ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, January 9, 2012

’ಪುನರ್ಜನ್ಮ’!!


’ಪುನರ್ಜನ್ಮ’!!
[ಇಂದು ನಿನ್ನೆ ಎರಡು ಕೃತಿಗಳು ಶೀಘ್ರಗತಿಯಲ್ಲಿ ಪ್ರಕಟಗೊಂಡಿರುವುದರಿಂದ ಶಂಕರ ಭಗವತ್ಪಾದರ ಕುರಿತ ಇದಕ್ಕೂ ಹಿಂದಿನ ಕೃತಿ ಬಹಳ ಮೌಲ್ಯಯುತವಾಗಿರುವುದರಿಂದ ಅದನ್ನು ಇನ್ನೂ ಓದಿರದ ಓದುಗ ಮಿತ್ರರಲ್ಲಿ ಅದನ್ನೂ ಮರೆಯದಂತೆ ಓದಿಕೊಳ್ಳಲು ಪ್ರಾರ್ಥಿಸುತ್ತೇನೆ]

" ನಾನು ಒಂದು ಎರಡು ಮೂರು ಅಂತ ಎಣಿಸುತ್ತಿರುವುದನ್ನೇ ನೋಡುತ್ತಿರಬೇಕು. ನಿಧಾನಕ್ಕೆ ಮಲಕ್ಕೋ, ನಿಧಾನಕ್ಕೆ ಎರಡೂ ಕಣ್ಣುಗಳನ್ನು ಮುಚ್ಚು. ನಿಧಾನಕ್ಕೆ ಶ್ವಾಸವನ್ನು ಒಳಗೆಳೆದುಕೊಂಡು ನಿಧಾನಕ್ಕೆ ಹೊರಗೆ ಬಿಡಬೇಕು....ಒನ್ ಟೂ ತ್ರೀ ಗೋ ...........ಈಗ ನೀನು ನಿನ್ನ ಹಿಂದಿನ ಜನ್ಮದಲ್ಲಿದ್ದೀಯಾ. ನಿನ್ನ ಕಾಲುಗಳನ್ನು ನೋಡ್ಕೋ. ಏನು ಹಾಕಿಕೊಂಡಿದ್ದೀಯಾ ಕಾಲಿಗೆ ? "

" ಹವಾಯಿ ಹಾಕಿಕೊಂಡಿದ್ದೇನೆ "

" ಹೌದಾ ...ಅಲ್ಲೇ ಸುತ್ತಮುತ್ತ ಇರುವ ವ್ಯಕ್ತಿಗಳನ್ನು ಗುರುತಿಸು ನೋಡೋಣ. ಯಾರ್ಯಾರಿದ್ದಾರೆ? "

" ಯಾರ್ಯಾರೋ ನಿಂತಿದ್ದಾರೆ. ಕಾಡು ಮನುಷ್ಯರ ಥರಾ ಕಾಣಿಸ್ತಾರೆ. ಕಾಡಿನ ಜಾಗದಲ್ಲಿ ಒಂದು ಹಳೇ ಗುಡಿಸಲು. ಏನೇನೂ ವೇಷ ಹಾಕ್ಕೊಂಡಿದಾರೆ. ಮೈಗೆ ಪ್ರಾಣಿ ಚರ್ಮ ಸುತ್ಕೊಂಡಿದಾರೆ. ತಲೆಗೆ ಹಕ್ಕಿಗಳ ಬಣ್ಣಬಣ್ಣದ ಪುಕ್ಕಗಳಿಂದ ಮಾಡಿದ ಟೋಪಿ ಧರಿಸಿದ್ದಾರೆ. ಎಲ್ಲರ ಕೈಲೂ ಈಟಿ-ಭರ್ಚಿಯಂಥಾ ಆಯುಧಗಳಿವೆ. ಹುರ್ರಾ ಹುರ್ರಾ ಹುರ್ರಾ ಹುರ್ರಾ ಅಂತ ಧ್ವನಿ ಹೊರಡಿಸ್ತಾ ಇದ್ದಾರೆ. ಆದರೆ ಒಬ್ಬರದೂ ಪರಿಚಯವಿಲ್ಲ"

" ಹಾಂ ಹೌದಾ ....ಈಗ ಮತ್ತೆ ಒನ್ ಟೂ ತ್ರೀ ಎಣಿಸ್ತಾ ನಿಧಾನಕ್ಕೆ ಹಿಂದಕ್ಕೆ ಹಿಂದಕ್ಕೆ ಹಿಂದಕ್ಕೆ ಹೋಗ್ತಾ ನಿನ್ನ ಅದಕ್ಕೂ ಹಿಂದಿನ ಜನ್ಮಕ್ಕೆ ಹೋಗು..ಒನ್..ಟೂ...ತ್ರೀ...ಗೋ....ಈಗ ನೋಡು ಅಲ್ಲಿ ಯಾರ್ಯಾರೆಲ್ಲಾ ಇದ್ದಾರೆ? "

" ನಮ್ಮಮ್ಮ-ಅಪ್ಪ, ಅಣ್ಣ ಎಲ್ಲಾ ಇದ್ದಾರೆ...ಮೈಸೂರಿನ ಹಳ್ಳಿ. ನಮ್ದು ಹಳ್ಳಿಮನೆ. ಹೊರಗಡೆ ನಾಯಿ ಮಲ್ಕೊಂಡಿದೆ.ಅದರ ಹೆಸರು ’ಟಾಮಿ’. ಮನೆ ಪಕ್ಕ ಒಂದು ತುಂಬಾನೇ ಆಳವಾದ ಒಂದು ಬಾವಿ ಇದೆ. "

" ನಿಮ್ಮಪ್ಪ-ಅಮ್ಮ ಅವರೆಲ್ಲಾ ಏನ್ ಮಾಡ್ತಾ ಇದ್ದಾರೆ ನೋಡು "

