ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, September 11, 2011

'ಹಯಗ್ರೀವ' ಪುರಾಣ !


'ಹಯಗ್ರೀವ' ಪುರಾಣ !

ಪುರಾಣ ಹೇಳುವುದರಲ್ಲಿ ನನ್ನದು ಎತ್ತಿದಕೈ ಎಂಬುದು ನೀವೇ ಹೇಳಿದ ಹಾಗಿತ್ತಪ್ಪ, ಅದನ್ನು ವಾಪಸ್ಸು ಪಡೆದುಕೊಂಡಿರೋ ಅಲ್ಲಾ ಇನ್ನೂ ಭಿನ್ನಮತವಿಲ್ಲದ ಸಹಮತ ಇದೇಯೋ ಅದರ ಅರಿವು ಬರಬೇಕಾದರೆ ನಿಮ್ಮ ವೋಟ್ ಆಫ್ ಕಾನ್ಫಿಡೆನ್ಸ್ ಕರೆಯಬೇಕಾಗುತ್ತದೇನೋ. ಒಂದು ಮಾತು ನೆನಪಿರಲಿ ಮಹನೀಯರೇ, ನಾನು ಬರೆಯಲು ಕುಳಿತ ಖುರ್ಚಿ ನನ್ನ ಸ್ವಂತದ್ದು, ಈ ಖುರ್ಚಿಗಂತೂ ಚುನಾವಣೆ ಇಲ್ಲ-ನಾನಿರುವರೆಗೆ ನನ್ದೇ ಆಗಿರುತ್ತದೆ ಎಂಬುದನ್ನು ನಿಮ್ಮೆಲ್ಲರಿಗೆ ತಿಳಿಸಲು ವಿಚಿತ್ರವಾಗಿ ನಕ್ಕು ಹೇಳುತ್ತಿದ್ದೇನೆ. ಡೀನೋಟಿಫಿಕೇಶನ್ನು ಗಣಿವ್ಯವಹಾರ ಯಾವುದರಲ್ಲೂ ನಾನು ಸೇರಿಕೊಂಡಿಲ್ಲ ಎಂಬುದು ಅಣ್ಣಾ ಹಜಾರೆಯಾಣೆ ಸತ್ಯ-ಅದು ತಮಗೂ ಗೊತ್ತಿರುವ ವಿಷಯವಾಗಿರಬಹುದು ಎಂಬ ಮನೋಭಾವನೆ ನನ್ನದು. ಕಾಸುಕೊಟ್ಟು ಯಾವುದೇ ಪ್ರಶಸ್ತಿಯನ್ನು ಪಡೆದುಕೊಳ್ಳಲಾಗದ ನಿರ್ಜೀವಿ ನಾನು ಎಂಬುದೂ ಕೂಡ ಈಗಾಗಲೇ ನಿಮಗೆ ಮನದಟ್ಟಾಗಿರುವುದರಿಂದ ಆ ಬಗ್ಗೆ ಜಾಸ್ತಿ ಸ್ಕ್ರೂ ಹಾಕುವುದು ಬೇಡ.

ಅಷ್ಟಾದಶ ಪುರಾಣಗಳನ್ನು ಓದೀ ಓದೀ ಕೂಚುಭಟ್ಟರಾದ ನಮ್ಮ ಸೊಂಡೆ ತಿಪ್ಪಾಭಟ್ಟರ ಖಾಸಾ ದೋಸ್ತರಾದ ಕುಳ್ ತಿಪ್ಪಾಭಟ್ಟರ ಸುದ್ದಿ ಹೇಳುವರೇ ತಮ್ಮಲ್ಲಿಗೈತಂದೆ. ಈ ಸಲ ಮತ್ತೆ ಆರಂಭದ ಶ್ಲೋಕಗಳನ್ನೆಲ್ಲಾ ಹೇಳುತ್ತಾ ಕೂರುವುದಿಲ್ಲ-ಹೇಳೀ ಕೇಳೀ ಮೊದಲೇ ಪುರಾಣ...ಇನ್ನೂ ಉದ್ದವಾದರೆ ಎದ್ದು ಓಡಿಹೋದರೆ ಏನುಗತಿ ? ಹಾಗೂ ಕಟ್ಟಾ ಸಂಪ್ರದಾಯವಾದಿಗಳು ಈಗ ಮಾತನಾಡುವ ಹಾಗಿಲ್ಲ ಯಾಕೆಂದ್ರೆ ’ಕಟ್ಟಾ’ ಎಂಬುದಕ್ಕೆ ದಿನಕ್ಕೊಂದು ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಆರಂಭದ ಪುಣ್ಯಕಾಲದಲ್ಲಿ ನಿಮಗೊಂದು ಹಿತವಚನ ಹೇಳಿಕೊಡುತ್ತೇನೆ ಕೇಳುವಂಥವರಾಗಿ--ಒಂದೊಮ್ಮೆ ಯಾವುದೇ ಕಾರಣಕ್ಕೆ ಯಾರೇ ಶ್ರೀಕೃಷ್ಣ ಜನ್ಮಸ್ಥಾನ ಸೇರಿದರೂ ಒಳಸೇರಿತ್ತಿದ್ದಂತೇಯೇ ವಿಚಿತ್ರವಾದ ಕಾಯಿಲೆಗಳಿವೆ ಎಂದು ಮಾಧ್ಯಮಗಳಿಗೆ ಹೇಳಿಕೆ ಬರುವಹಾಗೇ ಮಾಡಿ, ನಿಧಾನವಾಗಿ ಯಾವುದಾದರೂ ವೈದ್ಯರನ್ನು ಗುತ್ತಿಗೆ ಹಿಡಿದು ಆಸ್ಪತ್ರೆ[ದಡ]ಸೇರಿ ಬಿಡಿ. ಅಲ್ಲಿಗೆ ನೀವು ಆಲ್ಮೋಸ್ಟು ಆಚೆ ಬಂದಹಾಗೇ ಎಂದು ತಿಳಿಯಿರಿ!

ಮೈಮೇಲೆ ದರ್ಶನ ಬರುತ್ತದೆ ಎಂಬುದು ನಮ್ಮ ಕರಾವಳಿ ಜಿಲ್ಲೆ ಕಡೆ ಮಾತು. ತೂಗುದೀಪದ ಬೆಳಕಲ್ಲಿ ದೇವರನ್ನು ಕಂಡ ಜನ ಹೊರಗಿನ ಸೂರ್ಯನ ಪ್ರಭೆಯಲ್ಲಿ ದರ್ಶನವನ್ನು ಸರಿಯಾಗಿ ಪಡೆದುಕೊಂಡು ಭ್ರಾಂತಿಕಳೆದವರಗಿದ್ದಾರೆ! ಈ ಕನ್ನಡ ದೇಶದಲ್ಲಿ ಇನ್ನೆಷ್ಟು ಜನರಿಗೆ ’ದರ್ಶನ’ ಬಂದು ಇಳಿಯಬೇಕೋ ಗೊತ್ತಾಗುತ್ತಿಲ್ಲ, ಆದರೆ ಹಲವಾರು ಜನರಿಗೆ ’ದರ್ಶನ’ ಬರುವುದು ಇನ್ನೂ ಲೋಕಕ್ಕೆ ತಿಳಿದಿಲ್ಲ, ಒಂದೊಂದಾಗಿ ಹೊರಬರುತ್ತದೆ: ಕಥೆಯಲ್ಲ-ಜೀವನ!

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಮರಮಾನಂದಮಾಧವಮ್ ||

ಅಪರೂಪಕ್ಕೆ ಈ ಸತ್ಯ ವಾಕ್ಯದ ಅರ್ಥ ಜನರಿಗೆ ಆಗುತ್ತಿದೆ ಎಂಬುದು ಜನಜನಿತವಾದ ಸಂಗತಿಯಾಗಿದೆ. ಉಪ್ಪು ತಿಂದವ ನೀರು ಕುಡೀಲೇಬೇಕು ಎಂಬ ಅಪ್ಪಟ ಕನ್ನಡದ ಸ್ಲೋಗನ್ನು ಬಳಸಿ ರೋಷ ತೋರ್ಪಡಿಸಿದ ನಮ್ಮ ಬಾಂಧವರ ಕ್ಲೇಶ ನಿವಾರಣೆಗಾಗಿ ತಿಪ್ಪಾ ಭಟ್ಟರು ’ ಹಯಗ್ರೀವ’ ಮಾಡಿದ್ದಾರೆ !

ಸ್ವಸನಸ್ಪರ್ಶನೋ ವಾಯುಃ ಮಾತುರಿಷ್ವಾ ಸದಾಗತಿಃ |
ಪ್ರಷದಷ್ವೋ ಗಂಧವಹೋ ಗಂಧವಾಹಾ ನಿಲಾಶುಗಾಃ ||

ತಪ್ಪೆಷ್ಟು ಸರಿಯೆಷ್ಟು ಎಂಬ ಅರಿವಿಲ್ಲದೇ ಈ ಮೇಲಿನಂತೇ ವಾಯುವರ್ಣನೆಯನ್ನು ಈಗಲೇ ಮಾಡಿಬಿಟ್ಟಿದ್ದೇನೆ, ಸಂಸ್ಕೃತ ವಿದ್ವಾಂಸರೇ ದಯಮಾಡಿ ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ. ಯಾಕೆ ವಾಯುಸ್ತುತಿಮಾಡಿದೆ ಎಂಬುದನ್ನು ನಿಮಗೆ ಮುಂದೆ ಹೇಳುತ್ತಾ ಹೋಗುತ್ತೇನೆ.

ವಾಲಿ ಸುಗ್ರೀವ ಇಂಥವರ ಬಗ್ಗೆ ಕೇಳಿದ ನಮ್ಮಲ್ಲಿ ಕೆಲವರಿಗೆ ಹಯಗ್ರೀವನೆಂಬ ರಕ್ಕಸನ ಬಗೆಗೂ ತಿಳಿದಿರಲು ಸಾಕು. ಕೆಲವರಲ್ಲಿ ಹಯಗ್ರೀವ ದೇವರು ಎಂಬ ನಂಬಿಕೆಯೂ ಇದೆ. ಆದರೆ ನಮ್ಮ ತಿಪ್ಪಾ ಭಟ್ಟರಿಗೆ ಹಯಗ್ರೀವ ಎಂದರೆ ಒಂದು ಸಿಹಿ ತಿನಿಸು. ತಿಪ್ಪಸಂದ್ರದ ಮೊದಲನೇ ಹಂತದ ಮೂರನೇ ರಸ್ತೆಯ ನಾಕನೇ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಗುಡಾಣ ಹೊಟ್ಟೆಯ ಕುಳ್ಳಗಿನ ಆಸಾಮಿಯನ್ನು ನೀವು ನೋಡಿರಲಿಕ್ಕೂ ಸಾಕು! ನೋಡಿಲ್ಲ ಎಂದರೆ ಬಿಡಿ ಪರವಾ ಇಲ್ಲ ನಾನೇ ಹೇಳುತ್ತಿದ್ದೇನೆಲ್ಲ ಅವರ ಬಗ್ಗೆ ನೋಡುವುದಕ್ಕಿಂತಾ ಕೇಳುವುದು ಭಾರೀ ಇದೆ.

ಸ..ರಿ...ಗ..ಮ..ಪ ಅಂತಲೇ ಇರ್ತಿದ್ದ ಭಟ್ಟರದ್ದು ಅಡುಗೆ ವೈವಾಟು. ಅಲ್ಲೀ ಇಲ್ಲಿ ಪ್ರೀತಿಯಿಂದ ಕರೆದೋರ ಮನೆಗೆ ಅಡಿಗೆ ಮಾಡಲಿಕ್ಕೆ ಹೋಗಿ ಕೊಟ್ಟ ಅಷ್ಟಿಷ್ಟು ಹಣವನ್ನು ಎತ್ತಿಕೊಂಡು ಕಮಕ್ ಕಿಮಕ್ ಎನ್ನದೇ ಮನೆಕಡೆ ಹೆಜ್ಜೆಹಾಕುವ ಬಡಪಾಯಿ ಬ್ರಾಹ್ಮಣ ಶ್ರೀಮಾನ್ ತಿಪ್ಪಾ ಭಟ್ಟರು. ತಿಪ್ಪಸಂದ್ರಕ್ಕೆ ಅವರು ಬರುತ್ತಿದ್ದುದನ್ನು ಬೆಂಗಳೂರು ಮಹಾನಗರ ಪಾಲಿಕೆಯವರು ಗಮನಿಸಿರಬೇಕು ಅದಕ್ಕೇ ಇರಬೇಕು ಅದು ತಿಪ್ಪ ಸಂದ್ರ ! ಸಾವಿರ ತೂತುಗಳಿರುವ ಹಳೇ ಕೊಡೆ ಸಲ್ಪ ಕೊಳೆ ಮಸಿ ತಗುಲಿದ ಒಂದುಕಾಲಕ್ಕೆ ಬಿಳಿಯದೇ ಆಗಿದ್ದ ಪಂಚೆ, ಸರ್ವಕೆಲಸಕ್ಕೂ ಆಸ್ಕರ ನೀಡುವ ಹೆಗಲು ಅಂಗವಸ್ತ್ರ, ತಾರೆಗಳ ತೋಟದಂತೇ ಕಾಣುವ ತೂತುಬಿದ್ದ ಗಂಜೀಪರಾಕು [ಬನೀನು], ಬಸ್ಸಲ್ಲಿ ಓಡಾಡುವಾಗ ಮೇಲಿಂದ ಹಾಕಿಕೊಳ್ಳಲು ಒಂದು ಬುಶ್ ಕೋಟು [ತೆಳು ನೀಲಿ ಬಣ್ಣದ ಅರ್ಧ ತೋಳಿನ ಅಂಗಿ], ಕಾಲಿಗೆ ಸವೆದು ಇನ್ನೇನು ತೂತು ಬೀಳಲಿರುವ ಹವಾಯಿ. ಭಟ್ಟರ ಅಂಗಿ ಆ ಕಡೆ ತುಂಬುತೋಳಿನದ್ದೂ ಅಲ್ಲ ಈಕಡೆ ಅರ್ಧ ತೋಳಿನದ್ದೂ ಅಲ್ಲ--ಇವೆರಡರ ನಡುವೆ ತೋಳಿನ ಗಂಟು ಕಳಿದು ಮೊಳಕೈಯನ್ನು ಒಂದಂಗುಲ ಆವರಿಸುವ ಅಂಗಿ ---ಇದಕ್ಕೆ ಏನಂತೀರೋ ನೀವೇ ಹೆಸರಿಟ್ಟುಕೊಳ್ಳಿ.

ಭಟ್ರೀ ಅಂದುಬಿಟ್ರೆ ಸಾಕು ಪಾಪ ಮೂವತ್ತೆರಡರಲ್ಲಿ ಉಳಿದಿರುವ ಮೂರ್ನಾಲ್ಕು ಹಲ್ಲನ್ನು ರಾಷ್ಟ್ರೀಯ ಹೆದ್ದಾರಿಯ ಮೈಲಿಗಲ್ಲಿನಂತೇ ತೋರಿಸುತ್ತಾ ಓಡಿ ಬಂದು " ನನ್ ಕರದ್ರಾ " ಅನ್ನೋರು. ಸಲ್ಪ ಸಲುಗೆ ಇದ್ದವರಿಗೆಲ್ಲಾ ಬೇಸಿಗೆಯಾದರೆ " ತಂಪಾಗಿ ಮಜ್ಜಿಗೆ ಕುಡೀರಿ " ಎಂದು ನಾಕಾರು ಪಾತ್ರೆ ತಡಕಾಡಿ ಮಜ್ಜಿಗೆ ಮಾಡಿಕೊಂಡು ತಂದುಬಿಡುತ್ತಾರೆ. ಯಾರಲ್ಲೇ ಏನೇ ಕಾರ್ಯಕ್ರಮ ಜರುಗಿದರೂ ಭಟ್ಟರನ್ನು ಕರೆದರೆ ಅವರ ಮೊದಲೆ ಆದ್ಯತೆಯ ತಿನಿಸು ’ಹಯಗ್ರೀವ’ !

ಹಯಗ್ರೀವ ಬಗ್ಗೆ ನಿಮಗೆ ಈ ಮೊದಲ್ರ್‍ಏ ಒಮ್ಮೆ ವಿವರಿಸಿದ ನೆನಪು, ಇರಲಿ, ಮತ್ತೊಮ್ಮೆ ಹೇಳೋದ್ರಿಂದ ನನ್ನ ಗಂಟೇನೂ ಹೋಗೋದಿಲ್ಲ, ಅಸಲಿಗೆ ಗಂಟುಕಟ್ಟಿದ ಆಸಾಮಿಯೇ ನಾನಲ್ಲ! ಕಡ್ಲೆ ಬೇಳೆಯನ್ನು ಚೆನ್ನಾಗಿ ತೊಳೆದು ಹದವಾಗಿ ಬೇಯಿಸಿ ಅದಕ್ಕೆ ಗೊತ್ತಾದ ಪ್ರಮಾಣದಲ್ಲಿ ಸಕ್ಕರೆ ಹಾಕಿ ಕಲಸಿ, ಸ್ವಲ್ಪ ಕಾಯಿತುರಿ ಪರಿಮಳಕ್ಕೆ ಯಾಲಕ್ಕಿ ಇವಿಷ್ಟು ಹಾಕಿ ಒಂದುಹದಕ್ಕೆ ಕಾಸಿ ಇಳಿಸಿದಾಗ ಅದು ಹಯಗ್ರೀವ ಎನಿಸಿಕೊಳ್ಳುತ್ತದೆ. ಹಯಗ್ರೀವ ತಿಂದ ತಾಸೆರಡು ತಾಸಿನಲ್ಲೇ ಬುರ್ ಬುರ್ ಬುರಕ್ ಎಂಬ ವಾಯುಭಾರ ಸಮತೋಲನ ಕ್ರಿಯೆ ಆರಂಭವಾಗಿಬಿಡುತ್ತದೆ! ಯಾಕೆಂದರೆ ಅದು ಕಡ್ಲೆ. ಬೇಳೆಗಳಲ್ಲೇ ವಾಯುವಿನ ಪರಮೋತ್ಫತ್ತಿಗೆ ಮೊದಲನೇ ಸ್ಥಾನ ಅಲಂಕರಿಸಿರುವುದು ಅವರೇ ಬೇಳೆ. ಮೊದಲನೇ ರನ್ನರ್ ಅಪ್ -- ಕಡ್ಲೆಬೇಳೆ, ಎರಡನೇ ರನ್ನರ್ ಅಪ್ ಅಲಸಂದೆ. ಸ್ಪರ್ಧೆಯಲ್ಲಿ ಎಲ್ಲಾ ಬೇಳೆಗಳೂ ಭಾಗವಹಿಸುತ್ತವೆ!

ನೀವು ಕಮ್ಮಿ ಬಜೆಟ್‍ನಲ್ಲಿ ಸಿಹಿತಿನಿಸು ಸಹಿತ ಔತಣವನ್ನು ಏರ್ಪಡಿಸಬೇಕು ಎಂದುಕೊಂಡರೆ ಸೀದಾ ತಿಪ್ಪಾಭಟ್ಟರನ್ನು ಕಂಡುಬಿಡಿ ಆಯ್ತಾ ? ಅವರಿಗೆ ಮೊಬೈಲ್ ಇಲ್ಲ, ಅವರ ಮಗಳ ಮೊಬೈಲ್ ನಂಬ್ರ ಈ ರೀತಿ ಇದೆ--೧೨೩೪೫೬೭೮೯೦. ಮೊದಲೇ ಹೇಳುತ್ತೇನೆ ಕೇಳಿ ಮಗಳು ಶರೀರದಲ್ಲಿ ಅಪ್ಪನನ್ನೂ ಮೀರಿಸಿದ್ದಾಳೆ, ಇನ್ನೂ ಬೆಳೆಯುತ್ತಲೇ ಇದ್ದಾಳೆ. ನಾಕಾರು ವರ್ಷಗಳ ಹಿಂದೆ ಅವಳ ಮೂವತ್ತೆರಡನೇ ವಯಸ್ಸಿಗೆ ಮದುವೆ ಎಂಬುದೊಂದನ್ನು ಮಾಡಿದ್ದರು. ಅದೇನಾಯ್ತೋ ತಿಳೀಲಿಲ್ಲ ಮದುವೆಯ ರಾತ್ರಿ ಓಡಿಹೋದ ಗಂಡ ಮತ್ತೆ ಮನೆಕಡೆ ಸುಳೀಲಿಲ್ಲ, ಮಗಳ ನಿಜರೂಪ ದರ್ಶನವಾಗಿ ಬೆಚ್ಚಿಬಿದ್ದಿರಬಹುದೆ ಎಂದುಕೊಂಡವರು ನಮ್ಮಂಥಾ ಪಡ್ಡೆಗಳು. ಹೀಗಾಗಿ ನೀವು ಇನ್ಯಾವುದೋ ಕಾರಣಕ್ಕೆ ಫೋನುಮಾಡುವುದರಲ್ಲಿ ಅರ್ಥವಿಲ್ಲಾ ಅಂದೆ! ಅಲ್ಲ ಪಾಪ ನೀವು ಹಾಗಲ್ಲ ಅಂತ ನನಗೆ ಗೊತ್ತು, ಆದರೂ ನಮ್ಮಲ್ಲಿ ಕೆಲವರಿಗೆ ಹೆಂಗಸರನ್ನು ಕಂಡರೆ ಏನೋ ಒಂಥರಾ ಅನುಕಂಪ, ಯಾರೋ ಭಟ್ಟರ ಮಗಳಂತೆ ಒಮ್ಮೆ ನೋಡಿಬಿಡುವಾ ಎಂದು ಕಾಲು ಹೊಡೆದರೂ ತಪ್ಪಲ್ಲ. ಆ ಕಡೆ ’ ಹಲೋ ’ ಎಂದ ಗೊಗ್ಗರು ದನಿಗೆ ಕೆಲವ್ರು ಕಾಲೇ ಕಟ್ ಮಾಡಿಬಿಡ್ತಾರಂತೆ. ಕಾಲು ಅಂದ್ರೆ ಗೊತ್ತಾಯ್ತಲ್ಲ ಮಾರಯ್ರೆ ? ಅದು ಶರೀರದ ಕಾಲಲ್ಲ ಮೊಬೈಲ್ ಕರೆ, ಮೊಬೈಲ್ ಕಾಲು!

ಭಟ್ಟರು ಯಾವುದಕ್ಕೂ ಬೇಸರಮಾಡಿಕೊಂಡ ಜನ ಅಲ್ಲ. ಅವರಾಯ್ತು ಅವರ ಕೆಲ್ಸವಾಯ್ತು. ಮಗಳ ಗಂಡ ಬಿಟ್ಟು ಮಗಳು ತಮ್ಮನೆಯಲ್ಲೇ ಉಳಿಯುವ ಪ್ರಮೇಯ ಬಂತಲ್ಲ ಅಂತಲೂ ಚಿಂತಿಸಲಿಲ್ಲ. ಹೇಗೋ ದೇವರು ನಡೆಸುತ್ತಾನೆ ಎಂಬ ತುಂಬಿದ ಹಂಬಲ ಅವರದ್ದು. ನಿತ್ಯ ಎಲ್ಲಾದರೂ ಅಡಿಗೆ ಕೆಲಸಮಾಡಿ ಒಂದಷ್ಟು ಹಯಗ್ರೀವ ಕಲಸಿ, ತಾವೂ ಸಲ್ಪ ತಿಂದು ಮಜ್ಜಿಗೆ ಕುಡಿದು ಡರ್ ಎಂದು ತೇಗಿಬಿಟ್ಟರೆ ಮುಂದಿನ ಡರ್ ಎಲ್ಲಾ ಹಿಂಬಾಗಿಲಿನಿಂದಲೇ ನಡೆಯುತ್ತಿರುತ್ತದೆ ! ಪ್ರತೀ ಸರ್ತಿ ಅಪಾನವಾಯು ಸ್ಫೋಟಗೊಂಡಾಗಲೂ ಭಟ್ಟರಿಗೆ ಏನೋ ಸಮಾಧಾನ, ಹರೇರಾಮ ಹರೇರಾಮ ಎನ್ನುವ ಅವರ ಹತ್ತಿರದಲ್ಲಿ ಯಾರದರೂ ’ಆಪ್ತರು’ [ಅರ್ಥವಾಯಿತಲ್ಲ? ] ಇದ್ದರೆ " ಹೈಂಕ್ಕ ...ಸಲ್ಪ ಸಡ್ಲಾಯ್ತು " ಎಂಬುದನ್ನು ನಾವು ಕೆಲವೊಮ್ಮೆ ಕದ್ದುಕೇಳಿ ಖುಷಿಪಟ್ಟಿದ್ದಿದ್ದೆ. ಆಪಸ್ನಾತಿಯಲ್ಲಿ ನಾವು ಕಿಲಾಡಿಗಳು ಭಟ್ಟರು ’ ವಾಯುಸ್ತುತಿ ’ ಮಾಡುತ್ತಿದ್ದಾರೆ ಎಂದುಕೊಂಡು ನಮ್ಮಷ್ಟಕ್ಕೇ ನಾವು ನಗುವುದಿದೆ. ಜಗತ್ತಿನಲ್ಲಿ ಏನೇ ಏನಾಗಿ ಹೋದರೂ ಭಟ್ಟರು ಹಯಗ್ರೀವ ಮಾಡುವುದನ್ನಂತೂ ಸದ್ಯ ನಿಲ್ಲಿಸುವುದಿಲ್ಲ.

ಕೆಲವೊಮ್ಮೆ ಸಮಾಜದಲ್ಲಿ ಹೀಗೂ ಇರುತ್ತದೆ. ಹೇಗೆ ಎಂದರೆ ಅಕ್ಕಿಮೇಲೂ ಆಸೆ ನೆಂಟರಮೇಲೂ ಪ್ರೀತಿ ! ಅಕ್ಕಿ ಖರ್ಚಾಗಲೂ ಬಾರದು ನೆಂಟರು ಉಂಡಹಾಗೂ ಇರಬೇಕು ! ಎಂಥಾ ಕಸರತ್ತು ಅಲ್ವೇ? ಅಂಥಾ ಕೆಲವು ಜನರಿಗೆ ಏನಾದರೂ ಕಾರ್ಯಕ್ರಮ ನಡೆಸಿದರೆ ಕಮ್ಮಿ ಅಂದ್ರೆ ಅಂಥಾ ಕಮ್ಮಿ ಖರ್ಚಿನಲ್ಲಿ ಸಾಗಬೇಕಾಗುತ್ತದೆ. ಹೇಳಿಕೊಳ್ಳಲು ಔತಣದಂತಿರಬೇಕು, ಆದರೆ ಜಾಸ್ತಿ ಖರ್ಚು ಮಾಡುವಂತಿಲ್ಲ ! ೫೦೦ ಜನರಿಗೆ ಅಡಿಗೆ ಮಾಡಿದ್ದರಲ್ಲಿ ಸಾವಿರ ಮಂದಿ ಊಟಮಾಡಿ ಏಳಬೇಕು. ಅವರು ಹೊಟ್ಟೆ ತುಂಬಾ ಉಂಡರೋ ಬಿಟ್ಟರೋ ಶಿವನೇ ಬಲ್ಲ-ಅದು ಅಂಥವರಿಗೆ ಬೇಕಾಗೂ ಇಲ್ಲ. ಹೊರಡುವಾಗ ಒಳಗೆ ಕೊಳೆಯಲು ಶುರುವಾದ ನುಸಿರೋಗದ ಮುಷ್ಠಿಯಲ್ಲಿ ಮೂರು ಹಿಡಿಸುವ ಹೊಸ ತೆಂಗಿನಕಾಯಿ ಒಂದೆರಡು ಎಲೆ, ತಿನ್ನಲು ಸಹ್ಯವಲ್ಲದ ಅಡಿಕೆ ಚೀಟು ಇಟ್ಟು ತಾಂಬೂಲ ಕೊಟ್ಟು ಬೃಹದಾಕಾರವಾಗಿ ಹಲ್ಲುಗಿಂಜಿ ಬೀಳ್ಕೊಟ್ಟುಬಿಟ್ಟರೆ ಅಲ್ಲಿಗೆ ಕಾರ್ಯಕ್ರಮ ಅದ್ಧೂರಿಯಲ್ಲಿ ಮುಗಿದಹಾಗೇ ಆಯ್ತು! ಅಂಥವರಿಗೆ ಅತಿ ಕಡಿಮೆ ವೆಚ್ಚದಲ್ಲಿ ಮಾಡಿಕೊಡಬಹುದಾದದ್ದು ಹಯಗ್ರೀವ.

ಇನ್ನು ಹಯಗ್ರೀವದ ಬಗ್ಗೆ ಏನು ಹೇಳಲಿ ? ಅಪ್ಪಟ ದೇಸೀ ಸಿಹಿತಿನಿಸು. ನಕಲು ಮಾಡಿದರೂ ಒಂದೇ ಮಾಡದಿದ್ದರೂ ಒಂದೇ. ಸ್ವಲ್ಪ ಹೆಚ್ಚೋ ಕಮ್ಮಿಯೋ ಬೇಯಿಸಿದ ಯಾವ ಬೇಳೆಗೇ ಆಗಲಿ ಹದವಾಗಿ ಸಕ್ಕರೆ ಯಾಲಕ್ಕಿ ಹಾಕಿ ತಿಂದರೆ ರುಚಿ ಸಹಜವೇ. ಅದರಲ್ಲೂ ಹಲವು ತಿನಿಸುಗಳಿಗೆ ಮೂಲವಸ್ತುವಾದ ಕಡ್ಲೆಯಿಂದ ಮಾಡಿದ ಕಡ್ಲೆಬೇಳೆ ಅವುಗಳಲ್ಲೇ ಉತ್ಕೃಷ್ಟವಾದುದು. ಅಡ್ಡಡ್ಡ ಬೆಳೆಯುವುದು ಬಿಟ್ಟರೆ ಇನ್ಯಾವುದೇ ಅಡ್ಡಪರಿಣಾಮವಿಲ್ಲ!! ಉದ್ದ ಪರಿಣಾಮವಿರುವುದು ವಾಯುಸ್ತುತಿಮಾಡಿದರೆ ಹೊರಟುಹೋಗಿ ವಾಯುಮಂಡಲದಲ್ಲಿ ವಿಲೀನವಾಗಿಬಿಡುತ್ತದೆ ! ಹೀಗಾಗಿ ದುಷ್ಪರಿಣಾಮ ರಹಿತ ಘನವಸ್ತುವಿನಾಕಾರವೂ ಇಲ್ಲದ ದ್ರವವೆಂದು ಕರೆಯಲೂ ಅಸಾಧ್ಯವಾಗಿರುವ ಮಧ್ಯಂತರ ರೂಪದ ಈ ತಿನಿಸಿನ ವಸ್ತುವಿಗೆ ವೈಜ್ಞಾನಿಕವಾಗಿ ಯಾವ ರೂಪದ್ದು ಎಂಬುದನ್ನೂ ನೀವೇ ಹೆಸರಿಸಿಕೊಳ್ಳಬೇಕಾದ ಪ್ರಸಂಗ ಇದೆ ! ದ್ರವವಸ್ತುವನ್ನು ಕಾಯಿಸಿದಾಗ ಅದು ಆವಿಯಾಗಿ ಅನಿಲವಾಗಿ ಮಾರ್ಪಡುತ್ತದೆ ಎಂಬುದನ್ನು ತಿಳಿದಿದ್ದರೂ ಅದೂ ಅಲ್ಲದ ಇದೂ ಅಲ್ಲದ ಈ ಇದನ್ನು ತಿಂದಾಗ ಅದು ಅನಿಲರೂಪದಿಂದ ಹೊರಬರುತ್ತದೆ ಎಂಬುದನ್ನು ಯಾವುದೇ ಕೋರ್ಟಿನ ಕಟಕಟೆಯಲ್ಲಿ ನಿಂತು ಸಾಕ್ಷೀಸಹಿತ ಸಾಬೀತುಪಡಿಸಲು ಮರ್ಯಾದೆಗಂಜಿ ಹಿಂಜರಿವ ’ವಿಷಯವಸ್ತು’ ಇದಾಗಿದೆ!

ಮುದುಕರು ಅಕಸ್ಮಾತ್ ತಿಂದುಬಿಟ್ಟರೆ ಜೊತೆಗೆ ಹಿಮಾಲಯ ಡ್ರಗ್ ಕಂಪನಿಯ ಗ್ಯಾಸೆಕ್ಸ್ ಮಾತ್ರೆಯನ್ನೂ ಸೇವಿಸುವುದು ಒಳಿತು! ಆಯುರ್ವೇದ ಭಂಡಾರಗಳಲ್ಲಿ ವಾಯುವಿಳಂಗ ಎಂಬ ಚಿಕ್ಕ ಚಿಕ್ಕ ಬೀಜದ ರೂಪದ ಗಿಡಮೂಲಿಕೆ ದೊರೆಯುತ್ತದೆ,ಅದನ್ನು ಅರೆದು ಹುಡಿಮಾಡಿ ನೀರಿಗೆ ಹಾಕಿ ಕುಡಿದರೂ ಅನುಕೂಲ. ಕೆಲವು ಮುದುಕರಿಗೆ ಸುಧಾರಿಸಿಕೊಳ್ಳಲು ದಿನವೆರಡು ಹಿಡಿದೀತು, ಗಾಭರಿಯಾಗಬೇಡಿ ಸಾಯುವ ಕೇಸಂತೂ ಅಲ್ಲ!! ಹೆಂಗಸರು ತಿಂದರೆ ಮುಖ ಮುಖ ನೋಡ್ಕೊಂಡು ನಗ್ತಾರೆ. ಆ ನಗುವಿನ ಆಸುಪಾಸಿನಲ್ಲೆಲ್ಲೋ ಆ ವಾಯುವನ್ನು ವಾಯುಮಂಡಲಕ್ಕೆ ಉಡ್ಡಯನ ಮಾಡಿಬಿಡುತ್ತಾರೆ--ಗೊತ್ತೇ ಆಗುವುದಿಲ್ಲ ಮಾರಯ್ರೆ !

ತಿಪ್ಪಾ ಭಟ್ಟರು ಯಾಕೆ ಹಯಗ್ರೀವವನ್ನೇ ಮಾಡುತ್ತಾರೆಂದರೆ ಅವರಿಗೆ ತಯಾರಿಸಲು ಬರುವ ಸಿಹಿತಿನಿಸುಗಳಲ್ಲಿ ಅತೀ ಸುಲಭದ ತಿನಿಸು ಇದಾಗಿದೆ. ಪಾಕ-ಗೀಕ ಎಂತ ಜಾಸ್ತಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅವರು ಮೂರು ಸಲ ಹರೇರಾಮ ಎನ್ನುವುದರೊಳಗೆ ಬೇಳೆ ಬೆಂದಿರುತ್ತದೆ, ಬಾಣಲೆಗೆ ಹಾಕಿ ಸಕ್ಕರೆಹಾಕಿ ಯಾಲಕ್ಕಿ ಪುಡಿ ಹಾಕಿ ತಿರುಗಿಸುತ್ತಾ ಇನ್ನೊಮ್ಮೆ ಹರೇರಾಮ ಎಂದುಬಿಡುವಷ್ಟರಲ್ಲಿ ಹಯಗ್ರೀವ ರೆಡಿ ! ಸಾಕು ಜಾಸ್ತಿ ಬರೆಯಲಾರೆ, ತೀರಾ ಜಾಸ್ತಿಯಾಗಿಬಿಟ್ಟರೆ ನೀವು ಭಟ್ಟರನ್ನು ಹುಡುಕಿಕೊಡಿ ಅಂದ್ರೆ ಕಷ್ಟ. ಅವರು ನಿಂತಲ್ಲೇ ನಿಲ್ಲೋ ಪ್ರಾಣಿ ಅಲ್ಲ! ಭಟ್ಟರದ್ದು ರಾಹುಪಾದ [ಪಾದದ ಕೆಳಮೈಯ್ಯಲ್ಲಿ ಮಧ್ಯದಲ್ಲಿ ಸ್ವಲ್ಪ ತಗ್ಗಿನ ಜಾಗವಿರುತ್ತದೆ, ಅದಿಲ್ಲದೇ ಸಪಾಟಾಗಿ ಹಲಗೆಯಂತೇ ನೇರವಾಗಿರುವ ಪಾದ ಉಳ್ಳವರನ್ನು ರಾಹುಪಾದಿಗರು ಎನ್ನುತ್ತಾರೆ ಎಂಬುದಾಗಿ ಯಾರೋ ಹೇಳಿದ್ದನ್ನು ನಾನು ಕೇಳಿಕೊಂಡು ನಿಮಗೆ ಇಲ್ಲಿ ಹೇಳಿದ್ದೇನೆ.] ಅಂತ ತಿಳಿಯಿತು. ರಾಹುಪಾದದ ಬಗ್ಗೆ ಮಾಧ್ಯಮದವರಿಗೆ ಗೊತ್ತಾದರೆ ಹಳ್ಳಿಯಲ್ಲಿ ಕೆಲಸವಿಲ್ಲದ ಹಕ್ಕಿಶಕುನದವರಿಗೆ ಬಣ್ಣ ಹಚ್ಚಿ ಡ್ರೆಸ್ಸುಮಾಡಿಸಿ ಅವರನ್ನು ರಾತ್ರೋರಾತ್ರಿ ’ಗುರೂಜಿ’ಮಾಡಿ ಕೂರಿಸಿಕೊಂಡು ದಿನಗಟ್ಟಲೆ ಅದರಬಗ್ಗೇ ಕೊರೆಯಲು ಆರಂಭಿಸಿಬಿಡುತ್ತಾರೆ. ಅದ್ಕೇ ಅಂದೆ ನೀವೂ ಕೇಳ್ಕೊಂಡು ಸುಮ್ನಾಗಿ, ಹಲುಬ್ತಾ ತಿರುಗ್ಬೇಡಿ, ನಿಮ್ದು ರಾಹುಪಾದವದರಂತೂ ನೀವು ನಿಂತಲ್ಲಿ ನಿಲ್ಲುವುದಿಲ್ಲ, ಇನ್ನು ಯಾವ ಯಾವ ಮಾಧ್ಯಮದ ಕಚೇರಿಗೆ ಲಗ್ಗೆ ಇಡಬೇಕೋ ದೇವರೇ ಬಲ್ಲ !

|| ಇತಿ ಶ್ರೀ ಹಯಗ್ರೀವ ಪುರಾಣೇ ಪೂರ್ವೋತ್ತರ ಅಭಯಖಂಡೇ ಏಕೋಧ್ಯಾಯಃ ||

|| ಸರ್ವತ್ರ ಹವಯಗ್ರೀವ ಪ್ರಾಪ್ತಿರಸ್ತು || ||ಸಮಸ್ತ ಸನ್ಮಂಗಳಾನೀ ಭವಂತು ||

ಇನ್ನೇನೇನ್ ಬೇಕೋ ನೀವೇ ಹೇಳ್ಕೊಳಿ ನಾನು ಎದ್ದು ಹೊರಟೆ ........

Thursday, September 8, 2011

ಸಾರ್ಸಂಬಾಳೆ ಹೂವು ಸೀತಾರಾಂಭಟ್ಟರ ಪ್ರೀತಿಗೆ ಪಾತ್ರವಾದ ಕಥೆ !

[ಅಂತರ್ಜಾಲ ದಯೆಯಿಂದ ದೊರೆತ ಚಿತ್ರ ಕೇವಲ ಕಲ್ಪನೆಗೆ, ಸಾರ್ಸಂಬಾಳೆ ಹೂವಿನ ಹೋಲಿಕೆ ಇರುವ ಹೂವು ]

ಸಾರ್ಸಂಬಾಳೆ ಹೂವು ಸೀತಾರಾಂಭಟ್ಟರ ಪ್ರೀತಿಗೆ ಪಾತ್ರವಾದ ಕಥೆ !

ಮೇಲಿನಗಂಟ್ಗೆಯ ಮೂಲೆಮನೆಯ ಹಿತ್ತಲ ಏರಿಯಲ್ಲಿ ಕೊರೆಜಾಗದಲ್ಲಿ ಕುಟುಕು ಜೀವ ಹಿಡಿದಿದ್ದ ಆ ಗಿಡ ಅಲ್ಲೇ ಚಿಗಿತು ಹೂವು ಬಿಡುತ್ತದೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಇಳಿಮಳೆಗಾಲ ಸರಿದು ಚಳಿಬೀಳುವ ಸಮಯಕ್ಕೆ ಬೆಳ್ಳಂಬೆಳಿಗ್ಗೆ ಚಿಕ್ಕ ಚಿಕ್ಕ ಹಳದಿ ಹೂವುಗಳಿಂದ ಮೈದುಂಬಿಕೊಂಡು ಮೈಮೇಲೆ ಬಿದ್ದ ಇಬ್ಬನಿಗಳ ಮುತ್ತಿನ ಮಣಿಗಳನ್ನು ಹೊತ್ತು ನಳನಳಿಸುವ ಚಿಕ್ಕ ಶರೀರದ ಗಿಡವದು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೇ ಮಲೆನಾಡು-ಕರಾವಳಿಯ ಬಹುತೇಕರಿಗೆ ಸಾರ್ಸಂಬಾಳೆಯನ್ನು [ಪ್ರಾಂತೀಯ ಹೆಸರು ವಿಭಿನ್ನವಾಗಿರಬಹುದು] ಬಿಟ್ಟಿರಲಾಗಲೀ ಮರೆಯಲಾಗಲೀ ಆಗುವುದಿಲ್ಲ. ಪಕ್ಕದ ಮನೆಯ ಹುಡುಗಿ ಹೇಗೆ ಆಪ್ತವಾಗಿ ಕಾಣುತ್ತಾಳೋ ಅಷ್ಟೇ ಆಪ್ತವಾಗಿಬಿಡುವ ಸಹಜತೆಯುಳ್ಳ ಮುದ್ದು ಗಿಡ. ಅಲ್ಲಲ್ಲಿ ಚಿಕ್ಕ ಚಿಕ್ಕ ಚುಚ್ಚುವ ಮುಳ್ಳಿನಂತಹ ಗುಚ್ಛಗಳಲ್ಲಿ ಹಳದಿ ಹೂವುಗಳಿರುವುದು ಈ ಗಿಡದ ವಿಶೇಷ. ಹಾಗಂತ ಇದು ಪೂರ್ತಿ ಗೆಂಟ್ಗೆ ಹೂವಿನ ಜಾತಿಗೆ ಸೇರುವುದೂ ಇಲ್ಲ.

ಶ್ಯಾಮ ಭಟ್ಟರು ೧೮ರ ಹರೆಯದಲ್ಲಿದ್ದಾಗ ಅವರ ಮನೆಯ ಹಿತ್ತಿಲತುಂಬಾ ಆ ಗಿಡಗಳಿದ್ದವಂತೆ. ಆಮೇಲೆ ಅದೂ ಇದೂ ಕೆಲಸಮಾಡುತ್ತಾ ಹೋಗಲಿಬಿಡು ಎಲ್ಲಾ ಕಡೆ ಇರುತ್ತದೆ ಎಂದುಕೊಂಡ ಅವರು ಎಲ್ಲವನ್ನೂ ಕಿತ್ತೆಸೆದು ಕೇವಲ ಒಂದೇ ಬುಡವನ್ನು ಬಿಟ್ಟಿದ್ದರು. ಹೋಗೇಬಿಡ್ತು ಎನ್ನುವ ಹೊತ್ತಿಗೆ ಇನ್ನೂ ಇದ್ದೇನೆ ಅನಿಸೋ ಹಾಗೇ ಇನ್ನೂ ಜೀವದಿಂದಲೇ ಇದ್ದ ಗಿಡಕ್ಕೆ ಯಾರೂ ಗೊಬ್ಬರ ನೀರು ಹಾಕಿದವರಿಲ್ಲ. ಏರು ಜವ್ವನದ ಸೀತಾರಾಂಭಟ್ಟರಿಗೆ ಅದೆಲ್ಲದರ ಬಗ್ಗೆ ಆಸ್ಥೆಯಾಗಲೀ ಆಸಕ್ತಿಯಾಗಲೀ ಇರಲೇ ಇಲ್ಲ. ಯೌವ್ವನದಲ್ಲಿ ಕತ್ತೆಯೂ ಚೆನ್ನಾಗಿ ಕಾಣಿಸುತ್ತದೆ ಎಂಬಂತೇ ಎಳೆಯ ಭಟ್ಟರ ಕಳಿಯದ ಹೃದಯಕ್ಕೆ ಹೊಳೆವ ಕಣ್ಣಿನ ಹುಡುಗಿಯರು ಕನ್ನಹಾಕಿಬಿಡುತ್ತಿದ್ದರು! ಹಾಗಂತ ಅದು ಅವರ ತಪ್ಪೂ ಅಲ್ಲ ! ಭಟ್ಟರು ನೋಡಿದಾಗ ಅಲ್ಲೇಲ್ಲೋ ಹಾದಿಯಲ್ಲಿ ಅಲೆದಾಡುವ ಹುಡುಗಿಯರು ತಾವೂ ನೋಡಿದರು, ಏನಾಗುತ್ತಿದೆ ಎನ್ನುವ ಮೊದಲೇ ಕಣ್ಣುಗಳು ಒಂಥರಾ ಚಾಟಿಂಗ್ ಶುರುಮಾಡಿಬಿಡುತ್ತಿದ್ದವು!

