ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, March 26, 2012

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೇ ...


ಚಿತ್ರಋಣ: ಅಂತರ್ಜಾಲ
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೇ ...

ಆಧುನಿಕತೆಯೆಂಬ ಕೆಟ್ಟಸುಂಟರಗಾಳಿಗೆ ಬಲಿಯಾದ ಭಾರತೀಯ ಮೂಲದ ಸಂಸ್ಕೃತಿಯಲ್ಲಿ, ಮನೆಯಲ್ಲಿ ಸಾಯಂಕಾಲ ಹೇಳಿಕೊಡುತ್ತಿದ್ದ ಸಂಧ್ಯಾಸ್ಮರಣೆಗಳೂ ಬಾಯಿಪಾಠವೂ ಸೇರಿವೆ. ಒಂದಾನೊಂದು ಕಾಲದಲ್ಲಿ ನಮ್ಮ ಪೂರ್ವಜರು ತಮ್ಮ ಮುಂದಿನ ಪೀಳಿಗೆ ಉತ್ತಮವಾದುದೆಲ್ಲವನ್ನೂ ಕಲಿತು ಒಳಿತನ್ನು ಸಾಧಿಸಲಿ ಎಂಬ ಸದಾಶಯದಿಂದ ಒಳ್ಳೊಳ್ಳೆಯ ಕಥಾನಕಗಳನ್ನೂ ಪ್ರಾತಃಕಾಲದಲ್ಲಿ, ಸಾಯಾಂಕಾಲದಲ್ಲಿ ಹೇಳಿ ನೆನಪಿಸಿಕೊಳ್ಳಬೇಕಾದ ಆದರ್ಶ ಸ್ತ್ರೀ/ಪುರುಷರ ಸ್ಮರಣೆಗಳು ಅಡಕವಾಗಿರುವ ಶ್ಲೋಕಗಳನ್ನೂ ಎಳೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದರು. ಅದರ ಫಲವಾಗಿಯೇ ನಮಗೂ ನಮ್ಮ ಹಿಂದಿನ ತಲೆಮಾರುಗಳಿಗೂ ಭಾರತೀಯ ಸಂಸ್ಕೃತಿಯ ಪರಿಚಯ ಸಮರ್ಪಕವಾಗಿ ಆಗುತ್ತಿತ್ತು.

ಎಡಪಂಥೀಯರು ಎಂಬ ’ಸಮಾಜ ಸುಧಾರಕರು’ ಬೆಳೆದು ಅವರುಗಳ ರೆಕ್ಕೆ ಬಲಿತು ಕೆಟ್ಟದ್ದನ್ನೇ ಒಳ್ಳೆಯದೆಂದು ಬೋಧಿಸುವ ಮತ್ತು ಅಂತಹ ಬೋಧನೆಯ ಮೂಲಕ ತಮ್ಮ ಬೇಳೇ ಬೇಯಿಸಿಕೊಳ್ಳುವ ಕೆಲಸ ಆರಂಭವಾದಮೇಲೆ, ಯಾರಾದರೂ ಕೆಲವರು ಉತ್ತಮವಾದುದನ್ನು ಹೇಳಿದರೆ ಸಾಕು ಅವರಿಗೆ ಪುರೋಹಿತಶಾಹಿ ಎಂದೋ ಆರ್.ಎಸ್.ಎಸ್. ಎಂದೋ ಹಣೆಪಟ್ಟಿ ಹಚ್ಚುವವರು ತಯಾರಾಗಿರುವುದೂ ಮತ್ತು ಇಂದಿನ ಸಮಾಜದಲ್ಲಿ ಬಹುತೇಕ ಆ ಜನ ತಮ್ಮ ಮಾತೇ ನಡೆಯಬೇಕು ಎಂಬ ವಿಕೃತ ಧೋರಣೆ ತಳೆದಿರುವುದೂ ಸಮಾಜ ಅಧೋಗತಿಗೆ ಇಳಿಯಲು ಕಾರಣವಾಗಿದೆ. ತಪ್ಪನ್ನು ತಪ್ಪು ಎನ್ನುವಹಾಗಿಲ್ಲ, ಕುಡುಕನಿಗೆ ಕುಡಿಯುವುದು ಒಳ್ಳೆಯದಲ್ಲಾ ಎಂದು ತಿಳಿಹೇಳುವ ಹಾಗಿಲ್ಲ, ಎಲ್ಲೆಲ್ಲೂ ’ಬುದ್ಧಿಜೀವಿಗಳ’ ಸಂಘ ಕೆಲಸಕ್ಕೆ ಬಾರದ ಹಾವಿನಬುಟ್ಟಿಯ ಚೀಲ ಹೆಗಲಿಗೇರಿಸಿಕೊಂಡು ಓಡಾಡುತ್ತಿರುತ್ತದೆ! ಮಹಾತ್ಮರ ಬಗ್ಗೆ, ಸಾಧಕರ ಬಗ್ಗೆ, ರಾಷ್ಟ್ರಭಕ್ತರ ಬಗ್ಗೆ ಪಠ್ಯಗಳಲ್ಲಿ ಒತ್ತಾಯಪೂರ್ವಕ ಇಲ್ಲದ್ದನ್ನೇ ಬರೆಯಲಾಗುತ್ತಿದೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಂತಿಂಥವರು ಭಾಗವಹಿಸಿ ತಮ್ಮ ಪ್ರಾಣಾರ್ಪಣೆಗೈದರು ಎಂದರೆ ಸಾಕು ಮತ್ತೆ ಅಲ್ಲಿ ಆರ್.ಎಸ್.ಎಸ್ ಎಂದು ಸಂಬೋಧಿಸುತ್ತಾರೆ. ಈ ದೇಶದ ಮೂಲನಿವಾಸಿಗಳೆಲ್ಲಾ ಒಂದು ಕಾಲಕ್ಕೆ ಹಿಂದೂಗಳೇ ಆಗಿದ್ದರು. ಪರಕೀಯ ಮತಾಂಧರ ದಾಳಿಯ ಪರಿಣಾಮವಾಗಿ ಬಲವಂತವಾಗಿ ಮತಾಂತರಗೊಂಡ ಅನೇಕ ಹಿಂದೂಗಳೇ ನಮ್ಮ ನೆಲದಲ್ಲಿ ಅಲ್ಪಸಂಖ್ಯಾತರೆಂದು ಘೋಷಿಸಿಕೊಂಡರು. ಬರುಬರುತ್ತಾ ಅಲ್ಪ ಹೋಗಿಬಿಟ್ಟಿದೆ. ಈಗ ಯಾರೂ ಅಲ್ಪಸಂಖ್ಯಾತರಿಲ್ಲ. ಆದರೂ ತಾವು ಅಲ್ಪಸಂಖ್ಯಾತರು ತಾವು ಹೇಳಿದ್ದನ್ನೇ ನೀವು ಕೇಳಿ ಎಂದು ವಾದಿಸುವ ಜನಾಂಗಗಳೂ ಇವೆ! ಭಾರತ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಈ ದೇಶದ ಮೂಲನಿವಾಸಿಗಳ ಸಂಸ್ಕೃತಿ ಕಾರಣವಾಗಿತ್ತೆಂಬುದು ಇತಿಹಾಸ ಮತ್ತು ಪುರಾಣಗಳಿಂದ ತಿಳಿದುಬರುತ್ತದೆ. ಪುರಾಣಗಳೆಂದರೆ ಅವುಗಳೂ ಇತಿಹಾಸಗಳೇ ಆಗಿವೆ! ರಾಮ ಹುಟ್ಟಿದ ನೆಲದಲ್ಲಿ ರಾಮನನ್ನೇ ಅಲ್ಲಗಳೆಯುವ ಸಂಸ್ಕೃತಿಗಳು ವಿಜೃಂಭಿಸುವುದು ಯಾವ ಸುಧಾರಣೆಯ ದ್ಯೋತಕ ಹೇಳಿ? ಹಿಂದೂಗಳ ನೆಲದಲ್ಲೇ ಹಿಂದೂಗಳಿಗಿಂತ ತಮಗೇ ಮಹತ್ತರ ಸ್ಥಾನಕೊಡಿ ಎಂದು ಕೇಳುವುದು ಯಾವ ನ್ಯಾಯ ಸ್ವಾಮಿ ?

