ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, May 23, 2012

ಹಕ್ಕಿಯ ಹೆಗಲೇರಿ ಬಂದವಗೆ ನೋ- ಡಕ್ಕಾ ಮನಸೋತೆ ನಾನವಗೆ...

  
ಚಿತ್ರಋಣ: ಅಂತರ್ಜಾಲ
ಹಕ್ಕಿಯ ಹೆಗಲೇರಿ ಬಂದವಗೆ ನೋ-
ಡಕ್ಕಾ ಮನಸೋತೆ ನಾನವಗೆ...


ಜಗತ್ತಿನಲ್ಲಿ ಎಲ್ಲವನ್ನೂ ಎಲ್ಲರನ್ನೂ ಒಂದೇ ಮುಖದಲ್ಲಿ ಅಥವಾ ಒಂದೇಕೋನದಲ್ಲಿ ಅಳೆಯಲು ಸಾಧ್ಯವಾಗುವುದಿಲ್ಲ. ಹಾಗೊಮ್ಮೆ ವಿಮರ್ಶಿಸುವಾಗ ಹಲವು ಸಲ ಕೂಡಿ, ಕಳೆದು, ಗುಣಿಸಿ, ಭಾಗಿಸಿ, ವಿಭಜಿಸಿ, ಅಳೆದು, ತೂಗಿ ವ್ಯಕ್ತಿತ್ವದ ಪರಾಮರ್ಶೆಗೆ ಬರಬೇಕಾಗುತ್ತದೆ. ಜಗತ್ತನ್ನೇ ಬೆತ್ತಲೆಯಾಗಿಸಿ ನೋಡುವ ಕೆಲವರು ತಮ್ಮ’ಕತ್ತಲೆ’ಯಲ್ಲೇ ಹುಲಿ-ಸಿಂಹಗಳಂತೇ ಘರ್ಜಿಸುವುದನ್ನು ಕಂಡರೆ ನಗಬೇಕೋ ಅಳಬೇಕೋ ಎಂಬ ಸಮಸ್ಯೆ ಸಹಜವಾಗಿ ಪ್ರಾಪ್ತವಾಗುತ್ತದೆ. ಪೇಜಾವರ ವಿಶ್ವೇಶ ತೀರ್ಥ ಸ್ವಾಮಿಗಳು, ಮೊನ್ನೆ ಶಿವಮೊಗ್ಗೆಯಲ್ಲಿ ನಡೆದ ವಿಪ್ರಸಮ್ಮೇಳನದಲ್ಲಿ ಮಾಡಿದ ಭಾಷಣವನ್ನೇ ಹಿಡಿದುಕೊಂಡು, ಅದನ್ನು ಅರ್ಥಮಾಡಿಕೊಳ್ಳಲಾಗದ ತಮ್ಮ ಮಂಕುಬುದ್ಧಿಗೆ ಕನ್ನಡಿ ಹಿಡಿದು, "ಕನ್ನಡದ ಪ್ರಮುಖ ದಿನಪತ್ರಿಕೆ" ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಂಡ ಪತ್ರಿಕೆಯಲ್ಲಿ ನಿನ್ನೆ ಮೊನ್ನೆ ಬಂದ ಲೇಖನಗಳನ್ನು ಓದಿದರೆ ಯಾವುದು ಬೆತ್ತಲೆ ಮತ್ತು ಯಾವುದು ಕತ್ತಲೆ ಎಂಬುದು ಸ್ವಲ್ಪ ತಿಳುವಳಿಕೆ ಉಳ್ಳವನಿಗೆ ಅರ್ಥವಾಗುತ್ತದೆ. ಸದಾ ’ತಪ್ಪಾಯ್ತು ತಿದ್ಕೋತೀವಿ’ ಎನ್ನುವ ಅಂಕಣವನ್ನೇ ನಡೆಸುವ ಆ ದಿನಪತ್ರಿಕೆಯಲ್ಲಿ ಆ ಅಂಕಣದಲ್ಲಿ ಈ ಸಲುವಾಗಿಯೂ ಕ್ಷಮೆಯಾಚನೆ ಬಂದರೆ ವಿಶೇಷವಲ್ಲ!!

ತಮ್ಮನ್ನೇ ತಾವು ’ಪ್ರಜ್ಞಾನಬ್ರಹ್ಮ’ ಎಂದು ತಿಳಿದುಕೊಂಡ ಮಹಾನುಭಾವರು ಕೆಲವರು ತಮ್ಮ ಮನೋವೈಕಲ್ಯವನ್ನು ದೃಢಪಡಿಸುವುಕ್ಕಾಗಿಯೇ ಬರೆದ  ಬರಹಗಳು ಒಟ್ಟೊಟ್ಟಿಗೆ ಒಂದೇ ಪುಟದಲ್ಲಿ ಪ್ರಕಟಗೊಂಡಿವೆ; ಸುದ್ದಿಯ ಕೊರತೆಯಿಂದ ಹಗ್ಗಜಗ್ಗಾಡುವ ಬರಗಾಲದ ಈ ದಿನಗಳಲ್ಲಿ, ಸಿಕ್ಕ ಇಂತಹ ವಿಷಯಗಳನ್ನೇ ಅನಪೇಕ್ಷಿತವಾಗಿ ಎಳೆದೂ ಎಳೆದೂ ಸಮಾಜದ ಒಂದು ವರ್ಗವನ್ನು ಅವಹೇಳನ ಮಾಡುವುದು ಸುದ್ದಿಸಿಗದ ದಾರಿದ್ರ್ಯವನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗುತ್ತದೆ. ಅತಿ ಚಿಕ್ಕ ಮಕ್ಕಳಿಗಾದರೂ ಗೊತ್ತು ಈ ಶ್ಲೋಕ:

’ಸಹನಾವವತು
ಸಹನೌ ಭುನಕ್ತು...’

ಲೇಖನದಲ್ಲಿ ಒಬ್ಬರು ಮಂಡಿಸಿದ್ದಾರೆ ಹೇಗೆಂದರೆ

ಸಹನಾಭವತು
ಸಹನೌಭುನಕ್ತು ....!

ಸಂಸ್ಕೃತವನ್ನು ಹೇಗೆ ಬೇಕಾದರೂ ಬರೆಯಲು ಅದು ನಮ್ಮ ಅಜ್ಜಿಮನೆ ಹಕ್ಕೆಚಡಿಯಲ್ಲ ! ಮಂತ್ರಗಳನ್ನು ಬಳಸಲು ಅವುಗಳ ಪೂರಕ ಮಾಹಿತಿ ಬೇಕಾಗುತ್ತದೆ. ಸರಿಯಾದ ಮಾಹಿತಿ ಇಲ್ಲದೇ ಸ್ವಾಮಿಗಳಿಗೇ ಸವಾಲೆಸೆಯುವುದು ಎಂಥಾ ದುರದೃಷ್ಟಕರವೆಂದರೆ ಪತ್ರಿಕೆಯ ಮೌಲ್ಯಮಾಪನಮಾಡುವ ಕಾಲದಲ್ಲಿ ನಾವು ಮುಂದಾಗಬೇಕಾಗಿದೆ. ಕನ್ನಡದ ಇನ್ನೊಂದು ದಿನಪತ್ರಿಕೆಯಲ್ಲಿ ಇಂದು ಬಂದ ಲೇಖನದಲ್ಲಿ ಸ್ವಾಮಿಗಳು ಹೇಳಿದ ಮಾತುಗಳ ಬಗ್ಗೆ ಸಮರ್ಪಕ ವಿಶ್ಲೇಷಣೆಗಳು ಆಧಾರ ಸಹಿತವಾಗಿ ದೊರೆತಿವೆ. ವಿಷಯವಿಷ್ಟೇ : ಸಹಪಂಕ್ತೀ ಭೋಜನ! ಸಹಪಂಕ್ತೀ ಭೋಜನ ಇವತ್ತಿನ ದಿನದಲ್ಲಿ ಸ್ವಾಗತವೇ. ಅದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಅಲ್ಲಿ ದೊರೆಯಬಹುದಾದ ಸಲುಗೆಯಿಂದ, ಪ್ರೀತಿಯಿಂದ ಶಾಕಾಹಾರಿಗಳಾದವರು  ಮಾಂಸಾಹಾರಿಗಳಾಗುವ ಅಪಾಯವಿದೆ ಎಂಬ ವಾದ ಸುಳ್ಳಲ್ಲ.