ಅಪ್ಪಯ್ಯ ಮನೆಯಲ್ಲೇ ಇರುವಾಗ ಭಟ್ಟರು ಹೊರಗೆ ಹಾಗೆಲ್ಲಾ ಬಂದು ನಿಲ್ಲುತ್ತಿರಲಿಲ್ಲ. ಹಜಾರದಲ್ಲಿ ನಿಲ್ಲಲೂ ಹೆದರುವ ಸಂಪ್ರದಾಯಸ್ಥ ಮನೆತನ ! ೯ ಮೊಳದ ಕಂದುಪಟ್ಟೆ ಅಂಚಿನ ಬಿಳೇ ಧೋತಿ ಉಟ್ಟ ಅಪ್ಪಯ್ಯ ಶಾಲಿಬಟ್ಟೆಯ ಬನೀನು ತೊಟ್ಟು ಹೆಗಲಿಗೆ ಬಿಳೇ ಶಾಲನ್ನು ಹೊದ್ದು ಕೈಲಿ ಬೆಳ್ಳಿಕಟ್ಟಿನ ಬೆತ್ತದ ದೊಣ್ಣೆ ಹಿಡಿದು ಕೂತರೆ ಸರ್ದಾರ್ ಪಟೇಲರ ಥರಾ ಕಾಣ್ತಿದ್ರು. ಪೊದೆ ಮೀಸೆಯಲ್ಲಿ ಬಾಯಗಲಿಸಿ ಅದೂ ಇದೂ ಮಾತನಾಡುತ್ತಾ ಸಣ್ಣಗೆ ನಕ್ಕರೂ ಎಳೆಮಕ್ಕಳಲ್ಲಿ ಅದರಿಂದಲೇ ನಡುಕ ಹುಟ್ಟಿಸುವಂಥಾ ಘನಗಾಂಭೀರ್ಯ ಅವರದ್ದು.

" ಸೀತಾರಾಮ " ಎಂದು ಕರೆದರೆ ಸಾಕು ಹರೆಯದ ಭಟ್ಟರು ಹಸುಗೂಸಿನ ರೀತಿ ಹೆದರುತ್ತಲೇ ಓಡಿಬಂದು
" ಏನಪ್ಪಯ್ಯಾ ? " ಎಂದು ತಲೆಬಾಗಿ ನಿಲ್ಲುತ್ತಿದ್ದರು.

ಸಂಪ್ರದಾಯವನ್ನು ಬಿಡಲೂ ಮನಸ್ಸಿಲ್ಲದ ಆದ್ರೆ ಅಷ್ಟೇ ಸಹಜವಾಗಿ ಹೃದಯದ ಭಾವನೆಗಳನ್ನೂ ಅದುಮಿಡಲಾರದ ದ್ವಂದ್ವದಲ್ಲಿ ಸೀತಾರಾಮರು ತೊಳಲಾಡುತ್ತಿದ್ದರು. ಇದಕ್ಕೆಲ್ಲಾ ಕಾರಣವೂ ಇರದೇ ಇರಲಿಲ್ಲ. ಅಂಚಿಮನೆಯ ಸುಧಾ, ಮೇಗಣಮನೆಯ ರಾಧೆ, ಆರ್ಕೋಡ್ಲು ಸೀತಕ್ಕನ ಮಗಳು ಸೌಮ್ಯ ಈ ಮೂರರಲ್ಲಿ ’ ಯಾರು ಹಿತವರು ನಿನಗೆ ಈ ಮೂವರೊಳಗೆ ? ’ ಎಂಬ ಪ್ರಶ್ನೆ ಭಟ್ಟರ ಮನದಲ್ಲಿ ಕೊರೆಯುತ್ತಿದ್ದರೆ ಯಾರನ್ನೂ ಬಿಡಲೂ ಆಗುತ್ತಿರಲಿಲ್ಲ. ಹದವಾಗಿ ಬೆಳೆದ ಸುಧಾಳ ಕಪ್ಪು ನೀಳ ಜಡೆ ತನ್ನನ್ನು ಸೆಳೆದಿದ್ದರೆ ರಾಧೆಯ ಚಾಲಾಕಿತನದ ಚಿಗರೆ ಕಣ್ಣುಗಳು ಯಾವಗಲೂ ಕಣ್ಣಿಗೆ ಕಟ್ಟಿದ ಹಾಗಿದ್ದವು! ಗುಣದಲ್ಲಿ ಶ್ರೀಮಂತೆಯಾದ ಸೌಮ್ಯ ರೂಪದಲ್ಲೂ ಈ ಇಬ್ಬರಿಗೆ ಕಮ್ಮಿಯೇನೂ ಇರಲಿಲ್ಲ !

ಸೀತಾರಾಂಭಟ್ಟರು ಕಮ್ಮಿ ಎಂದುಕೊಳ್ಳಬೇಡಿ, ಥೇಟ್ ಶ್ರೀರಾಮಚಂದ್ರ. ಬಸ್ಸಿನಲ್ಲಿ ಒಮ್ಮೆ ಕುಮಟಾಕ್ಕೆ ಹೊರಟಾಗ ಗೇರುಸೊಪ್ಪೆ ಬಾಷಾ ಸಾಬರ ಮಗಳು ಸಬೀಹಬಾನು ಬುರ್ಖಾದೊಳಗಿಂದ ದಿಟ್ಟಿಸಿದ್ದೇ ದಿಟ್ಟಿಸಿದ್ದು ! ಆಕೆಗೆ ಭಟ್ಟರಂತಹ ಚೆಲುವ ಅದುವರೆಗೆ ಕಂಡಿರಲೇ ಇಲ್ಲವೇನೋ ಅನ್ನುವಹಾಗೇ ಎವೆಯಿಕ್ಕದೆ ನೋಡುತ್ತಿದ್ದಳು. ಅವಳಿನ್ನೂ ಹುಡುಗಿ ಭಾಷಾರ ಮಗಳು ಎಂಬುದು ಅವಳ ಪಕ್ಕ ಕುಳಿತ ವ್ಯಕ್ತಿ ಯಾರಿಗೋ ಪರಿಚಯಿಸುವಾಗ ತಿಳಿಯಿತು. ಸಹಜವಾಗಿ ಆಕೆ ಹೇಗಿದ್ದಾಳೆಂದು ಭಟ್ಟರಿಗೂ ಕುತೂಹಲ ಹುಟ್ಟಿತ್ತು. ಆದರೆ " ಬುರ್ಖಾ ತೆಗಿ ನಾನು ನೋಡಬೇಕು " ಎನ್ನಲಿಕ್ಕೆ ಸಾಧ್ಯವೇ ? ಹಾಗಂತ ಅವಳನ್ನೇ ಆಗಲೀ ಮತ್ಯಾರನ್ನೇ ಆಗಲಿ ಕಂಡ ತಕ್ಷಣ ಲವ್ವಿ ಡವ್ವಿ ಹಾಡುವ ಇರಾದೆ ಭಟ್ಟರದಲ್ಲ, ಆದರೂ ಎದೆಯಾಳದಲ್ಲಿ ಹುದುಗಿರುವ ಹೇಳಲಾಗದ ಭಾವಗಳಿಗೆ ಬಣ್ಣ ಹಚ್ಚಲು ಮನ ಬಯಸುತ್ತಿತ್ತು! ಹಾಗೊಮ್ಮೆ ನೋಡಿದರೆ ಅದು ಪ್ರೀತಿಯೋ ಪ್ರೇಮವೋ ಕಾಮವೋ ಒಂದೂ ಭಟ್ಟರಿಗರ್ಥವಿಲ್ಲ.

ಕ್ರಿಸ್ತಿಯನ್ ಕೇರಿಯ ಇನಾಸ ಆಗಾಗ ಹಳೆಯ ತೆಂಗಿನಕಾಯಿಗಳನ್ನು ನೆಲಕ್ಕೆ ಉಕ್ಕಿನ ಸೂಲಿಗೆ ಹೂತು ಸಿಪ್ಪೆ ಸುಲಿದುಕೊಡಲು ಬರುತ್ತಿದ್ದ. ಸುಲಿದ ಕಾಯಿಗಳನ್ನು ರಾಶಿಹಾಕಿ ವ್ಯಾಪಾರಿಗಳಿಗೆ ಹೇಳಿಕಳಿಸಿ ಮಾರುವುದು ಅಪ್ಪಯ್ಯನ ವ್ಯವಹಾರ. ಒಬ್ಬಿಬ್ಬರು ವ್ಯಾಪಾರಿಗಳು ಬಂದುನೋಡಿ ಅವರಲ್ಲಿ ಯಾರು ಜಾಸ್ತಿ ಹಣಕ್ಕೆ ಖರೀದಿಸಲು ಒಪ್ಪುತ್ತಾರೋ ಅವರಿಗೆ ಮಾರುವುದು ವಾಡಿಕೆಯಾಗಿತ್ತು. ಒಮ್ಮೆ ಕಾಯಿ ಸುಲಿಯದೇ ಬಹಳದಿನ ಕಳೆದಿತ್ತು. ಕಾಯಿಗಳು ಹಾಳಾಗಿ ಹೋಗುವ ಪ್ರಮೇಯ ಇರುವುದರಿಂದ ಇನಾಸನಿಗೆ ಬರಹೇಳುವಂತೇ ಅಪ್ಪಯ್ಯ ಸೀತಾರಾಂಭಟ್ಟರನ್ನು ಕಳಿಸಿದ್ದರು. ಇನಾಸನ ಮನೆಗೆ ಹೋದಾಗ ಆತ ಊರಲ್ಲಿ ಇಲ್ಲಾ ಎನ್ನುತ್ತಾ ಬಂದಾಕೆ ಇನಾಸನ ಮಗಳು ಮೇರಿ ; ಏನು ಚಂದ ಅಂತೀರಿ -ಚಂದ್ರನನ್ನೂ ನಾಚಿಸುವ ದುಂಡು ಮುಖ, ಗೋಧಿ ಬಣ್ಣ, ಕಾಮನ ಬಿಲ್ಲಿನ ಹುಬ್ಬು, ಹೊಳೆವ ತುಟಿ. ಭಟ್ಟರು ಎಲ್ಲಿ ಯಾವುದನ್ನು ನೋಡಿ ಸೋತರು ಎಂಬುದು ಅವರಿಗೂ ಅರಿವಿಲ್ಲ; ಅಷ್ಟೇ ಚೆನ್ನಾಗಿ ಬಂದು ಅಪ್ಪಿಕೊಳ್ಳುತ್ತೇನೆ ಎಂಬ ರೀತಿ ನೋಡುತ್ತಿದ್ದ ಮೇರಿಗೂ ತಿಳಿದಿರಲಿಲ್ಲ!

ಭಟ್ಟರು ಮನೆಯಲ್ಲಿ ಕುಳಿತಾಗ ಲೆಕ್ಕಾಹಾಕೀ ಹಾಕೀ ಸೋತು ಬಿಟ್ಟರು. ಸುಂದರ ಹುಡುಗಿಯರ ಯಾವುದಕ್ಕೆ ತಾನು ಸೋತೆ ಎನ್ನುವುದು ಸ್ಪಷ್ಟವಾಗದ ವಿಷಯವಾಗಿತ್ತು. ಒಮ್ಮೆ ಸುಧಾ ಇಷ್ಟವಾದರೆ ಇನ್ನೊಮ್ಮೆ ರಾಧೆ ಮನವನ್ನು ಕದ್ದೊಯ್ಯುತ್ತಾಳೆ, ಮಗುದೊಮ್ಮೆ ಸೌಮ್ಯ ಮತ್ತೊಮ್ಮೆ ಮೇರಿ !! ಯಾರಲ್ಲೂ ಹೇಳಿಕೊಳ್ಳಲೂ ಆಗದ ತನ್ನೊಳಗೇ ಬಚ್ಚಿಟ್ಟುಕೊಳ್ಳಲೂ ಆಗದ ಆ ಭಾವಗಳಿಗೆ ಏನೆಂದು ಕರೆಯೋಣ? ಕೆಲವೊಮ್ಮೆ ಹೀಗೂ ಯೋಚಿಸಿದರು : ರಾಜರ ಹಾಗೇ ಎಲ್ಲರನ್ನೂ ಮದುವೆಯಾಗುವುದು. ಮರುಕ್ಷಣ ಪಾಪ ಪ್ರಜ್ಞೆ ಭಟ್ಟರನ್ನು ಕಾಡಿ ಛೆ ಛೆ ಹಾಗೆಲ್ಲಾ ಮಾಡಲು ಸಾಧ್ಯವೇ ? ಪ್ರೀತಿಯನ್ನೂ ಶರೀರವನ್ನೂ ಒಬ್ಬಳಿಗೇ ಕೊಡಬೇಕಲ್ಲವೇ ? ಎಂದುಕೊಳ್ಳುತ್ತಾರೆ. ಆದರೂ ಒಬ್ಬರನ್ನೂ ಕಳೆದುಕೊಳ್ಳಲು ಮನಸ್ಸು ಸಿದ್ಧವಾಗುವುದೇ ಇಲ್ಲ.

ಹೆಗಡೆ ಮಾಸ್ತರು ವರ್ಗವಾಗಿ ಹೊಸಾಕುಳಿ ಶಾಲೆಗೆ ಬಂದವರು ಮೇಲಿನಗಂಟ್ಗೇಲೇ ಅಂಚಿಮನೆ ಪಕ್ಕದಮನೇಲಿ ಬಾಡಿಗೆಮನೆ ಮಾಡಿಕೊಂಡರು. ಹೀಗೇ ಅಡ್ಡಾಡ್ತಾ ಅಡ್ಡಾಡ್ತಾ ಇರೋ ಭಟ್ಟರು ಒಂದಿನ ಮಾಸ್ತರ ಮನೆ ಎದುರಿನಿಂದ ಹಾದು ಹೋಗ್ತಾ ಇರೋವಾಗ ಇಂಪಾದ ಗಾನವನ್ನು ಕೇಳಿ ಕ್ಷಣ ನಿಂತುಬಿಟ್ಟರು. ಅಬ್ಬಬ್ಬಾ ಎಂಥಾ ಕಂಠ, ಏನು ಸುಖ !! ಹಾಡುಕೇಳುತ್ತಾ ನಿಂತಿದ್ದ ಅವರಿಗೆ ಎಚ್ಚರವಾಗಿದ್ದು " ಅಮ್ಮಾ ನಾನು ಕಾಲೇಜಿಗೆ ಹೋಗಿ ಬತ್ತೆ " ಎಂಬ ದನಿ ಕೇಳಿ. ನೋಡುತ್ತಾರೆ ಸುರಲೋಕ ಸುಂದರಿ; ರಂಭೆ, ಮೇನಕೆ, ತಿಲೋತ್ತಮೆ ಎಲ್ಲರನ್ನೂ ಸೇರಿಸಿ ಎರಕಹೊಯ್ದ ಬೊಂಬೆ ಹೊರಟು ನಿಂತಿದ್ದಾಳೆ. ಕೈಲಿ ಒಂದೆರಡು ಪುಸ್ತಕಗಳು, ಬಣ್ಣದ ಛತ್ರಿ, ಚೂಡೀ ದಾರದಲ್ಲಿದ್ದ ಆಕೆಯ ತಲೆಯಲ್ಲಿ ಸಾರ್ಸಂಬಾಳೆ ಹೂವಿನ ಚಿಕ್ಕ ಮಾಲೆ!!

ಯಸ್, ಭಟ್ಟರು ನಿರ್ಧಾರಕ್ಕೆ ಬಂದುಬಿಟ್ಟರು! ಇದೇ ತನ್ನ ಹೂವು ! ತಿಳಿಸುವುದು ಹೇಗೆ? ಗೋತ್ರ,ಜಾತಕ-ಪಾತಕ ಇವನ್ನೆಲ್ಲಾ ನೋಡಬೇಡವೇ? ಮಾಸ್ತರು ತನಗೆ ಜಾತಕ ಕೊಟ್ಟಾರೆ ? ಯಾವುದನ್ನೂ ಯೋಚಿಸಲು ಸಮಯವಾಗಲೀ ಅದಕ್ಕೆಲ್ಲಾ ಮನಸ್ಸಾಗಲೀ ಇರಲಿಲ್ಲ. ಮುಂದೆ ನಡೆದವಳ ಹಿಂದೆ ನಡೆದು ಕೇಳಿದರು

" ಹಲೋ "

ಮುಖ ತಿರುಗಿಸಿ ನೋಡಿದಳು ಮಂದಗಮನೆ.

" ನಾನು ಶ್ಯಾಮ ಭಟ್ಟರ ಮಗ ಸೀತಾರಾಮ ಅಂತ, ನೀವು ತುಂಬಾ ಚೆನ್ನಾಗಿ ಹಾಡ್ತೀರಿ "

" ಇಲ್ಲಪ್ಪಾ ಏನೋ ಸುಮ್ನೇ ಹಾಡ್ದೆ ಅಷ್ಟೇ "

" ನೀವು ಹೆಗಡೆ ಮಾಸ್ತರ ಮಗಳಲ್ವೇ ? "

" ಹೌದು "

" ನಿಮ್ಮ ಹೆಸರು ಕೇಳ್ಬೋದೇ ? "

" ಸೌದಾಮಿನಿ "

ಇಬ್ಬರೂ ಕೆಲಹೊತ್ತು ಪರಸ್ಪರ ನೋಡುತ್ತಿದ್ದರೇ ಹೊರತು ಮಾತಿರಲಿಲ್ಲ. ಪಕ್ಕದಲ್ಲಿ ಯಾರೋ ಸರಿದುಹೋದಾಗ ಎಚ್ಚೆತ್ತು ಮುಂದೆ ಸಾಗಿದರು. ಮತ್ತೆ ಮಾತಿಲ್ಲ ಕತೆಯಿಲ್ಲ.

ಕಾಲೇಜು ಬರುವವರೆಗೂ ತನಗರಿವಿಲ್ಲದೇ ಹಿಂದೆ ಕೋಲೇ ಬಸವನ ರೀತಿ ಅಲೆದ ಸೀತಾರಾಂಭಟ್ಟರು ಸೌದಾಮಿನಿ ಕಾಲೇಜಿನೊಳಗೆ ಹೆಜ್ಜೆ ಹಾಕಿದಾಗ ಈ ಲೋಕಕ್ಕೆ ಮರಳಿ ಬಂದರು ! ಕೈಗಡಿಯಾರ ನೋಡಿಕೊಂಡು ನಿತ್ಯವೂ ಆ ಸಮಯಕ್ಕೆ ಕಾಲೇಜಿನ ವರೆಗೂ ಬರುವ ಸಾಹಸಕ್ಕೆ ಇಳಿದುಬಿಟ್ಟರು !

ಭಟ್ಟರ ಹಿತ್ತಿಲಲ್ಲಿರುವ ಸಾರ್ಸಂಬಾಳೆ ಕುಲದ ಏಕಮಾತ್ರ ಗಿಡ ನೀರು-ಗೊಬ್ಬರ ಕಾಣಹತ್ತಿತ್ತು. ಅಪ್ಪಯ್ಯ ಅದೆಲ್ಲಾ ಯಾಕೆ ಎಂದರೂ ಯಾಕೋ ತನಗಿಷ್ಟ ಎಂದ ಮಗನ ಧೋರಣೆಗೆ ವಿರುದ್ಧವಾಡಲಿಲ್ಲ. ಗಿರಿಮನೆ ನಾಗಪ್ಪ ಶೆಟ್ಟರು ಪೇಟೆಗೆ ಸಾಮಾನು ತರಲು ಹೋದವರು ಹಾದಿಯಲ್ಲಿ ನಿಂತು ಮಾತಾಡುತ್ತಿದ್ದ ಹೆಗಡೆ ಮಾಸ್ತರ ಮಗಳು ಮತ್ತು ಸೀತಾರಾಮನನ್ನು ಕಂಡುಬಿಟ್ಟರು. ಹಲ್ಲು ಕೀಳಿಸಲು ಹೊನ್ನಾವರಕ್ಕೆ ಬಂದ ಭಾಗೀರಥಕ್ಕ ಬಗ್ಗಿ ಬಗ್ಗಿ ನೋಡಿಯೂ ನೋಡದಂತೇ ನೋಡಿಕೊಂಡು ಬಂದಿದ್ದು ಮಾರನೇ ಮಧ್ಯಾಹ್ನದಿಂದ ಹಕ್ಕೆಚಡಿಯಲ್ಲಿ [ಹೊರಜಗುಲಿ ಹರಟೆಕಟ್ಟೆ] ಪುರಾಣ ಆರಂಭವಾಗಿಬಿಟ್ಟಿತು!

" ಆಯ್ಯಯ್ಯೋ ಕಾಲ್ಮಾನ ಕೆಟ್ಟೋಯ್ದು ಗಂಗಕ್ಕಾ.....ಆ ಮಾಸ್ತರ ಮಗ್ಳು ಮತ್ತೆ ಮೂಲೆಮನೆ ಶ್ಯಾಮನ ಮಾಣಿ ಪ್ಯಾಟೆಲಿ ನಿಂತ್ಗಂಡು ಮಾತಾಡಿದ್ದೇ ಮಾತಾಡಿದ್ದು ....ನೋಡ್ತ್ನಾ ಇರು ಇನ್ನೊಂದ್ ತಿಂಗ್ಳ ಕಳೀಲಿ ....ಇಬ್ರೂ ನಾಪತ್ತೆ ಆಯ್ದ್ವಿಲ್ಲೆ ಅಂದ್ರೆ ನನ್ ಹೆಸರ್ ತಗಿ. ಸಮಾ ಆತು ಆ ಶ್ಯಾಮಂಗೇನ್ ಕಮ್ಮಿ ಸೊಕ್ಕನೇ .....ಅಲ್ದಾ ? ಅಲ್ಲಾ ವಿಷ್ಯ ನಿನ್ ಕೈಲೇ ಇರ್ಲಿ ನಾ ಹೇಳಿದ್ದೇಳಿ ಹೇಳಡ ಮತೆ ......"

ಇಂಥಾ ಸುದ್ದಿಗೆ ಪತ್ರಿಕೆಯ ಯಾ ಮಾಧ್ಯಮದ ಅವಶ್ಯಕತೆ ಇರೋದಿಲ್ಲ. ಕಾಲಿಲ್ಲದ ಹಾವು ನುಣುಪು ಮೈಯ್ಯಿಂದ ಜಾರಿ ಓಡುವಂತೇ ಹಲ್ಲಿಲ್ಲದ ನಾಲಿಗೆಯಿಂದ ಕಿವಿಗೆ ಮತ್ತೆ ಕಿವಿಯಿಂದ ನಾಲಿಗೆಗೆ ಆವು ಹರೆದಾಡುತ್ತವೆ ! ಕೆಲವೊಮ್ಮೆ ಮಾಧ್ಯಮಗಳು ತಲುಪಲಾರದ ಜಾಗವನ್ನೂ ತಲ್ಪಿಬಿಡುತ್ತವೆ !

ಬೆಂಕಿಯನ್ನು ಬಹಳಕಾಲ ಮುಚ್ಚಿಡಲೂ ಬಚ್ಚಿಡಲೂ ಸಾಧ್ಯವಾಗುವುದಿಲ್ಲ ಹೇರ್‍ಗೋ ಹಾಗೇ ಇಂಥಾ ವಿಷಯಗಳೂ ಕೂಡ. ವಿಷಯವೇ ಇರದಿದ್ದರೂ ಸೃಷ್ಟಿಸುವ ’ವಿರಂಚಿ’ಗಳು ಸಮಾಜದಲ್ಲಿರುತ್ತಾರೆ ಅಂದಮೇಲೆ ಇದ್ದ ವಿಷಯಕ್ಕೆ ಮತ್ತಷ್ಟು ಸೇರಿಸಿ ಕಥೆ ಹೊಸೆಯಲು ಅವರಿಂದ ಆಗುವುದಿಲ್ಲ ಎನ್ನಲು ಆದೀತೇ ? ಹಾಗೆ ನೋಡಿದರೆ ಲೋಕದ ಅಷ್ಟೂ ಮಾನವ ಮುಖಗಳ ಹಿಂದೆ ಅಷ್ಟೇ ಕಥೆಗಳು ಅಡಗಿವೆ! ಆದರೆ ಕೆಲವೊಮ್ಮೆ ಕೆಲವು ಇಷ್ಟವಾಗುತ್ತವೆ ; ಇನ್ನು ಕೆಲವು ಸಹಿಸಲು ಕಷ್ಟವೆನಿಸುತ್ತವೆ! ಇಂತಹ ಕಷ್ಟವೆನಿಸುವ ಸರದಿ ಶ್ಯಾಮ ಭಟ್ಟರಿಗೆ ಬಂದಿದ್ದು ಇದೇ ಮೊದಲು. ಯಾರಿಗೂ ತಲೆಬಾಗಿದ ಜನವಲ್ಲ ಅದು! ಅಜಾನುಬಾಹು ಶರೀರದಂತೇ ವ್ಯಕ್ತಿತ್ವವನ್ನೂ ಆ ಮಟ್ಟಕ್ಕೆ ಬೆಳೆಸಿನಿಂತ ಜನ ಅವರು. ಹಾಗಂತೇಳಿ ಅನುಕಂಪ, ದಯೆ, ದಾನ-ಧರ್ಮ, ಕಟ್ಲ-ಕಂದಾಚಾರ ಇವೆಕ್ಕಲ್ಲಾ ಕೊರತೆಮಾಡಿದವರಲ್ಲ. ಆದರೂ ಸಮಾಜದಲ್ಲಿ ’ ದೇಹಿ ’ ಎಂದು ಸಹಾಯ ಕೇಳುವ ದಿನ ಅವರ ಪಾಲಿಗೆ ಬಂದಿರಲಿಲ್ಲ. ನಾಕು ಜನರ ಮಧ್ಯೆ ಎದ್ದುಕಾಣುವ ಮನುಷ್ಯನಾಗಿ ಕಾಲಹಾಕಿದ್ದರು. ಮಗ ಹೀಗೆ ಮಾಡಬಹುದೆಂಬ ಅನಿಸಿಕೆ ಇರಲಿಲ್ಲ.

ಇಲ್ಕೇಳಿ ನಿಮ್ಗೊಂದ್ ಸಣ್ ವಿಷಯ ಹೇಳಲೇಬೇಕು. ಶ್ಯಾಮ ಭಟ್ಟರು ಸಾರ್ಸಂಬಾಳೆ ಗಿಡಗಳನ್ನು ಯಾಕೆ ಕಿತ್ತುಹಾಕಿಸಿದ್ದರು ಬಲ್ಲಿರೋ ? ಇಲ್ಲತಾನೇ ? ಹಾಗಾದ್ರೆ ಕೇಳಿ-- ಶ್ಯಾಮಭಟ್ಟರಿಗೆ ಅವರ ಹರೆಯದಲ್ಲಿ ಒಬ್ಬಳು ಇಷ್ಟವಾಗಿದ್ದಳು. ಅತೀವ ಅಂಧಶ್ರದ್ಧೆ ಮತ್ತು ಕುರುಡು ಸಂಪ್ರದಾಯಗಳೇ ಮೆರೆದಿದ್ದ ಆ ಕಾಲದಲ್ಲಿ ಅತ್ಯಂತ ರೂಪಸಿಯಾಗಿ ಶ್ಯಾಮ ಭಟ್ಟರ ಮನಗೆದ್ದಿದ್ದ ಆ ಹುಡುಗಿಯನ್ನು ಮನೆಯವರನ್ನೆಲ್ಲಾ ವಿರೋಧಿಸಿ ಕಟ್ಟಿಕೊಳ್ಳುವುದು ಸಾಧ್ಯವಿರಲಿಲ್ಲ. ಸಾರ್ಸಂಬಾಳೆ ಹೂವಿನ ದಂಡೆಯನ್ನು ಚಳಿಗಾಲದ ಆದಿಯಲ್ಲಿ ಸದಾ ಮುಡಿದಿರುತ್ತಿದ್ದ ಆಕೆಯನ್ನು ಹೇಗಾದರೂ ಮದುವೆ ಆಗುವ ಮನಸ್ಸಿನಿಂದಿದ್ದ ಶ್ಯಾಮ ಭಟ್ಟರಿಗೆ ಅಂದು ನಿರಾಸೆಯೇ ಕಾದಿತ್ತು. ಹೇಗಾದರೂ ಮಾಡಿ ಹೇಳುವುದಕ್ಕೂ ಕೇಳುವುದಕ್ಕೂ ಮುನ್ನ ತುಮುಲಗಳೇ ಅಮರಿಕೊಂಡಿದ್ದ ಆ ದಿನಗಳಲ್ಲಿ ಒಂದಿನ ಆ ಹುಡುಗಿಯ ಮದುವೆ ನಿಶ್ಚಿತಾರ್ಥ ಬೇರೇ ಗಂಡಿನೊಟ್ಟಿಗೆ ನಡೆದಿದ್ದು ತಿಳಿದುಬಂದಿತ್ತು. ಶ್ಯಾಮ ಭಟ್ಟರಿಗೆ ಊಟ ಬೇಡಾ ...ನಿದ್ದೆ ಬೇಡಾ. ಹಿಂದಿನ ಕಾಲದಲ್ಲಿ ಗಂಡಸತ್ತಾಗ ಅಳುತ್ತಾ ಕೊರುವ ಹೆಂಡತಿಯಂತಾಗಿಬಿಟ್ಟಿದ್ದರು ಶ್ಯಾಮಭಟ್ಟರು. ಅಂತೂ ಗಟ್ಟಿ ಮನಸ್ಸು ಮಾಡಿಕೊಂಡು ಎಲ್ಲಾದರೂ ಇರಲಿ ಸುಖವಾಗಿರಲಿ ಎಂದು ಮನದಲ್ಲೇ ಬೀಳ್ಕೊಟ್ಟರು. ಅಂದಿನಿಂದ ಸಾರ್ಸಂಬಾಳೆ ಹೂವನ್ನು ಕಂಡಾಗೆಲ್ಲಾ ಅವರಿಗೆ ಆ ನೆನಪು ಕಾಡುತ್ತಿತ್ತು ! ಅದಕ್ಕಾಗಿಯೇ ಸಾತ್ವಿಕ ಮನದಲ್ಲೂ ಆ ಗಿಡಗಳೇ ಬೇಡ ಎಂಬ ಕಠೋರ ನಿರ್ಧಾರವನ್ನು ಕೈಗೊಂಡು ಕೀಳಿಸಿಹಾಕಿಬಿಟ್ಟಿದ್ದರು. ಆದರೂ ಒಂದನ್ನು ಕೀಳದೇ ಹಾಗೇ ಬಿಟ್ಟಿದ್ದು ಅವರ ಕಮರಿದ ಪ್ರೀತಿಗೆ ದ್ಯೋತಕವಾಗಿಯೋ ಎಂಬಂತಿತ್ತು.

ತನಗಾದಂತೇ ಮಗನಿಗೂ ನೋವಾಗುವುದು ಶ್ಯಾಮ ಭಟ್ಟರಿಗೆ ಇಷ್ಟವಿರಲಿಲ್ಲ. ವಿಷಯ ತಿಳಿದ ಅವರು ಹೊರಗೆ ಮಗನಿಗೆ ಅದನ್ನು ತೋರಗೊಡಲೂ ಇಲ್ಲ. ಸುಮ್ನೇ ಎದ್ದು ಶಾಲು ಹೆಗಲಿಗೇರಿಸಿಕೊಂಡು ಬೆಳ್ಳಿಕಟ್ಟಿನ ಬೆತ್ತದ ದೊಣ್ಣೆ ಹಿಡಿದು ಹೆಗಡೆ ಮಾಸ್ತರ ಹೊಸಿಲು ತುಳಿದರು. ವಾರದಲ್ಲೇ ಎರಡೂ ಮನೆಗಳಲ್ಲಿ ಮಾವಿನ ತೋರಣಗಳು ಕಂಡವು. ನೋಡನೋಡುತ್ತಿದ್ದಂತೇ ಮಾಸ್ತರ ಮಗಳನ್ನು ಪಾಲಕರು-ಹೆಣ್ಣಿನ ಕಡೆಯವರೊಟ್ಟಿಗೆ ಶ್ಯಾಮ ಭಟ್ಟರು ತಮ್ಮನೆಗೇ ಕರೆಸಿಕೊಂಡರು. ಹಾಕಿದ್ದ ದೊಡ್ಡ ಚಪ್ಪರದಲ್ಲಿ ತಯಾರಿಸಿದ್ದ ಸುಂದರ ಮಂಟಪದಲ್ಲಿ ವಿಧಿವತ್ತಾಗಿ ಸೀತಾರಾಂಭಟ್ಟರು ಮತ್ತು ಸೌದಾಮಿನಿ-ಯರ ಮದುವೆ ಆ ಊರಿಗೇ ಅತ್ಯಂತ ವಿಜೃಂಭಣೆ ಎನ್ನುವ ರೀತಿಯಲ್ಲಿ ನಡೆದುಹೋಯಿತು. ಹಾಡುಹಕ್ಕಿಯೊಂದು ಸುಂದರ ಮಾಮರದ ಆಶ್ರಯ ಪಡೆಯಿತು. ಪ್ರಸ್ತದ ರಾತ್ರಿಯಲ್ಲಿ ಸೀತಾರಾಂಭಟ್ಟರು ತಾವೇ ಪ್ರೀತಿಯಿಂದ ಬೆಳೆತೆಗೆದ ಸಾರ್ಸಂಬಾಳೆ ಹೂವಿನ ಮಾಲೆಯನ್ನು ಮನದನ್ನೆಗೆ ಮುಡಿಸಿದರು.

Tuesday, September 6, 2011

ಹಾಲು ಕುಡಿದು ಹೊರಟ ಗಣಪನ ಕಾಲು ಬೆರಳು ಹುಡುಕುತ್ತಿದ್ದ ಆ ದಿನ!


ಹಾಲು ಕುಡಿದು ಹೊರಟ ಗಣಪನ ಕಾಲು ಬೆರಳು ಹುಡುಕುತ್ತಿದ್ದ ಆ ದಿನ !

ಬಾಲ್ಯದ ದಿನಗಳು ಎಲ್ಲರಿಗೂ ಅಚ್ಚುಮೆಚ್ಚು ಎಂಬುದು ನನ್ನ ಕಲ್ಪನೆ. ಅದು ಸಿಹಿಯೋ ಕಹಿಯೋ ಒಟ್ಟಾರೆ ಬದುಕನ್ನು ರೂಪಿಸುವಲ್ಲಿ ಆ ಹಂತ ಹಲವು ಪರಿಣಾಮಗಳನ್ನು ಬೀರಿರುತ್ತದೆ. ಅಂತಹ ನೆನಪುಗಳ ಮಧ್ಯೆ ಮಹಾಚೌತಿ ಎನಿಸಿದ ಗಣೇಶ ಹಬ್ಬದ ನೆನಪೂ ಒಂದು. ಶ್ರಾವಣದ ವೇಳೆ ರುದ್ರಪಠಣ ಶ್ರೀಸೂಕ್ತ ಪುರುಷಸೂಕ್ತಾದಿ ಅಭಿಷೇಕ ಪೂಜೆಗಳೇ ಜಾಸ್ತಿ ನಡೆಯುತ್ತದೆಯಷ್ಟೇ, ನಾಗರ ಪಂಚಮಿ ಮತ್ತು ಕೃಷ್ಣ ಜನ್ಮಾಷ್ಟಮಿ ಮಧ್ಯೆ ಬಂದು ಹೋಗುವ ಹಬ್ಬಗಳಾದವು. ಶ್ರಾವಣದಲ್ಲಿ ನಮ್ಮಲ್ಲಿ ಹೂವುಗಳು ಕಮ್ಮಿ. ಹೂವು ಬೇಕೆಂದರೆ ಪರಸ್ಥಳಗಳಿಂದ ತರಿಸಿಕೊಳ್ಳಬೇಕು. ನಮ್ಮಲ್ಲಿನ ಕುಂಭದ್ರೋಣ ಮಳೆಗೆ ತುಳಸಿ ಮತ್ತು ಬಿಲ್ವಪತ್ರೆಗಳು ಚೆನ್ನಾಗಿ ಚಿಗುರುತ್ತಿದ್ದವೇ ಹೊರತು ಹೂ ಗಿಡಗಳು ನೀರು ಕುಡಿದು ಗೊಬ್ಬರ ತಿಂದು ಹೊಟ್ಟೆಯುಬ್ಬರಿಸಿ ಹೂವರಳಿಸದೇ ನಿಂತುಬಿಡುತ್ತಿದ್ದವು! ನಿತ್ಯ ಪುಷ್ಪ, ದಾಸವಾಳ, ರಂಜಬಟ್ಲು ಯಾನೇ ನಂಜಟ್ಲೆ ಇಂತಹ ಹೂವುಗಳನ್ನು ಬಿಟ್ಟರೆ ಅಲ್ಲಲ್ಲಿ ಡೇರೆಯ ಮೊಗ್ಗುಗಳು ಕಾಣಿಸುತ್ತಿದ್ದವು.

ಯಾವಾಗ ಶ್ರಾವಣ ಮುಗಿಯಿತು ಎಂಬುದು ಗಿಡಗಳಿಗೆ ಹೇಗೆ ಗೊತ್ತು ಎನ್ನುವ ಕುತೂಹಲ ಕೆರಳುವಂತೇ ಭಾದ್ರಪದಾದಿಯಲ್ಲೇ ಅಷ್ಟೂ ಗಿಡಗಳು ನಿಧಾನಕ್ಕೆ ಮೊಗ್ಗುಬಿಟ್ಟು ಇನ್ನೇನು ಗಣೇಶ ಬಂದ ಎನ್ನುವ ಹೊತ್ತಿಗೆ ಬಣ್ಣಬಣ್ಣದ ಹೂವುಗಳನ್ನು ಅರಳಿಸಿಕೊಂಡು ನಾ ಮುಂದು ತಾ ಮುಂದು ಎಂದು ಗಾಳಿಗೆ ತೊನೆದಾಡುತ್ತಾ ನೋಡುಗರನ್ನು ಸೆಳೆಯುತ್ತಿದ್ದವು. ನಮ್ಮಲ್ಲಿ ಗಣಪತಿಗೆ ಬಹಳ ಮಹತ್ವ; ಬಹುತೇಕ ಇದು ತಿಲಕರ ಕಾಲಕ್ಕೆ ಅವರ ಶಕೆಯಿಂದ ಆಗಿರುವ ಮಾರ್ಪಾಡೂ ಆಗಿದ್ದಿರಬಹುದು, ಮೇಲಾಗಿ ಭೂಕೈಲಾಸದ ಸೃಷ್ಟಿಗೆ ಕಾರಣನಾದ ಗೋಕರ್ಣದ ಗಣಪ ಮತ್ತು ವಾಲಖಿಲ್ಯ ಮುನಿಗೆ ಒಲಿದು ಬಂದ ಇಡಗುಂಜಿಯ ವಿನಾಯಕ ಇಬ್ಬರೂ ಇರುವುದರಿಂದಲೂ ಇರಬಹುದು ಗಣಪತಿ ಮೇಲೆ ತೂಕ ಪ್ರೀತಿ ಜಾಸ್ತಿ. ನನ್ನಂಥವರಿಗೆ ಆತ ಬೇಕೇ ಬೇಕು ಯಾಕೆಂದರೆ ಆತನ ನೈವೇದ್ಯವೆಲ್ಲಾ ನಮಗೂ ನೈವೇದ್ಯವೇ !

ಹಸಿರುಟ್ಟ ಭೂಮಿಯ ನಡುವೆ ಬಣ್ಣದ ಗಣಪ ಕುಳಿತರೆ ಹೇಗಿರಬಹುದು ? ನೋಡಲು ಅದು ಕಣ್ಣಿಗೆ ಹಬ್ಬವಾಗಿರುತ್ತದಷ್ಟೇ ? ಎಲ್ಲಾ ವಿಧದ ಹಿತ್ಲಕಾಯಿ [ತರಕಾರಿ]ಗಳು, ಹಣ್ಣು-ಹಂಪಲುಗಳು, ಗಂಗಮ್ಮನ ಕಾಳು, ಕೋಡನ ಗೆಜ್ಜೆ, ಮಡಾಗಲಕಾಯಿ, ಮಾದಲಕಾಯಿ, ಗಜನಿಂಬೆ, ಕೆಸವಿನ ಸೊಪ್ಪು, ಬಾಳೇಕಾಯಿ, ಬೇರು ಹಲಸು, ನೀರುಹಲಸು, ದಾಸ್‍ಕಬ್ಬು, ಜಾಯಿಕಾಯಿ, ಅಡಕೆ, ವೀಳ್ಯದೆಲೆ, ಶಿಂಗಾರ, ತೆಂಗಿನಕಾಯಿ, ಎಳನೀರು........ಹೆಸರು ಬರೆದು ಮುಗಿಯುವುದಿಲ್ಲ - ಗಣಪ ಅಷ್ಟು ಶ್ರೀಮಂತ!! ಆತನ ಬರುವಿಕೆಗೆ ಥರಥರದ ತಯಾರಿ. ಅಂಗೋಡಂಗ ಫಲಗಳ ಫಲಾವಳಿ ! ಮಕ್ಕಳೆಲ್ಲಾ ಸೇರಿ ಒತ್ತಟ್ಟಿಗೆ --

ಬಾರೋ ಬಾರೋ ಗಣಪ
ನಮ್ಮನೀಗೆ ಬಾರೋ ಗಣಪ
ನಮ್ಮನೀಗೆ ಬಾರೋ ಗಣಪ ....

ತಾಯಿ ಗೌರಮ್ಮನ ಕರಕೊಂಡು ಸರಸರ.......

..... ಎನ್ನುವಾಗ ಮುದ್ದು ಬಾಲಕ ಗಣಪ ಅಮ್ಮ ಗೌರಮ್ಮನ ಕೈಹಿಡಿದು ನಮ್ಮಗಳ ಮನೆಗೆಲ್ಲಾ ಬರುತ್ತಿರುವ ಕನಸು ಎಲ್ಲರ ಕಂಗಳಲ್ಲೂ ನುಸುಳುತ್ತಿತ್ತು. ಜಗತ್ತಿನಲ್ಲಿ ಬಹುಸಂಖ್ಯಾಕರು ಪ್ರೀತಿಸುವ ಏಕಮಾತ್ರ ದೈವ ಗಣೇಶ ಎಂದರೆ ತಪ್ಪಾಗಲಾರದೇನೋ. ಅಂತಹ ಗಣಪತಿ ಅಮ್ಮನ ಪುಟ್ಟ ಕಂದನಾಗಿ ಭಾದ್ರಪದ ಶುಕ್ಲ ಚೌತಿಯ ದಿನ ನಮ್ಮೆಲ್ಲರ ಪ್ರೀತಿಯ ಕೊಡುಕೊಳ್ಳುವಿಕೆಗಾಗಿ ಬರುತ್ತಾನಲ್ಲಾ ಹಾಗಾಗಿ ಭಾರೀ ತಯಾರಿ, ಭೂರೀ ತಯಾರಿ !

