|| ಶ್ರೀಚಕ್ರಪ್ರಿಯ-ಬಿಂದು-ತರ್ಪಣಪರಾಂ ಶ್ರೀ ರಾಜರಾಜೇಶ್ವರೀಮ್ ||
ಕಲ್ಯಾಣಾಯುತ-ಪೂರ್ಣಚಂದ್ರವದನಾಂ ಪ್ರಾಣೇಶ್ವರಾನಂದಿನೀಮ್
ಪೂರ್ಣಾಪೂರ್ಣತರಾಂ ಪರೇಶಮಹಿಷೀಂ ಪೂರ್ಣಾಮೃತಾಸ್ವಾದಿನೀಮ್ |
ಸಂಪೂರ್ಣಾಂ ಪರಮೋತ್ತಮಾಮೃತಕಲಾಂ ವಿದ್ಯಾವತೀಂ ಭಾರತೀಮ್
ಶ್ರೀಚಕ್ರಪ್ರಿಯ-ಬಿಂದು-ತರ್ಪಣಪರಾಂ ಶ್ರೀ ರಾಜರಾಜೇಶ್ವರೀಮ್ ||
ಶಕ್ತಿದೇವತೆಯ ಆರಾಧನೆಗೆ ಶರನ್ನವರಾತ್ರಿ ಪ್ರಶಸ್ತವಾಗಿದೆ; ಶರದೃತುವಿನಲ್ಲಿ ಬರುವುದರಿಂದ ಶರನ್ನವರಾತ್ರಿ ಎಂದು ಹೆಸರು. ಶಾರದೆಯ ಆರಾಧನೆಯೂ ಇರುವುದರಿಂದ ಶಾರದಾ ನವರಾತ್ರಿ ಎಂತಲೂ ಕರೆಯುತ್ತಾರೆ. ಶಾರದೆ ಬ್ರಹ್ಮ ಮಾನಸ ಪುತ್ರಿ; ಆದರೆ ಬ್ರಹ್ಮನ ಮಡದಿ ಕೂಡ ಹೌದು. ಸೃಷ್ಟಿಕರ್ತನೇ ಅವನಾದಮೇಲೆ ಎಲ್ಲರ ಸೃಷ್ಟಿಗೆ ಅವನೇ ಕಾರಣನಲ್ಲವೇ? ಹೀಗಾಗಿ ಆತ ಶಾರದೆಯ ಸೃಷ್ಟಿಕರ್ತನೂ ಹೌದು ಅತ್ತು ಆಕೆಯ ಪತಿಯೂ ಹೌದು.
ಹರಿಯ ಉರವನು ಮೆಟ್ಟಿ ಹರನ ಶಿರವನು ತುಳಿದು
ಸರಸಿಜೋದ್ಭವನ ಮೊಗಗೆಡಿಸಿ ಮೀರಿದಳು
ಹಿರಿಯರಿನ್ನಾರು | ಸರ್ವಜ್ಞ
ಎಂದ ಸರ್ವಜ್ಞ ವಚನದಲ್ಲಿ ಆತ ಹೇಳಿದ್ದು ಮೂರು ರೂಪದಲ್ಲಿ ಕಾಣಿಸಿದ ಸ್ತ್ರೀಯನ್ನು. ಗಂಗೆಯಾಗಿ ಶಿವನ ಜಟೆಯಲ್ಲಿ ನೆಲೆಸಿದರೆ, ಸಿರಿಯಾಗಿ ಹರಿಯ ಹೃದಯದಲ್ಲೇ ನಿಂತಳು, ವಾಣಿಯಾಗಿ-ಜನ್ಮಕೊಟ್ಟ ವಿರಂಚಿಯನ್ನೇ ಮದುವೆಯಾದಳು ಎಂಬುದು ಅರ್ಥ. ಅಪ್ಪನನ್ನೇ ಮಗಳು[ಮಾನಸ ಪುತ್ರಿಯಾದರೂ ಸಹಿತ] ಮದುವೆಯಾಗಿದ್ದರಿಂದ ಬ್ರಹ್ಮದೇವರು