ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, September 19, 2012

"ನೀ ಹೋದ ಹಾದಿಯಲಿ ಗಂಧ ತೇಯುವರಿಲ್ಲ; ದೇವರಿಗೆ ದೀಪ ಮೊದಲಿಲ್ಲ ಸಿರಿಗೌರೀ-ನೀ ಹೋಗಿ ಅಲ್ಲಿ ಫಲವಿಲ್ಲ"


ಚಿತ್ರಋಣ: ಅಂತರ್ಜಾಲ
"ನೀ ಹೋದ ಹಾದಿಯಲಿ ಗಂಧ ತೇಯುವರಿಲ್ಲ; ದೇವರಿಗೆ ದೀಪ ಮೊದಲಿಲ್ಲ ಸಿರಿಗೌರೀ-ನೀ ಹೋಗಿ ಅಲ್ಲಿ ಫಲವಿಲ್ಲ"

ಪ್ರಾಕೃತಿಕ ವೈಭವದ ಹಿಮಾದ್ರಿ ಗಿರಿಶಿಖರಗಳು. ಅಲ್ಲಿ ಜನಿಸಿದವಳು ಗಿರಿ-ಜಾ; ಪರಶಿವನನ್ನು ಒಲಿಸಿ ಶಿವೆಯಾದಳು. ಶಿವೆಗೆ ಸತತವೂ ಕೈಲಾಸದಲ್ಲಿ ಕೆಲಸ. ಜಗತ್ತಿಗೆ ಪಿತನಾದ ಶಿವನ ಅರ್ಧಾಂಗಿಯಾದಮೇಲೆ ಕೇಳಬೇಕೇ? ಒಂದೇ ಒಂದು ದಿನದಲ್ಲಿ ಕೆಲಭಾಗವೂ ತನಗೇ ಎಂದುಕೊಳ್ಳುವಷ್ಟೂ ತೆರಪಿಲ್ಲ! ಬಿಡುವಿಲ್ಲದ ಕೆಲಸಗಳ ನಡುವೆ ಹೆಣ್ಣು ಪಾರ್ವತಿಯ ಮನಸ್ಸು ತನ್ನಪ್ಪನ ಮನೆಯಲ್ಲಿ ನಡೆಯುವ ಅದ್ಧೂರೀ ಹಬ್ಬದ ಕಡೆಗೆ ಹೊರಳುತ್ತದೆ. ಭಾದ್ರಪದ ಶುದ್ಧ ಚೌತಿಯಂದು ಅಪ್ಪನಮನೆಯಲ್ಲಿ ಸಡಗರವೋ ಸಡಗರ! ಎಲ್ಲೆಲ್ಲೂ ಬಾಳೆ-ಮಾವಿನ ತೋರಣ, ರಂಗವಲ್ಲಿ, ದೂರ್ವೆ-ಹೂವುಗಳ ಮಾಲೆ, ನೂರಾರು ವಿಧದ ಭಕ್ಷ್ಯಗಳ ಸಿದ್ಧತೆ, ವೇದಮಂತ್ರಗಳ ಘೋಷ, ಇಂಪಾದ ವಾದ್ಯಗಳು, ಅದ್ಭುತ ಸಂಗೀತ-ನರ್ತನ-ಗಾಯನ ವಗೈರೆ, ಗಣನಾಮ ಸಂಕೀರ್ತನೆ..........ಹೀಗೇ ಅದು ಹೇಳಿ ಮುಗಿಯುವ ಪರಿಯಲ್ಲ. ಗಿರಿರಾಜ ಆಚರಿಸುವ ಅಂತಹ ಅದ್ಭುತ ಹಬ್ಬದ ಒಂದು ದಿನಕ್ಕಾಗಿ ದಿನಮುಂದಾಗಿ ಗೌರೀತದಿಗೆಯ ದಿನ ಭೂಮಿಗೆ ಹೋಗಿ ಮಾರನೇದಿನ ಮರಳುತ್ತೇನೆ ಎಂಬುದು ಶಿವನಲ್ಲಿ ಶಿವೆಯ ಬಿನ್ನಹ. ಶಂಕರನೋ ಶಂಕರಿಯನ್ನು ಬಿಟ್ಟಿರಲಾರ; ಅವನಿಗೆ ನಿಂತರೆ-ಕೂತರೆ-ನಡೆದರೆ ಎಲ್ಲೆಲ್ಲೆಯೂ ಶಕ್ತಿ ಬೇಕೇ ಬೇಕು. ಶಕ್ತಿ ಇಲ್ಲದಿದ್ದರೆ ಕೆಲಸವಾಗುವುದಾದರೂ ಎಂತು? ಅಲ್ಲವೇ? ಸ್ವತಃ ಶಕ್ತನಾದರೂ ಶಕ್ತಿಯ ಅವಲಂಬನೆ ಬಹಳವಾಗೇ ಇದೆ. ಹೀಗಾಗಿ ಎಷ್ಟೇ ವಿಜೃಂಭಣೆ ಇದ್ದರೂ ಗೌರಿಯನ್ನು ತವರಿಗೆ ಕಳಿಸಲು ಒಲ್ಲೆ ಎನ್ನುತ್ತಾನೆ ಗೌರ!

ನೀ ಹೋದ ಹಾದಿಯಲಿ ಗಂಧ ತೇಯುವರಿಲ್ಲ;
ದೇವರಿಗೆ ದೀಪ ಮೊದಲಿಲ್ಲ ಸಿರಿಗೌರೀ
ನೀ ಹೋಗಿ ಅಲ್ಲಿ ಫಲವಿಲ್ಲ

"ಏನು ಹೇಳುತ್ತಿದ್ದೀಯಾ ಪ್ರಿಯೆ ಗೌರೀ ? ನೀನು ತವರಿಗೆ ಹೋದರೆ ಇಲ್ಲಿ ನನಗೆ ಪೂಜೆಗೆ ಅಣಿಮಾಡಿಕೊಡುವವರಾರು? ದೇವರಿಗೆ ದೀಪ ಮುಡಿಸುವವರಾರು? ಗಂಧ ತೇಯ್ವವರಾರು? ನಿನ್ನ ತವರಿನಲ್ಲಿ ಅದೆಷ್ಟೇ ಸಡಗರವಿದ್ದರೂ ನೀನು ಹೀಗೆ ಮನೆಯನ್ನು ದಿನಗಟ್ಟಲೇ ತೊರೆದು ಹಾಗೆ ಅಲ್ಲಿಗೆ ಹೋಗಲು ನನ್ನ ಮನಸ್ಸು ಒಪ್ಪದಲ್ಲಾ, ನೀನಲ್ಲಿಗೆ ಹೋಗಿ ಪ್ರಯೋಜನವಿಲ್ಲಾ, ನೀನಿಲ್ಲೇ ಇರು " ಎಂಬುದು ಪರಮೇಶ್ವರನ ಹಠ. ಹೇಗಾದರೂ ಮಾಡಿ ತನನ್ನು ಎರಡುದಿನದ ಮಟ್ಟಿಗೆ ಅನುಮತಿಸಬೇಕೆಂಬುದು ಪರಮೇಶ್ವರಿಯ ಅಪೇಕ್ಷೆ.  ವಾದ-ಪ್ರತಿವಾದಗಳ ಕುರಿತ ೧೫ ನಿಮಿಷಗಳ ಊದ್ದದ ಹಾಡನ್ನು ಅಜ್ಜಿ ರಾಗವಾಗಿ ಹಾಡುವಾಗ ನಾವೆಲ್ಲಾ ಮಕ್ಕಳು ಕೇಳುತ್ತಿದ್ದೆವು; ಜಗನ್ಮಾತೆಯ ತವರಿನ ಪ್ರೀತಿಗೆ ಮತ್ತು ಜಗತಃಪಿತನ ಕಳಿಸಿಕೊಡಲಾಗದ, ಬಿಟ್ಟಿರಲಾಗದ ಅನಿವಾರ್ಯತೆಯ ಕಥೆಗೆ ಮುಗ್ಧರಾದ ನಮ್ಮಗಳ ಮನಸ್ಸಿನಲ್ಲಿ ನಮ್ಮ ತಾಯಿ-ತಂದೆಯರೇ ಈ ರೀತಿ ವಾದಮಾಡಿಕೊಳ್ಳುತ್ತಿದ್ದಾರೋ ಎಂಬ ಅನಿಸಿಕೆ. ಇಡೀ ಆ ವಾತಾವರಣ ಭಾವನಾಮಯ; ಅದು ಗೌರೀತದಿಗೆ! ಭುವಿಗೆ ಸ್ವರ್ಣಗೌರಿಯನ್ನು ಕರೆದು ಪೂಜಿಸುವ ದಿನ! ಪರಮೇಶ್ವರನಿಗೂ ದೇವರ ಪೂಜಾ ಕೈಂಕರ್ಯವಿದೆಯೇ? ಎಂದರೆ ಪರಬ್ರಹ್ಮನೊಬ್ಬನನ್ನುಳಿದು ಮಿಕ್ಕೆಲ್ಲಾ ದೇವರಿಗೂ ಅಂತಹ ಕಾರ್ಯಗಳಿವೆ; ತ್ರಿಮೂರ್ತಿಗಳೂ ಪರಬ್ರಹ್ಮನ ಆರಾಧಕರು ಮತ್ತು ಸ್ವಯಂ ಪರಬ್ರಹ್ಮನಷ್ಟೇ ಶಕ್ತರೂ ಕೂಡ; ಇದು ಪರಾತ್ಪರತೆ. 

