆ ಮೈ ಜುಂ ಎಂತು, ನಮ್ಮೂರ ಬಗ್ಗೆ ಬಹಳ ಹೆಮ್ಮೆ ಎನಿಸಿತು.

ತುತ್ತಿನ ಚೀಲ ತುಂಬಿಸುವ ಭರದಲ್ಲಿ ಸಾಗುವ ದಾರಿ ಸೇರುವ ಗಮ್ಯ ಮೊದಲು ಅರಿವಿಗೆ ಬಾರದಲ್ಲ ? ಕಾಲೇಜು ವಿದ್ಯೆಯಲ್ಲಿ ಎರಡುವರ್ಷ ಪೂರೈಸಿದ ಮೇಲೆ ಯಾರ್ಯಾರೋ ಎಲ್ಲೆಲ್ಲಿಗೋ ಹೋದೆವು; ಯಾರು ಎಲ್ಲಿ ಎತ್ತ ಎಂಬುದರ ಬಗ್ಗೆ ಅಷ್ಟಾಗಿ ಯಾರೂ ತಲೆಕೆಡಿಸಿಕೊಂಡವರಲ್ಲ, ಎಲ್ಲರೂ ಅವರವರ ಕೆಲಸಗಳಲ್ಲಿ ಬ್ಯೂಸಿ ಬ್ಯೂಸಿ. ಆದರೂ ಬಾಲ್ಯಕಾಲದ ಚಡ್ಡೀ ದೋಸ್ತಿಯ ಆ ಅನ್ಯಾದೃಶ ಅನುಭವ ಮತ್ತೆ ಮತ್ತೆ ಸ್ನೇಹಿತರು ಸಿಕ್ಕಾಗ ಮನಃಪಟಲದಲ್ಲಿ ಸುಳಿದಾಡುತ್ತದೆ. ಸುಬ್ರಹ್ಮಣ್ಯನೆಂಬ ಗೆಳೆಯನಿಗೂ ನನಗೂ ಯಾವುದೋ ಮಾತಿನ ಜಟಾಪಟಿ ನಡೆದಿದ್ದು, ನನ್ನ ಉಪನಯನಕ್ಕೆ ಆತನಿಗೆ ಬರದಂತೇ ನಾನು ತಾಕೀತು ಮಾಡಿದ್ದು, ಬರದಂತೇ ಮುಳ್ಳಬೇಲೀ ಹಾಕುತ್ತೇನೆಂದು ಹೆದರಿಸಿದ್ದು, ಇನ್ನೂ ಹಸಿಹಸಿ ಎಂಟನೇ ವಯಸ್ಸಿಗೇ ನನಗೆ ಉಪನಯನವಾಗಿದ್ದು ಎಲ್ಲವನ್ನೂ ನೆನೆದು ನನ್ನಷ್ಟಕ್ಕೇ ಒಂಥರಾ ಆನಂದಪಡುತ್ತೇನೆ. ಸುಬ್ರಹ್ಮಣ್ಯ ಸಿಗದೇ ದಶಕಗಳೇ ಸಂದವು. ಆತ ಹೇಗಿದ್ದಾನೋ ಈ ಸರ್ತಿಯೂ ಸಂದರ್ಶಿಸಲಾಗಲಿಲ್ಲ. ಬಡತನದಲ್ಲಿದ್ದ ಅವರ ಮನೆಯ ಹೊರಜಗುಲಿಗೆ ಶಿರವಾಳೆ [ಕಿಟಕಿ ಜಾಲಂದ್ರ]ಇರಲಿಲ್ಲ. ಒಂದೇ ಚಡ್ಡಿ-ಅಂಗಿಯಲ್ಲಿ ಇಡೀವಾರ ಶಾಲೆಯನ್ನು ಮುಗಿಸಬೇಕಾಗಿತ್ತು. ಚಪ್ಪಲಿಯಿಲ್ಲದ ಬರಿಗಾಲಲ್ಲಿ ಆತ ನಡೆದುಬರುತ್ತಿದ್ದ. ಸಣ್ಣಗೆ ಕಿಲಾಡಿಯಾಗಿದ್ದ ಆತ ಶಾಲೆಗೆ ಮಾತ್ರ ಸರಿಯಾಗಿ ಬರುತ್ತಿದ್ದ. ಬಡತನದ ಆ ಮುಖವನ್ನೊಮ್ಮೆ ನೆನೆದು ಕಣ್ಣಾಲಿ ತುಂಬಿಕೊಳ್ಳುತ್ತದೆ.

