ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, July 24, 2011

|| ಅಹಂ ಏಕಂ ಶತಂ ವ್ಯಾಘ್ರಂ ಸಪ್ತದೀ ಕುಂಜರಂ ಬಲಂ|||


|| ಅಹಂ ಏಕಂ ಶತಂ ವ್ಯಾಘ್ರಂ
ಸಪ್ತದೀ ಕುಂಜರಂ ಬಲಂ ||


" ಮಗನೇ ಆ ಕುಂಟು ಕುರಿ ಏನು ಹೇಳ್ತು ಬಲ್ಲೆಯಾ ? "

ಹೀಗೆಂದಾಗ ಅತ್ಯಂತ ಧೈರ್ಯದಿಂದಲೂ ಅತೀವ ಸಂತೋಷದಿಂದಲೂ ಕಣ್ಣರಿಳಿಸಿ ಮೈಯೆಲ್ಲಾ ಕಿವಿಯಾಗಿ ಕೇಳುತ್ತಿರುವ ನಾನು ಅಜ್ಜಿಯನ್ನು ಕುಳಿತಲ್ಲೇ ತಿರುಗಿ ತಿರುಗಿ ನೋಡುತ್ತಲೇ ಇದ್ದೆ. ಅಜ್ಜಿ ಒತ್ತಾಸೆಯಿಂದ ಹೇಳುತ್ತಿದ್ದ ಆ ಸಂಗತಿ ನನ್ನಲ್ಲಿರುವ ಭಯವನ್ನು ನಿವಾರಿಸಿಕೊಳ್ಳುವಲ್ಲಿ ಅಂದು ನನಗೆ ನೆರವಾಗಿತ್ತು. ಕನ್ನಡ ಪ್ರಾಥಮಿಕ ಶಾಲೆಯ ಒಂದನೆಯ ತರಗತಿಯಲ್ಲಿ ಕಲಿಯುತ್ತಿದ್ದ ನನಗೆ ೨ ಕಿಲೋ ಮೀಟರ್ ದೂರದ ಶಾಲೆಗೆ ಓಡಾಡುವಾಗ ಸಹಪಾಠಿಗಳು ಜೊತೆಗಿರದೇ ಇರುವ ಸಂಭವ ಇರುತ್ತಿತ್ತು. ಏಕಾಕಿಯಾಗಿ ಗುಡ್ಡದ ಕಾಲು ದಾರಿಗಳಲ್ಲಿ ಪಾಟಿಚೀಲ ಹೆಗಲಿಗೇರಿಸಿಕೊಂಡು ನಡೆದೇ ಹೋಗುವ ನನಗೆ ಸರಿಯಾದ ಚಪ್ಪಲಿಯೂ ಇರಲಿಲ್ಲ. ಆಗಿನ ಕಾಲವೇ ಹಾಗಿತ್ತು. ನಮಗೆಲ್ಲಾ ನಿತ್ಯವೂ ಹೊಸ ಯುನಿಫಾರ್ಮ ದಿರಿಸುಗಳು ಅಂತೆಲ್ಲಾ ಇರಲಿಲ್ಲ. ಮನೆಯಲ್ಲಿ ಬೇರೇ ಶಾಲೆಗೇ ಬೇರೆ ಎಂಬ ತೀರಾ ಮಡಿವಂತಿಕೆಯ ಜನ ನನ್ನ ಹಿರಿಯರಾಗಿರಲಿಲ್ಲ. ಕೊಳೆಯಾದಾಗ ತೊಳೆದು ಹಾಕಿಕೊಳ್ಳುವ ಎರಡೇ ಸೆಟ್ಟು ಅಂಗಿ ಚಡ್ಡಿಗಳು; ಅವೂ ದೊಗಳೆಗಳೇ !

ಅಂದಿನ ದಿನ ನಾವು ಏನನ್ನು ತೀರಾ ಪಡೆದಿರಲಿಲ್ಲವೋ ಅದಕ್ಕೆ ಹಳ್ಳಿಯ ಜೀವನ ವೈಖರಿಯೂ ಕಾರಣವಾಗಿದ್ದಿರಬಹುದು. ಪಡೆಯದೇ ಇದ್ದ ಆ ಸೌಕರ್ಯಗಳಿಗಿಂತ ಪಡೆದುಕೊಂಡ ಅನನ್ಯ ಅನುಭೂತಿ ಇದೆಯಲ್ಲಾ ಅದು ಇಂದಿನ ಜನಾಂಗಕ್ಕೆ ದುಡ್ಡುಕೊಟ್ಟರೂ ಸಿಗುವಂಥದ್ದಲ್ಲ. ಅವಿಭಕ್ತ ಕುಟುಂಬಗಳಲ್ಲಿ ಹುಟ್ಟಿಬೆಳೆದ ನಾನು ಮತ್ತು ನನ್ನೋರಗೆಯ ಜನರಿಗೆ, ನಮಗಿಂತಾ ಹಿಂದಿನ ಪೀಳಿಗೆಯವರಿಗೆ ಅದು ಸಿಕ್ಕಿರಬಹುದು. ಮನೆಯಲ್ಲಿ ಹಿರಿಯರು ನೀಡುವ ಪ್ರೀತ್ಯಾದರಗಳು, ವಾತ್ಸಲ್ಯ ಪೂರಿತ ನಡೆಗಳು ನಮಗೆ ಬೇಕಾದ್ದಕ್ಕಿಂತ ತುಸು ಜಾಸ್ತಿಯೇ ಲಭಿಸಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಮಳೆಗಾಲದಲ್ಲಿ ಎಲ್ಲೆಲ್ಲೂ ನಿಂತ ಮಳೆನೀರು. ತುಂಬಿ ಹರಿವ ತೊರೆ ಹಳ್ಳ ಕೆರೆ ಕಟ್ಟೆಗಳ ನೈಸರ್ಗಿಕ ಪುಟ್ಟ ಪುಟ್ಟ ಜಲಪಾತಗಳು. ಎಲ್ಲೆಲ್ಲೂ ಹಸಿರುಟ್ಟ ಭೂಮಿಯ ಅಂದ. ಸ್ವಲ್ಪ ಚಳಿಮಿಶ್ರಿತ ಹವೆಯಲ್ಲಿ ಮನೆಯೊಳಗೆ ಕುಳಿತು ಸೌದೆಯ ಒಲೆಯಲ್ಲಿ ಸುಟ್ಟು, ಕೊಬ್ಬರಿ ಎಣ್ಣೆ ಸವರಿದ ಹಲಸಿನ ಹಪ್ಪಳ ತಿನ್ನುತ್ತಾ ನಾವು ಕೇಳದ ಕಥೆಗಳಿಲ್ಲ. ಈಗ ಕಥೆ ಕೇಳಿ --

ಒಂದಾನೊಂದು ಕಾಲದಲ್ಲಿ ಒಬ್ಬ ಕುರಿಗಳನ್ನು ಸಾಕಿದ್ದನಂತೆ. ಅಮ್ಮಕುರಿ-ಅಪ್ಪಕುರಿ-ತಮ್ಮಕುರಿ-ಅಣ್ಣಕುರಿ-ಅಕ್ಕಕುರಿ-ಚಿಕ್ಕಪ್ಪಕುರಿಯೋ ಎಂಬಿತ್ಯಾದಿ ಹಲವು ಕುರಿಗಳು ಆತನ ಕೊಟ್ಟಿಗೆಯಲ್ಲಿದ್ದವು. ಅವು ದಿನಾಲೂ ತಾವೇ ಮನೆಯಿಂದ ಕೂಗಳತೆ ದೂರದಲ್ಲಿರುವ ಕಾಡಿಗೆ ಮೇಯಲು ಹೋಗ್ತಾ ಇದ್ವು. ಕಾಡಲ್ಲಿ ಅಲ್ಲಿ ಇಲ್ಲಿ ಒಟ್ಟಿಗೇ ಆ ಮಂದೆ ತಿರುಗಾಡ್ತಾ ಮೇಯ್ತಾ ಇದ್ವು. ಹೀಗೇ ಒಂದಿನ ಮಳೆಗಾಲದಲ್ಲಿ ಮೇಯ್ತಾ ಮೇಯ್ತಾ ಸಮಯ ಕಳ್ದಿದ್ದೇ ಗೊತ್ತಾಗ್ಲಿಲ್ಲ. ಸುಮಾರು ದೂರವೂ ಸಾಗಿಬಿಟ್ಟಿದ್ದವು. ಯಾಕೋ ಜೋರಾಗಿ ಗಾಳಿಬೀಸಿದಂತಾಗಿ ಕಪ್ಪುಗಟ್ಟಿದ ಮೋಡ್ದಿಂದ ಮಳೆ ಬರೋ ಹಾಗಾಯ್ತು. ಎಲ್ಲಾ ಕುರಿಗಳೂ ಓಡಿ ಮನೆಕಡೆ ನಡೆದುಬಿಟ್ಟವು. ಓಡುವ ಗಡಿಬಿಡಿಯಲ್ಲಿ ಕುಂಟುಕುರಿಯನ್ನು ಮರೆತುಬಿಟ್ಟವು. ತಾನೆಷ್ಟೇ ಓಡಿದರೂ ಶಾರೀರಿಕ ದೌರ್ಬಲ್ಯದಿಂದ ಆ ಕುಂಟು ಕುರಿಗೆ ಜಾಸ್ತಿ ಓಡಲಿಕ್ಕೆ ಆಗ್ತಾ ಇರಲಿಲ್ಲ. ಹೀಗಾಗಿ ಗುಂಪು ಮುಂದೆ ದೂರ ಓಡುವಾಗ ಇದ್ಕೆ ದಾರಿತಪ್ಪಿಹೋಯ್ತು !

ಮೊದ್ಲೇ ಕಾಡು ಹುಲಿ-ಸಿಂಹ-ಕರಡಿ ಇತ್ಯಾದಿ ಕ್ರೂರ ಪ್ರಾಣಿಗಳು ಇರೋ ಜಾಗ. [ಅಜ್ಜಿ ಇಷ್ಟನ್ನು ಹೇಳುತ್ತಿರುವಾಗ ನಮಗೆ ಮೈಯ್ಯೆಲ್ಲಾ ರೋಮಾಂಚನ ] ಕೇಳಬೇಕೇ ? ಪಾಪ ಈ ಕುಂಟುಕುರಿ [ನೋಡಿ ಅಜ್ಜಿ ಕುಂಟುಕುರಿ ಪಕ್ಷ! ಹೋದ ಕುರಿಮಂದೆಯನ್ನು ’ಆ’ ಎಂದರು, ಕುಂಟುಕುರಿಗೆ ’ಈ ’ ಎಂದರು-ನಮ್ಮ ಕನ್ನಡದಲ್ಲಿ ಹತ್ತಿರ ಇರುವ ವ್ಯಕ್ತಿ-ವಸ್ತು-ಪ್ರದೇಶಕ್ಕೆ ’ಈ’ ಕಾರ ಬಳಸುತ್ತೇವೆ, ದೂರವಿದ್ದರೆ ’ಆ’ ಕಾರ ಬಳಕೆಯಾಗುತ್ತದೆ] ಹಾಗೇ ಕುಂಟ್ತಾ ಕುಂಟ್ತಾ ಸ್ವಲ್ಪ ಮುನ್ನಡೀತು. ಅಷ್ಟರಲ್ಲೇ ಕತ್ತಲಾಗೇ ಹೋಯ್ತು. ಮಂದಬೆಳಕಿನಲ್ಲಿ ಹತ್ರದಲ್ಲೇ ಅದ್ಕೊಂದು ಗುಹೆ ಕಾಣಿಸ್ತು. ಹೇಗೂ ತಾನಂತೂ ಇವತ್ತು ಮನೆಗೆ ಹೋಗೋದಕ್ಕೆ ಸಾಧ್ಯವಿಲ್ಲಾ ಇಲ್ಲೇ ರಾತ್ರಿ ಕಳಿವಾ ಅಂತೇಳಿ ಕುಂಟುಕುರಿ ಆ ಗುಹೆಯೊಳಗೆ ಹೋಯ್ತು. ಹಗಲಿಡೀ ತಿರುಗಿ ಸುಸ್ತಾಗಿದ್ದ ಅದಕ್ಕೆ ಹೊಟ್ಟೆಯಂತೂ ತುಂಬಿತ್ತು. ಗುಹೆಯ ಒಳಗೆ ಹೋಗ್ತಾ ಹೋಗ್ತಾ ಅಲ್ಲೇ ಒಂದು ಜಾಗ ಹಿಡ್ದು ಮಲಗಿಬಿಡ್ತು. ಮಲ್ಗಿದ ಅದ್ಕೆ ಅಲ್ಲೇ ಜೋಂಪು ಹತ್ತತು.

ರಾತ್ರಿ ಹನ್ನೆರಡು ಹೊಡೆದಿರಬಹುದು. [ನಮ್ಮ ಕಣ್ಣು ಆಗ ಗೋಡೆಯಮೇಲೆ ಅಲ್ಲಾಡಿಸಿಕೊಂಡಿರುತ್ತಿದ್ದ ಸೊಕ್ಕಿನ ಗಡಿಯಾರದ ಮೇಲೆ ಹೋಗುತ್ತಿತ್ತು. ಎಲ್ಲಾ ಕಲ್ಪನೆ ತಾನೇ ಹನ್ನೆರಡು ಹೊಡೀವಾಗ ನಾವು ಮಲ್ಗಿರ್ತೀವಿ, ರಾತ್ರಿ ಅಷ್ಟೊತ್ತು ಎದ್ದಿದ್ದು ದಾಖ್ಲೇನೇ ಇಲ್ಲ. ಅಕಸ್ಮಾತ್ ಎಲ್ಲೋ ಕೃಷ್ಣಾಷ್ಟಮಿಯಂಥಾ ದಿನ ಇದ್ರೆ ಮನೆಯ ಒಳಗೇ ಇದ್ದು ಗೊತ್ತು ಬಿಟ್ರೆ ರಾತ್ರಿ ಹೊರಗೆ ಕಾಡಿಗೆಲ್ಲಾ ಹೋಗಿ ಗೊತ್ತಿದ್ದವರಲ್ಲ. ] ಗುಹೆಯ ಹೊರಗೆ " ಘಾಂವ್ ಘಾಂವ್ ಘಾಂವ್ " ಸಿಂಹ ಘರ್ಜನೆ! ಪಾಪ ಕುರಿಗೆ ಎಚ್ಚರಿಕೆಯಾಗೋಯ್ತು. ಒಬ್ಬನೇ ಅದೂ ಗುಹೆಯೊಳಗೆ ಇದೆಯಲ್ಲಾ ಅದರ ಫಜೀತಿ ಯಾರಿಗೂ ಬೇಡ. ಮೈಯ್ಯೆಲ್ಲಾ ಥರಥರ ನಡುಗ್ತಾ ಇತ್ತು. ಇನ್ನೇನು ಸಿಂಹ ಒಳಗೆ ಬಂದ್ರೆ ಕೊಂದು ತಿನ್ನೋದು ನಿಕ್ಕಿ. ಕುರಿ ಇರೋಬರೋ ಧೈರ್ಯಾನೆಲ್ಲಾ ಸೇರ್ಸ್ಕೊಂಡು ಮನಸ್ನಲ್ಲೇ ಎಲ್ಲಾ ದೇವ್ರನ್ನೂ ಸ್ಮರಣೆಮಾಡ್ಕೊಂಡು [ನೋಡಿ ಈ ಕಥೇಲಿ ಕುರಿಗೂ ದೇವರಿದ್ದಾನೆ !] ಸ್ವಲ್ಪ ಗಂಟ್ಲನ್ನ ಸರಿಮಾಡ್ಕೊಂಡ್ತು. ಹೇಗೂ ಸಾಯೂದ್ ಸಾಯೂದೇ ಬದಕ್ಲಿಕ್ಕೆ ಆದ್ರೆ ನೋಡ್ವ ಹೇಳಿ ಯಾವ್ದೋ ಹೊಸ ಭಯಂಕರ ಕಾಡು ಪ್ರಾಣಿ ಸ್ವರದಲ್ಲಿ ಹೇಳ್ತು " ಅಹಂ ಏಕಂ ಶತಂ ವ್ಯಾಘ್ರಂ ಸಪ್ತದೀ ಕುಂಜರಂ ಬಲಂ. "

[ಆ ಸಮಯದಲ್ಲಿ ಕುತೂಹಲ ಹೇಗಿತ್ತು ನಮ್ಗೆ ಅಂದ್ರೆ ನಿಜಕ್ಕೂ ಅದನ್ನು ಶಬ್ದಗಳಲ್ಲಿ ಹೇಳೋದಕ್ಕೆ ಸಾಧ್ಯಾವಾಗ್ತಾ ಇಲ್ಲ, ಅಜ್ಜಿ ಮುಂದುವರಿಸಿದ್ರು ] ಅಂಥಾ ಮಾದೊಡ್ಡ ಸಿಂಹಕ್ಕೆ ಗುಹೆಯ ಒಳಗಿನ ವಿಚಿತ್ರ ಪ್ರಾಣಿಯ ಆ ಕೂಗು ಕೇಳಿ ಎದೇಲಿ ಪುಕುಪುಕು ನಡುಕ ಶುರುವಾಯ್ತಂತೆ. ಈ ಕುಂಟುಕುರಿ ಹೇಳ್ತಲ್ಲಾ ಹಾಗಂದ್ರೇನು ಗೊತ್ತೇ ? ನಾನು ಒಬ್ಬನೇ ನೂರಾರು ಹುಲಿಗಳನ್ನೂ ಮತ್ತು ಆನೆಗಳನ್ನೂ ಒಟ್ಟಿಗೆ ಸೇರ್ಸಿದ್ರೆ ಎಷ್ಟು ಶಕ್ತಿ ಇರ್ತದೋ ಅಷ್ಟು ಶಕ್ತಿ ಹೊಂದಿದ್ದೇನೆ ಅಂತ. ಈ ಕೂಗಿಗೇ ಸಿಂಹ ಒಂದೇ ಸಲಕ್ಕೆ ಹೆದರಿಬಿಡ್ತಂತೆ! ಗುಹೆಯೊಳಗೆ ಪ್ರವೇಶಮಾಡೋ ಬದ್ಲು ಅಲ್ಲಿಂದ ಬೇಗ ಬೇಗ ಜಾಗ ಖಾಲಿ ಮಾಡ್ತಂತೆ! ಕುಂಟುಕುರಿ ಅಂತೂ ಬದ್ಕಿದ್ನಲ್ಲಪ್ಪಾ ಅಂದ್ಕೊಂಡು ರಾತ್ರಿ ಅಲ್ಲೇ ಇದ್ದು ಮಾರ್ನೇ ದಿವ್ಸ ಬೆಳಿಗ್ಗೆ ಹೊರಗೆ ಬಂತಂತೆ. ನಿಧಾನಕ್ಕೆ ತಿರುಗ್ತಾ ತನ್ನ ಗುಂಪನ್ನು ಹುಡುಕಿ ಸೇರ್ಕೊಂಡ್ತಂತೆ.

--ಇದು ಪೂರ್ಣಕಥೆ. ಇಂತಹ ಹಲವಾರು ಕಥೆಗಳು ನಮ್ಮನ್ನೆಲ್ಲಾ ಅಂದು ಸ್ವಲ್ಪವಾದರೂ ಸಂಸ್ಕಾರವಂತರನ್ನಾಗಿ, ಸುಸ್ವಭಾವ ಉಳ್ಳವರನ್ನಾಗಿ ಮಾಡಲು ಕಾರಣವಾಯ್ತು ಎಂಬುದು ಇಂದಿನ ನನ್ನೋರಗೆಯ ಹಲವರ ಅಭಿಪ್ರಾಯ. ಇಂದು ಕೂಡುಕುಟುಂಬಗಳೂ ಇಲ್ಲ, ಕಥೆಹೇಳುವ ಹಿರಿಯರೂ ಇಲ್ಲ. ಎಲ್ಲರಿಗೂ ಟಿವಿಯೇ ಪರದೈವ! ಇರೋ ಸ್ವಲ್ಪ ಸಮಯವನ್ನು ಅದರ ಮುಂದೇ ಕಳೆಯುವ ಬಯಕೆ. ಇನ್ನು ಮಕ್ಕಳು ಹೇಗೆ ಸಂಸ್ಕಾರವಂತರಾಗಬೇಕು? ಮುಂದಿನೆ ಪೀಳಿಗೆ ಯಾವ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ? ಭಗವದ್ಗೀತೆಯಂತಹ ಒಳಿತನ್ನು ಮತ್ತು ಸರಳ ಸುಖ ಜೀವನ ಸೂತ್ರಗಳನ್ನು ಬೋಧಿಸುವ ಗ್ರಂಥಗಳನ್ನು ಮಕ್ಕಳಿಗೆ ಬೋಧಿಸಲು ತಿಳಿಸಿದರೆ ನಾಗರಿಕತೆ ಅತಿ ಹೆಚ್ಚಾದ ನಮ್ಮಲ್ಲೇ ಕೆಲವರಿಗೆ ಅದು ಧರ್ಮಪ್ರಚಾರವಾಗಿ ಕಾಣುತ್ತದೆ. ಕಾಮಾಲೆಯ ಕಣ್ಣಿಗೆ ಲೋಕವೆಲ್ಲಾ ಹಳದಿ ಎಂಬಂತೇ ಕಂಡಿದ್ದೆಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಂಡರೆ ವಿಷಮಪರಿಸ್ಥಿತಿ ಉದ್ಭವಿಸುತ್ತದೆ. ಒಳ್ಳೆಯದು ಯಾವ ಮತದ ಮೂಲದಿಂದ ಬಂದರೇನು ಅದನ್ನು ಸ್ವೀಕರಿಸೋಣ. ಮತಗಳೆಲ್ಲದರ ಕುರುಡು ನಂಬಿಕೆಗಳನ್ನು ಬಿಟ್ಟುಬಿಡೋಣ ಅಲ್ಲವೇ ?

ಸತ್ಯವನ್ನು ಹೇಳುವುದಾದರೆ ಭಗವದ್ಗೀತೆಯ ಆಂಗ್ಲ ಅನುವಾದವನ್ನೂ, ಅದರ ವ್ಯಾಖ್ಯಾನಗಳನ್ನೂ ಇಡೀ ವಿಶ್ವದ ಎಲ್ಲೆಡೆಯ ಜನ ಒಪ್ಪುತ್ತಾರೆ; ಆದರೂ ಹೊರಗಿನಿಂದ ತಾವು ಅದನ್ನು ಅಳವಡಿಸಿಕೊಂಡಿದ್ದನ್ನು ಹೇಳುವುದಿಲ್ಲ, ತೋರಗೊಡುವುದಿಲ್ಲ. ಎಲ್ಲೋ ಒಬ್ಬಿಬ್ಬರು ಒಬಾಮಾ ಥರದವರು ಹೊರಗಿನಿಂದಲೂ ಒಪ್ಪುತ್ತಾರೆ. ಮನುಷ್ಯ ಹುಟ್ಟುವುದು ಸಾಯುವುದು ನಡೆದೇ ಇರುತ್ತದೆ. ತೀರಾ ಆಧ್ಯಾತ್ಮಿಕವಾಗಿ ನೋಡುವುದಾದದರೆ ಯಾರೂ ಯಾರಿಗೂ ಏನೂ ಅಲ್ಲ ! ಯಾವ ಸಂಬಂಧವೂ ಇಲ್ಲ. ಆದರೂ ಲೌಕಿಕವಾಗಿ ಬದುಕಿರುವವರೆಗೆ ಇಲ್ಲಿರುವ ಸುಖವನ್ನು ಅನುಕೂಲತೆಗಳನ್ನು ಪಡೆಯುವುದು ಜನಸಾಮಾನ್ಯರ ಇಚ್ಛೆಯಾಗಿರುತ್ತದೆ. ವೈಜ್ಞಾನಿಕವಾಗಿ ಇಷ್ಟೆಲ್ಲಾ ಮುಂದುವರಿದ ವಿಶ್ವದ ಜನತೆ ವಿಶ್ವಮಾನವ ತತ್ವವನ್ನು ಅಳವಡಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದೆ!

ಹೀಗೆ ನಾವೊಮ್ಮೆ ಯೋಚಿಸೋಣ. ನಮಗೆಲ್ಲಾ ತಿಳಿದಿರುವಂತೇ ವೈದ್ಯಕೀಯ ಚಿಕಿತ್ಸೆಗಳಿಗೆ ಪ್ರಯೋಗಶಾಲೆ, ಪರಿಕರಗಳು, ಯಂತ್ರಗಳು ಬೇಕು. ಹೊಟ್ಟೆಯೊಳಗಡೆ ಕರುಳಿನಲ್ಲಿ ಏನಾಗುತ್ತಿದೆ ಎಂದು ನೋಡುವುದೇ ಅಲೋಪಥಿ ಚಿಕಿತ್ಸೆಯಲ್ಲ, ಅದು ಆಯುರ್ವೇದವೂ ಅಲ್ಲ, ಹೋಮಿಯೋಪಥಿಯೂ ಅಲ್ಲ. ಏನಾಗಿದೆ ಎಂಬುದನ್ನು ವೈಜ್ಞಾನಿಕ ಉಪಕರಣಗಳ ಮೂಲಕ ತಿಳಿದುಕೊಳ್ಳುವುದು ಆ ಹಂತ. ನಂತರದ ಉಪಚಾರ ಪ್ರಕ್ರಿಯೆಮಾತ್ರ ಆ ಯಾ ಚಿಕಿತ್ಸಾ ಕ್ರಮಗಳಿಗೆ ಬದ್ಧವಾಗಿದ್ದು. ಅದೇ ರೀತಿ ಹಿಂದೂ ಧರ್ಮದಲ್ಲಿ ಬಳಕೆಯಾದ ಭಗವದ್ಗೀತೆ ಕೆಲವು ವೈಜ್ಞಾನಿಕ ಉಪಕರಣಗಳು ಮತ್ತು ಪ್ರಯೋಗಾಲಯವನ್ನು ಬಿಂಬಿಸಿದರೆ ಹೋಮ/ಹವನ/ಪೂಜೆ/ಪುನಸ್ಕಾರಗಳು ಹಿಂದೂ ಮತಕ್ಕಷ್ಟೇ ಮೀಸಲಾದ ಕೈಂಕರ್ಯಗಳಾಗಿರುತ್ತವೆ. ಹೀಗಾಗಿ ಭಗವದ್ಗೀತೆ ಎಂಬಮಾತ್ರಕ್ಕೆ ಜಗತ್ತಿಗೆ ಯಾವನೋ ಮಹಾಜ್ಞಾನಿ ಒದಗಿಸಿಕೊಟ್ಟ ಈ ಮಹಾಯಂತ್ರದ ಪ್ರಯೋಗ ಪರಿವೀಕ್ಷಣಾ ಪಟ್ಟಿ ಸಿಗದೇ ಹೋದರೆ ಅದು ಮನುಕುಲಕ್ಕೆ ನಾವೆಸಗುವ ಅಪಚಾರ ಎಂದರೆ ತಪ್ಪಾಗುವುದಿಲ್ಲ.

ನಿನ್ನೆ ನಾನು ಒಂದು ಹರಟೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದ ಕಾರ್ಯಕ್ರಮ. ಹರಟೆಯ ವಿಷಯ ಹೀಗಿತ್ತು-- ಸಂಸಾರ, ಸಂಸ್ಕಾರ ಮತ್ತು ಸಮಾಚಾರ. ಅನೇಕ ವಿದ್ವಾಂಸರು ವೇದಿಕೆಯ ಮೇಲೂ ಕೆಳಗೂ ಇದ್ದರು. ಅದೊಂದು ಸಾಮಾಜಿಕ ಕಾರ್ಯವಾಗಿದ್ದರಿಂದ ಎಲ್ಲಾ ಮತಗಳವರೂ ಅಲ್ಲಿದ್ದರು. ಸಂಸಾರದ ಸರಿಗಮವನ್ನು ನಿಭಾಯಿಸುವ ಕಲೆ, ಆಧುನಿಕ ಜೀವನದಲ್ಲಿ ಮಕ್ಕಳಿಗೆ ಯಾವ ರೀತಿಯಲ್ಲಿ ಸಂಸ್ಕಾರ ಕೊಡಬೇಕು ಹೀಗೆಲ್ಲಾ ಲೋಕಾಭಿರಾಮವಾಗಿ ನಾಕುಜನ ಕಲೆತು ಮಾತನಾಡುವ ಕ್ರಿಯೆ ಒಂದು ರೀತಿಯ ಹರಟೆ. ಅಲ್ಲಿ ಮುಕ್ತವಾಗಿ ಯಾರೂ ಏನನ್ನೂ ಸಂವಹಿಸಬಹುದಿತ್ತು. ಆಗ ವ್ಯಕ್ತವಾಗಿದ್ದೇ ಮನೆಯಲ್ಲಿ ಹಿರಿಯರ, ಅಜ್ಜ-ಅಜ್ಜಿಯರ ಕೊರತೆ ಕಾಣುವುದರಿಂದಲೂ ಮತ್ತು ಅಪ್ಪ-ಅಮ್ಮ ಇಬ್ಬರೂ ಕೆಲಸದ ನಿಮಿತ್ತ ಮಕ್ಕಳನ್ನು ದಾದಿಯರ ಕೈಗೋ ಇನ್ನಾರಕೈಗೋ ಕೊಟ್ಟು ಇಡೀ ದಿನದಲ್ಲಿ ಒಂದಾವರ್ತಿಯೂ ಮಕ್ಕಳನ್ನು ಸರಿಯಾಗಿ ಗಮನಿಸಲಾರದ್ದೇ ಹೋಗುವುದೂ ಹಲವು ನ್ಯೂನತೆಗಳಿಗೆ ಕಾರಣವಾಗುತ್ತದೆ ಎಂಬುದು.

ಪೂರಕ ನೀರು,ಗೊಬ್ಬರ, ಫಲವತ್ತಾದ ಮಣ್ಣು ಇವಿಷ್ಟಿದ್ದಲ್ಲಿ ಒಂದು ಸಸ್ಯ ಹೇಗೆ ಲೀಲಾಜಾಲವಾಗಿ ಬೆಳೆಯುವುದೋ ಹಾಗೇ ಸರಿಯಾದ ಮಾಹಿತಿ, ಪ್ರೀತಿ,ವಾತ್ಸಲ್ಯ, ಹೊತ್ತಿಗೆ ಸರಿಯಾದ ಆಹಾರ, ನಿದ್ರೆ, ವಿದ್ಯೆ ಇವುಗಳನ್ನೆಲ್ಲಾ ಒದಗಿಸಿದಾಗ ಮಾತ್ರ ಹುಟ್ಟಿದ ಮಗು ಸಮರ್ಪಕವಾಗಿ ಬೆಳೆಯುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ’ಕ್ಯಾಲ್ಶಿಯಮ್ ಡೆಫೀಶಿಯೆನ್ಸಿ’ ಅಂತಲೋ ಇನ್ನೇನೋ ಕೊರತೆ ಅಂತಲೋ ಹೇಳುವಂತೇ ಸಲ್ಲಬೇಕಾದ ಹಲವು ಉಪಚಾರಗಳಲ್ಲಿ ಯಾವುದೇ ವ್ಯತ್ಯಯವಾದರೂ ಮಗು ಅದರ ಫಲವನ್ನು ಉಣ್ಣಬೇಕಾಗುತ್ತದೆ-ಪರೋಕ್ಷ ಪಾಲಕರೂ ಅದರ ಫಲಿತ ಫಲವನ್ನು ಅನುಭವಿಸಬೇಕಾಗುತ್ತದೆ. ಎಲ್ಲವೂ ಯಾಂತ್ರಿಕವಾಗಿಯೇ ನಡೆದರೆ ನಮ್ನಮ್ಮಲ್ಲಿ ಆತ್ಮೀಯತೆ ಎಲ್ಲಿ ಬರುತ್ತದೆ ? ಈರುಳ್ಳಿಯ ಒಳಪದರದಲ್ಲಿರುವ ಪಾರದರ್ಶಕ ಸಿಪ್ಪೆಯಂತೇ ಒಂದು ಆತ್ಮಕ್ಕೂ ಇನ್ನೊಂದು ಆತ್ಮಕ್ಕೂ ಇರಬೇಕಾದ ಭಾವನಾತ್ಮಕ ಸಂಬಂಧ ಬೆಳೆಯುವುದು ಕೇವಲ ಹತ್ತಿರದ ತೊಡಗಿಕೊಳ್ಳುವಿಕೆಯಿಂದ. ಇವತ್ತು ನಮ್ಮಲ್ಲಿ ಅಪ್ಪ-ಅಮ್ಮ [ ಬೆಟರ್ ಮಾಮ್ ಅಂಡ್ ಡ್ಯಾಡ್ !] ಮಕ್ಕಳನ್ನು ದಿನಕ್ಕೊಂದಾವರ್ತಿಯಾದರೂ ಅಪ್ಪಿಕೊಂಡು ಮುದ್ದಿಸುತ್ತಾರೆಯೇ ? ಅಥವಾ ಮಕ್ಕಳು ಪಾಲಕರನ್ನು ಹಾಗೆ ಪ್ರೀತಿಸುತ್ತಾರೆಯೇ ? -ಕೇಳಿಕೊಳ್ಳಬೇಕಾಗಿದೆ!

ಮಕ್ಕಳೇ ಇರುವ ಸಭೆಯಲ್ಲಿ ಸುಮ್ನೇ ಒಬ್ಬೊಬ್ಬರಿಗೂ ಪ್ರತ್ಯೇಕ ಕಾಗದ ಕೊಟ್ಟು ಹೆಸರು, ವಿಳಾಸ [ಐಡೆಂಟಿಟಿ] ಬರೆಯದೇ ನಿಮ್ಮಪ್ಪ ಅಮ್ಮನ ಬಗ್ಗೆ ಏನಾದರೂ ದೂರುಗಳಿದ್ದರೆ ದಾಖಲಿಸಿ ಎಂದರೆ ಪ್ರತೀ ಮಗುವೂ ಕೊಟ್ಟ ಸಮಯವನ್ನೂ ಮೀರಿ ಬರೆಯುತ್ತಿರುತ್ತದೆ ಮತ್ತು ಮತ್ತೊಂದು ಖಾಲೀ ಹಾಳೆಗೆ ಬೇಡಿಕೆ ಇಡುತ್ತದೆ! ಅಂದಮೇಲೆ ಪಾಲಕರ-ಮಕ್ಕಳ ನಡುವೆ ಹೇಳಿಕೊಳ್ಳಲಾಗದ ದುಗುಡಗಳು ಇರುತ್ತವೆ ಎಂದಾಯಿತಲ್ಲ. ಅಷ್ಟೆಲ್ಲಾ ದುಗುಡಗಳನ್ನು ಮಡುಗಟ್ಟಿಸಿಕೊಂಡೇ ಬೆಳೆವ ಮಗುವಿಗೆ ಸಹಜವಾಗಿ ಪ್ರಾಪ್ತವಯಸ್ಸು ಬಂದಮೇಲೆ ಪಾಲಕರ ಮೇಲೆ ಪ್ರೀತಿ-ಮಮತ್ಕಾರ ಇರಲೇಬೇಕೆಂದೇನೂ ಇಲ್ಲ. ಅಪವಾದಕ್ಕೆ ಕೆಲವರಿಗೆ ಇರಬಹುದು. ಬಹುತೇಕರು ವಯಸ್ಸಾದ ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ಬಿಡುವವರೇ ಆಗುತ್ತಾರೆ !

ಅರ್ಧ ಶತಮಾನದ ಹಿಂದಿನವರೆಗೂ ನಮ್ಮ ಕನ್ನಡದ ಮನೆಗಳಲ್ಲಿ ಕೆಲವು ಶಿಷ್ಟಾಚಾರಗಳಿದ್ದವು. ಬೆಳಿಗ್ಗೆ ಹೀಗೀಗೆ, ಮಧ್ಯಾಹ್ನ ಹೀಗೀಗೆ, ಸಾಯಂಕಾಲ ಹೀಗೀಗೆ ಎಂದೆಲ್ಲಾ ಒಂದು ನಿಯಮಿತ ಜೀವನ ಕ್ರಮ ಅಳವಡಿಕೆಯಾಗಿತ್ತು. ಅಲ್ಲಿ ’ದೇವರ ಹೆಸರಿ’ನಲ್ಲಿ ಆ ಭಯದಲ್ಲಿ ಹಲವು ವೈಜ್ಞಾನಿಕ ಶುದ್ಧಾಚರಣೆಗಳು ನಡೆಸಲ್ಪಡುತ್ತಿದ್ದವು. ಮಕ್ಕಳಿಗೆ ಸಾಯಂಕಾಲವಾದರೆ ಕೈಕಾಲು ಮುಖತೊಳೆದು ದೇವರಿಗೆ ದೀಪ ಮುಡಿಸಿ, ಅಜ್ಜಿಯೋ ಅಜ್ಜನೋ ಇನ್ಯಾರೋ ಹಿರಿಯರ ಜೊತೆ ನೆಲದಮೇಲೆ ಕುಳಿತು ಕೋಷ್ಟಕಗಳು, ಮಗ್ಗಿ, ಸುಭಾಷಿತಗಳು, ಶ್ಲೋಕಗಳೇ ಆದಿಯಾಗಿ ಹಲವಾರು ಮಾಹಿತಿಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ತಿನ್ನುವುದಕ್ಕಾಗಿ ಬದುಕುವುದೋ ಬದುಕುವುದಕ್ಕಾಗಿ ತಿನ್ನುವುದೋ ಎಂಬುದರ ಅರ್ಥವನ್ನು ಹಿರಿಯರು ಬಿಡಿಸಿ ಹೇಳುತ್ತಿದ್ದರು. ಎಂತಹ ಆಹಾರ ಹೇಗೆ ಯಾವಾಗ ಎಲ್ಲಿ ಯಾವರೀತಿ ಸ್ವೀಕರಿಸಬೇಕು ಎಂಬುದನ್ನೂ ಕೂಡ ಕಲಿಸಿಕೊಡುತ್ತಿದ್ದರು. ನಶಿಸಿಹೋದ ರಾಜವಂಶದಂತೇ ಇಂದು ಅಂತಹ ಅಪ್ರತಿಮ ಮೇಧಾವಿ ಹಿರಿಯರೂ, ಪಂಡಿತರೂ ನಮ್ಮೊಡನೆ ಸಿಗುತ್ತಿಲ್ಲ, ಎಲ್ಲವೂ ಕನಸಲ್ಲಿ ಕಂಡ ದೃಶ್ಯಗಳಂತೇ ಕಾಣುತ್ತವೆ; ಕನ್ನಡಿಯಲ್ಲಿನ ಗಂಟಾಗಿ ಪರಿಣಮಿಸಿವೆ.