ತುಸು ವರ್ಷಗಳ ಹಿಂದಕ್ಕೆ ಬ್ರಾಹ್ಮಣರ ಮನೆಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಬಸಲೆಸೊಪ್ಪು ಇಂತಹ ಪದಾರ್ಥಗಳನ್ನು ಔಷಧಕ್ಕೂ ಕೂಡ ಬಳಸುತ್ತಿರಲಿಲ್ಲ! ಇಂದು ಹಾಗಲ್ಲ, ಸಮಾಜದ ಹಲವು ವರ್ಗಗಳ ಜೊತೆ ಸಹಬಾಳ್ವೆ ನಡೆಸುತ್ತಾ ಹಲವು ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಬ್ರಾಹ್ಮಣರು, ಅನಿವಾರ್ಯವಾಗಿ ಹೋಟೆಲ್ಗಳಲ್ಲೋ ಕ್ಯಾಂಟೀನ್ಗಳಲ್ಲೋ ತಿಂಡಿ-ತೀರ್ಥಗಳನ್ನು ಸ್ವೀಕರಿಸತೊಡಗಿದ್ದಾರೆ. ಆಹಾರಗಳ ತಯಾರಿಯನ್ನೇ ವ್ಯವಹಾರವನ್ನಾಗಿಸಿಕೊಂಡ ಜಾಗದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಬಳಕೆಯನ್ನು ನಿಷೇಧಿಸಿ ಎನ್ನಲು ಸಾಧ್ಯವಾಗಲಿಲ್ಲ; ಕ್ರಮೇಣ ಅವುಗಳ ರುಚಿ ಮೈಗೊಂಡು ಅವುಗಳು ಇಲ್ಲದೇ ಅಡುಗೆಯೇ ಆಗುವುದಿಲ್ಲ ಎಂಬಷ್ಟು ಆತುಕೊಂಡು ಈಗ ಬಹುತೇಕ ಬ್ರಾಹ್ಮಣರ ಮನೆಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿಗಳ ಬಳಕೆ ಕಾಯಮ್ಮಾಗಿ ಹೋಗಿದೆ! ಯಾಕೆ ಅವುಗಳನ್ನು ಬಳಸಬಾರದು ಎಂದಿದ್ದರು ಎಂದು ತಿಳಿಯುವುದಾದರೆ ವೇದವಿಜ್ಞಾನದ ಮೂಲಗಳ ಪ್ರಕಾರ ತಿಳಿದು ಬರುವ ಅಂಶ ಹೀಗಿದೆ: ಅವು ಕಾಮೋತ್ತೇಜಕ ಪದಾರ್ಥಗಳು. ಇಂದ್ರಿಯನಿಗ್ರಹವನ್ನೇ ಗುರಿಯಾಗಿಸಿಕೊಂಡು ಅಧ್ಯಯನ, ಅಧ್ಯಾಪನ ಮತ್ತು ಅನುಸರಣ ಇವುಗಳಲ್ಲಿ ನಿರತರಾದ ಮಂದಿಗೆ ನಿಗ್ರಹ ಶಕ್ತಿಯನ್ನು ಕುಂದಿಸುವ ಕೆಲಸ ಮಾಡುತ್ತವೆ ಎಂಬುದು ಈ ಬಳಕೆಯ ನಿಷೇಧದ ಹಿಂದಿರುವ ಸತ್ಯವಾಗಿತ್ತು. ಇವತ್ತು ಅಧ್ಯಾಪನರಂಗದಲ್ಲಿ ಇರುವ ಬಹಳ ವ್ಯಕ್ತಿಗಳು ಕಾಮುಕರಾಗಿದ್ದಾರೆ ಮತ್ತು ನಾವದನ್ನು ವಿಶ್ವವಿದ್ಯಾಲಯಗಳ ಮಟ್ಟದಲ್ಲೂ ಕಾಣುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಅವರ ಆಹಾರ-ವ್ಯವಹಾರದ ವೈಖರಿಯೇ ಆಗಿರುತ್ತದೆ! 

ಆಹಾರಕ್ಕೂ ಆಚರಣೆಗೂ ಅದೆಲ್ಲಿಯ ಸಂಬಂಧ ಎಂದು ಅಸಡ್ಡೆ ಮಾಡುವವರಿಗೆ ಒಂದು ಉದಾಹರಣೆ: ’ಮದ್ಯಪಾನಮಾಡಿ ವಾಹನ ಚಲಿಸಬೇಡಿ’ ಎಂಬುದು ಸಂಚಾರೀ ನಿಯಮಗಳಲ್ಲಿ ಒಂದು. ಮದ್ಯಪಾನ ಮಾಡುವುದಕ್ಕೂ ವಾಹನ ಚಲಾಯಿಸುವಿಕೆಗೂ ಏನು ಸಂಬಂಧ? ಅದನ್ನು ನಾನು ಹೊಸದಾಗಿ ವಿವರಿಸುವುದು ಬೇಡಾ ಎನಿಸುತ್ತದೆ. ಅದೇ ರೀತಿ ವೇದಾಗಮ ಶಾಸ್ರ್ರಗಳನ್ನು ಪ್ರತ್ಯಕ್ಷವಾಗಿ/ಪರೋಕ್ಷವಾಗಿ ಪ್ರತಿನಿತ್ಯ ಬಳಸುವ ಬ್ರಾಹ್ಮಣ ವರ್ಗದ ಜನ ಸಹಪಂಕ್ತೀ ಭೋಜನದಲ್ಲಿ, ದೊರೆತ ಇತರರ ಸಲುಗೆಯನ್ನುಪಯೋಗಿಸಿಕೊಂಡು,  ನಿಧಾನವಾಗಿ ಮದ್ಯ-ಮಾಂಸಗಳ ಬಳಕೆಯ ಕಡೆಗೆ ವಾಲಬಹುದು ಎಂಬ ಅಂಶ ನಿಜಕ್ಕೂ ಚಿಂತನಾರ್ಹವೇ. ಯಾಕೆಂದರೆ ಅದು ಈಗಾಗಲೇ ನಡೆಯುತ್ತಿದೆ. ಲೌಕಿಕದ ಕಡೆಗೆ ಗಾಢವಾಗಿ ಎಳೆದು ಇಂದ್ರಿಯಗಳನ್ನು ಸಬಲಗೊಳಿಸುವ ಕಾರ್ಯವನ್ನು ಈ ಎರಡು ಪದಾರ್ಥಗಳು ಮಾಡುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿ ಸಂಸರ್ಗದ ಸಲುಗೆ ಆಹಾರಕ್ರಮಕ್ಕಿರುವ ಅಡ್ಡಬೇಲಿಯನ್ನು ಹಾರಿ ಕಾಳರಾತ್ರಿಯಲ್ಲಿ ಕಾಳಸಂತೆಯಲ್ಲಿ ಬಿಕರಿಯಾಗುವ ಮದ್ಯ-ಮಾಂಸಗಳನ್ನು ಸ್ವೀಕರಿಸುವಲ್ಲಿಯವರೆಗೂ ಬ್ರಾಹ್ಮಣ ಜನರನ್ನು ಸೆಳೆದೊಯ್ಯಬಹುದು ಎಂಬ ಶಂಕೆಯಿಂದ ಸ್ವಾಮಿಗಳು ಹಾಗೆ ಹೇಳಿದ್ದಾರೆ.   