" ’ಅಶೂ ಮದುವೆಗೆ ಮೋದಲೇ ಗರ್ಭಿಣಿ ಆಗಿದ್ದು ಕುಟುಂಬದ ಮಾರ್ಯಾದೆಯನ್ನು ಬೀದಿಪಾಲುಮಾಡಿದ ಹಾಗಾಯ್ತು. ಇಂಥಾ ಮಗಳು ಹುಟ್ಟೋದಕ್ಕಿಂತಾ ಹುಟ್ಟದಿದ್ದರೇ ಚೆನ್ನಾಗಿತ್ತು’ ಅಂತ ಮಾತಾಡ್ಕೋತಾ ಇದಾರೆ"

" ನೀನು ಏನಾಗಿದೀಯ ಅಲ್ಲಿ ? "

" ನಾನು ಆ ಮನೆ ಮಗಳು. ಎಸ್. ಎಸ್, ಎಲ್.ಸಿ ಮುಗಿದಮೇಲೆ ಕಾಲೇಜಿಗೆ ಹೋಗಬೇಕು ಅಂದ್ಕೊಂಡಿದ್ದೆ, ಅಪ್ಪ ಬೇಡಾ ಅಂದ್ಬುಟ್ರು. ರಮೇಶ ನನ್ನ ಬಾಲ್ಯದ ಗೆಳೆಯ. ನಾವಿಬ್ರೂ ಬಿಟ್ಟಿರ್ತಾ ಇರ್ಲಿಲ್ಲ. ಸ್ಕೂಲಿಗೆ ಹೋದಾಗ ಏನಿದ್ರೂ ಹೇಳ್ಕೋತಾ ಇದ್ವಿ. ನಮ್ಮಿಬ್ರಲ್ಲಿ ಯಾರಾದ್ರೂ ಸ್ಕೂಲು ತಪ್ಪಿಸ್ಕೊಂಡ್ರೆ ಮಾರನೇದಿನ ನೋಟ್ಸು ಪರಸ್ಪರ ಪಡ್ಕೋತಾ ಇದ್ವಿ. ಆತ ಕಾಲೇಜಿಗೆ ಸೇರ್ಕೊಂಡ್ನಾ ನಾನು ಮಾತ್ರ ಓದಕ್ಕಾಗ್ಲಿಲ್ಲ. "

" ಮುಂದೇನಾಯ್ತು....?"

" ನಾನೂ ಬಿಡ್ಲಿಲ್ಲ. ಹಠಮಾಡಿಕೊಂಡು ಚಿಕ್ಕಮ್ಮನ ಮನೆಗೆ ಹೋಗಿ ಅಲ್ಲಿಂದ ಕಾಲೇಜಿಗೆ ಹೋಗಲು ಆರಂಭಿಸಿದೆ ...ಪಿಯೂ ಮೊದಲ ವರ್ಷದಲ್ಲಿ ನಂಗೆ ಇಂಗ್ಲೀಷ್ ಮೀಡಿಯಮ್ಮಿನಲ್ಲಿ ಅಷ್ಟಾಗಿ ಅರ್ಥವಾಗ್ತಿರಲಿಲ್ಲ. ರಮೇಶ ತುಂಬಾನೇ ಜಾಣ. ಅವನು ಹೇಗೋ ಎಲ್ಲಾನೂ ತಿಳ್ಕೋತಿದ್ದ. ಕಾಲೇಜಿಗೆ ಬಂದ ಆರೇಳು ತಿಂಗ್ಳಲ್ಲೇ ತುಂಬಾ ಎತ್ತರವಾಗಿ ಕಟ್ಟುಮಸ್ತಾಗಿ ಬೆಳೆದಿದ್ದು. ೫ ಫೂಟು ೮ ಇಂಚು ಎತ್ತರ ಇದ್ನೋ ಇರ್ಬೇಕು. ಗೋಧಿ ಮೈಬಣ್ಣದ ಆತನನ್ನು ನೋಡಿದಾಗ ನಂಗೆ ಈಗೀಗ ಅವನನ್ನೇ ಗಂಡನನ್ನಾಗಿ ಪಡೆವ ಆಸೆ ಹುಟ್ಕೊಂಡಿತ್ತು. "

" ಮುಂದೆ... ?"

" ರಮೇಶಂಗೂ ನಾನೆಂದ್ರೆ ಅಷ್ಟಿಷ್ಟ. ಮನೆಯಿಂದ ತಂದ ತಿಂಡಿ ಒಟ್ಟಿಗೇ ತಿಂತಾ ಇದ್ವಿ. ಕೆಲವೊಮ್ಮೆ ಹೋಟೆಲ್ಗೂ ಹೋಗ್ತಾ ಇದ್ವಿ. ಆಗಾಗ ಕಾಲೇಜಿಗೆ ಚಕ್ಕರ್ ಹಾಕಿ ಸಿನಿಮಾಗೂ ಹೋಗ್ತಾ ಇದ್ವಿ. ಮೈಸೂರು ಮಹಾರಾಜರು ನಮ್ಮಂಥಾ ಜನಗೋಳ್ಗೆ ಅಂತ ಒಂದು ಸಿನಿಮಾ ಟಾಕೀಸು ಕಟ್ಸಿದ್ರು. ಅದೇ ಟಾಕೀಸ್ನಾಗೆ ಒಂದೆರಡು ಸಿನಿಮಾ ನೋಡಿದ್ವಿ. ಅವನು ಹತ್ರ ಕುಂತಾಗೆಲ್ಲಾ ಒಂಥರಾ ಆಗ್ತಾ ಇತ್ತು. ಪ್ರೀತಿ ಅಂದ್ರೆ ಅದೇ ಇರ್ಬೇಕು. "

" ಮುಂದೆ ....?"