ಸಮಾಜದಲ್ಲಿ ಸ್ವೇಚ್ಛಾಚಾರ, ಸ್ವೈರವರ್ತನೆ ಜಾಸ್ತಿಯಾದಾಗ, ಗುರು-ಹಿರಿಯ ಮಾರ್ಗದರ್ಶಕರು ಇಲ್ಲದೇ ಇರುವಾಗ, ಯಾವುದೇ ಕಟ್ಟುಪಾಡುಗಳಾಗಲೀ ದೈವಭಯವಾಗಲೀ ಇಲ್ಲದೇ ಹೋದಾಗ ನಡೆಯಬಾರದ್ದು ನಡೆಯುತ್ತದೆ, ಘಟಿಸಬಾರದ್ದು ಘಟಿಸುತ್ತದೆ. ಅದರ ಫಲವೇ ಏನೋ ಎಂಬಂತೇ ನಾವಿಂದು ಅತ್ಯಾಧುನಿಕ ಲೈಫ್ ಸ್ಟೈಲ್ ಎಂದುಕೊಳ್ಳುತ್ತಾ ಲಿವ್-ಇನ್ ರಿಲೇಶನ್‍ಶಿಪ್, ಗಂಡನಿಲ್ಲದೇ ಮಗುಪಡೆಯುವ ಕ್ರಿಯೆ ಇನ್ನೂ ಮುಂತಾದ ಹಲವು ತೆರನಾದ ಬದುಕನ್ನು ಕಾಣುತ್ತಿದ್ದೇವೆ. ಒಬ್ಬ ಹುಡುಗನೋ ಹುಡುಗಿಯೋ ತನ್ನನ್ನು ಇನ್ನೊಬ್ಬರೊಂದಿಗೆ ಶಾರೀರಿಕ ಸಂಬಂಧದಲ್ಲಿ ಸಂಪರ್ಕಗಳಲ್ಲಿ ತೊಡಗಿಸಿಕೊಳ್ಳುವಾಗ ಅಲ್ಲಿ ಕೇವಲ ’ ಆ ಯಂತ್ರ ’ ಮಾತ್ರ ಕೆಲಸಮಾಡುವುದೇ ? ಯಾವುದೇ ಭಾವನೆಗಳು ಇಲ್ಲದೇ ಹೋದರೆ ’ ಆ ಕೆಲಸಕ್ಕೆ ಸಿಗಬಹುದಾದ ಯಂತ್ರಗಳ’ನ್ನೇ ಉಪಯೋಗಿಸಬಹುದಿತ್ತಲ್ಲಾ! ಒಬ್ಬ ಹುಡುಗ ಯಾ ಹುಡುಗಿ ಹಲವಾರು ವ್ಯಕ್ತಿಗಳೊಡನೆ ಆ ರೀತಿಯ ಸಂಬಂಧ ಇಟ್ಟುಕೊಳ್ಳಬಹುದೇ ? ಅದರಿಂದ ತೊಂದರೆಯೇನೂ ಇಲ್ಲವೇ? ಮುಂದೆ ಪ್ರಾಯ ಕಳೆದಮೇಲೆ ಮುದುಕಾದಾಗ ಮಕ್ಕಳೂ ಇರದಿದ್ದರೆ ಆಗ ಯಾವ ಲಿವ್-ಇನ್ ಸೌಲಭ್ಯ ಅವರಿಗೆ ದೊರೆಯಬಹುದು? ಎಲ್ಲರೂ ಚಿಂತಿಸಬೇಕಾದ ವಿಷಯ ಎಂದುಕೊಂಡಿದ್ದೇನೆ.

ಹಾದರಕ್ಕೆ ಹುಟ್ಟುವ ಮಕ್ಕಳು ಹಾದಿಯಲ್ಲೇ ಬಿಸುಡಲ್ಪಡುವ ಹಗಲುರಹಸ್ಯ ಪಾಪದ ಆ ಶಿಶುಗಳ ಮಾರಣಹೋಮ ನೋಡಿದರೆ ನಿಜಕ್ಕೂ ನಾಗರಿಕ ಸಮಾಜ ಎಷ್ಟು ಕ್ರೂರಿ ಎನಿಸುತ್ತದೆ. ಬೇಡದ ಮಗುವನ್ನು ಎಲ್ಲೆಲ್ಲೋ ಯಾರಿಗೋ ಸಿಗುವಂತೇ ಕಾಣಿಸಿ ಬಿಟ್ಟು ಕಣ್ಮರೆಯಾಗುವುದೂ ಕಂಡುಬರುತ್ತದೆ. ಇನ್ನು ಕೆಲವರು ನೇರವಾಗಿ ಬೇನಾಮಿ ಹೆಸರಿನಲ್ಲಿ ಅನಾಥಾಶ್ರಮಕ್ಕೆ ಬಿಟ್ಟುಬರುವುದು ತಿಳಿದುಬಂದಿದೆ. ನಾಳೆ ಆ ಮಕ್ಕಳಿಗೆ ತಂದೆ-ತಾಯಿಯ ಪ್ರೀತಿಯಿಂದ ವಂಚಿಸಿದ ಸಾಮಾಜಿಕ ಪಾಪ ಆ ಹಾದರದ ಪಾಲಕರದಾಗಲಿಕ್ಕಿಲ್ಲವೇ? ಕಾಲೇಜಿಗೆ ಹೋಗುವ ಹುಡುಗನಿಗೆ ಏಕಾಂತದಲ್ಲಿ ಮಜಾ ಉಡಾಯಿಸಲು ’ಅವಳು’ ಬೇಕು ಆದರೆ ತಾನು ಮದುವೆಯಾಗುವಾಗ ತನಗೆ ’ಕನ್ಯಾಪೊರೆಹರಿಯದ ಕನ್ಯೆಯೇ ಬೇಕು’ ಎಂಬುದು ಎಷ್ಟು ಧೂರ್ತತನ ಅಲ್ಲವೇ? ಪಾಲಕರ ಕಣ್ತಪ್ಪಿಸಿ ಪಾರ್ಕಿನಲ್ಲೋ ಸಿನಿಮಾ ಟಾಕೀಸಿನಲ್ಲೋ ಮತ್ತೆಲ್ಲೋ ಕುಳಿತು ಚಕ್ಕಂದವಾಡುವ ಹುಡುಗಿಗೆ ಎಲ್ಲಾಮುಗಿದು ಮದುವೆಯಾಗುವಾಗ ’ಸರಿಯಿರುವ ಗಂಡು’ ಬೇಕು; ಸರಿಯಿರುವ ಗಂಡು ಎಲ್ಲಾ ಆಟ ಮುಗಿಸಿನಿಂತ ಹುಡುಗಿಗೆ ಸಿಗಲು ಏನವರಪ್ನಮನೆ ಆಸ್ತಿಯೇ ? ಅಂಥಾ ಜನ ಮದುವೆಯಾದಮೇಲೂ ಮೊದಮೊದಲು ಕೀಲಿ ತಿರುಗಿಸಿದ/ತಿರುಗಿಸಿಕೊಂಡ ಹಳೇ ಕೊಂಡಿಗಳ ನೆನಪಾಗಿ ಮತ್ತೆ ಅವರ ಸಂಪರ್ಕವನ್ನು ಪಡೆಯುವ ಕಳ್ಳಮಾರ್ಗವನ್ನು ಹಿಡಿಯುದಿಲ್ಲವೇ?

ಇದನ್ನೆಲ್ಲಾ ತಿಳಿದೇ ನಮ್ಮ ಪೂರ್ವಜರು ಭಾರತೀಯ ಸಂಸ್ಕಾರವನ್ನು ನಮಗೆ ಕೊಟ್ಟರು ಎನ್ನುವುದಕ್ಕಿಂತ ಅನುಗ್ರಹಿಸಿದರು ಎನ್ನುವುದು ಸರಿಯೆನಿಸುತ್ತದೆ. ರಾಮಾಯಣ ಮಹಾಭಾರತಗಳೆಲ್ಲಾ ಕೇವಲ ಪುಸ್ತಕದ ಕಥೆಗಳೆಂದೂ ಅವು ನಡೆಯಲೇ ಇಲ್ಲಾ ಎಂದೂ ವಾದಿಸುವ ಅರ್ತಂಡ ವಿಜ್ಜಾನಿಗಳೂ ಸಮಾಜದ ದಿಕ್ಕುತಪ್ಪಿಸುವಲ್ಲಿ ಮುಂದಿದ್ದಾರೆ. ನೀವು ಹಿಂದೂ ಮುಸ್ಲಿಮ್ ಕ್ರೈಸ್ತ ಬೌದ್ಧ, ಜೈನ ಯಾವುದೇ ಮತದವರಾಗಿರಲಿ ಪ್ರಾಥಮಿಕವಾಗಿ ಜೀವನದ ಸ್ವಾಸ್ಥ್ಯಸಂಹಿತೆಯನ್ನು ನೋಡಿ. ಮಾನವ ಜೀವನಕ್ಕೆ ಬೇಕಾಗುವ ಅಮೂಲ್ಯ ಆದರ್ಶಗಳು ಕೇವಲ ಭಗದ್ಗೀತೆಯಲ್ಲಿ ಹೇಳಲ್ಪಟ್ಟಿವೆ ಎಂಬುದನ್ನು ಎದೆತಟ್ಟಿಹೇಳುತ್ತಿದ್ದೇನೆ. ಅದು ಭಗವಂತ ಹೇಳಿದ್ದೋ ಇನ್ಯಾರೋ ಹೇಳಿದ್ದೋ ಆಗಿರಲಿ, ಪರವಾಗಿಲ್ಲ; ಆದರೆ ಜಗತ್ತಿನಲ್ಲಿ ಅಂತಹುದೇ ಮತ್ತೊಂದು ಮ್ಯಾನೇಜ್‍ಮೆಂಟ್ ಬೋಧಿಸುವ ಗ್ರಂಥದ ಅಸ್ಥಿತ್ವ ಇಲ್ಲ! ಜಗತ್ತಿಗೆ ಅದನ್ನು ನೀಡಿದಾತ ಹೇಳುತ್ತಾನೆ --ನೀವು ನಿಮ್ಮ ನಿಮ್ಮ ಧರ್ಮದಲ್ಲೇ, ನಿಮ್ಮ ನಿಮ್ಮ ವೃತ್ತಿಯಲ್ಲೇ ಇದ್ದುಕೊಂಡು ಭಗವಂತನನ್ನು ಕಾಣಲು ಸಾಧ್ಯವಿದೆ--ಎಂದು. ಮಾಡುವ ಕೆಲಸಗಳನ್ನು ಹೇಗೆ ಮಾಡಬೇಕು, ಕೈಸೋತಾಗ ಹೇಗೆ ಧೃತಿಗೆಡಬಾರದು ಎಂಬಿತ್ಯಾದಿ ಸುಖೀ ಸಮಾಜದ ಸುಖಬೋಧೆಗಳು ಕೇವಲ 'ಮತಪ್ರಚಾರ'ವೆಂದು ರಾಜಕೀಯದವರಿಂದ ಪರಿಗಣಿಸಲ್ಪಟ್ಟಿರುವುದರಿಂದಲೇ ಇಂದು ಭಾರತದ ಜನರ ಜನನಾಯಕರ ಗುಣಗಳು ಈ ರೀತಿ ಅವನತಿಯ ಹಾದಿ ಹಿಡಿಯುತ್ತಿವೆ.

ಯಾಕೆ ಹೀಗೆಲ್ಲಾ ಆಗುತ್ತಿದೆ? ಯಾರು ಇದನ್ನು ಹಾಳುಮಾಡಿದರು? ಯಾರು ಇದನ್ನು ಸರಿಪಡಿಸುವವರು ಎಂದು ಒಮ್ಮೆ ಆಲೋಚಿಸಿ. ಪಾಶ್ಚಾತ್ಯರು ಎಲ್ಲಾ ಸೌಲಭ್ಯಗಳನ್ನೂ ಶ್ರೀಮಂತಿಕೆಯ ಸುಪ್ಪತ್ತಿಗೆಯನ್ನೂ ಅನುಭವಿಸಿ ಅಲ್ಲೆಲ್ಲೂ ’ಶಾಂತಿ’ ಎಂಬುದು ಸಿಗದೇ ಹುಡುಗಾಟ ಬಿಟ್ಟು ’ಶಾಂತಿ’ಗಾಗಿ ಹುಡುಕಾಟ ನಡೆಸಿ ಭಾರತಕ್ಕೆ ಬರುತ್ತಾರೆ. ಯಾರೋ ಒಬ್ಬಾಕೆ ಶ್ರೀ ಸಾಯಿಬಾಬಾರಿಗೆ ಐನೂರು ಕೋಟಿ ರೂಪಾಯಿಗಳ ಚೆಕ್ ಬರೆದ ಕಥೆಯನ್ನು ಹಿಂದೊಮ್ಮೆ ಹೇಳಿದ್ದೆ. ಇವತ್ತು ನೀವು ಸುದ್ದಿ ಮಾಧ್ಯಮಗಳಲ್ಲಿ ’ಎಲ್ಲಾ ಇದ್ದರೂ ಸಾಯಿಬಾಬಾರವರು ಏನನ್ನೂ ಬಳಸುತ್ತಿರಲಿಲ್ಲ’ ಎಂಬುದನ್ನು ಓದುತ್ತಿದ್ದೀರಿ. ತನ್ನ ದರ್ಶನಕ್ಕೆ, ತನ್ನ ಹತ್ತಿರಕ್ಕೆ ಬರುವ ಭಕ್ತರಿಗೆ ತನ್ನ ಭೌತಿಕ ಕಾಯದ ಬೆವರು, ಎಂಜಲು ಇತ್ಯಾದಿ ಯಾವುದೇ ವಾಸನೆಯು ತಲುಪಬಾರದೆಂಬ ಕಾಳಜಿಯಿಂದ ಅತ್ಯುತ್ಕೃಷ್ಟ ಸುಗಂಧ ದ್ರವ್ಯಗಳನ್ನು ಅವರು ಬಳಸುತ್ತಿದ್ದರು-ಇದನ್ನು ಕೆಲವು ಮಠಾಧಿಪತಿಗಳೂ ಬಳಸುತ್ತಾರೆ ; ಮನುಜ ಸಹಜ-ತಪ್ಪೇನಿದೆ ?

’ಶಾಂತಿ’ ಎಂಬುದು ಕೊಳ್ಳುವ ಆಸ್ತಿಯಲ್ಲ, ಅದು ನಮ್ಮೊಳಗೇ ಉದ್ಭವವಾಗುವ ಒಂದು ಮನೋದೈಹಿಕ ಸ್ಥಿತಿ ಅಲ್ಲವೇ ? ಕುರುಬರ ಕಾಳ[ಕಾಳಿದಾಸ]ನಂತೇ ಮರದ ಕೊಂಬೆಯಮೇಲೆ ನಿಂತು ಬುಡವನ್ನು ಕಡಿದರೆ ಏನಾಗಬಹುದು ? ಸಮಾಜದ ಸ್ವಾಸ್ಥ್ಯ ಹದಗೆಟ್ಟಾಗ ಅದರಮೇಲೇ ನಿಂತ ನಮ್ಮ ಸ್ಥಿತಿ ಏನಾಗಬಹುದು? ಯೋಚಿಸುವ ಕಾಲ ಬಂದುಬಿಟ್ಟಿದೆ. ರಸ್ತೆಯಲ್ಲಿ ಓಡಾಡುವಾಗ ಮುಸುಕುಹಾಕಿಕೊಂಡು ಹುಡುಗರನ್ನು ಅಪ್ಪಿಹಿಡಿದು ಓಡಾಡುವ ಹುಡುಗಿಯರನ್ನು ಕಂಡಾಗ ಯಾರೂ ಪ್ರಶ್ನಿಸುವ ಅವಕಾಶವಿಲ್ಲ; ಹಾಗೇನಾದರೂ ಮಾಡಿದರೆ ಮಾಡಿದವನಿಗೆ ಕಠಿಣ ಸಜೆಯಾಗಬಹುದು! ಹೆಣ್ಣುಮಕ್ಕಳನ್ನು ಹೆತ್ತ ಪಾಲಕರೇ ತಮ್ಮ ಅಳಿಯನಾಗುವ ಹುಡುಗನಿಗೆ ಅಪ್ಪ-ಅಮ್ಮ ಸತ್ತಿರಬೇಕು ಅಥವಾ ಬದುಕಿದ್ದರೆ ಜೊತೆಗಿರಬಾರದು ಎಂದು ನಿರ್ಧರಿಸುವುದು, ಅಕ್ಕ-ತಂಗಿ-ಅಣ್ಣ-ತಮ್ಮ ಇವರುಗಳು ಇದ್ದರೆ ಪದೇ ಪದೇ ಅವರು ಬಂದುಹೋಗಿ ಮಾಡಬಾರದು ಎಂಬಿತ್ಯಾದಿಯೆಲ್ಲಾ ಕರಾರುಗಳನ್ನು ಮಗಳಿಗೆ ಕಲಿಸಿಕೊಡುವುದರಿಂದ ’ಅವಿಭಕ್ತ ಕುಟುಂಬ’ ವೆಂಬ ಶಬ್ದ ಇತಿಹಾಸದ ಪುಟಗಳನ್ನು ಸೇರುತ್ತಿದೆ!

ಭೂಮಿ ಯಾರಿಗೂ ಶಾಶ್ವತವಲ್ಲ. ಎಲ್ಲರೂ ಬಂದುಹೋಗುವವರೇ! ಆದರೂ ನಾವೇ ಏರಿಕೊಳ್ಳುವ ಚಲಿಸುತ್ತಿರುವ ರೈಲಿನಲ್ಲಿ ಬೋಗಿಗಳು ಗಲೀಜಾಗಿದ್ದರೆ, ತುಕ್ಕು ಹಿಡಿದು ಕೊಂಡಿ ಕಳಚಿಕೊಳ್ಳುವ ಹಂತ ತಲ್ಪಿದ್ದರೆ ಯಾರಿಗಾದರೂ ಏರಿಕೊಳ್ಳಲು ಇಷ್ಟವಾಗುವುದೇ? ನಾಟಕವೊಂದನ್ನು ಮಾಡಲು ಹೊರಟಾಗ ಪ್ರತಿಯೊಬ್ಬ ಪಾತ್ರಧಾರಿಯೂ ತನ್ನ ಪಾತ್ರವನ್ನು ಹೇಗೆ ಸಮರ್ಪಕವಾಗಿ ನಿಭಾಯಿಸಲು ಪ್ರಯತ್ನಿಸುವನೋ/ಳೋ ಹಾಗೇ ಭಗವಂತ ಕೊಟ್ಟ ಜೀವನನಾಟಕದ ಪಾತ್ರಧಾರಿಗಳಾದ ನಮಗೆ ಕೊಟ್ಟ ಪಾತ್ರವನ್ನು ನಿಭಾಯಿಸಲು ಬರುತ್ತಿಲ್ಲವಲ್ಲ! ಈ ನಾಟಕದಲ್ಲಿ ಯಾರೂ ಯಾರಿಗೂ ಸಂಬಂಧವಲ್ಲ, ಆದರೆ ನಾಟಕ ಮುಗಿಯುವವರೆಗೂ ಅಣ್ಣನೋ ಅಪ್ಪನೋ ಸ್ನೇಹಿತೆಯೋ ಗಂಡನೋ ಹೆಂಡತಿಯೋ ಮತ್ತಿನ್ಯಾರೋ ಆಗಿ ಪಾತ್ರ ನಿರ್ವಹಿಸುವ ಅನಿವಾರ್ಯತೆ ಇದೆ. ನಾಟಕ ನಡೆಯುತ್ತಿರುವಾಗಲೇ ಅದನ್ನು ಕೆಡಿಸುವ [ಬಾಂಬ್ ಅಟ್ಯಾಕ್, ಹೈಜಾಕ್, ಮತಾಂತರ ಮೊದಲಾದ] ಕೆಲಸ ಎಷ್ಟು ಸಮಂಜಸ?

ಆರ್ಷೇಯ ಋಷಿವರ್ಯರುಗಳು ತಮ್ಮ ದಿವ್ಯಜ್ಞಾನಕ್ಕೆ ಲಭಿಸಿದ ಉತ್ತಮ ಅಂಶಗಳನ್ನು ಜಗತ್ತಿನ ಎಲ್ಲರ ಒಳಿತಿಗಾಗಿ ತಮ್ಮ ಔದಾರ್ಯದಿಂದ ಹಂಚಿಹೋದರು. ವೇದಗಳು ಪುರಾಣಗಳು ಉಪನಿಷತ್ತುಗಳು ಹೀಗೇ ಹಲವಾರು ಜ್ಞಾನನಿಧಿಗಳು ನಮಗೆ ಇಂದಿಗೂ ಲಭಿಸುತ್ತಿವೆ. ಸಾವಿರ ಸುತ್ತುಗಳನ್ನು ಹಾಕಿದರೂ ಗಂಟು ಒಂದೇ ಎಂಬ ತತ್ವದಂತೇ ಅವೆಲ್ಲವೂ ಕೊನೆಗೊಮ್ಮೆ ಸಾರುವುದು : ಮನುಜಮತ-ವಿಶ್ವಪಥ ! |ವಸುಧೈವ ಕುಟುಂಬಕಮ್ | ಎನ್ನುವುದು ಹೊಸದಾಗಿ ಮತಾಂಧರ ದಾಂಧಲೆ ಆರಂಭವಾದ ಮೇಲೆ ಜೋಡಿಸಿದ ವ್ಯಾಖ್ಯೆಯಲ್ಲವಲ್ಲ! ಶ್ರೀಸೂಕ್ತ ಸಾರುತ್ತದೆ --

|| ಪ್ರಾದುರ್ಭೂತೋಸ್ಮಿರಾಷ್ಟ್ರೇಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ ||

'ಉತ್ತಮವಾದ ದೇಶದಲ್ಲಿ ಜನಿಸಿರುವ ನನ್ನ ಪ್ರಾರ್ಥನೆ : ನನ್ನ ರಾಷ್ಟ್ರಕ್ಕೆ ಕೀರ್ತಿಯನ್ನೂ ಸಮೃದ್ಧಿಯನ್ನೂ ಕೊಡು' ಎಂದು. ಯಾವನೋ ಒಬ್ಬ ವ್ಯಕ್ತಿಯೋ ಬ್ರಾಹ್ಮಣನೋ ಎಲ್ಲೋ ಒಂದುಕಡೆ ಕುಳಿತು ಗಾಯತ್ರಿಯನ್ನು ಪಠಿಸಿದರೆ ಅದರಲ್ಲಿ

’ಧೀಯೋ’

ಎಂಬ ಶಬ್ದವನ್ನು ಉಚ್ಚರಿಸುತ್ತಾನೆ-ಅದು ಸಂಸ್ಕೃತ ವ್ಯಾಕರಣದ ಪ್ರಕಾರ ಬಹುವಚನ ಸೂಚಕವಾಗಿದೆ. ಕೇವಲ ತನಗೆ ಮಾತ್ರವಲ್ಲದೇ ನಮಗೆ ಅಥವಾ ಹಲವರಿಗೆ ಎಂಬ ಅರ್ಥವನ್ನು ಕೊಡುತ್ತದೆ. ಹೀಗಿರುವಾಗ ಕಬ್ಬಿಣದ ಕಡಲೆಯೆಂದು ಭ್ರಮಿಸಿ ಓದದೇ ಹೀಗಳೆಯುವ [ದ್ರಾಕ್ಷಿತಿನ್ನಲಾರದ ನರಿಯಂತೇ] ನಮ್ಮ ಯುವಜನಾಂಗ ನಮ್ಮ ಆರ್ಷೇಯ ವಾದಗಳನ್ನೂ ಸೂತ್ರಗಳನ್ನೂ ದೂರೀಕರಿಸಿದೆ. ಕೇವಲ ಅಲ್ಪಕಾಲದಲ್ಲಿ ಸಿಗಬಹುದಾದ ಕ್ಷಣಿಕ ಸುಖವೈಭೋಗಗಳಿಗೆ ಮಾರುಹೋಗಿ ನಿಜವಾದ ಆನಂದವನ್ನೂ ಸುಖವನ್ನೂ ಕಳೆದುಕೊಳ್ಳುತ್ತಿದ್ದಾರೆ. life is short, enjoy the fullest ಎಂದು ಯಾರೋ ರಾಬರ್ಟೋ ಲೋಬೋವೋ ಅಮೇರಿಕಾದಲ್ಲಿ ಹೇಳಿದ್ದನ್ನು ಇಲ್ಲಿನ ನಮ್ಮ ಪಡ್ಡೆಗಳು ನಿತ್ಯವೂ ಪಠಿಸುತ್ತಾರೆ. ಮೊಬೈಲ್ ನಲ್ಲಿ ಎಸ್ಸೆಮ್ಮೆಸ್ಸು ಕಳಿಸುತ್ತಾರೆ ! ಇನ್ನು ನೋಡಬಾರದ ಎಸ್ಸೆಮ್ಮೆಸ್ಸುಗಳು ಎಮ್ಮೆಮ್ಮೆಸ್ಸುಗಳು ಹುಡುಗ-ಹುಡುಗಿಯರು ಕದ್ದುಮುಚ್ಚಿನೋಡುವುದೂ ಪ್ರಸರಿಸುವುದೂ ನಡೆದೇ ಇದೆ. ತಮಾಷೆಗೆ ಕೆಲವರು ಹೇಳುವುದಿದೆ- ಆಂಗ್ಲರು ಎಲ್ಲವನ್ನೂ ಭಾರತದಿಂದ ಹೊತ್ತುಕೊಂಡು ಹೋದರು, ಆದರೆ ಅವರ ಭಾಷೆಯನ್ನು ಮಾತ್ರ ಇಲ್ಲೇ ಬಿಟ್ಟುಹೋದರು-ಎಂದು, ಈಗ ಅದಕ್ಕೆ ಇನ್ನೊಂದನ್ನೂ ಸೇರಿಸಬೇಕು, ’ಆಂಗ್ಲರು ಎಲ್ಲವನ್ನೂ ಭಾರತದಿಂದ ಹೊತ್ತುಕೊಂಡು ಹೋದರು, ಆದರೆ ಅವರ ಭಾಷೆ ಮತ್ತು ಸಂಸ್ಕೃತಿಗಳ ಬೀಜಗಳನ್ನು ಮಾತ್ರ ಇಲ್ಲೇ ಬಿತ್ತುಹೋದರು ’ !


’ನಾವು ನಾವೇ ನಾವು ಅವರಲ್ಲ’ ಎಂದು ನಿನ್ನೆ ಬ್ಲಾಗಿಗ ಮಿತ್ರರೊಬ್ಬರು ಬರೆದಿದ್ದರು, ಅದು ನಿಜವೇ. ನಾವು ನಾವಾಗಿರಬೇಕೇ ಹೊರತು ನಾವು ಅವರಾಗಬಾರದು. ಖ್ಯಾತ ಬರಹಗಾರ ಯಂಡಮೂರಿ ವೀರೇಂದ್ರನಾಥ್ ತಮ್ಮ ’ಮೈಂಡ್ ಪವರ್ ’ ಎಂಬ ಹೊತ್ತಗೆಯಲ್ಲಿ ಬರೆಯುತ್ತಾರೆ [ತುಂಬಾ ಉತ್ತಮ ಪುಸ್ತಕ-ಅಂಥದ್ದನ್ನು ನೀವೆಲ್ಲಾ [ಓದಿರದವರು] ಓದಬೇಕು]-- ಪ್ರತಿಯೊಬ್ಬರ ಜೀವನವೂ ಅವರವರಿಗೆ ಮುಖ್ಯವೇ. ನೀವು ನೀವಾಗಿ ಇಷ್ಟಪಡುವ ವೃತ್ತಿಯನ್ನು ಆಯ್ದುಕೊಳ್ಳಿ ಮತ್ತು ಆ ವೃತ್ತಿಯಲ್ಲಿ ನೀವೇ ಎಲ್ಲರಿಗಿಂತಲೂ ಉತ್ತಮ ಎಂಬುದನ್ನು ನಿಮ್ಮ ಕೃತಿಯಿಂದ ತೋರಿಸಿ. ಆಗ ನಿಮ್ಮ ಜೀವನವೆಂಬ ಸಿನಿಮಾದ ಹೀರೋ ನೀವೇ ಆಗಿರುತ್ತೀರಿ--ಎಂದು. ಭಗವದ್ಗೀತೆ ’ಕರ್ಮಯೋಗ’ದಲ್ಲಿ ಇದನ್ನೇ ಹೇಳುತ್ತದಲ್ಲಾ ! ಬಹುತೇಕ ಅವರ ಆ ಪುಸ್ತಕದ ಬರಹಗಳು ಭಗವದ್ಗೀತೆಯ ಸಾರವನ್ನೇ ಒಳಗೊಂಡಿವೆ. ಜಗತ್ತಿನಲ್ಲಿಯೇ ಅತ್ಯುತ್ತಮ ಪುಸ್ತಕವೆನಿಸಬಲ್ಲ ಆ ಅಂತಹ ಪುಸ್ತಕಗಳಿಗೂ ಆಧಾರವಾಗಿ ಭಗವದ್ಗೀತೆ ನಿಲ್ಲುತ್ತದೆ, ಸಲ್ಲುತ್ತದೆ ಎಂದಾದಾಗ ನಮಗೆ ಮಾತ್ರ ಅದು ಯಾಕೆ ವರ್ಜ್ಯವೋ ತಿಳಿಯದಾಗಿದೆ.

ಓ ನನ್ನ ರಾಷ್ಟ್ರಬಂಧುಗಳೇ, ನೀವು ಯಾವುದೇ ಮತದ ಅನುಯಾಯಿಗಳಾಗಿದ್ದರೂ ಅಡ್ಡಿಯಿಲ್ಲ, ನೀವು ಹಿಂದೂಗಳಾಗಬೇಕೆಂಬ ಆಗ್ರಹವಾಗಲೀ ಬೇಡಿಕೆಯಾಗಲೀ ಇರುವುದಿಲ್ಲ. ಎಲ್ಲಾ ಪೂರ್ವಾಗ್ರಹಗಳನ್ನು ಕಿತ್ತೊಗೆದು ಒಮ್ಮೆ ಮುಕ್ತ ಮನಸ್ಸಿನಿಂದ ಗೀತಾಮೃತವನ್ನು ಪಾನಮಾಡಿ, ಅದರ ರುಚಿಯನ್ನು ಒಮ್ಮೆ ಅರಿತಿರಾದರೆ ಮತ್ತೆ ಆವಾಗ ನಿಮಗೇ ಅದರ ಮಹತ್ವದ ಅರಿವಾಗುತ್ತದೆ. ಯಾರೂ ಜೀವನದಲ್ಲಿ ಸೋಲಬಾರದು, ಜೀವನ ಕೇವಲ ನಾಟಕ, ಯಾವ ಯಾವ ಮಾರ್ಗಗಳಿಂದ ಹೇಗೆ ಹೇಗೆ ಗೆಲ್ಲಬೇಕೆಂಬ ಸುಲಭ ಸೂತ್ರಗಳನ್ನು ಲೇಖಕ ಕೊಟ್ಟಿದ್ದಾನೆ. ಲೇಖಕ ’ಶ್ರೀಕೃಷ್ಣ’ ಎನ್ನುವುದನ್ನೂ ಅದು ’ಭಗವದ್ಗೀತೆ’ ಎಂಬುದನ್ನೂ ಮುಚ್ಚಿಟ್ಟು ಅದೊಂದು ಬರೇ ಉತ್ತಮ ಪುಸ್ತಕವೆಂದು ತಿಳಿದು ಓದಿನೋಡಿ. ನನ್ನ ದೇಶವಾಸಿಗಳು ಬದುಕಿನಲ್ಲಿ ಸಕಲ ಸುಖ ಶಾಂತಿ ಸಮೃದ್ಧಿ ಓಜಸ್ಸು ತೇಜಸ್ಸು ಧೈರ್ಯ ಹೀಗೇ ಎಲ್ಲವನ್ನೂ ಪಡೆದು ತಮ್ಮ ಜೀವನ ನಾಟಕದ ಪಾತ್ರವನ್ನು ಹೀರೋ ಆಗಿ ನಿರ್ವಹಿಸಬೇಕು ಮತ್ತು ಅದನ್ನೇ ಮುಂದಿನ ನಮ್ಮ ದೇಶವಾಸಿಗಳಿಗೆ ಕಲಿಸಬೇಕೆಂಬ ಕಳಕಳಿಯಿಂದ ಇವತ್ತೀ ಲೇಖನ ಬರೆದೆ. ಜಗತ್ತಿನ ಎಲ್ಲರೂ ಸುಖದಿಂದಿರಲಿ ಎಂದು ಪ್ರಾರ್ಥಿಸಿ ಅದನ್ನೇ ಹಾರೈಸಿ ಸದ್ಯ ವಿರಮಿಸುವುದಕ್ಕೆ ತಮ್ಮಲ್ಲಿ ಅಪ್ಪಣೆ ಕೇಳುತ್ತಿದ್ದೇನೆ, ನಮಸ್ಕಾರಗಳು.

Thursday, July 21, 2011

ಭಾವಾಂತರಂಗದಲ್ಲಿ .........


ಭಾವಾಂತರಂಗದಲ್ಲಿ .........

ಕೆಲವೊಮ್ಮೆ ಮನಸ್ಸಿನಲ್ಲಿ ಉದ್ಭವವಾಗುವ ಭಾವಗಳನ್ನು ಹಿಡಿದಿಡಲು ಶಬ್ದಗಳು ಸಿಗುವುದೇ ಇಲ್ಲ. ಯಾಕೆಂದರೆ ನಾವೇನು ಹೇಳಬೇಕೆಂದಿರುವೆವೋ ಅದನ್ನು ನಮಗಿಂತ ಚೆನ್ನಾಗಿ ಇನ್ನೊಬ್ಬರು ಹೇಳಿರುವಾಗ ಅದನ್ನು ಓದುವಲ್ಲಿ, ಆಲಿಸುವಲ್ಲಿ ಇರುವ ಆನಂದ ಮತ್ತೆ ಅದನ್ನೇ ಬೇರೇ ಪದಗಳಲ್ಲಿ ಬರೆಯಲು ಹೊರಟಾಗ ಸಿಗುವುದಿಲ್ಲ. ಅದರಲ್ಲಂತೂ ಹಾಡುಗಳು ಘಮ್ಮನೆ ಹೊಮ್ಮಿ ಅರಳಿಸುವ ಆನಂದ ಮನದಲ್ಲಿ ಅಂತಹ ಭಾವಗಳ ಸ್ಫುರಣೆ ಜಾಸ್ತಿಯಾಗಿ ಯಾವುದೋ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುವಲ್ಲಿ ಯಶಸ್ಸು ಪಡೆದುಬಿಡುತ್ತವೆ!

ಆಗಾಗ ಅಲ್ಲಲ್ಲಿ ಓಡಾಡುವಾಗ ಇಂದಿನ ಫ್ರೀಕ್ವೆನ್ಸಿ ಮಾಡ್ಯುಲೇಟೆಡ್ ರೇಡಿಯೋಗಳಲ್ಲಿ, ಆಟೋ ಚಾಲಕನಲ್ಲಿ ಡ್ರಾಪ್ ತೆಗೆದುಕೊಳ್ಳುವಾಗ, ಕೂದಲು ಕತ್ತರಿಸಲು ಹೋಗಿ ಕ್ಯೂನಲ್ಲಿ ಕುಳಿತಾಗ/ಬ್ಯೂಟಿ ಪಾರ್ಲರಿನಲ್ಲಿ ಐಬ್ರೋ ಮಾಡಿಸಲು ಹೋದಾಗ, ಬಸ್ಸಿನಲ್ಲಿ ಪಕ್ಕದವನ ಮೊಬೈಲ್‍ನಲ್ಲಿ ಅಂತಹ ಹಾಡುಗಳು ಕೇಳಿದಾಗ, ದೂರದ ಯಾವುದೋ ಕಾರ್ಯಕ್ರಮದವರು ಧ್ವನಿವರ್ಧಕದಲ್ಲಿ ಹಾಕಿದ ಹಾಡು ಕೇಳಿದಾಗ [ಇವರು ಉತ್ತಮ ಹಾಡುಗಳನ್ನು ಹಾಕುವುದು ಅಪರೂಪ, ಇರಲಿ] , ಯಾರೋ ಚಿಕ್ಕಮಕ್ಕಳು ಶಾಲೆಗಳಲ್ಲಿ ಹಾಡುಗಳಿಗೆ ನೃತ್ಯರೂಪ ಕೊಟ್ಟಾಗ, ಭವ್ಯವೇದಿಕೆಗಳಲ್ಲಿ ಅತಿಥಿಗಳು ಆಗಮಿಸುವುದಕ್ಕೂ ಮೊದಲು ಸಭಿಕರ ಕಾಲಕ್ಷೇಪಕ್ಕಾಗಿ ಅಂತಹ ಹಾಡುಗಳನ್ನು ಹಾಕಿರುವಾಗ..... ಹೀಗೇ ಒಂದಲ್ಲ ಎರಡಲ್ಲ ಯಾಂತ್ರಿಕ ಜೀವನದ ಹಲವಾರು ಸಂದಿಗೊಂದಿಗಳಲ್ಲಿ ಅಲ್ಲಲ್ಲೇ ಬೈಟು ಟೀ ಕುಡಿದಂತೇ ಎರಡೆರಡು ಕೆಲಸಗಳನ್ನು ಒಟ್ಟಿಗೇ ಮಾಡುವ ಪರಿಪಾಟ ನಮ್ಮಂತಹ ಬಹುತೇಕರದು.