ನನ್ನ ಬಹುತೇಕ ಸ್ನೇಹಿತರು ಎಲ್ಲರೂ ಮಾಂಸಾಹಾರಿಗಳೇ. ಹಾಗಂತ ಅವರು ಸುಸಂಸ್ಕೃತರಲ್ಲ ಎಂದು ನಾನೆಂದೂ ಅನ್ನುವುದಿಲ್ಲ. ನಮ್ಮಲ್ಲಿರುವ ಆ ಗಾಢ ಸ್ನೇಹಭಾವಕ್ಕೆ ಯಾವಕೊರತೆಯೂ ಇಲ್ಲ. ಆದರೆ ಮಾಂಸಾಹಾರಕ್ಕೆ ನನ್ನನ್ನು ಅವರು ಕರೆಯುವುದಿಲ್ಲ, ಶಾಕಾಹಾರಿಗಳಾಗಿ ಎಂಬ ಒತ್ತಾಯವನ್ನು ನಾನಂತೂ ಅವರಮೇಲೆ ಹೇರಲಿಲ್ಲ. ಕೆಲವು ವ್ಯವಹಾರಗಳಲ್ಲಿ ನಿರತರಾದ ವ್ಯಕ್ತಿಗಳಿಗೆ ಆ ಯಾ  ವ್ಯವಹಾರಕ್ಕೆ ಸಂಬಂಧಿಸಿದಂತೇ ನಿಯಮಗಳಿರುವುದು ಸೂಕ್ತ. ಗಡದ್ದಾಗಿ ರಾತ್ರಿ ಊಟ ಹೊಡೆದ ವಿದ್ಯಾರ್ಥಿ ಓದಲು ಕುಳಿತರೆ ಆತನಿಗೆ ಓದಿನ ಬದಲಿಗೆ ನಿದ್ದೆ ಹತ್ತುತ್ತದೆ. ಇಡೀದಿನ ಅದೂ ಇದೂ ತಿನ್ನುತ್ತಾ

ಆಚೆಮನೆ ಸುಬ್ಬಮ್ಮಂಗೆ ಏಕಾದಶಿ ಉಪವಾಸ
ಏನೋ ಸ್ವಲ್ಪ ತಿಂತಾರಂತೆ ಅವಲಕ್ಕಿ-ಉಪ್ಪಿಟ್ಟು-ಪಾಯಸ

ಅಂದಹಾಗೇ ಹೊಟ್ಟೆತುಂಬಿಸಿಕೊಂಡು ಜಾಗರಣೆ ಮಾಡುವುದು ಸಾಧ್ಯವಾಗುವುದಿಲ್ಲ! ಅದಕ್ಕೇ ಜಾಗರಣೆಯ ದಿನವಾದ ಶಿವರಾತ್ರಿಯಂದು ಲೋಕಕ್ಕೆ ಉಪವಾಸವನ್ನು ಹೇಳಿದ್ದಾರೆ. ಅಧಿಕಾರಿಗಳಿಗೆ, ಸಂಸದರಿಗೆ, ಶಾಸಕರಿಗೆ, ರಾಜ್ಯಪಾಲ-ರಾಷ್ಟ್ರಪತಿ ಈ ಎಲ್ಲರಿಗೆ ಹೀಗ್ಹೀಗೆ ನಡೆದುಕೊಳ್ಳಬೇಕು ಎಂಬ ನಿಯಮ-ನಿಬಂಧನೆಗಳಿವೆ. ಅದನ್ನು ಸರಕಾರದ ಭಾಷೆಯಲ್ಲಿ ’ಪ್ರೋಟೋಕಾಲ್’ ಎನ್ನುತ್ತಾರೆ. ಅಂತಹ ಪ್ರೋಟೊಕಾಲ್ ದೂರವಿರಿಸಿ ಬೇಕಾಬಿಟ್ಟಿ ವರ್ತಿಸಿದರೆ ವ್ಯವಸ್ಥೆ ಹದಗೆಡುತ್ತದೆ, ಸಮಾಜದ ಸ್ಥಿತಿ ಉದ್ವಿಗ್ನವಾಗುತ್ತದೆ, ಆಡಳಿತ ಯಂತ್ರ ತನ್ನ ಸ್ವರೂಪವನ್ನೂ ಮೌಲ್ಯವನ್ನೂ ಕಳೆದುಕೊಳ್ಳುತ್ತದೆ. ಸಹಸ್ರಮಾನಗಳಿಂದ ವಂಶಪಾರಂಪರ್ಯವಾಗಿ ಮದ್ಯ-ಮಾಂಸಗಳನ್ನು ಬಳಸದೇ ಇದ್ದ ಜನಾಂಗಕ್ಕೆ ಹೊಸದಾಗಿ ಅದನ್ನು ಬಳಸುವ ಬುದ್ಧಿ ಪ್ರಚೋದನೆಗೊಂಡರೆ ಅವರು ನಡೆಸಬೇಕಾದ ಕೈಂಕರ್ಯದಲ್ಲಿ ಸಹಜವಾಗಿ ವ್ಯತ್ಯಾಸಗಳನ್ನು ಕಾಣಬೇಕಾಗಿ ಬರುತ್ತದೆ. ಪೋಲೀಸರೇ ಕಳ್ಳರಾದರೆ, ಬೇಲಿಯೇ ಎದ್ದು ಹೊಲವನ್ನು ಮೇದರೆ ಹೇಗಾಗಬೇಡ? ಅಂದಹಾಗೇ ಅಲ್ಲಲ್ಲಿ ಅಪರೂಪಕ್ಕೆ ನಮ್ಮ ಪೋಲೀಸರೂ ಎಣ್ಣೆಹಾಕಿ ನರ್ತಿಸಿ ತಮ್ಮ ’ದಿವ್ಯಾನುಭೂತಿ’ಯನ್ನು ಪ್ರಸ್ತುತಪಡಿಸುವುದನ್ನೂ ಕಂಡಿದ್ದೇವೆ!

ಹಿಂದೂಜನ ಒಪ್ಪಿರುವ ಅಪ್ಪಿರುವ, ಸನಾತನವಾದ ಗ್ರಂಥ ಭಗವದ್ಗೀತೆಯ ಹದಿನೈದನೇ ಅಧ್ಯಾಯ-’ಪುರುಷೋತ್ತಮ ಯೋಗ’ ಎಂಬುದರಲ್ಲಿ ಜಗನ್ನಿಯಾಮಕ ಹೀಗೆ ಬೋಧಿಸಿದ್ದಾನೆ :   

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ ||

ಎಲ್ಲಾ ಜೀವಿಗಳ ದೇಹದಲ್ಲಿ ನಾನೇ ಸ್ಥಿತನಾಗಿದ್ದೇನೆ ಮತ್ತು ಪ್ರಾಣ ಮತ್ತು ಅಪಾನಗಳಿಂದ ಕೂಡಿದ ವೈಶ್ವಾನರ ಅಗ್ನಿರೂಪಿಯಾಗಿ ನಾಲ್ಕು ಪ್ರಕಾರದ ಅನ್ನವನ್ನು ಜೀರ್ಣವಾಗಿಸುತ್ತೇನೆ.

ಸರ್ವಸ್ಯ ಚಾಹಂ ಹೃದಿ ಸಂನಿವಿಷ್ಟೋ
ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ|
ವೇದೈಶ್ಚ ಸರ್ವೈರಹಮೇವ ವೇದ್ಯೋ
ವೇದಾಂತಕೃದ್ವೇದವಿದೇವ ಚಾಹಮ್ ||

ನಾನೇ ಎಲ್ಲಾ ಪ್ರಾಣಿಗಳ ಹೃದಯದಲ್ಲಿ ಅಂತರ್ಯಾಮಿ ರೂಪದಿಂದ ಸ್ಥಿತನಾಗಿದ್ದೇನೆ; ನನ್ನಿಂದಲೇ ಸ್ಮೃತಿ, ಜ್ಞಾನ ಉಂಟಾಗುತ್ತದೆ ಹಾಗೂ ಸಂಶಯಾದಿ ದೋಷಗಳ ನಿವಾರಣೆಯಾಗುತ್ತದೆ. ಎಲ್ಲಾ ವೇದಗಳ ಮೂಲಕ ನಾನೇ ತಿಳಿಯಲು ಯೋಗ್ಯನಾಗಿದ್ದೇನೆ ಹಾಗೂ ವೇದಾಂತದ ಕರ್ತೃ ಮತ್ತು ವೇದಗಳನ್ನು ಬಲ್ಲವನೂ ಸಹ ನಾನೇ ಆಗಿದ್ದೇನೆ.  