ಅಷ್ಟಕ್ಕೂ ಸನಾತನ ಧರ್ಮ ಉತ್ಕೃಷ್ಟ ಮಾನವೀಯ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿದಂಥದ್ದು; ಅದು ಹಿಂದೂ ಇಂದೂ ಮುಂದೂ ಎಂದೆಂದೂ! ಖ್ಯಾತ ಹೃದಯತಜ್ಞೆಯೂ ಉತ್ತಮ ಬರಹಗಾರ್ತಿಯೂ ಆದ ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ಪಾಶ್ಚಾತ್ಯ ದೇಶಗಳಿಗೆ ತೆರಳುವಾಗ ತಮಗಾದ ಅನುಭವಗಳನ್ನು ದಿನಪತ್ರಿಕೆಯೊಂದರಲ್ಲಿ ಹಂಚಿಕೊಂಡಿದ್ದಾರೆ. ವಿದೇಶೀಯರು ಇಲ್ಲಿನ ಯೋಗ, ಆಯುರ್ವೇದ, ವ್ಯಾಯಾಮ, ಧ್ಯಾನ ಇವುಗಳತ್ತ ಎಷ್ಟು ಆಕರ್ಷಿತರಾಗಿದ್ದಾರೆ ಎಂಬುದು ಅವರ ಇತ್ತೀಚಿನ ಒಂದು ಲೇಖನದಿಂದ ತಿಳಿಯಿತು. ವಿದೇಶದ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವೊಂದರಲ್ಲಿ, ವಿದೇಶೀಯಳೊಬ್ಬಳ ವಿನಂತಿಯ ಮೇರೆಗೆ ಆಕೆಯ ಶ್ರದ್ಧೆಯನ್ನರಿತು, ಸಿಕ್ಕ ತುಸು ವಿರಾಮಕಾಲದಲ್ಲೇ ಸೂರ್ಯನಮಸ್ಕಾರಗಳನ್ನು ಕಲಿಸಿದ ಬಗ್ಗೆ ಅವರು ಬರೆದಿದ್ದರು. ಅದೇ ರೀತಿ ಮೊನ್ನೆ ಓರ್ವ ವಿದೇಶೀ ಮಹಿಳೆ ಅದ್ಬುದರೋಗದಿಂದ ಬೆಂಗಳೂರಿನಲ್ಲೇ ಮರಣಿಸಿದಳು-ಆಕೆಯ ಬಯಕೆ ಹಿಂದೂ ಪದ್ಧತಿಯಂತೇ ತನ್ನ ಅಂತ್ಯೇಷ್ಟಿಗಳು ನಡೆಯಬೇಕು ಎಂಬುದಾಗಿತ್ತು! ಸಾವಿನ ಬಾಗಿಲಲ್ಲಿರುವಾಗಲೂ ಆಕೆ ಭಾರತದ ಅನೇಕ ದೇವಸ್ಥಾನಗಳಿಗೆ ಭೇರ್‍ಟಿ ನೀಡಿದಳು. ಸತ್ತನಂತರ ಆಕೆಯ ಪತಿ ಆಕೆಯೆ ಇಚ್ಛೆಯಂತೇ ಅಂತ್ಯಸಂಸ್ಕಾರವನ್ನು ನಡೆಸಿದ್ದನ್ನು ಮಾಧ್ಯಮವಾಹಿನಿಯೊಂದು ಬಿತ್ತರಿಸಿತು.

ಈ ದಿನಗಳಲ್ಲಿ ನಡೆಯುವ ಯಾವ ಕ್ರೌರ್ಯದ/ಕಳ್ಳತನದ/ಕೊಲೆಸುಲಿಗೆಯ ಘಟನೆಯ ದಾಖಲೆಗಳನ್ನು ತೆಗೆದು ನೋಡಿದಲ್ಲಿ ವಿದೇಶೀಧರ್ಮಗಳವರೇ ಇರುತ್ತಾರಲ್ಲ, ಅದರಲ್ಲೂ ಒಂದೇ ಧರ್ಮಕ್ಕೆ ಸಂಬಂಧಿಸಿದ ಜನ ಜಾಸ್ತಿ ಕಾಣಿಸುತ್ತಿರುವುದರ ಹಿನ್ನೆಲೆಯ ಕುರಿತು ನಾವು ಕೆಲವರು ಚಿಂತನ-ಮಂಥನ ನಡೆಸುತ್ತಿದ್ದೆವು. ಅಲ್ಲಿ ನಮಗೆ ಕಾಣಸಿಕ್ಕ ಪ್ರಬಲ ಕಾರಣ ತಿನ್ನುವ ಅತ್ಯಂತ ತಾಮಸಾಹಾರ ಮತ್ತು ವಿಕಾರಗಳೇ ಸಂಸ್ಕಾರಗಳೆಂದು ಅರಿತು ನಡೆಯುವ ಕ್ರಮ! ಅಂತಹ ಜನರನ್ನು ಗುರುತಿಸಿ ನೀವು ಉತ್ತಮ ಸಂಸ್ಕಾರ ಪಡೆಯಿರಿ, ಉತ್ತಮ ಬಾಳ್ವೆ ನಡೆಸಿ, ಮನುಷ್ಯರಾಗಿ ಎಂದರೆ ಮತ್ತೆ ’ಸಮಾಜ ಸುಧಾರಕರು’ ನಮಗೆ ಕಲ್ಲು ಹೊಡೆಯಲು ಬರುತ್ತಾರೆ; ನಮ್ಮ ವಿರುದ್ಧ ಅವರನ್ನು ಸೇರಿಸಿಕೊಂಡು ಹಾದಿಬೀದಿಯಲ್ಲಿ ಕೂತು ’ಸತ್ಯಾಗ್ರಹ’ ಎನ್ನುತ್ತಾರೆ!

ಇಂದಿನ ಯುವ ಜನಾಂಗ ಸಂಸ್ಕಾರ ರಹಿತವಾಗುತ್ತಿದೆ. ಯಾರಿಗೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಸಕ್ತಿಯಿಲ್ಲ. ಆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವೂ ಇಲ್ಲ. ಬದಲಾಗಿ ತಮಗೆ ಏನೋ ಸ್ವಲ್ಪ ತಪ್ಪಾಗಿ ತಿಳಿದದ್ದನ್ನೇ ಸರಿಯೆಂದು ವಾದಿಸುತ್ತಾ ಎಲ್ಲರಿಗೂ ಅದನ್ನೇ ಮನದಟ್ಟುಮಾಡಿಸುವ ’ಸಮಾಜ ಸುಧಾರಕ’ ಕೆಲಸ ಮನೆಹಾಳರ ಕೆಲಸವಲ್ಲದೇ ಮತ್ತೇನೂ ಅಲ್ಲ. ನವಜೀವನವೆಂಬ ಸೋಗಿನ ವ್ಯವಹಾರದಲ್ಲಿ ಪ್ರೈವೇಸಿಯ ಅವಶ್ಯಕತೆ ಎನ್ನುತ್ತಾ ಮನೆಯ ಹಿರಿಯರನ್ನೂ ಒಡಹುಟ್ಟಿದವರನ್ನೂ ಬೇರೆ ಬೇರೆಯಾಗಿಸಿ ಪ್ರತ್ಯೇಕವಾಗಿ ಯಾ ವಿಭಕ್ತವಾಗಿ ಜೀವಿಸಲು ಆರಂಭಿಸಿದ ಕುಟುಂಬಗಳಲ್ಲಿ ಭಾರತೀಯ ಮೂಲದ ಸಂಸ್ಕಾರಕ್ಕೆ ಅದ್ಯತೆಯೂ ಇಲ್ಲ; ಅದನ್ನು ತಿಳಿಸುವ ಹಿರಿಯರೂ ಇರುವುದಿಲ್ಲ.

ನಮ್ಮ ಬಾಲ್ಯದಲ್ಲಿ ನಾವೆಲ್ಲಾ ಪುಣ್ಯವಂತರಾಗಿದ್ದೆವು: ನಮಗೆ ನಮ್ಮ ಹಿರಿಯರೆಲ್ಲರೊಟ್ಟಿಗೆ ಜೀವಿಸುವ ಅವಕಾಶ ದೊರೆತಿತ್ತು. ಅವರು ಹೇಳಿಕೊಡುವ ಉತ್ತಮ ಅಂಶಗಳು ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತಿದ್ದವು. ಹಸೀಗೋಡೆಗೆ ಹರಳಿಟ್ಟಹಾಗೇ ಎಳೆಯ ಮಕ್ಕಳ ಮನಸ್ಸೆಂಬುದೊಂದು ಹಸೀ ಹಸೀ ಗೋಡೆ! ಅದಕ್ಕೆ ಉತ್ತಮವಾದ ಬಣ್ಣ ಬಣ್ಣದ ಹರಳುಗಳನ್ನು ಆಗಲೇ ಜೋಡಿಸಬೇಕು. ಗೋಡೆ ಒಣಗಿದಮೇಲೆ ಹರಳು ಅಂಟಿಕೊಳ್ಳುವುದಿಲ್ಲ. ಅದೇ ಕಾರಣಕ್ಕೇ ನಮಗೆ ನಮ್ಮ ಹಿರಿಯರು ಹಲವು ಆದರ್ಶಗಳನ್ನು ತಿಳಿಸಿಕೊಟ್ಟು ಉಪಕಾರ ಮಾಡಿದರು.