ವಿಶ್ವನಾಥ ನಮಗಿಂತ ಮೂರ್ನಾಕು ವರ್ಷ ಹಿರಿಯ. ಆತನ ತಂದೆ ೭೫-೭೬ ವರ್ಷದ ರಾಮಣ್ಣ ಮೊನ್ನೆ ಕೂಡಾ ಭಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಳೆಯ ರಾಗಗಳನ್ನು ಹಾಡಿ ಎಲ್ಲರ ಮನಗಳಲ್ಲೂ ಭಾವತರಂಗಗಳು ಮಾರ್ದನಿಸುವಂತೇ ಮಾಡಿದರು. ಕಳೆದವರ್ಷ ಅಕಾಲ ಜ್ವರದಿಂದ ಬಳಲಿ ವಿಶ್ವನಾಥ ತೀರಿಕೊಂಡಿದ್ದರ ಬಗ್ಗೆ ನಾನು ಬರೆದಿದ್ದೆ. ಜಾಸ್ತಿ ಓದಿರದಿದ್ದರೂ ಎಲ್ಲರಿಗೂ ಸ್ನೇಹಿತನಾಗಿದ್ದ ವಿಶ್ವನಾಥನ ಬಗ್ಗೆ ಹೊಸದಾಗಿ ಮತ್ತೆ ಬರೆಯುವುದಾಗುವುದಿಲ್ಲ. ಈ ಸಲದ ಭಜನೆ ಪ್ರಹರದಲ್ಲಿ ಪಾಪ ವಿಶ್ವನಾಥ ಇರಲಿಲ್ಲ. ಜೀವಿಯ ಜೀವನದಲ್ಲಿ ಯಾವುದು ಘಟಿಸಬೇಕೋ ಅದು ನಡೆಯಲೇ ಬೇಕಾದುದು ವಿಧಿಯನಿಯಮ. ಊರಕಡೆ ಎರಡು ಪ್ರದೇಶಕ್ಕೆ ನಾನು ಭೇಟಿಕೊಟ್ಟಿದ್ದೆ: ಎರಡೂ ಕಡೆಗಳಲ್ಲಿ ಮುದ್ದಾದ ಒಂದೊಂದು ಬೆಕ್ಕಿನ ಮರಿಗಳಿದ್ದವು. ಒಂದರ ತಾಯಿ ಮನೆಯ ಹತ್ತಿರದ ರಾಷ್ಟ್ರೀಯ ರಸ್ತೆ ದಾಟುತ್ತಿರುವಾಗ ವಾಹನಕ್ಕೆ ಸಿಲುಕಿ ಅಸುನೀಗಿದೆಯಂತೆ. ಆಗಿನ್ನೂ ಆ ಮರಿ ಕಣ್ಣನ್ನೇ ತೆರೆದಿರಲಿಲ್ಲವಂತೆ. ಬಾಟಲಿಯಲ್ಲಿ ಹಾಲುಣಿಸಿ ಆ ಮರಿಯನ್ನು ಬೆಳೆಸಿದ್ದಾರೆ-ಈಗ ಅಲ್ಲಿ ಇಲ್ಲಿ ಓಡಾಡುತ್ತಿದೆ. ಇನ್ನೊಂದರ ಅಮ್ಮನಿಗೆ ವಾತವೋ ಏನೋ ಮುದುರಿಕೊಂಡು ಸತ್ತುಹೋಯಿತಂತೆ, ಆ ಮರಿಯೂ ಚಿಕ್ಕದೇ ಇತ್ತು, ಹೊಟ್ಟೆಗೆ ಆಹಾರ ಹುಡುಕಿ ತಿನ್ನುವುದನ್ನು ಕಲಿತಿರದ ಅಮ್ಮನನ್ನೇ ಅವಲಂಬಿಸಿದ ಆ ಮರಿಗಳನ್ನು ಕಂಡಾಗ ’ಅಮ್ಮನ ಪಾತ್ರ’ದ ಋಣ ತೀರಿಸಲಾಗುವುದಿಲ್ಲ ಎಂಬುದು ನೆನಪಿಗೆ ಬಂತು. ಆ ವಿಷಯದಲ್ಲಿ ನನಗೆ ಅಮ್ಮನ ಪ್ರೀತಿಯಲ್ಲಿ ಕಿಂಚಿತ್ತೂ ಕೊರತೆಯಾಗಲಿಲ್ಲ; ಇವತ್ತಿಗೂ ನನಗೆ ಅಮ್ಮನ ಪ್ರೀತಿಯ ಆಸರೆ ಇದೆ.

