ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 1, 2012

’ಬೆಟ್ಟದ ಜೀವ’ ದ ಹುಟ್ಟಿಬೆಳೆದ ಮನೆಯ ಕಥೆ ಕಥೆಯಾದಾಗ !

ಚಿತ್ರಗಳ ಋಣ : ಗೂಗಲ್ ಅಂತರ್ಜಾಲ

’ಬೆಟ್ಟದ ಜೀವ’ ದ ಹುಟ್ಟಿಬೆಳೆದ ಮನೆಯ ಕಥೆ ಕಥೆಯಾದಾಗ !

ಗುಜರಿ ಆಯುವ ಹುಡುಗನೊಬ್ಬ ಬರೆಯುತ್ತಾನೆ- ’ಗೋರಿ ಕಾಯುವವರು’ ಎಂಬ ತನ್ನ ಕೆಟ್ಟ ಪದಗಳ ಬರಹದಲ್ಲಿ! ಆತನಿಗೆ ಗೋರಿಯಾವುದು ದೇವಳಯಾವುದು ಬೇರ್ಪಡಿಸಲಾಗದ ಹುಟ್ಟುಕುರುಡು! ಇಂಥವರೆಲ್ಲಾ ಇವತ್ತು ಪತ್ರಕರ್ತರಾಗಿ ಬರಹಗಾರರಾಗಿ ತಯರಾಗಿದ್ದಾರೆ ಎಂದಾಗ ಕಾಲದ ಸ್ಥಿತಿಯ ಅವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಮೊನ್ನೆಯಷ್ಟೇ ಒಬ್ಬ ಮಹಾತ್ಮರು ಹೇಳಿದ್ದಾರೆ " ಧರ್ಮ ಕಾಲಕ್ಕೆ ತಕ್ಕಂತೇ ಬದಲಾಗುವುದಿಲ್ಲ, ಧರ್ಮವೆಂಬುದು ಮಾನವ ಜೀವನದ ಒಳಿತಿಗಾಗಿ ಇರುವ ನೀತಿಯುಕ್ತ ಜೀವನಮಾರ್ಗ. ಧರ್ಮವನ್ನು ಬದಲಿಸಹೊರಡುವುದೇ ಅಧರ್ಮ, ಅದಕ್ಕೆ ಬದಲಾಗಿ ಧರ್ಮಕ್ಕೆ ನಾವು ನಮ್ಮನ್ನು ಅಳವಡಿಸಿಕೊಳ್ಳಬೇಕಾಗುತ್ತದೆ." ಅವರ ಮಾತು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಇಲ್ಲಿ ಧರ್ಮ ಎಂದರೆ ಯಾವುದು ಎಂಬ ಪ್ರಶ್ನೆ ಮೂಡಬಹುದು: ಅದು ಮಾನವ ಜೀವನಧರ್ಮ. ಮಹಾಕವಿ ಡೀವೀಜಿಯವರು ’ಜೀವನಧರ್ಮ ಯೋಗ’ ಎಂಬ ಗ್ರಂಥವನ್ನು ಬರೆದರು. ’ಮಂಕುತಿಮ್ಮನ ಕಗ್ಗ’ ಅರ್ಥವಾಗದವರಿಗೆ/ಕಗ್ಗಂಟು ಎನಿಸುವವರಿಗೆ ಇದು ಬಳಕೆಯಾಗಲಿ ಎಂಬುದು ಅವರ ಆಶಯವಾಗಿತ್ತು. ಅಂತಹ ಡೀವೀಜಿಯವರು ಬಾಳಿ ಬದುಕಿದ್ದ ಅವರ ಮನೆ ಇಂದು ಇಲ್ಲವೇ ಇಲ್ಲ. ಅ.ನ.ಕೃಷ್ಣರಾಯರು ಒಂದುಕಾಲಕ್ಕೆ ಉಪವಾಸವಿದ್ದ ಕನ್ನಡದ ಕೆಲಸಗಾರರಿಗೆ ಊಟವೊದಗಿಸಿದವರು! ಅವರ ಮನೆ ಇರುವ ಜಾಗ ಚಪ್ಪಲಿಗಳ ಗೋದಾಮು ಎಂಬುದು ತಿಳಿದರೆ ಬೇಸರವಾಗುವುದಿಲ್ಲವೇ? ಅದರಂತೇ ಮಲ್ಲಿಗೆಕವಿ ನರಸಿಂಹಸ್ವಾಮಿಯವರ ಮನೆಗೆ ಖುದ್ದಾಗಿ ನಾನು ಹೋಗಿ ನೋಡಿಬಂದಿದ್ದಿದೆ. ಇವತ್ತು ಹುಡುಕಿದರೆ ಆ ಮನೆ ಇಲ್ಲವೇ ಇಲ್ಲ!

ಕಾರಂತರು ಹುಟ್ಟಿಬೆಳೆದ ಮನೆ

ಕುಪ್ಪಳ್ಳಿಯ ವಿಸ್ತಾರವಾದ ಪ್ರದೇಶದಲ್ಲಿ ರಾಷ್ಟ್ರೀಯ ರಸ್ತೆಗಳಿಂದ ದೂರ ಉಳಿದ ಕುವೆಂಪು ಅವರ ಮನೆ ಮಾತ್ರ ಉಳಿದುಕೊಂಡಿತು. ಅದನ್ನು ರಕ್ಷಿಸಿಕೊಳ್ಳಲು, ನೋಡಿಕೊಳ್ಳಲು ಹಲವರು ಇದ್ದಾರೆ ಬಿಡಿ, ಕಾರಂತರ ಮನೆ ಹಾಗಲ್ಲ! ’ಬೆಟ್ಟದ ಜೀವ’, ’ಚೋಮನ ದುಡಿ’, ’ಮೂಕಜ್ಜಿಯ ಕನಸುಗಳು’, ’ಹುಚ್ಚುಮನಸ್ಸಿನ ಹತ್ತುಮುಖಗಳು’ ಮುಂತಾದ ಮನನೀಯ ಕಾದಂಬರಿಗಳನ್ನು ಕೊಟ್ಟ ಕಾರಂತರು ಕೈಯಾಡಿಸಿದ ಕಾರ್ಯಕ್ಷೇತ್ರ ಒಂದೇ ಎರಡೇ? ಕನ್ನಡಕ್ಕಾಗಿ ಅವರು ಕೊಟ್ಟ ಕೊಡುಗೆ ಲೆಕ್ಕಹಾಕಿದರೆ ಕುವೆಂಪುವಿಗಿಂತ ಮೇಲೆ ಕೂರಬೇಕಾದ ವ್ಯಕ್ತಿತ್ವ ಅವರದ್ದು! ಅಪಾರ ಪಾಂಡಿತ್ಯದ ಕಾರಂತರು ಸಾಹಿತ್ಯಾಸಕ್ತಿಯುಳ್ಳ ಹೊರದೇಶದಲ್ಲಿನ ಜನ ಕರೆದಾಗ ತನ್ನ ಸ್ವಂತ ಜಮೀನಿನ ಭಾಗವನ್ನೇ ಮಾರಿ ಅದರಿಂದ ಖರ್ಚನ್ನು ನಿಭಾಯಿಸಿದರೂ ಮತ್ತೂ ಸಾಲ ಬಾಕಿ ಉಳಿದಿತ್ತು ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ! ಕಾರಂತರು ವೇತನ ಪಡೆಯುವ ಯಾವುದೇ ಹುದ್ದೆಗೆ ಅಂಟಿಕೊಳ್ಳಲಿಲ್ಲ. ಕನ್ನಡಕ್ಕಾಗಿ ತನ್ನಲ್ಲಿದ್ದುದನ್ನೇ ಖರ್ಚುಮಾಡಿದರು!’ಈ ಜಗತ್ತು’ ಎಂಬ ಐದು ಸಂಪುಟಗಳ ಅವರ ಖಗೋಳಗ್ರಂಥವನ್ನು ಇಂದಿನ ಖಗೋಳಶಾಸ್ತ್ರಿಗಳು ಓದಿ ತಿಳಿದುಕೊಳ್ಳುವಂಥದ್ದಿದೆ! ಯಕ್ಷಗಾನ, ಬ್ಯಾಲೆ ನರ್ತನ, ಹಾಡು-ಹಸೆ, ಸಾಹಿತ್ಯ, ರಾಜಕೀಯ, ಶರಾವತೀ ಟೇಲರೇಸ್ ಎಂಬ ನಿಸರ್ಗಾಂದೋಲನ, ಮಕ್ಕಳಿಗೆ ಶಿಕ್ಷಣ ಹೀಗೇ ಕಾರಂತರದು ಆನೆಗಾತ್ರದ ಹೆಜ್ಜೆಗಳು! ಎಲ್ಲೇ ಹೋಗಲಿ ಕಾರಂತರು ತನ್ನದೇ ಆದ ಛಾಪು ಮೂಡಿಸಿದ್ದಾರೆ.