ನಮ್ಮಷ್ಟಕ್ಕೆ ನಾವಿದ್ದರೂ ಪರಕೀಯ ಜನಾಂಗಗಳು ನಮ್ಮ ಜೀವನಧರ್ಮದಮೇಲೆ, ದೇವಸ್ಥಾನ-ಪೂಜಾಮಂದಿರಗಳ ಮೇಲೆ ದಾಳಿಮಾಡಿದ್ದರಿಂದಾಗಿ ಇಂದು ರಾಮಂದಿರ-ಬಾಬರೀ ಮಸೀದಿಗಳಂಥಾ ಹಲವು ಜಾಗಗಳು ಕಾಣಸಿಗುತ್ತವೆ. ಹಿಂದೂ ಸನಾತನಿಗಳು ಇನ್ನೊಂದು ಧರ್ಮದವರನ್ನು ಒತ್ತಾಯಪೂರ್ವಕವಾಗಿಯೋ ಮನಃಪರಿವರ್ತಿಸಿಯೋ ನಮ್ಮ ಧರ್ಮಕ್ಕೆ ಮತಾಂತರಮಾಡಲಿಲ್ಲ. ಎಲ್ಲರಿಗೂ ತಂತಮ್ಮ ಧರ್ಮದಲ್ಲೇ ಸ್ವತಂತ್ರವಾಗಿ ಒಳಿತನ್ನು ಕಾಣಲು ತಿಳಿಸಿದರೂ ಇಂದು ಹಿಂದೂ ಎಂದರೇ ಆರ್.ಎಸ್.ಎಸ್. ಎಂದು ಬೆರಳು ತೋರಿಸುವ ’ಸಮಾಜಸುಧಾರಕ’ರ ಸೋಗಿನ ಸಂಘಗಳು ಇರಬೇಕಾದರೂ ಯಾಕೆ? ಕಾಡಿನ ಆನೆ ನಾಡಿಗೇಕೆ ಬಂತು? -ಎಂಬುದರ ಕುರಿತು ಅವಲೋಕಿಸಿದಾಗ ಆನೆಗಳ ವಸಾಹತುಗಳನ್ನು ಮನುಷ್ಯ ತನ್ನದಾಗಿ ಮಾಡಿಕೊಳ್ಳತೊಡಗಿದ್ದರಿಂದ ಅವುಗಳ ಜೀವನಧರ್ಮಕ್ಕೆ ಕುತ್ತುಬಂದಿದೆ. ಕಾಡುಗಳಲ್ಲಿ ಆಹಾರ ನಾಶವಾದಾಗ ಹಸಿದ ಹೊಟ್ಟೆ ಹೊತ್ತು ನಾಡಿಗೆ ಆಹಾರ ಹುಡುಕುತ್ತ ಬಂದವು ಆನೆಗಳು! ಅದರಂತೇ ಹಿಂದೂ ಸನಾತನ ಧರ್ಮದ ನೆಲೆಗಟ್ಟಿನ ಪ್ರದೇಶವಾದ ಭಾರತದಲ್ಲಿ ಇಂದು ಹಿಂದೂ ಎಂಬ ಪದಪ್ರಯೋಗವನ್ನು ಮಾಡಲೂ ನಮಗೆ ಹಕ್ಕಿಲ್ಲದಂತಾಗುತ್ತಿರುವುದು ವಿಪರ್ಯಾಸವಲ್ಲದೇ ಮತ್ತೇನು ? ನೇರವಾಗಿ ಹೇಳಿಬಿಡುವುದಾದರೆ ಆರ್.ಎಸ್.ಎಸ್. ಇರದಿದ್ದರೆ ಭಾರತದಲ್ಲಿ ಹಿಂದೂ ಸನಾತನ ಧರ್ಮ ಅಳಿಸಿಹೋಗುವ ಪ್ರಮೇಯವಿತ್ತು. ನಿಜವಾದ ದೇಶಭಕ್ತ ಜನ ತಮ್ಮದೇ ಆದ ರೀತಿಯಲ್ಲಿ ಸನಾತನ ಧರ್ಮದ ಉಳಿವಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕಟ್ಟಿದರು. ಅಂತಹ ದಿವ್ಯಚೇತನಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತಿದ್ದೇನೆ.

ಕನ್ನಡ ಭಾಷೆಯ ಬಳಕೆಯ ಬಗ್ಗೆ ಕೆಲವರು ಮಾತನಾಡುತ್ತಾರೆ. ಹಾಗೆ ಮಾತನಾಡುವ ಬಹುತೇಕರಿಗೆ ಇಂದು ಕನ್ನಡದ ವ್ಯಾಕರಣ, ಛಂದಸ್ಸು, ಸಂಧಿ-ಸಮಾಸ ಇವುಗಳ ಬಗ್ಗೆ ಏನೇನೂ ಗೊತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸಮೋಸಕ್ಕೂ ಸಮಾಸಕ್ಕೂ ವ್ಯತ್ಯಾಸ ಗುರುತಿಸಲಾಗದವರು ಕಾವ್ಯ ಬರೆಯುತ್ತೇವೆ ಎನ್ನುತ್ತಾರೆ. ಎರಡಕ್ಷರ ಆಂಗ್ಲದಲ್ಲಿ ಕಂಡರೆ ಅದು ತಪ್ಪು ಎನ್ನುವ ಆ ಜನರಿಗೆ ಕನ್ನಡ ಸಾಹಿತ್ಯಕ ಭಾಷೆ ಎಷ್ಟರಮಟ್ಟಿಗೆ ಗೊತ್ತು ಎಂಬುದನ್ನು ಅವರೇ ಅರಿಯಬೇಕಾಗಿದೆ! ಬರೆದಿದ್ದೆಲ್ಲಾ ಕನ್ನಡವಾಗುವುದಿಲ್ಲವಲ್ಲ? ನವ್ಯ ಮತ್ತು ನವೋದಯ ಬಂದಮೇಲೆ ಕನ್ನಡ ಭಾಷೆ ಅಲ್ಲಲ್ಲಿ ದಡವಿಲ್ಲದ ನದಿಯಂತೇ ಕಂಡಲ್ಲಿ ಹರಿಯುತ್ತಿದೆ! ನದೀಪಾತ್ರಯಾವುದು ಬೇರೇ ಜಾಗಯಾವುದು ತಿಳಿಯದೇ ನದೀಪಾತ್ರವೇ ಮರೆಯಾಗಿ ಅಲೆಮಾರಿ ನದಿಯಾಗುವ ಸಂಭವನೀಯತೆ ಗಮನಿಸಿದ ಕೆಲವು ಗಣ್ಯರು ಇಂದಿಗೂ ಸಾಹಿತ್ಯಕ ಚೌಕಟ್ಟಿನಲ್ಲಿ ಭಾಷಾ ಪ್ರಯೋಗವನ್ನು ಮಾಡಲು ಬಯಸುತ್ತಿದ್ದಾರೆ. ಕಾಗುಣಿತ ದೋಷಗಳು ವಿಪರೀತವಾಗಿ, ’ಅ’ಕಾರ ಮತ್ತು ’ಹ’ಕಾರಗಳ ಸ್ಥಾನಬದಲಾವಣೆಯಾಗಿ, ಪರಭಾಷೆಗಳ ಪದಗಳೂ ಕನ್ನಡದಲ್ಲಿ ಸೇರಿಕೊಂಡು ಅಪ್ಪಟ ಕನ್ನಡ ಯಾವುದು ಎಂಬುದನ್ನು ಹುಡುಕಿಕೊಳ್ಳಬೇಕಾದ ಪ್ರಮೇಯವಿದೆ. ಸಂಸ್ಕೃತ ಪದಗಳಿಗೆ ಮಾತ್ರ ಕನ್ನಡದಲ್ಲಿ ಪರಕಾಯ ಪ್ರವೇಶಮಾಡುವ ಅಧಿಕಾರವಿದೆ ಯಾಕೆಂದರೆ ಸಂಸ್ಕೃತ ಕನ್ನಡಕ್ಕೆ ಮಾತೃಭಾಷೆ! ಪುರೋಹಿತಶಾಹಿ ಎಂಬ ಹೆಸರನ್ನು ಉಚ್ಚರಿಸುವ ಕೆಲವರಿಗೆ ಸಂಸ್ಕೃತ ಸತ್ತಭಷೆಯಾಗಿ ಕಾಣುತ್ತದೆ; ಕನಸಿನಲ್ಲೂ ಅರಗಿಸಿಕೊಳ್ಳಲಾಗದ್ದಕ್ಕೆ ಕಾಡುತ್ತದೆ! ಅರ್ಥಹೀನ ವಿತಂಡವಾದಿಗಳಿಗೆ ಉತ್ತರಿಸಿ ಅನಾವಶ್ಯಕ ಕಾಲಹರಣ ಮಾಡುವ ಬದಲು ಆ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿದ್ದೇನೆ. ಹೀಗಾಗಿ ಕೆಲವು ಕಡೆ ನನ್ನ ಬರಹಗಳ ಜಾಡುಹಿಡಿದು ಬರಲು ಕೊಡುವ ಸಂಪರ್ಕಕೊಂಡಿಯನ್ನೇ ನಾನು ನಿಲ್ಲಿಸಿದ್ದೇನೆ.

ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ನ್ಯಾಯವನ್ನು ಎತ್ತಿಹಿಡಿಯುವ ಕಾರಣದಿಂದ, ನಮ್ಮಲ್ಲಿ ಹಿಂದಕ್ಕೆ ರಾಮಾಯಣ ಮಹಭಾರತಗಳನ್ನು ನಿತ್ಯವೂ ಭಾರತೀಯರು ನೆನೆಯುತ್ತಿದ್ದರು. ವಿಸ್ತೃತವಾದ ರಾಮಾಯಣವನ್ನೂ ಭಾರತವನ್ನೂ ಅತಿಸಂಕ್ಷಿಪ್ತವಾಗಿ ಶ್ಲೋಕಗಳ ರೂಪದಲ್ಲಿ ಹೇಳುತ್ತಿದ್ದರು:

ಪೂರ್ವೌ ರಾಮ ತಪೋವನಾದಿ ಗಮನಂ
ಹತ್ವಾ ಮೃಗಂ ಕಾಂಚನಂ |
ವೈದೇಹೀ ಹರಣಂ ಜಠಾಯು ಮರಣಂ
ಸುಗ್ರೀವ ಸಂಭಾಷಣಂ |
ವಾಲೀನಿಗ್ರಹಣಂ ಸಮುದ್ರ ತರಣಂ
ಲಂಕಾಪುರೀ ದಾಹನಂ |
ಪಶ್ಚಾದ್ರಾವಣ ಕುಂಭಕರ್ಣ ಹನನಂ
ಏತದ್ದಿ ರಾಮಾಯಣಂ ||


ಆದೌ ದೇವಕಿದೇವಿ ಗರ್ಭ ಜನನಂ
ಗೋಪೀಗೃಹೇ ವರ್ಧನಂ |
ಮಾಯಾಪೂತನಿ ಜೀವಿತಾಪಹರಣಂ
ಗೋವರ್ಧನೋದ್ಧಾರಣಂ|
ಕಂಸಃ ಛೇದನ ಕೌರವಾದಿ ಹನನಂ
ಕುಂತೀಸುತಃ ಪಾಲನಂ |
ಏತದ್ಭಾಗವತಂ ಪುರಾಣ ಪುಣ್ಯ ಕಥಿತಂ
ಶ್ರೀಕೃಷ್ಣ ಲೀಲಾಮೃತಂ ||


ಇಂತಹ ದಿವ್ಯ ಮಂಗಳ ಶ್ಲೋಕಗಳು ಇಂದು ಯಾರ ಬಾಯಲ್ಲೂ ಕೇಳಬರುವುದಿಲ್ಲ. ಎಲ್ಲೆಲ್ಲೂ ವ್ಹಾಯ್ ದಿಸ್ ಕೊಲವೆರಿಯಂತಹ ಮಹಾಮಾರಿಯೇ ಹಬ್ಬಿದೆಯೇ ಬಿಟ್ಟರೆ ಉತ್ತಮವಾದುದು ಯಾರಿಗೆ ಬೇಕಾಗಿದೆ? ನಮಲ್ಲಿ ಊಟವಾದ ನಂತರ ಹಳ್ಳಿಗಳಲ್ಲಿ ಜನ ಜೀರ್ಣಕ್ರಿಯೆಗಾಗಿ ನಡೆದಾಡುವ ಪರಿಪಾಟವಿತ್ತು.

ಉಂಡುನೂರಡಿ ಎಣಿಸಿ ಕೆಂಡಕ್ಕೆ ಕೈಕಾಸಿ
ಗಂಡುಮೇಲಾಗಿ ಮಲಗಿದರೆ | ವೈದ್ಯನ
ಗಂಡಕಾಣಯ್ಯ-ಸರ್ವಜ್ಞ

ಊಟಮಾಡಿ ಕನಿಷ್ಠ ನೂರು ಹೆಜ್ಜೆಗಳನ್ನಾದರೂ ನಡೆದು, ಕೈಯ್ಯನ್ನು ತುಸು ಬಿಸಿಯಾಗಿಸಿ ಆರ್ದ್ರತೆಯನ್ನು ಆರಿಸಿಕೊಂಡು, ಅಂಗಾತ ಮಲಗಿದರೆ ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತ ವೈದ್ಯನನ್ನು ತತ್ಸಂಬಂಧೀ ಅಜೀರ್ಣಕಾಯಿಲೆಗೆ ಸಂಪರ್ಕಿಸುವ ಪ್ರಮೇಯ ಬರುವುದಿಲ್ಲ ಎಂಬುದು ಸರ್ವಜ್ಞನ ಹಿತವಚನ. ಹಾಗೆ ಊಟಮಾಡಿ ನಡೆದಾಡುವಾಗ ರಾಮಾಯಣ ಭಾರತಗಳನ್ನು ಈ ಮೇಲೆ ಹೇಳಿದ ಶ್ಲೋಕಗಳ ಮೂಲಕ ರಾಗವಾಗಿ ಹೇಳಿ ನೆನೆಯುತ್ತಿದ್ದರು ನಮ್ಮ ಹಿರಿಯರು.

ಹೆಂಗಳೆಯರನ್ನು ಕಡೆಗಣಿಸಿದ್ದರು ಎಂಬುದನ್ನು ನಾನಂತೂ ಒಪ್ಪುವುದಿಲ್ಲ:

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರಿ ತಥಾ |
ಪಂಚಕನ್ಯಾಸ್ಸ್ಮರೇನ್ನಿತ್ಯಂ ಮಹಾಪಾತಕ ನಾಶನಮ್ || --ಎಂದಿದ್ದಾರೆ ಪ್ರಾಜ್ಞರು.

ಮೇಲಾಗಿ ಯಾವುದೇ ಪೂಜೆ-ಪುನಸ್ಕಾರಗಳಿರಲಿ ಅಲ್ಲಿ ಸುಹಾಸಿನೀ ಮತ್ತು ಕನ್ಯಾಕುಮಾರೀ ಪೂಜೆಯನ್ನು ನೆರವೇರಿಸುತ್ತಿದ್ದರು. || ಯತ್ರನಾರ್ಯಸ್ತು ಪೂಜ್ಯಂತೇ ರಮಂತೇ ತತ್ರದೇವತಾ || ಎಂಬ ಪರಿಕಲ್ಪನೆ ಇಂದಿನ ಅಧುನಿಕರಲ್ಲಿದೆಯೇ? ಮಾತೆತ್ತಿದರೆ ’ಸಮಾಜಸುಧಾರಕರು’ ಹೆಂಗಸರನ್ನು ಕೀಳಾಗಿ ನೋಡಿದರು ಎಂದು ಅಲ್ಲಿ ಮತ್ತೆ ಒಡೆದಾಳುವ ಹುನ್ನಾರವನ್ನು ಸೃಜಿಸುತ್ತಾರಲ್ಲಾ ಹಿಂದಿನ ಶತಮಾನವನ್ನೇ ತೆಗೆದುಕೊಳ್ಳಿ ಇವತ್ತಿನಷ್ಟು ಮನೆಮುರುಕ ಜನಾಂಗ ಅಲ್ಲಿರಲಿಲ್ಲ! ವಿವಾಹ ವಿಚ್ಛೇದನಗಳು ಇಲ್ಲವೇ ಇಲ್ಲಾ ಎಂಬಷ್ಟು ಕಮ್ಮಿ ಇದ್ದವು! ಮುಂದುವರಿದ ನಾಗರಿಕತೆಯ ಇಂದಿನ ಜನಾಂಗದಲ್ಲಿ ಅದೂ ನಮ್ಮ ಬೆಂಗಳೂರಿನಲ್ಲಿ ತಿಂಗಳಲ್ಲಿ ನೂರಾರು ವಿಚ್ಛೇದನಗಳು ನಡೆಯುತ್ತಲಿವೆ ಎಂದರೆ ಇದಕ್ಕೆ ಭಾರತೀಯ ಸಂಸ್ಕೃತಿ ಕಾರಣವೇ? ಆರ್.ಎಸ್.ಎಸ್. ಕಾರಣವೇ? ಅಥವಾ ಹಣದ ವ್ಯಾಮೋಹ ಮತ್ತು ಲಿವ್-ಇನ್ ಥರದ ಪಾಶ್ಚಾತ್ಯ ಅಂಧಾನುಕರಣೆ ಕಾರಣವೋ ಎಂಬುದನ್ನು ಅವರವರೇ ಆತ್ಮವಿಮರ್ಶೆಮಾಡಿಕೊಳ್ಳಬೇಕಾಗಿದೆ.