ಶಾಸ್ತ್ರೀಯ ಸಂಗೀತಗಳು ನಮ್ಮ ಮಾನಸಿಕ ನೋವನ್ನು ಕಳೆಯುತ್ತವೆ ಎಂಬುದು ಅಪ್ಪಟ ಸತ್ಯ ಮತ್ತು ಹಲವು ರಾಗಗಳು ಅನೇಕ ಕಾಯಿಲೆಗಳು ಬರದಂತೇ ತಡೆಯಲು ಪೂರಕ ಎಂಬುದು ವೈಜ್ಞಾನಿಕವಾಗಿ ಸಾಬೀತಾದ ವಿಷಯ. ಇದನ್ನು ಪದ್ಮಪಾಣಿಯಂತಹ ಸಂಗೀತ ನಿರ್ದೇಶಕರು ಅಳವಡಿಸಿ ತೋರಿಸಿದ್ದಾರೆ. ಆದರೂ ಎಲ್ಲಾ ಸರ್ತಿನೂ ಸಂಗೀತ ಕಚೇರಿಯಲ್ಲಿ ಕೂತು ಗಂಟೆಗಟ್ಟಲೆ ಕೇಳುವ ವ್ಯವಧಾನವಾಗಲೀ ಅವಕಾಶವಾಗಲೀ ಎಲ್ಲರಿಗೂ ಸಿಗುವ ಸಂಭವ ಕಡಿಮೆ. ಇರುವ ಸಮಯದಲ್ಲೇ ಹಾಗೆ ಮನರಂಜಿಸಲು ಬೇಕಾಗಿ ಹುಟ್ಟಿಕೊಂಡ ಸಂಗೀತ ಮಾರ್ಗವೇ ’ಸುಗಮ ಸಂಗೀತ.’ ಪ್ರಾಯಶಃ ಸುಗಮ ಸಂಗೀತದ ಬಳಕೆಯಾಗದಿದ್ದರೆ ಇಂದು ನಾವು ಹಲವು ಇಂತಹ ಗೀತೆಗಳನ್ನು ಇಷ್ಟು ಸುಲಲಿತವಾಗಿ ಕೇಳಲು ಆಗುತ್ತಿರಲಿಲ್ಲವೇನೋ ! ಸುಗಮ ಸಂಗೀತವೆಂಬುದು ಕನ್ನಡಕ್ಕೆ ಸಿಕ್ಕ ವರವೆಂದರೆ ತಪ್ಪಾಗಲಾರದು.

" ನಾವೆಂದೋ ಕೇಳಬೇಕೆಂದು ಬಯಸಿದ್ದ ಆ ಹಾಡು ಇಂದು ಬಂತಲ್ಲಾ " ಎಂದು ಸಹಜವಾಗಿ ಉದ್ಗಾರ ಹೊರಡುವ ಸನ್ನಿವೇಶಗಳೂ ಇವೆ. ಕೆಲವೇ ಕೆಲವು ಸೀಡಿ [ಧ್ವನಿ ಫಲಕ] ಮಾಧ್ಯಮಗಳಲ್ಲಿ ಅವುಗಳನ್ನು ಶೇಖರಿಸಿಟ್ಟು ನಾವೇ ನಾವಾಗಿ ಹಾಕಿಕೊಂಡು ಕೇಳುವಾಗ ಸಿಗದ ಮಜಾ ಅಲ್ಲಲ್ಲಿ ಚೂರುಪಾರು ಯಾರೋ ಹಾಕಿದ ಹಾಡುಗಳನ್ನು ಕೇಳಿದಾಗ ಸಿಗುತ್ತದೆ-ಅದಕ್ಕೆ ಕಾರಣ ನಮ್ಮ ಮನದ ತುಡಿತ. ಭಾವಜೀವಿಯಾದ ಮನುಜನಿಗೆ ದುಡಿಯುವ ಹಲವಾರು ದಿನಗಳಲ್ಲಿ ಕೆಲವೊಮ್ಮೆ ’ಇವತ್ತು ಏನೂ ಮಾಡುವ ಮನಸ್ಸಿಲ್ಲಾ’ ಎಂದಾಗಿರುತ್ತದೆ ಅಥವಾ ಇನ್ಯಾವುದೋ ಕಾರಣಕ್ಕೆ ಕೆಲಸಗಳಲ್ಲಿ ಜಿಗುಪ್ಸೆ ಬಂದಿರುತ್ತದೆ. ಬದುಕಿನ ಆತಂಕ, ಬೇಸರ, ಕಷ್ಟ, ನೋವು, ಭಯ ಮುಂತಾದ ಹಲವು ಸನ್ನಿವೇಶಗಳಲ್ಲಿ ಯಾವುದೋ ಕವಿ ಬರೆದ ಇಂಪಾದ ಹಾಡೊಂದು ಕಿವಿಯಮೇಲೆ ಹಾದುಹೋದರೆ ಅದು ಕೊಡುವ ಅಲ್ಪ ತೃಪ್ತಿ ಮರೆಯಲಾಗದ್ದಾಗಿರುತ್ತದೆ.

ಬೆಳಗಿನ ಜಾವ ಬೀಳುವ ಸಿಹಿಗನಸಿನಂತೇ, ನಮಗೆ ಪ್ರಿಯರಾದ ವ್ಯಕ್ತಿಗಳು ಬಂದು ಚುಂಬಿಸಿದ ಘಳಿಗೆಯಂತೇ, ಮುದ್ದಾದ ಮಗುವೊಂದು ಅಂಬೆಗಾಲಿಡಲು ಆರಂಭಿಸಿದಾಗ ಅದರ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುವ ಅಮ್ಮನಂತೇ, ಚಿತ್ರಬರೆದ ಕಲಾಕಾರ ದೂರನಿಂತು ಅದನ್ನೇ ಮತ್ತೆ ಮತ್ತೆ ನೋಡಿ ಆನಂದಿಸುವಂತೇ, ಗಾಯಕನೊಬ್ಬ ತನ್ನ ಗಾಯನವನ್ನೇ ಮತ್ತೆ ಮತ್ತೆ ಕೇಳಿ ಇದು ಚೆನ್ನಾಗಿ ಬಂತೆಂದು ಅಂದುಕೊಳುವಂತೇ, ದೊಡ್ಡ ವಾಣಿಜ್ಯ ಸಂಸ್ಥೆಯೊಂದನ್ನು ಕಟ್ಟಿ ಅದು ಹೆಮ್ಮರವಾಗುವುದನ್ನು ಕಂಡ ಸಂಸ್ಥೆಯ ಮೂಲಪುರುಷ/ಸ್ತ್ರೀ ಯಂತೇ ಇಲ್ಲಿನ ಸಂತಸ ಅವರ್ಣನೀಯ, ಅನಿರ್ವಚನೀಯ !

ಇಂತಹ ಅನಿಸಿಕೆಗಳನ್ನು ಹೇಳಬೇಕೆಂದರೂ ಹೇಳಲು ಸಾಧ್ಯವಾಗುವುದೇ ಇಲ್ಲ ! ತಿರುಪತಿ ನೋಡಿದ ಹಲವರು ದೇವರ ವಿಗ್ರಹ ಹೇಗಿತ್ತೆಂದು ನೇರವಾಗಿ ಹೇಳಲು ತಡಕಾಡುತ್ತಾರೆ ಹೇಗೋ, ಪ್ರಿಯತಮನ ಸುಂದರ ವದನವನ್ನು ಕದ್ದು ನೋಡಿದ ಪ್ರಿಯತಮೆಗೆ ತನ್ನ ಸಖಿಯರ ಕೂಡ ಆತನ ರೂಪಲಾವಣ್ಯವನ್ನು ವಿವರಿಸಲಾಗುವುದಿಲ್ಲ ಹೇಗೋ ಹಾಗೇ ಈ ಭಾವನೆಗಳಿಗೆ ಕಟ್ಟುಹಾಕಿ ಅವುಗಳನ್ನು ಬಂಧಿಸುವುದು ಸಾಧ್ಯವಾಗುವ ಮಾತಲ್ಲ. ಹಾಗಂತ ಅವು ನಗಣ್ಯವೆನಿಸಿದರೂ ಅವುಗಳ ವ್ಯುತ್ಫತ್ತಿಯಿಂದ ಸಿಗುವ ರಂಜನೆ ಟಿಕೆಟ್ಟು ಖರೀದಿಸಿ ಕುಳಿತು ಮೂರು ಗಂಟೆಯೋ ಆರು ಗಂಟೆಯೋ ನೋಡಿದ ಮನೋರಂಜನಾ ಕಾರ್ಯಕ್ರಮಗಳಲ್ಲಿ ಸಿಗುವಂಥದ್ದಲ್ಲ!

ಭಾವುಕರಲ್ಲಿ ಕೆಲವು ಜನ ಕವಿಗಳೂ ಇರುತ್ತಾರಲ್ಲವೇ? ತಮ್ಮ ಯಾವುದೋ ದಿನಗಳ ಯಾವುದೋ ಘಳಿಗೆಗಳ ಯಾವ್ಯಾವುದೋ ಸನ್ನಿವೇಶಗಳಲ್ಲಿ ಅಲ್ಲಿ ಹುಟ್ಟಿದ ಭಾವಗಳಿಗೆ ಜೀವ ತುಂಬುವ ಕೆಲಸವನ್ನು ಅವರು ಮಾಡಿರುತ್ತಾರೆ. ನಾನು ಈ ಮೊದಲೇ ಹೇಳಿರುವಂತೇ ಕೂಸು ಹುಟ್ಟುವ ವರೆಗೆ ಅದು ಅಮ್ಮನ ಹೊಟ್ಟೆಯೊಳಗೆ ಅಮ್ಮನಿಗೆ ಮಾತ್ರ ಸಂಬಂಧಿಸಿದ್ದು ಎನ್ನುವ ಹಾಗಿರುತ್ತದೆ- ಯಾವಾಗ ಕೂಸು ಜನಿಸಿತೋ ಅದು ಅಪ್ಪನಿಗೂ ಸುತ್ತಲ ಬಂಧುಗಳಿಗೂ ಸಂಬಂಧಿಸುತ್ತದೆ ಅಲ್ಲವೇ ? ಅದೇ ರೀತಿ ಇಂತಹ ಭಾವಗಳಿಂದ ಕವಿಯ ಮನ ಬಸಿರಾಗಿ ಕವನ ಜನಿಸುವವರೆಗೆ ಅದು ಕವಿಯ ಸ್ವಸಂತೋಷದ್ದಾಗಿರುತ್ತದೆ, ಯಾವಾಗ ಕವನ ಬರೆದು ಪ್ರಕಟಿಸಲ್ಪಟ್ಟಿತೋ ಆಗ ಆ ಕವನ ಹತ್ತಾರು ಜನರಿಗೆ ತಲುಪುತ್ತದೆ-ಸಂಬಂಧ ಬೆಳೆಯುತ್ತದೆ.

ಇಂತಹ ಕೆಲವು ಕವಿಗಳು ಬರೆದ ಕೆಲವು ಗೀತೆಗಳಂತೂ ನಿಜಕ್ಕೂ ಒಂದನ್ನೊಂದು ಮೀರಿಸುವ ಪೈಪೋಟಿಗಿಳಿಯುತ್ತವೆ. ಈ ಸಾಲಿನಲ್ಲಿ ದಿ| ಅಡಿಗರು, ದಿ| ನರಸಿಂಹ ಸ್ವಾಮಿಗಳು, ಇಂದು ನಮ್ಮ ಮಧ್ಯೆ ಇರುವ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು, ಎಚ್.ಎಸ್.ವೆಂಕಟೇಶ್ ಮೂರ್ತಿಗಳು, ಬಿ.ಆರ್ ಲಕ್ಷ್ಮಣರಾಯರು, ಕೆ.ಜಿ. ಶಿವಪ್ಪನವರು .....ಹೀಗೇ ಕೆಲವರನ್ನು ಮಾತ್ರ ನಾನು ಹೆಸರಿಸಿದ್ದೇನೆ...ಇನ್ನೂ ಹಲವರನ್ನು ಹೆಸರಿಸಬಹುದಾಗಿದೆ. ಅನೇಕ ಕವಿಗಳು, ಗಾಯಕ/ಗಾಯಕಿಯರು ಎಲೆಮರೆಯ ಕಾಯಿಯಂತಿದ್ದು ಕಾಣದಂತೇ ತಮ್ಮ ಕಲೆಯನ್ನು ಹಳ್ಳಿಗಳ ಮಟ್ಟದಲ್ಲೋ ತಾಲೂಕು ಮಟ್ಟದಲ್ಲೋ ಪ್ರದರ್ಶಿಸಿ ಹಾಗೇ ಅಲ್ಲಿಗೇ ನಿಂತುಬಿಡುತ್ತಾರೆ ಅಥವಾ ನಿರ್ಗಮಿಸಿಬಿಡುತ್ತಾರೆ. ಸೃಷ್ಟಿಯೊಡೆಯ ಎಲ್ಲರಿಗೂ ಸಮಾನ ಅವಕಾಶ ಕೊಡುವುದಿಲ್ಲವಲ್ಲ..ಅಂತಹ ಅವಕಾಶ ವಂಚಿತರು ತಮಗೆ ಅವಕಾಶ ಕೊಡಿ ಎಂದು ಬಡಿದಾಡುವ ಮನೋವೃತ್ತಿ ಇಲ್ಲಿ ಕಂಡುಬರುವುದಿಲ್ಲ.

ಶಿವಪ್ಪನವರೂ ಚೆನ್ನಾಗಿ ಬರೆಯುತ್ತಾರೆ ಎಂಬುದು ನನಗೆ ಮೊದಲು ಲಕ್ಷ್ಯಕ್ಕೇ ಬಂದಿರಲಿಲ್ಲ. ಅದೇರೀತಿ ಗರ್ತಿಕೆರೆ ರಾಘಣ್ಣನವರು ಚೆನ್ನಾಗಿ ಹಾಡುತ್ತಾರೆ ಎಂಬುದೂ ಸಹ ತಿಳಿದಿರಲಿಲ್ಲ. ಇತ್ತೀಚೆಗೆ ಮಲ್ಲೇಶ್ವರದಲ್ಲಿ ಡಾ | ಗಣೇಶರ ಅವಧಾನ ಕಾರ್ಯಕ್ರಮದಲ್ಲಿ ಅವರು ಬಂದು ಜಾಗವಿರದಿದ್ದ ಕಾರಣ ವೇದಿಕೆಯ ಹಿಂಭಾಗ ಕುಳಿತಿದ್ದುದು ಕಂಡಿತು. ಮಧ್ಯೆ ಯಾವುದೋ ಕರೆಬಂದು ಅವರು ಎದ್ದು ಹೋಗಬೇಕಾಯಿತು-ಮಾತನಾಡಲು ಕಾದೆ ಅಂದು ಅವರು ಸಿಗಲಿಲ್ಲ. ಮತ್ತೆಂದೋ ಅವರು ಪುರಭವನದ ಪಕ್ಕ ರಸ್ತೆ ದಾಟುವಾಗ ನಾನು ಬಸ್ಸಿನೊಳಗಿದ್ದೆ-ಆಗಲಿಲ್ಲ. ಆದರೂ ಅವರನ್ನೊಮ್ಮೆ ಕಂಡು ಮಾತನಾಡುವ ಇಚ್ಛೆ ಮಾತ್ರ ಬಲವಾಗಿದೆ. ರಾಘಣ್ಣ ರಾಗವಾಗಿ ಹಾಡುವಾಗ ಬರೇ ಹಾರ್ಮೋನಿಯಂ ಮತ್ತು ತಬಲಾ ಸಾತ್ ಸಾಕು. ಅದಷ್ಟೇ ಇದ್ದರೆ ಚಂದ. ಇಂದಿನ ಕೆಲವು ಸಂಗೀತ ಕಚೇರಿಗಳಲ್ಲಿ ಹಾಡುವವರ ಸ್ವರಮಾಧುರ್ಯಕ್ಕಿಂತ ಪಕ್ಕ ವಾದ್ಯಗಳೇ ಜಾಸ್ತಿಯಾಗಿಬಿಟ್ಟಿರುತ್ತವೆ- ಹೀಗಾಗಿ ಸಂಗೀತದೊಳಗಣ ಸಾಹಿತ್ಯ ಸ್ಪಷ್ಟವಾಗಿ ಕೇಳಿಸುವುದೇ ಇಲ್ಲ. ಸಂಗೀತದ ಸಾಹಿತ್ಯವೂ ನಮ್ಮ ಕಿವಿಗೆ ತಲ್ಪಿದಾಗ ಸಿಗುವ ಪ್ರಸನ್ನ ಮನಸ್ಕ ಸ್ಥಿತಿ ಬರೇ ವಾದ್ಯಪರಿಕರಗಳಿಂದ ಸಿಗುವುದಿಲ್ಲವಲ್ಲ !

ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಎದ್ದು ಏನೋ ಕೆಲ್ಸಮಾಡುವಾಗಲೋ ಅಥವಾ ಯಾವುದೋ ಹಬ್ಬದ ಸಡಗರದ ತಯಾರಿಯಲ್ಲಿ ಬಹುಬೇಗನೇ ಎದ್ದಿರುವಾಗಲೋ ಇಂತಹ ಹಾಡುಗಳು ಉತ್ಸಾಹವನ್ನು ದ್ವಿಗುಣಗೊಳಿಸುತ್ತವೆ. ಯಾರೂ ಇಲ್ಲಾ ನೀರವ ಮೌನ ಯಾಕೋ ಬೋರು ಎಂದಾದಾಗ ಯಾರೋ ಸ್ನೇಹಿತರು ಜೊತೆಗಿದ್ದಂತೇ ಈ ಭಾವಗೀತೆಗಳು ನಮ್ಮ ಜೊತೆಯಾಗುತ್ತವೆ. ದೂರದೂರಿಗೆ ಪ್ರಯಾಣ ಹೊರಟಾಗ ದಾರಿಯುದ್ಧ ಸಾಗುವ ಸಮಯ ಪರಿಸರದ ಮಾಧುರ್ಯವನ್ನು ಅವಲೋಕಿಸುವಾಗ ಈ ಹಾಡುಗಳು ನಮ್ಮೊಡನೆ ತಂತಾನೇ ತಾಳಹಾಕುತ್ತಾ ನರ್ತಿಸುತ್ತವೆ! ಮದುವೆ, ಮುಂಜಿ ಮುಂತಾದ ಹಲವು ಸಮಾರಂಭಗಳಲ್ಲಿ ಇಂತಹ ಭಾವಗೀತೆಗಳು ತೇಲಿಬಂದರೇ ಸಂಭ್ರಮ ಕಳೆಕಟ್ಟುತ್ತದೆ. ಯಾರೋ ನಮ್ಮಂಥವರು ಹಾಡುಗಳ ಬಗ್ಗೆ ಪ್ರತ್ಯೇಕವಾಗಿ ಹೇಳಿದರೂ ಹೇಳದೆಯೇ ಇದ್ದು ಆನಂದಾನುಭೂತಿ ಪಡೆವವರೇ ಅನೇಕರಿದ್ದಾರೆ; ಅದೇ ಈ ಹಾಡುಗಳಲ್ಲಿರುವ ಆಕರ್ಷಣೆ.

ನಾನು ನನ್ನ ಅನೇಕ ಮಿತ್ರರಲ್ಲಿ ಒಂದು ಮಾತು ಹೇಳಿದ್ದಿದೆ ಏನೆಂದರೆ ಹಾಡುಗಳಿಲ್ಲದ ಸಮಾರಂಭಗಳು ಎಣ್ಣೆಕಾಣದ ಕೂದಲಿರುವ ತಲೆಯಂತೇ ಬಣಬಣ ಎಂಬುದಾಗಿ. ಇನ್ನು ಸಾಯುವಾಗ ನನ್ನಲ್ಲಿ ಯಮ ನನ್ನ ಕೊನೆಯ ಆಸೆ ಕೇಳಿದರೆ ಒಂದೋ ನಾಕುದಿನ ಗಡುವು ವಿಸ್ತರಿಸು- ಕನ್ನಡದ ಒಂದಷ್ಟು ಇಂಪಾದ ಹಾಡುಗಳನ್ನು ಕೇಳಿ ಬರುತ್ತೇನೆ ಎನ್ನುತ್ತೇನೆ ಅಥವಾ ನನ್ನ ಜೊತೆಗೇ ಹಲವು ಕನ್ನಡದ ಹಾಡುಗಳ ಸೀಡಿಗಳನ್ನೂ ಮತ್ತು ಕೇಳುವ ಉಪಕರಣಗಳನ್ನೂ ತೆಗೆದುಕೊಂಡು ಹೋಗಲು ಪರ್ಮಿಶನ್ ಕೇಳುತ್ತೇನೆ! ಯಾಕೋ ನನಗೆ ಡೌಟು : ಡ್ಯೂಟಿ ಸಮಯದಲ್ಲಿ ಅದೂ ಇದೂ ಸಬೂಬು ಹೇಳಿ ಯಜಮಾನರ ಕಣ್ತಪ್ಪಿಸಿ ಮಜಾಪಡೆಯುವ ಸಂಬಳದ ಕೆಲಸಗಾರರಂತೇ ಯಮನ ದೂತರು ಭೂಮಿಗೆ ಬಂದವರು ಕೆಲಕಾಲ ಇಲ್ಲೇ ಎಲ್ಲೋ ಠಿಕಾಣಿ ಹೂಡಿ ಅಲ್ಲಿಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ನಮ್ಮ ಕನ್ನಡದ ಭಾವಗೀತೆಗಳನ್ನು ಮನಸಾರೆ ಕೇಳಿ ಆನಂದಿಸಿ ಆಮೇಲೆ ತಡವಾಗಿದ್ದಕ್ಕೆ ಯಮನಿಗೆ ಇನ್ಯಾವುದೋ ಕಾರಣಕೊಡುತ್ತಾರೆ ಅನ್ನಿಸುತ್ತಿದೆಯಪ್ಪ ! ನಿಜಕ್ಕೂ ಸತ್ತವ್ಯಕ್ತಿಯೂ ಎದ್ದು ಕುಳಿತು ಕಿವಿನಿಮಿರಿಸಿ ಒಮ್ಮೆ ಕೇಳಲಿಷ್ಟಪಡುವ ಹಾಡುಗಳು ನಮ್ಮಲ್ಲಿವೆ! ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಈ ಕನ್ನಡ ದೇಶಮಂ !

ಈ ಹಾಡನ್ನು ಕೇಳಿ -- ಶಿವಪ್ಪ ಕೃಷ್ಣನ ಒಳಹೊಕ್ಕು ಮಾಮರದ ಎಲೆಯಲೆಯಲ್ಲೂ ರಾಧೆಯನ್ನು ಕಾಣುವ ಪರಿ ನಿಜಕ್ಕೂ ಮನದುಂಬುತ್ತದೆ. ಅಲ್ಲೆಲ್ಲೋ ಆ ರಾಧೆ ಅವಿತುಕೊಂಡೇ ಇರಬಹುದೇನೋ ಎಂಬ ಭಾವನೆ ಉಮ್ಮಳಿಸುತ್ತದೆ.



ಅಲ್ಲಲ್ಲಿ ಕೆಲವು ಸಿನಿಮಾ ಸಾಹಿತಿಗಳೂ ಒಳ್ಳೊಳ್ಳೆಯ ಗೀತೆಗಳನ್ನು ಬರೆದಿದ್ದಾರೆ. ಆದರೂ ಯಾಕೋ ಭಾವಗೀತೆಗಳು ನೀಡುವ ವಿಶಿಷ್ಟ ಸಂತೋಷವನ್ನು ಸಿನಿಮಾ ಹಾಡುಗಳು ನೀಡುವುದಿಲ್ಲ. ಭಾವಗೀತೆಗಳು ನಮ್ಮ ಬದುಕಿನ ಮಜಲುಗಳಲ್ಲೇ ಇದ್ದು ಮನೆ ಊಟದಂತೇ ಇರುತ್ತವೆ, ಸಿನಿಮಾ ಹಾಡುಗಳು ಒಂಥರಾ ಹೋಟೆಲ್ ಊಟದ ರೀತಿ ಇದ್ದು ಯಾವಕಾಲಕ್ಕೂ ಇರುವ ಸಂಭವನೀಯತೆ ಕಡಿಮೆ! ಮನ ಗುನಗುನಿಸಲು ಇಷ್ಟಪಡುವ ಭಾವಗೀತೆಗಳಲ್ಲಿ ಅಡಿಗರ ’ಇಂದು ಕೆಂದಾವರೆಯ’, ಡೀವೀಜಿಯವರ 'ನೀಮಹಾನಂದವೇ' , ಲಕ್ಷ್ಮೀನಾರಾಯಣ ಭಟ್ಟರ 'ಯಾವುದೀ ಹೊಸಸಂಚು', 'ಮಲಗೋ ಮಲಗೆನ್ನ ಮಗುವೆ', 'ಎಲ್ಲೆ ಜಾರಿತೋ ಮನವು', ಲಕ್ಷ್ಮಣರಾಯರ 'ಅಮ್ಮಾ ನಿನ್ನ ಎದೆಯಾಳದಲ್ಲಿ', ವೆಂಕಟೇಶಮೂರ್ತಿಗಳ 'ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲಮ್ಮ', ಇನ್ನು ನರಸಿಂಹ ಸ್ವಾಮಿಗಳ ಇಡೀ ಮೈಸೂರು ಮಲ್ಲಿಗೆ ಸಂಕಲನದ ಹಾಡುಗಳು, ವರಕವಿ ಬೇಂದ್ರೆಗಳ ಹಲವು ಹಾಡುಗಳು,ಕುವೆಂಪುರವರ ಮತ್ತು ಶಿವರುದ್ರಪ್ಪನವರ ಹಲವು ಹಾಡುಗಳು ನಮಗೆ ತರುವ ಆನಂದ ಅಸದಳ. ನಮ್ಮನ್ನು ಮತ್ತೆ ಮತ್ತೆ ರಂಜಿಸುವ ಎಲ್ಲಾ ಕವಿಗಳಿಗೂ ಸಾಹಿತಿಗಳಿಗೂ ನಮಿಸುತ್ತಾ [ಸಂಬಂಧಪಟ್ಟ ಕಲಾವಿದರು, ತಾಂತ್ರಿಕವರ್ಗ, ಹಿನ್ನೆಲೆವಾದ್ಯಮೇಳ, ಸಂಗೀತ ನಿರ್ದೇಶಕರು ಎಲ್ಲರಿಗೂ ನಮ್ಮನೆನಕೆಗಳು] ಇಂಪಾದ ಎರಡು ಕವನಗಳೊಂದಿಗೆ ಇಂದಿನ ಈ ’ಭಾವಾಂತರಂಗದಲ್ಲಿ .....’ ಅನಿಸಿಕೆಗಳನ್ನು ನಿಮ್ಮ ಕೈಗಿಟ್ಟು ಕೈಮುಗಿಯುತ್ತಿದ್ದೇನೆ, ನಮಸ್ಕಾರ.



Sunday, July 17, 2011

ಆರಂಭ ಮುಕ್ತಕಗಳು


ಆರಂಭ ಮುಕ್ತಕಗಳು

ಜಗದಮಿತ್ರನ ಕಗ್ಗ ಒಂದು ಆಕಸ್ಮಿಕ ದೈವೀ ಸ್ಫುರಣೆ. ಇದರಲ್ಲಿ ನನ್ನದು ಅಂಚೆಯವನ ಕೆಲಸದ ರೀತಿ. ನನ್ನೂಳಗೆ ಕುಳಿತು ಬರೆಸುವ ಪರಮಾತ್ಮ ಅರಿವಾಗಿ, ಗುರುವಾಗಿ, ನೆರೆಕೆರೆಯ ಸ್ನೇಹಿತನಂತೇ ಕಂಡ ಆ ಅದ್ಭುತ ಶಕ್ತಿಯ ಸರಳತೆ ಕೂಡ ಅನುಭವಕ್ಕೆ ನಿಲುಕಿದ ವಿಷಯ. ಹಗ್ಗದಂತೇ ಹೊಸೆಯುವ ಕಗ್ಗದ ಆರಂಭದಲ್ಲಿ ನಾ ಬಳಸಿದ ಕೆಲವು ಆರಂಭ ಮುಕ್ತಕಗಳ ಭಾಗ ಇಲ್ಲಿದೆ, ತಮ್ಮ ಆವಗಾಹನೆಗಾಗಿ-


ಹಡಗಿನಲಿ ನಾನೊಂಟಿ ಗುರುತು ಪರಿಚಯವಿರದು
ಹೊಡೆವ ಬಿರುಗಾಳಿ ಜಡಿಮಳೆಗೆ ಅಂಜುವೆನು
ನಡೆವ ಮಾರ್ಗವ ತೋರ್ವನೊಡೆಯ ಇಡಗುಂಜಿಪತಿ
ಬಿಡದೆ ನೆನೆಯುತ್ತ ನಡೆ | ಜಗದಮಿತ್ರ

ನಾಕುಮುಖದಾ ಬೊಮ್ಮ ಬಣ್ಣದರಿವೆಯ ಹರಿಯ
ಸಾಕೇತ ಸಿರಿರಾಮ ವೀಣೆ ಸರಸತಿಯ
ಸಾಕೆನುವವರೆಗು ನೆನೆ ಶಂಭು ಉಮಾಪತಿಯ
ಬೇಕವರು ಜೊತೆಯೊಳಗೆ | ಜಗದಮಿತ್ರ

ಗುರುವ್ಯಾಸ ವಾಲ್ಮೀಕಿ ಆಚಾರ್ಯ ಪೀಠಗಳ
ಕರೆದು ಹರಸಿರಿ ಎನುತ ನ್ಯಾಸಪೂರ್ವದಲಿ
ಬರೆಹ ಓದುಗಳೆಮಗೆ ಅವರಿಚ್ಛೆಯಲಿ ನಡಿಗೆ
ಅರಿವು ಗುರುವಿನ ಕರುಣೆ | ಜಗದಮಿತ್ರ

ಭಾಷೆ ಸಾವಿರವಿರಲಿ ಕೋಶ ಮತ್ತಷ್ಟಿರಲಿ
ದೇಶಗಳು ಹಲವಾರು ಜಗದ ಗುಡಿಯೊಳಗೆ
ವೇಷಭೂಷಣ ವಿವಿಧ ಹಾರ ಪದ್ಧತಿಯಿರಲು
ದೋಷ ಮಾನವ ಸಹಜ | ಜಗದಮಿತ್ರ

ನರನು ನರಕಾಸುರನು ನರವ ಹಿಂಡುತ ಬದುಕೆ
ಹರನ ಗಣಗಳ ಗುಣವ ಹೊತ್ತುಕೊಳಲೇಕೆ ?
ಶಿರಬಾಗಿ ಕರಹಿಡಿಯೆ ಬೆಳೆವುದದು ಬ್ರಾತೃತ್ವ
ವರವು ಮಾನವ ಜನುಮ | ಜಗದಮಿತ್ರ

ವಿಸ್ತರದ ಈ ಗುಡಿಯ ವಿಸ್ತರದಿ ನೀ ನಿಂತು
ಸ್ವಸ್ತಮನದಲಿ ಬಯಸು ಜಗದ ಒಳಿತುಗಳ
ಹಸ್ತಶುದ್ಧಿಯು ನಿನದು ಕೊನೆಗೊಳಿಸು ಕ್ರೌರ್ಯವನು
ಅಸ್ಥಿರವು ಜೀವನವು | ಜಗದಮಿತ್ರ

ಅವರಿವರ ನೋಡಿ ಕಲಿ ಮಾಡಿ ತಿಳಿ ಕೆಲಸಗಳ
ಬೆವರು ಹರಿಯಲಿ ನೊಸಲ ತುದಿಯಿಂದ ಧರೆಗೆ
ಸವಿಯೂಟ ಕೆನೆಮೊಸರು ನಿನ್ನ ಕೈ ಕೆಸರಾಗೆ
ಭುವಿಯು ಕರ್ಮಠರಿಂಗೆ | ಜಗದಮಿತ್ರ

ಮಗುವು ಶೈಶವದಲ್ಲಿ ಆಟಿಕೆಯ ಹಿಡಿದೆತ್ತಿ
ನಗುವುದತಿ ಸಂತಸದಿ ಬಲು ತೃಪ್ತಿಯಿಂದ
ಬಿಗುವಿದೀ ಜೀವನವು ಮಗುಬೆಳೆದು ದುಡಿಯುವೊಲು
ನಗುವಳುವು ಬದಲುವಿಕೆ | ಜಗದಮಿತ್ರ

Friday, July 15, 2011

’ಸ್ತ್ರೀನಿವಾಸ ನಿತ್ಯಾರಂಜಿತ ಕಲ್ಯಾಣವು’!


ರಂಜೂ ಹಾಲುಕುಡಿಸುವ ಸ್ವಲ್ಪ ಮುನ್ನ ’ಜಗದೊದ್ಧಾರಕ ನಿತ್ಯಾನಂದ ಸಿಸು’

’ಸ್ತ್ರೀನಿವಾಸ ನಿತ್ಯಾರಂಜಿತ ಕಲ್ಯಾಣವು’!

[ಮೂಡಲಪಾಯ ಪ್ರಾಕಾರದಲ್ಲಿ ಸುಮ್ನೇ ತಮಾಷೆಗಾಗಿ ಬರೆದ ಒಂದು ಪ್ರಹಸನ]

ಹಿಮ್ಮೇಳ:

ಮೊದಲೊಂದಿಸೋಣ ಇಗ್ನ ರಾಜಗೇ ರವಿತೇಜಗೇ
ಇದಕೊಮ್ಮೆ ನೀಡು ಮನಸುಮಾಡು ನಿನ್ನ ಮಕ್ಕಳು
ಬದುಕೆಂಬ ರಂಗದಲ್ಲಿ ಹಾಡಿ ನಲಿದು ಕುಣಿವೆವು......
ಬದುಕೆಂಬ ರಂಗದಲ್ಲಿ ಹಾಡಿ ನಲಿದು ಕುಣಿವೆವು.....
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಮಗನೇ ಸಿದ್ಲಿಂಗ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "


" ಒಂದಾನೊಂದು ಕಾಲದಲ್ಲಿ ಕರ್ಣಾಟ ದೇಶದಲ್ಲೀ ಯಡ್ಯೂರಣ್ಣನೆಂಬ ರಾಜನಿದ್ದ. ಸಿಷ್ಟಾಚಾರ ಸಹಿತವಾಗಿ ಬ್ರಷ್ಟಾಚಾರವನ್ನು ಅಭಿವೃದ್ಧಿ ಪಡಿಸಿದ ರಾಜನ ಆಸ್ಥಾನದಲ್ಲಿ ಹಾಲಪ್ಪ ಗೂಳಪ್ಪ ರೇಣುಕ ಎಂಬೆಲ್ಲಾ ಪಂಚರತ್ನಗಳಿದ್ದರು. ಘನ ವಿದ್ವನ್ಮಣಿಗಳಾದ ಈ ಪಂಚರತ್ನಗಳ ಜೊತೆಗೆ ಸಂಪಂಗಿ ಕೆಂಪಂಗಿ ಕಾಡಿಗೆ ಟೊಪ್ಪಿಗೆ ಎಂಬೆಲ್ಲಾ ಕಟ್ಟಾ ಪಂಡಿತರಿದ್ದರು. ಜನತೆಗೆ ಅದು ಕೊಡುವೆ ಇದು ಕೊಡುವೆ ಎಂದೆನ್ನುತ್ತಾ ದೇವಾಲಯ ತಿರುಗುತ್ತಾ ಆಕಾಸ ನೋಡಿ ಕೈಮುಗೀತಿದ್ದ ರಾಜನ ಕಂಡು ಇರೋಧಿಗಳು ತಂ ೩೨ರಲ್ಲಿ ಮಿಕ್ಕುಳ್ದಿರೋ ೨೩ ಹಲ್ಲನ್ನೂ ಕಿವಿ ಹಿಂದ್ಗಡೀ ತಂಕ ಎಳೀತಾ ಇದ್ರು ಶಿವನೇ ಸಿದ್ಲಿಂಗ ಇದು ಯಾಕೆ ಬಲ್ಲೆಯಾ ....? ಹೇಳಿದ ಕೆಲ್ಸ ಆಗ್ದುದ್ದಕ್ಕೆ ಸಲ್ಪ ಗರಮ್ಮಾಗಿ ಏನಾರಾ ಮಾಧ್ಯಮದಗೆ ಕೂತು ಮಾತಾಡುದ್ರೆ ಪಾಲ್ಟಿ ಹೊಂಟ್ಬುಡೋದು.