ಹಳೆಯ ಮನೆಗಳು ಕಸುವು ಕಳೆದುಕೊಂಡು ಅಲ್ಲಲ್ಲಿ ಬಳಸಿದ ಕಟ್ಟಿಗೆಗಳಲ್ಲಿ ಹುಳುಬಿದ್ದು ಅಜಡಾಗಿವೆ. ಹೊಸಮನೆಗಳು ತಾರಸಿಯವು ಇನ್ನೂ ಮೇಲೆದ್ದಿಲ್ಲ. ದಶಕಗಳ ಹಿಂದೆ ಕಾಡು ಸಮೃದ್ಧವಾಗಿತ್ತು, ನಾಟುಗಳು, ಮರಮಟ್ಟುಗಳು ಸಿಗುತ್ತಿದ್ದವು, ಮನೆ ಕಟ್ಟುವುದಿರಲಿ, ದುರಸ್ತಿಯಿರಲಿ ಸಲೀಸಾಗಿ ನಡೆಯಬಹುದಿತ್ತು. ಆದರೆ ಈಗ ದುರಸ್ತಿಯೂ ತೀರಾ ದುಬಾರಿ, ಹೊಸಮನೆಕಟ್ಟಿದರೆ ಹಳೆಯ ಆ ಕಟ್ಟಿಗೆಯ ಅಥವಾ ಹಂಚಿನ ಮನೆಗಳ ಆಪ್ತತೆ ತಾರಸಿ ಮನೆಗಳಲ್ಲಿ ಕಾಣುವುದಿಲ್ಲ! ಕಾಲಗತಿಗೆ ತಕ್ಕಂತೇ ಚಳಿ-ಮಳೆಗಳಲ್ಲಿ ಬೆಚ್ಚಗೂ ಬಿಸಿಲಲ್ಲಿ ತಣ್ಣಗೂ ಇರುತ್ತಿದ್ದ ಹಂಚಿನ ಮನೆಗಳನ್ನು ಮತ್ತೆ ಕಟ್ಟಿದರೆ ಪರೋಕ್ಷವಾಗಿ ಕಾಡು ಕಡಿಯುವ ಕೆಲಸಕ್ಕೆ ನಾವೇ ಪ್ರೇರೇಪಣೆ ನೀಡಿದಂತಾಗುತ್ತದೆಯಲ್ಲವೇ? ಸದ್ಯ ನಮ್ಮನೆಗೆ ಅಂತಹ ತೊಂದರೆ ತೀರಾ ಇಲ್ಲ, ಸಾಕಷ್ಟು ಸರ್ತಿ ಸುಣ್ಣ, ಬಣ್ಣ ಹಚ್ಚಿಸಿಕೊಂಡ ಮನೆಯ ಕಟ್ಟಿಗೆಯಲ್ಲಿ ಇರುವ ಹುಳಗಳು ಅಲ್ಲಲ್ಲೇ ಸತ್ತುಹೋದವೋ ಏನೋ!