ಈ ಉಯ್ಯಾಲೆ ಮಂಚದಲ್ಲಿ ಕಾರಂತರು ಕುಳಿತು ಅದೆಷ್ಟು ಚಿಂತಿಸಿದರೋ ! [ಹಳೆಯ ಪರಿಕರಗಳನ್ನು ಗಮನಿಸಿ]

ಇವತ್ತು ಸರಕಾರದ ಸವಲತ್ತುಗಳಿಗೆ ಬುದ್ಧ್ಯಾಪೂರ್ವಕ ನಿಷೇಧಕ್ಕೊಳಗಾಗಿರುವ ಮೇಲ್ವರ್ಗದಲ್ಲಿ ಜನಿಸಿದ್ದರೂ ’ಚೋಮನ ದುಡಿ’ಯಲ್ಲಿ ಅವರ ಮನಮಿಡಿದ ರೀತಿಯನ್ನು ಕಾದಂಬರಿ ಓದದ ಅನೇಕರು ಅದೇ ಹೆಸರಿನ ಸಿನಿಮಾ ನೋಡಿ ಅರಿತಿದ್ದಾರೆ. ನಿಮ್ನವರ್ಗದವರ ಬಗ್ಗೆ ಕಾಳಜಿ ಇರದಿದ್ದರೆ ಅವರು ಅದನ್ನು ಬರೆಯಲು ಸಾಧ್ಯವಿತ್ತೇ ? ಒಂದು ಕಾಲಕ್ಕೆ ಕಾರಂತರು ಇದ್ದಾರೆಂದರೆ ಅವರೆದುರು ಕೆಲವರು ನಿಲ್ಲಲು ಹೆದರಿಕೊಳ್ಳುತ್ತಿದ್ದರು ಯಾಕೆಂದರೆ ತನಗನ್ನಿಸಿದ್ದನ್ನು ಯಾವ ಮುಲಾಜಿಗೂ ಒಳಗಾಗದೇ ನೇರಾನೇರ ಮುಖದಮೇಲೆ ಬಡಿದಹಾಗೇ ಹೇಳುವ ನಿಷ್ಠುರವಾದಿಯಾಗಿದ್ದರು ಕಾರಂತರು. ಮೀಸಾಕಾಯ್ದೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ತನಗೆ ಕೇಂದ್ರ ಕೊಡಮಾಡಿದ ಪ್ರಶಸ್ತಿಯನ್ನು ಧಿಕ್ಕರಿಸಿ ಜನರ ನೋವಿರುವವರೆಗೂ ತನಗೆ ಪ್ರಶಸ್ತಿ ಬೇಡವೆಂದ ಮಹಾಜನ ಕಾರಂತರು!

ಬರೆದು ಮುಗಿಯದಷ್ಟು ಬರೆಯಲ್ಲಿಕ್ಕಿರುವ ಅಗಾಧ ವ್ಯಕ್ತಿತ್ವ ಕಾರಂತರದ್ದು. ಅವರ ಬಗ್ಗೆ ಹೆಚ್ಚಿನದಾಗಿ ಇಲ್ಲಿ ಓದಿ :

ಥೈ ಥೈ ತದ್ದಿನ ಧೇಂ ಧೇಂ......[ http://nimmodanevrbhat.blogspot.in/2010/07/blog-post_14.html ]

ಕಾರಂತರೇ ಬದುಕಿದ್ದರೆ ಚತುಷ್ಪಥಕ್ಕೆ ಏನೆನ್ನುತ್ತಿದ್ದರೋ ತಿಳಿಯದು! ಯಾಕೆಂದರೆ ಇರುವ ಭೂಪ್ರದೇಶವನ್ನೆಲ್ಲಾ ಗಣಿಗೊಂದಿಷ್ಟು, ರಸ್ತೆಗಳಿಗೊಂದಿಷ್ಟು ಕೊಟ್ಟುಬಿಟ್ಟರೆ ಜನಜೀವನ ಸುಧಾರಿಸುತ್ತದೇನು ? ಅಷ್ಟಕ್ಕೂ ಅಲ್ಲಿ ಚತುಷ್ಪಥ ಯಾರಿಗೆ ಬೇಕಾಗಿದೆ? ನಾವು ವಿದೇಶೀಯರಲ್ಲ, ನಾವು ಅಮೇರಿಕನ್ನರಲ್ಲ,ನಾವು ಭಾರತೀಯರು! ನಮ್ಮದು ಕೃಷಿಪ್ರಧಾನ ದೇಶ; ಹಳ್ಳಿಗಳೇ ನಮ್ಮ ಪ್ರಮುಖ ಜೀವಜೀವಾಳ! ಅನೇಕ ಹಳ್ಳಿಗಳ ಜನಜೀವನವನ್ನೂ ಹಳ್ಳಿಗಳ ಜನರ ಜೀವನಕ್ರಮವನ್ನೂ ತಿರುಚಿಹಾಕುವ ಇಂತಹ ಹೆದ್ದಾರಿಗಳು ಯಾವ ಉದ್ಧಾರಕ್ಕಾಗಿ? ಕೇಂದ್ರ ರಸ್ತೆಕಾಮಗಾರಿಯಲ್ಲಿ ಯಾರ್ಯಾರಿಗೆ ಎಷ್ಟುಪಾಲು ? ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ರಾಜ್ಯಗಳ ಸಂಪರ್ಕವನ್ನು ಕಲ್ಪಿಸುವುದಕ್ಕೆ ಚತುಷ್ಪಥ ಅನಿವಾರ್ಯವಿತ್ತೇ ಹೊರತು ಇಲ್ಲೆಲ್ಲಾ ಅದರ ಅನಿವಾರ್ಯತೆ ಕಾಣಲಿಲ್ಲ. ಕರ್ನಾಟಕ ರಾಜ್ಯದಲ್ಲೂ ಅನವಶ್ಯಕವಾಗಿ ನಿರ್ಮಾಣಗೊಂಡ ರಾಜ್ಯಹೆದ್ದಾರಿಗಳೆಷ್ಟೋ! ಇಲ್ಲೆಲ್ಲಾ ಅಭಿವೃದ್ಧಿಯ ನೆಪದಲ್ಲಿ ಕಳ್ಳ ರಾಜಕಾರಣಿಗಳ ಬೊಕ್ಕಸಕ್ಕೆ ಎಷ್ಟೆಷ್ಟು ಹರಿದುಬಂತು ಎಂಬುದು ತಿಳಿಯುತ್ತಿಲ್ಲ!

ಕಾರಂತರ ಮನೆಯ ಹಿಂಪಾರ್ಶ್ವದಲ್ಲಿ ಔಟ್ ಹೌಸ್

ಎಡಪಂಥೀಯ ಎನಿಸಿಕೊಂಡ ಜನ ಬುದ್ಧಿಜೀವಿಗಳು ಎಂದು ಅವರಷ್ಟಕ್ಕೇ ಅವರು ಘೋಷಿಸಿಕೊಂಡಿದ್ದಾರೆ. ನೇರವಾಗಿರುವ ಮಾರ್ಗಕ್ಕೆ ಅಡ್ಡಹಾಕಿ ತಮ್ಮತ್ತ ಜನರನ್ನು ಆಕರ್ಷಿಸುವ ಅಡ್ಡಕಸುಬಿಗಳು ಅವರು! ಕಾರಂತರಿದ್ದರೆ ಇವತ್ತು ಕನ್ನಡನಾಡಿನಲ್ಲಿ ಮೆರೆಯುತ್ತಿದ್ದ ಅನೇಕ ಬುದ್ಧಿಜೀವಿಗಳು ಅಡಗಿ ಹೋಗುತ್ತಿದ್ದರು! ಗುಜರಿ ಆಯುವ ಹುಡುಗ ಬರೆಯುವ ರೀತಿ ನೋಡಿದರೆ ಆತನ ಗುಜರಿ ಸಾಮಗ್ರಿಗಳ ಬಗ್ಗೆ ನಿಜಕ್ಕೂ ಅಸಹ್ಯ ಹುಟ್ಟುತ್ತದೆ. ಕವಿ-ಸಾಹಿತಿಗಳು ಗತಿಸಿದಮೇಲೆ ಅವರ ಮನೆಗಳು, ಅವರು ಬಳಸಿದ್ದ ವಸ್ತುಗಳು ಇಂಥವೆಲ್ಲಾ ಮುಖ್ಯವಲ್ಲಾ ಕೇವಲ ಅವರ ಬರಹಗಳು-ತತ್ವಗಳು ಮಾತ್ರ ಮುಖ್ಯವೆಂಬ ಆತನ ಅನಿಸಿಕೆಯೊಂದಿಗೆ ಕಾರಂತರ ಮನೆ ಕೆಡವಿದಂತೇ ಅನೇಕ ಜನಸಾಮಾನ್ಯರ ಮನೆ ಕೆಡವಿದ್ದಾರೆ, ಸಾವಿರಾರು ಜನ ಬೀದಿ ಪಾಲಾಗಿದ್ದಾರೆ ಎನ್ನುವ ಆತನ ’ಸಾಮಾಜಿಕ ಕಳಕಳಿ’ಯಲ್ಲಿ ಕಾರಂತರೇ ಇದಕ್ಕೆಲ್ಲಾ ಪರೋಕ್ಷ ಕಾರಣವೋ ಎಂಬಂತೇ ಪ್ರತಿಧ್ವನಿತವಾಗಿದೆ. ಜನಸಾಮಾನ್ಯರು ಎಲ್ಲೆಡೆಯೂ ಇರುತ್ತಾರೆ ಆದರೆ ಎಲ್ಲರೂ ಕಾರಂತರಾಗಲು ಸಾಧ್ಯವೇ? ಕಾರಂತರ ಸಾಹಿತ್ಯ ದಾರ್ಷ್ಟ್ಯತೆ ಆ ವೈವಿಧ್ಯತೆ ಯಾರಲ್ಲಿದೆ ಕನ್ನಡದಲ್ಲಿ ? ಕಾರಂತರ ಮನೆ ಹೋಗಿದ್ದು ತನಗಂತೂ ಬೇಸರವಿಲ್ಲಾ ಎನ್ನುವ ಗುಜರಿ ಹುಡುಗನನ್ನು ಅನುಮೋದಿಸುವ ಮಂದಿಯೂ ಇದ್ದಾರೆ ಎಂಬುದು ಗೊತ್ತಾಗಿ ಬಹಳಖೇದವೂ ಆಯ್ತು. ಅಕಸ್ಮಾತ್ ಕುವೆಂಪು ಮನೆಯ ಒಂದು ಹಂಚನ್ನು ಕೆಡವಲಿ : ಅದರ ಪರಿಣಾಮ ಅನುಭವಕ್ಕೆ ಬರುತ್ತದೆ!