ವೇದಗಳನ್ನು ಓದುವ, ಆಸ್ವಾದಿಸುವ, ಆಚರಿಸುವ, ಅನುಮೋದಿಸುವ, ಗೀತೆಯ ನುಡಿಗಳನ್ನು ಪಾಲಿಸುವ ಬಹುತೇಕ ಬ್ರಾಹ್ಮಣರಿಗೆ ಇದರ ಅರ್ಥ ತಿಳಿದಿರುತ್ತದೆ. ಬ್ರಹ್ಮಾಂಡದ ಪ್ರತೀ ಜೀವಿಯಲ್ಲೂ ತಾನೇ ಇದ್ದೇನೆ ಎಂದ ಭಗವಂತನ ಮಾತನ್ನು ಒಪ್ಪಿಕೊಂಡಾಗ ಇನ್ನೊಂದು ಪ್ರಾಣಿಯನ್ನು ಆಹಾರವಾಗಿ ಬಳಸಿಕೊಳ್ಳಲು ಆ ದೇಹ-ಜೀವಗಳ ಬೇರ್ಪಡಿಸುವಿಕೆ ಮನಸ್ಸಿಗೆ ಒಪ್ಪಿತವಾಗುವ ವಿಷಯವಲ್ಲ. ಆಹಾರವಾಗಿ ಹಲವು ಪದಾರ್ಥಗಳು ಸಿಗುತ್ತವೆ. ಮಾಂಸವೇ ಆಗಬೇಕೆ? ಇಲ್ಲವಲ್ಲ. ಜೀವವೇ ಇಲ್ಲದ ಅಥವಾ ಜೀವನ ಮುಗಿದ ಸಸ್ಯಜನ್ಯ ಪದಾರ್ಥಗಳನ್ನು ತಮ್ಮ ಆಹಾರವನ್ನಾಗಿಸಿಕೊಂಡವರು ಬ್ರಾಹ್ಮಣರು. ಸತತ ತೌಲನಿಕ ಅಧ್ಯಯನದಿಂದ, ಮಾಂಸ ಪದಾರ್ಥಗಳ ಬಳಕೆ ಅಜ್ಞಾನ-ಅಂಧಕಾರ, ಅಹಂಕಾರ, ಪ್ರಮಾದ, ಆಲಸ್ಯ ಮತ್ತು ನಿದ್ರೆಯನ್ನು ವೃದ್ಧಿಸಿ ಮನುಷ್ಯನ ದೇಹಾಭಿಮಾನವನ್ನು ಹೆಚ್ಚಿಸಿ ಅದರಿಂದ ಜೀವಾತ್ಮನನ್ನು ಬಂಧಿಸುತ್ತದೆ ಎಂಬುದು ತಿಳಿದುಬಂದಿದೆ. 

ಹೀಗಾಗಿ ಸರ್ವಪ್ರಜಾ ಸಂಸರ್ಗದಿಂದ, ಸಂಗದಿಂದ, ಊಟದಲ್ಲಿ ಒಟ್ಟಿಗೆ ಕುಳಿತು ಮದ್ಯಮಾಂಸಾದಿಗಳ ಬಗೆಗೆ ಹೇಳಿಕೇಳಿ ಮಾಡಿಕೊಳ್ಳಬಹುದಾದ ಸನ್ನಿವೇಶ ಉಂಟಾಗಬಹುದೆಂಬ ಕಾರಣದಿಂದ ಪಂಕ್ತಿಯಲ್ಲಿ ಭೇದಮಾಡಿದರೇ ಹೊರತು, ಇತರೆ ಜನಾಂಗಗಳನ್ನು ಹೀನವಾಗಿ ಕಾಣುವ ದುರುದ್ದೇಶದ ನಡೆ ಅದಲ್ಲ. ವೈಜ್ಞಾನಿಕವಾಗಿ ಸ್ವಚ್ಛತೆಯ ಸಲುವಾಗಿ ಮಡಿಯನ್ನೂ, ಸಾತ್ವಿಕ ಆಹಾರಕ್ರಮದ ಸಲುವಾಗಿ ಪಂಕ್ತಿಭೇದವನ್ನೂ ನಡೆಸುತ್ತಿದ್ದರು ಎಂಬುದರಲ್ಲಿ ಅನುಮಾನವಿಲ್ಲ. ಇಂದು ನಗರಗಳಲ್ಲಿ ಕೆಲವು ಬ್ರಾಹ್ಮಣರು ಮದ್ಯ-ಮಾಂಸಗಳಲ್ಲಿ ನಿರತರಾಗಿ ತಮ್ಮ ಮೂಲ ಆಶಯಗಳನ್ನು ಮರೆತಿದ್ದಾರೆ; ಲೌಕಿಕ ಜೀವನಕ್ಕೇ ಜಾಸ್ತಿ ಆತುಕೊಂಡಿದ್ದಾರೆ, ಆತ್ಮೋನ್ನತಿಯ ವಿಚಾರ ಕೈಬಿಟ್ಟಿದ್ದಾರೆ. ಸಮಾಜದಲ್ಲಿ ಅಸತ್ಯ, ಕೆಟ್ಟವಿಚಾರ, ಚಟಗಳು, ದುರ್ನಡತೆ ಇವೆಲ್ಲಾ ಬಹಳ ಬೇಗ ಹೇಗೆ ಪ್ರಸಾರವಾಗುತ್ತವೋ ಹಾಗೆಯೇ ಮದ್ಯ-ಮಾಂಸಾದಿಗಳ ಬಳಕೆಯೂ ಕೂಡ. ಮಾಂಸಾಹಾರವನ್ನು ಬಳಸಿದವರೆಲ್ಲಾ ಕೆಟ್ಟವರೆಂದೋ ಅಥವಾ ಸಮಾಜ ಘಾತುಕರೆಂದೋ ನಾನು ಹೇಳುತ್ತಿಲ್ಲ; ಅದೇ ಅವರು ಮಾಂಸಾಹಾರವನ್ನು ತ್ಯಜಿಸಿದ್ದರೆ ಇನ್ನೂ ಉನ್ನತ ಜ್ಞಾನದ ಮಟ್ಟವನ್ನು ಸಾಧಿಸಬಹುದಿತ್ತು ಎಂಬುದು ನನ್ನ ಹೇಳಿಕೆ. ಈ ಜ್ಞಾನ ಕೇವಲ ಲೌಕಿಕ/ಪ್ರಾಪಂಚಿಕ ವ್ಯವಹಾರ ಜ್ಞಾನವಲ್ಲ; ಇಲ್ಲಿ ’ಜ್ಞಾನ’ ಎಂಬ ಪದವನ್ನು ಪಾರಮಾರ್ಥಿಕ ಸಾಧನೆಗೂ ಬಳಸಿಕೊಳ್ಳಲಾಗಿದೆ ಎಂಬುದನ್ನು ಓದುಗರು ಅರಿಯಬೇಕು. ಪಾರಮಾರ್ಥಿಕ ಸಾಧನೆಯನ್ನು ಲೌಕಿಕವಾಗಿ ಅಳೆಯುವ ಯಾವುದೇ ಮಾಪನಗಳಿಲ್ಲ; ಅಂದಮಾತ್ರಕ್ಕೆ ಅದನ್ನು ಅಲ್ಲಗಳೆಯಲಾಗುವುದಿಲ್ಲ!  