ಊರಿಗೆ ಹೋದಾಗೆಲ್ಲಾ ಹತ್ತಾರು ಸಾರಿ ಅಂದುಕೊಳ್ಳುವುದು ನಾವು ಕಲಿತ ಶಾಲೆಕಡೆ ಹೋಗಿ ಬರಬೇಕು ಎಂದು. ಇಂದು ಅಂತಹ ಮಾಸ್ತರಮಂದಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಬಹುಶಃ ನಾವು ಹುತುತು ಕಬಡ್ಡಿ ಆಡಿದ ಜಾಗ ಈಗ ಕ್ರಿಕೆಟ್ಟಿಗೆ ಬಳಕೆಯಾಗುತ್ತಿರಬಹುದು. ಮಗ್ಗಿ ಹೇಳಿಕೊಡುತ್ತಾರೋ ಇಲ್ಲವೋ ಎಂಬುದೂ ತಿಳಿದಿಲ್ಲ. ಆಗ ನಮ್ಮಲ್ಲಿದ್ದಿದ್ದು ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯೊಂದೇ! ಅದೂ ನಮ್ಮ ಶಾಲೆಯಲ್ಲಿ ಗಂಡುಮಕ್ಕಳೇ ಒಂದು ಕಾಲಕ್ಕೆ ಜಾಸ್ತಿ ಇದ್ದುದರಿಂದ ’ಕನ್ನಡ ಗಂಡುಮಕ್ಕಳ ಶಾಲೆ’ ಎಂದು ನಾವೂ ಓದಲು ಆರಂಭಿಸುವ ಮುನ್ನ ಅದಕ್ಕೆ ಹೆಸರಿದ್ದಿದ್ದು ತಿಳಿದುಬರುತ್ತದೆ. ಒಂದಾನೊಂದು ದಿನ ನಾವು ಅಂತಹ ಠಸ್ಸೆಯನ್ನೂ ಕಾಗದಪತ್ರಗಳಲ್ಲಿ ಕಂಡಿದ್ದೆವು; ಈಗ ಅದು ಹಾಗಿಲ್ಲ, ಬರೇ ಗಂಡುಮಕ್ಕಳಿರಲಿ ಮಕ್ಕಳ ಸಂಖ್ಯೆಯೇ ಇದೆಯೋ ಇಲ್ಲವೋ ಗೊತ್ತಾಗಿಲ್ಲ! ಊರಲ್ಲಿ ಅಲ್ಲಲ್ಲಿ ಖಾಸಗೀ ಶಾಲೆಗಳು ತಲೆ ಎತ್ತಿವೆ, ಎಲ್ಲರಿಗೂ ಒಳಗೊಳಗೇ ಇಂಗ್ಲೀಷ್ ವ್ಯಾಮೋಹ! ಶಾಲೆಯ ಆ ದಿನಗಳಲ್ಲಿ ನಮಗೆ ಆಡಲು ಅಷ್ಟೊಂದೆಲ್ಲಾ ಆಟದ ಪರಿಕರಗಳಿರಲಿಲ್ಲ. ಇಡೀ ಶಾಲೆಯಲ್ಲಿ ಕಲಿಯುವ ಒಟ್ಟೂ ಸುಮಾರು ೩೫೦-೪೦೦ ಮಕ್ಕಳಿಗೆ ಇದ್ದುದು ಎರಡೇ ಕೇರಂಬೋರ್ಡು, ಹಳೆಯ ಕೆಲವು ಡಂಬೆಲ್ಸು. ನಮ್ಮ ಶಾಲೆಯಲ್ಲಿ ಅಂದು ಯಾವುದೇ ವಾದ್ಯ ಪರಿಕರಗಳಿರಲಿಲ್ಲ. ಕುಡಿಯುವ ನೀರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ವಿದ್ಯುದ್ದೀಪ ಇರಲಿಲ್ಲ. ನಕಾಶೆಗಳು ಸಾಕಷ್ಟು ಇರಲಿಲ್ಲ. ಆದರೂ ಮಕ್ಕಳಲ್ಲಿ ಮಾತ್ರ ಅವುಗಳ ಕೊರತೆ ಕಂಡುಬರಲಿಲ್ಲ. ಇರುವುದನ್ನೇ ಬಳಸಿಕೊಂಡಿದ್ದೆವು. ಒಟ್ಟಾಗಿ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದೆವು.