ಕೆಲವುಕಾಲ ತಬ್ಬಿಬ್ಬಾಗಿದ್ದೂ ಇದೆ ಎಂದು ಕೇಳಿದ್ದೇನೆ. ಹೀಗಾಗಿ ಸ್ತ್ರೀ ಅಂದರೇ ಶಕ್ತಿ ಎಂಬುದು ತಿಳಿದುಬರುತ್ತದೆ. ಈ ಕಾಲದಲ್ಲಿ ನಾವು ಅಬಲೆ ಗಿಬಲೆ ಎಂದೆಲ್ಲಾ ಕರೆದರೂ ಹೆಣ್ಣಿಗೆ ಇರುವ ದಾರ್ಢ್ಯತೆ ಗಂಡಿಗೆ ಇಲ್ಲವೆಂಬುದೂ ಕೆಲವೊಮ್ಮೆ ತಿಳಿದುಬರುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮರ್ಯಾದೆಯನ್ನೇ ಕೊಡಲಿಲ್ಲ ಎನ್ನುವ ಮಹಿಳೆಯರು ನಮ್ಮಲ್ಲಿನ ನವರಾತ್ರಿಗೆ ಆಗಮಿಸಬೇಕು! ನವರಾತ್ರಿಯಲ್ಲಿ ದಿನಕ್ಕೊಂದು ಶಕ್ತಿ ದೇವತೆಯಂತೇ ನವದುರ್ಗೆಯರ ಆರಾಧನೆ, ಅಷ್ಟಲಕ್ಷ್ಮಿಯರ ಆರಾಧನೆ ಜೊತೆಗೆ ಸರಸ್ವತಿಯ ಆರಾಧನೆ ಜೊತೆಜೊತೆಗೇ ನಡೆಯುತ್ತವೆ. ಸುಹಾಸಿನೀ ಪೂಜೆ ಮತ್ತು ಕುಮಾರಿಕಾ ಅಥವಾ ಕೌಮಾರೀ ಪೂಜೆ ನಮ್ಮ ಪ್ರತಿಯೊಂದೂ ವಿಶೇಷ ಪೂಜೆಗಳ ಒಂದು ಭಾಗ ಎಂಬುದನ್ನೂ ಇಲ್ಲಿ ಮರೆಯುವಂತಿಲ್ಲ. ಸದ್ಗೃಹಿಣಿಯೊಬ್ಬಳು ಮನೆಯಲ್ಲಿ ಶುಚಿರ್ಭೂತಳಾಗಿ ಅಡುಗೆ ತಯಾರಿಸಿ, ತಯಾರಿಸಿದ ಭಕ್ಷ್ಯ ಭೋಜ್ಯಗಳನ್ನು ದೇವಿಗೆ ನಿವೇದಿಸಿ, ಅಗ್ರದ[ಕುಡಿಬಾಳೆ]ಎಲೆಯಿಟ್ಟು ಅವುಗಳಲ್ಲಿ ಮುತ್ತೈದೆಯರಿಗೆ ಕುವರಿಯರಿಗೆ ಊಟನೀಡಿ, ಯಥಾನ್ ಶಕ್ತಿ ದಕ್ಷಿಣೆ, ಬಟ್ಟೆ, ಅರಿಶಿನ-ಕುಂಕುಮ-ಬಳೆ-ಹೂವು ಇವೇ ಮೊದಲಾದ ಮಂಗಲ ದ್ರವ್ಯಗಳನ್ನು ಕೊಟ್ಟು ಅವರಲ್ಲೇ ದೇವಿಯ ರೂಪವನ್ನು ಕಾಣುವುದು ನವರಾತ್ರಿಯುದ್ದಕ್ಕೂ ನಡೆಯುವ ವೈಶಿಷ್ಟ್ಯ! -ಇದು ಜಗತ್ತಿನ ಇನ್ನಾವುದೇ ಮತದಲ್ಲಿ ಕಾಣುವುದಿಲ್ಲ!!