ಬೆನಕ ಬರುವ ಮುನ್ನಾದಿನ ಹಲವು ಮನೆಗಳಲ್ಲಿ ಆತನ ಕೂರುವಿಕೆಗಾಗಿ ಮಂಟಪವನ್ನು ಸಿದ್ಧಪಡಿಸುತ್ತಾರೆ. ಮರದಲ್ಲಿ ಮಾಡಿದ ಪೀಠಕ್ಕೆ ಚಿನ್ನದ ಬಣ್ಣದ ಕಾಗದ ಅಂಟಿಸಿ ಅದು ಬಂಗಾರದ್ದೇನೋ ಅನ್ನೋ ಹಾಗೇ ಮಾಡುತ್ತಾರೆ. ಬಾಳೇಕಂಬ, ಕಬ್ಬು, ಮಾವಿನ ತುಂಕೆಗಳನ್ನು ಕಟ್ಟುವುದು ಒಂದು ರೀತಿಯಲ್ಲಾದರೆ ಇನ್ನೂ ಕೆಲವರದು ಬಾಳೇ ಹೆಂಬೆಯಿಂದ ಮಾಡುವ ದಂಡಾವಳಿ ಮಂಟಪ. ಮತ್ತೆ ಕೆಲವರ ಮನೆಗಳಲ್ಲಿ ಅಡಕೆ ದಬ್ಬೆ, ಗಾತ್ರದ ಬಿದಿರು ಬೊಂಬು ಇವನ್ನೆಲ್ಲಾ ಬಳಸಿ ಐಮೂಲೆ ತೆಗೆದು ನಾಲ್ಕು ಕಂಬ ನೆಟ್ಟು, ಕಂಬಗಳಿಗೆ ಬಣ್ಣದ ಬೇಡಗೆ ಹಚ್ಚಿ ಬಣ್ಣದ ಕಾಗದದ ಹೂಮಾಲೆಗಳನ್ನು ಇಳಿಬಿಟ್ಟು, ಮಿರಿಮಿರಿಗುಡುವ ವರ್ತಿತಗಡು ಇತ್ಯಾದಿ ಅಲಂಕಾರ ಪರಿಕರಗಳಿಂದ ಸಕತ್ತಾಗಿ ಮಾಡುವ ಮಂಟಪ. ಮಂಟಪ ತಯಾರಿಕೆಯಲ್ಲೇ ಪೈಪೋಟಿ, ಅದರಲ್ಲೇ ತಂದು ಚೆನ್ನಾಗಿದೆ ತಂದು ಚೆನ್ನಾಗಿದೆ ಎನ್ನುವ ಹೇಳಿಕೊಳ್ಳುವಿಕೆ. ನಾವು ಚಿಕ್ಕ ಮಕ್ಕಳಿಗೆ ಮಾತ್ರ ಅವುಗಳನ್ನೆಲ್ಲಾ ಮುಟ್ಟಲು ಹಕ್ಕಿರಲಿಲ್ಲ! ಏನಿದ್ರೂ ಆ ಮನೆಗೆ ಈ ಮನೆಗೆ ಓಡಾಡುತ್ತ ಯಾರ್ಯಾರದು ಎಲ್ಲೆಲ್ಲೀವರೆಗೆ ಬಂತು ಎಂಬುದನ್ನು ಪರಸ್ಪರರಿಗೆ ತಿಳಿಸುವ ಕೆಲಸವಷ್ಟೇ ನಮ್ಮದು.

ಚೌತೀ ದಿವಸ ಉಂಡು ಹೊರಟ ಬೆನಕರಾಯ ಬಿದ್ದಿದ್ದ ಎಂಬ ಕಥೆ ಕೇಳಿದ್ದು ಬಿಟ್ಟರೆ ನಮ್ಮೂರಿಗೆ ಬರುವ ಆತ ಕಮ್ಮೀ ಕಮ್ಮೀ ಅಂದ್ರೆ ಎರಡು ದಿನ ಇದ್ದು ಹೋಗುತ್ತಿದ್ದ. ಕೆಲವರ ಮನೆಗಳಲ್ಲಿ ಐದು ಇನ್ನೂ ಕೆಲವರಲ್ಲಿ ೭ ಇನ್ನೂ ಕೆಲವರಲ್ಲಿ ೯ ಹೀಗೆಲ್ಲಾ ಉಳಿದುಕೊಳ್ಳುತ್ತಿದ್ದನಪ್ಪ! ಆದ್ರೆ ನಮ್ಮಗಳ ಕೆಲವು ಮನೇಲಿ ಎರಡೇ ದಿನ ಇರ್ತಿದ್ದ ಲಂಬೋದರ ಬರುವಾಗಿಂದ ಹೋಗುವವರೆಗೂ ಮಕ್ಕಳಾದಿಯಾಗಿ ಮುದುಕರವರೆಗೆ ಎಲ್ಲರಿಗೂ ಒಂಥರಾ ಖುಷಿ. ನಮಗೆಲ್ಲಾ ೬-೭ ವಯಸ್ಸಿದಾಗ ನಮ್ಮ ಕೇರಿಯ ಅಮ್ಮಣ್ಣ, ರಾಮ, ಗಪ್ಪತಿ, ಶ್ರೀಧರ, ಶ್ರೀಪಾದ, ಶಣಮಾಣಿ, ಯಂಟ್ರೊಣ[ ವೆಂಕಟರಮಣ], ಸುಬ್ಬು, ಕೃಷ್ಣ, ಸತ್ನಾರಣ [ಸತ್ಯನಾರಾಯಣ] ಹೀಗೇ ಇಂಥವರಿಗೆಲ್ಲಾ ಸರಾಸರಿ ೧೪-೧೫ ವರ್ಷ. ನಮ್ಮ ಕೇರಿಯ ಹೊರಗೆ ಒಂದು ಹರಿಯುವ ಹಳ್ಳವಿದೆ. ಅದರಲ್ಲಿ ಆಗ ಮಳೆಗಾಲ-ಬೇಸಿಗೆ ನೀರಿರುತ್ತಿತ್ತು. ಹರಿಯುವ ಹಳ್ಳಕ್ಕೆ ಅಡ್ಡಲಾಗಿ ಕಟ್ಟು ಕಟ್ಟಿದರೆ ಅಲ್ಲಿ ಒಂದು ಚಿಕ್ಕ ಜಲಾನಯನ ಪ್ರದೇಶ ಸಿದ್ಧವಾಗುತ್ತಿತ್ತು. ಮಹಾಚೌತಿಯ ದಿನ ಪೂಜೆ, ಹಲವು ವಿಧದ ಆರತಿಗಳಲ್ಲಿ ಮಗ್ನರಾಗಿತ್ತಿದ್ದ ಇವರೆಲ್ಲಾ ಚೌತಿಯ ಮರುದಿನ ಋಷಿಪಂಚಮಿ ಯಾನೇ ಇಲಿಪಂಚಮಿಯ ದಿನ ಹಳ್ಳಕ್ಕೆ ಕಟ್ಟು ಹಾಕಲು ತೆರಳುತ್ತಿದ್ದರು.

ಕಟ್ಟಿಗೆ ಬೇಕಾಗುವ ಸಾಮಗ್ರಿಗಳು ಅಲ್ಲಲ್ಲೇ ಸಿಗುತ್ತಿದ್ದವು. ನಮ್ಮಲ್ಲಿ ಅಡಕೆ ತೋಟಗಳಿರುವುದರಿಂದ ಹಗರದಬ್ಬೆ, ಅಡಕೆಮರದ ಮೋಟು, ಬಾಳೆಮರ, ಅಡಕೆ ಸೋಗೆ, ಅಡಕೆ ಹಾಳೆ, ತೆಂಗಿನಗರಿ ಹೀಗೇ ಕಟ್ಟುಹಾಕಲು ಬೇಕಾದ ಎಲ್ಲವನ್ನೂ ಮೇಲೆ ಹೇಳಿದ ಜನ ಸುತ್ತಲಿನ ತೋಟಗಳಲ್ಲಿ ಗುರುತಿಸುತ್ತಿದ್ದರು. ಹೇಳುವುದು ಕೇಳುವುದು ಏನಿಲ್ಲ, ಅವರು ತೋರಿಸಿದ್ದನ್ನು ಎಳೆದು ತರುವುದು ನಮ್ಮಲ್ಲಿ ಕೆಲವರ ಕರ್ತವ್ಯವಾಗಿತ್ತು, ಯಾಕೆಂದರೆ ಹಾಕಿದ ಕಟ್ಟಿನ ಜಲಾಶಯದಲ್ಲಿ ಈಜು ಕಲಿಯಲು ಅಪ್ಪಣೆ ಸಿಗಬೇಕಲ್ಲಾ? ರಾಮ ಅದೂ ಇದೂ ಅಂತ ಕೂಗುತ್ತಿದ್ದರೆ, ತಂದ ಅಡಕೆಮರದ ಮೋಟನ್ನು ಹಳ್ಳದ ಆಚೀಚೆಯಲ್ಲಿರುವ ಪಾಗಾರಕಟ್ಟೆಗೆ ಸಿಕ್ಕಿಸಿ ಗಟ್ಟಿ ನಿಲ್ಲುವಂತೇ ಮಾಡುತ್ತಿದ್ದವ ಶ್ರೀಪಾದ. ಗಪ್ಪತಿ ಹಗರದಬ್ಬೆಗಳನ್ನು ಹೂತು ಮೇಲ್ಭಾಗವನ್ನು ಆ ಅಡಕೆ ಎಳೆಗೆ ಕಟ್ಟುತ್ತಿದ್ದ. ಮಿಕ್ಕುಳಿದವರು ಅಡಕೆ ಸೋಗೆ ತೆಂಗಿನಗರಿ, ಅಡಕೆ ಹಾಳೆ ಇವುಗಳನ್ನೆಲ್ಲಾ ಆ ದಬ್ಬೆಗಳಿಗೆ ಆನಿಸಿ ಬಳ್ಳಿ ಕಟ್ಟುತ್ತಿದ್ದರು. ನಾವೆಲ್ಲಾ ರಾಮಸೇತುವಿಗೆ ಕಪಿ ಸೈನ್ಯ ಕೆಲಸಮಾಡಿದಂತೇ ಕಷ್ಟಪಟ್ಟು ಸಾಮಗ್ರಿಗಳನ್ನು ಎಳೆದೆಳೆದು ತಂದು ಹಾಕುತ್ತಿದ್ದೆವು. ಕಟ್ಟು ಸಂಪೂರ್ಣ ತಯಾರಾಗಿ ನಿಂತು ಅದರಲ್ಲಿ ನೀರುತುಂಬುವಷ್ಟರಲ್ಲಿ ಮಧ್ಯಾಹ್ನ ಹನ್ನೆರಡು ಹೊಡೀತಿತ್ತು.

" ಹೋಯ್ ಮಂಗನಾರತಿಗಾತಡ ಬರ್ರೋ " ಎಂದು ಹವ್ಯಕಪದಗಳಲ್ಲಿ ಇನ್ನೂ ಸರಿಯಾಗಿ ಮಾತುಕಲಿಯುತ್ತಿರುವ ಪುಟಾಣಿಯೊಂದು ಕೂಗುತ್ತಾ ಬಂದಾಗ ಎಲ್ಲರಿಗೂ ಘೊಳ್ಳೆನ್ನುವ ನಗು; ಸ್ವಲ್ಪ ಹೆದರಿಕೆ ಕೂಡ! ಯಾಕೆಂದರೆ ಕಟ್ಟುಕಟ್ಟಲು ಹಿರಿಯರ ಪರ್ಮಿಶನ್ ಇರುತ್ತಿರಲಿಲ್ಲ. ಹಾಗಂತ ಗಣಪತಿ ವಿಗ್ರಹಗಳನ್ನು ಅಂದು ಸಂಜೆ ವಿಸರ್ಜಿಸಲು ಬರುವುದು ಕಟ್ಟಿನಲ್ಲೇ! ಆದರೂ ಎಲ್ಲಿ ಮಕ್ಕಳು ಅಪಾಯ ಎದುರಿಸಿಯಾರು ಎಂಬ ಭಯಕ್ಕೆ ಅವರು ಹಾಗಿರುತ್ತಿದ್ದರು. ಎಲ್ಲರೂ ಗಡಬಡಿಸಿ ನೀರಲ್ಲಿ ಅಷ್ಟಿಷ್ಟು ಮುಳುಗೆದ್ದು

" ಹೇ ಈ ಸಲ ಕಟ್ಟು ಬಾಳ ಮಸ್ತಾಯ್ದು " ಎಂದುಕೊಳ್ಳುತ್ತಾ ಮನೆಕಡೆ ತೆರಳಿದರೆ ಅಲ್ಲಿ ವೈದಿಕರು ಮನೆಯವರು ಸೇರಿ ಮಂಗಲಾರತಿ ಮುಗಿಸಿ ನಮಗೆಲ್ಲಾ ’ಮಂಗಲಾರತಿ’ ಮಾಡಲು ಕಾಯುತ್ತಿರುತ್ತಿದ್ದರು. ಒಂದಷ್ಟು ಬೈಸಿಕೊಂಡು ತೀರ್ಥ-ಪ್ರಸಾದ ಪಡೆದು ಊಟ ಮುಗಿಸಿಬಿಟ್ಟರೆ ನಂತರ ನಾವು ಕೇರಿಯ-ಊರ ಹಲವಾರು ಮನೆಗಳಿಗೆ ಗಣಪತಿ ನೋಡಲು ಹೋಗುತ್ತಿದ್ದೆವು. ಜಾರಿಕೆಯ ಅಂಗಳದಲ್ಲಿ ಅಲ್ಲಲ್ಲಿ ಅಡಕೆ ದಬ್ಬೆಗಳನ್ನು ಕವುಚಿ ಸಂಕ [ಅದರಮೇಲೆ ನಡೆಯುವಂತೇ] ಹಾಕುತ್ತಿದ್ದರು. ಸತತ ಸುರಿಯುತ್ತಿದ್ದ ಶ್ರಾವಣದ ಮಳೆಯಿಂದ ಹಾವಸೆಗಟ್ಟಿದ್ದ ಸಂಕದ ಮೇಲೆ ನಡೆಯಹೋಗಿ ಹಗಲಲ್ಲೇ ನಕ್ಷತ್ರ ಎಣಿಸಿಹೊರಟ ಭೂಪಂದಿರೂ ಇದ್ದರು. ಅಂಗಳದ ಗಜನಿ ಮಣ್ಣಿನಲ್ಲಿ ಜಾರಿ ಚಡ್ಡಿಗೆ ರಾಡಿಬಡಿದುಕೊಂಡು ಆಚೆಮನೆ ಅಕ್ಕನಕೈಲಿ ಹಿತ್ಲಕಡೆಗೆ ನೀರ ತರಿಸ್ಕೊಂಡು ಅಲ್ಲೇ ಸಲ್ಪ ಒದ್ದೆಮಾಡಿ ಕೆಸರು ತೊಳಕೊಂಡು ಮುಂದಕ್ಕೆ ನಡೆಯುವ ಹುಡುಗರೂ ಇದ್ದರು.

ಮೊದಲೇ ಹೇಳಿದೆನಲ್ಲಾ ಒಬ್ಬಬ್ಬರ ಮನೆಯಲ್ಲೂ ಗಣಪತಿಯದ್ದು ವಿಭಿನ್ನ ಸ್ಟೈಲು ! ಕೆಲವು ಮನೆ ಗಣಪ ಬೆಳ್ಳಗಿದ್ದರೆ ಇನ್ನು ಕೆಲವು ಮನೆಗಳಲ್ಲಿ ಗುಲಾಬಿ ಬಣ್ಣ, ನಮ್ಮನೆಗಳಲ್ಲಿ ಕೆಂಪುಬಣ್ಣ! [ರಕ್ತವರ್ಣ] ಕೆಲವರ ಮನೆಯಲ್ಲಿ ಗೋವ ಕಾಯುವ ಗೊಲ್ಲನಂತೇ ನಿಂತರೆ ಇನ್ನು ಕೆಲವೆಡೆ ಶೇಷಶಾಯಿ, ಮತ್ತೆ ಕೆಲವೆಡೆ ಅಂಬೆಗಾಲಿನ ಬಾಲಗಣಪ, ನಮ್ಮಲ್ಲೆಲ್ಲಾ ಕುಕ್ಕರಗಾಲಿನಲ್ಲಿ ಕುಳಿತ ಸಾಂಪ್ರದಾಯಿಕ ಪಾಶಾಂಕುಶಧಾರಿ ! ಹೋದಲ್ಲೆಲ್ಲಾ ಯಾರು ವಿಗ್ರಹ ತಯಾರಿಸಿದ್ದು, ಅದು ಚೆನ್ನಾಗಿದೆ, ಗಣಪನ ಕಣ್ಣು ಚೆನ್ನಾಗಿದೆ, ಕೈಲಿರುವ ಕೊಳಲು ಚೆನ್ನಾಗಿದೆ, ಮೈಬಣ್ಣ ಚೆನ್ನಾಗಿದೆ, ಕಿರೀಟ ಚಲೋ ಇದೆ, ಹೊಟ್ಟೆ ಭಾಗ ಬಾಳ ಸಕತ್ತಾಗಿದೆ ಹೀಗೇ ತಲೆಗೊಂದು ಹೇಳಿಕೆಗಳು. ಜೊತೆಗೆ ಹಳ್ಳದ ಕಟ್ಟಿನ ಸುದ್ದಿ. ಈಗ ಎರಡಾಳು[ಹನ್ನೆರಡು ಅಡಿ] ಎತ್ತರಕ್ಕೆ ನೀರು ತುಂಬಿರುತ್ತದೆ ಎಂಬ ಹೇಳಿಕೆ.

ಅಸಲಿಗೆ ಕಟ್ಟಿನ ಎತ್ತರ ಇರುವುದೇ ೫ ಅಡಿ. ಹಳ್ಳದ ಮಧ್ಯೆ ಕೆಲವುಕಡೆ ಮಳೆಯಿಂದ ತುಂಬಿ ಹರಿದ ರಭಸಕ್ಕೆ ಅಲ್ಲಲ್ಲಿ ಸಲ್ಪ ಆಳದ ಗುಂಡಿಗಳಿರುತ್ತಿದ್ದವು. ಕಟ್ಟಿನ ಒಳಗೂ ಕೆಲವೆಡೆ ಹಾಗೆ ಆಳದ ಗುಂಡಿಗಳು ಇರುತ್ತಿದ್ದುದ್ದು ಸ್ವಾಭಾವಿಕ. ಆಳದ ಗುಂಡಿಯ ತಳದಿಂದ ಅಬ್ಬಬ್ಬಾ ಅಂದ್ರೆ ೭-೮ ಅಡಿ ಎತ್ತರಕ್ಕೆ ನೀರಿನ ಮಟ್ಟ ಇರುತ್ತಿತ್ತು. ಆದ್ರೂ ನಮ್ಮಂಥಾ ಚಿಕ್ಕವರಿಗೆಲ್ಲ ಅದು ಸಮುದ್ರ ! ಸಂಜೆಯಾಗುತ್ತಿದ್ದರೆ ಅಲ್ಲಿಗೆ ಹೋಗಲೂ ಹೆದರಿಕೆ. ಕಟ್ಟನ್ನು ಮೀರಿ ಹರಿಯುವ ನೀರು ಯಾವುದೋ ಫಾಲ್ಸ್ ಥರ ಕಾಣಿಸುತ್ತಿತ್ತು. ಆದರೂ ಯಾರೂ ಕಟ್ಟಿನ ಮಹಿಮೆಯನ್ನು ಬಿಟ್ಟುಕೊಟ್ಟವರಲ್ಲ!

ಕೇರಿಯಲ್ಲಿ ೧೦ ಮನೆಗಳು; ಹತ್ತು ಗಣಪತಿ ವಿಗ್ರಹಗಳು. ಇಲಿಪಂಚಮಿಯ ದಿನ ಸಾಯಂಕಾಲ ೭ರ ನಂತರ ಪೂಜೆ ಆರಂಭ. ಒಬ್ಬೊಬ್ಬರ ಮನೆಯ ಹಾಗೆ ಪೂಜೆ. ಒಂದುಕಡೆ ಪೂಜೆ ಮುಗಿಸಿ ಜನ ಮತ್ತೊಂದು ಮನೆಗೆ ಬರುತ್ತಿದ್ದರು. ಎಲ್ಲರ ಮನೆಗಳ ಪೂಜೆಗಳೂ ಮುಗಿದ ತರುವಾಯ ಗಣೇಶ ವಿಸರ್ಜನೆ. ಜಾಗಟೆ, ಶಂಖ, ತಾಳ, ಡೋಲು ಇತ್ಯಾದಿ ವಾದ್ಯಗಳು. ಹೆಂಗಳೆಯರ ಇಂಪಾದ ಹಾಡುಗಳು.

" ಏಳಯ್ಯಾ ವಿಘ್ನೇಶ ಹೋಗಿಬಾ ..
ಏಳೂ ಏಳೆಲೆ ಗೌರಿಯ ತನಯ ಶ್ರೀಶಂಕರನಾ ಪ್ರೇಮದ ಕುವರನೇ ....... "

" ನಾದಬ್ರಹ್ಮ ಪರಾತ್ಪರ ಕರುಣ....
ಸಾರಸಗುಣ ಪರಿಶೋಭಿತ ಚರಣ....."

ಹೀಗೇ ನಾನಾವಿಧ ಸಂಗೀತಗಳನ್ನು ಆಲೈಸುತ್ತಾ ಹೊರಟುನಿಂತ ಗಣಪನನ್ನು ಬೀಳ್ಕೊಡುವುದು ನಮಗೆಲ್ಲಾ ಯಾರೋ ಮನೆಮಂದಿಯನ್ನು ಎಲ್ಲಿಗೋ ಕಾಣದ ದೂರದೇಶಕ್ಕೆ ಕಳಿಸಿದ ಹಾಗೇ ಭಾಸವಾಗುತ್ತಿತ್ತು; ಬೇಸರವಾಗುತ್ತಿತ್ತು. ಮಂಗಳ ನಿರಾಜನವನ್ನೂ ಮಂತ್ರಪುಷ್ಪವನ್ನೂ ಅರ್ಪಿಸಿದ ಹಿರಿಯರು ಶ್ರದ್ಧಾ-ಭಕ್ತಿ ಪೂರ್ವಕ ಗಣೇಶನಲ್ಲಿ ಪ್ರಾರ್ಥನೆ ಸಲ್ಲಿಸಿ ವಾರ್ಷಿಕವಾಗಿ ತಾವು ನಡೆಸಿಬಂದ ಪೂಜಾಕೈಂಕರ್ಯದಿಂದ ಸಂಪ್ರೀತನಾಗಿ, ಸಂತುಷ್ಟನಾಗಿ ಆಗಿರಬಹುದಾದ ಯಾವುದೇ ದೋಷಗಳಿದ್ದರೂ ಕ್ಷಮಿಸಿ ಹರಸುವಂತೇ ಸಾಷ್ಟಾಂಗವೆರಗುತ್ತಿದ್ದರು. ಗೋತ್ರಪ್ರವರಗಳನ್ನು ಉದ್ದರಿಸಿ ಪ್ರಸಾದ ಬೇಡಿ ತೆಗೆದ ನಂತರ ಮನೆಮಂದಿಗೂ ನೆರೆದ ಎಲ್ಲರಿಗೂ ಪ್ರಸಾದ ವಿತರಣೆ ನಡೆಯುತ್ತಿತ್ತು. ಋಷಿಪಂಚಮಿಯ ಕೊನೆಯ ಪೂಜೆಯಲ್ಲಿ ಗಣಪತಿಗೆ ಕಾಯಿ-ಜೋನಿಬೆಲ್ಲ ಹಾಕಿ ಕಲಸಿದ ಅರಳು, ವಿಧದ ಹಣ್ಣುಗಳು, ಕಡಲೆ, ಖರ್ಜೂರ, ಕಲ್ಲುಸಕ್ಕರೆ ಇತ್ಯಾದಿಯಾಗಿ ಇರುತ್ತಿದ್ದು ಅದನ್ನು ಎಲ್ಲರಿಗೂ ಹಂಚಿದ ಬಳಿಕ ವಿಗ್ರಹದಲ್ಲಿ ನಿಂತ ಗಣೇಶನಲ್ಲಿ ಮತ್ತೊಮ್ಮೆ ಕಾಯಾ-ವಾಚಾ-ಮನಸಾ ಪ್ರಾರ್ಥಿಸಿ ವ್ರತೋದ್ವಾಸನೆಗೈದು ಮಂಗಲಾಕ್ಷತೆ ಎರಚಿ ಸಿದ್ಧಿವಿನಾಯಕನನ್ನು ವಿಧಿವತ್ತಾಗಿ ಆ ಸ್ಥಾನದಿಂದ ಬೀಳ್ಕೊಳ್ಳುತ್ತಿದ್ದರು.

ಮಂತ್ರದಿಂದ ಬೀಳ್ಕೊಂಡ ಗಣೇಶನ ಭೌತಿಕ ವಿಗ್ರಹ ಮಾತ್ರ ಅಲ್ಲಿದ್ದು ಅದನ್ನು ನಿಧಾನವಾಗಿ ಮಂಟಪದಿಂದ ಇಳಿಸಿ ಹೊರಜಗುಲಿಗೆ ತರಲಾಗುತ್ತಿತ್ತು. ಅಲ್ಲಿ ಹೊರಟುನಿಂತ ಗಣಪನಿಗೆ ಹೆಂಗಸರು ಲೋಟದಲ್ಲಿ ಹಾಲು ಇರಿಸಿ ನಮಸ್ಕರಿಸುತ್ತಿದ್ದರು. ಇದೆಲ್ಲಾ ನಮ್ಮಲ್ಲಿನ ಭಾವನೆ ! ಅಲ್ಲಿ ಮನೆಯ ಎಲ್ಲರೂ ಇನ್ನೊಮ್ಮೆ ನಮಸ್ಕರಿಸಿದ ಮೇಲೆ ಅಭಯಮುದ್ರೆಯ ಗಣೇಶ ದೊಂದಿ [ದೀವಟಿಗೆ], ಒಣಗಿದ ತೆಂಗಿನಗರಿಯ ಸೂಡಿ, ಸೀಮೆ ಎಣ್ಣೆ ಗ್ಯಾಸ್ ಲೈಟ್ ಇತ್ಯಾದಿಗಳ ಬೆಳಕಿನಲ್ಲಿ ಹೊರಗೆ ಮೆರವಣಿಗೆ ಹೊರಡುತ್ತಿದ್ದ. ಅದೇ ವೇಳೆಗೆ ಕೇರಿಯ ಎಲ್ಲರ ಮನೆಗಳ ಗಣಪತೀ ವಿಗ್ರಹಗಳು ಸಾಲಾಗಿ ಬಂದು ಅಲ್ಲಿಗೆ ಸೇರಿಕೊಂಡು ಮುಂದಿರುವ ಅರ್ಧ ಫರ್ಲಾಂಗು ದಾರಿಯನ್ನು ಅತ್ಯಂತ ವಿಜೃಂಭಣೆಯಿಂದ ಕ್ರಮಿಸುತ್ತಿದ್ದವು. ಮೆರವಣಿಗೆ ಹಾದು ಹೋದ ದಾರಿಯಲ್ಲಿ ಜಾಜಿ, ಮಲ್ಲಿಗೆ, ಕರವೀರ, ಮೊಟ್ಟೆ ಸಂಪಿಗೆ, ಕೇದಿಗೆ ಹೀಗೇ ತರಾವರಿ ಹೂಗಳ ಪರಿಮಳಗಳು ಹಿಂದೆ ಬರುವ ಜನಸ್ತೋಮಕ್ಕೆ ಮುದವನ್ನು ನೀಡುತ್ತಿದ್ದವು. ಯಾಕೋ ಎಲ್ಲರಿಗೂ ಬೇಸರ; ಗಣೇಶ ಬಂದಿದ್ದೂ ಗೊತ್ತಾಗಲಿಲ್ಲ-ಹೊರಟಿದ್ದೂ ಗೊತ್ತಾಗಲಿಲ್ಲ ಎನ್ನುವ ಭಾವನೆ, ಇನ್ನೂ ನಾಕುದಿನ ಇದ್ದು ಹೋಗಬಹುದಿತ್ತು ಎಂಬ ಅದಮ್ಯ ಅನಿಸಿಕೆ. ಆದರೂ ಹಿಂದಿನವರು ನಡೆಸಿಬಂದ ನಿರ್ಧರಿತ ಕಾಲಮಾನ, ಹೀಗಾಗಿ ಅದನ್ನು ವಿಸ್ತರಿಸಲಾಗಲೀ ಮೊಟಕುಗೊಳಿಸಲಾಗಲೀ ಯಾರಿಗೂ ಇಷ್ಟವಿರಲಿಲ್ಲ; ಯಾವುದೋ ಅವ್ಯಕ್ತ ಭಯವೂ ಇದ್ದಿರಬಹುದೇನೋ.

" ಗಣಪತಿ ಬಪ್ಪಾ ಮೋರ್ಯಾ ಉಡಚಾ ವರ್ಷಾ ಲವಕರ್ಯಾ " ಎಂಬ ಮರಾಠಿ ಜೈಕಾರವನ್ನೂ ಸೇರಿಸಿದಂತೇ ಹಲವು ತೆರನಾದ ಜೈಕಾರಗಳು ಘೋಷಗಳು ತಾರಕ ಸ್ವರದಲ್ಲಿ ಕೇಳಿಸಿ ಮೆರವಣಿಗೆಗೆ ಮೆರುಗು ತರುತ್ತಿದ್ದವು. ಅಲ್ಲಿಲ್ಲಿ ಇರುವ ವೈದಿಕರು ಇರುವಲ್ಲಿಂದಲೇ ವೇದಘೋಷವನ್ನೂ ನಡೆಸಿಕೊಡುತ್ತಿದ್ದರು. ನಮ್ಮಲ್ಲಿನ ಗಣಪತಿ ವಿಸರ್ಜನೆ ಅತ್ಯಂತ ಸಾಂಪ್ರದಾಯಿಕವಾಗಿಯೂ ಮನೋರಂಜಕವಾಗಿಯೂ ಇರುವುದರಿಂದ ಇರುವ ಹತ್ತೂ ಮನೆಗಳಿಗೆ ಅವರವರ ನೆಂಟರೂ ಇದನ್ನು ನೋಡಬಯಸಿ ಬರುತ್ತಿದ್ದರು. ಮೈಸೂರು ದಸರಾ ಜಂಬೂ ಸವಾರಿಗಿಂತಲೂ ನಮ್ಮ ಜಂಬೋ ಜನಾರ್ದನನ ವಿಸರ್ಜನಾ ಮೆರವಣಿಗೆಯೇ ದೊಡ್ಡದೇನೋ ಎಂಬ ರೀತಿಯಲ್ಲಿ ಉತ್ಸುಕರಾಗಿ ನೋಡುವ ಕೌತುಕದ ಕಣ್ಣುಗಳು ಹಲವಿದ್ದವು.

ಹಳ್ಳದ ಕಟ್ಟಿಗೆ ತೆರಳಿದ ಮೆರವಣಿಗೆ ಕರ್ಪೂರವನ್ನು ವೀಳ್ಯದೆಲೆಯಲ್ಲಿ ಹಚ್ಚಿ ನೀರಲ್ಲಿ ತೇಲಿಬಿಡುವುದರ ಮೂಲಕ ವಿಸರ್ಜನೆಗೆ ತೊಡಗುತ್ತಿತ್ತು. ಬಣ್ಣಬಣ್ಣದ ಗಣಪನ ವಿಗ್ರಹಗಳನ್ನು ಒಂದೊಂದಾಗಿ ಕಟ್ಟಿನ ಜಲಾನಯನ ಪ್ರದೇಶದಲ್ಲಿ ಮುಳುಗಿಸುತ್ತಿದ್ದರು. ಮುಳುಗಿಸುವ ಕೊನೆಯ ಹಂತದಲ್ಲಿ ಗಣೇಶನಿಗೆ ಹಾಕಿದ್ದ ಜನಿವಾರವನ್ನು ವಿಗ್ರಹದ ಶಿರೋಭಾಗದಿಂದ ತೆಗೆಯುವ ಮೊದಲೇ ಮನೆಯ ಹಿರಿಯರು ಯಾರಾದರೂ ಧರಿಸಿ ಅದರ ಪ್ರಭೆಯನ್ನು ಹಾಗೇ ಉಳಿಸಿಕೊಳ್ಳುತ್ತಿದ್ದರು. ಗಣಪಣ್ಣನ ಹೊಕ್ಕಳ ಜಾಗದಲ್ಲಿ ಇರಿಸಿದ್ದ ನಾಣ್ಯವನ್ನು ಎತ್ತಿ ಚಂದ್ರಲೋಕಕ್ಕೆ ಎಸೆಯಲಾಗುತ್ತಿತ್ತು ! ತದನಂತರ ಎರಡು ಸರ್ತಿ ಮೋರ್ಯಾ ಮೋರ್ಯಾ ಎಂದು ನೀರಲ್ಲಿ ವಿಗ್ರಹ ಅದ್ದಿ ಮೂರನೇ ಸಲ ನೀರಲ್ಲಿ ಅದನ್ನು ಬಿಡುವುದಕ್ಕೆ ಯಂಟ್ರೊಣ[ವೆಂಕಟರಮಣ]ನ ಕೈಗೆ ಕೊಡುತ್ತಿದ್ದರು. ಯಂಟ್ರೊಣ ಹೊಳಬೆಳಕಿನ ಕತ್ತಲಲ್ಲೇ ಸಾಗಿ ಗುಂಡಿ ಇರುವ ಜಾಗದಲ್ಲಿ ವಿಗ್ರಹವನ್ನು ವಿಸರ್ಜಿಸುತಿದ್ದ. ಅದಾದ ಸಲ್ಪ ಹೊತ್ತಿಗೆ ನಮ್ಮಂಥ ಬಹುತೇಕ ಮಕ್ಕಳ ದುಂಬಾಲು ಆಲಿಸಿ ಮುಳುಗಿಸಿದವರ ಹೊರತಾಗಿ ಬೇರೇ ಯಾರಾದರೂ ನೀರಲ್ಲಿ ಧುಮುಕಿ ವಿಸರ್ಜಿಸಿದ ಗಣಪನ ವಿಗ್ರಹಗಳನ್ನು ಎತ್ತಿಕೊಂಡು ಬೇರೇ ಮಾರ್ಗವಾಗಿ ಬಂದು ಕೊಡುತ್ತಿದ್ದರು. ಹಾಗೆ ತಂದ ವಿಗ್ರಹವನ್ನು ಬ್ಯಾಟರಿ ಬೆಳಕಿನಲ್ಲಿ ಕೊಟ್ಟಿಗೆಗೆ ಸಾಗಿಸಲಾಗುತ್ತಿತ್ತು.

ಪೂಜಿಸಿದ ಮಣ್ಣಿನ ಅಥವಾ ಪಾರ್ಥಿವ ವಿಗ್ರಹಗಳನ್ನು ಪೂಜಾನಂತರ ಹರಿಯುವ ನೀರಿನಲ್ಲೋ ಇರುವ ಕೆರೆಯಲ್ಲೋ ವಿಸರ್ಜಿಸಿ ಬಿಡಬೇಕು, ಅದಕ್ಕೆ ಯಾವುದೇ ಅಪಚಾರ ಆಗಬಾರದು ಎಂಬುದು ಶಾಸ್ತ್ರಾಧಾರಿತವಾಗಿದೆ. ಆದರೆ ಗಣಪಣ್ಣನ ವಿಷಯದಲ್ಲಿ ಅದೂ ನಮ್ಮಕಡೆ ಸಲ್ಪ ಡಿಸ್ಕೌಂಟು! ವಿಸರ್ಜಿಸಿದ ಗಣಪನ ವಿಗ್ರಹವನ್ನು ಎತ್ತಿ ಕೊಟ್ಟಿಗೆಯಲ್ಲಿ ಇಡುವುದರಿಂದ ದನಗಳಿಗೆ ಉಣ್ಣಿಗಳ ಬಾಧೆ ಕಮ್ಮಿ ಆಗುತ್ತದೆ ಎಂಬ ಹೇಳಿಕೆಯನ್ನು ಯಾರೋ ಹುಟ್ಟಿಸಿ ಹಬ್ಬಿಸಿದ್ದರು. ಅದು ನಮಗೂ ಅನುಕೂಲವೇ ಆಗಿತ್ತು; ಯಾಕೆಂದರೆ ಆಡಲು ಬಣ್ಣದ ಗಣಪತಿಯ ವಿಗ್ರಹ ಸಿಗುವುದಲ್ಲ ? ಎತ್ತಿ ತಂದ ವಿಗ್ರಹದಲ್ಲಿ ಯಾವುದಾದರೂ ಅಂಗವೋ ಆಭರಣವೋ ಮುರಿದುಹೋಗಿರುತ್ತಿತ್ತು ! ನೀರಿನಲ್ಲಿ ಅಷ್ಟೊಂದು ರಭಸದಿಂದ ಎತ್ತಿ ಬಿಟ್ಟಾಗ ಹಾಗೆ ಆಗುವುದು ಸಹಜವಷ್ಟೇ ? ಆದರೂ ನಮ್ಮಲ್ಲಿನ ಗಣಪ ವಿಗ್ರಹಗಳು ಅಚ್ಚಿನಿಂದ ತಯಾರಿಸಿದವಲ್ಲ; ಬದಲಿಗೆ ಹದಗೊಳಿಸಿದ ಮಣ್ಣನ್ನು ಕೈಯ್ಯಿಂದಲೇ ಮೆತ್ತಿ ಆಕಾರ ಕೊಟ್ಟು ಒಣಗಿಸಿ, ತಿದ್ದಿ ತೀಡಿ ನುಣುಪುಗೊಳಿಸಿ ಬಣ್ಣಹಚ್ಚಿ ತಯಾರಿಸಿದವಾಗಿರುತ್ತವೆ. ಬಂಗಾರದ ಬಣ್ಣದ ಆಭರಣಗಳು ಹೊಟ್ಟೆಯಲ್ಲಿ ಹೆಡೆಬಿಚ್ಚಿ ಕುಳಿತ ಸರ್ಪ, ಕಾಲ ಪಕ್ಕದಲ್ಲಿ ಕೈಮುಗಿದೋ ಹಣ್ಣುತಿನ್ನುತ್ತಲೋ ಕುಳಿತ ಪಿಳಿಪಿಳಿ ಕಣ್ಣಿನ ಮೂಷಿಕ ಹೀಗೇ ಇವೆಲ್ಲಾ ನಮ್ಮ ಮನಸ್ಸನ್ನು ಕದ್ದುಬಿಡುತ್ತಿದ್ದವು.

ರಾತ್ರಿ ಬ್ಯಾಟರಿ ಬೆಳಕಿನಲ್ಲಿ ಕೊಟ್ಟಿಗೆಯ ಅಂಗಳದಲ್ಲಿ ಇರಿಸಿದ ಗಣಪನ ವಿಗ್ರಹವನ್ನು ನೋಡಿ ಏನೇನು ಊನವಾಗಿದೆ ಎಂದು ಸುಮಾರಾಗಿ ಅಂದಾಜು ಕಟ್ಟಿದ ನಾವು ಆ ರಾತ್ರಿ ಹಿರಿಯರೆದುರು ಚಕಾರವೆತ್ತುವ ಹಾಗಿರಲಿಲ್ಲ. ಎಲ್ಲಾದರೂ ಆ ವಿಷಯ ಮಾತನಾಡಿದರೆ ಹಿರಿಯರು ಬಂದಿರುವ ನೆಂಟರ ಎದುರಿಗೆ ಬೈದರೆ ನಮ್ಮ ಮರ್ಯಾದೆಯ ಗತಿ ಏನಾಗಬೇಡ ! ಹೀಗಾಗಿ ಆಡಲೂ ಆಗದೇ ಅನುಭವಿಸಲೂ ಆಗದೇ ಆ ರಾತ್ರಿ ನಿದ್ದೆಯೇ ಇಲ್ಲದೇ ಕಳೆದುಹೋಗುತ್ತಿತ್ತು. ಹಾಗಂತ ಗಣಪನ ವಿಸರ್ಜನೆ ಮುಗಿದು ಊಟವಾದ ನಂತರ ಬೇಸರ ಕಳೆಯುವಿಕೆಗಾಗಿ ಕೇರಿಯ ಯಾವುದಾದರೊಂದು ಮನೆಯಲ್ಲಿ ಯಕ್ಷಗಾನದ ಪ್ರಸಂಗವೋ ಅಥವಾ ಚಿಕ್ಕ ಹೆಣ್ಣುಮಕ್ಕಳಿಂದ ನೃತ್ಯವೋ ನಡೆಯುತ್ತಿತ್ತು. ಕೆಲವೊಂದು ಸರ್ತಿ ಹಿಂದೂಸ್ಥಾನೀ ಸಂಗೀತ ಅಥವಾ ದಾಸರ ಪದಗಳನ್ನೂ ಹಾಡಲಾಗುತಿತ್ತು. ಇವೆಲ್ಲಾ ನಮ್ಮಂಥಾ ಮಕ್ಕಳಿಗೆ ಬೇಕೇ ? ನಮದೇನಿದ್ದರೂ ಒಂದೇ ಚಿಂತೆ : ಎಷ್ಟು ಹೊತ್ತಿಗೆ ಬೆಳಕು ಹರಿದೀತು, ಎಷ್ಟು ಬೇಗ ಮುರಿದ ವಿಗ್ರಹದ ತುಣುಕುಗಳು ನಮಗೆ ಸಿಕ್ಕಾವು ---ಇದೇ ಯೋಚನೆಯಲ್ಲೇ ಚಿಕ್ಕ ಜೀವಗಳು ಹೈರಾಣಾಗುತ್ತಿದ್ದವು!

ಬೆಣಚು ಬಿಡುತ್ತಿರುವಹಾಗೇ ಹಾಸಿಗೆಯಿಂದೆದ್ದು ಕೆಂಪಾದ ಕಣ್ಣುಜ್ಜುತ್ತಾ ಹಾಗೇ ಸಲ್ಪ ಮುಖ ತೊಳೆದ ಶಾಸ್ತ್ರಮಾಡಿ ಹಳ್ಳದ ಕಟ್ಟಿನ ಜಲಾನಯನಕ್ಕೆ ಓಡುತ್ತಿದ್ದೆವು. ನಮ್ಮಲ್ಲಿಯೇ ಸಲ್ಪ ದೊಡ್ಡಗಿನ ಈಜುಬಲ್ಲ ಹುಡುಗನನ್ನು ಕರೆದಿರುತ್ತಿದ್ದೆವು. ಅಲ್ಲಿ ನೀರು ಶಾಂತವಾಗಿ ಸ್ಫಟಿಕ ಸದೃಶವಾಗಿದ್ದಾಗ ಮುರಿದ ವಿಗ್ರಹದ ಬಣ್ಣದ ತುಣುಕುಗಳನ್ನು ಹುಡುಕುತ್ತಿದ್ದೆವು. ಒಬ್ಬ ತನಗೆ ತನ್ನ ಗಣಪತಿಯ ಕೈ ಸಿಕ್ಕಿತು ಎಂದರೆ ಇನ್ನೊಬ್ಬ ಕಿರೀಟದ ಭಾಗ ಸಿಕ್ಕಿದ್ದಕ್ಕೆ ಸಂತಸಪಡುತ್ತಿದ್ದ. ಮತ್ತೊಬ್ಬ ಚಿನ್ನದ ಬಣ್ಣದ ಪಾಶಾಂಕುಶ ದೊರೆಯಿತು ಎಂದು ಕೇಕೇ ಹಾಕಿದರೆ ಉಳಿದವನೊಬ್ಬ ಮುರಿದ ಕಾಲುಬೆರಳನ್ನು ಹುಡುಕಿ ಅದೋ ಅಲ್ಲಿದೆ ನೋಡು ಎಂದು ಉದ್ಗಾರ ತೆಗೆಯುತ್ತಿದ್ದ. ಅಂತೂ ವಿಗ್ರಹಗಳ ಭಾಗಗಳು ಹಾಗೆ ಸಿಕ್ಕಾಗ ಆಗುವ ಆನಂದಕ್ಕೆ ಪಾರವೇ ಇರಲಿಲ್ಲ. ಈಜುಬಲ್ಲ ಗೆಳೆಯ ನೀರಿಗೆ ಜಿಗಿದು ಅವನ್ನೆಲ್ಲಾ ಎತ್ತಿಕೊಡುತ್ತಿದ್ದ. ಪಡೆದ ಆ ಭಾಗಗಳ ಮರುಜೋಡಣೆ ಮುಂದಿನ ಕೆಲಸ. ಅದಾದ ನಂತರ ನಾವು ನಮ್ಮಷ್ಟಕ್ಕೇ ಶಾಲೆಗೆ ರಜಾ ಘೋಷಿಸಿಕೊಂಡು ಮನೆಯಲ್ಲಿ ಬಳಸಿಬಿಟ್ಟ ಹೂವು ಪತ್ರೆ ಒಟ್ಟುಗೂಡಿಸಿಕೊಂಡು ಮತ್ತೆ ಕೊಟ್ಟಿಗೆಯ ಅಂಗಳದಲ್ಲಿ ಗಣಪನ ಪೂಜೆ ನಡೆಸುತ್ತಿದ್ದೆವು. ಮನೆಗಳಲ್ಲಿ ನಡೆಸಿದ ಎಲ್ಲಾ ಸೇವೆಗಳಿಗಿಂತಾ ನಮ್ಮ ಪೂಜೆಯೇ ಬಹಳ ಜೋರಾಗಿರುತ್ತಿತ್ತು!

