ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, January 2, 2013

ಜಗದ ಮಾಯದಾಟಗಾರ

ಚಿತ್ರ ಋಣ : Ta Prohm Temple, Cambodia
Photograph by Peter Nijenhuis , www.InterestingPlac.es

ಜಗದ ಮಾಯದಾಟಗಾರ
[ಸನ್ಮಿತ್ರರೇ, ನಿಸರ್ಗದ ಕೌತುಕವನ್ನು ಬಣ್ಣಿಸುವುದು ಕಬ್ಬಿಗನ ಕನಸು. ಸದಾ ಹಲವಾರು ಸಾಂಸಾರಿಕ ವಿಷಯಗಳೇ ಎಡತಾಕಿರುವಾಗ ಅವುಗಳನ್ನು ಬಿಟ್ಟು ಹೊರಜಗತ್ತನ್ನು ಬೆರಗುಗಣ್ಣುಗಳಿಂದ  ಕಾಣುವ ಮನೋವೃತ್ತಿಗೆ ಹೂತ ಹುಣಿಸೇ ಮರವೂ ಕವನಕ್ಕೆ ವಿಷಯವಾದೀತು ಎಂದು ಬೇಂದ್ರೆ ಹೇಳಿದ್ದಾರೆ; ಅದನ್ನೇ ಕವನಿಸಿದ್ದಾರೆ. ಕಾಂಬೋಡಿಯಾದ/ ಈ ಜಗತ್ತಿನ ಅತೀ ಪುರಾತನ ಬೃಹದ್ದೇಗುಲವನ್ನು ಕಾಣುವಾಗ ಮನಸ್ಸಿಗೆ ಅಂಥದ್ದೇ ಭಾವ, ಆ ಭಾವಗಳ ಮಜಲಿನಲ್ಲಿ ಹುಟ್ಟಿದ್ದು ಈ ಕವನ, ಒಪ್ಪಿಸಿಕೊಂಡು ಓದುವ  ನಿಮ್ಮೆಲ್ಲರಿಗೂ  ಅನಂತ ಮುಂಗಡ ಧನ್ಯವಾದಗಳು  :   ]

ಮಗುವದೊಂದು ಆಟಕೆಳಸಿ ಬುಗುರಿಯನ್ನು ಚಲಿಸಿತು
ನಿಗದಿಗೊಂಡ ಸಮಯವಿಲ್ಲ ಸೊಗೆದೆಳೆಯುತ ನಲಿಯಿತು |
ನೆಗೆದು ನೆಗೆದು ಹಾರಿ ಕುಣಿದು ಹಗುರಗೊಂಡ ಸೊಬಗಲೂ
ಮುಗುದಮನಕೆ ಬೇಡವಾಯ್ತು ಬುಗುರಿಯಾಟ ನಲಿವಲೂ !

ಯುಗದ ಧರ್ಮ ಬಗೆಯ ಕರ್ಮ ಬಂಧಗಳಲಿ ಸಿಲುಕುತ
ಹೆಗಲಮೇಲೆ ಭಾರಹೊತ್ತು ಮುಗಿಯದಂತೆ ನಡೆಯುತ |
ಚಿಗರೆಕಂಡ ಸೀತೆ ತೆರದಿ ಹಲವು ಪಡೆವ ಹಂಬಲ
ಚಿಗಿತ ವಿಷಯಲೋಲುಪತೆಯು ನಿಗಮ ದುಃಖಕೆ ಬೆಂಬಲ !  

ಸೊಗದ ಮಾಯದಾಟಗಾರ ದಾಳಗಳನು ಬೀಸುವ
ಮೊಗವ ತೋರ ಸನಿಹಬಾರ ರೂಪದಲ್ಲಿ ಇರನವ |
ಯುಗಯುಗದಲು ಬರುವೆನೆಂದ ಗೀತೆಯಲ್ಲಿ ಮಾಧವ
ನೊಗವನೆಳೆವ ನಮಗದೆಲ್ಲಿ ಎಂದು ಕಾಂಬೆ ಕೇಶವ ?