ಹಾಗೆ ನೋಡಿದರೆ ಒಂದು ಸಂವತ್ಸರದಲ್ಲಿ ಒಟ್ಟೂ ಐದು ನವರಾತ್ರಿಗಳು ಬರುತ್ತವೆ: ೧. ವಸಂತ ನವರಾತ್ರಿ, ೨. ಗುಪ್ತ ನವರಾತ್ರಿ ಅಥವಾ ಶಾಕಂಬರಿ ನವರಾತ್ರಿ, ೩ ಶಾರದಾ ನವರಾತ್ರಿ ಅಥವಾ ಶರನ್ನವರಾತ್ರಿ, ೪. ಪೌಷ ನವರಾತ್ರಿ ಮತ್ತು ೫. ಮಾಘ ನವರಾತ್ರಿ. ಚಿಕ್ಕದಾಗಿ ವಿವರಣೆ ತಿಳಿಯೋಣ:
೧. ವಸಂತ ನವರಾತ್ರಿ: ಇದು ಮಾರ್ಚ್ ಏಪ್ರಿಲ್ ಸಮಯದಲ್ಲಿ ಘಟಿಸುತ್ತದೆ. ಚೈತ್ರಶುದ್ಧ ಪಾಡ್ಯದಿಂದ ನವಮಿಯವರೆಗೆ ನಡೆಯುವ ಈ ನವರಾತ್ರಿ ರಾಮನವಮಿಯನ್ನು ಒಳಗೊಂಡಿರುವುದರಿಂದ ರಾಮನವರಾತ್ರಿ ಎಂತಲೂ ಕರೆಯುತ್ತಾರೆ. ಈ ಕಾಲದಲ್ಲೂ ಕೂಡ ನವ ಶಕ್ತಿಗಳ ಆರಾಧನೆ ನಡೆಯುತ್ತದೆ.
೨. ಗುಪ್ತ ನವರಾತ್ರಿ ಅಥವಾ ಶಾಕಂಬರಿ ನವರಾತ್ರಿ: ಅಷಾಢ ಮಾಸದ ಶುಕ್ಲಪಕ್ಷದ ಪ್ರತಿಪದೆಯಿಂದ ನವಮಿಯವರೆಗೆ ದೇವಿಯರ ಆರಾಧನೆ, ವಿಶೇಷವಾಗಿ ಗಾಯತ್ರೀಮಾತೆಯ ಆರಾಧನೆ ಈ ಕಾಲಘಟ್ಟದ ನವರಾತ್ರಿಯದ್ದು.
೩. ಶಾರದಾ ನವರಾತ್ರಿ ಅಥವಾ ಶರನ್ನವರಾತ್ರಿ: ಮೇಲೆ ಹೇಳಿದಹಾಗೇ ಶರನ್ನವರಾತ್ರಿ ಅಥವಾ ಮಹಾನವರಾತ್ರಿ ಎಂತಲೂ ಕರೆಯಲ್ಪಟ್ಟಿದೆ. ದುಷ್ಟ ಶಕ್ತಿಗಳ ನಿಗ್ರಹ ಮತ್ತು ಶಿಷ್ಟರ ಪರಿಪಾಲನೆ ನಡೆದ ನೆನಪಿನಲ್ಲಿ ಈ ಆಚರಣೆ. ಪಾಂಡವರು ಬನ್ನಿ ಮರಕ್ಕೆ ಕಟ್ಟಿದ್ದ ತಮ್ಮ ಆಯುಧಗಳನ್ನು ಮರಳಿ ಪಡೆದ ಕಾಲ, ಶ್ರೀರಾಮ ರಾವಣನನ್ನು ವಧಿಸಿದ ಕಾಲ, ಕೌರವರನ್ನು ಕೊಂದು ಪಾಂಡವರು ಧರ್ಮಸಾಮ್ರಾಜ್ಯವನ್ನು ಸ್ಥಾಪಿಸಿದ ಕಾಲ ಇದಾಗಿತ್ತು ಎಂಬುದು ಪ್ರಾಗೈತಿಹಾಸದಿಂದ ತಿಳಿದುಬಂದ ವಿಷಯ. ಇಲ್ಲಿ ನವದಿನಗಳಲ್ಲಿ ಯಾವ ಯಾವ ದೇವಿಯರನ್ನು ಆರಾಧಿಸುತ್ತಾರೆ ಸ್ವಲ್ಪ ನೋಡೋಣ:
ಅ> ಪ್ರತಿಪದೆಯ ದಿನ : ಶೈಲಪುತ್ರಿ: ಜಗನ್ಮಾತೆ ಈ ದಿನ ಗಿರಿಜೆಯಾಗಿ ಪೂಜೆ ಸ್ವೀಕರಿಸುತ್ತಾಳೆ.ದುರ್ಗೆಯ ಮೊದಲನೇ ಮುಖ. ಅರ್ಧಚಂದ್ರನನ್ನು ಶಿರದಲ್ಲಿ ಧರಿಸಿ ನಂದಿವಾಹನೆಯಾಗಿ ಬಂದಿದ್ದಳಂತೆ ಜಗತ್ತಿಗೆ ಈ ದಿನ, ಆ ನೆನಪಿನಲ್ಲಿ ಹಾಗೇ ಪೂಜೆ.