ರಜಸ್ತಶ್ಚಾಭಿಭೂಯ ಸತ್ತ್ವಂ ಭವತಿ ಭಾರತ|
ರಜಃ ಸತ್ತ್ವಂ ತಮಶ್ಚೈವ ತಮಃ ಸತ್ತ್ವಂ ರಜಸ್ತಥಾ||

ರಜೋಗುಣ ಮತ್ತು ತಮೋಗುಣಗಳನ್ನು ಅದುಮಿಕೊಂಡು ಸತ್ವಗುಣವು ವೃದ್ಧಿಸುತ್ತದೆ, ಸತ್ವಗುಣ ತಮೋಗುಣಗಳನ್ನು ಅದುಮಿಕೊಂಡು ರಜೋಗುಣವು ವೃದ್ಧಿಸುತ್ತದೆ, ಅಂತೆಯೇ ಸತ್ವಗುಣ ಮತ್ತು ರಜೋಗುಣಗಳನ್ನು ಅದುಮಿಕೊಂಡು ತಮೋಗುಣವು ವೃದ್ಧಿಸುತ್ತದೆ ಎಂದು ಶ್ರೀಕೃಷ್ಣ ಅರ್ಜುನನಿಗೆ ೧೪ನೇ ಅಧ್ಯಾಯ ’ಗುಣತ್ರಯ ವಿಭಾಗಯೋಗ’ದಲ್ಲಿ ವಿವರಿಸಿದ್ದಾನೆ. ಕೃಷ್ಣಹೇಳಿದ ಮೂರರಲ್ಲಿ ಮೊದಲನೆಯ ರೀತಿಯನ್ನು ನಾವು ಅನುಸರಿಸಿದರೆ ಇಂದ್ರಿಯನಿಗ್ರಹ, ಅರಿಷಡ್ವರ್ಗಗಳ ಹತೋಟಿ ತಕ್ಕಮಟ್ಟಿಗೆ ಸಾಧ್ಯವಾಗುತ್ತದೆ ಎಂಬುದು ಮಹಾತ್ಮರ/ತಪಸ್ವಿಗಳ ಅನುಭವದ ಮಾತಾಗಿದೆ. ಅದನ್ನು ಸಾಧ್ಯವಾಗಿಸಿಕೊಳ್ಳುವಲ್ಲಿ ಬ್ರಾಹ್ಮಣವರ್ಗ ನಡೆದು ಬಂದಿತ್ತು. ದೇಶಾಂತರ ಪರ್ಯಟನೆಯಲ್ಲಿ ಬಂಗಾಳದ ಕಡೆಗೆ ನೆಲೆನಿಂತ ಬ್ರಾಹ್ಮಣವರ್ಗ ಸಂಸರ್ಗದ ಫಲವಾಗಿ ಮಾಂಸಾಹಾರವನ್ನು ಸ್ವೀಕರಿಸತೊಡಗಿತು! ಇವತ್ತಿಗೂ ಬಂಗಾಳದ ಬ್ರಾಹ್ಮಣರಿಗೂ ನಮ್ಮಲ್ಲಿನ ಬ್ರಾಹ್ಮಣರಿಗೂ ಸಹಪಂಕ್ತೀ ಭೋಜನ ನಡೆಯುವುದಿಲ್ಲ!! ಸಹಪಂಕ್ತೀ ಭೋಜನ-ನಿಷೇಧ ಜಾತಿಯಿಂದ ಅಥವಾ ಜಾತಿಗಳ ಸಲುವಾಗಿ ಜನಿಸಿದ್ದಲ್ಲ, ಬದಲಾಗಿ ಆಹಾರನೀತಿಯಿಂದ ಜನಿಸಿದ್ದಾಗಿದೆ; ಅಲ್ಲಿ ಅನ್ಯ ಜನಾಂಗವನ್ನು ಅವಹೇಳನಮಾಡುವ ಉದ್ದೇಶ ಇರುವುದಿಲ್ಲ. 

ಪತ್ರಿಕೆಯಲ್ಲಿ ಬರೆದ ಮಹಾನುಭಾವನೊಬ್ಬ ಋಷಿ ದೂರ್ವಾಸರ, ಕಶ್ಯಪರ ಮತ್ತು ಇನ್ನಿತರ ಹಲವರ ಮೂಲವನ್ನು ಕೆದಕುತ್ತಾ ಅವರೆಲ್ಲಾ ಮಾಂಸಾಹಾರಿಗಳಾಗಿರಲಿಲ್ಲವೇ ? ಎಂಬ ಪ್ರಶ್ನೆ ಹಾಕಿದ್ದಾನೆ. ನೋಡಿ: ಮಹರ್ಷಿ ವಾಲ್ಮೀಕಿ ಮೂಲದಲ್ಲಿ ಬೇಡನಾಗಿದ್ದುದು ನಮಗೆಲ್ಲಾ ತಿಳಿದೇ ಇದೆ; ಆದರೆ ಬದಲಾದ ಜೀವನದಲ್ಲಿ ಅದೇ ಬೇಡ ಹಕ್ಕಿಗಳ ವಧೆಯನ್ನು ತಾನೇ ನಿಷೇಧಿಸಿದ-ಮಾಂಸಾಹಾರವನ್ನು ವರ್ಜಿಸಿದ,  ’ಮರಾ ಮರಾ ಮರಾ ’ ಎನ್ನುವ ಜಪದಲ್ಲಿ ಧ್ಯಾನಸ್ಥನಾಗಿ ಕುಳಿತು ಜ್ಞಾನಿಯಾದ! ಸಹನೌಭುನಕ್ತು --ಎಂಬಲ್ಲಿ ಸಹನೆಯಿಂದ ಎಲ್ಲರೂ ಭುಂಜಿಸೋಣ ಎಂದರ್ಥವಾಗುತ್ತದೆಯೇ ಹೊರತು ಅದನ್ನೇ ವಿಪರ್ಯಾಸದ ಅರ್ಥಕ್ಕೆ ಬಳಸಿಕೊಳ್ಳಬೇಕಾಗಿಲ್ಲ. ಬದಲಾದ ಪರಿಸರದಲ್ಲಿ ಎಲ್ಲರೊಂದಿಗೆ ಸಹಪಂಕ್ತಿಯಲ್ಲಿ ಬ್ರಾಹ್ಮಣರು ಊಟಮಾಡುತ್ತಾ ಅದೇಷ್ಟೋ ಕಾಲ ಗತಿಸಿದೆ; ಮಾಡುತ್ತಲೇ ಇದ್ದಾರೆ, ಮಾಡುತ್ತಾರೆ. "ಆದರೆ ಊಟದ ಸಮಯದ ಸ್ನೇಹ, ಭಿನ್ನ ಆಹಾರದ ರುಚಿನೋಡುವ ಚಟದೆಡೆಗೆ ಹಚ್ಚದಂತೇ ಎಚ್ಚರವಹಿಸುವುದು ಬ್ರಾಹ್ಮಣರ ಕರ್ತವ್ಯ-ಎಂಬುದನ್ನು ಬ್ರಾಹ್ಮಣರು ಮರೆಯಬಾರದು" ಎಂದು ಶ್ರೀಗಳು ಹೇಳಿದ್ದಾರೆ; ಇದು ರಾಜಕೀಯ ಪ್ರೇರಿತವೂ ಅಲ್ಲ, ಮಾತನ್ನು ಹೊರಳಿಸಲೂ ಇಲ್ಲ ಎಂಬುದನ್ನು ಕಾಗದದ ’ಹುಲಿ’-’ಸಿಂಹ’ಗಳು ತಿಳಿದುಕೊಂಡು ಮಾತಾಡಬೇಕಾಗಿದೆ.