ಕುವೆಂಪು ಅವರಿಗೆ ಕೊಡಮಾಡಿದ ಘನತೆ ಗೌರವವನ್ನು ಕಾರಂತ, ಮಾಸ್ತಿ, ಡೀವೀಜಿ, ಅನಕೃ ಮುಂತಾದವರಿಗೆ ಸರಕಾರ ಕೊಡಲಿಲ್ಲ. [ಕುವೆಂಪು ಹುಟ್ಟಾ ಶ್ರೀಮಂತರಾಗಿದ್ದರು! ದಕ್ಷಿಣಕನ್ನಡದ ಉಪಾಧ್ಯಾಯರೊಬ್ಬರು ಅವರ ಮನೆಗೇ ಹೋಗಿ ಪಾಠಹೇಳಿಕೊಡುತ್ತಿದ್ದರು! ಈ ಸವಲತ್ತು ನಾನು ಇಲ್ಲಿ ಪಟ್ಟಿಮಾಡಿದ ಎಷ್ಟು ಜನರಿಗಿತ್ತು? ] ಡೀವೀಜಿ ಬದುಕಿನಲ್ಲಿ ಬಡತನದಿಂದ ಬಳಲಿದರೂ ಸಾರ್ವಜನಿಕರಿಗಾಗಿ ಗೋಖಲೆ ಸಂಸ್ಥೆಯನ್ನು ಕಟ್ಟಿಕೊಟ್ಟರು-ತನಗೆ ಬಂದ ಸನ್ಮಾನಧನದಲ್ಲಿ! ಸನ್ಮಾನ ಪಡೆದ ಮಾರನೇ ದಿನವೂ ಸೆಟ್ಟಿ ಅಂಗಡಿಯಿಂದ ತರಿಸುವ ಕಾಫಿ ಪುಡಿಗೆ ಕಾಸಿರಲಿಲ್ಲ ಡೀವೀಜಿಯಲ್ಲಿ! ಮನೆಗೆ ಬಂದ ಅಭಿಮಾನಿಗಳಿಗೆ ಕಾಫಿ ಕೊಡಲು ಅನುಕೂಲವಿಲ್ಲದಾಗ " ಶೆಟ್ಟರೇ, ದಯಮಾಡಿ ಕಾಫಿಪುಡಿ, ಸಕ್ಕರೆ ಕೊಟ್ಟು ಕಳಿಸಿ, ಲೆಕ್ಕ ಬರೆದಿಟ್ಟುಕೊಳ್ಳಿ ಆಮೇಲೆ ತೀರಿಸುತ್ತೇನೆ" ಎಂದು ಗುಪ್ತವಾಗಿ ಹುಡುಗನೊಬ್ಬನ ಮೂಲಕ ಚೀಟಿ ಕಳಿಸಿದ್ದಾರೆ ಅಂಗಡಿಗೆ! ಎಂತೆಂತೆಹ ಮಹಾನುಭಾವರು ಕನ್ನಡದಲ್ಲಿ ಆಗಿಹೋದರೂ ಅವರಿಗಿಲ್ಲದ ವಿಶೇಷ ರಾಜಮರ್ಯಾದೆ ಕುವೆಂಪು ಅವರಿಗೆ ಮಾತ್ರ ದೊರೆತಿದೆ; ದೊರೆಯುತ್ತಿದೆ; ದೊರೆಯುತ್ತದೆ!!ಕವಿ-ಸಾಹಿತಿಗಳ ಬಗ್ಗೆಯೂ ಜಾತೀ ರಾಜಕಾರಣ ಎನಿಸುವುದಿಲ್ಲವೇ?

ಕಾರಂತರ ಮನೆಯನ್ನು ಕೆಡವಿದ್ದು ಕನ್ನಡದ ಮನೆಯ ಒಂದು ಕಂಬ ಕೆಡವಿದಂತೆಯೇ ಸರಿ. ಮುಕ್ತಮನದಿಂದ ಕಾರಂತರನ್ನು ಆಮೂಲಾಗ್ರವಾಗಿ ತಿಳಿದುಕೊಂಡ ಜನ ಕಾರಂತರು ಕೇವಲ ಮೇಲ್ವರ್ಗಕ್ಕಾಗಿ ಅಥವಾ ಮೇಲ್ವರ್ಗವನ್ನು ಹೊಗಳಿ ಏನನ್ನೋ ಬರೆದರು ಎನ್ನುವುದಿಲ್ಲ. ’ಚೋಮನ ದುಡ”ಯ ಕೆಲವು ಸನ್ನಿವೇಶಗಳು ಅಸಹಾಯ ದಲಿತನ ಕಣ್ಣೀರಕಥೆ ಹೃದಯದೊಳಗೆ ಮಡುಗಟ್ಟಿ-ಹಾಡಾಗಿ, ಆತ ದುಡಿಬಡಿದು ಕುಣಿಯುವುದನ್ನು ನೆನಪಿಸಿಕೊಳ್ಳುವಾಗ ಓದುಗನ ಕಣ್ಣಲ್ಲಿ ಆರ್ದ್ರತೆ ಒಸರದಿದ್ದರೆ ನನ್ನ ಮಾತನ್ನು ತೆಗೆದುಹಾಕಿ! ಇವತ್ತಿಗೂ ಕಾರಂತರು ಕಟ್ಟಿದ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಮುಖ್ಯಸ್ಥರಾಗಿರುವ ಸಂಜೀವ ಸುವರ್ಣರನ್ನು ಕೇಳಿದರೆ ಕಾರಂತರ ಬಗ್ಗೆ ತುಸು ಆತ್ಮೀಯವಾಗಿ ಹೇಳಿಯಾರು. ನನಗೆ ಆಶ್ಚರ್ಯವಾಗಿದ್ದು, ದಕ್ಷಿಣ ಕನ್ನಡ ಜನತೆ ಯಾಕೆ ಹಾಗೆ ಸುಮ್ಮನೇ ಕುಳಿತಿದ್ದಾರೆ, ಕಾರಂತರ ಮನೆ ಹೋಗುತ್ತದೆ ಎಂದಾಗಲೂ ಅವರಿಗೆ ಏನೂ ಅನಿಸಲಿಲ್ಲವೇ? ಅಥವಾ ಹತ್ತಿರವಿರುವ ದೇವರು ಸಸಾರವಾದಂತೇ ಆಯ್ತೇ?

ಧರ್ಮಸ್ಥಳ/ತಿರುಪತಿ ದೇವಳದ ಪಕ್ಕದಲ್ಲೇ ಇರುವವರಿಗೆ ಆ ದೇವರು ಸಸಾರ! ನೋಡೀ ನೋಡೀ ಚಡ್ಡೆ! ಅದೇ ದೂರದಿಂದ ಹೋಗುವ ಯಾತ್ರಿಗೆ ಅವು ಕಣ್ತುಂಬಿಸಿಕೊಳ್ಳುವ ಭಕ್ತಿಯ ಸ್ವರ್ಗ! ಅದೇ ರೀತೀ ಕವಿ-ಸಾಹಿತಿಗಳನ್ನು ಖುದ್ದಾಗಿ ಕಾಣುವುದು ಸಾಧ್ಯವಾಗದಾಗ ಕೊನೇಪಕ್ಷ ಅವರು ಈ ಜಾಗದಲ್ಲಿ ಬದುಕಿದ್ದರು ಎನ್ನಲಿಕ್ಕೆ, ಅವರು ಬಳಸಿದ ವಸ್ತುಗಳನ್ನು ನೋಡಿ ಖುಷಿಪಡಲಿಕ್ಕೆ ಒಂದು ಸ್ಮಾರಕವಿದ್ದರೆ ಅದರಿಂದ ಸಿಗುವ ಆತ್ಮತೃಪ್ತಿ ಹೇಳಿಕೊಳ್ಳಲು ಆಗುವಂಥದ್ದಲ್ಲ. ’ಗೋರಿ’ ಎಂಬ ಗುಜರಿ ಹುಡುಗ ಬಳಸಿದ ಪದ ಇದೆಯಲ್ಲ ಅದು ನನಗೆ ಕೊಟ್ಟ ನೋವು ಅಷ್ಟಿಷ್ಟಲ್ಲ.
ಏನೇ ಇರಲಿ ಕಾರಂತರ ಮನೆ ಕೆಡವಿದ್ದು ಖಂಡನೀಯ, ವಿಷಾದನೀಯ, ಅದನ್ನು ಸಮರ್ಥಿಸಿ ಬರೆಯುವ ಎಲ್ಲರ ಲೇಖನಗಳೂ ಖಂಡನೀಯ ಎಂಬುದನ್ನು ಘಂಟಾಘೋಷವಾಗಿ ಹೇಳುತ್ತಿದ್ದೇನೆ.

23 comments:

  1. ಭಟ್ಟರೇ, ನಿಮ್ಮ ಅನಿಸಿಕೆಗೆ ನನ್ನ ಸಹಮತವಿದೆ. ಗುಜರಿ ಅ೦ಗಡಿಯವರ ಬರಹದಲ್ಲಿ ಭಾವನಾತ್ಮಕ ಅ೦ಶಕ್ಕಿ೦ತ ವ್ಯಾವಹಾರಿಕತೆಗೆ ಹೆಚ್ಚು ಒತ್ತು ಸಿಕ್ಕಿದೆ. ಹೌದು, ಒಬ್ಬ ಕವಿಸಾಹಿತಿ ಬಾಳಿ ಬದುಕಿದ ಮನೆಗಿ೦ತ ಆತನ ಬರಹವೇ ಮುಖ್ಯ ಎ೦ಬುದನ್ನು ಅ೦ಶಿಕವಾಗಿ ಒಪ್ಪೋಣ. ಆದರೆ ಆತ ಬಾಳಿದ ಮನೆಯನ್ನು ಉಳಿಸಿ ಸ್ಮಾರಕವಾಗಿಸಿದಲ್ಲಿ ಮು೦ದಿನ ಪೀಳಿಗೆಗೆ ಆ ಸಾಹಿತಿ ಮಹನೀಯನ ಬಗ್ಗೆ ಹೆಚ್ಚಿನ ಒಲವು ಮೂಡುತ್ತದೆ. ಮ೦ಗಳೂರು ಪರಿಸರದಲ್ಲಿ ರೈತರ ನೂರು ಮನೆಗಳು ನೆಲಸಮವಾಗಿರಬಹುದು. ಆದರೆ ನಮ್ಮ ಸ೦ ಸ್ಕ್ರತಿ ಯ icon ಕಾರ೦ತರ ಮನೆಯನ್ನು ಉಳಿಸಬಹುದಿತ್ತು. ಇ೦ಗ್ಲೇ೦ಡಿನಲ್ಲಿ ಶೇಕ್ಸ್ ಪಿಯರ್ ಮಾತ್ರವಲ್ಲ, ಆಗಿಹೋದ ಅಷ್ಟು ಕವಿಗಳ ಸ್ಮಾರಕವನ್ನು ಬಹಳ ಚೆನ್ನಾಗಿ ಕಾಪಿಟ್ಟು ನಿರ್ವಹಣೆ ಮಾಡುತ್ತಿದ್ದಾರೆ. ನಮ್ಮಲ್ಲಿ ಕುವೆ೦ಪು ಹೊರತಾಗಿ ಇನ್ಯಾರಿಗೂ ಆ ಭಾಗ್ಯ ಸಿಕ್ಕದೆ ಇರುವುದು ಬೇಸರದ ವಿಷಯವೇ. ನಿಮ್ಮ ಬಿಚ್ಚುಮನಸ್ಸಿನ ಮಾತುಗಳು ಒಪ್ಪತಕ್ಕದ್ದೇ. ಈ ಬಗ್ಗೆ ನಾನು ನಿನ್ನೆ ನನ್ನ ಬ್ಲಾಗಿನಲ್ಲಿ ಬರೆದಿದ್ದೆ. ಇನ್ನು ದಕದವರ್ಯಾಕೆ ಸುಮ್ಮನಿದ್ದಾರೆ ಎ೦ದು ಕೇಳಿದ್ದೀರಿ. ಕಾರಂತರ ಮನೆ ಉಡುಪಿ ಜಿಲ್ಲೆಗೆ ಸೇರುತ್ತದೆ. ಅವಿಭಜಿತ ದಕದವರು ಹಿ೦ದಿನಿ೦ದಲೂ ಸಾ೦ಸ್ಕ್ರತಿಕ ವಿಷಯ ಗಳಿ ಗಿ೦ತ ವ್ಯಾವಹಾರಿಕ ವಿಚಾರಗಳಿಗೆ ಹೆಚ್ಚು ಗಮನ ಕೊಡುವವರು. ಇದು ನನ್ನ ಭಾವನೆ. ಸಕಾಲಿಕ ವಿಷಯಗಳ ಬಗ್ಗೆ ಹೀಗೆಯೇ ಬರೆಯುತ್ತಿರಿ.

    ReplyDelete
  2. ಬುದ್ದಿ ಜೀವಿಗಳ ಬಗ್ಗೆ ನಿಲುವುಗಳು ಬಗ್ಗೆ ಬಹಳಷ್ಟು ಜನಕ್ಕೆ ಬೇಸರವಿದೆ.

    ಕೆಳಗಿನ ನಾಲ್ಕೇ ಸಾಲಿನಲ್ಲಿ ಅವರ ಬಂಡವಾಳ ತಿಳಿಸಿದಿರಿ
    "ಎಡಪಂಥೀಯ ಎನಿಸಿಕೊಂಡ ಜನ ಬುದ್ಧಿಜೀವಿಗಳು ಎಂದು ಅವರಷ್ಟಕ್ಕೇ ಅವರು ಘೋಷಿಸಿಕೊಂಡಿದ್ದಾರೆ. ನೇರವಾಗಿರುವ ಮಾರ್ಗಕ್ಕೆ ಅಡ್ಡಹಾಕಿ ತಮ್ಮತ್ತ ಜನರನ್ನು ಆಕರ್ಷಿಸುವ ಅಡ್ಡಕಸುಬಿಗಳು ಅವರು! ಕಾರಂತರಿದ್ದರೆ ಇವತ್ತು ಕನ್ನಡನಾಡಿನಲ್ಲಿ ಮೆರೆಯುತ್ತಿದ್ದ ಅನೇಕ ಬುದ್ಧಿಜೀವಿಗಳು ಅಡಗಿ ಹೋಗುತ್ತಿದ್ದರು"

    ಇನ್ನು ಪತ್ರಕರ್ತರ ವಿಷಯದಲ್ಲಿ "ಗುಜರಿ-ಚಿಂದಿ ಆಯುವ ಹುಡುಗ ಬರೆಯುವ ರೀತಿ ನೋಡಿದರೆ ಆತನ ಗುಜರಿ ಸಾಮಗ್ರಿಗಳ ಬಗ್ಗೆ ನಿಜಕ್ಕೂ ಅಸಹ್ಯ ಹುಟ್ಟುತ್ತದೆ" ಎಂಬ ನಿಮ್ಮ ಮಾತು ಅಕ್ಷರಷಃ ಸತ್ಯ..

    ReplyDelete
  3. ಶ್ರೀಯುತ ಕಾರಂತರ ಮನೆಯನ್ನು ಕೆಡವಿದ ಸುದ್ದಿ ಕೇಳಿ ನಿಜಕ್ಕೂ ಬೇಸರ ಎನ್ನಿಸುತ್ತದೆ. ಮನೆಯನ್ನು ಕೆಡವುದರ ಬದಲು ಅದನ್ನು ಮಣಿಪಾಲದ ಕಾರಂತ ಕಲಾಗ್ರಾಮಕ್ಕೆ ವರ್ಗಾಯಿಸಬಹುದಿತ್ತು. ಸರಕಾರಕ್ಕೆ, ಮನೆಯನ್ನು ಮಣಿಪಾಲಕ್ಕೆ ವರ್ಗಾಯಿಸುವಿಕೆಗೆ ಅರ್ಜಿಯನ್ನೂ ಕೊಡಲಾಗಿತ್ತಂತೆ, ಆದರೆ ಯಾವ ಸರಕಾರವೂ, ಎಮ್‌ಎಲ್‌ಏಗಳೂ ಮುಂದುಬಂದಿಲ್ಲ. ನಿಜಕ್ಕೂ ವಿಷಾದದ ಸಂಗತಿ.

    ReplyDelete
  4. ಗುಜರಿ ಆಯುವ ಹುಡುಗ ಆಯ್ದದ್ದೇನು? ಪಡೆದದ್ದೇನು? ಅವ ಪಡೆದದ್ದನ್ನು ಹೊಂದಿರುತ್ತಾನೆ. ಹೊಂದುರುವುದಲ್ಲದೆ, ಬೇರೆ ಕೊಡಲಾದೀತೆ?

    ReplyDelete
    Replies
    1. ನಿಜಕ್ಕೂ ಸಾರ್ವಕಾಲಿಕ ಸತ್ಯವಾದ ಮಾತನ್ನಾಡಿದಿರಿ:-)

      Delete
  5. ಇಂತಹ ಕಾರಂತರನ್ನು ಯಾವುದೋ ಲಂಕೇಶ, ತೇಜಸ್ವಿ ಎಂತೆಲ್ಲಾ ಹೋಲಿಸಲು ಸಾಧ್ಯವೇ? ಕಾರಂತರ ರೋಮದ ಯೋಗ್ಯತೆ ಮಿಕ್ಕುಳಿದವರಲ್ಲಿತ್ತೇ?... ಹೀಗೆಲ್ಲ ಚಿಂತಿಸೊ ನಿಮಗೆ ಕಾರಂತರ ಹೆಸರು ಹೇಳೊ ಯೋಗ್ಯತೆಯ ಒಂದು ರೋಮವು ಇಲ್ಲ.

    ReplyDelete
    Replies
    1. thank you pranayi, you are simply Great & Matured !

      Delete
  6. ಕುವೆಂಪು ಮತ್ತು ತೇಜಸ್ವಿಯವರನ್ನ ಅನವಶ್ಯಕವಾಗಿ ಇಲ್ಲಿ ಎಳೆದು ತಂದ್ದಿದ್ದೀರಿ. ಕಾರಂತರ ಮನೆಯನ್ನ ಕೆಡವಿದ್ದು ನೋವಿನ ಸಂಗತಿ. ಅದನ್ನ ಆ ಮನೆಯ structureನ್ನೆ ಎತ್ತಿ ಬೇರೆಡೆಗೆ ಸ್ಥಳಾಂತರಿಸಬಹುದ್ದಿತ್ತು. ನೀವು ಬಯ್ಯಬೇಕಾಗಿರಿವುದು ಆಳವಾದ ವಿಸ್ಮೃತಿ ಒಡ್ಡಿಕೊಳ್ಳುತ್ತಿರುವ ಕರಾವಳಿಯ ಜನತೆಯನ್ನೆ ಹೊರತು ಕುವೆಂಪು ತೇಜಸ್ವಿ ಅವರನಲ್ಲ. ಒಮ್ಮೆ ಪುತ್ತೂರಿಗೆ ಹೋಗಿ ಬಾಲವನದ ಕಥೆ ಹೇಗಾಗಿದೆ ಅನ್ನುವುದನ್ನು ನೋಡಿ. ನಿಮ್ಮ ಮೂಗಿನ ನೇರಕ್ಕೆ ಬರೆದುಕೊಳ್ಳುವುದು ಸರಿಯಲ್ಲ.

    ReplyDelete
    Replies
    1. Yes this is the problem with these guys, If Bhat is talking about Karant we will accept it, but you are talking against Kuvempu & Tejasvi? That is not digestible. You are writing About Basheer as scrap seller? you are also a writer? Do you think is it good to be so aggressive? are you leading a fight for publicity purpose? Anyways best of luck for your future blogs.