ಬ>ಬಿದಿಗೆಯ ದಿನ: ಬ್ರಹ್ಮಚಾರಿಣಿರೂಪದಲ್ಲಿ ದೇವಿಗೆ ಪೂಜೆ. ದುರ್ಗೆಯ ಎರಡನೇ ಮುಖ, ಕೈಯಲ್ಲಿ ಗುಲಾಬಿ ಹೂಗಳನ್ನೂ ಕಮಂಡಲವನ್ನೂ ಧರಿಸಿದ್ದಳಂತೆ. ಅದೇ ರೀತಿಯಲ್ಲಿ ಧ್ಯಾನಿಸಿ ಪೂಜಿಸಲ್ಪಡುತ್ತಾಳೆ.
ಕ> ತದಿಗೆಯ ದಿನ: ಚಂದ್ರಘಂಟಾ ಎಂಬ ರೂಪದಲ್ಲಿ ದೇವಿಯನ್ನು ದರ್ಶಿಸುತ್ತೇವೆ. ಜಗದ್ಧಾತ್ರಿಯ ಮೂರನೇ ಮುಖ ಇದಾಗಿದೆ, ಬಹಳ ಕೋಪದಿಂದ ಹೊರಡುತ್ತಾ ಶಿರದಲ್ಲಿ ಅರ್ಧಚಂದ್ರನನ್ನು ಧರಿಸಿ ಹುಲಿಯಮೇಲೆ ಕುಳಿತು, ಚಂದ್ರಘಂಟಾ ಎಂದು ಕರೆಯಲ್ಪಟ್ಟಳಂತೆ-ಅದೇ ರೂಪದಲ್ಲಿ ಪೂಜೆ.
ಡ> ಚತುರ್ಥಿಯ ದಿನ : ಕೂಷ್ಮಾಂಡ ರೂಪಿಣಿಯಾಗಿ ಕಾಣುತ್ತಾಳೆ. ಎರಡು ಕೈಗಳಲ್ಲಿ ರಕ್ತತುಂಬಿದ ಎರಡು ಹೂಜೆಗಳನ್ನು ಹಿಡಿದು ಆರ್ಭಟಿಸುವ ಶಕ್ತಿ ಸೃಷ್ಟಿಯ ಸೃಷ್ಟಿ, ಸ್ಥಿತಿ. ಲಯ ಕರ್ತೆಯಾಗಿ, ಸೂರ್ಯಮಂಡಲವನ್ನು ತನ್ನ ಶಕ್ತಿಯಿಂದ ಸೃಜಿಸಿದಳೆಂಬ ಕಾರಣಕ್ಕಾಗಿ ಆಕೆಯನ್ನು ಅದೇ ರೂಪದಲ್ಲಿ ಆರಾಧಿಸಲಾಗುತ್ತದೆ.
ದ> ಪಂಚಮಿಯ ದಿನ: ಸ್ಕಂದಮಾತಾ ಅಂದರೆ ಕಾರ್ತಿಕೇಯನಿಗೆ ಜನ್ಮವಿತ್ತ ದೇವಿ ಸಿಂಹಾಸನದಮೇಲೆ ಕುಳಿತು ಕಮಲದ ಹೂಗಳನ್ನು ಧರಿಸಿದ್ದಳಂತೆ-ಅದೇ ರೂಪದಲ್ಲಿ ಈ ದಿನ ಪೂಜೆ.