ಇನ್ನೊಂದು ನೋವು ತಂದ ಮಾತೆಂದರೆ. ಮಹಾನುಭಾವನೊಬ್ಬ ಬರೆದಿದ್ದು: ಅನ್ಯ ಜನಾಂಗಗಳಲ್ಲಿ ಮಠಗಳು ಹುಟ್ಟಿಕೊಂಡಮೇಲೆ ಬ್ರಾಹ್ಮಣ ಮಠಗಳಿಗೆ ದಕ್ಷಿಣೆ, ಪಾದಕಾಣಿಕೆ, ದಾನ ಇವೆಲ್ಲಾ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದ್ದರಿಂದ ಪೇಜಾವರ ಸ್ವಾಮಿಗಳಂಥವರು ದಲಿತರ ಕೇರಿಗಳಲ್ಲಿ ಪಾದಯಾತ್ರೆ, ಸಂಚಾರ ನಡೆಸುತ್ತಾ ದೀಕ್ಷೆ ಕೊಡುತ್ತೇವೆ ಎನ್ನುತ್ತಾ ಪರೋಕ್ಷವಾಗಿ ಕಾಣಿಕೆ ಎತ್ತಲು ಬರುತ್ತಾರೆ ಎಂದಿದ್ದಾನೆ. ಜಾತೀವಾರು ಮಠಗಳು ತಲೆ ಎತ್ತಿದ್ದು, ಅವು ರಾಜಕೀಯವಾಗಿ ಆ ಯಾ ಜಾತಿಗಳಿಗೆ ಸರಕಾರೀ ಸೌಲಭ್ಯ/ಮಾನ್ಯತೆ/ಮೀಸಲಾತಿ ಇವುಗಳನ್ನು ಕೊಡಿಸಲಿಕ್ಕೆ ಎಂಬುದರಲ್ಲಿ ಸಂದೇಹವಿಲ್ಲ. ಪಾರಮಾರ್ಥಿಕವಾಗಿ ನಡೆಸುವ ಕಾರ್ಯಗಳಿಗೂ ಭಿನ್ನವಾಗಿ ಒಬ್ಬೊಬ್ಬ ಸ್ವಾಮಿ ಒಂದೊಂದು ರೀತಿಯಲ್ಲಿ ತನ್ನ ಲೌಕಿಕನಡೆಯಿಂದ ಪ್ರಚಾರಕ್ಕೆ ಬರುತ್ತಾನೆ; ಜನಾಂಗದ ಬಲವನ್ನು ಸಾಕ್ಷೀಕರಿಸಲು ವಿಧಾನಸೌಧದಂತಹ ರಾಜಕೀಯ ಮಹಲುಗಳಿಗೂ ನಡೆದುಬರುತ್ತಾನೆ. ಸನಾತನ ಧರ್ಮದಲ್ಲಿ ಎಲ್ಲಾ ಜನಾಂಗಗಳಿಗೆ ಗುರುವಿನ ಸ್ಥಾನದಲ್ಲಿ ನಡೆದಿದ್ದು ಬ್ರಾಹ್ಮಣ ಜನಾಂಗ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಬದಲಾದ ಸನ್ನಿವೇಶದಲ್ಲಿ ಉದರಂಭರಣೆಗಾಗಿ ಬ್ರಾಹ್ಮಣರು ವೇದಾಧ್ಯಯನ ತೊರೆದು ಅನ್ಯವೃತ್ತಿಗಳಲ್ಲಿ ತೊಡಗಿಕೊಂಡಿದ್ದೂ ಅಷ್ಟೇ ಸತ್ಯ. ವೃತ್ತಿ ಸಂಬಂಧದ ಒಡನಾಟ ತಿರುಗಾಟಗಳಿಂದ ಆಹಾರ-ವ್ಯವಹಾರಗಳಲ್ಲಿ ವ್ಯತ್ಯಯವುಂಟಾಗುವುದೂ ಅನಿವಾರ್ಯ ಸಹಜ. ಆದರೂ ಇವತ್ತಿಗೂ ಬ್ರಾಹ್ಮಣ ಮಠಗಳು ಆದಾಯಕ್ಕಾಗಿ ಅಥವಾ ಪಾದಗಾಣಿಕೆಗಾಗಿ ಯಾವಕೆಲಸದಲ್ಲೂ ತೊಡಗಿಕೊಂಡಿಲ್ಲ. ಅವರು ವಿಧಾನಸೌಧದ ಜಗಲಿಗೆ ಮೀಸಲಾತಿ ಕೇಳಲು ಬರುವುದಿಲ್ಲ. ಸಮಾಜದ ಯಾವ ವರ್ಗದವರಿಂದಲೂ ತಮಗೆ ಇಂತಿಷ್ಟು ಸಂದಾಯವಾಗಬೇಕೆಂದು ಎಂದೂ ಬಯಸುವುದಿಲ್ಲ. ಅವರಿಗೆ ಬೇಕಾಗಿರುವುದು ಸಮಷ್ಟಿಯ ಸಮಾಜದ ಸ್ವಾಸ್ಥ್ಯ! ಸರ್ವಜನಾಂಗದ ಸರ್ವತೋಮುಖ ಅಭಿವೃದ್ಧಿ. ಹೀಗಾಗಿ ದಲಿತರ ಸಂಕಷ್ಟದ ಅಳಲನ್ನು ಆಲೈಸಲು, ನಕ್ಸಲೈಟ್ಸ್ ಗಳ ಮನವನ್ನು ಸಮಾಜಮುಖಿಯಾಗಿ ಪರಿವರ್ತಿಸಲು ಆದಾಯ-ನಿರಪೇಕ್ಷಿತ ಮತ್ತು ಧರ್ಮಸಂತುಲಿತ ಸಂಚಾರವನ್ನೋ ಪಾದಯಾತ್ರೆಯನ್ನೋ ಆಂದೋಲನವನ್ನೋ ಬ್ರಾಹ್ಮಣ ಮಠಗಳು ನಡೆಸುತ್ತವೆ-ಕಾಣಿಕೆಗಾಗಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ.

ಹಕ್ಕಿಯ ಹೇಗಲೇರಿ ಬಂದ ಭಗವಂತ ಕೃಷ್ಣನಾಗಿ, ಜಗದ್ಗುರುವಾಗಿ ಬೋಧಿಸಿದ ನೀತಿಗೆ ಆತುಕೊಂಡಿರುವ, ಆತನ ಲೀಲಾವಿನೋದದ ಪಾತ್ರಧಾರಿಗಳಾಗಿರುವ ಎಲ್ಲರ ನಡುವೆ, ಕೇವಲ ಮೇಲ್ವರ್ಗವೆಂದು ಗುರಿಮಾಡಲ್ಪಟ್ಟು, ಸದಾ ಅನ್ಯಜನಾಂಗದ ಮಾತಿನ ಚಾಟಿಏಟು, ರಾಜಕೀಯದ ಅವಗಣನೆ ಇವುಗಳನ್ನು ಸಹಿಸುತ್ತಾ ಬದುಕುವ ವಿಪ್ರಜನಾಂಗದ ಮೇಲಿನ, ಸ್ವಾಮಿಗಳ ಮೇಲಿನ ಆರೋಪ ಸರಿಯಲ್ಲ; ಮಾಡಿದ ಆರೋಪದಲ್ಲಿ ಎಳ್ಳಷ್ಟೂ ಹುರುಳಿಲ್ಲ. ಲೇಖಕರುಗಳ ಮತ್ತು ಅವರ ಮಂಡಳಿಯ ’ಯಜಮಾನರ’ ’ಕತ್ತಲೆ’ಕಳೆದು ಅವರು ನಿಜವಾದ ಬೆತ್ತಲೆ ಪ್ರಪಂಚವನ್ನು ಅವಲೋಕಿಸುವ ಮಟ್ಟಕ್ಕೆ ತಲುಪಲಿ ಎಂದು,  ನಾನೂ ಮನಸೋತ ಹಕ್ಕೀಹೆಗಲಿಗನಲ್ಲಿ ಪುನಃ ಪುನಃ ಪ್ರಾರ್ಥಿಸುತ್ತಿದ್ದೇನೆ, ನಮಸ್ಕಾರ.      

20 comments:

  1. ಪ್ರತಾಪ್ ಸಿಂಹರ ಲೇಖನ ಅವರ ಮೇಲಿರುವ ನನ್ನ ಸದಭಿಪ್ರಾಯವನ್ನು ತಲೆಕೆಳಗು ಮಾಡಿದ ಲೇಖನ, ಇದರಿಂದ ತಿಳಿಯುವುದು ಏನೆಂದರೆ ಕನ್ನಡ ಸುದ್ದಿ ಚಾನೆಲ್ ಗಳು ತಮ್ಮ ಚಾನೆಲ್ ನ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ನೊಣ ಸತ್ತರೂ ಬ್ರೇಕ್ ನಂತರ ನೋಡಿ ಎಂದು ಜನರನ್ನ ಪೆದ್ದು ಮಾಡಕ್ಕೆ ಹೊರಟಿವೆ, ಹಾಗೆ ಈತ ತನ್ನ ಪ್ರಚಾರದಲ್ಲಿ ತನ್ನ ರೇಟ್ ಹೆಚ್ಚಿಸಿಕೊಳ್ಳಲು ವಿವಾದವಾಗಬಲ್ಲಂತ ವಿಷಯಕ್ಕೆ ಕೈ ಹಾಕಿದ್ದಾನೆ, ಎಲ್ಲರಿಗೂ ಪ್ರಚಾರ ಗಿಟ್ಟಿಸಿಕೊಳ್ಳೋಕೆ ಸುಲಭವಾಗಿ ಸಿಗುವುದು ಹಿಂಧೂ ಧರ್ಮವಲ್ಲವೇ.... ಸುಮ್ಮನಿದ್ದರೆ ಇಂತಹ ಇನ್ನಷ್ಟು ಮಂದಿ ನಾಯಿಕೊಡೆಗಳಂತೆ ಬೆಳೆಯಲಾರಂಬಿಸುತ್ತೆ

    ReplyDelete
  2. TRP ಹುಚ್ಚು ಜಾಸ್ತಿ ಆದಾಗ ಮೀಡಿಯಾದವರು ಯಾವ ಮಟ್ಟಕ್ಕೆ ಇಳಿಯುವರೆಂಬುದನ್ನು ಕತ್ತಲೆಯಲ್ಲಿ ಬೆತ್ತಲಾದವರ ಹುಚ್ಚು ಲೇಖನ ತೋರಿಸಿದೆ.
    ಒಳ್ಳೆ ಅಂಕಣವೆಂದರೆ ಏನೆಂದು ನಿಮ್ಮ ಈ ಲೇಖನ ಓದಿದರೆ ಅರ್ಥವಾಗುತ್ತದೆ.ಹಕ್ಕಿಯ ಹೆಗಲೇರಿ ........ಲೆಖನ ಬಹಳ ಚೆನ್ನಾಗಿ ಮೂಡಿ ಬಂದಿದೆ.

