ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, August 29, 2011

ಚಿಕ್ಕ ಇಲಿಯ ಬೆನ್ನನೇರಿ !


ಚಿಕ್ಕ ಇಲಿಯ ಬೆನ್ನನೇರಿ !

[ಎಲ್ಲಾ ಓದುಗ, ಸ್ನೇಹಿತ, ಬಂಧು-ಮಿತ್ರ-ಹಿತೈಷಿಗಳಿಗೂ ಸೇರಿದಂತೇ ಲೋಕದ ಸಮಸ್ತರಿಗೂ ಸ್ವರ್ಣಗೌರೀ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.]


ಚಿಕ್ಕ ಇಲಿಯ ಬೆನ್ನನೇರಿ ದೊಡ್ಡಹೊಟ್ಟೆ ಬೆನಕರಾಯ
ಸಿಕ್ಕ ಸಿಕ್ಕ ಭಕ್ತರುಗಳ ಮನೆಗೆ ಧಾವಿಸಿ
ಅಕ್ಕರೆಯಿಂದವರು ಕೊಟ್ಟ ಚಕ್ಕುಲಿಗಳ ಮೆದ್ದು ಮತ್ತೆ
ಚೊಕ್ಕಗೊಳಿಸಿ ಮೋದಕಗಳ ತಿಂದು ವಿರಮಿಸಿ !

ಡರ್ರೆನ್ನುತ ತೇಗಿದಾಗ ಆಗಿಹೋಯ್ತು ರಾತ್ರಿ ಅಲ್ಲಿ
ಸರ್ರನೆದ್ದು ಹೊರಟುಬಿಟ್ಟ ತನ್ನ ಮನೆಕಡೆ
ಗರ್ರೆನ್ನುತ ತಿರುಗಿ ತಿರುಗಿ ಬಿದ್ದುಬಿಡ್ತು ಮೂಷಿಕಣ್ಣ
ಕರ್ರಗಿರುವ ಬಾನಿನಲ್ಲಿ ಚಂದ್ರ ಹಲ್ಬಿಡೆ !

ಬಿದ್ದ ಚಣದಿ ಹೊಟ್ಟೆಯೊಡೆದು ಬೆನವಗಾಯ್ತು ಕಷ್ಟಕಾಲ
ಎದ್ದುಬಿದ್ದು ಹುಡುಕಿ ನಡೆದ ಸೊಂಟಬಂಧಿಯ
ಕದ್ದು ನೋಡಿ ನಗುತಲಿದ್ದ ಮೋಡಸರಿಸಿ ಚಂದಿರಾಮ
ಕ್ರುದ್ಧನಾದ ವಿಘ್ನರಾಜ ಕಂಡು ಸಂದಿಯ !

ನಕ್ಕ ಶಶಿಯ ಸೊಕ್ಕ ಮುರಿಯೆ ಗಣಪ ಬಿಸುಟ ಮುರಿದು ಹಲ್ಲ
ಹೆಕ್ಕಿ ಹರೆಯುತಿದ್ದ ಹಾವ ಹೊಟ್ಟೆ ಕಟ್ಟುತ
ಹಕ್ಕಿಗಧಿಕ ವೇಗದಲ್ಲಿ ಸಾಗುವಾಗ ಹಾದಿಯಲ್ಲಿ
ಬಿಕ್ಕುತಳುವ ತಂಗದಿರನ ಬೆನ್ನ ತಟ್ಟುತ

ವಿಕಟನಿತ್ತ ಶಾಪವನ್ನು ಮರಳಿ ಪಡೆದು ಹರಸುವಂತೆ
ನಿಕಟನಪ್ಪೆನೆನುತ ಬೇಡಿದಾ ಶಶಾಂಕನು
ಪ್ರಕಟಗೊಳುವ ನಿನ್ನ ನೋಡೆ ಭಾದ್ರಪದದ ಚೌತಿಯಲ್ಲಿ
ಮುಕುಟ ಮಸಿಯ ಛಾಯೆಪಡೆಯಲೆಂದ ಸುಮುಖನು