" ಒಂದಿನ ರಮೇಶ ಅಲ್ಲೆಲ್ಲೋ ಹೋಗೋಣ ಬರ್ತೀಯಾ ? ಅಂದ. "

" ನೀನೇನೆಂದೆ ?......."

" ಆಯ್ತು ಬರ್ತೀನಿ ಎಂದೆ. ಅವನೆಂದ್ರೆ ನಂಗೆ ತುಂಬಾನೇ ಆಸೆ. ಅದ್ಕೇ ಅವನ್ಜೊತೆ ಮೈಸೂರಿನಿಂದ ಕೊಡಗಿಗೆ ಹೋದೆ. ಕೊಡಗು ನೋಡಲು ತುಂಬಾ ಸುಂದರ. ಚಳಿಗಾಲದಲ್ಲಂತೂ ಅಲ್ಲಿನ ವಾತಾವರಣ ನೆನೆಸ್ಕೊಂಡ್ರೆ ಕರ್ನಾಟಕದ ಕಾಶ್ಮೀರ ಅನ್ಬೇಕು. ಅಂಥಾ ಕೊಡಗಿನಲ್ಲಿ ಒಂದೆರಡು ದಿನ ತಂಗಿದ್ವಿ. ತುಂಬಾ ದಿವಸದಿಂದ ಮನಸ್ಸು ಒಟ್ಟಿಗೇ ಇರ್ಬೇಕು ಅಂತ ಬಯಸ್ತಾ ಇತ್ತು. ಅದೆಷ್ಟೋ ದಿನಗಳು ಕಳೆದಮೇಲೆ ಈಗ ಅದಕ್ಕೆ ಕಾಲ ಕೂಡಿಬಂದಿತ್ತು. ಒಟ್ಟಿಗೇ ಇದ್ವಲ್ಲ, ಹಾಗೇ ಒಂದಾಗೋಣ ಅಂದ ರಮೇಶ. ಅವನ ತೋಳಿನಲ್ಲಿ ಬಂಧಿಯಾಗಿದ್ದ ನಂಗೆ ಸ್ವರ್ಗಕ್ಕೆ ಮೂರೇಗೇಣು. ರಮೇಶ ನನ್ನವನೇ ಅಲ್ವೇ ಅದಕ್ಕೇ ಇರ್ಬೇಕು ಮತ್ತು ಆತ ಎಂದೆಂದಿಗೂ ನನ್ನವನಾಗೇ ಇರ್ತಾನೆ ಎಂಬ ಕಾರಣಕ್ಕೂ ಇರ್ಬೇಕು "

" ಮುಂದೆ ......? "

" ಕೊಡಗಿನಲ್ಲಿ ಕಳೆದ ಎರಡೂ ರಾತ್ರಿ ನಾನು ಜೀವನದಲ್ಲೇ ಮರೆಯೋ ಹಾಗಿಲ್ಲ. ಅದೇನು ಖುಷಿ ಏನು ಮಜಾ. ಇಬ್ಬರೂ ಬಹಳ ಸಮಯ ಒಅಬ್ಬರನ್ನೊಬ್ಬರು ತಬ್ಬಿಕೊಂಡೇ ಇದ್ವಿ. ನಮ್ಮಿಬ್ಬರ ಮೈಮನಗಳೆರಡೂ ಬೆರೆತು ಒಂದೇ ಆಗಿಬಿಟ್ಟಿದ್ದವು. ರಾತ್ರಿ ಕಳೆದು ಬೆಳಗಾದರೂ ರಮೇಶನಿಂದ ಬಿಡಿಸಿಕೊಳ್ಳಲು ಇಷ್ಟವಾಗ್ತಿರಲಿಲ್ಲ. "

" ಮುಂದೇನಾಯ್ತು.... ? "

" ಕೊಡಗಿನಿಂದ ಮರಳಿದ ನಂಗೆ ಸ್ವಲ್ಪ ಕಷ್ಟಾನೇ‍ ಕಾದಿತ್ತು. ಮೊದಲಿಗೆ ಮನೇಲಿ ಅಪ್ಪ ಕೋಪಗೊಂಡು ಮೊದ್ಲೇ ಕಾಲೇಜಿಗೆ ಕಳ್ಸಿರ್ಲಿಲ್ಲ. ಈಗ ಇಲ್ಲಿ ಚಿಕ್ಕಮ್ಮನೂ ಹೇಳ್ದೇ ಕೇಳ್ದೇ ಅದ್ಯಾಕೆ ಎಲ್ಲೋ ಹೋಗಿದ್ದಿ ? ಎಂದು ತಗಾದೆ ತಗೆದಿದ್ಲು. ಇದ್ದೊಬ್ಬ ಚಿಕ್ಕಮ್ಮನ್ನೂ ಕೊಂಚ ವಿರೋಧ ಮಾಡ್ಕೊಳೋ ದಿನ ಬಂದ್ಬುಡ್ತು. ಆದ್ರೂ ಏನೋ ಸಬೂಬು ಹೇಳ್ದೆ, ಆ ಕ್ಷಣಕ್ಕೆ ಚಿಕ್ಕಮ್ಮ ಹೋಗ್ಲಿ ಹುಡುಗಿ ಪಾಪ ಅಂತ ಸುಮ್ಮನಾದಳು"

" ಆಮೇಲೆ ....? "

" ಎರಡುವಾರ ಕಳೀತಿರ್ಬೇಕು. ಒಂದಿನ ಕಾಲೇಜಿಗೆ ಹೋದಾಗ ವಾಂತಿ ವಾಂತಿ ವಾಂತಿ. ಶರೀರಕ್ಕೆ ಯಾವ ಆಹಾರಾನೂ ಬೇಡ. ಸುಸ್ತಗಿ ಸುಮ್ನೇ ಮಲಗಿಬಿಟ್ಟೆ. ಚಿಕ್ಕಮ್ಮಂಗೆ ವಾಂತಿ ಬಂದಿದ್ದನ್ನು ಹೇಳಲೇ ಇಲ್ಲ. ಯಾಕೋ ಮೈ ಸರಿಯಿಲ್ಲ ಊಟಬೇಡ ಅಂತ ಸುಮ್ಮನೇ ಮಲಗಿಬಿಟ್ಟೆ. ಹಾಗೂ ಹೀಗೂ ದಿನಗಳು ಕಳೆದ್ವು "