ನ> ಷಷ್ಠಿಯ ದಿನ : ಕಾತ್ಯಾಯಣಿಯಾಗಿ ಅಲಂಕಾರಗೊಳ್ಳುತ್ತಾಳೆ.ಕಾತ್ಯ ಋಷಿಯ ಮಗಳಾಗಿ, ಚಂದ್ರಹಾಸವೆಂಬ ಆಯುಧವನ್ನು ಹಿಡಿದು ಸಿಂಹವಾಹನೆಯಾಗಿ ಕಡುಕೋಪದಲ್ಲಿ ವಿಜೃಂಭಿಸಿದ ಶಕ್ತಿ ಕಾತ್ಯಾಯಣಿ. ಈ ದಿನ ಆ ರೂಪದಲ್ಲಿ ಪೂಜೆ.
ಪ> ಸಪ್ತಮಿಯ ದಿನ : ಭಯಂಕರವಾಗಿ ಘರ್ಜಿಸುತ್ತಾ ಬೆಳಕೇ ಕಾಣಿಸದಂತೇ ಕತ್ತಲರೂಪವನ್ನೂ ಕತ್ತಲಲ್ಲೇ ಮಿರುಗುವ ಬಣ್ಣಬಣ್ಣದ ಆಭರಣಗಳನ್ನೂ ಧರಿಸಿದ ದೇವಿ ಕತ್ತೆಯನ್ನೇರಿ ಕಾಣಿಸಿಯೂ ಕಾಣಿಸದಂತಾಗಿ ದುಷ್ಟರನ್ನು ಮಟ್ಟಹಾಕುವ ಕಾಲರಾತ್ರಿಯಾಗಿ ಸಂಹರಿಸಿದ ದಿನವೆಂದು ತಿಳಿಯಲಾಗಿದೆ, ಕಾಲರಾತ್ರಿಯ ಆರಾಧನೆ.
ಫ> ಅಷ್ಟಮಿಯ ದಿನ : ಮಹಾಗೌರಿಯಾಗಿರುತ್ತಾಳೆ. ಷೋಡಶಿಯಾಗಿದ್ದ ಗಿರಿಜೆ ಮಹಾದೇವನ ಮಡದಿಯಾಗುತ್ತಾಳೆ-ಮಹಾದೇವಿ ಮಹಾಗೌರಿ ಎನಿಸುತ್ತಾಳೆ. ಗೌರನ ಅರ್ಧಾಂಗಿ ಶ್ರೀಗೌರಿಯ ಆರಾಧನೆ ಈ ದಿನ ನಡೆಯುತ್ತದೆ.
ಮ> ನವಮಿಯ ದಿನ : ಸಿದ್ಧಿದಾತ್ರಿ! ಸಿದ್ಧರು, ಯಕ್ಷರು, ಗಂಧರ್ವರು, ಕಿನ್ನರರು, ಕಿಂಪುರುಷರು, ಕೆಲವು ಅಸುರರು, ದೇವತೆಗಳು ಎಲ್ಲರೂ ತಮ್ಮ ತಮ್ಮ ಸಿದ್ಧಿಗಾಗಿ ಪ್ರಾರ್ಥಿಸಿದಾಗ ಸಿದ್ಧಿದಾತ್ರಿಯಾಗಿ ಸಿದ್ಧಿಯನ್ನು ಅನುಗ್ರಹಿಸುವವಳಾಗಿ ಕಾಣಿಸಿಕೊಂಡಳಂತೆ. ಅದಕ್ಕೇ ಈ ದಿನ ಸಿದ್ಧಿದಾತ್ರಿಯ ಆರಾಧನೆ ನಡೆಯುತ್ತದೆ. ದುರ್ಗೆಯನ್ನು ಆಹ್ವಾನಿಸಿ ವಾಹನ, ಯಂತ್ರೋಪಕರಣ, ಆಯುಧಗಳ ಪೂಜೆ ನಡೆಯುತ್ತದೆ.