ಇಂದಿಗೆ ಇದೆಲ್ಲಾ ಅಂದಿನ ಜೀವನದ ಕಥೆ ! ಇಂದು ಹಳ್ಳವೇನೋ ಇದೆ. ಆದರೆ ಹಳ್ಳದ ಹರವನ್ನು ಊರಲ್ಲಿ ರಾಜಕೀಯ ಮಾಡುವ ಒಬ್ಬಾತ ಒತ್ತುವರಿಮಾಡಿ ಕಬಳಿಸಿದ್ದಾನೆ. ಆತನಿಗೆ ಮಂತ್ರಿಮಹೋದಯರ ತನಕ ಎಲ್ಲರ ಕೈಯ್ಯೂ ಇರುವುದರಿಂದಲೂ ಕಾಸಿಗಾಗಿ ಆತ ಏನನ್ನೂ ನಡೆಸಲು ಹೇಸದ ವ್ಯಕ್ತಿ ಎಂಬ ಬಿರುದನ್ನು ಅದಾಗಲೇ ಪಡೆದಿರುವುದರಿಂದಲೂ ಕೇರಿಯ ಮಿಕ್ಕುಳಿದ ಜನ ಮಾತಾಡಲು ಹೆದರುತ್ತಾರೆ ! ಇರುವ ಜಾಗವೆಲ್ಲಾ ತನ್ನದೇ ಎನ್ನುತ್ತಾ ಆಕ್ಟೋಪಸ್ ಶೈಲಿಯಲ್ಲಿ ಕಬಳಿಕೆ ನಡೆಸುವ ಆತನನ್ನು ಕಂಡರೆ ಏನನ್ನಬೇಕೋ ತಿಳಿಯುತ್ತಿಲ್ಲ. ಅಮ್ಮಣ್ಣ ಕುಡುಕನಾಗಿದ್ದಾನೆ, ರಾಮ ಊರು ತೊರೆದಿದ್ದಾನೆ, ಶ್ರೀಪಾದ ಸಮರ್ಪಕ ಆದಾಯವಿಲ್ಲದೇ ಹೆಂಡತಿಯ ಸರಕಾರೀ ಆಕ್ಕೊರ್ಕೆಯ ಸಂಬಳವನ್ನೇ ನಂಬಿಕೊಂಡಿದ್ದಾನೆ, ಗಪ್ಪತಿ ಯಾವುದೋ ರಿಸರ್ಚು ಮಾಡಲು ಹೋಗಿ ಯಾವುದೂ ಆಗದೇ ಕೂದಲೆಲ್ಲಾ ಉದುರಿ ವಾನಪ್ರಸ್ಥಾಶ್ರಮ ಸ್ವೀಕರಿಸಿದವರಂತೇ ಕಾಣುತ್ತಿದ್ದಾನೆ, ತಮ್ಮನ ಜೊತೆ ಜಗಳವಾಡಿಕೊಂಡ ಸುಬ್ಬು ಯಾವುದೋ ಊರಿಗೆ ವಿಳಾಸ ನೀಡದೇ ತೆರಳಿದ್ದಾನೆ. ಶಣಮಾಣಿಗೆ ಗುಟ್ಕಾ ಸ್ಯಾಚೆಟ್ಟುಗಳ ಹಾರ ನಿತ್ಯವೂ ಬೇಕಾಗುತ್ತದೆ. ಸತ್ನಾರಣ ಜಮೀನು ನೋಡಿಕೊಂಡಿದ್ದು ಹೆಂಡತಿಗೆ ಸೌಖ್ಯವಿಲ್ಲದ್ದರಿಂದ ನೆಮ್ಮದಿಯಿಂದಿಲ್ಲ ........ಹೀಗೇ ಯಾರ್ಯಾರೋ ಏನೇನೋ ಆಗಿದ್ದಾರೆ!

ನನ್ನ ಓರಗೆಯ ಹುಡುಗರು ಬೆಳೆದು ಓದಿ, ಅದೂ ಇದೂ ಉದ್ಯೋಗ ನಡೆಸಿ ನಗರಗಳಿಗೆ ತೆರಳಿದ್ದಾರೆ, ಹಳ್ಳಿಯಲ್ಲಿ ಈಗಿರುವ ಚಿಕ್ಕಮಕ್ಕಳಿಗೆ ಆ ದೃಶ್ಯಗಳು ಲಭ್ಯವಿಲ್ಲ, ಹಿಂದಿನ ಕಾಲದ ನಡಪತ್ತೂ ಇಲ್ಲ. ಹಾಗೆಯೇ ಈ ಕಥೆಯೂ ಕೂಡ. ಬಹುತೇಕರ ಮನೆಗಳಲ್ಲಿ ಗಣಪತಿಯೇನೋ ಬರುತ್ತಾನೆ ಆದರೆ ಮೊದಲಿನ ಉತ್ಸುಕತೆಯಿಲ್ಲ, ಆ ಶ್ರದ್ಧೆ-ಭಕ್ತಿ ಉಳಿದಿಲ್ಲ, ವಿಸರ್ಜನೆ ತುಳಸಿ ಮುಂದೆ ಇಟ್ಟು ಚೊಂಬು ನೀರನ್ನು ಎರಚುವುದರ ಮೂಲಕ ಮುಗಿದು ಹೋಗುತ್ತದೆ! ಇಂದಿನ ಮಕ್ಕಳಿಗೆ ದೊಂದಿ-ದೀವಟಿಗೆ ಇವೆಲ್ಲಾ ಪುಸ್ತಕದ ಶಬ್ದಗಳಾಗಿಬಿಟ್ಟಿವೆ. ಹಳ್ಳದಲ್ಲಿ ಕಲ್ಮಶ ತುಂಬಿಬಿಟ್ಟಿದೆ. ಯಾರೂ ಕಟ್ಟುಹಾಕುವುದಿಲ್ಲ, ಎಲ್ಲೂ ಮೆರವಣಿಗೆಯ ಸಡಗರ ಕಾಣುವುದಿಲ್ಲ. ಚೌತಿ ಬಂದಿದ್ದಷ್ಟೇ ಪಂಚಾಂಗದಲ್ಲಿ ಗೊತ್ತು, ಹೋಗಿದ್ದನ್ನು ತಿಳಿಯಲು ಮತ್ತೆ ಪಂಚಾಂಗವನ್ನೇ ತೆರೆಯಬೇಕು, ಅಂದಹಾಗೇ ಹೇಳುವುದನ್ನೇ ಮರೆತೆ-ಹತ್ತಾರು ವರ್ಷಗಳಲ್ಲಿ ಪಂಚಾಂಗವನ್ನು ತಯಾರಿಸುವವರಿಗೂ ಅದನ್ನು ಬಳಸಲು ಕಲಿಯುವವರಿಗೂ ಹುಡುಕಾಟ ನಡೆಸಬೇಕಾದೀತು ! ಹಕೀಕತ್ತು ಹೀಗಿರುವಾಗ ಉದರಂಭರಣೆಗೆ ದೇಶ-ವಿದೇಶಗಳಿಗೆ ವಲಸೆ ತೆರಳಿದ ಮುಂದಿನ ಪೀಳಿಗೆ ಶುದ್ಧ ಅಮೇರಿಕನ್ನರ ಸ್ಟೈಲಿನಲ್ಲಿ " ಹಾಯ್ ಹೌ ದೂ ಯು ದೂ ಗಣೇಶ್ ? " ಎಂದರೆ ಅದು ಆಶ್ಚರ್ಯದ ಸಂಗತಿಯಾಗುವುದಿಲ್ಲ ! ಹಬ್ಬಕ್ಕೆ ಬರುವ ಗಣಪ [ಒಂದೊಮ್ಮೆ ಬಂದರೆ!]ಉಂಡೆ-ಚಕ್ಕುಲಿಗಳನ್ನು ಚಿತ್ರಗಳಲ್ಲಿ ನೋಡುತ್ತಾ ಕೂರಬೇಕೇ ಶಿವಾಯಿ ೨೧ ಅಥವಾ ೩೨ ಬಗೆಯ ಖಾದ್ಯ ವೈವಿಧ್ಯಗಳು ಆತನಿಗೆ ಲಭ್ಯವಾಗುವುದು ಡೌಟು !

Monday, August 29, 2011

ಚಿಕ್ಕ ಇಲಿಯ ಬೆನ್ನನೇರಿ !


ಚಿಕ್ಕ ಇಲಿಯ ಬೆನ್ನನೇರಿ !

[ಎಲ್ಲಾ ಓದುಗ, ಸ್ನೇಹಿತ, ಬಂಧು-ಮಿತ್ರ-ಹಿತೈಷಿಗಳಿಗೂ ಸೇರಿದಂತೇ ಲೋಕದ ಸಮಸ್ತರಿಗೂ ಸ್ವರ್ಣಗೌರೀ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.]


ಚಿಕ್ಕ ಇಲಿಯ ಬೆನ್ನನೇರಿ ದೊಡ್ಡಹೊಟ್ಟೆ ಬೆನಕರಾಯ
ಸಿಕ್ಕ ಸಿಕ್ಕ ಭಕ್ತರುಗಳ ಮನೆಗೆ ಧಾವಿಸಿ
ಅಕ್ಕರೆಯಿಂದವರು ಕೊಟ್ಟ ಚಕ್ಕುಲಿಗಳ ಮೆದ್ದು ಮತ್ತೆ
ಚೊಕ್ಕಗೊಳಿಸಿ ಮೋದಕಗಳ ತಿಂದು ವಿರಮಿಸಿ !

ಡರ್ರೆನ್ನುತ ತೇಗಿದಾಗ ಆಗಿಹೋಯ್ತು ರಾತ್ರಿ ಅಲ್ಲಿ
ಸರ್ರನೆದ್ದು ಹೊರಟುಬಿಟ್ಟ ತನ್ನ ಮನೆಕಡೆ
ಗರ್ರೆನ್ನುತ ತಿರುಗಿ ತಿರುಗಿ ಬಿದ್ದುಬಿಡ್ತು ಮೂಷಿಕಣ್ಣ
ಕರ್ರಗಿರುವ ಬಾನಿನಲ್ಲಿ ಚಂದ್ರ ಹಲ್ಬಿಡೆ !

ಬಿದ್ದ ಚಣದಿ ಹೊಟ್ಟೆಯೊಡೆದು ಬೆನವಗಾಯ್ತು ಕಷ್ಟಕಾಲ
ಎದ್ದುಬಿದ್ದು ಹುಡುಕಿ ನಡೆದ ಸೊಂಟಬಂಧಿಯ
ಕದ್ದು ನೋಡಿ ನಗುತಲಿದ್ದ ಮೋಡಸರಿಸಿ ಚಂದಿರಾಮ
ಕ್ರುದ್ಧನಾದ ವಿಘ್ನರಾಜ ಕಂಡು ಸಂದಿಯ !

ನಕ್ಕ ಶಶಿಯ ಸೊಕ್ಕ ಮುರಿಯೆ ಗಣಪ ಬಿಸುಟ ಮುರಿದು ಹಲ್ಲ
ಹೆಕ್ಕಿ ಹರೆಯುತಿದ್ದ ಹಾವ ಹೊಟ್ಟೆ ಕಟ್ಟುತ
ಹಕ್ಕಿಗಧಿಕ ವೇಗದಲ್ಲಿ ಸಾಗುವಾಗ ಹಾದಿಯಲ್ಲಿ
ಬಿಕ್ಕುತಳುವ ತಂಗದಿರನ ಬೆನ್ನ ತಟ್ಟುತ

ವಿಕಟನಿತ್ತ ಶಾಪವನ್ನು ಮರಳಿ ಪಡೆದು ಹರಸುವಂತೆ
ನಿಕಟನಪ್ಪೆನೆನುತ ಬೇಡಿದಾ ಶಶಾಂಕನು
ಪ್ರಕಟಗೊಳುವ ನಿನ್ನ ನೋಡೆ ಭಾದ್ರಪದದ ಚೌತಿಯಲ್ಲಿ
ಮುಕುಟ ಮಸಿಯ ಛಾಯೆಪಡೆಯಲೆಂದ ಸುಮುಖನು

ಅಮ್ಮ ಹಾಲ ಕರೆಯುವಾಗ ನಮ್ಮಕೃಷ್ಣ ಚೊಂಬಿನಲ್ಲಿ
ಸುಮ್ಮನಾಡಿ ನೋಡುತಿದ್ದ ಚಂದ್ರ ಬಿಂಬವ
ಒಮ್ಮೆ ಮಣಿಯು ಕಳೆಯಲಾಗಿ ಕದ್ದ ಕಳ್ಳ ಗೊಲ್ಲನೆಂದು
ಚಿಮ್ಮಿ ಹರಿದ ಸುದ್ದಿ ತಂತು ಹರಿಗಗೌರವ

ಮುರಳಿ ತೆರಳಿ ಕಾಡಿನೆಡೆಗೆ ಬಡಿದು ಜಾಂಬವಂತನನ್ನು
ಕೆರಳಿ ಪಡೆದ ಮಣಿಯನಲ್ಲಿ ವಿಷಯವರಿಯುತ
ತರಳಗೆರಗಿ ಜಾಂಬವಂತ ಪರಿಪರಿಯಲಿ ಪ್ರಾರ್ಥಿಸಲ್ಕೆ
ಕರುಳುಮಿಡಿದು ಜಾಂಬವತಿಯ ಕೈಯ್ಯ ಹಿಡಿಯುತ

ಮಣಿಯ ಕಂಡು ಊರಮಂದಿ ಹುರುಪುಗೊಂಡು ಹಾರಿಕುಣಿದು
ಕಣಿವೆಯೆಲ್ಲ ಮಾರ್ದನಿಸಿತು ಕೃಷ್ಣಜಯಜಯ
ಹೊಣೆಯನಿತ್ತನಾ ಗಣೇಶ ಕೇಳಿದವಗೆ ಮಣಿಯಕಥೆಯ
ಋಣದಿ ಮುಕ್ತಿ ದೋಷವಿಲ್ಲ ಎಲ್ಲ ಸುಖಮಯ


Sunday, August 28, 2011

ಅಣ್ಣನ ಗೆಲುವು = ದೇಶದ ಗೆಲುವು = ಮನುಷ್ಯತ್ವದ ಗೆಲುವು


ಅಣ್ಣನ ಗೆಲುವು = ದೇಶದ ಗೆಲುವು = ಮನುಷ್ಯತ್ವದ ಗೆಲುವು

ದೇಶದ ಜನರ ದೈನಂದಿನ ಸ್ಥಿತಿ ಹದಗೆಟ್ಟಾಗ ಅಧರ್ಮ ತಾಂಡವವಾಡಿದಾಗ ನಮಗೆ ನೆನಪಾಗುವುದು " ಯದಾಯದಾಹಿ ಧರ್ಮಸ್ಯ ..........." ಎಂಬೀ ಗೀತೆಯ ನುಡಿ. ೭೫ ವರ್ಷ ವಯೋಮಾನದ ಮುದುಕನೊಬ್ಬ ಇನ್ನೂ ಮೂಲ ಭಾರತೀಯ ಸಂಸ್ಕೃತಿಯನ್ನು ಸಂಸ್ಕಾರವನ್ನು ಆತು ಬದುಕುತ್ತಿರುವುದು ಅಬ್ಬರದ ಪ್ರಚಾರಕ್ಕಾಗಿ ಅಲ್ಲ, ಯಾವುದೇ ಪಕ್ಷ-ಪಾರ್ಟಿಗಳಿಗಾಗಿ ಅಲ್ಲ, ತನ್ನ ಸ್ವಾರ್ಥಕ್ಕಾಗಿ ಅಲ್ಲ ಬದಲಾಗಿ ತನ್ನ ದೇಶವಾಸಿಗಳ ದಿನನಿತ್ಯದ ಬದುಕು ಹಸನಾಗಲಿ ಎಂಬ ಒಂದೇ ಆಶಯದಿಂದ. ಒಂದೇ ಒಂದು ದಿನ ಉಪವಾಸ ಇರಿ ಅಂದರೆ ಹರೆಯದ ಕಸುವುಳ್ಳ ಶರೀರದವರಾದ ನಾವುಗಳೆಲ್ಲಾ ಮಿಸುಕಾಡಿಬಿಡುತ್ತೇವೆ ಎನ್ನುವಾಗ ಹನ್ನೊಂದು ದಿನಗಳ ನಿರಶನ ವೃತ್ತಿ ಎಷ್ಟು ಕಠಿಣತಮ ಎಂಬುದನ್ನು ಮತ್ತೆ ಬಿಡಿಸಿ ಹೇಳುವ ಅಗತ್ಯವಿಲ್ಲವಷ್ಟೇ ?

ಅಂದು ಅಣ್ಣಾ ಹಜಾರೆಯ ಗಾಳಿ ಮೊದಲಾಗಿ ಜೋರಾಗಿ ಬೀಸಲು ಆರಂಭಿಸಿದಾಗ ಕನ್ನಡದ ಅಪ್ಪ-ಮಕ್ಕಳ ಸರ್ಕಸ್ ಕಂಪನಿ ಅದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿತು, ತನ್ನ ಪಕ್ಷದ ಪ್ರಣಾಳಿಕೆಯೇನೋ ಎಂಬಂತೇ ಮುದುಕರಾದ ದೊರೆಸ್ವಾಮಿಗಳನ್ನೂ ಕಟ್ಟಿಕೊಂಡು ಬಹಳ ಗಟ್ಟಿಯಾಗಿ ಎದೆತಟ್ಟಿ ನುಡಿಯಿತು, ಆದರೆ ಅದೇ ಅಪ್ಪ-ಮಕ್ಕಳು ಅದರಲ್ಲೂ ೧೦೦೮ ಶ್ರೀಮಾನ್ ಕುಮಾರ ಅಣ್ಣಾಹಜಾರೆಯವರ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಪ್ರಮುಖರೆಲ್ಲಾ ಹಣಪಡೆದಿದ್ದಾರೆ ಎಂದು ಅಡ್ಡಡ್ಡ ನಿಂತು ಬೊಗಳಿದಾಗ ದೂರದಲ್ಲಿ ಬೀದಿನಾಯಿಯೂ ಸಾತ್ ನೀಡುತ್ತಿತ್ತೇನೋ ಅನಿಸುತ್ತದೆ; ಯಾಕೆಂದರೆ ಬೀದಿನಾಯಿಗಳು ತಲೆಯಿಲ್ಲದೇ ಕೂಗುತ್ತವೆ!

ಜನಸಂಘವೆಂಬ ಒಂದು ಜನಜಾಗೃತಿಯ ಮಂಚ ಹುಟ್ಟಿಕೊಂಡು ದೇಶಭಕ್ತರೇ ಅದರಲ್ಲಿ ತುಂಬಿಕೊಂಡು ಇಂದಿರಾಗಾಂಧಿಯ ಕಾಲದಲ್ಲೇ ತುರ್ಯಾವಸ್ಥೆಗೆ ತಲುಪಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂತಹ ಜನಸಂಘ ಕಾಲಾನಂತರದಲ್ಲಿ ಜನತಾಪಕ್ಷವಾಗಿ ರಾಜಕೀಯ ರೂಪ ಪಡೆದು ನಂತರ ಇಬ್ಭಾಗವಾಗಿ ಜನತಾ ಪಕ್ಷ ಮತ್ತು ಭಾರತೀಯ ಜನತಾ ಪಕ್ಷವೆಂಬ ಎರಡು ರೂಪಗಳಲ್ಲಿ ಗೋಚರಿಸಿತು. ಈ ದೇಶದಲ್ಲಿ ಹಲವಾರು ಪಕ್ಷಗಳು ಜನಿಸಿದ್ದೇ ಆ ವೇಳೆಗೆ. ಇದನ್ನೆಲ್ಲಾ ನೋಡುತ್ತಿದ್ದ ಪ್ರಾದೇಶಿಕ ರಾಜಕೀಯ ಪಾಪಿಗಳು ತಂತಮ್ಮ ಅನುಕೂಲಕ್ಕೆ ಹಲವು ಪಕ್ಷಗಳನ್ನು ಹುಟ್ಟುಹಾಕಿದರು; ತಾವು ನಡೆಸಿದ್ದೇ ಆದರ್ಶವೆಂದು ಘೋಷಿಸಿಬಿಟ್ಟರು!

ಹಾಗೇ ಬ್ರಷ್ಟರೆಲ್ಲಾ ಸೇರಿಕೊಂಡು ಮತ್ತೆ ಮತ್ತೆ ದಳಗಳು ವಿದಳಗಳಾದವು; ಜನತಾ ಪಕ್ಷ ಎಂಬುದು ಮತ್ತೆ ಭಾಗವಾಗಿ ಜನತಾದಳವಾಯ್ತು. ಜನತಾದಳವನ್ನು ಕರ್ನಾಟಕದಲ್ಲಿ ತಮಗೆ ನೋಟು ತಯಾರಿಸುವ ಕಾರ್ಖಾನೆ ಮಾಡಿಕೊಳ್ಳಲು ಬಯಸಿದ್ದ ಮಣ್ಣಿನ ಮಗನ ಧೂರ್ತ ಆಲೋಚನೆಗಳು ಮತ್ತೆ ದಳ ವಿಭಜನೆಗೊಳಾಗಾಗಿದ್ದೂ ಸೆಕ್ಯೂಲರ್ ಜನತಾದಳವೆಂಬ ಫೌಂಡೇಶನ್ನೇ ಇಲ್ಲದ ಕೆಟ್ಟ ಪಕ್ಷ ಜನಿಸಿದ್ದೂ ಜನ ಕಂಡಿರುವ ಸತ್ಯ. ಹಾಗೆ ಜನಿಸಿದ ಪಕ್ಷ ಹಾದರಕ್ಕೆ ಜನಿಸಿದ ಕೂಸಿನ ಹಾಗೇ ಕಂಡವರನ್ನೆಲ್ಲಾ ತನ್ನಪ್ಪ-ತನ್ನಮ್ಮ ಎಂದುಕೊಳ್ಳುತ್ತಾ ಯಾರ್ಯಾರನ್ನೋ ತನ್ನ ತೆಕ್ಕೆಯೊಳಗೆ ಸೇರಿಸಿಕೊಳ್ಳುತ್ತಾ ಮಣ್ಣಿನ ಮಕ್ಕಳ ಮನೆಯತ್ತ ದಾಪುಗಾಲು ಹಾಕಿತ್ತು. ಅಲ್ಲಿ ಸರಸ-ವಿರಸಗಳು ಕೇವಲ ಸೂಟ್‍ಕೇಸ್ ಮೂಲಕ ನಡೆಯುತ್ತಿದ್ದವೇ ಹೊರತು ರಾಜ್ಯದ-ದೇಶದ-ಗಣತಂತ್ರದ ನಿಜವಾದ ಮುನ್ನಡೆ ಯಾರಿಗೂ ಬೇಕಾಗಿರಲಿಲ್ಲ. ಗಾಳಿ ಬಂದಾಗ ತೂರಿಕೋ ಎಂಬ ಕನ್ನಡದ ಗಾದೆಯಂತೇ ಗೆದ್ದ ಎತ್ತಿನ ಬಾಲ ಹಿಡಿದು ನಡೆದ ಜನ ಆ ಮನೆ ಪಕ್ಷದವರು.

ತ್ವರಿತಗತಿಯಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳಲ್ಲಿ ವ್ಯಾವಹಾರಿಕ ಪೈಪೋಟಿ ಜಾಸ್ತಿಯಾಗತೊಡಗಿದಾಗ ಎಲ್ಲಾ ಪಕ್ಷಗಳವರೂ ಸೂಟ್‍ಕೇಸ್ ವ್ಯವಹಾರವನ್ನು ಗೌಪ್ಯವಾಗಿ ಆರಂಭಿಸಿದ್ದೇ ಇಂದಿನ ಈ ಸ್ಥಿತಿ ತಲ್ಪಲು ಕಾರಣವಾಗಿದೆ. ಇಲ್ಲದಿದ್ದರೆ ಬಡ ಬೆಂಗಳೂರು ರಾತ್ರೋರಾತ್ರಿ ವಿದೇಶಿಗರ ಕಣ್ಮಣಿಯಾಗುವ ಅಥವಾ ಇಲ್ಲಿನ ನೆಲದ ಇಂಚಿಂಚು ಜಾಗಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯಬರುವ ಬವಣೆ ಇರಲಿಲ್ಲ; ಬಂಗಾರದ ಬೆಲೆ ಮೂವತ್ತು ಸಾವಿರಕ್ಕೆ ಏರುತ್ತಿರಲಿಲ್ಲ! ದಿಢೀರ್ ಶ್ರೀಮಂತಿಕೆಯ ಕನಸುಹೊತ್ತು ಜೀವನ ಚಿಕ್ಕದು ಅದರಲ್ಲಿ ಹೇಗಾದರೂ ಮಾಡಿ ಕೋಟ್ಯಂತರ ಗಳಿಸಿ ಮೆರೆದುಬಿಡಬೇಕೆಂಬ ಆ ಅನಿಸಿಕೆಯೇ ಸಮರ್ಪಕ ಕಾಯಿದೆಗಳ ಬಿಗಿಹಿಡಿತವಿರದ ರಾಜಕೀಯ ರಂಗಕ್ಕೆ ಹಲವರನ್ನು ಕರೆತಂದಿತು. ಹಸು-ಕುರಿ ಮೇಯಿಸಿಕೊಂಡಿದ್ದ ನಿರಕ್ಷರಕುಕ್ಷಿಗಳೂ ಜನಪ್ರತಿನಿಧಿಗಳಾಗಿ ರಾಜಕೀಯದಲ್ಲಿ ಸ್ಥಾನ ಗಿಟ್ಟಿಸಿದರು; ಹೆಡ್ ಕಾನ್ಸ್ಟೇಬಲ್ ಚೆನ್ನಿಗಪ್ಪನ ಥರದವರು ಬೆಳಗಾಗುವುದರೊಳಗೆ ಎಂಜಿನೀಯರಿಂಗ್ ಕಾಲೇಜುಗಳನ್ನೂ ವ್ಯಾಪಾರೀ ಮಳಿಗೆಗಳನ್ನೂ ಸ್ಥಾಪಿಸಿಬಿಟ್ಟಿದ್ದು ನಮ್ಮ ಸಂವಿಧಾನದ ಲೋಪಗಳನ್ನು ಸಾಬೀತು ಪಡಿಸಲು ಸದ್ಯಕ್ಕೆ ಸಾಕು.

ಆಳುವ ದೊರೆಗಳು ಅಧಿಕಾರಿಗಳನ್ನು ಮನಬಂದಕಡೆ ವರ್ಗಾಮಾಡುವ ಸಲುವಾಗಿ ಸೂಟ್‍ಕೇಸ್ ದಂಧೆ ನಡೆಸಲು ಆರಂಭಿಸಿದರು. ಅಲ್ಲಿ ತೆತ್ತ ಅಧಿಕಾರಿಗಳು ಇಲ್ಲಿ ಜನರನ್ನು ಸುಲಿಯಹತ್ತಿದರು! ಅಧಿಕಾರಿಗಳಿಗೆ ಅವರ ಕೆಳದರ್ಜೆಯ ಅಧಿಕಾರಿಗಳು ನಂತರ ಅದಕ್ಕೂ ಕೆಳಗಿನ ಅಧಿಕಾರಿಗಳು ಹೀಗೇ ಈ ಸರಪಳಿ ಮೇಲಿಂದ ಕೆಳತನಕ ಹಬ್ಬಿದ ಸದೃಢ ಜಾಲವಾಗಿ ಸತತವಾಗಿ ಸುಲಿಗೆಯನ್ನೇ ವೃತ್ತಿಯನ್ನಾಗಿ 'ಮೇಜಿನ ಕೆಳಗೆ ಕೈ' ಎಂಬ ನಾಮಾಂಕಿತ ಪಡೆಯಿತು. ಯಥಾರಾಜಾ ತಥಾ ಪ್ರಜಾ ಎನ್ನುವಹಾಗೇ ಆಳುವವರೇ ಸರಿಯಿಲ್ಲದಾಗ ಪ್ರಜೆಗಳು ಹೇಗಿರುತ್ತಾರೆ -ಅವರು ತಮಗೆ ಬೇಕಾದ್ದನ್ನು ಕ್ರಯಕ್ಕೆ ಕೊಳ್ಳಹತ್ತಿದರು. ಬೇಕಾದ ಎಲ್ಲಾ ಕೆಲಸಗಳೂ ಕ್ರಯ-ವಿಕ್ರಯಗಳ ಮಾರ್ಗ ಹಿಡಿದಾಗ ಅಲ್ಲಿಯೂ ಮತ್ತೆ ಪ್ರಜೆಗಳಲ್ಲೇ ಪೈಪೋಟಿ ಆರಂಭವಾಯ್ತು. ಆ ಪೈಪೋಟಿಯಲ್ಲಿ ಕೈಸುಟ್ಟುಕೊಂಡವರು ಪ್ರಜೆಗಳೇ ಹೊರತು ಪ್ರಭುಗಳಲ್ಲ!

ಒಬ್ಬ ಸಂಪಂಗಿ ಲಂಚ ಪಡೆದದ್ದನ್ನೇ ದಾಖಲೆಯಿದ್ದರೂ ಅಲ್ಲಗಳೆಯುತ್ತಾನೆ, ಒಬ್ಬ ಹಾಲಪ್ಪ ಹೋರಿಕ್ರಿಯೆಯನ್ನು ನಡೆಸಿಯೂ ತಾನಲ್ಲವೆನ್ನುತ್ತಾನೆ, ಒಬ್ಬ ಕಟ್ಟಾ ಹಾಡಹಗಲೇ ಹೆಬ್ಬಾವು ಪ್ರಾಣಿಯೊಂದನ್ನು ನುಂಗಿ ಮಲಗಿದಂತೇ ರೈತರ ಜಮೀನು ನುಂಗಿ ಮಲಗಿಬಿಡುತ್ತಾನೆ ಎಂದರೆ ರಾಜ್ಯದಲ್ಲಿ ಏನೆಲ್ಲಾ ನಡೀತಾ ಇತ್ತು ಎಂಬುದು ನಮಗೆ ಧುತ್ತನೇ ಎದುರು ನಿಲ್ಲುತ್ತದೆ. ತನ್ನ ಖುರ್ಚಿಯ ಭದ್ರತೆಗಾಗಿ ಪಕ್ಷದ ಹಿತಾಸಕ್ತಿ ಎಂಬ ಕಾರಣಕ್ಕೆ ಯಡ್ಯೂರಿ ಎಂಬ ಅಸಡ್ಡಾಳ ವ್ಯಕ್ತಿ ಗಣಿಗಾರಿಕೆಗೆ ಅವಕಾಶ ಕೊಟ್ಟು ತಲೆಯಮೇಲೆ ಮುಸುಕು ಹಾಕಿಕೊಂಡಿದ್ದು ತಿಳಿಯದ ವಿಷಯವೇ ? ಉತ್ತರ ಕರ್ನಾಟಕದ ಕೆಲವೆಡೆ ಹೋಗಿಬನ್ನಿ ಸ್ವಾಮೀ ಅದು ಭೂಮಿಯಮೇಲಿನ ನಿಜವಾದ ಅತ್ಯಾಚಾರ! ಸದಾ ನಮ್ಮಲ್ಲೇ ಸಾರ್ವಜನಿಕರದಾಗಿ ಇರಬೇಕಾದ ವನಸಂಪತ್ತು, ಗಣಿಸಂಪತ್ತು ಯಾರೋ ನಾಕಾರು ಕೈಗಳ ಮೂಲಕ ಪರಭಾರೆಯಾಗುತ್ತಿರುವಾಗ ನಾವೆಲ್ಲಾ ಇಷ್ಟುದಿನ ಕಂಡೂ ಕಾಣದಂತಿದ್ದದ್ದು ನಿಜಕ್ಕೂ ನರಗಳು ಸತ್ತ ಬದುಕು ಎಂಬುದನ್ನು ವ್ಯಾಖ್ಯಾನಿಸುವುದು ಮತ್ತೆ ಇಲ್ಲಿ ಬೇಡ.

ದೇಶ ಭಕ್ತ ದೀನದಯಾಳ, ಜೆ.ಪಿ., ಜಗನ್ನಾಥರಾವ್ ಜೋಶಿ, ವಾಜಪೇಯಿ ಇವರೆಲ್ಲಾ ಇದ್ದ ಅಂದಿನ ಜನಸಂಘದಲ್ಲಿ ಅಥವಾ ಜನತಾಪಕ್ಷದಲ್ಲಿ ಚುನಾವಣೆಗೆ ನಿಲ್ಲಲು ಅಭ್ಯರ್ಥಿಗೆ ಇಡಗಂಟಿಗೆ ಕಾಸು ಕೊಡುವವರು ಇನ್ಯಾರೋ ದೇಶಭಕ್ತರುಗಳಾಗಿರುತ್ತಿದ್ದರು. ಹಲವರ ವರ್ಗಿಣಿಯಿಂದ ಬಂದ ಹಣವನ್ನು ಇಡಗಂಟಾಗಿ ಇಟ್ಟು ಚುನಾವಣೆಗೆ ನಿಲ್ಲುತ್ತಿದ್ದ ಆ ಕಾಲದಲ್ಲಿ ಊರಿಂದೂರಿಗೆ ಪ್ರಚಾರಕ್ಕೆ ಹೋಗುವಾಗಲೂ ಸಾರ್ವಜನಿಕ ವಾಹನಗಳನ್ನೇ ಅವರು ಬಳಸುತ್ತಿದ್ದರು, ಯಾರೋ ಕಾರ್ಯಕರ್ತರುಗಳ ಮನೆಗಳಲ್ಲಿ ಇದ್ದು ತಮ್ಮ ಪ್ರಚಾರ ಸಭೆ ಮುಗಿದಮೇಲೆ ಮುಂದಿನೂರಿಗೆ ಪಯಣಿಸುತ್ತಿದ್ದರು! ಇಂದು ನೋಡಿ ನಗರಗಳಲ್ಲಿ ಒಬ್ಬ ಕಾರ್ಪೋರೇಟರ್ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ ಕೋಟಿಗಟ್ಟಲೆ ಹಣ ಪ್ರಚಾರಕ್ಕೆ ಖರ್ಚುಮಾಡುತ್ತಾನೆ ಎಂದಾದರೆ ಅದು ಎಲ್ಲಿಂದ ಬರಬೇಕು ? ಇನ್ನು ಶಾಸಕ, ಸಂಸದರ ಚುನಾವಣೆಗೆ ನಿಂತ ಹುರಿಯಾಳುಗಳ ಖರ್ಚುವೆಚ್ಚ ಯಾವ ಮಟ್ಟದ್ದಿದ್ದೀತು ?

ಪತ್ರಿಕೆಗಳೂ ಮತ್ತು ಮಾಧ್ಯಮಗಳ ರೋಲ್‍ಕಾಲ್ ವ್ಯವಹಾರ ಅನೇಕರಿಗೆ ತಿಳಿದೇ ಇದೆ. ಕೆಲವು ವಾರಪತ್ರಿಕೆಗಳಂತೂ ಅದರಿಂದಲೇ ಬದುಕಿದವು ಮೇಲೆದ್ದವು ಚೆನ್ನಾಗಿ ಚಿಗಿತವು, ಸ್ಕೂಲು-ಕಾಲೇಜು ಇನ್ನಿತರ ದಂಧೆಗಳನ್ನೂ ಆರಂಭಿಸಿ ಬಿಟ್ಟವು. ಇದು ಆರಂಭವಾಗಿದ್ದು ’ಜಾಣಜಾಣೆಯರ ಪತ್ರಿಕೆ’ಯ ಆ ದಿನಗಳಲ್ಲಿ ಎಂದರೆ ಸುಳ್ಳಲ್ಲವಲ್ಲ! ಇದೀಗ ಗಣಿಧಣಿಗಳಿಂದಲೂ ರೋಲ್‍ಕಾಲ್ ಪಡೆದು ಅವರ ಪರವಗಿಯೇ ನಿಂತಿದ್ದಾರೆ ಎಂಬ ದಾಖಲೆ ಸಿಕ್ಕಿಬಿಟ್ಟಿದೆ, ಅದರಲ್ಲೂ ಜನಪ್ರಿಯ ದಿನಪತ್ರಿಕೆಯೊಂದಿಗೆ ಗುರುತಿಸಿಕೊಂಡಿದ್ದ ಸಂಪಾದಕರೊಬ್ಬರು ಹಫ್ತಾ ಪ್ರಸಾದ ಕೋಟಿಗಳಲ್ಲಿ ಪಡೆದಿದ್ದಾರೆಂದಮೇಲೆ ಯಾರು ಸಂಭಾವಿತರು ಮತ್ತು ಯಾರನ್ನು ನಂಬಬೇಕು?

ವಿಜಯ ಕರ್ನಾಟಕದಲ್ಲಿ ಇತ್ತೀಚೆಗೆ ತರಳುಬಾಳು ಸ್ವಾಮಿಗಳು ಬರೆದಂತೇ ಪ್ರತೀ ವ್ಯಕ್ತಿ ತನ್ನನ್ನು ಜನಲೋಕಪಾಲ ವಿಧೇಯಕಕ್ಕೆ ಪ್ರಾಮಾಣಿಕವಾಗಿ ಒಗ್ಗಿಸಿಕೊಳ್ಳಬೇಕಾಗಿದೆ. ಅವರು ಉದಾಹರಣೆಯ ಸಮೇತ ವಿವರಿಸಿದ್ದು ಬಹಳ ಚೆನ್ನಾಗಿತ್ತು. ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳ ಗುಣಮಟ್ಟ ಸರಿಯಾಗಿದೆಯೇ ಎಂಬುದು ಗಿರಾಕಿಗಳಿಗೆ ಗೊತ್ತಿರುವುದಿಲ್ಲ, ತಯಾರಕರಿಗೆ ಅದನ್ನು ಹೇಗಾದರೂ ವಿಲೇವಾರಿಮಾಡಿ ಹಣಮಾಡಿಕೊಳ್ಳುವ ತರಾತುರಿ! ಈ ದಿಸೆಯಲ್ಲಿ ಬೇಕಾದ್ದು ಬೇಡಾದ್ದು ಎಲ್ಲವನ್ನೂ ಹಲವು ವಿಧ ಸ್ಕೀಮ್‍ಗಳ ಮೂಲಕ ಮಾರುಕಟ್ಟೆಗೆ ತರುವ ತಯಾರಕರು ಅದರ ಪರಿಶೀಲನೆಗೆ ಸ್ವಲ್ಪ ದಿನಗಳ ಅವಕಾಶ ಕೊಡುವರೇ ? ಅಥವಾ ಗ್ರಾಹಕರು ಅಂತಹ ಅವಕಾಶ ಒದಗಿಬಂದರೆ ಪ್ರಾಮಾಣಿಕವಾಗಿ ಅದರ ಬಗ್ಗೆ ತಮ್ಮ ಅನಿಸಿಕೆ ಹೇಳುವರೇ ಎಂಬುದು ಇಂದಿನ ಪ್ರಶ್ನೆಯಾಗಿದೆ.

ಬಿಕರಿಯಾಗುವ ಎಲ್ಲಾ ಆಹಾರ ವಸ್ತುಗಳೂ ಕಲಬೆರಕೆಗೊಳ್ಳುವುದು, ಗುಣಮಟ್ಟವಿಲ್ಲದ್ದಕ್ಕೂ ಮಾರುಕಟ್ಟೆ ಕಲ್ಪಿಸಿ ಗಿರಾಕಿಗಳಿಗೆ ಮೋಸಮಾಡುವುದು, ಪೆಟ್ರೋಲ್ ಬಂಕ್ ಗಳಲ್ಲಿ ಮೀಟರ್ ಎಗರಿಸಿ ದೋಚುವುದು ಇವೆಲ್ಲಾ ನಿಲ್ಲುವುದು ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ನಾನು ಆತ್ಮವಿಮರ್ಶೆಗೆ ಒಳಪಡಿಸಿಕೊಂಡಾಗ ಮಾತ್ರ. ದಿಢೀರ್ ಶ್ರೀಮಂತಿಕೆಯ ಕನಸು ಇಟ್ಟುಕೊಂಡು ಬೆಳೆಯುವ ಸಾಮ್ರಾಜ್ಯ ದಿಢೀರನೆ ಕುಸಿಯುವ ಕಾಲ ಬಹಳ ದೂರವಿಲ್ಲ ಎಂಬುದು ಎಲ್ಲರಿಗೂ ಮನದಟ್ಟಾದರೆ ನಗರಗಳ ಧಾವಂತದ ಜೀವನಕ್ಕೆ ಸೋಗಿನ ಆಡಂಬರದ ಅಟಾಟೋಪಕ್ಕೆ ಕಡಿವಾಣ ಬಿದ್ದಂತಾಗುತ್ತದೆ. ಹೇಳುವುದು ಸುಲಭ ಸ್ವಾಮೀ ಆಚರಿಸುವುದು ಕಷ್ಟ! ಗಾಂಧೀಜಿಯಂತೇ ಅಣ್ಣಾ ಖಾದಿ ತೊಟ್ಟರು ನಾವು ತೊಡುತ್ತೇವೆಯೇ ? ಸ್ವದೇಶೀ ಚಳುವಳಿಯ ಮುಖ್ಯಸ್ಥರಾಗಿದ್ದ ರಾಜೀವ ದೀಕ್ಷಿತ್ ಸರಳಜೀವನ ನಡೆಸಿ ತೋರಿಸಿದರು ನಾವು ಸರಳ ಜೀವನ ನಡೆಸಲು ತಯಾರಿದ್ದೇವೆಯೇ ? ನಮಗೆ ಎರಡು ಹೆಜ್ಜೆ ಹೋಗಲೂ ವಾಹನಬೇಕು. ಪಾತ್ರೆ ತೊಳೆಯಲಿಕ್ಕೆ, ಬಟ್ಟೆ ಒಗೆಯಲಿಕ್ಕೆ, ಕಸಗುಡಿಸಲಿಕ್ಕೆ ಎಲ್ಲಾ ವಿದೇಶೀ ತಂತ್ರಜ್ಞಾನದ ಯಂತ್ರಗಳೇ ಬೇಕು. ಆಮೇಲೆ ನಮ್ಮ ಶರೀರ ಯಂತ್ರವೇ ಬೊಜ್ಜಿನಿಂದ ಕೆಟ್ಟಾಗ ಅದಕ್ಕೆ ಬೇಕಾದರೆ ಮತ್ತೆ ಹಣ ತೆತ್ತು ಕರಗಿಸಿಕೊಳ್ಳುವ ಜನ ನಾವಾಗಿದ್ದೇವೆ.