      Delete
    2. @ Hanif ಗುಜರಿ ಅಂಗಡಿಯವ ಹೆತ್ತ ತಾಯಿ(ಭಾರತಾಂಬೆ)ಯನ್ನು ಸೂಳೆ ಎಂದು ಜರಿದರೂ ನಿಮಗೆ ಕಿಂಚಿತ್ತೂ ನೋವಾಗುವುದಿಲ್ಲ ಮತ್ತು ಅವರ ಬೆಂಬಲಕ್ಕೆ ನಿಲ್ಲುತ್ತೀರಿ. ಬೆಂಬಲಿಸುವ ಮುನ್ನ ಒಮ್ಮೆ ಯೋಚಿಸಿ ನೋಡಿ.. ಯಾವನೋ ತಲೆಮಾಸಿದವನು ಭಾರತಾಂಬೆಯ ಬೆತ್ತಲೆ ಚಿತ್ರವನ್ನು ಗೀಚಿ ದೇಶಬಿಟ್ಟು ಹೋದ, ಇನ್ಯಾವನೋ ಭಾರತಾಂಬೆಯನ್ನು ಸೂಳೆಗೆ ಹೋಲಿಸಿ ಅಸಹ್ಯವಾದ ಕವನ ಬಿಚ್ಚಿಟ್ಟಿದ್ದೂ ಆಯಿತು.. ನಿಮ್ಮ ಆಪ್ತ ಆ ಚಿಂದಿ ಆಯುವ ಬಷೀರ್ ಬೆತ್ತಲೆ ಚಿತ್ರಕ್ಕೆ ಬೆತ್ತಲೆ ಕವನವನ್ನು ಜೋಡಿಸಿ.. ಸಂತಸ ಪಟ್ಟಿದ್ದಾನೆ... ಅದು ನಿಮ್ಮ ಗಮನಕ್ಕೆ ಬಾರಲಿಲ್ಲವೇ, ಅಥವಾ ಅದನ್ನೂ ಸಮರ್ಥಿಸಲು ಕಾರಣ ಹುಡುಕುತ್ತಿರುವಿರೇ.. ಬಷೀರ್ ನ ಗುಜರಿ ಮಾರುವವನು ಅಂದರೆ ನಿಮಗೇಕೆ ಅಷ್ಟೊಂದು ಕೋಪ.. ಗುಜರಿ ಮಾರುವವನು ಆತನೇ ಹೇಳಿಕೊಂಡಿದ್ದು ಅಂತ ನಿಮಗೇಕೆ ತಿಳೀಲಿಲ್ಲ.. ನೀವು ಬುದ್ದಿಜೀವಿಗಳಾಗುತ್ತಿದ್ದೀರೇನು

      Delete
  7. ಕುವೆ೦ಪುರವರನ್ನು.., ತೇಜಸ್ವಿ ಅವರನ್ನು.....ರೋಮಕ್ಕೆ ಹೋಲಿಸಲು ನಿಮಗೇನು ಹಕ್ಕಿದೆ....? ನಾನು ಶಿವರಾಮ್ ಕಾರ೦ತರ ಬಗ್ಗೆ ಯಾವರೀತಿ ಅಘಾದವಾದ ಪ್ರೀತಿ ಗೌರವವನ್ನು ಹೊ೦ದಿದ್ದೇನೆಯೋ ಅದೇ ತರಹ ಕುವೆ೦ಪು ,ತೇಜಸ್ವಿ, ಯವರ ಮೇಲೂ ಅಘಾದವಾದ ಪ್ರೀತಿ ಗೌರವವನ್ನು ಹೊ೦ದಿದ್ದೇನೆ. ನನ್ನ೦ತೆ ಚಿ೦ತಿಸುವ ಅನೇಕಾನೇಕ ಸಾಹಿತ್ಯಾಸಕ್ತರಿಗೆ ನಿಮ್ಮ ಲೇಖನದಿ೦ದ ಬಹಳ ನೋವು೦ಟಾಗುತ್ತದೆ.... ಬಹುಶ: ಯಾವದೋ ಪೂರ್ವ್ವಾಗ್ರಹ ಆಸಕ್ತಿ ನಿಮ್ಮಿ೦ದ ಈ ಲೇಖನ ಬರೆಸಿದೆ.

    ReplyDelete
  8. ಯಾರಿಗೇ ಇಷ್ಟವಾಗಲಿ ಯಾರಿಗೇ ಕಷ್ಟವಾಗಲಿ ಕಣ್ಣಿಗೆ ಕಂಡಿದ್ದನ್ನು ಹೇಳುವ ಜಾಯಮಾನ ನನ್ನದು. ನಾನು ನಿಷ್ಠುರವಾದಿ. ಜಾತೀಯತೆ ಇಲ್ಲವೆಂದ ರಾಜ್ಯದಲ್ಲಿ, ’ಜಾತ್ಯಾತೀತ’ ಎಂಬ ಸೋಗಿನಲ್ಲಿ ಜಾತಿಯೆಂಬ ಹಿಡೆನ್ ಅಜೆಂಡಾ ಕಾರ್ಯನಿರ್ವಹಿಸುವುದು ಕಾಣುತ್ತಲೇ ಇರುತ್ತದೆ. ಇದು ಇವತ್ತಿನ ಸಾಹಿತ್ಯ ಲೋಕಕ್ಕೂ ಹೊಸದಲ್ಲ ಎಂಬುದು ಎಲ್ಲರೂ ಅರಿಯಬೇಕಾದ ವಿಷಯ. ಇದನ್ನು ಇವತ್ತಿನ ಹೊಸದಿಗಂತದಲ್ಲಿ ಲೇಖಕರೊಬ್ಬರು ಚಿಕ್ಕದಾಗಿ ಹೀಗೆ ಬಿತ್ತರಿಸಿದ್ದಾರೆ ನೋಡಿ:
    http://hosadigantha.in/epaper.php?date=03-02-2012&name=03-02-2012-6