ಇಂತಿಪ್ಪ ಕರ್ನಾಟ ದೇಶದಲ್ಲೀ ಸಿದ್ಧೂ ಕುಮಾರಣ್ಣ ಎಂಬಿತ್ಯಾದಿ ರಾಜ ವೈರಿಗಳು ವಾಸಸ್ತಾ ಇದ್ರು. ರಾಜಂಗೆ ಭೂಮಿ ಕಂಡ್ರೆ ಭೋ ಆಸೆ. ಹಿಂದಕ್ಕೊಮ್ಮೆ ಕುಮಾರಣ್ಣ ರಾಜ ಆಗಿದ್ಕಾಲ್ಕೆ ಈ ವಯ್ಯ ಯುವರಾಜನ ಥರಾ ಇತ್ತು. ಹಳೇ ರಾಜ ಕುಮಾರಣ್ಣ ಭೂಮಿ ಪಿರೂತಿ ಮಾಡ್ಕಂಬಾಗ ಇದೂ ಜಾಗಾನೆಲ್ಲಾ ಕಂಡ್ಕಬುಟ್ಟಿತ್ತು. ಅದಕ್ಕೇ ತಾನೇ ರಾಜ ಆದಂತಾ ಈ ಸಮಯ ಗೇಣಿಗ್ ಕೊಟ್ರೆಲ್ಲಾ ಆಗತಕ್ಕಂತದಲ್ಲಾ ಅಂತ ನಿರ್ಧಾರ ತಕ್ಕಂಡು ಖೇಣಿ ಲೆಕ್ಕಕ್ಕೆ ರಾಜ ಖಾತೆ ಬರ್ದಾಯ್ತು. ಸಿಂಹಾಸನದ ಮೇಲೆ ಕೂರ್ತಿದ್ದಂಗೆ ಮನೆಜನ ಮಕ್ಳು-ಮರಿ ಹೆಂಡ್ತೀಕಡೆ ಸಂಬಂಧ ಮಕ್ಳಕಡೆ ಸಂಬಂಧ ಎಲ್ಲಾ ನೆನಪಾಯ್ತು. ಇರೋ ಬರೋ ಭೂಮಿನಲ್ಲಿ ಆದಷ್ಟೂ ಅವ್ರಿಗೇ ಇರ್ಲಿ ಅಂತಂಬೋ ಕರ್ತವ್ಯ ಬಹುಬೇಗ ಪೂರೈಸಿದ ರಾಜ ಆ ಕೂಡ್ಲೇ ಇರೋಧಿಗಳ್ನ ಎದುರಿಸಬೇಕಾಗಿ ಬಂತು !

ಕಳ್ ಹಣ ಮಾಡಕಾಗ್ದಲೇ ಬೋಳೋರು ಕಾಳೂರು ಹೊಸ್ನೋಟಸ್ನರ ಎಲ್ಲಾ ಕತಕತ ಒಳಗೊಳ್ಗೇ ಕುದೀತಾ ಇದ್ರು. ತಿರುವನಂತ ಪುರದ ಕಡೆ ತಲೆಹಾಕಿ ಕೆರ್ಕಂಡು ಕೆರ್ಕಂಡು ಅನಂತು ಕೂತಿದ್ರೆ ಮಾರೀ ಕೋಣನ ಬಲೀ ಕೋಡೋ ಸಮ್ಯಕ್ಕೆ ಈಶ್ರಣ್ಣ ಕಾದಿತ್ತು.

ಹೀಗಿರ್ತಾ ಒಂದಿನ ಕುಮಾರಣ್ಣ ಸಡೆನ್ನಾಗಿ ಆಡಳಿತ ಯಂತ್ರದ ನಟ್ಟು ಬೋಲ್ಟು ಸರಿ ಐತೋ ನೋಡತಕ್ಕಂತವನಾದ. ಕೆಲವು ಸಡ್ಲಾಗಿತ್ತು, ಇನ್ಕೆಲವು ಮುರ್ಯೋ ಹಂತದಾಗಿತ್ತು, ಮತ್ತೂ ಕೆಲವು ಜಾಮಾಗಿಬಿಟ್ಟಿತ್ತು! ಮತ್ತೊಂದೆರಡಗೆ ಆಯಿಲ್ ಬಿಟ್ಟು ಲೂಸ್ ಆಗುತ್ತಾ ನೋಡುವಂತವನಾದ ಕುಮಾರಣ್ಣ ಪ್ರಜೆಗಳ ಹಿತಾರ್ಥ ಈ ನಟ್ ಬೋಲ್ಟ್ನೆಲ್ಲಾ ಚೀಲ ತುಂಬ್ಕೆಂಡು ರಿಪೇರಿಗೆ ತಗಂಡೋಯ್ತು. ಯಾರ್ಯಾರೋ ಏನೇನೋ ಮಾತಾಡ್ಕೆಂಡ್ರು. ಇಮಾನ ಅಂದ್ರು, ರಿಸಾರ್ಟು ಅಂದ್ರು ಡ್ಯಾನ್ಸ್ ಮಾಡದ್ರು, ಯಾಯಾಮ ಮಾಡದ್ರು ಅಂತೂ ಕತ್ತೆಗೊಳೆಲ್ಲಾ ಕುದುರೆವೇಷ ಹಾಕ್ಕೊಂಡು ವೇದಿಕೆಮೇಲೆ ಬಂದ್ವು!

ಮುಂದಿಂದೆಲ್ಲಾ ನಾಳೆ ಸೀನ್ನಾಗ್ ವಿಚಾರ್ಸೋಣ ಮಗನೇ !

ಇತ್ಲಾಕಡೀಗೆ ಜನಾ ಸುಮ್ಕೇ ಕೂರ್ಲಿಲ್ಲ. ಆಡಳಿತ ಹಾಳಾಗದೆ ನಮಗೆ ಅದ್ಕೊಡಿ ಇದ್ಕೊಡಿ ಅನ್ನುವಂತವರಾದ್ರು. ರಾಜನ ದರ್ಬಾರ್ ಹಾಲ್ನಲ್ಲಿ ನಿತ್ಯಾ ಕಸ-ಕೊಳೆ ಬಂದು ಬೀಳಾಕ್ ಶುರುವಾಯ್ತು. ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಸೋಬವ್ವಾ ನಿತ್ಯ ಕಣ್ಣೀರಾದ್ಲು. ಆಕೆಗೆ ರಾಜನೆಂದ್ರೆ ಭೋ ಪ್ರೀತಿ ಅಂತಾ ಜನ ಅಂದ್ಕಂಡ್ರು. ದರ್ಬಾರ್ ಹಾಲನ್ನು ದಿನವೂ ಆ ಸೋಬವ್ವಾ ಎಂಬಾಕೆ ಒನಕೆ ಓಬವ್ವಾ ತಾನೇ ಅನ್ನೋ ಥರಾ ಕಸಾಗುಡಿಸಿ, ರಂಗೋಲಿಬಿಟ್ಟು ಕೆಮ್ಮಣ್ಣು ತುಂಬಿ ಎಲ್ಲಾರ ಕಣ್ಣಿಗೆ ಚಂದಾ ಕಾಣ್ವಂತೇ ಮಾಡದ್ಲು. ಮಾಡ್ದಷ್ಟೂ ಆ ಕುರಿ ನನ್ಮಕ್ಳು ಗಲೀಜು ಮಾಡ್ಕತಿದ್ವು !

ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಗಪ್ಪಾ "

ಹಿಮ್ಮೇಳ:

ಚೆಲ್ವ ಸಿಸು ಬಿಡದಿಯೋಳ್ ಬಂದು ದೇಸಿಗನಾಗಿ
ಮೆಲ್ಲಗೆ ಹಳೆಯ ಹೆಂಗೆಳೆಯರನು ಕರೆಯೇ
’ಸೊಲ್ಲು ಸೊಲ್ಲು’ ಎನುತ ಬಂದಿಳಿದು ರಂಜಿತಾ
ಚೆಲ್ಲಾಟ ಶುರುವಿಟ್ಟು ಕುಳಿತಲ್ಲೆ ಕುಣಿದೂ...
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಅಣ್ಣಾ ಹೇಳುವಂತವನಾಗಪ್ಪಾ "

" ಇಂತಿಪ್ಪ ಪಾಳುಬಿದ್ದ ದೇಸದಾಗೆ ಬಿಡದಿ ಎಂಬೊಂದೂರು. ಅಲ್ಲಿ ಖಾಲೀ ಜಾಗ ಬೇಜಾನ್ ಬಿದ್ದಿತ್ತು. ಸಿಸುನಂತಾ ಸಿಸು ನಿತ್ಯಾನಂದ ಸಿಸು ತಮಿಳ್ನಾಡಲ್ಲಿ ತಪಸ್ ಮಾಡಿ ಇಲ್ಲೀಗ್ ಬಂತು. ಅದಕೂ ಈ ಹಾಳಬಿದ್ ರಾಜ್ಯ ನೋಡಿ ಶಾನೆ ಬೇಜಾರಾಗಿತ್ತು. ಯಾಕೋ ರಾಜ್ಯದ ದೆಸೆ ಸರೀಗಿಲ್ಲಾ ಸ್ತ್ರೀನಿವಾಸ ಕಲ್ಯಾಣ ಮಾಡಿ ಆಮೇಲೆ ಪಂಚ್ಗಾಗ್ನಿ ತಪಸ್ಸು ಮಾಡಿ ಅದ್ಕೂ ನಂತ್ರ ಕುಂಡೆಯೋಗ ಜಾಗ್ರತಿ ಮಾಡುದ್ರೆ ಎಲ್ಲಾ ಸರಿಹೋತೈತೆ ಎಂಬುದಾಗಿ ಗ್ಯಾನದಾಗೆ ಹೊಳೀತು. ಮೇಲಾಗಿ ರಂಜೂ ಎಂಬ ರಮಣಿಯನ್ನು ’ಸ್ತ್ರೀನಿವಾಸ ನಿತ್ಯಕಲ್ಯಾಣ’ ವೆಂಬ ಟಚ್ಚಿಂಗ್ ಟಚ್ಚಿಂಗ್ ಯೋಗದ ಮೂಲಕ ಎಲ್ಲವೂ ಸಾಧ್ಯ ಎಂಬುದ್ನ ಅರಿತ ಸಿಸು ತಡ ಮಾಡ್ಲೇ ಇಲ್ಲ. "

ಹಿಮ್ಮೇಳ :

ರಂಜು ಎಂಬಾ ಹೆಣ್ಣು ರಂಭೆಗಿಂತಲು ಮಿಗಿಲು
ನಂಜಿರದ ಮನಸಿನೊಳು ಸಿಸುವ ಆದರಿಸಿ
ಅಂಜಿಕೆಯ ಬದಿಗಿಟ್ಟು ಪೂರ್ಣಚಂದ್ರನ ಕಂಡು !
ಗಿಂಜಿದಳು ಬಿಳಿಹಲ್ಲು ’ನಿತ್ಯ’ನರ್ತನದಿ
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "

" ರಂಜೂ ಎಂಬ ರಂಭೆಯನ್ನು ಕಂಡುಕೊಂಡಿದ್ದ ಸಿಸು ಇದ್ದಕ್ಕಿದ್ದಂತೆ ಅವಳ ಕಡೆ ತಿರುಗಿ ನಕ್ಕಿತು. ಬರೋಬ್ಬರಿ ೭೦ ಕೆಜಿ ತೂಗುವ ಸಿಸುವನ್ನೂ ಅದರ ಬಿಳಿಯ ಹಲ್ಲುಗಳನ್ನೂ ಕಂಡು ರಂಜೂ ನಕ್ಕಳು. ಸಿಸುವಿಗೆ ತುಂಬಾ ಬಾಯಾರಿಕೆಯಾಯ್ತು. ರಂಜೂ ಹಾಲುಕುಡಿಸುವಂತವಳಾದಳು. ಇಂತಹ ಸಿಸುವನ್ನು ಅಲ್ಲಿದ್ದ ’ಕೆಟ್ಟ ಜನ’ ಅಪಾರ್ಥಮಾಡಿಕೊಂಡ್ರು. ಗೊತ್ತಿಲ್ದಂಗೆ ಈಡಿಯೋ ಹಿಡ್ದಿಟ್ಟು ಎಡವಟ್ಟಾಗೋಯ್ತು! ಮಾಧ್ಯಮದೋರು ಬಂದ್ರು. ಸಿಸು ಆಗಲೂ ನಗ್ತಾನೇ ಇತ್ತು. ಮತ್ಯಾರೋ ಬಂದ್ರು: ಆಗ್ಲೂ ಸಿಸು ಹಾಗೇ ನಗ್ತಿತ್ತು. ಮಾಧ್ಯಮದೋರು ಏನೇನೋ ಹೇಳಾಕೆ ಸುರುವಿಟ್ರು. ಇದ್ನೆಲ್ಲಾ ನೋಡ್ತಿದ್ದ ಜನ ಯಾರೋ ಮೂಗರ್ಜಿ ಕೊಟ್ರು. ’ಕೆಟ್ಟ ಜನ’ ’ಡೀಲ್ ಇದ್ಯಾ ?’ ಅಂದ್ರು. ಸಿಸು ಆಗ್ಲೂ ನಿರ್ವಿಕಾರವಾಗಿ ನಗ್ತಾನೇ ಇತ್ತು. ಹೀಗೇ ದಿನ ಕಳೀತಾ ಕಳೀತಾ ಒಂದಿನ ಅದ್ಯಾರೋ ಆರಕ್ಸಕರಂತೆ ಬಂದ್ರು. ಅಷ್ಟ್ರೊಳಗೆ ಸಿಸು ನಡ್ಯೋದ್ ಬಿಟ್ಟು ಹಾರಾಡೋಕ್ ಕಲ್ತಿತ್ತು. ರಾತ್ರೋರಾತ್ರಿ ಹಾರಿದ ಸಿಸು ಹಿಮಾಲಯ ಹತ್ಬುಡ್ತು. "

ಅಡಗಿ ಹಿಮಾಲಯದಿ ಬೆಡಗನ್ನು ಮರೆಮಾಚಿ
ಮಡಗಿ ಹೊಸ ಸಿಮ್ಮುಗಳ ಸಂಪರ್ಕಕೆಂದು
ಬಿಡದಿ ತೊರೆಯುತಲೋಡಿ ಕಾಣದಾದರು ಮತ್ತೆ
ಹುಡುಗಾಟ ಹುಡುಕುತ್ತ ಬಂದವರ ನೆನೆದೂ
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "

" ಪೋಲೀಸರೆಂಬ ಪೋಲೀಸರು ಒಬ್ಬೊಬ್ರೂ ಹತ್ತತ್ತು ಟವೆಲಲ್ಲಿ ಬೆವರು ಒರೆಸಿಕೊಳ್ಳುತ್ತಾ ಹಗಲಲ್ಲೇ ಬ್ಯಾಟ್ರಿ ಹಾಕಿ ಹುಡುಕಿದರೂ ಸಿಸುವಿನ ಸುಳಿವೇ ಇಲ್ಲ! ಕೈಕೈ ಹಿಸುಕಿಕೊಂಡ ಪೋಲೀಸರು ದೊಡ್ಡ ಗಣಪತಿಗೆ ಕಡುಬಿನ ಹಾರದ ಸೇವೆ ಕೊಡ್ತೀವಪ್ಪಾ ಕೆಲ್ಸದಿಂದ ಎತ್ತಾಕ್ ಬುಡ್ತರೆ ಕಾಪಾಡು ಅಂತಂದಿದ್ದೇ ಯಾರೋ ಸೂಚ್ನೆ ಕೊಟ್ರು. ಪೋಲೀಸ್ರು ಹಿಮಾಲಯ ಹತ್ತದ್ರು. ಅಲ್ಲೊಂದ್ ಮನೆತಾವ ಕಾವೀಬಟ್ಟೆ ನೀಲಿಬಟ್ಟೆ ಮತ್ತೆಂತದೋ ಬಟ್ಟೆ ಒಣಗಿಸಿದ್ದು ಕಾಣಸ್ತು. ಯಾರೂ ಮಾತಾಡ್ಲಿಲ್ಲ. ಕರದ್ರೂ ಮಾತಿಲ್ಲ! ನಮ್ ಪೋಲೀಸ್ನೋರ್ಗೆ ಮಾತಾಡ್ಬುಟ್ರೆ ಆಗೋಗ್ತಾ ಇತ್ತು. ಅಲ್ಲೇ ಎಡವಟ್ಟಾಗಿದ್ದು. ಒಬ್ಬ ಪೋಲೀಸ ಸಿಸು ಐತಾ ದರ್ಸ್ನ ಮಾಡ್ಬೇಕಾಗಿತ್ತು ಅಂತ ಸಂದೇಅ ಬರ್ದಂಗೆ ಹೋದ. ಸಿಸು ಕಂಡಿದ್ದೇ ಮಿಕ್ದೋರ್ಗೆ ಕಣ್ ಹೊಡ್ದ! ಎಲ್ಲಾ ಪೋಲೀ[ಸ್] ಹೈಕ್ಳೂ ಸೇರಿ ಸಿಸುನ ಕರ್ಕಂಬಂದ್ರು. ಆಗ್ಲೂ ಅದೇ ನಿರ್ವಿಕಾರ ನಗೆ !

ಅದಾದ ಕೆಲವೇ ದಿನದಲ್ಲಿ ಸುಸುಮ್ಕೇ ಸಿಕ್ಷೆ ಅಂತಾ ಕೊಟ್ರು. ಸಿಸು ಕೆಲು ದಿನ ಜೈಲ್ನಲ್ಲಿ ನಗ್ತಾ ಇತ್ತು. ಅಮೇಲೆ ಅದ್ಯಾರೋ ಪುಣ್ಯಾತ್ಮರು ’ಅದು ಸಿಸು ಥರಾ ಅದೆ ಬಿಟ್ಟಾಕಿ’ ಅಂದ್ರು. ಅದ್ಕೇ ಕೋರ್ಟು ಪೋಲೀಸರಿಗೆ ಹೇಳಿ ಬಿಟ್ಟಾಕ್ತು. ವಾಪಸ್ ಬಂದ ಸಿಸುನ ವೈಭವದ ಮೆರವಣಿಗೇಲಿ ಬಿಡದಿ ಅದರ ತೊಟ್ಲಿಗೆ ಅದೇ ಆ ಬೆಡ್ಡಿಗೆ ಕರ್ಕಂಬಂದೋರು ಮುಂದೆ ಬೇರ್ಬೇರೇ ನಿತ್ಯಾಶ್ರಮ ಕಟ್ಟೋ ನಿತ್ಯಕಾಮಾನಂದ್ರು, ಪೂರ್ಣ ಕಾಮಾನಂದ್ರು..ಇತ್ಯಾದಿ.
ಮುಂದೇನಾಯ್ತು ಕೇಳುವಂತವನಾಗು "

ಹಿಮ್ಮೇಳ :

ಸೀಮೆ ಎಣ್ಣೆಯ ಸುರಿದು ’ಪಂಚಾಗ್ನಿ’ಯಂ ಉರಿಸಿ
ಸೀಮೆಗಿಲ್ಲದ ಯಾಗ ಮಾಡಿತೋರಿಸುತ
ನೇಮವಿದುಯೆಗೆಂದು ಸೋಮಪಾನವಮಾಡಿ
ಕಾಮುಕರು ಬೆಳಗಿದರು ಮಂಗಳಾರತಿಯಾ...
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "

ರಾಮಾಯಣದಲ್ಲಿ ತಾನು ಶೀಲವಂತೆ ಅಂತ ತೋರ್ಸೋಕೆ ಸೀತೆ ಅಗ್ನಿ ಪ್ರವೇಶ ಮಾಡಿದ್ಲಲ್ಲಾ ಅದೇ ರೀತೀಲಿ ಅಂತರ್ಜಾಲವೆಲ್ಲಾ ತಡಕಾಡಿ ’ಪಂಚಾಗ್ನಿ ತಪಸ್ಸು’ ಎಂಬುದ್ನ ಹುಡ್ಕುದ್ರು. ದೋಡ್ದಾದ ವೃತ್ತಾಕಾರ್ದ ಗುಳಿಮಾಡಿ, ಅದ್ರಲ್ಲಿ ಕಟ್ಗೆ ಪೀಸು ಅದು ಇದು ತುಂಬಿ ಮ್ಯಾಕಿಂದ ಸೀಮೆ ಎಣ್ಣೆ ಸುರುದ್ರು. ಬೆಂಕಿ ಹಚ್ತಿದ್ದಂಗೆ ಸಿಸುನ ಮಧ್ಯೆ ತಂದು ಕೂರ್ಸುದ್ರು. ಕೆಲವು ಕಡೆ ಮಾತ್ರ ಚಿಕ್ದಾಗಿ ಬೆಂಕಿ ಇದ್ದು ಉಳಕಿದ್ ಕಡೆ ಹೊಗೆ ಬರ್ತಾ ಇತ್ತು. ಮಧ್ಯೆ ತಂಗಾಳೀಲಿ ಸಿಸು ಧ್ಯಾನ ಮಾಡ್ತಾ ಇತ್ತು.

ಧ್ಯಾನಾ ಮುಗ್ಸಿ ಈಚೆ ಬಂದ್ಮೇಲೆ ಮತ್ತೆ ಮಾಧ್ಯಮದೋರು ಬಂದ್ರು. ಆವತ್ತು ನಿತ್ಯಕಾಮಾನಂದ್ರು, ಪೂರ್ಣಕಾಮಾನಂದ್ರು, ನಿತ್ಯಕಾಮಿನಿ, ದೈತ್ಯಕಾಮಿನಿ...ಹೀಗೇ ಇವ್ರೆಲ್ಲಾ ಸೇರಿ ಮತ್ತೆ ಮಂಗ್ಳಾರ್ತಿ ಜೋರು. ಸಿಸು ಮತ್ತೆ ನಗೋಕೆ ಹಿಡೀತು!

ಹಿಮ್ಮೇಳ :

ನ್ಯಾಯವಾದಿಯ ಕಟ್ಟಿ ತಳ್ಳಿ ಝಣಝಣ ಬುಟ್ಟಿ
ಮಾಯಕದಿ ನೂರು ಮಂತ್ರಂಗಳನು ಪಠಿಸಿ
ಕಾಯವಿದು ೬-೭ ವರ್ಷಗಳ ಸಿಸುವಿನದು
ಧ್ಯೇಯವಿಲ್ಲಿದಕೆ ಯಾರೊಡನೆ ಕಾಮಿಪುದು ..
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಅಣ್ಣಾ ಹೇಳುವಂತವನಾಗಪ್ಪಾ "

ಸಿಸುವಿನ ಮನೆಯೋರು ವಕೀಲರನ್ನು ಕಟ್ಟಿದ್ರು. ವಕೀಲರ ಜೊತೆ ಕೂತು ಮಂತ್ರ ಪಠಿಸಿದ್ರು. ಕತ್ತೆಗೋ ಕುರಿಗೋ ಮದ್ಕೊಡೋ ಡಾಕ್ಟರ್ ಹಿಡ್ಕಂಡು ಒಂದು ಪ್ರಮಾಣ ಪತ್ರ ಮಾಡ್ಸುದ್ರು. ನಿತ್ಯಾನಂದ ೬-೭ ವರ್ಷದ ಸಿಸು. ಈ ಶರೀರದಲ್ಲಿ ಕಾಮಕ್ಕೆ ಬೇಕಾದ ಅಂಗಾಂಗ ಕೆಲಸನಿರತವಾಗಿಲ್ಲ! ಸ್ವಾಮಿ ’ಒಂಬತ್ತ’ಂತೂ ಅಲ್ಲ ! ಅಂದ್ಮೇಲೆ ೭೦ಕೆಜಿ ತೂಕದ್ದು ಅದು ಹೇಗೆ ಸಿಸು ಎಂಬೋದು ಹಲವರ ಪ್ರಸ್ನೆ. ಪ್ರಸ್ನೆ ಹೀಗೇ ಹಲವಾರು ಇರ್ತದೆ ಆದರೆ ಸಿಸು ಅನ್ನೋದನ್ನು ಗಟ್ಟಿಮಾಡೋ ತಾಕತ್ತೈತಲ್ಲಾ ಅದ್ಕೇ ಅನ್ನೋದು ಈ ಲೋಕದಾಗೆ ಏನೇ ಬೇಕಾದ್ರೂ ಮಾಡ್ಕಬೌದು, ಕಾಸ್ ಮಾತ್ರ ಮಡೀಕಂಡಿರಬೇಕು. ಕೋರ್ಟು ಏನಾರಾ ಮಾಡ್ಕಳ್ಳಿ ಸದ್ಯಕ್ಕಂತೂ ತಾನು ಸಿಸು ಅಂತಿಪ್ಪ ನಿತ್ಯಂಗೆ ಮುಂದೇನಾಯ್ತು ನೋಡೋಣವಾಗಲೀ....

ಕುಂಡೆಯೆತ್ತುತ ಹಾರಿ ತಕತಕನೆ ತಾವ್ ಕುಣಿದರ್
ಮಂಡೆಯಿಲ್ಲದ ನಾರೀಮಣಿಯರತಿ ಭರದಿ
ಗಂಡು ಮೇಲಾಗಿ ಬರಲಲ್ಲಿಗದುವೇ ಯೋಗ !
ಭಂಡಜನ ಹದಗೆಡಿಸಿ ಮುನಿ ಪತಂಜಲಿಯಾ...
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "


" ಮಗನೇ ಸಿಸುವಿನ ಮಹಾತ್ಮೆಯ ಬಗ್ಗೆ ಎಷ್ಟು ಹೇಳಿದರೂ ಸಾಲದಪ್ಪಾ. ಅನಾದಿ ಕಾಲದಲ್ಲಿ ಪತಂಜಲಿ ಎಂಬೊಬ್ಬ ಋಷಿ ಇದ್ನಂತೆ. ಆತ ಯೋಗದ ಕುರಿತು ಹೀಂಗಿಂಗೆಲ್ಲಾ ಬರದ. ಅಂತಾ ಯೋಗದ ಭಾಗದಲ್ಲಿ ಕುಂಡಲಿನೀ ಯೋಗ ಒಂದು ಅಂತ ಹೇಳಿದ್ನಂತೆ. ಅದನ್ನೇ ತಾವು ಪ್ರಾಕ್ಟಿಕಲ್ ಆಗಿ ಮಾಡ್ತೀವಿ ಅಂತ ರಂಜೂನು ಸೇರ್ದಂತೇ ಸಾವ್ರಾರು ಜನ ಹುಡ್ಗೀರ್ನ ಕಂಡು ಸಿಸು ಮತ್ತೆ ನಗ್ತಾ ಇತ್ತು. ಅದೇ ’ನಿರ್ವಿಕಾರ’! ಹುಡ್ಗೀರು ಹೆಂಗಸ್ರು ಕುಂಡೆ ಎತ್ತಿ ಹಾರ್ಸಿ ಹಾರ್ಸಿ ಕುಣ್ದಿದ್ ನೋಡದ್ರೆ ನಾಳೆ ಬಿಡದಿ ಕಡೆಗೆ ಹೋಗೋ ವಾಹನ ಚೆಕ್ ಮಾಡಿ ಅದ್ರಲ್ಲಿ ಪೇನ್ ಕಿಲ್ಲರ ಮಾತ್ರೆಗಳು ಅರ್ಧ ಕ್ವಿಂಟಾಲು, ಝಂಡು ಬಾಮು ಇತ್ಯಾದಿ ಸಿಗೋದು ಗ್ಯಾರಂಟಿಯಪ್ಪಾ. ಎಲ್ಲಾ ಆ ೬-೭ ವರ್ಷದ ಸಿಸುವಿನ ಪವಾಡ!

ಅಂತೂ ’ಸ್ತ್ರೀನಿವಾಸ ನಿತ್ಯಾರಂಜಿತ ಕಲ್ಯಾಣ’ ಕಥೆಯನ್ನು ಕೇಳಿದೆಯಲ್ಲಾ ಈಗ ಸರ್ವರಿಗೂ ಮಂಗಲಪಾಡೋಣ...

" ಅಣ್ಣಾ ನಿನ್ನ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನಾನೂ ಕ್ವಾರ್ಟರು ಏರಿಸಿಗೊಂಡು ಬಿಡದಿಕಡೆ ಹೋಗಬೇಕೆಂಬ ಮನಸ್ಸಾಗುತ್ತಿದ್ದೆಯಣ್ಣಾ ...ತಾವು ಹೇಳಿದಂತೇ ಮಂಗಲಪಾಡೋಣ "

ಹಿಮ್ಮೇಳ:

ಜಯಜಯ ಮಂಗಲ ಜಗದ ದೇವರಿಗೆ
ಭಯವನು ನೀಗುವ ಕಾಲಭೈರವಗೆ
ನಿಯಮದಿ ’ನಿತ್ಯ’ನ ಕಥೆಯನು ಕೇಳಿದ
ವಯದಲಿ ಹಿರಿಕಿರಿಯರಾಗಿಹ ಜನಕೆ
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ......

ತಿರುಮಲ ತಿರುಪತೀ ತಿಮ್ಮಪ್ಪ ವರದ ಗೋವಿಂದಾ ....ಗೋವಿಂದ
ಏಳುಕುಂಡಲವಾಡ ಗೋವಿಂದಾ .....ಗೋವಿಂದ
ಸುರಗಿರಿ ಚರಗಿರಿ ಕರಿಗಿರಿ ಹರಿಗಿರಿ ಪುರಗಿರಿ ಆರುಮಲೆ ಏಳುಮಲೆ ಇಪ್ಪತ್ನಾಕು ಮಲೆಗಳಲ್ಲಾಡೋ ಮಲೈಮಾದೇಶ್ವರನಿಗೇ ಜಯ ಜಯ ಜಯ ಜಯ
ಹರನಮಸ್ಪಾರ್ವತೀ ಪತೆ.....ಹರ ಹರ ಮಹಾದೇವ


Thursday, July 14, 2011

ಆ ಮಹಾಕಾವ್ಯ ಈ ಭಾವ ಗೀತೆ ನಿನ್ನ ಪದಧ್ವನಿ


ಆ ಮಹಾಕಾವ್ಯ ಈ ಭಾವ ಗೀತೆ ನಿನ್ನ ಪದಧ್ವನಿ

ಸಾಮಾನ್ಯರಾದ ನಮಗೆ ಕಾವ್ಯವನ್ನು ಬರೆಯುವಾಗ ಹಲವೊಮ್ಮೆ ಯಾವುದೇ ವಿವೇಚನೆ ಇರುವುದಿಲ್ಲ. ಆದರೆ ಮಹರ್ಷಿಗಳು, ಮಹಾಕವಿಗಳು ಕಾವ್ಯವನ್ನು ತಮ್ಮ ತಪಸ್ಸಿನಿಂದ ಬಸಿದು ಕೊಟ್ಟಿದ್ದಾರೆ ಅರ್ಥಾತ್ ಅವುಗಳ ಬಳಕೆಯಿಂದ ಓದುಗರಲ್ಲಿ, ಸಮಾಜದಲ್ಲಿ ಒಳಿತಾಗಬೇಕು, ಜನಜೀವನದಲ್ಲಿ ಇಹ-ಪರಗಳ ತಿಳುವಳಿಕೆಗಳು ಸಮರ್ಪಕವಾಗಿ ಮೂಡಿ ಸಮಾಜ ತಪ್ಪು ಹಾದಿಯಲ್ಲಿ ನಡೆಯದಂತಾಗಬೇಕು ಎಂಬುದು ಅವರ ಅಪೇಕ್ಷೆಯಾಗಿರುತ್ತಿತ್ತು. ಅದರಿಂದ ಅವರಿಗೆ ಯಾವ ಪ್ರಯೋಜನವಾಗದಿದ್ದರೂ ಲೋಕದ ಹಿತಾರ್ಥ ಅದನ್ನವರು ನಡೆಸಿಬಂದಿದ್ದರು.

ಆ ಮಹಾಕಾವ್ಯಗಳ ಸರಹದ್ದಿನಲ್ಲಿ ಹಿಂದಕ್ಕೆ ಹಿಂದಕ್ಕೆ ಹೋಗುತ್ತಾ ಹೋದರೆ ಆಸಕ್ತರಿಗೆ ಕಾಣಸಿಗುವುದೇ ಮಹಾಭಾರತ. ತಪಸ್ಸಿನಿಂದ ವಿಮುಖರಾಗಿ ಲೌಕಿಕವಾಗಿ ಚಿಂತನ-ಮಂಥನ ನಡೆಸುತ್ತಿದ್ದ ಮಹಾ ಋಷಿ ಕೃಷ್ಣದ್ವೈಪಾಯನರಿಗೆ ಜಲೌಘದಂತೇ ತಂತಾನೇ ಒಂದು ಕಾವ್ಯ ಬಾಯಿಂದ ಹೊರಡಹತ್ತಿತು. ಹಾಗೆ ಹೊರಬಂದ ಆ ಕಾವ್ಯವನ್ನು ತಾನೇ ಹೇಳಿಕೊಂಡು ಬರೆಯಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಆ ಕುರಿತು ಹಾಗೇ ಜಂಜಾಟದಲ್ಲಿರುವಾಗ ದೇವರ್ಷಿ ನಾರದರು ಆ ಜಾಗಕ್ಕೆ ಬಿಜಯಂಗೈಯ್ಯುತ್ತಾರೆ, ಅದು ದೈವೀ ಸಂಕಲ್ಪ! ಬಂದ ನಾರದರಿಗೆ ಮಹರ್ಷಿಗಳ ಮುಖದಲ್ಲಿರುವ ಅವ್ಯಕ್ತ ಚಿಂತೆಯ ಅರಿವಾಗುತ್ತದೆ. ಲೋಕಾಭಿರಾಮವಾಗಿ ಉಭಯ ಕುಶಲೋಪರಿಗಳು ನಡೆದ ಬಳಿಕ ನಾರದರೇ ಅದನ್ನು ನೇರವಾಗಿ ಪ್ರಸ್ತಾಪಿಸುತ್ತಾರೆ. ತನ್ನಲ್ಲಿ ಒಡ ಮೂಡಿದ ಮಹಾಕಾವ್ಯವನ್ನು ಅಕ್ಷರ ರೂಪಕ್ಕೆ ತರಲಾಗದ ಪೀಕಲಾಟವನ್ನು ಮಹರ್ಷಿ ದೇವರ್ಷಿಗೆ ಹೇಳುತ್ತಾರೆ.

ಕೃತಿಗೆ ಲಿಪಿಕಾರನಾಗಿ ಒಬ್ಬಾತ ಬೇಕು, ಆತ ಬರೇ ಬೆರಳಚ್ಚು ತಜ್ಞನಾಗಿರದೇ ’ತಲೆ’ಯಿರುವಾತನಾಗಿ ತಾನು ಹೇಳುತ್ತಿರುವುದನ್ನು ಅರ್ಥವಿಸಿಕೊಂಡು ವೇಗದಲ್ಲಿ ಅದನ್ನು ಬರೆಯಬಲ್ಲವನಾಗಿರಬೇಕು ಎಂಬುದು ಮಹರ್ಷಿಗಳ ಆಶಯವಾಗಿರುತ್ತದೆ. ಅದಕ್ಕೆ ತಕ್ಕನಾದ ವ್ಯಕ್ತಿ ಈಶಸುತನೆನಿಸಿದ ಪರಬ್ರಹ್ಮ ಸ್ವರೂಪಿ ಗಣೇಶನೆಂಬುದು ನಾರದರ ಅಂಬೋಣ. ಗಣೇಶನನ್ನು ಒಲಿಸಿ ಕರೆಯಲು ಇರುವ ಸೂತ್ರಗಳಲ್ಲಿ ಖಂಡೋಪಾಸನೆ ಮತ್ತು ಅಖಂಡೋಪಾಸನೆಗಳೇ ಮೊದಲಾದ ಚರ್ಚೆಗಳು ನಡೆಯುತ್ತವೆ. ಕೊನೆಗೊಮ್ಮೆ ಇಬ್ಬರೂ ಧ್ಯಾನಾಸಕ್ತರಾಗಿ ಸ್ತುತಿಗೈದು ಗಣೇಶನನ್ನು ಪ್ರಸನ್ನಗೊಳಿಸಿ ಪ್ರತ್ಯಕ್ಷ ಕಾಣುವಲ್ಲಿ ಸಫಲರಾಗುತ್ತಾರೆ.

ಅಭ್ಯುತ್ಥಾನಂ ಸು ಆಸನಂ ಸ್ವಾಗತೋಕ್ತಿಃ
ಪಾದ್ಯಂಚಾರ್ಘ್ಯಂ ಮಧುಪರ್ಕಾಚ ಮೌಚ |
ಸ್ನಾನಂ ವಾಸೋ ಭೂಷಣಾಂಗಂಧಮಾಲ್ಯೇ
ಧೂಪೋ ದೀಪಃ ಸೋಪಹಾರಃ ಪ್ರಣಾಮ ||

ಬಂದ ಗಣೇಶನಿಗೆ ಸುಆಸನ[ ಕುಳಿತುಕೊಳ್ಳುವ ಪೀಠ-ಖುರ್ಚಿ] ಅರ್ಘ್ಯ [ಕೈತೊಳೆಯಲು ನೀರು] ಪಾದ್ಯ[ಕಾಲುತೊಳೆಯಲು ನೀರು]ಮಧು-ಪರ್ಕವೇ ಮೊದಲಾಗಿ ಷೋಡಶೋಪಚಾರವನ್ನು ನೆರವೇರಿಸಿದ ಬಳಿಕ ವಿಷಯ ಪ್ರಸ್ತಾವನೆಯಾಗುತ್ತದೆ. ಮಹರ್ಷಿಗಳು ಮಹಾಕಾವ್ಯದ ಹೇಳುವಿಕೆಯನ್ನು ಆರಂಭಿಸುತ್ತಾರೆ. ಗಣೇಶ ಅವರು ಹೇಳಿದ್ದನ್ನು ಅತಿ ಶೀಘ್ರವಾಗಿ ಬರೆದುಬಿಡುತ್ತಾನೆ. ಮಧ್ಯೆ ಹೇಳುವುದನ್ನು ನಿಲ್ಲಿಸಿದರೆ ಬರೆಯುತ್ತಿರುವ ಲೆಕ್ಕಣಿಕೆ[ಪೆನ್ನು] ಬಿಸುಟು ತಾನು ಹೊರಟುಹೋಗುತ್ತೇನೆ ಎಂಬ ಕರಾರು ಗಣೇಶನದ್ದಿರುತ್ತದೆ. ಆಗ ಮಹರ್ಷಿಗಳು ತಾನು ಹೇಳಿದ್ದನ್ನು ಅರ್ಥಮಾಡಿಕೊಂಡು ಬರೆಯುವಂತೇ ಗಣೇಶನಿಗೆ ಪ್ರತಿಕರಾರು ಹಾಕುತ್ತಾರೆ. ಗಣೇಶ ಒಪ್ಪಿ ಕಾವ್ಯದ ಬರಹ ಮುನ್ನಡೆಯುತ್ತದೆ.