ಮೇಲೆ ಹೇಳಿದ ಇಂತಹ ಹಾಡುಗಳು ಇವತ್ತಿಗೆ ಲಭ್ಯವಿಲ್ಲ; ಅಜ್ಜಿಯಂದಿರೊಂದಿಗೇ ಕಾಲವಾಗಿಹೋದ ಹಾಡುಗಳು, ಕಥೆಗಳು ಅವೆಷ್ಟೋ! ಅಂತಹ ದಿವ್ಯ-ಭವ್ಯ ಸಂಸ್ಕಾರದಾಯೀ ತಾಯಿಯರಿಗೆ ನನ್ನ ನಮನಗಳನ್ನು ಸಲ್ಲಿಸುವುದರೊಂದಿಗೆ ಸ್ವರ್ಣ ಗೌರಿಗೂ ನನ್ನ ನಮಸ್ಕಾರಗಳು. ಹುಂಡುಗುತ್ತಿಗೆ ಹಿಡಿದವರಂತೇ ಏನು ಭಟ್ಟರು ಇಂಥದ್ದನ್ನೇ ಬರೆದು ಓದಲು ಕರೆಯುತ್ತಾರಲ್ಲಾ ಎಂಬ ಮನಸ್ಥಿತಿ ಬೇಡ; ಯಾಕೆಂದರೆ ಇಂಥದ್ದನ್ನು ಹೇಳಲೂ ನಮ್ಮಂತಹ ಕೆಲವುಜನ ಬೇಕು. ಭಾದ್ರಪದ ಶುದ್ಧ ತದಿಗೆ-ಚೌತಿಯ ಸಮಯದಲ್ಲಿ, ಹೊಲ-ಗದ್ದೆ-ತೋಟ-ಗುಡ್ಡ-ಬೆಟ್ಟ ಎಲ್ಲೆಲ್ಲೂ ಹಸಿಸ್ರು ತುಂಬಿದ ವಾತಾವರಣ ನಮ್ಮ ಕರಾವಳಿಯಲ್ಲಿ. ಸೊಂಪಾಗಿ ಬೆಳೆದ ಭತ್ತದ ಗದ್ದೆಗಳ ನಡುವೆ ದೂರದಲ್ಲಿ, ಗದ್ದೆ ಹಾಳಿ[ಗದ್ದೆ ಮಧ್ಯೆ ನಡೆಯಲು ಬಿಟ್ಟುಕೊಂಡಿರುವ ಕಿರಿದಾದ ಬದುವು]ಗಳ ಮೇಲೆ, ಅಡಕೆ ತೋಟದ ಅಂಚುಗಳಲ್ಲಿ ಹಾದುಬರುವ ಚಿಕ್ಕಹಾದಿಯಲ್ಲಿ, ಗುಡ್ಡ-ಬೆಟ್ಟಗಳ ಇಳಿಜಾರಿನಲ್ಲಿ ಕಾಣುವ ಕಾಲುದಾರಿಯಲ್ಲಿ ಎಲ್ಲೋ ಗೌರೀ-ಗಣೇಶರು ನಡೆದುಬಂದಂತೇ ಭಾಸ! ಮಯ್ಯೆಲ್ಲ ರೋಮಾಂಚನ!! ಅದೇ ಜಾಗಗಳಲ್ಲಿ ಹುಟ್ಟಿಕೊಳ್ಳುವ ದೂರ್ವೆಗಳನ್ನು ಸಂಗ್ರಹಿಸಲು ನಾವು ಮಕ್ಕಳು ಸಾಗಿರುತ್ತಿದ್ದೆವು. ಗೌರಮ್ಮನ ಹೂವು, ಚಂಡು[ಗೊಂಡೆ] ಹೂವು, ಡೇರೇ ಹೂವು, ಅಮೇಲೆ ಕೋಟೆ ಹೂವು[ಹಳದೀ ಬಣ್ಣದ ತುಸು ದೊಡ್ಡ ಹೂವು], ಕರವೀರ ಹೂವು, ಜಾಜಿ-ಮಲ್ಲಿಗೆ-ಇರುವಂತಿಗೆ-ಸೇವಂತಿಗೆ ಒಂದೆರಡೇ? ಎಲ್ಲವೂ ಈ ಹಬ್ಬಕ್ಕೆ ಅಣಿಯಾಗಬೇಕು.

ಜೊತೆಗೆ ದೇವರಮುಂದೆ ಅಂಗೋಡಂಗ [ಸಿಗುವ ಎಲ್ಲಾ] ಫಲಗಳಿಂದ ಫಲಾವಳಿ ಕಟ್ಟುತ್ತಿದ್ದರು ಹಿರಿಯರು; ಅಲ್ಲಿ ನಾವು ಕರಸೇವಕರು! ತೆಂಗಿನಕಾಯಿಂದ ಆರಂಭ; ಎಷ್ಟೆಂದರೂ ಅದು ಶ್ರೀಫಲ ಅಲ್ಲವೇ?  ಹೀರೆಕಾಯಿ, ಹಾಗಲಕಾಯಿ, ಗೆಣಸಿನ ಗೆಡ್ಡೆ, ಪಡುವಲಕಾಯಿ, ಮಾದಲಕಾಯಿ, ಬೆಂಡೆ, ಬದನೆ, ಚಪ್ಪರ ಬದನೆ[ಸೀಮೇ ಸೌತೆ], ಸೌತೇಕಾಯಿ, ಮಂಗಳೂರು ಸೌತೇಕಾಯಿ[ಮೊಗೇಕಾಯಿ], ದಾಳಿಂಬೆ, ಹಲಸು[ಅಪರೂಪಕ್ಕ ಸಿಕ್ಕರೆ], ಪಟ್ಟಣದಿಂದ ತಂದ ಮೂಸಂಬಿ, ಸೇಬು, ಜಾಯಿಕಾಯಿ, ಕಬ್ಬು, ವೀಳೆಯದೆಲೆ-ಹಣ್ಣಡಕೆ, ಅಡಕೆ ಶಿಂಗಾರ, ಮಾವಿನ ಎಲೆ, ಹಲವು ವಿಧದ ಸೋಡಿಗೆಗಳು, ಎಲೆಕೋಸು, ಬೇರು ಹಲಸು, ಕೆಸು[ಕೆಸವೆ],

" ತಮ್ಮಾ ಮತ್ತೆಂಥಾ ಬಿಟ್ಟೆ ನೋಡು "

ಎಂಬ ಮಾತಿಗೇ ಪ್ರಜ್ಞೆ ಬಂದಂತಾಗುತ್ತಿತ್ತು, ಇಲ್ಲದಿದ್ದರೆ ನಮ್ಮ ಲೋಕವೇ ಬೇರೆ! ನಮ್ಮಲೋಕದಲ್ಲಿ ಅಮ್ಮ-ಮಗ ನಡೆದು ಬರುತ್ತಿರುವ ಚಿತ್ರವೇ ಸದಾ! ನಮ್ಮಂತಹ ಒಬ್ಬ ಬಾಲಕ ಅಮ್ಮನ ಸೇವೆಮಾಡುತ್ತಾ, ಅಪ್ಪನ ಸವಾರಿ ಮನೆಗೆ ಬಂದಾಗ ಬಾಗಿಲು ಬಿಡದೇ ಹತನಾದಾಗ ನಮ್ಮ ಕಣ್ಣಲ್ಲೂ ಧಾರಾಕಾರ ನೀರು!  ಸತ್ತ ಬಾಲಕನಿಗೆ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿದ್ದ ಗಜೇಂದ್ರನೆಂಬ ಆನೆಯ ತಲೆ! ಅಲ್ಲಿ ಮತ್ತೆ ಜೀವ-ಆತ ಗಣಗಳಿಗೇ ದೈವ! ಪುಟ್ಟನ ಸಾಹಸಗಾಥೆಯನ್ನು ನೋಡಬಂದವರು ಆತನನ್ನು ಸೋಲಿಸಲಾಗದೇ ಅಪ್ಪನನ್ನು ಕಳಿಸಿ ಹಿಂಭಾಗದಿಂದ ತ್ರಿಶೂಲದಿಂದ ತಿವಿದು ವಧಿಸಿದ್ದ ಆ ಬಾಲಕ ಮತ್ತೆ ಕುಳಿತ! ದೇವಾನುದೇವತೆಗಳಿಂದ ತಲಾ ಒಂದೊಂದು ಉಡುಗೊರೆ; ದಿವ್ಯಾಸ್ತ್ರಗಳ-ದಿವ್ಯ ಶಕ್ತಿಗಳ ನೀಡುವಿಕೆ. ಇಂಥಾ ಬಾಲಕ ಅಮ್ಮನೊಟ್ಟಿಗೆ ಸಾದಾ ಸೀದಾ ನಡೆದುಬರುವ ಚಿತ್ರಣ ನಮ್ಮ ಮನಗಳಲ್ಲಿ. ಆತ್ಮಲಿಂಗವನ್ನು ಧರೆಗಿಳಿಸಿಕೊಟ್ಟು ತಲೆಯಮೇಲೆ ರಾವಣನಿಂದ ಗುದ್ದು ತಿಂದಿದ್ದನಂತೆ! ವ್ಯಾಸರ ಎದುರಲ್ಲಿ ಕೂತು ಗೀರ್ವಾಣ ಲಿಪಿಯಲ್ಲಿ ಮಹಾಭಾರತವನ್ನು ಬರೆದು ಅದು ಪಂಚಮವೇದವಾಗಲಿ ಎಂದು ಹರಸಿದ್ದನಂತೆ! ಪುಟಾಣಿಯಾಗಿದ್ದ ಶ್ರೀಕೃಷ್ಣನನ್ನು ತನ್ನ ತೊಡೆಯಮೇಲೆ ಕೂರಿಸಿಕೊಂಡು ಉಂಡೆ-ಚಕ್ಕುಲಿ-ಮೋದಕ ಇತ್ತನಂತೆ!ಭಕ್ತರ ಮನೆಯಲ್ಲಿ ಹೊಟ್ಟೆಬಿರಿ ಉಂಡು, ಮೂಷಿಕವೇರಿ ಹೊರಟು ಗದ್ದೆ ಹಾಳಿಯಮೇಲೆ ಸಾಗುವಾಗ ಮೂಷಿಕಕ್ಕೆ ಕಾಲುಜಾರಿ ಈ ಗಣಪ ಬಿದ್ದನಂತೆ-ಮೇಲಿನಿಂದ ನೋಡಿದ ಚಂದ್ರ ನಕ್ಕನಂತೆ-ಹೊಟ್ಟೆರಿಪೇರಿಗೆ ಹಾವುಸಿಕ್ಕಿತಂತೆ-ಎಡದಾಡೆ ಹಲ್ಲನ್ನು ಮುರಿದು ಬೀಸಿದಾಗ ಚಂದ್ರ ತತ್ತರಿಸಿಹೋದನಂತೆ! "ಭಾದ್ರಪದ ಶುಕ್ಲ ಚತುರ್ಥಿಯ ದಿನ ನಿನ್ನನ್ನು ಯಾರೋ ನೋಡದೇ ಹೋಗಲಿ-ನೋಡಿದವರಿಗೆ ಕಳಂಕ ತಟ್ಟುವಂತಾಗಲಿ" ಎಂದು ಶಪಿಸಿಬಿಟ್ಟನಂತೆ! ---ನೋಡಿ ಇಲ್ಲೇ ನಾವು ಸ್ವಲ್ಪ ವೀಕು! ಚೌತಿಯ ದಿನ ಜಾಗಟೆ ಹಿಡಿದು ಮೂರ್ತಿ ತರುವುದಕ್ಕೆ ಹೋಗಲೂ ಅನುಮಾನ-ಎಲ್ಲಾದರೂ ಅಪ್ಪಿತಪ್ಪಿ ಚಂದ್ರ ಕಂಡುಬಿಟ್ಟರೆ ನಮ್ಮ ಗತಿಯೇನು-ನಮ್ಮ ಕಥೆಯೇನು!    