ಸಿನಿಮಾಗಳ ಬಗ್ಗೆ ಹೇಳುತ್ತಲೇ ಇದ್ದೇನೆ. ಮೊನ್ನೆ ನಿರ್ದೇಶಕರೊಬ್ಬರು ಬೇಸರದಿಂದ ನಿವೃತ್ತರಾದರಂತೆ! ಕೋಟಿಗಳಲ್ಲಿ ಸಂಭಾವನೆ ಪಡೆಯುವ ನಾಯಕ ನಟರಿಂದ ಸಿನಿಮಾರಂಗದ ನಿರ್ದೇಶಕ ಮತ್ತು ನಿರ್ಮಾಪಕರು ದಿವಾಳಿ ಏಳುತ್ತಾರೆ ಎಂಬುದು ಅವರ ಅಭಿಪ್ರಾಯ. ನಾಯಕನಟರೋ ನಟಿಯರೋ ಅವರಿಗೆಲ್ಲಾ ಕೋಟಿಗಳಲ್ಲಿ ಕೊಟ್ಟು ಕಲಿಸಿದವರಾರು? ಅಷ್ಟಕ್ಕೂ ಇಂದಿನ ಸಿನಿಮಾಗಳಲ್ಲಿ ಯಾವ ನ್ಯಾಯ-ನೀತಿ ಕಥೆಗಳಿವೆ? ಆಪ್ತಮಿತ್ರ, ಆಪ್ತರಕ್ಷಕ, ಮುಂಗಾರುಮಳೆ ಮುಂತಾದ ಕಥೆಗಳನ್ನು ಆಧರಿಸಿದ ಚಿತ್ರಗಳು ಯಶಸ್ವಿಯಾಗಿದ್ದು ಕಾಣುತ್ತಿಲ್ಲವೇ? ಹಿಂದಿನ ನಿರ್ದೇಶಕರುಗಳು ಉತ್ತಮ ಕಾದಂಬರಿಗಳನ್ನೋ ಕಥೆಗಳನ್ನೋ ಆಯ್ದುಕೊಳ್ಳುತ್ತಿದ್ದರು, ತಕ್ಕಂತೇ ಪಾತ್ರಗಳನ್ನು ರೂಪಿಸಿ ಅವುಗಳನ್ನು ಪೋಷಿಸುವ ಉತ್ತಮ ಕಲಾವಿದರನ್ನು ಹುಡುಕುತ್ತಿದ್ದರು. ಅಲ್ಲಿ ಭರ್ಜರೀ ಸೆಟ್ ಗಳಿಗಿಂತಾ ಹೆಚ್ಚಾಗಿ ಭರ್ಜರೀ ಕಥೆಗಳು ರಾರಾಜಿಸುತ್ತಿದ್ದವು. ವಿಕೃತ ಸಂಭಾಷಣೆಗಳು ಇರುತ್ತಿರಲಿಲ್ಲ. ಸಿನಿಮಾ ಹಣಮಾಡಬೇಕೆಂಬ ಒಂದೇ ಉದ್ದೇಶದಿಂದ ಕೂಡಿರುತ್ತಿರಲಿಲ್ಲ. ಜನತೆಗೆ ಉತ್ತಮ ಸಂದೇಶವನ್ನು ಕೊಡುವ ಪ್ರಯತ್ನಗಳೂ ಸಿನಿಮಾಗಳ ಮೂಲಕ ನಡೆಯುತ್ತಿದ್ದವು. ಇಂದಿನ ನಿರ್ದೇಶಕರಿಗೆ ಚಾ ಕುಡಿದಷ್ಟೇ ಹೊತ್ತಿನಲ್ಲಿ ಸಿನಿಮಾಗಳು ತಯಾರಾಗಬೇಕು-ವರ್ಷಕ್ಕೆ ಹತ್ತಾರು ಸಿನಿಮಾಗಳು ಆಗಬೇಕು, ಕಿಸೆ ಭರ್ತಿಯಾಗುತ್ತಲೇ ಇರಬೇಕು. ಕೆಲವೊಮ್ಮೆ ನಿರ್ದೇಶಕ-ನಿರ್ಮಾಪಕ-ಸಂಭಾಷಣೆಕಾರ-ಸಂಗೀತನಿರ್ದೇಶಕ-ಗೀತೆರಚನೆಗಾರ ಎಲ್ಲವೂ ಒಬ್ಬನೇ: ಇದೊಂಥರಾ ಹುಂಡುಗುತ್ತಿಗೆ ಲೆಕ್ಕಾಚಾರ. ಅತಿಯಾದ ಕಮರ್ಷಿಯಲ್ ಫ್ಲಾಪ್ ಸಿನಿಮಾಗಳನ್ನು ನೀಡಿದ ನಿರ್ದೇಶಕರುಗಳಿಗೆ ನಿದ್ರೆಮಾತ್ರೆಯೇ ಗತಿಯಾಗುತ್ತದೆ. ಇದರ ವಿವೇಚನೆ ಬೇಡವೇ? ಮಚ್ಚು-ಲಾಂಗುಗಳ ಸಿನಿಮಾಗಳೇ ಅತಿಯಾಗಿರುವಾಗ ಉತ್ತಮ ಸಂಸ್ಕೃತಿಯನ್ನು ಸಮಾಜದಲ್ಲಿ ನಾವು ನಿರೀಕ್ಷಿಸಬಹುದೇ?

ದೀಪಮೂಲೇ ಸ್ಥಿತೋಬ್ರಹ್ಮಾ ದೀಪಮಧ್ಯೇ ಸ್ಥಿತೋ ಹರಿಃ |
ದೀಪಾಗ್ರೇ ಶಂಕರಃ ಪ್ರೋಕ್ತಂ ದೀಪರಾಜಾಯತೇ ನಮಃ ||

ಶಿವಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಂ |
ಮಮಶತ್ರು ಹಿತಾರ್ಥಾಯ ಸಂಧ್ಯಾಜ್ಯೋತಿರ್ನಮೋಸ್ತುತೇ ||

ಇಂತಹ ಸಾಯಂಕಾಲದ ಸ್ತುತಿಗಳು ಇಂದೆಲ್ಲಿ ಕಾಣಸಿಗುತ್ತವೆ? ಸಂಜೆ ಬೆಳಗುವ ದೀಪದಲ್ಲೂ ಜಗನ್ನಿಯಾಮಕ ಶಕ್ತಿಯನ್ನು ಕಂಡು ತನ್ನ ಶತ್ರು ಎಂದರೆ ಅಂಧಕಾರ, ಅದಕ್ಕೂ ಹಿತವನ್ನೇ ಬಯಸುವ ಆದರ್ಶವೆಂಥದು ನೋಡಿ! ಒಂದೊಮ್ಮೆ ಕಾರ್ಯಕಾರಣ ಶತ್ರುಗಳಿದ್ದರೂ ಅವರೆಲ್ಲರಿಗೂ ಸಹಿತ ಒಳಿತಾಗಲಿ ಎಂದು ಬಯಸುವ ಮನೋಗತವನ್ನು ಈ ಶ್ಲೋಕದಲ್ಲಿ ಕಾಣುತ್ತೇವೆ. ಇದು ಅನನ್ಯ ಸದೃಶವಾಗಿದೆ.

ಮುಗಿಸುವ ಮುನ್ನ ನಿಮಗೊಂದು ಗೀತೆಯನ್ನು ಕೇಳಿಸಲೇಬೇಕು. ಈ ಗೀತೆ ನನ್ನನ್ನು ಬಹಳವಾಗಿ ತಟ್ಟಿದೆ. ಕಂಚಿನಕಂಠದ ಗಾಯಕ ಪಿ.ಬಿ.ಶ್ರೀನಿವಾಸ್ ಹಾಡಿರುವ ಅಂದಿನ ಸಿನಿಮಾಗೀತೆ ಎಂತಹ ಸಂಸ್ಕಾರವನ್ನು ಬೋಧಿಸುತ್ತಿತ್ತು ಎಂಬುದು ತಿಳಿಯುತ್ತದೆ. ದೃಶ್ಯಗಳಲ್ಲಿ ಶಿಕ್ಷಕರು ಮಕ್ಕಳು, ಆ ಹಳ್ಳಿಯ ಶಾಲಾ ಪರಿಸರ, ಮಕ್ಕಳ ಮುಗ್ಧ ಮನೋಭಾವ ಇವುಗಳನ್ನೆಲ್ಲಾ ಭಾರತೀಯ ಸಂಸ್ಕೃತಿಯಾಧಾರದಲ್ಲಿ ಸೆರೆಹಿಡಿಯಲಾಗಿದೆ. ಹಾಡಿನ ಗಾಯಕರು, ಸಂಗೀತ ಅಳವಡಿಸಿದವರು, ತಂತ್ರಜ್ಞರು, ಕಲಾವಿದರು, ಮಕ್ಕಳು ಎಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸುತ್ತಾ ಇವತ್ತಿನ ಈ ಲೇಖನದಿಂದ ಬೀಳ್ಕೊಳ್ಳುತ್ತಿದ್ದೇನೆ, ತಾಯಿ ಶಾರದೆ ಎಲ್ಲರಿಗೂ ಓದು-ಬರಹಗಳನ್ನು ನೀಡಲಿ, ತನ್ಮೂಲಕ ಓದಿಕೊಂಡ ಜನ ಸಜ್ಜನರಾಗಲಿ, ಜಗತ್ತಿನಲ್ಲಿಯೇ ಆದರ್ಶಪ್ರಾಯವಾದ ಭಾರತೀಯ ಸನಾತನ ಸಂಸ್ಕೃತಿಯನ್ನು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ, ನಮಸ್ಕಾರ.





17 comments:

  1. Aatmeeya VRB,
    Tamma manassina novu, alalu khandita arthavayitu... nimage anantananta dhanyavaadgalu... yakendare nimma ee tarunyadalli istondu valleya chintanege neevu teredukondaddu abhimanavenisutte.. devaru nimma ee sadvichaaragala sarani sada hariyuvante maadali...nimma geletana saarthakavayitu, Bhattare.