" ಮುಂದೆ ...? "


" ನಂಗಂತೂ ಈಗೀಗ ತುಂಬಾನೇ ಸುಸ್ತು. ನಿಂತ್ರೂ ನಿದ್ದೆ ಕುಂತ್ರೂ ನಿದ್ದೆ. ಮಲ್ಕೊಂಡೇ ಇರೋಣಾ ಅನ್ನಿಸ್ತಿತ್ತು. ಡಾಕ್ಟರ್ ಹತ್ತಿರ ಹೋದಾಗ ಸುಸ್ತು ಕಮ್ಮಿಯಾಗೋ ಮಾತ್ರೆ ಕೊಟ್ರು. ಊಹೂಂ ಏನೂ ಪ್ರಯೋಜನವಾಗಲಿಲ್ಲ. ಮೇಲಾಗಿ ತಿಂಗಳಿಗೆ ಸರಿಯಾಗಿ ನಂಗೆ ಪೀರಿಯಡ್ಸ್ ಆಗ್ತಿರ್ಲಿಲ್ಲ. ಈಗ್ಲೂನೂ ಅಷ್ಟೇ ಮೂರೂವರೆ ತಿಂಗ್ಳು ಆದ್ರೂನೂ ಮುಟ್ಟು ಬಂದಿರ್ಲಿಲ್ಲ."

" ಹೌದಾ..ಹಾಗೆಲ್ಲಾ ಕೆಲವ್ರಿಗೆ ಇರುತ್ತೆ ಬಿಡಮ್ಮ, ಮುಂದೇನಾಯ್ತು ?"

" ಒಂದಿನ ನಾನು ಮನೇಲಿರೋವಾಗ ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದೆ. ಆಗ ಚಿಕ್ಕಮ್ಮ ಮತ್ತು ಅವರ ಮನೇಜನರೆಲ್ಲಾ ಸೇರ್ಕೊಂಡು ಸರಿಯಾಗಿ ಪರೀಕ್ಷಿಸಬೇಕು ಅಂತ ಮೈಸೂರಿನ ಮಹಾರಾಜಾ ಆಸ್ಪತ್ರೆಗೆ ಕರೆದುಕೊಂಡು ಹೋದ್ರು. ಅಲ್ಲಿನ ವೈದ್ಯರು ಎಲ್ಲಾ ರೀತಿ ಟೆಸ್ಟ್ ಮಾಡಿ ನಾನು ಬಸುರಿ ಎಂದು ಹೇಳಿಬಿಟ್ಟರು"

" ಹೌದಾ ಆಂ........ಆಮೇಲೆ ? "

" ವಿಷಯ ಕೇಳಿ ನಮ್ಮ ಚಿಕ್ಕಮ್ಮ ಎಲ್ಲಾ ತುಂಬಾ ಗಾಬರಿಯಾಗಿದ್ರು. ನಮ್ಮಪ್ಪ-ಅಮ್ಮಂಗೂ ಕಾಗ್ದ ಬರ್ದು ವಿಷಯ ತಿಳಿಸಿದ್ರು. ಮೊದಲೇ ನನ್ಕಂಡ್ರೆ ಅಪ್ಪಂಗೆ ಆಗ್ತಿರ್ಲಿಲ್ಲ, ಯಾಕಂದ್ರೆ ತನ್ಮಾತು ಮೀರಿ ಕಾಲೇಜಿಗೆ ಹೋಗ್ತಾಳಲ್ಲ ಅಂತ. ಕಾಗದ ತಲ್ಪಿದ್ದೇ ತಲ್ಪಿದ್ದು ನಮ್ಮಪ್ಪ-ಅಮ್ಮ-ಅಣ್ಣ ಎಲ್ಲಾ ಮನೆಗೆ ಬೀಗ ಜಡಿದು ಚಿಕ್ಕಮ್ಮನ ಮನೆಗೇ ಬಂದುಬಿಟ್ರು. "

" ಅರೆರೇ ಅದೇನೀಗ .......? "

" ಹಾಗೇ, ನಾನು ಬಸುರಿ ಆಗಿದ್ನಲ್ಲಾ ಅದಕ್ಕೇ ಅವರಿಗೆ ಬೆಟ್ಟದಷ್ಟು ಕೋಪ ಬಂದಿತ್ತು. ಬಂದವ್ರೇ ’ಮನೆಹಾಳಿ ಮೊದ್ಲೇ ಹೇಳಿದ್ನಾ ಕಾಲೇಜಿಗೆ ಬೇಡಾ ಅಂತ. ನಿನ್ನ ಮುಗಿಸದೇ ಇದ್ರೆ ನಮ್ಮ ಹೆಸರಿಗೆಲ್ಲಾ ಮಸೀ ಬಳಿದೇ ಹಾಗೇ ಇರೋ ಆಸಾಮಿನೇ ಅಲ್ಲ ನೀನು ’ ಅಂತ ತುಂಬಾನೇ ಬಯ್ದ್ರು "

" ಹೌದಾಅ..ಛೆ.ಛೆ.. ಪಾಪ ಅವರಿಗೇನ್ಗೊತ್ತು ನಿಮ್ ಪ್ರೀತಿ ಮಹತ್ವ ಅಲ್ವೇ ? ಮುಂದೆ "