    ReplyDelete
  9. ಸನ್ಮಾನ್ಯ V.R. Bhat ರವರೇ ಕುವೆಂಪು ಕಾರಂತ, ಲಂಕೇಶ್ ಮತ್ತು ಪೂಚಂತೇ ಬರೆದದ್ದು ನೆಲದ ಮೇಲಿನ ಜನಸಾಮಾನ್ಯರ ಬಗ್ಗೆ.. ಲಂಕೇಶರ ಬನದ ಕರಡಿಯ ಅವ್ವ, ಏಯ್ ಅಂದರೆ ಹೋಯ್ ಅನ್ನುವಳು. ಕೃಷ್ಣನೆಂದರೆ ನಾಟಕದ ಕಂಪೆನಿಯ ಪಾತ್ರಧಾರಿಯಷ್ಟೇ ನೆನಪಿಗೆ ಬರುತ್ತಾನೆ ಅಂದವರು ಕಡಲತೀರದ ಭಾರ್ಗವ.. ಕುವೆಂಪು ಈ ನೆಲದ ಮೂಲಮಕ್ಕಳ ಪರಂಪರೆಯ ಗುತ್ತಿ ಮತ್ತವನ ನಾಯಿಯಂತಹ ನಿರ್ಲಕ್ಷಿತರ ಬಗ್ಗೆ ಬರೆದವರು.. ಇನ್ನು ತೇಜಸ್ವಿಯವರೋ ಮಾರ, ಪ್ಯಾರ, ಬಿರಿಯಾನಿ ಕರಿಯಪ್ಪ, ಹಾವಾಡಿಗ ಎಂಗಟ, ಮಂದಣ್ಣನಂತಹ ಜನಸಾಮಾನ್ಯರ ಬಗ್ಗೆ ಬರೆದವರು..'ನಾನು ಬೇರೆ ಯಾವ ಲೇಖಕರಿಂದಲೂ ಪ್ರಭಾವಿತ ನಾಗಿಲ್ಲ. .. ' ಎಂದು ಮುಲಾಜಿಲ್ಲದೆ ಹೇಳಿದವರು ಡಾ. ಶಿವರಾಮ ಕಾರಂತರು. ಸರ್ , ಯಾಕೆ ಹಾಗೆ ಹೇಳಿದಿರಿ ಎಂದು ಪ್ರಶ್ನಿಸುವ ಧೈರ್ಯವನ್ನು ಯಾರು ಮಾಡಲಿಲ್ಲ. ಎನ್ನುವುದು ಬೇರೆ ಮಾತು. ಅಂಥ ಕಾರಂತರು ಕೂಡ ಪೂರ್ಣಚಂದ್ರ ತೇಜಸ್ವಿಯವನ್ನು; ಅದರಲ್ಲೂ ಅವರ ವಿಜ್ಞಾನ ಸಂಬಂಧಿಸಿದ ಬರಹಗಳನ್ನು ವಿಪರೀತ ಇಷ್ಟಪಟ್ಟಿದ್ದರು. ಒಂದೆರಡು ಸಂದರ್ಭಗಳಲ್ಲಿ 'ವಿಜ್ಞಾನ ಬರಹಗಳ ವಿಷಯಕ್ಕೆ ಬಂದರೆ, ನೀವು ನನಗಿಂತ ಚೆನ್ನಾಗಿ ಅಪ್ತವಾಗಿ ಮತ್ತು ಸರಳವಾಗಿ ಬರೀತೀರ. ನಾನು ಓದಿ ಬರೆದೆ. ನೀವು ಅನುಭವಿಸಿ ಬರೆದಿರಿ, ಹಾಗಾಗಿ ನನಗಿಂತ ನೀವೇ ದೊಡ್ಡ ಲೇಖಕರು... ಎಂದಿದ್ದರೂ ಕೂಡ. ಕಾರಂತಜ್ಜನ ಈ ಮೆಚ್ಚುಗೆಯ ಮಾತಿಗಿಂತ ದೊಡ್ಡ ಪ್ರಶಸ್ತಿ ಇರುವುದು ನನಗಂತೂ ಗೊತ್ತಿಲ್ಲ ಎನ್ನುತ್ತಿದ್ದರು ತೇಜಸ್ವಿ.
    ವಿಷಯ ಹೀಗಿರುವಾಗ ಈ ನಾಡಿನ ನೆಲಮೂಲದ ಮೂವರು ದೈತ್ಯ ಲೇಖಕರನ್ನು ಹೀನಾಯವಾಗಿ ತುಚ್ಛೀಕರಿಸುವ ನಿಮ್ಮ ಇಂತಹ ಗಲೀಜು ಬರಹವೊಂದು ಪತ್ರಕರ್ತ ಹಾಗೂ ಧರ್ಮದ ಹಿನ್ನೆಲೆಯಿಂದ ಮುಸಲ್ಮಾನರಾದ ಬಷೀರರನ್ನು "ಚಿಂದಿ ಆರಿಸುವವನು" ಎಂದು ಹೀಗಳೆಯುತ್ತದೆ. ಇಲ್ಲಿ ಹಿಡನ್ ಅಜೆಂಡಾ ಇರುವುದು ತಮಗೇ. ಕಾರಂತರನ್ನು ಜಾತಿಯ ವರ್ತುಲದೊಳಗೆ ಕಟ್ಟಿಹಾಕಿಕೊಂಡಿರುವುದು ನಿಮ್ಮ ತಪ್ಪೇ ಹೊರತು, ಕಾರಂತರ ತಪ್ಪಲ್ಲ. ಚೋಮನೆಂಬೋ ಭೂರಹಿತ ಕೂಲಿಕಾರ್ಮಿಕನ ಬದುಕಿನೊಳಗೆ ಆಳಕ್ಕೆ ನುಗ್ಗುವ ಕಾರಂತರನ್ನು ಯಾವ ಜಾತಿಯೂ ಹಿಡಿದಿಟ್ಟಿರಲಿಲ್ಲ. ಹೇಗಾದರೂ ಮಾಡಿ "ನಮ್ಮವರಾದ" ಕಾರಂತರನ್ನು ಜಾತಿಗಳ ಸಂಕೋಲೆಗಳೊಳಗೆ ಬಂಧಿಸಿ ಅವರ ಹೆಗಲ ಮೇಲೆ ಬಂದೂಕಿಟ್ಟು ಲಂಕೇಶರಿಗೆ, ಕುವೆಂಪುಗೆ, ತೇಜಸ್ವಿಯವರಿಗೆ ಪ್ಲಾಸ್ಟಿಕ್ ಗುಂಡು ಹೊಡೆಯುವ ವಿಫಲ ಯತ್ನ ನಡೆಸಿದ್ದೀರಿ ಅಷ್ಟೇ. ಈ ದೈತ್ಯರು ಖಂಡತುಂಡವಾಗಿ ನಿರಾಕರಿಸುತ್ತಿದ್ದುದು ತಮ್ಮಂಥಹವರನ್ನೇ. ಕಾರಂತರೆಂದೂ ಜಾತಿ ಮತ್ತು ಕುಲಶ್ರೇಷ್ಠತೆಯ ತಮ್ಮ ಪರಿಯ ವ್ಯಸನದೊಳಗೆ ಯಾವತ್ತೂ ಬಿದ್ದವರಲ್ಲ. ಮೂಲತಃ ನಾಸ್ತಿಕರಾದ ಕಾರಂತರು ನಿಮ್ಮ ಕಟ್ಟುವಿಕೆಯ ಯಾವ ಪರಿಧಿಗೂ ಸಿಕ್ಕುವುದಿಲ್ಲ. ದೈತ್ಯ ಲೇಖಕರನ್ನು ಕಾರಂತರ ವಿರುದ್ದ ಎತ್ತಿಕಟ್ಟುವ ನಿಮ್ಮ ಹಪಾಹಪಿಯೊಳಗೇ ಕುಲಶ್ರೇಷ್ಠತೆಯ ವ್ಯಸನಗಳು ಬಿಚ್ಚಿಕೊಂಡಿವೆ. ತಮ್ಮ ಬರಹ ಹೊಲಸಾದುದೂ ಮತ್ತು ಕಾರಂತರೂ ಸೇರಿದಂತೆ ಉಳಿದ ಬರಹಗಾರರಿಗೆ ಮಾಡಿದ ಅವಮಾನವೆಂದೇ ನಾನು ಭಾವಿಸುತ್ತೇನೆ. ಜಾತಿಮೂಲದಿಂದ ತಮಗೆ ಆಗದ ಲೇಖಕರು ಬರಹಗಾರರನ್ನು ನಿಮ್ಮ ವೈಯುಕ್ತಿಕ ಬ್ಲಾಗ್ ನಲ್ಲಿ ತೇಜೋವಧೆ ಮಾಡಿಕೊಂಡು ಸುಖಿಸಿಕೊಳ್ಳಲು ಯಾರದ್ದೂ ಅಭ್ಯಂತರವಿಲ್ಲ. ಅಂಥಹದೇ ಮನಸ್ಥಿತಿಯವರು ಅದನ್ನು ಓದಿಕೊಳ್ಳಲಿ. ಆದರೆ ಲಂಕೇಶ್, ಕುವೆಂಪು, ಕಾರಂತರು ಮತ್ತು ತೇಜಸ್ವಿಯವರನ್ನು ಓದಿಕೊಂಡು ಇವರೆಲ್ಲರ ಆಶಯಗಳನ್ನು ಎದೆಗಪ್ಪಿಕೊಂಡು ಬರೆಯುತ್ತಿರುವ ನೂರಾರು ಮನಸ್ಸುಗಳಿರುಬ ಕನ್ನಡ ಬ್ಲಾಗ್ ನಲ್ಲಿ ಪ್ರಕಟಿಸುವ ತಮ್ಮ ಧೈರ್ಯವನ್ನು ಯಾರೂ ಸರಿಯೆಂದು ಒಪ್ಪುವುದಿಲ್ಲ. ಮನುಷ್ಯತ್ವವನ್ನು ಮಾತ್ರ ಮಾತನಾಡಿದ ಕನ್ನಡದ ಅತ್ಯುತ್ತಮ ಲೇಖಕರನ್ನು ಪರಸ್ಪರ ಎತ್ತಿಕಟ್ಟುವ ತಮ್ಮ ಬಾಲಿಶತನಕ್ಕೆ ಕಾರಂತರು, ತೇಜಸ್ವಿ, ಲಂಕೇಶ್, ಕುವೆಂಪುರವರ ಆಶಯಗಳನ್ನು ಒಪ್ಪುವ ಮನಸ್ಸುಗಳ ಛೀಮಾರಿಗಳು ಮಾತ್ರ ಸಲ್ಲುತ್ತವೆ. ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಸದ್ಗುರು ಭಗವಾನ್ ಶ್ರೀಧರ ಸ್ವಾಮಿಗಳು,ಎಲ್ಲರಿಗಾಗಿ ವೇದ, ಮತ್ತು ವೇದಸುಧೆಯನ್ನು ಮಾತ್ರ ತಮ್ಮಿಷ್ಟ ಬಂದಂತೆ ಹರಿಸಿಕೊಳ್ಳಿ.. ನಾವು ಪ್ರೀತಿಸುವ ಜೀವಗಳನ್ನು ಅವಮಾನಿಸಲು ಪ್ರಯತ್ನಿಸದಿರಿ. ಇದು ವೇದವನ್ನು ಬಿಟ್ಟು ಜನಸಾಮಾನ್ಯ ಲೇಖಕರನ್ನು ಪ್ರೀತಿಸುವ ಮನಸ್ಸುಗಳ ಎಚ್ಚರಿಕೆ ಸಹ.

    ReplyDelete
    Replies
    1. Raghavendra, ನಿಮ್ಮ ಎಚ್ಚರಿಕೆ ನಿಮಗೇ ಇರಲಿ, ನಿಮ್ಮ ನಾಲಿಗೆ ಬಿಗಿ ಹಿಡಿದು ನಿಮ್ಮ ಬ್ಲಾಗಿನಲ್ಲಿ ಅದೇನಉ ಬೇಕೋ ಬರೆದುಕೊಳ್ಳಿ. ನಿಮ್ಮ ಕಂತೆ ಪುರಾಣ ನಮಗೆ ಬೇಕಾಗಿಲ್ಲ, ಹೊಸದಿಗಂತದ ಲಿಂಕ್ ಮೇಲಿದೆ ಓದಿ, ಇಷ್ಟು ಸಾಕು

      Delete
  10. ಆತ್ಮೀಯ ಓದುಗರೇ, ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನೂ ಸ್ವೀಕರಿಸಿದ್ದೇನೆ, ನನಗೆ ನೀವೇನೆಂದರೂ ಅದರ ಬಗ್ಗೆ ಹಿಗ್ಗು/ಕುಗ್ಗು ಇಲ್ಲ! ಅವೆಲ್ಲಾ ನ್ಯೂಟ್ರಲ್. ನನ್ನ ಬಗ್ಗೆ ತಿಳಿಯದ ಅನೇಕರ ಸಲುವಾಗಿ ಇಲ್ಲೊಂದು ಲಿಂಕ್ ಹಾಕುತ್ತಿದ್ದೇನೆ ಇದನ್ನು ದಯವಿಟ್ಟು ಓದಿಕೊಳ್ಳಿ :
    http://nimmodanevrbhat.blogspot.in/2011/12/blog-post_18.html

    ನನ್ನ ಪ್ರತಿಕ್ರಿಯೆಗಳನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ, ಎಲ್ಲರಿಗೂ ಧನ್ಯವಾದಗಳು.

    ReplyDelete
  11. ಬರೆದುದನ್ನು ಬರೆದುಕೊಂಡು ಹೊಗಳಿಕೆ ಮಾತ್ರ ಬಯಸಿದರೆ ಹೇಗೆ ರಾಘವೇಂದ್ರರ ಮಾತು ನಿಮಗಿಂತ ಕಟುವಾಗಿಲ್ಲ..