ಶಾಲೆಯ ಅಂಗಳದಲ್ಲಿ ಸಣ್ಣ ಹೂದೋಟವಿತ್ತು. ಅಲ್ಲಿ ನಿತ್ಯವೂ ಗಿಡಗಳಿಗೆ ಪಾಳಿಯ ಪ್ರಕಾರ ನೀರು ಹಾಕುವುದು[ಚಳಿ ಮತ್ತು ಬೇಸಿಗೆ ಕಾಲಗಳಲ್ಲಿ]ಮತ್ತು ಅವುಗಳ ಲಾಲನೆ ಪಾಲನೆ ಮಕ್ಕಳ ಜವಾಬ್ದಾರಿಯೇ ಆಗಿತ್ತು. ಶಂಖಪುಷ್ಪದ ಬಳ್ಳಿ, ಗಡಿಯಾರ ಸಂಪಿಗೆ ಮುಂತಾದ ಅಪರೂಪದ ಹೂಗಳು ಅರಳಿ ನಿಲ್ಲುತ್ತಿದ್ದವು. ಬಣ್ಣಬಣ್ಣದ ಗಿಡಗಳನ್ನು ನೋಡುತ್ತಾ ಗಾಳಿಗೆ ಅವು ತಲೆಯಾಡಿಸುವಾಗ ನಮಗೂ ಅವುಗಳಿಗೂ ಭಾವಬಂಧನ ಬೆಸುಗೆಯಾಗುತ್ತಿತ್ತು. ಅದರ ಮಗ್ಗುಲಲ್ಲೇ ಮರದ ಧ್ವಜಸ್ತಂಭ ನೆಟ್ಟಿದ್ದರು. ಆಗಾಗ ನಡೆಯುವ ರಾಷ್ಟ್ರೀಯ ಹಬ್ಬಗಳಲ್ಲಿ ಧ್ವಜಾರೋಹಣ ನಡೆಸಲು ಅದು ಬಳಕೆಯಾಗುತ್ತಿತ್ತು. ಸ್ಥಳೀಯ ಯುವಕ ಸಂಘದ ಸಹಕಾರದೊಂದಿಗೆ ನಾವು ಮಕ್ಕಳೆಲ್ಲಾ ಶ್ರಮದಾನಮಾಡಿ ಅಂಗಳದ ಒಂದು ಪಕ್ಕದಲ್ಲಿ ವೇದಿಕೆಯೊಂದನ್ನು ಕಟ್ಟಿದ್ದೆವು. ವಾರ್ಷಿಕ ಸ್ನೇಹ ಸಮ್ಮೇಲನಕ್ಕೆ ಅದು ಬಳಕೆಯಾಗುತ್ತಿತ್ತು. ಡಿಸೆಂಬರ್, ಜನವರಿ ಹೊತ್ತಿಗೆ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತೀರಾ ದೂರವೇನೂ ಅಲ್ಲ. ಹೆಚ್ಚೆಂದರೆ ಗೋಕರ್ಣ, ಮುರ್ಡೇಶ್ವರ, ಬನವಾಸಿ ಈ ಥರದ ಜಾಗಗಳಿಗೆ. ಆದರೂ ಅಲ್ಲಲ್ಲೇ ಅದೂ ಇದೂ ನೋಡುತ್ತಾ ಎರಡು ದಿನಗಳು ಕಳೆದುಹೋಗುತ್ತಿದ್ದವು. ಒಟ್ಟಿಗೇ ಕೂತು ಒಂದೇ ವಾಹನದಲ್ಲಿ ಪ್ರಯಾಣಿಸುವುದು, ’....ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಜಯವಾಗಲಿ/ಜಯವಾಯಿತು’ ಎಂದು ಕೈಬರಹದಲ್ಲಿ ಬರೆದಿದ್ದ ಚೀಟಿಕಟ್ಟುಗಳಿಂದ ಒಂದೊಂದನ್ನೇ ಅಲ್ಲಲ್ಲಿ ಹಾರಿಬಿಡುತ್ತಾ ಸಾಗುವುದು, ದಾರಿಯುದ್ದಕ್ಕೂ ಹಾಡು, ಜೈಕಾರ, ತೆರಳಿದ ಜಾಗಗಳಲ್ಲಿ ಒಟ್ಟಿಗೇ ಊಟ, ತಿಂಡಿ, ವಿಶ್ರಾಂತಿ ಬಹಳ ಮಜವಾಗಿರುತ್ತಿತ್ತು. ನೆನೆಸಿದರೆ ಬಾಲ್ಯ ಮತ್ತೆ ಬರುವುದೇ?