ಇದಲ್ಲದೇ ಬ್ರಹ್ಮಾಣಿ, ವೈಷ್ಣವಿ, ಮಾಹೇಶ್ವರಿ, ಇಂದ್ರಾಣಿ, ಕೌಮಾರಿ, ವಾರಾಹಿ ಮತ್ತು ಚಾಮುಂಡಾ ಎಂಬ ಅಷ್ಟಮಾತೃಕೆಯರ ಆರಾಧನೆಯೂ ಸಹ ನಡೆಯುತ್ತದೆ. ಮೂಲಾ ನಕ್ಷತ್ರ ಆರಂಭವಾದ ದಿನ ವಿಗ್ರಹ ರೂಪದಲ್ಲೋ ಯಾ ಪುಸ್ತಕಗಳ ರೂಪದಲ್ಲೋ ಶಾರದೆಯನ್ನು ಸ್ಥಾಪಿಸಲಾಗುತ್ತದೆ. ಅಂದಿನಿಂದ ದಶಮಿಯ ವರೆಗೆ ನಾಲ್ಕು ದಿನಗಳ ಪರ್ಯಂತ ಸರಸ್ವತಿಗೆ ಪೂಜೆ ಸಲ್ಲುತ್ತದೆ. ಅಷ್ಟಮಿ ನವಮಿ ಮತ್ತು ದಶಮಿಗಳಂದು ಮಹಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತೀ ಪೂಜೆ ನಡೆಯುತ್ತದೆ.
ವಿಜಯದಶಮಿ ವಿಜಯದ ಸಂಕೇತವಂತೆ. ಪಾಂಡವರಿಗೆ ಗೆಲುವುತಂದ ದಿನ, ಶ್ರೀರಾಮನಿಗೆ ವಿಜಯ ದೊರೆತ ದಿನ ಇದೇ ಆಗಿದೆ ಎಂದು ಪ್ರಾಗೈತಿಹಾಸ ಹೇಳುತ್ತದೆ. ವಿಜಯ ದಶಮಿಯಂದು ಶಾರದೆಗೆ ವಿಶೇಷ ಪೂಜೆ ಮಧ್ಯಾಹ್ನದಲ್ಲಿ ಸಲ್ಲಿಸಲ್ಪಟ್ಟು, ಸ್ಥಾಪಿತ ಶಾರದೆಯನ್ನು ಷೋಡಶೋಪಚಾರ ಮಹಾಪೂಜೆಗಳಿಂದ ಆರಾಧಿಸಿದನಂತರ ಶಾರದಾ ವಿಸರ್ಜನೆ ನಡೆಯುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸದ ಆರಂಭದ ದಿನ ಇದಾಗಿದೆ. ಹಲವು ಜನ ಹೊಸ ಉದ್ಯಮಗಳನ್ನು ಇಂದೇ ಆರಂಭಿಸುತ್ತಾರೆ. ಕೆಲವರು ಅಂಗಡಿಮುಂಗಟ್ಟುಗಳಲ್ಲಿ ಪೂಜೆ ನಡೆಸುತ್ತಾರೆ. ಕರ್ನಾಟಕದಲ್ಲಿ ಮೈಸೂರಿನಲ್ಲಿ ಜಂಬೂ ಸವಾರಿ ನಡೆಯುತ್ತದೆ. ಶೃಂಗೇರಿ, ಕೊಲ್ಲೂರು ಮೊದಲಾದ ಜಾಗೃತ ದೇವಾಲಯಗಳಲ್ಲಿ ತ್ರಿಗುಣಸ್ವರೂಪೀ ದೇವಿಯ ಆರಾಧನೆ ನಡೆಸಲ್ಪಡುತ್ತದೆ. ಸಂಜೆ ಉತ್ತರಭಾರತದಲ್ಲಿ ರಾವಣದಹನ ಕಾರ್ಯಕ್ರಮ ನಡೆಸಲ್ಪಡುತ್ತದೆ.
ಈಗ ಮತ್ತೆ ಬಾಕಿ ಉಳಿದ ನವರಾತ್ರಿಗಳನ್ನು ತಿಳಿಯೋಣ:
೪. ಪೌಷ ನವರಾತ್ರಿ: ಡಿಸೆಂಬರ್-ಜನವರಿ ಸಂದರ್ಭದಲ್ಲಿ ಜರುಗುವ ನವರಾತ್ರಿ ಇದು. ಮತ್ತೆ ದೇವಿಯರ ಆರಾಧನೆ. ಪುಷ್ಯಮಾಸದ ಶುಕ್ಲ ಪ್ರತಿಪತ್ ನಿಂದ ನವಮಿಯವರೆಗೆ ಜರುಗುವ ಅಮ್ಮನವರ ಆರಾಧನೆ.