    ReplyDelete
  12. ಕಂಡ ಕಂಡ ದೇವರನೆಲ್ಲ ಕೈ ಮುಗಿದು ಓಡಾಡುತ್ತಿದ್ದೋನು ನಾನು, ಶಿವರಾಮ ಕಾರಂತರ 'ಹುಚ್ಚುಮನಸ್ಸಿನ ಹತ್ತು ಮುಖಗಳು" ಓದಿ ಅವರ ಧಾರ್ಮಿಕ ನಿಲುವುಗಳಿಂದ ಪ್ರಭವಿನಾಗಿ ದೇವರನ್ನೆ ಬಿಟ್ಟೆ, ಮನೆಯಲ್ಲಿ ಹಬ್ಬ ಹರಿದಿನ ಬಂದರೆ ಮನೆಯಲ್ಲಿ ನಾನು ಭಾಗವಹಿಸದೆ ಅವರ ಮನಸ್ಸಿಗೆ ನೋವು ಮಾಡಿದೋನು, ಅಳಿದ ಮೇಲೆ ಕಾದಂಬರಿಲಿ ಕಾರಂತರು ತನ್ನ ಸ್ನೇಹಿತನ ತಾಯಿಯ ಖುಷಿಗಾಗಿ ದೇವಸ್ತಾನವನ್ನು ಜೀರ್ಣೊದ್ದಾರ ಮಾಡಿ ತನ್ನ ವೈಚಾರಿಕ ನಿಲುವಿಗಿಂತ ಮನುಷ್ಯ ಸುಖ ದುಃಖ ಮುಖ್ಯ ಅನ್ನೊದನ್ನ ತೋರಿಸಿದರು, ಆಗಿಂದ ನಾನು ಮನೆಲಿ ಎಲ್ಲ ಹಬ್ಬಗಳಲ್ಲು ಪೂಜೆಗಳಲ್ಲು ಸಕ್ರಿಯನಾದೆ, ಸಾಲಿಗ್ರಾಮದಲ್ಲಿ ಕಾರಂತ ಬಗ್ಗೆ ಒಂದು ಸಂಗ್ರಹಾಲಯವಿದೆ, ಅಲ್ಲಿ ತೇಜಸ್ವಿ ಬಗ್ಗೆ ಕಾರಂತರಲ್ಲಿದ್ದ ಗೌರವವನ್ನು ಕಂಡು ತೇಜಸ್ವಿಯನ್ನು ಓದಲು ಶುರು ಮಾಡಿದೆ. ಹೀಗೆ ಒಬ್ಬ ಸಾಹಿತಿಯಿಂದ ಪ್ರಭಾವಿತನಾದ ನನ್ನತವರಿಗೆ ಅವರನ್ನ(ಕಾರಂತರನ್ನು) ಮುಂದಿಟ್ಟು ಕೊಂಡು ತೇಜಸ್ವಿಯಂತ ಸಾಹಿತಿ ಬಗ್ಗೆ ಕೇವಲವಾಗಿ ಮಾತನಾಡೊ ವಿಕೃತ ಮನುಷ್ಯನ ಲೇಖನ ಓದಿದರೆ ಎಷ್ಟು ನೋವಾಗಬಹುದು. ಇಂತವರಿಗೆ ಕಾರಂತರ ಮನಸ್ಸು, ಚಿಂತನೆ ಬೇಡ ಅವರ ಹೆಸರು ಬೇಕಷ್ಟೆ, ತಮ್ಮ ಬೆಳೆ ಬೆಂದ ಮೇಲೆ ಕಾರಂತರ ಹೆಸರನ್ನೆ ಮರೆಯೋ ಮನಸ್ಸುಗಳಿಗೆ ಕಾರಂತರು ಎಂದು ಅರ್ಥವಾಗೊಲ್ಲ. ಇಂಥ ವಿಕೃತ ಮನಸ್ಸುಗಳು ಸಮಾಜಕ್ಕೆ ಉಮೇಶ್ ರೆಡ್ಡಿಯಷ್ಟೆ ಅಪಾಯಕಾರಿ.

    ReplyDelete
  13. ಈ ಮೇಲೆ ಕಾಮೆಂಟ್ ಬರೆದಿರುವ "Raghavendra" ಯಾರಂತ ನನಗೆ ಗೊತ್ತಿಲ್ಲ. ಆದರೆ ನಾನು ಅವರ ಕಾಮೆಂಟನ್ನು ಅಕ್ಷರಶಃ ಅನುಮೋದಿಸುತ್ತೇನೆ. ವಿ.ಆರ್.ಭಟ್ಟರು ನೀತಿವಾಕ್ಯ ಹೇಳುವ ಚೌಪದಿಗಳನ್ನು ಬರೆಯುತ್ತಾರೆ (ಆವು ನನಗೆ ಇಷ್ಟವೂ ಆಗುತ್ತವೆ) ಆದರೆ ತಾವೇ ಆ ನೀತಿವಾಕ್ಯಗಳನ್ನು ಪಾಲಿಸುವುದಿಲ್ಲ. ತಲೆಭಾರದ (headweight) ಉದ್ಧಟತನ ತೋರುತ್ತಾರೆ [ರಾಘವೇಂದ್ರ ಅವರು ಇಷ್ಟು ಗೌರವಯುತವಾಗಿ, ಅರ್ಥಪೂರ್ಣವಾಗಿ ಪ್ರತಿಕ್ರಿಯೆ ಬರೆದು ತಿಳಿಸಿದಾಗ ಅದಕ್ಕೆ ವಿ.ಆರ್.ಭಟ್ ಉತ್ತರಿಸಿದ ರೀತಿಯೇ ಇದಕ್ಕೊಂದು ಉದಾಹರಣೆ.] ಇದು ನಿಜಕ್ಕೂ ಖೇದಕರ ಸಂಗತಿ. ವಿ.ಆರ್.ಭಟ್‌ರಿಗೆ (ಮತ್ತು ಎಲ್ಲರಿಗೂ) ದೇವರು ಒಳ್ಳೆಯದನ್ನೇ ಮಾಡಲಿ ಎಂದು ನನ್ನ ಆಶಯ.

    ReplyDelete
    Replies
    1. ಸನ್ಮಾನ್ಯ ಶ್ರೀವತ್ಸ ಜೋಶಿಯವರೇ, ನನಗೆ ಹೆಡ್ ವೇಟ್ ಅಥವಾ ಉದ್ಧಟತನ ಎಂದಿದ್ದೀರಿ ಒಪ್ಪಿಕೊಳ್ಳುತ್ತೇನೆ, ನಿಮ್ಮ ಅನಿಸಿಕೆ ಹಾಗೇ ಇರಲಿ, ಪರವಾಗಿಲ್ಲ. ರಾಘವೇಂದ್ರ ಎನ್ನುವ ವ್ಯಕ್ತಿ ನನಗೂ ನಿಮ್ಮಷ್ಟೇ ಗೊತ್ತು! ನಾನು ಉತ್ತರಕೊಟ್ಟಿದ್ದು ಅವರು ಬರೆದ ಕೊನೆಯ ವಾಕ್ಯಗಳಿಗೆ. ಅವರ ಕೊನೆಯ ಮಾತುಗಳು " ಮನುಷ್ಯತ್ವವನ್ನು ಮಾತ್ರ ಮಾತನಾಡಿದ ಕನ್ನಡದ ಅತ್ಯುತ್ತಮ ಲೇಖಕರನ್ನು ಪರಸ್ಪರ ಎತ್ತಿಕಟ್ಟುವ ತಮ್ಮ ಬಾಲಿಶತನಕ್ಕೆ ಕಾರಂತರು, ತೇಜಸ್ವಿ, ಲಂಕೇಶ್, ಕುವೆಂಪುರವರ ಆಶಯಗಳನ್ನು ಒಪ್ಪುವ ಮನಸ್ಸುಗಳ ಛೀಮಾರಿಗಳು ಮಾತ್ರ ಸಲ್ಲುತ್ತವೆ. ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಸದ್ಗುರು ಭಗವಾನ್ ಶ್ರೀಧರ ಸ್ವಾಮಿಗಳು,ಎಲ್ಲರಿಗಾಗಿ ವೇದ, ಮತ್ತು ವೇದಸುಧೆಯನ್ನು ಮಾತ್ರ ತಮ್ಮಿಷ್ಟ ಬಂದಂತೆ ಹರಿಸಿಕೊಳ್ಳಿ.. ನಾವು ಪ್ರೀತಿಸುವ ಜೀವಗಳನ್ನು ಅವಮಾನಿಸಲು ಪ್ರಯತ್ನಿಸದಿರಿ. ಇದು ವೇದವನ್ನು ಬಿಟ್ಟು ಜನಸಾಮಾನ್ಯ ಲೇಖಕರನ್ನು ಪ್ರೀತಿಸುವ ಮನಸ್ಸುಗಳ ಎಚ್ಚರಿಕೆ ಸಹ." ನನಗೆ ಇಷ್ಟವಾಗಲಿಲ್ಲ ಎಂಬುದಕ್ಕಾಗಿಯೂ ಮತ್ತು ಅವರು ಬರೆದ ಮಾಹಿತಿಯೆಲ್ಲಾ ನನಗೆ ಗೊತ್ತಿರುವುದರಿಂದ ಮತ್ತೆ ಅದು ಸಾಫ್ಟ್ ವಾರ್ [ಶೀತಲ ಸಮರ] ಆಗಿ ಮುಂದುವರಿಯುವುದು ಬೇಡ ಎಂಬ ಅನಿಸಿಕೆಯಿಂದಲೂ ಅದನ್ನು ಅಷ್ಟಕ್ಕೇ ನಿಲ್ಲಿಸಿದ್ದೇನೆ.

      ನನ್ನ ಅನಿಸಿಕೆಯನ್ನು ನಾನು ಹೇಳಿದ್ದೇನೆ. ನಿಮ್ಮೆಲ್ಲರ ಅನಿಸಿಕೆಯನ್ನು ನೀವೆಲ್ಲಾ ಹೇಳಿದ್ದೀರಿ. ನಾನು ಯಾವ ಜಾತಿಯನ್ನೂ ಹೊತ್ತು ಮೆರೆದಿಲ್ಲ ಅಥವಾ ಜಾತಿಯವರೆಂದು ಕಾರಂತರ ಹೆಗಲಮೇಲೆ ಕೋವಿ ಇಟ್ಟು ಗುಂಡು ಹಾರಿಸಲಿಲ್ಲ! ನೋಡೀ ಸರ್, ತಮ್ಮಲ್ಲಿಯೇ ಕೇಳುತ್ತೇನೆ: ಕಾರಂತರು ಕನ್ನಡಕ್ಕೆ ಕೊಟ್ಟ ಕೊಡುಗೆಗಾಗಲೀ ಅಥವಾ ಅವರ ಪಾಂಡಿತ್ಯಕ್ಕಾಗಲೀ ಯಾರನ್ನೂ ಹೋಲಿಸಲು ಸಾಧ್ಯವಿಲ್ಲ ಎಂಬುದು ನಾನು ಎಲ್ಲಿದ್ದರೂ ಹೇಳುವ ನನಗೆ ಕಂಡ ಸತ್ಯ. ಹೀಗೆ ಬರೆಯಲು ನಾನು ಓದಿದ ಮೂಲ ಲೇಖನ ಕಾರಣವಾಗಿದೆ!! ಮೂಲ ಲೇಖನವನ್ನೇ ಓದದೇ ಕೇವಲ ನನ್ನ ಪ್ರತಿಕ್ರಿಯಾ ಲೇಖನಕ್ಕಷ್ಟೇ ಸ್ಪಂದಿಸಿದರೆ ಅದು ಅಪೂರ್ಣವಾಗುತ್ತದೆ. ಹೀಗಾಗಿ ಮೂಲ ಲೇಖನವನ್ನು ತಾವೆಲ್ಲಾ ಓದಿಕೊಳ್ಳಬಹುದು.