ಹಿರಿಯರು ಹೇಳಿಬಿಟ್ಟಿದ್ದರು "ನೋಡ್ರೋ ಪೋರಗಳಾ ಚೌತೀದಿನ  ಚಂದ್ರನನ್ನು ನೋಡಬಾರದು. ನೋಡದ್ರೆ ಕಳ್ಳ-ಸುಳ್ಳ-ಮಳ್ಳ ಎಂಬೆಲ್ಲಾ ಅಪವಾದ ಬರ್ತದೆ." ಸಾದಾ ದಿನ ಆ ಬಗ್ಗೆ ಎಂದೂ ತಲೆಕೆಡಿಸಿಕೊಂಡವರಲ್ಲವೇ ಅಲ್ಲ. ಚಂದ್ರ "ನೋಡು" "ನೋಡು" ಎಂದು ಎದುರಾ ಎದುರೇ ಬಂದರೂ "ಓ  ಅದೇನ್ ಮಹಾ ಯಾವಾಗ್ಲೂ ನೋಡಿದ್ದೇ ಬಿಡು" ಅಂದ್ಕೊಂಡು ಸಾಗಿದವರು ನಾವು, ಆದರೆ ಮಹಾಚೌತಿಯ ದಿನಮಾತ್ರ ನಮಗೆ ಹೊರಗೆ ಹೋಗಲಿಕ್ಕೇ ಭಯ! "ಹಗಲುಹೊತ್ತಿನಲ್ಲೇ ಮೋಡದ ಮರೆಯಲ್ಲಿ ಎಲ್ಲೋ ಇದ್ದುಬಿಡುತ್ತಾನೆ, ಹೇಳೋದಕ್ಕೆ ಬರೋದಿಲ್ಲ" ಎಂದಿದ್ದರು. ಆತ ಎಲ್ಲಿದ್ದಾನೆ ಎಂಬ ಬಗ್ಗೆ ತಿಳಿದಿಲ್ಲ; ಯಾರೂ ಹೇಳುವವರಿಲ್ಲ ಯಾಕೆಂದರೆ ಯಾರೂ ನೋಡಿರುವುದಿಲ್ಲ. "ನೋಡ್ರೋ ನೋಡೇ ಬಿಡ್ತೇನೆ ಅಂತ ಸುಬ್ರಾಯ ನೋಡ್ದ; ಮಾರನೇ ವರ್ಷವೇ ಜನ ಅವ್ನಿಗೆ ’ಕಳ್ಳ’ ಅಂದ್ರು. ಅಂವ ಕಳ್ಳಾ ಏನಲ್ಲ ಪಾಪ ಕದ್ದವರು ಬೇರೇ ಯಾರೋ ಆದ್ರೂ ಅತನ ಕಥೆ ಏನಾಯ್ತು ನೋಡಿ" ಸುಬ್ರಾಯ ಕಳ್ಳನೆನಿಸಿದ ಕಥೆಕೇಳಿದ್ದ ನಮಗೆ ಜಂಘಾಬಲವೆಲ್ಲಾ ಉಡುಗಿ ಹೋಗಿತ್ತು; ಮಾರ್ಯಾದೆ ಪ್ರಶ್ನೆ ಮಾರಾರ್ಯೆ! ಹೀಗಾಗಿ ಚೌತಿ ದಿನ ಏನು ಚೌತಿ ಕಳೆದು ಮಾರನೇ ದಿನವೂ ನಾವು ಆಕಾಶದ ಕಡೆಗೆ ಮುಖ ಎತ್ತಿದವರಲ್ಲ, "ತಡೀರಿ ಪಾಸಾಗಿ ಹೋಗ್ಬುಡ್ಲಿ" ಅಂದ್ಕೊಂಡು ಇನ್ನೊಂದಿನ ತಡವಾಗಿಯೇ ನೋಡೋಣ ಏನಾಯ್ತೀಗ ಅಂತ ಸುಮ್ಮನಾದ ಜನ. ಅಕಸ್ಮಾತ್ ಚಂದ್ರ ಕಂಡುಬಿಟ್ಟರೆ ಪರಿಹಾರ ಇತ್ತೆಂಬುದನ್ನು ಯಾರೂ ಹೇಳಿರಲೇ ಇಲ್ಲ; ಯಾಕೆಂದರೆ  ನಮ್ಮ ಇವತ್ತಿನ ಮಕ್ಕಳ ಹಾಗಲ್ಲ-ಆವತ್ತೆಲ್ಲಾ ಹಿರಿಯರು ಹೇಳಿದ್ದಕ್ಕೆ ವಿರುದ್ಧವಾಗಿ ಹೋಗದ ಮಕ್ಳು ನಾವು. ನಂತರ ಒಮ್ಮೆ ಯಕ್ಷಗಾನದಲ್ಲೇ ಗೊತ್ತಾಗಿದ್ದು "ಸ್ಯಮಂತಕೋಪಾಖ್ಯಾನ ಅರ್ಥಾತ್ ಜಾಂಬವತಿ ಪರಿಣಯ" ನೋಡಿದಾಗ! ಇವತ್ತಾದರೆ "ಓ ಪರವಾಗಿಲ್ಲ ಬಿಡಿ...ಸುಂದರಿ ಸತ್ಯಭಾಮೆ ಕೃಷ್ಣನ ಮಡದಿಯಾದಳಲ್ಲಾ....ನಮಗೂ ಸತ್ಯಭಾಮೆ ಸಿಗಬಹುದು ನೋಡೋಣ" ಎಂಬ ವಿತಂಡಿಗಳೂ ಇರಬಹುದು! ಫಕ್ಕನೆ ನೀವು ಯಾರಾದ್ರೂ ನೋಡಿದ್ರೆ ಇರಲಿ ಅಂತ ಒಂದು ಶ್ಲೋಕ ಹೇಳಿಕೊಡ್ತೇನೆ ಕೇಳಿ[ಪ್ರಯೋಗಶೀಲರಾಗಬೇಡಿ, ಇದು ಅನಿವಾರ್ಯವಾಗಿ ಕಂಡಿದಕ್ಕೆ ಮಾತ್ರ ಎಮರ್ಜೆನ್ಸಿ ಮಾತ್ರೆ ಅಷ್ಟೇ.]:

ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾ ರೊಧೀಃ ತವ ಹ್ಯೇಶಃ ಸ್ಯಮಂತಕಃ ||

ಮಹಾಚೌತಿಯ ಮರುದಿನ ಋಷಿಪಂಚಮಿ. ಇಲಿ ಪಂಚಮಿ ಎಂದೂ ನಮ್ಮಲ್ಲಿ ಕರೆಯುತ್ತಾರೆ. ಇವತ್ತಿನ ಮಹಾನಗರಿಗರ ಮನೆಗಳಲ್ಲಿ ನಡೆಸಿದಂತೇ ನಮ್ಮಲ್ಲಿ ಗಣಪನಿಗೆ ಒಂದೇ ಪೂಜೆಯಲ್ಲ. ಬಣ್ಣದ ಗಣಪನನ್ನು ಇಡುವ ಮಂದಿ ೨,೩,೫,೭,೯,೧೦ ಹೀಗೇ ಶಕ್ತ್ಯಾನುಸಾರ ಹಾಗೇ ಇರಿಸಿಕೊಂಡು ನಿತ್ಯವೂ ಮಧ್ಯಾಹ್ನ, ಸಾಯಂಕಾಲ ಪೂಜೆ ನಡೆಸುತ್ತಾರೆ. ಕೆಲವೊಮ್ಮೆ ಅನಿವಾರ್ಯತೆಗಳಲ್ಲಿ ಮಹಾಚೌತಿಯ ಮಾಧ್ಯಾಹ್ನದ ಒಂದೇ ಪೂಜೆ ಸಲ್ಲಿಸಿ ವಿಸರ್ಜನೆ ಮಾಡುವುದಿದೆ; ಕೆಲವರಲ್ಲಿ ಮಾತ್ರ ಇದೇ ಸಂಪ್ರದಾಯವೂ ಇದೆ. ಹಿಂದೆಲ್ಲಾ ಗಣಪತಿ ಹಬ್ಬವನ್ನು ಆಚರಿಸುವುದರ ಜೊತೆಗೆ ಲೋಭಿಗಳಿಗೆ ಗಣಪತಿ  ಹಬ್ಬ ಆಚರಿಸಲು ಕಲಿಸುವ ಜಾದೂ ನಡೆಯುತ್ತಿತ್ತು! ಕಾಸನ್ನೇ ಬಿಚ್ಚದ ’ಜುಗ್ಗ’ ಎನಿಸಿಕೊಂಡವರ ಮನೆಯ ಅಂಗಳದಲ್ಲಿರುವ ತುಳಸಿ ಕಟ್ಟೆಯ ಮುಂದೆ, ಚೌತಿಯ ದಿನ ಬೆಣಚುಬಿಡುವುದಕ್ಕೂ ಮುನ್ನ ಗಣಪತಿ ವಿಗ್ರಹ, ಪೂಜೆ ಸಾಮಾನು ಇತ್ಯಾದಿಯಾಗಿ ತಂದಿಟ್ಟು ಊದಬತ್ತಿ ಹಚ್ಚಿ ಹೋಗಿಬಿಡುತ್ತಿದ್ದರು! ಯಾರೆಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ! ನಮ್ಮಕಡೆ ಒಂದು ಶಾಸ್ತ್ರವಿದೆ-ಗಣಪತಿ ವಿಗ್ರಹ ಮನೆಗೆ ಒಮ್ಮೆ ತಂದಮೇಲೆ ಮತ್ತೆ ಪ್ರತೀವರ್ಷ ತಂದು ಪೂಜೆ ಮಾಡಬೇಕು ಎಂದು. ಕಂಡಿದ್ದಕ್ಕೆ ಅನಿವಾರ್ಯವಾಗಿ ಮನೆಯೊಳಗೆ ತರದೇ, ತುಳಸಿಯ ಮುಂದೆಯೇ ಒಂದೇ ಪೂಜೆ ಸಲ್ಲಿಸಿ, [ಪರಸ್ಪರ ಸಾಗಹಾಕುವ ರೀತಿ] ವಿಸರ್ಜಿಸುವ ಲೋಭಿಗಳೂ ಇದ್ದರು!        

