ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, February 24, 2012

ಒತ್ತಡ-ನಿಗ್ರಹ


ಒತ್ತಡ-ನಿಗ್ರಹ

ಅನುಗಾಲವೂ ಚಿಂತೆ ಈ ಜೀವ ಜೀವನಕೆ
ತನುಮನಕೆ ಇಲ್ಲ ಸುಖ ಎಲ್ಲ ಸಂದೇಹ
ಕನಸುಗಳು ಏರುತ್ತ ತಕತಕನೆ ಕುಣಿವಾಗ
ಮನಸು ಬಳಲುತಲಿಹುದು | ಜಗದಮಿತ್ರ

ಅಧಿಕಾರ ಬೇಕೆಂಬ ಆಸೆ ಒಂದೆಡೆಯಲ್ಲಿ
ಪದಕುಸಿವ ಭಯವಿಹುದು ಇನ್ನೊಂದು ಕಡೆಗೆ
ಬೆದಕುತ್ತ ಹಲವರಲಿ ಅಂಗಲಾಚುವ ಕಾಲ
ಬದುಕು ಹೋರಾಟವೈ | ಜಗದಮಿತ್ರ

ಒಡೆಯನಣತಿಯ ಮೀರೆ ಹದಗೆಡುಗು ಜೀವನವು
ಬಿಡುಗಡೆಗೆ ಬಯಸುವುದು ಸೋತ ತನುಮನವು
ಕಡೆಗೊಮ್ಮೆ ತನುವೆದುರು ಮನಸೋತು ಮಣಿದಾಗ
ಕೆಡುಗು ದೇಹಸ್ಥಿತಿಯು | ಜಗದಮಿತ್ರ

ಸಿರಿವಂತ ನೆಂಟರನು ಕಂಡೊಮ್ಮೆ ಕುಳಿತಾಗ
ಕರೆವಂತೆ ಧನಿಕನಾಗುವ ಆಸೆ ಮನಕೆ !
ಹರಸಾಹಸದಿ ನಿತ್ಯ ಹಣಗಳಿಸುವಾಸೆಯಲಿ
ತಿರುಚಿ ಕೊಂಬುದು ಹೃದಯ | ಜಗದಮಿತ್ರ

ಸತಿಯಾಸೆ ಅತಿಯಾಗೆ ಪತಿಗಧಿಕದೊತ್ತಡವು
ಪತಿಯಾಸೆ ಅತಿಯಾಗೆ ಸತಿಗಕ್ಕು ನೋವು
ಸತಿಪತಿಗಳಿಬ್ಬರಿಗೂ ಅತಿಯಾಸೆ ಜೋರಾಗೆ
ಕಥೆಗೆ ಮಂಗಳವಕ್ಕು ! ಜಗದಮಿತ್ರ

ಮಕ್ಕಳಿಗೆ ಶಿಕ್ಷಣದಿ ಹೆಚ್ಚು ಗುಣಪಡೆವಂತೆ
ಇಕ್ಕಳದ ಅಡಕೊತ್ತು ಇಟ್ಟು ಹೆದರಿಸುತ
ಹೊಕ್ಕಳಿನ ಬಳ್ಳಿಕೊಯ್ಯುವಮುಂಚೆಯೇ ಶಾಲೆ !
ಮಕ್ಕಳಾಟವೆ ಬದುಕು ? ಜಗದಮಿತ್ರ

ಯುಗಧರ್ಮ ನಗಧರ್ಮ ಆಗಿಹುದು ಈ ದಿನದಿ
ಬಗೆಬಗೆಯ ಹಾದಿಯಲಿ ಮೋಸ-ವಂಚನೆಯು !
ನಗುನಗುತ ಬಂದವರೆ ನುಗ್ಗಿ ಕದ್ದೊಯ್ಯುವರು
ನಗಕೆ ಚೋರರ ಭಯವು | ಜಗದಮಿತ್ರ