ಮಹರ್ಷಿಗಳು ಹೇಳಿದ ಆ ಕಾವ್ಯದಲ್ಲಿ ಅಲ್ಲಲ್ಲಿ ತನಗೆ ಸಂದೇಹ ಬಂದಾಗ ಗಣೇಶ ಅದನ್ನು ಪರಿಹರಿಸುವಂತೇ ಮಹರ್ಷಿಗಳನ್ನು ಕೇಳುತ್ತಾನೆ, ಋಷಿಗಳು ಹಾಗೇ ಸಮಜಾಯಿಷಿ ಕೊಟ್ಟು ಸಂದೇಹ ನಿವಾರಣೆಯಾದಮೇಲೆ ಮತ್ತೆ ಲೆಕ್ಕಣಿಕೆ ಮುನ್ನಡೆಯುತ್ತದೆ. ಒಮ್ಮೆ ಹೀಗಾಗುತ್ತದೆ ಕಾವ್ಯದಲ್ಲಿರುವ ಕಥಾನಕ ಮಹಾಭಾರತ, ಭಾರತ ಕಥೆಯಲ್ಲಿ ಧರ್ಮರಾಯನ ರಥ ನೆಲದಿಂದ ಎತ್ತರಕ್ಕೆ ಗಾಳಿಯಲ್ಲಿ ಹಾರುತ್ತಿರುತ್ತದೆ. ಹಾರುತ್ತಿರುವ ರಥ ಒಮ್ಮೆ ಕುಸಿದು ಬೀಳುತ್ತದೆ. ಮಹಾ ಧರ್ಮಿಷ್ಠನಾದ ಯುಧಿಷ್ಠಿರನ ರಥವೇ ಹೀಗಾಗಲು ಕಾರಣವೇನು ? ಎಂಬ ಗಣೇಶನ ಪ್ರಶ್ನೆಗೆ ಋಷಿಗಳ ಉತ್ತರ - ಶ್ರೀಕೃಷ್ಣ " ಅಶ್ವತ್ಥಾಮೋ ಹತಃ ಕುಂಜರಃ " ಎಂದು ಘೋಷಿಸುವಂತೇ ಧರ್ಮರಾಯನಿಗೆ ಆಜ್ಞಾಪಿಸಿದಾಗ ಸತ್ಯಸಂಧನಾದ ಧರ್ಮರಾಯ " ಪ್ರತ್ಯಕ್ಷ ನೋಡದೆಯೇ ಹೇಳಲಾರೆ " ಎಂದುಬಿಡುತ್ತಾನೆ. ಸ್ವತಃ ಭಗವಂತನೇ ಆದ ಶ್ರೀಕೃಷ್ಣನ ಆಜ್ಞೆಯನ್ನು ಅವಗಣನೆಮಾಡಿದ್ದರ /ಉಲ್ಲಂಘನೆಮಾಡಿದ್ದರ ಪರಿಣಾಮವಾಗಿ ಧರ್ಮರಾಯನ ರಥ ಒಮ್ಮೆ ಹಾಗೆ ಧರೆಗುರುಳುತ್ತದೆ. " ಯಾರು ಭಗವಂತನನ್ನೇ ಸಂಶಯಿಸುತ್ತಾರೋ ಅವರಿಗೆ ಉಳಿಗಾಲವಿಲ್ಲ [ಸಂಶಯಾತ್ಮಾ ವಿನಶ್ಯತಿ] " ಎಂದು ಶ್ರೀಕೃಷ್ಣನೇ ಸಾರುತ್ತಾನೆ. --ಈ ಉತ್ತರ ಬರುತ್ತಿರುವಂತೆಯೇ ತನ್ನ ಶುಂಡ[ಸೊಂಡಿಲು]ವನ್ನೊಲೆದು ಹೂಂ ಹೂಂ ಎನ್ನುತ್ತಾ ಬಹಳ ಸಂತೋಷದಿಂದ ಭಾರತಕಥೆಯನ್ನು ಕಾವ್ಯರೂಪದಲ್ಲಿ ಬರೆದುಮುಗಿಸಿದನಂತೆ ಗಣೇಶ. ಗಣೇಶ ’ಗೀರ್ವಾಣ ಲಿಪಿ’ಯಲ್ಲಿ ಈ ಕಾವ್ಯವನ್ನು ಬರೆದ. ಛಂದಸ್ಸು-ವ್ಯಾಕರಣ, ಅಲಂಕಾರ, ಉಪಮೆ ಇತ್ಯೇತ್ಯಾದಿ ಸರ್ವಾಭರಣ ಸುಂದರಿಯಾದ ಈ ಮಹಾಕಾವ್ಯ [ಅದರ ಸಂಸ್ಕೃತದ ಆವೃತ್ತಿ] ಇಂದಿಗೂ ಸಾಹಿತ್ಯಾಸಕ್ತರಿಗೆ ಅತ್ಯುತ್ತಮ ’ಕಾವ್ಯ’ಳೆನಿಸಿದ್ದಾಳೆ!

ಬರೆಯುವಾಗ ಓದಿದ್ದಕ್ಕಿಂತ ಹತ್ತುಪಟ್ಟು ಹೆಚ್ಚಿನ ಅರ್ಥವಾಗುತ್ತದೆ ಎನ್ನುವುದು ಹಲವರ ಅನಿಸಿಕೆ ಅಲ್ಲವೇ? ಇನ್ನು ಕೆಲವರಿಗೆ ಬರೆಯುವಾಗಲೂ ತಲೆ ಎಲ್ಲೋ ಇರುತ್ತದೆ, ಹಾಗಾಗಿ ಅವರು ಬರೆದರೂ ಒಂದೇ ಬಿಟ್ಟರೂ ಒಂದೇ. ಗಣೇಶನಿಗೆ ಹೊಸದಾಗಿ ಅರ್ಥವಿವರಣೆಯೇನೂ ಬೇಕಾಗಿರಲಿಲ್ಲ, ಆದರೂ ಲೋಕದ ಹಿತಾರ್ಥ ರಚಿತವಾಗುವ ಅದಕ್ಕೆ ಲೋಕಕ್ಕೆ ತಿಳಿಯುವ ಹಾಗೇ ಆತ ಕಾರಣ ಕೇಳಿದ್ದಾನೆ. ಹೇಗೂ ಬರೆಯುವಾಗಲೇ ಅದರ ಪರಿಪೂರ್ಣ ಹುರುಳನ್ನು ಅರಿತಿದ್ದ ಗಣೇಶ ಬರೆದು ಮುಗಿಸಿ ನಿಂತು ಈ ಕೃತಿ ನಿಜಕ್ಕೂ ಮಹಾನ್ ಕಾವ್ಯವೇ ಸರಿ, ಇದು ಚತುರ್ವೇದಗಳ ನಂತರ ಜನಿಸಿದ್ದರಿಂದ ಪಂಚಮವೇದ ಎನಿಸಲಿ ಎಂದು ಹರಸಿ ಮಹರ್ಷಿಗಳಿಂದ ಬೀಳ್ಕೊಂಡನಂತೆ. ಈ ಮಹಾಕಾವ್ಯದ ಭಾಗವಾಗಿಯೇ ಸಂಗೀತದ ಸ್ವರ-ಲಯ-ತಾಳಗಳೂ ಹುಟ್ಟಿದ್ದರಿಂದ ಸಂಗೀತವನ್ನೂ ಇದೇ ಹೆಸರಿನಿಂದ ಕರೆಯುತ್ತಾರೆ. ಕೃತಿಯ ಕರ್ತೃವಾದ ಮಹರ್ಷಿ ಜಗತ್ತಿಗೇ ಒಳಿತಾಗಬಲ್ಲ ಹಲವು ಕೃತಿಗಳನ್ನು ಕೊಟ್ಟಿರುವುದರಿಂದ ವಿಶ್ವಬಂಧುವಾದ ಅವರನ್ನು ’ವ್ಯಾಸ’ ಎಂದು ಸಮಾಜ ಗೌರವಿಸುತ್ತದೆ.

ಚತುರ್ವೇದಗಳನ್ನೂ ಭಾಗವತ ಪುರಾಣವನ್ನೂ ವಾಣಿ ಮತ್ತು ವಾಙ್ಮಯಗಳನ್ನು ಸಮೀಕರಿಸಿ ಕೃತಿರೂಪಕ್ಕಿಳಿಸಿರುವುದರಿಂದ ವೈಶ್ವಿಕರಾದ [ವಿಶ್ವಬಂಧುವಾದ] ವ್ಯಾಸರಿಗೂ ಮೊದಲಾಗಿ ಯಾರೂ ಅಂತಹ ಮೇರು ಕೆಲಸಗಳನ್ನು ಮಾಡಿರಲಿಲ್ಲ. ವೇದವೆಂದರೇ ಜ್ಞಾನ. ತಾನು ಪಡೆದ ಜ್ಞಾನವನ್ನು ಜಗದ ಇತರರಿಗೂ ಹಂಚುವ ಹಂಬಲದಿಂದ ಇಂತಹ ಮಹತ್ಕಾರ್ಯವನ್ನು ಮಾಡಿ ಜ್ಞಾನಚಕ್ಷುವನ್ನು ಕರುಣಿಸಿದ ಮಹರ್ಷಿ ಗುರುಗಳೆಲ್ಲರ ಗುರುಗಳೆನಿಸಿದ್ದಾರೆ. ಈ ಕಾರಣಕ್ಕಾಗಿ ಉತ್ತಮ ಕೆಲಸಗಳನ್ನು ಮಾಡುವಾಗ ವ್ಯಾಸರನ್ನು ನೆನೆಯುವುದಾಗುತ್ತದೆ.

ಮಳೆಗಾಲದ ನಾಲ್ಕು ತಿಂಗಳು ಭೂಮಿಯಲ್ಲಿ ಹಲವು ಜೀವಿಗಳ ಸಂತಾನೋತ್ಫತ್ತಿ ಪ್ರಕ್ರಿಯೆ ಜಾಸ್ತಿಯಿರುತ್ತದೆ. ಹುಳ-ಹುಪ್ಪಟೆಗಳು, ಏಡಿಗಳು, ಸರೀಸೃಪಗಳೇ ಮೊದಲಾದ ಎಲ್ಲಾ ಜೀವಕೋಟಿಗಳ ಓಡಾಟ ಬಹಳ ಹೆಚ್ಚಿರುತ್ತದೆ. ಸರ್ವ ಸಂಗವನ್ನೂ ತ್ಯಜಿಸಿ ಜೀವನ್ಮುಕ್ತ ಸ್ಥಿತಿಯನ್ನು ಗಳಿಸುವತ್ತ ಹೆಜ್ಜೆಹಾಕುವ ಅಹಿಂಸೆಯನ್ನು ಅನುಸರಿಸುವ, ಬೋಧಿಸುವ ತಾಪಸಿಗಳು ಈ ಕಾಲದಲ್ಲಿ ಓಡಾಡಿದರೆ ಅವರ ಮರದ ಹಾವುಗೆಗಳಿಗೆ ಅರಿವಿಲ್ಲದೇ ಸಿಕ್ಕ ಜೀವಜಂತುಗಳು ಕೊಲ್ಲಲ್ಪಡುತ್ತವಲ್ಲಾ ಎಂಬ ಕಾರಣಕ್ಕೆ ಸನ್ಯಾಸಿಗಳಾದವರು ಕುಂಭದ್ರೋಣ ಮಳೆಯ ಸಮಯವಾದ ಅಷಾಢ ಹುಣ್ಣಿಮೆಯಿಂದ ಕಾರ್ತೀಕ ಹುಣ್ಣಿಮೆಯ ವರೆಗೆ ಒಂದೇ ಕಡೆಗೆ ಆಶ್ರಯಪಡೆದಿದ್ದು ತಮ್ಮ ತಪಸ್ಸನ್ನೂ ಏಕಾಂತವನ್ನೂ ಹೆಚ್ಚಿಸಿ ಜಗತ್ಕಲ್ಯಾಣಕ್ಕೆ ಪರೋಕ್ಷ ಕಾರಣೀಭೂತರಾಗುತ್ತಾರೆ. ನಾಲ್ಕು ಮಾಸಗಳ ಈ ಕಾಲವನ್ನು ಚಾತುರ್ಮಾಸವೆಂದೂ ನಡೆಯುವ ವೃತವನ್ನು ಚಾತುರ್ಮಾಸ್ಯವೆಂದೂ ಕರೆಯುತ್ತಾರೆ.


ಸಜ್ಜನರೂ ತಪೋನಿಷ್ಠರೂ ಆದ ಸಾಧು-ಸಂತರನ್ನು ಅವರ ಚಾತುರ್ಮಾಸ್ಯದ ವೇಳೆ ದರ್ಶಿಸಿ ಅವರಿಗೆ ಭಿಕ್ಷೆಯನ್ನು ನಡೆಸುವುದು, ಅವರ ಪಾದಪೂಜೆ ನಡೆಸುವುದು ಮತ್ತು ಅವರು ನಡೆಸಬಹುದಾದ ಸಂಕೀರ್ತನೆಗಳಲ್ಲಿ ಭಾಗಿಗಳಾಗುವುದು ಪುಣ್ಯತಮ ಕೆಲಸವಾಗಿರುತ್ತದೆ. ಲೌಕಿಕವಾಗಿ ಉದಾಹರಿಸಬಹುದಾದರೆ ತಾವೂ ಹೊರಟ ನೌಕೆಯಲ್ಲಿ ತಮಗೆ ಗೊತ್ತಿರುವ ಹಲವರನ್ನೂ ಜ್ಞಾನಮಾರ್ಗದಲ್ಲಿ ಕರೆದುಕೊಂಡು ಹೋಗುವ ಇಚ್ಛೆಯುಳ್ಳ ನಿಸ್ಪೃಹರು ಅವರಾಗಿರುತ್ತಾರೆ. ಜನನ-ಮರಣಗಳೆಂಬ ಚಕ್ರವ್ಯೂಹದಿಂದ ಹೊರಬರಲು ಸರಿಯಾದ ಆಯೋಜನೆ ಅಂಥಾ ತಪಸ್ವಿಗಳಿಂದ ಲಭಿಸಬೇಕೇ ವಿನಃ ಅದು ಕ್ರಯಕ್ಕೆ ಸಿಗುವಂಥದ್ದಲ್ಲ! ಜನಿಸಿದ ಪ್ರತೀವ್ಯಕ್ತಿಗೆ ಉತ್ತಮ ಗುರುವಿನ ದರ್ಶನವಾಗಬೇಕಾದರೆ ಅದೂ ಒಂದು ವಿಧಿಯಿಚ್ಛೆಯೇ ಆಗಿರುತ್ತದೆ. ಸಿಕ್ಕಿದ ಸದ್ಗುರುವನ್ನು ಸಮರ್ಪಕವಾಗಿ ಸೇವಿಸುವ ಬುದ್ಧಿ ಬರುವುದೂ ಕೂಡ ಆ ಯಾ ವ್ಯಕ್ತಿಯ ವಿಧಿಯೇ ಸರಿ.

ಯುಗಧರ್ಮಕ್ಕನುಗುಣವಾಗಿ ಕಲಿಯುಗದಲ್ಲಿ ಕಪಟ ಸನ್ಯಾಸಿಗಳು ಬಹಳವೇ ಇರುವುದರಿಂದ ಸನ್ಯಾಸಿಗಳಾದವರಿಗೆ ಕಾಲಹಾಕುವುದು ಕಷ್ಟವಾಗಿದೆ! ಸನ್ಯಾಸಿಗೂ ಸನ್ಯಾಸಿಯ ವೇಷಕ್ಕೂ ಹೊರನೋಟದಿಂದ ಸಾಮ್ಯತೆ ಕಾಣುವುದರಿಂದ ಅನೇಕ ಜನ ಸತ್ಯಾಸತ್ಯತೆಯ ಪರಾಮರ್ಷೆಗೆ ನಿಲುಕದ ವಿಷಯವೆಂದು ನಿಜ ಸನ್ಯಾಸಿಗಳನ್ನೂ ಮರೆತುಬಿಡುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾರೆ. ಆದ್ಯ ಶಂಕರರು ಈ ರೀತಿ ಅಪ್ಪಣೆಕೊಡಿಸಿದ್ದಾರೆ --

ಅಸ್ಮತ್ ಪೀಠೇ ಸಮಾರೂಢಃ ಪರಿವ್ರಾಡುಕ್ತ ಲಕ್ಷಣಃ |
ಅಹಮೇವೇತಿ ವಿಜ್ಞೇಯ ಯಸ್ಯ ದೇವ ಇತಿ ಶ್ರುತೇ ||

-ಪರಿವ್ರಾಜಕ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ತನ್ನ ಪೀಠದಲ್ಲಿ ಆಸೀನನಾದರೆ ಅವನನ್ನು ತಾನೇ ಅಂತ ತಿಳಿಯಿರಿ. ಅರಿಷಡ್ವರ್ಗಗಳಿಂದ ಮುಕ್ತರಾದ, ಹೊಗಳುವಿಕೆ-ತೆಗಳುವಿಕೆಯಲ್ಲಿ ಸ್ಥಿತಪ್ರಜ್ಞರಾದ, ಮೋಕ್ಷವನ್ನುಳಿದು ಇನ್ನುಳಿದ ಆಸೆಗಳನ್ನು ಪರಿತ್ಯಜಿಸಿದ, ಯಾರದೇ ಸಂಗವನ್ನೂ ಬಯಸದ, ತ್ರಿಕಾಲ ಸ್ನಾನ-ಸಂಧ್ಯಾ ತಪಃ ಪೂಜಾದಿ ಕೈಂಕರ್ಯನಿರತರಾದ, ಬಾಹ್ಯಾಸಕ್ತಿಯನ್ನು ವಿಜೃಂಭಿಸದ, ಜನರಿಗೆ ತ್ರಿಕರಣ ಪೂರ್ವಕ ಸನ್ಮಾರ್ಗ ಬೋಧಿಸುವ, ಸಾತ್ವಿಕ-ಸಸ್ಯಾಹಾರಿಗಳಾದ, ಅಹಿಂಸಾ ತತ್ಪರರಾದ, ಹೃದಯ ಸರೋವರದಲ್ಲಿ ಬೆಳಗುತ್ತಿರುವ ಪರಮಾತ್ಮನೆಂಬ ಸೂರ್ಯನನ್ನೇ ನೋಡುವ ಹಂಸದ ರೀತಿ ಪರಮಹಂಸರಾಗಿರುವ ವ್ಯಕ್ತಿಗಳು ಸನ್ಯಾಸಿಗಳು ಎನಿಸಿಕೊಳ್ಳುತ್ತಾರೆಯೇ ಹೊರತು ವಿಧಾನ ಸೌಧದಲ್ಲಿ ರಾಜಕೀಯ ಕಣಕ್ಕೆ ಮುನ್ನುಗ್ಗುವ, ವಿಷಯ ಪ್ರೇರಿತರಾಗಿ ಕಣ್ಣುಮುಚ್ಚಾಲೆಯಾಡುವ ವ್ಯಕ್ತಿಗಳಲ್ಲ. ಸನ್ಯಾಸಿಗಳ ನಡತೆಯನ್ನವಲೋಕಿಸಿ ಪರಿವ್ರಾಜಕರಾದವರನ್ನು ಮಾತ್ರ ಗುರುವೆಂದು ಪರಿಗಣಿಸು ಎಂದು ಆಚಾರ್ಯರು ಹೇಳಿದ್ದಾರಲ್ಲವೇ ? ಭಗವತ್ಪಾದ ಶಂಕರರಿಗೆ ಅಷ್ಟು ಹಿಂದೆಯೇ ಕಪಟ ಸನ್ಯಾಸಿಗಳ ಬಗ್ಗೆ ಅರಿವಿತ್ತು ಎಂಬುದು ಸ್ಪಷ್ಟವಾಗುತ್ತದೆ!

ಮನುಷ್ಯ ಎಷ್ಟೇ ತಾನರಿತರೂ ಅದು ಲೌಕಿಕ ವಿದ್ಯೆಯೇ ಹೊರತು ಪಾರಮಾರ್ಥಿಕವಲ್ಲ. ವಿಶ್ವವಿದ್ಯಾಲಯಗಳು ಕೊಡಮಾಡುವ ಪದವಿಗಳು ಕೇವಲ ಇಲ್ಲಿನ ವಿಷಯಗಳಿಗೆ ಸಂಬಂಧಿಸಿದ್ದೇ ಹೊರತು ಕಾಣದ ಲೋಕದ ಉನ್ನತ ಗಮ್ಯಸ್ಥಾನಕ್ಕೆ, ಗಹನವಾದ ಆ ವಿಷಯಗಳಿಗೆ ಸಂಬಂಧಿಸಿದ್ದಲ್ಲ. ವಿಜ್ಞಾನಮಯ ಲೋಕದಿಂದಾಚೆಗೆ ಏನಾದರೂ ಮಾಹಿತಿ ಲಭ್ಯವಾಗುವುದಾದರೆ ಅದು ಶುದ್ಧ ಸನ್ಯಾಸಿಗಳಿಗೇ ಹೊರತು ಸಾಮಾನ್ಯರಿಗಲ್ಲ. ನಮಗೆ ಗೊತ್ತಿರದ ಅನೇಕ ವಿಷಯಗಳನ್ನು ತಮ್ಮ ತಪೋಬಲದಿಂದ ತಾರ್ಕಿಕವಾಗಿ ನಿರ್ಣಯಿಸಬಹುದಾದ ತಾಕತ್ತು ಇರುವುದು ಕೇವಲ ತಾಪಸರಿಗೇ ಹೊರತು ಬೇರಾರಿಗೂ ಅಲ್ಲ.

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಂ ||

ಹುಟ್ಟಿಸಿದ ಆ ಶಕ್ತಿ ಮೂಕನನ್ನೇ ವಾಚಾಳಿಯನ್ನಾಗಿಯೂ ಹೆಳವನನ್ನೇ ಶಿಖರಗಾಮಿಯನ್ನಾಗಿಯೂ ಮಾಡಬಲ್ಲ ಸಾಮರ್ಥ್ಯ ಉಳ್ಳದ್ದಾಗಿದೆ ಎಂಬ ಸತ್ಯದ ಅರಿವು ನಿಜದ ಅರಿವು ಕೂಪಮಂಡೂಕಗಳಾದ ನಮಗೆ ಸಹಜವಾಗಿ ಪ್ರಾಪ್ತವಲ್ಲ. ಯಾವಾಗ ಯುದ್ಧದಲ್ಲಿ ನಮ್ಮ ಕುದುರೆ ಸೋಲುತ್ತದೋ, ಯಾವಾಗ ಪರೀಕ್ಷೆಯಲ್ಲಿ ನಮ್ಮ ಅನುತ್ತೀರ್ಣತೆ ಘೋಷಿಸಲ್ಪಡುತ್ತದೋ, ಯಾವಾಗ ಇಲ್ಲದ ಕಾಯಿಲೆ ನಮಗೆ ಅಡರಿಕೊಂಡು ಹಿಂಸಿಸುತ್ತದೋ, ಯಾವಾಗ ಇರುವ ಬೊಕ್ಕಸ ಬರಿದಾಗಿ ನಡೆವ ಮಾರ್ಗವೇ ಗತಿಯಾಗಿ ಪರಿಣಮಿಸುತ್ತದೋ ಅಂತಹ ದಯನೀಯ ದಿನಗಳಲ್ಲಿ ಮಾತ್ರ ನಮಗೆ ಆ ಇನ್ನೊಂದು ಶಕ್ತಿಯ ಅರಿವು ಸ್ವಲ್ಪ ಮಟ್ಟಿಗೆ ಆಗುತ್ತದೆ! ಆದರೂ ’ಅಡಿಗೆ ಬಿದ್ದರೂ ಮೂಗು ಮೇಲೇ ಇದೆ’ ಎನ್ನುವ ನಮ್ಮ ಅಹಂ ಅಲ್ಲೂ ಕೆಲಸಮಾಡುತ್ತಲೇ ಇರುತ್ತದೆ! ಯಾವಾಗ ಅಹಂ ಎಂಬ ಗಡಿಯಾರ ನಿಷ್ಕ್ರಿಯವಾಗುತ್ತದೋ ಆಗ ಪರಾಶಕ್ತಿಯೆಂಬ ಯಂತ್ರ [ವಿದ್ಯುತ್ತು ಹೋದಾಗ ಯೂ.ಪಿ.ಎಸ್ ಅಥವಾ ಜನರೇಟರ್ ಇರುವಂತೇ]ಚಾಲೂ ಆಗುತ್ತದೆ. ಇಲ್ಲಿ ಯೂ.ಪಿ.ಎಸ್ ಮತ್ತೆ ನಾವೇ ತಯಾರಿಸಿದ ಯಂತ್ರವಾಗಿರುವುದರಿಂದ ಇತಿ-ಮಿತಿ ಸಹಿತವಾಗಿದೆ, ಆದರೆ ಪರಾಶಕ್ತಿ ಇತಿಮಿತಿ ರಹಿತದ್ದಾಗಿದೆ ಎಂಬುದನ್ನು ನಾವು ಅರಿಯಬೇಕು. ಅದು ಕರಗದ ಶಕ್ತಿ. ಇದಕ್ಕೆ ಉದಾಹರಣೆ ದ್ರೌಪದೀ ವಸ್ತ್ರಾಪಹರಣ. ಅಸಾಮಾನ್ಯ ಶೂರರೂ ಮೂರುಲೋಕದ ಗಂಡ ಎಂದೆಲ್ಲಾ ಬಿರುದು ಪಡೆದವರೂ ಸೇರಿದ ಪಂಚಪಾಂಡವರಲ್ಲಿ ಕೇವಲ ಒಬ್ಬನೇ ಒಬ್ಬ ಗಂಡ ಕೂಡ ದ್ರೌಪದಿಯ ಮಾನ ಕಾಪಾಡಲು ಸಮರ್ಥರಾಗಿರಲಿಲ್ಲ. ತುಂಬಿದ ಸಭೆಯಲ್ಲಿ ಮಾನಹೋಗುವಾಗಲೂ ಒಂದೇ ಕೈ ಎತ್ತಿ ಇನ್ನೊಂದರಲ್ಲಿ ಮಾನಮುಚ್ಚಿಕೊಂಡಾಗಲೂ ಪರಾಶಕ್ತಿ ಚಾಲೂ ಆಗಲಿಲ್ಲ. ಯಾವಾಗ ತನ್ನಿಂದಾಗದೆಂದು ಎರಡೂ ಕೈ ಮೇಲೆತ್ತಿ ಗೋಳಿಟ್ಟಳೋ ಆಗ ಅಕ್ಷಯಾಂಬರದ ಕೃಪೆಗೆ ಪಾತ್ರಳಾದಳು. ಆದರೆ ನಮ್ಮ ಯಾವ ಮಾನಕಗಳಿಗೂ ನಿಲುಕದ್ದು ಆ ಅದ್ಭುತ ಶಕ್ತಿ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ.

ಕಣ್ಣಿಗೆ ಕಾಣುವ ಆಕಾಶದ ಬುಡ-ತುದಿಗಳನ್ನಾಗಲೀ ಆಳ-ಅಗಲಗಳನಾಗಲೀ ಅಳೆಯಲಾಗದ ವಿಜ್ಞಾನ ನಮ್ಮದು! ಗುರುತ್ವ ಪೊಳ್ಳುಗಳ [ಬ್ಲ್ಯಾಕ್ ಹೋಲ್ಸ್]ಬಗ್ಗೆ ಅರಿವು ಬಂದರೂ ಅದರಾಚೆ ಏನಿದೆಯೆಂದಾಗಲೀ ಅದು ಹೇಗೆ ಹೋದ ವಸ್ತು-ವ್ಯಕ್ತಿಗಳನ್ನು ತನ್ನೊಳಗೆ ಎಳೆದುಕೊಳ್ಳುತ್ತದೆ ಎಂಬುದರ ಬಗ್ಗೆಯಾಗಲೀ ಇದುವರೆಗೆ ಅರಿಯಲಾಗದ ವಿಜ್ಞಾನ ನಮ್ಮದು! ಹಾಡಹಗಲೇ ನುಗ್ಗಿ ಜೀವಸಂಕುಲಗಳಿಗೆ ಪ್ರತ್ಯಕ್ಷ ದೈವತ್ವವನ್ನು ಕಣ್ತುಂಬ ಕಾಣಗೊಡುವ ಸೂರ್ಯನಲ್ಲಿ ಏನಿದೆಯೆಂಬ ಪರಿಪೂರ್ಣ ಮಾಹಿತಿ ಸಿಗದೇ ಅಂದಾಜುಕಟ್ಟಿದ ವಿಜ್ಞಾನ ನಮ್ಮದು! ನಿಯಮಬದ್ಧವಾಗಿ ಕೆಲಸ ನಿರ್ವಹಿಸುವ ಆಕಾಶ ಕಾಯಗಳ ನಿಯಂತ್ರಣ ಎಲ್ಲಿದೆ ಎಂಬುದನ್ನು ಅರಿಯದ ವಿಜ್ಞಾನ ನಮ್ಮದು! ಹೋಗಲಿ ದೇಹವೆಂಬ ಹಾರ್ಡ್ವೇರ್ ನಲ್ಲಿರುವ ಆತ್ಮವೆಂಬ ’ತಂತ್ರಾಂಶ’ ಹುಟ್ಟುವುದಕ್ಕಿಂತಾ ಮೊದಲು ಎಲ್ಲಿತ್ತು ಅಥವಾ ಸತ್ತಮೇಲೆ ಎಲ್ಲಿಗೆ ಹೇಗೆ ಹೋಯ್ತು ಎಂದು ಅರಿಯಲಾಗದ ಅತಂತ್ರ ವಿಜ್ಞಾನ ವೈಭೋಗ ನಮ್ಮದು! ಈ ಎಲ್ಲದನ್ನೂ ನಿರೂಪಿಸಿ, ನಿರ್ವಹಿಸುವ ನಮ್ಮ ಮೇರೆಗೂ ಮೀರಿದ ಇನ್ನೊಂದು ಯಾವುದೋ ಶಕ್ತಿಯ ಆವಾಸವನ್ನು ಅಲ್ಲಗಳೆಯುತ್ತೀರೇನು ? ಸಾಧ್ಯವೇ ನೀವೇ ಅವಲೋಕಿಸಿ.

ಹೀಗಾಗಿ ನಮಗಿಂತ ಹಿರಿದಾದ ಆ ದಿವ್ಯಶಕ್ತಿಯ ಸಾನ್ನಿಧ್ಯವನ್ನು ಸದಾ ಸಂಸ್ಮರಣೆಗೈದು ಅದರ ಹತ್ತಿರ ಹತ್ತಿರಕ್ಕೆ ನಮ್ಮನ್ನು ಸೆಳೆದೊಯ್ಯುವ ಪರಲೋಕದ ನಮ್ಮ ಗೈಡ್ ಈ ’ಗುರು.'

’ಸರ್ವೇಷಾಂ ಮಹಾಜನಾನಾಂ ಯೋಗಕ್ಷೇಮಾಭ್ಯುದಯ ಸಿದ್ಧ್ಯರ್ಥಂ’

ಎಂದು ಸಂಕಲ್ಪಿಸಿ ಸತತ ಜಗದ ಜನರ ಅಹವಾಲುಗಳನ್ನು ಜಗನ್ನಿವಾಸನ ಬಳಿಗೆ ತನ್ನ ತಪಸ್ಸಿನ ಮೂಲಕ ಒಯ್ಯುವ, ರವಾನಿಸುವ ಈ ಗುರುವೆಂಬ ಸಂದೇಶಕಾರನಿಗೆ, ಈ ನಮ್ಮ ಹಿತೈಷಿಗೆ, ಈ ನಮ್ಮ ಬಂಧುವಿಗೆ ನಮಿಸುವುದು ನಮ್ಮ ಕರ್ತವ್ಯವಾಗಿದೆ. ಹಾಗೆ ನಾವು ಮನಸ್ಸುಮಾಡಿ ಮುನ್ನಡೆಯೋಣ, ಗುರುದರ್ಶನಮಾಡಿ ಕೃತಾರ್ಥರಾಗೋಣ-ನಿಜದ ನೆಲೆಯನ್ನು ಅರಿಯುವತ್ತ ಅಂಬೆಗಾಲಿಡಲು ಪ್ರಯತ್ನಿಸೋಣ ಎಂಬ ಸದಾಶಯದೊಂದಿಗೆ ಜಗದ ಎಲ್ಲರ ಪರವಾಗಿ ಗುರುವಂದನೆ ಮಾಡುತ್ತಿದ್ದೇನೆ -

Justify Fullಅಜ್ಞಾನತಿಮಿರಾಂಧಸ್ಯ ಜ್ಞಾನಾಂಜಲಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಸ್ಠಾವರಂ ಜಂಗಮಂ ವ್ಯಾಪ್ತಂ ಯತ್ಕಿಂಚಿತ್ ಸಚರಾಚರಂ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಜ್ಞಾನಶಕ್ತಿಸಮಾರೂಢಃ ತತ್ವಮಾಲಾವಿಭೂಷಿತಃ |
ಭುಕ್ತಿಮುಕ್ತಿಪ್ರದಾತಾ ಚ ತಸ್ಮೈ ಶ್ರೀಗುರವೇ ನಮಃ ||

ಕಾಷಾಯವಸ್ತ್ರಂ ಕರದಂಡಧಾರಿಣಂ ಕಮಂಡಲಂ ಪದ್ಮಕರೇಣ ಶಂಖಂ |
ಚಕ್ರಂ ಗದಾ ಭೂಷಿತ ಭೂಷಣಾಢ್ಯಂ ಶ್ರೀಪಾದರಾಜಂ ಶಿರಸಾ ನಮಾಮಿ ||

ಹಂಸ ಹಂಸಾಯ ವಿದ್ಮಹೇ ಪರಮಹಂಸಾಯ ಧೀಮಹಿ |
ತನ್ನೋ ಹಂಸಃ ಪ್ರಚೋದಯಾತ್ ||

|| ಓಂ ಸ್ವಸ್ತಿ ||

Tuesday, July 12, 2011

ಬೇಕು ಮುಂಗಡ !


ಬೇಕು ಮುಂಗಡ !

ಜೀವ ಜಡದ ಹೃದಯವನ್ನು ಒಮ್ಮೆ ಸಾರಿಸಿ
ದೇವ ದೇಹದೊಳಗೆ ನಿನ್ನ ಕರೆದು ಕೂರಿಸಿ |
ಭಾವಮಿಳಿತ ಮನಸದೆಂಬ ಹೂವ ಏರಿಸಿ
ಜಾವಜಾವಕೊಮ್ಮೆ ಪೂಜೆ ಭಕುತಿ ಪೇರಿಸಿ ||

ರಾಮ ಕೃಷ್ಣ ಬುದ್ಧ ಕಲ್ಕಿ ಹಲವು ರೂಪದಿ
ನೇಮ ನಡೆಸಿ ಮೆರೆವೆ ಹರಿಯೇ ಜಗದ ಕೂಪದಿ |
ನಾಮ ನೆನೆಯಲೆಮಗೆ ಸಮಯವಿರದು ತಾಪದಿ !
ಹೇಮ ಗಿರಿಗಳವನು ಬಯಸಿ ಆಡೆ ಚೌಪದಿ !!

ಬಲಿಗೆ ಒಲಿದೆ ದಾನ ಪಡೆದು ಹಿಂದೆ ಭುವಿಯಲಿ
ಕಲಿಯನೊಲಿದು ತಂದು ಜಡಿದೆ ಭವಕೆ ಕಹಿಯಲಿ !
ಸುಲಿಗೆ ಮೋಸ ಚೋರತನಗಳಧಿಕ ದಿನದಲಿ
ಒಲವು ಪ್ರೀತಿ ನಲುಗಿನಿಂತು ನೋಡುತಿರುವಲಿ ||

ಧರ್ಮ ಜಾತಿ ಮತಗಳೆಂಬನೇಕ ಪಂಗಡ
ಕರ್ಮವೆಮಗೆ ಸಾಗಬೇಕು ಅದರ ಸಂಗಡ |
ಮರ್ಮವರಿಯದಾದೆವಯ್ಯ ತತ್ವ ಹಿಂಗಡ
ಶರ್ಮ ಶೇಖ ಪೌಲಿಗೆಲ್ಲ ಬೇಕು ಮುಂಗಡ !