ನಮ್ಮಲ್ಲಿ ಆಗೆಲ್ಲಾ ಕಾಡುಗಳು ಹೇರಳವಾಗಿದ್ದವು. ನಮ್ಮ ತಂದೆಯ ಎಳವೆಯಲ್ಲಂತೂ ಕೊಟ್ಟಿಗೆಗೇ ಹುಲಿ ಬರುತ್ತಿತ್ತು! ದನಕರುಗಳನ್ನು ಕಾಯಲು ಪ್ರತ್ಯೇಕ ಜನ ಇರುವ ಕಾಲ ಅದಾಗಿತ್ತು. ನಮ್ಮ ಬಾಲ್ಯದಲ್ಲೂ ನಮ್ಮಲ್ಲಿ ಕೊಟ್ಟಿಗೆಗೆ ಹಸಿರು ಸೊಪ್ಪು ಹರಡುವ ಪದ್ಧತಿ ಇತ್ತು. ದನಗಳು ಪ್ರತಿನಿತ್ಯ ಗೋಮಾಳಕ್ಕೆ ತೆರಳಿದಮೇಲೆ, ಕೊಟ್ಟಿಗೆಯ ಸಗಣಿಯನ್ನೆಲ್ಲಾ ತೆಗೆದು, ಹೊಸದಾಗಿ ತಂದಿದ್ದ ಹಸಿರು ಸೊಪ್ಪು,[ಮಳೆಗಾಲದಲ್ಲಿ], ತಿಳಿಹಳದಿ ಕರಡ[ಗುಡ್ಡದಲ್ಲಿ ಮಳೆಗಾಲದಲ್ಲಿ ಬೆಳೆಯುವ ಒಂದು ಜಾತಿಯ ಹುಲ್ಲು-ಚಳಿಗಾಲದಲ್ಲಿ], ದರಕು [ಒಣಗಿ ಉದುರಿದ ಎಲೆಗಳು-ಬೇಸಿಗೆಯಲ್ಲಿ] ಹೀಗೇ ಹರಡುವ/ಹಾಸುವ ಪದ್ಧತಿ ಇತ್ತು. ಚೌತಿ ಮಳೆಗಾಲದಲ್ಲೇ ಬರುವುದರಿಂದ ಆ ಸಮಯದಲ್ಲಿ ನಿತ್ಯ ಕೊಟ್ಟಿಗೆಗೆ ಹಸಿರು ಸೊಪ್ಪು ಹಾಸುತ್ತಿದ್ದರು. ಆದರೆ ಋಷಿಪಂಚಮಿಯ ದಿನಮಾತ್ರ ಹೊಸದಾಗಿ ಹಸಿರು ಸೊಪ್ಪನ್ನು ಕೊಯ್ದು ತರುತ್ತಿರಲಿಲ್ಲ. ಋಷಿಗಳು ತಪಸ್ಸು ಮಾಡುವುದು ಸಾಮಾನ್ಯವಾಗಿ ಕಾಡುಗಳಲ್ಲಿ. ಕಾಡಿನ ಸಸ್ಯಗಳ, ಪೊದೆಗಳ ನಡುವೆ ಯಾವ ಋಷಿ ಅದೆಲ್ಲಿ ತಪಸ್ಸಿಗೆ ಕೂತಿರುತ್ತಾನೋ ಗೊತ್ತಿಲ್ಲವಲ್ಲಾ? ಅಂತಹ ಮಹನೀಯರಿಗೆ ಗೌರವಾರ್ಪಣೆ ಸಲ್ಲಿಸುವ ಸಲುವಾಗಿ ವರ್ಷದಲ್ಲಿ ಈ ಒಂದುದಿನ ಭೂಮಿಯಲ್ಲಿ [ನಮ್ಮಲ್ಲಿ] ಗಿಡ-ಮರಗಳನ್ನು ಕಡಿಯುವ/ಕತ್ತರಿಸುವ ಕೆಲಸವನ್ನು ಮಾಡುತ್ತಿರಲಿಲ್ಲ. ಋಷಿಪಂಚಮಿಯಂದು ಗಣಪತಿಯ ಉತ್ಸವಕ್ಕೇ ಪ್ರಾಮುಖ್ಯತೆ ನೀಡಲಾಗುತ್ತದೆ. ಪರಸ್ಪರರ ಮನೆಗಳಲ್ಲಿ ಕೂರಿಸಿರುವ ಗಣೇಶನನ್ನೂ ಅವನಿಗಾಗಿ ಅಲಂಕರಿಸಿರುವ ಮಂಟಪಗಳನ್ನೂ ನೋಡುವುದೇ ಕಣ್ಣಿಗೆ ಹಬ್ಬ! ಕಮಲೇ ಕಮಲೋತ್ಫತ್ತಿಃ ಅಂದಹಾಗೇ ಹಬ್ಬದೊಳಗೇ ಹಬ್ಬ ಹುಟ್ಟುವುದು ಹೀಗೆ! ಬೆನಕನ ಉತ್ಸವದಲ್ಲಿ ಕಡೇಪಕ್ಷ ೫ ವಿಗ್ರಹಗಳನ್ನಾದರೂ ನೋಡಬೇಕೆಂಬುದು ಒಂದು ಶಾಸ್ತ್ರ! ಗಣಪ ಎಲ್ಲದರಲ್ಲೂ ತನ್ನದೇ ಆದ ವೈಶಿಷ್ಟ್ಯವನ್ನು ಕಾಪಾಡಿಕೊಂಡ ದೇವರು-ಇಲ್ಲೂ ಹಾಗೇನೆ. ಆತ ಉತ್ಸವ ಪ್ರಿಯನೂ ಹೌದು.

ಶ್ರೀ ಕಲ್ಯಾಣ ಗುಣಾವಹಂ ರಿಪುಹರಂ ದುಸ್ಸ್ವಪ್ನ ದೋಷಾಪಹಂ
ಗಂಗಾಸ್ನಾನ ವಿಶೇಷ ಪುಣ್ಯಫಲದಂ ಗೋದಾನತುಲ್ಯಂ ನೃಣಾಂ |
ಆಯುರ್ವಧನಮುತ್ತಮಂ ಶುಭಕರಂ ಸಂತಾನ ಸಂಪತ್ಪ್ರದಂ
ನಾನಾಕರ್ಮ ಸುಸಾಧನಂ ಸಮುಚಿತಂ ಪಂಚಾಗ ಮಾಕರ್ಣ್ಯತಾಂ ||

ಗಣೇಶ ಹಬ್ಬದ ಪ್ರಯುಕ್ತ ಭಟ್ಟರಿಂದ ಕಥಾಶ್ರವಣ ಮಾಡಿದಿರಿ, ಕಥಾಕಾಲಕ್ಷೇಪವನ್ನು ಮಾಡಿದಿರಿ. ಹಿಂದೂ ಪಂಚಾಂಗದ ಪ್ರಕಾರ  ಜೀವನ ಗತಿಯಲ್ಲಿ, ಪ್ರತೀ ಹೆಜ್ಜೆಯಲ್ಲೂ ಪಂಚಾಂಗ ಶ್ರವಣದ ಅವಶ್ಯಕತೆ ಕಾಣುತ್ತದೆ. ಇಂದಿನ ವಿಜ್ಞಾನಕ್ಕೂ ನಮ್ಮ ಪಂಚಾಂಗಕ್ಕೂ ಸಾಮ್ಯತೆ ಬಹಳವಿದೆ; ವಿಜ್ಞಾನ ಇನ್ನೂ ಅರಿಯದ್ದನ್ನು ವೇದಗಳ ಆಧಾರದಮೇಲೆ ಪಂಚಾಂಗ ಶ್ರುತಪಡಿಸುತ್ತದೆ. ಪಂಚಾಂಗವನ್ನೇ ಬಳಸದೇ ಅದರ ಮೌಲ್ಯವನ್ನೇ ಅರಿಯದೇ ಬರಿದೇ ಜರಿಯುವ ಜನರೂ ಇದ್ದಾರೆ. ಪಂಚಾಂಗದಲ್ಲಿ ಹೇಳುವ ಮುಹೂರ್ತಗಳು ಆ ಯಾ ಕಾಲಕ್ಕೆ ಈ ಭೂಮಿಯಲ್ಲಿ ಘಟಿಸುವ ಕಾಸ್ಮಿಕ್ ರೇ  ಅಥವಾ ಗ್ರಹಗಳಿಂದ ಹೊರಸೂಸಲ್ಪಡುವ ಪ್ರಭಾವಲಯದ ಬಗ್ಗೆ ಹೇಳುತ್ತವೆ. ಉತ್ತಮ ಪ್ರಭಾವಲಯವಿದ್ದಾಗ ನಡೆಸುವ ಕಾರ್ಯ ಮಂಗಳಕರವಾಗುತ್ತದೆ, ನೆಗೆಟಿವ್ ಎನರ್ಜಿ ಇರುವ ಹೊತ್ತಿನಲ್ಲಿ ನಡೆಸುವ ಕಾರ್ಯ ವಿಘ್ನವನ್ನು ಅನುಭವಿಸುತ್ತದೆ; ಮಾನಸಿಕ ಕ್ಲೇಶಗಳಿಗೆ ಕಾರಣವಾಗುತ್ತದೆ. ಹಿಂದಿನ ಯಾವ ಕ್ರಮವೂ ಸುಳ್ಳಲ್ಲ; ಧಾವಂತದ ಜೀವನದಲ್ಲಿ ನಮಗೆ ಅದು ಗೊತ್ತಾಗುತ್ತಿಲ್ಲ!  ಕುಳಿತು ವಿವೇಚಿಸಿದರೆ, ಯೋಚಿಸಿದರೆ, ಚಿಂತನ-ಮಂಥನ ನಡೆಸಿದರೆ ಪಂಚಾಂಗದ-ಸನಾತನ ಸುವ್ಯವಸ್ಥೆಯ ಪ್ರಜ್ಞೆ ಒಡಮೂಡೀತು. ಮತ್ತೆ ಹೀಗೇ ನಿಮಗೆ ಪೌರೋಹಿತ್ಯನೀಡುವ ಪೊರೋಹಿತನಾಗಿ ಬರುತ್ತಿರುತ್ತೇನೆ, ಪರಬ್ರಹ್ಮ ಮಹಾಗಣಪತಿ ನಿಮ್ಮೆಲ್ಲರಿಗೂ ಸುಖ-ಶಾಂತಿ-ಸಮೃದ್ಧಿಯನ್ನು ಕರುಣಿಸಲಿ, ಧನ್ಯವಾದಗಳು.