ಪಾರ್ಕಿನಲ್ಲಿ ಒದ್ದಾಡುವ, ಕಷ್ಟಪಟ್ಟು ಕ್ರತ್ರಿಮವಾಗಿ ನಗೆಯಾಡುವ ಮಹಿಳೆಯರು ಮನೆವಾರ್ತೆ ಕೆಲಸಗಳನ್ನು ತಾವೇ ಮಾಡಿಕೊಂಡಿದ್ದರೆ, ಯಂತ್ರಗಳ ಬಳಕೆ ಕಮ್ಮಿ ಇದ್ದರೆ ಹೀಗೆಲ್ಲಾ ಅಸಹ್ಯಕರವಾಗಿ ಒದ್ದಾಡುವುದು ಬೇಕಾಗುತಿತ್ತೇ ? ಅವರಮನೆಯಲ್ಲಿ ಕಾರು ಬಂತು ನಮ್ಮಲ್ಲೂ ಬರಲಿ, ಅವರಲ್ಲಿ ೪೮ ಇಂಚಿನ ಎಲ್.ಸಿ.ಡಿ ಟೀವಿ ಬಂತು ನಮ್ಮಲ್ಲೂ ಬರಲಿ, ಅವರ ಮನೆಯಲ್ಲಿ ಮತ್ತಿನ್ನೇನೋ ಬಂತು ನಮ್ಮಲ್ಲೂ ಬರಲಿ --ಈ ಹಪಾಹಪಿಯೇ ಇಂದಿನ ಬ್ರಷ್ಟಾಚಾರದ ಆರಂಭದ ಹಂತವಾಗಿ ಗೋಚರಿಸುತ್ತದೆ. ಎಲ್ಲರಿಗೂ ಎಲ್ಲವೂ ಲಭ್ಯವಲ್ಲದಿರುವುದು ಸೃಷ್ಟಿನಿಯಮ. ಜವಾನನ ಕೆಲಸದಲ್ಲಿರುವವನೂ ಕಾರು ಇಡಬೇಕೆಂದರೆ ಅದಕ್ಕೊಂದು ಕಳ್ಳದುಡಿಮೆಯ ದಾರಿ ಕಂಡುಕೊಳ್ಳಲೇಬೇಕಾಗುತ್ತದೆ!

ಒಬ್ಬ ಜನಸಾಮಾನ್ಯನ ಜೀವನ ಪರ್ಯಂತದ ದುಡಿಮೆ ಆತ ಖರೀದಿಸಿದ ನಿವೇಶನ, ಕಷ್ಟದಿಂದಲೇ ಕಟ್ಟಿದ ಮನೆ, ಮಾಡಿದ ಮಕ್ಕಳ ಮದುವೆ ಈ ಕೆಲಸಗಳ ಸಾಲತೀರಿಸಲೇ ಇನ್ನೂ ಸಾಲದಾಗಿರುವಾಗ ಕೋಟಿಗಟ್ಟಲೇ ಕಬಳಿಸಿ ಹಾಯಾಗಿರುವ ಮಾರ್ಗ ಯಾರಿಗೆ ಬೇಡವಾಗಿದೆ? ಇಲ್ಲೇ ಜನಲೋಕಪಾಲ ಅಪ್ಲೈ ಆಗಬೇಕಾಗಿದೆ ಸ್ವಾಮೀ. ದೇವರು ಕೊಟ್ಟಷ್ಟು ಇಟ್ಟುಕೊಂಡು ಇದ್ದುದರಲ್ಲೇ ನೆಮ್ಮದಿಯಿಂದಿದ್ದರೆ ಸಮಾಜದ ಬಹುತೇಕರಿಗೆ ಒತ್ತಡದಿಂದ ಬರುವ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯದ ತೊಂದರೆ ಇವೆಲ್ಲಾ ಬಗೆಹರಿದುಹೋಗುತ್ತವೆ!

ಇನ್ನು ಸಮಾಜದಲ್ಲಿ ಇದುವರೆಗೆ ಆಳಿದವರು ತಮ್ಮ ಆದಾಯವನ್ನು ಶಾಶ್ವತವಾಗಿ ಉತ್ತಮವಾಗಿರಿಸಿಕೊಳ್ಳಲು ಪೆಟ್ರೋಲ್ ಬಂಕು, ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಇಂದು ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆಗಳು ಸೇವಾರ್ಥದಲ್ಲಿ ನಡೆಯುತ್ತಿಲ್ಲ ಬದಲಾಗಿ ಅವೂ ವಾಣಿಜ್ಯ ಮಳಿಗೆಗಳೇ ಆಗಿವೆ! ಅವುಗಳಿಂದ ಮಾಲೀಕರು ಮೆಲ್ಲುವ ಆದಾಯ ಕೋಟಿಗಳಲ್ಲೇ ಇದೆ! ಅವುಗಳನ್ನೆಲ್ಲಾ ಖಾಸಗೀ ಕಂಪನಿಗಳ ಹೆಸರಿನಲ್ಲಿ ನೋಂದಾಯಿಸಿ ಕರಾಕರಣೆ ವಿಧಿಸುವುದು ನ್ಯಾಯಸಮ್ಮತವಾಗಿದೆ. ಮತ್ತು ಶಿಕ್ಷಣ ಸಂಸ್ಥೆಗಳು ಪಡೆಯುವ ಫೋರ್ಸ್ಡ್ ಡೊನೇಶನ್ ಯಾವ್ಯಾವ ಹಂತದಲ್ಲಿ ಎಷ್ಟೆಷ್ಟಿದೆ ಮತ್ತು ಎಷ್ಟೆಷ್ಟಿರಬೇಕು ಎಂಬುದನ್ನು ಕಾಯಿದೆಯ ಮೂಲಕ ನಿರ್ಬಂಧನಕ್ಕೆ ಒಳಪಡಿಸಬೇಕಾಗಿದೆ. ಎಷ್ಟನ್ನೇ ವಿಧಿಸಿದರೂ ಕಣ್ಮುಚ್ಚಿ ಕೊಡುವ ಪ್ರಜೆಗಳು/ಪಾಲಕರು ಇರುವವರೆಗೆ ಅವರು ಮೇಯುತ್ತಲೇ ಇರುತ್ತಾರೆ. ಆಸ್ಪತ್ರೆಗಳಲ್ಲಿ ಪ್ರತಿಯೊಂದು ಚಿಕಿತ್ಸೆಯ ಬಗ್ಗೂ ಸಮಾನ್ಯ ಎಷ್ಟು ಖರ್ಚು ವಿಧಿಸುತ್ತಾರೆ ಎಂಬುದನ್ನು ನಿಗಾ ಇರಿಸಿ ಅದಕ್ಕೂ ಕೂಡ ಕೆಲವು ನಿಬಂಧನೆ ಹೇರುವುದು ಅನಿವಾರ್ಯವಾಗಿದೆ. ಇದನ್ನೆಲ್ಲಾ ಸಮಾಜದ ಜನ ಈ ಹೋರಾಟ ನಿರತ ಜನ ಮುಂದಾಗಿ ಮಾಡಬೇಕಾಗಿದೆ.

ಹಿಂದಿನ ಕಾಲ ಹಾಗಿತ್ತು ಹೀಗಿತ್ತು ಎಂದು ಕರುಬುವುದು ಬೇಡ ಇಂದೂ ಏನೂ ಕಮ್ಮಿ ಇಲ್ಲ ಚೆನ್ನಾಗೇ ಇದೆ ಎನ್ನುವ ಜನ ಹಿಂದಿನ ಜನರ ' ಸೆಲ್ಫ್ ಕಂಟೇನ್ಡ್ ಲೈಫ್ ' ನೋಡಿ ಕಲಿಯಬೇಕಾಗಿದೆ. ಅವತ್ತು ಸಮಾಜದಲ್ಲಿ ಡಾಂಭಿಕತೆಯಿರಲಿಲ್ಲ, ಸಾಲದಲ್ಲಿ ಕಾರು ಖರೀದಿಸಿ ಮೆರೆಯುವ ಸೋಗಿನ ಜೀವನ ಇರಲಿಲ್ಲ, ಇನ್ನೊಬ್ಬರಿಗೆ ಕೊಡ-ತಕ್ಕೊಳ್ಳುವ ವ್ಯವಹಾರ ಬಾಯಿಮಾತಿನಲ್ಲಿಯೇ ಇದ್ದರೂ ಪರಸ್ಪರ ಮೋಸವಿರಲಿಲ್ಲ; ಆದರೆ ಇವತ್ತು ಹಾಗಿಲ್ಲ, ಇದಕ್ಕೆ ಹೊಣೆ ಬೇರಾರೂ ಅಲ್ಲ-ನಾವೇ !

ಅಣ್ಣಾ ಹಜಾರೆಯಂಥವರು ದೇಶದಲ್ಲಿ ತೀರಾ ವಿರಳ. ನಮ್ಮ ಬೆಂಗಳೂರಿನಲ್ಲಿ ಹಿಂದೆ ನಿಜಲಿಂಗಪ್ಪ, ಕಡಿದಾಳ್ ಮಂಜಪ್ಪ ಇಂಥವರೆಲ್ಲಾ ಮುಖ್ಯಮಂತ್ರಿಗಳಾಗಿದ್ದವರೂ ಹಾಗೇ ಇದ್ದರು, ತೀರಾ ಇತ್ತೀಚಿನ ವರ್ಷಗಳಲ್ಲಿ ಎಚ್.ಎನ್, ಟಿ.ಆರ್.ಶಾಮಣ್ಣ, ಕೃಷ್ಣಯ್ಯರ್, ನಿಟ್ಟೂರು ಶ್ರೀನಿವಾಸ ರಾವ್... ಇಂತಹ ನಿಸ್ಪೃಹ ಜೀವಿಗಳನ್ನು ನಾವು ಕಂಡಿದ್ದೇವೆ. ಅನೇಕ ಮಹನೀಯರು ಸಾರ್ವಜನಿಕರ ಹಣ -ಪೈಸೆ ಮುಟ್ಟಲಿಲ್ಲ, ನಿಮಗೆ ತಿಳಿದಿರಲಿ ಇಂದಿನ ಮನಮೋಹನ್ ಸಿಂಗ್ ಕೂಡ ಸಾರ್ವಜನಿಕ ಹಣ ಮುಟ್ಟಿದವರಲ್ಲ ಆದರೆ ಅವರು ಸೂತ್ರದ ಗೊಂಬೆಯಾಗಿ ಕೊಟ್ಟ ಅಧಿಕಾರವನ್ನು ನಡೆಸುತ್ತಿದ್ದಾರೆಯೇ ವಿನಃ ಅಧಿಕಾರದಲ್ಲೂ ಅವರ ಸ್ವಂತಿಕೆಯನ್ನು ನಾವು ಕಾಣುತ್ತಿಲ್ಲ, ಇದಕ್ಕಾಗಿ ಅವರನ್ನು ದೂರಿ ಪ್ರಯೋಜನವಿಲ್ಲ !

ಬಡವನ ಕೋಪ ದವಡೆಗೆ ಮೂಲ ಎಂಬ ನಾಣ್ನುಡಿ ಕೇಳಿದ್ದೀರಲ್ಲಾ ಅಣ್ಣಾ ಹಜಾರೆಯವರ ಸಾತ್ವಿಕ ಶಕ್ತಿ ಸಮಾಜದ ಅಪಧಮನಿ ಮತ್ತು ಅಭಿಧಮನಿ ಎರಡೂ ನಾಳಗಳಲ್ಲಿ ಪ್ರವಹಿಸಿ ಹೊಸದೊಂದು ನ್ಯಾಯದ ಅಲೆಯನ್ನು , ಕ್ರಾಂತಿಯನ್ನು ಉಂಟುಮಾಡಿದೆ. ಈ ಅಲೆ ಮೊದಲೇ ಎದ್ದಿದ್ದರೆ ಇವತ್ತಿಗೆ ಬಹುತೇಕ ರಾಜಕೀಯದ ಜನ ಜೈಲಿನಲ್ಲಿ ಚಾಪೆ ನೇಯುತ್ತಿದ್ದರು! ಈಗಲಾದರೂ ಬರುತ್ತಿದೆಯಲ್ಲಾ ಎಂಬುದು ಸಂತಸದ ವಿಷಯವಾದರೂ ಸಮಾಜದಲ್ಲಿ ಸಂಪೂರ್ಣ ಅದು ಅಳವಡಲು ಬಹಳ ಸಮಯ ಹಿಡಿಯುತ್ತದೆ. ಹಿಂದೆ ಹೇಗೆ ಹಳ್ಳಿಗರ ಸಮಸ್ಯೆಯನ್ನು ನ್ಯಾಯಯುತವಾಗಿ ಕೋರ್ಟು-ಕಚೇರಿಗಳ ಹಂಗಿಲ್ಲದೇ ಅವರೇ ಬಗೆಹರಿಸಿಕೊಳ್ಳುತ್ತಿದ್ದರೋ ಹಾಗೇ ಅದೇ ಕಾಲ ಮರಳಿ ಬಂದರೆ ಜನಜೀವನ ಸುರಳೀತವಾಗುತ್ತದೆ; ಸುಗಮವಾಗುತ್ತದೆ. ಗಾಂಧೀಜಿ ಕಂಡ ರಾಮರಾಜ್ಯ ಅದೇ ಹೊರತು ಮನೆಮನೆಗೂ ಬೀಜೇಪಿ ಜೇಡಿಎಸ್ಸು ಮತ್ತು ಕಾಂಗ್ರೆಸ್ಸು ಅಲ್ಲ ಅನ್ನುವುದನ್ನು ನಾವೆಲ್ಲಾ ಅರಿತಾಗಲೇ ಸಮಾಜ ಮೂಲರೂಪಕ್ಕೆ ಬರುತ್ತದೆ. ವಿಪರೀತ ಕುಡಿದವನಿಗೆ ಅಮಲೇರಿದ ಹಾಗೇ ಹೆಜ್ಜೆಹೆಜ್ಜೆಯಲ್ಲೂ ಬ್ರಷ್ಟಾಚಾರವನ್ನೇ ಕಂಡು ಅದನ್ನೇ ಅನುಮೋದಿಸಿ, ಅದನ್ನೇ ಆತುಬದುಕಿದ ನಮಗೆ ಅಮಲು ಇಳಿದ ವ್ಯಕ್ತಿಗೆ ಕಾಣುವ ನಿಜಜೀವನದ ಸ್ಥಿತಿಯಂತೇ ಸಮಾಜದ ಸ್ವಾಸ್ಥ್ಯರೂಪ ಕಂಡಾಗ ಬ್ರಷ್ಟಾಚಾರ ಬೇಡವಾಗುತ್ತದೆ. ಈಗಿರುವುದು ಎರಡೇ ದಾರಿ ಒಂದೇ ಬ್ರಷ್ಟಾಚಾರವನ್ನೇ ಅನುಮೋದಿಸಿ ಕುಡುಕರು ಕುಡಿದೇ ಸಾಯುವಂತೇ ಅದರಲ್ಲೇ ಸಾಯುವುದು ಇಲ್ಲಾ ಬ್ರಷ್ಟಾಚಾರ ನಿರ್ಮೂಲನೆಗೆ ಪ್ರತೀ ಹೆಜ್ಜೆಯಲ್ಲೂ ನಾವಾಗಿ ನಾವು ತೊಡಗಿಕೊಂಡು ಸಮಾಜದ ಸುಧಾರಣೆಗೆ ಪಾತ್ರರಾಗುವುದು; ಆಯ್ಕೆ ನಮಗೆ-ನಿಮಗೆ ಬಿಟ್ಟಿದ್ದು.

ಚಲಾವಣೆಯಲ್ಲಿರದ ನಾಣ್ಯಕ್ಕೆ ಯಾರೊ ಹೇಗೆ ಬೆಲೆಕೊಡುವುದಿಲ್ಲವೋ ಹಾಗೇ ವೃದ್ಧಾಪ್ಯದಲ್ಲಿರುವ ವಾಜಪೇಯಿಯಂತಹ ಮುತ್ಸದ್ಧಿಗಳನ್ನು ಮರೆತು ಮೆರೆದ ಇಂದಿನ ಬೀಜೇಪಿ, ನಿಸ್ಪೃಹರಾಗಿದ್ದ ಜಾರ್ಜ್ ಫರ್ನಾಂಡಿಸ್ ರಂತಹ ವ್ಯಕ್ತಿಗಳನ್ನು ಮರೆತ ಈ ಬೀಜೇಪಿ, ಅಧಿಕಾರಕ್ಕಾಗಿ ತಮ್ಮೊಳಗೇ ಹಗಲುನಾಟಕ ಆರಂಭಿಸಿದ ಈ ಬೀಜೇಪಿ ಮೊದಲಿನ ಜನಸಂಘವಲ್ಲ. ಇದರ ಬಗ್ಗೆ ಜಾಸ್ತಿ ಕೇಳಬೇಕೆಂದರೆ ಪುತ್ತೂರು ರಾಮ ಭಟ್ಟರಲ್ಲಿ ಹೋಗಬೇಕು. ಅಂತಹ ಅಪ್ಪಟ ಕಾರ್ಯಕರ್ತರನ್ನೆಲ್ಲಾ ದೂರವಿಟ್ಟು ಕಮಲ ಕೆಸರನ್ನೇ ಮೆತ್ತಿಕೊಂಡಿದೆ; ಹಾಳಾಗಿ ಹೋಗಿದೆ. ಹಾಳಾದ ಹೋಳಾದ ಮನೆಗೆ ಸದಾ ನಗುತ್ತಿದ್ದ ಸದಾನಂದರನ್ನು ಅವರ ನಗು ಕಸಿದುಕೊಂಡು ತಂದು ಕೂರಿಸಿದ್ದಾರೆ-ನಡೆಸುವುದು ಕಷ್ಟವಿದೆ!

ಜಾತೀವಾರು ಮುಖಂಡರು, ಜಾತೀವಾರು ಮಂತ್ರಿಗಿರಿ, ಜಾತೀವಾರು ಸ್ವಾಮಿಗಳು ಇವುಗಳೆಲ್ಲಾ ನಿಜವಾಗಿಯೂ ಬೇಕಿತ್ತೇ ಈ ಸಮಾಜಕ್ಕೆ ? ಜಾತ್ಯಾತೀತ ಸರಕಾರಗಳಲ್ಲಿ ಯಾವುದೇ ಸರಕಾರೀ ಅರ್ಜಿಯನ್ನು ಭರ್ತಿಮಾಡುವಾಗ ಜಾತಿ ಪ್ರಮಾಣಪತ್ರ ಯಾಕೆ ಬೇಕಾಯ್ತು? ಇವೆಲ್ಲಕ್ಕೂ ಜನಲೋಕಪಾಲ ಅಪ್ಲೈ ಆಗಬೇಕು ಸ್ವಾಮೀ-ಸುಲಭದ ಮಾತಲ್ಲ. ಮಾನವರೆಲ್ಲಾ ಒಂದೇ ಎಂದಮೇಲೆ ಜಾತೀ ರಾಜಕಾರಣ ಮೊದಲು ತೊಲಗಬೇಕು, ಮೀಸಲಾತಿ ತೊಲಗಬೇಕು, ಕೇವಲ ಅರ್ಹತೆಯ ಮೇಲೆ ಆದ್ಯತೆ ನೀಡುವ ವ್ಯವಸ್ಥೆ ಬರಬೇಕು ಅಲ್ಲವೇ ? ಹೀಗೇ ಕುಂಟುತ್ತಾ ತೆವಳುತ್ತಾ ಸಾಗಿದರೆ ನಮಗೆ ಕಾಣುವ ದ್ರೋಹ,ವಿದ್ರೋಹಗಳ ಸಂಖ್ಯೆ ಅಸಂಖ್ಯಾತ. ಪ್ರತೀ ಹಂತದಲ್ಲಿ ಜನಲೋಕಪಾಲ ಬರಬೇಕು; ಆಗಮಾತ್ರ ಅಣ್ಣಾ ಹಜಾರೆ ಹೇಳಿದ್ದು, ಕೇಳಿದ್ದು ಅನುಷ್ಠಾನಕ್ಕೆ ಬರುತ್ತದೆ.

ಏನೂ ಇರಲಿ ತಾತ ಸಹನೆಯಿಂದ ಗೆದ್ದ ಈ ಗೆಲುವು ದೇಶದ ಗೆಲುವಾಗಿದೆ, ಮಾನವತೆಯ ಗೆಲುವಾಗಿದೆ ಎನ್ನಲು ಅಡ್ಡಿಯಿಲ್ಲವಷ್ಟೇ ? ಈ ಸಂದರ್ಭದಲ್ಲಿ ಹಿಂದೆ ದೇಶಕಟ್ಟಿದ ಅಣ್ಣನಂತಹ ಹಲವು ಕಾರ್ಯಕರ್ತರಿಗೂ ಈಗ ನಮ್ಮ ಕಣ್ಮುಂದೆ ಕುಳಿತಿರುವ ಅಣ್ಣನವರಿಗೂ ಹೃತ್ಪೂರ್ವಕ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ನೆನಪಿಸುತ್ತಾ ವಿರಮಿಸುತ್ತಿದ್ದೇನೆ, ನಮಸ್ಕಾರ.

Thursday, August 25, 2011

ಎನಗಿನ್ನು ದೊರೆತನ ಹೋಗಿ ವಿಶ್ವಾಮಿತ್ರ ಮುನಿಪರಿಗಾಗಿಹುದು !!


ಎನಗಿನ್ನು ದೊರೆತನ ಹೋಗಿ ವಿಶ್ವಾಮಿತ್ರ ಮುನಿಪರಿಗಾಗಿಹುದು !!

ಆಗಾಗ ನೆನಪಿನಾಳದಲ್ಲಿ ಕೇಳಬಯಸಿ ಕಾಡುವ ಯಕ್ಷಗಾನದ ಹಾಡುಗಳನ್ನು ಮತ್ತೆ ಮತ್ತೆ ಕೇಳಬೇಕು ಎನ್ನುವಾಗ ಕೆಲವೇ ಭಾಗವತರು ನೆನಪಾಗುತ್ತಾರೆ. ಯಕ್ಷಗಾನ ಪ್ರಸಂಗದ ಪ್ರದರ್ಶನಕ್ಕೆ ಭಾಗವತರೇ ನಿಜವಾದ ಸೂತ್ರಧಾರ ಅಲ್ಲವೇ? ಯಕ್ಷಗಾನದ ಅಭಿರುಚಿ ಇರುವ ಎಲ್ಲರಿಗೂ ಭಾಗವತರ ಸ್ಥಾನದ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇರುವುದಿಲ್ಲ. ಕಂಚಿನ ಕಂಠ ಎಂದೇ ಕರೆಯುತ್ತೇವೆ; ಅಂದಮಾತ್ರಕ್ಕೆ ಕಂಠವನ್ನು ಕಂಚು ಹಿತ್ತಾಳಿ ಇತ್ಯೇತ್ಯಾದಿ ಲೋಹಗಳಿಂದ ಮಾಡಿರುವುದಿಲ್ಲ, ಆದರೆ ಅವುಗಳಿಂದ ಹೊರಡುವ ಸ್ವರಮಾಧುರ್ಯಕ್ಕೂ ಮಾನವ ಕಂಠ ಶಾರೀರಕ್ಕೂ ತಾಳೆ ಹಾಕಿ ಹಾಗೆ ಹೇಳುವುದು ವಾಡಿಕೆ.

ಉತ್ತಮ ಭಾಗವತರು ರಂಗಸ್ಥಳಕ್ಕೆ ಕಾಲಿಟ್ಟ ಕೂಡಲೇ ಯಕ್ಷರಸಿಕರ ಚಪ್ಪಾಳೆ ಗಿಟ್ಟಿಸುವುದರಲ್ಲಿ ಸಂಶಯವಿಲ್ಲ. ಆದರೆ ಚಪ್ಪಾಳೆ ಗಿಟ್ಟಿಸಲೇಬೇಕೆಂಬ ಹರಸಾಹಸದಲ್ಲಿ ಸರ್ಕಸ್ಸಿಗೆ ತೊಡಗಿರುವ ಯುವ ಭಾಗವತರುಗಳನ್ನು ಕಂಡಾಗ ಬೇಸರವಾಗುತ್ತದೆ; ಅದು ಒಂದರ್ಥದಲ್ಲಿ ಪ್ರಶಸ್ತಿಗಳ ಹಿಂದೆ ಬಿದ್ದ ಕಲಾವಿದರನ್ನು, ಸಾಹಿತಿಗಳನ್ನು, ಸಂಗೀತಗಾರರನ್ನು ನೆನಪಿಸುತ್ತದೆ. ಹೇಗೆ ಕರ್ನಾಟಕ, ಹಿಂದೂಸ್ಥಾನಿ ಅಂತೆಲ್ಲಾ ಸಂಗೀತ ಪ್ರಾಕಾರಗಳಿವೆಯೋ ಹಾಗೇ ಯಕ್ಷಗಾನಕ್ಕೂ ಅದರದ್ದೇ ಆದ ವೈಶಿಷ್ಟ್ಯಪೂರ್ಣ ರಾಗಗಳಿವೆ. ಅವುಗಳನ್ನು ಬಿಟ್ಟು ಯಾವುದೋ ಸಂಗೀತದ ಅಥವಾ ಸುಗಮ ಸಂಗೀತದ ಗುಂಗಿನಲ್ಲಿ ಹಾಡುವ ಯಕ್ಷಗಾನದ ಹಾಡುಗಾರಿಕೆ ಯಕ್ಷಗಾನದ ಮೂಲರೂಪಕ್ಕೆ ಕುತ್ತುತರುತ್ತದೆ !

ನಾವೆಲ್ಲಾ ಚಿಕ್ಕವರಿರುವಾಗ ಯಕ್ಷಗಾನದಲ್ಲಿ ಹೊಸ್ತೋಟ, ಕಡತೋಕ, ಬಲಿಪ, ನೆಬ್ಬೂರು ಹೀಗೇ ಪ್ರಸಿದ್ಧ ಭಾಗವತರಿಗೆ ಆದ್ಯತೆ ಇತ್ತು. ಹಾಡುಗಾರಿಕೆಯಲ್ಲಿ ಅವರು ಆಳವಾಗಿ ತೊಡಗಿಕೊಂಡು ಅಲ್ಲಿನ ಮಟ್ಟುಗಳನ್ನು ಬಿಟ್ಟುಕೊಡದಂತೇ ಹಾಡುವುದು ಯಕ್ಷಗಾನದ ನಿಜವಾದ ಸಂಪ್ರದಾಯ. ಆ ನಂತರ ಕಾಳಿಂಗನಾವುಡರ ಗಾಳಿ ಜೋರಾಗಿಯೇ ಬೀಸಿತಾದರೂ ಕೆಲವೊಮ್ಮೆ ಅವರ ಹಾಡುಗಳಲ್ಲಿ ಅಕ್ಷರಶುದ್ಧತೆ ಕಾಣಬರಲಿಲ್ಲ. ಒಟ್ಟಾರೆ ಯಾವುದೋ ರಾಗಹಿಡಿದು ಕೂಗಿಬಿಟ್ಟರೆ ಅದು ಭಾಗವತಿಕೆಯಾಗುವುದಿಲ್ಲವಲ್ಲ; ಭಾಗವತಿಕೆ ಅಲ್ಲಿನ ಮೂಲ ಸಾಹಿತ್ಯಕ್ಕೆ ಚ್ಯುತಿಬರದ ರೀತಿಯಲ್ಲಿ ನಡೆದಾಗ ಮಾತ್ರ ಅದನ್ನು ಪರಿಗಣಿಸಬಹುದಾಗುತ್ತದೆ. ಬಹುಸಂಖ್ಯಾಕ ಯುವಕರು ಕಾಳಿಂಗ ನಾವುಡರಿಗೆ ಮನಸೋತರೂ ಪರಿಶುದ್ಧ ಯಕ್ಷಗಾನವನ್ನು ಬಲ್ಲವರು ಅವರ ಹಾಡುಗಳನ್ನು ಕೇಳಿದರೇ ಹೊರತು ಮನಸಾ ಅದೇ ಸರಿ ಎಂದು ಬಗೆಯಲಿಲ್ಲ.

ಯಕ್ಷಗಾನದ ಭಾಗವತಿಕೆಗೆ ದಿ|ಕೆರೆಮನೆ ಮಹಾಬಲ ಹೆಗಡೆಯವರ ಕೊಡುಗೆಯೂ ಇದೆ. ಅವರಂತಹ ಶುದ್ಧ ಸಾಹಿತ್ಯದಲ್ಲಿ ಹಾಡಿದ ಭಾಗವತರಿಲ್ಲ. ಇಂದಿಗೂ ಅವರ ಭಾಗವತಿಕೆಯಲ್ಲಿರುವ ಕೃಷ್ಣ ಸಂಧಾನ ಧ್ವನಿ ಸುರುಳಿಯನ್ನು ಇಷ್ಟವುಳ್ಳವರು ಆಲಿಸಬಹುದಾಗಿದೆ. ವೃತ್ತಿನಿರತ ಮೇಳಗಳಲ್ಲಿ ಕೆರೆಮನೆ ಮೇಳದಷ್ಟು ಶುದ್ಧ ಚೌಕಟ್ಟಿನ ಪ್ರದರ್ಶನ ನೀಡಿದ ಮೇಳ ಮತ್ತೊಂದಿಲ್ಲ. ಆದಿಯಲ್ಲಿ ಸ್ರೀವೇಷದವರಿಂದ ಗಣಪತಿ ಪೂಜೆ, ನಂತರ [ಕೋಡಂಗಿಯಿಂದ ಹಿಡಿದು] ಬಾಲಗೋಪಾಲವೇಷ, ತೆರೆಕುಣಿತ ಅಥವಾ ಒಡ್ಡೋಲಗ ಹೀಗೇ ಸಾಂಪ್ರದಾಯಿಕವಾಗಿ ಶುರುವಾಗುತ್ತಿದ್ದ ಪ್ರದರ್ಶನ ಅಂತ್ಯದಲ್ಲೂ ಗಣಪತಿ ಸ್ತುತಿ ಮತ್ತು ಸ್ತ್ರೀವೇಷದವರಿಂದ ಮಂಗಳಾರತಿಯೊಂದಿಗೆ ಮುಕ್ತಾಯಗೊಳ್ಳುತ್ತಿತ್ತು. ಪ್ರದರ್ಶನಕ್ಕೂ ಮುನ್ನ ಮತ್ತು ಪ್ರದರ್ಶನಾನಂತರ ಚೌಕಿಯಲ್ಲಿ [ ಗ್ರೀನ್ ರೂಂ]ಗಣಪತಿ ಪೂಜೆ ಕಡ್ಡಾಯವಾಗಿತ್ತು. ಇವೆಲ್ಲಾ ಯಕ್ಷಗಾನ ಸೃಜಿಸಿದ ಅಂದಿನ ಹಿರಿಯರು ನಂಬಿ ನಡೆಸಿಬಂದ ಜಾಯಮಾನ.

ಈಗೀಗ ಯಕ್ಷಗಾನ ಮೂರುಗಂಟೆಯ ಪ್ರದರ್ಶನಕ್ಕಿಳಿದಮೇಲೆ ತನ್ನ ಪಾರಂಪರಿಕ ತಿಟ್ಟುಗಳನ್ನು ಕೆಲವನ್ನು ಅದಾಗಲೇ ಬಿಟ್ಟುಕೊಟ್ಟಿದೆ! ಸಂಪ್ರದಾಯಗಳಲ್ಲಿ ಹಲವನ್ನು ಕಲಾವಿದರು ನಡೆಸುತ್ತಿಲ್ಲ--ಏಕೆಂದರೆ ಬಹುತೇಕ ಮೇಳಗಳು ಕೂಡಿ, ಕಳೆದು, ಗುಣಿಸಿ, ಭಾಗಿಸಿ ಕಟ್ಟುವ ಕಲಾವಿದರಿಂದ ಆವೃತವಾಗಿವೆ. ಇಂದಿರುವ ಕಲಾವಿದರು ನಾಳೆ ಇರುತ್ತಾರೆಂಬ ನಂಬುಗೆ ಮೇಳ ನಡೆಸುವ ಯಜಮಾನರಿಗೆ ಇರುವುದಿಲ್ಲ. ಕೆಲವು ಕಲಾವಿದರಂತೂ ಇಂದಿಲ್ಲಿ ನಾಳೆ ಮತ್ತೆಲ್ಲೋ ಹೀಗೇ ಯಾವ ಮೇಳಕ್ಕೂ ಅಂಟಿಕೊಳ್ಳದೇ ಕರೆದಲ್ಲಿಗೆ ಹೋಗಿ ಅನುಕೂಲವಾದಾಗ ಪಾತ್ರನಿರ್ವಹಿಸುವವರಾಗಿದ್ದಾರೆ !

ಭಾಗವತಿಕೆಯಲ್ಲಿ ನವನಾವೀನ್ಯ ಭಾವ ಮೂಡಿಸಬೇಕೆಂದು ಹೊರಟ ಇಂದಿನ ಬಡಗುತಿಟ್ಟಿನ ಗಾಯಕರಲ್ಲಿ ಸುಬ್ರಹ್ಮಣ್ಯ ಧಾರೇಶ್ವರರು ಸಂಗೀತವನ್ನು ಅಳವಡಿಸಿ ಯಕ್ಷಗಾನವನ್ನು ಸಂಗೀತೀಕರಣ ಮಾಡಿದ್ದರೆ ಶಬರಾಯ, ಮತ್ತಿತರ ಕೆಲವು ಜನ ಕಾಳಿಂಗ ನಾವುಡರನ್ನು ಅನುಕರಿಸುತ್ತ ಸ್ವಂತಿಕೆ ಕಳೆದುಕೊಂಡಿದ್ದಾರೆ. ಕೊಳಗಿ ಕೇಶವ ಹೆಗಡೆಯವರಿಗೆ ಕಂಠ ಚೆನ್ನಾಗಿದ್ದರೂ ಹಳೆಯ ಮಟ್ಟುಗಳು ಇನ್ನೂ ಪೂರ್ತಿ ಕರಗತವಾಗಿಲ್ಲ. ವಿದ್ವಾನ್ ಗಣಪತಿ ಭಟ್ಟರಿಗೆ ಉಚ್ಚರಣಾ ಶುದ್ಧಿ ಸಿದ್ಧಿಸಿದರೂ ಹೇಳಿಕೊಳ್ಳುವ ಅದ್ಭುತ ಗರಳು ಅವರದಾಗಿಲ್ಲ. ಇನ್ನು ತೆಂಕುತಿಟ್ಟಿನಲ್ಲಿ ಕೆಲವರಂತೂ ಏನು ಹಾಡುತ್ತಾರೆ ಎಂಬುದು ಅವರಿಗೇ ಗೊತ್ತಿಲ್ಲ! ವೈದ್ಯರನೇಕರು ತಮ್ಮ ಪ್ರಿಸ್ಕ್ರಿಪ್ಷನ್‍ನಲ್ಲಿ ಬ್ರಹ್ಮಲಿಪಿ ಬರೆಯುವುದು ನೋಡಿದ್ದೀರಲ್ಲ ಹಾಗೇ ಎಮ್ಮೆ ಉಚ್ಚೆ ಹೊಯ್ದಹಾಗೇ ಒಂದಷ್ಟು ಕೂಗುತ್ತಾರೆ; ಕೂಗುವುದು ಭಾಗವತಿಕೆಯಲ್ಲ ಎಂಬ ಕನಿಷ್ಠ ಅವಲೋಕನವೂ ಅವರಿಗಿಲ್ಲ.

ನಸೀಬು ಗಟ್ಟಿ ಇದ್ದುದರಿಂದ ನಾನಂತೂ ನೆಬ್ಬೂರರ ಹಲವು ಹಾಡುಗಳನ್ನು ಕೇಳಿದ್ದೇನೆ. ಅದೇನು ಮಟ್ಟು, ಅದೇನು ಘನತೆ, ಗಾಂಭೀರ್ಯ ಎಲ್ಲೆಲ್ಲಿ ಯಾವ್ಯಾವ ರಾಗಗಳನ್ನು ನಿಯೋಜಿಸಿ ಹಾಡಬೇಕೋ ಅದನ್ನು ಶ್ರುತಿಬದ್ಧವಾಗಿ ಸಾಹಿತ್ಯಶುದ್ಧವಾಗಿ ಹಾಡುವುದು ಅವರ ಹೆಗ್ಗಳಿಕೆಯಾಗಿದೆ. ಹಾಗಂತ ಹೇಳಿಕೊಳ್ಳುವ ಕಂಠಸಿರಿ ಅವರದಲ್ಲದಿದ್ದರೂ ಇರುವ ಮಧುರ್ಯದಲ್ಲೇ ಪ್ರೇಕ್ಷಕರನ್ನು ಶ್ರೋತೃಗಳನ್ನು ಮೋಡಿಮಾಡುವ ಗಾರುಡೀ ವಿದ್ಯೆ ಅವರಿಗೆ ತಿಳಿದಿದೆ; ಈಗ ಮುದುಕಾಗಿದ್ದಾರೆ, ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಹಾಡುತ್ತಾರೆ. ನೆಬ್ಬೂರು ನಾರಾಯಣ ಭಾಗವತರು ರಂಗಸ್ಥಳಕ್ಕೆ ಬಂದರೆಂದರೆ ಇಡೀ ರಂಗಸ್ಥಳವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಹಿತಮಿತವಾದ ಹಾಡುಗಾರಿಕೆಯಿಂದ ಜನರನ್ನೂ ಕಲಾವಿದರನ್ನೂ ಸೆಳೆದಿದ್ದು ಅತಿಶಯೋಕ್ತಿಯಲ್ಲ.

ಹಿಂದೆಲ್ಲಾ ಭಾಗವತರಾಗಲೂ ಕೆಲವು ಅರ್ಹತೆಗಳನ್ನು ನೋಡುತ್ತಿದ್ದರು. ಇಂದು ಅದು ಮಾಯವಾಗಿದೆ. ಹಿಂದೆ ಪೌರಾಣಿಕ ಪ್ರಸಂಗಗಳು ಮಾತ್ರ ಇದ್ದವು; ಇಂದು ಸಾಮಾಜಿಕ ಪ್ರಸಂಗಗಳೂ ಕಾಲಿಟ್ಟಿವೆ-ವಿಜೃಂಭಿಸುತ್ತಿವೆ!! ಸಾಮಾಜಿಕ ಸಿನಿಮಾಗಳಂತೇ ಸಾಮಾಜಿಕ ಯಕ್ಷಗಾನ ಪ್ರಸಂಗಗಳಲ್ಲಿ ಕೇವಲ ಲೌಕಿಕ ವ್ಯವಹಾರಗಳ ದಾಖಲೆ ಕಾಣುತ್ತದೆಯೇ ಹೊರತು ನೀತಿಪಾಠಗಳು ಆದರ್ಶಗಳು ಕಾಣುವುದಿಲ್ಲ. ಕಮರ್ಷಿಯಲ್ ಸಿನಿಮಾಗಳು ಅಥವಾ ವಾಣಿಜ್ಯ ಚಲನಚಿತ್ರಗಳು ಎಂದು ಯಾವುದನ್ನು ಕರೆಯುತ್ತೇವೇಯೋ ಅದೇ ರೀತಿ ಕಮರ್ಷಿಯಲ್ ಪ್ರಸಂಗಗಳೂ ಇವೆ-ಅವು ಜಾಸ್ತಿ ಗೇಟ್ ಕಲೆಕ್ಷನ್ ಕೊಡುತ್ತವೆ ! ಈ ಕಾರಣಕ್ಕಾಗಿಯೇ ಕೆಲವು ಮೇಳಗಳು ವರ್ಷಾವರ್ಷಾ ಹೊಸ ಹೊಸ ಸಾಮಾಜಿಕ ಪ್ರಸಂಗಗಳನ್ನು ಅಳವಡಿಸುತ್ತಿದ್ದಾರೆ. ಬಸವಣ್ಣನ ಜೀವನ ಚರಿತ್ರೆಯನ್ನೂ ಯಕ್ಷಗಾನದಲ್ಲಿ ಕಂಡು ಸಖೇದಾಶ್ಚರ್ಯವಾಯ್ತು! ಎಲ್ಲಿಯ ಬಸವಣ್ಣ ಎಲ್ಲಿಯ ಯಕ್ಷಗಾನ !!

ಬಡಗುತಿಟ್ಟಿನಲ್ಲೂ ಬಡಾಬಡಗು ಎಂಬ ಶುದ್ಧ ಉತ್ತರಕನ್ನಡದ ತಿಟ್ಟೊಂದಿದೆ. ಆ ತಿಟ್ಟಿನಲ್ಲಿ ಕೆಲವು ವಿಶಿಷ್ಟ ರಾಗಗಳು ಮತ್ತು ಕುಣಿತಗಳು ಹಿಂದೆ ನಿಯೋಜಿತವಾಗಿವೆ. ಅಂಥದ್ದರಲ್ಲಿ ಸಭಾಹಿತ ಬಿಡ್ತಗೆ ಎನ್ನುವ ಒಂದು ತಿಟ್ಟು ಕೂಡ ತುಂಬಾ ಪ್ರಸಿದ್ಧ. ಈಗಿನ ಅವಸರದ ಕಾಲದಲ್ಲಿ ನಿಧಾನಗತಿಯಲ್ಲಿ ನಡೆಸುವ ಸಭಾಹಿತ ಬಿಡ್ತಗೆಗಳೆಲ್ಲಾ ಮಾಯವಾಗುವ ಹಂತದಲ್ಲಿವೆ! ಹಾಡುವ ಭಾಗವತನಿಗೆ ಸಂಗೀತದ ರಾಗಜ್ಞಾನವಿರಬೇಕು, ಸಾಹಿತ್ಯದ ಸ್ವಾಧ್ಯಾಯವಿರಬೇಕು. ಹಾಗಂತ ಯಕ್ಷಗಾನ ಈಗಿರುವ ಎರಡೂ ಸ್ವದೇಶೀ ಸಂಗೀತ ಪ್ರಾಕಾರಗಳಿಗಿಂತ ಭಿನ್ನವಾಗಿದೆ; ತುಸು ದೂರನಿಂತು ತನ್ನ ತನವನ್ನು ಮೆರೆಯುತ್ತದೆ! ಮೋಹನ, ಕಾಂಬೋಧಿ, ಕಲ್ಯಾಣಿ ಹೀಗೇ ಅನೇಕ ರಾಗಗಳನ್ನೂ ಒಳಗೊಂಡಿರುವ ಯಕ್ಷಗಾನ ತನ್ನದೇ ಆದ ಕೆಲವು ರಾಗಗಳನ್ನೂ ಹೊಂದಿದೆ-ಅವುಗಳ ಬಗ್ಗೆ ಅಧ್ಯಯನ ಇನ್ನೂ ನಡೆಯಬೇಕಿದೆ.

ಕೇವಲ ಒಂದು ಮದ್ದಳೆ[ಮೃದಂಗ], ಒಂದು ತಾಳದ ಜೊತೆ, ಒಂದು ಹಾರ್ಮೋನಿಯಂ ಮತ್ತು ಒಂದು ಚಂಡೆ ಇವಿಷ್ಟೇ ಸಂಗೀತ ಪರಿಕರಗಳು ೨೧-೨೨ನೇ ಶತಮಾನದಲ್ಲೂ ಎಲ್ಲಾ ಸಂಗೀತೋಪಕರಣಗಳಿಗಿಂತಾ ಚಂದವಾದ ಹಿಮ್ಮೇಳವನ್ನು ಒದಗಿಸುವುದೂ ಅಲ್ಲದೇ ಗೊತ್ತಿರದ ಯಾವುದೇ ಪ್ರೇಕ್ಷಕನನ್ನೂ ಸೆರೆಹಿಡಿದಿಡಬಲ್ಲ ಮಾಂತ್ರಿಕ ಶಕ್ತಿ ಹಿಮ್ಮೇಳಕ್ಕಿದೆ! ತಾಳದಲ್ಲೇ ಗೆಜ್ಜೆಯ ಉಲಿಯನ್ನು ಕೇಳಬಹುದಾದರೆ ಉತ್ತಮ ಕಂಠ ಮತ್ತು ತಾಳದ ಗಚ್ಚು ಇರುವ ಭಾಗವತ ಹಾಡಹೊರಟರೆ ನಿಜಕ್ಕೂ ಅದು ಭುವಿಯ ಸ್ವರ್ಗ ಎಂದರೆ ತಪ್ಪಲ್ಲ.