Monday, July 11, 2011

ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು


ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು

[ಭಾಗ-೨]

ಕನ್ನಡದ ಕಲಿಯಾಗಿ ಕನ್ನಡವನ್ನೇ ಉಸಿರಾಡಿ, ಪೌರಾಣಿಕ ಪಾತ್ರಗಳಿಗಷ್ಟೇ ತಮ್ಮನ್ನೂ ತಮ್ಮ ಬಳಗವನ್ನೂ ಮೀಸಲಾಗಿರಿಸಿಕೊಂಡು, ಬದುಕಿನ ಹಲವು ಮಜಲುಗಳಲ್ಲಿ ಸಾಕಷ್ಟು ನೋವನ್ನು ಅನುಭವಿಸಿ ಪ್ರೇಕ್ಷಕ ಪ್ರಭುಗಳಿಗೆ ನಲಿವನ್ನು ಉಣಬಡಿಸಿ ಮಿಂಚಿ ಮರೆಯಾದ, ನೀಲಾಗಸದಲ್ಲಿ ಶಾಶ್ವತ ಮಿನುಗುತಾರೆಯಾದ ದಿ| ಕೆರೆಮನೆ ಶಂಭು ಹೆಗಡೆಯವರ ಸತ್ಯ ಹರಿಶ್ಚಂದ್ರನ ಪಾತ್ರದ ಒಂದು ತುಣುಕನ್ನು ನಿಮ್ಮ ಆವಗಾಹನೆಗಾಗಿ ಇಲ್ಲಿ ನೀಡಿದ್ದೇನೆ. ಭಾಗವಹಿಸಿದ ಹಿಮ್ಮೇಳ-ಮುಮ್ಮೇಳದ ಎಲ್ಲ ಕಲಾವಿದರಿಗೂ ನನ್ನ ನಮನಗಳು --



ಬೇಸರದ ದಿನಗಳನ್ನು ಕಳೆಯಲಿಕ್ಕೆ ಹುಡುಕಿಕೊಂಡ ಒಂದು ಮಾರ್ಗ ನಿಜಕ್ಕೂ ಮನಸ್ಸಿನ ದಾಹವನ್ನು, ಹಸಿವನ್ನು ನಿವಾರಿಸುವ ತಾಕತ್ತನ್ನು ಹೊಂದಿತ್ತು; ಎಷ್ಟರಮಟ್ಟಿಗಪ್ಪಾ ಅಂತಂದರೆ ಕನ್ನಡದ ಇಂದಿನ ಉದ್ದಾಮ ಪಂಡಿತರಾದ ಶತಾವಧಾನಿ ಡಾ| ಆರ್. ಗಣೇಶ್ ಕೂಡ ಆ ಕಲೆಯನ್ನು ಮೆಚ್ಚಿಕೊಂಡರು, ಮಾತ್ರವಲ್ಲ ತಮ್ಮ ಪಾಂಡಿತ್ಯದಿಂದ ಕೆಲವು ಏಕವ್ಯಕ್ತೀ ಅಭಿನಯದ ಪ್ರಸಂಗಗಳನ್ನೂ ಬರೆದರು! ಕನ್ನಡದ ಇನ್ನೊಬ್ಬ ಕಟ್ಟಾಳು ಶತಾಯುಷಿ ಪ್ರೊ| ಜಿ. ವೆಂಕಟಸುಬ್ಬಯ್ಯನವರೂ ಸಹಿತ ಯಕ್ಷಗಾನ ತಾಳಮದ್ದಲೆಯನ್ನು ಕೂತು ಕೇಳಿದರು. ಸಂಸ್ಕೃತದ ಘನವಿದ್ವಾಂಸರೂ ಘನಪಾಠಿಗಳೂ ಮೆಚ್ಚಿ ತಲೆದೂಗುವಂತಹ ಅನ್ಯಭಾಷಿಕರು ಕದಿಯಲಾರದ ಅಪ್ಪಟ ಕನ್ನಡ ಕಲೆ ಯಕ್ಷಗಾನ! ಅಂದಿನ ದಿನಗಳಲ್ಲಿ ವಿದೇಶೀ ಪ್ರಜೆಗಳೂ ಪೂರ್ಣರಾತ್ರಿ ನಮ್ಮೊಟ್ಟಿಗೆ ಆರಾಮ್ ಖುರ್ಚಿಗಳಲ್ಲಿ ಕುಳಿತು ಯಕ್ಷಗಾನ ನೋಡಿದ್ದನ್ನು ನಾನು ಸ್ವತಃ ಕಂಡು ಹರುಷಪಟ್ಟಿದ್ದೇನೆ. ಮಾರ್ಥಾ ಆಸ್ಟಿನ್ ಎಂಬೊಬ್ಬ ಮಹಿಳೆಯಂತೂ ಅದರ ಮೇಲೆ ಸಂಶೋಧನೆಗೇ ತೊಡಗಿದ್ದರು! ಈ ಕಲೆ ಕೇವಲ ಕರಾವಳಿ ಜಿಲ್ಲೆಗಳಿಗೆ ಮೀಸಲಾಗಬಾರದು. ಇದರಲ್ಲಿನ ಸಾಹಿತ್ಯವನ್ನು ರಸಾನುಭೂತಿಯನ್ನು. ಇದರ ಅಂದಚಂದವನ್ನು ಇಡೀ ಕರ್ನಾಟಕದ ಜನತೆ ಅನುಭವಿಸುತ್ತಾ ಜ್ಞಾನದ ಖಜಾನೆಯನ್ನು ತಮ್ಮ ಮನೆಗಳಲ್ಲಿ ಸ್ಥಾಪಿಸಿಕೊಳ್ಳಲಿ ಎಂದು ಈ ಮೂಲಕ ಹಾರೈಸುತ್ತೇನೆ.

ನಾಗರ ಪಂಚಮಿಗೆ ಸುಳಿರೊಟ್ಟಿ ಮಾಡುತ್ತಿದ್ದರು. ಅಕ್ಕಿಹಿಟ್ಟಿನ ತಳಪಾಯದ ಮೇಲೆ ಕಾಯಿ-ಬೆಲ್ಲದ ಪಾಕಮಿಶ್ರಣವನ್ನು ಇಟ್ಟು ಅದನ್ನು ಶುಂಠಿ ಅಥವಾ ಅರಿಶಿನದ ಎಲೆಗಳಲ್ಲಿ ಮಡಚಿ ದೋಸೆ ಕಾವಲಿಯ ಮೇಲೆ ಬೇಯಿಸುತ್ತಿದ್ದರು. ತಿನ್ನಲು ಪೊಗದಸ್ತಾಗಿರುವ ಈ ತಿಂಡಿ ನಾಗನಿಗೂ ಇಷ್ಟವಂತೆ! ಯಾರು ಕಂಡರೋ ತಿಳಿದಿಲ್ಲ ! ಇದೇ ವೇಳೆ ದಾಲ್ಚಿನಿ ಗಿಡದ ಎಲೆಗಳನ್ನು ತಂದು ಅದರಲ್ಲಿ: ಇದೇರೀತಿ ನುಣ್ಣಗೆ ರುಬ್ಬಿದ ಅಕ್ಕಿ ಹಿಟ್ಟಿಗೆ ಬೆಲ್ಲಸೇರಿಸಿ ಕಾಯಿಸಿ ತಟ್ಟುವ ಹದಕ್ಕೆ ತಂದುಕೊಂಡು, ಆರಿದ ಅದನ್ನು ಉಂಡೆಗಳಾಗಿ ಕಟ್ಟಿ, ಆ ಉಂಡೆಗಳನ್ನು ದಾಲ್ಚಿನಿ ಎಲೆಯಾಕಾರಕ್ಕೆ ಎಲೆಗಳಲ್ಲಿ ತಟ್ಟಿ ಅದರೊಳಗೆ ಪಾಕದ ಕಾಯಿತುರಿ-ಬೆಲ್ಲ ಮೆತ್ತಿ, ನಂತರ ಎಲೆಯ ಬುಡಾ-ತುದಿಗಳನ್ನು ಮುಗಿದ ಕೈ ಆಕಾರಕ್ಕೆ ಮಡಚುತ್ತಿದ್ದರು. ಮಡಚಿದ ಅವುಗಳನ್ನು ತಾಮ್ರದ ಅಟ್ಟಿನ ಕೌಳಿಗೆಯಲ್ಲಿ ಒಂದರಮೇಲೊಂದು ಪೇರಿಸಿ ಅದರಲ್ಲೇ ತಯಾರಾಗುವ ಹಬೆಯಲ್ಲಿ ಬೇಯಿಸುತ್ತಿದ್ದರು.[ಓದುಗರು ನೀವ್ಯಾರಾದರೂ ಪ್ರಯತ್ನಿಸುವುದಾದರೆ ರುಚಿಗೆ ತಕ್ಕಷ್ಟು ಉಪ್ಪು ಹಾಕಲು ಮರೆಯಬೇಡಿ] ೩-೪ ದಿನಗಳವರೆಗೆ ಇಟ್ಟು ತಿನ್ನಬಹುದಾದ ಈ ತಿಂಡಿ ’ಕೈಮುಗು [ಮುಗಿದ ಕೈ ಆಕಾರದ ಕೈಮುಗ್ಯೋ ] ಮೊಮ್ಮಿ’ ಎಂತಲೂ, ಗೆಣಸಲೆ ಎಂತಲೂ ಕರೆಸಿಕೊಳ್ಳುತ್ತಿತ್ತು. ನಾವು ಮಕ್ಕಳು ಆಗಾಗ ಹಿರಿಯರ[ಅಜ್ಜಿ-ಅಮ್ಮ] ಕಣ್ತಪ್ಪಿಸಿ ಅಟ್ಟಿನಕೌಳಿಗೆಗೆ ಲಗ್ಗೆ ಇಡುವುದಿತ್ತು. " ೭೦ ರಲ್ಲಿ ೪-೫ ಕಾಣುತ್ತಿಲ್ಲಾ ? " ಎಂದು ಪ್ರಶ್ನಿಸಿದರೆ " ಬೆಕ್ಕು ತಿಂದಿರಬೇಕು " ಎಂದು ಹಾರಿಕೆಯ ಉತ್ತರ ಕೊಡುತ್ತಿದ್ದೆವು; ಆ ’ಕಳ್ಳಬೆಕ್ಕಿ’ನ ಬಗೆಗೆ ಅವರಿಗೂ ಗೊತ್ತು !

ಅಂದಹಾಗೇ ನಮ್ಮ ನೆಂಟರ ಮನೆಯಲ್ಲೊಂದು ಬೆಕ್ಕು ಸಾಕಿದ್ದರು. ಅದರ ವೈಶಿಷ್ಟ್ಯವೇನೆಂದರೆ ನೆಲದಮೇಲೆ ಎಲೆಗಳಲ್ಲಿ ಇಟ್ಟ ಆಹಾರಕ್ಕೆ ತಾನಾಗಿ ಯಾವುದಕ್ಕೂ ಬಾಯಿಹಾಕಿ ತಿನ್ನುತ್ತಿರಲಿಲ್ಲ. ಮನೆಯ ಹಿರಿಯರ ಮುಖ ನೋಡಿ ಕೀರಲು ದನಿಯಲ್ಲಿ " ಮ್ಯಾಂವ್ " ಎನ್ನುತ್ತಿತ್ತು. " ಹೋಗು ನಿಂಗೇ ಅದು ತಿನ್ನು " ಎಂಬ ಫರ್ಮಾನು ಬರುವವರೆಗೂ ಕಾಯುತ್ತಿತ್ತು. ಬೆಕ್ಕಿಗೂ ಅರ್ಥವಾಗುವ ನಮ್ಮ ಕನ್ನಡ ಇನ್ಯಾರಿಗೆ ಅರ್ಥವಾಗದೇ ಇದ್ದರೂ ಹೋಗಲಿ ಬಿಡಿ! ಕೆಲವು ಪ್ರಾಣಿಗಳೇ ಹಾಗೆ-ಅದ್ಭುತ ಬುದ್ಧಿಮತ್ತೆಯನ್ನು ತೋರುತ್ತವೆ. [ಬೆಂಗಳೂರಿನ ಸುಬ್ರಹ್ಮಣ್ಯ ನಗರದ ಕಾಲನಿಯೊಂದರ ರಸ್ತೆಯಲ್ಲಿ ನೀರಿನ ಟಾಕಿಯೊಂದಿತ್ತು. ಬಾಯಾರಿಕೆಯಾದಾಗ ಹಸುವೊಂದು ಅದರ ನಲ್ಲಿಯನ್ನು ಬಾಯಲ್ಲೇ ಒತ್ತಿ ತಿರುಗಿಸಿ ನೀರು ಕುಡಿದು ಮತ್ತೆ ಮರಳಿ ತಿರುಗಿಸಿ ನೀರನ್ನು ನಿಲ್ಲಿಸುವುದನ್ನು ೧೯೯೪ರಲ್ಲಿ ಕಂಡಿದ್ದೆ!] ಊರಲ್ಲಿ ನಮ್ಮಲ್ಲಿ ಇದ್ದ ಮಲೆನಾಡ ಗಿಡ್ಡ ತಳಿಯ ೨೫-೨೬ ಹಸುಗಳ ಪೈಕಿ ಒಂದು ಹಸು ಕೊಂಬಿನಲ್ಲಿ ಸರಗೋಲನ್ನು ತೆರೆದು ಒಳಗೆ ಬರುವುದನ್ನು ಅಭ್ಯಾಸಮಾಡಿಕೊಂಡಿತ್ತು. ಸರಗೋಲು ಅಥವಾ ದಣಕಲು ಅಂದರೆ ಮಧ್ಯದಲ್ಲಿ ನಾಲ್ಕಾರು ಅಡಿ ಜಾಗ ಬಿಟ್ಟು ಆ ಕಡೆ ಈ ಕಡೆ ಎರಡು ಮರದ ದಿಮ್ಮಿಗಳನ್ನು ನಿಲ್ಲಿಸಿ, ಸಮಾನಾಂತರದಲ್ಲಿ ೪ ಇಂಚು ವ್ಯಾಸದ ನಾಕಾರು ತೂತುಗಳಿರುವ ಆ ದಿಮ್ಮಿಗಳಿಗೆ ಬಿದಿರಿನ ದಪ್ಪ ತುಂಡುಗಳನ್ನು ತೂರಿಸುವುದು. ಬೇಕಾದಾಗ ಅದನ್ನು ಜರುಗಿಸಿ ತೆರೆದರೆ ದಾರಿ, ಹಾಗೇ ಬಿಟ್ಟರೆ ಮುಚ್ಚಿದ ದಾರಿ! ಹೀಗೇ ಅಪರೂಪದ ಸ್ವಭಾವಗಳನ್ನು ಪ್ರಾಣಿ/ಪಕ್ಷಿಗಳಲ್ಲಿ ಅಲ್ಲಲ್ಲಿ ಕಾಣಬಹುದಾಗಿದೆ.

ಮಳೆಗಾಲದಲ್ಲಿ ಮನೆಗಳ ಸುತ್ತ ಯಥೇಚ್ಛ ಜಾಗವಿರುವಲ್ಲಿ ಥರಥರದ ಹೂವಿನಗಿಡಗಳು ಬೆಳೆಯುತ್ತಿದ್ದವು. ಶಂಕರಗೌರೀ ಗಿಡ, ಬೋಳಮ್ಮನ ಗಿಡ ...ಹೀಗೇ ಹಲವು ಹತ್ತು ಬಣ್ಣ ವೈವಿಧ್ಯಗಳು, ಆಕಾರ ವೈವಿಧ್ಯಗಳು, ಪರಿಮಳ ವೈವಿಧ್ಯಗಳು, ಅವುಗಳ ಮೇಲೆ ಹಾರಾಡುವ ಕೂರುವ ದುಂಬಿ-ಪತಂಗ-ಪಾತರಗಿತ್ತಿಗಳು, ಮತ್ತವುಗಳಲ್ಲಿ ವೈವಿಧ್ಯಗಳು ಆಹಹಾ ...ಸೃಷ್ಟಿಸಿದ ಆ ಕಲಾವಿದ ಸಿಕ್ಕರೆ ಒಮ್ಮೆ ಅಪ್ಪಿ ಆನಂದಭಾಷ್ಪ ಸುರಿಸಿ ಕೈಲಾಗಬಹುದಾದ ಸನ್ಮಾನವನ್ನು ಮಾಡಿಬಿಡಬಹುದಿತ್ತು ಅನಿಸುತ್ತದೆ! ಜಾಜಿ ಜೂಜಿ ಮಲ್ಲಿಗೆ ಸಂಪಿಗೆ ಕೇದಿಗೆ ಪುನ್ನಾಗ ಕರವೀರ ಪುಷ್ಪಪೂಜೆಯಲ್ಲಿ ಹೆಸರಿಸುವ ಬಹುತೇಕ ಎಲ್ಲಾ ಜಾತಿಯ ಹೂವುಗಳು ಅಲ್ಲಿದ್ದವು. ಅದು ನಮ್ಮ ಪೂರ್ವಜರ, ನಮ್ಮ ಹಿರಿಯರ ಒಲವು-ಒತ್ತಾಸೆ. ತನ್ನ ಹೆಸರಲ್ಲಿ ನಮಗೂ ಒಂದಷ್ಟು ಕರುಣಿಸಿ ಕಣ್ಮನ ತಣಿಸಿದ ಆ ಕಾಣದ ದೇವರಿಗೆ ಯಾವಮಾರ್ಗದ ಮಿಂಚಂಚೆಯಲ್ಲಿ ಕೃತಜ್ಞನಾಗಲಿ ?

ಆಷಾಢದಲ್ಲಿ ಮಳೆ ವಿಪರೀತ ಇರುವುದರಿಂದ ಅದ್ಯಾಕೋ ಜಾಸ್ತಿ ಹೂವುಗಳು ಬಿಡುತ್ತಿರಲಿಲ್ಲ. ಆಗ ಏನಿದ್ದರೂ ತುಳಸೀ ಗಿಡಗಳ ಮೇಲಾಟ. ಹರೆಯದ ಹುಡುಗಿಯರಂತೇ ಅಲ್ಲಿನ ನೆಲದ ಕಸುವನ್ನುಂಡು ದಷ್ಟಪುಷ್ಟವಾಗಿ ಬೆಳೆದ ತುಳಸೀ ಗಿಡಗಳಿಂದ ಬುಟ್ಟಿ ಬುಟ್ಟಿ ತುಳಸಿ ಕೊಂಬೆಗಳನ್ನು ಕೊಯ್ದು ಹಾರಮಾಡಿ ದೇವರಿಗೆ ಹಾಕುವುದಿತ್ತು. ನಾಗರ ಪಂಚಮಿಯ ಆಜುಬಾಜಿನಲ್ಲೇ ಕೃಷ್ಣಾಷ್ಟಮಿ ಇನ್ನೇನು ಬಂದುಬಿಡುತ್ತದಲ್ಲ ! ಅದಾದ ೧೧ ದಿನಗಳಲ್ಲೇ ಗಣೇಶ ಹಬ್ಬ ! ಹಬ್ಬಗಳು ಬಂದವೆಂದರೆ ಮಕ್ಕಳಾದ ನಮಗೆ ಬಲು ಖುಷಿ. ತರಾವರಿ ತಿಂಡಿ-ತಿನಿಸುಗಳು ಸಿಗುತ್ತವಲ್ಲ! ಶ್ರೀಕೃಷ್ಣ ರಾತ್ರಿ ಹುಟ್ಟುವುದು-ಆತನಿಗೆ ಬೆಣ್ಣೆ ಮುದ್ದೆ, ವಿವಿಧ ಉಂಡೆಗಳು, ಸಜ್ಜಿಗೆ, ಕಲಸಿದ ಅರಳುಕಾಳು, ಗೋಡಂಬಿ-ದ್ರಾಕ್ಷಿ...ಹೀಗೇ ದೇವರ ಮುಂದೆ ಜಾಗವೇ ಇರದಷ್ಟು! ನಿಜ ಹೇಳಲೋ ಪುರಾಣಗಳಲ್ಲಿ ದೇವರು ಹಲವು ರೂಪಗಳಲ್ಲಿ ಕಾಣಿಸಿಕೊಂಡಿದ್ದು ತುಂಬಾ ಒಳ್ಳೇದಾಯ್ತು. ಜನ್ಮಾಷ್ಟಮಿಯ ಉಂಡೆಗಳು ಇಟ್ಟಲ್ಲೇ ಮಾಯವಾಗುವ ’ಶ್ರೀಕೃಷ್ಣನ ಮಹಿಮೆ’ಯ ಬಗ್ಗೆ ಹೊಸದಾಗಿ ಹೇಳಬೇಕೇ? ನಮಗೆ ಗಣೇಶ ಅಂದರೂ ತುಂಬಾ ಇಷ್ಟವಪ್ಪ. ಆತನಿಗೆ ನಮ್ಮಹಾಗೇ ಬೇಡದ ತಿಂಡಿಗಳೇ ಇರಲಿಲ್ಲ. ನಮ್ಮಲ್ಲಂತೂ ೨೧ ಬಗೆಯ ಸಿಹಿತಿನಿಸುಗಳನ್ನು ಮಾಡುತ್ತಿದ್ದರು! ಅದರೊಟ್ಟಿಗೆ ಕರಿದ ವ್ಯಂಜನಗಳು ಅಲಾಯ್ದ! ಪಾಯಸ ಪತ್ರೊಡೆ ಚಕ್ಕುಲಿ ಒಡೆ ಮತ್ತೇಕೆ ಪ್ರತ್ಯೇಕ ಹೆಸರಿಸಿ ನಿಮ್ಮ ಹೊಟ್ಟೆ ಉರಿಸಲಿ ?

ಒಮ್ಮೆ ಏನಾಯ್ತು ಗೊತ್ತಾ ನಾನು ಚಿಕ್ಕವನಿದ್ದೆನಲ್ಲಾ ಮೆಟ್ಗನ [ಪುಟಬಾಳೆ, ಯಾಲಕ್ಕೀಬಾಳೆ]ಬಾಳೇಹಣ್ಣು ಎಂದರೆ ನಂಗೆ ಅತಿ ಪ್ರೀತಿಯಿತ್ತು. ಆದರೆ ಒಂದೆರಡು ತಿಂದು ಬಿಟ್ಟರೆ ಜೀರ್ಣವಾಗುವುದು ಕಷ್ಟ ಎಂಬುದು ನಮ್ಮ ಹಿರಿಯರ ಅಂಬೋಣ, ಅದು ಅವರ ಅಂಬೋಣ ಬಿಡಿ-ನಂಗೇ ಬಿಟ್ಟರೆ ಗಣೇಶನಿಗೇ ಪೈಪೋಟಿ ಕೊಡಲು ಸಿದ್ಧನಾಗುತ್ತಿದ್ದೆ ಎಂದುಕೊಳ್ಳೋಣ! ಒಂದು ಗಣೇಶ ಚತುರ್ಥಿಯಂದು ಮಂಗಲಾರತಿಯಾಗುವ ವೇಳೆ ಚಂದದ ಆರತಿಗಳನ್ನೇ ಕಣ್ತುಂಬಾ ಈಕ್ಷಿಸುತ್ತಿದ್ದೆ. ಅವೆಷ್ಟು ಆರಾತಿಗಳಪ್ಪಾ ಏಕದಳ, ದ್ವಿದಳ, ತ್ರಿದಳ. ಚತುರ್ದಳ, ಪಂಚದಳ, ನಾಗಾರತಿ, ಗರುಡಾರತಿ, ಹಲವು ಬತ್ತಿಗಳ ನೀರಾಜನ ಇಲ್ಲೂ ಮತ್ತದೇ ವೈವಿಧ್ಯ! ಆರತಿ ಮುಗಿದು ಮಂತ್ರಪುಷ್ಪದ ಘೋಷ ನಡೆಯುವ ಗಡಿಬಿಡಿಯಲ್ಲಿ ದೇವರ ಮುಂದೆ ಇಟ್ಟಿರುವ ಬಾಳೆಗೊನೆ ನಾಪತ್ತೆ! ನಂಗಂತೂ ಕಣ್ಣೀರೇ ಬಂದ್ಹೋಯ್ತು. ಗಣಪತಿಯ ಹೊಟ್ಟೆ ಬಹಳ ದೊಡ್ಡದು, ಆತ ಕೆಲವೊಮ್ಮೆ ಮುಂದಿರಿಸಿದ ಹಣ್ಣು-ತಿಂಡಿಗಳನ್ನು ತಿಂದುಬಿಡುತ್ತಾನೆ ಎಂದು ಸಮಾಧಾನ ಮಾಡಿದ್ದರು ಹಿರಿಯರು! ನಾವು ಅಂದು ಐಟಿ ಬಿಟಿಯುಗದ ಮಕ್ಕಳಾಗದೇ ಪೆದ್ಮುಂಡೆಯವುಗಳಾಗಿದ್ದದ್ದರಿಂದ ಅವರು ಬಚಾವು!

ಪಾಯಸವೂ ನನ್ನ ಪ್ರೀತಿಯ ಖಾದ್ಯಗಳಲ್ಲೊಂದು. ಅಕ್ಕಿಯ/ ಗೋಧಿ-ಕಡ್ಲೆಯ ಪಾಯಸ ಮಾಡಿದರೆ ಅಜೀರ್ಣವಾಗುವಷ್ಟು ಊಟಮಾಡಿಬಿಡುವುದು ನನ್ನ ಅಭ್ಯಾಸ ಅಂತಿದ್ದರು ನನ್ನ ಹಿರಿಯರು. [ಅಸಲಿಗೆ ನನ್ನ ಜೀರ್ಣಾಂಗ ಮನಸ್ಸಿನಷ್ಟು ದೊಡ್ಡದಾಗಿರಲಿಲ್ಲವಲ್ಲ!] ಹೀಗೇ ಒಮ್ಮೆ ಮನೇಲಿ ಯಾವಾಗಲೋ ಊಟಮಾಡುವಾಗ " ನೋಡು ತಮ್ಮಾ ನಿನ್ ಹೊಟ್ಟೆ ಉಂಡುಂಡು ಮೂಗು ನೋಡ್ತಾ ಇದೆ " ಎಂದು ಚಿಕ್ಕಪ್ಪ ಗೇಲಿಮಾಡಿದ್ದರು. ನಾನು ಹೌದಿರಬೇಕೆಂದು ಊಟ ನಿಲ್ಲಿಸಿ ಕೈತೊಳೆದಿದ್ದೆ. ಹೊಟ್ಟೆ ಭರ್ತಿಯಾದಾಗ ಅದು ಮುಮ್ಮುಖವಾಗಿ ನಿಂತಾಗ ನಮ್ಮ ಮೂಗನ್ನು ದಿಟ್ಟಿಸಿದಂತೇ ಕಾಣುವುದಿಲ್ಲವೇ ? ಬೇಕಾದ್ರೆ ನೀವೇ ನೋಡ್ಕೊಳಿ. ಒಮ್ಮೆ ಪುರೋಹಿತರೊಬ್ಬರು ಸಪ್ತಶತೀ ಪಾರಾಯಣಕ್ಕೆ ನಮ್ಮನೆಗೆ ಬಂದಿದ್ದರು. ಅವರು ಕಾಯಂ ಬರುವವರೇ ಆಗಿರುವುದರಿಂದ ನಂಗೆ ಅವರಲ್ಲಿ ಸಲುಗೆಯೂ ಇತ್ತು. ಅಂದು ಪೂಜೆಯೂ ಮುಗಿದು ಊಟಕ್ಕೆ ಕುಳಿತಾಗ ಪುರೋಹಿತರು ಪಾಯಸವನ್ನು ಉಣ್ಣುತ್ತಿದ್ದರು. ಚಿಕ್ಕಪ್ಪ ಹೇಳಿದ ಆ ಮಾತು ನಂಗೆ ನೆನಪಿಗೆ ಬಂದು " ನೋಡು ಭಟ್ಟರ [ಪುರೋಹಿತರ] ಹೊಟ್ಟೆ ಉಂಡುಂಡು ಮೂಗು ನೋಡ್ತಾ ಇದೆ " ಎಂದುಬಿಟ್ಟೆನಂತೆ! ಚಿಕ್ಕಪ್ಪ ನನ್ನಮೇಲೆ ಪ್ರಯೋಗಿಸಿದ್ದನ್ನು ನಾನು ಪುರೋಹಿತರಮೇಲೆ ಪ್ರಯೋಗಿಸಿಬಿಟ್ಟಿದ್ದೆ ಅಂತ ಕಾಣುತ್ತೆ! ಪಾಪ ಆ ಬಡ ಪುರೋಹಿತರ ಸ್ಥಿತಿ ಏನಾಗಿರಬೇಡ !

ಮಳೆಗಾಲದ ಕೆಲವು ದಿನಗಳಲ್ಲಿ ಭಾನುವಾರ ಬಂದಾಗ ಹೊಸದಾಗಿ ಮೇಯಲು ಸಿದ್ಧವಾಗಿ ನಿಂತ ಆಕಳ ಎಳೆಗರುಗಳನ್ನು ಮೇಯುವ ತರಬೇತಿ ನೀಡಲು ದೇವರಮಕ್ಕಿ ಗದ್ದೆಗೆ ಕೊಂಡೊಯ್ಯುತ್ತಿದ್ದೆವು. ಅಲ್ಲಿ ನಮ್ಮದೇ ರಾಜ್ಯ! ಗೂಟಕ್ಕೆ ಕರುಗಳನ್ನು ಕಟ್ಟಿಬಿಟ್ಟರೆ ಆಮೇಲೆ ಆಡುವುದು ಹೂಡುವುದು ಮರವೇರುವುದು ಮರಕೋತಿಯಾಡುವುದು ಹೀಗೇ ಅಂದಿನ ದಿನಚರಿ. ಊಟ-ತಿಂಡಿ ಬೇಕಾಗಿಯೇ ಇರಲಿಲ್ಲ. ನಮಗೆಲ್ಲಾ ನಮ್ ಮಾಸ್ತರು ಹೇಳಿಕೊಟ್ಟಿದ್ದು

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ

-- ಅಂದು ಅದು ಕುವೆಂಪುರವರ ರಚನೆ ಎಂಬುದು ನಮಗೆ ಮಾಸ್ತರು ಹೇಳಿದ್ದೇ ಬಿಟ್ಟರೆ ಕುವೆಂಪು ಯಾರು ಅವರು ಇದ್ದಕ್ಕಿದ್ದಲ್ಲೇ ಅದೆಲ್ಲಾ ಯಾಕೆ ಬರೆದರು-ಆ ಬಗ್ಗೆ ಜಾಸ್ತಿ ಮಂಡೆಬಿಸಿಮಾಡಿಕೊಂಡ ಜನವಲ್ಲ ನಾವು! ಕೆಲವೊಮ್ಮೆ ’ಮೊರೆವ ತೊರೆಯೆಡೆಯಲ್ಲಿ’ ಇರುವುದು ’ಮೆರೆವ ತೊರೆಯೆಡೆಯಲ್ಲಿ’ ಅಂತಾಗಿಬಿಟ್ಟು ಅದನ್ನೇ ಕಂಠಪಾಠಮಾಡುತ್ತಿದ್ದೆವು. ಅರ್ಥವನ್ನಂತೂ ಮಾಸ್ತರು ಬಿಡಿಸಿ ಹೇಳಿದ್ದರು. ಹೀಗಾಗಿ ಹಾಡೇನ್ ಕೇಳ್ತೀರಿ? ನಾವಾಯ್ತು ಮತ್ತೆ ನಮ್ಮ ಮಾಸ್ತರು, ಅಪರೂಪಕ್ಕೆ ಬರುವ ಇನೇಶ್ ಭಟ್ಟರು! ನಮ್ಮೂರಕಡೆ ’ಭಟ್ಟ’ ಎನ್ನುವ ಹೆಸರು ಧಾರಾಳವಾಗಿ ಸಿಗುವುದರಿಂದಲೂ ’ಇನ್ಸ್‍ಪೆಕ್ಟರ್’ ಎಂಬೆಲ್ಲಾ ಶಬ್ದವನ್ನು ಉಚ್ಚರಿಸುವುದು ಸರಿಯಾಗಿ ಗೊತ್ತಿಲ್ಲದ್ದರಿಂದಲೂ ನಾವು ಅಪರೂಪಕ್ಕೆ ಶಾಲೆಗೆ ಆಗಮಿಸುವ ಆ ಅತಿಥಿಯನ್ನು ಭಟ್ಟರುಗಳ ಸಾಲಿಗೇ ಸೇರಿಸಿಕೊಂಡು ’ಇನೇಶ್ ಭಟ್ಟ’ರನ್ನಾಗಿಸಿಬಿಟ್ಟಿದ್ದೆವು !

ಅಷ್ಟೇ ಏಕೆ ದೇವಸ್ಥಾನಗಳಿಗೆ ಹೋದರೆ ಶ್ಲೋಕಗಳನ್ನು ಹೇಳಿ ನಮಸ್ಕರಿಸಬೇಕು ಎಂದು ಹಿರಿಯರು ಆಜ್ಞಾಪಿಸಿದ್ದರು. ನಮ್ಮೊಳಗೊಬ್ಬ ಮಾಬ್ಲೇಶ್ವರ. ದೇವಸ್ಥಾನಕ್ಕೆ ಹೋದಾಗ ಅಕಸ್ಮಾತ್ ಅವನನ್ನು ಕಂಡರೆ ನಗುಬರುತ್ತಿತ್ತು, ಯಾಕೆ ಗೊತ್ತೇ ’ ಶಾಂತಾಕಾರಂ ಭುಜಗ ಶಯನಂ ’ಎಂಬ ಶ್ಲೋಕವನ್ನು ಹೇಳುವಾಗ ಎಲ್ಲಿ ತಪ್ಪಿಹೋಗುತ್ತದೋ ಎಂದು ಅತೀ ಗಡಿಬಿಡಿ ಮಾಡಿಕೊಂಡು ಮನದ ಆ ಗೋಜಲಿನಲ್ಲಿ ’ಶಾಂತಾಕಾರಂ ಗಜಭುಜ ಶಯನಂ ’ ಎಂದು ಆತ ಹೇಳುವುದು ಸರ್ವೇ ಸಾಮಾನ್ಯವಾಗಿತ್ತು. ದೇವಸ್ಥಾನಗಳಲ್ಲಿ ಊರ ಹಿರಿಯರು ಕೆಲವು ಮರಾಠಿ ಭಕ್ತಿಗೀತೆಗಳನ್ನೂ ಮೀರಾ ಭಜನೆಗಳನ್ನೂ ಹಾಡುತ್ತಿದ್ದರು. ಸಮೂಹಗಾನವಾದ ಭಜನೆಗಳಲ್ಲಿ ನಾವೂ ಭಾಗವಹಿಸುತ್ತಿದ್ದೆವು. ಹಾಡಿನ ಚರಣಗಳು ಬರದೇ ಇದ್ದರೆ ಮಿಕ್ಕುಳಿದವರು ಹಾಡುವಾಗ ಬಾಯಾಡಿಸುತ್ತಾ ಇದ್ದು ಕೊನೇ ಶಬ್ದವನ್ನು ನೆನಪಿಟ್ಟು ಅವರಿಗಿಂತಾ ಗಟ್ಟಿ ಧ್ವನಿಯಲ್ಲಿ ಜೋರಾಗಿ ಹಾಡುತ್ತಿದ್ದೆವು! ಹೀಗಾಗಿ ನಮಗೂ ಮರಾಠಿ ಹಾಡುಗಳು ಬರುತ್ತಿದ್ದವು ಅಂತ ಜನ ಅಂದುಕೊಂಡಿರಲೂ ಸಾಕು!

ಮನವೆಂಬ ಕೆದಕೂಪವನ್ನು ಕೆದಕಿದರೆ, ನೆನೆದರೆ ಸಾವಿರ ಸಾವಿರ ಘಟನೆಗಳು ಸಾಲಾಗಿ ಹೊರಬರುತ್ತವೆ. ಯಾವುದು ನಿಮಗೆ ಪಥ್ಯವೋ ಯಾವುದು ಅಪಥ್ಯವೋ ಹಂಸಕ್ಷೀರ ನ್ಯಾಯದಿಂದ ಸ್ವೀಕರಿಸಲು ನಿಮ್ಮಲ್ಲೇ ಕೋರಿ ಪ್ರಥಮೇಕಾದಶಿ ಹಬ್ಬದ ಆಚರಣೆಯ ನೆನಹಿನಲ್ಲಿ ಇಂದು ನಿನ್ನೆ ನಡೆಸಿದ ಈ ನನ್ನ ರಾಮಾಯಣಕ್ಕೆ ಸದ್ಯಕ್ಕೆ ಮಂಗಳ ಹಾಡುತ್ತಿದ್ದೇನೆ, ನಮಸ್ಕಾರ.

Sunday, July 10, 2011

ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು...



ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು...

[ಭಾಗ-೧]
ಮಳೆಗಾಲವೆಂದರೆ ಕರಾವಳಿ ಜಿಲ್ಲೆಗಳಲ್ಲಿ ಸೂರ್ಯದರ್ಶನ ಅಪರೂಪ. ಧೋ ಗುಟ್ಟಿ ಸುರಿವ ಮುಸಲಧಾರೆ, ಕೆಲವೊಮ್ಮೆ ವಿಪರೀತ ಗಾಳಿ, ಅತಿಯಾದ ಗುಡುಗು-ಮಿಂಚು, ಸಿಡಿಲಿನ ಅಬ್ಬರ. ತಾವೇನೂ ಕಮ್ಮಿ ಇಲ್ಲಾ ಎನ್ನುವಂತೇ ಕೆರೆಗಳಲ್ಲಿ ಬಂಡೆಯ ಸಂದುಗಳಲ್ಲಿ ಅಡಗಿ ಕುಳಿತ ಬೃಹತ್ ಗಾತ್ರದ ಗೂಕರ ಕಪ್ಪೆಗಳ ಚಿತ್ರ ವಿಚಿತ್ರ ಕೂಗು, ಮರಿಕಪ್ಪೆಗಳ ಗೊಟ್ಗೊಟ್ ಗೊಟರ್ ಎಂಬ ಸದ್ದು, ದಿಬ್ಬಣಕ್ಕೆ ಅವಸರದಿಂದ ಓಡಿ ಸೇರುವಂತೇ ಕೊಂಬೆತ್ತಿ ಓಡುವ ಚಿಕ್ಕ ಚಿಕ್ಕ ಸಾವಿರಾರು ಏಡಿಮರಿಗಳು. ನಾಮುಂದು ತಾಮುಂದು ಎಂದು ಸಾಗುವ ಶತಪದಿ [ಹಣ್ಣಡಕೆ ಪಚ್ಹುಳು], ಸಹಸ್ರಪದಿ[ಚೋರಟೆ], ಪಡಚೆ ಹುಳು ಒಂದೆಡೆಗಾದರೆ ನಿಧಾನವೇ ಪ್ರಧಾನವೆನ್ನುವ ಹಿಸ್ಗ, ಮಣ್ಣಲ್ಲಿ ಉರುಳಾಡುವ ಎರೆಹುಳು ಹೀಗೇ ಈ ಪಟ್ಟಿ ಊದ್ದ ಬೆಳೆಯುತ್ತದೆ.