೫. ಮಾಘ ನವರಾತ್ರಿ : ಮಾಘ ಮಾಸದ ಶುಕ್ಲ ಪಾಡ್ಯದಿಂದ ನವಮಿಯವರೆಗೆ ಜರುಗುವ ಜಗದಂಬೆಯ ಆರಾಧನೆ. ಸಮಾನ್ಯಾಗಿ ಜನವರಿ ತಿಂಗಳ ಕೊನೆ ಅಥವಾ ಫೆಬ್ರವರಿ ತಿಂಗಳಲ್ಲಿ ಬರುತ್ತದೆ.
ಈಗ ಮತ್ತೆ ಬಾಕಿ ಉಳಿದ ನವರಾತ್ರಿಗಳನ್ನು ತಿಳಿಯೋಣ:
೪. ಪೌಷ ನವರಾತ್ರಿ: ಡಿಸೆಂಬರ್-ಜನವರಿ ಸಂದರ್ಭದಲ್ಲಿ ಜರುಗುವ ನವರಾತ್ರಿ ಇದು. ಮತ್ತೆ ದೇವಿಯರ ಆರಾಧನೆ. ಪುಷ್ಯಮಾಸದ ಶುಕ್ಲ ಪ್ರತಿಪತ್ ನಿಂದ ನವಮಿಯವರೆಗೆ ಜರುಗುವ ಅಮ್ಮನವರ ಆರಾಧನೆ.
೫. ಮಾಘ ನವರಾತ್ರಿ : ಮಾಘ ಮಾಸದ ಶುಕ್ಲ ಪಾಡ್ಯದಿಂದ ನವಮಿಯವರೆಗೆ ಜರುಗುವ ಜಗದಂಬೆಯ ಆರಾಧನೆ. ಸಮಾನ್ಯಾಗಿ ಜನವರಿ ತಿಂಗಳ ಕೊನೆ ಅಥವಾ ಫೆಬ್ರವರಿ ತಿಂಗಳಲ್ಲಿ ಬರುತ್ತದೆ.
[ಈ ಎಲ್ಲಾ ನವರಾತ್ರಿಗಳನ್ನೂ ಅಖಂಡ ಭರತವರ್ಷದ ರಾಜರುಗಳು ನಡೆಸುತ್ತಿದ್ದರು. ದೇವರನ್ನು ಅಮ್ಮನ ರೂಪದಲ್ಲಿ ಕಂಡರೆ ಸ್ವಂತ ಅಮ್ಮನನ್ನು ಕಂದಷ್ಟೇ ತೃಪ್ತಿ-ತಮ್ಮ ನೋವು-ನಲಿವುಗಳನ್ನು ಹಡೆದಮ್ಮನಲ್ಲಿ ಹೇಳಿಕೊಂಡ ಹಾಗೇ ಜಗದಮ್ಮನಲ್ಲಿ ಹೇಳಿಕೊಳ್ಳುತ್ತಿದ್ದರು. ಕಾಲಾನಂತರ ಅಧುನಿಕ ಜೀವನದ ಭರದಲ್ಲಿ, ರಾಜರುಗಳ ಆಳ್ವಿಕೆ ಅಳಿದಮೇಲೆ ಈಗ ಶಾರದಾ ನವರಾತ್ರಿ ಮಾತ್ರ ಪ್ರಮುಖವಾಗಿ ಆಚರಣೆಯಲ್ಲಿದೆ. ಉತ್ತರಭಾರತದಲ್ಲಿ ಬಹಳ ಕಡೆ ವಸಂತ ನವರಾತ್ರಿಯನ್ನೂ ಆಚರಿಸುತ್ತಾರೆ. ]
ಇಂತೀಪರಿಯಲ್ಲಿ ನವರಾತ್ರಿಯ ಮಹತ್ವವನ್ನು ಸ್ಥೂಲವಾಗಿ ತಿಳಿದಿದ್ದೀರಿ. ಮಧು-ಕೈಟಭರನ್ನೂ, ಶುಂಭ-ನಿಶುಂಭರನ್ನೂ, ಸುಂದೋಪಸುಂದರನ್ನೂ ದೇವಿ ಹನನ ಮಾಡುತ್ತಾಳೆ. ಮೂಕಾಸುರನನ್ನೂ ಮಹಿಷಾಸುರನನ್ನೂ ದೇವಿ ಕೊಲ್ಲುತ್ತಾಳೆ. ತ್ರಿಮೂರ್ತಿಗಳ ಮಡದಿಯರಾಗಿ ಕಾಣುವ ದೇವಿ, ದೇವಿ ಮಹಾತ್ಮೆಯಲ್ಲಿ ತಾನೇ ಎಲ್ಲದಕ್ಕೂ ಆಧಾರ ಎಂಬುದನ್ನು ಎತ್ತಿ ತಿಳಿಸಿದ್ದಾಳೆ. ಅಪ್ಪ ಇದ್ದಮೇಲೆ ಅಮ್ಮ ಇರಲೇಬೇಕಲ್ಲಾ? ಇಲ್ಲದಿದ್ದರೆ ಅಪ್ಪನನ್ನು ಅಪ್ಪನೆನ್ನಲು ಸಾಧ್ಯವೇ? ಋಷಿಗಳ ಕಾಲದಲ್ಲಿ ಅದು ಸಾಧ್ಯವಾಗಿರಬಹುದಾದರೂ ಮೂಲದಲ್ಲಿ ಋಷಿಗಳಿಗೂ ಒಬ್ಬ ಅಮ್ಮ ಇರಲೇಬೇಕಲ್ಲಾ? ಅಪ್ಪ-ಅಮ್ಮ ಎರಡೂ ಒಂದೇ ಶಕ್ತಿಯ ಎರಡು ಮುಖಗಳಾದರೂ ಎರಡೂ ಮುಖಗಳನ್ನು ತಿಳಿದುಕೊಳ್ಳಬೇಕಾದುದು, ಒಪ್ಪಿಕೊಳ್ಳಬೇಕಾದುದು, ಆರಾಧಿಸಬೇಕಾದುದು ನಮ್ಮ ಧರ್ಮ. ನಾಣ್ಯಕ್ಕೆ ಹೇಗೆ ಎರಡು ಮುಖವೋ, ಸಂಸಾರಕ್ಕೆ ಹೇಗೆ ಗಂಡ-ಹೆಂಡಿರೋ ಹಾಗೇ ಪ್ರಕೃತಿ-ಪುರುಷರ ಪರೋಕ್ಷ ಆರಾಧನೆಯಲ್ಲಿ ನವರಾತ್ರಿ ಪ್ರಕೃತಿ ಆರಾಧನೆ ಅರ್ಥಾತ್ ಸ್ತ್ರೀ ರೂಪದ ಆರಾಧನೆಗೆ ಮೀಸಲಾಗಿದೆ.
ಸರ್ವರಿಗೂ ಶರನ್ನವರಾತ್ರಿಯ ಹಾರ್ದಿಕ ಶುಭಾಶಯಗಳು. ದೇವಿ ಸಕಲ ಸಮೃದ್ಧಿಯನ್ನೂ ಇತ್ತು ಪೊರೆಯಲಿ ಎಂದು ಹಾರೈಸುತ್ತೇನೆ. ಜಗವನ್ನು ಹೊತ್ತು, ಜಗವನ್ನು ಹೆತ್ತು, ಹೆತ್ತಜಗವನ್ನೇ ಮತ್ತೆ ಹೊತ್ತು ಮುನ್ನಡೆಸುವ, ಆ ನಡೆಯಲ್ಲೇ ಆನಂದವನ್ನು ಅನುಭವಿಸುವ ಅದಿಪರಾಶಕ್ತಿಗೆ ನಮ್ಮ ನಮನಗಳನ್ನು ಹೀಗೆ ಹೇಳೋಣ:
ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ|
ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೆ ||
ತುಂಬಾ ವಿಚಾರಯುಕ್ತ ಲೇಖನ ಭಟ್ ಸಾರ್, ಚೆನ್ನಾಗಿದೆ. ನಿಮಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು..
ReplyDeleteಶ್ಯಾಮಲ