5 comments:

  1. ಸಕಾಲಿಕ ಬರಹ, ಚೆನ್ನಾಗಿದೆ.

    ReplyDelete
  2. ವ " ಗಣೇಶನೂ " ಸತ್ಯವೇ ಮಿಥ್ಯವೇ, ಉತ್ತರಿಸಿ ?
    "ಗಣೇಶ" ಗಣಗಳಿಗೆಲ್ಲಾ ಈಶ ಗಣೇಶ. ಈತನಿಗೆ ದೇವರಿಗೆಲ್ಲಾ ದೇವ ಮೊದಲ ಪೂಜೆ. ಇದರ ಕಾರಣ ಬಲು ಸೊಜಿಗ, ಅಶ್ಚರ್ಯ, ವಿಸ್ಮಯ ಅಙ್ಞಾನ. ಈತನ ಹುಟ್ಟು ತಾಯಿ ಪಾರ್ವತಿಯ ಕೊಳೆಯಿಂದ ಮಗುವನ್ನಾಗಿ ಮಾಡಿ ಅದಕ್ಕೆ ಜೀವವು ಕೊಟ್ಟು ಮಗು. ತಾಯಿ ಕೊಳೆಯಿಂದ ನಾರುತಿರುವುದರಿಂದ ಸ್ನಾನಕ್ಕಾಗಿ ಸ್ನಾನ ಮಾಡಲು ಕಾವಲಿಗೆ ಯಾರೂ....? ಇಲ್ಲದ ಕಾರಣ, ಅಂದಿಗೂ ಕಾವಲು ಬೇಕಿದ್ದ ಕಾರಣ ಮಗನನ್ನೇ ಕಾವಲಿಗೆ ನಿಲ್ಲಿಸಿ ಸ್ನಾನಕ್ಕೆ ಹೋದಳು. ಸ್ನಾನಕ್ಕೆ ಹೋಗಿ ಕೆಲಕಾಲದಲ್ಲೇ ಆ ತನ್ನ ಸೃಷ್ಟಿಸಿದ ತಾಯಿಯ ಗಂಡ ಪರಮೇಶ್ವರನು ಬರಲಾಗಿ ತಂದೆಯೆಂದು ಅರಿಯದ.......ದ, ಆ ಮಗ ತಡೆದಿರಲಾಗಿ ತಾನು ಆಕೆಯ ಗಂಡನೆಂದರು ಒಪ್ಪದಿರಲು ಅಷ್ಟಕ್ಕೆ ಕೋಪನೆತ್ತಿಗೇರಿ ಕೊಂದನು. ಅದ ಅರಿತ ಆ ತಾಯಿಯು, ಮಗನೇ ಎಂದು ತನ್ನ ಮಗನ ಮುಂದೆ ಪಾರ್ವತಿ ತಾಯಿಯು ಬಂದು ಮೊದಲ ಮಗುವನ್ನೇ ಕೊಂದೆಯಲ್ಲ ಎಂದು ಅಳುತ್ತಲೇ, ಚೀರಾಡೆ ಗೋಗರಿಯೇ ಕೋಪಗೊಳ್ಳೆ ನನಗೆ ನನ್ನ ಮಗನೂ ಬೇಕೆಬೇಕೆಂದು ಹಟ ಹಿಡಿಯೇ ನೊಂದ ಈಶನೂ ದಿಕ್ಕುದೆಶೇ ಕಾಣದೆ ಉಳಿಸಿಕೊಳ್ಳಲಾಗದೇ "ದೇವರಾದರೂ" .......? ಅದೇ ತಲೆಯನ್ನು...........ಮತ್ತೇ....? ಸೇರಿಸಲಾಗದೇ ದೇವರ ದೇವನೆಂಬ ಮಹಾದೇವ ತತ್ತರಿಸಿರಲು ಚಿಂತಾಕ್ರಾತನಾಗಿ ಹೊಳೆಯಿತು ಒಂದು ದಾರಿಯದು ದಕ್ಷಿಣದಿಕ್ಕಿನಲ್ಲಿ ಮಲಗಿರುವ ಯಾವುದಾದರೂ ತಲೆಯನ್ನು ತನ್ನಿ ಈತನನ್ನು ಬದುಕಿಸಬಹುದೆಂದ ಸರ್ವೇಶ ಅದರಂತೆ ಯಾವುದು ಮನುಷ್ಯನ ತಲೆ ದೊರೆಯದೇ ತಂದರು ಒಂದು ಆನೆಯ ತಲೆಯನ್ನು ತಂದರು . ಆತನೂ ವಿಧಿಯಿಲ್ಲದೇ ಜೋಡಿಸಿದ ಜೀವವು ಬಂತು.
    ದೇವತೆಗಳೇ ಕೊಂಕಿ ಕೊಂಕಿ ನಗಲು ಹತ್ತಿದರು. ಎಲ್ಲರೂ ಬೃಹುದಾಕಾರದ ತಲೆಯ ಮತ್ತು ಆ ನಡೆಯ ಕಂಡು ಹೀಯಾಳಿಸ ತೊಡಗಿದರು, ಅದನ್ನು ಕಂಡು ನೊಂದ ತಾಯಿಪಾರ್ವತಿ ನನ್ನ ಮಗನಿಗೇ ಬೆಲೆಯಿಲ್ಲ. ಎಲ್ಲರೂ ನಗುವಂತಾಗಿದೆ ಹೀಯಾಳಿಸುವಂತಾಗಿದೆ ಇದಕ್ಕೆ ಏನಾದರೂ ಪರ್ಯಾಯ ವ್ಯೆವಸ್ಥೆ ಮಾಡಿ ಎಂದು ಮತ್ತೆ ಗೋಗರೆದಳು. ಈಶನೂ ಬಲವಾಗಿ ಯೋಚಿಸಿ ಎಲ್ಲರೂ ಮೆಚ್ಚುವಂತೆ ಮಾಡಬೇಕಾದರೆ ಈತನನ್ನೇ ಎಲ್ಲರೂ ಗೌರವಿಸುವಂತೆ ಮಾಡಿದರೆ ಎಲ್ಲರು ಗೌರವಿಸುತ್ತಾರೆಂದು ಭಾವಿಸಿ, ಈತನಿಗೆ ಮೊದಲ ಪೂಜೆ ಮಾಡಬೇಕೆಂದು ಕಾನೂನು ಮಾಡಿಟ್ಟನು. ಅದರಂತೆ ಇಂದಿಗೂ ನಡೆದು ಬರುತ್ತಿದೆ.
    ಒಬ್ಬ ದೇವರ ದೇವರಿಗೆ ಮನುಷ್ಯನ ಬದುಕಿಸಲು ಶಕ್ತಿಯಿಲ್ಲವೆಂದಮೇಲೆ ನಮಗೂ ಆತನಿಗೂ ವ್ಯೆತ್ಯಾಸವೇನು ಅರಿಯದಾಗಿದೆ .
    ಈಗ ನಮ್ಮ ಭಾರತದ ಇತಿಹಾಸಕ್ಕೆ ಬರೋಣ. ಗಣೇಶನ್ನು ಬೊಂಬೆಯನ್ನು ಇದನ್ನು ಮೊಟ್ಟ ಮೊದಲಿಗೆ ದಕ್ಷಿಣ ದೇಶಕ್ಕೆ ಬಂದದ್ದು ಹೇಗೆಂದರೇ, ವಾತಾಪಿಯ ಯುದ್ಧದಲ್ಲಿ ದಕ್ಷಿಣದ ರಾಜ ಈ ಯುದ್ಧದಲ್ಲಿ ನಾನು ಗೆದ್ದರೇ, ನಿನ್ನನ್ನು ಕೊಂಡು ದಕ್ಷಿಣ ಭಾರತದಲ್ಲಿ ಪ್ರತಿಷ್ಟಾನೆ ಮಾಡುತ್ತೇನೆ. ಎಂದು ಬೇಡುಕೊಳ್ಳುತ್ತಾನೆ. ತನ್ನ ಸ್ವಂತ ಸಾಮರ್ಥ್ಯದಿಂದ ಗೆದ್ದನೆಂದರಿಯದೇ ತಾನು ಬೇಡಿದಂತೇ ಅದರಂತೆ ದಕ್ಷಿಣ ದೇಶಕ್ಕೆ ತಂದು ಗಣೇಶನ ದೇವಾಲಯ ಪೂಜೆ ಕೈಗೊಳ್ಳುತ್ತಾನೆ. ಅದರನಂತರದಲ್ಲಿ ದಕ್ಷಿಣದಲ್ಲಿ ಗಣೇಶನ ಗುಡಿಗಳು ಪ್ರಚಲಿತಕ್ಕೆ ಬಂದಿತೆಂದು ಹೇಳಿದ್ದಾರೆ. ಅದರ ಹಿಂದೆ ದಕ್ಷಿಣ ಭಾರತೀಯರಿಗೆ ಪರಿಚಯವಿರಲಿಲ್ಲವೆಂಬುದು ಸತ್ಯ.
    ಸ್ವಾತಂತ್ರ ಹೋರಾಟದಲ್ಲಿ ಗಣೇಶನು ಮುಖ್ಯ ಪಾತ್ರವಹಿಸುತ್ತದೆ. ಹೇಗೆಂದರೇ, ಇಲ್ಲಿ ಹಿಂದೂಗಳನ್ನು ಒಟ್ಟಿಗೆ ಸೇರಿಸಲು ಬ್ರೀಟಿಷರ ವಿರುದ್ಧ ಜನರನ್ನು ಎತ್ತಿಕಟ್ಟಲು ಒಂದು ಅವಕಾಶಗಳು ಬೇಕಿರುತ್ತದೆ. ಆಗ ಅದಕ್ಕೆ ಬಾಲ ಗಂಗಾಧರತಿಲಕರು ಈ ಗಣೇಶೋತ್ಸವಗಳನ್ನು ಮಾಡಿಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಲು ಜನರನ್ನು ಒಂದೇಡೆ ಸೇರಿಸಲು ಈ ಗಣೇಶನನ್ನು ಉಪಯೋಗಿಸಿಕೊಳ್ಳುತ್ತಾರೆ. ಕಾರಣ, ವೈಷ್ಣವರು, ಶೈವರೂ, ಜೈನರು ಸಹ ಹೀಗೆ ಹಲವು ಹಿಂದೂಗಳು ನಂಬುವ ಏಕೈಕ ದೇವರು ಎನ್ನುವ ಕಾರಣಕ್ಕೆ, ಇಂದಿಗೂ ಈ ಮಾತು ಸತ್ಯವಾಗಿರುತ್ತದೆ. ಆದಕಾರಣವೇ ಎಲ್ಲಿನೋಡಿದರೂ ಬಲಮುರಿ, ಎಡಮುರೀ ಗಣೇಶನ ದೇವಾಲಗಳನ್ನು ನೋಡಬಹುದು.