ಅಮ್ಮ ಹಾಲ ಕರೆಯುವಾಗ ನಮ್ಮಕೃಷ್ಣ ಚೊಂಬಿನಲ್ಲಿ
ಸುಮ್ಮನಾಡಿ ನೋಡುತಿದ್ದ ಚಂದ್ರ ಬಿಂಬವ
ಒಮ್ಮೆ ಮಣಿಯು ಕಳೆಯಲಾಗಿ ಕದ್ದ ಕಳ್ಳ ಗೊಲ್ಲನೆಂದು
ಚಿಮ್ಮಿ ಹರಿದ ಸುದ್ದಿ ತಂತು ಹರಿಗಗೌರವ

ಮುರಳಿ ತೆರಳಿ ಕಾಡಿನೆಡೆಗೆ ಬಡಿದು ಜಾಂಬವಂತನನ್ನು
ಕೆರಳಿ ಪಡೆದ ಮಣಿಯನಲ್ಲಿ ವಿಷಯವರಿಯುತ
ತರಳಗೆರಗಿ ಜಾಂಬವಂತ ಪರಿಪರಿಯಲಿ ಪ್ರಾರ್ಥಿಸಲ್ಕೆ
ಕರುಳುಮಿಡಿದು ಜಾಂಬವತಿಯ ಕೈಯ್ಯ ಹಿಡಿಯುತ

ಮಣಿಯ ಕಂಡು ಊರಮಂದಿ ಹುರುಪುಗೊಂಡು ಹಾರಿಕುಣಿದು
ಕಣಿವೆಯೆಲ್ಲ ಮಾರ್ದನಿಸಿತು ಕೃಷ್ಣಜಯಜಯ
ಹೊಣೆಯನಿತ್ತನಾ ಗಣೇಶ ಕೇಳಿದವಗೆ ಮಣಿಯಕಥೆಯ
ಋಣದಿ ಮುಕ್ತಿ ದೋಷವಿಲ್ಲ ಎಲ್ಲ ಸುಖಮಯ


7 comments:

 1. ಭಟ್ ಸರ್ ತುಂಬಾ ಚೆನ್ನಾಗಿದೆ.. ಕತೆ ಹೇಳುವ ಹೊಸ ಶೈಲಿ .

  ReplyDelete
 2. ಸರ್ ತುಂಬಾ ಚೆನ್ನಾಗಿದೆ. ನನಗೆ ತುಂಬಾ ಇಷ್ಟವಾಯಿತು.

  ReplyDelete
 3. :-)... ಧನ್ಯವಾದಗಳು. ನಿಮ್ಮೆಲ್ಲರಿಗೂ ಗೌರೀ ಗಣೇಶ್ ಹಬ್ಬದ ಹಾರ್ದಿಕ ಶುಭಾಶಯಗಳು ಭಟ್ ಸಾರ್.....


  ಶ್ಯಾಮಲ

  ReplyDelete
 4. ಸ್ಯಮ೦ತಕ ಮಣಿಯ ಕಥೆಯನ್ನೂ ತಿಳಿಸಿದ ಭಟ್ ಸರ್ ಗೆ ವ೦ದನೆಗಳು ಹಾಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

  ಅನ೦ತ್

  ReplyDelete
 5. ಕಾವ್ಯ ಕಥೆ ಚೆನ್ನಾಗಿ ಮೂಡಿ ಬಂದಿದೆ.ಪ್ರತೀ ಹಂತದಲ್ಲಿ ಕಾವ್ಯದ ಲಹರಿ ಕಾಪಾಡಿದ್ದು ಖುಷಿಕೊಟ್ಟಿತು. ಅಭಿನಂದನೆಗಳು.

  ReplyDelete
 6. ಸುಂದರವಾದ ಕಥನಕವನ.
  ಗಣೇಶ ಹಬ್ಬದ ಶುಭಾಶಯಗಳು.

  ReplyDelete
 7. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ನಮನಗಳು

  ReplyDelete