ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, February 27, 2012

ಸಗ್ಗವೀ ವಸುಂಧರಾ !

ಸಗ್ಗವೀ ವಸುಂಧರಾ !

ಚಿಗುರು ಹೂವು ಕಾಯಿ ಹಣ್ಣು
ನಗದು ಲೋಕ ಸುಂದರ !
ಬಗೆಬಗೆಯಲಿ ಬದಲುಗೊಳುವ
ಸಗ್ಗವೀ ವಸುಂಧರಾ !!

ಜಲದ ಚಿಲುಮೆ ಹರಿದು ಮುಂದೆ
ವಲಯ ಮಲಯಗಳಲಿ ಸಾಗಿ
ಸಲಿಲ ಜಲಲಧಾರೆಯಾಗಿ
ನಲಿದು ಧುಮ್ಮಿಕ್ಕುತಾ |
ಒಲಿದ ಮಿಥುನಗಳವು ನಿಂದು
ಕಲೆಯುತಲ್ಲಿ ದೇವಳದಲಿ
ನಲಿವುದಂತು ದೃಶ್ಯಕಾವ್ಯ
ಕಲೆಯು ಹಿಗ್ಗಿ ಸೊಕ್ಕುತಾ ||

ವನದ ತುಂಬ ವೃಕ್ಷರಾಶಿ
ದಿನವು ಮೊಲ್ಲೆ ಹುಲ್ಲು ಹಸಿರು
ಮನಕೆ ಮುದವ ನೀಡ್ವ ರಂಗು
ಘನತರಂಗವೆಬ್ಬಿಸೀ |
ಜಿನುಗುತಿರುವ ಜೇನು ಮಿಸರೆ
ಗುನುಗು ದುಂಬಿನಾದ ತುಂಬಿ
ಸನಿಹ ನವಿಲ ನಾಟ್ಯ ಭಂಗಿ
ಬನದಿ ಗುಲ್ಲು ಹಬ್ಬಿಸೀ ||

ಕೆಂಪು ಹಳದಿ ಪಚ್ಚೆ ನೀಲಿ
ಗುಂಪಿನ ಬಂಗಾರ ಸೇರಿ
ತಂಪು ಸ್ಫಟಿಕ ಮುತ್ತು ಹವಳ
ಸೊಂಪಾಗಿಸಿ ಭರಣವ |
ಇಂಪಿನ ಸಂಗೀತ ಗಾನ
ಮಂಪರಿನಲು ಸುಖದ ಧ್ಯಾನ
ನೋಂಪಿ ನಾಂದಿ ಮಂತ್ರ ಘೋಷ
ಗಂಪಾಗಿಸಿ ಕರಣವ ||

ಗಿರಿ ಸಾಗರ ನದಿ ಪರ್ವತ
ಪುರಿ ದ್ವಾರಕೆ ಹರಿದ್ವಾರ
ಮರೆಯಲಪ್ಪುದೇ ಅಜಂತಾ
ಕರೆವ ಎಲ್ಲೋರವಾ ?
ಬರಿಯದಲ್ಲ ಶಿಲೆಯ ಕಬ್ಬ
ಹಿರಿದು ಹಂಪೆ ಹಳೆಬೀಡಲಿ
ಬರಿದೇ ಜನ್ಮತಳೆದ ಕಾವ್ಯ
ಹರಿದು ಬಂತು ಕಲರವ ||

6 comments:

  1. ಭಾರತದ ಪ್ರಕೃತಿ ಸೌಂದರ್ಯ ಮತ್ತು ಶಿಲ್ಪ ಚಾತುರ್ಯದ ಅಮೋಘ ಚಿತ್ರಣ. ಸುಲಲಿತವಾಗಿ ಹಾಡಿಸಿಕೊಳ್ಳ ಬಲ್ಲ ಶಕ್ತ ಕವನ.

    ReplyDelete
  2. ಬಹಳ ಸುಂದರವಾದ ರಚನೆ ...

    ReplyDelete
  3. ವ್ಹಾ ಅದ್ಭುತವಾದ ಕವಿತೆ ಭಟ್ ಸರ್.. ನಿಮ್ಮ ಲೇಖನಗಳನ್ನಷ್ಟೇ ಓದಿ ಆಸ್ವಾದಿಸಿದ್ದ ನನಗೆ ಈ ಕವಿತೆ ನಿಜಕ್ಕೂ ತುಂಬಾ ಇಷ್ಟವಾಯ್ತು.. ಭಾರತೀಯ ಪರಂಪರೆಯನ್ನು ಚೆಂದವಾಗಿ ಕಟ್ಟಿಕೊಟ್ಟಿರುವ ಹಿರಿಮೆ ನಿಮಗೆ ಸಲ್ಲುತ್ತದೆ.. ಪದವೃಷ್ಠಿ ಅದ್ಭುತವೆನಿಸುತ್ತದೆ..:) ಒಂದು ಸುಂದರ ಭಾರತೀಯ ಸಂಸ್ಕೃತಿ ಮತ್ತು ಗತ ವೈಭವಕ್ಕಿಡಿದ ಕನ್ನಡಿ ಈ ಕವಿತೆ.. ಹಿಡಿಸಿತು..:)))

    ReplyDelete
  4. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತಾನಂತ ವಂದನೆಗಳು.

    ReplyDelete