ನಿತ್ಯ ಕುಳಿತಾಗೊಮ್ಮೆ ಬರೆದು ಕರ್ಮಂಗಳನು
ಸತ್ಯ-ಮಿಥ್ಯದ ಲೆಕ್ಕ ಒಪ್ಪಿಸುತ ಮನಕೆ
ತಥ್ಯದೊಳ್ ಪರಮಾತ್ಮ ಅಡಗಿಹನು ಮನದೊಳಗೆ
ಪಥ್ಯ ಸರಳತೆ ಇಹಕೆ | ಜಗದಮಿತ್ರ

ತಾಪ-ತ್ರಯಗಳಿಂ ಬೇಯುವುದು ಜೀವನವು
ಕೋಪ ಮೋಹಾದಿ ಮದ-ಮಾತ್ಸರ್ಯ ಗುಣಗಳ್
ವ್ಯಾಪಾರ ನಡೆದಿಹುದು ನಮಗರಿವೆ ಇಲ್ಲದಲೆ
ದೀಪಬುಡ ಕತ್ತಲವು | ಜಗದಮಿತ್ರ

ಯೋಗ-ಧ್ಯಾನವು ಬೇಕು ಭೋಗವೈಖರಿ ಜೊತೆಗೆ
ಕಾಗೆ-ಕುನ್ನಿಗೆ ಹಾರ ಇಡಬೇಕು ಬದುಕೆ
ಸಾಗರವು ಸಂಸಾರ ಆಗುವುದು ಸಾಕಾರ
ನೀಗು ಒತ್ತಡ ನಿರತ | ಜಗದಮಿತ್ರ

12 comments:

  1. ಸೂಪರ್ ಆಗಿದೆ ಸರ್.
    ತತ್ವಗಳನ್ನ ಎಷ್ಟು ಚೆನ್ನಾಗಿ ಬರೆದಿದ್ದೀರಿ
    ಜಗದಮಿತ್ರನಿಗೆ ವಂದನೆಗಳು
    ಸ್ವರ್ಣಾ

    ReplyDelete
  2. ಮರಳಿದ ಜಗದ ಮಿತ್ರನಿಗೆ ಸಂತೋಷದ ಸ್ವಾಗತ. ಬದುಕಿನ ತತ್ವಗಳನ್ನು ಸರಳವಾಗಿ ಬೋಧಿಸುವ ನಿಮಗೆ ವಂದನೆಗಳು.

    ReplyDelete
  3. अत्युत्तमम् अस्ति । भट्भाग ॥

    ReplyDelete
  4. ಭಟ್ಟರೇ,ತು೦ಬಾ ಚೆನ್ನಾಗಿದೆ.ಮತ್ತೆ ಮತ್ತೆ ಮೆಲುಕು ಹಾಕುವಂತಿದೆ.

    ReplyDelete
  5. ಬಹಳ ಚೆನ್ನಾಗಿವೆ, ಅರ್ಥಗರ್ಭಿತವಾಗಿವೆ ಇದರಲ್ಲಿನ ಹತ್ತೂ ಚೌಪದಿಗಳು!
    "ಬದುಕು ಹೋರಾಟವೈ" ಎಂಬ ಪದಪುಂಜ "ಬಿಎಸ್‌ವೈ"ಗೆ ಪ್ರಾಸಬದ್ಧವಾಗಿದೆಯೇನೊ ಎಂದನಿಸುತ್ತದೆ :-)

    ReplyDelete
    Replies
    1. ಜೋಶಿಯವರೇ, ನೀವು ಬರೆದಿದ್ದು ನೋಡಿ ಸ್ವಲ್ಪ ನಗುಬಂತು! ಅದಕ್ಕೇನಂತೆ ’ಬದುಕು ಸೆಣಸಾಟ-ವೈ’ ಮಾಡಿಬಿಡೋಣ ಅಲ್ಲಿಗೆ ನೀವು ಹೇಳಿದಂತೇ ಆಗುತ್ತದೆ ನೋಡಿ! ನಿಮ್ಮ ಅನಿಸಿಕೆಗೆ ಧನ್ಯವಾದ