    ReplyDelete
    Replies
    1. ನರಸಿಂಗರಾಯರೇ, ನಿಮ್ಮ ಅಭಿಮಾನ-ಪ್ರೀತಿಯ ಮಾತುಗಳಿಗೆ ಶರಣು ಸರ್. ಜಾಸ್ತಿ ಹೊಗಳಬೇಡಿ-ಅಜೀರ್ಣವಾದರೆ ಕಷ್ಟ!

      Delete
  2. ಸಣ್ಣ ತಿದ್ದುಪಡಿ, ಪಂಚಕಂ ನಾ ಸ್ಮರೇನ್ನಿತ್ಯಂ...
    ದೀಪಮೂಲೇ ಸ್ಥಿತೋ ಬ್ರಹ್ಮಾ....

    ReplyDelete
    Replies
    1. ಶ್ರೀಕಾಂತರೇ, ಪಂಚಕಂ ನಾ ಎಂದರೆ ಅರ್ಥವ್ಯತ್ಯಾಸವಾಗುತ್ತದಲ್ಲಾ ? ಹೇಗೆ ಋಷಿಮುನಿಗಳು ಗೃಹಸ್ಥರಾಗಿಯೂ ಬ್ರಹ್ಮಚಾರಿಗಳೆನಿಸಿದರೂ ಈ ಮೇಲೆ ಹೇಳಿದ ಪಂಚಕನ್ಯೆಯರೂ ಹಾಗೇ ಅವರು ಮದುವೆಯಾದರೂ ಕೆಲವು ಸರ್ತಿ ಸನ್ನಿವೇಶಗಳಿಂದ ಪತಿವ್ರತೆಯರಲ್ಲ ಎನಿಸಲೂ ಬಹುದಾದರೂ ಅವರು ಮನಸಾ ಪಾತಿವ್ರತ್ಯವನ್ನು ಕಾಪಾಡಿಕೊಂಡ ಜನ. ಹೀಗಾಗಿ ರಾಮಕೃಷ್ಣಾಶ್ರಮದ ಪುಸ್ತಕಗಳೂ ಸೇರಿದಂತೇ ಹಲವು ಹೊತ್ತಗೆಗಳಲ್ಲಿ ಪಂಚಕನ್ಯಾ ಎಂತಲೇ ಹೇಳಲ್ಪಟ್ಟಿದೆ!

      ದೀಪಮೂಲೇ ಸ್ಥಿತೋ ಬ್ರಹ್ಮಾ ....ಒಪ್ಪುತ್ತೇನೆ, ಇದನ್ನು ಪ್ರಾಂತೀಯವಾಗಿ ಎರಡೂ ರೀತಿಯಲ್ಲಿ ಬಳಸುವುದು ಕಾಣುತ್ತದೆ. ಧನ್ಯವಾದ.

      Delete
  3. ನಮಸ್ಕಾರ, ನಿಮಗೆ ಗೊತ್ತಿರಲಿಕ್ಕಿಲ್ಲ, ನಾನು ಕೂಡ ನಮಸ್ತೆ ಸದಾ ವತ್ಸಲೇ ಎನ್ನುತ್ತಲೇ ಸಂಘದ ಗರಡಿಯಲ್ಲಿ ನನ್ನ ಬಾಲ್ಯ ಕಳೆದವನು. 1980 ರ ದಶಕದಲ್ಲಿ ಸರಸಂಘ ಚಾಲಕರಾಗಿದ್ದ ಬಾಳಾ ಸಾಹೇಬ್ ದೇವರಸ್ ಮ೦ಗಳೂರಿಗೆ ಬಂದಿದ್ದಾಗ ನಾನು ಗಣವೇಷಧಾರಿಯಾಗಿ ಅಲ್ಲಿದ್ದೆ. ನಿಮ್ಮ ಬರಹ ಓದುತ್ತಲೇ ನನ್ನ ಬಾಲ್ಯದ ನೆನಪಾಯ್ತು. ಚೆಂದದ ಬರಹ.

    ReplyDelete
    Replies
    1. ನಮಸ್ಕಾರ, ಆನೆ ಹೋದದ್ದೇ ದಾರಿ ಎನ್ನುತ್ತಾರಲ್ಲಾ ಹಾಗೇ ಪರಾಂಜಪೆಯವರು ಹೋದದ್ದೇ ಮಾರ್ಗವೋ ಎಂಬಂತೇ ಎಲ್ಲಿಲ್ಲ ನೀವು ಹೇಳಿ? ಯಾವುದರ ಅನುಭವವೂ ಕಮ್ಮಿ ಎನಿಸುವುದಿಲ್ಲ ನಿಮ್ಮಲ್ಲಿ! ನಿಮ್ಮ ಅನಿಸಿಕೆಗೆ ಧನ್ಯವಾದ.

      Delete
  4. very good article.
    www.suragange.blogspot.com

    ReplyDelete
  5. ಭಟ್ಟರೆ,
    ಸನಾತನ ಮೌಲ್ಯಗಳಿಗೆ ಅಂತ್ಯವಿಲ್ಲ. ಪಿ.ಬಿ.ಶ್ರೀನಿವಾಸರ ಗೀತೆ ತುಂಬ ಸೊಗಸಾಗಿದೆ. ಧನ್ಯವಾದಗಳು.

    ReplyDelete
    Replies
    1. ಸನ್ಮಾನ್ಯ ಸುಧೀಂಧ್ರರೇ, ತಮ್ಮ ಅನಿಸಿಕೆಗಳಿಗೆ ಧನ್ಯವಾದ.

      Delete
  6. ಟೀಕೆ ಅತಿಯಾಯಿತು!!!
    ಭಾರತದ ಇಂದಿನ ಸ್ಥಿತಿಗೆ ಡೋಂಗಿ ಬುದ್ದಿಜೀವಿಗಳು ಕಾರಣರಿರಬಹುದು. ಒಮ್ಮೊಮ್ಮೆ 'ಪರಿವಾರ ಜೀವಿಗಳ' ಪಾಲೂ (ಇಂದಿನ ಸ್ಥಿತಿಗೆ) ಇದೆ ಎಂದನಿಸುತ್ತದೆ. ಪ್ರಪಂಚದ ಎಷ್ಟೋ ಚಿಕ್ಕಪುಟ್ಟ ದೇಶಗಳು (ಒಂದೆರಡು ಉದಾಹರಣೆ-ದಕ್ಷಿಣ ಕೊರಿಯಾ, ತೈವಾನ್,ಇಸ್ರೈಲ್,ಹಾಲೆಂಡ್,ಸಿಂಗಾಪುರ) ದಾಪುಗಾಲಿಟ್ಟು ಮುನ್ನಡೆಯುತ್ತಿದ್ದರೆ ನಾವು ಮಾತ್ರ ಅರೆಗಣ್ಣು ಮುಚ್ಚಿ ಹಿಂದಿನ ಕಲ್ಪನೆಯಲ್ಲೇ ಬಿದ್ದಿದ್ದೇವೆ.

    ನೀವು ಬರೆದಿರಿ-"ಪುರಾಣಗಳೆಂದರೆ ಅವುಗಳೂ ಇತಿಹಾಸಗಳೇ ಆಗಿವೆ! ರಾಮ ಹುಟ್ಟಿದ ನೆಲದಲ್ಲಿ ರಾಮನನ್ನೇ ಅಲ್ಲಗಳೆಯುವ ಸಂಸ್ಕೃತಿಗಳು ವಿಜೃಂಭಿಸುವುದು ಯಾವ ಸುಧಾರಣೆಯ ದ್ಯೋತಕ ಹೇಳಿ?"
    ಆದರೆ ಪುರಾಣಗಳು ಹಾಗೂ ಮಹಾಕಾವ್ಯಗಳು ನಡೆದಿದ್ದು ಅಲ್ಲ.ಅವೆಲ್ಲಾ ಸುಂದರ ಬರಹಗಳಷ್ಟೇ. ರಾಮ ಹಾಗೂ ಕೃಷ್ಣರು ಐತಿಹ್ಯಪುರುಷರೆನ್ನುವುದಕ್ಕೆ ಎಲ್ಲೂ ಆದಾರಗಳಿಲ್ಲ. ಅವರ ಕಥೆಗಳೆಲ್ಲ ನಮ್ಮ ಪೂರ್ವಜರ ಉನ್ನತ ಗುಣಮಟ್ಟದ ವಿಚಾರಶೀಲತೆಯ ಪ್ರತಿರೂಪ.
    ಈ ದೇವಸ್ಥಾನಗಳು, ಅದರಲ್ಲೊಂದು ಮೂರ್ತಿ, ಅದರ ಪೂಜೆ, ಹರಕೆ,ದುಡ್ಡು-ಇವೆಲ್ಲಾ ಆರ್ಯರ ಕಾಲದ ಆ ಪುರಾತನ ಭಾರತದಲ್ಲಿ ಎಲ್ಲಿತ್ತು?