ನಮ್ಮ ಇಂದಿನ ಭಾಗವತರುಗಳು ತಮ್ಮನ್ನೂ ತಮ್ಮ ಹಾಡುಗಾರಿಕೆಯನ್ನೂ ಅವಲೋಕಿಸಿಕೊಳ್ಳಬೇಕಾದ ಕಾಲ ಬಂದಿದೆ. ಹೇಗೆ ಭಾಷೆಯೊಂದನ್ನು ಹಿಂದಿನ ಹಿರಿಯರು ಮುಂದಿನ ತಲೆಮಾರಿಗೆ ಜವಾಬ್ದಾರಿಯುತವಾಗಿ ತಲುಪಿಸುತ್ತಾರೋ ಹಾಗೇ ಯಕ್ಷಗಾನದ ಶುದ್ಧ, ಪಾರಂಪರಿಕ ಅಥವಾ ಸಂಪ್ರದಾಯ ಬದ್ಧ ಭಾಗವತಿಕೆಯನ್ನು ಮುಂದಿನ ಪೀಳಿಗೆಗೆ ಕಲಿಸುವಾಗ ಎಲ್ಲೂ ಅಪಚಾರವಾಗದಂತೇ, ಎಲ್ಲೂ ಮೂಲ ಕಲೆಗೆ ದೋಷ ತಟ್ಟದಂತೇ, ಎಲ್ಲೂ ಇರುವ ರಾಗಗಳ ಚಹರೆ ಬದಲಿಸಿ ಸಂಗೀತವನ್ನು ಅಳವಡಿಸದಂತೇ ಕಲಿಸುವುದು ಅಗತ್ಯವಾಗಿದೆ. ಯಾವುದೋ ಸಂಗೀತದ ಆಮಿಷಕ್ಕೆ, ಯಾವುದೋ ನವಜಾಯಮಾನದ ಮೋಡಿಗೆ ಒಳಗಾಗಿ ಮೂಲವನ್ನು ಬಲಿಹಾಕುವ ಪ್ರವೃತ್ತಿ ಸರಿಯಲ್ಲ ಎಂಬುದನ್ನು ಸ್ಪಷ್ಟಪಡಿಸಲು ಈ ಲೇಖನ ಬರೆದೆ. ಧನ್ಯವಾದಗಳೊಂದಿಗೆ ಇಗೋ ಇಲ್ಲಿವೆ ಯಕ್ಷಗಾನದ ಒಂದೆರಡು ಶಾಸ್ತ್ರೀಯ ಹಾಡುಗಳು ತಮ್ಮ ಆಸ್ವಾದನೆಗೆ :










Monday, August 22, 2011

ನೋವ ಭಾವಗಳು


ನೋವ ಭಾವಗಳು


ನನ್ನಾಳದಲ್ಲಿರುವ ನೋವ ಭಾವಗಳಲ್ಲಿ
ಬಿನ್ನಹವು ನೀವಲ್ಲೇ ಕರಗಿ ನೀರಾಗಿ
ಚೆನ್ನಾಗಿರಲಿ ಎನ್ನ ಸುತ್ತಲಿನ ಜನಮನವು
ಹೊನ್ನು ಬೆಳೆದುಂಡುಟ್ಟು ಸುಖವವರದಾಗಿ

ಬೆನ್ನುಬಿಡದಲೆ ಹಿಡಿದು ಎಳೆದಾಡಿ ಕೇಳಿದಿರಿ
ಸನ್ನೆಯಲೇ ತಾವೆಂದು ಹೊರಬರುವುದೆಂದು !
ನನ್ನಿನುಡಿದವಗಿಲ್ಲಿ ಬದುಕು ಮುಳ್ಳಿನಮಂಚ
ಬೆನ್ನುಹಾಕುವೆ ನಿಮಗೆ ದಮ್ಮಯ್ಯ ಬೇಡ

ಅನ್ನ ನೀರಿನ ಋಣಕೆ ಭುವಿಗೆ ಬಂದಿದ್ದಾಯ್ತು
ಕನ್ನಹಾಕುವ ಬುದ್ಧಿ ಬಾರದಿರಲೆನಗೆ
ಮುನ್ನ ಎಲ್ಲರ ಮೊಗದಿ ನಗುವನ್ನು ಕಾಣುವೊಲು
ನನ್ನಿಷ್ಟಗಳನೆಲ್ಲ ಬಲಿಹಾಕುವುದಕೆ !!

ತನ್ನ ಜೀವಿತ ಸವೆಸಿ ಅಣ್ಣ ಹಜಾರದಲಿ
ಮೊನ್ನೆ ನಿನ್ನೆಯು ಇಂದು ಕುಳಿತನುಪವಾಸ
ತಿನ್ನುವುದೆ ಮಂತ್ರವೆನುವಾ ಖೂಳರುಗಳೆಲ್ಲ
ಗುನ್ನೆಗಳ ಗುರುತಳಿಸಿ ಮೆರೆದಟ್ಟಹಾಸ !!

Saturday, August 20, 2011

ಎಂದೂ ಮುಗಿಯದು ಹರಿಕಥೆಯು !

ಚಿತ್ರಕೃಪೆ: ಅಂತರ್ಜಾಲ

ಎಂದೂ ಮುಗಿಯದು ಹರಿಕಥೆಯು !


ಮುರಳಿಯ ಮೋಹಕ ನಾದಕೆ ಗೋಕುಲ
ತಲೆದೂಗಿತು ಒಲೆದಾಡುತಲಿ
ತರಳನ ಮೋಡಿಯ ದಾಳಕೆ ವ್ಯಾಕುಲ
ಚಿತ್ತತೊರೆದು ನಲಿದಾಡುತಲಿ

ಹುಟ್ಟಿದ ಮಥುರೆಯ ತೊರೆಯುತಲಲ್ಲಿಗೆ
ಸಟ್ಟನೆ ಸಾಗುತ ಬಂದನವ
ತಟ್ಟಿದ ಎಲ್ಲರ ಹೃದಯವ ಮೆಲ್ಲಗೆ
ಬೆಟ್ಟವನೆತ್ತುತ ಕಂದನವ !!

ಗಡಿಗೆಯನೊಡೆದಾ ಬೆಣ್ಣೆಯಕದ್ದಾ
ಅಡಗಿಸಿ ಗೋಪಿಕೆ
ವಶನಗಳ
ಬೆಡಗಿಯರೆಲ್ಲರ ಹೆಣ್ಣಿಮೆಗೆದ್ದಾ
ಒಡನಾಡುತ ತಿಂದಶನಗಳ

ಜಾವದಿ ಕರೆದಾ ಗೋವುಗಳೆಲ್ಲವ
ಭಾವದಿ ಬಂದವು ಕರುಗಳವು
ಹಾವನು ತುಳಿದಾ ಜೀವಗಳೆಲ್ಲವ
ಸಾವಿನಿಂದ ತಾ ಹೊರಗೆಳೆದೂ

ಎಳೆತನದಲಿ ತಾ ಕುಚೇಲಗೊಲಿದಾ
ಗೆಳೆತನವಾಯಿತು ಹೆಮ್ಮರವು
ಗಳಿಕೆಯ ಹಿಡಿಯವಲಕ್ಕಿಯಪಡೆದಾ
ಅಳಿಸುತ ಬಡತನ ಸುಮ್ಮನವ

ಕರೆಯಲು ಬಂದಾ ಅಕ್ರೂರನ ಮನ
ಒರೆಗೆ ಹಚ್ಚಿ ತಾ ಪರಿಗಣಿಸಿ
ಅರಿವಲಿ ಭಕ್ತಗೆ ತಾ ಭಗವಂತನೇ
ಹೊರಗಡೆ ಬಂಧುವು ಎಂದೆನಿಸಿ

ಒದೆಯುತ ಮಾವನ ವಧಿಸಿದ ಅಳಿಯನು
ಸದೆಬಡಿಯುತ ಚಾಣೂರನನು
ಗದೆಯನು ನೀಡುತ ತಾತನ ಕೂರಿಸಿ
ಬದಲಿಸಿದನು ರಾಜ್ಯಭಾರವನು

ಪಾಂಚಾಲಿಯ ವೇದನೆಯನು ಗ್ರಹಿಸಿದ
ಪಾಂಚಜನ್ಯಧಾರಿಯು ಒಳಗೆ
ಕಾಂಚಾಣದ ಮದ ಹರಿದಾವೇಳೆಗೆ
ವಾಂಛಿತಕ್ಷಯಾಂಬರ ಹೊರಗೆ

ನಡೆಸಿದ ಭಾರತ ತರಿಯುತ ಹಲವರ
ಜಡದೇಹಕೆ ಅಂತ್ಯವ ಕರೆದು
ಗುಡಿಸಿ ಅಧರ್ಮವ ಬಡಿಸಿದ ಗೀತೆಯ
ತಡಮಾಡದೆ ಸತ್ಯವ ತೆರೆದು

ಒಂದೇ ಎರಡೇ ಘಟನೆಯು ಸಾವಿರ
ಎಂದೂ ಮುಗಿಯದು ಹರಿಕಥೆಯು !
ಚಂದದಿ ನೀವಿದ ಕೇಳಿದ ರೀತಿಗೆ
ಅಂದದ ಮಂಗಳ ಸಾರುವೆನು


Thursday, August 18, 2011

ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ !!


ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ !!

[ಕೊನೆಯ ಕಂತು]

ಹೀಗೆ ನಡೆದಿದ್ದ ಹವ್ಯಕರ ಆ ದಿನಗಳಲ್ಲಿ ವ್ಯಾವಹಾರಿಕ ಉಬ್ಬರವಿಳಿತಗಳಿರಲಿಲ್ಲ. ಪರಮಾತ್ಮ ಕೊಟ್ಟುದರಲ್ಲಿ ಸಂತಸಮಯ ಜೀವನವನ್ನು ತಮ್ಮದೇ ಸಹಜ ಶೈಲಿಯಲ್ಲಿ ನಡೆಸಿಬಂದ ಜನ ಹವ್ಯಕರು. ಸುಮಾರು ೧೮ನೇ ಶತಮಾನಕ್ಕೂ ಮುಂಚೆ ಧಣಿ ಕೊಟ್ಟ ಭೂಪ್ರದೇಶ ಹೇರಳವಾಗಿತ್ತು. ಜನಸಂಖ್ಯೆ ಕಮ್ಮಿಇತ್ತು. ಯಾವಾಗ ಒಬ್ಬೊಬ್ಬ ಅಪ್ಪನಿಗೆ ಎಂಟು ಹತ್ತು ಮಕ್ಕಳು ಜನಿಸಿದರೋ ಸಂಸಾರ ಬೆಳೆಯಲಾರಂಭಿಸಿತು; ಭೂಪ್ರದೇಶ ಕಮ್ಮಿಯಾಯಿತು. ಉಪಜೀವನಕ್ಕೆ ಮೂಲ ಆಸರೆಯಾದ ಭಾಗಾಯಿತ, ತರಿ ಜಮೀನುಗಳು ಸಾಲದಾಗುತ್ತಾ ಬಂತು. ಆಗ ಹವ್ಯಕರ ಕೆಲವು ಕುಟುಂಬಗಳು ಗ್ರಾಮದಿಂದ ಗ್ರಾಮಕ್ಕೆ ವಲಸೆ ಸಾಗುತ್ತಾ ಅಲ್ಲೆಲ್ಲಾದರೂ ತಮ್ಮ ಉಪಜೀವಿತಕ್ಕೆ ಅನುಕೂಲವಾಗುವುದೋ ಎಂದು ಹುಡುಕಹತ್ತಿದರು.

ರಾಜಾಶ್ರಯ ಬಹುಹಿಂದೆಯೇ ಕೈತಪ್ಪಿ ಹೋದುದರಿಂದ ಉಪಜೀವಿತಕ್ಕೆ ಬೇಕಾಗುವ ಆರ್ಥಿಕ ವ್ಯವಸ್ಥೆಯನ್ನು ಇವರೇ ಹುಡುಕಿಕೊಳ್ಳಬೇಕಿತ್ತು. ಸ್ವಾಭಿಮಾನಿಗಳಾದ ಹವ್ಯಕರು ಯಾರಿಂದಲೂ ಸಹಾಯವನ್ನು ಅಪೇಕ್ಷಿಸಿ ಕೈ ಒಡ್ಡಿದವರಲ್ಲ ! ತಮ್ಮ ಕೆಲಸಕ್ಕೆ ತಕ್ಕ ಸಂಭಾವನೆ ಸಿಗುವುದೇ ಎಂಬ ಹುಡುಕುವಿಕೆಯನ್ನೂ ಬಿಟ್ಟವರಲ್ಲ!! ಅವಿಭಕ್ತ ಕುಟುಂಬವಿದ್ದಾಗ ಮನೆಯ ಎಲ್ಲಾ ಸದಸ್ಯರೂ ಹೊಲಗದ್ದೆಗಳಲ್ಲಿ ಒಟ್ಟಾಗಿ ದುಡಿಯುತ್ತಿದ್ದರು. ಒಂದು ಕಡೆ ಹೋಮ-ಹವನ,ಪೂಜೆ ಇನ್ನೊಂದು ಕಡೆ ಭೂಮಿತಾಯಿಯ ಆರಾಧನೆ. ಹೀಗೇ ಜೀವನ ಸಾಗಿತ್ತು. ಜನಸಂಖ್ಯೆ ಜಾಸ್ತಿಯಾಗಿ ಮಕ್ಕಳಿಗೆ ಅಪ್ಪ ಹಿಸ್ಸೆ ಕೊಡುವಾಗ ಎಕರೆಗಟ್ಟಲೆ ಇರುವ ಭಾಗಾಯ್ತ, ತರಿ ಎಲ್ಲಾ ಗುಂಟೆ ಲೆಕ್ಕದಲ್ಲಿ ಇಳಿಯಹತ್ತಿದವು. ಒಂದುಕಾಲದಲ್ಲಿ ಎಂಟು ಜನ ಅಣ್ಣ-ತಮ್ಮಂದಿರ ಒಟ್ಟುಕುಟುಂಬದ ಆಸ್ತಿಯಾಗಿದ್ದ ೮ ಎಕರೆ ಭೂಮಿ ಈಗ ಒಡೆದ ಒಂದೊಂದು ಎಕರೆಗೆ ಇಳಿಯಿತು. ಹೀಗೇ ಬರುಬರುತ್ತಾ ಕೃಷಿಭೂಮಿಯ ಜಾಗ ಒಡೆದು ಒಡೆದು ಹೋಳಾಗುತ್ತಾ ಹೋಳಾಗುತ್ತಾ ಜಮೀನೂ ಚಿಕ್ಕದು ಬರುವ ಆದಾಯವೂ ಕಮ್ಮಿ ಎಂಬಂತಾಗಿ ಜೀವನಕ್ಕೆ ಅನಾನುಕೂಲವಾಗತೊಡಗಿತು.

ಇಂತಹ ಸನ್ನಿವೇಶದಲ್ಲಿ ೧೮ನೇ ಶತಮನದ ಆದಿಭಾಗದಲ್ಲಿ ಕೆಲವು ಕುಟುಂಬದ ಅಣ್ಣ-ತಮ್ಮಂದಿರು ಮುಂಬೈಯೆಡೆಗೆ ಮುಖಮಾಡಿದರು. ಇನ್ನೂ ಕೆಲವರು ವೈದ್ಯ ಮತ್ತು ತಾಂತ್ರಿಕ ಶಿಕ್ಷಣವನ್ನು ಪಡೆದು ನಗರಗಳಲ್ಲಿ ನೆಲೆಸಿದರು. ಕ್ರಮೇಣ ಕ್ರಮೇಣ ಅವಿಭಕ್ತ ಕುಟುಂಬ ಒಡೆಯುವ ಬದಲು ಹಿರಿಯಣ್ಣನೋ ಕಿರಿತಮ್ಮನೋ ಬಿಟ್ಟು ಮಿಕ್ಕುಳಿದವರು ಚೆನ್ನಾಗಿ ಓದಿಕೊಂಡು ವಿವಿಧ ನಗರಗಳಲ್ಲಿ, ವಿದೇಶಗಳಲ್ಲಿ ಉದ್ಯೋಗಗಳನ್ನು ಕಂಡುಕೊಂಡರು. ಹಾಗೇ ಬೇರೇ ಬೇರೇ ಉದ್ಯೋಗಗಳನ್ನು ಮಾಡುವ ಹವ್ಯಕರ ಜೀವನ ಮಟ್ಟಕೂಡ ಸುಧಾರಿಸಿತು. ಊರಮನೆಗಳಲ್ಲಿ ಕಾಣದ ಆಧುನಿಕ ಸೌಲಭ್ಯಗಳು, ಪರಿಕರಗಳು ಈ ಉದ್ಯೋಗಸ್ಥರ ಮನೆಗಳಲ್ಲಿದ್ದವು. ಇದೇ ಸಮಯಕ್ಕೆ ಹವ್ಯಕರಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕೂಡ ಜಾಸ್ತಿಯಿತ್ತು. ಹೆತ್ತೊಡಲು ಬೆಳೆವ ಕರುಳ ಬಳ್ಳಿಯನ್ನು ಸದೃಢವಾದ ಮರವೊಂದಕ್ಕೆ ಹಬ್ಬಿಸಲು ಪರದಾಡಬೇಕಾದಂಥ ಪರಿಸ್ಥಿತಿ ಉದ್ಭವವಾಯಿತು. ನಗರವಾಸಿಗಳು ತಮಗೆ ಹುಡುಗಿ ಚೆನ್ನಾಗಿರಬೇಕೆಂದೂ, ವಿದ್ಯಾರ್ಹತೆ ಜಾಸ್ತಿ ಇರಬೇಕೆಂದೂ ತಾಕೀತುಮಾಡಿದರು; ಹಳ್ಳಿಗಳಲ್ಲಿ ಅವರ ಮನೆಮೂಲದಲ್ಲಿ ಹಿರಿಯರು ಜಾತಕ ಮೇಳಮೇಳೀ ಸರಿಯಾಗಬೇಕೆಂದರು.

ಆ ಕಾಲಘಟ್ಟದಲ್ಲಿ ಹಳ್ಳಿಗರ ಪ್ರತೀ ಮನೆಯಲ್ಲೂ ಲಂಗದಾವಣಿ ಇದ್ದೇ ಇರುತ್ತಿತ್ತು! ಯಾಕೆಂದರೆ ಪ್ರತೀ ಮನೆಯಲ್ಲೂ ಒಬ್ಬಳಲ್ಲಾ ಒಬ್ಬಳು ಹೆಣ್ಣುಮಗಳು ಬೆಳೆಯುತ್ತಾ ಇರ್ತಾ ಇದ್ದಳು. ಅಕ್ಕ-ಪಕ್ಕದ ದಾಯಾದರಲ್ಲಿ ಹುಳುಕು ಉಪದ್ರವಗಳೂ ಜಾಸ್ತಿ ಇದ್ದವು. ಪಕ್ಕದ ಮನೆಗೆ ಹೆಣ್ಣು ನೋಡಲು ಬಂದ ಯಾವುದೋ ಊರಿನ ಗಂಡಿನ ಕಡೆಯವರಿಗೆ ಹೇಗಾದರೂ ಮಾಡಿ ತಪ್ಪುಕಲ್ಪನೆ ಬರಿಸಿ ಮದುವೆ ನಡೆಯದಂತೇ ನೋಡಿಕೊಂಡದ್ದರಲ್ಲಿ ರಕ್ಕಸ ಸಂತಸವನ್ನು ಅನುಭವಿಸುವ ಅಜ್ಜ-ಅಜ್ಜಿಯಂದಿರೂ ಇದ್ದರು! ಕೆಲವರು ಒಳ್ಳೆಯವರೂ ಇದ್ದರು. ಹೆಣ್ಣು ನೋಡಿ ನಿಕ್ಕಿ ಮಾಡಿಕೊಂಡು ಹೋದರೂ ಆಮೇಲೆ ಸಂಬಂಧಿಕರಲ್ಲಿ ಯಾರೋ ಮುದುಕರು ಕವಚ ಒಗೆದುಬಿಟ್ಟರೆ ’ಓಹೊಹೋ ಅಪಶಕುನ ಅಪಶಕುನ ’ ಎನ್ನುತ್ತಾ ಸಂಬಂಧವನ್ನು ಮುರಿದುಕೊಳ್ಳುವ ಸಂಭವನೀಯತೆ ಬಹಳವಾಗಿತ್ತು. ಲಗ್ನಪತ್ರಿಕೆ ಮುದ್ರಿತವಾಗಿ ಹಂಚಲ್ಪಟ್ಟಮೇಲೆ ಯಾರೋ ತೀರಿಹೋದರೆಂಬ ಕಾರಣಕ್ಕೆ ಹೆಣ್ಣೊಬ್ಬಳನ್ನು ನಿರಾಕರಿಸಿದ ವ್ಯಕ್ತಿಯನ್ನು ನಾನೇ ಚಿಕ್ಕವನಿರುವಾಗ ನಮ್ಮ ಪಕ್ಕದಮನೆಯಲ್ಲಿ ಕಂಡಿದ್ದೆ ಎಂದಮೇಲೆ ಅದಕ್ಕೂ ಹಿಂದೆ ಕಾಲಮಾನದಲ್ಲಿ ಈ ವಿಷಯಕವಾಗಿ ಮತ್ತೂ ಅಂಧಕಾರವಿತ್ತು!!

ಬಡತನದಲ್ಲಿ ಏಳೆಂಟು ಹೆಣ್ಣುಮಕ್ಕಳನ್ನು ಹಡೆದ ಕನ್ಯಾಪಿತೃಗಳು ಒಬ್ಬಿಬ್ಬರನ್ನು ಮದುವೆಮಾಡುವಾಗಲೇ ಹೈರಾಣಾಗುತ್ತಿದ್ದರು. ನೆತ್ತಿಯ ಕೂದಲು ಉದುರಿ ಮಿಕ್ಕುಳಿದ ಕೂದಲು ಬೆಳ್ಳಿಯ ಮೆರುಗನ್ನು ಹೊಂದುವತ್ತ ಸಾಗುತ್ತಿದ್ದವು! ಹೊಲಿಗೆ, ಸಂಗೀತ, ಅಡುಗೆ, ಚಿತ್ರಕಲೆ, ಕೊಟ್ಟಿಗೆ ಕೆಲಸ, ಮನೆವಾರ್ತೆ ಹೀಗೇ ಹಲವು ಕೆಲಸಗಳನ್ನು ಕಲಿತಿದ್ದರೂ ಹೆಣ್ಣುಮಕ್ಕಳಿಗೆ ತಕ್ಕ ವರಸಾಮ್ಯ ಕೂಡಿಬರುತ್ತಿರಲಿಲ್ಲ. ಕೆಲವೊಮ್ಮೆ ಈ ಸನ್ನಿವೇಶ ’ ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ......’ ಎಂಬ ನರಸಿಂಹಸ್ವಾಮಿಯವರ ಹಾಡನ್ನು ನೆನಪಿಗೆ ತರುತ್ತದೆ. ಗಂಡುಗಳ ಆಯ್ಕೆಯಲ್ಲಿ ಆ ಸ್ಪರ್ಧೆಯಲ್ಲಿ ಸ್ಪುರದ್ರೂಪಿಗಳಲ್ಲದವರು, ನಕ್ಷತ್ರ ದೋಷವುಳ್ಳವರು, ಹಳ್ಳಿಯ ಪಕ್ಕದಮನೆಯ ರಾಜಕೀಯದಿಂದ ಅಪವಾದ ಹೊತ್ತವರು ಕಂಕಣಭಾಗ್ಯಕಾಣದೇ ಹಾಗೇ ಮುದುಕಾದರು! ಎಷ್ಟೋ ಜನ ಹೆಂಗಸರು ಮದುವೆಯ ನಂತರ ನಡೆದ ಹಳ್ಳಿಗರ ಹಿತ್ತಾಳೆ ಕಿವಿಯೂದುವ ತಂತ್ರದಿಂದ ತಮ್ಮ ಗಂಡಂದಿರನ್ನೇ ಕಳೆದುಕೊಳ್ಳಬೇಕಾಗಿ ಬಂತು.

ಹವ್ಯಕ ಹಳ್ಳಿಗರಲ್ಲಿ ಕೃಷಿ ಕೆಲಸಮಾಡುವ ಚೈತನ್ಯ ಇಳಿಯುತ್ತಾ ಹೋಯಿತು. ಗೇರುಸೊಪ್ಪೆಯ ಜಡ್ಡಕ್ಕಿ ಥರದ ಅಕ್ಕಿಯನ್ನು ಉಂಡು ಜೀರ್ಣಿಸುವ ಆಳುಗಳು ಇಲ್ಲವಾದರು! ಹೊತ್ತಿಗೆ ತಕ್ಕ ಮೈಮುರಿದು ಕೆಲಸಮಾಡಿ ಸಬಲರಾಗಿದ್ದ ಜನ ನಿಧಾನವಾಗಿ ಬೇರೇ ಆಳು-ಕಾಳಿನ ಸೌಲಭ್ಯಕ್ಕಾಗಿ ತಡಕಾಡಿದರು. ಈ ನಡುವೆ ಸಮಾಜದ ಇತರೆ ವರ್ಗಗಳ ಕೆಲಸಗಾರರು ಹವ್ಯಕರ ಹೊಲ-ಮನೆಗಳಲ್ಲಿ ಕೆಲಸಕ್ಕೆ ಬರತೊಡಗಿದರು. ಸಂಬಳಕ್ಕೆ ಬರುತ್ತಿದ್ದ ಕೆಲಸಗಾರರು ಕಾಲಾನುವರ್ತಿಗಳಾಗಿ ತಮ್ಮ ಉದರಂಭರಣೆಗಾಗಿ ಹೆಚ್ಚಿನ ಆದಾಯವನ್ನು ಕೋರತೊಡಗಿದರು. ಹವ್ಯಕರು ಬಹುವಾಗಿ ನಂಬಿದ್ದ ಅಡಕೆಗೆ ಅವರು ನಿರೀಕ್ಷಿಸಿದ ದರ ಸಿಗಲಿಲ್ಲ. ದರ ಕುಸಿಯುತ್ತಲೇ ಇತ್ತು, ದಿನಸಿಸಾಮನುಗಳ ಮತ್ತು ಕೂಲಿಯಾಳುಗಳ ಧಾರಣೆ ಜಾಸ್ತಿಯಾಗುತ್ತಲೇ ಇತ್ತು. ಹಲವರು ಸಾಲ-ಸೋಲಮಾಡಿ ಬದುಕಬೇಕಾದ ಕಾಲಬಂತು. ಮರ್ಯಾದೆಯಿಂದ ಜೀವನನಡೆಸುವುದೇ ಕಷ್ಟವಾಗತೊಡಗಿದಾಗ ಬಹಳ ಜನ ಹಳ್ಳಿಗಳನ್ನೇ ತೊರೆಯುವ ಇರಾದೆ ಹೊಂದಿದರು.

ಆದರೂ ಹಳ್ಳಿಗಳಲ್ಲಿ ಅನೇಕರು ಇನ್ನೂ ಕೂಡುಕುಟುಂಬದ ಆಸ್ತಿಯನ್ನು ಹೊಂದಿದ್ದರು. ಹಾಗೆಲ್ಲಾ ಬಿಟ್ಟುಹೊರಡಲು ಮನಸ್ಸಾಗುತ್ತಿರಲಿಲ್ಲ. ಈ ನಡುವೆ ನಗರಗಳಲ್ಲಿ-ಪಟ್ಟಣಗಳಲ್ಲಿ ಸರಕಾರೀ ಯಾ ಖಾಸಗೀ ನೌಕರಿಮಾಡುವ ಮಂದಿ ಈ ಜೀವನವೇ ಸಸಾರವೆಂದರು. ಆ ಯುವಕರು ತಮಗೆ ತಮ್ಮ ಹಾಗೇ ನೌಕರಿಮಾಡುವ ಮಹಿಳೆಯಿದ್ದರೇ ಮದುವೆಯಾಗುವುದಾಗಿ ಹೇಳಿದರು. ಹವ್ಯಕರ ಮದುವೆಗಳು ನೌಕರೀ ಅವಲಂಬಿತವಾಗತೊಡಗಿದ್ದು ಆಗಲೇ! ಮತ್ತೆ ಹೆಣ್ಣು ಹೆತ್ತವರಿಗೆ ಹೊಸ ಸನ್ನಿವೇಶ. ಏಗುತ್ತಾ ಏಗುತ್ತಾ ನಡೆಯುವ, ಬೇಸರಗೊಳ್ಳುವ ಅಪ್ಪಯ್ಯನ ಮುಖದ ಗೆರೆಗಳನ್ನು ಅವಲೋಕಿಸಿದ ಅನೇಕ ಹೆಣ್ಣುಮಕ್ಕಳು ಸ್ವಯಂ ನಿರ್ಧಾರದಿಂದ ಮದುವೆಯೆಂಬ ವಿಷಯವನ್ನೇ ಮರೆತುಬಿಟ್ಟರು, " ಅಪ್ಪಯ್ಯಾ ನೀ ಏನ್ ಹೆದ್ರಡ ಹುಟ್ಟಸಿದ ದೇವ್ರು ಹುಲ್ಲು ಮೇಯಸ್ತ್ನಿಲ್ಲೆ , ನಂಗೊ ಮಹಿಳಾಮಂಡ್ಳಿ ಸೇರಿ ಏನಾದ್ರೂ ಕೆಲಸ ಮಾಡ್ಕಂಡು ಜೀವನ ನಡೆಸ್ಕಂಡ್ ಹೋಗ್ತ್ಯ " ಎಂದುಬಿಟ್ಟರು. ಅಲೆದು ಸವೆದು ತೂತಾದ ಹವಾಯಿಯನ್ನು ಅಂಗಳದ ತುದಿಯಲ್ಲಿ ಕಳಚಿಟ್ಟ ಅಪ್ಪಯ್ಯ ಕುಸಿದು ಕೂರುವ ಮೊದಲೇ ನೂರಾರು ಜಾತಕಪ್ರತಿಗಳ ಕಟ್ಟುಗಳಿದ್ದ ಪ್ಲಾಸ್ಟಿಕ್ [ದಾರದ]ಕೈ ಚೀಲವನ್ನೂ ಬಿಸಿಲಲ್ಲಿ ತಿರುಗಿ ಬಿಳಿಯ ಡಿಸ್ಟೆಂಪರ್ ಹಚ್ಚಿದಂತೇ ಕಾಣುವ ಮರದಕಾವಿನ ಕೊಡೆಯನ್ನೂ ಆತನ ಎರಡೂ ಕೈಗಳಿಂದ ತೆಗೆದಿರಿಸಿ ಇನ್ನುಮೇಲೆ ಆ ಗೋಳೇ ಬೇಡಾ ಎಂದುಬಿಟ್ಟರು!

ಹೆಣ್ಣು ಹೆತ್ತವರ ತಾಪತ್ರಯದ ಅನುಭವವಿರುವ ಆ ಕಾಲದ ಹೊಸಜೋಡಿಗಳು [ಸರಿಸುಮಾರು ೨೦-೨೫ ವರ್ಷಗಳ ಹಿಂದೆ] ಗರ್ಭಧರಿಸಿದ ಮೂರು ತಿಂಗಳಾಗುತ್ತಿದ್ದಂತೇ ಭ್ರೂಣಪರೀಕ್ಷೆಯ ಕಳ್ಳ ಯಂತ್ರಗಳು ಆ ಕಡೆ ಉಡುಪಿ, ಈ ಕಡೆ ಶಿರಸಿ , ಮತ್ತೊಂದೆಡೆ ಶಿವಮೊಗ್ಗಾಕ್ಕೆ ಬಂದಿದ್ದನ್ನು ತಿಳಿದು ಕದ್ದೂಮುಚ್ಚಿ ಅಲ್ಲಿಗೆ ಹೋಗಿ ಸ್ಕ್ಯಾನಿಂಗ್ ನಡೆಸಿದವು! ಮನೆಯ ಅಜ್ಜ-ಅಜ್ಜಿಗೆ ಗೊತ್ತಿರದ ಗೌಪ್ಯದಲ್ಲೇ ವ್ಯವಹಾರಗಳು ಮುಗಿದುಹೋಗುತ್ತಿದ್ದವು. ಅಸಂಖ್ಯಾತ ಹೆಣ್ಣು ಭ್ರೂಣಗಳು ಜನ್ಮ ಕಾಣಲೇ ಇಲ್ಲ! " ಡಾಕ್ಟ್ರೇ, ಗಂಡಾದರೆ ಬಿಡಿ ಹೆಣ್ಣಾದ್ರೆ ಬೇಡ ತೆಗೆದ್ಬುಡಿ " ಎಂದು ನಿರ್ದಾಕ್ಷಿಣ್ಯವಾಗಿ ಹೇಳತೊಡಗಿದರು. ಮಕ್ಕಳ ಭಾಗ್ಯವನ್ನೇ ಕಾಣದ ಕೆಲವು ಜನಮಾತ್ರ ತಮಗೆ ಹೆಣ್ಣೋ ಗಂಡೋ ಯಾವುದೇ ಜನಿಸಿದರೂ ಸರಿ ಅಂತ ಹಾಗೇ ಬಿಟ್ಟಿದ್ದಕ್ಕೆ ಅಲ್ಲಲ್ಲಿ ಕೆಲವು ಹೆಣ್ಣುಮಕ್ಕಳು ಜನಿಸಿದರು ಬಿಟ್ಟರೆ ಆಗ ಹುಟ್ಟಿದವರೆಲ್ಲಾ ಗಂಡುಗೂಳಿಗಳೇ !!

ಮತ್ತೊಂದು ಹತ್ತು ವರ್ಷ ಕಳೆದ ಮೇಲೆ ಸರಕಾರ ಭ್ರೂಣಪರೀಕ್ಷೆಯ ಮೇಲೆ ನಿಷೇಧ ಹೇರಿತು. ಕೃಷ್ಣಭಾವ, ರಘುಮಾವ, ರಾಧಾಕೃಷ್ಣ ಹೆಗಡೆ ಹೀಗೇ ಅನೇಕ ಹವ್ಯಕ ಬಾವಯ್ಯಂದಿರು ಒಳಗೊಳಗೇ ಸರಕಾರವನ್ನು ಬೈದುಕೊಂಡರು! ಆದರೂ ಕೆಲವು ವೈದ್ಯರು ಗುಟ್ಟಾಗಿ ಅಲ್ಲಲ್ಲಿ ಆಪರೇಟ್ ಮಾಡುತ್ತಲೇ ಇದ್ದರು ! ವಿಧಿಯಿಚ್ಛೆಯಲ್ಲಿ ಬದುಕುಳಿಯಬೇಕೆಂಬ ಭ್ರೂಣಗಳು ಬದುಕಿದವು ಈಗ ಅವುಗಳೆಲ್ಲಾ ಮದುವೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಮಧ್ಯಸ್ಥಿಕೆಯಲ್ಲಿ ವ್ಯವಹಾರಕ್ಕೆ ನಿಂತಿವೆ.

೨೦-೨೫ ವರ್ಷಗಳ ಹಿಂದೆ ಜನಿಸಿ ಪದವಿ ಸಂಪಾದಿಸಿದ ಗಂಡುಗಳ ಜೊತೆಗೆ ಜನಿಸಿದ ಅಥವಾ ಅವರ ಓರಗೆಯ ಅನೇಕರು ವೃದ್ಧಾಪ್ಯದ ತಾಯಿ-ತಂದೆಗಳೆನ್ನುವ ಕಾರಣಕ್ಕೋ ಒಬ್ಬನೇ ಮಗನೆನ್ನುವ ಕಾರಣಕ್ಕೋ ಅಥವಾ ಆಧುನಿಕ ವಿದ್ಯೆ ಇಷ್ಟವಿಲ್ಲದೆಯೋ ತಕ್ಕಮಟ್ಟಿನ ಕಾಲೇಜು ವ್ಯಾಸಂಗ ಮುಗಿಸಿ ಹಳ್ಳಿಗಳಲ್ಲೇ ಉಳಿದರು. ಅದೇ ವಯಸ್ಸಿನ ಅಥವಾ ಅವರಿಗಿಂತಲೂ ಕಿರಿಯರು ತಾಂತ್ರಿಕ ಯಾ ವೈದ್ಯ ಪದವಿ ಮುಗಿಸಿ ನಗರ ಸೇರಿದರು. ತಾಂತ್ರಿಕ ಪದವಿ ಮುಗಿಸಿದವರಿಗೆ ಗಣಕ ತಂತ್ರಜ್ಞಾನ ಅತೀ ಸುಲಭದ ಮಾರ್ಗವಯಿತು. ಹವ್ಯಕರು ಸಹಜವಾಗಿ ಅತೀ ಬುದ್ಧಿವಂತರು, ತೀಕ್ಷ್ಣಮತಿಯುಳ್ಳವರು, ಕುಶಾಗ್ರಮತಿಗಳು ಎಂದೆಲ್ಲಾ ಅನಿಸಿಕೊಂಡಿದ್ದಾರೆ. ಇವತ್ತು ಹವ್ಯಕರಿಲ್ಲದ ರಂಗಗಳೇ ಇಲ್ಲ! ತಾವಿರುವ ರಂಗಗಳಲ್ಲಿ ಬಹುತೇಕ ಮುಂಚೂಣಿಯಲ್ಲೇ ಇರುತ್ತಾರೆ !!

ಊರಮನೆಯಲ್ಲಿರುವ ಈಗಿನ ಯುವಕರು ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಕಷ್ಟಪಟ್ಟು ಮಾಡಿಕೊಂಡರು. ಮನೆಗೆ ಫ್ರಿಜ್, ವಾಶಿಂಗ್ ಮಶಿನ್, ಫ್ಯಾನ್, ಫೋನ್, ಟಿವಿ ಎಲ್ಲಾ ಸೌಕರ್ಯಗಳೂ ಬಂದವು, ಓಡಾಡಲು ವಾಹನಗಳೂ ಬಂದವು. ಆದರೆ ಹೆಣ್ಣುಕೊಡುವವರು ಮಾತ್ರ ದಿಕ್ಕಿಲ್ಲ!! ಮದುವೆಗೆ ತಯಾರಾಗಿರುವ ಹೆಣ್ಣುಮಕ್ಕಳ ಮತ್ತು ಗಂಡುಮಕ್ಕಳ ಸಂಖ್ಯೆಯಲ್ಲಿ ಗಣನೀಯ ವ್ಯಾತ್ಯಾಸ ಇತ್ತು. ಬೇಡಿಕೆಗೂ ಪೂರೈಕೆಗೂ ವ್ಯತ್ಯಾಸವಾದರೆ ಮಾರುಕಟ್ಟೆ ಏನಾಗುತ್ತದೆ ಎಂಬುದು ತಮಗೆಲ್ಲಾ ತಿಳಿದಿದೆಯಷ್ಟೇ? ಅಪ್ಪಯ್ಯನ ಆದರಣೆಯಿಂದ ಆದ್ಯತೆಪಡೆದು ’ಬೇರೆಮನೆಗೆ ಹೋಗುವವಳು’ ಎಂದು ಹಲವು ರೀತಿಯಲ್ಲಿ ಪ್ರೋತ್ಸಾಹ ಪಡೆದು ಉನ್ನತ ವ್ಯಾಸಂಗ ಮುಗಿಸಿದ ಹಲವು ಹುಡುಗಿಯರು ಅಪ್ಪ-ಅಮ್ಮನಿಗೆ ಬೈಬೈ ಹೇಳಿ ಅಲ್ಲೇ ಲವ್ವಿ-ಡವ್ವಿ ಮಾಡಿಕೊಂಡು ಹಾರಿಹೋದವು!! ಅಪ್ಪ-ಅಮ್ಮನ ಮಾತನ್ನು ಮೀರದ ತಂಗ್ಯಮ್ಮಗಳು

೧. ಮದುವೆಯಾಗುವಾತ ಚಂದ ಇರಬೇಕು.
೧. (ಬ) ಆತ ಸಾಪ್ಟ್‍ವೇರ್ ತಂತ್ರಜ್ಞನೇ ಆಗಿರಬೇಕು ಅಥವಾ ವೈದ್ಯನಾಗಿರಬೇಕು.
೨. ಆತನಿಗೆ ಅಣ್ಣ-ತಮ್ಮ ಇರಬಾರದು.
೩. ಅಕ್ಕ-ತಂಗಿ ಇದ್ದರೆ ಬಂದ್ರೂ ಬೇಗ ಅವರವರ ಊರಿಗೆ ಹೋಗಿಬಿಡಬೇಕು.
೪. ಆತನ ಅಪ್ಪ-ಅಮ್ಮ ಜೀವಿತದಲ್ಲಿ ಇಲ್ಲದಿದ್ದರೇ ಒಳ್ಳೆಯದು, ಇದ್ದರೆ ಅವರಪಾಡಿಗೆ ಅವರು ಹಳ್ಳಿಮನೆಯಲ್ಲಿರಬೇಕು.
೫. ಮದುವೆಯಾಗುವಾತ ತನ್ನ[ಹುಡುಗಿಯ] ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು.
೬. ತನ್ನ [ಹುಡುಗಿಯ] ಅಕ್ಕ-ತಂಗಿ ಬಂದರೆ ಅವರನ್ನು ಆದರದಿಂದ ಕಾಣಬೇಕು.
೭. ತನ್ನ[ಹುಡುಗಿಯ] ಅಣ್ಣ-ತಮ್ಮ ಇದ್ದರೆ ಅವರನ್ನೆಲ್ಲಾ ಯಥಾಯೋಗ್ಯ ಅನುಕೂಲದಲ್ಲಿಡಲು ಸಹಕರಿಸಬೇಕು.
೮ ವಾಸಕ್ಕೆ ಬಾಡಿಗೆಮನೆಯಾದರೂ ಕೊನೇಪಕ್ಷ ಬೆಂಗಳೂರಿನಂತಹ ಊರಲ್ಲಿ ಒಂದು ಸೈಟು ಇರಬೇಕು.
೯ ತಿರುಗಾಡಲು ಮಾರುತಿ ೮೦೦, ವ್ಯಾನು ಹೊರತುಪಡಿಸಿ ಯಾವುದದರೂ ಹೊಸ ಕಾರು ಇರಬೇಕು.
.
.
.
.
.
.
ನನಗೆ ಮುಕ್ತ ಸ್ವಾತಂತ್ರ್ಯ ಇರಬೇಕು !!

ಜೈ ಭಜರಂಗಬಲಿ !! ಈಈಈಷ್ಟುದ್ದ ಕರಾರುಗಳುಳ್ಳ ಪತ್ರಹಿಡಿದು ಮಾರುಕಟ್ಟೆಗೆ ನುಗ್ಗಿದವು. ಜಾತಕ ಕೊಡುವ ಬದಲು ಹುಡುಗನ ಜಾತಕವನ್ನೇ ಕೇಳುವ ಆತನ ಜಾತಕ ಜಲಾಡುವವರೆಗೂ ಬೆಳೆದರು! ಎಷ್ಟೋ ಹುಡುಗರು ಕಿಬ್ಬದಿಯ ಕೀಲು ಮುರಿದ ಅನುಭವವಾಗಿ ತಾವೂ ಬೇರೇ ಜನಾಂಗದ ಹುಡುಗಿಯರೊಟ್ಟಿಗೆ ಲವ್ವಿ-ಡವ್ವಿ ಹಾಡಿದರು. ಊರಮನೆಯಲ್ಲಿರುವ ಪಾಪದ ಹುಡುಗರು ಮೇಲೆ-ಕೆಳಗೆ ನೋಡುತ್ತಾ ಅಲ್ಲೊಬ್ಬ ಹುಡುಗಿಯಿದ್ದಾಳೆ ನೋಡಬೇಕು ಇಲ್ಲೊಬ್ಬ ಹುಡುಗಿಯಿದ್ದಾಳೆ ಕೇಳಬೇಕು ಎಂದುಕೊಳ್ಳುತ್ತಾ ಹಲವತ್ತುಕೊಳ್ಳತೊಡಗಿದರು. ದಲ್ಲಾಲಿಗಳು ಎರಡೂ ಕಡೆ ಕುಳಿತು ಅಡ್ವಾನ್ಸು ಪಡೆದು ಬರೋಬ್ಬರಿ ಚಾ ಕಾಫಿ ತಿಂಡಿ ಹೀರಿ ಓಡಾಡಿಕೊಂಡು ವಧುದಕ್ಷಿಣೆಯ ವರೆಗೂ ನಡೆಯಹತ್ತಿತು.

ಕಲಿತ [ಓದಿದ] ಹುಡುಗಿಯರನೇಕರು " ಜಾತಿಯೇನು ಮಹಾ ಗೋತ್ರವೇನು ಮಹಾ ಅಪ್ಪಯ್ಯಾ ? ಅವಂಗೆ ಆಸ್ತಿ ಎಷ್ಟಿದ್ದು ಗೊತ್ತಿದ್ದೋ ? " ಎಂದು ಅಪ್ಪ-ಅಮ್ಮನ ಬಾಯಿಮುಚ್ಚಿಸಿ ಬೇರೇ ಜನಾಂಗದವರನ್ನು ಮದುವೆಯಾದರು!! ಮದುವೆಯಾಗಿ ಆರೇಳುತಿಂಗಳಲ್ಲೇ ಗಂಡಕೊಡುವ ಬವಣೆಗಳನ್ನು ಹೇಳಿಕೊಳ್ಳುವವರೂ, ಹೇಳಿಕೊಳ್ಳಲೂ ಆರದೇ ಪರಿತಾಪಪಡುವವರೂ ಕಂಡುಬಂದರು. ಹಲವು ವಿಚ್ಛೇದನಗಳೂ ನಡೆದವು. ವಿಚ್ಛೇದಿತ ಹೆಣ್ಣುಮಕ್ಕಳು ತಮ್ಮ ಅನುಭವದಿಂದ known Devil is better than unknown Angel ಎಂದರು. ಉದಾರ ಮನದ ಹವ್ಯಕ ಹುಡುಗರು ವಿಚ್ಛೇದಿತ/ಮಕ್ಕಳಿರುವ ಹೆಂಗಸರನ್ನೂ ಮದುವೆಯಾದರು-ಅದೂ ಮಹಾನಗರಗಳಲ್ಲೇ ಕಂಡ ಸತ್ಯ !!