      Delete
  6. ಮತ್ತು ಬೇಕಿನ್ನುಬೇಕೆಂದು ಹೆಣಗುತಲಿರಲು
    ಕುತ್ತು ಬರಲಹುದೆಂದು ಜೀವನದೊಳು |
    ಹತ್ತು ಪದ್ಯಂಗಳಲಿ ಸೊಗಸಾಗಿ ತಿಳುಹಿದಿರಿ
    ಬಿತ್ತುತಲೆ ನಿಗ್ರಹದುಪಾಯಂಗಳಂ ||

    ReplyDelete
    Replies
    1. ಹಳದಿ-ರಾಮನ ಸಿಹಿಯ ತುರುಕುತೀ ಬಾಯಿಯೊಳು
      ಬೆಳೆದ ಪದ್ಯದ ’ಗತಿ’ಗೆ ಚಂದಗಾಣಿಸುತ
      ಕಳೆತೆಗೆದ ಗದ್ದೆಯಲಿ ಫಸಲು ಹುಲುಸಪ್ಪಂತೆ
      ಬೆಳೆತೆಗೆಯಲನುಗ್ರಹಿಸಿ | ಜಗದಮಿತ್ರ

      ಈ ರಾಮರ ಅನುಗ್ರಹವೂ ಶ್ರೀರಾಮನ ಅನುಗ್ರಹವೂ ನಮ್ಮಂಥವರಿಗೆ ಸದಾ ಇರಲಿ, ಧನ್ಯವಾದಗಳು

      Delete
  7. ಸಹೃದಯೀ ಕನ್ನಡ ಸಾಹಿತ್ಯಾಸಕ್ತರೇ, ಶತಾವಧಾನಿ ಶ್ರೀಯುತ ಆರ್. ಗಣೇಶ್ ಮತ್ತು ಈ ಮೇಲೆ ಪ್ರತಿಕ್ರಿಯಿಸಿದ ಶ್ರೀಯುತ ಕೆ.ಬಿ.ಎಸ್ ರಾಮಚಂದ್ರ ಮೊದಲಾದ ಕಾವ್ಯ ಕೋವಿದರು ಕನ್ನಡತನವನ್ನು ಉಳಿಸುವ ಸಲುವಾಗಿ ಛಂದೋಬದ್ಧವಾದ ಕಾವ್ಯ ರಚನೆ ಕಲಿಸುವಲ್ಲಿ ಪದ್ಯಪಾನವೆಂಬ ಜಾಲತಾಣವನ್ನು ನಡೆಸುತ್ತಿದ್ದಾರೆ. ತಮ್ಮ ದಿನನಿತ್ಯದ ಕಾರ್ಯಬಾಹುಳ್ಯಗಳ ನಡುವೆಯೂ ಕನ್ನಡದ ಮೂಲ ಕಾವ್ಯ ಶೈಲಿಯ ಪರಂಪರೆಯನ್ನು ಉಳಿಸಬೇಕೆನ್ನುವ ಒಂದೇ ಉದ್ದೇಶ ಅವರದಾಗಿದೆ.