" ಅದೇ ಆವಗ್ಲೇ ಅಂದ್ನಲ್ಲ ನಮ್ಮಮ್ಮ-ನಮ್ಮಪ್ಪ-ನಮ್ಮಣ್ಣ ಎಲ್ಲಾ ಸೇರಿ ಕುಟುಂಬದ ಮರ್ಯಾದೇನ ಬೀದಿಪಾಲು ಮಾಡಿದ್ಲು ಅಂತ ಚೆನ್ನಾಗಿ ಥಳಿಸಿದ್ರು. ಅದಷ್ಟೇ ಅಲ್ಲ ಯಾರಿಗೂ ತಿಳೀದ ಹಾಗೇ ಅದ್ಯಾವ್ದೋ ನರ್ಸಿಂಗ್ ಹೋಮ್ ನಲ್ಲಿ ಭ್ರೂಣನ ತೆಗ್ಸೋ ವ್ಯವಸ್ಥೆ ಮಾಡಿದ್ರು."

" ಛೆ..ಎಂಥಾ ಕೆಲ್ಸ ಮಾಡ್ದ್ರು... ಸುಮ್ನೇ ನಿಮ್ಮಿಬ್ಬರ್ಗೆ ಮದ್ವೆ ಮಾಡ್ಬುಟ್ರೆ ಆಗ್ತಿತ್ತು ಅಲ್ವೇ ? ಮುಂದೆ ..."

" ಮಾರನೇದಿನವೇ ಅದ್ಯಾವ್ದೋ ನರ್ಸಿಂಗ್ ಹೋಮ್‍ಗೆ ಕರ್ಕೊಂಡ್ಹೋದ್ರು. ಆಪರೇಷನ್ ಥೇಟರ್ನಲ್ಲಿ ದಾಕ್ಟ್ರು ಅದೇನೇನೋ ಮಾಡ್ದ್ರು. ಆಮೇಲೆ ಇನ್ನೂ ಬಲಿತಿರದ ಶಿಶುವನ್ನು ಹೊರಗೆ ತೆಗೆದ್ರು. ಎಷ್ಟು ಮುದ್ದಾದ ಶಿಶು. ಆ ನನ್ ಕಂದ ಇನ್ನೂ ಕಣ್ಣೇ ತೆರೆದಿರಲಿಲ್ಲ. ಒಮ್ಮೆ ಸರಿಯಾಗಿ ನೋಡೋಕೂ ಬಿಡ್ದೇ ಆ ಮಗುನ್ನ ಹಂಗಿಂದಂಗೇ ಅದೆಲ್ಲಿಗೋ ಕಳಿಸಿಬುಟ್ರು. ಮಗುವಿನ ಅಮ್ಮ ನನಗಾದ್ರೂ ಏನಾಗಿರ್ಬೇಡ! ರಮೇಶಂಗೆ ತಿಳಿದ್ರೆ ಆತ ಎಷ್ಟು ನೊಂದ್ಕೋತಾನೋ ಗೊತ್ತಿಲ್ಲ. ನಂಗಂತೂ ಅಲ್ಲಿಂದಾನೇ ತಲೆನೋವು ಆರಂಭವಾಗಿದ್ದು. ಆ ಪ್ರೀತಿಯ ಮಗುವಿನ ಮುಖಾನ ನಾನೆಂದೂ ಮರೀಲಾರೆ. "

" ಮುಂದೆ....."

" ಯಾರೋ ಕೆಲಸದೋರು ಹೇಳ್ತಾ ಬರ್ತಿದ್ರು ’ರೋಡಲ್ಲಿ ತಿಪ್ಪೆಗುಂಡಿ ಪಕ್ಕ ಅದ್ಯಾರೋ ಪಾಪಿಗಳು ಮಗೂನ ಬಿಸಾಕಿದಾರೆ’ ಅಂತ. ಹೆಚ್ಚುಪಕ್ಷ ಅದು ನನ್ಮಗೂನೇ ಇರ್ಬೇಕು. ನಮ್ಮನೆಜನ ಡಾಕ್ಟ್ರು ಎಲ್ಲಾ ಸೇರಿ ಮಗೂನ ಹಾಗೆ ಬಿಸಾಕಿರ್ಬೇಕು. ಅದನ್ನೆಲ್ಲಾ ಕೇಳಿ ನಂಗೆ ಎದೆಗೆ ಹೊನ್ನಶೂಲ ಹೊಕ್ಕಿದ ಅನುಭವ ಆಗ್ತಾ ಇತ್ತು. ನಾನು ಜೋರಾಗಿ ಕಿರಿಚ್ಕೋತಿದ್ದೆ. ’ಎಲ್ಲಿ ನನ್ನ ಮಗು ಎಲ್ಲಿ ನನ್ನ ಪುಟ್ಟ ನನ್ಕೈಗೆ ಕೊಡಿ’ ಎಂದು ಒಂದೇ ಸಮನೆ ಕೂಗ್ತಾ ಇದ್ದೆ. "

" ಆಮೇಲೆ.....? "