    ReplyDelete
  3. ಹಿಂದಿನ ಭಾಗವಿಲ್ಲಿ ಮುಂದುವರಿದಿದೆ.

    ಸತ್ಯ ವಿಷಯವೇನೆಂದರೇ,
    ೧. ಒಂದು ಆನೆಯ ತಲೆಯನ್ನು ಮನುಷ್ಯನಿಗೆ ಜೋಡಿಸಲಾಗದು ಕಾರಣ ಅದರ ಕತ್ತಿನ ವಿಸ್ತೀರ್ಣವೇ ಬೇರೆ ಮನುಷ್ಯನ ಕತ್ತಿನ ವಿಸ್ತೀರ್ಣವೇ ಬೇರೆ.
    ೨. ಆನೆಯ ಆಹಾರ ಪದ್ಧತಿಯೇ ಬೇರೆ ಮನುಷ್ಯನ ಆಹಾರ ಪದ್ಧತಿಯೇ ಬೇರೆ.
    ೩. ಮನುಷ್ಯನ ತಲೆ ೧.೫ ಕೆ ಜಿ ಯಿಂದ ೨.೫ ಕೆಜಿ ಮಾತ್ರ, ಆನೆಯತಲೆ ೧೦೦ ಕೆ ಜಿ. ಒಬ್ಬ ಸಾಮಾನ್ಯ ಅಥವಾ ಬಲಶಾಲಿ ಮನುಷ್ಯನಿಂದ ಹೊರಲು ಸಾಧ್ಯವಿಲ್ಲ. ಹೊತ್ತರು ಸೊಂಡಲಿನ ಬಾರಕ್ಕೆ ನೆಲಕ್ಕೆ ಮಲಗಿ ಅಥವಾ ಬಾಗಿಬಿಡುತ್ತಾನೆ.
    ೪. ಆನೆಯ ಸಸ್ಯ ಆಹಾರ ಪದ್ಧತಿಯಂತೆ ಬಾಯಿ ಹಲ್ಲು ಸೊಂಡಿಲ ವಿಶೇಷವಾಗಿ ಮಾಡಲ್ಪಟ್ಟಿರುತ್ತದೆ. ಅದಕ್ಕೆ ತಕ್ಕಂತೆ ಹೊಟ್ಟೆಯು ಬಹು ದೊಡ್ಡದು.
    ೫. ಒಂದು ಆನೆಗೆ ದಿನಕ್ಕೆ ಸರಾಸರಿ ೨೫೦ ಕೆ ಜಿ ಆಹಾರಬೇಕು. ಆನೆಯ ಜೀರ್ಣಾಂಗವೇ ಬೇರೆ ಮನುಷ್ಯನ ಜೀರ್ಣಾಂಗವೇ ಬೇರೆ. ತಲೆಗೆ ತಕ್ಕಂತೆ ಆಹಾರವಾ ಶರೀರಕ್ಕೆ ತಕ್ಕ ಆಹಾರವಾ ಆರಿಯದಾಗಿದೆ.
    ೬. ಒಂದು ಬಾರಿಗೆ ಆನೆ ಸುಮಾರು ೨೦೦ ಲೀಟರು ನೀರು ಕುಡಿಯುತ್ತದೆ.
    ೭. ಆನೆಯ ತಲೆಯಲ್ಲಿ ಕೇಳಿದ್ದು ಅರ್ಥಮಾಡಿಕೊಂಡು ಮಹಾಭಾರತವನ್ನು ಬರೆಯಲು ಸಾಧ್ಯವೇ ಇಲ್ಲ ಇಲ್ಲದ ಮಾತು ಉದಾಹರಣೆಗೆ ಮನುಷ್ಯರಾರು ಬರೆಯಲು ಒಪ್ಪದಿದ್ದ ಮೇಲೆ ಒಂದು ಆನೆಯತಲೆ ಅದನ್ನು ಅರ್ಥಮಾಡಿಕೊಂಡು ಬರೆಯುವುದು ಸೋಜಿಗವೇ ಸರಿ. ಕೆಲವು ವೇಳೆ ತಮ್ಮ ಕಥೆಯನ್ನು ಯೋಚಿಸಲು ಕಾಲಾವಕಾಶಕ್ಕಾಗಿ ವ್ಯಾಸರು ಗಣೇಶನ್ನೇ ಪೇಚಿಗೆಸಿಕ್ಕಿಕೊಳ್ಳುವಂತೆ ಕೆಲವು ಕ್ಲಿಷ್ಟ ಪದಗಳನ್ನು ಜೋಡಿಸುತ್ತಿದ್ದರೆಂದು ಓದಿದ್ದೇವೆ