      ನೀತಿ ಎಲ್ಲರಿಗೂ ಒಂದೇ ಎಂದಮೇಲೆ ಕನ್ನಡದ ಕಟ್ಟಾಳುಗಳಾದ ಮಿಕ್ಕುಳಿದ ಕವಿ-ಸಾಹಿತಿಗಳ ಸ್ಮಾರಕಗಳ/ಪ್ರತಿಮೆಗಳ/ಸ್ಮರಣಾರ್ಥ ಪ್ರಶಸ್ತಿಗಳ ಸಲುವಾಗಿ ಯಾವುದೇ ಸಂಘವಾಗಲೀ, ವೇದಿಕೆಯಾಗಲೀ ಮುಂದೆಬರಲಿಲ್ಲ ಯಾಕೆ? ಹೊಸದಿಗಂತದಲ್ಲಿ ಪ್ರಕಟವಾದ ಚಿಕ್ಕ ಮಾಹಿತಿಯನ್ನು ಈ ಮೇಲಿನ ಹಾಕಿದ ಕೊಂಡಿಹಿಡಿದು ತಾವು ಕಾಣಬಹುದಾಗಿದೆ. ನೀತಿ ತಪ್ಪಿದಾಗ ಅಲ್ಲಿ ನೀತಿ ಪದ್ಯಗಳ ಚೌಪದಿಗಳ ಪ್ರಶ್ನೆ ಇರುವುದಿಲ್ಲ! ಯಾವುದು ನೀತಿ ಎಂಬುದನ್ನು ತಿಳಿಯದೇ ನಾನು ಮಾತನಾಡಲಿಲ್ಲ ಎಂದುಕೊಂಡಿದ್ದೇನೆ.

      ಇನ್ನು ನಾನು ’ರೋಮ’ ಎನ್ನುವ ಪದ ಬಳಕೆ ಮಾಡಿದ್ದಕ್ಕೆ ನಿಮಗೆಲ್ಲಾ ಬೇಸರವಿದ್ದರೆ ಅದನ್ನು ವಿಸರ್ಜಿಸೋಣ, ಅಥವಾ ನಗಣ್ಯವೆಂದುಕೊಳ್ಳೋಣ. ನಿಮ್ಮಂತಹ ಒಳ್ಳೆಯ ಮನಸ್ಸುಗಳು ಬೇಸರಗೊಂಡಿದ್ದಕ್ಕೆ ಕ್ಷಮೆಯಿರಲಿ. ಆದರೆ ಹಾಗೆ ಮಾಡಿಸುವಂತೇ ಮಾಡಿದ ಲೇಖನದ ಬಗ್ಗೆ ಮತ್ತು ಎಡಪಂಥೀಯರ ಅಸಡ್ಡೆಯ ಧೋರಣೆಯ ಬಗ್ಗೆಯೂ ಸ್ವಲ್ಪ ತಮ್ಮೆಲ್ಲರ ಗಮನ ಸೆಳೆಯ ಬಯಸುತ್ತೇನೆ. ಕನ್ನಡದಲ್ಲಿ ಒಬ್ಬರನ್ನು ಬಿಟ್ಟರೆ ಮತ್ಯಾರೂ ಇಲ್ಲವೇ? ಸಹಜವಾಗಿ ಸಿಗಬೇಕಾದ ಗೌರವ ಅವರೆಲ್ಲರಿಗೂ [ಕುವೆಂಪು ಅವರಿಗೆ ಸಿಕ್ಕಿದಷ್ಟು ಪೂರ್ತಿ ಅಲ್ಲದಿದ್ದರೂ]ಅಷ್ಟಿಷ್ಟು ಸಿಕ್ಕಿ ಸಮನ್ವಯವಾದರೆ ಆಗ ನೀತಿವಾಕ್ಯ ಸಹಜವಾಗಿ ಎಲ್ಲರಿಗೂ [ಬರೆದ ನನಗೂ] ಅಪ್ಲೈ ಆಗುತ್ತದೆ. ನಾನು ಕಂಡ ಸತ್ಯದ ವಿರುದ್ಧ ದನಿ ಎತ್ತಿದಾಗ ನಿಮಗೆ ಅದು ಉದ್ಧಟತನವಾಗುತ್ತದೆ ಎಂಬುದು ನನಗೊಂದು ಹೊಸ ಸತ್ಯವನ್ನು ಕಾಣುವಂತೇ ಮಾಡಿದೆ! ನನ್ನನ್ನು ಅನುಮೋದಿಸುವ ಸಂಖ್ಯೆ ಕಮ್ಮಿ ಎಂಬುದು ನನಗೆ ಮೊದಲೇ ಗೊತ್ತಿತ್ತೂ ಕೂಡ ! ಹೀಗಾಗಿ ಇಲ್ಲಿಗೆ ವಿಷಯ ನಿಲ್ಲಿಸಿಬಿಡೋಣ, ದೇವರು ಕೊಟ್ಟ ಗೌರವ ಯಾರ್ಯಾರಿಗೆ ಎಷ್ಟು ಸಿಗಬೇಕೋ ಅದು ಸಿಗುತ್ತದೆ ಎಂದುಕೊಂಡು ಸುಮ್ಮನಾಗೋಣ. ಪ್ರತಿಕ್ರಿಯಿಸಿದ ನಿಮಗೂ ದೇವರು ಒಳ್ಳೇದು ಮಾಡಲಿ ಎಂಬುದರೊಂದಿಗೆ ನಿಮ್ಮೊಬ್ಬರ ತುಡಿತಕ್ಕಾಗಿ ’ಮುಗಿಸಿದ’ ಮೇಲೂ ಮರಳಿ ಸ್ಪಂದಿಸುತ್ತಿದ್ದೇನೆ, ಧನ್ಯವಾದಗಳು.

      Delete
  14. Dear V.R.Bhat, ನಿಮ್ಮ ಪ್ರಲಾಪವನ್ನು ಮೊಂಡುವಾದಗಳನ್ನು ಗಮನಿಸಿದಾಗೆಲ್ಲ ನನಗೆ ಒಂದೇ ನೆನಪಾಗುವುದೆಂದರೆ ಮಾರ್ಕ್ ಟ್ವೈನ್‌ನ ಫೇಮಸ್ ಹೇಳಿಕೆ: "Never try to teach a pig to sing. It wastes your time and annoys the pig." ಇಲ್ಲಿ ನಿಮ್ಮನ್ನು pig ಎಂದು ಕರೆದೆನೆಂದು ವಾದಕ್ಕಿಳಿಯಬೇಡಿ ಮತ್ತೆ! ಏಕೆಂದರೆ ಮಾರ್ಕ್ ಟ್ವೈನ್ ಹೇಳಿದ್ದು ನನಗೂ ಅನ್ವಯವಾಗುತ್ತದೆ, ಹಾಗಾಗಿ ನಿಮ್ಮ ಟೈಮ್ ವೇಸ್ಟ್ ಮಾಡಬೇಡಿ, ನನ್ನನ್ನು annoy ಮಾಡಬೇಡಿ. ಹಹ್ಹಹ್ಹಾ! :-)

    ReplyDelete
    Replies
    1. Dear Joshi, ಪ್ರಬುದ್ಧ ’punಡಿತರ’ ವಾದಕ್ಕೆ ಮರುತ್ತರ ಬೇಕೇ ? ಸಮಯದಲ್ಲಿ ನಾನು ಹೇಳಿದ್ದು ಪ್ರಾಯಶಃ ತಮಗೆ ತಡವಾಗಿ ಅರ್ಥವಾಗಬಹುದು! ಮಾರ್ಕ್ ಟ್ವೈನ್ ಯಾಕೆ ನಮ್ಮ ಕನ್ನಡದಲ್ಲೇ ಇದೆಯಲ್ಲಾ ’ಕೋಣನ ಮುಂದೆ ಕಿನ್ನರಿ ಬಾರಿಸಿದಂತೇ’ ಅಂತ! ಇದೂ ಸಹ ಹಾಗೇ ನಿಮಗೂ ನನಗೂ ಇಬ್ಬರಿಗೂ ಸಮನ್ವಯವಾಗುತ್ತದೆ ಎನ್ನುತ್ತಾ ವಾದಸರಣಿಗೆ ನನ್ನ ’ಮುಕ್ತಾಯ’ ಹಾಡುತ್ತಿದ್ದೇನೆ.

      Delete
    2. ಹೊಗಳಿಕೆಗೆ ಮಾತ್ರ ಇರಲಿ ನಿಮ್ಮ ಅನಿಸಿಕೆಗಳು ಇಲ್ಲಿ ...

      Delete
    3. It is not right to compare karanth,kuvempu ,bendre DVG and any body for that matter.They are different individuals and contributed to kannada in there own style.They made us (kannadigas) proud.Bottom line is that,not to make anybody small to show other people big.They are big by any standards , at least as compared to us.Let us not restrict them to particular cast.Let them grow beyond boundaries like Gandhiji not like .....Let every body criticize any body ,if they like to do so with out comparison.Just because all these people belong to us.

      suragange.blogspot.com

      Delete