ದಲ್ಲಾಲಿಗಳ ಧಾರಣಮಟ್ಟ ಏರುತ್ತಾ ಹೋಯ್ತು. ಅತ್ತಕಡೆ ಪಾಲಕರಿಗೆ ಕಲಿತ ಹೆಣ್ಣುಗಳು ನೀಡುವ ಕರಾರುಗಳ ಪಟ್ಟಿಯೂ ಊದ್ದುದ್ದ ಬೆಳೆಯ ತೊಡಗಿತ್ತು. ಕೆಲವೊಮ್ಮೆ ಹವ್ಯಕ ಕನ್ಯಾಪಿತೃಗಳ ಸೊಕ್ಕನ್ನು ದಮನಿಸಲು ದಲ್ಲಾಲಿಗಳು ರಾಜ್ಯದ ಯಾವ್ಯವುದೋ ಭಾಗಗಳಿಂದ " ಇವರೇ ಆ ಬ್ರಾಹ್ಮಣರು ಇವರೇ ಈ ಬ್ರಾಹ್ಮಣರು " ಎಂದು ಸುಳ್ಳು ಸೃಷ್ಟಿಸಿ ಹಳ್ಳೀ ಹುಡುಗರಿಗೆ ಮದುವೆ ಮಾಡಿಸಿ ಹಣಎಣಿಸಿಕೊಂಡು ಹೋದರು. ಅಂತಹ ಅನೇಕ ಮದುವೆಗಳೂ ಮುರಿದುಬಿದ್ದವು! ಇಂತಹ ಸಂದರ್ಭವನ್ನು ದೂರದಲ್ಲಿ ನೋಡುತ್ತಿದ್ದ ಶಿರಸಿಯ ಹೆಗಡೆಯವರು ಮಾರ್ಮಿಕವಾಗಿ ಸಮಾಜಕ್ಕೆ ಒಂದು ಚುಚ್ಚುಮದ್ದು ಕೊಟ್ಟರು! ಅದೇ ’ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ ...’ !!

ಅತ್ಯಂತ ಸುಶಿಕ್ಷಿತ, ಸದ್ಗುಣಶೀಲ ಸಮಾಜವಾದ ಹವ್ಯಕರಲ್ಲಿ ಈಗಲೂ ಈ ಗೋಳು ಮುಗಿದಿಲ್ಲ. ಅತಿಯಾಗಿ ಓದಿದ ಹೆಣ್ಣುಮಕ್ಕಳು ಆಕಾಶಕ್ಕೆ ಏಣಿ ಹಚ್ಚಿದ್ದಾರೆ!! ಹಳ್ಳಿಗಳಲ್ಲಿ ಸದ್ಗುಣಿಗಳಾಗಿ ಮಾತಾ-ಪಿತೃಗಳನ್ನು ಪಾಲಿಸುತ್ತಾ ದಿನಗಳೆಯುತ್ತಿರುವ ಪಾಪದ ಗಂಡುಕೂಸುಗಳನ್ನು ಕೇಳುವವರೇ ಇಲ್ಲ! ಮದುವೆಯ ವಯಸ್ಸು ಮೀರಿದಮೇಲೆ ಅದು ಬೇಕೆನಿಸುವುದೇ ಇಲ್ಲ ಎಂಬುದು ಕೆಲವರ ಅಭಿಪ್ರಾಯ. ಜೀವಿತದಲ್ಲಿ ಅದೂ ವೃದ್ಧಾಪ್ಯದಲ್ಲಿ ಜೀವನದ ಕಷ್ಟ-ಸುಖಗಳನ್ನು ಹಂಚಿಕೊಳ್ಳಲಿಕ್ಕೆ ಪಾಲುದಾರರ ಅವಶ್ಯಕತೆ ಕಂಡುಬರುತ್ತದೆ; ಯಾಕೆಂದರೆ ಎಲ್ಲರೂ ಸನ್ಯಾಸಿಗಳೇನಲ್ಲ!! ಆ ಬಂಧ ಎಳವೆಯಲ್ಲೇ ಮದುವೆಯ ಹರೆಯದಲ್ಲೇ ಗಟ್ಟಿಯಾಗಿದ್ದರೆ ಅದು ತರುವ ಸಂತಸವೇ ಬೇರೇ ಇರುತ್ತದೆ, ಅದಿಲ್ಲಾ ಅನಿವಾರ್ಯವಾಗಿ ಆತುಕೊಳ್ಳುವ ರೀತಿಯಲ್ಲಿ ಮುಪ್ಪಿನಲ್ಲೋ ಮಧ್ಯವಯದಲ್ಲೋ ’ ಅಂತೂ ಮದುವೆಯ ಶಾಸ್ತ್ರ ಆಯಿತಪ್ಪ’ ಎಂಬ ಅನಿಸಿಕೆಯಲ್ಲಿ ಮಾಡಿಕೊಂಡವರಿಗೆ ಅದು ಅಷ್ಟಕ್ಕಷ್ಟೇ!

ಅಂದಹಾಗೇ ಕಾನುಗೋಡು ಚನ್ನಕೇಶವನಿಗೆ ಪಾಳಿಯಲ್ಲಿ ಪೂಜೆಮಾಡಲು ಇವತ್ತು ಹವ್ಯಕ ಹುಡುಗರಿಲ್ಲ!! ಪೂಜೆ ಯಾರಿಗೆ ಬೇಕಾಗಿದೆ ಹೇಳಿ ? ಮನೆಗಳಲ್ಲಿ ದೀಪಹಚ್ಚಬೇಕಾದ ಹೆಣ್ಣುಗಳೇ ಮರೆಯಾಗುತ್ತಿರುವಾಗ ಮಿಕ್ಕುಳಿದದ್ದು ಆಮೇಲೆ ಅಲ್ಲವೇ? ಸದ್ಯಕ್ಕೆ ಚನ್ನಕೇಶವನ ಪೂಜೆಗೆ ಸಂಬಳದಮೇಲೆ ಹವ್ಯಕ ಭಟ್ಟರೊಬ್ಬರನ್ನು ನೇಮಿಸಿದ್ದಾರೆ-ಚನ್ನಕೇಶವ ಉಪವಾಸ ಬೀಳಲಿಲ್ಲ!! ಅಲ್ಲೀಗ ದಾರಿಯ ಇಕ್ಕೆಲಗಳಿರಲಿ ದೇವಸ್ಥಾನದ ಸುತ್ತಲೂ ಇರುವ ಕಾಡುಗಳೆಲ್ಲಾ ನಾಶವಾಗಿ ದೇವಸ್ಥಾನ ಊರೊಳಗೆ ಹೊಕ್ಕಹಾಗಿದೆ. ಕಾಡು ನಾಡಾಗಿದೆ, ನಾಡಿನ ಜನತೆಗೆ ದೇವರು ಬೇಡವಾಗಿದ್ದಾನೆ!! ಅಲ್ಲಿನ ಮೂಲದವರೆಲ್ಲಾ ಅದೂ ಇದೂ ಓದಿಕೊಂಡು ನಗರಗಳತ್ತ ಬಿಜಯಂಗೈದಿದ್ದಾರೆ- ಅರಸಿಯರನ್ನು ಅರಸಬೇಕಲ್ಲಾ-ಹೀಗಾಗಿ!!

ಹವ್ಯಕ ಮುಖಂಡರನೇಕರು ಇದೊಂದು ನಮ್ಮ ಸಮಾಜದ ಪಿಡುಗು ಎಂದು ಮೇಜು ಗುದ್ದುವುದು ಬಿಟ್ಟರೆ ಕ್ರಿಯಾತ್ಮಕವಾಗಿ " ಎಮ್ಮನೆ ತಂಗ್ಯೊಂದು ಎಂ.ಬಿ.ಏ ಮಾಡಿದ್ದು ಮಾರಾಯ ಎಲ್ಲಾದ್ರೂ ಹುಡುಗ್ರಿದ್ವನ ? " ಎಂಬ ಮಾತನ್ನೇ ಆಡುತ್ತಾರೆ. ಬೆಕ್ಕಿಗೆ ಗಂಟೆಕಟ್ಟುವ ಕೆಲಸ ಯಾವ ಇಲಿಗೂ ಬೇಡದ್ದು ಅಲ್ಲವೇ? ತಿರುಗಿದ ಕಾಲಚಕ್ರದ ಹಲ್ಲಿಗೆ ಸಿಕ್ಕ ಹವ್ಯಕ ಸಮಾಜದ ಗಂಡುಕೂಸುಗಳನ್ನು ನೆನೆಯುತ್ತಾ ಒಮ್ಮೆ ನೆನೆಪಿಗೆ ಬಂದಿದ್ದು ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಹೆಣ್ಣುಮಕ್ಕಳನ್ನಾದರೂ ಹವ್ಯಕ ಮುಖಂಡರು ಕರೆತಂದು ನಮ್ಮ ಹುಡುಗರ ಆಶಯವನ್ನು ನೆರವೇರಿಸಬಹುದಿತ್ತು. ಆದರೆ ಯಾರದೋ ಮನೆಯ ಜವಾಬ್ದಾರಿ ಯಾರಿಗೆ ಬೇಕು ಎಂದು ತಂತಮ್ಮಲ್ಲೇ ಒಳತೋಟಿ ಹೊಂದಿರುವ ಹವ್ಯಕ ಬುದ್ಧಿವಂತರಿಗೆ ಹೆಚ್ಚಿಗೆ ಏನನ್ನು ಹೇಳಲು ಸಾಧ್ಯ ಹೇಳಿ ?

ಹುಟ್ಟಿದ ಪ್ರತೀ ಜೀವಿಗೂ ಜಗದಲ್ಲಿ ಅದರ ನ್ಯಾಚುರಲ್ ಹ್ಯಾಬಿಟಾಟ್ ಅಂತ ಇರುತ್ತದೆ ಅಲ್ಲವೇ? ಅದು ಜನಾಂಗಗಳಲ್ಲಿ, ಪ್ರಭೇದಗಳಲ್ಲಿ ಪ್ರವಹಿಸುವ ವೈಖರಿಯೇ ಬೇರೇ ಬೇರೆ. ಹವ್ಯಕ ಬ್ರಾಹ್ಮಣ ಹುಡುಗಿಯೊಬ್ಬಳು ಕುರಿಯ ತಲೆಗೆ ಮಸಾಲೆ ಅರೆಯುವ ಕೆಲಸವನ್ನಾಗಲೀ ಅಥವಾ ಮಾಂಸಾಹಾರೀ ವಂಶದಿಂದ ಬಂದ ಕುವರಿಯೊಬ್ಬಳು ದಿನನಿತ್ಯ ಮುಟ್ಟು-ಮಡಿ, ಹೋಮ-ಹವನ, ಉಪವಾಸ-ವ್ರತ ಇತ್ಯಾದಿಗಳಲ್ಲಿ ತೊಡಗಿಕೊಳ್ಳುವುದಾಗಲೀ ಅವರವರ ನ್ಯಾಚುರಲ್ ಹ್ಯಾಬಿಟಾಟಿಗೆ ವಿರುದ್ಧವಾಗಿರುತ್ತದೆ! ಪ್ರಾಯದ ದೇಹ ಕಸುವಿನಲ್ಲಿ ಹೆಚ್ಚೆಂದರೆ ವರ್ಷಾರುತಿಂಗಳು ಹೊಂದಿಕೊಂಡರೂ ಕ್ರಮೇಣ ಆ ಮೂಲ ಜೀನ್ಸ್ ಆ ಮೂಲ ಕ್ರೋಮೋಸೋಮ್ ತನ್ನ ಮೂಲ ಸಂಸ್ಕಾರವನ್ನೇ ಅನುಸರಿಸುತ್ತದೆ! ಪ್ರವಾಹದ ವಿರುದ್ಧ ಈಜುವವರ ಗತಿ ಗೊತ್ತಿದೆಯಲ್ಲಾ ಹಾಗೇ ಇಲ್ಲೂ ಮನದ ಪ್ರವಾಹದ ವಿರುದ್ಧ ಈಜಲಾಗದ ಯಾವುದೋ ಘಳಿಗೆಯಲ್ಲಿ ಮದುವೆ ವಿಚ್ಛೇದನದಲ್ಲಿ ಪರ್ಯವಸಾನಗೊಳ್ಳುತ್ತದೆ! ಹೀಗೆಲ್ಲಾ ರಾಮಾಯಣವಾಗುವ ಬದಲು ಹವ್ಯಕರು ಹವ್ಯಕರನ್ನೇ ವರಿಸಲಿ! ಹತ್ತು ಹೆಚ್ಚೋ ಕಮ್ಮಿಯೋ ಸಮಾಜಿಕ ಹೊಂದಾಣಿಕೆಯಲ್ಲಿ ವ್ಯತ್ಯಾಸವಾಗುವುದಿಲ್ಲ! ಹವ್ಯಕ ಗಂಡುಗಳು ಹಣದಾಹಿಗಳಲ್ಲ, ಕೊಲೆಗಡುಕರಲ್ಲ! ಹವ್ಯಕ ಹುಡುಗರು ತುಂಬಾ ಸುಸಂಸ್ಕೃತರೂ ಗುಣಾಢ್ಯರೂ ಆಗಿದ್ದಾರೆ. ಆಸರೆಗಾಗಿ ಅರಸಿ ಬರುವ ’ಅರಸಿ’ಯನ್ನು ಈಗಿನವರಂತೂ ’ಅರಸಿ’ಗೆ ತಕ್ಕ ಸೌಲಭ್ಯಗಳಿಂದ ಪೋಷಿಸುತ್ತಾರೆ! ಈ ಸದಾಶಯವನ್ನು ಸಾರುತ್ತಾ ಹವ್ಯಕ ಕನ್ಯಾಪಿತೃಗಳಲ್ಲಿ ಈ ಬಿನ್ನಹವನ್ನು ಮುಂದಿಡುತ್ತಾ ಮತ್ತೊಮ್ಮೆ ನಿಮಗೆ ಅದೇ ಹಾಡನ್ನು ಕೇಳಿಸುತ್ತಿದ್ದೇನೆ, ನಮಸ್ಕಾರ.




Wednesday, August 17, 2011

ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ !!


ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ!!
[ಮುಂದುವರಿದ ಭಾಗ]

ಹಾಗೆ ಪೂಜಾಕೈಂಕರ್ಯಕ್ಕೆ ಎಲ್ಲವೂ ಸಿದ್ಧವಾದಮೇಲೆ ದೇವರಿಗೆ ಅನ್ನವನ್ನು ಬೇಯುವುದಕ್ಕೆ ಇಟ್ಟು ಅರ್ಚನೆ ಆರಂಭಗೊಳಿಸಲು ಕವಾಟು ತೆಗೆಯುತ್ತಿದ್ದರು. ಕವಾಟುತೆಗೆದು ಹಿಂದಿನದಿನದ ಹೂವು-ಹಣ್ಣು ಇತ್ಯಾದಿ ಏನಾದರೂ ಬಿದ್ದಿದ್ದರೆ ಅದನ್ನೆಲ್ಲಾ ಹೆಕ್ಕಿ ಸ್ವಚ್ಛಗೊಳಿಸಿ, ಮನೆಯಿಂದ ತಂದ ಗೋಮಯ ಚಿಕ್ಕಭಾಗವನ್ನು ನೀರಿನಲ್ಲಿ ಅದ್ದಿ ಗರ್ಭಗುಡಿಯ ಹೊರಭಾಗಗಳಿಗೆ ಪ್ರೋಕ್ಷಿಸಿ ಶುದ್ಧೀಕರಣ ಮುಗಿಸುತ್ತಿದ್ದರು. ನಿಧಾನವಾಗಿ ಲೋಕದ ಸಮಸ್ತರಿಗೂ ತಂತಮ್ಮ ಕುಟುಂಬ-ಬಂಧುವರ್ಗ, ಬಳಗ ಇವರೆಲ್ಲರಿಗೂ ಧರ್ಮ-ಅರ್ಥ-ಕಾಮ-ಮೋಕ್ಷ ಚತುರ್ವಿಧ ಪುರುಷಾರ್ಥಗಳು ಸಿದ್ಧಿಸಲಿ ಮತ್ತು ಆರೋಗ್ಯನಿರ್ವಿಘ್ನತೈಶ್ವರ್ಯ ಜ್ಞಾನ ಪ್ರಾಪ್ತಿ ಎಂಬೀ ಬೇಡಿಕೆಗಳನ್ನೊಳಗೊಂಡ ಸಂಕಲ್ಪ ಮಾಡಿ ದೇವರನ್ನು ಪೂಜೆಗೆ ಅಣಿಗೊಳಿಸುತ್ತಿದ್ದರು.

ಚನ್ನಕೇಶವನ ಗರ್ಭಗುಡಿಯ ಒಳಭಾಗದಲ್ಲಿ ಹತ್ತಿಸಿದ ದೀಪ-ಧೂಪಗಳು ಅದಾಗಲೇ ತಮ್ಮ ಅಡರನ್ನು ಪಸರಿಸುತ್ತಿದ್ದವು. ದೀಪದ ಮಂದ ಬೆಳಕಿನಲ್ಲಿ ಶಿಶುವೊಂದು ತೊಟ್ಟಿಲಲ್ಲಿ ಎದ್ದಿತೋ ಎಂಬಂತೇ ಹಸನ್ಮುಖೀ ಕೇಶವ ಅರ್ಘ್ಯ-ಪಾದ್ಯಾದಿ ಪಂಚೋಪಚಾರಗಳನ್ನು ಸ್ವೀಕರಿಸಿ ಅಭಿಷೇಕಕ್ಕೆ ತಯಾರಾಗುತ್ತಿದ್ದ. ಬಾವಿಯಿಂದ ಕೊಡಗಳೆರಡರಲ್ಲಿ ನೀರನ್ನು ತಂದು ನಿಧಾನವಾಗಿ ಪುರುಷಸೂಕ್ತದಿಂದ ಅಭಿಷೇಕ ಮುಂದುವರಿಯುತ್ತಿತ್ತು. ದೇವರ ವಿಗ್ರಹಕ್ಕೆ ಕೊಡಪಾನ ಅಥವಾ ಯಾವುದೇ ಪರಿಕರಗಳು ತಾಗಿ ಘಾಸಿಯಾಗಬಾರದೆಂಬ ಕಾಳಜಿಯಿಂದ ಮುಂಜಿಯಾದರೂ ಸುಮಾರು ೧೬ ವರ್ಷದೊಳಗಿನ ಮಕ್ಕಳಿಗೆ ಒಳಗೆ ಪ್ರವೇಶ ಇರುತ್ತಿರಲಿಲ್ಲ ಎಂಬುದು ಗಮನಾರ್ಹ.

ಶ್ರೀಸೂಕ್ತ, ಪುರುಷಸೂಕ್ತ, ನಾರಾಯಣ ಸೂಕ್ತ ಮೊದಲಾದ ಹಲವಾರು ಮಂತ್ರಗಳಿಂದ ಅಭಿಷೇಚಿಸಿಕೊಂಡ ಕೇಶವ ಈಗ ನಿಧಾನಕ್ಕೆ ಶುಚಿಯಾದ ಬಟ್ಟೆಯಿಂದ ಮೈ ಒರೆಸಿಕೊಳ್ಳಲ್ಪಟ್ಟು ಮಂಗಲದ್ರವ್ಯಗಳನ್ನು ಪೂಸಿಸಿಕೊಳ್ಳುತ್ತಿದ್ದಾನೆ. ಶ್ರೀಗಂಧ, ರಕ್ತಚಂದನ, ಕುಂಕುಮ, ಅರಿಷಿನ, ಅಕ್ಷತೆಯೇ ಮೊದಲಾದ ಮಂಗಲದ್ರವ್ಯಗಳು ಸಮರ್ಪಣೆಗೊಂಡ ನಂತರ ಅಡಕೆ ಶಿಂಗಾರದಿಂದ ಸಣ್ಣ ಅಲಂಕಾರಮಾಡಿ ಒಂದು ಚಿಕ್ಕ ಆರತಿಮಾಡುತ್ತಿದರು. ಆಗೆಲ್ಲಾ ಬರುವ ಸುತ್ತಲ ದೂರದ ಹಳ್ಳಿಗಳ ಭಕ್ತಾದಿಗಳು ಬಂದು ಸೇರುತ್ತಿದ್ದರು. ಬರುವವರು ಖಾಲೀ ಕೈಲಿ ಬರುತ್ತಿರಲಿಲ್ಲ. ಕೆಲವರು ಹಾಲು, ಕೆಲವರು ಅಕ್ಕಿ, ಬಾಳೇಹಣ್ಣು, ತೆಂಗಿನಕಾಯಿ, ತಾವ್ತಾವು ಬೆಳೆದ ಹಿತ್ಲಕಾಯಿ,ಕಬ್ಬು ಹೀಗೇ ಒಂದೇ ಎರಡೇ ತರಾವರಿ ಕೊಡುಗೆಗಳನ್ನು ತಮ್ಮ ಭಕ್ತಿಗನುಗುಣವಾಗಿ ಅವರೆಲ್ಲಾ ತರುತ್ತಿದ್ದರು.

ಕೇಶವನ ವೈಶಿಷ್ಟ್ಯ ಎಂದರೆ ಆತ ಮಾತನಡುವ ದೇವರೆಂದೇ ಖ್ಯಾತಿ !! ಅಂದರೆ ಮಾತನಾಡುವುದಲ್ಲ ಬದಲಾಗಿ ಭಕ್ತರು ಕೇಳಿದ ಪ್ರಶ್ನೆಗಳಿಗೆ ಆತ ಉತ್ತರಿಸುತ್ತಿದ್ದ. ಆತನ ಮುಂದೆ ಎರಡು ಕಾಯಿಗಳನ್ನೊಡೆದು ಪ್ರಶ್ನೆ ಕೇಳುವಾತ ತಂದ ಶಿಂಗಾರವನ್ನು ಅಮೃತ ಕಲಶ ಹಿಡಿದ ಬಲಗೈಮೇಲೆ ಅರ್ಧ ಮತ್ತು ಎಡಗೈ ಸಂದಿನಲ್ಲಿ ಅರ್ಧ ಇಡುತ್ತಿದ್ದರು.

" ಸ್ವಾಮೀ ಚನ್ನಕೇಶವ ದೇವಪ್ಪ ಎಂಬ ಭಕ್ತ ತನ್ನ ಮಗಳಿಗೆ ಗಂಡೊಂದನ್ನು ನೋಡಿದ್ದಾಗಿ ಆ ಸಂಬಂಧ ಉತ್ತಮ ಅದನ್ನು ಮಾಡಿಕೊಂಡರೆ ಮುಂದೆ ಜೀವನ ಒಳ್ಳೇದಾಗಿ ನಡೀತದೆ ಅಂತ ತಮಗನಿಸಿದರೆ ಮಹಾಸನ್ನಿಧಾನದ ಬಲಭಾಗದಿಂದ ಪ್ರಸಾದವಾಗಬೇಕು ಅದಿಲ್ಲಾ ಆ ಸಂಬಂಧ ಬೇಡಾ ಎಂಬುದು ತಮ್ಮ ಅಣತಿಯಾದರೆ ಎಡದಿಂದ ಅಪ್ಪಣೆಕೊಡಿಸಬೇಕು ಎಂದು ವಿನೀತನಾಗಿ ತಮ್ಮ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡ್ತಾನೆ ಗುರುದೇವರು ತಮ್ಮ ಚಿತ್ತಕ್ಕಿದ್ದಿದ್ದನ್ನು ಕರುಣಿಸುವಂತಾಗಲಿ "

ಹೀಗೇ ಹಲವಾರು ಕಾರಣಗಳಿಗೆ/ಸಮಸ್ಯೆಗಳಿಗೆ ಪ್ರಸಾದ ಕೇಳುತ್ತಿದ್ದರು. ಕೆಲವೊಮ್ಮೆ ಕೇಳುತ್ತಿರುವಾಗಲೇ ಬಸಕ್ಕನೆ ಪೂರ್ತಿಯಾಗಿ ಬಲದಿಂದಲೋ ಅಥವಾ ಎಡದಿಂದಲೋ ಬೀಳುವ ಪ್ರಸಾದ ಇನ್ನು ಕೆಲವೊಮ್ಮೆ ಗಂಟೆಗಟ್ಟಲೆ ಕಾಯಿಸುವುದೂ ಇತ್ತು. ಕೇಳಿದ ಪ್ರಶ್ನೆಯಲ್ಲಿ ದ್ವಂದ್ವ ಇದ್ದರೆ ಅದನ್ನು ಎರಡು ಪ್ರತ್ಯೇಕ ಪ್ರಶ್ನೆ ಮಾಡಬೇಕಾಗಿ ಬರುತ್ತಿತ್ತು. ಕೆಲವೊಮ್ಮೆಯಂತೂ ಭಾರವಾದ ಶಿಂಗಾರದ ಅತೀ ಚಿಕ್ಕ ಎಳೆಯೊಂದು ಬಿಟ್ಟು ಮಿಕ್ಕೆಲ್ಲಾ ಭಾಗ ಕೆಳಗೆ ನೇತಾಡುವುದು ಕಾಣುತಿತ್ತು ಆದರೂ ಬೀಳುತ್ತಿರಲಿಲ್ಲ !! ನಾನೇ ಸ್ವತಃ ನೋಡಿದಂತೇ ಸಾವಿರಾರು ಭಕ್ತರು ಪ್ರಸಾದದಿಂದ ಪರಿಹಾರ ಕಾಣುತ್ತಿದ್ದರು. " ಬೆಂಗಳೂರಿನಲ್ಲಿ ಉದ್ಯೋಗ ಮಾಡಬೇಕೆನ್ನುವ ಆಸೆ, ಹೋದರೆ ಅನುಕೂಲವಾಗುವುದೋ ಅಥವಾ ಇಲ್ಲವೋ " ಎಂಬುದಕ್ಕೂ ಕೂಡ ಭಗವಂತ ಉತ್ತರಿಸುತ್ತಿದ್ದ !!

ಇನ್ನೊಂದು ವಿಶೇಷ ಎಂದರೆ ಭಗವಂತನ ಸನ್ನಿಧಿಯಲ್ಲಿ ಒಂದಿಬ್ಬರಿಗೆ ಮೈಮೇಲೆ ದರ್ಶನಕೂಡ ಬರುತ್ತಿತ್ತು. ಅದು ಹಾಗೆಲ್ಲಾ ದಿನವಿಡೀ ಬರುವುದಲ್ಲ, ಯಾರಿಗಾದರೂ ಮೌಖಿಕ ಉತ್ತರಗಳು ಬೇಕಾದಾಗ ದರ್ಶನಪಾತ್ರಿಗಳನ್ನು ಪೂಜಾರಿಗಳು ಕರೆತರುತ್ತಿದ್ದರು. ದೇವರಲ್ಲಿ ಪ್ರಾರ್ಥಿಸಿ ಕಾಯೊಡೆದು, ಶಿಂಗಾರವನ್ನು ದೇವರಿಗೆ ಏರಿಸಿ ತೆಗೆದು ಅದನ್ನು ಪಾತ್ರಿಯ ಕೈಗೆ ಕೊಟ್ಟು ತೀರ್ಥ ಹೊಡೆದಾಗ ಪಾತ್ರಿ ನಿಂತಲ್ಲೇ ಆವೇಶಭರಿತನಾಗುತ್ತಿದ್ದ!! ಎದುರಿಗಿನ ಭಕ್ತ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದ. ೩೦-೬೦ನಿಮಿಷಗಳ ವರೆಗೆ ನಡೆಯುವ ದರ್ಶನ ಯಾವಾಗ ಪ್ರಮುಖಪ್ರಶ್ನೆಗಳು ನಿಂತವೋ ಆಗ ಇಳಿದುಹೋಗುವಂತೇ ಮತ್ತೆ ಪೂಜೆಯವರು ಪಾತ್ರಿಗೆ ತೀರ್ಥಹೊಡೆಯುತ್ತಿದ್ದರು.

ಕೊಂಕಣ ತೋಟವೆಂಬ ಒಂದು ಸುಂದರ ತಾಣಕೂಡ ಅಲ್ಲಿಗೆ ಹತ್ತಿರವಿತ್ತು. ಅದು ಕೇಶವನ ಗಣಗಳ ಜಾಗವಂತೆ!! ಭೂತ-ಪಿಶಾಚಿಗಳಿಂದ ಬಳಲುವವರು ಅಲ್ಲಿಗೆ ಪೂಜೆ ಹರಕೆ ಹೊರುತ್ತಿದ್ದರು. ಎತ್ತರದ ಮರದ ಬೀಳಲುಗಳು ಬೆತ್ತದ ಬಲೆಗಳಿಂದ ಆವೃತವಾದ ಅ ಜಾಗದಲ್ಲಿ ನಾಗರಕಲ್ಲುಗಳೂ ಇದ್ದವು. ನಾಗ, ಚೌಡಿ, ಭೂತ ಇನ್ನೂ ಹಲವು ಏನೇನೋ ಎಲ್ಲವನ್ನೂ ಸೇರಿಸಿ ಒಂದೇ ಜಾಗದಲ್ಲಿ ಪೂಜೆ ನಡೆಯುತ್ತಿತ್ತು.

" ಯಾರ್ದಾದ್ರೂ ಕೊಂಕಣ ತೋಟದ ಚರು ಅದ್ಯನ್ರೋ ? ಇದ್ರೆ ಬೇಗ್ ಹೇಳಿ ತಡ ಆಗ್ತದೆ " ಅಂತ ಅರ್ಚಕರು ಕೇಳಿದಾಗ ನಿಧಾನವಾಗಿ ಅಕ್ಕಿತಂದವರಲ್ಲಿ ಕೆಲವರು

" ಒಡ್ಯಾ ನಮ್ದೊಂದ್ ಪೂಜದೆ"

" ನಂದೊಂದ್ ಅದೆ "

ಎನ್ನುತ್ತಾ ಹೆಸರು ಹೇಳುತ್ತಿದ್ದರು. ಅವರವರ ಹೆಸರಿನಲ್ಲಿ ಪಡಸಾಲೆಯಲ್ಲಿ ಪ್ರತ್ಯೇಕ ಅನ್ನದ ಚರುಗಳನ್ನು ಬೇಯಿಸಲು ಇಡಲಾಗುತ್ತಿತ್ತು.


ಇಷ್ಟೆಲ್ಲಾ ಆಗುವ ಹೊತ್ತಿಗೆ ಕನಿಷ್ಠ ಮಧ್ಯಾಹ್ನ ೨ಘಂಟೆ. ಈಗ ಚನ್ನಕೇಶವನಿಗೆ ಪೂರ್ಣಾಲಂಕಾರ : ಭಕ್ತರು ಹೊತ್ತುತಂದ ಜಾಜಿ-ಜೂಜಿ, ಮರುಗ, ಸೇವಂತಿಗೆ, ಡೇರೆ, ದಾಸವಾಳ, ಮಲ್ಲಿಗೆ, ಇರುವಂತಿಗೆ, ಸಂಪಿಗೆ ಹೀಗೇ ವಿಧವಿಧದ ಹೂಗಳಿಂದ, ಅಡಕೆ ಶಿಂಗಾರದಿಂದ, ಬಿಲ್ವಪತ್ರೆ, ತುಳಸೀ ಕುಡಿಗಳು ಮೊದಲಾದವುಗಳಿಂದ ಚಿನ್ನ ಬೆಳ್ಳಿಯ ಆಭರಣ ಹಾಕಿದ್ದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಶೋಭಿಸುತ್ತಿದ್ದ ಭಗವಂತ. ನಿತ್ಯವೂ ಅನ್ನದ ಜೊತೆ ಒಂದು ಪರಮಾನ್ನ ನೈವೇದ್ಯ ಭಗವಂತನಿಗೆ ! ನೈವೇದ್ಯಗಳು ಬಂದು ಗರ್ಭಗುಡಿಯಲ್ಲಿ ಕೂತಮೇಲೆ ಮಂಗಳಾರತಿ. ಏಕಾರತಿ, ಸಸ್ಯಜನ್ಯ ನೈಜ ಹಾಲ್ಮಡ್ಡಿಯ ಧೂಪವನ್ನು ಕೆಂಡದ ಆರತಿಗೆ ಹಾಕುತ್ತಿದ್ದರು. ಇಡೀ ವಾತಾವರಣ ಪರಿಮಳಮಯವಾಗುತ್ತಿತ್ತು. ಏಕಾರತಿಯಾಗಿ ನೈವೇದ್ಯ ಅರ್ಪಣೆಯಾಗುವಾಗ ಮಧ್ಯೆ ಒಮ್ಮೆ ಬಾಗಿಲು ಹಾಕುವ ವೈವಾಟಿತ್ತು: ದೇವರು ಉಣ್ಣಬೇಕಲ್ಲ? ಅರ್ಚಕರು ಹೊರವಲಯ ಒಂದು ಸುತ್ತು ಮಂತ್ರ ಹೇಳುತ್ತಾ ಸುತ್ತಿಬಂದು ಮತ್ತೆ ಬಾಗಿಲು ತೆರೆಯುತ್ತಿದ್ದರು. ಆಗ ಇಟ್ಟ ನೈವೇದ್ಯ ವಿಸರ್ಜಿಸಿ ಎದುರಿನ ಸ್ಥಳವನ್ನು ತೀರ್ಥದಿಂದ ಶುಚಿಗೊಳಿಸಿ ನಂತರ ಫಲ-ತಾಂಬೂಲ ಹಣ್ಣು ಹಂಪಲು ನೈವೇದ್ಯ. ಇದೆಲ್ಲಾ ಮುಗಿದಮೇಲೆ ಮಹಾಮಂಗಲಾರತಿ. ನಾಕಾರು ಆರತಿಗಳು ನಡೆಯುವಾಗ ಭಕ್ತರೇ ಹರಕೆಮಾಡಿ ತಂದು ಹಾಕಿದ್ದ ಸಾವಿರಾರು ಗಂಟೆಗಳನ್ನು ಹೊರಗೆ ಆರತಿಗೆ ನಿಂತ ಜನ ಬಡಿಯುತ್ತಿದ್ದರು. ಶಂಖ, ಜಾಗಟೆ ಎಲ್ಲಾ ಸೇರಿ ಇಡೀ ವಾತಾವರಣ ಓಕಾರಮಯವಾಗಿ ೧೫ ನಿಮಿಷ ನಮಗೆ ಭೂಮಿ ಮರೆತುಹೋಗುತ್ತಿತ್ತು.

ಆರತಿ ಮುಗಿದಮೇಲೆ ಹೊರಗೆ ಬಾಗಿಲ ಜಟ್ಗಗಳಿಗೆ ಪೂಜೆ ಆರತಿ ನಡೆಯುತ್ತಿತ್ತು. ಆರತಿ ಮುಗಿಸಿದ ನಂತರ ಅದಾಗಲೇ ಚಿಕ್ಕ ಅಷ್ಟಾಂಗಸೇವೆಯೂ ನಡೆಯುತ್ತಿತ್ತು. ತಾಳ, ಶಂಖ ಮೊದಲಾದವುಗಳನ್ನು ವಿಶಿಷ್ಟವಾಗಿ ಬಡಿದು, ನರ್ತಿಸಿ ಕೇಶವನನ್ನು ಪ್ರಸನ್ನೀಕರಿಸಿದ ಅರ್ಚಕರು ಎಲ್ಲರಪರವಾಗಿ ಅಂದಿನ ಪೂಜಾ ಸಮರ್ಪಣೆಗೈದು ಗೊತ್ತಿದ್ದೋ ಗೊತ್ತಿರದೆಯೋ ನಡೆದಿರಬಹುದದ ಅಪರಾಧಗಳಿಗೆ ಕ್ಷಮೆಯಾಚಿಸಿ ಪುಷ್ಪಾಂಜಲಿ ಅರ್ಪಿಸುತ್ತಿದ್ದರು. ಪ್ರಸಾದದ ಹೂಗಳನ್ನು ತೆಗೆದು ದೊಡ್ಡ ಹರಿವಾಣದಲ್ಲಿ ಇರಿಸಿಕೊಂಡು ತೀರ್ಥದ ಗಿಂಡಿ ಹಿಡಿದು ಹೊರಗೆ ಬರುತ್ತಿದ್ದರು. ಕಾದಿರುವ ಎಲ್ಲರಿಗೂ ತೀರ್ಥ-ಪ್ರಸಾದ ಕಾಯಿಕಡಿ-ಹಣ್ಣು-ಹಂಪಲು ಕೊಟ್ಟಮೇಲೆ ಕೊಂಕಣ ತೋಟದ ಪೂಜೆಗೆ ಸಂಬಂಧಪಟ್ಟ ಜನರೊಟ್ಟಿಗೆ ಅರ್ಚಕರು ಮಡಿಯಲ್ಲೇ ಚರುವನ್ನು ಹೊತ್ತು ಪೂಜಾಸಾಮಗ್ರಿಗಳನ್ನೂ ಇಟ್ಟುಕೊಂಡು ತೆರಳುತ್ತಿದ್ದರು.

ಕೊಂಕಣತೋಟದಲ್ಲಿ ಬಿದ್ದಿರುವ ಕಸಪಸಾಗಳನ್ನೆಲ್ಲಾ ತೆಗೆದುಹಾಕಿ ನೀರು ಎರೆದು ಅಭಿಷೇಕ ಮತ್ತೆ ಗಂಧ-ಪುಷ್ಪಾದಿಗಳಿಂದ ಅರ್ಚನೆ ನಡೆಯುತ್ತಿತ್ತು. ಆರತಿಯಾದಮೇಲೆ ತಂದಿರುವ ಅನ್ನವನ್ನು ನೈವೇದ್ಯಮಾಡಿ ಅಲ್ಲೇ ಬಾಳೆಲೆಯಲ್ಲಿ ಬಲಿಹಾಕಲಾಗುತ್ತಿತ್ತು.

" ಓಹೊಹೋ ಪುನ್ನೂರು ನಾಗಮ್ಮ, ಚೌಡಮ್ಮಾ ನಾಗದೇವತೆ,ಕೀಳು ಕೊಂಕಣತೋಟದ ದೇವತಾ ಗಣಗಳೇ ಭಕ್ತನಾದ ದೇವಪ್ಪ ಕೊಟ್ಟ ಪೂಜೆಯಿಂದ ಸಂಪ್ರೀತಗೊಂಡು ಆತನ ಕುಟುಂಬಕ್ಕೆ ಹಲವಾರು ದಿನಗಳಿಂದ ತೊಂದರೆ ಕೊಡುತ್ತಿರುವ ಗಾಳೀ ಉಪದ್ರವವನ್ನು ಬ್ಯಾಟ ಮೊಖವಾಗಿ ಬಂದೋಸ್ತು ಮಾಡಿಕೊಡಬೇಕು ಅಂತ ಪ್ರಾರ್ಥಿಸ್ತಾನೆ. ಸ್ವಾಮೀ ಚನ್ನಕೇಶವನ ಅಪ್ಪಣೆಯಂತೇ ನಿಮ್ಮೆದುರು ಮಂಡಿಯೂರಿ ನಿಮಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿಕೊಳ್ತಾ ಇದ್ದಾನೆ ಆತನ ಮನದಿಚ್ಛೆಯನ್ನು ಪೂರೈಸಿ ಆಗುತ್ತಿರುವ ತೊಂದರೆಗಳಿಂದ ಆತನನ್ನು ಬಂಧಮುಕ್ತಗೊಳಿಸಿ ಗಾಳೀ ಉಪದ್ರವವನ್ನು ಇನ್ಮೇಲೆ ತಮ್ಮ ಸುಪರ್ದಿಗೆ ತೆಗೆದುಕೊಂಡು ಇಲ್ಲೇ ನಿಗ್ರಹಿಸಬೇಕಾಗಿ ಪಾರ್ಥಿಸ್ತಾ ಇದ್ದಾನೆ, ಅನುಗ್ರಹಮಾಡಿ "

ಹಣ್ಣು-ಕಾಯಿ, ಚರು ಪೂಜೆ ಎಲ್ಲವನ್ನೂ ಸ್ವೀಕರಿಸಿದ ಆ ದೇವತೆಗಳು, ಭೂತಗಣಗಳು ಪ್ರಸನ್ನವಾಗಿ ತಲೆದೂಗುತ್ತಿದ್ದವೋ ಏನೋ ಅಂತೂ ಆ ದಿನದಿಂದಲೇ ಪೂಜಿಸಿದ ಭಕ್ತರ ತೊಂದರೆಗಳು ಮಾಯವಾಗುತ್ತಿದ್ದವು.


ಇದೆಲ್ಲಾ ಮುಗಿದು ಪ್ರಸಾದ ವಿತರಣೆಯಾದ ಮೇಲೆ ಅರ್ಚಕರು ದೇವಳದ ಪಡಸಾಲೆಗೆ ಬರುತ್ತಿದ್ದರು. ಆಗ ಜೊತೆಗಿರುವ ಸಹಾಯಕರು ಏನಾದರೂ ಹೀರೇಕಾಯಿ ಗೊಜ್ಜೋ ಸೂಜಮೆಣಸಿನ ಚಟ್ನಿಯೋ ಮಾಡಿರುತ್ತಿದ್ದರು. ಕೇಶವನ ಮುಂದೊಮ್ಮೆ ತೆರಳಿ ಕವಾಟು ಹಾಕಿಬಿಟ್ಟರೆ ಇನ್ನು ನಾಳೆಯೇ ಪೂಜೆ. ಅಲ್ಲೀವರೆಗೆ ಕೇಶವನಿಗೆ ವಿಶ್ರಾಂತಿ. ಚುರ್ರೆನ್ನುವ ಹೊಟ್ಟೆಗೆ ನೈವೇದ್ಯಮಾಡಿದ ಅನ್ನ-ಸಹಾಯಕರು ರುಬ್ಬಿಟ್ಟ ಗೊಜ್ಜು, ಸ್ವಲ್ಪ ಪರಮಾನ್ನ, ಜೊತೆಗೆ ತಂದುಕೊಂಡಿದ್ದರೆ ಮಜ್ಜಿಗೆ ಇವು ಇಳಿಯುತ್ತಿದ್ದವು. ಅರ್ಚಕರ ಕುಟುಂಬವುಳಿದು ಇನ್ನಿತರ ಜನ ಊಟಕ್ಕೆ ನಿಂತರೆ ಅವರಿಗೆ ಅರ್ಚಕರು ಮತ್ತು ಸಹಾಯಕರೇ ದೇವಳದ ಹೊರವಲಯದಲ್ಲಿ ಇರುವ ಚಿಕ್ಕ ಕೊಠಡಿಯೊಂದರಲ್ಲಿ ಊಟ ಬಡಿಸುತ್ತಿದ್ದರು.

ಪೂಜೆ ಮುಗಿಸಿ ಮರಳುವಾಗ ಭಕ್ತರು ಅರ್ಚಕರಿಗೆ ಏನಾದ್ರೂ ಚಿಲ್ಲರೆ ಕಾಣಿಕೆ ಕೊಟ್ಟು ಹೋಗುತ್ತಿದ್ದರು. ಹೀಗೇ ಇಡೀ ದಿನ ಪೂಜೆಗೇ ಮೀಸಲಾಗಿ ಮನೆಗೆ ಮರಳುವಾಗ ಮೂಡಿದ ದೇವರು ಮುಳುಗುವತ್ತ ದಾಪುಗಾಲು ಹಾಕಿ ತೆರಳಿಬಿಡುತ್ತಿದ್ದ. ಹೀಗೆ ನಡೆದಿತ್ತು ಹವ್ಯಕರ ಹಳ್ಳಿಗಳಲ್ಲಿ ದೈವಾರಾಧನೆ. ಇದೂ ಅಲ್ಲದೇ ಕೆಲವೊಮ್ಮೆ ವಿಶೇಷ ಹೋಮ-ಹವನ-ಪಾರಾಯಣ ಅಂತ ಹಲವು ಪ್ರಮುಖ ಘಟ್ಟಗಳೂ ಇರುತ್ತಿದ್ದವು.