ಉಳಿದ ಕಾಲದಲ್ಲಿ ಎಂದೆಂದೂ ಕಾಣದಂತಹ ಜೀವಸಂಕುಲಗಳು ಜಾತ್ರೆ ಸೇರಿದಂತೇ ಒಮ್ಮೆಲೇ ಸಂತಾನೋತ್ಫತ್ತಿ ನಡೆಸುವ ಈ ಕಾಲದಲ್ಲಿ ಕಪ್ಪುಗಟ್ಟಿದ ಮೋಡಗಳ ಸಂದಿನಿಂದ ಅಪರೂಪಕ್ಕೊಮ್ಮೆ ಸೂರ್ಯ ಅಂಚೆಯವನ ರೀತಿ ಬಂದುಹೋಗುತ್ತಾನೆ. ಗದ್ದೆ-ತೋಟಗಳಲ್ಲಿ ಕೆಲಸ ಬಹಳವೇ ನಡೆಯುತ್ತಿದ್ದರೂ ಸುರಿವ ಮಳೆ ಕೆಲವೊಮ್ಮೆ ಏನನ್ನೂ ಮಾಡಗೊಡದೆ ರಜಾ ಸಾರಿಬಿಡುತ್ತದೆ! ಇಂತಹ ದಿನಗಳಲ್ಲಿ ಹಿಂದೆ ಉಪಜೀವಿತಕ್ಕೆ ಬೇಕಾದ ಸಾಮಾನುಗಳನ್ನು ಮಧ್ಯೆ ಮಧ್ಯೆ ತಾಲೂಕು ಪ್ರದೇಶಕ್ಕೆ ಹೋಗಿ ತರುವುದಾಗುತ್ತಿರಲಿಲ್ಲ. ಇಂದಿನಂತೇ ದೂರವಾಣಿ ಸೌಲಭ್ಯವಾಗಲೀ ವಾಹನ ಸೌಕರ್ಯವಾಗಲೀ ಇರದ ಆ ಕಾಲದಲ್ಲಿ ಮಳೆಗಾಲದ ೬ ತಿಂಗಳಿಗೆ [ನೆನಪಿಡಿ ಅಲ್ಲಿ ಮಳೆಗಾಲಕ್ಕೆ ತೆರೆ ಬೀಳುವುದು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ] ಸಾಕಾಗುವಷ್ಟು ಕಿರಾಣಿ ಸಾಮಾನುಗಳನ್ನು ಮನೆಗಳಲ್ಲೇ ದಾಸ್ತಾನುಮಾಡಿಕೊಳ್ಳುತ್ತಿದ್ದರು. ಉಳ್ಳವರು ಹೀಗೆ ಮಾಡಿದರೆ ಇರದಿದ್ದವರು ಉಳ್ಳವರ ಮನೆಗಳಲ್ಲಿ ಕಡಾ ಪಡೆದೋ ಭಕ್ಷೀಸು ಪಡೆದೋ ಅಥವಾ ಸಹಕಾರ ಅಂತ ಪಡೆದೋ ಜೀವನ ನಡೆಸುತ್ತಿದ್ದರು.

ಆ ೬ ತಿಂಗಳ ಸಮಯದಲ್ಲಿ ಯಾವುದೇ ಮನೋರಂಜನೆ ಕಾರ್ಯಕ್ರಮ ಇರುತ್ತಿರಲಿಲ್ಲ. ಇಂದಿನಹಾಗೇ ಚಲನಚಿತ್ರ ಮಂದಿರಗಳಾಗಲೀ ರಂಗಮಂದಿರಗಳಾಗಲೀ ಇದ್ದಿರಲಿಲ್ಲವಾಗಿ ಮನೋರಂಜನೆಗೆ ಅಂದು ಬೇರಾವ ಮಾರ್ಗವೂ ಇರಲಿಲ್ಲ. ಹಗಲೆಲ್ಲಾ ದುಡಿಯುವ ಮನಸ್ಸಿಗೆ ಬೇಸರವಾಗುವುದು ಸಾಯಂಕಾಲದಲ್ಲಿ. ಸಂಜೆ ೬ ಗಂಟೆಗೆಲ್ಲಾ ಕತ್ತಲಾವರಿಸಿ ಬಿಟ್ಟರೆ ಮಾರನೇದಿನ ಬೆಳಿಗ್ಗೆ ೮ಗಂಟೆಗೇ ಸ್ವಲ್ಪ ಬೆಳಕು ಅಂತ ಕಾಣುವುದು! ಆ ರಾತ್ರಿಗಳಲ್ಲಿ ವಿದ್ಯುದ್ದೀಪಗಳಿರಲಿಲ್ಲ. ಹರಳೆಣ್ಣೆಯ ದೀಪಗಳು, ವಿಶೇಷವಿದ್ದರೆ ಅವುಗಳ ದೊಂದಿಗಳು-ದೀವಟಿಗೆಗಳು, ಹಿಲಾಲು-ಜುಂಜಿ, ಓಡಾಡಲು ಒಣಗಿದ ತೆಂಗಿನಗರಿಗಳನ್ನು ಕತ್ತರಿಸಿ ಮಡಿಸಿದ ಸೂಡಿ, ಅಡಕೆದಬ್ಬೆಗಳನ್ನು ಸಣ್ಣಗೆ ಸಿಗಿದು ಕಟ್ಟಿದ ಹಗರಸೂಡಿ ಇತ್ಯಾದಿಗಳೇ ಪರಿಕರಗಳಿದ್ದವು. ಕೆಲವೊಮ್ಮೆ ಒಬ್ಬರ ಮುಖ ಇನ್ನೊಬ್ಬರಿಗೆ ಸರಿಯಾಗಿ ಕಾಣದಂತಹ ಮಂದ ದೀಪಗಳಲ್ಲಿ ಕಾಲಹಾಕಬೇಕಾಗಿ ಬರುತ್ತಿತ್ತು. ಕತ್ತಲೆಯ ನೀರವವನ್ನು ಬಗೆಬಗೆದು ಕಿವಿಗೆ ಎಲ್ಲಿಹೋದರೂ ಅದೇ ಸದ್ದು ಎನ್ನುವಂತೇ ಒಂದೇ ನೇರಕ್ಕೆ ಕೂಗುವ ಜೀರುಂಡೆಗಳು ಮಾತ್ರ ತಮ್ಮತನವನ್ನು ಸಂಪೂರ್ಣ ಮೆರೆಯುತ್ತಿದ್ದವು. ಕಾಯಿಲೆಯೋ ಕಸಾಲೆಯೋ ಆದರಂತೂ ಆಗುವ ಬವಣೆ ಹೇಳತೀರ. ನಡೆಯಲಾರದೇ ನಿತ್ರಾಣನಾದ/ಳಾದ ರೋಗಿಯನ್ನು ಕಂಬಳಿಯೊಂದರಲ್ಲಿ ಮಲಗಿಸಿ ಅದನ್ನು ಒನಕೆಗೆ ಕಟ್ಟಿ ಒನಕೆಯ ಎರಡೂ ತುದಿಗಳಲ್ಲಿ ಒಬ್ಬೊಬ್ಬರೂ ಹೊತ್ತುಕೊಂಡು ವೈದ್ಯರಲ್ಲಿಗೆ ಹೋಗಬೇಕಾಗುತ್ತಿತ್ತು.

ಹಳ್ಳಿಗೊಬ್ಬ ವೈದ್ಯ ಎಂತೆಲ್ಲಾ ಇರಲಿಲ್ಲ. ಪರಂಪರಾಗತ ನಾಟಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಎಲ್ಲಾ ಕಾಯಿಲೆಗೂ ಒಬ್ಬರೇ ವೈದ್ಯರೆಂದೇನೂ ಇರಲಿಲ್ಲ. ಒಂದೊಂದು ಕಾಯಿಲೆಗೆ ಒಬ್ಬೊಬ್ಬ ವೈದ್ಯರ ಹೆಸರು ಕೇಳಿಬರುತ್ತಿತ್ತು. ಯಾವುದೇ ಮಾಧ್ಯಮ ಸರಿಯಾಗಿರದ ಕಾರಣ ಇದು ಕೇವಲ ಬಾಯಿಂದ ಬಾಯಿಗೆ ಹಬ್ಬುವ ಅನುಭವಿಗಳ ಸುದ್ದಿ ಮೂಲವನ್ನು ಅವಲಂಬಿಸಿತ್ತು. ಇರುವ ವೈದ್ಯರು ಬೇರಾವುದೋ ಕಾರ್ಯವಶಾತ್ ಬೇರೆಲ್ಲಿಗೋ ಹೋಗಿದ್ದರೆ ಅವರು ಬರುವ ದಿನದ ವರೆಗೂ ಕಾಯುವ ಅನಿವಾರ್ಯತೆಯೂ ಇರುತ್ತಿತ್ತು. ನಾಡಿ ಪರೀಕ್ಷೆಯಲ್ಲಿ ನಿಪುಣರಾಗಿರುತ್ತಿದ್ದ ವೈದ್ಯರುಗಳು ಸಾಕಷ್ಟು ಮೂಲಿಕೆಗಳನ್ನು ಕಂಡುಕೊಂಡಿದ್ದರು. ಕಾಡು ಮನೆಗಳ ಮಗ್ಗುಲವರೆಗೂ ಇರುತ್ತಿತ್ತಾಗಿ ಗಿಡಮೂಲಿಕೆಗಳಿಗೆ ಬರಗಾಲವಿರಲಿಲ್ಲ. ’ಇದ್ರೆ ಬೇರಿನ ಮದ್ದು ಸತ್ರೆ ಕುಂಟೆ ಮದ್ದು ’ ಎಂಬುದು ಅಲ್ಲಿನ ಒಂದು ಹಳೇ ಗಾದೆ! ಅದರರ್ಥ ಜೀವ ಇದ್ದರೆ ವೈದ್ಯರು ಕೊಡುವ ನಾರು-ಬೇರುಗಳ ಚಿಕಿತ್ಸೆ, ಜೀವ ಹೋದರೆ ಮರದ ಕುಂಟೆಗಳನ್ನು ಜೋಡಿಸಿ ಸುಡುವುದು ಎಂಬುದು.

ಮಳೆ ಜಾಸ್ತಿಯಾಗಲೀ ಕಮ್ಮಿಯಾಗಲೀ ಅದಕ್ಕೆಲ್ಲಾ ಜನ ದೇವರನ್ನೇ ಮೊರೆಹೋಗುತ್ತಿದ್ದರು. ಇಂದಿಗೂ ಈ ವಿಷಯ ಜನರ ನಿಯಂತ್ರಣದಲ್ಲಿಲ್ಲ ಎಂಬುದನ್ನು ಮರೆಯುವ ಹಾಗಿಲ್ಲವಲ್ಲ! ಸ್ಥಾನಿಕವಾಗಿ ಅಲ್ಲಲ್ಲಿ ಆಯಾಯ ದೇವರುಗಳಿಗೆ ಕೆಲವು ರೀತಿರಿವಾಜುಗಳನ್ನು ನಡೆಸಿದರೆ ದೇವರು ಪ್ರಸನ್ನನಾಗುತ್ತಾನೆ ಅಥವಾ ಜನರ ಸಂಕಷ್ಟವನ್ನು ಕಂಡು ಸ್ಪಂದಿಸುತ್ತಾನೆ ಎನ್ನುವ ಭಾವನೆ ಅಂದಿನ ಅಲ್ಲಿನ ಜನಾಂಗಗಳಲ್ಲಿ ಸದಾ ಇತ್ತು. ಉದಾಹರಣೆಗೆ ಮಳೆ ಕಮ್ಮಿಯಾದರೆ ಧಾರೇಶ್ವರ ದೇವಸ್ಥಾನದ ಪುಷ್ಕರಣಿಯಲ್ಲಿ ಮುಳುಗಿರುವ ಗಣಪನ ವಿಗ್ರಹವನ್ನು ಮೇಲಕ್ಕೆ ತೆಗೆದು ಇಡೀ ವಿಗ್ರಹಕ್ಕೂ ಕಾಳು ಮೆಣಸಿನ[ಅರೆದು ತಯಾರಿಸಿದ] ಲೇಪನ ಮಾಡಿ ಹೊರಗಡೆ ಬಿಸಿಲಲ್ಲಿ ಕೂರಿಸುತ್ತಿದ್ದರಂತೆ. ಹೆಚ್ಚಾಗಿ ಎಲ್ಲಿ ನೋಡಿದರೂ ಜನಪ್ರಿಯನಾಗಿ ಜನಪರನಾಗಿ ಇರುವ ದೇವರೆನಿಸಿಕೊಂಡ ಗಣಪ ಜನ ಮುನಿದಿದ್ದಾರೆ ಎಂದು ತಿಳಿದು ಕೇವಲ ದಿನವೊಪ್ಪತ್ತಿನಲ್ಲಿ ಅಸಾಧಾರಣ ಮಳೆಸುರಿಸಿದ ದಾಖಲೆಗಳು ಅಲ್ಲಿ ಸಿಗುತ್ತವೆ! [ಇನ್ನುಳಿದಂತೇ ಈಶ್ವರನಿಗೆ ರುದ್ರಾಭಿಷೇಕ, ಗಣಪನಿಗೆ ಕಡುಬು ನೈವೇದ್ಯವೇ ಮೊದಲಾದ ಹಲವು ಸೇವೆಗಳು ನಡೆಯುತ್ತಿದ್ದವು.] ಮಳೆ ಬಂದಮೇಲೆ ಗಣಪನಲ್ಲಿ ಕ್ಷಮೆಕೋರಿ ಪಶ್ಚಾತ್ತಾಪ ಪಟ್ಟು ಪ್ರಾಯಶ್ಚಿತ್ತ ಪೂಜೆ ನೆರವೇರಿಸಿ ಪುನಃ ಆತನನ್ನು ಸ್ವಸ್ಥಾನಕ್ಕೆ ಮರಳಿ ಕಳುಹಿಸುವ ಪದ್ಧತಿಯಿತ್ತು. ಇದು ಕಾಕತಾಳೀಯವೋ ಮೂಢನಂಬಿಕೆಯೋ ನೀವೇನೇ ಅಂದರೂ ಇವತ್ತಿಗೂ ಇದು ಆಗಾಗ ಮರುಕಳಿಸುವ ಸತ್ಯ!

ಮಳೆ ಸರಿಯಾಗಿ ಬಿದ್ದ ದಿನಗಳಲ್ಲಿ ಎಲ್ಲೆಲ್ಲೂ ಜಾರುವ ಪಾಚಿಗಟ್ಟಿದ ನೆಲದಮೇಲೇ ನಡೆಯಬೇಕಾಗುತ್ತಿತ್ತು. ಮನೆಯ ಅಂಗಳಗಳಲ್ಲಿ ಅಡಕೆ ದಬ್ಬೆಗಳ ಸಂಕಗಳನ್ನು ಹಾಕಿಕೊಳ್ಳುತ್ತಿದ್ದರು. ಆಮೇಲಾಮೇಲೆ ಸುಧಾರಿಸಿದವರು ಕಲ್ಲುಹಾಸನ್ನು ಮಾಡಿದರಾದರೂ ಜಾರುವಿಕೆ ಹಾಗೇ ಇತ್ತು. ಜಾರಿಬಿದ್ದ ವ್ಯಕ್ತಿಯನ್ನು ತಕ್ಷಣ ಕಂಡರೆ " ಅಗೋ ಗಂಟು ಹೆಕ್ಕಿದ " " ಅಲ್ನೋಡು ಗಂಟು ಹೆಕ್ಕಿದ್ಲು " ಎಂದು ತಮಾಷೆಮಾಡುವ ಪರಿಪಾಟವಿತ್ತು. ಆಗೆಲ್ಲಾ ಮದುವೆಗಳು ಎಂದರೆ ಸಾಮಾನ್ಯವಾಗಿ ಕಾರ್ತೀಕದಲ್ಲಿ ತುಳಸೀ ವಿವಾಹ ಆದನಂತರ ಸರಿಸುಮಾರು ಜೂನ್ ವರೆಗೆ ನಡೆಯುತ್ತಿದ್ದವು. ಹೊಸದಾಗಿ ಮದುವೆಯಾದ ಜೋಡಿ ಅಳಿಯನ[ಭೀಮನ] ಅಮಾವಾಸ್ಯೆಗೆ ಮಾವನ ಮನೆಗೆ ಬರುವ ಸಂಪ್ರದಾಯವಿತ್ತು. ಈ ಅಮಾವಾಸ್ಯೆಗೆ ಕೆಲವುಕಡೆ ಕೊಡೆ ಅಮಾಸೆ ಎನ್ನುವುದೂ ಇದೆ. ರಾಯರು ಮಾವನಮನೆಗೆ ಬರುವಾಗ ಕೊಡೆಹಿಡಿದು ಬರುತ್ತಾರಲ್ಲಾ ಅದಕ್ಕೇ ಈ ಅಮಾಸೆ ಕೊಡೆ ಅಮಾಸೆ! ಈಗೆಲ್ಲಾ ರಾಯರೂ ರಾಯರ ಮಾವನೂ ಪಟ್ಟಣ ಸೇರಿಬಿಟ್ಟಿದ್ದಾರೆ, ಹಾಗೂ ಹಳ್ಳಿಯಲ್ಲೇ ಮಾವನಮನೆ ಇದ್ದರೆ ರಾಯರು ಕಾರಲ್ಲೋ ಬೈಕಿನಲ್ಲೋ ಬರುತ್ತಾರೆ ಬಿಡಿ; ಕೊಡೆ ಬೇಕಾಗಿಯೇ ಇಲ್ಲ.

ಎಣ್ಣೆ ಬತ್ತಿ ದೀಪದ ಆ ಕಾಲದಲ್ಲಿ ಜನಮನದಲ್ಲಿ ಭಯಭೀತಿಗಳೂ ಸಾಕಷ್ಟಿದ್ದವು. ಅದರಲ್ಲಂತೂ ಮಳೆಗಾಲದಲ್ಲೆಲ್ಲಾ ಯಾರಾದರೂ ಸತ್ತುಬಿಟ್ಟರೆ ತಿಂಗಳುಗಳ ಕಾಲ ಆ ಪ್ರದೇಶದ ಹೆಂಗಸರು, ಮಕ್ಕಳು, ಕೆಲವು ಪುಕ್ಕಲು ಗಂಡಸರು ತುಂಬಾ ಹೆದರಿಕೊಳ್ಳುತ್ತಿದ್ದರು. ಮನುಷ್ಯ ತನ್ನನ್ನು ಸರಿಯಾಗಿ ತಾನು ಅರಿಯದೇ ಹೊದರೆ ಸಾವಿನ ಭೀತಿ ಅತಿಯಾಗಿ ಆತನನ್ನು ಮುತ್ತಿಕೊಳ್ಳುತ್ತದೆ. ಯಾರೋ ಬಂದು ಏನನ್ನೋ ಮಾಡಿ ತಮ್ಮನ್ನು ಕೊಂದುಬಿಟ್ಟರೆ ಎಂಬ ಅಂಜಿಕೆ ಸದಾ ಬೆನ್ನಟ್ಟಿ ಬರುತ್ತದೆ. ಆ ಕಾಲಘಟ್ಟದಲ್ಲಿ ಹಲವರಿಗೆ ಇದರ ಪರಿವೆಯೇ ಇರಲಿಲ್ಲ. ಸಾವು ಅನಿವಾರ್ಯ ಎಂಬುದನ್ನು ಅವರು ಮರೆತಿದ್ದರೋ ಏನೋ ಅಂತೂ ಸಾವನ್ನು ಆದಷ್ಟೂ ಮುಂದೂಡಲು ಇಷ್ಟಪಡುತ್ತಿದ್ದರು. ಶುದ್ಧ ಗಾಳಿ, ನೀರು, ನೈಸರ್ಗಿಕವಾಗಿ ಬೆಳೆದ ಪೌಷ್ಟಿಕ ಆಹಾರಪದಾರ್ಥಗಳ ಬಳಕೆ ಇದ್ದುದರಿಂದ ರೋಗಗಳು ಇವತ್ತಿನಷ್ಟು ಸಾಮಾನ್ಯವಾಗಿರಲಿಲ್ಲ. ಎಲ್ಲರಿಗೂ ಮಧುಮೇಹವಾಗಲೀ ಅಧಿಕ ರಕ್ತದೊತ್ತಡವಾಗಲೀ ಬರುವುದು ಸಹಜವೆಂಬ ಸ್ಥಿತಿ ಇರಲಿಲ್ಲ. ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗುವ ಕಾಯಿಲೆ ಬರುವುದು ಅಪರೂಪವಾಗಿರುತ್ತಿತ್ತು. ಒಂದೊಮ್ಮೆ ಅಂತಹ ಸ್ಥಿತಿ ಬಂದರೆ ಆಗ ವ್ಯಕ್ತಿ ಸತ್ತ ಅಂತಲೇ ಲೆಕ್ಕ; ಯಾಕೆಂದರೆ ಶಸ್ತ್ರ ಚಿಕಿತ್ಸೆಯೆಲ್ಲಾ ಅಂದಿಗೆ ಅಲ್ಲಿ ಲಭ್ಯವಿರಲಿಲ್ಲ.

ಭಯ, ಆತಂಕ, ದುಗುಡ, ಏಕತಾನತೆಯಿಂದ ಬೇಸರಗೊಳ್ಳುವ ಮನಸ್ಸುಗಳನ್ನು ಮುದಗೊಳಿಸಲು ಅಂದಿನ ಜನರಲ್ಲಿಯೇ ಪಾರ್ತಿ ಸುಬ್ಬ ಎಂಬೊಬ್ಬಾತ ಹೆಜ್ಜೆ ಮುಂದಿಟ್ಟು ಕಲೆಯೊಂದನ್ನು ಆಲೋಚಿಸಿ, ಸೃಜಿಸಿ, ಕರಗತಮಾಡಿಕೊಂಡ -ಪ್ರಚುರಪಡಿಸಿದ. ಆ ಕಲೆಯೇ ಮುಂದೆ ಯಕ್ಷಗಾನವೆಂದು ಪ್ರಸಿದ್ಧ ಸಮಗ್ರ ಕಲಾಪ್ರಾಕಾರವಾಗಿ ಗೋಚರಿಸಿತು. ಅಲ್ಲಲ್ಲಿ ಕೆಲವು ಕವಿಗಳೂ ಇದ್ದರು-ಅವರು ತಾಡವೋಲೆಗಳಲ್ಲಿ ರಾಮಾಯಣ-ಮಹಾಭಾರತಗಳು ಮತ್ತು ಪುರಾಣಗಳನ್ನು ಅವಲಂಬಿಸಿ ಕೃತಿಗಳನ್ನು ರಚಿಸುತ್ತಿದ್ದರು. ಅಂತಹ ಕವಿಗಳಲ್ಲಿ ಒಬ್ಬನಾದ ಯಾಣದ ಬತ್ತಲೇಶ್ವರ ರಚಿಸಿದ ’ಬತ್ತಲೇಶ್ವರ ರಾಮಾಯಣ’ ನನ್ನ ನೋಡುವಿಕೆಗೆ ಸಿಕ್ಕಿತ್ತು. ತಿಗಳಾರೀ ಲಿಪಿಯಲ್ಲಿ ರಚಯಿತವಾದ ಆ ಹೊತ್ತಗೆಯನ್ನು ಯಾರದೋ ಕೃಪೆಯಿಂದ ಕಣ್ತುಂಬಿಕೊಳ್ಳುವುದು ಸಾಧ್ಯವಾಯಿತು. ನನ್ನ ಪೂರ್ವಜರಲ್ಲೂ ಒಬ್ಬಾತ ಕವಿಯಾಗಿದ್ದ ಎಂಬುದು ನಮ್ಮನೆಯಲ್ಲೇ ಇರುವ ತಾಡವೋಲೆಯ ರಾಮಾಯಣದಿಂದ ತಿಳಿಯುತ್ತದೆ. ನನ್ನ ಅಜ್ಜ ಪ್ರತೀ ನವರಾತ್ರಿಯಲ್ಲಿ ಆ ಪುಸ್ತಕವನ್ನು ಪೂಜಿಸಿ, ಶಾರದೆಯಾಗಿ ಪೂಜೆಗೊಂಡ ಆ ಪುಸ್ತಕವನ್ನು ಶಾರದೆಯನ್ನು ವಿಸರ್ಜಿಸಿದ ವಿಜಯದಶಮಿಯ ದಿನ ಓದುತ್ತಿದ್ದರು. ಶಾರದೆಯನ್ನು ವಿಸರ್ಜಿಸಿದ ದಿನ ಚಿಕ್ಕಮಕ್ಕಳಿದ್ದರೆ ಅಕ್ಷರಾಭ್ಯಾಸ, ದೊಡ್ಡವರಾದರೆ ಪುಸ್ತಕಾಭ್ಯಾಸ ನಮ್ಮಲ್ಲಿನ ಕ್ರಮವಾಗಿತ್ತು. ಅಜ್ಜ ರಾಮಾಯಣವನ್ನು ರಾಗವಾಗಿ ಗಮಕದಲ್ಲಿ ಹಾಡಿಕೊಂಡು ನಮ್ಮನ್ನೆಲ್ಲಾ ಸೆಳೆಯುತಿದ್ದರು. ತಕ್ಕಮಟ್ಟಿಗಿನ ಪಾಂಡಿತ್ಯವನ್ನು ಹೊಂದಿದ್ದ ಅವರು ತಮ್ಮ ವ್ಯಾವಹಾರಿಕ ಅನುಭವಗಳನ್ನೂ ಸೇರಿಸಿ ಅರ್ಥವಿವರಣೆ ನೀಡುತ್ತಿದ್ದರು. ಈ ರೀತಿಯಿಂದಲೂ ಅಜ್ಜ ನಮಗೆಲ್ಲಾ ಗುರುವಾಗಿ ಸದಾ ಪ್ರಾತಃಸ್ಮರಣೀಯರು. ಅದರ ಆರಂಭದ ಒಕ್ಕಣೆ ಈ ರೀತಿ ಇದೆ --

ಮೇದಿನಿಪ ದಶರಥನ ಬಸುರಲಿ ರಾಮಲಕ್ಷ್ಮಣ ಭರತ ಶತ್ರುಹ....

ಹಾಗೇ ಮುಂದುವರಿದು

ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು...

....ಹೀಗೆಲ್ಲಾ ಬರುತ್ತಾ ಸಾಗುತ್ತದೆ. ಅಚ್ಚ ಹಳಗನ್ನಡ. ಅಭ್ಯಾಸಬಲದಿಂದ ಅಜ್ಜ ಇಡೀ ಆ ರಾಮಾಯಣವನ್ನು ಓದುತ್ತಿದ್ದರು.

ತಾಡವೋಲೆಯ ಪುಸ್ತಕಗಳಲ್ಲಿ ಎರಡು ಕ್ರಮ. ಒಂದು ಅಕ್ಷರಗಳನ್ನು ಯಾವುದೋ ಮರದ ರಸದಲ್ಲಿ ಬರೆದಿರುವುದು, ಇನ್ನೊಂದು ಅಕ್ಷರಗಳನ್ನು ಕೊರೆದಿರುವುದು. ನಮ್ಮನೆಯಲ್ಲಿರುವ ಪುಸ್ತಕ ಕೊರೆದು ಮೂಡಿಸಿದ ಅಕ್ಷರಗಳಿಂದಾಗಿದೆ. ಓದುವಾಗ ಅಕ್ಷರಗಳು ಸರಿಯಾಗಿ ಕಾಣಿಸಲಿ ಎಂಬ ಕಾರಣಕ್ಕೆ ಬಾಳೆಯ ಮೂತಿಯಲ್ಲಿ ಸಿಗುವ ಕುಪ್ಪಡ [ಮೂತಿಯ ಎಲೆಯಂತಹ ಒಂದು ಭಾಗ]ದ ರಸವನ್ನು ಹಾಕಿ ಉಜ್ಜುತ್ತಿದ್ದರು. ಹಾಗೆ ಮತ್ತೆ ಮತ್ತೆ ಆ ರಸವನ್ನು ಹಾಕುವುದರಿಂದ ತಾಡವೋಲೆ ಜೀರ್ಣವಾಗಿ ಹೋಗುವ ಸಂಭವನೀಯತೆ ಇರುವುದರಿಂದ ಈಗ ಆ ಪುಸ್ತಕವನ್ನು ನಮ್ಮ ಹಿರಿಯರ ಆಶೀರ್ವಾದದ ಆಸ್ತಿಯಾಗಿ ಪರಿಗಣಿಸಿ ಜೋಪಾನಮಾಡಲಾಗಿದೆ.

ಪ್ರಥಮೇಕಾದಶಿ ಎಂಬ ಹಬ್ಬದಿಂದ ಆರಂಭಗೊಳ್ಳುವ ಹಬ್ಬಗಳ ಸಾಲು ಅಲ್ಲಿನ ಜನರಿಗೆ ಸ್ವಲ್ಪ ಉತ್ತೇಜನ ನೀಡುತ್ತಿದ್ದವು. ಚಿಕ್ಕ ಆಚರಣೆಗಳನ್ನೂ ಜನ ದೊಡ್ಡ ಹಬ್ಬವನ್ನಾಗಿ ಪರಿಗಣಿಸಿ ಪರಸ್ಪರ ಹೋಗಿ-ಬಂದು ಮಾಡುವುದು ಕರೆದು-ಇರಿಸಿ ಮಾಡುವುದು ಹೀಗೇ ಸಂಬಂಧಗಳ ಬಳಕೆ ಬಹಳವಾಗಿತ್ತು. ಅಲ್ಲಲ್ಲಿ ಆ ಯಾ ಹಬ್ಬಗಳಿಗೆ ಸೇರುವ ನೆಂಟರಿಷ್ಟರು ತಮ್ಮ ಉತ್ತಮ ಸಮಯದ ಸದುಪಯೋಗಕ್ಕಾಗಿಯೂ ಮನೋರಂಜಕವಾಗಿಯೂ ಯಕ್ಷಗಾನ ತಾಳಮದ್ದಲೆಯನ್ನು ನಡೆಸುತ್ತಿದ್ದರು. ಯಕ್ಷಗಾನಕ್ಕೆ ಇನ್ನೊಂದು ಹೆಸರು ದಶಾವತಾರ ಆಟ. ಮಹಾವಿಷ್ಣುವಿನ ಹತ್ತು ಅವತಾರಗಳಲ್ಲಿ ಹರವಿಕೊಂಡ ಬಹುತೇಕ ಕಥಾಭಾಗಗಳನ್ನು ಪ್ರಸಂಗಗಳಾಗಿ ವಿಂಗಡಿಸಿ ಅಂದಿನ ಆದಿಕವಿಗಳು ತಮ್ಮ ಉತ್ತಮೋತ್ತಮ ಶೈಲಿಯಲ್ಲಿ ಭಾಮಿನಿಷಟ್ಪದಿಯೇ ಮೊದಲಾದ ಛಂದಸ್ಸುಗಳನ್ನು ಬಳಸಿ ಪ್ರಾಸಬದ್ಧವಾಗಿಯೂ ಸರ್ವಾಂಗ ಶುದ್ಧವಾಗಿಯೂ ಮತ್ತು ವ್ಯಾಕರಣ ಬದ್ಧವಾಗಿಯೂ ಬರೆದು ಲೋಕಾರ್ಪಣೆಗೈದಿದ್ದಾರೆ. ಎಷ್ಟೋ ಕವಿಗಳ ಹೆಸರುಗಳು ಇವತ್ತಿಗೆ ಜನ ಮರೆತಿದ್ದರೂ ಅವರ ಕೃತಿಗಳು ಮಾತ್ರ ಅಲ್ಲಿನ ಜನ ಮರೆಯುವ ಹಾಗೇ ಇಲ್ಲ. ಚಕ್ರವರ್ತಿ ರುಕ್ಮಾಂಗದ ಹಾಗೂ ಆತನ ಮಗ ಧರ್ಮಾಂಗದ ಪ್ರಥಮೇಕಾದಶೀ ವೃತವನ್ನು ನಡೆಸಿದ ಕಥೆಯನ್ನು ’ಧರ್ಮಾಂಗದ ದಿಗ್ವಿಜಯ’ದಲ್ಲಿ ಹೇಳಲಾಗಿದೆ. ಹಿಂದೂಸ್ಥಾನಕ್ಕೆ ಭಾರತವೆಂಬ ಹೆಸರು ತಂದುಕೊಟ್ಟ ಮಹಾನುಭಾವ ದುಶ್ಯಂತ-ಶಕುಂತಲೆಯರ ಪುತ್ರ ಚಕ್ರವರ್ತಿ ಭರತನ ಬೀಗತನವೂ ಕೂಡ ಇದೇ ಪ್ರಸಂಗದಲ್ಲಿ ನಿರೂಪಿತವಾಗಿದೆ! ಇವೆಲ್ಲಾ ಕಥೆಗಳು ನಮಗೆಲ್ಲಾ ತಿಳಿದಿದ್ದರೆ ಅದು ಯಕ್ಷಗಾನದ ಕೃಪೆ! ಆ ಹಿರಿಯ ಕವಿಗಳ ಆಶೀರ್ವಾದ.

ಜನಮನ ಸುಸಂಸ್ಕೃತವಾಗಬೇಕಾದರೆ ಉತ್ತಮ ಸಾಹಿತ್ಯಗಳನ್ನು ಓದಬೇಕು; ಅವುಗಳಲ್ಲಿರುವ ಸಾತ್ವಿಕ ಶಕ್ತಿಯನ್ನು ತಮ್ಮಲ್ಲಿ ಆವಾಹಿಸಿಕೊಳ್ಳಬೇಕು. ತಮ್ಮಲ್ಲಿನ ನ್ಯೂನತೆಗಳನ್ನು ಕಥಾಭಾಗಗಳಲ್ಲಿ ಸಿಗುವ ಸನ್ನಿವೇಶಗಳಿಗೆ ತುಲನೆಮಾಡಿಕೊಂಡು ಸರಿಪಡಿಸಿಕೊಳ್ಳಬೇಕು. ಹಿಂದಿನ ಕವಿಗಳು ಮಹಾಮಹೋಪಾಧ್ಯಾಯರಾಗಿದ್ದರು. ಇಂದಿನಂತೇ ಮೂರಕ್ಷರ ಬರೆದವರೆಲ್ಲಾ ಕವಿಗಳೋ ಸಾಹಿತಿಗಳೋ ಆಗಿಬಿಡುತ್ತಿರಲಿಲ್ಲ. ಹಿನ್ನೆಲೆಗೆ ಭಾಷೆಗಳ ತಾಯಿಯಾದ ಸಂಸ್ಕೃತದ ಪರಿಪೂರ್ಣ ಜ್ಞಾನವನ್ನು ಅವರು ಹೊಂದಿರುತ್ತಿದ್ದರು. ಆ ಭಾಷಾಪ್ರೌಢಿಮೆಯೊಡನೆ ಸನ್ನಿವೇಶಗಳ ರಸಾನುಭೂತಿಯನ್ನು ಮನಸಾ ಧರಿಸಿ ಅದನ್ನು ಕೃತಿರೂಪಕ್ಕೆ ಇಳಿಸುತ್ತಿದ್ದರು. ಹೀಗಾಗಿ ಪ್ರತಿಯೊಂದೂ ಕೃತಿ ’ಮಾಸ್ಟರ್ ಪೀಸ್’ ಆಗಿರುತ್ತಿತ್ತು ಮತ್ತು ಅದನ್ನು ಬಳಸಿದ, ಓದಿದ ವ್ಯಕ್ತಿ ಮತ್ತೆ ಮತ್ತೆ ಓದುವಂತೇ ಪ್ರಲೋಭನೆ ಉಂಟುಮಾಡುತ್ತಿತ್ತು. ಇಂದು ಎಷ್ಟೋ ಸಲ ಬೇರೇ ಬೇರೇ ಮಂತ್ರಗಳ ಜಪವನ್ನು ಮಾಡಲು ಹೇಳುವುದು ವಾಡಿಕೆ: ಅದಕ್ಕೆ ಕಾರಣವಿಷ್ಟೇ-- ಅಷ್ಟು ಹೊತ್ತಾದರೂ ಮನಸ್ಸು ಏಕಾಗ್ರತೆಯನ್ನು ಸಾಧಿಸಲಿ, ಒಳ್ಳೆಯದನ್ನು ಬಯಸಲಿ ಎಂಬುದು. ಅದೇ ರೀತಿ ಯಕ್ಷಗಾನ ಪ್ರಸಂಗಗಳ ಪ್ರದರ್ಶನವನ್ನೂ ದೇವರ ಸೇವೆಯೆಂದೇ ಜನ ಪರಿಗಣಿಸಿದ್ದರು. ಪಾತ್ರಧಾರಿಗಳೂ-ಸೂತ್ರಧಾರಿಗಳೂ ಅದೇ ಭಾವನೆಯಿಂದ ಆಟವನ್ನು ನಡೆಸುತ್ತಿದ್ದರು.

ಉಳಿದ ಭಾಗವನ್ನು ಮುಂದಿನ ಕಂತಿನಲ್ಲಿ ನೋಡೋಣ, ನಮಸ್ಕಾರ

Thursday, July 7, 2011

ದಂ-ಪತಿ




ದಂ-ಪತಿ

ಈ ಜ್ವರ ಶುರುವಾಗಿದ್ದು " ದಂ ಲಗಾಕೆ ಐಸ್ಸಾ " ಎಂದು ಬರೋಬ್ಬರಿ ಮಾಲು ತುಂಬಿದ ಕೈಗಾಡಿಯನ್ನು ಕುಮಟಾಪ್ಯಾಟೆಯಲ್ಲಿ ತಳ್ಳುವವರು ಕೂಗಿದಾಗ. ಇನ್ನೂ ಹಲವಾರು ಪಟ್ಟಣ ಮತ್ತು ಶಹರಗಳಲ್ಲಿ ಅಲ್ಲಲ್ಲಿ ಕಾಣಸಿಗುವ ದಿನನಿತ್ಯದ ಸಾಮಾನು ಸಾಗಾಟ ವೈಖರಿಯಲ್ಲಿ ಇದೂ ಒಂದು ರೀತಿ. ಆದರೆ ಈ ದಂ ಗೂ ನಮ್ಮ ದಂಪತಿಗೂ ಏನಾದರೂ ಸಂಬಂಧವಿರಬಹುದೇ ಎನ್ನುವ ಪ್ರಶ್ನೆ ಅಕಸ್ಮಾತ್ ಕಾಡತೊಡಗಿದ್ದು ನಿಜ. ಆ ಪೀಡನೆಗೆ ಯಾವ ಮಾಂತ್ರಿಕನಲ್ಲೂ ಪರಿಹಾರ ಸಿಗುವಂತಿರಲಿಲ್ಲ! ಹಾಗಾಗಿ ನಾನೇ ಹುಡುಕಿ ನಡೆಯುವ ಪರಿಸ್ಥಿತಿ ಎದುರಾಗಿ ಆ ದಂ-ಪತಿಯನ್ನು ಹುಡುಕಿದೆ!