    ೮. ಕಡಬು ವಡೆ ಲಡ್ಡು ಇಡ್ಡ್ಲಿ ಮನುಷ್ಯನ ಆಹಾರ ಅದರಿಂದ ಪ್ರಾಣಿಗಳಿಗೇನೂ ಪ್ರಯೋಜನವಿಲ್ಲ
    ೯. ಆನೆಯ ಬಾಯಿಯ ಉಸಿರಾಟ ಉಚ್ವಾಸ ನಿಸ್ಚ್ವಾಸ ವೇಗ ಮನುಷ್ಯನ ಹೃದಯ ಚಲನ ವಲನ ವ್ಯೆತ್ಯಾಸ ರಕ್ತದ ವಿಸ್ಕಾಸಿಟಿ ದಪ್ಪ ಸಂಚಾರದ ವೇಗ ಹೀಗೆ ಬಹಳಷ್ಟು ಬದಲಾವಣೆಗಳಿವೆ.
    ೧೦. ಆನೆಯ ತಲೆಯಿಂದ ಸೊಂಡಿಲ ಉದ್ದ ೧೦ ಹತ್ತು ಅಡಿಯಿರುತ್ತದೆ ಕುಳ್ಳನಾದ ಸುಮಾರು ೫ ಐದುಅಡಿ ಎತ್ತರವಿರುವ ಈತ ಅದನ್ನು ಎತ್ತಿಕೊಂಡು ನಡೆಯುವುದು ನಿಮ್ಮ ನರಕ ಹಿಂಸೆಯೇ ಸರಿ.
    ೧೧. ರಕ್ಕಸರಿಗೆ ತಲೆಕತ್ತರಿಸಿದರೂ ದೇಹವನ್ನು ಎರಡಾಗಿ ಸೀಳಿದರೂ ಮತ್ತೇ ಕೂಡುವಂತೆ ವರಕೊಟ್ಟ ನಮ್ಮ ದೇವರು ಈತನ ತಲೆಯನ್ನು ಸೇರಿಸಲು ಶ್ರಮಪಟ್ಟದ್ದಾದರೂ ಏಕೆ ?
    ೧೨. ಆನೆಯ ತಲೆಯ ಮೆದಳು ಬೇರೆ ಅದರ ಆಲೋಚನೆಗಳು ಧೀರ್ಘದಾರ್ಶಿತನವು, ಮನುಷ್ಯನಿಗಿರುವ ಮೆದುಳು ಆಲೋಚನೆಗಳು ವ್ಯೆತ್ಯಾಸ ವಿರುತ್ತದೆ. ಒಂದಕೊಂದು ಹೊಂದಿಕೊಳ್ಳುವುದಿಲ್ಲ.
    13. ಇಲಿಯನ್ನು ವಾಹನವಾಗಿ ಉಪಯೋಗಿಸುವುದು ಏಲ್ಲಿಯ ನ್ಯಾಯವು ಹೌದೇ ?
    ಹೀಗೆ ಬರೆಯುತ್ತಲೇ...... ಹೋಗಬಹುದು ಇದು ಬರೆದಿರುವು ಸತ್ಯವಲ್ಲವೇ ನೀವೇ ಹೇಳಿ. ನಾವು ಇಪ್ಪತ್ತೊಂದನೇ ಈ ಶತಮಾನದಲ್ಲಿ ಪ್ರಪಂಚದ ಎಲ್ಲರಿಗೂ ಮುಂದೆ ಭಾರತೀಯರೇ ನಿಲ್ಲುತ್ತೇವೆ ಎನ್ನುವುದು ಎಷ್ಟುಸರಿ? .

    ReplyDelete
    Replies
    1. ಸನ್ಮಾನ್ಯ ಗುಣಶೇಖರರೇ, ತಾವೇ ಎಲ್ಲವನ್ನೂ ಹೇಳಿಬಿಟ್ಟಿದ್ದೀರಿ, ಬಾಕಿ ಯಾವುದೂ ಕಾಣಿಸುತ್ತಿಲ್ಲ. ಇಂದು ನಿಮ್ಮಂತಹ ಹಲವಾರು ' ಬುದ್ಧಿಜೀವಿಗಳು' ಸಮಾಜದಲ್ಲಿ ಹುಟ್ಟಿದ್ದಾರೆ ಎಂಬುದೂ ಕೂಡ ಗಣಪತಿಯ ಹುಟ್ಟಿನಷ್ಟೇ ಸೋಜಿಗ ! ಹಿಂದೂ ಸನಾತನ ಕಥೆಗಳು ಕೇವಲ ಕಣ್ಣಿಗೆ ಕಾಣುವ ಲೌಕಿಕ ವ್ಯವಹಾರಗಳಲ್ಲ, ಅವುಗಳ ಹಿಂದೆ ಅಸದೃಶ ಜ್ಞಾನ,ವಿಜ್ಞಾನ, ಸತ್ಯ, ತಥ್ಯ ಎಲ್ಲಾ ಅಡಗಿವೆ ಎಂಬುದಷ್ಟೇ ನಿಮಗೆ ಉತ್ತರ. ಮಾರುವೇಷದಲ್ಲಿ ಬರೆಯುವ ಚಟ ಯಾಕೆಂಬುದು ಗೊತ್ತಾಗಲಿಲ್ಲ ! 'ಮನದ ತಾಪ' ತಣಿಯಲು ಬರೆದಿದ್ದೀರಿ ಎಂದುಕೊಳ್ಳುತ್ತೇನೆ, ನಿಮ್ಮಂಥವರಿಗೆ ಉತ್ತರಿಸದೆ ಇದ್ದರೆ ಅದು ಉತ್ತಮವಾಗುತ್ತದೆ, ಶ್ರಮವಹಿಸಿ ಅಷ್ಟೆಲ್ಲಾ ಬರೆದ ನಿಮಗೆ ಧನ್ಯವಾದಗಳು.

      Delete

  4. ತುಂಬಾ ಉತ್ತಮವಾದ ಲೇಖನ ವಿ ಆರ್ ಭಟ್ಟರೇ.......ಚಿಕ್ಕವನಿದ್ದಾಗ ಕೇಳಿದ ಹಾಡುಗಳೆಲ್ಲ ಮತ್ತೆ ನೆನಪಿಗೆ ಬರುವಂತಾಯಿತು.....:-)



    (ಮಾನ್ಯ ಗುಣಶೇಖರ ಮೂರ್ತಿಯವರೇ ....ಇಷ್ಟು ದಿನ ಗಣೇಶನೂ ದೇವರು...ಆತ ದೇವರ ಮಗ ಎಂದೆಲ್ಲಾ ಭ್ರಮೆಯಲ್ಲಿದ್ದೆವು......ತಾವು ತಮ್ಮ ಅದ್ಭುತ ಸಂಶೋಧನೆಗಳ ಮೂಲಕ ಆತ ಮನುಷ್ಯ ಅಂತ ಪದೇ ಪದೇ ಹೇಳೀ ಸಾಬೀತು ಮಾಡಿದ್ದೀರಿ ತುಂಬಾ ಧನ್ಯವಾದಗಳು.......:-)P.....)

    ReplyDelete