    ಒಂದು ಕಾಲಕ್ಕೆ ಕನ್ನಡದಲ್ಲಿ ಎಷ್ಟೆಲ್ಲಾ ವಿಭಿನ್ನ ತರಗತಿಯ ಕಾವ್ಯಗಳಿದ್ದವು ಎಂದು ತಿಳಿದರೆ ಆಶ್ಚರ್ಯವೂ ಸಂತೋಷವೂ ಒಟ್ಟೊಟ್ಟಿಗೇ ಆಗುತ್ತದೆ. ಗಮಕಿಗಳು, ಗಾಯಕರು ಹಾಡಬಲ್ಲ ಕೃತಿಗಳು ಜನಮಾನಸದಲ್ಲಿ ಬಹುಕಾಲ ಬದುಕುತ್ತವೆ; ಬಾಯಿಂದ ಬಾಯಿಗೆ ಜಾನಪದದಂತೇ ಹಬ್ಬಿ ಜೀವಂತಿಕೆ ಮೆರೆಯುತ್ತವೆ ಎಂಬುದಕ್ಕೆ ಹಲವು ಸಾಕ್ಷಿಗಳು ದೊರೆಯುತ್ತವೆ. ವ್ಯಾಕರಣ, ಛಂದಸ್ಸು, ಪ್ರಾಸ ಇವೆಲ್ಲಾ ಇಲ್ಲದ ಕವನಗಳು ಹರಕಲು ಗೋಡೆಯ ತೆರನಾಗಿ ಕಂಡರೆ, ಅವುಗಳಿಂದ ಪೂರ್ಣವಾದ ಗೀತೆಗಳು ಹೊಳೆಯುವ ವರ್ಣಮಯ ಹೊಸಗೋಡೆಯಂತೇ ನಳನಳಿಸುತ್ತವೆ!

    ಅನೇಕ ಓದುಗರಲ್ಲಿ ಅಭಿರುಚಿಯಿದೆ ಆದರೆ ಅಭಿವ್ಯಕ್ತ ಪಡಿಸಲು ಕ್ರಮಬದ್ಧ ಮಾರ್ಗ ತಿಳಿದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನವೋದಯ ಮತ್ತು ನವ್ಯ, ನವ್ಯೋತ್ತರ ಶೈಲಿಯಲ್ಲಿ ಬರೆಯುತ್ತಾ ಇದೀಗ ಯಾವ ಶೈಲಿಗೂ ಒಗ್ಗದೇ ಕಾವ್ಯ ಸಂಪೂರ್ಣ ಗದ್ಯಮಯವಾಗಿದೆ. ಗದ್ಯಕಾವ್ಯವನ್ನು ಬರೆಯುವ ಹಲವರಲ್ಲಿ ಉದ್ದೇಶ ಯಾವುದೋ ಇದ್ದು, ಹೊರಟ ಸ್ಥಳದಿಂದ ಗಮ್ಯಸ್ಥಳಕ್ಕೆ ಅವರು ತಲ್ಪುವ ಮೊದಲೇ ಅಲ್ಲೆಲ್ಲೋ ತಿರುವಿನಲ್ಲಿ ಹೊರಟುಹೋಗುತ್ತಾರೆ! ಕಾವ್ಯದ ಗತ್ತು-ಗೈರತ್ತು ಇರುವುದು ಅದರ ಶುದ್ಧ ಅಂಗವಿನ್ಯಾಸದಲ್ಲಿ, ಹೀಗಾಗಿ ಸಾಂಪ್ರದಾಯಿಕ ಮತ್ತು ಪಾರಂಪರಿಕ ಕಾವ್ಯವನ್ನು ಕಲಿಯಲು ದಯಮಾಡಿ ಮನಸ್ಸು ಕೊಡಿ; ಕನ್ನಡ ತನವನ್ನು ಉಳಿಸಿ ಎಂದು ನಿಮ್ಮಲ್ಲಿ ಮತ್ತೊಮ್ಮೆ ನನ್ನ ವಿಜ್ಞಾಪನೆ. ಕಾವ್ಯ ಕಲಿಕೆಗೆ ದಾರಿ ಇಲ್ಲಿದೆ: http://padyapaana.com/