    ReplyDelete
    Replies
    1. ಪ್ರಿಯ ಸುಬ್ರಹ್ಮಣ್ಯರೇ, ನೀವೂ ನಾನೂ ಈ ವಿಷಯಕವಾಗಿ ಒಂದು ವಾರ ಕಾಲ ಮುಖತಃ ಚರ್ಚೆ ನಡೆಸಿಕೊಂಡರೆ ಒಳ್ಳೆಯದು ಎನಿಸುತ್ತದೆ. ಮುಂದುವರಿದು ಎಂದಿರಿ, ಮುಂದುವರಿದು ಎಲ್ಲಿಗೆ ಹೋಗುತ್ತಾರೆ? ಇನ್ನು ದಾಖಲೆಗಳ ಸಮೇತ ನಾನು ವಿವಾಹ ವಿಚ್ಛೇದನಗಳ ಸಂಖ್ಯೆಯಲ್ಲಿ ಅತಿಯಾಗಿ ಏರಿದ್ದನ್ನು ತೋರಿಸಬಲ್ಲೆ, ನಾನೇ ಏಕೆ ನೇವೇ ಕೋರ್ಟುಗಳಲ್ಲಿ ವಿಚಾರಿಸಿದರೆ ತಿಳಿದೀತು! ಇನ್ನು ರಾಮಾಯಣ ಮತ್ತು ಮಹಾಭಾರತ ಇವುಗಳನ್ನು ನೀವು ನಂಬುತ್ತಿಲ್ಲದಿರಬಹುದು-ಅವುಗಳನ್ನು ಸುಂದರ ಕಾವ್ಯಗಳನ್ನಾಗಿ ನೀವು [ಮೂಲ ಸಂಸ್ಕೃತದಲ್ಲಲ್ಲದಿದ್ದರೂ ] ಓದಿಕೊಂಡಿರಬಹುದು. ನೀವೇ ಹೇಳುವ ಇತಿಹಾಸ ತಜ್ಞರು ರಾಮಾಯಣ ಮತ್ತು ಮಹಾಭಾರತ ನಡೆದ ಜಾಗಗಳಲ್ಲಿ ಕೆಲಭಾಗಗಳಲ್ಲಿ ಉತ್ಖನನ ನಡೆಸಿ ಅವರ ಕರ್ಮದ ಕಾರ್ಬನ್ ಡೇಟಿಂಗ್ ಎಂಬ ರೀ-ಸರ್ಚ್ ನಡೆಸಿ ಒಪ್ಪಿಕೊಂಡಿದ್ದಾರಲ್ಲಾ? ಇದಕ್ಕೇನೆನ್ನುತ್ತೀರಿ?

      ಮಾಧ್ಯಮವಾಹಿನಿಯೊಂದರಲ್ಲಿ ಪ್ರದರ್ಶಿಸಿದಂತೇ ದ್ವಾರಕೆಯ ಭೂಭಾಗ ಸಮುದ್ರದಾಳದಲ್ಲಿ ಕಂಡುಬಂದಿದೆಯಲ್ಲಾ ಇದಕ್ಕೆಲ್ಲಾ ನೀವು ಅಲ್ಲವೆನ್ನುತ್ತೀರೇ? ರಾಮಸೇತುವಿನಲ್ಲಿ ಬಳಕೆಯಾದ ಕಲ್ಲುಗಳು ತೇಲುವ ಸ್ವಭಾವದವು ಎಂದು [ಪರಿಶೀಲಿಸಲ್ಪಟ್ಟು] ಪರಿಗಣಿತವಾಗಿವೆಯಲ್ಲಾ ?

      ಮುಂದಕ್ಕೆ ಮುಂದಕ್ಕೆ ಅಂದರೆ ಎಲ್ಲಿಗೆ ಹೊರಟಿದ್ದೇವೆ ಸುಬ್ರಹ್ಮಣ್ಯರೇ? ಬರುವಾಗ ನೀವೂ ನಾವೂ ಏನೂ ತರಲಿಲ್ಲ, ಹೋಗುವಾಗಲೂ ಕೊಂಡುಹೋಗುವುದು ಸಾಧ್ಯವಿಲ್ಲ! ಅಂದಮೇಲೆ ನಮ್ಮ ನೆಗೆತ ಯಾವ ಎತ್ತರಕ್ಕೆ ? ನಾನು ಅಭಿವೃದ್ಧಿ ಬೇಡವೆನ್ನಲಿಲ್ಲ, ಅಲ್ಲಗಳೆಯಲೂ ಇಲ್ಲ, ಆದರೆ ಭಾರತೀಯ ಸಂಸ್ಕೃತಿಯನ್ನು ಹೀಗಳೆಯುವುದನ್ನು ಅಲ್ಲಗಳೆಯುತ್ತೇನೆ.

      ನೀವು ಹೇಳಿದ/ಹೇಳುವ ಎಲ್ಲಾ ವೈಜ್ಞಾನಿಕ ಸಂಶೋಧನೆಗಳೂ ನಮ್ಮ ವೇದಗಳಲ್ಲೇ ಪ್ರಮಾಣೀಕೃತವಾಗಿ ಘನೀಕೃತ ರೂಪದಲ್ಲಿ ಅಡಕವಾಗಿವೆ. ಒಬ್ಬ ಪ್ರಖ್ಯಾತ ವೈದ್ಯರ ಮಗಳಿಗೆ ಕ್ಯಾನ್ಸರ್ ಇತ್ತು. ಅವರು ಈ ಪ್ರಪಂಚದ ಅತ್ಯುನ್ನತ ವೈದ್ಯಕೀಯ ಸೌಲಭ್ಯಗಳನ್ನೆಲ್ಲಾ ಬಳಸಿದರೂ ವಾಸಿಯಾಗದೇ ಕೋನೆಯ ಪ್ರಯೋಗವಾಗಿ ಭಾರತೀಯ ಅರಿಶಿನ-ಕಾಳುಮೆಣಸುಗಳನ್ನು ಅರೆದು ಕಷಾಯದ ರೂಪದಲ್ಲಿ ಕುಡಿಸುತ್ತಿದ್ದರು. ಏನಾಶ್ಚರ್ಯ ! ಮಗಳಿಗೆ ಸಂಪೂರ್ಣ ವಾಸಿಯಾಗಿದ್ದೂ ಅಲ್ಲದೇ ಅದನ್ನು ಅವರು ದೇಶ-ವಿದೇಶಗಳ ವೈದ್ಯರಿಗೆ ತಿಳಿಸಿ ಛಾಲೇಂಜ್ ಮಾಡಿದ್ದಾರೆ! ಇದಕ್ಕೆಲ್ಲಾ ಏನೆನ್ನುತ್ತೀರಿ?

      ನೈಜ ಜೀವನ ಅನುಭವಾಧಾರಿತ ಭಾರತದ ಮಹಾಕಾವ್ಯ-ಗ್ರಂಥಗಳೆಲ್ಲಾ ಕೇವಲ ಕಾಲ್ಪನಿಕ ಎಂಬ ನಿಮ್ಮಂಥವರ ಹೇಳಿಕೆಗೆ ನಗಬೇಕೋ ಅಳಬೇಕೋ ಗೊತ್ತಾಗದಲ್ಲಾ! ಏನೇ ಇರಲಿ, ಸಾಧ್ಯವಾದಾಗ ವಿಲಂಬಿತ ಚರ್ಚೆ ನಡೆಸೋಣ, ಧನ್ಯವಾದಗಳು.

      Delete
  7. ಇನ್ನೂ ಕೆಲವು ತಿದ್ದು ಪಡಿ
    "ಹತ್ವಾ ಮೃಗಂ"
    "ಏತದ್ದಿ ರಾಮಾಯಣಂ"
    "ಕುಂತಿ ಸುತಾಃ ಪಾಲನಂ" - ಬಹುವಚನ
    "ಮಮ ಶತ್ರು ವಿನಾಶಾಯ" - ಶತ್ರು ಹೊರಗಿನದಲ್ಲ!! ಬಹುಷಃ ನಮ್ಮೊಳಗಿನ ಅಹಂಕಾರದ ಕುರಿತು ಈ ರೀತಿ ಹೇಳಿರಬೇಕು!

    ReplyDelete
    Replies
    1. ಪ್ರಿಯ ಶಿವರಾಮ ಭಟ್ಟರೇ,

      ಬಹಳ ದಿವಸಗಳ ನಂತರ ನನ್ನ-ನಿಮ್ಮ ಭೇಟಿ.

      ಇಲ್ಲಿ ಪ್ರಾದೇಶಿಕವಾಗಿಯೂ ಮತ್ತು ಉಚ್ಚರಣೆಗೆ ಅನುಕೂಲವಾಗಿಯೂ ಇರುವಂತೇ ಚಿಕ್ಕ ಪುಟ್ಟ ವ್ಯಾಕರಣ ಲೋಪಗಳನ್ನು ಮಾಡುವುದನ್ನು ಕಂಡಿದ್ದೇನೆ.

      ’ಹತ್ವಾ ಮೃಗಃ’ ಎಂದು ಕೆಲವೆಡೆ ಬಳಸಿದರೆ ಕೆಲವರು ’ಹತ್ವಾ ಮೃಗಂ’ ಎಂದು ಉಚ್ಚರಿಸುತ್ತಾರೆ. ಎರಡೂ ಸರಿಯಾಗೇ ಇದೆ ಎಂಬುದು ನನ್ನ ಅನಿಸಿಕೆ.