ಬರಹ ಬಹಳ ಉದ್ದವಾಗಿರುವುದರಿಂದ ಮುಂದಿನ ಕಂತಿನಲ್ಲಿ ಮುಗಿಸುವುದಕ್ಕೆ ತಮ್ಮ ಅಪ್ಪಣೆ ಬಯಸುತ್ತೇನೆ, ನಮಸ್ಕಾರ.


Sunday, August 14, 2011

ಅವರು ಬಿಟ್ಟು ಹೋದರು; ನಾವು ಒಟ್ಟಾರೆ ಇದ್ದೇವೆ !!



ಅವರು ಬಿಟ್ಟು ಹೋದರು; ನಾವು ಒಟ್ಟಾರೆ ಇದ್ದೇವೆ !!


ಯಾವಾಗಲೂ ತೊಂದರೆಗಳ/ ಸಮಸ್ಯೆಗಳ ರಾಗವನ್ನೇ ಹಾಡಿದರೆ ಓದುವವರಿಗೂ ಬೇಜಾರಾಗ್ತದೆ ಅನ್ನೋದು ನಂಗೂ ಗೊತ್ತು. ಆದರೆ ಅಂಗೈ ಹುಣ್ಣಿಗೆ ಕನ್ನಡಿ ಹಿಡಕೊಂಡು ಬಾವುಟಹಾರಿಸಿ ಊದ್ದುದ್ದ ಮೇಜುಗುದ್ದುವ ಭಾಷಣಗಳನ್ನು ಸಿಡಿಸಿ ಸ್ವಲ್ಪ ಸಿಹಿ ಹಂಚಿಬಿಟ್ಟರೆ ಅದು ಸ್ವಾತಾಂತ್ರ್ಯೋತ್ಸವ -ನಮ್ಮ ಲೆಕ್ಕದಲ್ಲಿ. ಯಾರದರೂ ನನ್ನೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸ್ತಾ ಇದ್ದೇವೆ ಅಂದ್ರೆ ಅವರನ್ನೆಲ್ಲಾ ಕಲೆಹಾಕಿ ಕೂತು ಒಂದು ಬೈಠಕ್ಕು ಮಾಡಬೇಕು ಅನ್ನಿಸ್ತಾ ಇದೆ. " ಗಂಡೆದೆ ಇದ್ರೆ ಕಾಶ್ಮೀರ ಬಿಡಸ್ಕೊಳ್ರೀ ಆಮೇಲೆ ಬಾವುಟ ಇನ್ನೂ ಚೆನ್ನಾಗಿ ಹಾರ್ಸೋಣ " ಅಂತಿದ್ದೆ.

ಯಾರೋ ತಮಾಷೆಗೆ ಹೇಳ್ತಾರೆ "ಗಾಂಧೀಜಿ ಥರದವ್ರು ದಶಕಗಳ ಕಾಲ ಮಾಡಲಾಗದ ಕೆಲಸಾನ ನೆಹರೂ ಒಂದೇ ರಾತ್ರೀಲಿ ಮಾಡ್ಬುಟ್ರು ಕಣ್ರೀ" ಅಂತ. ಅದು ಪಕ್ವವೋ ಅಪಕ್ವವೋ ನಮಗೆ ಬೇಡ. ಆದರೆ ನೆಹರೂ ಮತ್ತು ಲೇಡೀ ಮೌಂಟ್ ಬ್ಯಾಟನ್ ಒಟ್ಟಿಗೇ ಬಹಳ ಸಮಯ ಕಳೀತಾ ಕಳೀತಾ ಅಂತೂ ಆ ದಿನ ಮಧ್ಯರಾತ್ರೀಲಿ ಆಕೆಯ ಯಜಮಾನನ ಮನವೋಲೈಸುವಲ್ಲಿ ನೆಹರೂ ಯಶಸ್ಸು ಪಡೆದಿರಬಹುದು ಅಲ್ಲಾ ಅನ್ನೋಕೂ ಆಗದ ಪುರಾವೆಗಳು ಸಿಕ್ಕಿವೆ ಬಿಡಿ ಅತ್ಲಗೆ. ಆದರೆ ಅಲ್ಲೀವರೆಗೆ ನೈತಿಕ ನಿಷ್ಠೆಯಿಂದ ಹೋರಾಡಿ ವೀರಮರಣವನ್ನಪ್ಪಿದ ಲಕ್ಷೋಪಲಕ್ಷ ಜನ ದೇಶಬಾಂಧವರ ನಿಸ್ವಾರ್ಥ ಸೇವೆಯನ್ನು ಅಲ್ಲಗಳೆಯಲೂ ಆಗುವುದಿಲ್ಲ. ನೆಹರೂ ಡೀಲು ಕುದುರಿಸುವುದರ ಹಿಂದೆ ಪ್ರಧಾನಿ ಗಾದಿ ಮೇಲೆ ನೆಹರೂಗೆ ಕಣ್ಣು ಬಿದ್ದಿತ್ತು. ತಂದೆ ಮೋತಿಲಾಲ ನೆಹರೂರಷ್ಟು ಸಾಚಾ ವ್ಯಕ್ತಿಯಾಗಿರಲಿಲ್ಲ ಜವಾಹರ.

ಮೋತೀಲಾಲರ ಬಗ್ಗೆ ಕಥೆಯೊಂದು ಹೀಗಿದೆ: ಬಡವನೊಬ್ಬ ಬಂದು ತನ್ನ ಮಗಳ ಮದುವೆಗೆ ೮೦೦ ರೂಪಾಯಿ ಹಣ ಬೇಕಾಗಬಹುದೆಂದು ಹೇಳಿ ಬೇಡುತ್ತಾನೆ; ಮೋತೀಲಾಲರು ತಕ್ಷಣ ಉತ್ತರಿಸೋದಿಲ್ಲ, ಆದರೆ ಆತನಿಗೆ ಸಾಯಂಕಾಲ ಬಾ ನೋಡೋಣ ಅಂತಾರೆ. ಅಂದಿನ ವ್ಯಾಪಾರ ವೈವಾಟಿನಲ್ಲಿ ಬಂದ ಹಣವನ್ನೆಲ್ಲಾ ಪ್ರತ್ಯೇಕ ಎತ್ತಿಡಲು ತನ್ನ ಗುಮಾಸ್ತನಿಗೆ ಹೇಳ್ತಾರೆ. ಬಡವನ ಹಾಗೂ ಮೋತಿಲಾಲರ ಸಂಭಾಷಣೆ ನಡೀವಾಗ ಆ ಗುಮಾಸ್ತ ಕೂಡ ಕೇಳಿಸಿಕೊಂಡಿದ್ದ. ಸಾಯಂಕಾಲ ಬಂದ ಹಣವನ್ನೆಲ್ಲಾ ತಂದು ಕೊಡುವಂತೇ ಮೋತೀಲಾಲರು ಕೇಳಿದಾಗ " ಸ್ವಾಮೀ ಅಲ್ಲಿ ಸಾವಿರದ ಇನ್ನೂರು ರೂಪಾಯಿಗಳಿವೆ ಎಲ್ಲವನ್ನೂ ಕೊಡಲೇ ಅಥವಾ ...." ಮೋತೀಲಾಲರು ಎಲ್ಲವನ್ನೂ ಕೊಡಲು ಹೇಳುತ್ತಾರೆ. ತಂದ ಆ ಹಣದ ಗಂಟನ್ನು ಬಡವನಿಗೆ ಕೊಟ್ಟುಬಿಡ್ತಾರೆ. ನಂತರ ಗುಮಾಸ್ತನಲ್ಲಿ ಹೇಳ್ತಾರೆ " ನಾನು ಬೆಳಿಗ್ಗೆ ಆತ ಬಂದಾಗಲೇ ಸಂಕಲ್ಪಿಸಿದ್ದೆ ಈ ದಿನದ ದುಡಿತವನ್ನು ಅದೆಷ್ಟೂ ಬರಲಿ ಆತನಿಗೆ ಕೊಟ್ಟುಬಿಡೋದು ಅಂತ, ಅದರಲ್ಲಿ ಮತ್ತೆ ಪೈಸೆ ಉಳಿಸಿಕೊಂಡ್ರೂ ದೇವರು ಕ್ಷಮಿಸಲಾರ." ಇದು ಮೋತೀಲಾಲರ ಮಟ್ಟಾದರೆ ಜವಾಹರ ಕೊಟ್ಟಿದ್ದಕ್ಕಿಂತ ಪಡೆದದ್ದೇ ಜಾಸ್ತಿ.

ನಮ್ಮಲ್ಲಿ ಕೆಲವು ಕುರುಡು ಸಂಪ್ರದಾಯಗಳು ನಡ್ಕೊಂಡು ಬಂದುಬಿಟ್ಟಿವೆ. ನೆಹರೂ ಅಂದ್ರೆ ಮಕ್ಕಳ ಚಾಚಾ, ಕೋಟಿಗೆ ಕೆಂಪು ಗುಲಾಬಿ ಹೂ ಸಿಕ್ಕಿಸಿದ ಒಂದು ಚಿತ್ರ ಕಣ್ಣಿಗೆ ಕಟ್ಟುತ್ತದೆ; ಮಕ್ಕಳು ಯಾರಿಗೆ ಇಷ್ಟವಲ್ಲ ಹೇಳಿ? ಆ ಕಾರಣಕ್ಕೆ ಮಕ್ಕಳಿಗೇ ಪಠ್ಯಕ್ರಮದಲ್ಲಿ ಅವರನ್ನು ಮಹಾನ್ ಸಾಧಕರು/ದೇಶಭಕ್ತರು ಎಂಬಂತೇ ಬಿಂಬಿಸಿ ಇಂದಿಗೂ ಅದನ್ನೇ ತಲೆಗೆ ತುಂಬ್ತಾ ಇದಾರೆ. ನೆಹರೂ ಅವರ ಗಾದೀ ಭಕ್ತರಾಗಿದ್ದರು ಎಂಬುದು ಎಷ್ಟೋ ಜನರಿಗೆ ಇನ್ನೂ ನಂಬೋದಕ್ಕೆ ಕಷ್ಟವಾಗ್ತದೆ. ಡಾರ್ಜೀಲಿಂಗಿನ ಸೆರೆಮನೆಯಲ್ಲಿದ್ರಂತೆ ಮಗಳಿಗೆ ಬಣ್ಣಬಣ್ಣದ ಪತ್ರ ಬರೀತಾ ಇದ್ರಂತೆ; ಆ ಮಗಳೂ ಅದ್ಕೇನೇ ಹಾಗೇ ಗಾದೀ ಭಕ್ತಳಾಗಿ ನೆಹರೂ ಪರಂಪರೆ ಮುಂದುವರೀತು!!

ನೆಹರೂ ಹೋದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿಗಳು ಅನಾಯಾಸವಾಗಿ ಗಾದಿಗೆ ಬಂದಿದ್ರು. ಆದ್ರೆ ಗಾದೀಮೇಲೆ ಇಂದಿರಾ ಗಾಂಧಿಯ ಕಣ್ಣಿತ್ತಲ್ಲಾ ಹೀಗಾಗಿ ತಾಷ್ಕೆಂಟ್ ಒಪ್ಪಂದಕ್ಕೆ ಸಹಿಹಾಕಲು ಹೋದವರು ಅಲ್ಲೇ ’ಏನೋ’ ಆಗಿ ಸತ್ತಿದ್ದಾರೆ, ಅದು ಬಹುತೇಕರಿಗೆ ಒಳತೋಟಿಯಿಂದ ಗೊತ್ತಿರೋ ವಿಷಯ ಬಿಟ್ಟಾಕಿ ಅತ್ಲಗೆ ! ಶಾಸ್ತ್ರಿಯವರ ಮರಣಾನಂತರ ಪಟ್ಟಕ್ಕೆ ಇಂದಿರಾ ಬಂದೇ ಬಿಟ್ಟಳು. ಇಂದಿರಾಗೂ ಇಂಡಿಯಾಗೂ ಮೂರುಮೂರೇ ಅಕ್ಷರಗಳು ಆದ್ರೆ ಎರಡೂ ಸಮತೂಕದ್ದು ಎಂದು ಬಿಂಬಿತವಾಗೋ ಹಾಗೇ ಭ್ರಮಾಲೋಕ ಸೃಷ್ಟಿಸತೊಡಗಿದ್ಲು. ತನ್ನ ಅನ್ಯಾಯಗಳ ವಿರುದ್ದ ಸಿಡಿದೆದ್ದ ಅತಿರಥ ಮಹಾರಥರನ್ನು ಮೀಸಾ ಕಾಯ್ದೆಯ ಮೂಲಕ ಜೈಲಿಗೆ ತಳ್ಳಿಬಿಟ್ಟಳು. ಇಡೀ ದೇಶದ ಇತಿಹಾಸದಲ್ಲೇ ಅದೊಂದು ಕರಾಳ ಛಾಯೆ ಇಂದಿಗೂ ಇದೆ; ಆದರೂ ಜನ ಎಣ್ಣೆಗೆ ೧೦೦ ರೂ ಇಸ್ಕಂಡು ’ಕಾಂಗೈ ಕಾಂಗೈ’ ಅಂತಾರೆ.

ದುರದೃಷ್ಟಕ್ಕೆ ಆ ಕಾಲಕ್ಕೆ ಮಾಹಿತಿಗಳ ಆಕರ ಗ್ರಂಥಗಳು ಯಾವುದೂ ಲಭ್ಯವಿರದೇ ಸ್ವಾನುಭವದಿಂದ ಆಲೋಚಿಸಿ ’ಸಂವಿಧಾನ’ ಎಂಬ ಕರಡನ್ನು ಅಂಬೇಡ್ಕರ ಸಾಹೇಬರು ಬರೆದ್ರು. ಅದು ಅವರ ತಪ್ಪಲ್ಲ-ಕಾಲ ಹಾಗಿತ್ತು. ಓಬೀರಾಯನ ಕಾಲದ ಉಗಿಬಂಡಿಯನ್ನೇ ಇಂದೂ ಓಡಿಸುತ್ತಿದ್ದರೆ ಹೇಗಾಗುತ್ತಿತ್ತು ಆಲೋಚಿಸಿ-- ಅದೇ ರೀತಿ ನಮ್ಮ ಸಂವಿಧಾನ ಹಳೇ ಉಗಿಬಂಡಿಯಾಗಿದೆ, ಹೊಸ ರೈಲು ನಮಗೆ ಬೇಕಾಗಿದೆ ಆದರೆ ಮಾಡಲು ಇಂದಿನ ಬ್ರಷ್ಟಾಚಾರಿಗಳು ಒಪ್ಪುತ್ತಿಲ್ಲ. ಸಂವಿಧಾನದ ಲೋಪದೋಷಗಳನ್ನು ಸರಿಪಡಿಸಿಬಿಟ್ಟರೆ ನಾಳೆ ತಮ್ಮ ಕಬಳಿಕೆಯೆಲ್ಲಾ ತಿಳಿದುಹೋಗುತ್ತದೆ ಎಂಬ ದುರಾಲೋಚನೆಯಿಂದ ತಿದ್ದುಪಡಿ ಮಾಡಲು ಲೋಕಸಭೆಯಲ್ಲಿ ಠರಾವು ಮಂಜೂರಾಗುವುದೇ ಇಲ್ಲಬಿಡಿ!!

ಜೈಲಿನಲ್ಲಿ ಸಾಕಷ್ಟು ಉಪವಾಸ ವನವಾಸ ಬಿದ್ದು ನೋವುತಿಂದು ನೊಂದ ಸಮಾನಮನಸ್ಕ ಹಲವು ಜನ ಸೇರಿ ಜನಸಂಘದ ಸ್ಥಾಪನೆಯಾಯಿತು. ಜನಸಂಘ ಕ್ರಮೇಣ ’ಜನತಾಪಕ್ಷ’ವೆಂಬ ರೂಪ ಪಡೀತು. ಜೈಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ ಮೊದಲಾದ ಹಲವು ಗಣ್ಯರು ಮುಂಚೂಣಿಯಲ್ಲಿದ್ರು; ಅವರಿಗೆಲ್ಲಾ ಗಾದಿಗಿಂತ ದೇಶಸೇವೆ ಬೇಕಾಗಿತ್ತು ! ಆದರೆ ನಮ್ಮ ಜನರಿಗೆ ಅದು ಅರ್ಥವಾಗದೇ ಹೋಗಿ ’ಈ.ಹೆ.ಗು.’ಗಳೇ ಜಾಸ್ತಿಯಿದ್ದುದರಿಂದ ಚುನಾವಣೆ ಅಂದ್ರೆ ಒಂದು ಹಬ್ಬ-ಹೆಂಡ,ಮೋಜು-ಮಜಾ ಅನ್ನೋ ಮಟ್ಟಕ್ಕೆ ನಮ್ಮ ಪರಂಪರಾಗತ ಕಾಂಗೈ ನಡೆಸಿಕೊಂಡು ಬಂತು--ಅದೇ ಕಾಂಗ್ರೆಸ್ ಸಾಧಿಸಿದ ಮಹತ್ಸಾಧನೆ ಅಷ್ಟೇ !! ಪಾರ್ಟಿ ಫಂಡು ಅಂತ ಜಾಸ್ತಿ ಏನೂ ಇಲ್ದೆ ಇದ್ದ ಜನತಾಪಕ್ಷ ಅಬ್ಬರದ ಪ್ರಚಾರಕ್ಕಾಗಲೀ ಹಣ-ಹೆಂಡ ಹಂಚುವ ’ಗಾದೀಕುಲ’ದವರ ತೆರನ ತಂತ್ರಗಾರಿಕೆಯನ್ನು ಬಳಸಲಾಗಲೀ ಹೋಗಲಿಲ್ಲ; ಹೀಗಾಗಿ ಮಹಾಚುನಾವಣೆಗಳಲ್ಲಿ ಜನತಾಪಕ್ಷ ಅನೇಕಸಲ ದೊಪಕ್ಕನೇ ಬಿದ್ದುಬಿಡುತ್ತಿತ್ತು.

ಅದೇನು ಸ್ವಾತಂತ್ರ್ಯ ಅಂತೀರೋ ಆಂಗ್ಲರು ಎದ್ದುಹೋದಮೇಲೆ ಸರಿಸುಮಾರು ೪೦ ವರ್ಷಗಳಿಗೂ ಅಧಿಕ ತಾನೇ ಆಡಳಿತ ನಡೆಸಿದ ಕಾಂಗ್ರೆಸ್ಸು ತನ್ನ ಪಂಚವಾರ್ಷಿಕ ಯೋಜನೆಗಳಲ್ಲಿ ಹಂಗ್ಮಾಡ್ತೀವಿ ಹಿಂಗ್ಮಾಡ್ತೀವಿ ಎಂದು ಕಣ್ಣೊರಿಸಿದ್ದೇ ಬಿಟ್ರೆ ಇವತ್ತಿಗೆ ಒಬ್ಬ ಟಾಟಾ ಇನ್ನೊಬ್ಬ ಬಿರ್ಲಾ ಇರದಿದ್ದರೆ ದೇಶದಲ್ಲಿ ಯಾವ ಹೊಸಬದಲಾವಣೆಯೂ ಆಗುತ್ತಿರಲಿಲ್ಲವೇನೋ. ಕಾಂಗೈ ಕೊಡಲಾಗದ ಸೌಲಭ್ಯಗಳನ್ನು ಒಬ್ಬ ವಾಜಪೇಯಿ ಕೇವಲ ಒಂದೇ ಟರ್ಮಿನಲ್ಲಿ ಕೊಟ್ಟುಬಿಟ್ಟರು; ಅದೂ ೧೦-೧೧ ವಿಭಿನ್ನ ಪಕ್ಷಗಳನ್ನು ಸೇರಿಸಿ ತೇಪೆಹಾಕಿಕೊಂಡ ಸಮ್ಮಿಶ್ರ ಸರಕಾರದ ಮುಖಂಡನಾಗಿ!!

ದೇಶದ ಆಯಕಟ್ಟಿನ ಜಾಗಗಳಲ್ಲಿ ದೇಶಭಕ್ತರನ್ನು ನೇಮಿಸುವ/ಕೂರಿಸುವ ಕೂರಿಸಿ ಗೌರವಿಸುವ ಇಚ್ಛೆ ವಾಜಪೇಯೀ ಸರಕಾರಕ್ಕಿತ್ತು. ಹಾಗಾಗೇ ನಮ್ಮ ಮೇಧಾವಿ ಎ.ಪಿ.ಜೆ ಅಬ್ದುಲ್ ಕಲಾಂ ಅಂದು ಭಾರತದ ಪರಮೋಚ್ಚ ಸ್ಥಾನವನ್ನು ಅಲಂಕರಿಸಿದರು; ಅದರ ಘನತೆಯನ್ನು ಹೆಚ್ಚಿಸಿದ್ರು. ವಿಪರ್ಯಾಸ ನೋಡಿ ಇನ್ನೊಂದು ಟರ್ಮಿಗೆ ಅವರನ್ನು ಮುನ್ನಡೆಸುವ ಬದಲು ಕೆಲಸಕ್ಕೆ ಬರದ ಮುದುಕರನ್ನೂ ಮೃದಂಗಬಾರಿಸುವವರನ್ನೂ ತಂದು ಕೂರಿಸಲಾಯಿತು ಯಾಕೆಂದರೆ ಅಲ್ಲಿ ರಬ್ಬರ್ ಸ್ಟಾಂಪ್ ಇದ್ದರೇ ಆಳುವ ಪಕ್ಷಕ್ಕೆ ಒಳ್ಳೇದು. ಹೀಗಾಗಿ ನಿಜವಾಗಿ ಮುಂದುವರಿಯಬೇಕಾದ ಆ ಗೌರವ ಕಲಾಂ ಅವರಿಗೆ ಅರ್ಹತೆ ಬೇಕಾದ್ದಕ್ಕಿಂತ್ಲೂ ಜಾಸ್ತೀನೇ ಇದ್ರೂ ದಕ್ಕಲಿಲ್ಲ.



ತೀರಾ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನಿತ್ಯ ಅದನ್ನೇ ಕೇಳ್ತಾ ನೋಡ್ತಾ ಇದೀರಿ ಮತ್ತೆ ಹೇಳ್ಬೇಕಾದ ಅಗತ್ಯವೇನೂ ಕಾಣಿಸ್ತಿಲ್ಲ. ಮೀಟರ್ ಹಿಡಿದು ನೋಡಿದ್ರೆ ಸ್ವಾತಂತ್ರ್ಯ ಪೂರ್ವದ ಪ್ರಜೆಗಳಿಗೂ ಇಂದಿನ ದೇಶವಾಸಿಗಳಿಗೂ ಪಡೆದ ಸೌಲಭ್ಯಗಳಲ್ಲಿ ಅಷ್ಟೇನೂ ಬದಲಾವಣೆಕಾಣಿಸೋದೇ ಇಲ್ಲ ಸ್ವಾಮೀ. ಅಂದು ಹಳ್ಳಿಗಳಲ್ಲಾದ್ರೂ ರಾಜಕೀಯ ಇರ್ಲಿಲ್ಲ-ಇಂದು ಮನೆಮನೆಗೂ ರಾಜಕೀಯ ಹೊಕ್ಕು ಎಲ್ಲಾ ರಾಜಕೀಯಮಯವಾಗಿದೆ. ತಮಾಷೆಗೆ ಹೀಗೆ ಹೇಳಬಹುದು ಅಪ್ಪ ಬೀಜೆಪಿ ಮಗ ಜೇಡಿಎಸ್ಸು ಆದ್ರೆ ಯಾಕೋ ಹೊಟ್ಟೆನೋವಿನಿಂದ ಅಪ್ಪ ಊಟಮಾಡದಾಗ ಮಗ ಹೇಳ್ತಾನೆ " ನಮ್ಮಪ್ಪ ಊಟ ಮಾಡ್ದೇ ಇರೋದ್ರಲ್ಲಿ ಏನೋ ರಾಜಕೀಯ ಷಡ್ಯಂತ್ರ ಇದೆ " !!

ದೇಶದಲ್ಲಿ ಇನ್ನೂ ಬಡವರ, ನಿರ್ಗತಿಕರ, ಅನಕ್ಷರಸ್ಥರ, ಭಿಕ್ಷುಕರ ಸಂಖ್ಯೆ ಬಹಳ ಜಾಸ್ತೀನೇ ಇದೆ. ನಿನ್ನೆ ಫೇಸ್ಬುಕ್‍ನಲ್ಲಿ ಮಿತ್ರ ಅರುಣ್ ಕಶ್ಯಪ್ ಒಂದು ವೀಡಿಯೋ ಹಾಕಿದ್ರು. ನೋಡ್ದಾಗಿಂದ ಶರೀರದ ಕಣಕಣವೂ ಕೊತಕೊತ ಕುದೀತಾ ಇದೇರಿ. ಇಲ್ಲೇ ಕೆಳಗೆ ಲಿಂಕ್ ಹಾಕ್ತೇನೆ ನೀವೂ ಒಮ್ಮೆ ನೋಡಿ. ನಾಳೆ ದಿನ ನೀವೆಲ್ಲಾ ದೇಶದಲ್ಲಿ ಇರ್ಬೇಕು ಅಂದ್ರೆ ಯಾವ ಧೈರ್ಯದಿಂದ ಇರ್ತೀರಿ? ಮುಂಬೈ ತಾಜಮಹಲ್ ಸುಟ್ಟು ನೂರಾರು ಅಮಾಯಕರನ್ನು ಬಲಿತೆಗೆದುಕೊಂಡ ಪಾಕಿಗಳು ಮತ್ತೆ ಅದಿನ್ನೂ ಹಸಿಹಸಿಯಿರುವಾಗಲೇ ಮುಂಬೈಯ್ಯಲ್ಲಿ ಬಾಂಬ್ ಹಾಕುವಷ್ಟು ತಯಾರಾಗಿದ್ದಾರೆ ಎಂದಮೇಲೆ ಒಬ್ಬ ಸಾಮಾನ್ಯ ಪ್ರಜೆಯ ಜೀವಕ್ಕೆ ಎಲ್ಲಿ ಬೆಲೆ ಇದೆ ಸ್ವಾಮೀ?

http://youtu.be/xzLmq5kd9ZQ

http://youtu.be/B5JWTQlILW8



ಯಾರೋ ದಾವೂದನಂತೆ ಮತ್ತೊಬ್ಬನಂತೆ, ನಮ್ಮ ದೇಶದ ಸ್ಥಿತಿಗತಿಯನ್ನು ಅಲ್ಲಾಡಿಸುವ ಯಾವುದೇ ದೇಶವನ್ನೇ ಆಗಲಿ ಬರಿದೇ ಯಾಕೆ ಬಿಡ್ತಾರೆ ಈ ಆಡಳಿತದ ಮಂದಿ? ಎಷ್ಟು ದಿನ ಸಂಯಮ ಸಂವಹನ ಇದೆಲ್ಲಾ? ಸಾಮ ದಾನ ಭೇದ ದಂಡ ಇತ್ಯಾದಿ ಕೆಲವು ಸೂತ್ರಗಳನ್ನು ನಮ್ಮಲ್ಲಿನ ಪಂಚತಂತ್ರವೇ ಹೇಳಿದ್ಯಲ್ಲ-ಅದನ್ನಾದ್ರೂ ತಿಳ್ಕೊಂಡು ಮೇಲೇರಿ ಬರುವ ರಾಷ್ಟ್ರವನ್ನು ಮಟಾಷ್ ಮಾಡಿಬಿಟ್ಟರೆ ಮತ್ತೆ ಮತ್ತೆ ಮೂಗಿಗೆ ಸೀತಬಾಧಿಸಿದ ಹಾಗೇ ಇಂತಹ ಕಿರಿಕಿರಿ ಇರುತ್ತಿರಲಿಲ್ಲ ಅಲ್ಲವೇ? ಇಂದು ದೇಶವ್ಯಾಪಿ ನಮ್ಮಲ್ಲೇ ಕೆಲವರು ಬೇಹುಗಾರರಿದ್ದಾರೆ!! ಅವರು ಪಾಕಿಸ್ತಾನದ ಭಕ್ಷೀಸು ಪಡೆಯುತ್ತಿರುತ್ತಾರೆ. ಅಲ್ಪಸಂಖ್ಯಾತರನ್ನು ಪ್ರಶ್ನಿಸುವ ಹಕ್ಕು ಬಹುಸಂಖ್ಯಾಕರಿಗಿಲ್ಲ, ರಿಯಾಲಿಟಿಯಲ್ಲಿ ಇಂದು ಯಾರೂ ಅಲ್ಪಸಂಖ್ಯಾಕರಲ್ಲ!!

ಬೇರೇ ದೇಶಗಳ ಜನ ಬಂದು ನಮ್ಮಲ್ಲಿನ ಧೂರ್ತರನ್ನೇ ತಮ್ಮ ಮತಕ್ಕೆ ಅನುಯಾಯಿಗಳನ್ನಾಗಿ ಮಾಡಿಕೊಂಡು ಒಂದಷ್ಟು ಹಣ-ಸೌಲಭ್ಯಗಳ ಅಮಿಷವೊಡ್ಡಿ ಇಂದು ಅವರೇ ನಾವು ತಿಳಿಯುವ ಅಲ್ಪಸಂಖ್ಯಾತರಾಗಿದ್ದಾರೆ!! ಆ ಅಲ್ಪಸಂಖ್ಯಾತರನ್ನೇ ಮುಂದೆ ಬಿಟ್ಟುಕೊಂಡು ಕದ್ದೂಮುಚ್ಚಿ ಮತ್ತೆ ಮತಾಂತರದ ವ್ಯವಹಾರ ಕತ್ತಲಲ್ಲಿ ಸದಾ ಜಾಗೃತವಾಗಿದೆ. ಬುದ್ಧಿ ಕಮ್ಮಿಯಿರುವ ಹುಂಬರಿಗೆ ಜಾಸ್ತಿ ಹಣದ ಆಸೆ ತೋರಿಸಿ ಮತಾಂಧರನ್ನಾಗಿ ಮಾಡಿ ಅಂಥವರಿಂದಲೇ ಅಲಲ್ಲಿ ದುಷ್ಕೃತ್ಯಗಳಿಗೆ ಪ್ಲಾನು ಮಾಡಿಸ್ತಾರೆ!! ---ಇದೆಲ್ಲಾ ಗೊತ್ತಿರದ ವಿಷಯ ಅಂದುಕೊಂಡ್ರೇನು? ದರಿದ್ರ ರಾಜಕಾರಣಿಗಳಿಗೆ ಅವರ ವೋಟಿನ ಆಸೆ ಹೀಗಾಗಿ ವೋಟ್ ಬ್ಯಾಂಕ್ ರಾಜಕಾರಣ ಎಲ್ಲವನ್ನೂ ತನಗೆ ಬೇಕಾದ ರೀತಿಯಲ್ಲೇ ನಿರ್ವಹಿಸುತ್ತದೆ!! ಇದೇ ಕಾರಣದಿಂದ ರಕ್ಕಸ ದಾವೂದು ಚೋಟಾ ಶಕೀಲು ಇಂಥವರೆಲ್ಲಾ ಮೆರೀತಾರೆ.

ಗೋವಿನ ಹಾಲನ್ನು ಉಂಡು ಅದರಿಂದ ಹಲವಾರು ಉಪಕಾರ ಪಡೆದ ಜನವೇ ಗೋವನ್ನು ಕಡೀತಾರೆ-ಅದೂ ಚಿತ್ರಹಿಂಸೆ ಕೊಟ್ಟು ಕಡೀತಾರೆ. ಅದನ್ನು ತಡೀಲಿಕ್ಕೆ ಹೋದರೆ ಕೋಮುಘರ್ಷಣೆ!! ಯಾವ ನ್ಯಾಯ ಸ್ವಾಮೀ?? ದನ ತಿನ್ನುವವರೇ ನೀವು ನಮ್ಮ ದೇಶದಲ್ಲಿ ಬದುಕಬೇಕು ಅಂತಿದ್ರೆ ಆ ಕೆಲ್ಸ ಬಿಡಿ ಅಥವಾ ದೇಶಾನೇ ಬಿಟ್ಟು ತೊಲಗಿ ಅನ್ನೋದ್ರಲ್ಲಿ ತಪ್ಪೇನಿದೆ ಹೇಳಿ? ದೇಶದ ಮೂಲವಾಸಿಗಳ ಬೇಕುಬೇಡಗಳನ್ನು ಕೇಳುವವರೇ ಇಲ್ಲ--ಇಲ್ಲಿನ ಆದ್ಯತೆ ವೋಟ್ ಬ್ಯಾಂಕ್ ನೋಡಿಕೊಂಡು ಮಾತ್ರ. ಬೇರೇ ಮನೆಯಿಂದ ಸುಮ್ನೇ ಇರಲು ಬಂದವ ಇದು ತನ್ನದೇ ಮನೆ ನಿಮಗ್ಯಾರಿಗೂ ಹಕ್ಕಿಲ್ಲ ಅಂದಹಾಗಾಯ್ತು ಮೂಲನಿವಾಸಿಗಳ ಬದುಕು. ಹಿಂದೂ ಎನ್ನುವ ಹಾಗೇ ಇಲ್ಲ!! ಹಿಂದೂ ಎಂದರೇ ಗುಂಡಿಟ್ಟು ಕೊಲ್ಲುವ ಕಾಲ ಬರುವುದು ಬಹಳ ದೂರವಿಲ್ಲ ಬಿಡಿ. ಅಷ್ಟಕ್ಕೂ ಹಿಂದೂ ತತ್ವ ಸಂಪ್ರದಾಯ ವೇದಗಳನ್ನಾಧರಿಸಿದ್ದು, ವೇದಗಳು ಮಾನವ ಜೀವನ ಮೌಲ್ಯವನ್ನು ತಿಳಿಸುತ್ವೆ ಎಂದು ಎಷ್ಟೇ ತಿಳಿಸಿದರೂ ಅದಕ್ಕೆ ಮಾನ್ಯತೆಯೇ ಇಲ್ಲ!!

ರಾಮ ಹುಟ್ಟಿದ ಬೆಳೆದ, ನಡೆದಾಡಿದ, ದೇಹವಿಸರ್ಜಿಸಿ ತನ್ನ ಮೌಲ್ಯಗಳನ್ನೂ ಪ್ರೀತಿಯನ್ನೂ ಬಿಟ್ಟುಹೋದ ಅವನದಾದ ಈ ನೆಲದಲ್ಲಿ ರಾಮಮಂದಿರ ನಿರ್ಮಿಸುವುದಕ್ಕೆ ಯಾವುದೋ ಬಾಬರಿಯ ಅಡ್ಡಗಾಲು! ಜೀವ ಇದ್ಯೇನ್ರೀ ಪ್ರಜೆಗಳೇ ನಿಮ್ಗೆ? ರಾಮ ಇಲ್ಲಿನ ಜೀವಜೀವಾಳ. ಹಿಂದೂ ಎಂದವನ ರಕ್ತದ ಅಣುಅಣುವಿನಲ್ಲೂ ರಾಮ ತುಂಬಿದ್ದಾನೆ. ಪುರಾತನಕಾಲದಿಂದ ಇದ್ದ ಆತ ಹುಟ್ಟಿದ ಜಾಗದಲ್ಲಿದ್ದ ದೇವಸ್ಥಾನ ಅದ್ಯಾವುದೋ ಅಡ್ಡಕಸಬಿ ಬಾಬರಿ ಕೆಡವಿದ. ಆಗಲೇ ನಮ್ಮಲ್ಲಿ ತಾಕತ್ತಿರ್ಲಿಲ್ಲ ನೋಡಿ. ಇಲ್ಲಾಂದ್ರೆ ಬಾಬರಿಗೆ ಯಾಕೆ ಬಿಡಬೇಕಾಗಿತ್ತು? ಹೋಗಲಿ ಬಾಬರಿ ಸಾಬಿ ಮಧ್ಯೆ ಬಂದವ ದೇವಾಲಯ ಮೊದಲೇ ಇದ್ದುದಕ್ಕೆ ಸಾಕ್ಷ್ಯಗಳಿವೆ ಅಂತ ಆ ಜಾಗದಲ್ಲಿ ಉತ್ಖನನ ಮಾಡಿ ಅವಶೇಷಗಳನ್ನು ಒದಗಿಸಿದ್ರೂ ರಾಮನಿಗೆ ಅಲ್ಲಿ ಜಾಗವಿಲ್ಲ--ಇದು ಇಂದಿನ ನಮ್ಮತನ.

ರಾಜಕಾರಣಿಗಳು ಪೂಜ್ಯರಲ್ಲ, ದೇವರಲ್ಲ, ವೃತ್ತಿಯಿಂದ ಅವರು ಗಣ್ಯರಲ್ಲ ಅವರು ಪ್ರಜೆಗಳ ಸೇವಕರು. ಅವರನ್ನು ಕಂಡಲ್ಲೆಲ್ಲಾ ಹಾರತುರಾಯಿ ಹಾಕುವ ಹಳೆಯ ಗೊಡ್ಡು ಸಂಪ್ರದಾಯ ಬಿಡಿ. ಯಾರೋ ಮಂತ್ರಿಯಂತೆ ಬಂದ್ಬುಡ್ತಾನೆ ಅಲ್ಲಾಡಸ್ಕೊಂಡು ! ಆ ಎಲ್ಲಾ ನನ್ಮಕ್ಳಿಗೂ ಫಾರಿನ್ ಮೇಕ್ ಏಸಿ ಕಾರು! ಎಲ್ಲಾ ಸೈಕಲ್ಲು ತುಳ್ಕಂಡು ಸಮಾಜ ಸೇವೆ ಮಾಡೋ ಹಾಗಾಗ್ಲಿ. ಯಾವುದೇ ಕೆಲಸ ನ್ಯಾಯಯುತವಾಗಿ ಆಗಿಲ್ದೇ ಇದ್ರೆ, ಅದಕ್ಕೆ ಸಂಬಂಧಿಸಿದ ಮಂತ್ರಿಯ ಲಾಬಿ ನಡೆದಿದ್ದು ಕಂಡ್ರೆ ರೋಡ್ ರೋಡ್‍ನಲ್ಲಿ ಎಳೆದು ಹೊಡೀರಿ. ಜನಸೇವೆಗೆ ಕಂಕಣ ತೊಡುವ ನಿಷ್ಠಾವಂತ ಮಾತ್ರ ರಾಜಕೀಯಕ್ಕೆ ಬರ್ಲಿ, ರೊಕ್ಕ ತಿನ್ನೋ ಬಿಳೀ ಡ್ರಮ್ಮುಗಳೆಲ್ಲಾ ಮನೇಲೇ ಮಲಗಿರ್ಲಿ, ಏನಂತೀರಿ ?

ನೋಡೀ ಸ್ವಾಮೀ ಓದುತ್ತಿರುವವರು ನೀವ್ಯಾರೇ ಆಗ್ಲಿ, ಇರುವುದನ್ನು ಖಾಡಾಖಾಡಿ ವಾದಿಸುವ ಮನುಷ್ಯ ನಾನು. ಮೂಲದಲ್ಲಿ ಇದ್ದ ಮೌಲ್ಯಗಳಿಗೆ ಬೆಲೆಕೊಟ್ಟು ಬದುಕುವ ಜನ ಬದುಕಲಿ- ಇಲ್ಲಾ ಕ್ರಾಂತಿಯೇ ಆಗಿಬಿಡಲಿ ಬಿಡಿ;ಎಷ್ಟು ದಿನ ಕಷ್ಟ ಸಹಿಸಲು ಸಾಧ್ಯ? ಅಣ್ಣಾ ಹಜಾರೆಯವರ ಮಾತುಗಳನ್ನು ಕೇಳಿದ್ದೀರಿ. ಅವರ ಆಂದೋಲನಕ್ಕೆ ಬೆಂಬಲ ಸದಾ ಕೊಡಿ. ದೇಶಭಕ್ತಿ ನಿಮ್ಮೆಲ್ಲರಲ್ಲಿ ಪ್ರತೀಕ್ಷಣ ಹರಿಯುತ್ತಿರಲಿ. ಹಲ್ಲುಗಳ ಮಧ್ಯೆ ಹುಳುಕುಹಲ್ಲೂ ಇದ್ದಾಗ ಅದಕ್ಕೆ ಯಾವರೀತಿ ಟ್ರೀಟ್‍ಮೆಂಟ್ ಕೊಡುತ್ತೇವೋ ಅದೇ ರೀತಿ ನಮ್ಮೊಳಗೇ ಇರುವ ಧೂರ್ತರಿಗೆ ಶಾಕ್ ಟ್ರೀಟ್‍ಮೆಂಟ್ ಕೊಡುವ ಅವಶ್ಯಕತೆ ಇದೆ. ದುಡ್ಡಿಗಾಗಿ ಮೌಲ್ಯವನ್ನು ಮಾರಬೇಡಿ, ಹಣಕ್ಕಾಗಿ ದೇಶವನ್ನು ಮಾರಬೇಡಿ. ಬ್ರಿಟಿಷರು ಅಂತೂ ಹೇಗೋ ಬಿಟ್ಟುಹೋದರೂ ಕೊಟ್ಟದ್ದನ್ನು ಉಳಿಸಿಕೊಳ್ಳಲಾಗದೇ ಮತ್ತೆ ನಾವು ವಿಭಜಿಸಿಬಿಟ್ಟೆವು. ಇನ್ನಾದರೂ ಮತ್ತೆ ಅಂತಹ ಪರಿಸ್ಥಿತಿ ಬಾರದಿರಲಿ. ಒಟ್ಟಾರೆ ನಾವು ಬದುಕಿದ್ದೇವೆ ಎಂದು ಹೆದರಿ ಉಸಿರು ಹಿಡಿದಿರುವುದಕ್ಕಿಂತ ಒಬ್ಬ ಭಗತ್ ಸಿಂಗ್ ಆಗಿ, ಒಬ್ಬ ಮಂಗಲ ಪಾಂಡೆಯಾಗಿ, ಒಬ್ಬ ಝಾಂಸೀರಾಣಿಯಾಗಿ ದೇಶಸೇವೆ ಮಾಡಲು ಸಿದ್ಧರಾಗಿರೋಣ; ಸಮಯಬಂದರೆ ವೀರಮರಣಕ್ಕೂ ಸಿದ್ಧರಾಗೇ ಮುನ್ನಡೆಯೋಣ ಬನ್ನಿ: ಬ್ರಷ್ಟಾಚಾರ, ಬೇಹುಗಾರಿಕೆ, ಕೋಮುಘರ್ಷಣೆ, ಆಂತರಿಕ ಸಮಸ್ಯೆಗಳು ಎಲ್ಲದಕ್ಕೂ ಇತಿಶ್ರೀ ಹಾಡಿಬಿಡೋಣ; ಮತಭೇದವಿಲ್ಲದೇ ದೇಶದ ಆಸ್ತಿಯನ್ನು ಲಪಟಾಯಿಸುವ ಈಗಿರುವ ರಾಜಕೀಯದ ಎಲ್ಲರನ್ನೂ ಮನೆಗ್ ಕಳಿಸೋಣ ಬನ್ನಿ.

ದೇಶಭಕ್ತ ಜನರಿಂದ ಹೊಸ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆಬರಬೇಕು. ಯಾರಿಗೂ ತೊಂದರೆಯಾಗದ ಮತ್ತು ದೇಶದ ಮೂಲನಿವಾಸಿಗಳ ಹಕ್ಕುಬಾಧ್ಯತೆಗಳನ್ನು ರಕ್ಷಿಸುವ ಹೊಸ ಆಯಾಮ ತೆರೆದುಕೊಳ್ಳಬೇಕು. ಭಯೋತ್ಫಾತಕ ರಕ್ಕಸರು ಭಾರತವನ್ನು ಕನಸಲ್ಲಿ ನೆನೆದರೂ ಹೆದರಿಕೊಳ್ಳಬೇಕು. ಹಾಗಾಗಲಿ ನಮ್ಮ ಭಾರತ, ಎಲ್ಲರಿಗೂ ಸುಖ ಸಮೃದ್ಧಿ ಸಾರುತ್ತಾ




ಜೈ ಹಿಂದ್ ಜೈಹಿಂದ್ ಜೈ ಹಿಂದ್