    ReplyDelete
  3. ಅರ್ಥಪೂರ್ಣ ಲೇಖನ, ಮೀಡಿಯಾಗಳು ಇನ್ನಾರು ಇಂತಹ ಕುತಂತ್ರ ಬಿಡಬೇಕು

    ReplyDelete
  4. ಸಹವಾಸದಂತೆ ಬುದ್ದಿ, ಆಹಾರದಂತೆ ಲದ್ದಿ ಅನ್ನೋ ಗಾದೆ ನ್ಣದ್ರೂ ನೆನಪಿದಿದ್ರೆ ಸಾಕಿತ್ತು...ಸಿಂಹಕ್ಕೆ....

    ReplyDelete
  5. ನಿರೀಕ್ಷೆಯಲ್ಲಿದ್ದೆ. ಸರಿಯಾಗಿ ಬರೆದಿದ್ದೀರ. ಎಲ್ಲ ರೀತಿಯ ಆಧಾರಪೂರ್ವಕ ಉತ್ತರ. ಒಳ್ಳೆಯ ಲೇಖನ.

    ReplyDelete
  6. ಇದನ್ನ ಕನ್ನಡ ಪ್ರಭದವರು ಎದೆ ಗಾರಿಕೆ ಇದ್ದರೆ ಪ್ರಕಟಿಸಲಿ ನೋಡಾ...? ವಿಶ್ವೇಶ್ವರ ಭಟ್ ರಲೇಖನಕ್ಕಾಗೆ ನಾನು ತರಿಸುತ್ತಿದ್ದೆ.. ಇನ್ನು ನಿಲ್ಲಿಸಬೇಕು.. ಇದನ್ನ ಬೇಡ ಈ ಹುಚ್ಚರ ಪತ್ರಿಕೆ.

    ReplyDelete
  7. ನೀವನ್ನುತ್ತಿರುವುದು ಸರಿ. ಕನ್ನಡಪ್ರಭ ಬೆಂಕಿಗೆ ತುಪ್ಪಸುರಿಯುವ ಪತ್ರಿಕೆಯೆಂದೇ ಅನ್ನಿಸುತ್ತದೆ.

    ReplyDelete
  8. ವಿಚಾರಪೂರ್ಣ ಲೇಖನ‌ :)

    ReplyDelete
  9. ಬಹಳ ಉತ್ತಮ ವಿಚಾರ ವಿಶ್ಲೇಷಣೆ. 'ಕತ್ತೆಗೆ ತಿಳಿವುದೇ ಕಸ್ತೂರಿ ಪರಿಮಳ!. ಸ್ವಾಮೀಜಿಯವರ ಮಾತಿನ ಅಂತರಾರ್ಥವನ್ನು ತಿಳಿಯಲು ಅಸಾಧ್ಯವಾದ ಇಂತವರೀಗೆ ಭಗವದ್ಗೀತೆ ಎಲ್ಲಿಂದ ಅರ್ಥ ಆದೀತು. ಮಾತಿನ ಮೇಲ್ಮೈ ಅರ್ಥಮಾಡಿಗೊಳ್ಳುವ ಈ ತರದ ಬುದ್ಧಿಜೀವಿಗಳು ನಿಜವಾದ ಅವಿವೇಕಿಗಳೇ ಸರಿ.

    ವಿವಿಧ ಧರ್ಮ, ಜಾತಿ, ಪಂಗಡ ಯಾಕೆ ಬೇಕು ? ಹುಟ್ಟಿನಲ್ಲಿ ಗಂಡು ಹೆಣ್ಣು ಎಂಬುದು ಮಾತ್ರ ನಿಮ್ಮ ಗೌರವದ ಮಾತಾಗಿದ್ದರೆ ಮೊದಲು ಪ್ರಪಂಚದಲ್ಲಿ ಮೊದಲು ಯಾವ ಧರ್ಮವೂ ಇಲ್ಲ, ಬೇಡ, ಜಾತಿಯೇ ಇಲ್ಲ ಅಂತ ಹೋರಾಡಿ. ಪ್ರಪಂಚದಾದ್ಯಂತ ನೀವು ಪ್ರಚಾರಗಳಿಸುವಿರಿ ಓ ಬುದ್ಧಿಜೀವಿಗಳೇ. ವಾಸ್ತವವನ್ನು ಅರ್ಥಮಾಡಿಗೊಳ್ಳುವಲ್ಲಿ ಆಸಕ್ತರಾದ ಇಂತವರು ದಯವಿಟ್ಟು ಬಾಯಿಮುಚ್ಚಿ ಕೂತುಕೊಳ್ಳುವುದೇ ನೀವು ಸಮಾಜಕ್ಕೆ ಮಾಡುವ ಬಲುದೊಡ್ಡ ಉಪಕಾರ.

    ReplyDelete
    Replies
    1. Bhaja Govindam!

      Iddanu Explain madalu Prthap Simhanige Agatta?

      Delete
  10. ನಿಮ್ಮ ಲೇಖನ ನಿಜಕ್ಕೂ ಚೆನ್ನಾಗಿದೆ ಮತ್ತು ವಾಸ್ತವದ ಮೇಲೆ ಬೆಳಕು ಚೆಲ್ಲುತ್ತಿದೆ. ನಿನ್ನೆ ಮೊನ್ನೆ ಹುಟ್ಟಿಕೊ೦ಡ ಸಿ೦ಹಗಳ ಪ್ರತಾಪ ಹೇಗಿದೆಯೆ೦ದರೆ, ತಾವ೦ದಿದ್ದೇ ವೇದವಾಕ್ಯ ಎ೦ಬ ಜ೦ಬ ಅವರ ತಲೆಗೆ ಅಡರಿದೆ. ಗೊತ್ತಿರುವುದು ಅಲ್ಪವೇ ಆದರೂ ತಾನೇ ಮಹಾನ್ ಎ೦ಬ ಹಮ್ಮು ಬಿಮ್ಮು ಅವರಲ್ಲಿದೆ. ಸ್ವಾಮಿಗಳು ಹೇಳಿದ ಮಾತಿನಲ್ಲಿರುವ ಕಟುಸತ್ಯ ಅವರಿಗೆ ಅಪಥ್ಯ. ಒ೦ದು ದಿನಪತ್ರಿಕೆಯನ್ನು ವೇದಿಕೆಯನ್ನಾಗಿಸಿ ಇ೦ತಹ ವಿಚಾರವನ್ನು ಪ್ರಮುಖ ಸುದ್ದಿಯಾಗಿಸಿ ಪ್ರಕಟಿಸಿದ್ದು ಕೂಡ ಆ ಪತ್ರಿಕೆಯ ಮೌಲ್ಯವನ್ನು ಸಾಕ್ಷೀಕರಿಸುತ್ತದೆ. ನಿಮ್ಮಿಂದ ಈ ಲೇಖನ ನಿರೀಕ್ಷಿಸಿದ್ದೆ.

    ReplyDelete
  11. ಭಟ್ಟರೆ,
    ಪ್ರತಾಪಸಿಂಹರು ದಾರಿ ತಪ್ಪುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿದ್ದೀರಿ.