      ’ಅದ್ಯ’ ರಾಮಾಯಣವನ್ನು ಹೇಳುವ ಕ್ರಮ ಎಂಬ ಅನಿಸಿಕೆಯಿಂದ ಏತದ್ಯ ಎಂದಿದ್ದು, ಕೆಲವರು ಮತ್ತದೇ ’ಏತದ್ದಿ’ ಎಂತ ಉಪಯೋಗಿಸುತ್ತಾರೆ.

      ’ಕುಂತೀ ಸುತಾಃ’ ಬಹುವಚನ ಸರಿಯೇ ಆದರೆ ಕುಂತೀ ಸುತಃಪಾಲನಂ ಎಂಬಲ್ಲಿ ವಿಸರ್ಗ ಸಂಧಿಯನ್ನು ಬಳಸಬೇಕಾಗಿ ಬರುವುದರಿಂದ ಕುಂತೀ ಸುತಃ ಎಂತಲೇ ಬಳಸುವುದನ್ನು ಕಂಡಿದ್ದೇನೆ. ಮೇಲಾಗಿ ಕುಂತೀ ಸುತ ಎಂದರೆ ಅದು ಪಂಚಪಾಂಡವರಿಗೂ ಸಲ್ಲುತ್ತದೆ!

      ಮಮ ಶತ್ರು ಹತಾರ್ಥಾಯ ಎಂತಲೂ ಕೆಲವರು ಉಪಯೋಗಿಸುತ್ತಾರೆ. ’ಶಿವಂ ಕರೋತಿ’ಯ ಬದಲಿಗೆ ’ಶಿವ’ನನ್ನು ಕಂಡರಾಗದ ಜನ ’ಶುಭಂ ಕರೋತಿ’ ಎಂದೂ ಬಳಸುತ್ತಾರೆ! ಇವೆಲ್ಲಾ ಪ್ರಾದೇಶಿಕ ಭಿನ್ನತೆಗಳು. ನಾವು ಎರಡು ಸಲ ಅದನ್ನೇ ಹೇಳುತ್ತಾ ಹೊರಗಿನ ಶತ್ರುಗಳೇನಾದರೂ ಇದ್ದರೆ ’ಮಮ ಶತ್ರು ಹಿತಾರ್ಥಾಯ’ ಎಂತಲೂ ನಮ್ಮೊಳಗಿನ ಶತ್ರುವಿನ ಬಗ್ಗೆ ಹೇಳುವಾಗ ’ಮಮ ಶತ್ರು ವಿನಾಶಾಯ’ ಎಂದು ಬಳಸೋಣ ಹೇಗೆ ಆಗದೇ ?

      ಬಹಳ ದೋಷಗಳಿದ್ದರೆ ಸಂಸ್ಕೃತ ಪಂಡಿತರಾದ ಈ ಮೇಲೆ ಕಾಣುವ ಸ್ನೇಹಿತ ಶ್ರೀಕಾಂತರು ತಗಾದೆ ಜಾಸ್ತಿ ತೆಗೆಯುತ್ತಿದ್ದರು. ಅವರ ಕಣ್ಣಿಗೆ ಕಂಡಿದ್ದನ್ನು ಅದಾಗಲೇ ಹೇಳಿದ್ದಾರಲ್ಲಾ!

      ನಿಮ್ಮ ಚೆನ್ನುಡಿಗೆ ನನ್ನ ನಮನ.

      Delete
  8. ಲೇಖನ ಚೆನ್ನಾಗಿತ್ತು..
    1. ಶಿವರಾಮ ಭಟ್ಟರು ಹೇಳಿದ್ದು ಸರಿ ಎಂದು ನನ್ನ ಅನಿಸಿಕೆ. "ಹತ್ವಾ ಮೃಗಂ" ಎಂದರೆ 'ಮೃಗವನ್ನು ಕೊಂದು' ಎಂದು ದ್ವಿತೀಯಾ ವಿಭಕ್ತ್ಯಾಂತವಾಗುತ್ತದೆ. ಮೃಗಃ ಎಂಬುದು ಪ್ರಥಮಾ ಆದ ಕಾರಣ 'ಮೃಗವು ಕೊಂದು' ಎಂದಾಗುವುದಲ್ಲ! ಮತ್ತೆ ವಿಶೇಷಣ 'ಕಾಂಚನಂ' ಕೂಡ ದ್ವಿತೀಯಾಂತ್ಯವಾಗೇ ಇದೆಯಲ್ಲ!
    2. "ಏತತ್+ಹಿ= ಏತದ್ಧಿ" ಎಂದು ಸಂಧಿಯಾಗುತ್ತದೆ. ನೀವಂದಂತೆ 'ಏತದ್ಯ' ಇದನ್ನು ಬಿಡಿಸಲು ಕ್ಲೇಷವಾಗುತ್ತದೆ. ಏತತ್+ಅದ್ಯ= ಏತದದ್ಯ ಎಂದು ಜಸ್ತ್ವಸಂಧಿಯಾಗಿ ಛಂದೋಭಂಗವಾಗುತ್ತದೆ
    3."ಪೂರ್ವೌ" ರಾಮ ತಪೋವನಾದಿ... ಎಂದು ಸರಿಯಾದ ಪಾಠವಿರಬೇಕೆಂದು ನನ್ನ ಅನಿಸಿಕೆ. 'ಪೂರ್ವೌ' ಸಪ್ತಮಿ ವಿಭಕ್ತ್ಯಾಂತವಾದ ಕಾರಣ 'ಪೂರ್ವದಲ್ಲಿ' ಎಂದಾಗುತ್ತದೆ. ಪೂರ್ವಂ- ಪೂರ್ವವು/ಪೂರ್ವವನ್ನು ಎಂದು ಪ್ರಥಮಾ/ದ್ವಿತೀಯಾಂತವಾಗುತ್ತದೆಯೇ ಎಂದು ಸಂದೇಹ..
    4. "ಏತದ್ ಭಾಗವತಂ" ಎಂದು ಅನುಸ್ವಾರಾಂತ್ಯವಾದಾಗ ಛಂದಸ್ಸಿಗೆ ಹೊಂದುತ್ತದೆ ಹಾಗೇ " ಈ ಭಾಗವತವು" ಎಂದು ಸರಿಯಾದ ಅರ್ಥವನ್ನು ಕೊಡುತ್ತದೆ ಕೂಡ.
    5. ಕುಂತೀ- ಸುತಾಃ/ಸುತಃ ಇದರಲ್ಲಿ ನನಗೆ ಅಷ್ಟು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಆದರೆ ಸುತಃ ಎಂದರೆ ಸರಿಯಾಗಬಹುದು. ಯಾಕೆಂದರೆ ಅಲ್ಲಿ ಸಮಾಸವಾಗುತ್ತದೆ, ಇಲ್ಲದಿದ್ದರೆ ಅರ್ಥಕ್ಕೆ ತೊಡಕಾಗುತ್ತದೆ. ಸುತರ/ಸುತನ ಎಂದು ಷಷ್ಠೀ ವಿಭಕ್ತ್ಯಾಂತವಾದರೆ ಸುತಸ್ಯ/ಸುತಾನಾಂ ಎಂಬ ರೂಪ ಹೊಂದಬೇಕು!
    ಹಾಡು ತುಂಬಾ ಚೆನ್ನಾಗಿದೆ.. ನನ್ನ ಸಂಚಾರವಾಣಿಗೆ ಸೇರಿಸಲ್ಪಟ್ಟಿತು;-)

    ReplyDelete
  9. ಗಣೇಶ ಭಟ್ಟರೇ,

    ನಿಮ್ಮಂತಹ ಅನೇಕರು ಇಂಥದ್ದನ್ನು ಇಂದೂ ಸ್ಮರಿಸುತ್ತೀರಿ ಎಂಬುದು ಬಹಳ ಖುಷಿತಂದ ವಿಷಯ. ನಾನು ಸಹಜವಾಗಿ ಬರೆಯುತ್ತಾ ನಡೆದಿದ್ದೇನೆಯೇ ವಿನಃ ಅದು ಮಂತ್ರವಲ್ಲಾ ಎಂಬ ದೃಷ್ಟಿಯಿಂದ ವ್ಯಾಕರಣ ಶುದ್ಧಿಗೆ ತೊಡಗಿರಲಿಲ್ಲ. ಇರಲಿ, ನೀವೆಲ್ಲಾ ಹೇಳಿದಂತೇ ಮಾರ್ಪಾಟುಗಳನ್ನು ಅಳವಡಿಸುತ್ತೇನೆ, ಧನ್ಯವಾದ.

    ReplyDelete
  10. ಬಹಳ ಉತ್ತಮವಾಗಿದೆ
    ನೀವು ಹೇಳಿದಂತೆ ನಮ್ಮ ಪುರಾತನರು ವಿಮಾನ ಯಾನವನ್ನು ಮಾತ್ತು ಸ್ತಳಾಂತರ ವನ್ನು ಮಾಡುತ್ತಿದ್ದರು.
    ಆಗಿನ ವೈಜ್ಞಾನಿಕ ಅನ್ವೇಷಣೆಗಳ ಮುಂದೆ ಇವತ್ತಿನ ವಿಜ್ಞಾನ ಇನ್ನು ಏಳೆಗುಸು .

    ReplyDelete