" ಕೊನೆಗೂ ಅವರ್ಯಾರೂ ನನ್ನ ಮಾತನ್ನು ಕೇಳಲೇ ಇಲ್ಲ. ಮಗೂನ ನಂಗೆ ಕೊಡ್ಲೇ ಇಲ್ಲ. ಆ ನಡುವೆ ರಮೇಶ ಕೂಡ ಬಂದಿರಲೇ ಇಲ್ಲ. ನಂಗೆ ತುಂಬಾ ಬೇಸರವಾಗಿತ್ತು. ಇದೂ ಜೀವನವೇ ಅನ್ನಿಸಿಬಿಟ್ಟಿತ್ತು. ಅದ್ಕೇ ಒಂದು ನಿರ್ಧಾರಕ್ಕೆ ಬಂದ್ಬುಟ್ಟೆ. ಹೇಗಾದ್ರೂ ಮಗೂನ ಕಳ್ಕೊಂಡೆ. ಇನ್ನು ಯಾರಿಗಾಗಿ? ಅಂಗಡಿಯಿಂದ ನಿದ್ರೆ ಮಾತ್ರೆ ಒಂದಷ್ಟು ಕಟ್ಟಿಸ್ಕೊಂಡು ಮನೆಗೆ ಬಂದಳ್ವೇ ಮನೇಲಿ ಎಲ್ಲರೂ ಹೊರಗೆ ಹೋದವೇಳೆ ಇಪ್ಪತ್ತು ನಿದ್ರೆ ಮಾತ್ರೆ ಸೇವಿಸಿದೆ. ನಿದ್ದೆ ಬರೋಕೂ ಮುನ್ನ ಹೊಟ್ಟೆಯಲ್ಲಿ ಬೆಂಕಿಹಾಕಿದಷ್ಟು ನೋವು, ತಲೆಯಲ್ಲಿ ಇನ್ನೇನೋ ನೋವು ಸಹಿಸಲಸಾಧ್ಯ ವೇದನೆ. ಅಂತೂ ಅದೆಷ್ಟೋ ಹೊತ್ತು ಮಲಗೇ ಇದ್ದೆ! ಮನೆಯವರೆಲ್ಲಾ ಬಂದ್ರು, ಮುಟ್ಟಿ ಎಬ್ಬಿಸ್ತಾ ಇದ್ರು. ನಾನು ಏಳಲೇ ಇಲ್ಲ. ನಾನು ಮತ್ತೆ ಆ ಮನೇಲಿ ಉಳಿಯೋ ಇಷ್ಟ ನಂಗಿರ್ಲಿಲ್ಲ."

" ಈಗ ಹೇಳಮ್ಮ ..ನಿಂಗೆ ಆ ಮಗು ತುಂಬಾ ಇಷ್ಟವಾಗಿತ್ತು ತಾನೇ? ರಮೇಶ ಕೂಡ ಅಷ್ಟೇ ಇಷ್ಟ ಹೌದಲ್ಲಾ? ಈ ಜನ್ಮದಲ್ಲಿ ರಮೇಶ ಎಲ್ಲಿದ್ದಾನೆ ಕಾಣಿಸ್ತಾ ಇದ್ಯಾ? "

" ಈಗ ರಮೇಶ ಸುರೇಶ ಆಗಿದ್ದಾನೆ. ದಿನಾ ನಂಗೆ ಕಾಣಿಸ್ತಾನೆ. ಥೇಟ್ ರಮೇಶನೇ ಅನ್ಬೇಕು, ಅಂಥಾ ಸುಂದರ ಮೈಕಟ್ಟು. ಮುದ್ದ್ಮುದ್ದಾಗಿದಾನೆ. ಮೈಸೂರು ಪ್ರಾಡಕ್ಟ್ಸ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸಮಾಡ್ತಾ ಇದ್ದಾನೆ. ಸೂಟು ಬೂಟು ಹಾಕ್ಕೊಂಡು ಕಾರಲ್ಲೇ ಓಡಾಡ್ತಾನೆ. ಕೈತುಂಬಾ ಸಂಬಳ "

" ಈಗ ಒಂದೊಮ್ಮೆ ನಿನ್ನನ್ನು ಸುರೇಶನಿಗೆ ಕೊಟ್ಟು ಮದುವೆ ಮಾಡಿಬಿಟ್ಟರೆ ಮತ್ತದೇ ಮಗು ನಿನ್ನ ಹೊಟ್ಟೇಲಿ ಜನಿಸುತ್ತೆ ಅಲ್ವೇ? ಹಾಗ್ಮಾಡಿದ್ರೆ ನಿಂಗೆ ಇಷ್ಟಾನಾ ? ಅಲ್ಲಿಗೆ ನಿನ್ನ ನೋವು ಎಲ್ಲಾ ಮಾಯ ಅಂದ್ಕೋತೀನಿ ? "

" ಹೌದು ಹೌದು....ಸುರೇಶನ ಜೊತೆ ನಂಗೆ ಮದುವೆ ಮಾಡ್ಬಿಟ್ರೆ ಎಲ್ಲಾ ಪ್ರಾಬ್ಲಮ್ಮೂ ಸಾಲ್ವ್ ಆಗುತ್ತೆ "

" ಈಗ ನಿಧಾನಕ್ಕೆ ಆ ಜನ್ಮದಿಂದ ಹಿಂದಿನ ಹಾಗೂ ಹಿಂದಿನ ಜನ್ಮದಿಂದ ಈ ಜನ್ಮಕ್ಕೂ ಬರ್ತಾ ಇದ್ದೀಯಾ. ನಾನು ಒನ್ ಟೂ ತ್ರೀ ಎಂದ ತಕ್ಷಣ ಈ ಜನ್ಮದ ರೇಣುಕಾ ನಿಧಾನಕ್ಕೆ ಎಚ್ಚೆತ್ತುಕೊಳ್ಳಬೇಕು.ಎರಡೂ ಹಸ್ತದಿಂದ ಕಣ್ಣನ್ನು ಮೆತ್ತಗೆ ಉಜ್ಜಿಕೊಳ್ಳುತ್ತಾ ನಿಧಾನವಾಗಿ ಕಣ್ಣುತೆರೆಯಬೇಕು. ಒನ್ ಟೂ ತ್ರೀ ....ಯಸ್ ರಿಲಾಕ್ಸ್ ರಿಲಾಕ್ಸ್ ರಿಲಾಕ್ಸ್ "

----

" ಏನಮ್ಮಾ ಸುರೇಖಾ ಈಗ ಹೇಗನ್ನಿಸ್ತಾ ಇದೆ ? "

" ತುಂಬಾನೇ ಡಿಫರೆಂಟಾಗಿದೆ ಗುರೂಜಿ"