ಛೆ ಛೆ ಛೆ ಛೆ, ನೀವಂದುಕೊಂಡಹಾಗೇ ಯಾವುದೋ ದಂಪತಿಯನ್ನು ನಾನು ಹುಡುಕಿ ಹೊರಟಿರಲಿಲ್ಲ. ಅದು ದಂ-ಪತಿ ಶಬ್ದದ ಕುರಿತಾದ ಒಂದು ಸಂಶೋಧನೆಯಾಗಿತ್ತು. ಸಂಶೋಧನೆ ಮಾಡುವಾಗ ಟಾಟಾ ಇನ್ಸ್‍ಟಿಟ್ಯೂಟ್‍ನವರಾಗಲೀ ಬಾಬಾ ಅಟೊಮಿಕ್ ರಿಸರ್ಚ ಸೆಂಟರ್ ನವರಾಗಲೀ ಜಾಗಕೊಡಲಿಲ್ಲ. ಹೋಗಲಿ ಬಿಡಿ ಏನು ಇಡೀ ಜಗತ್ತೆಲ್ಲಾ ಅವರೇ ವ್ಯಾಪಿಸಿಕೊಂಡಿದ್ದಾರೆಯೇ? ಅಷ್ಟಕ್ಕೂ ನಾನು ಮಾಡುವ ಸಂಶೋಧನೆಯ ಮಹತ್ವವನ್ನೇ ಅರಿಯದ ಮಹಾನುಭಾವರುಗಳು ಅಲ್ಲಿದ್ದಾರೆ; ಅದಕ್ಕೇ ಹಾಗೆ ಎಂದುಕೊಂಡು ನನ್ನ ಸಂಶೋಧನೆ ಮುಂದುವರಿಯಿತು. ತಿನ್ನಲಾರದ ದ್ರಾಕ್ಷಿ ಎತ್ತರದ ಬಳ್ಳಿಯಲ್ಲಿದ್ದುದರಿಂದ ಹುಳಿ ಎಂದ ನರಿಯಹಾಗೇ ಎಂದು ನೀವು ಮೂದಲಿಸಿದರೂ ಅಡ್ಡಿಯಿಲ್ಲ-ನಾನು ಮಾಡುವ ಕೆಲಸ ನನಗೆ ಗೊತ್ತಿದೆಯಲ್ಲಾ ಅದೇ ಸಂತೃಪ್ತಿ ಸಾಕು ಬಿಡಿ. ದಾಸರೂ ಹೇಳಿದ್ದಾರೆ ’ನಿಂದಕರಿರಬೇಕು ಜಗದಲಿ ’! ಅಂತಹ ದಾಸರಂತಹ ದಾಸರೇ ನನ್ನ ಪರವಾಗಿರುವಾಗ ಇನ್ನು ಯಾರಿದ್ದರೇನು ಇರದಿದ್ದರೇನು ಅಲ್ಲವೇ? ಹೋಗ್ಲಿ ಬಿಡಿ, ಸಂಶೋಧನೆ ಮುಂದೇನಾಯ್ತು ತಿಳಿಯೋಣ.

ನಾವು ಮದುವೆಯಾದ ಹೊಸದರಲ್ಲಿ " ನೀವು ದಂಪತಿ ಸಮೇತ ಬನ್ನಿ " ಎಂದು ಕರೆದವರು ನೂರಾರು ಜನ. ಇಲ್ಲಿ ಸುಳ್ಳು ಸಂಖ್ಯೆಯೇನೂ ಕೊಡುತ್ತಿಲ್ಲ, ಇರೋ ಹಕೀಕತ್ತು ಇರೋಹಾಗೇ ಹೇಳೊದೇ ನನ್ನ ಅಭ್ಯಾಸ. ಅಂದಾಜಿಗೆ ಸಂಖ್ಯೆ ಗುಜರಾಯಿಸಲು ಅದೇನು ಹುಲಿ-ಸಿಂಹಗಳ ಗಣತಿಯೇ? ಅದೂ ಕಷ್ಟ ಅನ್ನಿ ಪಾಪ ಅವರಾದರೂ ಏನುಮಾಡುತ್ತಾರೆ? ಒಂದೊಮ್ಮೆ ಹುಲಿ ಲೆಕ್ಕ ಮಾಡಲಿಕ್ಕೆ ಹೋಗಿ ಅದಕ್ಕೆ ಕಂಡುಬಿಟ್ಟರೆ ಅಧಿಕಾರಿಗಳನ್ನು ಮನೆಗೆ ವಾಪಸ್ ಕಳಿಸದೇ ಇರುವ ಜವಾಬ್ದಾರಿಗಳನ್ನು ಹುಲಿ-ಸಿಂಹ-ಆನೆಗಳೂ ಹೊತ್ತಹಾಗಿವೆ. ಅದ್ಕೇ ಇರಬೇಕು ಅವು ಇತ್ತೀಚೆಗೆ ಅರಣ್ಯಾಧಿಕಾರಿಗಳನ್ನೂ ಅರಣ್ಯಪಾಲಕರನ್ನೂ ಹುಡುಕಿಕೊಂಡು ಊರೂರು ಅಲೀತಾ ಇವೆ! ಮೇಲ್ಗಡೆ ಇರೋ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು " ಹೋಗ್ರೋ " ಅಂತಾರೆ, ಕಡಿತಗೊಂಡ ಬೋಳುಕಾಡಲ್ಲಿ ಕುಳಿತ ಹಿಂಸ್ರ ಪಶುಗಳು " ಬನ್ರೋ " ಅಂತವೆ! ಕೃಷಿಕರು ಇಲ್ಲದ ಆರೋಪ ಮಾಡ್ತಾರೆ. ಪಾಪ ಅರಣ್ಯಾಧಿಕಾರಿಗಳು-ಅರಣ್ಯಪಾಲಕರ ಫಜೀತಿ ನಾಯಿ-ನರಿಗೆ ಕೊಟ್ರೂ ಬೇಡ! ಮುಂದಿನ ಸಲದಿಂದ ಮಿಲಿಟ್ರಿಗಾದ್ರೂ ಸೇರ್ಕಂಬುಡ್ತಾರ್ಯೇ ಹೊರ್ತು ಅರಣ್ಯ ಇಲಾಖೆಗೆ ಮಾತ್ರ ಸೇರುವುದು ಡೌಟು.

ದಂಪತಿ ಸಮೇತ ಬನ್ನಿ ಅಂದಿದ್ರು ಅಂದ್ನಲ್ಲಾ ದಂ-ಪತಿ ಅಂದ್ರೇನೂ ಅಂತ ಮತ್ತೆ ಕೆದಕಲು ಕುಳಿತೆ. ’ಪತಿ’ ಅಂದರೆ ಗಂಡ, ಯಜಮಾನ ಇತ್ಯೇತ್ಯಾದಿ ವರ್ಣನೆ ಸಿಕ್ಕಿತು. ’ದಂ’ ಎಂದರೆ ಹೆಂಡತಿ ಆಗಿರಲೇಬೇಕಲ್ಲವೇ? ಹೆಂಡತಿ ಇರದ ಪತಿಗೆ ದಂ ಇರದ ಪತಿ ಅಂತ ಬರೆಯುವುದು ಸರಿಯೇ? ಅಥವಾ ಯಾರಾದ್ರೂ ಹೆಂಡತಿ ಮಾತ್ರ ಬಂದರೆ ದೂರದಿಂದಲೇ ಅವರನ್ನು ಕಂಡು ಇಂಥವರ ’ದಂ’ ಮಾತ್ರ ಬಂದ್ರು ಎನ್ನುವುದು ಸರಿಯೇ? ಕೆಲವರು ದಂಪತಿಗಳು ಎಂತ್ಲೂ ಕರೀತಾರಲ್ಲ ಅದ್ಯಾಕೆ ಹಾಗೆ? ದಂಪತಿ ಎನ್ನುವುದೇ ಜೋಡಿ ಸೂಚಕ ಶಬ್ದ ಎಂದಮೇಲೆ ಅನೇಕ ದಂಪತಿ ಜೋಡಿಗಳಿದ್ದರೆ ಮಾತ್ರ ’ದಂಪತಿಗಳು’ ಎನ್ನುವುದು ಸಮಂಜಸವೇನೋ ಅನಿಸುತ್ತದಪ್ಪ. ಸಮಸ್ಯೆ ಇಲ್ಲೂ ಅದೇ ಇದೆ! ಎಲ್ಲರ ’ದಂ’ ಗಳೂ ಬಂದಿದ್ದರೆ ’ಪತಿ’ಗಳು ಇನ್ನೂ ಬರುವವರಿದ್ದರೆ " ಹಾಂ ... ಎಲ್ಲರ ದಂ ಗಳೂ ಬಂದ್ರು ಇನ್ನು ಪತಿಗಳು ಬರ್ತಾ ಇದ್ದಾರೆ ಎಂದು ಹೇಳುವ ಹಾಗೂ ಇಲ್ಲ ಅಲ್ಲವೇ? ಯಾಕೋ ಸಮಸ್ಯೆ ಸುಲಭಕ್ಕೆ ಬಗೆಹರಿಯಲಿಲ್ಲ. ಬೀಜಗಣಿತವೂ ಅಲ್ಲ, ರೇಖಾಗಣಿತವೂ ಅಲ್ಲ, ದೃಗ್ಗಣಿತವೂ ಅಲ್ಲ; ದಂಗಣಿತ ! ಯಾವ ಫಾರ್ಮ್ಯುಲಾವೂ ನಾಟುವ ಸ್ಥಿತಿಯಲ್ಲಿರಲಿಲ್ಲ ಬಿಡಿ.

ಕೆಲವೊಮ್ಮೆ
ಹೀಗೂ ಯೋಚನೆ ಬಂದಿದ್ದಿದೆ. ’ದಮ್ಮು’ ಇರುವ ಪತಿಗೆ ದಂಪತಿ ಎಂದರೆ ಹೇಗೆ ? ಮಳೆಗಾಲ ಚಳಿಗಾಲದಲ್ಲಿ ದಮ್ಮು ಇರುವವರಿಗೆ ಸ್ವಲ್ಪ ಅಡಚಣೆ ಜಾಸ್ತಿ. ಶ್ವಾಸ ಮೇಲೆತ್ತುವಾಗ ಹಂದಿಯಹಾಗೇ ಹೂಂಕರಿಸುವವರು ಗೂಳಿಯಹಾಗೇ ಗುಟುರುವವರು ನಂಗಂತೂ ಕಾಣಸಿಗುತ್ತಾರೆ. ಅಮಿತಾಭನಿಗೆ ಉಬ್ಬಸರೋಗವಿದೆ ಎಂಬುದು ಅವರಿಗೆಲ್ಲಾ ತಿಳಿದಿರೋ ಹಾಗಿದೆ. ಹೀಗಾಗಿ ಇಂತಹ ’ದಮ್‍ಪತಿ’ಗಳ ಸಂಘದ ಬಲವರ್ಧನೆಯಾದ ಹಾಗಾಗಿದೆ. ಜಯವರ್ಧನೆಗೂ ಬಲವರ್ಧನೆಗೂ ಏನೂ ಸಂಬಂಧವಿಲ್ಲ-ಸದ್ಯ ಅದನ್ನು ಮಧ್ಯೆ ತರುವುದು ಬೇಡ-ಯಾಕೆಂದರೆ ಸಂಶೋಧನೆಯ ಫಾರ್ಮ್ಯುಲಾ ಕೆಟ್ಟುಹೋಗುವ ಸಂಭವವಿದೆ, ಗೊತ್ತಾಯಿತಲ್ಲ? ಅಂತೂ ಮಳೆಚಳಿಗಾಲಗಳಲ್ಲಿ ಕೆಲವಾರು ಕಾರ್ಯಕ್ರಮಗಳಿಗೆ ಬರೇ ಮಡದಿಯರೇ ಹೋಗಿಬರಬೇಕಾಗಬಹುದು. ಆಗ ಅವರು "ನಮ್ಮ ದಮ್‍ಪತಿ" ಬರಲಿಲ್ಲ ಎನ್ನಬಹುದಲ್ಲವೇ?

’ದಂ ಮಾರೋ ದಂ’ ಹಾಡುಕೇಳಿದಾಗಲಂತೂ ಹಲವು ನನ್ನಂಥಾ ಪಡ್ಡೆಗಳಿಗೆ ಚಡ್ಡಿಹಾಕಿ ಕುಣಿಯುವ ಹುಚ್ಚು ಬರುತ್ತದೆ. ’ದಂ’ ಎಳೆಯುವುದರಲ್ಲೂ ಅದೆಷ್ಟು ಸುಖಾಂತೀರಿ ಕೆಲವರಿಗೆ. ಒಂದೇ ಒಂದು ದಂ ತಮ್ಮ ದಿನದ ರಿಧಮ್ಮನ್ನೇ ಬದಲಾಯಿಸುತ್ತದೆ ಅಂತಾರೆ ಇನ್ಕೆಲ್ವು ಜನ. ಇಲ್ಲೂ ಅದೆಂಥದೋ ’ದಂ’ ಕರಾಮತ್ತು. ಯೇ ಕ್ಯಾ ಹೈ ದುನಿಯಾ ? ಅನಂತನಾಗರು [ನಾಗರ ಹಾವಲ್ಲ!] ನಾರದನಾಗಿ ಅಭಿನಯಿಸಿದ ’ಇದು ಎಂಥಾ ಲೋಕವಯ್ಯಾ ? ’ ಹಾಡು ನೆನಪಾಗುತ್ತದೆ. ದಂ ಎನ್ನುವ ಆ ಒಂದೇ ಅನುನಾಸಿಕ ಅಕ್ಷರಕ್ಕೆ ಅಷ್ಟೆಲ್ಲಾ ಆನೆಗಾತ್ರದ ಕಿಮ್ಮತ್ತಿದ್ದಮೇಲೆ ದಂ ಇಲ್ಲದ ಪತಿ ಎಂದರೆ " ಛೆ ಅವನಾ ಅವನಿಗೆ ದಮ್ಮೇ ಇಲ್ಲ " ಅಂತಾರಲ್ಲಾ ಅದೂ ನೆನಪಾಗುತ್ತದೆ. "ದಂ ಇದ್ರೆ ಮುಂದೆ ಬಾ ನೋಡೋಣ " ಎಂದ ಕುಡುಕನ ನೆನಪೂ ಆಯ್ತು ಸ್ವಾಮೀ. ಎಷ್ಟೋಸಲ ನಮ್ಮಲ್ಲಿ ಇರುವ ದಂ ಎಲ್ಲಾ ಮಾಯವಾಗಿ ನಮ್ಮ ಜಂಘಾಬಲವೇ ಉಡುಗಿಹೋಗಿ ಅಡಗಿಕೂತು ತಪ್ಪಿಸಿಕೊಳ್ಳುವ ಪರಿಯೂ ಇರುತ್ತದೆ. ಬಾಲ್ಯದಲ್ಲಿ ಶಾಲೆಯ ಮಾಸ್ತರು ಬಂದರೆ ಹಾಗಾಗುತ್ತಿತ್ತು. ಬರ್ತಾ ಬರ್ತಾ ಯಾರದ್ರೂ ಸುಂದರ ಹುಡುಗೀರು ಅತೀ ಹತ್ತಿರ ಬಂದರೆ ಒಂಥರಾ ಹಾಗಾಗೋಕ್ಹಿಡೀತು! ಈಗೀಗ ಮನೇಲಿರೋ ’ದಂ’ ದಬಾಯಿಸಿದ್ರೂ ಮರುದಬಾಯಿಸಲು ದಂ ಇರದ ಸ್ಥಿತಿ ನಮ್ದು! ಇನ್ನು ಕಾಲೇಜಿಗೆ ಹೋಗುವ ನಮ್ಮ ಮಕ್ಳೇನಾದ್ರೂ ತಿರುಗಿನಿಂತುಬಿಟ್ಟರೆ ದೇವ್ರೇಗತಿ! ಇಷ್ಟಿದ್ದೂ ಆ ’ದಂ’ ಶರೀರದ ಯಾವ ಮೂಲೆಯಲ್ಲಿ ಹುದುಗಿ ಕೂತಿದೆ ಎನ್ನುವುದು ಅರ್ಥವಾಗಲಿಲ್ಲ.

ದಂ-ಪತಿಯೊಳಗೆ ಇರುವ ’ದಂ’ ಗೂ ನಮ್ಮೊಳಗೇ ಆಳದಲ್ಲೆಲ್ಲೋ ಇರುವ ’ದಂ’ಗೂ ಹಾಗೂ ಮಳೆಚಳಿಗಾಲದಲ್ಲಿ ಏಕಾಏಕೀ ಅಟ್ಯಾಕ್ ಮಾಡಿ ’ಇನ್ನೇನು ಈ ಸರ್ತಿ ಉಳಿಯೊಲ್ಲ’ ಅಂತನ್ನಿಸಿಬಿಡುವ ಈ ದಮ್ಮಿಗೂ ಏನಾದರೂ ಸಂಪರ್ಕ-ಸಂಬಂಧವಿರಲೇಬೇಕಲ್ಲಾ ? ಇವುಗಳ ಹಿಂದಿನ ಕಾಮನ್ ಬೇಸ್ ಯಾವುದು ಎಂಬುದನ್ನು ಪ್ರಥಮವಾಗಿ ಕಂಡುಹಿಡಿಯಬೇಕಾಯಿತು. ಜಾಗದ ಅನಿವಾರ್ಯತೆಯನ್ನು ಮನೆಯ ಧೂಳು ತುಂಬಿ ದಮ್ಮು ಕಟ್ಟುವ ಗ್ಯಾರೇಜು ನಿವಾರಿಸಿತು. ಅಲ್ಲೂ ಕೂಡ ಮನೆಯವರೆಲ್ಲರ ಆಕ್ಷೇಪಣೆ ಸಹಿಸುತ್ತಲೇ ಸಂಶೋಧಿಸಬೇಕಾದ ಅನಿವಾರ್ಯತೆ ಇತ್ತು. ಸಂಶೋಧನೆಯ ಸಮಯದಲ್ಲಿ ಕುಟುಂಬ ನಿರ್ವಹಣೆಗೆ ಸರಕಾರವಾಗಲೀ ಯಾ ಯಾವುದೇ ದೊಡ್ಡ ಸಂಘ-ಸಂಸ್ಥೆಯಾಗಲೀ ಧನಸಹಾಯ/ಮಾಶಾಸನ ನೀಡುತ್ತಿರಲಿಲ್ಲ. ಮಾಶಾಸನದಲ್ಲಿ ಬಹಳಪಾಲು ಬೇಡದ ಜನಗಳಿಗೇ ಸಲ್ಲುವುದು ಯಾರಿಗೂ ತಿಳಿಯದ್ದೇನಲ್ಲವಲ್ಲ ! ಸಂಶೋಧನೆ ಫಲಕಾರಿಯಾದರೆ ಮುಂದೆ ಹಾರತುರಾಯಿ ಮೆರವಣಿಗೆ ! ಅಂದುಕೊಂಡಹಾಗೇ ಆಗದೇ ಹೊದರೆ ಮುಂದಿರುವ ಮಾರೀ ಹಬ್ಬದ ನೆನಪು ಆಗಾಗ ಮರುಕಳಿಸಿ ಕೆಲಸಮಾಡಲು ದಮ್ಮೇ ಇರುತ್ತಿರಲಿಲ್ಲ.

ಆರೇಳು ತಿಂಗ್ಳೇ ಕಳೆದು ಹೋಯ್ತು. ಇನ್ನೂ ಸರಿಯಾದ ಫಾರ್ಮ್ಯುಲಾ ಸಿಗಲಿಲ್ಲ. ನನ್ನನ್ನೇ ನಾನು ಸರಿಯಾಗಿ ನೋಡಿಕೊಂಡರೆ ಏನಾದ್ರೂ ಉತ್ತರ ಹೊಳೆಯಬಹುದು ಎಂದು ನಮಗೆ ಯಾರೋ ಉಡುಗೊರೆಯಾಗಿ ಕೊಟ್ಟ ನಾಕಡಿ ಉದ್ದದ ಕನ್ನಡಿಯಲ್ಲಿ ತಿರುಗಿ ಮುರುಗಿ ನೋಡಿಕೊಳ್ಳುತ್ತಿದ್ದೆ. ಜೋರಾಗಿ ಬಂದ ಗುಡುಗಿಗೆ ಒಮ್ಮೆ ಎದೆಯೊಳಗೆ ದಮ್ಮೇ ಇಲ್ಲದಂತಾಗಿ ಹಿಡಿದಿದ್ದ ಕನ್ನಡಿ ಕೈತಪ್ಪಿ ವಾಲಿತು. ಹೆಚ್ಚೇನೂ ಬೀಳಲಿಲ್ಲ ಆದ್ರೂ ನನ್ನ ಫಿಗರನ್ನು ಸರಿಯಾಗಿ ತೋರುತ್ತಿದ್ದ ಕನ್ನಡಿ ಮುಖ ಸಿಂಡರಿಸಿಕೊಂಡ ಹಾಗಿದೆಯಲ್ಲಾ ಎಂದು ಎತ್ತಲು ಹೋದ್ರೆ " ಅದೇನ್ರೀ ಬಿದ್ದಿದ್ದು ಕನ್ನಡೀನಾ ಅಯ್ಯೋ ದೇವ್ರೇ ನಮ್ ಬಾವ ಬಾಂಬೆಯಿಂದ ತಂದಿದ್ದು......" ಎಂದು ಮಂತ್ರಪಠಿಸುತ್ತಾ ಬಂದ ’ದಂ’ ನೋಡುತ್ತಿದ್ದಂತೇ ಕೈಕಾಲೆಲ್ಲಾ ತರತರ ಎದೆಯಲಿ ಡವಡವ, ಮತ್ತೆ ಕರೆಂಟು ಹೋದ ಹಾಗೇ ’ದಂ’ ಉಡುಗೇ ಹೋಯಿತು. ಸಂಶೋಧನೆ ಅಷ್ಟಕ್ಕೇ ನಿಂತಿದೆ. ರಿಸರ್ಚ್ ಮಾಡಲಿಚ್ಛಿಸುವ ಹುಡುಗಿಯರಿಗೆ/ಹೆಂಗಸರಿಗೆ ಹೆಚ್ಚಿನ ಆದ್ಯತೆ! ವಿಶ್ವವಿದ್ಯಾಲಯಗಳ ಇತ್ತೀಚಿನ ಗೈಡ್‍ಗಳಿಗೂ ಮೀರಿ ಎಲ್ಲಾರೀತಿಯ ಸಹಕಾರ ನೀಡಲಾಗುವುದು! ಕ್ಯಾನ್ ಸಂಬಡಿ ಟೇಕ್ ಓವರ್ ಪ್ಲೀಸ್ ?

Tuesday, July 5, 2011

ಓಪನ್-ಕ್ಲೋಸ್


ಓಪನ್-ಕ್ಲೋಸ್

ಅಕೌಂಟು ಓಪನ್ ಮಾಡುವಾಗ
ಮಿನಿಮಮ್ ಬ್ಯಾಲೆನ್ಸ್ ಇರಲೇಬೇಕು
ಬ್ಯಾಲೆನ್ಸೇ ಇರದಿದ್ದರೆ
ಅಕೌಂಟಾದರೂ ಯಾಕೆ ಓಪನ್ ಮಾಡಬೇಕು ?
ಅದಕ್ಕೇ ನಾನು ಹಲವುದಿನ
ಬಜ್ಜಿನಲ್ಲಿ ಅಕೌಂಟು ಓಪನ್ ಮಾಡುವುದೇ ಇಲ್ಲ !
ಈ ವಿಷಯ ಯಾರಿಗೂ ಹೇಳಬೇಡಿ
ಎಂದರೆ ನೀವು ಮುದ್ದಾಂ ಹೇಳಿಯೇ ಹೇಳುತ್ತೀರಿ
ಯಾರಿಗಾದ್ರೂ ಹೇಳ್ಕೊಳಿ ಎಂದರೆ
ಹಾಗೇ ಕಸದಎಸೆದ ಥರ ಬಿಟ್ಟುಬಿಡುತ್ತೀರಿ

ಚಿಕ್ಕ ಮಕ್ಕಳೂ ಹಾಗೆ
ಮಾಡಬೇಡ ಎಂದರೆ ಅರ್ಗಿಸ್ ಮಾಡೇಮಾಡುತ್ತಾರೆ
ಏನದ್ರೂ ಮಾಡ್ಕೊ ಅಂದರೆ
ಹೆದರಿಕೆಯಿಂದ ಸುಮ್ನೇ ಕೂತಿರ್ತಾರೆ
ಬಿದ್ದಾಗ ಯಾರೂ ನೋಡದಿದ್ದರೆ
ಅಂಡು ನೀವಿಕೊಂಡು ಎದ್ದುಹೋಗುತ್ತಾರೆ
ಅಪ್ಪಿತಪ್ಪಿ ಯಾರೋ ನೋಡಿದ್ದನ್ನು
ಅವರು ನೋಡಿಬಿಟ್ಟರೆ
ಆಕಾಶ ಕಳಚಿಬಿದ್ದಹಾಗೇ
ಅಳಲು ಶುರುವಿಡುತ್ತಾರೆ !

ರಾಜಕಾರಣಿಗಳೇನು ಇದಕ್ಕೆ ಹೊರತೇ?
ನೆರೆಪರಿಹಾರಕ್ಕೂ ಕನ್ನಹಾಕಿ
ಅಲ್ಲಲ್ಲೇ ಅಷ್ಟಷ್ಟು ಬಸಿದುಕೊಳ್ಳುತ್ತಾರೆ !
ಯಾರೂ ಪರಾಂಬರಿಸದಿದ್ದರೆ
’ಬೆಣ್ಣೆ’ ಪೂರ್ತಿ ತಿಂದು ಹಾಗೇ ನಡೆಯುತ್ತಾರೆ
ಯಾರಾದ್ರೂ "ಏನ್ರೀ ಅದು ಸರೀನಾ ? " ಅಂದ್ರೆ
ಪಕ್ಕದಲ್ಲಿದ್ದ ಯಾರ ಬಾಯಿಗೋ ಕೈ ಒರೆಸಿಬಿಡುತ್ತಾರೆ
ವರ್ಗಾವರ್ಗೀ ಇದ್ಯಾ ? ಕೆಲ್ಸ ಆಗ್ಬೇಕಾ ?
ಸೂಟ್ ಕೇಸ್ ತಕಂಬನ್ನಿ ಆಗುತ್ತೆ !
ಬ್ಯಾಲೆನ್ಸೇ ಇಲ್ಲಾಂದ್ರೆ
ನಿನ್ನಕೌಂಟೇ ಓಪನ್ನಾಗಲ್ಲ ಹೋಗಪ್ಪಾ ಅಂತಾರೆ
ಕೆಲವರು ಓದದೇ ಇದ್ದರೂ ’ಸಂಸ್ಕೃತ’ ಬಳಸುತ್ತಾರೆ

ಜ್ಯೋತಿಷಿಗಳು ಮುಂದ್ಗಡೆ ತಟ್ಟೇಲಿ
ಒಂದೈನೂರರ ನೋಟು ಸಾವಿರದ್ದು ಒಂದು
ನೂರರದ್ದು ನೂರಾರು ಹರಡಿಕೊಂಡು ಕೂತಿರ್ತಾರೆ!
ಪಾಪ ದುಡ್ಡಿನ ಮೋಹವನ್ನೇ ಮರೆತ
ಪರಿತ್ಯಾಗಿಗಳು !
ಏನಾದ್ರೂ ಸಮಸ್ಯೆ ಇದ್ಯೇ ?
ಸಾವಿರದಿಂದಲೇ ಅಕೌಂಟು ಓಪನ್ನು !
ನೂರರ ಲೆಕ್ಕದಲ್ಲಿ ಕೇಳಿದರೆ
ಚಿಕಿತ್ಸೆಗೆ ಪವರ್ ಇರುವುದಿಲ್ಲ-ಪರಿಣಾಮ ಕಮ್ಮಿ !
ಹತ್ತೋ ಇಪ್ಪತ್ತೋ ಎಂದರೆ
ಗುರಾಯಿಸಿ ನೋಡುತ್ತಾರೆ !

ಕತ್ತರಿ ಹಿಡ್ಕೊಂಡು
ದುಡ್ಡು ಕೊಡ್ಲಿಲ್ಲಾ ಅಂದ್ರೆ ರೋಗಿ ಸಾಯ್ತಾನೆ
೨ ಲಕ್ಷ ಕೊಟ್ರೆ ಚಿಕಿತ್ಸೆಮಾಡ್ಬಹುದು
ಇಲ್ಲಾಂದ್ರೆ ಆಪರೇಷನ್ ಮಾಡಕಾಗಲ್ಲ
ಅಂತಾನೆ ಸೇವೆಯ ಪ್ರತಿಜ್ಞೆಗೈದ ವೈದ್ಯ !
ಇನ್ನೇನು ಉಸಿರಾಡ್ತಿದಾನೆ ರೋಗಿ
ಬದುಕಿಸಬೇಕು ಅಂದ್ಕಳಿ
ಮೊದಲು ಅಕೌಂಟ್ ಓಪನ್ ಮಾಡ್ಬೇಕು!
ಪತ್ರಿಕೇಲಿ ನಿಮ್ಬಗ್ಗೆ ಚೆನ್ನಾಗಿ ಬರೀಬೇಕಾ?
ಅಕೌಂಟ್ ಓಪನ್ ಮಾಡಿ ಪ್ಲೀಸ್ !
ಎಲ್ಲಾಕಡೆನೂ ಅಕೌಂಟು
ಅನ್ನಕೌಂಟು ಇಲ್ಲಾ ಅನ್ಕೋಬೇಡಿ
ಅದು ಸ್ವಿಸ್ ಬ್ಯಾಂಕಿನಲ್ಲಿದೆ !
ಅದೊಂಥರಾ ಅಕೌಂಟು
ಇದ್ನೆಲ್ಲಾ ನೋಡ್ತಾ ನಂಗನ್ಸಿದ್ದು
ಲೆಟ್ ಮಿ ನಾಟ್ ಓಪನ್ ದಿ ಅಕೌಂಟ್

Sunday, July 3, 2011

ನೀವು ಏನೂ ಅಂದುಕೊಳ್ಳಬೇಡಿ!


ನೀವು ಏನೂ ಅಂದುಕೊಳ್ಳಬೇಡಿ!

ನೀವೇನೂ ಅಂದುಕೊಳ್ಳಬೇಡಿ
ನಾನೂ ಏನೂ ಅಂದುಕೊಳ್ಳುವುದಿಲ್ಲ
ಹೀಗಂದುಕೊಂಡೇ ಅಂದುಕೊಳ್ಳುವ ವಿಷಯಗಳೆಷ್ಟೋ !

ಬಸ್ಸಿನಲ್ಲಿ ಮಾತನಾಡುವಾಗ
ಇನ್ನೊಬ್ಬರ ಮುಖಕ್ಕೆ ನಮ್ಮ ಎಂಜಲು ಸಿಡಿದಾಗ
ನಡೆಯುವ ಅವಸರದಲ್ಲಿ ಕಾಲು
ಇನ್ನೊಬ್ಬರಿಗೆ ತಾಕಿದಾಗ
ಎಲೆಯಲ್ಲಿ ಊಟಮಾಡುವಾಗ
ಕೈತುತ್ತು ಜಾರಿ ಮೈಮೇಲೆ ಬಿದ್ದು
ಹಿಮಪಾತವಾದಂತೇ ಜಾರಿ
ಪಕ್ಕದವರ ಎಲೆಗೋ ತಟ್ಟೆಗೋ ಇಣುಕಿದಾಗ

ಅದೇನೋ ಸರಿ ಆದರೆ ಎದುರುಗಡೆಮನೆ
ಮಾಧುರಿ ದೀಕ್ಷಿತ ಕಣ್ಣು ಕೋರೈಸಿದಾಗ
ಕಣ್ಸನ್ನೆಮಾಡಿ ಬೆಂಬತ್ತ ಮಾಧವ
ಪರೀಕ್ಷೆಗಳು ಮುಗಿದರೂ ಕಾಲೇಜು ತಪ್ಪಿಸಲಿಲ್ಲ!
ಮಿನಿಟಾಪು ಬಾಟಮ್ಮು ಲೋ ಜೀನ್ಸು ಲೆಗ್ಗಿಂಗು
ಕಡಿವಾಣವೇ ಇರದ ಅವಳ ಫ್ಯಾಶನ್ ಶೋಗೆ
ಸದಾ ವೀಕ್ಷಕನಾಗಿ ತದೇಕಚಿತ್ತದಿಂದ
ನೋಡನೋಡುತ್ತಾ ಅವಳನ್ನು ಅದು ಹೇಗೋ
ಮರುಳುಮಾಡಿ ಇನಿಯೇ ನೀನೇ ನನ್ನ ಪ್ರಾಣ ಎಂದಾಗ
ಮನಸುಕೊಟ್ಟೆ ಎಲ್ಲಾ ಕೊಟ್ಟೆ ಎಂದವಳಿಗೆ
ಕೀಲಿ ತಿರುಗಿಸಿ ಕೈಲೊಂದು ಕೊಟ್ಟು
ಮತ್ತೆ ತಪ್ಪಿಸಿಕೊಂಡ ಮಹಾನುಭಾವ

ಅಲಲಲಲೇ ಎಂದವರಿಗೆಲ್ಲಾ ಹೂನಗೆ ಬೀರಿ
ಸರಿಯಾಗೇ ಇದ್ದವಳನ್ನು ಕಣ್ತುಂಬಾ ಕಂಡು
ಕೆಕ್ಕರಿಸಿದ ವೆಂಕೋಬಜ್ಜನಿಗೆ ೭೮
’ಹುಳಿ’ಗೆ ಕೊರತೆಯಿಲ್ಲ ! ಶತಾಯಗತಾಯ ಪ್ರಯತ್ನಕ್ಕೂ
ಯಶಸಿಗದಾಗ ಆತನೆಂದ " ಆಕೆ ಸರಿಯಿಲ್ಲ ಗಂಡು ಬೀರಿ "
ಆತನ ಬಳಗವೆಲ್ಲಾ ಆಕೆಯನ್ನು ಹೆಸರಿಸಿದ್ದು
ಅದೇ ಹೆಸರಿನಿಂದ !

ಶೀಲಾ ಓಡಾಡುವಾಗ ಜಗವೆಲ್ಲಾ ಸುಂದರ
ಭುವನ ಸುಂದರಿಯಾದ ಆಕೆ ಎಲ್ಲರಿಗೂ ಬೇಕು
ಹೃದಯ ವೈಶಾಲ್ಯದಿಂದ ಸ್ನೇಹಿತರ ಬಳಗವೂ ವಿಶಾಲ
ಮೊನ್ನೆ ಆಕೆಯ ಮನೆಯ ಮುಂದೆ ಪೋಲೀಸು ಗಾಡಿ !
ಯಾಕಮ್ಮಾ ಎಂದರೆ "ನಾನೇನೂ ತಪ್ಪು ಮಾಡಿಲ್ಲಾ"
ಎನ್ನುತ್ತಿದ್ದಂತೇ ಜೀಪಿನೊಳಗೆ ಜಗಸುಂದರಿ
ಅಭಿಮಾನೀ ಬಳಗ ಚೀರಿತು ಆದರೂ
ಹಿಂದೆ ’ಅಭಿಮಾನಿ’ಗಳಾಗಿದ್ದವರೇ ಕೊಟ್ಟ ಅರ್ಜಿ
ಆಕೆ ಹಲವರು ಸ್ವತ್ತು !
ನುಂಗಿದ್ದಾಳೆ ಹಲವರು ಸ್ವತ್ತು !
ಆದರೂ ಇನ್ನೂ ’ಕುಮಾರಿ’
ಮತ್ತೆ ಮದುವೆಯಾಗಲು ತಯಾರಿ !

ಪಕ್ಕದಮನೆಯಲ್ಲಿ ಎರಡು
ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳು
ಅವರಿಗೊಬ್ಬಳೇ ತಾಯಿ!
ಮಹಾಲೆ ಬರುತ್ತಾನೆ ಪೇಟೆಯಿಂದ ದಿನಾ
ಕುಡಿದು ಬಂದಾಗ ಒದರಾಟ ಜೋರು
" ನಕರಾ ಮಾಡಬ್ಯಾಡ " ಎಂದೆಲ್ಲಾ ಆಕೆಗೆ ಬೈಯುತ್ತಾನೆ
ಆಕೆಯೆ ಯಜಮಾನ ಮನೆಯಲ್ಲಿದ್ದರೂ ಇರದಿದ್ದರೂ
ಗಂಟೆಗಟ್ಟಲೆ ಮೀಟಿಂಗು ಚಾಟಿಂಗು !
ಇರಬಹುದೇ ಮೇಟಿಂಗು ?
ಆಗಮಾತ್ರ ಯಾರಿಗೂ ಪ್ರವೇಶವಿಲ್ಲ !
ದೂರವಾಣಿ ರಿಂಗಣಿಸಿದರೂ ಎತ್ತುವುದಿಲ್ಲ

ಇಷ್ಟು ಸ್ಯಾಂಪಲ್ಲುಗಳು ಸಾಕು
ನೀವೇನೂ ಅಂದುಕೊಳ್ಳಬೇಡಿ
ನಾನೇನೂ ಅಂದುಕೊಳ್ಳುವುದಿಲ್ಲ
ಹಾಂ... ಹೇಳುವುದು ಮರೆತೆ :
ಕೇಳಿದ್ದೆಲ್ಲಾ ನಿಮ್ಮಲ್ಲೇ ಇರಲಿ !