    ReplyDelete
  12. ನಾವು ಬ್ರಾಹ್ಮಣರನ್ನು ಗೌರವಿಸುವುದು ಅವರ ಉಚ್ಚ ನಡೆತಗೆ.ಅದನ್ನು ಅವರು ಕಾಪಾಡಿಕೊಳ್ಳುವುದು ಅವರ ಧರ್ಮ .ಗುಜರಿ ಅಂಗಡಿ ಭಾಸೀರನಿಗೂ ಪ್ರತಾಪಸಿಂಹರಿಗೂ ಯಾವದೇ ವ್ಯತ್ಯಾಸವಿಲ್ಲ.ಬಾಡೂಟದ ಜೊತೆಗೆ ಗಾಂಧಿಜಯಂತಿ! ಲೇಖನದಲ್ಲಿ ಬಶಿರ ಎಂಬುವರು ಹಾಗೆ ಬರೆದಿದ್ದಾರೆ (ಗುಜರಿ ಅಂಗಡಿ blog)

    ReplyDelete
  13. ಲೇಖನವು ಉತ್ತಮವಾಗಿ ಮೂಡಿಬಂದಿದೆ. ವಿಶ್ಲೇಷಣೆ ಚೆನ್ನಾಗಿದೆ. ಮತ್ತೊಂದು ಗಮನಿಸ ಬೇಕಾದ ಅಂಶ - "ಸಹನೌ ಭುನಕ್ತು" ವೇದವಾಕ್ಯದ ಬಗ್ಗೆ. ತೈತ್ತಿರೀಯ ಉಪನಿಷತ್ತಿನ ಈ ಶಾಂತಿ ಮಂತ್ರ ಗುರು-ಶಿಷ್ಯರ ನಡುವಿನ ಸಂಬಂಧ ಹಾಗೂ ದೀಕ್ಷೆಯ ಕುರಿತದ್ದಾಗಿದೆ. " ಸಹ ನೌ ಭುನಕ್ತು" - ನೌ ಅಂದರೆ ನಮ್ಮಿಬ್ಬರನ್ನು ( ಗುರು-ಶಿಷ್ಯರನ್ನು) ಸಹ ಅಂದರೆ ಜೊತೆಯಾಗಿ ಭುನಕ್ತು ತಿನ್ನಲ್ಪಡಲಿ. ನಮ್ಮಿಬ್ಬರನ್ನು ಜೊತೆಯಾಗಿ ತಿನ್ನಲ್ಪಡಲಿ ಅಂದರೆ ಜ್ಞಾನದಾತೃವಿನಲ್ಲಿ ಹಾಗೂ ಜ್ಞಾನಪಾತ್ರನಲ್ಲಿ (ವಿದ್ಯಾರ್ಥಿಯಲ್ಲಿ) ಉಂಟಾಗುವ (ಜನ್ಯವಾಗುವ) ಜ್ಞಾನವು ಅವನಿಂದ (ಜ್ಞಾನಕ್ಕೆ ವಿಷಯನಾದ ಭಗವಂತನಿಂದ) ಭೋಗಿಸಲ್ಪಡಲಿ ( ಸ್ವೀಕರಿಸಲ್ಪಡಲಿ) ಎಂಬ ಮಹಾನ್ ಆಶಯ-ಅರ್ಥಗಳುಳ್ಳ ಮಂತ್ರಕ್ಕೆ, ಸಹಪಂಕ್ತಿಯಲ್ಲಿ ಎಲ್ಲರೂ ತಿನ್ನಬೇಕೆಂಬ ಅರ್ಥ ಬರುವುದಕ್ಕೆ ಹೇಗೆ ಸಾಧ್ಯ? ನೌ ಎಂಬುದು ಅಸ್ಮದ್ ಶಬ್ದದ ದ್ವಿತೀಯಾ ವಿಭಕ್ತಿ ದ್ವಿವಚನ. ಬಹುವಚನಪ್ರಯೋಗ ಅಲ್ಲಿಲ್ಲ. ಬಾಯಿಗೆ ಬಂದಂತೆ ಯಾರು ಬೇಕಾದರೂ ...ಎನು ಬೇಕಾದರೂ ಬರೆದು " ಇದರ ಅರ್ಥ ಗೊತ್ತೇ ಸ್ವಾಮೀಜೀ? ವೇದವನ್ನು ಓದಿದ್ದೀರಾ" ಎಂದು ಮೂರ್ಖತನಲ್ಲಿ ಕೇಳುವ ಪ್ರಶ್ನೆಯನ್ನು ಮಾತ್ರ ಪ್ರಕಟಿಸಿ, ಅದಕ್ಕೆ ಕಳುಹಿಸುವ ಉತ್ತರವನ್ನು ಪ್ರಕಟಿಸುವ ಧೈರ್ಯ ತೋರದ ಬಾಯಿಬಡುಕ ಪತ್ರಕರ್ತರಿಗೆ ಏನನ್ನ ಬೇಕು ನೀವೇ ಹೇಳಿ!!!!

    ReplyDelete
  14. I have lost the respect to visveshwara Bhat. I was the regular reader if bettale Jagath but I have stopped reading long back. KP has published this article to increase it's TRP. I will stop publishing KP. Can bettale pratap simha can answer to the explanation given by Sheshagiri? Well said Sheshagiri and Bhat avare

    ReplyDelete
  15. ಅರ್ಥಪೂರ್ಣ ಲೆಖನ !!!!!!!!!!!!!!!

    ReplyDelete
  16. Dear sir,
    Now a days lot of people criticizing director Girish kasaravalli.People are unnecessarily questioning his commitment to cinema in kannadaprbha new paper. Sir why don't you write an article to support of Girish kasaravalli.? Please write a article on it.

    ReplyDelete
  17. ಒ೦ದು ಮೂರ್ಖ ಅನಗತ್ಯ ಲೇಖನಕ್ಕೆ ವಿ.ಆರ್.ಭಟ್ ರವರ ವಿಶ್ಲೇಷಣೆ ಸಮಚಿತ್ತದ ಪ್ರತಿಕ್ರಿಯಾತ್ಮಕ ಬರಹ ನಿಜಕ್ಕೂ ಚಿ೦ತನೀಯವಾಗಿದೆ.
    ಬೆತ್ತಲೆ ಪ್ರಪ೦ಚದ ಲೇಖಕರ ವ್ಯಕ್ತಿತ್ವ ಹಾಗೂ ಧೋರಣೆ ಸ೦ಪೂರ್ಣ ಬೆತ್ತಲೆಯಾಗಿದೆ. ನಿಜಕ್ಕೂ ಇ೦ತಹ ಅವಹೇಳನಕಾರೀ ಬರಹ ಹೇಳಿಕೆಗಳು ಟೀಕೆಗಳು ಪ್ರವಾಹದೋಪಾದಿಯಲ್ಲಿ ಬ೦ದರೂ ಸಮಚಿತ್ತ ಕಳೆದುಕೊಳ್ಳದೆ ಶಾ೦ತವಾಗಿ ನಿವೇದಿಸಿಕೊ೦ಡಿರುವ ಪೇಜಾವರ ಸ್ವಾಮಿಗಳು ನಿಜಕ್ಕೂ ಅನುಕರಣೀಯ ಹಾಗೆಯೇ ಹಲವಾರು ದಶಕಗಳಿ೦ದ ತನ್ನ ಮೇಲೆ ನಿರ೦ತರ ಪ್ರಹಾರ ಅವಮಾನವಾಗುತ್ತಿದ್ದರೂ ತಾಳ್ಮೆಯನ್ನು ಕಳೆದುಕೊಳ್ಳದೆ ತನ್ನ ಆದರ್ಶ ಸಾತ್ವಿಕ ಸ೦ಯಮವನ್ನು ಪ್ರದರ್ಶಿಸುತ್ತಿರುವ ವಿಪ್ರ ಸಮಾಜ ನಿಜಕ್ಕೂ ಅಭಿನ೦ದನೀಯ. ಇ೦ತಹ ಸ೦ಯಮ ಬಹುಶಃ ಬೇರಾವ ಸಮುದಾಯದಲ್ಲೂ ಕಾಣಸಿಗದು. ಬಹುಶಃ ಇದರ ದುರುಪಯೋಗದ ಫಲವಾಗಿ ಕೆಲವು ಸಿ೦ಹಗಳು ಪ್ರತಾಪದಿ೦ದ ಘರ್ಜಿಸುತ್ತಿವೆ. ಸತ್ಯವನ್ನು ತುಳಿಯಲಾಗದು.
    ಡಾ ಜ್ನಾನದೇವ್ ಮೊಳಕಾಲ್ಮುರು

    ReplyDelete
  18. ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಭಟ್ ಸಾರ್. ಪತ್ರಿಕೆಯಲ್ಲಿ ಬಾಯಿಗೆ ಬಂದಂತೆಲ್ಲಾ ವಿಶ್ಲೇಷಣೆ ಮಾಡಿ ಬರೆದವರು ಓದಿದರೆ ಚೆನ್ನಾಗಿತ್ತು... ಧನ್ಯವಾದಗಳು

    ಶ್ಯಾಮಲ

    ReplyDelete