    --------

    ಪ್ರಸಕ್ತ ಕಾವ್ಯ ಎಲ್ಲದರಂತಲ್ಲ! ಸಾಮಾನ್ಯವಾಗಿ ಕಾವ್ಯ ಬರೆಯುವಾಗ ಕವಿ ತನ್ನದೇ ಲೋಕದಲ್ಲಿ ವಿಹರಿಸುತ್ತಾ ಉಚ್ಚಸ್ಥಾಯಿಯಲ್ಲೆಲ್ಲೋ ಹಾಡುಗಾರನೊಬ್ಬ ಪರಮಾತ್ಮನನ್ನು ಸಂಧಿಸಿದಂತೇ ಕಾವ್ಯದಗತಿಯಲ್ಲೇ ಭಗವಂತನನ್ನು ಕಾಣಲು ಬಯಸುತ್ತಾನೆ-ಇದು ಉತ್ತಮ ಕವನಗಳ ಸಾಮಾನ್ಯ ಆಶಯ. ಆದರೆ ಕಗ್ಗ ಬರೆಯುವಾಗ ಬರೆಯುವಾತ ತನ್ನನ್ನೇ ಅಣಕಿಸಿಕೊಳ್ಳುತ್ತಾ [ಆರ್.ಕೆ.ಲಕ್ಷಣ್ ಅವರ ವ್ಯಂಗ್ಯಚಿತ್ರದಂತೇ] ತನ್ನ ಪ್ರತಿಕೃತಿಯನ್ನೇ ಹೊರಗೆಲ್ಲೋ ನಿಲ್ಲಿಸಿ, ಮಾನವ ಸಹಜಧರ್ಮದ ಆದರ್ಶಗಳನ್ನು ಬರೆಯುವುದು ಕಗ್ಗದ ಮಹತಿ. ಕಗ್ಗ ಆ ಕ್ಷಣಕ್ಕೆ ಎಲ್ಲರಿಗೂ ರುಚಿಸದೇ ಇದ್ದರೂ ನಿಧಾನವಾಗಿ ಕಬ್ಬನ್ನು ಕಚ್ಚಿ ರಸಹೀರಿದಂತೇ ಪದಪದಗಳಲ್ಲಿಯೂ ಹೊಮ್ಮಬಹುದಾದ ಸಂದೇಶಗಳನ್ನು ಅವಲೋಕಿಸಬೇಕಾಗುವುದು ಕಗ್ಗದಲ್ಲಿ. ಭಗವಂತನ ದೂತನಾಗಿ ಭುವಿಗೆ ಬಂದರೆ ಹೇಗಿರಬಹುದೋ ಹಾಗೇ ಆ ರೂಪವನ್ನು ಕಲ್ಪಿಸಿಕೊಂಡು-ಅದನ್ನು ನಮ್ಮದೇಹದಲ್ಲಿ ನಿಲ್ಲಿಸಿ ನಾವು ಹೊರನಡೆದು ನಿಂತು ಬಂದ ಆ ದೂತ ನಮ್ಮನ್ನು ಅಣಕಿಸುವಾಗ ಹುಟ್ಟುವ ಕಾವ್ಯ ಕಗ್ಗವಾಗುತ್ತದೆ! ಆ ಘಳಿಗೆಯ ಅನುಭವ ಅನನ್ಯ!

    ಓದಿದ, ಓದಿ ಪ್ರತಿಕ್ರಿಯಿಸಿದ, ಓದುವ ನಿಮ್ಮೆಲ್ಲರಿಗೂ ಋಣಿಯಾಗಿದ್ದೇನೆ, ಆಭಾರಿಯಾಗಿದ್ದೇನೆ.

    ReplyDelete
  8. ಭಟ್ಟರೆ,

    ನಿಮ್ಮ ಕಗ್ಗಗಳು ಎಂದಿನಂತೆ ಸೊಗಸಾಗಿವೆ.

    ReplyDelete
  9. ಭಟ್ರೇ,

    ಸೂಪರ್....ಒಂದಕ್ಕಿಂತ ಒಂದು ಚೆನ್ನಾಗಿದೆ ಸರ್....ತುಂಬಾನೇ ಇಷ್ಟ ಆಯಿತು...

    ReplyDelete
  10. ಅರ್ಥಗರ್ಭಿತ, ನೀತಿಬೋಧಕ ಕವನ ಸರ್, ಅಭಿನ೦ದನೆಗಳು. ನನ್ನ ಬ್ಲಾಗ್ ಗೂ ಬನ್ನಿ.

    ReplyDelete