" ಡಿಫರೆಂಟ್ ಅಂದ್ರೆ ಏನು ಚೆನ್ನಾಗಿದೆ ಅಂತಾನೋ? ಪ್ರಾಬ್ಲಮ್ಮು ಸಾಲ್ವಾಯ್ತು ಅನ್ನಿಸ್ತಾ ಇದ್ಯೋ ಹೇಗೆ‍ ? "

" ಹೌದು ಗುರೂಜಿ. ನನ್ನಲ್ಲಿರುವ ಪ್ರಶ್ನೆಗಳಿಗೆ ನನಗೆ ಉತ್ತರಗಳು ಸಿಕ್ಕಿವೆ. ಮನಸ್ಸು ಖುಷಿಯಾಗಿದೆ. ಈಗ ಹಾಯಾಗಿದ್ದೇನೆ. ಹೊಸ ಜೀವನವನ್ನು ಎದುರಿಸಲು ತಯಾರಿದ್ದೇನೆ. "

" ಆಯ್ತಮ್ಮ ನಿಮ್ಮ ಮನೆ ಹಿರಿಯರಿಗೆ ಹೇಳಿ ಆದಷ್ಟು ಬೇಗ ಮುಂದಿನ ಕೆಲಸದ ಏರ್ಪಾಟು ಮಾಡೋಣ. "

***

8 comments:

  1. ಭಟ್ಟರೆ,
    ಇದು ಕತೆಯಾ ಅಥವಾ ನಡೆದ ಘಟನೆಯಾ? ಪುನರ್ಜನ್ಮದ ಅನೇಕ ಕೇಸುಗಳನ್ನು ಓದಿದ್ದೀನಿ. ಅದರಲ್ಲಿ ನಂಬುಗೆಯೂ ಇದೆ. ಆದರೆ ಹಿಪ್ನಾಟಿಜಮ್ ಮೂಲಕ ಹಿಂದಿನ ಜನ್ಮಗಳ ನೆನಪು ಮಾಡಿಕೊಳ್ಳಬಹುದೆ?

    ReplyDelete
  2. ಚೆನ್ನಾಗಿ ಬರೆದಿದ್ದೀರಿ. ಪುನರ್ಜನ್ಮ ವನ್ನ ಒಪ್ಪುತ್ತೇನೆ. ಆದರೆ, ಹಿಪ್ನಾಟಿಸಮ್ ಮೂಲಕ ಹಿಂದಿನ ಜನ್ಮವನ್ನ ಅಷ್ಟು ಶೀಘ್ರವಾಗಿ, ನೆನಪಿಸಿಕೊಳ್ಳುವುದನ್ನ ಒಪ್ಪಲು ಕಷ್ಟವಾಗುತ್ತೆ! ನಮ್ಮ ಸುಪ್ತ ಮನಸ್ಸಿನ ಭಾವನೆಗಳನ್ನು ಕೆದಕಿ, ಹೊರತೆಗೆಯುವುದು ಅನ್ನಿಸುತ್ತೆ.

    ReplyDelete
  3. ಯಾವುದೊ ಪುನರ್ಜನ್ಮದ ಎಪಿಸೋಡ್ ಅನ್ನು ಟಿವಿಯಲ್ಲಿ ನೋಡಿದಂತೆನಿಸಿತು ಅಷ್ಟು ಅಚ್ಚುಕಟ್ಟಾದ ನಿರೂಪಣೆ ನಿಮ್ಮದು ಸರ್.. ಪುನರ್ಜನ್ಮ ನಿಜವೊ ಸುಳ್ಳೊ ತಿಳಿಯದು ಆದರೆ ನಿಮ್ಮ ನಿರೂಪಣೆ ವಿಷಯ ವಸ್ತುವನ್ನು ಸರಾಗವಾಗಿ ಓದುಗರಿಗೆ ಮುಟ್ಟಿಸುತ್ತದೆ ಎಂದಷ್ಟೆ ಹೇಳಬಲ್ಲೆ.. ಚೆಂದವಾದ ಬರಹ ಸರ್..:)))

    ReplyDelete
  4. ಕಥೆ ಮಜವಾಗಿದೆ!!! ಸುದಾನೋ ತರಂಗದಲ್ಲೋ ಒಂದು ಚಂದದ (XX) ಚಿತ್ರದೊಂದಿಗೆ ಬಂದರೆ ಮುದುಕರಿಂದ ಹುಡುಗರವರೆಗೂ ಎಲ್ಲರೂ ಓದುವುದು ಗ್ಯಾರಂಟಿ!!! :-)
    ಇನ್ನು ಪುನರ್ಜನ್ಮದ ಬಗ್ಗೆ - ಪುನರ್ಜನ್ಮ ಒಂದು ಲೊಳಲೊಟ್ಟೆ!!ಕೋಟ್ಯಾಂತರ ಬುದ್ದಿವಂತರೂ ನಂಬುವ ಸುಳ್ಳು!!!