ಯಾವುದೇ ತಾಪತ್ರಯವಿರದ ಆ ದಿನಗಳ ಮಹತ್ವ ಇವತ್ತಿಗೆ ಅರಿವಿಗೆ ಬರುತ್ತದೆ. ಇದ್ದರೂ ಒಂದೇ ಇರದಿದ್ದರೂ ಒಂದೇ ಎಂಬ ಮನೋಭಾವ ಅಂದಿಗೆ ಆಗುತ್ತಿದ್ದುದು ಕಾಲಕಳೆದಮೇಲೆ ಅದುಬೇಕು, ಇದುಬೇಕು ಎಂಬ ಆಸೆಗೆ ಇಳಿದುಬಿಡುತ್ತದೆ! ಹೆತ್ತವರಾಗಿ ಸಹಜವಾಗಿ ನಮ್ಮ ಏಳ್ಗೆಗೆ ಕಾರಣೀಭೂತರಾದ ನಮ್ಮ ಪಾಲಕರು ತಾವು ಪಡೆಯದ ಸೌಲಭ್ಯಗಳನ್ನು ನಮಗಾಗಿ ಕಲ್ಪಿಸಿದ್ದರು. ಮಕ್ಕಳ ಮುಖದ ಗೆಲುವಿನ ನಗುವಿನಲ್ಲಿ ಕಷ್ಟದ ಚಣಗಳನ್ನು ಕಳೆಯಲೆತ್ನಿಸುತ್ತಾ ಓದಿಸಿದ ಅವರಿಗೆ ನಾವೆಷ್ಟೇ ಕೃತಜ್ಞರಾಗಿದ್ದರೂ ಕಮ್ಮಿ ಎನಿಸುತ್ತದೆ. ಜೀವನದ ಭಾಗವಾಗಿ ಕೆಲವು ಕೆಲಸಗಳನ್ನೂ ಮಾಡಿಕೊಳ್ಳುವ ಕಲೆಯನ್ನು ಅವರು ನಮಗೆ ಧಾರೆ ಎರೆದರು. ಕೇವಲ ಪುಸ್ತಕದ ವಿದ್ಯೆ ವಿದ್ಯೆಯಲ್ಲಾ ಜೀವನಕ್ಕೆ ಬೇಕಾದ ಕಾರ್ಯಗಳನ್ನು ನಿಭಾಯಿಸಲು ಕಲಿಯಬೇಕೆಂಬುದೂ ಅವರ ಇಚ್ಛೆಯಾಗಿತ್ತು. ಅದು ಇಂದು ನಮಗೆ ಹೆಜ್ಜೆಹೆಜ್ಜೆಗೆ ಸಹಕಾರಿಯಾಗಿದೆ. ಅಂತಹ ಕಾರ್ಯಗಳಲ್ಲಿ ಸಾಮೂಹಿಕವಾಗಿ ಕಲೆಯುವ ಎಲ್ಲರೊಳಗೊಂದಾಗುವ ಕಲೆ ಕೂಡ ಒಂದು. ಅದೇ ಈ ಭಜನೆ ಕಾರ್ಯಕ್ರಮ. ಭಾವಪೂರಿತವಾಗಿ ಭಜನೆಗಳಲ್ಲಿ ನಾವು ತೊಡಗಿಕೊಂಡಾಗ ನಮ್ಮದೆಲ್ಲವನ್ನೂ ಪರಮಾತ್ಮನ ಪಾದಕ್ಕೆ ಹಾಕಿ ಶರಣಾದಾಗ ಯಾವುದೋ ರಕ್ಷಣಾ ಕವಚ ಸಿಕ್ಕ ಅನುಭವ ನಮಗಾಗುತ್ತದೆ; ಯಾವುದೋ ಅವ್ಯಕ್ತ ಆಸರೆ ನಮ್ಮನ್ನು ಪೊರೆಯುವ ಭರವಸೆ ಇತ್ತಂತಾಗುತ್ತದೆ. ಅಂತಹ ಆ ಆಸರೆ ಪುಟ್ಟ ಕಂದಮ್ಮಗಳ ಅಮ್ಮಂದಿರನ್ನು ಕಸಿದುಕೊಳ್ಳದಿರಲಿ, ಯಾವುದೇ ಜೀವಿಯೂ ಅಮ್ಮನ ಪ್ರೀತಿಯಿಂದ ವಂಚಿತವಾಗದಿರಲಿ ಎಂದು ಪ್ರಾರ್ಥಿಸುತ್ತಾ ಮತ್ತೊಮ್ಮೆ ಭಜನೆಯ ಸಾಲೊಂದಿಗೆ ಇದೋ ಲೋಕದ ಹಿತಾರ್ಥ ವಂದಿಸಿಕೊಳ್ಳುತ್ತಿದ್ದೇನೆ :

ಸೀತಾರಾಮ್ ಜೈಜೈರಾಮ್ ಭಜರೇ ಮನ......ಭಜರೇ ಮನ ಭಜ ರಾಮನಾಮ
ಸೀತಾರಾಮ್ ಜೈಜೈರಾಮ್ ಭಜರೇ ಮನ...