ಸಗರಪುತ್ರರಿಂಗೆ ನಾಕ ಕರುಣಿಸಲ್ಕೆ ದೇಶದಿ
ಮಿಗಿಲುಗೊಂಡು ತುಂಬಿಹರಿದಳ್ ದೇವಗಂಗೆ ಕೋಶದಿ |
ಒಗೆದು ಬೆಳಕ ಚೆಲ್ಲಿ ಜೀವಕೋಟಿಗಳನು ಸಲಹುವ
ಮುಗಿದು ಕಯ್ಯ ಕಟ್ಟಿದರಸ ಭಾನುಗೊಂದು ಭವನವ ||

ಜಗದ ದೇವ ಯುಗದ ದೈವ ಬಗೆವುದೆಲ್ಲ ತಿಳಿಯದು
ನಗದು ರೂಪ ಬಿಗಿಯ ಸಡಿಲಿಸುತ್ತಲೊಮ್ಮೆ ನಗುವುದು |
ಸಿಗುವುದಿಲ್ಲ ನಮ್ಮ ಕಣ್ಗೆ ನಮ್ಮೊಳಗವಿತಿದ್ದರೂ
ಸಿಗದ ಸೂತ್ರ ಹಿಡಿದು ಜಗವ ಕುಣಿಸಿ ನಡೆಸುತಿರುವುದು ||10 comments:

 1. ಭಟ್ಟರೇ, ಕವನ ಚೆನ್ನಾಗಿದೆ..

  ReplyDelete
 2. ಚಂದದ ಸಾಲುಗಳು ಸರ್

  ReplyDelete
 3. kavanada saalugalu odhisikondu hoguvudallade,
  mattomme odhabekennuva hambala huttisuttave.
  utthamavaadagite !!!!

  ReplyDelete
 4. ಸರ್ ತುಂಬಾ ಅರ್ಥಗರ್ಭಿತ ಮತ್ತು ಪ್ರಾಸಬದ್ಧ ಸಾಲುಗಳು ಹಾಡಲೂ ಬಳಸಲೂ ಬಹಳ ಅನುಕೂಲವೆನಿಸುತ್ತದೆ. ನಿಮ್ಮ ಪ್ರಾವೀಣ್ಯತೆಗೆ ನೀವೇ ಸಾಟಿ. ಧನ್ಯವಾದ

  ReplyDelete
  Replies
  1. ಶೇಖರ್, ಅಂತೂ ನಿಮಗೂ ಕವನದ ಗೀಳು ಅಂಟಿತು, ಧನ್ಯವಾದ

   Delete
 5. ಇಲ್ಲಿನ ತೀವ್ರತೆ ನಮಗೂ ಮುಟ್ಟುತ್ತದೆ ಭಟ್ಟ ಸರ್. ಇಲ್ಲಿದೆ ನೋಡಿ ನನ್ನ ಮನದಳಲಿನ ಒಕ್ಕಣೆ:

  "ಯುಗಯುಗದಲು ಬರುವೆನೆಂದ ಗೀತೆಯಲ್ಲಿ ಮಾಧವ
  ನೊಗವನೆಳೆವ ನಮಗದೆಲ್ಲಿ ಎಂದು ಕಾಂಬೆ ಕೇಶವ ?"

  ಅತ್ಯುತ್ತಮ ರಚನೆ ಸರ್.

  ReplyDelete
  Replies
  1. ಬದರಿಯವರೇ, ಶಿವನೊಲುಮೆ/ ಕೆಶವನೋಲುಮೆ ಅಷ್ಟು ಸುಲಭ ಸಾಧ್ಯವೇ? ಅದು ಜನ್ಮಾಂತರಗಳ ಪುಣ್ಯ ವಿಶೇಷದಿಂದ, ಲೌಕಿಕ ಮಿಥ್ಯಾ ನಿಗಮದ ಬಂಧ-ಬಂಧನಗಳು ಕಡಿದಾಗ ಮಾತ್ರ ಲಭ್ಯವಾಗುವಂಥದ್ದು, ಧನ್ಯವಾದಗಳು

   Delete