    ReplyDelete
  5. ಇಲ್ಲಿ ಓದುಗರು ಗಮನಿಸಬೇಕು, ಪುನರ್ಜನ್ಮ ಎಂಬುದನ್ನು ಮಾಧ್ಯಮದಲ್ಲಿ ಬಿತ್ತರಿಸಿದ ಹಿಪ್ನಾಟಿಸಂ ಹೇಗೆ ಹೇಳುತ್ತದೆ ಎಂಬುದನ್ನೇ ಯಥಾವತ್ತಾಗಿ ಕಥೆಯಾಗಿದ್ದೇನೆ. ಹಿಂದಿನ ಜನ್ಮಗಳಲ್ಲಿ ಆ ಕಾಲಕ್ಕೆ ಸಿನಿಮಾ ಇತ್ತೋ ? ಮೈಸೂರಿನಲ್ಲಿ ಟಾಕೀಸುಗಳು ಇದ್ದವೋ ? ಎಲ್ಲವೂ ಕೇವಲ ಊಹೆ ! ನಾಯಿ ಮಲಗಿದೆ ಹೀಗಿದ್ದೆಲ್ಲಾ ನಗುವುದಕ್ಕೆ ಕಾರಣವಾಗುತ್ತದೆ. ಕೇವಲ ವ್ಯಾವಹಾರಿಕವಾಗಿ ದುಡಿಮೆಗೊಂದು ದಾರಿಮಾಡಿಕೊಳ್ಳುವ ಸಲುವಾಗಿ ಕೆಲವರು ಪುನರ್ಜನ್ಮವನ್ನು ತಿಳಿಸುತ್ತೇವೆ ಎಂದು ನಡೆಸುವ ಹಿಪ್ನಾಟಿಸಂ ಬಗ್ಗೆ ಈ ಕಥೆ!

    ಇನ್ನು ಪುನರ್ಜನ್ಮ ಲೊಳಲೊಟ್ಟೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಇದಕ್ಕೆ ಸಾಕಷ್ಟು ಸಾಕ್ಷಾಧಾರಗಳು ನನ್ನಲ್ಲಿವೆ. ಹಲವು ಘಟನೆಗಳನ್ನೂ ಆಧಾರವಾಗಿ ನೋಡಬಹುದಾಗಿದೆ. ಯಾವ ಆತ್ಮ ಎಲ್ಲಿ ಜನಿಸಬೇಕು ಮತ್ತು ಏನೇನು ಉಪಭೋಗಿಸಬೇಕು ಎಂಬುದು ವಿಧಿನಿಯಮ. ಮೊಬೈಲ್ ನಲ್ಲಿರುವ ಸಿಮ್ಮು 3g ಆಗಿದ್ದರೆ ಅದರ ಅನುಕೂಲಗಳೇ ಬೇರೆ, ಸಾದಾ ಸಿಮ್ಮಿಗೆ ಬೇರೆ ವ್ಯವಸ್ಥೆ, ಅನ್ದ್ರಾಯ್ದ್ ಮೊಬೈಲ್ ಗೇ ಬೇರೆ ವ್ಯವಸ್ಥೆ ಹೇಗೋ ಹಾಗೇ ಆತ್ಮ ಆಸೀನವಾಗುವ ದೇಹ ಮತ್ತು ಪರಿಸರವನ್ನು ಅವಲಂಬಿಸಿ ವ್ಯವಹರಿಸುತ್ತದೆ, ತಾನು ಪಡೆದುಬಂದ ಭಾಗ್ಯವನ್ನೋ/ನಟದೃಷ್ಟತೆಯನ್ನೋ ಅನುಭವಿಸುತ್ತದೆ. ಹೀಗಾಗಿ ಪುನರ್ಜನ್ಮದ ಪರಿಪೂರ್ಣ ಮಾಹಿತಿ ಪಡೆಯದವರು ಅದನ್ನು ಲೊಳಲೊಟ್ಟೆ ಎನ್ನಬೇಕಾಗಬಹುದು.

    ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು

    ReplyDelete
    Replies
    1. ವಿ.ಆರ್. ಭಟ್ ಅವರಿಗೆ ವಂದನೆಗಳು.

      ಪುನರ್ಜನ್ಮದ ಬಗ್ಗೆ ನಿಮ್ಮ ನಂಬಿಕೆಗಳ ಬಗ್ಗೆ ನನಗೆ ಯಾವ ಅಭ್ಯಂತರವೂ ಇಲ್ಲ.

      ಎಲ್ಲಾರೂ ಒಪ್ಪಬೇಕಾದರೆ ಸಂಶಯಾತೀತವಾಗಿ ಸಮರ್ಪಕವಾಗಿ ಸಿದ್ಧಾಂತಿಸಬೇಕಾಗುತ್ತದೆ ಎಂದು ಮಾತ್ರ ಹೇಳುತ್ತೇನೆ.

      Delete
    2. ಎಂ.ವಿ.ಶ್ರೀನಿವಾಸ ಅವರೇ, ತಮ್ಮ ಅಭಿಪ್ರಾಯ ಸರಿ, ಪುನರ್ಜನ್ಮವೂ ಸೇರಿದಂತೇ ಕೆಲವು ಘಟನೆಗಳಿಗೆ ಮೂಲ ಸಿಗುವುದಿಲ್ಲ, ವಿಚಿತ್ರ ಎನಿಸಿದರೂ ಸತ್ಯವಾದ ಘಟನೆಗಳು ಅನೇಕ. ಪ್ರಾಯಶಃ ಜಗನ್ನಿಯಾಮಕನ ಸೂತ್ರ ಬೇರೇನೋ ಇರಬೇಕು. ಆ ಕುರಿತು ಹುಡುಕಾಟ ವೈಜ್ಞಾನಿಕವಾಗಿ ನಡೆದೇ ಇದೆಯೇ ಹೊರತು ಸಿದ್ಧಾಂತವನ್ನು ಮಂಡಿಸುವ ಹಂತವನ್ನು ತಲ್ಪುವಲ್ಲಿ ಯಾವುದೂ ಪರಿಪೂರ್ಣವಾಗಿಲ್ಲ. ಸಾಧ್ಯವಾದಾಗ ಮತ್ತಷ್ಟು ಘಟನೆಗಳನ್ನು ತಮ್ಮೆಲ್ಲರ ಮುಂದೆ ಪ್ರಸ್ತಾಪಿಸುತ್ತೇನೆ. ಧನ್ಯವಾದಗಳು

      Delete
  6. ಚೆಲೋ ಕಲ್ಪನೆಯ ಹೆಣಿಗೆ. ಭಟ್ಭಾಗ.

    - ಸಿರಿರಮಣ.

    ReplyDelete